ಸುಮಾರು 30-35 ವರ್ಷಗಳ ಹಿಂದಿನ ಮಾತು. ಮೈಸೂರಿನ ಪತ್ರಿಕೋದ್ಯಮ ಒಂದು ರೀತಿ ಸಾಂಪ್ರದಾಯಕ ಚೌಕಟ್ಟಿನಲ್ಲಿಸಿಕ್ಕಿಹಾಕಿಕೊಂಡಿದ್ದ ಕಾಲಘಟ್ಟವದು. ಅಂತಹ ಸಂದರ್ಭದಲ್ಲಿಒಂದು ಕಡೆ ಪತ್ರಿಕೆಗಳ ಕಾಂಟೆಂಟ್ ವಿಚಾರದಲ್ಲಿ ಬದಲಾವಣೆ ಗಾಳಿ ಬೀಸಿ ಚಲನಶೀಲತೆ ದೊರೆತಾಗ ಮತ್ತೊಂದು ಕಡೆ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಯೂ ಇಂಥದ್ದೇ ಕಾರ್ಯ ನಡೆದಿತ್ತು. ಇದರಲ್ಲಿಮುಂಚೂಣಿಯಲ್ಲಿದ್ದ ಪ್ರಮುಖರಲ್ಲಿ ನೇತ್ರಾ ರಾಜು ಕೂಡ ಒಬ್ಬರು.ಮೈಸೂರಿನಲ್ಲಿ ಮೇ 21 ರಂದು ಬದುಕೆಂಬ ರಂಗಸ್ಥಳದಿಂದ ನಿರ್ಗಮಿಸಿದ ರಾಜು ಮೈಸೂರಿನ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿಇಂತಹ ಚಲನಶೀಲತೆಗೆ ಗಟ್ಟಿಯಾಗಿ ನಿಂತವರು.
ಅದು 1990ರ ದಶಕದ ಆರಂಭದ ವರ್ಷಗಳು. ದೇಶದಲ್ಲಿಉದಾರೀಕರಣದ ಗಾಳಿ ಬೀಸುತ್ತಿತ್ತು. ದಲಿತ, ರೈತ, ಬಂಡಾಯ ಚಳವಳಿ ಕಾವು ಪಡೆದಿತ್ತು. ಮೈಸೂರಿನ ಪತ್ರಿಕೋದ್ಯಮವು ಪತ್ರಿಕೆಗಳ ವಸ್ತು ವಿಷಯದಲ್ಲಿಮಗ್ಗಲು ಬದಲಿಸಿತ್ತು. ಹೊಸ ತಲೆಮಾರಿನ ಪತ್ರಕರ್ತರು ಪತ್ರಿಕಾ ಕ್ಷೇತ್ರ ಪ್ರವೇಶಿಸಿದ್ದರು. ಸಹಜವಾಗಿ ಹೊಸತನಕ್ಕೆ ತುಡಿದರು. ಇದು ಪತ್ರಿಕೆಗಳ ಕಾಂಟೆಂಟ್‌ನಲ್ಲಿಅಭಿವ್ಯಕ್ತವಾಗಿತ್ತು. ಆಗ ಛಾಯಾಚಿತ್ರ ಪತ್ರಿಕೋದ್ಯಮವೂ ತನ್ನ ಸಾಂಪ್ರದಾಯಕ ಚೌಕಟ್ಟಿನಲ್ಲೇ ಹೆಚ್ಚಾಗಿ ಗಿರಕಿ ಹೊಡೆಯುತ್ತಿತ್ತು. ಇಂತಹ ವೇಳೆ ಇದನ್ನು ಭೇದಿಸಿ ತಮ್ಮ ವಿಭಿನ್ನ ಶೈಲಿಯ ಫೋಟೋ ಜರ್ನಲಿಸಂನಲ್ಲಿ ಹೆಜ್ಜೆ ಗುರುತನ್ನು ದಾಖಲಿಸಿದವರು ನೇತ್ರಾರಾಜು.
ಮೊದಲು ಇದಕ್ಕೆ ಚಾಲನೆ ಕೊಟ್ಟು ಕೆಲವು ವರ್ಷಗಳ ಕಾಲ ಆ ನಿಟ್ಟಿನಲ್ಲಿಸಾಗಿ ನಂತರ ಬೆಂಗಳೂರಿನಲ್ಲಿತಮ್ಮ ವೃತ್ತಿ ಜೀವನ ಮುಂದುವರಿಸಿದವರು ಹೆಸರಾಂತ ಪತ್ರಿಕಾ ಛಾಯಾಗ್ರಾಹಕ , ಸಾಗ್ಗೆರೆ ರಾಮಸ್ವಾಮಿ. ಮೈಸೂರಿನಲ್ಲಿಇದಕ್ಕೂ ಮುನ್ನ ಇಂತಹ ಪ್ರಯತ್ನಗಳು ನಡೆದಿರಲಿಲ್ಲಎಂದೇನೂ ಈ ಮಾತಿನ ಅರ್ಥವಲ್ಲ. ಆದರೆ, ಪತ್ರಿಕೆಗಳಲ್ಲಿಫೋಕಸ್ ಆಗಿ ಆ ಪ್ರಯತ್ನಗಳು ನಡೆಯಲು ಆರಂಭವಾಗಿದ್ದು 1990ರ ದಶಕದ ನಂತರ. ಎರಡು ಸಾವಿರದ ಇಸವಿ ನಂತರ ಅದು ಮತ್ತಷ್ಟು ಚಲನಶೀಲತೆ, ವಿಭಿನ್ನತೆ ಪಡೆದಿದ್ದು ಈಗ ಇತಿಹಾಸ.
ಹೆಸರಾಂತ ಪತ್ರಿಕಾ ಛಾಯಾಗ್ರಾಹಕರಾದ ಮೈಸೂರಿನ ಎಸ್.ಎಂ.ಜಂಬುಕೇಶ್ವರ್, ಪ್ರಗತಿ ಗೋಪಾಲಕೃಷ್ಣ, ನಾಗೇಶ್ ಪಾಣತ್ತಲೆ, ಅನುರಾಗ್ ಬಸವರಾಜ್, ಶ್ರೀರಾಮ್, ಮಧುಸೂದನ್ ಹೀಗೆ ಮೈಸೂರಿನ ಅನೇಕ ಪತ್ರಿಕಾ ಛಾಯಾಗ್ರಾಹಕರು, ಈ ಹಿಂದೆ ಮೈಸೂರಿನಲ್ಲಿಕರ್ತವ್ಯ ನಿರ್ವಹಿಸಿದ ಪ್ರಜಾವಾಣಿಯ ವಿಶ್ವನಾಥ ಸುವರ್ಣ ಅವರು ಇದಕ್ಕೆ ತಮ್ಮದೇ ಆದ ಕಾಣಿಕೆ ನೀಡಿರುವುದು ಮೈಸೂರಿನ ಪತ್ರಿಕಾ ಇತಿಹಾಸದ ಪುಟಗಳಲ್ಲಿದಾಖಲಾಗಿದೆ.
ಆಗೆಲ್ಲಾ1990ರ ದಶಕದಲ್ಲಿಸಂಯುಕ್ತ ಕರ್ನಾಟಕ ಹಾಗೂ ನಂತರ ಕನ್ನಡಪ್ರಭದ ಮೈಸೂರು ಜಿಲ್ಲಾವರದಿಗಾರನಾಗಿದ್ದ ನಾನು ಸುದ್ದಿ ಹಾಗೂ ಲೇಖನಗಳ ಫೋಟೋಗಳಿಗೆ ಹೆಚ್ಚಾಗಿ ಇಬ್ಬರ ಮೇಲೆ ಅವಲಂಬನೆ ಆಗುತ್ತಿದ್ದೆ. ಮೊದಲನೆಯದು ಪ್ರಗತಿ ಗೋಪಾಲಕೃಷ್ಣ. ಮತ್ತೊಬ್ಬರು ನೇತ್ರಾರಾಜು. ಆಗಾಗ್ಗೆ ಅನುರಾಗ ಬಸವರಾಜ್ ಕೂಡ ಫೋಟೋ ಕೊಡುತ್ತಿದ್ದದು ಉಂಟು. ಆಗ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ಪತ್ರಿಕೆಗಳಿಗೆ ಅವರದೇ ಪ್ರತ್ಯೇಕ ಫೋಟೋ ಜರ್ನಲಿಸ್ಟ್‌ಗಳಿರಲಿಲ್ಲ.
ನೇತ್ರಾ ರಾಜು ತಮ್ಮ ಚಿಕಿತ್ಸಕ ದೃಷ್ಟಿಯಿಂದ ಸಮಾಜದ ಓರೆಕೋರೆಯನ್ನು ತಿದ್ದಲು ಪ್ರಯತ್ನಿಸಿದವರು. ತಮ್ಮ ಕಣ್ಣು ಮುಂದಿರುವ ವಸ್ತು ವಿಷಯವನ್ನು ವಿಭಿನ್ನ ಶೈಲಿಯಲ್ಲಿಮುಂದಿಡುವ ಕಲೆ ರಾಜು ಅವರಿಗೆ ಕರಗತವಾಗಿತ್ತು. ತಮ್ಮ ಫೋಟೋಗಳಿಗೆ ಯಾವತ್ತೂ ಬೈಲೈನ್ ಡಿಮಾಂಡ್ ಮಾಡಲಿಲ್ಲ. ಫೋಟೋ ಪಡೆದವರು ಕೊಟ್ಟಷ್ಟು ರೊಕ್ಕವನ್ನು ಕಿಸೆಗೆ ಹಾಕಿಕೊಳ್ಳುತ್ತಿದ್ದರು. ಫೋಟೋಗೆ ಕೊಟ್ಟ ಹಣ ಕಡಿಮೆಯಾಗಿದ್ದರೂ ಮರುಮಾತಾಡುತ್ತಿರಲಿಲ್ಲ. ತಮ್ಮ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾದರೆ ಮುಗುಳ್ನಕ್ಕು ಸುಮ್ಮನಾಗಿ ಬಿಡುತ್ತಿದ್ದರು. ಸನ್ಮಾನ, ಪ್ರಶಸ್ತಿಗಳೆಂದರೆ ಅವರು ಗಾವುದ ದೂರ.
ಹಾಗೇ ನೋಡಿದರೆ ರಾಜು ಪ್ರೆಸ್ ಫೋಟೋಗ್ರಾಫರ್‌ಗಳ ಗುಂಪಿನಲ್ಲಿಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ನಿಂತ ಜಾಗದಲ್ಲಿಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಚಹಾಗೆ ಕರೆದರೆ ಸರ್, ಅರ್ಜೆಂಟ್ ಕೆಲಸ ಇದೆ . ಇನ್ನೊಂದು ಸಲ ಟೀ ಕುಡಿಯೋಣ ಅಂತ ತಕ್ಷಣ ಜಾಗ ಖಾಲಿ ಮಾಡುತ್ತಿದ್ದರು. ಅಂತಹ ಅರ್ಜೆಂಟ್ ಕೆಲಸ ಏನೂ ಇರುತ್ತಿರಲಿಲ್ಲ. ತನ್ನ ಕ್ಯಾಮರಾ ಕಣ್ಣಲ್ಲಿಮತ್ತೊಂದು ದೃಶ್ಯವನ್ನು ಸೆರೆ ಹಿಡಿಯುವ ತುಡಿತ ಅದಾಗಿರುತ್ತಿತ್ತು ಅಷ್ಟೇ.
ಅದೊಂದು ರೀತಿ ನಿರಂತರ ತಳಮಳದ ಸ್ಥಿತಿ. ನಿರಂತರ ತಳಮಳ ಇಲ್ಲದವನು ಕ್ರಿಯೇಟಿವ್ ಆಗಿರಲಾರ ಎಂಬ ಮಾತಿದೆ. ಅಂತಹ ತಳಮಳದಲ್ಲೇ ರಾಜು ಅದ್ಬುತ ಛಾಯಾಚಿತ್ರಗಳನ್ನು ಸಮಾಜದ ಮುಂದಿಟ್ಟಿದ್ದರು. ರಾಜು ಅಂತರ್ಮುಖಿಯಾಗಿದ್ದರು. ಆದರೆ, ಅವರು ಸೆರೆ ಹಿಡಿದ ಫೋಟೋಗಳು ಹೃದಯದ ಮಾತಾಗಿರುತ್ತಿದ್ದವು. ಅವರ ಫೋಟೋಗಳು ದೃಶ್ಯ ಕಾವ್ಯವಾಗಿರುತ್ತಿದ್ದವು, ಬಂಡಾಯದ ಕಿಚ್ಚಿನ ಅಭಿವ್ಯಕ್ತವಾಗಿರುತ್ತಿದ್ದವು, ಸಮಸಮಾಜದ ನಿರ್ಮಾಣದ ಆಶಯಗಳನ್ನು ಹೊತ್ತಿರುತ್ತಿದ್ದವು.
ರಾಜು ಶ್ರಮಜೀವಿಯಾಗಿದ್ದರು.ನರಹಂತಕ ವೀರಪ್ಪನ್ ಸೆರೆ ಹಿಡಿಯುವ ಕಾರ್ಯಾಚರಣೆ ಕವರೇಜ್ ಎಂದರೆ ರಾಜು ಅವರಿಗೆ ಎಲ್ಲಿಲ್ಲದ ಹಿಗ್ಗು. ಕಾಡುಮೇಡು ಅಲೆಯಬಹುದು ಎಂಬ ಖುಷಿಯೋ ಖುಷಿ. ರಾಜು ತುಂಬಾ ಸಂಕೋಚದ ಸ್ವಭಾವದವರಾಗಿದ್ದರು. ಅಂದು ರಾತ್ರಿ ಒಬ್ಬರೇ ತೋಟದ ಮನೆಯಲ್ಲಿದ್ದಾಗ ಹೃದಯಾಘಾತವಾಗಿದ್ದರೂ ಮಧ್ಯರಾತ್ರಿಯಲ್ಲಿಏಕೆ ಮತ್ತೊಬ್ಬರಿಗೆ ತೊಂದರೆ ಕೊಡ್ಬೇಕು, ಬೆಳಗ್ಗೆ ಹೇಳಿದರಾಯಿತು ಎಂದು ಸುಮ್ಮನಾಗಿದ್ದಾರೆ. ಅಷ್ಟರಮಟ್ಟಿಗೆ ಅವರದು ಭಿಡೆ ಸ್ವಭಾವ ಅಂತೀರೋ ಅಥವಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವೋ ಗೊತ್ತಿಲ್ಲ.
ಹೃದಯಾಘಾತವಾಗಿ ಎಷ್ಟೋ ತಾಸುಗಳ ನಂತರ ಅವರು ಆಸ್ಪತ್ರೆಗೆ ಬಂದಿದ್ದರು. ವೈದ್ಯರು, ಬದುಕಿಸುವ ಪ್ರಯತ್ನ ನಡೆಸಿದರೂ ಕೈಗೂಡಲಿಲ್ಲ. ತಮ್ಮ ಕ್ಯಾಮರಾ ಕ್ಲಿಕ್ಕಿಸಲು ಮಿಂಚಿನಂತೆ ಓಡಾಡುತ್ತಿದ್ದ ರಾಜು, ಜವರಾಯನ ಕರೆಗೂ ಮಿಂಚಿನಂತೆ ಓಡಿದ್ದರು. ರಾಜು ನಿಧನರಾದಾಗ ಅವರಿಗೆ 62 ವರ್ಷವಾಗಿತ್ತು. ಸಾಯುವ ವಯಸ್ಸಲ್ಲ.
ನೇತ್ರಾ ಕಣ್ಮುಚ್ಚಿರಬಹುದು. ಆದರೆ, ಅವರ ಫೋಟೋಗಳು ಸದಾ ಮಾತಾಡುತ್ತಿರುತ್ತವೆ.
ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಮಾಸದ ಹುಣ್ಣಿಮೆ. ಈಗಿನ ನೇಪಾಳದಲ್ಲಿರುವ ಲುಂಬಿನಿ ಗ್ರಾಮದಲ್ಲಿ ಶುದ್ಧೋಧನ, ಮಾಯಾದೇವಿಯರ ಮಗನಾಗಿ ಜನಿಸಿದನು. ಈತ ಜನುಮತಹ ಕ್ಷತ್ರಿಯ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ ಗೌತಮಿಯ ಆರೈಕೆಯಲ್ಲಿ ಬೆಳೆಯುತ್ತಾನೆ. ಆದುದರಿಂದ ಸಿದ್ದಾರ್ಥ ಗೌತಮ ಎಂದು ಕರೆಯಲ್ಪಡುತ್ತಾನೆ.
ತಂದೆಗೆ ಮಗ ಚಕ್ರವರ್ತಿ ಆಗಬೇಕು ಎಂಬ ಮಹದಾಸೆ. ಹಾಗಾಗಿ ಮಗ ರಾಜಭೋಗವಿಲಾಸ ಗಳಲ್ಲಿ ಸದಾ ಓಲಾಡುತ್ತಿರುವಂತೆ ವ್ಯವಸ್ಥೆ ಮಾಡಿದರು.ಸಿದ್ಧಾರ್ಥನ ವಿದ್ಯಾಭ್ಯಾಸದ ನಂತರ, ಪ್ರಾಪ್ತ ವಯಸ್ಕರಾದಾಗ ಸುಂದರಿ ರಾಜಕುಮಾರಿ ಯಶೋಧರೆಯೊಂದಿಗೆ ವಿವಾಹವಾಗುತ್ತದೆ. ರಾಹುಲನೆಂಬ ಮುದ್ದು ಮಗನೂ ಜನಿಸುತ್ತಾನೆ.
ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದರೂ ಮನುಕುಲವನ್ನು ಸತತವಾಗಿ ಬಾಧಿಸುತ್ತಿರುವ ವೇದನೆ ಸಿದ್ದಾರ್ಥನ ಮನವನ್ನು ಆವರಿಸಿ ಅದರ ನಿವಾರಣೆಯ ಮಾರ್ಗ ಶೋಧಿಸಲು ಮನಸ್ಸು ಕಾತರಿಸುತ್ತಿತ್ತು. ಸಂಸಾರ ಬಂಧನದಲ್ಲಿದ್ದರೆ ಕಾರ್ಯಸಾಧನೆ ಅಸಾಧ್ಯ ಎಂದು ಮನಗೊಂಡು ಆ ಸಂಕೋ ಲೆಯನ್ನು ಕಡಿದೊಗೆಯಲು ನಿರ್ಧರಿಸಿದ .
ಜ್ಞಾನೋದಯದ ಮೊದಲ ಹಂತ ಅಜ್ಞಾನದ ನಿವಾರಣೆ. ಜ್ಞಾನಾರ್ಜನೆಯ ಉದ್ದೇಶದಿಂದ ಸಿದ್ದಾರ್ಥ ಊರೂರು ಅಲೆದಾಡಿ ಪಂಡಿತರೊಂದಿಗೆ ಒಡನಾಡಿ,ಅಧ್ಯಯನ,ತರ್ಕ-ವಿಮರ್ಶೆ,ವಿಚಾರ ವಿನಿಮಯಗಳ ಮೂಲಕ ಅಗಾಧ ಜ್ಞಾನ ಸಂಪಾದಿಸಿದ.
ಯಾವಾಗ ಜನನ,ಮರಣ, ರೋಗ ರುಜಿನ,ವೃದ್ಧಾಪ್ಯ ಇತ್ಯಾದಿ ಕೊನೆಯೆ ಇಲ್ಲದ ಪೀಡೆಗಳಿಗೆ ಒಳಪಟ್ಟಿರುವುದರ ಹಿಂದೆ ಪರದಾಡುವುದು ವ್ಯರ್ಥ ಎಂದು ಮನವರಿಕೆ ಆದಮೇಲೆ ಅವುಗಳಿಂದ ಮುಕ್ತಿ ಹೊಂದುವ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದ. ಶಾಂತಿ ಶೋಧನೆಗಾಗಿ ಪರಮಾನಂದ ಪಡೆಯಲು ಲೋಕ ಸಂಚಾರಿ ಸನ್ಯಾಸಿಯಾಗಿ ಅಲೆದಾಡಿದ . ಸಿದ್ದಾರ್ಥ ಬಾಹ್ಯಪ್ರಪಂಚವನ್ನು ಪೂರ್ಣ ಮರೆತು ಅಂತರ್ಮುಖಿಯಾಗಿ,ಸುದೀರ್ಘ ಚಿಂತನೆಯಲ್ಲಿ ತಲ್ಲೀನನಾದ. ಸರ್ವರೀತಿಯ ಬಯಕೆ,ಕಾಮನೆ, ಆಶೋತ್ತರಗಳನ್ನು ಮನಸ್ಸಿನ ಅಂತರಾಳದಿಂದ ದೂರಮಾಡಿ ದೃಢಚಿತ್ತನಾದ. ಎಲ್ಲ ರೀತಿಯ ಭಯ, ಭ್ರಾಂತಿ, ಮಾಯೆ, ಗಳಿoದ ಮನಸ್ಸನ್ನು ಮುಕ್ತಗೊಳಿಸಿದ. ಕೇವಲ ಮೈತ್ರಿ ,ಸೌಹಾರ್ದತೆ, ಸಕಲ ಜೀವ ರಾಶಿಗಳಲ್ಲು ಕರುಣೆ,ದಯೆ, ಅನುಕಂಪ,ಉದಾತ್ತ ಧ್ಯೇಯಗಳು ಆವರಿಸಿ ಬುದ್ಧಿ ಸುಜ್ಞಾನದ ಬೆಳಕಿನಲ್ಲಿ ಶೋಭಾಯಮಾನ ವಾಯಿತು. ಅಲೌಕಿಕ ಶಾಂತಿ, ಸಚಿತ್ ಆನಂದದ ಅನುಭವವಾಗಿ ಜ್ಞಾನದ ದಿವ್ಯಜ್ಯೊತಿಯಿಂದ ಮುಖಮಂಡಲ ತೇಜೋಮಯವಾಯಿತು. ರಾಜಕುಮಾರ ಸಿದ್ದಾರ್ಥ ಬುದ್ಧನಾಗಿ ಪರಿವರ್ತನೆಗೊಂಡನು.
ತನ್ನ ಸ್ವ ಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿಗೆ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಅಷ್ಟಾಂಗ ಮಾರ್ಗವನ್ನು ತೋರಿಸಿಕೊಟ್ಟರು.ಜಗಜ್ಯೋತಿ ಬುದ್ಧನಾದ. ಜನರಲ್ಲಿ ಸಮಾನತೆ,ಸಮತಾಭಾವನೆಗಳನ್ನು ಪ್ರಚೋದಿಸಿ, ಎಲ್ಲಾ ವರ್ಗದ ಜನರನ್ನು ತನ್ನೆಡೆ ಆಕರ್ಷಿಸಿ ಅವರಿಗೆ ನೀತಿ,ಬೋಧಙನೆಗಳನ್ನಿತ್ತು ಮನು ಕುಲವನ್ನು ಉದ್ಧರಿಸಿದ ಮಹಾಪುರುಷ ಬುದ್ಧ.
ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧನ ಜನ್ಮ ದಿನವನ್ನು ಬುದ್ಧ ಪೂರ್ಣಿಮ, ಅಥವಾ ಬುದ್ಧಜಯಂತಿ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಈ ದಿನ ಬುದ್ಧನ ಜೀವನ ಮತ್ತು ಬೋಧನೆಗಳನ್ನು ಕುರಿತು ಎಲ್ಲೆಡೆ ಪ್ರವಚನ ನಡೆಯುತ್ತದೆ.ರಾಜಕುಮಾರ ಸಿದ್ದಾರ್ಥ ಜನಿಸಿದ್ದು ವೈಶಾಖ ಪೂರ್ಣಿಮ. ಜ್ಞಾನೋದಯ ಪಡೆದಿದ್ದೂ, ಆತನ ಕೊನೆಯ ನಿರ್ವಾಣವೂ ವೈಶಾಖ ಶುದ್ಧ ಪೂರ್ಣಿಮವೇ ಆಗಿದೆ.
ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು. ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ ಎಂ.ಎ ಎಂ.ಫಿಲ್ ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.
ಇವರಿಗೆ ಚಿಕ್ಕಂದಿನಿಂದಲೇ ಕಲೆಯ ಸೆಳೆತ. ನನ್ನ ಬಾಲ್ಯದಲ್ಲಿ ಕಂಡಿದ್ದನ್ನು ಅನುಭವಿಸಿದ್ದನ್ನು ಮನಸ್ಸಿನ ಪುಟದಲ್ಲಿ ಗುಪ್ತವಾಗಿ ಇಟ್ಟುಕೊಂಡಿದ್ದರು. ಇದರ ಅಭಿವೃದ್ಧಿಗೆ ಸಾಕಾರವಾಯಿತು ಕಲೆ. ಕಲೆಯೆಂಬ ಬಲೆಯಲ್ಲಿ ಸಿಲುಕಿದ ಇವರು ವಿಭಿನ್ನ ರೀತಿಯಲ್ಲಿ ವಿಶಿಷ್ಟವಾದ ಕಲಾ ಯಾತ್ರೆಯನ್ನು ಆರಂಭಿಸಿದರು. ಹೀಗೆ ಹಲವಾರು ರೀತಿಯ ಕಲಾಕೃತಿಗಳನ್ನು ರಚಿಸಿ ಮೆಚ್ಚುಗೆ ಪಡೆದವರು ರಕ್ಷಾ ಆರ್ ಪೂಜಾರಿ.
ಉಡುಪಿ ಜಿಲ್ಲೆಯ ಕಾಪು ಇವರ ಜನ್ಮಸ್ಥಳ. ಬಾಲ್ಯದಲ್ಲಿಯೆ ಹಲವಾರು ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರಿಗೆ ವಿಶಿಷ್ಟವಾದ ಕಲಾಕೃತಿಗಳನ್ನು ರಚಿಸಬೇಕು ಎಂಬ ಆಶಯ ಮೂಡಿತು. ಇವರು ಕೆಲವೊಂದು ದಿನ ಆಸ್ಪತ್ರೆಯಲ್ಲಿ ಸ್ವಾಗತಕಾರರ ಆಗಿ ಕಾರ್ಯ ಮಾಡುತ್ತಿದ್ದಾಗ ಅಲ್ಲಿ ಬಿಡುವಾದಾಗ ಸಮಯ ವ್ಯರ್ಥ ಮಾಡದೇ ಹಲವಾರು ರೀತಿಯ ವಿಶಿಷ್ಟವಾದ ಕಲಾಕೃತಿಗಳನ್ನು ಪೆನ್ಸಿಲ್ ಸ್ಕೆಚ್ ನಲ್ಲಿ ಆರಂಭಿಸಿದರು. ಇವರು ರಚಿಸಿದ ಹಲವಾರು ಕಲಾಕೃತಿಗಳು ಎಲ್ಲರಿಗೂ ಮೆಚ್ಚುಗೆಯಾದವು. ಅಭಿನಂದನೆಗಳ ಮಹಾಪೂರ ಹರಿದು ಬಂತು. ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿ ಮೂಡಿತು.
ಅಂದು ಆರಂಭವಾದ ಕಲಾ ಯಾತ್ರೆ ಮುಂದುವರೆಯಿತು. ಇದಕ್ಕೆ ಇವರ ತಂದೆ-ತಾಯಿಯ ಪ್ರೋತ್ಸಾಹ ಬಹಳ ಸಿಕ್ಕಿತು. ಇವರು ಮಧುಬನಿ ಶೈಲಿ, ಆಕ್ರಿಲಿಕ್. ಜಲವರ್ಣ ಮಾಧ್ಯಮ. ಪೋರ್ಟ್ರೇಟ್ ಹೀಗೆ ವಿಭಿನ್ನ ರೀತಿಯ ಕಲರ್ ಕೃತಿಗಳನ್ನು ರಚಿಸಿದ ಹಿರಿಮೆ ಇವರದು. ಇವರು ರಚಿಸಿದ ಮುಖ್ಯ ಕಲಾಕೃತಿಗಳು ಎಂದರೆ ಕೃಷ್ಣ ರಾಧೆ. ಯಕ್ಷಗಾನ, ಕೋಳಿಅಂಕ ಕಂಬಳ ಗಣಪತಿ ಮತ್ತು ಅಮೂರ್ತ ಶೈಲಿಯ ಕಲಾಕೃತಿಗಳು ಸೇರಿದಂತೆ ಒಟ್ಟು 800 ಕಲಾಕೃತಿಗಳನ್ನು ರಚಿಸಿದ್ದಾರೆ.
ಪ್ರಸ್ತುತ ಇವರು ಮೂಡಬಿದ್ರೆಯ ಆಳ್ವಾಸ್ ನಲ್ಲಿ ಬಿ ವಿ ಎ ಅಧ್ಯಯನ ಮಾಡುತ್ತಿದ್ದಾರೆ. ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಲರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರಿಗೆ ರಾಜ್ಯಮಟ್ಟದ ಕಲಾ ಸ್ಪರ್ಧೆ ಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ಮಣಿಪಾಲ್ ಶಿರ್ವ ಮಲ್ಪೆ ಹಲವಾರು ಕಡೆ ಏಕವ್ಯಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ರಕ್ಷಾ ಪೂಜಾರಿ ಹೇಳುವ ಹಾಗೆ ಕಲೆಯು ಎಂಥವರನ್ನಾದರೂ ಕೂಡ ಬದಲಾಯಿಸುತ್ತದೆ ಇಂತಹ ಅದ್ಭುತ ಶಕ್ತಿ ಕಲೆಯಲ್ಲಿದೆ.
ತನ್ನ ಬಿಡುವಿನ ಸಮಯದಲ್ಲಿ ಕಲಾಸಕ್ತರಿಗೆ ಕಲೆಯನ್ನು ಹೇಳು ಕೊಡುವುದರ ಮೂಲಕ ಸೇವೆಯನ್ನು ಸಲ್ಲಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳುತ್ತಾರೆ ಗುರುವಿಲ್ಲದೆ ಗರಿ ಮೂಡಿಸಿಕೊಂಡ ಕಲಾವಿದರಾದ ರಕ್ಷ ಶೆಟ್ಟಿ ಅವರನ್ನು ಅಭಿನಂದಿಸೋಣ.
ವಿ. ಎಸ್ . ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ ‘ದೀಕ್ಷಾ’-ಆಪ್ ನ್ನು (DIKSHA-app) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.
ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ‘ಪರೀಕ್ಷಾ ಅಭ್ಯಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಅಳವಡಿಸಿ ದೀಕ್ಷಾ ವೇದಿಕೆಯ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪಿಯುಸಿ ವಿದ್ಯಾರ್ಥಿಗಳಿಗೆ ಮುಂಬರಲಿರುವ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಈ ಆಪ್ ಸಹಕಾರಿಯಾಗಲಿದೆ ಎಂದರು.
ಅದೇ ರೀತಿಯಾಗಿ ಡಿ.ಎಸ್.ಇ.ಆರ್.ಟಿ.ಯು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿದ್ಧತೆ ಮಾಡುವುದಕ್ಕಾಗಿ “ಫೋಕಸ್” ಎಂಬ ಪುನರ್ಮನನ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಿದೆ. ಪ್ರತಿಯೊಂದು ವಿಷಯಕ್ಕೆ ಇ- ಪಠ್ಯಪುಸ್ತಕ, ಕನಿಷ್ಠ 2 ಮಾಡೆಲ್ ಪ್ರಶ್ನೆಪತ್ರಿಕೆಗಳು, ವಿವರಾಣಾತ್ಮಕ ವಿಡಿಯೋಗಳು, ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಅದರಲ್ಲಿ ದೊರೆಯಲಿವೆ ಎಂದು ಸಚಿವರು ಹೇಳಿದರು.
ವಿದ್ಯಾರ್ಥಿಗಳಿಗೆ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ (PCMB) ವಿಷಯಕ್ಕೆ ಸುಮಾರು 9000 ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯು) ಅಧ್ಯಾಯವಾರು ಒದಗಿಸಲಾಗಿದೆ. ದೇಶದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ನಮ್ಮ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದನ್ನು ಪ್ರಪ್ರಥಮವಾಗಿ ಜಾರಿಗೊಳಿಸುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಈ ಎಲ್ಲ ಪಠ್ಯಾಂಶಗಳನ್ನು ‘DIKSHA-app’ದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಚಿವರು ಕೋರಿದರು.
ಏನಿದು ದೀಕ್ಷಾ-ಆಪ್ ಪ್ರೋಗ್ರಾಂ: DIKSHA ಪೋರ್ಟಲ್ ಅನ್ನು https://diksha.gov.in/ ಇಲ್ಲಿ ನೋಡಬಹುದಾಗಿದೆ. ಆಂಡ್ರಾಯಿಡ್ ಫೋನ್ ಗಳಲ್ಲಿ DIKSHA ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಈ ಲಿಂಕ್ ಒತ್ತಿ ದೀಕ್ಷಾ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು: http://bit.ly/KA-diksha
DIKSHA ಆಪ್ ಅಥವಾ ಪೋರ್ಟಲ್ ನಲ್ಲಿ ನಿಮಗೆ ಬೇಕಿರುವ ಬೋರ್ಡ್, ಮಾಧ್ಯಮ, ಭಾಷೆ ಮತ್ತು ತರಗತಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬಗೆಯ ಪಠ್ಯಾಂಶಗಳನ್ನು ಪಡೆದುಕೊಳ್ಳಬಹುದು.
ದೀಕ್ಷಾ-ಆಪ್ ಉದ್ದೇಶ: ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ, ಅವರ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರೋಗ್ರಾಂ ರೂಪಿಸಲಾಗಿದೆ. ಕೋವಿಡ್ ಪಿಡುಗಿನ ಈ ಕಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆಯು ಚಂದನ ಟಿವಿಯ ಮೂಲಕ ಆನಲೈನ್ ಪಾಠಗಳನ್ನು ನಡೆಸುತ್ತಿದೆ. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ದೀಕ್ಷಾ ಪೋರ್ಟಲ್ನಲ್ಲಿ ಅಳವಡಿಸಲಾಗಿರುವ ಈ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಸಾಧ್ಯವಾದಾಗ ಮತ್ತು ಅಗತ್ಯವಿದ್ದಾಗ ನೋಡಿಕೊಳ್ಳಬಹುದು.
ಕಾರ್ಯಕ್ರಮದ ವ್ಯಾಪ್ತಿ: 1ರಿಂದ 12ನೇ ತರಗತಿಗಳಿಗೆ: ಎಲ್ಲ ಬಗೆಯ ಪಠ್ಯಾಂಶಗಳು ಅಂದರೆ ಇ-ಪಠ್ಯಪುಸ್ತಕಗಳು (ಇಟಿಬಿ), ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆ ಕೋಶ (ಕ್ವಶ್ಚನ್ ಬ್ಯಾಂಕ್) ಮತ್ತು ಶಿಕ್ಷಕರಿಗೆ ಪಾಠ ಯೋಜನೆ ಇನ್ನಿತರ ಸಂಪನ್ಮೂಲಗಳನ್ನು ದೀಕ್ಷಾ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ.
ಕ್ವಶ್ಚನ್ ಬ್ಯಾಂಕಿನಲ್ಲಿ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಕಿರುಉತ್ತರಗಳು (Very Short Answer), ಸಂಕ್ಷೀಪ್ತ ಉತ್ತರಗಳು (Short Answers), ದೀರ್ಘ ಉತ್ತರಗಳು (Long Answers); ಹೀಗೆ ನಾಲ್ಕು ರೀತಿಯ ಪ್ರಶ್ನೆಗಳು ಸೇರಿವೆ.
ಫೋಕಸ್ ಪ್ರೋಗ್ರಾಂ: 10ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿಯ ಪರೀಕ್ಷೆಗೆ ಸಿದ್ಧರಾಗುವುದಕ್ಕೆ ಸಹಾಯವಾಗಲೆಂದು ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಪ್ರತಿ ಅಧ್ಯಾಯಕ್ಕೆ ಸುಮಾರು 30 ಪ್ರಶ್ನೆಗಳನ್ನು ಸೇರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹಲವಾರು ಕ್ಲಿಷ್ಟಕರ ಪರಿಕಲ್ಪನೆಗಳನ್ನು ಪುನರ್ಮನನ ಮಾಡುತ್ತ, ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಸಾಧ್ಯಗೊಳಿಸುತ್ತದೆ.
ದ್ವಿತೀಯ ಪಿಯುಸಿಗೆ: ಪಿಸಿಎಂಬಿ ವಿಷಯಗಳಿಗೆ, ಪ್ರತಿ ಅಧ್ಯಾಯಕ್ಕೂ ಸಮಾರು 80-100 ಪ್ರಶ್ನೆಗಳನ್ನು ಅಪ್ಲೋಡ್ ಮಾಡಲಾಗಿದೆ. ಇದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ KCET, COMEDK, JEE, NEET, ಹೀಗೆ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡುವುದಕ್ಕೆ ಸಹಾಯವಾಗುತ್ತದೆ.
ಇದು ವಿದ್ಯಾರ್ಥಿಗಳಿಗೆ ಹೇಗೆ ಉಪಯುಕ್ತ? ಈ ಎಲ್ಲಾ ಪಠ್ಯಾಂಶಗಳು ದೀಕ್ಷಾ ಪೋರ್ಟಲ್ ಮತ್ತು ದೀಕ್ಷಾ ಆಪ್ ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮಗೆ ಅರ್ಥವಾಗದ ಪಾಠ ಅಥವಾ ಅಧ್ಯಾಯಗಳನ್ನು ರಿಪ್ಲೇ ಮಾಡಿ ನೋಡಲು ಸಾಧ್ಯವಿರುತ್ತವೆ. ಜೊತೆಗೆ ವಿಡಿಯೋ, ಪಿಡಿಎಫ್ ರೂಪದಲ್ಲಿರುವ ವಿವರಣಾತ್ಮಕ ಪಠ್ಯಾಂಶಗಳನ್ನು ಆಪ್ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡರೆ, ಇಂಟರ್ನೆಟ್ ಇಲ್ಲದಿದ್ದಾಗಲೂ ನೋಡಿಕೊಂಡು, ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಶಿಕ್ಷಣ ಇಲಾಖೆಯ ತಜ್ಞ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಅಗತ್ಯ, ಪರೀಕ್ಷೆಯ ಸ್ವರೂಪ ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಪಠ್ಯಾಂಶಗಳನ್ನು ಸಿದ್ಧಪಡಿಸಿರುವುದರಿಂದ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗಲು ಅತ್ಯಂತ ಉಪಯುಕ್ತವಾಗಿವೆ.
10ನೇ ತರಗತಿಯ ಸುಮಾರು 9 ಲಕ್ಷ ವಿದ್ಯಾರ್ಥಿಗಳು, 1ರಿಂದ – 10ನೇ ತರಗತಿ: ಸುಮಾರು 85 ಲಕ್ಷ ವಿದ್ಯಾರ್ಥಿಗಳು, ಪಿಯುಸಿ (ಪ್ರಥಮ & ದ್ವಿತೀಯ): ಸುಮಾರು 13 ಲಕ್ಷ ವಿದ್ಯಾರ್ಥಿಗಳು ದೀಕ್ಷಾ-ಆಪ್ ನ ಪ್ರಯೋಜನ ಪಡೆಯಲಿದ್ದಾರೆ.
ಇಲಾಖೆಯು ಒದಗಿಸಿದ ಎಲ್ಲ ಪಠ್ಯಾಂಶಗಳನ್ನು ‘ದೀಕ್ಷಾ’ ವೇದಿಕೆಗೆ ಅಪ್ಲೋಡ್ ಮಾಡುವುದಕ್ಕೆ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಕೋವಿಡ್ ಪರೀಕ್ಷೆ ವರದಿಗಳನ್ನು ವಿಳಂಬ ಮಾಡಿದ ಸರಕಾರಿ ಮತ್ತು ಖಾಸಗಿ ಲ್ಯಾಬ್‌ಗಳ ಮೇಲೆ ಸರಕಾರ ಮೊದಲೇ ಎಚ್ಚರಿಕೆ ನೀಡಿದಂತೆ ದಂಡ ಪ್ರಯೋಗ ಮಾಡಿದೆ.
ಸ್ಯಾಂಪಲ್ ಕಳಿಸಿಕೊಟ್ಟ 24 ಗಂಟೆಗಳ ಒಳಗಾಗಿ ರಿಸಲ್ಟ್ ಕೊಡದೆ, ಐಸಿಎಂಆರ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡದ ಕಾರಣಕ್ಕೆ ಪ್ರತೀ ಒಂದು ಸ್ಯಾಂಪಲ್ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ.
ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಭೆಯ ನಂತರ ಡಿಸಿಎಂ ಈ ಮಾಹಿತಿ ಹಂಚಿಕೊಂಡರು.
ಡಿಸಿಎಂ ಹೇಳಿದ್ದಿಷ್ಟು;
24 ಗಂಟೆ ಒಳಗಾಗಿ ರಿಸಲ್ಟ್ ಕೊಡಬೇಕು ಎಂದು ಸರಕಾರವು ಲ್ಯಾಬ್‌ಗಳಿಗೆ ಡೆಡ್‌ಲೈನ್ ವಿಧಿಸಿತ್ತು. ಆದರೆ, ಕೆಲ ಲ್ಯಾಬ್‌ಗಳು ಪರಿಸ್ಥಿತಿಯ ತೀವ್ರತೆ ಅರಿಯದೇ ಉಪೇಕ್ಷೆ ಮಾಡಿರುವುದು ಅಕ್ಷಮ್ಯ. ಹೀಗಾಗಿ ದಂಡ ಹಾಕಲಾಗಿದೆ. ಮೇ 8ರಿಂದ ಜಾರಿಗೆ ಬರುವಂತೆ ದಂಡ ಕ್ರಮ ಕೈಗೊಳ್ಳಲಾಗಿದ್ದು, 3,034 ಸ್ಯಾಂಪಲ್‌ಗಳ ವರದಿ ನೀಡಲು ತಡ ಮಾಡಿದ ಕಾರಣಕ್ಕೆ ಸರಕಾರಿ ಸ್ವಾಮ್ಯದ 9 ಪ್ರಮುಖ ಲ್ಯಾಬ್‌ಗಳಿಗೆ 6,06,800 ರೂ. ಹಾಗೂ ಖಾಸಗಿ ವಲಯದ 31 ಲ್ಯಾಬ್‌ಗಳಿಂದ 7,069 ಸ್ಯಾಂಪಲ್‌ಗಳು ವಿಳಂಬವಾಗಿ ಬಂದಿದ್ದು, ಅವುಗಳಿಗೆ ಒಟ್ಟು 14,13,800 ರೂ. ದಂಡ ವಿಧಿಸಲಾಗಿದೆ.
ಐಸಿಎಂಆರ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡದೇ ಫಲಿತಾಂಶದ ವರದಿಗಳನ್ನು ಬಹಿರಂಗ ಮಾಡಿದ ಕಾರಣಕ್ಕಾಗಿ 5 ಲ್ಯಾಬ್‌ಗಳಿಗೆ ದಂಡ ವಿಧಿಸಿ ಮುಚ್ಚಿಸಲಾಗಿದೆ. ಜತೆಗೆ, ಇನ್ನೂ ಬಹಳ ವಿಳಂಬ ಮಾಡಿದ 41 ಲ್ಯಾಬ್‌ಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಸ್ಯಾಂಪಲ್ ತಲುಪಿದ 24 ಗಂಟೆಯೊಳಗೆ ರಿಸಲ್ಟ್ ಕೊಡುವುದರ ಜತೆಗೆ, ಪಾಸಿಟೀವ್ ಬಂದವರ ಮಾಹಿತಿಯನ್ನು ಐಸಿಎಂಆರ್ ಪೋರ್ಟಲ್‌ಗೆ ಆಪ್‌ಲೋಡ್ ಮಾಡಬೇಕು. ಹೀಗೆ ಆಗದಿರುವುದರಿಂದ ಚಿಕಿತ್ಸೆ ತಡವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಲ್ಯಾಬ್‌ಗಳ ಇಂಥ ದೋರಣೆಯನ್ನು ಸಹಿಸಲು ಸಾಧ್ಯವಿಲ್ಲ.
1,100 ಸ್ಯಾಂಪಲ್ ರಿಸಲ್ಟ್ ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 2,20,000 ರೂ., 862 ರಿಸಲ್ಟ್ ತಡ ಮಾಡಿದ ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಲ್ಯಾಬ್‌ಗೆ 1,72,400 ರೂ., 659 ವರದಿ ವಿಳಂಬ ಮಾಡಿದ ಯುರೋಫಿನ್ಸ್ ಕ್ಲಿನಿಕಲ್ ಗೆನೆಟಿಕ್ಸ್ ಇಂಡಿಯಾ ಲ್ಯಾಬ್‌ಗೆ 1,31,800 ರೂ. ದಂಡ ವಿಧಿಸಲಾಗಿದೆ. ಸರಕಾರಿ ಸ್ವಾಮ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‌ಗಳಿವು.
ಇನ್ನು, ಖಾಸಗಿ ಲ್ಯಾಬ್‌ಗಳಿಗೆ ಬಂದರೆ 938 ವರದಿಗಳನ್ನು ತಡವಾಗಿ ನೀಡಿದ ಡಾ.ಲಾಲ್ ಪಾಥ್‌ಲ್ಯಾಬ್ಸ್‌ಗೆ 1,87,600 ರೂ., 918 ರಿಸಲ್ಟ್ ನೀಡಲು ತಡ ಮಾಡಿದ್ದಕ್ಕೆ ಮೆಡ್‌ಜಿಯೋನೋಂ ಲ್ಯಾಬ್‌ಗೆ 1,83,600 ರೂ., ಮಣಿಪಾಲ್ ಆಸ್ಪತ್ರೆಯ ಲ್ಯಾಬ್ 880 ವರದಿಗಳನ್ನು ತಡ ಮಾಡಿದ್ದಕ್ಕಾಗಿ 1,76,000 ರೂ., 756 ರಿಸಲ್ಟ್ ತಡ ಮಾಡಿದ ಪ್ರಿಮಾ ಡಯಾಗ್ನಿಸ್ಟಿಕ್ ಲ್ಯಾಬ್‌ಗೆ 1,51,200 ರೂ., 585 ವರದಿ ವಿಳಂಬ ಮಾಡಿದ 1ಎಂಜಿ ಲ್ಯಾಬ್ಸ್‌ಗೆ 1,17,000 ರೂ., ಬೆಂಗಳೂರು ಅರ್ಬನ್ ಲ್ಯಾಬ್ಸ್ (05) 509 ವರದಿಗಳನ್ನು ವಿಳಂಬ ಮಾಡಿದ್ದಕ್ಕಾಗಿ 1,01,800 ರೂ. ದಂಡ ವಿಧಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‌ಗಳಿವು.
ಟೆಸ್ಟ್ ಹೆಚ್ಚಿಸಲು ಸೂಚನೆ:
ಸದ್ಯಕ್ಕೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಲ್ಲಡೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆಮನೆಗೂ ತೆರಳಿ ರೋಗ ಲಕ್ಷಣಗಳಿದ್ದವರನ್ನು ಪರೀಕ್ಷೆ ಮಾಡಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಒಬ್ಬ ಪಾಸೀಟಿವ್ ಬಂದವರು ಪತ್ತೆಯಾದರೆ ಅವರಿಗೆ ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದ ಕನಿಷ್ಠ ನಾಲ್ವರನ್ನಾದರೂ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಸೋಂಕು ಕಂಡು ಬಂದರೆ ಅಂಥವರನ್ನು ಕೂಡಲೇ ಸ್ಥಳೀಯ ಕೋವಿಡ್ ಕೇರ್‌ಗಳಿಗೆ ಶಿಫ್ಟ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಚಾಮರಾಜನಗರದಲ್ಲಿ ಕಿಟ್‌ಗಳಿಲ್ಲ ಅಂತ ನೆಪ ಹೇಳಿ ಪರೀಕ್ಷೆ ನಡೆಸುತ್ತಿಲ್ಲ ಎಂಬ ಮಾಹಿತಿಯನ್ನು ಶಾಲಿನಿ ರಜನೀಶ್ ಗಮನಕ್ಕೆ ತಂದರು. ಕೂಡಲೇ ಅಲ್ಲಿಗೆ ಅಗತ್ಯವಾದ ರಾಟ್ & ಆರ್‌ಟಿಪಿಸಿಆರ್ ಕಿಟ್‌ಗಳನ್ನು ಕಳಿಸುವಂತೆ ಸೂಚಿಸಿದ್ದೇನೆ.
ಬ್ಲ್ಯಾಕ್ ಫಂಗಸ್ ತುರ್ತು ಔಷಧಿ ಖರೀದಿ:
ಸದ್ಯಕ್ಕೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಔಷಧಿಗೆ ಬಹಳ ಬೇಡಿಕೆ ಇದ್ದು, ತಮ್ಮಲ್ಲಿ ಸ್ಟಾಕ್ ಇದ್ದರೆ ಯಾರು ಬೇಕಾದರೂ ತುರ್ತಾಗಿ ಪೂರೈಕೆ ಮಾಡಬಹುದು. ನಿಗದಿತ ದರ ನೀಡಿ ಸರಕಾರ ತಕ್ಷಣ ಖರೀದಿ ಮಾಡಲಿದೆ. ಆಂಫೊಟೆರಿಸಿನ್-ಬಿ ಔಷಧಿಯನ್ನು (Amphotericin-B; 50mg) 3 ಲಕ್ಷ ವೈಲ್ಸ್ ಖರೀದಿ ಮಾಡುವಂತೆ ಸಭೆಯಲ್ಲಿದ್ದ ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ ಅಜುಂ ಪರ್ವೇಜ್ ಅವರಿಗೆ ನಿರ್ದೇಶನ ನೀಡಲಾಯಿತು. ಇನ್ನು, ರಾಜ್ಯದಲ್ಲಿ ರೆಮಿಡಿಸಿವರ್ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ದಾಸ್ತಾನಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಲ್ಯಾಬ್ ಉಸ್ತುವಾರಿ ಅಧಿಕಾರಿ ಶಾಲಿನಿ ರಜನೀಶ್, ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ ಅಜುಂ ಪರ್ವೇಜ್, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್ ಮುಂತಾದವರು ಸಭೆಯಲ್ಲಿದ್ದರು
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಮೂಲ ಪತ್ತೆ ಹಚ್ಚುವ ಕೆಲಸ ನಾಳೆಯಿಂದಲೇ ಶುರು
ಕೋವಿಡ್-19 ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಅಪಾಯಕಾರಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಮೂಲವನ್ನು ಪತ್ತೆ ಹಚ್ಚಲು ಸುಪ್ರಸಿದ್ಧ ವೈದ್ಯರು ಹಾಗೂ ಸೂಕ್ಷ್ಮಾಣುಜೀವಿ ತಜ್ಞರಿಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನಿರ್ದೇಶನ ನೀಡಿದರು.
ಬೆಂಗಳೂರಿನಲ್ಲಿ ಭಾನುವಾರ ಈ ಬಗ್ಗೆ ರಾಜ್ಯದ ಖ್ಯಾತ ತಜ್ಞ ವೈದ್ಯರೂ ಹಾಗೂ ಕೋವಿಡ್ & ಬ್ಲ್ಯಾಕ್ ಫಂಗಸ್ ಚಿಕಿತ್ಸಾ ಶಿಷ್ಟಾಚಾರ ಸಮಿತಿಗಳ ತಜ್ಞರ ಸಭೆಯಲ್ಲಿ ಜಗತ್ತಿನ ಯಾವ ದೇಶದಲ್ಲೂ ಕೋವಿಡ್ ನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳದ ಬ್ಲ್ಯಾಕ್ ಫಂಗಸ್ ಭಾರತದಲ್ಲಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಸಮಾಲೋಚನೆ ನಡೆಸಿದ ನಂತರ ಡಿಸಿಎಂ, ನಾಳೆಯಿಂದಲೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಮೂಲ ಹುಡುಕುವಂತೆ ಸೂಚಿಸಿದರು.
ಅಲ್ಲದೆ, ಅತಿ ಶೀಘ್ರದಲ್ಲಿಯೇ ಈ ಬಗ್ಗೆ ವರದಿ ನೀಡಬೇಕು ಹಾಗೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಹೊಸ ಮಾರ್ಗಸೂಚಿ ರೂಪಿಸುವಂತೆಯೂ ಅವರು ನಿರ್ದೇಶನ ತಜ್ಞರಿಗೆ ತಿಳಿಸಿದರು.
ಈ ಸಭೆಯ ಆರಂಭದಲ್ಲಿ ಮಣಿಪಾಲ್ ಆಸ್ಪತ್ರೆಯ ಇ ಎನ್ ಟಿ ತಜ್ಞ ವೈದ್ಯರೂ ಡಾ.ಸಂಪತ್ ಚಂದ್ರ ಪ್ರಸಾದ್ ರಾವ್ ಬ್ಯಾಕ್ ಫಂಗಸ್ ಬಗ್ಗೆ ವಿವರಗಳನ್ನು ನೀಡಿದರು.
ಡಾ.ಸಂಪತ್ ಹೇಳುವುದೇನು?
ಬ್ಲಾಕ್ ಫಂಗಸ್ ಮೊದಲ ಅಲೆ ವೇಳೆ ಕಂಡುಬರಲಿಲ್ಲ. ಈಗ ಏಕೆ ಕಾಣಿಸಿಕೊಂಡಿದೆ? ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿರುವ ಆಮ್ಲಜನಕದಿಂದ ಬರುತ್ತಿದೆಯಾ? ಯಾವುದೇ ದೇಶದಲ್ಲೂ ಕಾಣಿಸಿಕೊಳ್ಳದ ಈ ಕಾಯಿಲೆ ನಮ್ಮಲ್ಲೇ ಕಂಡು ಬಂದಿದ್ದೇಕೆ? ನಮ್ಮಲ್ಲಿನ ಲೋಪವೇನು? ಇದನ್ನು ಪತ್ತೆ ಮಾಡುವ ಪ್ರಯತ್ನ ಮಾಡಬೇಕು.
ಸದ್ಯಕ್ಕೆ ಬಳಕೆಯಾಗುತ್ತಿರುವ ಆಕ್ಸಿಜನ್ ಶುದ್ದವಾಗಿದೆಯೇ? ಆಮ್ಲಜನಕ ಸಾಂದ್ರಕಗಳಿಗೆ ಡಿಸ್ಟಲರಿ ನೀರು ಬಳಕೆಯಾಗುತ್ತಿದೆಯಾ? ಇಲ್ಲವಾ? ಐಸಿಯುಗಳ ಸ್ವಚ್ಛತೆ ಯಾವ ಮಟ್ಟದಲ್ಲಿದೆ? ಆಸ್ಪತ್ರೆಗಳ ಸ್ವಚ್ಛತೆ ಹಾಗೂ ಆಮ್ಲಜನಕ ಸಿಲಿಂಡರ್ ಗಳ ಸ್ವಚ್ಛತೆಯನ್ನು ವೈದ್ಯಕೀಯ ಮಾರ್ಗಸೂಚಿ ಪ್ರಕಾರ ಮಾಡಲಾಗುತ್ತಿದೆಯಾ? ಅಲ್ಲದೆ, ನೈಟ್ರೋಜನ್ ಬಳಸಿ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ. ಆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ? ಸದ್ಯಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುವ ಆಮ್ಲಜನಕವನ್ನೆಲ್ಲ ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದರಿಂದ ಅಡ್ಡ ಪರಿಣಾಮ ಉಂಟಾಗಿರಬಹುದಾ? ಆಸ್ಪತ್ರೆಗಳಲ್ಲಿನ ಆಮ್ಲಜನಕ ಘಟಕ, ಅವುಗಳಿಂದ ಪೂರೈಕೆಯಾಗುವ ಪೈಪುಗಳ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆಯಾ? ಈ ಎಲ್ಲ ಪ್ರಶ್ನೆಗಳ ಬಗ್ಗೆ ಉತ್ತರ ಹುಡುಕುವಂತೆ ತಜ್ಞ ವೈದ್ಯರಿಗೆ ಸೂಚನೆ ನೀಡಲಾಗಿದೆ.
ರೆಫರ್ ಮಾಡುವ ಆಸ್ಪತ್ರೆಗಳ ಪರಿಶೀಲನೆ
ಕಳೆದ 7 ದಿನಗಳಲ್ಲಿ 700 ಬ್ಲ್ಯಾಕ್ ಫಂಗಸ್ ಪೀಡಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಸದ್ಯಕ್ಕೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ರೋಗಿಗಳ ಸಣ್ಣಪುಟ್ಟ ಆಸ್ಪತ್ರೆಗಳಿಂದ ರೆಫರ್ ಆಗಿ ಬಂದಿದ್ದಾರೆ. ಇವರನ್ನು ರೆಫರ್ ಮಾಡಿದ ಆಸ್ಪತ್ರೆಗಳ ವ್ಯವಸ್ಥೆಯನ್ನೂ ಪರಿಶೀಲನೆ ಮಾಡುವಂತೆ ತಜ್ಞರಿಗೆ ತಿಳಿಸಲಾಗಿದೆ. ಅಲ್ಲೆಲ್ಲ ಚಿಕಿತ್ಸಾ ಶಿಷ್ಟಾಚಾರ ಪಾಲಿಸಲಾಗಿದೆಯಾ? ಅಲ್ಲಿ ಬಳಕೆ ಮಾಡಲಾದ ಆಕ್ಸಿಜನ್ ಉತ್ತಮ ಗುಣಮಟ್ಟದ್ದೇ? ಅದು ಎಲ್ಲಿಂದ ಬಂದಿದೆ? ಆ ಮೂಲವನ್ನು ಹುಡುಕಿ ಅಧ್ಯಯನ ಮಾಡಲು ತಿಳಿಸಲಾಗಿದೆ. ಈ ಕೆಲಸ ನಾಳೆಯಿಂದಲೇ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ರೋಗಿಗಳಿಗೆ ಆಸ್ಪತ್ರೆಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ನಾವು ಖಾತರಿ ಮಾಡಿಕೊಳ್ಳಬೇಕಿದೆ. ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ಶಿಷ್ಟಾಚಾರವನ್ನು ಚಾಚೂ ತಪ್ಪದೆ ಪಾಲಿಸಲಾಗಿದೆಯಾ? ಬ್ಲ್ಯಾಕ್ ಫಂಗಸ್ ಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಿದೆಯಾ? ಸರಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಪರಿಣಾಮಕಾರಿಯಾಗಿ ಬಳಕೆ ಆಗುತ್ತಿವೆಯಾ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಮಾಡಲಾಗುತ್ತಿದ್ದು, ಸೋಮವಾರದಿಂದಲೇ ತಜ್ಞರ ತಂಡಗಳು ಅಧ್ಯಯನ ನಡೆಸಿ ಅತಿ ಶೀಘ್ರದಲ್ಲಿಯೇ ವರದಿ ನೀಡಲಿವೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಉಪೇಕ್ಷೆ ಮಾಡುವ ಪ್ರಶ್ನೆ ಇಲ್ಲ ಎಂದು ಡಿಸಿಎಂ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕೋವಿಡ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ ಅಧ್ಯಕ್ಷ ಡಾ.ಸಚ್ಚಾದಾನಂದ, ಸದಸ್ಯರಾದ ಡಾ.ರವಿ, ಡಾ.ಶಶಿಭೂಷಣ, ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ ಅಧ್ಯಕ್ಷೆ ಡಾ.ಅಂಬಿಕಾ, ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಖ್ಯಾತ ತಜ್ಞ ವೈದ್ಯರು ಇದ್ದರು.
ತಾವು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೋವಿಡ್ ಸೋಂಕಿತರ ಕೈಹಿಡಿದು ತಮ್ಮ ನೃತ್ಯದ ಮೂಲಕ ಧೈರ್ಯವಾಗಿರಲು ಹುರಿದುಂಬಿಸಿದ ಸಚಿವ ಸುರೇಶ್ ಕುಮಾರ್ ಅವರ ವೈದ್ಯೆ ಪುತ್ರಿ ಡಾ.ದಿಶಾ.ಎಸ್.ಕುಮಾರ್ ತಮ್ಮ ನಡೆಯಿಂದ ಮಾದರಿಯಾಗಿದ್ದಾರೆ.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೆಲ ಕೋವಿಡ್ ಸೋಂಕಿತರು ವೈದ್ಯಕೀಯ ಶುಶ್ರೂಶೆಯ ಬಳಿಕವೂ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬಲು ಈ ರೀತಿ ಅಚಾನಕ್ಕಾದ ನಡೆಯನ್ನು ಅನುಸರಿಸಿದೆವು. ಸೋಂಕಿತರೊಬ್ಬರ ಕೈ ಹಿಡಿದು ಅವರ ಜೊತೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದೆವು. ನಾನು ಸತ್ತು ಹೋಗ್ತೇನೆ ಅಂತ ಭಯಭೀತನಾಗಿ ಮಲಗಿದ್ದ ಯುವಕನೊಬ್ಬ ನಮ್ಮೊಂದಿಗೆ ನೃತ್ಯ ಮಾಡಿದ್ದು, ತದನಂತರದಲ್ಲಿ ಆತ ತನ್ನ ಖಾಯಿಲೆಯಿಂದ ಚೇತರಿಸಿಕೊಂಡಿದ್ದು ಒಬ್ಬ ವೈದ್ಯೆಯಾಗಿ ನನಗೆ ಅತೀವ ತೃಪ್ತಿ ತಂದ ವಿಷಯ ಎಂದು ಡಾ.ದಿಶಾ.ಎಸ್.ಕುಮಾರ್ ಹೇಳಿದರು.
ಇಕ್ಕಲಾರದ ಕೈ ಎಂಜಲು-ಹರಿದಾಸ ಪರಂಪರೆಯ ಶ್ರೇಷ್ಟ ಕೀರ್ತನಕಾರರಲ್ಲಿ ಪುರಂದರ ದಾಸರ ಹೆಸರು ಅಗ್ರಮಾನ್ಯ. ವಿಡಂಬನಾತ್ಮಕವಾಗಿ ಬರೆದ ಅವರ “ ಇಕ್ಕಲಾರೆ ಕೈ ಎಂಜಲು” ಕೃತಿ ಪ್ರಸ್ತುತ ಸಮಾಜಕ್ಕೆ ಹೆಚ್ಚು ಅನ್ವಯವಾಗುತ್ತದೆ. ಪುರಂದರ ದಾಸರು ಉಪಾದಾನಕ್ಕೆ ಹೋದಾಗ ಭಿಕ್ಷೆ ನೀಡಲು ಇಷ್ಟವಿಲ್ಲದವರು ಮಕ್ಕಳು ಅಳುತ್ತಿದ್ದಾರೆ,ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು, ಹೊಟ್ಟೆ ನೋಯುತ್ತಲಿದೆ ಎಂಬ ನಾನಾ ಕಾರಣಗಳನ್ನು ನೀಡುತ್ತಾರೆ. ಕೆಲವರು ಮನೆಯ ಬಾಗಿಲನ್ನು ಹಾಕಿಕೊಂಡು ಬಿಡುತ್ತಾರೆ. ಈ ಸನ್ನಿವೇಶವನ್ನು ಪುರಂದರ ದಾಸರು “ಇಕ್ಕಲಾರೆ ಕೈ ಎಂಜಲು ಹೋಗೋ ದಾಸಯ್ಯ”. ಎಂಬ ಕೀರ್ತನೆಯಲ್ಲಿ ವಿಡಂಬಿಸಿದ್ದಾರೆ.
”ಕದವ ಮುಚ್ಚಿದಳು ಮಾಳಿ ಗಯ್ಯಾಳಿ ತನ್ನ ಮನೆಯೊಳಗಿನ ಪಾಪ ಹೊರಗೆ ಹೋದೀತೆಂದು”. ಎಂದು ಪುರಂದರದಾಸರು ಕೀರ್ತನೆಯ ಕಡೆಯಲ್ಲಿ ಮನುಷ್ಯನ ನೀಡದ ಗುಣವನ್ನು ಖಂಡಿಸುತ್ತಾರೆ. ಆದರೆ ಇಲ್ಲಿ “ಇಕ್ಕಲಾರದ ಕೈ ಎಂಜಲು” ಎಂದೇ ನಾವು ಅರ್ಥ ಮಾಡಿಕೊಳ್ಳಬೇಕು. ಇಕ್ಕಲಾರದ ಕೈ ಎಂಜಲು ಮನುಷ್ಯನ ಸಂಕುಚಿತ ಮನೋಭಾವವನ್ನು ಕುರಿತ ಮಾರ್ಮಿಕವಾದ ನುಡಿಗಟ್ಟೆಂದರೆ ತಪ್ಪಿಲ್ಲ. ಕಳ್ಳನಿಗೊಂದು ಪಿಳ್ಳೆನೆವ, ಕುಣಿಯಲಾರದವಳಿಗೆ ನೆಲಡೊಂಕು ಎಂಬ ಮಾತುಗಳೂ ಇದೇ ಸಾಲಿಗೆ ಸೇರುವವು. “ಇಕ್ಕಲಾರೆ ಕೈ,ಇಕ್ಕಲಾರದ ಕೈ” ಎರಡು ಪದ ದಾನ ಹೀನ, ದಾನ ಶೀಲ ಎಂಬ ಎರಡೂ ಪರಿಭಾಷೆಗಳನ್ನು ಸಂಕೇತಿಸುತ್ತದೆ.
ಇಕ್ಕಲಾರೆ ಕೈ ಎಂಜಲು,ಅನ್ಯ ಕೆಲಸವಿದೆ ಹಾಗೆ… ಹೀಗೆ…ಎಂದು ಬೇರೆ ಬೇರೆ ಕಾರಣಗಳನ್ನು ಹೇಳುವಂತಿಲ್ಲ. ಹಾಗಂದರೆ ಎಂಜಲು ಕೈಗಲ್ಲ ಮನಸ್ಸಿಗೆ ಎಂದಾಗುತ್ತದೆ. ಇತರರಿಗೆ ದಾನ ಕೊಡುವ ಶಕ್ತಿ ಇದ್ದಾಗ ಕೊಡಬೇಕು. ಆದರೆ ಕೊಟ್ಟದ್ದು ಗೋಪ್ಯವಾಗಿರಬೇಕು. ಅಪಾತ್ರರಿಗೆ ದಾನ ಕೊಡಬಾರದು. ಅಂದರೆ ಅರ್ಹತೆ ಇಲ್ಲದವರಿಗೆ ಒಂದು ವೇಳೆ ಕೊಟ್ಟರೆ “ಕೊಟ್ಟವನು ಕೋಣ ಇಸಿದುಕೊಂಡವನು ಜಾಣ” ಎಂದಾಗಿಬಿಡುತ್ತದೆ.
ದಾನ ಕೊಟ್ಟಾಗ ಯಾವುದೇ ಪ್ರತಿಫಲವನ್ನು ಅಪೇಕ್ಷಿಸಬಾರದು. ಗಳಿಸಿದ್ದರಲ್ಲಿ ಅಲ್ಪಾಂಶವನ್ನಾದರೂ ದಾನ ಮಾಡಬೇಕು. ಹಾಗಂತ ನಮಗೆ ಅನಗತ್ಯ ಎನ್ನಿಸಿದ್ದನ್ನು ಕೊಟ್ಟು ಬೀಗುವುದಲ್ಲ! ಗಳಿಸಿದ್ದೆಲ್ಲವೂ ನಮ್ಮದ್ದಲ್ಲ! ಅದರಲ್ಲಿ ಅನ್ಯರ ಪಾಲೂ ಇರುತ್ತದೆ. ಅದನ್ನೆಲ್ಲವನ್ನೂ ತಾನೇ ಅನುಭವಿಸುತ್ತೇನೆ ಯಾರಿಗೂ ಕೊಡಲಾರೆ ಎಂದರೆ ಕಡೆಗದು ಅನ್ಯರ ಪಾಲಾಗಿ. “ಕೂಡಿಟ್ಟವನು ಕೋಣ,ಅನುಭವಿಸುವವನು ಜಾಣ” ಎಂಬಂತಾಗುತ್ತದೆ.
ಸನಾತನ ಧರ್ಮದ ಮೊದಲ್ಗೊಂಡಂತೆ ಎಲ್ಲ ಧರ್ಮಗಳಲ್ಲಿಯೂ ದಾನಕ್ಕೆ ಅತ್ಯಂತ ಮಹತ್ವವಿದೆ. ದಾನ ಕೊಟ್ಟ ನಂತರ ಕೊಟ್ಟೆ ಎಂದು ಕೊರಗಿದರೆ ಮಾಡಿದ ದಾನ ವ್ಯರ್ಥವೆಂದೇ ತಿಳಿಯಬೇಕು. ಇದನ್ನೇ ಸರ್ವಜ್ಞ “ಕೊಟ್ಟು ಕುದಿಯಲು ಬೇಡ ಕೊಟ್ಟಾಡಿಕೊಳಬೇಡ”. ಎಂದಿರುವುದು.
ಮಾಡಿ ಕೆಟ್ಟರು ಮನವಿಲ್ಲದೆ | ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ |ಮಾಡುವ ನೀಡುವ ನಿಜಗುಣವುಳ್ಳೊಡೆ | ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಮ ದೇವ |– ಎಂದೂ ಬಸವಣ್ಣನವರು ದಾನದ ಹಿರಿಮೆಯನ್ನು ಕುರಿತು ಹೇಳುತ್ತಾರೆ. ಅಕ್ಕಮಹಾದೇವಿಯೂ ಬದುಕಿಗೆ ಯಾವುದು ಶೃಂಗಾರ ಎಂದು ಹೇಳುವ ವಚನದಲ್ಲಿ “ಕರಕ್ಕೆ ಶೃಂಗಾರ ಸತ್ಪಾತ್ರಕ್ಕೆ ನೀಡುವುದು” ಎಂದಿದ್ದಾರೆ.
ವಿದ್ಯಾದಾನ, ಅನ್ನದಾನ, ಕನ್ಯಾದಾನ ಇವುಗಳನ್ನು ಹೊರತುಪಡಿಸಿ ಆಧುನಿಕ ದಿನಮಾನಗಳಲ್ಲಿ ದಾನದ ಪರಿಪ್ರೇಕ್ಷ ಬದಲಾಗಿದೆ. ನೇತ್ರದಾನ, ದೇಹದಾನ, ಅಂಗಾಂಗ ದಾನ, ರಕ್ತದಾನ ಇತ್ಯಾದಿ ಹಾಗೆ ಕೋವಿಡ್ ಹತ್ತೊಂಬತ್ತರ ನಂತರ ಪ್ಲಾಸ್ಮದಾನ ಹೊಸದಾಗಿ ಸೇರ್ಪಡೆಯಾಗಿದೆ. ಏನೇ ದಾನ ನೀಡಿದರೂ ಅದರ ಪ್ರಯೋಜನವಾಗಬೇಕಷ್ಟೆ.
ದಾನಶೀಲತ್ವ ಒಳ್ಳೆಯಗುಣ ಇಲ್ಲದ್ದನ್ನು ತಂದು ದಾನ ನೀಡಲಾಗದು ಇರುವುದನ್ನು ನಿಷ್ಕಲ್ಮಶ ಮನಸ್ಸಿನಿಂದ ನೀಡಬೇಕು. “ದಾನಂ ಹಸ್ತಸ್ಯ ಭೂಷಣಂ”, “ಕೈಗೆ ದಾನವೇ ಭೂಷಣ”. ಕೊಡಲು ಮನಸ್ಸಿಲ್ಲದೆ ಕುಂಟು ನೆಪ ಹೇಳಿದರೆ ಆಗದು ಕೊಡೊಲೊಲ್ಲದಕೈ,ಇಕ್ಕಲಾರದ ಕೈ ಆಗಿಬಿಡುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಸುರೇಶ್ ಕುಮಾರ್ ಪ್ರತಿಪಾದನೆ
ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸಚಿವರು, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬಂದಿಗೆ ಬಂದ ನಂತರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕವಾಗುತ್ತದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಕೋವಿಡ್ ಪ್ರಸರಣವು ಎಲ್ಲೆಡೆ ತೀವ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಎರಡನೇ ಅಲೆ ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು.
ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಸಲಹಾತ್ಮಕವಾಗಿ ಹೇಳಿದೆ. ಕರ್ನಾಟಕ ರಾಜ್ಯವು ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ಅನುಭವ ಹೊಂದಿದ್ದು, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವುದು ಹೆಚ್ಚಿನ ಸಮಸ್ಯೆಯಾಗದಿದ್ದರೂ, ವಿದ್ಯಾರ್ಥಿಗಳ ಕಲಿಕೆ, ಪೋಷಕರ ಮನ:ಸ್ಥಿತಿ, ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಕಾರ್ಯಗಳನ್ನು ಸಮಗ್ರವಾಗಿ ಅವಲೋಕಿಸಿ, ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು.
ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ಮಾಹೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ಮಾಹೆಯಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ಮಾಹೆಯ ಸೂಕ್ತ ದಿನಾಂಕಗಳಂದು ಆಯೋಜಿಸಬಹುದಾಗಿದೆಯೆಂದೂ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಈ ರೀತಿಯ ಸಮಾಲೋಚನಾ ಸಭೆಯು ಅಭಿನಂದನಾರ್ಹ ಪ್ರಯತ್ನ. ಇಂತಹ ಪ್ರಯತ್ನಗಳು ಸಂಕಷ್ಟದ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸುವಂತಹದ್ದಾಗಿವೆ ಎಂದೂ ಸುರೇಶ್ ಕುಮಾರ್ ಹೇಳಿದರು.
ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಕ್ಕೆ ತಂದರು ಹಾಗೂ ಸಿ.ಬಿ.ಎಸ್.ಇ. ಮಂಡಳಿಯು ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಪರವಾಗಿ ವಿಚಾರ ಮಂಡಿಸಿದರು. ಬಹುಪಾಲು ಸಚಿವರು ಪರೀಕ್ಷೆಗಳನ್ನು ನಡೆಸಲೇಬೇಕೆಂದು ಪ್ರತಿಪಾದಿಸಿದರು. ಇಂದಿನ ಸಭೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಹಾಜರಿದ್ದರು.
ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಈ ವರ್ಷದ ಆರಂಭದಲ್ಲಿ 47,700 ರ ಮಟ್ಟದಲ್ಲಿದ್ದು, ಆಗಿನ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮೊತ್ತವು ರೂ.189 ಲಕ್ಷ ಕೋಟಿಯ ಸಮೀಪವಿತ್ತು. ಆ ಸಂದರ್ಭದಲ್ಲಿ ನೋಂದಾಯಿಸಿಕೊಂಡಿದ್ದ ರೀಟೇಲ್ ಗ್ರಾಹಕರ ಸಂಖೈ ಮಾತ್ರ ಕೇವಲ 5.89 ಕೋಟಿಯಷ್ಠೆ. ಇದು ಷೇರುಪೇಟೆಯ ಚಟುವಟಿಕೆಯಲ್ಲಿ ಸಾಂಸ್ಥಿಕ ವಲಯದ ಪಾತ್ರವೇ ಹೆಚ್ಚಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸಾಂಸ್ಥಿಕ ವಲಯ ಎಂದರೆ ವಿದೇಶಿ ಸಂಸ್ಥೆಗಳಾಗಿರಬಹುದು, ಸ್ವದೇಶಿ ಸಂಸ್ಥೆಗಳಾಗಿರಬಹುದು, ಮ್ಯುಚುಯಲ್ ಫಂಡ್ ಗಳಾಗಿರಲೂಬಹುದು.
ವಿಶ್ವವೆಂದೂ ಕಾಣದ ರೀತಿಯ ಕರೋನಾ ಸಾಂಕ್ರಾಮಿಕವು ಜನಜೀವನದ ಶೈಲಿಗಳನ್ನೇ ಬದಲಿಸಿದೆ. ಷೇರುಪೇಟೆಯ ವ್ಯವಹಾರವು ಅತ್ಯಂತ ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಕೈಲಿರುವ ಮೊಬೈಲ್ ನಲ್ಲಿಯೂ ಸಹ ಕಾರ್ಯ ನಿರ್ವಹಿಸಬಹುದಾದ ಮಟ್ಟದಲ್ಲಿರುವುದರಿಂದ ಈಗಿನ ಲಾಕ್ ಡೌನ್ ಸಮಯದಲ್ಲಿ ಮನಸ್ಸು ಮತ್ತು ಚಿಂತನೆಗಳನ್ನು ಸಕಾರಾತ್ಮಕವಾಗಿರುವಂತೆ ಮಾಡಲು, ರಚನಾತ್ಮಕತೆಯತ್ತ ತೊಡಗಿಸುವುದರೊಂದಿಗೆ ಮಿತವಾದ ಸಂಪಾದನೆ ಗಳಿಸಲು ಸಹ ಸಾಧ್ಯವಿರುವ ಸುಲಭ ಮಾರ್ಗ ಎಂದರೆ ಷೇರುಪೇಟೆ.
ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಂಡವರಲ್ಲಿ ಸಾಮಾನ್ಯವಾಗಿ ನಕಾರಾತ್ಮಕವಾದ ಅಭಿಪ್ರಾಯ ಹೊರಬರುವುದು. ಕಾರಣ ನಡೆಸುವ ಚಟುವಟಿಕೆ ಕೇವಲ ಭಾವನಾತ್ಮಕವಾಗಿದ್ದು, ವಾಸ್ತವಿಕತೆಯಿಂದ ದೂರವಿರುವುದಾಗಿದೆ. ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಹಿರಿಯ ನಾಗರಿಕರೂ ಸೇರಿ, ಸೀಮಿತವಾದ, ನಿಯಂತ್ರಿತ ರೀತಿಯಲ್ಲಿ, ಯಾವುದೇ ವ್ಯಾಮೋಹಕ್ಕೊಳಗಾಗದೆ ಕೇವಲ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ ಆಕರ್ಷಕ ಲಾಭ ಪಡೆಯುವ ಮೂಲಕ ತಮ್ಮ ದೈಹಿಕ, ಮಾನಸಿಕ, ಬಾಧೆಗಳನ್ನು ಮರೆತು ಆರೋಗ್ಯವನ್ನಯ ವೃದ್ಧಿಸಿಕೊಂಡ ಹಲವಾರು ಉದಾಹರಣೆಗಳುಂಟು.
ನಾಲ್ಕೈದು ತಿಂಗಳಲ್ಲಿ ಒಂದು ಕೋಟಿ ರೀಟೇಲ್ ಹೂಡಿಕೆದಾರರು:
ಮನೆಯಲ್ಲಿಯೇ ಇರಿ, ಮನಸ್ಸಿನ ಹತೋಟಿಯೊಂದಿಗೆ ಸುಲಭ ಸೀಮಿತ ರೀತಿಯಲ್ಲಿ ಸಂಪಾದನೆಮಾಡಿ ಎಂಬುದಕ್ಕೆ ಷೇರುಪೇಟೆ ಉತ್ತಮ ವೇದಿಕೆಯನ್ನೊದಗಿಸುತ್ತದೆ. ಈಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೀಟೇಲ್ ಗ್ರಾಹಕರು, ಗೃಹಿಣಿಯರೂ ಸೇರಿದಂತೆ, ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿದ್ದ 5.89 ಕೋಟಿ ರೀಟೇಲ್ ಗ್ರಾಹಕರ ಸಂಖ್ಯೆಯು ಈಗ ಸುಮಾರು 6.88 ಕೋಟಿಗೆ ಏರಿಕೆಯಾಗಿದೆ. ಚಟುವಟಿಕೆಯ ಗಾತ್ರವೂ ಸಹ ಹೆಚ್ಚಾಗಿರುವುದರಿಂದ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮೊತ್ತವೂ ಸಹ ರೂ.218 ಲಕ್ಷ ಕೋಟಿಯನ್ನು ದಾಟಿದೆ. ಅಂದರೆ ಸುಮಾರು ನಾಲ್ಕೈದು ತಿಂಗಳಲ್ಲಿ ಸೆನ್ಸೆಕ್ಸ್ 2,800 ಪಾಯಿಂಟುಗಳ ಏರಿಕೆಯೊಂದಿಗೆ ಮಾರ್ಕೆಟ್ ಕ್ಯಾಪಿಟಲೈಸೇಷನ್ನನ್ನು ರೂ.29 ಲಕ್ಷ ಕೋಟಿಯಷ್ಠು ಏರಿಕೆ ಕಾಣುವಂತಾಗಲು ಸುಮಾರು ಒಂದು ಕೋಟಿ ಹೊಸ ಹೂಡಿಕೆದಾರರ ಕೊಡುಗೆಯೂ ಅಪಾರವಾಗಿರುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೆನ್ಸೆಕ್ಸ್ 16 ನೇ ಫೆಬ್ರವರಿಯಂದು ಸರ್ವಕಾಲೀನ ಗರಿಷ್ಠ 52,516 ಪಾಯಿಂಟುಗಳನ್ನು ತಲುಪಿದ ದಿನ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.205.80 ಲಕ್ಷ ಕೋಟಿಯಲ್ಲಿತ್ತು. ಆದರೆ ಈಗ ಇನ್ನೂ ಎರಡು ಸಾವಿರ ಪಾಯಿಂಟುಗಳ ಹಿಂದಿರುವಾಗ ಅಂದರೆ 52,540 ರಲ್ಲಿರುವಾಗ ಆಗಲೇ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.218 ಲಕ್ಷ ಕೋಟಿ ದಾಟಿರುವುದು ಪೇಟೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಯೇ ಕಾರಣವಾಗಿದೆ. ವಿವಿಧ ಅಂತರ ರಾಷ್ಟ್ರೀಯ ವಿತ್ತೀಯ ಸಂಸ್ಥೆಗಳು ಈಗಿನ ಕರೋನಾ ಸಾಂಕ್ರಾಮಿಕ ಪ್ರಭಾವದಿಂದ ಭಾರತದ ಜಿ ಡಿ ಪಿ ಭಾರಿ ಕುಸಿತ ಕಾಣುತ್ತದೆ ಎಂದು ವರದಿ ಪ್ರಕಟಿಸಿದ ನಂತರವೂ ಷೇರುಪೇಟೆ ಉತ್ಸಾಹಭರಿತವಾಗಿರುವುದು ಹೆಚ್ಚು ಗಮನಾರ್ಹವಾಗಿದೆ.
ಉತ್ತಮ ಬಲಶಾಲಿಯಾಗುವುದು ಹೇಗೆ?
ಇದಕ್ಕೆ ಸುಲಭವಾದ ಉತ್ತರವೆಂದರೆ ʼದುರ್ಬಲತೆಯ ಅರಿವು ಸಬಲತೆಗೆ ಒಲವುʼ. ಅಂದರೆ ನಮ್ಮ ವೀಕ್ನೆಸ್ ಏನೆಂದು ಅರಿತರೆ ಅಂತಹುವುಗಳಿಂದ ನಾವು ದೂರ ಉಳಿಯಲೆತ್ನಿಸುತ್ತೇವೆ, ಫಲಿತಾಂಶ ಸಮಾಧಾನಕರವಾಗಿಯೇ ಇರುತ್ತದೆ. ಮಗುವು ಬೆಂಕಿಯ ಬಿಸಿಯನ್ನು ಒಮ್ಮೆ ಅನುಭವಿಸಿದ್ದರೆ, ಅದರಿಂದ ಸದಾ ದೂರವಿರಲು ಇಚ್ಚಿಸುತ್ತದೆ. ಅದೇ ರೀತಿಯ ವಿರಾಟ್ ಸ್ವರೂಪವು ಹಿರಿಯರಲ್ಲಿರುತ್ತದೆ. ಈಗಿನ ತಾಂತ್ರಿಕ ಯುಗದಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸುವುದು ಅವರಲ್ಲಿರುವ ಡಿಸ್ಕೌಂಟ್ , ರಿಬೇಟ್, ಉಚಿತ, ಕೊಡುಗೆಗಳ ವ್ಯಾಮೋಹದಿಂದ. ಭಾರಿ ಡಿಸ್ಕೌಂಟ್, ಉಚಿತ ಕೊಡುಗೆಗಳನ್ನು ನೀಡುವ ವಿಧವನ್ನು ನಾವು ಮೈಗೂಡಿಸಿಕೊಂಡಲ್ಲಿ, ನಮ್ಮ ವ್ಯವಹಾರಿಕ ಚಿಂತನೆಗಳ ಫಲವೂ ಸಹ ಇದೇ ರೀತಿ, ಪರೋಕ್ಷವಾಗಿ ಕೊಡುಗೆ ನೀಡುವ ರೀತಿಯಿರುತ್ತದೆ. ಜೀವಿಸು, ಜೀವಿಸಲು ಬಿಡು ಎಂಬ ತತ್ವವನ್ನಾಧರಿಸಿ ಚಟುವಟಿಕೆ ನಡೆಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಈ ಡಿಸ್ಕೌಂಟ್ , ರಿಬೇಟ್, ಉಚಿತ, ಕೊಡುಗೆಗಳ ಚಿಂತನೆಗಳು ನಮ್ಮಲ್ಲಿ ದುರಾಸೆಯನ್ನು ಬಿತ್ತುತ್ತದೆ. ಇದು ಮುಂದೆ ನಿರಾಸೆಯತ್ತ ಕೊಂಡೊಯ್ಯುತ್ತದೆ. ಹಾಗಾಗಿ ಈ ಡಿಸ್ಕೌಂಟ್ , ರಿಬೇಟ್, ಉಚಿತ, ಕೊಡುಗೆಗಳ ವ್ಯಾಮೋಹದಿಂದ ಹೊರಬಂದು ಸಹಜತೆಯತ್ತ ಹೊರಳಿದಲ್ಲಿ ಬೇರೆ ಲೋಕವೇ ಗೋಚರಿಸುವುದು. ಮಾಲ್ ಗಳಡಿಸ್ಕೌಂಟ್ , ರಿಬೇಟ್, ಉಚಿತ, ಕೊಡುಗೆಗಳು, ಕ್ರೆಡಿಟ್ ಕಾರ್ಡ್ ಗಳ, ಬ್ಯಾಂಕಿಂಗ್, ನಾನ್ ಬ್ಯಾಂಕಿಂಗ್ ವಲಯದ ಕಂಪನಿಗಳ ಆಫರ್, ʼ ಪ್ರಿ ಅಪ್ರೂವ್ಡ್ʼ ಲಗತ್ತಿಸಿದ ಶಬ್ಧಗಳ ಪ್ರಭಾವದಿಂದ ಹೊರಬಂದು. ಸಹಜ ಚಿಂತನೆಗಳನ್ನಳವಳಿಡಿಸಿಕೊಳ್ಳುವುದು ಉತ್ತಮ. ಈ ಕ್ರಮವು ಆರ್ಥಿಕ ಸಾಕ್ಷರತೆ ಬೆಳೆಸುವುದಲ್ಲದೆ, ಸಬತೆಯನ್ನೂ ಜೊತೆಗೂಡಿಸುವುದು. ಕೆಲವು ಬ್ಯಾಂಕಿಂಗ್ ಸಂಸ್ಥೆಗಳು ಈ ಪ್ರಿ ಅಪ್ರೂವ್ಡ್ ನೆಪದಲ್ಲಿ ನಾನ್ ರೀಫಂಡಬಲ್ ಪ್ರೊಸೆಸಿಂಗ್ ಚಾರ್ಜ್ ಗಳನ್ನು ಸಂಗ್ರಹಿಸಿ, ಮುಂದೆ ಸವಲತ್ತು ಒದಗಿಸದೆ, ನಾನ್ ರೀಫಂಡಬಲ್ ಪ್ರೊಸೆಸಿಂಗ್ ಚಾರ್ಜ್ ಹಿಂದಿರುಗಿಸದೆ ಇರುವ ಉದಾಹರಣೆಗಳುಂಟು. ಕೆ ವೈ ಸಿ ಒದಗಿಸಿ ಹಲವಾರು ವರ್ಷಗಳು ಆ ಬ್ಯಾಂಕ್ ನ ಗ್ರಾಹಕರಾಗಿದ್ದರೂ ಸರಿ, ವೃತ್ತಿಯಾಧಾರಿತ ನೆಪಗಳ ಮೂಲಕ ತಿರಸ್ಕರಿಸಿ, ನಾನ್ ರೀಫಂಡಬಲ್ ಪ್ರೊಸೆಸಿಂಗ್ ಚಾರ್ಜ್ ಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಳ್ಳುವುದೂ ಉಂಟು.
ಕೆಲವು ಬ್ಯಾಂಕ್ ಗಳಲ್ಲಿ ಮಾರ್ಕೆಟಿಂಗ್ ಟೀಂ ನ ಮೋಹಕ ಪದಗಳಿಗೆ ಮರುಳಾಗಿ, ಸೇವಿಂಗ್ಸ್ ಖಾತೆಯನ್ನು ತೆರೆದು, ನಂತರ ಮಿನಿಮಮ್ ಬ್ಯಾಲನ್ಸ್ ಮುಂತಾದ ಕಾರಣಗಳಿಂದ ಗ್ರಾಹಕರಿಗೆ ಹೊರೆ ಮಾಡಿರುವುದೂ ಉಂಟು. ಹೀಗೆ ಅಗೋಚರವಾದ ರೀತಿಯಲ್ಲಿ ನಮ್ಮ ಹಣವನ್ನು ಹೀರಿಕೊಳ್ಳುವ ವಿಧಗಳೇ ಹೆಚ್ಚಾಗಿ ಸೃಷ್ಟಿಯಾಗುತ್ತಿರುವುದು ಖೇದದ ಸಂಗತಿಯಾಗಿದೆ.
ಅವಕಾಶಗಳ ಆಗರ- ಷೇರುಪೇಟೆ: ಫಲಿತಾಂಶಧಾರಿತ ಅವಕಾಶಗಳು:
ಷೇರುಪೇಟೆಯಲ್ಲಿ ಅವಕಾಶಗಳು ಹೇಗೆ ಸೃಷ್ಠಿಯಾಗುತ್ತವೆ ಎಂಬುದನ್ನು ವೈವಿಧ್ಯಮಯ ಕೋನಗಳಿಂದ ಅರಿಯಬೇಕಾಗುತ್ತದೆ. ಇಲ್ಲಿ ಸಕಾರಾತ್ಮಕವಾದ , ನಕಾರಾತ್ಮಕವಾದ ಬೆಳವಣಿಗೆಗಳು ಸಾಕಷ್ಠಿವೆ. ವಿಶ್ಲೇಷಕರು ಯಾವ ರೀತಿ ಬೇಕಾದರೂ ವಿವರಿಸಬಹುದು. ಆದರೆ ಮುಖ್ಯವಾಗಿ ನಮ್ಮ ಅಗತ್ಯತೆ, ಸಾಮರ್ಥ್ಯವನ್ನು ನಾವು ಅರಿತು ನಡೆಸಿದಲ್ಲಿ ಮಾತ್ರ ಚಟುವಟಿಕೆ ಉತ್ತಮ ಫಲ ಕೊಡಬಹುದು. ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ;
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ :ಈ ಷೇರು ಸೆನ್ಸೆಕ್ಸ್ ನ ಅಂಗವಾಗಿದ್ದು ಬ್ಯಾಂಕಿಂಗ್ ಕ್ಷೇತ್ರದ ಸರ್ಕಾರಿ ವಲಯದ ಅಗ್ರಮಾನ್ಯ ಬ್ಯಾಂಕ್ ಆಗಿದೆ. ಈ ಬ್ಯಾಂಕಿನ ಷೇರು ಕಳೆದ ಒಂದು ವರ್ಷದಲ್ಲಿ ರೂ.150 ಸಮೀಪವಿದ್ದು ಸೆಪ್ಟೆಂಬರ್ ಮಾಸಾಂತ್ಯದ ಫಲಿತಾಂಶ ಬಂದ ಸಮಯದಲ್ಲಿ ವಿವಿಧ ಬ್ರೋಕಿಂಗ್ ಸಂಸ್ಥೆಗಳು ರೇಟಿಂಗ್ ನೀಡಿದವು. ಆಗ ಆಂಬಿಟ್ ಸಂಸ್ಥೆಯು ಈ ಷೇರಿಗೆ ರೂ.402 ರ ಟಾರ್ಗೆಟ್ ನೀಡಿತು. ಉಳಿದಂತೆ ಕೋಟಕ್ ಮಹೀಂದ್ರ ರೂ.340 ರ, ಸಿ ಎಲ್ ಎಸ್ ಎ ರೂ.330 ರ ಟಾರ್ಗೆಟ್ ನೀಡಿದ್ದವು. ಕ್ರೆಡಿಟ್ ಸೂಸ್ಸೆ ರೂ.270 ರ, ಮಾರ್ಗನ್ ಸ್ಟಾನ್ಲೆ ರೂ.280 ರ ಟಾರ್ಗೆಟ್ ನೀಡಿದ್ದವು. ಸೋಜಿಗವೆಂದರೆ ಈ ಎಲ್ಲಾ ಟಾರ್ಗೆಟ್ ಗಳನ್ನು ಈ ಷೇರು ಫೆಬ್ರವರಿಯಲ್ಲಿಯೇ ನೀಡಿ ರೂ.426 ರವರೆಗೂ ಜಿಗಿದು ವಾರ್ಷಿಕ ದಾಖಲೆಯನ್ನು ನಿರ್ಮಿಸಿತು. ಆದರೆ ಈ ಬೆಲೆ ಸ್ಥಿರತೆ ಕಾಣದೆ ಏಪ್ರಿಲ್ ನಲ್ಲಿ ರೂ.321 ರವರೆಗೂ ಜಾರಿತು.
ಈಗ ಬ್ಯಾಂಕ್ ತನ್ನ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದ ನಂತರ ರೂ.404 ರವರೆಗೂ ಪುಟಿದೆದ್ದು ರೂ.401 ರ ಸಮೀಪ ಕೊನಗೊಂಡಿದೆ. ವಿವಿಧ ಬ್ರೋಕಿಂಗ್ ಸಂಸ್ಥೆಗಳು ವೈವಿಧ್ಯಮಯ ರೇಟಿಂಗ್ ಮತ್ತು ಟಾರ್ಗೆಟ್ ಗಳನ್ನು ನೀಡಿದರೂ ಪೇಟೆಯಲ್ಲಿ ಷೇರಿನ ಬೆಲೆ ತನ್ನ ಘನತೆ, ಗಾಂಭೀರ್ಯಕ್ಕೆ ತಕ್ಕಂತೆ, ಬೇಡಿಕೆ ಪೂರೈಕೆಗಳನ್ನು ಸಮತೋಲನಗೊಳಿಸಿ, ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿ ಏರಿಳಿತಗಳನ್ನು ಪ್ರದರ್ಶಿಸಿದೆ.
ಪಿರಮಲ್ ಎಂಟರ್ ಪ್ರೈಸಸ್ : ಹಿಂದಿನವಾರ ಪ್ರಮುಖ ಕಂಪನಿಯಾದ ಪಿರಮಲ್ ಎಂಟರ್ ಪ್ರೈಸಸ್ ತನ್ನ ಮಾರ್ಚ್ ಅಂತ್ಯದ ಅಂಕಿ ಅಂಶಗಳನ್ನು ಪ್ರಕಟಿಸಿ, ಷೇರುದಾರರಿಗೆ ಪ್ರತಿ ಷೇರಿಗೆ ರೂ.33 ರಂತೆ ಡಿವಿಡೆಂಡ್ ಪ್ರಕಟಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.1,625 ರವರೆಗೂ ಕುಸಿಯಿತು. ಆದರೆ ಅಲ್ಲಿಂದ ಒಂದೇ ವಾರದಲ್ಲಿ ರೂ.1,748 ರವರೆಗೂ ಪುಟಿದೆದ್ದಿದೆ. ಇನ್ನೂ ಡಿವಿಡೆಂಡ್ ವಿತರಿಸಲು ನಿಗದಿತ ದಿನ ಗೊತ್ತುಪಡಿಸದ ಕಾರಣ ಈ ಷೇರಿನಲ್ಲಿ ಚಟುವಟಿಕೆಯು ಚುರುಕಾಗಿರುವ ಸಾಧ್ಯತೆಯೇ ಹೆಚ್ಚು.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್:ಬುಧವಾರದಂದು ಈ ಕಂಪನಿ ತನ್ನ ಫಲಿತಾಂಶವನ್ನು ಪ್ರಕಟಿಸಿತು. ಕಂಪನಿ ಆಕರ್ಷಕವಾದ ಅಂಕಿ ಅಂಶಗಳೊಂದಿಗೆ ಪ್ರತಿ ಷೇರಿಗೆ ರೂ.9 ರಂತೆ ಡಿವಿಡೆಂಡ್ ಪ್ರಕಟಿಸಿತು. ಈ ಎರಡೂ ಅಂಶಗಳು ಗುರುವಾರದಂದು ಷೇರಿನ ಬೆಲೆ ರೂ.193 ರ ಸಮೀಪದಿಂದ ರೂ.215 ರವರೆಗೂ ಜಿಗಿತ ಕಾಣುವಂತೆ ಮಾಡಿತು. ಈ ಕಂಪನಿಯು ಲಕ್ಷ್ಮೀವಿಲಾಸ್ ಬ್ಯಾಂಕನ್ನು ತನ್ನ ಸಮೂಹಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ಕಂಪನಿಯು ಹಿಂದಿನ ವರ್ಷದವರೆಗೂ ನಿರಂತರವಾಗಿ ಪ್ರತಿ ತ್ರೈಮಾಸಿಕದಲ್ಲೂ ಆಕರ್ಷಕ ಡಿವಿಡೆಂಡ್ ವಿತರಿಸಿದ ದಾಖಲೆ ಹೊಂದಿದೆ.
ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್:ಈ ಕಂಪನಿಯು ಗುರುವಾರದಂದು ಉತ್ತಮ ಫಲಿತಾಂಶದೊಂದಿಗೆ ಪ್ರತಿ ಷೇರಿಗೆ, ದಾಖಲೆಯ ರೂ.22.75 ರಂತೆ ಡಿವಿಡೆಂಡ್ ಪ್ರಕಟಿಸಿದ ಕಾರಣ ಷೇರಿನ ಬೆಲೆ ಶುಕ್ರವಾರ ವಾರ್ಷಿಕ ಗರಿಷ್ಠ ರೂ.288 ರ ದಾಖಲೆ ನಿರ್ಮಿಸಿತು. ನಂತರ ರೂ.275 ರ ಸಮೀಪಕ್ಕೆ ಕೊನೆಗೊಂಡಿತು.
ಕ್ಲಾರಿಯಂಟ್ ಇಂಡಿಯಾ:ಈ ಕಂಪನಿ ತನ್ನ ಷೇರುದಾರರಿಗೆ ಆಕರ್ಷಕವಾದ ಪ್ರಮಾಣದಲ್ಲಿ ಡಿವಿಡೆಂಡನ್ನು ವಿತರಿಸುವ ದಾಖಲೆ ಹೊಂದಿದೆ. ಹಿಂದಿನ ವರ್ಷ ಜುಲೈ ನಲ್ಲಿ ಪ್ರತಿ ಷೇರಿಗೆ ರೂ.140 ರಂತೆ ವಿಶೇಷ ಡಿವಿಡೆಂಡನ್ನು ವಿತರಿಸಿತು, ನಂತರ ಆಗಸ್ಟ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.11 ರಂತೆ ಡಿವಿಡೆಂಡನ್ನು ವಿತರಿಸಿತು. ಈ ವರ್ಷ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರೂ.50 ರಂತೆ ಮತ್ತೊಮ್ಮೆ ಡಿವಿಡೆಂಡನ್ನು ವಿತರಿಸಿದ ದಾಖಲೆ ಹೊಂದಿದೆ.
ಈ ಹಿನ್ನೆಲೆಯಲ್ಲಿ ಈ ಕಂಪನಿ ತನ್ನ ಫಲಿತಾಂಶವನ್ನು ಪ್ರಕಟಿಸುವ ದಿನದವರೆಗೂ ಚುರುಕಾದ ವಹಿವಾಟು ಪ್ರದರ್ಶಿಸಿ, ಗರಿಷ್ಠ ರೂ.530 ನ್ನು ತಲುಪಿತು. ಆದರೆ ಕಂಪನಿ ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್ ಪ್ರಕಟಿಸಿದ್ದು ಪೇಟೆಗೆ ಸಮಾಧಾನವಾಗದ ಕಾರಣ ಷೇರಿನ ಬೆಲೆ ರೂ.476 ರವರೆಗೂ ಜಾರಿತು.
ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು. ಈ ರೀತಿಯ ಅವಕಾಶಗಳನ್ನು ಆಗಿಂದಾಗ್ಗೆ ಪ್ರದರ್ಶಿಸುವ ಪೇಟೆಯಲ್ಲಿ ಸುರಕ್ಷಿತ ಮಟ್ಟದಲ್ಲಿರಬೇಕಾದಲ್ಲಿ ವಿಶೇಷವಾದ ಅರಿವು, ಅಧ್ಯಯನ, ಮಾಹಿತಿ, ಅನುಭವ, ಮಾರ್ಗದರ್ಶನಗಳ ಅವಶ್ಯಕ. ಈ ಕಾರಣದಿಂದಾಗಿ ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳಬೇಕಾದ ಬ್ರೋಕಿಂಗ್ ಸಂಸ್ಥೆಯು ಆ ರೀತಿಯ ಸೇವೆಗಳನ್ನು ಒದಗಿಸುವಂತಿದ್ದರೆ ಅವರಿಗೆ ನೀಡಬಹುದಾದ ವೃತ್ತಿಪರ ಶುಲ್ಕವನ್ನು ಚೌಕಾಶಿ ಮಾಡದೆ ಪಾವತಿಸಿ ಯೋಗ್ಯವಾದ ಸೇವೆ ಪಡೆದುಕೊಂಡಲ್ಲಿ ನ್ಯಾಯಸಮ್ಮತವಾಗಿರುತ್ತದೆ.
ಹೊಸದಾಗಿ ಪೇಟೆ ಪ್ರವೇಶಿಸುವವರು ಆರಂಭದಲ್ಲಿ ಸಣ್ಣ ಗಾತ್ರದ ಚಟುವಟಿಕೆ ನಡೆಸಿ ಅನುಭವ ಪಡೆದು ನಂತರ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿಸಿಕೊಳ್ಳುವುದು ಸೂಕ್ತ. ಈಗಿನ ಪೇಟೆಯಲ್ಲಿ ಆರಂಭದಲ್ಲಿ ಹೂಡಿಕೆಯಾಗಿ ಪ್ರವೇಶಿಸಿದರೂ, ನಂತರದಲ್ಲಿ ವ್ಯವಹಾರದಂತೆ ದೊರೆತ ಅವಕಾಶಗಳನ್ನು ತಮ್ಮದಾಗಿಸಿಕೊಂಡಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂಬುದು ಸದಾ ನೆನಪಿನಲ್ಲಿಡಬೇಕಾದ ಅಂಶ.