ಎಂ.ವಿ. ಶಂಕರಾನಂದ
ಮಳೆಯ ಏರುಪೇರಿನ ಈ ದಿನಗಳಲ್ಲಿ ಮಳೆಯಾಶ್ರಿತ ರೈತರು ಹೇಗೆ ಬದುಕಬಹುದೆಂದು ತೋರಿಸಿ ಕೊಟ್ಟವರ ಸಾಲಿಗೆ ಮೇಷ್ಟ್ರು ಡಾ.ಸಿದ್ಧಗಂಗಯ್ಯ ಹೊಲತಾಳು ಸೇರುತ್ತಾರೆ. ಸುಮಾರು ಒಂದೂವರೆ ದಶಕಗಳಿಂದ ನೀರ ಸಂರಕ್ಷಣೆಯ ಪಾಠದಲ್ಲಿ ತೊಡಗಿಸಿಕೊಂಡಿರುವ ಇವರು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಲತಾಳು ಗ್ರಾಮದಲ್ಲಿರುವ ಸಿದ್ಧರಬೆಟ್ಟದ ತಪ್ಪಲಿನಲ್ಲಿ ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಐದೂಕಾಲೆಕರೆ ಭೂಮಿಯಲ್ಲಿ ಸಣ್ಣ ಮಳೆ ಬಂದರೂ ಒಂದು ಹನಿ ನೀರೂ ಆಚೆ ಹೋಗದಂತೆ ಕಾಪಾಡಿಕೊಂಡಿದ್ದಾರೆ.
ಸಿದ್ಧರಬೆಟ್ಟದ ತಪ್ಪಲಿನ ಗ್ರಾಮ ಹೊಲೆತಾಳು. ಈ ಬೆಟ್ಟದ ಮೇಲಿನಿಂದ ಹರಿಯುವ ಮಳೆನೀರು ಸಿದ್ಧಗಂಗಯ್ಯನವರೂ ಸೇರಿದಂತೆ ಅಪಾರ ರೈತರ ಹೊಲದ ಮೇಲೆ ಹರಿಯುತ್ತದೆ. ಆದರೆ ಸಿದ್ಧಗಂಗಯ್ಯನವರನ್ನು ಬಿಟ್ಟು ಬೇರೆ ಯಾವ ರೈತರೂ ಮಳೆನೀರನ್ನು ಇಷ್ಟರಮಟ್ಟಿಗೆ ಸಂಗ್ರಹಿಸುವುದಿಲ್ಲ.
ಮೇಷ್ಟ್ರು ಸಿದ್ಧಗಂಗಯ್ಯನವರ ಐದೂಕಾಲು ಎಕರೆ ಜಮೀನಿನಲ್ಲಿ ಪ್ರಕೃತಿದತ್ತವಾಗಿ ಎರಡು ನೀರಿನ ಹಳ್ಳಗಳಿವೆ. ಈ ಹಳ್ಳಗಳ ಮೂಲಕ ಒಂಭತ್ತು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಬಿದ್ದ ಮಳೆ ನೀರೆಲ್ಲ ಸಂಗ್ರಹಗೊಂಡು ಮಳೆ ಇಲ್ಲದ ದಿನಗಳಲ್ಲಿ ಬೇಸಾಯಕ್ಕೆ ಅನುಕೂಲವಾಗಿದೆ. ತಮ್ಮ ಭೂಮಿಯಲ್ಲಿ ಇವರು 60 ಹುಣಸೆ, 60ವಿವಿಧ ತಳಿಗಳ ಮಾವಿನ ಮರಗಳ ಜೊತೆಗೆ ಇತರೆ 10 ವಿಧದ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಜೊತೆಗೆ 30 ನೇರಳೆ,30 ನಿಂಬೆ, 20 ತೆಂಗು, ಸಪೋಟ, ಸೀತಾಫಲ, ಬೆಟ್ಟದನೆಲ್ಲಿ, ಚಕೋತ, ಸೀಬೆ, ಅಂಜೂರ ಇತ್ಯಾದಿ ಹಣ್ಣಿನಮರಗಳ ಜೊತೆಗೆ ನೆರಳು, ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವ, ಮಣ್ಣಿನಲ್ಲಿ ಹ್ಯೂಮಸ್ ಹೆಚ್ಚಿಸುವ ಆಲ, ಅರಳಿ, ಬೇವು, ಬಸರಿ, ಗೋಣಿ ಸೇರಿದಂತೆ ವಿವಿಧ 10 ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಮರಗಳು ಹಣ್ಣು ಬಿಟ್ಟಾಗ ಹತ್ತಾರು ಜಾತಿಯ ಪಕ್ಷಿಗಳು ಗುಂಪು, ಗುಂಪಾಗಿ ಬರುತ್ತವೆ. ಅವುಗಳ ಆಟ, ಪಾಟ ನೋಡುವುದೇ ಒಂದು ಸೊಗಸು.
ತಿಪಟೂರಿನ ಕಲ್ಪತರು ಡಿಗ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಸಿದ್ಧಗಂಗಯ್ಯನವರು ಒಮ್ಮೆ ರಾಷ್ಟ್ರೀಯ ಮಟ್ಟದ ಪ್ರಸಿದ್ಧ ಜಲಯೋಧ ರಾಜಾಸ್ಥಾನದ ರಾಜೇಂದ್ರಸಿಂಗ್‌ರ ಭಾಷಣ ಕೇಳಿ ಪ್ರಭಾವಿತರಾದರು. ನಿವೃತ್ತಿ ನಂತರ ತಮ್ಮ ಕಾಡು ಕೃಷಿಯಲ್ಲಿ ಮಳೆ ನೀರು ಸಂಗ್ರಹಿಸುವ, ಬಳಸುವಲ್ಲಿ ಮತ್ತಷ್ಟು ಅನುಭವ ಪಡೆದುಕೊಂಡರು. ಅವರು ನಿರ್ಮಿಸಿರುವ ೯ ಕೃಷಿ ಹೊಂಡಗಳಿಂದಾಗಿ ಸುತ್ತಮುತ್ತಲ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿಯಾಗಿದೆ.
ಇವರ ಜಮೀನಿನ ಸುತ್ತಮುತ್ತ ಹಲವಾರು ತಲಪರಿಗೆಗಳಿವೆ. ಬರಗಾಲದಲ್ಲೂ ತಲಪರಿಗೆಗಳಲ್ಲಿ ನೀರು ಜಿನುಗಿ ಕಟ್ಟೆಗಳಲ್ಲಿ ತುಂಬಿಕೊಳ್ಳುತ್ತದೆ. ಸಣ್ಣಗೆ ಒಂದು ಬೆರಳಿನ ಗಾತ್ರ ಜಿನುಗುವ ನೀರನ್ನು ಹೆಚ್ಚು ಪಡೆಯಬೇಕೆಂಬ ದುರಾಸೆ ಪಟ್ಟು ಅಗೆದು ಕಾಲುವೆ ಮಾಡಿದರೆ ನೀರು ಹರಿಯುವುದಿಲ್ಲ. ಜಲದ ಕಣ್ಣು ಮುಚ್ಚಿ ಹೋಗುತ್ತದೆ. ಏನನ್ನೂ ಮಾಡದೆ ಮಾನವ ಮೌನಿಯಾಗಿದ್ದರೆ ತಲಪರಿಗೆಗಳು ತನ್ನಿಂದ ತಾನೇ ಸಮೃದ್ಧವಾದ ನೀರನ್ನು ನೀಡುತ್ತವೆ. ಪೂರ್ವಿಕರ ಜ್ಞಾನದಿಂದಾಗಿ ಈ ಪ್ರದೇಶದಲ್ಲಿ ಈರಜ್ಜಿ ಚಿಲುಮೆ (ತಲಪರಿಗೆ), ಅಯ್ಯನಕಟ್ಟೆ ತಲಪರಿಗೆ, ತಾತನಕಟ್ಟೆ ತಲಪರಿಗೆ, ಹೊಸಕೆರೆ ತಲಪರಿಗೆಗಳಿವೆ. ಮೇಷ್ಟ್ರ ಅನುಭವದಲ್ಲಿ ಈ ನಾಲ್ಕು ತಲಪರಿಗೆಗಳು ಎಂತಹ ಬರಗಾಲದಲ್ಲೂ ಯಾವತ್ತೂ ಬತ್ತಿಲ್ಲ. ಸದಾ ನೀರಿನ ಒರತೆ ತಪ್ಪುವುದೇ ಇಲ್ಲ.ಇವರ ಜಮೀನಿನ ಮುಂಭಾಗದ ರಾಮಣ್ಣನ ಕಟ್ಟೆಯಲ್ಲಿ ತಲಪರಿಗೆ ಮತ್ತು ಕೃಷಿ ಹೊಂಡಗಳ ನೀರಿನ ಜಾಲದಲ್ಲಿ ವರ್ಷವಿಡೀ ನೀರು ಇರುತ್ತದೆ.
ಮರವಳಿಯ ಕಾಡು ಕೃಷಿಯಿಂದಾಗಿ ಮೇಷ್ಟ್ರ ಜಮೀನಿನಲ್ಲಿ ನವಿಲು, ಮೊಲ ಸೇರಿದಂತೆ ಹಲವಾರು ಸಣ್ಣಪುಟ್ಟ ಕಾಡುಪ್ರಾಣಿಗಳು, ವಿಷಪೂರಿತ ಮತ್ತು ವಿಷಪೂರಿತವಲ್ಲದ ಹಾವುಗಳು ಇವೆ. ವಿವಿಧ ಜಾತಿಯ ಪಕ್ಷಿಗಳ ಕಲರವ ಸಂಜೆ, ಮುಂಜಾನೆ ಕೇಳುವುದೇ ಒಂದು ಸೊಗಸು.
‘ಹಿಂದೊಮ್ಮೆ ವಿದ್ಯಾರ್ಥಿಯಾಗಿದ್ದಾಗ ಭರ್ಜರಿ ಮಳೆ ಸುರಿಯಿತು. ಇಲ್ಲಿನ ಬಂಡೆ ಪಕ್ಕದ ಹೊಂಗೆ ಮರದ ಬಳಿ ಆಶ್ರಯ ಪಡೆದುಕೊಂಡೆ. ಬಂಡೆ ಮೇಲೆ ಹೊಳೆಯೋಪಾದಿಯಲ್ಲಿ ನೀರು ಹರಿದದ್ದನ್ನು ಕಂಡು ಅಯ್ಯೋ ಎಷ್ಟೊಂದು ನೀರು ನಷ್ಟವಾಗುತ್ತಿದೆ. ಈ ನೀರನ್ನೆಲ್ಲ ಒಂದೆಡೆ ಸಂಗ್ರಹಿಸಬೇಕೆಂದು ಕೊಂಡೆ. ಆದರೆ, ಓದು, ಉದ್ಯೋಗ, ಸಂಸಾರದೊಳಗೆ ಮುಳುಗಿ ಹೋದ ನನಗೆ ಮಳೆ ನೀರು ಸಂಗ್ರಹಿಸುವ ಕಡೆ ಗಮನ ನೀಡಲಾಗಲಿಲ್ಲ. ನಿವೃತ್ತಿ ನಂತರ ನೀರಿನ ಹಳ್ಳವನ್ನು ಬಳಸಿಕೊಂಡು ಒಂಭತ್ತು ಕೃಷಿಹೊಂಡಗಳನ್ನು ನಿರ್ಮಿಸಿದ ಒಂದು ವರ್ಷದ ನಂತರ ಮರವಳಿ ಬೇಸಾಯದಿಂದಾಗಿ ಜೀವವೈವಿಧ್ಯತೆ ರಕ್ಷಣೆಗೆ ಅನುಕೂಲವಾಯಿತು. ಬಣ್ಣ, ಬಣ್ಣದ ಭರಣಿ ಹುಳುಗಳ ಗುಯ್‌ಗುಡುವಿಕೆ ಕರ್ಣಾನಂದ, ಜೇನುಹುಳುಗಳ ಝೇಂಕಾರ, ಕ್ರಿಮಿ, ಕೀಟಗಳ ಸಂಚಾರ ಒಂದು ವಿಜ್ಞಾನ ಲೋಕವನ್ನೇ ತೆರೆದಿಡುತ್ತದೆ. ಆಗೆಲ್ಲ ಪೂರ್ಣಚಂದ್ರತೇಜಸ್ವಿ ಬರೆದ ಪುಸ್ತಕಗಳು ಮಸ್ತಕದೊಳು ಹಾದುಹೋಗುತ್ತವೆ. ಪಾಠ ಹೇಳಿದ ಬದುಕಿನಲ್ಲಿ ಸಿಕ್ಕ ಸುಖಕ್ಕಿಂತ ಹತ್ತು ಪಟ್ಟು ಮಿಗಿಲಾಗಿ ಕೃಷಿ ಬದುಕಿನಲ್ಲಿ ದೊರಕಿದೆ. ಬೇಸಾಯದಲ್ಲಿ ಲಾಭ ಇಲ್ಲ ಎನ್ನುವುದು ಸುಳ್ಳು. ಯಾವುದೇ ಕ್ಷೇತ್ರದಲ್ಲಿ ಇಷ್ಟಪಟ್ಟು ಕಷ್ಟಪಟ್ಟರೆ ಸುಖ ಇದ್ದೇ ಇರುತ್ತದೆ. ಭೂಮಿ ಭಾಷೆಯನ್ನು ಅರಿಯದೆ ಮಾಡುವ ವ್ಯವಸಾಯದಲ್ಲಿ ನಷ್ಟ, ದುಃಖ ಇರುತ್ತದೆ. ಮರವಳಿ ಕೃಷಿ ಒಡನಾಟದಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢನಾಗಿದ್ದೇನೆ. ಇಲ್ಲಿನ ಅವಿನಾಭಾವ ಸಂಬಂಧದಿಂದ ಮಧುಮೇಹ ಕಳೆದ 8 ವರ್ಷಗಳಿಂದ ನಿಯಂತ್ರಣದಲ್ಲಿದೆ. ಹುರುಳಿ, ಅಲಸಂದೆ ಬಿತ್ತಿ ಬೆಳೆದರೂ ಅವೆಲ್ಲ ಒಣಗಿ ಭೂಮಿಯಲ್ಲೇ ಗೊಬ್ಬರವಾಗುವಂತೆ ನೋಡಿಕೊಳ್ಳುತ್ತೇನೆ. ಇದರಿಂದ ಎರೆಹುಳುಗಳ ಸಂತತಿ ಹೆಚ್ಚುತ್ತದೆ. ಎರೆಹುಳುಗಳಿಂದಾಗಿ ಮಣ್ಣು ಸಡಿಲಗೊಂಡು ಮಳೆ ನೀರು ಭೂದೇವಿ ಮಡಿಲು ಸೇರುತ್ತದೆ. ಧಾನ್ಯಗಳ ಬೇರು ಮತ್ತು ಮರ, ಗಿಡಗಳ ಬೇರುಗಳಿಗೆ ಗಾಳಿ, ನೀರು, ಬೆಳಕು, ಗೊಬ್ಬರ ಸಮ ಪ್ರಮಾಣದಲ್ಲಿ ದೊರೆತು ಉತ್ಕೃಷ್ಟ ಫಲ, ಫಸಲು ದೊರೆಯುತ್ತದೆ. ಹೀಗಾಗಿ ೬೦ ವರ್ಷದ ನಂತರ ನನ್ನ ಬದುಕಿನಲ್ಲಿ ಮತ್ತೆ ಚಿರಯೌವ್ವನ ಮರುಕಳಿಸಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.