22 C
Karnataka
Saturday, November 30, 2024
    Home Blog Page 106

    SSLC ಅಂಕಗಳನ್ನೂ ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶ ಘೋಷಿಸಲು ಶಿಕ್ಷಣ ಸಚಿವರ ಸೂಚನೆ

    ಇಂದಿನ ಸಂದರ್ಭದಲ್ಲಿ, ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು, ಹಾಗೂ ಹೆಚ್ಚು ನ್ಯಾಯಯುತವಾಗಲು ಈ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶಗಳನ್ನೂ ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ಕರ್ನಾಟಕ‌ ಪ್ರೌಢ ಶಿಕ್ಷಣ‌ಪರೀಕ್ಷಾ ಮಂಡಳಿಯ ವತಿಯಿಂದ‌ ಅಂಕಿ ಅಂಶಗಳನ್ನು ಪಡೆದು, ಪ್ರಥಮ ಪಿಯು ಅಂಕಗಳೊಂದಿಗೆ ಸೂಕ್ತ ರೀತಿಯಲ್ಲಿ ಹೊಂದಿಸಿ ಜೂನ್  ಮಾಸಾಂತ್ಯಕ್ಕೆ ಗ್ರೇಡಿಂಗ್ ಫಲಿತಾಂಶಗಳನ್ನು ಘೋಷಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

    ‘ಪರಿಸರ ವ್ಯವಸ್ಥೆಯ ಮರುಸ್ಥಾಪನೆ’ಯ ನಿಟ್ಟಿನಲ್ಲಿವಿಶ್ವ ಪರಿಸರ ದಿನಾಚರಣೆ: 2021

    ಮನುಷ್ಯನು ಸ್ವಾರ್ಥ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪೃಕೃತಿಯ ಮೇಲೆ ಮಾಡಿದ ದಬ್ಬಾಳಿಕೆಯಿಂದ ಈಗಾಗಲೇ ಅನೇಕ ವನ್ಯಜೀವಿಗಳು ನಾಶಹೊಂದಿವೆ, ಇನ್ನೂ ಅನೇಕ ಜೀವಿಗಳು ವಿನಾಶದಂಚಿನಲ್ಲಿವೆ. ಮಾತ್ರವಲ್ಲ, “ಮಾಡಿದ್ದುಣ್ಣು ಮಹರಾಯ ಅನ್ನುವಂತೆ”, ಮನುಷ್ಯನೇ ಈಗ ಪರಿಸರ ಮಾಲಿನ್ಯದಿಂದ ಉಂಟಾದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಡೆಂಗ್ಯು ಜ್ವರ, ಚಿಕನ್‌ಗೂನ್ಯ, ಮಲೇರಿಯ, ಇಲಿಜ್ವರ ಮುಂತಾದ ಸಾಂಕ್ರಾಮಿಕ ರೋಗಗಳಿಗೆ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗಿರುವ ಭೂಮಂಡಲದ ತಾಪಮಾನ ಏರುವಿಕೆ ಮತ್ತು ಹವಾಮಾನ ಬದಲಾವಣೆಯೇ ಮುಖ್ಯ ಕಾರಣವೆಂದು ತಿಳಿದು ಬಂದಿದೆ. ಪರಿಸರ ಮಾಲಿನ್ಯದಿಂದ ಕ್ಯಾನ್ಸರ್ ಮತ್ತು  ಉಸಿರಾಟ-ಸಮಸ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇಷ್ಟು ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಉಂಟಾಗುತ್ತಿರುವ ಅಕಾಲಿಕ ಮಳೆ, ನೆರೆ, ಕ್ಷಾಮ, ಸಮುದ್ರಕೊರೆತ, ಬರಗಾಲದಂತಹ ದುಸ್ಥಿತಿಗಳಿಂದ ಅನೇಕ ಕಷ್ಟನಷ್ಟ, ಸಾವು ನೋವುಗಳನ್ನು ಅನುಭವಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಇನ್ನಷ್ಟು ಭೀಕರ ದುರಂತಗಳಿಗೆ ಕಾಲ  ಸನ್ನಿಹಿತವಾಗಬಹುದು. 

    COVID-19 ಸಾಂಕ್ರಾಮಿಕದ ಮೊದಲ  ಮತ್ತು ಎರಡನೇ ಅಲೆಗಳ   ಅವಧಿಯಲ್ಲಿ, ವಾಯುಮಾಲಿನ್ಯ,  ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ಅನೇಕ ಸಂಶೋಧನೆಗಳಿಂದ ನಿರೂಪಿತವಾಗಿದೆ. ಮಾತ್ರವಲ್ಲ, ವಲಸೆ ಪಕ್ಷಿಗಳೂ  ಸೇರಿದಂತೆ ಅನೇಕ  ವನ್ಯಜೀವಿಗಳ ಬದುಕು ಮರುಸ್ಥಿತಿಗೆ ಬಂದಿರುವುದು ವರದಿಯಾಗಿವೆ.   ಪರಿಸರದ ಅವನತಿಗೆ ನಾವು ಮನುಷ್ಯರೇ ಕಾರಣ ಅನ್ನುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.  

    Photo by Alena Koval from Pexels

    ಈಗಾಗಲೇ ನಾವು ಮರು ಸ್ಥಿತಿಗೆ ತರಲಾರದಷ್ಟು ಪರಿಸರವನ್ನು ಸಾಕಷ್ಟು ಹಾನಿ ಮಾಡಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ನೈರ್ಮಲ್ಯವನ್ನು ಕಾಪಾಡಲು ಮತ್ತು ಸಂರಕ್ಷಿಸಲು ಕಾರ್ಯಪ್ರವೃತ್ತರಾಗಬೇಕಾಗಿರುವುದು ತುಂಬಾ ಅವಶ್ಯ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ದೇಶಗಳ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದು ಸಮಾಧಾನದ ವಿಷಯ. 

    ಪರಿಸರ ಸಂರಕ್ಷಣೆ ಅಂದ ತಕ್ಷಣ ಸರಕಾರ, ಸಂಸ್ಥೆ, ಕೈಗಾರಿಕೋದ್ಯಮಿ, ಬಂಡವಾಳ ಶಾಹಿಗಳ ಅಥವಾ ಇನ್ನಾವುದೋ ದೇಶದ ಕಡೆಗೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಬದಲಾಗಿ ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.  ನಮಗೆ ಬದುಕಲು ಆಮ್ಲಜನಕ, ನೀರು, ಆಹಾರ, ನೆಲೆ ಎಲ್ಲವನ್ನೂ ನೀಡುವ ಪರಿಸರವನ್ನು ಸಂರಕ್ಷಿಸಲು ನಾವು ಕಾರ್ಯೋನ್ಮುಖರಾಗಬೇಕಿದೆ.  ನಮ್ಮ ದೈನಂದಿನ ಜೀವನದಲ್ಲಿ ಪರಿಸರ-ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಂಡು ನಮಗೆ ಆಸರೆಯಾಗಿರುವ ಭೂಮಿಯನ್ನು ಉಳಿಸಿ ಕೊಳ್ಳುವಲ್ಲಿ ಅಳಿಲುಸೇವೆ ಸಲ್ಲಿಸೋಣ.

    ಪರಿಸರಸ್ನೇಹಿಚಟುವಟಿಕೆಗಳು

    • ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಉಳಿಸಿ ಬೆಳೆಸೋಣ. ಹಣ್ಣುಹಂಪಲು ನೀಡುವ ಗಿಡಗಳನ್ನು ನೆಟ್ಟರೆ, ಮುಂದೆ ವನ್ಯಜೀವಿಗಳಿಗೆ ಮುಖ್ಯವಾಗಿ ಪಕ್ಷಿಗಳಿಗೆ ಆಹಾರ ಸಿಗುತ್ತದೆ. 
    • ನೀರನ್ನು ಅನಗತ್ಯವಾಗಿ ವೆಚ್ಚ ಮಾಡದಿರೋಣ.
    • ಮನೆ ಕಚೇರಿಗಳಲ್ಲಿ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸೋರುತ್ತಿದ್ದರೆ ತಕ್ಷಣ ಅದನ್ನು ನಿಲ್ಲಿಸೋಣ.
    • ಮಳೆನೀರನ್ನು ಆದಷ್ಟು ಸಂಗ್ರಹಿಸಿ ಉಪಯೋಗಿಸೋಣ. ನಮ್ಮ ಮನೆ ತೋಟಗಳಲ್ಲಿ ಮಳೆಕೊಯ್ಲು ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಕಾಪಾಡೋಣ. 
    • ಹಳೆಯ ಕಾಗದ, ಪುಸ್ತಕಗಳನ್ನು ಸುಡದೆ, ಮರು ಮಾರಾಟ ಮಾಡಿ, ಅವನ್ನು ಪುನ: ಕಾಗದ ತಯಾರಿಸಲು ಬಳಸಬಹುದು, ಇದರಿಂದ ಅನೇಕ ಮರಗಳನ್ನು ಸಂರಕ್ಷಿಸಬಹುದು. 
    • ಜೈವಿಕ ತ್ಯಾಜ್ಯಗಳಿಂದ ಅಡುಗೆ ಅನಿಲವನ್ನು ಉತ್ಪಾದಿಸಿ, ಜಾಗತಿಕ ತಾಪಮಾನ ಬಿಸಿಯೇರುವಿಕೆಗೆ ಕಾರಣಗಳಲ್ಲಿ ಒಂದಾದ ಮಿಥೇನ್ ಅನಿಲವನ್ನು ನಿಯಂತ್ರಿಸೋಣ. 
    • ಮನೆಯ ಸುತ್ತಮುತ್ತ, ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸೋಣ. ಇದರಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ, ತಾಜಾ ಮಾಲಿನ್ಯರಹಿತ ಆಮ್ಲಜನಕವೂ ಸಿಗುತ್ತದೆ.
    • ಕಟ್ಟಡಗಳನ್ನು (ಮನೆ, ಅಂಗಡಿ, ಮಾಲ್, ಕಚೇರಿ) ಕಟ್ಟುವ ಹಂತದಲ್ಲೇ ಶಕ್ತಿ ಮತ್ತು ಸಂಪನ್ಮೂಲವನ್ನು ಉಳಿಸುವ ತಂತ್ರ – ಸಾಮಾಗ್ರಿಗಳನ್ನು ಬಳಸೋಣ. 
    • ಮದುವೆ, ಧಾರ್ಮಿಕ ಮತ್ತು ಇನ್ನಿತರ ಶುಭ ದಿನಗಳಲ್ಲಿ ಪರಿಸರಕ್ಕೆ ಧಕ್ಕೆ ತರುವ ಆಚರಣೆಗಳನ್ನೆಲ್ಲ ಕಡಿಮೆಗೊಳಿಸೋಣ. 
    • ವಿದ್ಯುತ್ಬಳಕೆಯನ್ನು ಮಿತಗೊಳಿಸೋಣ (ಅಗತ್ಯವೆನಿಸಿದಾಗ ಮಾತ್ರ ಫ್ಯಾನ್,  ಹವಾ ನಿಯಂತ್ರಣ, ಬಳಸೋಣ, ಕೊಠಡಿ ಹಾಗೂ ಮನೆ ಕಚೇರಿಯಿಂದ ಹೊರಬರುವ ಮುನ್ನ  ಸ್ವಿಚ್ ಗಳನ್ನು ಮರೆಯದೆ ಆರಿಸುವುದು ಇತ್ಯಾದಿ). 
    • ಸೌರಶಕ್ತಿ, ಎಲ್ ಇ ಡಿ ‌ ಬಲ್ಬ್ಗ ಳನ್ನು ಬಳಸೋಣ. 
    • ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರೋಣ ಮತ್ತು ಸಿ.ಎನ್.ಜಿ ಇಂಧನವನ್ನು ಬಳಸಿ ವಾಯು ಮಾಲಿನ್ಯವನ್ನು ಕಡಿಮೆಗೊಳಿಸೋಣ. 
    • ವಿದ್ಯುತ್-ಚಾಲಿತ ವಾಹನಗಳನ್ನು ಬಳಸುವ ಬಗ್ಗೆ ಆಸಕ್ತಿ ವಹಿಸೋಣ. 
    • ನಾವು ಬಳಸುವ ಎಲ್ಲ ವಸ್ತುಗಳನ್ನು ಮರುಚಕ್ರೀಕರಣಗೊಳಿಸಲು ಸಾಧ್ಯವಿದೆ. ಘನತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಿ ಮರುಚಕ್ರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗೋಣ ಮತ್ತು ಕೈಜೋಡಿಸೋಣ. 
    • ಮಿತಬಳಕೆ, ಮರುಬಳಕೆ ಮತ್ತು ಮರುಚಕ್ರೀಕರಣ ಎಂಬ ನೀತಿಯನ್ನು ಪಾಲಿಸಿ ತ್ಯಾಜ್ಯದ ಹೊರೆ ಕಡಿಮೆ ಮಾಡೋಣ. 
    • ದೀಪಾವಳಿಯಲ್ಲಿ ಪಟಾಕಿ ಸುಡುವುದನ್ನು ಕಡಿಮೆಗೊಳಿಸೋಣ;  ಹಬ್ಬ ಹರಿದಿನಗಳಲ್ಲಿ ಶಬ್ಧ ಮಾಲಿನ್ಯವನ್ನು ಕಡಿಮೆಗೊಳಿಸೋಣ. 
    • ಗ್ರಾಮವಾಸಿಗಳಾಗಿದ್ದರೆ, ಖಾಲಿ ಇರುವ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳೆಸಿ, ಹೊಂಗೆ, ಜತ್ರೋಪಾದಂತಹ ಜೈವಿಕ-ಇಂಧನದ ಸಸ್ಯಗಳನ್ನು ಬೆಳೆಸಬಹುದು. 
    • ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ಕಡಿಮೆಗೊಳಿಸಿ  ಅಂತರ್ಜಲದ ದುರುಪಯೋಗವನ್ನು ತಡೆಗಟ್ಟೋಣ. 
    • ಸಾಧ್ಯವಾದಷ್ಟು ಸಾವಯವ ಕೃಷಿಯನ್ನು ಅವಲಂಬಿಸಿ (ಎರೆಗೊಬ್ಬರ, ಜೈವಿಕ ಕ್ರಿಮಿನಾಶಕ ಬಳಕೆ, ಸಂಯೋಜಿತ ಕೀಟ ನಿರ್ವಹಣೆ  ಇತ್ಯಾದಿ), ಆಧುನಿಕ ಕೃಷಿ ಪದ್ಧತಿಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆಗೊಸೋಣ.
    • ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಣ. 
    • ಮಳೆನೀರು ವ್ಯರ್ಥ ಸಮುದ್ರ ಸೇರದಂತೆ  ಜಮೀನಿನಲ್ಲೇ  ಇಂಗಿಸೋಣ. 
    • ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳಲ್ಲಿ (ಬಸ್/ರೈಲು) ಪ್ರಯಾಣಿಸೋಣ. 
    • ಸಮೀಪದ ತಿರುಗಾಟಕ್ಕೆ ಕಾಲ್ನಡಿಗೆ, ಸೈಕಲ್ ಸವಾರಿ ಮಾಡೋಣ, ಇದು ಪರಿಸರ ಮಾತ್ರವಲ್ಲ ಆರೋಗ್ಯದ  ದೃಷ್ಠಿಯಿಂದಲೂ ಉತ್ತಮ. 
    • ಪ್ಲಾಸ್ಟಿಕ್ ಕೈಚೀಲಗಳನ್ನು ಅವಲಂಬಿತವಾಗದೇ, ಬಟ್ಟೆಯ/ನಾರಿನ ಚೀಲಗಳನ್ನು ಬಳಸೋಣ.
    • ನಾವು ಬಳಸುವ   ಪ್ಲಾಸ್ಟಿಕ್ ವಸ್ತುಗಳನ್ನು (ಕೈಚೀಲ, ಲೋಟ, ತಟ್ಟೆ, ಚಮಚ, ಐಸ್ಕ್ರೀಮ್ ಕಪ್ ಇತ್ಯಾದಿ) ಅಲ್ಲಲ್ಲಿಯೇ ಎಸೆಯದೇ ಅವುಗಳನ್ನು ಪುನರ್- ಬಳಕೆಗೊಳಿಸಲು (ರೀಸೈಕ್ಲಿಂಗ್) ಹಿಂದಿರುಗಿಸೋಣ. 
    • 4 ಅಥವಾ 5 ಸ್ಟಾರ್ ಲೇಬಲ್ ಇರುವ  ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಇನ್ನಿತರ   ಗೃಹೋಪಯೋಗಿ ಉಪಕರಣಗಳನ್ನು ಬಳಸಿ ವಿದ್ಯುತ್ ಶಕ್ತಿಯನ್ನು  ಉಳಿಸೋಣ.
    • ಉಡುಗೊರೆ / ನೆನಪಿನ ಕಾಣಿಕೆಗಳನ್ನು ನೀಡುವಾಗ ಪರಿಸರಸ್ನೇಹಿ ವಸ್ತುಗಳನ್ನೇ/ ಪರಿಸರ ಸಂರಕ್ಷಣಾ ಪುಸ್ತಕ, ಗಿಡಗಳನ್ನು  ಕೊಡೋಣ. ಸ್ಥಳಿಯ ಪರಿಸರ-ಸ್ನೇಹಿ ಕರಕುಶಲ ಮಾದರಿಗಳನ್ನು ಖರೀದಿಸೋಣ ಮತ್ತು ಪ್ರೋತ್ಸಾಹಿಸೋಣ. 
    • “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”  ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಪರಿಸರದ ಬಗ್ಗೆ ಕಾಳಜಿಯನ್ನು ಹುಟ್ಟಿಸಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಿವು ಮೂಡಿಸಿ, ಪರಿಸರಸ್ನೇಹಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಲು ಹುರಿದುಂಬಿಸಲು ಹೆತ್ತವರು / ಪೋಷಕರು ಮತ್ತು ಶಿಕ್ಷಕರು ಆಸಕ್ತಿ ತೋರಬೇಕು. 
    • ಕೋವಿಡ್-೧೯ ಸುರಕ್ಷತೆಯ ದೃಷ್ಟಿಯಿಂದ ಬಳಸುವ ಫೇಸ್ ಮಾಸ್ಕ್ ಗಳನ್ನು  ಸಿಕ್ಕಿದಲ್ಲಿ  ಎಸೆಯದೆ, ಅದು ಒಂದು ಅಪಾಯಕಾರಿ ಜೈವಿಕ ತ್ಯಾಜ್ಯ ಆಗಿರುವುದರಿಂದ ವಿಲೇವಾರಿ ಮಾಡುವ ಬಗ್ಗೆ ವಿಶೇಷ ಜಾಗೃತಿ ವಹಿಸೋಣ. 
    • ಪರಿಸರ ಸಂಘ, ಕೂಟಗಳನ್ನು ರಚಿಸಿಕೊಂಡು ತಮ್ಮ ಸುತ್ತಲ ಸ್ಥಳಗಳನ್ನು ಹೆಚ್ಚು ಚೊಕ್ಕವಾಗಿಟ್ಟುಕೊಳ್ಳಲು ಸೂಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಕಾರ್ಯರೂಪಕ್ಕೆ ತರೋಣ.
    • ಮಾಡುತ್ತಿರುವ ಪರಿಸರ-ಸ್ನೇಹಿ ಕಾರ್ಯ-ಚಟುವಟಿಕೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಇತರರನ್ನೂ ಹುರಿದುಂಬಿಸೋಣ. 
    ವಿಶ್ವ ಪರಿಸರ ದಿನಾಚರಣೆ: 2021 :
     ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 5   ಒಂದು ಮಹತ್ವಪೂರ್ಣವಾದ ದಿನ;  ವಿಶ್ವ ಪರಿಸರ ದಿನಾಚರಣೆ.  ಇದು ಪರಿಸರ ಮತ್ತು ಅದರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ  ಎಚ್ಚರಿಸುವ ದಿನ. 
    ಇದು ವಿಶ್ವ ಸಂಸ್ಥೆಯ – ಪರಿಸರ ಕಾರ್ಯಕ್ರಮದ  ಅಡಿಯಲ್ಲಿ ನಡೆಯುವ  ಜಾಗತಿಕ ಒಂದು ಅಭಿಯಾನ.   1974 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ  ಇದು   ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳಿಗೆ ಪರಿಹಾರ  ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಬೃಹತ್ ಅಭಿಯಾನವಾಗಿದೆ.     ‘ಮರುಕಲ್ಪಿಸಿ, ಮರುಸೃಷ್ಟಿಸಿ. ಮರುಸ್ಥಾಪಿಸಿ’ (Reimagine. Recreate. Restore)  ಎಂಬ ಧ್ಯೇಯವನ್ನು   ಇಟ್ಟುಕೊಂಡು ‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ ವು  (United Nations – Environment Programme; UN-EP) ಈ ವರ್ಷದ  ವಿಶ್ವ ಪರಿಸರ ದಿನವನ್ನು ಆಚರಿಸಿಲು ಕರೆನೀಡುವುದರ ಜೊತೆಗೆ     ‘ಪರಿಸರ ವ್ಯವಸ್ಥೆಯ  ಮರುಸ್ಥಾಪನೆ: 2021-2030’ (Ecosystem Restroration:2021-30) ಎಂಬ  ಹತ್ತು ವರ್ಷದ ಒಂದು ಬೃಹತ್  ಕಾರ್ಯಯೋಜನೆಗೆ ಚಾಲನೆ ನೀಡಿದೆ.    ದಶಕದ ಈ  ಅವಧಿಯಲ್ಲಿ  ಪ್ರತಿ ಭೂಖಂಡ ಮತ್ತು  ಸಮುದ್ರದಲ್ಲಿ ಮಾನವ ನಿರ್ಮಿತ  ಪರಿಸರ ವ್ಯವಸ್ಥೆಗಳ ಅವನತಿಯನ್ನು ತಡೆಯಲು,  ಮತ್ತು ಅದನ್ನು  ಹಿಮ್ಮುಖಗೊಳಿಸಬೇಕೆಂಬ    ಉದ್ದೇಶವನ್ನು ಹೊಂದಿದೆ.  ಆ ಮೂಲಕ  ಇದು ಬಡತನವನ್ನು ನಿರ್ಮೂಲನೆಗೊಳಿಸಲು, ಹವಾಮಾನ ಬದಲಾವಣೆಯನ್ನು ಉಪಶಮನಗೊಳಿಸಲು ಮತ್ತು ವನ್ಯಜೀವಿಗಳ ಸಂತತಿ ನಿರ್ವಂಶವಾಗುವುದನ್ನು  ತಡೆಯಲು ಸಹಕಾರಿಯಾಗುವುದು ಎಂದು ಆಶಿಸಲಾಗಿದೆ.  ಇದು ಯಶಸ್ವಿಯಾಗಬೇಕಿದ್ದರೆ ಪ್ರತಿಯೊಬ್ಬರೂ   ಕೈಜೋಡಿಸಬೇಕು.  ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಮಹತ್ತರವಾದ ಜವಾಬ್ದಾರಿ ಇದೆ.  ಈ ಜವಾಬ್ದಾರಿಯಿಂದ  ನುಣುಚಿಕೊಂಡರೆ, ಅದರ ವ್ಯತಿರಿಕ್ತ ಪರಿಣಾಮ ಮುಂದೆ ನಾವೇ ಎದುರಿಸಬೇಕಾಗುತ್ತದೆ.ವಿಶ್ವ ಪರಿಸರ ದಿನಾಚರಣೆಯ ಹೆಚ್ಚಿನ ಮಾಹಿತಿಗಾಗಿ UN-EP  ವೆಬ್‌ಸೈಟ್‌ಗೆ ಪ್ರವೇಶಿಸಬಹುದು:  https://www.un.org/en/observances/environment-day
    Photo by PhotoMIX Company from Pexels

    ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನು ಪೂರೈಸಲು ಅಲ್ಲ- ಮಹಾತ್ಮ ಗಾಂಧಿ. 

    ನೀರು ಅತ್ಯಂತ ಅಮೂಲ್ಯ ಸರಕು ಮತ್ತು ಈ ಭೂಮಿಯ ಎಲ್ಲ ಜನರಿಗೆ ಉಡುಗೊರೆಯಾಗಿದೆ ಮತ್ತು ಅದನ್ನು ಸಮಾನವಾಗಿ ಹಂಚಿಕೊಳ್ಳಬೇಕು – ಬುದ್ಧ.

     ನಮ್ಮ ಕೈಯಲ್ಲಿ ಇಂದು ನಮ್ಮ ಭವಿಷ್ಯ ಮಾತ್ರವಲ್ಲ, ಜೊತೆಗೆ ನಮ್ಮೊಂದಿಗೆ ಈ ಭೂಮಿಯಲ್ಲಿರುವ ಎಲ್ಲ ಜೀವಿಗಳ ಭವಿಷ್ಯವೂ ಅಡಗಿದೆ –  ಡೇವಿಡ್ ಅಟೆನ್‌ ಬರೋ. 

    ಪ್ರತಿಯೊಂದು ಜೀವಕ್ಕೂ ಇನ್ನೊಂದು ಪೂರಕವಯ್ಯ, ಜೀವಜೀವದ ನಂಟು ಬೃಹ್ಮಗಂಟು – ಗೋಪಾಲಕೃಷ್ಣ ಅಡಿಗ.

    ಜಗತ್ತು ಬದಲಾಗಬೇಕೆಂದು ಎಲ್ಲರೂ ಬಯಸುತ್ತಾರೆ, ತಾನು ಬದಲಾಗಬೇಕೆಂದು ಯಾರೂ ಯತ್ನಿಸುವುದಿಲ್ಲ – ಲಿಯೋ ಟಾಲ್‌ಸ್ಟಾಯ್. 

    ಪರಿಸರ ಯಾರೊಬ್ಬರ ಆಸ್ತಿ ಅಲ್ಲ, ಅದು ಪ್ರತಿಯೊಬ್ಬನಿಗೂ ಅವಶ್ಯ, ಉತ್ತಮ ಪರಿಸರವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ – ಡಾ. ಶಿವರಾಮ ಕಾರಂತ. 

    ಮಾನವ ಜೀವಿಯ ಕಾರಣದಿಂದ ಭೂಮಿಯೊಂದು ರೋಗಗ್ರಸ್ತ ಗ್ರಹವಾಗಿದೆ. ಅದಕ್ಕೆ ತುರ್ತಾಗಿ ಚಿಕಿತ್ಸೆ ಬೇಕಾಗಿದೆ. ಬರಲಿರುವ ದುರಂತಕ್ಕೆ ತಡೆಯೊಡ್ಡದ್ದಿದ್ದರೆ ಇಡೀ ಪ್ರಥ್ವಿಯೇ ಜೀವಗಳ ವಾಸಕ್ಕೆ ಅನರ್ಹವಾಗಲಿದೆ- ಕೆ.ವಿ. ನಾರಾಯಣ. 

    ಈ ಪೃಥ್ವಿಯನ್ನು ನಮ್ಮ ತಾತ ಮುತ್ತಾತರಿಂದ ನಾವು ವಂಶ ಪಾರಂಪರ್ಯವಾಗಿ ಪಡೆದಿದ್ದೇವೆ. ನಮ್ಮ ಮಕ್ಕಳು ಮೊಮ್ಮಕ್ಕಳಿಗೆಂದು ನಾವಿದನ್ನು ಕಲುಷಿತಗೊಳಿಸಿಟ್ಟು ಹೋಗಬಾರದು – ನಾಗೇಶ ಹೆಗ್ಡೆ. 

    ಪರಿಸರ-ಸ್ನೇಹಿ ಕೆಲಸಗಳೆಂದರೆ ಬೀಜ ಬಿತ್ತಿದಂತೆ. ಅದು ಬೆಳೆದು ಫಲ ಕೊಡುವುದಲ್ಲದೆ ಮತ್ತೆ ಬೀಜವನ್ನು ಒದಗಿಸುತ್ತದೆ- ಕೆ. ಎಸ್. ನಿಸಾರ್ ಅಹಮದ್. 

    “ಗಿಡ ಬೆಳೆಸಿದಂತೆಲ್ಲ ರಾಷ್ಟ್ರವೂ  ಬೆಳೆಯುತ್ತದೆ, ಗಿಡ ಬೆಳೆಸಿ,  ರಾಷ್ಟ  ಉಳಿಸಿ” – ಎನ್. ಮಣಿವಾಸಕಮ್.

    Photograph by: Nithish P. Byndoor

    KSRTC ಹೆಸರು ಕೇರಳ ಪಾಲಾಗುವುದೆ ? FBಯಲ್ಲಿ ಸ್ವಾರಸ್ಯಕರ ಚರ್ಚೆ; ಆತಂಕ ಬೇಡ ಎಂದರು ಸಾರಿಗೆ ಸಚಿವರು

    ಸುದೀರ್ಘ ಕಾನೂನು ಸಮರದಲ್ಲಿ ನಮ್ಮ ಹೆಮ್ಮೆಯ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ ಆರ್ ಟಿ ಸಿ ಹೆಸರು ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಪಾಲಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬದಲಿ ಹೆಸರು ಸೂಚಿಸಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸ್ವಾರಸ್ಯಕರ ಚರ್ಚೆ ಶುರುವಾಗಿದೆ.

    ಪರ್ತಕರ್ತ ಹ. ಚ. ನಟೇಶ ಬಾಬು‘KSRTC’ ಅನ್ನೋದು ಇನ್ಮೇಲೆ ಕೇರಳ ಸ್ವತ್ತು. ಹೋಗಲಿ ಬಿಡಿ ಒಂದು S ತೆಗೆದು ‘KRTC'(Karnataka Road Transport Corporation) ಮಾಡಿಕೊಳ್ಳೋಣ. ನೋ ಪ್ರಾಬ್ಲಂ ಎಂದು ಆರಂಭಿಸಿದ ಚರ್ಚೆಗೆ ಪ್ರತಿಕ್ರಿಯಿಸಿರುವ ಶ್ರೀಧರ ಬಾಣಾವರ ಅವರು Ka Ra Ra Sa Sam ಅಂತ ಇಂಗ್ಲಿಷ್‌ ನಲ್ಲಿ ಯಾಕಾಗಬಾರದು.? ನನ್ನ ಮಗಳಿಗೆ ನನ್ನ ಹೆಸರಿನ ಮೊದಲಕ್ಷರ (ಶ್ರೀ)Sri ಎಂದು S ಬದಲಿಗೆ ನಾಲ್ಕು ದಶಕಗಳ ಹಿಂದೆ ಇಟ್ಟಿದ್ದೇನೆ. ಏನೂ ತೊಂದರೆ ಆಗಿಲ್ಲ ಎಂದಿದ್ದಾರೆ.

    ಇದೇ ಚರ್ಚೆಯಲ್ಲಿ ಭಾಗವಹಿಸಿರುವ ಹಿರಿಯ ಪತ್ರಕರ್ತ ಎಂ. ಜಯರಾಮ ಅಡಿಗ ಅವರು ..State ಪದವನ್ನು ಎಲ್ಲ ಸರ್ಕಾರಿ ನಿಗಮ -Corporation-ಗಳಲ್ಲಿ Karnataka ಪದದ ಮುಂದೆ ಸೇರಿಸುವ ನಿಯಮ ಅನುಸರಣೆ ಇದೆ. (ಸರ್ಕಾರಿಮಂಡಳಿ-Board-ಗಳಿಗೆ ಹಾಗೇನಿಲ್ಲ).ಯಾವುದೇ ಖಾಸಗಿ ಸಂಸ್ಥೆ ‘ಕರ್ನಾಟಕ….ಸಂಸ್ಥೆ’ ಹೆಸರಿಟ್ಟು ಕೊಂಡರೆ ಕರ್ನಾಟಕದ ಮುಂದೆ ರಾಜ್ಯ-State-ಪದಸೇರಿಸಿಕೊಳ್ಳಬಾರದೆಂಬ ನಿರ್ಬಂಧ. ಉದಾ: ನೀವು ಕರ್ನಾಟಕ ಪುಸ್ತಕ ಸಂಸ್ಥೆ Karataka Book House ಪ್ರಾರಂಭಿಸಿದರೆ ಅದನ್ನು ಕರ್ನಾಟಕ ರಾಜ್ಯ ಪುಸ್ತಕ ಸಂಸ್ಥೆ Karnataka State Book House ಎಂಬ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ ಹೆಸರು ಬದಲಾವಣೆ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ವಿವರಿಸಿದ್ದಾರೆ.

    ಈ ಚರ್ಚೆ ಮುಂದುವರಿದಿದ್ದು ಹಲವಾರು ಹಲವು ರೀತಿಯ ಹೆಸರು ಸೂಚಿಸಿದ್ದಾರೆ.

    ರಾ ಸು ವೆಂಕಟೇಶ ನಮ್ಮದೀಗ
    ಕದಂಬ ಸಾರಿಗೆ ಸಂಸ್ಥೆ /ಕರುನಾಡ ಸಾರಿಗೆ
    ಎಂದಾಗಲಿ!
    . ಎಂದು ಆರಂಭಿಸಿರುವ ಚರ್ಚೆಗೆ ಹಲವಾರು ಮಂದಿ ದನಿಗೂಡಿಸಿದ್ದಾರೆ.ಕೆಲವರು ಸುವರ್ಣ ಕರ್ನಾಟಕ ಸಾರಿಗೆ ಎಂದಾಗಲಿ ಎಂಬ ಸಲಹೆಯನ್ನು ನೀಡಿದ್ದಾರೆ. ಇಲ್ಲೂ ಚರ್ಚೆ ಮುಂದುವರಿದಿದೆ.

    ಆತಂಕ ಬೇಡ

    ಈ ಮಧ್ಯೆ ಕೆಎಸ್ ಆರ್ ಟಿ ಸಿ ಎಂಬ ಹೆಸರು ಕೈ ತಪ್ಪುತ್ತಿದೆ ಎಂದು ಕನ್ನಡಿಗರು ಪಡುತ್ತಿರುವ ಆತಂಕಕ್ಕೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ

    ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

    ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಸವದಿ ಅವರು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.

    ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ “ಕೆಎಸ್‌ಆರ್‌ಟಿಸಿ” ಎಂದು ಬಳಸುವಂತಿಲ್ಲವೆಂದು,ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು
    ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಗಳನ್ನು ಇಂದು ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಆದರೆ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ರವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.

    ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆ ಎಸ್ ಆರ್ ಟಿ ಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.ಏತನ್ಮಧ್ಯೆ, ಸದರಿ ಮಂಡಳಿಯನ್ನು .4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ ಮತ್ತು ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಮತ್ತು ಕೆಎಸ್‌ಆರ್‌ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ಮಾರ್ಕ್‌ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿದೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು.

    ಆದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಸವದಿಯವರು ಸಮಜಾಯಿಷಿ ನೀಡಿದ್ದಾರೆ.

    ಕೇರಳ ಎಸ್‌ಆರ್‌ಟಿಸಿಯು, ಕೆಎಸ್ಆರ್‌ಟಿಸಿ / ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿನ ಸುದ್ದಿ ಪ್ರಕಟವಾಗಿದೆ. ಒಂದು ವೇಳೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಆದ್ದರಿಂದ ಆತಂಕಪಡಬೇಕಾಗಿಲ್ಲ ಎಂದು ಸವದಿ ಅವರು ತಿಳಿಸಿದ್ದಾರೆ.

    ಕುಶ ಈಗ ಬಂಧ ಮುಕ್ತ

    ಕುಶ ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ನಿನ್ನೆ ಸಂಜೆ ಅರಣ್ಯ ಪ್ರದೇಶ ದಲ್ಲಿ ಬಿಡುಗಡೆ ಮಾಡಲಾಗಿದೆ, ಇದರಿಂದ ಕುಶ ಬಂಧಮುಕ್ತ ನಾಗಿದ್ದಾನೆ ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ ಕುಶ ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು,ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶ ನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ.

    ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಕೆ ಪಿ ರಂಜನ್ ಹಾಗೂ ಅರಣ್ಯ ಪಶುವೈದ್ಯಾಧಿಕಾರಿ ಡಾಕ್ಟರ್ ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು ಬೀಳ್ಕೊಟ್ಟರು.

    2018ರಲ್ಲಿ ಚೆಟ್ಟಳ್ಳಿ ಕಂಡಕೆರೆ ವ್ಯಾಪ್ತಿಯಲ್ಲಿ ಈ ಆನೆ ಜನರಿಗೆ ಕಿರುಕುಳ ನೀಡುತ್ತಿತ್ತು ಎಂಬ ಆರೋಪದ ಮೇಲೆ ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ಅದಕ್ಕೆ ‘ಕುಶ’ ಎಂದು ನಾಮಕರಣ ಮಾಡಿ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿತ್ತು. ದುಬಾರೆ ಶಿಬಿರದಲ್ಲಿದ್ದ ‘ಕುಶ’ ಆನೆ 2019ರಲ್ಲಿ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ಕಾಡಿಗೆ ಓಡಿ ಹೋಗಿತ್ತು. ಸುಮಾರು 17 ಆನೆಗಳ ಗುಂಪಿನೊಂದಿಗೆ ಸೇರಿಕೊಂಡಿತ್ತು. ಇಲಾಖೆಯವರು ಸೆರೆಹಿಡಿಯಲು ನಡೆಸಿದ ಎಲ್ಲಾ ಪ್ರಯತ್ನ ವಿಫಲವಾಗಿತ್ತು. ಕೊನೆಗೆ 2019ರಲ್ಲಿ ಮತ್ತೆ ಸೆರೆ ಹಿಡಿಯಲಾಗಿತ್ತು.

    ಸ್ವತಂತ್ರವಾಗಿದ್ದ ಆನೆಯನ್ನು ಬಂಧಿಸಿ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿ ಪ್ರಿಯರು ದೂರುತ್ತಿದ್ದರು. ಹೀಗಾಗಿ ಇದನ್ನು ವಾಪಸ್ಸು ಕಾಡಿಗೆ ಬಿಡುವಂತೆ ಅರಣ್ಯ ಮಂತ್ರಿ ಲಿಂಬಾವಳಿ ಆದೇಶಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

    ಮೊನ್ನೆ ಭಾನುವಾರ ಪರಿಸರ ಕಾರ್ಯಕರ್ತೆ ಮತ್ತು ಸಂಸದೆ ಮೇನಕಾ ಗಾಂಧೀ ಸಚಿವರ ಸೂಚನೆಯನ್ನು ಪಾಲಿಸದ ಅರಣ್ಯ ಸಿಬ್ಭಂದಿ ಬಗ್ಗೆ ಹರಿಹಾಯ್ದಿದಿದ್ದರು.

    ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿ; ಭೌತಿಕ ತರಗತಿ ತಡವಾದರು ಎಂದಿನಂತೆ ಆನ್ ಲೈನ್ ಶಾಲೆ

    ಈ ವರ್ಷದ ಅಂದರೆ 2021-22 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ವರ್ಷವನ್ನು ನಿಗದಿ ಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳ ಆರಂಭ ತಡವಾದರು ಆನ್ ಲೈನ್ ಮತ್ತಿತರ ಪರ್ಯಾಯ ಮಾರ್ಗಗಳ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸಲು ಸೂಚಿಸಲಾಗಿದೆ.

    ಇದರ ಅನ್ವಯ ಜುಲೈ 1 ರಿಂದ ಅಕ್ಟೋಬರ್ 9 ರವರೆಗೆ ಮೊದಲ ಅವಧಿಯಾಗಿದ್ದುಅಕ್ಟೋಬರ್ 21 ರಿಂದ 2022ರ ಏಪ್ರಿಲ್ 30ರವರೆಗೆ ಎರಡನೇ ಅವಧಿಯಾಗಿರುತ್ತದೆ.

    ಅಕ್ಟೋಬರ್ 10ರಿಂದ ಅಕ್ಟೋಬರ್ 20ರವರೆಗೆ ದಸರಾ ರಜೆ ಹಾಗೂ 2022 ರ ಮೇ 1 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಲಾಗಿದೆ.

    ಈ ಬಗ್ಗೆ ಹೊರಡಿಸಿರುವ ಸುತ್ತೋಲೆಯ ಪೂರ್ಣ ಪಾಠ ಇಲ್ಲಿದೆ. ಅದರ ಜೊತೆಗೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2021-22 ನೇ ಸಾಲಿಗೆ ದಾಖಲಾತಿ ಮತ್ತು ಶುಲ್ಕ ಪಡೆಯುವ ಬಗ್ಗೆ ಹೊರಡಿಸಿರುವ ಸುತ್ತೋಲೆಯೂ ಇದೆ.

    ಇವೆಲ್ಲಾ ಸರಿಯಾಗೋದು ಯಾವಾಗ?

    ಶಿವಪ್ರಸಾದ್ ಬೋಳಂತೂರು

    ದಿನಕಳೆದಂತೆಲ್ಲಾ ನಿರಾಳವಾಗಿ ಸಾಗುತ್ತಿದ್ದ ಜೀವನ ಇಂದು ಕಳೆಗುಂದಿದೆ. ನೆಮ್ಮದಿಯ ಭರವಸೆ ಕಳಕೊಂಡಿದೆ. ಅಭಿವೃದ್ದಿಯ ಹೊಂಗನಸ ತೆರೆದಿಟ್ಟು, ಮೇರುಶಿಖರವಾಗಲೋಸುಗ ಆ ದಿಕ್ಕಿನಲ್ಲಿ ಅಂಬೆಗಾಲಿಡುತ್ತಿದ್ದಂತೆ, ದೇಶ ಜಾರದಿದ್ದರೂ ಕಾಲೆಳೆಯುವ ಪ್ರಯತ್ನ ಕೆಲವರಿಂದ ಸದ್ದಿಲ್ಲದೆ ನಡೆಯುತ್ತಿದೆ. ಯಾರಿಗೇನು ನೀಡಿತ್ತು ಭಾರತವೆಂದಾದರೆ, ಸಂಸ್ಕೃತಿ ನೀಡಿಲ್ಲವೆ, ಬಂದ ಪಯಣಿಗರಿಗೆ ನೆಲೆಯನಿತ್ತಿಲ್ಲವೆ, ಕಷ್ಟದಲ್ಲಿ ಸಹಾಯಹಸ್ತ ಚಾಚಿಲ್ಲವೆ…ಆದರೂ ಇನಿತಿದೇಕೆ ಸಂಕಷ್ಟ!

    ವೇದೋಪನಿಷತ್ತು, ಧರ್ಮಗ್ರಂಥವನ್ನು ನೀಡಿ, ಅದರೊಳಗಿನ ಗಂಧಪರಿಮಳವನ್ನು ಪಸರಿಸಿ, ಆಘ್ರಾಣಿಸಿದ ಮೇಲೂ ಧೈರ್ಯವನ್ನೇಕೆ ಕಳೆದುಕೊಂಡಿತು ನನ್ನ ದೇಶ! ಮತ್ತೇಕೆ ನನ್ನವರು ಅಪಪ್ರಚಾರದಲಿ ಸಿಲುಕಿ, ನಲುಗಿ ಪ್ರಾಣವನ್ನೆ ಬಿಡುವಷ್ಟು ಅಬಲರಾಗುತ್ತಿದ್ದಾರೆ! ಮನೆಯೊಳಗೆ ಕುಳಿತಂತೆ ಭವಿಷ್ಯದ ಕೆಟ್ಟ ಕನಸು ಕಾಣುತ್ತಾ, ಪೂರ್ವಜರು ಕೊಟ್ಟಿಹ ಕೊಡುಗೆಗಳನ್ನು ನೆನೆಯದೆ ಭವಿಷ್ಯದ ಚಿಂತಕರಾಗುವಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ. ಬಿಟ್ಟೂಬಿಡದೆ ಸಂಕಷ್ಟ ಎದುರಾಗಿರುವಾಗ, ದುಃಖದಲ್ಲಿ ಕುಂದಿ ಅಬಲರಾಗಿರುವ ನಿಶ್ಯಕ್ತ ಜೀವಗಳಿಗೆ ಶಕ್ತಿ ತುಂಬಿ ಸಬಲರನ್ನಾಗಿಸಬೇಕಿದೆ.

    ಕೊರೋನಾ ಬಂದಾಗಿನಿಂದಲೂ ನಾವು ಕೈಗೊಳ್ಳುವ ಕೆಲಸಕ್ಕೆ ನೂರೆಂಟು ವಿಘ್ನ! ಕಷ್ಟಪಟ್ಟು ಪದವಿ ಗಳಿಸಿ ಸಣ್ಣಪುಟ್ಟ ಉದ್ಯೋಗದಲ್ಲಿರುವವರು ಮುಂದೇನು ಕತೆಯೋ ಎಂಬಂತೆ ಚಿಂತಿಸುತ್ತಾರೆ! ಕತ್ತಲ ಚಿಮಣಿ ದೀಪದ ಬೆಳಕಲ್ಲೋ, ಜಗಲಿಯ ಅಂಚಲ್ಲೋ ಕುಳಿತು ಬೀಡಿ ಕಟ್ಟಿ, ಮನೆಗೆ ದಿನಸಿ ಸಾಮಾನು ಹೊಂದಿಸುತ್ತಿದ್ದವರ ಗೋಳು ಸಾಮಾನ್ಯವಾಗಿಬಿಟ್ಟಿದೆ. ಜೋತುಬಿದ್ದಿರುವ ಹುಬ್ಬಿನೆಡೆಯ ಆಸೆಯ ಕಂಗಳಲಿ ಪೆನ್ಷನ್ ಹಣಕ್ಕಾಗಿ ಕಾದು ಕುಳಿತಿರುವ ಸುಕ್ಕುಗಟ್ಟಿರುವ ಕೈಗಳು ಇನ್ನೆಷ್ಟು ಕಾಯಬೇಕೋ! ಪಟ್ಟಿ ಮಾಡುತ್ತಾ ಹೋದಂತೆ ಸಾಲು ಸಾಲು ಸಂಕಷ್ಟಗಳು, ಚಿಂತಿಸುತ್ತಾ ಕೂತಂತೆ ಭವಿಷ್ಯವೇ ಹಾಳಾಯಿತೆಂಬ ಅಳುಕು. ಸರ್ವ ರೋಗಕ್ಕೂ ಸರಾಯಿ ಮದ್ದು ಎಂದು ಬೀಗುತ್ತಿದ್ದವರು ಕೊರೋನಾದೆದುರು ಬಾಗಲೇಬೇಕಾಯಿತು. ಶಾಲೆಯ ಸವಿ ಕ್ಷಣಗಳನ್ನು ಮೆಲುಕು ಹಾಕಬೇಕಿದ್ದ ಮುಗ್ಧ ಮನಸುಗಳು ಆನ್‌ಲೈನ್ ಕ್ಲಾಸಿಗೆ ಹೊಂದಿಕೊಂಡಿವೆ. ಇವರೆಲ್ಲರದು ಒಂದೇ ಪ್ರಶ್ನೆ “ಇದೆಲ್ಲ ಸರಿ ಆಗೋದು ಯಾವಾಗ?”

    ಧೈರ್ಯ ಕಳಕೊಂಡ ಮನಗಳಿಗೆ ಈ ಬರಹ ಸಾಂತ್ವನದ ಜೋಗುಳ. ಎದೆಗುಂದದಿರಿ ನನ್ನವರೇ, ಕಲಿಯಬೇಕಾದ ಸಾಕಷ್ಟು ಜೀವನ ಪಾಠ ಪ್ರಕೃತಿ ಕಲಿಸಿತು. ಮತ್ತೆ ಹೊಸ ದಿನಗಳಿಗಾಗಿ ನಾವು ನಮ್ಮ ಮನಸ್ಸು ಬದಲಿಸಿಕೊಳ್ಳಬೇಕು. ನಮ್ಮಿಂದ ಆಗುವಷ್ಟು ನಾವೇ ನಮಗೆ ಧೈರ್ಯ ತಂದುಕೊಳ್ಳಬೇಕು. ಋಣಾತ್ಮಕವಾಗಿ ಚಿಂತಿಸುವವರಿಂದ ದೂರವಿರಬಹುದು. ಬಿಡುವಿನ ಸಮಯದಲ್ಲಿ ಮನೆಯವರೊಂದಿಗೆ ಬೆರೆಯಿರಿ, ಸ್ನೇಹಿತರೊಂದಿಗೆ ಹರಟೆ ಹೊಡೆಯಿರಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ. ಪರೀಕ್ಷೆಯ ದಿನ ಸಮೀಪ ಬಂದಾಗ ಪುಸ್ತಕ ಓದುತ್ತಿದ್ದಂತೆ, “ಅದು ಮಾಡಬೇಕು, ಇದು ಸಾಧಿಸಬೇಕು” ಎಂದು ಕಾಡುವ ಆಲೋಚನೆಗಳನ್ನು ಸಾಕಾರಗೊಳಿಸಿ. ಮನಸ್ಸನ್ನು ಬೇಜಾರಿಗೆ ನೂಕದಿರಿ. ಮನೆಯಲ್ಲೇ ಇರಿ, ಆರಾಮಾಗಿರಿ. ಅತಿಯಾಗಿ ಚಿಂತಿಸದಿರಿ.

    ನಮ್ಮ ಭಾರತ ಹಿಂದೆಂದೂ ಕಂಡಿರದ ಸಂಕಷ್ಟಕ್ಕೆ ತುತ್ತಾಗಿರಬಹುದಾದರೂ, ಮನೆಮನದಲ್ಲೆಲ್ಲೂ ನಂಬಿಕೆಯ ಪ್ರೇಮ ಬಹು ಗಟ್ಟಿಯಾಗಿರಲಿ. ನಮಗೆ ಅರಿವಿಲ್ಲದಂತೆ ಎಲ್ಲಾ ನಡೆದು ಹೋಯಿತು. ಕೃಷ್ಣ ವಾಣಿಯಂತೆ, “ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತಿದೆ,ಆಗುವುದೆಲ್ಲಾ ಒಳ್ಳೆಯದೇ ಆಗಿದೆ, ಮುಂದೆ ಆಗಲಿರುವುದೂ ಒಳ್ಳೆಯದೇ ಆಗಲಿದೆ”. ಭಗವದ್ಗೀತೆಯ ಈ ಮಾತುಗಳು ಅನಂತ ಸತ್ಯವೆಂದು ತಿಳಿದಿದ್ದರೂ ದಿನನಿತ್ಯದ ಜೀವನದಲ್ಲಿ ಆ ಮಾತುಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿ ಸುಖಾಸುಮ್ಮನೆ, “ಹೀಗೆ ಆಗಬಾರದಿತ್ತು” ಎಂದು ವಿಷಾದಿಸುತ್ತೇವೆ.

    ಸಂಸ್ಕೃತದಲ್ಲಿ ಸ್ವರ್ಣದಂತ ಸುಭಾಷಿತವಿದೆ. “ಚಿಂತಾ ಚಿತಾ ಸಮಾನಾsಸ್ತಿ ಬಿಂದುಮಾತ್ರ ವಿಶೇಷತ್ಹ|, ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೆ ಚಿತಾ”||: ಚಿಂತೆ ಮತ್ತು ಚಿತೆಯಲ್ಲಿ ಕೇವಲ ಅನುಸ್ವಾರದ ವ್ಯತ್ಯಾಸವಿದೆ. ಚಿಂತೆಯೂ ಜೀವವಿರುವವರನ್ನು ಸುಟ್ಟರೆ, ಚಿತೆ ನಿರ್ಜೀವಿಯನ್ನು ಸುಡುತ್ತದೆ. ಹಾಗಾಗಿ ಅತಿಯಾಗಿ ಚಿಂತಿಸದೆ ನಮ್ಮ ಮನಸ್ಸಿಗೆ ಧೈರ್ಯ ತಂದುಕೊಂಡರೆ ಮಾತ್ರ ಬದಲಾವಣೆ ಸಾಧ್ಯ.

    Photo by Sarah Kilian on Unsplash


    ಶಿವಪ್ರಸಾದ್ ಬೋಳಂತೂರು, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಪ್ರಥಮ ಬಿ.ಎ ( ಪತ್ರಿಕೋದ್ಯಮ ವಿಭಾಗ)ವಿದ್ಯಾರ್ಥಿ

    ಕೋವಿಡ್ : ಸಕ್ರಿಯ ಪ್ರಕರಣಗಳು ಇಳಿಕೆ

    ಇಂದು ಬೆಳಿಗ್ಗೆ ವರದಿಯಾದಂತೆ ದೇಶದ ಕೋವಿಡ್ ಸ್ಥಿತಿ ಈ ರೀತಿ ಇದೆ.

    ಪ್ರಕರಣಗಳು ಇಳಿಮುಖವಾಗಿ ಮುಂದುವರಿಯುತ್ತಿರುವ ನಿಟ್ಟಿನಲ್ಲಿ, ಭಾರತದ ಸಕ್ರಿಯ ಪ್ರಕರಣಗಳು 16,35,993 ಕ್ಕೆ ಇಳಿದಿದೆ; ಸತತ 8 ದಿನಗಳಿಂದ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ

    ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 77,420 ರಷ್ಟು ಕಡಿಮೆಯಾಗಿವೆ.

    ದೈನಂದಿನ ಹೊಸ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ನಿರಂತರ ಪ್ರವೃತ್ತಿಯನ್ನು ಕಾಯ್ದುಕೊಂಡು ಭಾರತವು ಕಳೆದ 24 ಗಂಟೆಗಳಲ್ಲಿ 1.32 ಲಕ್ಷ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.

    ದೇಶಾದ್ಯಂತ ಈವರೆಗೆ 2.65 ಕೋಟಿಗೂ ಹೆಚ್ಚು ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 2,07,071 ರೋಗಿಗಳು ಚೇತರಿಸಿಕೊಂಡಿದ್ದಾರೆ.

    ಸತತ 22 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳಿಗಿಂತ ದೈನಂದಿನ ಚೇತರಿಕೆಯ ಪ್ರಮಾಣಗಳು ಹೆಚ್ಚಾಗಿವೆ.

    ನಿರಂತರ ಇಳಿಮುಖವಾಗುತ್ತಿರುವ ನಿಟ್ಟಿನಲ್ಲಿ, ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 93.08% ರಷ್ಟು ಹೆಚ್ಚಾಗಿದೆ.

    ಸಾಪ್ತಾಹಿಕದ ದೃಢಪಟ್ಟ ಪ್ರಕರಣದ ಪ್ರಮಾಣವು ಪ್ರಸ್ತುತ 7.27% ಆಗಿದೆ.

    ದೈನಂದಿನ ದೃಢಪಟ್ಟ ಪ್ರಕರಣದ ದರ 6.38%, ಸತತ 11 ದಿನಗಳವರೆಗೆ 10% ಕ್ಕಿಂತ ಕಡಿಮೆ ಇದೆ.

    ಕೋವಿಡ್ ಪರೀಕ್ಷಾ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಿದೆ. ಒಟ್ಟು 35.7 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

    ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಇದುವರೆಗೆ 22.41 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ .(ವರದಿ :ಪಿಐಬಿ)

    ಬಾಲುಗಾರು ಎಂಬ ಶ್ರುತಿಬ್ರಹ್ಮ


    ಕಳೆದ 2020ರಲ್ಲಿ ನಮ್ಮನ್ನಗಲಿದ ಗೀತಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ ಇಂದು. ಚೆನ್ನೈ ಹತ್ತಿರದ ತಾಮರೈಪಾಕಂನಲ್ಲಿನ ತಮ್ಮ ತೋಟದಲ್ಲಿ ತಣ್ಣಗೆ ಮಲಗಿರುವ ಅವರ ನೆನಪುಗಳು ಮನ್ವಂತರಗಳು ದಾಟಿದರೂ ಅಳಿಯಲಾರವು. ಕೊರೋನಾದಿಂದ ಕಂಗೆಟ್ಟ ನಮಗೆ ಅವರ ಗಾಯನ ಒಂದು ಮೆಡಿಸಿನ್‌ ಮಾತ್ರವಲ್ಲ, ಮುನ್ನಡೆಯಲೊಂದು ಸ್ಫೂರ್ತಿ ಹಾದಿ. https://cknewsnow.com ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ. ಕೆ. ಚನ್ನಕೃಷ್ಣ ಅವರು ಈ ಗಾನಗಾರುಡಿಗನನ್ನು ನೆನಪಿಸಿಕೊಂಡು ಬರೆದ ಲೇಖನ ನಮ್ಮ ಓದುಗರಿಗಾಗಿ ಇಲ್ಲಿದೆ.


    ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.
    ಎಲ್ಲರ ಪಾಲಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇನ್ನೂ ಅನೇಕರಿಗೆ ಎಸ್ಪಿಬಿ, ಮತ್ತೂ ಅನೇಕಾನೇಕರಿಗೆ ಪ್ರೀತಿಯ ಬಾಲು.
    -1-
    ಶ್ರುತಿಬ್ರಹ್ಮ!!!
    ಅಚ್ಚರಿಯೇನೂ ಇಲ್ಲ. ಅವರು ಸಾಕ್ಷಾತ್ ಶ್ರುತಿಬ್ರಹ್ಮರೇ. ನಮ್ಮ ನೆಲದ ಸಂಗೀತಲೋಕದ ಐಸಿರಿ, ಸ್ವರಬ್ರಹ್ಮ ಹಂಸಲೇಖ ಅವರು ಬಾಲು ಅವರನ್ನು ಕರೆಯುವ ಪರಿ, ತಮ್ಮ ಹೃದಯದಲ್ಲಿ ಅವರನ್ನು ಪ್ರತಿಷ್ಠಾಪನೆ ಮಾಡಿಕೊಂಡಿರುವ ರೀತಿ ಇದು. ಅಷ್ಟೇ ಅಲ್ಲ, ಅವರ ಮಾತುಗಳಲ್ಲೇ ಹೇಳುವುದಾದರೆ, “ಇಂದು ಅವರ (ಎಸ್ಪಿಬಿ) ಹುಟ್ಟುಹಬ್ಬ. ನನ್ನ ಪಾಲಿಗಿದು ಸಂಸ್ಕೃತಿಯೇ ಜನ್ಮವೆತ್ತಿದ ದಿನ! ನಾಡಿನ ಪಾಲಿಗೆ ಸಾಮರಸ್ಯವೇ ಜನಿಸಿದ ದಿನ. ಒನ್ ಎಸ್ಪಿಬಿ ಫಾರ್ 500 ಯಿಯರ್ಸ್!!!”

    ಆಹಾ.. ಎಂತಹ ನುಡಿಗಳು. ಅವರ ಮಾತುಗಳಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸರಸ್ವತಿ ಪುತ್ರರಾದ ಅವರ ನಾಲಗೆಯ ಮೇಲೆ ಬಾಲು ಎಂಬ ಶ್ರುತಿಯೂ ಹೀಗೆ ಸಾಕ್ಷಾತ್ಕಾರವಾಗಿತ್ತು.

    //ಉಮಂಡುಗು ಮಂಡುಘನ
    ಗರಜೇ ಬದುರಾ//

    ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರಕ್ಕಾಗಿ ಅಪ್ಪಟ ಹಿಂದೂಸ್ಥಾನಿಯ ರಾಗ ‘ಮೇಘ’ದಲ್ಲಿ ಬಾಲು ಅವರು ಹಾಡಿದ ಈ ಚೀಜು ನಮ್ಮ ಪಾಲಿನ ಅನರ್ಘ್ಯ ಸ್ವರಧಾರೆ. ಆ ಮಹಾ ಗಾನಯೋಗಿಯ ದಿವ್ಯಕೃಪೆಯಿಂದ ಈ ವಿರಳ ಗಾಯಕನ ಹೃದಯದಿಂದ ಉಕ್ಕಿಹರಿದ ಗಾನಗಂಗೆಯೇ ಈ ಆಲಾಪ. ಕನ್ನಡಮ್ಮನ ಕಿರೀಟಕ್ಕೆ ರಾಷ್ಟ್ರಪ್ರಶಸ್ತಿಯ ಗರಿಯಿಟ್ಟ ಅನನ್ಯ ಗಾಯನವದು.
    “ಬಾಲುಗಾರು… ಅದ್ಭುತಃ”, ಹಂಸಲೇಖ ಅವರೇ.. ತಮಗೆ ಕೂಡ ಸಾವಿರ ಶರಣು..
    -2-
    ಅದು ಹೈದರಾಬಾದ್. ಕಾರ್ಯಕ್ರಮ, ʼಶಿರಿಡಿ ಸಾಯಿʼ ಚಿತ್ರದ ಆಡಿಯೋ ಲೋಕಾರ್ಪಣೆ. ವೇದಿಕೆಯ ಮುಂಭಾಗದಲ್ಲಿ ತೆಲುಗು ಚಿತ್ರರಂಗದ ಪಾಲಿನ ಜ್ಞಾನಕೋಶ ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಕೂತಿದ್ದರು. ಅವರ ಪಕ್ಕದಲ್ಲಿ ಅಕ್ಕಿನೇನಿ ನಾಗಾರ್ಜುನ, ಅವರ ಪತ್ನಿ ಅಮಲ, ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವು, ನಟ ಶ್ರೀಕಾಂತ್, ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು ಸೇರಿದಂತೆ ತೆಲುಗು ಚಿತ್ರರಂಗದ ಚಿಕ್ಕ-ದೊಡ್ಡವರೆಲ್ಲರೂ ಸೇರಿದ್ದರು. ಅದು ಆ ಚಿತ್ರದ ಕ್ಲೈಮ್ಯಾಕ್ಸ್ ಗೀತೆ.

    // ಭಕ್ತಲು ಮೀರು, ಮೀ ಭಕ್ತಿಕಿ ಬಾನಿಸ ನೇನು
    ಸೂರ್ಯಚಂದ್ರುಲು ಚುಕ್ಕಲು ನೇನೈ ಕನಬಡುತುಂಟಾನು
    ಮಿಮ್ಮು ಕನಿಪೆಡುತುಂಟಾನು… //

    ( // ಭಕ್ತರು ನೀವು, ನಿಮ್ಮ ಭಕ್ತಿಗೆ ಅಡಿಯಾಳು ನಾನು
    ಸೂರ್ಯಚಂದ್ರರು, ನಕ್ಷತ್ರಗಳು ನಾನಾಗಿ ಕಾಣಿಸುತ್ತಿರುವೆ
    ನಿಮ್ಮೆಲ್ಲರನು ನೋಡಿಕೊಳ್ಳುತ್ತಿರುತ್ತೇನೆ.. // )

    ಮಹಾ ಸಮಾಧಿಯಾಗುವ ಮುನ್ನ ಬಾಬಾ ಅವರು ತಮ್ಮ ಭಕ್ತಸಮೂಹಕ್ಕೇ ಹೇಳುವ ಸಾಲುಗಳಿವು. ಒಂದೆಡೆ ಭಕ್ತಿಯ ಪರಾಕಾಷ್ಠೆ, ಮತ್ತೊಂದೆಡೆ ಭಕ್ತರನ್ನು ಸಾಂತ್ವನಗೊಳಿಸುವ ಅವತಾರಪುರುಷನ ಅಂತಿಮ ಕ್ಷಣಗಳು.. ಆರ್ದ್ರತೆಯ ಮಹಾಸಾಗರದಂತೆ ಉಕ್ಕುವ ಹಾಡಿಗೆ ಜೀವತುಂಬಿದ್ದರು ಬಾಲು. ಪಲ್ಲವಿಯ ಮೂರು ಸಾಲು ಮುಗಿಯುವ ಮುನ್ನವೇ ಇಡೀ ಸಭಾಂಗಣ ಸೂಜಿಬಿದ್ದರೂ ಕೇಳುವಷ್ಟು ನಿಶ್ಯಬ್ದವಾಗಿತ್ತು. ಕಿಕ್ಕಿರಿದಿದ್ದ ಸಭಿಕರ ಕಣ್ಣಾಲಿಗಳು ತುಂಬಿಹೋಗಿದ್ದವು. ಅವರ ಸ್ವರಾಲಾಪಕ್ಕೆ ಸ್ವತಃ ಅಕ್ಕಿನೇನಿ ಅವರೇ ಮೂಕವಿಸ್ಮಿತರಾಗಿಬಿಟ್ಟರು. ಸಂಗೀತ ನಿದೇಶಕ ಕೀರವಾಣಿ ಮೌನಮೂರ್ತಿಯಾಗಿಬಿಟ್ಟರು.

    ಇಂಥ ಬಾಲು ಅವರ ಬಗ್ಗೆ ಹೇಳಲು ಇಂತಹ ಸಾವಿರಾರು ಉದಾಹರಣೆಗಳಿವೆ, ಸ್ವಾರಸ್ಯಗಳಿವೆ. ಅವರ ಸ್ವರಯಾತ್ರೆಯಲ್ಲಿ ಕಾಣುತ್ತಿರುವ ಮೈಲುಗಲ್ಲುಗಳು, ಹೆಜ್ಜೆಗುರುತುಗಳನ್ನು ಲೆಕ್ಕಿಸುತ್ತ ಹೋಗುವುದು ಎಂದರೆ ಗಜಪಯಣದ ಹಿಂದೆ ಇರುವೆ ನಡೆದಂತೆ. 1966ರಿಂದ ಅವರತವಾಗಿ ಹಾಡಿದ ಅವರ ಸ್ವರಕ್ಕೆ ಧಣಿವಿರಲಿಲ್ಲ, ಆ ಜೀವಿಗೆ ಸ್ವರದ ಹಸಿವು ಬಿಟ್ಟರೆ ಬೇರೇನೂ ಇರಲಿಲ್ಲ.

    ಕನ್ನಡದಲ್ಲಿ ʼಗಾನಯೋಗಿ ಪಂಚಾಕ್ಷರಿ ಗವಾಯಿʼ, ʼಗಡಿಬಿಡಿ ಗಂಡʼ, ʼಪ್ರೇಮಲೋಕʼ, ʼಚೈತ್ರದ ಪ್ರೇಮಾಂಜಲಿʼ, ʼಮೈಸೂರ ಮಲ್ಲಿಗೆʼ, ʼಅಮೃತವರ್ಷಿಣಿʼ, ʼನಮ್ಮೂರ ಮಂದಾರ ಹೂವೇʼ… ಒಂದೇ ಎರಡೇ.

    ಕವಿ ಕೆಎಸ್ ನರಸಿಂಹಸ್ವಾಮಿ ಅವರ ಸರ್ವಕಾಲೀನ ವಿರಹಗೀತೆ..
    // ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ
    ನಿನ್ನೊಳಿದೆ ನನ್ನ ಮನಸು
    ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
    ನಿನ್ನೊಲುಮೆ ನನ್ನ ಕಂಡೂ… //

    ಹುಣ್ಣಿಮೆಯಲಿ ಉಕ್ಕುವ ಕಡಲಿನಂತೆಯೇ ಈ ಗೀತೆಯಲ್ಲಿ ಬಾಲು ಅವರ ಸ್ವರಗಳ ಭಾವಶರಧಿಯಲ್ಲಿ ಕನ್ನಡಿಗರೆಲ್ಲರೂ ಮಿಂದಿದ್ದು ಸುಳ್ಳಲ್ಲ.

    ನಮ್ಮ ಸ್ವರಬ್ರಹ್ಮರೇ (ಹಂಸಲೇಖ) ಬರೆದು ರಾಗ ಸಂಯೋಜಿಸಿದ ’ಮಹಾಕ್ಷತ್ರಿಯ’ ಚಿತ್ರದ “ಈ ಭೂಮಿ ಬಣ್ಣದ ಬುಗುರಿ..” ಹಾಡು ಬಾಲು ಅವರಿಗಾಗಿಯೇ ಜನ್ಮತಾಳಿತೇನೋ ಎನ್ನುವ ಹಾಗಿದೆ ಅವರ ಸ್ವರಾಲಾಪನೆ.

    ಇನ್ನು ತೆಲುಗಿಗೆ ಬಂದರೆ ಅವರು ಹಾಡಿದ್ದೆಲ್ಲವೂ ಅಮೃತವೇ. ‘ಶಂಕರಾಭರಣಂ’, ‘ಸ್ವಾತಿಮುತ್ಯಂ’, ‘ಸಿರಿವೆನ್ನೆಲ’, ‘ಗೀತಾಂಜಲಿ’, ‘ರೋಜಾ’, ‘ಜಗದೇಕವೀರುಡು ಅತಿಲೋಕ ಸುಂದರಿ’, ‘ಅನ್ನಮಯ್ಯ’, ‘ಶ್ರೀರಾಮದಾಸು’ ʼಶಿರಿಡಿ ಸಾಯಿʼ ಸೇರಿದಂತೆ ಅನೇಕಾನೇಕ ಚಿತ್ರಗಳ ಅಪರೂಪದ ಗೀತೆಗಳಿಗೆ ಅವರು ಉಸಿರನ್ನೇ ತುಂಬಿಸಿಟ್ಟಿದ್ದಾರೆ. ತೆಲುಗಿನ ʼಫಲಾಸʼ ಚಿತ್ರಕ್ಕಾಗಿ ಹಾಡಿದ ‘ಓ ಸೊಗಸರಿ, ಪ್ರಿಯ ಲಾಹಿರಿʼ ಅವರ ಕೊನೆಯ ಗೀತೆ. ಹದಿನಾರರ ಬಾಲು ಅವರನ್ನು ಮತ್ತೊಮ್ಮೆ ನಮ್ಮ ಕಣ್ಮುಂದೆ ನಿಲ್ಲಿಸುವ, ಅವರ ತುಂಟತನದಿಂದ ಕಚಗುಳಿ ಇಡುವ ಈ ಹಾಡನ್ನು ದುರದೃಷ್ಟವಶಾತ್‌ ಸಿನಿಮಾದಂದ ಕೈಬಿಡಲಾಗಿತ್ತು.

    ತಮಿಳಿನ ’ಕೇಳಡಿ ಕಣ್ಮಣಿ’ ಚಿತ್ರಕ್ಕಾಗಿ ಅವರೇ ನಟಿಸಿ ಹಾಡಿದ ’ಮಣ್ಣಿಲ್ ಇಂದ ಕಾದಲನ್ರೀ’ ಹಾಗೂ ’ತೇವರ್ ಮಗನ್’ ಚಿತ್ರದಲ್ಲಿನ ಅವರ ಗಾಯನ.. ವ್ಹಾಹ್.. ವರ್ಣನೆಗೆ ಅಕ್ಷರಗಳೇ ಸೋಲುತ್ತಿವೆ. ಭಾಗ್ಯರಾಜಾ ನಿರ್ದೇಶನದ ʼಕಾದಲ್‌ ಓಯುಯಂʼ ಸಿನಿಮಾದಲ್ಲಿ ಅವರು ಹಾಡಿದ “ಸಂಗೀತಂ ಜಾಜಿಮುಲ್ಲೈ ಕಾಣುಮಿಲ್ಲೈ” ಬಾಲು ಅವರ ಶೃತಿ & ಸ್ವರಶಕ್ತಿಗೆ ಸಾಕ್ಷಿ. ಹಿಂದಿಯಲ್ಲಿ ʼಏಕ್ ದುಜೇ ಕೇಲಿಯೇʼ, ʼಮೈನೆ ಪ್ಯಾರ್ ಕಿಯಾʼ, ʼಸಾಜನ್ʼ, ʼಹಮ್ ಆಪ್ಕೆ ಹೈ ಕೌನ್ʼ ಚಿತ್ರಗಳ ಹಾಡುಗಳಂತೂ ಎವರ್‌ಗ್ರೀನ್‌- ಅದ್ಭುತ ಮೆಲೋಡಿಗಳು.

    ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಭೋಜಪುರಿ ಸೇರಿ ಅನೇಕ ಭಾಷೆಗಳಲ್ಲಿ 40ರಿಂದ 45 ಸಾವಿರ ಹಾಡುಗಳನ್ನು ಅವಿಚ್ಛಿನ್ನವಾಗಿ, ಅಮೋಘವಾಗಿ ಹಾಡಿರುವ ಬಾಲು ಅವರು ಬಹುಮುಖ ಪ್ರತಿಭೆ. 1996ರಲ್ಲಿ ಅವರು ನಿರ್ಮಿಸಿ, ಕಮಲ್ ಹಾಸನ್ ನಟಿಸಿದ್ದ ’ಶುಭಸಂಕಲ್ಪಂ’ ಚಿತ್ರವು, ಸಿನಿಮಾಗಳ ಬಗ್ಗೆ ಅವರಿಗಿದ್ದ ಸದಭಿರುಚಿಗೆ ಸಾಕ್ಷಿ. ಕನ್ನಡದ ’ಮುದ್ದಿನಮಾವ’, ತೆಲುಗಿನ ’ಪ್ರೇಮ’, ತಮಿಳಿನ ’ಕೇಳಡಿ ಕಣ್ಮಣಿ’, ’ಕಾದಲನ್’ ಚಿತ್ರಗಳಲ್ಲಿ ಅವರದ್ದು ಕಚಗುಳಿ ಇಡುವ ಅಪರೂಪದ ನಟನೆ. ಮತ್ತೂ ಬೇಕಾದಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

    ತೆಲುಗು ಕವಿ, ನಟ ತೆನಕಳ್ಳ ಭರಣಿ ಅವರ ’ಮಿಥುನಂ’ ಚಿತ್ರದಲ್ಲಿನ ʼಅಪ್ಪದಾಸುʼ ಪಾತ್ರ ಬಾಲು ಅವರ ನಟನಾ ಪ್ರತಿಭೆಯ ಗೌರಿಶಂಕರ. ಎರಡೇ ಪಾತ್ರಗಳ ಆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಅವರ ಪರಮ ಮುಗ್ಧ, ಕಂಜ್ಯೂಸ್ ಪತಿಯಾಗಿ ಕಾಣಿಸಿಕೊಂಡ ಅವರ ‌ʼನವರಸʼ ಪೋಷಣೆಯನ್ನು ಕಣ್ತುಂಬಿಕೊಳ್ಳಲೇಬೇಕು.

    ಬಾಲು ಅವರದ್ದು ಬರೆದಷ್ಟೂ ಮುಗಿಯದ ಮಹಾಕಾವ್ಯ. ಅವರಿಗೆ ಅವರೇ ಸಾಟಿ. ಆ ಸ್ವರಕ್ಕೆ ಆ ಸ್ವರವೇ ಪೋಟಿ. ಮಹಾನುಭಾವ ಶ್ರೀ ಕೋದಂಡಪಾಣಿಯವರು ಹಾಗೂ ಸ್ವರ ಸರಸ್ವತಿ ಎಸ್. ಜಾನಕಿ ಅವರಿಬ್ಬರೂ ಇಲ್ಲದಿದ್ದರೆ ಇವತ್ತು ಬಾಲಸುಬ್ರಹ್ಮಣ್ಯಂ ಎಂಬ ಹೆಸರೇ ಇರುತ್ತಿರಲಿಲ್ಲ.

    ಮಹಾ ವಾಗ್ಗೇಯಕಾರ ಶ್ರೀ ತ್ಯಾಗಯ್ಯ ಅವರು ಬರೆದು ಹಾಡಿದ ಈ ಕೀರ್ತನೆಯನ್ನು ಇಲ್ಲಿ ಉಲ್ಲೇಖಿಸಬಹುದು.
    // ಎಂದರೋ ಮಹಾನುಭಾವುಲು
    ಅಂದರಿಕೀ ವಂದನಮುಲು… //
    (ಎಷ್ಟೋ ಮಹಾನುಭಾವರು / ಎಲ್ಲರಿಗೂ ವಂದನೆಗಳು)

    ಬಾಲು ಎಂಬ ಮಹಾನುಭಾವರಿಂದ ಸಂಗೀತ ಲೋಕ ಸಮೃದ್ಧವಾಗಿದೆ. ಇವತ್ತು (ಜೂನ್ 4) ಹುಟ್ಟುಹಬ್ಬ ಆಚರಿಕೊಂಡು ಇನೊಂದು ವಸಂತಕ್ಕೆ ಕಾಲಿಡಬಹುದಾಗಿದ್ದ ಅವರು ಕಳೆದ ವರ್ಷ ಕೋವಿಡ್‌ ಮಾರಿಗೆ ತುತ್ತಾದರು. ವೈರಸ್‌ ಮಾರಿ ವಕ್ಕರಿಸಿಕೊಳ್ಳುವ ಮುನ್ನ ನಮ್ಮ ಜಯಂತ್‌ ಕಾಯ್ಕಿಣಿ ಬರೆದಿದ್ದ ʼವೈರಿ ಕೊರೊನಾʼ ಹಾಡಿ ಮನೆಯೊಳಗೇ ಸ್ವರಕಟ್ಟಿದ್ದ ಆ ಮಹಾನ್‌ ಹಾಡುಗಾರ ಅದೇ ವರ್ಷ ಸೆಪ್ಟೆಂಬರ್‌ 24ರಂದು ಮೌನಕ್ಕೆ ಜಾರಿ, ಬದುಕು ನಿಲ್ಲಿಸಿಬಿಟ್ಟರು.

    ಕೊನೆ ಮಾತು..
    ಮಹಾನ್ ವಾಗ್ಗೇಯಕಾರರಾದ ʼಅನ್ನಮಯ್ಯʼ ಅವರ ಜೀವನ ಚೆರಿತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ನಾರದರು ಮಾರುವೇಷದಲ್ಲಿ ಬಂದು, ʼಅನ್ನಮಯ್ಯʼ ಅವರ ಹರಿಭಕ್ತಿಗೆ ಮೆಚ್ಚಿ ತಮ್ಮ ತಂಬೂರಿಯನ್ನೇ ಅವರಿಗೆ ಕಾಣೀಕೆಯಾಗಿ ಕೊಟ್ಟು ಹೀಗೆ ಹೇಳಿದರಂತೆ..

    “ಮರ್ಭಾಕ್ತಾಹಃ ಯತ್ರ ಗಾಯಂತಿ ತತ್ರತಿಷ್ಠಾಮಿ ನಾರದ..”
    “ನಾರದ, ನಾನು ವೈಕುಂಠದಲ್ಲೂ ಇರಲ್ಲ, ಯೋಗಿಗಳ ಹೃದಯದಲ್ಲೂ ಇರುವುದಿಲ್ಲ. ಎಲ್ಲಿ ನನ್ನ ಭಕ್ತರು ಹಾಡುತ್ತಿರುವರೋ ಅಲ್ಲಿ ಪಟ್ಟಾಗಿ ಕೂತುಬಿಟ್ಟಿರುತ್ತೇನೆ. ನನಗೆ ಗಾಯನವೆಂದರೆ ಅಷ್ಟು ಪ್ರಾಣ.” ಸ್ವತಃ ಶ್ರೀಹರಿಯೇ ನನ್ನೊಂದಿಗೆ ಹೀಗೆ ಹೇಳಿದ್ದು ಎಂದು ನಾರದರು ಹೇಳುತ್ತಾರೆ..

    ಗಾಯನವೆಂದರೆ ಶ್ರೀಹರಿಗೇ ಏಕೆ? ಶ್ರೀಸಾಮಾನ್ಯನಿಗೂ ಪರಮಇಷ್ಟ. ಶಾಸ್ತ್ರೀಯ ಸಂಗೀತದ ಪ್ರವೇಶವೇ ಇಲ್ಲದೇ ಸಪ್ತಸ್ವರಗಳನ್ನು ಆ ಸಾಮಾನ್ಯನ ಹೃದಯಕ್ಕೆ ಆಳವಾಗಿ ದಾಟಿಸಿದ ಬಾಲು ಮಹಾನ್ ಗಾಯಕರು ಎನ್ನದಿರಲು ಸಾಧ್ಯವೇ?

    ನಮ್ಮ ದೇಶ ಕಂಡ ಸಿನಿಮಾ ಜಗತ್ತಿನ ಯುಗದ ಗಾಯಕ ಎಸ್‌ಪಿಬಿ ಅವರಿಗೆ ಜನ್ಮದಿನ ಶುಭಾಶಯಗಳು. ವಿನಮ್ರ ಸಮಸ್ಕಾರಗಳು.

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎರಡು ದಿನ ಎಸ್ಎಸ್ ಎಲ್ ಸಿ ಪರೀಕ್ಷೆ

    ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಸೂಕ್ತ ದಿನಾಂಕಗಳಂದು ಎರಡು ದಿನಗಳ ಮಟ್ಟಿಗೆ ಅತ್ಯಂತ ಸರಳೀಕರಣಗೊಳಿಸಿ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಮಾಜದ ವಿವಿಧ ಸ್ತರಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಮಾಜದ ವಿವಿಧ ಗಣ್ಯ ವ್ಯಕ್ತಿಗಳು, ಹಿಂದಿನ ಶಿಕ್ಷಣ ಸಚಿವರು, ಮಾಧ್ಯಮದ ಮಿತ್ರರು, ಸಚಿವ ಸಂಪುಟದ ಸಹೋದ್ಯೋಗಿಗಳು, ಮಾನ್ಯ ಮುಖ್ಯಮಂತ್ರಿಗಳೂ ಸೇರಿದಂತೆ ಹಲವರೊಂದಿಗೆ ಈ ಕುರಿತು ಸಮಾಲೋಚನೆ ಮಾಡಲಾಗಿದೆ ಎಂದರು.

    ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು, ಅದೇ ಸಂದರ್ಭದಲ್ಲಿ ಅವರ ಆರೋಗ್ಯಕ್ಕೂ ಸಮಸ್ಯೆಯಾಗಬಾರದೆನ್ನುವ ಮಧ್ಯಮ ಪಥವೊಂದನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಪರೀಕ್ಷೆ ನಡೆಸುವುದು ನಮ್ಮ ಪ್ರತಿಷ್ಠೆಯಾಗಬಾರದು ಆದರೆ ನಮ್ಮ ನಿಲುವು ಮಕ್ಕಳನ್ನು ಇಕ್ಕಟ್ಟಿಗೆ ಸಿಕ್ಕಿಸಬಾರದೆನ್ನುವ ಪ್ರಜ್ಞೆ ನಮ್ಮ ನಿರ್ಧಾರಗಳನ್ನು ನಿಯಂತ್ರಿಸಿದೆ ಎಂದು ಅವರು ಹೇಳಿದರು.

    ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರು ಈ ಹಿಂದೆ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಂಕಗಳನ್ನು ನೀಡಿ ಪ್ರಕಟಗೊಳಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಇಲಾಖೆಯು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಿದೆ ಹಾಗೂ ಜೂನ್ ಮಾಸಾಂತ್ಯಕ್ಕೆ ಫಲಿತಾಂಶ ಪ್ರಕಟಣೆ ಮಾಡಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

    ಈ ರೀತಿ ನೀಡಿದ ಫಲಿತಾಂಶವು ಯಾವುದೇ ವಿದ್ಯಾರ್ಥಿಗೆ ತೃಪ್ತಿಕರವಾಗದೇ ಇದ್ದಲ್ಲಿ ಕೋವಿಡ್ ಅಲೆ ನಿಯಂತ್ರಣಕ್ಕೆ ಬಂದ ನಂತರ ಇಲಾಖೆಯು ನಡೆಸುವ ಪರೀಕ್ಷೆಗೆ ಹಾಜರಾಗಬಹುದು ಎಂದು ಸಚಿವರು ಹೇಳಿದರು ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಫಲಿತಾಂಶವನ್ನು ಮೇಲೆ ತಿಳಿಸಿದಂತೆ ಪ್ರಕಟಿಸಲು ಯಾವುದೇ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇಲಾಖೆ ನಡೆಸುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.

    ಎಸ್ಎಸ್ ಎಲ್ ಸಿ ಪರೀಕ್ಷೆಗಳ ವಿವರ:

    ಕೋವಿಡ್-19ರ ಪರಿಸ್ಥಿತಿಯಲ್ಲಿ 06 ವಿಷಯಗಳಿಗೆ ಸುದೀರ್ಘ ಅವಧಿಗೆ ಪರೀಕ್ಷೆಗಳನ್ನು ನಡೆಸಿದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆರೂ ದಿನಗಳು ಬರುವುದು ಕಷ್ಟಸಾಧ್ಯವಾಗಿರುತ್ತದೆ. ಹಿಂದಿನ ಸಾಲಿನ ಕಲಿಕಾ ಗುಣಮಟ್ಟದ ಮಾನದಂಡ ನಮ್ಮಲ್ಲಿ ಇಲ್ಲದಿರುವ ಕಾರಣ ಮತ್ತು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಯು ಮುಖ್ಯವೆನ್ನುವ ಸಮಾನ ಅಭಿಪ್ರಾಯಗಳ ಕಾರಣ, ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಕೋವಿಡ್-19ರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರಸ್ತುತ ಸಾಲಿಗೆ ಸರಳೀಕರಿಸಿ ಕೇವಲ ಎರಡು ದಿನಗಳಲ್ಲಿ (ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳು) ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ

    ಕೇವಲ ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು. ಉತ್ತರ ಪತ್ರಿಕೆಯು OMR (Optical Mark Reader) ರೂಪದಲ್ಲಿರುವುದು. ಪ್ರತಿ ವಿಷಯಕ್ಕೆ ಗರಿಷ್ಠ 40 ಅಂಕಗಳಿಗೆ ಸೀಮಿತಗೊಳಿಸಿ ಪರೀಕ್ಷೆಯನ್ನು ನಡೆಸಲಾಗುವುದು.

    ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ- 1 ಗಣಿತ, ಭಾಗ- 2 ವಿಜ್ಞಾನ ಮತ್ತು ಭಾಗ- 3ರಲ್ಲಿ ಸಮಾಜ ವಿಜ್ಞಾನದ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಬೆಳಿಗ್ಗೆ 10.30 ರಿಂದ 01.30 ಗಂಟೆಯವರೆಗೆ ನಿಗಧಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ಇರಲಿದೆ.

    ಹಾಗೆಯೇ ಒಟ್ಟು 03 ಭಾಷಾ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಇದರಲ್ಲಿ ಭಾಗ -1 ಪ್ರಥಮ ಭಾಷೆ, ಭಾಗ- 2 ದ್ವಿತೀಯ ಭಾಷೆ ಮತ್ತು ಭಾಗ -3ರಲ್ಲಿ ತೃತೀಯ ಭಾಷೆಯ ಪ್ರಶ್ನೆಗಳಿರುತ್ತವೆ. ಪರೀಕ್ಷಾ ಸಮಯವನ್ನು ಅಪರಾಹ್ನ 10.30 ರಿಂದ 01.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3.00 ಗಂಟೆಯ ಕಾಲಾವಕಾಶ ನೀಡಲಾಗುವುದು.

    ಕೋರ್ ಮತ್ತು ಭಾಷಾ ವಿಷಯಗಳ ಪರೀಕ್ಷೆಗಳ ನಡುವೆ ಮೂರು ದಿನಗಳ ಅಂತರ ನೀಡಲಾಗುವುದು. ಎಲ್ಲ ಮಾದರಿಯ ವಿದ್ಯಾರ್ಥಿಗಳೂ ಇದೇ ವಿಧಾನ ಅನ್ವಯವಾಗುತ್ತದೆ.

    ಪ್ರತಿ ವಿಷಯಕ್ಕೆ CCERF, CCERR ವಿದ್ಯಾರ್ಥಿಗಳಿಗೆ ಗರಿಷ್ಠ 80 ಅಂಕಗಳಿಗೆ ಮತ್ತು CCEPF, CCEPR, NSR, NSPR ವಿದ್ಯಾರ್ಥಿಗಳಿಗೆ ಗರಿಷ್ಠ 100 ಅಂಕಗಳಿಗೆ ಪರಿವರ್ತಿಸಿ, ಪ್ರತಿ ವಿಷಯದಲ್ಲಿ ವಿದ್ಯಾರ್ಥಿಯು ಪಡೆದ ಅಂಕಗಳನ್ನು ಅದಕ್ಕೆ ಅನುಗುಣವಾಗಿ ಪರಿವರ್ತಿಸಲಾಗುವುದು. ಇದರ ಜೊತೆಗೆ CCERF, CCERR ವಿದ್ಯಾರ್ಥಿಗಳಿಗೆ ಅಂತರಿಕ ಅಂಕಗಳನ್ನು ಸೇರ್ಪಡಿಸಿ ಪ್ರಸ್ತುತ ನಿಯಮದಂತೆ ಫಲಿತಾಂಶ ಪ್ರಕಟಿಸಲಾಗುವುದು.

    ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿಧಧ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣತಾ ಅಂಕಗಳನ್ನು ನೀಡಿ ಉತ್ತೀರ್ಣಗೊಳಿಸಲಾಗುವುದು. ಮುಂದುವರೆದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮೇಲೆ ಎ, ಬಿ ಹಾಗೂ ಸಿ ಗ್ರೇಡ್ ಗಳನ್ನು ನೀಡಲಾಗುವುದು.

    ಪರೀಕ್ಷೆಗೆ ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟ

    ಪರೀಕ್ಷೆಗೆ ಮುಂಚಿತವಾಗಿ ಮಾದರಿ ಪ್ರಶ್ನೆಪತ್ರಿಕೆಯನ್ನು ಮಂಡಳಿ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಹಾಗೆಯೇ ಶಾಲೆಗಳಿಗೆ ತಲುಪಿಸಲಾಗುವುದು.

    ಹಿಂದಿನ ಸಾಲುಗಳಲ್ಲಿ ಸುಮಾರು 3000 ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಪ್ರಸ್ತುತ ವರ್ಷದಲ್ಲಿ ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಿ, ಅಂದರೆ ಸುಮಾರು 6000 ಅದಕ್ಕೂ ಮೇಲ್ಪಟ್ಟು ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ನಡೆಸಲಾಗುವುದು.

    ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಂತೆ, ಒಂದು ಡೆಸ್ಕ್ ಗೆ ಕೇವಲ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಲಾಗುವುದು.

    ಹಾಸ್ಟೆಲ್ಗಳ/ವಸತಿ ಶಾಲೆಗಳ/ವಲಸೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆ ಅವಕಾಶ ಕಲ್ಪಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಲು ಕಳೆದ ಸಾಲಿನ ಎಸ್ಓಪಿ ಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ, ಆರೋಗ್ಯ ಇಲಾಖೆಯ ಸಲಹೆಯೊಂದಿಗೆ ಪರೀಕ್ಷೆ ನಡೆಸಲಾಗುವುದು.

    ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗುವುದು.

    ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು. ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಎನ್95 ಮಾಸ್ಕ್ ಕಡ್ಡಾಯವಾಗಿ ಧರಿಸಲು ವ್ಯವಸ್ಥೆ ಮಾಡಲಾಗುವುದು.

    ಆರೋಗ್ಯ ಇಲಾಖೆಯ ಸಲಹೆ ಪಡೆದು 20 ದಿನಗಳ ಮುಂಚಿತವಾಗಿ ಪರೀಕ್ಷೆಯು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

    ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ನಿರ್ದೇಶಕಿ ಆರ್. ಸ್ನೇಹಲ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಜಯಾ


    ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ವರ್ಷ) ಇಂದು (ಜೂನ್‌ 3) ಅಗಲಿದ್ದಾರೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಚಿತ್ರಪಥ.ಕಾಮ್ ಜಾಲ ತಾಣದ ಪ್ರಧಾನ ಸಂಪಾದಕ ಶಶಿಧರ ಚಿತ್ರದುರ್ಗ ಅವರು ಈ ಹಿರಿಯ ಕಲಾವಿದೆಯ ಚಿತ್ರಯಾತ್ರೆಯನ್ನು ಇಲ್ಲಿ ದಾಖಲಿಸಿದ್ದಾರೆ.


    ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ಬಾಲಕೃಷ್ಣ, ನರಸಿಂಹರಾಜು ಮತ್ತು ದ್ವಾರಕೀಶ್‌ ಅವರೊಂದಿಗಿನ ಜಯಾರ ಪಾತ್ರಗಳು ಬಹು ಜನಪ್ರಿಯ. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು. 350ಕ್ಕೂ ಹೆಚ್ಚು ಸಿನಿಮಾಗಳು, ಹತ್ತಾರು ಧಾರಾವಾಹಿಗಳ ಸಾವಿರಾರು ಸಂಚಿಕೆಗಳಲ್ಲಿ ಅಭಿನಯಿಸಿದ್ದಾರೆ.

    ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.

    ‘ಕುಲಗೌರವ’ ಚಿತ್ರದಲ್ಲಿ ರಾಜಕುಮಾರ್, ನರಸಿಂಹರಾಜು ಅವರೊಂದಿಗೆ,’ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಪನಾ ಜೊತೆ
    ‘ಮಹದೇಶ್ವರ ಪೂಜಾಫಲ’ದಲ್ಲಿ ದ್ವಾರಕೀಶ್ ಜೊತೆ
    | ಚಿತ್ರ ಸೌಜನ್ಯ: ಚಿತ್ರಪಥ.ಕಾಮ್ ಸಂಗ್ರಹ


    ‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು.

    1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.

    ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್‌ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.

    ‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

    error: Content is protected !!