ಇತ್ತೀಚಿಗಷ್ಟೇ ನನ್ನ ತಾಯಿಯವರ ಮಂಡಿನೋವಿಗೆ ಜನರಿಕ್ ಔಷಧ ಮಳಿಗೆಯಲ್ಲಿ ಒಂದು ಜೆಲ್ ಆಯಿಂಟ್ ಮೆಂಟ್ ಖರೀದಿಸಿದೆ.ಅದಕ್ಕೆ ಇಪ್ಪತ್ತೆರಡು ರೂಪಾಯಿ ಕೊಟ್ಟೆ. ಕೆಲವು ವಾರಗಳು ಕಳೆದವು.ನನ್ನ ಮಡದಿಯ ಬೆನ್ನು ನೋವಿಗೆ ವೈದ್ಯರು ಆಯಿಂಟ್ ಮೆಂಟ್ ಬರೆದು ಕೊಟ್ಟರು. ಅದನ್ನ ಕೊಳ್ಳಲು ಮೆಡಿಕಲ್ ಶಾಪಿಗೆ ಹೋದೆ.ನಾನು ಜನೌಷಧಿ ಮಳಿಗೆಯಲ್ಲಿ ಕೊಂಡಿದ್ದ ಆಯಿಂಟ್ ಮೆಂಟ್ ಕೂಡ ಅದೇ ರಾಸಾಯನಿಕ ಒಳಗೊಂಡಿದ್ದು ತಿಳಿಯಿತು. ಮಾರುಕಟ್ಟೆ ಹೆಸರು ಬೇರೆ.ಬೆಲೆ ಎಪ್ಪತೈದು ರೂಪಾಯಿಗಳು. ಒಂದೇ ಔಷಧ ಬೇರೆ ಕಂಪೆನಿ ಉತ್ಪನ್ನ. ಬೇರೆಯದೇ ಹೆಸರುಗಳು.ಆದರೆ ಮುಖಬೆಲೆ ಅಜಗಜಾಂತರ ವ್ಯತ್ಯಾಸ!
ಹೀಗೆಯೇ ಜನರಿಕ್ ಜಾಡನ್ನ ಅರಸುತ್ತಾ ಹೋದೆ. ಒಂದು ಸಮಾಧಾನಕರ ವಿಚಾರ ಸಿಕ್ಕಿತು.
generic drug is a pharmaceutical drug that contains the same chemical substance as a drug that was originally protected by chemical patents. Generic drugs are allowed for sale after the patents on the original drugs expire.
ಏನಿದು ಜನರಿಕ್ ಅನಿವಾರ್ಯತೆ?
ಫೇಸ್ ಬುಕ್ ಮಿತ್ರರು,ಹಿರಿಯ ಪಶುವೈದ್ಯರಾಗಿರುವ ಡಾ. ಎನ್.ಬಿ. ಶ್ರೀಧರ್ ಅವರ ಲೇಖನವನ್ನ ಫೇಸ್ ಬುಕ್ ನಲ್ಲಿ ಕೂಡ ಓದಿದ್ದೆ.ಅವರೂ ಕೂಡ ಈ ಹಿನ್ನೆಲೆಯಲ್ಲಿಯೇ ವಿಸ್ತರಿಸಿ ಬರೆದಿದ್ದರು.ಜನರಿಕ್ ಅಥವಾ ಜನ ಔಷಧ ಈಗ ವ್ಯಾಪಕವಾಗಿ ಮನೆಮಾತಾಗುತ್ತಿದೆ.ಕಾಯಿಲೆಯೇ ಒಂದು ಸಮಸ್ಯೆ. ಅದಾದ ನಂತರ ವೈದ್ಯರ ಚಿಕಿತ್ಸೆ ಬಿಲ್ ಭರಿಸುವುದು ಇನ್ನೊಂದು. ಜೊತೆಗೆ ದೀರ್ಘಕಾಲೀನ ಔಷಧಗಳನ್ನ ಕೊಳ್ಳುವುದು ಮತ್ತೊಂದು ಸಮಸ್ಯೆ.ಇಂತಹ ಸನ್ನಿವೇಶ ಮಧ್ಯಮ ವರ್ಗ ಮತ್ತು ಕಡುಬಡವರನ್ನ ಕಾಡುತ್ತಿದೆ. ಔಷಧ ಕಂಪನಿಗಳು ಒಟ್ಟು ತಮ್ಮಉತ್ಪನ್ನಗಳ ದರವನ್ನ ಪ್ರತೀ ಉತ್ಪಾದನಾ ಹಂತದಲ್ಲೂ ಏರಿಕೆಮಾಡುತ್ತಲೇ ಇವೆ.ಅದಕ್ಕೆ ಸರಿಸಾಟಿಯಾಗಿ ತಮ್ಮ ಉತ್ಪನ್ನಗಳನ್ನ ಮಾರುಕಟ್ಟೆಯಲ್ಲಿ ರಭಸದಿಂದ ತಳ್ಳಲು ಕಂಪನಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿನಿರತರಿಗೆ ಪ್ರಲೋಭನೆಗಳನ್ನೂ ಒಡ್ಡುತ್ತಿದೆ.ಇದರ ಬಗ್ಗೆ ಅನೇಕ ವೈದ್ಯರು ವಿರೋಧವ್ಯಕ್ತಪಡಿಸುತ್ತಾರೆ.
ಇಂತಹ ಸನ್ನಿವೇಶ ನಮಗೆ ಯಾವಾಗಲೂ ಎದುರಾಗುತ್ತಿದೆ. ನಿಮಗೆ ನೆನಪಾಗಬಹುದು. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರ ತೀವ್ರ ಒತ್ತಡದಿಂದ ಜನ ಔಷಧ ಕಲ್ಪನೆ ಮೂರ್ತ ಸ್ವರೂಪತಾಳಿತು. ಅಲ್ಲಿಯವರೆಗ ನೆನೆಗುದಿಯಲ್ಲೇ ಇತ್ತೇನೊ ? ಗೊತ್ತಿಲ್ಲ. ಅಥವಾ ಅವರ ಕಾಲದಲ್ಲಿ ಜನಪ್ರಿಯವಾಯಿತೇನೊ?.ಏನೇ ಇರಲಿ. ಔಷಧಗಳಿಗೆ ತಮ್ಮ ಮಾಸಿಕ ಆದಾಯದ ಬಹುಪಾಲನ್ನ ಔಷಧಗಳಿಗೇ ಮೀಸಲಾಗಿಟ್ಟವರು ಅನೇಕರು. ಮಿಕ್ಕ ದೈನಂದಿನ ಖರ್ಚುವೆಚ್ಚಗಳಿಗೆ ಸಾಲಸೋಲಮಾಡುವ ಅನಿವಾರ್ಯತೆಯ ಸುಳಿಗೆ ಸಿಲುಕಿದ್ದಾರೆ. ಅಂಥವರಿಗೆ ಜನರಿಕ್ ಔಷಧಗಳು ಒಂದು ವರದಾನವೆಂದೇ ಹೇಳಬಹುದು.
ಕೈಗೆಟುಕುವ ದರ,ಶೀಘ್ರ ಪರಿಣಾಮ.
ನನ್ನ ಆತ್ಮೀಯ ಮಿತ್ರರೊಬ್ಬರು ಜನೌಷಧಗಳ ಬಗ್ಗೆ ಅಭಿಪ್ರಾಯ ಕೇಳಿದರಂತೆ.ಅವರಿಗೆ ಸಕ್ಕರೆ ಕಾಯಿಲೆ ತೊಂದರೆ ಇದೆ.ಅದಕ್ಕೆ ವೈದ್ಯರು ಒಳ್ಳೆಯ ಪ್ರತಿಕ್ರಿಯೆ ನೀಡಿದರಂತೆ.ಆವತ್ತಿನಿಂದ ತಾವು ಜನರಿಕ್ ಔಷಧಗಳನ್ನೇ ಸೇವಿಸುತ್ತಿರುವೆ ಎಂದರು. .ಅವರಿಗೀಗ ತಮ್ಮ ಆದಾಯದಲ್ಲಿ ಶೇಕಡ ನಲವತ್ತರಷ್ಟು ಉಳಿಕೆಯಾಗುತ್ತಿದೆಯಂತೆ. ನಿವೃತ್ತರಿಗೆ ಈ ಉಳಿಕೆ ಒಂದು ಒಳ್ಳೆಯ ಮೊತ್ತವೆ!.
ಜನರಿಕ್ ಔಷಧಗಳು ಮಾರುಕಟ್ಟೆ ಹೆಸರಿನ ಔಷಧಗಳಷ್ಟೇ ಸಮ.ಅದರಲ್ಲಿನ ಪ್ರಮಾಣ,ಬಳಕೆ,ಪರಿಣಾಮ, ಎಲ್ಲವೂ ಒಂದೇ ಎಂಬ ಮತ್ತೊಂದು ಅಭಿಪ್ರಾಯ ಅಂತರ್ಜಾಲದಲ್ಲಿದೆ.
Generic drugs are copies of brand-name drugs that have exactly the same dosage, intended use, effects, side effects, route of administration, risks, safety, and strength as the original drug. In other words, their pharmacological effects are exactly the same as those of their brand-name counterparts.
ಇಷ್ಟೆಲ್ಲ ನಂಬಲರ್ಹ ಸಂಗತಿಗಳಿದ್ದರೂ ನಮ್ಮ ಬಹುತೇಕ ವೈದ್ಯರು ಯಾಕೆ ಜನರಿಕ್ ಔಷಧಗಳನ್ನ ಬರೆದು ಕೊಡುವುದಿಲ್ಲ? ಎಂಬ ಪ್ರಶ್ನೆ ನಮ್ಮನ್ನ ಕಾಡದೇ ಇಲ್ಲ. ಅದಕ್ಕೆ ವೈದ್ಯರಲ್ಲಿ ಹಾಗೂ ರೋಗಿಗಳಲ್ಲಿ ಜನರಿಕ್ ಔಷಧಗಳ ಬಗ್ಗೆ ವಿಶ್ವಾಸಮೂಡಿಲ್ಲ. ಇನ್ನೊಂದು ಕಾರಣವೆಂದರೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಬ್ರಾಂಡೆಡ್ ಕಂಪನಿಗಳ ದೈತ್ಯಬಲ.
ಮಾರುಕಟ್ಟೆಯ ಮೇಲಿನ ಅವುಗಳ ಅವುಗಳ ದಾಳಿ ಮತ್ತು ಹಿಡಿತ.ಹೀಗಾಗಿ ಜನರಿಕ್ ಔಷಧಗಳ ಅಸ್ತಿತ್ವ ಕ್ಷೀಣವಾಗಿ ಕಾಣುತ್ತಿದೆ.
ಪ್ರಸ್ತುತ ಆಗಬೇಕಾಗಿರುವುದೇನು?
ಸರ್ಕಾರದ ಆಶಯ ಬಹಳ ನೇರ ಮತ್ತು ಸರಳ.ಶ್ರೀಸಾಮಾನ್ಯನ ಸಂಸಾರಕ್ಕೂ ಉತ್ತಮ ಔಷಧಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು.ಆದರೆ ಅದರ ಜಾರಿಗೆ ಬಹಳ ದುರ್ಬಲ.ಏಕೆಂದರೆ ಸರ್ಕಾರಿ ಆಸತ್ರೆಗಳಲ್ಲಿ ಮೊದಲಿಗೆ ಜನರಿಕ್ ಔಷಧಗಳನ್ನ ಬರೆಯುವ ಬಗ್ಗೆ ವೈದ್ಯರಿಗೆ ಪ್ರೇರಣೆ ಹಾಗೂ ಜವಾಬ್ದಾರಿ ನೀಡಬೇಕು.ಅವುಗಳ ಬಗ್ಗೆ ರೋಗಿಗಳಲ್ಲಿ ಎರಡುಮಾತು ಹೇಳಿ ವಿಶ್ವಾಸ ಮೂಡಿಸಬೇಕು.ಅಲ್ಲಿ ಜನರಿಕ್ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯ ನಡೆಯಬೇಕು.ಕೇವಲ ಜನ ಔಷಧ ಮಳಿಗೆಗಳನ್ನ ವೇಗವಾಗಿ ತೆರೆಯುವ ಕೆಲಸವಾದರೆ ಸಾಲದು. ಮಾಹಿತಿಯೂ ಕೂಡ ಮಿಂಚಿನಂತೆ ಜನತೆಯನ್ನ ತಲುಪಬೇಕು.
ಅಥವಾ ಜನರಿಕ್ ಮಳಿಗೆಯಲ್ಲಿ ಮಾರುಕಟ್ಟೆ ಹೆಸರು ಮತ್ತು ಅದಕ್ಕೆ ಸಮವಾಗಿರುವ ಜನರಿಕ್ ಉತ್ಪನ್ನಗಳ ಹೆಸರಿನ ಪಟ್ಟಿ ಜನರಿಕ್ ಮಳಿಗೆಗಳಲ್ಲಿ ಲಭ್ಯವಿರಬೇಕು. ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು,ಹೋಬಳಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಜನರಿಕ್ ಔಷಧ ಬರೆಯಲು ಸರ್ಕಾರವೇ ಸೂಚನೆ ನೀಡಬೇಕು. ವೈದ್ಯರಿಗೆ ಜನರಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಶಿಬಿರ ನಡೆಸಬೇಕು. ಸರ್ಕಾರ ಪ್ರಚಾರ ಮಾಧ್ಯಮಗಳ ಮೂಲಕ ಈ ಬಗ್ಗೆಯೂ ಜನತೆಯಲ್ಲಿ ಜಾಗೃತಿ ಮೂಡಿಸಬೇಕು.
ಕಾಸಿಗೆ ತಕ್ಕ ಕಜ್ಜಾಯವೆ?
ಕಾಸಿಗೆ ತಕ್ಕ ಕಜ್ಜಾಯ ಎಂಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಆ ಇಂಗಿತವನ್ನೇ ಜನರಿಕ್ ಔಷಧಗಳ ಬಗ್ಗೆ ಸಹಜವಾಗೇ ಹೊಂದಿರುತ್ತೇವೆ.
ಬಹಳ ಮಂದಿಗೆ ಜನರಿಕ್ ಔಷಧಗಳು ಕಡಿಮೆ ಬೆಲೆಗೆ ಸಿಗುತ್ತವೆಂದರೆ ಅಚ್ಚರಿಯ ಸಂಗಡ ಅದರ ಗುಣಮಟ್ಟದ ಬಗ್ಗೆ ದೇಹತಾಳುತ್ತಾರೆ.ಕಡಿಮೆ ದರ ,ಕಡಿಮೆ ಸಾಮರ್ಥ್ಯ ಎಂಬ ಭಾವನೆ ಬರುತ್ತದೆ.ಆದರೆ ಅದು ಸಲ್ಲದು.
ಭದ್ರಾವತಿಯ ಜನಪ್ರಿಯ ಪ್ರಸೂತಿ ತಜ್ಞೆ, ವೈದ್ಯಕೀಯ ಬರಹಗಳ ಲೇಖಕಿ ಡಾ.ವೀಣಾಭಟ್ ಅವರ ಪ್ರತಿಕ್ರಿಯೆಯೂ ಜನರಿಕ್ ಔಷಧಗಳ ಮಹತ್ವ ಸಾರುತ್ತದೆ.” For chronic illness I advise to go for generic drugs only “.ಅವರ ನಿಚ್ಚಳ ಅಭಿಪ್ರಾಯವಿದು.
ಏನಿದು ಜನರಿಕ್?
ಮಾರುಕಟ್ಟೆಯಲ್ಲಿ ಸಿಗುವ ಹೆಸರಾಂತ ಔಷಧ ಉತ್ಪನ್ನದ ಹಿಂದೆ ಸಂಶೋಧನೆ, ಅಭಿವೃದ್ಧಿ,ತಯಾರಿಕೆ,ಪ್ರಚಾರ ಮುಂತಾದ ವೆಚ್ಚಗಳನ್ನ ಭರಿಸಬೇಕಾಗುತ್ತದೆ.
ಅದು ತನ್ನ ಉತ್ಪನ್ನದ ಹಕ್ಕನ್ನ ಹೊಂದಿ ಇಂತಿಷ್ಟು ವರ್ಷಗಳವರೆಗೆ ಏಕಮೇವತೆಯನ್ನ ಸ್ಥಾಪಿಸಿಕೊಂಡಿರುತ್ತದೆ.ಯಾರೂ ಆ ಔಷಧವನ್ನ ತಯಾರುಮಾಡುವಂತಿಲ್ಲ.ಇಂತಿಷ್ಟು ವರ್ಷಗಳ ಗಡುವು ತೀರಿದ ನಂತರ ಅದರ ಮೇಲಿನ ಸ್ವಾಮ್ಯತೆ ಕಳೆದುಕೊಳ್ಳತ್ತದೆ. ಆಗ ಅದನ್ನ ಜನರಿಕ್ ಉತ್ಪನ್ನವಾಗಿ ಮಾರ್ಪಡಿಸಬಹುದು. ಖಾಸಗಿಯವರು ಮುಂದಾಗಿ ಅಂತಹ ಔಷಧ ತಯಾರಿಸಲು ಅನುಮತಿ ಪಡೆದುಕೊಳ್ಳುತ್ತಾರೆ.ಹಲವಾರು ಹಂತದ ವೆಚ್ಚಗಳು ಉಳಿದುಕೊಳ್ಳುತ್ತವೆ.ಕೇವಲ ತಯಾರಿಕೆ ಮತ್ತು ಮಾರಾಟ ಮಾತ್ರ.ಹೀಗಾಗಿ ಕಡಿಮೆ ದರ ವಿಧಿಸಲು ಸಾಧ್ಯವಾಗುತ್ತದೆ.
ಉದಾಹರಣೆಗೆ ಒಂದು ಮಾತ್ರೆಯ ಉತ್ಪಾದನಾ ವೆಚ್ಚ ಒಂದು ರೂಪಾಯಿ ಇದೆ ಅನ್ನೋಣ.ಅದರ ಪ್ರಚಾರಕ್ಕೇ ಕಂಪನಿಯು ಒಂಭತ್ತು ರೂಪಾಯಿಗಳನ್ನು ವೆಚ್ಚಮಾಡುತ್ತದೆ.ಅಂದರೆ ಒಂದು ಮಾತ್ರೆಯ ಮುಖಬೆಲೆ ಲಾಭಾಂಶ ಸೇರಿಸಿ ಹತ್ತು ರೂಪಾಯಿ ಆಗುತ್ತದೆ..( ಉಲ್ಲೇಖ,ಡಾ.ಬಿ.ಎಚ್.ಮಂಜುನಾಥ್ ಅವರ ವಿಜಯವಾಣಿ ಕಳಕಳಿ ಅಂಕಣ ).ಅವರೇ ಉಲ್ಲೇಖಿಸಿರುವಂತೆ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂಥ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿದೆ.ಈಗ ಖಾಸಗಿ ಔಷಧ ತಯಾರಕರ ಔಷಧ ಮಾತ್ರೆಗಳು ದುಬಾರಿ ಎನಿಸಿದರೂ ಕೊಳ್ಳುವುದು ಅನಿವಾರ್ಯವಾಗುವಂತೆ ವ್ಯವಸ್ಥಿತ ಜಾಲ ಕೆಲಸಮಾಡುತ್ತಿದೆ.ಜನೌಷಧ ಮಳಿಗೆಗಳಲ್ಲಿ ಈಗ 500ಕ್ಕೂ ಹೆಚ್ಚು ಬಗೆಯ ಔಷಧಗಳು ಸಿಗುತ್ತವೆ.150 ಮಾದರಿಯ ವೈದ್ಯಕೀಯ ಪರಿಕರಗಳು ಲಭ್ಯವಿವೆ.
ಖಾಸಗಿ ಕಂಪನಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬಂದರೆ ನಾಗರಿಕರಿಗೆ ಮತ್ತಷ್ಟು ಕಡಿಮೆಬೆಲೆಯಲ್ಲಿ ದೊರೆಯುತ್ತವೆ. ಆದ್ದರಿಂದ ಕಡಿಮೆ ದರ ಎಂದಾಕ್ಷಣ ಔಷಧಗಳು ಪರಿಣಾಮಕಾರಿಯಲ್ಲ ಎಂಬ ಅಭಿಪ್ರಾಯ ತಾಳುವುದು ಬೇಡ.ಹೆಸರುವಾಸಿ ಕಂಪೆನಿಗಳು ತಮ್ಮ ಹಕ್ಕುಸ್ವಾಮ್ಯದಲ್ಲಿ ದುಬಾರಿ ಎನಿಸುವ ಔಷಧಗಳ ಉತ್ಪಾದನೆ ಈಗಾಗಲೇ ಮಾಡುತ್ತಿವೆ. ಜೊತೆಗೆ ಅರ್ಧಕ್ಕರ್ಧಷ್ಟು ಕಂಪನಿಗಳು ಜನರಿಕ್ ಉತ್ಪನ್ನಗಳನ್ನೂ ತಯಾರಿಸುತ್ತಿವೆ. ಜನರಿಕ್ ಔಷಧಗಳು ಪರಿಣಾಮದಲ್ಲಿ ಬಹಳ ನಿಧಾನ ಎನ್ನುವ ತಪ್ಪು ನಂಬಿಕೆಯಿದೆ.ಆದರೆ ಔಷಧನಿಯಂತ್ರಣ ಸಂಸ್ಥೆ ಅವುಗಳು ಹೆಸರಾಂತ ಉತ್ಪನ್ನಗಳಷ್ಟೇ ಶೀಘ್ರ ಪರಿಣಾಮ ಹೊಂದಿರಬೇಕೆಂದು ಆಶಿಸುತ್ತದೆ.
ಈ ಉತ್ಪನ್ನಗಳು ಯಾವುದೇ ನಿರ್ದಿಷ್ಟ ಕಂಪನಿಗಳ ಸಂಬಂಧ ಹೊಂದಿರುವುದಿಲ್ಲ. ಜನರಿಕ್ ಔಷಧಗಳು ಯಾವ ದೇಶದಲ್ಲಿ ಬಳಸಲ್ಪಡುತ್ತದೆಯೋ ಆಯಾ ದೇಶದ ನಿಯಂತ್ರಣದಲ್ಲಿರುತ್ತವೆ.
ನಮ್ಮ ದೇಶದಲ್ಲಿ ಔಷಧ ನಿಯಂತ್ರಕ ಸಂಸ್ಥೆಯಿದೆ .Drugs Standard Control Organization .ಈ ಸಂಸ್ಥೆಯು ಅಮೆರಿಕದ ಎಫ್ ಡಿ ಎ ಗೆ ಸಮವಾಗಿದೆ. ಭಾರತದಲ್ಲಿ ಔಷಧಗಳ ಮತ್ತು, ವೈದ್ಯಕೀಯ ಉಪಕರಣಗಳ ಕುರಿತು ಮಾರಾಟ ಹಾಗೂ ಅನುಮತಿ ನೀಡುತ್ತದೆ. ಈ ಸಂಸ್ಥೆಯ ಮೂಲಕವೇ
ಅಧಿಕೃತವಾಗಿ ಜನರಿಕ್ ಔಷಧಗಳು ಅನುಮತಿ ಹೊಂದಿವೆ. ಹೀಗಿರುವಾಗ ಔಷಧ ಪರಿಣಾಮ ಮತ್ತು ಜನತೆಯ ಜೀವರಕ್ಷಣೆ ಸರ್ಕಾರದ್ದೇ ಆಗಿರುತ್ತದೆ. ಈ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯನಮ್ಮಲ್ಲಿ ಆಗಬೇಕಿದೆ.ಇಂತಹ ಸನ್ನಿವೇಶದಲ್ಲಿ ನಮ್ಮ ಸ್ವಯಂ ಸೇವಾ ಸಂಘಸಂಸ್ಥೆಗಳ ಪಾತ್ರವನ್ನೂ ಬಹಳ ಪ್ರಮುಖ ಎಂದು ಹೇಳಬಹುದು. ಅಷ್ಟೇ ನಮ್ಮ ಸೇವಾಮನೋಭಾವ ಹಾಗೂ ವೃತ್ತಿಪರ ವೈದ್ಯರ ಒಳಗೊಳ್ಳುವಿಕೆಯೂ ಅಗತ್ಯವಿದೆ.
ಆಭಿಯಾನದ ಅವಶ್ಯಕತೆ.
ಮುಂದುವರೆದ ದೇಶವೆಂಬ ಹೆಗ್ಗಳಿಕೆಯ ಅಮೆರಿಕದ್ದು.ಅಲ್ಲಿ 2014 ರ ಒಂದು ಅಧ್ಯಯನದ ಪ್ರಕಾರ ವೈದ್ಯರುಗಳು ಬರೆದ ಸುಮಾರು ನಾಲ್ಕು ಬಿಲಿಯನ್ ಗೂ ಅಧಿಕ ಸಲಹಾಚೀಟಿಗಳಲ್ಲಿ ಶೇ 88 ರಷ್ಟು ಜನರಿಕ್ ಉತ್ಪನ್ನಗಳಿವೆ ಎಂದು ಅಲ್ಲಿ ಜನರಿಕ್ ಔಷಧ ಉತ್ಪನ್ನ ಸಂಸ್ಥೆ ತಿಳಿಸುತ್ತದೆ. ನಮ್ಮ ದೇಶದಲ್ಲೂ ಈಗಿನ ಜನರಿಕ್ ಔಷಧ ಬಳಸಿದ ರೋಗಿಗಳ ಪ್ರತಿಕ್ರಿಯೆ ಸಂಗ್ರಹಿಸಬೇಕು. ಸಾಕಷ್ಟು ಅನುಕೂಲಕರವಾಗಿದ್ದನ್ನೇ ಕೇಳಿದ್ದೇವೆ. ಈ ಬಗ್ಗೆ ನಮ್ಮಲ್ಲಿ ನಾವಿನ್ನೂ ಮೀನ ಮೇಷ ಎಣಿಸುತ್ತಿದ್ದೇವೇನೊ!
ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ, ರಕ್ತ ಗುಂಪುಗಳ ಕುರಿತು, ಮಕ್ಕಳಲ್ಲಿನ ಆಟಿಸಂ ಕಾಯಿಲೆ ಬಗ್ಗೆ, ಮಾನಸಿಕ ತೊಂದರೆಗಳು ಹಾಗೂ ಅನೇಕ ಸಮುದಾಯ ಕ್ಷೇಮಪರ ಸೇವೆ ಹಾಗೂ ಜಾಗೃತಿ ಆಂದೋಲನ ಮಾಡುತ್ತಿವೆ.ಸಂತೋಷ. ಈಗ ಜನರಿಕ್ ಔಷಧಗಳ ಬಗ್ಗೆಯೂ ವಿಶಿಷ್ಟವಾದ ಅಭಿಯಾನ ಆರಂಭಿಸಬೇಕೆನಿಸುತ್ತದೆ. ಜನರಿಕ್ ಔಷಧಗಳು ಮತ್ತು ಅದಕ್ಕೆ ಸಮವಾದ ಮಾರುಕಟ್ಟೆ ಹೆಸರುಗಳು, ಅವುಗಳಲ್ಲಿನ ರಾಸಾಯನಿಕ ಅಂಶ ಇತ್ಯಾದಿಗಳ ಬಗ್ಗೆ ಎಚ್ಚೆತ್ತ ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಬಹುದು. ನಮ್ಮ ವೈದ್ಯರ ಸಂಘ ಅಂದರೆ ಐಎಂಎ ಉತ್ತಮ ಸೇವಾಕಾರ್ಯಗಳನ್ನ ಮಾಡುತ್ತಿರುತ್ತದೆ.ಈಗ ಜನೌಷಧ ಕುರಿತು ವೈದ್ಯಸಮೂಹ ಮತ್ತು ಔಷಧ ಮಾಹಿತಿ ಬಗ್ಗೆ ಸೇತುಬಂಧ ಆಂದೋಲನ ಹಮ್ಮಿಕೊಂಡರೆ ಬಡ ರೋಗಿಗಳಿಗೆ ಕಿಂಚಿತ್ ನೆರವು ನೀಡಿದ ಪುಣ್ಯ ಬರುತ್ತದೆ.
ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ಬಟ್ಟೆ,ವಾಹನ,ಚಪ್ಪಲಿ, ಟೀವಿ, ,ಸೌಂದರ್ಯಸಾಧನಗಳು. ಇತ್ಯಾದಿ ವಸ್ತುಗಳನ್ನ ಶೇ ರಿಯಾಯಿತಿಯಿಟ್ಟು ಗ್ರಾಹಕರನ್ನ ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ.ಆದರೆ ಕ್ಷೇಮಲಾಭದ ಔಷಧ,ಮಾತ್ರೆಗಳ ಬಗ್ಗೆ ಅಷ್ಟು ಸಮನಾದ ತಂತ್ರಗಳಿಲ್ಲ ಎನ್ನುವುದು ದುರದೃಷ್ಟಕರ. .ಪತಂಜಲಿ ಉತ್ಪನ್ನಗಳು ಹೇಗೆ ಒಂದು ಹರಿವನ್ನೇ ಹುಟ್ಟುಹಾಕುತ್ತಿದೆಯೋ ಅದೇ ತೆರನಾಗಿ, ಸುಲಭ ದರದ ಪರಿಣಾಮಕಾರೀ (ಜನರಿಕ್ )ಜನೌಷಧ ಬಗ್ಗೆ ಜಾಗೃತಿ ಅಭಿಯಾನ ರೂಪುಗೊಳ್ಳಬೇಕಾದದ್ದು ಈಗಿನ ಜರೂರು ಅನಿಸುತ್ತದೆ.
ಕೊನೇಹನಿ: ಜನರಿಕ್ ಜನಪ್ರಿಯತೆಯನ್ನ ಸ್ವಾರ್ಥಕಾಗಿ ಕೆಲವು ಕಂಪನಿಗಳು ಕೆಳದರ್ಜೆಯ ಔಷಧಗಳನ್ನು ಈ ಮಳಿಗೆಗಳಲ್ಲಿ ಮಾರಾಟಮಾಡಿತ್ತಿದ್ದಾರೆ ಎಂದು ನನ್ನ ಮಿತ್ರರಾದ ಕೆ.ಜಿ.ಮಂಜುನಾಥ ಶರ್ಮ ಅವರು ಹೇಳಿದ್ದಾರೆ. ಹೀಗಾದರೆ ಸರ್ಕಾರ ಮತ್ತಷ್ಟು ಗುಣಮಟ್ಟ ತಪಾಸಣೆಯ ಕ್ರಮಗಳ ಮೂಲಕ ಈರೀತಿಯ ದುರ್ಬಳಕೆಯನ್ನ ತಪ್ಪಿಸಬೇಕು.
Photo by Thought Catalog on Unsplash