19.2 C
Karnataka
Friday, November 29, 2024
    Home Blog Page 112

    ದ್ವಿತೀಯ ಪಿಯು ಪರೀಕ್ಷೆ ಮುಂದಕ್ಕೆ; ಪ್ರಥಮ ಪಿಯು ಪರೀಕ್ಷೆ ಇಲ್ಲದೆ ಪಾಸ್; ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಮ್

    ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

    ಮಂಗಳವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮುನ್ನವೇ ಪ್ರಕಟಿಸಲಾಗುವುದು ಎಂದರು.

    ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಬೇಕೆಂದು ಅವರು ಮನವಿ ಮಾಡಿದ್ದಾರೆ.

    ಮೊದಲನೆ ಪಿಯು ವಿದ್ಯಾರ್ಥಿಗಳಿಗೆ ಪ್ರಮೋಷನ್:
    ದ್ವಿತೀಯ ಪಿಯು ಪರೀಕ್ಷೆಗಳ ನಂತರ ನಡೆಸಬೇಕೆಂದು ನಿರ್ಧರಿಸಲಾಗಿದ್ದ ಪ್ರಥಮ ಪಿಯು ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು, ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ನಿರ್ಧಾರವನ್ನೂ ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಮುನ್ನ ಬ್ರಿಡ್ಜ್ ಕೋರ್ಸ್ಗಳನ್ನು ನಡೆಸಲಾಗುತ್ತದೆ. ಹಾಗೆಯೇ ಇಲಾಖೆಯ ಯೂ-ಟ್ಯೂಬ್ ಚಾನಲ್ಗಳ ಮೂಲಕ ಈಗಿನಿಂದಲೇ ಈ ಬ್ರಿಡ್ಜ್ ಕೋರ್ಸ್ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದರು.

    ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ:
    ಪರೀಕ್ಷೆಗಳನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಉಪನ್ಯಾಸಕರು ವರ್ಕ್ ಫ್ರಂ ಹೋಂ ಕೆಲಸ ಮಾಡಲು ಸೂಚಿಸಲಾಗಿದೆ.

    ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ಇಲಾಖೆಯ ಪಠ್ಯ ಬೋಧನಾ ಕ್ರಮಗಳನ್ನು ಅವರೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲ ಆಡಳಿತಾತ್ಮಕ ಕ್ರಮಗಳಲಿಗೆ ಅವರು ಸದಾ ಲಭ್ಯವಾಗಬೇಕಿದೆ. ಹಾಗೆಯೇ ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರು ತಮ್ಮ ಕೋವಿಡ್ ಜವಾಬ್ದಾರಿಗಳನ್ನು ಪೂರೈಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ರಾಜ್ಯಾದ್ಯಂತ 1047 ಕೇಂದ್ರಗಳಲ್ಲಿನ 5562 ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

    ಸಭೆ ಪರಿಗಣಿಸಿದ ಅಂಶಗಳು

    ಪ್ರಾಯೋಗಿಕ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದೆ.

    ರಾಜ್ಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹರಡುತ್ತಿರುವುದು

    ಪರೀಕ್ಷೆಗೆ ಸಹಕಾರ ನೀಡಬೇಕಿದ್ದ ಇಲಾಖೆಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಹಾಗೆಯೇ ಪರೀಕ್ಷೆ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನಲ್ಲಿ ವಾಸ್ತವ್ಯ ಮಾಡಿರುವುದು

    ವಿದ್ಯಾರ್ಥಿಗಳ ಮತ್ತು ಪೋಷಕರ ಮಾನಸಿಕ ಒತ್ತಡಗಳು ಸೇರಿದಂತೆ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.

    ಸಿಬಿಎಸ್ಇ ಸೇರಿದಂತೆ ಕೇಂದ್ರ ಮಂಡಳಿ ಪರೀಕ್ಷೆಗಳು ಹಾಗೆಯೇ ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ,ತಮಿಳುನಾಡು, ಹಿಮಾಚಲ ಪ್ರದೇಶ, ಛತ್ತೀಸ್ಘಡ್, ರಾಜಸ್ಥಾನ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪರೀಕ್ಷೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಪಿಯು ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಮತ್ತಿತರರು ಭಾಗವಹಿಸಿದ್ದರು.

    ಪಾಸಿಟೀವ್ ಎಂದ ಕೂಡಲೇ ನೆಗೆಟೀವ್ ಯೋಚನೆ ಬೇಡ

    ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ದಿನೇ ದಿನೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ಗೆ ಲಸಿಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದರೂ ಕೂಡಾ ಇಂದಿನ ಪರಿಸ್ಥಿತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಬಹುತೇಕರಲ್ಲಿ ಆತಂಕ ಉಂಟು ಮಾಡಿದೆ ನಿಜ. ಆದರೆ ನಮ್ಮ ಜಾಗ್ರತೆಯಲ್ಲಿ, ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಅಲ್ಲಲ್ಲಿ ಜನಜಾಗೃತಿ, ಮಾಹಿತಿ ಎಲ್ಲೆಡೆ ಲಭ್ಯವಿರುವುದರಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕಷ್ಟವೇನಲ್ಲ.

    ಆದರೆ ಕೊರೊನಾದಿಂದಷ್ಟೇ ಅಲ್ಲ, ‘ಕೊರೊನಾ ಪಾಸಿಟಿವ್’ ಬಂದಿದೆ ಎಂಬ ಭಯ ಮತ್ತು ಒತ್ತಡ ಕೂಡಾ ಬದುಕನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ.ಕೊರೊನಾದಿಂದ ಮರಣ ಹೊಂದಿದವರ ಸಂಖ್ಯೆಯಲ್ಲಿಕೊರೊನಾ ರಿಪೋರ್ಟ್ ಪಾಸಿಟಿವ್ ಅಂದಾಕ್ಷಣ ಹೆದರಿಕೆಯಿಂದ ಹಾರ್ಟ್ ಅಟ್ಯಾಕ್, ರಕ್ತದೊತ್ತಡಕ್ಕೆ ಒಳಗಾಗಿ ಪ್ರಾಣ ಕಳೆದಕೊಂಡವರೂ ಇದ್ದಾರೆ.

    ಒಂದುವೇಳೆ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡಿವೆ, ಟೆಸ್ಟ್ ರಿಪೋರ್ಟ್ನಲ್ಲಿ ಪಾಸಿಟಿವ್ ಬಂದಿದೆ ಅಂತಾದರೆ ತಕ್ಷಣವೇ ನೆಗೇಟೀವ್ ಆಗಿ ಯೋಚನೆ ಮಾಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಒಮ್ಮಿಂದೊಮ್ಮೆಲೇ ಭಯಕ್ಕೊಳಗಾಗುತ್ತೇವೆ, ಒತ್ತಡ ಶುರುವಾಗಿಬಿಡುತ್ತದೆ. ಇದ್ದಕ್ಕಿದ್ದ ಹಾಗೇ ಬಿಪಿ ಏರಿ ಬಿಡುತ್ತದೆ. ಅದು ಸಹಜವೇ. ಆದರೆ ಕೊರೊನಾದಿಂದ ಮುಕ್ತರಾಗುತ್ತೇವೆ ಎನ್ನುವ ಸಕಾರಾತ್ಮಕ ಮನೋಭಾವ ನಮ್ಮನ್ನು ಇತರೆ ಆರೋಗ್ಯ ಸಮಸ್ಯೆಗಳಿಂದ ಪಾರುಮಾಡಿಬಿಡುತ್ತದೆ.
    ಮೊದಲಾಗಿ ಸ್ವತಃ ಸಾರ್ವಜನಿಕರಿಂದ ಸಾಮಾಜಿಕ ಅಂತರವನ್ನು ಕಾದಿಟ್ಟುಕೊಳ್ಳಬೇಕು, ಮನೆಯಲ್ಲಾದರೂ ಸರಿ ಇತರರಿಂದ ದೂರ ಇದ್ದು ರೋಗದ ಹರಡುವಿಕೆಗೆ ಕಾರಣರಾಗಬಾರದು. ಕೊರೊನಾ ಬಂದಿದ್ದರೆ ರೋಗ ಉಲ್ಬಣಿಸುವವರೆಗೆ ಕಾಯದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು.

    ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಮನಸ್ಸಿಗೆ ತಂದುಕೊಳ್ಳಬಾರದು. ಯಾಕೆಂದರೆ ಸಾವು ನೋವು ಆಗುತ್ತಿರುವುದು ಒಂದೆಡೆಯಾದರೆ, ಕೊರೋನಾ ಮುಕ್ತರಾಗಿ ಮತ್ತೆ ಮನೆ ಸೇರಿ ನಿಟ್ಟುಸಿರು ಬಿಟ್ಟವರು ಸಾಯುವವರ ಸಂಖ್ಯೆಗಿಂತ ಸಾವಿರಪಟ್ಟು ಹೆಚ್ಚು ಎಂಬುದನ್ನು ಮರೆಯಬಾರದು.

    ಮಾನಸಿಕ ಒತ್ತಡದಿಂದ ಉಂಟಾಗುವ ಅನಾರೋಗ್ಯ

    • ಒತ್ತಡಕ್ಕೊಳಗಾಗುವುದರಿಂದ ಭಯ,ಸಿಟ್ಟು, ಬೇಸರ, ದುಃಖ, ಖಿನ್ನತೆ ಉಂಟಾಗಬಹುದು.
    • ಬದುಕಿನ ಬಗ್ಗೆ ನಿರಾಸೆ ಉಂಟಾಗಬಹುದು, ಹಸಿವು, ನಿದ್ದೆ, ಆಸಕ್ತಿಗಳು ಕುಂಠಿತಗೊಳ್ಳಬಹುದು.
    • ನಿದ್ರಾಹೀನತೆಯ ಜತೆಗೆ ದುಸ್ವಪ್ನಗಳು ಕಾಡಬಹುದು.
    • ಏಕಾಗ್ರತೆ ಕಡಿಮೆಯಾಗುವುದು, ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಬಹುದು.
    • ದೈಹಿಕ ಆರೋಗ್ಯ ಹದಗೆಡಬಹುದು, ತಲೆನೋವು, ಹೊಟ್ಟೆ, ಇವೇ ಮೊದಲಾದ ಸಮಸ್ಯೆಗಳು ಉಂಟಾಗಬಹುದು.
    • ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಮತ್ತಷ್ಟು ಹದಗೆಡಿಸಬಹುದು.
    • ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದು.
    • ಕುಡಿತ, ತಂಬಾಕು ಸೇವನೆ ಅಥವಾ ಇತರೆ ದುಶ್ಚಟಗಳಿದ್ದರೆ ಅದನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇರುತ್ತದೆ.

    ಕೊರೋನಾದ ಸುದ್ದಿಯಿಂದಲೇ ಉಂಟಾಗುವ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು.

    • ಪತ್ರಿಕೆ, ಟಿವಿ, ಸೋಷಿಯಲ್ ಮೀಡಿಯಾದಂತ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಕೂಡಾ ಹರಿದಾಡುತ್ತಿರುವುದು ಕೊರೋನಾದ ಸಾವು ನೋವುಗಳೇ. ಹಾಗಾಗಿ ಅದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದು. ಅದರ ಬದಲು ಆಧ್ಯಾತ್ಮಿಕವಾಗಿ, ವ್ಯಕ್ತಿತ್ವ ವಿಕಸನದಂತಹ ಲೇಖನಗಳನ್ನು ಓದುವುದು, ಪುಸ್ತಕ ಓದುವುದು, ಕಲೆಯ ಬಗ್ಗೆ ಆಸಕ್ತಿ ಇದ್ದರೆ ತಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಕಾರಾತ್ಮಕ ಮನಸ್ಥಿತಿಯನ್ನು ದೂರ ಮಾಡಿಕೊಳ್ಳಬಹುದು.
    • ಉಸಿರಾಟಕ್ಕೆ ಸಂಬಂಧಿಸಿದಂತೆ ಪ್ರಾಣಾಯಾಮ, ಯೋಗ, ಧ್ಯಾನದಂತಹ ಆರೋಗ್ಯಕರ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
    • ಪ್ರತಿನಿತ್ಯ ದೈಹಿಕ ವ್ಯಾಯಾಮ ಕೈಗೊಳ್ಳುವುದು ಕೂಡಾ ಆರೋಗ್ಯಕರ ಮನಸ್ಥಿತಿಯನ್ನು ಹೊಂದಬಹುದು.
    • ಸಾಕಷ್ಟು ನಿದ್ದೆ ಮಾಡುವುದು.
    • ಮಾದಕ ವಸ್ತುಗಳ ಸೇವನೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು. ದಿನನಿತ್ಯದ ಆರೋಗ್ಯಕರ ಕ್ರಮಗಳನ್ನು ತಪ್ಪದೇ ಪಾಲಿಸುವುದು, ಉದಾಹರಣೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೊರಗೆ ಹೋದಾಗ ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಸುವುದು, ಹೊರಗೆ ಹೋಗಿ ಬಂದಾ ಕೂಡಲೇ ಸ್ನಾನ ಮಾಡಿಯೇ ಮನೆ ಒಳಪ್ರವೇಶಿಸುವುದು ಇವೇ ಮೊದಲಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
    • ಆಹಾರ ಸೇವನೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರವನ್ನು ಸೇವಿಸುವುದು.
    • ಔಷಧಗಳನ್ನು ಸೇವನೆ ಮಾಡಿ ನಮ್ಮ ಮೇಲೆಯೇ ಪ್ರಯೋಗ ಮಾಡುವುದಕ್ಕಿಂತ ತಜ್ಞ ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳುವುದು ಕೂಡಾ ಬಹಳ ಅಗತ್ಯ.

    Photo by Nathan Dumlao on Unsplash

    ಮರುಭೂಮಿಗಳ ಮಾಯಾಲೋಕ

    ಮರುಭೂಮಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರಣವೆಂದರೆ ಮರಳು ರಾಶಿಗಳಿಂದ ಕೂಡಿದ ಅತಿ ಉಷ್ಣತೆಯ ವಾತಾವರಣವಿರುವ, ಅತಿ ಕಡಿಮೆ ಮಳೆಯಾಗುವ, ಸಸ್ಯಗಳು ಮತ್ತು ಪ್ರಾಣಿಗಳು ಅತಿ ವಿರಳ ಅಥವಾ ಇಲ್ಲವೇ ಇಲ್ಲದ ನಿರ್ಜನ ಪ್ರದೇಶ. ಈ ಚಿತ್ರಣ ಸ್ವಲ್ಪ ಮಟ್ಟಿಗೆ ಸರಿ ಅನಿಸಿದರೂ ಸಹ, ಮರುಭೂಮಿಗಳ ವೈವಿಧ್ಯತೆ ಅಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಸಸ್ಯಗಳು ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ರೀತಿ ಇವುಗಳನ್ನು ಗಮನಿಸಿದರೆ ನಮಗೆ ನಿಜವಾಗಿಯೂ ಅಚ್ಚರಿಯುಂಟಾಗಿ, ಮರುಭೂಮಿಗಳು ಮಾಯಾಲೋಕವೇ ಸರಿ ಎಂಬ ಭಾವನೆ ಬರುವುದು ಖಚಿತ.

    ಭೂಗೋಳ ಶಾಸ್ತ್ರದ ಪ್ರಕಾರ ಯಾವ ಪ್ರದೇಶದಲ್ಲಿ ವಾರ್ಷಿಕ ಮಳೆ ಸರಾಸರಿ 250 ಮಿಲಿ ಮೀಟರ್ ಗಿಂತ ಕಡಿಮೆ ಇದೆಯೋ, ಅಂತಹ ಪ್ರದೇಶಗಳನ್ನು ಮರುಭೂಮಿ ಎಂದು ಕರೆಯಲ್ಪಡುತ್ತದೆ.ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ಜೀವನಕ್ಕೆ ಬೇಕಾದಷ್ಟು ಜಲಾಧಾರವನ್ನು ಒದಗಿಸಲಾಗದಷ್ಟು ಒಣ ವಾತಾವರಣವನ್ನು ಮರುಭೂಮಿಗಳಲ್ಲಿ ನಾವು ಕಾಣುತ್ತೇವೆ.ಮರುಭೂಮಿಗಳಲ್ಲಿ ಹೆಚ್ಚು ಉಷ್ಣತೆ ಮತ್ತು ಶೀತ ವಾತಾವರಣಗಳಿರುವ ಎರಡು ಬಗೆಯ ಮರುಭೂಮಿಗಳನ್ನು ನಾವು ಕಾಣ ಬಹುದು.

    ಭೂಮಿಯ ಒಂದನೇ ಮೂರು ಭಾಗದಷ್ಟು (1/3)ಪ್ರದೇಶ ಮರುಭೂಮಿಗಳಿಂದ ಆವರಿಸಿದೆ. ವಿಶೇಷತೆಯೆಂದರೆ ಮರುಭೂಮಿಗಳನ್ನು ಪ್ರಪಂಚದ ಎಲ್ಲಾ ಆರು ಖಂಡಗಳಲ್ಲಿಯೂ ನಾವು ಕಾಣುತ್ತೇವೆ.ಪ್ರಪಂಚದ ಅತಿದೊಡ್ಡ ಮರುಭೂಮಿ ಅಂಟಾರ್ ಕ್ಟಿಕ್.

    ಮರುಭೂಮಿಗಳನ್ನು ಸಾಮಾನ್ಯವಾಗಿ ಮೂರು ಬಗೆಯ ಮರುಭೂಮಿಗಳಾಗಿ ವರ್ಗಾಯಿಸಲಾಗಿದೆ.

    1) ಉಷ್ಣ ವಲಯದ( tropical) ಮರುಭೂಮಿಗಳು ( ಅತಿ ಉಷ್ಣತೆ ಮತ್ತು ಕಡಿಮೆ ವಾರ್ಷಿಕ ಮಳೆ 250 m m ರಿಂದ 200 m m )

    2) ಸಮಶೀತೋಷ್ಣ ವಲಯದ( temperate)  ಮರುಭೂಮಿಗಳು ( ಸಾಧಾರಣ ಉಷ್ಣತೆ ಮತ್ತು ವಾರ್ಷಿಕ ಮಳೆ 200 m m ರಿಂದ 500 m m )

    3) ಉನ್ನತ ಪ್ರದೇಶದ ಶೀತ ಅಥವಾ ಧೃವ ಮರುಭೂಮಿಗಳು.

    ಉಷ್ಣ ವಲಯದ ಮರುಭೂಮಿಗಳು : ಆಫ್ರಿಕಾದ ಸಹರಾ ಮರುಭೂಮಿ, ಅರೇಭಿಯಾ ಮರುಭೂಮಿ,ಭಾರತದ ಥಾರ್ ಮರುಭೂಮಿ. ಉಷ್ಣ ವಲಯದ ಮರುಭೂಮಿಗಳಲ್ಲಿ ತಾಪಮಾನವು 58ಡಿಗ್ರಿ ಸೆಂಟಿಗ್ರೇಡ್ ತಲುಪುತ್ತದೆ. ಸಮಶೀತೋಷ್ಣದ ಮರುಭೂಮಿಗಳು, ಚೀನಾದ ಗೋಬಿ ಮರುಭೂಮಿ,ಅಮೇರಿಕಾದಕೊಲೊರಾಡೊ ಮರುಭೂಮಿ, ಚಿಲಿ ದೇಶದ ಅಟಕಾಮಾ,ಅರ್ಜೆಂಟೈನಾದ ಪೆಟೆಗೋನಿಯಾ ಮುಂತಾದವು.

    ಸಹರಾ ಮರುಭೂಮಿ | Photo by Greg Gulik from Pexels
    ಥಾರ್ ಮರಭೂಮಿ |Photo by Aimanness Harun on Unsplash

    ಉನ್ನತ ಪ್ರದೇಶದ / ಶೀತ ವಲಯದ ಮರುಭೂಮಿಗಳು : ಆರ್ಕ್ಟಿಕ್  ಹಾಗೂ ಅಂಟಾರ್ಟಿಕಾ ಪ್ರದೇಶಗಳು.ಈ ಮರುಭೂಮಿಗಳು ಹೆಚ್ಚಿನ ಅಕ್ಷಾಂಶದ ಪ್ರದೇಶಗಳಲ್ಲಿ ಕಾಣಿಸುತ್ತವೆ.ಇಲ್ಲಿ ಹೆಚ್ಚಿನ ತಾಪಮಾನವಿಲ್ಲದಿದ್ದರೂ, ಸಸ್ಯ ವರ್ಗ ಇಲ್ಲದೇ ಇರುವುದು ಹಾಗೂ ಕಡಿಮೆ ನೀರಿನ ಆವಿಯಿರುವುದರಿಂದ ಮರುಭೂಮಿ ಎಂದು ಪರಿಗಣಿಸಲಾಗಿದೆ.ಅಂಟಾರ್ಟಿಕಾದ ಒಳಭಾಗ ಮತ್ತು ಆರ್ಕ್ಟಿಕ್ ನ ಹೆಚ್ಚಿನ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಮಳೆ 125 ರಿಂದ 200 ಮಿ ಮೀ.

    ಇದೇ ಆಧಾರದ ಮೇರೆಗೆ ಭೂಮಿಯ ನೆರೆ ಗ್ರಹವಾಗಿರುವ ಮಂಗಳ ಗ್ರಹ ಮತ್ತು ಉಪ ಗ್ರಹ ಚಂದ್ರ ಇವುಗಳ ಮೇಲ್ಮೈ ಹಾಗೂ ವಾತಾವರಣ ಮರುಭೂಮಿಯ ಲಕ್ಷಣಗಳನ್ನು ಹೊಂದಿದೆಯೆಂದು ತೀರ್ಮಾನಿಸಲಾಗಿದೆ.

    ಎಡಫಿಕ್( edaphic) ಮರುಭೂಮಿಗಳು: ಇನ್ನು ಕೆಲವು ಪ್ರದೇಶಗಳಲ್ಲಿ ವಾರ್ಷಿಕ ಮಳೆ 250 ಮಿ.ಮೀ ಗಿಂತಲೂ ಹೆಚ್ಚಾಗಿದ್ದರೂ ಸಹ ಶುಷ್ಕ ವಾತಾವರಣ ಹೊಂದಿದ್ದು ಬಂಜರು ಪ್ರದೇಶಗಳಾಗಿವೆ. ಇವುಗಳನ್ನು ಎಡಫಿಕ್( edaphic) ಮರುಭೂಮಿಗಳು ಎಂದು ಕರೆಯುತ್ತಾರೆ. ಮೇಲ್ಮೈ ಜ್ವಾಲಾಮುಖಿ ಸ್ಪೋಟಗಳ ಅವಶೇಷಗಳಿಂದ ಕೂಡಿದ್ದು, ಸರಂಧ್ರಗಳಿರುವ ಕಾರಣ ನೀರು ಬೇಗನೆ ಇಂಗುತ್ತದೆ. ಆದ್ದರಿಂದ ಸಸ್ಯಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವಿರುತ್ತದೆ. ಉದಾಹರಣೆ ಅಮೇರಿಕಾದ ಕೊಲೊರಾಡೊ ಪ್ರಸ್ಥಭೂಮಿ.

    ಹವಾಮಾನ ಪ್ರಕ್ರಿಯೆಯಿಂದ ಮರುಭೂಮಿಗಳು ರೂಪುಗೊಳ್ಳುತ್ತವೆ.ಮರುಭೂಮಿಗಳಲ್ಲಿ ಬೆಳಗಿನ ಮತ್ತು ರಾತ್ರಿಯ ಉಷ್ಣತೆಯಲ್ಲಿ ಅಪಾರ ವ್ಯತ್ಯಾಸವಿರುತ್ತದೆ.ಬೆಳಗಿನ ಸಮಯದಲ್ಲಿ ಅತಿ ಶಾಖದ ವಾತಾವರಣವಿದ್ದರೆ, ರಾತ್ರಿ ವೇಳೆಯಲ್ಲಿ ಅತಿ ಶೀತಲ ವಾತಾವರಣವುಂಟಾಗುತ್ತದೆ. ಈ ಉಷ್ಣತೆಯ ಏರಿಳಿತಗಳಿಂದ ಕಲ್ಲು ಬಂಡೆಗಳಲ್ಲಿ ತುಯ್ತುಗಳುಂಟಾಗಿ( Stress), ಒಡೆದು ಪುಡಿ ಪುಡಿಯಾಗುತ್ತವೆ. ಹಲವಾರು ವರ್ಷಗಳಿಗೊಮ್ಮೆ ( ಕೆಲವು ಸಾರಿ, ನೂರಾರು ವರ್ಷಗಳ ನಂತರ) ಅತಿ ಮಳೆ ಸುರಿದು ಪ್ರವಾಹಗಳು ಸಹ ಉಂಟಾಗುತ್ತವೆ. ಅತಿಯಾಗಿ ಕಾದಿರುವ ಕಲ್ಲು ಬಂಡೆಗಳ ಮೇಲೆ ಮಳೆ ಬಿದ್ದಾಗಲೂ ಸಹ ಕಲ್ಲು ಬಂಡೆಗಳು ಒಡೆದು ಪುಡಿಪುಡಿಯಾಗ ಬಹುದು.ಬಿರುಗಾಳಿ ಬೀಸಿದಾಗ, ಚೆಲ್ಲಾ ಪಿಲ್ಲಿಯಾಗಿ ವಿಶಾಲ ಪ್ರದೇಶಗಳಲ್ಲಿ ಹರಡುತ್ತವೆ. ಬಿರುಗಾಳಿ ಜೊತೆಯಲ್ಲಿ ಬಂದ ಕಲ್ಲಿನ ಪುಡಿ( Saltation) ಮರಳು, ಬಂಡೆಗಳಿಗೆ ಅಪ್ಪಳಿಸಿದಾಗ ಬಂಡೆಯ ಮೇಲ್ಮೈಯಿಂದಲೂ ಕಲ್ಲಿನ ಪುಡಿಗಳು ಉತ್ಪತ್ತಿಯಾಗುತ್ತವೆ.

    ಇದೇ ಪ್ರದೇಶಗಳಲ್ಲಿ ಮರಳು ಹರಡುವ ಜೊತೆಗೆ ಮರಳಿನ ದಿಬ್ಬಗಳು ಸಹ ತಯಾರಾಗುತ್ತವೆ.ಸಾಮಾನ್ಯವಾಗಿ ಮರುಭೂಮಿಗಳಲ್ಲಿ ಘನೀಕರಿಸಿದ ಮಣ್ಣಿನ ಅಥವಾ ಜ್ವಾಲಾಮುಖಿಗಳಿಂದ ಹೊರ ಬಂದ ನಿಕ್ಷೇಪಗಳಿಂದ ಉಂಟಾದರೆ, ಗ್ರಾನೈಟ್, ಸುಣ್ಣದ ಕಲ್ಲು ಮತ್ತು ಮರಳುಗಲ್ಲುಗಳಿಂದ ಮರಳು ತಯಾರಾಗುತ್ತದೆ.ಸುಮಾರು 500 ಅಡಿಗಳಷ್ಟು ಎತ್ತರ ಬೆಳೆಯಬಹುದು. ಮರುಭೂಮಿಯ ಇತರೆ ಲಕ್ಷಣಗಳೆಂದರೆ, ಹೊರ ಚಾಚಿದ ಬಂಡೆಗಳು( rock out crops ), ಒಡ್ಡಿದ ಬೆಡ್ ರಾಕ್ ಗಳು, ಯಾವುದೋ ಕಾಲದಲ್ಲಿ ಹರಿದ ನೀರಿನಿಂದ ತಯಾರುಗೊಂಡ ಜೇಡಿ ಮಣ್ಣಿನ ತರಹದ ರಾಶಿ, ತಾತ್ಕಾಲಿಕವಾಗಿ ಉಂಟಾದ ಸರೋವರಗಳು, ಉಪ್ಪಿನ ಹರಿವಾಣೆಗಳು ( salt pans ) ಅಂತರ್ಜಲದಿಂದ ಉಂಟಾದ ನೀರಿನ ಬುಗ್ಗೆಗಳು ( Springs ), ಬಿಸಿ ನೀರಿನ ಬುಗ್ಗೆಗಳು, ಜಲಧರಗಳು ( aquifers ).ನೀರಿನ ಮೂಲಗಳು ಇರುವ ಕಡೆ ಒಯಸಿಸ್ ಗಳು ನಿರ್ಮಾಣವಾಗಬಹುದು.

    ಈಜಿಪ್ಟ್ ನಲ್ಲಿರುವಒಯಾಸಿಸ್ 150 ಕಿ.ಮೀ ಉದ್ದವಿದ್ದು ಲಿಬಿಯನ್ ಮರುಭೂಮಿಯಅತಿದೊಡ್ಡ ಒಯಸಿಸ್ ಇದಾಗಿದೆ.ಧ್ರುವ ಪ್ರದೇಶಗಳಲ್ಲಿ ಕಾಣುವ ಶೀತ ಮರುಭೂಮಿಗಳಲ್ಲಿ ಗಾಳಿಯು ಬಹಳ ಶೀತದಿಂದ ಕೂಡಿದ್ದು, ಅತಿ ಕಡಿಮೆ ತೇವಾಂಶವಿದ್ದು, ಗಾಳಿಯ ಜೊತೆಯಲ್ಲಿ ಹಿಮ ಸಾಗಿಸಲ್ಪಡುತ್ತದೆ. ಇದರಿಂದ ಹಿಮದ ಬಿರುಗಾಳಿ( Blizzards), ಹಿಮದರಾಶಿಗಳು ಉಂಟಾಗುತ್ತವೆ.

    ಮರಳಿನಿಂದ ಮತ್ತು ಧೂಳಿನಿಂದ ಕೂಡಿದ ಬಿರುಗಾಳಿ ಬೀಸುವುದು ಮರುಭೂಮಿಗಳಲ್ಲಿ ಸರ್ವೇ ಸಾಮಾನ್ಯ. ಇವುಗಳನ್ನು ಸ್ಯಾಂಡ್ ಸ್ಟಾರ್ಮ್ಸ ಮತ್ತು ಡಸ್ಟ್ ಸ್ಟಾರ್ಮ್ಸ ಎಂದು ಕರೆಯುತ್ತಾರೆ.ಹಲವು ಬಾರಿ, ಬಿರುಗಾಳಿ, ಧೂಳನ್ನು ಆರು ಕಿಲೋ ಮೀಟರ್ ಎತ್ತರಕ್ಕೆ ಒಯ್ಯಬಹುದು.ಹಲವಾರು ದಿನಗಳು ಗಾಳಿಯಲ್ಲಿ ತೇಲುತ್ತಾ, ಸೂರ್ಯನ ಬೆಳಕಿಗೆ ಅಡ್ಡಕಟ್ಟಿ ಕತ್ತಲೆಯ ವಾತಾವರಣ ಉಂಟಾಗಬಹುದು.

    2001 ರಲ್ಲಿ ಚೈನಾದ ಮರುಭೂಮಿಯಲ್ಲಿ ಬೀಸಿದ ಬಿರುಗಾಳಿಯು 6.5 ದಶಲಕ್ಷ ( ಮಿಲಿಯನ್ ) ಟನ್ ನಷ್ಟು ಧೂಳನ್ನು 134 ದಶಲಕ್ಷ ಚದರ ಕಿಲೋ ಮೀಟರ್ ಪ್ರದೇಶವನ್ನು ಆವರಿಸಿತ್ತು ಎಂದು ಅಧ್ಯಯನದ ಮೂಲಕ ಅಂದಾಜು ಮಾಡಲಾಗಿದೆ.ಪ್ರಪಂಚದಲ್ಲಿ ಮರುಭೂಮಿಗಳ ಶೇಖಡಾ 20 ರಷ್ಟು ಮಾತ್ರ ಮರಳಿನಿಂದ ಕೂಡಿದೆ ಅಂದರೆ ನಮಗೆ ಅಚ್ಚರಿಯಾಗುತ್ತದೆ.

    ಪ್ರಪಂಚದಲ್ಲಿ ಅತಿ ಒಣ ಪ್ರದೇಶವಿರುವ ಅಟಕಾಮ ಮರುಭೂಮಿಯಲ್ಲಿ ಸರಾಸರಿ ವಾರ್ಷಿಕ ಮಳೆ ಕೇವಲ 1 ಮಿಲಿ ಮೀಟರ್ ರಷ್ಟು ಇದ್ದು, ಕಳೆದ ನಾಲ್ಕು ನೂರು ಐವತ್ತು ವರ್ಷಗಳಿಂದ (450) ಗಮನಾರ್ಹವಾಗಿ ಮಳೆಯಾಗದೆ ಇರುವುದಕ್ಕೆ ಪುರಾವೆಗಳಿವೆ. ಹೋಲಿಕೆಗೆ ನಮ್ಮ ಬೆಂಗಳೂರು ನಗರದಲ್ಲಿ ವಾರ್ಷಿಕ ಸರಾಸರಿ ಮಳೆ ಒಂಬೈನೂರ ಎಪ್ಪತ್ತು ಮಿಲಿ ಮೀಟರ್ (970 m m).

    ಮರುಭೂಮಿಗಳಲ್ಲಿ ಸಸ್ಯಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವಿದ್ದು ಕಡಿಮೆ ಮಳೆ, ಅತೀ ಉಷ್ಣತೆ ಮತ್ತು ಬಿರುಗಾಳಿಗಳಿಂದ ಬೆಳವಣಿಗೆ ಕುಂಟಿತಗೊಳ್ಳುತ್ತದೆ.ನೀರು ಮತ್ತು ತೇವಾಂಶಗಳನ್ನು ಕಾಪಾಡಿಕೊಳ್ಳುವುದೇ ಮರುಭೂಮಿಗಳಸಸ್ಯಗಳಿಗಿರುವಸವಾಲು.

    ನಮಗೆಲ್ಲರಿಗೂ ತಿಳಿದಿರುವಂತೆ , ಸಸ್ಯಗಳ ಬೆಳವಣಿಗೆಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ( photosynthesis ) ಬಹಳ ಮುಖ್ಯ. ಈ ಕ್ರಿಯೆ ಬೆಳಗಿನ ಸಮಯದಲ್ಲಿ, ಸೂರ್ಯನ ಕಿರಣಗಳ ಸಹಾಯದಿಂದ ನಡೆಯ ಬೇಕು. ಆದರೆ ಬೆಳಗಿನ ಸಮಯದಲ್ಲಿ, ಮರುಭೂಮಿಗಳ ತಾಪಮಾನ ಅತಿ ಹೆಚ್ಚು ಇರುತ್ತದೆ. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅವಶ್ಯಕವಿರುವ ಇಂಗಾಲದ ಡೈ ಆಕ್ಸೈಡ್ ನ್ನು ಪಡೆಯಲು ಸ್ಟೋಮಾಟವನ್ನು (ಪತ್ರರಂಧ್ರ) ತೆರೆದರೆ, ಬಾಷ್ವೀಕರಣ( evapo transpiration ) ಉಂಟಾಗಿ ನೀರು ಆವಿಯಾಗುತ್ತದೆ. ಮರುಭೂಮಿಗಳ ಸಸ್ಯಗಳಲ್ಲಿ ನೀರಿನ ಸಂರಕ್ಷಣೆ ಬಹಳ ಮುಖ್ಯ. ಆದ್ದರಿಂದ ಸಸ್ಯಗಳೆಲ್ಲ ಕ್ಯಾಮ್ ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಬಳಸಿ,ಬೆಳಗಿನ ಸಮಯದಲ್ಲಿ ಪತ್ರ ರಂಧ್ರ ಮುಚ್ಚಿದ್ದು, ರಾತ್ರಿ ವೇಳೆಯಲ್ಲಿ ತೆರೆದು, ಇಂಗಾಲದ ಡೈ ಆಕ್ಸೈಡ ನ್ನು ಹೀರಿಕೊಂಡು ಶೇಖರಿಸುತ್ತವೆ. ಉದಾಹರಣೆ ಕಾಕ್ಟಿ, ಭ್ರೊಮೀಲಿಯಡ್ಸ್.

    ಮರುಭೂಮಿಗಳ ಸಸ್ಯ ವರ್ಗ

    ಥಾರ್ ಮರುಭೂಮಿ |Photo by Andrew Slifkin on Unsplash

    ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳ ಎಲೆಗಳು ಬಹಳ ಚಿಕ್ಕದಾಗಿರುತ್ತವೆ ಅಥವಾ ಎಲೆಗಳು ಇರುವುದಿಲ್ಲ, ಕಳ್ಳಿ ಜಾತಿಯ ಗಿಡಗಳು ಮರುಭೂಮಿಗಳ ವಿಶೇಷತೆ ಎಂದೇ ಹೇಳಬಹುದು.ಕ್ಲೋರ್ ಫಿಲ್ ನ್ನು ಸಸ್ಯಗಳ ಎಲೆಗಳಲ್ಲಿ ಕಾಣಬಹುದು.ಆದರೆ ಮರುಭೂಮಿಗಳ ಸಸ್ಯಗಳಲ್ಲಿ ಕ್ಲೋರ್ ಫಿಲ್ ಕಾಂಡಗಳಲ್ಲಿರುತ್ತದೆ.ನೀರನ್ನು ಶೇಖರಿಸಲು ಸಾಧ್ಯವಾಗುವಂತೆ ಕಾಂಡಗಳು ಮಾರ್ಪಾಡಾಗಿರುತ್ತವೆ.ಮಳೆ ಬಂದಾಗ ಅತಿ ಶೀಘ್ರವಾಗಿ ಬೇರುಗಳು ನೀರನ್ನು ಹೀರಿಕೊಂಡು ಕಾಂಡಗಳಲ್ಲಿ ಶೇಖರಿಸುತ್ತವೆ. ಸೋಮೋರಾನ್ ಮರುಭೂಮಿಯ ದೈತ್ಯಾಕಾರದ ಸಗೋರಾ ಎಂಬ ಕಳ್ಳಿಗಿಡ 150 ಅಡಿಗಳ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಕಾಂಡದಲ್ಲಿ ಎಂಟು ಟನ್ ನಷ್ಟು ( ಸುಮಾರು 600 ಬಕೆಟ್ ನೀರು) ನೀರನ್ನು ಶೇಖರಿಸ ಬಲ್ಲದು. 200 ವರ್ಷಗಳ ಜೀವವಿರುವ ಈ ಗಿಡ ಬೇರೆ ಗಿಡಗಳಿಗೆ ನೆರಳು ನೀಡುವುದರ ಜೊತೆಗೆಮರುಭೂಮಿಗಳ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಅನುಕೂಲವಾಗಿದೆ.

    ಸಕ್ಯುಲೆಂಟ್ ಸಸ್ಯಗಳ( Succulent plants ) ಎಲೆಗಳಲ್ಲಿ, ಕಾಂಡಗಳಲ್ಲಿ ಅಥವಾ ಗೆಡ್ಡೆಗಳಲ್ಲಿ ನೀರನ್ನು ಶೇಖರಿಸಿಕೊಳ್ಳುತ್ತವೆ. ಎಲೆಗಳು ಮತ್ತು ಕಾಂಡಗಳ ಮೇಲೆ ಮೇಣದಂತ ಪೊರೆ ಇರುತ್ತದೆ.ಇದರಿಂದ ನೀರು ಆವಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಕೆಲವು ಸಸ್ಯಗಳಲ್ಲಿ ಮಳೆ ಬಂದಾಗ ಮಾತ್ರ ಎಲೆಗಳು ಚಿಗುರುತ್ತವೆ ಮತ್ತು ಶೀಘ್ರವಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.ಒಣ ವಾತಾವರಣ ಸೃಷ್ಟಿಯಾದಾಗ ಎಲೆಗಳು ಉದುರಿ ಹೋಗುತ್ತವೆ.ಕಾಂಡಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತವೆ.ಉದಾಹರಣೆ ಬ್ಲ್ಯಾಕ್ ಬ್ರಷ್.ಇನ್ನು ಕೆಲವು ಸಸ್ಯ ಜಾತಿಗಳಲ್ಲಿ ವಾರ್ಷಿಕಸಸ್ಯಗಳು ಭೀಕರ ಕ್ಷಾಮ ಮತ್ತು ಒಣ ವಾತಾವರಣ ಇರುವ ವರೆವಿಗೂ ಹಲವಾರು ವರ್ಷಗಳು ಬೀಜಗಳು ನೆಲದಲ್ಲಿರುತ್ತವೆ.ಮಳೆ ಬಂದ ತಕ್ಷಣ, ಕೆಲವೇ ದಿನಗಳಲ್ಲಿ ಬೀಜಗಳು ಮೊಳಕೆ ಹೊಡೆದು, ಸಸ್ಯಗಳಾಗಿ, ಹೂವು ಬಿಟ್ಟು ಮತ್ತು ಬೀಜಗಳಾಗಿ ನೆಲಕ್ಕೆ ಉದುರುತ್ತವೆ.ಮತ್ತೊಂದು ಜೀವ ಚಕ್ರಕ್ಕೆ ಕಾಯುತ್ತವೆ. ಉದಾಹರಣೆ ಈವನಿಂಗ್  ಪ್ರಿಮ್ ರೋಸ್,ಗ್ಲೋಬ್ನ್ಯೂಲ್ಲೊ, ಸಿಗೊ ಲಿಲಿ.

    ಮರುಭೂಮಿಗಳಪ್ರಾಣಿ ವರ್ಗ

    Photo by Matteo sacco from Pexels

    ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಂಡು ಜೀವಿಸುವ ಪ್ರಾಣಿಗಳಿಗೆ ಜೈರೊಕೋಲ್ಸ್( Xero coles ) ಎಂದು ಕರೆಯುತ್ತಾರೆ. ಈ ಪ್ರಾಣಿಗಳು ಎದುರಿಸುವ ದೊಡ್ಡ ಸವಾಲುಗಳೆಂದರೆ ನೀರಿನ ಕೊರತೆ ಮತ್ತು ಅತೀ ಉಷ್ಣತೆ.ದೇಹದಲ್ಲಿ ನೀರಿನಾಂಶವನ್ನು ಉಳಿಸುವುದು, ಆವಿಯಾಗುವಿಕೆಯನ್ನು ತಡೆಗಟ್ಟುವುದು ಬಹಳ ಮುಖ್ಯ. ಪ್ರಾಣಿಗಳು ರಾತ್ರಿ ಸಮಯದಲ್ಲಿ ಹೆಚ್ಚು ಸಕ್ರಿಯವಾದ ಕಾರ್ಯಾಚರಣೆ ಮಾಡುತ್ತವೆ.ಮರುಭೂಮಿಗಳಲ್ಲಿ ವಾಸಿಸುವ ಸಸ್ತನಿಗಳು ಹೆಚ್ಚು ಬೆವರುವುದಿಲ್ಲ.

    ಉದಾಹರಣೆಗೆ ಒಂಟೆ 49 ಡಿಗ್ರಿ ಸೆಂಟಿಗ್ರೇಡನ ತಾಪಮಾನದಲ್ಲಿಯೂ ಸಹ ಬೆವರುವುದಿಲ್ಲ. ಒಂಟೆಯು “ಮರುಭೂಮಿಯ ಹಡಗು” ಎಂದೇ ಪ್ರಖ್ಯಾತಿಯನ್ನು ಹೊಂದಿದೆ. ಒಂಟೆಯ ದೇಹದ ವೈಶಿಷ್ಟ್ಯತೆಯೆಂದರೆ, ಬೆನ್ನಿನ ಮೇಲಿರುವ ಉಬ್ಬು( hump). ಉಬ್ಬಿನಲ್ಲಿ ಕೊಬ್ಬಿನ ಅಂಶವನ್ನು ಶೇಖರಿಸುತ್ತದೆ. ಹೆಚ್ಚು ತಾಪಮಾನವಿರುವ ಸಂದರ್ಭಗಳಲ್ಲಿಯೂ ಸಹ ಹತ್ತು ದಿನಗಳಾದರೂ ನೀರು ಕುಡಿಯದೇ ಇರಬಲ್ಲದು. ಉಬ್ಬಿನಲ್ಲಿರುವ ಕಬ್ಬಿನಂಶವು ಮೆಟಾ ಬೊಲಿಸ್ ಆದಾಗ  ( meta bolisation) ಒಂದು ಗ್ರಾಂ ಕೊಬ್ಬಿನಾಂಶಕ್ಕೆ ಒಂದು ಗ್ರಾಂ ಗಿಂತ ಹೆಚ್ಚು ನೀರು ಉತ್ಪತ್ತಿಯಾಗುತ್ತದೆ.

    ನಿರ್ಜಲೀಕರಣದಿಂದ( dehydration) ದೇಹದ ಶೇಖಡಾ 30 ರಷ್ಟು ತೂಕವನ್ನು ಕಳೆದುಕೊಂಡರು ಜೀವಿಸ ಬಲ್ಲದು. ನೀರು ದೊರೆತಾಗ, 600 ಕೆಜಿ ನೀರನ್ನು ಕುಡಿಯುವ ಸಾಮರ್ಥ್ಯವನ್ನು ಹೊಂದಿದೆ.ಬೇರೆ ಪ್ರಾಣಿಗಳು ಸಾಮಾನ್ಯವಾಗಿ ದಿನ ಒಂದಕ್ಕೆ 20 ರಿಂದ 40 ಲೀಟರ್ ನೀರನ್ನು ದೇಹದ ಮೂಲಕ ಕಳೆದುಕೊಂಡರೆ, ಒಂಟೆ ಕೇವಲ ಒಂದೂವರೆ ಲೀಟರ್ ನಷ್ಟು ನೀರನ್ನು ಮಾತ್ರ ಕಳೆದುಕೊಳ್ಳುತ್ತದೆ.

    ಒಂಟೆ ಉಸಿರು ಬಿಟ್ಟಾಗ (ನಿಶ್ವಸಸುವಿಕೆ), ನೀರಿನ ಆವಿ ಮೂಗಿನಲ್ಲಿಯೇ ಇದ್ದು, ಮರು ಹೀರಿಕೆಯಾಗಿ ದೇಹವನ್ನು ಸೇರುತ್ತದೆ.ಒಂಟೆಗೆ ಅಗಲವಾಗಿರುವ ಪಾದಗಳಿರುವುದರಿಂದ ಮರಳಿನ ಮೇಲೆ ಸುಲಭವಾಗಿ ನಡೆಯಬಲ್ಲದು.ಎರಡು ಉಬ್ಬುಗಳಿರುವ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆಯೆಂದು ಕರೆಯುತ್ತಾರೆ.

    ಇದೇ ರೀತಿ ಕಾಂಗರೊ ಇಲಿ ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಂಡಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ.ಕಾಂಗರೂ ಇಲಿ ನೀರು ಕುಡಿಯುವುದೇ ಇಲ್ಲ. ಕುಡಿಯುವ ಅವಶ್ಯಕತೆಯೂ ಇಲ್ಲ. ಇದು ಹೆಚ್ಚಾಗಿ ಒಣಗಿದ ಬೀಜಗಳನ್ನು ತಿನ್ನುತ್ತದೆ.ಹೀಗೆ ತಿಂದಂತಹ ಬೀಜಗಳುಮೆಟಾಬೊಲಿಸಿಂಆಗುವ ಸಮಯದಲ್ಲಿ ಉಂಟಾಗುವ ನೀರುಇದಕ್ಕೆ ಸಾಕಾಗುತ್ತದೆ.ಒಂದು ಗ್ರಾಂ ಬೀಜದಿಂದ ಅರ್ಧ ಗ್ರಾಂನಷ್ಟು ನೀರನ್ನು ಪಡೆಯಬಲ್ಲದು.ಇದರ ಮೂತ್ರದಲ್ಲಿ ಸಹ ನೀರು ಹೋಗದೆ ಗಟ್ಟಿ ಹರಳಿನ ರೂಪದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ.ಸ್ನಾನಕ್ಕೆ ನೀರಿನ ಅವಶ್ಯಕತೆಯಿಲ್ಲದೆ, ಮರಳಿನಲ್ಲಿ ಉರುಳಿ ಡಸ್ಟ್ ಬಾತ್ ಮಾಡುತ್ತದೆ.ಇದರ ದೇಹದಲ್ಲಿ ಬೆವರಿನ ಗ್ರಂಥಿಗಳು ಬಹಳಷ್ಟು ಕಡಿಮೆ ಇದ್ದು, ಬೆಳಗಿನ ಹೊತ್ತು ಬಿಲದಲ್ಲಿದ್ದು, ರಾತ್ರಿಯ ವೇಳೆಯಲ್ಲಿ ಮಾತ್ರ ಸಕ್ರಿಯವಾಗಿ ಕಾರ್ಯಾಚರಣೆ ಮಾಡುತ್ತದೆ.

    ದೇಹದ ಮೇಲೆ ಪೊರೆ ಬೆಳೆದು, ಅದರಿಂದಲೇ ಗೂಡನ್ನು ನಿರ್ಮಿಸಿಕೊಂಡು, ತಾಪಮಾನ ಹೆಚ್ಚಾಗಿರುವ ಬೇಸಿಗೆ ಕಾಲದಲ್ಲಿ ಕೆಲವು ವರ್ಷಗಳ ಕಾಲ ಮರಳಿನಲ್ಲಿ ಬಿಲ ತೋಡಿಕೊಂಡು ಜೀವಿಸುವ ಕಪ್ಪೆಯ ಜೀವನ ಶೈಲಿ ಇನ್ನೂ ಆಶ್ಚರ್ಯಕರ. ಗೂಡು ಕಟ್ಟುವ ಕಪ್ಪೆಗಳು ( cocoon forming ), ಭೂಮಿಯ ಮೇಲ್ಮೈನ ನೀರಿನಾಂಶ ಕಡಿಮೆಯಾಗುವ ಮೊದಲೇ ಸುಮಾರು 1 ಮೀಟರ್ ಆಳದ ಬಿಲವನ್ನು ತೋಡಿಕೊಂಡು, ಮೂಗಿನ ಹೊಳ್ಳೆಗಳನ್ನು ಹೊರತುಪಡಿಸಿ, ಉಳಿದ ದೇಹವೆಲ್ಲಾ ಮುಚ್ಚಿಕೊಳ್ಳುವಂತೆ ಪೊರೆಯು ಬೆಳೆದು, ಗೂಡನ್ನು ಕಟ್ಟಿಕೊಂಡು, ಅದರ ಒಳಗೆ ಸೇರಿಕೊಳ್ಳುತ್ತದೆ. ಕಡಿಮೆ ವೇಗದಲ್ಲಿ ಉಸಿರಾಡುತ್ತದೆ. ಈ ಸ್ಥಿತಿಯನ್ನು ಗ್ರೀಷ್ಮ ನಿಷ್ಕ್ರಿಯತೆ ಅಥವಾ ಗ್ರೀಷ್ಮ ನಿದ್ದೆ ( aestivation) ಎಂದು ಕರೆಯುತ್ತಾರೆ. ಮೆಟಾಬೊಲಿಸಂನ ವೇಗವನ್ನು ಸಹ ಒಂದನೇ ಐದು ಭಾಗದಷ್ಟು ಕಡಿಮೆ ಮಾಡಿಕೊಳ್ಳುತ್ತದೆ.ಆದ್ದರಿಂದ ಬಿಲದಲ್ಲಿ ಹಲವಾರು ವರ್ಷಗಳು ಜೀವಿಸುತ್ತದೆ.ಹೊರಗೆ ಬರುವವರೆವಿಗೆ ತಾಜ್ಯ ವಿಸರ್ಜನೆ ಇರುವುದಿಲ್ಲ.

    ಉದಾಹರಣೆ, ಪಶ್ಚಿಮ ಮತ್ತು ಮಧ್ಯ ಆಸ್ಟ್ರೇಲಿಯಾ ದೇಶದ ಬೆಂಗಾಡಿನಲ್ಲಿ ಕಂಡು ಬರುವ ಮೈನ್ಸ್ ಕಪ್ಪೆ.ಸಾಮಾನ್ಯವಾಗಿ, ಕಪ್ಪೆಗಳು ನೀರಿನಲ್ಲಿ ಮೊಟ್ಟೆಯಿಡುವುದನ್ನು ನಾವುಗಳು ನೋಡಿದ್ದೇವೆ.ಮರುಭೂಮಿಯಲ್ಲಿ ವಾಸಿಸುವ ಕಪ್ಪೆಗಳು ಮಣ್ಣಿನಲ್ಲಿಯೇ ಮೊಟ್ಟೆಯಿಡುತ್ತವೆ.ಮಳೆ ಬಂದು ನೀರು ಹರಿದಾಗ, ಮೊಟ್ಟಗಳು ಹೊಡೆದು, ಟ್ಯಾಡ್ ಪೋಲ್ ಗಳು (ಮರಿಕಪ್ಪೆಗಳು) ನೀರನ್ನು ಸೇರುತ್ತವೆ.

    ಮರುಭೂಮಿಗಳಲ್ಲಿ ಹಲವಾರು ಜಾತಿಯ ಕೀಟಗಳನ್ನು, ಪಕ್ಷಿಗಳನ್ನು ಮತ್ತು ಸಸ್ತನಿಗಳನ್ನು ನಾವು ಕಾಣಬಹುದು.ಇವುಗಳ ಜೀವನಶೈಲಿ, ಮರುಭೂಮಿಗಳ ವಾತಾವರಣಕ್ಕೆ ಹೊಂದಿಕೊಳ್ಳುವ ಪದ್ಧತಿಗಳನ್ನು ಗಮನಿಸಿದರೆ ಒಂದೊಂದು ಪ್ರಾಣಿಯದು ಒಂದೊಂದು ವಿಚಿತ್ರ ಶೈಲಿ.ಪ್ರತಿಯೊಂದನ್ನು ವಿವರಿಸುವುದು ನಿಜವಾಗಲು ಕಷ್ಟ ಸಾಧ್ಯ. ನಿಜವಾಗಲೂ ಮರುಭೂಮಿಗಳು ಮಾಯಾಲೋಕವೇ ಸರಿ.

    ಡಬಲ್ ರೂಪಾಂತರಿ ಕೊರೊನಾವೈರಸ್ ಎಬ್ಬಿಸಿರುವ ಎರಡನೇ ಅಲೆ?


    ಕೋವಿಡ್19 ಮೊದಲಿನ ಅಲೆಯ ಪರಿಮಾಣ ಕಡಿಮೆಯಾಗುತ್ತಿದ್ದಂತೆ  ಜನಜೀವನ ಸಹಜ ಸ್ಥಿತಿಗೆ ಬಂತು.  ಅಂತೆಯೇ  ಸಾರ್ವಜನಿಕರಲ್ಲಿ  ಮುನ್ನೆಚ್ಚರಿಕೆ ಕ್ರಮಗಳ ಗಂಭೀರತೆಯು ಕಡಿಮೆಯಾಯಿತು. ಆದರೆ ಇನ್ನೊಂದು ಬದಿಯಲ್ಲಿಕೊರೊನಾವೈರಸ್  ಮೌನವಾಗಿ ಇನ್ನಷ್ಟೂ  ವೇಗದಲ್ಲಿ ಹರಡಿ   ಹೊಸ ಹೊಸ  ರೂಪಾಂತರಕ್ಕೆ  ಅವಕಾಶವಾಯಿತುಕೊನೆಗೆ  ಡಬಲ್ ರೂಪಾಂತರಿಯಾಗಿ  ಮತ್ತೊಮ್ಮೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬಾರಿ ಸುಂಟರಗಾಳಿಯಂತೆ ಅಲ್ಲ,   ಚಂಡಮಾರುತದಂತೆ ಅಪ್ಪಳಿಸಿ  ಅಪಾರ ಸಾವು ನೋವನ್ನು ಉಂಟುಮಾಡುತ್ತಿದೆ.


    2019 ಡಿಸೆಂಬರ್ ತಿಂಗಳು ಚೀನಾದಲ್ಲಿ ಮೊದಲು ಪತ್ತೆಯಾದ ಹೊಸ ತಳಿಯ   ಕೊರೊನಾವೈರಸ್  (SARS-CoV-2) ಆರಂಭದಲ್ಲಿ ಆ ದೇಶದ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಅನಾಹುತವನ್ನು ಸೃಷ್ಟಿಸಿದರೆ   ತದನಂತರ ಭಾರತವು ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಿಸಿ  ಭೀಕರ  ಸಾವು ನೋವಿನ ಅಲೆಯನ್ನು ಎಬ್ಬಿಸಿತು.  ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ, ಫೇಸ್ ಮಾಸ್ಕ್ ಧರಿಸಿವುದು,  ಜನತಾ ಕರ್ಫ್ಯೂ,  ಲಾಕ್ಡೌನ್, ಸಭೆ, ಸಮಾರಂಭ, ಜಾತ್ರೆ,   ಜನಸಮೂಹಕ್ಕೆ ನಿರ್ಬಂಧ,   ಮುಂತಾದ ಕ್ರಮಗಳಿಂದ  ಕೋವಿಡ್-19 ಭೀಕರತೆಗೆ ಒಂದು ಮಟ್ಟಿಗೆ ಕಡಿವಾಣ ಹಾಕಿ ಜನಜೀವನ,  ಆರ್ಥಿಕತೆ  ಮರಳಿ  ಹಳಿಗೆ ಬರುತ್ತಿದೆ ಅನ್ನುವಾಗಲೇ ರೂಪಾಂತರಿ ಕೊರೊನಾವೈರಸ್ ಎರಡನೇ  ಅಲೆ   ಹೆಸರಿನಲ್ಲಿ ಇನ್ನಷ್ಟು ವೇಗ ಮತ್ತು ತೀರ್ವವಾಗಿ  ದುಷ್ಪರಿಣಾಮ ಬೀರುತ್ತಿದೆ.

    ಕಳೆದ ಬಾರಿ ಕೋವಿಡ್-19 ಸ್ಫೋಟಗೊಂಡಾಗ ವಿಶ್ವದಾದ್ಯಂತ ಎಲ್ಲರ ವಕ್ರ ದೃಷ್ಟಿ  ಚೀನಾದ* ಮೇಲೆ ಇತ್ತು.  ಈ ಬಾರಿ ಜಗತ್ತಿನ ದೃಷ್ಟಿ ನಮ್ಮ ದೇಶದ ಮೇಲೆ, ಆದರೆ  ವಕ್ರ ದೃಷ್ಟಿಯಲ್ಲ ಮಾನವೀಯತೆಯ  ಸಹನಾಭೂತಿ;   ಈಗಾಗಲೇ ಭಾರತಕ್ಕೆ ನೆರವಾಗಲು  ನಲವತ್ತು ದೇಶಗಳು  ಸಹಾಯಹಸ್ತವನ್ನು ಚಾಚಿವೆ. ಕಾರಣ, ಈಗ ಕೋವಿಡ್-19 ಎರಡನೇ ಅಲೆ  ಸುನಾಮಿಯಂತೆ  ಅಪ್ಪಳಿಸಿರುವುದು ಭಾರತದಲ್ಲಿ. ಹಾಗೂ ಇದಕ್ಕೆ  ಕಾರಣವಾಗಿರುವ ಡಬಲ್ ರೂಪಾಂತರಿ   ಕೊರೊನಾವೈರಸ್  ಮೊದಲು ಪತ್ತೆಯಾಗಿರುವುದೂ  ಭಾರತದಲ್ಲಿ.  ಮಹಾರಾಷ್ಟ್ರದಲ್ಲಿ ಅಕ್ಟೋಬರ್ 2020 ರಲ್ಲಿ ಕೋವಿಡ್-19  ಪೀಡಿತ ರೋಗಿಗಳಿಂದ ಪಡೆದ    ಸ್ಯಾಂಪಲ್ ಗಳನ್ನು  ಪರೀಕ್ಷೆಗೆ ಒಳಪಡಿಸಿದಾಗ (ಜೀನೋಮ್ ಸೀಕ್ವೆನ್ಸಿಂಗ್ )    61% ಮಾದರಿಗಳಲ್ಲಿ ‘ಡಬಲ್ ರೂಪಾಂತರಿ’ ಕೊರೊನಾವೈರಸ್ ಇರುವಿಕೆಯನ್ನು  ಪತ್ತೆಹಚ್ಚಲಾಯಿತು. ಇದನ್ನು ಡಿಸೆಂಬರ್ 1, 2020 ರಂದು  ದೃಢಪಡಿಸಲಾಯಿತು. ‘L452R’ ಮತ್ತು ‘E484Q’  ಎಂಬ    ಎರಡು ರೂಪಾಂತರಗಳನ್ನು ಹೊಂದಿರುವ  ‘ಡಬಲ್ ರೂಪಾಂತರಿ’  (Double variant) ಕೊರೊನಾವೈರಸ್ ಗೆ ನೀಡಿದ ಹೆಸರು  ಬಿ.1.617  SARS-CoV-2. 

    ಚೀನಾ ಮೂಲದಿಂದ ಬಂದಂತಹ ಹೊಸ ತಳಿಯ ಕೊರೊನಾವೈರಸ್ (SARS-CoV-2) ರೂಪಾಂತರಗೊಂಡಿದ್ದು ಹೇಗೆ?  

    ಮೊದಲು ರೂಪಾಂತರ ಅಂದರೆ ಏನು ಅನ್ನುವುದನ್ನು ತಿಳಿಯೋಣ.  ಮ್ಯುಟೇಷನ್ (Mutation) ಪದ ಕೇಳಿರಬಹುದು;  ಸರಳವಾಗಿ ಹೇಳುವುದಿದ್ದರೆ,  ಇದು ತಳಿ ಮಾಹಿತಿಯಲ್ಲಿ  ಆಗುವ ಬದಲಾವಣೆ.  ನಾವು ಸೇರಿ ಪ್ರತಿಯೊಂದು ಜೀವಿ ಏನು ಅನ್ನುವ ಮಾಹಿತಿ ಡಿಎನ್ಎ ಯಲ್ಲಿ    ಇರುತ್ತದೆ; ಅದನ್ನೇ ತಳಿ / ಆನುವಂಶಿಕ ಮಾಹಿತಿ (Genetic information) / ವಂಶವಾಹಿಗಳು (Genes) ಅನ್ನುವುದು.  ಅದೇ ರೀತಿ   ಕೊರೊನಾವೈರಸ್  ರಚನೆ, ಜೀವನಚಕ್ರದ ಮಾಹಿತಿ ಅದರ ಆರ್.ಎನ್.ಎ  (RNA) ಯಲ್ಲಿ ಇರುತ್ತದೆ.   ಡಿಎನ್ಎ / ಆರ್.ಎನ್.ಎ  (DNA/RNA) ಯಲ್ಲಿ ಬದಲಾವಣೆಯಾದರೆ ಅದನ್ನು ಮ್ಯುಟೇಷನ್ ಎನ್ನಲಾಗುತ್ತದೆ. ತಳಿ ಮಾಹಿತಿಯಲ್ಲಿ  ಉಂಟಾದ  ಬದಲಾವಣೆ   ಪ್ರೋಟೀನ್ ಗಳಲ್ಲಿ   ಪ್ರಕಟಗೊಳ್ಳುತ್ತದೆ. ಏಕೆಂದರೆ,  ಜೀವಿಗಳ ರಚನೆ ಮತ್ತು  ಕೆಲಸಕಾರ್ಯಗಳನ್ನು ನಿರ್ವಹಿಸಲು ಯಾವ ಯಾವ ಪ್ರೋಟೀನ್ ಗಳು  ಬೇಕು ಅನ್ನುವ ಮಾಹಿತಿ ಡಿಎನ್ಎ  / ಆರ್.ಎನ್.ಎ  ಯಲ್ಲಿ ಇರುತ್ತದೆ. ಪ್ರೋಟೀನ್ ಗಳು  ಅಲನೈನ್  (A),   ಅರ್ಜಿನೈನ್  (R),  ಆಸ್ಪ್ಯಾರಜಿನ್ (N),  ಆಸ್ಪರ್ಟಿಕ್ ಆಮ್ಲ  (D),  ಸಿಸ್ಟೀನ್ (C),  ಗ್ಲುಟಾಮಿನ್ (Q),    ಗ್ಲುಟಾಮಿಕ್ ಆಮ್ಲ  (E), ಗ್ಲೈಸಿನ್  (G), ಹಿಸ್ಟಿಡಿನ್   (H),   ಐಸೊಲ್ಯೂಸಿನ್  (I), ಲ್ಯುಸಿನ್ (L),     ಲೈಸಿನ್ (K),  ಮೆಥಿಯೋನಿನ್  (M),   ಫೆನೈಲಾಲನೈನ್  (F),   ಪ್ರೋಲೈನ್ (P),   ಸೆರೈನ್ (S),   ಥ್ರೆಯೋನೈನ್  (T),    ಟ್ರಿಪ್ಟೊಫಾನ್  (T),  ಟೈರೋಸಿನ್  (W),    ವ್ಯಾಲಿನ್ (V)  ಎಂಬ  20 ಬಗೆಯ ಅಮೈನೊ ಆಮ್ಲ (Amino acids) ಗಳಿಂದ ನಿರ್ಮಿತವಾಗಿರುತ್ತವೆ (ಬ್ರಾಕೆಟ್ನಲ್ಲಿರುವ ಇಂಗ್ಲಿಷ್ ವರ್ಣಮಾಲೆಗಳು ಪ್ರತಿ ಅಮೈನೊ ಆಮ್ಲಕ್ಕೆ ನೀಡಲಾದ ಸಂಕೇತ).

    ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು  ಮನೆ ನಿರ್ಮಾಣವನ್ನು ಕಲ್ಪಿಸಿಕೊಳ್ಳೋಣ. ಇಟ್ಟಿಗೆಗಳನ್ನು ಸರಿಯಾದ ಕ್ರಮದಲ್ಲಿ   ಜೋಡಿಸಿ ಮನೆಯನ್ನು ನಿರ್ಮಿಸುವಂತೆ, ಮೂರು ಆಯಾಮದ ರಚನೆ ಇರುವ  ಪ್ರೋಟೀನ್ ಗಳನ್ನು  ರೂಪುಗೊಳ್ಳಲು  ಅಮೈನೋ ಆಮ್ಲಗಳು  ಸರಿಯಾದ ಕ್ರಮದಲ್ಲಿ ಜೋಡಣೆಯಾಗುತ್ತವೆ.  ಇಟ್ಟಿಗೆಗಳನ್ನು ಯಾವ  ಅನುಕ್ರಮದಲ್ಲಿ   ಜೋಡಿಸಬೇಕೆನ್ನುವ  ನೀಲನಕ್ಷೆ ವಾಸ್ತುಶಿಲ್ಪದ ರೇಖಾಚಿತ್ರದಲ್ಲಿರುತ್ತದೆ.  ಅಂತೆಯೇ, ಡಿಎನ್ಎ / ಆರ್.ಎನ್.ಎ  ಯಲ್ಲಿರುವ ವಂಶವಾಹಿಗಳು  ಯಾವ ರೀತಿಯ ಪ್ರೋಟೀನ್  ಗಳನ್ನು ರೂಪಿಸಬೇಕು ಎಂಬುದರ ನೀಲನಕ್ಷೆಯಾಗಿ ಕಾರ್ಯನಿರ್ವಹಿಸಿದರೆ, ಪ್ರೋಟೀನ್  ರಚನೆಗೆ ಅಮೈನೋ ಆಮ್ಲಗಳು ಬಿಲ್ಡಿಂಗ್ ಬ್ಲಾಕ್ ಗಳಾಗಿ ಕಾರ್ಯನಿರ್ವಹಿಸುತ್ತವೆ.   ಡಿಎನ್ಎ  ಅಥವಾ ಆರ್.ಎನ್.ಎಯಲ್ಲಿರುವ   ನ್ಯೂಕ್ಲಿಯೋಟೈಡ್ ಗಳ  ಅನುಕ್ರಮವು ಪ್ರೊಟೀನ್ ಲ್ಲಿರುವ  ಅಮೈನೊ ಆಸಿಡ್ ಅನುಕ್ರಮವನ್ನು ನಿರ್ಧರಿಸುತ್ತದೆ.

    ವರ್ಣಮಾಲೆಯ ಅಕ್ಷರಗಳನ್ನು ಸರಿಯಾದ ಕ್ರಮದಲ್ಲಿ  ಜೋಡಿಸಿ ಅರ್ಥಪೂರ್ಣ ಪದಗಳನ್ನು ರಚಿಸುವಂತೆ ಎ, ಜಿ, ಸಿ ಮತ್ತು ಯು  (ಎಡಿನೈನ್, ಗ್ವಾನಾಯಿನ್, ಸೈಟೊಸೀನ್ ಮತ್ತು ಯುರಾಸಿಲ್) ಎಂಬ ಕೇವಲ ನಾಲ್ಕು ಬಗೆಯ ಅಕ್ಷರ(ರಾಸಾಯನಿಕ)ಗಳಿಂದ ರಚಿತವಾಗಿರುವ ಅಗಾಧವಾದ ತಳಿಮಾಹಿತಿಯು ಆರ್ ಎನ್ ಎ ನಲ್ಲಿ ಇರುತ್ತದೆ.   ಉದಾಹಾರಣೆಗೆ, ಕನ್ನಡ ವರ್ಣಮಾಲೆಯ ‘ನ’ ಮತ್ತು ‘ಮ’ ಅಕ್ಷರಗಳನ್ನು ಬಳಸಿ ‘ನಮನ’ ಎಂಬ ಅರ್ಥವಿರುವ ಪದವನ್ನು ರಚಿಸಬಹುದು. ಆದರೆ ಅಕ್ಷರಗಳ ಜೋಡಣೆಯಲ್ಲಿ ವ್ಯತ್ಯಾಸವಾದರೆ, ಅದು ‘ಮನನ’ / ‘ನನಮ’ ಅಂತಾಗಿ ಆ ಪದದ ಅರ್ಥ ಸಂಪೂರ್ಣವಾಗಿ ಬದಲಾವಣೆಯಾಗುವಂತೆ ಅಥವಾ ಅರ್ಥರಹಿತಗೊಳ್ಳುವಂತೆ ತಳಿಮಾಹಿತಿಯಲ್ಲಿರುವ ಎ ಜಿ ಸಿ ಯು  ಅನುಕ್ರಮದಲ್ಲಿ  ವ್ಯತ್ಯಾಸ/ಲೋಪವಾದರೆ (ಮ್ಯುಟೇಷನ್) ಅನರ್ಥವಾಗುತ್ತದೆ.

    ಕೊರೊನಾವೈರಸ್ ಹೊರಮೈಯಲ್ಲಿರುವ  ಗದೆ  ಆಕಾರದ  ಸ್ಪೈಕ್ ಕೂಡ ಒಂದು ಪ್ರೋಟೀನ್ (ಸ್ಪೈಕ್ ಪ್ರೋಟೀನ್ ವೈರಸ್ ಮಾನವ ಜೀವಕೋಶಗಳಿಗೆ ನುಗ್ಗಲು ಬಳಸುವ ‌ ಒಂದು ಭಾಗ*). ಇದು ಒಟ್ಟು  1255 ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಈ ಸ್ಪೈಕ್ ಪ್ರೋಟೀನ್ ನಲ್ಲಿರುವ ಅಮೈನೋ  ಆಮ್ಲಗಳಲ್ಲಿ  ವ್ಯತ್ಯಾಸವಾದರೆ   ಅಂದರೆ ಒಂದು ನಿರ್ದಿಷ್ಟ ಸ್ಥಾನದಲ್ಲಿರುವ ಅಮೈನೋ ಆಮ್ಲದಿಂದ ಇನ್ನೊಂದು ಅಮೈನೋ ಆಮ್ಲ  ಬದಲಿಯಾದರೆ    ಪ್ರೊಟೀನ್ ರಚನೆಯಲ್ಲಿ ಸಣ್ಣ ಬದಲಾವಣೆಯಾಗಬಹುದು.  ಆ ಬದಲಾವಣೆ ಅಪಾಯಕಾರಿಯೂ ಆಗಿರಬಹುದು.  ಈಗ   ರೂಪಾಂತರಿ ಕೊರೊನಾವೈರಸ್ ನಲ್ಲಿ ಆಗಿರುವುದು ಅದೇ.  

    ವೇರಿಯಂಟ್ L452R:  ಸ್ಪೈಕ್ ಪ್ರೋಟೀನ್  452 ನೇ ಸ್ಥಾನದಲ್ಲಿ  ಲ್ಯುಸಿನ್ (L)  ಬದಲು   ಅರ್ಜಿನೈನ್ (R) ಸೇರಿಕೊಂಡಿದೆ; ಹಾಗಾಗಿ ಈ ರೂಪಾಂತರದ (ವೇರಿಯಂಟ್)   ಹೆಸರು L452R.  ಸ್ಪೈಕ್ ಪ್ರೊಟೀನ್ ಲ್ಲಿ  ಆದಂತಹ ಈ  ಬದಲಾವಣೆಯು ಕೊರೊನಾವೈರಸ್  ಅತಿಥೆಯ (Host) (ಮಾನವನ) ಜೀವಕೋಶದೊಳಗೆ ಇನ್ನಷ್ಟೂ  ಪ್ರಬಲವಾಗಿ ಅಂಟಿಕೊಳ್ಳುವಂತೆ ಮಾಡಿದೆ. ವಾಸ್ತವವಾಗಿ,  L425R ಹೊಂದಿರುವ   ರೂಪಾಂತರಿ  ಕೊರೊನಾವೈರಸ್   ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ  ಪತ್ತೆಯಾಗಿದ್ದು ಅದು ತನ್ನ  ಸ್ಪೈಕ್ ಪ್ರೋಟೀನ್ಗಳ ಮೂಲಕ ಇನ್ನೂ  ಬಿಗಿಯಾಗಿ ಅಂಟಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಮಾತ್ರವಲ್ಲ ಈ ಹಿಂದಿನ ಹೊಸ ತಳಿಯ ಕೊರೊನಾವೈರಸ್ (SARS-CoV-2) ಗಿಂತ ಇನ್ನು ಹೆಚ್ಚು ವೇಗವಾಗಿ ವೃದ್ಧಿಗೊಳ್ಳುವ  ಹಾಗೂ   ಸುಮಾರು 20% ರಷ್ಟು ಪ್ರಸರಣವನ್ನು  ಹೆಚ್ಚಿಸುವ ಸಾಮರ್ಥ್ಯ ಪಡೆದಿದೆ  ಮತ್ತು ಪ್ರತಿಕಾಯದ ಪರಿಣಾಮಕಾರಿತ್ವವನ್ನು 50% ಕ್ಕಿಂತ ಕಡಿಮೆ ಮಾಡುತ್ತದೆ ಎಂದು  ವಿಜ್ಞಾನಿಗಳು  ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 

    ವೇರಿಯಂಟ್ E484Q:  ಇದೂ  ಕೂಡ ಸ್ಪೈಕ್ ಪ್ರೋಟೀನ್ ನಲ್ಲಿ  ಆದಂತಹ ಬದಲಾವಣೆ; 484 ನೇ ಸ್ಥಾನದಲ್ಲಿ ಗ್ಲುಟಾಮಿಕ್ ಆಮ್ಲದ  ಬದಲು  (E)  ಗ್ಲುಟಾಮಿನ್ (Q)  ಸೇರಿಕೊಂಡಿದೆ.  ಇದು ಈ ಮೊದಲು  ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದ ಲ್ಲಿ ಕಂಡುಬಂದಿದ್ದ   E484K ರೂಪಾಂತರಕ್ಕೆ ಹೋಲುತ್ತದೆ ಎಂಬುವುದನ್ನು ಕಂಡುಕೊಳ್ಳಲಾಗಿದೆ.    ಇದು ಕೂಡ  ಸ್ಪೈಕ್ ಪ್ರೋಟೀನ್‌  ಜೀವಕೋಶದ  ಎಸಿಇ 2 ರಿಸೆಪ್ಟರ್* ಅಂಟಿಕೊಳ್ಳುವ  ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಈಗಾಗಲೇ ಮೂಲ ಕೊರೊನಾವೈರಸ್  (SARS-CoV-2) ವಿರುದ್ಧ ದೇಹದಲ್ಲಿ ಉತ್ಪತ್ತಿಯಾದ      ಪ್ರತಿಕಾಯ (Antibodies) ಗಳಿಂದ  ನುಣುಚಿಕೊಳ್ಳುವ  ಸಾಮರ್ಥ್ಯವನ್ನು ಹೊಂದಿದೆ   ಎಂದು ತಿಳಿದುಬಂದಿದೆ.

    ಈ ಎರಡು ಬಗೆಯ ರೂಪಾಂತರಿ ಕೊರೊನಾವೈರಸ್ ಪ್ರತ್ಯೇಕವಾಗಿ ಬೇರೆ ಬೇರೆ ದೇಶಗಳಲ್ಲಿ ಗುರುತಿಸಲಾಗಿದ್ದರೂ,  ಆ ಎರಡು ಮ್ಯುಟೇಷನ್ ಒಂದರಲ್ಲೇ ಇರುವ  ಕೊರೊನಾವೈರಸ್ ಮೊದಲು ಪತ್ತೆಯಾಗಿರುವುದು ಭಾರತದಲ್ಲಿ.  ಹಾಗಾಗಿ,  ಈಗ ಜಗತ್ತಿನ ಗಮನ ಸೆಳೆದಿರುವ ಭಾರತದಲ್ಲಿ  ಸುನಾಮಿಯಂತೆ   ಎರಡನೇ ಅಲೆ  ಎಬ್ಬಿಸಲು ಕಾರಣವಾಗಿರಬಹುದಾದ ಕೊರೊನಾವೈರಸ್ ನ್ನು  ‘ಡಬಲ್ ಮ್ಯುಟೆಂಟ್’  / ಡಬಲ್ ರೂಪಾಂತರಿ  (ಬಿ.1.617  SARS-CoV-2 :  L452R ಮತ್ತು E484Q )     ಎಂಬ ಹೆಸರು ನೀಡಲಾಗಿದೆ (ಬಿ.1.617′ ಕೊರೊನಾ ವೈರಾಣುವಿನ ವಂಶಾವಳಿಯನ್ನು ಸೂಚಿಸುತ್ತದೆ). 

    ಭಾರತದಲ್ಲಿ ಪತ್ತೆಹಚ್ಚಿದ ನಂತರ  ಈ ಡಬಲ್ ರೂಪಾಂತರಿ ಈಗಾಗಲೇ  ಯು.ಕೆ., ಯು.ಎಸ್., ಇಸ್ರೇಲ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜರ್ಮನಿ,  ಸೇರಿದಂತೆ 17 ದೇಶಗಳಲ್ಲಿಯೂ ಪತ್ತೆ ಹಚ್ಚಲಾಗಿದೆ.  ಈ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಈಗಾಗಲೇ  ಈ ಎಲ್ಲ ದೇಶಗಳು ಭಾರತದ ಪ್ರಯಾಣಿಕರ ವಿಮಾನಯಾವನ್ನು ಸಧ್ಯದ ಮಟ್ಟಿಗೆ ನಿರ್ಬಂಧಿಸಿವೆ.  

    ಚಿತ್ರ ಕೃಪೆ: Jonathan Corum | Source: Andrew Rambaut et al., Covid-19 Genomics Consortium U.K.

    ಏಕ ರೂಪಾಂತರಿಯು  ಉಂಟುಮಾಡುವ ಪರಿಣಾಮಗಳ ಬಗ್ಗೆ ಈಗಾಗಲೇ ತಿಳಿದಿದ್ದರೂ   ಡಬಲ್ ರೂಪಾಂತರಿ   ಕೊರೊನಾವೈರಸ್  ಹೇಗೆ ಹೋಸ್ಟ್ (ಮಾನವನ) ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು  ಇನ್ನಷ್ಟೇ  ಅರ್ಥಮಾಡಿಕೊಳ್ಳಬೇಕಿದೆ. ಇದರ ಬಗ್ಗೆ ಅಧ್ಯಯನಗಳು ಈಗ ಪ್ರಗತಿಯಲ್ಲಿವೆ. ಇದಲ್ಲದೆ,  COVID-19 ಸಾಂಕ್ರಾಮಿಕದ ಎರಡನೇ ಅಲೆಗೆ  ಈ ಡಬಲ್ ರೂಪಾಂತರಿಯೇ  ಕಾರಣವೆಂದು 100% ಖಚಿತವಾಗಿಲ್ಲ. ಮೊದಲ ಅಲೆಗೆ  ಹೋಲಿಸಿದರೆ ಎರಡನೇ ಅಲೆಯ  ಕೋವಿಡ್-19 ತುಂಬಾ  ಆಕ್ರಮಣಕಾರಿ ಇರುವುದನ್ನು ಪರಿಗಣಿಸಿ,  ಇದಕ್ಕೆ ಕಾರಣ  ಡಬಲ್ ರೂಪಾಂತರಿ   ಎಂದು  ಊಹಿಸಲಾಗಿದೆ.      ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು ಅದನ್ನು ಇನ್ನೂ  ದೃಢಪಡಿಸಬೇಕಿದೆ.  

    ತನಿಖೆಯಲ್ಲಿರುವ ರೂಪಾಂತರಿ

    ಮ್ಯುಟೇಷನ್ / ರೂಪಾಂತರವು ಸ್ವಯಂಪ್ರೇರಿತವಾಗಿ  ಆಗುವ  ಒಂದು  ನೈಸರ್ಗಿಕ ವಿದ್ಯಮಾನ; ಜೀವಿಗಳ ವಿಕಾಸದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.  ಹೋಸ್ಟ್  ಜೀವಕೋಶಗಳಲ್ಲಿ  ಅತಿ ವೇಗವಾಗಿ ವೈರಸ್ ಗಳು ವೃದ್ಧಿಯಾಗುವುದರಿಂದ  ಅವುಗಳು ಸಾರ್ವಕಾಲಿಕವಾಗಿ ವಿಕಾಸಗೊಳ್ಳುತ್ತಾ ಹೋಗುತ್ತವೆ. COVID-19 ಸಾಂಕ್ರಾಮಿಕಕ್ಕೆ ಕಾರಣವಾದ ಕೊರೊನಾವೈರಸ್  ಮತ್ತು ಇತರ ಇನ್ಫ್ಲುಯೆಂಜ ವೈರಸ್‌ಗಳ ಜೀನೋಮಿಕ್ ಡೇಟಾವನ್ನು ಸಂಗ್ರಹಿಸಿಸಲು  ಮತ್ತು ಹೆಚ್ಚಿನ ಅಧ್ಯಯನಕ್ಕೆ ಮುಕ್ತ   ಪ್ರವೇಶವನ್ನು ಒದಗಿಸಲು  ‘GISAID’ ಎಂಬ ಆನ್ಲೈನ್ ಡೇಟಾಬೇಸ್ ಅನ್ನು  ತೆರೆಯಲಾಗಿದೆ. ಇದರಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾಗುವ ರೂಪಾಂತರಿ ಕೊರೊನಾವೈರಸ್  ಜಿನೋಮ್ ಸೀಕ್ವೆನ್ಸ್ ನ್ನು  ಸಂಗ್ರಹಿಸಲಾಗುತ್ತಿದೆ. ಹೊಸ ತಳಿಯ  ಕೊರೊನಾವೈರಸ್ (SARS-CoV-19) ಆರ್.ಎನ್.ಎ. ಅನುಕ್ರಮವನ್ನು  ಜೀರೋ  ಸೀಕ್ವೆನ್ಸ್ (Zero sequence / Reference sequence) ಆಗಿ ಇಟ್ಟುಕೊಂಡು ಹೊಸ ರೂಪಾಂತರಿಗಳನ್ನು ಪತ್ತೆಹಚ್ಚಲಾಗುತ್ತಿದೆ.    ಜೀನೋಮ್  ಸೀಕ್ವೆನ್ಸಿಂಗ್  ದತ್ತಾಂಶದ ಪ್ರಕಾರ  ಈಗಾಗಲೇ ಸಾವಿರಾರು  ರೂಪಾಂತರಗಳು  (Mutation) ಸಂಭವಿಸಿವೆ. ಒಂದು ಅಥವಾ ಹೆಚ್ಚಿನ ಹೊಸ ರೂಪಾಂತರಗಳನ್ನು ಹೊಂದಿರುವ ವೈರಸ್ ಅನ್ನು ಮೂಲ ವೈರಸ್‌ (SARS-CoV-19)ನ “ರೂಪಾಂತರ”(Variant) ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ರೂಪಾಂತರಗಳು ಅಪಾಯಕಾರಿ ಅಲ್ಲ. ಆದರೆ ಕೆಲವು ರೂಪಾಂತರಗಳು   ಸೋಂಕು ಮತ್ತು ರೋಗದ ತೀವ್ರತೆಯ ವಿಷಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುವುದರಿಂದ  ಅಪಾಯಕಾರಿಯಾಗಿವೆ. ಇಂತಹ  ರೂಪಾಂತರಿ ವೈರಸ್ ಗಳನ್ನು   VOC (Variant of Concern) ಎಂದು ವರ್ಗೀಕರಿಸಲಾಗಿದೆ. ಅಂದರೆ, ಕಾಳಜಿ / ಜಾಗ್ರತೆ ವಹಿಸಬೇಕಾದ ರೂಪಾಂತರ.   L452R ಅನ್ನು Variant of Concern ಎಂದು ಪರಿಗಣಿಸಲಾಗಿದೆ.   ಈಗ ಡಬಲ್ ರೂಪಾಂತರಿಯಾಗಿ ವಕ್ಕರಿಸಿರುವ   ಕೊರೊನಾವೈರಸ್ ನ  ಪ್ರಭಾವದ  ಬಗ್ಗೆ ಅಧ್ಯಯನಗಳು  ಮುಂದುವರಿದಿರುವುದರಿಂದ   ವಿಶ್ವ ಆರೋಗ್ಯ ಸಂಸ್ಥೆಯು  ಸದ್ಯಕ್ಕೆ  ಇದನ್ನು ‘Variant under Investigation’ (ತನಿಖೆಯಲ್ಲಿರುವ ರೂಪಾಂತರಿ) ಎಂದು  ಪರಿಗಣಿಸಿದೆ.  

    ಭಾರತೀಯ ಲಸಿಕೆ ಕೊವ್ಯಾಕ್ಸಿನ್

    ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ   ಅಭಿವೃದ್ಧಿ ಪಡಿಸಿರುವ ಲಸಿಕೆ ಕೊವ್ಯಾಕ್ಸಿನ್ (BBV152 ).  ಇದು ಕೊರೊನಾವೈರಸ್ ನ್ನು ತಟಸ್ಥಗೊಳಿಸುವಲ್ಲಿ 81%  ಪರಿಣಾಮಕಾರಿತ್ವವನ್ನು ಹೊಂದಿರುವುದು ಕ್ಲಿನಿಕಲ್ ಟ್ರಯಲ್ಸ್  ದೃಢಪಡಿಸಿದೆ.      ಎರಡು ಸಂಸ್ಥೆಗಳು ಜಂಟಿಯಾಗಿ  ನಡೆಸಿದ ಮೂರನೇ ಹಂತದ ಕ್ಲಿನಿಕಲ್  ಅಧ್ಯಯನದಿಂದ  ಒಂದು ಹೊಸ  ಆಶಾಕಿರಣ  ಮೂಡಿಸಿದೆ.  ಕೋವಾಕ್ಸಿನ್ ಲಸಿಕೆಯು ಡಬಲ್ ರೂಪಾಂತರಿ  ಕೊರೊನಾವೈರಸ್   (ಬಿ.1.617 SARS-CoV-2) ನ್ನೂ ತಟಸ್ಥಗೊಳಿಸುವಲ್ಲಿ ಪರಿಣಾಮಕಾರಿಯಾಗಿ ಕಂಡುಬಂದಿದೆ.    ಮೂರನೇ ಹಂತದ ಈ ಅಧ್ಯಯನದಲ್ಲಿ   ಭಾರತದಾದ್ಯಂತ 18 ರಿಂದ 98 ವರ್ಷ ವಯಸ್ಸಿನ   25,800 ಜನರನ್ನು  ಕೊವ್ಯಾಕ್ಸಿನ್  ಎರಡನೇ ಡೋಸ್ ಪಡೆದ  14 ದಿನಗಳ ನಂತರ ವಿಶ್ಲೇಷಣೆ ನಡೆಸಿ ಸಕಾರಾತ್ಮಕ  ಫಲಿತಾಂಶ ಪಡೆಯಲಾಗಿದೆ.  ಸಂಶೋಧನಾ ವರದಿಯು ಸಧ್ಯದಲ್ಲೇ ನಿಯತಕಾಲಿಕದಲ್ಲಿ ಪ್ರಕಟವಾಗಲಿದೆ. ಕೋವಾಕ್ಸಿನ್  ಇಂಗ್ಲೆಂಡ್ ನಲ್ಲಿ ಮೊದಲು ಪತ್ತೆಹಚ್ಚಲಾಗಿರುವ  ಬಿ .1.1.7 ರೂಪಾಂತರಿ  ಕೊರೊನಾವೈರಸ್ ನ್ನು (SARS‑CoV‑2 variant, B.1.1.7) ನಿಷ್ಕ್ರೀಯಗೊಳಿಸುವಲ್ಲಿಯೂ ಸಫಲವಾಗಿದೆ ಎಂದು ‘ಜರ್ನಲ್ ಆಫ್ ಟ್ರಾವೆಲ್ ಮೆಡಿಸಿನ್’  ನಲ್ಲಿ ಪ್ರಕಟವಾಗಿದೆ.

    ಕೋವಿಶೀಲ್ಡ್ ಲಸಿಕೆಯೂ ಕೂಡ   ‘ಡಬಲ್ ರೂಪಾಂತರಿತ’ (B.1.617 variant)   ಕೊರೊನಾವೈರಸ್ ವಿರುದ್ಧವೂ   ರಕ್ಷಣೆಯನ್ನು ನೀಡುತ್ತದೆ ಎಂದು ಹೈದರಾಬಾದ್ ನಲ್ಲಿರುವ    ಸಿಎಸ್ಐಆರ್ – ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮೊಲೆಕ್ಯುಲರ್ ಬಯಾಲಜಿ (ಸಿಸಿಎಂಬಿ ) ವಿಜ್ಞಾನಿಗಳು ನಡೆಸಿದ  ಪ್ರಾಥಮಿಕ ಅಧ್ಯಯನದಿಂದ  ಕಂಡುಬಂದಿದೆ ಎಂದು  ಸಿಸಿಎಂಬಿ ನಿರ್ದೇಶಕರಾಗಿರುವ  ಡಾ.  ರಾಕೇಶ್ ಕೆ ಮಿಶ್ರಾ ಎಂದು ಇತ್ತೀಚೆಗೆ  ಹೇಳಿರುವುದು ಆಶಾದಾಯಕ (ಹೆಚ್ಚಿನ ಅಧ್ಯಯನ ನಡೆಯುತ್ತಿದೆ).

    ಸ್ಥಳೀಯವಾಗಿ ಉತ್ಪಾದಿಸುವ  ಕೋವಾಕ್ಸಿನ್ ಮೆಕ್ಸಿಕೊ, ಫಿಲಿಪೈನ್ಸ್, ಇರಾನ್, ಪರಾಗ್ವೆ, ಗ್ವಾಟೆಮಾಲಾ, ನಿಕರಾಗುವಾ, ಗಯಾನಾ, ವೆನೆಜುವೆಲಾ, ಬೋಟ್ಸ್ವಾನ, ಜಿಂಬಾಬ್ವೆ  ಹೀಗೆ  ಒಟ್ಟು  60 ಕ್ಕೂ ಹೆಚ್ಚು ದೇಶಗಳು   ತುರ್ತು ಬಳಕೆಗೆ ಬೇಡಿಕೆ ಪಡೆದುಕೊಂಡಿದೆ. ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಮತ್ತು ಅಮೆರಿಕದ ಉನ್ನತ ಸಾಂಕ್ರಾಮಿಕ ತಜ್ಞ ಡಾ. ಆಂಥೋನಿ ಫೌಸಿ ಅವರು    “ಮಾರಣಾಂತಿಕ ರೂಪಾಂತರಿ ವೈರಸ್  ಬಿ.1.617 ನ್ನು  ತಟಸ್ಥಗೊಳಿಸುವಲ್ಲಿ   ಯಶಸ್ವಿಯಾಗಿದೆ” ಎಂದು ಇತ್ತೀಚೆಗೆ ಹೇಳಿಕೆ ನೀಡಿರುವುದು  ಇಲ್ಲಿ ಉಲ್ಲೇಖನೀಯ.  

    ಜಾಗತಿಕ ಸವಾಲು

    ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ವೈರಸ್  ಸಾಮೂಹಿಕ ಹರಡುವಿಕೆಯನ್ನು ನಿಲ್ಲಿಸುವುದು ಒಂದು ಮುಖ್ಯ ಸವಾಲಾಗಿತ್ತು. ಎರಡನೆಯ ಅಲೆಯಲ್ಲಿ  ಸಮುದಾಯ ಪ್ರಸರಣವನ್ನು ತಡೆಯುವುದು   ಮಾತ್ರವಲ್ಲದೆ ಕೊರೊನಾವೈರಸ್ ಇನ್ನಷ್ಟು ರೂಪಾಂತರಕ್ಕೆ ಒಳಗಾಗುವುದನ್ನು  ತಡೆಹಿಡಿಯುವುದು ಒಂದು ದೊಡ್ಡ ಜಾಗತಿಕ ಸವಾಲಾಗಿದೆ.    ಈಗಾಗಲೇ ಡಬಲ್ ರೂಪಾಂತರವು ಸಮುದಾಯದಲ್ಲಿ ಶೀಘ್ರವಾಗಿ ಹರಡುವುದರಿಂದ ಮತ್ತು ರೋಗವನ್ನು ಹೆಚ್ಚು ತೀವ್ರಗೊಳಿಸುವ ಮೂಲಕ  ಹಾನಿಯನ್ನುಂಟುಮಾಡಿದೆ. ಆದರೆ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಕೊರೊನಾವೈರಸ್ ಇನ್ನೂ ಅಪಾಯಕಾರಿ ಮೂರನೇ ರೂಪಾಂತರಿಯಾಗಿ  ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.  

     ಲಸಿಕೆ ಅಭಿಯಾನ

    ರೂಪಾಂತರ ವೈರಸ್ ಜನರನ್ನು ಆಕ್ರಮಿಸುವ ಮೊದಲು ಲಸಿಕೆಯನ್ನು ಪಡೆಯಬೇಕು.   ಹೆಚ್ಚು ಹೆಚ್ಚು  ಜನರು ಲಸಿಕೆ ಪಡೆಯುತ್ತಿದ್ದಂತೆ  ವೈರಸ್ ಪ್ರಸರಣವು ಕಡಿಮೆಯಾಗಿ  ಅದು     ರೂಪಾಂತಗೊಳ್ಳುವ  ಪ್ರಕ್ರಿಯೆಗೆ  ಒಂದು ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಜವಾಬ್ದಾರಿಯುತ ಭಾಗವಹಿಸುವಿಕೆಯಿಂದ ಮಾತ್ರ ಇದು ಸಾಧ್ಯ. ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿದೆ; ಹಂತ ಹಂತವಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. (ಕೋವಿಡ್ -೧೯ ಲಸಿಕೆಗಾಗಿ  ನೋಂದಾಯಿಸಲು ಸರ್ಕಾರದ   ಈ ಕೆಳಗಿನ   ಲಿಂಕ್ ನ್ನು ಕ್ಲಿಕ್ ಮಾಡಬಹುದು.https://selfregistration.cowin.gov.in) ಪ್ರಸ್ತುತ, ಭಾರತದಲ್ಲಿ  ಎರಡು ಲಸಿಕೆಗಳು ಸಾರ್ವಜನಿಕರಿಗೆ ಲಭ್ಯವಿದೆ ಕೊವಾಕ್ಸಿನ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್  ಇಂಡಿಯಾ – ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಉತ್ಪಾದಿಸಿರುವ   ಕೋವಿಶೀಲ್ಡ್ ಲಸಿಕೆ.  ಇದರೊಂದಿಗೆ,  ರಷ್ಯಾದ  ‘ಸ್ಪುಟ್ನಿಕ್ ವಿ’ (Sputnik V)  ಲಸಿಕೆಗೂ  ಸರ್ಕಾರದ ಅನುಮೋದನೆ ದೊರೆತಿದ್ದು   ಮೇ 2021 ರ ಅಂತ್ಯದ ವೇಳೆ ಅದರ ನಿಯೋಜನೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ  ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಂಡಿರುವ ಇಸ್ರೇಲ್ ನಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ  ಗಮನಾರ್ಹವಾಗಿ ಇಳಿಮುಖವಾಗಿದೆ  ಎಂಬ ವರದಿ ಭಾರತದ  ಲಸಿಕೆ ಅಭಿಯಾನಕ್ಕೆ ಇನ್ನಷ್ಟೂ  ಪುಷ್ಠಿ ನೀಡಿದೆ.

    ಕೊರೊನಾಮುಕ್ತ ಸಮಾಜ ನಿರ್ಮಾಣದ ಅನಿವಾರ್ಯತೆ

    ಪ್ರಥಮ ಮತ್ತು  ಎರಡನೇ ಡೋಸ್ ಲಸಿಕೆ ಪಡೆದ  ನಂತರ ಅತಿಯಾದ ಆತ್ಮವಿಶ್ವಾಸದಲ್ಲಿ   ‘ನಾನು  ಸೇಫ್,  ನನಗೆ ಯಾವ ಕೊರೊನವೂ ತಾಗುವುದಿಲ್ಲ’ ಎಂದು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಲಸಿಕೆ ಹಾಕಿಸಿಕೊಂಡ ನಂತರ   COVID-19 ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಮಯ ತೆಗೆದುಕೊಳ್ಳುತ್ತದೆ. ಮುಖ್ಯವಾಗಿ,  ಲಸಿಕೆಗಳು ಎಷ್ಟು ಸಮಯದವರೆಗೆ ರಕ್ಷಣೆ ನೀಡುತ್ತವೆ ಎಂಬುದು ಇನ್ನೂ ತಿಳಿದಿಲ್ಲ. ಸುರಕ್ಷತೆಗಾಗಿ  ಸರ್ಕಾರಿ  ಮಾರ್ಗಸೂಚಿಗಳನ್ನು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲೇಬೇಕು. ವೈರಸ್   ವ್ಯಾಪಕವಾಗಿ ಹರಡಿ  ಹೆಚ್ಚು ಹೆಚ್ಚು ಜನರು   ಸೋಂಕಿತರಾದಾಗ   ರೂಪಾಂತರಗೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ.  ಆದುದರಿಂದ,  ಇನ್ನೂ ಬಲಿಷ್ಠ ರೂಪಾಂತರಿ ಕೊರೊನವೈರಸ್    ಸೃಷ್ಟಿಯಾಗುವುದನ್ನು ತಡೆಹಿಡಿಯಬೇಕಾಗಿದೆ.  ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ   ಸಮಸ್ಯೆ  ಮತ್ತಷ್ಟೂ  ಬಿಗಡಾಯಿಸಬಹುದು. 

    ಆರಂಭದಲ್ಲಿ  ಜನರು ಲಸಿಕೆ ಪಡೆಯಲು ಹಿಂಜರಿಕೆ ತೋರಿದರೂ  ಎರಡನೇ ಅಲೆಯ ಹೊಡೆತದಿಂದಾಗಿ ಹೆಚ್ಚಿನ  ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, 18-45 ವಯಸ್ಸಿನ 1.3 ಕೋಟಿ ಜನರು ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 139.12 ಜನಸಂಖ್ಯೆ ಇರುವ    ಭಾರತದಂತಹ ವಿಶಾಲ ರಾಷ್ಟ್ರದಲ್ಲಿ  ಅಷ್ಟೊಂದು ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದಿಸಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಸೀಮಿತ ಅವಧಿಯೊಳಗೆ ಸಂಪೂರ್ಣಗೊಳಿಸುವುದು  ಒಂದು ದೊಡ್ಡ ಸವಾಲು.  ಈ ಸವಾಲನ್ನು ಭಾರತವು ಯಶಸ್ವಿಯಾಗಿ ಎದುರಿಸುತ್ತದೆ ಎಂದು ಆಶಿಸೋಣ.  ನಮ್ಮ ನಮ್ಮ ಜಾಗ್ರತೆ ಮುಂದುವರಿಸೋಣ. ‘ಎಲ್ಲರೂ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತರು’ ಎಂಬ ಧ್ಯೇಯವನ್ನು  ಇಟ್ಟುಕೊಂಡು ಕೊರೊನಾಮುಕ್ತ ಸಮಾಜವನ್ನು  ನಿರ್ಮಿಸಲು  ನಾವೆಲ್ಲರೂ ಕೈಜೋಡಿಸಲೇಬೇಕು. 

    ರೂಪಾಂತರವು ಹೊಸ ರೂಪಾಂತರಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದರ ಅನಿಮೇಟೆಡ್ ವೀಡಿಯೊವನ್ನು ಇಲ್ಲಿ ನೋಡಬಹುದು:

    *ಹೆಚ್ಚಿನ ವಿವವರಗಳನ್ನು ತಿಳಿಯಲು ಇದೇ ವಿಭಾಗದಲ್ಲಿರುವ ಲೇಖಕರ ಈ ಹಿಂದಿನ ಲೇಖನಗಳನ್ನು ಓದಬಹುದು.

    ಮೂಗಿಗಿಂತ ಮೂಗುತಿಯೇ ಭಾರವಾಗಬಾರದು


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ  ಕನ್ನಡದ ಮೊದಲ ಲಕ್ಷಣ ಗ್ರಂಥ ‘ಕವಿರಾಜಮಾರ್ಗ’ ಕಾವ್ಯದ   ಎರಡನೆ ಪರಿಚ್ಛೇಧದಲ್ಲಿ ಉಲ್ಲೇಖವಾಗಿರುವ  ದೇಸೀ ವಾಕ್ಯವಿದು.  ಸಮಸಂಸ್ಕೃತ  ಪದಗಳನ್ನು ಲಘುಪದಗಳ ಮುಂದೆ ತಂದು ನಿಲ್ಲಿಸಿದರೆ ಅದು ಸುಖಕರವಲ್ಲ ಎಂದು ಕೃತಿಕಾರರು  “ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ” ಎಂಬ  ಮಾತಿನ ಮೂಲಕ  ವ್ಯಾಕರಣದ ಹಿನ್ನೆಲೆಯಲ್ಲಿ ಹೇಳುತ್ತಾರೆ.

    ಅಗತ್ಯಕ್ಕಿಂತ ಹೆಚ್ಚಾದರೆ ಮೂಗಿಗಿಂತ ಮೂಗುತಿಯೇ ಭಾರ  ಅನ್ನುವ ಹಾಗಾಗುತ್ತದೆ ಎಂಬ ಅಭಿಪ್ರಾಯವೂ ಇಲ್ಲಿ ಮೂಡುತ್ತದೆ. ಬಿಣ್+ ಪೊರೆ(ಹೊರೆ)  ಅಂದರೆ  ಭಾರೀ ಹೊರೆ ಎಂದರ್ಥ. ‘ಕೂಸು’ ಎಂದರೆ ಎಳೆಯ ಮಗು  ಏನೂ  ತಿಳಿದಿರುವುದಿಲ್ಲ. ಆಟವಾಡಿಕೊಂಡೇ ಕಾಲ ಕಳೆಯುತ್ತಿರುತ್ತದೆ ಅದಕ್ಕೆ  ಯಾವುದೇ ವಸ್ತುವಿನ ಭಾರವನ್ನಾಗಲಿ, ಜವಾಬ್ದಾರಿಯನ್ನಾಗಲೀ ಹೊರಲು ಸಾಧ್ಯವಾಗುವುದಿಲ್ಲ. ಅಂಥ ಮಗುವಿನ ತಲೆಯ ಮೇಲೆ ಭಾರವನ್ನು ಅಥವಾ ಗುರುತರ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವೇ? ಎಂಬ ಪ್ರಶ್ನೆ ಬಂದೇ ಬರುತ್ತದೆ.

    ಯಾವುದೇ  ಯಂತ್ರಕ್ಕಾಗಲಿ,  ತನ್ನ ಕ್ಷಮತೆಗಿಂತ  ಹೆಚ್ಚು ಭಾರವನ್ನು   ಹೊರಿಸಿದರೆ ಅದು ಸರಾಗವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಇರಬಹುದು ಇಲ್ಲವೇ ಅವಧಿಗಿಂತ ಮೊದಲೆ  ಕಾರ್ಯ ಸ್ಥಗಿತ ಮಾಡಬಹುದು. ಇದರಿಂದ ನಷ್ಟವೇ ಅಲ್ಲವೆ!   ಎಷ್ಟು ಕಾರ್ಯ ನಿರ್ವಹಿಸಲು ಸಾಮರ್ಥ್ಯವಿದೆಯೋ ಅಷ್ಟನ್ನು ಮಾತ್ರ ನೀಡುವುದು ಸೂಕ್ತ ಎಂಬುದು  ‘’ಕೂಸಿನ ತಲೆಯೊಳ್ ಬಿಣ್ಪೊರೆಯನ್ನಿಟ್ಟವೊಲಸುಖಕರಂ’’ ಎಂಬ ಮಾತಿನ  ಅರ್ಥ.

    ಕೂಸಿನ ತಲೆಯ ಮೇಲೆ ಅಧಿಕ  ಭಾರ ಹೊರಿಸುವುದು ಎಂದರೆ  ದುರ್ಬಲರ ಮೇಲೆ ದೌರ್ಜನ್ಯ ಎಸಗಿದಂತೆ, ಕಿರಿಯರ  ಮೇಲೆ ಬಲಪ್ರದರ್ಶನ  ಮಾಡಿದಂತೆ ಎಂಬ   ಅರ್ಥವೂ ಇಲ್ಲಿ ಹೊಳೆಯುತ್ತದೆ.  ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಯಕ್ಕೂ ಮೀರಿ ಕೂಸಿನ  ಮೇಲೆ ಅಧಿಕ ಕಲಿಕೆಯ ಭಾರ ಹೊರಿಸುವುದಿದೆ ಹಾಗೆ  ವಯಸ್ಸಿಗೆ ಮೀರಿದ್ದನ್ನು  ಕಲಿಕೆಗೆ ಹೇರಬಾರದು  ಎಂಬ ಸೂಕ್ಷ್ಮವನ್ನೂ ಇಲ್ಲಿ ಗಮನಿಸಬೇಕಾದದ್ದೇ.

    ಆಟಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಕಲಿಕಾ ಭಾರವನ್ನು ಹೊರಿಸಿದರೆ ಆ ಮಗು ಖಿನ್ನತೆಗೆ ಒಳಗಾಗಬಹುದು, ಸೃಜನಶೀಲತೆಯನ್ನು ಕಳೆದುಕೊಳ್ಳಬಹುದು ಇಲ್ಲವೆ ಆ ಮಗುವಿನ ಆಲೋಚನಾ ಸಾಮರ್ಥ್ಯ ಕುದುರೆಗೆ ಕಟ್ಟಿದ ಜೀನಿನಂತೆ ಸೀಮಿತವಾಗಬಹುದು  ಹಾಗಾಗಿ ಮಗುವಿಗೆ ಕಲಿಕೆಗೆ ಎಷ್ಟು ಅವಶ್ಯಕವೋ ಅಷ್ಟಷ್ಟನ್ನು ಹಿತಮಿತವಾಗಿ  ಒದಗಿಸುವುದು ಉತ್ತಮ  ಎಂಬರ್ಥ ಬರುತ್ತದೆ.   ಮಕ್ಕಳ ಮನಸ್ಸು ಮುಗ್ಧ ಅವುಗಳ ತಲೆಯ ಮೇಲೆ ಹೂಗೊಂಚಲನ್ನು ಇರಿಸಬೇಕೇ ವಿನಃ ಭಾರವಾದ ಕಲ್ಲನ್ನಲ್ಲ. ಕಲಿಯುವ ಮಕ್ಕಳ ಮನಸ್ಸು  ಮೃದುವಾಗಿರುತ್ತದೆ ಅದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಆಸೆಗಳನ್ನು, ಕನಸುಗಳನ್ನು ಒಟ್ಟಿಗೆ ಅವುಗಳ ಮೆಲೆ ಹೇರಿದರೆ  ಅದು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ”  ಎಂಬ ನುಡಿಗಟ್ಟಿಗೂ ಸಮವಾಗುತ್ತದೆ .

    ಯಾವುದೇ ವಾಹನ,  ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡರೂ ಅದರ ಕಾರ್ಯಕ್ಷಮತೆ ಇಷ್ಟೆ ಎಂದು ಬರೆದಿರುತ್ತಾರೆ ಮೀರಿದರೆ ತೊಂದರೆಯೇ ಅಲ್ವೆ. ಅದಕ್ಕೆ ಕೆಲವು ವಾಹನಗಳಲ್ಲಿ ‘ನಿಗದಿತ ‘ ಎಂಬ ಪದವನ್ನೂ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ minimum/maximum Capacity  ಎಂದೂ ಬರೆದಿರುತ್ತಾರೆ. ಒಟ್ಟಾರೆಯಾಗಿ  ಯಂತ್ರವೋ, ಮಗುವೋ, ಮನುಷ್ಯನೋ ಅವನ ವ್ಯಕ್ತಿಗತ ಸಾಮರ್ಥ್ಯ  ನೋಡಿ ಕಾರ್ಯಭಾರವನ್ನು  ಒದಗಿಸುವುದು ಉತ್ತಮ ಆಗ ಅವರಿಗೆ ಜವಾಬ್ದಾರಿ ನಿರ್ವಹಣೆ ಸುಲಭಸಾಧ್ಯವಾಗುತ್ತದೆ. ಒಳ್ಳೆಯ ಫಲಿತಾಂಶ ದೊರೆಯುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ

    ಹೂಡಿಕೆ ಚಾರಿಟಬಲ್‌ಗಿಂತ ಪ್ರಾಫಿಟಬಲ್‌ ಆಗಿರಲಿ.

    ಹೂಡಿಕೆಯನ್ನು ಮಾಡುವ ಮೊದಲು ಕಂಪನಿಯ ಗುಣಮಟ್ಟ, ಕಂಪನಿಯ ಚಟುವಟಿಕೆಯ ವಲಯ, ಆ ಚಟುವಟಿಕೆಗೆ ಇರುವ ವ್ಯಾವಹಾರಿಕ ಬೆಂಬಲ, ಕಂಪನಿಯ ಆಡಳಿತ ಮಂಡಳಿಯ ಮನೋಧರ್ಮ ವಿಶೇಷವಾಗಿ ಷೇರುದಾರರ ಬಗ್ಗೆ ಅವರಿಗಿರುವ ಕಾಳಜಿ (ಇದನ್ನು ಕಂಪನಿ ಪ್ರಕಟಿಸುವ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳಿಂದ ಮಾಪನ ಮಾಡಬಹುದು) ಮುಂತಾದವುಗಳನ್ನು ಪರಿಶೀಲಸಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವ ಎಚ್ ಡಿ ಎಫ್ ಸಿ ಆರಂಭವಾದುದು 1977 ರಲ್ಲಿ. ಈ ಕಂಪನಿ 1981-82 ರಲ್ಲಿ ರೂ.100 ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ ತದನಂತರ ಶೇ.7.50, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರೂ.100 ರ ಮುಖಬೆಲೆಯ ಷೇರು ಸುಮಾರು 2000 ದ ಇಸವಿಯವರೆಗೂ ಷೇರಿನ ಬೆಲೆ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ನಿಯತಕಾಲಿಕವಾಗಿ ಆದಾಯ ಗಳಿಸಿಕೊಡುವ ಕಂಪನಿಯಾಗಿ ಗುರುತಿಸಲ್ಪಟ್ಟಿತು. ಈ ಷೇರು ಆಗ ಕೊಂಡವರು ಮುಂದೆ ಮುಖಬೆಲೆ ಸೀಳಿಕೆ, ‌ ಆಕರ್ಷಕ ಡಿವಿಡೆಂಡ್, ಬೋನಸ್‌ ಷೇರು ವಿತರಣೆಗಳ ಮೂಲಕ ಉತ್ತಮ ಲಾಭವನ್ನು ಪಡೆದುಕೊಂಡರು.

    ಇದೇ ರೀತಿ 80 ರ ದಶಕದಲ್ಲಿ ನಿವೃತ್ತರು, ಸೀನಿಯರ್‌ ಸಿಟಿಜನ್ಸ್‌, ನಿಯತಕಾಲಿಕ ಆದಾಯವನ್ನವಲಂಬಿತರನೇಕರು ಕಂಪನಿಗಳಾದ ಟಾಟಾ ಪವರ್‌, ಟಾಟಾ ಹೈಡ್ರೋ, ಆಂದ್ರ ವ್ಯಾಲಿಯಂತಹ ಕಂಪನಿಗಳ ಷೇರುಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಕಂಪನಿಗಳ ಷೇರಿನ ಮುಖಬೆಲೆ ರೂ.100 ರಲ್ಲಿದ್ದು ಈ ಕಂಪನಿಗಳು ಪ್ರತಿವರ್ಷ ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್‌ ವಿತರಿಸುತ್ತಿದ್ದರು. ಇದು ಆಗಿನ ಬ್ಯಾಂಕ್‌ ಬಡ್ಡಿದರಕ್ಕಿಂತ ಹೆಚ್ಚಿದ್ದುದಲ್ಲದೆ, ಷೇರಿನ ಬೆಲೆಗಳು ಡಿವಿಡೆಂಡ್‌ ನಂತರ ಭಾರಿ ಕುಸಿತ ಕಂಡಾಗ ಹೂಡಿಕೆಗೆ ಆಕರ್ಷಣೀಯವಾಗಿದ್ದವು. ಷೇರಿನ ಬೆಲೆಗಳು ಕಡಿಮೆ ಬೆಲೆಯಲ್ಲಿದ್ದ ಕಾರಣ ಧೀರ್ಘಕಾಲೀನ ಹೂಡಿಕೆ ಅನಿವಾರ್ಯವಾಗಿತ್ತು. ಆಗ ಭಾರತೀಯ ಪೇಟೆಗಳು ವಿದೇಶೀ ಹೂಡಿಕೆದಾರರಿಗೆ ತೆರೆದುಕೊಂಡಿರದೆ ಕೇವಲ ಸ್ಥಳೀಯ ಹೂಡಿಕೆದಾರರಿಗೆ ಮಾತ್ರ ಅವಕಾಶ ಒದಗಿಸುತ್ತಿದ್ದವು.

    ತಾಂತ್ರಿಕತೆಯ ಅಭಾವ- ದೀರ್ಘಕಾಲೀನ ಪ್ರಭಾವ

    ಆಗಿನ ಸಂದರ್ಭದಲ್ಲಿ ಎಲ್ಲವೂ ಭೌತಿಕ ಕ್ರಿಯೆಗಳ ಮೂಲಕ ನಿರ್ವಹಿಸುವ ಪದ್ಧತಿಯಾಗಿತ್ತು. ಹಾಗಾಗಿ ಭೌತಿಕ ಷೇರುಪತ್ರಗಳನ್ನು, ಟ್ರಾನ್ಸ್‌ ಫರ್‌ ಫಾರಂಗಳೊಂದಿಗೆ ವರ್ಗಾವಣೆ ಸ್ಟಾಂಪ್‌ ಗಳನ್ನು ಲಗತ್ತಿಸಿ ಕಂಪನಿಗಳಿಗೆ ಕಳುಹಿಸಿದರೆ, ಅವು ಖರೀದಿದಾರರ ಹೆಸರಿಗೆ ವರ್ಗಾವಣೆಯಾಲು ಕೆಲವು ತಿಂಗಳುಗಳೇ ಬೇಕಾಗುತ್ತಿತ್ತು. ಈ ಕಾರಣದಿಂದ ಷೇರುಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆ ಎಂಬುದು ಹೆಚ್ಚಾಗಿ ಅಳವಡಿಕೆಯಾಗುತ್ತಿತ್ತು. ಅದಕ್ಕೆ ತಕ್ಕಂತೆ ಪೇಟೆಯಲ್ಲಿ ಖರೀದಿಸಿದ ಷೇರು ಕೊಂಡವರ ಕೈ ಸೇರಬೇಕಾದರೆ ಕೆಲವೊಮ್ಮೆ ತಿಂಗಳುಗಳೇ ಹಿಡಿಯುತ್ತಿತ್ತು. ಷೇರು ಮಾರಾಟ ಮಾಡಿದವರಿಗೆ ಹಣ ಕೈ ಸೇರಲು ಆಯಾ ವಿನಿಮಯ ಕೇಂದ್ರಗಳ ಚುಕ್ತಾಚಕ್ರ ( Clearing cycle) ಗಳನ್ನಾಧರಿಸಿ, ಒಂದು ವಾರ, ಎರಡು ವಾರ ಅಥವಾ ತಿಂಗಳು ಹೀಗೆ ಅಧಿಕ ಸಮಯ ಹಿಡಿಯುತ್ತಿತ್ತು. ಈಗಿನಂತೆ ತಾಂತ್ರಿಕತೆಯಾಧಾರಿತ ಸರಳೀಕೃತ ಪದ್ಧತಿ ಇರಲಿಲ್ಲ. ಹಾಗಾಗಿ ದೀರ್ಘಕಾಲೀನ ಹೂಡಿಕೆ ಎಂಬುದು ರಕ್ತಗತವಾದ ಪದ್ಧತಿಯಾಗಿತ್ತು.

    ಮತ್ತೊಂದು ಪ್ರಮುಖ ಅಂಶವೆಂದರೆ ಕಂಪನಿಗಳು ಈಗಿನಂತೆ ಪ್ರತಿಯೊಂದು ತ್ರೈಮಾಸಿಕದ ಫಲಿತಾಂಶಗಳನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಿಗೆ ನೀಡುವ ನಿಯಮವಿಲ್ಲದೆ, ಕೇವಲ ವರ್ಷಕೊಮ್ಮೆ ವಾರ್ಷಿಕವಾಗಿ ಅಂಕಿ ಅಂಶಗಳನ್ನು, ಬ್ಯಾಲನ್ಸ್‌ ಶೀಟ್‌ ಮತ್ತು ಲಾಭ- ನಷ್ಟದ ಲೆಕ್ಕವನ್ನು ನೀಡುತ್ತಿದ್ದ ಕಾರಣ ಷೇರಿನ ಏರಿಳಿತಗಳು ವಾರ್ಷಿಕ ಸಾಮಾನ್ಯ ಸಭೆಯ ಸಮಯದಲ್ಲಿ, ಡಿವಿಡೆಂಡ್‌, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದ ಕಾರ್ಪೊರೇಟ್‌ ಫಲಗಳ ಕಾರಣ ಬರುತ್ತಿದ್ದ ನಿಗಧಿತ ದಿನದ ಸಮಯದಲ್ಲಿ ಹೆಚ್ಚಾಗುತ್ತಿದ್ದವು. ಸಂಪರ್ಕಸಾಧನಗಳ ಕೊರತೆಯ ಕಾರಣ ಕಂಪನಿಗಳ ಸುದ್ಧಿ-ಸಮಾಚಾರಗಳು ಎಲ್ಲರಿಗೂ ಲಭ್ಯವಾಗುತ್ತಿರಲಿಲ್ಲ. ಕೇವಲ ಕೆಲವೇ ವಹಿವಾಟುದಾರರಿಗೆ ಇದು ಸುವರ್ಣಾವಕಾಶ ಕಲ್ಪಿಸಿಕೊಡುತ್ತಿತ್ತು. ಆದರೆ ಆಗಿನ ಸೀಮಿತ ಚಟುವಟಿಕೆಯ ಯುಗದಲ್ಲಿ ಬರುತ್ತಿದ್ದ ಐ ಪಿ ಒ ಗಳು ಆಕರ್ಷಕ ಬೆಲೆಗಳಲ್ಲಿ ವಿತರಣೆಯಾಗುತ್ತಿದ್ದ ಕಾರಣ ಅಲಾಟ್ಮೆಂಟ್‌ ಪಡೆದವರಿಗೆ ಹೆಚ್ಚಿನ ಲಾಭದಾಯಕವಾಗಿರುತ್ತಿತ್ತು. ಆಗಿನ ಕಂಟ್ರೋಲರ್‌ ಆಫ್‌ ಕ್ಯಾಪಿಟಲ್‌ ಇಶ್ಯೂಸ್‌ (C C I ) ಕಂಪನಿಗಳ ಐ ಪಿ ಒ ಗಳ ವಿತರಣೆ ಬೆಲೆಗಳನ್ನು ನಿಯಂತ್ರಿಸುತ್ತಿತ್ತು. ಎಲ್ಲಾ ವಿತರಣೆಗಳು ಫಿಕ್ಸಡ್‌ ಪ್ರೈಸ್‌ ನಲ್ಲಿರುತ್ತಿದ್ದವು.

    ಹೂಡಿಕೆ ಲಾಭಕಾಲೀನವಾದರೆ ಯಶಸ್ಸು

    ಆದರೆ ಈಗ ಎಲ್ಲವೂ ಬದಲಾಗಿದೆ. ಸ್ಟಾಕ್‌ ಎಕ್ಸ್‌ ಚೇಂಜ್‌ ನ ಎಲ್ಲಾ ಚಟುವಟಿಕೆಗಳೂ ಟೆಕ್ನಾಲಜಿ ಅಳವಡಿಕೆಯ ಕಾರಣ ಸರಳವಾಗಿ, ಸುಸೂತ್ರವಾಗಿ ನಡೆಯುವಂತಾಗಿದೆ. ಹಿಂದೆ ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಪೇ ಔಟ್‌ ಅಂದರೆ ವಿಲೇವಾರಿ ಹಣವು ಕೇವಲ ವಹಿವಾಟಿನ ನಂತರದ ಎರಡನೇ ದಿನವೇ ಲಭಿಸುವಷ್ಟು ವೇಗವಾಗಿ ಸಿಗುತ್ತಿದೆ.

    ಖರೀದಿಸಿದ ಷೇರುಗಳೂ ಸಹ ಅದೇ ಸಮಯಕ್ಕೆ ಡಿ ಮ್ಯಾಟ್‌ ಖಾತೆಗೆ ಜಮೆಯಾಗುತ್ತಿದೆ. ಭೌತಿಕ ಷೇರು ಸರ್ಟಿಫಿಕೇಟ್‌ ಗಳ ಬದಲಾಗಿ ಎಲ್ಲವೂ ಅಭೌತಿಕ ಅಂದರೆ ಡಿಮ್ಯಾಟ್‌ ರೂಪದಲ್ಲಾಗಿರುವುದರಿಂದ ಷೇರು ವರ್ಗಾವಣೆಯ ಫಜೀತಿಯೇ ಇಲ್ಲ. ಆದ್ದರಿಂದ ಚಟುವಟಿಕೆಯ ಗಾತ್ರವೂ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯ ಪೇಟೆಗಳೂ ಜಾಗತಿಕ ವಿತ್ತೀಯ ಸಂಸ್ಥೆಗಳಿಗೂ ತೆರೆದ ಕಾರಣ ಎಲ್ಲಾ ದಿಕ್ಕಿನಿಂದಲೂ ಹಣವು ಹರಿದು ಬರುತ್ತಿರುವುದರಿಂದ ಹೆಚ್ಚು ಹೆಚ್ಚು ಕೈಗಾರಿಕೆಗಳು, ಉದ್ಯಮಗಳು ಸ್ಟಾಕ್‌ ಎಕ್ಸ್‌ ಚೇಂಜ್‌ ವಹಿವಾಟಿಗೆ ಲೀಸ್ಟಿಂಗ್‌ ಮಾಡಿಕೊಂಡಿವೆ.

    ಸ್ಟಾಕ್‌ ಎಕ್ಸ್‌ ಚೇಂಜ್‌ – ವಹಿವಾಟಿನ ವೇದಿಕೆ

    ದೇಶದಲ್ಲಿದ್ದ ಪ್ರಾದೇಶಿಕ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ಹೂಡಿಕೆದಾರರ ಹಿತದ ದೃಷ್ಠಿಯಿಂದ ಜಾರಿಗೊಳಿಸಿದ ಬಿಗಿ ನಿಯಮಗಳ ಕಾರಣ ತಮ್ಮ ಅಸ್ಥಿತ್ವವನ್ನು ತ್ಯಜಿಸಿಕೊಂಡವು. ಹಾಗಾಗಿ ಈಗ ಸಧ್ಯ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ಮತ್ತು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ಪ್ರಮುಖವಾಗಿ ಷೇರುಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿ ಈ ಎರಡು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳು ತಮ್ಮ ಸಾರ್ವಭೌಮತ್ವವನ್ನು ಸ್ಪರ್ಧಾತ್ಮಕವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಸುಮಾರು 4,700 ಕಂಪನಿಗಳು ವಹಿವಾಟಿಗೆ ನೋಂದಾಯಿಸಿಕೊಂಡಿದ್ದರೆ, ನ್ಯಾಷನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಾಗುವ ವಹಿವಾಟಿನ ಗಾತ್ರ ಹೆಚ್ಚಾಗಿದೆ. ಒಂದರಲ್ಲಿ ವೇದಿಕೆಯ ತಳಹದಿ ವಿಸ್ತಾರವಾಗಿದ್ದರೆ, ಮತ್ತೊಂದರಲ್ಲಿ ವಹಿವಾಟಿನ ಗಾತ್ರ ಅತಿ ಎತ್ತರವಾಗಿದೆ.

    ದೀರ್ಘಕಾಲೀನ-ಅಲ್ಪಕಾಲೀನ ಯಾವುದು ಸೂಕ್ತ:

    ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ವಿಶ್ಲೇಷಣೆಗಳ ಕಾರಣ ಹೂಡಿಕೆಯನ್ನು ಲಾಭ ಗಳಿಸಲು ಬಳಸಿಕೊಳ್ಳುವ ಬದಲು ಖರೀದಿಸಿದ ಷೇರಿನ ವ್ಯಾಮೋಹಕ್ಕೊಳಗಾಗುವ ಸಂದರ್ಭವೇ ಹೆಚ್ಚಾಗುತ್ತಿದೆ. ಇದು ಹೂಡಿಕೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಹೂಡಿಕೆ ಮಾಡಿದವರಿಗೆ ಡಿವಿಡೆಂಡ್‌, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದವುಗಳ ಮೂಲಕ ಫಲ ನೀಡುವುದು ಕಾರ್ಪೊರೇಟ್‌ ಗಳ ನೀತಿಯಾಗಿದೆ. ಪರ್ಯಾಯವಾಗಿ ಪೇಟೆಯಲ್ಲಿ ವಹಿವಾಟಾಗುತ್ತಿರುವ ಷೇರುಗಳ ಬೆಲೆ ಏರಿಕೆ ಕಂಡಾಗ ಅವುಗಳನ್ನು ಮಾರಾಟಮಾಡಿ ಲಾಭವನ್ನಾದರೂ ಪಡೆದುಕೊಳ್ಳಬಹುದಾಗಿದೆ.

    ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಹೂಡಿಕೆದಾರರು ಷೇರಿನ ಬೆಲೆ ಅತಿ ಹೆಚ್ಚಾದಾಗ ಮಾರಾಟಮಾಡದೆ ಇದು ಉತ್ತಮ ಕಂಪನಿಯಾಗಿದ್ದು, ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ನಾನು ಮಾರಾಟ ಮಾಡುವುದಿಲ್ಲ. ಹೂಡಿಕೆಯಾಗಿ ಮುಂದುವರೆಸುತ್ತೇನೆ ಎಂಬ ಚಿಂತನೆಯಲ್ಲಿರುತ್ತಾರೆ. ಆ ಕಂಪನಿಯು ಉತ್ತಮ ಕಾರ್ಪೊರೇಟ್‌ ಫಲ, ವಿಶೇಷವಾಗಿ ಆಕರ್ಷಕ ಡಿವಿಡೆಂಡ್‌ ವಿತರಿಸುವುದಾದರೆ ಈ ನಿರ್ಧಾರವು ಸೂಕ್ತವಾದುದಾಗಿರುತ್ತದೆ.

    ಆದರೆ ಈಗಿನ ದಿನಗಳಲ್ಲಿ ಷೇರುಪೇಟೆಯ ಹೂಡಿಕೆಯು ಒಂದು ರೀತಿಯ ಚಾರಿಟಬಲ್‌ ಚಟುವಟಿಕೆಯಾಗುತ್ತಿರುವಂತಿದೆ. ಇದಕ್ಕೆ ಕೆಳಗಿನವು ನಿದರ್ಶನಗಳಾಗಿವೆ.

    ರೂ.2,000 ದ ಸಮೀಪವಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.7 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಕಂಪನಿಯು ಉತ್ತಮವಾದರೂ ಹೂಡಿಕೆಗೆ ಬರುವ ಲಾಭವಾದರೂ ಎಂತಹದು. ಈ ಷೇರಿನ ಬೆಲೆ ಏರಿಕೆ ಕಂಡಾಗ ಮಾರಾಟಮಾಡಲೂ ಸಹ ಒಲವು ತೋರದೆ ಹೂಡಿಕೆ ಮುಂದುವರೆಸುತ್ತಾರೆ. ಈ ಕಂಪನಿ ಪ್ರಕಟಿಸಿದ ನಾಲ್ಕನೆ ತ್ರೈಮಾಸಿಕ ಫಲಿತಾಂಶವು ತುಂಬಾ ಆಕರ್ಷಕವಾಗಿದೆ ಎಂದು ಹೆಚ್ಚಿನವರು ವಿಶ್ಲೇಷಿಸುತ್ತಾರೆ. ಆದರೆ ವರ್ಷದಿಂದ ವರ್ಷದ ಫಲಿತಾಂಶ ಮಾತ್ರ ಯಾರು ವಿಶ್ಲೇಷಿಸುತ್ತಿಲ್ಲ ಕಾರಣ ಇದು ಅಷ್ಠು ಸಮರ್ಪಕವಾಗಿಲ್ಲ.

    ಲೌರಸ್‌ ಲ್ಯಾಬ್‌ ಷೇರಿನ ಬೆಲೆ ರೂ.460 ರ ಸಮೀಪವಿದೆ. ಈ ಕಂಪನಿ ಉತ್ತಮ ಫಲಿತಾಂಶ ಪ್ರಕಡಿಸಿದರೂ ಘೋಷಿಸಿದ ಡಿವಿಡೆಂಡ್‌ ಮಾತ್ರ ಪ್ರತಿ ಷೇರಿಗೆ 80 ಪೈಸೆ ಮಾತ್ರ.

    ಆಕ್ಸಿಜೆನ್‌ ಬೇಡಿಕೆ ಹೆಚ್ಚಾಗಿರುವ ಕಾರಣ ಈ ಹಿಂದೆ ಬಿ ಒ ಸಿ ಲಿಮಿಟೆಡ್‌ ಎಂದಿದ್ದು ಈಗ ಲಿಂಡೇ ಇಂಡಿಯಾ ಎಂದಾಗಿರುವ ಕಂಪನಿ ರೂ.1830 ರಲ್ಲಿದ್ದು ಪ್ರತಿ ಷೇರಿಗೆ ರೂ.3 ರಂತೆ ಡಿವಿಡೆಂಡ್‌ ನೀಡಲಿದೆ.

    ಬಜಾಜ್‌ ಫೈನಾನ್ಸ್‌ ಕಂಪನಿ ಷೇರಿನ ಬೆಲೆ ರೂ.5,450 ರಲ್ಲಿದ್ದು ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್‌ ಪ್ರಕಟಿಸಿದೆ. ಈ ಷೇರಿನ ಬೆಲೆ ರೂ.4,361 ರಿಂದ ರೂ.5,525 ರ ಏರಿಳಿತವನ್ನು ಕೇವಲ ಒಂದೇ ತಿಂಗಳಲ್ಲಿ ಪ್ರದರ್ಶಿಸಿದೆ.

    ಲಸಿಕೆ ಉತ್ಪಾದನಾ ಕಂಪನಿ ಅಸ್ಟ್ರಾಜನೆಕ ಫಾರ್ಮ ಕಂಪನಿ ಷೇರಿನ ಬೆಲೆ ರೂ.ಆ3,900 ರ ಸಮೀಪದಲ್ಲಿದೆ. ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.3,005 ರಿಂದ ರೂ.4,500 ರ ಸಮೀಪಕ್ಕೆ ಜಿಗಿದು ನಂತರ ರೂ.3,900 ರ ಸಮೀಪದಲ್ಲಿದೆ. ಇಂತಹ ವಾತಾವರಣದಲ್ಲಿ ಹೂಡಿಕೆಯಾಗಿ ಉಳಿಸಿಕೊಂಡಲ್ಲಿ ಈ ಕಂಪನಿ ವಿತರಿಸುವ ಡಿವಿಡೆಂಡ್‌ ಮಾತ್ರ ರೂ.2 ಮಾತ್ರ.

    ಕಂಪನಿಗಳು ವಿತರಿಸುವ ಡಿವಿಡೆಂಡ್‌ ಗಿಂತ ಪೇಟೆಯಲ್ಲಿನ ಏರಿಳಿತಗಳನ್ನು ಲಾಭದಾಯಕ ಚಟುವಟಿಕೆಯಾಗಿ ಬಳಸಿಕೊಂಡಲ್ಲಿ ಹೂಡಿಕೆಯು ಯಶಸ್ವಿಯಾಗುತ್ತದೆ. ಇದೇ ರೀತಿಯ ವಹಿವಾಟಿನಿಂದ ಎಫ್‌ ಐ ಐ, ಡಿ ಐ ಐ ಗಳು, ಕೋಟಿಗಟ್ಟಲೆ ಸಂಪಾದನೆ ಮಾಡಿಕೊಳ್ಳುತ್ತಿವೆ. ಷೇರಿನ ಬಗ್ಗೆ ವ್ಯಾಮೋಹ ತ್ಯಜಿಸಿದಲ್ಲಿ ಮಾತ್ರ ಹೂಡಿಕೆಯು ನ್ಯಾಯಸಮ್ಮತಗೊಳಿಸಿದಂತಾಗುತ್ತದೆ.

    ಆಕ್ಸಿಸ್‌ ಬ್ಯಾಂಕ್‌, ಬಯೋಕಾನ್‌, ಸಿಂಜೀನ್‌ ಇಂಟರ್‌ ನ್ಯಾಶನಲ್‌, ಚೆನ್ನೈ ಪೆಟ್ರೊ ದಂತಹ ಅನೇಕ ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರೂ ಡಿವಿಡೆಂಡ್‌ ಪ್ರಕಟಿಸಲು ಅಸಮರ್ಥವಾಗಿವೆ. ಇದು ಹೂಡಿಕೆದಾರರ ಹಿತದಿಂದ ಸಮರ್ಥನೀಯವಲ್ಲ.

    ಹೂಡಿಕೆ ಹೇಗಿರಬೇಕು?

    ಷೇರುಪೇಟೆಯಲ್ಲಿ ನಡೆಸುವ ಚಟುವಟಿಕೆ ಹೂಡಿಕೆಯಾಗಲಿ ಅಥವಾ ವ್ಯವಹಾರಿಕತೆಯಿಂದಾಗಲಿ ಯಶಸ್ಸು ಕಂಡು ಫಲಪ್ರದವಾಗಲು ಅನುಸರಿಸಬೇಕಾದ ರೀತಿ ಹೇಗಿರಬೇಕೆಂದರೆ ಹೂಡಿಕೆ ಮಾಡಿದ ಷೇರಿನ ಬೆಲೆಯಲ್ಲೂ ಏರಿಕೆ ಕಾಣುವುದರೊಂದಿಗೆ ಆಕರ್ಷಕ ಡಿವಿಡೆಂಡ್‌ ನೀಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

    ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು.

    ರಿಲಯನ್ಸ್‌ ಇಂಡಸ್ಟ್ರೀಸ್‌ ಉತ್ತಮ ಕಂಪನಿಯೂ ಹೌದು, ಷೇರುದಾರರ ಹಿತಾಸಕ್ತ ಕಂಪನಿಯೂ ಹೌದಾದರೂ, ಷೇರಿನಲ್ಲಿ ಸಂಪಾದನೆಯಾಗಬೇಕೆಂದರೆ ಷೇರಿನ ಬೆಲೆ ರೂ.1,500 ರಿಂದ ರೂ1,800 ರ ಸಮೀಪದಲ್ಲಿದ್ದಾಗ ಖರೀದಿಸಿದಲ್ಲಿ ಈಗ ಅಲ್ಪಮಟ್ಟಿನ ಆದಾಯ ಗಳಿಸಲು ಸಾಧ್ಯವಾಗುತ್ತಿತ್ತು. ಆದರೆ ಷೇರಿನ ಬೆಲೆಯೇ ಗರಿಷ್ಠದಲ್ಲಿದ್ದಾಗ ಖರೀದಿ ಮಾಡಿದಲ್ಲಿ ಆ ಹೂಡಿಕೆಯು ಚಾರಿಟಬಲ್‌ ಶೈಲಿಯಾಗುತ್ತದೆಯೇ ಹೊರತು, ಲಾಭ ಗಳಿಕೆಯ ದೃಷ್ಠಿಯಿಂದ ಸರಿಯಲ್ಲ.

    ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಮಾರಾಟಮಾಡಿ ಹೊರಬಂದು, ಮತ್ತೊಮ್ಮೆ ಕುಸಿದಾಗ ಅದನ್ನೇ ಮರುಖರೀದಿ ಮಾಡಿದಲ್ಲಿ ಹೂಡಿಕೆಯ ಹೊರೆಯನ್ನು ತಗ್ಗಿಸಿಕೊಂಡಂತಾಗಿ ಹೂಡಿಕೆ ಫಲಪ್ರದವಾಗುತ್ತದೆ. ಇದೇ ರೀತಿ ಟಾಟಾ ಸ್ಟೀಲ್‌, ಆಕ್ಸಿಸ್‌ ಬ್ಯಾಂಕ್‌, ಎಸ್‌ ಬಿ ಐ, ಮಹೀಂದ್ರ ಅಂಡ್‌ ಮಹೀಂದ್ರ, ಐ ಟಿ ಸಿ, ಲಾರ್ಸನ್‌ ಅಂಡ್‌ ಟೋಬ್ರೊ, ಮುಂತಾದ ಅಗ್ರಮಾನ್ಯ ಕಂಪನಿಗಳೂ ಭಾರಿ ಏರಿಳಿತ ಪ್ರದರ್ಶಿಸುವ ಕಾರಣ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದ ಅವಕಾಶ ವಂಚಿತರಾಗುವುದು ಸರಿಯಲ್ಲ. REAL TIME MARKET STRATEGY ನಿಯಮ ಅಳವಡಿಸಿಕೊಂಡು ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಸುವ ಪ್ರಯತ್ನ ಒಳಿತು.

    ಹವಾಮಾನ ವೈಪರೀತ್ಯದಲ್ಲೂ ಭರ್ಜರಿ ಮಾವು ಇಳುವರಿ; ಸ್ವಯಂ ಮಾರುಕಟ್ಟೆ ಕಂಡುಕೊಂಡ ಮಾವು ಬೆಳೆಗಾರ

    ಕಳೆದ ಮೂರ್ನಾಲ್ಕು ವರ್ಷದಿಂದ ಹವಾಮಾನ ವೈಪರೀತ್ಯದ ಕಾರಣ ಮಾವು ಇಳುವರಿ ತೀವ್ರ ಕುಸಿತವಾಗುತ್ತಿರುವುದು ಮಧ್ಯ ಕರ್ನಾಟಕದ ಬಹುತೇಕ ಮಾವು ಬೆಳೆ ರೈತರ ಆತ್ಮವಿಶ್ವಾಸವನ್ನು ಕಸಿದಿದೆ. ಇದರ ಬೆನ್ನಲ್ಲೇ ಬಂದಷ್ಟು ಇಳುವರಿ ಮಾರುಕಟ್ಟೆ ತಲುಪುವ ಸಂಕ್ರಮಣ ಕಾಲಕ್ಕೆ ಕೋವಿಡ್ ಕರ್ಫ್ಯೂ, ಲಾಕ್ ಡೌನ್ ಗಳ ಹೇರಿಕೆ ಅವರನ್ನು ಮತ್ತಷ್ಟು ಕಂಗೆಡಿಸಿದೆ. ಇಂತ ಸ್ಥಿತಿಯಲ್ಲಿ ದಾವಣಗರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ರೈತ ತಿಪ್ಪೇಸ್ವಾಮಿ ತಮ್ಮದೇ ಪ್ರರಿಶ್ರಮದಲ್ಲಿ ಭರಪೂರ ಇಳುವರಿ ಹಾಗೂ ಲಾಭದಾಯಕ ಮಾರುಕಟ್ಟೆ ಸೃಷ್ಟಿಸಿಕೊಂಡು ಯಶಸ್ಸಿಗೆ ಮಾದರಿ ಎನಿಸಿದ್ದಾರೆ.

    ತಮ್ಮಐದು ಎಕರೆ ತೋಟದಲ್ಲಿ ಬೆಳೆದ ರುಚಿಕರ ತಳಿಯ ಬಾದಾಮ್ ಹಾಗೂ ಸಿಂಧೂರ ಮಾವಿನ ಹಣ್ಣುಗಳನ್ನು ಕಳೆದ ಮೂರು ವಾರದಿಂದ ದಾವಣಗೆರೆ, ಚಿತ್ರದುರ್ಗದ ಗ್ರಾಹಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಗೇಣಿ ಕೊಟ್ಟು ಕೈ ತೊಳೆದುಕೊಳ್ಳುವ ಪ್ರವೃತ್ತಿಯಲ್ಲಿರುವ ಅನೇಕ ರೈತರು ಅಲ್ಪ ಆದಾಯಕ್ಕೆ ತೃಪ್ತಿ ಪಡೆಯುತ್ತಾರೆ. ಆದರೆ ತಿಪ್ಪೇಸ್ವಾಮಿ ಮಾರುಕಟ್ಟೆಗೆ ಸಂಶೋಧನಾತ್ಮಕ ರೂಪು ನೀಡಿದ್ದಾರೆ. ಸ್ವಂತ ವಾಹನದಲ್ಲಿ ನಗರ ಪ್ರದೇಶದ ಬಡಾವಣೆಗಳಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಆಲ್ಪೋನ್ಸೋ ಹಾಗೂ ಸಿಂಧೂರ ತಳಿಯ ಮಾವಿನ ಹಣ್ಣುಗಳನ್ನು ಸ್ವಯಂ ಮಾರಾಟ ಮಾಡುವ ಮೂಲಕ ತಮ್ಮದೇ ಆದ ಮಾರುಕಟ್ಟೆ ನಿರ್ಮಿಸಿಕೊಂಡಿದ್ದಾರೆ. ಸ್ವ ಮಾರುಕಟ್ಟೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರುಕಟ್ಟೆ ವಿಸ್ತರಣೆಗೆ ಸೂಕ್ತ ಸಂಪರ್ಕ ಗ್ರಾಹಕರಿಂದಲೇ ಸಿಗುತ್ತಿದೆ. ಎರಡು ಕೆ.ಜಿ. ಗಿಂತ ಹೆಚ್ಚು ಬೇಡಿಕೆ ಬಂದರೂ ಮನೆ ಬಾಗಿಲಿಗೆ ತಲುಪಿಸುತ್ತಾರೆ.

    ನಿತ್ಯ ಕನಿಷ್ಟ 200 ಕೆ.ಜಿ.ಯಿಂದ 500 ಕೆ.ಜಿ.ವರೆಗೆ ಮಾವು ಮಾರಾಟವಾಗುತ್ತಿದೆ. ಪ್ರತಿ ಕೆ.ಜಿ. ಆಲ್ಪೋನ್ಸೊ(ಬಾದಾಮ್) ಮಾವು ಬೆಲೆ ರೂ.130 ಬೆಲೆ ನಿಗದಿಗೊಳಿಸಿದ್ದೇನೆ. ದಾವಣಗೆರೆ, ಚಿತ್ರದುರ್ಗ ನಗರಗಳಲ್ಲಿ ಒಟ್ಟಾರೆ ಒಂದು ವಾರಕ್ಕೆ 1 ಟನ್ ಮಾರುತ್ತಿದ್ದೇನೆ. ಮೂರು ವಾರಗಳಲ್ಲಿ 3 ಟನ್ ಮಾರಾಟವಾಗಿದೆ. ಮೇ 15ರ ವರೆಗೆ ಇನ್ನೂ 5 ವಾರ ನಮ್ಮದೇ ತೋಟದ ಮಾವು ಮಾರಾಟ ಮಾಡುವ ಭರವಸೆ ಇದೆ. ಶಿವಮೊಗ್ಗ ನಗರದಿಂದಲೂ ಬೇಡಿಕೆ ಬರುತ್ತಿದೆ. ಇವರ ತೋಟದಿಂದಲೇ ಸುಮಾರು 8 ಟನ್ ಏಕಾಂಗಿಯಾಗಿ ಮಾರುವ ಗುರಿ ಇದೆ. ರೂ 8ಲಕ್ಷ ಗಳಿಕೆಯ ಗುರಿ ಇದೆ ಎನ್ನುತ್ತಾರೆ ತಿಪ್ಪೇಸ್ವಾಮಿ.

    ದೊಡ್ಡಬ್ಬಿಗೆರೆ ಸಮೀಪ 5 ಎಕರೆ ಮಾವಿನ ತೋಟ. ಕೊಳವೆ ಬಾವಿಯಲ್ಲಿ ಅಲ್ಪ ನೀರು. ಮಾವಿಗೆ ನೀರಿನ ಬೇಡಿಕೆ ಕಡಿಮೆ. ವಿನೂತನ ಪ್ರಯೋಗಕ್ಕೆ ಮುಂದಾಗಿ ಇರುವ ಅಲ್ಪ ನೀರಿನಲ್ಲಿ ಕೃಷಿ ವಿಜ್ಞಾನಿ ಹಾಗೂ ಅಧಿಕಾರಿಗಳ ಮಾರ್ಗದರ್ಶನದಂತೆ ನೀರುಣಿಸಿಲಾಗಿತ್ತು. ಜುಲೈ ತಿಂಗಳಲ್ಲೆ ತೋಟ ಉಳುಮೆ ಮಾಡಿಸಿ, ಗುಣಿ ಸುತ್ತು ಮಾಡಲಾಗಿತ್ತು. ಪ್ರೂನಿಂಗ್ ಮೂಲಕ ರೆಂಬೆಗಳ ನಡುವೆ ಗಾಳಿ ಸುಳಿಯುವಂತೆ ಹೆಚ್ಚುವರಿ ರೆಂಬೆಗಳನ್ನು ತೆರವುಗೊಳಿಸಿದ್ದರು. ಬುಡದಿಂದ ಅಂತರ ಕಾಯ್ದುಕೊಂಡು, 5 ಪುಟ್ಟಿ ಕಾಂಪೋಸ್ಟ್ ಗೊಬ್ಬರ, 2 ಕೆ.ಜಿ. ಸುಣ್ಣ ಕೊಡಲಾಗಿತ್ತು. ಹಾಗಾಗಿ ನವೆಂಬರ್ನಲ್ಲಿ ಹೂ ಬಿಟ್ಟು ಜನವರಿಯಲ್ಲಿ ಈಚು ಕಾಣಿಸಿದ್ದವು. ಆನಂತರ ವಾರಕ್ಕೊಮ್ಮೆ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುವ ಮೂಲಕ ಇಳುವರಿ ವೃದ್ಧಿಸಿದೆ. ಅಕ್ಕಪಕ್ಕದ ತೋಟಗಳಲ್ಲಿ ಮಾವು ಬೆಳೆ ನೆಲಕಚ್ಚಿದೆ. ಜನವರಿಯಲ್ಲಿ ಬಿದ್ದ ಮಳೆಗೆ ಆಗ ಹೂವಾದ ತೋಟಗಳಲ್ಲಿ ಬೆಳೆ ಕುಸಿತದ ಪ್ರಮಾಣ ಅಧಿಕ. ಸಕಾಲದ ಪೋಷಣೆಯಿಂದ ಬೇಗ ಹೂವಾದ ಕಾರಣ ಜನವರಿ ತಿಂಗಳ ಮಳೆ ಬಿದ್ದರೂ ಕಾಯಿಗಟ್ಟಿದ ಕಾರಣ ಭರ್ಜರಿ ಇಳುವರಿ ಸಿಕ್ಕಿದೆ ಎನ್ನುತ್ತಾರೆ ಅವರು.

    ರೈತ ಕೃಷಿಯಲ್ಲಿ ವಿನೂತನ ಸಂಶೋಧನಾಧರಿತ ಪದ್ದತಿ ಅಳವಡಿಸಿಕೊಳ್ಳಬೇಕು. ಲಭ್ಯ ಸಂಪನ್ಮೂಲಗಳ ಬಳಕೆಗೆ ನಿಗಾವಹಿಸಬೇಕು. ಕರ್ಫ್ಯೂ ಹೇರಿಕೆಯಿಂದ ಹೊರರಾಜ್ಯಗಳಿಗೆ ಮಾವು ಸಾಗಣೆ ಕುಸಿದಿದೆ. ಬಾಹ್ಯ ಮಾರುಕಟ್ಟೆಯಲ್ಲಿ ಬಂದ್ ಆಗಿರುವ ಕಾರಣ ಸಗಟು ಮಾರಾಟದಲ್ಲಿ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಮಹಾರಾಷ್ಟ್ರ ರಾಜ್ಯಕ್ಕೆ ರವಾನೆಯಾಗುತ್ತಿದ್ದ ಮಾವು ಕೋವಿಡ್ ನಿಂದ ಹಿನ್ನಡೆ ಆಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗೇಣಿ ಕೊಟ್ಟು ಕೈ ತೊಳೆದುಕೊಳ್ಳುವ ಬದಲು ಸ್ವಂತ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಪರಿಶ್ರಮದಿಂದ ಲಾಭದಾಯಕವಾಗಬಲ್ಲದು ಎಂದು ಅವರು ಅನುಭವ ಬಿಚ್ಚಿೇಹಹಮಟ್ಟರು.

    ರಾಸಾಯನಿಕ ಔಷದೋಪಚಾರದಿಂದ ದೂರ ಉಳಿದು. ಸಾವಯವ ಕೃಷಿಯಲ್ಲಿ ಬೆಳೆದ ಮಾವು ಬೆಳೆಯನ್ನು ಸ್ವಾಭಾವಿಕವಾಗಿ ಹಣ್ಣಾಗಿಸಲು ದಾವಣಗೆರೆ ತರಳಬಾಳು ಕೃಷಿ ಸಂಶೋಧನಾ ಕೇಂದ್ರದಲ್ಲಿನ ಈಥಲೀನ್ ಅನಿಲ ಚೇಂಬರ್ ನಲ್ಲಿ ಸತತ 24 ಗಂಟೆ ಶೇಖರಿಸಲಾಗುವುದು. ಆನಂತರ ಉಗ್ರಾಣಕ್ಕೆ ಸ್ಥಳಾಂತರಿಸಲಾಗುವುದು. ಒಂದು ವಾರದಲ್ಲಿ ಬಂಗಾರದ ಬಣ್ಣದ ಹಣ್ಣಾಗುವ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ರಾಸಾಯನಿಕ ಪೌಡರ್ ಬಳಸದೆ ಆರೋಗ್ಯ ಪೂರ್ಣ ಮಾವಿನ ಹಣ್ಣಿ ಸ್ವಾದ ಸವಿಯಬಹುದು ಎನ್ನುತ್ತಾರೆ ತಿಪ್ಪೇಸ್ವಾಮಿ.

    ಅಪ್ಪ ಹೇಳಿದ ಸಿಂಧಿ ಕತೆ

    ಇದು ಅಮ್ಮನ ಮನೆಯ ತೋಟದೊಳಗಿರುವ ಬಸವಣ್ಣನ ಗುಡಿ.ಅಕ್ಕಪಕ್ಕದಲ್ಲಿ ಬಸವಣ್ಣ.ಮಧ್ಯದಲ್ಲಿ ಲಿಂಗರೂಪಿ ಶಿವ.
    ಈ ಮೂರೂ ದೇವರಿಗೂ ಒಂದು ಮುದ್ದಾದ ಹಿನ್ನೆಲೆ ಇದೆ.

    ನಾವು ಬಾಳಾ ಚಿಕ್ಕವರಿರುವಾಗಲೇ ಅಪ್ಪ ಅಮ್ಮನನ್ನು ಮಲಗಳಲೆಯ ಅಜ್ಜನ ಮನೆಯಿಂದ ಹಿಸ್ಸೆ ಕೊಟ್ಟು ಕಳಿಸಿದ್ರಂತೆ.ಆಗ ಅಜ್ಜನ ಮನೆಯಲ್ಲಿ ನಾಕಾರು ಜೊತೆ ಉಳುಮೆ ಮಾಡೊ ಎತ್ತುಗಳಿದ್ದವಂತೆ.ಗಾಡಿಗೂ ಬರುವ,ಉಳುಮೆಗೂ ತಿದ್ದಿದ ಜೋಡೆತ್ತುಗಳೂ ಎರಡು ಜೊತೆ ಇದ್ದವಂತೆ.

    ಸಿಂಧಿ-ಮಾಟ…. ಹಾಗೇ ಉಳುಮೆಗೂ ಗಾಡಿಗೂ ತಿದ್ದಿದ ಎತ್ತುಗಳ ಜೋಡಿ.
    ರುಪಾಯಿ ಬಣ್ಣದ, ನೋಡಲಿಕ್ಕೆ ಸಾಕ್ಷತ್ ಬಸವಣ್ಣನನ್ನೇ ಎರಕ ಹೊಯ್ದಷ್ಟು ಲಕ್ಷಣವಾಗಿದ್ದ ,ಬೆಳಗಿಂದ ಕತ್ತಲು ಇಳಿಯುವವರೆಗೂ ನೊಗ ಹೆಗಲ ಮೇಲಿದ್ದರೂ ಸೋಲದ,ಅವು ಸುಮ್ಮನಿದ್ದಾಗೆಲ್ಲಾ ನಾವು ಮಾಡುತ್ತಿದ್ದ ತಂಟೆಗಳನ್ನು ಸುಮ್ಮನೆ ಸಹಿಸುತ್ತಿದ್ದ ಮಮತಾಮಯಿ ಎತ್ತುಗಳು ಅವು.

    ಅಮ್ಮ ಅಪ್ಪನಿಗೆ ಹಿಸ್ಸೆಯ ಜಮೀನಿನ ಜೊತೆಗೆ ಬಂದಿದ್ದು ಈ ಸಿಂಧಿ ಮಾಟ.ದುಡಿಮೆಯಲ್ಲಿ ನೀ ಮೇಲಾ ನಾ ಮೇಲಾ ಅನ್ನುವ ಪೈಪೋಟಿಯಲ್ಲಿ ಸಿಂಧಿ ಮಾಟ ಮತ್ತು ಅಪ್ಪ ಅಮ್ಮ .
    ಗದ್ದೆ ಉಳಲು,ಹೊರೆ ಹೇರಲು,ಹೊಲದ ನೇರೂಪಿಗೆ ,ಮನೆ ಕಟ್ಟಲು ಬೇಕಾದ ಮರಮಟ್ಟು ಹೇರಲು ಸಿಂಧಿ ಮಾಟ ಹಗಲೂ ರಾತ್ರಿ ಹೆಗಲು ಕೊಟ್ಟವು.ಅಪ್ಪ ಅಮ್ಮನೂ ಸರೀಕರ ಜೊತೆಗೆ ಸಮಬಾಳ್ವೆ ಮಾಡೋ ಹಟದಿಂದ ಅಜ್ಜ ಕೊಟ್ಟಿದ್ದ ಸಣ್ಣ ತೋಟವನ್ನು ವಿಶಾಲವಾಗಿಸಿದರು.

    ನಾವು ಚಿಕ್ಕವರಿರುವಾಗ ಆ ಜೋಡೆತ್ತುಗಳೇ ನಮಗೆ ಆಟದ ಸರಕು.ನಾನು ,ಅಣ್ಣ ಮತ್ತು ನನ್ನ ತಮ್ಮ ಧರಣಿ ಪೈಪೋಟಿ ಮೇಲೆ ಸಿಂಧಿಮಾಟನ ಕಾಲಸಂದಿಯಿಂದ ನುಸುಳುತ್ತಿದ್ದೆವು.ಜೋಡು ಕೋಡುಗಳನ್ನು ಸುಮ್ಮಸುಮ್ಮನೆ ಎಳೆಯುತ್ತಿದ್ವಿ.ರಜ ಇದ್ದಾಗ ಮೇಯಿಸಲಿಕ್ಕೆ ಕೆಳಗಡೆ ಗದ್ದೆಗೆ ಹೊಡಕೊಂಡು ಹೋಗ್ತಿದ್ದ ದನಿನ ಹುಡುಗನಿಗೆ ನಾವೂ ಜೊತೆಯಾಗ್ತಿದ್ವಿ.ಹಗಲೆಲ್ಲಾ ದುಡಿದು ಬಂದ ಜೀವ ಅವು. ಮಕ್ಕಳಾಟಕ್ಕೆ ಬೇಸರಿಸದೆ ,ಒದೆಯದೆ, ಹಾಯದೇ ಸುಮ್ಮನೆ ಕಣ್ಣುಮುಚ್ಚಿ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿರುತ್ತಿದ್ದವು.ಹಗಲೆಲ್ಲಾ ಕೆಲಸ ಮಾಡುತ್ತಿದ್ದಿದ್ದು, ಸಂಜೆ ಗೊಂತಿಗೆ ಹಾಕಿದ್ದ ಬಿಳುಲ್ಲು ತಿನ್ನುವಾಗ ನಾವು ಕೊಡುತ್ತಿದ್ದ ತಂಟೆಗಳನ್ನು ಮೆಲುಕು ಹಾಕುತ್ತಲೇ ಸಹಿಸುತ್ತಿದ್ದಿದ್ದು.,ಇಷ್ಟೇ ಸದ್ಯ ನನ್ನ ನೆನಪಿನಲ್ಲಿ ಉಳಿದಿದೆ.

    ಅಪ್ಪ ಹೇಳುವ ಸಿಂಧಿಯ ಮತ್ತೊಂದು ಕಥೆ ಬಾಳಾ ಸೊಗಸಾಗಿದೆ.

    ಒಮ್ಮೆ ಸಿಂಧಿ ಏನೋ ತಪ್ಪು ಮಾಡಿತ್ತು ಅಂತ ಅಪ್ಪ ಸಂಜೆ ಒಂದೆರಡು ಏಟು ಕೊಟ್ಟಿದ್ರಂತೆ. ದನಕರುಗಳು ಹೊಡೆಸಿಕೊಂಡಾಗ ಕಣ್ಣೀರು ಸುರಿಸುತ್ತಾ ಮುಖದಲ್ಲಿ ನೋವನ್ನು ತೋರಿಸುತ್ತವೆ.
    ಅಪ್ಪ ಹೊಡೆದ ನೋವಿಗೆ ಅಳುತ್ತಿದ್ದ ನಮ್ ಸಿಂಧಿ ರಾತ್ರಿಯಾಗುತ್ತಲೂ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ಎರಡು ಕಿಮೀ ದೂರದಲ್ಲಿರುವ ಅಜ್ಜನ ಮನೆಯ ಕೊಟ್ಟಿಗೆಯಲ್ಲಿ ಹೋಗಿ ನಿಂತಿತ್ತಂತೆ.
    ಅಪ್ಪ ಮಾರನೆ ದಿನ ಊರೆಲ್ಲಾ ಹುಡುಕಿ ಅಜ್ಜನ ಮನೆಗೆ ಹೋದರೆ ಅಲ್ಲಿ ಹುಲ್ಲು ಕೂಡ ತಿನ್ನದೆ ಮುನಿಸಿಕೊಂಡು ಸುಮ್ಮನೆ ನಿಂತಿತ್ತಂತೆ.
    ಅಪ್ಪ ಸಮಾಧಾನ ಮಾಡಿದ ಮೇಲೆ ಮನೆಗೆ ಬಂದಿದ್ದಂತೆ.

    ಇಂಥಾ ಸಿಂಧಿ ಈ ಪ್ರಸಂಗ ಆದಮೇಲೆ ಮತ್ತೆಂದೂ ಆ ಸಾಹಸ ಮಾಡಲಿಲ್ಲ. ಅಪ್ಪನ ಸರಿಸಮಕ್ಕೆ ದುಡಿದು ಸಂಜೆಯಾಗುತ್ತಲೂ ಹಣ್ಣಾಗುತ್ತಿತ್ತು.

    ಅವತ್ತೊಂದು ದಿನ., ಹಗಲೆಲ್ಲಾ ನಟ್ಟಿಗದ್ದೆ ಉಳುಮೆ ಮುಗಿಸಿ,ರಾತ್ರಿ ಹುಲ್ಲು ತಿಂದು ಮಲಗಿದ್ದು ಹಾಗೇ ಕಣ್ಮುಚ್ಚಿಕೊಂಡಿದೆ…
    ತನ್ನ ಬದುಕಿನ ಕೊನೇ ಕ್ಷಣದವರೆಗೂ ತನ್ನ ಮನೆಗಾಗಿ,ಒಡೆಯನಿಗಾಗಿ ದುಡಿದ ಜೀವ ಸುಖವಾದ ಕೊನೆ ಕಂಡಿತ್ತು.ಮಾಟ ತನ್ನ ಗೆಳೆಯನ ಸಾವಿನ ನಂತರ ಸ್ವಲ್ಪ ದಿನ ಬದುಕಿದ್ದು ತೀರಿಹೋಯ್ತು.ಇವೆರಡೂ ಎತ್ತುಗಳು ಉಳಿಸಿಹೋದ ನೆನಪು, ಗಳಿಸಿದ ಆಸ್ತಿ ಮಾತ್ರ ಇಂದಿಗೂ ನಮ್ಮ ‌ಮನೆಯಲ್ಲಿ ಶಾಶ್ವತವಾಗಿದೆ.

    ಸಿಂಧಿಯನ್ನು ಸಮಾಧಿ ಮಾಡಿದ ಜಾಗದಲ್ಲಿ ಎತ್ತರಕ್ಕೆ ಕಟ್ಟೆ ಕಟ್ಟಿಸಿದರು ಅಪ್ಪ. ಹಬ್ಬ ಹುಣ್ಣಿಮೆಗಳಲ್ಲಿ,ಶುಭಕಾರ್ಯಕ್ಕೆ ಹೊರಡುವ ಮುನ್ನ ,ಏನಾದರೂ ಸಂಕಲ್ಪ ಮಾಡಿಕೊಳ್ಳುವಾಗ ಬಸವಣ್ಣನ ಪೂಜೆ ಮಾಡುವುದು ನಮ್ಮನೆಯಲ್ಲಿ ಅಂದಿನಿಂದಲೂ ನಡೆಯುತ್ತಿದೆ.ಹಬ್ಬದಲ್ಲಿ ಎಡೆ ಮಾಡ್ತಾರೆ ಅಮ್ಮ.

    ಎರಡು ಜೋಡಿ ಬಸವಣ್ಣನ ವಿಗ್ರಹ ತಂದು ಪುಟ್ಟ ಗುಡಿ ಕಟ್ಟಿದ ಮೇಲೆ ಬಸವಣ್ಣನ ಕಟ್ಟೆ ಇನ್ನೂ ಚಂದ ಆಯ್ತು.
    ನನ್ನ ಮಗ ಚಿಕ್ಕವನಿರುವಾಗ ಅಜ್ಜನ ಮನೆಗೆ ಬೇಸಿಗೆ ರಜಕ್ಕೆ ಹೋದಾಗೆಲ್ಲಾ ಬಸವಣ್ಣನ ಪೂಜೆ ಮಾಡಕೊಂಡು ಬರಲಿಕ್ಕೆ ಕಳಿಸ್ತಿದ್ರು.ಅಮ್ಮನ ನಂಬಿಕೆ ಪ್ರಕಾರ ಅವನು ಪೂಜೆ ಮಾಡಿದಾಗೆಲ್ಲಾ ಮಳೆಯಾಗ್ತಿತ್ತು.

    ಅದ್ಯಾವ ಕಾರಣಕ್ಕೋ ಗೊತ್ತಿಲ್ಲ. ಮಾಟನನ್ನು ಸಮಾಧಿ ಮಾಡಲಿಲ್ಲ. ಅದರ ಸುಂದರವಾದ ಕೊಂಬುಗಳು ಬಹಳ ವರ್ಷ ಮನೆಯ ಉಣುಗೋಲಿನಲ್ಲಿದ್ವು.

    ಈ ಎರಡು ಬಸವಣ್ಣಗಳ ನಡುವಿದೆಯಲ್ಲಾ ಲಿಂಗ.ಅದಕ್ಕೂ ಒಂದು ಮುಗ್ಧ ,ಮುದ್ದಾದ ಕಥೆಯಿದೆ.ಆಗ ನಾವು ಪ್ರೈಮರಿ ಶಾಲೆ ಕಲಿಯಲು ಊರಲ್ಲೇ ಇದ್ದ ಶಾಲೆಗೆ ಹೋಗ್ತಿದ್ವಿ.ಶನಿವಾರ ಭಾನುವಾರ ಬಂತೂಂದ್ರೆ ಅಮ್ಮ ಹಂಚಿದ್ದ ಕೆಲಸಗಳನ್ನು ಗುತ್ತಿಗೆ ತಗೊಂಡವ್ರ ಹಾಗೆ ಒಂದೇ ಉಸಿರಿನಲ್ಲಿ ಮುಗಿಸಿ ಅಮ್ಮ ಅಪ್ಪ ಕೆಲಸ ಮಾಡುತ್ತಿದ್ದ ತೋಟದ ನಡುರೋಡಿಗೆ ಹೋಗಿ ಅಲ್ಲಿ ಸಿಕ್ಕುವ ಸೌದೆ ,ಕಲ್ಲುಗುಂಡು, ಸೊಪ್ಪು, ಹೂವುಗಳಿಂದ ಆಟ ಆಡ್ತಿದ್ವಿ.ನಾವು ಆಡ್ತಿದ್ದ ಆ ದಾರಿಯಲ್ಲಿ ಒಂಥರಾ ಕೇಸರಿಕಪ್ಪು ಮಿಶ್ರಿತ ಬಣ್ಣದ ಕಲ್ಲುಗಳು ರಸ್ತೆಯಲ್ಲಿ ಎದ್ದಿರುತ್ತಿದ್ದವು.
    ಒಂದಿನ ಹೀಗೇ ಆಡುವಾಗ ಈಗ ಬಸವಣ್ಣನ ನಡುವಿರುವ ಈ ಲಿಂಗ ನಮಗೆ ಆಟಕ್ಕೆ ದಕ್ಕಿದ್ದು.ನಾವು ಈ ಗುಂಡಗಿನ ಕಲ್ಲನ್ನು ಈಶ್ವರ ಅಂತ ಕಲ್ಪಿಸಿ ಪೂಜೆಯ ಆಟ ಆಡಿದ್ದೇ ಆಡಿದ್ದು.

    ಅದಾದ ಮೇಲೆ ಅದು ಥೇಟು ಲಿಂಗದಂತೇ ಅನಿಸಿದ ಕಾರಣ ಬಸವಣ್ಣನ ಕಟ್ಟೆ ಮೇಲಿಟ್ಟು ಶಿವಸ್ವರೂಪಿಯಾಗಿ ಪೂಜೆ ನಡೆಸಲಾರಂಬಿಸಿದ್ರು ಅಪ್ಪ ಅಮ್ಮ.. ಚಿಕ್ಕಂದಿನಲ್ಲಿ ನಂಗೆ,ಅಣ್ಣಂಗೆ,ಧರಣಿಗೆ ಈ ಲಿಂಗ ಪ್ರತಿಷ್ಟಾಪನೆಯ ಪ್ರಸಂಗದಿಂದಾಗಿ ನಾವು ಬಾಳಾ ಬಾಳಾ ವಿಶೇಷ ಅನಿಸ್ತಿತ್ತು.ಅದೂ ಅಲ್ಲದೆ ಸ್ವತಃ ಶಿವನೇ ಬಂದು ನಮ್ಮ ಕೈಗೆ ತಾನಾಗಿಯೇ ಸಿಕ್ಕಿ ಆಟ ಆಡಿಸಿಕೊಂಡು ಪೂಜಿಸಿಕೊಳ್ಳ ತೊಡಗಿದ್ದರಿಂದ ನಾವು ಬಾಳಾ ಅದೃಷ್ಟವಂತರು ಅಂತಲೂ ಅನಿಸ್ತಿತ್ತು.

    ಇನ್ನು ಬಸವಣ್ಣನ ಪಕ್ಕ ಹಲಸಿನ ಮರ ಇದೆಯಲ್ಲಾ.ಅದರ ಬುಡದಲ್ಲಿ ಒಂದು ಪುಟಾಣಿ ಕಟ್ಟೆ ಇದೆ.ಅದು ಅಂಜನೇಯ ಸ್ವಾಮಿ.
    ಇದಕ್ಕೂ ಒಂದು ಹಿನ್ನೆಲೆ ಇದೆ. ಬಹುಶಃ ಮೂರು ದಶಕದ ಹಿಂದಿನ ಕಥೆ.ಆಗ ನಮ್ಮ ಭಾಗದಲ್ಲಿ ಮಂಗಗಳ ಕಾಟ ಇರಲಿಲ್ಲ. ಇನಫ್ಯಾಕ್ಟ್ ನಾವು ಚಿಕ್ಕಂದಿನಲ್ಲಿ ಮಂಗಗಳನ್ನು ನೋಡಿದ್ದೇ ಧರ್ಮಸ್ಥಳದಲ್ಲಿದ್ದ ಝೂನಲ್ಲಿ.

    ಹೀಗಿದ್ದಾಗ ಅಕಸ್ಮಾತ್ ಒಂದಿನ ನಮ್ಮ ಮನೆಯ ಹಿಂದುಗಡೆ ಇದ್ದ ನೇರಳೆ ಮರದಲ್ಲಿ ಬಳಲಿದ್ದ ಮಂಗವೊಂದು ಬಂದಿತ್ತು. ಬರುವಾಗಲೇ ಅದಕ್ಕೇನೋ ತೊಂದರೆ. ಯಾರೋ ಹೊಡೆದೋ,ಅಥವಾ ಗಾಯದಿಂದಲೋ ನರಳುತ್ತಿದ್ದ ಅದು ಮಧ್ಯಾಹ್ನದ ಹೊತ್ತಿಗೆ ಕಾಣಲಿಲ್ಲ. ಏನಾಯ್ತು ಅಂತ ಅಪ್ಪ ಹೋಗಿ ನೋಡುವಾಗ ಮರದ ಬುಡದಲ್ಲಿ ಅದರ ಪ್ರಾಣವಿಲ್ಲದ ದೇಹ ಕಂಡಿತು.ಅವೊತ್ತು ನಮಗೆಲ್ಲಾ ತುಂಬಾ ದುಃಖ. ಎಂದೂ ಮನೆಯ ಬಳಿ ಬಾರದ ಮಂಗ ಇವತ್ತು ಬಂದು ಇಲ್ಲಿ ಪ್ರಾಣ ಬಿಟ್ಟಿದೆ ಎಂದರೆ ಏನೋ ಋಣವಿರಬೇಕು ಎನಿಸಿತ್ತು ಅಪ್ಪನಿಗೆ.
    ಅದನ್ನು ನಮ್ ಬಸವಣ್ಣನ ಕಟ್ಟೆ ಬಳಿಯಲ್ಲೇ ಸಮಾಧಿ‌ ಮಾಡಿ ಅದಕ್ಕೊಂದು ಪುಟಾಣಿ ಕಟ್ಟೆ ಕಟ್ಟಿ ಪೂಜಿಸಲಾರಂಬಿಸಿದರು.

    ಪ್ರತಿ ಬಾರಿ ಬಸವಣ್ಣನ ಪೂಜೆಗೆ ಹೋದಾಗಲೂ ಮನಸ್ಸು ನೆನಪಿನ ತೆಪ್ಪದಲ್ಲಿ ತೇಲಿಹೋಗುತ್ತದೆ. ಅಮ್ಮನ ‌ಮನೆಯಿಂದ ಇನ್ನೂರು ಹೆಜ್ಜೆ ದೂರ ಇರುವ‌ ಈ ಬಸವಣ್ಣನ ಕಟ್ಟೆ ನಮಗೆ ಆಪದ್ಭಾಂದವ.ಅಮ್ಮ ವಾರದಲ್ಲಿ ನಾಕಾರು ವಿಶೇಷ ದಿನಗಳನ್ನು ಮಾಡಿಕೊಂಡು ಬಸವಣ್ಣನಿಗೆ ಪೂಜೆ ಮಾಡ್ತಾರೆ.ಅಮ್ಮನ ನಂಬಿಕೆ ಮತ್ತು ಭಕ್ತಿಗೆ ಬಸವಣ್ಣನೂ ಅಂಜನೇಯನೂ ಮಾರುಹೋಗಿರುವುದು ನಿಜವೇ.

    ಇವತ್ತು ಬಸವಣ್ಣನಿಗೂ ಅಂಜನೇಯನಿಗೂ ಹಣ್ಣುತುಪ್ಪ ಇತ್ತು.
    ಯಾವಾಗಲೂ ಮನೆಯ ಬಿಡಿ ಹೂವುಗಳಿಂದಲೇ ಅಲಂಕೃತವಾಗ್ತಿದ್ದ ನಮ್ ಬಸವಣ್ಣನಿಗೆ ಇವತ್ತು ಪೇಟೆಯ ಸುಗಂಧರಾಜದ ಹಾರ.
    ಅಂಜನೇಯನಿಗೆ ಬಣ್ಣದ ಸೇವಂತಿಗೆ.ಅಲಂಕಾರ ಮುಗಿದ ಮೇಲೆ ದೇವರು ದೃಷ್ಟಿ ತಾಕುವಷ್ಟು ಚಂದ ಕಾಣ್ತಿತ್ತು.

    ನಂಗೆ ಯಾವಾಗಲೂ ಅನಿಸುವುದು. ನಮಗಿದ್ದ ಸಮೃದ್ಧ ಬಾಲ್ಯ,ನಾವಾಡಿದ ಬದುಕಿಗೆ ಹತ್ತಿರವಿದ್ದ ಮಕ್ಕಳಾಟಗಳು ಇಂದಿನ ಪೀಳಿಗೆಗೆ ಎಂದೂ ಸಿಗಲಾರದು.ಹೀಗೆ ಹಳಹಳಿಸುವಾಗೆಲ್ಲಾ ಈ ಯೋಚನೆ ಸರಿಯಲ್ಲ ಅಂತಲೂ ಅನಿಸ್ತದೆ. ‘ಪ್ರತಿ ಕಾಲವೂ ಆಯಾ ಕಾಲಕ್ಕನುಸಾರ ಅತೀ ನವೀನವೂ ಅತ್ಯಂತ ಪುರಾತನವೂ ಆಗಿರುತ್ತದೆ’ಎನ್ನುವುದನ್ನು ನೆನಪಿಸಿಕೊಳ್ತಿನಿ.

    ಪ್ರಕೃತಿಯಲ್ಲಿನ ಪ್ರತಿಯೊಂದರಲ್ಲೂ ದೈವತ್ವ ಕಾಣುವ ಅಪ್ಪ ಅಮ್ಮ ನಮಗೆ ಹಾಕಿಕೊಟ್ಟ ಮೇಲ್ಪಂಕ್ತಿ ನಿಜಕ್ಕೂ ಒಂದು ಚಂದದ‌ ಹಂಬಲನೆಸ್ ಅನ್ನು ಕೊಟ್ಟಿದೆ ನಮಗೆ ಎನಿಸುತ್ತದೆ.

    ಮರುಜನ್ಮದ ಥಿಯರಿ ಪ್ರಕಾರ ನಮ್ ಸಿಂಧಿ‌ಮಾಟ ಈಗ ಈ ಜನ್ಮದಲ್ಲಿ ಮಹಾಪುರುಷರಾಗೇ ಹುಟ್ಟಿರುತ್ತವೆ.ಇದಂತೂ ನಿಶ್ಚಿತ.
    ಇನ್ನು ಅಂಜನೇಯ ಅಮ್ಮನ ಮನೆಯನ್ನು ಅಗೋಚರವಾಗಿ ಕಾಪಾಡ್ತಿರಬಹುದು .

    ಹೀಗೆ ನಂಬುವುದರಲ್ಲಿ ಎಷ್ಟು ನಿರಾಳವಿದೆ ಎನ್ನುವುದನ್ನು ಅನುಭವಿಸಿಯೇ ತೀರಬೇಕು.
    ..
    ಅಪ್ಪ ಮತ್ತೂ ಸಿಂಧಿ ಕತೆ ಹೇಳ್ದಾಗ ಮತ್ತಷ್ಟು ಬರೀತಿನಿ.ಈಗ ಸಾಕು.

    ಅಮರ ಅಕ್ಕಮಹಾದೇವಿ


    ಇಂದು ಕನ್ನಡದ ಮೊದಲ ಕವಯತ್ರಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿ


    ಸುಮಾ ವೀಣಾ

    ವಚನ ಸಾಹಿತ್ಯಾಕಾಶದ ಉಜ್ವಲನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ ಹಾಗೆ ಅದರ ಜಂಜಡದಲ್ಲಿ ಸಿಲುಕದೆ ತಾವರೆಯ ಎಲೆಯ ಮೇಲಿನ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವಳು.

    ‘ಸಾಮಾಜಿಕ ಪ್ರಭುತ್ವ’ ಮತ್ತು ‘ರಾಜಪ್ರಭುತ್ವ’ ಎರಡನ್ನೂ ಏಕಕಾಲಕ್ಕೆ ದಿಕ್ಕರಿಸಿದವಳು. ಅರ್ಥಾತ್ ‘ಅಂಗಭಾವ’ವನ್ನು ತ್ಯಜಿಸಿ ‘ಲಿಂಗಭಾವ’ವನ್ನು ಬೆಳೆಸಿಕೊಂಡವಳು. ಅಕ್ಕನ ವಚನಗಳು ಕಾ್ವ್ಯದ ದೃಷ್ಟಿಯಿಂದಲೂ ಅಲಂಕಾರ,ದೃಷ್ಟಾಂತಗಳಿಂದ ಕೂಡಿದ್ದು ಸಂಕೀರ್ಣವಾಗಿ ಹಾಗು ಸಂಗತದಿಂದ ಕೂಡಿವೆ.

    ಉಡತಡಿಯಲ್ಲಿ ನಿರ್ಮಿಸಿರುವ ಅಕ್ಕಮಹಾದೇವಿಯವರ ಪ್ರತಿಮೆ / ಕೃಪೆ : ವಿಕಿಪಿಡಿಯಾ

    ನಮಗೆ ದೊರೆತಿರುವ ಅಕ್ಕನ ಒಂದೊಂದು ವಚನಗಳು ಒಂದೊಂದು ಒಂದೊಂದು ಅಣಿಮುತ್ತುಗಳು.ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಕೈದೀವಿಗೆಗಳಾಗಿವೆ. ಮುಂಗಾರಿನ ಸಂದರ್ಭದಲ್ಲಿ ಬೀಳುವ ವಾರಿಕಲ್ಲು ಅರ್ಥಾತ್ ಆಲಿಕಲ್ಲಿನ ಹಾಗೆ ಮನಸ್ಸನ್ನು ಉಲ್ಲಾಸದಿಂದ ಪುಟಿದೇಳಿಸುವ   ಅಕ್ಕನ ವಚನವೊಂದನ್ನು  ಆಕೆಯ ಜಯಂತಿಯಂದು ನೋಡೋಣ!

     ಮುತ್ತು  ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,

    ಉಪ್ಪು ನೀರಲ್ಲಾಯಿತ್ತು

     ಉಪ್ಪು ಕರಗಿತ್ತು ವಾರಿಕಲ್ಲು ಕರಗಿತ್ತು

    ಮುತ್ತು ಕರಗಿದುದನಾರೂ ಕಂಡಿಲ್ಲ

     ಈ ಸಂಸಾರಿ ಮಾನವರು  ಲಿಂಗವ ಮುಟ್ಟಿ ಭವಭಾರಿಗಳಾದರು

    ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ

    ಚೆನ್ನಮಲ್ಲಿಕಾರ್ಜುನಯ್ಯಾ

    ಜಗತ್ತಿನಲ್ಲಿ  ಯಾವುದು ನಿತ್ಯನಿರಂತರ ಎಂದು ಹೇಳಲು ಅಕ್ಕ  ಅದ್ಭುತ ಕೊಟ್ಟಿರುವ ಉಪಮೆಗಳನ್ನು ಇಲ್ಲಿ ನೋಡಬಹುದು.

    ಮುತ್ತು,ವಾರಿಕಲ್ಲು,ಉಪ್ಪು  ಇವುಗಳ ಮೂಲ  ನೀರು  ಆದರಿವುಗಳ ಆಯುಷ್ಯ ಕ್ಷಣ, ತಿಂಗಳುಗಳು, ವರ್ಷಗಳು .  ವಾರಿಕಲ್ಲು ಅಂದರೆ ಆಲಿಕಲ್ಲು ಭೂಮಿಗೆ ಬಿದ್ದೊಡನೆ ಕರಗಲಾರಂಭಿಸುತ್ತದೆ ಇನ್ನೇನು ತಿನ್ನೋಣ ! ಎನ್ನುವಷ್ಟರಲ್ಲಿ ಕೈಜಾರಿಹೋಗುತ್ತದೆ, ಹಾಗೊಂದು  ವೇಳೆ ತಿಂದರೂ ಕ್ಷಣಗಳಲ್ಲಿ ಬಾಯಲ್ಲೇ ಕರಗಿ ಹೋಗುತ್ತದೆ. 

    ಅಂತೆಯೇ ಲಕ್ಷೋಪಲಕ್ಷ ಜನರು ಜಗತ್ತಿನಲ್ಲಿ ಹುಟ್ಟುತ್ತಾರೆ  ವಾರಿಕಲ್ಲಿನಂತೆಯೆ  ಬೇಗನೆ ಕರಗಿಯೇ  ಹೋಗುತ್ತಾರೆ .  ಸ್ವಲ್ಲ  ಕಾಲವಿದ್ದು ಕರಗುವುದು ಉಪ್ಪು  ಕೆಲವರು ಸಾಮಾಜಿಕ ಜೀವನದಲ್ಲಿದ್ದು  ಭವದ ರಾಗ- ದ್ವೇಷಗಳಿಗೆ ಒಳಗಾಗಿ   ಸುಳ್ಳು -ತಟವಟಿಕೆ ಮಾಡಿಕೊಂಡೇ ಇದ್ದುಬಿಡುತ್ತಾರೆ.   ಕೆಲ ಸಮಯಾನಂತರ ಹೇಳ ಹೆಸರಿಲ್ಲದಂತೆ ಅವರೂ ಕರಗಿ ಹೋಗುತ್ತಾರೆ.   ಆದರೆ ಮಹಾತ್ಮರು ನೀರಿನಲ್ಲಿಯೇ ಹುಟ್ಟುವ ಮುತ್ತು ಪರಿಪೂರ್ಣವಾಗಿ ಶಾಶ್ವತವಾಗಿ ಇರುವಂತೆ   ತಮ್ಮ ಕೆಲಸಗಳ ಮೂಲಕ   ಇದ್ದುಬಿಡುತ್ತಾರೆ.

    ಮಹಾತ್ಮರ ಹುಟ್ಟು  ಹಾಗೆಯೇ ತನ್ನ ಸುತ್ತ ಮುತ್ತಲಿನವರನ್ನು ತನ್ನ ಸಿದ್ಧಾಂತಗಳಿಂದ  ಸೆಳೆದು ತಿದ್ದುವ ತೀಡುವ  ಪ್ರಯತ್ನ ಮಾಡಿ ಭೌತಿಕ ಶರೀರ ಧಾಟಿದ ಮೇಲೆಯೂ  ಪ್ರಾತಃಸ್ಮರಣೀಯರಾಗುತ್ತಾರೆ. ವಚನದ ಮುಂದುವರೆದ  ಭಾಗದಲ್ಲಿ ಅಕ್ಕಮಹಾದೇವಿ ‘ಭವಭಾರಿಗಳು’  ಅಂದರೆ ಲೌಕಿಕ ಜೀವನಾಸಕ್ತರು ಎನ್ನುತ್ತಾರೆ.  ಪ್ರಾಪಂಚಿಕ ಜೀವನದಲ್ಲಿ ಮುಳುಗಿದ್ದು ಕಡೆಗೆ ಉಪ್ಪಿನ ಹಾಗೆ ಹೆಸರಿಗಿಲ್ಲದಂತೆ  ಜೀವನವನ್ನು ವ್ಯಯಿಸಿಕೊಂಡೇ ದುಃಖದಲ್ಲೇ ಕರಗಿ ಹೋಗುತ್ತಾರೆ.  ಆದರೆ ನಾನು ಈ ಮನುಷ್ಯ ಜನ್ಮದಲ್ಲಿ ಇದ್ದರೂ ಕೂಡ  ಚೆನ್ನಮಲ್ಲಿಕಾರ್ಜುನನ  ನೆನಹಿನಲ್ಲಿ ,ಉಲುಹಿನಲ್ಲಿ   ಧೃಡಮನಸ್ಕಳಾಗಿ ಅವನದೇ ಧ್ಯಾನದಲ್ಲಿ ತೊಡಗಿದ್ದೇನೆ ಅನದೇ ಹೆಸರಿನಲ್ಲಿ   ಇಷ್ಟೆಲ್ಲಾ  ಚರ್ಚಿಸಿದ ನಂತರ  ನೀರಲ್ಲಾದ ಮುತ್ತಿನಂತೆ  ಅಕ್ಕನೂ ಅಮರಳೆ ಅಲ್ವೆ!

    ಮುಖ್ಯ ಚಿತ್ರ :ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುತಡಿಯಲ್ಲಿರುವ ದೇವಾಲಯ/ ಚಿತ್ರ ಕೃಪೆ: ವಿಕಿಪಿಡಿಯಾ

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ ಪರೀಕ್ಷೆಗಳು ಮುಂದಕ್ಕೆ

    • ರಾಜ್ಯಾದ್ಯಂತ ಏಪ್ರಿಲ್ 27ರ ರಾತ್ರಿಯಿಂದ 14 ದಿನ ‘ಕೊರೋನಾ ಕರ್ಫ್ಯೂ’ ಜಾರಿ ಹಿನ್ನಲೆಯಲ್ಲಿ‌ ನಾಳೆಯಿಂದ- ಏಪ್ರಿಲ್ 27- ನಡೆಯಬೇಕಿದ್ದ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.

    ಈ ಬಗ್ಗೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು;  ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೊರೋನಾ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ಕೊರೋನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

    error: Content is protected !!