ಮನುಷ್ಯ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಆಶಾವಾದಿಯಾಗಬೇಕು. ಧೈರ್ಯದಿಂದ ಇರಬೇಕು. ಯಾರು ಹುಚ್ಚ ಅಂದರೂ ಚಿಂತೆ ಮಾಡದೆ ಸದಾ ನಗಬೇಕು,ಕರುಣೆ, ಪ್ರೀತಿ ಇರಬೇಕು. ಸದಾ ಸರ್ವರಿಗೂ ಒಳ್ಳೆಯದಾಗಬೇಕೆಂಬ ಆಶಯ ಹೊಂದಿರಬೇಕು, ಎಲ್ಲಾ ಬಲ್ಲವನು ನಾನು ಅನ್ನುವ ಹಮ್ಮು ಬೇಡ, ಮುಗ್ಧ ಮಗುವಿನ ಮನಸ್ಸಿನ ಹಾಗೆ ಪ್ರತಿಯೊಂದರ ಕಡೆ ಪೂರ್ವಗ್ರಹ ಪೀಡಿತ ಆಗದೆ, ಕುತೂಹಲ ಭರಿತ ನೋಟ ಇರಬೇಕು. ಹೀಗಿದ್ದರೆ ನಮ್ಮ ದೇಹದಲ್ಲಿನ ರಸ ಉತ್ಪತ್ತಿ ಗ್ರಂಥಿಗಳು ಸರಾಗವಾಗಿ ಕೆಲಸ ಮಾಡಿ, ಆರೋಗ್ಯ ಸುಸ್ಥಿತಿಯಲ್ಲಿದ್ದು, ಜೀವನ ಲವಲವಿಕೆಯಿಂದ ಕೂಡಿ ಸಂತೋಷಮಯವಾಗಿರುತ್ತದೆ…..
ಇತ್ತೀಚೆಗೆ ಕರೊನಾ ಬಂದಾಗಿನಿಂದ ಯಾವ ವೈದ್ಯರನ್ನ ಕೇಳಿ, ಮನಃಶಾಸ್ತ್ರಜ್ಞರನ್ನು ಕೇಳಿ, ಅಧ್ಯಾತ್ಮ ಬೋಧಕರನ್ನು ಕೇಳಿ, ಕೊನೆಗೆ ಬಾಯ್ತುಂಬ ತಾಂಬೂಲ ಮೆಲ್ಲುತ್ತ ಎಲೆ,ಬೇರು, ಬೀಜ ಅಂತ ಕಾಡಲ್ಲಿ ಅರಸಿ ತಂದು ಅರೆದು ಔಷಧಿ ಅಂತ ಕೊಡುವ ಮಾಸಿದ ಬಟ್ಟೆಗಳ, ಒರಟು ಭಾಷೆಯ ನಾಟಿ ವೈದ್ಯರನ್ನ ಕೇಳಿ, ಇದನ್ನೇ ಹೇಳೋದಾ?!
ನನಗೆ ಆಶ್ಚರ್ಯವಾಗಿ ಸುಮ್ಮನೆ ಅವಲೋಕಿಸಿದೆ. ಮನುಷ್ಯನ ಸಹಜ ಹುಟ್ಟು ಗುಣಗಳನ್ನು ಅಳವಡಿಸಿಕೊಳ್ಳಲು ಇಂದಿನ ಸುಧಾರಿತ ಜನಾಂಗ ಯಾಕೆ ಇಷ್ಟು ಕಷ್ಟ ಪಡಬೇಕು ಅಥವಾ ಪಡುತ್ತಿದೆ ಅಂತ. ಇವರು ಹೇಳುತ್ತಿರುವ,ಇಂದು ಮಾನವರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಈ ಅಂಶಗಳನ್ನು ಪಡೆಯಲು ಕೋಟಿ ಹಣ ಬೇಕಿಲ್ಲ ಅಥವಾ ಅನ್ನ,ನೀರು ಬಿಟ್ಟು ಕಠಿಣ ತಪಸ್ಸು ಮಾಡಬೇಕಿಲ್ಲ. ಆದರೂ ಇಡೀ ಮಾನವಕುಲ ಇಂದು ಇವುಗಳ ಕೊರತೆಯಿಂದ ನರಳುತ್ತಿರುವುದಾದರೂ ಏತಕ್ಕೆ?
ನಾಗರಿಕತೆ, ಅಭಿವೃದ್ಧಿ, ಮುಂದುವರಿಕೆಯ ಭಾಗವಾಗಿ ನಾವು ನಮ್ಮ ಹುಟ್ಟುಗುಣಗಳನ್ನು ದೂರಮಾಡಿಕೊಂಡು, ನಮ್ಮದಲ್ಲದ್ದನ್ನ, ನಮಗೆ ಆಗದ್ದನ್ನ ಮೈಗೂಡಿಸಿಕೊಂಡು ಬಿಟ್ಟವಾ?! ನಮಗೆ ಒಗ್ಗದ್ದನ್ನು ನಮಗೆ ತಿಳಿಯದ ಹಾಗೆ ಅನುಸರಿಸಿ, ನಮ್ಮ ಸಹಜತೆಯನ್ನು ಕಳೆದುಕೊಂಡು ಬಿಟ್ಟವಾ? ಇದು ಬೇಕಿತ್ತಾ?!
ನಾಗರಿಕತೆ ಹೆಸರಲ್ಲಿ ಬಟ್ಟೆ ಹೊದ್ದ ದಿನದಿಂದ ಮಾನವ ಬದಲಾಗಿಬಿಟ್ಟನೇನೋ, ತನ್ನನ್ನು ಮುಚ್ಚಿಕೊಳ್ಳುವುದನ್ನ ಕಲಿತು. ಸಹಜತೆಯಿಂದ ದೂರವಾಗುವ ನಡಿಗೆ ಅಂದೇ ಆರಂಭವಾಗಿರಬೇಕು. ಇಡೀ ವಿಕಸತೆಯಲ್ಲಿ ಮಾನವ ತನ್ನ ಈ ಸಹಜತೆಯನ್ನು ಹೇಗೆ ಮುಚ್ಚಿಡಬೇಕು ಎಂಬುದಕ್ಕೇ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತಿದೆ. ಪರಿಣಾಮ ಇಂದು ಬಲವಂತವಾಗಿ ನಗುವುದನ್ನು ಅಭ್ಯಸಿಸುತ್ತಿದ್ದೇವೆ!
ಸುಮ್ಮನೆ ಯೋಚಿಸಿ, ಇಂದಿಗೂ ಈಗಲೂ ಇಡೀ ಪ್ರಪಂಚ ನಶಿಸಿ ಹೋದರೂ ನನಗೇನೂ ಆಗುವುದಿಲ್ಲ. ಸಾವು ಸುತ್ತಲಿದ್ದವರಿಗೆ ಬರಬಹುದೇ ವಿನಾ ನನಗೆ ಬರಲ್ಲ ಅನ್ನುವ ನಮ್ಮ ಹುಟ್ಟು ಸ್ವಭಾವ ಇದೆಯಲ್ಲ ಇದಕ್ಕಿಂತಲೂ ಸಕಾರಾತ್ಮಕ ಯೋಚನೆ, ಧೈರ್ಯ, ಆಶಾವಾದಿ ಪ್ರವೃತ್ತಿ ಬೇರೆ ಎಲ್ಲಿಯಾದರೂ ಇರಲು ಸಾಧ್ಯವಾ? ಆದರೂ ಮೈಗೂಡಿಸಿಕೊಳ್ಳುವ ಮಟ್ಟಕ್ಕೆ ನಾವು ಬೆಳೆದುಬಿಟ್ಟಿರುವುದು ವಿಪರ್ಯಾಸ ಅಲ್ಲವಾ?
ಈ ಧೈರ್ಯ, ಸಕಾರಾತ್ಮಕ ಯೋಚನೆ, ಆಶಾವಾದಕ್ಕೆ ಮೂಲಕಾರಣ ಮರುಘಳಿಗೆಯ ಅಜ್ಞಾನ. ಹೌದು ನಾಳೆ ಏನಾಗುತ್ತೋ ಗೊತ್ತಿಲ್ಲ ಅಂತಲೇ ಇಂದು ಸಂತೋಷದಿಂದ ಇರಲು ಸಾಧ್ಯವಾಗಿದೆ. ಆದರೆ ಮುಂದುವರೆದ ಮನುಷ್ಯನ ಹಂಬಲ ಏನು ಗೊತ್ತಾ?ಆ ನಾಳೆಯನ್ನು ಇಂದೇ ತಿಳಿದುಕೊಳ್ಳೋದು!ಹೀಗಿದ್ದಾಗ ಇನ್ನು ನಮ್ಮನ್ನು ಯಾರು ಪಾರು ಮಾಡಬೇಕು? ಆ ಸೃಷ್ಟಿಸಿದವನೂ ನಿನ್ನ ಕರ್ಮ ಅಂತ ಕೈಬಿಟ್ಟು ತುಂಬಾ ದಿನವಾಗಿರಬೇಕು.
ಪ್ರಕೃತಿಗೆ ವಿರುದ್ಧವಾದದ್ದನ್ನ ಯೋಚಿಸುತ್ತಾ, ಸಾಧಿಸುವುದು ಮನುಷ್ಯನ ಸಾಧನೆ ಆಗಿ ಎಲ್ಲ ತರಹದ ಅಸೌಖ್ಯಕ್ಕೆ ಕಾರಣ ಆಗಿದೆ. ಮನಃಶಾಂತಿ ಬಿಡಿ, ದೂರದ ಮಾತಾಯ್ತು. ಇಂದು ನಿದ್ರೆ,ಹಸಿವಿಗೆ ಮಾನವ ಪರದಾಡುತ್ತಿದ್ದಾನೆ! ಆದರೂ ತನ್ನ ವಿರುದ್ಧ ದಿಕ್ಕಿನ ಪಯಣ ಅವನಲ್ಲಿ ಅರಿವಾಗದಿರುವುದು ಅಚ್ಚರಿ. ಇಂತಹ ಮುಂದುವರಿಕೆ ನಮಗೆ ಬೇಕಾ?!
ನಾನು ಸಹಜವಾಗಿ ಇರುವಾಗಲೆಲ್ಲ ನನ್ನ ಅಮ್ಮ, ಅಪ್ಪ, ಗುರುಗಳು, ಹಿರಿಯರು ಆಕ್ಷೇಪಿಸಿರುವುದು ನನ್ನಲ್ಲಿ ಜೀವಂತವಾಗಿವೆ. ಅಮ್ಮ ಅಂತೂ ಮಾತೆತ್ತಿದರೆ, ನಾಲ್ಕು ಜನಕ್ಕೆ ಅಂಜಿ ಜೀವನ ಮಾಡಬೇಕು ಕಣೋ ಅನ್ನುತ್ತಾ ನನ್ನ ಸಹಜತೆಯನ್ನು ದಮನಿಸುವ ಪ್ರಯತ್ನದಲ್ಲೇ ಜೀವನ ಸವೆಸಿದರು. ಎಲ್ಲರೊಡನೆ ನಗುತ್ತಾ ಇರೋದನ್ನ ಅಮ್ಮ ಆಕ್ಷೇಪಿಸಿದರೆ, ಅಪ್ಪ ನನ್ನ ಸಹಜ ಗುಣಗಳಿಗೆ ಕಡಿವಾಣ ಹಾಕುತ್ತಿದ್ದರು. ಏನೋ ನೆನಸಿಕೊಂಡು ಕ್ಲಾಸಲ್ಲಿ ನಕ್ಕಿದ್ದ ನನ್ನನ್ನು ನನ್ನ ಗುರುಗಳು ಇಡೀ ದಿನ ತರಗತಿಯ ಹೊರಗೆ ನಿಲ್ಲಿಸಿದ್ದರು. ಆದರೂ ಇವರೆಲ್ಲರೂ ನನ್ನನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಅಗ್ರ ಗಣ್ಯರು. ಈಗ ಮಾತ್ರ ವೈದ್ಯರು, ಮನಃಶಾಸ್ತ್ರಜ್ಞರು,ಅಧ್ಯಾತ್ಮ ಚಿಂತಕರು ಇವರು ಮಾಡಬೇಡ ಅಂದದ್ದನ್ನು ಮಾಡಿ ಅಂತ ಹೇಳ್ತಿದ್ದಾರೆ. ಎಲ್ಲೋ ಎಡವುತ್ತಿಲ್ಲವಾ ನಾವೆಲ್ಲ?
‘ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು.
ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್ ₹220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ 3.17% ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ.
ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಿನ್ನೆಯಷ್ಟೇ ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ₹900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿ.
ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ ₹100 ಕೋಟಿ ಯೋಜನೆ ಜಾರಿಗೆ ತರಲು ತಯಾರಿದ್ದೇವೆ.
ಬೆಲೆ ಏರಿಕೆ ಬರೆ
ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಇಂಧನ ಬೆಲೆ ಹೆಚ್ಚಿಸಿರಲಿಲ್ಲ ಎಂದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ, ಪ್ರತಿಯೊಬ್ಬರು ಪರಿಸರ ಕಾಳಜಿ ಇಟ್ಟುಕೊಂಡು ತಮ್ಮ ಸುತ್ತಲೂ ಅವಕಾಶವಿರುವ ಕಡೆ ಗಿಡ ನೆಡುವ ಮೂಲಕ ಹಸಿರು ಬೆಳೆಸುವ ಕೆಲಸ ಮಾಡಬೇಕು, ಆಮೂಲಕ ನಮ್ಮ ಸುತ್ತಲ ಪರಿಸರದಲ್ಲಿ ಪ್ರಾಕೃತಿಕವಾಗಿ ಶುದ್ಧ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಬೇಕೆಂದು ಅರಣ್ಯ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.
ಅವರು ಇಂದು ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ‘ಕಾಡಿನಲ್ಲಿ ವನ್ಯಮೃಗ ಗಳಿಗಾಗಿ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಧರ್ಮಸ್ಥಳದ 125 ಹೆಕ್ಟೇರು ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಕಾರ್ಯಕ್ರಮದ ಆರಂಭದಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂಬ ದ್ಯೇಯ ವಾಕ್ಯಕ್ಕೆ ದನಿಗೂಡಿಸಿದರು.ಆನಂತರ ವೃಕ್ಷ ಬಂಧನ ವಿಧಿ ನಡೆಸಲಾಯಿತು. ಆ ಮೂಲಕ ಮರಗಳ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಬದ್ಧತೆಯಿಂದ ದುಡಿಯುವ, ವೃಕ್ಷ ಕಾಯುವ ಕಾಯಕಕ್ಕೆ ಕೈಜೋಡಿಸಲು ಅನುವು ಮಾಡಿಕೊಡಲಾಯಿತು.
ನಂತರ ಧರ್ಮಸ್ಥಳದ ಅರಣ್ಯಪ್ರದೇಶದಲ್ಲಿ ಸಚಿವರು ಹಾಗೂ ಧರ್ಮಾಧಿಕಾರಿಗಳು ಗಿಡ ನೆಟ್ಟು ಯೋಜನೆಗೆ ಚಾಲನೆ ನೀಡಿದರು. ಅಲ್ಲದೆ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಂದಲೂ ಗಿಡ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಅರ್ಧ ಎಕರೆ ಅರಣ್ಯ ಪ್ರದೇಶದಲ್ಲಿ ಕೈಗೊಂಡಿರುವ ಮಿಯಾವಾಕಿ ಮಾದರಿ ನೆಡುತೋಪು ಯೋಜನೆ ಉದ್ಘಾಟಿಸಲಾಯಿತು.
ನಂತರ ಧರ್ಮಸ್ಥಳ ಶ್ರೀ ಕ್ಷೇತ್ರ ನೂತನವಾಗಿ ಜಾರಿಗೆ ತಂದಿರುವ ಹಸಿರು ಬಸ್ ಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತಲಿನಲ್ಲಿ ಅರಣ್ಯ ನಾಶವಾಗಿರುವ ಕಡೆ ಗಿಡ ನೆಡಬೇಕು , ವಿಶೇಷವಾಗಿ ವನ್ಯಮೃಗಗಳಿಗೆ ಆಹಾರ ಕ್ಕಾಗಿ ಹಣ್ಣಿನ ಗಿಡಗಳನ್ನು ನೆಡಬೇಕು ಎಂದು ಎರಡು ತಿಂಗಳ ಹಿಂದೆ ಇಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೆವು ಅದರಂತೆ ಇಂದು ಇಲ್ಲಿ ಗಿಡ ನೆಟ್ಟಿದ್ದೇವೆ, ನೀವು ಸಹ ನಿಮ್ಮ ಸುತ್ತಮುತ್ತ ಅವಕಾಶವಿರುವ ಕಡೆ ಗಿಡ ನೆಡಬೇಕು ಎಂದು ಅವರು ಮನವಿ ಮಾಡಿದರು. ಕರೋನಾ ಇದ್ದರೂ ಕೂಡ ವಿಶ್ವ ಪರಿಸರದ ದಿನವಾಗಿ ಇಂದು ನಾವು ಸ್ವಸ್ಥ ಪರಿಸರಕ್ಕಾಗಿ ಈ ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ .ಇದು ನಾಟಿ ಸಮಯವೂ ಆಗಿರುವುದರಿಂದ ಯೋಜನೆಯ ಅನುಷ್ಠಾನಕ್ಕೆ ಉತ್ತಮ ಸಮಯವಾಗಿದೆ. ಸಾರ್ವಜನಿಕರು ಕೂಡ ಇಂತಹ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ ಹಸಿರು ಸಂರಕ್ಷಣೆಗೆ ಮುಂದಾಗಬೇಕೆಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಈ ಪ್ರದೇಶದಲ್ಲಿ ಮಾವು, ಹಲಸು ,ನೆಲ್ಲಿ, ಕಾಡು ಬಾದಾಮಿ, ಹೆಬ್ಬಲಸು ಮತ್ತು ನೇರಳೆ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಸಮಾರಂಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ಹಾಜರಿದ್ದರು.
ಹಾಸನ ಜಿಲ್ಲೆಯ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್.ಪಿ ವೆಂಕಟೇಶ್ ಮೂರ್ತಿ ಅವರು 2020 ನೇ ಸಾಲಿನ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆರ್.ಪಿ ವೆಂಕಟೇಶ್ ಮೂರ್ತಿ ಅವರು ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಸಾಮಾಜಿಕ ಕಳಕಳಿಯ ಕಾರ್ಯಗಳು , ರೈತ ಚಳುವಳಿ ಹಾಗೂ ಪರಿಸರ ಕಾಳಜಿಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಆರ್.ಪಿ ವೆಂಕಟೇಶ್ ಮೂರ್ತಿ ಅವರು ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆಯುತ್ತಿರುವ 28 ನೇ ಪತ್ರಕರ್ತರಾಗಿದ್ದಾರೆ .ಈ ಪ್ರಶಸ್ತಿ 15 ಸಾವಿರ ರೂಪಾಯಿ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಕಳೆದ ಬಾರಿ ಈ ಪ್ರಶಸ್ತಿ ಗೆ ತರಂಗ ಪತ್ರಿಕೆಯ ಡಾ ಯು.ಬಿ ರಾಜಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಕೋವಿಡ್ ಕಾರಣಗಳಿಂದ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿರಲಿಲ್ಲ. ಈ ಬಾರಿ ಇಬ್ಬರೂ ಸಾಧಕರನ್ಮು ಒಟ್ಟಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಗುವುದು ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಎಚ್.ಅರ್. ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ರಾಂಪುರ ಗ್ರಾಮದವರಾದ ಆರ್.ಪಿ ವೆಂಕಟೇಶ ಮೂರ್ತಿ ಅವರು 1976 ರಿಂದ ಪತ್ರಿಕಾ ರಂಗದಲ್ಲಿದ್ದಾರೆ.ಜೊತೆಗೆ ಅನೇಕ ಸಾಮಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ಅವರು ಪತ್ರಕರ್ತನೂ ಒಬ್ಬ ರೈತ ಎಂದು ಕರೆದುಕೊಂಡಿರುವುದು ಅಪರೂಪದ ಸಂಗತಿ. ಸಾಮಾನ್ಯವಾಗಿ ಪತ್ರಕರ್ತರನ್ನು ಬುದ್ಧಿಜೀವಿಗಳು ಎಂದು ಕರೆಯುವುದುಂಟು. ನಿಜವಾದ ಮಣ್ಣಿನ ಮಗ ಪತ್ರಕರ್ತನಾಗಿ `ಜನತಾ ಮಾಧ್ಯಮ’ ದಿನಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಬಿಎಸ್ಸಿ ಮತ್ತು ಎಲ್ ಎಲ್ ಬಿ ಪದವಿ ಗಳಿಸಿ , ಜೆಪಿ ಚಳವಳಿಯಿಂದ ಸ್ಪೂರ್ತಿ ಪಡೆದು ರೈತ ಚಳವಳಿಯಲ್ಲಿ ಭಾಗವಹಿಸಿ ಹಲವು ಹೋರಾಟಗಳನ್ನು ನಡೆಸಿದ್ದಾರೆ.
ಮಂಜುನಾಥ ದತ್ತ,ಜೇಬರ್ ಹಾಗೂ ವಾಸುದೇವನ್ ಅವರ ಒಡನಾಟದಲ್ಲಿ ಜೀವನ ಹಾದಿ ಕಂಡ ವೆಂಕಟೇಶ್ ಮೂರ್ತಿ ಅವರು ಈಗ ಬಾಗಿದ ಬಾಳೆಗೊನೆ ರೀತಿ ಇದ್ದಾರೆ. ಅದು ಎಷ್ಟೇ ಬಲಿತು ಪಕ್ವವಾಗಿದ್ದರೂ ನೆಲದ ಕಡೆ ನೋಡುತ್ತದೆಯೇ ಹೊರತು ಆಕಾಶದತ್ತ ತಲೆ ಎತ್ತುವುದಿಲ್ಲ. ಈಗಲೂ ಅವರ ದೃಷ್ಟಿ ಮಣ್ಣಿನತ್ತ ಇದೆ. ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ನ ಟ್ರಸ್ಟಿ ಎಚ್ ಅರ್.ಶ್ರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆ ಇಲ್ಲದೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ, ನೀಟ್ ಅಂಕಗಳನ್ನು ಮಾತ್ರ ಪರಿಗಣಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಕೊಟ್ಟಿರುವ ಸಲಹೆ ಬಗ್ಗೆ ಸದ್ಯದಲ್ಲೇ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಸುರೇಶ್ ಕುಮಾರ್ ಅವರು ಉತ್ತಮ ಸಲಹೆ ನೀಡಿದ್ದಾರೆ. ಎಂಜಿನೀಯರಿಂಗ್ & ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಇಂತಿಷ್ಟು ಅಂಕಗಳನ್ನು ಪಡೆಯಬೇಕಾಗಿತ್ತು. ಈಗ ಆ ಅಂಕ ಪರಿಗಣಿಸುವ ಬದಲು ಸಿಇಟಿ ರಾಂಕ್ ಪರಿಗಣಿಸುವ ಸಲಹೆಯನ್ನು ಅವರು ನೀಡಿದ್ದಾರೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು, ಉನ್ನತ ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು ಡಿಸಿಎಂ.
ಅಲ್ಲದೆ, ಈ ಬದಲಾವಣೆ ಮಾಡಬೇಕಾದರೆ ಕಾಯ್ದೆಯ ತಿದ್ದುಪಡಿಯನ್ನೂ ಮಾಡಬೇಕು. ಈ ಬಗ್ಗೆ ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆಯೂ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರದ ನೀತಿಗಳು ಮತ್ತು ಕೋವಿಡ್ ಮುಂತಾದ ಕಾರಣಗಳಿಂದಾಗಿ ಇಂದು ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಬೀಜ, ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು. ಹೆಸರು, ಉದ್ದು, ಅಲಸಂಡೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಹೇಗಾದರೂ ಮಾಡಿ ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಕೂಡಲೇ ಸಮರೋಪಾದಿಯಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪತ್ರದ ಮುಖ್ಯಾಂಶಗಳು : ಈ ವರ್ಷ ಕೇವಲ ಶೇ. 19, ಅಂದರೆ 410 ಕ್ವಿಂಟಾಲ್ ಹೆಸರು ಕಾಳು ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಕಳೆದ ವರ್ಷ ತುಮಕೂರಿಗೆ 851 ಕ್ವಿಂಟಾಲ್ ಕಾಳನ್ನು ವಿತರಿಸಿದ್ದರೆ ಈ ವರ್ಷ ಕೇವಲ 90 ಕ್ವಿಂಟಾಲ್ ವಿತರಿಸಲಾಗಿದೆ. ಹಾಸನಕ್ಕೆ 618 ಕ್ವಿಂಟಾಲಿಗೆ ಬದಲಾಗಿ 87.5 ಕ್ವಿಂಟಾಲ್, ಮೈಸೂರಿಗೆ 418 ಕ್ವಿಂಟಾಲ್ ಬೇಡಿಕೆಗೆ ಬದಲಾಗಿ 165.50, ಚಾಮರಾಜನಗರಕ್ಕೆ 222 ಕ್ವಿಂಟಾಲಿನ ಬದಲು 67.5 ಕ್ವಿಂಟಾಲ್ ನೀಡಲಾಗಿದೆ. ಇದನ್ನು ದ್ರೋಹವೆನ್ನದೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕು?
ಈ ವರ್ಷದ ಪೂರ್ವ ಮುಂಗಾರಿನಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಸರಾಸರಿಗಿಂತ ಶೇ. 15-20 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಸರ್ಕಾರ ಬಿತ್ತನೆ ಬೀಜ ಸರಬರಾಜು ಮಾಡದೆ ತೊಂದರೆ ಮಾಡಿದೆ. ನನಗಿರುವ ಮಾಹಿತಿಯ ಪ್ರಕಾರ ಈ ವರ್ಷ ಬೇಡಿಕೆಯನ್ನು ಅಂದಾಜು ಮಾಡದೆ, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ಸಂಗ್ರಹಣೆ ಮಾಡಿಕೊಳ್ಳದೆ ಮೈಮರೆಯಲಾಗಿದೆ. ಕಡೆಗೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಳೆದ ವರ್ಷ ಬಿತ್ತನೆ ಬೀಜ ಪಡೆದ ರೈತರಿಗೆ ಈ ವರ್ಷ ನೀಡಲಾಗದು ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಹೇಳಿ ಕಳಿಸಿದ್ದಾರೆ. ಕೃಷಿ ಇಲಾಖೆಯೂ ಸಹ ಸುತ್ತೋಲೆಗಳನ್ನು ಹೊರಡಿಸಿದೆ.
ಈಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಕೆಲಸಗಳು ಪ್ರಾರಂಭವಾಗುತ್ತವೆ. ಅಲ್ಲಿಗೂ ಸಹ ಸಾಕಷ್ಟು ಪ್ರಮಾಣದ ಬಿತ್ತನೆ ಕಾಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ.ನನಗೆ ಇರುವ ಮಾಹಿತಿ ಪ್ರಕಾರ ಕೃಷಿ ಇಲಾಖೆ 8391 ಕ್ವಿಂಟಾಲಿಗೆ ಬದಲು ಕೇವಲ 5000 ರಿಂದ 5500 ಕ್ವಿಂಟಾಲ್ ಹೆಸರು ಕಾಳನ್ನು ವಿತರಿಸಲು ಈಗ ಹೊರಟಿದೆ. ಇದು ಸರಿಯಾದ ಕ್ರಮವಲ್ಲ.
ಇದೆಲ್ಲದರಿಂದ ಆಗುವ ಪರಿಣಾಮಗಳೇನು? ರೈತರಿಗೆ ಸಮರ್ಪಕ ಬಿತ್ತನೆ ಬೀಜ ಸಿಗದೆ ಬಿತ್ತನೆ ಮಾಡದಿದ್ದರೆ ಅಥವಾ ರೈತರು ತಮ್ಮ ಬಳಿ ಇದ್ದ ಗುಣಮಟ್ಟವಿಲ್ಲದ ಬೀಜಗಳನ್ನು ಬಿತ್ತನೆ ಮಾಡಿದರೆ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದ ರೈತರಿಗೆ ಆದಾಯ ಖೋತಾ ಆಗುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕಾಳುಗಳನ್ನು ಬಳಸುವ ಗ್ರಾಹಕರಿಗೆ ಸುಲಭದ ದರದಲ್ಲಿ ಕೈಗೆಟುಕದೆ ದ್ವಿದಳ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಲಾರಂಭಿಸುತ್ತಾರೆ. ಇದರಿಂದ ಒಟ್ಟಾರೆ ರಾಷ್ಟ್ರದ ಜನರ ಆರೋಗ್ಯದ ಮಟ್ಟ ಕುಸಿತವಾಗುತ್ತದೆ.
ನಿಜವಾದ ರಾಷ್ಟ್ರಪ್ರೇಮವೆಂದರೆ ತನ್ನ ಜನರಿಗೆ ಉತ್ತಮ ಆಹಾರವನ್ನು ನೀಡಿ ಸದೃಢರಾಗಿಸುವುದೂ ಹೌದಲ್ಲವೆ? ಕೇವಲ ಬಾಯಿ ಮಾತಿನಲ್ಲಿ ರಾಷ್ಟ್ರಪ್ರೇಮದ ಮಾತನಾಡಿ ಅದಾನಿ, ಧಮಾನಿ, ಅಂಬಾನಿಗಳ ಕೈಗೆ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಕೊಟ್ಟು, ಹಸಿರು ಶಾಲನ್ನು ಹೆಗಲ ಮೇಲೆ ಹಾಕಿಕೊಂಡರೆ ಅದು ರೈತ ಪ್ರೇಮವಾಗುತ್ತದೆಯೇ? ವೇಷಗಳನ್ನು ಧರಿಸಿ ಘೋಷಣೆಗಳನ್ನು ಕೂಗಿದರೆ ಅದು ರಾಷ್ಟ್ರಪ್ರೇಮವಾಗುತ್ತದೆಯೇ? ಸುಳ್ಳು ಘೋಷಣೆಗಳ ಕೆಸರಿನಲ್ಲಿ ಮುಳುಗಿಸಿ ಜನರನ್ನು ಭೀಕರ ಶೋಷಣೆ ಮಾಡುವುದರಿಂದ ದೇಶ ಪ್ರಗತಿ ಹೊಂದಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ಘೋಷಣಾ ಪ್ರಕ್ರಿಯೆಯಲ್ಲಿ ಆಯಾ ವಿದ್ಯಾರ್ಥಿಗಳ ಪ್ರಥಮ ಪಿಯು ಹಾಗೂ ಎಸ್.ಎಸ್.ಎಲ್.ಸಿ ಅಂಕಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತಿದ್ದು, ವೃತ್ತಿಪರ ಕೋರ್ಸಿಗೆ ಪ್ರವೇಶ ಕಲ್ಪಿಸುವ ಸಿ.ಇ.ಟಿ.ಪರೀಕ್ಷೆಗೆ ಪಿಯು ಫಲಿತಾಂಶ ಪರಿಗಣಿಸಿ ವೇಟೇಜ್ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರಾಂಕಿಂಗ್ ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ಸಚಿವ ಸುರೇಶ್ ಕುಮಾರ್ ಅವರು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಅವರನ್ನು ಕೋರಿದ್ದಾರೆ. ಈ ಬಗ್ಗೆ ಅವರು ಬರೆದ ಪತ್ರದ ಅಂಶಗಳು ಕೆಳಕಂಡಂತಿವೆ.
ಮಾನ್ಯ ಉಪಮುಖ್ಯಮಂತ್ರಿಗಳೇ,
ದಿನಾಂಕ 04.06.2021ರಂದು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಗಳ ನಡುವೆ ಸಮತೋಲನ ತರಲು ಈ ರೀತಿಯ ನಿರ್ಧಾರವು ಅವಶ್ಯಕವಾಗಿತ್ತು. ಅದನ್ನು ತಮ್ಮೊಂದಿಗೂ ನಾನು ಹಂಚಿಕೊಂಡಿದ್ದೇನೆ.
ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ತೇರ್ಗಡೆ ಮಾಡುವ ನಿರ್ಧಾರದ ಹಿಂದೆ ನಾವು ನಿರ್ದಿಷ್ಟವಾದ ತರ್ಕವನ್ನು ಅನುಸರಿಸಿದ್ದೇವೆ. ಈ ವಿದ್ಯಾರ್ಥಿಗಳ ಮೊದಲ ಪಿಯು ಅಂಕಗಳಲ್ಲದೇ ಎಸ್.ಎಸ್.ಎಲ್.ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲು ಸಹ ನಿರ್ಧಾರ ಮಾಡಿದ್ದೇವೆ. ಅಲ್ಲದೇ ಯಾವುದೇ ವಿದ್ಯಾರ್ಥಿಯು ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದಲ್ಲಿ ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆಯೆಂದೂ ಘೋಷಿಸಿದ್ದೇವೆ. ಇಂದಿನ ಸಂದರ್ಭದಲ್ಲಿ ಇದಕ್ಕಿಂತ ಪ್ರಸ್ತುತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.
ಸಾಮಾನ್ಯವಾಗಿ ದ್ವಿತೀಯ ಪಿಯು ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತಪಡಿಸಿದರೂ ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಿದೆ. ಹಾಗಾಗಿ, ಈ ಬಾರಿಯ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಸಿ.ಇ.ಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವಾಗ, ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿಗೆ ಸೀಮಿತಗೊಂಡಂತೆ ತಮ್ಮ ಇಲಾಖೆಯು ನಡೆಸಲು ಉದ್ದೇಶಿಸಿರುವ ವೃತ್ತಿಪರ ಕೋರ್ಸ್ ದಾಖಲಾತಿಗೆ ಸಂಬಂಧಿಸಿದ ಸಿ.ಇ.ಟಿ.ಪರೀಕ್ಷೆಗೆ ವೇಟೇಜ್ ನೀಡುವ ಪ್ರಕ್ರಿಯೆಯನ್ನು ತಾವು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರಾಂಕಿಂಗ್ ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ತಮ್ಮನ್ನು ಕೋರುತ್ತೇನೆ. ಈ ಕುರಿತಂತೆ ನಾನು ತಮ್ಮೊಂದಿಗೆ ಖುದ್ದಾಗಿ ಮಾತನಾಡಿರುವ ಅಂಶವನ್ನು ಸಹ ಇಲ್ಲಿ ಸ್ಮರಿಸುತ್ತಿದ್ದೇನೆ.
ಜೂನ್ ಐದು ಮತ್ತೆ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಮಹೋತ್ಸವದ ಸಂದರ್ಭ. ಪರಿಸರ ಸಂರಕ್ಷಣೆಯ ಕುರಿತು ಅನೇಕ ಚಳವಳಿಗಳು ಕಾರ್ಯಕ್ರಮಗಳು ನಡೆಯುತ್ತವೆ.ನಾಗರಿಕ ಸಮಾಜದ ನಾವು ಅಭಿವೃದ್ಧಿಯ ಮಂತ್ರ ಜಪಿಸಿ ಉನ್ನತಿಯತ್ತ ಸಾಗುತ್ತಿವೆ ಎಂದುಕೊಂಡೇ ಅವನತಿಯ ಹಾದಿ ಹಿಡಿದಿದ್ದೇವೆ. ಕೊರೊನಾ ಸಂದರ್ಭದಲ್ಲಿ ಆಹಾರ ಪ್ಯಾಕೆಜ್, ಔಷಧಿ, ಸಂಸ್ಕಾರ ಇತ್ಯಾದಿ ಕಾರಣಕ್ಕೆ ಪ್ಲಾಸ್ಟಿಕ್ ಅನಿವಾರ್ಯವಾಗಿ ಬಳಕೆಯಾಗುತ್ತಿದೆ.ಪರಿಸರ ಸಂರಕ್ಷಣೆಯ ಸಂಬಂಧ ಆಧುನಿಕ ಸವಾಲುಗಳೇ ಎದುರಾಗಿವೆ.ಕಳೆದು ಹೋದದ್ದನ್ನು ಅಷ್ಟು ಸುಲಭವಾಗಿ ಗಳಿಸಲು ನಮ್ಮಿಂದ ಸಾಧ್ಯವಿಲ್ಲ ಇರುವುದನ್ನು ಹೇಗೆ ಜೋಪಾನ ಮಾಡಿಕೊಳ್ಳುವುದು ಎಂಬುದರ ಕಡೆಗೆ ನಮ್ಮ ಯೋಚನಾಲಹರಿ ಇರಬೇಕು.
ಬಿರುಬೇಸಗೆಯ ಕಾಲ ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇದೆ. ದೇಹವನ್ನು ತಂಪಾಗಿಡುವ ಎಳನೀರಿನಂತಹ ಪಾನೀಯದ ಕಡೆ ನಮ್ಮ ಗಮನ ಸ್ಟ್ರಾಇಲ್ಲದೆ ಕುಡಿಯಲಾರೆವು. ಸ್ಟ್ರಾ ಇಲ್ಲದೆಯೂ ಎಳನೀರಿನ ಸವಿ ಸವಿಯಬಹುದಲ್ಲವೇ ಹಾಗೆ ಬೇರೆ ಬೇರೆ ತಂಪು ಪಾನೀಯಗಳನ್ನು ಕುಡಿಯುವ ಸಂದರ್ಭದಲ್ಲಿಯೂ ಸ್ಟ್ರಾಗಳನ್ನೇ ಬಳಸುತ್ತೇವೆ. ಇವೂ ಪ್ಲಾಸ್ಟಿಕ್ ಅಲ್ಲವೇ ಇದನ್ನು ಬಿಟ್ಟರೆ ಪ್ರಕೃತಿಯ ಒಡಲಿಗೆ ನಾವು ನಿರಂತರವಾಗಿ ಸೇರಿಸುತ್ತಿರುವ ನಿಧಾನ ವಿಷ ಒಂದರ್ಥದಲ್ಲಿ ನಿಧನ ವಿಷವನ್ನು ಸೇರಿಸುವುದನ್ನು ತಡೆಯಬಹುದಲ್ಲವೇ. ಸ್ಟಾçಗಳನ್ನು ಎಳನೀರು ಮಾರಾಟಗಾರರು ಧೂಳಿನ ನಡುವೆಯೇ ಇಟ್ಟಿರುತ್ತಾರೆ ನಾವದರಲ್ಲಿ ಎಳನೀರು ಸೇವಿಸಿದರೆ ಹಣಕೊಟ್ಟು ಧೂಳನ್ನು ಸೇವಿಸಿದಂತಾಗುತ್ತದೆ. ಈ ರೀತಿಯ ಚಿಕ್ಕ ಚಿಕ್ಕ ಸಮಸ್ಯೆಗಳೇ ಬಹು ದೊಡ್ಡವಾಗಿ ಕಾಡುವುದು.ಹಾಗೆ ಚಾಕಲೇಟ್ ಪೊಟ್ಟಣ ಕೂಡ. ಚಾಕಲೇಟ್ ಬಹಳ ಚಿಕ್ಕವಾಗಿ ಉದರಕ್ಕೆ ಸಿಹಿಯನ್ನು ಕೊಟ್ಟರೂ ಅದನ್ನು ಪ್ಯಾಕ್ ಮಾ್ಡಿದ ಪ್ಲಾಸ್ಟಿಕ್ ಭೂಮಿಗೆ ನುಂಗಲಾರದ ತುತ್ತು. ವಿಷಕಾರಿ ಪ್ಲಾಸ್ಟಿಕ್ ಭೂಮಿಯ ಒಡಲನ್ನು ಸೇರಿರುವುದರಿಂದ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ ಪೋಲಾಗಿ ಹೋಗುತ್ತಿದೆ.
ಶುಭ ಸಮಾರಂಭಗಳಲ್ಲಿ ಮಾವಿನ ಎಲೆಯ ತೋರಣಗಳನ್ನು ನಾವು ಈಗ ಕಾಣುತ್ತಿಲ್ಲ. ಎಲ್ಲವೂ ಪ್ಲಾಸ್ಟಿಕ್ ಮಯ. ಅದರದ್ದೇ ತೋರಣಗಳನ್ನು ಇಳಿ ಬಿಟ್ಟಿರುತ್ತೇವೆ.ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆ ಕಟ್ಟಲು ಹಂಚಿ ಕಡ್ಡಿಗಳನ್ನು ಬಳಸುತ್ತಿದ್ದೆವು ಆದರೆ ಈಗ ಸುಲಭ ಎಂದು ತಗಡಿನ ಸ್ಟಾಪ್ಲರ್ ಪಿನ್ಗಳನ್ನು ಹೊಡೆದು ತೋರಣ ಕಟ್ಟಿ ಒಣಗಿದ ಮೇಲೆ ರಸ್ತೆಗೆ ಎಸೆಯುತ್ತೇವೆ.ಅಪ್ಪಿ ತಪ್ಪಿ ದನಕರುಗಳ ಶರೀರಕ್ಕೆ ಸ್ಟಾಪ್ಲರ್ ಪಿನ್ಗಳು ಸೇರಿದರೆ ಅವುಗಳಿಗೆ ಯಮ ಯಾತನೆ. ಅದರ ಬದಲು ತೋರಣ ಚುಚ್ಚಲು ನಾವು ಊದು ಬತ್ತಿಯ ಕಡ್ಡಿಗಳನ್ನು ಬಳಸಬಹುದು.
ಐಸ್ಕ್ರೀಂಗಳು ಅವುಗಳ ಬೇರೆ ಬೇರೆ ವಿಧಗಳು ಚಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಕರ್ಷಿಸಿವೆ. ಆ ಕಪ್ಗಳೆಲ್ಲಾ ಪ್ಲಾಸ್ಟಿಕ್ಕೇ. ಐದಾರುವರ್ಷಗಳ ಹಿಂದೆ ಐಸ್ಕ್ರೀಂಗಳು ಖರೀದಿಸುವಾಗ ಮಟ್ಕ ಕುಲ್ಫಿ ಎಂಬ ಐಸ್ಕ್ರೀಂನ್ನು ಸಣ್ಣ ಕುಡಿಕೆಯಲ್ಲೇ ಪ್ಯಾಕ್ ಮಾಡಿರುತ್ತಿದ್ದರು. ಆದರೀಗ ಮಡಿಕೆ ಆಕಾರದ ಪ್ಲಾಸ್ಟಿಕ್ ಕಂಟೇನರ್ಳಲ್ಲಿ ಸಿಗುತ್ತಿದೆ. ನೀರು, ಕಾಫಿ, ಟೀ ಕಪ್ಗಳು ಪ್ಲಾಸ್ಟಿಕ್ ನವೇ ಇವುಗಳ ನಿಯಂತ್ರಣದ ಕುರಿತು ಯೋಚಿಸಬೇಕಾಗಿದೆ. ಇತ್ತೀಚೆಗೆ ಪತ್ರಿಕೆ ಓದುವಾಗ ಹರ್ಯಾಣದ ಐಸ್ಕ್ರೀಂಪಾರ್ಲರಿನ ಮಾಲೀಕರು ತೆಂಗಿನ ಚಿಪ್ಪಿನಿಂದ ವಿನ್ಯಾಸ ಗೊಳಿಸಿದ ಕಪ್ಗಳಲ್ಲಿ ಸರ್ವ್ ಮಾಡಿಸುತ್ತಾರೆ ಎಂದಿತ್ತು ಇದಂತೂ ಒಳ್ಳೆಯ ಯೋಚನೆ ಅನ್ನಿಸಿತು.ಕಾರಣ ಮನೆಗಳಲ್ಲಿ ತೆಂಗಿನ ಕಾಯಿ ಬಳಸಿದ ನಂತರ ಚಿಪ್ಪನ್ನು ಎಸೆಯುತ್ತಾರೆ ಕಾರಣ ಒಲೆಗಳು ಇಲ್ಲ ಅನ್ನುವ ಕಾರಣಕ್ಕೆ. ನಗರ ಪ್ರದೇಶದ ತೊಂಭತ್ತು ಪ್ರತಿಶತ ನಾಗರಿಕರೆಲ್ಲಾ ಸ್ನಾನದ ನೀರಿಗೆ ಸೋಲಾರ್, ಎಲೆಕ್ಟ್ರಿಕ್ ಗೀಝರ್, ಗ್ಯಾಸ್ ಗೀಝರ್ ಬಳಸುವುದು.
ಕಾಗದಕ್ಕೆ ತತ್ವಾರವಿರುವಂತಹ ಕಾಲ ನಾವು ಬಳಸುವ ಪ್ರತಿಯೊಂದು ಕಾಗದವೂ ಅರಣ್ಯ ನಾಶದ ಸಂಕೇತವೇ ಆಗಿದೆ. ಅದರಲ್ಲೂ ಮದುವೆ ಆಮಂತ್ರಣ ಪತ್ರಿಕೆಗಳಿಗೆ ಬಳಸುವ ಕಾಗದ ವ್ಯರ್ಥ.ದುಬಾರಿ ಕಾಗದ ಬಾರಿ ಬೆಲೆ ಕೊಟ್ಟರೂ ಉಪಯೋಗ ನೂರರಲ್ಲಿ ಎರಡು ಭಾಗ ಮಾತ್ರ , ಅದರಲ್ಲಿ ಪ್ಲಾಸ್ಟಿಕ್ಕಿನ ತೆಳು ಹೊದಿಕೆಯಿರುತ್ತದೆ. ಅದರ ಬದಲು ಕರವಸ್ತ್ರ, ಟವಲ್ ಇತ್ಯಾದಿಗಳಲ್ಲಿ ಮುದ್ರಿಸಿಕೊಟ್ಟರೆ ಅನುಕೂಲ ಬಟ್ಟೆಯ ಮೇಲಿನ ಮುದ್ರಣ ಒಂದರೆರಡು ಬಗೆತದ ಬಳಿಕ ಹೋಗುತ್ತದೆ ನಂತರ ಮನೆಯ ಉಪಯೋಗಕ್ಕೆ ಬರುತ್ತದೆ. ಈ ಪರಿಕಲ್ಪನೆ ಸಾಕಾರವಾದರೆ ಒಂದಷ್ಟು ಜನರಿಗೆ ಉದ್ಯೋಗ ದೊರೆತಂತಾಗುತ್ತದೆ. ಕಾಗದದ ಬಳಕೆಯನ್ನು ಸಲೀಸಾಗಿ ನಿರಾಕರಿಸಲು ಸಾಧ್ಯವಿಲ್ಲ ವ್ಯರ್ಥವಾಗುವ ಕಬ್ಬಿನ ಸಿಪ್ಪೆಯನ್ನು ಕಾಗದದ ತಯಾರಿಕೆಯಲ್ಲಿ ಯಥೇಚ್ಚವಾಗಿ ಬಳಸಿಕೊಳ್ಳಬಹುದು.
ಅತ್ಯಂತ ಪಾಯಕಾರಿ ಬೆಳವಣಿಗೆ ಎಂದರೆ ಟಿಶ್ಯು ಪೇಪರ್ ಬಳಕೆ. ಇವುಗಳು ಮರದ ಇರುಳಿನಿಂದಲೇ ಮಾಡುವುದು ಹಾಗೆ ಮರದ ತಿರುಳಿನಿಂದ ಬಿಳಿಯ ಬಣ್ಣಕ್ಕೆ ತರಬೇಕೆಂದರೆ ಹೈಡ್ರೋಜನ್ ಪೆರಾಕ್ಸ್ಐಡ್, ಸೋಡಿಯಂ ಕ್ಲೋರೈಡ್, ಕ್ಯಾಲ್ಸಿಯಂ ಹೈಪೋಕ್ಲೋರೈಡ್ಗಳನ್ನು ಬಳಸಿತುತ್ತಾರೆ. ಇವುಗಳು ಆರೋಗ್ಯಕ್ಕೆ ಮಾರಕ . ಇದೇ ಟಿಶ್ಯು ಪೇಪರ್ಗಳನ್ನು ಚಂಪಾಕಲಿಯಂತಹ ಸಿಹಿ ತಿಂಡಿಗಳಲ್ಲಿ ಕಲಬೆರಕೆಯಾಗಿ ಬಳಸುವುದಿದೆ. ಇಂತಹ ಟಿಶ್ಯು ಪೇಪರ್ ಬದಲಿಗೆ ಕರವಸ್ತ್ರ,ಟವಲ್ ಬಳಸಬಹುದಲ್ಲವೇ. ಗಣೇಶನ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲು, ರಾಸಾಯನಿಕ ಬಣ್ಣಗಳ ಮೂರ್ತಿಗಳ ಬದಲು ಮಣ್ಣಿನಸ್ವಾಭಾವಿಕ ಮೂರ್ತಿಗಳನ್ನು ಮಾಡಿ ಪೂಜಿಸಿದರೆ ಪರಿಸರ ಜಾಗೃತಿ ವಹಿಸಿದಂತೆ ಆಗುತ್ತದೆ.
ಮಳೆ ಬಾರದೆ ಬೆಳೆ ಇಲ್ಲ ಅಂತರ್ಜಲದ ಮಟ್ಟ ತೀರಾ ಕುಸಿದಿರುತ್ತದೆ ಹಾಗಾಗಿ ಕುಡಿಯುವ ನೀರನ್ನು ಹಣ ಕೊಟ್ಟು ವ್ಯರ್ಥ ಮಾಡುವುದು ಬದಲಾಗಬೇಕು. ಮದುವೆ,ಮುಂಜಿ ಗೃಹಪ್ರವೇಶ,ಯಾವುದೇ ಸಮಾರಂಭವಾಗಲಿ ಕುಡಿಯುವ ನೀರಿನ ಬಾಟಲಿಗಳನ್ನು ಕೊಡುತ್ತಾರೆ ಇದರಲ್ಲಿ ಎರಡು ದುರುಪಯೋಗ ಒಟ್ಟಿಗೆ ಇದೆ ಒಂದು ಪ್ಲಾಸ್ಡಿಕ್ ದುರುಪಯೋಗ ಇನ್ನೊಂದು ಕುಡಿಯುವ ನೀರಿನ ದುಂದು ವೆಚ್ಚ. ನೀರು ಕುಡಿದು ಎಸೆಯುವ ಬಾಟಲಿಗಳ ಕತ್ತಿನ ಭಾಗ ಕತ್ತರಿಸಿ ತಳಭಾಗದಲ್ಲಿ ರಂಧ್ರ ಕೊರೆದು ಮಣ್ಣು ತುಂಬಿಸಿ ಬೀಜ ಹಾಕಿ ಖಾಲಿ ಇರುವ ಜಾಗಗಳಿಗೆ ಹಾಕಿದರೆ ಶೇಕಡಾ ನೂರರಷ್ಟು ಅಲ್ಲದೇ ಇದ್ದರೂ ನಲವತ್ತು –ಐವತ್ತು ಭಾಗವಾದರೂ ಬೀಜವೊಡೆದು ಸಸಿಗಳಾಗಿ ಮರಗಳಾಗಬಹುದು.
ಶಾಲಾ ಕಾಲೇಜಿನ ಮಕ್ಕಳು ಬಳಸುವ ಲೇಖನ ಸಾಮಾಗ್ರಿಗಳೂ ಸಂಪೂರ್ಣ ಪ್ಲಾಸ್ಟಿಕ್ ಮಯವೇ ಎಲ್ಲಾ ಉಪಯೋಗಿಸಿ ಎಸೆಯುವ ಸಾಧನೆಗಳೇ ಉದಾಹರಣೆಗೆ ಪುಸ್ತಕಗಳಿಗೆ ಹಾಕುವ ರ್ಯಾಪರ್, ಪೆನ್,ಸ್ಕೇಲ್, ಶಾರ್ಪನರ್,ಕ್ಲಚ್ ಪೆನ್ಸಿಲ್ ಇತ್ಯಾದಿ. ಬಳಸಿ ಎಸೆಯಬಹುದಾದ ಪೆನ್ಗಳು ಮಕ್ಕಳ ಬರವಣಿಗೆಯ ಸೌಂದರ್ಯ ಕಸಿದಿದೆ ಎನ್ನುವುದು ನನ್ನ ಅನಿಸಿಕೆ. ಅದರ ಬದಲು ಇಂಕ್ ಪೆನ್ಗಳಲ್ಲಿ ಬರೆಯವ ಅಭ್ಯಾಸಕ್ಕೆ ಮರುಚಾಲನೆ ದೊರೆತರೆ ಮಕ್ಕಳ ಅಕ್ಷರವೂ ದುಂಡಾಗುತ್ತದೆ ವಿಷಕಾರಿ ಪ್ಲಾಸ್ಟಿಕ್ ಬಳಕೆ ತುಸು ತಪ್ಪಿದಂತಾಗುತ್ತದೆ.
ಆಹಾರ ಪದಾರ್ಥಗಳನ್ನು ಹೋಟೆಲ್ಗಳಲ್ಲಿ ಪ್ಲಾಸ್ಟಿಕನಲ್ಲೇ ಸುತ್ತಿ ಕೊಡುವುದು ಸಾಮಾನ್ಯವಾಗಿದೆ ಅದರಲ್ಲೂ ಕಪ್ಪಬಣ್ಣದ ಪ್ಲಾಸ್ಟಿಕ್ನಲ್ಲಿ ನ್ಯೂಸ್ ಪೇಪರಗಳಲ್ಲಿ ತಿನ್ನುವ ತಿಂಡಿಗಳನ್ನು ಕೊಡುವುದು ಅತ್ಯಂತ ಅಪಾಯಕಾರಿ ಹಾಗೆ ಮನೆಗಳಲ್ಲಿ ಬೇಳೆ ಕಾಳುಗಳನ್ನು ತುಂಬಿಸಿಡುವ ಪ್ಲಾಸ್ಟಿಕ್ ಡಬ್ಬಿಗಳು ಇದರ ಬಗ್ಗೆ ಗೃಹಿಣಿಯರು ಎಚ್ಚರ ವಹಿಸಬೇಕು.ಹಿಂದೆ ಬಾಳೆ ಎಲೆ, ಮುತ್ತುಗದ ಎಲೆ, ಅಡಿಕೆ ಹಾಳೆಗಳಲ್ಲಿ ಕಟ್ಟುತ್ತ ಇದ್ದರು. ನ್ಯೂಸ್ ಪೇಪರಗಳಲ್ಲಿ ಸುತ್ತಿದ ಬಜ್ಜಿ, ಬೋಂಡಾಗಳು ಕ್ಯಾನ್ಸರನ ರಹದಾರಿ ಎಂದು ತಮಿಳುನಾಡಿನ ಸರಕಾರ ಈ ಕುರಿತು ಬೀದಿ ಬದಿ ತಿಂಡಿ ತಿನಿಸು ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ನೆನೆಯ ಬಹುದು. ಹಾಗೆ ಹೋಟಲ್ಗಳ ಇಡ್ಲಿ ಪ್ಲಾಸ್ಟಿಕ್ ಸಹಿತ ಬೆಂದಿರುತ್ತದೆ ಅದೂ ಕ್ಯಾನ್ಸರ್ ಕಾರಕ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ಬಗ್ಗೆ ಗ್ರಾಹಕರು ಜಾಗೃತವಾಗಬೇಕು.
ಮಣ್ಣಿನ ಪಾತ್ರೆಗಳ ಉಪಯೋಗವನ್ನು ಮಾಡಿದಷ್ಟೂ ನಮಗೇ ಅನುಕೂಲ.ಇದು ಅಗತ್ಯ ಅಲಂಕಾರ ಎರಡಕ್ಕೂ ಉಪಯೋಗಕ್ಕೆ ಬರುತ್ತದೆ. ಅಲ್ಲುಮಿನಿಯಂ, ಸ್ಟೇನ್ಲೆಸ್ ಸ್ಟೀಲ್, ಕೋಟೆಡ್ ಪಾತ್ರೆಗಳು , ನಾನ್ಸ್ಟಿಕ್ ಕುಕ್ ವೇರ್ಗಳು ಆರೋಗ್ಯಕ್ಕೆ ಅಪಾಯಕಾರಿ.ಐಷಾರಾಮಿ ಹೋಟೆಲ್ಗಳಲ್ಲಿ ಮಣ್ಣಿನ ಪಾತ್ರೆ, ತಾಮ್ರದ ಬಡಿಸುವ ಪಾತ್ರೆಗಳೇ ಹೆಚ್ಚಾಗಿವೆ.ಇವುಗಳಲಿ ಆಹಾರದ ಪೋಷಕಾಂಶ ನಾಶವಾಗುವುದಿಲ್ಲ. ಅದರಲ್ಲೂ ಮಣ್ಣಿನಲ್ಲಿರುವ ಲವಣಗಳು ಆಮ್ಲೀಯ ಆಂಶಗಳನ್ನಿ ಹೀರಿಕೊಳ್ಳುತ್ತವೆ. ನಮ್ಮ ಹಿರಿಯರಿಗೆ ಇವುಗಳ ಉಪಯೋಗ ತಿಳಿದಿದ್ದ ಕಾರಣದಿಂದಲೇ ತುಪ್ಪದ ಕುಡಿಕೆ, ಸುಣ್ಣದ ಕುಡಿಕೆ, ನೀರಿನ ಗಡಿಗೆ,ಸಾರಿನ ಮಡಿಕೆ,ಮೊಸರಿನ ಮಡಿಕೆ, ಸಾಮಾನ್ಯವಾಗಿದ್ದವು.
ತ್ರಿಪದಿ ಕವಿ ಸರ್ವಜ್ಞನ ಭಾವ ಚಿತ್ರವನ್ನು ನೋಡಿದರೆ,ಆತನ ಕೈಯಲ್ಲಿ ಮಣ್ಣಿನ ಪಾತ್ರೆಇರುವುದನ್ನು ಕಾಣಬಹುದು ಅದನ್ನೇ ಆತ “ಕರದಿ ಕಪ್ಪರವುಂಟು” ಎಂದಿರುವುದು. ಹಾಗೆ ಋಷಿಮುನಿಗಳ ಕೈಯಲ್ಲಿ ಹಿತ್ತಾಳೆಯ ಕಮಂಡಲು ಕಾಣ ಬಹುದು ಇವುಗಳ ನೀರು ಅರೋಗ್ಯಕ್ಕೆ ಅನುಕೂಲವಿತ್ತು ಆದರೀಗ ಹಳೆ ಕಾಲದ ತಾಮ್ರ ಹಿತ್ತಾಳೆ ಪಾತ್ರೆ . ಕಂಚಿನ ಪಾತ್ರೆಗಳನ್ನು ತೂಕಕ್ಕೆ ಹಾಕಿ ಕೈತೊಳೆದುಕೊಳ್ಲುತ್ತದ್ದೇವೆ. ಕುಡಿಯುವ ನೀರಿನ ಶೇಖರಣೆಯೂ ಪ್ಲಾಸ್ಟಿಕ್ನಲ್ಲಾಗುತ್ತಿದೆ.
ಹಿರಿಯರು ಅಡುಗೆ ಮಾಡುವಾಗ, ಬಾಳೆ, ಅರಿಶಿಣ.ಹಲಸು ಇತ್ಯಾದಿ ಎಲೆಗಳನ್ನು ಬಳಸುತ್ತಿದ್ದರು ಅದರಲ್ಲೂ ಕಡುಬು ಮಾಡುವಾಗ ಈಗೆಲ್ಲ ಪ್ಲಾಸ್ಟಿಕ್ ಮೌಲ್ಡ್ ಬಂದಿವೆ .ಹಿಂದೆ ಊಟಕ್ಕೆ ಹಾಗು ಅಡುಗೆಗಳಲ್ಲಿ ಬಾಳೆ ಎಲೆಗಳನ್ನು, ಅಡಿಕೆ ಹಾಳೆಗಳನ್ನು,ಮುತ್ತುಗದ ಎಲೆ ಇತ್ಯಾದಿಗಳನ್ನು ಬಳಕೆ ಮಾಡುತ್ತಿದ್ದವು. ಈಗ ಅದೆಲ್ಲವನ್ನು ಕಳೆದು ಬಾಳೆ ಎಲೆಯ ಆಕಾರವನ್ನು ಹೋಲುವ ಪೇಪರ್ ಮೇಲೆ ತಿನ್ನುವಂತಾಗಿದೆ. ಒಂದು ಕಾಲದಲ್ಲಿ ಬಾಳೆ ಎಲೆ ಆಹಾರವನ್ನು ಸುತ್ತುವ ಪರಿಕರವಾಗಿತ್ತು. ಆದರೆ ಈಗ ಫುಡ್ ರ್ಯಾಪರ್ಗಗಳು ಸಿಗುತ್ತದೆ. ಪರ್ಚ್ಮೆಂಟ್ ಪೇಪರ್, ಅಲ್ಯುಮಿನಿಯಂ ಫಾಯಿಲ್ ರೀತಿಯಲ್ಲಿ ಆಹಾರ ಒಣಗಿಸಲು ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಸುತ್ತಿದ್ದೇವೆ.
ಬಾಳೆ ಎಲೆಯ ಮೇಲೆ ಬಿಸಿ ಊಟ ಬಡಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರವನ್ನು ಸೇರುತ್ತಿದ್ದವು, ಜೀರ್ಣ ಕ್ರಿಯೆ ಸುಲಭವಾಗಿ ಆಗುತ್ತಿತ್ತು. ಇದರಿಂದ ಬಿಳಿ ಕೂದಲಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಬಾಳೆ ಎಲೆಯಲ್ಲಿ ಇರುವ ಎಪಿಗ್ಯಾಲೊಕೋಟ್ಟಟಿನ್ ಪಾಲಿಫೆನೇಲ್‌ಗಳು ಪ್ರಕೃತಿದತ್ತವಾದ ಆಂಟಿ ಆಕ್ಸಿಡೆಂಟ್‌ಗಳು ಇದು ತ್ವಚೆಗೆ ಉತ್ತಮ ಪೋಷಕಾಂಶ ನೀಡುತ್ತಿದ್ದವು. ಇದೆಲ್ಲವನ್ನು ಬಿಟ್ಟು ನಾವು ಆಧುನಿಕತೆಯ ಹೆಸರಿನಲ್ಲಿ ವಿಷ ಆಹಾರವನ್ನೇ ಸೇವನೆ ಮಾಡುತ್ತಿದ್ದೇವೆ. ಥಾಯ್ಲೆಂಡ್ ಸರ್ಕಾರ ಆಹಾರ ಪದಾರ್ಥಗಳು ಹಣ್ಣು ತರಕಾರಿಗಳನ್ನು ಸುತ್ತಲು ಕಡ್ಡಾಯವಾಗಿ ಬಾಳೆ ಎಲೆಗಳನ್ನೇ ಬಳಸಬೇಕು ಎಂದು ನಿಯಮ ಜಾರಿ ಮಾಡಿರುವಂತೆ ನಮ್ಮ ಸರಕಾರವೂ ನಿಯಮ ತರಬೇಕು. ಸಾಧ್ಯ ಆದಷ್ಟೂ ಬಟ್ಟೆ ಬ್ಯಾಗ್ ಗಳ ಉಪಯೋಗ ಬಂದರೆ ಚೆನಾಗಿರುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಆದರೆ ಈಗ ಸಿಗುತ್ತಿರುವ ಬಟ್ಟೆ ಬ್ಯಾಗಿನಲ್ಲೂ ಕಲಬೆರಕೆ ಇದೆ ಬಿಸಿಗೆ ಹಿಡಿದರೆ ಪ್ಲಾಸ್ಟಿಕ್ ಜಿನುಗಿದಂತೆ ಜಿನುಗುತ್ತದೆ.
ಗೃಹಾಲಂಕಾರಕ್ಕೆ ನಾವೀಗ ಪ್ಲಾಸ್ಟಿಕ್ ಹೂಗಳನ್ನು ಬಳಸುತ್ತಿದ್ದೇವೆ.ಅದನ್ನು ಬಿಟ್ಟು ಮನೆಗಳಲ್ಲಿ ನಮಗೆ ಬೇಕಾದ ಹೂಗಳನ್ನು ಸಾಧ್ಯವಾದಷ್ಟೂ ಬೆಳೆಯಬಹುದು. ಹಾಗಾಗಿ ತಾರಸಿ ತೋಟಗಳ ಟ್ರೆಂಡ್ ಇತ್ತೀಚೆಗೆ ಬಹಳ ಮಾನ್ಯತೆ ಪಡೆಯುತ್ತಿದೆ.ಹಾಗಾಗಿ ಮನುಷ್ಯ ಯಾವುಕ್ಕೆ ಪ್ಲಾಸ್ಟಿಕ್ ಅನ್ನು ಪರ್ಯಾಯ ತೆಗೆದುಕೊಂಡಿದ್ದೇವೋ ಅವವೇ ಆಯ್ಕೆಗಳಿಗೆ ಮತ್ತೆ ಹಿಂದಿರುಗಿದರೆ ಪರಿಸರ ಹಾನಿ ಆರೋಗ್ಯ ಹಾನಿ ಎರಡೂ ತಪ್ಪುತ್ತದೆ. ಪರಿಸರ ಹಾನಿಯಲ್ಲಿ ಪ್ಲಾಸ್ಡಿಕ್ದೇ ಸಿಂಹ ಪಾಲು ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ವಿಶಾಲಾರ್ಥದಲ್ಲಿ ಜೀವಿಗಳ ಬದುಕು, ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸುತ್ತಲಿನ ಸ್ಥಿತಿ ಹಾಗೂ ಘಟಕಗಳ ಒಟ್ಟಾರೆ ಅಂಶಗಳ ಮೊತ್ತವೇ ಪರಿಸರ. ಸೃಷ್ಟಿ ಉಗಮದ ನಂತರ ಭೌಗೋಳಿಕ ಬದಲಾವಣೆಯಲ್ಲಿನ ಸಹಜ ಪರಿಸ್ಥಿತಿಯಲ್ಲಿ ಜೀವಿಗಳ ಉಗಮ. ಏಕಕೋಶ ಜೀವಿಯಿಂದ ಮಿಲಿಯನ್ ಮಿಲಿಯನ್ ವರ್ಷಗಳ ನಂತರ ಆದಿಮಾನವನ ಅಸ್ತಿತ್ವದ ಆರಂಭ. ಸ್ವಾಭಾವಿಕ ಪರಿಸರ ಜೀವಿಯಾಗಿದ್ದ ಮಾನವನಲ್ಲಿ ಆಧುನಿಕತೆ ಜಾಗೃತಿಯೇ ಪರಿಸರದ ವಿನಾಶದ ಮೊದಲ ಹೆಜ್ಜೆ.
ವಿಜ್ಞಾನ, ತಾಂತ್ರಿಕತೆಯ ಸೋಗಿನಲ್ಲಿ ಪರಿಸರ ವಿನಾಶದ ತೀವ್ರತೆ ಪಡೆಯಿತು. 21ನೇ ಶತಮಾನದ ವೇಳೆಗೆ ಭೂ ಭಾಗದ ಶೇ.80 ಕಾಡು ನಾಶವಾಗಿದೆ ಎಂಬುದು ಒಂದು ಅಂದಾಜು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯವಿದ್ದರೆ ಅಗತ್ಯ ಪ್ರಮಾಣದ ಮಳೆ ಬೀಳುವುದು. ಸದ್ಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಶೇ.25 ಭಾಗ ಅರಣ್ಯ ವ್ಯಾಪಿಸಿದೆ. ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರದೇಶ ವೃದ್ಧಿಸಿರುವುದು ಸಮಾಧಾನಕರ ಅಂಶ.
ಅರಣ್ಯ ನಾಶಕ್ಕೆ ಪ್ರಮುಖ ಕಾರಣಗಳು:
ವ್ಯವಸಾಯಕ್ಕಾಗಿ ಕಾಡು ನಾಶ. ವಾಣಿಜ್ಯ ಉದ್ದೇಶಕ್ಕಾಗಿ ಮರದಿಮ್ಮಿಗಳ ರವಾನೆ. ಗಣಿಗಾರಿಕೆ, ಜನಸಂಖ್ಯಾ ಸ್ಪೋಟ, ನಗರೀಕರಣ, ಔದ್ಯೋಗಿಕರಣ, ಜಲಾಶಯಗಳ ನಿರ್ಮಾಣ, ಅರಣ್ಯ ಬೆಂಕಿಗಾಹುತಿಗಳಿಂದ ಅರಣ್ಯ ತೆರವುಗಳ್ಳುತ್ತಿದೆ. 2018 ರಲ್ಲಿ ಭಾರತದಲ್ಲಿ 19310 ಹೆಕ್ಟೇರ್ ಅರಣ್ಯ ನಾಶವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಕಾಡು ನಾಶಗೊಳಿಸಿ ವ್ಯವಸಾಯ ಭೂಮಿಗೆ ಪರಿವರ್ತನೆ ಹೆಚ್ಚುತ್ತಿದೆ. ಅರಣ್ಯದ ಸಾಂದ್ರತೆ ಕುಂಠಿತಗೊಳ್ಳುತ್ತಿದೆ. ವನ್ಯ ಜೀವಿಗಳು ನಾಡು ಪ್ರವೇಶಿಸುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ.
ಅರಣ್ಯದ ಪ್ರಯೋಜನಗಳು
ಆಹಾರ, ಅರಿವೆಯ ಮೂಲಾಧಾರ, ಭೂ ಸವಕಳಿ ತಡೆಯುವುದರ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು. ಪ್ರವಾಹ ನಿಗ್ರಹಿಸುವುದು. ಮರಗಳ ಬೇರು ನೀರು ಹೀರಿ ನೀರಾವಿ ಮೂಲಕ ವಾತಾವರಣ ಸೇರುಸುವುದು. ವಾತಾವರಣ ನಿಯಂತ್ರಿಸುವುದು. ಇಂಗಾಲದ ಡೈ ಆಕ್ಸ್ಯೆಡ್ ಹೀರುವ ಮೂಲಕ ಜಾಗತಿಕ ತಾಪಮಾನ ಸ್ಥಿರವಾಗಿರಿಸುವುದು. ಹಸಿರು ಮನೆ ಅನಿಲಗಳ ಮೂಲಕ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪೂರಕ. ಕಡಲ ತೀರದ ತೆಂಗಿನ ಮರಗಳು ಬಿರುಗಾಳಿ ತಿರುಗಿಸುವುವು. ಜೀವಿಗಳ ಜೀವಾನಿಲ ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳು.
ಅರಣ್ಯ ನಾಶ ತಡೆಯಲು ಕ್ರಮಗಳು
ಕಾಡು ಕಡಿಯುವುದನ್ನು ನಿಯಂತ್ರಿಸಬೇಕು. ಅರಣ್ಯ ಬೆಂಕಿ ತಡೆಯಬೇಕು. ಮರು ಅರಣ್ಯೀಕರಣಕ್ಕೆ ಕ್ರಮ. ಕೃಷಿ ಭೂಮಿ ಪರಿವರ್ತನೆಗೆ ತಡೆ. ಅರಣ್ಯ ರಕ್ಷಣೆಗೆ ಸಾರ್ವಜನಿಕ ತಿಳಿವಳಿಕೆ ರೂಪಿಸುವುದು. ಅರಣ್ಯಗಳ್ಳರನ್ನು ಶಿಕ್ಷಿಸುವುದು. ಹೆದ್ದಾರಿ ನಿರ್ಮಾಣಗಳನ್ನು ತಡೆಯುವುದು. ವಿದ್ಯುತ್ ಸಂಪರ್ಕಕ್ಕಾಗಿ ಮರಗಳ ಮಾರಣ ಹೋಮ ತಡೆಯುವದು.
ಪರಿಸರ ಉಳಿಸಲು ಪ್ರಮುಖ ಕರ್ತವ್ಯಗಳು
ಜಲ ವಿದ್ಯುತ್ ಬದಲು ಸೌರ ವಿದ್ಯುತ್ ಬಳಸಬೇಕು. ಅನಗತ್ಯವಾಗಿ ಶಕ್ತಿ ಪೋಲು ಮಾಡದೆ ಸಂರಕ್ಷಣೆ ಮಾಡಲು ಶಿಕ್ಷಣ ನೀಡಬೇಕು.
ಜಲ ಮೂಲಗಳನ್ನು ಉಳಿಸಬೇಕು. ಮಳೆ ನೀರನ್ನು ಸಂರಕ್ಷಿಸಬೇಕು. ಮಳೆಕೊಯ್ಲು ವಿಧಾನ ಕಡ್ಡಾಯಗೊಳಿಸಬೇಕು.
ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ. ಅನಗತ್ಯ ವಾಹನ ಬಳಕೆ ನಿರ್ಬಂಧಿಸಬೇಕು.
ಸಾವಯವ ಗೊಬ್ಬರ ಬಳಕೆ ಹೆಚ್ಚಿಸಬೇಕು.
ಮರಗಿಡಗಳ ನೆಡಲು ಶಿಕ್ಷಣ ನೀಡಬೇಕು. ರಿಸೈಕಲ್ ಹಾಗೂ ಪುನರ್ ಉಪಯೋಗಿಸವ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು.
ಮಳೆ ಕಾಡುಗಳನ್ನು ರಕ್ಷಿಸಬೇಕು. ಸರ್ಕಾರ, ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಭಾಗಿತ್ವದಿಂದ ಪರಿಸರ ಉಳಿವು ಸಾಧ್ಯ.
ಪರಿಸರದಲ್ಲಿ ಸಿಕ್ಕಿದ್ದನ್ನೆಲ್ಲಾ ಬಾಚುವ ಪ್ರವೃತ್ತಿಯಿಂದ ವಿನಾಶದತ್ತ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಗೆ ಹಣ, ಅಂತಸ್ತಿಗಿಂತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರು, ಶುದ್ಧಗಾಳಿ, ಫಲವತ್ತಾದ ಭೂಮಿ ಇಲ್ಲವಾದಲ್ಲಿ ಜೀವಿಗಳ ಅಸ್ತಿತ್ವವೇ ಇಲ್ಲ. ಬುದ್ದಿ ಜೀವಿಗಳಾದ ಮಾನವ ಪ್ರಬೇಧವೇ ಪರಿಸರದ ಬಗ್ಗೆ ಮುಂದಾಲೋಚನೆ ಇಲ್ಲ. ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಟ್ಟಲ್ಲಿ ಪರಿಸರ ದಿನಾಚರಣೆಗೆ ಅರ್ಥವಿದೆ.
ತೋವಿನಕೆರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ, ಸಿದ್ಧರಬೆಟ್ಟ ಪರ್ವತಶೃಂಗಗಳ ಸೆರಗಿನಲ್ಲಿರುವ ಒಂದು ಗ್ರಾಮ. ಹೋಬಳಿ ಕೇಂದ್ರವಾಗುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದರೂ ಬರೀ ಗ್ರಾಮವಾಗೇ ಉಳಿದಿರುವ ಈ ಹಳ್ಳಿಯ ಹೃದಯ ಭಾಗವಾದ ತುಮಕೂರು-ಮಧುಗಿರಿ-ಕೊರಟಗೆರೆ ವೃತ್ತದಲ್ಲಿ ನಿಂತು ಪಶ್ಚಿಮಕ್ಕೆ ನೋಡಿದರೆ ನಳನಳಿಸುವ ಸಮೃದ್ಧಿಯಾದ ಹಸಿರು ಬೇಲಿಯ ತೋಟವೊಂದು ಕಾಣುತ್ತದೆ. ಅದು ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ಪದ್ಮರಾಜು ಅವರ ತೋಟ. ಇವರಿಗೆ ತೋಟಗಾರಿಕೆ ಮತ್ತು ಬೇಸಾಯದಲ್ಲಿ ಅಪಾರವಾದ ಆಸಕ್ತಿ.
ಬಿ.ಕಾಂ. ಪದವೀಧರರಾದ ಪದ್ಮರಾಜು ಅರಸಿ ಬಂದ ನೌಕರಿಯನ್ನು, ಬೆಂಗಳೂರಿನ ಆಕರ್ಷಣೆಯನ್ನು ಬಿಟ್ಟು ತೋಟಗಾರಿಕೆಗೆ ಬಂದಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 4-5 ಗಂಟೆ ಕಾಲ ತೋಟದಲ್ಲಿ ಕೆಲಸ ಮಾಡುವ ಇವರು ಸಹಜ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಖುಷಿಯಾಗಿ ಅಳವಡಿಸಿಕೊಂಡಿದ್ದಾರೆ. ಹಿತಮಿತವಾದ ಫ್ರೂನಿಂಗ್(ಸವರುವಿಕೆ) ಇವರ ಕೃಷಿ ಶೈಲಿ. ತೋಟದ ಅಗೆತ, ಬೇಸಾಯ ತೀರಾ ತೀರಾ ಕಮ್ಮಿ. ಎಲ್ಲಾ ಅಲ್ಲೇ ಮುಚ್ಚುವಿಕೆ. ಇದರಿಂದ ತೋಟದಲ್ಲಿ ಅಪಾರವಾದ ಬಯೋಮಾಸ್ ಕಾಣಬಹುದು. ತೋಟ ಕಾಲು ಶತಮಾನದಿಂದ ಒಂದು ಹದಕ್ಕೆ, ಲಯಕ್ಕೆ ಒಗ್ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರುನೂರು ಅಡಿ ಆಳದ ಬೋರ್‌ವೆಲ್‌ಗಳಲ್ಲಿ ಎರಡು ಇಂಚು ನೀರಿನ ಲಭ್ಯವಿದೆ. ಐವತ್ತು ಅಡಿ ಆಳದ ತೆರೆದ ಕಲ್ಲುಬಾವಿ ಇದ್ದರೂ ಜಲ ಬತ್ತಿಹೋಗಿದೆ. ಆದರೂ ಮುಚ್ಚಿಸುವ ತಪ್ಪು ನಿರ್ಧಾರ ಮಾಡಿಲ್ಲ.
ಸಹಜ, ಸಾವಯವ ಪದ್ಧತಿಯ ಅರಿವಿಲ್ಲದವರಿಗೆ ಇವರ ತೋಟ ಆಕರ್ಷಕವಾಗಿ ಕಾಣುವುದಿಲ್ಲ. ಸ್ಯಾದರಿಯಂತೆ ಗೋಚರಿಸುತ್ತದೆ. ಎರಡು ಮುಕ್ಕಾಲು ಎಕರೆಯಲ್ಲಿ ಐದುನೂರು ಅಡಿಕೆ, ನಲವತ್ತು ತೆಂಗು, ಹತ್ತು ಹಲಸು, ನಲವತ್ತು ತೇಗ, ಬೇಲಿಯಲ್ಲಿ ಅಪಾರವಾಗಿ ಶ್ರೀಗಂಧ ಮತ್ತು ಗ್ಲಿಸೀಡಿಯಾ, ಬೇವು ಹೀಗೆ ಒಟ್ಟು ಎರಡು ಸಾವಿರ ಮರಗಿಡಗಳನ್ನು, ನಲವತ್ತು ಜಾತಿಯ ಸಸ್ಯಪ್ರಭೇದಗಳನ್ನು ಕಾಣಬಹುದಾಗಿದೆ. ನಿತ್ಯ ಉಪಯೋಗಿಯಾದ ಕರಿಬೇವು, ಮಸಾಲೆ ಎಲೆಗಿಡ, ಸಿಮರುಬ, ನೇರಳೆ, ಮಾವು, ಸೀಬೆ, ಬಾಳೆ, ನುಗ್ಗೆ, ಗೆಣಸು, ಮೆಣಸು ಮಾತ್ರವಲ್ಲದೆ, ಔಷಧ ಸಸ್ಯಗಳು ಉಂಟು. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಮುನ್ನೂರು ವೆನಿಲ್ಲಾ ಸಸ್ಯಗಳನ್ನು ಬೆಳೆದು ಆರ್ಥಿಕವಾಗಿಯೂ ಸದೃಢರಾದರು.
`ಒಂದು ಕೇಜಿಗೆ ಮೂರು ಸಾವಿರ ರೂಪಾಯಿ ಗಳಿಸಿದ್ದುಂಟು’ ಎಂಬುದಾಗಿ ತುಂಬಾ ಹೆಮ್ಮೆಯಿಂದ ಹೇಳುವ ಪದ್ಮರಾಜು `ಕಾಲಕ್ಕೆ ತಕ್ಕಂತೆ ನಮ್ಮ ರೈತರು ನಮ್ಮ ಜಮೀನಿನಲ್ಲಿ, ತೋಟಗಾರಿಕೆಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ’ ಎಂಬುದನ್ನು ಹೀಗೆ ವಿವರಿಸುತ್ತಾರೆ;
`ಸಕಾಲಕ್ಕೆ ಮಳೆ, ನೀರು, ಇದ್ದಾಗ ತಂದೆ ಕಾಲದಲ್ಲಿ ಆಹಾರ ಬೆಳೆಗಳಾದ ರಾಗಿ, ಜೋಳ, ಹುರುಳಿ, ಅವರೆ, ತೊಗರಿ, ಶೇಂಗಾ ಇತ್ಯಾದಿಗಳನ್ನು ದಿಣ್ಣೆ ಹೊಲದಲ್ಲಿ ಬೆಳೆದೆವು. ಇತ್ತೀಚಿನ (ಎರಡು ದಶಕದಿಂದ) ಅನಿಶ್ಚಿತ ಮಳೆ, ಅಂತರ್‌ಜಲದ ಕುಸಿತದ ಕಾರಣದಿಂದ ತೋಟಗಾರಿಕೆಗೆ ಒತ್ತು ಕೊಟ್ಟಿದ್ದೇವೆ. ನಮ್ಮ ದಿಣ್ಣೆ ಹೊಲವನ್ನು ಹೊರತುಪಡಿಸಿ, ಎರಡೂ ಮುಕ್ಕಾಲು ಎಕರೆ ತೋಟಗಾರಿಕೆಯ ಎರಡು ದಶಕದ ಅನುಭವದಿಂದ ಹೇಳುವುದಾದರೆ ವಾರ್ಷಿಕ ನಿರ್ವಹಣಾ ವೆಚ್ಚ ಕಳೆದು ಮೂರು ಲಕ್ಷ ರೂಪಾಯಿಗೆ ಮೋಸವಿಲ್ಲ. ಮುಖ್ಯವಾಗಿ ಅಡಿಕೆ, ತೆಂಗಿನ ಬೆಳೆಯ ಬೆಲೆಯಲ್ಲಿ ಏರುಪೇರಾಗುವುದರಿಂದ ಒಂದು ವರ್ಷ ಮೂರು ಲಕ್ಷ, ಇನ್ನೊಂದು ವರ್ಷ ಐದಾರು ಲಕ್ಷ ಸಿಗಬಹುದು. ಏನೇ ಏರುಪೇರಾದರೂ ಸರಾಸರಿ ಮೂರು ಲಕ್ಷ ಗ್ಯಾರಂಟಿ. ಆದುದರಿಂದ ನಮ್ಮ ಮನೆಯ ಮೂಲಭೂತ ಸೌಲಭ್ಯಗಳಿಗೆ ಕೊರತೆ ಇಲ್ಲ. ಇನ್ನು ನಮ್ಮ ತೋಟದ ನಲವತ್ತು ತೆಂಗಿನ ಮರಗಳಲ್ಲಿ ಇಪ್ಪತ್ತೈದು ನಲವತ್ತು ವರ್ಷ ಮೀರಿದವು. ಅವುಗಳಿಂದ ಹದವಾದ ಕಾಯಿಗಳನ್ನು ಆಯ್ದ ಸಸಿಗಳನ್ನು ಬೆಳೆಸುತ್ತೇವೆ. ಪ್ರತಿವರ್ಷ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರತಿ ಸಸಿಗೆ ಬೆಳವಣಿಗೆ ಆಧರಿಸಿ ಇನ್ನೂರು-ಇನ್ನೂರೈವತ್ತು ರೂಪಾಯಿಗೆ ಮಾರುತ್ತೇವೆ. ಸ್ಥಳೀಯ ರೈತರ ಬೇಡಿಕೆಯನ್ನು ಪೂರ್ಣವಾಗಿ ಪೂರೈಸಲಾಗುತ್ತಿಲ್ಲ.’
ಪದ್ಮರಾಜು ಅವರ ಈ ಮಾತುಗಳನ್ನು ಕೇಳುತ್ತಿದ್ದರೆ ಸಹಜವಾಗಿ `ರೈತರೇಕೆ ಬಡವರು? ರೈತರೇಕೆ ಸಾಲ ಮಾಡುತ್ತಾರೆ? ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಏಕಿಲ್ಲ?’ ಮುಂತಾಗಿ ಅನೇಕ ಪ್ರಶ್ನೆಗಳು ಏಳುತ್ತವೆ. ಈ ಕುರಿತು ಮೂರು ದಶಕದಿಂದ ಕೃಷಿಯ ಒಡನಾಟ ಮತ್ತು ಪತ್ರಿಕಾ ಮಾಧ್ಯಮದ ಸಂಪರ್ಕವಿರುವ ಇವರು ಸಾವಿರಾರು ವರದಿ, ಲೇಖನ, ಟಿಪ್ಪಣಿಗಳನ್ನು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ ತಮ್ಮ ತೋಟದಲ್ಲೇ ಹತ್ತಾರು ವಿಚಾರ ಸಂಕಿರಣಗಳನ್ನು, ಕಮ್ಮಟಗಳನ್ನು, ಪ್ರಾತ್ಯಕ್ಷಿಕೆಗಳನ್ನು ನಡೆಸಿದ್ದಾರೆ. ರೈತರಲ್ಲಿ ಅರಿವು ಮತ್ತು ಆತ್ಮವಿಶ್ವಾಸ ತುಂಬಲು ಶ್ರಮಿಸಿದ್ದಾರೆ.
ಕಳೆದ ಒಂದು ದಶಕದಿಂದ ತೋವಿನಕೆರೆಯ `ಹಳ್ಳಿಸಿರಿ’ ಮಹಿಳಾ ಸಂಘಟನೆ ಜೊತೆ ಒಡನಾಟ ಇಟ್ಟುಕೊಂಡಿರುವ ಪದ್ಮರಾಜು ಈ ಏರಿಯಾದಲ್ಲಿ ಹಲಸಿನ ಕ್ರಾಂತಿಗೆ ಕಾರಣರಾಗಿದ್ದಾರೆ. ಹಲಸಿನ ಮೌಲ್ಯವರ್ಧನೆ ಇವರ ಮಂತ್ರ. ಹಿರೇಹಳ್ಳಿಯ ತೋಟಗಾರಿಕಾ ಕೇಂದ್ರಕ್ಕೆ ನಿರ್ದೇಶಕರಾಗಿ ಕರುಣಾಕರನ್ ಅವರು ಆಗಮಿಸಿದ್ದು `ಹಳ್ಳಿಸಿರಿ’ ಗೆ ನಿಜವಾಗಿಯೂ ಸಿರಿಯೇ ಬಂದAತಾಗಿದೆ. ಹಲಸಿನಿಂದ ಮುನ್ನೂರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಶ್ರೀಪಡ್ರೆಯವರು ತಮ್ಮ ಹಲಸಿನ ಅಧ್ಯಯನದಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಹಳ್ಳಿಸಿರಿ ಸಂಸ್ಕೃತಿಗೆ ತೊಂಬತ್ತು ಖಾದ್ಯಗಳನ್ನು ತಯಾರಿಸುವುದು ಗೊತ್ತಿದ್ದರೂ, ತುಂಬಾ ಜನಪ್ರಿಯವಾದ ಹದಿನೈದು ಖಾದ್ಯಗಳನ್ನು ತಮ್ಮ ಪ್ರಾತ್ಯಕ್ಷಿಕಾ ಕಾರ್ಯಕ್ರಮಗಳಲ್ಲಿ ಮತ್ತು ಹಲಸಿನ ಔತಣಕೂಟಗಳಲ್ಲಿ ರುಚಿ ತೋರಿಸುತ್ತಾರೆ. ಪದ್ಮರಾಜುರವರು ಈ ಅರ್ಧ ವರ್ಷದಲ್ಲಿ ಹಲಸಿನ ಕುರಿತು ವಾಟ್ಸಪ್‌ನಲ್ಲಿ ಮಾಹಿತಿ ನೀಡಿರುವುದೇ ಒಂದು ಕೃತಿಯಾಗುತ್ತದೆ. ಹಲಸಿಗೆ ನವಕಲ್ಪವೃಕ್ಷ ಎಂಬುವ ಹೆಸರು ಪ್ರಾಪ್ತವಾಗಿದೆ. ಹಲಸನ್ನ ಕುರಿತು ಯಾಕಿಷ್ಟು ವ್ಯಾಮೋಹ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ:` ಹಲಸು ಮಳೆ ಕಡಿಮೆ ಬೀಳುವ ಒಣಪ್ರದೇಶದಲ್ಲೂ ಸಮೃದ್ಧಿಯಾಗಿ ಬೆಳೆಯುತ್ತದೆ. ಹೆಚ್ಚಿನ ಪೌಷ್ಠಿಕಾಂಶಗಳಿಂದ ಕೂಡಿದೆ. ಹಲವು ಖಾದ್ಯಗಳ ತಯಾರಿಕೆಯ ಸಾಧ್ಯತೆಯಿಂದ ಮೌಲ್ಯವರ್ಧನೆ. ನಮ್ಮ ಬಯಲು ಸೀಮೆಯ ರೈತರನ್ನು ಬರದಿಂದ ಮುಕ್ತಿಗೊಳಿಸಲು ಇರುವ ಸುಲಭೋಪಾಯ.’
ಹಲಸಿನ ಅಭಿಯಾನವನ್ನೇ ಆರಂಭಿಸಿರುವ ಪದ್ಮರಾಜುರವರಿಗೆ ಕೃಷಿ ವಿಶ್ವವಿದ್ಯಾಲಯದೊಂದಿಗೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಜಿಕೆವಿಕೆ) ಭಾರಿ ನಂಟು. ಜಿಕೆವಿಕೆ ವಿದ್ಯಾರ್ಥಿಗಳು ತಮ್ಮ ಪದವಿ ಅಧ್ಯಯನದ ಕೊನೆಯ ವರ್ಷ ಮೂರು ತಿಂಗಳು ಗ್ರಾಮವಾಸ್ತವ್ಯ ಮಾಡಿ, ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಸಂವಾದ ಮಾಡುವುದು ಕಡ್ಡಾಯ. ಅಂಥ ಗ್ರಾಮ ವಾಸ್ತವ್ಯಗಳು ತೋವಿನಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆಗಿವೆ, ಆಗುತ್ತಿವೆ. ಹೀಗಾಗಿ ತೋವಿನಕೆರೆಗೂ, ಜಿಕೆವಿಕೆಗೂ ಅವಿನಾಭಾವ ಸಂಬಂಧ ಏರ್ಪಟ್ಟಿದೆ.
ರೈತ ಆತ್ಮಹತ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಪದ್ಮರಾಜು ಉತ್ತರ: `ಎಲ್ಲ ರೈತರ ಆತ್ಮಹತ್ಯೆಗಳು ಸಾಲಬಾಧೆಗೆ ಅಲ್ಲ. ರೈತ ಸಾಲದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಕೆಲ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ, ಬರದ ಸಂದರ್ಭದಲ್ಲಿ ಮಾತ್ರ ಸರ್ಕಾರ ವಿವೇಚನೆಯಿಂದ ಸಾಲಮನ್ನಾ ಮಾಡಬೇಕಷ್ಟೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಗಂಭೀರ ವಿಚಾರವಾಗಿದೆ’. ಹೀಗೆ ಅಭಿಪ್ರಾಯಪಡುತ್ತಾ ಅವರು ಬೆಳೆವಿಮೆ ಜಾಗೃತಿಗೆ ಮುಂದಾಗಿದ್ದಾರೆ.
ಇಂದು ಕೋವಿಡ್ ಸಂಕಷ್ಟ ನಮ್ಮ ಪರಿಸರ ಪ್ರಿಯರ, ರೈತರ ಬದುಕನ್ನು ಸಹ ಹಿಂಡಿ ಹಿಪ್ಪೆ ಮಾಡಿದೆ. ಇಂತಹ ದುರ್ಭರ ಸನ್ನಿವೇಶದಲ್ಲಿ ಇಂದು (ಜೂನ್ ೫) ವಿಶ್ವ ಪರಿಸರ ದಿನಾಚರಣೆ ಆಚರಿಸುವಂತಹ ಸ್ಥಿತಿ ಬಂದಿದೆ. ಹೀಗಿರುವಾಗ ರೈತರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದಾಗ, `ರೈತ ಶ್ರಮಜೀವಿ. ಕಷ್ಟಸಹಿಷ್ಣು. ಆತ್ಮಹತ್ಯೆ ಪ್ರಶ್ನೆ ಬೇಡ. ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿ, ಬರೆಯಿರಿ, ಬದುಕಿ’. ಇದು ಅವರ ಅನಿಸಿಕೆ. ಎಂಥ ಬುದ್ಧಿವಾದ! ಅಲ್ಲವೇ?
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.