35 C
Karnataka
Sunday, April 20, 2025
    Home Blog Page 12

    ಮೋದಿ ಜನ್ಮದಿನ: ಸಸಿ ನೆಟ್ಟ ನಟ ಅನಂತನಾಗ್

    BENGALURU SEP 16

    ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತನಾಗ್ ಅವರು ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಜತೆಗೂಡಿ ಸದಾಶಿವ ನಗರದ ಪೂಜಾರಿ ಲೇಔಟ್ ನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಬಳಿಕ ಮಾತನಾಡಿದ ಅವರು, “ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವವು ದೇಶಕ್ಕೆ ಹೊಸ ಚೈತನ್ಯ ತಂದಿದೆ. ಭಗವಂತನು ಅವರಿಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ” ಎಂದು ಹಾರೈಸಿದರು.

    “ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿ ನಿರಂತರ ಮೂರು ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರವನ್ನು ಇವರು ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಅರುಣ್, ರಾಜೀವ್ ಮುಂತಾದವರು ಭಾಗವಹಿಸಿದ್ದರು.

    Indian Stock Market:ಚಂಚಲಚಿತ್ತ ಪೇಟೆಯಲ್ಲಿ VALUE PICK ಒಂದೇ ಕ್ಷೇಮ

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ನಿರಂತರವಾಗಿ ಏರಿಳಿತಗಳನ್ನುಂಟುಮಾಡುತ್ತಿದ್ದು ಅನಿರೀಕ್ಷಿತ ಮಟ್ಟದ ಬದಲಾವಣೆಗಳನ್ನು ಬಿಂಬಿಸುತ್ತಿದ್ದು ಅವಕಾಶಗಳನ್ನು ಕಾಲ್ಪನಿಕವೆಂದಿನಿಸುವಂತೆ ಶೀಘ್ರವಾಗಿ ಕಣ್ಮರೆಯಾಗುವಂತೆ ಮಾಡುತ್ತಿದೆ.  ಕೊರೋನಾ ಸಮಯದ ನಂತರದಲ್ಲಿ ಪೇಟೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಿದ್ದೇವೆ.  ಈ ರೀತಿಯ ಅಸ್ಥಿರ ವಾತಾವರಣಕ್ಕೆ ಕಾರಣವೇನು? ಎಂಬುದು ಎಲ್ಲರ ಮನದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

    ಈಗಿನ ಪೇಟೆಗಳ ಚಲನೆಯನ್ನು ಪರಿಶೀಲಿಸಿದಾಗ ಅರಿವಾಗುವುದು ಅವು ಸೂಜಿ ಮತ್ತು ಪಿನ್‌ ಗಳ ಮೇಲೆ ನಿಂತಂತಿದೆ ಎಂಬ ಸಿಟಿ ಬ್ಯಾಂಕ್‌ ನವರ ಹೇಳಿಕೆ ಸಹಜತೆಯಿಂದ ಕೂಡಿದೆ ಎನಿಸುತ್ತದೆ.

    ಈ ವರ್ಷದ ಏಪ್ರಿಲ್‌ 29 ರಂದು 57,060 ರಲ್ಲಿದ್ದ ಸೆನ್ಸೆಕ್ಸ್‌  ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು. ಅಲ್ಲಿಂದ ಸೆನ್ಸೆಕ್ಸ್‌ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು.  ಜೊತೆಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.258 ಲಕ್ಷ ಕೋಟೆ ಮೀರಿತು. 

    ಜೂನ್‌ ತಿಂಗಳ 17 ರಂದು  ಮಧ್ಯಂತರದಲ್ಲಿ ಸೆನ್ಸೆಕ್ಸ್‌  50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು.  ಅಂದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು.  ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್‌ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿಯಿತು.  ಅಂದರೆ ಏಪ್ರಿಲ್‌ ತಿಂಗಳ ಅಂತ್ಯದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್‌ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು  ಹೂಡಿಕೆಯೆನಿಸದು.

      ಶುಕ್ರವಾರ ಸೆಪ್ಟೆಂಬರ್‌ 9 ರಂದು ಸೆನ್ಸೆಕ್ಸ್‌ 60,000 ದ ಗಡಿ ದಾಟಿ ಮತ್ತೆ ಹಿಂದಿರುಗಿ 59,793.14 ರಲ್ಲಿ ಕೊನೆಗೊಂಡಿದೆ.  ಅಂದಿನ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.283.03 ಲಕ್ಷ ಕೋಟಿಯನ್ನು ತಲುಪಿ ಸರ್ವಕಾಲೀನ ದಾಖಲೆ ನಿರ್ಮಿಸಿದೆ.  ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ.   ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.  

    ಜೂನ್‌ 16, 2022 ರಂದು ಅಗ್ರಮಾನ್ಯ, ಪ್ರಮುಖ ಕಂಪನಿಗಳಾದ ಬಜಾಜ್‌ ಫೈನಾನ್ಸ್‌, ಸಿಯಟ್‌, ಗ್ಲೆನ್‌ ಮಾರ್ಕ್‌ ಫಾರ್ಮ,  ಗ್ರಾಫೈಟ್‌ ಇಂಡಿಯಾ, ಗ್ರಾಸಿಂ, ಗುಜರಾತ್‌ ಗ್ಯಾಸ್‌, ಹಿಂಡಾಲ್ಕೋ, ಹಿಂದೂಸ್ಥಾನ್‌ ಝಿಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಇನ್ಫೋಸಿಸ್‌, ಎಲ್‌ ಐ ಸಿ ಹೌಸಿಂಗ್‌, ಎನ್‌ ಎಂ ಡಿ ಸಿ, ಸೇಲ್‌, ಟಾಟಾ ಸ್ಟೀಲ್‌, ಟೆಕ್‌ ಮಹಿಂದ್ರ, ಅಲ್ಟ್ರಾಟೆಕ್‌ ಮುಂತಾದವುಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಇಳಿದವು.  ಆದರೆ ಕೇವಲ ಎರಡು/  ಮೂರು ತಿಂಗಳುಗಳಲ್ಲೇ ಅವು ಗಳಿಸಿಕೊಟ್ಟ ಅವಕಾಶಗಳು ಹೇಗಿತ್ತೆಂದರೆ  ಷೇರುಪೇಟೆಯಲ್ಲಿ ಇಷ್ಟು ಸುಲಭವಾಗಿ ಸಂಪಾದನೆ ಮಾಡಬಹುದೆಂಬ ಚಿಂತನೆಯಿಂದ ಮತ್ತಷ್ಟು ಹಣವನ್ನು ತೊಡಗಿಸಿರಲೂಬಹುದು. ಈ ಕಂಪನಿಗಳು ಯಾವ ರೀತಿಯಲ್ಲಿ ಪುಟಿದೆದ್ದವು ಎಂಬುದಕ್ಕೆ ಈ ಕೋಷ್ಠಕದ ಮೇಲೆ ಕಣ್ಣಾಯಿಸಿರಿ.

    ಕಂಪನಿ ಹೆಸರುಪೇಟೆಯ ಕನಿಷ್ಠ ದರ 16/06/2022ಪೇಟೆಯ ಗರಿಷ್ಠ ದರ 10/09/2022ವಾರ್ಷಿಕ ಕನಿಷ್ಠ ದರ
    ಬಜಾಜ್ ಫೈನಾನ್ಸ್5,365.607,320.005,235.60( 17/06)
    ಸಿಯಟ್911.101,431.25890(20/06)
    ಗ್ಲೆನ್‌ ಮಾರ್ಕ್‌ ಫಾರ್ಮ363388348.90 (20/06)
    ಗ್ರಾಫೈಟ್382.25408350.20(20/06)
    ಗ್ರಾಸಿಂ1,278.151,797.851,276.90(17/06)
    ಗುಜರಾತ್ ಗ್ಯಾಸ್421.85519.00403.80(23/06)
    ಹಿಂಡಾಲ್ಕೊ333.00430.60309(20/06)
    ಹಿಂದೂಸ್ಥಾನ್ ಝಿಂಕ್207.25291.90242.40(06/07)
    ಇಂಡಸ್‌ ಇಂಡ್‌ ಬ್ಯಾಂಕ್‌806.001,149.50763.75(23/06)
    ಇನ್ಫೋಸಿಸ್1,392.151,519.801,367.20(17/06)
    ಎಲ್  ಸಿ ಹೌಸಿಂಗ್‌309.00439.40291.75(20/06)
    ಎನ.ಎಂಡಿಸಿ107.45125.1099.60(15/07)
    ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌1,278.001,509.001,271.75 (17/06)
    ಸೇಲ್66.6582.7563.60 (20/06)
    ಬಿ ಪಿ ಸಿ ಎಲ್‌310.35341.55293.50(21/06)
    ಟೆಕ್ ಮಹೀಂದ್ರ971.151,131.95971.15(16/06)
    ಅಲ್ಟ್ರಾಟೆಕ್5,2807,0275,158.05(17/06)

    ಈ ಪ್ರಮಾಣದ ಏರಿಕೆಯನ್ನು ಕೇವಲ ಒಂದೇ ತ್ರೈಮಾಸಿಕದಲ್ಲಿ ಪ್ರದರ್ಶಿಸಿರುವುದು ಉಳಿತಾಯಕ್ಕಿಂತ ಹೂಡಿಕೆಯಾಗಿಯೇ ಆಯ್ಕೆ ಮಾಡಿಕೊಳ್ಳುವುದು ಸುರಕ್ಷತೆಯ ದೃಷ್ಠಿಯಿಂದ ಸೂಕ್ತವಾಗಿದೆ.   ಉಳಿತಾಯವೆಂದರೆ ದೀರ್ಘಕಾಲೀನ ಚಿಂತನೆಯೊಂದಿಗೆ ಮಾಡಿ, ಸಮಯಬದ್ಧವಾಗಿ ಮಾಸಾಶನ ಒದಗಿಸುವುದಾಗಿದೆ.  

    ಅಂದರೆ ಷೇರುಪೇಟೆಯ ದೃಷ್ಠಿಯಿಂದ ಲಾಭಾಂಶವನ್ನು ಪಡೆಯುವುದಾಗಿದೆ.  ಆದರೆ ಅಲ್ಪಕಾಲೀನ ಸಮಯದಲ್ಲಿ ಅಪೂರ್ವವಾದ ಲಾಭ ಒದಗಿಸಿದಾಗ ನಗದೀಕರಿಸಿಕೊಂಡಲ್ಲಿ ಅದು ಲಾಭಗಳಿಕೆಗಾಗಿ ಹೂಡಿಕೆಮಾಡಿದಂತಾಗುತ್ತದೆ.  ಹಲವು ಬಾರಿ ದೊರೆತ ಲಾಭ ಗಳಿಕೆ ಅವಕಾಶವನ್ನು ಕಳೆದುಕೊಂಡಲ್ಲಿ ಮುಂದೆ ಬಂಡವಾಳಕ್ಕೇ ಕುತ್ತು ಬರಲು ಸಾಧ್ಯವಿದೆ.  ಕಾರಣ ಕಂಪನಿಗಳ ಸಾಧನೆಯು ಪೇಟೆಯಲ್ಲಾಗುವ ಬದಲಾವಣೆಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಷೇರುಪೇಟೆಯಲ್ಲಿ VALUE PICK  ಅಂದರೆ ಉತ್ತಮ ಷೇರಿನ ಬೆಲೆ ಕುಸಿತ ಕಂಡಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಕ್ಷೇಮ.  

    ಕೆಲವೊಮ್ಮೆ ಅಪೂರ್ವ ಏರಿಕೆಯಿಂದ ಲಾಭ ಗಳಿಸಿಕೊಟ್ಟಾಗ ಅದನ್ನು PROFIT BOOK ಗೆ ಅಪೂರ್ವ ಅವಕಾಶವೆಂದು ನಗದೀಕರಿಸಿಕೊಳ್ಳುವುದು.   ಉಳಿತಾಯ ಮತ್ತು ಹೂಡಿಕೆಗಳ ಮೂಲ ಉದ್ದೇಶ ನಮ್ಮ ಹಣ ಸುರಕ್ಷಿತಗೊಳಿಸುವುದರೊಂದಿಗೆ ಲಾಭ ಗಳಿಸಿಕೊಳ್ಳುವುದು.  ಇಲ್ಲಿ ಕಾರ್ಪೊರೇಟ್‌ ಗಳ ಭವಿಷ್ಯವು ಅನೇಕ ಮಾನದಂಡಗಳಿಂದ ತೂಗುವುದರಿಂದ ಷೇರಿನ ಬೆಲೆಗಳು ಅದಕ್ಕನುಗುಣವಾಗಿ ಬದಲಾಗುತ್ತಿರುತ್ತವೆ.  ಹಾಗಾಗಿ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಸೂಕ್ತ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ರಾಣಿಯಾಗುವುದೆಂದರೆ ʼರಾಣಿಯರ ಫೇರಿಟೇಲ್‌ ʼನಷ್ಟು ಸುಲಭವಲ್ಲ ಎಂದು ಜಗತ್ತಿಗೆ ತೋರಿಸಿದ ಎರಡನೇ ಎಲಿಝೆಬೆತ್‌

    ಮುಗಿಲಿನಲ್ಲಿ ಕರಿ ಮೋಡಗಳು ದಟ್ಟಯಿಸಿ, ಸೂರ್ಯನ ಶಕ್ತಿಯನ್ನು ಕ್ಷೀಣಗೊಳಿಸಿ, ಬಿಟ್ಟೂ ಬಿಡದೆ ಕಣ್ಣೀರು ಸುರಿಸುವಂತಹ  ವಾತಾವರಣದ ಒಂದು  ಸಾಧಾರಣ ನಿನ್ನೆಯದು.

    ಜಗಮಗಿಸಿದ ವಸಂತಕಾಲದಲ್ಲಿ ಇನ್ನೂ ಹಲವು ದಿನಗಳಿವೆ ಎಂದಿರುವಾಗಲೇ ಚಳಿಗಾಲದ ಕರಿ ಬೆಳಗನ್ನು ಕಂಡ ಇಂಗ್ಲೆಂಡಿನ ಜನರು ಹೌಹಾರಿ ಎಂದಿನಂತೆ ಹವಾಮಾನದ ಬಗ್ಗೆಯೇ ಚರ್ಚಿಸುತ್ತಿದ್ದರು.

     ಕರ್ಮ ಭೂಮಿಯಲ್ಲಿ  ಶುರುವಾಗಲಿರುವ ಶರತ್ಕಾಲದ ನಿರೀಕ್ಷೆಯಲ್ಲಿ  ಎಂದಿನ ವೃತ್ತಿಕರ್ಮಗಳನ್ನು ಮಾಡುತ್ತಿರುವಾಗಲೆ ಬಂದ ವಲಸಿಗ ರೋಗಿಯೊಬ್ಬ  

    “ ಕ್ವೀನ್‌ ಇಹ ಲೋಕ ತ್ಯಜಿಸುವ ಸೂಚನೆಗಳಿವೆ .. ಯಾವಾಗ ಬೇಕಾದರೂ” ಎಂದು ನಿರಾಯಾಸವಾಗಿ ಹೇಳಿದ.

    Queen is not well you know– ಎಂದು ಆ ವೇಳೆಗಾಗಲೆ ದುಗುಡದ ಭಾವದಲ್ಲಿ ನನ್ನ ಬ್ರಿಟಿಷ್ ದಾದಿ ‌ ವೇದನೆ ಪಡುತ್ತ ಉಸುರಿದ್ದಳು.“ರಾಣಿ ಸತ್ತರೆ ಎಷ್ಟು ದಿನಗಳ ರಜಾ ಸಿಗಬಹುದು“ ಎನ್ನುವುದನ್ನು ಆಗಾಗಲೇ ನಮ್ಮ ಜೊತೆ ಕೆಲಸ ಮಾಡುವ ಹಲವರು ಕಿರಿಯರು ಗೂಗಲಿಸಿದ್ದರು.‌

    ಸಂಜೆಯ ವೇಳೆಗೆ ಮುಗಿಲು ಹರಿದು ಸುರಿದಿತ್ತು.  ಎಪ್ಪತ್ತು ವರ್ಷ ರಾಣಿಯಾಗಿದ್ದ ತೊಂಬತ್ತಾರು ವರ್ಷದ ‌ ರಾಣಿ ಎರಡನೇ ಎಲಿಝೆಬೆತ್‌ ಕೊನೆಯುಸಿರೆಳೆದಿದ್ದರು.

    ಸುಪ್ರಸಿದ್ಧ ಟೈಮ್ಸ್ ನಿಯತಕಾಲಿಕದ ಮುಖ ಪುಟದಲ್ಲಿ 1920

    ಇಡೀ ದಿನ ರಾಣಿಯ ಆರೋಗ್ಯದ ಬಗ್ಗೆ ಒಂದೇ ಸಮನೆ ವರದಿ ನೀಡುತ್ತಿದ್ದ  ಮಾಧ್ಯಮಗಳಿಗೆ ಸಾವಿನ ಸುದ್ದಿಯನ್ನು  ಅಧಿಕೃತಗೊಳಿಸಲು ಅರಮನೆಯಿಂದ ಅನುಮತಿ ಸಿಕ್ಕಿತ್ತು. ಆ ಕೂಡಲೇ ವಿಷಯ ಮಿಂಚಿನ ವೇಗದಲ್ಲಿ ಜಗತ್ತನ್ನೆಲ್ಲ ವ್ಯಾಪಿಸಿತು.

    ಸೆಪ್ಟಂಬರ್‌ ಎಂಟನೇ ತಾರೀಖು ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಖ್ಯಾತಿ  ಪಡೆದ ಇಂಗ್ಲೆಂಡಿನ ರಾಜ ಮನೆತನದ ರಾಣಿಯೊಬ್ಬಳು, ಅತಿ ದೀರ್ಘ ಕಾಲ ಸಾಮ್ರಾಜ್ಯವೊಂದರ ಮುಖಂಡಳಾಗಿ ಸೇವೆ ಸಲ್ಲಿಸಿದ ಖ್ಯಾತಿಯ ಕಿರೀಟ ಧರಿಸಿ  ಜಗಮಗಿಸುತ್ತಲೆ ಮುಳುಗಿಹೋಗಿದ್ದರು.

    ಇಡೀ ಭೂಮಂಡಲದಲ್ಲಿ ರಾಣಿಯೆಂದರೆ  ʼಇಂಗ್ಲೆಂಡಿನ ರಾಣಿ ʼ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ‌ ಸಂವೇದನೆಗಳನ್ನು ಮೂಡಿಸಿತು.

    ಪತಿ ಫಿಲಿಪ್ ಜೊತೆ 1953

    ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್‌ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು.  ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್‌ ತನ್ನ  ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ  ಕವನಗಳು ಹರಿದುಬಂದವು. ಮಾಧ್ಯಮ, ಟೀವಿ, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌ ಗುಂಪುಗಳು, ವೈಯಕ್ತಿಕ ಮಾತುಕತೆಗಳಲ್ಲಿ ರಾಣಿ ಮತ್ತೆ ಮತ್ತೆ ಹುಟ್ಟಿಬಂದಳು.

    ಎರಡು ದಿನದ ಹಿಂದಷ್ಟೆ ಪ್ರಧಾನಿಯ ಪಟ್ಟಕ್ಕೆ ಹತ್ತಿಳಿವ ಆಟದಲ್ಲಿ ಜಯಗಳಿಸಿದ್ದ ಹೊಸ ಮತ್ತು ಮೂರನೇ ಮಹಿಳಾ ಪ್ರಧಾನಿ ಲಿಝ್ ಟ್ರಸ್ ಸ್ಕಾಟ್ಲ್ಯಾಂಡಿನ ಬಲಮೋರಲ್‌ ಅರಮನೆಯಲ್ಲಿ ರಾಣಿಯಿಂದ ಸರ್ಕಾರ ರಚಿಸಲು ಆಮಂತ್ರಣ ಪಡೆದಿದ್ದರು. ಜೀವನದ ಆಟದಲ್ಲಿ ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ ಆದರೆ ಕರ್ತವ್ಯ ನಿಭಾಯಿಸುವುದೇ ಮುಖ್ಯ ಎನ್ನುವ ಸಂದೇಶವನ್ನು ತನ್ನ ಇಳಿವಯಸ್ಸಿನಲ್ಲಿ ಯಶಸ್ವಿಯಾಗಿ, ಮಾತಿಲ್ಲದೆ ಹೊಸ ಪ್ರಧಾನಿಗೆ ರಾಣಿ ಅರುಹಿದ್ದರು.

    ಬೋರಿಸ್‌ ಜಾನ್ಸನ್ ತನ್ನ ರಾಜೀನಾಮೆ ಸಲ್ಲಿಸಿ ರಾಣಿಯನ್ನು ನೋಡಿ ಬಂದಿದ್ದ . ಅವರೊಡನೆ ನಿಂತು ತನ್ನ ಎಂದಿನ  ಸಿದ್ಧ ನಗು ಮುಖವನ್ನು ಹೊತ್ತು  ರಾಣಿ ಫೋಟೋ ತೆಗೆಸಿಕೊಂಡಿದ್ದರು. ಆ ಬೆಳಕಿನ ಝಲಕಿನಲ್ಲೂ ಅವಳ ಮುಖದ ಬೆಳಕು ಕುಂದುತ್ತಿರುವ ಲಕ್ಷಣಗಳು ಅಲ್ಲಿ ಸ್ಪಷ್ಟವಾಗಿದ್ದವು.

    ತನ್ನ ಅಧಿಕಾರಾವಧಿಯಲ್ಲಿ ಹದಿನೈದನೇ ಪ್ರಧಾನ ಮಂತ್ರಿಗೆ ಸರ್ಕಾರ ರಚಿಸಲು ಆಂಂತ್ರಣ ನೀಡಿದ್ದ ರಾಣಿ ಬೋರಿಸನಿಗೆ,  ಹೊರಹೋಗುತ್ತಿರುವವನು ನೀನೇ ಮೊದಲಲ್ಲ, ನಾನೂ ಶಾಶ್ವತಳಲ್ಲ ಎನ್ನುವ ಭಾವ ಬರಿಸಿದ್ದರೆ ಆಶ್ಚರ್ಯವಿಲ್ಲ.

    ಏನಾದರಾಗಲಿ ಇಂಗ್ಲೆಂಡಿನಲ್ಲಿ ಇಂತಹ ಆಧ್ಯಾತ್ಮಿಕ, ಪಾರಮಾರ್ಥಿಕ ಭೋದನೆಗಳು ವ್ಯಕ್ತವಾಗುವುದು ಕಡಿಮೆ. ಕರ್ತವ್ಯ ಪ್ರಜ್ಞೆ ಗೇ ಹೆಚ್ಚು ಒತ್ತು.  

     ಏಕೆಂದರೆ, ಆ ವೇಳೆಗಾಗಲೆ ರಾಣಿಯ ಅಂತ್ಯ ದಿನಗಳ ಪರಿಪೂರ್ಣ ಸಿದ್ದತೆ ನಡೆದಿತ್ತು.  “ರಾಜ -ರಾಣಿಯರಿಗೆ ಇಂತಹ ಸೇವೆ ಸಿಗುವುದು ಅವರ ದೌರ್ಭಾಗ್ಯವೇ ಸರಿ “ ಎನ್ನುವುದು ಈ ಹೊತ್ತಿನಲ್ಲಿ ಸ್ಮಶಾನ ವೈರಾಗ್ಯದಂತೆ ಓದಿಸಿಕೊಂಡರೂ ಅಚ್ಚರಿಯಿಲ್ಲ.

    ಸಾಮ್ರಾಜ್ಯವೊಂದರ ಪಟ್ಟದ ತಲೆ ಉರುಳಿದಾಗ ಅರಾಜಕತೆಯಾಗದಂತೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆಕೆ ರಾಣಿಯಾಗಿ ಎಪ್ಪತ್ತು ವರ್ಷಗಳು ಸಂದ ಸುಸಂಧರ್ಭವನ್ನು ಈ ವರ್ಷದ  ಮಧ್ಯದಲ್ಲಾಗಲೇ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಆಕೆಯ ಸಾವಿನಿಂದ ಉಂಟಾಗುವ ಶೋಕ, ಅಂತಿಮ ನಮನ ಸಲ್ಲಿಸಲು ಬರುವ ಜನರ ಭಾವೋದ್ರೇಕಗಳನ್ನು  ನಿಯಂತ್ರಿಸಲು  ಮತ್ತು  ಶಾಂತಿಯನ್ನು ಕಾಪಾಡಲು ಪಡೆಗಳನ್ನು ನಿರ್ಮಿಸಲಾಗಿತ್ತು. ಈ ಪಡೆಗಳಿಗೆ ವಿಶೇಷ ಹೆಸರುಗಳನ್ನು ನೀಡಲಾಗಿತ್ತು.

    ರಾಣಿ ಸ್ಕಾಟ್ಲ್ಯಾಂಡಿನಲ್ಲಿ ಸತ್ತರೆ ಅಲ್ಲಿ ನಡೆವ ಚಟುವಟಿಕೆಗಳಿಗೆ ʼ ಆಪರೇಷನ್‌  ಯೂನಿಕಾರ್ನ್ʼ ( ಇದು ಸ್ಕಾಟ್ಲ್ಯಾಂಡಿನ  ರಾಷ್ಟ್ರ ಪ್ರಾಣಿ)‌ ಎಂದೂ ಲಂಡನ್ನಿನಲ್ಲಿ ಕೈಗೊಳ್ಳುವ ಅಂತ್ಯ ಕ್ರಿಯೆಯ ಯೋಜನೆಗಳನ್ನು ʼಆಪರೇಷನ್‌ ಲಂಡನ್‌ ಬ್ರಿಡ್ಜ್‌ ( ಲಂಡನ್ನಿನ ಪ್ರಸಿದ್ಧ ಪ್ರೇಕ್ಷಣಾ ಸ್ಥಳ) ʼ ಎಂತಲೂ ಹೆಸರು ನೀಡಲಾಗಿತ್ತು. 

    ಈಗ ಬಾಕಿ ಉಳಿದಿರುವುದೆಂದರೆ ಈ ಪಡೆಗಳು ಬ್ರಿಟಿಷ್‌ ಸ್ಟಾಂಡರ್ಸ್ ಪ್ರಕಾರ ಅದನ್ನು ನಡೆಸುವುದನ್ನು ನೋಡುವುದು.

    ಇನ್ನೂ ಹತ್ತು ದಿನಗಳ ನಂತರ ನಡೆಯಬಹುದಾದ ಅಂತ್ಯ ಕ್ರಿಯೆ ರಾಣಿಯ ಬದುಕನ್ನು ಒಟ್ಟಾಗಿ ಅರಿಯಲು ಆರಂಭಿಸುವ ಹಲವು ಹೊಸತುಗಳನ್ನು ಸೃಷ್ಟಿಸುವುದರಲ್ಲಿ ಅನುಮಾನಗಳಿಲ್ಲ.

    ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ 2015ರಲ್ಲಿ

    ರಾಣಿಯ ಗತ್ತು, ಗೈರತ್ತು, ಮುಖಂಡಳ ಕರ್ತವ್ಯ ಪ್ರಜ್ಞೆ ಸೇವಾಭಾವ , ಸಂಸಾರದ ನಾಯಕಿಯ ಸಹನೆ ಮತ್ತು ಸಂಯಮ, ದೇಶವೊಂದರ ಪರಮೋಚ್ಛ ಅಧಿಕಾರದಲ್ಲಿ ಬರುವ ಸುಖ-ದುಃಖಗಳ ಸಂಭಾಳಿಕೆ, ಕಾಲ ತರುವ ಎಲ್ಲ ವೈಚಿತ್ರ್ಯಗಳನ್ನೂ ಬೆರಗು ಗಣ್ಣುಗಳಲ್ಲಿ, ಮಗುವಿನ ಮುಗ್ಧತೆಯಲ್ಲಿ  ಅರಗಿಸಿಕೊಂಡು ರಾಜನೀತಿಗಳು, ಮಕ್ಕಳು, ಸೊಸೆಯರು, ಸಂಬಂಧಿಗಳು ತರುವ ಕಳಂಕಗಳನ್ನು ವಿಷಕಂಟನಂತೆ ಹಿಡಿದಿಟ್ಟುಕೊಂಡು, ದ್ವೇಷಿಸುವವರನ್ನು ಬಗಲಲ್ಲೇ ಇಟ್ಟುಕೊಂಡು, ಹುಟ್ಟಿನಿಂದಾಗಿ ಬಂದ ಪಟ್ಟವನ್ನು  ಸಮತೂಕವಾಗಿ, ದಾಖಲೆ ವರ್ಷಗಳ ಕಾಲ ನಿರ್ವಹಿಸಿದ ಮಹಾ ಚೇತನ ಈ ಎರಡನೇ ಎಲಿಝಬೆತ್‌ ಎನ್ನುವುದರಲ್ಲಿ ಅತಿಶಯೋಕ್ತಿಗಳಿಲ್ಲ.

     ಆಕೆಯ ಸಾವಿನಲ್ಲಿ‌ ಮೇಲಿನ ಈ ಭಾವವೊಂದು ಜಗತ್ತಿನಲ್ಲಿ ಅನುರುಣಿಸುವುದಕ್ಕೆ ಕಾರಣವೆಂದರೆ ಆಕೆ  ತನ್ನ ಜೀವನವಿಡೀ   ಅದಕ್ಕಾಗಿ  ಅವಿರತ ಶ್ರಮಿಸಿರುವುದು.  ರಾಣಿಯಾಗುವುದೆಂದರೆ    ʼರಾಣಿಯರ ಫೇರಿಟೇಲ್‌ ʼ  ನಷ್ಟು ಸುಲಭವಲ್ಲ ಎಂದು ಜಗತ್ತಿಗೆ ತೋರಿಸಿರುವುದು.

    ರಾಣಿ ಎಲಿಝಬೆತ್‌ ಳಿಗೆ ಶ್ರದ್ಧಾಂಜಲಿ.

    CET RANKING: ತೀರ್ಪು ಪ್ರಶ್ನಿಸಿ ಮತ್ತೆ ಹೈಕೋರ್ಟ್ ಗೆ ಮನವಿ ಸಲ್ಲಿಸಲು ತೀರ್ಮಾನ

    BENGALURU SEP 5

    2020-21ರಲ್ಲಿ ಪಿಯುಸಿ ತೇರ್ಗಡೆಯಾಗಿ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ rank ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂಬ ಹೈಕೋರ್ಟ್ ತೀರ್ಪಿನಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಅದನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಸಂಬಂಧ ತಮ್ಮ ನಿವಾಸದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಸೋಮವಾರ ಬೆಳಿಗ್ಗೆ ಅವರು ದೀರ್ಘ ಸಮಾಲೋಚನೆ ನಡೆಸಿದರು.

    ಬಳಿಕ ಮಾತನಾಡಿದ ಅವರು, ತೀರ್ಪಿತ್ತಿರುವ ಏಕ ಸದಸ್ಯ ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಅಥವಾ ಮೇಲ್ಮನವಿ ಸಲ್ಲಿಸಬೇಕೋ ಎನ್ನುವುದನ್ನು ವಕೀಲರ‌ ತೀರ್ಮಾನಿಸುತ್ತಾರೆ. ತ್ವರಿತವಾಗಿ ಯಾವುದು ಆಗುತ್ತದೊ ಅದನ್ನು ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಕೋರ್ಟ್ ತೀರ್ಪನ್ನು ಪಾಲಿಸಲು ಹೋದರೆ ಈ ವರ್ಷ ಸಿಇಟಿ ಬರೆದಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅವರ rank ಪಟ್ಟಿ ದೊಡ್ಡ ಪ್ರಮಾಣದಲ್ಲಿ ಏರುಪೇರಾಗುತ್ತದೆ ಎಂದು ಅವರು ತಿಳಿಸಿದರು.

    ಕೋರ್ಟ್ ಮೆಟ್ಟಿಲೇರಿದ್ದವರು ಯಾವುದೋ ಒಂದು ತಾಂತ್ರಿಕ ಅಂಶಕ್ಕೆ ಅಂಟಿಕೊಂಡಿದ್ದಾರೆ. ಹೋದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕೈಗೊಂಡ ತೀರ್ಮಾನವನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ನುಡಿದರು.

    ಹೋದ ವರ್ಷದ ವಿದ್ಯಾರ್ಥಿಗಳ ಬಗ್ಗೆ ನಮಗೆ ಅಸಮಾಧಾನವೇನಿಲ್ಲ. ನಾವು ಯಾರಿಗೂ ಅನ್ಯಾಯ ಆಗದಂತೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಎಲ್ಲವೂ ನಿಗದಿತ ಕಾಲಮಿತಿಯಲ್ಲೇ ನಡೆಯಲಿದೆ ಎಂದು ಅವರು ಭರವಸೆ ನೀಡಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಮತ್ತು ಕಾನೂನು ತಜ್ಞರ ಭಾಗವಹಿಸಿದ್ದರು.

    CET RANKING: ಹೈಕೋರ್ಟ್ ತೀರ್ಪಿನ ಬಗ್ಗೆ ಚರ್ಚಿಸಲು ಸಚಿವರ ನೇತೃತ್ವದಲ್ಲಿ ಸೋಮವಾರ ಸಭೆ

    BENGALURU SEP 4

    2020-21ರಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ವಿದ್ಯಾರ್ಥಿಗಳ ಪಿಯುಸಿ ಅಂಕವನ್ನೂ ಪರಿಗಣಿಸುವಂತೆ ಹೈಕೋರ್ಟ್ ನೀಡಿರುವ ಆದೇಶ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಬೆಳಿಗ್ಗೆ ಮಹತ್ವದ ಸಭೆ ಕರೆದಿದ್ದಾರೆ.

    ಈ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ‌ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಮತ್ತು ಕಾನೂನು ತಜ್ಞರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ನ್ಯಾಯಾಲಯದ ತೀರ್ಪಿನ ಸಾಧಕ-ಬಾಧಕಗಳನ್ನು ಚರ್ಚಿಸಿ, ಮುಂದಿನ ಕ್ರಮ ಕುರಿತು ನಿರ್ಧರಿಸಲಾಗುವುದು ಎಂದಿದ್ದಾರೆ.

    2020-21ರಲ್ಲಿ ಕೊರೋನಾ ಕಾರಣದಿಂದಾಗಿ ಪಿಯುಸಿ ಪರೀಕ್ಷೆ ನಡೆಸದೆ, ತೇರ್ಗಡೆ ಮಾಡಲಾಗಿತ್ತು. ನಂತರ ಸಿಇಟಿ ನಡೆಸಿ, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ, ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

    ಆದರೆ, ಹೀಗೆ ಪ್ರವೇಶಾವಕಾಶ ಪಡೆದುಕೊಂಡ 24 ಸಾವಿರ ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಬರೆದಿದ್ದರು. ಅಲ್ಲದೆ, Rank ಪಟ್ಟಿಯಲ್ಲಿ ತಮ್ಮ ದ್ವಿತೀಯ ಪಿಯುಸಿ ಅಂಕಗಳನ್ನು ಕೂಡ ಪರಿಗಣಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು

    Indian Stock Market:ಗಜಗಾತ್ರದ ವಹಿವಾಟು ಎಂದರೇನು?

    ಷೇರುಪೇಟೆಯಲ್ಲಿ ಇತ್ತೀಚೆಗೆ ಹರಿದಾಡುವ ಹಣದ ಪ್ರಭಾವದ ಕಾರಣ ಗಜಗಾತ್ರದ ವಹಿವಾಟುಗಳು ಹೆಚ್ಚಾಗುತ್ತಿವೆ. ಈ ಗಜಗಾತ್ರದ ವಹಿವಾಟುಗಳು ಹೂಡಿಕೆದಾರರ ವಿಶೇಷವಾಗಿ ಸಣ್ಣ ಹೂಡಿಕೆದಾರರ ಭಾವನೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂದರೆ ಒಂದು ಕಂಪನಿ ಷೇರಿನ ಬೆಲೆಗಳು ಅಧಿಕ ಸಂಖ್ಯಾಗಾತ್ರದ ವಹಿವಾಟಿನೊಂದಿಗೆ ಏರಿಕೆ ಕಂಡರೆ ಅದು ಹೂಡಿಕೆಗೆ ಸೂಕ್ತವೆಂದು ಮತ್ತು ಅದು ಏರಿಕೆಯ ದಿಶೆಯಲ್ಲಿರುವುದರಿಂದ ಮತ್ತಷ್ಠು ಏರಿಕೆ ಕಾಣಬಹುದೆಂಬ ಆಶಾಭಾವನೆಗೆ ದಾರಿಯಾಗುತ್ತದೆ ಮತ್ತು ಸಹಜ ಚಿಂತನೆಗಳಿಂದ ದೂರವಾಗುವಂತೆ ಮಾಡುತ್ತದೆ.

    ಗಜಗಾತ್ರದ ವಹಿವಾಟು ಎಂದರೇನು?

    ಒಂದು ವಹಿವಾಟಿನ ಗಾತ್ರವು ರೂ.10 ಕೋಟಿಗೂ ಹೆಚ್ಚಿದ್ದು, ಮಾರಾಟಮಾಡುವವರು ಮಾರಾಟಮಾಡುವ ಷೇರುಗಳ ಸಂಖ್ಯೆ ಮತ್ತು ದರಗಳೊಂದಿಗಿನ ಆರ್ಡರ್‌ ನ್ನು ದಾಖಲಿಸಿದ ಮೇಲೆ ಖರೀದಿಸುವವರು ಸಹ ಅಷ್ಠೇ ಸಂಖ್ಯೆಯ ಷೇರುಗಳು ಮತ್ತು ದರದೊಂದಿಗೆ ಆರ್ಡರ್‌ ದಾಖಲಿಸಿದಲ್ಲಿ ಮಾತ್ರ ಅದು ವಹಿವಾಟಾಗಿ ಪರಿವರ್ತಿತವಾಗುತ್ತದೆ. ಈ ಪ್ರಕ್ರಿಯೆಯು ಕೇವಲ 90 ಸೆಕಂಡ್‌ ಗಳಲ್ಲಿ ನಡೆಯುತ್ತದೆ. ಒಂದೊಮ್ಮೆ 9 ನಿಮಿಷಗಳೊಳಗೆ ಸಮಾನಾಂತರದ ಪರ್ಯಾಯ ಆರ್ಡರ್‌ ಬರದಿದ್ದರೆ ಆ ಆರ್ಡರ್‌ ನಿಷ್ಕ್ರಿಯಗೊಳ್ಳುತ್ತದೆ. ಅಂದರೆ ಖರೀದಿಸುವ ಮತ್ತು ಮಾರಾಟಮಾಡುವ ಎರಡೂ ಆರ್ಡರ್‌ ಗಳು ನಿಗದಿತ ಸಮಯದೊಳಗೆ ಪ್ರವೇಶಿಸಿದಲ್ಲಿ ಮಾತ್ರ ಅದು ವಹಿವಾಟಾಗುತ್ತದೆ.

    ಗಜಗಾತ್ರದ ವಹಿವಾಟು ಇತರೆ ವಿಚಾರಗಳು

    ಗಜಗಾತ್ರದ ವಹಿವಾಟು ದಿನಕ್ಕೆ ಎರಡು ಬಾರಿ ನಡೆಯುತ್ತದೆ. ಮುಂಜಾನೆ 8.45 ರಿಂದ 9.00 ಗಂಟೆಯವರೆಗೂ ಮತ್ತು ಎರಡನೇ ಬಾರಿ ಮದ್ಯಾಹ್ನ 2.05 ರಿಂದ 2.20 ರವರೆಗೆ. ಕೇವಲ ಈಕ್ವಿಟಿ ಷೇರುಗಳಿಗೆ ಮಾತ್ರ ಅನ್ವಯಿಸುವ ಈ ವಹಿವಾಟು, ಬ್ಲಾಕ್‌ ರೆಫರೆನ್ಸ್‌ ಪ್ರೈಸ್‌ ಆಧಾರದ ಮೇಲೆ ದರವನ್ನು ನಿಗದಿಪಡಿಸುವರು. ಇಲ್ಲಿ ವಹಿವಾಟಾದ ಷೇರುಗಳ ಸಂಖ್ಯೆಯು ಒಟ್ಟು ವಹಿವಾಟಾದ ಷೇರುಗಳ ಸಂಖ್ಯೆಯಲ್ಲಿ ಬಿಂಬಿತವಾಗುತ್ತದೆ. ಆದರೆ ಈ ವಹಿವಾಟಿನ ದರಗಳು LTP, LTQ, ಓಪನಿಂಗ್‌ ಮತ್ತು ಕ್ಲೋಸಿಂಗ್‌ ದರಗಳು, ಗರಿಷ್ಠ ಮತ್ತು ಕನಿಷ್ಠ ದರಗಳು ವೇಟೆಡ್‌ ಆವರೇಜಿಂಗ್‌ ಪ್ರೈಸಿಂಗ್‌ ಗಳನ್ನು ಪರಿಗಣಿಸುವುದಿಲ್ಲ. ಈ ಸಮೂಹದಲ್ಲಿ ವಹಿವಾಟಾಗಲು ಪೀರಿಯಾಡಿಕ್‌ ಕಾಲ್‌ ಆಕ್ಷನ್‌ ಸಮೂಹದಲ್ಲಿರುವ ಷೇರುಗಳು ಅರ್ಹವಲ್ಲ.

    ದಿನದ ಅಂತ್ಯದಲ್ಲಿ ಷೇರುವಿನಿಮಯ ಕೇಂದ್ರಗಳು ಪ್ರಕಟಿಸುವ ವಹಿವಾಟಿನ ಗಾತ್ರದ ಅಂಶಗಳಲ್ಲಿ , ವಿದೇಶಿ ಮತ್ತು ಸ್ವದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಅಂಕಿ ಅಂಶಗಳಲ್ಲಿ ಗಜಗಾತ್ರದ ವಹಿವಾಟೂ ಸೇರಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ನಡೆಸುವ ವಹಿವಾಟು ತುಲನಾತ್ಮಕವಾಗಿದ್ದು, ನಿವ್ವಳ ಅಂಶಗಳು ಭಾರಿ ಏರಿಳಿತ ಕಾಣುತ್ತಿರಲಿಲ್ಲ. ಆದರೆ ಆಗಷ್ಟ್‌ 30ರಂದು ನಡೆದ ಚಟುವಟಿಕೆಗಳ ಅಂಕಿ ಅಂಶಗಳು ವಿಭಿನ್ನತೆಯಿಂದ ಕೂಡಿತ್ತು. ಅಂದು ವಿದೇಶೀ ವಿತ್ತೀಯ ಸಂಸ್ಥೆಗಳು ರೂ.16,145 ಕೋಟಿ ಮೌಲ್ಯದ ಷೇರು ಖರೀದಿಸಿದರೆ ರೂ.11,979 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡುವ ಮೂಲಕ ರೂ.4,165 ಕೋಟಿ ಮೌಲ್ಯದ ಷೇರು ನಿವ್ವಳ ಖರೀದಿ ಮಾಡಿದ್ದವು. ಆದರೆ ನಂತರದ ದಿನದಲ್ಲಿ ಅಂದರೆ ಸೆಪ್ಟೆಂಬರ್‌ 1 ರಂದು ಪರಿಸ್ಥಿತಿಯು ಪಲ್ಲಟಗೊಂಡು, ಅಂದು ಅವು ಖರೀದಿಸಿದ ಷೇರಿನ ಮೌಲ್ಯವು ರೂ.11,907 ಕೋಟಿಯಾಗಿದ್ದು, ಮಾರಾಟದ ಮೌಲ್ಯವು ರೂ.14,197 ಕೋಟಿಯಾಗಿ, ಅಂತಿಮವಾಗಿ ರೂ.2,290 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡಿದ್ದವು.

    ಇಂತಹ ಅಂಕಿ ಅಂಶಗಳಿಗೆ ಪರಿಶೀಲಿಸದೆ ಆದ್ಯತೆ ಕೊಡುವುದು ಸರಿಯಲ್ಲ. ಇಲ್ಲಿ ಅನೇಕ ಗಜಗಾತ್ರದ ವಹಿವಾಟುಗಳು ನಡೆದಿರುವ ಅಂಶವನ್ನು ಗಮನಿಸಬೇಕು. ಈ ರೀತಿ ಗಜಗಾತ್ರದ ವಹಿವಾಟಿನಲ್ಲಿ ಚೌಕಾಶಿ ಮಾಡಿ ನಿರ್ಧರಿಸಿರುವ ವಹಿವಾಟುಗಳೂ ಸೇರಿರುತ್ತವೆ. ಹಲವಾರು ಬಾರಿ ಕೆಲವು ಮ್ಯೂಚುಯಲ್‌ ಫಂಡ್‌ ಗಳಾಗಲಿ, ವಿತ್ತೀಯ ಸಂಸ್ಥೆಗಳಾಗಲಿ ತಮ್ಮ ಹೂಡಿಕೆ ಗುಚ್ಚದಲ್ಲಿರುವ ಷೇರುಗಳನ್ನು ತಮ್ಮದೇ ಸಮೂಹದ ಮತ್ತೊಂದು ಕಂಪನಿಗೆ ವರ್ಗಾಯಿಸುವುವು. ಇದಕ್ಕೆ ಕಾರಣ ಪೇಟೆಯಲ್ಲಾಗುವ ಬದಲಾವಣೆಗಳ ಪ್ರಯೋಜನ ಪಡೆಯುವುದಾಗಬಹುದು, ತೆರಿಗೆ ಸವಲತ್ತುಗಳನ್ನು ಪಡೆದುಕೊಳ್ಳುವುದೂ ಇರಬಹುದು. ಆದರೆ ಈ ರೀತಿಯ ಚಟುವಟಿಕೆಗಳೂ ಸಹ ವಹಿವಾಟಿನ ಅಂಕಿ ಅಂಶಗಳಲ್ಲಿ ಸೇರಿರುತ್ತವೆ.

    1, ಸೆಪ್ಟೆಂಬರ್‌ 2022 ರಂದು ನಡೆದ ಕೆಲವು ವಹಿವಾಟಿನ ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ.


    NTUC INSURANCE CO
    OPERATIVE Ltd
    ಸಂಸ್ಥೆ ಮಾರಾಟ ಮಾಡಿದ
    ಕಂಪನಿಗಳ ಸಂಖ್ಯಾಗಾತ್ರ

    INCOME INSURANCE Ltd
    ಸಂಸ್ಥೆಯು ಅಂದು ಖರೀದಿ
    ಮಾಡಿದ ಷೇರುಗಳ ಸಂಖ್ಯೆ ಮತ್ತು
    ವಹಿವಾಟಿನ ದರ
    ಭಾರತಿ ಏರ್‌ ಟೆಲ್‌ 12,22,30012,22,300 @ Rs.734.90
    ಹೆಚ್‌ ಡಿ ಎಫ್‌ ಸಿ 4,85,0144,85,104 @ Rs.2,400.50
    ಹಿಂದೂಸ್ಥಾನ್‌ ಯುನಿಲೀವರ್‌ 3,90,939 3,90,939 @ Rs.2,598.05
    ಐಸಿಐಸಿಐ ಬ್ಯಾಂಕ್‌ 34,76,713 34,76,713 @ Rs.873.55
    ಇನ್ಫೋಸಿಸ್‌ 2,55,0132,55,013 @ Rs.1,456.40
    ಲಾರ್ಸನ್‌ ಅಂಡ್‌ ಟೋಬ್ರೊ 4,08,7884,08,788 @ Rs.1,902.35
    ರಿಲೈಯನ್ಸ್‌ ಇಂಡಸ್ಟ್ರೀಸ್‌ 7,17,1947,17,194 @ Rs.2,562.45
    ಝೊಮೆಟೊ 1,32,74,0951,32,74,095 @ Rs.61.00

    NTUC INSURANCE CO OPERATIVE Ltd & INCOME INSURANCE Ltd ಇವೆರಡೂ ಕಂಪನಿಗಳೂ ಸಿಂಗಪೂರ್‌ ನಲ್ಲಿ ಸ್ಥಾಪಿತಾವಾಗಿರುವ ಕಂಪನಿಗಳು.


    ಇಂತಹ ಚಟುವಟಿಕೆಯಿಂದ ಸಣ್ಣ ಹೂಡಿಕೆದಾರರು ವಿದೇಶೀ ವಿತ್ತೀಯ ಸಂಸ್ಥೆಗಳು ಭಾರಿ ಪ್ರಮಾಣದ ಚಟುವಟಿಕೆ ನಡೆಸಿವೆ ಎಂದು, ಈ ಅಗ್ರಮಾನ್ಯ ಕಂಪನಿಗಳ ವಹಿವಾಟಾದ ಷೇರುಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಮತ್ತಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಿ ವಾಸ್ತವಿಕತೆಯನ್ನು ಮರೆತುಬಿಡಬಹುದು. ಚಟುವಟಿಕೆಗೂ ಮುನ್ನ ಇಂತಹ ಅಂಶಗಳನ್ನೂ ಗಮಾನಿಸಬೇಕಾದುದು ಅನಿವಾರ್ಯ

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    KCET: ಸಿಇಟಿ: ಅತಿವೃಷ್ಟಿಯಿಂದ ವಿದ್ಯುತ್ ಅಡಚಣೆ; ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ

    BENGALURU SEP 1

    .ರಾಜ್ಯಾದ್ಯಂತ ವಿಪರೀತ ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಗೊಂಡಿರುವ ಹಿನ್ನೆಲೆಯಲ್ಲಿ, ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್ ಲೈನ್ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಅವರು, ಹಲವು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಈ ಕಾಲಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಂದಿದ್ದಾರೆ.

    ಇದರಂತೆ ಶಾಲಾ ವ್ಯಾಸಂಗದ ವಿವರಗಳನ್ನು ಮೊದಲು ಅಪೂರ್ಣವಾಗಿ ತುಂಬಿರುವವರು ಸರಿಯಾದ ವಿವರಗಳನ್ನು ತುಂಬಲು ಸೆ.1ರಿಂದ 7ರವರೆಗೆ ಪ್ರತಿದಿನ ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 8ರವರೆಗೆ (ಭಾನುವಾರ ಪೂರ್ತಿ ದಿನ) ಅವಕಾಶ ಇರಲಿದೆ. ಇದು ಈವರೆಗೂ ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ.

    ಹಾಗೆಯೇ, ಶಾಲಾ ವಿವರಗಳು ಮತ್ತು ಜಿಲ್ಲಾ/ತಾಲ್ಲೂಕು ವಿವರಗಳನ್ನು ತುಂಬದೆ ಇದ್ದಲ್ಲಿ ಅಂಥವರಿಗೆ ಇದಕ್ಕೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಸರಿಪಡಿಸಿಕೊಳ್ಳಲು ಸೆ.7ರವರೆಗೆ ಅವಕಾಶ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಒಂದೆರಡು ವರ್ಷಗಳ ಶಾಲಾ ವಿವರಗಳನ್ನು ತಪ್ಪಾಗಿ ನಮೂದಿಸಿರುವವರಿಗೆ ಸೆ.8ರ ಬಳಿಕ ಅವಕಾಶ ಕೊಡಲಾಗುವುದು. ಜತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಂಥವರು ಸೆ.3ರ ಬೆಳಿಗ್ಗೆ 8ರಿಂದ ಸೆ.5ರ ಸಂಜೆ 5 ಗಂಟೆಯ ಒಳಗೆ ಅದನ್ನು ಸರಿಪಡಿಸಿ ಕೊಳ್ಳಬಹುದು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ವಿಧಾನಸೌಧದ ಜತೆಗೆ ಲಾಲ್ ಬಾಗ್ ನಲ್ಲೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆ; ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿನ ಪ್ರತಿಮೆ: ರಾಜ್ಯ ಮಟ್ಟದ ಉದ್ಘಾಟನಾ ಅಭಿಯಾನಕ್ಕೆ ಸಿಎಂ ಚಾಲನೆ

    BENGALURU SEP 1

    ಒಂದೆರಡು ತಿಂಗಳಲ್ಲಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.

    ಇದರ ಅಂಗವಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತನಾಡಿ, ‘ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ರಾಜ್ಯ ಸರಕಾರವು ವಿಧಾನಸೌಧದ ಆವರಣದಲ್ಲೂ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್ ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಮೈದಾಳಲಿದೆ ಎಂದು ಘೋಷಿಸಿದರು.

    ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಾಪನೆಗೆ ಸರಕಾರವು 84 ಕೋಟಿ ರೂ. ವಿನಿಯೋಗಿಸುತ್ತಿದೆ. ಈ ಪ್ರತಿಮೆಗೆ ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ ‘ಪ್ರಗತಿ ಪ್ರತಿಮೆ’ (Statue of Prosperity ) ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ಅವರು ನುಡಿದರು.

    ಅಭಿಯಾನವು ರಾಜ್ಯದ ಎಲ್ಲರನ್ನೂ ಒಳಗೊಳ್ಳಲಿದ್ದು, ನವ ಕರ್ನಾಟಕ ನಿರ್ಮಾಣದ ದೊಡ್ಡ ಹೆಜ್ಜೆಯಾಗಿದೆ. ಇದು ಸರಕಾರದ ಸಮಗ್ರ ಅಭಿವೃದ್ಧಿ ಸಂಕಲ್ಪದ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದರು.

    ಕೆಂಪೇಗೌಡರ ದೂರದೃಷ್ಟಿಯ ಹಿರಿಮೆ

    ಸಚಿವ ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ತಾಣಗಳ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ‘ಬೆಂಗಳೂರಿನ ಇಂದಿನ ಕೀರ್ತಿಗೆ ಈ ನಗರಕ್ಕೆ ಬುನಾದಿ ಹಾಕಿದ ಕೆಂಪೇಗೌಡರೇ ಕಾರಣ. ಅವರ ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ ಇಂದಿನಿಂದ 45 ದಿನಗಳ ಕಾಲ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಎಲ್ಲ ಹಳ್ಳಿಗಳ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು ನದಿಗಳಿಂದ ಪವಿತ್ರವಾದ ಮಣ್ಣು ಮತ್ತು ಜಲ ಸಂಗ್ರಹಿಸಲಾಗುವುದು. ಬಳಿಕ ಪ್ರಧಾನಿ ಮೋದಿ ಪ್ರತಿಮ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿಯವರ ಸಮಯ ನೋಡಿಕೊಂಡು ನವೆಂಬರ್ 1ರಂದು ಅನಾವರಣ ಮಾಡುವ ಉದ್ದೇಶ ಇದೆ” ಎಂದರು.

    ಕೆಂಪೇಗೌಡರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು. ಅವರಿಂದ ಬೆಂಗಳೂರು ಸುರಕ್ಷಿತ ಮತ್ತು ಸುಭದ್ರವಾಗಿದೆ. ಅಂತಹ ಮಹಾಪುರುಷನ ನೆನಪನ್ನು ರಾಜ್ಯ ಸರಕಾರ ಅಜರಾಮರಗೊಳಿಸುತ್ತಿದೆ ಎಂದರು.

    ಅಭಿಯಾನದ ಅಂಗವಾಗಿ 31 ಜಿಲ್ಲೆಗಳಿಗೂ ತಲಾ ಒಂದು ಎಲ್ಇಡಿ ಅಲಂಕೃತ ವಾಹನ ಹೋಗಲಿದೆ. ಇದರಲ್ಲಿ ಪುಣ್ಯಪುರುಷರ ಸಂದೇಶಗಳು ಇರಲಿದ್ದು, ಕೆಂಪೇಗೌಡರನ್ನು ಕುರಿತ ಸಾಕ್ಷ್ಯಚಿತ್ರ ಪ್ರಸಾರವೂ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

    23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾಮಗಾರಿ ಇನ್ನು ಒಂಬತ್ತು ತಿಂಗಳಲ್ಲಿ‌ ಮುಗಿಯಲಿದೆ. ಇದಕ್ಕಾಗಿ ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

    ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡರ ಜೀವನಕ್ಕೆ ಸಂಬಂಧಿಸಿದ 46 ಸ್ಥಳಗಳಿಗೆ ಕಾಯಕಲ್ಪ ನೀಡುತ್ತಿದೆ. ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ವೀರಸಮಾಧಿ ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

    ಐವತ್ತು ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿವಿ ಆವರಣದಲ್ಲಿ ತಲೆಎತ್ತಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್, ಸಚಿವರಾದ ಆರ್.ಅಶೋಕ, ಎಸ್ ಟಿ ಸೋಮಶೇಖರ್, ಮುನಿರತ್ನ, ನಾರಾಯಣಗೌಡ, ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ಜಗ್ಗೇಶ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಎಸ್ ಆರ್ ವಿಶ್ವನಾಥ, ಎಲ್ ಎನ್ ನಾರಾಯಣಸ್ವಾಮಿ, ಅ.ದೇವೇಗೌಡ ಇದ್ದರು.

    ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾ, ಪ್ರಾಧಿಕಾರದ ಆಯುಕ್ತ ಆರ್. ವಿನಯ್ ದೀಪ್ ಮುಂತಾದವರು ಉಪಸ್ಥಿತರಿದ್ದರು.


    ಲಿಮಿನಲ್ ಲ್ಯಾಂಡ್: ಡಾ. ಶ್ರೀಧರ್ ಮೂರ್ತಿ ಅವರ ಏಕವ್ಯಕ್ತಿ ಜಲವರ್ಣ ಕಲಾಕೃತಿಗಳ ಪ್ರದರ್ಶನ

    ವಿ ಎಸ್ ನಾಯಕ ಬಳಕೂರು

    ಒಂದು ಚಿತ್ರವು ಸಾವಿರಾರು ಕಥೆಗಳನ್ನು ಹೇಳುತ್ತದೆ. ಸಾವಿರಾರು ಧ್ವನಿಗಳನ್ನು ಹೊರಹೊಮ್ಮಿಸುತ್ತದೆ. ನಿಸ್ತೇಜವಾದ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ. ಚಿತ್ರಕಲೆ ಒಂದು ಮಾಯಾಲೋಕ. ಅದರ ಅಂತರಾಳವನ್ನು ಹೊಕ್ಕಿ ಕಲಾವಿದ ಎಲ್ಲರ ಮನಸೂರೆಗೊಳ್ಳುವ ವಿಭಿನ್ನ ಕಲಾಕೃತಿಗಳನ್ನು ರಚಿಸಿ ಕಲಾಸಕ್ತರ ಮಡಿಲಿಗೆ ಅರ್ಪಿಸುತ್ತಾ ನೆ. ಇಂತಹ ವಿಭಿನ್ನ ಕಲಾಕೃತಿಗಳ ಮೂಲಕ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ರಚಿಸಿರುವ ವಿನೂತನ ಕಲಾಕೃತಿಗಳನ್ನು ಕಲಾ ಪ್ರದರ್ಶನದ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸುತ್ತಿದ್ದಾರೆ ಡಾ. ಶ್ರೀಧರ್ ಮೂರ್ತಿ. ಎ.

    ಇವರು ರಚಿಸಿರುವ ಜಲವರ್ಣ ಮಾಧ್ಯಮದ ಕಲಾಕೃತಿಗಳು ಒಂದು ಮಾಂತ್ರಿಕ ಜಗತ್ತನ್ನು ಸೃಷ್ಟಿ ಮಾಡಿದಂತಿದೆ. ಶ್ರೀಧರ್ ಅವರು ಮೂಲತಃ ಕೊಪ್ಪಳ ದವರು ಈಗ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಮುದ್ರಣ ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಚಿತ್ರಕಲಾ ಮಹಾವಿದ್ಯಾಲಯದಿಂದ ಬಿ. ಎಫ್. ಎ. ಪದವಿಯನ್ನು ನಂತರ ಎಂ. ಎಫ್. ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.2012 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪಡೆದುಕೊಂಡಿದ್ದಾರೆ.

    ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆರ್ಟ್ ಹೌಸ್ ಕಲಾ ಗ್ಯಾಲರಿಯಲ್ಲಿ ಆಯೋಜನೆ ಮಾಡಿರುವ ಇವರ ಜಲವರ್ಣ ಮಾಧ್ಯಮದ ಕಲಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ವಿನೂತನ ಸಂದೇಶವನ್ನು ಕೊಡುತ್ತದೆ. ಸೌಂದರ್ಯ ಪ್ರಜ್ಞೆಯನ್ನು ಈ ಭೂಮಿಯ ಮಿತಿಯಿಂದ ಹೊರಗಿನ ಬ್ರಹ್ಮಾಂಡಕ್ಕೆ ಹೇಗೆ ವಿಸ್ತಾರ ಮಾಡಬಹುದು ಮತ್ತು ಇವರ ಆಲೋಚನೆಯಲ್ಲಿ ಈ ಭೂಮಿಯ ಹೊರಗೆ ಒಂದು ಸೌಂದರ್ಯವಿದೆ. ಅದರ ಆಕರ್ಷಣೆ ಹೊಂದಿ ಆಲೋಚನೆಯಿಂದ ವಿಭಿನ್ನ ಕಲಾಕೃತಿಗಳನ್ನು ರಚಿಸಿದ್ದಾರೆ.

    ಗೋಚರ ಮತ್ತು ಅಗೋಚರ ಪ್ರಪಂಚದ ನಡುವೆ ಒಂದು ಪ್ರಪಂಚವಿದೆ ಆ ಪ್ರಪಂಚ ಶ್ರೀಧರ್ ಅವರಿಗೆ ಬಹ ಳಷ್ಟು ಕಾಡಿದೆ ಅದು ಇಷ್ಟವಾಗಿದೆ ಕಾಣುವ ಮತ್ತು ಕಾಣದಿರುವ ಲೋಕದ ಮಧ್ಯೆ ಇರುವ ಒಂದು ಪ್ರಪಂಚವನ್ನು ತಾವೇ ಕಲ್ಪಿಸಿಕೊಂಡು ಅಲ್ಲಿ ಅವರು ಅನುಭವಿಸಿದ ನೋಡಿದ ಹಲವಾರು ವಿಚಾರಗಳನ್ನು ವಿಸ್ಮಯಕಾರಿ ಕಲಾಕೃತಿಗಳ ಮೂಲಕ ರಚಿಸಿದ್ದಾರೆ. ಆದರೆ ಭೂಮಿಯ ಆಚೆ ಏನಿದೆ ಎಂಬ ಕಲ್ಪನೆ ಅವರಿಗಿಲ್ಲ. ಆದರೆ ಅವರು ಈ ಭೂಮಿಯನ್ನು ಆಧಾರವಾಗಿಟ್ಟುಕೊಂಡು ಆಲೋಕ ದ ಪರಿಚಯವನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ. ಸಾಮಾನ್ಯವಾಗಿ ಇವರು ರಚಿಸಿರುವ ಈ ಕಲಾಕೃತಿಗಳನ್ನು ನೆರಳು ಮತ್ತು ಬೆಳಕಿನ ನಡುವೆ ವೀಕ್ಷಿಸಿದಾಗ ವಿಭಿನ್ನವಾದ ಒಂದು ತಾಣಕ್ಕೆ ಹೋದ ಅನುಭವದ ಜೊತೆಗೆ ನಮಗೆ ನಾವು ಎಲ್ಲಿದ್ದೇವೆ ಎಂಬ ಪರಿವೆಯೂ ಕೂಡ ಇರುವುದಿಲ್ಲ.

    ಇಂತಹ ವಿಭಿನ್ನ ಕಲಾಕೃತಿಗಳ ಸರಣಿ ವೀಕ್ಷಿಸುವ ಸುಯೋಗ ಕಲಾಸಕ್ತರ ಆದ ತಮ್ಮ ಪಾಲಿಗೆ ಒದಗಿ ಬಂದಿದೆ . ತಮ್ಮ ಬಿಡುವಿನ ಸಮಯದಲ್ಲಿ ಈ ಕಲಾಗ್ಯಾಲರಿ ಗೆ ಭೇಟಿ ನೀಡಿ ಕಲಾಪ್ರದರ್ಶನವನ್ನು ವೀಕ್ಷಿಸಬಹುದು.

    ಆರ್ಟ್ ಹೌಸ್ ಕಲಾಗ್ಯಾಲರಿ
    ಅರಮನೆ ರಸ್ತೆ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕ
    ವಸಂತನಗರ, ಬೆಂಗಳೂರು

    ದಿನಾಂಕ: 27 ಅಗಸ್ಟ್ ರಿಂದ ಆರಂಭವಾಗಿ 4 ಸೆಪ್ಟೆಂಬರ್ ವರೆಗೆ ನಡೆಯಲಿದೆ
    ವೀಕ್ಷಣೆಯ ಸಮಯ :
    ಬೆಳಿಗ್ಗೆ 10:30 ರಿಂದ ಸಂಜೆ6:30
    ಪ್ರವೇಶ ಉಚಿತ

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


    ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ

    ಎಂ.ವಿ. ಶಂಕರಾನಂದ

    ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ.
    ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ.

    ಗೌರಿ ಎಂಬುದು ಪರಮೇಶ್ವರನ ಪತ್ನಿ ಪಾರ್ವತಿಯ ಮತ್ತೊಂದು ಹೆಸರು. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ.

    ಶ್ರೀ ಸ್ವರ್ಣ ಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ ಗೌರಿ ಎಂದು ಅರ್ಥ. ಅಂತಹ ಜಗನ್ಮಾತೆಯಾದ ಗೌರಿಯನ್ನು ಸುಮಂಗಲಿಯರು ಪೂಜಿಸುವ ವಿಧಿ ವಿಧಾನ ಇಲ್ಲಿದೆ.

    ಈ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಾಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

    ಬಾಗಿನ ಹೀಗಿರಲಿ: ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆಬಿಚ್ಚೋಲೆ, ಕನ್ನಡಿ , ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.

    ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು.

    ಪತ್ರೆಗಳನ್ನು,ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, ೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ 16 ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು. ಪಂಚಾಮೃತ ಅಭಿಷೇಕ ಮಧುಪರ್ಕ,ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು.

    ಕಲಶದ ವಿಧಾನ:ಇನ್ನು ಕೆಲವರು ಮರಳಗೌರಿಯನ್ನು ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ. ಅವರವರ ಸಂಪ್ರದಾಯದಂತೆ ಗೌರಿಯನ್ನು ಪ್ರತಿಸ್ಠಾಪಿಸಿ ಪೂಜೆ ಮಾಡಬೇಕು.ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ 5 ವಿಳ್ಳೆದೆಲೆಯನ್ನು ಇಟ್ಟು ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ ಸುತ್ತ ಬಿಳಿ ಸುಣ್ಣ ಹಚ್ಚಿ ಅದಕ್ಕೆ ೪ ಕಡೆ ಅರಿಶಿನ ಕುಂಕುಮ ಹಚ್ಚಬೇಕು. ಒಂದು ತಟ್ಟೆಯಲ್ಲಿ ಹಳದಿ (ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು) ವಸ್ತ್ರವನ್ನು ಹಾಸಿ ಎರೆಡು ವಿಳ್ಳೆದೆಲೆಯ ಜೊತೆ ಎರೆಡು ಬಟ್ಳಡಿಕೆ ಇಟ್ಟು ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು ಜೊತೆಯಲ್ಲಿ ಸಿದ್ಧಪಡಿಸಿದ ಕಲಶವನ್ನು ಸ್ಥಾಪನೆ ಮಾಡಬೇಕು.

    ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ.
    “ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯಾದತ್ತಾಣಿ ಸೂರ್ಪಾಣಿ ಗೃಹಾಣಿ ಮಾನಿ ಜಾನಕಿ “.

    ದೇವರ ವಿಸರ್ಜನೆ: ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು. ಅದಕ್ಕೆ ಬೇಕಾಗುವ ಸಾಮಾಗ್ರಿಗಳು: ತೆಂಗಿನಕಾಯಿ ಅಥವಾ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ, ಬೆಲ್ಲದಚ್ಚು, ಬಳೆ ಬಿಚ್ಚೋಲೆ, ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಸೀರೆ, ಎರೆಡು ರವಿಕೆ ಕಣಗಳು, ಹಣ್ಣುಗಳಾದ ದಾಳಿಂಬೆ, ಸೀಬೆ ಹಣ್ಣು, ಸೀತಾ ಫಲ, ಸಪೋಟ, ಮೂಸಂಬಿ, ಕಿತ್ತಳೆ. ನಂತರ ಮಂಗಳಾರತಿ ಮಾಡಿ ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು.

    ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ ಸೇವಿಸಬೇಕು .

    ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.
    “ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
    ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ.

    ಗೌರಿ ಹಬ್ಬದ ಬಗ್ಗೆ ಮತ್ತಷ್ಟು ವಿವರಗಳಿಗೆ ಈ ವಿಡಿಯೋ ನೋಡಿ

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    error: Content is protected !!