18.6 C
Karnataka
Saturday, November 30, 2024
    Home Blog Page 109

    ಲಸಿಕೆ: ಯಾರಿಗೆ ಯಾವಾಗ

    ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಎದ್ದಿರುವ ಗೊಂದಲಗಳಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕೋವಿಡ್ ಲಸಿಕೆ ನೀಡುವ ವಿವರಗಳನ್ನು ಅದು ಟ್ವಿಟರ್ ಮೂಲಕ ಪ್ರಕಟಿಸಿದೆ.

    ಯಥಾ ಪ್ರಜಾ…ತಥಾ ರಾಜಾ ಅಂದಿದ್ದರು ಕೃಷ್ಣ

    ಯಥಾ ರಾಜಾ…ತಥಾ ಪ್ರಜಾ… ಎಂಬುದು ಅನಾದಿ ಕಾಲದ ಮಾತು. ರಾಜನಿದ್ದಂತೆ ಪ್ರಜೆಗಳು ಎಂದರ್ಥ. ಇದನ್ನು ಉಲ್ಟಾ ಮಾಡಿ ಹೇಳಿದ್ದರು ಅವರು. ಯಥಾ ಪ್ರಜಾ…ತಥಾ ರಾಜಾ ಅಂದಿದ್ದರು. ಅವರು ಮತ್ತ್ಯಾರೂ ಅಲ್ಲ; ಶುಕ್ರವಾರ ಇಹಲೋಕ ತ್ಯಜಿಸಿದ ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ.

    ಅನುಮಾನವೇ ಬೇಡ, ಕೃಷ್ಣ ಈ ನಾಡು ಕಂಡ ಅಪರೂಪದ ರಾಜಕಾರಣಿ. ಮೂರು ಬಾರಿ ವಿಧಾನಸಭಾ ಸದಸ್ಯರು, ಒಂದು ಬಾರಿ ಸಚಿವರು, ಒಮ್ಮೆ ಲೋಕಸಭಾ ಸದಸ್ಯರು, ಒಂದು ಅವಧಿಗೆ ವಿಧಾನಸಭಾ ಸ್ಪೀಕರ್‌ ಆಗಿದ್ದವರು. ಆದರೆ, ಅವರು ಇಡೀ ರಾಜ್ಯಕ್ಕೆ ಹೆಚ್ಚು ಪರಿಚಯವಾಗಿದ್ದೇ ವಿಧಾನಸಭಾ ಸ್ಪೀಕರ್‌ ಆದಾಗಲೇ. ಎಸ್‌.ಆರ್‌.ಬೊಮ್ಮಾಯಿ ಸಚಿವ ಸಂಪುಟದಲ್ಲಿಅವರು ರೇಷ್ಮೆ ಸಚಿವರಾಗಿದ್ದ ಅವಧಿಯೂ ಬಹಳ ಕಡಿಮೆ.

    ಕೃಷ್ಣ ಅವರ ಜೊತೆ ನನಗೆ ಸುಮಾರು 30 ವರ್ಷಗಳ ಒಡನಾಟ. ಪತ್ರಿಕೋದ್ಯಮದ ನನ್ನ ಆರಂಭದ ವರ್ಷಗಳಿಂದಲೇ ಪರಿಚಯವು ವಿಶ್ವಾಸವಾಗಿ ಬೆಳೆದಿತ್ತು. ಕೃಷ್ಣ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು ಮಂಡ್ಯ ಜಿಲ್ಲೆನಾಗಮಂಗಲದಲ್ಲಿ. ಅದು 1990ರ ದಶಕದ ಆರಂಭದ ವರ್ಷಗಳು. ಆಗ ನಾಗಮಂಗಲದ ಶಾಸಕರಾಗಿದ್ದ ಲಾಳನಕೆರೆ ಶಿವರಾಮೇಗೌಡರ ಹೆಸರು ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿಕೇಳಿ ಬಂದಿತ್ತು. ಜನತಾಪರಿವಾರದ ನೇತಾರ ಎಚ್‌.ಡಿ.ದೇವೇಗೌಡರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಶಿವರಾಮೇಗೌಡರ ವಿರುದ್ಧ ಬೀದಿಗಿಳಿದರು. ಆಗ ರಾಜ್ಯದಲ್ಲಿಎಸ್‌.ಬಂಗಾರಪ್ಪ ಅವರ ಸರಕಾರ. ದೇವೇಗೌಡರು 1989ರ ವಿಧಾನಸಭಾ ಚುನಾವಣೆಯಲ್ಲಿಸೋತು ರಾಜಕೀಯವಾಗಿ ಸಂಕಷ್ಟದಲ್ಲಿದ್ದರು. ದೇವೇಗೌಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಗಮಂಗಲದಲ್ಲಿಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಗಂಗಾಧರಮೂರ್ತಿ ಅವರ ಫೋಟೋವನ್ನು ಕೈಯಲ್ಲಿಹಿಡಿದು ಬೃಹತ್‌ ಪಾದಯಾತ್ರೆ ನಡೆಸಿದರು. ಆಗ ಸಂಯುಕ್ತ ಕರ್ನಾಟಕದ ಮೈಸೂರು ಜಿಲ್ಲಾವರದಿಗಾರನಾಗಿದ್ದ ನಾನು ಈ ಪಾದಯಾತ್ರೆಯನ್ನು ವರದಿ ಮಾಡಲು ನಾಗಮಂಗಲಕ್ಕೆ ಹೋಗಿದ್ದೆ. ಅಲ್ಲಿಕೃಷ್ಣ ಮೊದಲ ಬಾರಿಗೆ ಪರಿಚಯವಾದರು.

    ಕೃಷ್ಣ ಅವರು ರಾಮಕೃಷ್ಣ ಹೆಗಡೆ, ದೇವೇಗೌಡ,ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಅವರ ಮುಂದಾಳತ್ವದ ಆಗಿನ ಜನತಾಪರಿವಾರದಲ್ಲಿಎರಡನೇ ಹಂತದ ನಾಯಕರಾಗಿದ್ದವರು. . ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕಾರಣ ಪ್ರವೇಶದ ಮುನ್ನಾ ದಿನಗಳಿಂದಲೂ ಆಪ್ತರಾಗಿದ್ದವರು. ಕೃಷ್ಣ ಹಾಗೂ ಸಿದ್ದರಾಮಯ್ಯ ಇಬ್ಬರೂ ಮೈಸೂರಿನಲ್ಲಿಹಿರಿಯ ವಕೀಲರೊಬ್ಬರ ಬಳಿ ವಕೀಲ ವೃತ್ತಿ ಆರಂಭಿಸಿದ್ದವರು. ಜನತಾಪರಿವಾರದಲ್ಲಿಈ ಇಬ್ಬರೂ ಒಂದು ಕಾಲದಲ್ಲಿಎಸ್‌.ಆರ್‌.ಬೊಮ್ಮಾಯಿ ಅವರ ಜೊತೆ ಹೆಚ್ಚು ಗುರುತಿಸಿಕೊಂಡವರಾಗಿದ್ದರು. ಇದಕ್ಕೆ ಕಾರಣ ಬೊಮ್ಮಾಯಿ ಅವರು ನಂಬಿದ್ದ ಎಂ.ಎನ್‌.ರಾಯ್‌ ಅವರ ಸಿದ್ಧಾಂತ. ಜನತಾ ಪರಿವಾರದ ಆಂತರಿಕ ರಾಜಕಾರಣದಲ್ಲಿಒಕ್ಕಲಿಗ ಸಮಾಜದ ಕೃಷ್ಣ ಅವರನ್ನು ಬದಿಗೆ ಸರಿಸುವ ಪ್ರಯತ್ನ ನಡೆದಾಗಲೆಲ್ಲಾಅವರ ಬೆಂಬಲಕ್ಕೆ ನಿಲ್ಲುತ್ತಿದ್ದವರು ಸಿದ್ದರಾಮಯ್ಯ.

    ಸಿದ್ದರಾಮಯ್ಯ ಹಾಗೂ ಕೃಷ್ಣ ಅವರ ಮಧ್ಯೆ ಮೊದಲ ಬಾರಿಗೆ ರಾಜಕೀಯವಾಗಿ ಬಿರುಕು ಮೂಡಿದ್ದು 2006ರಲ್ಲಿ. ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ವಿರುದ್ಧ ತಿರುಗಿ ಬಿದ್ದು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗ ಇದಕ್ಕೆ ನೀರೆರೆದವರು ಆಗ ಸ್ಪೀಕರ್‌ ಆಗಿದ್ದ ಕೃಷ್ಣ ಎಂಬುದು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿಸ್ಪೀಕರ್‌ ಆಗಿ ಕೃಷ್ಣ ಅವರು ಕೈಗೊಂಡ ನಿರ್ಧಾರಗಳು ವಿವಾದಕ್ಕೀಡಾಯಿತು.

    ಕೃಷ್ಣ ಅವರು ಸ್ಪೀಕರ್‌ ಆದಾಗ ಕರ್ನಾಟಕ ರಾಜಕಾರಣವು ಸಂಕ್ರಮಣದ ಕಾಲದಲ್ಲಿತ್ತು. ವಿಧಾನಸಭೆಯಲ್ಲಿಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಕರ್ನಾಟಕದಲ್ಲಿಮೊದಲ ಬಾರಿಗೆ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಪರಸ್ಪರ ಜಿದ್ದಾಜಿದ್ದಿ ಹೋರಾಟದ ಪಕ್ಷಗಳಾಗಿದ್ದ ಕಾಂಗ್ರೆಸ್‌ -ಜೆಡಿಎಸ್‌ ಮೊದಲ ಬಾರಿಗೆ ಕೈಜೋಡಿಸಿ ಸರಕಾರ ರಚಿಸಿದ್ದು ಕರ್ನಾಟಕ ರಾಜಕಾರಣದಲ್ಲಿಆಘಾತವೇ ಸರಿ. ಕಾಂಗ್ರೆಸ್‌ ವಿರೋಧದಲ್ಲೇ ತನ್ನ ಶಕ್ತಿಯನ್ನು ಕಂಡು ಕೊಂಡಿದ್ದ ಜನತಾ ಪರಿವಾರ ಅಧಿಕಾರಕ್ಕಾಗಿ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದ್ದನ್ನು ಜನತಾ ಪರಿವಾರದ ಕಟ್ಟಾ ಬೆಂಬಲಿಗರು ಒಪ್ಪಿಕೊಳ್ಳಲು ಸುತರಾಂ ಸಿದ್ದರಿರಲಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಧರ್ಮಸಿಂಗ್‌ ಸರಕಾರ ರಚನೆಯಾಗಿ 20 ತಿಂಗಳಲ್ಲೇ ಕುಮಾರಸ್ವಾಮಿ ನಾಯಕತ್ವದಲ್ಲಿಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೇರಿತ್ತು. ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿಅಧಿಕಾರದ ರುಚಿ ಕಂಡಿತು. ಅಧಿಕಾರ ಪಲ್ಲಟದ ಇಂತಹ ಕಾಲಘಟ್ಟದಲ್ಲಿಸ್ಪೀಕರ್‌ ಆಗಿದ್ದವರು ಕೃಷ್ಣ.

    ಇದೇನೇ ಇರಲಿ. ಕೃಷ್ಣ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ರಾಜಕಾರಣದಲ್ಲಿಹಣದ ಹಿಂದೆ ಯಾವತ್ತೂ ಹೋದವರಲ್ಲ. ಸರಳ ಜೀವಿ. ಅವರು ಸರಳವಾಗಿರಬೇಕೆಂದು ಸರಳವಾಗಿರುತ್ತಿದ್ದವರಲ್ಲ. ಅವರು ಜೀವನ ಶೈಲಿಯೇ ಹಾಗಿತ್ತು. ಸ್ವಲ್ಪ ಶ್ರೀಮಂತಿಕೆಯ ಜೀವನ ನಡೆಸಲು ಅವರ ಬಳಿ ಆರ್ಥಿಕ ಅನುಕೂಲ ಇರಲಿಲ್ಲಎಂದೇನೂ ಅಲ್ಲ. ಆದರೆ, ಸರಳವಾಗಿ ಬದುಕುವುದೇ ಅವರಿಗೆ ಒಗ್ಗಿ ಹೋಗಿತ್ತು. ಅದು ಅವರ ಮಾನಸಿಕ ಸ್ಥಿತಿ.

    ಸ್ಪೀಕರ್‌ ಆಗಿ ದುಬಾರಿ ಕಾರಿನಲ್ಲಿ ಪೊಲೀಸ್‌ ಎಸ್ಕಾರ್ಟ್‌ಗಳೊಂದಿಗೆ ಓಡಾಡುವಷ್ಟೇ ಸುಲಭವಾಗಿ ಫುಟ್‌ಪಾತ್‌ನಲ್ಲಿ ನಡೆದುಕೊಂಡೋ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಬೆಂಗಳೂರು-ಮೈಸೂರು ಪ್ರಯಾಣಿಸುವುದೋ ಅವರಿಗೆ ಅಷ್ಟೇ ಸಲೀಸಾಗಿತ್ತು. ಮಹಾತ್ಮ ಗಾಂಧೀಜಿ ಹಾಗೂ ರಾಮಮನೋಹರ ಲೋಹಿಯಾ ಅವರ ಜೀವನದಿಂದ ಕೃಷ್ಣ ಪ್ರಭಾವಿತರಾಗಿದ್ದರು.

    ಕೃಷ್ಣ ಅಧಿಕಾರ ಬಂದಾಗಲೂ ಅಹಂ ಅನ್ನು ತಮ್ಮ ಬಳಿ ಬಿಟ್ಟುಕೊಂಡವರಲ್ಲ. ಅಧಿಕಾರ ಸಿಕ್ಕಾಗ ಹಿಗ್ಗಲಿಲ್ಲ. ಅಧಿಕಾರ ಹೋದಾಗ ಕುಗ್ಗಲಿಲ್ಲ. ಏಕೆಂದರೆ, ಅವರಲ್ಲೊಬ್ಬ ಸ್ಥಿತಪ್ರಜ್ಞ ಯಾವತ್ತೂ ನೆಲೆಸಿದ್ದ. ಅಧಿಕಾರದ ಕುರ್ಚಿ ಮೇಲೆ ಕುಳಿತಾಗಲೂ ಎಲೆ ಮೇಲೆ ಬಿದ್ದ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವರು. ಒಂದು ಕಡೆ ಬಿಡಲಾಗದ ತತ್ತ್ವ ಸಿದ್ದಾಂತ, ಇನ್ನೊಂದು ಕಡೆ ಹಳೆಯದಕ್ಕೆ ಅಂಟಿಕೊಂಡರೆ ಬದಲಾದ ರಾಜಕೀಯ ವಾತಾವರಣದಲ್ಲಿಅಸ್ತಿತ್ವದ ಪ್ರಶ್ನೆ -ಈ ಎರಡರಮಧ್ಯೆ ಕೃಷ್ಣ ಆಯ್ಕೆ ಮಾಡಿಕೊಂಡಿದ್ದು ತತ್ತ್ವ, ಸಿದ್ದಾಂತವನ್ನೇ.

    ಅವರ ಜೊತೆ ಹರಟೆ ಹೊಡೆಯುತ್ತಿದ್ದ ಅನೇಕ ಸಂದರ್ಭದಲ್ಲಿಅವರಲ್ಲಿನಾನು ಕಂಡಿದ್ದು ತಮ್ಮ ಬುದ್ದಿಯ ಮಾತಿಗಿಂತ ಹೃದಯದ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಭ್ರಷ್ಟ ವ್ಯವಸ್ಥೆಯಲ್ಲಿಬದುಕಲು ಅವರು ತುಂಬಾ ಕಸಿವಿಸಿಗೊಳ್ಳುತ್ತಿದ್ದರು.
    ಕೃಷ್ಣ ತುಂಬಾ ಮಹತ್ವಾಕಾಂಕ್ಷೆಯ ರಾಜಕಾರಣಿ ಆಗಿರಲಿಲ್ಲ. ತಮ್ಮ ಕ್ಷೇತ್ರದ ಮಟ್ಟಿಗೆ ರಾಜಕಾರಣ ಮಾಡಿಕೊಂಡಿದ್ದವರು. ಪಕ್ಕದ ಕ್ಷೇತ್ರದ ಕಡೆಗೂ ತಲೆ ಹಾಕುತ್ತಿರಲಿಲ್ಲ. ಅವರ ಇತಿಮಿತಿಯ ಅರಿವು ಚೆನ್ನಾಗಿತ್ತು. ಸಮಾಜವಾದಿ ಸಿದ್ದಾಂತ ಹಿನ್ನೆಲೆಯ ಅವರು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಕಟ್ಟಿ ಜಾರ್ಜ್‌ ಫರ್ನಾಂಡೀಸ್‌ ಅವರನ್ನು ಮೈಸೂರಿಗೆ ಕರೆಸಿ ಈ ವೇದಿಕೆಯನ್ನು ಅವರಿಂದ ಉದ್ಘಾಟಿಸಿದ್ದರು.

    ಕೃಷ್ಣ ಅವರ ಜೊತೆ ಆಗಾಗ್ಗೆ ರಾಜಕಾರಣ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹರಟೆ ಹೊಡೆಯುವ ಸಮಯ ಒದಗಿ ಬರುತ್ತಿತ್ತು. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅವರು ಮೈಸೂರಿನ ಕುವೆಂಪುನಗರದ ಮನೆಯಲ್ಲಿದ್ದಾಗ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರಿಯಾಗಿ ಕೇಳುತ್ತಿರಲಿಲ್ಲ. ಆಗೆಲ್ಲಾಅವರು ಮನೆಗೆ ಬಂದು ಬಿಡಿ ಎನ್ನುತ್ತಿದ್ದರು. ಅವರ ಮನೆಗೆ ಹೋಗಿ ಮಾತಾಡಿ ಬರುತ್ತಿದ್ದೆ. ಮೈಸೂರಿನಲ್ಲಿ ಎಲ್ಲಿಯಾದರೂ ದಾರಿಯಲ್ಲಿಸಿಕ್ಕರೆ ಅಲ್ಲಿಯೇ ಯಾವುದಾದರೂ ಹೋಟೆಲ್‌ಗೆ ಹೋಗಿ ಚಹಾ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದೆವು. ಅವರ ಜೊತೆ ಮಾತಾಡುವಾಗ ರಾಜಕೀಯದ ಒಳನೋಟಗಳು ಗೊತ್ತಾಗುತ್ತಿದ್ದವು.

    ಮಾತಿನ ಮಧ್ಯೆ ಮಾಧ್ಯಮ ಕ್ಷೇತ್ರವೂ ವ್ಯಾಪಾರೀಕರಣದಿಂದ ಹೊರತಾಗಲಿಲ್ಲಎಂದು ನೊಂದುಕೊಳ್ಳುತ್ತಿದ್ದರು. ಆದರೆ, ಇದನ್ನೇ ನೆಪ ಮಾಡಿಕೊಂಡು ಮಾಧ್ಯಮಕ್ಕೆ ಅಧಿಕಾರಸ್ಥರು ಮೂಗುದಾರ ಹಾಕಲು ಹೊರಟರೆ ಸಹಿಸುವುದಿಲ್ಲ. ಮಾಧ್ಯಮದ ಸ್ವೇಚ್ಛಾಚಾರಕ್ಕೆ ನಿಯಂತ್ರಣ ಆ ಕ್ಷೇತ್ರದ ಒಳಗಿನಿಂದಲೇ ಆಗಬೇಕೇ ವಿನಾ ಸರಕಾರಗಳು ಮಾಡುವುದನ್ನು ಒಪ್ಪುವ ಮಾತೇ ಇಲ್ಲಎನ್ನುತ್ತಿದ್ದರು. ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಅವರು ವಿಧಾನಸಭೆಗೆ ಎಲೆಕ್ಟ್ರಾನಿಕ್‌ ಮೀಡಿಯಾದ ಕ್ಯಾಮರಾಗಳಿಗೆ ಪ್ರವೇಶ ನಿರ್ಬಂಧಿಸಿದಾಗ ಇದನ್ನು ವಿರೋಧಿಸಿದ್ದರು.


    ಕಳೆದ ವರ್ಷ ಒಂದು ದಿನ ಅವರ ಜೊತೆ ಮಾತಾಡುವಾಗ, ನೋಡ್ರೀ…ಈ ದೇಶಕ್ಕೆ ಒಬ್ಬ ಡಿಕ್ಟೇಟರ್‌ (ಸರ್ವಾಧಿಕಾರಿ) ಬೇಕು ಅಂದರು. ಏನ್‌ ಸರ್‌, ಹೀಗೆ ಹೇಳ್ತೀರಿ? ಅಂತ ನಾನು ಆಶ್ಚರ್ಯ ಚಕಿತನಾಗಿ ಕೇಳಿದಾಗ, ಇಲ್ಲಗುರುರಾಜ್‌, ನಮ್ಮ ಜನರೇ ಸರಿ ಇಲ್ಲ. ದುಡ್ಡು ತಗೊಂಡು ವೋಟ್‌ ಹಾಕ್ತಾರೆ. ಪ್ರಾಮಾಣಿಕತೆ, ಶಿಸ್ತು ಮರೆಯಾಗಿದೆ . ಯಥಾ ಪ್ರಜಾ…ತಥಾ ರಾಜಾ ಅಂತಾಗಿದೆ. ಜನರೇ ಭ್ರಷ್ಟರಾದರೆ ಏನ್‌ ಮಾಡ್ತೀರಿ? ಈ ದೇಶಕ್ಕೆ ಒಬ್ಬ ದಯಾಳು ಸರ್ವಾಧಿಕಾರಿ ಬೇಕು ( ಬೆನೆವೋಲೆಂಟ್‌ ಡಿಕ್ಟೇಟರ್‌). ಆಗಲೇ ನಮ್ಮ ಜನ ಸರಿ ಹೋಗೋದು ಅಂತ ಕಾಣುತ್ತೆ ಅಂತ ತುಂಬಾ ನೊಂದು ಮಾತಾಡಿದ್ದರು. ಅಂದರೆ, ಅವರೇನೂ ಮನಃಪೂರ್ವಕವಾಗಿ ಈ ಮಾತನ್ನು ಹೇಳಿರಲಿಲ್ಲ. ಆದರೆ, ವ್ಯವಸ್ಥೆ ಅಷ್ಟೊಂದು ಹದಗೆಟ್ಟು ಹೋಗಿದೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಕೆಲವು ವರ್ಷಗಳ ಮಟ್ಟಿಗಾದರೂ ದಯಾಳು ಸರ್ವಾಧಿಕಾರಿಯೊಬ್ಬನ ಅಗತ್ಯವಿದೆ ಎಂದು ಒಲ್ಲದ ಮನಸ್ಸಿನಿಂದಲೇ ಹತಾಶರಾಗಿ ಹೇಳಿದ್ದರು.

    ಭ್ರಷ್ಟ ವ್ಯವಸ್ಥೆಯ ಬಗ್ಗೆ ಅವರು ಅಷ್ಟೊಂದು ರೋಸಿ ಹೋಗಿದ್ದರು. ಮರುಕ್ಷಣವೇ ಜನತಂತ್ರ ವ್ಯವಸ್ಥೆಯಲ್ಲಿಏನಾದರೂ ಸುಧಾರಣೆ ಆಗಬಹುದು ನೋಡೋಣ. ಈ ಸುಧಾರಣೆ ಯುವಪೀಳಿಗೆಯವರಿಂದ ಮಾತ್ರ ಸಾಧ್ಯ ಎಂದಿದ್ದರು.

    ಕೃಷ್ಣ ಒಳ್ಳೆಯ ವಾಗ್ಮಿ ಅಲ್ಲ, ವೇದಿಕೆ ಮೇಲೆ ನಿಂತು ಮಾತಾಡುವ ಒಳ್ಳೆಯ ಭಾಷಣಕಾರರೂ ಅಗಿರಲಿಲ್ಲ. ಆದರೆ, ಅವರಾಡುವ ಮಾತು ಹೃದಯದಿಂದ ಬರುತ್ತಿದ್ದವು. ಅಂತರಂಗದ ಪಿಸು ಮಾತಾಗಿರುತ್ತಿದ್ದವು. ಒಡಲಾಳದ ನೋವಾಗಿರುತ್ತಿದ್ದವು. ಹೀಗಾಗಿ, ಜನರ ಹೃದಯಕ್ಕೆ ನೇರವಾಗಿ ನಾಟುತ್ತಿತ್ತು.

    ಕೃಷ್ಣ ಅವರು ಜನತಾ ಪರಿವಾರದಿಂದ ದೂರವಾದಾಗ ಬಿಜೆಪಿಯ ಕೆಲವು ಹಿರಿಯ ನಾಯಕರು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ, ಅವರು ಬಿಜೆಪಿಗೆ ಹೋಗುವ ಮನಸ್ಸು ಮಾಡಲಿಲ್ಲ. ಸಿದ್ದರಾಮಯ್ಯ ಅವರ ಜೊತೆ ಮಾತಾಡಿ ಕಾಂಗ್ರೆಸ್‌ ಕೈ ಹಿಡಿದರು. ಕಾಂಗ್ರೆಸ್‌ ಸೇರುವುದು ಕೂಡ ಅವರ ಮನಸಾರೆಯ ತೀರ್ಮಾನವಾಗಿರಲಿಲ್ಲ. ಕೆಲವು ಬೆಂಬಲಿಗರ ಒತ್ತಾಯಕ್ಕೆ ಕಟ್ಟು ಬಿದ್ದು ಇಂತಹ ನಿರ್ಧಾರ ಕೈಗೊಂಡಿದ್ದರು. ಆದರೆ, ಕಾಂಗ್ರೆಸ್‌ ನಲ್ಲಿಅವರೇನೂ ಸಕ್ರಿಯರಾಗಿರಲಿಲ್ಲ. ರಾಜಕಾರಣ ದ ಮತ ಸಂತೆಯಲ್ಲಿ ಕಾಂಚಾಣದ ಥೈಲಿ ಕುಣಿದಾಗ ಕೃಷ್ಣ ಮೂಕಪ್ರೇಕ್ಷಕರಾಗಿ ಬಹಳ ವರ್ಷಗಳೇ ಆಗಿದ್ದವು. ಒಂದು ದಿನ ರಾಜಕೀಯ ನಿವೃತ್ತಿ ಘೋಷಿಸಿದರು. ಬೆಂಬಲಿಗರಿಗೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಅಂತ ಸ್ಥಿತಪ್ರಜ್ಞರಾದರು.

    ಹೀಗಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿಮಂಡ್ಯ ಕ್ಷೇತ್ರದಲ್ಲಿಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ ಕುಮಾರಸ್ವಾಮಿ ಹಾಗೂ ದಿವಂಗತ ಅಂಬರೀಶ್‌ ಅವರ ಪತ್ನಿ ಸುಮಲತಾ ಅಂಬರೀಶ್‌ ಅವರ ಮಧ್ಯೆ ಹಣಾಹಣಿ ಉಂಟಾದಾಗ ಇಬ್ಬರೂ ಕೃಷ್ಣ ಅವರ ಮನೆ ಬಾಗಿಲು ತಟ್ಟಿದರು. ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡರು. ಆದರೆ, ಕೃಷ್ಣ ಅವರದು ಒಂದೇ ಮಾತು. ನಾನು ರಾಜಕಾರಣದಿಂದ ನಿವೃತ್ತ ನಾಗಿದ್ದೇನೆ. ನಿಮಗೆ ಒಳ್ಳೆಯದಾಗಲಿ ಎಂದು ಇಬ್ಬರಿಗೂ ಶುಭ ಹಾರೈಸಿ ಕಳುಹಿಸಿದ್ದರು.

    ಆದರೆ, ಚುನಾವಣಾ ಸಮಯದಲ್ಲಿಅವರ ಜೊತೆ ನಾನು ಮಾತಾಡುವಾಗ , ಸುಮಲತಾ ಅವರ ಬಗ್ಗೆ ಎದುರಾಳಿಗಳು ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿದ್ದುದನ್ನು ನೋಡಿ ಸಿಟ್ಟಾಗಿದ್ದರು. ಒಬ್ಬ ಹೆಣ್ಣು ಮಗಳ ಬಗ್ಗೆ ಹೀಗೆಲ್ಲಾಮಾತಾಡ್ತಾರಾ? ಅಂತ ನೊಂದಿದ್ದರು. ಅವನ ಮನಸ್ಸು ಸುಮಲತಾ ಅವರ ಗೆಲುವಿಗೆ ತುಡಿಯುತ್ತಿದುದು ಅವರ ಮಾತಿನಲ್ಲಿವ್ಯಕ್ತವಾಗಿತ್ತು.

    ಕೃಷ್ಣ ಅವರ ನಿಧನದ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಅವರೊಂದಿಗಿನ ಒಡನಾಟದ ನೆನಪುಗಳು ಸುರುಳಿ ಬಿಚ್ಚಿದವು.

    ಮಂಗಳೂರು ವಿವಿಯಿಂದ ಆಶಾ (ASHA) ಕಾರ್ಯಕರ್ತೆಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ

    ಕೋವಿಡ್ ೧೯ ಸಂಧಿಗ್ದ ಸಮಯದಲ್ಲಿ ಆಶಾ (ASHA)  ಕಾರ್ಯಕರ್ತೆಯರು  ಹಗಲಿರುಳು ನೀಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಹಣ್ಣುಹಂಪಲು ಮತ್ತು  ರೋಗನಿರೋಧಕ ಶಕ್ತಿ ವೃದ್ಧಿಸುವ ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ  ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತ್ತು.‌

     ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ  ಅವರು ಪೌಷ್ಟಿಕ ಆಹಾರ ಕಿಟ್ ಗಳನ್ನು ಕೊಣಾಜೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ವಿತರಿಸಿ “ಜನರ ಸೇವೆಯೇ ಜನಾರ್ದನ ಸೇವೆ; ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರು ಸಮುದಾಯದಲ್ಲಿ ಮಾಡುತ್ತಿರುವ ಆರೋಗ್ಯ ಸೇವೆಯು  ದೇವರು ಮೆಚ್ಚುವಂತದ್ದು.  ಈ  ಸಂದರ್ಭದಲ್ಲಿ  ಅವರನ್ನು ಗುರುತಿಸಿ ಗೌರವಿಸುವುದು, ಅವರ  ಕರ್ತವ್ಯಕ್ಕೆ ಬೆಂಬಲವಾಗಿ ನಿಲ್ಲುವುದು ನಮ್ಮ ಧರ್ಮ”  ಎಂದು ನುಡಿದರು.

     ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ.‌ ಅವರು ಮಾತಾನಾಡಿ ಜನರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರೆಯರು ತಮ್ಮ  ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಮುಖ್ಯ.  ಈ ಹಿನ್ನೆಲೆಯಲ್ಲಿ ಅವರಿಗೆ ಪೌಷ್ಟಿಕ ಆಹಾರ ಕಿಟ್ ನ್ನು ನೀಡುತ್ತಿರುವುದು ನಮ್ಮ ಒಂದು ಅಳಿಲು ಸೇವೆ”  ಹೇಳಿ ವಂದನಾರ್ಪಣೆ   ಸಲ್ಲಿಸಿದರು.

    .ಆಶಾ ಕಾರ್ಯಕರ್ತೆಯರ ಪರವಾಗಿ ಪೂರ್ಣಿಮ ಶೆಟ್ಟಿ ಮಾತಾನಾಡಿ ಕೋವಿಡ್ ವಾರಿಯರ್ ಆಗಿ  ತಮ್ಮ ಅನುಭವವನ್ನು ಹಂಚಿಕೊಂಡರು.‌ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತಾನಾಡಿ ಸ್ವಾಗತಿಸಿದರು. ‌ಮಂಗಳೂರು ವಿವಿ ಕೋವಿಡ್-೧೯ ಸೆಲ್ ಇದರ ನೋಡಲ್ ಅಧಿಕಾರಿ ಪ್ರೊ.‌ ರಾಜು ಕೃಷ್ಣ  ಚಲನಾನವರ್,  ಮಂಗಳೂರು ವಿವಿ ಯ ಉದ್ಯೋಗಿಗಳ ಸಹಕಾರ ಸಂಘದ ನಿರ್ದೇಶಕರೊಬ್ಬರಲ್ಲಿ ಒಬ್ಬರಾದ . ಚನಿಯಪ್ಪ ನಾಯಕ್ ಬಿ., ಪ್ರೊ.‌ ವೈ. ಸಂಗಪ್ಪ , ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೇದಾವತಿ ಗಟ್ಟಿ, ಕೋವಿಯ್-೧೯ ಟಾಸ್ಕ್ ಫ಼ೋರ್ಸ್ ಸದಸ್ಯೆ ಶ್ರೀಮತಿ ರಾಜೇಶ್ವರಿ ಎಮ್  ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.

    ವಿಶ್ವವಿದ್ಯಾನಿಲಯದ   ‘ವಾತ್ಸಲ್ಯ ನಿಧಿ’  ಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೋವಿಡ್ ೧೯ ಸುರಕ್ಷತಾ ನಿಯಮಾವಳಿಯನ್ನು  ಪಾಲಿಸಲಾಯಿತು.

    ಏನಾದರು ಆಗು ಮೊದಲು ಸುಜ್ಞಾನಿಯಾಗು

    ಎಲ್ಲಿಯೂ ನಿಲ್ಲದಿರು,ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು…ಓ ನನ್ನ ಚೇತನ ಆಗು ನೀ ಅನಿಕೇತನ…..ಅಂದ ರಸ ಋಷಿ ಕವಿ ವಾಣಿ ಬಹಳ ದಿನದಿಂದ ಅವ್ಯಕ್ತ ಯೋಚನೆಯನ್ನು ನನ್ನಲ್ಲಿ ಹುಟ್ಟು ಹಾಕಿದೆ. ಕೊನೆ ಅನ್ನೋದು ಮುಟ್ಟಲಾಗದ ಅನಂತತೆಯಾ? ಅಥವಾ ಮುಟ್ಟುವ ಶಕ್ತಿ ಇದ್ದರೂ ಮುಟ್ಟಿ ನಿರಾಸೆ ಹೊಂದಬಾರದು ಅನ್ನುವ ಅರ್ಥವಾ? ಕೊನೆಯ ಉಸಾಬರಿಯೇ ಬೇಡ, ಇದ್ದಲ್ಲಿಯೇ ಮನೆ ಕಟ್ಟಿ ಕೊನೆ ಕಾಣುವ ಅಂದರೆ, ಎಲ್ಲಿಯೂ ನಿಲ್ಲಬೇಡ, ಮನೆ ಕಟ್ಟ ಬೇಡ ಅನ್ನುತ್ತಿದೆ ಕವಿ ವಾಣಿ! ಅನಂತತೆಯಲ್ಲಿ ಅನಂತನಾಗು, ಕೊನೆಯಾಗಬೇಡ ಎಂದಾರ್ಥವೇ?

    If Happiness is your destination, it’s along the road,not at the end of the road ಅಂದ ಮತ್ತೊಬ್ಬ ತತ್ವಜ್ಞಾನಿ ಇದನ್ನೇ ಹೇಳಿದನಾ? ವಿಶ್ರಮಿಸದೆ ನಿರಂತರತೆಯಲ್ಲಿ ಇರುವುದೇ ಸಂತೋಷ!! ಸರಳ ರೇಖೆಗೆ ಕೊನೆ ಉಂಟು, ವೃತ್ತಕ್ಕೆ ಕೊನೆ ಇಲ್ಲ! ಇಡೀ ವಿಶ್ವ, ಸೃಷ್ಟಿ ವೃತ್ತಾಕಾರವಾಗಿ, ಇಲ್ಲಿಯ ಜೀವನವೂ ಜೀವನ ಚಕ್ರವಾಯ್ತಾ?

    ಅನಂತತೆಯಲ್ಲಿ ಕೊನೆ ಅನ್ನೋದು ಇಲ್ಲ ಅಂತಾದ್ರೆ, ಸಾವು ಹೇಗೆ ಕೊನೆಯಾದೀತು?! ಕತ್ತಲು ದಿನದ ಅಂತ್ಯ. ರಾತ್ರಿಯ ಉಗಮ. ಬೆಳಕಲ್ಲಿ ಬದುಕುವವನಿಗೆ ಕತ್ತಲು ಅಂತ್ಯ. ಬೆಳಕು,ಕತ್ತಲೆಗಳ ಪರಿವೆ ಇಲ್ಲದವನಿಗೆ ಯಾವುದು ಅಂತ್ಯ, ಯಾವುದು ಉಗಮ? ಚೇತನವು ಇಂತಹ ಅಂತ್ಯ, ಉಗಮಗಳ ಪರಿವೆ ಮೀರಿ ಎಲ್ಲೂ ನಿಲ್ಲದೆ ಅನಿಕೇತನ ಆಗಬೇಕಾ? ಕೊನೆ ಇಲ್ಲದ ಪಯಣಕ್ಕೆ ಅರ್ಥ ಉಂಟಾ? ಹಾಗಾದರೆ ಈ ಪಯಣದ ಗುರಿ ಏನು? ಅನಂತತೆಯಲ್ಲಿ ಸ್ಪಷ್ಟ ಗುರಿ ಇಲ್ಲದ ಪಯಣಿಗನಾದ ಜೀವ ಹುಚ್ಚುಚ್ಚಾಗಿ ಆಡುತ್ತಿದ್ದಾನಾ?

    ಇಡೀ ಸೃಷ್ಟಿಯ ಜೀವರಾಶಿಗಳಲ್ಲಿ ಉನ್ನತ ಶ್ರೇಣಿಯ ವಿಕಸನ ಹೊಂದಿ ಪಂಚಭೂತಗಳನ್ನು, ಬ್ರಹ್ಮಾಂಡವನ್ನು ತನ್ನ ಸೀಮಿತ ಪಂಚೇಂದ್ರಿಯಗಳ ಮೂಲಕ ಅರಿತು ಅವುಗಳ ಮೇಲೆಯೇ ತನ್ನ ಅಸ್ತಿತ್ವನ್ನು ಹೇರಲು ಹೊರಟ ಜೀವವು ಎಲ್ಲಿಯ ತನಕ ಬಂದಿದೆ ಅಂದರೆ ತನಗೆ ಬಹುದೂರ ಅನ್ನಿಸಿದ್ದ ಈ ಭೂಮಂಡಲದ ಕ್ಷುಲ್ಲಕ ಧೂಳಿನ ವಿಸ್ತೀರ್ಣದಲ್ಲಿ ತನ್ನ ಸಂಪರ್ಕ ಸಾಧಿಸಿಕೊಂಡಿರುವುದು! ಸಾವಿರಾರು ಅಲ್ಲಲ್ಲ, ಕೋಟ್ಯಂತರ ಕಿಲೋಮೀಟರ್ ದೂರದ ತನಕ ಈ ಜೀವ ಇಂದು ಮಾತಾಡಬಲ್ಲ, ಅಲ್ಲಿಯ ತನ್ನಂತಹುದೇ ಜೀವಿಯ ಜೊತೆ ವ್ಯವಹರಿಸಬಲ್ಲ, ಅಲ್ಲಿಯ ಆಗು ಹೋಗುಗಳನ್ನು ಕುಳಿತಲ್ಲಿಂದಲೇ ನೋಡಬಲ್ಲ ಮತ್ತು ಈ ದೂರವನ್ನು ತನ್ನದೇ ಸೀಮಿತ ವೇಗದಲ್ಲಿ ಕ್ರಮಿಸಬಲ್ಲ ಕೂಡಾ!

    ನೆನಪಿರಲಿ ಈ ದೂರ ಬ್ರಹ್ಮಾಂಡದ ಒಂದು ಕಣದ ವಿಸ್ತೀರ್ಣಕ್ಕೂ ಸಮ ಅಲ್ಲ. ಇವೆಲ್ಲವೂ ಜೀವಿಯ ಪಂಚೇಂದ್ರಿಯ ಶಕ್ತಿಯ ಕ್ಷಮತೆಯನ್ನು ಹೆಚ್ಚಿಸಿವೆಯೇ ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಇದರಿಂದ ಆದ ಅನಾನುಕೂಲದ ಕಡೆ ಗಮನ ಹರಿಸಿದರೆ ಗೊತ್ತಾಗುತ್ತೆ, ಈ ಭರದಲ್ಲಿ ತಾನು ಜೀವಿಸಲು ಯೋಗ್ಯವಿದ್ದಂತಾ ಒಂದೇ ಒಂದು ಜಾಗವಾದ ಈ ಭೂಮಿಯನ್ನು ಮತ್ತೆ ಸರಿಮಾಡಲಾಗದಂತೆ ಕೆಡಿಸಿ ಐದು ಭೂತಗಳಲ್ಲಿ ಎರಡು, ಗಾಳಿ,ನೀರನ್ನು ದುರ್ಲಭ ಮಾಡಿ ಆಹಾಕಾರ ಆಗುವಂತೆ ಮಾಡಿಬಿಟ್ಟಿದ್ದಾನೆ.

    ಮೂರನೇ ಭೂತವಾದ ಮಣ್ಣನ್ನು ನಾಶ ಮಾಡುವ ಎಲ್ಲ ಯೋಚನೆಯಲ್ಲಿದ್ದಾನೆ.ಎಷ್ಟೋ ಜೀವ ಸಂಕುಲಗಳನ್ನು ನಾಶ ಮಾಡಿಬಿಟ್ಟಿದ್ದಾನೆ. ಪ್ರಕೃತಿಯ ಮೇಲಿನ ದೌರ್ಜನ್ಯದ ಬಗ್ಗೆ ಹೇಳುವುದೇ ಬೇಡ. ಪಂಚ ಭೂತಗಳಲ್ಲಿ ಆಕಾಶ,ಬೆಂಕಿ ಇವನಿಗೆ ಇಲ್ಲಿಯವರೆಗೆ ನಿಲುಕಿಲ್ಲ, ಹಾಗಾಗಿ ಉಳಿದಿವೆ. ಇಂತಹ ಅತ್ಯಾಚಾರಿಯನ್ನು ಪ್ರಕೃತಿ ತನ್ನ ಮಾಡಿಲಲ್ಲಿಟ್ಟು ಇನ್ನೂ ಸಾಕುತ್ತಿರುವುದೇ ಆಶ್ಚರ್ಯ!

    ಪ್ರಕೃತಿ,ಪಂಚಭೂತಗಳನ್ನು ನಾಶ ಮಾಡುತ್ತಾ ಸಾಧಿಸಿದ ಈ ಕ್ಷುಲ್ಲಕನ ಅವಿವೇಕತನ ಎಂದಾದರೂ ಸಾಧನೆ ಆಗಬಹುದಾ?? ಹೋಗಲಿ ತಾನಾದರೂ ಸುಖವಾಗಿದ್ದಾನಾ? ಉಹೂಂ. ಮನುಷ್ಯ ಇಂದು ತಲುಪಿದ ಮಾನಸಿಕ ಅದಃಪತನವನ್ನು ತನ್ನ ವಿಕಸನದ ಪ್ರಯಾಣದ ಯಾವ ಅವಧಿಯಲ್ಲೂ ತಲುಪಿಲ್ಲ. ಆದರೂ ವಿಜಯದ ನಗು ಬಿರುತ್ತಿದ್ದಾನೆ. ತನ್ನ ಭಾರವನ್ನೇ ತಾಳದ ತಳಹದಿಯ ಮೇಲೆ ನಿಂತು,ಬ್ರಹ್ಮಾಂಡವನ್ನು ಹೊರುವ ಸಾಹಸ ಮಾಡುತ್ತಿದ್ದಾನೆ! ಮೂರ್ಖ ಅನ್ನಬೇಕೋ, ಅಮಾಯಕ ಅನ್ನಬೇಕೋ ಗೊತ್ತಾಗುತ್ತಿಲ್ಲ.

    ಪ್ರಕೃತಿಯ ಕೂಸಾದ ಮಾನವ ತನ್ನ ಮೆದುಳಿನ ಶಕ್ತಿಯನ್ನು ವಿರುದ್ಧ ದಿಕ್ಕಿನಲ್ಲಿ ಉಪಯೋಗಿಸುತ್ತಿದ್ದಾನಾ? ಎಲ್ಲ ಜೀವ ರಾಶಿಗಳನ್ನು ಸಲಹುವಂತೆ ಮಾನವನನ್ನೂ ಹೇಗೆ, ಎಷ್ಟರಮಟ್ಟಿಗೆ ಸಲುಹಬೇಕೆಂದು ಪ್ರಕೃತಿಗೆ ಗೊತ್ತಿತ್ತು. ಆದರೆ ಅತೀ ಬುದ್ಧಿವಂತಿಕೆಯಿಂದ ಇವನು ಪ್ರಕೃತಿಯ ವಿರುದ್ಧವೇ ಹೋಗಿ, ತನ್ನ ಆಯಸ್ಸು, ಪೀಳಿಗೆಗಳನ್ನು ಹೆಚ್ಚಿಸಿಕೊಂಡಿದ್ದಾನೆ. ಇದನ್ನು ಸಾಧನೆ ಅಂತ ತಿಳಿದು ಬೀಗುತ್ತಿದ್ದಾನೆ!

    ಇಂದಿಗೂ ಪ್ರಕೃತಿ ಸುಮ್ಮನೆ ಮುನಿದರೆ, ಹೇಳ ಹೆಸರಿಲ್ಲದಂತೆ ಆಗುವ ಮಾನವ ಪ್ರಕೃತಿಯನ್ನು ಮರೆತಂತೆ, ಅದರ ಅವಶ್ಯಕತೆಯೇ ಇಲ್ಲದವನಂತೆ ಧಿಮಾಕು ತೋರಿಸುತ್ತಾ, ಪ್ರಕೃತಿಯಿಂದ ಬಹು ದೂರ ನಡೆದು ಹೋಗಿ, ಹುಚ್ಚನಾಗಿದ್ದಾನೆ. ದೂರ ಸರಿದಂತೆಲ್ಲಾ ಕಾಣೆಯಾದ ನೀರಿಗೆ,ಗಾಳಿಗೆ ತತ್ತರಿಸುತ್ತಿದ್ದಾನೆ. ಮರ ಗಿಡ ಕಡಿದು ಮನೆಕಟ್ಟಿಕೊಂಡು, ತಣ್ಣನೆಯ ಗಾಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡು, ಇಂದು ಉಸಿರಾಡುವ ಗಾಳಿಗೆ ರೋಧಿಸುತ್ತಿದ್ದಾನೆ…. ಮನೆಯನೆಂದು ಕಟ್ಟದಿರು

    ಪ್ರಕೃತಿಗೆ ಯಾವುದೇ ತರಹದ ಧಕ್ಕೆ ತರದೆ, ಯಾವುದೇ ತರಹದ ಅದರ ವಿರುದ್ಧದ ಕೃತ್ಯ ಎಸಗದೆ, ಇಂದು ಮಾನವ ಸಾಧಿಸಿ ಬೀಗುತ್ತಿರುವ ಈ ದೂರ ಸಂಪರ್ಕವನ್ನು ಸಾವಿರ ಸಾವಿರ ವರ್ಷಗಳ ಹಿಂದೆ ಸಾವಿರಾರು ದಾರ್ಶನಿಕರು ಈ ಭೂಮಿಯಲ್ಲಿ ಬರೀ ಧ್ಯಾನದಿಂದ ಸಾಧಿಸಿ ತೋರಿಸಿ ಅದೂ ಉಪಯೋಗಕ್ಕೆ ಬರುವುದು ಅಲ್ಲ ಅಂತ ಹೇಳಿ ಮುಂದೆ ಹೋಗಿದ್ದಾರೆ…… ಎಲ್ಲಿಯೂ ನಿಲ್ಲದಿರು……

    ಪಂಚೇಂದ್ರಿಯಗಳಿಂದ ಕಾಣುವ ಪ್ರಪಂಚ ಸತ್ಯವಲ್ಲ. ಸತ್ಯವಾದ ಪ್ರಪಂಚವನ್ನು ಕಾಣ ಬಯಸಿದರೆ ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು ನಿನ್ನಲ್ಲಿಯೇ ಇರುವ ನಿನ್ನನ್ನು ನೋಡು. ನಿನ್ನಲ್ಲಿಯ ಆಗಾಧ ಶಕ್ತಿ ನೋಡು. ಆ ಶಕ್ತಿಯೇ ಕೊನೆ ಇರದ ನಿನ್ನ ಪಯಣದ ಇಂಧನ. ಈ ಅಂತರ್ದರ್ಶನ ನೀನು ಹೊಂದಿದರೆ ಈ ಅನಂತದಲ್ಲಿ ಯಾರೂ ಎಲ್ಲಿಯೂ ನಿನ್ನನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊನೆ ಇರದ ಪಯಣದಲ್ಲಿ ಸದಾ ಸುಖಿ ನೀನು…… ಕೊನೆಯನೆಂದು ಮುಟ್ಟದಿರು….

    ವಿಜ್ಞಾನಿಗಳೆಂದರೆ ಋಷಿಗಳಿದ್ದಂತೆ. ಅವರ ಜ್ಞಾನವೆಲ್ಲವೂ ಸೃಷ್ಟಿಯ ಒಳಿತಿಗಾಗಿಯೇ. ಅವರು ಹೇಳುವ ವಿಷಯವು ಧರ್ಮಾತೀತವಾದದ್ದು. ಪ್ರಕೃತಿಯೇ ತನ್ನ ಹಲವಾರು ವಿಷಯಗಳನ್ನು ಸೃಷ್ಟಿಗೆ ತಿಳಿಸಲು ವಿಜ್ಞಾನಿಗಳನ್ನು ಸೃಷ್ಟಿಸಿಕೊಂಡಿದೆ ಅಂತೆಲ್ಲಾ ನಂಬಿಕೊಂಡಿದ್ದ ಕಾಲ ಒಂದಿತ್ತು. ಆದರೆ ಇಂದು ಅವರೂ ಪೇಟೆಂಟ್ ಅನ್ನುವ ನಮ್ಮ ಸಂಸ್ಕೃತಿ ಕಂಡು ಕೇಳರಿಯದ ಶಬ್ದವನ್ನು ಅಳವಡಿಸಿಕೊಂಡು ಮಾನವರ ರಕ್ತ ಹೀರುತ್ತಾ ಸೃಷ್ಟಿಯ ವೈರಿಗಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮನುಷ್ಯ ಯಾವ ಮಟ್ಟಕ್ಕೆ ಹೋದರೂ ತನ್ನ ದುರ್ಬುದ್ಧಿ ಎನ್ನುವ ಇಂದ್ರಿಯಾಧಾರಿತ ಗುಣದಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಸಾಬೀತುಮಾಡಿದ್ದಾನೆ. ತಾನು ಕಂಡುಕೊಂಡ ಅಗಾಧ ಶಕ್ತಿಗಳನ್ನು ಮಾನವ ಕುಲದ ಏಳಿಗೆಗೆ ಉಪಯೋಗಿಸದೆ, ಇತರೆ ತನ್ನದೇ ತಂತುಗಳಾದ ಮಾನವರನ್ನು ದಮನಿಸಲು,ಪ್ರಾಣಿಗಳಂತೆ ನಡೆಸಿಕೊಂಡು ಆಳಲು ತವಕಿಸುತ್ತಿದ್ದಾನೆ, ಅಧಮ ಮಾನವ.

    ಇದು ಎಂದೆಂದಿಗೂ “ವಿ” ಜ್ಞಾನವೇ….ಸುಜ್ಞಾನವಲ್ಲ. (ರೂಪ,ವಿರೂಪ, ಸುರೂಪ ಅರ್ಥದಲ್ಲಿ) ಮಾನವಕುಲವನ್ನು ಇಂದು ಸುಜ್ಞಾನಡೆದೆಗೆ ನಡೆಸುವ ಸುಜ್ಞಾನಿಗಳು ಬೇಕಾಗಿದ್ದಾರೆ, ವಿಜ್ಞಾನಡೆದೆಗೆ ನಡೆಸುವ ವಿಜ್ಞಾನಿಗಳಲ್ಲ ಅಂತ ಬಹು ನೋವಿನಿಂದ ಹೇಳಬೇಕಾಗಿದೆ. ಸುಜ್ಞಾನ ಮಾತ್ರ ಮಾನವನನ್ನು ತಾನಿದ್ದ ಸ್ತರದಿಂದ ಮೇಲಕ್ಕೆತ್ತಬಹುದೇ ವಿನಾ ವಿಜ್ಞಾನ ಅಲ್ಲ. ಸುಜ್ಞಾನಿಯಾಗದ ಜ್ಞಾನಿ,ಗುರು, ನಾಯಕ, ವಿಜ್ಞಾನಿ, ವೈದ್ಯ, ಎಂಜಿನಿಯರ್, ಮನುಕುಲಕ್ಕೆ ಮಾರಕ. ಹೀಗೇ ಮುಂದುವರಿದರೆ, ಸ್ವಾರ್ಥತೆಯ ಮನುಕುಲ ನಾಶವನ್ನು ಯಾರೂ ತಡೆಯಲಾರರು.

    Photo by Sovit Chetri from Pexels

    ಟೊಮೊಟೊ ಬೆಳೆದು ಕೈ ಸುಟ್ಟುಕೊಂಡ ರೈತರು

    ನಿರಂತರ ಆದಾಯ ಗಳಿಸಲು ರೈತರು ವೈವಿಧ್ಯ ತರಕಾರಿ ಬೆಳೆಗಳನ್ನು ಪೋಷಿಸುತ್ತಾರೆ. ಅಪರೂಪಕ್ಕೆ ಬಂಪರ್ ಬೆಲೆ ಸಿಗುವ ರೈತರಿಗೆ ಬಹು ಪಾಲು ನಷ್ಟದ ಕಹಿ ಮಾಮೂಲು. ಉತ್ತಮ ಬೆಲೆ ನಿರೀಕ್ಷೆಯಲ್ಲಿ ಟೊಮೊಟೊ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದೆ ನಷ್ಟದ ಕಹಿ ಉಣಿಸಿದೆ.

    ಪ್ರತಿ ಕಿಲೋಗ್ರಾಂ ಟೊಮೊಟೊ ಸಗಟು ವಹಿವಾಟಿನಲ್ಲಿ ಸರಾಸರಿ ರೂ.5 ರಿಂದ 6 ಬೆಲೆಗೆ ಬಿಕರಿಗೊಂಡಿದೆ. ಕಳೆದ ಮಾರ್ಚ್ ಆರಂಭದಲ್ಲಿ ಟೊಮೊಟೊ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಮಾರು 600 ಬಾಕ್ಸ್ ಮಾರಾಟ ಮಾಡಲಾಗಿದೆ. ಒಂದು ಬಾಕ್ಸ್ ನಲ್ಲಿ 28 ಕೆ.ಜಿ. ಟೊಮೊಟೊ ಸಂಗ್ರಹ ಸಾಮರ್ಥ್ಯ. ಕೇವಲ ರೂ.160 ರಂತೆ ಒಂದು ಬಾಕ್ಸ್ ದರ ನಿಗದಿಯಾಗಿದೆ. ವಾರದಲ್ಲಿ ಮೂರು ದಿನ 20 ಬಾಕ್ಸ್ ವರೆಗೆ ಇಳುವರಿ ಬಂದಿದೆ. ಬೇಡಿಕೆ ಇಲ್ಲದೆ ಪಾತಾಳಕ್ಕಿಳಿದ ಧಾರಣೆಯಿಂದ ಕಂಗಲಾಗಿದ್ದೇವೆ ಎನ್ನುತ್ತಾರೆ ರೈತ ಮೂರ್ತಿ.

    ದೀರ್ಘಾವಧಿ ಇಳುವರಿ ನೀಡುವ ಸಾವೊ ತಳಿಯ ಟೊಮೊಟೊ ಸಸಿಗಳನ್ನು ರೂ.1.80 ರಂತೆ ಖರೀದಿಸಲಾಗಿತ್ತು. ಮುಕ್ಕಾಲು ಎಕರೆಯಲ್ಲಿ 8 ಸಾವಿರ ಸಸಿಗಳನ್ನು ಪೋಷಣೆ ಮಾಡಲಾಗಿತ್ತು. ಔಷಧಿ ಗೊಬ್ಬರ ಸೇರಿ ಸುಮಾರು ರೂ.40 ರಿಂದ 50 ಸಾವಿರ ಖರ್ಚು ತಗುಲಿತ್ತು. ಮನೆಮಂದಿಯೆಲ್ಲಾ ಟೊಮೊಟೊ ಬಿಡಿಸಲು ತೆರಳಿದ್ದರಿಂದ ದುಬಾರಿ ಕೂಲಿ ಉಳಿದಿದೆ. ದಾವಣಗೆರೆಗೆ ರವಾನಿಸಿದ್ದರೆ ಬಾಡಿಗೆ, ಹಮಾಲಿ, ದಲ್ಲಾಳಿ ಖರ್ಚು ತೀವ್ರ ಹೊಡೆತ ಬೀಳುತ್ತಿತ್ತು. ಮನೆ ಬಾಗಿಲಲ್ಲೇ ಸಗುಟು ವ್ಯಾಪಾರಿಗಳಿಗೆ ಮಾರಾಟ ಮಾಡಿದೆವು. ಇಲ್ಲವಾದರೆ ಇನ್ನೂ ತೀವ್ರ ನಷ್ಟ ಅನುಭವಿಸಬೇಕಾಗಿತ್ತು ಎನ್ನುತ್ತಾರೆ ಅವರು.

    ಇದು ಟೊಮೊಟೊ ಬೆಳೆದ ಒಬ್ಬ ರೈತನ ಅಳಲು. ರಾಜ್ಯಾದ್ಯಾಂತ ಟೊಮೊಟೊ ಬೆಳೆದ ರೈತರಿಗೆ ಏಕರೂಪದ ಲಾಭದಾಯಕ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ. ಎಲ್ಲೆಂದರಲ್ಲೆ ಸರಕು ಸಾಗಣೆ ವಾಹನಗಳಿಂದ ಟೊಮೊಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಲಾಕ್ ಡೌನ್ ಸಮಯದಲ್ಲಿ ಓಡಾಟಕ್ಕೆ ಪರವಾನಗಿ ಇದೆ. ಜನರ ಓಡಾಟವಿಲ್ಲದೇ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹಾಗಾಗಿ ದರದಲ್ಲಿ ಭಾರಿ ಇಳಿಕೆ ಕಂಡಿದೆ. ದೀರ್ಘಾವಧಿ ಸಂಗ್ರಹಣೆ ಸಾಧ್ಯವಿಲ್ಲದೇ, ಮಾರಾಟ ಮಾಡಲು ಸಾಧ್ಯವಾಗದೇ ಬೀದಿಗೆ ಚೆಲ್ಲಿದ್ದಾರೆ.

    ಟೊಮೊಟೊ ಬೆಳೆಯಲ್ಲದೆ ಬಹುತೇಕ ತರಕಾರಿ, ಹಣ್ಣು ಬೆಳೆದ ರೈತರ ಗೋಳಿಗೆ ಕೊನೆಯಲ್ಲಿ. ವೈಜ್ಞಾನಿಕ ಯುಗದಲ್ಲಿಯೂ ಬೇಡಿಕೆ, ಪೂರೈಕೆಯ ವಿಶ್ಲೇಷಣೆ ಪ್ರಾಮಾಣಿಕವಾಗಿ ನಡೆಸಿಲ್ಲ. ಸರ್ಕಾರ ರೈತ ಪರ ಇಲಾಖೆಗಳ ಮೂಲಕ ತರಕಾರಿ ಬೆಳೆ ಭೂಮಿ ಸರ್ವೇ ನಡೆಸಬೇಕು. ವಿವಿಧ ತರಕಾರಿ, ಹಣ್ಣುಗಳ ಬೇಡಿಕೆಯ ಅಂಕಿಅಂಶಗಳನ್ನು ಸಂಗ್ರಹಿಸಬೇಕು. ಪ್ರಾದೇಶಿಕ ಹವಾಗುಣ ವಿಶ್ಲೇಷಿಸಿ ತರಕಾರಿ, ಹಣ್ಣು ಬೆಳೆ ವಿಭಜಿಸಬೇಕು. ಬೇಡಿಕೆಗನುಗುಣವಾಗಿ ಇಂತಿಷ್ಟೇ ಹೆಕ್ಟೇರ್ ನಲ್ಲಿ ಬೆಳೆಯಲು ಉತ್ತೇಜಿಸಬೇಕು. ಒಂದೆರಡು ವರ್ಷ ಇಂತಹ ವೈಜ್ಞಾನಿಕ ಪ್ರಯೋಗ ಅಳವಡಿಸಿದಲ್ಲಿ ರೈತರಿಗೆ ಲಾಭ ತಂದುಕೊಡಲು ಸಾಧ್ಯ.

    ದೈಹಿಕ ಶ್ರಮ, ಆರ್ಥಿಕ ಹೊರೆ, ದೀರ್ಘಾವಧಿ ಕಾಯುವಿಕೆಯಿಂದ ಬೆಳೆ ಮಾರುಕಟ್ಟೆಗೆ ತಲುಪಿಸಿದರೆ ಕೇವಲ ಕೆಲವೇ ನಿಮಿಷದಲ್ಲಿ ದಲ್ಲಾಲಿಗಳು ಅವರಿಗಿಂತ ಹೆಚ್ಚು ಲಾಭ ಗಳಿಸುವರು. ಇದು ಅಸೂಯೆ ವೃದ್ಧಿಸುವ ವ್ಯವಸ್ಥೆ. ತಾತ್ಕಾಲಿಕ ಕೊರತೆ ಸೃಷ್ಟಿಸುವ ಮೂಲಕವೂ ರೈತರಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯುವ ಹುನ್ನಾರಗಳು ನಡೆಯುತ್ತವೆ. ಸರ್ಕಾರ ಇಂದಿನ ಡಿಜಿಟಲ್ ತಂತ್ರಜ್ಞಾನದಲ್ಲಿ ರೈತರಿಗೆ ಬೇಡಿಕೆ, ಪೂರೈಕೆಯ ಪರಿಕಲ್ಪನೆಯಲ್ಲಿ ಉತ್ಪನ್ನಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.

    ಪದವಿ ಹಾಗೂ ಸ್ನಾತಕೋತ್ತರ ಪದವಿ; ಪರೀಕ್ಷೆ ತಡವಾದರೂ ಆನ್‌ಲೈನ್‌ ಬೋಧನೆ ಮುಂದುವರಿಕೆ

    ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‌ಗಳ ಸಮ ಸ್ಥಾನಿಕ ಸೆಮಿಸ್ಟರ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಈ ಕೋರ್ಸ್‌ಗಳ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶುಕ್ರವಾರ ತಿಳಿಸಿದ್ದಾರೆ.

    ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಇನ್ನೂ ಮುಗಿಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‌ಗಳು) ಆನ್‌ಲೈನ್‌ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‌ಗಳಿಗೆ ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‌ಗಳ ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಕೋವಿಡ್‌ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಕೆಲವು ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‌ಗಳಿಗೆ ಹೋಗಲು ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದು ವಿವರಿಸಿದ್ದಾರೆ.

    ಸ್ನಾತಕೋತ್ತರ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, “ಕೋವಿಡ್‌ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‌ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‌ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಮೂರನೇ ಸೆಮಿಸ್ಟರ್‌ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಅಲ್ಲಿ ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು” ಎಂದಿದ್ದಾರೆ.

    ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಒಂದೊಮ್ಮೆ ಈ ತರಗತಿಗಳು ಮುಗಿದ ಮೇಲೂ ಕೋವಿಡ್‌ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಹೊರಹೊಮ್ಮುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ವೇಳಾಪಟ್ಟಿಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ನಾಳೆಯಿಂದ 18- 44 ವಯೋಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ; ಕೊವ್ಯಾಕ್ಸಿನ್‌ ಸೆಕೆಂಡ್‌ ಡೋಸ್‌ ಕೂಡ ಆರಂಭ

    18ರಿಂದ 44 ವರ್ಷ ವಯೋಮಿತಿಯೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ನಾಳೆಯಿಂದ (ಮೇ 22) ಕೋವಿಡ್ ಲಸಿಕೆ ಕೊಡಲಾಗುವುದು ಹಾಗೂ ಒಂದೆರಡು ತಿಂಗಳಲ್ಲಿ ರಾಜ್ಯದ 500 ಕಡೆ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಬಿಜೆಪಿ ಶುಕ್ರವಾರ ಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಜತೆ  ಮಾತನಾಡಿದರು.

    ರಾಜ್ಯವೇ ಲಸಿಕೆ ನೀಡಲು ಅದರ ಮೇಲೆ ವ್ಯವಸ್ಥಿತ ನಿಗಾ ಇರಿಸಲು ಪ್ರತ್ಯೇಕ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿ ಮಾಡಲಾಗಿದ್ದು, ಅದನ್ನು ಕೋವಿನ್‌ ಪೋರ್ಟಲ್‌ ಜತೆ ಲಿಂಕ್ ಮಾಡಲಾಗುತ್ತಿದೆ. ಜೂನ್ 1ರಿಂದ ಈ ಪೋರ್ಟಲ್ ಕೆಲಸ‌ ಮಾಡಲಿದೆ ಎಂದು ಡಿಸಿಎಂ ತಿಳಿಸಿದರು.

    ರಾಜ್ಯದಲ್ಲಿ 1,90,000 ಜನರಿಗೆ ಈಗ ಕೊವ್ಯಾಕ್ಸಿನ್‌ ಸೆಕೆಂಡ್‌ ಡೋಸ್‌ ಕೊಡಬೇಕಿದೆ. ಇದರಲ್ಲಿ 1,70,000 ಕೊವ್ಯಾಕ್ಸಿನ್‌ ಲಸಿಕೆ ಸಿದ್ಧವಿದ್ದು, ಈಗಾಗಲೇ ಕೊಡಲು ಪ್ರಾರಂಭಿಸಲಾಗಿದೆ.   ಕೋವಿಶೀಲ್ಡ್‌ ಕೂಡ ಸ್ಟಾಕ್‌ ಇದೆ. ಲಸಿಕೆ ಅಭಿಯಾನ ತೀವ್ರಗೊಳಿಸಲು ಮುಂಚೂಣಿಯ ಕಾರ್ಯಕರ್ತರ ಪಡೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಆದ್ಯತೆಯ ಮೇಲೆ ಅವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ನಾಳೆಯಿಂದ ಮಾಧ್ಯಮ ಸಿಬ್ಬಂದಿ, ಚಿತಾಗಾರ ಸಿಬ್ಬಂದಿ, ವಿಕಲಚೇತನರು, ಆರೋಗ್ಯ ಕಾರ್ಯಕರ್ತರು ಮತ್ತವರ ಕುಟುಂಬ ಸದಸ್ಯರು, ಕೋವಿಡ್‌ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್‌ ಮತ್ತು ನೀರು ಪೂರೈಕೆ ಸಿಬ್ಬಂದಿಗೆ ವ್ಕಾಕ್ಸಿನ್‌ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಇನ್ನೂ ಸೋಂಕಿತರಾಗಿ ಗುಣಮುಖರಾದವರಿಗೆ ತಕ್ಷಣವೇ ಲಸಿಕೆ ಕೊಡಬೇಕಿಲ್ಲ. ಮೂರು ತಿಂಗಳ ನಂತರ ಲಸಿಕೆ ಕೊಟ್ಟರೂ ಸಾಕು. ಕೋವಿಶೀಲ್ಡ್ ಪಡೆದವರಿಗೆ 4-6 ವಾರದಲ್ಲಿ ಸೆಕೆಂಡ್‌ ಡೋಸ್‌ ಕೊಡಬೇಕಿತ್ತು. ಆ ಅಂತರವನ್ನು 16 ವಾರಗಳ‌ ವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್‌ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಲಸಿಕೆಯೊಂದೇ ಅಂತಿಮ ಪರಿಹಾರ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    500 ಆಕ್ಷಿಜನ್‌ ಜನರೇಟರ್‌:ಇನ್ನು ಒಂದೆರಡು ತಿಂಗಳಲ್ಲಿಯೇ ರಾಜ್ಯದ ಎಲ್ಲೆಡೆ 400ರಿಂದ 500 ಆಕ್ಸಿಜನ್‌ ಜನರೇಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲಿಯೂ ಐಸಿಯುಗಳನ್ನು ಹಾಕುತ್ತಿದ್ದೇವೆ ಎಂದು ಅವರು ಹೇಳಿದರು.

    ಒಂದು ಆಕ್ಸಿಜನ್‌ ಬೆಡ್‌ಗೆ 20,000 ಲೀಟರ್‌ ಆಮ್ಲಜನಕ ಬೇಕು. ಈ ಲೆಕ್ಕದಲ್ಲಿ ನೋಡಿದರೆ, ರಾಜ್ಯದಲ್ಲಿರುವ ಎಲ್ಲ ಆಕ್ಸಿಜನ್‌ ಬೆಡ್‌ಗಳಿಗೆ ಆಗಿ ಮಿಕ್ಕುವಷ್ಟು ಆಮ್ಲಜನಕದ ತುರ್ತು ಸಂಗ್ರಹ ನಮ್ಮಲ್ಲಿದೆ. ಮೂರನೇ ಅಲೆಯ ದೃಷ್ಟಿ ಇಟ್ಟುಕೊಂಡು ಇನ್ನು ಹೆಚ್ಚೆಚ್ಚು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 3,000 ವೆಂಟಿಲೇಟರ್‌, 25,000 ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚುವರಿಯಾಗಿ ಒಂದು ವರ್ಷದ ಅವಧಿಯಲ್ಲಿ ಮಾಡಿದ್ದೇವೆ. ಇದರ ಪ್ರಮಾಣವನ್ನು ಮತ್ತೂ  ಹೆಚ್ಚಿಸುತ್ತೇವೆ. ಇನ್ನು ಪಿಎಂ ಕೇರ್‌ನಿಂದ 315 ಕೋಟಿ ಹಣದ ಜತೆಗೆ ವೆಂಟಿಲೇಟರ್‌ಗಳನ್ನೂ ನಮಗೆ ಕೊಡಲಾಗಿದೆ ಎಂದು ಡಿಸಿಎಂ ಅಂಕಿ-ಅಂಶ ಕೊಟ್ಟರು.

    ಈಗಾಗಲೇ ನೋಂದಣಿಯಾಗಿರುವ, ನೋಂದಣಿಯಾಗದ ಎಷ್ಟೋ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ನೀಡಿದ್ದೇವೆ. ಎಲ್ಲೋ ಕುಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಕ್ಸಿಜನ್‌ ದೊರೆಯುತ್ತಿದೆ. ಹಾಗೆಯೇ ಸಣ್ಣ ಪ್ರಮಾಣದಲ್ಲಿದ್ದ ಆಕ್ಸಿಜನ್‌ ಸಾಗಾಣಿಕೆ ವ್ಯವಸ್ಥೆ ಈಗ ದೊಡ್ಡ ಪ್ರಮಾಣದಲ್ಲಿ ಆಗಿದ್ದು, ಪ್ರತ್ಯೇಕ ರೈಲುಗಳಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

    ಬ್ಲ್ಯಾಕ್‌ ಫಂಗಸ್‌ಗೆ ಔಷಧಿ:ಬ್ಲ್ಯಾಕ್‌ ಫಂಗಸ್‌ ಬೇರೆ ರಾಜ್ಯಗಳಲ್ಲಿ ಮೊದಲು ಕಂಡು ಬಂದಿತ್ತು. ನಮ್ಮಲ್ಲಿ ಈಗ ಕಂಡುಬಂದಿದೆ. ಈಗ ಒಂದು ನಿರ್ದಿಷ್ಟ ಔಷಧಿಗೆ ಬೇಡಿಕೆ ಬಂದಿದೆ. ಆದರೆ, ಇದಕ್ಕೆ ಹಲವಾರು ಔಷಧಿಗಳಿದ್ದರೂ ಜನರು ಮಾತ್ರ ʼಲೈಸೋಸೋಮಲ್ ಅಮಪೋಟೆರಿಸನ್ʼ (liposomal amphotericin) ಔಷಧಿಯನ್ನೇ ಕೇಳುತ್ತಿದ್ದಾರೆ. ʼಲೈಸೋಸೋಮಲ್ ಅಮಪೋಟೆರಿಸನ್-ಬಿʼ ಸೇರಿ ಇನ್ನೂ ಪರ್ಯಾಯ ಔಷಧ ಇದ್ದರೂ ಜನರು ಅದಕ್ಕೇ ಮುಗಿಬೀಳುತ್ತಿದ್ದಾರೆ. ಮೆಡಿಕಲ್‌ ಸ್ಟೋರ್‌ಗಳಲ್ಲಿಯೂ ಪರ್ಯಾಯ ಔಷಧಿಗಳು ಸಿಗುತ್ತಿವೆ. ಈ ತಿಂಗಳ 14ರಂದು  ʼಲೈಸೋಸೋಮಲ್ ಅಮಪೋಟೆರಿಸನ್ʼ ಔಷಧಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇನ್ನು ಕೆಲ ದಿನಗಳಲ್ಲಿಯೇ ನಮ್ಮ ಕೈ ಸೇರಲಿದೆ ಎಂದರು ಡಿಸಿಎಂ.

    ಅಂದಹಾಗೆ, ಬ್ಲ್ಯಾಕ್‌ ಫಂಗಸ್‌ ಅನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗಿದೆ.  ಖಾಸಗಿ ಆಸ್ಪತ್ರೆಗಳು ರಹಸ್ಯವಾಗಿ ಚಿಕಿತ್ಸೆ ನೀಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಔಷಧ ಹಂಚಿಕೆಯಲ್ಲಿ ತಾರತಮ್ಮ ಇಲ್ಲ:ರಾಜ್ಯಕ್ಕೆ ಔಷಧಿ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಮ ಎಸಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಡಾ.ಅಶ್ವತ್ಥನಾರಾಯಣ; “ಮಹಾರಾಷ್ಟ್ರ, ಗುಜರಾಜ್‌ ಮುಂತಾದ ರಾಜ್ಯಗಳಲ್ಲಿ ಜನವರಿಯಿಂದಲೇ ಎರಡನೇ ಅಲೆ ಆರಂಭವಾಯಿತು. ರಾಜ್ಯದಲ್ಲಿ ಏಪ್ರಿಲ್‌ನಿಂದ ಶುರುವಾಯಿತು. ಅಲ್ಲೆಲ್ಲ ಸೋಂಕಿತರು ಹೆಚ್ಚಾದ ಕಾರಣ ಮೊದಲು ಆದ್ಯತೆಯ ಮೇರೆಗೆ ಔಷಧಿ, ಆಕ್ಸಿಜನ್‌, ರೆಮಿಡಿಸಿವಿರ್‌ಗಳನ್ನು ಕೇಂದ್ರವು ಆ ರಾಜ್ಯಗಳಿಗೆ ಪೂರೈಕೆ ಮಾಡಿತು” ಎಂದರು.

    ರಾಜ್ಯದಲ್ಲಿ ಏಪ್ರಿಲ್‌ನಿಂದ ಸೋಂಕು ವಿಪರೀತ ಹೆಚ್ಚಲು ಶುರುವಾಯಿತು. ತಕ್ಷಣವೇ ರಾಜ್ಯ ಸರಕಾರ ಕೇಂದ್ರಕ್ಕೆ ಎಲ್ಲ ಮಾಹಿತಿ ನೀಡಿತು. ಕೂಡಲೇ ಕೇಂದ್ರವೂ ರಾಜ್ಯಕ್ಕೆ ಅಗತ್ಯವಾದ ಎಲ್ಲ ಔಷಧಿ ಒದಗಿಸಲು ತುರ್ತಾಗಿ ಲೈನಪ್‌ ಮಾಡಿ ಕ್ರಮ ವಹಿಸಿತು. ತಕ್ಷಣವೇ ಎಲ್ಲ ಔಷಧಿಗಳ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಯಿತು. ಅದಾದ ಕೆಲ ದಿನಗಳಲ್ಲಿಯೇ ರಾಜ್ಯಕ್ಕೆ ಪೂರೈಕೆ ಆರಂಭವಾಯಿತು. ರೆಮಿಡಿಸಿವರ್‌ ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಹಂಚಿಕೆ ಆಗಿರುವುದು ರಾಜ್ಯಕ್ಕೆ ಮಾತ್ರ. ಈ ತಿಂಗಳ 23ರ ಹಂಚಿಕೆಯ ರೆಮಿಡಿಸಿವರ್ ಬಂದರೆ ಮಹಾರಾಷ್ಟ್ರಕ್ಕಿಂತ ನಮಗೇ ಹೆಚ್ಚು ಸಿಕ್ಕಂತಾಗುತ್ತದೆ ಎಂದರು ಅವರು.

    ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.‌ಆರ್.‌ವಿಶ್ವನಾಥ್‌ ಉಪಸ್ಥಿತರಿದ್ದರು.

    ಪ್ರೌಢಶಾಲೆಯ ಹಂತದಲ್ಲೇ ವೃತ್ತಿಪರ ಶಿಕ್ಷಣ

    ನಾಗೇಶ್ ಎಸ್ ವೈ

    ಇಂದು ಹೈಸ್ಕೂಲ್ ಶಿಕ್ಷಣದ ಅವಧಿಯಲ್ಲೇ ತಾಂತ್ರಿಕ ವೃತ್ತಿಪರ ಕೋರ್ಸ್ ಪಡೆಯಬಹುದೆಂಬ ಬಹಳಷ್ಟು ಮಂದಿಗೆ ಗೊತ್ತಿಲ್ಲ. 7ನೇ ತರಗತಿ ಉತ್ತೀರ್ಣರಾದ ನಂತರ 8ನೇ ತರಗತಿಯ ಹಂತದಲ್ಲಿಯೇ 6 ವಿಷಯಗಳೊಂದಿಗೆ(ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ವೃತ್ತಿಪರ ತಾಂತ್ರಿಕ ಶಿಕ್ಷಣವನ್ನು ಪಡೆಯುವ ಅವಕಾಶ ಇದೆ.

    ಕಾಲೇಜು ಶಿಕ್ಷಣ & ತಾಂತ್ರಿಕ ಶಿಕ್ಷಣ ಇಲಾಖೆ(DCTE) ಇದರ ಅಡಿಯಲ್ಲಿ 10ನೇ ತರಗತಿಯ ತನಕ ಈ ಕಿರಿಯ ತಾಂತ್ರಿಕ ಕೋರ್ಸ್ ಅನ್ನು ಮುಗಿಸಿಕೊಳ್ಳುವ ಅವಕಾಶವನ್ನು ಕಿರಿಯ ತಾಂತ್ರಿಕ ಶಾಲೆ(JTS) ಕಲ್ಪಿಸಿಕೊಟ್ಟಿದೆ. ಇದು ಕರ್ನಾಟಕದಲ್ಲಿ ಆರಂಭವಾಗಿದ್ದು 1965ರಲ್ಲಿ.

    ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರವೇಶಾತಿ ಪ್ರಕ್ರಿಯೆ:
    ಪ್ರತಿ ವರ್ಷ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಏಪ್ರಿಲ್ ಮಾಹೆಯಲ್ಲಿ (ಈ ಬಾರಿ ಕರೋನ ಕಾರಣದಿಂದ ದಿನಾಂಕಗಳು ವ್ಯತ್ಯಾಸವಾಗಿವೆ) ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ತದ ನಂತರ ಆಯ್ಕೆ ಪ್ರಕ್ರಿಯೆ ರೋಸ್ಟರ್ ಪದ್ಧತಿಯಲ್ಲಿ ನಡೆಯುತ್ತದೆ. ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ 30ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್(EEE) ಟ್ರೇಡ್ ಗೆ ಮತ್ತು ಉಳಿದ 30 ವಿದ್ಯಾರ್ಥಿಗಳನ್ನು ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್(EME) ಟ್ರೇಡ್ ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


    ವಿದ್ಯಾರ್ಥಿಯು ಮಾಧ್ಯಮಿಕ ಹಂತದಲ್ಲಿಯೇ ಕಿರಿಯ ತಾಂತ್ರಿಕ ಶಿಕ್ಷಣವನ್ನು ಪಡೆಯುವುದು ಮುಂದಿನ ತಾಂತ್ರಿಕ ಡಿಪ್ಲೋಮ ವ್ಯಾಸಂಗಕ್ಕೆ ದಾರಿದೀಪ. ಇಂತಹ ಶಾಲೆಗಳು ಕೇವಲ ಕರ್ನಾಟಕ ರಾಜ್ಯದಲ್ಲಿ 6 ಮಾತ್ರ ಇವೆ. ಎಲ್ಲಾ ಭಾಗದಲ್ಲೂ ತೆರದರೆ ಬಹಳಷ್ಟು ಕಿರಿಯ ತಾಂತ್ರಿಕ ಕಲಿಕಾರ್ಥಿಗಳಿಗೆ ಅನುಕೂಲವಾಗುತ್ತದೆ.

    -ನಮಿತಾ ಸಿ,ಪ್ರಭಾರ ಪ್ರಾಚಾರ್ಯರು,ಕಿರಿಯ ತಾಂತ್ರಿಕ ಶಾಲೆ,ಭದ್ರಾವತಿ


    ಪ್ರಸಕ್ತ ಕರ್ನಾಟಕದಲ್ಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು:
    ಬಳ್ಳಾರಿ,ಬಾಗಲಕೋಟೆ,ಭದ್ರಾವತಿ,ಗುಲ್ಬರ್ಗಾ,ಮಂಗಳೂರು ಮತ್ತು
    ಹುಬ್ಬಳ್ಳಿಯಲ್ಲಿಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಿವೆ.

    ಮುಂದಿನ ವ್ಯಾಸಂಗಕ್ಕೆ ಮೀಸಲಾತಿ:ಸರ್ಕಾರಿ ಕಿರಿಯ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ತಾಂತ್ರಿಕ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ ಸಮಯದಲ್ಲಿ ರಾಜ್ಯದ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 5% ಮೀಸಲಾತಿ ದೊರೆಯಲಿದೆ. (ಅಲ್ಲದೇ ಈ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗಕ್ಕೂ ಅರ್ಹರಾಗಿರುತ್ತಾರೆ.)

    ಬೋಧನಾ ಮಾಧ್ಯಮ:ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ ಸಾಮಾನ್ಯ ವಿಷಯಗಳನ್ನು ಕನ್ನಡದಲ್ಲೂ ಹಾಗೂ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಬೋಧಿಸಲಾಗುವುದು.

    ಶಿಷ್ಯವೇತನ:ಕಿರಿಯ ತಾಂತ್ರಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸರ್ಕಾರದಿಂದ ಪ್ರತಿ ವರ್ಷದಲ್ಲಿ 500ರೂ. ಶಿಷ್ಯ ವೇತನ ನೀಡಲಾಗುವುದು.

    ಕನಿಷ್ಠ ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆಗಳು:ಪ್ರವೇಶಕ್ಕಾಗಿ ಅಭ್ಯರ್ಥಿಯು ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ, ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.ಅರ್ಜಿ ಸ್ವೀಕರಿಸುವ ಹಿಂದಿನ ದಿನಾಂಕಕ್ಕೆ ಅಭ್ಯರ್ಥಿಯು ಕರ್ನಾಟಕದ ಯಾವುದೇ ಅಂಗೀಕೃತ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕನಿಷ್ಠ 5 ವರ್ಷಗಳ ವ್ಯಾಸಂಗ ಮಾಡಿರಬೇಕು.

    ಅರ್ಜಿ ಸಿಗುವ ಸ್ಥಳ:
    ಅರ್ಜಿ ನಮೂನೆಯನ್ನು ಮೇಲೆ ಕಾಣುವ ನಿಮ್ಮ ಸ್ಥಳದಿಂದ ಹತ್ತಿರವಿರುವ ಯಾವುದಾದಾರೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಭೇಟಿ ನೀಡಿ ಕಚೇರಿಯಲ್ಲಿ ಪಡೆಯಬಹುದಾಗಿದೆ.
    ಹೆಚ್ಚಿನ ವಿವಿರಗಳನ್ನು ಸಂಬಂಧಿಸಿದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ(JTS) ಕಚೇರಿಯಿಂದ ಪಡೆಯಬಹುದು.

    ಕಿರಿಯ ತಾಂತ್ರಿಕ ಶಾಲೆ(JTS)ಯಲ್ಲಿ ಕೋರ್ಸ್ ಮುಗಿಸಿದವರಿಗೆ ಆಗುವ ಪ್ರಯೋಜನಗಳು:

    ಸ್ವಾವಲಂಬಿಯಾಗಿ, ಸ್ವ ಉದ್ಯೋಗಿಯಾಗಿ ಜೀವನ ನಿರ್ವಹಣೆ ಮಾಡುವ ಅವಕಾಶ.ಎಲೆಕ್ಟ್ರಿಷಿಯನ್,ಎಲೆಕ್ಟ್ರಿಕಲ್ ಶಾಪ್ ಉದ್ಯಮಿಯಾಗಿ ಕಾರ್ಯನಿರ್ವಹಿಸುವ ಕೌಶಲದ ಬೆಳವಣಿಗೆ,ಎಲೆಕ್ಟ್ರಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.ಮೆಕ್ಯಾನಿಕಲ್ ಟ್ರೇಡ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಾರ್ಯಗಳಲ್ಲಿ ತೊಡಗುವ ಕೌಶಲದ ಬೆಳವಣಿಗೆ.

    ಉದಾ: Corpenter, Welder, Turner etc ಈ ಕೋರ್ಸ್ ಜೊತೆಗೆ ತಾಂತ್ರಿಕ ಡಿಪ್ಲೋಮ ಕೋರ್ಸ್ ಮಾಡಿಕೊಂಡವರಿಗೆ MNC ಕಂಪನಿಗಳಲ್ಲಿ ವಿಪುಲವಾದ ಉದ್ಯೋಗ ಅವಕಾಶವಿದೆ. ಅಲ್ಲದೇ ಮೊದಲ ಆದ್ಯತೆ ನೀಡಲಾಗುತ್ತದೆ.


    ನಾಗೇಶ್ ಎಸ್ ವೈ ಅವರು ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ
    ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರು.

    ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ: ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಕೋವಿಡ್ ಸಂಕಷ್ಟದ ಕಾಲದಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವ ಉದ್ದೇಶದಿಂದ ಶಿಕ್ಷಣದ ಮುಂದುವರಿಕೆ ಕ್ರಮಗಳ ಕುರಿತಂತೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಕೊರೋನಾ ಸೋಂಕಿನ ಭೀತಿಯಿಂದಾಗಿ 2021-22ನೇ ಶೈಕ್ಷಣಿಕ ವರ್ಷವೂ ನಿಗದಿಯಂತೆ ಆರಂಭವಾಗುವ ಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ನಂತರ ಅವರು ಮಾತನಾಡಿದರು.

    ವಿಶೇಷವಾಗಿ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವುದು ಆ ಮೂಲಕ ಅವರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವುದು ಹಾಗೆಯೇ ಕಳೆದ ಸಾಲಿನಲ್ಲಿ ಕಲಿತ ಪಾಠದಂತೆ ನಮ್ಮ ಮಕ್ಕಳನ್ನು ತಲುಪಲು ಪರ್ಯಾಯ ಕ್ರಮಗಳನ್ನು ಅನುಸರಿಸಬೇಕೆಂಬ ಕುರಿತು ಈ ಸಮಿತಿಯು ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

    ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಪರ್ಯಾಯ ಬೋಧನಾ ಹಾಗೂ ಕಲಿಕಾ ಕ್ರಮಗಳು ಪ್ರಾಮುಖ್ಯತೆ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ತಜ್ಞರ ತಂಡದಿಂದ ಸಲ್ಲಿಕೆಯಾಗುವ ವರದಿಯ ಆಧಾರದಲ್ಲಿ ಬರುವ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖವಾಗಲಾಗುವುದು ಎಂದು ಸಚಿವರು ತಿಳಿಸಿದರು.

    ಲಭ್ಯವಿರುವ ಸ್ಥಿತಿಗತಿಗಳು, ಮೌಲ್ಯಾಂಕನ ಪದ್ಧತಿ, ಮಂಡಳಿ ಪರೀಕ್ಷೆಗಳು, ಆನ್ ಲೈನ್ / ದೂರಶಿಕ್ಷಣ, ಶಿಕ್ಷಕರ ತರಬೇತಿ, ಸಂಪನ್ಮೂಲ ಸದ್ಬಳಕೆ ಸೇರಿದಂತೆ ಎಲ್ಲ ಆಯಾಮಗಳನ್ನೂ ಆಧ್ಯಯನ ಮಾಡಿ ವರದಿ ನೀಡಲು ಸಮಿತಿಯಲ್ಲಿ ಖ್ಯಾತ ವಿವಿಧ ಶಿಕ್ಷಣ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿನಿಧಿಗಳು, ನಿಮ್ಹಾನ್ಸ್ ಪ್ರತಿನಿಧಿಗಳು, ರಾಜ್ಯದ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು, ಖಾಸಗಿ ಶಾಲೆಗಳ ಪ್ರತಿನಿಧಿ, ಪೋಷಕ ಸಂಘಟನೆಯ ಪ್ರತಿನಿಧಿಗಳು, ಶಿಕ್ಷಕ/ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ತಕ್ಷಣದಲ್ಲೇ ಸಮಿತಿ ರಚಿಸಿ ಇಲಾಖೆ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿಯಲ್ಲಿ ನೀಲನಕ್ಷೆಯನ್ನು ಮಂಡಿಸಲು ಸಮಿತಿಯನ್ನು ಕೋರಲಾಗುವುದು ಎಂದು ಸಚಿವರು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ :ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರ ಮಂಗಳವಾರದ ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು, ಹಲವಾರು ರಾಜ್ಯಗಳು, ಅದರ ಅನುಷ್ಠಾನಕ್ಕೆ ಸಾಕಷ್ಟು ಪೂರ್ವಭಾವಿ ಕೆಲಸಗಳನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ‌ ಇದರ‌ ಬಗ್ಗೆ ವರದಿ ಸಲ್ಲಿಕೆಯಾದ ಬಳಿಕ ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳು ಅವಶ್ಯವಿದ್ದು, ರಾಜ್ಯ ಸಂಪನ್ಮೂಲ ತಂಡದ ರಚನೆಯೂ ಸೇರಿದಂತೆ ಇದರಲ್ಲಿ ಉಲ್ಲೇಖಿಸಿರುವ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಮೃತ ಶಿಕ್ಷಕರಿಗೆ ಪರಿಹಾರ- ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್:
    ಕೋವಿಡ್ ನಿಂದ ರಾಜ್ಯದ ವಿವಿಧೆಡೆ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಮೃತರಾಗಿರುವ ಕುರಿತು ಅಂಕಿ ಅಂಶಗಳನ್ನು ಮಂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕರ‌ ಕಲ್ಯಾಣ ನಿಧಿಯಿಂದ ವಿಶೇಷ ಪ್ರಕರಣವೆಂದು ಈ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ ಎಂದರು.

    ಹಾಗೆಯೇ ಶಿಕ್ಷಕ ಸಮುದಾಯವನ್ನ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೆ ಮುನ್ನ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಲಸಿಕೆ‌ ನೀಡುವಲ್ಲಿ ಪ್ರಾಧಾನ್ಯತೆ ನೀಡಬೇಕಿದ್ದು, ಈ ಕುರಿತು ಆರೋಗ್ಯ ಇಲಾಖೆಗೆ ಕೂಡಲೇ‌ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸುರೇಶ್ ಕುಮಾರ್ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರೂ ಸಹ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತನಾಡುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಅರೋಗ್ಯ ಇಲಾಖೆಗೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಅನುಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ: ಈಗಾಗಲೇ ಶಿಕ್ಷಕರ ವರ್ಗಾವಣೆ ಬಹಳ ತಡವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಲಾಕ್ ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಶಿಕ್ಷಕರು ಇಲಾಖೆಯಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ಇದರಲ್ಲಿ ವಿಳಂಬ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ವೃಂದ ಮತ್ತು ನೇಮಕಾತಿ ನಿಯಮ:6-8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶ ಮಾಡಲಾಗಿತ್ತು. ವಿಳಂಬದ ಕಾರಣ ನೇಮಕಾತಿಗೆ ಯಾವುದೇ ಕ್ರಮವಾಗಿಲ್ಲ. ಕಾಲಮಿತಿ ವಿಧಿಸಿಕೊಂಡು ಇದನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇಮಕಾತಿಗೆ ನಿರ್ಬಂಧ ಇಲ್ಲದ ಕಾರಣ, ಆ ಪ್ರದೇಶದ ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಕ್ರಿಯಾಯೋಜನೆ ರೂಪಿಸಿ ಮಂಡಿಸಬೇಕೆಂದು ಸೂಚಿಸಿದರು.

    ಸಂಕನೂರ ನೇತೃತ್ವದ ಸಮಿತಿ ವರದಿ:ಶಾಲಾಕಾಲೇಜುಗಳ ಆರ್.ಆರ್.ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವರದಿ‌ ಮಂಡಿಸಲು ರಚಿಸಲಾಗಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಸಮಿತಿ ವರದಿ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಈ ಕುರಿತ ಪ್ರಗತಿ ಪರಿಶೀಲಿಸಿ ವರ್ಚುವಲ್ ಮೂಲಕ ಸಭೆ ನಡೆಸಿ ಶೀಘ್ರವೇ ವರದಿ ನೀಡುವ ಸಂಬಂಧದಲ್ಲಿ ಸಂಕನೂರು ಅವರೊಂದಿಗೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾವೂ ಸಹ ಸಂಕನೂರು ಅವರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಶೀಘ್ರವೇ ವರದಿ ಕೋರುವುದಾಗಿ ತಿಳಿಸಿದರು.

    ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ:ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಪೋರ್ಟಲ್ ದೀಕ್ಷಾ ಆಪ್ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳು ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಲು ಅನುವಾಗುವಂತೆ ಪಠ್ಯ ಭಾಗಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಪೋರ್ಟಲ್ ಆಗಿದ್ದು, ದೀಕ್ಷಾ ಪೋರ್ಟಲ್ ನಲ್ಲಿ ಅತಿ ಹೆಚ್ಚು ಪಠ್ಯ ಲಭ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಉತ್ತಮ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ 1ರಿಂದ 10ನೇ ತರಗತಿಗಳಿಗೆ ಅನ್ವಯವಾಗುವಂತೆ 22 ಸಾವಿರ ಇ-ಪಠ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಪಠ್ಯಪುಸ್ತಕಗಳು, ವರ್ಕ್ ಪುಸ್ತಕಗಳು, ತರಬೇತಿ ಪಠ್ಯಗಳು ಅಧ್ಯಾಯವಾರು ದೀಕ್ಷಾ ಆಪ್ ನಲ್ಲಿ ಲಭ್ಯವಿದೆ. ಹಾಗೆಯೇ ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆಯೂ ಪಠ್ಯರಚನೆ ಪೂರೈಸಿ ಆಪ್ ಗೆ ಅಪ್ ಲೋಡ್ ಮಾಡಲಾಗಿದೆ. ಪದವಿ ಪೂರ್ವ ಉಪನ್ಯಾಸಕರ ತರಬೇತಿ ಮಾಡ್ಯೂಲ್ ನ್ನು ಸಹ ಅಪ್ ಲೋಡ್ ಮಾಡಲಾಗುತ್ತಿದೆ. ಈ ಆಪ್ ನ ಬಳಕೆಯನ್ನು ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಸಚಿವರು ಕೋರಿದರು.

    ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪರ್ಯಾಯ ಬೋಧನಾ ಕ್ರಮಗಳಿಗೆ ಆದ್ಯತೆ ಇರಲಿದ್ದು, ಈಗಿನಿಂದಲೇ ದೂರದರ್ಶನ, ಆಕಾಶವಾಣಿಯಂತಹ ಸಮೂಹ ಮಾಧ್ಯಮಗಳು ಸೇರಿದಂತೆ ತಂತ್ರಜ್ಞಾನಾಧಾರಿತ ಬೋಧನೆಯ ಸಂಪೂರ್ಣ ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ:ಭೌತಿಕವಾಗಿ ಶಾಲೆಗಳು ಆರಂಭವಾಗುವುದು ತಡವಾದರೂ ಸರಿಯೇ ಮಕ್ಕಳ ಕಲಿಕೆಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಬೇಕು ಎಂದು ಸಚಿವರು ಸೂಚಿಸಿದರು.

    ಶಾಲಾ ಶುಲ್ಕದ ಗೊಂದಲ ಪರಿಹಾರ:ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿರುವ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣದ ಮಾಹಿತಿ ಪಡೆದ ಸಚಿವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಮಾರ್ಗಗಳನ್ನು ಆಲೋಚಿಸಬೇಕೆಂದು ಸಲಹೆ ನೀಡಿದರು.

    ಸಭೆಯಲ್ಲಿ ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಫ್ಯಾಮಿಲಿ ಮ್ಯಾನ್ ಸೀಸನ್ 2 ಬಿಡುಗಡೆ ದಿನ ಪ್ರಕಟ

    ಸೀಸನ್ 1 ರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೆಬ್ ಸಿರೀಸ್ ಫ್ಯಾಮಿಲಿ ಮ್ಯಾನ್ ಸೀಸನ್ 2 ರ ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ಇಂದು ಪ್ರಕಟಿಸಿದೆ. ಜೂನ್ 4 ರಂದು ಬಿಡುಗಡೆ ಮಾಡುವುದಾಗಿ ಅದು ಟ್ರೇಲರ್ ಬಿಡುಗಡೆ ಮಾಡುವುದರ ಮೂಲಕ ಪ್ರಕಟಿಸಿದೆ.

    ಈ ಹಿಂದೆ ಫೆಬ್ರವರಿ 12 ರಂದೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿತ್ತು. ಆದರೆ ಆ ಸಮಯದಲ್ಲಿ ಬಿಡುಗಡೆಯಾದ ತಾಂಡವ್ ವೆಬ್ ಸರಣಿ ವಿವಾದಕ್ಕೆ ಕಾರಣವಾಗಿದ್ದರಿಂದ ಫ್ಯಾಮಿಲಿ ಮ್ಯಾನ್ 2 ರ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು.

    ಮಾತು ಕೊಟ್ಟಂತೆ ಈ ಬೇಸಿಗೆಗೆ ಸರಣಿಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ದೇಶಕರಾದ ರಾಜ್ ಮತ್ತು ಡಿಕೆ ಟ್ವೀಟ್ ಮಾಡಿದ್ದಾರೆ.

    ಕುಟುಂಬ ಪ್ರೇಮಿಯಾಗಿ ಜೊತೆಗೆ ಇಂಟೆಲಿಜೆನ್ಸ್ ಅಧಿಕಾರಿ ಶ್ರೀಕಾಂತ್ ತಿವಾರಿ ಆಗಿ ಮನೋಜ್ ಬಾಜ್ಪೇಯಿ ಅದ್ಭುತ ಅಭಿನಯ ನೀಡಿದ್ದ ಫ್ಯಾಮಿಲಿ ಮ್ಯಾನ್ 1 ತೀವ್ರ ಕುತೂಹಲ ಕೆರಳಿಸಿತ್ತು. ಎಲ್ಲರೂ ಒಂದೇ ಸಿಟ್ಟಿಂಗ್ ನಲ್ಲಿ ಎಲ್ಲಾ ಎಪಿಸೋಡ್ ಗಳನ್ನು ನೋಡುವಂತೆ ಮಾಡಿ ಸೀಸನ್ 2 ಕ್ಕೆ ಕಾಯುವಂತೆ ಮಾಡಿತ್ತು.

    ಮನೋಜ್ ಬಾಜ್ಪೇಯಿ ಜೊತೆ ಸಮಂತ ಅಕ್ಕಿನೇನಿ, ಪ್ರಿಯಾಮಣಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್ ಮತ್ತಿತರರು ನಟಿಸಿದ್ದಾರೆ.

    ಈ ಸರಣಿ ವೀಕ್ಷಿಸಲು ನೀವು ನೀವು ಅಮೆಜಾನ್ ಪ್ರೈಮ್ ಗೆ ಚಂದಾದಾರಗಬೇಕಾಗುತ್ತದೆ. ಚಂದಾದಾರರಾಗಲು ಈ ಕೆಳಗಿನ JOIN NOW ಲಿಂಕ್ ಒತ್ತಿ.

    error: Content is protected !!