ಷೇರುಪೇಟೆಯಲ್ಲಿ ಹಣವನ್ನು ಹೇಗೆ ಬೆಳೆಸಿಕೊಳ್ಳಬಹುದೆಂಬುದು ಎಲ್ಲಾ ವಹಿವಾಟುದಾರರ ಚಿಂತನೆಯಾಗಿರುತ್ತದೆ. ಅದರೆ ಅಗ್ರಮಾನ್ಯ ಕಂಪನಿಗಳಲ್ಲಿ ಹೇಗೆ ಅಲ್ಪಕಾಲೀನದಲ್ಲೇ ಹೂಡಿಕೆ ವೃದ್ಧಿಗೊಳಿಸಬಹುದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರದರ್ಶಿತವಾಗುತ್ತಿರುವ ಅತಿ ವೇಗದ ಏರಿಳಿತಗಳು ತೋರಿಸಿಕೊಟ್ಟಿವೆ. ಆದರೆ ಈ ರೀತಿಯ ಅವಕಾಶಗಳು ಪೇಟೆಗಳಲ್ಲಿ ಉದ್ಭವವಾದಾಗ ಮಾತ್ರ ಉಪಯೋಗಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರೀಕ್ಷೆ, ಅಪೇಕ್ಷೆಗಳಿಂದ ದೂರವಿದ್ದು ವಾಸ್ತವಾಂಶಗಳನ್ನಾಧರಿಸಿ ನಿರ್ಧರಿಸಬೇಕಷ್ಷೇ
ಬದಲಾವಣೆಯ ವೇಗ:ಹಿಂದಿನ ವರ್ಷ ಮಾರ್ಚ್ ನಲ್ಲಿ ಷೇರುಪೇಟೆಗಳು ಭಾರಿ ಒತ್ತಡದಲ್ಲಿದ್ದವು. ಅದಕ್ಕೆ ಮುಖ್ಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿ ಸಾಗಿದ್ದುದಾಗಿದೆ. ಇದರ ಪ್ರಭಾವ ಹೇಗಿತ್ತೆಂದರೆ 2020ರ ಫೆಬ್ರವರಿ 20ರಂದು ಸೆನ್ಸೆಕ್ಸ್ 41,170 ರಲ್ಲಿದ್ದು ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.158.50 ಲಕ್ಷ ಕೋಟಿಯಲ್ಲಿತ್ತು. ಒಂದು ತಿಂಗಳ ನಂತರ ಅಂದರೆ 26 ರಂದು ಮಾರ್ಚ್ ಸೆನ್ಸೆಕ್ಸ್ 29,815 ಪಾಯಿಂಟುಗಳಿಗೆ ಕುಸಿದು, ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.112.89 ಲಕ್ಷ ಕೋಟಿಗೆ ಜಾರಿತ್ತು. ಅಂದರೆ ಈ ಒಂದು ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್ ಸುಮಾರು 11,350 ಪಾಯಿಂಟುಗಳ ಭಾರಿ ಕುಸಿತ ಪ್ರದರ್ಶಿಸಿತು.
ಈ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ಸಹ ರೂ.45.61 ಲಕ್ಷ ಕೋಟಿಯಷ್ಠು ಕರಗಿಹೋಯಿತು. ಈ ಅವಧಿಯಲ್ಲಿ ಸುಮಾರು ರೂ.70 ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟಮಾಡಿದ್ದವು. ಮತ್ತೆ ಮೂರು ತಿಂಗಳ ಅವಧಿಯಲ್ಲಿ ಅಂದರೆ 24 ನೇ ಜುಲೈ 2020 ರಂದು ಸೆನ್ಸೆಕ್ಸ್ ಸುಮಾರು 8,300 ಪಾಯಿಂಟುಗಳಿಗೂ ಹೆಚ್ಚಿನ ಏರಿಕೆ ಕಂಡು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ರೂ.147.28 ಲಕ್ಷ ಕೋಟಿಗೆ ಏರಿಕೆ ಪಡೆದುಕೊಂಡಿತು. ಅಂದರೆ ರೂ.34.29 ಲಕ್ಷ ಕೋಟಿಯಷ್ಟನ್ನು 3 ತಿಂಗಳ ಅವಧಿಯಲ್ಲಿ ಗಳಿಸಿಕೊಂಡಿತು. ಈ ಬೇಳವಣಿಗೆಯಿಂದ ಏರಿಕೆಗೆ ಬೇಕಾದಷ್ಟು ಸಮಯ ಇಳಿಕೆಗೆ ಅವಶ್ಯಕತೆಯಿಲ್ಲ ಎಂಬುದು ತಿಳಿಯುತ್ತದೆ.
ಆರ್ಥಿಕ ಸಾಕ್ಷರತಾ ಜಾಗೃತಿ ಅಗತ್ಯತೆ:ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಷೇರುಪೇಟೆಯ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕೇವಲ 6.64 ಕೋಟಿ ಮಾತ್ರ. ಇದು ನಮ್ಮಲ್ಲಿರುವ ಆರ್ಥಿಕ ಅನಕ್ಷರತೆಯನ್ನು ಬಿಂಬಿಸುತ್ತದೆ. ಆದರೂ ಹಿಂದಿನ ವರ್ಷದ ಜುಲೈನಲ್ಲಿದ್ದ ಸುಮಾರು 5.15 ಕೋಟಿಗಿಂತ ಸುಮಾರು ಒಂದೂವರೆ ಕೋಟಿ ಹೂಡಿಕೆದಾರರು ಹೆಚ್ಚಾಗಿದ್ದಾರೆ. ಇದು ಆರ್ಥಿಕ ಸಾಕ್ಷರತೆಯ ಬಗ್ಗೆ ಮೂಡುತ್ತಿರುವ ಜಾಗೃತಿಯ ಪ್ರಭಾವವಾಗಿದೆ.
ಅಂದರೆ ಹೆಚ್ಚಿನ ಉಪಯೋಗವನ್ನು ವಿತ್ತೀಯ ಸಂಸ್ಥೆಗಳು, ಮ್ಯೂಚುಯಲ್ ಫಂಡ್ ಗಳೂ ಪಡೆದುಕೊಳ್ಳುತ್ತಿವೆ. ಜನ ಸಾಮಾನ್ಯರೂ ನೇರವಾಗಿ, ಪರಿಸ್ಥಿತಿಯನ್ನರಿತು, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡು, ಷೇರುಪೇಟೆ ಚಟುವಟಿಕೆ ನಡೆಸಲು ಅವಕಾಶವಿದೆ. ಸಮತೋಲನಾ ಚಿತ್ತ, ಬಂಡವಾಳದ ಸುರಕ್ಷತೆಯ ಬೆಳವಣಿಗೆಯ ಏಕೈಕ ಉದ್ದೇಶ, ಒದಗಿಬಂದ ಅವಕಾಶಗಳನ್ನು ಕಿಸೆಗೆ ಸೇರಿಸುವ ಗುಣಗಳು ಯಶಸ್ಸಿಗೆ ಪೂರಕ ಅಂಶಗಳಾಗಿವೆ.
ಷೇರುಪೇಟೆಯ ಚಟುವಟಿಕೆಯಲ್ಲಿ ಯಾರು ಭಾಗವಹಿಸಬಹುದು?
ಷೇರುಪೇಟೆಯಲ್ಲಿ, ಯಾವ ವೃತ್ತಿಯಲ್ಲಿದ್ದರೂ ಇಲ್ಲಿನ ಚಟುವಟಿಕೆಯಲ್ಲಿ ಉಳಿತಾಯದ ರೂಪದಲ್ಲಿ ಭಾಗವಹಿಸಿ ಲಾಭಗಳಿಸುವ ಅವಕಾಶ ಇರುತ್ತದೆ. ವೃತ್ತಿ ಅಂದರೆ ಕಿರಾಣಿ ಅಂಗಡಿ, ಹಣ್ಣು ಹಂಪಲು, ಹಾಲು ಮಾರಾಟಗಾರರು, ರೀಟೇಲ್ ವ್ಯಾಪಾರಸ್ಥರು, ಕಾರ್ಮಿಕರು, ಉದೋಗದಲ್ಲಿರುವವರು, ಅಧಿಕಾರಿಗಳು ಸರ್ಕಾರಿ ನೌಕರರು ಯಾವುದಾದರೂ ಸರಿ, ಆದಾಯ ತೆರಿಗೆ ಇಲಾಖೆಯಿಂದ ಪಡೆದ ಪ್ಯಾನ್ ಸಂಖ್ಯೆ, ಆಧಾರ್ ಮತ್ತು ಬ್ಯಾಂಕ್ ಖಾತೆ ಇದ್ದರೆ ಷೇರುಪೇಟೆ ವ್ಯವಹಾರ ಮಾಡಬಹುದು.
ಹೂಡಿಕೆ ಚಟುವಟಿಕೆ ಹೇಗಿರಬೇಕು?
ಇಂದಿನ ಬಹುತೇಕ ಎಲ್ಲಾ ಚಟುವಟಿಕೆಗಳು ಲಾಭಗಳಿಕೆಯತ್ತಲೇ ಕೇಂದ್ರೀಕೃತವಾಗಿರುವುದರಿಂದ, ಷೇರುಪೇಟೆಯಲ್ಲೂ ವ್ಯವಹಾರಿಕ ದೃಷ್ಠಿಯಲ್ಲಿ ಚಟುವಟಿಕೆ ಅಗತ್ಯ. ಬಂಡವಾಳ ಸುರಕ್ಷತೆಯ ದೃಷ್ಠಿಯಿಂದ ಇದು ಅತ್ಯಗತ್ಯ. ಏಕೆಂದರೆ ಷೇರುಪೇಟೆ ನಿಂತ ನೀರಲ್ಲ, ಇಲ್ಲಿ ಷೇರಿನ ದರಗಳು ಏರಿಕೆಯನ್ನು ಕಾಣುವ ವೇಗಕ್ಕಿಂತ ಇಳಿಕೆಯ ವೇಗವೇ ಹೆಚ್ಚಾಗಿರುತ್ತದೆ. ವಿಶೇಷವಾಗಿ ಸೂಚ್ಯಂಕಗಳು ಗರಿಷ್ಠದಲ್ಲಿರುವುದು, ಕರೋನಾ ವೈರಾಣುವಿನ ಆಘಾತಕಾರಿ ಪ್ರಭಾವಗಳ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಏರಿಳಿತಗಳಿರುತ್ತವೆ.
ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಕುಸಿತದಲ್ಲಿರುವಾಗ ಉಳಿತಾಯದ ದೃಷ್ಟಿಯಿಂದ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೇವಲ ಐವತ್ತು, ನೂರು ಷೇರುಗಳನ್ನು ಕೊಂಡು ತಮ್ಮ ಹೂಡಿಕೆಗುಚ್ಚವನ್ನು ನಿರ್ಮಿಸಬಹುದು. ಅವಕಾಶವಾದಾಗಲೆಲ್ಲಾ ಈ ರೀತಿ ಉತ್ತಮ ಕಂಪನಿಗಳ ಷೇರುಗಳನ್ನು ಶೇಖರಿಸಬಹುದು. ಇದರಿಂದ ಎರಡು ವಿಧದಲ್ಲಿ ಲಾಭದ ಸಾಧ್ಯತೆ ಇರುತ್ತದೆ. ಒಂದು ಕೊಂಡ ಷೇರುಗಳಿಗೆ ಕಂಪನಿಗಳು ವಿತರಿಸುವ ಕಾರ್ಪೊರೇಟ್ ಫಲಗಳು ಅಂದರೆ ಲಾಭಾಂಶ, ಬೋನಸ್ ಷೇರು ಪಡೆಯಬಹುದು ಮತ್ತೊಂದು ಪೇಟೆಯಲ್ಲಿ ಆ ಷೇರಿನ ಬೆಲೆಗಳು ಏರಿಕೆ ಕಂಡಾಗ ಮಾರಾಟ ಮಾಡಿ ಲಾಭ ಗಳಿಸಬಹುದು. ಒಮ್ಮೊಮ್ಮೆ ಪೇಟೆಯು ನೀಡುವ ಅದ್ಭುತವಾದ ಅವಕಾಶಗಳಿಂದ ತ್ವರಿತ ಲಾಭವನ್ನು ಪಡೆಯಬಹುದು. ಪೇಟೆಗಳ ಸೂಚ್ಯಂಕಗಳು ಗರಿಷ್ಟದಲ್ಲಿವೆ ಎಂದು ಭಾವಿಸುವ ಬದಲು, ಅವಕಾಶಗಳ ಅನ್ವೇಷಣೆ ಅಗತ್ಯ.
ಅಲ್ಪಕಾಲೀನ ಅವಕಾಶಗಳ ಸೃಷ್ಠಿ
ಉದಾಹರಣೆಗೆ ಶುಕ್ರವಾರ, 23 ರಂದು ಫಾರ್ಮಾ ವಲಯದ ಷೇರುಗಳು ಹೆಚ್ಚು ರಭಸಮಯವಾದ ಚಟುವಟಿಕೆಯಿಂದ ಏರಿಕೆ ಕಂಡವು. ಆದರೆ ಸುಮಾರು 3 ಗಂಟೆಯ ಸಮಯದಲ್ಲಿ ಕುಸಿತ ಕಂಡು ದಿಢೀರನೆ ಏರಿಕೆ ಕಂಡವು. ಅಂದು ಕ್ಯಾಡಿಲ್ಲಾ ಹೆಲ್ತ್ ಕೇರ್ ಷೇರು ದಿನದ ಆರಂಭಿಕ ಚಟುವಟಿಕೆಯಲ್ಲಿ ರೂ.560 ನ್ನು ತಲುಪಿ ಕ್ರಮೇಣ ರೂ.540 ರವರೆಗೂ ಕುಸಿಯಿತು. ಸಮಯ 3 ಗಂಟೆಯ ನಂತರ ಏಕಮುಖವಾಗಿ ಏರಿಕೆ ಕಂಡು ರೂ.578 ರವರೆಗೂ ಏರಿಕೆ ಕಂಡಿತು. ಅಂದರೆ ಕೇವಲ ಅರ್ಧ ಗಂಟೆಯಲ್ಲಿ ಸುಮಾರು ಶೇ.35 ರಷ್ಠರ ಏರಿಕೆ ಅದ್ಭುತವಲ್ಲವೇ?
ಅದೇ ರೀತಿ ಮತ್ತೊಂದು ಫಾರ್ಮಾ ಕಂಪನಿ ಗ್ಲೆನ್ ಮಾರ್ಕ್ ಫಾರ್ಮ ದಿನದ ಆರಂಭದಲ್ಲಿ ರೂ.577 ರಲ್ಲಿದ್ದು ನಂತರ ರೂ.550 ರವರೆಗೂ ಜಾರಿತು. ಕೊನೆ ಗಳಿಗೆಯಲ್ಲಿ ರೂ.565 ಕ್ಕೆ ಏರಿಕೆ ಕಂಡು ರೂ.560 ರ ಸಮೀಪ ಕೊನೆಗೊಂಡಿತು.
ವ್ಯಾಕ್ಸಿನ್ ಸಂಬಂಧಿತ ವಿಚಾರದಲ್ಲಿ ಸತತವಾದ ಇಳಿಕೆಯಲ್ಲಿದ್ದ ಅಸ್ಟ್ರಾಜೆನಿಕ ಫಾರ್ಮಾ ಷೇರಿನ ಬೆಲೆ ಹಿಂದಿನ ಶುಕ್ರವಾರ ರೂ.3,460 ರಲ್ಲಿದ್ದು, ಈ ವಾರ ದಿನೇ ದಿನೇ ಏರಿಕೆ ಕಂಡು ಶುಕ್ರವಾರ 23 ರಂದು ರೂ.4,580 ನ್ನು ತಲುಪಿ ವಿಜೃಂಭಿಸಿತಾದರೂ ಅದು ಕ್ಷಣಿಕವಾಗಿದ್ದು, ಅಲ್ಲಿಂದ ಮಾರಾಟದ ಒತ್ತಡ ಹೆಚ್ಚಾಗಿ ರೂ.4,160 ರ ಸಮೀಪಕ್ಕೆ ಜಾರಿ ರೂ.4,226 ರಲ್ಲಿ ಕೊನೆಗೊಂಡಿತು. ಒಂದೇ ವಾರದಲ್ಲಿ ರೂ.1,100 ಕ್ಕೂ ಹೆಚ್ಚಿನ ಏರಿಕೆ ಅಂದರೆ ಶೇ.30 ರಷ್ಠು ಏರಿಕೆಯು ಲಾಭದ ನಗದೀಕರಣಕ್ಕೆ ಪ್ರೇರಣೆಯಾಗಿದೆ.
ಶಿಲ್ಪಾ ಮೆಡಿಕೇರ್, ಸುವೇನ್ ಫಾರ್ಮಾ, ಡಿಶ್ಮನ್ ಕಾರ್ಬೋಜೆನ್, ವೋಕಾರ್ಡ್, ಸಿಪ್ಲಾ, ಸನ್ ಫಾರ್ಮಾ ಮುಂತಾದವುಗಳು ಉತ್ತಮ ಚಟುವಟಿಕೆ ಪ್ರದರ್ಶಿಸಿದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಷೇರಿನ ಬೆಲೆಗಳು ಹೆಚ್ಚಿನ ಏರಿಕೆ ಕಂಡಿರುವಾಗ ದುಡುಕಿನ ಖರೀದಿ ಬೇಡ. ಏಕೆಂದರೆ ಚಟುವಟಿಕೆ ಭರಿತ ಸಂದರ್ಭದಲ್ಲಿ ಅಲ್ಪಕಾಲೀನ ಹೂಡಿಕೆಯಾಗಿ ಖರೀದಿಸಿದ ಷೇರು, ಪೇಟೆ ಕುಸಿದರೆ ಅದನ್ನು, ಬಂಡವಾಳ ಸುರಕ್ಷತೆಗಾಗಿ, ದೀರ್ಘಕಾಲೀನವಾಗಿ ಹೂಡಿಕೆಯಾಗಿ ಮುಂದುವರೆಸಬೇಕಾಗುತ್ತದೆ.
2018 ಆರಂಭದಲ್ಲಿ ಯೂನಿಕೆಂ ಲ್ಯಾಬ್ ಷೇರನ್ನು ರೂ.370 ರಲ್ಲಿ ಖರೀದಿಸಿದವರು ಈಗಲೂ ತಮ್ಮ ಖರೀದಿಯ ದರ ಬರಲಿಲ್ಲವೆಂದು ಕಾಯುತ್ತಿರುವರು. ಆದರೆ ಈ ಷೇರಿನ ಬೆಲೆ ಇದೇ ಒಂದು ವರ್ಷದಲ್ಲಿ ರೂ.122 ನ್ನು ಕಂಡಿದ್ದು ಈಗ ರೂ.338 ರಲ್ಲಿದೆ.
ಫಾರ್ಮ ಮತ್ತು ಶುಶ್ರೂಷೆ ವಲಯದ ಕಂಪನಿಗಳು ಚುರುಕಾಗಿರುವ ಈ ಸಮಯದಲ್ಲೂ 2018 ರ ಜೂನ್ ನಲ್ಲಿ ರೂ.278 ರಲ್ಲಿ ಖರೀದಿಸಿದ ಹೆಲ್ತ್ ಕೇರ್ ಗ್ಲೋಬಲ್ ಷೇರಿನ ಬೆಲೆ ರೂ.185 ರ ಸಮೀಪವಿದೆ. ಈ ವರ್ಷ ಈ ಷೇರಿನ ಬೆಲೆ ರೂ.70 ರೊಳಗೆ ಕುಸಿದಿತ್ತು.
ಆಕ್ಸಿಜನ್ ಕಂಪನಿಗಳು:
ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಬೇಡಿಕೆಯ ಕಾರಣ ಆಕ್ಸಿಜನ್ ಎಂಬ ನಾಮಧೇಯ ಉಳ್ಳ ಕಂಪನಿಗಳು ಚಟುವಟಿಕೆ ಭರಿತವಾಗಿವೆ. ಆ ಕಂಪನಿಗಳೂ ಹಿಂದೆಂದೂ ಕಾಣದ ರೀತಿಯಲ್ಲಿ ಸರ್ವಕಾಲೀನ ಏರಿಕೆ ಪ್ರದರ್ಶಿಸಿವೆ. ಈ ರೀತಿಯ ಏರಿಕೆಯು ಕೇವಲ ಗಾಳಿಗೋಪುರದಂತಿದ್ದು, ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶವೆನ್ನಬಹುದು.
ಲಿಂಡೇ ಇಂಡಿಯಾ ಕಂಪನಿ ಈ ಹಿಂದೆ ಬಿ ಓ ಸಿ ಇಂಡಿಯಾ ಎಂದಿದ್ದ ಕಂಪನಿ ಈ ಕಂಪನಿ ಷೇರಿನ ಬೆಲೆ ಹತ್ತು ವರ್ಷಗಳ ಹಿಂದೆ ರೂ.165 ರ ಸಮೀಪವಿತ್ತು.2016 ರಲ್ಲಿ ರೂ.240 ರ ಸಮೀಪವಿತ್ತು. ಈ ವರ್ಷ ರೂ.976 ರಲ್ಲಿದ್ದು ಹಿಂದಿನ ವಾರ ರೂ.2078 ನ್ನು ತಲುಪಿ ರೂ.1,867 ರಲ್ಲಿ ಕೊನೆಗೊಂಡಿದೆ. ಜೂನ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.3 ರಂತೆ ಡಿವಿಡೆಂಡ್ ವಿತರಿಸಲಿದೆ. ಡಿವಿಡೆಂಡ್ ಗಾಗಿ ಕಾಯದೆ ಹೊರಬರುವುದು ಬಂಡವಾಳ ಸುರಕ್ಷತೆಗೆ ದಾರಿಯಲ್ಲವೇ?
ಒಂದೇ ವರ್ಷದಲ್ಲಿ ಅಗಾದ ಲಾಭ:
ಷೇರುಪೇಟೆಯ ವೇಗ ಹೇಗಿದೆ ಎಂದರೆ, ಟಾಟಾ ಸ್ಟೀಲ್ ಕಂಪನಿ ಷೇರಿನ ಬೆಲೆ ಕಳೆದ ಹಿಂದಿನ ವರ್ಷ ಮಾರ್ಚ್ ನಲ್ಲಿ ರೂ.250 ರ ಸಮೀಪದಲ್ಲಿದ್ದು, ಅಲ್ಲಿಂದ ನವೆಂಬರ್ ತಿಂಗಳಲ್ಲಿ ರೂ.550 ರ ಸಮೀಪಕ್ಕೆ ಜಿಗಿಯಿತು. ಮತ್ತೆ ಅಲ್ಲಿಂದ ಏಪ್ರಿಲ್ ರೂ.950 ನ್ನು ದಾಟಿದೆ. ಇದೇ ರೀತಿ ಜೆ ಎಸ್ ಡಬ್ಲು ಸ್ಟೀಲ್, ಸ್ಟೀಲ್ ಅಥಾರಿಟೀಸ್ ಆಫ್ ಇಂಡಿಯಾ, ಜಿಂದಾಲ್ ಸ್ಟೀಲ್ ಅಂಡ್ ಪವರ್ ನಂತಹ ಅನೇಕ ಕಂಪನಿಗಳು ಏರಿಕೆಯನ್ನು ಪ್ರದರ್ಶಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್ ಗಳೂ ಸಹ ಭಾರಿ ಏರಿಕೆ ಪ್ರದರ್ಶಿಸಿ, ಬೆಲೆಗಳು ಕುಸಿದಾಗ, ವ್ಯಾಲ್ಯೂ ಪಿಕ್ ಆಗಿ ಖರೀದಿಸಿದವರಿಗೆ ಆಕರ್ಷಕ ಲಾಭವನ್ನು ಗಳಿಸಿಕೊಟ್ಟಿದೆ. ಗ್ಲೆನ್ ಮಾರ್ಕ್ ಫಾರ್ಮ, ಕ್ಯಾಡಿಲ್ಲಾ ಹೆಲ್ತ್ ಕೇರ್ ನಂತಹ ಅನೇಕ ಫಾರ್ಮಾ ಕಂಪನಿಗಳು ಆಕರ್ಷಕ ಲಾಭವನ್ನು ಗಳಿಸಿಕೊಟ್ಟಿವೆ.
ಆದರೆ ಇದೇ ರೀತಿಯ ಅವಕಾಶಗಳು ಪ್ರತಿ ವರ್ಷವೂ ಪುನರಾವರ್ತನೆಗೊಳ್ಳುತ್ತದೆ ಎಂಬ ಭ್ರಮೆ ಬೇಡ. ಆದರೆ ನಡೆಸಿದ ಎಲ್ಲಾ ಚಟುವಟಿಕೆಗೂ ದಾಖಲೆಯಾದ ‘ ಕಾಂಟ್ರಾಕ್ಟ್ ನೋಟ್ ‘ ಪಡೆದು, ಸರಿಯಾಗಿರುವುದನ್ನು ದೃಢಪಡಿಸಿಕೊಳ್ಳುವುದು ಅತ್ಯವಶ್ಯಕ.
ಕರೋನಾ ಸಮಯದಲ್ಲಿ, ಹಾಫ್ ಲಾಕ್ ಡೌನ್, ಲಾಕ್ ಡೌನ್, ಸೆಕ್ಷನ್ 144 ನಂತಹ ಹಲವಾರು ಬಿಗಿ ಕ್ರಮಗಳಿಂದ ಬೇಸರಿಸಿಕೊಳ್ಳದೆ, ತಾಂತ್ರಿಕತೆ ಒದಗಿಸಿರುವ ಅವಕಾಶಗಳನ್ನು, ಸೀಮಿತವಾಗಿ, ನಿಯಮಿತವಾಗಿ ಬಳಸಿಕೊಂಡಲ್ಲಿ ಆರ್ಥಿಕವಲಯದ ಜ್ಞಾನಾರ್ಜನೆಯೂ ಆಗುವುದು, ಅಲ್ಪಮಟ್ಟಿನ ಸಂಪಾದನೆಗೂ ದಾರಿಯಾಗುವುದು. ಜನಸಾಮಾನ್ಯರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಲ್ಲಿ ಈಗಿನ ವಿದೇಶಿ ವಿತ್ತೀಯ ಸಂಸ್ಥೆಗಳ ಮುಷ್ಠಿಯಿಂದ ಹೊರಬಂದು ‘ ವ್ಯಾಘ್ರನ ಬೇಟೆಗೆ ಶ್ವಾನ ಬಿಟ್ಟಂತೆ’ ಎಂಬ ಪರಿಸ್ಥಿತಿಯನ್ನು ಬದಲಿಸಬಹುದು. ಒಟ್ಟಿನಲ್ಲಿ ಅರಿತು ಹೂಡಿಕೆ ಮಾಡಿರಿ ಅನುಸರಿಸಬೇಡಿ. ಅಪಾಯದ ಮಟ್ಟ ಅರಿತು ನಿರ್ಧರಿಸಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು