25.7 C
Karnataka
Friday, November 29, 2024
    Home Blog Page 114

    ವಸಂತ ಚಂದಿರ ಸುಖ-ದುಃಖಕ್ಕೂ…..

    ಸುಮಾ ವೀಣಾ

    “ಹೆಜ್ಜೆಗೊಂದು ಹೊಸ ಯುಗಾದಿ,ಚೆಲುವುನಮ್ಮ ಜೀವನ ನಮ್ಮ ಹಾದಿಯೋ ಅನಾದಿ,ಪಯಣವೆಲ್ಲ ಪಾವನ” ಎಂಬ ಕೆ.ಎಸ್ ನರಸಿಂಹಸ್ವಾಮಿಯವರ ಸಾಲಿನಂತೆ ನಮ್ಮ ಜೀವನದ ಪಯಣದ  ಆವೃತ್ತಿಗೂ  ಯುಗಾದಿ ಚಂದ್ರನಿಗೂ ಸಂಬಂಧವಿದೆ. . ವಸಂತ ಮಾಸದ  ಚಂದ್ರನೋ ನೋಡಲು ಬಹಳ ಪ್ರಕಾಶಮಾನವಾಗಿ ಕಾಣಿಸುತ್ತಾನೆ.

    ‘ಯುಗಾದಿ’ ಎಂದರೆ ಬೇವು -ಬೆಲ್ಲಗಳ ಸಮಾಗಮ. ಪಂಚಾಂಗ ಶ್ರವಣ ಇತ್ಯಾದಿಗಳನ್ನು ಮುಗಿಸಿದ ಬಳಿಕ ಯುಗಾದಿ ಊಟ ಮಾಡಿ,  ಚಂದ್ರನನ್ನು ನೋಡಬೇಕು  ಶುಭ ಎನ್ನುತ್ತಾರೆ.   ಆದರೆ ಗಣೇಶ ಚತುರ್ಥಿಯ ದಿನ ಚಂದ್ರ ನೋಡುವುದು ನಿಷಿದ್ಧ ಹಾಗೊಂದು ವೇಳೆ ಆ ಚಂದ್ರನನ್ನು  ನೋಡಿದ್ದರೆ ಆ ದೋಷ ಯುಗಾದಿ ಚಂದ್ರನನ್ನು ನೋಡುವ   ಮೂಲಕ ನಿವಾರಣೆಯಾಗುತ್ತದೆ ಎನ್ನುತ್ತಾರೆ.

     ನಮ್ಮಲ್ಲಿ ನವಗ್ರಹಗಳಲ್ಲಿ ಸೂರ್ಯನನ್ನು ತಂದೆಗೆ ಹೋಲಿಸದಿದರೆ ಚಂದ್ರನನ್ನು ತಾಯಿಗೆ ಹೋಲಿಸುವುದಿದೆ. ಅಲ್ಲದೆ  ಚಂದ್ರನನ್ನು ಬುದ್ಧಿವಂತಿಕೆ  ಹಾಗು ಉತ್ತಮನಡವಳಿಕೆಯ ದ್ಯೋತಕವಾಗಿಯೂ ಬಿಂಬಿಸಲಾಗುತ್ತದೆ.  ಯುಗಾದಿಚಂದ್ರ ಅಷ್ಟು ಸುಲಭಕ್ಕೆ ಕಾಣಸಿಗುವುದಿಲ್ಲ . ಅಮವಾಸ್ಯೆಯ  ಮರುದಿನ ಚಂದ್ರ ಬೇಗ ಗೋಚರಿಸುವುದು ಕಷ್ಟ .ಹಾಗೊಂದು  ವೇಳೆ “ಕಷ್ಟ ಪಟ್ಟರೆ ಸುಖ” ಎಂಬಂತೆ ಆ ಚಂದ್ರನನ್ನು  ಕಷ್ಟ ಪಟ್ಟು ನೋಡಿದರೆ ಮನಸ್ಸಿಗೆ ಸಂತಸವಾಗುತ್ತದೆ.  ಇನ್ನು  ಕೆಲವೆಡೆ ಒಂದು ವರ್ಷದ ಮಳೆ- ಬೆಳೆಗಳ ಸಾಧ್ಯತೆಯನ್ನು ಹೇಳುವಾಗ ಯುಗಾದಿ ಚಂದ್ರ ಗೋಚರಿಸುವ ಗೆರೆಯಾಕಾರವನ್ನೂ  ಗಣನೆಗೆ ತೆಗೆದುಕೊಳ್ಳುವುದೂ ಇದೆ.

     ಇವಿಷ್ಟು ಯುಗಾದಿ ಹಬ್ಬದ ಚಂದ್ರನ ಕುರಿತ ವಿಚಾರವಾದರೆ   ‘ಕವಿರಾಜಮಾರ್ಗ’ ಕೃತಿಯ ಮೂರನೆಯ ಪರಿಚ್ಛೇದದ 124ನೆ ಪದ್ಯದಲ್ಲಿ  ಸಮಾಹಿತಾಲಂಕಾರಕ್ಕೆ ಉದಾಹರಣೆಯಾಗಿ ಉಲ್ಲೇಖವಾಗಿರುವ ಚಂದ್ರನನ್ನೂ ನೋಡೋಣ!

     ಮುಳಿದಿರ್ದ ನಲ್ಲಳಲ್ಲಿಗೆ

    ತಿಳಿಪಲ್ ಪೋಪೆನ್ನ ಬಗೆಗೆ ದೊರೆಕೊಳೆ ಮತ್ತಿಂ

    ತೆಳೆವೆರೆ ಗಗನಾಂತರದೊಳ್

    ಪೊಳೆದತ್ತೆತ್ತಂ ವಸಂತಸಮಯೋತ್ತಂಸಂ

     ಇದರರ್ಥ ಕೋಪಗೊಂಡ ನಲ್ಲೆಯನ್ನು ತವಿಸಲು ಹೊರಟ ನಲ್ಲನಿಗೆ  ವಸಂತಮಾಸಕ್ಕೇ ಶಿರೋಭೂಷಣದಂತಿದ್ದ  ಚಂದ್ರ ಸಹಾಯ  ಮಾಡಲು ಎಳೆವರೆಯಾಗಿ ಉದಯಿಸಿದ,   ಕತ್ತಲನ್ನು ದೂಡಿದ,  ಮಾರ್ಗ ತೋರಿಸಿದ ಎಂಬುದಾಗಿ . ಚಂದ್ರನನ್ನು ಮನಃಕಾರಕ, ಮನಸ್ಸಿನ ಮೇಲೆ ಪರಿಣಾಮ ಬೀರುವಂಥವನು ಹಾಗಾಗಿ  ಪ್ರಿಯೆಯ ಮನಸ್ಸನ್ನು ಸಮಾಧಾನಿಸಿದ ಎಂದೂ ಅರ್ಥೈಸುವುದಿದೆ.  ಕವಿರಾಜಮಾರ್ಗ ಕೃತಿಯಲ್ಲಿ   ಸಮಾಹಿತಾಲಂಕಾರಕ್ಕೆ  (ಸಮಾಹಿತ ಪದಕ್ಕೆ  ಪ್ರಸನ್ನ ಚಿತ್ತ,ಒಟ್ಟುಗೂಡಿಸಿದ,ವ್ಯವಸ್ಥೆಗೊಳಿಸಿದ  ಎಂಬ    ಅರ್ಥವಿದೆ) ಉದಾಹರಿಸಿದ   ಈ ಪದ್ಯದಲ್ಲಿ  ಕೋಪಗೊಂಡ ನಾಯಕಿಯ ಮನಸ್ಸನ್ನು ತವಿಸಲು ನಾಯಕನ ಪರವಾಗಿ  ಸ್ವತಃ   ದೈವಾದತ್ತವಾದ ಚಂದ್ರನೇ ಬಂದ ಎಂದಿದೆ.

     ಈ ಬರೆಹದ ಆರಂಭದಲ್ಲಿ ಚಂದ್ರನನ್ನು ತಾಯಿಗೂ ಹೋಲಿಸುತ್ತಾರೆ   ಎಂದು ಹೇಳಿರುವ ಕಾರಣದಿಂದ ಪಿ.ಲಂಕೇಶರ  ಅವ್ವ ಕವಿತೆಯಲ್ಲಿ   ತಾಯಿ,ಯುಗಾದಿ,ಚಂದ್ರನನ್ನು  ಉಲ್ಲೇಖಿಸಿರುವುದನ್ನೂ ಚುಟುಕಾಗಿ ಗಮನಿಸೋಣ!

    ಸತ್ತಳು ಈಕೆ

    ಬಾಗು ಬರೆನ್ನಿನ ಮುದುಕಿಗೆಷ್ಟು ಪ್ರಾಯ?

    ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ  ಸಂಭ್ರಮ?

    ಎಂದು . ಅಂದರೆ ಎಷ್ಟು ಯುಗಾದಿಯ ಚಂದ್ರನನ್ನು   ಅವ್ವ ನೋಡಿದ್ದಾಳೊ  ಅಷ್ಟು ವರ್ಷ  ಆಕೆಗೆ ಎಂದಿರುವ  ಲಂಕೇಶರು ತಕ್ಷಣವೇ  ನೋಡಿದ ಅಷ್ಟು ಚಂದ್ರರಲ್ಲಿ ನೆಮ್ಮದಿಯ ಚಂದ್ರರೆಷ್ಟು ಎನ್ನುವ  ಮರುಪ್ರಶ್ನೆಯನ್ನು   ಪ್ರಶ್ನಾರ್ಥಕವಾಗಿಯೇ ಉಳಿಸಿಕೊಂಡು   ಭಾವುಕರಾಗಿದ್ದಾರೆ. ಮುಂದುವರೆದು

     ಹೆತ್ತದ್ದಕ್ಕೆ,ಸಾಕಿದ್ದಕ್ಕೆ:ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆ……… ಹೊರಟು ಹೋದುದಕ್ಕೆ  ಎನ್ನುತ್ತಾ ಲಂಕೇಶರು ತಾಯಿಯನ್ನು ನೆನೆದು ಆರ್ದ್ರವಾಗಿ   ಉಳಿದಿರುವುದೇ “ಕೃತಜ್ಞತೆಯ ಕಣ್ಣೀರು” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

     ಬಾಳೆಲ್ಲಾ ಸುಖ-ದುಃಖ,ಬೇವು -ಬೆಲ್ಲ  ಎಂಬಂತೆ    ಕನ್ನಡ ಸಾಹಿತ್ಯದಲ್ಲೂ ಯುಗಾದಿಯ ಚಂದ್ರ  ನೋವಿಗೂ-ನಲಿವಿಗೂ ಸೂಚಕವಾಗಿದ್ದಾನೆ.  ವಾಸ್ತವವಾಗಿ ಕೊರೊನಾ   ಎರಡನೆ ಅಲೆ ಅನ್ನುವ ಕಾರ್ಮೋಡ  ಸರಿದು ಎಲ್ಲವೂ ಕ್ಷೇಮ!  ಎಲ್ಲವೂ ಆರೋಗ್ಯ! ಎಂಬ ಭರವಸೆಯ  ವಸಂತ  ಋತುವಿನ ಚಂದ್ರನನ್ನು ನಿರೀಕ್ಷಿಸೋಣವೆ!

    Photo by Jacob Dyer on Unsplash

    ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ

    ಶ್ರೀ ಪ್ಲವ ನಾಮ ಸಂವತ್ಸರ ಅಡಿ ಇಟ್ಟಾಗಿದೆ. ಹಬ್ಬದ ಊಟವೂ ಮುಗಿದಿದೆ. ಈ ಹಬ್ಬದ ಸಂಜೆಯ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ಈ ಪಾಡ್ಕಾಸ್ಚ್ ಪ್ರಸ್ತುತ ಪಡಿಸುತ್ತಿದ್ದೇವೆ.

    ಈ ಪಾಡ್ಕಾಸ್ಟ್ ನಲ್ಲಿ ನಾಡಿನ ಜನಪ್ರಿಯ ಕವಿಗಳಾದ ಅಂಬಿಕಾತನಯದತ್ತ, ಕೆ ಎಸ್ ನರಸಿಂಹಸ್ವಾಮಿ ಹಾಗೂ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರ ಕವನಗಳನ್ನು ಲಕ್ಷ್ಮಿ ಶ್ರೇಯಾಂಸಿ ಇಂಪಾಗಿ ಹಾಡಿದ್ದಾರೆ. ಲೇಖಕಿ ರತ್ನ ಶ್ರೀನಿವಾಸ್ ಹಬ್ಬದ ಹಿನ್ನೆಲೆ ವಿವರಿಸಿದ್ದಾರೆ. ಭಾರತಿ ಕಾರ್ಯಕ್ರಮ ನಿರೂಪಿಸಿದ್ದಾರೆ. ಸಂಧ್ಯಾ ನಾಗರಾಜ್ ಅವರ ರಂಗೋಲಿ ಕಲೆ ಪಾಡ್ಕಸ್ಟ್ ಗೆ ಹೊಸ ಮೆರಗು ನೀಡಿದೆ.

    ಆಲಿಸಿ ಪ್ರತಿಕ್ರಿಯಿಸಿ

    ಯುಗಾದಿಯ ನೈಸರ್ಗಿಕ, ಪೌರಾಣಿಕ ಹಿನ್ನೆಲೆ


    ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ’. ಈ ದಿನ ಆಚರಣೆಗೆ ನೈಸರ್ಗಿಕ, ಐತಿಹಾಸಿಕ ಮತ್ತು ಪೌರಾಣಿಕ ಕಾರಣಗಳಿವೆ.


    ಎಂ.ವಿ. ಶಂಕರಾನಂದ

    ನೈಸಗಿಕ ಕಾರಣಗಳು:ಸರಿ ಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ-ಸಂಪಾತದ ಮೇಲೆ ಬರುತ್ತಾನೆ. (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ). ಈ ಎರಡೂ ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಬೇಧಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (10:25) ಹೇಳಿದ್ದಾನೆ.

    ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸ ವರ್ಷದ ಕಾಲ ಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.


    ಪೌರಾಣಿಕ ಕಾರಣಗಳು:
    ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕ ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು. ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯ ಪಡೆದನು.

    ಬ್ರಹ್ಮ ದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದ. ಅರ್ಥಾತ್ ಈ ದಿನ ಸತ್ಯ ಯುಗ ಪ್ರಾರಂಭವಾಯಿತು. ಆದ್ದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.
    ಶುಭ ಯುಗಾದಿ.

    Photo by Lisa Fotios from Pexels

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಮಾವಿನ ತಳಿರಿನ ಜೊತೆಗೆ ಬೇವಿನ ಗೊಂಚಲು

    ಹಬ್ಬ ಅಂದರೆ ಹೆಣ್ಣುಮಕ್ಕಳಿಗೆ ಸಡಗರ ಅಂತಾರೆ.
    ಸಡಗರ ಏನೋ ಇರುತ್ತೆ.ಆದರೆ ಗುಡಿಸು ಸಾರಿಸು ತಿಕ್ಕು ಉಜ್ಜುಗಳಿಂದ ಹೈರಾಣಾಗುವುದಂತೂ ಸತ್ಯವೇ.ಪಕ್ಕಾ ಹಳ್ಳಿಯವಳಾದ ನನಗೆ ನನ್ನತ್ತೆ ಕಲಿಸಿದ ಹಬ್ಬದ ಪೂರ್ವತಯಾರಿಯ ಅಚ್ಚುಕಟ್ಟುತನವನ್ನು ಬಿಡುವುದಕ್ಕೂ ಏನೋ ಎಂತೋ ಎನ್ನುವ ಆತಂಕ. ಮಾಮೂಲಿನಂತೆ ಹಳ್ಳಿಯಲ್ಲಿ ನೆರವಿಗೆ ಒಂದು ಜೊತೆ ಕೈಗಳು ಸಿಗುವುದು ಬಹಳ ಕಷ್ಟ.ಮನಸ್ಸು ಮಾಡಿ ಮನೆಯ ಗಂಡಸರು ಕೈ ಜೋಡಿಸಿದ್ರೆ ಹಟ್ಟಿ ,ಹಿತ್ತಿಲು ,ಅಟ್ಟ ,ಸೂರು ನೇರೂಪು.ಮನಸ್ಸೂ ಹಗೂರ.

    ವಿಪರ್ಯಾಸವೆಂದರೆ ಸಮಾನತೆಯನ್ನು ಭಾಷಣದಲ್ಲಿ ಮಾತಾಡುವ ನಮ್ಮ ಪುರುಷರು ಮನೆಗೆಲಸವನ್ನು ಮನೆಯ ಹೆಂಗಸರಿಗೇ ವಹಿಸಿ ದೊಡ್ಡತನ ಮೆರೆಯುತ್ತಾರೆ.ಒಂಚೂರು ಕೈ ಜೋಡಿಸಿದ್ರೆ…ಎನ್ನುವ ಸಾಲನ್ನು ನಾನು ಮತ್ತೆಮತ್ತೆ ಹೇಳಿದಾಗೆಲ್ಲಾ ಅದೊಂದು ಕನಸನ್ನು ಕಾಣುವುದು ಬಿಟ್ಟು ಬೇರೆ ಏನಾದರೂ ಇದ್ರೆ ಮಾತಾಡು ಅಂತ ಪಕ್ಕದಲ್ಲಿರುವ ನನ್ನ ಗೆಳತಿ ಸಿಡುಕುತ್ತಾಳೆ.

    ಯುಗಯುಗಾದಿ ಕಳೆದರೂ ಮತ್ತೊಂದು ಯುಗಾದಿ ಬಂದೇ ಹೋಯ್ತು.
    ರೇವತಿ ಮಳೆ ಹುಟ್ಟಿ ಎಂಟು ಕಳೆದರೂ ಇನ್ನೂ ಸುರಿಯುವ ದಿರಿಸು ಕಾಣ್ತಿಲ್ಲ.ಕಳೆದ ವರ್ಷ ಇಷ್ಟು ಸಮಯಕ್ಕೆ ಭೂಮಿಗೆ ಒಂದೆರಡು ಹದ ಮಳೆ ಸುರಿದು ಗಿಡಮರಗಳೆಲ್ಲ ಹಚ್ಚಗೆ ಕಂಗೊಳಿಸುತ್ತಿದ್ದವು.
    ಕಾಫಿ ತೋಟ ,ಮೆಣಸು ಬಳ್ಳಿಗಳು ಬಳಲಿವೆ.

    ಆದರೆ

    ಲೋಕದ ಕೃಪೆ ಅವಕೃಪೆಗಳಿಗೆಲ್ಲಾ ತಲೆಕೆಡಿಸಿಕೊಳ್ಳದೆ ಹಬ್ಬಗಳ ಆಚರಣೆಯಂತೂ ನಡೆದೇ ತೀರುತ್ತದೆ.ಅದು ಹಾಗಿದ್ದರೇ ಚೆನ್ನ.

    ಬಹುತೇಕ ನಮ್ಮಲ್ಲಿ ಯುಗಾದಿಗೆ ಹೊಸ ಬಟ್ಟೆ ಉಡುವುದು ಅನೂಚಾನವಾಗಿ ನಡೆದಿದೆ.ಹೊಸಬಟ್ಟೆ ಎಂದರೆ ಕನಿಷ್ಠ ಹೊಸ ಬನಿಯನ್ನು ,ಚಡ್ಡಿ ,ಟವೆಲ್ಲು ಗಳಾದರೂ ನಡೆದೀತು.
    ಹೆಣ್ಣುಮಕ್ಕಳು ಈ ನೆಪದಲ್ಲಿ ಹೊಸ ಸೀರೆ ಖರೀದಿ ಮಾಡ್ತಾರೆ.
    ಹಬ್ಬಕ್ಕೆ ವಿಶೇಷವಾಗಿ ಬೇಳೆ ಹೋಳಿಗೆಯನ್ನು ನೈವೇದ್ಯ ಮಾಡುತ್ತೇವೆ.ಹಬ್ಬದ ಹಿಂದಿನ ದಿನ ಹೂರಣ ತಯಾರಿಸಿಡುವ ಸಂಭ್ರಮ.
    ಹಿಂದೂಗಳ ನಂಬಿಕೆಯಂತೆ ಯುಗಾದಿ ಅಥವಾ ಉಗಾದಿ ವರ್ಷದ ಮೊದಲ ದಿನ.

    ಚೈತ್ರ ಮಾಸದ ಮೊದಲ ದಿನ.ಮಾವಿನ ತಳಿರಿನ ಜೊತೆಗೆ ಬೇವಿನ ಗೊಂಚಲುಗಳನ್ನೂ ಬಾಗಿಲಿಗೆ ಕಟ್ಟಿ ಸಿಂಗರಿಸಿ ಹೊಸಿಲಿಗೆ ರಂಗೋಲಿ,ಹೊಸಹೂವುಗಳನ್ನಿಟ್ಟು ಅಲಂಕರಿಸುತ್ತೇವೆ.ಮಲೆನಾಡಿನ ಈ ಭಾಗದಲ್ಲಿ ಬೇವಿನ ಮರಗಳ ಸಂಖ್ಯೆ ಬಹಳ ಕಡಿಮೆ. ನೂರುಮನೆಯಿರುವ ಊರಿನಲ್ಲಿ ಒಂದೆರಡು ಮನೆಯಲ್ಲಿ ಬೇವು ಸಿಗಬಹುದು.ಬೇವು ಬೆಲ್ಲಕ್ಕಾಗಿ ಬೇಕಾಗುವ ಬೇವನ್ನು ಒಬ್ಬರು ಇನ್ನೊಬ್ಬರಿಗೆ ಕೊಡುವಾಗ ಒಂದೆರಡು ಅಚ್ಚು ಬೆಲ್ಲವನ್ನೂ ಇಟ್ಟು ಕೊಡುವುದು ಪದ್ದತಿ.ಇದರಿಂದ ಹೊಸ ವರ್ಷದ ಈ ಶುಭದಿನದಂದು ಬೆಲ್ಲವನ್ನು ಹಂಚಿದ ಪುಣ್ಯ ಪಡೆಯುತ್ತಾರೆ.ಇನ್ನು ನಮ್ಮಲ್ಲಿ ಬೇವುಬೆಲ್ಲವನ್ನು ಒಣಕೊಬ್ಬರಿ ಹುರಿಗಡಲೆ ಬೆಲ್ಲ ಮತ್ತು ಬೇವನ್ನು ಒಟ್ಟಿಗೆ ಪುಡಿ ಮಾಡಿ ತಯಾರಿಸುತ್ತಾರೆ.

    ಹಬ್ಬದ ದಿನ ಮನೆಯವರೆಲ್ಲರಿಗೂ ಎಣ್ಣೆ ನೀರು ಕಡ್ಡಾಯ.
    ಅಭ್ಯಂಜನದ ಎಣ್ಣೆಗಾಗಿ‌ ಹರಳೆಣ್ಣೆ ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆಗಳಿಗೆ ಅರಿಷಿಣ ಮತ್ತು ಬೇವಿನೆಲೆಗಳನ್ನು ಬೆರೆಸಿ ಬಿಸಿ ಮಾಡಿಕೊಂಡು ಬಳಸುತ್ತಾರೆ.ಹಾಗೇ ಹಂಡೆಯ ನೀರಿಗೂ ನಾಕಾರು ಸಣ್ಣ ಬೇವಿನ ರೆಂಬೆಗಳನ್ನು ಹಾಕುತ್ತೇವೆ.ಸ್ನಾನದ ನಂತರ ಪೂಜೆ ಮುಗಿಸಿ ಶತಾಯುರ್ವಜ್ರದೇಹಾಯ..ಮಂತ್ರವನ್ನು ಹೇಳಿಕೊಂಡು ಬೇವುಬೆಲ್ಲವನ್ನು ಭಕ್ತಿಯಿಂದ ಸೇವಿಸುತ್ತೇವೆ.ಊರ ದೇವಸ್ಥಾನಕ್ಕೆ ಪ್ರತಿ ಹಬ್ಬದಲ್ಲೂ ಎಡೆ ಕೊಡುವುದು ಸಹಜ ಪದ್ದತಿ.

    ಇನ್ನು ಸಂಜೆಯಾಗುತ್ತಲೂ ಚಂದ್ರದರ್ಶನದ ಸಂಭ್ರಮ. ತುಸು ಎತ್ತರದ ಊರಿನ ಮಾಮೂಲು ಜಾಗಕ್ಕೆ ಎಲ್ಲರೂ ಸೇರಿಕೊಂಡು…
    ‘ಅಮಾಸೆ ಆದ ಮಾರನೆ ದಿನವೇ ಉಗಾದಿ ಬಂದ್ರೆ ಚಂದ್ರ ಕಾಣಾದು ಕಷ್ಟವೆಯಾ’ಅನ್ನುವ ಮಾಮೂಲಿ ಮಾತಿನೊಂದಿಗೆ ಯಾರಿಗಾದರೂ ಒಬ್ಬರಿಗೆ ಕಿರುಗೆರೆಯಂತೆ ಕಾಣುವ ಚಂದ್ರ ಕಂಡೊಡನೆ
    ‘ ಓ ಅಲ್ಲಿ.. ಅಲ್ಲೆಯಾ..ಆ ದೊಡ್ಡ ಮಾಡಾ ಐತಲಾ..ಅದರ ಕೆಳಿಕೆ ಬಂದು ಬಲಕ್ಕೆ ನೋಡು.. ಅದೇ‌ ನ್ಯಾರಕ್ಕು ನೋಡಿರೆ ಕಾಣ್ತಿತಪಾ’
    ಅನ್ನುವ ದಿಕ್ಕು ತೋರುವ ಅಥವಾ ದಿಕ್ಕು ತಪ್ಪಿಸುವ ಎಲ್ಲರ ಸಂಭ್ರಮದೊಳಗೆ ಬೆರೆತು ಚಂದ್ರದರ್ಶನ ಮಾಡಿ ಭಕ್ತಿಯಿಂದ ಕೈಮುಗಿದು, ಉಳಿದ ಬೇವುಬೆಲ್ಲವನ್ನು ತಿಂದು ಮನೆಗೆ ಮರಳುವುದರೊಂದಿಗೆ ಉಗಾದಿಯ ಸಂಭ್ರಮ ಮುಗಿಯುತ್ತದೆ.

    ಇನ್ನು ತಿನ್ನೋರ ಪೈಕಿಗೆ(ನಾನ್ ವೆಜಿಟೇರಿಯನ್ಸಿಗೆ ನಮ್ ಆಡುಮಾತಲ್ಲಿ ಬಳಸುವ ವಿಶೇಷಣ)ಮಾರನೆ ದಿನ ವರ್ಷದೊಡುಕು. ಅವತ್ತು ಯಥಾಶಕ್ತಿಗನುಸಾರ ಮನೆಯಲ್ಲಿ ಮಾಂಸದಡುಗೆ ,ಪಾನ ಪರಿಕರಾದಿಗಳ ವ್ಯವಸ್ಥೆ.ಒಟ್ಟಾರೆ ಹಬ್ಬದ ಹೆಸರಿನಲ್ಲಿ ಸಂಭ್ರಮಿಸುವುದಕ್ಕೆ ನೆಪ ಹುಡುಕುವುದು.

    ಹಬ್ಬದ ಪೌರಾಣಿಕ ಹಿನ್ನೆಲೆ ಏನೇ ಇದ್ದರೂ ಹಬ್ಬಗಳು ಬಂದಾಗ ಸ್ಥಳೀಯವಾಗಿ ಏರುವ ವ್ಯಾಪಾರ ವಹಿವಾಟುಗಳಿಗೆ ಜಾತಿ ಮತದ ಸೋಂಕು ತಟ್ಟದೇ ಇರುವುದನ್ನು ನೋಡುವುದೇ ಸಂಭ್ರಮ. ಯುಗಾದಿ ಹಬ್ಬದ ದಿನ ಟಿವಿಯಲ್ಲಿ ಬರುವ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೆ ಮನೆಯ ಹಿರಿಯರು ತಪ್ಪದೇ ಹಾಜಾರಾಗಿ ಭೂಮಂಡಲದ, ದೇಶದ,ರಾಜಕೀಯ ನಾಯಕರ,ಮನೆಯ ಕಿರಿಯರ ಭವಿಷ್ಯವನ್ನು ಕುತೂಹಲದಿಂದ ಕೇಳಿ ರಾತ್ರಿ ಊಟದ ಜೊತೆಗೆ ಚರ್ಚಿಸುವುದು ಬಹುತೇಕ ಎಲ್ಲ ಮನೆಗಳಲ್ಲೂ ಇದ್ದಿದ್ದೆ.

    ಕರೋನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂಕಷ್ಟದ ಕಾಲದಲ್ಲಿ ಯುಗಾದಿಯ ಸಂಭ್ರಮದೊಂದಿಗೆ ನಮ್ಮ ಮುಸ್ಲಿಂ ಬಾಂಧವರ ಪವಿತ್ರ ಉಪವಾಸ ಮಾಸ ಸಹ ಆರಂಭವಾಗಲಿದೆ.ಕರೋನಾ ವಿರುದ್ದದ ರಕ್ಷಣೆಯ ಸೂತ್ರಗಳು ಹಬ್ಬದ ಹೆಸರಿನಲ್ಲಿ ಮರೆತು ಹೋಗದಿರಲಿ.
    ಭಗವಂತನ ಅನುಗ್ರಹವನ್ನು ಬೇಡುತ್ತಾ ಸರ್ವರಿಗೂ ಹಬ್ಬದ ಶುಭಾಶಯಗಳು.

    (ರಂಗೋಲಿ ಕಲೆ :ಸಂಧ್ಯಾ ನಾಗರಾಜ್)

    ನಮ್ಮೂರ ಯುಗಾದಿ

    ಕೊಡ ತುಂಬುತಾದಂತೆ, ಕೊಡ ತುಂಬುತಾದಂತೆ ಅಂತ ರಾತ್ರಿಯ ಒಂದು ಸರಹೊತ್ತಲ್ಲಿ ಬೇಸಿಗೆಯ ಸೆಖೆಗೆ ಜಗುಲಿಗಳ ಮೇಲೆ ಮಲಗಿದ್ದ ನನ್ನೂರ ಜನಕ್ಕೆ ರಣ ಘೋಷದಂತೆ ಕೇಳಿಸಿಬಿಡುತ್ತಿದ್ದವು ಈ ವಾಕ್ಯಗಳು!.. ಯಾರು ಮೊದಲು ಈ ರಣ ಕಹಳೆ ಊದಿದರು ಅಂತ ತಿಳಿಯುವ ವ್ಯವಧಾನ ಯಾರಿಗೂ ಇರುತ್ತಿರಲಿಲ್ಲ. ಇಡೀ ಓಣಿ,ನಂತರ ಊರಿಗೆ ಊರೇ ವಯಸ್ಸಿನ ಇತಿ ಮಿತಿ ಮರೆತು ಎದ್ದು ಸಂಭ್ರಮ,ಆತುರತೆಯಿಂದ ಕಣ್ಣುಜ್ಜಿಕೊಳ್ಳುತ್ತಾ ಮನೆಗಳಲ್ಲಿನ ಖಾಲಿ ಕೊಡಗಳನ್ನು ತಡಕಾಡಿ ನಮ್ಮೂರ ಸೇದುವ ಭಾವಿ ಕಡೆ ರಣೋತ್ಸಾಹದಿಂದ ಹೊರಟು ಬಿಡುತ್ತಿದ್ದರು.

    ಎಪ್ಪತ್ತರ ದಶಕ ಅದು. ನಾಡು ಕಂಡರಿಯದ ಬರಗಾಲಕ್ಕೆ ಕರ್ನಾಟಕ ತುತ್ತಾಗಿತ್ತು. ಉತ್ತರ ಕರ್ನಾಟಕದ ಸ್ಥಿತಿಯಂತೂ ಚಿಂತಾಜನಕ. ರೈಲಲ್ಲಿ ನೀರು ಸರಬರಾಜು ಮಾಡ್ತಾರಂತೆ ಅನ್ನೋ ವಿಷಯಗಳನ್ನು ಬಾಯಿ ಮುಚ್ಚದೆ ಕೇಳುತ್ತಿದ್ದ ಸಮಯ. ಬಯಲು ಸೀಮೆಯ ನನ್ನೂರು ಅದಕ್ಕೆ ಹೊರತಾಗಿರಲಿಲ್ಲ. ಇಡೀ ಊರಿಗೆ ನೀರಿನ ದಾಹ ತೀರಿಸಲು ಇದ್ದದ್ದು ಒಂದೇ ಒಂದು ಸಿಹಿ ನೀರ ಸೇದುವ ಭಾವಿ! ತಾಯಿಯ ಮೊಲೆಗಿಂತಲೂ ಪವಿತ್ರ ನಮಗೆ. ಆ ನೀರಿನ ರುಚಿ ದೇಶ ಸುತ್ತಿರುವ ನನಗೆ ಮತ್ತೆಲ್ಲಿಯೂ ಕಂಡಿಲ್ಲ. ನಮ್ಮೂರ ಸಿಹಿನೀರ ಕುಡಿದರೆ ಯಾವ ರೋಗ ಬರೋದಿಲ್ಲ ಅನ್ನುವ ಹಿರಿಯರ ಮಾತಂತೂ ನಮಗೆ ಸಂಜೀವಿನಿಯಾಗಿತ್ತು. ದೊಡ್ಡ ಕೆರೆ ಇರುವ ನನ್ನೂರಲ್ಲಿ ಐದಾರು ಭಾವಿಗಳಿದ್ದರೂ ಅವುಗಳ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಈ ಒಂದು ಭಾವಿಯ ನೀರಿನ ಹೊರತು. ಕೊಡಗಳನ್ನು ಹಗ್ಗಕ್ಕೆ ಕಟ್ಟಿ ಕೆಳಗೆ ಬಿಟ್ಟು ಪ್ರಾಣಿಗಳ ಗುಟುರಿನ ಶಬ್ದದಂತೆ ತುಂಬಿಕೊಳ್ಳುತ್ತಿದ್ದ ಕೊಡಗಳನ್ನು ನೋಡ್ತಾ ಮೇಲಕ್ಕೆ ಒಬ್ಬರು ಅಥವಾ ಇಬ್ಬರೂ ಸೇರಿ ಎಳೆಯೋದು ಇದೆಯಲ್ಲ, ಅದು ಒಂದು ಕಲೆ. ಹಾಗಾಗಿ ಆ ಭಾವಿಗೆ ಸಿಹಿ ನೀರ ಸೇದುವ ಭಾವಿ ಅಂತ ಹೆಸರು. ಊರಿಂದ ನೂರಿನ್ನೂರು ಮೀಟರ್ ದೂರದಲ್ಲಿ ಕೆರೆಯ ದಂಡೆಯ ಪಶ್ಚಿಮ ದಿಕ್ಕಿನಲ್ಲಿತ್ತು.

    ಕೆರೆ ತುಂಬಿದರೆ ಬಾವಿಯಲ್ಲಿ ಸಮೃದ್ಧ ನೀರು. ವರ್ಷ ಬಿಟ್ಟು ವರ್ಷವಂತೂ ಕೆರೆ ತುಂಬುತ್ತಿತ್ತು. ಹಾಗಾಗಿ ಆಗ ಸಾವಿರ,ಹದಿನೈದು ನೂರು ಜನಸಂಖ್ಯೆ ಇದ್ದ ನನ್ನೂರಿಗೆ ಈ ಬಾವಿಯ ನೀರು ಸಾಕಾಗುತ್ತಿತ್ತು. ಮೂರ್ನಾಲ್ಕು ವರ್ಷ ಮಳೆ ಬಾರದಿದ್ದರೆ, ನಮ್ಮ ನೀರಿನ ಗೋಳು ಎಲ್ಲಿ ಹೇಳಿದರೂ ತೀರದು. ಈಗಿನ ರೀತಿ ನಮ್ಮೆಲ್ಲ ಗೋಳುಗಳನ್ನು ಕೇಳೋಕ್ಕೆ ಸರ್ಕಾರ ಅಂತ ಒಂದಿದೆ ಅಂತ ನಮಗೆ ತಿಳಿದೇ ಇರಲಿಲ್ಲ. ಏನೇ ಸಮಸ್ಯೆ ಬಂದರೂ ಊರವರೇ ಪರಿಹರಿಸಿಕೊಳ್ಳುತ್ತಿದ್ದರು. ಒಣಗಿದ ಕೆರೆಯಲ್ಲಿ ಅಲ್ಲಲ್ಲಿ ಹೂಳಿನ ಕೆಸರು ತೆಗೆದು ಭಾವಿಯ ರೂಪದ ಗುಂಡಿ ಮಾಡಿಕೊಳ್ಳುತ್ತಿದ್ದೆವು. ಅದೂ ಸಾಕಾಗುತ್ತಿರಲಿಲ್ಲ. ಊರ ಪಶ್ಚಿಮಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಗೌಡ್ರ ಕಪಿಲೇಬಾವಿ, ಈಶಾನ್ಯದಲ್ಲಿ ಎರಡು ಕಿಲೋಮೀಟರ್ ದೂರದ ಗೊಲ್ಲರ ಅಳ್ಳಿರಜ್ಜನ ಕಪಿಲೆ ಬಾವಿಗಳು ನೆರವಿಗೆ ಬರುತ್ತಿದ್ದವು. ನನ್ನೂರ ಸುತ್ತ ಮುತ್ತ ಅಂತರ್ಜಲ ಕಡಿಮೆ.

    ಈ ಸಿಹಿನೀರ ಸೇದುವ ಬಾವಿ ಒಂಥರಾ ನಮ್ಮೂರ ಸಂಪರ್ಕ ಕೇಂದ್ರ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಾಯಂಕಾಲ ಪ್ರತಿ ಮನೆಯ ಒಬ್ಬ ಅಥವಾ ಇಬ್ಬರು ಸದಸ್ಯರು , ಹೆಣ್ಣು, ಗಂಡು ತಾಮ್ರ ಅಥವಾ ಮಣ್ಣಿನ ಕೊಡಗಳನ್ನು ಹಿಡಿದು ನೀರಿಗೆ ಅಂತ ಇಲ್ಲಿ ಬರಲೇಬೇಕು. ಎಲ್ಲ ಕುಶಲೋಪರಿಗಳೂ ಅಲ್ಲೇ. ಎಲ್ಲರ ಹತ್ತಿರ ಸೇದುವ ಹಗ್ಗ ಇರುತ್ತಿರಲಿಲ್ಲ. ಇದ್ದವರು ಹಗ್ಗ ಹಾಕುತ್ತಿದ್ದರು. ಅವರು ಸಾಕು ಮಾಡಿಕೊಂಡು ಹಗ್ಗ ತೆಗೆಯುತ್ತಿದ್ದರು. ಅಷ್ಟರಲ್ಲೇ ಎಲ್ಲರೂ ಸೇದಿಕೊಳ್ಳಬೇಕು. ಹಾಗಾಗಿ ಬಾವಿಗೆ ಹೋಗಿ ಬರುವ ಹಾದಿಯಲ್ಲಿ ಸಾಕಾ, ಸಾಕಾ ಅಂತ ಕೇಳಿಕೊಳ್ಳೋದು ಒಂದು ರೀತಿಯ ಸಾಂಪ್ರದಾಯಿಕ ಮಾತಾಗಿತ್ತು. ಯುವಕರು ಒಬ್ಬರೇ ಕೊಡವನ್ನು ಬಾವಿಯಿಂದ ಸೇದಿದರೆ, ಯುವತಿಯರಿಗೆ ನೆರವಿನಂತೆ ಹಗ್ಗಕ್ಕೆ ಕೈಹಾಕೋದು, ಎಳೆಯುವ ಆ ಧಾಟಿ ಬಲು ಸೊಗಸಾಗಿ ಇರ್ತಿತ್ತು. ಐದಾರು ರಾಟೆಗಳು ಬಾವಿಗೆ ಇದ್ದರೂ ಒಂದೋ ಎರಡೋ ಕೆಲಸ ಮಾಡುತ್ತಿದ್ದವು ಹಗ್ಗಗಳೊಂದಿಗೆ. ಹಾಗಾಗಿ ಬಾವಿಯ ಕಟ್ಟೆ ಮಾತುಗಳ ವಿನಿಮಯಕ್ಕೂ ವೇದಿಕೆ ಆಗುತ್ತಿತ್ತು. ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಅನ್ನೋ ಗಾದೆಯೇ ಆಗ ಪ್ರಚಲಿತ ಇತ್ತು ಅಂದ್ರೆ, ಈ ನೀರಿನ ಭಾವಿಗಳ ಪಾತ್ರ ಎಷ್ಟಿರುತ್ತಿತ್ತು ಅಂತ ಅರ್ಥ ಮಾಡಿಕೊಳ್ಳಿ. ಜೋಡು ಕೊಡಗಳನ್ನು ಎರಡು ಹೆಗಲ ಮೇಲೆ ಯುವಕರು ಹೊತ್ತರೆ, ಬಳುಕುವ ಲತಾಂಗಿಯರು ತಲೆಯ ಮೇಲೆ ಒಂದು,ಸೊಂಟದ ಮೇಲೆ ಮತ್ತೊಂದನ್ನು ಹೊತ್ತು ನಡೆಯುವ ಸೊಗಸು ಇಂದು ಕನಸಾಗಿದೆ! ಈಗಿನ ಹೆಂಗಳೆಯರ ಸೊಂಟಗಳು ಕೊಡ ಇಡಲು ಸಿದ್ದವೇ ಆಗಿಲ್ಲವೇನೋ ಅಂತ ಅನುಮಾನ ನನಗೆ.

    ಇದೆಲ್ಲಾ ಸೊಬಗು,ನಗು,ಬಿನ್ನಾಣ,ಊರ,ಮನೆಯ ಎಲ್ಲಾ ವಿಷಯಗಳ ಚರ್ಚೆ,ಯುವಕ ಯುವತಿಯರ ಕಳ್ಳ ಕಣ್ಣ ನೋಟಗಳ ವಿನಿಮಯ ನಡೆಯುತ್ತಿದ್ದದು ಬಾವಿಯಲ್ಲಿ ನೀರಿದ್ದರೆ ಮಾತ್ರ! ಬರಗಾಲ ಬಂದು,ಮಳೆ ಬಾರದೆ ಕೆರೆ ತುಂಬದೇ ಇದ್ರೆ, ಭಾವಿಯ ಜಲಮೂಲ ಕ್ಷೀಣಗೊಂಡು ಕೊಡಮುಳುಗುವಷ್ಟು ಅಡಿ,ಎರಡಡಿ ನೀರು ಶೇಖರಿಸಿಕೊಳ್ಳಲು ದಿನವಿಡೀ ಬೇಕಾಗುತ್ತಿತ್ತು. ಸಾಯಂಕಾಲದ ವರೆಗೆ ಇದ್ದ ಬದ್ದ ನೀರನ್ನೆಲ್ಲಾ ಬಾವಿಯ ತಳಕ್ಕೆ ಇಳಿದು ಬಸಿದಾಗಿರುತ್ತಿತ್ತು. ಹಾಗಾಗಿ ರಾತ್ರಿಯೆಲ್ಲಾ ಯಾರಾದ್ರು ಎಷ್ಟು ನೀರು ಬಂತು ಅಂತ ನೋಡಿಕೊಂಡು ರಾತ್ರಿಯೇ ನೀರನ್ನು ಸೇದುವುದು ಆಗ ಸಾಮಾನ್ಯವಾಗಿತ್ತು. ಹಾಗಾಗಿಯೇ ರಾತ್ರಿ ಸರಹೊತ್ತಿನ ಕೊಡ ತುಂಬುತ್ತಾವಂತೆ ಅನ್ನೋ ಶಬ್ದಗಳು ರಣ ಕೇಕೆಯಂತೆ ಪ್ರತಿಯೊಬ್ಬರನ್ನೂ ಬಡಿದೆಬ್ಬಿಸಿ ಬಿಡುತ್ತಿತ್ತು.

    ಇಂತಹ ಬೇಸಿಗೆಯ ಸಮಯದಲ್ಲೇ,ನೀರಿನ ಬವಣೆ ಇರುವಾಗಲೇ ಯುಗಾದಿ ಹಬ್ಬ ಬಂದುಬಿಡುತ್ತಿತ್ತು. ಬಹುತೇಕ ಮನೆಗಳ ನೆಲಹಾಸು ಮಣ್ಣಿನಿಂದಲೇ ಇರುತ್ತಿತ್ತು. ಅವುಗಳನ್ನು ಸಗಣಿ ನೀರಿನೊಂದಿಗೆ ಸಾರಿಸುತ್ತಿದ್ದರು. ಮನೆಯಲ್ಲಿನ ಪಾತ್ರೆ ಪಗಡೆ ಗಳನ್ನು ತೊಳೆದುಕೊಳ್ಳಬೇಕು. ಇಲ್ಲವಾದ್ರೆ ಅದೆಂತಹ ಯುಗಾದಿ ಹಬ್ಬ?!

    ಎರಡು ಮೂರು ವರ್ಷ ಮಳೆ ಬರದಿದ್ದದ್ದು,ಬೆಳೆ ಬೆಳೆಯದೇ ಹೋದದ್ದು, ಮನುಷ್ಯರದ್ದು ಬಿಡಿ, ದನ ಕರುಗಳಿಗೆ ನೀರು ಮೇವಿನ ಬವಣೆ, ಕೊನೆಗೆ ಕುಡಿಯಲು ನೀರೂ ಇಲ್ಲದ್ದು ವಿಷಯವೇ ಅಲ್ಲ ಅನ್ನುವ ರೀತಿ ನನ್ನೂರು ಯುಗಾದಿ ಹಬ್ಬಕ್ಕೆ ತಯಾರಾಗಿ ಬಿಡ್ತಿತ್ತು! ಹಿಂದಿನ ದಿನ ಮನೆ ಸಾರಿಸಿಕೊಂಡು, ಇದ್ದ ಬದ್ದ ಪಾತ್ರೆಗಳನ್ನು ತೊಳೆದುಕೊಂಡು, ರಾತ್ರಿಯೆಲ್ಲಾ ನೀರನ್ನು ಬಾವಿಯಿಂದ ಅಕ್ಷರಶಃ ಬಸಿದು ತಂದು, ಬೆಳಿಗ್ಗೆಯೇ ಎಲ್ಲ ಮನೆಗಳ ಮುಂದೆ ಸಗಣಿ ನೀರಿನ ಸಿಂಚನ, ರಂಗೋಲಿಗಳು, ಮಾವಿನ ಎಲೆಯ ತಳಿರು ತೋರಣಗಳು ಹಬ್ಬದ ಸಡಗರವನ್ನು ಉಲ್ಬಣಗೊಳಿಸುತ್ತಿತ್ತು. ಅಡುಗೆ ಮನೆಗಳಲ್ಲಿ ಹಬ್ಬದ ಅಡುಗೆಯ ತಯಾರಿ ನಡೆದರೆ, ಊರಲ್ಲಿ ದೇವರು ಬರುವ ಸಂಭ್ರಮ. ದೇವರು ಊರೆಲ್ಲ ಅಡ್ಡಾಡಿ ತಳಾಸ ಅಂತ ಕರೆಯಲ್ಪಡುವ ಪೂಜಾರಿ ಮನೆಯ ಜಾಗದಲ್ಲಿ ಬಂದು ಸ್ಥಾಪಿತನಾದರೆ, ಅಲ್ಲಿ ಕೊಡುತ್ತಿದ್ದ ಬೇವು ಬೆಲ್ಲದ ನೀರಿಗೆ ಊರೆಲ್ಲ ನೆರೆಯುತ್ತಿತ್ತು. ಬೇವಿನ ಹೂಗಳ ಗೊಂಚಲು, ಮಾವಿನಕಾಯಿಯ ತುಂಡುಗಳು, ಬೆಲ್ಲದ ತುಂಡುಗಳನ್ನು ಬೆರೆಸಿ, ತಯಾರಿಸಿದ ಪಾನಕ ಅದು. ಒದ್ದೆ ಬಟ್ಟೆಯಿಂದ ಹೊದಿಸಿದ ಹೊಸ ಮಣ್ಣಿನ ಗಡಿಗೆಯಲ್ಲಿ ಅದನ್ನು ಇಟ್ಟಿರುತ್ತಿದ್ದರು. ಆ ನೀರನ್ನು ಒಂದು ಲೋಟದಲ್ಲಿ ಮನೆಗೆ ತಂದು ಪೂಜೆಯ ನಂತರವೇ ಎಲ್ಲರ ಊಟ. ಇದು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಯುಗಾದಿಯ ಬೇಟೆ ಗೆ ಅಂತ ಊರ ಉತ್ಸಾಹಿ ಯುವಕರು ನಮ್ಮೂರ ಬೇಡಪಡೆಯ ನೇತೃತ್ವದಲ್ಲಿ ಭರ್ಚಿ,ಬಿಲ್ಲೆ, ಕತ್ತಿ ವಿಧ ವಿಧವಾದ ಆಯುಧ ಹಿಡಿದು ಅಡವಿಗೆ ಹೋಗುತ್ತಿದ್ದರು.

    ಯುಗಾದಿ ಬೇಟೆ ಅಂತಲೇ ಹೆಸರುಹೊಂದಿದ್ದ ಈ ಕಾರ್ಯಕ್ರಮ ಬಹುತೇಕ ಸುತ್ತ ಹಳ್ಳಿಗಳಲ್ಲಿ ಇರುತ್ತಿತ್ತು. ಅಡವಿಗಳಲ್ಲಿ ಆಯಾಯ ಊರುಗಳ ಸರಹದ್ದು ಇರುತ್ತಿತ್ತು. ಆಯಾಯ ಊರವರು ಅವರವರ ಊರುಗಳ ಸರಹದ್ದಲ್ಲೇ ಬೇಟೆ ಆಡಬೇಕು. ಬೇಟೆ ಬೇರೆ ಊರ ಅಡವಿಯ ಸರಹದ್ದಿಗೆ ಹೋಯ್ತೆಂದರೆ ಅದನ್ನು ಕೊಲ್ಲುವ ಹಾಗಿಲ್ಲ ಅನ್ನುವ ನಿಯಮ. ನನಗಂತೂ ಇದು ಆಗತಾನೇ ಅಪ್ಪ ಕಥೆ ಹೇಳುತ್ತಿದ್ದ ಪಾಶುಪತಾಸ್ತ್ರ ದ ಕಥೆಯಲ್ಲಿಯ ಅರ್ಜುನ ಮತ್ತು ಬೇಡನ ರೂಪದ ಶಿವನನ್ನು ನೆನಪಿಸುತ್ತಿತ್ತು.

    ಸಾಮಾನ್ಯವಾಗಿ ಒಂದು ರಾತ್ರಿಗೆ ಮೀಸಲಿರುತ್ತಿದ್ದ ಈ ಬೇಟೆ ಆಟ, ಒಂದು ವೇಳೆ ಬೇಟೆ ಸಿಗದಿದ್ದರೆ ಮತ್ತೊಂದು ದಿನಕ್ಕೆ ಮುಂದೂಡಿಕೆ ಆಗ್ತಿತ್ತು. ಏನೇ ಆದರೂ ಬೇಟೆ ಇಲ್ಲದೆ ಪಡೆ ಊರೊಳಗೆ ಬರ್ತಿರಲಿಲ್ಲ. ಹಾಗೆ ಅಲ್ಲಿಯ ಆಗು ಹೋಗುಗಳನ್ನು ಕಾಲ ಕಾಲಕ್ಕೆ ಊರಿಗೆ ಬಂದು ತಿಳಿಸುವ ಗುಂಪು ಇರ್ತಿತ್ತು.

    ಒನಕೆ ಓಬವ್ವ ಅಂತ ಹೆಸರು ವಾಸಿಯಾದ ಚಿತ್ರದುರ್ಗದ ಮದಕರಿ ನಾಯಕನ ಇತಿಹಾಸದಲ್ಲಿ ಬರುವ ವೀರ ಮಹಿಳೆಯ ತವರೂರು ಗುಡೇಕೋಟೆ ನನ್ನೂರಿನ ಅಡವಿಯ ಸರಹದ್ದಲ್ಲೇ ಇದೆ. ಈ ಯುಗಾದಿ ಬೇಟೆ ಅಂದ್ರೆ, ಅವರಿಗೂ ನಮಗೂ ಎನಾದ್ರೂ ತಗಾದೆ ಇರಲೇಬೇಕು. ಸಾಮಾನ್ಯವಾಗಿ ಕಾಡು ಹಂದಿಗಳೇ ಬೇಟೆ ಆಗಿರುತ್ತಿದ್ದವು. ಅದನ್ನು ಯಾರು ಮೊದಲಿಗೆ ನೋಡಿದರು,ಯಾರು ಮೊದಲ ಹೊಡೆತ ಯಾವ ಆಯುಧದಿಂದ ಕೊಟ್ಟರು,ಮತ್ಯಾರು ಅದಕ್ಕೆ ಸಾಯುವ ಹೊಡೆತ ಕೊಟ್ಟರು ಅನ್ನುವುದು ದಿನಗಳ ಕಾಲ ರಸವತ್ತಾದ ಚರ್ಚೆಯ ವಿಷಯಗಳು. ಇಡೀ ಊರಿಗೇ ಸಂಭ್ರಮದ,ಹೆಮ್ಮೆಯ ವಿಷಯವಾಗಿ ಚರ್ಚಿಸಲ್ಪಡುತ್ತಿತ್ತು. ನನಗಂತೂ ಕಥೆಗಳಲ್ಲಿ ಕೇಳುತ್ತಿದ್ದ ಯುದ್ಧದ ಭಾವನೆ ಬರ್ತಿತ್ತು. ಬಲವಾದ ಬೇಟೆ ದೊರಕಿದೆ, ಆ ವರ್ಷ ಒಳ್ಳೆ ಮಳೆ,ಬೆಳೆ ಆಗಿ ಊರಿಗೆ ಸಂವೃದ್ಧತೆ ಆಗುತ್ತದೆ ಅನ್ನುವ ಪ್ರತೀತಿ!

    ಆ ಬೇಟೆಯ ಮೆರವಣಿಗೆಯೇ ಒಂದು ಸಂಭ್ರಮ. ಬೇಟೆಗೆ ಹೋದ ಎಲ್ಲರೂ ತಮ್ಮ ತಮ್ಮ ಆಯುಧಗಳನ್ನು ಮೇಲೆತ್ತಿಕೊಂಡು ಬೇಟೆಯನ್ನು ಒಂದು ಕೋಲಿಗೆ ನೇತುಹಾಕಿಕೊಂಡು ಇಬ್ಬರು ಹೊತ್ತು ಮೆರವಣಿಗೆಯಲ್ಲಿ ನಡೆಯುತ್ತಿದ್ದರೆ, ಮತ್ತೆಲ್ಲರೂ ಆಯುಧ ಸಮೇತರಾಗಿ ನೃತ್ಯ ಮಾಡುತ್ತಾ ಊರ ಬೀದಿಯಲ್ಲಿ ಸಾಗೋದು ಮರೆಯಲಾಗದ ರೋಚಕ ಕ್ಷಣ! ಸಾಗುವ ಮೆರವಣಿಗೆಗೆ, ಊರ ಹೆಂಗಳೆಯರು ಆರತಿ, ಓಕುಳಿಯಿಂದ ನಿವಾಳಿಸೋದು ನೋಡಲು ಬಲು ಖುಷಿ ಕೊಡ್ತಿತ್ತು. ಬೇಟೆಗಾರರ ದಣಿದ ಮುಖಗಳು ಕುಂಕುಮದಿಂದ ಕೆಂಪಾಗಿ ಹುರುಪಿನಿಂದ ಕುಣಿಯೋದು ನನಗೆ ರಣೋತ್ಸವವನ್ನು ಕಲ್ಪಿಸಿಕೊಳ್ಳಲು ಅನುವು ಮಾಡುತ್ತಿತ್ತು.

    ಮಾರನೆಯ ದಿನ ಪಂಚಾಂಗ ಶ್ರವಣ, ಸಾಯಂಕಾಲ ಚಂದ್ರ ದರ್ಶನ. ಎಲ್ಲರೂ ಊರ ಹೊರಗಿನ ದೇವಸ್ಥಾನದಲ್ಲಿ ನೆರೆಯೋದು, ಮುಸುಕು ಆಗುವತನಕ ಅಲ್ಲಿದ್ದು, ಚಂದ್ರನನ್ನು ಆಗಸದಲ್ಲಿ ಹುಡುಕೋದು. ಕಂಡವರು ಅಲ್ಲಿದೆ ನೋಡು, ಆ ಮರದ ಟೊಂಗೆಯ ಎಡಕ್ಕೆ ಅಂತ ಹೇಳೋದು, ಕಾಣಲಿಲ್ಲ ಅನ್ನೋದು…ಹೀಗೇ ಸ್ವಲ್ಪ ಕತ್ತಲು ಆವರಿಸುವವರೆಗೆ ಕಣ್ಣು ಮುಚ್ಚಾಲೆ ಆಟ. ನಂತರ ಗೆರೆ ಎಳೆದಂತಹ ಬಿದಿಗಿ ಚಂದ್ರನ ದರ್ಶನ…ಮಿಣುಕು ದೀಪ ಹಚ್ಚಿದಂತಾ ಜೋಡು! ಚಂದ್ರ ಕಂಡ,ಚಂದ್ರ ಕಂಡ ಅಂತ ಕುಣಿತಿದ್ವಿ, ಕಂಡವರೆನ್ನೆಲ್ಲಾ ಚಂದ್ರನ್ನ ನೋಡಿದ್ಯಾ ಅಂತ ಕೇಳೋದೇ ಕಾರ್ಯಕ್ರಮ! ಊರ ಎಲ್ಲ ಹಿರಿಯರ ಕಾಲಿಗೆ ನಮಸ್ಕಾರ.

    ಚೈತ್ರ ಮಾಸದೊಂದಿಗೆ ಪ್ರಾರಂಭವಾಗುವ ನಮ್ಮ ನೆಲದ ಹೊಸ ವರುಷದ ಹಬ್ಬ ಈ ಯುಗಾದಿ ಅಂತೆ. ಒಂದಿದ್ದರೂ,ಇಲ್ಲದಿದ್ದರೂ ಜೀವನದಲ್ಲಿಯ ಕಷ್ಟ,ಸುಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ಸಂದೇಶದ ರೂಪಕವಾಗಿ ಇಂದು ಬೇವು,ಬೆಲ್ಲವನ್ನು ಜೊತೆಯಾಗಿ ಸೇವಿಸಿ ಸಂಭ್ರಮಿಸುತ್ತೇವೆ.

    ಸುಖವಾಗಿರಲು, ಸಂತೋಷವಾಗಿರಲು ಬೇಕಾಗಿರೋದು ಮನಃಸತ್ವ…. ಹಣ ಅಲ್ಲ ಅನುಕೂಲಗಳು ಅಲ್ಲ ಅನ್ನೋದನ್ನ ಆಗ ಅನುಭವಿಸಿದ್ದರೂ ತಿಳಿಯಲು ಆಗಲಿಲ್ಲ, ಈಗ ತಿಳೀತಿದೆ.

    ಎಲ್ಲರಿಗೂ ಪ್ಲವನಾಮ ಸಂವತ್ಸರದ ಉಗಾದಿ ಹಬ್ಬದ ಶುಭಾಶಯಗಳು. ಬೇವು ಬೆಲ್ಲ ತಿಂದು,ಒಳ್ಳೊಳ್ಳೆ ಮಾತಾಡಿ ಕಷ್ಟ,ಸುಖಗಳನ್ನು ಸಮವಾಗಿ ಸ್ವೀಕರಿಸುವ ಸಮಭಾವಿಗಳಾಗಿ ಬಾಳೋಣ.

    Photo by Jeremy Bishop on Unsplash

    ಹೊಸ ಭರವಸೆಗಳೊಂದಿಗೆ ಆರಂಭವಾಗಿರುವ ಹೊಸ ವರ್ಷ

    ಯುಗಾದಿ ಅಂದರೆ…. ಹೊಸವರ್ಷದ ಆರಂಭ. ಜಗತ್ತು ಮುಂದುವರಿಯಬೇಕೆಂದರೆ ಎಲ್ಲವೂ ಮರಳಿ ಸಂಭವಿಸಬೇಕು. ಕಾಲದ ಹುಟ್ಟು, ಪ್ರಕೃತಿಯ ಚೈತನ್ಯ, ಮನುಷ್ಯನ ಸಂಕಲ್ಪ, ಬದುಕು, ಬೆಳೆಗಳು ಎಲ್ಲವೂ ಹೊಸ ಕುಡಿಗಳೊಂದಿಗೆ ಮರಳಿ ಹುಟ್ಟಬೇಕು, ಹೊಸತನ್ನು ಪ್ರತಿಪಾದಿಸಬೇಕು.  ಪ್ರಕೃತಿಯ ಚಿಗುರು,ಹೂ,ಹೊಸ ಕುಹೂ,ಸಂತೋಷ, ಸಂಭ್ರಮ ಇತ್ಯಾದಿ ಎಲ್ಲ ಹೊಸತನ್ನೂ ಕಾಲದಲ್ಲಿ  ಗುರುತಿಸಿ ಆ ಸಂತೋಷವನ್ನು ಆಚರಿಸುತ್ತ, ಬರುವ ವರ್ಷದ ದಿವಸಗಳೆಲ್ಲ , ಸಂತೋಷವಾಗಿ, ಸಮತೋಲಿತವಾಗಿ ಕಳೆಯಲೆಂದು ಆಶಿಸಿ ಸಮಾಜದ ಜನರೆಲ್ಲ ಒಟ್ಟುಗೂಡಿ ಆಚರಿಸುವ ಹಬ್ಬವೇ ಯುಗಾದಿ. ಈ ಹಂಬಲದೊಂದಿಗೆ ಮತ್ತೆ ಮರಳಿ ಬರುತ್ತಿದೆ ಇದೋ ಈ ಯುಗಾದಿಯ ಸಂಭ್ರಮ.

    ಹಬ್ಬಗಳು ಸಮಾಜದ ಅತಿ ಮುಖ್ಯ ಅಂಗಗಳು. ಹಬ್ಬಗಳ ಇರುವು ಸಮುದಾಯದ ಒಗ್ಗಟ್ಟನ್ನು, ಆರೋಗ್ಯದ ಸುಸ್ಥಿತಿಯನ್ನು ಬಿಂಬಿಸುತ್ತದೆ. ಹಬ್ಬಗಳು ಸಮಾಜದ ಜನರ ಚೈತನ್ಯವನ್ನು ಒಗ್ಗೂಡಿಸಿ, ಸಮುದಾಯದಲ್ಲಿ ಸಾರ್ಥಕತೆಯನ್ನು ತುಂಬುತ್ತವೆ.ನಮ್ಮ ನಾಡಿನ ಮತ್ತು ದೇಶದ ಬಹುತೇಕ ಹಿಂದೂ ಹಬ್ಬಗಳು ದೇವರ ಕಥೆ-ಉಪಕಥೆಗಳ ಆಧಾರದ ಮೇಲೆ ಸೃಷ್ಟಿಯಾದವು.ಇವುಗಳ ಜೊತೆ,ಪ್ರಕೃತಿಯ ಬದಲಾವಣೆಗಳ ಆಧಾರದ ಮೇಲೂ ಕೆಲವು ಹಬ್ಬಗಳು ಸೃಷ್ಟಿಯಾಗಿವೆ. ಕೃಷಿಯನ್ನು ಅಧರಿಸಿದ ರೈತಾಪಿ ಹಬ್ಬಗಳೂ ಇವೆ.ಆದರೆ ಸೃಷ್ಟಿಲೋಕದ ಕಾಲ ಮಾಪನವನ್ನು ಆಧರಿಸಿ ಬರುವ ಕೆಲವೇ ಹಬ್ಬಗಳಲ್ಲಿ ಯುಗಾದಿ ಅತ್ಯಂತ ಮುಖ್ಯವಾದ್ದು.

    ಸೂರ್ಯ-ಚಂದ್ರರ ಪಥ ಗತಿಯನ್ನು ಅನುಸರಿಸಿ ಧರಿತ್ರಿ ಹೊಸ ಉಡುಗೆ ತೊಡುವ ವಸಂತ ಋತುವಿಗಂತೂ ವರ್ಷದಲ್ಲಿ ಇನ್ನಿಲ್ಲದ ಪ್ರಾಧಾನ್ಯತೆ. ಭಾರತವೇ ಅಲ್ಲದೆ ಇತರೆ ದೇಶಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಈ ವಸಂತ ಋತುವಿಗೆ ಸ್ವಾಗತ ಸಿಗುತ್ತದೆ. ಅದನ್ನೇ ಹೊಸವರ್ಷವೆಂದು ನಮ್ಮ ಹಿರಿಯರು ನಂಬಿದ ಸಂಪ್ರದಾಯವನ್ನೇ ನಾವು ಯುಗಾದಿ ಮತ್ತು ಇತರೆ ಹೆಸರುಗಳಲ್ಲಿ ಆಚರಿಸುತ್ತೇವೆ.

     ಚಳಿಗಾಲದ ಕತ್ತಲೆ, ಕಡಿಮೆ ಬೆಳಕು, ಸಣ್ಣ ದಿನಗಳನ್ನು ತೊಡೆದು ಚೈತ್ರ ಮಾಸ ತರುವ ಉಲ್ಲಾಸ ಅವರ್ಣನೀಯವಾದ್ದು. ಈ ಸಂಭ್ರಮದ ದಿಬ್ಬಣ ಶುರುವಾಗುವುದೇ ಯುಗಾದಿಯ ದಿನ. ನವೋಲ್ಲಾಸ, ಹೊಸ ಚಿಗುರಿನ ಜೊತೆ ಆಗ ತಾನೆ ಹುಟ್ಟಿ ಚಂಗನೆಂದು ನೆಗೆವ ಸಣ್ಣ ಮರಿಗಳಿಂದ ಹಿಡಿದು ,ಪುಟ್ಟ ಮಕ್ಕಳು, ಮುದುಕರು ಎಲ್ಲರೂ ಯುಗಾದಿಯ ಸಮಯದಲ್ಲಿ ನವ ಮುನ್ನುಡಿಯನ್ನು ಬರೆಯುತ್ತಾರೆ.ಸುತ್ತಲಿನ ಪರಿಸರದಲ್ಲೆಲ್ಲ ಪ್ರಸನ್ನತೆಯನು ಹರಡಿ, ಹೊಸ ಉಲ್ಲಾಸವನ್ನು ತುಂಬಿ ಬದುಕನ್ನು ಮತ್ತೆ ಪ್ರಚೋದಿಸುವ ಈ ಕಾಲವನ್ನು ಯುಗದ ಆದಿಯೆಂದೂ, ಹೊಸವರ್ಷವೆಂದೂ ನಮ್ಮ ಸಮಾಜ ಗುರುತಿಸಿರುವುದರಲ್ಲಿ ಅಪಾರವಾದ ಅರ್ಥ ಅಡಗಿದೆ.

     ಪ್ರತಿ  ದಿನವೂ ಹೊಸತೇ ಆದರೂ, ಕಾಲವನ್ನು ಗುಣಿಸುವವರು ಹಲವಾರು ವರ್ಷಗಳನ್ನು ಒಂದು ಕಾಲವಧಿಯಡಿ ಗುರುತಿಸಿ ಅದನ್ನು ಸಂವತ್ಸರವೆಂದು ಕರೆದಿದ್ದಾರೆ. ಈ ಪ್ರತಿ ಸಂವತ್ಸರದಲ್ಲಿ 60 ವರ್ಷಗಳನ್ನು ಕೂಡಿಹಾಕುತ್ತಾರೆ.ಈ ಗಣನೆಯ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳೇ ಚೈತ್ರಮಾಸ. ಸಂಸ್ಕೃತ ಪದವಾದ ಯುಗ (ಕಾಲ) ಆದಿ(ಶುರುವಾತು) ಇನ್ನೂ ಕ್ಲಿಪ್ತವಾಗಿ ಹೇಳಬೇಕೆಂದರೆ ಕಲಿಯುಗದಲ್ಲಿ ಮಾತ್ರ ಆರಂಭವಾದ ಹಬ್ಬ. ಕಲಿಯುಗ ಶುರುವಾದ್ದು ಕೃಷ್ಣ ಈ ಲೋಕವನ್ನು ಬಿಟ್ಟು ತೆರಳಿದ ಬಳಿಕ. ಮಹರ್ಷಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ “ ಯೆಸ್ಮಿನ್ ಕ್ರಿಷ್ಣೋ ದಿವಂವ್ಯತಃ, ತಸೇವ ಪ್ರತಿ ಪನ್ನಂ ಕಲಿಯುಗಃ “ ಎನ್ನುತ್ತಾರೆ. ಈ ಕಲಿಯುಗ ಶುರುವಾದ್ದು 3102 ಬಿಸಿಇ ಯ ಫೆಬ್ರವರಿ 17-18 ನೇ ತಾರೀಖಿನಂದಂತೆ.

    ಗೌತಮೀಪುತ್ರ ಶತಕರ್ಣಿ, ಶತವಹಾನದ ರಾಜ  ಚೈತ್ರಮಾಸದ ಈ ಕಾಲದ ಮಹತ್ತನ್ನು ಗುರುತಿಸಿ ಯುಗಾದಿಯ ಆಚರಣೆಯನ್ನು ಶುರುಮಾಡಿದ ಎಂದು ನಂಬುವ ಚರಿತ್ರಕಾರರಿದ್ದಾರೆ. ಇದೇ ರಾಜವಂಶಜರು ಕರ್ನಾಟಕ, ಆಂಧ್ರಪ್ರದೇಶ  ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಆಳಿದ ಕಾರಣ ಈ ಹಬ್ಬವನ್ನು ಮುಖ್ಯವಾಗಿ ಈ ಮೂರು ರಾಜ್ಯಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ‘ಗುಡಿ ಪಾಡ್ವ’ ಎಂದು ಕರೆಯುತ್ತಾರೆ.ಇದೇ ದಿನವನ್ನು ಉತ್ತರಭಾರತದವರು ‘ಚೈತ್ರ ನವರಾತ್ರಿ ‘ ಹಬ್ಬದ ಮೊದಲ ದಿನವಾಗಿ ಆಚರಿಸುತ್ತಾರೆ. ರಾಜಾಸ್ಥಾನದಲ್ಲಿ ‘ತಪ್ನಾ’ ಎನ್ನುವ, ಸಿಂಧಿಗಳು‘ಚೇತಿ ಚಂದ್’ ಎನ್ನುವ ಮಣಿಪುರದವರು ‘ಸಜಿಬು ನೊನ್ಗ್ಮ ಪನ್ಬ’ ಎನ್ನುವ ಹೆಸರಿನ ಹಭ್ಭಗಳನ್ನು ಹೊಸವರ್ಷದ ಹೆಸರಲ್ಲಿ ಇದೇ ದಿನ ಆಚರಿಸಿದರೆ,  ಬಾಲಿ ಮತ್ತು ಇಂಡೋನೇಶಿಯಾದಲ್ಲಿರುವ ಹಿಂದೂಗಳು ‘ನ್ಯೇಪಿ’ ಎನ್ನುವ ಹೆಸರಲ್ಲಿ ಯುಗಾದಿಯ ತತ್ವ ಇರುವ ಹಬ್ಬವನ್ನು ಆಚರಿಸುತ್ತಾರೆ.

    ‘ಚಂದ್ರಮಾನ ಯುಗಾದಿ’ ಮತ್ತು ‘ಸೂರ್ಯಮಾನ ಯುಗಾದಿ’ ಗಳೆಂದು ಎರಡು ಬಗೆಯನ್ನು ಯುಗಾದಿಯಲ್ಲಿ ಜನರು ಆಚರಿಸಿದರೂ ಚೈತ್ರ ಶುದ್ದ ಪಾಡ್ಯಮಿ ಸೂಚಿಸುವುದು ಚಂದ್ರಮಾನ ಯುಗಾದಿಯನ್ನು. ಪ್ರಕಾಶಮಯವಾದ ಚೈತ್ರದ ಆಮೇಲಾರ್ಧದ ಮೊದಲನ್ನು ಯುಗಾದಿಯ ದಿನ ಸೂಚಿಸುತ್ತದೆ.

    ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ‘ಬಾರ್ಹಸ್ಪತ್ಯಮಾನ’ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ.

    ಪ್ರಕೃತಿಯ ನಾಲ್ಕು ಕಾಲಗಳು ತಮ್ಮಿಂದ ತಾವೆ ಪುನರಾವರ್ತಿತವಾಗುತ್ತಲೇ ಬಂದಿವೆ. ಆದರೆ ಮಾನವನಿಗೆ ಅದನ್ನು ಅಳೆಯುವ ಬಯಕೆ. ಆಯಾ ಕಾಲಗಳಲ್ಲಿ ನಡೆವ ಪ್ರಕೃತಿಯ ವಿದ್ಯಮಾನಗಳನ್ನು ಗಮನಿಸಿ , ಅದಕ್ಕೆ ಸೂಕ್ತ ಹೆಸರಿಟ್ಟು ಅದರ ಸಂಭ್ರಮಗಳಲ್ಲಿ ತಾನು ಕೂಡ ಭ್ರಮಿತನಾಗುವ ಬಯಕೆ. ಈ ಪರಿಭ್ರಮಣೆಯ ಪರಿಣಾಮವೇ ಯುಗಾದಿ ಹಬ್ಬದ ಆಚರಣೆಗೆ ಕಾರಣ. ಮನುಜನಲ್ಲಿ ಕೂಡ ಒಂದು ರೀತಿಯಲ್ಲಿ ಭಾವ ಪುನರುತ್ಥಾನವಾಗುವ ಕಾಲವಿದು. ಜೀವನದ ಅನುಭವವಿರುವ ಹಿರಿಯರು, ಬದುಕನ್ನು ಅದರ ನಿಜರೂಪದಲ್ಲಿ ನೋಡಿದವರು ಕಾಲದಲ್ಲಿ ಒಳಿತೂ-ಕೆಡುಕೂ ಇರುವುದನ್ನು ಗಮನಿಸಿ ಅದನ್ನು ಜೀವನದ ಬೇವು (ಕಹಿ) ಬೆಲ್ಲ (ಸಿಹಿ)ಗಳಲ್ಲಿ ಗುರುತಿಸಿದ್ದಾರೆ. ಅವೆರಡೂ ಸಮನಾಗಿದ್ದಲ್ಲಿ ಬದುಕು ಸಮತೋಲನವಾಗಿರಬಲ್ಲದು ಎಂಬ ಅಪಾರವಾದ ಅರಿವನ್ನು ತೋರುತ್ತ, ಅಷ್ಟನ್ನಾದರೂ ಅನುಗ್ರಹಿಸು ಎಂಬ ಬೇಡಿಕೆಯನ್ನು ದೇವನ ಮುಂದಿಡುತ್ತ ಯುಗಾದಿಯಲ್ಲಿ ದೇವರನ್ನು ಅನುನಯಿಸುತ್ತಾರೆ. ಜನ ಸಮುದಾಯಗಳಲ್ಲಿ, ಸಮಾಜದಲ್ಲಿ, ಕುಟುಂಬಗಳಲ್ಲಿ,ಪ್ರಕೃತಿಯಲ್ಲಿ ವರ್ಷದ ಕಾಲಾವಧಿಯಲ್ಲಿ ಆಗಿರಬಹುದಾದ ಹಲವು ಒಳ್ಳೆಯ-ಕೆಟ್ಟ ಘಟನೆಗಳು ಬದುಕಿನ ಸಹಜವಾದ ಕ್ರಿಯೆ ಎಂದು ಸಾರುವಲ್ಲಿ ಅಪಾರ ಪ್ರಬುದ್ದತೆಯನ್ನು ಮನುಜ ಈ ಹಬ್ಬದ ಮೂಲಕ ಮೆರೆದಿದ್ದಾನೆ.

    ಯುಗಾದಿಯಲ್ಲಿ ಇದೇ ತಿಳಿವಿನ ಹೂರಣವನ್ನು ಒಬ್ಬಟ್ಟಿನಲ್ಲಿಟ್ಟು ತಟ್ಟಿದ್ದಾನೆ. ಪುಳಿಯೋಗರೆಯ ಹಿತವಾದ ಹುಣಸೆ ಹುಳಿಯಲ್ಲಿ,ಮಸಾಲೆಯಲ್ಲಿ ಸವಿದಿದ್ದಾನೆ.ಮಾವನ ಕಾಯಿ ಚಿತ್ರಾನ್ನವೂ ಜನಪ್ರಿಯ. ಆದರೆ ಯುಗಾದಿಯ ಸಾಂಕೇತಿಕ ಅಡುಗೆ ಅಂದರೆ ಉಗಾದಿ ಪಚಡಿ!

    ಬೆಲ್ಲ, ಹಸಿಮೆಣಸಿನಕಾಯಿ,ಬೇವಿನೆಲೆ, ಹುಣಿಸೇಹಣ್ಣು, ಉಪ್ಪನ್ನು ಬಳಸಿ ಮಾಡುವ ಈ ನೈವೇದ್ಯದಡುಗೆಯಲ್ಲಿ ಬದುಕಿನ ಸುಖ,ದುಗುಡ, ಕಹಿ,ಕೋಪ,ಮತ್ತು ಆಶ್ಚರ್ಯ ಭಾವಗಳನ್ನು ಮೇಳೈಸಿ ಮತ್ತೆ  ಬದುಕು ಹೇಗೆ ಎಲ್ಲ ಅನುಭವಗಳ ಮಿಷ್ರಣ ಎನ್ನುವುದನ್ನು ಸಾಬೀತುಮಾಡಿ  ಜನರಿಗೆ ಸರಳವಾಗಿ ಅನುಭವಕ್ಕೆ ಬರುವಂತೆ ಮಾಡಿ, ಹೀಗೇ ಬದುಕನ್ನು ಎಲ್ಲ ರುಚಿಗಳಲ್ಲಿ ಅಸ್ವಾದಿಸಿ ಎನ್ನುವ ಕರೆಯನ್ನು ಯುಗಾದಿ ಹಬ್ಬದ ಮೂಲಕ ನೀಡಿದ್ದಾನೆ.ಈ ನಿಟ್ಟಿನಲ್ಲಿ ಯುಗಾದಿ ಬರೀ ಹೊಸವರ್ಷದ ಆಚರಣೆಯನ್ನು ಮಾತ್ರ ಪ್ರತಿಪಾದಿಸುವ ಹಬ್ಬಮಾತ್ರವಾಗಿರದೆ ಬದುಕಿನ ಅನುಭವವನ್ನು ಸಮಚಿತ್ತನಾಗಿ ಸ್ವೀಕರಿಸಿರುವ ಮನುಷ್ಯನ ಪ್ರಬುದ್ದತೆಯ ಶಿಖರ ಶೃಂಗವನ್ನು ತಿಳಿಸುವ ಹಬ್ಬವಾಗಿದೆ. ಬದುಕಲ್ಲಿ ಕಹಿ ಮಿಳಿತವಾಗಿದ್ದರೂ ಇನ್ನೆಲ್ಲ ಅನುಭವಗಳನ್ನು ಸೇರಿಸಿ ನೋಡಿದಲ್ಲಿ ಹೇಗೆ ಇದು ಸರಳವಾಗಿ ಸ್ವೀಕೃತವಾಗಬಲ್ಲುದು  ಎಂಬ ಸಂದೇಶವನ್ನು ಸಾರುವ ಹಬ್ಬವಿದು.

    ಈ ಹಬ್ಬಕ್ಕೆ ದೇವರ ಕಥೆಗಳ ಜೋಡನೆ ಮಾಡುವ ಪ್ರಯತ್ನವೂ ಆಗಿವೆ. ಕೆಲವರು ಇದನ್ನು ಆದಿಕರ್ತ ಬ್ರಹ್ಮನು ಸೃಷ್ಟಿಯನ್ನು ಶುರುಮಾಡಿದ ಮೊದಲ ದಿನವೆಂದು ನಂಬುತ್ತಾರೆ. ಈ ದಿನ ಮನೆಗಳು ಇನ್ನಿಲ್ಲದಂತೆ ಬೇವು ಮತ್ತು ಮಾವಿನೆಲೆಗಳಿಂದ ಅಲಂಕೃತವಾಗುವುದನ್ನು ಗಮನಿಸಿದ್ದೀರಷ್ಟೆ? ಇದಕ್ಕೂ ಒಂದು ಉಪಕಥೆಯಿದೆ. ಆ ಪ್ರಕಾರ  ಗಣೇಶ ಮತ್ತು ಕಾರ್ತಿಕೇಯರಿಬ್ಬರಿಗೂ ಮಾವು ಎಂದರೆ ಅಪಾರ ಪ್ರೀತಿ. ಮಾವಿನ ಚಿಗುರು ಶುರುವಾಗುವುದು ಈ ವಸಂತದ ಸಮಯದಲ್ಲೇ.ಅಪತ್ತುಗಳ ನಿವಾರಕ ಗಣೇಶನನ್ನು ಈ ಸಮಯದಲ್ಲಿ ಪೂಜಿಸುವ ಪರಿಪಾಠವಿರುವುದರಿಂದ ಈ ಹಬ್ಬಕ್ಕೆ ಮಾವಿನೆಲೆಯ ತೋರಣ ಪ್ರತಿ ಮನೆಯನ್ನು ಸಿಂಗರಿಸುತ್ತದೆ. ಹೀಗೆ ಮಾಡಿರೆಂದು ಕಾರ್ತಿಕೇಯನು ಜನರಿಗೆ ಹೇಳಿದನೆಂಬ ಪ್ರತೀತಿಯಿದೆ.

    ಬೇವು ಬೆಲ್ಲವನ್ನು ತಿಂದರೆ ದೇಹವು ವಜ್ರಕಾಯವಾಗಬಲ್ಲುದು ಎಂದು ಕೂಡ ಕೆಲವರು ಬರೆದಿದ್ದಾರೆ. ಹಾಗೆಂದೇ ಗಣೇಶನನ್ನು ಸ್ತುತಿಸುವ ಒಂದು ಶ್ಲೋಕ ಹೀಗೆ ಹೇಳುತ್ತದೆ.”ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ “ ಎಂದು ನಂಬಿ ಬೇವು ಬೆಲ್ಲವನ್ನು ತಿಂದು,ಇತರರಿಗೂ ಹಂಚುತ್ತಾರೆ.

    ಸಂಪ್ರದಾಯದ ಪ್ರಕಾರ ಯುಗಾದಿಯ ಆಚರಣೆ  ಎಣ್ಣೆ ಸ್ನಾನ,ಪೂಜೆ, ಪ್ರಾರ್ಥನೆ, ಹೋಳಿಗೆ ಊಟ, ಹೊಸಬಟ್ಟೆ, ಹೊಸ ಆಶಯಗಳು, ಇತರರಿಗೆ ಒಳಿತನ್ನು ಕೋರುವುದನ್ನು ಬಿಟ್ಟರೆ ಮತ್ತೇನು ವಿಶೇಷವಿಲ್ಲ. ಆದರೆ, ಹಳ್ಳಿಗಳಲ್ಲಿ ಹಾಗೂ ಇನ್ನೂ ಸಂಪ್ರದಾಯ, ಆಚರಣೆ ಉಳಿಸಿಕೊಂಡಿರುವಅಗ್ರಹಾರಗಳಲ್ಲಿ,ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ,ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.

    ಪ್ರತಿದೇಶದಲ್ಲೂ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವುಸು ಸಹಜವೇ.ಯುಗಾದಿಯ ಹಬ್ಬವನ್ನು ಕೂಡ ಇದು ಹೊರತುಪಡಿಸಿಲ್ಲ.ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ನಿಷೇಧ ಹೇರಿದ್ದರೂ ಕಣ್ಣು ತಪ್ಪಿಸಿ ಜೂಜಾಡುವವರು ಇದ್ದಾರೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.ಹಾಗಾಗಿ ಕೆಲವರಿ ಯುಗಾದಿಯ ಮಜಾ ಮಾರನೆಯ ದಿನದ ವರ್ಷ ತೊಡಕಿನಲ್ಲಿ ಸಿಗುತ್ತದೆ.

    ಹಾಗಾಗಿ ಯುಗಾದಿ ಅಂದರೆ…. ಚಿಗುರಿನೆಲೆಗಳು ಹಾಡುವ ಪಲ್ಲವಿ,ಹಳೆಯ ಕೆಟ್ಟನೆನಪಿನ ಕೊನೆ, ಹೊಸತಿನ ಆಗಮನ, ಕಳೆದ ದಿನಗಳಿಗೆ ವಿದಾಯ ಮತ್ತು ಮುಂದಿನ ದಿನಗಳ ಬಗ್ಗೆ ಇತರರಿಗೆ ಶುಭವನ್ನು ಕೋರುವ, ದೇವರಲ್ಲಿ ಪ್ರಾರ್ಥಿಸುವ  ಕವನ.

     ಅಚ್ಚುಕಟ್ಟಾಗುವ ಮನೆ, ಬಾಗಿಲಿಗೆ  ತಳಿರು ತೋರಣ ,ದೇವರ ಮನೆಯ ಬಾಗಿಲಿಗೆ ಚಿಗುರು ಹಸಿರಿನ ಮಾವಿನೆಲೆಯ ಸಿಂಗಾರ, ಮನೆಯ ಮುಂದೆ ಚಿಕ್ಕಿಯ ಬಣ್ಣದ ರಂಗೋಲಿ, ಶುಭ್ರವಾಗುವ ರಾಸುಗಳು, ಅಭ್ಯಂಗನದ ಸ್ನಾನ, ಬೆಳಗುವ ಮನಸ್ಸು, ಪೂಜೆ ,ಪುನಸ್ಕಾರ, ಮುಂದಿನ ಶುಭ ದಿನಗಳಿಗಾಗಿ ದೇವರಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಬ್ಬಟ್ಟಿನ ತಟ್ಟೆ, ಒಳ್ಳೆಯ ಮಾತು, ಶುಭ ಹಾರೈಕೆ,ಸಂಕಲ್ಪಗಳ ಹೂ ಮಾಲೆಯನ್ನು ಹೊಸೆಯುವ ಮತ್ತು ಕಳೆದ ಕಾಲದ ಪುನರಾವಲೋಕನಕ್ಕೆ ಅವಕಾಶ- ಎಲ್ಲವೂ  ಹೌದು.

     ಜೊತೆಗೆ ಯುಗಾದಿಯ ದಿನ ಮುಂಬರುವ ವರ್ಷದ ಬಗ್ಗೆ ಮುನ್ನುಡಿಯ ಉವಾಚವನ್ನು ಕೇಳುವ ಪರಿಪಾಠವೂ ಇದೆ. ಯುಗಾದಿಯ ದಿನ ಶುರು ಮಾಡುವ ಎಲ್ಲ ಹೊಸ ಯೋಜನೆಗಳು ಶುಭದಾಯಕ ಎನ್ನುವ ನಂಬಿಕೆಯೂ ಇದೆ.

    ಹೊಸ ಸೇರ್ಪಡೆ ಎಂದರೆ ವಿಶ್ವರತ್ನ ಮಹಾನ್ ಮಾನವತಾವಾದಿ, ಶೋಷಿತ ಜನ ವಿಮೋಚಕ ಮತ್ತು ಬಹುಜನ ಬಂಧು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಜನ್ಮದಿನವನ್ನೂ ಜನರು  ’ಭೀಮ ಯುಗಾದಿ ’ ಎಂದು ಕರೆಯುವ ಹೊಸ ಪರಿಪಾಠವನ್ನು ಶುರುಮಾಡಿರುವುದು. ಈ ವರ್ಷ ಆಚರಿಸುವ ಚಂದ್ರಮಾನ ಯುಗಾದಿಯು ಏಪ್ರಿಲ್ 13ರಂದು ಮಂಗಳವಾರ ಬಂದಿದೆ. ಏಪ್ರಿಲ್ 14ರ ಬುಧವಾರ ಬರುವ ಅಂಬೇಡ್ಕರರ ಜನ್ಮ ದಿನವನ್ನುಭೀಮ ಯುಗಾದಿ ಎಂದು ಕರೆಯಲಾಗುತ್ತಿದೆ.

    ನಮ್ಮ ನಾಡಿನ ಪ್ರಬುದ್ಧ ಹಬ್ಬವಿದು. ಹಿಂದೂಗಳ ಹಬ್ಬವೇ ಆದರೂ, ಈ ಹಬ್ಬದ ಹಿಂದಿನ ಮೌಲ್ಯ ಲೋಕಕ್ಕೇ ಅನ್ವಯವಾಗುವಂತದ್ದು.ಹಾಗಾಗಿ ತತ್ವದಲ್ಲಿ ಇದು ಧರ್ಮವನ್ನು ಮೀರಿದ್ದು. ಮನು ಕುಲದ ಪ್ರಬುದ್ದತೆಯನ್ನು, ಕಾಲವನ್ನು ಅಳೆವ,ಗುಣಿಸುವ ಬೌದ್ಧಿಕ ಮಟ್ಟದ್ದು. ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗುರುತಿಸಿ ಅದರೊಡನೆ ತನ್ನನ್ನು ಜೋಡಿಸಿಕೊಳ್ಳುವ ಮನುಷ್ಯನ ತಾತ್ವಿಕತೆಯನ್ನು ಮತ್ತು ಹೊಂದಾಣಿಕೆಯನ್ನು ತೋರುವಂತದ್ದು. ಸಾಮಾಜಿಕವಾಗಿ ಭಾರತದಲ್ಲಿದ್ದ ಸಮುದಾಯಗಳಲ್ಲಿನ ಅರೋಗ್ಯವಂತ ಮನೋಧರ್ಮವನ್ನು ಬಿಂಬಿಸುವಂತಹ ಹಬ್ಬ ಯುಗಾದಿ. ಅದಕ್ಕೆಂದೇ ಪ್ರತಿಯೊಬ್ಬರ ಬದುಕಲ್ಲಿ ಯುಗಾದಿ ಮತ್ತೆ ಮತ್ತೆ ಮರಳಿ ಬರಲಿ ಮತ್ತು  ಇನ್ನಷ್ಟು ಸಂಭ್ರಮವನ್ನು ,ಸಂತೋಷವನ್ನು ತರಲಿ.

    ಕೋವಿಡ್ ಎನ್ನುವ ವಿಶ್ವವ್ಯಾಪೀ ಹೊಸವ್ಯಾಧಿಯನ್ನು ಹೊಡೆದೋಡಿಸಬಲ್ಲ ಲಸಿಕೆಗಳೊಂದಿಗೆ    (ಅಸ್ತ್ರ) ಇದೀಗ ಮನುಕುಲ ಮತ್ತೊಮ್ಮೆ ಮರುಹುಟ್ಟು ಪಡೆದಿದೆ. ಹೊಸ ಭರವಸೆಗಳೊಂದಿಗೆ ಆರಂಭವಾಗಿರುವ ಈ ಹೊಸ ವರ್ಷ ನಿಜಕ್ಕೂ ಮತ್ತೊಂದು ಹೊಸ ಯುಗದ ಆರಂಭವೇ ಸರಿ.

    ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಕೆಗಳು.

    Photo by Mink Mingle on Unsplash

    .

    ನಿಂದಕರಿರಬೇಕು


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕಾಣದಂತೆ  ಕಣ್ಗಳ್ ತಮ್ಮ ಕಾಡಿಗೆಯಂ-  ಕನ್ನಡದ  ಮೊದಲ ಲಕ್ಷಣಗ್ರಂಥ ‘ಕವಿರಾಜಮಾರ್ಗ’ದಲ್ಲಿ  ಪ್ರಸ್ತಾಪವಾಗಿರುವ  ಅಪ್ಪಟ ದೇಸಿ ಸೊಗಡುಳ್ಳ ಮಾತಿದು.  ತೋರ್ಬೆರಳೊಂದೇ ಇತರರನ್ನು ತಪ್ಪಿತಸ್ಥರೆಂದು ಬೊಟ್ಟು  ಮಾಡಿ ತೋರಿಸುವಾಗ  ಇತರ ಬೆರಳುಗಳು ನಮ್ಮತ್ತ ನೀನೆ ಮೊದಲ ತಪ್ಪಿತಸ್ಥ  ಎಂದು ಬೊಟ್ಟುಮಾಡಿ ತೋರಿಸುತ್ತಿರುತ್ತವೆ.

    ಕವಿರಾಜಮಾರ್ಗಕಾರ ಕಾವ್ಯದ ದೋಷಗಳನ್ನು ಕುರಿತು ಮಾತನಾಡುವಾಗ   “ಕಾಣನೇಗೆಯ್ದುಂ ತನ್ನ  ದೋಷಮಂ ಕಾಣದಂತೆಂದುಂ ಕಣ್ಗಳ್ ತಮ್ಮ ಕಾಣಿಗೆಯುಂ”    ಎಂಬ ಮಾತನ್ನು ಉಲ್ಲೇಖಿಸಿದ್ದಾನೆ. ಕಣ್ಣಿಗೆ ಕಾಡಿಗೆ ಹಾಕಿದರೆ ಅದರ ಸೌಂದರ್ಯವನ್ನು  ನೋಡುವ ಕಣ್ಣುಗಳೇ ಬೇರೆ. ಎಂದು ವಾಚ್ಯಾರ್ಥದಲ್ಲಿ ತೆಗೆದುಕೊಂಡರೆ  ವಿಶೇಷಾರ್ಥದಲ್ಲಿ  ಮನುಷ್ಯ ಏನು ಮಾಡಿದರೂ ತನ್ನ ದೋಷವನ್ನು ತಾನು ಕಂಡುಕೊಳ್ಳಲಾರ, ಅತ್ಮಾಭಿಮಾನವೋ  ತನ್ನ ಮೇಲಿನ ಅಂಧಾಭಿಮಾನವೋ ತನ್ನನ್ನು ಯಾವತ್ತೂ ಸಮರ್ಥಿಸಿಕೊಳ್ಳುತ್ತಾನೆ .

    ತನ್ನ ಮೂಗಿನ ನೇರಕ್ಕೆ ಮಾತನಾಡಿಕೊಳ್ಳುವುದನ್ನು ಬಿಟ್ಟು “ ನಮ್ಮ ಬೆನ್ನು ನಮಗೆ ಕಾಣದು” ಎಂಬ  ಮಾತಿನಂತೆ ಸ್ವತಃ ಆತ್ಮವಿಮರ್ಶೆಗೆ ಒಳಗಾಗಬೇಕು . ಹೊಗಳಿಕೆ,ಓಲೈಕೆ, ದಾಕ್ಷಿಣ್ಯ ,ಮುಂತಾದ ಕೃತಕತೆಯನ್ನು ಮೀರಿ,  ನಿಂದನೆಗಳನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎನ್ನುತ್ತಾರೆ.

    ಇದನ್ನೆ ನಿಂದಕ ನಿಯರೆ ರಾಖಿಯೆ,ಆಂಗನ ಕುಟಿ ಬಂಧಾಯಿ|ಬಿನ ಸಾಬನ,ಪಾನಿಬಿನಾ ನಿರ್ಮಲ ಕರೆ ಸುಭಾಯಿ||

    ಎಂದು ಸಂತ ಕಬೀರರು ಹೇಳಿರುವುದು.  ಬದುಕಿನ ನಿರಂತರ ಪ್ರಯಾಣದಲ್ಲಿ ಸಹ ಪ್ರಯಾಣಿಕರಿಂದ ಸದಾ ಒಳ್ಳೆಯದನ್ನೆ ನಿರೀಕ್ಷಿಸಲಾಗದು. ಇವರು ತೊಂದರೆ ಕೊಟ್ಟು ಕಿರಿ ಕಿರಿ ಮಾಡಿ ನಮ್ಮನ್ನು ಪರಿಪಕ್ವಗೊಳಿಸುತ್ತಾರೆ ಅದಕ್ಕೆ ನಾವುಗಳು ಸದಾ ಋಣಿಗಳಾಗಿರಬೇಕು. 

    ನಕರಾತ್ಮಕತೆಯನ್ನು ಬಿಟ್ಟು ಎಲ್ಲವನ್ನೂ ಸಕಾರಾತ್ಮವಾಗಿ ತೆಗೆದುಕೊಳ್ಳಬೇಕು.  ನೀರು ಸಾಬೂನು ವ್ಯಯವಾದರೂ ಕೊಳೆ ಕಳೆದು ಹೋಗುವಂತೆ  ನಿಂದಕ ಜನರು ಅಕಾರಣವೋ,ಸಕಾರಣವೋ ತಮ್ಮ ಹಣ, ಸಮಯ,ಶಕ್ತಿ ವ್ಯಯಿಸಿ  ಕೊಂಕುನುಡಿಗಳನ್ನು, ಬಿರುನುಡಿಗಳನ್ನು, ಮನಸ್ಸಿಗೆ ಘಾಸಿಯಾಗುವಂಥ ಮಾತುಗಳನ್ನಾಡಿ ಸದಾ ಇತರರ ಕೊಳೆ ತೆಗೆಯುತ್ತಲೇ ಇರುತ್ತಾರೆ.  ಹಾಗಾಗಿ ಹೊಗಳು ಭಟರಿಗಿಂತ ನಿಂದಕರಿಗೆ ಎಡೆ ಕೊಡಬೇಕು ಎನ್ನುತ್ತಾರೆ.  

    ಬದುಕಿನ ಹಾದಿಯಲ್ಲಿ ನಿಚ್ಛಳ ಯಶಸ್ಸು ಬೇಕೆಂದರೆ ಇಂಥ ನಿಂದಕರ ನಡುವೆ ಇರಲೇಬೇಕು.  ಮನುಷ್ಯ  ಎಷ್ಟೇ  ಬುದ್ಧಿವಂತನಾದರೂ  ನಾಳಿನ ಹೊಳಹುಗಳ ಸುಳುಹುಗಳನ್ನು ಅರಿಯದವನಾಗಿರುತ್ತಾನೆ. ನಿಂದಕರು ತಮಗರಿವಿಲ್ಲದಂತೆ ಇತರರನ್ನು ತಿದ್ದುವ ಕೆಲಸ ಮಾಡುತ್ತಿರುತ್ತಾರೆ ಹಾಗಾಗಿ ಅವರಿಗೆ ಧನ್ಯವಾದಗಳನ್ನೂ ಹೇಳಬೇಕು. ನಾವೇ ಸರಿ ಎಂಬ ಬೀಗುವಿಕೆ ಸರಿಯಲ್ಲ ಬಾಗುವಿಕೆಯೂ ಇರಬೇಕು ಅಂದಾಗ ಮಾತ್ರ ಸಜ್ಜನಿಕೆಯ ಬಾಳುವಿಕೆ ನಮ್ಮದಾಗುತ್ತದೆ ಹಾಗಾಗಿ ನಮ್ಮ ಓರೆಕೋರೆಗಳನ್ನು ರಂಜಕವಾಗಿ ಹೇಳುವ ನಿಂದಕರನ್ನು ಸಹಿಸಿಕೊಳ್ಳುವ ವಿಶಾಲ ಮನೋಧರ್ಮವಿರಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಹೃದಯಕ್ಕಿಂತ ಮೆದುಳಿಗೇ ಹೆಚ್ಚು ಮಹತ್ವ ನೀಡಿದಲ್ಲಿ ಷೇರುಪೇಟೆಯಲ್ಲಿ ಸಂಪಾದನೆ ಅತಿ ಸುಲಭ

    ಷೇರುಪೇಟೆಯಲ್ಲಿ ಸುಲಭವಾಗಿ ಹಣ ಗಳಿಸಬಹುದು. ಆದರೆ ಹಣಗಳಿಸಬೇಕೆಂಬುದೊಂದೇ ಧ್ಯೇಯವಾಗಿರಬೇಕು. ಅದರಲ್ಲೂ ಚಟುವಟಿಕೆ ಅಗ್ರಮಾನ್ಯ ಕಂಪನಿಗಳಿಗೆ ಮಾತ್ರ ಸೀಮಿತವಾಗಿರಬೇಕು. ಇದು ಎಷ್ಠರಮಟ್ಟಿಗೆ ಸಾಧ್ಯ ಎಂದರೆ ಉತ್ಪಾದನಾ ಕಂಪನಿಗಳು ತಾವು ಉತ್ಪಾದನೆಗೆ ಅಗತ್ಯವಿರುವ ಸಮಯ ಮತ್ತು ಉತ್ಪಾದಿಸಿ ಗಳಿಸುವ ಹಣಕ್ಕಿಂತ ಹೆಚ್ಚು ಗಳಿಕೆ ಸಾಧ್ಯ. ಆದರೆ ಚಟುವಟಿಕೆಯು ಸ್ವಲ್ಪ ದಾರಿತಪ್ಪಿದಲ್ಲಿ ಹಾವು ಏಣಿ ಆಟದಲ್ಲಿ ಹಾವು ಕಚ್ಚಿಸಿಕೊಂಡು ಪಾತಾಳಕ್ಕಿಳಿದಂತಾಗುತ್ತದೆ. ಎಚ್ಚರ ಅತ್ಯಗತ್ಯ.

    ಹೂಡಿಕೆ ತಜ್ಞರು, ವಿಶ್ಲೇಷಕರು, ಪಂಡಿತರು ಸಾಮಾನ್ಯವಾಗಿ ಸಣ್ಣ ಹೂಡಿಕೆದಾರರು ದೀರ್ಘಕಾಲೀನ ಹೂಡಿಕೆಗೆ ತೊಡಗಿಸಿಕೊಂಡರೆ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ. ಸೆನ್ಸೆಕ್ಸ್‌ ಒಂದು ವರ್ಷದ ಹಿಂದೆ ಅಂದರೆ ಹಿಂದಿನ ಮಾರ್ಚ್‌ ತಿಂಗಳಲ್ಲಿ ಸುಮಾರು 25,700 ಪಾಯಿಂಟುಗಳಲ್ಲಿದ್ದು ಅಲ್ಲಿಂದ ಸರಿ ಸುಮಾರು ದ್ವಿಗುಣಗೊಂಡಾಗಲೂ ಇದೇ ರೀತಿ ಉಪದೇಶಿಸಿದಲ್ಲಿ ಹೂಡಿಕೆ ಯಶಸ್ಸು ಕಾಣುವುದು ಸಾಧ್ಯವಿರದು. ಅಲ್ಲದೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳ ಇಂಡೆಕ್ಸ್‌ ಗಳು ಸಹ ಸರ್ವಕಾಲೀನ ಗರಿಷ್ಠಕ್ಕೆ ಜಿಗಿದಿರುವ ಕಾರಣ ಅಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ, ಹೂಡಿಕೆಯು ಧೀರ್ಘಕಾಲೀನ, ಅತಿ ದೀರ್ಘಕಾಲೀನವೋ ಅಥವಾ ಶಾಶ್ವತಕಾಲೀನವೋ ಆಗಿಬಿಡುವ ಸಾಧ್ಯತೆ ಹೆಚ್ಚಾಗುತ್ತದೆ.ಕೆಲವು ದೃಷ್ಠಾಂತಗಳನ್ನು ಪರಿಶೀಲಿಸೋಣ:

    ಶುಕ್ರವಾರ 9 ರಂದು ಫಾರ್ಮಾ ವಲಯದ ಷೇರುಗಳಲ್ಲಿ ಅನಿರೀಕ್ಷಿತ ಮಟ್ಟದ ಚಟುವಟಿಕೆ ಬಿಂಬಿತವಾಗಿದ್ದು ತಿಳಿದ ವಿಷಯ. ಗ್ಲೆನ್‌ ಮಾರ್ಕ್‌ ಫಾರ್ಮ ಕಂಪನಿ ಷೇರು ಕಳೆದ ಎರಡು ಮೂರು ತಿಂಗಳ ಚಟುವಟಿಕೆ ಗಮನಿಸಿದಲ್ಲಿ , ಮೂರು ತಿಂಗಳ ಹಿಂದೆ ಷೇರಿನ ಬೆಲೆ ರೂ.530 ರ ಸಮೀಪವಿದ್ದು ಚಟುವಟಿಕೆ ಭರಿತವಾಗಿತ್ತು. ಅಲ್ಲಿಂದ ಫೆಬ್ರವರಿಯಲ್ಲಿ ರೂ.443 ರಸಮೀಪಕ್ಕೆ ಜಾರಿತು. ಮಾರ್ಚ್‌ ನಲ್ಲಿ ರೂ.443 ರಿಂದ ರೂ.492 ರವರೆಗೂ ಏರಿಳಿತ ಪ್ರದರ್ಶಿಸಿದೆ. ಏಪ್ರಿಲ್‌ ತಿಂಗಳಲ್ಲಿ ಈ ಷೇರಿನ ಬೆಲೆ ಮತ್ತೆ ರೂ.533 ನ್ನು ತಲುಪಿದೆ.

    ಅಂದರೆ ಕೇವಲ ಮೂರೇ ತಿಂಗಳಲ್ಲಿ ಷೇರಿನ ಬೆಲೆ ರೂ.532 ರಿಂದ ರೂ.443 ಕ್ಕೆ ಕುಸಿದು ಮತ್ತೆ ರೂ.533 ಕ್ಕೆ ಪುಟಿದೆದ್ದಿದೆ. ಇನ್ನು ಒಂದು ವರ್ಷದ ಹಿಂದೆ ಅಂದರೆ ಮಾರ್ಚ್‌ 2020 ರಲ್ಲಿ ಈ ಷೇರಿನ ಬೆಲೆ ರೂ.168 ರ ಕನಿಷ್ಠ ಬೆಲೆಯಾಗಿದ್ದು ಏಪ್ರಿಲ್‌ ನಲ್ಲಿ ರೂ.361 ಕ್ಕೆ ಪುಟಿದೆದ್ದಿದೆ. ಅಲ್ಲಿಂದ ಜೂನ್‌ ನಲ್ಲಿ ರೂ.500 ನ್ನು ದಾಟಿದೆ. ಜೂನ್‌ ನಲ್ಲಿ ತಲುಪಿದ್ದ ರೂ.572 ರ ಹಂತವು ವಾರ್ಷಿಕ ಗರಿಷ್ಠವಾಗಿದ್ದು ಆ ಬೆಲೆಯನ್ನು ನಂತರದ ತಿಂಗಳುಗಳಲ್ಲಿ ತಲುಪದಾಗಿದೆ. ಮತ್ತೆ ಆಗಷ್ಟ್‌ 2020 ರ ನಂತರ ಫೆಬ್ರವರಿವರೆಗೂ ಪ್ರತಿ ತಿಂಗಳು ರೂ.500 ನ್ನು ದಾಟಿ ಕುಸಿಯುತ್ತಿದೆ. ಅಂದರೆ ಈ ಷೇರಿನಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಟುವಟಿಕೆಯು ಕೇವಲ ಅಲ್ಪಕಾಲೀನ ಹೂಡಿಕೆಗೆ ಅನುಕೂಲವಾಗಿದ್ದು ದೀರ್ಘಕಾಲೀನ ಎಂಬುದಕ್ಕೆ ಅಂಟಿಕೊಂಡಲ್ಲಿ ಅವಕಾಶ ವಂಚಿತರಾಗುವಂತಿದೆ. ಕಳೆದ ಒಂದು ವರ್ಷದಲ್ಲಿ ಒಂಬತ್ತು ತಿಂಗಳು ಷೇರಿನ ಬೆಲೆ ರೂ.500 ನ್ನು ದಾಟಿ ಮತ್ತೆ ಕುಸಿದಿದೆ.

    ಈ ಷೇರು ಪ್ರತಿ ತಿಂಗಳು ಶೇ.10 ರಿಂದ ಶೇ.20 ರವರೆಗೂ ಏರಿಳಿತ ಪ್ರದರ್ಶಿಸುತ್ತಿರುವುದಕ್ಕೆ ಕಾರಣಗಳನೇಕವು ಸೃಷ್ಠಿಯಾಗುತ್ತಿರುತ್ತವೆ. ಆದರೆ ಚಟುವಟಿಕೆ ನಡೆಸುವವರು ಮಾತ್ರ ತಮ್ಮ ಲಾಭ ನಷ್ಟದ ಮೇಲೆ ಗಮನವಿರಿಸಿದಲ್ಲಿ ಅವಕಾಶದ ಲಾಭ ಪಡೆಯಲು ಸಾಧ್ಯ. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ವಹಿವಾಟಿನ ಶೇ.20 ರಿಂದ ಶೇ.30 ರವರೆಗಿನ ಭಾಗ ಮಾತ್ರ ವಿಲೇವಾರಿ ವಹಿವಾಟಾಗಿದ್ದು, ಉಳಿದಂತೆ ಚುಕ್ತಾ ವಹಿವಾಟಾಗಿರುವುದು ವ್ಯವಹಾರಿಕತೆಯ ಮಟ್ಟವನ್ನು ಬಿಂಬಿಸುತ್ತದೆ. ಈ ಷೇರಿನ ಏರಿಳಿತ ನೋಡೋಣ.‌

    ಕ್ಯಾಡಿಲ್ಲಾ ಹೆಲ್ತ್‌ ಕೇರ್‌ ಕಂಪನಿಯ ಷೇರು ಸಹ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸುತ್ತಿದ್ದು ಶುಕ್ರವಾರ ಈ ಷೇರಿನ ಬೆಲೆಯು ರೂ.517 ನ್ನು ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ. ಪ್ರತಿ ತಿಂಗಳು ಶೇ.10 ರಿಂದ ಶೇ.20 ರಷ್ಠು ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಈ ಷೇರಲ್ಲೂ ಸಹ ವಿಲೇವಾರಿಯಾಗುವ ಅಂಶ ಮಾತ್ರ ಶೇ.25 ರಿಂದ 30 ಮಾತ್ರವಾಗಿದೆ. ಆದರೆ ಫೆಬ್ರವರಿ ತಿಂಗಳಲ್ಲಿ ಶೇ.40 ನ್ನು ತಲುಪಿದೆ.

    ಇದಕ್ಕೆ ಮುಖ್ಯ ಕಾರಣ ಷೇರಿನ ಬೆಲೆಯು ಜನವರಿಯಲ್ಲಿ ತಲುಪಿದ್ದ ರೂ.509 ರ ಸಮೀಪದಿಂದ ರೂ.412 ರವರೆಗೂ ಕುಸಿದ ಕಾರಣ ವ್ಯಾಲ್ಯೂ ಪಿಕ್‌ ಆಗಿರುವುದಾಗಿದೆ. ಈ ಷೇರಿನಲ್ಲುಂಟಾದ ಒಂದು ವರ್ಷದ ಮಾಸಿಕ ಏರಿಳಿತಗಳನ್ನು ನೋಡೋಣ.

    ಕೆನರಾ ಬ್ಯಾಂಕ್‌ ಕಂಪನಿಯ ಷೇರು ಸಹ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸುತ್ತಿದ್ದು ಶುಕ್ರವಾರ ಈ ಷೇರಿನ ಬೆಲೆಯು ರೂ.147 ರಿಂದ ಏರಿಕೆ ಕಂಡು ರೂ.153 ನ್ನು ತಲುಪಿ ನಂತರ ರೂ.148 ರ ಸಮೀಪಕ್ಕೆ ಹಿಂದಿರುಗಿದೆ.

    ಪ್ರತಿ ತಿಂಗಳು ಶೇ.10 ರಿಂದ ಶೇ.30 ರಷ್ಠು ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಈ ಷೇರಿನ ಬೆಲೆ 2014 ರಲ್ಲಿ ಸುಮಾರು ರೂ.400 ರ ಸಮೀಪವಿದ್ದಾಗ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳುವ ಪ್ರಸ್ತಾಪ ಮಾಡಿತಾದರೂ ಕಾರ್ಯಗತಗೊಳಿಸಲಿಲ್ಲಿ. ಆದರೆ ಕಾಲಕ್ರಮೇಣ ಪೇಟೆಯಲ್ಲಿ ಷೇರಿನ ಬೆಲೆಯು ಮುಖಬೆಲೆ ಸೀಳಿಕೆಯ ಹಂತಕ್ಕೆ ಕುಸಿದು ಚೇತರಿಕೆ ಕಂಡಿದೆ. 2019 ರಲ್ಲಿ ಕಂಪನಿಯು ತನ್ನ ನೌಕರವೃಂದಕ್ಕೆ ಪ್ರತಿ ಷೇರಿಗೆ ರೂ.237.23 ರಂತೆ ESOP ಮೂಲಕ ಷೇರುಗಳನ್ನು ವಿತರಿಸಿದೆ. ಆದರೆ ನಂತರದಲ್ಲಿ ಷೇರಿನ ಬೆಲೆಯು ಇಳಿಕೆಯಲ್ಲೇ ಇದೆ.

    ಆದರೆ ಕಳೆದ ಒಂದು ವರ್ಷದಲ್ಲಿ ಈ ಷೇರು ಸಹ ಪ್ರತಿ ತಿಂಗಳು ಶೇ.10 ರಿಂದ 25 ರವರೆಗೂ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಗಳಿಕೆಗೆ ಅಪಾರ ಅವಕಾಶ ಕಲ್ಪಿಸಿದೆ. ಹಿಂದಿನ ಒಂದು ವರ್ಷದ ಏರಿಳಿತಗಳ ಕೋಷ್ಠಕ ಹೀಗಿದೆ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ ಕಂಪನಿಯು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ತೈಲ ಮಾರಾಟದ ಸಂಸ್ಥೆಯಾಗಿದ್ದು. ಹೂಡಿಕೆದಾರರನ್ನು ಹರ್ಷಿತಗೊಳಿಸುವಂತಹ ಮಟ್ಟದಲ್ಲಿ ಕಾರ್ಪೊರೇಟ್‌ ಫಲಗಳನ್ನು ವಿತರಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಸಹ ಪ್ರತಿ ತಿಂಗಳು ಶೇ.10 ರಿಂದ 15 ರವರೆಗೂ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಕಾಲೀನ ಗಳಿಕೆಗೆ ಅಪಾರ ಅವಕಾಶ ಕಲ್ಪಿಸಿದೆ. ಇದು ಪೇಟೆಯ ಚಟುವಟಿಕೆಗಳಲ್ಲಿ ದೊರೆಯಬಹುದಾದ ಲಾಭವಾದರೆ, ಸಹಜವಾಗಿ ಹೂಡಿಕೆ ಮಾಡಿರುವವರಿಗೆ ಆಕರ್ಷಕ ಡಿವಿಡೆಂಡ್‌ ಪ್ರತಿ ಷೇರಿಗೆ ರೂ.10.50 ಯಂತೆ 2021 ರಲ್ಲಿ ವಿತರಿಸಿದೆ. ಈ ಷೇರು ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡವರಿಗೂ, ಅಲ್ಪಕಾಲೀನ ಚಟುವಟಿಕೆಗೆ ಆಯ್ಕೆ ಮಾಡಿಕೊಂಡವರಿಗೂ ಸಂತೋಷವನ್ನುಂಟುಮಾಡಿದೆ. ಹಿಂದಿನ ಒಂದು ವರ್ಷದ ಏರಿಳಿತಗಳ ಕೋಷ್ಠಕ ಹೀಗಿದೆ.

    ಹೀಗೆ ಅಗ್ರಮಾನ್ಯ ಕಂಪನಿಗಳನೇಕವು ಅಲ್ಪಕಾಲೀನದಲ್ಲೇ ಅಗಾದ ಪ್ರಮಾಣದ ಲಾಭಗಳಿಸಿಕೊಡುತ್ತಿರುವಾಗ, ಬ್ಯಾಂಕ್‌ ಬಡ್ಡಿ ಅತಿ ಕಡಿಮೆ ಇರುವ ಈ ಸಮಯದಲ್ಲಿ ಭಾವನಾತ್ಮಕತೆಯಿಂದ ಹೊರಬಂದು ಪೇಟೆ ಒದಗಿಸಿಕೊಡುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳುವ ನೈಪುಣ್ಯತೆ, ಕೌಶಲ್ಯತೆಗಳನ್ನು ಅಳವಡಿಸಿಕೊಂಡಲ್ಲಿ ಅಲ್ಪಮಟ್ಟಿನ ಸುರಕ್ಷತೆಯಿಂದ ಬಂಡವಾಳ ಬೆಳೆಸಿಕೊಳ್ಳಬಹುದು. ಪ್ರಚಾರಕ್ಕಿಂತ ಆಚಾರವೇ ಹಿತ. ಸರ್ಕಾರವೂ ಸಹ ಪರೋಕ್ಷವಾಗಿ, ಷೇರುಪೇಟೆಯಲ್ಲಿ ಹೂಡಿಕೆಗಿಂತ ವಹಿವಾಟಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದಕ್ಕೆ ಕಂಪನಿಗಳು ವಿತರಿಸುವ ಕಾರ್ಪೊರೇಟ್‌ ಫಲವಾದ ಡಿವಿಡೆಂಡ್‌ ನ್ನು ತೆರಿಗೆಗೊಳಪಡಿಸಿದರೆ, ಅಲ್ಪಕಾಲೀನ ವಹಿವಾಟಿನಿಂದ ಬಂದ ಲಾಭಕ್ಕೆ ಕೇವಲ ಶೇಕಡ 15 ತೆರಿಗೆ ವಿಧಿಸುತ್ತಿರುವುದು ನಿದರ್ಶನವಾಗಿದೆ.

    ಈಗಿನ ದಿನಗಳಲ್ಲಿ ಸಂದರ್ಭವನ್ನಾಧರಿಸಿ ನಿರ್ಧರಿಸಬೇಕು. ಕಾರಣ ಬದಲಾವಣೆಗಳ ವೇಗ ಹೆಚ್ಚು. ಯಶಸನ್ನು ಸಾಧಿಸಲು ಸರ್ವಕಾಲೀನ ಸಮೀಕರಣ ಎಂದರೆ, ವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್‌ ಒಂದೇ ಆಗಿದೆ.

    ಪರೀಕ್ಷೆಗಳು ಇದ್ದೇ ಇರುತ್ತೆ; ಈ ವರ್ಷ ಬೇಸಿಗೆ ರಜೆ ಕೊಡಲ್ಲ ಎಂದ ‌ಅಶ್ವತ್ಥನಾರಾಯಣ

    ಕೋವಿಡ್‌ ಕಾರಣಕ್ಕೆ ಪ್ರಸಕ್ತ ನಡೆಯುತ್ತಿರುವ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಿಲ್ಲುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲವೂ ಮುಂದುವರಿಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಶನಿವಾರದಂದು ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; “ವಿಶ್ವವಿದ್ಯಾಲಯದ ಮಟ್ಟದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌, ಡಿಪ್ಲೋಮೋ ಸೇರಿದಂತೆ ಉನ್ನತ ಶಿಕ್ಷಣ ವ್ಯಾಪ್ತಿಗೆ ಬರುವ ಯಾವುದೇ ವಿಭಾಗದ ಪರೀಕ್ಷೆಗಳು ಯಥಾವತ್‌ ನಡೆಯುತ್ತವೆ. ಯಾವ ಬದಲಾವಣೆಯೂ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

    ಮುಂದಿನ ಶೈಕ್ಷಣಿಕ ವರ್ಷ ನಿಲ್ಲದು:ಮುಂದಿನ ವರ್ಷ, ಅಂದರೆ; 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಯಾವ ಚಟುವಟಿಕೆಗಳಲ್ಲೂ ವ್ಯತ್ಯಯ ಆಗುವುದಿಲ್ಲ. ಈಗ ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆಗಳು ಇರುವುದಿಲ್ಲ. ಹಿಂದೆಯೇ ತರಗತಿಗಳು ಆರಂಭವಾಗುತ್ತವೆ. ಅದರಲ್ಲಿ ಆಫ್‌ಲೈನ್‌ ಮತ್ತು ಆನ್‌ಲೈನ್‌ ತರಗತಿಗಳು ಇರುತ್ತವೆ. ಮೊದಲು ಆನ್‌ಲೈನ್‌ ತರಗತಿಗಳು ಆರಂಭವಾಗುತ್ತವೆ. ವಿದ್ಯಾರ್ಥಿಗಳು ಎರಡರ ಪೈಕಿ ಒಂದಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ ಎಂದರು ಉಪ ಮುಖ್ಯಮಂತ್ರಿಗಳು.

    ಯಾರು ಕಾಲೇಜಿಗೆ ಬರುತ್ತಾರೋ ಅವರ ಸುರಕ್ಷತೆಗೆ ಕಾಲೇಜಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಕೋವಿಡ್‌ ಮಾರ್ಗಸೂಚಿ ಪ್ರಕಾರ ಎಲ್ಲ ವ್ಯವಸ್ಥೆ ಮಾಡಲಾಗಿರುತ್ತದೆ. ತರಗತಿ ಕೊಠಡಿಗಳ ಸ್ಯಾನಿಟೈಸೇಷನ್‌, ಸ್ವಚ್ಛತೆ, ಕೋವಿಡ್‌ ಪರೀಕ್ಷೆ, ದೈಹಿಕ ಅಂತರ ಹಾಗೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

    1.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳು:ಕೋವಿಡ್‌ ಕಾರಣಕ್ಕಾಗಿ ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್)‌ ಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಕಲಿಯಬಹುದು. ಅದಕ್ಕೆ ನೆರವಾಗುವಂತೆ ಈ ವರ್ಷ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.60 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್‌ಲೆಟ್‌ ಪಿಸಿಗಳನ್ನು ನೀಡಲಾಗಿದೆ. ಕಳೆದ ವರ್ಷ 1.10 ಲಕ್ಷ ವಿದ್ಯಾರ್ಥಿಗಳಿಗೆ ಇವನ್ನು ಕೊಡಲಾಗಿತ್ತು. ಕ್ಲಾಸ್‌ ರೂಮುಗಳನ್ನೇ ಸ್ಟುಡಿಯೋಗಳ್ನಾಗಿ ಪರಿವರ್ತಿಸಲಾಗಿದೆ. ಎಲ್ಲವೂ ಸ್ಮಾರ್ಟ್‌ ಕ್ಲಾಸ್‌ ರೂಮುಗಳಾಗಿವೆ. ಮನೆಯಿಂದಲೇ ವ್ಯಾಸಂಗವನ್ನು ಮುಂದುವರಿಸಬಹುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಈಗಾಗಲೇ ಮುಂದಿನ ಶೈಕ್ಷಣಿಕ ವರ್ಷದ ನಾಲ್ಕೈದು ತಿಂಗಳು ನಷ್ಟವಾಗಿದೆ. ಅಂದರೆ, ತಡವಾಗಿದೆ. ಇನ್ನೂ ತಡ ಆಗುವುದು ಬೇಡ. ಒಂದು ವೇಳೆ ತಡವಾದರೆ, ಓದು, ಪರೀಕ್ಷೆ, ತೇರ್ಗಡೆ, ಉದ್ಯೋಗ, ಮುಂದಿನ ವ್ಯಾಸಂಗದ ಚೈನ್‌ ಕಟ್‌ ಆಗಿಬಿಡುತ್ತದೆ. ಹಾಗೆ ಆಗುವುದು ಬೇಡ ಎಂದರು ಅವರು.

    ಸರಿಪಡಿಸುತ್ತೇವೆ:ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆಯಲ್ಲಿ ಸರಿಯಾಗಿ ಕಂಟೆಂಟ್‌ ಅನ್ನು ಅಪ್‌ಲೋಡ್‌ ಮಾಡಲಾಗುತ್ತಿಲ್ಲ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು: ಈ ಕೂಡಲೇ ಅದನ್ನು ಸರಿ ಮಾಡುತ್ತೇವೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ. ಇಡೀ ದೇಶದಲ್ಲೇ ಮೊತ್ತ ಮೊದಲಿಗೆ ಇಂಥ ಕಲಿಕಾ ವ್ಯವಸ್ಥೆಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು

    ಲಸಿಕೆ ಪಡೆದ ನಂತರವೂ ಕೋವಿಡ್ ಬರಬಹುದೇ?

    ಲಸಿಕೆ ಪಡೆದ ನಂತರವೂ ಇನ್ನು ಕೆಲಕಾಲ ಕೋವಿಡ್ ನಿಯಮ ಪಾಲಿಸಬೇಕು

    ಒಂದು ವರ್ಷದ ಹಿಂದೆ ಕೋವಿಡ್ ವಿಚಾರದ ಬಗ್ಗೆ ನಮಗೆ ಬಹುತೇಕ ಏನೂ ತಿಳಿದಿರಲಿಲ್ಲ. ಅದೊಂದು ವಿಶ್ವವ್ಯಾಪಿ ಹೊಸ ವ್ಯಾಧಿಯಾಗಿತ್ತು. ಒಂದೂ ಕಾಲು ವರ್ಷದಲ್ಲಿ ಈ ವ್ಯಾಧಿಯ ಬಗ್ಗೆ ನಾವು ಒಂದಷ್ಟು ವಿಚಾರಗಳನ್ನು ಅರಿತುಕೊಂಡಿದ್ದೇವೆ. ಕೆಲವು ವಿಚಾರಗಳಲ್ಲಿ ಕೋವಿಡ್ ಹೀಗೇ ವರ್ತಿಸುತ್ತದೆ ಎಂದು ಕೂಡ ಹೇಳಬಹುದಾಗಿದೆ. ಅದನ್ನು ತಡೆಯಬಲ್ಲ ಲಸಿಕೆಗಳೂ ಈಗ ಲಭ್ಯವಿವೆ.

    ಕೋವಿಡ್ ನಿಯಮಗಳನ್ನು ಸ್ವಲ್ಪ ಸಡಿಲಿಸಿದರೂ ಅದು ನಮ್ಮ ನಡುವೆ ಜಿಗಿಯುತ್ತ ಮತ್ತೆ ಬಲಿಷ್ಠವಾಗುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದದ್ದೇ. ಆದರೆ, ಜನರ ಒತ್ತಾಯಕ್ಕೆ ಮಣಿದ, ಭಾರತ ಸರ್ಕಾರ ಬಹುತೇಕ ಚಟುವಟಿಕೆಗಳನ್ನು ಮತ್ತೆ ಶುರುಮಾಡಿತು. ಜಾತ್ರೆ, ಸಿನಿಮಾ,ಹೋಟೆಲುಗಳು ಶುರುವಾಗಿ ಬದುಕು ಮತ್ತೆ ಹರಡಿತು ಎನ್ನುವಷ್ಟರಲ್ಲಿ ಕೋವಿಡ್ ಕಾಳ್ಗಿಚ್ಚು ಭಾರತದಲ್ಲಿ ಮತ್ತೆ ಹರಡುತ್ತಿದೆ.ಏಪ್ರಿಲ್ ಎರಡನೇ ವಾರದಲ್ಲಿ ದಿನವೊಂದರಲ್ಲಿ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ಸತತ ಮೂರು ದಿನಗಳು ದಾಖಲಾಗಿವೆ. ಪ್ರತಿದಿನ ಸರಾಸರಿ ಐನೂರಕ್ಕೂ ಹೆಚ್ಚು ಜನರು ವಿಧಿವಶರಾಗಿದ್ದಾರೆ. ಇದು ಭಾರತದ ಕೋವಿಡ್ ಇತಿಹಾಸದಲ್ಲಿ ದಿನವೊಂದಕ್ಕೆ ದಾಖಲಾದ ಅತ್ಯಂತ ಹೆಚ್ಚಿನ ಸೋಂಕಿನ ದಾಖಲೆಯೂ ಆಗಿದೆ.

    ಖ್ಯಾತ ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ರಾಜಕಾರಣಿಗಳು ಒಬ್ಬೊಬ್ಬರಾಗಿ ಪ್ರತಿ ದಿನ ತಮಗೆ ಈ ಎರಡನೇ ಅಲೆಯ ಕೋವಿಡ್ ಪಾಸಿಟಿವ್ ಆಗಿರುವುದಾಗಿ ಟ್ವೀಟ್ ಮಾಡುತ್ತಲೇ ಇದ್ದಾರೆ. ಆದರೆ ದಟ್ಟವಾಗಿ ಹರಡುತ್ತಿರುವ ಈ ಕೋವಿಡ್ ಅಲೆಯ ನಡುವೆ ಕೋವಿಡ್ ಲಸಿಕೆಯ ಭರವಸೆ ಜನರನ್ನು ಪೊರೆಯುತ್ತಿದೆ. ಸುಮಾರು ಎಂಟು ಕೋಟಿ ಜನರಿಗೆ ಈ ವರೆಗೆ ಮೊದಲ ವ್ಯಾಕ್ಸಿನ್ ಡೋಸ್ ದೊರಕಿದೆ. ಈಗ 45 ವಯಸ್ಸು ಮೇಲ್ಪಟ್ಟವರಿಗೆಲ್ಲ ವ್ಯಾಕ್ಸಿನ್ ನೀಡುವ ಪ್ರಯತ್ನಗಳಾಗುತ್ತಿವೆ.

    ಜನರು ಎಚ್ಚರ ತಪ್ಪಿದ ಕಾರಣ ಕೋವಿಡ್ ವ್ಯಾಕ್ಸಿನ್ ದೊರಕುತ್ತಿರುವ ಈ ಸಮಯದಲ್ಲೇ ಭಾರತ ಅತ್ಯಂತ ಬಲವಾದ ಕೋವಿಡ್ ನ ಎರಡನೇ ಅಲೆಯನ್ನು ಎದುರಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಕೆಲವು ವಸ್ತು ನಿಷ್ಠ ವಿಷಯಗಳ ಅರಿವು ಜನರಿಗಿರಬೇಕಾದ್ದು ಅತ್ಯಂತ ಅಗತ್ಯ. ವ್ಯಾಕ್ಸಿನ್ ಬಗ್ಗೆ  ಹೆದರುವ ಅಗತ್ಯವಿಲ್ಲ. ಅಂತೆಯೇ ವ್ಯಾಕ್ಸಿನ್ ಬಗ್ಗೆ ಇಲ್ಲ ಸಲ್ಲದ ಭರವಸೆಗಳನ್ನು ಇಡುವುದು ಕೂಡ ಅಪಾಯಕರ.

    ಇತ್ತೀಚೆಗೆ ವ್ಯಾಕ್ಸಿನ್ ನ ಮೊದಲ ಅಥವಾ ಎರಡೂ ಡೋಸ್ ಪಡೆದ ನಂತರ ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಬಗೆಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ವಾಟ್ಸಾಪ್ ಮುಂತಾದ ತಾಣಗಳಲ್ಲಿ  ’ಪೆಲ್ಟಮ್ಯಾನ್ ಎಫೆಕ್ಟ್ ’ ಎನ್ನುವ ಸಿದ್ಧಾಂತದ ಬಗ್ಗೆ ಚರ್ಚೆ ನಡೆಯುತ್ತಿದೆ.

    Sam peltzmanಎಂಬಾತ ಚಿಕಾಗೊ ನಲ್ಲಿ 1988ರಲ್ಲಿ ಮೈಕ್ರೊ ಎಕಾನಾಮಿಕ್ಸ್ ಹೇಳಿಕೊಡುತ್ತಿದ್ದ ವ್ಯಕ್ತಿ. ಆತ ಹೇಳಿದ್ದೇನೆಂದರೆ, ಕೆಲವು ಭದ್ರತೆಗಳು ಜನರಿಗೆ ಸಿಕ್ಕ ಕೂಡಲೇ ಅವರಲ್ಲಿ ಅಪಾಯವನ್ನು ಎದುರಿಸುವ ಧೈರ್ಯ ಹೆಚ್ಚಾಗುವ ಸಂಭವನೀಯತೆಯ ಬಗ್ಗೆ ಆತ ತತ್ವವೊಂದನ್ನು ಪ್ರತಿಪಾದಿಸಿದ. ಉದಾಹರಣೆಗೆ ಹೆಲ್ಮೆಟ್ ಹಾಕಿದ ನಂತರ ಬೈಕ್ ನ್ನು ಅತ್ಯಂತ ವೇಗವಾಗಿ ಓಡಿಸುವುದು, ಸೀಟ್ ಬೆಲ್ಟ್ ಹಾಕಿಕೊಂಡಿದ್ದೇನೆ ಎನ್ನುವ ಹುಂಬ ಧೈರ್ಯದಲ್ಲಿ ಅಡ್ಡಾ ದಿಡ್ಡಿ ವಾಹನಗಳನ್ನು ಓಡಿಸಿ ಆಕ್ಸಿಡೆಂಟ್ ಗಳು ಹೆಚ್ಚಾಗುವುದು -ಇತ್ಯಾದಿ ವಿಚಾರಗಳನ್ನು ಈತನ ತತ್ವ ಹೇಳುತ್ತದೆ.

    ಅಂದರೆ, ಒಂದಿಷ್ಟು ಭದ್ರತೆ ಸಿಕ್ಕಕೂಡಲೇ ಜನರು ತಾವು ವಹಿಸಬೇಕಾದ ಎಚ್ಚರಿಕೆಗಳನ್ನು ಗಾಳಿಗೆ ತೂರಿ, ಮೈ ಮರೆತು ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ವಾಲಿಕೆಯನ್ನು ತೋರುತ್ತಾರೆ. ಅಲ್ಲಿ ಬದಲಾಗುವುದು ಅಪಾಯವನ್ನು ಆಹ್ವಾನಿಸುವ ಜನರ ವರ್ತನೆಯೇ ಹೊರತು, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ನಿಂದ ಯಾವ ಪ್ರಯೋಜನವೂ ಇಲ್ಲವೆಂದಲ್ಲ. ಪ್ರಾಣವೇ ಹೋಗುವ ಕಡೆ, ಜೀವ ಉಳಿಯುವ ಸಾಧ್ಯತೆಯನ್ನು ಈ ಉಪಕರಣಗಳು ಕಲ್ಪಿಸಿ ಅಲ್ಪ ಸ್ವಲ್ಪ ಭದ್ರತೆಯನ್ನು ಒದಗಿಸಬಲ್ಲವೇ ಹೊರತು ಅಪಘಾತ ನಡೆಯದಂತೆ ಜನರು ಎಚ್ಚರವಹಿಸದಿದ್ದಲ್ಲಿ ಅವು ನಿಶ್ಪ್ರಯೋಜಕವಾಗುತ್ತವೆ. ಈ ವಿಚಾರವನ್ನು ನಾವು ಕೋವಿಡ್ ಲಸಿಕೆಯ ವಿಚಾರಕ್ಕೂ ಅನ್ವಯಿಸಿಕೊಳ್ಳಬಹುದು.

    ಲಸಿಕೆ ಸಿಕ್ಕ ಕೂಡಲೇ ಕೋವಿಡ್ ಬರುವುದಿಲ್ಲವೆಂದಲ್ಲ. ಎರಡು ಡೋಸ್  ಲಸಿಕೆಯ ನಂತರವೂ  ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ಸುಲಭವಾಗಿ ಕೋವಿಡ್ ಬರಬಹುದು.ಕೋವಿಡ್ ವಿಚಾರದಲ್ಲಿ ಈಗ ಲಸಿಕೆಯ ಲಭ್ಯತೆ ಇದೆಯಾದರೂ ಎಂದಿನಂತೆ ಎಚ್ಚರಿಕೆಗಳನ್ನು ನಾವು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಮುಂದುವರೆಸುವ ಅವಶ್ಯಕತೆಯಿದ್ದೇ ಇದೆ. ಮೈ ಮರೆಯುವಂತಿಲ್ಲ.ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಬದಲಾಗಿಲ್ಲ. ಜೊತೆಗೆ ಇನ್ನಷ್ಟು ವಿಚಾರಗಳನ್ನು ಮನನ ಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ.

    1. ವ್ಯಾಕ್ಸಿನ್ ನಿಂದ ಕೋವಿಡ್ ಬರುವುದಿಲ್ಲ.

    2. ಒಂದು ಡೋಸ್ ಪಡೆದವರಲ್ಲಿ ಪೂರ್ಣ ಪ್ರಮಾಣದ ಪ್ರತಿರೋಧಕ ಶಕ್ತಿಯಿರುವುದಿಲ್ಲ.

    3. ಎರಡೂ ಡೋಸ್ ಗಳು ದೊರಕಿದ ನಂತರ ಜನರಲ್ಲಿ ಕೋವಿಡ್ ವಿರುದ್ಧ ಬಲವಾದ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಆದರೆ, ಅದು ಪ್ರತಿಶತ ನೂರರಷ್ಟು ರಕ್ಷಣೆ ಒದಗಿಸುವುದಿಲ್ಲ. ಆದ್ದರಿಂದ ಎಚ್ಚರ ತಪ್ಪಿದರೆ ಆಗಲೂ ಕೋವಿಡ್ ಬರಬಲ್ಲದು.

    4. ಎರಡೂ ಡೋಸ್ ಪಡೆದವರಲ್ಲಿ ಕೂಡ ಹಲವಾರು ವಾರಗಳ ಕಾಲ ಪ್ರತಿರೋಧಕ ಶಕ್ತಿ ಬೆಳೆದಿರುವುದಿಲ್ಲ. ಇದೇ ಕಾರಣಕ್ಕೆ ಎರಡನೇ ಡೋಸ್ ಸಿಕ್ಕ ಮರುದಿನವೇ ಕೋವಿಡ್ ಪಾಸಿಟಿವ್ ಎನ್ನುವಂತ ವಿಚಾರಗಳನ್ನು ನಾವು ಓದುತ್ತೇವೆ.

    5. ಯಾವ ಲಸಿಕೆಗಳಿಂದಲೂ ಪ್ರತಿಶತ ಕೋವಿಡ್ ನಿರೋಧಕ ಶಕ್ತಿ ಬರುವುದಿಲ್ಲ.

    6. ಒಂದಷ್ಟು ಶಕ್ತಿ ಬಂದರೂ ಒಂದಾರು ತಿಂಗಳುಗಳಿಗಿಂತ ಹೆಚ್ಚಾಗಿ ಅದು ಉಳಿಯದಿರಬಹುದು.ಒಂದಾರು ತಿಂಗಳ ನಂತರ ಬೂಸ್ಟರ್ ಡೋಸ್ ಬೇಕಾಗಬಹುದು.

    7. ಕೋವಿಡ್ ಲಸಿಕಯನ್ನು ಪ್ರತಿ ವರ್ಷ ಕೊಡುವ ಪರಿಪಾಟವನ್ನು ಪಾಲಿಸಬೇಕಾಗಬಹುದು.ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.

    8. ಭಾರತದ ಬೃಹತ್ ಸಂಖ್ಯೆಯ ಜನರಿಗೆ ಎರಡೆರಡು ಲಸಿಕೆ ಸಿಗಲು ಇನ್ನೂ ಬಹಳ ಕಾಲ ಬೇಕು. ಜನಸಂಖ್ಯೆ ಶೇಕಡ 60ರಷ್ಟು ಜನರು ವ್ಯಾಕ್ಸಿನ್ ಪಡೆದಾಗ ಮಾತ್ರ ಹರ್ಡ್ ಇಮ್ಯೂನಿಟಿ ಬೆಳೆಯುತ್ತದೆ. ಅಲ್ಲಿಯವರೆಗೆ ನಮ್ಮ ದೇಶ ಕೋವಿಡ್ ಮುಕ್ತವಾಗುವುದಿಲ್ಲ. ಜನ ಪ್ರಪಂಚದ ಪ್ರತಿ ದೇಶದಿಂದ ಕೋವಿಡ್ ಉಚ್ಚಾಟಣೆಯಾಗುವುದು ಸುಲಭವಾದ ವಿಚಾರವಲ್ಲ.ಅಲ್ಲಿಯವರೆಗೆ ಕೋವಿಡ್ ಎಚ್ಚರಿಕೆಗಳು ಜಾರಿಯಲ್ಲಿರಲೇ ಬೇಕು. ಈ ವಿಚಾರ ಅತ್ಯಂತ ಕಟುವಾದ ಸತ್ಯ. ಇದನ್ನು ಪ್ರಪಂಚದ ಎಲ್ಲರೂ ಒಂದಾಗಿ ಎದುರಿಸಲೇಬೇಕಾಗಿದೆ. ಲಸಿಕೆ ಒಂದು ಪ್ರಮಾಣದ ಸುರಕ್ಷತೆಯನ್ನು ಒದಗಿಸಿದರು, ಅದು ಪೂರ್ಣ ಪ್ರಮಾಣದ್ದಾಗಿರುವುದಿಲ್ಲ.ಈ ಎಚ್ಚರಿಕೆಯ ಜೊತೆಗೇ ನಮ್ಮ ಬದುಕು ಮುಂದುವರೆಯಬೇಕಾಗಿದೆ.

    9. ಲಸಿಕೆಯನ್ನು ತೆಗೆದುಕೊಳ್ಳದಿದ್ದಲ್ಲಿ ಕೋವಿಡ್ ಅಪಾಯ ನೂರಕ್ಕೆ ನೂರು ನಿಜವಾಗಿರುತ್ತದೆ.ಅದರಿಂದ ತಪ್ಪಿಸಿಕೊಳ್ಳಲು ಸದಾ ಜಾಗೃತರಾಗಿರಬೇಕಾಗುತ್ತದೆ. ಆದರೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹೆದರಿಕೆಯಲ್ಲೇ ಬದುಕಬೇಕಾಗುತ್ತದೆ. ಲಸಿಕೆಗಳು ಶೇಕಡಾ 70ಕ್ಕೂ ಹೆಚ್ಚಿನ ರಕ್ಷಣೆಯನ್ನು ಒದಗಿಸಬಲ್ಲವು.ಲಸಿಕೆ ಪಡೆಯುವುದರಿಂದ ಸಾವು ನೋವು ಮತ್ತು ಆಸ್ಪತ್ರೆ ಸೇರಬೇಕಾದ ಸ್ಥಿತಿ ಗರಿಷ್ಠ ಮಟ್ಟದಲ್ಲಿ ಕಡಿಮೆಯಾಗುತ್ತದೆ.

    ಆದರೆ ಲಸಿಕಗಳಿಂದ ಕೂಡ ಕೆಲವು ದುಷ್ಪರಿಣಾಮಗಳು ಪಟ್ಟಿಯಾಗಿವೆ. ಹೊಸ ದುಷ್ಪರಿಣಾಮಗಳು ದಾಖಲಾಗುತ್ತಿವೆ. ಉದಾಹರಣೆಗೆ, ಆಸ್ಟ್ರಾಜೆನಿಕಾ ಲಸಿಕೆ ಕೆಲವರ ರಕ್ತನಾಳಗಳಲ್ಲಿ ರಕ್ತದ ಗಡ್ಡೆಗಳನ್ನು ಸೃಷ್ಟಿಸಬಲ್ಲದು ಎನ್ನುವ ವಿಚಾರ ಯೂರೋಪು ಮತ್ತು ಯು.ಕೆ.ಯಲ್ಲಿ ವಿಸ್ತೃತವಾದ ಚರ್ಚೆಯಾಯಿತು.  ಲಸಿಕೆ ಪಡೆದ ಲಕ್ಷಾಂತರ ಜನರಲ್ಲಿ ಹಲವರಲ್ಲಿ  ರಕ್ತದ ಗಡ್ಡೆ ಕಾಣಿಸಿದ್ದು, ಕೆಲವರು ಅಸುನೀಗಿದ್ದು ದೃಢವಾಯಿತು.ಅದರಲ್ಲೂ ಇದು ಮಹಿಳೆಯರಲ್ಲೇ ಅಧಿಕವಾಗಿ ಕಾಣಿಸಿತು.ಆದರೆ ಇದು ಕಾಕತಾಳಿಯವೋ ಅಥವಾ ಲಸಿಕೆಯಿಂದಲೂ ಎಂಬುದರ ಬಗ್ಗೆ ಇನ್ನು ಅಧ್ಯಯನ ನಡೆಯುತ್ತಿದೆ. ಆದರೆ ಈ ಸೈಡ್ ಎಫೆಕ್ಟ್ ಸಾವಿರಾರು ಮೈಲು ವಿಮಾನ ಪ್ರಯಾಣ ಮಾಡಿದರೆ ಅಥವಾ ಮಕ್ಕಳಾಗದಂತೆ ಮಹಿಳೆಯರು ತೆಗೆದುಕೊಳ್ಳುವ ಸಂತಾನ ನಿರೋಧಕ ಗುಳಿಗೆಗಳಿಂದ ಆಗುವ ರಕ್ತದ ಗಡ್ಡೆಗಳ ಅಪಾಯಕ್ಕೆ ಹೋಲಿಸಿದರೆ ಒಂದು ಭಾಗದಷ್ಟು ಕೂಡ ಅಪಾಯಕಾರಿಯಲ್ಲ ಎಂಬ ವಿಚಾರವನ್ನು ಸರ್ಕಾರ, ಜನರಿಗೆ ತಿಳಿಸಿ ಭರವಸೆ ನೀಡಿದೆ.

    ಹಾಗೆ ನೋಡಿದರೆ, ಪ್ರಪಂಚದ ಯಾವ ಲಸಿಕೆಯೂ ಪೂರ್ಣ ಪ್ರಮಾಣದ ರಕ್ಷಣೆಯನ್ನು ನೀಡುವುದಿಲ್ಲ. ಪ್ರತಿಯೊಂದಕ್ಕೂ ಅದರದೇ ಆದ ಸೈಡ್ ಎಫೆಕ್ಟ್ ಗಳು ಕೂಡ ಇವೆ. ಕೋವಿಡ್ ಲಸಿಕೆಯೂ ಇದಕ್ಕೆ ಹೊರತಲ್ಲ. ಆದರೆ ಪ್ರತಿಯೊಂದು ಲಸಿಕೆಗಳಿಂದ ಮನುಷ್ಯಕುಲಕ್ಕೆ ಅಪಾರವಾದ ಲಾಭವಾಗಿದೆ. ಕೋಟ್ಯಂತರ ಜನರ ಜೀವ ಉಳಿದಿದೆ. ಕೋವಿಡ್ ಲಸಿಕೆಯ ವಿಚಾರದಲ್ಲೂ ಇದು ಸತ್ಯವಾಗಲಿದೆ.

    10. ಆದರೆ ಹಲವಾರು ಕೋವಿಡ್ ಲಸಿಕೆಗಳನ್ನು ವರ್ಷವೊಂದರಲ್ಲಿ ಮಾರುಕಟ್ಟೆಗೆ ತಂದು ದೀರ್ಘಕಾಲದ ಅಧ್ಯಯನವಿಲ್ಲದೆ ಜನ ಸಾಮಾನ್ಯರಿಗೆ ನೀಡುತ್ತಿರುವ ಬಗ್ಗೆ ಜನರಲ್ಲಿ ಆತಂಕವಿದೆ. ಪೂರ್ಣ ಪ್ರಮಾಣದ ಮಾಹಿತಿಯಿಲ್ಲದ ಕಾರಣ ಎಲ್ಲರಲ್ಲೂ ಒಂದು ಬಗೆಯ ಆತಂಕ ಮನೆಮಾಡಿದೆ. ಆದರೆ, ಕೋವಿಡ್ ಬಿಗಿಹಿಡಿತಕ್ಕೆ ಸಿಲುಕಿದಲ್ಲಿ ಆಗಬಹುದಾದ ಜೀವಹಾನಿಗೆ ಹೋಲಿಸಿದರೆ ಕೋವಿಡ್ ಲಸಿಕೆ ತೆಗೆದುಕೊಂಡರೆ ಆಗುವ ಲಾಭಗಳೇ ಅಧಿಕವಾದ ಕಾರಣ ವಿವಾದಗಳಿರುವ ಆಸ್ತ್ಟ್ರಜೆನಿಕದ  ಎರಡೂ ಡೋಸ್ ವ್ಯಾಕ್ಸಿನ್ ಗಳನ್ನು ನಾನು ತೆಗೆದುಕೊಂಡಿದ್ದೇನೆ.ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಆರಾಮಾಗಿದ್ದೇನೆ.

    ಕೋವಿಡ್ ಬಂದರೆ ಆಗಬಹುದಾದ ದುರದೃಷ್ಟದ ಪಾಡನ್ನು ನನ್ನ ಪ್ರಯತ್ನ ಮತ್ತು ಒಪ್ಪಿಗೆಯಿಂದ ದೂರವಿಟ್ಟ ತೃಪ್ತಿಯಂತೂ ನನಗಿರುತ್ತದೆ. ಅಕಸ್ಮಾತ್ ಕೋವಿಡ್ ಬಂದು, ಬೇರೆಯವರಿಗೆ ನನ್ನಿಂದ ಸದ್ದೇ ಇಲ್ಲದೆ ಕೋವಿಡ್ ಹರಡದಂತೆ ತಡೆದ ನೆಮ್ಮದಿಯೂ ಇರುತ್ತದೆ.ಸದ್ಯದ ಪರಿಸ್ಥಿತಿಯಲ್ಲಿ ಹೀಗೆ ಮಾಡಿರೆಂಬುದೇ ಪ್ರತಿ ಸರ್ಕಾರಗಳು ನಮ್ಮನ್ನು ಕೇಳುತ್ತಿರುವುದು ಕೂಡ.

    ಲಸಿಕೆ ಪಡೆದರೂ ಸಧ್ಯಕ್ಕೆ ಕೋವಿಡ್ ನಿಯಮಪಾಲನೆಗಳು ಹೋಗುವುದಿಲ್ಲ. ಜನರು ಮೈ ಮರೆತರೆ ಕೋವಿಡ್ ಮತ್ತೆ ಹರಡುತ್ತದೆ. ಮತ್ತೊಂದು ವರ್ಷವಾದರು ನಾವು ಕೋವಿಡ್ ನಿಯಮಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಮುಂದೆಯೂ ಅಗತ್ಯಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ತಯಾರಿರೋಣ.

    Photo by Ivan Diaz on Unsplash

                                                                  

    error: Content is protected !!