ಬಮುಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಯ ನೆರವಿಗೆ ಧಾವಿಸಿರುವ ಬಮುಲ್ ಸಂಸ್ಥೆಯು, ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವನ್ನು ನೀಡಿದೆ. ಸುಮಾರು 8 ಕೋಟಿ ರೂ. ಅಧಿಕ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸೋಮಶೇಖರ್ , ಬಮುಲ್ ವತಿಯಿಂದ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ. ಇಂಥ ಕೊರೋನಾ ಸಂಕಷ್ಟ ಕಾಲದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ನೆರವಿನ ಅಗತ್ಯವಿದೆ ಎಂದು ಮನಗಂಡಿರುವುದು ಉತ್ತಮ ನಡೆಯಾಗಿದೆ. ಒಟ್ಟಾರೆಯಾಗಿ ಬಮುಲ್ ವ್ಯಾಪ್ತಿಯ ಕಚೇರಿಗಳ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕಿ, 4.50 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪ, ಹಾಲು ವಿತರಕರಿಗೆ 3.6 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಹಾಲು ಹಾಗೂ ಉಚಿತ ಮೆಡಿಕ್ಲೈಮ್ (ವೈದ್ಯಕೀಯ ವಿಮೆ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಮುಲ್ ವ್ಯಾಪ್ತಿಯಲ್ಲಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ನೆರವಿಗೆ ದಾವಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶ ಇದಾಗಿದೆ. ಇದೇ ಮಾದರಿಯಲ್ಲಿ ಉಳಿದ ಹಾಲು ಉತ್ಪಾದಕ ಸಂಘಗಳೂ ತಮ್ಮ ಸೇವೆಯನ್ನು ಮಾಡಲಿ ಎಂದು ಸಚಿವರು ತಿಳಿಸಿದರು.
ವೈದ್ಯರ ನಡಿಗೆ ಜನರ ಕಡೆಗೆ
ವೈದ್ಯರ ನಡಿಗೆ ಜನರ ಕಡೆಗೆ ಎಂಬ ಕಾರ್ಯಕ್ರಮವನ್ನು ಮಾಡಿ, ವೈದ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿ ಈಗಾಲಗೇ ನೂರಾರು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಹೀಗಾಗಿ ಸೋಂಕು ತಗುಲಿದರೆ ಯಾರೂ ಆತಂಕಗೊಳ್ಳುವುದು ಬೇಡ, ಮನೆಯಲ್ಲಿ ಇರುವುದೂ ಬೇಡ. ಕೋವಿಡ್ ಕೇರ್ ಸೆಂಟರ್ ಗೆ ದಾವಿಸಿ 8-10 ದಿನವಿದ್ದರೆ ಸಾಕು ಸೂಕ್ತ ಚಿಕಿತ್ಸೆ ದೊರೆಯುವುದಲ್ಲದೆ, ಊಟೋಪಚಾರವೂ ಲಭಿಸಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ನಿರ್ಲಕ್ಷ್ಯ ಬೇಡ, ಎಲ್ಲರೂ ಚಿಕಿತ್ಸೆ ಪಡೆಯಿರಿ
ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಯಾರಿಗೂ ಎರಡನೇ ಅಲೆಯ ತೀವ್ರತೆ ಗೊತ್ತಿರಲಿಲ್ಲ. ನನ್ನ ಜೊತೆಗೆ 20 ವರ್ಷಗಳಿಂದ ಇದ್ದವರು ಸಹ ಕೊರೋನಾ ತೀವ್ರತೆಗೆ ಬಲಿಯಾಗಿದ್ದಾರೆ. ಹೀಗಾಗಿ ಆದರೆ, ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಚಿಕಿತ್ಸೆ ಪಡೆಯಿರಿ, ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸಮಸ್ಯೆಯಾಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಎಲ್ಲ ಗ್ರಾಮ, ವಾರ್ಡ್ ಗಳಲ್ಲೂ ವ್ಯಾಕ್ಸಿನೇಶನ್ ಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನಿಂತುಕೊಂಡು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಇನ್ನು ತೊಂದರೆಯಲ್ಲಿರುವವರಿಗೆ ಪಡಿತರ ಕಿಟ್ ಅನ್ನು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾರಿಗೆ ತೊಂದರೆಯಾಗಿದೆಯೋ ಅವರ ಸಹಾಯಕ್ಕೆ ಧಾವಿಸುವ ಕೆಲಸಕ್ಕೆ ಆಗುತ್ತಿದೆ. ಇಸ್ಕಾನ್ ದೇವಸ್ಥಾನದಿಂದ ಅನುಕೂಲ ಬೇಕಿದ್ದ ಕಡೆ ಸುಮಾರು 2 ಸಾವಿರ ಮಂದಿಗೆ ಭೋಜನ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಸಚಿವರಾದ ಸೋಮಶೇಖರ್ ಮಾಹಿತಿ ನೀಡಿದರು.
ಕೆಎಂಎಫ್ ಎಂಡಿ ಸತೀಶ್ ಸೇರಿದಂತೆ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದಲ್ಲೇ ಹೆಚ್ಚು ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ನಡುವೆ ಮೈಸೂರು ತಾಲ್ಲೂಕಿನ 14 ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ಶೂನ್ಯವಾಗಿದ್ದು, ಕೋವಿಡ್-19ಗೆ ಪ್ರವೇಶ ನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೈಸೂರು ತಾಲ್ಲೂಕು ವ್ಯಾಪ್ತಿಗೆ ಒಳಪಡುವ 37 ಗ್ರಾಮ ಪಂಚಾಯತಿಗಳಲ್ಲಿ 11 ಗ್ರಾಮ ಪಂಚಾಯತಿಗೆ ಸೇರುವ 14 ಗ್ರಾಮಗಳಲ್ಲಿ ಇದುವರೆಗೂ ಒಂದೂ ಕೋವಿಡ್ ಪ್ರಕರಣಗಳು ದಾಖಲಾಗದೆ ಕೊರೊನಾ ಮುಕ್ತವಾಗಿದ್ದು, ಇದು ಇತರೆ ಹಳ್ಳಿಗಳಿಗೆ ಮಾದರಿಯಾಗಿದೆ.
ಮಾರ್ಗಸೂಚಿಗೆ ಆದ್ಯತೆ ನೀಡಿದ ಗ್ರಾಮಸ್ಥರು: ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಜೊತೆಗೆ ಗ್ರಾಮಸ್ಥರೂ ಕೂಡ ಸ್ವಂ ಮಾರ್ಗಸೂಚಿಗಳನ್ನು ಕಟ್ಟನಿಟ್ಟಾಗಿ ಪಾಲಿಸಿದ ಫಲವಾಗಿ ಈ ಗ್ರಾಮಗಳು ಕೋವಿಡ್ ಸೋಂಕಿನಿಂದ ದೂರ ಉಳಿದವು.
ಇಲ್ಲಿನ ಜನರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗದೆ ಇರುವುದು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗುವುದು, ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಿದ ಪರಿಣಾಮದಿಂದಾಗಿ ಕೋವಿಡ್ ಈ ಗ್ರಾಮಗಳಿಗೆ ಕಾಲಿಡಲಿಲ್ಲ.
ಗ್ರಾಮ ಪಂಚಾಯತಿಗಳಿಂದ ಜಾಗೃತಿ:ಗ್ರಾಮ ಪಂಚಾಯತಿ ವತಿಯಿಂದ ಕೋವಿಡ್ ಹರಡದಂತೆ ಮುಂಜಾಗ್ರತ ಕ್ರಮವಹಿಸಲು ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಮನೆ ಮನೆ ಬಾಗಿಲಿ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಿ ದೈಹಿಕ ಅಂತರ ಕಾಪಾಡುವುದು ಮತ್ತು ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ. ಒಂದೆರಡು ಹಳ್ಳಿಗಳಲ್ಲಿ ಮಾತ್ರ ಲಕ್ಷಣ ಕಾಣಿಸಿಕೊಂಡ ಎರಡು ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಅವಿರತ ಶ್ರಮ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತಿದ್ದಾರೆ. ಪ್ರತಿನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ರಿನಿಂಗ್‌ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಜನರು ಮುಂಜಾಗ್ರತ ಕ್ರಮ ಅನುಸರಿಸುವುದರ ಜೊತೆಗೆ, ಗ್ರಾಮ ಪಂಚಾಯಿತಿಗಳ ಶ್ರಮದಿಂದ ಸೋಂಕು ಹರಡದಂತೆ ನೋಡಿಕೊಳ್ಳಲಾಗಿದೆ. ಇಲ್ಲಿವರೆಗೆ ಯಾರಿಗೂ ಸೋಂಕು ತಗುಲಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ.
–ಎಂ.ಎಸ್.ರಮೇಶ್,ಕಾರ್ಯನಿರ್ವಾಹಕ ಅಧಿಕಾರಿ, ಮೈಸೂರು ತಾಲ್ಲೂಕು ಪಂಚಾಯತಿ
ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇಂದು ಪ್ರಧಾನಿ ನೇರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಮಹತ್ವದ ಸಭೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಲಾಯಿತು.
ಫಲಿತಾಂಶ ಪ್ರಕಟಿಸಲು ಸಧ್ಯದಲ್ಲೇ ಸೂಕ್ತ ಮಾನದಂಡ ರಚಿಸಲಾಗವುದು. ಕೋವಿಡ್ ಸಂಕಟದ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯೇ ಮುಖ್ಯ ಎಂದು ಸಭೆ ಅಭಿಪ್ರಾಯ ಪಟ್ಟಿತು.
ರಾಜ್ಯದಲ್ಲಿ ಶೀಘ್ರ ನಿರ್ಧಾರ
ಕೇಂದ್ರ ಸರಕಾರದ ಈ ನಿರ್ಧಾರ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ . ಕರ್ನಾಟಕದ ಮಟ್ಟಿಗೆ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ..
ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, “ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದು ಕೋರಿದರು.
ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವೀಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.
ಇದೇ ರೀತಿ ಆಯಾ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೈಗಾರಿಕೆಗಳ ಜತೆ ಒಡಂಬಡಿಕೆಗೆ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ
ಕೋವಿಡ್ ಸವಾಲಿನ ನಡುವೆಯೂ ಈ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದ್ದು, ಕೈಗಾರಿಕಾಭಿವೃದ್ಧಿಗೆ ಬಹಳಷ್ಟು ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ತುಮಕೂರಿನ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ʼಶಿಕ್ಷಣ ಮತ್ತು ಕೈಗಾರಿಕೆʼ ಕುರಿತ ಅಂತಾರಾಷ್ಟ್ರೀಯ ಮಟ್ಟದ ವರ್ಚುಯಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು.
ನೂತನ ನೀತಿಯ ಪ್ರಕಾರ ಇಡೀ ಸಮಾಜವನ್ನು ಶಿಕ್ಷಣ ಸಂಸ್ಥೆಗಳು ಮುನ್ನಡೆಸುತ್ತವೆ ಹಾಗೂ ಅದೇ ಸಂಸ್ಥೆಗಳನ್ನು ಕೈಗಾರಿಕೆಗಳು ಹಿಂಬಾಲಿಸಬೇಕಾಗುತ್ತದೆ. ಏಕೆಂದರೆ, ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕುಶಲತೆಯುಳ್ಳ ಮಾನವ ಸಂಪನ್ಮೂಲವು ಶಿಕ್ಷಣ ಸಂಸ್ಥೆಗಳಿಂದಲೇ ಬರಬೇಕಾಗುತ್ತದೆ ಎಂದು ಡಿಸಿಎಂ ಪ್ರತಿಪಾದಿಸಿದರು.
ಇದೇ ನಿಟ್ಟಿನಲ್ಲಿ, ಈಗಾಗಲೇ ಶಿಕ್ಷಣ ನೀತಿ ಜಾರಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲಾಗಿದ್ದು, ಕೋವಿಡ್ ಕಾರಣದಿಂದ ಕೊಂಚ ವಿಳಂಬವಾಗಿದೆ. ಗುಣಮಟ್ಟದ ಬೋಧನೆ ಮತ್ತು ಗುಣಮಟ್ಟದ ಕಲಿಕೆಗೆ ನೀತಿ ಪೂರಕ ಹಾಗೂ ಬಹು ವಿಷಯಗಳ ಕಲಿಕೆಗೆ ಮುಕ್ತ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.
ಮೂಲಸೌಕರ್ಯ ಒಡಂಬಡಿಕೆಗೆ ಅವಕಾಶ:
ಶೈಕ್ಷಣಿಕ ಸಂಸ್ಥೆಗಳು ಜಾಗತಿಕ ಗುಣಮಟ್ಟದ ಮೂಲಸೌಕರ್ಯಗಳನ್ನು ಹೊಂದಿರಬೇಕು ಎಂಬುದೇನೋ ನಿಜ. ಆದರೆ, ಈ ಬಗ್ಗೆ ಸರಕಾರ ಉದಾರವಾಗಿದೆ. ಎಲ್ಲ ಸೌಲಭ್ಯಗಳನ್ನು ಶಿಕ್ಷಣ ಸಂಸ್ಥೆಗಳೇ ಮಾಡಿಕೊಳ್ಳಬೇಕೆಂದು ತಾಕೀತು ಮಾಡಲಾಗುತ್ತಿಲ್ಲ. ಬದಲಿಗೆ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಕೈಗಾರಿಕಾ ಸಂಸ್ಥೆಗಳು ಅಥವಾ ಯಾವುದೇ ಜಾಗತಿಕ ಶಿಕ್ಷಣ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸರಕಾರ ಮುಕ್ತ ಅವಕಾಶ ನೀಡಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಒಂದು ವರ್ಷ ಇಂಟರ್ನ್‌ಶಿಪ್
ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಬೇಕೆಂಬ ಕಾರಣಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಓದುವ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಇದಕ್ಕೆ ನ್ಯಾಸ್ಕಾಂ ಸೇರಿದಂತೆ ಎಲ್ಲ ಕೈಗಾರಿಕಾ ಪ್ರಾತಿನಿಧಿಕ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ ಎಂದು ಡಿಸಿಎಂ ನುಡಿದರು.
ಡಿಪ್ಲೊಮಾ ಪಠ್ಯ ಪರಿಷ್ಕರಣೆ:
ಎಐಸಿಟಿ ಮಾನದಂಡದ ಪ್ರಕಾರ ಈಗಾಗಲೇ ಐಟಿಐ, ಜಿಟಿಟಿಸಿ, ಡಿಪ್ಲೊಮಾ ಪಠ್ಯವನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಹೊಸ ಪಠ್ಯದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದು ಡಿಸಿಎಂ ಹೇಳಿದರು.
ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ.ಜಿ.ಪರಮೇಶ್ವರ, ಉಪ ಕುಲಪತಿ ಡಾ.ಬಾಲಶೆಟ್ಟಿ, ಸಿದ್ಧಾರ್ಥ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮುಂತಾದವರು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಮದ್ದಳೆಯ ಹೊಕ್ಕಿಲಿಯಂತೆ– ಈ ಮಾತು ಮೂರನೆ ಮಂಗರಸನ ‘ನೇಮಿಜಿನೇಶ’ ಕೃತಿಯಲ್ಲಿ ಬರುತ್ತದೆ. “ಮದ್ದಳೆಯ ಹೊಕ್ಕಿಲಿಯಂತೆ” ಇದೊಂದು ಅರ್ಥಧ್ವನಿಯುಳ್ಳ ವಾಕ್ಯ. “ ಆವಕಡೆಯೆಂದು ಕಾಣದೆ ತಲಹಳಂಗೊಳುತ್ತಾ ವನಾಂತರದೊಳು ಮದ್ದಳೆಯ ಹೊಕ್ಕಿಲಿಯಂತೆ “ ಎಂದಿದೆ.
ಮದ್ದಳೆ ತಾಳವಾದ್ಯದ ಒಂದು ಬಗೆ ಅಂಥ ತಾಳ ವಾದ್ಯದೊಳಕ್ಕೆ ಪ್ರವೇಶಿಸಿದ ಇಲಿಯನ್ನು ವಿಷಮ ಪರಿಷ್ಥಿತಿಯನ್ನು ಎದುರಿಸುವ ಮಾನವರಿಗೆ ಹೋಲಿಸಿ ಹೇಳುವುದಿದೆ. ಒಂದುವೇಳೆ ಅಂಥ ಪರಿಸ್ಥಿತಿಯಲ್ಲಿ ಸಿಕ್ಕರೆ ಅಲ್ಲಿಯೇ ಇರಲಾಗದು ತಪ್ಪಿಸಿಕೊಂಡು ಹೊರಬರಲಾಗದು ಅತ್ತ ಪುಲಿ ಇತ್ತ ದರಿ ಎನ್ನುವ ಹಾಗಾಗುತ್ತದೆ.
ಏನೇ ಕೆಲಸ ಮಾಡಬೇಕಾದರೂ ಪೂರ್ವತಯಾರಿಯೊಂದಿಗೆ ಮಾಡಬೇಕು ಇಲ್ಲವಾದರೆ ಅರ್ಥನಷ್ಟ,ಸಮಯನಷ್ಟ ಉಂಟಾಗುತ್ತದೆ. ಹಾಗೆ ಸಮಸ್ಯೆಯೊಂದರಲ್ಲಿ ಸಿಕ್ಕು ತಹತಹ ಪಡುವ ಜನರನ್ನು ಈ ಮಾತು ಉದಾಹರಿಸುತ್ತದೆ. ಇನ್ನು ಇನ್ಯಾರದೋ ಮಾತಿನಿಂದ ಪ್ರಲೋಭನೆಗೊಂಡು ಅವರ ಮಾತಿಗೆ ಮರುಳಾಗಿ ತೊಳಲಾಟದಲ್ಲಿ ಸಿಲುಕುವವರನ್ನು , ಗೊತ್ತು ಗುರಿಯಿಲ್ಲದ ಸ್ಥಳ, ವಿಷಜಾಲದಲ್ಲಿ ಸಿಲುಕು ಮೋಸ ಹೋಗುವವರನ್ನು ಕಂಡಾಗ ಮದ್ದಳೆಯೊಳಗೆ ಸಿಲುಕಿದ ಇಲಿಯದೇ ಪರಿಸ್ಥಿತಿ. ಅಪ್ಪಿ ತಪ್ಪಿ ಏನೋ ಕುತೂಹಲದಿಂದ ಇಲಿಗಳು ಮದ್ದಳೆ ಪ್ರವೇಶಿಸಿದರೆ ಅದನ್ನು ಉಪಯೋಗಿಸುವವರು ಬಿಡುತ್ತಾರೆಯೇ ಅದನ್ನು ಹಿಡಿದು ಕೊಲ್ಲುವವರೆಗೆ ಬಿಡುವುದಿಲ್ಲ. ಇಲ್ಲಿ ಇಲಿಯ ಚೆಲ್ಲಾಟದಿಂದ ಮದ್ದಳೆ ನುಡಿಸುವವರಿಗೂ ನಷ್ಟ ಇಲಿಗೂ ಪ್ರಾಣಭೀತಿ ಒಟ್ಟಾರೆ ಉಭಯ ಭೀತಿ.
ಯಾರಿಗಾದರೂ ನಾವು ಉಪಕಾರ ಮಾಡಲು ಸಾಧ್ಯವಾಗದೇ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು. ಹಾಗಾದರೆ ಈ ರೀತಿಯ ಕಷ್ಟಗಳು ಎದುರಾಗುತ್ತವೆ ಎಂಬ ಎಚ್ಚರಿಕೆಯನ್ನು ಮೂರನೆಯ ಮಂಗರಸ ಕೊಟ್ಟಿದ್ದಾನೆ. ಈ ವಾಕ್ಯವನ್ನು ಓದುವಾಗ ವೀರ ಅಭಿಮನ್ಯು ನೆನಪಿಗೆ ಬರುತ್ತದೆ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಪ್ರವೇಶಿಸುತ್ತಾನೆ ಆದರೆ ಹೊರಗೆ ಬರಲಾಗುವುದಿಲ್ಲ ಧಿರೋದಾತ್ತತೆಯಿಂದ ಹೋರಾಡುತ್ತಾನೆ ಮಡಿಯುತ್ತಾನೆ. ಆದರೆ ಮದ್ದಳೆಯಲ್ಲಿ ಸಿಕ್ಕ ಇಲಿಗೆ ಹೋಲಿಸಲಾಗುವುದಿಲ್ಲ. ಕಾರಣ ತನ್ನವರಿಗಾಗಿ ಪ್ರವೇಶಿಸಿದ ಅಭಿಮನ್ಯವಿನಲ್ಲಿ ಹೋರಾಟದ ಛಲವಿತ್ತೇ ವಿನಃ ಅನ್ಯ ಆಲೋಚನೆಗಳಿರಲಿಲ್ಲ.
ಈಗಿನ ಕೊರೋನಾ ಕಾಲಕ್ಕೂ ಇದನ್ನು ಹೋಲಿಸ ಬಹುದು. ಸರಕಾರ ಮಾಡಿರುವ ನಿಯಮಗಳನ್ನು ಪಾಲಿಸದೆ ಕೊರೋನಾ ಎಂಬ ಮದ್ದಳೆಯಲ್ಲಿ ಸೇರಿದಂತ ಇಲಿಯಂತೆ ನಾವಾಗವುದು ಬೇಡ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮುಂತಾದ ನಿಯಮಗಳನ್ನು ಪಾಲಿಸಿ ಕೊರೋನವನ್ನು ಹೊಡೆದೋಡಿಸೋಣ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಮುಂಜಾನೆ ಪ್ರಭಾತೇ ಕರದರ್ಶನಂ ಎಂದು ಜಾಗೃತಗೊಂಡಾಗಲಿಂದಲೂ ನಮ್ಮ ಗೊಂದಲಮಯ ಶೈಲಿ ಜೀವನ ಆರಂಭವಾಗುವುದೇ ಮೊದಲಿಗೆ ಪೆಪ್ಸೋಡೆಂಟ್ ಬಳಸಲೋ ಅಥವಾ ಕ್ಲೋಸ್ ಅಪ್ ಬಳಸಲೋ ಎಂದು .ನಂತರ ಅಡುಗೆ ಮನೆಯತ್ತ ಧಾವಿಸಿದಾಗ ಅಲ್ಲಿಯೂ ನಿರ್ಧರಿಸಲಸಾಧ್ಯವಾದ ಆಯ್ಕೆಗಳು, ಮುಂಜಾನೆ ಉಲ್ಲಾಸಭರಿತರಾಗಿರಲು ತಾಜಾ ಟೀ ರೂಬಿ ಟೀ, ರೆಡ್ ಲೇಬಲ್, 3 ರೋಸಸ್, ತಾಜ್ ಮಹಲ್ ಟೀ, ಬ್ರೂ, ಬೂಸ್ಟ್, ಹಾರ್ಲಿಕ್ಸ್ ಲೈಟ್, ಹಾರ್ಲಿಕ್ಸ್ ವುಮನ್ ( ಪುಟಾಣಿಗಳಿಗೆ ಹಾರ್ಲಿಕ್ಸ್ ಜೂನಿಯರ್) ಗಳಲ್ಲಿ ಆಯ್ಕೆ ಮಾಡಿ ಕುಡಿದು ಹೊರಬರುವಷ್ಠರಲ್ಲಿ ಸಮಯದ ಅಭಾವದ ಕಾರಣ ಪತ್ರಿಕೆಗಳತ್ತ ಕಣ್ಣಾಯಿಸಿ ಮುಂದಿನ ದಿನಚರಿಯತ್ತ ಸಾಗುವುದು.
ಬಾತ್ ರೂಂ ನತ್ತ ಸಾಗಿದಾಗ ಅಲ್ಲಿ ಕ್ಲಿನಿಕ್ ಪ್ಲಸ್, ಡೋವ್ ಶಾಂಪೂ, ಸನ್ ಸಿಲ್ಕ್, ಗಳಲ್ಲಿ ಯಾವುದಾದರೊಂದು ಆಯ್ಕೆ ಮಾಡಿಕೊಂಡ ನಂತರ ಲಿರಿಲ್, ಪಿಯರ್ಸ್, ಹಮಾಮ್, ರೆಕ್ಸೊನಾ, ಲಕ್ಸ್, ಡೋವ್, ಲೈಫ್ ಬಾಯ್ ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು. ಬಾತ್ ರೂಂ ನಿಂದ ಹೊರಬಂದಮೇಲೆ ಪಾಂಡ್ಸ್ ಡ್ರೀಂ ಫ್ಲೋ ಪೌಡರ್, ಗ್ಲೋ ಅಂಡ್ ಲೌಲಿ, ಲ್ಯಾಕ್ಮೆ ಪರ್ಫೆಕ್ಟ್, ಆಕ್ಸೆ ಸಿಗ್ನೇಚರ್ , ವ್ಯಾಸಲೀನ್ ಗಳನ್ನು ಬಳಸಿ ಟ್ರಿಂ ಆಗಿ ಮನೆಯ ಸಭಾಂಗಣದಲ್ಲಿ ಕುಳಿತು ಟಿ ವಿ ನೋಡೋಣ ಎಂದು ಆನ್ ಮಾಡಿದಾಗ ಲಿರಿಲ್, ಹಾರ್ಲಿಕ್ಸ್, ಗ್ಲೋ ಅಂಡ್ ಲೌಲಿಗಳೊಂದಿಗೆ ಕಲೆ ಹೋಗಲಾಡಿಸಲು ಸರ್ಫ್ , ಹೊಸ ವಿಚಾರದ ವೀಲ್, ರಿನ್ ನ ಜಾಹಿರಾತು ಹೀಗೆ ಸಾಗಿದ ಲಾಕ್ ಡೌನ್ ದಿನಚರಿಯಲ್ಲಿ ಮಧ್ಯೆ ಮಧ್ಯೆ ಬೇಸರವೆನಿಸಿದಾಗ knorr noodles ಅಥವಾ kwality walls ಐಸ್ ಕ್ರೀಂ, ಸವಿಯುವ ಮೂಲಕ ದಿನ ಕಳೆಯುವುದೇ ಮನೆಯಲ್ಲಿಯೇ ಇರಿ ಮನರಂಜನೆ ತೆಗೊಳ್ಳಿ ಎಂದಂತಾಗಿದೆ.
ಇದೇನು ಇಷ್ಚು ಐಟಂಗಳ ಪ್ರಚಾರ ಮಾಡುತ್ತಿರುವೆನೆಂದು ಭಾವಿಸಬೇಡಿ. ಇದು ನಮ್ಮ ನಿತ್ಯದಲ್ಲಿ ಪ್ರತಿಯೊಂದು ಕ್ರಿಯೆಗಳಲ್ಲಿ ತೇಲಿಬಿಡಲಾಗುತ್ತಿರುವ ವ್ಯವಹಾರಿಕ ಪ್ರಕ್ರಿಯೆಗಳು. ಮೇಲೆ ಹೆಸರಿಸಿದ ಎಲ್ಲಾ ಉತ್ಪನ್ನಗಳೂ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಹಿಂದೂಸ್ಥಾನ್ ಯುನಿಲೀವರ್ ನ ಉತ್ಪನ್ನಗಳಾಗಿವೆ. ಇವುಗಳೊಂದಿಗೆ ಅನ್ನಪೂರ್ಣ, ಡೊಮೆಕ್ಸ್, ಮುಂತಾದ ದಿನಬಳಕೆಯ ಸಾಮಾಗ್ರಿಗಳು ಸಹ ಈ ಕಂಪನಿಯ ಉತ್ಪನ್ನಗಳಾಗಿವೆ. ಸಾಮಾನ್ಯವಾಗಿ ಒಂದು ಕಂಪನಿ ಒಂದೇ ಬ್ರಾಂಡನ್ನು ಅಳವಡಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದೇ ಕಂಪನಿ ಗ್ರಾಹಕರ ಚಿಂತನೆಗಳನ್ನೇ ಬಂಡವಾಳವಾಗಿಸಿಕೊಂಡು, ತನ್ನದೇ ಉತ್ಪನ್ನಗಳ ಮೇಲೆ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿ ಜಯಶಾಲಿಯಾಗುತ್ತಿದೆ. ಇದು ಒಂದು ಮಾರ್ಕೆಟಿಂಗ್ ತಂತ್ರವಾಗಿದೆ. ಈ ಕಂಪನಿಯಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ವಿವಿಧ ವಲಯದ ಕಂಪನಿಗಳು ವಿಲೀನಗೊಂಡಿವೆ. ಕೆಲವು ಕಂಪನಿಗಳು ಸ್ವಾಧೀನಗೊಳಿಸಿಕೊಳ್ಳಲಾಗಿದೆ. ಹಾಗಾಗಿ ಈ ಮಟ್ಟದ ಬೆಳವಣಿಗೆ ಸಾಧ್ಯವಾಗಿದೆ. ಗ್ರಾಹಕರ ದಿನಬಳಕೆಯ ಸಾಮಾಗ್ರಿ ವಲಯದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದೆ.
ಹಿಂದೂಸ್ಥಾನ್ ಯುನಿಲೀವರ್ ಕಂಪನಿಯು ಈ ಮಟ್ಟದ ಗಜಗಾತ್ರಕ್ಕೆ ಬೆಳೆಯಲು ಅದರಲ್ಲಿ ವಿಲೀನಗೊಂಡಿರುವ ಬ್ರೂಕ್ ಬಾಂಡ್, ಲಿಪ್ಟನ್, ಲ್ಯಾಕ್ಮೆ,ಪಾಂಡ್ಸ್, ಇಂದುಲೇಖ, ಕಿಸಾನ್, ಕ್ವಾಲಿಟಿ ವಾಲ್ಸ್, ಗ್ಲಾಕ್ಸೋ ಸ್ಮಿತ್ ಕ್ಲೈನ್ ಕನ್ಸೂಮರ್ಸ್ ಕಂಪನಿಗಳ ಕೊಡುಗೆಯೂ ಅಪಾರವಾಗಿದೆ.
ಭಾರತದ ಶ್ರೀಮಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ರೂ.10 ರ ಮುಖಬೆಲೆ ಷೇರು ರೂ.2,100 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಆದರೆ ರೂ.1 ರ ಮುಖಬೆಲೆಯ ಹಿಂದೂಸ್ಥಾನ್ ಯುನಿಲೀವರ್ ಷೇರಿನ ಬೆಲೆ ರೂ.2,300 ನ್ನು ದಾಟಿರುವುದು ಈ ಕಂಪನಿಯ ಮಟ್ಟವನ್ನು ತೋರಿಸುತ್ತದೆ. ಅಲ್ಲದೆ ಈ ಕಂಪನಿಯು ಈ ತಿಂಗಳ 14 ರಂದು ನಿಗದಿಪಡಿಸಿರುವ ಡಿವಿಡೆಂಡ್ ರೂ.17.00 ಸೇರಿ ಒಟ್ಟು ರೂ.40.50 ಪೈಸೆಯಷ್ಠು ಡಿವಿಡೆಂಡ್ ವಿತರಿಸಿದಂತಾಗುತ್ತದೆ.
ಸಾಮಾನ್ಯವಾಗಿ ಷೇರುಪೇಟೆಯ ಹೂಡಿಕೆಗೆ ತೊಡಗಿಸಿಕೊಂಡವರಲ್ಲಿ ತಮ್ಮ ಹೂಡಿಕೆ ಗುಚ್ಚದಲ್ಲಿ ಕೆಲವೇ ಕೆಲವು ಆಯ್ದ ಕಂಪನಿಗಳಿರಲಿ ಎಂಬ ಭಾವನೆ ಇರುತ್ತದೆ. ಇದರಿಂದ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ. ಕಾರಣ ಸೀಮಿತ ವಲಯದ ಹೂಡಿಕೆಯಾದ್ದರಿಂದ ಅಲ್ಲಿ ಉಂಟಾಗುವ ಏರುಪೇರುಗಳು ಭಾರಿ ಪ್ರಮಾಣದಲ್ಲಿ ಪ್ರಭಾವಿಯಾಗುತ್ತದೆ. ಆದರೆ ಹೂಡಿಕೆ ಗುಚ್ಚದಲ್ಲಿ ಅನೇಕ ಕಂಪನಿಗಳ ಷೇರುಗಳಿದ್ದರೆ, ವಲಯವಾರು ಬದಲಾವಣೆಗಳು ಸೀಮಿತವಾದ್ದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಬಹುಕಂಪನಿಗಳ ಹೂಡಿಕೆಗುಚ್ಚವು ಗೊಂದಲಗಳ ಸಮಯದಲ್ಲಿ ಒಂದು ರೀತಿಯ ಷಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ.
ಸಧ್ಯ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಸಣ್ಣ ಸಣ್ಣ ಕಾರಣಗಳಿಗೂ ಭಾರಿ ಏರುಪೇರು ಪ್ರದರ್ಶಿತವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಷೇರಿನ ಇತ್ತೀಚಿನ ಚಲನೆಯಾಗಿದೆ.
ಈ ಕಂಪನಿಯು ಈ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಿದ ತನ್ನ ಫಲಿತಾಂಶದ ಸಮಯದಲ್ಲಿ ರೂ.860 ರ ಸಮೀಪದಲ್ಲಿದ್ದು, ಪ್ರಕಟವಾದ ನಂತರ ರೂ.740 ರ ಸಮೀಪಕ್ಕೆ ಕುಸಿಯಿತು. 26 ರಂದು ರೂ.770 ರ ಸಮೀಪದಿಂದ ರೂ.809 ಕ್ಕೆ ಜಿಗಿಯಿತು, 27 ರಂದು ರೂ.873 ಕ್ಕೆ ಜಿಗಿಯಿತು. 28 ರಂದು ರೂ.910 ನ್ನು ತಲುಪಿ ರೂ.873 ರಲ್ಲಿ ಕೊನೆಗೊಂಡಿದೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಷೇರಿನ ಬೆಲೆ ಗರಿಷ್ಠ ಹಂತದಲ್ಲಿದ್ದಾಗ ಪ್ರದರ್ಶಿತವಾದ ವಹಿವಾಟಿನ ಗಾತ್ರ ಮಾತ್ರ ಅಸಹಜ ಪ್ರಮಾಣದ್ದಾಗಿದೆ. ಈ ಕಂಪನಿ ಘೋಷಿಸಿದ ಫಲಿತಾಂಶದಲ್ಲಿ ಪ್ರತಿ ಷೇರಿಗೆ ರೂ.3 ರ ಡಿವಿಡೆಂಡ್ ಗೆ ಜೂನ್ ಅಂತ್ಯದಲ್ಲಿ ನಿಗದಿತ ದಿನವಾಗಿದ್ದರೂ ಕೇವಲ ಮೂರುದಿನಗಳಲ್ಲಿ ರೂ.140ರಷ್ಠು ಏರಿಕೆ ಕಂಡಿರುವುದು ಅಸಹಜವಲವೇ? ಈ ಪರಿಸ್ಥಿತಿಯ ಲಾಭಪಡೆದುಕೊಳ್ಳುವುದು ಕರಗತ ಮಾಡಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸಾಧ್ಯ.
ಈ ಹಂತದಲ್ಲಿ ಕೆಳ ಮಧ್ಯಮ ಮತ್ತು ಮಧ್ಯಮ ವಲಯದ ಕಂಪನಿಗಳನೇಕವು ಕಂಡರಿಯದ ರೀತಿಯಲ್ಲಿ ಏರಿಕೆ ಪ್ರದರ್ಶಿಸಿವೆ. ಈ ಸಮಯದಲ್ಲಿ ಅಂತಹವುಗಳಿಂದ ದೂರವಿದ್ದಲ್ಲಿ ಮಾತ್ರ ಬಂಡವಾಳ ಸುರಕ್ಷಿತ. HIL Ltd ಕಂಪನಿಯು ಕಳೆದ ಒಂದೇ ತಿಂಗಳಲ್ಲಿ ರೂ.3,380 ರಿಂದ ರೂ.5,049 ರವರೆಗೂ ಏರಿಕ ಕಂಡಿದೆ. ಕಂಪನಿ ಸಾಧನೆಯು ಉತ್ತಮವಾಗಿದ್ದರೂ ಈ ಪ್ರಮಾಣದ ಏರಿಕೆ ಸಹಜವೆನಿಸದು. ರೂ.825 ರ ವಾರ್ಷಿಕ ಕನಿಷ್ಠದಲ್ಲಿದ್ದ ಈ ಷೇರು ರೂ.5,000 ದ ಗಡಿಯನ್ನು ದಾಟಿರುವುದು ಅಸಹಜವಲ್ಲವೇ? Praj Industries ಷೇರಿನ ಬೆಲೆ 2020 ರಲ್ಲಿ ರೂ.43 ರ ಕನಿಷ್ಠದಲ್ಲಿದ್ದ ಷೇರು ರೂ.398 ರವರೆಗೂ ಜಿಗಿದು ರೂ.334 ರ ಸಮೀಪವಿದೆ. ಈ ರೀತಿ ಅಸಹಜ ರೀತಿಯ ಚಟುವಟಿಕೆಗಳಲ್ಲಿರುವ ಅನೇಕ ಕಂಪನಿಗಳಿಂದ ದೂರವಿರುವುದೇ ಒಳಿತು. ಇಲ್ಲವಾದಲ್ಲಿ ದೀರ್ಘಕಾಲೀನ ಹೂಡಿಕೆದಾರರಾಗದೆ, ಶಾಶ್ವತ ಹೂಡಿಕೆದಾರರಾಗಬಹುದು.
Angel Broking ಕಂಪನಿಯ ಷೇರು ರೂ.306 ರಲ್ಲಿ ವಿತರಣೆಯಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ವಿತರಣೆಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದ್ದ ಈ ಷೇರು ಕಳೆದ ಒಂದೇ ತಿಂಗಳಲ್ಲಿ ರೂ.355 ರ ಸಮೀಪದಿಂದ ರೂ.788 ರವರೆಗೂ ಜಿಗಿದು ರೂ.745 ರ ಸಮೀಪ ಕೊನೆಗೊಂಡಿದೆ. ಕೇವಲ ಒಂದೇ ತಿಂಗಳಲ್ಲಿ ದ್ವಿಗುಣಗೊಂಡಿರುವ ಈ ಸ್ಮಾಲ್ ಕ್ಯಾಪ್ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ.
ಮೂರು ವರ್ಷಗಳ ಹಿಂದೆ ರೂ.98 ರಂತೆ ಖರೀದಿಸಿದ ಅರವಿಂದ್ ಲಿಮಿಟೆಡ್,ರೂ.90 ರಂತೆ ಖರೀದಿಸಿದ ಗುಜರಾತ್ ಮಿನರಲ್ ಡೆವೆಲಪ್ಮೆಂಟ್ ಕಾರ್ಪೊರೇಷನ್,ರೂ.1,030 ರಲ್ಲಿ ಖರೀದಿಸಿದ ಗೋವಾ ಕಾರ್ಬನ್, ರೂ.93 ರಲ್ಲಿ ಖರೀದಿಸಿದ ಕೇಸೋರಾಂ ಇಂಡಸ್ಟ್ರೀಸ್, ರೂ.290 ರಂತೆ ಖರೀದಿಸಿದ ಲಾ ಓಪಾಲ ಆರ್ ಜಿ,ರೂ.315 ರಲ್ಲಿ ಖರೀದಿಸಿದ ರೇನ್ ಇಂಡಸ್ಟ್ರೀಸ್, ರೂ.800 ರಲ್ಲಿ ಖರೀದಿಸಿದ ಅಪೆಕ್ಸ್ ಫ್ರೋಜನ್, ಮುಂತಾದವು ಖರೀದಿಸಿದ ಬೆಲೆಯನ್ನು ಇದುವರೆಗೂ ತಲುಪದೆ, ಹೂಡಿಕೆದಾರರು ಕಾಯುತ್ತಿರುವುದು ಸಾಮಾನ್ಯವಾಗಿದೆ. ಈ ಪಟ್ಟಿಗೆ ಹೆಲ್ತ್ ಕೇರ್ ಗ್ಲೋಬಲ್, ಯೂನಿಕೆಂ ಲ್ಯಾಬೊರೆಟರೀಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್, ಓರಿಯಂಟಲ್ ಕಾರ್ಬನ್, ಈಕ್ವಿಟಾಸ್ ಹೋಲ್ಡಿಂಗ್ಸ್, ಮುಂತಾದ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಈ ಹಂತದಲ್ಲಿ ಅಗ್ರಮಾನ್ಯ ಕಂಪನಿಗಳನ್ನು ಹೊರತು ಪಡಿಸಿ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಗಳಲ್ಲಿ ಹೂಡಿಕೆಗೆ ಮುನ್ನ ಹೆಚ್ಚಿನ ಚಿಂತನೆ ಅಗತ್ಯ.
ಹೆಚ್ಚಿನ ಕಂಪನಿಗಳು ವಾರ್ಷಿಕ ಗರಿಷ್ಠದಲ್ಲಿರುವ ಸಮಯದಲ್ಲಿ ಕೈಲಿರುವ ಹಣವನ್ನು ಯಾವ ರೀತಿ ಹೂಡಿಕೆ ಮಾಡಬಹುದು ಎಂಬುದೇ ಸಮಸ್ಯೆಯಾಗಿದೆ. ಹರಿದಾಡುವ ಹಣ ಹೆಚ್ಚಿದೆ. ಹೂಡಿಕೆಗೆ ಕೇವಲ ಕೆಲವೇ ಕಂಪನಿಗಳಿವೆ. ಹೇಗೆ ನಿರ್ಧರಿಸುವುದು. ಪ್ರತಿ ತಿಂಗಳೂ ಮಾಸಾಂತ್ಯದಲ್ಲಿ ಬರುವ ಚುಕ್ತಾ ಚಕ್ರದ ಕಾರಣ ಷೇರಿನ ಬೆಲೆಗಳು ಭಾರಿ ಕುಸಿತ ಅಥವಾ ಅಸ್ವಾಭಾವಿಕ ಏರಿಕೆ ಪ್ರದರ್ಶಿಸುತ್ತವೆ. ಇದಕ್ಕೆ ಪೂರ್ವಾಬಾವಿಯಾಗಿ ಆ ತಿಂಗಳಲ್ಲಿ ಅತಿಯಾದ ಚಟುವಟಿಕೆಯಿಂದ ಕುಸಿದಿರುತ್ತವೆ ಅಥವಾ ಏರಿಕೆ ಕಂಡಿರುತ್ತವೆ. ಆ ತಿಂಗಳಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು, ವಿಶೇಷವಾಗಿ ಸೆನ್ಸೆಕ್ಸ್ ನಲ್ಲಿರುವ ಷೇರುಗಳು ಭಾರಿ ಕುಸಿತಕ್ಕೊಳಗಾದಾಗ ಖರೀದಿಸಿದಲ್ಲಿ, ಚುಕ್ತಾ ಚಕ್ರದೊಳಗೆ ಅಥವಾ ನಂತರದಲ್ಲಿ ಭಾರಿ ಚೇತರಿಕೆ ಕಾಣುವುದು ಈಗಿನ ವಹಿವಾಟಿನ ವಿಧವಾಗಿದೆ.
ಅದೇ ರೀತಿ ಟೆಕ್ನಾಲಜಿ ವಲಯದ ಕಂಪನಿಗಳು, ಫಾರ್ಮಾ ವಲಯದ ಕಂಪನಿಗಳು ಸಹ ಭಾರಿ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧರಿಸುವುದು ಸಾಧ್ಯವಿಲ್ಲದಿದ್ದಲ್ಲಿ ಪ್ರತಿ ಷೇರಿಗೆ ರೂ.58 ರ ಡಿವಿಡೆಂಡ್ ಘೋಷಿಸಿರುವ BPCL, ಪ್ರತಿ ಷೇರಿಗೆ ರೂ.22.75 ರಂತೆ ಡಿವಿಡೆಂಡ್ ವಿತರಿಸಲಿರುವ Hindustan Petroleum Corporation Ltd, ಕಂಪನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಡಿವಿಡೆಂಡೂ ಸಿಗುತ್ತದೆ ಜೊತೆಗೆ ಷೇರಿನ ಬೆಲೆ ಹೆಚ್ಚಳಕ್ಕೆ ಅವಕಾಶವಿದ್ದು, ಅಧಿಕ ಲಾಭವನ್ನೂ ಪಡೆಯಬಹುದಾಗಿದೆ.
ಕಂಪನಿಗಳು ಆಕರ್ಷಕ ಲಾಭಗಳಿಸಿದರೂ ಅದಕ್ಕೆ ತಕ್ಕಂತೆ ಡಿವಿಡೆಂಡ್ ಗಳನ್ನು ವಿತರಿಸುವಲ್ಲಿ ವಿಫಲವಾಗುತ್ತಿವೆ. ಅಂದರೆ ಷೇರುಪೇಟೆಯಲ್ಲಿ ಹೂಡಿಕೆಯ ಹಣ ವೃದ್ಧಿ ಕಾಣಬೇಕಾದರೆ, ಖರೀದಿಸಿದ ಷೇರನ್ನು ಲಾಭಕ್ಕೆ ಮಾರಾಟಮಾಡಿದಲ್ಲಿ ಮಾತ್ರ ಸಾಧ್ಯ. ಮ್ಯುಚುಯಲ್ ಫಂಡ್, ವಿತ್ತೀಯ ಸಂಸ್ಥೆಗಳು, ವೆಂಚರ್ ಕ್ಯಾಪಟಲಿಸ್ಟ್, ಪ್ರೈವೇಟ್ ಈಕ್ವಿಟಿ ಇನ್ವೆಸ್ಟರ್ ಗಳ ಈ ದಿನಗಳಲ್ಲಿ ಯಾವುದೇ ಷೇರಿನ ಬಗ್ಗೆ ಭಾವನಾತ್ಮಕ ನಂಟು ಬೇಡ. ವಹಿವಾಟನ್ನು ಸಣ್ಣ ಪ್ರಮಾಣದ ಅಂದರೆ 50, 100 ರ ಸಂಖ್ಯೆಯ ಷೇರುಗಳಲ್ಲಿ ನಡೆಸಿದಲ್ಲಿ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಚಟುವಟಿಕೆಯಲ್ಲಿ ಚಿಂತನೆ, ವಿಶ್ಲೇಷಣೆಗಳಿಗೆ ತೆರೆದಿಡು ಮನ, ಸ್ವಾವಲಂಭಿ ನಿರ್ಧಾರದಮೇಲಿರಲಿ ಸದಾ ನಿಮ್ಮ ಗಮನ.
ಈ ಸ್ವಭಾವ ಚಿತ್ರವನ್ನು ಸದ್ಯದಲ್ಲೇ ಪ್ರಕಟವಾಗಲಿರುವ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ಬರೆದ ಕಪಾಳಮೋಕ್ಷ ಪ್ರವೀಣ ಸ್ವಭಾವ ಚಿತ್ರಗಳ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಕನ್ನಡದ ಪ್ರಸಿದ್ಧ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯವರು ಪ್ರಕಟಿಸುತ್ತಿದ್ದಾರೆ. ಈ ಅಧ್ಯಾಯ ಅವರ ಸಂಪರ್ಕಕ್ಕೆ ಬಂದ ಆಗಿನ ಜನಪ್ರತಿನಿಧಿಗಳ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
ಶಾಸಕರು, ಸಂಸದರು, ಕಾರ್ಪೊರೇಟರ್‌ಗಳು ಇವರನ್ನೆಲ್ಲ ಹತ್ತಿರದಿಂದ, ದೂರದಿಂದ, ಓರೆನೋಟದಿಂದ ಕಾಣುವ, ಭೇಟಿ ಮಾಡುವ ಅವಕಾಶಗಳು ಬಂದಾಗಲೆಲ್ಲ, ಇಂತಹವರೆಲ್ಲ ವಿಶೇಷ ಜನ ಎಂದು ನನಗನಿಸುವುದೇ ಇಲ್ಲ. ಅವರನ್ನು ನಮ್ಮಂತೆಯೇ ಬಗೆದು ಸಮಾನರಾಗಿ ಕಾಣಲು ಹೊರಟರೆ, ಅವರಿಗೂ ಒಂದು ರೀತಿಯ ಮುಜುಗರ.
ಕೊಲ್ಹಾಪುರದಲ್ಲಿದ್ದಾಗ ಒಬ್ಬ ಸಂಸದರ ಷರ್ಟಿನ ವಿನ್ಯಾಸ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ ಅವರು ಸಿಟ್ಟು ಮಾಡಿಕೊಂಡರು. ಇನ್ನೊಬ್ಬರು ಹಾಕಿಕೊಂಡಿರುವ ಬಟ್ಟೆ ಚೆನ್ನಾಗಿದ್ದರೆ, ಯಾರಾದರೂ ಹೊಗಳೇ ಹೊಗಳುತ್ತಾರಲ್ಲವೇ? ಆವಾಗ ಬಟ್ಟೆ ಹಾಕಿಕೊಂಡವರಿಗೂ ಖುಷಿಯಾಗುತ್ತದಲ್ಲವೇ ಎಂಬುದೇ ಪ್ರಶ್ನೆ. ಇನ್ನೊಂದು ಸಲ ಬೋರಿವಿಲಿಯಲ್ಲಿ ಒಬ್ಬ ಶಾಸಕರು ನನ್ನ ರೀತಿಯೇ ಎರಡು ಸಲ ಪಾನ್ ಹಾಕಿಕೊಂಡು ತುಟಿ ಕೆಂಪಾದ ಮೇಲೆ ನಾಲಿಗೆಯಿಂದ ತುಟಿ ಸವರಿಕೊಳ್ಳುತ್ತಾ ಸುಖ ಅನುಭವಿಸುತ್ತಿದ್ದರು. ಶಾಸಕರು, ಅವರ ಪಕ್ಕದಲ್ಲಿ ನಾನು, ನನ್ನ ಪಕ್ಕದಲ್ಲಿ ಸಹೋದ್ಯೋಗಿ. ಸಹೋದ್ಯೋಗಿ ಹತ್ತಿರ ನಾನು ಶಾಸಕರ ಬಗ್ಗೆ ಪಿಸುಮಾತಿನಲ್ಲಿ ಹೇಳಿದಾಗ, ಇಲ್ಲ, ಇಲ್ಲ, ಹಾಗೆ ಮಾತನಾಡಬಾರದು ಎಂದು ತುಟಿಯ ಮೇಲೆ ಬೆರಳಿಟ್ಟುಕೊಂಡರು.
ಏಕೆ ಹೀಗಾಗುತ್ತದೆ? ನನ್ನ ಅಧಿಕಾರ ಸ್ಥಾನದ ಬಗ್ಗೆ, ಬರಹಗಾರನಾಗಿರುವೆನೆಂಬ ಆತ್ಮವಿಶ್ವಾಸದಿಂದ ಹೀಗಾಗುತ್ತದೆಯೇ ಎಂದು ಮತ್ತೆ ಮತ್ತೆ ಯೋಚಿಸಿದಾಗ ಹೊಳೆದದ್ದು, ನಾನು ಬಾಲ್ಯದಲ್ಲಿ, ಯೌವ್ವನದಲ್ಲಿ ಕಂಡ ಜನಪ್ರತಿನಿಧಿಗಳ ಸ್ವಭಾವ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆಯೆಂಬುದು. ಇದೆಲ್ಲ ತೀರಾ ಹಿಂದಿನ ಕಾಲದ ಸಮಾಚಾರ ಎಂದು ತಿಳಿಯಬಾರದು. ತೀರಾ 1978, 1979ರಲ್ಲೂ ನಾನು ಒಂದು ಗೊಬ್ಬರದ ಅಂಗಡಿಯ ಮುಂದಿನ ಜಗುಲಿಯಲ್ಲಿ ಕುಳಿತುಕೊಂಡು ಶಾಸಕರೊಬ್ಬರ ಜೊತೆ ದಿನಪತ್ರಿಕೆ ಓದುತ್ತಿದ್ದೆ. ನನ್ನ ಹತ್ತಿರ ಒಂದು ಪುಟ ಇದ್ದರೆ, ಅವರ ಹತ್ತಿರ ಇನ್ನೊಂದು ಪುಟ. ಮುಂದಿನ ಪುಟದಲ್ಲಿದ್ದ ಸುದ್ದಿ ಮುಂದುವರೆದಿದ್ದರೆ, ಅವರು ನಾನು ಆ ಪುಟ ಓದಿ ಮುಗಿಸುವ ತನಕ ಕಾಯುತ್ತಿದ್ದರು.
ಜನಪ್ರತಿನಿಧಿಗಳ ಬಗ್ಗೆ ವಿಶೇಷ ಸಲಿಗೆಯಿದು ಎಂದು ಭಾವಿಸಬಾರದು. ನಮ್ಮ ಶಾಸಕರು ಪಕ್ಕದ ಗ್ರಾಮದಲ್ಲಿದ್ದವರು. ಅದೊಂದು ಸುಂದರವಾದ ಹಸಿರುವಾಣಿ ಗ್ರಾಮ. ಎಲ್ಲರ ಮನೆಯಲ್ಲೂ ಹಿತ್ತಲ ತುಂಬಾ ತರಕಾರಿಯಿತ್ತು. ತರಕಾರಿ ಅಂಗಡಿಯೇ ಇರಲಿಲ್ಲ. ಹಾಗಂತ ಅಂಚೆ ಕಚೇರಿಯೂ ಇರಲಿಲ್ಲ. ನಮ್ಮೂರಿನಲ್ಲಿದ್ದ ಅಂಚೆ ಕಚೇರಿಗೇ ಅವರ Post ಕೂಡ ಬರುತ್ತಿತ್ತು. ನಮ್ಮೂರ ಅಂಚೆ ಕಚೇರಿ ಕೂಡ Sub-Post Office ಮಾತ್ರವಷ್ಟೇ! ಇಡೀ ಗ್ರಾಮಕ್ಕೆ ಸೇರಿ ಒಂದು ನಾಲ್ಕೈದು ಕಾಗದಗಳು ಬರುತ್ತಿದ್ದವು ಅಷ್ಟೆ. ಪಕ್ಕದ ಗ್ರಾಮದ ನಾಯಕರು ಶಾಸಕರಾದರು ನೋಡಿ, ಬೆಂಗಳೂರು, ದೆಲ್ಲಿ, ಮೈಸೂರು ಎಲ್ಲ ಕಡೆಯಿಂದಲೂ ಅವರಿಗೆ ಕಾಗದಗಳು, ಪುಸ್ತಕಗಳು, ಪತ್ರಿಕೆಗಳು, ಗೆಜೆಟ್. ಪೋಸ್ಟ್ ಬ್ಯಾಗ್ ಗಾತ್ರ ಮಾತ್ರ ಊದುತ್ತಲೇ ಇತ್ತು. ಬ್ಯಾಗ್‌ನಿಂದ ಶಾಸಕರಿಗೆ ಸೇರಿದ ಎಲ್ಲ ಟಪಾಲನ್ನು ತೆಗೆದು ಒಂದು ಕಡೆ ಹರಡುವರು. ಅದನ್ನು ನೋಡಲೇ ಒಂದು ಸಂತೋಷ. ಗೆಜೆಟ್ಟನ್ನ ನಾನು ಮೊದಲು ನೋಡಿದ್ದು ಅಲ್ಲೇ. ಅದರ ಮೇಲೆ ಶಾಸಕರ ಹೆಸರು, ವಿಳಾಸ ನೋಡಿ ಪುಳಕಿತನಾಗುತ್ತಿದ್ದೆ. ಶಾಸಕರು ಎದುರಿಗೆ ಸಿಕ್ಕಾಗಲೆಲ್ಲ ಸೆಲ್ಯೂಟ್ ಹೊಡೆಯುವಾಗ ಗೆಜೆಟ್ ಕೂಡ ಕಣ್ಣೆದುರಿಗೆ ಬರೋದು.
ಈ ಶಾಸಕರು ದಿನವೂ ಎದುರಾಗುತ್ತಿದ್ದರು. ಎಸ್ಸೆಸ್ಸಲ್ಸಿ ಪರೀಕ್ಷೆ ಯಾವಾಗ, ಪಿಯುಸಿ ಪರೀಕ್ಷೆ ಯಾವಾಗ, ಯಾರು ಸಪ್ಲಿಮೆಂಟರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ವಿವರಗಳು ಅವರಿಗೆ ಗೊತ್ತಿರುತ್ತಿತ್ತು. ಈ ಸಲವಾದರೂ ಪಾಸ್ ಮಾಡಿಕೊ, ಸುಮ್ಮನೆ ಮಾರ್ಚ್-ಸೆಪ್ಟೆಂಬರ್, ಸೆಪ್ಟೆಂಬರ್-ಮಾರ್ಚ್ ಅಂತ ದಂಡಯಾತ್ರೆ ಮಾಡಬೇಡ ಎಂದು ಗದರುತ್ತಿದ್ದರು. ಶಾಸಕರನ್ನು ನಿಲ್ಲಿಸಿಕೊಂಡು ಮನೆಯೊಳಗೆ ಆಗುತ್ತಿರುವ ದಾಯಾದಿ ಜಗಳವನ್ನೋ, ಗದ್ದೆಗೆ ನೀರು ಬಿಡುವುದರಲ್ಲಿ, ಕೊರಚುವದರಲ್ಲಿ ಮೂಡಿದ ತಗಾದೆಯನ್ನೋ ಗಂಟೆಗಟ್ಟಲೆ ಒಪ್ಪಿಸುವುರು, ಇದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡು ಒಂದು ನ್ಯಾಯವನ್ನು ಕೂಡ ಶಾಸಕರು ಹೇಳುತ್ತಿದ್ದರು. ಯಾವ ಮದುವೆಗೆ ಬಂದಾಗ ಶಾಸಕರು ಎಷ್ಟು ಮುಯ್ಯಿ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ಊರಿನವರೆಲ್ಲ ಗಮನಿಸಿರುತ್ತಿದ್ದುದರಿಂದ, ಉಡುಗೊರೆ ನೀಡುವವರೆಲ್ಲ ಒಂದು ಸಮಾನತೆಯ ಸೂತ್ರವನ್ನು ಅನುಸರಿಸಲೇ ಬೇಕಾಗುತ್ತಿತ್ತು. ಸಣ್ಣ-ಪುಟ್ಟ ವ್ಯವಹಾರಗಳಿಗೂ ಶಾಸಕರ ಒತ್ತಾಸೆಗೆ, ಶಿಫಾರಿಸ್‌ಗೆ ಜುಲುಮೆ ಮಾಡುತ್ತಿದ್ದರು. ತಾಲೂಕ್ ಆಫೀಸಿಗೆ, ಜಿಲ್ಲಾಧಿಕಾರಿ ಕಚೇರಿಗೆ ಶಾಸಕರನ್ನು ಮುಂದಿಟ್ಟುಕೊಂಡು ಹೋಗಿಯೇ ಅಹವಾಲು ಹೇಳುತ್ತಿದ್ದರು. ಇಂಥ ಕಚೇರಿಗಳಲೆಲ್ಲ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬಂದು ನಂತರ ಶಾಸಕರಿಗೆ ಅದರ ಬಗ್ಗೆ ದೂರು ಹೇಳಿ, ಅಧಿಕಾರಿಗೋ, ಗುಮಾಸ್ತರಿಗೋ ಕೊಟ್ಟಿರುವ ಲಂಚದ ಬಾಬ್ತನ್ನು ಹಿಂತಿರುಗಿ ಪಡೆಯಲು ಪ್ರಯತ್ನಿಸುತ್ತಿದ್ದರು. ಇಂತಹ ಕ್ಯಾತೆ, ಮಧ್ಯಸ್ಥಿಕೆಗೆ ಶಾಸಕರು ಒಪ್ಪದೆ, ಪದೇ ಪದೇ ಮನಸ್ತಾಪವಾಗೋದು.
ಇನ್ನೊಬ್ಬ ಶಾಸಕರಂತೂ ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಪೂಜೆ ಮಾಡಿ, ನಾಷ್ಟಾ ಮುಗಿಸಿ, ಪೇಟ ಕಟ್ಟಿಕೊಂಡು, ಮನೆಯ ಮುಂದಿನ ಅಂಗಳದಲ್ಲಿ ನೂಲು ಮಂಚದ ಮೇಲೆ ಕೂರುತ್ತಿದ್ದರು. ನಾವು ಕಾಲೇಜಿಗೆ ಅವರ ಮನೆಯ ಮುಂದೆಯೇ ಹಾದು ಹೋಗಬೇಕಾಗಿತ್ತು. ಪ್ರತಿದಿನ ಬೆಳಿಗ್ಗೆ ಹೀಗೆ ಶಾಸಕರು ಜನಸೇವೆಗೆ ರೆಡಿಯಾಗಿ ಕುಳಿತಿದ್ದನ್ನು ನೋಡುತ್ತಿದ್ದರಿಂದ ರಾಜಕೀಯ ವಿಜ್ಞಾನದ ತರಗತಿಗಳಲ್ಲಿ ಜನಪ್ರತಿನಿಧಿಗಳ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಹೇಳುತ್ತಿದ್ದ ಎಲ್ಲ ಸಂಗತಿಗಳೂ ನಮ್ಮ ಶಾಸಕರಿಗೂ ಹದಿನಾರಾಣೆ ಅನ್ವಯವಾಗುತ್ತಿತ್ತು. ಮೇಷ್ಟರು ಪುಸ್ತಕದಿಂದ ಹೇಳುತ್ತಿದ್ದುದಕ್ಕೂ, ಕಣ್ಣೆದುರಿಗೆ ಕಾಣುತ್ತಿರುವುದಕ್ಕೂ ಯಾವ ಬಿರುಕೂ ಕಾಣುತ್ತಿರಲಿಲ್ಲ. ಯಾವುದೇ ಸ್ತರದ ಸಾರ್ವಜನಿಕರು ಬಂದು ಕೂಗಲಿ, ಯಾವ ಕೆಲಸವೇ ಇರಲಿ, ಅವರೊಂದಿಗೆ ಶಾಸಕರು ಹೊರಟುಬಿಡುತ್ತಿದ್ದರು. ಕರೆದುಕೊಂಡು ಹೋಗಲು ಬಂದವರು ನಡೆದುಕೊಂಡು ಬಂದಿದ್ದರೆ, ಇವರದೂ ನಡಿಗೆಯೇ! ಜಟಕಾ ಅಂದರೆ ಜಟಕಾ, ಕಾರು ಇದ್ದರೆ ಕಾರು, ಬೆಂಗಳೂರಿಗೆ ಹೋಗಬೇಕು ಸರ್ಕಾರಿ ಬಸ್‌ನಲ್ಲಿ ಅಂದರೆ ಅದಕ್ಕೂ ಸೈ. ಬಸ್ ಹತ್ತಿದಾಗ ಎಲ್ಲ ಸೀಟುಗಳು ಭರ್ತಿಯಾಗಿದ್ದರೆ, ಯಾರಾದರೂ ಎದ್ದು ಶಾಸಕರಿಗೆ ಕೂರಲು ಅನುಕೂಲ ಮಾಡಿಕೊಡುತ್ತೀವೆಂದರೆ, ಅದಕ್ಕೂ ಒಪ್ಪುತ್ತಿರಲಿಲ್ಲ. ಹೀಗೆ ಓಡಾಡುವಾಗ ಮಧ್ಯಾಹ್ನದ ಊಟದ ಸಮಯವಾದರೆ, ಪ್ರಜೆಗಳ ಜೊತೆಯೇ ಊಟ. ಅಧಿಕಾರಿಗಳ ಬಳಿ ಹೋಗಿ, ನೋಡಿ ಇವರು ನಮ್ಮವರು, ಕೆಲಸ ಮಾಡಿಕೊಡಿ ಎಂಬ ಬೇಡಿಕೆ, ಆಗ್ರಹ.
ಒಂದು ಸಲ ಈ ಶಾಸಕರು ಊಟಕ್ಕೆ ಕೂತಿದ್ದರು. ಹಿಟ್ಟನ್ನು ಸೊಪ್ಪಿನ ಹುಳಿಗೆ ಅದ್ದಿ ಇನ್ನೇನು ಬಾಯಿಗೆ ಹಾಕಿಕೊಳ್ಳಬೇಕು ಅನ್ನುವ ಹೊತ್ತಿಗೆ ಜನರ ಒಂದು ಗುಂಪು ನುಗ್ಗಿತು. ಗ್ರಾಮದಲ್ಲಿ ಪೊಲೀಸರಿಂದ ಹಲ್ಲೆ. ಮಾನ್ಯರು ಊಟವನ್ನು ಮಾಡಲೇ ಇಲ್ಲ. ಎದ್ದು ಜನರ ಜೊತೆ ಎಸ್‌ಪಿ ಬಂಗಲೆಗೆ ಹೋದರು. ಸಾಹೇಬರು ಊಟ ಮಾಡುತ್ತಿದ್ದಾರೆ ಅಂದರೆ. ನಾನು ಕೂಡ ಊಟ ಮಾಡುತ್ತಿದ್ದವನು, ಮಧ್ಯದಲ್ಲಿ ಎದ್ದು ಬಂದಿದ್ದೇನೆ ಎಂದು ಬಂಗಲೆ ಒಳಗೆ ನುಗ್ಗಿದರು. ಸಾಹೇಬರು ಶಾಸಕರನ್ನು ಊಟಕ್ಕೆ ಆಹ್ವಾನಿಸಿರು. ಎಂತಹ ಅಧಿಕಾರಿಯನ್ನಾದರೂ ಏಕವಚನದಲ್ಲಿ ಆದರೆ ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಶಾಸಕರು, ಇಲ್ಲ, ನಾನು ಮುಂದಿನ ತುತ್ತು ತಿನ್ನಬೇಕಾದರೆ ನೀನು ನಾನು ಬಂದ ಕೆಲಸ ಮಾಡಿಕೊಟ್ಟ ಮೇಲೇ ಎಂದು ಷರತ್ತು ಹಾಕಿ, ಅಲ್ಲಿಂದಲೇ ಗ್ರಾಮಕ್ಕೆ ಸಂದೇಶ ರವಾನಿಸಲು ಒಬ್ಬ ಇನ್‌ಸ್ಪೆಕ್ಟರನ್ನು ಮೋಟರ್ ಸೈಕಲ್‌ನಲ್ಲಿ ಕಳಿಸಿದರು.
ಇಂತಹ ಶಾಸಕರು ಬಯಲು ನಾಟಕ ನೋಡಲು ಬಂದಾಗ ಊರಿನ ಜನರು ನಟಿ-ನಟಿಯರಿಗೆ ಮುಯ್ಯಿ ಮಾಡುವಾಗ ಅವರ ವಸ್ತ್ರಗಳಿಗೆ ನೋಟನ್ನು ಪಿನ್ ಸಮೇತ ಚುಚ್ಚುತ್ತಿದ್ದರಲ್ಲ ಹಾಗೆಯೇ ಇವರಿಗೂ ಮುಯ್ಯಿ ಮಾಡುತ್ತಿದ್ದರು. ಈ ಶಾಸಕರಿಂದ ಕೆಲಸ ಆಗುತ್ತಿತ್ತೇ ಅಂದರೆ ಬಹುಪಾಲು ಸಂದರ್ಭಗಳಲ್ಲಿ ಇಲ್ಲ ಎಂಬುದೇ ಖಚಿತವಾದ ಉತ್ತರ. ಆದರೆ ಮನುಷ್ಯ ಜನಾನುರಾಗಿ. ಕ್ಷೇತ್ರದ ಎಲ್ಲ ಕುಟುಂಬಗಳೂ ಗೊತ್ತು. ಯಾರು ಯಾವ ಮನೆಯವರು, ಯಾವ ಬೀದಿಯವರು ಎಂಬುದು ಕೂಡ ಗೊತ್ತು. ಇವರ ವಿರುದ್ಧ ಚುನವಾಣೆಗೆ ನಿಲ್ಲುತ್ತಿದ್ದವರು, ಆಡಳಿತ ಪಕ್ಷದವರು, ಪದಾಧಿಕಾರಿಗಳು, ವಕೀಲರು ಜನರ ಜೊತೆ ಬೆರೆಯುವುದೇ ಕಷ್ಟ. ಪಕ್ಷದಲ್ಲಿ ಪ್ರಭಾವವಿದ್ದುದರಿಂದ ಕೆಲಸ ಆಗುತ್ತಿತ್ತು. ಆದರೆ ಜನ ಇವರ ಹತ್ತಿರ ಹೋಗುವುದಕ್ಕೆ ಇಷ್ಟ ಪಡುತ್ತಿರಲಿಲ್ಲ. ಚುನಾವಣೆ ಸಮಯ ಬಂದಾಗ ಈತನ ಪ್ರಚಾರವೂ ಜೋರಾಗಿರುವುದು. ಆದರೆ ಗೆಲ್ಲುತ್ತಿರಲಿಲ್ಲ. ಗೆಲ್ಲುತ್ತಿದ್ದವರು ಹಳೆ ಕಾಲದ ಮನೋಭಾವದ ಜನಾನುರಾಗಿ ಶಾಸಕರು. ಈ ಗ್ರಾಮದ ಮತ್ತು ಗ್ರಾಮ್ಯದ ಶಾಸಕರಿಗೆ ತಾನು ಆಧುನಿಕನಲ್ಲ, ಪದವೀಧರನಲ್ಲ ಎಂಬ ಪ್ರಜ್ಞೆ ಇತ್ತು. ಚುನಾವಣೆಯಲ್ಲಿ ಎದುರು ನಿಲ್ಲುತ್ತಿರುವವನು ವಿದ್ಯಾವಂತ, ಬುದ್ಧಿವಂತ, ಮುಂದೆ ಬರುತ್ತಾನೆ ಎಂಬುದೂ ಗೊತ್ತಿತ್ತು. ಯಾವುದಾದರೂ ಸಾರ್ವಜನಿಕ ಸಮಾರಂಭದಲ್ಲಿ ಶಾಸಕರಾಗಿ ಇವರಿಗೇ ಅಗ್ರ-ಅಧಿಕೃತ ಸ್ಥಾನ ಕೊಟ್ಟು ಕೂರಿಸಿದ್ದರೂ ಎದುರಾಳಿ ಬಂದಾಗ, ಆತನ ಆಧುನಿಕ ವ್ಯಕ್ತಿತ್ವಕ್ಕೆ ಗೌರವ ಕೊಟ್ಟು ಎದ್ದು ನಿಲ್ಲುತ್ತಿದ್ದರು. ಚೆನ್ನಾಗಿದ್ದೀರಾ ಗೌಡರೇ ಎಂದು ಕುಶಲೋಪರಿ ಕೇಳುತ್ತಿದ್ದರು.
ನಮ್ಮ ಗ್ರಾಮ್ಯ ಶಾಸಕರು ವಿಧಾನಸಭೆಯಲ್ಲಿ ಮಾತನಾಡಿದ ದಿವಸವೋ, ಪ್ರಶ್ನೆ ಕೇಳಿದ ದಿವಸವೋ ಪತ್ರಿಕೆಯಲ್ಲಿ ವರದಿಯಾದ ದಿವಸ ಆ ಪುಟವನ್ನು, ಸಾಲುಗಳನ್ನು ಹತ್ತು ಹತ್ತು ಸಲ ಓದುತ್ತಿದ್ದೆವು. ಶಾಸಕರು ದಿನವೂ ಎದುರಾಗುತ್ತಿದ್ದ ಮಾಮೂಲಿ ವ್ಯಕ್ತಿಯಾದರೂ, ವಿಧಾನಸಭೆಯಲ್ಲಿ ಮಾತನಾಡಿ ವಾಪಸ್ ಬಂದ ಸಂದರ್ಭದಲ್ಲಿ ಮತ್ತೆ ಹೋಗಿ ಅವರನ್ನೇ ವಿಶೇಷ ವ್ಯಕ್ತಿ ಎಂದು ನೋಡುತ್ತಿದ್ದೆವು. ನಿಜವಾಗಿಯೂ ಅವರ ಮುಖದಲ್ಲಿ ಒಂದು ಕಳೆ ಇರೋದು.
ಪಕ್ಕದ ಪಾಂಡವಪುರದಿಂದ ಶಾಸಕರಾಗಿ ಆಯ್ಕೆಯಾಗಿರುವವರು ಪಕ್ಷೇತರರಾದರೂ, ಕಾಂಗ್ರೆಸ್ಸಿನವರಿಗಿಂತ ಗಾಂಧೀವಾದಿಯೆಂದು, ಸೈಕಲ್‌ನಲ್ಲಿ ಓಡಾಡುತ್ತಾರೆಂದು, ಹೊಲ-ಗದ್ದೆ ಕೆಲಸ ಮಾಡಲು ಪಟಾಪಟಿ ಚಡ್ಡಿಯಲ್ಲಿ ಕೂಲಿಕಾರರ ಜೊತೆ ತಾವೂ ಸಮನಾಗಿ ನಿಲ್ಲುತ್ತಾರೆಂದು ಕೇಳಿದ್ದೆವು. ಇಂತಹ ಶಾಸಕರನ್ನು ಒಮ್ಮೆ ಹೋಗಿ ನೋಡಿಕೊಂಡು ಬರಲೇಬೇಕು ಎಂದು ಮೇಷ್ಟರು ಸೂಚಿಸಿದ್ದರಿಂದ ನಾವೆಲ್ಲಾ ನೆಲೆಮನೆ ಗ್ರಾಮಕ್ಕೆ ಹೋದರೆ, ಮಹಾನುಭಾವರು ಕೇವಲು ನೀರು ಗದ್ದೆಗೆ ಇಳಿದಿರಲಿಲ್ಲ ಅಷ್ಟೆ. ಜನರ ಒಂದು ಸಣ್ಣ ಗುಂಪಿನೊಡನೆ ಗದ್ದೆ ಬದುವಿನಲ್ಲಿದ್ದ ಹೊಂಗೆ ಮರದ ಕೆಳಗಿ ಕುಳಿತುಕೊಂಡು ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ಇವರೇ ಶಾಸಕರು ಅಂತ ಒಬ್ಬರು ಗುರುತು ಹೇಳಿದ ಮೇಲೆ ನಮಗೆ ಗೊತ್ತಾಯಿತು. ಮುಂದಿನ ವಾಕ್ಯ ನಿಮಗೆ ಗೊತ್ತೇ ಇದೆ. ನಂತರದ ಚುನಾವಣೆಯಲ್ಲಿ ಇವರು ಗೆಲ್ಲಲಿಲ್ಲ. ಸೋತೆ ಎಂದು ಬೇಸರ ಕೂಡ ಮಾಡಿಕೊಳ್ಳಲಿಲ್ಲ. ತಾವಾಯಿತು ತಮ್ಮ ಹೊಲ-ಗದ್ದೆ ಕೆಲಸವಾಯಿತು, ಚರಕದಲ್ಲಿ ನೂಲುವುದಾಯಿತು. 1969ರಲ್ಲಿ ಗಾಂಧಿ ಶತಮಾನೋತ್ವವ ಆದಾಗ ನಮ್ಮ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾನ್ಯರು ಮಾಡಿದ ಭಾಷಣದಿಂದ ನಾವು ವಿದ್ಯಾರ್ಥಿಗಳಿರಲಿ, ಕಾಲೇಜು ಮೇಷ್ಟರುಗಳು ಕೂಡ ಪ್ರಭಾವಿತರಾಗಿದ್ದೆವು.
ಇವರೆಲ್ಲ ಇಷ್ಟೊಂದು ಜನರ ಜೊತೆ ಬೆರೆಯುತ್ತಿದ್ದರಿಂದ ಭ್ರಷ್ಟರಾಗಿರುವುದು, ಆಸ್ತಿ ಮಾಡಿಕೊಳ್ಳುವುದು ಕೂಡ ಕಷ್ಟವಿತ್ತು. ಅದೂ ಅಲ್ಲದೆ, ಸಾರ್ವಜನಿಕರು ಕೂಡ ಇವರನ್ನು ಜನಪ್ರತಿನಿಧಿಗಳೆಂದು ಒಪ್ಪಿ ಗೌರವ ತೋರಿಸುತ್ತಿದ್ದುದು ನಿಜವಾದರೂ, ಇವನು ಜನಪ್ರತಿನಿಧಿ ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮವನು, ನಮಗೆ ಆಗಿ ಬರುವವನು ಎಂಬ ನಂಬಿಕೆ ಪ್ರಧಾನವಾಗಿತ್ತು. ಹಾಗಾಗಿ ಇವರ ಹಣದ ವಹಿವಾಟು, ಆಸ್ತಿ ವ್ಯವಹಾರದಲ್ಲಿ ಸಣ್ಣ-ಪುಟ್ಟ ಬದಲಾವಣೆಗಳಾದರೂ ಊರವರಿಗೆಲ್ಲ ಗೊತ್ತಾಗಿಬಿಡುತ್ತಿತ್ತು. ಜನರ ಬಾಯಿಗೆ ಬೀಳಲು ಶಾಸಕರು ಕೂಡ ಹೆದರುತ್ತಿದ್ದರು. ಜಿಲ್ಲಾ ಕೇಂದ್ರದಲ್ಲೋ, ಬೆಂಗಳೂರಿನಲ್ಲೋ ಮನೆ ಮಾಡಿಕೊಂಡು ವಾಸಿಸುತ್ತಾ, ಚುನಾವಣೆ ಸಮಯದಲ್ಲಿ ಮಾತ್ರ ಭೇಟಿ ನೀಡುವ ಕ್ರಮ ಇನ್ನೂ ಜಾರಿಗೆ ಬಂದಿರಲಿಲ್ಲ.
ಇಂತಹ ಶೀಲ-ಸ್ವಭಾವಗಳ ಜನಪ್ರತಿನಿಧಿಯನ್ನು ವ್ಯಕ್ತಿತ್ವ ನಿರ್ಮಾಣವಾಗುವ ನಿರ್ಣಾಯಕ ವರ್ಷಗಳಲ್ಲಿ ನೋಡಿದ್ದರಿಂದ ಮುಂದೆ ಕೂಡ ನನಗೆ ಇವರನ್ನು ವಿಶೇಷ ವ್ಯಕ್ತಿಗಳೆಂದು ಪರಿಗಣಿಸುವ ಮನೋಭಾವವೇ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಂದ ನಾನು ಮುಂದೆ ಮೈಸೂರಿನಲ್ಲಿ ಓದುವಾಗ ನಮ್ಮ ವಿಭಾಗದ ಸಮಾರಂಭಕ್ಕೆ ಹಿಂದೆ ಅರ್ಥ ಸಚಿವರಾಗಿದ್ದು ನಂತರ ವಿರೋಧಪಕ್ಷದ ನಾಯಕರಾಗಿದ್ದವರನ್ನು ಹೋಟೆಲಿನಿಂದ ಕರೆದುಕೊಂಡು ಹೋಗುವಾಗ, ಕಾರಿನಲ್ಲಿ ಹಿಂದುಗಡೆ ಸೀಟಿನಲ್ಲಿ ಅವರ ಪಕ್ಕವೇ ಕುಳಿತುಕೊಳ್ಳಲು ಹೊರಟೆ. ಮುಖ ಸಿಂಡರಿಸಿಕೊಂಡ ಮಹಾನುಭಾವರು, ಹೋಗಿ ಮುಂದೆ ಡ್ರೈವರ್ ಪಕ್ಕದಲ್ಲಿ ಕುಳಿತುಕೊ ಎಂದು ಸೂಚಿಸಿದರು. ಹಾಗಿದ್ದರೂ ಮುಂದೆ ಅವರ ವರ್ತನೆ ಮತ್ತು ಮಾತುಕತೆ ಎಲ್ಲ ಸೌಜನ್ಯಪೂರ್ಣವಾಗಿಯೇ ಇತ್ತು. ನೀನು ಪ್ರಜೆ ಆಗಿರುವುದರಿಂದ ನನ್ನಿಂದ ದೂರವಿರು ಎಂದು ಹೇಳಿಸಿಕೊಂಡಂತಹ ಸಂದರ್ಭ ಬಹಳ ಅಪರೂಪ. ಒಂದು ಸಂದರ್ಭದಲ್ಲಿ ನಾಯಕರೊಬ್ಬರು ಹೋಟೆಲ್ ಮುಂದೆ ಸಿಕ್ಕಿ ನನಗೆ ಬೇಕಾಗಿದ್ದ ಶಿಫಾರಸ್ ಪತ್ರವೊಂದನ್ನು ಕಾರಿನ ಬಾನೆಟ್ ಮೇಲೆ ನೋಟ್‌ಪ್ಯಾಡ್ ಇಟ್ಟುಕೊಂಡು ಬರೆದುಕೊಟ್ಟರು.
ಮುಂದೆ ನಾನು ಕೇಂದ್ರ ಸರ್ಕಾರದಲ್ಲಿ ಅಧಿಕಾರಿಯಾದ ಮೇಲೂ ಭೇಟಿ ಮಾಡಿದ, ಒಡನಾಡಿದ ಬಹುಪಾಲು ಜನಪ್ರತಿನಿಧಿಗಳು, ನಾಯಕರು ಸೌಜನ್ಯದಿಂದಲೇ ವರ್ತಿಸುತ್ತಿದ್ದರು. ಇದಕ್ಕೆ ಬಹುಪಾಲು ನಾನು ಅಧಿಕಾರಿಯಾಗಿದ್ದುದು ಕಾರಣವಾಗಿರಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಒಡನಾಡುವಾಗ ಯಾರು ಯಾವ ರೀತೀಯಲ್ಲಿ ವರ್ತಿಸಬೇಕೆಂಬುದಕ್ಕೆ ಮಾದರಿಗಳಿರುತ್ತವೆ, ಸೂತ್ರಗಳಿರುತ್ತವೆ. ಅದರ ಪ್ರಕಾರವೇ ಎಲ್ಲವೂ ನಡೆದುಕೊಂಡು ಹೋಗುತ್ತದೆ. ಇದು ನಿಜವಾದರೂ, ನಾನು ಇದುವರೆಗೆ ಬರೆದಿರುವುದೆಲ್ಲ ಗಾಂಧಿಯುಗದ, ಸ್ವಾತಂತ್ರ್ಯ ಚಳುವಳಿಯ ಪ್ರಭಾವ ಇನ್ನೂ ತೀವ್ರವಾಗಿದ್ದ ೧೯೬೦ರ ದಶಕದ, ೭೦ರ ದಶಕದ ಮೊದಮೊದಲ ವರ್ಷಗಳ ಕನಸಿನ ಯುಗದ ಶಾಸಕರ, ಜನಪ್ರತಿನಿಧಿಗಳ ಸ್ವಭಾವ ಚಿತ್ರವೆಂದು ತಪ್ಪು ತಿಳಿಯಬಾರದು. ಬೆಂಗಳೂರಿನಲ್ಲಿ ಕೂಡ ನಮ್ಮ ಬಡಾವಣೆಯಲ್ಲಿದ್ದ ಒಬ್ಬ ಶಾಸಕರು ಬೆಳಿಗ್ಗೆ ಎದ್ದು ಸೀಲ್, ಸ್ಟ್ಯಾಂಪ್ ಪ್ಯಾಡ್, ಲೆಟರ್ ಹೆಡ್ ಇಟ್ಟುಕೊಂಡು ಕುಳಿತುಕೊಂಡು ಗಂಟೆಗಟ್ಟಲೆ ಶಿಫಾರಸ್ ಪತ್ರಗಳನ್ನು ಬರೆದುಕೊಡುತ್ತಿದ್ದರು. ನಾನು ಒಮ್ಮೆ ಯಾವುದೋ ಒಂದು ದಾಖಲೆಯನ್ನು ದೃಢೀಕರಿಸಿಕೊಳ್ಳಲು ಇವರ ಸಹಿ ಪಡೆಯಲು ಹೋದಾಗ, ರಿಕ್ಷಾ ಚಾಲಕನೊಬ್ಬನಿಗೆ ನನ್ನ ಕೆಲಸ ಮಾಡಿಕೊಡುವುದಕ್ಕಿಂತ ಮುಂಚೆ ಒಂದು ಶಿಫಾರಸ್ ಪತ್ರ ಬರೆದುಕೊಟ್ಟರು. ಅದನ್ನು ಓದಿದ ರಿಕ್ಷಾ ಚಾಲಕ ಹೀಗೆ ಬರೆದುಕೊಟ್ಟರೆ ಕೆಲಸ ಆಗುವುದಿಲ್ಲ, ಇನ್ನೂ Strong ಆಗಿ ಬರೆದುಕೊಡಿ ಎಂದು ರೇಗಿ ಜುಲುಮೆ ಮಾಡಿ ಮತ್ತೊಂದು ಶಿಫಾರಸ್ ಪತ್ರ ಬರೆಸಿಕೊಂಡ. ಇದೇ ಬಡಾವಣೆಯಲ್ಲಿದ್ದ ಸಂಸದರೊಬ್ಬರು ಯಾವಾಗಲೂ ಗಾಂಧಿ ಬಜಾರ್, ಶಂಕರಪುರಂ, ಚಾಮರಾಜಪೇಟೆ ಬೀದಿ ಬೀದಿಗಳಲ್ಲಿ ತಮ್ಮ ಸಹಚರರೊಡನೆ ಪಟಪಟ ನಡೆದುಕೊಂಡೇ ಓಡಾಡೋರು.
ತುರ್ತು ಪರಿಸ್ಥಿತಿ ಸಮಯದಲ್ಲಿ ಶ್ರೀಮಂತ, ಸಜ್ಜನ ಶಾಸಕರೊಬ್ಬರು ಒಂದು ಸಂಘಟನೆಯ ಕೆಲಸಕ್ಕೆ ಅವರ ಬಂಗಲೆಯ ಹಿಂದಿನ ಔಟ್ ಹೌಸನ್ನು ಬಿಟ್ಟುಕೊಟ್ಟರು. ನಾವೆಲ್ಲ ಅಲ್ಲಿಗೆ ಹೋದಾಗ, ಮಾನ್ಯರು ತಮ್ಮ ದಿವಾನ್‌ಖಾನೆಯಿಂದ ಬಂದು ನಮ್ಮೊಡನೆಯೇ ಬೆರೆಯುತ್ತಿದ್ದರು. ಮುಂದೆ ಅವರು ಸಚಿವರು, ಪಕ್ಷದ ಅಧ್ಯಕ್ಷರೂ ಆದರು. ಕೆಲವು ವರ್ಷಗಳ ನಂತರ ಇಪ್ಪತ್ತು ಮೂವತ್ತು ಜನರು ಭಾಗವಹಿಸಿದ್ದ ಒಂದು ಸಾಹಿತ್ಯ ಪರಿಷತ್ತಿನ ಆಪ್ತ ಸಮಾರಂಭದಲ್ಲಿ ಸಿಕ್ಕಿದ್ದೆವು. ನಮಸ್ಕಾರ ಹೇಳಿ, ಹಿಂದಿನ ಗುರುತನ್ನು ನಾನು ಹೇಳುವ ಮುನ್ನವೇ ಅವರೇ ಎಲ್ಲ ವಿವರಗಳನ್ನು ನೆನೆಸಿಕೊಂಡರು.
ನಾಗಪುರದಲ್ಲಿ ಎರಡು ಮೂರು ವರ್ಷ ಕೆಲಸ ಮಾಡುತ್ತಿದ್ದಾಗ ನಾನು ದೆಹಲಿಗೆ ಹೋಗುವ ರೈಲಿನಲ್ಲೇ ಆಡ್ವಾಣಿಯವರು ಕೂಡ ಅನೇಕ ಸಲ ಪ್ರಯಾಣ ಮಾಡುತ್ತಿದ್ದರು. ಸಹ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಓದುತ್ತಿದ್ದ ಅವರಿಗೆ ರಾತ್ರಿ ದೀಪವನ್ನು ಹೆಚ್ಚು ಹೊತ್ತು ಉರಿಸುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗಬಹುದಲ್ಲವೇ ಎಂದು ಯಾವಾಗಲೂ ಪರಿತಪಿಸುತ್ತಿದ್ದರು. ಪ್ರಯಾಣದುದ್ದಕ್ಕೂ ಸಿಗುವ ಸ್ಟೇಷನ್‌ಗಳಲ್ಲಿ ಅವರನ್ನು ಭೇಟಿ ಮಾಡಲು ನೂರಾರು ಕಾರ್ಯಕರ್ತರು ಬಂದುಬಿಡುತ್ತಿದ್ದರು. ಅವರ‍್ಯಾರೂ ರೈಲಿನೊಳಗೆ ಬರದಂತೆ, ದಾಂದಲೆ ಮಾಡದಂತೆ ಇವರೇ ಎಚ್ಚರಿಸುತ್ತಿದ್ದರು. ಮತ್ತೆ ರೈಲು ಹೊರಟ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎಲ್ಲರೊಡನೆ ಮಿತವಾಗಿ ಬೆರೆಯುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದರು.
ಸಮಕಾಲೀನ ಜನಪ್ರತಿನಿಧಿಗಳನ್ನು ಕುರಿತು ಕೂಡ ನನಗೆ ಇದೇ ರೀತಿಯ ಸ್ವಭಾವ ಚಿತ್ರ ಬರೆಯಲು ಆಸೆಯಾಗುತ್ತದೆ. ಹಾಗೆ ನಾನೆ ಬರೆಯಲಾರೆ ಎಂಬುದು ಕೂಡ ಗೊತ್ತಿದೆ. ಆದರೆ ಹಾಗೆ ಬರೆಯಲು ಸಾಧ್ಯವಾಗದೆ ಇರುವುದಕ್ಕೆ ಜನಪ್ರತಿನಿಧಿಗಳು ಮಾತ್ರ ಕಾರಣವಲ್ಲ, ನಾವು, ನೀವು ಮತ್ತು ಸಮಾಜ ಹಾಗೂ ಕಾಲಧರ್ಮ ಕೂಡ ಕಾರಣವಾಗಿರಬಹುದು ಎಂದು ಹೊಳೆದಾಗ ಇದು ಸ್ವಭಾವ ಚಿತ್ರದ ಬರವಣಿಗೆಗೆ ಸಂಬಂಧಪಟ್ಟ ಸಂಗತಿ ಮಾತ್ರವಲ್ಲ ಎಂಬುದು ಹೊಳೆದಾಗ, ಮನಸ್ಸಿಗೆ ಖೇದವಾಗುತ್ತದೆ.
ಒಂದು ವರ್ಷದ ಹಿಂದೆ ಇದೇ ದಿನ. ಆಗಷ್ಟೇ ಲಾಕ್ ಡೌನ್ ತೆರವಾಗಿ ಚಟುವಟಿಕೆಗಳು ಶುರುವಾಗುತ್ತಿದ್ದ ಸಮಯ. ವರ್ಕ್ ಫ್ರಮ್ ಹೋಮ್ ಗಳು, ಆನ್ ಲೈನ್ ತರಗತಿಗಳು , ಪರೀಕ್ಷೆ ನಡೆಯುವುದೋ ಇಲ್ಲವೋ ಗೊಂದಲ ಎಲ್ಲವೂ ಈಗ ಹೇಗಿದಿಯೋ ಆಗಲೂ ಹಾಗೆಯೇ ಇತ್ತು. ಆದರೆ ಸ್ವಲ್ಪ ದಿನದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗುವ ಆಶಾ ಭಾವನೆಯಂತೂ ಇತ್ತು.
ಇಂಥ ಸಂದರ್ಭದಲ್ಲೇ ವರ್ಷದ ಹಿಂದೆ -ಮೇ 29,2020- ನಾನು ಕನ್ನಡಪ್ರೆಸ್.ಕಾಮ್ ಅನ್ನು ಶುರುಮಾಡಿದ್ದು. ಹಿರಿಯ ನಿರ್ದೇಶಕ ಯೋಗರಾಜ ಭಟ್ಟರು ಲೋಕಾರ್ಪಣೆಗೊಳಿಸಿದ್ದರು. ಆ ದಿನ ಬರೆದ ಸಂಪಾದಕೀಯದಲ್ಲಿ ಬರೆದಿದ್ದ ಕೆಲ ಸಾಲು ಹೀಗಿತ್ತು….ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ.
ಆದರೆ ವರ್ಷ ಕಳೆದರೂ ಕೋವಿಡ್ ಕಾರ್ಮೋಡ ಚದುರಿಲ್ಲ. ಇನ್ನೇನು ಮೋಡ ಸರಿಯುತ್ತಿದೆ ಎಂಬ ಸಂದರ್ಭದಲ್ಲಿ ಎರಡನೇ ಅಲೆ ಅಬ್ಬರಿಸಿತು. ಹೆಚ್ಚಿನ ಅವಾಂತರಗಳನ್ನೇ ಮಾಡಿ ಸಧ್ಯ ತಣ್ಣಗಾಗುವ ಲಕ್ಷಣಗಳನ್ನು ತೋರುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ನಾವು ಎರಡನೇ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಈ ಬಾರಿ ನೂರಕ್ಕೂ ನೂರಷ್ಟು ಕೋವಿಡ್ ದೂರವಾಗುತ್ತದೆ ಮತ್ತೆ ಅದು ಮತ್ತೆಂದು ಮನುಕುಲವನ್ನು ಕಾಡುವುದಿಲ್ಲ ಎಂಬ ವಿಶ್ವಾಸವಂತೂ ಇದೆ.
ಈ ಒಂದು ವರ್ಷದಲ್ಲಿ ನಾನು ಎಣಿಸಿದಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಕನ್ನಡಪ್ರೆಸ್.ಕಾಮ್ ಅನ್ನು ನೀವು ಪ್ರೀತಿಸಿದ್ದೀರಿ. ಒಪ್ಪಿಕೊಂಡಿದ್ದೀರಿ. ಮೆಚ್ಚಿದ್ದೀರಿ. ಕಾಮೆಂಟ್ ಮಾಡಿದ್ದೀರಿ. ಇದಕ್ಕಾಗಿ ಮೊದಲಿಗೆ ನಿಮ್ಮೆಲ್ಲರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು.
ಈ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಪಾಡ್ಕಾಸ್ಟ್ ಅನ್ ಕನ್ನಡ ಪತ್ರಿಕೋದ್ಯಮಕ್ಕೆ ಪರಿಚಯಿಸಿದ ಹೆಮ್ಮೆಯೂ ನಮಗಿದೆ. ಆಡಿಯೋ ವಿಡಿಯೋ ಮತ್ತು ಟೆಕ್ಸ್ಟ್ ಈ ಮೂರು ಸಾಧ್ಯತೆಗಳನ್ನು ಬಳಸಿಕೊಂಡಿದ್ದೇವೆ. ಭಾರತ ಮಾತ್ರವಲ್ಲ ದೂರದ ಇಂಗ್ಲೆಂಡ್, ಅಮೆರಿಕಾ , ಕೆನಡಾ , ಆಸ್ಛ್ರೇಲಿಯಾ ಮತ್ತು ಕೊಲ್ಲಿ ರಾಷ್ಷ್ರಗಳಲ್ಲೂ ನಮ್ಮ ಓದುಗ ಬಳಗ ವಿಸ್ತರಿಸಿದೆ.
ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಲೇಖಕ ಬಂಧುಗಳು ನಾನು ಕೇಳಿದಾಗ, ಕೆಲವು ವೇಳೆ ನಾನು ಕೇಳುವ ಮುನ್ನವೇ ತಮ್ಮ ವಿದ್ವತ್ ಪೂರ್ಣ ಲೇಖನಗಳನ್ನು ಬರೆದು ಕಳಿಸಿದ್ದಾರೆ. ವೈಯಕ್ತಿಕವಾಗಿ ನಾನು ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಲು ಹೊರಟರೆ ಪಟ್ಟಿ ದೊಡ್ಡದಾಗುತ್ತದೆ. ಅವರಿಗೆಲ್ಲಾ ನಾನು ಈ ಮೂಲಕ ಹೃದಯ ತುಂಬಿದ ಧನ್ಯವಾದ ಅರ್ಪಿಸುವೆ. ಕನ್ನಡಪ್ರೆಸ್ ನ ಈ ಯಾತ್ರೆಯಲ್ಲಿ ನಿಮ್ಮ ಕೊಡುಗೆ ದೊಡ್ಡದು ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ನಿಮ್ಮ ಲೇಖನಗಳಿಂದ ಕನ್ನಡಪ್ರೆಸ್.ಕಾಮ್ ಮತ್ತಷ್ಟು ಶ್ರೀಮಂತವಾಗಲಿ ಎಂದಷ್ಟೇ ಹೇಳಬಲ್ಲೆ.
ಮುಂದಿನ ದಿನಗಳಲ್ಲಿ ಈ ಜಾಲತಾಣವನ್ನು ಮತ್ತಷ್ಟು ವೈಶಿಷ್ಟಪೂರ್ಣವಾಗಿ ಮಾಡಬೇಕೆಂಬ ಹಂಬಲವಂತೂ ಇದೆ. ಅದಕ್ಕಾಗಿ ಈ ಜಾಲತಾಣಕ್ಕೆ ಸಾಂಸ್ಥಿಕ ಸ್ವರೂಪ ಕೊಡುವ ಕೆಲಸ ಆರಂಭಿಸಿದ್ದೇನೆ. ನಾಡಿನ ಕೆಲವು ಹೆಸರಾಂತ ಪತ್ರಕರ್ತರು ಕೈ ಜೋಡಿಸುವರಿದ್ದಾರೆ. ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವೆ.
ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ. ನಮ್ಮ ಯಾತ್ರೆಯೆ ಎರಡನೇ ವರ್ಷದ ಮೊದಲ ದಿನವಾದ ಇಂದು ಶುದ್ಧ ಪತ್ರಿಕೋದ್ಯಮಕ್ಕೆ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗೆ ಎಂದಿನಂತೆ ಸದಾ ಸ್ವಾಗತ.