24.7 C
Karnataka
Saturday, November 30, 2024
    Home Blog Page 104

    ಪ್ರಾಣಿ ದತ್ತು: ದರ್ಶನ್ ಕರೆಗೆ ಓಗೊಟ್ಟ ಪ್ರಾಣಿಪ್ರಿಯರಿಂದ 40 ಲಕ್ಷ ದೇಣಿಗೆ

    ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ಹಾಗೂ ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಳ್ಳಲು ಕರೆನೀಡಿದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾದ ದರ್ಶನ್ ಅವರು ರಾಜ್ಯದ ಮೃಗಾಲಯದ ಪ್ರಾಣಿಗಳ ಬಗ್ಗೆ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದಾರೆ, ಅವರು ಸ್ವಇಚ್ಛೆಯಿಂದ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆಕೊಟ್ಟರು ಅವರ ಕರೆಯ ಮೇರೆಗೆ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ.

    ವಿಶ್ವ ಪರಿಸರ ದಿನದಂದು ಮೈಸೂರು ಮೃಗಾಲಯದಲ್ಲಿ ಸಸಿ ನೆಟ್ಟ ದರ್ಶನ್

    ಕೊರೋನಾದ ಈ ಕಷ್ಟಕಾಲದಲ್ಲಿ ಸರ್ಕಾರ ಜನರ ರಕ್ಷಣೆಯ ಹೊಣೆ ಹೊತ್ತಿರುವ ಹಾಗೆ ದರ್ಶನ್ ಅವರು ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
    ಹಾಗೆಯೇ ಪ್ರಾಣಿ ದತ್ತು ಪಡೆಯಲು ದೇಣಿಗೆ ನೀಡಿದ ಎಲ್ಲ ಪ್ರಾಣಿಪ್ರಿಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
    ನಾನು ಸಹ ರಾಜ್ಯದ ಎಲ್ಲಾ ಪ್ರಾಣಿ ಪ್ರಿಯರಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಬೇಕು ಮತ್ತು ಈ ಉದ್ದೇಶಕ್ಕಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ

    ಮಂಗಳೂರು ವಿವಿಯಲ್ಲಿ ಪರಿಸರ ದಿನಾಚರಣೆ

    ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳಗಂಗೋತ್ರಿಯಲ್ಲಿ   ವಿಶ್ವ ಪರಿಸರ ದಿನವನ್ನು ಆಚರಿಸಿತು. ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಸಸಿಯನ್ನು ನೆಟ್ಟು  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    “ಕೋವಿಡ್ -19 ಎರಡನೇ ಅಲೆಯ ಪರಿಣಾಮವಾಗಿ    ಕ್ಯಾಂಪಸ್ನ  ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯ  ಉದ್ಯೋಗಿಗಳೆಲ್ಲರ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಈ ವರ್ಷದ  ವಿಶ್ವ ಪರಿಸರ ದಿನವನ್ನು ಆಚರಿಸಲು ಸಾಧ್ಯವಿಲ್ಲದ ಕಾರಣ, ನಾವು ಈ  ದಿನವನ್ನು  ಸರಳ ಆದರೆ ಪರಿಣಾಮಕಾರಿ ವಿಧಾನಗಳಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದರು.

    ಇಂದಿನ  ಮಕ್ಕಳು   ಭವಿಷ್ಯದ ನಾಗರಿಕರು.  ರಾಷ್ಟ್ರದ ಪ್ರಜ್ಞಾವಂತ ನಾಗರೀಕರನ್ನಾಗಿ ರೂಪುಗೊಳಿಸುವಲ್ಲಿ ಮಕ್ಕಳಲ್ಲಿ   ಪರಿಸರದ ಬಗ್ಗೆ ಪ್ರೀತಿ  ಕಾಳಜಿ ಮೂಡಿಸುವಂತದ್ದು ಒಂದು ಮಹತ್ವಪೂರ್ಣವಾದ ಕಾರ್ಯ. ಅಂತೆಯೇ,   ರಾಷ್ಟ್ರ ನಿರ್ಮಾಣದಲ್ಲಿ  ಯುವಶಕ್ತಿಯೂ ಪಾತ್ರವೂ  ಅತ್ಯಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು   ದತ್ತು ಸ್ವೀಕರಿಸಿರುವ ಸರ್ಕಾರಿ ಶಾಲಾ ಮಕ್ಕಳಿಗಾಗಿ ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’    ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಪರಿಸರ ಸಂರಕ್ಷಣೆಯಲ್ಲಿ ನನ್ನ ವೀಕ್ಷಣೆಗಳು ಮತ್ತು ಅನುಭವಗಳು’  ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಂದ  ಒಳ್ಳೆಯ ಪ್ರತಿಸ್ಪಂದನೆ  ಬಂದಿರುವುದು ಪ್ರಶಂಸನೀಯ ಎಂದೂ ಹೇಳಿದರು.

    ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪ್ರಬಂಧವನ್ನು ಬರೆದು ಕೆಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಎಲ್ಲಾ ವಿಜೇತರಿಗೆ ಬಹುಮಾನ ನೀಡಲಾಗುವುದು. ಬಹುಮಾನಗಳನ್ನು ಗೆಲ್ಲಲು ಸಾಧ್ಯವಾಗದವರು ನಿರಾಶೆಗೊಳ್ಳಬೇಡಿ. ಅವರಿಗೆ  ಮೆಚ್ಚುಗೆಯ ಪ್ರಮಾಣಪತ್ರವನ್ನೂ ನೀಡಲಾಗುವುದು. ಆದರೆ ನಿಮ್ಮ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರಕೃತಿಯ ಬಗೆಗಿನ ಕಾಳಜಿಯನ್ನು ನಿಲ್ಲಿಸಬೇಡಿ. ಮನುಷ್ಯರೂ ಸೇರಿದಂತೆ ಎಲ್ಲಾ  ಪ್ರಾಣಿಗಳ ಬದುಕು ಸಸ್ಯಗಳ ಮೇಲೆ ಅವಲಂಬಿತವಾಗಿದೆ. ಸಸ್ಯಗಳು,  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ, ಆವಾಸಸ್ಥಾನ ಮತ್ತು ಆಹಾರವನ್ನು ಒದಗಿಸುತ್ತವೆ, ನೀರಿನ ಚಕ್ರವನ್ನು ನಿಯಂತ್ರಿಸುತ್ತವೆ, ಹೀಗೆ ಅನೇಕ  ಸೇವೆಗಳನ್ನು ನೀಡುತ್ತವೆ. ಆದ್ದರಿಂದ, ಅಸ್ತಿತ್ವದಲ್ಲಿರುವ ಹಸಿರನ್ನು ಸಂರಕ್ಷಿಸುವುದರ ಜೊತೆಗೆ, ನಾವು ಹೆಚ್ಚು ಹೆಚ್ಚು ಸಸ್ಯಗಳನ್ನು ನೆಟ್ಟು ಅರಣ್ಯವನ್ನು ಮರುಸೃಷ್ಟಿಸಬೇಕು.   ನಮ್ಮ ದಿನನಿತ್ಯದ ಜೀವನದಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ  ಪ್ರಕೃತಿಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಒಳ್ಳೆಯದು.

    ಮಳೆನೀರು ಕೊಯ್ಲು,  ಸೌರಶಕ್ತಿ ಬಳಕೆ, ಪೇಪರ್ ಲೆಸ್ ಇ -ಆಫೀಸ್, ಬ್ಯಾನ್  ಆನ್   ಸಿಂಗಲ್ ಯೂಸ್  ಪ್ಲಾಸ್ಟಿಕ್,  ಒನ್ ಸ್ಟುಡೆಂಟ್ – ಒನ್ ಪ್ಲಾಂಟ್,  ಔ’ಷಧಿಯ ಸಸ್ಯಗಳ ನಿರ್ವಹಣೆ,  ಡಿಜಿಟಲ್ ಲೇಬಲ್ಲಿಂಗ್ ಒಫ್  ಪ್ಲಾಂಟ್ಸ್  ಮುಂತಾದ ಪರಿಸರಸ್ನೇಹಿ ಕಾರ್ಯಚಟುವಟಿಕೆಗಳನ್ನು ಇನ್ನಷ್ಟೂ  ವಿಸ್ತಾರವಾಗಿ ಹಾಗೂ  ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.  ‘ಪರಿಸರ-ವ್ಯವಸ್ಥೆ ಪುನಃಸ್ಥಾಪನೆ’ ವಿಶ್ವಸಂಸ್ಥೆಯ ಈ ಬೃಹತ್ ಯೋಜನೆ ಯಶಸ್ಸುಗೊಳಿಸುವಲ್ಲಿ  ನಾವೆಲ್ಲರೂ ಕೈಜೋಡಿಸೋಣ. ಪರಿಸರವನ್ನು ಸಂರಕ್ಷಿಸೋಣ” ಎಂದು ಹೇಳಿದರು.  

    ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಅವರು   ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿ  ಸ್ವಾಗತಿಸಿದರು.  

    ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ  ಪ್ರೊ.  ಮೋನಿಕಾ ಸದಾನಂದ ಅವರು   ‘ಪರಿಸರ ವ್ಯವಸ್ಥೆ ಪುನಃಸ್ಥಾಪನೆಗೆ ಜೈವಿಕ ತಂತ್ರಜ್ಞಾನದ ವಿಧಾನಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.  ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ   ಪ್ರೊ. ಬಿ. ರಾಜು ಕೃಷ್ಣ  ಚಲನಾನವರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪರಿಸರ ವಿಜ್ಞಾನ ವಿಭಾಗದ ಸಂಯೋಜಕರಾದ ಪ್ರೊ. ತಾರಾವತಿ ಎನ್  ಸಿ ಅವರು ವಂದನಾರ್ಪಣೆ ಸಲ್ಲಿಸಿದರು.   ಪ್ರೊ. ಬಿ . ನಾರಾಯಣ, ಹಣಕಾಸು ಅಧಿಕಾರಿಗಳು, ಡಾ. ಚಂದ್ರು ಹೆಗ್ಡೆ  ವಿಶೇಷ ಅಧಿಕಾರಿಗಳು, ಇನ್ನಿತರರು   ಉಪಸ್ಥಿತರಿದ್ದರು. 

    ಕುಲಸಚಿವರಾದ  ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಅವರ   ನೇತೃತ್ವದಲ್ಲಿ  ಜೆಸಿಐ  ಮಂಗಳಗಂಗೋತ್ರಿ ಸಹಭಾಗಿತ್ವದೊಂದಿಗೆ  ಮಂಗಳಗಂಗೋತ್ರಿ ಆವರಣದಲ್ಲಿ ಸುಮಾರು ನೂರು ಸಸಿಗಳನ್ನು ನೆಡಲಾಯಿತು.  ಜೇಸಿ  ಫ್ರಾಂಕಿ ಪ್ರಾನ್ಸಿಸ್ ಕುಟಿನೊ,  ತ್ಯಾಗಂ ಹರೇಕಳ, ಶ್ರೀ ದಿವಾಕರ  ಎಂ.ಎಸ್., ಡಾ.ಶರತ್ ಚಂದ್ರ ಕೆ., ಶ್ರೀ ಚನಿಯಪ್ಪ ನಾಯಕ್, ಡಾ.ಪ್ರಸನ್ನ  ಬಿ.ಕೆ., ಶ್ರೀ ಚಂದ್ರ, ಆನಂದ ಕೆ.  ಅಸೈಗೋಳಿ, ಶ್ರೀಮತಿ. ಪ್ರತಿಮಾ ಹೆಬ್ಬಾರ್, ಜೆ.ಸಿ. ಜಯಲಕ್ಷ್ಮಿ  ಇತರರು ಸಹಕರಿಸಿದರು.

    ಜೂನ್ 21 ರಿಂದ ಕೇಂದ್ರ ಸರಕಾರದಿಂದಲೆ ಎಲ್ಲರಿಗೂ ಉಚಿತ ಲಸಿಕೆ

    ಜೂನ್ 21 ರಿಂದ ಇಡೀ ದೇಶದ ಎಲ್ಲಾ ವಯೋಮಾನದವರಿಗೂ ಕೇಂದ್ರ ಸರಕಾರವೇ ಉಚಿತವಾಗಿ ಕೋವಿಡ್ ಲಸಿಕೆಯನ್ನು ಪೂರೈಸಲಿದೆ. ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತಾನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಮಹತ್ವದ ಘೋಷಣೆಯನ್ನು ಮಾಡಿದರು.

    ಆರೋಗ್ಯ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾದ್ದರಿಂದ ಮೇ 1 ರಿಂದ ಲಸಿಕೆ ಖರೀದಿ ಮತ್ತು ವಿತರಣೆ ವ್ಯವಸ್ಥೆಯನ್ನು ಕೇಂದ್ರ ಸರಕಾರ ಆಯಾ ರಾಜ್ಯಗಳಿಗೆ ವಹಿಸಿತ್ತು. ಆದರೆ ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಗೆ ಆಗದ ಕಾರಣ ಇದರ ಹೊಣೆಯನ್ನು ಇದೀಗ ಮತ್ತೆ ಕೇಂದ್ರ ಸರಕಾರವೇ ವಹಿಸಿಕೊಂಡಿದೆ.

    ತಯಾರಾಗುವ ಶೇಕಡ 75 ರಷ್ಟನ್ನು ಲಸಿಕೆಯನ್ನು ಕೇಂದ್ರ ಸರಕಾರವೇ ಉತ್ಪಾದಕರಿಂದ ನೇರವಾಗಿ ಖರೀದಿ ಮಾಡಿ ರಾಜ್ಯಗಳಿಗೆ ವಿತರಿಸಲಿದೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಉಚಿತವಾಗಿ ಸಿಗಲಿದೆ. ಇನ್ನುಳಿದ ಶೇಕಡ 25 ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ನೇರವಾಗಿ ಖರೀದಿ ಮಾಡಬಹುದಾಗಿದ್ದು ಅವುಗಳು ಲಸಿಕೆ ಖರೀದಿ ಬೆಲೆಯ ಮೇಲೆ ಕೇವಲ 150 ರೂಪಾಯಿಗಳ ಸೇವಾ ಶುಲ್ಕವನ್ನಷ್ಟನ್ನೆ ಪಡೆಯಬಹುದಾಗಿದೆ.

    ಇದರ ಜೊತಗೆ ಬಡವರ್ಗದವರಿಗೆ ನೀಡುತ್ತುರವ ಹೆಚ್ಚುವರಿ ಆಹಾರ ಧಾನ್ಯ ವಿತರಣೆಯನ್ನು ದೀಪಾವಳಿ ವರೆಗೂ ಮುಂದುವರಿಸಲಾಗಿದೆ.

    ಇಂದು ಸಂಜೆ ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜೂನ್ 7) ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

    ಪ್ರಧಾನ ಮಂತ್ರಿಗಳು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲವಾದರು ದೇಶದ ಕೋವಿಡ್ ಪರಿಸ್ಥಿತಿ ಮತ್ತು ವ್ಯಾಕ್ಸಿನೇಷನ್ ಪ್ರಗತಿಯ ಬಗ್ಗೆ ಮಾತಾನಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

    ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕ್ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ

    ಜಿಲ್ಲಾ ಮಟ್ಟದಲ್ಲಿ ಇರುವ ಕೋವಿಡ್ ಸೋಂಕಿನ ವಸ್ತುಸ್ಥಿತಿಯನ್ನು ಆಧರಿಸಿ ಜೂನ್ 14ರ ನಂತರ ಯಾವ ರೀತಿ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

    ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದರು

    ಎಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಇದೆ ? ಅಂತಹ ಜಿಲ್ಲೆಗಳಲ್ಲಿ ಸಡಿಲಿಕೆ ಕ್ರಮ ಗಳನ್ನು ಜರುಗಿಸಬೇಕು ಮಾಡಬೇಕು ಎಂಬ ಸಲಹೆ ಬಂದಿದೆ ಕೈಗಾರಿಕಾ ವಲಯ ದಿಂದಲೂ ಸಹಿತ ಹಲವು ಸಲಹೆಗಳು ಬಂದಿವೆ ಹೀಗಾಗಿ ಬೆಂಗಳೂರು ನಗರ ಸೇರಿದಂತೆ ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

    ಇಳಿಯುತ್ತಿದೆ ಸೋಂಕಿತರ ಸಂಖ್ಯೆ; ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳಲ್ಲಿಯೇ ಕನಿಷ್ಠ

    ಭಾರತದಲ್ಲಿ  ಕಳೆದ 24 ಗಂಟೆಗಳಲ್ಲಿ ದೈನಿಕ 1,14,460 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿಯೇ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. ದೇಶವು ಸತತ 10 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ.

    https://static.pib.gov.in/WriteReadData/userfiles/image/image0012CDK.jpg

    ಭಾರತದ ಸಕ್ರಿಯ ಪ್ರಕರಣಗಳ ಹೊರೆ ಸತತ ಇಳಿಕೆಯಾಗುತ್ತಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ 15 ಲಕ್ಷಕ್ಕಿಂತ ಕೆಳಗಿಳಿದಿದೆ ಮತ್ತು ಅದು 14,77,799 ರಲ್ಲಿದೆ. ಸತತ ಆರನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ.

    ಕಳೆದ 24 ಗಂಟೆಗಳಲ್ಲಿ 77,449 ನಿವ್ವಳ ಇಳಿಕೆ ಕಂಡು ಬಂದಿದೆ. ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 5.13% ರಷ್ಟಿದೆ.

    https://static.pib.gov.in/WriteReadData/userfiles/image/image002UWXJ.jpg

    ಕೋವಿಡ್ -19 ಸೋಂಕಿನಿಂದ ಹೆಚ್ಚು ಜನರು ಗುಣಮುಖರಾಗುತ್ತಿದ್ದು, ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 24 ನೇ ದಿನವೂ  ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 1,89,232 ಮಂದಿ ಗುಣಮುಖರಾಗಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 74,772 ರಷ್ಟು ಹೆಚ್ಚಾಗಿವೆ.

    https://static.pib.gov.in/WriteReadData/userfiles/image/image003D8UY.jpg

    ಸಾಂಕ್ರಾಮಿಕವು ಜಾಗತಿಕವಾಗಿ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ 2,69,84,781 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ.  ಇದರಿಂದ  ಒಟ್ಟು  ಗುಣಮುಖ ದರ 93.67%, ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.

    ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,36,311 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 36.4 ಕೋಟಿ (36,47,46,522) ಪರೀಕ್ಷೆಗಳನ್ನು ನಡೆಸಿದೆ.ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 6.54% ಇದೆ, ದೈನಿಕ ಪಾಸಿಟಿವ್ ದರ ಇಂದು 5.62% ಆಗಿದೆ. ಅದು ಸತತ 13ನೇ ದಿನವೂ 10% ಗಿಂತ ಕೆಳಗಿದೆ.

    https://static.pib.gov.in/WriteReadData/userfiles/image/image004R1Z2.jpg

    ಇನ್ನೊಂದು ಪ್ರಮುಖ ಸಾಧನೆಯಲ್ಲಿ,  ದೇಶದಲ್ಲಿ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 23 ಕೋಟಿ ದಾಟಿದೆ. ರಾಷ್ಟ್ರವ್ಯಾಪ್ತಿ ಲಸಿಕಾ ಆಂದೋಲನದ ಮೂಲಕ 23.13 ಕೋಟಿ ಲಸಿಕಾ ಡೋಸ್ ಗಳನ್ನು  ಹಾಕಲಾಗಿದೆ.  ಕಳೆದ 24 ಗಂಟೆಗಳಲ್ಲಿ  33,53,539 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

    ಇಂದು ಬೆಳಿಗ್ಗೆ 7 ಗಂಟೆಯವರೆಗಿನ  ತಾತ್ಕಾಲಿಕ ವರದಿಗಳ ಪ್ರಕಾರ 23,13,22,417 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

    ವಿವರಗಳು ಈ ಕೆಳಗಿನಂತಿವೆ:

    ಆರೋಗ್ಯ ಕಾರ್ಯಕರ್ತರು1ನೇ ಡೋಸ್99,63,790
    2ನೇ  ಡೋಸ್68,55,261
    ಮುಂಚೂಣಿ ಕಾರ್ಯಕರ್ತರು.1ನೇ ಡೋಸ್1,61,65,342
    2ನೇ ಡೋಸ್86,62,859
    18-44 ವರ್ಷ ವಯೋಗುಂಪಿನವರು1ನೇ ಡೋಸ್2,77,39,545
    2ನೇ ಡೋಸ್1,61,253
    45 ರಿಂದ  60 ವರ್ಷ ವಯೋಗುಂಪಿನವರು1ನೇ ಡೋಸ್7,07,15,580
    2ನೇ ಡೋಸ್1,12,99,332
    60ವರ್ಷಕ್ಕಿಂತ ಮೇಲ್ಪಟ್ಟವರು1ನೇ ಡೋಸ್6,05,54,245
    2ನೇ ಡೋಸ್1,92,05,210
    ಒಟ್ಟು23,13,22,417

    (ವರದಿ ಪಿಐಬಿ)

    ಜುಲೈ ಅಂತ್ಯಕ್ಕೆ ಯಶವಂತಪುರ ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರ

    ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ಕಾರ್ಯಯೋಜನೆಯನ್ನು ರೂಪಿಸಿದ್ದು, ಜೂನ್ ಮಾಸಾಂತ್ಯದೊಳಗೆ ವ್ಯಾಕ್ಸಿನೇಶನ್ ಕಾರ್ಯವು ಒಂದು ಹಂತಕ್ಕೆ ಬರಲಿದೆ. ಜುಲೈ ಮಾಸಾಂತ್ಯದೊಳಗೆ ಯಶವಂತಪುರ ಕ್ಷೇತ್ರವು ಶೇಕಡಾ ನೂರು ವ್ಯಾಕ್ಸಿನೇಶನ್ ಪಡೆದ ಕ್ಷೇತ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವ್ಯಾಕ್ಸಿನೇಶನ್ ಗೆ ಸಂಬಂಧಪಟ್ಟಂತೆ ಗೊಂದಲಗಳು ಬಗೆಹರಿದಿವೆ. ಕೆಲವರು ವೃಥಾ ಆರೋಪಗಳನ್ನು ಮಾಡಿದರು, ಕೊರತೆ ಇದೆ ಎಂದೆಲ್ಲ ಹೇಳಿದರು. ಆದರೆ, ಎಲ್ಲವೂ ಸರಿ ಇದ್ದು, ನಾಳೆಯಿಂದಲೇ 1 ವಾರ್ಡ್ ಗೆ 1 ಸಾವಿರ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 18ರಿಂದ 45 ವರ್ಷದವರಿಗೂ ಲಸಿಕೆ ಲಭ್ಯವಾಗಲಿದೆ.

    ವ್ಯಾಕ್ಸಿನೇಶನ್ ಬಗ್ಗೆಯ ತಪ್ಪು ಕಲ್ಪನೆ ದೂರ ಮಾಡಿಕೊಳ್ಳಿ
    ವ್ಯಾಕ್ಸಿನೇಶನ್ ಬಗ್ಗೆ ಅನೇಕ ಗೊಂದಲಗಳು, ತಪ್ಪು ಕಲ್ಪನೆಗಳು ಮೂಡಿದ್ದು, ಇದನ್ನು ಎಲ್ಲರೂ ದೂರ ಮಾಡಿಕೊಳ್ಳಬೇಕು. ಜ್ವರ ಬರಲಿದೆ, ತಲೆನೋವು ಬರಲಿದೆ ಹೀಗೆ ಏನೆಲ್ಲ ಹೇಳಲಾಗುತ್ತದೆ. ಆದರೆ, ಇದು ಎಲ್ಲರಿಗೂ ಆಗುವುದಿಲ್ಲ. ಒಂದು ವೇಳೆ ಜ್ವರ ಬಂದರೂ ಸಹ ಅದಕ್ಕೆ ವೈದ್ಯರು ಮಾತ್ರೆಯನ್ನು ಕೊಟ್ಟು ಕಳುಹಿಸುತ್ತಾರೆ. ಇಂದು ದೇಶದಲ್ಲಿ ಕೋಟ್ಯಂತರ ಜನ ವ್ಯಾಕ್ಸಿನೇಶನ್ ಪಡೆದಿದ್ದಾರೆ. ಹಾಗಾಗಿ ಭಯ ಬೇಡ. ಇನ್ನು ವ್ಯಾಕ್ಸಿನೇಶನ್ ಸಿಗದು ಎಂಬ ಭಯ, ಆತಂಕ ಯಾರಿಗೂ ಬೇಡ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

    ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ
    ಕೊರೋನಾ ಎರಡನೇ ಅಲೆ ವಿಪರೀತವಾಗಿದೆ. ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಿವೆ. ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಸಹ ನಿಯಂತ್ರಣ ಕಷ್ಟವಾಗಿದೆ. ನನ್ನ ಕ್ಷೇತ್ರದಲ್ಲಿಯೇ ಸುಮಾರು ಏಳೂವರೆ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಧೈರ್ಯಗೆಡಬಾರದು ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಸೋಂಕು ತಗುಲಿದ್ದರೆ, ಕೂಡಲೇ ಟ್ರಯಾಜ್ ಸೆಂಟರ್ ಗಳಿಗೆ ಭೇಟಿ ಕೊಟ್ಟರೆ, ಅಲ್ಲಿರುವ ವೈದ್ಯರು ಸೋಂಕಿನ ತೀವ್ರತೆ, ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ, ಮನೆಯಲ್ಲಿದ್ದರೆ ಸಾಕೇ? ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಕೊಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಮನೆಯತ್ತ ವೈದ್ಯರು
    ಕೋವಿಡ್ ನಿಯಂತ್ರಣ ಮಾಡಲೇಬೇಕೆಂಬ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ವೈದ್ಯರ ತಂಡದೊಂದಿಗೆ ಸಾಕಷ್ಟು ಶ್ರಮಿಸಲಾಗುತ್ತಿದೆ. ಹೀಗಾಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹಳ್ಳಿಗಳ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಲಕ್ಷಣಗಳು ಕಂಡು ಬಂದರೆ ಅಲ್ಲಿಯೇ ಟೆಸ್ಟ್ ಮಾಡಿ, ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

    ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ
    ಯಶವಂತಪುರ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಸಾವಿನ ಪ್ರಮಾಣದಲ್ಲೂ ಕಡಿಮೆಯಾಗುತ್ತಿದೆ. ಹೀಗಾಗಿ ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಬೇಕು. ಜೊತೆಗೆ ವ್ಯಾಕ್ಸಿನೇಶನ್ ಪಡೆದುಕೊಳ್ಳಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಕಿವಿಮಾತು ಹೇಳಿದರು.

    24 ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ವಿತರಣೆ
    ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಸಚಿವರಾದ ಸೋಮಶೇಖರ್ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಧನಸಹಾಯವನ್ನು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ವಿತರಣೆ ಮಾಡಿದರು. ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಮಂದಿಗೆ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮಂದಿ ಹಾಗೂ ನೆಲಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿಯ ಆರ್ಥಿಕವಾಗಿ ಹಿಂದುಳಿದವರ ಕುಟುಂಬ ವರ್ಗದವರಿಗೆ ಸಹಾಯಧನವನ್ನು ಸಚಿವರು ವಿತರಿಸಿದರು. ಈ ಮೂಲಕ ಒಟ್ಟು 24 ಕುಟುಂಬಗಳಿಗೆ ಭಾನುವಾರ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳ ಸಹಾಯಧನವನ್ನು ಸಚಿವರು ವಿತರಣೆ ಮಾಡಿದರು.

    ಕೊರೋನಾ ವಾರಿಯರ್ಸ್ ಗಳಿಗೆ ಪ್ರೋತ್ಸಾಹಧನ ವಿತರಣೆ
    ಸೋಮನಹಳ್ಳಿ, ತರಳು, ನೆಲಗುಳಿ ಗ್ರಾಮ ಪಂಚಾಯಿತಿಗಳ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಹಾಗೂ ವಾಟರ್ ಮನ್ ಗಳಿಗೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರೋತ್ಸಾಹಧನ ಮತ್ತು ಪಡಿತರ ಕಿಟ್ ಅನ್ನು ವಿತರಣೆ ಮಾಡಲಾಯಿತು.
    ಕಗ್ಗಲಿಪುರ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ವಾರಿಯರ್ಸ್ ಗಳಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹಧನ, ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

    ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ʼಜ್ಞಾನಗಂಗೆʼಯನ್ನು ಹರಿಸಿದ ಶಿಕ್ಷಣ ಸಂತ


    ಇಂದು ಗಾಂಧೀವಾದಿ ಎಚ್ ನರಸಿಂಹಯ್ಯ ನವರ 101 ನೇ ಜನ್ಮದಿನ. ಅವರು ಕಟ್ಟಿದ ಶಾಲೆಯಲ್ಲೇ ಓದಿದ ಹಿರಿಯ ಪತ್ರಕರ್ತ CKNEWSNOW.COM ಜಾಲ ತಾಣದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ.ಕೆ. ಚನ್ನಕೃಷ್ಣ ಅವರು ಎಚ್ ಎನ್ ಅವರೊಂದಿಗಿನ ತಮ್ಮ ನೆನಪಿನ ಬುತ್ತಿಯನ್ನು ಇಲ್ಲಿ ದಾಖಲಿಸಿದ್ದಾರೆ.


    ಬೆಂಗಳೂರಿನ ಹೃದಯ ಮೆಜೆಸ್ಟಿಕ್‌ನಿಂದ ಸರಿಯಾಗಿ ನೂರಎರಡು ಕಿ.ಮೀ ದೂರದಲ್ಲಿರುವ ಬಾಗೇಪಲ್ಲಿ ಎಂಬ ನತದೃಷ್ಟ ಪಟ್ಟಣಕ್ಕೆ ‘ಭಾಗ್ಯನಗರ’ ಎಂಬ ಇನ್ನೊಂದು ಹೆಸರಿದೆ. ಹೆಸರಲ್ಲೇನಿದೆ ಭಾಗ್ಯ? ಇವತ್ತಿಗೂ ಭಾಗ್ಯವನ್ನೇ ಕಾಣದ ಇಲ್ಲಿನ ಜನರು ನೆಚ್ಚಿಕೊಂಡಿರುವುದು ಅನತಿದೂರದಲ್ಲಿ ನೆಲೆಸಿರುವ ಗಡಿದಂ ಶ್ರೀ ವೆಂಕಟೇಶ್ವರ ಸ್ವಾಮಿ ಅವರನ್ನು ಮತ್ತೂ ತಮ್ಮ ಬೆವರನ್ನು.

    ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪರಗೋಡು-ಚಿತ್ರಾವತಿ ಅಣೆಕಟ್ಟೆ ದಾಟಿ ಎರಡುಮೂರು ನಿಮಿಷ ಕ್ರಮಿಸಿ ಬಸ್ಸಿನ ಕಿಟಕಿಯಿಂದ ಬಲಕ್ಕೆ ಇಣುಕಿದರೆ ದೂರದಲ್ಲಿ ಗಡಿದಂ ದೇಗುಲದ ರಾಜಗೋಪುರ ವಿರಾಜಮಾನವಾಗಿ ಕಾಣುತ್ತಿದೆ. ಆ ನೋಟವನ್ನು ಸ್ವಲ್ಪ ಮೊಟಕು ಮಾಡಿದರೆ ಕಲ್ಲುಬಂಡೆಗಳ ಗುಡ್ಡಂತೆ ಕಾಣುವ ಬೆಟ್ಟದ ಮುನ್ನೆಲೆಯಲ್ಲಿ ಮರಗಳ ದೊಡ್ಡ ಗುಂಪು ಗೋಚರವಾಗುತ್ತದೆ. ಆ ಹಸಿರುರಾಶಿ ನಡುವೆ ವಿಶಾಲವಾಗಿ ಮೈಚಾಚಿಕೊಂಡಿದೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು.

    ಈ ಪರಿ ಹಸಿರು ಹೊದಿಕೆ ಹೊದ್ದುಕೊಂಡು ತಣ್ಣಗಿರುವ ಈ ಕಾಲೇಜು ನನ್ನ ಪಾಲಿಗೆ ಅಕ್ಷರಶಃ ಅಕ್ಷರಕಾಶಿಯೇ. ಮೂರು ವರ್ಷ ನಾನೂ ಆ ಕಾಶಿಯಲ್ಲೇ ಇದ್ದೆ. ದೇವರನ್ನೇ ನಂಬದ ವಿಚಾರವಾದಿ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರು ಅದರ ನಿರ್ಮಾತೃ. ತಮ್ಮ ನರನಾಡಿಗಳಲ್ಲೂ ವಿಜ್ಞಾನವನ್ನೇ ತುಂಬಿಕೊಂಡು ವೈಚಾರಿಕತೆಯನ್ನೇ ಉಸಿರಾಡುತ್ತಿದ್ದ ಅವರು ವಿಶಾಲ ಹೃದಯದಿಂದ ಹಳ್ಳಿಮಕ್ಕಳ ಉದ್ಧಾರಕ್ಕಾಗಿ ಕಾಲೇಜನ್ನು ಕಟ್ಟಿಸಿದ್ದರು. ಬಡಮಕ್ಕಳು, ಅದರಲ್ಲೂ ರೈತಮಕ್ಕಳಿಗೇ ಒಳ್ಳೆಯ & ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಆಶಿಸಿ ಈ ಮಹತ್ಕಾರ್ಯ ಮಾಡಿದ್ದರು.

    ಹೆಜ್ಜೆಗೆ ಒಂದುನೂರು ತೆಲುಗು ಶಬ್ದಗಳೇ ಕೇಳುವ ಬಾಗೇಪಲ್ಲಿಗೆ 1976ರಲ್ಲಿ ನ್ಯಾಷನಲ್ ಕಾಲೇಜು ಬಂದಿತು. ಎಚ್ಚೆನ್ ಎಂಬ ʼಶಿಕ್ಷಣಸಂತʼ ಅಲ್ಲಿಗೆ ಹೆಜ್ಜೆ ಇಟ್ಟಿದ್ದು ಆಗಲೇ. ಆ ಹೊತ್ತಿಗೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ದುಡ್ಡಿದ್ದವರ ಪಾಲಾಗುವ ಅನಿಷ್ಠ ಪರ್ವ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯವ್ಯಾಪಿ ಜಾತಿಗೊಂದು ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದ್ದ, ಡೊನೇಷನ್ ಹಾವಳಿಗೆ ಗಟ್ಟಿ ತಳಪಾಯ ಹಾಕುತ್ತಿದ್ದ ವೇಳೆಯಲ್ಲೇ ಎಚ್ಚೆನ್ ಅವರು ಕನ್ನಡಕ್ಕೆ ಹತ್ತಿರವಿದ್ದರೂ ಅದರ ಸೊಗಡಿನಿಂದ ಬಹುದೂರವಿದ್ದ ಬಾಗೇಪಲ್ಲಿಯಲ್ಲಿ ಕಾಲೇಜಿಗೆ ಅಡಿಗಲ್ಲು ಹಾಕಿಬಿಟ್ಟರು. ಅವರ ನಿರ್ಧಾರ ಕೇಳಿ ಮೂಗುಮುರಿದವರೆಷ್ಟೋ.. ಲೆಕ್ಕವಿಲ್ಲ. ಬೆಂಗಳೂರಿನಲ್ಲಿ ಬಿಟ್ಟು ನಮ್ಮೂರಲ್ಲಿ ಈ ಮನುಷ್ಯ ಏಕೆ ಕಾಲೇಜು ಮಾಡುತ್ತಿದ್ದಾರೆಂದು ಸ್ಥಳೀಯರೂ ಚಕಿತರಾಗಿ ಅವರನ್ನು “ಬಂಧುಗಳೇ ಇಲ್ಲದ ಭೈರಾಗಿ” ಎಂದು ಮೂದಲಿಸಿದ್ದರು.

    ಆದರೆ, ಎಚ್ಚೆನ್ ಆಲೋಚನೆಯೇ ಬೇರೆಯಾಗಿತ್ತು. ಅನಕ್ಷರತೆ, ಬಡತನ, ಬರ ಮತ್ತು ತೆಲುಗು ಮೈವೆತ್ತಿದ್ದ ಆ ನೆಲಕ್ಕೆ ಈ ಕಾಲೇಜು ನಿಜಕ್ಕೂ ಒಂದು ಓಯೆಸಿಸ್. ’ಅ’ಭಾಗ್ಯನಗರದ ಆಸುಪಾಸಿನ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಎಚ್ಚೆನ್ ಭಾಗ್ಯದ ಬಾಗಿಲನ್ನೇ ತೆರೆದರು. ಆಗ ಪಿಯುಸಿ ದಾಟಿ ಡಿಗ್ರಿ ಬೇಕಿದ್ದರೆ 42 ಕಿ.ಮೀ ದೂರದ ಚಿಕ್ಕಬಳ್ಳಾಪುರ ಮುನಿಸಿಪಲ್ ಕಾಲೇಜಿಗೆ ಹೋಗಬೇಕಿತ್ತು. ಆಗ ಎಂತಹ ದುಃಸ್ಥಿತಿ ಇತ್ತೆಂದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬಾಗೇಪಲ್ಲಿ ಹೆದ್ದಾರಿಯ ಹೆಬ್ಬಾಗಿಲು ಟಿಬಿ ಕ್ರಾಸ್ ದಾಟಿಸುವುದು ಕೂಡ ಕಷ್ಟವಿದ್ದ ಕಾಲವದು. ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಹತ್ತಕ್ಕೆ ಇಲ್ಲವೇ ಪಿಯುಸಿ ಆದ ಕೂಡಲೇ ಹಸೆಮಣೆಗೆ ಸಿದ್ಧರಾಗಿಬಿಡುತ್ತಿದ್ದರು. “ನಮ್ಮ ಮಗಳದ್ದು ಪಿಯುಸಿ ಆಯಿತು, ಎಸ್ಸೆಸ್ಸೆಲ್ಸಿ ಪಾಸಾಯಿತು, ಇನ್ನೇನಿದ್ದರೂ ಈ ವರ್ಷ ಮದುವೆ” ಎಂದು ಅಪ್ಪ-ಅಮ್ಮ ಹೇಳುತ್ತಿದ್ದ ಸಮಯವದು. ಹುಡುಗರ ಕಥೆಯೂ ಹೆಚ್ಚೂಕಡಿಮೆ ಅಷ್ಟೇ.

    ನಮ್ಮ ಎಚ್ಚೆನ್ ಇದನ್ನು ಬದಲಾಯಿಸಿದರು. ಬಾಗೇಪಲ್ಲಿ ಎಂಬ ಗಡಿಪಟ್ಟಣಕ್ಕೆ ಬರಲು ತಾಯಿ ಸರಸ್ವತಿಗೆ ಬಾಗಿಲು ತೆರೆದದ್ದು ಅವರೇ. ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ʼಜ್ಞಾನಗಂಗೆʼಯನ್ನು ಅವರು ಹರಿಯುವಂತೆ ಮಾಡಿದ್ದು ಹೀಗೆ.

    ಗೌರಿಬಿದನೂರಿನಲ್ಲೂ ಹೀಗೆ ಆಯಿತು. 1964ರಲ್ಲಿಯೇ ಅಲ್ಲೂ ನ್ಯಾಷನಲ್ ಕಾಲೇಜು ಸ್ಥಾಪಿಸಿ ಉಳ್ಳವರ ಮನೆಗಳ ಕೂಲಿಗಳಾಗುತ್ತಿದ್ದ ಹುಡುಗರ ಕೈಗೆ ಪೆನ್ನು-ಪುಸ್ತಕ ಕೊಟ್ಟರು ಎಚ್ಚೆನ್. ಡಿಗ್ರಿಯ ಉತ್ಕಟತೆ ಇದ್ದರೂ ಗತ್ಯಂತರವಿಲ್ಲದೆ ಮದುವೆಗೆ ಕೊರಳೊಡ್ಡುತ್ತಿದ್ದ ಯುವತಿಯರು ಕಾಲೇಜಿನ‌ ಲಾಬ್‌ಗಳಲ್ಲಿ ಪ್ರಯೋಗ ಮಾಡತೊಡಗಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ, ಅದರಲ್ಲೂ ಕನ್ನಡದ ಕಸುವೇ ಕಾಣದ ನೆಲದಲ್ಲಿ ಶಿಕ್ಷಣ ಕೈಂಕರ್ಯವನ್ನು ಯಶಸ್ವಿಯಾಗಿ ಶುರು ಮಾಡಿದ್ದರು ಅವರು. ಒಣಗಿ ಬೆಂಡಾಗಿ ಹೋಗಿದ್ದ ಪಿನಾಕಿನಿ ನದಿಯ ತಟದಲ್ಲಿ ಜ್ಞಾನವೃಕ್ಷಗಳು ಚಿಗುರೊಡೆತೊಡಗಿದ್ದು ಹೀಗೆ.

    ಅವರೆಡೂ ಕಾಲೇಜುಗಳನ್ನೂ ಸ್ಥಾಪಿಸಿದಾಗ ಕೋಲಾರ ಜಿಲ್ಲೆಯೊಂದೇ ಇತ್ತು. ಆಗ ಗೌರಿಬಿದನೂರು, ಬಾಗೇಪಲ್ಲಿ ತಾಲೂಕುಗಳು ಕರ್ನಾಟಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳೆಂಬ ಕುಖ್ಯಾತಿಗೆ ಒಳಗಾಗಿದ್ದವು. ಆದರೂ ಎಚ್ಚೆನ್ ಅವರು ಇವೆರಡೂ ಪ್ರದೇಶಗಳಿಗೆ ಜ್ಞಾನಗಂಗೆಯನ್ನು ಹರಿಸಿ ಶೈಕ್ಷಣಿಕವಾಗಿ ಮರುಭೂಮಿಯಾಗಿದ್ದ ನೆಲದಲ್ಲಿ ಜ್ಞಾನಸೆಲೆಯನ್ನು ಉಕ್ಕಿಸಿದ್ದರು. ಓದಿನ, ಅಪರಿಮಿತ ಜ್ಞಾನದ ಹಸಿವಿನಿಂದ ಹೊಸೂರು ಎಂಬ ಹಳ್ಳಿಯಿಂದ ಬೆಂಗಳೂರಿಗೆ 85 ಕಿ.ಮೀ ನಡೆದಿದ್ದ ಅವರು ಅದಕ್ಕೆ ಪ್ರತಿಯಾಗಿ ಈ ಎರಡು ತಾಲೂಕುಗಳಿಗೆ ಎರಡು ಉತ್ಕೃಷ್ಟ ಕಾಲೇಜುಗಳನ್ನು ಕೊಟ್ಟು ಅಜರಾಮರರಾದರು.


    ಇನ್ನು ನಾನು. ಗುಡಿಬಂಡೆಯಲ್ಲಿ ಪಿಯುಸಿ ಮುಗಿಸಿ ಡಿಗ್ರಿಗೆ ಯಾವ ಕಾಲೇಜು ಸೇರಬೇಕೆಂಬ ಪರಮ ಗೊಂದಲದಲ್ಲಿದ್ದ ಸಂದರ್ಭವದು. ಚಿಕ್ಕಬಳ್ಳಾಪುರದ ಮುನಿಸಿಪಲ್ ಕಾಲೇಜಿಗೆ ಸೇರುವಂತೆ ಕೆಲ ಗೆಳೆಯರು ಹೇಳಿದ್ದರು. ಅದೇ ಹೊತ್ತಿಗೇ ನಮ್ಮ ಗುಡಿಬಂಡೆಯಲ್ಲಿ ಎಚ್ಚೆನ್ ಹೆಸರು ಜನಜನಿತವಾಗಿತ್ತು. ನನ್ನ ಜತೆಯಲ್ಲೇ 10ನೇ ತರಗತಿ ಓದಿದ್ದ ಎಚ್.ನರಸಿಂಹಯ್ಯ ಎಂಬ ಗೆಳೆಯನ ಮೂಲಕ ಎಚ್ಚೆನ್‌ ಅವರ ಹೆಸರು ನನಗೆ ಗೊತ್ತಾಯಿತು.

    ಹೀಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸೇರಿದ ನನಗೆ ಅನೇಕ ಸಲ ಎಚ್ಚೆನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಪ್ರಥಮ ಪದವಿಯಲ್ಲಿದ್ದಾಗಲೇ ನನಗೆ ಅವರ ದರ್ಶನವಾಯಿತು. ಆಮೇಲೆ ವರ್ಷಕ್ಕೆರಡು ಅಥವಾ ಮೂರು ಬಾರಿಯಾದರೂ ಅವರನ್ನು ನೋಡುವ ಭಾಗ್ಯವಿರುತ್ತಿತ್ತು. ಮುಖ್ಯವಾಗಿ ಎನ್ನೆಸ್ಸೆಸ್ ಕ್ಯಾಂಪಿನ ಸಮಾರೋಪಕ್ಕೆ ಅವರು ಬರುವುದು ತಪ್ಪುತ್ತಿರಲಿಲ್ಲ. ಇದಾದ ಮೇಲೆ ಬೆಂಗಳೂರಿಗೆ ಬಂದಾಗ ಬಸವನಗುಡಿ ನ್ಯಾಷನಲ್ ಕಾಲೇಜು ಹಾಸ್ಟೆಲ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಒಂದು ದಿನ ಕಲ್ಲುಪ್ಪು ಬೆರೆಸಿದ್ದ ಬಿಸಿನೀರಿನಲ್ಲಿ ಕಾಲಿಟ್ಟುಕೊಂಡು ಮರದ ಕುರ್ಚಿ ಮೇಲೆ ಕೂತಿದ್ದ ಅವರನ್ನು ನೋಡಿದಾಗ ಮಾತು ಹೊರಡದೇ ತಡವರಿಸಿದ್ದೆ. ‘ಕಾಲು ನೋವು ಕಣಪ್ಪಾ, ಉಪ್ಪುನೀರು ಬಿಸಿ ಒಳ್ಳೆಯದು’ ಎಂದು ಅವರೇ ಹೇಳಿದ್ದರು. ತಿನ್ನಲೊಂದು ಹಣ್ಣು ಕೊಟ್ಟರು. ಅದಾದ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ನನ್ನ ಬಸವನಗುಡಿ ಯಾತ್ರೆ ತಪ್ಪುತ್ತಿರಲಿಲ್ಲ. ಆಗೆಲ್ಲ ಎಚ್ಚೆನ್ ಭೇಟಿ ಆಗದಿದ್ದರೆ ಬಸವನಗುಡಿ ಕಾಲೇಜನ್ನೇ ಕಣ್ತುಂಬಿಕೊಂಡು ಊರಿಗೆ ಮರಳುತ್ತಿದ್ದೆ.


    ಪತ್ರಿಕೋದ್ಯಮಕ್ಕೆ ಬಂದ ಮೇಲೆ ಅವರನ್ನು ನಿರಂತರವಾಗಿ ಭೇಟಿಯಾಗುವುದು, ಅವರ ಭಾಷಣಗಳನ್ನು ವರದಿ ಮಾಡುವುದು ಶುರುವಾಯಿತು. ಆ ಲಗಾಯ್ತಿನಿಂದ ನನಗೆ ಅವರ ಅರಿವು ಇನ್ನೊಂದು ಮಜಲು ಮುಟ್ಟಿತು. ಎಚ್.ಡಿ. ದೇವೇಗೌಡರ ಕ್ಯಾಬಿನೇಟ್‌ನಲ್ಲಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ್‌ರನ್ನು ಒಮ್ಮೆ ಎಚ್ಚೆನ್ ಅವರು ಹೊಸೂರು ಶಾಲೆಗೆ ಭಾಷಣಕಾರರನ್ನಾಗಿ ಕರೆತಂದಿದ್ದರು. ನಾನು ಪತ್ರಕರ್ತನಾಗಿ ಅವರ ಭಾಷಣವನ್ನು ಮೊದಲು ವರದಿ ಮಾಡಿದ್ದು ಅದೇ ಮೊದಲು. ಚಿಕ್ಕಬಳ್ಳಾಪುರದ ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ ಸಾರಥ್ಯದಲ್ಲಿ ಹೊಸೂರಿಗೆ ಚಿಕ್ಕಬಳ್ಳಾಪುರ ಪತ್ರಕರ್ತರ ಸವಾರಿ ಹೋಗಿತ್ತು. ಹಿರಿಯರಾದ ಭವಾನಿ ಲಕ್ಷ್ಮೀನಾರಾಯಣ ಮತ್ತವರ ಕ್ಯಾಮೆರಾ ಹಾಗೂ ವಯಸ್ಸಿನಲ್ಲಿ ಕೊಂಚ ಹಿರಿಯರಾದ ʼಸಂಯುಕ್ತ ಕರ್ನಾಟಕʼ ವರದಿಗಾರ ಜಯರಾಂ ಜತೆಯಲ್ಲಿದ್ದರು.

    ಮಾಮೂಲಿಯಾಗಿ ಸಚಿವರು ಬಂದರೆ ಅವರ ಭಾಷಣವನ್ನೇ ಸುದ್ದಿ ಮಾಡುತ್ತಿದ್ದ ದಿನಗಳವು. ನನಗೂ ಅದೇ ಸರಿ ಅಂತ ನಂಬಿಕೆ. ಆದರೆ, ಕಾರ್ಯಕ್ರಮ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ವಾಪಸ್ ಬಂದು ಸುದ್ದಿ ಬರೆದು ಮುಗಿಸಿದ ಮೇಲೆ ಎಚ್ಚೆನ್ ಹೇಳಿದ್ದೇ ʼಇಂಟ್ರೋʼ ಆಗಿ ದೇಶಾವರಿಯಾಗಿ ಭಾಷಣ ಮಾಡಿದ ಎಂ.ಪಿ.ಪ್ರಕಾಶ್ ಅವರ ಮಾತುಗಳೆಲ್ಲ ಸಬ್ ಹೆಡ್ಡಿಗೆ ಬಂದಿದ್ದವು. “ಹಳ್ಳಿ ಮಕ್ಕಳು ಓದಬೇಕು, ಯಾಕೆ?” ಎಂದು ಕಾರಣಗಳನ್ನು ಹೇಳುತ್ತಲೇ ಹೊಸೂರು ನ್ಯಾಷನಲ್‌ ಶಾಲೆ ಕಥೆಯನ್ನು ಹೇಳಿದ್ದರು ಎಚ್ಚೆನ್.‌ ನನ್ನ ಮೇಲೆ ಅಚ್ಚಳಿಯದೇ ಬಿದ್ದ ಮುದ್ರೆ ಅದು.

    ಮತ್ತೊಂದು ಪ್ರಸಂಗ. ಆವತ್ತೊಂದು ದಿನ ನನಗೆ ಬೆಳಗ್ಗೆಯೇ ಮುಖ್ಯಮಂತ್ರಿ ನಿವಾಸಕ್ಕೆ ಅಸೈನ್‌ಮೆಂಟಿತ್ತು. ʼಸಂಯುಕ್ತ ಕರ್ನಾಟಕʼ ಪತ್ರಿಕೆಯ ಮುಖ್ಯ ವರದಿಗಾರ ಯಗಟಿ ಮೋಹನ್ ನನಗೆ ಮುಖ್ಯಮಂತ್ರಿಗಳ ಆಧಿಕೃತ ನಿವಾಸ ಮತ್ತು ಕಚೇರಿ ʼಅನುಗ್ರಹʼ, ʼಕೃಷ್ಣಾʼಕ್ಕೆ ಕಳಿಸಿದ್ದರು. ನಾನು ಬೆಳಗ್ಗೆ ಎಂಟೂವರೆಗೇ ಅನುಗ್ರಹದಲ್ಲಿದ್ದೆ. ಮುಖ್ಯಮಂತ್ರಿಗಳ ಫೋಟೊಗ್ರಾಫರ್ ನಟರಾಜ್ ಅವರು ಗಡಿಬಿಡಿಯಿಂದ ʼಅನುಗ್ರಹʼದ ಗೇಟಿಗೆ ಓಡಿಬಂದರು. “ಯಾಕೆ? ಯಾರು ಬರ್ತಾರೆ ಸರ್” ಅಂತ ಕೇಳಿದೆ. ಯಾರೋ ಹಿರಿಯರು, ಗಾಂಧೀವಾದಿಗಳು ಬರ್ತಾರಂತೆ ಅಂದರು ಅವರು. ಕೆಲ ಕ್ಷಣಗಳಲ್ಲೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ʼಅನುಗ್ರಹʼದ ಗೇಟಿಗೆ ಬಂದು ನಿಂತರು. ಆಗ ಅಂಬಾಸಿಡರ್ ಕಾರಿನಲ್ಲಿ ಬಂದು ಇಳಿದವರು ನಮ್ಮ ಎಚ್ಚೆನ್. ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಅವರು ಬಂದಿದ್ದರು. ಸುಮಾರು ಹತ್ತದಿನೈದು ನಿಮಿಷಗಳ ಮಾತುಕತೆಯ ನಂತರ ಕೃಷ್ಣ ಅವರು ಗೇಟಿನವರೆಗೂ ಬಂದು ಎಚ್ಚೆನ್ ಅವರನ್ನು ಬೀಳ್ಕೊಟ್ಟರು. ನಾನು ಅವರಿಗೆ ನಮಸ್ಕಾರ ಹಾಕಿ, “ಸರ್, ನನ್ನ ಹೆಸರು ಚನ್ನಕೃಷ್ಣ, ಬಾಗೇಪಲ್ಲಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿ” ಎಂದೆ. ಅವರಿಗೆ ಬಹಳ ಸಂತೋಷವಾಯಿತು. ನನ್ನ ಬೆನ್ನುತಟ್ಟಿದರು. ಪಕ್ಕದಲ್ಲೇ ಇದ್ದ ಕೃಷ್ಣ ಅವರು ನನ್ನಡೆ ನೋಡಿ ನಗೆಬೀರಿ, “ನೋಡಿ, ನಿಮ್ಮ ಶಿಷ್ಯರೂ ಇಲ್ಲೂ ಇದ್ದಾರೆ” ಎಂದರು. ನನ್ನ ಹೆಮ್ಮೆ, ಆನಂದಕ್ಕೆ ಪಾರವೇ ಇಲ್ಲ.

    ಎಚ್ಚೆನ್ ಎಂದರೆ ಅಷ್ಟು ಎತ್ತರ. ಅವರ ಸರಳತೆ, ಪ್ರಾಮಾಣಿಕತೆ, ಪ್ರಖರ ವಿಚಾರ, ನಂಬಿದ ಗಾಂಧೀವಾದ, ತೊಟ್ಟ ಖಾದಿ, ಆಡಿದ ಮಾತು… ಎಲ್ಲವನ್ನೂ ತಮ್ಮ ಕೊನೆಕ್ಷಣದವರೆಗೂ ಜೀವಿಸಿ ಬಿಟ್ಟುಹೋಗಿದ್ದಾರೆ. ಕಾಲೇಜಿನಲ್ಲಿದ್ದಷ್ಟೂ ದಿನ ಪಾಠ ಮಾಡದಿದ್ದರೂ ನಮಗೆ ಅವರು ಗುರುವೇ ಆಗಿದ್ದರು. ನಮಗೆ ಬೋಧಿಸುತ್ತಿದ್ದ ಎನ್ನೆನ್, ಎಚ್ಚಾರ್ಕೆ, ನಿಂಗಪ್ಪ, ರಾಜು, ಎಲ್ಲಾರ‍್ಕೆ, ಆರ‍್ಟಿವಿ ಮತ್ತೂ ಕಲಿಸದಿದ್ದರೂ ಜೀವನದ ಪಾಠ ಹೇಳಿಕೊಟ್ಟ ಡಿಎಸ್, ಬಿಪಿವಿ, ಕೆಟಿವಿ, ಸಿದ್ದಪ್ಪ ಅವರೆಲ್ಲರಲ್ಲೂ ನಾನು ಕಂಡಿದ್ದು ಎಚ್ಚೆನ್ ಎಂಬ ಸ್ಫೂರ್ತಿಯ ಸೆಲೆಯನ್ನೆ.

    2020ರ ಜೂನ್ 6ರಂದು ಎಚ್ಚೆನ್ ಅವರ ಜನ್ಮಶಮಾನೋತ್ಸವವಿತ್ತು. ಆವತ್ತೇ ನನಗೆ ಇದೆಲ್ಲವನ್ನು ಬರೆಯಲಾಗದ್ದಕ್ಕೆ ವಿಷಾದವಿದೆ. ಕೆಲ ತಿಂಗಳ ಹಿಂದೆ ನನ್ನ ಹಿರಿಯ ಮಗಳ ಜತೆ ಬಸವನಗುಡಿ ಕಾಲೇಜಿಗೆ ಹೋಗಿದ್ದೆ. ನನ್ನ ಎಕಾಮಿಕ್ಸ್ ಗುರುವರ್ಯರಾದ ಎಚ್ಚಾರ‍್ಕೆ (ಎಚ್.ಆರ್.ಕೃಷ್ಣಮೂರ್ತಿ) ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಕುರ್ಚಿಯಲ್ಲಿದ್ದರು. ನನ್ನ ಕಂಗಳು ತುಂಬಿಬಂದಿದ್ದವು. ಗುರುವಲ್ಲದ ಗೆಳೆಯ ಪ್ರಕಾಶ್, ಬಾಗೇಪಲ್ಲಿಯಿಂದ ಬಸವನಗುಡಿಗೆ ಶಿಫ್ಟ್ ಆಗಿದ್ದರು. ಎಚ್ಚೆನ್ ಕೋಣೆಯನ್ನು ತೋರಿಸಿದರು. ಅಲ್ಲಿ ನಿಲ್ಲಿಸಿ ನಮ್ಮಿಬ್ಬರ ಫೋಟೋ ತೆಗೆದರು. ಎಚ್ಚೆನ್ ಮಲಗಿದ್ದ ಕಾಟ್, ಹಾಸಿಗೆ, ದಿಂಬು, ಮಿಕ್ಸಿ, ನೀರಿನ ಫಿಲ್ಟರ್, ಗ್ಲಾಸು ಜತೆಗೆ ಅವರು ಧರಿಸಿದ್ದ ಉಡುಪುಗಳು ಅಲ್ಲೇ ಇವೆ, ಜತನವಾಗಿ.. ಬಹು ಜೋಪಾನವಾಗಿ. ಜತೆಗೆ ಅವರು ಬಿಟ್ಟುಹೋಗಿರುವ ಸ್ಮೃತಿಗಳು ಮತ್ತು ಮೌಲ್ಯಗಳು ಕೂಡ.


    ಗಾಂಧೀಜಿ ಅವರ ಬಗ್ಗೆ ಅಲ್ಬರ್ಟ್ ಐನ್‌ಸ್ಟಿನ್ ಹೀಗೆ ಹೇಳಿದ್ದರು..
    “ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ನಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು”.

    ಇದೇ ಮಾತನ್ನು ಎಚ್ಚೆನ್ ಅವರಿಗೂ ಅನ್ವಯಿಸಿ ಹೀಗೆ ಹೇಳಬಹುದು..
    “ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು. ಡೊನೇಷನ್ ಇಲ್ಲದ ವ್ಯವಸ್ಥೆ ಬರಬೇಕು ಎಂದು ಕನಸು ಕಂಡಿದ್ದ, ಅದಕ್ಕಾಗಿ ಜೀವಿತಾವಧಿಯುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ವ್ಯಕ್ತಿಯೊಬ್ಬರು ಕ್ಯಾಪಿಟೇಷನ್ ಶಿಕ್ಷಣ ವ್ಯವಸ್ಥೆಯನ್ನೇ ಮೈವೆತ್ತ ಕರ್ನಾಟಕದಂಥ ರಾಜ್ಯದಲ್ಲಿ ಜೀವಿಸಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು..”

    ಉತ್ಪ್ರೇಕ್ಷೆ ಏನಲ್ಲ, ಇದು ಸತ್ಯವೂ ಹೌದು. ಶಿಕ್ಷಣ ಇವತ್ತು ಉಳ್ಳವರ ಜಹಗೀರು. (ಬರಹ ಕೃಪೆ :CKNEWSNOW.COM)

    ಕಾರ್ಯ ಸಾಧನೆಗೆ ಅಡ್ಡದಾರಿ ಎಂದಿಗೂ ಸಲ್ಲ

    ಸುಮಾ ವೀಣಾ

    ತನ್ನಿಕ್ಕಿ ದ ತತ್ತಿಯನ್ ತಾನೆ ನೊಣೆವಂತಕ್ಕುಂ– ಪ್ರಸ್ತುತ ಸಾಲು ಪಂಪನ ‘ವಿಕ್ರಮಾರ್ಜುನ ವಿಜಯ’ದ  ದಶಮಾಸ್ವಾಸದಲ್ಲಿ  ಉಲ್ಲೇಖವಾಗಿರುವಂಥದ್ದು.  ಕುರುಕುಲ ಪಿತಾಮಹಾ ಭೀಷ್ಮರು  ಮಹಾಭಾರತ ಯುದ್ಧ ನಡೆಯುವ ಪೂರ್ವದಲ್ಲಿ   ದಂಡನಾಯಕನ ಪಟ್ಟ ಕಟ್ಟುವ ಸಂದರ್ಭದಲ್ಲಿ   ಉಭಯಸಂಕಟ ಅನುಭವಿಸುವ ಸಂದರ್ಭದಲ್ಲಿದೆ.  ಪಾಂಡವರು ಹಾಗು ಕೌರವರು ಕುರುಕುಲಪಿತಾಮಹ ಭೀಷ್ಮರಿಗೆ ಮೊಮ್ಮಕ್ಕಳೇ .ಅವರುಗಳೆ ಪರಸ್ಪರ ಹೋರಾಟ ಮಾಡಿಕೊಳ್ಳುತ್ತಿದ್ದಾರೆ  ಅವರನ್ನು ರಕ್ಷಿಸಲಾಗುತ್ತಿಲ್ಲವಲ್ಲ.  ಕೈಕಟ್ಟಿದಂಥ ಪರಿಸ್ಥಿತಿ ಎಂದು ಭೀಷ್ಮರು ನೊಂದುಕೊಳ್ಳುತ್ತಾರೆ. ಹಾವು ತಾನೆ ಇಟ್ಟ ಮೊಟ್ಟೆಗಳನ್ನು ತಾನೆ ನಷ್ಟಮಾಡಿಕೊಂಡು ತನ್ನ ವಂಶವನ್ನೆ  ನಾಶಮಾಡಿಕೊಳ್ಳುವಂತೆ ನಾನು ನನ್ನ ವಂಶವನ್ನು ನಾನೆ ನಾಶ ಮಾಡಿಕೊಳ್ಳುತ್ತಿದ್ದೇನಲ್ಲಾ ಯಾರಿಗೂ ಬರಬಾರದ ಧರ್ಮ ಸಂಕಟ  ಎಂದು  ದುಃಖಿಸುತ್ತಾರೆ.

    ಕೆಲವೊಮ್ಮೆ ಹಾಗೆ ನಮ್ಮ ತಪ್ಪುಗಳೆ, ನಾವೆ ಮಾಡಿಕೊಳ್ಳುವ ಎಡವಟ್ಟುಗಳೆ   ನಮಗೆ ಉರುಳಾಗುವ ಸಂದರ್ಭಗಳು ಬರುತ್ತವೆ. “ಅವರವರ ತಲೆಯ ಮೇಲೆ ಅವರವರವೇ ಕೈಗಳು” ಅನ್ನುತ್ತಾರಲ್ಲ ಹಾಗೆ. ಇಲ್ಲಿ ಮೋಹಿನ ಭಸ್ಮಾಸುರರ ಕತೆ ನೆನಪಾಗುತ್ತಾದೆ .  ವಿಷ್ಣು ಮೋಹಿನಿ ಅವತಾರ ತಾಳಿದ್ದೆ ಭಸ್ಮಾಸುರನ ಸಂಹಾರಕ್ಕೆ ಅವನು ಯಾವಾಗ ಅವನ ತಲೆ ಮೇಲೆ ಕೈಯನ್ನಿಟ್ಟುಕೊಳ್ಳುವನೋ ಅಂದೇ ಮರಣಿಸುವನು ಎಂಬ ವರವನ್ನು ಪಡೆದಿರುತ್ತಾನೆ.   ಮಿತಿಮೀರಿದ ಭಸ್ಮಾಸುರನ ಅಟ್ಟಹಾಸ ಸಹಿಸಲು  ಸಾಧ್ಯವಾಗದೇ ಹೋದಾಗ ಮೋಹಕ ರೂಪ ಅವತರಿಸಿ ಬಂದ  ವಿಷ್ಣು ನೃತ್ಯ ಹೇಳಿಕೊಡುವ ನೆಪದಲ್ಲಿ  ಅವನ ತಲೆಯ  ಮೇಲೆ ಕೈಇಡುವಂತೆ  ಮಾಡುತ್ತಾನೆ. ಭಸ್ಮಾಸುರನನ್ನು ಸಂಹರಿಸುತ್ತಾನೆ.

    ಭೀಷ್ಮರ   ಉಭಯಸಂಕಟ,  ಭಸ್ಮಾಸುರನ  ಅಟ್ಟಹಾಸ ಬೇರೆ ಬೇರೆ ಸನ್ನಿವೇಶಗಳು.   ಪ್ರಸ್ತುತ ಕಾಲಘಟ್ಟದಲ್ಲೂ  ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲೂ  “ತನ್ನಿಕ್ಕಿದ ತತ್ತಿಯನೆ ತಾನೆ ನೊಣವಂತಕ್ಕುಂ” ಎಂಬ ಮಾತು ಅಕ್ಷರಷಃ ಅನ್ವಯಿಸುತ್ತದೆ. ಮಾನವ ಸಂಶೋಧನೆಗಳನ್ನು ಮಾಡುವುದು    ಜೀವಪರ ಕಾಳಜಿಯಿಂದ .ಜನರ   ಉಪಯೋಗಕ್ಕೆ ಬರುವಂತೆ. ಆದರೆ ಅವುಗಳೆ ಮನುಕುಲದ ನಾಶಕ್ಕೆ ಕಾರಣವಾಗಿ ಅಪಸವ್ಯಗಳಾಗಿ ಕಾಡುತ್ತಿವೆ.

    ಉದಾಹರಣೆಗೆ  ಪ್ರಸವ ಪೂರ್ವ ಸ್ಕ್ಯಾನಿಂಗ್ ಬೆಳೆಯಲಿರುವ  ಭ್ರೂಣದ ಆರೋಗ್ಯ  ಪರೀಕ್ಷೆಗಾಗಿರುವುದು ಇದನ್ನೆ  ಕೆಲವು ಅವಿವೇಕಿಗಳು ಲಿಂಗ ಪತ್ತೆಗೆ ದುರ್ಬಳಕೆ ಮಾಡಿಕೊಂಡ ಅನೇಕ  ಸಾಲು ಸಾಲು ಉದಾಹರಣೆಗಳಿವೆ. ಉಳಿದಂತೆ  ನಮ್ಮ ನಾಗರಿಕರೂ ಕೂಡ  ಸುಲಭದಲ್ಲಿ ಕಾರ್ಯ ಸಾಧಸಿಕೊಳ್ಳಲು ಅಡ್ಡದಾರಿಗಳನ್ನು, ನ್ಯಾಯವಲ್ಲದ  ಉಪ ಮಾರ್ಗಗಳನ್ನು ಹಿಡಿಯುತ್ತಾರೆ . ಇವು  ಕ್ರಮೇಣ ಅವರಿಗೇ ತೊಡಕುಗಳಾಗುತ್ತವೆ“ತಾನೇ ತೋಡಿದ ಹಳ್ಳದಲ್ಲಿ ತಾನೆ ಬಿದ್ದಂತೆ”   ಎಂದು  ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಮನುಷ್ಯ ಸದಾ ನೇರ- ನಿಷ್ಟರ ಜೀವನ ನಡೆಸಬೇಕು , ಅನ್ಯಮಾರ್ಗಿಗಳಾದರೆ, ದಾಕ್ಷಿಣ್ಯಕ್ಕೆ ಕಟ್ಟುಬಿದ್ದರೆ  ತೊಡಕುಗಳು ಅವರಿಸುತ್ತವೆ ಎಂಬ ಸೂಕ್ಷ್ಮವನ್ನು ಅರಿಯಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಬ್ಯಾಂಕಿಂಗ್‌ ವಲಯದಲ್ಲಿ ಸಾಲದ ಬೇಡಿಕೆ ಕುಸಿಯುವುದೇ?

    ವಿತ್ತೀಯ ಪೇಟೆಯಲ್ಲಿ ಸಂಪನ್ಮೂಲ ಸಂಗ್ರಹಣೆ, ವಿತರಣೆ, ಸುಧಾರಣೆಗಳು, ಫಂಡಿಂಗ್‌ ಮೂಲಕ ಹರಿದುಬರುತ್ತಿರುವ ಹಣದ ಗಾತ್ರ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಗಳು ವಿಶೇಷವಾಗಿ ಖಾಸಗಿ ಬ್ಯಾಂಕ್‌ ಗಳು ಸಾಲಗಳ ಬೇಡಿಕೆಯ ಕೊರತೆಯನ್ನೆದುರಿಸಬಹುದೆಂದೆನಿಸುತ್ತದೆ. ಅವುಗಳು ತಮ್ಮ ಸಂಪಾದನೆಯನ್ನು ಬೇರೆ ಮೂಲಗಳಿಂದ ಹೆಚ್ಚಿಸಿಕೊಳ್ಳುವಂತಹ ಸಂದರ್ಭವನ್ನೂ ತಳ್ಳಿಹಾಕುವಂತಿಲ್ಲ. ಕೊನೆಗೆ ಸಣ್ಣ ಸಣ್ಣ ಗ್ರಾಹಕರೇ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್‌ ವಲಯದ ಅಗ್ರಮಾನ್ಯ ಗ್ರಾಹಕರಾಗುವ ಸಾಧ್ಯತೆಯಿದೆ. ಈ ದಿಶೆಯಲ್ಲಿ ಜನಸಾಮಾನ್ಯರಲ್ಲಿಯೂ ಆರ್ಥಿಕ ಸಾಕ್ಷರತೆಯ ಅಗತ್ಯತೆ ಹೆಚ್ಚಿದೆ.

    ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ :ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ಕಾರ್ಲೈಲ್‌ ಗ್ರೂಪ್‌ ನ ಪ್ಲೂಟೋ ಇನವೆಸ್ಟ್ಮೆಂಟ್ಸ್‌ ನವರ ರೂ.3,185 ಕೋಟಿ, ಎಚ್‌ ಡಿ ಎಫ್‌ ಸಿ ಬ್ಯಾಂಕ್‌ ನ ಹಿಂದಿನ ಮುಖ್ಯಸ್ಥ ಅದಿತ್ಯ ಪುರಿಯವರ ರೂ.25 ಕೋಟಿ ಸೇರಿ ಒಟ್ಟು ರೂ.4,000 ಕೋಟಿ ರೂಪಾಯಿಗಳನ್ನು, ಪ್ರತಿ ಷೇರಿಗೆ ರೂ.390 ರಂತೆ ವಿತರಿಸಿ ತನಗೆ ಅಗತ್ಯವಿರುವ ಬಂಡವಾಳವನ್ನು ಪಡೆದುಕೊಂಡಿದೆ. ಇದರಿಂದ ಕಾರ್ಲೈಲ್‌ ಸಮೂಹವು ಸಂಸ್ಥೆಯಲ್ಲಿ ಶೇ.54.3 ರಷ್ಟರ ಭಾಗಿತ್ವವನ್ನು ಹೊಂದಿದಂತಾಗಿದೆ.

    Photo by MayoFi on Unsplash

    ಗಮನಿಸಿ: ಈ ಸಂಸ್ಥೆಗಳಿಗೆ ಪೇಟೆಯಲ್ಲಿ ಷೇರಿನ ದರ ರೂ.437 ರಲ್ಲಿರುವಾಗ ಷೇರನ್ನು ರೂ.390 ರಂತೆ ವಿತರಿಸಿದರೂ ಈ ಬೆಳವಣಿಗೆಗಳು ಷೇರಿನ ಬೆಲೆಯನ್ನು ವಾರಾಂತ್ಯದಲ್ಲಿ ರೂ.838 ನ್ನು ತಲುಪಿ ವಿಜೃಂಭಿಸಿದೆ. ಈ ಏರಿಕೆಯು ಸಧ್ಯದ ಕಂಪನಿಯ ಆಂತರಿಕ ಸಾಧನೆಯಿಂದಲ್ಲದೆ, ಕೇವಲ ಹೊರಗಿನ ಬೆಳವಣಿಗೆ ಮತ್ತು ನಿರೀಕ್ಷೆಗಳ ಕಾರಣದಿಂದಾಗಿದೆ. ಈ ರೀತಿ ನಿರಂತರವಾಗಿ ಗರಿಷ್ಠ ಆವರಣಮಿತಿಯಲ್ಲಿರುವ ಪರಿಸ್ಥಿತಿಯು ಅನಿರೀಕ್ಷಿತವಾದ ರೀತಿಯಲ್ಲಿ ಷೇರಿಂದ ಹೊರಬರಲು ಸಾಧ್ಯವಾಗದ ರೀತಿಯಲ್ಲಿ ಕನಿಷ್ಠ ಆವರಣಮಿತಿಗೆ ಪರಿವರ್ತನೆಯಾಗುವುದನ್ನೂ ತಳ್ಳಿಹಾಕುವಂತಿಲ್ಲ.

    ಹಿಂದಿನ ವರ್ಷ ಜುಲೈನಲ್ಲಿ ಆದಿತ್ಯ ಪುರಿಯವರು ತಮ್ಮ ನಿವೃತ್ತಿಯ ಸಂದರ್ಭದಲ್ಲಿ 74.2 ಲಕ್ಷ ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಷೇರುಗಳನ್ನು ಮಾರಿದ್ದರು.

    ವಿತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ಫಂಡಿಂಗ್‌ ಬೆಳವಣಿಗೆಗಳು:

    • ಆರೋಗ್ಯವಲಯದ ತಾಂತ್ರಿಕ ಕಂಪನಿ Breathe Well-Being ಒಂದು ದಶಲಕ್ಷ ಡಾಲರ್ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಅರ್ಬನ್‌ ಕಂಪನಿ ಎಂಬ ಗೃಹೋಪಯೋಗಿ ಸೇವೆಗಳ ಕಂಪನಿ 255 ದಶ ಲಕ್ಷ ಡಾಲರ್‌ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಆಫ್‌ ಬ್ಯುಸಿನೆಸ್‌ ಕಂಪನಿ B to B ವ್ಯವಹಾರಿಕ ಸಂಸ್ಥೆಯು ಜಪಾನಿನ ಸಾಫ್ಟ್‌ ಬ್ಯಾಂಕ್‌ ಮೂಲಕ 100 ರಿಂದ 150 ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ.
    • B to B ಸಾಗಾಣಿಕೆ ವಲಯದ ವ್ಯವಹಾರಿಕ ಸಂಸ್ಥೆ ಲೋಕಸ್‌ 50ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಕ್ರೇಜೋ ಡಾಟ್‌ ಫನ್‌ 3 ದಶಲಕ್ಷ ಡಾಲರ್‌ ಸೀಡ್‌ ಫಂಡಿಂಗ್‌ ಪಡೆದುಕೊಂಡಿದೆ
    • ಮುತೋಟ್‌ ಫೈನಾನ್ಸ್‌ ರೂ.5,000 ಕೋಟಿ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
    • ಜಪಾನಿನ ಸಾಫ್ಟ್‌ ಬ್ಯಾಂಕ್‌ 600 ರಿಂದ 700 ದಶ ಲಕ್ಷ ಡಾಲರ್‌ ನ್ನು ಫ್ಲಿಪ್‌ ಕಾರ್ಟ್‌ ನಲ್ಲಿ ಹೂಡಿಕೆ ಮಾಡಲಿದೆ.
    • ಟಾಟಾ ಮೋಟಾರ್ಸ್‌ 425 ದಶ ಲಕ್ಷ ಡಾಲರ್‌ ನ್ನು 4.35% ರ ಬಡ್ಡಿ ದರದ ಸಾಗರೋತ್ತರ ಬಾಂಡ್‌ ಗಳನ್ನು ವಿತರಿಸುವ ಮೂಲಕ ಸಂಗ್ರಹಿಸಿದೆ.
    • ಇನ್ಫೋಗೇನ್‌ ಡಿಜಿಟಲ್‌ ವೇದಿಕೆ ಕಂಪನಿಯು 200 ದಶ ಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
    • ನಿದ್ದೆ ಮತ್ತು ಗೃಹ ಪರಿಹಾರ ವಲಯದ ವೇಕ್‌ ಫಿಟ್‌ 50 ದಶ ಲಕ್ಷ ಡಾಲರ್‌ ಸಂಗ್ರಹಣೆಗೆ ಪ್ರಯತ್ನ ನಡೆಸುತ್ತಿದೆ.
    • ಇನ್ಫೋ ಎಡ್ಜ್‌ ಕಂಪನಿ ಬೆಂಬಲಿತ ಝೊಮೆಟೋ ಕಂಪನಿ ತನ್ನ ರೂ.8,250 ಕೋಟಿ ಮೌಲ್ಯದ ಆರಂಭಿಕ ಷೇರು ವಿತರಣೆ ಗುರಿ ಹೊಂದಿದೆ.
    • ಪೇಟಿಎಂ ಕಂಪನಿಯು 1.5 ಶತ ಕೋಟಿ ಡಾಲರ್‌ ಮೌಲ್ಯದ ಐ ಪಿ ಒ ವಿತರಿಸಲಿದೆ.
    • ಹರ್ಷ ಮೊಯಿಲಿ ರವರ 200 ದಶಲಕ್ಷ ಡಾಲರ್‌ ಗಳ ನಿಧಿ ಪರಿಸರ ವಲಯದ ತಾಂತ್ರಿಕ ಕಂಪನಿಗಳಿಗೆ ಆರ್ಥಿಕ ಬೆಂಬಲ ನೀಡಲಿದೆ
    • ಸಾರ್ವಜನಿಕ ವಲಯದ ಬ್ಯಾಂಕ್‌ ಗಳು ಸಹ ಸುಮಾರು ರೂ.9,000 ಕೋಟಿ ಯನ್ನು ಷೇರುಗಳನ್ನು QIPಗಳಿಗೆ ವಿತರಿಸುವ ಮೂಲಕ ಸಂಗ್ರಹಿಸಲಿದೆ.

    ಬ್ಯಾಂಕಿಂಗ್‌ ವಲಯದ ಮೇಲಾಗುವ ಪ್ರಭಾವ:

    ಈ ಎಲ್ಲಾ ಸುದ್ಧಿಗಳು ಕಂಪನಿಗಳಿಗೆ ಸುಲಭವಾಗಿ ಸಂಪನ್ಮೂಲ ಲಭ್ಯವಾಗುತ್ತಿರುವುದನ್ನು ತೋರಿಸುತ್ತದೆ. ಕೇವಲ 4.35% ರ ಬಡ್ಡಿಯಂತೆ ಟಾಟಾ ಮೋಟಾರ್ಸ್‌ 425 ದಶಲಕ್ಷ ಡಾಲರ್‌ ಹಣ ಸಂಗ್ರಹಣೆ ಮಾಡಿದೆ ಎಂದರೆ ಜಾಗತಿಕ ಮಟ್ಟದಲ್ಲಿ ಹರಿದಾಡುತ್ತಿರುವ ಹಣದ ಗಾತ್ರದ ಅರಿವಾಗುವುದು. ಹೀಗಿರುವಾಗ ಕಾರ್ಪೊರೇಟ್‌ ಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಅವಶ್ಯವಿರುವ ಸಂಪನ್ಮೂಲಕ್ಕಾಗಿ ಬ್ಯಾಂಕ್‌ ಗಳನ್ನು ಅವಲಂಬಿಸುವುದರ ಅಗತ್ಯವಿರುವುದಿಲ್ಲ. ಇದು ಬ್ಯಾಂಕಿಂಗ್‌ ವಲಯ ತನ್ನ ಬೆಳವಣಿಗೆಗಾಗಿ ಸಾಂಪ್ರದಾಯಿಕ ರೀಟೇಲ್‌ ಗ್ರಾಹಕರನ್ನು ಅವಲಂಬಿಸಲೇಬೇಕಾಗಿದೆ.

    ಈ ಬೆಳವಣಿಗೆ ಮುಂಬರುವ ದಿನದಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ. ಖಾಸಗಿ ವಲಯದ ಬ್ಯಾಂಕುಗಳಿಗಿಂತ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ರಿಟೇಲ್ ಗ್ರಾಹಕರನ್ನು ಹೆಚ್ಚಿಗೆ ಅವಲಂಬಿಸಿರುವುದರಿಂದ ಮೇಲಿನ ಬೆಳವಣಿಗೆಗಳು ಅವುಗಳ ಮೇಲೆ ಪರಿಣಾಮ ಕಡಿಮೆ ಎಂದೇ ಭಾವಿಸಬಹುದಾಗಿದೆ.

    error: Content is protected !!