ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ- ‘ಅಭಿನವ ಪಂಪ’ನೆಂದು ಬಿರುದಾಂಕಿತನಾಗಿರುವ ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ ಪುರಾಣ’ದಲ್ಲಿ ಉದ್ಗರಿಸಿರುವ ವಾಕ್ಯ ಇದು. ವಿಷಬೀಜ ಬಿತ್ತಿ ಬೆಳೆಸಿದರೆ ಆ ಉದ್ಯಾನ ವಿಷೋದ್ಯಾನವಾಗುತ್ತದೆ ಅದನ್ನು ಬಿಟ್ಟು ಹೂ-ಹಣ್ಣು ಔಷಧೀಯ ಸಸ್ಯ ಮುಂತಾದವುಗಳನ್ನು ಬೆಳೆಸಿದರೆ ಅದು ಅಮೃತತ್ವಕ್ಕೆ ಸಮಾನವಾಗಿರುತ್ತದೆ.
“ಬಿತ್ತಿದಂತೆ ಬೆಳೆ” ಅಂದರೆ ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಬೆಳೆಯನ್ನು ಕೊಡುತ್ತದೆ. ಆದರೆ ದೋಷಪೂರಿತ ಬೀಜಗಳು ಹೇಗೆ ಒಳ್ಳೆಯ ಬೆಳೆಯನ್ನು ಕೊಡಲಾಗದು.“ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ” ಎಂಬ ಮಾತನ್ನು ಸಮಾಜಕ್ಕೆ ಈ ಮಾತನ್ನು ಅನ್ವಯಿಸಬಹುದು. ಸಮಾಜದ ವಿಷ ಎಂದರೆ ಗರ್ವ. ನಮ್ಮಲ್ಲಿ ಹಲವರಿಗೆ ವಿದ್ಯಾವಂತರೆಂಬ ಗರ್ವವಿದೆ,ನಮಗೆ ತಿಳಿದಿರುವಂತದ್ದೆ ಅಂತಿಮ ಎಂಬ ಭ್ರಮೆಯೂ ಹಲವರಲ್ಲಿ ಇರುತ್ತದೆ.ಇದು ಕೆಲವೊಮ್ಮೆ ಜನ್ಮತಃ, ಬೆಳೆದ ಸಂದರ್ಭ, ಮನೆಯಲ್ಲಿನ ಸುಖದ ವಾತಾವರಣ, ಸಂಪತ್ತಿನ ಗರ್ವವೂ ಇಲ್ಲಿ ಇರುತ್ತವೆ.ಇಂತಹ ಸಂದರ್ಭಗಳು ಕೆಟ್ಟದ್ದನ್ನೆ ಸೃಷ್ಟಿ ಮಾಡುತ್ತವೆ.ಈ ‘ಗರ್ವ’ ಅನ್ನುವುದು ವಿಷ ಬೀಜವೇ ಇದು ಮತ್ಸರ, ದ್ವೇಷ, ಸೇಡು ಮುಂತಾದವುಗಳನ್ನು ಮಾತ್ರ ಕೊಡಲು ಸಾಧ್ಯ.
ವ್ಯಕ್ತಿಯೊಬ್ಬ ವಿದ್ಯಾವಂತ ಎಂದು ಕರೆಸಿಕೊಂಡರೆ ಸಾಲದು ಆತ ಕರಗತ ಮಾಡಿಕೊಂಡಿರುವ ವಿದ್ಯೆ ಎಂತಹದ್ದು ಎನ್ನುವುದರ ಅರಿವಿರಬೇಕು. ನಿಜಕ್ಕೂ ವಿದ್ಯಾವಂತನಾದವನು ಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಜೀವನವನ್ನು ರಸೋದ್ಯಾನವಾಗಿಸಿಕೊಳ್ಳಬೇಕೇ ವಿನಾ ಅನಗತ್ಯ ವಿಚಾರಗಳನ್ನೇ ತುಂಬಿಸಿಕೊಂಡು ಮನೆ ಹಾಗು ಮನಸ್ಸನ್ನು ಕಸೋದ್ಯಾನವಾಗಿಸಿಕೊಳ್ಳಬಾರದು.
ಆಭರಣ ನೋಡುವುದಕ್ಕೆ ಆಕರ್ಷಕ, ಅತ್ಯಾಕರ್ಷಕ ಎಂದರೆ ಸಾಲದು ಅದರ ತಾಳುವಿಕೆ, ಮೌಲ್ಯವೂ ಮುಖ್ಯ. ಅವುಗಳನ್ನು ಯಾವ ಲೋಹದಿಂದ ಮಾಡಿದೆ ಎನ್ನುವುದರ ಮೇಲೆಯೂ ಅವುಗಳ ಘನತೆ ನಿರ್ಧಾರವಾಗುತ್ತದೆ. ಹಾಗೆ ನಮ್ಮ ಬದುಕೂ ಕೂಡ. ನಮ್ಮ ಒಡನಾಟವೂ ಇಲ್ಲ ಗಣನೆಗೆ ಬರುವಂಥದ್ದು. “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಮಾತನ್ನೂ ಇಲ್ಲಿ ಉಲ್ಲೇಖಿಸಬಹುದು.
ನಮ್ಮನ್ನಾವರಿಸಿರುವ ಕೆಟ್ಟದ್ದು ಎನ್ನುವ ಹಾಲಾಹಲವನ್ನು ಕಳೆದು ಅಮೃತತ್ವಕ್ಕೆ ಏರಿಸಬಲ್ಲ ಸದ್ಗುಣಗಳಿಂದ ನಾವು ಆವಕವಾಗಬೇಕು. ಯಾವಾಗಲೂ ಕೆಟ್ಟದ್ದರ ಸುತ್ತಲೂ ಸುತ್ತುತ್ತಿದ್ದರೆ ಅದು ನಮಗೆ ನಾವೇ ಏರ್ಪಡಿಸಿಕೊಳ್ಳುವ ವಿಷವರ್ತುಲವೇ ಸರಿ! ವಿಷತ್ವವನ್ನು ಬಿಟ್ಟು ಅಮೃತತ್ವಕ್ಕೆ ಏರೋಣ. ವಿಷೋದ್ಯಾನ ಅಳಿಸಿ ಅಮೃತೋದ್ಯಾನ ನಿರ್ಮಿಸೋಣ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಭಾರತದಲ್ಲಿ ಆಚರಿಸುವ ವಿವಿಧ ಬಣ್ಣಗಳ ಹಬ್ಬ ಹೋಳಿ. ಇದನ್ನು ಕಾಮನ ಹುಣ್ಣಿಮೆ, ಹೋಳಿ ಹುಣ್ಣಿಮೆ, ವಸಂತ ಹುಣ್ಣಿಮೆ ಎಂದೆಲ್ಲಾ ಕರೆಯುತ್ತಾರೆ. ಶಿಶಿರ ಋತು ಮುಗಿದು, ವಸಂತ ಋತುವಿನ ಚೈತ್ರ ಮಾಸ ಕಾಲಿಡುವಾಗ ಹಣ್ಣಾದ ಎಲೆಗಳು ಉದುರಿ, ಹೊಸ ಎಲೆಗಳು ಚಿಗುರಿರುತ್ತವೆ. ಆ ಚಿಗುರಿನ ರಸ ಹೀರಿ ಸಂತಸದಿಂದ ಹಾಡುವ ಕೋಗಿಲೆಯ ಕುಹೂ…ಕುಹೂ…. ನಾದ ಕೇಳಿ ಬರುತ್ತಿರುತ್ತದೆ. ಮಾವು, ಮಲ್ಲಿಗೆ ಸಂಪಿಗೆ, ಮುತ್ತಗದ ಗಿಡಮರಗಳು ಹೂಬಿಟ್ಟು ನಿಸರ್ಗ ಬಣ್ಣಬಣ್ಣವಾಗಿ ಕಾಣುವಾಗ ಈ ಹಬ್ಬ ಬರುತ್ತದೆ.
ಪುರಾಣಗಳ ಪ್ರಕಾರ, ತಾರಕಾಸುರನ ಕಾಟಕ್ಕೆ ದೇವತೆಗಳು ಸೋತುಹೋಗಿದ್ದರು. ಶಿವನ ಪುತ್ರನಲ್ಲದೆ ಬೇರೆ ಯಾರೂ ತನ್ನ ಕೊಲ್ಲದಂತೆ ವರ ಪಡೆದಿದ್ದನವನು. ಆಗ ಬ್ರಹ್ಮನು ಶಿವ ಪಾರ್ವತಿಯರ ವಿವಾಹ ಮಾಡಿಸಲು ಹೇಳುತ್ತಾನೆ. ಆದರೆ ಶಿವ ವಿರಾಗಿಯಾಗಿ, ಕೈಲಾಸದಲ್ಲಿ ತಪಸ್ಸಿನಲ್ಲಿದ್ದಾನೆ. ಅವನು ಪಾರ್ವತಿಯಲ್ಲಿ ಅನುರಕ್ತನಾಗುವಂತೆ ಮಾಡಬಲ್ಲವನೆಂದರೆ ಮನ್ಮಥ ಮಾತ್ರ. ಇಂದ್ರ ಅವನನ್ನು ಕರೆಸಿ, ಈ ಕೆಲಸ ಮಾಡಲು ಹೇಳುತ್ತಾನೆ. ವಸಂತನನ್ನು, ಅಪ್ಸರೆಯರನ್ನು ಅವನ ಜೊತೆ ಕಳಿಸುತ್ತಾನೆ. ಮನ್ಮಥ ಶಿವನಿದ್ದಲ್ಲಿಗೆ ಬರುತ್ತಾನೆ. ಪಾರ್ವತಿ ಶಿವನ ಮುಂದೆ ಧ್ಯಾನದಲ್ಲಿರುತ್ತಾಳೆ. ಮನ್ಮಥನು ಪ್ರಯೋಗಿಸಿದ ಐದು ಹೂವಿನ ಬಾಣಗಳು ಶಿವನಿಗೆ ತಾಕಿ, ಎಚ್ಚರನಾಗಲು ಪಾರ್ವತಿ ಕಾಣಿಸಿ, ಕ್ಷಣಕಾಲ ಪರವಶನಾಗುತ್ತಾನೆ. ನಂತರ ಎಚ್ಚೆತ್ತು ಕೋಪದಿಂದ ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನ ಬೂದಿ ಮಾಡುತ್ತಾನೆ. ಶಿವ ಪಾರ್ವತಿಯರ ಮದುವೆ ನಡೆದಾಗ ಶಿವನು ಮನ್ಮಥನಿಗೆ ಜೀವ ನೀಡಿ, ಅವನು ಅವನ ಹೆಂಡತಿಗೆ ಮಾತ್ರ ಕಾಣುವಂತೆ ವರ ಕೊಡುತ್ತಾನೆ. ಅಂದಿನಿಂದ ಕಾಮನಿಗೆ ಎಲ್ಲಾ ಸ್ತ್ರೀ ಪುರುಷರ ಹೃದಯದಲ್ಲಿ ಸ್ಥಾನ ದೊರೆಯುತ್ತದೆ. ಈ ಘಟನೆ ಫಾಲ್ಗುಣ ಶುದ್ಧಹುಣ್ಣಿಮೆಯ ಪುಬ್ಬಾ ನಕ್ಷತ್ರದಂದು ನಡೆದಿದ್ದರಿಂದ ಇದನ್ನು ಕಾಮನ ಹುಣ್ಣಿಮೆ ಎನ್ನುತ್ತಾರೆಂದು ಪ್ರತೀತಿ ಇದೆ.
ಜಾನಪದ ಕಥೆಯೊಂದರ ಪ್ರಕಾರ ಕಾಮ-ರತಿಯರು ಪ್ರೇಮಾಲಾಪದಲ್ಲಿದ್ದಾಗ, ಒಬ್ಬ ಋಷಿ ಇವರ ಅಕಾಲ ಸಂಯೋಗವನ್ನು ಕಂಡು ಶಾಪಕೊಟ್ಟ. ನಂತರ ಅವರು ಭೂ ಲೋಕದಲ್ಲಿ ಬೇರೆ ಬೇರೆ ಜಾತಿಯಲ್ಲಿ ಜನಿಸಿದರು. ಒಂದು ದಿನ ರತಿಯ ಕಂಡ ಕಾಮ ಅನುರಕ್ತನಾಗಿ ಅವಳನ್ನೇ ಮದುವೆಯಾಗಲು ನಿರ್ಧರಿಸಿದ. ಅವನ ತಂದೆ ಪ್ರತಿಭಟಿಸಿದಾಗ ತನ್ನ ಮನೆ ಬಿಟ್ಟು ಅವಳ ಮನೆಯಲ್ಲಿಯೆ ಇರತೊಡಗಿದ. ಅಪಾರ ಬಡತನದ ರತಿಯ ಮನೆಯಲ್ಲಿ ದಿನವೂ ಏಕಾದಶಿಯೆ. ಸ್ವಲ್ಪ ಕಾಲದ ನಂತರ ಹಸಿವನ್ನು ತಾಳದೆ ಕಾಮ ಸತ್ತ. ಅವನ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ರತಿಗೆ ಶಕ್ತಿಯಿರಲಿಲ್ಲ. ಆಗ ಕಾಮನ ಗೆಳೆಯರು ಕಟ್ಟಿಗೆ, ಬೆರಣಿ ಸೇರಿಸಿ ತಂದು ರತಿಯ ಮನೆಯ ಬೆಂಕಿ ತಂದು ಸಂಸ್ಕಾರ ಮಾಡಿದರು. ಇದು ಸಹ ಫಾಲ್ಗುಣ ಮಾಸದ ಹುಣ್ಣಿಮೆಯಂದು ನಡೆಯಿತಂತೆ.
ನಾರದ ಪುರಾಣದಂತೆ; ರಾಕ್ಷಸ ರಾಜ ಹಿರಣ್ಯಕಶಿಪು ಹರಿಯನ್ನು ದ್ವೇಷಿಸುತ್ತಿದ್ದ. ಅವನ ಮಗ ಪ್ರಹ್ಲಾದ ಹರಿಭಕ್ತ. ಅವನನ್ನು ತಿದ್ದಲಾಗದೆ, ಕೊಲ್ಲಲು ಹಿರಣ್ಯಕಶಿಪು ನಿರ್ಧರಿಸುತ್ತಾನೆ. ತನ್ನ ಎಲ್ಲ ಪ್ರಯತ್ನ ವಿಫಲವಾದ್ದರಿಂದ ತನ್ನ ತಂಗಿ ಹೋಲಿಕಾಳ ನೆರವು ಕೇಳುತ್ತಾನೆ. ಅವಳನ್ನು ಬೆಂಕಿ ಸುಡುತ್ತಿರಲಿಲ್ಲ. ಅವಳು ಪ್ರಹ್ಲಾದನನ್ನು ಎತ್ತಿಕೊಂಡು ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹರಿ ಹೋಲಿಕಾಳನ್ನೆ ಸುಟ್ಟು ಪ್ರಹ್ಲಾದನನ್ನು ಕಾಪಾಡುತ್ತಾನೆ. ಈ ದ್ಯೋತಕವಾಗಿ ಸಹ ಹೋಳಿ ಹಬ್ಬ ಆಚರಿಸಲ್ಪಡುತ್ತದೆ.
ಈ ಆಚರಣೆಯ ಹಿಂದಿರುವ ಸಂದೇಶವೇನೆಂದರೆ ಕೆಟ್ಟದ್ದನ್ನು ಸುಡು ಎಂದು. ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ವರ್ಗಗಳನ್ನು ಸುಟ್ಟು, ಅಸುರಿಶಕ್ತಿಗಳನ್ನು ನಿರ್ನಾಮ ಮಾಡಬೇಕೆಂಬ ಹಟ ಹುಟ್ಟಿದ ಹೊರತು ಪ್ರೀತಿ ಮೊಳೆಯುವುದಿಲ್ಲ. ಬದುಕಿಗೆ ಬಣ್ಣ ಬರುವುದಿಲ್ಲ. ಕಾಮವೆಂದರೆ ಬಯಕೆ, ಅದನ್ನು ಸುಡದ ಹೊರತು ಮುಕ್ತಿಯ ಮಾತು ಬರಿಯ ಕನಸಾಗುತ್ತದೆ.
ಕಾಮದಹನದ ನೆನಪಿಗೆ ಕಾಮನ ಪ್ರತಿಮೆ ಮಾಡಿಸಿ, ಶೃಂಗರಿಸಿ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ, ಇಟ್ಟಿರುತ್ತಾರೆ. ಎಡಗಡೆ ರತಿಯ ಮೋಹಕ ಪ್ರತಿಮೆ ಇಡುವುದುಂಟು. ಕೆಲ ಊರುಗಳಲ್ಲಿ ಸರಕಾರಿ ಕಾಮಣ್ಣ, ಓಣಿಯ ಕಾಮಣ್ಣ, ದೈವದ ಕಾಮಣ್ಣ ಎಂದು ಮೂರು ಬಗೆಯ ಕಾಮಣ್ಣರನ್ನು ಪೂಜಿಸುತ್ತಾರೆ. ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಐದು ದಿನಗಳ ಕಾಲ ಪೂಜಿಸಿ, ಹುಣ್ಣಿಮೆಯ ದಿನ ದಹಿಸುವುದು ಸಂಪ್ರದಾಯ. ಕಾಮದಹನದ ನಂತರ ಓಕುಳಿಯಾಡಿ, ಎಣ್ಣೆ ಮಜ್ಜನ ಮಾಡಿ, ಹೋಳಿಗೆ ಮೆಲ್ಲುವುದೂ ಸಂಪ್ರದಾಯ.
ಲಂಬಾಣಿ ಜನಾಂಗದವರು ಹೋಳಿ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ಅವರು ದೋಂಢಾ ಎನ್ನುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ದೋಲ್ ಪೌರ್ಣಮಿ ಎಂದೂ, ಹರ್ಯಾಣದಲ್ಲಿ ದುಲಂದಿ ತ್ಯೋಹಾರ್ ಎಂದೂ ಆಚರಿಸುತ್ತಾರೆ. ಕೆಲವು ಕಡೆ ಇದನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಜೈನರು ಹೋಳಿ ಹಬ್ಬದಂದು ರಾಧಾ ಕೃಷ್ಣನನ್ನು ಪೂಜಿಸಿ, ಗಸಗಸೆಯ ಹಾಲನ್ನು ಕುಡಿಯುತ್ತಾ ಸಂಭ್ರಮದಿಂದ ಹೋಳಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಜಾತಿ-ಮತ-ವರ್ಗ- ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಸಂತಸದಿಂದ ನಲಿಯುತ್ತಾ ಆಚರಿಸುವ ವಿಶಿಷ್ಟ ಹಬ್ಬ ಈ ಹೋಳಿ.
ತುಮಕೂರಿನ ಎಂ.ವಿ.ಶಂಕರಾನಂದ ಹಲವಾರು ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಕನ್ನಡದ ಹೆಸರಾಂತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ಕಾಲದೊಂದೊಂದೇ ಹನಿ… ಪುಸ್ತಕ ಇಂದು ಇನ್ನು ಸ್ವಲ್ಪ ಹೊತ್ತಿನಲ್ಲಿ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಲೋಕಾರ್ಪಣೆ ಆಗಲಿದೆ. ಈ ಕೃತಿಯ ಒಂದು ಅಧ್ಯಾಯವನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ಅಧ್ಯಾಯ 27. ಮನೆ
ಕುವೆಂಪು ಅವರು ತಮ್ಮ ‘ಅನಿಕೇತನ’ ಪದ್ಯದಲ್ಲಿ ‘ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಎನ್ನುವ ಸಾಲುಗಳನ್ನು ಬರೆಯುತ್ತಾರೆ. ನಾವೆಲ್ಲ ಸಾಮಾನ್ಯವಾಗಿ ಮಕ್ಕಳಾಗಿದ್ದಾಗ ಹಿರಿಯರು ಇದನ್ನು ಮಾಡಬೇಡ ಎಂದು ಹೇಳಿದ್ದನ್ನೇ ಮಾಡುವ ಆಸೆಯಿದ್ದ ಹಾಗೆ, ನನಗೆ ಮನೆಯನ್ನು ಕಟ್ಟಿ ನೋಡುವ ಒಂದು ಆಸೆ ನನ್ನಲ್ಲಿ ಹುಟ್ಟಿಕೊಂಡಿತು.
ನಾವು ವಾಸಿಸುತ್ತಿದ್ದ ಮನೆ ಜೀರ್ಣಾವಸ್ಥೆಯನ್ನು ತಲುಪಿ, ಯಾವಾಗ ನೆಲಕ್ಕೆ ಉರುಳಿ ಬೀಳಬಹುದು ಎನ್ನುವ ಭಯದಲ್ಲಿಯೇ ಬದುಕುವ ಪರಿಸ್ಥಿತಿಯಿತ್ತು. ಮನೆಯ ಮಾಡಿನ ಬಿದಿರಿನ ಗಳಗಳೆಲ್ಲ ತುಂಡಾಗಿ ಒಂದೊಂದಾಗಿ ಬೀಳಲು ಆರಂಭವಾಗಿದ್ದವು. ಮಾಡಿಗೆ ಹೊದಿಸಿದ್ದ ಮುಳಿಹುಲ್ಲು ಆಗಾಗ ಹಾರಿಹೋಗಿ, ಶಿಶುನಾಳ ಶರೀಫರು ‘ಸೋರುತಿಹುದು ಮನೆಯ ಮಾಳಿಗೆ’ ಎನ್ನುವ ಪದ್ಯವನ್ನು ಇಂತಹ ಮನೆಯನ್ನು ನೋಡಿಯೇ ಬರೆದಿರಬಹುದು ಎನ್ನುವ ಕಲ್ಪನೆ ಕೂಡಾ ನನಗೆ ಬಂದಿತ್ತು. ಮನೆಗೆ ಹೊದಿಸುತ್ತಿದ್ದ ಮುಳಿಹುಲ್ಲು ಕೂಡಾ ಆಗ ಕಡಿಮೆಯಾಗುತ್ತಾ ಬಂದಿತ್ತು ಹಾಗೂ ಅದರ ಮೌಲ್ಯ ವರ್ಷವರ್ಷವೂ ಜಾಸ್ತಿಯಾಗುತ್ತಲೇ ಇತ್ತು. ಲಭ್ಯತೆ ಕೂಡಾ ಕಡಿಮೆಯಾಗಿದ್ದಲ್ಲದೆ, ಅದನ್ನು ಹೊದಿಸುವ ಕೂಲಿಯೂ ಪ್ರತಿವರ್ಷ ಹೆಚ್ಚುತ್ತಲೇ ಇತ್ತು.
ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಒಂದು ಗಟ್ಟಿಯಾದ ಒಂದು ಮನೆ ಕಟ್ಟಿಕೊಳ್ಳಬೇಕು ಯೋಚನೆ ನನಗೆ ಬಂತು. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಸಲುವಾಗಿ ವರ್ಷವರ್ಷ ಒಂದೊಂದೇ ಕೆಲಸಗಳನ್ನು ಮಾಡುತ್ತ ಬಂದೆ. ಮೊದಲನೆಯ ವರ್ಷ ಮನೆಯ ಜಾಗಕ್ಕೆ ಬೇಕಾದ ನೆಲವನ್ನು ಸಮತಟ್ಟುಗೊಳಿಸಿ, ಅದರಿಂದ ತೆಗೆದ ಮಣ್ಣನ್ನು ತೋಟಕ್ಕೆ ಹಾಕಿಸಿದೆ. ಅದರಿಂದಾಗಿ ಮನೆಯ ಜಾಗ ಸಿದ್ಧವಾಗಿದ್ದರ ಜೊತೆಗೆ, ತೋಟಕ್ಕೆ ಹೊಸ ಮಣ್ಣು ಸಹ ದೊರಕಿತು. ನಂತರ ಒಂದು ಕೆರೆ ತೆಗೆದು ತೋಟಕ್ಕೆ ನೀರು ಹಾಯಿಸಲು ಒಂದು ಪಂಪ್ ಹಾಕಿಸಿ, ಮನೆಗೆ ಸಮತಟ್ಟು ಮಾಡಿದ ಜಾಗದಲ್ಲಿ ಒಂದು ನೀರಿನ ಟ್ಯಾಂಕ್ ಮಾಡಿಸಿದೆ. ಅಷ್ಟಲ್ಲದೇ ಮನೆಗೆ ಒಂದು ಕಚ್ಚಾಮಾರ್ಗದ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಮಾಡಿಸಿದೆ. ಹಳೆಯ ಮನೆಗೆ ಬರುವಾಗ ಹೊಳೆ ಮತ್ತು ಸಂಕವನ್ನು ದಾಟಿಕೊಂಡು ಬರಬೇಕಾಗಿತ್ತು. ಹೊಸ ಮನೆಯ ಜಾಗಕ್ಕೆ ಸ್ವಲ್ಪ ಸುತ್ತಿ ಬಳಸಿ ಮನೆಯವರೆಗೂ ಮಾರ್ಗದ ವ್ಯವಸ್ಥೆಯನ್ನು ಮಾಡಿಸಿದೆ. ಅದರ ನಂತರದ ವರ್ಷ ಮನೆಗೆ ಬೇಕಾಗುವಂತಹ ಕೆಂಪು ಕಲ್ಲು ಕಡಿಸಿ, ಸುಮಾರು ಏಳು ಸಾವಿರ ಕಲ್ಲುಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡೆ.
ಇಷ್ಟೆಲ್ಲ ತಯಾರಿಗಳಾಗಿದ್ದರೂ ಮನೆ ಕಟ್ಟಿಸಲು ಬೇಕಾಗುವ ಧೈರ್ಯ ನನಗೆ ಬಂದಿರಲಿಲ್ಲ. ಅದಕ್ಕೆ ಬೇಕಾದ ಬಂಡವಾಳ ನನ್ನ ಹತ್ತಿರ ಇರಲಿಲ್ಲ. ಆ ಸಮಯದಲ್ಲಿ ನಮ್ಮ ಕುಟುಂಬದವರೊಬ್ಬರ ಮನೆಯನ್ನು ಕಟ್ಟಿಸಲಿಕ್ಕೆ ಮಂಗಳೂರಿನಿಂದ ಜಗದೀಶ್ ಎನ್ನುವ ಕಾಂಟ್ರಾಕ್ಟರ್ ಒಬ್ಬರು ಬಂದಿದ್ದರು. ನಾನು ಅವರನ್ನು ಭೇಟಿ ಮಾಡಲು ಹೋದವನು ನನಗೂ ಒಂದು ಮನೆ ಆಗಬೇಕಿತ್ತು ಎಂದು ಹೇಳಿದೆ. ನಾಲ್ಕು ದಿನ ಕಳೆದ ಮೇಲೆ ಅವರು ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದರು. ಮನೆ ಬೇಕು ಎಂದು ಹೇಳಿದ್ದಿರಲ್ಲ, ಮಾಡಿಸಿಬಿಡೋಣ ಎಂದು ಹೇಳಿದರು. ಆಗ ನಾನು ಮನೆಯ ಪೂರ್ವಭಾವಿ ತಯಾರಿಗಳೆಲ್ಲ ಆಗಿವೆ, ಆದರೆ ಉಳಿದ ಕೆಲಸಕ್ಕೆ ನನ್ನಲ್ಲಿ ಹಣವಿಲ್ಲ ಎಂದು ನಾನು ಅವರ ಹತ್ತಿರ ಹೇಳಿದೆ. ಅವರು ಎಷ್ಟು ಹಣ ಇದೆ ಎಂದು ಕೇಳಿದಾಗ ಇಪ್ಪತ್ತು ಸಾವಿರ ರೂಪಾಯಿಗಳಿರುವುದಾಗಿ ಹೇಳಿದೆ. ನನ್ನ ಜಮೀನಿನ ಸ್ವಲ್ಪ ಭಾಗವನ್ನು ಸರಕಾರ ಮಾರ್ಗ ಮಾಡುವ ಸಲುವಾಗಿ ವಶಪಡಿಸಿಕೊಂಡು ಪರಿಹಾರವಾಗಿ ನೀಡಿದ್ದ ಹಣವನ್ನು ನಾನು ಬ್ಯಾಂಕಿನಲ್ಲಿ ಇಟ್ಟಿದ್ದೆ. ಆ ಹಣಕ್ಕೆ ಸ್ವಲ್ಪ ಬಡ್ಡಿ ಸೇರಿ ಅದು ಇಪ್ಪತ್ತು ಸಾವಿರ ಆಗಿತ್ತು. ಅದರ ಜೊತೆಗೆ ಆ ವರ್ಷದ ಅಡಿಕೆ ಕೂಡಾ ಇತ್ತು. ಅಡಿಕೆಗೆ ಬೆಲೆ ಜಾಸ್ತಿ ಇರದಿದ್ದರೂ ಸ್ವಲ್ಪ ಹಣ ಅದರಿಂದ ಸಿಗುತ್ತಿತ್ತು. ಅದನ್ನು ಅವರಿಗೆ ಹೇಳಿ ಸುಮಾರು ಒಂದು ಲಕ್ಷ ಖರ್ಚಿನಲ್ಲಿ ಒಂದು ಚಿಕ್ಕ ಹಂಚಿನ ಮನೆಯನ್ನು ಮಾಡಲು ಸಾಧ್ಯವಾದರೆ ಮಾಡಿಕೊಡಿ ಎಂದು ಹೇಳಿದೆ. ಆಗ ಅವರು ಹಂಚಿನ ಮನೆಗೆ ಮರವನ್ನು ಕೊಂಡುಕೊಳ್ಳಲು ತುಂಬಾ ಖರ್ಚಾಗುವ ಕಾರಣ ಕಾಂಕ್ರೀಟ್ ಮನೆಯನ್ನೇ ಮಾಡುವುದು ಒಳ್ಳೆಯದು ಎಂದು ಹೇಳಿದರು. ಈಗ ನಿಮ್ಮ ಹತ್ತಿರ ಎಷ್ಟು ದುಡ್ಡು ಇದೆಯೋ ಅದಕ್ಕೆ ತಕ್ಕ ಹಾಗೆ ಕಾಮಗಾರಿಯನ್ನು ಆರಂಭಿಸೋಣ, ಆಮೇಲೆ ಆದಾಗ ಅದನ್ನು ಮುಂದುವರಿಸೋಣ ಎಂದು ಜಗದೀಶ್ ಅವರು ನನಗೆ ಧೈರ್ಯವನ್ನು ತುಂಬಿದರು. ಸರಿ ಎಂದು ನಾನು ಒಪ್ಪಿಕೊಂಡು ಇಪ್ಪತ್ತು ಸಾವಿರ ರೂಪಾಯಿಯಲ್ಲಿ ಜಲ್ಲಿ, ಸಿಮೆಂಟುಗಳನ್ನು ತಂದು ಕೆಲಸ ಆರಂಭ ಮಾಡಿದೆವು.
ಕೆಲಸ ಮುಂದುವರೆದಂತೆ ನಮಗೆ ಹಣಕಾಸಿನ ಕಷ್ಟಗಳು ಆರಂಭವಾದವು. ಆಗ ಸುಳ್ಯದ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡೆ. ಇಪ್ಪತ್ತೈದು ಸಾವಿರದಲ್ಲಿ ಪಾಲು ಬಂಡವಾಳ ಕಳೆದು ಇಪ್ಪತ್ಮೂರು ಸಾವಿರ ರೂಪಾಯಿ ಕೈಗೆ ಸಿಕ್ಕಿತು. ನನ್ನ ತಮ್ಮನ ಹೆಸರಿನಲ್ಲಿ ಇನ್ನೊಂದು ಸಾಲ ಮಾಡಿ ಅದರ ಇಪ್ಪತ್ಮೂರು ಸಾವಿರವನ್ನು ಸೇರಿಸಿಕೊಂಡೆ. ಉಳಿದ ಹಣವನ್ನು ಹೊಂದಿಸುವುದಕ್ಕಾಗಿ ಜಿ ಪಿ ಎಫ್ (ಗವರ್ನ್ಮೆಂಟ್ ಪ್ರೊವಿಡೆಂಟ್ ಫಂಡ್) ನಿಂದ ಸಾಲವನ್ನು ಪಡೆದುಕೊಂಡೆ. ನನ್ನಲ್ಲಿದ್ದ ಎಲ್ ಐ ಸಿ ಪಾಲಿಸಿಗಳಿಂದಲೂ ಸ್ವಲ್ಪ ಸಾಲ ಸಿಕ್ಕಿತು. ನನ್ನ ತಮ್ಮನ ಹತ್ತಿರವೂ ಅವನ ಹತ್ತಿರ ಇದ್ದ ಎಲ್ ಐ ಸಿ ಪಾಲಿಸಿಗಳಿಂದ ಸಾಲವನ್ನು ತೆಗೆಯಲು ಹೇಳಿದಾಗ, ಅವನು ಅಷ್ಟು ಆಸಕ್ತಿಯನ್ನು ತೋರಿಸಲಿಲ್ಲ. ನಮ್ಮ ಮನೆಯ ಹತ್ತಿರವಿದ್ದ ವಿಜಯಾ ಬ್ಯಾಂಕ್ ಮ್ಯಾನೇಜರ್ ಪರಿಚಯ ನನಗೆ ಇತ್ತು. ಅವರ ಹತ್ತಿರ ಹೋಗಿ ಸಾಲವನ್ನು ಕೊಡಲು ಸಾಧ್ಯವಿದೆಯೇ ಎಂದು ವಿಚಾರಿಸಿದೆ. ಮನೆ ಕಟ್ಟುತ್ತಿದ್ದ ಜಾಗದ ಭೂ ಪರಿವರ್ತನೆ ಆಗಬೇಕಾಗಿದ್ದ ಕಾರಣ ಮನೆಯ ಸಲುವಾಗಿ ಸಾಲ ಕೊಡಲು ಅಗವುದಿಲ್ಲ, ಬೇರೆ ಯಾವುದಾದರೂ ಸಾಲ ಕೊಡಲು ಸಾಧ್ಯವಿದೆಯೇ ಎಂದು ನೋಡುತ್ತೇನೆ ಎಂದು ಅವರು ಹೇಳಿದರು. ಆಮೇಲೆ ಅವರು ತೋಟಕ್ಕೆ ಮಣ್ಣು ಹಾಕುವ ಕಾರಣಕ್ಕೆ ಕೃಷಿ ಅಭಿವೃದ್ಧಿಯ ಹೆಸರಿನಲ್ಲಿ ಸ್ವಲ್ಪ ಸಾಲವನ್ನು ಮಂಜೂರು ಮಾಡಿದರು. ಹೀಗೆ ಬೇರೆಬೇರೆ ಕಡೆಗಳಿಂದ ಹಣದ ವ್ಯವಸ್ಥೆಯನ್ನು ಮಾಡಿಕೊಂಡರೂ, ಒಂದು ಲಕ್ಷದಲ್ಲಿ ಮುಗಿಸಬೇಕೆಂದುಕೊಂಡಿದ್ದ ಮನೆಯ ಖರ್ಚು ಏರುತ್ತಲೇ ಹೋಯಿತು. ಹಾಗೆ ಎರಡು-ಎರಡೂವರೆ ಲಕ್ಷ ದಾಟಿದ ಖರ್ಚನ್ನು ನೋಡಿದ ನನಗೆ ನಿಜವಾದ ಮನೆ ಕಟ್ಟಿಸುವ ಕಷ್ಟ ಅರ್ಥವಾಯಿತು.
ಆರಂಭ ಮಾಡಿದ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸಲಾಗದೇ ಸಾಧ್ಯವಿದ್ದ ಎಲ್ಲ ಮೂಲಗಳಿಂದ ಸಾಲವನ್ನು ಪಡೆದುಕೊಂಡೆ. ಮನೆ ಕೆಲಸ ಮುಗಿಯುತ್ತಿದ್ದಂತೆಯೇ ಹಣಕಾಸಿನ ಅಡಚಣೆಯೂ ಜಾಸ್ತಿಯಾಗುತ್ತ ಹೋಯಿತು. ಮನೆಯ ಫ್ಲೋರಿಂಗಿಗೆ ಜಗದೀಶ್ ಅವರು ಹೇಳಿದಂತೆ ಕಡಪಾ ಮತ್ತು ಶಾಬಾದ್ ಕಲ್ಲುಗಳನ್ನು ಹಾಕುವುದು ಎಂದು ನಿರ್ಧಾರ ಮಾಡಿದೆವು. ಧಾರವಾಡದಲ್ಲಿದ್ದ ನನ್ನ ಭಾವನಿಗೆ ಫೋನ್ ಮಾಡಿ ಕೇಳಿದಾಗ ಅವರು ಅಲ್ಲಿಗೆ ಬಂದರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ನಾನು ಜಗದೀಶ್ ಅವರೊಂದಿಗೆ ಧಾರವಾಡಕ್ಕೆ ಹೋಗಿ, ಹುಬ್ಬಳ್ಳಿಯಿಂದ ನಮಗೆ ಬೇಕಾದ ಕಲ್ಲುಗಳನ್ನು ತಂದೆವು. ಅಷ್ಟಾಗಿಯೂ ಮನೆ ಕಟ್ಟಿಸುವ ಕೆಲಸದ ಖರ್ಚು ಮುಗಿದಿರಲಿಲ್ಲ. ನಮ್ಮ ಮನೆಯ ಸಮೀಪದ ಶ್ರೀಮಂತ ಬಂಧುಗಳೊಬ್ಬರ ಹತ್ತಿರ ಐದು ಸಾವಿರ ರೂಪಾಯಿಗಳನ್ನು ಹದಿನೈದು ದಿನಗಳ ಸಲುವಾಗಿ ಸಾಲವಾಗಿ ತೆಗೆದುಕೊಂಡು ಬಂದೆ. ಹದಿನೈದು ದಿನಗಳು ಕಳೆದ ಮೇಲೆ ಅವರ ಸಾಲವನ್ನು ಮರಳಿ ಕೊಡಲಾಗದ ಪರಿಸ್ಥಿತಿಯಲ್ಲಿ ಅವರ ಹತ್ತಿರ ಹೋಗಿ ಕಷ್ಟವನ್ನು ಹೇಳಿಕೊಂಡೆ. ಅವರು ಪರವಾಗಿಲ್ಲ ತಡವಾಗಿಯೇ ಕೊಡಿ ಎಂದು ಹೇಳಿದರು. ಅಷ್ಟೇ ಅಲ್ಲದೆ ಮನೆ ಕೆಲಸ ಮುಗಿದಮೇಲೆ ಹಣವನ್ನು ಮರಳಿ ಕೊಡುವಾಗ ಬಡ್ಡಿಯ ಹಣವನ್ನು ಕೂಡಾ ಅವರು ತೆಗೆದುಕೊಳ್ಳಲಿಲ್ಲ. ಮತ್ತೊಬ್ಬ ಶ್ರೀಮಂತ ಬಂಧುಗಳಲ್ಲಿ ಕೇಳಿದಾಗ ಅವರು ಕಷ್ಟದಲ್ಲಿ ಐದು ಸಾವಿರ ಕೊಟ್ಟು, ಹದಿನೈದು ದಿನಗಳೊಳಗೆ ಹಿಂದಿರುಗಿಸಬೇಕೆಂದು ಆದೇಶಿಸಿದರು. ಹದಿನೈದು ದಿನಗಳ ನಂತರ ಅವರ ಹಣವನ್ನು ಅವರ ಸೂಚನೆಯಂತೆ ಹಿಂದಿರುಗಿಸಿದೆ. ಎರಡನೇ ಶ್ರೀಮಂತರು ಹಣದೊಂದಿಗೆ ಬಡ್ಡಿಯನ್ನೂ ತೆಗೆದುಕೊಂಡರು. ನಮ್ಮವರೆಲ್ಲ ಹೀಗೆ ಸಮಯದ ಗಡುವು, ಬಡ್ಡಿಯ ಲೆಕ್ಕಾಚಾರದಲ್ಲಿ ಹಣ ಕೊಟ್ಟರೆ, ಬ್ರಾಹ್ಮಣೇತರರೊಬ್ಬರು ನಿಮಗೆ ಯಾವಾಗ ಬೇಕಾದರೂ ಹಣವನ್ನು ಕೇಳಿ ತೆಗೆದುಕೊಂಡು ಹೋಗಿ, ಅನುಕೂಲವಾದಾಗ ಮರಳಿ ಕೊಡಿ ಎಂದು ಹೇಳಿ ಆಗಾಗ ಹಣವನ್ನು ಕೊಟ್ಟು ಸಹಾಯ ಮಾಡಿದ್ದರು. ಹೀಗೆ ಕಷ್ಟಪಟ್ಟು ಹಣವನ್ನು ಹೊಂದಿಸಿ ಸುಮಾರು ಮೂರೂವರೆ ಲಕ್ಷ ಖರ್ಚು ಮಾಡಿ ಮನೆಯನ್ನು ಕಟ್ಟಿ ಮುಗಿಸಿದೆ.
ಅದೇ ಸಮಯದಲ್ಲಿ ಚೊಕ್ಕಾಡಿಯ ರಾಮ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿತ್ತು. ಅದರಲ್ಲಿ ಊರಿನ ಕೆಲವು ಹಿರಿಯರೆಲ್ಲ ಸೇರಿಕೊಂಡು ನನಗೆ ಒಂದು ಸನ್ಮಾನ ಮಾಡಬೇಕು ಎಂದು ನಿಶ್ಚಯ ಮಾಡಿಕೊಂಡರು. ಆ ಸನ್ಮಾನ ಸಮಾರಂಭಕ್ಕೆ ಲಕ್ಷ್ಮೀಶ ತೋಳ್ಪಾಡಿ, ಬನ್ನಂಜೆ ಗೋವಿಂದಾಚಾರ್ಯ, ಖ್ಯಾತ ಯಕ್ಷಗಾನ ಆರ್ಥಧಾರಿ ಪ್ರಭಾಕರ ಜೋಶಿ ಅವರೆಲ್ಲ ಬಂದಿದ್ದರು. ಜೋಶಿಯವರು ಅಭಿನಂದನಾ ಭಾಷಣ ಮಾಡುತ್ತ ‘ನಮ್ಮ ಚೊಕ್ಕಾಡಿಯವರಿಗೆ ಸರಸ್ವತಿ ಒಳಿದಿದ್ದಾಳೆ, ಆದರೆ ಲಕ್ಷ್ಮಿ ಇನ್ನೂ ಒಲಿದಿಲ್ಲ’ ಎಂದು ಹೇಳಿದರು. ನಾನು ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಲಕ್ಷ್ಮಿಯನ್ನು ತೋರಿಸಿ ‘ಲಕ್ಷ್ಮಿ ಕೂಡಾ ಒಲಿದಿದ್ದಾಳೆ, ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದಾಳೆ, ಹಾಗಾಗಿ ನನ್ನೊಂದಿಗೆ ಇಬ್ಬರೂ ಇದ್ದಾರೆ’ ಎಂದು ಹೇಳಿದೆ. ಸಂಜೆ ಸಮಾರಂಭ ಮುಗಿದ ಮೇಲೆ ಅವರೆಲ್ಲರೂ ಬಂದು ಹೊಸ ಮನೆಯ ಕಾಮಗಾರಿಯನ್ನು ನೋಡಿ ಹರಸಿದರು. 1991 ನೇ ಇಸವಿಯ ಮೇ ಮಧ್ಯಭಾಗದಲ್ಲಿ ಹೊಸ ಮನೆಯ ಒಕ್ಕಲು ಆಯಿತು. ಆದರೂ ಕುವೆಂಪು ಅವರ ‘ಕೊನೆಯನೆಂದೂ ಮುಟ್ಟದಿರು’ ಸಾಲಿನಂತೆ, ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿತ್ತು. ಹಳೆಯ ಮನೆಯಲ್ಲಿದ್ದ ಕೆಲವೇ ಕೆಲವು ಮರಗಳನ್ನು ಹೊಸ ಮನೆಗೆ ಬಳಸಿಕೊಂಡು, ಸಂಬಂಧಿಕರ ಮನೆಯಲ್ಲಿದ್ದ ಹಳೆಯ ಮರಗಳನ್ನು ತೆಗೆದುಕೊಂಡು ಬಂದು ಹೇಗೋ ಕಷ್ಟಪಟ್ಟು ಮನೆಯ ಕೆಲಸವನ್ನು ಮಾಡಿ ಮುಗಿಸಿದೆ. ಮನೆ ಕಟ್ಟಿ ಮುಗಿದಿದ್ದರೂ ನಂತರದ ತಾಪತ್ರಯಗಳೆಲ್ಲ ಹಾಗೆಯೇ ಉಳಿದಿದ್ದವು. ಮನೆ ಕಟ್ಟಲು ಮಾಡಿದ್ದ ಸಾಲವನ್ನೆಲ್ಲ ಸಂಬಳದ ದುಡ್ಡಿನಿಂದ, ಅಲ್ಪಸ್ವಲ್ಪ ಕೃಷಿಯ ಆದಾಯದಿಂದ ತೀರಿಸಬೇಕಾಗಿತ್ತು. ಸುಮಾರು ಹತ್ತು ವರ್ಷಗಳ ಕಷ್ಟದ ನಂತರ ಎಲ್ಲ ಸಾಲವನ್ನೂ ತೀರಿಸಿಕೊಂಡೆ. ಆದರೂ ತೊಂದರೆಯಿಲ್ಲದ ಒಂದು ನೆಲೆ ನಮ್ಮ ಮನೆಯವರಿಗೆ ಸಿಕ್ಕಿತು ಎನ್ನುವುದೇ ಒಂದು ಸಂತೋಷದ ಸಂಗತಿ.
ಆ ಸಂದರ್ಭದಲ್ಲಿ ಬಂದ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡ ನನ್ನ ಹೆಂಡತಿ ಮತ್ತು ತಾಯಿಯವರ ಸಹಕಾರ ತುಂಬಾ ದೊಡ್ಡದು ಎನ್ನುವುದು ನನ್ನ ಭಾವನೆ. ಆಗ ಮನೆ ನೋಡಲಿಕ್ಕೆ ಬಂದಿದ್ದ ನಮ್ಮ ಊರಿನವರೊಬ್ಬರು ‘ಅಯ್ಯೋ, ಇಷ್ಟು ದೊಡ್ಡ ಮನೆ ನಿನಗೆ ಬೇಕಿತ್ತಾ’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಆ ಮಾತು ಕೇಳಿ ನನಗೆ ಬಹಳ ಆಶ್ಚರ್ಯವಾಗಿತ್ತು. ನಾವು ಮೂರು ಜನ ಅಣ್ಣ-ತಮ್ಮಂದಿರಿಗೆ ಅಗತ್ಯವಿದ್ದಷ್ಟು ದೊಡ್ಡ ಮನೆ ಮಾತ್ರ ನಮ್ಮದಾಗಿತ್ತು. ಹಾಗೆ ನನ್ನನ್ನು ಪ್ರಶ್ನಿಸಿದವರ ದೊಡ್ಡ ಮನೆ ಈಗಲೂ ಇದೆ ಎನ್ನುವುದು ಕೂಡಾ ಸತ್ಯದ ಸಂಗತಿ. ಅವರ ಆ ಪ್ರಶ್ನೆ ಮುಂದೆ ನನ್ನ ಬದುಕಿನಲ್ಲಿ ಯಾವ ತಿರುವುಗಳನ್ನೆಲ್ಲ ಪಡೆದುಕೊಂಡು ದಾಂಧಲೆಯನ್ನೆಬ್ಬಿಸಿತು ಎಂಬುದು ನನ್ನ ಬದುಕಲ್ಲಿ ಮರೆಯಲಾಗದ ಸಂಗತಿಯಾಗಿದೆ. ಅದರ ವಿವರ ಮುಂದೆ ಬರಲಿದೆ.
ಚೊಕ್ಕಾಡಿ ಅವರ ಭಾವಚಿತ್ರ ಸೆರೆಹಿಡಿದದ್ದು ಶಿವ ಸುಬ್ರಹ್ಮಣ್ಯ
ಕುವೆಂಪು ಸಾಹಿತ್ಯದಲ್ಲಿ ಜೀವ ಸೆಲೆ ತುಂಬಿದ ವಿಶ್ವಮಾನವ. ಜನ ಸಾಮಾನ್ಯರ ಒಡನಾಡಿಯಾಗಿ ಬದುಕಿದ ಚೇತನ. ಅರಿಷಡ್ವರ್ಗಗಳನ್ನು ಮೇರೆ ಮೀರದಂತೆ ನಿಗ್ರಹಿಸಿದ ದೇವತಾ ಮನುಷ್ಯ. ಕುವೆಂಪು ಸಾಹಿತ್ಯವನ್ನು ಮಕ್ಕಳು, ಮೊಮ್ಮಕ್ಕಳಿಗೆ ರುಚಿಸುವಂತೆ ಮಾಡಿದಲ್ಲಿ ಅನಿಕೇತನವಾದೀತು. ಇಲ್ಲವಾದರೆ ವಿಗ್ರಹ ಪೂಜೆಯ ಬ್ರಹ್ಮರಥೋತ್ಸವವಾಗಿ ಉಳಿಯಲಿದೆ ಎಂದು ಸಾಹಿತಿ ಡಾ.ಆನಂದ ಋಗ್ವೇದಿ ತಿಳಿಸಿದರು.
ಸಾಹಿತಿ ಫೈಜ್ನಟ್ರಾಜ್ ನೇತೃತ್ವದಲ್ಲಿ ಪ್ರತಿ ತಿಂಗಳ ಕೊನೆ ಭಾನುವಾರ ಸಂತೇಬೆನ್ನೂರಿನಲ್ಲಿ ನಡೆಯುವ ಮಾಸದ ಮಾತು ಸಾಹಿತ್ಯದ ಕಾರ್ಯಕ್ರಮದಲ್ಲಿ ಈ ಸಾಲಿನ ಮೇರು ಕವಿಗಳ ಪರಿಚಯ ಕಾರ್ಯಕ್ರಮದಲ್ಲಿ ಕುವೆಂಪು ಕುರಿತು ದಾವಣಗೆರೆ ಸಾಹಿತಿ ಆನಂದ ಋಗ್ವೇದಿ ಮಾತನಾಡಿದರು.
ಕುವೆಂಪು ಸಾಹಿತ್ಯ ಟೀಕಿಸಲು ಸಾವಿರ ವಿಷಯಗಳಿದ್ದರೆ ಪ್ರೀತಿಸಲು ಲಕ್ಷ ವಿಷಯಗಳಿವೆ. ಬೆಂದ್ರೆಗೆ 46 ವಯಸ್ಸಿನಲ್ಲಿಯೂ ಕಾಯಂ ಕೆಲಸವಿಲ್ಲ ಎಂಬ ಬೇಸರ ಕುವೆಂಪು ಅವರಿಗಿತ್ತು. ಬರವಣಿಗೆ ಹಾಗೂ ಓದಿನಲ್ಲಿ ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಂಡಿದ್ದ ಮಹಾನ್ ಚೇತನ ಕುವೆಂಪು ಎಂದು ಬಣ್ಣಿಸಿದರು.
ಮೇರು ಕವಿ ಕುವೆಂಪು ಮಕ್ಕಳಿಗೆ ಕಿಂದರ ಜೋಗಿ ಪರಿಚಯಿಸಿ, ಪಂಡಿತೋತ್ತಮರಿಗೆ ರಾಮಯಣದರ್ಶನಂವನ್ನು ಬರೆಯುವ ವೈಶಿಷ್ಟತೆ ಇತ್ತು. ಕವಿ ಪ್ರತಿಭೆ ದೃಷ್ಟಿಯಿಂದ ಸಣ್ಣ ಸಂಗತಿಯನ್ನು ವಿಶೇಷ ಚಿತ್ರಿಸುವ ಕೌಶಲ ಅಡಗಿತ್ತು.
ಕುವೆಂಪು ಮನೆ ದೊಡ್ಡ ಮನೆತನ. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡರು. ಮಲತಾಯಿ ಬಂದ ಮೇಲೆ ಕೇವಲ ಐದನೇ ತರಗತಿ ನಂತರ ಕುಪ್ಪಳಿ ಮನೆ ತೊರೆದು ರಾಮಕೃಷ್ಣಾಶ್ರಮ ಸೇರಿದರು. ಬಿ.ಎ. ಮುಗಿಸಿ ಕುಪ್ಪಳಿಗೆ ಬಂದದ್ದು ತಂದೆಗೆ ಆನಾರೋಗ್ಯದ ಕಾರಣ. ತಾಯಿ ಮನೆ ಸಮೀಪದ ಹಿರೇ ಕೂಡಿಗೆಗೆ ಬರುತ್ತಿದ್ದರು. ‘ನನ್ನ ಮನೆ’ ಎಂದು ಬರೆದ್ದದ್ದು ಭಾವನಾತ್ಮಕ ಕವನ. ಪಾಶ್ಚ್ಯತೀಕರಣದ ಅನುಕರಣೆಯಲ್ಲಿ ಕುಪ್ಪಳಿಯನ್ನು ಸರ್ಕಾರ ಸ್ಮಾರಕಗೊಳಿಸಿದೆ. ಕುಪ್ಪಳಿ ಮನೆ ಅವರಿಗೆ ಸುಮಧುರ ಅನುಭವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಕಟ ಮರೆಯಲು ಕವಿಶೈಲದಲ್ಲಿ ಕಾಲ ಕಳೆಯುತ್ತಿದ್ದರು ಕುವೆಂಪು. ಕವಿಶೈಲದಲ್ಲಿ ನನಗೆ ಸಂಭ್ರಮಕ್ಕಿಂತ ಸಂಕಟ ಪಡುವ ಮಗು ನೆನಪಾಗುತ್ತದೆ. ಆ ಅಳು ಮುವತ್ತು ಕವನ ಸಂಕಲದಲ್ಲಿ ದಾಖಲಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಮೇರು ಕೃತಿಯಲ್ಲಿ ಐಕ ಮತ್ತು ಪೀತ ಕಾಡಿನ ಬೆಳದಿಂಗಳಲ್ಲಿ ಓಡಾಡುತ್ತಾರೆ. ಚಂದಿರನ ಬೆಳಕು, ಕಾಡು ಅದ್ಭುತ ಚಿತ್ರಣ ಎಂಬ ಬೆರಗು ಬೇಡ. ಬಡವರಿಗೆ ಹಸಿವು ನೀಗಿಸುವುದಷ್ಟೆ ಮುಖ್ಯ. ಇದನ್ನು ಅದ್ಬುತವಾಗಿ ಚಿತ್ರಿಸಿದ್ದರು ಕುವೆಂಪು ಎಂದು ಅವರು ಹೇಳಿದರು.
ಮನುಷ್ಯನ ಶಬ್ದ ಪ್ರಪಂಚದ ಆಚೆಗಿನ ದಿನಗಳಲ್ಲಿ ಸಂವಹನ ಆಂಗಿಕವಾಗಿತ್ತು,ಅಂದರೆ ಅಭಿನಯವೇ ಆಗಿತ್ತು. ಪ್ರಾಕೃತಿಕ ಬದಲಾವಣೆ ವಿಸ್ಮಯಗಳನ್ನ ಇಡೀ ಸಮೂಹ ಅಭಿನಯಿಸಿ ತೋರಿಸುತಿತ್ತು. ಕಾಲಾಂತರದಲ್ಲಿ ನೋಡುವ-ಆಡುವ ಎಂಬ ವರ್ಗೀಕರಣವಾಗಿ ನಂತರದಲ್ಲಿ ಬಿಡುವಿನ ವೇಳೆಯಲ್ಲಿ ಬೇಸರ ಕಳೆಯುವ ಸಾಧನವಾಯಿತು.
ಜಗತ್ತಿನಲ್ಲಿ ಎಲ್ಲಾ ಮನುಷ್ಯ ಜೀವಿಯು ರಂಗಭೂಮಿ ಬಾಂಧವ್ಯ ಹೊಂದಿದ್ದಾರೆ, ಮನುಷ್ಯ ತಾನು ಊಟ ಮಾಡುವ ತಟ್ಟೆ, ವಾಸಿಸುವ ಮನೆ, ತೊಡುವ ಉಡುಗೆ ಸುಂದರವಾಗಿರಬೇಕೆಂದು ಬಯಸುತ್ತಾನೆ. ಬದುಕಿನ ಈ ಸೌಂದರ್ಯ ಪ್ರಜ್ಞೆಯು ರಂಗದ ಬಂಧವನ್ನ ಸೂಚಿಸುತ್ತದೆ. ಸ್ಥಳ, ಆಚರಣೆ, ಸಂಪ್ರದಾಯ, ಕಾಲಗಳಿಗೆ ತಕ್ಕಂತೆ ಹೊಸ ಹೊಸ ಪ್ರಕಾರಗಳು ಹುಟ್ಟಿಕೊಳ್ಳುತ್ತ ಕರ್ನಾಟಕ ರಂಗಸಂಪತ್ತಿನ ಸಮೃದ್ಧ ಕ್ಷೇತ್ರವಾಯಿತು. ಇಂದಿಗೂ ಕೂಡ ಜನಪದ ರಂಗಭೂಮಿಯಲ್ಲಿ ಕರ್ನಾಟಕವೇ ಮೊದಲು.
ಆಧುನಿಕವಾಗಿಯೂ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ರಂಗ ತರಬೇತಿ ಶಾಲೆಗಳನ್ನು ಕರ್ನಾಟಕ ಹೊಂದಿದೆ. ಆರು ರಂಗಾಯಣ ಕಾರ್ಯ ನಿರ್ವಹಿಸುತ್ತಿವೆ ಎರಡು ನಿರ್ಮಾಣ ಹಂತದಲ್ಲಿವೆ . ಪ್ರತಿ ದಿನ ಹೊಸ ಕಲಾವಿದ, ಹೊಸ ರಂಗ ಪಠ್ಯ, ಹೊಸ ರಂಗ ಪ್ರಯೋಗ ಸಿದ್ದಗೊಳ್ಳತ್ತಲೇ ಇವೆ. ಅಂತಾರಾಷ್ಟ್ರೀಯವಾಗಿ ಭಾರತವನ್ನು ಪ್ರತಿನಿಧಿಸುವಷ್ಟು ಶ್ರೀಮಂತವಾಗಿದೆ ಕನ್ನಡ ರಂಗಭೂಮಿ.
ರಂಗಭೂಮಿ ದಿನ
ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ದಿನಗಳಂತೆ ರಂಗಭೂಮಿಗೂ ಒಂದು ವಿಶೇಷ ದಿನ ಬೇಕು ಎಂದು ಇಂಟರ್ ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ ಪ್ರತಿ ವರ್ಷವೂ ಮಾರ್ಚ್ 27ರ ದಿನವನ್ನು ಅಂತಾರಾಷ್ಟ್ರೀಯ ರಂಗಭೂಮಿ ದಿನವಾಗಿ ಘೋಷಿಸಿತು. ಈ ದಿನ ವಿಶ್ವದ ಪ್ರಸಿದ್ಧ ರಂಗ ತಜ್ಞರನ್ನು ಆಯ್ಕೆ ಮಾಡಿ ರಂಗ ಸಂದೇಶ ನೀಡಿಸುವ ಪರಿಪಾಠ ಇದೆ. ಈ ವರ್ಷ ವಿಶೇಷವಾಗಿ ರಂಗನಟಿಗೆ ಈ ಅವಕಾಶ ದೊರೆತಿದೆ. ಯುನೈಟೆಡ್ ಕಿಂಗ್ಡಮ್ ನ ಹೆಲೆನ್ ಮಿರ್ರೇನ್ ರಂಗ ಸಂದೇಶ ನೀಡಿದ್ದಾರೆ.
ಸಾಕಷ್ಟು ಸವಾಲುಗಳು
ನಮ್ಮ ಮುಂದೆ ಸವಾಲುಗಳು ಸಾಕಷ್ಟು ಇವೆ. ರಂಗ ತರಬೇತಿ ಪಡೆದ ಕಲಾವಿದರ ದುಡಿಸಿಕೊಳ್ಳಬೇಕು. ಜಿಲ್ಲೆಗೊಂದು ರಂಗಾಯಣ ಆಗಬೇಕು. ಹಿರಿಯ ಕಲಾವಿದರ ಮಾಸಾಶನ ಹೆಚ್ಚಬೇಕು,ತಾಲ್ಲೂಕಿಗೊಂದು ರಂಗಮಂದಿರ ಬೇಕು. ಜಿಲ್ಲಾ ರಂಗಮಂದಿರಗಳ ನಿರ್ವಹಣೆ ಸಮರ್ಪಕವಾಗಬೇಕು. ರಾಜ್ಯದ ಎಲ್ಲಾ ರಂಗಮಂದಿರಗಳು ಏಕರೂಪ ಬಾಡಿಗೆ ಇರಬೇಕು. ಹೀಗೆ ಬೇಕುಗಳ ನಡುವೆಯೂ ನಾವು ಸಂಭ್ರಮಿಸೋಣ ನನ್ನದೇ ಎಂಬ ಭಾವ ತೀವ್ರತೆಯಿಂದ ಹೊರಗಿದ್ದು ನಮ್ಮದು ಎಂಬ ಭಾವಾನುಸಂಧಾನಕ್ಕಾಗಿ.
ತುಮಕೂರು ತಾಲ್ಲೂಕು ಮೆಳೇಹಳ್ಳಿಯ ದೇವರಾಜ್ ಕರ್ನಾಟಕದ ಸುಪ್ರಸಿದ್ಧ ರಂಗ ನಿರ್ದೇಶಖರು.ಇಪ್ಪತ್ತು ವರ್ಷಗಳಿಂದ ನಟನೆ, ನಿರ್ದೇಶನ, ನಾಟಕ ರಚನೆ ಮತ್ತು ಸಂಘಟನೆಯಲ್ಲಿ ತೊಡಗಿದ್ದಾರೆ. ನಿರ್ದೇಶಸಿದ ನಾಟಕಗಳು-ದೂತವಾಕ್ಯ, ಸೇವಂತಿ ಪ್ರಸಂಗ, ಕೇಳು ಜನಮೇಜಯ, ಮತ್ತವಿಲಾಸ, ತೆರೆಗಳು, ಬಲಿಯಾದಳು ಭಾಗೀರಥಿ, ಯಾರಿಗೂ ಹೇಳೊಣು ಬ್ಯಾಡ, ಸಾಯೋಆಟ, ಅಂಗುಲಿಮಾಲ, ಕಾಲಜ್ಙಾನಿ ಕನಕ,ದೊರೆ ಈಡಿಪಸ್, ಹಳಿಯ ಮೇಲಿನ ಸದ್ದು, ಮೈಲಾರ ಮಹದೇವ ಇತ್ಯಾದಿ.ಸಂಪನ್ಮೂಲ ವ್ಯಕ್ತಿಯಾಗಿ-ಎನ್ ಎಸ್ ಡಿ ಆರ್ ಆರ್ ಸಿ ಬೆಂಗಳೂರು, ರಂಗಾಯಣ ಮೈಸೂರು, ರಂಗ ಅಧ್ಯಯನ ಕೇಂದ್ರ ಕುಂದಾಪುರ, ಎಂ ಇ ಎಸ್ ರಂಗಶಾಲೆ ಬೆಂಗಳೂರು, ಅಭಿನಯ ಶಿವಮೊಗ್ಗ, ಎನ್ ಎಸ್ ಡಿ ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಯೋಗ ಪ್ರಮುಖ ಸ್ಥಳ-ಪುಣೆ,ದೆಹಲಿ, ಹೈದರಾಬಾದ್, ಮಲೆಷ್ಯಾ ಮತ್ತು ಕರ್ನಾಟಕ.
ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿಯ ಬೃಹತ್ ಸಂಖ್ಯೆಯ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.
ಶಿಕ್ಷಕರೆಂದರೆ ಎಲ್ಲರೂ ಶಿಕ್ಷಕರೇ, ಎಲ್ಲರೂ ನಮ್ಮ ಮಕ್ಕಳ ಹಿತಕ್ಕೆ ದುಡಿಯುತ್ತಾರೆ. ಅದರಲ್ಲಿ ಎರಡು ಮಾತೇ ಇಲ್ಲ, ಹೀಗಿರುವಾಗ ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರನ್ನು ಯಾವ ರೀತಿಯಲ್ಲಿ ಹಾಗೆಯೇ ಯಾವ ಮಾನದಂಡದ ಮೂಲಕ ಸದಸ್ಯತ್ವ ನೀಡುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸಲಾಗುವುದೆಂದು ಎಂದು ಸುರೇಶ್ ಕುಮಾರ್ ತಿಳಿಸಿದರು.
1995-2000ವರೆಗಿನ ಶಾಲೆಗಳಿಗೆ ಅನುದಾನ: ಶಿಕ್ಷಣ ಕ್ಷೇತ್ರದ ಪ್ರಮುಖ ಬೇಡಿಕೆಯಾದ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸಿಎಂ ಅವರಿಗೆ ಪ್ರಮುಖವಾಗಿ ಇದನ್ನು ಪರಿಗಣಿಸಬೇಕೆಂದು ಕೋರಿದ್ದೆ. ಕೋವಿಡ್ ಸಂಕಷ್ಟದ ಸಮಯವಾದ್ದರಿಂದ ಬಜೆಟ್ ನಲ್ಲಿ ಅದಕ್ಕೆ ಅನುದಾನ ಹಂಚಿಕೆಯಾಗಿಲ್ಲ. ಆ ನಂತರವೂ ನಾನು ಸಿಎಂ ಅವರೊಂದಿಗೆ ಚರ್ಚಿಸಿದ್ದು ಪೂರಕ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಿ ಬಜೆಟ್ ಕುರಿತ ಚರ್ಚೆಯಲ್ಲಿ ಕನಿಷ್ಠ ಐದು ವರ್ಷದ ಅಂದರೆ 1995-2000ವರೆಗಿನ ಶಾಲೆಗಳಿಗೆ ಅನುದಾನ ನೀಡುವ ಘೋಷಣೆ ಮಾಡಬೇಕೆಂದು ಕೋರಿದ್ದೇನೆ. ಈ ಕುರಿತು ಮತ್ತೊಮ್ಮೆ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟವಾದ ಭರವಸೆ ಪಡೆಯುವೆ ಎಂದು ಸುರೇಶ್ ಕುಮಾರ್ ತಿಳಿಸಿದರು.
1995 ರಿಂದ 2000 ವರೆಗಿನ 5 ವರ್ಷಗಳ ಅವಧಿಯಲ್ಲಿ 685 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು 211 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಇದ್ದು, ಅವುಗಳನ್ನು ಅನುದಾನಕ್ಕೊಳಡಪಡಿಸುವ ನಿಟ್ಟಿನಲ್ಲಿ 138.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ ಎಂದು ಸಚಿವರು ತಿಳಿಸಿದರು.
ಜ್ಯೋತಿ ಸಂಜೀವಿನಿ ವಿಸ್ತರಣೆ:
ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲಾ ಸಿಬ್ಬಂದಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಜ್ಯೋತಿ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಆರ್ ಆರ್ ವಿನಾಯ್ತಿ- ನಿಯಮಗಳ ಸರಳೀಕರಣ:
ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನರಹಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವ ಸಂದರ್ಭದಲ್ಲಿ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಆರ್ ಆರ್. ನವೀಕರಣವನ್ನು ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ವಿನಾಯ್ತಿ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಹಾಗೆಯೇ ಸುರಕ್ಷತಾ ಪ್ರಮಾಣಗಳ ಅಗತ್ಯತೆಯ ಸರಳೀಕರಣ ಮಾಡುವ ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸಲು ಎಸ್.ವಿ. ಸಂಕನೂರು ಅವರ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಮೂರ್ನಾಲ್ಕು ವಾರಗಳೊಳಗೆ ಸಮಿತಿ ವರದಿ ನೀಡಲಿದ್ದು, ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೆರವು:
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖಾಸಗಿ ಶಾಲೆಗಳಿಗೆ ನೆರವು ನೀಡುವ ಮೂಲಕ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶವಿದ್ದು, ಈ ಕುರಿತು ಮಂಡಳಿಯ ನಿಯಮಗಳಲ್ಲಿ ಅವಕಾಶ ಕಲ್ಪಿಸುವ ಸಂಬಂಧದಲ್ಲಿ ಯೋಜನಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರವೆ ಸಭೆ ನಡೆಸಲಾಗುವುದೆಂದು ಅವರು ಹೇಳಿದರು.
ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಗೆ ಸಿದ್ಧವಾಗುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನದಂತಹ ಸಮಯದಲ್ಲಿ ಯಾವುದೇ ಮುಷ್ಕರಗಳಿಗೆ ಎಡೆ ಮಾಡಬಾರದೆಂದು ಸಚಿವರು ಮನವಿ ಮಾಡಿದರು. ಶಿಕ್ಷಕ ಸಂಘಟನೆಗಳ ಪ್ರತಿನಿಧಿಯು ಸಚಿವರ ಮನವಿಗೆ ಸ್ಪಂದಿಸಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಎಚ್. ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಇಲಾಖೆಯ ಅಧಿಕಾರಿಗಳಾದ ಕುಮಾರ ನಾಯಕ್, ವಿ. ಅನ್ಬುಕುಮಾರ್, ಸ್ನೇಹಲ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ರೂಪ್ಸಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಳೆದೊಂದು ವರ್ಷ ಪೂರ್ತಿ ಕೋವಿಡ್ ಹೆಮ್ಮಾರಿ ಕಾಡಿದ ಪರಿ ವರ್ಣಿಸಲಸದಳ. ಈ ಹೆಮ್ಮಾರಿಯ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕಾಗಿ ಬಂತು. ಲಾಕ್‌ಡೌನ್ ಎಂದರೇನೆಂದು ಸಾಮಾನ್ಯ ಜನರಿಗೆ ಅದರ ಬಿಸಿ ತಟ್ಟಿದ್ದು ಆವಾಗಲೇ. ಕೋವಿಡ್ ಹೆಮ್ಮಾರಿ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿದ್ದಿರಬಹುದು. ಆದರೆ ಇದರಿಂದಾದ ಅನಾಹುತಗಳು ಅಷ್ಟಿಷ್ಟಲ್ಲ. ವ್ಯಾಪಾರ ವಹಿವಾಟುಗಳಿಲ್ಲದೆ ಅಂಗಡಿ, ಹೋಟೆಲ್‌ಗಳು ಹೇಳತೀರದಷ್ಟು ನಷ್ಟ ಅನುಭವಿಸಿವೆ. ಸಣ್ಣಪುಟ್ಟ ವರ್ತಕರು, ಬೀದಿಬದಿಯ ವ್ಯಾಪಾರಿಗಳು ಸರ್ವನಾಶ ಹೊಂದಿದರು. ಬಹಳಷ್ಟು ಮಂದಿ ಕೆಲಸ, ಇದ್ದ ನೆಲೆ ಎರಡನ್ನೂ ಕಳೆದುಕೊಂಡು ತ್ರಿಶಂಕುವಾದರು. ಶೈಕ್ಷಣಿಕ ವಲಯ ಈಗಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಾಣವಾಗಿಲ್ಲ. ಸಣ್ಣ ಮಕ್ಕಳ ಮೇಲೆ ಈ ಶೂನ್ಯ ವರ್ಷವು ಉಂಟುಮಾಡಿರುವ ಮಾನಸಿಕ ದುಷ್ಪರಿಣಾಮ ಬಲು ಭೀಕರ. ಯಾವ ವಲಯವೂ ಈ ಒಂದು ವರ್ಷದಲ್ಲಿ ಬೆಳವಣಿಗೆಯನ್ನು ದಾಖಲಿಸಿಲ್ಲ. ಕೆಲವು ವಲಯದಲ್ಲಿ ಕೊಂಚ ಮಟ್ಟಿನ ಚೇತರಿಕೆ ಪ್ರಮಾಣ ನಗಣ್ಯವೆನಿಸುವಷ್ಟು ಕಂಡಿದೆ, ಅಷ್ಟೆ.
ಹೀಗಿರುವಾಗಲೇ ಇದೀಗ ದೇಶದಾದ್ಯಂತ ಕೊರೋನಾ ವೈರಸ್‌ನ ಎರಡನೇ ಅಲೆ ಮತ್ತೆ ಅಪ್ಪಳಿಸಿದೆ. ಅನೇಕ ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿದಂತೆ) ಹೊಸ ಸೋಂಕು ಹರಡುವಿಕೆ ಹಚ್ಚಿದೆ. ಮತ್ತೆ ಲಾಕ್‌ಡೌನ್, ನೈಟ್ ಕರ್ಫ್ಯೂ, ಸಭೆ ಸಮಾರಂಭ, ಮದುವೆ ಮುಂಜಿಗಳಿಗೆ ನಿಷೇಧ/ ನಿರ್ಬಂಧ ಹೇರಬೇಕೆ ಎಂಬ ಗಂಭೀರ ಪ್ರಶ್ನೆಗೆ ಚಾಲನೆ ದೊರೆತಿದೆ.
ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಕೊರೋನಾ ವೈರಸ್ ಮತ್ತೆ ಅಟ್ಟಹಾಸದ ದಾಳಿ ನಡೆಸಿರುವುದು ಕಡಿಮೆ ಭಯಾನಕ ಸಂಗತಿಯಂತೂ ಖಂಡಿತ ಅಲ್ಲ. ಕೊರೋನಾ ದಾಳಿ ಮಾಡಿತ್ತು ಎಂಬುದನ್ನೇ ಮರೆತು ಬಿಂದಾಸ್ ಆಗಿ ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ದ್ರಾವಣದ ಗೋಜಿಲ್ಲದೆ ಎಲ್ಲೆಂದರಲ್ಲಿ ತಿರುಗಾಡುವ ಜನರನ್ನು ನೋಡಿದರೆ ಕೋವಿಡ್‌ನ ಎರಡನೇ ಅಲೆ ಅದೆಂಥ ಅನಾಹುತಗಳನ್ನು ಸೃಷ್ಟಿಸಲಿದೆಯೋ ಎಂದು ಗಾಬರಿಯಾಗುವುದು ಸಹಜ.
ಜನರು ಹೀಗೆ ಬಿಂದಾಸ್ ಆಗಿ ಅಡ್ಡಾಗಾಲು ಕಾರಣಗಳಿಲ್ಲದಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಜರುಗಿದ್ದು ಸರ್ಕಾರಿ ಕಾರ್ಯಕ್ರಮಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳು. ಇಂಥ ಕಡೆ ಮಾಸ್ಕ್ ಧರಿಸಬೇಕೆಂಬ ಬಗ್ಗೆ ಸರ್ಕಾರಕ್ಕೇ ಎಚ್ಚರಿಕೆಯಿರಲಿಲ್ಲ. ಯಾವುದೇ ಕೊರೋನಾ ಮುನ್ನೆಚ್ಚರಿಕೆಗಳಿಲ್ಲದೆ ಸಾಕಷ್ಟು ಸರ್ಕಾರಿ, ರಾಜಕೀಯ ಸಮಾರಂಭಗಳು ನಡೆದುಹೋಗಿವೆ. ಆದರೆ ಸರ್ಕಾರ ಜನಸಾಮಾನ್ಯರ ಮದುವೆಗಳಿಗೆ ನೂರು, ಐನೂರು ಎಂದೆಲ್ಲ ಸಂಖ್ಯಾಮಿತಿ ಹೇರಿ, ಮದುವೆಮನೆಗಳಿಗೆ ಮಾರ್ಷಲ್‌ಗಳನ್ನೂ ಕಳಿಸಿ ಕಿರಿಕಿರಿ ಮಾಡಿದ್ದು ಮಾತ್ರ ವಿಪರ್ಯಾಸದಲ್ಲಿ ವಿಪರ್ಯಾಸ. ನೂರು ಮಂದಿ ಸೇರಿದರೆ ವೈರಸ್ ದಾಳಿಯಾಗುತ್ತದೆ; ಆದರೆ ಸಾವಿರಾರು, ಲಕ್ಷಾಂತರ ಮಂದಿ ಸೇರುವೆಡೆ ವೈರಸ್ ಹರಡುವುದಿಲ್ಲ ಎಂಬುದು ಮಾತ್ರ ಬಲು ಸೋಜಿಗವೇ ಸರಿ!
ಸರ್ಕಾರ ಕೋವಿಡ್‌ನ ಕಠಿಣ ನಿರ್ಬಂಧಗಳನ್ನು ಮೊದಲು ತಾನು ಪಾಲಿಸಿದರೆ ಜನರೂ ಅದನ್ನು ಅನುಸರಿಸುತ್ತಾರೆ. ಸರ್ಕಾರವೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರೆ ಜನರೇಕೆ ಅದನ್ನು ಅನುಸರಿಸುತ್ತಾರೆ? ಗಾದೆಯೇ ಇದೆಯಲ್ಲ- ಯಥಾ ರಾಜಾ ತಥಾ ಪ್ರಜಾ. ಯಾವುದೇ ಸಂದರ್ಭವಿರಲಿ, ಪ್ರಧಾನಿ ಮೋದಿ ಇತ್ತೀಚಿನವರೆಗೂ ಮಾಸ್ಕ್ ಧರಿಸದೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದರಿಂದಾಗಿ ದೇಶದ ಜನರಿಗೆ ತಾವೂ ಹೀಗೆಯೇ ಮಾಸ್ಕ್ ಧರಿಸಬೇಕು ಎಂದು ಮನವರಿಕೆಯಾಗುವುದು ಸ್ವಾಭಾವಿಕ. ಆದರೆ ನಮ್ಮ ರಾಜ್ಯದ ನಾಯಕರು ಹೇಗೆಲ್ಲ ವರ್ತಿಸಿದರು ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ದೃಶ್ಯಾವಳಿಗಳೇ ಹೇಳುತ್ತವೆ! ?
ಎರಡನೇ ಅಲೆ ಎದ್ದಿದೆಯೆಂದು ಈಗ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧ ಹೇರಿದರೆ ರಾಜ್ಯ, ದೇಶ ಸರ್ವನಾಶ ಹೊಂದುವುದು ನಿಶ್ಚಿತ. ಅದರ ಬದಲಿಗೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸುವುದು, ಲಸಿಕೆ ಅಭಿಯಾನಕ್ಕೆ ಇನ್ನಷ್ಟು ರಭಸ ತಂದುಕೊಡುವುದು, ಕೇರಳ-ಮಹಾರಾಷ್ಟ್ರ- ತಮಿಳುನಾಡು ಗಡಿಗಳಲ್ಲಿ ಇನ್ನಷ್ಟು ನಿಗಾವಹಿಸುವುದು, ಸರ್ಕಾರದ್ದಿರಲಿ, ಖಾಸಗಿಯದ್ದಿರಲಿ ಯಾವುದೇ ಕಾರ್ಯಕ್ರಮಗಳಿಗೆ ಸಂಖ್ಯಾ ಮಿತಿಯನ್ನು ಕಡ್ಡಾಯವಾಗಿ ಜಾರಿ ಮಾಡುವುದು ಮೊದಲಾದ ಗರಿಷ್ಟ ನಿಯಂತ್ರಣ ಕ್ರಮ ಕೈಗೊಳ್ಳುವ ಅಗತ್ಯ ತುರ್ತಾಗಿದೆ. ಸಾರ್ವಜನಿಕರು ಕೂಡ ಸ್ವಯಂ ನಿರ್ಬಂಧ ವಿಧಿಸಿಕೊಂಡು ಆದಷ್ಟು ಮನೆಯೊಳಗೇ ಇರುವುದು ಸೂಕ್ತ. ಹಾಗೆ ಮಾಡದಿದ್ದರೆ ಎರಡನೇ ಅಲೆ ಏನೇನು ಅನಾಹುತಗಳನ್ನು ಸೃಷ್ಟಿಸಲಿದೆಯೋ ಯಾರೂ ಊಹಿಸುವಂತಿಲ್ಲ.
ಕೋವಿಡ್ ಹೆಮ್ಮಾರಿ ದೇಶದ ಪ್ರಗತಿಯನ್ನು ರಸಾತಳಕ್ಕೆ ತಳ್ಳಿರುವುದು ನಿಜ. ಆದರೆ ಕೋವಿಡ್ ಕಾರಣದಿಂದಾಗಿಯೇ ಇಂದು ಭಾರತದ ಕೀರ್ತಿ ಜಗದಗಲಕ್ಕೆ ಪಸರಿಸಿರುವುದೂ ಅಷ್ಟೇ ನಿಜ. ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ನಂಥ ಬಲಾಢ್ಯ ದೇಶಗಳು ಕೋವಿಡ್ ನಿಯಂತ್ರಿಸಲು ಈಗಲೂ ಹೆಣಗುತ್ತಿರುವಾಗಲೇ ಭಾರತ ಮಾತ್ರ ಅಷ್ಟರೊಳಗೇ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಉತ್ಪಾದಿಸಿ, 70 ದೇಶಗಳಿಗೆ ಪೂರೈಸಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯಲ್ಲ. ಈಗಾಗಲೇ 70 ದೇಶಗಳಿಗೆ 5 ಕೋಟಿ 85ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಭಾರತ ರವಾನಿಸಿದೆ. ಈ ಪೈಕಿ ಸುಮಾರು 80ಲಕ್ಷ ಡೋಸ್‌ಗಳಷ್ಟು ಲಸಿಕೆ 35 ದೇಶಗಳಿಗೆ ಉಚಿತವಾಗಿ ಪೂರೈಕೆಯಾಗಿದೆ. ಸುಮಾರು 3 ಕೋಟಿ 39 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಶುಲ್ಕಸಹಿತವಾಗಿ 15ದೇಶಗಳಿಗೆ ಪೂರೈಸಿದೆ. ಸುಮಾರು 1 ಕೋಟಿ 64 ಲಕ್ಷ ಡೋಸ್‌ಗಳಷ್ಟು ಲಸಿಕೆ 18 ದೇಶಗಳಿಗೆ ಕೋವ್ಯಾಕ್ಸ್ ಸೌಲಭ್ಯ ಒಪ್ಪಂದದಂತೆ ರವಾನೆಯಾಗಿದೆ. ಕಳೆದ ಜನವರಿ 20ರಿಂದಲೇ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮೊದಲಾದ ನೆರೆಯ ದೇಶಗಳಿಗೆ ಕೊರೋನಾ ಲಸಿಕೆಯ ಪೂರೈಕೆ ಆರಂಭಗೊಂಡಿದೆ. ನಮ್ಮನ್ನು ನಖಶಿಖಾಂತವಾಗಿ ದ್ವೇಷಿಸುವ ಭಾರತದ ಪರಮವೈರಿ ಪಾಕಿಸ್ತಾನಕ್ಕೂ ಇದೇ ಮಾರ್ಚ್ ತಿಂಗಳಲ್ಲಿ ಭಾರತದಿಂದ 4.5 ಕೋಟಿ ಡೋಸ್ ಲಸಿಕೆ ಉಚಿತವಾಗಿ ರವಾನೆಯಾಗಲಿದೆ!
ಪಾಕಿಸ್ತಾನ ಸದ್ಯ ಚೀನಾದಿಂದ ಪೂರೈಕೆಯಾದ ಕೋವಿಡ್ ಲಸಿಕೆಯನ್ನು ಬಳಸುತ್ತಿದೆ. ಆದರದು ತೀರಾ ದುಬಾರಿ. ಲಸಿಕೆಯೊಂದಕ್ಕೆ 2000ರೂ. ಬೆಲೆ ತೆರಬೇಕಾಗಿದೆ. ಪಾಕಿಸ್ತಾನ ಸರ್ಕಾರದ್ದು ಈಗ ತೀರಾ ಆರ್ಥಿಕ ದುಸ್ಥಿತಿ. ಹಾಗಾಗಿ ಭಾರತದಿಂದ ಉಚಿತ ಲಸಿಕೆಯ ಬೇಡಿಕೆಯ ಪ್ರಸ್ತಾಪ ಸಲ್ಲಿಸಿದೆ. ಭಾರತ ಪೂರೈಸುವ ಲಸಿಕೆಯಿಂದ ದೇಶದ ಶೇ.20ರಷ್ಟು ಮಂದಿಗೆ ಲಸಿಕೆ ಹಾಕಬಹುದು. ಭಾರತದ ಲಸಿಕೆಯ ಬಗ್ಗೆ ಪಾಕ್ ಪ್ರಜೆಗಳಿಗೆ ವಿಶ್ವಾಸವಿದೆ. ಆದರೆ ಚೀನಾದಿಂದ ಪಡೆದ ಲಸಿಕೆಯ ಬಗ್ಗೆ ಅನುಮಾನ ಮಾತ್ರ ಇದೆ.
ಭೂತಾನ್, ಮಾಲ್ಡೀವ್ಸ್, ಫಿಜಿ ಸೇರಿದಂತೆ ಭಾರತದಿಂದ ಲಸಿಕೆ ಪಡೆದ ಅಲ್ಲಿಯ ಪ್ರಜೆಗಳು ಭಾರತದ ತ್ರಿವರ್ಣ ಬಾವುಟ ಹಿಡಿದು, ಮೆರವಣಿಗೆ ಮಾಡಿ ಭಾರತಕ್ಕೆ, ಭಾರತದ ಪ್ರಧಾನಿಗೆ ಉಘೇ ಉಘೇ ಹೇಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ನಲಿದಿದ್ದಾರೆ.
ಆದರೆ ಇಲ್ಲಿ ಭಾರತದಲ್ಲಿ ಮಾತ್ರ ತಾವು ಪ್ರಗತಿಪರರೆಂದು ತಮಗೆ ತಾವೆ ಹಣೆ ಪಟ್ಟಿ ಅಂಟಿಸಿಕೊಂಡ ಕೆಲವರು ದಿನಬೆಳಗಾದರೆ ಪ್ರಧಾನಿ ಮೋದಿಯನ್ನು ನಿಂದಿಸುತ್ತಾ, ಮೋದಿ ಜನವಿರೋಧಿ ಎಂದು ಜರೆಯುತ್ತಾ ದೇಶದ ಮಾನ ಹರಾಜು ಹಾಕುವುದರಲ್ಲೇ ವಿಕೃತ ಸಂತಸ ಕಾಣುತ್ತಿದ್ದಾರೆ.
ವಿಪರ್ಯಾಸವೆಂದರೆ ಇದೇ ಅಲ್ಲವೆ?
ನಾವು ಬದುಕಬೇಕು. ಇತರರ ಬದುಕನ್ನೂ ಹಸನುಗೊಳಿಸಬೇಕು. ಇದೇ ನಮ್ಮ ಪ್ರಾಚೀನ ಭಾರತೀಯ ಪರಂಪರೆ ನಮಗೆ ಹೇಳಿಕೊಟ್ಟ ಪಾಠ. ಮೋದಿ ಅದನ್ನೇ ಅನುಸರಿಸುತ್ತಾರೆ.
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
ಕೋವಿಡ್ ಎರಡನೆ ಅಲೆ ಕಾರಣಕ್ಕೆ ಪದವಿ ಕೋರ್ಸುಗಳ ತರಗತಿಗಳು ನಿಲ್ಲುವುದಿಲ್ಲ ಹಾಗೂ ಪರೀಕ್ಷೆಗಳು ಕೂಡ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉನ್ನತ ಶಿಕ್ಷಣ ವಿಭಾಗದ ಪರಿಸ್ಥಿತಿಯನ್ನು ಅವಲೋಕನ ನಡೆಸಿದ ಅವರು; ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ಸರಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ಹಾಲಿ ನಡೆಯುತ್ತಿರುವ ಆಫ್ʼಲೈನ್ ತರಗತಿಗಳನ್ನು ಹಾಗೆಯೇ ಮುಂದುವರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಸೂಚನೆ ನೀಡಲಾಯಿತು ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯಗಳು, ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಇನ್ನಿತರೆ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಎರಡನೇ ಅಲೆ ಬೀರುವ ಪರಿಣಾಮಗಳ ಮಹತ್ವದ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದೇನೆ. ಇಲ್ಲಿಯವರೆಗೆ ಆನ್‌ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ನಡೆಸಿರುವ ಬಗ್ಗೆ ಹಾಗೂ ಈಗ ನಡೆಯುತ್ತಿರುವ ಹೈಯ್ಯರ್ ಸೆಮಿಸ್ಟರ್ ಪರೀಕ್ಷೆಗಳ ಬಗ್ಗೆ ಮತ್ತು ನಡೆಯಬೇಕಾದ ಲೋಯರ್ ಸೆಮಿಸ್ಟರ್ ಪರೀಕ್ಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲಾ ವಿಶ್ವವಿದ್ಯಾಲಯಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಲಾಯಿತು ಎಂದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ನಡೆಸುತ್ತಿರುವ ಹಾಸ್ಟೆಲ್‌ಗಳನ್ನು ಮುಂದುವರಿಸಲು ಆಯಾ ಇಲಾಖೆಗಳನ್ನು ಕೋರಲಾಗುವುದು. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹಾಗೂ ಹಾಸ್ಟೆಲ್ʼಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಎಂ ಸೂಚಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಭಾಗಿಯಾಗಿದ್ದರು.
ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್ ನೀಡಲಾಗುವ ʼಗೆಟ್-ಸೆಟ್ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್-ಸೆಟ್ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; “ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.
ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಉಪ ಕ್ರಮದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ; ಸಮಗ್ರ ಕಲಿಕಾ ವ್ಯವಸ್ಥೆ (ಎಲ್‌ಎಂಎಸ್) ಕೂಡ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರ ಕೈಗೊಂಡ ಕ್ರಮಗಳು ಮೆಚ್ವುವಂತಹದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.
ವರ್ಷಪೂರ್ತಿ ಗೆಟ್ ಸೆಟ್ ಗೋ:ಈ ಸಂದರ್ಭದಲ್ಲಿ ʼಗೆಟ್ ಸೆಟ್ ಗೋʼ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು; “ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ʼಗೆಟ್ ಸೆಟ್ ಗೋʼ ಮೂಲಕ ಕೋಚಿಂಗ್ ವ್ಯವಸ್ಥೆ ಇರುತ್ತದೆ” ಎಂದರು.
ಐಐಟಿಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಹೆಜ್ಜೆ ಇಡಲಾಗುತ್ತಿದೆ. ಜೆಇಇ, ನೀಟ್ ಪರೀಕ್ಷೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚು ರಾಂಕ್‌ಗಳನ್ನು ಪಡೆಯುವ ನಿಟ್ಟಿನಲ್ಲಿ ಇದು ಸಹಕಾರಿ ಆಗಲಿದೆ. ಜತೆಗೆ; ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಗೆಟ್ ಸೆಟ್ ಗೋ ಮೂಲಕ ಅಧ್ಯಯನ ಮಾಡಬಹುದು ಎಂದು ಡಿಸಿಎಂ ಹೇಳಿದರು.
ಕಲಿಕೆ ಸುಲಭ ಮತ್ತು ಸರಳ:ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ʼಗೆಟ್ ಸೆಟ್ ಗೋʼ ಕೋಚಿಂಗ್ ವ್ಯವಸ್ಥೆ ರೂಪಿಸಲಾಗಿದ್ದು, ಇದರಲ್ಲಿ ನೀಟ್, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅತ್ಯಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೋಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಇಡೀ ದೇಶದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇಂಥ ಉಪಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಆಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಆಕ್ಸೆಸ್ ಹೇಗೆ? ʼಗೆಟ್ ಸೆಟ್ ಗೋʼ ಆನ್‌ಲೈನ್ ಫ್ಲಾಟ್‌ಫಾರಂಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಕರ್ನಾಟಕವೂ ಸೇರಿದಂತೆ ಸಿಇಟಿ ಬರೆಯಲಿಚ್ಚಿಸುವ ದೇಶದ ಯಾವ ವಿದ್ಯಾರ್ಥಿ ಬೇಕಾದರೂ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್ ಮಾಡಬಹುದು. ವೆಬ್‌ಸೈಟ್, ಯುಟ್ಯೂಬ್ ಅಥವಾ ಗೆಟ್ ಸೆಟ್ ಗೋ ಆಪ್ ಮೂಲಕ ಕೋಚಿಂಗ್ ಪಡೆಯಬಹುದು. ಈ ಆಪ್ ಅಂಡ್ರಾಯಿಡ್, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್ ಆಪ್ ಸ್ಟೋರ್‌ನಲ್ಲಿ 4.3 ರೇಟಿಂಗ್ ಇದೆ. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟ್, ಗೂಗಲ್ ಪ್ಲೇಸ್ಟೋರ್ ಆಯಂಡ್ರಾಯ್ಡ್ ಆಪ್ GetCETGO ಮೂಲಕ ಮಾಹಿತಿ ಪಡೆಯಬಹುದು ಹಾಗೂ ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.
ಕಳೆದ ವರ್ಷ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆಯವರೇ ಈ ವರ್ಷವೂ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಕೋವಿಡ್ ಸಂಕಷ್ದದಿಂದ ಹೊರಬಾರದ ಹಿನ್ನೆಲೆಯಲ್ಲಿ ಸರಕಾರ ʼಗೆಟ್-ಸೆಟ್ ಗೋʼ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಅತ್ಯುತ್ತಮ ಕೋಚಿಂಗ್ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾಲೇಜುಗಳು ಸ್ಥಗಿತ ಇಲ್ಲ
ಯಾವುದೇ ಕಾರಣಕ್ಕೂ ಆರಂಭವಾಗಿರುವ ಕಾಲೇಜುಗಳನ್ನು ಸ್ಥಗಿತ ಮಾಡುವುದಿಲ್ಲ. ಈಗಾಗಲೇ ಒಂದು ವರ್ಷ ವ್ಯರ್ಥವಾಗಿರುವುದು ಸಾಕು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಬಿಎಂಎಸ್ ಕಾಲೇಜ್ ಸೇರಿ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಬಂದಿದೆ ಎಂದು ಸುದ್ದಿಗಾರರು ಕೇಳಿದೆ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ: “ವಿದ್ಯಾರ್ಥಿಗಳಿಗೆ ಆಫ್‌ಲೈನ್ ಕ್ಲಾಸ್ ಕಡ್ಡಾಯವಲ್ಲ, ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲೂ ಹಾಜರಾಗಬಹುದು. ಆದರೆ, ಹಾಜರಾತಿ ಕಡ್ಡಾಯ. ಆಯಾ ಶಿಕ್ಷಣ ಸಂಸ್ಥೆಗಳು ಇನ್ನೂ ಉತ್ತಮವಾಗಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಬೇಕು. ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು. ಸ್ಯಾನಿಟೈಸೇಷನ್, ಮಾಸ್ಕ್, ದೈಹಿಕ ಅಂತರ ಕಾಪಾಡಿಕೊಳ್ಳುವತ್ತ ಹೆಚ್ಚು ನಿಗಾ ಇಡಬೇಕು” ಎಂದು ಸಲಹೆ ಮಾಡಿದರು.
ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ವ್ಯತ್ಯಯ ಆಗಬಾರದು. ಪರಿಸ್ಥಿತಿಯನ್ನು ಎದುರಿಸಲು ಎಲ್ಲ ತಯಾರಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಮಾಡಿಕೊಳ್ಳಬೇಕು. ಈಗಾಗಲೇ ವ್ಯಾಕ್ಸಿನ್ ಬಂದಿದೆ. ಎರಡನೇ ಅಲೆ ಎದ್ದಿದೆ ಎನ್ನುವ ಕಾರಣಕ್ಕೆ ಆಫ್‌ಲೈನ್ ತರಗತಿಗಳನ್ನು ಸ್ಥಗಿತ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ವೆಂಕಟರಾಜು ಮುಂತಾದವರು ಉಪಸ್ಥಿತಿರಿದ್ದರು.