ಸಿನಿಮಾ ಇತಿಹಾಸ ಹೇಳುವ ‘ಚಿತ್ರಪಥ’ ಪೋರ್ಟಲ್ ಶನಿವಾರ ಲೋಕಾರ್ಪಣೆ ಗೊಳ್ಳಲಿದೆ. ಹಿರಿಯ ಪತ್ರಕರ್ತ ಶಶಿಧರ ಚಿತ್ರದುರ್ಗ ಈ ಪೋರ್ಟಲ್ ರೂಪಿಸಿದ್ದಾರೆ.
ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ – ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು – ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ.ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದರ ಜೊತೆಗೆ ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ ಎಂದು ಶಶಿಧರ ತಿಳಿಸಿದ್ದಾರೆ.
‘ನಾಸ್ಟಾಲ್ಜಿಯಾ’, ‘ಚಿತ್ರ-ಕಥೆ’, ‘ಶೂಟಿಂಗ್ ಸೋಜಿಗ’, ‘ಮಾಹಿತಿ – ವಿಶೇಷ’, ‘ನೆನಪು’, ‘ಪೋಸ್ಟರ್ ಮಾಹಿತಿ’, ‘ಅತಿಥಿ ಅಕ್ಷರ’ ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್ ಆಗಿ ಮಾಹಿತಿ ನೀಡುವ ಪ್ರಯತ್ನ. ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ.
ಭವಾನಿ ಲಕ್ಷ್ಮೀನಾರಾಯಣ: ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ-ನಟಿಯರು, ತಂತ್ರಜ್ಞರಿಗೆ ಅವರು ‘ಸ್ಟಾರ್ ಫೋಟೋಗ್ರಾಫರ್’! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು. ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್‍ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.
ಪ್ರಗತಿ ಅಶ್ವತ್ಥನಾರಾಯಣ :
ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು `ಪ್ರಗತಿ’ಯ ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ `ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ `ಪ್ರೇಮ ಪ್ರೇಮ ಪ್ರೇಮ’. `ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. `ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೋಗ್ರಾಫರ್‍ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.
‘ಚಿತ್ರಪಥ’ ಅನಾವರಣ
ಮಾರ್ಚ್ 6ರಂದು ಶನಿವಾರ ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ‘ಚಿತ್ರಪಥ’ ಅನಾವರಣಗೊಳಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್, ಚಿತ್ರಸಾಹಿತಿ ಕವಿರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು.
ಲರ್ನಿಂಗ್ ಲೈಸೆನ್ಸ್ ಸೇರಿದಂತೆ 18 ವಿವಿಧ ಸೇವೆಗಳಿಗೆ ಇನ್ನು ಮುಂದೆ ಆರ್ ಟಿ ಓ ಕಚೇರಿಗೆ ಹೋಗಬೇಕಿಲ್ಲ. ಈ ಸೇವೆಗಳು ಆನ್ ಲೈನ್ ಮೂಲಕವೇ ಸಿಗಲಿದೆ. ಈ ಬಗ್ಗೆ ಮಾರ್ಚ್ 4 ರಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್ ಪ್ರಕಟಣೆ ಮಾಡಿದೆ.
ಲರ್ನಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ನ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ಮಾಡಲಾಗಿದೆ. ಆಧಾರ್ ಅಥೆಂಟಿಕೇಷನ್ ಮಾಡುವ ಮೂಲಕ ಈ ಸೇವೆಗಳನ್ನು ನಾಗರಿಕರು ಪಡೆಯಬಹುದಾಗಿದೆ.
ಆನ್ ಲೈನ್ ಮೂಲಕವೆ ಪಡೆಯಬಹುದಾದ ಆನ್ ಲೈನ್ ಸೇವೆಗೆಳು ಹೀಗಿವೆ.
1. Learner’s License can now be availed completely online
2. Duplicate Driving License
3. Renewal of Driving License for which test of competence to drive is not required
4. Change of Address in Driving License and Certificate of Registration
5. Issue of International Driving Permit
6. Temporary Registration of motor vehicle
7. Registration of motor vehicle with a fully built body
8. Application for issue of duplicate Certificate of Registration
9. Application for Grant of NOC for Certificate of Registration
10. Surrender of Class of Vehicle from License
11. Notice of Transfer of Ownership of motor vehicle
12. Application for Transfer of Ownership of motor vehicle
13. Intimation of Change of Address in Certificate of Registration
14. Application for registration for driver training from Accredited Driver training centre
15. Application for registration of motor vehicle of Diplomatic Officer
16. Application for assignment of Fresh Registration Mark of motor vehicle of Diplomatic Officer
ಜ್ಯೋತಿಷ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಜಾತಿ, ವರ್ಗ ಭೇದವೆನ್ನದೆ “ಜ್ಯೋತಿಷ್ಯ” ಹೇಳುವ ಪರಿಹಾರ ಆದಿ-ಅನಾದಿಯಿಂದಲೂ ನಮ್ಮ ಪರಂಪರೆಯಲ್ಲಿ ಸಾಗಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರವನ್ನು ಈಗ ಎಲ್ಲರೂ ಕಲಿಯಬಹುದಾಗಿದೆ. ಈ ಅಪೂರ್ವ ಶಾಸ್ತ್ರವನ್ನು ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಹಲವು ಸಫಲ ಪ್ರಯತ್ನಗಳು ನಡೆದಿವೆ.
ಜ್ಯೊತಿಷ್ಯಕ್ಕೆ ಸಂಬಂಧಿಸಿದಂತೆ ಹಲವು ಗ್ರಂಥಗಳು ಹಾಗೂ ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಅವರವರ ಅಗತ್ಯ, ಆವಶ್ಯಕತೆ, ಬೇಡಿಕೆಗಳಿಗೆ ತಕ್ಕಂತೆ ಕೋರಿಬಂದ ಸಂಗತಿಗಳಿಗೆ ಜ್ಯೊತಿಷ್ಯ ವಿದ್ವಾಂಸರು ‘ಜ್ಯೋತಿಷ್ಯ’ ತಿಳಿಸಿ ಕೇಳುಗರ ಕುತೂಹಲ ತಣಿಸಿದ್ದಾರೆ.
ದಾವಣಗೆರೆಯ ಜ್ಯೋತಿಷಿ ಡಾ|| ಸಿ ಕೆ ಆನಂದತೀರ್ಥಾಚಾರ್ ಅವರು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಪಾದಿಸಿರುವ 250 ಪುಟಗಳ “ಸಂಸ್ಕಾರ ಸೌರಭ” ಕೃತಿ ಈಚೆಗೆ ಶ್ರೀ ಭಾಸ್ಕರಾಚಾರ್ಯ ಜ್ಯೊತಿರ್ವಿದ್ಯಾ ಪ್ರತಿಷ್ಠಾನ, ದಾವಣಗೆರೆ, ಇವರಿಂದ ಪ್ರಕಟವಾಗಿ, ಸಮಾರಂಭವೊಂದರಲ್ಲಿ ಲೋಕಾರ್ಪಣೆಗೊಂಡಿದೆ. ಇದು ವಿಶೇಷವಾಗಿ ಶೋಡಷ ಸಂಸ್ಕಾರಗಳು ಮತ್ತು ಮುಹೂರ್ತದ ಮಹತ್ವವನ್ನು ವಿಶ್ಲೇಶಿಸಿರುವ ಗ್ರಂಥವಾಗಿದೆ. ಜ್ಯೋತಿಷ್ಯ ಶಾಸ್ತ್ರವು ಎಲ್ಲಾ ಕಾಲದಿಂದಲೂ ಗೌರವಕ್ಕೆ ಪಾತ್ರವಾಗಿದೆ ಎಂದು ಸಂಗ್ರಹಕಾರರು ಆರಂಭದ ನುಡಿಯಲ್ಲಿ ಹೇಳಿಕೊಂಡಿದ್ದಾರೆ.
ಕರೋನಾ ಲಾಕ್ಡೌನ್ ಅವಧಿಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ತಾವುಗಳು ಜ್ಯೋತಿಷ್ಯ ವಿದ್ಯಾರ್ಥಿಗಳಿಗೆ ಬೋಧಿಸಿದ ಪಾಠಗಳು ಈ ಗ್ರಂಥದ ರೂಪವನ್ನು ಪಡೆದಿವೆ ಎಂದೂ ಅವರು ತಿಳಿಸಿದ್ದಾರೆ. ಗ್ರಂಥದ ಕರಡನ್ನು ತಜ್ಞರಿಂದ ಮೇಲು-ಪರಿಶೀಲನೆ ಮಾಡಿಸಿ ಅವರ ಮೆಚ್ಚುಗೆಯ ನುಡಿಗಳು ಹಾಗೂ ಪ್ರೋತ್ಸಾಹದ ನಂತರ ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ ಸಂಗತಿ. ಜ್ಯೋತಿಷ್ಯ ಶಾಸ್ತ್ರದ ತತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಈ ಪ್ರಯತ್ನವನ್ನು ಮಂತ್ರಾಲಯದ ಶ್ರೀಗಳು ಹರಿಸಿ-ಅನುಗ್ರಹಿಸಿದ್ದಾರೆ.
ವಿವಿಧ ಸಂಸ್ಕಾರಗಳ ಕಿರು ಪರಿಚಯ ಹಾಗೂ ಹಲವಾರು ಸಂದರ್ಭಗಳಲ್ಲಿ ಮುಹೂರ್ತ ನಿರ್ಧರಿಸುವ ಅಂಶಗಳು ಗ್ರಂಥದ 26 ಅಧ್ಯಾಯಗಳಲ್ಲಿ ಸ್ಥಾನ ಪಡೆದಿವೆ. ‘ಕಾಲಗಣನೆ’ ಪಂಚಾಂಗದಲ್ಲಿ ಪ್ರಮುಖವಾದುದು. ವಿಕ್ರಮ ರಾಜನಿಂದ ಆರಂಭವಾದ “ವಿಕ್ರಮ ಶಖೆ” ಮುಗಿದು ಈಗ ಕಾಲಗಣನೆಯ ಲೆಕ್ಕಾಚಾರಕ್ಕೆ ಹಿಂದೂ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ “ಶಾಲಿವಾಹನ ಶಖೆ” ಪ್ರಾರಂಭವಾದ ಹಿನ್ನೆಲೆಯನ್ನು ಇಲ್ಲಿ ಕಥಾ ರೂಪದಲ್ಲಿ ವಿವರಿಸಿ ಮುನ್ನಡೆಯಲಾಗಿದೆ.
ಶೋಡಷ ಸಂಸ್ಕಾರಗಳು, ಗರ್ಭದಾನದ ಮಹತ್ವ, ನಾಮಕರಣ, ಕರ್ಣ ಛೇದನ, ಅಕ್ಷರಾಭ್ಯಾಸ, ಉಪನಯನ, ವಿವಾಹ, ಗೃಹ ವಾಸ್ತು, ಪ್ರಯಾಣಕ್ಕೆ ಶುಭ ಮುಹೂರ್ತದಿಂದ ಹಿಡಿದು ಅಂತೇಷ್ಠಿ (ಮರಣ ವಿಚಾರ) ವರೆಗೆ ಓದಿಕೊಂಡು ಹೋಗುವ ಹಾಗೆ ಆಕರ್ಷಿತವಾಗಿ ಆಚಾರ್ಯರು ಯಶಸ್ವಿ ಪ್ರಯತ್ನ ಮಾಡಿದ್ದಾರೆ. ಈ ಸಂಗತಿಗಳು ಪ್ರತಿ ವ್ಯಕ್ತಿಯ ಪ್ರತಿ ಕುಟುಂಬದ “ಜ್ಯೋತಿಷ್ಯ” ಅಗತ್ಯತೆಗಳನ್ನು ಬಹುಮಟ್ಟಿಗೆ ಅವುಗಳ ಪ್ರಾಥಮಿಕ ಹಂತದಲ್ಲಿ ತಿಳಿಸುವುದರಿಂದ ಈ ಕೃತಿ ಒಂದು ಕೈಪಿಡಿಯಂತೆ ಸಹಾಯಕವಾಗಿದ್ದು ಪ್ರತಿ ಮನೆಯಲ್ಲಿ ಇರಬೇಕಾದ ಪುಸ್ತಕವೆಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ.
ನಮ್ಮ ಭಾರತ ಕೃಷಿ ಪ್ರಧಾನವಾದ ದೇಶ.ಕೃಷಿ ದೇಶದ ಜೀವಾಳ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ‘ಮುಹೂರ್ತ’ಗಳು ಎಂಬ ಒಂದು ಪ್ರತ್ಯೇಕ ಅಧ್ಯಾಯವೇ ಈ ಕೃತಿಯಲ್ಲಿದೆ (ಪುಟ 156 ರಿಂದ 173). ನಕ್ಷತ್ರಗಳಿಗೂ ಮಳೆಗೂ ಇರುವ ಸಂಬಂಧ, ನಕ್ಷತ್ರಕ್ಕೊಂದು ಗಿಡ ಮೀಸಲಿಟ್ಟಿರುವ ಕಲ್ಪನೆ , ಯಜ್ಞ ಸಂಬಂಧಿ ಸಸ್ಯಗಳು, ವೃಕ್ಷಚ್ಛೇದನದಿಂದ ಆಗುವ ಅನಿಷ್ಠಪ್ರಾಪ್ತಿ ಹಾಗೂ ಹಿಂದುಗಳಿಗೆ ಅತೀ ಪವಿತ್ರವಾದ ತುಳಸಿ ಗಿಡದ ಮಹತ್ವವನ್ನು ವಿಶೇಷವಾಗಿ ವಿವರಿಸಲಾಗಿದೆ. ಹೆಚ್ಚಿನ ಫಸಲು ಇಳುವರಿಗೂ ಹಾಗೂ ಸಂಗೀತಕ್ಕೂ ಇರುವ ವಿದ್ಯಮಾನವನ್ನು ಸಹ ಗುರುತಿಸಲಾಗಿದೆ.
ಗೃಹವಾಸ್ತು- ಈಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ವಾಸ್ತು ಪ್ರಕಾರ ಗೃಹ ನಿರ್ಮಿಸಿ, ದುಖಃ-ಸಂತೋಷ-ಸಂಮೃದ್ಧಿಯಿಂದ ಇರುವ ಬಯಕೆ ಯಾರಿಗೆ ಬೇಡ? ಸುಮಾರು 24 ಪುಟಗಳಲ್ಲಿ ಗೃಹವಾಸ್ತುವಿನ ಮೇಲೆ ಸ್ಮೃತಿಕಾರರು ಬೆಳಕು ಚೆಲ್ಲಿದ್ದಾರೆ.
ಪ್ರಾಯಶಃ ಜ್ಯೋತಿಷ್ಯವನ್ನು ಅತಿ ಹೆಚ್ಚಾಗಿ ಕೇಳುವ ಸಂದರ್ಭವೆಂದರೆ ಅದು ವಿವಾಹದ ವಿಷಯವಾಗಿ ಎಂದು ಹೇಳಬಹುದು. “ವಿವಾಹ ಸಂಸ್ಕಾರ” ಈ ಗ್ರಂಥದ ಅತಿ ದೊಡ್ಡ ಅಧ್ಯಾಯ.
ಈ ಗ್ರಂಥರಚನೆಗಾಗಿ ಆಚಾರ್ಯರು 18 ಆಚಾರ್ಯರ ಕೃತಿಗಳಲ್ಲದೇ, ಈಚಿನ ವಿದ್ವಾಂಸರ ೮ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದು ಆಕರ ಗ್ರಂಥಗಳ ಪಟ್ಟಿಯಿಂದ ತಿಳಿಯುತ್ತದೆ.ಶೋಡಷ ಸಂಸ್ಕಾರಗಳು ಪ್ರತಿ ವ್ಯಕ್ತಿಯ ಉತ್ತರೋತ್ತರ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಮತ್ತು ಜನ್ಮಜಾತ ದೋಷಗಳನ್ನು ನಿವಾರಿಸುವಲ್ಲಿ “ಮುಹೂರ್ತ” ಆಯುಧದಂತೆ ರಕ್ಷೆ ನೀಡುತ್ತದೆ ಎಂಬುದೇ ಈ ಕೃತಿಯ ಒಳ ತಾತ್ಪರ್ಯ.
ಅಂದಹಾಗೆ ಆನಂದತೀರ್ಥಾಚಾರ್ ಜ್ಯೊತಿಷ್ಯದಲ್ಲಿ ಅಪರೂಪವೆನಿಸುವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಹಲವು ವರ್ಷಗಳಿಮ್ದ ಜ್ಯೋತಿಷ್ಯ ತರಗತಿಗಳನ್ನು ನಿರಂತರವಾಗಿ (ಇತರರೊಂದಿಗೆ) ನಡೆಸಿಕೊಂಡು ಬರುತ್ತಿದ್ದು, ಎರಡು ಪುಸ್ತಕಗಳನ್ನು ಈಗಾಗಲೆ ರಚಿಸಿದ್ದಾರೆ.
ರೂ 300/- ಮುಖ ಬೆಲೆಯ ಗ್ರಂಥದ ಪ್ರತಿಗಳು ಕೆಳಗಿನ ವಿಳಾಸದಲ್ಲಿ ಮಾರಾಟಕ್ಕೆ ಲಭ್ಯವಿದೆ.ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನ (ರಿ.)361, ಮೊದಲನೆಯ ಮಹಡಿ, ದೀಕ್ಷಿತ್ ರಸ್ತೆ ಕೆ.ಬಿ ಬಡಾವಣೆ, ದಾವಣಗೆರೆ-577 002
ಇತ್ತ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅತ್ತ ದಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಹತ್ತನೇ ತರಗತಿ (ICSE) ಮತ್ತು 12 ನೇ (ISC) ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.
ಇತ್ತೀಚೆಗೆ ವಾರಣಾಸಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೆ. ಎತ್ತಿ ಹಾಕುತ್ತಿಲ್ಲ, ಧಡ ಢದ ಶಬ್ದ ಇಲ್ಲ. ಟಿಕೆಟ್,ಟಿಕೆಟ್ ಅನ್ನುವ ನಿರ್ವಾಹಕ ಇಲ್ಲ. ಓಡುವ ಮರ ಗಿಡ ಇಲ್ಲ. ರೋಡ್ ಮೊದಲೇ ಇಲ್ಲ. ಕೂತ ಅರ್ಧ ಗಂಟೆಗೇ ಬೇಜಾರು. ಅಭ್ಯಾಸ ಬಲ, ಏನೂ ಇಲ್ಲ ಅಂತ ಗೊತ್ತಿದ್ದೂ ಮೋಹಕವಾಗಿದ್ದ ಕಿಟಕಿಯ ಮುಚ್ಚಳವನ್ನು ತೆಗೆದೆ. ನಮ್ಮ ಬಸ್ಸುಗಳ ಗ್ಲಾಸಿನ ಕಿಟಕಿಯ ಮುಚ್ಚಳ ತೆಗೆದ ಅಭ್ಯಾಸದಂತೆ ಶಕ್ತಿ ಎಲ್ಲಾ ಹಾಕಲು ಪ್ರಯತ್ನಿಸುತ್ತಿದ್ದಂತೆ,ಸರಾಗವಾಗಿ ಅಲ್ಲಿಯ ತನಕ ನುಲಿಯುತ್ತಿದ್ದ ಗಗನಸಖಿಯ ಧ್ವನಿಗಿಂತಲೂ ಇಂಪಾಗಿ ತೆರೆದುಗೊಂಡಿತು. ಬೆಳಗಿನ 11 ಘಂಟೆಯ ಸಮಯವಾದ್ದರಿಂದ ಸೂರ್ಯನ ಬೆಳಕು ಪ್ರಖರವಾಗಿದ್ದರ ಪರಿಣಾಮ ಇರಬೇಕು, ಕಣ್ಣು ಹಾಯ್ಸುವಷ್ಟು ದೂರಕ್ಕೆ ಶ್ವೇತವರ್ಣದ ಮೊಡಗಳೇ. ಪ್ರಾಥಮಿಕ ಶಾಲೆಯ ಸಿಂಪಿ ಲಿಂಗಣ್ಣ ಬರೆದಿದ್ದ ಹಿಂಜಿದ ಅರಳೆಯು ಚೂರುಗಳಾಗಿ ಮೊಡಗಳಾಗಿಹವೇ ಅನ್ನುವ ಪದ್ಯದ ಸಾಲು ನೆನಪಿಗೆ ಬಂತು. ಮೋಡ ಬಿಟ್ಟು ಸುಮಾರು ಅಡಿಗಳ ಮೇಲೆ ವಿಮಾನ ಹಾರುತ್ತಿದ್ದರೂ ಸುಮ್ಮನೆ ತೇಲಾಡುತ್ತಾ ಹಾಲ್ಕಡದಲ್ಲಿ ನಿಂತಿದೆಯೇನೂ ಅನ್ನುವ ಅನುಭವ. ಶುಭ್ರ ಮೋಡಗಳ ಸಮೂಹ ನನ್ನನ್ನು ಹಿಡಿದಿಟ್ಟು ಬಿಟ್ಟಿತು.
ಕೈಲಾಸದ ವರ್ಣನೆ, ವೈಕುಂಠದ ವರ್ಣನೆಯನ್ನು ಕಥೆಗಳಲ್ಲಿ ಕೇಳಿದ್ದ, ಚಲನಚಿತ್ರ ಗಳಲ್ಲಿ ನೋಡಿದ್ದ ನೆನಪಾಯ್ತು. ಅಲ್ಲಿಯೇ ಕ್ಷೀರಸಾಗರದ ಶೇಷಶಾಯಿ ವಿಷ್ಣು ಲಕ್ಷ್ಮೀ ಸಮೇತ ನನ್ನ ಸ್ಮೃತಿಪಟಲವನ್ನು ತಾಕುತ್ತಿದ್ದರೆ, ಶಿವ ಪಾರ್ವತಿಯರ ತಾಂಡವ ನೃತ್ಯ ಕಣ್ಮುಂದೆ ಬರ್ತಿತ್ತು.
ಅಷ್ಟರಲ್ಲೇ ನೀವು ಪ್ರಯಾಣಿಸುತ್ತಿರುವ ವಿಮಾನವು 37 ಸಾವಿರ ಅಡಿಗಳ ಎತ್ತರದಲ್ಲಿದ್ದು, ಘಂಟೆಗೆ 700 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದೆ ಅನ್ನುವ ಅಶರೀರವಾಣಿ ವಿಮಾನದ ತುಂಬಾ ಪ್ರತಿದ್ವನಿಸಿತು.
1670 ಕಿ.ಮೀ. ಪ್ರತಿಗಂಟೆಗೆ ತಿರುಗುವ ಭೂಮಿಯ ಮೇಲಿರುವ ಬೆಂಗಳೂರು, ನಾನು ಪ್ರಯಾಣಿಸುವ ಈ ವಿಮಾನ ವಾರಣಾಸಿಯಲ್ಲಿ ಭೂಮಿ ಬಿಟ್ಟು ಮೇಲೇರಿದೆ. ಮತ್ತೆ ಬೆಂಗಳೂರಲ್ಲಿ ಭೂಮಿ ತಾಕಲು 3,4 ತಾಸುಗಳು ಬೇಕು. ಈ ಸಮಯದಲ್ಲಿ ಬೆಂಗಳೂರು ತಿರುಗುವ ಭೂಮಿಯಲ್ಲಿ ಎಷ್ಟು ದೂರ ಹೋಗಬಹುದು? ಭೂಮಿಯ ಗುರುತ್ವಾಕರ್ಷಣೆ ಕಕ್ಷೆಯಲ್ಲೇ ವಿಮಾನ ಸಂಚರಿಸುತ್ತಿದ್ದು, ಬೆಂಗಳೂರನ್ನು ಹಿಡಿಯಲು 1670+700 =2370 ಕಿ.ಮೀ ವೇಗದಲ್ಲಿ ಗಂಟೆಗೆ ಈ ವಿಮಾನ ಸಂಚರಿಸುತ್ತಿರಬಹುದಾ, ಈ ಸಂಬಂಧದ ವೇಗದ ಬಗ್ಗೆ ಐನ್ ಸ್ಟೈನ್ ಹೇಗೆ ಕಂಡು ಹಿಡಿದ, ಮತ್ತು ಇದನ್ನು Relative Speed ಅಂತ ಹೆಸರಿಟ್ಟ ? ಅಂತ ಯೋಚಿಸುತ್ತಿದ್ದಂತೆ, ನನ್ನ ಆಲೋಚನೆಯನ್ನು ಸರಳಗೊಳಿಸಲು 120 ಕಿ.ಮೀ. ಗಂಟೆಗೆ ವೇಗದಲ್ಲಿ ಚಲಿಸುವ ರೈಲನ್ನು ಊಹಿಸಿಕೊಂಡೆ. ಸುಮಾರು 150 ಅಡಿ ಉದ್ದವಿರುವ ರೈಲಿನ ಡಬ್ಬಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ಈ ಚಲಿಸುವ ರೈಲಿನಲ್ಲಿ ನಾನು ನಡೆದು ಹೋದರೆ, 5 ನಿಮಿಷಕ್ಕೆ ಆ ತುದಿಯನ್ನು ತಲುಪಬಹುದು ಅಂದುಕೊಳ್ಳುವ. ಈ 5 ನಿಮಿಷದಲ್ಲಿ ರೈಲು 10 ಕಿ.ಮೀ.ದೂರ ಚಲಿಸಿತು. ನಾನು 150 ಅಡಿ ಚಲಿಸಿದೆ. ರೈಲು ಮತ್ತು ನಾನು ಪ್ರತಿ ಗಂಟೆಗೆ 1670 ಕಿ.ಮೀ ವೇಗದಲ್ಲಿ ಸುತ್ತುವ ಭೂಮಿಯ ಮೇಲಿದ್ದೇವೆ!
Relative speed!
ಈ ಮೂರು ತೆರನಾದ ವೇಗಗಳು, ಒಂದಕ್ಕೊಂದು ಸಂಬಂಧ ಹೇಳುವುದೇ Relative speed!ಮೊದಲ ಬಾರಿಗೆ ಇಂತಹ ಅನುಮಾನಗಳ ಬಗ್ಗೆ ತಲೆ ಕೆಡಿಸಿಕೊಂಡವರೇ ಜ್ಞಾನಿಗಳೇನೋ ಅನ್ನಿಸಿತು. ಅದಕ್ಕಿಂತಲೂ ಸೋಜಿಗದ ಸಂಗತಿ ಒಂದು ನನ್ನ ಮೆದುಳನ್ನು ತಾಕಿತು! ಅದೆಂದರೆ ವಿಮಾನವೇ ಇರದಿದ್ದ ಸಾವಿರಾರು ವರ್ಷಗಳ ಹಿಂದೆ ಈ ಶ್ವೇತವರ್ಣದ ಮೋಡಗಳ ರಾಶಿಗಳಲ್ಲಿ ಅದು ಹೇಗೆ ನಮ್ಮ ದಾರ್ಶನಿಕರು ವೈಕುಂಠ,ಕೈಲಾಸ ಗಳನ್ನು ಕಲ್ಪಿಸಿಕೊಂಡರು?ಇದರ ಇರುವಿಕೆಯ ಕಲ್ಪನೆ ಅವರಿಗೆ ಹೇಗೆ ಬಂತು,ನೋಡದ ಹೊರತು? ಅಥವಾ ಈ ಶ್ವೇತವರ್ಣದ ಮೋಡಗಳನ್ನು ನೋಡಿದ್ದರಾ?…ಹೇಗೆ ನೋಡಿದ್ದರು? ಸಾಲು, ಸಾಲು ಪ್ರೆಶ್ನೆಗಳು ಮುತ್ತಿಕೊಂಡು ಬಿಟ್ಟವು. ನಾನು ಆ ಬಿಳೀ ಮೋಡಗಳ ಶ್ವೇತನಗರಿಗಳಲ್ಲಿ ರೆಕ್ಕೆ ಇಟ್ಟುಕೊಂಡವನ ಹಾಗೆ ಹಾರಾಡುತ್ತಿದ್ದೆ!
ನಿರಂತರ ಧ್ಯಾನ ಮಾಡುವವರು ಸಮಾಧಿ ಸ್ಥಿತಿ ತಲುಪುವ ಮುನ್ನ ಅತಿಂದ್ರಿಯ ಶಕ್ತಿ ಹೊಂದುತ್ತಾರೆ. ದೇಹವನ್ನು ಎಷ್ಟು ಗಾತ್ರಕ್ಕೆ ಬೇಕಾದ್ರೂ ಹಿಗ್ಗಿಸಬಹುದು ಮತ್ತು ಕುಗ್ಗಿಸಬಹುದು. (ರಾಮಾಯಣದಲ್ಲಿ ಹನುಮಂತನು ಈ ಶಕ್ತಿ ಹೊಂದಿದ್ದನ್ನು ಅವನ ಮೊದಲ ಸೀಮೋಲ್ಲಂಘನ ವೇಳೆ ವಾಲ್ಮೀಕಿ ಹೇಳಿದ್ದಾನೆ. ಬೌದ್ಧರಲ್ಲಿ ಬೋಧಿಸತ್ವನು ಈ ಶಕ್ತಿ ಹೊಂದಿದ್ದನ್ನು ಹೇಳುತ್ತಾರೆ.) ಅಲ್ಲದೆ ಧ್ಯಾನಿಸುವ ಯೋಗಿಗಳು ಎಷ್ಟೇ ದೂರಕ್ಕೆ ಬೇಕಾದ್ರೂ ಪಯಣಿಸಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಬಲ್ಲರು, ತಮ್ಮ ದೇಹವನ್ನು ಇಲ್ಲಿಯೇ ಬಿಟ್ಟು. ಇದನ್ನು Telepathy ಅಂತಾರೆ ಈಗ. ಈ ಅಗೋಚರ ಶಕ್ತಿಯು ಅಂತಹ ಧ್ಯಾನಿಗಳು ಧ್ಯಾನಿಸುವ ಯಾವ ವಿಷಯದ ಬಗ್ಗೆ ಯೂ ಸಂಪೂರ್ಣ ಜ್ಞಾನ ನೀಡಬಲ್ಲದು ಅದನ್ನ ತಪಃ ಶಕ್ತಿ ಅಂತಾರೆ ಅಂತ ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ ಒಮ್ಮೆ ನಮ್ಮ ಶ್ರೀ ರಾಘವೇಂದ್ರ ಸ್ವಾಮಿಗಳು ಹೇಳಿದ್ದು ನೆನಪಿಗೆ ಬಂತು.
ಇಂದಿಗೂ ನಿಲುಕದ ಜ್ಞಾನವನ್ನು ಅವರು ಕಂಡುಕೊಂಡರಾ?
ಅಂತಹ ತಪಃ ಶಕ್ತಿಯಿಂದ ಯೋಗಿಗಳು ಸಂಚರಿಸಿ ಈ ಶ್ವೇತ ಮೋಡಗಳನ್ನು ನೋಡಿದ್ದರಾ?…ನಮಗೆ ಇಂದಿಗೂ ನಿಲುಕದ ಜ್ಞಾನವನ್ನು ಅವರು ಕಂಡುಕೊಂಡರಾ? ಅನ್ನುವಂತಹ ಪ್ರಶ್ನೆಗಳು ಏಳತೊಡಗಿದವು. ಯಾಕಂದ್ರೆ ಒಮ್ಮೆ ಐನ್ ಸ್ಟೈನ್ ತನ್ನೆಲ್ಲಾ ಜ್ಞಾನದ ಮೂಲ ಸೆಲೆ ಭಾರತೀಯ ಅಧ್ಯಾತ್ಮ ಚಿಂತನೆಗಳು ಅಂತ ಹೇಳಿದ್ದದು.
ಈ ಯೋಚನೆ ಬಂದದ್ದೇ ತಡ, ನಮ್ಮ ಯೋಗಿಗಳು ತಮ್ಮ ತಪಃ ಶಕ್ತಿಯಿಂದ ಇಡೀ ಸೃಷ್ಟಿಯನ್ನು ಸುತ್ತಿಬಿಟ್ಟರಾ? ಇತ್ತೀಚೆಗೆ ಕಂಡುಕೊಂಡು Milky way ಅಂತ ಹೆಸರಿಸಿದ ಈ ಬ್ರಹ್ಮಾಂಡವನ್ನು ಆಗಲೇ ನೋಡಿಯೇ ವಿಷ್ಣುವನ್ನು ಕ್ಷೀರ ಸಾಗರ (ಹಾಲ್ಗಡಲು) ದಲ್ಲಿ ಇರಿಸಿದರಾ? ಋಗ್ವೇದದ ಪುರುಷ ಸೂಕ್ತ ಸೃಷ್ಟಿಯ ರಹಸ್ಯ ಹೇಳಿದೆ ಅಂದಿದ್ದರು. ನಾವೆಲ್ಲಾ ಅದರಲ್ಲಿ ಬರುವ ಯಜ್ಞ,ಹವಿಸ್ಸು ಅನ್ನುವ ಶಬ್ದಗಳನ್ನು ಶಬ್ದಾರ್ಥದಲ್ಲಿ ಹುಡುಕಲು ಹೋಗಿ ದಾರಿ ತಪ್ಪಿದೆವಾ? ಒಮ್ಮೆ ಋಗ್ವೇದದ ಈ ಪುರುಷ ಸೂಕ್ತವನ್ನು ಇತ್ತೀಚೆಗೆ ಹೇಳಿದ Big Bang Theory ಗೆ ಹೋಲಿಸಿಕೊಂಡು ನೋಡಿದರೆ ಅರ್ಥವಾಗುತ್ತೆ. ಈ ಮಹಾಸ್ಫೋಟವನ್ನೇ ನಮ್ಮ ಯೋಗಿಗಳು ಯಜ್ಞಕುಂಡಕ್ಕೆ ಹೋಲಿಸಿ, ಅಲ್ಲಿಯ ತನಕ ಇದ್ದ ಸೃಷ್ಟಿಯನ್ನು ಹಿರಣ್ಯ ಗರ್ಭ, ಯಜ್ಞದಲ್ಲಿ ಬಲಿಯಾದ ಪುರುಷ ಅಂತ ಹೇಳಿದರಾ? ಅನ್ನುವಂತಹ ಯೋಚನೆಗಳು ತಲೆಯಲ್ಲಿ ಬಂದುಬಿಟ್ಟವು. ಯಜ್ಞಕ್ಕೆ ಮೊದಲೂ ಪುರುಷನಿದ್ದ, ಅವನನ್ನು ಯಜ್ಞದಲ್ಲಿ ಬಲಿ ಕೊಡಲಾಯ್ತು, ಮತ್ತೆ ಯಜ್ಞ ಕುಂಡ ದಿಂದ ಯಜ್ಞ ಮುಗಿದಮೇಲೆ ಪುರುಷ ಎದ್ದು ಬಂದ ಅಂತ ಹೇಳಿರುವ ಋಗ್ವೇದದ ಪುರುಷ ಸೂಕ್ತವೂ ಅದೆಷ್ಟು ದಿನಗಳವರೆಗೆ ನಮಗೆ ಬಾಲಿಶವಾಗಿ ಕಂಡಿತಲ್ಲ?
ಸೃಷ್ಠಿಯಲ್ಲಿ ಮೊದಲಿಗೆ ಏನೆಂದರೆ ಏನೂ ಇಲ್ಲ. ಕತ್ತಲೆ ಮಯ. ನೀರವತೆಯ ಶಬ್ದ. ಇದನ್ನೇ ಓಂಕಾರ ಅಂದರಾ? ಹಿಂದೆ ಇದ್ದ ಎಲ್ಲವೂ ಮಹಾಸ್ಫೋಟಕ್ಕೆ ಮುನ್ನ ಕುಸಿದು ಮತ್ತೆ ಬೆಳೆದು ಸ್ಪೋಟವಾಯ್ತು. ಈ ಮಹಾಸ್ಫೋಟವನ್ನೇ Big Bang ಅಂತ ಹೆಸರಿಸಿದೆ,ಈಗಿನ ವಿಜ್ಞಾನ. ಅಂತಹ ಏನೂ ಇಲ್ಲದಿರುವಾಗಲೂ,ಸ್ಪೋಟ ಆಗುವಾಗಲೂ, ಅದ ನಂತರವೂ ಕಾಲ ಅಥವಾ time ಇತ್ತು. ಆಕಾಶ ಇತ್ತು. ಈ ಕಾಲವನ್ನು ಶಿವ ಅಂದು ಅದರ ಆದಿ, ಅಂತ್ಯ, ಗೊತ್ತಿಲ್ಲ ಅಂತ ಕಥೆಗಳ ರೂಪಕಗಳಲ್ಲಿ ನಮಗೆ ಹೇಳಿದರಾ? ಆಕಾಶವನ್ನು ವಿಷ್ಣು ಅಂದು (milky way) ಹಾಲ್ಗಡಲಲ್ಲಿ ಮಲಗಿಸಿದರಾ? ಅರ್ಥವಾಗದ ನಾವು ಬಾಲಿಶ ಕಥೆಗಳು ಅಂದು ನಕ್ಕುಬಿಟ್ಟೆವಾ? ಅಲ್ಪ ಸ್ವಲ್ಪ ಅಲ್ಲಿ ಇಲ್ಲಿ ಕೇಳಿದ್ದ ವಿಷಯಗಳು ಒಂದರ ಮೇಲೊಂದರಂತೆ ಆ ಶ್ವೇತ ಮೋಡಗಳ ಕಡಲಿಂದ ತೇಲಿ ಬಂದ ಅನುಭವ ಆಯ್ತು.
20ನೇ ಶತಮಾನದ ಐನ್ ಸ್ಟೈನ್ ರ ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ವಿವರಿಸಿದ ಸಾಪೇಕ್ಷ ವೇಗದ ಸಿದ್ದಾಂತವೇ ನಮಗೆ ಸರಿಯಾಗಿ ಅರ್ಥವಾಗಿಲ್ಲ, ಅಂತಹುದರಲ್ಲಿ ನಮ್ಮ ಯೋಗಿಗಳು ಕಂಡುಕೊಂಡದ್ದನ್ನು ಬುದ್ದಿಯೇ ತಿಳಿಯದ ಜನಗಳಿಗೆ ಹೇಳಲು ತೆಗೆದುಕೊಂಡಿರುವ ಪ್ರಯಾಸವನ್ನು ಒಮ್ಮೆ ಸುಮ್ಮನೆ ಊಹಿಸಿಕೊಂಡೆ! ತಲೆ ಕೆಟ್ಟು ಮೊಸರು ಗಡಿಗೆ ಆಯ್ತು. ಅರ್ಥ ಆಗಲಿ,ಬಿಡಲಿ ಸಾಪೇಕ್ಷ ವೇಗದ ಸಿದ್ದಾಂತದಿಂದಾಗಿಯೇ ಇಂದು ನಾವು ಉಪಗ್ರಹಗಳ ಉಡಾವಣೆ ಮಾಡುತ್ತಿರುವುದು,ಬ್ರಹ್ಮಾಂಡದಲ್ಲಿ ಮಾನವ ನಿರ್ಮಿತ ಉಪಗ್ರಹಗಳು ತಿರುಗುತ್ತಾ ಇಂದಿನ ಆಧುನಿಕ ಜಗತ್ತಿಗೆ ಸಹಕಾರಿಯಾಗಿ ನಿಂತಿರುವುದು. ಇದರ ಪ್ರಕಾರ ವೈಜ್ಞಾನಿಕವಾಗಿ ಯೋಚಿಸಿದರೆ ತಟಸ್ಥ ಅಥವಾ ಸೊನ್ನೆ ವೇಗ ಎಂಬುದು ಇರಲು ಭೂಮಿಯ ಮೇಲೆ ಸಾಧ್ಯವೇ ಇಲ್ಲ. ಯಾಕೆಂದರೆ 1670 ಕಿ.ಮೀ ಪ್ರತಿ ಗಂಟೆಗೆ ತಿರುಗುವ ಭೂಮಿಯ ಮೇಲೆ ಯಾವುದೂ ತಟಸ್ಥ ವಲ್ಲ! ನಾವು ತಟಸ್ಥ ಅಂದುಕೊಂಡಿರುವುದು ಭೂಮಿಯ ವೇಗದೊಂದಿಗೆ ತಿರುಗುತ್ತಿರುತ್ತದೆ! ಪ್ರತಿಗಂಟೆಗೆ 700 ಕಿ.ಮೀ ವೇಗದಲ್ಲಿ ಸಾಗುತ್ತಿರುವ ಈ ವಿಮಾನ ಸುಮ್ಮನೆ ನಿಂತಿದೆಯೇನೂ ಅಂತ ಅನ್ನಿಸುತ್ತಿದೆ! ಇದನ್ನೇ ಶಂಕರರು ಮಾಯೆ ಅಂದರಾ? ಕಾಣುವ, ನೋಡುವ ಈ ಭೌತ ಜಗತ್ತು ಸತ್ಯವಲ್ಲ ಅಂದದ್ದನ್ನು ನಾವು ತಪ್ಪಾಗಿ ಅರ್ಥೈಸಿಕೊಂಡೆವಾ?
ಏನೇನೋ ಯೋಚನೆಗಳು ನನ್ನನ್ನು ಕುಬ್ಜನನ್ನಾಗಿ ಮಾಡಿದವು. ಪ್ರಪಂಚದ ಎಲ್ಲ ನಾಗರಿಕತೆಯ ಪ್ರಾಚೀನ ಗ್ರಂಥಗಳನ್ನು ಓದಬೇಕು ಅನ್ನುವ ಉತ್ಕಟ ಆಸೆ ಬಂತು. ಎರಡು ಹೊತ್ತಿನ ಊಟ ಮಾಡಲು ಅಭ್ಯಸಿಸಿದ್ದ ನನ್ನ ಓದು ಎನ್ನುವುದು ಮೊದಲ ಬಾರಿಗೆ ಕೆಲಸಕ್ಕೆ ಬಾರದ್ದು ಅನ್ನಿಸಿತು. ಹಿಂದೆ ಇಂತಹ ಉತ್ಕಟ ಆಸೆ ಹೊಂದಿರುವರನ್ನು ಮಾತ್ರ ಪರೀಕ್ಷಿಸಿ, ಜ್ಞಾನ ಹೇಳಲಾಗುತ್ತಿತ್ತು,ಎಲ್ಲರಿಗೂ ಅಲ್ಲ ಅನ್ನುವ ಅಂಶದ ಬಗ್ಗೆ ನಿರ್ಮಾನುಷತೆ, ಅಸಮಾನತೆ ಅನ್ನುವಂತಹ ಪದಗಳನ್ನು ಉಪಯೋಗಿಸಿ ಬೈದಿದ್ದೆ. ಈಗ ಅಂತಹ ಸೌಭಾಗ್ಯವೂ ಇಲ್ಲವಲ್ಲ ಅಂತ ಮನಸ್ಸು ಮರುಗಿತು. ವಿದ್ಯೆ ಎಂದರೇನು ಅಂತ ಪ್ರಪ್ರಥಮವಾಗಿ ಪ್ರಶ್ನೆಯೊಂದು ತಲೆಯಲ್ಲಿ ಮೂಡಿದಾಗ, ನಮ್ಮ ವಿಮಾನ ಬೆಂಗಳೂರು ತಲುಪುತ್ತಿದೆ, ನಮ್ಮ ವಿಮಾನದಲ್ಲಿ ಪ್ರಯಾಣ ಮಾಡಿದ ನಿಮಗೆಲ್ಲ ಧನ್ಯವಾದಗಳು,ಮತ್ತೆ ಪಯಣಿಸಲು ಬನ್ನಿ ಅನ್ನುವಂತಹ ಮೋಹಕ ಧ್ವನಿ ನನ್ನನ್ನು ಭೂಮಿಯ ಮೇಲೆ ಇಳಿಸಿತು. ಮತ್ತದೇ ಅರ್ಥವಿಲ್ಲದ ಬಲವಂತದ ಜೀವನ!
ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಪರೀಕ್ಷೆಗಳು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಧಾರವಾಡದಲ್ಲಿ ತಿಳಿಸಿದ್ದಾರೆ.
ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 21- ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಜೂ.24-ಗಣಿತ, ಜೂ. 28-ವಿಜ್ಞಾನ, ಜೂ. 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಜುಲೈ2- ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಜು.5- ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸ್ಪಂದನ ರಾಜ್ಯಾದ್ಯಂತ
ಬೆಳಗಾವಿ ವಿಭಾಗದಲ್ಲಿ ಶಿಕ್ಷಣ ಸ್ಪಂದನ ಕಡತ ವಿಲೇವಾರಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಅಭೂತಪೂರ್ವ ಪ್ರಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ಹೇಳಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕಡತ ವಿಲೇವಾರಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬಜೆಟ್ ಅಧಿವೇಶನ ಮುಗಿದ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶದ ಭಾಗದಿಂದ ಆರಂಭಗೊಂಡಂತೆ ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ನಡೆಸಲಾಗುವುದೆಂದರು.
ಬೆಳಗಾವಿ ವಿಭಾಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಶಿಕ್ಷಕರಿಂದ ಇಂದಿನ ಶಿಕ್ಷಣ ಸ್ಪಂದನಕ್ಕೆ ಒಟ್ಟು 2940 ಅರ್ಜಿಗಳು ಸ್ವೀಕೃತವಾಗಿದ್ದು, 2674 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಉಳಿದ 266 ಅರ್ಜಿಗಳು ವಿವಿಧ ಹಂತಗಳಲ್ಲಿವೆಯಎಂದರು.ಾಹಿತಿ ನೀಡಿದ ಸಚಿವರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 90 ಅರ್ಜಿಗಳು ಸ್ವೀಕರಿಸಲಾಗಿದ್ದು, 41 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತೆಂದರು.
ಮಧ್ಯಾಹ್ನ ಉಪಹಾರ ಯೋಜನೆ ಶೀಘ್ರ ಅನುಷ್ಠಾನ
ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ಅತ್ಯಂತ ಅವಶ್ಯವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಸಹಮತಿಗಾಗಿ ಕೋರಲಾಗಿದ್ದು ಅನುಮತಿ ದೊರೆತ ಕೂಡಲೇ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು
ಅಧಿಕಾರಿಗಳಿಂದ ಶಾಲಾ ದತ್ತು
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯ ನಿರ್ದೇಶಕ ವೃಂದದ ಅಧಿಕಾರಿಗಳೂ ಸೇರಿದಂತೆ ಪ್ರತಿಯೊಬ್ಬರೂ ಶಾಲಾ ದತ್ತು ತೆಗೆದುಕೊಳ್ಳಲು ಮುಂದಾಗಬೇಕೆಂದು ಹೇಳಿದ ಸಚಿವರು, ಅವಶ್ಯಕತೆ ಬಿದ್ದರೆ ದತ್ತು ಪಡೆದ ಶಾಲೆಗಳಲ್ಲಿ ಅಧಿಕಾರಿಗಳು ಮಕ್ಕಳಿಗೆ ಬೋಧಿಸುವ ಕೆಲಸದಲ್ಲಿಯೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಈ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗುವುದೆಂದರು.
ಶಾಲಾರಂಭ ಶೀಘ್ರ
ಶಾಲಾರಂಭಿಸಲು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸಮ್ಮತಿ ಅವಶ್ಯವಿರುವ ಕಾರಣ, ಶೀಘ್ರದಲ್ಲಿ ಸಭೆ ಸೇರಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದೆಂದರು.
ಇದೇ ಏಪ್ರಿಲ್ ಎರಡರಿಂದ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಸ್.ಎಸ್ಎಲ್.ಸಿ ಹಾಗೂ ದ್ವಿತೀಯ ಪಿಯು ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ಸ್ವತಃ ಪರಿಶೀಲಿಸುವುದಾಗಿ ಹೇಳಿದರು.
ಸಚಿವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಅರುಣ ಶಹಾ ಪುರ, ಎಸ್.ವಿ.ಸಂಕನೂರು ಹಾಗೂ ಹಣಮಂತ ನಿರಾಣಿ ಮತ್ತು ಧಾರವಾಡದ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಉಪಸ್ಥಿತರಿದ್ದರು.
ಸೆನ್ಸೆಕ್ಸ್ ಅಂದರೆ ಸೆನ್ಸಿಟಿವ್ ಇಂಡೆಕ್ಸ್ ಅತಿ ಸೂಕ್ಷ್ಮತೆಯನ್ನು ಹೊಂದಿರುವ ಸೂಚ್ಯಂಕವಾಗಿರುತ್ತದೆ ಎಂಬ ಉದ್ದೇಶದಿಂದ 1986 ರಲ್ಲಿ ತೇಲಿ ಬಿಡಲಾಯಿತು.
ಅಂದಿನಿಂದಲೂ ಸೆನ್ಸೆಕ್ಸ್ ನಲ್ಲಿ 30 ಬಲಿಷ್ಠ ಕಂಪನಿಗಳನ್ನು ಸೇರಿಸಲಾಗಿದೆ. ಆಗಿನಿಂದಲೂ ಸೆನ್ಸೆಕ್ಸ್ ಹಲವಾರು ರಭಸದ ಏರಿಳಿತಗಳನ್ನು ಪ್ರದರ್ಶಿಸಿದೆ. ಈ ತಿಂಗಳ 16 ರಂದು 52,516 ಪಾಯಿಂಟುಗಳನ್ನು ತಲುಪಿ ಸರ್ವಕಾಲೀನ ದಾಖಲೆಯನ್ನು ನಿರ್ಮಿಸಿದೆ.
2020 ರ ಮಾರ್ಚ್ 24 ರಂದು 25,638 ಪಾಯಿಂಟುಗಳಲ್ಲಿದ್ದ ಸೆನ್ಸೆಕ್ಸ್ ಒಂದೇ ವರ್ಷದೊಳಗೆ ಈ ಮಟ್ಟದಲ್ಲಿ ದ್ವಿಗುಣಗೊಂಡಿರುವುದೂ ಸಹ ದಾಖಲೆಯೇ ಆಗಿದೆ.
2002 ರ ಡಿಸೆಂಬರ್ ನಲ್ಲಿ 3,376 ರಲ್ಲಿದ್ದ ಸೆನ್ಸೆಕ್ಸ್ 2008 ರ ಜನವರಿಯಲ್ಲಿ 20,201 ನ್ನು ತಲುಪಿ ನಂತರ ಕೇವಲ ಸುಮಾರು ಆರು ತಿಂಗಳಲ್ಲಿ 10 ಸಾವಿರ ಪಾಯಿಂಟುಗಳೊಳಗೆ ಕುಸಿದು 2010 ಅಕ್ಟೋಬರ್ ತಿಂಗಳಲ್ಲಿ 20,100 ರ ಗಡಿ ದಾಟಿ ಚೇತರಿಕೆ ಪ್ರದರ್ಶಿಸಿದೆ.
ಲೀಸ್ಟಿಂಗ್ ಅಂಕಿ ಅಂಶಗಳು:
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 4,722 ಕಂಪನಿಗಳು ವಹಿವಾಟಿಗೆ ಲೀಸ್ಟಿಂಗ್ ಆಗಿವೆ. ಅವುಗಳಲ್ಲಿ ಸುಮಾರು 809 ಕಂಪನಿಗಳು ತಮ್ಮ ಚಟುವಟಿಕೆ ನಿರ್ವಹಣೆಯಲ್ಲಿ ಎಸಗಿರುವ ವಿವಿಧ ಲೋಪಗಳ ಕಾರಣ ಅಮಾನತುಗೊಂಡಿವೆ. ಅವು ತಮ್ಮ ಲೋಪಗಳನ್ನು ಸರಿಪಡಿಸಿಕೊಳ್ಳುವವರೆಗೂ ವಹಿವಾಟಿಗೆ ಅನುಮತಿ ದೊರೆಯುವುದಿಲ್ಲ. ಉಳಿದ 3,913 ಕಂಪನಿಗಳು ವಹಿವಾಟಾಗಲು ಅನುಮತಿ ಹೊಂದಿವೆ. ಇವುಗಳಲ್ಲಿ ಅನೇಕ ಕಂಪನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನವು ಹೂಡಿಕೆದಾರರಿಗೆ ಆಕರ್ಷಣೀಯವಾದ ಲಾಭಾಂಶಗಳನ್ನು, ಬೋನಸ್ ಷೇರುಗಳನ್ನು ನೀಡುತ್ತಿವೆ. ಆದ್ದರಿಂದ ಸೆನ್ಸೆಕ್ಸ್ ನಿಂದ ಹೊರಗಿರುವ ಕಂಪನಿಗಳು ಹೂಡಿಕೆಗೆ ಯೋಗ್ಯವಿಲ್ಲವೆಂಬ ಭಾವನೆ ಬೇಡ.
ಸೆನ್ಸೆಕ್ಸ್ ಕಂಪನಿಗಳ ಅವಸ್ಥೆ:
1986 ರಲ್ಲಿ ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಕಂಪನಿಗಳಲ್ಲಿ ಹೂಡಿಕೆ ಮಾಡಿದವರಿಗೆ ಅದೇ ರೀತಿ ಏರಿಕೆ ಪ್ರದರ್ಶಿಸಿವೆ ಎಂದಲ್ಲ. ಕಾರಣ ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳನ್ನು, ಸೆನ್ಸೆಕ್ಸ್ ಸಮಿತಿಯು ಪರಿಶೀಲಿಸುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ಸಾಧನೆಯಾಧಾರಿತ, ವಹಿವಾಟಿನ ಗಾತ್ರವನ್ನಾಧರಿಸಿ ಆ ಕಂಪನಿಗಳನ್ನು ಮುಂದುವರೆಸುತ್ತದೆ, ಸೂಕ್ತವಾದ ಬದಲಾವಣೆಗಳನ್ನು ಮಾಡುತ್ತಿರುತ್ತದೆ. ಒಂದು ಸಮಯದಲ್ಲಿ ಬಾಂಬೆ ಬರ್ಮ, ಏಶಿಯನ್ ಕೇಬಲ್ಸ್, ಕ್ರಾಂಪ್ಟನ್ ಗ್ರೀವ್ಸ್, ಜಿ ಇ ಶಿಪ್ಪಿಂಗ್, ಸಿಂಧಿಯಾ ಸ್ಟೀಮ್ ಶಿಪ್, ಭಾರತ್ ಫೋರ್ಜ್, ಬಳ್ಳಾರ್ಪುರ್ ಇಂಡಸ್ಟ್ರೀಸ್, ಅರವಿಂದ್ ಮಿಲ್ಸ್, ಬಾಂಬೆ ಡೈಯಿಂಗ್, ಸಿಯಟ್, ಸೆಂಚುರಿ ಟೆಕ್ಸ್ ಟೈಲ್ಸ್, ಕಾಲ್ಗೇಟ್, ಜಿ ಎಸ್ ಎಫ್ ಸಿ, ಗುಜರಾತ್ ಅಂಬುಜಾ ಸೀಮೆಂಟ್, ಹಿಂದೂಸ್ಥಾನ್ ಮೋಟಾರ್ಸ್, ಸೀಮನ್ಸ್, ಸ್ಟೀಲ್ ಅಥಾರಿಟೀಸ್ ಆಫ್ ಇಂಡಿಯಾ, ಟಾಟಾ ಕೆಮಿಕಲ್ಸ್, ಕ್ಯಾಸ್ಟ್ರಾಲ್, ಝೀ ಟೆಲಿಗಳೂ ಸಹ ಸೆನ್ಸೆಕ್ಸ್ ನ ಅಂಗವಾಗಿದ್ದವು. ಇವುಗಳಲ್ಲಿ ಏಶಿಯನ್ ಕೇಬಲ್ಸ್, ಸಿಂಧಿಯಾ ಸ್ಟೀಮ್ ಶಿಪ್, ನಂತಹವು ಪೇಟೆಯಿಂದ ನಿರ್ಗಮಿಸಿ ಹೂಡಿಕೆದಾರರ ಗಂಟನ್ನು ಕರಗಿಸಿವೆ. ಇನ್ನು ಪೀಕೋ, ಇಂಡಿಯನ್ ಆರ್ಗಾನಿಕ್, ಇಂಡಿಯನ್ ರೇಯಾನ್, ಫಿಲಿಪ್ಸ್, ರಾನಬಾಕ್ಸಿ, ಐ ಪಿ ಸಿ ಎಲ್ ಗಳಂತಹ ಕಂಪನಿಗಳು ಬೇರೊಂದು ಕಂಪನಿಗಳಲ್ಲಿ ವಿಲೀನಗೊಳ್ಳುವ ಮೂಲಕ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ.
ಫೆಬ್ರವರಿ ಒಂದರಂದು ಸೆನ್ಸೆಕ್ಸ್ 2,314 ಪಾಯಿಂಟುಗಳ ಏರಿಕೆ ಕಂಡಾಗ ಅದು ಸಹಜ ಬೆಳವಣಿಗೆ ಎಂದು ಬಿಂಬಿಸಲಾಯಿತು, ಆದರೆ 26 ರಂದು 1,939 ಪಾಯಿಂಟುಗಳ ಇಳಿಕೆಯನ್ನು ಭಾರಿ ಅಸಹಜ ಬೆಳವಣಿಗೆ ಎನ್ನುವಂತಹ ವಾತಾವರಣ ಮೂಡಿದೆ. ಇದು ಷೇರುಪೇಟೆಯ ಒಂದು ವಿಸ್ಮಯಕಾರಿ ಅಂಶ. ಏರಿಕೆಯನ್ನು ಸ್ವಾಗತಿಸುವ, ಇಳಿಕೆಯನ್ನು ತಿರಸ್ಕರಿಸುವ ಗುಣ ಪೇಟೆಯಲ್ಲಿರುವವರಿಗೆ ಮೂಡಿರುತ್ತದೆ. ಕಾರಣ ಹೂಡಿಕೆದಾರರು ಸದಾ ತಮ್ಮ ಹೂಡಿಕೆಯ ಮೌಲ್ಯ ಹೆಚ್ಚಳವನ್ನು ಬಯಸುವುದಾಗಿದೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಫೆಬ್ರವರಿ 25 ರಂದು ರೂ.206.18 ಲಕ್ಷ ಕೋಟಿ ಇದ್ದುದು 26 ರಂದು ರೂ.200.81 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ ಇಳಿಕೆಯ ವೇಗ ಹೆಚ್ಚು ಅದರಂತೆ ಹಾನಿಕಾರಕ ಅಂಶವು ಹೆಚ್ಚಿರುತ್ತದೆ.
ಹೂಡಿಕೆ ಗುಚ್ಚದ ನಿರ್ವಹಣೆ:
ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡ ಕಂಪನಿಗಳ ಬಗ್ಗೆ ಸದಾ ನಿಗಾ ಇರಿಸಬೇಕಾಗಿದೆ. ಕಾರಣ ಪರಿಸ್ಥಿತಿಗಳ ಬದಲಾವಣೆ ಬಹಳ ವೇಗವಾಗಿವೆ. ಪೇಟೆಯಲ್ಲಿ ಚಟುವಟಿಕೆಗೆ ಪ್ರಮುಖ ಪಾತ್ರ ವಹಿಸಿರುವ ವಿತ್ತೀಯ ಸಂಸ್ಥೆಗಳು ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಿ ತೀರ್ಮಾನ ತೆಗೆದುಕೊಳ್ಳುತ್ತವೆ. ಅವರ ನಿರ್ಧಾರಗಳು ಪೇಟೆಯಲ್ಲಿ ಅಂತಹ ಷೇರಿನ ಬೆಲೆಗಳ ಮೇಲೆ ಮಹತ್ತರ ಪ್ರಭಾವ ಬೀರುತ್ತವೆ. ಈ ಸಂಸ್ಥೆಗಳ ಚಟುವಟಿಕೆಯು ಕೇವಲ ಸೆನ್ಸೆಕ್ಸ್ ಕಂಪನಿಗಳಿಗೆ ಸೀಮಿತವಾಗಿರುವುದಿಲ್ಲ. ಅವು ಸಾಧನೆಯಾಧಾರಿತ, ಉತ್ತಮ ಭವಿಷ್ಯ ಸಾಧ್ಯ ಎಂದೆನಿಸುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
1990/2000 ದ ದಶಕದಲ್ಲಿದ್ದ ಅನೇಕ ಕಂಪನಿಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿವೆ. ಆ ದಿನಗಳಲ್ಲಿ ಹೆಚ್ಚು ಚುರುಕಾಗಿದ್ದ ಕಂಪನಿಗಳಲ್ಲಿ ಟೈಪ್ ರೈಟಿಂಗ್ ಯಂತ್ರಗಳ ತಯಾರಕರಾದ ರೆಮಿಂಗ್ಟನ್ ರಾಂಡ್, ಮಯೂರ್ ಸಿಂಟೆಕ್ಸ್, ಮೈಸೂರ್ ಲ್ಯಾಂಪ್, ಮಫತ್ ಲಾಲ್ ಫೈನ್, ಸ್ವೀಡ್ ಇಂಡಿಯಾ, ಮಾಥರ್ ಅಂಡ್ ಪ್ಲಾಟ್, ಆರ್ಟನ್ ಸಿಂಥೆಟಿಕ್ಸ್ ಗಳು ಈಗ ಕಣ್ಮರೆಯಾಗಿವೆ. ಬೂಟ್ಸ್ ಇಂಡಿಯಾ, ಕ್ಯಾಡ್ ಬರೀಸ್, ಓಟೀಸ್ ಎಲೆವೇಟರ್, ಸ್ಯಾಂಡೋಜ್, ಫಿಲಿಪ್ಸ್ ನಂತಹ ಕಂಪನಿಗಳೂ ವಿಲೀನಗೊಳ್ಳುವ/ ಡಿಲೀಸ್ಟಿಂಗ್ ಮೂಲಕ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ. ಆದರೆ ಕಂಪನಿಗಳಾದ ಐ ಟಿಸಿ, ಮಹೀಂದ್ರ ಅಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಡ್ರೀಸ್ ನಂತಹ ಕಂಪನಿಗಳೂ ಇಂದಿಗೂ ಹೆಚ್ಚಿನ ವಹಿವಾಟು ಪ್ರದರ್ಶಿಸುವುದಲ್ಲದೆ, ಸಾಧನೆಯನ್ನು ಹೊಂದಿವೆ. ಹಾಗಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳನ್ನು ಹೊಂದಿರುವ ಹೂಡಿಕೆ ಗುಚ್ಚದ ಬಗ್ಗೆ ಹೆಚ್ಚು ಹೆಚ್ಚು ಪರಿಶೀಲನೆ ಅಗತ್ಯ. ಪೇಟೆಗಳು ಗರಿಷ್ಠದಲ್ಲಿದ್ದಾಗ ಅವು ಹೆಚ್ಚಿನ ಏರಿಕೆ ಹೊಂದಿರುವುದರಿಂದ ಒಂದು ಸಣ್ಣ ನಕಾರಾತ್ಮಕ ಸುದ್ಧಿ ಅಥವಾ ಬೆಳವಣಿಗೆಯು ಭಾರಿ ಕುಸಿತಕ್ಕೆ ಕಾರಣವಾಗಬಹುದು.
‘Value pick – profit book’ ಫಲ ಹೇಗಿರುತ್ತದೆ?
ಷೇರುಪೇಟೆಯ ಚಟುವಟಿಕೆಯು ಯಶಸ್ಸಿಗೆ ವ್ಯಾಲ್ಯು ಪಿಕ್ ಹೇಗಿದ್ದರೆ ಸರಿ ಎಂಬುದಕ್ಕೆ ಈ ಕೆಳಗಿನ ಕೋಷ್ಟಕವನ್ನು ನೋಡಿರಿ. 2020 ರ ಮಾರ್ಚ್ ನಲ್ಲಿದ್ದ ಬೆಲೆಗೂ 2021 ರ ಫೆಬ್ರವರಿಯ ಬೆಲೆಗೂ ಕೆಲವು ಅಗ್ರಮಾನ್ಯ ಕಂಪನಿಗಳು ಎಂತಹ ಘನವಾದ ಲಾಭವನ್ನು ತಂದುಕೊಟ್ಟಿವೆ ಎಂಬುದನ್ನು ಅರಿಯಬಹುದು. ಆದರೆ ಆ ಪ್ರಮಾಣದ ಲಾಭವನ್ನು ಕೈಗೆಟುಕಿಸಿಕೊಳ್ಳಬೇಕಾದಲ್ಲಿ ಪ್ರಾಫಿಟ್ ಬುಕ್ ಮಾಡಿಕೊಳ್ಳುತ್ತಿರಬೇಕು ಎಂಬುದು ನೆನಪಿರಲಿ.
ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಕುಸಿತದಲ್ಲಿದ್ದರೆ, ಆ ಕಂಪನಿಗಳ ಬಗ್ಗೆ ಯಾವುದೇ ನಕಾರಾತ್ಮಕ ಅಂಶಗಳಿಲ್ಲದಿದ್ದರೆ ಅದು ಹೂಡಿಕೆಗೆ ಅಪೂರ್ವವಾದ ಅವಕಾಶವಾಗಿರುತ್ತದೆ. ಪೇಟೆಯು ಕುಸಿತದಲ್ಲಿದ್ದಾಗ ಗಜಗಾತ್ರದ ಖರೀದಿ ಮಾಡದೆ, ಪ್ರತಿಯೊಂದು ಕುಸಿತದಲ್ಲೂ ಸ್ವಲ್ಪ ಸ್ವಲ್ಪ ಷೇರುಗಳನ್ನು ಖರೀದಿಸುವುದರಿಂದ ಅಪಾಯದ ಮಟ್ಟವನ್ನು ಮಿತಗೊಳಿಸಬಹುದು.
ಕೆಲವು ಕಂಪೆನಿಗಳ ವರ್ಷದ ಹಿಂದಿನ ಬೆಲೆಗೂ ಈಗಿನ ಬೆಲೆಯನ್ನು ಗಮನಿಸಿ
COMPANY NAME
Monthly High In Mar 2020
rate @17th Mar 2020
Present rate @ 26th Feb 2021
Tata Steel
447
282
714
Tata Motors
171
077
323
Maruthi Suzuki
6,977
5,603
6,872
Larsen & Toubro
1,298
955
1,442
Reliance Inds
1,507
1,008
2,083
Infosys
811
550
1,252
T C S
2,228
1,658
2,896
HCL Tech
624
452
909
HDFC Bank
1,232
975
1,534
Kotak Mah Bank
1,739
1,321
1,782
ICICI Bank
549
366
597
S B I
331
214
390
I T C
208
149
204
ಮೇಲಿನ ಪಟ್ಟಿಯು ಕೇವಲ ಉದಾಹರಣೆಯಾಗಿ ಮಾತ್ರ ನೀಡಿದ್ದು, ಯಾವುದೇ ರೀತಿಯ ಶಿಫಾರಸ್ಸು ಅಲ್ಲ. ಷೇರುಗಳ ಬೆಲೆಗಳಲ್ಲುಂಟಾಗುವ ಏರಿಳಿತಗಳು ವೈವಿಧ್ಯಮಯ ಕಾರಣಗಳಿಂದಾಗುತ್ತವೆ, ಆದರೂ ನಂತರದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆಯಾದ ನಂತರ ಅಗ್ರಮಾನ್ಯ ಕಂಪನಿಗಳ ಷೇರಿನ ದರಗಳು ಪುಟಿದೇಳುತ್ತವೆ ಎಂಬುದು ಹಲವಾರು ಭಾರಿ ಪ್ರದರ್ಶಿತವಾಗಿದೆ.
ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಧೈರ್ಯಮಿಲ್ಲದಂಗಾವ ಕಾರ್ಯಮುಂ ಆಗದು – ‘ರಾಮ ಕಥಾಸಾರ’ದಲ್ಲಿ ಬರುವ ಮಾತಿದು. “ಧೈರ್ಯಂ ಸರ್ವತ್ರಸಾಧನಂ” ಎಂಬ ಮಾತು ಎಲ್ಲರಿಗೂ ತಿಳಿದಿರುವಂಥದ್ದೆ. ಇದನ್ನು ‘ಮನೋಬಲ’, ‘ಆತ್ಮಬಲ’ ಎನ್ನಲೂ ಬಹುದು. ಧೈರ್ಯವಿಲ್ಲದಿದ್ದರೆ ಜೀವನ ನಡೆಸಲಾಗದು ಎಂದು ದೇವಚಂದ್ರ ವಿವರಿಸುವ ಒಂದು ಚಿಕ್ಕ ಕತೆ ಈ ಕೃತಿಯಲ್ಲಿದೆ.
ರೈತನೊಬ್ಬ ಧೋ! ಎಂದು ಸುರಿಯುವ ಮಳೆಯಲ್ಲಿ ಉರುವಲು ಇಲ್ಲ ಎನ್ನುವ ಕಾರಣಕ್ಕೆ ಉಪವಾಸವಿರುತ್ತಾನೆ. ಉರುವಲಿಗೋಸ್ಕರ ತೀವ್ರ ಹುಡುಕಾಟ ನಡೆಸಿ ಕಡೆಗೆ ಮಾಡಿಗೆ ಹೊದಿಸಿದ ದೊಡ್ಡ ಕಟ್ಟಿಗೆಯ ತುಂಡನ್ನೆ ಕಡಿಯಲು ಮುಂದಾಗುತ್ತಾನೆ. ಆದರೆ ಅದು ಕಟ್ಟಿಗೆಯ ರೂಪದಲ್ಲಿದ್ದ ಮಾರಿ ದೇವತೆಯಾಗಿರುತ್ತದೆ. ರೈತನ ಬದುಕುವ ಅದಮ್ಯ ಉತ್ಸಾಹ ಕಂಡು ಮಾರಿ ದೇವತೆ ತನ್ನ ನಿಜ ರೂಪ ತೋರಿಸಿ “ನನ್ನನ್ನು ಕಡಿಯದಿರು! ಇಂದಿನಿಂದ ನಿನ್ನ ಮನೆ ಮುಂದೆ ನಿತ್ಯವೂ ಸೌದೆ ಹೊರೆ ಇರುವಂತೆ ನೋಡಿಕೊಳ್ಳುತ್ತೇನೆ” ಎನ್ನುತ್ತದೆ.
ಹಾಗೆ ಒಂದಷ್ಟು ದಿನಗಳವರೆಗೆ ಮಾರಿ ದೇವತೆ ತನಗೆ ಜೀವದಾನ ಮಾಡಿದ ರೈತನನ್ನು ಕಟ್ಟಿಗೆ ನೀಡಿಯೇ ಸಲಹುತ್ತಿರುತ್ತದೆ. ಈ ವಿಚಾರ ಹೇಗೋ ತಿಳಿದ ಪಕ್ಕದ ಮನೆಯ ಹೆಂಗಸೂ ಕೂಡ ಗಂಡನಿಗೆ “ಮಾರಿ ದೇವತೆ ಸೌದೆ ಹಾಕುವಾಗ ನೋಡಿ ಕಡಿಯಲು ಮುಂದಾಗು ಆಗ ನಮಗೆ ನಿತ್ಯವೂ ಸೌದೆ ಹೊರೆ ದೊರೆಯುತ್ತದೆ” ಎನ್ನುತ್ತಾಳೆ. ಹೆಂಡತಿಯ ಬಲವಂತದಿಂದ ಆ ವ್ಯಕ್ತಿ ಭಂಡ ಧೈರ್ಯ ಮಾಡಿ ಮಾರಿ ದೇವತೆಯನ್ನು ಕಡಿಯಲು ಕೊಡಲಿ ಎತ್ತಿದರೆ ಕಡಿಯಲು ಸಾಧ್ಯವಾಗುವುದಿಲ್ಲ. ಇಡೀ ದೇಹ ಚೈತನ್ಯ ಕಳೆದುಕೊಂಡಂತೆ ಮರವಟ್ಟಂತೆ ಕೊಡಲಿ ಎತ್ತಿದ ಅದೆ ಭಂಗಿಯಲ್ಲಿಯೇ ಇದ್ದು ಬಿಡುತ್ತಾನೆ.
ಅದನ್ನು ಕಂಡ ಹೆಂಡತಿ ತನ್ನ ಕಿವಿಯಾಭರಣಗಳನ್ನು ಕೊಟ್ಟು “ನನ್ನ ಗಂಡನನ್ನು ಬಿಟ್ಟು ಬಿಡು ಎಂದು ಬೇಡಿಕೊಳ್ಳುತ್ತಾಳೆ. ಅದಕ್ಕೊಪ್ಪದ ಮಾರಿ ದೇವತೆ “ನಿತ್ಯವೂ ಈ ರೈತನ ಮನೆ ಮುಂದೆ ಸೌದೆ ಹೊರೆ ಹಾಕಿದರೆ ಬಿಡುವೆ” ಎನ್ನುತ್ತದೆ. ಮರ್ಯಾದೆಗಂಜಿ ದುರಾಸೆ ಪಟ್ಟ ದಂಪತಿಗಳು ಬಡ ರೈತನ ಮನೆಗೆ ನಿತ್ಯವೂ ಒಂದೊಂದು ಹೊರೆ ಸೌದೆಯನ್ನು ಹಾಕಲು ಮುಂದಾಗುತ್ತಾರೆ.
ಇದೊಂದು ಕತೆಯೇ ಆದರೂ ನಮಗೆ ಇದರಿಂದ ದೊರೆಯುವ ಆಶಯವೇನೆಂದರೆ ಯಾವುದೇ ಕೆಲಸ ಮಾಡಲು ಧೈರ್ಯ ಬೇಕು ಆದರೆ ದುರಾಸೆಯಿಂದ ಕೂಡಿದ ಭಂಡ ಧೈರ್ಯ ಬೇಡ ಎಂಬುದು. ಧೈರ್ಯದಲ್ಲೂ ಸಾತ್ವಿಕತೆ ಇರಬೇಕು. ಆಂತಹ ಧೈರ್ಯ ನಮ್ಮ ಏಳಿಗೆಯ ಸೂಚಕ. ಹೌದಲ್ವ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಫೆಬ್ರವರಿ 28 ರಂದು ನಮ್ಮ ರಾಷ್ಟ್ರದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಗುತ್ತದೆ.ಫೆಬ್ರವರಿ 28,1928 ರಂದು ಸರ್.ಸಿ.ವಿ.ರಾಮನ್‍ರವರು “ರಾಮನ್ ಪರಿಣಾಮ”ವನ್ನು ಕಂಡು ಹಿಡಿದ ದಿನ. ಈ ಸಂಶೋಧನೆಗೆ ರಾಮನ್‍ರಿಗೆ ನೊಬೆಲ್ ಪ್ರಶಸ್ತಿ ದೊರಕಿತು.ಏಷ್ಯಾ ಖಂಡದಲ್ಲಿಯೇ ಭೌತಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲ ವಿಜ್ಞಾನಿ.ವಿಜ್ಞಾನ, ರಾಮನ್‍ರ ಜೀವ ಮತ್ತು ಉಸಿರಾಗಿತ್ತು ಎಂದರೆ ತಪ್ಪಾಗಲಾರದು.ಅವರಿಗೆ ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆಗಳು, ಮನಸ್ಸಿನ ಆಂತರಿಕ ಅವಶ್ಯಕತೆಯನ್ನು ಈಡೇರಿಸುವ ಕಾರ್ಯವಾಗಿತ್ತು ಮತ್ತು ಅದರಲ್ಲಿ ಆನಂದವನ್ನು ಕಂಡ ವ್ಯಕ್ತಿ.
“Science was a personal endeavour, an aesthetic pursuit and above all joyous experience to C. V Raman” – Prof. Ramaseshan”. ಇಂತಹ ಸಂದರ್ಭದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಿಜವಾಗಲೂ ಸಮಯೋಚಿತ.
ವೈಜ್ಞಾನಿಕ ಮನೋಭಾವ ಬೆಳೆಯಬೇಕು
ಇತ್ತೀಚಿಗೆ ಮದನಪಲ್ಲಿಯ ವಿದ್ಯಾವಂತ ಕುಟುಂಬವೊಂದರಲ್ಲಿ ಮೂಢ ನಂಬಿಕೆಗೆ ಇಬ್ಬರು ಹೆಣ್ಣು ಮಕ್ಕಳು ಬಲಿಯಾದ ಘಟನೆ ಶಿಕ್ಷಣ ವ್ಯವಸ್ಥೆಯಲ್ಲಿ, ಬೋಧಕ ಕ್ರಮದಲ್ಲಿ ನ್ಯೂನ್ಯತೆಗಳಿರುವ ಬಗ್ಗೆ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ವಿಜ್ಞಾನ, ಪಠ್ಯ ಕ್ರಮದಲ್ಲಿ ಕೇವಲ ಒಂದು ಅಧ್ಯಯನದ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಓದುವ ಅಥವಾ ಬೋಧನೆಗೆ ಮಾತ್ರ ಸೀಮಿತವಾದ ವಿಷಯವಾಗಿದೆ. ವಿಜ್ಞಾನದ ಶಿಕ್ಷಣ( Science Education ) ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ವಿಫಲವಾಗಿರುವ ಅಂಶ ಬೆಳಕಿಗೆ ಬರುತ್ತದೆ. ವಿಪರ್ಯಾಸದ ಸಂಗತಿಯೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಪ್ರಗತಿ ಹೊಂದಿರುವ 21 ನೇ ಶತಮಾನದಲ್ಲಿಯೂ ಸಹ ಇಂತಹ ಘಟನೆಗಳು ನಡೆಯುತ್ತವೆ ಎಂದರೆ ನಿಜವಾಗಿಯೂ ಆಶ್ಚರ್ಯಕರ ಮತ್ತು ಭಯಂಕರ.
ಭೌತಿಕ ಮತ್ತು ಪ್ರಾಕೃತಿಕ ಪ್ರಪಂಚದ ವಿದ್ಯಮಾನಗಳಿಗೆ ಸಂಬಂಧಿಸಿದ, ಪಕ್ಷಪಾತವಿಲ್ಲದ ಅವಲೋಕನ ಹಾಗೂ ವ್ಯವಸ್ಥಿತ ಪ್ರಯೋಗಗಳಿಗೆ ಒಳಗೊಳ್ಳುವಂತೆ ಮಾಡುವ ಕ್ರಮಬದ್ಧ ಅಧ್ಯಯನದ ವಿಧಾನವೇ ವಿಜ್ಞಾನ. ಸಾಮಾನ್ಯ ಸತ್ಯಗಳು ಅಥವಾ ಮೂಲಭೂತ ತತ್ವಗಳಕಾರ್ಯಾಚರಣೆಗಳನ್ನು ಒಳಗೊಂಡಂತೆ ನಡೆಸುವ ಜ್ಞಾನಾನ್ವೇಷಣೆಯೇ ವಿಜ್ಞಾನ. ಒಂದು ಅರ್ಥದಲ್ಲಿ ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ ಜ್ಞಾನ ಮಂಡಲ.
ಮೂರು ಭಾಗಗಳಾಗಿ ವಿಜ್ಞಾನ
ವಿಶಾಲವಾಗಿ ಹೇಳುವುದಾದರೆ, ವಿಜ್ಞಾನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, ಅಜೈವಿಕ ವಿಶ್ವದ ಅಧ್ಯಯನವನ್ನು ಒಳಗೊಂಡಿರುವ ಭೌತಿಕ ವಿಜ್ಞಾನ. ಉದಾಹರಣೆ ಕ್ಷೇತ್ರಗಳು : ಖಗೋಳ ಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಮಿಯ ವಿಜ್ಞಾನ ಇತ್ಯಾದಿ. ಎರಡನೆಯದಾಗಿ ಜೈವಿಕ ವಿಜ್ಞಾನ. ಉದಾಹರಣೆ : ಜೀವ ಶಾಸ್ತ್ರ, ಕೃಷಿ ವಿಜ್ಞಾನ, ಜೀವ ರಸಾಯನ ಶಾಸ್ತ್ರ ಮುಂತಾದವುಗಳು. ಮೂರನೆಯ ಶಾಖೆ, ಸಾಮಾಜಿಕ ವಿಜ್ಞಾನ. ಉದಾಹರಣೆ : ಅರ್ಥಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ. ಹೀಗೆ ವಿಜ್ಞಾನ, ಮೇಲೆ ತಿಳಿಸಿರುವಂತೆ, ಭೌತಿಕ ಮತ್ತು ನೈಸರ್ಗಿಕ ಪ್ರಪಂಚದ ವಿದ್ಯಮಾನಗಳನ್ನು ತರ್ಕ ಬದ್ಧವಾಗಿ ವಿವರಿಸಬಲ್ಲ ಜ್ಞಾನದ ಗಣಿ.
ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ವಿಜ್ಞಾನಿ ಎಂದು ಕರೆಯುತ್ತಾರೆ.ಸತ್ಯಾನ್ವೇಷಣೆಗೆ ವಿಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ವ್ಯಕ್ತಿ. ಯಾವುದೇ ಒಂದು ಕ್ರಿಯೆ ಪುನರಾವರ್ತನೆಗೊಳ್ಳ ಬೇಕಾದದ್ದು ವಿಜ್ಞಾನದ ಮೂಲ ಲಕ್ಷಣ.
ಬಹಳ ಜನಪ್ರಿಯವಾದ ಮತ್ತು ಹಲವಾರು ಜನಸಾಮಾನ್ಯರಿಗೂ ತಿಳಿದಿರುವ ನ್ಯೂಟನ್‍ನ ಸೇಬು ಹಣ್ಣಿನ ಪ್ರಕರಣವನ್ನು ಗಮನಿಸಿ. ನ್ಯೂಟನ್, ಮೇಲಿಂದ ಸೇಬು ಬೀಳುವುದನ್ನು ಪರಿಶೀಲಿಸಿದ. ಜೊತೆಗೆ ಯಾವುದೇ ವಸ್ತುವನ್ನು ಮೇಲಕ್ಕೆ ಎಸೆದಾಗ, ಅದು ಪುನಃ ಕೆಳಗೆ ಬೀಳುವುದನ್ನು ಗಮನಿಸಿದ. ಪ್ರಯೋಗಗಳ ಮೂಲಕ ಖಚಿತಪಡಿಸಿಕೊಂಡ ನಂತರ, ಗುರುತ್ವಾಕರ್ಷಣ ತತ್ವವನ್ನು ಪ್ರತಿಪಾದಿಸಿದ. ಯಾವುದೇ ಎರಡು ದ್ರವ್ಯ ರಾಶಿಗಳ ನಡುವೆ ಆಕರ್ಷಣಾ ಬಲವಿರುತ್ತದೆ ಮತ್ತು ಈ ಬಲವು ದ್ರವ್ಯರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿದ್ದು, ಅಂತರದ ವರ್ಗಕ್ಕೆ ವಿಲೋಮಾನುಪಾತವಾಗಿರುತ್ತದೆ ಎಂಬ ವಿಷಯವನ್ನು ಕಂಡುಕೊಂಡ. ಸೂರ್ಯನ ಸುತ್ತಲೂ ಗ್ರಹಗಳು ( ಭೂಮಿಯೂ ಒಳಗೊಂಡಂತೆ ) ಪ್ರದಕ್ಷಿಣೆ ಹಾಕಲು, ಭೂಮಿಯ ಸುತ್ತಲೂ ಚಂದ್ರನು ಪ್ರದಕ್ಷಿಣೆ ಹಾಕಲು ಗುರುತ್ವಾಕರ್ಷಣೆ ಕಾರಣ ಎಂಬ ಅಂಶ, ನ್ಯೂಟನ್‍ನ ಗುರುತ್ವಾಕರ್ಷಣೆ ತತ್ವದ ಮೂಲಕ ಬೆಳಕಿಗೆ ಬಂದಿತು. ಈ ಅಂಶ ಸಾರ್ವತ್ರಿಕ. ಯಾರು ಬೇಕಾದರೂ ಪ್ರಯೋಗ ನಡೆಸಿ ನೋಡ ಬಹುದಾಗಿದೆ.ಇದು ವಿಜ್ಞಾನದ ವೈಶಿಷ್ಠ್ಯ.
ನಿತ್ಯ ಜೀವನದಲ್ಲಿ ಹಾಸು ಹೊಕ್ಕಾದ ವಿಜ್ಞಾನ
ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ.ವಿಜ್ಞಾನವಿಲ್ಲದೇ ಜೀವನವೇ ಇಲ್ಲ. ನಮ್ಮ ದಿನ ನಿತ್ಯದ ಪ್ರತಿಯೊಂದೂ ಕೆಲಸದಲ್ಲಿ ನಮಗೆ ಗೊತ್ತಿದ್ದೂ, ಗೊತ್ತಿಲ್ಲದೆಯೊ ವಿಜ್ಞಾನದ ತತ್ವಗಳನ್ನು ಬಳಸುತ್ತೇವೆ.ನಮ್ಮ ಜೀವದ ಪ್ರತಿಯೊಂದು ಅಂಶವು ಸಹ ಒಂದಲ್ಲಾ ಒಂದು ರೀತಿಯಲ್ಲಿ ವಿಜ್ಞಾನದಿಂದ ಪ್ರಭಾವಗೊಂಡಿದೆ.ವಿಜ್ಞಾನವು ಪ್ರಪಂಚವನ್ನು ಸಂಕುಚಿತಗೊಳಿಸಿದೆ.
ಸಮಾಜದಲ್ಲಿ ಬದಲಾವಣೆ ತರ ಬೇಕಾದರೆ, ಶಿಕ್ಷಣ ಮುಖ್ಯ. ಅದರಲ್ಲೂ, ಸಮಾಜದಲ್ಲಿ ತರ್ಕ ಬದ್ಧವಾಗಿ, ವಿವೇಚನಾ ಶಕ್ತಿಯುಳ್ಳ ವಿದ್ಯಾರ್ಥಿಗಳನ್ನು, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ.ನಮ್ಮ ಚಿಂತನೆಗಳನ್ನು ವಿಶಾಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು.
1) ವೈಜ್ಞಾನಿಕ ( Scientific)
2) ಅವೈಜ್ಞಾನಿಕ ( Unscientific)
3) ಮೂಢನಂಬಿಕೆ ( Superstition)
ವಿಜ್ಞಾನದ ತತ್ವಗಳಿಗೆ ಸಂಬಂಧಿಸಿದ ಅಥವಾ ವಿಜ್ಞಾನದ ತತ್ವಗಳನ್ನು ಪ್ರದರ್ಶಿಸುವ ಚಿಂತನೆಗಳಿಗೆ ವೈಜ್ಞಾನಿಕ ಎಂದು ಕರೆಯಬಹುದು.ವೈಜ್ಞಾನಿಕ ಚಿಂತನೆಗಳನ್ನು ವಿಜ್ಞಾನದ ಸೂತ್ರಗಳಿಗೆ ಹಾಗೂ ಪ್ರಯೋಗಗಳಿಗೆ ಅಳವಡಿಸಬಹುದು.ಅಂದರೆ ವಿಜ್ಞಾನದ ತಳಹದಿ ಇರುವಂಥದ್ದು.
ವಿಜ್ಞಾನದ ಸೂತ್ರ, ಪ್ರಯೋಗಗಳಿಗೆ ಒಳಪಡದೆ ವಿಜ್ಞಾನದ ತತ್ವಗಳ ಹಂಗಿಲ್ಲದೆಯೂ, ತಿಳಿವಳಿಕೆಯಿಲ್ಲದೆಯೂ, ಸ್ವತಂತ್ರವಾಗಿ ಆಚರಣೆಯಲ್ಲಿಇರುವಂಥಾದ್ದು ಮತ್ತು ವೈಜ್ಞಾನಿಕ ತತ್ವಗಳಿಗೆ ವಿರುದ್ಧವಾದದ್ದು ಅವೈಜ್ಞಾನಿಕ ಎಂದು ಕರೆಯಬಹುದು.ಯಾವ ಚಿಂತನೆಗಳನ್ನು ವಿಜ್ಞಾನದ ತತ್ವಗಳು ಮತ್ತು ಪ್ರಯೋಗಗಳ ಮೂಲಕ ಸಂಪೂರ್ಣ ತಪ್ಪೆಂದು ದೃಢಪಡಿಸಬಹುದೋ ಅಥವಾ ರುಜುವಾತು ಮಾಡಬಹುದೋ ಅಂತಹ ಚಿಂತನೆಗಳನ್ನು ಮೂಢನಂಬಿಕೆ ಅಥವಾ ಮೌಢ್ಯಎಂದು ಕರೆಯಬಹುದು. ಮೂಢನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ.ಸಮಾಜದಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನುವೈಜ್ಞಾನಿಕ ದೃಷ್ಟಿಯಿಂದಲೇ ನೋಡ ಬೇಕಾದ ಅವಶ್ಯಕತೆಯಿಲ್ಲ. ಆ ರೀತಿಯಾದ ಯಾವ ನಿಯಮವೂ ಇಲ್ಲ. ನಮ್ಮ ಸುತ್ತ ಮುತ್ತ ವೈಜ್ಞಾನಿಕವಲ್ಲದ ಎಷ್ಟೋ ವಿಷಯಗಳಿವೆ.ಅವೈಜ್ಞಾನಿಕ ಚಿಂತನೆಗಳಿಗೆ, ಪದ್ಧತಿಗಳಿಗೆ ಕೆಲವು ಉದಾಹರಣೆಗಳನ್ನು ಅವಲೋಕಿಸಿ, ವೈಜ್ಞಾನಿಕ ಮನೋಭಾವ ಮತ್ತು ಮೂಢನಂಬಿಕೆಗಳ ಬಗ್ಗೆ ತಿಳಿಯಲು ಪ್ರಯತ್ನಿಸೋಣ.
ಉದಾಹರಣೆಗೆ, ಹಬ್ಬ ಹರಿ ದಿನಗಳಲ್ಲಿ ಹೊಸ ಬಟ್ಟೆಯನ್ನು ಧರಿಸುತ್ತೇವೆ.ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ನಮ್ಮ ಸಂತೋಷಕ್ಕೆ, ಖುಷಿಗೆ ಅಳವಡಿಸಿಕೊಂಡಿರುವ ಪದ್ಧತಿ.ಅದೇ ರೀತಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುತ್ತೇವೆ.ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನುತ್ತೇವೆ. ತಾತ್ವಿಕವಾಗಿ, ಜೀವನದಲ್ಲಿ ಸಿಹಿ ಕಹಿ ಘಟನೆಗಳು / ಸಂದರ್ಭಗಳು ಬರುವುದು ಸರ್ವೇ ಸಾಮಾನ್ಯ.ಸುಖ – ದುಃಖಎರಡನ್ನೂ ಅನುಭವಿಸಲು ಸಿದ್ದವಿರಬೇಕು, ಎಂದು ಸಾಂಕೇತಿಕವಾಗಿ ತಿಳಿಹೇಳುವ ಪದ್ಧತಿ ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ. ಆದರೆ, ವಿಜ್ಞಾನದ ತಳಹದಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನದ ನೆಲೆಯಲ್ಲಿ ನೋಡುವ ಅವಶ್ಯಕತೆಯೂ ಇಲ್ಲ. ಹೆಚ್ಚು ನೀರು ಬೇಕಾಗಿರುವ ಕಬ್ಬಿನ / ಭತ್ತದ ಬೆಳೆಯನ್ನು ಕಡಿಮೆ ಮಳೆ ಹಾಗೂ ನೀರಿನ ಅಭಾವವಿರುವ ಪ್ರದೇಶದಲ್ಲಿ ಬೆಳೆಯುವುದು ನಿಜವಾಗಿಯೂ ಅವೈಜ್ಞಾನಿಕ. ಅದೇ ರೀತಿ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಳವೆಗಳ ಮೂಲಕ ನೀರು ಹಾಯಿಸುವ ಬದಲು, ತೆರೆದ ಕಾಲುವೆಗಳ ಮೂಲಕ ನೀರನ್ನು ಹರಿಸುವುದು, ಅವೈಜ್ಞಾನಿಕ ಪದ್ಧತಿ. ಕೋವಿಡ್ 19, ನಮ್ಮನ್ನು ಕಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.ಈ ಸಂದರ್ಭದಲ್ಲಿ, ಹಣೆಬರಹವಿದ್ದಂತೆ ನಡೆಯುತ್ತದೆ ಎಂದು ತಾತ್ಸಾರ ಮಾಡಿ ಮಾಸ್ಕ್ ಧರಿಸದಿರುವುದು ಅವೈಜ್ಞಾನಿಕ ಅಥವಾ ಮೂಢನಂಬಿಕೆಯಾಗ ಬಹುದು.ಸಮಾಜಕ್ಕೆ ತೊಂದರೆಯಾಗದಂತ ಅವೈಜ್ಞಾನಿಕ ಪದ್ಧತಿ / ಆಚರಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
ವೈಜ್ಞಾನಿಕಮನೋಭಾವ
ಮುಕ್ತ ಮನಸ್ಸುಳ್ಳ, ನಿಖರವಾದ ಜ್ಞಾನವನ್ನು ಪಡೆಯುವ ಆಸೆಯುಳ್ಳ, ಆತ್ಮ ವಿಶ್ವಾಸದಿಂದ ಜ್ಞಾನವನ್ನು ಹುಡುಕುವ, ಪರಿಶೀಲಿಸಿದ ಹಾಗೂ ದೃಢಪಟ್ಟಿರುವ ಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಅಚಲ ನಂಬಿಕೆಯುಳ್ಳ ವರ್ತನೆಗೆ ವೈಜ್ಞಾನಿಕ ಮನೋಭಾವ ಎಂದು ಕರೆಯಬಹುದು.
ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಕ್ರಿಯೆ / ವಿಷಯವನ್ನು ಸ್ವತಃ ನೋಡಿ, ಮಾಡಿ ಕಲಿಯುವ, ಪ್ರಶ್ನೆಗಳನ್ನು ಕೇಳಿ ನಿಖರವಾದ ಜ್ಞಾನವನ್ನು ಪಡೆದುಕೊಳ್ಳುವ, ಎಲ್ಲ ವಿಷಯಗಳಿಗೂ ಪುರಾವೆಯನ್ನು ಕೇಳುವ, ಪ್ರಯೋಗಗಳನ್ನು ಮಾಡುವ ಮೂಲಕ ಖಚಿತಪಡಿಸಿಕೊಳ್ಳುವ ನಡವಳಿಕೆಯನ್ನು ವೈಜ್ಞಾನಿಕ ಮನೋಭಾವನೆ ಎಂದು ಕರೆಯಬಹುದು. ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿಗೆ ಈ ಕೆಳಗಿನ ಲಕ್ಷಣಗಳಿರ ಬೇಕಾಗುತ್ತದೆ.
1)ವಿಮರ್ಶಾತ್ಮಕ ವೀಕ್ಷಣೆ ಮತ್ತು ಚಿಂತನೆ.
2)ಸುತ್ತಲೂ ನಡೆಯುವ ಕ್ರಿಯೆಗಳಿಗೆ ಅಥವಾ ಎಲ್ಲ ವಿಷಯಗಳ ಬಗ್ಗೆ ನಿಖರವಾದ ಜ್ಞಾನವನ್ನು ಪಡೆಯುವ ಹಂಬಲ. ಏಕೆ, ಏನು ಮತ್ತು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವಲ್ಲಿ ಹೆಚ್ಚಿನ ಆಸಕ್ತಿ.
3)ಮೂಢ ಮತ್ತು ತಪ್ಪು ನಂಬಿಕೆಗಳಲ್ಲಿ ವಿಶ್ವಾಸವಿಲ್ಲದಿರುವುದು.
4)ಬೇರೆಯವರ ಅಭಿಪ್ರಾಯಕ್ಕೆ / ವೀಕ್ಷಣೆಗಳಿಗೆ ಗೌರವವನ್ನು ಸೂಚಿಸುವುದು. ಪ್ರಯೋಗಗಳಿಂದ ಖಚಿತಪಡಿಸಿದರೆ ಅಥವಾ ಖಚಿತವಾದ ಪುರಾವೆಗಳನ್ನು ಒದಗಿಸಿದಾಗ, ತನ್ನ ಅಭಿಪ್ರಾಯವನ್ನು ಬದಲಿಸಲು ಸಿದ್ಧವಾಗಿರುವುದು.
5)ವಿಜ್ಞಾನದಲ್ಲಿ ಯಾವುದೇ ಸಿದ್ಧಾಂತ ಅಂತಿಮವಲ್ಲ ಎಂಬ ತಿಳುವಳಿಕೆಯನ್ನ ಹೊಂದಿರುವುದು.
6)ಹಠತ್ತಾಗಿ ತೀರ್ಮಾನಕ್ಕೆ ಬರದೇ ಇರುವುದು.
7)ಪಕ್ಷಾತೀತವಲ್ಲದ ಕುತೂಹಲವನ್ನು ಹೊಂದಿರುವುದು.
8)ತೀಕ್ಷಣವಾಗಿ ವೀಕ್ಷಿಸುವುದು.
9)ಸರಿಯಾದ ಕಾರಣವಿಲ್ಲದೆ ಯಾವುದೇ ಕ್ರಿಯೆ ಪ್ರಕೃತಿಯಲ್ಲಿ ನಡೆಯುವುದಿಲ್ಲ ಎಂಬ ಅಚಲವಾದ ನಂಬಿಕೆ.
10)ಪ್ರಕೃತಿಯಲ್ಲಿ ಪ್ರತಿಯೊಂದು ಕ್ರಿಯೆ ವಿಜ್ಞಾನದ ತತ್ವಗಳು ಹಾಗೂ ನಿಯಮಗಳ ಪ್ರಕಾರ ನಡೆಯುತ್ತವೆ ಎಂಬ ದಿಟ್ಟವಾದ ಆಲೋಚನೆ.
ಮೂಢನಂಬಿಕೆಗಳು ( Superstitions )
ಮೂಢನಂಬಿಕೆಗಳು, ಈಗಾಗಲೆ ಹೇಳಿರುವಂತೆ, ವಿಜ್ಞಾನದ ತತ್ವಗಳು ಮತ್ತು ಪ್ರಯೋಗಗಳ ಮೂಲಕ ಸಂಪೂರ್ಣ ತಪ್ಪೆಂದು ಧೃಡಪಡಿಸಬಹುದಾಂಥ ಚಿಂತನೆಗಳು.ಯಾವ ನಂಬಿಕೆಯಲ್ಲಿ ಮೌಢ್ಯತೆ ಇರುವುದೊ, ಅದನ್ನು ಮೂಢನಂಬಿಕೆ ಎಂದು ಕರೆಯಬಹುದು. ಮೂಢನಂಬಿಕೆಗಳು ಸಾರ್ವಕಾಲಿಕ. ಎಲ್ಲಾ ಕಾಲದ, ಎಲ್ಲಾ ದೇಶದ, ಎಲ್ಲಾ ಜನಾಂಗಗಳಲ್ಲಿ ಮೂಢನಂಬಿಕೆಗಳನ್ನು ನಾವು ಕಾಣುತ್ತೇವೆ.ನಮ್ಮ ದೇಶದಲ್ಲಿ ಹಾಗೂ ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿರುವ ಕೆಲವು ಮೂಢನಂಬಿಕೆಗಳನ್ನು ನೋಡೋಣ.
ಅಂಗೈನಲ್ಲಿ ನವೆಯಾದರೆ ದುಡ್ಡು ಸಿಗುತ್ತದೆ, ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅಶುಭ, ಮನೆಯಲ್ಲಿ ಕನ್ನಡಿ ಒಡೆದರೆ ಏಳು ವರ್ಷ ಅಶುಭ, ಆರೋಗ್ಯದಲ್ಲಿ, ಆರ್ಥಿಕವಾಗಿ ಅಥವಾ ಸಂಸಾರದಲ್ಲಿ ಸಮಸ್ಯೆಗಳುಂಟಾದಾಗ, ಮಾಂತ್ರಿಕನ ಅಥವಾ ಜ್ಯೋತಿಷ್ಯನ ಸಲಹೆ ಪಡೆಯುವುದು, ಗ್ರಹಣ ಕಾಲದಲ್ಲಿ ಹೊರಗಡೆ ಹೋಗಬಾರದು, ಏನನ್ನು ತಿನ್ನಬಾರದು ಎಂಬ ಅಪಾರ ನಂಬಿಕೆ, ಮುಟ್ಟಾದ ಹೆಣ್ಣು ಮೈಲಿಗೆ, ಸಂಖೈ 13 ಅಶುಭ, ಕೆಲವು ಬಣ್ಣಗಳ ಬಟ್ಟೆಯನ್ನು ಧರಿಸಿದರೆ ಗೆಲುವು ಸಿಗುತ್ತದೆ, ಹೀಗೆ ಹಲವಾರು ಮೂಢನಂಬಿಕೆಗಳನ್ನು ನಾವುಗಳು ಪಟ್ಟಿ ಮಾಡಬಹುದು. ಕೆಲವು ಬಾರಿ, ಗಣೇಶನ ವಿಗ್ರಹ ಹಾಲು ಕುಡಿಯಿತು ಎಂಬ ವಿಷಯವನ್ನು ಸಾರ್ವಜನಿಕರಲ್ಲಿ ನಂಬಿಸಿ ದೊಡ್ಡ ಸುದ್ದಿಯಾಗಿದ್ದನ್ನು ನಾವು ಕೇಳಿದ್ದೇವೆ ಮತ್ತು ಟಿ.ವಿ ಮಾಧ್ಯಮಗಳಲ್ಲಿ ನೋಡಿದ್ದೇವೆ.
ಸಾಮಾನ್ಯವಾಗಿ ಹೆಚ್ಚು ಶಿಕ್ಷಣ ಪಡೆಯದೇ ಇರುವ ನಾಗರಿಕರಲ್ಲಿ ಮೂಢನಂಬಿಕೆಗಳನ್ನು ನಾವು ಕಾಣುತ್ತೇವೆ.ಆದರೆ ಇದು ಯಾವಾಗಲೂ ಅನ್ವಯಿಸುವುದಿಲ್ಲ. ವಿದ್ಯಾವಂತರು ಸಹ ಮೂಢನಂಬಿಕೆಗಳನ್ನು ಅನುಸರಿಸುವುದನ್ನು ನೋಡುತ್ತೇವೆ.ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಮ್ಮ ಪ್ರಾಂಶುಪಾಲರು ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ.ಎಚ್.ನರಸಿಂಹಯ್ಯನವರು ನಮ್ಮ ಕ್ಲಾಸಿನಲ್ಲಿ ಹೇಳಿದ್ದ ಮಾತು ನೆನಪಿಗೆ ಬರುತ್ತದೆ.ಗ್ರಹಣಗಳ ಬಗ್ಗೆ ಕೆಲವು ಭೌತಶಾಸ್ತ್ರದ ಪ್ರಾಧ್ಯಾಪಕರು ಎರಡು ಸಿದ್ಧಾಂತಗಳಲ್ಲಿ ನಂಬಿಕೆಯುಳ್ಳವರಾಗಿದ್ದು, ಒಂದು ಕ್ಲಾಸಿನಲ್ಲಿ ಪಾಠಮಾಡಲು ಮತ್ತು ಇನ್ನೊಂದು ಮನೆಯಲ್ಲಿ ಆಚರಣೆ ಮಾಡಲು.ಹೀಗೆ ಮೂಢನಂಬಿಕೆಗಳು ನಮ್ಮ ಜೀವನದ ಭಾಗವಾಗಿದೆ ಎಂದರೆ ತಪ್ಪಾಗಲಾರದು.
ಮೂಢನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ಮೂಢನಂಬಿಕೆಗಳು ಅವೈಚಾರಿಕ ಮತ್ತು ಕುರುಡು ನಂಬಿಕೆ.ಅಲೌಕಿಕ ಅಂಶಗಳಲ್ಲಿ ಅಪಾರ ನಂಬಿಕೆ, ವೈಯಕ್ತಿಕ ನಂಬಿಕೆಗಳು ಮತ್ತು ಅನುಭವಗಳು, ಅಸಂಬಂಧಿತ ಘಟನೆಗಳಿಗೆ ಸಂಬಂಧ ಹುಡುಕಲು ಪ್ರಯತ್ನಿಸುವುದು, ಇಂತಹ ಸನ್ನಿವೇಶಗಳು ಮೂಢನಂಬಿಕೆಗೆ ಎಡೆಮಾಡಿಕೊಡುತ್ತವೆ.ಕೆಲವು ಸಂದರ್ಭಗಳಲ್ಲಿ ಮೂಢನಂಬಿಕೆಗಳು ಮನಸ್ಸಿನ ಆತಂಕ ಮತ್ತು ದುಗುಡಗಳನ್ನು ಕಡಿಮೆ ಮಾಡುತ್ತವೆ.ಆದ್ದರಿಂದ ಮನಸ್ಸಿಗೆ ಹೆಚ್ಚು ಒತ್ತಡ ಹಾಗೂ ಆತಂಕವಾದ ಸಮಯದಲ್ಲಿ ಮೂಢನಂಬಿಕೆಗಳಿಗೆ ಮೊರೆ ಹೋಗುವುದು ಹೆಚ್ಚಾಗುತ್ತದೆ.ಹೀಗೆ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದಲೂ, ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಮತ್ತು ಎಲ್ಲಾ ಜನಾಂಗಗಳಲ್ಲಿಯೂ ನಾವು ಕಾಣುತ್ತೇವೆ.ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟಕರವಾದ ಸಂಗತಿ ಎಂದೇ ಹೇಳಬಹುದು.ಕೆಲವೊಂದು ಮೂಢನಂಬಿಕೆಗಳು ಸಮಾಜಕ್ಕೆ ಮತ್ತು ಇತರ ನಾಗರಿಕರಿಗೆ ತೊಂದರೆಯುಂಟು ಮಾಡುತ್ತವೆ.ಇಂತಹ ಸಮಾಜಘಾತಕ ಮೂಢನಂಬಿಕೆಗಳನ್ನು ನಾವು ಮೊದಲು ಹೋಗಲಾಡಿಸಬೇಕು.
ಮೂಢನಂಬಿಕೆಗಳ ವಿರುದ್ಧ ಕಾನೂನು
ಮೂಢನಂಬಿಕೆಗಳ ವಿರುದ್ಧವಾಗಿ, ನನಗೆ ತಿಳಿದಿರುವಂತೆ, ಎರಡು ರಾಜ್ಯಗಳು ಕಾನೂನನ್ನು ರೂಪಿಸಿವೆ.ಮಹಾರಾಷ್ಟ್ರ ಸರ್ಕಾರ 2013 ರಲ್ಲಿ ಮೂಢನಂಬಿಕೆ ನಿಷೇಧ ಕಾನೂನು ವಿಧೇಯಕವನ್ನು ಜಾರಿಗೆ ತಂದಿದೆ.ಕರ್ನಾಟಕದಲ್ಲಿ. “The Karnataka Anti – superstition Authority“ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಚಿಂತನೆ ನಡೆದಿದೆ.
ಕಾನೂನು ರೀತ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸುವುದು ನಿಜವಾಗಿಯೂ ಕಷ್ಟಕರವಾದಂತ ಸಂಗತಿ. ನಾಗರೀಕರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಬಹಳ ಮುಖ್ಯ.ವಿದ್ಯಾರ್ಥಿಗಳಲ್ಲಿ ( ಮುಂದಿನ ಪ್ರಜೆಗಳಲ್ಲಿ ) ವೈಜ್ಞಾನಿಕ ವಿಷಯದಲ್ಲಿ ಆಸಕ್ತಿ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದು. ಇದರಿಂದ ಮೂಢನಂಬಿಕೆಗಳ ನಿವಾರಣೆಗೆ ಅನುಕೂಲವಾಗುತ್ತದೆ ಮತ್ತು ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಬಹುದು.ನಾವೆಲ್ಲರೂ ನಮ್ಮ ಸುತ್ತ ಮುತ್ತಲೂ ನಡೆಯುವ ಚಟುವಟಿಕೆಗಳನ್ನು ವಿಜ್ಞಾನದ ಕಣ್ಣಿನಿಂದ ನೋಡುವಂತಾಗ ಬೇಕು.
ನಮ್ಮ ಸಂವಿಧಾನ 51A ರಲ್ಲಿ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ.“It shall be the duty of every citizen of India to develop scientific temper, humanism and the spirit of inquiry and reform”. ಈ ಪ್ರಯತ್ನದಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ.ನಾವು ಮಾಡುವ ಹಲವಾರು ಕಾರ್ಯಗಳಲ್ಲಿ ಸೋಲನ್ನು ಕಾಣಬಹುದು.ಸೋಲುಂಡ ತಕ್ಷಣವೇ ಮೂಢನಂಬಿಕೆಗಳ ಮೊರೆ ಹೋಗುವುದು ಬೇಡ. ಮರಳಿ ಪ್ರಯತ್ನ ಮಾಡುವ. ಸಿ.ವಿ ರಾಮನ್‍ರು ಸೋಲಿನ ಬಗ್ಗೆ ಹೀಗೆ ಹೇಳಿದ್ದಾರೆ. “I am the master of my failure. If I never fail how will I ever learn”.I unquote.
We shall continue to strive hard to achieve our goals without resorting to superstitious beliefs”. ಎಂಬ ಸಂದೇಶದೊಂದಿಗೆ ಲೇಖನವನ್ನು ಮುಗಿಸುವೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ‘ಶಿಕ್ಷಣಕ್ಕೆ ಸಹಾಯ’ ದ (Help Educate) ಉಪಕ್ರಮದ ಅಂಗವಾಗಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ನೀಡುವ ಬಗ್ಗೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಪರಿಕಲ್ಪನೆಯಂತೆ ಈ ಒಪ್ಪಂದ ಆಗಿದ್ದು, ನಗರ- ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಅಂತರವನ್ನು ಆಳಿಸಿಹಾಕಲು ಈ ಉಪಕ್ರಮ ಪೂರಕವಾಗಲಿದೆ.
ಈ ಕುರಿತು ತಿಳಿವಳಿಕೆ ಪತ್ರಕ್ಕೆ ಶುಕ್ರವಾರ ಉಪ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಸಹಿ ಹಾಕಲಾಗಿದ್ದು, ಇದರಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ), ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ರೋಟರಿ ಕ್ಲಬ್ ವೈಟ್‌ಫೀಲ್ಡ್ ಸೆಂಟ್ರಲ್ (ಜಿಲ್ಲೆ 1390) ವತಿಯಿಂದ ಸಹಿ ಬಿದ್ದಿದೆ.
ಈ ಕಾರ್ಯಕ್ರಮದಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸವನ್ನುಂಟು ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಒಪ್ಪಂದಕ್ಕೆ ಅಂಕಿತ ಬಿದ್ದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಶಿಕ್ಷಣದಲ್ಲಿ ಮಹತ್ವದ ಬದಲಾವಣೆ:“ಶಿಕ್ಷಣಕ್ಕೆ ಸಹಾಯ” ಮಾಡುವ ಈ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೊರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳು, ಡಿಜಿಟಲ್ ಬೋಧನೆಯ ಮೂಲಕ ಆಧುನಿಕ ವಿಧಾನದಲ್ಲಿ ಪ್ರಾಧ್ಯಾಪಕರು ಅಪ್‌ಗ್ರೇಡ್ ಆಗಲು ಇದರಿಂದ ಸಾಧ್ಯವಿದೆ. ಜತೆಗೆ, ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರಕಾರಿ ಕಾಲೇಜುಗಳನ್ನು ಸಜ್ಜುಗೊಳಿಸುವ ಅಂಶವೂ ಇದರಲ್ಲಿ ಸೇರಿದೆ ಎಂದರು ಡಿಸಿಎಂ.
30,000 ಕಂಪ್ಯೂಟರ್‌ಗಳ ಅಗತ್ಯ:ಸರಕಾರಿ ಕಾಲೇಜುಗಳಿಗೆ ಸುಮಾರು 30,000 ಕಂಪ್ಯೂಟರ್‌ಗಳು ಅಗತ್ಯ ಇದ್ದು, ಆ ಪೈಕಿ ಈಗ 12,500 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಸುಮಾರು 50 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ವಿದ್ಯಾರ್ಥಿಗಳನ್ನು ಆಧುನಿಕ ಕಲಿಕೆಯತ್ತ ಕರೆದೊಯ್ಯಲು, ಡಿಜಿಟಲ್ ತಾರತಮ್ಯವನ್ನು ನಿವಾರಿಸುವ ಈ ಉದಾತ್ತ ಉದ್ದೇಶಕ್ಕೆ ಖಾಸಗಿ ಸಂಘ ಸಂಸ್ಥೆಗಳು ಸರಕಾರದ ಜತೆ ಕೈಜೋಡಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ಇನ್ನೂ ಅನೇಕ ದಾನಿಗಳು ಶಿಕ್ಷಣಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದರು ಉಪ ಮುಖ್ಯಮಂತ್ರಿ.
ಈ ಉದಾತ್ತ ಕಾರ್ಯಕ್ರಮದ ಅಡಿಯಲ್ಲಿ ಕಾಗ್ನಿಜೆಂಟ್ ಇಂಡಿಯಾ ಪ್ರೈ. ಲಿಮಿಟೆಡ್ ಇಲಾಖೆಗೆ 12,500 ಡಿ-ಬಾಂಡೆಡ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಒದಗಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಇನ್ನೂ ರೋಟರಿ ಕ್ಲಬ್‌ನವರು ವಿಂಡೋಸ್ ಓಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್ ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಸಿಎಂ ಮಾಹಿತಿ ಕೊಟ್ಟರು.
ಕಾಗ್ನಿಜೆಂಟ್ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ನವೀನ್ ರಾವ್ ಮಾತನಾಡಿ; “ಕಾಲೇಜು ಶಿಕ್ಷಣ ಇಲಾಖೆಯ ನೇತೃತ್ವದ ಈ ನಿರ್ಣಾಯಕ ಉಪಕ್ರಮದ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ಡಿಜಿಟಲ್ ಕಲಿಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು” ಎಂದರು.
ಡಿಜಿಟಲ್ ವೇದಿಕೆಯಲ್ಲಿರುವ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಮೂಲಕ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಕಾರ್ಯಕ್ರಮ ಪೂರಕ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎಂದು ರೋಟರಿ ಕ್ಲಬ್ ಜಿಲ್ಲಾ ಗರ್ವನರ್ ನಾಗೇಂದ್ರ ಪ್ರಸಾದ್ ಅವರು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಅವರು ಯೋಜನೆ ಕುರಿತು ಮಾಹಿತಿ ನೀಡಿದರು. ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‌ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು