ಇಂದು ಮಾರ್ಚ್ 8, 2021; ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕೋವಿಡ್-19 ಸಂಧಿಗ್ಧ ದಿನಗಳಲ್ಲಿ ಮಹಿಳೆಯರು ಸಲ್ಲಿಸಿರುವ ಸೇವೆ ಮತ್ತು ಸಮರ್ಥ ನಾಯಕತ್ವವನ್ನು ಪರಿಗಣಿಸಿ, “ಮುಂದಾಳತ್ವದಲ್ಲಿ ಮಹಿಳೆಯರು: ಕೋವಿಡ್ -19 ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು” ಎಂಬ ಧ್ಯೇಯವಾಕ್ಯದೊಂದಿಗೆ 2021 ರ ಮಹಿಳಾ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅನೇಕ ಚರ್ಚೆ, ಉಪನ್ಯಾಸ, ವಿಚಾರಗೋಷ್ಠಿಗಳ ನಡುವೆ ”ಮಹಿಳೆ ಮತ್ತು ಪರಿಸರ’ ಕುರಿತು ಒಂದು ಲೇಖನ.
ಅಭಿವೃದ್ಧಿಯ ಪಥದಲ್ಲಿ ಆಗಾಗ ಕೇಳಿಬರುವ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ವಿದ್ಯಮಾನಗಳ ಹಿನ್ನಲೆಯೊಂದಿಗೆ ‘ಮಹಿಳೆ’ ಹಾಗೂ ‘ಪರಿಸರ’ ಎಂಬ ವಿಷಯಗಳೂ ಸಹ ಇಂದು ಹೆಚ್ಚು ಪ್ರಸ್ತುತವಾಗುತ್ತಿವೆ. ಮಹಿಳೆ ಎಂದ ಕೂಡಲೆ ಸಾಂಪ್ರದಾಯಿಕ ಗ್ರಹಿಕೆಗಳಾದ ಅಬಲೆ, ಮಾತೆ, ಮಾಯೆ ಮೊದಲಾದ ಆಕೆಯ ಕುರಿತು ಇರುವ ಭಾಷಾ ಪ್ರಯೋಗಗಳೊಂದಿಗೆ ಇತ್ತೀಚಿನ ಮಹಿಳಾವಾದ, ಮಹಿಳಾ ಸಂಘಟನೆಗಳು, ಮಹಿಳಾ ಸ್ವಾಯತ್ತತೆ, ವಿಮೋಚನೆ ಎನ್ನುವ ಪದಪ್ರಯೋಗಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಪರಿಸರ ಎಂದಾಗ ಸಾಮಾನ್ಯವಾಗಿ ಕೇಳಿಬರುವುದು ಕೈಗಾರಿಕೀಕರಣ, ನಗರೀಕರಣ, ಗಣಿಗಾರಿಕೆ, ಮಾಲಿನ್ಯ, ಸಂರಕ್ಷಣೆ ಮೊದಲಾದ ಪದಗಳು.
ಮಹಿಳೆ ಹಾಗೂ ಪರಿಸರಕ್ಕೆ ಪರಸ್ಪರ ಸಂಬಂಧ ಇದೆ ಎಂದು ಅರ್ಥೈಸಿ ಆಕೆ ಪರಿಸರಕ್ಕೆ ಹೆಚ್ಚು ನಿಕಟವಾಗಿರುವವಳು ಎಂದು ವಿವರಿಸಿಕೊಂಡಿರುವ ಸಾಕಷ್ಟು ಅಧ್ಯಯನಗಳು ನಮ್ಮೆದುರಿಗಿವೆ. ಹೀಗಾಗಿ ಪರಿಸರಕ್ಕೆ ಮಾರಕಗಳಾದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕೈಗಾರಿಕೀಕರಣ, ನಗರೀಕರಣಗಳನ್ನು ಮಹಿಳಾ ವಿರೋಧಿ ಎಂದು ಗುರುತಿಸಿ ಮಹಿಳೆಯರು ಅವುಗಳನ್ನು ಎದುರಿಸಲು ಇರುವ ದಾರಿಗಳ ಕುರಿತು ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ಮಹಿಳೆಯರು ಹೇಗೆ ತಮ್ಮನ್ನು ತೊಡಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲು ಒಂದು ಚಿಕ್ಕ ಪ್ರಯತ್ನ.
ಅಭಿವೃದ್ಧಿ ಎನ್ನುವುದು ಒಂದು ದೇಶದ ಸರ್ವತೋಮುಖ ಪ್ರಗತಿಯ ಅವಿಭಾಜ್ಯ ಅಂಗ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಿಕ್ಕುದೆಸೆಯಿಲ್ಲದೆ ಮುಂದುವರಿಯುತ್ತಿರುವ ಕೈಗಾರೀಕರಣ, ನಗರೀಕರಣ, ಗಣಿಗಾರಿಕೆಯಂತಹ ಪರಿಸರ ವಿನಾಶಕ ಯೋಜನೆಗಳಿಂದ ಸಮಾಜದ ಎಲ್ಲಾ ಸ್ತರದಲ್ಲಿರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ದುಷ್ಪರಿಣಾಮಗಳು ತಟ್ಟುತ್ತವೆ. ಪರಿಸರ ವಿನಾಶಕ ಚಟುವಟಿಕೆಗಳಿಂದ ಸಮಾಜದ ಎಲ್ಲಾ ವರ್ಗದ ಜನರು ಬವಣೆಗಳನ್ನು ಪಡುತ್ತಿದ್ದರೂ ಅದರಲ್ಲಿ ಮುಖ್ಯ ಬಲಿಪಶು ಮಹಿಳೆಯರೇ. ಉದಾಹರಣೆಗೆ, ಹೆಚ್ಚಿನ ಎಲ್ಲ ಅಭಿವೃದ್ಧಿಪರ ಯೋಜನೆಗಳಿಗೆ ಅರಣ್ಯನಾಶ ಸಾಮಾನ್ಯ. ಜೀವ-ಪರಿಸರದ ಸಮತೋಲನವನ್ನು ಕಾಪಾಡಲು ವನ್ಯಸಂಪತ್ತು ಎಷ್ಟು ಮುಖ್ಯ ಎನ್ನುವುದು ತಿಳಿದೇ ಇದೆ. ನಿಸರ್ಗದ ವನ್ಯ ಸಂಪತ್ತನ್ನು ಧ್ವಂಸಮಾಡುವುದು ಹಲವಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತವೆ. ಅದರಲ್ಲಿ ಬಹುಮುಖ್ಯವಾದದ್ದು ನೀರಿನ ಸಮಸ್ಯೆ .
ನೀರಿನ ಸಮಸ್ಯೆ ಕಾಡುವುದು ಮಹಿಳೆಯರನ್ನೇ
ಪ್ರಾಕೃತಿಕವಾಗಿ ನಡೆಯುವ ನೀರಿನಚಕ್ರದಲ್ಲಿ ಮುಖ್ಯ ಪಾತ್ರವಹಿಸುವ ಕಾಡನ್ನು ಕಡಿದರೆ ಮಳೆಯ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ. ಬಿದ್ದ ಮಳೆನೀರು ಸಮುದ್ರಕ್ಕೆ ಕೊಚ್ಚಿ ಹೋಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಕೆರೆ, ಬಾವಿ, ನದಿ ತೊರೆಗಳು ಖಾಲಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಉದ್ಭವವಾಗುವ ನೀರಿನ ಸಮಸ್ಯೆಯಿಂದ ಬವಣೆ ಪಡುವವರು ಬಹುಮುಖ್ಯವಾಗಿ ಮಹಿಳೆಯರು. ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಹಲವು ಮೈಲಿ ದೂರವನ್ನು ಕ್ರಮಿಸಿ ಉರಿಬಿಸಿಲಿನಲ್ಲಿ ನೀರನ್ನು ತಲೆಯ ಮೇಲೆ ಹೊತ್ತು ತರುವ ದೃಶ್ಯ ಮತ್ತು ನಗರ, ಪಟ್ಟಣಗಳಲ್ಲಿ ನೀರಿಗಾಗಿ ಮಹಿಳೆಯರು ನಲ್ಲಿಯ ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಹ ದೃಶ್ಯಗಳನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ವನ್ಯ ಸಂಪತ್ತನ್ನು ಅವಲಂಬಿಸಿ ದುಡಿಮೆಯನ್ನು ಮಾಡಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೊಂಡಿರುತ್ತಾರೆ. ಕಟ್ಟಿಗೆ ಮಾರಾಟ, ಚಾಪೆ ಹೆಣೆಯುವುದು, ಬುಟ್ಟಿ ನೇಯುವಿಕೆ, ಅಡಿಕೆ ಸುಲಿಯುವುದು ಹೀಗೆ ಹಲವಾರು ಸಣ್ಣ ಕಸುಬುಗಳನ್ನು ನಿರ್ವಹಿಸಿ ಸ್ವಾಲಂಬಿಗಳಾಗಿರುತ್ತಾರೆ. ಕಾಡನ್ನು ಮಿತಿಮೀರಿ ಕಡಿಯುವುದರಿಂದ ಅವರ ದುಡಿಮೆಗೆ ದೊಡ್ಡ ಹೊಡೆತ ಬೀಳುತ್ತದೆ. ಕೈಗಾರೀಕರಣ, ಗಣಿಗಾರಿಕೆ, ವಿದ್ಯುತ್‍ಸ್ಥಾವರ, ಅಣೆಕಟ್ಟು ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಕೈಗೊಳ್ಳುವಾಗ ಸರಕಾರವು ಒಂದಿಷ್ಟು ಪರಿಹಾರವನ್ನು ನೀಡಿ ಹಳ್ಳಿಯ ಜನರನ್ನು/ಬುಡಕಟ್ಟು ಜನಾಂಗಗಳನ್ನು ಒಕ್ಕಲೆಬ್ಬಿಸುವುದರಿಂದ ಮುಖ್ಯವಾಗಿ ಮಹಿಳೆಯರು ಬದುಕು ದಯನೀಯವಾಗುತ್ತದೆ.
ಪ್ರಕೃತಿ ಮಿಕೋಪಗಳಾದ ಬರಗಾಲ, ಕ್ಷಾಮ, ನೆರೆ ಹಾವಳಿ, ಜೊತೆಗೆ ದೋಷಪೂರಿತ ಬಿತ್ತನೆ ಬೀಜ, ಗೊಬ್ಬರಗಳನ್ನು ಉಪಯೋಗಿಸುವುದರಿಂದ, ಅಲ್ಲದೇ ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆಸಿಗದೇ ಇರುವುದು, ಹೀಗೆ ಹಲವಾರು ಕಾರಣಗಳಿಂದ ಪಾರಂಪರಿಕವಾಗಿ ಕೃಷಿಯನ್ನೇ ನಂಬಿಕೊಂಡಿರುವ ಬಂದಿರುವ ರೈತರು ಕೃಷಿಯನ್ನು ತ್ಯಜಿಸಿ ಉದ್ಯೋಗ ಅರಸುತ್ತ ಹಳ್ಳಿಯಿಂದ ಪಟ್ಟಣವನ್ನು ಸೇರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಮಹಿಳೆಯರ ಮೇಲೆ ಮನೆವಾರ್ತೆ ಕೆಲಸಗಳ ಜೊತೆಗೆ ಕೃಷಿಯನ್ನು ಸಹ ತಾವೇ ನೋಡಿಕೊಳ್ಳಬೇಕಾಗಿರುವುದರಿಂದ ಅವರ ಮೇಲೆ ಇನ್ನಷ್ಟು ಕೆಲಸದ ಒತ್ತಡ ಬೀಳುತ್ತದೆ. ಸಮೀಕ್ಷೆಯ ಪ್ರಕಾರ ಗ್ರಾಮೀಣ ಮಹಿಳೆಯರು ಪುರುಷರಿಗಿಂತ ಶೇಕಡ 35ರಷ್ಟು ಹೆಚ್ಚು ಸಮಯ ಕೆಲಸದಲ್ಲಿ ನಿರತರಾಗಿರುತ್ತಾರೆ.
ಪ್ರಕೃತಿ ವಿಕೋಪ ಮತ್ತು ಮಹಿಳೆಯರು
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಆವರ್ತನದಲ್ಲಿ ಸಂಭವಿಸುವ ಪ್ರವಾಹ, ಚಂಡಮಾರುತ, ಬರಗಾಲ ಇನ್ನಿತರ ನೈಸರ್ಗಿಕ ವಿಕೋಪಗಳು ಮಾನವ ಪ್ರಕೃತಿಯ ಮೇಲೆ ನಡೆಸಿದ ದಬ್ಬಾಳಿಕೆಯ ಪ್ರತಿಫಲ. ಇದನ್ನು ಅನೇಕ ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ. ಜಾಗತಿಕ ತಾಪಮಾನ ಏರುವಿಕೆ ಮತ್ತು ಹವಾಗುಣ ಬದಲಾವಣೆಯಿಂದಾಗಿ ಸಮಸ್ಯೆಗಳು ಇನ್ನಷ್ಟೂ ಬಿಗಡಾಯಿಸುತ್ತಿವೆ. ನಿಸರ್ಗವು ಪ್ರತಿಯೊಂದು ಪ್ರಾಕೃತಿಕ ಕ್ರಿಯೆಗಳನ್ನು ಸಮತೋಲನದಲ್ಲಿ ಇಡುವ ಸಂಕೀರ್ಣವಾದ ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ, ಮನುಷ್ಯನ ಸ್ವಾರ್ಥ ಸಾಧನೆಯಿಂದಾಗಿ ಈ ಸಮತೋಲನದಲ್ಲಿ ಏರುಪೇರು ಉಂಟಾಗಿ ಮೇಲೆ ತಿಳಿಸಿರುವ ಪ್ರಕೃತಿ-ವಿಕೋಪಗಳಿಗೆ ಕಾರಣವಾಗಿ ಸಾವುನೋವುಗಳು ಸಂಭವಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡ ಮಹಿಳೆಯರ ಸ್ಥಿತಿ ಶೋಚನೀಯವಾಗುತ್ತದೆ.
ಭಾರತದಲ್ಲಿ ಕರಾವಳಿ ಮತ್ತು ನದಿಗಳು ಶೇಕಡ 65 ಮೀನುಗಾರ ಕುಟುಂಬಗಳಿಗೆ ಆಧಾರಸ್ತಂಭವಾಗಿವೆ. ಮೀನುಗಾರರ ಕುಟುಂಬದಲ್ಲಿ ಪುರುಷದೊಂದಿಗೆ ಕೆಲಸಗಳನ್ನು ಹಂಚಿಕೊಂಡು ಮಹಿಳೆಯರೂ ದುಡಿಮೆಯಲ್ಲಿ ಭಾಗಿಯಾಗಿರುತ್ತಾರೆ. ಒಂದು ಕಡೆ ಕಾರ್ಖಾನೆಗಳು ಹೊರಚೆಲ್ಲುವ ತ್ಯಾಜ್ಯಗಳಿಂದ ಜಲಮಾಲಿನ್ಯ, ಇನ್ನೊಂದು ಕಡೆ ಮೀನುಗಾರಿಕೆಗೆ ಸರಕಾರವು ಗೊತ್ತುಗುರಿಯಿಲ್ಲದೆ ಆಧುನಿಕ ತಂತ್ರಜ್ಞಾನ (ಕೆಲವು ಮೈಲುಗಳ ವ್ಯಾಪ್ತಿಯಲ್ಲಿ ಒಂದೇ ಸಲಕ್ಕೆ ಸಾವಿರಾರು ಮೀನುಗಳನ್ನು ಹಿಡಿಯವುದು) ಉಪಯೋಗಿಸುವ ಬಂಡವಾಳಶಾಹಿಗಳಿಗೆ ಅವಕಾಶ ನೀಡಿರುವುದರಿಂದ, ಇದು ಮತ್ಸ್ಯಕ್ಷಾಮಕ್ಕೆ ಕಾರಣವಾಗುವುದಲ್ಲದೆ, ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆಯನ್ನು ನಂಬಿಕೊಂಡಿರುವ ಮಹಿಳೆಯರು ಮತ್ತು ಅವರನ್ನು ನಂಬಿಕೊಂಡಿರುವ ಕುಟುಂಬವು ಬೀದಿಗೆ ಬೀಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.
ಗ್ರಾಮೀಣ ಹಾಗು ಕರಾವಳಿ ಪ್ರದೇಶದ ಮಹಿಳೆಯರ ದುಸ್ಥಿತಿ ಈ ರೀತಿಯಾದರೆ, ಪರಿಸರ-ವಿನಾಶಕ ಕ್ರಿಯೆಗಳು ನಗರವಾಸಿ ಮಹಿಳೆಯರ ಸ್ಥಿತಿಯನ್ನು ಇನ್ನೊಂದು ರೀತಿಯಲ್ಲಿ ಸಂಕಷ್ಟಕ್ಕೆ ಈಡುಮಾಡಿವೆ. ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ಇವೆಲ್ಲವನ್ನು ನಾವು ನಿಸರ್ಗದಿಂದ ಪಡೆಯುತ್ತೇವೆ. ಇವೆಲ್ಲವೂ ನಿರ್ಮಲವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ವಿಪರೀತವಾದ ಕೈಗಾರಿಕೀಕರಣ, ನಗರೀಕರಣ, ಹಸಿರು ಕ್ರಾಂತಿಯ ಹೆಸರಿನಲ್ಲಿ ಅನುಸರಿಸಿಕೊಂಡು ಬಂದಿರುವ ಆಧುನಿಕ ಮಾದರಿಯ ಕೃಷಿಪದ್ಧತಿ ಹಾಗೂ ಆಧುನಿಕ ಜೀವನ ಶೈಲಿಯಿಂದ ಪರಿಸರದ ಪ್ರತಿಯೊಂದು ಅಂಗವು ಸಾವಿರಾರು ಬಗೆಯ ರಾಸಾಯನಿಕ ವಸ್ತುಗಳಿಂದ ಮಾಲಿನ್ಯಗೊಂಡಿದೆ. ಈ ರಾಸಾಯನಿಕಗಳು ಗಾಳಿ, ನೀರು, ಆಹಾರ ಮೂಲಕ ದೇಹವನ್ನು ಸೇರಿ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಕಾರಣದಿಂದ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್, ಅಸ್ತಮ, ಚರ್ಮಸಂಬಂಧಿ ರೋಗಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಲುಷಿತಗೊಂಡ ಅನಾರೋಗ್ಯಕರ ಪರಿಸರದಲ್ಲಿ ಬದುಕುವ ಎಲ್ಲರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇತ್ತೀಚಿನ ಹಲವು ಸಂಶೋಧನೆಗಳು ಪರಿಸರಕ್ಕೆ ಬಿಡುಗಡೆಯಾಗುವ ಅನೇಕ ರಾಸಾಯನಿಕಗಳು ಸ್ತ್ರೀಯರ ಆರೋಗ್ಯದ ಮೇಲೆ ಅನಪೇಕ್ಷಿತ ಪರಿಣಾಮಗಳನ್ನು ಬೀರಿ ಮಾರಕ ಕಾಯಿಲೆಗಳನ್ನು ಉಂಟುಮಾಡುತ್ತವೆ ಎಂದು ದೃಢಪಡಿಸಿವೆ. ಕ್ರಿಮಿನಾಶಕಗಳಾದ ಎಂಡೋಸಲ್ಪಾನ್, ಡಿ.ಡಿ.ಟಿ., ಪ್ಲಾಸ್ಟಿಕ್ ಘಟಕವಾದ ಬಿಸ್‍ಫಿನೋಲ್-ಎ, ಅನೇಕ ಔಷಧಿಗಳು (ಟೆಮೋಕ್ಸಿಫಿನ್, ಸ್ಟಿಲ್‍ಬೆಸ್ಟ್ರೊಲ್, ಇತರ) ಹೀಗೆ ಅನೇಕ ಮಾನವ-ನಿರ್ಮಿತ ರಾಸಾಯನಿಕ ವಸ್ತುಗಳು ಹೆಣ್ಣು-ಲಿಂಗ ಹಾರ್ಮೋನ್ (ಇಸ್ಟೋಜನ್)ಗಳನ್ನು ಹೋಲುವುದರಿಂದ ಅವುಗಳು ಮಹಿಳೆಯರ ದೇಹವನ್ನು ಸೇರಿದರೆ ಆರೋಗ್ಯ ಸ್ಥಿತಿಯನ್ನು ಏರುಪೇರು ಮಾಡಿ ಅನೇಕ ಸ್ತ್ರೀಸಂಬಂಧಿ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಜಗತ್ತಿನಾದ್ಯಂತ ಕಳೆದ 20 ವರ್ಷಗಳಿಂದೀಚೆ ಶೇಕಡ 60ರಷ್ಟು ಏರಿದೆ. ಮಾತ್ರವಲ್ಲ, ಈ ರಾಸಾಯನಿಕಗಳು ತಾಯಿಯ ಗರ್ಭದಲ್ಲಿ ಬೆಳೆಯುವ ಮಗುವಿನ ಮೇಲೂ ದುಷ್ಪರಿಣಾಮ ಬೀರಿ ಅಂಗವಿಕಲತೆ ಮತ್ತು ಬುದ್ಧಿಮಾಂದ್ಯ ಮಗುವಿನ ಜನ್ಮಕ್ಕೆ ಕಾರಣವಾಗುತ್ತವೆ. ವಿಕಲತೆ ಇರುವ ಮಗುವಿಗೆ ಜನ್ಮ ನೀಡುವ ತಾಯಿಯು ಜೀವನಪರ್ಯಂತ ಬವಣೆ ಪಡುವುದಲ್ಲದೆ, ಎಷ್ಟೋ ಕಡೆಗಳಲ್ಲಿ ಇದಕ್ಕೆ ಹೆತ್ತ ತಾಯಿಯ ಮೇಲೆ ಅಪವಾದ ಹೋರಿಸಿ ಅವರನ್ನು ಅವಹೇಳನ ಮಾಡುವಂತಹ ಪುರುಷಪ್ರಧಾನ ಸಮಾಜವೂ ಇದೆ.
ಪರಿಸರ ಮಾಲಿನ್ಯದಿಂದ ಮತ್ತು ಪರಿಸರ-ವಿನಾಶಕಾರಿ ಯೋಜನೆಗಳಿಂದ ವಿವಿಧ ಸ್ತರದಲ್ಲಿರುವ ಮಹಿಳೆಯರು ನೇರವಾಗಿ ಅಥವಾ ಪರೋಕ್ಷವಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವಾಗ ಅಂತಹ ಯೋಜನೆಗಳ ವಿರುದ್ಧ ಅವರು ಧ್ವನಿಯೆತ್ತಲೇ ಬೇಕಾಗಿರುವ ಅನಿವಾರ್ಯತೆಯಿದೆ. ಲಿಂಗ-ತಾರತಮ್ಯವಿರುವ ದೇಶಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಕಡೆಗಣಿಸಿರುವುದರಿಂದ ಮತ್ತು ಅವರನ್ನು ಕೇವಲ ಮನೆವಾರ್ತೆ ಕೆಲಸಗಳಿಗೆ ಸೀಮಿತಗೊಳಿಸಿ ಮೂಲೆಗುಂಪಾಗಿಸಿರುವುದರಿಂದ ಮಹಿಳೆಯರು ತಮಗಾಗುತ್ತಿರುವ ಅನ್ಯಾಯವನ್ನು ನೋಡಿಯೂ ಮೌನವಾಗಿ ಅನುಭವಿಸಬೇಕಾಗಿದೆ. ಸಮೀಕ್ಷೆಯ ಪ್ರಕಾರ ಜತ್ತಿನಾದ್ಯಂತ ರಾಷ್ಟ್ರೀಯ ಸರ್ಕಾರಗಳಿಂದ ಹಿಡಿದು ಸ್ಥಳೀಯ ಸಮುದಾಯ ಗುಂಪುಗಳವರೆಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರನ್ನು ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸಲಾಗುತ್ತಿದೆ. ಉದಾಹರಣೆಗೆ, ಜಗತ್ತಿನ ಎಲ್ಲ ರಾಷ್ಟ್ರೀಯ ಸಂಸದರಲ್ಲಿ ಶೇಕಡ 25ಕ್ಕಿಂತ ಕಡಿಮೆ ಮಹಿಳಾ ಪ್ರತಿನಿಧಿ ಇದ್ದು, ಅದರಲ್ಲೂ ಪರಿಸರ ಸಂಬಂಧಿತ ಕ್ಷೇತ್ರಗಳಲ್ಲಿ ಉನ್ನತ ಮಂತ್ರಿ ಸ್ಥಾನ ಅಥವಾ ಸಮುದಾಯ ಮಟ್ಟದ ಸಮಿತಿಗಳನ್ನು ಕೇವಲ ಶೇಕಡ 12 ಮಹಿಳೆಯರು ಪ್ರತಿನಿಧಿಸುತ್ತಾರೆ.
“ಮಣ್ಣು, ನೀರು, ಅರಣ್ಯ ಮತ್ತು ಶಕ್ತಿ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು, ಮಾತ್ರವಲ್ಲ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಮಹಿಳೆಯರು ಆಳವಾದ ಸಾಂಪ್ರದಾಯಿಕ ಮತ್ತು ಸಮಕಾಲೀನ ಜ್ಞಾನವನ್ನು ಹೊಂದಿರುತ್ತಾರೆ” ಎಂದು 1991 ರಲ್ಲಿ ವಿಶ್ವಬ್ಯಾಂಕ್ ಸಂಶೋಧನಾಧಾರಿತವಾಗಿ ಪ್ರಕಟಿಸಿರುವುದು ಎಲ್ಲರೂ ಒಪ್ಪುವಂತದ್ದು. ಹೀಗಿದ್ದೂ, ಯಾವುದೇ ಪ್ರಗತಿಪರ ಯೋಜನೆಗಳನ್ನು ಪ್ರಾರಂಭಿಸುವಾಗ ಸರಕಾರವಾಗಲಿ ಅಥವಾ ಬಂಡವಾಳಶಾಹಿಗಳಾಗಲಿ ಮಹಿಳೆಯರಿಗೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗಮನ ಕೊಡದೆ ಜಾಣಕುರುಡು ಪ್ರದರ್ಶಿಸುತ್ತವೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ರೂಪಿಸುವ ಯಾವುದೇ ಯೋಜನೆಗಳಿರಲಿ, ಆ ಯೋಜನೆಗಳ ಸಂಪೂರ್ಣ ರೂಪುರೇಷೆಗಳನ್ನು ತಿಳಿಯುವ ಹಕ್ಕು ಮತ್ತು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕನ್ನು ಮಹಿಳೆಯರು ಪಡೆದುಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಮುಖ ನಾಗರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶಗಳಿಗೆ ಮಹಿಳೆಯರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸುವಂತಹ ಲಿಂಗ-ಅಸಮಾನತೆಯು ಸುಸ್ಥಿರ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗುತ್ತದೆ ಎಂಬುವುದನ್ನು ಈಗಾಗಲೇ ಜಾಗತಿಕವಾಗಿ ಮನಗಾಣಲಾಗಿದೆ.
ಮಹಿಳೆಯರು ಎಚ್ಚೆತ್ತುಕೊಳ್ಳಬೇಕು
ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಮತ್ತು ಅದರ ವಿರುದ್ಧ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಇದ್ದೇ ಇದೆ. ಒಬ್ಬಂಟಿಗಳಾಗಿ ಹೋರಾಡಿದರೆ ಅವಳಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಸಂದರ್ಭದಲ್ಲೇ ಮಹಿಳಾ ಸಂಘಟನೆಗಳ ಅಗತ್ಯತೆ ಕಂಡುಬರುವುದು. ಗ್ರಾಮೀಣ ಅಥವಾ ನಗರ ಪ್ರದೇಶವಿರಲಿ, ಮಹಿಳೆಯರು ತಮ್ಮದೇ ಆದ ಸಂಘಟನೆಗಳನ್ನು ಮಾಡಿಕೊಂಡು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಮಹಿಳಾ ಸಂಘಟನೆಗಳೊಂದಿಗೆ ಕೂಡಿಕೊಂಡು ತಮ್ಮ ಬದುಕಿನ ಮೇಲೆ ದುಸ್ತರ ಪರಿಣಾಮ ಬೀರುವ ಪರಿಸರ-ವಿನಾಶಕ ಯೋಜನೆ, ಚಟುವಟಿಕೆಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ.
ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳಾ-ಸಂಘಟನೆಗಳು ನಡೆಸುವ ಪ್ರತಿಭಟನೆಗಳನ್ನು ಸರ್ಕಾರವಾಗಲಿ, ಖಾಸಗಿ ಹಿತಾಸಕ್ತಿಗಳಾಗಲಿ ಅಷ್ಟು ಸುಲಭವಾಗಿ ಧಮನಿಸಲು ಸಾಧ್ಯವಿಲ್ಲ ಮತ್ತು ಮಹಿಳಾ ಸಂಘಟನೆಗಳು ನಡೆಸುವ ಪ್ರತಿಭಟನೆಗಳು ನ್ಯಾಯ ಸಿಗುವ ಅವಕಾಶಗಳು ಹೆಚ್ಚು. ಅನೇಕ ಮಹಿಳಾ ಸಂಘಟನೆಗಳು ತಮ್ಮ ಹಕ್ಕಿಗಾಗಿ ನಡೆಸಿದ ಪ್ರತಿಭಟನೆ ಯಶಸ್ವಿಯಾಗಿರುವಂತಹ ಅನೇಕ ಘಟನೆಗಳು ನಮ್ಮ ದೇಶದಲ್ಲಿ ಇವೆ.
ಉತ್ತರ ಪ್ರದೇಶದ ಚಾಮೋಲಿ ಜಿಲ್ಲೆಯಲ್ಲಿ 1974ರಲ್ಲಿ ಅಲ್ಲಿನ ಮಹಿಳೆಯರು ಗೌರಾದೇವಿಯವರ ನಾಯಕತ್ವದಲ್ಲಿ ಚಿಪ್ಕೊ ಚಳವಳಿಯನ್ನು ಹುಟ್ಟುಹಾಕಿ ಸಾವಿರಾರು ಮರಗಳನ್ನು ಪರಿಸರ-ವಿನಾಶಕ ಶಕ್ತಿಗಳಿಂದ ರಕ್ಷಿಸುವಲ್ಲಿ ಸಫಲರಾಗಿರುತ್ತಾರೆ. 1877ರಲ್ಲಿ “ಮಹಿಳಾ ಮಂಗಳ ದಾಸ” ಸಂಘಟನೆಯ ಮೂಲಕ ಬಾಚನಿ ದೇವಿ ಅವರ ನಾಯಕತ್ವದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಈಗಿನ ಉತ್ತರಾಖಂಡದಲ್ಲಿರುವ ಕಾಡನ್ನು ಪರಿಸರ ವಿರೋಧಿ ಯೋಜನೆಯಿಂದ ಹೋರಾಟದ ಮೂಲಕ ಸಂರಕ್ಷಿಸಿದರು.
ಕರ್ನಾಟಕದಲ್ಲಿ “ಅಪ್ಪಿಕೋ” ಎನ್ನುವ ಚಳುವಳಿಯನ್ನು ಮಾಡಿ ಇಲ್ಲಿನ ಮಹಿಳೆಯರು ಕೈಗಾರಿಕೋದ್ಯಮಿಗಳ ಕಪಿಮುಷ್ಟಿಯಿಂದ ಸಾವಿರಾರು ಮರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವಂತಹ ಘಟನೆಗಳನ್ನು ಮಹಿಳೆಯರು ಸ್ಪೂರ್ತಿಯಾಗಿ ತೆಗೆದುಕೊಳ್ಳಕೊಳ್ಳಬಹುದು. ಸಮಾಜಸೇವಕಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‍ರವರು ಬಡಜನರನ್ನು ಬೀದಿಗೆ ತರುವ ಹಲವಾರು ಪರಿಸರ-ವಿನಾಶಕಾರಿ ಯೋಜನೆಗಳ ವಿರುದ್ಧ ಪ್ರತಿಭತಿಸಲು ದಮನಿತರ ಧ್ವನಿಯಾಗಿ ನಿಂತಿರುವುದನ್ನು ಮಹಿಳೆಯರು ಮನಗಾಣಬೇಕು. ಈ ಸಂದರ್ಭದಲ್ಲಿ ತಮ್ಮ ಲೇಖನ, ಭಾಷಣ ಮತ್ತು ಹೋರಾಟಗಳ ಮೂಲಕ ಪರಿಸರ-ವಿರೋಧಿ ಯೋಜನೆಗಳ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರ ಕಣ್ಣುತರೆಸಿದ್ದ ಡಾ. ಕುಸುಮ ಸೊರಬ ಅವರನ್ನು ಮತ್ತು ಅವರ ಸೇವೆಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಈ ರೀತಿ ಪರಿಸರ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಶೋಧನೆ, ಚಳವಳಿ, ನಾಯಕತ್ವ, ಮತ್ತು ಸ್ವಯಂಸೇವೆಯ ಮೂಲಕ ಬಹಳಷ್ಟು ಕೊಡುಗೆ ನೀಡಿದ ಅನೇಕ ಮಹಾನ್ ಮಹಿಳೆಯರು ಇದ್ದಾರೆ.
ನಿರ್ಮಲವಾದ ಪರಿಸರ ಉಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು
ಪ್ರತಿಯೊಂದು ಮೂಲಭೂತ ಅವಶ್ಯಕತೆಗಳನ್ನು ನೀಗಿಸುವುದು ಮಾತ್ರವಲ್ಲ ನಮ್ಮ ಉತ್ತಮವಾದ ಮಾನಸಿಕ ದೈಹಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪರಿಸರವನ್ನು ಮಾಲಿನ್ಯರಹಿತವಾಗಿ ಕಾಪಾಡುವಲ್ಲಿ ಮಹನೀಯರು ಮಹಿಳೆಯರು ಎನ್ನುವ ಭೇದ ಭಾವವಿಲ್ಲದೆ ಅದರಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರ ಸಂರಕ್ಷಣೆಯ ವಿಷಯ ಬಂದಾಗ ಅದು ವಿದ್ಯಾರ್ಥಿಗಳ ಪಾತ್ರ, ಸರ್ಕಾರದ ಪಾತ್ರ, ಸಾರ್ವಜನಿಕರ ಪಾತ್ರ, ಹೀಗೆ ವಿಂಗಡಣೆ ಮಾಡಿಕೊಂಡು ಚರ್ಚಿಸುವುದು ಸಾಮಾನ್ಯ. ಆದರೆ ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರು ಹೇಗೆ ಕೈಜೋಡಿಸಬಹುದು ಎನ್ನುವುದರ ಬಗ್ಗೆ ಜಿಜ್ಞಾಸೆ ಕಡಿಮೆ. ಪ್ರಾಯೋಗಿಕವಾಗಿ ನೋಡಿದರೆ ಮಹಿಳೆಯರು ತಮ್ಮದೇ ಆದ ನೆಲೆ ಮತ್ತು ಪರಿಮಿತಿಯಲ್ಲಿ ನಿರ್ಮಲವಾದ ಪರಿಸರವನ್ನು ಉಳಿಸುವಲ್ಲಿ ಮತ್ತು ನಿರ್ಮಾಣ ಮಾಡುವಲ್ಲಿ ಪರಿಣಾಮಕಾರಿಯಾಗಿ ಅನೇಕ ವಿಧದಲ್ಲಿ ಸೇವೆಯನ್ನು ಮಾಡಲು ಅವಕಾಶವಿದೆ.
‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಒಬ್ಬ ವ್ಯಕ್ತಿಯ ಆಚಾರ ವಿಚಾರ ಆ ವ್ಯಕ್ತಿಯ ಹೆತ್ತವರ, ಮುಖ್ಯವಾಗಿ ತಾಯಿಯು ಆತ/ಆಕೆಯನ್ನು ಬೆಳೆಸಿದ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಹೆಣ್ಣು ಜೀವನದ ವಿವಿಧ ಹಂತಗಳಲ್ಲಿ ತಾಯಿಯ ಸ್ಥಾನವನ್ನು ತುಂಬುತ್ತಾರೆ. ಈ ಸ್ಥಾನದಲ್ಲಿರುವಾಗ ಮಕ್ಕಳಿಗೆ ಭಾಷೆ ಮತ್ತು ಶಿಷ್ಟಾಚಾರವನ್ನು ಕಲಿಸುವ ಜವಾಬ್ದಾರಿಯನ್ನು ಹೊತ್ತಿರುವ ತಾಯಂದಿರು ಮುಗ್ಧಮನಸ್ಸಿನ ತಮ್ಮ ಮಕ್ಕಳಿಗೆ ಪರಿಸರವನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿದೆ. ಉದಾಹರಣೆಗೆ, ಚಿಕ್ಕಮಕ್ಕಳು ಬಣ್ಣಬಣ್ಣದ ಚಿಟ್ಟೆಗಳಿಗೆ ಆಕರ್ಷಿತರಾಗಿ ಅವುಗಳನ್ನು ಹಿಡಿದು ಆಡುವುದು (ಹೀಗೆ ಮಾಡುವಾಗ ಚಿಟ್ಟೆಯು ಅರೆಜೀವ ಸ್ಥಿತಿಗೆ ಬರಬಹುದು ಅಥವಾ ಸಾಯಲೂಬಹುದು), ಗಿಡಗಳ ಮೊಗ್ಗನ್ನು ಚಿವುಟುವುದು, ಕಸಕಡ್ಡಿಗಳನ್ನು ಅಲ್ಲಲ್ಲೇ ಬಿಸಾಡುವಂತಹ ತಪ್ಪುಗಳನ್ನು ಅರಿವಿಲ್ಲದೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ತಾಯಿಯು ತನ್ನ ಮಗುವಿಗೆ ಹಾಗೆ ಮಾಡುವುದು ತಪ್ಪು ಎಂದು ತಿಳಿಹೇಳಿ ಜೀವಿಗಳ ಮತ್ತು ಪರಿಸರದ ಮಹತ್ವವನ್ನು ಅವರಿಗೆ ಅಕ್ಕರೆಯಿಂದ ವಿವರಿಸಿದರೆ ಅಥವಾ ಕತೆಯ ಮೂಲಕ ಮನದಟ್ಟು ಮಾಡುವುದರ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ, ಪ್ರೀತಿ ಬರುವಂತೆ ಪ್ರೇರೇಪಿಸಬಹುದು.
ಈ ಕ್ರಿಯೆಯು ಎರಡು ದೃಷ್ಟಿಕೋನದಿಂದ ಪರಿಣಾಮಕಾರಿಯಾಗಿರುತ್ತದೆ. ಒಂದು, ನಾವು ಯಾವುದನ್ನು ಗಮನಿಸುತ್ತೆವೆಯೋ, ಅದರ ಬಗ್ಗೆ ಅರಿಯಲು ಪ್ರಯತ್ನಿಸುತ್ತೇವೆ. ಯಾವುದರ ಅಗತ್ಯತೆಯ ಬಗ್ಗೆ ಅರಿತಿರುತ್ತೇವೆಯೋ, ಅದನ್ನು ಪ್ರೀತಿಸುತ್ತೇವೆ; ಯಾವುದನ್ನು ಪ್ರೀತಿಸುತ್ತೇವೆಯೋ ಅದನ್ನು ರಕ್ಷಿಸುತ್ತೇವೆ. ಇನ್ನೊಂದು, ಬಾಲ್ಯಾವಸ್ಥೆಯಲ್ಲಿ ಮನದಟ್ಟಾಗುವ ವಿಷಯಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತದೆ ಎನ್ನುವುದು ಮನಶಾಸ್ತ್ರಿಕವಾಗಿ ಕಂಡುಕೊಂಡ ಸತ್ಯ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”. ಹಾಗಾಗಿ, ಮಹಿಳೆಯರು ತಾಯಿಯ ಶ್ರೇಷ್ಠ ಸ್ಥಾನದಲ್ಲಿರುವಾಗ ಭವಿಷ್ಯದ ದೃಷ್ಟಿಯಿಂದ ಪರಿಸರವನ್ನು ಪ್ರೀತಿಸುವ ಮತ್ತು ಕಾಪಾಡುವ ಸುಸಂಸ್ಕೃತ ಪ್ರಜೆಗಳನ್ನು ತಯಾರು ಮಾಡುವಂತಹ ಅತ್ಯುನ್ನತ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಇರುತ್ತದೆ.
ಮಹಿಳೆಯರು ವೈಯಕ್ತಿಕವಾಗಿ ಅಥವಾ ಸಂಘಟನೆಯ ಮೂಲಕ ಪರಿಸರ-ಸ್ನೇಹಿ ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಬಹುದು. ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಆಧುನಿಕ ಕೃಷಿ ಪದ್ಧತಿಯಲ್ಲಿ ಉತ್ತಮ ಫಸಲನ್ನು ಪಡೆಯಲು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದು ಸಾಮಾನ್ಯ. ಆದರೆ ಅದರಿಂದ ಪರಿಸರದ ಮೇಲೆ ಅಷ್ಟೇ ದುಷ್ಪರಿಣಾಮಗಳೂ ಇವೆ. ಯಥೇಚ್ಛವಾಗಿ ರಸಗೊಬ್ಬರವನ್ನು ಬಳಸುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ನಾಶವಾಗಿ ಮಣ್ಣಿನ ಫಲವತ್ತತೆ ಕ್ರಮೇಣ ಕಳೆದು ಕೃಷಿಭೂಮಿ ಬರಡಾಗುತ್ತದೆ. ಇದಕ್ಕೆ ಒಂದು ಉತ್ತಮ ಪರಿಹಾರ ಸಾವಯವ ಗೊಬ್ಬರ ಉತ್ಪಾದನೆ,
ಕಸವನ್ನು ಸಿಕ್ಕಿದಲ್ಲಿ ಎಸೆಯುವುದು, ಕಸದ ರಾಶಿಯನ್ನು ಸುಡುವುದು ವಾಯು, ಜಲ ಮತ್ತು ನೆಲ ಮಾಲಿನ್ಯಗಳಿಗೆ ಕಾರಣವಾಗಿ ಪರಿಸರಕ್ಕೆ ಮಾರಕವಾಗುತ್ತದೆ. ತ್ಯಾಜ್ಯಗಳನ್ನು ಸುಡುವ ಮೂಲಕ ಪರಿಸರಕ್ಕೆ ಹಾನಿಯುಂಟುಮಾಡುವ ಅನೇಕ ಹಸಿರುಮನೆ ಅನಿಲಗಳು ಮತ್ತು ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಒಂದು ಪ್ರಮುಖ ಸವಾಲು. ಮಹಿಳೆಯರು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಬಹುದು. ಮನೆಯಲ್ಲಿ ಉತ್ಪನ್ನವಾಗುವ ಹಸಿಕಸ ಮತ್ತು ಒಣಕಸಗಳನ್ನು ಪ್ರತ್ಯೇಕ ವಾಗಿ ಶೇಖರಿಸಿ ಹಸಿಕಸವನ್ನು ಮನೆಯ ಹಿತ್ತಲಿನಲ್ಲಿ ಮಡಿಕೆ ಅಥವಾ ಎರೆಗೊಬ್ಬರ ತಯಾರಿಕೆಗೆ ಒಣಕಸಗಳನ್ನು ಮರುಚಕ್ರೀಕರಣ ಕ್ರಿಯೆಗೆ ಅಲ್ಲಲ್ಲಿನ ಗ್ರಾಮ ಪಂಚಾಯತ್, ಪುರಸಭೆ, ನಗರಸಭೆಯ ತ್ಯಾಜ್ಯ ವಿಲೇವಾರಿಯ ಪ್ರಕ್ರಿಯೆಗೆ ಕೈಜೋಡಿಸಬಹುದು. ಈ ನಿಟ್ಟಿನಲ್ಲಿ ನಮ್ಮ ದೇಶದ ಅನೇಕ ಕಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಿಂದ ಸಾಕಷ್ಟು ಯಶಸ್ಸು ಕಂಡಿರುವುದು ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಕೊಡುಗೆ ಎಷ್ಟು ಪರಿಣಾಮಕಾರಿ ಎಂಬುವುದಕ್ಕೆ ಇದು ಒಂದು ಪಥ್ಯಕ್ಷ ಸಾಕ್ಷಿ.
ಪರಿಸರಸ್ನೇಹಿ ಚಟುವಟಿಕೆ
ಇಂತಹ ಪರಿಸರಸ್ನೇಹಿ ಚಟುವಟಿಕೆಗಳ ಬಗ್ಗೆ ಕೆಲವು ಸಂಘಸಂಸ್ಥೆಗಳು ನೀಡುವ ತರಬೇತಿಯ ಪ್ರಯೋಜನವನ್ನು ಮಹಿಳೆಯರು ಪಡೆದು ಅದರಲ್ಲಿ ಆಸಕ್ತಿ ತೋರಿಸಬೇಕು. ಮಹಿಳೆಯರು ಹೀಗೆ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ. ಸುತ್ತಮುತ್ತಲಿನ ಪರಿಸರವನ್ನು ಕಸಕಡ್ಡಿಗಳಿಂದ ಮುಕ್ತವಾಗಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಉತ್ತಮ ಫಸಲನ್ನು ಪಡೆಯಲು ಸಹಾಯವಾಗುತ್ತದೆ. ಮಾತ್ರವಲ್ಲ. ಹೀಗೆ ತಯಾರಿಸಿದ ಗೊಬ್ಬರಕ್ಕೆ ಮರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದರಿಂದ ತಕ್ಕಮಟ್ಟಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು.
ಮನೆಯ ಸುತ್ತಲೂ ಉದ್ಯಾನವನ್ನು ನಿರ್ವಹಿಸುವುದು, ಬೇಸಿಗೆಯಲ್ಲಿ ಪಕ್ಷಿಗಳಿಗೆ ಒಂದು ಚೊಂಬು ನೀರನ್ನು ಇಡುವುದು, ಶಾಪಿಂಗ್‌ಗೆ ಹೋಗುವಾಗ ಪಾಲಿಥೀನ್ ಕ್ಯಾರಿಬ್ಯಾಗ್ ಬದಲಿಗೆ ಮರುಬಳಕೆ ಮಾಡಬಹುದಾದ ಚೀಲಗಳನ್ನು ತೆಗೆದುಕೊಳ್ಳುವುದು. ಇಂತಹ ಪರಿಸರ-ಸ್ನೇಹಿ ಚಟುವಟಿಕೆಗಳನ್ನು ಮಹಿಳೆಯರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಅಮೂಲ್ಯ ಕೊಡುಗೆ ನೀಡಬಹುದು. “ಹನಿ- ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬ ನಾಣುಡಿಯಂತೆ ಮಹಿಳೆಯರ ಸಣ್ಣ ಚಟುವಟಿಕೆಗಳು ಪರಿಸರ ಸಂರಕ್ಷಣೆಗೆ ಪರಿಣಾಮಕಾರಿಯಾಗಿ ನೆರವಾಗುತ್ತದೆ.
ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅನೇಕ ಮಹಿಳಾ ಸಂಘಟನೆಗಳು ಅಸ್ತಿತ್ವದಲ್ಲಿವೆ. ವನಮಹೋತ್ಸವ, ಪ್ಲಾಸ್ಟಿಕ್ ನಿರ್ಮೂಲನೆ, ಗ್ರಾಮೀಣ ಮಹಿಳೆಯರಿಗೆ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಅರಿವು ಮೂಡಿಸುವಿಕೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಮಹಿಳಾ ಸಂಘಟನೆಗಳು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಕೊಳ್ಳಬಹುದು. ಇದಕ್ಕೆ ಒಂದು ಮಾದರಿ ಎನ್ನುವಂತೆ, ಕೀನ್ಯಾ ದೇಶದ ವಾಂಗರಿ ಮಾಥಯಿಯವರು ಗ್ರೀನ್ ಬೆಲ್ಟ್ ಎನ್ನುವ ಚಳವಳಿಯ ಮೂಲಕ ಮಹಿಳೆಯರನ್ನು ಒಗ್ಗೂಡಿಸಿ ಸುಮಾರು 10 ಮಿಲಿಯನ್ ಗಿಡಗಳನ್ನು ನೆಟ್ಟು ಪೋಷಿಸಿ ಸದಾ ಬರಗಾಲದಿಂದ ನರಳುತ್ತಿದ್ದ ಅಲ್ಲಿನ ಜನರ ಹಸಿವನ್ನು ನೀಗಿಸಿದ ದಿಟ್ಟ ಕಾರ್ಯ ಒಂದು ಮಾದರಿ. ಅವರ ಈ ಮಹಾನ್ ಸೇವೆಯನ್ನು ಪರಿಗಣಿಸಿ, ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ಮಾತ್ರವಲ್ಲ, 2004ರಲ್ಲಿ ನೋಬೆಲ್ (Nobel Peace Prize) ಪಾರಿತೋಷಕವನ್ನು ಅವರಿಗೆ ನೀಡಲಾಯಿತು. ಇದೇ ರೀತಿಯಲ್ಲಿ ಇತ್ತೀಚೆಗೆ ಚೀನಾ ಮತ್ತು ಜಪಾನ್ ದೇಶಗಳಲ್ಲಿ ಮಹಿಳಾ ಸಂಘಟನೆಗಳು ದೇಶದಾದ್ಯಂತ ಗಿಡ ಮರಗಳನ್ನು ನೆಟ್ಟು ಪೋಷಿಸಿ ನೈಜ ಹಸಿರುಕ್ರಾಂತಿಯನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ತಲತಲಾಂತರಗಳಿಂದ ನಡೆದುಕೊಂಡು ಬಂದಂತಹ ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಧಾರ್ಮಿಕ ಚೌಕಟ್ಟನ್ನು ಹಾಕಿ ಸಮಾಜದಲ್ಲಿ ಮಹಿಳೆಯರನ್ನು ಅಬಲೆ ಎನ್ನುವ ಹಣೆಪಟ್ಟಿ ಕಟ್ಟಿ ಮೂಲೆಗುಂಪು ಮಾಡಿರುವುದರಿಂದ, ಇಂದು ಎಲ್ಲಾ ಧರ್ಮದ ಮಹಿಳೆಯರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಅವಕಾಶ ವಂಚಿತರಾಗಿರುವುದನ್ನು ಕಾಣಬಹುದು. ಹಾಗಾಗಿ, ಪರಿಸರ-ವಿನಾಶಕ ಯೋಜನೆಗಳು ಅವರ ಬದುಕಿನಲ್ಲಿ ತಂದಿರುವ ಕಷ್ಟ-ಬವಣೆಗಳನ್ನು ಮೌನವಾಗಿ ಅನುಭವಿಸುತ್ತಿದ್ದಾರೆ. ಜೀವಶಾಸ್ತ್ರೀಯವಾಗಿ, ದೈಹಿಕವಾಗಿ, ಮಾನಸಿಕವಾಗಿ ಮಹಿಳೆಯರು ಪುರುಷರಿಗಿಂತ ಭಿನ್ನವಾಗಿರಬಹುದು. ಆದರೆ ಮಹಿಳೆಯರು ಕೂಡ ನಾಗರಿಕ ಸಮಾಜದಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವಲ್ಲಿ ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಮಾನ ಪಾತ್ರವನ್ನು ವಹಿಸಬಲ್ಲರು.
ಇತ್ತೀಚಿನ ದಿನಗಳಲ್ಲಿ ಲಿಂಗತಾರತಮ್ಯದ ವಿರುದ್ಧ ಮತ್ತು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದರ ಪರವಾಗಿ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಧ್ವನಿ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸುವಾಗ ಮಹಿಳೆಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮತ್ತು ಕಾರ್ಯರೂಪಕ್ಕೆ ತರಲು ಸಮಾನ ಅವಕಾಶಗಳನ್ನು ನೀಡಬೇಕು. ಪರಿಸರ-ವಿನಾಶಕ ಯೋಜನೆಗಳಿಂದ ಮಹಿಳೆಯರ ದೈನಂದಿನ ಬದುಕಿನಲ್ಲಿ ಮತ್ತು ಅವರ ಆರೋಗ್ಯದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ/ಅಧ್ಯಯನಗಳು ನಡೆಯಬೇಕು, ಮತ್ತು ಇಂತಹ ಅಧ್ಯಯನಗಳಲ್ಲಿ ಭಾಗಿಯಾಗಲು ಮಹಿಳೆಯರಿಗೆ ಅವಕಾಶ ಪ್ರಾಶಸ್ತ್ಯಗಳನ್ನು ನೀಡಬೇಕು. ಇಲ್ಲಿ ಅವಕಾಶಗಳನ್ನು ನೀಡಬೇಕು ಎನ್ನುವುದಕ್ಕಿಂತ ಅವಕಾಶಗಳನ್ನು ಮಹಿಳೆಯರೇ ಪಡೆದುಕೊಳ್ಳಬೇಕು ಅನ್ನುವುದು ಹೆಚ್ಚು ಸಮಂಜಸ. ಒಂದೊಮ್ಮೆ ಅದಕ್ಕೆ ಅವಕಾಶ ಇಲ್ಲದೇ ಇದ್ದರೆ ಅದಕ್ಕಾಗಿ ಹೋರಾಡುವುದರಲ್ಲಿ ನ್ಯಾಯವಿದೆ. ಮಹಿಳೆಯರಿಗೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪರಿಸರದ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ಅವರು ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಶಿಕ್ಷಣ/ಅರಿವು ಮೂಡಿಸುವಂತಹ ಕೆಲಸಗಳು ಇನ್ನಷ್ಟೂ ಹೆಚ್ಚಾಗಬೇಕು.
ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಸಂಘಟನೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಬೇಕು. ಮಹಿಳೆಯರು, ಪುರುಷ-ಪ್ರಧಾನ ಸಮಾಜ ಹೊರಿಸಿರುವ ‘ಅಬಲೆಯರು’ ಎನ್ನುವ ಆರೋಪವನ್ನು ಒಪ್ಪಿಕೊಂಡು ತಮ್ಮ ಬದುಕನ್ನೇ ಬುಡಮೇಲು ಮಾಡುತ್ತಿರುವ ಪರಿಸರ-ವಿನಾಶಕಾರಿ ಶಕ್ತಿ ವ್ಯವಸ್ಥೆಗಳ ವಿರುದ್ಧ ಧ್ವನಿಯೆತ್ತದೇ ಮೌನವಾಗಿದ್ದರೆ ಮುಂದೊಂದು ದಿನ ಇನ್ನಷ್ಟು ಸಂಕಷ್ಟ ಬವಣೆಗಳನ್ನು ಅನುಭವಿಸಬೇಕಾಗಬಹುದು. ಆದುದರಿಂದ, ಅನ್ಯಾಯದ ವಿರುದ್ಧ ಹೋರಾಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಿಕೆ ಮತ್ತು ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಹಿಳೆಯರು ತಮ್ಮ ಜೀವನವನ್ನು ಇನ್ನಷ್ಟೂ ಕ್ಷೇಮಮಯವಾಗಿಸಿಕೊಳ್ಳಬೇಕು.
‘ಸಮ ಪಾಲು, ಸಮ ಬಾಳು’ ಎಂಬ ತತ್ವವನ್ನು ಅಳವಡಿಸಿಕೊಂಡು ಬದುಕಲು ಪ್ರತಿಯೊಂದನ್ನು ನೀಡುವ ಪರಿಸರವನ್ನು ಸಂರಕ್ಷಿಸುವ ಮಹತ್ತರ ಕಾರ್ಯದಲ್ಲಿ ನಾವೆಲ್ಲರೂ ಜಂಟಿಯಾಗಿ ಭಾಗಿಯಾಗೋಣ.