ಮಾರ್ಚ್ 22, ವಿಶ್ವ ಜಲ ದಿನ, ಜಗತ್ತಿನಾದ್ಯಂತ , ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ‘ಮೌಲ್ಯಯುತ ನೀರು’ ಎಂಬ ಕೇಂದ್ರ ವಿಷಯದೊಂದಿಗೆ 2021 ರ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. “ಬಾಯಾರಿದ ಮನುಷ್ಯನಿಗೆ ಒಂದು ಹನಿ ನೀರು ಚಿನ್ನದ ಚೀಲಕ್ಕಿಂತ ಹೆಚ್ಚು ಅಮೂಲ್ಯವಾದದ್ದು”. ನೀರಿನ ಮೌಲ್ಯವನ್ನು ಅರಿತುಕೊಂಡು ಅದರ ಸಂರಕ್ಷಣೆಯಲ್ಲಿ ಕೈಜೋಡಿಸೋಣ. “ಹನಿ- ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬ ಮಾತಿನಂತೆ ಪ್ರತಿಯೊಬ್ಬರ ಕೊಡುಗೆಯು ದೊಡ್ಡ ಮಟ್ಟದಲ್ಲಿ ಜಲಸಂರಕ್ಷಣೆಗೆ ಸಹಾಯವಾಗುತ್ತದೆ. ಜಲಶಕ್ತಿ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸುತ್ತಿರುವ ಕೆರೆಹೂಳೆತ್ತುವ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ನಾವೆಲ್ಲರೂ ಭಾಗಿಯಾಗೋಣ.
ಇಡೀ ವಿಶ್ವದಲ್ಲಿ ಭೂಗ್ರಹದಲ್ಲಿ ಮಾತ್ರ ನಾವು ಜೀವಿಗಳನ್ನು ಕಾಣಬಹುದು ಮತ್ತು ಇಲ್ಲಿ ಜೀವಿಗಳು ಉದಯಿಸಿ ವಿಕಾಸ ಹೊಂದುವಂತಹ ಪರಿಸರ, ವಾತಾವರಣ ಇದೆ. ಇತರೆ ಯಾವ ಗ್ರಹದಲ್ಲೂ ಇಂತಹ ಒಂದಕ್ಕೊಂದು ಜೈವಿಕ ಮತ್ತು ಅಜೈವಿಕ ಅಂಶಗಳ ಸಮ್ಮಿಲನದಿಂದ ಪೂರಕವಾಗಿರುವ ಪರಿಸರ ಇದೆ ಎಂಬುದರ ಬಗ್ಗೆ ಸದ್ಯಕ್ಕೆ ನಿಖರ ಮಾಹಿತಿ ಇಲ್ಲ. ಭೂಮಿಯಲ್ಲಿ ಜೀವಿಗಳು ಹುಟ್ಟಲು ಮತ್ತು ವಿಕಾಸ ಹೊಂದಲು ಕಾರಣವಾದ ಅಂಶಗಳನ್ನು ಕೆದಕಿದರೆ ನಮಗೆ ನೀರಿನ ಮಹತ್ವವನ್ನು ಅರಿತುಕೊಳ್ಳಬಹುದು. ಇತರ ಗ್ರಹಗಳಲ್ಲಿ ಜೀವಿಗಳು ಉದಯಿಸದೆ ಇರಲು ಅಲ್ಲಿದ್ದಂತಹ ಅಂಶಗಳು ಯಾವುದು ಎಂಬುದರ ಬಗ್ಗೆ ತಿಳಿದುಕೊಂಡರೆ ನಮಗೆ ಭೂಮಿಯಲ್ಲಿ ಕಂಡು ಬರುವ ಪರಿಸರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು.
ಭೂಮಿಯು ಸೌರವ್ಯೂಹದಲ್ಲಿಯ ಇತರ ಕಾಯಗಳಂತೆ ಸುಮಾರು 4,500 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತು. ಇತರ ಗ್ರಹಗಳು ಇದೇ ಸಮಯದಲ್ಲಿ ರೂಪುಗೊಂಡರೂ ಇಲ್ಲಿ ಜೀವಿಗಳು ಉಗಮವಾಗಲಿಲ್ಲ. ಜೀವಿಗಳ ಉಗಮಕ್ಕೆ ಇಲ್ಲಿರುವ ವಿಶೇಷತೆಗಳು ಏನೆಂದರೆ:
1. ಭೂಮಿ ಸೂರ್ಯನಿಂದ ಇರುವ ದೂರ ಬೇರೆ ಗ್ರಹಗಳಿಗೆ ಹೋಲಿಸಿದರೆ ಅತೀ ಹತ್ತಿರವೂ ಅಲ್ಲ, ಅತೀ ದೂರವೂ ಅಲ್ಲ (ಭೂಮಿಯು ಸೂರ್ಯನನ್ನು ಸರಾಸರಿ 92,955,807 ಮೈಲುಗಳಷ್ಟು (149,597,870 ಕಿಮೀ) ಅಂತರದಲ್ಲಿ ಸುತ್ತುತಿರುತ್ತದೆ. ಇದರಿಂದಾಗಿ ಇಲ್ಲಿ ಜೀವಪೋಷಕ ರಾಸಾಯನಿಕಗಳು ಉತ್ಪತ್ತಿಯಾಗಲು ಅವಕಾಶವಾಗುವಂತಹ ಉಷ್ಣತೆಯ ವ್ಯಾಪ್ತಿ ಇದೆ. ಇದು ಪೋಷಕಾಂಶಗಳ ಸಾಗಾಣಿಕೆಗೆ ನೀರಿನಂತಹ ದ್ರವ ಮಾಧ್ಯಮ ಮತ್ತು ನೀರನ್ನು ಭೂಮಿಯಲ್ಲಿ ದ್ರವ ರೂಪದಲ್ಲೇ ಉಳಿಸಿಕೊಳ್ಳವುದಕ್ಕೆ ಸಹಕಾರಿಯಾಗಿದೆ.
2. ಜೀವಿಗಳಿಗೆ ಆಧಾರವಾಗಿದ್ದುಕೊಂಡು ಅವುಗಳನ್ನು ಉಳಿಸಿಕೊಂಡು ಹೋಗಬಲ್ಲ ವಾಯುಮಂಡಲ ಮತ್ತು ಜೀವರಾಶಿಗೆ ಅಪಾಯವಾಗಬಲ್ಲ ಸೂರ್ಯನ ಅಪಾಯಕಾರಿ ವಿಕಿರಣಗಳು ಭೂಮಿಗೆ ಬಾರದಂತೆ ತಡೆಯುವ ರಕ್ಷಾಕವಚ (ಕಾಂತಗೋಳ ವ್ಯಾನ್ ಆಲನ್ ಬೆಲ್ಟ್ ಮತ್ತು ಓಜೋನ್ ಪದರ) ಇವೆ.
ಜಲಚಕ್ರ
ಭೂಮಿ ಸೃಸ್ಟಿಯಾದ ಸುಮಾರು 800 ಮಿಲಿಯನ್ ವರ್ಷಗಳ ನಂತರ ಭೂಮಿಯ ಸಂಪೀಡನೆಯಿಂದಾಗಿ ಭೂಮಿಯ ಉಷ್ಣತೆಯು ಹೆಚ್ಚಾಗಿ ಭೂಮಿಯು ದ್ರವಿಸುವುದಕ್ಕೆ ಪ್ರಾರಂಭವಾಯಿತು. ಇದರಿಂದಾಗಿ ಭೂಮಿಯ ವಿಭೇದಿಕರಣಕ್ಕೆ ಅವಕಾಶವಾಯಿತು. ಭೂಮಿಯ ವಿಭೇದಿಕರಣದಿಂದಾಗಿ ಭಾರ ಧಾತುಗಳು ಭೂಮಿಯ ಒಳಗರ್ಭಕ್ಕೂ, ಹಗುರ ಧಾತುಗಳು ಹೊರ ಬಾಗಕ್ಕೂ ಬಂದವು ಮತ್ತು ಅನಿಲಗಳು ಮತ್ತು ನೀರಾವಿ ಬಿಡುಗಡೆಯಾಗಿ ವಾಯುಮಂಡಲ ಉಂಟಾಯಿತು. ಮುಂದೆ ಸೂರ್ಯನು ಭೂಮಿಯನು ಅಸಮವಾಗಿ ಬಿಸಿ/ತಂಪು ಮಾಡುವ ಮೂಲಕ ವಾಯುಮಂಡಲದ ಅನಿಲಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಂತೆ ಮಾಡಿತು ಹಾಗೂ ತಣ್ಣನೆಯಾಗಿ ನೀರಾವಿಯು ಮೋಡವಾಗಿ ಮಳೆಯಾಗಿ ಭೂಮಿಯನ್ನು ಸೇರಿತು. ಮುಂದೆ ಮಳೆನೀರು ತಗ್ಗಾದ ಜಾಗಳಿಗೆ ಸೇರಿ ಸಮುದ್ರ, ಸಾಗರಗಳಾದವು. ತದನಂತರ ಈ ಪ್ರಕ್ರಿಯೆಗಳು ಜಲಚಕ್ರದ ಮೂಲಕ ನಿರಂತರವಾಗಿ ನಡೆಯುತ್ತಾ ಇದೆ.
ಇದೇ ಸಮಯದಲ್ಲಿ ಗುಡುಗು ಮಿಂಚುಗಳಿಂದಾದ ವಿದ್ಯುತ್ ವಿಸರ್ಜನೆಗಳಿಂದ ಉಂಟಾದ ಕಾರ್ಬನ್, ಹೈಡ್ರೋಜನ್ ಮತ್ತು ನೈಟ್ರೋಜನ್‍ಗಳ ಸಂಕೀರ್ಣ ಅಣುಗಳು ಮಳೆಯೊಂದಿಗೆ ಸಾಗರವನ್ನು ಸೇರಿಕೊಂಡು ಮೊದಲ ಜೀವಿಗಳ ಉದಯವಾಯಿತು. ವಾತಾವರಣದಲ್ಲಿದ್ದ ಹೆಚ್ಚುವರಿ ಕಾರ್ಬನ್ ಡೈಆಕ್ಸೈಡ್ ನೀರಿನೊಂದಿಗೆ ಕರಗಿ ಕಾರ್ಬೋನೇಟ್ ಶಿಲೆಗಳ ರೂಪದಲ್ಲಿ ಭೂಮಿಗೆ ಹಿಂತಿರುಗಿರುವುದರಿಂದ ಹಸಿರುಮನೆ ಪರಿಣಾಮ ಕಡಿಮೆಯಾಯಿತು. ಆದಿ ರೂಪದ ಜೀವಿಗಳು ಕಡಲಲ್ಲಿ ಉದ್ಭವಿಸುವುದಕ್ಕೂ ಅವು ಬದುಕುಳಿಯುವುದಕ್ಕೂ ನೀರಿನ ಪಾತ್ರ ಅಮೂಲ್ಯವಾಯಿತು. ಮುಂದೆ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗುತ್ತಾ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತಾ ಹೋಗಿ ಜೀವಿಗಳ ಉಳಿವಿಗೆ, ಬದುಕಿಗೆ ಅನುಕೂಲಕರವಾದ ಪರಿಸರ/ವಾತಾವರಣ ಸೃಸ್ಟಿಯಾಯಿತು.
ಈ ಮೇಲಿನ ಅಂಶಗಳಿಂದ ಜೀವಿಗಳು ಸೃಷ್ಟಿಯಾಗಲು ಮತ್ತು ವಿಕಾಸಹೊಂದಲು ನೀರಿನ ಮಹತ್ವವನ್ನು ಅರಿಯಬಹುದು. ಆದುದರಿಂದ, ನೀರಿನಿಂದಲೇ ಜೀವನ, ಜೀವನವೆಂದರೆ ನೀರು. ನೀರು ಇಲ್ಲದಿದ್ದರೆ ಜೀವನವಿಲ್ಲ ಎಂದು ಹೇಳುವಷ್ಟು ನೀರಿನ ಪ್ರಾಮುಖ್ಯತೆ ಪ್ರತಿಯೊಂದು ಜೀವಿಗೂ ಇದೆ. ಮನುಷ್ಯನ ದೇಹದಲ್ಲಿ ಶೇ 65 ಭಾಗ ನೀರಾದರೆ, ಅಂಬಲಿ ಮೀನಿನ ದೇಹವು ಶೇ 95 ಭಾಗ ನೀರು ಇದೆ. ಅದೇ ರೀತಿ ಜಲವಾಸದ ಸಸ್ಯಗಳಲ್ಲಿ ಶೇಕಡಾ 70 ರಿಂದ 80 ಭಾಗ ನೀರು ಇದ್ದರೆ, ಶುಷ್ಕಪ್ರದೇಶದ ಕೆಲವು ಸಸ್ಯಗಳಲ್ಲಿ ಕೇವಲ ಪ್ರತಿಶತ 4 ರಿಂದ 5 ರಷ್ಟು ಮಾತ್ರ ನೀರನ್ನು ಉಳಿಸಿಕೊಂಡು ಬದುಕುತ್ತವೆ.
ಭೂಮಿಯ ಸುಮಾರು ಶೇ 70 ಭಾಗ ನೀರಿನಿಂದ ಆವರಿಸಿಕೊಂಡಿದೆ. ಈ 70 ಶೇಕಡಾ ನೀರಿನಲ್ಲಿ ಶೇ 97.5 ಸಮುದ್ರದಲ್ಲಿದೆ. ಉಪ್ಪುನೀರಿನ ರೂಪವಲ್ಲದೆ ಉಳಿದ ಶೇಕಡಾ 2.5 ನೀರಿನಲ್ಲಿ 90 ಶೇಕಡಾ ನೀರು ಮಂಜುಗಡ್ಡೆಯ ರೂಪದಲ್ಲಿದೆ. ಇನ್ನುಳಿದ ಶೇಕಡಾ 0.26 ಭಾಗ ನೀರು ಮಾತ್ರ ಭೂಚರ ಜೀವಿಗಳಿಗೆ ಬಳಸಲು ಯೋಗ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ನೀರು ಭೂಮಿಯಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಇರುವ ಪ್ರಮಾಣದ ಎಲ್ಲಾ ನೀರು ಬಳಸಲು ಯೋಗ್ಯವೂ ಅಲ್ಲ ಎಂಬುದು.
ಒಂದು ಲೆಕ್ಕದಲ್ಲಿ ಇದು ಒಂದು ವರವೂ ಹೌದು, ಶಾಪವೂ ಹೌದು. ಏಕೆಂದರೆ ಭೂಮಿಯಲ್ಲಿ ನೀರು ಅಸಮ ಪ್ರಮಾಣದಲ್ಲಿ ವಿತರಣೆಯಾಗಿರುವುದರಿಂದ ಭೌಗೋಳಿಕ ವೈವಿಧ್ಯತೆ, ಹವಾಮಾನ ವೈವಿಧ್ಯತೆ, ಆವಾಸಸ್ಥಾನ ವೈವಿಧ್ಯತೆ ಮತ್ತು ಜೀವವೈವಿಧ್ಯತೆಗಳನ್ನು ಕಾಣುತ್ತೇವೆ.ಶಾಪ ಏಕೆಂದರೆ, ಭೂಮಿಯ ಶೇಕಡ 70 ಭಾಗ ನೀರು ಆವರಿಸಿದ್ದರೂ ಅವುಗಳು ನಮ್ಮ ಬಳಕೆಗೆ ಉಪಯೋಗವಾಗದಿರುವುದು. ಬರಗಾಲದ ದಿನಗಳಲ್ಲೂ ಈ ನೀರನ್ನು ಬಳಸಲು ಸಾಧ್ಯವಾಗದು. ಒಂದು ವೇಳೆ, ಭೂಮಿಯಲ್ಲಿರುವ ಬಳಸಲು ಯೋಗ್ಯವಾದಂತಹ ಶೇ 0.26 ನೀರು ಜಲಮಾಲಿನ್ಯದಿಂದ ಬಳಸಲು ಅಯೋಗ್ಯವಾದರೆ ನಮ್ಮ ಗತಿಯನ್ನು ಊಹಿಸಲೂ ಸಾಧ್ಯವಿಲ್ಲ. ಮಾತ್ರವಲ್ಲ, ನಮ್ಮಿಂದಾಗಿ ಇತರ ಜೀವಿಗಳೂ ಸಾಯಬೇಕಾಗುತ್ತದೆ. ಹಾಗಾಗಿ ನಮ್ಮ ಜೀವಜಲವಾಗಿರುವ ನೀರನ್ನು ಬೇಕಾಬಟ್ಟಿ ಬಳಸದೇ, ಉಳಿಸಿ ಸಂರಕ್ಷಿಸುವುದು ನಮ್ಮ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದಾಗಬೇಕು.
ಮನೆಯಲ್ಲಿ ಮಳೆನೀರು ಕೊಯ್ಲು ಮಾಡುವ ಒಂದು ಸರಳ ವಿಧಾನ
ಪ್ರಕೃತಿ ಎಲ್ಲರಿಗೂ ಎಲ್ಲವನ್ನೂ ಒಂದೇ ಸಮನಾಗಿ ನೀಡಿಲ್ಲ. ಹಾಗಂತ ಯಾವುದಕ್ಕೂ ಕೊರತೆಯನ್ನು ಮಾಡಿಲ್ಲ. ಪ್ರಕೃತಿಯು ನಮಗೆ ನೀಡಿರುವ ಬಳಸಲು ಯೋಗ್ಯವಾದ ಶೆಕಡಾ 0.26 ನೀರನ್ನು ಮಾತ್ರ ನೀಡಿದೆ ಎಂದು ನಾವು ನಿಸರ್ಗವನ್ನು ದೂಷಿಸುವಂತಿಲ್ಲ. ಏಕೆಂದರೆ, ಈ ನೀರನ್ನು ನಾವು ಪ್ರಾಮಾಣಿಕವಾಗಿ ಬಳಸಿ, ಉಳಿಸಿದರೆ, ಆ ಸ್ವಲ್ಪ ಪ್ರಮಾಣದ ನೀರೇ ಬೇಕಾದಷ್ಟು ಸಾಕಾಗುತ್ತದೆ. ಹಾಗಾದರೆ ಇತ್ತೀಚಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗಳಿಗೆ ನಾವೇ ಹೊಣೆ ಎಂದಾಯಿತು. ನಾವು ಮಾಡುವ ನೀರಿನ ಅಪವ್ಯಯ, ಜಲ ಮಾಲಿನ್ಯ, ಇರುವಾಗ ಅಪರಿಮಿತ ಅಥವಾ ವಿವೇಚನಾರಹಿತ ಬಳಕೆ, ಅರಣ್ಯ ನಾಶ, ನಿಸರ್ಗದ ನೀರನ್ನು ಸಂರಕ್ಷಿಸುವ ಮೂಲ ನಾಶಮಾಡಿ ಅಂತರ್ಜಲದ ಅಪಾರಬಳಕೆ, ಜನಸಂಖ್ಯಾ ಸ್ಫೋಟ, ನಗರೀಕರಣ ಇತ್ಯಾದಿ ಜಲಕ್ಷಾಮಕ್ಕೆ ಕಾರಣವಾಗುತ್ತಿದೆ.
ಹಾಗಾದರೆ ನೀರಿನ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು? ನೀರು ಒಂದು ಬರಿದಾಗದ ಸಂಪನ್ಮೂಲ. ನಾವು ನೀರನ್ನು ಅದರ ಮೂಲದಿಂದ ಬಳಸಿದಾಗ ಮಾತ್ರ ಅದು ಬೇಸಿಗೆ ಕಾಲದಲ್ಲಿ ಬರಿದಾಗುತ್ತದೆ. ಮತ್ತೆ ಪುನಃ ಮಳೆಗಾಲದಲ್ಲಿ ತುಂಬುತ್ತದೆ. ಪುನಃ ಬೇಸಿಗೆ ಕಾಲದಲ್ಲಿ ಬರಿದಾಗುತ್ತದೆ. ªಹೀಗೆ ಬೇಸಿಗೆ ಕಾಲದಲ್ಲಿ ಖಾಲಿಯಾದ ನೀರು ಎಲ್ಲಿಗೆ ಹೋಯಿತು ಮತ್ತು ಮಳೆಗಾಲದಲ್ಲಿ ಆ ನೀರು ಎಲ್ಲಿಂದ ಬಂತು? ಏಕೆಂದರೆ ನೀರು ಆಗಲೇ ಭೂಗ್ರಹದಲ್ಲಿ ಸೃಸ್ಟಿಯಾಗಿದೆ. ಪುನ: ಸೃಷ್ಟಿ ಮಾಡಲು ಸಾದ್ಯವಿಲ್ಲ, ಮಾತ್ರವಲ್ಲ, ಲಯಗೊಳಿಸಲೂ ಸಾಧ್ಯವಿಲ್ಲ. ಹೀಗೆ ನೀರು ಒಂದು ರೂಪದಿಂದ ಇನ್ನೊಂದು ರೂಪವಾಗಿ ಪರಿವರ್ತನೆಯಾಗಿ ಬರಿದಾದ ಕಡೆ ತುಂಬುವುದಕ್ಕೆ ಜಲಚಕ್ರ ಎನ್ನುವರು. ಜಲಚಕ್ರವು ನೀರನ್ನು ಎಲ್ಲಾ ಕಡೆಗೆ ಹಂಚುವುದಲ್ಲದೆ ನೀರನ್ನು ಪ್ರಕೃತಿದತ್ತವಾಗಿ ಶುದ್ಧೀಕಣಗೊಳಿಸುತ್ತದೆ.
ಜಲಚಕ್ರ ಎಂದರೆ, ನೀರು ಸಮುದ್ರ, ಸರೋವರ ನದಿ ಕೊಳ ಪ್ರಾಣಿ ಸಸ್ಯಗಳಿಂದ ಆವಿಯಾದ ನೀರು ವಾತಾವರಣದಲ್ಲಿ ಮೋಡವಾಗಿ ಸಾಂದ್ರೀಕರಣ ಹೊಂದಿ ಮಳೆಯಾಗಿ ಪುನಃ ಭೂಮಿಯನ್ನು ಸೇರುವುದು ಎಂಬುವುದನ್ನು ಅರಿತೆವು. ಜಲಚಕ್ರದಲ್ಲಿ ನೀರು ಕ್ರಮಬದ್ಧವಾಗಿ ಎಲ್ಲಾಕಡೆ ಹಂಚಬೇಕಾದರೆ ಸರಿಯಾದ ಪ್ರಮಾಣದಲ್ಲಿ ಕಾಡು ಬೇಕು ಮತ್ತು ಜಲಚಕ್ರದ ಮೂಲಕ ಎಲ್ಲಾ ಕಡೆ ಹಂಚಿಕೆಯಾದ ಶುದ್ದ ನೀರನ್ನು ಪುನಃ ಅದರ ಮೂಲಸ್ಥಾನವಾದ ಸಮುದ್ರಕ್ಕೆ ಹೋಗಲು ಬಿಡದೆ ಭೂಮಿಯಲ್ಲೇ ಶೇಖರಣೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಏಕೆಂದರೆ ಆಧುನಿಕತೆ ಮತ್ತು ಅಭಿವೃದ್ಧಿಯ ಭರಾಟೆಯಲ್ಲಿ ನಾವು ಕಾಡುನಾಶ, ನಮ್ಮ ಹಿರಿಯರು ದೂರದೃಷ್ಟಿಯಿಂದ ಕಟ್ಟಿಸಿದ ಕೆರೆಕುಂಟೆಗಳನ್ನು ನಾಶ ಮಾಡಿದ್ದೇವೆ. ಅಲ್ಲದೆ, ನಗರೀಕರಣ, ಕಾಂಕ್ರಿಟೀಕರಣ, ಡಾಮರೀಕರಣ, ಹೀಗೆ ಹಲವು ಯೋಜನೆಗಳಿಂದ ನೀರು ಭೂಮಿಯಲ್ಲಿ ಸ್ವಾಭಾವಿಕವಾಗಿ ಸಂಗ್ರಹಗೊಳ್ಳುವ ನೈಸರ್ಗಿಕ ವಿಧಾನವನ್ನು ನಾಶ ಮಾಡುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಾವು ಏನನ್ನಾದರೂ ಮಾಡಲೇಬೇಕು. ಇಲ್ಲದಿದ್ದರೆ ಸದ್ಯ ಭವಿಷ್ಯದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಇನ್ನು ನಮ್ಮಲ್ಲಿ ಈಗಾಗಲೇ ಇರುವ ನೀರಿನ ಸದ್ಭಳಕೆಯ ಕ್ರಮವನ್ನು ಅಳವಡಿಸಿಕೊಳ್ಳುವುದು. ಇಲ್ಲಿ ಸದ್ಭಳಕೆ ಅಂದರೆ ಮುಖ್ಯವಾಗಿ ನೀರನ್ನು ಮಿತವಾಗಿ ಬಳಸುವುದು ಎಂದರ್ಥ. ಅರ್ಥಾತ್, ಎಷ್ಟು ಉಪಯೋಗಕ್ಕೆ ಅವಶ್ಯವೋ ಅಷ್ಟನ್ನೇ ಮಾತ್ರ ಬಳಸುವುದು. ಉಳಿತಾಯಕ್ಕಾಗಿ ನೀರನ್ನು ಬಳಸದೇ ಇರಲು ಸಾಧ್ಯವಾಗದೆ ಇರಬಹುದು. ಬದಲಾಗಿ, ನೀರನ್ನು ಪೋಲು ಮಾಡದಿರುವುದು ಮತ್ತು ಮರುಬಳಕೆ ಮಾಡುವುದು.
ನೀರಿನ ಬಗ್ಗೆ ಪ್ರಮುಖವಾದ ಇನ್ನೊಂದು ಸಮಸ್ಯೆಯೆಂದರೆ, ಜಲಮಾಲಿನ್ಯ. ಪರಿಸರದ ಪ್ರತಿಯೊಂದು ಘಟಕವೂ ಇಂದು ಕಲುಷಿತಗೊಂಡಿದೆ. ನೆಲ, ಜಲ, ವಾಯು, ಪರಿಸರ ಪ್ರತಿಯೊಂದು ಘಟಕವು, ಆವಾಸಸ್ಥಾನಗಳು ಕಲುಷಿತಗೊಂಡಿವೆ. ಪರಿಸರದ ಘಟಕಗಳು ಮಾಲಿನ್ಯ ಆಗುವುದು ಎಂದರೇನು? ಪರಿಮಿತಿಗಿಂತ ಯಾವುದೇ ಒಂದು ಪದಾರ್ಥವು/ರಾಸಾಯನಿಕವು ಹೆಚ್ಚಾಗಿ ಅದು ಜೈವಿಕ ಮತ್ತು ಅಜ್ಯೆವಿಕ ಅಂಶಗಳಲ್ಲಿ ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾದರೆ ಅದನ್ನು ಪರಿಸರ ಮಾಲಿನ್ಯ ಎನ್ನುತ್ತೇವೆ. ಎಲ್ಲಾ ಘಟಕಗಳಿಗಿಂತ ನೀರು ಬಹಳ ಬೇಗ ಕಲುಷಿತಗೊಳುತ್ತದೆ. ಕಾರಣ, ನೀರು ಒಂದು ಸಾರ್ವತ್ರಿಕ ದ್ರಾವಕ. ನೀರಿನಲ್ಲಿ ಹೆಚ್ಚಿನ ವಸ್ತುಗಳು ಕರಗುತ್ತವೆ. ಈ ಗುಣದಿಂದಾಗಿ ಜೀವಿಗಳು ಪೋಷಕಾಂಶದ ಸಾಗಾಣಿಕೆಗೆ ನೀರನ್ನು ಬಳಸಿಕೊಂಡಿದೆ. ನೀರು ಜೀವಿಗಳಿಗೆ ಮುಖ್ಯವಾಗಿ ಪೋಷಕಾಂಶಗಳ ಸಾಗಾಣಿಕೆಗೆ ಮತ್ತು ರಾಸಾಯನಿಕ ಕ್ರಿಯೆಗಳಿಗೆ ಮಾಧ್ಯಮವಾಗಿ ಸಹಾಯಕವಾಗುತ್ತದೆ. ನೀರಿನ ಸಾರ್ವತ್ರಿಕ ದ್ರಾವಕ ಗುಣವು ಜೀವಿಗಳಿಗೆ ಅನುಕೂಲಕರವಾಗಿದ್ದರೆ, ಅದರೆ ಇದೇ ಗುಣ ಮಾಲಿನ್ಯ ವಿಷಯವನ್ನು ಪರಿಗಣಿಸಿದರೆ ಪ್ರತಿಕೂಲವೂ ಆಗಿದೆ. ನೀರಿನ ಸಾರ್ವತ್ರಿಕ ದ್ರಾವಕ ಗುಣದಿಂದಾಗಿ ಇತರ ದ್ರಾವಕಗಳಿಗಿಂತ ಅದು ಬೇಗನೆ ಮಾಲಿನ್ಯವಾಗುತ್ತದೆ. ಹಾಗಾಗಿ ನೀರನ್ನು ಕಲುಷಿತಗೊಳಿಸುವ ಮಾಲಿನ್ಯಕಾರಿಗಳನ್ನು ನೀರಿನ ಮೂಲದಿಂದ ಆದಷ್ಟೂ ದೂರ ಇಡಬೇಕು.
ಜಲಚಕ್ರದಲ್ಲಿ ನಮ್ಮನ್ನೂ ತೊಡಗಿಸಿಕೊಳ್ಳಲು ಸಾಧ್ಯವಿದ್ದು, ಆ ಮೂಲಕ ನೀರನ್ನು ಸಂರಕ್ಷಿಸಬಹುದು:
· ಸಿಹಿನೀರಿನ ನೈಸರ್ಗಿಕ ಮೂಲಗಳಾದ ತೆರದಬಾವಿ, ಕೆರೆ, ನದಿ ಸರೋವರವನ್ನು ಯಥಾಸ್ಥಿಯಲ್ಲಿ ಕಾಪಾಡಿಕೊಂಡು ಬರುವುದು.
· ಸಾಧ್ಯವಾದಷ್ಟೂ ಕಾಡನ್ನು ಬೆಳೆಸುವುದು ಮತ್ತು ಮುಖ್ಯವಾಗಿ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡಿಯುವುದನ್ನು ತಡೆಗಟ್ಟುವುದು.
· ಮಳೆನೀರನ್ನು ಇಂಗಿಸುವುದರ ಮೂಲಕ ಅಂತರ್ಜಲ ಮಟ್ಟವನ್ನು ಏರಿಸುವುದು.
· ಮಳೆನೀರು ಕೊಯ್ಲು, ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡುವುದು.
· ಎಲ್ಲಾ ಮನೆಯವರು ಮಳೆಗಾಲದಲ್ಲಿ ನಳ್ಳಿ ನೀರು ಬಳಸದೆ, ಮಳೆಕೊಯ್ಲು ಮುಖಾಂತರ ಸಂಗ್ರಹಿಸಿದ ನೀರನ್ನು ಬಳಸಬೇಕು.
· ಮನೆಯ ವ್ಯಾಪ್ತಿಯ ಕಂಪೌಂಡು ಸುತ್ತಮುತ್ತ ಬಿದ್ದ ನೀರನ್ನು ಹೊರಗೆ ಹೋಗದಂತೆ ಇಂಗುಗುಂಡಿ ಮಾಡಿ ನೀರನ್ನು ಇಂಗಿಸುವುದು.
· ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯದಲ್ಲಿ ಭಾಗಿಯಾಗುವುದು.
· ಬೇಸಿಗೆಯಲ್ಲಿ ನೀರು ಸಿಗದೆ ಪಕ್ಷಿಗಳ ಪ್ರಾಣಕ್ಕೆ ಅಪಾಯವಿದೆ ಎಂದು ಸೂಚಿಸುವ ವರದಿಗಳಿವೆ. ನಾವು ಮನೆಯ ಹೊರಗೆ ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಪಕ್ಷಿಗಳನ್ನು ಉಳಿಸೋಣ.
ನೀರಿನ ಮಾಲಿನ್ಯವನ್ನು ತಡೆಗಟ್ಟುವುದು:
· ನೀರಿನ ಮೂಲದಲ್ಲಿರುವ ಜಲಚರಗಳು ನೀರಿಗೆ ಸೇರಿದ ಮಾಲಿನ್ಯಕಾರಿಗಳನ್ನು ತಕ್ಕಮಟ್ಟಿಗೆ ಸೇವಿಸಿಕೊಂಡು ನೀರನ್ನು ಶುದ್ಧಿಕರಿಸುತ್ತವೆ (ಜೈವಿಕ ಶುದ್ಧೀಕರಣ). ಇದು ಒಂದು ಹಂತ ತಲುಪಿದ ಮೇಲೆ ಜಲಚರಗಳು ಸಾಯುತ್ತವೆ. ಹಾಗಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವಾಗ ಅದರಲ್ಲಿರುವ ಮಲಿನಕಾರಿಗಳನ್ನು ಬೇರ್ಪಡಿಸಬೇಕು.
· ದೊಡ್ಡ ದೊಡ್ಡ ಕೈಗಾರಿಕೆಗಳು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೆ ನಾವು ನಮ್ಮ ಮನೆಯಲ್ಲಿ ಉಂಟಾಗುವ ಮಾಲಿನ್ಯ ನೀರನ್ನು ಸಂಗ್ರಹಿಸಿ ಅದರಲ್ಲಿರುವ ಕಲ್ಮಷಗಳನ್ನು ಬೇರ್ಪಡಿಸಿ ಆ ನೀರನ್ನು ಮರುಬಳಕೆ ಮಾಡಬಹುದು. ಮುಖ್ಯವಾಗಿ ಇಂತಹ ನೀರನ್ನು ಮನೆಯಲ್ಲಿ ಹೂವಿನ ಗಿಡಗಳಿಗೆ, ತೋಟಕ್ಕೆ ಬಳಸಬಹುದು.
‘ವಿಶ್ವ ಸಂಸ್ಥೆಯ ವಾಟರ್ ಡಾಕ್ಯುಮೆಂಟ್ಸ್’ ಪ್ರಕಾರ ಈಗಿರುವ ಜೀವನಶೈಲಿಯಂತೆ ನೀರನ್ನು ಬಳಸುತ್ತಾ ಹೋದರೆ, 2030 ಹೊತ್ತಿಗೆ ಪ್ರಪಂಚದಾದ್ಯಂತ ಶೇಕಡಾ 47 ರಷ್ಟು ಜನಸಂಖ್ಯೆಯು ನೀರಿನ ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ‘ನೀರು ಭೂತಾಯಿಯ ಅನರ್ಘ್ಯ ರತ್ನ’. ಮನುಷ್ಯನೂ ಸೇರಿದಂತೆ ಎಲ್ಲಾ ಕೋಟ್ಯಾನುಕೋಟಿ ಜೀವಿಗಳಿಗೆ ಬದುಕಲು ಆಶ್ರಯ ನೀಡಿರುವ ಭೂಮಿಯ ಒಂದು ಅಮೂಲ್ಯ ಆಸ್ತಿ ನೀರು. ನೀರಿಲ್ಲದೇ ಯಾವ ಜೀವಿಯೂ ಬದುಕಲಾರದು. ಆದುದರಿಂದ ನೀರಿನ ಬಗ್ಗೆ ಅಸಡ್ಡೆ ತೋರಿಸದೇ ಅದರ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಂಡು ಭವಿಷ್ಯದಲ್ಲಿ ಬರುವ ನೀರಿನ ಹಾಹಾಕಾರವನ್ನು ತಪ್ಪಿಸಲು ಈಗಿಂದಲೇ ನಾವು ಕಾರ್ಯತತ್ಪರಾಗಬೇಕು. ಇಲ್ಲದಿದ್ದರೆ ಶೀಘ್ರ ಭವಿಷ್ಯದಲ್ಲಿ ಅನಾಹುತ ತಪ್ಪಿದಲ್ಲ.
ಸ್ಫೂರ್ತಿಯ ಆಶಾಕಿರಣ
ಯಾವುದೇ ಫಲಾಪೇಕ್ಷೆ ಇಲ್ಲದೆ ಸಾವಿರಾರು ಗಿಡಮರಗಳನ್ನು ನೆಟ್ಟು ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿ ಪಡೆದ ಪದ್ಮಶ್ರೀ ಪುರಸ್ಕೃತೆ ತಿಮ್ಮಕ್ಕ; 1999-2000 ಮತ್ತು 2003 ರಲ್ಲಿ ತೀವ್ರವಾದ ಬರಗಾಲಗಳಿಂದ ತತ್ತರಿಸಿದ್ದ ರಾಜಸ್ಥಾನ ಗ್ರಾಮಗಳಲ್ಲಿ ಅಲ್ಲಿನ ಜನರ ಪಾಲುದಾರಿಕೆಯಿಂದ ಕಿರು ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಕೊಯ್ಲು ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾದ ಅಮ್ಲಾ ರುಯಿಯಾ; ಬಿಹಾರದ ಹಳ್ಳಿಯೊಂದರಲ್ಲಿ 1997 ರಲ್ಲಿ ಸ್ವಯಂ ಸಹಾಯ ಗುಂಪು ಒಂದನ್ನು ಸ್ಥಾಪಿಸಿ ಅಲ್ಲಿನ ಮಹಿಳೆಯರನ್ನು ಆರ್ಥಿಕ ಸ್ವಾಲಂಬಿ ಮಾಡುವುದರ ಜೊತೆಗೆ ಶ್ರಮದಾನದ ಮೂಲಕ ಮಳೆನೀರು ಕೊಯ್ಲು ಮತ್ತು ಹಸಿರೀಕರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ‘ಬಿಹಾರದ ಹಸಿರು ಮಹಿಳೆ’ ಎಂದೇ ಖ್ಯಾತಿ ಪಡೆದಿರುವ ಜಯ ದೇವಿ, ಬರಪೀಡಿತ ಪೂರ್ವ ರಾಜಸ್ಥಾನದಲ್ಲಿ ವ್ಯಾಪಕವಾದ ನೀರಿನ ಸಂರಕ್ಷಣಾ ಪ್ರಯತ್ನಗಳನ್ನು ಕೈಗೊಂಡು ಸಮುದಾಯ ನಾಯಕತ್ವಕ್ಕಾಗಿ 2001 ರ ರಾಮನ್ ಮ್ಯಾಗ್ಸೆಸೆ (Ramon Magsaysay) ಪ್ರಶಸ್ತಿಯನ್ನು ಪಡೆದು ‘ವಾಟರ್ ಮ್ಯಾನ್’ ಎಂದೇ ಖ್ಯಾತಿ ಹೊಂದಿರುವ ರಾಜೇಂದ್ರ ಸಿಂಗ್, ಸಾಗರ ತಾಲೂಕಿನ ನೀಚಡಿ ಗ್ರಾಮದ ಯುವಕರ ಕೆರೆಹೂಳು ತೆಗೆಯುವ ಯಶೋಗಾಥೆ, ಇಂತಹ ಅನೇಕ ಘಟನೆಗಳು ಮತ್ತು ಧೀಮಂತ ವ್ಯಕ್ತಿಗಳು ಜಲ ಸಂರಕ್ಷಣೆಯಲ್ಲಿ ಅವರು ವಹಿಸಿರುವ ಪಾತ್ರ, ನೀಡಿರುವ ಕೊಡುಗೆ ಸ್ಫೂರ್ತಿಯುತವಾದದ್ದು.
Photo by mrjn Photography on Unsplash