18.6 C
Karnataka
Saturday, November 30, 2024
    Home Blog Page 110

    ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಪಿಎಚ್‌ಸಿಗೊಂದು ಕೋವಿಡ್‌ ಕಾರ್ಯಪಡೆ

    ಕೋವಿಡ್‌-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರ ಜತೆ ಮಹತ್ವದ ಮಾತುಕತೆ ನಡೆಸಿದರು.

    ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಚುಯಲ್‌ ಸಭೆಯಲ್ಲಿ ಕೋವಿಡ್‌ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್‌, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚ‌ರ್ಚೆ ನಡೆಸಲಾಯಿತು.

    ಅಮೆರಿಕ, ಕೆನಡಾ, ನೆದರ್‌ಲ್ಯಾಂಡ್ಸ್‌, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಆಸ್ಟ್ರೇಲಿಯಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲೆಂಡ್‌, ಜಪಾನ್‌ ಮುಂತಾದ ದೇಶಗಳ ದಕ್ಷಿಣ ಭಾರತ್‌ ಕಾನ್ಸುಲೇಟ್‌ ಜನರಲ್‌ಗಳ ಜತೆ ಡಿಸಿಎಂ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಕೋವಿಡ್‌ನಂಥ ಸೋಂಕಿನ ವಿರುದ್ಧ ಹೋರಾಟ ನಡೆಸಲು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ದೇಶಗಳ ಜತೆಗೆ ಎಲ್ಲ ರೀತಿಯ ಸಹಕಾರ ಸಂಬಂಧ ಹೊಂದಲು ಕರ್ನಾಟಕ ಸಿದ್ಧವಿದೆ ಎಂದರು.

    ಮೂರು ವಾರಗಳ ಹಿಂದೆ ರಾಜ್ಯದಲ್ಲಿ ಎರಡನೇ ಅಲೆ ಅಪ್ಪಳಿಸಿದೆ. ಸರಕಾರವು ಸೋಂಕು ಹರಡುವುದಕ್ಕಿಂತ ವೇಗವಾಗಿ ಹಾಸಿಗೆ ನಿರ್ವಹಣೆ, ಆಮ್ಲಜನಕ ಪೂರೈಕೆ, ಔಷಧಿ ಲಭ್ಯತೆ, ಹೋಮ್‌ ಐಸೋಲೇಷನ್‌ನಂಥ ಪರಿಹಾರ ಕಾರ್ಯಗಳನ್ನು ಕೈಗೊಂಡು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದರು ಡಿಸಿಎಂ.

    ರಾಜ್ಯದಲ್ಲಿ ಈಗ ಆಕ್ಸಿಜನ್‌, ಔಷಧಿ, ಬೆಡಗಳ ಕೊರತೆಯನ್ನು ಬಹುತೇಕ ನೀಗಿಸಲಾಗಿದೆ. ಮತ್ತೊಂದೆಡೆ ಸಂಭನೀಯ 3ನೇ ಅಲೆಯನ್ನು ಎದುರಿಸಲು ಸರಕಾರ ಸಜ್ಜಾಗಿದೆ ಎಂದು ಡಿಸಿಎಂ ಹೇಳಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೋಮ್‌ ಐಸೋಲೇಷನ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಸೋಂಕಿತರಿಗೂ ಕೋವಿಡ್‌ ಕೇರ್‌ನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

    ವಿವಿಧ ದೇಶಗಳ ನೆರವು ಹೀಗಿದೆ:

    ಜಾಗತಿಕ ಆವಿಷ್ಕಾರ ಮೈತ್ರಿಕೂಟ (gia) ದೇಶಗಳ ರಾಜತಾಂತ್ರಿಕರು ಸಭೆಯಲ್ಲಿ ನೀಡಿದ ನೆರವಿನ ಮಾಹಿತಿ ಇಲ್ಲಿದೆ.

    ಜಪಾನ್‌ :ದಕ್ಷಿಣ ಭಾರತದ ಜಪಾನ್ ಕಾನ್ಸುಲೇಟ್‌ ಜನರಲ್‌ ಅಕಿಕೊ ಸುಗಿತಾ ಅವರು ಭಾರತ & ಕರ್ನಾಟಕಕ್ಕೆ ನೀಡಿರುವ ನೆರವಿನ ಮಾಹಿತಿ ನೀಡಿದರು. ಈಗಾಗಲೇ ರಾಜ್ಯದಲ್ಲಿದ್ದ ಬಹತೇಕ ಜಪಾನಿಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಜಪಾನ್‌ ಸರಕಾರ ಭಾರತಕ್ಕೆ 50 ದಶಲಕ್ಷ ಡಾಲರ್ ಅನುದಾನ ಘೋಷಿಸಿದೆ. 800 ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ ಎಂದ ಅಕಿಕೊ ಸುಗಿತಾ ಅವರು, ಉತ್ಪಾದನಾ & ಅತ್ಯಗತ್ಯ ಕೈಗಾರಿಕೆಗಳ ಕಾರ್ಯಚಟುವಟಿಕೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮನವಿ ಮಾಡಿದರು. ಜಪಾನಿನ ಅನೇಕ ಕಂಪನಿಗಳು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಶಯ ಹೊಂದಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.

    ದಕ್ಷಿಣ ಕೊರಿಯಾ:ದಕ್ಷಿಣ ಕೊರಿಯಾದ ಕಾನ್ಸುಲೇಟ್‌ ಜನರಲ್‌ ಯಂಗ್ ಸೀಪ್ ಕ್ವಾನ್ ಅವರು ಮಾತನಾಡಿ, ಈಗಾಗಲೇ 1,500 ಕೊರಿಯನ್‌ ಪ್ರಜೆಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರವಾಗಬೇಕು ಎಂದು ವಿನಂತಿ ಮಾಡಿದರು.

    ಜತೆಗೆ, ಜಾಗತಿಕ ಮಟ್ಟದಲ್ಲಿರುವ ಲಸಿಕೆಗಳ ಕೊರತೆಯನ್ನು ನೀಗಿಸಲು ವ್ಯಾಕ್ಸಿನ್‌ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಲು ದಕ್ಷಿಣ ಕೊರಿಯಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದ ಅವರು, ಭಾರತಕ್ಕೆ ಐದು ವಿಮಾನಗಳಲ್ಲಿ ವೈದ್ಯಕೀಯ ಸರಂಜಾಮುಗಳ ಪೂರೈಕೆ, ಆಮ್ಲಜನಕ ಸಿಲಿಂಡರ್‌ಗಳು, ವೈದ್ಯಕೀಯ & ತಪಾಸಣೆ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಸ್ತುಗಳು ಭಾರತಕ್ಕೆ ಬಂದಿವೆ. ಅಲ್ಲದೆ, ಇಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೊರಿಯಾದ ಎಲ್‌ಜಿ, ಸ್ಯಾಮ್‌ಸಂಗ್‌ ಮುಂತಾದವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿವೆ ಎಂದರು.

    ಸ್ವಿಡ್ಜರ್‌ಲೆಂಡ್:‌ಸ್ವಿಡ್ಜರ್‌ಲೆಂಡ್ ದೇಶದ ಕಾನ್ಸುಲೇಟ್‌ ಜನರಲ್ ಸೆಬಾಸ್ಟಿಯನ್ ಹಗ್‌ ಅವರು ಮಾತನಾಡಿ, ಭಾರತಕ್ಕೆ ಎಲ್ಲ ರೀತಿಯ ನೆರವು ಮತ್ತು ತಾಂತ್ರಿಕ ಮಾಹಿತಿ ಹಂಚಿಕೊಳ್ಳಲು ನಮ್ಮ ದೇಶ ಸಿದ್ಧವಿದೆ. ಭಾರತಕ್ಕೆ 13 ಟನ್ ವೈದ್ಯಕೀಯ ವಸ್ತುಗಳ ನೆರವು ನೀಡಲಾಗಿದೆ. 600 ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗಿದೆ. 40ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಭಾರತಕ್ಕೆ 7 ದಶಲಕ್ಷ  ಸ್ವಿಸ್ ಫ್ರಾಂಕ್ಗಳಷ್ಟು ನೆರವು ಕೊಟ್ಟಿವೆ ಎಂದರು.

    ಅಲ್ಲದೆ, ಜಾಗತಿಕ ಆವಿಷ್ಕಾರ ಪಾಲುದಾರ ಕೂಟದ ಸದಸ್ಯರು ಹೆಚ್ಚು ಹೆಚ್ಚು ಸಭೆಗಳನ್ನು ನಡೆಸುವ ಮೂಲಕ ನೆರವು ಮತ್ತು ಮಾಹಿತಿ ಹಂಚಿಕೆಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಸೆಬಾಸ್ಟಿಯನ್ ಹಗ್‌ ಸಲಹೆ ಮಾಡಿದರು. ಇದಕ್ಕೆ ಡಿಸಿಎಂ ಅವರು ಒಪ್ಪಿಗೆ ಸೂಚಿಸಿದರು.

    ನೆದರ್‌ಲ್ಯಾಂಡ್ಸ್:‌ಯಾವುದೇ ಸಂದರ್ಭದಲ್ಲೂ ನೆದರ್‌ಲ್ಯಾಂಡ್ಸ್ ಭಾರತದ ಜತೆ ಇರುತ್ತದೆ ಎಂದು ಆ ದೇಶದ ಕಾನ್ಸುಲೇಟ್‌ ಜನರಲ್‌ ಆದ ಗೆರ್ಟ್ ಹೈಜ್ಕೂಪ್ ಅವರು ಭರವಸೆ ನೀಡಿದರು. ಈಂಥ ಸಭೆಗಳನ್ನು ಹೆಚ್ಚೆಚ್ಚು ನಡೆಸಬೇಕು ಎಂದು ಸಲಹೆ ನೀಡಿದರಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ರಾಯಭಾರ ಕಚೇರಿ ಮತ್ತು ದೂತಾವಾಸದ ಸಿಬ್ಬಂದಿಯನ್ನು ಅಗತ್ಯ ಸಿಬ್ಬಂದಿ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕವು ಹಾಗೆ ಪರಿಗಣಿಸಬೇಕು ಎಂದು ಕೋರಿದರು

    ಈಗಾಗಲೃ ನೆದರ್‌ಲ್ಯಾಂಡ್ಸ್ 3 ವಿಮಾನಗಳಷ್ಟು ವೈದ್ಯಕೀಯ ಸರಂಜಾಮುಗಳನ್ನು ಭಾರತಕ್ಕೆ ತಲುಪಿಸಿದೆ. ಫಿಲಿಪ್ಸ್ ಕಂಪನಿ ತಯಾರಿಸಿದ 10,000 ಆಮ್ಲಜನಕ ಸಾಂದ್ರಕಗಳನ್ನೂ ಕೂಡ ಒದಗಿಸಿದೆ ಎಂದು ಹೈಜ್ಕೂಪ್‌ ಮಾಹಿತಿ ನೀಡಿದರು.

    ಅಮೆರಿಕ:ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚೆನ್ನೈನಲ್ಲಿರುವ ಅಮೆರಿಕನ್‌ ಕಾನ್ಸುಲೇಟ್‌ ಜನರಲ್‌ ಜುಡಿತ್ ರವಿನ್ ಅವರು, 100 ಮಿಲಿಯನ್ ಯುಎಸ್ ಡಾಲರ್‌ನಷ್ಟು ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಆಮ್ಲಜನಕ, ವೈದ್ಯಕೀಯ ಸರಂಜಾಮು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಿದೆ. ಇದೆಲ್ಲವನ್ನೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಲಕ ಕೊಡಲಾಗುತ್ತಿದೆ ಎಂದರು.

    ಅಲ್ಲದೆ, ಭಾರತ-ಅಮೆರಿಕ ಜಂಟಿಯಾಗಿ ಕೋವಿಡ್‌ ಪರಿಹಾರ ನಿಧಿಗಾಗಿ ಕೆಲಸ ಮಾಡಲಿವೆ. ಭಾರತದಲ್ಲಿ 20 ದಶಲಲ್ಷ ಡೋಸ್‌ ಲಸಿಕೆ ತಯಾರಿಸಲು ಕೈಜೋಡಿಸಲಿದೆ ಎಂದು ಅವರು ತಿಳಿಸಿದರು.

    ಇನ್ನು ಇದೇ ಸಭೆಯಲ್ಲಿ ಮಾತನಾಡಿದ ಜರ್ಮನಿ ಕಾನ್ಸುಲೇಟ್‌ ಜನರಲ್‌ ಆಶಿಮ್‌ ಬರ್ಕಾಟ್‌ ಅವರು, ಸೋಂಕು ತಡೆಗಟ್ಟಲು ಕರ್ನಾಟಕದಲ್ಲಿ ಜಾರಿಗೆ ತಂದಿರುವ ಲಾಕ್‌ಡೌನ್‌ ಕ್ರಮ ಸರಿ ಇದೆ ಎಂದರಲ್ಲದೆ, ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಜರ್ಮನಿ ಸಿದ್ಧವಿದೆ ಎಂದರು. ಇಸ್ರೇಲ್‌ ಕಾನ್ಸುಲೇಟ್‌ ಜನರಲ್‌ ಜೋನಾಥನ್‌ ಝಡ್ಕಾ, ಕೆನಡಾದ ನಿಕೋಲಾಸ್‌ ಗೆರಾರ್ಡ್‌, ಡೆನ್ಮಾರ್ಕ್‌ನ ಜೆ ಬೆಜೂರಿಮ್‌ ಹಾಗೂ ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ ಮುಮತಾದವರು ಮಾತನಾಡಿದರು.

    ಪ್ರಕೃತಿಸಂರಕ್ಷಣೆ ಮತ್ತು ಕರ್ತವ್ಯ ಬದ್ಧತೆ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ | ಧರೆ ಹತ್ತಿಉರಿದಡೆ ನಿಲಲು ಬಾರದು | ಏರಿ ನೀರುಂಬುಡೆ, ಬೇಲಿ ಕೆಯ್ಯ ಮೇವಡೆ | ನಾರಿ ತನ್ನ ಮನೆಯಲ್ಲಿ ಕಳುವಡೆ | ತಾಯ ಮೊಲೆಹಾಲು ನಂಜಾಗಿ ಕೊಲುವೆಡೆ | ಇನ್ನಾರಿಗೆ ದೂರುವೆ ಕೂಡಲ  ಸಂಗಮದೇವಾ |

    ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹೊಣೆ  ನಮ್ಮೆಲ್ಲರ ಮೇಲೆ ಇರುತ್ತದೆ ಎಂಬುದನ್ನು ದಾರ್ಶನಿಕ ಬಸವಣ್ಣ  ಇಲ್ಲಿ ಉಲ್ಲೇಖಿಸಿರುವುದನ್ನು  ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ನೋಡಬಹುದು.

    ಜಾಗತಿಕ ತಾಪಮಾನದ ದಿಸೆಯಿಂದ ಭೂಮಿಯಲ್ಲಿ ಕೆಲವೆಡೆ ನಿಲ್ಲಲಾಗುತ್ತಿಲ್ಲ  ಬಿಸಿಲಿನ ತಾಪ ಸಹಿಸಲಾರದೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವೆ?  ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ? ಎಂಬಂತೆ ಭಿತ್ತಿ ಅರ್ಥಾತ್ ಭೂಮಿಯೇ ಇಲ್ಲದೆ ಇನ್ನೂ ಸರಳವಾಗಿ ಹೇಳುವುದಾದರೆ ಕೃಷಿ ಭೂಮಿಯೇ ಇಲ್ಲವಾದರೆ ನಾವು ಬೆಳೆಯುವುದಾದರು ಏನನ್ನು  ಎಂಬ ಪ್ರಶ್ನೆ ಏಳುತ್ತದೆ.

    ಅಕ್ರಮ ಭೂ ಒತ್ತುವರಿ, ಕೈಗಾರಿಕೆ,ನಿವೇಶನ,ರಸ್ತೆ ಇತ್ಯಾದಿ ಕಾರಣಕ್ಕೆ ಕೃಷಿ ಭೂಮಿ ಸವಕಲಾಗುತ್ತಿದೆ. ಕುಡಿಯುವ ನೀರು,ಸೇವಿಸುವ ವಾಯು ಅರ್ಥಾತ್ ಜೀವಜಲ  ಪ್ರಾಣವಾಯುವಿಗೂ ತತ್ವಾರ ಬಂದಿರುವ ಕಾಲವಿದು.  ಯದ್ವಾತದ್ವಾ ಬೋರ್ವೆಲ್ಗಳನ್ನು ಕೊರೆದು ನೀರನ್ನು ಪೋಲು ಮಾಡಿ ನೀರಿನ ಕುಡಿಯುವ ನೀರಿನ ಮಾರಾಟ ಪ್ರಾರಂಭವಾಗಿ ದಶಕಗಳೆ ಕಳೆದಿವೆ.  ನಮ್ಮ ಅನುಕೂಲಕ್ಕೆ   ಮರಗಳನ್ನು  ಹನನ  ಮಾಡಿ ಪ್ರಕೃತಿಯ ಮೇಲೆ  ಮನುಷ್ಯ ವಿಕೃತಅಟ್ಟಹಾಸ ಮೆರೆದಿದ್ದಾನೆ.

    ಸ್ವಚ್ಛ ಗಾಳಿಗೆ ಆಕ್ಸಿಜನ್  ಸೆಂಟರ್ ಗಳಿಗೆ ಹೋಗಬೇಕು ಅನ್ನುವ ಸುದ್ದಿ ಓದಿದ್ದೆವು ಕೇಳಿದ್ದೆವು ಹುಬ್ಬೇರಿಸಿದ್ದೆವು  ನಮ್ಮ ಮುಂದಿನ ತಲೆಮಾರಿಗೆ  ಇವೆಲ್ಲಾ ಎಂದು ಸುಮ್ಮನಿದ್ದೆವು, ಅದರೆ ಈಗ ಕೊರೊನಾ ಸಂದರ್ಭದಲ್ಲಿ ಈ  ಆಮ್ಲಜನಕವೇ ಇಲ್ಲದೆ  ಅನೇಕರು ಪ್ರಾಣಬಿಟ್ಟ ಸುದ್ದಿ ನಮ್ಮನ್ನು ಹೈರಾಣಾಗಿಸಿದೆ.   ನೂರಾರು ಸಾವಿರಾರು ಟನ್ಗಟ್ಟಲೆ ಆಕ್ಸಿಜನ್  ಉತ್ಪಾದನೆ ಆದರೂ   ಅವಶ್ಯಕತೆಗೆ ಲಭ್ಯವಿಲ್ಲದೆ ಇರುವುದು ಖೇದದ ಸಂಗತಿ.

    ಏರಿ ಅಂದರೆ ಕೆರೆಯ ನೀರನ್ನು ತಡೆಯುವ ಕಟ್ಟೆ ಎಂಬ ಅರ್ಥದಲ್ಲಿ ತೆಗೆದುಕೊಂಡರೆ  ಇಂದಿನ ಸಂದರ್ಭಕ್ಕೆ  ಮಾನವ ಸಂಪನ್ಮೂಲವನ್ನು ರಕ್ಷಣೆ ಮಾಡಬೇಕಾಗಿರುವ ಸರಕಾರ ಸರಕಾರದ ಅಂಗ ಸಂಸ್ಥೆಗಳು  ಎಂದು ತಿಳಿಯಬಹುದು.   ನಿನ್ನೆಯ  ವಿದ್ಯಾಮಾನಗಳನ್ನು ನೋಡಿದರೆ  ಅತೀವ ದುಃಖವಾಗುತ್ತದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ.  ಜನರನ್ನು ರಕ್ಷಣೆ ಮಾಡುವ ಹೊಣೆ ಹೊತ್ತಿರುವ ವೈದ್ಯಕೀಯ ಸಿಬ್ಬಂದಿಯೇ  ಅಕ್ರಮದಲ್ಲಿ ಭಾಗಿಯಾಗಿರುವುದು ಇರುವ ಜೀವರಕ್ಷಕ ಔಷಧಿಗಳನ್ನು ತಾವೇ ಕಳವು ಮಾಡಿ ಕಾಳಸಂತೆಯಲ್ಲಿ  ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ.  

    ಕೊರೊನಾ ಸಂದರ್ಭಕ್ಕೆ  ಲಸಿಕೆಗಳು ಬಂದಿವೆ  ಇವುಗಳ ಅಭಾವವಾದರೆ ನಕಲಿ  ಲಸಿಕೆಗಳು ಮಾರುಕಟ್ಟೆಗೆ ಬರುತ್ತವೆ ಎಂಬ ಸುದ್ದಿ ತಿಳಿದು ಜೀವ ರಕ್ಷಕ ಮಾಡುವ ಔಷಧವೂ ಕಲಬೆರಕೆಯೆ  ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನೆ ಅಲ್ಲವೇ  ತಾಯ ಹಾಲು ನಂಜಾಗುವುದು ಎನ್ನುವುದು  ಕಾಯುವ ಕೈಗಳೇ ಕೊಡಲಿ ಕಾವಾದಾರೆ ಮಲಗುವ ನೆಲವೆ  ಪ್ರಾಣ ರಕ್ಷಣೇ ಮಾಡಬೇಕಾದ ಹಾಸಿಗೆಗಳೆ ಮೃತ್ಯುಕೂಪವಾದರೆ  ಇನ್ನೆಲ್ಲಿ  ನಮ್ಮ ಸಂಕಷ್ಟಗಳ  ಪರಿಹಾರ ಎಂಬ ಪ್ರಶ್ನೆ ಕಾಡುತ್ತದೆ.   

    ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವ ಉತ್ತರದಾಯಿತ್ವ ಎಲ್ಲರದ್ದಾಗಿದೆ ಮತ್ತು ಅಧಿಕಾರ ಹೊಂದಿದ ಕೇಂದ್ರಗಳು  ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ  ಬದ್ಧತೆಯಿಂದ  ಇರಬೇಕು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು.  

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಕಂಡಿದ್ದು ಸತ್ಯವಲ್ಲ- ಕೈಗೆ ಎಟುಕಿಸಿಕೊಂಡಿದ್ದೇ ಸತ್ಯ

    ಈಗಿನ ಅನಿಶ್ಷಿತತೆಯ ಸಮಯದಲ್ಲಿ ಹೆಚ್ಚಿನವರ ಗಮನ ಶೀಘ್ರ ಹಣ ಸಂಪಾದನೆಯಾಗಿದೆ. ಎಷ್ಠು ಸುಲಭವಾಗಿ, ತ್ವರಿತವಾಗಿ ಹಣ ಸಂಪಾದನೆ ಮಾಡಬಹುದು ಎಂಬ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಷೇರುಪೇಟೆಯೂ ಇದಕ್ಕೆ ಹೊರತಲ್ಲ.

    ಷೇರುಪೇಟೆಯ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸರಳ ಸಮೀಕರಣವೆಂದರೆ PFT Module ಅಂದರೆ Practical, Fundmental, Tehnicals ವಿಧ. ಪ್ರಸ್ತುತ ಸಂದರ್ಭದಲ್ಲಿ ಅಂತರ್ಗತವಾಗಿ ಅಡಕವಾಗಿರುವ ಮೂಲಭೂತಾಂಶಗಳನ್ನು ಆಧರಿಸಿ ಜೊತೆಗೆ ಪೇಟೆ ಒದಗಿಸುವ ಕ್ಷಣಿಕ, ಅಲ್ಪಕಾಲಿಕ ಅವಕಾಶಗಳನ್ನು ಬಳಸಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಸ್ವಲ್ಪ ಮಟ್ಟಿನ ಸುರಕ್ಷತೆಯೊಂದಿಗೆ ಬಂಡವಾಳ ಬೆಳೆಸಲು ಸಾಧ್ಯ. ದೀರ್ಘಕಾಲೀನ ಹೂಡಿಕೆಯಿಂದ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು ಎಂಬ ಪರಿಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈ ಸಮಯದಲ್ಲಿ ಹೂಡಿಕೆಗೆ ಅಂಟಿಕೊಳ್ಳದೆ ವ್ಯವಹಾರಿಕತೆಯತ್ತ ಒಲವು ತೋರುವುದು ಒಳಿತು.

    ತ್ವರಿತ ಲಾಭ ತಂದ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌

    ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.166 ರಂತೆ ಐಪಿಒ ಮೂಲಕ ಸಾರ್ವಜನಿಕ ಷೇರು ವಿತರಣೆ ಮಾಡಿದ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಕಂಪನಿಯು ತನ್ನ ಷೇರುದಾರರಿಗೆ ಎಂತಹ ಅದ್ಭುತವಾದ ಲಾಭವನ್ನು ತಂದುಕೊಟ್ಟಿದೆ ಎಂದರೆ ಈ ತಿಂಗಳ 10 ರಂದು ರೂ.868 ರವರೆಗೂ ಜಿಗಿತ ಕಂಡಿದೆ. ಈ ಷೇರು ಆರಂಭಿಕ ದಿನಗಳಲ್ಲಿ ರೂ.286 ರಿಂದ ಆರಂಭವಾಗಿ ಕ್ರಮೇಣ ಏರಿಕೆಯ ಪಥದಲ್ಲಿ ಸಾಗಿ ಈ ಹಂತವನ್ನು ತಲುಪಿದೆ. ಕೇವಲ ಕೆಲವೇ ತಿಂಗಳಲ್ಲಿ ಪೇಟೆಯು ಎರಡಕ್ಕೂ ಹೆಚ್ಚು ಪಟ್ಟು ಲಾಭ ಗಳಿಸಿಕೊಟ್ಟಿದೆ. 10 ರಂದು ರೂ.868 ನ್ನು ತಲುಪಿದ ಈ ಷೇರು 14 ರಂದು ರೂ.720 ಕ್ಕೆ ಕುಸಿದು ರೂ.728 ರ ಸಮೀಪ ಕೊನೆಗೊಂಡಿದೆ. ಕಂಪನಿಯ ಪ್ರವರ್ತಕರನ್ನಾಧರಿಸಿ, ಉಜ್ವಲ ಭವಿಷ್ಯದ ನಿರೀಕ್ಷೆಯಿಂದ ಹೂಡಿಕೆದಾರರ ಬೆಂಬಲ ಹೆಚ್ಚಾಗಿ ಏರಿಕೆ ಕಂಡಿದೆ. ರೂ.300-400 ರ ಸಮೀಪ ಖರೀದಿ ಮಾಡಿದವರೂ ಸಹ ರೂ.860 ದಾಟಿದಾಗ ಮಾರಾಟ ಮಾಡಲು ನಿರುತ್ಸಾಹ ತೋರಲು ಕಾರಣ ಮೈಂಡ್‌ ಟ್ರೀ ಷೇರಿನ ಬೆಲೆಯಾಗಿದೆ. ಆದರೆ ಈಗಿನ ಅಲ್ಪ ಬಡ್ಡಿ ಯುಗದಲ್ಲಿ ಈ ರೀತಿ ಅನಿರೀಕ್ಷಿತ ಲಾಭದ ಇಳುವರಿ ದೊರೆತಾಗ ಲಾಭದ ನಗದೀಕರಣ ಸುರಕ್ಷಿತ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

    ದೀರ್ಘ ಕಾಲದ ನಂತರ ಮರಳಿಬಂದ ಅಸಲು : ಜಿ ಎನ್‌ ಎಫ್‌ ಸಿ ಲಿಮಿಟೆಡ್

    ಈ ಷೇರಿನ ಬೆಲೆ ರೂ.390 ರ ಸಮೀಪವಿದ್ದು ಈ ತಿಂಗಳ 12 ರಂದು ಷೇರಿನ ಬೆಲೆ ರೂ.425 ನ್ನು ತಲುಪಿ ವಾರ್ಷಿಕ ಗರಿಷ್ಠದ ಸಂಭ್ರಮ ಮೂಡಿಸಿತು. ಹಿಂದಿನ ವರ್ಷ ಸುಮಾರು ರೂ.100 ರ ಕನಿಷ್ಠದಲ್ಲಿದ್ದು, ಈ ವರ್ಷ ರೂ.200 ರ ಸಮೀಪದಿಂದ ಕೆಲವೇ ತಿಂಗಳುಗಳಲ್ಲಿ ರೂ.425 ಕ್ಕೆ ಜಿಗಿತ ಕಂಡಿರುವುದು ಹಲವಾರು ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಆದರೆ ಈಗಿನ ಬೆಲೆ ಸುಮಾರು ರೂ.400 ರಲ್ಲಿ ಖರೀದಿಮಾಡಿದಲ್ಲಿ ಅದು ಉತ್ತಮ ಹೂಡಿಕೆಯಾಗಬಹುದೇ? ಎಂಬ ಚಿಂತನೆ ಹಲವರಲ್ಲಿದೆ. ಅಂತಹವರ ಗಮನಕ್ಕೆ ಈ ಕೆಳಗಿನ ಅಂಶಗಳನ್ನು ತರಬಯಸುತ್ತೇನೆ.

    ಜಿ ಎನ್‌ ಎಫ್‌ ಸಿ ಷೇರಿನ ಬೆಲೆ 2018 ರಲ್ಲಿ ರೂ.547 ರವರೆಗೂ ಏರಿಕೆ ಕಂಡಿತ್ತು. ಆ ವರ್ಷ ರೂ.425 ರ ಸಮೀಪ ಖರೀದಿ ಮಾಡಿದವರು ಈಗಲೂ ಪರಿತಪಿಸುತ್ತಿದ್ದಾರೆ. 2018 ರ ನಂತರದಲ್ಲಿ ಈ ಷೇರಿನ ಬೆಲೆ ರೂ.96 ರವರೆಗೂ ಕುಸಿದಿದ್ದು ಅಲ್ಲಿಂದ ಈ ವರ್ಷ ರೂ.425 ನ್ನು ತಲುಪಿ ಮತ್ತೆ ಜಾರಿದೆ. ಅಂದರೆ ಷೇರುಪೇಟೆಯಲ್ಲಿ ಷೇರಿನ ದರಗಳು ನಿಂತ ನೀರಿನಂತಲ್ಲ, ಸದಾ ಹರಿಯುತ್ತಿರುತ್ತವೆ. ಹರಿಯುವ ದಿಶೆಯನ್ನಾಧರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಅರಿವು, ಕೌಶಲ್ಯಗಳ ಅಗತ್ಯ ಹೆಚ್ಚಾಗಿದೆ. ಷೇರುಪೇಟೆಯು ಜೂಜಾಟ ಎಂಬ ಭಾವನೆಯಲ್ಲಿರುವವರಿಗೆ ಇದು ಉತ್ತರವನ್ನು ನೀಡುವಂತಿದೆ. ಜೂಜಾಟದಲ್ಲಿ ಹಣವು ಸಂಪೂರ್ಣವಾಗಿ ನಶಿಸುವುದು ಇಲ್ಲ ಆದಾಯ ತರುವುದು. ಆದರೆ ಷೇರುಪೇಟೆಯಲ್ಲಿ ಹೂಡಿಕೆ ಉತ್ತಮ ಕಂಪನಿಗಳಲ್ಲಾಗಿದ್ದರೆ ಪೇಟೆಯಲ್ಲಿ ಷೇರಿನ ದರಗಳು ಕುಸಿದರೂ, ಕಂಪನಿ ಉತ್ತಮವಾಗಿದ್ದರೆ, ಷೇರಿನ ದರಗಳು ಪುಟಿದೇಳುವ ಸಾಧ್ಯತೆ ಹೆಚ್ಚಿರುತ್ತದೆ.

    ದೀರ್ಘಕಾಲೀನವೋ ಶಾಶ್ವತವೋ : ಬಜಾಜ್‌ ಹಿಂದೂಸ್ಥಾನ್‌ ಶುಗರ್ ಲಿಮಿಟೆಡ್

    ಈ ಷೇರಿನ ಬೆಲೆ ಶುಕ್ರವಾರ ರೂ.14.28 ರ ವಾರ್ಷಿಕ ಗರಿಷ್ಠ ದಾಖಲಿಸಿ ನಂತರ ರೂ.12.92 ರ ಲೋವರ್‌ ಸರ್ಕ್ಯೂಟ್‌ ನಲ್ಲಿ ಕೊನೆಗೊಂಡಿದೆ. ರೂ.3.77 ಈ ಷೇರಿನ ವಾರ್ಷಿಕ ಕನಿಷ್ಠ ಬೆಲೆಯಾಗಿದೆ. ಅಂದರೆ ಈ ವರ್ಷದ ಕೆಲವು ತಿಂಗಳ ಹಿಂದೆ ಖರೀದಿ ಮಾಡಿದವರು ಅಧಿಕ ಲಾಭ ಗಳಿಸಿದಂತಾಗಿದೆ. ಓದುಗರ ಗಮನಕ್ಕೆ ಕೆಲವು ಅಂಶಗಳನ್ನು ತರಬಯಸುತ್ತೇನೆ. ಈ ಷೇರಿನ ಬೆಲೆ ರೂ.1 ಅಗಿದ್ದು 2020 ರಲ್ಲಿ ವರ್ಷಪೂರ್ತಿ ಒಂದಂಕಿಯಲ್ಲಿ ವಹಿವಾಟಾಗುತ್ತಿತ್ತು. ಸೋಜಿಗವೆಂದರೆ ಈ ಷೇರು 2010 ರಲ್ಲಿ ರೂ.240 ಕ್ಕೂ ಹೆಚ್ಚಿತ್ತು. 2006 ರಲ್ಲಿ ಈ ಷೇರಿನ ಬೆಲೆ ರೂ.568 ರಲ್ಲಿತ್ತು. ಅಲ್ಲಿಂದ ನಿರಂತರವಾಗಿ ಇಳಿಯುತ್ತಲೇ ಬಂದಿದೆ. 2010 ರಲ್ಲಿ ಹೂಡಿಕೆ ಮಾಡಿದವರಿಗೆ ಬಂಡವಾಳ ಹೇಗೆ ಕರಗಿಹೋಯಿತೆಂದರೆ, ಅವರು ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದ ಕಂಪನಿಯಲ್ಲಿ ಶಾಶ್ವತ ಹೂಡಿಕೆದಾರರಾಗಿದ್ದಾರೆ.

    ಟಾಟಾ ಕೆಮಿಕಲ್ಸ್‌ ಲಿಮಿಟೆಡ್‌ :

    ಸರಕು ರಸಾಯನಿಕಗಳನ್ನುತ್ಪಾದಿಸುವ ಈ ಕಂಪನಿ ಕಳೆದ ಒಂದು ತಿಂಗಳಿನಲ್ಲಿ ರೂ.800 ರ ಸಮೀಪದಿಂದ ರೂ.670 ರವರೆಗೂ ಇಳಿಕೆ ಕಂಡು ನಂತರ ಚೇತರಿಗೆ ಕಂಡು ಶುಕ್ರವಾರ 14 ರಂದು ರೂ.733 ನ್ನು ತಲುಪಿ ರೂ.702 ರ ಸಮೀಪ ಕೊನೆಗೊಂಡಿದೆ. ಪ್ರತಿ ಷೇರಿಗೆ ರೂ.10 ರಂತೆ ಲಾಭಾಂಶ ಘೋಷಿಸಿದೆ. ಡಿವಿಡೆಂಡ್‌ ನ್ನು ವಿತರಿಸಲು ಸುಮಾರು ಇನ್ನು ಒಂದು ತಿಂಗಳ ಸಮಯವಿರುವುದರಿಂದ ಮುಂದಿನ ದಿನಗಳಲ್ಲಿ ಚೇತರಿಕೆಯ ಚಟುವಟಿಕೆ ಪ್ರದರ್ಶಿತವಾಗಬಹುದು. ಬೇಗ ಬೇಗ ಡ್ರಾ ಬೇಗ ಬೇಗ ಹಣ ಎಂಬ ಹಂತದಲ್ಲಿರುವುದೇ ಕಾದು ನೋಡಬೇಕು.

    ಪಿರಮಲ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್:

    ಸುಮಾರು ರೂ.1,630 ರ ಸಮೀಪ ವಹಿವಾಟಾಗುತ್ತಿರುವ ಈ ಷೇರು ಮಾರ್ಚ್‌ 2021 ರ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ. ಫಾರ್ಮಾ ಮತ್ತು ವಿತ್ತೀಯ ವಲಯದಲ್ಲಿ ಗುರುತಿಸಿಕೊಂಡಿರುವ ಈ ಕಂಪನಿ 2020 ರಲ್ಲಿ ಪ್ರತಿ ಷೇರಿಗೆ ರೂ.14 ರಂತೆ ಡಿವಿಡೆಂಡ್‌ ವಿತರಿಸಿತ್ತು ಈ ವರ್ಷ ಪ್ರತಿ ಷೇರಿಗೆ ರೂ.33 ರಂತೆ ಡಿವಿಡೆಂಡ್‌ ಘೋಷಿಸಿದೆ. ಮಾರ್ಚ್‌ ತಿಂಗಳಲ್ಲಿ ರೂ.2,000 ದ ಸಮೀಪವಿದ್ದ ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.1,760 ರ ಸಮೀಪದಿಂದ ಕುಸಿದಿದೆ. ಇದು ಹೈ ಬೀಟಾ ಸ್ಟಾಕ್‌ ಎಂಬುವ ರೀತಿಯಲ್ಲಿ ಏರಿಳಿತ ಪ್ರದರ್ಶಿಸುವ ಈ ಷೇರು ಅಲ್ಪಾವಧಿಯ ಹೂಡಿಕೆಗೆ ಉತ್ತಮವೆನಿಸುತ್ತದೆ. ಕಾದು ನೋಡೋಣ.

    ಪ್ರಮುಖ ಕಂಪನಿಗಳನೇಕವು ಇತ್ತೀಚಿನ ದಿನಗಳಲ್ಲಿ ರಭಸದ ಏರಿಕೆ ಕಂಡು ಸ್ಥಿರತೆ ಕಾಣದೆ ಜಾರಿವೆ. ಎನ್‌ ಎಂ ಡಿ ಸಿ ರೂ.135 ರ ಸಮೀಪದಿಂದ ರೂ.213 ರವರೆಗೂ ಏರಿಕೆ ಕಂಡು, ರೂ.185 ಕ್ಕೆ ಕುಸಿದಿರುವ ವೇಗ, ಬಲರಾಂಪುರ್‌ ಚಿನ್ನಿ ಮಿಲ್ಸ್‌ ರೂ.230 ರ ಸಮೀಪದಿಂದ ರೂ.348 ಕ್ಕೆ ಏರಿಕೆ ಕಂಡು ರೂ.300 ಕ್ಕೆ ಕುಸಿದ ರೀತಿ, ಟಾಟಾ ಸ್ಟೀಲ್‌ ಷೇರು ಒಂದೇ ತಿಂಗಳಲ್ಲಿ ರೂ.854 ಸಮೀಪದಿಂದ ರೂ.1.246 ನ್ನು ತಲುಪಿ ರೂ.1,130 ಕ್ಕೆ ಕುಸಿದ ಶೈಲಿ ಕಂಡಾಗ ಕಣ್ಣಿಗೆ ಕಂಡಿದ್ದು ಸತ್ಯವಲ್ಲ- ಕೈಗೆ ಎಟುಕಿಸಿಕೊಂಡಿರುವುದೇ ಸತ್ಯವೆಂದು ಸಾರುವಂತಿದೆ.

    ಪರೀಕ್ಷೆ ಇಲ್ಲದೆ ಪಾಸು ಮಾಡುವುದಕ್ಕಿಂತ ಆನ್ ಲೈನ್ ಪರೀಕ್ಷೆ ನಡೆಸುವುದು ಸೂಕ್ತ

    ಕೊರೋನಾ ವೈರಸ್ ನ ಎರಡನೇ ಅಲೆಗೆ ನಾವೆಲ್ಲರೂ ತತ್ತರಿಸಿ ಹೋಗಿದ್ದೇವೆ. ಮೊದಲನೆ ಅಲೆಗಿಂತಲೂ ಈ ಭಾರಿ ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಪ್ರಪಂಚದ ಪ್ರತಿಯೊಬ್ಬ ನಾಗರಿಕನೂ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದಾನೆ. ನಮ್ಮ ದೇಶದಲ್ಲಂತೂ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದು, ಸಾವು ನೋವುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕ್ಷೇಮವಾಗಿ, ಆರೋಗ್ಯವಾಗಿರಲು ಕೊರೋನಾ ವೈರಸ್‍ ಅನ್ನು ಓಡಿಸಬೇಕಾಗಿದೆ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಸರ್ಕಾರದ ಕೋವಿಡ್ ನಿಯಮಗಳನ್ನು ನಾವೆಲ್ಲರೂ ಚಾಚು ತಪ್ಪದೆ ಪಾಲಿಸುವುದು ಮತ್ತು ಯಾವ ಆತಂಕವೂ ಇಲ್ಲದೆ ಲಸಿಕೆಯನ್ನು ಹಾಕಿಸಿಕೊಳ್ಳುವುದು. 

    ಕಳೆದ ವರ್ಷದ (2020) ಮಾರ್ಚ್ ತಿಂಗಳಿನಿಂದಲೂ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ವಿದ್ಯಾರ್ಥಿಗಳು ಮನೆಯಿಂದಲೇ ಆನ್ ಲೈನ್ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೊರೋನಾ ಎರಡನೇ ಅಲೆಯು ಪ್ರಬಲವಾಗಿರುವ ಕಾರಣ, ಸೋಂಕು ಹೆಚ್ಚಾಗಿ ಮತ್ತು ವೇಗವಾಗಿ ಹರಡುತ್ತಿದ್ದು ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ದೃಷ್ಟಿಯಿಂದ ಸಿ ಬಿ ಎಸ್ ಇ ಸಂಸ್ಥೆಯು ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ. ಶೈಕ್ಷಣಿಕ ವರ್ಷದಲ್ಲಿ ನಡೆಸಿರುವ ಶಾಲಾ ಮಟ್ಟದ ಪರೀಕ್ಷೆಗಳು ಮತ್ತು ಟೆಸ್ಟ್ ಗಳಲ್ಲಿ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಹೊರತು ಪಡಿಸಿ ಉಳಿದ ತರಗತಿಗಳಲ್ಲಿ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

    ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ನಡೆಸ ಬೇಕೆ ಅಥವಾ ಬೇಡವೇ ಎಂಬುವುದರ ಬಗ್ಗೆ ಜೂನ್ ತಿಂಗಳಿನಲ್ಲಿ ಕೋವಿಡ್ ನ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಮಾಡುವುದಾಗಿ ಸಿ ಬಿ ಎಸ್ ಇ ಸಂಸ್ಥೆ ತಿಳಿಸಿದೆ. ಮಾನ್ಯ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಹಲವಾರು ರಾಜ್ಯ ಸರ್ಕಾರಗಳೂ ಸಹ ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ಪರೀಕ್ಷೆಗಳನ್ನು ಮುಂದೂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಬಿಟ್ಟರೆ, ಬೇರೆ ಮಾರ್ಗವಿಲ್ಲವೆಂದೇ ಹೇಳಬಹುದು. ಈ ತೀರ್ಮಾನಗಳನ್ನು ಹಲವಾರು ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಂಶುಪಾಲರುಗಳು ಸ್ವಾಗತಿಸಿದ್ದಾರೆ.

    ಪರೀಕ್ಷೆಗಳು ಏಕೆ ಬೇಕು?

    ಅಂತಿಮ ಘಟ್ಟದ ಪರೀಕ್ಷೆಯನ್ನು ನಡೆಸದೇ, ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡದೇ, ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೆಲವು ಶಿಕ್ಷಣ ತಜ್ಞರದು. ಪರೀಕ್ಷೆಗಳು ಏಕೆ ಬೇಕು, ಪರೀಕ್ಷೆಗಳ ಉದ್ದೇಶಗಳೇನು ಎಂಬುವುದರ ಬಗ್ಗೆ ತಿಳಿಯೋಣ.

    ಕಲಿಕೆಯ ಪ್ರಕ್ರಿಯೆಯಲ್ಲಿ ಪರೀಕ್ಷೆಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ನಿರ್ದಿಷ್ಟ ವಿಷಯಗಳಲ್ಲಿ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ, ಅವರ ಕಲಿಕಾ ಮಟ್ಟವೇನು, ಯಾವ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಅಧ‍್ಯಾಪನ ಬೇಕಾಗಿದೆ ಎಂಬ ಅಂಶಗಳ ಬಗ್ಗೆ ಅರಿಯಲು ಪರೀಕ್ಷೆಗಳನ್ನು ನಡೆಸುವುದು ಉತ್ತಮವಾದ ಮಾರ್ಗ ಹಾಗೂ ಈ ಅಂಶಗಳು ಪರೀಕ್ಷೆಗಳ ಉದ್ದೇಶಗಳೂ ಸಹ.

    ಈ ಮೌಲ್ಯ ಮಾಪನದಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಸಹ ಅಳೆಯಬಹುದು, ಜೊತೆಗೆ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಮತ್ತು ನ್ಯೂನ್ಯತೆಗಳನ್ನು (Strengths and weaknesses) ಸಹ ಅರಿಯ ಬಹುದು. ಪರೀಕ್ಷೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯಿಂದ ಶಿಕ್ಷಕರಿಗೆ ಅವರ ಪಾಠ ಪ್ರವಚನಗಳ ಶೈಲಿಯನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಳ್ಳಲು ಸಹಾಯವಾಗುತ್ತದೆ. ಸೆಕೆಂಡರಿ ಮತ್ತು ಉನ್ನತ ಶಿಕ್ಷಣಗಳ ಮಟ್ಟದಲ್ಲಿ ಪರೀಕ್ಷೆಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ.

    ಮೌಲ್ಯಮಾಪನ ವಿಧಾನದಲ್ಲಿ ಎರಡು ಬಗೆಯ ವಿಧಾನಗಳಿವೆ. ರಚನಾತ್ಮಕ ಮೌಲ್ಯಮಾಪನ (Formative Assessment) ಮತ್ತು ಸಾರಾಂಶ ಮೌಲ್ಯಮಾಪನ   (Summative Assessment). ಯಾವುದೇ ಪಾಠ / ಕೋರ್ಸು / ಪಠ್ಯದ ಭಾಗವನ್ನು ಕಲಿಸುವ ಸಮಯದಲ್ಲಿ, ವಿದ್ಯಾರ್ಥಿಗಳ ಕಲಿಕೆಯ ಆಳ, ಕಲಿಕೆಯ ಅವಶ್ಯಕತೆಗಳು, ಶೈಕ್ಷಣಿಕ ಪ್ರಗತಿ ಇವುಗಳನ್ನು ತಿಳಿಯಲು ನಡೆಸುವ ಹಲವಾರು ಮೌಲ್ಯಮಾಪನ ವಿಧಾನಗಳನ್ನು ರಚನಾತ್ಮಕ ಮೌಲ್ಯಮಾಪನ ಪದ್ಧತಿ ಎಂದು ಕರೆಯುತ್ತಾರೆ. ಉದಾಹರಣೆಗೆ ತರಗತಿಗಳಲ್ಲಿ ನಡೆಸುವ ಚರ್ಚೆಗಳು, ಪ್ಲಾಷ್ ಪ್ರಶ್ನೆಗಳು, ಕ್ವಿಜ್ ಗಳು, ವಿದ್ಯಾರ್ಥಿಗಳಿಂದ ಉಪನ್ಯಾಸಗಳು, ಗ್ರೂಪ್ ಚರ್ಚೆಗಳು, ಇತ್ಯಾದಿ.

    ಯಾವುದೇ ಕೋರ್ಸು / ಪಾಠ / ಪಠ್ಯ ಭಾಗದ ಭೋದನೆ ಮುಗಿದ ನಂತರ ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಯ ಆಳವನ್ನು ಅಳೆಯುವ ಉದ್ದೇಶದಿಂದ ನಡೆಸುವ ಮೌಲ್ಯಮಾಪನ ಪದ್ಧತಿಗೆ ಸಾರಾಂಶ ಮೌಲ್ಯಮಾಪನ ಎಂದು ಕರೆಯುತ್ತಾರೆ. ಉದಾಹರಣೆಗೆ  ಅರ್ಧ ವಾರ್ಷಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ ಅಥವಾ ಒಂದು ಅಧ್ಯಾಯದ ಕೊನೆಯಲ್ಲಿ ಮಾಡುವ ಪರೀಕ್ಷೆ.

    ಕಲಿಕೆಯು ಸಂಪೂರ್ಣವಾಗಿ ಪರಿಣಾಮಕಾರಿಯಾಗ ಬೇಕಾದರೆ, ಮೇಲೆ ತಿಳಿಸಿರುವ ಎರಡು ಪದ್ಧತಿಗಳನ್ನು ಸಹ ಅಳವಡಿಸ ಬೇಕಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಅನೇಕ ವಿದ್ಯಾ ಸಂಸ್ಥೆಗಳಲ್ಲಿ ಎರಡು ವಿಧಾನಗಳಲ್ಲಿಯೂ ಮೌಲ್ಯಮಾಪನ ಮಾಡಲಾಗುತ್ತದೆ.

    ಪ್ರಚಲಿತ ಸ್ಥಿತಿ

    ಪ್ರಚಲಿತ ಪರಿಸ್ಥಿತಿಯಲ್ಲಿ ಕೋವಿಡ್ 19 ರಣಕೇಕೆ ಹಾಕುತ್ತಾ, ಸಾವಿರಾರು ಪ್ರಾಣಗಳನ್ನು ಬಲಿ ಪಡೆಯುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲಾ ವಿಧಾನಗಳಲ್ಲಿ ಮೌಲ್ಯಮಾಪನ ಮಾಡುವುದು ನಿಜವಾಗಲೂ ಸಾಧ್ಯವಿಲ್ಲ.

    ಆದ್ದರಿಂದಲೇ, ಸಿ ಬಿ ಎಸ್ ಇ ಸಂಸ್ಥೆಯು ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ಧುಗೊಳಿಸಿ ಶಾಲೆಗಳಲ್ಲಿ ಇದುವರೆವಿಗೂ ನಡೆಸಿರುವ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನೀಡುವಂತೆ ಆದೇಶವನ್ನು ನೀಡಿದೆ. ಆದರೆ, ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲಂಬಿಸಿ, ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ರಾಜ್ಯ ಸರ್ಕಾರಗಳು ಸಹ ಪರೀಕ್ಷೆಗಳನ್ನು ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿರುವುದಿಲ್ಲ.

    ಹನ್ನೆರಡನೇ ತರಗತಿಯ ಪರೀಕ್ಷೆ ಒಂದು ಘಟ್ಟದ ಅಂತಿಮ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ, ಮುಂದೆ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣವನ್ನು ಆರಿಸಿಕೊಳ್ಳ ಬೇಕಾಗಿದೆ. ಆದ್ದರಿಂದ ಹನ್ನೆರಡನೇ ತರಗತಿಯ ಪರೀಕ್ಷೆಗಳು ಬಹಳ ಮುಖ್ಯ. ಪರೀಕ್ಷೆಗಳನ್ನು ರದ್ದುಗೊಳಿಸಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿದರೆ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಕುಂಠಿತವಾಗುತ್ತದೆ. ನನ್ನ ಅನುಭವದಲ್ಲಿ ಹೇಳುವುದಾದರೆ, ವಿದ್ಯಾರ್ಥಿಗಳು, ಪರೀಕ್ಷೆ ನಡೆಸಲಾಗುತ್ತದೆ ಎಂದರೇ ಮಾತ್ರ, ಮುತುವರ್ಜಿಯಿಂದ, ಶ್ರದ್ಧಾಯುಕ್ತವಾಗಿ ವ್ಯಾಸಂಗ ಮಾಡುತ್ತಾರೆ. ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲಿ ನಡೆಸುವ ಆಂತರಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ತೋರುವುದಿಲ್ಲ.

    ಉದಾಹರಣೆಗೆ ಹೇಳುವುದಾದರೆ, ದಿವಂಗತ ಡಾ.ಎಚ್ ನರಸಿಂಹಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ, ಪದವಿ ತರಗತಿಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಮಟ್ಟದ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಮಾಡಿ, ಆಂತರಿಕ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೊಳಿಸಿದರು. ಪರಿಣಾಮವಾಗಿ, ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯನ್ನು ತೋರುತ್ತಿರಲಿಲ್ಲ. ಭೌತಶಾಸ್ತ್ರದ ಉಪನ್ಯಾಸಕನಾಗಿ ನಾನು ಗಮನಿಸಿರುವ /  ನನ್ನ ಅನುಭವಕ್ಕೆ ಬಂದಿರುವ ವಿಷಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಮುತುವರ್ಜಿ ಮತ್ತು ಶ್ರದ್ಧೆ ಬರ ಬೇಕಾದರೆ, ಪರೀಕ್ಷೆಗಳನ್ನು ನಡೆಸ ಬೇಕಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ Outcome based learning ಪದ್ಧತಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ಅಂಶವನ್ನು ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿಯೂ ಸಹ ಪ್ರಸ್ತಾಪಿಸಲಾಗಿದೆ. Learning outcomes ನಿರ್ಧರಿಸಲು, ಮೌಲ್ಯಮಾಪನ ಬಹಳ ಮುಖ್ಯ. ಆದರೆ ಪ್ರಚಲಿತ ಪರಿಸ್ಥಿತಿಯಲ್ಲಿ , ಭೌತಿಕವಾಗಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ. ಅಂತಿಮ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಬಹುದು. ಹಿಂದಿನ ವರ್ಷದ ಮೊದಲ ಅಲೆಯ ಸಂದರ್ಭದಲ್ಲಿ (2020) ಹಲವು ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಗಳಿತ್ತು, ಆದರೆ ಈಗ ಚಿತ್ರಣ ವಿಭಿನ್ನವಾಗಿದೆ. ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಂಡಿದ್ದಾರೆ ಮತ್ತು ಇದು ಅನಿವಾರ್ಯವೂ ಕೂಡ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ, ನೆಟ್ ವರ್ಕ್ ಸಂಪರ್ಕ ಸುಧಾರಿಸಿದೆ. ಸಮಸ್ಯೆಯಿರುವ ಕಡೆ, ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಉನ್ನತ ಶಿಕ್ಷಣ ಮತ್ತು ಸೆಕೆಂಡರಿ ಮಟ್ಟದಲ್ಲಿ ಎಲ್ಲಾ ವಿದ್ಯಾರ್ಥಿಗಳ ಬಳಿ ಟ್ಯಾಬ್ ಅಥವಾ ಸ್ಮಾರ್ಟ್ ಪೋನ್ ಇರುತ್ತದೆ. ಆದ್ದರಿಂದ ಹನ್ನೆರಡನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಬಹುದು. ವರ್ಷ ಪೂರ್ತಿ ಕಾಲೇಜಿನ ಮಟ್ಟದಲ್ಲಿ ನಡೆಸಿದ ಆಂತರಿಕ ಮೌಲ್ಯಮಾಪನ ಮತ್ತು ಆನ್ ಲೈನ್ ಪರೀಕ್ಷಗಳ ಸಾಧನೆಯನ್ನು 50 : 50 ಅನುಪಾತದಲ್ಲಿ ಪರಿಗಣಿಸಿ ಫಲಿತಾಂಶವನ್ನು ನೀಡುವುದು ಸೂಕ್ತ. ಇದರಿಂದ, ವಿದ್ಯಾರ್ಥಿಗಳ ಕಲಿಕಾ ಧೃಷ್ಟಿಯಿಂದಲೂ ಅನುಕೂಲವಾಗುತ್ತದೆ.                 

    ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ ಭವಿಷ್ಯತ್ತಿನ ಶಿಕ್ಷಣ

    Photo by Glenn Carstens-Peters on Unsplash

    ಪಠ್ಯಪುಸ್ತಕ ಸ್ವಯಂ ಅಧ್ಯಯನದಿಂದ ಜ್ಞಾನಾರ್ಜನೆ

    ಕೊರೊನಾ 1 ಹಾಗೂ 2 ಅಲೆಯ ಭೀಭತ್ಸತೆ ಶಿಕ್ಷಣ ವ್ಯವಸ್ಥೆಯನ್ನು ಅತಂತ್ರಗೊಳಿಸಿದೆ. ಶೈಕ್ಷಣಿಕ ವರ್ಷದ ಕಾರ್ಯಯೋಜನೆಗಳಿಗೆ ಹಿಂದೆಂದೂ ಕಾಣದ ಹಿನ್ನಡೆ ಉಂಟಾಗಿದೆ. ಶಿಕ್ಷಣಕ್ಕಿಂತ ಜೀವ ಅಮೂಲ್ಯ. ಜೀವ ಇದ್ದರೆ ಜೀವನ. ಇಂತಹ ಸಂದಿಗ್ಧತೆಯಲ್ಲಿ 2020-21 ಸಾಲಿನ ಎಲ್ಲಾ ಹಂತದ ಶಿಕ್ಷಣ ವ್ಯವಸ್ಥೆ ಅನಿಶ್ಚಿತತೆಯಲ್ಲಿದೆ. ಯಾರನ್ನೂ ಹೊಣೆಯಾಗಿಸದ ಸ್ಥಿತಿಯಲ್ಲಿ ಮಕ್ಕಳಿಗೆ ಸ್ವ ಅಧ್ಯಯನದ ಆಸಕ್ತಿ ಚಿಗುರೊಡೆಯುವಂತೆ ಪೋಷಿಸುವುದು ಪೋಷಕರ ಕರ್ತವ್ಯ.

    ಪರೀಕ್ಷೆ ಇಲ್ಲ, ಓದೂ ಇಲ್ಲ ಎಂಬ ತಾತ್ಸಾರದಲ್ಲಿ ಜಡತೆ, ನಿಷ್ಕ್ರಿಯತೆ, ಮುಂದೂಡುವ ಪ್ರವೃತ್ತಿ ಮೈಗೂಡುತ್ತವೆ. ಸದಾ ಚಂಚಲಗೊಳ್ಳುವ ಮನಸ್ಸು ಅನಾಹುತಗಳ ಸೃಷ್ಟಿಸುವುದ ಖಚಿತ. ಏಕಾಗ್ರತೆ ಕ್ಷೀಣಿಸಿ, ಅನಿಯಂತ್ರಿತ ಭಾವಾವೇಶದಲ್ಲಿ ನೈತಿಕ ಮೌಲ್ಯಗಳ ಕೊರತೆ ಎದ್ದು ಕಾಣತ್ತಿದೆ.  ಮನೆಯಲ್ಲೇ ಉಳಿದ ಮಕ್ಕಳು ಓದಿನಿಂದ ವಿಮುಖಗೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜ್ಞಾನ ಸಂಪಾದನೆಯ ಅನಿವಾರ್ಯತೆಯಲ್ಲಿ ಪ್ರತ್ಯಕ್ಷ ಶಿಕ್ಷಣದಿಂದ(formal education) ವಂಚಿತ ಮಕ್ಕಳಿಗೆ ಸ್ವ ಅಧ್ಯಯನ ಭವಿಷ್ಯ ರೂಪಿಸಬಲ್ಲುದು.

    1 ರಿಂದ 10 ನೆ ತರಗತಿ ಮಕ್ಕಳಿಗೆ ಪಠ್ಯಪುಸ್ತಕಗಳಿವೆ. ಬೋಧಿಸದ ಪಠ್ಯವನ್ನು ‘ಪಾಠ ಮಾಡಿಲ್ಲ’ ಅದು ಅಪರಚಿತ ಎಂಬ ಭ್ರಮೆ ಬಿಡಬೇಕು. ಪಠ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರು ಅನಕ್ಷರಸ್ಥ ಪೋಷಕರೊಂದಿಗೆ ಸಂವಾದ ಸೃಷ್ಟಿಸುವ ಮೂಲಕ ಮಕ್ಕಳಗೆ ಪಠ್ಯಪುಸ್ತಕ ಅಭ್ಯಾಸಿಸುವ ಗೀಳು ಹಚ್ಚಬೇಕು. ಇದೆಲ್ಲಾ ಸಾಧ್ಯವಾ…ಎಂಬ ಹತಾಶೆ ಸಲ್ಲದು. ಪಠ್ಯ ಪುಸ್ತಕ ಸ್ಪರ್ಶಿಸುವ ಓದು ಮನೋಕೋಶದಲ್ಲಿ ಚಿರಸ್ಥಾಯಿ. ಅಧ್ಯಾಯಗಳ ಅಡಿಪಾಯ ಹೆಕ್ಕುವ ಮೂಲಕ ಸ್ವಯಂ ಕಲಿಕೆಗೆ ನಾಂದಿ ಹಾಡಬಹುದು.

    1. ರಿಂದ 5 ನೇ ತರಗತಿ ಮಕ್ಕಳು ಶಾಲೆಯಿಂದ ದೂರ ಉಳಿದು ಕಲಿತದ್ದನ್ನು ಮರೆತಿದ್ದಾರೆ. ಸ್ವಯಂ ಪಠ್ಯ ಓದಿಗೆ ಕೆಲ ಸಲಹೆಗಳನ್ನು ಪಾಲಿಸಿ.ಅಧ್ಯಾಯಗಳನ್ನು ಓದುವ ಉದ್ದೇಶ ಸ್ಪಷ್ಟತೆ ಇರಲಿ. ರಚನಾತ್ಮಕತೆ ಪ್ರೇರಿಪಿಸುವ ಪ್ರಶ್ನೆಗಳು, ಕಿರು ಉತ್ತರ ಪ್ರಶ್ನೆಗಳು ಹಾಗೂ ದೀರ್ಘ ಉತ್ತರ ಪ್ರಶ್ನೆಗಳನ್ನು ವಿಂಗಡಿಸಿ ಉತ್ತರಿಸುವ ತಾದಾತ್ಮ್ಯ ಇರಲಿ. ಪಠ್ಯದ ಓದಿನ ಛಾಪು ಮೂಡಿಸಲು ಗಟ್ಟಿ ಧ್ವನಿಯಲ್ಲಿ ಓದಿ. ಆನಂತರ ಸಾಧ್ಯಾವಾದರೆ ಸಮೀಪದ ಪದವೀಧರರಲ್ಲಿ ಚರ್ಚೆ ನಡೆಸಿ.

    2. ಸುದೀರ್ಘ ಅಧ್ಯಾಯದಲ್ಲಿನ ಸಾರವನ್ನು ಮನನ ಮಾಡಿಕೊಳ್ಳಿ. ಶಿರೋನಾಮೆ, ಉಪ ಶಿರೋನಾಮೆಗಳನ್ನು ಗ್ರಹಿಸಿ. ಪಠ್ಯ ಪುಸ್ತಕಗಳೊಂದಿಗೆ ನಿಮ್ಮ ಜೊತೆಗಾರನಂತೆ ಸ್ವೀಕರಿಸಿ. ಈ ಅಂಶಗಳತ್ತ ಪೋಷಕರ ಗಮನ ಹರಿಸಬೇಕು. ತಮ್ಮ ಮಕ್ಕಳಲ್ಲಿ ಧನಾತ್ಮಕ ಬದಲಾವಣೆಗೆ ಪ್ರೇರಕರಾಗಬೇಕು.

    3.ದೈಹಿಕ ಶಕ್ತಿ ಗರಿಷ್ಟತೆ ಸಮಯ ಮುಂಜಾವಿನಲ್ಲಿ ಪಠ್ಯ ಓದಲು ರೂಢಿಸಿಕೊಳ್ಳಿಬೇಕು. 10 ರಿಂದ 15 ನಿಮಿಷಗಳ ಸಮಯವನ್ನು ಚಿಕ್ಕ ವಿಭಾಗ ಮಾಡಿಕೊಂಡ ಓದಿ. ಓದಿದ್ದನ್ನು ಚಿತ್ರಗಳ ರೂಪಕದಲ್ಲಿ ಮನನ ಮಾಡಿ. ಇದರಿಂದ ಜ್ಞಾಪಕ ಶಕ್ತಿ ಶಾಶ್ವತವಾಗಿ ಉಳಿಯಲಿದೆ.

    4.ಕಲಿಕೆ ಸೃಜನಾತ್ಮಕತೆಗೆ ದಾರಿ, ಸೃಜನಾತ್ಮಕತೆ ಚಿಂತನೆಗೆ ಮಾರ್ಗಸೂಚಿ. ಚಿಂತನೆಯಿಂದ ಜ್ಞಾನ ವೃದ್ಧಿ. ಜ್ಞಾನದಿಂದ ಮಹಾನ್ ವ್ಯಕ್ತಿಗಳಾಗಲು ಸಾಧ್ಯ

    5. ಗುರಿ, ನಿರಂತರ ಜ್ಞಾನ ಸಾಧನೆ, ಕಠಿಣ ಪರಿಶ್ರಮ, ಗ್ರಹಿಕೆ ಮಂತ್ರಗಳನ್ನು ಪಠಿಸುವ ಮೂಲಕ ಸ್ವಾವಲಂಬನೆ ಪಡೆಯಬೇಕು. ಪಠ್ಯದ ಅಭ್ಯಾಸ ಪ್ರತಿಗಳಲ್ಲಿ ಅಧ್ಯಾಯದ ಪ್ರಶ್ನೆಗಳಿಗೆ ಉತ್ತರ ದಾಖಲಿಸಬೇಕು. ನಿರಂತರ ಓದಿದ್ದನ್ನು ಬರೆಯುವ ಮೂಲಕ ಕಲಿಕೆ ಸ್ಥಿರಗೊಳಿಸಬೇಕು. ಸಂಬಂಧಪಟ್ಟ ಅಧ್ಯಾಯಗಳ ಚಿತ್ರಸಹಿತ ವಿವರಣೆಗೆ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ವಯಂ ಕಲಿಕೆಯಲ್ಲಿ ಸಂತೃಪ್ತಿ ಸಿಗಲಿದೆ.

    ಸಿಇಟಿ ಮುಂದಕ್ಕೆ; ಅಗಸ್ಟ್‌ 28 & 29ರಂದು ಪರೀಕ್ಷೆ

    ಕೋವಿಡ್‌ ಎರಡನೇ ಅಲೆ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನೂ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹೊಸ ವೇಳಾಪಟ್ಟಿಯಂತೆ ಮುಂಬರುವ ಅಗಸ್ಟ್‌ 28 & 29ರಂದು ಸಿಇಟಿ ನಡೆಯಲಿದೆ. ಹಾಗೆಯೇ, 30ರಂದು ಕನ್ನಡ ಭಾಷಾ ಪರೀಕ್ಷೆ ಇರುತ್ತದೆ. ಶೀಘ್ರದಲ್ಲಿಯೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

    ಈ ಮೊದಲು ಪ್ರಕಟಿಸಲಾಗಿದ್ದ ವೇಳಾಪಟ್ಟಿಯಂತೆ ಜುಲೈ 7 & 8 ರಂದು ಸಿಇಟಿ ಹಾಗೂ 9ರಂದು ಕನ್ನಡ ಪರೀಕ್ಷೆ ನಡೆಯಬೇಕಾಗಿತ್ತು.

    ಹೆಚ್ಚಿನ ವಿವರಗಳಿಗೆ https://cetonline.karnataka.gov.in/kea/ ವೆಬ್‌ ತಾಣಕ್ಕೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ಕೋವಿಡ್‌ನಿಂದ ಸುರಕ್ಷಿತವಾಗಿರಿ ಮತ್ತೂ ಪಿಯುಸಿ ಮತ್ತು ಸಿಇಟಿ ಪರೀಕ್ಷೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಿ ಎಂದು ಡಾ.ಅಶ್ವತ್ಥನಾರಾಯಣ ಹಾರೈಸಿದ್ದಾರೆ.

    ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ


    ಆಮ್ಲಜನಕ, ರೆಮಿಡಿಸಿವಿರ್ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರಕಾರಿ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ (sast) ಪೋರ್ಟಲ್ʼ ನಲ್ಲಿ ಸಿಗುವ ಹಾಗೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಕೋವಿಡ್‌ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಆಮ್ಲಜನಕ & ರೆಮಿಡಿಸಿವಿರ್ ಬೇಡಿಕೆ- ಪೂರೈಕೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಎಷ್ಟು ಪೂರೈಕೆ ಆಗುತ್ತಿದೆ? ಎಷ್ಟು ಬಳಕೆಯಾಗುತ್ತಿದೆ? ಯಾರಿಗೆ ಕೊಡಲಾಗಿದೆ? ಎಂಬ ಸಮಗ್ರ ಮಾಹಿತಿಯನ್ನು ಇದೇ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಈಗ ಪ್ರತೀದಿನ 35,000 ರೆಮಿಡಿಸಿವಿರ್ ಡೋಸ್‌ ಬೇಕಿದೆ ಎಂದರು.

    ಇದರ ಜತೆಗೆ, ರಾಜ್ಯಾದ್ಯಂತ ಆಕ್ಸಿಜನ್‌ ಬೆಡ್‌ಗಳಿಗೆ ಭಾರೀ ಬೇಡಿಕೆ ಇದೆ. ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸರಕಾರದ ಬೆಡ್‌ಗಳ ಮಾಹಿತಿಯನ್ನು ಕೂಡ ಈ ಪೋರ್ಟಲ್‌ ನಲ್ಲಿ ಹಾಕಲಾಗುವುದು. ಇದರಿಂದ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುತ್ತದೆ. ಜತೆಗೆ ಸಾರ್ವಜನಿಕರಿಗೂ ವಾಸ್ತವ ಚಿತ್ರಣ ಸಿಗುವಂತಾಗಲಿದೆ ಎಂದರು.

    ಇನ್ನು ಎರಡು-ಮೂರು ದಿನಗಳಲ್ಲೇ ಸಾಸ್ಟ್ ಪೋರ್ಟ್‌ಲ್‌ಗೆ (http://arogya.karnataka.gov.in/) ಮೇಲೆ ತಿಳಿಸಿದ ಎಲ್ಲವನ್ನೂ ಲಿಂಕ್‌ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

    24 ಗಂಟೆ ಒಳಗೇ ರಿಸಲ್ಟ್‌:ಬೆಂಗಳೂರಿನಲ್ಲಿ ಈಗ ಪರೀಕ್ಷೆಯಾದ 24 ಗಂಟೆ ಒಳಗೇ ಫಲಿತಾಂಶ ಕೊಡಬೇಕು. ಬಿಯು ನಂಬರ್‌ ಜನರೇಟ್‌ ಆಗುವುದು ಕೂಡ ತಕ್ಷಣ ಆಗಬೇಕು. ರಾಜ್ಯದ ಉದ್ದಗಲಕ್ಕೂ ಹೀಗೆಯೇ ಆಗಬೇಕು. ರಾಜ್ಯದ ಸರಾಸರಿ ಪರಿಸ್ಥಿತಿ ನೋಡಿದರೆ ರಿಸಲ್ಟ್‌ ಬರಲು ನಾಲ್ಕೂವರೆ ದಿನದಿಂದ ಎರಡು ದಿನವಾಗುತ್ತಿದೆ. ಫಲಿತಾಂಶ ವಿಳಂಬದಿಂದ ಸೋಂಕು ಉಲ್ಬಣಿಸಿ ಹೆಚ್ಚು ಪ್ರಾಣನಷ್ಟ ಆಗುತ್ತಿದೆ ಎಂದು ಡಿಸಿಎಂ ಕಳವಳ ವ್ಯಕ್ತಪಡಿಸಿದರು.

    ಸ್ಯಾಂಪಲ್‌ ಕಲೆಕ್ಟ್‌ ಮಾಡಿದ ಒಂದು ದಿನದೊಳಗೆ ವರದಿ ಕೊಡುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ. ತಡವಾಗಿ ರಿಸಲ್ಟ್ ಕೊಡುವ ಲ್ಯಾಬ್‌ಗಳಿಗೆ ಪ್ರತಿ ಟೆಸ್ಟ್‌ಗೆ 150 ರೂ. ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಬೆಡ್‌ಗೆ ಬೇಡಿಕೆ ಹೆಚ್ಚಾಗಿದೆ:ಬೆಂಗಳೂರಿನಲ್ಲಿ ಈಗ ಬೆಡ್ ಖಾಲಿ ಆಗುತ್ತಿರುವುದು ದಿನಕ್ಕೆ 950 ಮಾತ್ರ. ಆದರೆ 7000 ದಿಂದ 8000 ಬೆಡ್‌ಗಳಿಗೆ ಡಿಮಾಂಡ್ ಬರುತ್ತಿದೆ. ಇಷ್ಟು ಸೋಂಕಿತರಲ್ಲಿ ಟ್ರಾಯಾಜ್ (ವೈದ್ಯರ ಪರಿಶೀಲನೆ) ಆದ ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2000ಕ್ಕೂ ಹೆಚ್ಚು ಜನ ಇದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

    ಬೆಡ್‌ ಬೇಡಿಕೆ ನಿಭಾಯಿಸಲು ಸಮರ್ಪಕ ಟ್ರಾಯಾಜಿಂಗ್ ಮಾಡಬೇಕು. ಬೆಂಗಳೂರಿನಲ್ಲಿ ಎಲ್ಲ ವಾರ್ಡ್ ಮಟ್ಟದಲ್ಲಿಯೂ ಟ್ರಾಯಾಜಿಂಗ್ ಮಾಡಿ ಅರ್ಹರಿಗಷ್ಟೇ ಆಸ್ಪತ್ರೆಗೆ ಸೇರಿಸುವ ಅವಕಾಶ ಕಲ್ಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಕಡೆ ವೈಯಕ್ತಿಕ ಟ್ರಾಯಾಜಿಂಗ್ ಆರಂಭವಾಗಿದೆ. ಒಂದೊಂದು ಕಡೆಯೂ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು ಡಾ.ಅಶ್ವತ್ಥನಾರಾಯಣ.

    ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್ʼಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಈ ಸ್ಟೆಪ್ʼಡೌನ್ ಆಸ್ಪತ್ರೆ & ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಟ್ರಾಯಾಜಿಂಗ್, ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಗಂಭೀರವಲ್ಲದ ಸೋಂಕಿತರಿಗೆ ಇಲ್ಲಿಯೇ ಚಿಕಿತ್ಸೆ ಕೋಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    20,000 ಬೆಡ್‌ ಹೆಚ್ಚಳ:ರಾಜ್ಯಾದ್ಯಂತ ಐಸಿಯು & ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ 4000 ಬೆಡ್‌ಗಳೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ 20,000 ಬೆಡ್‌ಗಳನ್ನು ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯಕ್ಕೆ 1200 ಮೆ.ಟನ್‌ ಆಮ್ಲಜನಕ ಹಂಚಿಕೆಯಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.

    ಹೆಚ್ಚು ದರ ಸುಲಿಗೆ ಮಾಡಿದರೆ ಕ್ರಮ:ಹೋಮ್‌ ಐಸೋಲೇಷನ್‌ ಪ್ರಮಾಣ ಹೆಚ್ಚುತ್ತಿರುವುದರಿಂದ ಪಲ್ಸಾಸ್ಕೋಮೀಟರ್‌ಗಳಿಗೆ ಡಿಮಾಂಡ್‌ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂಬ ಸರಕಾರಕ್ಕೆ ಬಂದಿದೆ. ಮೆಡಿಕಲ್‌ ಸ್ಟೋರ್‌ಗಳು ಆಗಿರಲಿ ಅಥವಾ ಇನ್ನಾರೇ ಆಗಿರಲಿ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಪ್ರತಿ ರೆಮಿಡಿಸಿವರ್‌ ಸೇರಿ ಪ್ರತಿಯೊಂದು ಔಷಧಕ್ಕೂ ಅನ್ವಯ ಆಗುತ್ತದೆ. ಜನರು 112 ಹೆಲ್ಪ್‌ಲೈನ್‌ ಕರೆ ಮಾಡಿದರೆ ಅಂಥ ತಪ್ಪಿತಸ್ಥರನ್ನೂ ಕೂಡಲೇ ಬಂಧಿಸಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಕ್ಷೆಗೊಳಪಡಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

    ಸರಕಾರವು ದೊಡ್ಡ ಪ್ರಮಾಣದಲ್ಲಿ ಪಲ್ಸಾಸ್ಕೋಮೀಟರ್‌ಗಳನ್ನು ಖರೀದಿ ಮಾಡುತ್ತಿದೆ. ಪ್ರತೀ ಒಂದಕ್ಕೆ 350 ರೂ.ನಂತೆ ಕೊಡಲಾಗುತ್ತಿದೆ. ಹೀಗಿದ್ದರೂ ಜನರ ಅಗತ್ಯಕ್ಕಾಗಿ ಸರಕಾರ ಹೆಚ್ಚು ಪ್ರಮಾಣದಲ್ಲಿ ಕೊಳ್ಳುತ್ತಿದೆ ಎಂದರು ಅವರು.

    ಡಿಸಿಎಂ ವಾರ್‌ ರೂಂಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌ ಇದ್ದರು.ಹಿರಿಯ ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್‌, ಮೌನಿಷ್‌ ಮುದ್ಗಲ್‌, ಪ್ರದೀಪ್, ಅರುಂಧತಿ ಚಂದ್ರಶೇಖರ್‌, ಗಿರಿಗೌಡ, ಸಾಸ್ಟ್ ಪೋರ್ಟ್‌ಲ್‌ ಕಾರ್ಯನಿರ್ವಾಹಕ ನಿರ್ದೇಶಕಿ ಎನ್.ಟಿ. ಅಬ್ರು, ಕೆಎಎಸ್ ಅಧಿಕಾರಿ ರಾಜೇಂದ್ರ ಕುಮಾರ ಮತ್ತಿತರರು ಇದ್ದರು.

    ಯಾವುದೂ ಸತ್ಯವಲ್ಲ. ಎಲ್ಲವೂ ಸಾಪೇಕ್ಷ!

    ಅವನು ತನ್ನದೇ ಪ್ರಪಂಚದಲ್ಲಿರುತ್ತಾನೆ. ಸುತ್ತಲಿನ ಯಾವ ಆಗು ಹೋಗುಗಳಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ…..ಅಂತೆನ್ನುವ ಮಾತುಗಳನ್ನು ನಾವೆಲ್ಲ ಬೇರೆಯವರ ಬಗ್ಗೆಯೂ,ಬೇರೆಯವರು ನಮ್ಮ ಬಗ್ಗೆಯೂ ಅತೀ ಸಾಮಾನ್ಯ ಎಂಬಂತೆ ಆಡುವುದನ್ನು ಯಾವಾಗಲೂ ಕೇಳುತ್ತೇವೆ. ಇದರ ಅರ್ಥ ಭೌತಿಕವಾದ ಈ ಪ್ರಪಂಚಕ್ಕೆ ಹೊರತಾಗಿ, ನಮ್ಮ ನಮ್ಮ ಮೆದುಳುಗಳಲ್ಲಿ ನಾವೇ ಪ್ರಪಂಚ ಸೃಷ್ಟಿಸಿ ಕೊಳ್ಳೋದು ಅನ್ನೋ ಅರ್ಥವನ್ನು ಎಷ್ಟು ಸಾಮಾನ್ಯ ಎಂಬಂತೆ ನಾವು ಭಾವಿಸಿದ್ದೇವಲ್ಲ?

    ಯಾಕೋ ಇತ್ತೀಚಿಗೆ ಸುತ್ತಲಿನ ಆಗು ಹೋಗುಗಳು ಈ ಪ್ರಪಂಚದ ಬಗ್ಗೆ ಯೋಚಿಸುವ ಹಾಗೆ ಮಾಡಿತು. ಪ್ರಪಂಚ ಎಂದರೇನು? ನನ್ನ ಪ್ರಪಂಚ ಮತ್ತೊಬ್ಬರ ಪ್ರಪಂಚದಿಂದ ಬೇರೆ ಅಂತಾದರೆ ಎಷ್ಟು ಸಹಸ್ರ ಸಂಖ್ಯೆಯಲ್ಲಿ ಈ ಪ್ರಪಂಚಗಳು ಇರಬೇಕಾಗುತ್ತೆ? ಬೇರೆ ಬೇರೆ ಜೀವ ರಾಶಿಗಳಿಗೆ ಬೇರೆಯದೇ ಪ್ರಪಂಚ. ನಾನು, ಇರುವೆ ಜೊತೆಯಲ್ಲೇ ಇದ್ದರೂ ನನ್ನ ಮತ್ತು ಇರುವೆಯ ಪ್ರಪಂಚ ಬೇರೇನೇ. ಇರುವೆಗೆ ಕತ್ತಲು, ಬೆಳಕು,ಋತುಮಾನ ತಿಳಿದಿದೆಯಾ? ತಿಳಿದಿದ್ದರಿಂದಲೇ ಮಳೆಗಾಲಕ್ಕೆ ಮುಂಚೆ ತನ್ನ ಆಹಾರವನ್ನು ಅದು ಶೇಖರಿಸಿಕೊಳ್ಳುತ್ತೆ. ಆದರೆ ಅದರ ಆಯಸ್ಸು ಬೇರೆ,ನನ್ನ ಆಯುಸ್ಸು ಬೇರೆ. ಅದು ಎಷ್ಟೇ ಮೇಲಿನಿಂದ ಬಿದ್ದರೂ ಸಾಯಲ್ಲ,ನಾನು ಹತ್ತಿಪ್ಪತ್ತು ಅಡಿಯಿಂದ ಬಿದ್ದರೆ ಸಾಯ್ತಿನಿ!

    ನಾಯಿಗಿರುವ ವಾಸನೆ ಶಕ್ತಿ,ಬೆಕ್ಕಿಗಿರುವ ರಾತ್ರಿಯ ದೃಷ್ಟಿ ಶಕ್ತಿ ವಿಕಾಸದ ಅತ್ಯುತ್ತಮ ಜೀವರಾಶಿಯಾದ ನಮಗೆ ಇಲ್ಲ. ವಿಶ್ವದ ಎಲ್ಲ ಜೀವ ರಾಶಿಗಳಿಗೆ ಬೇರೆಯದೇ (ಪರ) ರೀತಿ ತೋರುವ ಪಂಚ ಭೂತಗಳ ವಿಷಯ ಹೇಳಲು, ಇದನ್ನು ಪರಪಂಚ, ಪ್ರಪಂಚ ಅಂದರಾ?! ಇರುವುದು ಒಂದೇ ಭೌತಿಕ ಪ್ರಪಂಚವಾದರೂ ಮೆದುಳಿರುವ ಎಲ್ಲ ಜೀವಿಗಳಿಗೂ ಅದರದ್ದೇ ಆದ ಪ್ರಪಂಚವನ್ನು ಅವುಗಳೇ ಸೃಷ್ಟಿ ಮಾಡಿಕೊಂಡು ಬಿಟ್ಟವಾ? ಒಂದರಂತೆ ಮತ್ತೊಂದಿಲ್ಲ ಅಂತ ಹೇಳಿದ ದ್ವೈತ ಇದೇನಾ?

    ಅಂದರೆ ಯಾವುದೂ ಸತ್ಯವಲ್ಲ. ಎಲ್ಲವೂ ಸಾಪೇಕ್ಷ! ಇದನ್ನಾ ಅದ್ವೈತ ಹೇಳಿದ್ದು, ಸಾವಿರಾರು ವರ್ಷಗಳ ಹಿಂದೆ ಈ ನೆಲದಲ್ಲಿ?ಆಧುನಿಕ ವಿಜ್ಞಾನ ಆಕಾಶ, ಕಾಲ ಎರಡೇ ಸತ್ಯ. ಮಿಕ್ಕಿದ್ದೆಲ್ಲ ಸಾಪೇಕ್ಷ ಅಂದಿದೆ. (ಸಾಪೇಕ್ಷೆ ಅಂದರೆ ಸತ್ಯವಲ್ಲ, ಮಿಥ್ಯೆಯೂ ಅಲ್ಲ. ನನಗೆ ಒಂಥರಾ ಕಾಣಿಸಿದರೆ, ಮತ್ತೊಬ್ಬರಿಗೆ ಮತ್ತೊಂದು ತರಹ ಕಾಣಿಸೋದು) ಇದನ್ನು ಸರಳ ಉದಾಹರಣೆಯಲ್ಲಿ ಹೇಳುವುದಾದ್ರೆ, ಒಂದು ಚಲಿಸುವ ಕಾರನ್ನು ಊಹಿಸಿಕೊಳ್ಳುವ. 10 ಮೀಟರ್ ದೂರದ ಎರಡು ಬಿಂದುಗಳಲ್ಲಿ ಅದು 100 ಕಿಲೋ ಮೀಟರ್ ವೇಗದಲ್ಲಿ ಚಲಿಸುವಾಗ ನಮಗೆ ಕಾಣುತ್ತದೆ. ಆದರೆ ಅದೇ ಕಾರು 1000ಕಿಲೋಮೀಟರ್ ವೇಗವಾಗಿ ಚಲಿಸುವಾಗ ಆ ಎರಡು ಬಿಂದುಗಳ ಮಧ್ಯೆ ಕಾಣುವುದಿಲ್ಲ. ಒಂದು ಬೆಳಕಿನ ಕಿರಣ ಹಾದು ಹೋದ ಹಾಗೆ ಭಾಸವಾಗುತ್ತದೆ. ಕಾರು ಇದ್ದದ್ದು, ಓಡಿದ್ದು ಸತ್ಯ,ಆದರೆ ನಮಗೆ ಕಾಣಲಿಲ್ಲ ಅನ್ನುವುದೂ ಸತ್ಯ. ಇದರಲ್ಲಿ ವೇಗ ಸಾಪೇಕ್ಷ. ಕಾರು, ಎರಡು ಬಿಂದುಗಳ ನಡುವಣ ದೂರವನ್ನು ಕ್ರಮಿಸಲು ತೆಗೆದುಕೊಂಡ ಕಾಲ ಸತ್ಯ. ಕ್ಷೀಣಿಸಿದ ಕಾಲದಲ್ಲಿ ವೇಗದ ಕಾರು ನಮಗೆ ಕಾಣಿಸಲಿಲ್ಲ ಅನ್ನುವ ಸತ್ಯವು ನಮ್ಮ ಜ್ಞಾನೇಂದ್ರಿಯಗಳಿಗೆ ಸಾಪೇಕ್ಷ. ಮತ್ಯಾವುದೋ ಜೀವಿಗೆ ನಮಗೆ ಕಾಣಿಸದ ಕಾರು ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇರಬಹುದು. ಜ್ಞಾನೇಂದ್ರಿಯಗಳ ಕ್ಷಮತೆಯ ಕಾರಣದಿಂದ ಸತ್ಯವು ಸಾಪೇಕ್ಷವಾಯಿತಾ?

    ಇದರ ಅಡಿಯಲ್ಲಿ ಸ್ವಲ್ಪ ಆಯಾಮಗಳ ಕಡೆ ನೋಡುವ. ವಿಜ್ಞಾನದ ಪ್ರಕಾರ ಆಯಾಮ(Dimensional) ಮೂರು ಪ್ರಕಾರ. ಅವು ಉದ್ದ, ಅಗಲ, ಎತ್ತರ. ಉದ್ದದ ಆಯಾಮದಲ್ಲಿ ನಡೆದರೆ,ಬದುಕಿದರೆ ಅದು ಒಂದನೆಯ ಆಯಾಮ. (1st dimensional) ಉದಾಹರಣೆಗೆ ಸರಳ ರೇಖೆ. ಎರಡನೆಯ ಆಯಾಮ (2nd dimensional/ 2D) ಅಂದ್ರೆ ಉದ್ದ,ಅಗಲ ಗಳಲ್ಲಿ ಇರುವುದು ಎತ್ತರದ ಅರಿವು ಇರುವುದಿಲ್ಲ. ಉದಾಹರಣೆಗೆ ಚೌಕ,ಆಯತ ಇತ್ಯಾದಿ. ಮೂರನೆಯ ಆಯಾಮ (3rd dimensional/ 3D)ಅಂದರೆ ಉದ್ದ,ಅಗಲ,ಎತ್ತರ ಮೂರರಲ್ಲೂ ಬದುಕುವುದು. ನಾವು ಮನುಷ್ಯರು ಈ ಆಯಾಮದಲ್ಲಿ ಇದ್ದೇವೆ. ಕಾಣುವ ಪ್ರಪಂಚದ ಎಲ್ಲ ಭೌತಿಕ ವಸ್ತುಗಳೂ ಈ ಆಯಾಮದಲ್ಲಿವೆ.

    ಎರಡನೇ ಆಯಾಮದವರಿಗೆ ಎತ್ತರದ ಅನುಭವ ಇರದೇ ಇರುವುದರಿಂದ ಮೂರನೇ ಆಯಾಮದಲ್ಲಿರುವವರನ್ನು ನೋಡಲಾಗಲ್ಲ,ನೋಡಿದರೂ ಅವರ ಅನುಭವದ ಎರಡೇ ಆಯಾಮದಲ್ಲಿ ಮಾತ್ರ ನೋಡುತ್ತಾರೆ. ನಮ್ಮಲ್ಲಿಯ ಹಲವು ಏಕ ಜೀವಿಗಳು ಒಂದನೇ ಆಯಾಮದಲ್ಲಿಯೂ, ಮತ್ತೆ ಕೆಲವು ಕೆಳ ಸ್ತರದ ಜೀವಿಗಳು ಎರಡನೇ ಆಯಾಮದಲ್ಲಿಯೂ ಇರುವ ಸಾಧ್ಯತೆ ಇದೆ.

    ಇತ್ತೀಚೆಗೆ ವಿಜ್ಞಾನ ಕಾಲವನ್ನು ನಾಲ್ಕನೆಯ ಆಯಾಮ ಅಂತ ಕರೆದಿದೆ ಮತ್ತು ಅದರಲ್ಲಿರುವವರು ನಮ್ಮ ಕಣ್ಣಿಗೆ ಕಾಣದ ವೇಗದಲ್ಲಿರುವುದರಿಂದ ಅವರು ನಮಗೆ ಗೋಚರಿಸಲಾರರು ಅಂದಿದ್ದಾರೆ! ಹೀಗೆಯೇ ಪ್ರಯೋಗ ಶಾಲೆಯ ಆಧುನಿಕ ವಿಜ್ಞಾನ ಹನ್ನೊಂದು ಆಯಾಮಗಳನ್ನು ಮುಂದಿಟ್ಟು, ಒಂದೊಂದು ಆಯಾಮದಲ್ಲೂ ನಮಗಿರುವ ಇಂದ್ರಿಯಗಳಿಗೆ ನಿಲುಕದ ಶಕ್ತಿಗಳನ್ನು ಅವರಿಗೆ ಪರಮಾರಿಸಿ, ಹನ್ನೊಂದನೆಯ ಆಯಾಮದಲ್ಲಿರುವವರನ್ನು ನಮ್ಮ ಪೂರ್ವಜರು ಹೇಳಿರುವ ದೇವರುಗಳು ಅನ್ನುವ ಅರ್ಥದಲ್ಲಿ ಉನ್ನತ ಮಟ್ಟದ ಸ್ತರದಲ್ಲಿ ಇರಿಸಿದ್ದಾರೆ, ಅತಿಂದ್ರಿಯ ಶಕ್ತಿಗಳನ್ನು ಕೊಟ್ಟು! ಮೂರನೇ ಆಯಾಮದಿಂದ ಮೇಲಿನವರು ನಮ್ಮ ಸುತ್ತ,ಹತ್ತಿರದಲ್ಲೇ ಇದ್ದರೂ ನಮಗೆ ನೋಡಲಾಗಲ್ಲ,ಕಾರಣ ನಮ್ಮ ಜ್ಞಾನೇಂದ್ರಿಯಗಳ ಕ್ಷಮತೆ. ಇವಿಷ್ಟೂ ನಮ್ಮ ಪುರಾಣಗಳನ್ನು ಉಲ್ಲೇಖಿಸಿ ಹೇಳುತ್ತಿಲ್ಲ, ಬದಲಾಗಿ ಆಧುನಿಕ ಭೌತ ವಿಜ್ಞಾನದ ಪ್ರಥಮ ಹಂತದ ಊಹೆಗಳಾಗಿ ಪರಿಗಣಿಸಿ, ಸಂಶೋಧನೆ ನಡೆಯುತ್ತಿದೆ.

    ಆಯಾಮಗಳನ್ನು ವಿಂಗಡಿಸಲು ವಿಜ್ಞಾನ ಸೌರಶಕ್ತಿಯನ್ನು ಮಾಪಕವಾಗಿ ಬಳಸಿಕೊಂಡಿದೆ. ಅಂದರೆ ಮೂರನೆಯ ಆಯಾಮದಲ್ಲಿಯ ನಾವು ಸೌರ ಶಕ್ತಿಯನ್ನು ಶೇಕಡಾ 5 ರಷ್ಟು ಉಪಯೋಗಿಸಿಕೊಂಡಿದ್ದರೆ, ಹನ್ನೊಂದನೇ ಆಯಾಮದವರು ಶೇಕಡಾ 100 ರಷ್ಟು ಸೌರಶಕ್ತಿಯನ್ನು ಬಳಸಿಕೊಳ್ಳಲು ಕಲಿತಿರುತ್ತಾರಂತೆ. ಅಥವಾ ನಾವೂ 100 ಶೇಕಡಾ ಸೌರಶಕ್ತಿ ಉಪಯೋಗಿಸುವುದನ್ನು ಕಲಿತ ದಿನ ಆ ಆಯಾಮದಲ್ಲಿರುತ್ತೇವೆ, ಅತಿಂದ್ರಿಯ ಶಕ್ತಿ ಹೊಂದಿ!

    ವಿಜ್ಞಾನದ ಅನುಸಾರ ಯಾರು ಯಾವ ಆಯಾಮಗಳಲ್ಲಿ ಬೇಕಾದರೂ ಇರಬಹುದು, ಆಯಾಯ ಆಯಾಮಗಳನ್ನು ಗ್ರಹಿಸಲು,ಅನುಭವಿಸಲು ಬೇಕಾಗುವ ಜ್ಞಾನೇಂದ್ರಿಯಗಳ ಸಾಮರ್ಥ್ಯ ಪಡೆದು. ಅದ್ವೈತದ ಅಹಂ ಬ್ರಹ್ಮಾಸ್ಮಿ (ನಾನೂ ಬ್ರಹ್ಮನಾಗ ಬಲ್ಲೆ, ಅಥವಾ ನಾನೂ ಬ್ರಹ್ಮ) ಇದನ್ನೇನಾ ಹೇಳುದ್ದು?ಈ ಮಣ್ಣಿನ ಪುರಾತನ ದರ್ಶನಗಳನ್ನು ಅಭ್ಯಸಿಸಿದ ಎಲ್ಲರಿಗೂ ಮೇಲೆ ಹೇಳಿದ ವಿಷಯಗಳು ತೀರಾ ಸಾಮಾನ್ಯವಾದವುಗಳು, ಆದರೆ ಈಗಿನ ವಿಜ್ಞಾನಕ್ಕೆ ಕುತೂಹಲ ಕೆರಳಿಸಿರುವ ವಿಷಯಗಳು! ಅಣುವಿನಲ್ಲಿನ ಎಲೆಕ್ಟ್ರಾನ್, ನ್ಯೂಟ್ರಾನ್,ಪ್ರೋಟ್ರಾನ್ ಅನ್ನುವಲ್ಲಿಗೆ ನಿಂತಿದ್ದ ವಿಜ್ಞಾನ, ಮತ್ತೂ ಒಳ ಹೊಕ್ಕು ಈ ಮೂರನ್ನೂ ವಿಭಜಿಸಿ ಇವು ವಿಭಜಿಸಲಾಗದ, ಸದಾ ಚಲನೆಯಲ್ಲಿರುವ ದಾರದ ತರಹದ ತಂತುಗಳಿಂದ ಮಾಡಲ್ಪಟ್ಟಿವೆ ಅಂತ ಹೇಳಿದ್ದಾರೆ. ಅದನ್ನು String Theory ಅಂತ ಕರೆದು ಕೊಂಡಿದ್ದಾರೆ. ಮನುಷ್ಯನ ಪಂಚೇದ್ರಿಯಗಳ ಸೂಕ್ಷ್ಮತೆಯನ್ನು ವಿಸ್ತರಿಸಿಕೊಳ್ಳುವಂತಹ ಯಂತ್ರಗಳನ್ನು ಕಂಡುಕೊಂಡು ಅವುಗಳ ಸಹಾಯದಿಂದ ಈ ಸೃಷ್ಠಿಯನ್ನು ನೋಡುತ್ತಿರುವುದೇ ವಿಜ್ಞಾನದ ಕೆಲಸ ವಾಗಿದೆ,ಬಿಟ್ಟರೆ ಸತ್ಯದ ಅನ್ವೇಷಣೆಯಲ್ಲ.

    ನಮ್ಮ ಜ್ಞಾನೇಂದ್ರಿಯಗಳಿಗೂ ನಿಲುಕದ ಎಷ್ಟೋ ಸತ್ಯಗಳು ನಮ್ಮ ಸುತ್ತ ಮುತ್ತ ಇವೆ. ಉದಾಹರಣೆ ನಾಲ್ಕನೇ ಆಯಾಮದ ಜಗತ್ತನ್ನು ನಾವು ಅನುಭವಿಸದೇ ಇರುವುದು. ಏನೇ ನಾವು ವಿಜ್ಞಾನದಲ್ಲಿ ಮುಂದುವರಿದಿದ್ದೇವೆ ಅಂದರೂ ಅದು ಪಂಚೇಂದ್ರಿಯಗಳ ನಿಲುಕು ಮಾತ್ರ!ಹಾಗಾಗಿಯೇ ನಮ್ಮ ಹಿರಿಯರು ಜ್ಞಾನ,ವಿಜ್ಞಾನ,ಸುಜ್ಞಾನ ಅಂದು, ಈ ವಿಜ್ಞಾನವನ್ನು ಮಧ್ಯೆದಲ್ಲಿ ಇಟ್ಟಿದ್ದಾರೆ.

    ಇಂತಹ ವಿಜ್ಞಾನ ಮತ್ತೂ ಒಂದು ಹೆಜ್ಜೆ ಮುಂದುವರಿದು ಸಾವಿಗೆ ಹೊಸ ವ್ಯಾಖ್ಯಾನ ಕೊಡ್ತಿದೆ. ಅದೆಂದರೆ ಒಂದು ಆಯಾಮದಿಂದ ಮರೆಯಾಗಿ, ಮತ್ತೊಂದು ಆಯಾಮದಲ್ಲಿ ಅದರ ಅಸ್ತಿತ್ವನ್ನು ಕಾಣುವುದು! ಮೂರನೇ ಆಯಾಮದಲ್ಲಿ ಸಂಭವಿಸಿದ ಸಾವು ಭೌತ ಶರೀರದ ಅಸ್ತಿತ್ವವನ್ನು ಇಲ್ಲವಾಗಿಸಿದರೂ ಸೂಕ್ಷ್ಮ ಶರೀರದ ಅಸ್ತಿತ್ವವನ್ನು ನಂತರದ ಆಯಾಮಗಳಲ್ಲಿ ಮುಂದುವರಿಸುತ್ತಿರುವುದು ನನಗೆ ಕುತೂಹಲದ ವಿಷಯವಾಗಿದೆ. ಈ ನೆಲದ ದಾರ್ಶನಿಕರು ಇದೇ ವಿಷಯದ ಬಗ್ಗೆ ನಾನಾ ತರಹದ ಸಿದ್ದಾಂತಗಳನ್ನು ಮಂಡಿಸಿದ್ದರೂ ವೈಜ್ಞಾನಿಕ ಪುರಾವೆಗಳೊಂದಿಗೆ ಮಂಡಿಸಿದ ಉದಾಹರಣೆ ಇಲ್ಲವಾಗಿ ಅದೊಂದು ನಂಬಿಕೆಯ ಪ್ರತೀತಿ ಆಗಿದೆ. ಈಗಿನ ವಿಜ್ಞಾನ ಇಂತಹ ನಂಬಿಕೆಯ ವಿಷಯಕ್ಕೆ ನಮ್ಮ ಜ್ಞಾನೇಂದ್ರಿಯಗಳಿಗೆ ನಿಲುಕುವ ನೆಲೆಗಟ್ಟಲ್ಲಿ ಪುರಾವೆ ಒದಗಿಸಲು ತೊಡಗಿಕೊಳ್ಳುವುದು ಆಧುನಿಕ ಮನುಷ್ಯನ ಜೀವಮಾನದ ಮೈಲಿಗಲ್ಲೇನೋ!

    ಅತಿಂದ್ರಿಯ ವಾದದ್ದನ್ನು ಇಂದ್ರಿಯಗಳ ವ್ಯಾಪ್ತಿಗೆ ತಂದು ನಿಲ್ಲಿಸಿ,ವಿವರಿಸುವುದು, ವಿಜ್ಞಾನ ಅನ್ನಿಸಿದರೂ ನಮ್ಮ ಸೀಮಿತ ಇಂದ್ರಿಯಗಳ ಜ್ಞಾನಕ್ಕೆ ನಿಲುಕದೇ ಇರೋದು ವಿಶ್ವದಲ್ಲಿ ತುಂಬಾ ಇದೆ ಅನ್ನೋದನ್ನ ವಿಶ್ವದ ಎಲ್ಲಾ ದಾರ್ಶನಿಕರು ಮಾರ್ಮಿಕವಾಗಿ, ನಾನಾ ತರಹದ ಮಾಧ್ಯಮಗಳ ಮೂಲಕ ಮುಂದಿನ ಪೀಳಿಗೆಗಳಿಗೆ ಹೇಳಿದ್ದಾರೆ. ಎಲ್ಲ ಜೀವಿಗಳ ಇಂದ್ರಿಯ ಶಕ್ತಿಗಳು ಸೀಮಿತವಾಗಿದ್ದು, ಒಂದೇ ಇರುವ ಪರಮ ಸತ್ಯವನ್ನೂ ಸಾಪೇಕ್ಷಗೊಳಿಸಿಕೊಂಡು ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿವೆ. ಮಾನವ ಒಂದೆಡೆ ಆಯಾಮಗಳ ಹುಡುಕಾಟದಲ್ಲಿ ಉರ್ಧ್ವಮುಖದಲ್ಲಿ ಚಲಿಸಿದರೆ, ಮತ್ತೊಂದೆಡೆ ನೀಚ ಬುದ್ಧಿಗಳ ಆಗರವಾಗಿ ಮಾನವ ಕುಲಕ್ಕೇ ಕಂಟಕವಾಗಿ ಕುಹಕ ನಗೆ ಬೀರುತ್ತಿದ್ದಾನೆ. ಕೊಳಕು ಅನ್ನುವುದೂ ಸಾಪೇಕ್ಷವಾ?? ನನ್ನ ಕೊಳಕು ನನಗೆ ಕೊಳಕಾಗದೆ,ಬೇರೆಯವರಿಗೆ ಕೊಳಕಾಗಿ ಕಾಣೋದು ಅಥವಾ ಅನಿವಾರ್ಯವಾ? ಎಲ್ಲ ಜೀವ ಕಣಗಳಿಗೆ ಹುಟ್ಟು ಈ ಕೊಳಕೇ. ಮನುಷ್ಯನ ದೇಹದ ಕೊಳಕು ಮೈಯ ಬೆವರಾಗಿ ಹೊರಬರುವುದು ನಿಂತಿತು ಅಂದರೆ, ಅವನು ಸತ್ತ ಅಂತ. ನಾವಿಂದು ಯೋಚಿಸಬೇಕಾಗಿರುವುದು ಮನಸ್ಸಿನ ಕೊಳಕಿನ ಬಗ್ಗೆ. ಅದು ಸೃಷ್ಟಿಸುವ ಕೊಳಕು ಪ್ರಪಂಚದ ಬಗ್ಗೆ. ಹೌದು,ಪ್ರತಿ ಮನಸ್ಸಿಗೂ ಒಂದು ಶಕ್ತಿ ಇದೆ. ಅದರ ಕೊಳಕು ಪ್ರಪಂಚವೂ ಸಾಪೇಕ್ಷವಾ? ಅಥವಾ ಅನಿವಾರ್ಯವಾ?

    ಒಂದೆಡೆ ಕರೊನಾ ಕಾರಣದಿಂದ ಇಡೀ ವಿಶ್ವ ನರಳುತ್ತಿದ್ದರೆ, ಮಾನವಿಯತೆಯಿಂದ ಮಿಡಿದು,ಸಹಾಯ ಹಸ್ತ ಚಾಚುವವರು ಒಂದು ಕಡೆಯಾದರೆ, ಕೆಲವರು ಇದರಲ್ಲೇ ಕೊಳಕು,ಪಾಪಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ! ತಮ್ಮ ತೆವಲುಗಳನ್ನು ವಿಕೃತವಾಗಿ ತೀರಿಸಿಕೊಳ್ಳುತ್ತಿದ್ದಾರೆ. ಎಲ್ಲ ಮಾನವರ ಮೇಲೆ ಈ ಕ್ರಿಮಿ ಭೇದ,ಭಾವ ತೋರದೆ ಎರಗಿದರೂ ಮನುಷ್ಯನಲ್ಲಿಯ ಈ ಇಬ್ಬಗೆ ರೀತಿ ನನ್ನನ್ನು ಯೋಚಿಸುವಂತೆ ಮಾಡಿದೆ. ಯಾಕೆ ಹೀಗೆ? ಇಂತಹ ಸಮಯದಲ್ಲಾದರೂ ಪರಸ್ಪರರು ಮಾನವರಾಗಿ ಬಂದ ಸಂಕಟ ಎದುರಿಸಬೇಕು ತಾನೇ? ಬಂದಿರುವ ಮಹಾ ಮಾರಿಯ ಮುಂದೆ ಅದೇಗೆ ಮಾನವ ಈ ರೀತಿ ವರ್ತಿಸಬಹುದು? ಹಾಗಾದರೆ ಮಾನವನಿಗೆ ಆತ್ಮಸಾಕ್ಷಿ ಅಥವಾ ಮನಃಸಾಕ್ಷಿ ಎಂಬುದು ಇಲ್ಲವೇ? ಇಲ್ಲ ಅಂತಾದರೆ, ವಿಜ್ಞಾನ ಮಂಡಿಸುವ ಉನ್ನತ ಮಟ್ಟದ ಆಯಾಮಗಳ ಅರ್ಥ ಏನು?! ಅಥವಾ ಇದೆಲ್ಲಾ ಸತ್ಯವಲ್ಲದ ಸಾಪೇಕ್ಷವಾ?

    Photo by Andy Beales on Unsplash

    ನಾಯಿ ಬಾಲವೇಕೆ ಡೊಂಕು


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ನಳಿಗೆಯೊಳ್ ನಾಯ ಬಾಲವನು ಕಟ್ಟಲ್ತನ್ನ ನಳುಹ ಬಿಡಂತೆ-  ನಮ್ಮೆಲ್ಲರಿಗು ತಿಳಿದಿರುವಂತಹ   ಮಾತು.  ತಪ್ಪನ್ನು ತಿದ್ದಿಕೊಳ್ಳದೆ   ಉಡಾಫೆಯಿಂದ ವರ್ತಿಸುವ  ಜನರನ್ನು ನೋಡಿದಾಗಲೆಲ್ಲಾ  “ಎಷ್ಟು ಹೇಳಿದರೂ  ಅಷ್ಟೆ   ನಾಯಿ ಬಾಲ ಡೊಂಕು”  ಅಂದು ಬಿಡುತ್ತೇವೆ. 

    ಈ  ಗಾದೆ ಮಾತನ್ನು ವ್ಯಕ್ತಿಯ ಗುಣಸ್ವಭಾವಕ್ಕೆ ಅನ್ವಯಿಸಿ ಹೇಳುವಂತಹದ್ದು.  “ನಳಿಗೆಯೊಳ್ ನಾಯ ಬಾಲವನು ಕಟ್ಟಲ್ತನ್ನ ನಳುಹ ಬಿಡಂತೆ” ಎಂಬ ಮಾತು ‘ಸಮ್ಯುಕ್ತಕೌಮುದಿ’ಯಲ್ಲಿ ಉಲ್ಲೇಖವಾಗಿದೆ.ನಮಗೆ  ಸ್ವಯಂಬುದ್ಧಿ ಹೇಳಿಕೊಳ್ಳುವ ಪ್ರಸಂಗಗಳು ಅನೇಕ ಬಾರಿ  ಬರುತ್ತವೆ.   ಅಚಾತುರ್ಯದಿಂದ ಏನೋ ಘಟಿಸಿಬಿಡುತ್ತದೆ ನಷ್ಟವೂ ಆಗುತ್ತದೆ ಆ ಸಂದರ್ಭದಲ್ಲಿ  ಇನ್ನೊಮ್ಮೆ ಆಗದಂತೆ ಎಚ್ಚರವಹಿಸಬೇಕು ಎಂದು ನಮಗೆ ಬುದ್ಧಿವಾದ ಹೇಳಿಕೊಂಡಿರುತ್ತೇವೆ  ಸ್ವಲ್ಪ ದಿನ ಕಳೆದನಂತರ ಮತ್ತದೆ ತಪ್ಪು ಮರುಕಳಿಸಿದಾಗ ನಾವೂ” ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ  ಡೊಂಕು ಸರಿಹೋಗುತ್ತದೆಯೇ?” ಎಂದು ನಮ್ಮನ್ನೆ ಹಳಿದುಕೊಂಡಂತಾಗುತ್ತದೆ. 

    ಸಾಧಕರ, ಸಾಹಸಿಗಳ ಮಾತುಗಳನ್ನು ಕೇಳಿದಾಗಲೂ ನಮ್ಮ ಮನಸ್ಸು ಅವರಂತೆಯೇ ನಾವೂ ಸಾಧಿಸಬೇಕು  ಅನ್ನುವ ತೀರ್ಮಾನಕ್ಕೆ ಬರುತ್ತದೆ. ಹಾಗೆ ಕೂಡ ಕೆಲಸ ಮಾಡಬೇಕು ಅಂದು ಕೊಳ್ಳುತ್ತೇವೆ.ಒಂದೆರಡು ದಿನ ಅದೇ ದಿಸೆಯಲ್ಲಿ ನಡೆಯುತ್ತೇವೆ ಕೂಡ  ಆನಂತರ ಆ ಅಭ್ಯಾಸ  ಕೈಬಿಟ್ಟುಹೊಗುತ್ತದೆ.  ಕಾರಣ ಏಕಾಗ್ರತೆಯ ಕೊರತೆಯಿರುತ್ತದೆ.  ನಿದ್ರೆ ಇತ್ಯಾದಿಗಳನ್ನು  ತ್ಯಾಗ ಮಾಡಲು ನಮ್ಮ ಮನಸ್ಸು ಸಿದ್ಧವಿರುವುದಿಲ್ಲ. ಅಂದುಕೊಂಡ ಕೆಲಸ ಅರ್ಧಕ್ಕೆ ನಿಲ್ಲುತ್ತದೆ. ಅಂದು ಕೊಂಡ ಸಂಕಲ್ಪ ಈಡೇರದೆ ಹೋದಾಗಲೂ ಹೀಗೆ ಆಗುತ್ತದೆ.  

    ಇನ್ನು ಕೆಲವೊಮ್ಮೆ ಡಯಟ್ ಮಾಡಬೇಕು ಎಂದು ಹಿತಮಿತ  ಆಹಾರ ಸೇವಿಸಬೇಕೆಂದು  ತೀರ್ಮಾನ ಮಾಡಿಕೊಂಡು ಅನುಸರಿಸುತ್ತಿದ್ದರೂ  ಮನೆಗೆ ಯಾರೊ  ಅತಿಥಿಗಳು ಬಂದರು ಎಂದೋ ಮದುವೆ -ಮುಂಜಿ ಇತ್ಯಾದಿ ಸಮಾರಂಭಕ್ಕೆ ಹೋಗಿ ಅಲ್ಲಿ ಪಥ್ಯ  ಅನುಸರಿಸಲಾಗದೆ ಡಯಟ್ ನಿಯಮವನ್ನು ಕೈಬಿಡುವುದೂ ಇದೆ. ಆಗ ಮತ್ತೆ  ನಾಯಿ ಬಾಲ ಡೊಂಕು ಎಂದೇ ಹೇಳಬೇಕಾಗುತ್ತದೆ.

    ನಾಯಿ ಬಾಲ ಡೊಂಕು ಎಂಬುದು ನಾಯಿಯ  ಜೈವಿಕ ಗುಣವನ್ನು ಅನುಸರಿಸಿ ಹೇಳಿದರೂ ಅದನ್ನು ಮೀರಿಯೂ ಮನುಷ್ಯ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬಹುದು ತಿದ್ದಿಕೊಳ್ಳಬೇಕು ಅನ್ನುವ ಅಂತಃಸತ್ವ ಇಲ್ಲಿದೆ. ನಾಯಿ ಬಾಲಕ್ಕೆ ದಬ್ಬೆ ಕಟ್ಟುವುದು  ಎಂಬ  ಮಾತು ,ಮನುಷ್ಯನ ಸಂದರ್ಭದಲ್ಲಿ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದು ಎಂದಾಗುತ್ತದೆ.  ಮನುಷ್ಯ ಬುದ್ಧಿ ಕಲಿತ ಮೇಲೆಯೇ ಕೆಲವೊಂದು ದುರಭ್ಯಾಸಗಳನ್ನು ತಿಳಿದು ರೂಢಿಸಿಕೊಂಡಿರುತ್ತಾನೆ ಅಂಥವುಗಳನ್ನು ಖಂಡಿತಾ ತಿದ್ದಿಕೊಳ್ಳುವ ಅವಶ್ಯಕತೆಯಿದೆ  ಮನುಷ್ಯ ಪ್ರಯತ್ನ ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು ಎಂಬುದಕ್ಕೆ  ಈ ಮಾತನ್ನು ಅನ್ವಯಿಸಿ ಹೇಳುವುದು. 

    “ಮನಸಿದ್ದಲ್ಲಿ ಮಾರ್ಗ” ಎಂಬಂತೆ ಲೋಪದೋಷಗಳನ್ನು ಕೆಟ್ಟ ಅಭ್ಯಾಸಗಳನ್ನು ತ್ಯಜಿಸ ಬಯಸುವುದಕ್ಕಿಂತ ತ್ಯಜಿಸಬೇಕೆಂಬ ಸಂಕಲ್ಪ ಮಾಡಿದರೆ ನಾಯಿ ಬಾಲವನ್ನೂ ಸರಿ ಮಾಡಬಹುದು  ಎಂಬ ಆಶಾದಾಯಕ ಮಾತನ್ನು ಸ್ಥಾಯಿಗೊಳಿಸಬಹುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಮನೆಯಲ್ಲಿಯೇ ಇರಿ – ಮಹತ್ತರವಾದ ಆರೋಗ್ಯ ಭಾಗ್ಯ ಪಡೆಯಿರಿ.

    ಎಂತಹ ಪರಿಸ್ಥಿತಿ ಬಂತು ವ್ಯಾಪಾರವೇ ಇಲ್ಲ, ಜನ ಓಡಾಟ ಕಡಿಮೆಯಾಗಿದೆ.  ಸರಕನ್ನು ಅಸಲಿನ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚು ಚಾಲ್ತಿಯಲ್ಲಿರುವ ಪರಿಸ್ಥಿತಿಯಾಗಿದೆ.  ಇನ್ನು ಕೃಷಿಕ ವಿಭಾಗದವರ ಪಾಡು ಹೇಳತೀರದು.   ಮತ್ತೆ ಕೆಲವರಿಗೆ  ನಾವು ಹೂಡಿದ ಬಂಡವಾಳಕ್ಕೆ 2- 3% ಸಹ ವರ್ಕೌಟ್‌ ಆಗಲ್ಲ ಎಂಬ ಭಾವನೆ,  ಹೂವಿನ ವ್ಯಾಪಾರಸ್ಥರು ಇತ್ತೀಚೆಗೆ ಮಾರಾಟವಾಗದೇ ಇರುವ ಸರಕನ್ನು ತಿಪ್ಪೆಗೆ ಎಸೆದ ಸುದ್ಧಿಯೂ ಸಹ ಪಸರಿಸಿತ್ತು.   ಈಗ ಮತ್ತೊಮ್ಮೆ ಲಾಕ್‌ ಡೌನ್‌ ಪ್ರಕಟಿಸಲಾಗಿದೆ. 

    ನಮ್ಮ ಸುರಕ್ಷಾ ಚಕ್ರವನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ.  STAY at HOME- STAY SAFE  ಎಂದು ಹೆಚ್ಚಿನವರು ಅಳವಡಿಸಿಕೊಂಡಿರುವರು.  ಮನೆಯಲ್ಲಿಯೇ ಇರಿ ಮನರಂಜನೆ ತೆಗೊಳ್ಳಿ ಎಂಬುದಕ್ಕೆ ಈಗ ಬ್ರೆಕ್‌ ಬಿದ್ದಿದೆ.  ಕಾರಣ ಪ್ರಸಾರವಾಗುತ್ತಿರುವ  ಹಳೆಯ ಧಾರಾವಾಹಿಗಳು ಅಸಹಜ ತಿರುವುಗಳಿಂದ ವೀಕ್ಷಕರ ಆಸಕ್ತಿ ಕಳೆದುಕೊಳ್ಳುತ್ತಿವೆ. ಡಬ್ಬಿಂಗ್‌ ಆದ ಕೆಲವು ಪೌರಾಣಿಕ ಧಾರಾವಾಹಿಗಳೂ ಸಹ ಅರ್ಧಕ್ಕೇ ನಿಂತು ಹೋಗಿವೆ.ಬಿಗ್ ಬಾಸ್ ಕೂಡ ಇಂದೇ ಕೊನೆಯಾಗುತ್ತಿದೆ.   ನ್ಯೂಸ್‌ ಚಾನಲ್‌ ಗಳಲ್ಲಿ ಸದಾ ಕಾಲವೂ ನೆಗಟಿವ್ ಸುದ್ದಿಗಳೇ.  ಹಾಗಿದ್ದರೆ ಸಮಯ ಕಳೆಯುವುದು ಹೇಗೆ? ಎಂಬುದು ಹೆಚ್ಚಿನವರ ಪ್ರಶ್ನೆಯಾಗಿದೆ.  ಈಗಿನ ತಾಂತ್ರಿಕ ಯುಗದಲ್ಲಿ ನಾವೂ ಚಟುವಟಿಕೆಯಲ್ಲಿರಬೇಕು,  ಮನಸ್ಸಿಗೂ ಸ್ವಲ್ಪ ಚಿಂತನೆಗೆ ಅವಕಾಶಕೊಟ್ಟು ಆರೋಗ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು, ನಡೆಸಿದ ಚಟುವಟಿಕೆಯಿಂದ ಸ್ವಲ್ಪ ಸಂಪಾದನೆಯೂ ಆಗಬೇಕು.    ಈ ಎಲ್ಲವಕ್ಕೂ ಪರಿಹಾರ ಎಂದರೆ ಷೇರುಪೇಟೆ ಚಟುವಟಿಕೆಯೊಂದೇ.  ಕದಡಿದ ವಾತಾವರಣದಲ್ಲಿ ಮನೆಯಲ್ಲೇ ಕುಳಿತು ಕೈಲಿರುವ ಹಣದಲ್ಲೇ ಸೀಮಿತ ಚಟುವಟಿಕೆ ನಡೆಸಿ ಹಣವನ್ನು ಗಳಿಸುವುದರೊಂದಿಗೆ ಮನಸ್ಸನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹರ್ಷೋಲ್ಲಾಸಭರಿತವಾಗಿರಲು ಷೇರುಪೇಟೆ ಒಂದು ಉತ್ತಮ ಸಾಧನ.

    ಷೇರಪೇಟೆಯಲ್ಲಿ ಸ್ವಲ್ಪಮಟ್ಟಿನ ಸುರಕ್ಷಿತ ವಿಧಾನ ಎಂದರೆ  invest – hold – book profit ಒಂದೇ.   ಇಲ್ಲಿನ ವಹಿವಾಟಿಗೆ ಗ್ಯಾರಂಟೀ ಎಂಬುದಿರುವುದಿಲ್ಲ.  ಇತರೆ ವ್ಯಾಪರಗಳಲ್ಲಿದ್ದಂತೆ  ಇಲ್ಲಿಯೂ ಸ್ವಲ್ಪಮಟ್ಟಿನ ಅಪಾಯವಿದ್ದೇ ಇದೆ.  ಆದರೆ ನಮ್ಮ ಚಿಂತನೆ, ಭಾವನೆಗಳನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಕೌಶಲ್ಯವನ್ನು ಹೊಂದಿದ್ದರೆ ಷೇರುಪೇಟೆಯ ವಹಿವಾಟು ನಿರ್ವಹಣೆ ಲಾಭದಾಯಾಕವಾಗಿರುತ್ತದೆ.

    ಯಶಸ್ಸಿನ ಸೂತ್ರಗಳು:

    ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಲು ಅಳವಡಿಸಿಕೊಳ್ಳಬೇಕಾದ / ಅಗತ್ಯವಿರುವ ಕೆಲವು ಸೂತ್ರಗಳು ಹೀಗಿವೆ.

    ಬಂಡವಾಳ (CAPITAL) :   ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು ಎಂಬಂತೆ  ಪೇಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಪ್ರಯತ್ನಮಾಡಿದಲ್ಲಿ ಮಾತ್ರ ಭವಿಷ್ಯದಲ್ಲಿ ಆ ಹೂಡಿಕೆ ಮೆರಗು ತರಲು ಸಾಧ್ಯ.

    ಸಹನೆ (PATIENCE)  :  ಹೂಡಿಕೆಗೆ  ಆಯ್ಕೆ ಮಾಡಿಕೊಂಡ ಕಂಪನಿಗಳು ಉತ್ತಮವಾಗಿದ್ದಲ್ಲಿ, ಷೇರುಗಳ ಬೆಲೆಗಳಲ್ಲಿ ಆಗುವ ಏರಿಳಿತಗಳಿಗೆ ಗಮನಕೊಡದೆ,  ಅವುಗಳು ಏರಿಕೆ ಕಾಣುವವರೆಗೂ ಹೂಡಿಕೆ ಮುಂದುವರೆಸಬೇಕು.   ಕೊಂಡ ಷೇರು ಏರಿಕೆ ಕಾಣಲಿಲ್ಲ ಎಂಬ ಕೊರಗು ಇರಬಾರದು.  ಕಾರಣ, ಸೇವಿಸಿದ ಆಹಾರವು ಪಚನವಾಗಿ ರಕ್ತಗತವಾಗಲೂ ಸಹ ಸಮಯ ಬೇಕಾಗುವುದು, ಅದರಂತೆ ಖರೀದಿಸಿದ ಷೇರು ಲಾಭ ಗಳಿಸಿಕೊಡಲು ಸಹ ಸಮಯಾವಕಾಶ ನೀಡಬೇಕು.  ಹೂಡಿಕೆಯು ಸಕಾರಾತ್ಮಕ ಫಲಿತಾಂಶ ನೀಡುವವರೆಗೂ ಮುಂದುವರೆಸುವಂತಿರಬೇಕು.   ಒಂದು ವೇಳೆ ಹೂಡಿಕೆಮಾಡಿದ ಕಂಪನಿಯಲ್ಲಿನ ಆಂತರಿಕ ಬೆಳವಣಿಗೆ ಅಥವಾ ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ನೇರವಾಗಿ ಪ್ರಭಾವ ಬೀರುವಂತಹ ಭಾಹ್ಯ ಬೆಳವಣಿಗೆ ಏನಾದರೂ ಇದ್ದಾಗ ಮಾತ್ರ ಅಂತಹ ಷೇರಿನಿಂದ ಹೊರಬರುವ ಚಿಂತನೆ ಮಾಡಬೇಕಷ್ಠೆ.  ಇದು ಒಂದು ರೀತಿಯ ಸ್ಟಾಪ್‌ ಲಾಸ್‌ ಪ್ರಕ್ರಿಯೆಯಾಗಿದೆ.

    ಅನುಭವ (EXPERIENCE) :   ಅಧ್ಯಯನದಿಂದ ಅರಿವು,  ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು,  ಅರಿವು ತಿಳಿವು ಸುಳಿವುಗಳಿಂದ ಉಳಿವು ಎಂಬಂತೆ ಅನುಭವವೇ ಚಟುವಟಿಕೆಗೆ ಪೂರಕ ಅಂಶವಾಗಿದ್ದು, ಚಟುವಟಿಕೆಗೆ ಸ್ವಂತ ಅನುಭವವಿಲ್ಲದೆ ಇದ್ದರೂ,  ಅನುಭವಸ್ಥರಿಂದ, ವೃತ್ತಿಪರರಿಂದ ಸೂಕ್ತ ಮಾರ್ಗದರ್ಶನ ಪಡೆದಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ.  

    ಸಂದರ್ಭೋಚಿತ ನಿರ್ಧಾರ (DECISION) : ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಾಗ ಸಂಪ್ರದಾಯಿಕ ಮಾಂತ್ರಿಕ ಪದಗಳಿಗೆ ಮರುಳಾಗದೆ invest and track it,  invest  and watch it, wealth protection ಎಂಬುದಕ್ಕೆ ಹೆಚ್ಚಿನ ಆಧ್ಯತೆ ನೀಡಿದಲ್ಲಿ ಯಶಸ್ಸು ಸಮೀಪವಿರುತ್ತದೆ.   ಸಮಯೋಚಿತ ನಿರ್ಧಾರ  ಹಲವು ಭಾರಿ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆಗಳೂ ಉಂಟು. ವಿಶೇಷವಾಗಿ ಪೇಟೆಗಳು ಉತ್ತುಂಗದಲ್ಲಿದ್ದಾಗ, ಹೂಡಿಕೆಯು ಆರಂಭದಲ್ಲಿ ದೀರ್ಘಕಾಲೀನ ಉದ್ದೇಶ ಹೊಂದಿದ್ದರೂ,  ನಂತರದಲ್ಲಿ ಅವಕಾಶ ಲಭಿಸಿದಾಗ ನಿರ್ಗಮಿಸುವ ವ್ಯವಹಾರಿಕತೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

    ನಿರ್ಲಿಪ್ತತೆ (DETACHMENT) :    ಸಾಮಾನ್ಯವಾಗಿ, ಸಾಂಪ್ರದಾಯಿಕವಾಗಿ ನಡೆದುಬಂದಿರುವ ಪದ್ಧತಿ ಎಂದರೆ ಹೂಡಿಕೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ಹೊಂದುವುದು.  ಈ ಭಾವನಾತ್ಮಕತೆಯು ಷೇರುಪೇಟೆಯಲ್ಲಿ ಹೆಚ್ಚಿರುತ್ತದೆ.   ಈ ಭಾವನಾತ್ಮಕತೆಯ ಕಾರಣ ಅನೇಕ ಅವಕಾಶಗಳನ್ನು ಕೈ ಚೆಲ್ಲಬೇಕಾಗುತ್ತದೆ.  

    ಶಿಸ್ತು(DESCIPLINE) :  ಹೂಡಿಕೆಯು ಉತ್ತಮ ಕಂಪನಿಯಲ್ಲಿದ್ದು,  ಮೌಲ್ಯಾಧಾರಿತ ಖರೀದಿಯಾಗಿದ್ದಲ್ಲಿ  ಪೇಟೆಯ ಏರಿಳಿತಗಳತ್ತ ಗಮನಹರಿಸದೆ ಕೇವಲ ಅವಕಾಶಕ್ಕಾಗಿ ಎದುರು ನೋಡಬೇಕು.  ಇಂದಿನ ಪೇಟೆಗಳಲ್ಲಿ ವಿವಿಧ ರೀತಿಯ ವಹಿವಾಟುದಾರರು, ವಿತ್ತೀಯ ಸಂಸ್ಥೆಗಳು, ಸಾಹುಕಾರಿ ವ್ಯಕ್ತಿಗಳು ಭಾಗವಿಹಿಸುವುದರಿಂದ,  ಹಾಗೂ Derivative ಪೇಟೆಯ ಚಟುವಟಿಕೆಯು, ಪ್ರತಿ ತಿಂಗಳ ಕೊನೆಯ ಗುರುವಾರ ಚುಕ್ತಾ ಆಗಬೇಕಾಗಿರುವುದರಿಂದ, ಹತ್ತಾರು ರಭಸದ ಏರಿಳಿತಗಳನ್ನು ಕಾಣಬಹುದಾಗಿದೆ.   ಭಾರಿ ಕುಸಿತ ಕಂಡಂತಹ ಕಂಪನಿಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ.  ಅದು ಷೇರಿನ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುವಂತೆ ಮಾಡುತ್ತದೆ.   ಷೇರಿನ ಬೆಲೆಗಳು ಗರಿಷ್ಠದಲ್ಲಿದ್ದಾಗ ಅಲ್ಪ ಪ್ರಮಾಣದ ಲಾಭಕ್ಕೆ ತೃಪ್ತಿಪಟ್ಟು ನಗದೀಕರಿಸುವ ಶಿಸ್ತನ್ನು ರೂಢಿಸಿಕೊಳ್ಳುವುದು ಸೂಕ್ತ.    ಕೈಲಿ ಹಣವಿದೆ ಎಂದು ಆತುರದಲ್ಲಿ ಮನಬಂದಂತೆ ಹೂಡಿಕೆ ನಿರ್ಧರಿಸದೆ,  ಅವಕಾಶಕ್ಕಾಗಿ ಎದುರುನೋಡುವುದು ಒಳಿತು.

    ನೆಮ್ಮದಿ (SATISFACTION) :  Value pick – prafit book ಎಂಬುದು  ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ.  ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು.  ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು.   ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ.   ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಷೇರುಪೇಟೆಯಲ್ಲಿ ಹೂಡಿಕೆ ಯಾವ ರೀತಿ ಲಾಭದಾಯಕ?

    ಷೇರುಪೇಟೆ ಚಟುವಟಿಕೆಯಲ್ಲಿ ಲಾಭಗಳಿಸುವುದಕ್ಕೆ ಹಲವಾರು ವಿಧಗಳಿವೆ.   ಅವುಗಳಲ್ಲಿ ಸುರಕ್ಷಿತ ವಿಧಾನ ಎಂದರೆ invest – hold – book profit ವಿಧವಾಗಿದೆ.   ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆ ಇಳಿಕೆ ಕಂಡಾಗ ಖರೀದಿಸಬೇಕು.  ನಂತರದಲ್ಲಿ ಷೇರಿನ ಬೆಲೆ ವಿವಿಧ ಕಾರಣಗಳಿಂದ ಏರಿಕೆ ಕಂಡಾಗ ಹೂಡಿಕೆ ಅವಧಿಗನುಗಣವಾಗಿ ಹೆಚ್ಚಿನ ಲಾಭ ತಂದುಕೊಡುವುದಾದರೆ ಅದನ್ನು ಮಾರಾಟಮಾಡಿ ಲಾಭಗಳಿಸಿಕೊಳ್ಳಬಹುದು.

    ಹೆಚ್ಚಿನ ಕಂಪನಿಗಳು ತಮ್ಮ 2020-21 ವರ್ಷದ ವಾರ್ಷಿಕ ಮತ್ತು 4 ನೇ ತ್ರೈಮಾಸಿಕದ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ.   ಅವುಗಳಲ್ಲಿ ಕೆಲವು ಕಂಪನಿಗಳು ಉತ್ತಮವಾಗಿವೆ ಎಂದು ಬಿಂಬಿಸಿದರೆ ಅನೇಕ ಕಂಪನಿಗಳೂ ಆಕರ್ಷಕ ಡಿವಿಡೆಂಡ್‌ ಗಳನ್ನು ಪ್ರಕಟಿಸಿವೆ.  ಪಾರಂಪರಿಕವಾಗಿ ಅನೇಕ ಕಂಪನಿಗಳು ತಮ್ಮ ಡಿವಿಡೆಂಡ್‌ ಗಳನ್ನು ಪ್ರಕಟಿಸಿವೆ.  ಕೆಲವು ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರೂ ಡಿವಿಡೆಂಡ್‌ ಪ್ರಕಟಿಸಿಲ್ಲ.

    ಇತ್ತೀಚೆಗೆ ಕಂಪನಿಗಳು ಪ್ರಕಟಿಸಿರುವ ಡಿವಿಡೆಂಡ್‌ ಪಟ್ಟಿ:

    COMPANY NAMEDIVIDEND PER SHARE IN Rs. RECORD / BOOK CLOSSURE DATE
    ATUL20.0017TH JULY
    BAJAJ AUTO140.0010TH JULY
    BAJAJ HOLDINGS40.0010TH JULY
    BAJAJ FINANCE10.0010TH JULY
    BLUE DART15.0023RD JULY
    ORACLE200.0018TH MAY
    GODREJ AGRO8.006TH AUG
    GRINDWEL NORTON9.5022ND JULY
    HERO MOTOCORP35.0024TH JULY
    ICRA27.0024TH JULY
    MAHARASHTRA SCOOTERS50.0010TH JULY
    SHRIRAM CITI13.0023RD JULY
    SWARAJ ENGINES69.0003RD JULY
    TECH MAHINDRA30.0027TH JULY
    VST LTD114.0020TH JULY
    WENDT INDIA20.0016TH JULY

    ಇವುಗಳಲ್ಲದೆ  ಕಂಪನಿಗಳಾದ ಟಾಟಾ ಸ್ಟೀಲ್‌ ಪ್ರತಿ ಷೇರಿಗೆ ರೂ.25, ಅಲೆಂಬಿಕ್‌ ಫಾರ್ಮ ಪ್ರತಿ ಷೇರಿಗೆ ರೂ.14,  ಟೆಕ್‌ ಮಹೀಂದ್ರ ಪ್ರತಿ ಷೇರಿಗೆ ರೂ.30, ಮಾರುತಿ ಸುಜುಕಿ ಪ್ರತಿ ಷೇರಿಗೆ ರೂ.45, ಟಾಟಾ ಕೆಮಿಕಲ್ಸ್‌ ಪ್ರತಿ ಷೇರಿಗೆ ರೂ.10,   ಟಾಟಾ ಕಮ್ಯುನಿಕೇಶನ್ಸ್‌ ಪ್ರತಿ ಷೇರಿಗೆ ರೂ.14, ,  ವಿಶಾಖ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.10, ,  ಜಿಲ್ಲೆಟ್‌ ಪ್ರತಿ ಷೇರಿಗೆ ರೂ.50,   ಹೆಚ್‌ ಡಿ ಎಫ್‌ ಸಿ ಪ್ರತಿ ಷೇರಿಗೆ ರೂ.23, ,  ಇನ್ಫೊಸಿಸ್‌ ಪ್ರತಿ ಷೇರಿಗೆ ರೂ.15,  ಹಿಂದೂಸ್ಥಾನ್‌ ಯುನಿಲೀವರ್‌ ಪ್ರತಿ ಷೇರಿಗೆ ರೂ.17 ರಂತೆ  ಕಂಪನಿಗಳು ಆಕರ್ಷಕ ಡಿವಿಡೆಂಡ್‌ ಘೋಷಿಸಿವೆ. 

    ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.7 ರಂತೆ ಡಿವಿಡೆಂಡ್‌ ಘೋಷಿಸಿದರೆ, ಕೋಟಕ್‌ ಮಹೀಂದ್ರ ಬ್ಯಾಂಕ್ ರೂ. 1,780 ರಲ್ಲಿದ್ದು, ಪ್ರತಿ ಷೇರಿಗೆ 90 ಪೈಸೆಯಂತೆ ಡಿವಿಡೆಂಡ್‌ ಪ್ರಕಟಿಸಿದೆK. ಇಂತಹ ಕಂಪನಿಗಳಲ್ಲಿ ಕೇವಲ ಭಾವನಾತ್ಮಕವಾಗಿ ಹೂಡಿಕೆ ಮಾಡಬಹುದಷ್ಠೆ. 

    ಕೆಲವೊಮ್ಮೆ ಕಂಪನಿಗಳು ಬೋನಸ್‌ ಷೇರುಗಳನ್ನು ವಿತರಿಸುತ್ತವೆ ಇದರಿಂದ ಹೊಂದಿರುವ ಷೇರುಗಳ ಸಂಖ್ಯೆ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಷೇರಿನ ಬೆಲೆಗಳು ಏರಿಕೆ ಕಂಡಾಗ ಹೆಚ್ಚಿನ ಲಾಭ ಗಳಿಕೆಗೆ ಅವಕಾಶವಾಗುವುದು.

    ಒಟ್ಟಾರೆ ಪೇಟೆಯು ಉತ್ತುಂಗದಲ್ಲಿರುವುದರಿಂದ ಹೆಚ್ಚಿನ ಅಲ್ಪಾವಧಿ ಏರಿಳಿತಗಳು ಪ್ರದರ್ಶಿತವಾಗುವುದರಿಂದ ಅಲ್ಪಕಾಲೀನ ಲಾಭ ಗಳಿಕೆಗೆ ಉತ್ತಮ ತಳಹದಿಯನ್ನು ಪೇಟೆ ಒದಗಿಸುತ್ತಿದೆ.   ಭಾವನಾತ್ಮಕತೆಗಿಂತ ಚಿಂತನಾತ್ಮಕ ಕೌಶಲ್ಯವು ಹೆಚ್ಚು ಲಾಭದಾಯಾಕವಾಗಿದೆ.

    ಮನೆಯಲ್ಲಿಯೇ ಇದ್ದು ಸುರಕ್ಷತೆಯೊಂದಿಗೆ  ನಡೆಸಿದ ತುಲನಾತ್ಮಕ ಚಟುವಟಿಕೆಗೆ ಉತ್ತಮ ಪ್ರತಿಫಲ ಪಡೆಯಿರಿ.  ಶುಭವಾಗಲಿ.

    error: Content is protected !!