ಡಾ. ಎಚ್ ಎಸ್ ಸತ್ಯನಾರಾಯಣ ಅವರು ಫೇಸ್ಬುಕ್ಕಿ ನಲ್ಲಿ ಬರೆಯುತ್ತಿದ್ದ ಕನ್ನಡದ ಪ್ರಖ್ಯಾತ ಲೇಖಕರೊಂದಿಗಿನ ತಮ್ಮ ಒಡನಾಟವನ್ನು ಒಂದು ಗೂಡಿಸಿ ಅಪೂರ್ವ ಒಡನಾಟ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಲೇಖಕಿ ಮತ್ತು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿರುವ ನೂತನ ದೋಶೆಟ್ಟಿ ಈ ಕೃತಿಯ ಪುಟ್ಟ ಪರಿಚಯವನ್ನು ಇಲ್ಲಿ ಮಾಡಿ ಕೊಟ್ಟಿದ್ದಾರೆ.
ಕನ್ನಡ ಪ್ರಾಧ್ಯಾಪಕರೂ, ಲೇಖಕರೂ ಆಗಿರುವ ಡಾ. ಎಚ್ ಎಸ್ ಸತ್ಯನಾರಾಯಣ ಅವರು. ಜನವರಿ 10ರಂದು ” ನಿಮ್ಮ ವಿಳಾಸ ಬೇಕಿತ್ತು ಅಪೂರ್ವ ಒಡನಾಟ ಪುಸ್ತಕ ಕೇಳಿಸುವೆ” – ಎಂದು ಕಳಿಸಿದ ವಾಟ್ಸ್ ಆ್ಯಪ್ ಮೆಸೇಜಿಗೆ ಉತ್ತರವಾಗಿ ನಾಲ್ಕೇ ನಿಮಿಷದಲ್ಲಿ ವಿಳಾಸ ಕಳಿಸಿದೆ.
ಅವರ ಈ ಲೇಖನಗಳನ್ನು ಫೇಸ್ಬುಕ್ನಲ್ಲಿ ಓದಿ ಆಸ್ವಾದಿಸಿದ್ದು ಈಗ ಒಟ್ಟಂದದಲ್ಲಿ ಸಿಗುವ ಖುಷಿ ಒಂದೆಡೆಯಾದರೆ ಅವರ ಅಭಿಮಾನ ಇನ್ನೊಂದೆಡೆ. ಗೂಗಲ್ ಪೇ ಅಥವಾ ಫೋನ್ ಪೇ ನಂಬರ್ ಕಳಿಸಿ ಎಂಬ ನನ್ನ ಒಕ್ಕಣಿಕೆಗೆ ಅವರು ‘ ರೆಡಿ ಟು ಸೆಂಡ್’ ಎಂದು ಪುಸ್ತಕದ ಫೋಟೊ ಹಾಕಿ ‘ ನಿಮ್ಮ ತಾವ ದುಡ್ಡ್ ಇಸ್ಕಂಡ್ರೆ ದೇವ್ರು ಮೆಚ್ಚಾಕಿಲ್ಲ’ ಎಂದು ಚಟಾಕಿ ಹಾರಿಸಿದ್ದರು. ಅದಕ್ಕೆ ನಾನು ‘ ನಿಮ್ಮ ಅಭಿಮಾನ ದೊಡ್ಡದು ಗುರುಗಳೇ. ಆದ್ರೆ ಈಗ ಪುಸ್ತಕ ಕಳಿಸಿ ದುಡ್ಡು ಕಳಿಸಿ ಎಂದು ಕೇಳುವ ಟ್ರೆಂಡ್ ನಡೀತಿದೆ’ ಎಂದು ಮರು ಚಟಾಕಿ ಹಾರಿಸಿದೆ.
ಇದನ್ನು ಏಕೆ ಹೇಳಿದೆನೆಂದರೆ ಅವರು ಈ ಪುಸ್ತಕದಲ್ಲಿ ಕನ್ನಡ ನಾಡಿನ 51 ಹಿರಿಯ ಲೇಖಕರ ಒಡನಾಟದಲ್ಲಿ ಸವಿದ ನೂರಾರು ಚಟಾಕಿಗಳನ್ನು ನೆನಪಿಸಿಕೊಂಡಿದ್ದಾರೆ.
ವರಕವಿಗಳ ಅಪರೂಪದ ವ್ಯಕ್ತಿಚಿತ್ರ
ಬೇಂದ್ರೆಯವರ ಬಗೆಗಿನ ಲೇಖನದಿಂದ ಪುಸ್ತಕ ಆರಂಭವಾಗುತ್ತದೆ. 12ರ ಬಾಲಕ ಸತ್ಯ ನಾಲ್ಕು ದಶಕಗಳ ನಂತರ ಅವರ ಬಗೆಗೆ ಬರೆಯುವ ಲೇಖನ ವರಕವಿಗಳ ಅಪರೂಪದ ವ್ಯಕ್ತಿಚಿತ್ರವಾಗಬಲ್ಲುದೆಂದು ಊಹಿಸಿರಲೇ ಇಲ್ಲ. ಅದು ಆಯಿತು! ಪೆನ್ನಿನ ಪಾತಿವ್ರತ್ಯದಂತಹ ಹಾಸ್ಯದಿಂದ ಬದುಕಿನ ಬಂಡಿ ಆದಷ್ಟೂ ಎಳ್ದೀನಿ.ಇನ್ಮ್ಯಾಲಿಂದೆಲ್ಲ ಅವಂದು! ಎನ್ನುವ ಜೀವನದರ್ಶನದವರೆಗಿನ ಹರಹು ಇಲ್ಲಿದೆ. ಬೇಂದ್ರೆಯವರ ಕೈಯಲ್ಲಿ ಬರೆಯಲಾರದ ಸತ್ಯ ಅವರ ಪೆನ್ನು ಅವರ ಬಗ್ಗೆಯೇ ಲೇಖನ ಬರೆಸಿತಲ್ಲಾ ಎಂಬ ಬೆರಗು ಉಳಿಯುತ್ತದೆ.
ಎ ಎನ್ ಮೂರ್ತಿರಾಯರ ಲೇಖನದಲ್ಲಿ ಸಂಕಟ ಬಂದಾಗ ವೆಂಕಟರಮಣ? ಎಂದು ಅವರನ್ನು ಕೆಣಕಿದ ನಿಮ್ಮ ಧೈರ್ಯಕ್ಕೆ ಒಂದು ಮೆಚ್ಚುಗೆ. ಈ ಲೇಖನ ಅವರ ಬಗೆಗೆ ಮಾತ್ರವಾಗಿರದೆ ಅವರ ಸಮಕಾಲೀನ ಸಾಹಿತ್ಯದ ಚರಿತ್ರೆಯ ಭಾಗವೂ ಆಗಿದೆ.
ಶಿವರಾಮ ಕಾರಂತರ ಮಾತುಗಳೆಂದರೆ ಈಗಿನ ಟಾರ್ಗೆಟ್ ಮಿಸೈಲ್ ಗಳಿದ್ದಂತೆ. ಅಂಥ ಕೆಲವನ್ನು ಇಲ್ಲಿ ಸಿಡಿಸಿದ್ದೀರಿ.ಕುವೆಂಪು ಅವರನ್ನು ಭೇಟಿಯಾಗಲು ನಿಮ್ಮ ಪರಿಶ್ರಮ.. ಈಗಲೂ ಬರೆಯುತ್ತಿದ್ದೀರಿ ಸರ್? ಎಂದು ಅವರನ್ನೇ ಕೇಳಿದಿರಿ!! ಅದಕ್ಕೆ ಅವರು ನೀಡಿದ ಉತ್ತರವಿದೆಯಲ್ಲಾ- ಕಾವ್ಯವನ್ನು ಬದುಕುತ್ತಿದ್ದೇನೆ – ಎಂಬುದು, ನಿಮ್ಮ ಧೈರ್ಯ/ ಹುಂಬ ಪ್ರಶ್ನೆ ಇರದಿದ್ದರೆ ಇಂಥ ಉತ್ತರ ಸಿಗುತ್ತಿತ್ತೇ?
ಗೊರೂರರ ಬಗ್ಗೆ ಬರೆಯುತ್ತಾ ಡಿವಿಜಿ, ಶ್ರೀನಿವಾಸ ರಾಜು ಮೇಷ್ಟ್ರು, ಹಂಪನಾ ಮೊದಲಾದವರ ಮಾತುಗಳನ್ನು ಹೇಳುತ್ತೀರಿ. ಆ ಕಾಲ ಒಬ್ಬ ಸಾಹಿತಿಯ ಬದುಕಿಗೆ ಇತರ ಸಾಹಿತಿಗಳ ಬದುಕು ಒಂದಿಲ್ಲೊಂದು ರೀತಿಯಲ್ಲಿ ತುಳುಕಿ ಕೊಂಡಿದ್ದ ಅಪೂರ್ವ ಕಾಲ.
ಪುತಿನ ಅವರು ಹಾ ಮಾ ನಾಯಕರ ಕುರಿತು ಆಡಿದ ‘ ಪ್ರೇಮ ಕುರುಡು’ ಮಾತಿನಲ್ಲಿ ಹಾಸ್ಯ ಪೂರಿತ, ತಾಯ ಅಕ್ಕರೆಯಿದೆ. ಪುತಿನ ಅವರು ನಿಮಗೆ ಜಯನಗರದಲ್ಲಿ ಪ್ರತ್ಯಕ್ಷವಾಗಿ ” ಈಗ ಚೆಲುವನಾರಾಯಣ ನನ್ನನ್ನು ನೋಡಲೆಂದು ಹೋಗುವೆ” ಎಂದು ಹೇಳಿದ್ದನ್ನು ಓದುವ ಭಾಗ್ಯ ನಮ್ಮದು.
ಕೆ ಎಸ್ ನ ಕಾಣಲು ಯುಜಿಸಿ ಪರೀಕ್ಷೆ ಬಿಟ್ಟ ಲೇಖಕ
ಕೆ ಎಸ್ ನ ಅವರನ್ನು ಕಾಣುವ ಸಲುವಾಗಿ ಯುಜಿಸಿ ಪರೀಕ್ಷೆ ಬಿಟ್ಟಿರಿ!!ಇವರ ಬಗ್ಗೆ ಇರುವ ಮಾತುಗಳಲ್ಲಿ ಕವಿಗಳ ನೋವು, ನಲಿವು, ಒಲವು ಎಲ್ಲವುಗಳ ಹರಿವಿದೆ.
ಟಿ. ಸುನಂದಮ್ಮ ಅವರೊಂದಿಗೆ ಬಸ್ಸಿನ ಪಯಣ! ಬಸವರಾಜ ಕಟ್ಟೀಮನಿ ಅವರಂಥ ಹಿರಿಯರ ಆಶೀರ್ವಾದ ,” ನೀವು ಚೆನ್ನಾಗಿ ಓದಿ ಮುಂದೆ ಬರಬೇಕು ಎಂಬುದೇ ನನ್ನ ಆಸೆ” – ಯನ್ನು ಈಡೇರಿಸಿಬಿಟ್ಟಿರಿ. * ಎಲ್ ಬಸವರಾಜು- ಇಷ್ಟು ಸಹಜವಾಗಿ ವಿದ್ವಾಂಸರು ಇರುತ್ತಾರೋ ಎನ್ನಿಸುವಷ್ಟು ಸರಳ ವ್ಯಕ್ತಿತ್ವದ, ನೇರ ನಡೆಯ ಇವರ ಪರಿಚಯ ಕಣ್ಣು ಕಟ್ಟುವಂತಿದೆ. ವೈಎನ್ಕೆ ಅವರ ಶಬ್ದದಾಟಗಳ ಬಗ್ಗೆ ಹೇಳುತ್ತ ಕಡೆಯಲ್ಲಿ Y( ಯಾಕೆ) ಎಂದು ಪ್ರಶ್ನಿಸಿದ್ದು ಮಜವಾಗಿದೆ. ಅ ರಾ ಮಿತ್ರ ಅವರ ಹಾಸ್ಯ ಅಬ್ಬರವಿಲ್ಲದ ಜುಳುಜುಳು ಹರಿಯುವ ಶುದ್ಧ, ಸ್ಪಷ್ಟ ನೀರಿನಂಥ ಹಾಸ್ಯ. ಮೆಲು ಮಾತಿನ ಹಸನ್ಮುಖಿ ಮಿತ್ರ ಅವರೊಂದಿಗಿನ ನನ್ನ ಅನುಭವವೂ ಈ ಲೇಖನ ಓದಿ ತಾಜಾ ಆಯಿತು.
ಪಾ ವೆಂ ಬದುಕು ಬರಹ
ಪಾ ವೆಂ ಆಚಾರ್ಯ ಅವರ ಕುರಿತ ಬರಹದ ಪ್ರತಿ ಶಬ್ದದಲ್ಲೂ ಅವರ ಬದುಕು ಹಾಗೂ ಬರಹಗಳ ಹಿರಿಮೆಯನ್ನು ಎತ್ತಿ ಹಿಡಿದಿದ್ದೀರಿ. ಶಾಂತರಸರಿಂದ ಸಂಪಾದಿತವಾದ ‘ ಬೆನ್ನ ಹಿಂದಿನ ಬೆಳಕು’ ಕವನ ಸಂಕಲನದ ಕುರಿತು ನಿಮ್ಮ ಪ್ರಶ್ನೆ- ಪ್ರಾದೇಶಿಕತೆಯ ಮೋಹಕ್ಕೆ ಒತ್ತು ಕೊಟ್ಟು ಸಂಕಲನವನ್ನು ಹೊರತಂದಿರುವುದು ಸ್ಪಷ್ಟ. ನಾವು ಒತ್ತು ಕೊಡಬೇಕಾಗಿರುವುದು ಸಾಹಿತ್ಯದ ಸತ್ವಕ್ಕೆ ಅಲ್ಲವಾ ಸರ್? – ಕೇಳಿ ಆ ಶಾಂತಮೂರ್ತಿಗಳನ್ನೂ ಸಿಟ್ಟಿಗೆಬ್ಬಿಸಿಬಿಟ್ಟಿರಲ್ಲ! ಶಾಂತರಸರು ಆಗಿನ ಮುಖ್ಯಮಂತ್ರಿಗಳ ಸರ್ಕಾರದ ಧೋರಣೆಯ ವಿರುದ್ಧ ಖಾರದ ಪ್ರತಿಭಟನಾ ಧ್ವನಿಯನ್ನು ಎತ್ತಿ ಅದಕ್ಕೆ ಪೂರಕವಾಗಿ ನಡೆದುಕೊಂಡರೆಂಬುದು ಅವರ ಬಗೆಗೆ ನೀಡಿದ ದೊಡ್ಡ ತಿಳಿವಳಿಕೆ.
ಎಲ್ ಎಸ್ ಶೇಷಗಿರಿ ರಾಯರ ಮಾತುಗಳನ್ನು ಕೇಳುವುದೇ ಒಂದು ಆನಂದ.ಈ ಲೇಖನದಲ್ಲಿ ಹೆಸರಿಸಿರುವ ಅವರು ಹಾಗೂ ಹಾಮಾನಾ ಅವರ ಲೇಖನ ಸಂಘರ್ಷ ಸ್ವಾರಸ್ಯವಾಗಿದೆ. ಇಂಥ ಪಾಂಡಿತ್ಯಪೂರ್ಣ ತಿಕ್ಕಾಟಗಳು ಕನ್ನಡ ಸಾಹಿತ್ಯ ಪರಂಪರೆಯ ಭಾಗವಾಗಿವೆ..ಅವರು ಹಾಗೂ ಅವರ ಶ್ರೀಮತಿಯವರು ಮೃದು ಮಾತಿನ, ಅತ್ಯಂತ ಸಜ್ಜನಿಕೆಯ ಜೀವಿಗಳು. ನಾನೂ ಅವರ ಮನೆಯಲ್ಲಿ ಸತ್ಕಾರ ಸ್ವೀಕರಿಸಿದ್ದೇನೆ.
ಜಿ ಎಸ್ ಆಮೂರರ ಕುರಿತು ಹೇಳಿರುವ ಫೋಟೊ ಸಂದರ್ಭ ನಿಮ್ಮ ದೇಸಿ ಹುಂಬತನಕ್ಕೆ ಇನ್ನೊಂದು ಸಾಕ್ಷಿ. ಸರಳತೆಗೆ ಪಾಂಡಿತ್ಯವೂ ಒಲಿಯುವುದಂತೆ. ಇದು ಆಮೂರರ ವಿದ್ವತ್ತಿಗೆ ಸಲ್ಲುವ ಮೌಲಿಕವಾದ ಲೇಖನ. ಬಿ ಸಿ ರಾಮಚಂದ್ರ ಶರ್ಮ ಅವರೊಂದು ವರ್ಣರಂಜಿತ ವ್ಯಕ್ತಿತ್ವ ಕನ್ನಡ ಸಾಹಿತ್ಯದಲ್ಲಿ. ಈ ಲೇಖನದಲ್ಲಿ ಮೂರ್ತಿ ರಾಯರಿಗೂ, ಪುತಿನ ಅವರಿಗೂ ಪಂಪ ಪ್ರಶಸ್ತಿ ಸಿಕ್ಕ ಬಗ್ಗೆ ಇರುವ ನಿಮ್ಮ ಟಿಪ್ಪಣಿ ಆಸಕ್ತಿದಾಯಕ. ಯಾರಿಗೂ ಹೊಳೆಯದ್ದು ನಿಮಗೆ ಹೊಳೆದಿದೆ ಎಂದರೆ ನಿಮ್ಮದು ಕೀಟಲೆ ಬುದ್ಧಿಯೇ ಸರಿ. ಶರ್ಮರು ತಮ್ಮ ಹಾಗೂ ಚೆನ್ನಯ್ಯ ಅವರು ಹೆಸರ ಜೊತೆ ನಿಮ್ಮದನ್ನೂ ಸೇರಿಸಿಕೊಳ್ಳಬೇಕಿತ್ತು.
ಜಿ ಎಸ್ ಶಿವರುದ್ರಪ್ಪನವರ ಬಗ್ಗೆ ಬರೆಯುವಾಗ ನಿಮ್ಮಲ್ಲಿ ಅವರ ಬಗ್ಗೆ ಅಂಥ ಆಪ್ತತತೆ ಕಾಣಿಸಲಿಲ್ಲ. ಜಿಎಸ್ಎಸ್ ಅವರನ್ನು ಊಟಿ ಪ್ರವಾಸದಲ್ಲಿ ಬೆಟ್ಟದ ಮೇಲೆ ಅಕಸ್ಮಾತ್ ನಾನು ಭೇಟಿಯಾಗಿದ್ದೆ. ಆನಂತರ ಅವರು ಮನೆಗೂ ಹೋಗಿದ್ದೆ. ಅವರಿಗೆ ಆಕಾಶವಾಣಿಯಲ್ಲಿ ನುಡಿನಮನ ಸಲ್ಲಿಸಿದ್ದ ಧನ್ಯತೆ ನನ್ನದು.
ಚನ್ನವೀರ ಕಣವಿಯವರು ಸಜ್ಜನಿಕೆಯ ಮೂರ್ತರೂಪ. ಚಂಬೆಳಕಿನಂಥ ನಗು, ಮಾತು, ನಡಿಗೆ ಇವರದು. ಲೇಖನದಲ್ಲಿರುವ ಇವರ ಪರಿಶುದ್ಧ ಮನದ ತಿಳಿಹಾಸ್ಯದ ಮಾತುಗಳು ಮುದ ನೀಡಿದವು.ಶಾಂತಾದೇವಿ ಕಣವಿ ಬಗ್ಗೆ ಹೇಳುತ್ತ ತುಂಬಾ ಗೌರವ, ಕುತೂಹಲದಿಂದ ಅವರ ಬರವಣಿಗೆಯನ್ನು ಕಾಣುವೆ ಎಂದು ಅಷ್ಟು ಒಳ್ಳೆಯ ಉತ್ತರ ಕೊಟ್ಟಿದ್ದರೂ ಉದಾರವಾಗಿ ಪ್ರಶಂಸೆ ಮಾಡಬಹುದಿತ್ತು ಎಂಬ ಕೊಂಕು ನಿಮ್ಮ ಕಾಲೆಳೆಯುವ ಬುದ್ಧಿಗೆ ಸರಿಹೋಗಿಲ್ಲ ಅನ್ನಿಸುತ್ತೆ. ಕೊನೆಯಲ್ಲಿ ಅವರು ಕವಿತೆಯ ಎರಡು ಸಾಲುಗಳು ಎಲ್ಲ ಕಾಲಕ್ಕೂ ಸಲ್ಲುವ ಎಚ್ಚರಿಕೆಯ ಅಚ್ಛಾ ನುಡಿಗಳು!
ಹಾ ಮಾ ನಾಯಕರ ‘ ಪುಸ್ತಕಗಳ ಕುರಿತು ಲೇಖಕರ ಧೋರಣೆ ಸಕಾರಾತ್ಮಕವಾಗಿ ಇರಬೇಕು ‘ ಎಂಬ ಮಾತು ಮಾರ್ಮಿಕವಾಗಿದೆ. ಪತ್ನಿ ಯಶೋಧರಮ್ಮ ಅವರೊಂದಿಗೆ ಆಡಿದ ಅವರು ಕೊನೆಯ ಮಾತೂ ಸಹ!! ಡಾ ಎಮ್ ಎಮ್ ಕಲ್ಬುರ್ಗಿ ಅವರ ಮಾತು ,” ಲೇಖನಿಯ ಹೊಡೆದಾಟಕ್ಕೆ ಲೇಖನಿಯನ್ನೇ ಬಿಡಬೇಕು. ಬೇರೆ ಆಯುಧಗಳನ್ನು ಬಳಸಬಾರದು ” ಅವರ ಬದುಕಿಗೇ ವಿಪರೀತವಾಯಿತು. ಅವರು ಸಂಪಾದಿಸಿದ್ದ ಎರಡು ಬೃಹತ್ ವಚನ ಸುಪುಟಗಳ ಬಿಡುಗಡೆಯ ಸಂದರ್ಭದಲ್ಲಿ ನನ್ನ ಆಕಾಶವಾಣಿಯ ಅಂತರಾಳ ಪುಸ್ತಕವೂ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆಯಾಗಿತ್ತು. ಅವರಿದ್ದಿದ್ದರೆ ಅಲ್ಲಿ ಅವರ ಉಪಸ್ಥಿತಿಯೂ ಇರುತ್ತಿತ್ತು.
ಜಿ ಎಸ್ ಸಿದ್ಧಲಿಂಗಯ್ಯ ಅವರು ನಿಮ್ಮನ್ನು ಕಿಚಾಯಿಸಿದ್ದು ಓದಿ ಖುಷಿಯಾಯಿತು.ಪುಸ್ತಕದ ಉದ್ದಕ್ಕೂ ಅದು ನಿಮ್ಮ ಪೇಟೆಂಟ್ ಅನ್ನೋ ಥರ ಇದೆಯಲ್ಲಾ! ಅವರ ಅಗಾಧ ಓದು, ಪಾಂಡಿತ್ಯದ ಶಿಸ್ತೇ ಅವರನ್ನು ಕಟುವಾಗಿ ಮಾಡಿದ್ದಿರಬೇಕು.
ವೀಳ್ಯದೆಲೆಯ ಮರೆಯ ಕಾಯಿ
ಕೆ.ವಿ.ಸುಬ್ಬಣ್ಣ ಅವರ ರಸಗವಳದ ಅಭ್ಯಾಸದ ಕುರಿತು ಜಯಂತ ಕಾಯ್ಕಿಣಿ ಅವರು ,” ಇವರು ವೀಳ್ಯದೆಲೆಯ ಮರೆಯ ಕಾಯಿ” ಎಂದಿದ್ದು ಬಹಳ ರಂಜನೀಯ. ಪುಟ್ಟ ಹಳ್ಳಿಗೆ ವಿಶ್ವ ಭೂಪಟದಲ್ಲಿ ಸ್ಥಾನ ದೊರಕಿಸಿದ ಸುಬ್ಬಣ್ಣ ಅವರಿಗೆ ಅವರೇ ಸಾಟಿ. ಭಾರತದಲ್ಲಿ ಇವರಂಥ ಮತ್ತೊಂದು ಉದಾಹರಣೆ ಇರಲಾರದು. ಟಿ ವಿ ವೆಂಕಟಾಚಲ ಶಾಸ್ತ್ರಿಯವರ ” ನನ್ನ ಪಾಲಿಗೆ ಬಿಡುವೆಂದರೆ ಓದುತ್ತಿರುವ ಪುಸ್ತಕವನ್ನು ಪಕ್ಕಕ್ಕಿಟ್ಟು ಬೇರೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುವುದು” ಎಂಬ ಮಾತನ್ನು ಅವರು ನಿಮ್ಮೆದುರೇ ಆಡಿದ್ದೆಂದು ಗೊತ್ತಿರಲಿಲ್ಲ! ಪುಸ್ತಕಗಳ ಕೊರತೆಯನ್ನು ಊಹಿಸಿ ಪ್ರೊಫೆಸರ್ ಹುದ್ದೆಯನ್ನೇ ನಿರಾಕರಿಸಿದ ಇವರನ್ನು ಇಂದಿನ ‘ ಹುದ್ದೆ ರಾಜಕೀಯ’ ದಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯ.ಸೈಕಲ್ ಕಲಿಯದಿದ್ದರೂ ಕನ್ನಡದ ತೇರನ್ನು ಎಳೆದ ಮೇರು ಎಂದು ನೀವಂದದ್ದು ಸರಿಯಾಗಿದೆ.
ಎಸ್ ಎಲ್ಲ ಭೈರಪ್ಪ ಅವರನ್ನೇ ” ನೀವು ಎಸ್ ಎಲ್ ಭೈರಪ್ಪ ಅವರಲ್ವೇ?” ಎಂದು ಕೇಳಿ ಅವರು ಅಲ್ಲ ಎಂದು ಹೇಳಿದ ಪ್ರಸಂಗ ಓದಿ ದೊಡ್ಡದಾಗಿ ನಕ್ಕು ಬಿಟ್ಟೆ. ಈ ಅನುಭವ ಸಾಲ್ದು ಅಂತ ಅವರ ಕಾಲೇಜಿನ ಅವರ ಕೊಠಡಿಯಲ್ಲೇ ,” ನೀವೂ ಬೇರೆಯವರ ಮನೆಗೆ ಹೇಳ್ದೆ ಹೋದ್ರೆ ಅವರಿಗೂ ಡಿಸ್ಟರ್ಬ್ ಆಗುತ್ತಲ್ಲಾ” ಅನ್ನೋಕೂ ಎದೆಗಾರಿಕೆ ಬೇಕು!
ಜಿ ಹೆಚ್ ನಾಯಕ್ ಅವರ ಪಾಠದ ನಡುವೆ ಲಹರಿಯಲ್ಲಿ ನುಸುಳುತ್ತಿದ್ದ ಸಂಗತಿಗಳು, ಮಾಹಿತಿಗಳೇ ಬದುಕಿನುದ್ದಕ್ಕೂ ಆಸರೆಯಾಗುತ್ತಿದ್ದವು ಎಂಬ ನಿಮ್ಮ ಮಾತು ಅಕ್ಷರಶಃ ನಿಜ. ಅಂಥ ಶಿಕ್ಷಕರು ಪಠ್ಯದ ಜೊತೆಗೆ ಜೀವನದ ಪಾಠಗಳನ್ನೂ ಹೇಳಿಕೊಡುತ್ತಿದ್ದರು. ಬನಾನಾ ಶೇಕ್ ಎಂಬ ಚೋದ್ಯದ ಪ್ರಸಂಗವನ್ನು ಹೇಳುವ ನಾಯಕರ ವಿಮರ್ಶಾ ಹಾದಿ ಸತ್ಯ, ವಿನಯ, ವಿವೇಕದಿಂದ ಕೂಡಿದ್ದು ಮನುಷ್ಯ ಸಂಬಂಧಗಳನ್ನು ಕಾಯ್ದುಕೊಳ್ಳುವ ಎಚ್ಚರದಲ್ಲಿ ಮಂಡಿಸುವುದು ಅವರ ಕ್ರಮ ಎನ್ನುವ ನಿಮ್ಮ ಮಾತು ಸರಿಯೇ. ಇದನ್ನೇ ಅಡಿಗರೂ ಹೇಳಿದ್ದಾರೆ. ಸನ್ಮಾನ ಸ್ವೀಕಾರ ತಮ್ಮ ತಾತ್ವಿಕತೆಗೆ ಒಪ್ಪತಕ್ಕದ್ದಲ್ಲ ಎಂಬ ಅವರ ನಿಲುವು ಇಂದು ಹಾರ-ತುರಾಯಿಗಳಿಗೆ ಸದಾ ಕೊರಳೊಡ್ಡುವವರಿಗೆ ಕಾಣದಲ್ಲ!! ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕಾವ್ಯ , ಅವರ ಖಡಕ್ ವ್ಯಾಪಾರಿ ನಿಲುವು, ತಿನಂಶ್ರೀ, ಪುತಿನರಂಥ ಹಿರಿಯರ ಒಡನಾಟದ ಬಂಧುರತೆ ನಿಮಗೆ ದಕ್ಕಿದ್ದು ‘ ಮೈಸೂರು ಪಾಕ್ ‘ ಗಿಂತ ಹೆಚ್ಚೇ ಬಿಡಿ.
ನೀವಂದಂತೆ ಅನೇಕ ಮೇರು ಗಾಯಕರ ಸಾಧನೆಗೆ ಈ ಕವಿ ಜೀವಜಲವಾದರು.’ ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಹಾಡಿನ ಹುಟ್ಟಿನ ಕತೆಯನ್ನು ಇಲ್ಲಿ ದಾಖಲಿಸಿದ್ದೀರಿ. ಭಟ್ಟರು ಅನುವಾದಿಸಿ ತಮ್ಮದೇ ಆಗಿಸಿಕೊಂಡಿರುವ ಚಂದದ ರಚನೆಗಳು..ತೊರೆದು ಹೋಗದಿರೊ ಜೋಗಿ, ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ…ಮೊದಲಾದವು ಅಪೂರ್ವ ಕಲಾಕೃತಿಗಳು.
ಕೆ ಎಸ್ ನಿಸಾರ್ ಅಹಮದ್ ಅವರನ್ನು ನಿತ್ಯೋತ್ಸವ ಕವಿ ಎಂದು ಬ್ರಾಂಡ್ ಮಾಡಿದ್ದರ ಬಗ್ಗೆ ಅವರಿಗೆ ಹುಸಿಮುನಿಸು ಇತ್ತು ಎಂದು ನೀವು ಹೇಳಿದಂತಿದೆ. ‘ ನಿಮ್ಮೊಡನಿದ್ದೂ ನಿಮ್ಮಂತಾಗದೆ…’ ಎಂದು ಬರೆದು ಭಿನ್ನ ಐಡೆಂಟಿಟಿ ಬಯಸದ ಭಾರತಾಂಬೆಯ ಸುಪುತ್ರ ತಾವು ಎಂದು ಅವರೇ ಹೇಳಿಕೊಂಡಿದ್ದಾರೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ..ಗೀತೆ ಅವರು ಬರೆದದ್ದರಿಂದಲೇ ಅಷ್ಟು ಸೊಗಸಾಗಿರಬೇಕು. ಕುರಿಗಳು ಸಾರ್ ಕುರಿಗಳು ಗೀತೆ ವ್ಯವಸ್ಥೆಯ ವಿಡಂಬನೆಯ ಶ್ರೇಷ್ಠ ಉದಾಹರಣೆ ಎಂದು ನನಗನ್ನಿಸುತ್ತದೆ.
ಸಾ ರಾ ಅಬೂಬಕರ್ ಅವರದು ನೀವಂದಂತೆ ಘನಗಾಂಭೀರ್ಯ. ಅವರು ತಾವು ಹುಟ್ಟಿ, ಬೆಳೆದ ,ತಾವು ತಿಳಿದ ಧಾರ್ಮಿಕ. ವಾತಾವರಣದೊಳಗಣ ಮನುಷ್ಯ- ಜೀವಿಗಳ ಕತೆ ಹೇಳುವ ಲೇಖಕಿ. ನಮ್ಮ ಹೆಣ್ಣು ಜೀವಗಳು ಶೋಷಣೆಯಿಂದ ಬಿಡುಗಡೆಗೊಳ್ಳಬೇಕೆಂಬ ಆಶಯವೇ ಅವರ ಬರವಣಿಗೆಯ ಸಾರ.ಕೆ.ಟಿ ಗಟ್ಟಿ, ನಾ.ಡಿಸೋಜಾ ಅವರಿಗ್ಯಾಕೆ ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿಲ್ಲ? ಎಂದು ಕೇಳಿದವರು, ಒಬ್ಬ ಮಹಿಳೆ, ಸಾರಾ ಎಂಬುದನ್ನು ನಾವು ಮರೆಯಬಾರದು. ಜ್ಞಾನ ಪೀಠ ಪಡೆಯುವ ಸಾಮರ್ಥ್ಯ ಇರುವ ಲೇಖಕಿಯರು ನಮ್ಮಲ್ಲಿದ್ದಾರೆ. ಅವರು ಪರವಾಗಿ ಲಾಬಿ ಮಾಡುವವರು ಯಾರು? ಇಂಥ ಪ್ರಶ್ನೆಗಳೇ ಅವರನ್ನು ಭಿನ್ನವಾಗಿ ನಿಲ್ಲಿಸಿರುವುದು.
ಕಡಿದಾಳ ಶಾಮಣ್ಣ ಅವರ ವಿಭಿನ್ನ ಸೃಜನಶೀಲ ಮುಖಗಳನ್ನು ಇಲ್ಲಿ ಪರಿಚಯಿಸಿದ್ದೀರಿ. ಆ ಕಾಲದಲ್ಲೇ ತಮ್ಮ ಊರನ್ನು ಬಯಲು ಶೌಚ ಮುಕ್ತಗೊಳಿಸಿದ ಕೀರ್ತಿ ಅವರದ್ದು. ಹಾಮಾನಾ ಅವರ ಮನೆಯಲ್ಲಿ ಶಾಮಣ್ಣ ಅವರು ಮಲಗಿದ್ದ ಮಂಚದ ಪಕ್ಕದ ಮಂಚದಲ್ಲಿ ಮಲಗಿದ್ದ ನಾಯಿ ಬೊಗಳಿದ ಸಂದರ್ಭವನ್ನು ಓದಿ ಕೆಮ್ಮು ಬರುವಷ್ಟು ನಕ್ಕೆ. ಇವರೆಲ್ಲ ಎಂಥ ಅಪರೂಪದ ದೈವ ಸೃಷ್ಟಿಗಳು!!
ಹಂಪಿ ವಿವಿಯಲ್ಲಿರುವ ‘ನರಸಿಂಹಯ್ಯ ಕಲ್ಲಿನ ಕತೆ, ಆ ಕಲ್ಲು ಮರಡಿಯಲ್ಲೇ ವಿಶ್ವ ವಿದ್ಯಾಲಯವನ್ನು ಕಟ್ಟಿಸಿದ ಗಟ್ಟಿಗ ಕಂಬಾರರು. ಯಾವ ಫೇರಿ ಟೇಲ್ಗೂ ಕಡಿಮೆಯಿರದ ಕತೆಗಳು ಇವು ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರು ಇತರರ ಬರವಣಿಗೆಗೆ ಸಿಕ್ಕುವುದಿಲ್ಲ. ಹಾಗಾಗಿ ಕಡಿಮೆ ಬರೆದಿದ್ದೀರಿ. ತೇಜಸ್ವಿಯವರು ಲಂಕೇಶ್, ನಂಜುಂಡಸ್ವಾಮಿ, ಶಾಮಣ್ಣ ಮತ್ತಿತರರ ಬಗ್ಗೆ ಹೇಳಿದ ಸಂಗತಿಗಳನ್ನೆಲ್ಲ ಕಲೆಹಾಕಿ ಬರೆದರೆ ಅದೇ ಒಂದು ಪುಸ್ತಕವಾದೀತು ಎಂದಿದ್ದೀರಿ. ಬರೆದು ಬಿಡಿ. ಅದು ಉಕ್ಕಿಸುವ ಹಾಸ್ಯದೊಂದಿಗೆ ಆ ಕಾಲದ ಸಾಹಿತ್ಯ, ಸಾಮಾಜಿಕ ಚಿತ್ರಣವೂ ಆದೀತು.
ಚೆಕ್ಕಿನಿಂದ ಪ್ರಶಸ್ತಿಗೆ ಮೌಲ್ಯ!
ಗಿರೀಶ್ ಕಾರ್ನಾಡರು ತಾವು ತೆಗೆದುಕೊಂಡ ಒಂದು ಪ್ರಶಸ್ತಿಯ ಕುರಿತು, ” ಕೆಲವೊಂದು ಪ್ರಶಸ್ತಿಗಳಿಗೆ ಮಹತ್ವವಿರುವುದು ಅವುಗಳ ಜೊತೆ ಬರುವ ಚೆಕ್ಕಿನಿಂದ. ಕೆಲವು ಪ್ರ,ಶಸ್ತಿಗಳು ಯಾವ ಆಮಿಷವನ್ನೂ ಅಂಟಿಸಿಕೊಂಡು ಬರದೆ, ಒಳ್ಳೆಯ ಸಾಹಿತ್ಯವನ್ನು ಪ್ರೀತಿಸುವವರು ತಮ್ಮ ಸಂತೋಷವನ್ನು ಸೂಚಿಸಲೆಂದೇ ಕೊಡುತ್ತಾರೆ. ಅದನ್ನು ಗೌರವದಿಂದ ಲೇಖಕರು ತಗೋಬೇಕು” ಎಂದು ಹೇಳಿದ್ದನ್ನು ನೆನಪಿಟ್ಟು ಉಲ್ಲೇಖಿಸಿದ್ದೀರಿ. ಇದು ಲೇಖಕ ಕಾರ್ನಾಡರ ಹಾಗೂ ಪ್ರಶಸ್ತಿಯ ಘನತೆಯನ್ನು ಹೇಳುತ್ತದೆ.
ಗಿರಡ್ಡಿ ಗೋವಿಂದರಾಜು ಅವರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಪರಂಪರೆಯ ಅರಿವಿನಿಂದ ಸಂಪುಷ್ಟವಾದ ಬರಹ ತೋರುವ ಸಂಸ್ಕೃತಿ ಪರವಾದ ಕಾಳಜಿಗಳಿಂದಾಗಿ ಅವರು ಕನ್ನಡದ ಮುಖ್ಯ ವಿಮರ್ಶಕರೆನ್ನುವುದು ಮುಖ್ಯ ಸಂಗತಿ ಎಂಬ ನಿಮ್ಮ ಗ್ರಹಿಕೆ ಸರಿಯಾದದ್ದೇ. ವಾದಗಳಿಂದ ದೂರವಾಗಿ ಒಂದು ‘ ಸೇಫ್ ಝೋನ್’ ನಿರ್ಮಿಸಿಕೊಳ್ಳುವ ಮುಂಚೂಣಿ ಬರಹಗಾರರ ನಡುವೆ ‘ ಮಧ್ಯಮ ಮಾರ್ಗ’ ದ ಚರ್ಚೆಗೆ ಅವಕಾಶ ಮಾಡಿದ್ದು ಗಿರಡ್ಡಿ ಗೋವಿಂದರಾಜು ಅವರು ನಿರ್ಮಿಸಿದ ಇನ್ನೊಂದು ಇತಿಹಾಸ.
ನಾ. ಡಿಸೋಜಾ ಅವರ ಕುರಿತ ಲೇಖನ ಅವರ ಕತೆ, ಕಾದಂಬರಿಗಳಲ್ಲಿ ಬಹುತೇಕವಾಗಿ ಇರುವ ನೀರಿನಂತೆ ಹರಿದಿದೆ. ಅವರ ನಿಷ್ಕಲ್ಮಷ ಮನದೆದುರು ಕಾಲೆಳೆಯುವ ಮನಸ್ಸೇ ಆಗಿರಲಾರದು. ಮಲೆನಾಡಿನಲ್ಲಿ ಇರುವ ಅವರು ಅಲ್ಲಿನ ನಿರ್ಮಲತೆಯನ್ನು ಕಾಯ್ದುಕೊಂಡಿದ್ದಾರೆ. ಅಂತಹ ವ್ಯಕ್ತಿತ್ವ ಕನ್ನಡ ಸಾಹಿತ್ಯದಲ್ಲಿ ಮತ್ತೊಂದಿರಲಾರದು. ‘ ಸಾಗರದ ದೀಪ’ ಎಂಬ ನಿಮ್ಮ ವಿಶೇಷಣ ಎಲ್ಲ ರೀತಿಯಲ್ಲೂ ಸೂಕ್ತವಾಗಿದೆ.
ಸುಬ್ರಾಯ ಚೊಕ್ಕಾಡಿ ಅವರ ಬಗ್ಗೆ ಇರುವ ಲೇಖನದುದ್ದಕ್ಕೂ ಈ ಹಿರಿಯ ಕವಿಗಳ ಸರಳತೆ, ಸ್ನಿಗ್ಧ ನಗು ಹರಿದಂತಿದೆ. ” ಈ ಕವಿ ಇಳಿವಯಸ್ಸಿನಲ್ಲೂ ಮಗುವಿನ ಮುಗ್ಧತೆಯನ್ನು ಕಾಪಾಡಿಕೊಂಡಿದ್ದಾರೆ! ಸೋಗಲಾಡಿತನದ ಸೋಂಕು ಇವರಿಗಿನ್ನೂ ತಗಲದಿರುವುದಕ್ಕೆ ಚೊಕ್ಕಾಡಿ ಪರಿಸರವೇ ಕಾರಣವಿರಬಹುದು.” ಆ ನೆಲದಿಂದಲೇ ನಾಡಿನ ಕಿರಿಯ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬಂದಿರುವ ಈ ಹಿರಿಯರ ಈ ಗುಣ ಕನ್ನಡ ಲೇಖಕರಲ್ಲಿ ಇವರೊಬ್ಬರಿಗೇ ಮೀಸಲಾಗಿದೆಯೇನೋ!
ಮಾಲತಿ ಪಟ್ಟಣಶೆಟ್ಟಿ ಅವರ ಕುರಿತ ಲೇಖನದಲ್ಲಿ ಅವರ ಸಾಹಿತ್ಯಕ್ಕಿಂತ ವೈಯಕ್ತಿಕ ವಿವರಗಳೇ ಹೆಚ್ಚಿವೆ. ಇವರ ಕಾಲದಲ್ಲಿ ನೀವು ಹೆಸರಿಸಿರುವ ಕೆಲವು ‘ ಕಪ್ಪು ಚುಕ್ಕೆ’ ಗಳು ಎಲ್ಲ ಅಧ್ಯಕ್ಷರ ಕಾಲದಲ್ಲೂ ಒಂದಿಲ್ಲೊಂದು ಇರುತ್ತವೆ. ಅದನ್ನು ಬಿಟ್ಟರೂ ಆಗುತ್ತಿತ್ತು.
ಚಿ. ಶ್ರೀನಿವಾಸ ರಾಜು ಅವರು ” ಶಿಕ್ಷಕರ ಸಾಂಸ್ಕೃತಿಕ ಹೊಣೆಗಾರಿಕೆಯ ಸಂಕೇತದಂತೆ ಬರೆದವರು. ಹೀಗಾಗಿ ಇವರು ಎಲ್ಲಾ ಅರ್ಥದಲ್ಲೂ ನಿಜವಾದ ಮೇಷ್ಟ್ರು. ಕಿ ರಂ ನಾಗರಾಜರನ್ನು ಮಾರ್ಗ ಮಧ್ಯದಲ್ಲಿ ನೀವು ಭೇಟಿಯಾದ ಒಂದು ಸಂದರ್ಭದಲ್ಲಿ ಅವರಿಗೆ ಮಾರ್ಗವನ್ನು ನೀವು ನೆನಪಿಸಿದಾಗ ಅವರಂದ ಮಾತು ,” ನನ್ನ ದಾರಿ ನಂಗೊತ್ತು! ನಾನು ಬೇರೆ ದಾರೀಲೇ ಹೋಗೋದು! ” ನೀವಂದಂತೆ ಇದು ರೂಪಕವೇ ಆಗಿದೆ. ಅವರು ಕನ್ನಡ ಸಾಹಿತ್ಯದ ಒಂದು ನಿಗೂಢ.
ವೈದೇಹಿಯವರು,” ನಮ್ಮ ಕುಂದಾಪುರದಷ್ಟು ಚಂದದ ಊರು ಪ್ರಪಂಚದಲ್ಲೇ ಇಲ್ಲ. ಅಲ್ಲಿನ ಕನ್ನಡದಷ್ಟು ಸೊಗಸು ಇನ್ನಾವ ಭಾಷೆಗೂ ಇಲ್ಲ” ಎನ್ನುವುದಕ್ಕೆ ಅವರ ಕತೆಗಳೇ ಸಾಕ್ಷಿ. ಮೆಲುದನಿಯ, ಮೃದುಮನಸು ವೈದೇಹಿಯವರ ಕತೆಗಳ ಆತ್ಮ ಬಹಳ ಗಟ್ಟಿ. ಎಮ್ ಎನ್ ವ್ಯಾಸರಾವ್ ಅವರು ಕನ್ನಡಕ್ಕೆ ಅನೇಕ ಸಾರ್ವಕಾಲಿಕ ಜನಪ್ರಿಯ, ಸುಮಧುರ ಗೀತೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನಾಕೊಂದ್ಲೆ ನಾಕೊ…., ಸೂರ್ಯಂಗೂ ಚಂದ್ರಂಗೂ.., ಯುಗಯುಗಗಳೆ ಸಾಗಲಿ…ಮೊದಲಾದ ಚಿತ್ರಗೀತೆಗಳಂತೆ ಭಾವಗೀತೆಗಳೂ ನಾಜೂಕು ಭಾವದವು. ‘ ಯಾರ ದನಿಯದು.?’ ಹಾಡಿನ ಹುಟ್ಟು ಬಹಳ ಸ್ವಾರಸ್ಯವಾಗಿದ್ದು ಕವಿಗಳ ರಸಿಕ ಭಾವವನ್ನು ತೋರಿಸುತ್ತದೆ. ನೀನಿಲ್ಲದೇ….ಹಾಡಂತೂ ಸದಾ ಮನದಲ್ಲಿ ಗುನುಗುಡುವ ಕವಿತೆ.
ಬರಗೂರು ರಾಮಚಂದ್ರಪ್ಪ ಅವರ ಶಿಸ್ತು, ಬದ್ಧತೆ ಕರ್ನಾಟಕದಲ್ಲಿ ಮನೆಮಾತಾಗಿದೆ. ಅವರ ವಾಕ್ಪಟುತ್ವದ ಬಗ್ಗೆ ಸೇರಿಸಬಹುದಿತ್ತು.ಅವರ ಚಲನಚಿತ್ರಗಳು, ಗದ್ಯದ ಬಗ್ಗೆ ಕೊಂಚವಾದರೂ ಬರೆಯಬಹುದಿತ್ತು.* ಕಾಳೇಗೌಡ ನಾಗವಾರ ಅವರು ,” ಸಾಹಿತ್ಯದ ವಿದ್ಯಾರ್ಥಿಯಾದೋರು ಇವನ್ನೆಲ್ಲ ಓದಿರಲೇಬೇಕು ಕಣ್ರಿ” ಎಂದು ನೀವು ಎಮ್ ಎ ಮುಗಿಸಿ ಹೊರಟಾಗ ಪುಸ್ತಕಗಳ ಪಟ್ಟಿಯೊಂದನ್ನು ಕೊಟ್ಟಿದ್ದರು ಎಂಬುದನ್ನು ಓದಿದಾಗ ,” ಹಿಂದೆ ಗುರು ಇದ್ದ..” ಮಾತು ನೆನಪಿಗೆ ಬಂತು. ಇಂಥ ಮೇಷ್ಟ್ರು, ಅವರ ಕಾಳಜಿ ದೊರೆಯಲು ಭಾಗ್ಯವಿರಬೇಕು.
ವಿಜಯ ದಬ್ಬೆ ಅವರ ಸ್ತ್ರೀವಾದ
ವಿಜಯ ದಬ್ಬೆ ಅವರ ಸ್ತ್ರೀವಾದದ ಕುರಿತ ಮಾತು, ” ಸ್ತ್ರೀವಾದದ ಮುಖ್ಯ ಉದ್ದೇಶವೇ ಸ್ತ್ರೀವಾದ ಇರದ ಸಮಾಜವನ್ನು ಸೃಷ್ಟಿಸುವುದು” ಮಹಿಳಾ ಪರ ಹೋರಾಟಕ್ಕೆ ದಿಕ್ಸೂಚಿಯಂತಿದೆ. ಮೊದಲ ತಲೆಮಾರಿನ ಕನ್ನಡ ಲೇಖಕಿಯರನ್ನು ಪರಿಚಯಿಸಿದ್ದು ಅವರ ಬಹುದೊಡ್ಡ ಕಾಣಿಕೆ. ಸತೀಶ್ ಕುಲಕರ್ಣಯವರ ಬಗ್ಗೆ ಡಾ ಚಂದ್ರಶೇಖರ ನಂಗಲಿಯವರು ಹೇಳುವಂತೆ,” ಲೋಕವು ಕಾಲಿಗೆ ಹಾಕಿಕೊಂಡು ತುಳಿದಾಡುವ ಅಲಕ್ಷಿತ ಜೀವ ಮತ್ತು ಜೀವಗಳನ್ನು ತಮ್ಮ ಹೃದಯಕ್ಕೆ ಒತ್ತಿಕೊಳ್ಳುವ ವಿಶಾಲ ದೃಷ್ಟಿಯ ಕವಿ.” ಇದನ್ನು ನೆನಪಿಟ್ಟು ಬರೆದಿದ್ದೀರಿ.
ಕುಂ ವೀರಭದ್ರಪ್ಪ ಅವರ ಕುರಿತು,” ಅಸಹನೀಯವಾದ ಸಾಮಾಜಿಕ ಪರಿಸರವನ್ನು ಸಹಾನುಭೂತಿಯಿಂದ ಗಮನಿಸುತ್ತಲೇ ಕಥಾಲೋಕದೊಳಗೆ ಮನೆ ಮಾಡಿಕೊಂಡು ಬದುಕುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರಿಂದ ಇವರ ಅನುಭವ ಲೋಕಗಳೆಲ್ಲ ಕಥೆಗಳ ರೂಪದಲ್ಲಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ” ಎಂದು ಹೇಳಿದ್ದೀರಿ. ಆ ಜೀವನಾನುಭವವಾದರೂ ಎಷ್ಟು ಗಟ್ಟಿ! ನೋವಿನಲ್ಲೂ ಸೋಲದೆ ಸೆಟೆದು ನಿಲ್ಲುವ ಆ ಗುಂಡಿಗೆಯಾದರೂ ಎಂಥದ್ದು! ಹಸಿವಿನ ಡೈಲಾಗ್ ಓದಿ ಸುಸ್ತಾಗುವಷ್ಟು ನಗುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?!
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಗೋಕಾಕರು, ರಾಜರತ್ನಂ ಅವರು, ಡಾ ಜಿ ಎಸ್ ಶಿವರುದ್ರಪ್ಪನವರ ಗುಣವಿಶೇಷಗಳನ್ನು ಕಲಿತೆ ಎಂದು ಹೇಳುವುದೇ ಅವರ ಸೌಜನ್ಯತೆಗೆ ಹಾಗೂ ಶಿಷ್ಯಪರಂಪರೆಯನ್ನು ಅವರು ಒಪ್ಪಿಕೊಂಡು ವಿನಯವಂತಿಕೆಯನ್ನು ಮೆರೆಯುವುದಕ್ಕೆ ಸಾಕ್ಷಿ.. ಡಿ ಆರ್ ನಾಗರಾಜ ಅವರ, ” ಖಡ್ಗವಾಗಲಿ ಕಾವ್ಯ” ಎಂಬ ಘೋಷಣೆ ಮತ್ತೆ ಮೊಳಗಬೇಕಿದೆ. ಸಿದ್ಧಲಿಂಗಯ್ಯ ಅವರಿದ್ದಲ್ಲಿ ನಗೆಯ ಅಲೆ. ” ಸಂಶೋಧನೆಯ ಜಡವಾದ ಭಾಷೆಗೆ ಸಿದ್ಧಲಿಂಗಯ್ಯನವರು ಪ್ರಾಪ್ತವಾಗಿಸಿದ ಲವಲವಿಕೆಯು ಓದುಗರಲ್ಲಿ ಬೆರಗು ಮೂಡಿಸಿತು.ಅವತಾರಗಳು ಎಂಬ ಅವರ ಪ್ರಬಂಧ ಸಂಕಲನ ಹಾಗೂ ಮೂರು ಸಂಪುಟಗಳಲ್ಲಿ ಪ್ರಕಟಗೊಂಡ ಅವರ ಆತ್ಮಕಥೆ ಊರು ಕೇರಿ ನಮ್ಮ ಗತಕಾಲವನ್ನು ನೆನೆಯಬೇಕಾದ ಬಗೆಗೆ ಮಾದರಿಯಾಗಿಬಿಟ್ಟವು”.
ಎಸ್ ಮಂಜುನಾಥ ಅವರ ” ವಸ್ತು ವಿಷಯವನ್ನು ನಾನು ಪ್ರಜ್ಞಾಪೂರ್ವಕವಾಗಿ ಆಯ್ದುಕೊಳ್ಳುವುದು ಕಮ್ಮಿ.ಅದು ಸರಿಯಲ್ಲ ಎಂಬುದೇ ನನ್ನ ಭಾವನೆ. ನನ್ನ ಜೀವ ಯಾವುದಕ್ಕೆ ಸಹಜವಾಗಿ ಸ್ಪಂದಿಸುತ್ತದೋ ಅದೇ ನನ್ನ ಕವಿತೆಯಾಗುತ್ತದೆ. ಈ ಜೀವಸ್ಪಂದನೆಯೇ ಕವಿತೆಯ ಜೀವಾಳ. ಅದೊಂದು ಅನುಭವ” ಈ ಮಾತುಗಳು ಕವಿಯ ಹಾಗೂ ಕವಿತೆಯ ನಿಲುವನ್ನು ಹೇಳಿವೆ.
ದುಂಡಿರಾಜ್ಅವಳು ಅಕಸ್ಮಾತ್ ಸಿಕ್ಕಳುನನ್ನನ್ನು ನೋಡಿ ನಕ್ಕಳುನಮಗೀಗ ಎರಡು ಮಕ್ಕಳುಈ ಹನಿಗವಿತೆ ದುಂಡಿರಾಜರದ್ದೇ ಎನ್ನುವ ಛಾಪು ಅವರ ಚುಟಕಗಳದ್ದು.
ಅಪೂರ್ವ ಒಡನಾಟ
ಸತ್ಯನಾರಾಯಣ ಅವರ ಈ ಎಲ್ಲ ಲೇಖಕರೊಂದಿಗಿನ ಭೇಟಿ, ಒಡನಾಟ, ಅಪೂರ್ವ ಅನುಭವವೇ ಒಂದು ಸೋಜಿಗ. ಇದು ಫೇಸ್ಬುಕ್ ಬರಹವಾದ್ದರಿಂದ ಚಿಕ್ಕದಾಗಿದೆ. ಆದರೆ ಇದರ ಸತ್ವ ಬಹಳ ದೊಡ್ಡದು. ಹಿರಿಯ ಲೇಖಕರ ಬಹಳ ಅಪರೂಪದ ಮಾತುಗಳು ಇಲ್ಲಿವೆ. ನವಿರು ಹಾಸ್ಯದ ದೃಷ್ಟಿಯಿಂದ ಎಲ್ಲವನ್ನೂ ನೋಡುವುದು, ಅನುಭವಿಸುವುದು ಇದರ ಹೈಲೈಟ್. ಕೆಲವು ಪ್ರಸಂಗಗಳಂತೂ ನಗೆಯುಕ್ಕಿಸುತ್ತವೆ. ನನಗೆ ಸೋಜಿಗವೆಂದರೆ ಫೇಸ್ಬುಕ್ ಬರಹಕ್ಕೆ ಹಾಕಿದ್ದ ನನ್ನ ಅಭಿಪ್ರಾಯವನ್ನು ಅವರು ನಲ್ಮೆಯಿಂದ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಇದರ ಮರುಮುದ್ರಣವಾದರೆ ಭಾಷೆ, ಶೈಲಿ, ಹೇಳುವಿಕೆಗಳು ಇನ್ನೂ ಸೊಗಸಾಗಲಿ. ಇದು ಸಂಗ್ರಹಯೋಗ್ಯ. ಇದರಲ್ಲಿ ಇರುವ 51 ಹಿರಿಯರೂ ಪ್ರಮುಖರೇ ಆದ್ದರಿಂದ ಪ್ರತಿ ಲೇಖನದ /ಲೇಖಕರ ಬಗೆಗೆ ಒಂದೆರಡು ಮಾತನ್ನು ಹೇಳದೆ ಮುಂದುವರೆಯುವುದು ಸಾಧ್ಯವಿಲ್ಲ. ಹಾಗಾಗಿ ಪ್ರತಿ ಲೇಖನದ ಬಗ್ಗೆಯೂ ಹೇಳಿದ್ದೇನೆ. ಇದು ಹೆಸರಿಗೆ ತಕ್ಕಂತೆ ಅಪೂರ್ವ ಒಡನಾಟವೇ. ಅದನ್ನು ಅನುಭವಿಸಲು ಪೂರ್ಣ ಪುಸ್ತಕ ಓದಲೇಬೇಕು.