17.7 C
Karnataka
Friday, November 29, 2024
    Home Blog Page 121

    ಕೇರಳ ನಿಶ್ಯಬ್ದ; ತಮಿಳುನಾಡು ಗೊಂದಲಮಯ.

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ಕೇರಳ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ.


    ಎಸ್.ಕೆ. ಶೇಷಚಂದ್ರಿಕ

    ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಯ ಆಸುಪಾಸಿನ ದಿನಗಳಲ್ಲಿ ಸಂಚರಿಸುತ್ತಿರುವುದಾಗಿ ಭಾವಿಸಿಕೊಳ್ಳಿ. ಆಗ ನಿಮಗೆ ಅಕ್ಕಪಕ್ಕದ ಎರಡು ಸಮಾಜಗಳಲ್ಲಿನ ಮತದಾರರು ಚುನಾವಣಾ ಪ್ರಕ್ರಿಯೆಗಳನ್ನು ಕಾಣುವ ಹಾಗೂ ಪಾಲ್ಗೊಳ್ಳುವಿಕೆಯ   ವಿಧಾನ ದಲ್ಲಿ ಅಜಗಜಾಂತರ ವ್ಯತ್ಯಾಸ ಕಾಣುವಿರಿ.

    ಕೆಲವೇ ಕಿಲೋಮೀಟರ್ ಗಳು  ಗಡಿ ಅಂತರದಲ್ಲಿದ್ದರೂ ಮಲೆಯಾಳಂ ಮತದಾರನ ದೃಷ್ಟಿಯೇ ಬೇರೆ ; ತಮಿಳು ಭಾಷಿಗರ ಚುನಾವಣಾ ಸಂಸ್ಕೃತಿಯೇ ಬೇರೆ. ಒಬ್ಬ ಪಶ್ಚಿಮ; ಮತ್ತೊಬ್ಬ  ಪೂರ್ವ.   ನಾವು ಎರಡೂ ರಾಜ್ಯಗಳಲ್ಲಿ ಈವರೆಗೆ ಮೂರು ಬಾರಿ ಸಮೀಕ್ಷೆಗಾಗಿ ಸಂಚರಿಸಿದ್ದುಂಟು.  ನಾವು ಕಂಡಂತೆ ಕೇರಳ ಮತದಾರ ಮೌನಿ . ತಮಿಳು ಮತದಾರ  ಬಾಯಿ ಮುಚ್ಚಿರುವುದೇ ಕಡಮೆ.

    ಕೇರಳದ ಮತದಾರನ ಮನಸ್ಸಿನಲ್ಲಿ ಏನಿದೆ ಅಥವಾ ಏನಿತ್ತು ಎಂದು ಫಲಿತಾಂಶ ಬಂದ ಬಳಿಕ ತಿಳಿಯಬಹುದೇ ವಿನಃ ಮುಂಚೆ ತಿಳಿಯುವುದು ಕಷ್ಟಸಾಧ್ಯ.   ತಮಿಳುನಾಡಿನ ಜನ ಹೀಗಲ್ಲ.  ಚುನಾವಣಾ ವಿಷಯದಲ್ಲಂತೂ ಅವರು ವ್ಯಾಖ್ಯಾನಕಾರರು ಮತ್ತು ವಾಗ್ಗೇಯಕಾರರು. ಇದು ವರದಿಗಾರರಾದ ನಮ್ಮ ಅನುಭವ.

    ಪ್ರಸ್ತುತ  ಕೇರಳದ ವಿದ್ಯಮಾನಗಳು ಹೀಗೆಯೇ ಇದೆ.  ಇನ್ನೇನು ಚುನಾವಣೆ ಮನೆಬಾಗಿಲಿಗೇ ಬರುವಂತಿದೆ ಎನ್ನುವುದು ಖಚಿತವಾದರೂ ಕೇರಳದ ಮತದಾರ ನಿರ್ಲಿಪ್ತ ನಂತೆಯೇ ಕಾಣ್ತಿದ್ದಾನೆ. ರಸ್ತೆ  ಗೋಡೆಗಳು ಸ್ವಚ್ಛವಾಗಿವೆ. ರಾಜಕೀಯ ಪಕ್ಷಗಳ ಕಚೇರಿ ಬಾಗಿಲು ಇನ್ನೂ ತೆರೆದಂತಿಲ್ಲ.  ಭಿತ್ತಿಪತ್ರಗಳು ಕೈಗೆ ಸಿಕ್ಕಿಲ್ಲ.  ರಸ್ತೆ , ಬಜಾರು, ಸಂತೆಗಳಲ್ಲಿ ಗುಂಪುಗಳಾಗಿ ಪಕ್ಷಗಳ ಕಾರ್ಯಕರ್ತರು ಸೇರುತ್ತಿಲ್ಲ.

    ಹೋಲಿಕೆಗಾಗಿ ಉಲ್ಲೇಖಿಸಬಹುದಾದರೆ ತಮಿಳುನಾಡಿನಲ್ಲಿ ಮೊನ್ನೆ  ಜೈಲಿನಿಂದ ಹೊರ ಬಂದ ಚಿನ್ನಮ್ಮ  ಉರುಫ್ ಶಶಿಕಲಾ ಬೆಂಗಳೂರಿನಿಂದ ಚೆನ್ನೈ ತಲುಪುವುದರೊಳಗಾಗಿ
    ಇಡೀ ತಮಿಳುನಾಡು ಮತದಾರರಲ್ಲಿ ಕೋಲಾಹಲ ಕಾತರ ಎದ್ದು ಕಂಡಿತ್ತು. ಅಮೆರಿಕೆಯ ಟ್ರಂಪ್ ಚುನಾವಣೆಗೆ ಮೀರಿದ ಪ್ರಚಾರ ಚಿನ್ನಮ್ಮನಿಗೆ ದಕ್ಕಿತ್ತು. 

    ನಿರ್ಲಿಪ್ತ ಸ್ವಭಾವದ ಮತದಾರ

    ಕೇರಳ ಜನರ ನಡೆ ನುಡಿ ಹಾಗೂ ಬದುಕಿನ ರೀತಿ ನೀತಿಯೇ ಹೀಗೆ.  ಬೇರೆಯವರ ವಿಷಯಕ್ಕೆ ತಲೆ ಹಾಕದ ಜನ ಇವರು.  ಇಡೀ ದೇಶದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ಚುನಾವಣೆಗಳು ನಡೆಯುವ ರಾಜ್ಯಗಳಲ್ಲಿ ಕೇರಳ ಮೊದಲನೆಯದು. ಮತಗಟ್ಟೆಗಳ ಮೇಲಿನ ದಾಳಿ, ಇಲ್ಲವೇ ಪಕ್ಷಗಳ ಗುಂಪು ಘರ್ಷಣೆ ಕೇರಳದಲ್ಲಿ ಅತಿ ಕಡಿಮೆ.  ಜನ ಬಾಹುಳ್ಯವಿದ್ದರೂ ಒಂದೇ ಹಂತದ  ಮತದಾನ ಮಲೆಯಾಳದ ಪರಿಪಾಠ.  ಚುನಾವಣಾ ಆಯೋಗಕ್ಕೆ ಕೇರಳವೆಂದರೆ ನಿಶ್ಚಿಂತೆ.

    ಮತದಾರರು ನಿರ್ಲಿಪ್ತರೆಂದ ಮಾತ್ರಕ್ಕೆ ರಾಜಕೀಯ ನಾಯಕರು ಹರಿಶ್ಚಂದ್ರರೆಂದೇನೂ ಅರ್ಥವಲ್ಲ. ಇತ್ತೀಚಿನ ಚಿನ್ನದ ರಹಸ್ಯ ರವಾನೆಯ ತಿರುವನಂತಪುರದ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಕೆಲವು ರಾಜಕೀಯ ನಾಯಕರು ವಂಚನೆ ಮತ್ತು ಭ್ರಷ್ಟಾಚಾರದಲ್ಲಿ ವಿಶ್ವ ಖ್ಯಾತಿ ಗಳಿಸಿದವರು ಕೇರಳದಲ್ಲಿದ್ದಾರೆ.

    ಯುಡಿಎಫ್ v/s ಎಲ್ ಡಿ ಎಫ್

    ಕೇರಳದ ಮುಂಬರುವ ಚುನಾವಣೆಗಾಗಿ ಸಿದ್ಧತೆ ನಡೆಸಿರುವ ಪ್ರತಿಪಕ್ಷವೆಂದರೆ ಯುಡಿಎಫ್ ಒಕ್ಕೂಟದ ನಾಯಕತ್ವ ವಹಿಸಿಕೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ.  ಹೆಸರಿಗೆ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಎನ್ನುವ ಶಿರೋನಾಮೆ ಇದ್ದರೂ ಕಾಂಗ್ರೆಸ್ಸಿನದೇ ಇಲ್ಲಿ ಪಾರುಪತ್ಯ.  ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಯುಡಿಎಫ್ ನ ಉಳಿದ ಅಂಗ ಪಕ್ಷಗಳೆಂದರೆ ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್ (ಜೋಸೆಫ್ ಪಂಗಡ) ಆರ್ ಎಸ್ ಪಿ (ರೆವಲ್ಯೂಷನರಿ ಸೋಷಲಿಸ್ಟ್ ಪಕ್ಷ ) ಮತ್ತು ಕೆಲವು ಸ್ಥಳೀಯ ಪಕ್ಷಗಳು.  ಯುಡಿಎಫ್ – ಇದು ಚುನಾವಣೆಯ ಮುಂಚೆಯೇ ನಿರ್ದಿಷ್ಟವಾಗಿ ಒಂದಾಗುವ ಸಂಘಟನೆ.  ಕಳೆದ  9 ವರ್ಷಗಳಿಂದ ಅಧಿಕಾರಕ್ಕೆ ಬರಲು ಯುಡಿಎಫ್ ಕೇರಳದಲ್ಲಿ ವಿಫಲ ಪ್ರಯತ್ನ ಮುಂದುವರಿಸಿದೆ.

    ಇನ್ನು ಉಳಿದದ್ದು ಈಗ ಆಡಳಿತದಲ್ಲಿರುವ ಎಡಪಂಥೀಯ ಲೆಫ್ಟ್ ಡೆಮಾಕ್ರೆಟಿಕ್ ಒಕ್ಕೂಟ (ಎಲ್ ಡಿ ಎಫ್ ) ಎಡಪಂಥೀಯ ಎಲ್ ಡಿ ಎಫ್ ನ  ಪಕ್ಷಗಳೆಂದರೆ ಕಮ್ಯುನಿಸ್ಟ್ (ಮಾರ್ಕ್ಸಿಸ್ಟ್) ಪಕ್ಷ (ಸಿಪಿಎಂ),  ಸಿಪಿಐ, ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೇರಳ ಕಾಂಗ್ರೆಸ್(ಎಂ)

    ಅಂಗ ಪಕ್ಷಗಳು ಸೇರಿದಂತೆ ಆಡಳಿತಾರೂಢ ಎಲ್ ಡಿ ಎಫ್ ನಲ್ಲಿ  93 ಶಾಸಕರಿದ್ದಾರೆ.  ಪ್ರತಿಪಕ್ಷವಾಗಿ ಯುಡಿಎಫ್ ಶಾಸಕರ
    ಸಂಖ್ಯೆ 47. ಕೇರಳ ವಿಧಾನ ಸಭೆಯ ಶಾಸಕರ ಒಟ್ಟು ಸಂಖ್ಯೆ 140.  ಕರ್ನಾಟಕದ  224 ಶಾಸಕರ ವಿಧಾನಸಭೆಗೆ ಹೋಲಿಸಿದರೆ ಕೇರಳ ಸಂಖ್ಯೆಯಲ್ಲಿ ಚಿಕ್ಕದು.

    ಚುನಾವಣೆಯ ಸಂದರ್ಭದಲ್ಲಿ ಒಗ್ಗೂಡುವ ಕೇರಳದ ರಾಜಕೀಯ ಪಕ್ಷಗಳು ಭದ್ರತೆ ಮತ್ತು ಅಸ್ತಿತ್ವ ಕಾಪಾಡಿಕೊಳ್ಳುವ ಸಲುವಾಗಿ ಪಕ್ಷಾಂತರಕ್ಕೆ ಹೆಚ್ಚು ಒತ್ತು ಕೊಡುತ್ತಿಲ್ಲ.  ಹೀಗಾಗಿ ಕಳೆದ ನಲವತ್ತು ವರ್ಷಗಳಿಂದ ಎಡಪಂಥಿಯ ಎಲ್ ಡಿ ಎಫ್ ಅಥವಾ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಈ ಎರಡೇ ಪಕ್ಷ ಒಕ್ಕೂಟಗಳು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಕೇರಳ ರಾಜಕಾರಣದ ವೈಶಿಷ್ಟ್ಯ ಎನ್ನಬಹುದು.

    ಎಲ್ ಡಿಎಫ್ ಮತ್ತು ಯುಡಿಎಫ್ ಗಳಲ್ಲಿ ಪ್ರಧಾನವಾಗಿ ಕಾಣುವ ತತ್ವ ಸಿದ್ಧಾಂತದ  ಸಮಾನ ಕಾರ್ಯ ನೀತಿಯೆಂದರೆ ಜಾತ್ಯತೀತತೆ ಮತ್ತು ಸಮಾಜವಾದಿ ಕಾರ್ಯಕ್ರಮಗಳು. ಎಡಪಂಥೀಯ ರಾಜಕೀಯ ಧೋರಣೆಯ ಎಲ್ ಡಿಎಫ್ ನಲ್ಲಿ ಮಾತ್ರ ಕಮ್ಯೂನಿಸ್ಟ್  ಸಿದ್ಧಾಂತ. ಉಳಿದೆಲ್ಲ ಚಿಂತನೆಗಿಂತ ಹೆಚ್ಚಿನ ಪ್ರಾಧಾನ್ಯತೆ ಇದಕ್ಕಿದೆ.

    ಕೇರಳ ಎಲ್ ಡಿಎಫ್ ನ ಮತ್ತೊಂದು ವಿಶೇಷವೆಂದರೆ ಇಲ್ಲಿನ ಕಮ್ಯೂನಿಸ್ಟ್ ಮಾರ್ಕಿಸ್ಟ್ ಪಕ್ಷ ಪ್ರಾದೇಶಿಕ ಪಕ್ಷ ಎನಿಸುವ ಮಟ್ಟಿಗೆ ಸ್ವಾಯತ್ತತೆ ಮತ್ತು ಸ್ವತಂತ್ರ್ಯ ಕಾಪಾಡಿಕೊಂಡು ಬಂದಿದೆ. ಆಡಳಿತ ಕೈಯಲ್ಲಿರುವ ಕಾರಣ ಕೇಂದ್ರಮಟ್ಟದ ಸಿಪಿಎಂ ವರಿಷ್ಠರು ಕೇರಳ ಕಮ್ಯುನಿಸ್ಟರ ಅಧೀನರು ಎಂದರೂ  ಸರಿಯಾದೀತು.

    ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಒಕ್ಕೂಟ ಎಲ್ ಡಿಎಫ್ ಗೆ ತೀವ್ರ  ಹೆದರಿಕೆ ಹುಟ್ಟಿಸಿದಂತಿದೆ ಇಂದಿನ ಸ್ಥಿತಿ.

    ಬೂದಿ ಮುಚ್ಚಿದ ಕೆಂಡ  – ಶಬರಿಮಲೈ

    ಕೇರಳ ವಿಧಾನಸಭೆಯ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮೇಲೆ ನಿಶ್ಚಲವಾಗಿ ಹಾಗೂ ಖಚಿತವಾಗಿ ಪರಿಣಾಮ ಬೀರುವ ವಿವಾದವೆಂದರೆ ಶಬರಿಮಲೈ.ಶಬರಿಮಲೈ ದೇವಾಲಯಕ್ಕೆ ಮಹಿಳೆಯರು ಹೋಗಲು ನಿರ್ಬಂಧವಿಲ್ಲವೆಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ಕೇರಳದ ಧಾರ್ಮಿಕ ಕ್ಷೇತ್ರದಲ್ಲಿ ನಂಬಿಕೆ ಸಂಪ್ರದಾಯಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಬೃಹತ್ ರೂಪ ತಾಳಿವೆ.

    ಶಬರಿಮಲೈ ವಿವಾದವನ್ನು ಕೇವಲ ಒಂದು ಪುಟ ಇಲ್ಲವೇ ಒಂದು  ದಿನದಲ್ಲಿ ಹೇಳಿ ಮುಗಿಸುವುದು ಅಸಾಧ್ಯ. ಸಂಕ್ಷಿಪ್ತವಾಗಿ ಹೇಳಿ ಮುಗಿಸುವುದಾದರೆ 2018ರ ಸೆಪ್ಟೆಂಬರ್ 20ರಂದು ಸುಪ್ರೀಂಕೋರ್ಟಿನ  ಐದು ನ್ಯಾಯಾಧೀಶರುಗಳ ಪೀಠ ತೀರ್ಪಿತ್ತು  ತಾತ್ಕಾಲಿಕವಾಗಿ ಮಹಿಳೆಯರ ಪ್ರವೇಶವನ್ನು ಎತ್ತಿ ಹಿಡಿದಿದೆ. ಈಗ ಸುಪ್ರೀಂ ಕೋರ್ಟ್ ನ  ಏಳು ನ್ಯಾಯಾಧೀಶರುಗಳ ಮತ್ತೊಂದು ಪೀಠ ಪ್ರಕರಣದ
    ಮರುಪರಿಶೀಲನೆಯತ್ತ ಸಾಗಿದೆ.

    ಈಗ ಚುನಾವಣೆ ಕಾಲ . ಅಂದ ಬಳಿಕ ನಮ್ಮ ಪ್ರಜಾತಂತ್ರದಲ್ಲಿ ರಾಜಕಾರಣ ಮತ್ತು ಧರ್ಮ ಕಾರಣಗಳಿಗೆ ಸಂಘರ್ಷ ಕಾಲವೂ ಹೌದು,  ಪರೀಕ್ಷೆಯ ಕಾಲ ಸಹಿತ ಬಂದಂತಾಗಿದೆ.

    ಕೇರಳದ ರಾಜಕೀಯ ಪಕ್ಷಗಳ ಪೈಕಿ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲೂ ಎಡಪಂಥೀಯ ಒಕ್ಕೂಟಕ್ಕೆ ಜನ ಮನ್ನಣೆ ಸಿಕ್ಕಿತ್ತು. ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ನಾಯಕ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸುಪ್ರಿಂಕೋರ್ಟಿನ ‘ಮುಕ್ತ ನಿರ್ಣಯ’ ಎಡಪಂಥೀಯ ಚಿಂತನೆ ಗಳಿಗೆ ದೊರೆತ ಬೆಂಬಲ ಎಂದು ಭಾವಿಸಿದುದು ಸಹಜವಾಗಿತ್ತು. ಆದರೆ ಧಾರ್ಮಿಕ ಭಾವನೆಗಳು ಜನಮನದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸದೇ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಪ್ರೋತ್ಸಾಹಿದುದು ತಪ್ಪುಹೆಜ್ಜೆಯಾಯಿತು. 2019ರ  ಜನವರಿ 2ರಂದು ಪ್ರಗತಿಗಾಮಿ ಮಹಿಳೆಯರಿಬ್ಬರು ದೇವಾಲಯಕ್ಕೆ ‘ನುಗ್ಗಿದ್ದು’ ಹಿಂದೂ ಧರ್ಮೀಯರನ್ನು ಕೆರಳಿಸಿತು.  ಪಿನರಾಯಿ ವಿಜಯರಿಗೆ ಕೆಟ್ಟ ಹೆಸರು ಬಂತು.

    ಇದರ ಲಾಭ ಪಡೆದದ್ದು ಕಾಂಗ್ರೆಸ್.  ಎಚ್ಚರಿಕೆಯ ಹೆಜ್ಜೆ ಇಟ್ಟ ಕಾಂಗ್ರೆಸ್ ಹಿಂದೂ ಧರ್ಮೀಯರ ಮನ ಗೆದ್ದಿತ್ತು. ಹೀಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಪ್ಪತ್ತು ಸ್ಥಾನಗಳ ಪೈಕಿ ಕಾಂಗ್ರೆಸ್ ಹತ್ತೊಂಬತ್ತು ಸ್ಥಾನ ಗಳಿಸಿತ್ತು.

    ಇದಾದ ಬಳಿಕ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಂಥೀಯ ಎಲ್ ಡಿ ಎಪ್ ಭಾರಿ ಜಯ ಗಳಿಸಿರುವುದು ಕಾಂಗ್ರೆಸ್ ಗೆ ಚಿಂತೆ ತಂದಿದೆ.ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಬರಲಿದ್ದಾರೆ.

    ಒಟ್ಟಿನಲ್ಲಿ ದೇಶದಲ್ಲಿಯೇ ಅತ್ಯಂತ ಉತ್ತಮ ದರ್ಜೆಯ ಪ್ರಜ್ಞಾವಂತ ಮತದಾರನೆಂಬ ಹೆಸರು ಗಳಿಸಿದ ಮಲೆಯಾಳಿ ಪ್ರಜೆ ಶಬರಿಮಲೈ ವಿವಾದದಿಂದ ವಿಚಲಿತನಾಗಿದ್ದ ನೆಂಬುದು ಶತಸ್ಸಿದ್ಧ. 


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    ಪದವಿ ಕಾಲೇಜುಗಳಿಗೆ 8,000 ಬೋಧಕರ ನೇಮಕಕ್ಕೆ ಬೇಡಿಕೆ

    ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಹಿನ್ನಲೆಯಲ್ಲಿ ಇನ್ನು ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರದಂತೆ 8,000 ಕಾಯಂ ಉಪನ್ಯಾಸಕರ ನೇಮಕಾತಿಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಮೈಸೂರು ಜಿಲ್ಲೆಯ ಕೆ.ಆರ್.ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; ಉತ್ತಮ ಕಲಿಕೆ, ಬೋಧನೆಯು ಶಿಕ್ಷಣ ನೀತಿಯ ಆಶಯ. ಅದಕ್ಕೆ ತಕ್ಕಂತೆ ಗುಣಮಟ್ಟದ ಬೋಧಕರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ಬಜೆಟ್‌ ಪೂರ್ವ ಸಭೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

    ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಹಿನ್ನಲೆಯಲ್ಲಿ ಇನ್ನು ಮುಂದೆ ಆತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರದಂತೆ 8,000 ಕಾಯಂ ಉಪನ್ಯಾಸಕರ ನೇಮಕಾತಿಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಜತೆಗೆ; ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ಸಾಲುತ್ತಿಲ್ಲ. ಬಜೆಟ್‌ನಲ್ಲಿ ಹಂಚಿಕೆಯಾಗುವ ಒಟ್ಟು ಅನುದಾನದಲ್ಲಿ ಶೇ.88ರಷ್ಟು ಅನುದಾನ ವೇತನಕ್ಕೇ ಹೋಗುತ್ತಿದೆ. ಇದುವರೆಗೂ ಒಟ್ಟಾರೆ ಬಜೆಟ್‌ನಲ್ಲಿ ಶೇ.2ರಷ್ಟು ಅನುದಾನವನ್ನಷ್ಟೇ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು ಶೇ.3.5ಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೊ ಡಿಸಿಎಂ ಹೇಳಿದರು.

    ಅತಿಥಿ ಉಪನ್ಯಾಸಕರ ಮುಂದುವರಿಕೆ:ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಅತಿಥಿ ಉಪನ್ಯಾಸಕರನ್ನು ಈ ವರ್ಷವೂ ಮುಂದುವರಿಸಲಾಗಿದೆ. ವೇತನ ಏರಿಕೆ, ಸೇವೆ ಕಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟಿದ್ದಾರೆ. ಆ ಬೇಡಿಕೆಗಳನ್ನು ಈಡೇರಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಗುಣಮಟ್ಟಕ್ಕೆ ಕ್ರಮ:ಸರಕಾರಿ ಸ್ವಾಮ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರಬೇಕು. ನ್ಯಾಕ್‌ ಮಾನ್ಯತೆ ಸಿಗಬೇಕು. ಜತೆಗೆ; ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

    2 ಕೋಟಿ ಅನುದಾನ:ಕೆ.ಆರ್.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಶೈಕ್ಷಣಿಕ ವರ್ಷದಲ್ಲಿ ಎರಡೂ ಕಾಲೇಜುಗಳಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನು ಹೆಚ್ಚಿನ ಅನುದಾನ ನೀಡಲು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡಲಾಗಿದೆ. ಎಲ್ಲವನ್ನು ಪರಿಶೀಲನೆ ನಡೆಸಿದ ನಂತರ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ.ಮಹೇಶ್ ಉಪಸ್ಥಿತರಿದ್ದರು. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮುಂತಾದವರು ಹಾಜರಿದ್ದರು.

    ಬೆಂಗಳೂರು ನಗರ ಹೊರತು ಪಡಿಸಿ ಉಳಿದೆಡೆ ಫೆ.22ರಿಂದ 6ರಿಂದ 8ನೇ ತರಗತಿ ಆರಂಭ

    ಈ ಶೈಕ್ಷಣಿಕ ವರ್ಷದ 6 ರಿಂದ 8ನೇ ತರಗತಿಗಳನ್ನು ಬೆಂಗಳೂರು ನಗರ ಮತ್ತು ಕೇರಳ ಗಡಿಭಾಗಕ್ಕೆ ಹೊಂದಿಕೊಂಡ ಶಾಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಶಾಲೆಗಳಲ್ಲಿ ಎಂದಿನಂತೆ ಈ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

    ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ರಾಜ್ಯದ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆ ಹಾಗೂ ಉಚ್ಚ ನ್ಯಾಯಾಲಯದ ಆಶಯದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 9 ಮತ್ತು 12ನೇ ತರಗತಿಗಳಂತೆ 6ರಿಂದ 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿವೆ ಎಂದರು.

    ಆ ವೇಳೆಗೆ ರಾಜ್ಯದ ಕೋವಿಡ್‍ಗೆ ಸಂಬಂಧಿಸಿದ ವಿವರವಾದ ವರದಿಯೊಂದು ತಾಂತ್ರಿಕ ಸಲಹಾ ಸಮಿತಿ ಕೈಸೇರಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಉಳಿದ ಒಂದರಿಂದ ಐದನೇ ತರಗತಿಗಳ ಆರಂಭ ಅಥವಾ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸುವ ಸಂಬಂಧದಲ್ಲಿ ಫೆ. 24 ಇಲ್ಲವೇ 25ರಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದೆ ಎಂದರು.

    ಇನ್ನು ಮುಂದೆ ಆರೋಗ್ಯ ಇಲಾಖೆ ಈಗಾಗಲೇ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ಕೋವಿಡ್ ರ‍್ಯಾಂಡಮ್ ಟೆಸ್ಟ್ ಕೈಗೊಳ್ಳಲಿದೆ ಎಂದು ಸಹ ಸುರೇಶ್ ಕುಮಾರ್ ವಿವರಿಸಿದರು.

    ಹಾಜರಾತಿ ಕಡ್ಡಾಯವಿಲ್ಲ-ಪೋಷಕರ ಸಮ್ಮತಿ ಪತ್ರ ಕಡ್ಡಾಯ:
    ಈ ಮೊದಲು ನಿರ್ಧಾರ ಕೈಗೊಂಡಂತೆ 6ರಿಂದ 8ನೇ ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಬರುವಾಗ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಹಾಗೆಯೇ ಶಾಲೆಗೆ ಹಾಜರಾಗುವುದು ಕಡ್ಡಾಯವೇನಿಲ್ಲ. ಕೇರಳ ಭಾಗದಿಂದ ಗಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟೀವ್ ಫಲಿತಾಂಶವಿದ್ದರೆ ಮಾತ್ರವೇ ಶಾಲೆಗೆ ಹಾಜರಾಗಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಾಲೆಗಳನ್ನು ಆರಂಭಿಸುವ ಸಂಬಂಧದಲ್ಲಿ ಈಗಾಗಲೇ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಐದು ಸಭೆಗಳನ್ನು ನಡೆಸಿ ಅವರು ಮಾರ್ಗದರ್ಶನದನ್ವಯವೇ ಶಾಲೆಗಳು ನಡೆಯುತ್ತಿದ್ದು, ಎಲ್ಲ ತರಗತಿಗಳಲ್ಲಿ ಹಾಜರಾತಿ ಕಡ್ಡಾಯವಲ್ಲವಾದರೂ ಶೇ. 70-89ರಷ್ಟು ಹಾಜರಾತಿ ಇದೆ ಎಂದು ಅವರು ವಿವರಿಸಿದರು. ಈ ಮೊದಲು ಆರಂಭವಾಗಿರುವ ಶಾಲೆಗಳ ಹಾಜರಾತಿ, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ, ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಯನ್ನು ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ 6ರಿಂದ 8ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಎಂದು ಅವರು ವಿವರಿಸಿದರು.

    ಜ. 28ರಂದು ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಇಂದು ಉಳಿದ ತರಗತಿಗಳನ್ನು ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ.

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್:ಶಾಲೆಗಳ ಸುರಕ್ಷತೆ ಮತ್ತು ಶಾಲೆಗಳಲ್ಲಿ ನಿಯಮಗಳ ಪಾಲನೆಯನ್ನು ಗಮನಿಸುವ ಹಾಗೂ ಸ್ಥಳೀಯ ಅಗತ್ಯತೆಗಗಳಿಗನುಸಾರವಾಗಿ ಶಾಲೆಗಳ ಆರಂಭಿಸುವ ಸಂಬಂಧದಲ್ಲಿ ಜಿಲ್ಲಾಧಿಕಾರಿಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ವಿವರಿಸುವ ಸಂಬಂಧದಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಲಯಗಳನ್ನು ತೆರೆಯಲಿದ್ದಾರೆ. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ನಿಗಮಗಳು ಬಸ್ ಚಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ. ಈ ಕುರಿತಂತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.

    ಅಜೀಂಪ್ರೇಂಜೀ ವಿವಿ ನಡೆಸಿದ ಸಮೀಕ್ಷೆಯೊಂದರಲ್ಲಿ ಶಾಲೆಗಳು ಆರಂಭವಾಗದೇ ಇರುವುದರಿಂದ ಶೇ. 92ರಷ್ಟು ಮಕ್ಕಳು ಗಣಿತದಲ್ಲಿ ಹಿಂದೆ ಬಿದ್ದಿದ್ದರೆ, ಶೆ. 80ರಷ್ಟು ಮಕ್ಕಳು ಅಕ್ಷರಗಳನ್ನೇ ಮರೆತಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಎಲ್ಲ ವಲಯಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ತಾಂತ್ರಿಕ ರಾಜ್ಯ ಸಲಹಾ ಸಮಿತಿ ಸೂಚಿಸಿದಂತೆ ಎಸ್ ಒ ಪಿ ಯನ್ವಯ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ ವಿದ್ಯಾರ್ಥಿಗಳ ಮತ್ತು ಲಭ್ಯ ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿಗಳನ್ನು ಪಾಳಿ ಇಲ್ಲವೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮತ್ತು ಬದಲಾವಣೆ ಮಾಡಿಕೊಳ್ಳಲು ಶಾಲೆಗಳಿಗೆ ಅವಕಾಶವಿದೆ. ಗ್ರಂಥಾಲಯ, ಪ್ರಾರ್ಥನಾ ಕೊಠಡಿ, ಪ್ರಯೋಗಲಯ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಕೊಠಡಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.

    ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದರು.

    ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಒಂದನೇ ತರಗತಿಯಿಂದ ಎಲ್ಲ ತರಗತಿಗಳು ಆರಂಭವಾಗಿವೆ. ದೆಹಲಿ ಮತ್ತು ಒರಿಸ್ಸಾದಲ್ಲಿ 9ರಿಂದ ಮೇಲಿನ ತರಗತಿಗಳು, ಕೇರಳದಲ್ಲಿ 10ರಿಂದ ಮೇಲಿನ ತರಗತಿಗಳು, ಮಹಾರಾಷ್ಟ್ರದಲ್ಲಿ 5ರಿಂದ ಮೇಲಿನ ತರಗತಿಗಳು ಹರಿಯಾಣದಲ್ಲಿ 9ರಿಂದ ಮೇಲಿನ ತರಗತಿಗಳು ಆರಂಭವಾಗಿವೆ ಎಂದು ಸಚಿವರು ವಿವಿಧ ರಾಜ್ಯಗಳ ಶೈಕ್ಷಣಿಕ ಚಟುವಟಿಕೆಗಳನ್ನು ವಿವರಿಸಿದರು.

    ಈಗಾಗಲೇ ಆರಂಭವಾಗಿರುವ 10ನೇ ತರಗತಿ ಸರಾಸರಿ ಹಾಜರಾತಿ – 70.7%, 9ನೇ ತರಗತಿ ಸರಾಸರಿ ಹಾಜರಾತಿ – 60.30%, 6 ರಿಂದ 8ನೇ ತರಗತಿ ವಿದ್ಯಾಗಮ ಕಾರ್ಯಕ್ರಮದ ಸರಾಸರಿ ಹಾಜರಾತಿ– 50.5 % ಇದೆ. ಪಿಯು ತರಗತಿಗಳಲ್ಲೂ ಶೇ. 75ಕ್ಕೂ ಹೆಚ್ಚು ಹಾಜರಾತಿ ಇದೆ. ಟಿ.ಎ.ಸಿ. ಶಿಫಾರಸ್ಸಿನಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎಸ್.ಓ.ಪಿ ಅನುಸಾರ ತೆಗೆದುಕೊಂಡಿದ್ದರಿಂದ ಹಾಗೂ ಶಿಕ್ಷಕರಿಗೆ ಮುಂಚಿತವಾಗಿ ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಿದ್ದ ಹಿನ್ನಲೆಯಲ್ಲಿ ಯಾವುದೇ ಶಾಲೆಯಿಂದ ಸೋಂಕು ಹರಡುವಿಕೆ ಕುರಿತು ಈ ವರೆಗೆ ವರದಿಯಾಗಿಲ್ಲ. ಈ ಎಲ್ಲ ಅಂಶಗಳನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ ಎಲ್ಲ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಮುಂದಿನ ಶೈಕ್ಷಣಿಕ ಸಾಲು:2021-22 ಸಾಲಿನ ಶೈಕ್ಷಣಿಕ ವರ್ಷವನ್ನು 2021ರ ಜುಲೈ 15ರಿಂದ ಏಕಕಾಲದಲ್ಲಿ ಆರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು

    ಬೆಂಗಳೂರು ಉತ್ತರ ವಿವಿಗೆ 170 ಎಕರೆ ಭೂಮಿ;
    ಜಂಗಮಕೋಟೆಯಲ್ಲಿ ನಾಲೆಡ್ಜ್‌ ಸಿಟಿ

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿರುವಾಗಲೇ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ.

    ಬೆಂಗಳೂರಿನಲ್ಲಿ ಸೋಮವಾರ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು; ಗುಣಮಟ್ಟದ ಕಲಿಕೆ, ಬೋಧನೆ ಮತ್ತು ಸಂಶೋಧನೆ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಅದರಂತೆ ಬೆಂಗಳೂರು ಕೇಂದ್ರ (ಸೆಂಟ್ರಲ್‌ ಕಾಲೇಜ್)‌, ಬೆಂಗಳೂರು (ಜ್ಞಾನಭಾರತಿ) ಹಾಗೂ ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯಗಳ ಮೂಲಕವೇ ಇಷ್ಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.

    ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ 1.50 ಕೋಟಿಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಬೇಕಾದರೆ ಇಷ್ಟು ಕಾಲೇಜುಗಳ ನಿರ್ಮಾಣ ಅಗತ್ಯ. ಒಂದು ವೇಳೆ ಇಲ್ಲದಿದ್ದರೆ ಹೊಸ ಕಾಲೇಜನ್ನು ನಿರ್ಮಾಣ ಮಾಡಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲಾಗದೆ ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಮೂಲಕ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಡಿಸಿಎಂ ಹೇಳಿದರು.

    ಜಾಗ ಸರಕಾರದ್ದು:ಇಷ್ಟು ಕಾಲೇಜುಗಳನ್ನು ನಿರ್ಮಾಣ ಮಾಡುವುದು ದೊಡ್ಡ ಕನಸು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಅಗತ್ಯವಾದ ಭೂಮಿಯನ್ನು ಸರಕಾರವೇ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಇವತ್ತಿನ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಜತೆ ಮಾತುಕತೆ ನಡೆಸಿದ್ದೇನೆ. ನಗರದ ವ್ಯಾಪ್ತಿಯಲ್ಲಿ ಕಾಲೇಜುಗಳ ನಿರ್ಮಾಣಕ್ಕೆ ಬೇಕಾಗುವ ಭೂಮಿ ಎಲ್ಲೆಲ್ಲಿ ಲಭ್ಯವಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಕೇಳಿದ್ದೇನೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಇನ್ನು ಕೆಲ ದಿನಗಳಲ್ಲಿಯೇ ನಗರದ ಎಲ್ಲ ಶಾಸಕರ ಸಭೆಯನ್ನು ಕರೆಯಲಿದ್ದೇನೆ. ಭೂಮಿ ಪಡೆಯುವ ಸಂಬಂಧ ಅವರೆಲ್ಲರ ವಿಶ್ವಾಸವನ್ನು ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಎಲ್ಲ ಕ್ಷೇತ್ರಗಳೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನಾಂತರವಾಗಿ ಬೆಳೆಯಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡಿ ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

    ಬೇಡಿಕೆ ಇರುವ ಕೋರ್ಸುಗಳು ಮಾತ್ರ:ಶಿಕ್ಷಣ ನೀತಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳ ಆಧಾರದ ಮೇಲೆ ಉದ್ಯೋಗಾಧಾರಿತ, ವೃತ್ತಿಪರ ಮತ್ತು ಜಾಗತಿಕವಾಗಿ ಬೇಡಿಕೆ ಹೊಂದಿರುವ ಕೋರ್ಸುಗಳನ್ನೂ ಆರಂಭಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಕನಸುಗಳು ಈಡೇರಿ ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    8,000 ಬೋಧಕರ ಮಂಜೂರು:ಪ್ರಸ್ತುತ ರಾಜ್ಯದ ಪದವಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಇದಲ್ಲದೆ ಇನ್ನೂ 8,000 ಬೋಧಕ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಈಗ ಖಾಲಿ ಇರುವ ಹುದ್ದೆಗಳ ಜತೆಗೆ ಈ ಹುದ್ದೆಗಳ ಮಂಜೂರು ಮಾಡಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಹಾಗೇಯೇ, ಇಲಾಖೆಗೆ ಸಿಗುತ್ತಿರುವ ಒಟ್ಟಾರೆ ಅನುದಾನ ಕಡಿಮೆ ಇದ್ದು, ರಾಜ್ಯದ ಒಟ್ಟು ಬಜೆಟ್‌ ಗಾತ್ರದಲ್ಲಿ ಶೇ.3.5ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ. ಈಗ, ಅಂದರೆ; 2020-21ರ ಮುಂಗಪತ್ರದಲ್ಲಿ ಮಂಜೂರಾದ ಒಟ್ಟು 4687 ಕೋಟಿ ರೂ. ಅನುದಾನದಲ್ಲಿ ಶೇ.88ರಷ್ಟು ಅಂದರೆ; 3998 ಕೋಟಿ ರೂ. ವೇತನಕ್ಕೇ ಹೋಗಿದೆ. ಉಳಿದ ಶೇ.12ರಷ್ಟು ಅಂದರೆ 595 ಕೋಟಿ ರೂ. ಮೊತ್ತದಲ್ಲಿ ಮಾತ್ರ ಇಲಾಖೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಅನುದಾನವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು ಉಪ ಮುಖ್ಯಮಂತ್ರಿ.

    ಉತ್ತರ ವಿವಿಗೆ ಭೂಮಿ:ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಂಗಮಕೋಟೆ ಬಳಿ 172 ಎಕರೆ ಜಾಗ ಗುರುತಿಸಿದ್ದು, ಆ ಪೈಕಿ 57 ಎಕರೆಯನ್ನು ಹಸ್ತಾಂತರ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ 53 ಎಕರೆ ಹಸ್ತಾಂತರ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಲ್ಲದೆ 61 ಎಕರೆಯಲ್ಲಿ 51 ಎಕರೆ ಸರ್ಕಾರದ್ದೇ ಇದೆ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅದನ್ನೂ ವಶಕ್ಕೆ ಪಡೆಯಲಾಗುವುದು. ಇನ್ನೊಂದು ತಿಂಗಳ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಜಂಗಮಕೋಟೆಯಲ್ಲಿ ನಾಲೆಡ್ಜ್‌ ಸಿಟಿ:2015ರಲ್ಲಿ ಈ ಬೆಂಗಳೂರು ಉತ್ತರ ವಿವಿ ಸ್ಥಾಪನೆ ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿತಾದರೂ ಅದು ಅಸ್ತಿತ್ವಕ್ಕೆ ಬಂದಿದ್ದು 2018ರಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣವಾಗಲಿದೆ. ಈ ಜಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಇಲ್ಲಿ ಒಂದು ಜ್ಞಾನ ನಗರ (ನಾಲೆಡ್ಜ್‌ ಸಿಟಿ) ವನ್ನು ಸ್ಥಾಪನೆ ಮಾಡಲಾಗುವುದು ಎಂದರು.

    ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ಕೆಂಪರಾಜು ಮತ್ತಿತರರು ಹಾಜರಿದ್ದರು.

    ಆಹಾರಕ್ಕೆ ಮಾತ್ರ ಬದುಕು ಎಂದರೆ ಈ ಹುಟ್ಟು ವ್ಯರ್ಥ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕೂಳುಗೇಡಿಂಗೆ ಒಡಲ ಹೊರುವಿರಿ- ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಕುಮಾವ್ಯಾಸನ ಗದುಗಿನ ಭಾರತದಲ್ಲಿ  ಬರುವ ಮಾತಿದು.   ಐದೂ ಜನ ಗಂಡರಿದ್ದು  ನನ್ನೊಬ್ಬಳನ್ನು ರಕ್ಷಿಸುವುದಕ್ಕೆ ನಿಮ್ಮಿಂದಾಗುವುದಿಲ್ಲವೇ  ಎಂದು ನೋವಿನಿಂದ, ವಿಷಾದದಿಂದ ಹತಾಶೆಯಿಂದ  ದ್ರೌಪದಿ ಭೀಮನನ್ನು ಕುರಿತು ಈ ಮಾತುಗಳನ್ನಾಡುತ್ತಾಳೆ.

    ಮನುಷ್ಯ ಬುದ್ಧಿಜೀವಿ ಎಂಬುದಾದರೆ ಆತ ತನ್ನ ಜೀವಿತಾವಧಿಯಲ್ಲಿ ಒಂದಿಲ್ಲೊಂದು ಒಳ್ಳೆಯ ಕೆಲಸವನ್ನು ಮಾಡಬೇಕು. ಇಲ್ಲವಾದರೆ ವ್ಯರ್ಥವೇ.  (ಇಲ್ಲಿ ‘ಕೂಳು’ ಎಂದರೆ ಅನ್ನ ಎಂದರ್ಥ. ಕೂಳು  ಆಧುನಿಕ ಕಾಲದಲ್ಲಿ ಹೀನಾರ್ಥ ಪಡೆದುಕೊಂಡಿದೆ)

    ಆಹಾರ ಸೇವನೆ  ಪ್ರಾಣ ರಕ್ಷಣೆಗೆ.ಅದನ್ನು ಬಿಟ್ಟು ಅಳತೆಯಲ್ಲಿ ಮೂರಂಗುಲವಿರುವ ನಾಲಗೆಯ ಸೆಳೆತಕ್ಕೆ ಒಳಗಾಗಬಾರದು .  “ಜಿಹ್ವಾಚಾಪಲ್ಯಕ್ಕಿಂತ ಜವಾಬ್ದಾರಿ” ಮುಖ್ಯ ಎಂಬುದನ್ನು ಈ ವಾಕ್ಯ ಹೇಳುತ್ತದೆ.  ಆಹಾರಕ್ಕೆ ಮಾತ್ರ  ಈ ಬದುಕು ಎಂದರೆ ಈ ಹುಟ್ಟು ವ್ಯರ್ಥವೆಂದೇ  ತಿಳಿಯಬೇಕು.  ಪ್ರಾಣಿಗಳು ತಿಂದು ಬದುಕುತ್ತವೆ.  ಜನ ತಿಳಿದು ಬದುಕುತ್ತಾರೆ ಎಂದು ಹೇಳವುದು ಇದಕ್ಕೆ ಅಲ್ಲವೆ!

    ತಮ್ಮ  ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಇಲ್ಲವಾದರೆ  ಈ ಹುಟ್ಟು ವ್ಯರ್ಥ  ಎಂದೇ ಇಲ್ಲಿ ವೇದ್ಯವಾಗುತ್ತದೆ.  ತಿನ್ನುವುದು ಉಡುವುದು ತೊಡುವುದರಾಚೆಗಿನ ಜೀವನ ಜೀವಿಸುವುದು ಮುಖ್ಯ  ಅದನ್ನು ಬಿಟ್ಟು  ಮೂಲ ಅವಶ್ಯಕತೆಗಳೆ   ಮುಖ್ಯವಾಗಬಾರದು. ಅವಲಂಬಿತರ ಮಾನಕ್ಕೆ ಧಕ್ಕೆಯುಂಟಾದಾಗ ಶೀಘ್ರ ಸ್ಪಂದಿಸಬೇಕು ಎಂಬ ಕಳಕಳಿ “ಕೂಳುಗೇಡಿಂಗೆ ಒಡಲ ಹೊರುವಿರಿ” ಮಾತಿನ ಹಿಂದಿದೆ.ವೈಯುಕ್ತಿಕ ಹಿತಾಸಕ್ತಿಗಳಿಗೆ ತನ್ನವರ ಮರ್ಯಾದೆಯನ್ನು ಪದೇ ಪದೇ ಪಣಕ್ಕಿಡುವುದು ಹೇಡಿಗಳ ಲಕ್ಷಣ  ಎಂಬ ಅರ್ಥವೂ ಇಲ್ಲಿ ಸ್ಫುರಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಬಂಡವಾಳಪೇಟೆಯಲ್ಲಿ speculation ಮಾಡದೆ ಹೂಡಿಕೆ ಮಾಡುವುದೆ ಜಾಣತನ

    ಷೇರುಪೇಟೆ ಎಂದೊಡೆ ಎಲ್ಲರ ಚಿತ್ತವೂ ಚುರುಕಾಗುವ ವಾತಾವರಣ ನಿರ್ಮಿತವಾಗಿದೆ. ಇದಕ್ಕೆ ಕಾರಣ ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿರುವುದಲ್ಲದೆ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ಜಿಗಿದಿರುವುದಾಗಿದೆ.

    ಇನ್ನು ಬಿ ಎಸ್‌ ಇ ಮಿಡ್‌ ಕ್ಯಾಪ್‌ ಇಂಡೆಕ್ಸ್‌ ಸಹ ದ್ವಿಗುಣಗೊಂಡರೆ, ಬಿ ಎಸ್‌ ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಸುಮಾರು ಎರಡೂವರೆ ಪಟ್ಟಿಗೆ ಸಮೀಪವಿದೆ. ಬಿಎಸ್‌ ಇ ಆಟೋ ಇಂಡೆಕ್ಸ್‌ ಸುಮಾರು ಎರಡೂವರೆಪಟ್ಟು ಹೆಚ್ಚಾಗಿದೆ. ಬಿ ಎಸ್‌ ಇ ಬ್ಯಾಂಕ್‌ ಇಂಡೆಕ್ಸ್‌ ಸಹ ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಬಿ ಎಸ್‌ ಇ ಕನ್ಸೂಮರ್‌ ಡ್ಯೂರಬಲ್ಸ್‌, ಬಿ ಎಸ್‌ ಇ ಕ್ಯಾಪಿಟಲ್‌ ಗೂಡ್ಸ್‌ ಇಂಡೆಕ್ಸ್‌ , ಬಿ ಎಸ್‌ ಇ ಹೆಲ್ತ್‌ ಕೇರ್‌ ಇಂಡೆಕ್ಸ್‌ ಗಳೂ ಸಹ ದ್ವಿಗುಣಗೊಂಡಿವೆ.

    ಹೀಗಿರುವಾಗ ಷೇರುಪೇಟೆಯಲ್ಲಿ ವಹಿವಾಟಿಗೆ ಲಿಸ್ಟಿಂಗ್‌ ಆಗಿರುವ ಎಲ್ಲಾ ಷೇರುಗಳೂ ಏರಿಕೆಯನ್ನು ಕಂಡಿವೆ ಎಂಬ ಭ್ರಮೆ ಬೇಡ. ಬಹಳಷ್ಠು ಕಂಪನಿಗಳು ಹಿಂದೆ ಕಂಡಂತಹ ಬೆಲೆಗಳನ್ನು ಮತ್ತೆ ತಲುಪುದಾಗಿವೆ. ಉತ್ತಮ ಕಂಪನಿಗಳೇ ಆದರೂ ಪೇಟೆಯಲ್ಲಿ ಏರಿಕೆ ಕಾಣದ ಪರಿಸ್ಥಿತಿಗೆ ತಲುಪಿವೆ. ಇವುಗಳಲ್ಲಿ ಕೆಲವನ್ನು ಉದಾಹರಣೆಗಾಗಿ ನೀಡಲಾಗಿದೆ.

    ಚೇತರಿಕೆ ಕಂಡ ಕಂಪನಿಗಳ ಇತಿಹಾಸ:

    • ವೊಡಫೋನ್‌ ಐಡಿಯಾ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ರೂ.2.83 ರಿಂದ ರೂ.13.80 ರವರೆಗೂ ಜಿಗಿದಿದೆ. ಆದರೂ ಈ ಷೇರಿನ ಬೆಲೆ ಏಪ್ರಿಲ್‌ 2017 ರಲ್ಲಿದ್ದ ರೂ.90 ಹಂತಕ್ಕೆ ತಲುಪುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ.
    • ದಾಲ್ಮಿಯಾ ಭಾರತ್‌ ಶುಗರ್ಸ್ ಕಂಪನಿ ಷೇರಿನ ಬೆಲೆ ರೂ.40 ರಿಂದ ರೂ.158 ರವರೆಗೂ ಏರಿಕೆ ಕಂಡಿದ್ದರೂ 2017 ರ ನವೆಂಬರ್‌ ತಿಂಗಳ ರೂ.175 ರ ಹಂತವನ್ನು ಇನ್ನೂ ತಲುಪಿಲ್ಲ.
    • ಪ್ರತಿ ಷೇರಿಗೆ ರೂ.6 ರಂತೆ ಡಿವಿಡೆಂಡ್‌ ವಿತರಿಸಿದ ಬಜಾಜ್‌ ಕನ್ಸೂಮರ್‌ ಕೇರ್‌ ಕಂಪನಿ ಷೇರಿನ ಬೆಲೆ ರೂ.118 ರ ಸಮೀಪದಿಂದ ರೂ.284 ರವರೆಗೂ ಏರಿಕೆಯನ್ನು ಕಂಡಿದ್ದರೂ 2019 ರ ಡಿಸೆಂಬರ್‌ ತಿಂಗಳ ರೂ.325 ನ್ನು ತಲುಪಲು ಇನ್ನಷ್ಠು ಸಮಯಬೇಕಾಗಬಹುದು.
    • ಕ್ಯಾಸ್ಟ್ರಾಲ್‌ ಇಂಡಿಯಾ ಷೇರಿನ ಬೆಲೆ ಹಿಂದಿನ ಫೆಬ್ರವರಿಯಲ್ಲಿ ರೂ.162 ರಲ್ಲಿತ್ತು. ಈ ಬೆಲೆಯು 2018 ರ ಆಗಷ್ಟ್‌ ತಿಂಗಳ ಬೆಲೆಯಾಗಿದ್ದು, ಅಲ್ಲಿಂದ ರೂ.89 ರವರೆಗೂ ಕುಸಿದು, ಸದ್ಯ ರೂ.129 ರ ಸಮೀಪವಿದೆ. ಎಲ್ಲಾ ಇಂಡೆಕ್ಸ್‌ ಗಳು ಏರಿಕೆ ಕಂಡಿದ್ದರೂ ಈ ಕಂಪನಿ ಷೇರಿನ ಬೆಲೆ ಇಳಿಕೆಯಲ್ಲೇ ಇದೆ.
    • ಎವರೆಸ್ಟ್‌ ಕ್ಯಾಂಟೋ ಸಿಲಿಂಡರ್ ಕಂಪನಿಯ ಎರಡು ರೂಪಾಯಿಗಳ ಮುಖಬೆಲೆಯ ಷೇರಿನ ಬೆಲೆ ರೂ.9 ರ ಸಮೀಪದಿಂದ ರೂ.70 ರ ವರೆಗೂ ಏರಿಕೆ ಕಂಡಿದೆ. ಈ ಕಂಪನಿಯು 2013 ರ ನಂತರದಲ್ಲಿ ಡಿವಿಡೆಂಡ್‌ ನೀಡಿಲ್ಲ. ಸಧ್ಯ ಕಂಪನಿಯು ಲಾಭ ಗಳಿಸುತ್ತಿದೆ. 2009 ರಲ್ಲಿ ರೂ.223 ರ ಸಮೀಪವಿದ್ದ ಈ ಷೇರನ್ನು ಆಗ ಖರೀದಿಸಿರುವವರು ಅನೇಕರು ತಮ್ಮ ಹೂಡಿಕೆಯನ್ನು ಮುಂದುವರೆಸಿದ್ದಾರೆ.
    • ವಕ್ರಾಂಗಿ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಈ ವರ್ಷ ರೂ.17 ರ ಸಮೀಪದಿಂದ ರೂ.69 ರವರೆಗೂ ಜಿಗಿತ ಕಂಡಿದೆಯಾದರೂ 2018 ರ ಮಾರ್ಚ್‌ ಸಮಯದ ಬೆಲೆ ರೂ.150 ನ್ನು ತಲುಪದಾಗಿದೆ.
    • 2000 ದ ಟೆಕ್ನಾಲಜಿ ಬೂಮ್‌ ಸಮಯದಲ್ಲಿ ಸಾವಿರಾರು ರೂಪಾಯಿಗಳಲ್ಲಿ ವಹಿವಾಟಾಗುತ್ತಿದ್ದ ಜಿ ಟಿ ಎಲ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ 2011 ರ ಜೂನ್‌ ನಲ್ಲಿ ರೂ.145 ರ ಸಮೀಪವಿತ್ತು. ಆದರೆ ಈ ವರ್ಷ ಈ ಷೇರಿನ ಬೆಲೆ ರೂ.1 ರ ಸಮೀಪದಲ್ಲಿದ್ದು ಅಲ್ಲಿಂದ ರೂ.9 ನ್ನು ತಲುಪಿ ಈಗ ರೂ.7 ರ ಸಮೀಪವಿದೆ. ಸುಮಾರು 9/10 ವರ್ಷಗಳ ಹಿಂದೆ ಖರೀದಿಸಿದವರ ಬೆಲೆ ಮತ್ತೊಮ್ಮೆ ತಲುಪಬಹುದೇ?
    • 2018 ರಲ್ಲಿ ರೂ.1,000 ಕ್ಕೂ ಹೆಚ್ಚಿದ್ದ ಗೋವಾ ಕಾರ್ಬನ್‌ ಕಂಪನಿ ಷೇರು ಈ ವರ್ಷ ರೂ.110 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.300 ರ ಸಮೀಪವಿದೆ.
    • ರಿಲಯನ್ಸ್‌ ಎಡಿಎಜಿ ಸಮೂಹ, ಎನ್‌ ಬಿ ಸಿ ಸಿ, ಐ ಡಿ ಎಫ್‌ ಸಿ, ಜೆ ಪಿ ಅಸೋಸಿಯೇಟ್ಸ್‌, ಎರೋಸ್‌ ಇಂಟರ್ನ್ಯಾಶನಲ್, ಲ್ಯಾಂಕೋ ಇನ್ಫ್ರಾ, ರಿಸರ್ಜರ್‌ ಮೈನ್ಸ್‌, ಸುಜುಲಾನ್‌, ಅಸ್ಟ್ರಾಲ್‌ ಕೋಕ್‌, ಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿದ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಇಂತಹ ಕಂಪನಿಗಳ ಪಟ್ಟಿಯು ಇನ್ನೂ ವಿಸ್ತಾರವಾಗಿದೆ.

    ಹಕ್ಕಿನ ಷೇರು ವಿತರಿಸಿದ ಕಂಪನಿಗಳ ಸ್ಥಿತಿ

    2015 ರಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಪ್ರತಿ ಷೇರಿಗೆ ರೂ.450 ರಂತೆ ಹಕ್ಕಿನ ಷೇರು ವಿತರಿಸಿತು. ಆದರೆ ಆ ಷೇರಿನ ಬೆಲೆ ನಿರಂತರವಾಗಿ ಕುಸಿಯುತ್ತಾ ಬಂದು ಈ ವರ್ಷ ರೂ.64 ನ್ನು ತಲುಪಿತ್ತು. ನಂತರದಲ್ಲಿ ಹತ್ತು ದಿನಗಳ ಹಿಂದೆ ರೂ.341 ರವರೆಗೂ ಏರಿಕೆ ಕಂಡು ವಿಜೃಂಭಿಸಿತು. ಆದರೂ ಆರು ವರ್ಷಗಳ ಹಿಂದೆ ವಿತರಿಸಿದ ಹಕ್ಕಿನ ಬೆಲೆ ಅರ್ಥಹೀನವಾಗಿಯೇ ಇದೆ.

    ಇಂದಿನ ಬಹಳಷ್ಟು ಕಂಪನಿಗಳ ಆಪತ್ತಿಗೆ ಅವುಗಳ ಆಡಳಿತ ಮಂಡಳಿಗಳ ತಪ್ಪು ನಿರ್ಧಾರಗಳೇ ಕಾರಣ ಎನ್ನಬಹುದಾಗಿದೆ. 2006 ರ ಸಮಯದಲ್ಲಿ ಪೇಟೆಗಳು ಉತ್ತುಂಗದಲ್ಲಿದ್ದಾಗ ಅನೇಕ ಕಂಪನಿಗಳು ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್ಸ್‌ ಗಳನ್ನು ಅಧಿಕ ಪ್ರೀಮಿಯಂನಲ್ಲಿ ವಿತರಿಸಿದವು. ಷೇರುಪೇಟೆಯಲ್ಲಿ ಷೇರಿನ ದರಗಳು ಏರುತ್ತಲೇ ಇರುತ್ತವೆ ಎಂಬುದು ತಪ್ಪು.

    ಬದಲಾವಣೆಗಳ ವೇಗ ಅತಿ ಹೆಚ್ಚಾಗಿರುವುದರಿಂದ ಷೇರಿನ ದರಗಳು ಗರಿಷ್ಠದಲ್ಲಿದ್ದಾಗ ಹೆಚ್ಚಿನ ಎಚ್ಚರ ಅಗತ್ಯ. ನಂತರದ ದಿನಗಳಲ್ಲಿ ಆರ್ಥಿಕತೆ ಕುಸಿದ ಪರಿಣಾಮ ಅನೇಕ ಕಂಪನಿಗಳು ಆಪತ್ತಿಗೊಳಗಾದವು. ಅವುಗಳಲ್ಲಿ ಸಿಂಟೆಕ್ಸ್‌ ಇಂಡಸ್ಟ್ರೀಸ್‌ ಸಹ ಒಂದು. ಒಂದು ಕಾಲದಲ್ಲಿ ಭಾರತ್‌ ವಿಜಯ್‌ ಮಿಲ್ಸ್‌ ಎಂದಿದ್ದ ಈ ಕಂಪನಿ ತನ್ನ ನೀರಿನ ಟ್ಯಾಂಕ್‌ ಯೋಜನೆಯ ಯಶಸ್ಸಿನ ಕಾರಣ ಹೆಸರನ್ನು ಬದಲಿಸಿಕೊಂಡಿತು. ಈ ಕಂಪನಿ ರೂ.91.16 ರಂತೆ ಪರಿವರ್ತಿಸಿದ ಷೇರುಗಳು ಈ ತಿಂಗಳ 10ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ. ಅಂದರೆ ರೂ.91.16 ರ ಷೇರುಗಳು ರೂ.4 ರಲ್ಲಿದ್ದಾಗ ಚಲಾವಣೆಗೆ ಬಂದಲ್ಲಿ ಪೇಟೆಯ ಮೇಲೆ ಯಾವುದೇ ಪರಿಣಾಮ ಬೀರದು ಕಾರಣ ಆ ಷೇರುಗಳ ಮಾರಾಟದ ಸಾಧ್ಯತೆ ತೀರಾ ವಿರಳ. ಈ ಕಂಪನಿಯು 2016 ರಲ್ಲಿ ರೂ.1 ರ ಮುಖಬೆಲೆಯ ಪ್ರತಿ ಷೇರಿಗೆ ರೂ.65 ರಂತೆ ಹಕ್ಕಿನ ಷೇರು ವಿತರಿಸಲಾಯಿತು. ಈಗಿನ ಬೆಲೆ ರೂ.4 ರ ಸಮೀಪವಿದೆ. ಕಂಪನಿಯ ಉತ್ಪನ್ನವೇನೋ ಪೇಟೆಯಲ್ಲಿ ಪ್ರತಿಷ್ಠಿತವಾಗಿದ್ದರೂ, ಆಂತರಿಕವಾಗಿ ಆರ್ಥಿಕ ಒತ್ತಡದಲ್ಲಿದೆ ಎನ್ನಬಹುದು. ಡಿಸೆಂಬರ್‌ ತಿಂಗಳ ತ್ರೈಮಾಸಿಕದಲ್ಲಿ ವಹಿವಾಟಿನ ಗಾತ್ರ ಹೆಚ್ಚಿರುವುದು ಆಶಾಭಾವನೆ ಮೂಡಿಸಿದೆ.

    ಕೆನರಾ ಬ್ಯಾಂಕ್‌ 2017 ರಲ್ಲಿ ಪ್ರತಿ ಷೇರಿಗೆ ರೂ.207 ರಂತೆ ಹಕ್ಕಿನ ಷೇರು ವಿತರಿಸಿದೆ ಆದರೆ ನಂತರದಲ್ಲಿ ಷೇರಿನ ಬೆಲೆಗಳು ಕುಸಿದು ನೀರಸ ವಾತಾವರಣವನ್ನೆದುರಿಸಿತು. ಹಿಂದಿನ ವರ್ಷ ಫೆಬ್ರವರಿಯಲ್ಲಿ ರೂ.187 ರ ಗರಿಷ್ಠದಲ್ಲಿದ್ದ ಈ ಷೇರು ಮಾರ್ಚ್ ನಲ್ಲಿ ಉಂಟಾದ ಕುಸಿತದ ಕಾರಣ ಷೇರಿನ ಬೆಲೆ ರೂ.74 ರ ಸಮೀಪಕ್ಕೆ ಜಾರಿತು. ಈ ತಿಂಗಳಲ್ಲಿ ರೂ.172 ರವರೆಗೂ ಏರಿಕೆ ಕಂಡು ಸಧ್ಯ ರೂ.157 ರ ಸಮೀಪವಿರುವ ಈ ಕಂಪನಿ ಷೇರಿನ ಬೆಲೆ ಹಕ್ಕಿನ ಷೇರಿನ ಬೆಲೆ ರೂ.207 ಎಂದು ತಲುಪುವುದೋ ಕಾದುನೋಡಬೇಕಾಗಿದೆ.

    ಹಾಗೆಂದು ಎಲ್ಲಾ ಹಕ್ಕಿನ ಷೇರುಗಳೂ ನಿಶ್ಪಲವಾಗಿವೆ ಎಂದಲ್ಲ, 2015 ರಲ್ಲಿ ಕ್ಯಾನ್‌ ಫಿನ್‌ ಹೋಮ್ಸ್‌ ರೂ.450 ರಂತೆ ಹಕ್ಕಿನ ಷೇರು ವಿತರಿಸಿದೆ. ಅದರ ಬೆಲೆ ಈಗ ರೂ.516 ರಲ್ಲಿದೆ.

    2015 ರಲ್ಲಿ ಜಿ ಎಂ ಆರ್‌ ಇನ್ಫ್ರಾಸ್ಟ್ರಕ್ಚರ್‌ ಲಿ ಕಂಪನಿಯು ರೂ.15 ರಂತೆ ಹಕ್ಕಿನ ಷೇರು ವಿತರಿಸಿದೆ ಆ ಷೇರಿನ ಬೆಲೆ ರೂ.26 ರ ಸಮೀಪವಿದೆ. ಆದರೆ ಈ ಕಂಪನಿ ಷೇರು 2010 ರಲ್ಲಿ ರೂ.50/60 ರಲ್ಲಿತ್ತು ಆಗ ಖರೀದಿಸಿದವರು ದೀರ್ಘಕಾಲೀನ ಹೂಡಿಕೆದಾರರಾಗಿ ಮುಂದುವರಿಯುತ್ತಿದ್ದಾರೆ.

    2016 ರಲ್ಲಿ ಕರ್ನಾಟಕ ಬ್ಯಾಂಕ್‌ ಪ್ರತಿ ಷೇರಿಗೆ ರೂ.70 ರಂತೆ ಹಕ್ಕಿನ ಷೇರು ವಿತರಿಸಿತ್ತು. ನಂತರದ ಸುಧೀರ್ಘ ಕುಸಿತದ ನಂತರ ಈಗ ಮತ್ತೆ ವಿತರಣೆ ಬೆಲೆ ಸಮೀಪಕ್ಕೆ ಹಿಂದಿರುಗಿದೆ.

    2017 ರಲ್ಲಿ ಇಂಡಿಯನ್ ಹೋಟೆಲ್‌ ಪ್ರತಿ ಷೇರಿಗೆ ರೂ.75 ರಂತೆ ವಿತರಣೆ ಮಾಡಿತ್ತು. ಈ ವರ್ಷ ಷೇರಿನ ಬೆಲೆ ರೂ.62 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.130 ರ ಸಮೀಪದಲ್ಲಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಷೇರಿನ ಬೆಲೆಗಳು ಸೂಚ್ಯಂಕಗಳು ಗರಿಷ್ಠದಲ್ಲಿದ್ದಾಗ ಚಂಚಲತೆ ಹೆಚ್ಚು ಪ್ರದರ್ಶಿಸುವ ಕಾರಣ ಹೂಡಿಕೆಯನ್ನು ಅಲ್ಪಕಾಲೀನವಾಗಿಸಬೇಕು. ಉತ್ತಮ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ಪೇಟೆಗಳು ಕುಸಿತದಲ್ಲಿದ್ದಾಗ ದೀರ್ಘಕಾಲೀನ ತಂತ್ರ ಅಳವಡಿಸಬೇಕು. ಎಂತಹ ಪರಿಸ್ಥಿತಿಯಾದರೂ, ಹೂಡಿಕೆ ಮಾಡಿದ ಷೇರುಗಳ ಮೇಲೆ ಹೆಚ್ಚಿನ ನಿಗಾ ಇರಲೇಬೇಕು.

    ಉತ್ತಮ ಘನತೆಯ ಕಂಪನಿಗಳು, ಕುಸಿದರೂ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಕ್ಲಾರಿಯಂಟ್‌ ಕೆಮಿಕಲ್ಸ್‌, ಅಶೋಕ್‌ ಲೇಲ್ಯಾಂಡ್‌, ಮಹೀಂದ್ರ ಅಂಡ್‌ ಮಹೀಂದ್ರ, ಸಿಪ್ಲಾ, ಬಯೋಕಾನ್‌, ಕೆನರಾ ಬ್ಯಾಂಕ್‌, ಎಸ್‌ ಬಿ ಐ, ಯು ಪಿ ಎಲ್‌ ಮುಂತಾದವಾಗಿವೆ.

    ಷೇರು ಪೇಟೆಯನ್ನು ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಲ್ಲಿ ಬಂಡವಾಳ ಅಲ್ಪಮಟ್ಟಿನ ಸುರಕ್ಷಿತ. ಸ್ಪೆಕ್ಯುಲೇಷನ್‌ ಎಂದರೆ ಅನಿಶ್ಚಿತತೆ ಅಪರಿಮಿತ.

    ಯುಜಿಸಿ ಹಿಂಬಾಕಿ ಪಾವತಿ, ಪ್ರಾಂಶುಪಾಲರ ಹುದ್ದೆ ಭರ್ತಿ ಸೇರಿದಂತೆ ಸರಕಾರಿ ಕಾಲೇಜು ಪ್ರಾಧ್ಯಾಪಕರ ಬೇಡಿಕೆ ಶೀಘ್ರ ಇತ್ಯರ್ಥ: ಡಿಸಿಎಂ

    ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿ ಸರಕಾರಿ ಕಾಲೇಜು ಪ್ರಾಧ್ಯಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಲ್ಲ ಬೇಡಿಕೆಗಳನ್ನು ಆದಷ್ಟು ಶೀಘ್ರವೇ ಈಡೇರಿಸಲಾಗುವುದು ಎಂದು ತಿಳಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕರ್ನಾಟಕ ಸರಕಾರಿ ಕಾಲೇಜುಗಳ ಬೋಧಕರ ಸಂಘದ ಅಧ್ಯಕ್ಷ ಡಾ.ಡಿ.ಎಂ.ಮಂಜುನಾಥ್‌ ಮತ್ತಿತರೆ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಈ ಬಗ್ಗೆ ಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರಕಾರ ಪಾಲು ತುಂಬಲಾಗಿಲ್ಲ. ಈ ಮೊತ್ತವನ್ನು ಕೂಡಲೇ ತುಂಬುವುದು. 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್ ತಿಂಗಳಿನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

    ವರ್ಗಾವಣೆ ಪ್ರಕ್ರಿಯೆ ಶೀಘ್ರ ಆರಂಭ:

    2021ರ ವರ್ಗಾವಣೆ ಕಾಯ್ದೆಯ ಪ್ರಕಾರ ಈಗಾಗಲೇ ಸರಕಾರ ವರ್ಗಾವಣೆ ನೀತಿ ರೂಪಿಸಿದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ; ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕೂಡಲೇ ಚಾಲನೆ ನೀಡುವುದು ಹಾಗೂ ಗರಿಷ್ಠ ವಯೋಮಿತಿಗೆ ವಿನಾಯಿತಿ ನೀಡಿ ಯುಜಿಸಿ ವೇತನ ಶ್ರೇಣಿಯಲ್ಲಿನ ಸಹ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವುದು, ಪ್ರಾಧ್ಯಾಪಕ ಹುದ್ದೆಯ ಪದೋನ್ನತಿಗೆ ಕೂಡಲೇ ಚಾಲನೆ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಡಿಸಿಎಂ ತಿಳಿದ್ದಾರೆ.

    ಪಿಹೆಚ್ʼಡಿ ವೇತನ ಬಡ್ತಿ ತಾರತಮ್ಯ ಬಗೆಹರಿಸುವ ಸಲುವಾಗಿ ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದ ಉಪ ಮುಖ್ಯಮಂತ್ರಿಗಳು; ಪಿಎಚ್‌ ಡಿ ಮಾಡಲು ಪ್ರಾಧ್ಯಾಪಕರು ಅರ್ಜಿ ಸಲ್ಲಿಸುವ ವೇಳೆ ನಿರಪೇಕ್ಷಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ಮೇಲೆ ಈ ಪತ್ರವನ್ನು ಸಲ್ಲಿಸಿದರೆ ಸಾಕು. ಈ ಬಗ್ಗೆ ಎಲ್ಲ ವಿವಿಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಬೋಧಕ ಸಿಬ್ಬಂದಿ ಪದನಾಮ

    ಕಾಲೇಜುಗಳಲ್ಲಿ ಈವರೆಗೂ ಬೋಧಕೇತರ ಸಿಬ್ಬಂದಿಯಾಗಿದ್ದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಸರಕಾರಿ ಸ್ವಾಮ್ಯದಲ್ಲಿರುವ 108 ಸರಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರಾಧ್ಯಾಪಕರಿಗೆ ಪಿಎಚ್‌ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    2003ರಲ್ಲಿ ನೇಮಕಗೊಂಡ ಅರೆಕಾಲಿಕ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಸ್ತಾನೀಕರಣ ನೀಡಲು ಸಕಾರಾತ್ಮಕವಾಗಿ ಪರಿಶೀಲಿಸಲು ಒಪ್ಪಿಗೆ ಹಾಗೂ ಬಾಕಿ ಇರುವ ಸ್ತಾನೀಕರಣ ಪ್ರಸ್ತಾವನೆಗಳನ್ನು ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗುವುದು. ಜತೆಗೆ; 310 ಪ್ರಾಂಶುಪಾಲರನ್ನು ಆದಷ್ಟು ಬೇಗ ನೇಮಕ ಮಾಡಲಾಗುವುದು ಎಂದು ಡಿಸಿಎಂ ವಿವರ ನೀಡಿದರು.

    ಯುಜಿಸಿ ವೇತನ ಪಡೆಯುವ ಪ್ರಾಧ್ಯಾಪಕರಿಗೆ ವಾಹನ, ಮನೆ ಮತ್ತಿತರೆ ವಸ್ತುಗಳ ಖರೀದ ಮೇಲೆ ಇರುವ ಷರತ್ತುಗಳನ್ನು ಸರಳಗೊಳಿಸಲು ಬಗ್ಗೆಯೂ ಚರ್ಚಿಸಲಾಯಿತು ಎಂದು ಡಿಸಿಎಂ ಹೇಳಿದರು.

    ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಮತ್ತಿತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

    ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು

    ನನ್ನ ಎರಡು ವರ್ಷದ ಪುಟ್ಟ ಮಗ ಕೈಯಲ್ಲೊಂದು ಪುಸ್ತಕ ಹಿಡಿದು ಎಲ್ಲೋ ಪರೀಕ್ಷೆ ಹತ್ತಿರ ಬರುತ್ತಿರುವ ಮಕ್ಕಳು ಓದುತ್ತಿರುವಂತೆ ನಟಿಸುವುದನ್ನು ನೋಡುವುದೇ ಒಂದು ಖುಷಿ.  ಸಮಯ ಸಿಕ್ಕಾಗೆಲ್ಲ ಪುಸ್ತಕ ತಿರುವಿ ಹಾಕುವ ಇಲ್ಲವೇ ತನಗೆ ಬರುವ ಪದ್ಯಗಳನ್ನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಾಡಿ , ಹಾಡಿ ತೋರಿಸುವ ಪರಿ ಮನಸ್ಸಿಗೆ ಮುದ ಕೊಡುತ್ತದೆ.ಇಂದಿನ ಮಕ್ಕಳು ದಿನವಿಡೀ ಗ್ಯಾಜೆಟ್ ಕೊಟ್ಟರೂ ಹಿಡಿದು ಕುಳಿತುಬಿಡುವುದನ್ನು ನೋಡಿದರೆ ಎಂತಹ  ಪೋಷಕರಿಗೂ ಖೇದ ಎನಿಸದಿರದು.

    ನಮ್ಮ ಮಕ್ಕಳೂ ಕಥೆ ಓದಬೇಕು , ಸಾಹಿತ್ಯ  ತಿಳಿಯಬೇಕು ನಮ್ಮಂತೆಯೇ ಗಿಡಮರ ಮಣ್ಣುಗಳ  ಮಧ್ಯೆ ಬೆಳೆಯಬೇಕು ಎಂಬುದು ಎಲ್ಲರ ಆಕಾಂಕ್ಷೆ.  ಮಲೆನಾಡಿನ ಹಳ್ಳಿಯ ಹಸಿರುಗಾಡಿನ ಮಧ್ಯೆ ಹುಟ್ಟಿ ಬೆಳೆದ ನನಗೆ ನನ್ನ ಮಗ ಲಂಡನ್ ನ ಸಿಟಿಯಲ್ಲಿ ಬೆಳೆದರೆ ಏನೋ ಕಳೆದುಕೊಳ್ಳುವನೇನೋ ಎಂಬ ಆತಂಕ ಸದಾ  ಕಾಡುತ್ತಿತ್ತು.  ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು .

    ಇಲ್ಲಿನ ಪೋಷಕರಿಗೆ ಹಿರಿಯರ ನೆರವಿರುವುದಿಲ್ಲ ನಿಜ  , ಏನಾದರೂ ಆದರೆ ಮನೆಮದ್ದು ಮಾಡಲು, ಮಕ್ಕಳನ್ನು ಸಂತೈಸಲು  ಕೂಡ ಗೊತ್ತಿರದ ಯುವ ಪೋಷಕರ ಆತಂಕವನ್ನು ಕಡಿಮೆ ಮಾಡಲೆಂದೇ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು ವಿಶೇಷ ಕಾಳಜಿ ತೆಗೆದುಕೊಂಡು ,  ವಿವಿಧ ರೀತಿಯ ತರಗತಿಗಳನ್ನು ಪ್ರತಿದಿನ ಇಟ್ಟಿರುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ  ಮಾಡಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಓದುವ ಗೀಳನ್ನು ಹಚ್ಚಬೇಕು ಹಾಗೆ ಮಾಡಿದಲ್ಲಿ ಅವರಿಗೆ ತರಗತಿಯಲ್ಲಿ ಕೂಡ ಏಕಾಗ್ರತೆ ಹೆಚ್ಚಲು ಮತ್ತು ಆಸಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಮಕ್ಕಳ ತಜ್ಞರ ಅಂಬೋಣ .

    ಮಕ್ಕಳು ಗ್ಯಾಜೆಟ್ ಗಳನ್ನು ಹೆಚ್ಚು ಹೆಚ್ಚು ಬಳಸಿದಂತೆಲ್ಲ ಅವರ ಅರೋಗ್ಯ ಕೂಡ ಹದಗೆಡುತ್ತದೆ , ಕಣ್ಣಿನ ತೊಂದರೆ ಬರುತ್ತದೆ ,ಕುಳಿತಲ್ಲಿಂದ ಏಳದೆ ಬೊಜ್ಜು ಕೂಡ ಬರಬಹುದು. ಹಾಗೆಯೇ ಇಡೀ ದಿನ ಮಕ್ಕಳ ಮನಸ್ಸಿನಲ್ಲಿ ಗೇಮ್ಸ್ ತಲೆಯಲ್ಲಿ ಓದುವುದರಿಂದ ಓದಿನ ಬಗ್ಗೆ ಶಾಲೆಯೆಲ್ಲಿ ಮಾಡುವ ಪಾಠದ ಬಗ್ಗೆ ಯಾವುದೇ ರೀತಿಯ ಇಚ್ಛೆ ತೋರಿಸಲಾರರು . 

    ಅಷ್ಟೇ ಅಲ್ಲ ಮಕ್ಕಳು ಮನೆ ಬಿಟ್ಟು ಹೊರಹೋಗಲು ಕೂಡ ಚಿಂತಿಸುತ್ತಾರೆ . ಹಿಂದೆ ಮಕ್ಕಳು ಹೊರಹೋಗಲು ಕಾದು ಕುಳಿತಿರುತ್ತಿದ್ದರು , ಪರಿಚಯವಿಲ್ಲದ ಕಡೆಗಳಿಗೆ ಹೋದರೂ ಅಲ್ಲಿ ಸಿಕ್ಕ ಇತರ ಮಕ್ಕಳೊಂದಿಗೆ ಗೆಳೆತನ ಮಾಡಿಕೊಳ್ಳುತ್ತಿದ್ದರು . ಈ ರೀತಿಯಾಗಿ ಸಾಮಾಜಿಕವಾಗಿ ಬೆರೆಯುತ್ತಿದ್ದರು . ಆದರೆ ಈಗಿನ ಮಕ್ಕಳಿಗೆ  ನೆಂಟರಿಶ್ಟರ ಮದುವೆ , ಮುಂಜಿಗಳಿಗೆ ಹೋದರೆ ಅಲ್ಲಿ ಆಟವಾಡಲು ಮೊಬೈಲ್ ಬೇಕು , ಹೆಚ್ಚಿನ ಮಕ್ಕಳು ಹೊರಗೆ ಕರೆದುಕೊಂಡು ಹೋದರೆ ಮಂಕಾಗಿ ಕುಳಿತುಕೊಳ್ಳುವುದು ಕಂಡುಬರುತ್ತದೆ.    ಮಕ್ಕಳು ಗ್ಯಾಜೆಟ್ ಗಳ  ಮೊರೆ ಹೋಗಿ ದಿನವಿಡೀ ಅದರೊಂದಿಗೆ ಕಳೆಯುವುದನ್ನು ನೋಡಿದರೆ ಖೇದವೆನಿಸುತ್ತದೆ.

    ನಮ್ಮ ಕಾಲದಲ್ಲಿ ಗ್ಯಾಜೆಟ್ ಇಲ್ಲದೆ ನಾವೆಲ್ಲಾ ಮಣ್ಣು , ಗಿಡಮರಗಳ ನಡುವೆ ಆಡುತ್ತಾ ಬೆಳೆದಿರುವುದು ಅದೃಷ್ಟ ಎನ್ನಬಹುದು. ಹಾಗಾದರೆ ಈಗಿನ ಮಕ್ಕಳು ಹೀಗೆ ಗ್ಯಾಜೆಟ್ ಹಿಡಿದು ಕೂರುವುದನ್ನು ತಡೆಯಲು ಸಾಧ್ಯವಿಲ್ಲವೇ ? ಖಂಡಿತ ಸಾಧ್ಯ.  ಇದನ್ನು ಪೋಷಕರಾದ ನಾವೇ ಮನೆಯಿಂದಲೇ  ಪ್ರಾರಂಭಿಸಬೇಕು.  ಇದಕ್ಕಾಗಿ ಮಕ್ಕಳ ಜೊತೆ ಕಳೆಯಲು ಸಮಯ ನಿಗದಿ ಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ.

    ಲಂಡನ್ ನ ಪ್ರತಿ ಚಿಲ್ಡ್ರನ್ ಸೆಂಟರ್ ಗಳು ಇದಕ್ಕಾಗಿ ವಿವಿಧ ತರಗತಿಗಳನ್ನು ಮಾಡುತ್ತಿವೆ. ಮಗು ಮೂರು ತಿಂಗಳು ಇರುವಾಗಲೇ ಅವಕ್ಕೆ ಪುಸ್ತಕವನ್ನು ತೋರಿಸಲು ಪ್ರಾರಂಭಿಸಿದರೆ ಅವಕ್ಕೆ ಪುಸ್ತಕ ಪ್ರೀತಿ ಹುಟ್ಟುತ್ತದೆ ಎಂಬುದು ಸಂಶೋಧಕರು ಕಂಡುಕೊಂಡ ಸತ್ಯ. ಮೊದಮೊದಲು ಪುಸ್ತಕವನ್ನು ಬಾಯಿಗೆ ಇಡಬಹದು, ಕಾಲ ಕಳೆದಂತೆ ಅದರ ಪುಟವನ್ನು ತಿರುಗಿಸಿ ಅದರೊಂದಿಗೆ ಆಡಲು ಪ್ರಾರಂಭಿಸುವ ಮಗು ಕ್ರಮೇಣ ಪುಸ್ತಕದಲ್ಲಿರುವ ಚಿತ್ರಗಳ ಮೇಲೆ ತನ್ನ ಗಮನವನ್ನು ಹರಿಸುತ್ತದೆ. ಒಂದೇ ಪುಸ್ತಕವನ್ನು ಮತ್ತೆ ಮತ್ತೆ ತೋರಿಸಿ ಅದರಲ್ಲಿರುವ ಕಥೆ ಓದಲು ಪ್ರಾರಂಭಿಸಿದರೆ ಅಥವಾ ಅದರಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರೆ  ಮಗು ಅದರಲ್ಲಿ ಕುತೂಹಲ ಹೊಂದುವುದು ಮಾತ್ರವಲ್ಲ ಅದರ ಶಬ್ದಕೋಶ ಕೂಡ ಬೆಳೆಯುತ್ತಾ ಹೋಗುತ್ತದೆ. ದಿನದಲ್ಲಿ ಕೇವಲ ಅರ್ಧ ತಾಸಿನಷ್ಟು ಕಥೆ ಓದುವ ದಿನಚರಿ ಇಟ್ಟುಕೊಂಡರೆ ಮಗು ಒಂದು ವರ್ಷವಾಗುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಗುರುತಿಸುತ್ತದೆ . ತೊದಲು ನುಡಿ ನುಡಿಯಲು ಕಲಿಯುತ್ತದೆ. ರೈಮ್ಸ್ ಗಳನ್ನು ಅಥವಾ ಕಥೆಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಂಡ ಮಗು ಇತರ ಮಕ್ಕಳಿಗಿಂದ ಬೇಗ ಮಾತನಾಡುವುದನ್ನು ಕಲಿಯುವುದನ್ನು ಗಮನಿಸಬಹುದು. 

    ಮಕ್ಕಳ ಬುದ್ದಿ ವಿಕಾಸಕ್ಕೆ ಅವರು ಮಾಡುವ ಕೆಲಸದಲ್ಲಿ ಅಥವಾ ಆಟದಲ್ಲೇ ಇರಲಿ ಏಕಾಗ್ರತೆ ಹೆಚ್ಚಿಸಲು ಮಗುವಾಗಿರುವಾಗಲೇ ಕಥೆ ಓದುವುದು , ರೈಮ್ಸ್ ಹೇಳುವುದು ಈ ರೀತಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಟ್ಟಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ.

    ಒಟ್ಟಾರೆಯಾಗಿ ಕಲಿಕೆಯಲ್ಲಿ ಒಂದು ಮಗು ಮುಂದುವರೆಯಬೇಕು ಎಂದಲ್ಲಿ ಪುಸ್ತಕ ಪ್ರೀತಿ ಒರೆ ಹಚ್ಚುವುದು ಅಷ್ಟೇ ಅವಶ್ಯಕ. ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳಲ್ಲಿ ಹೇಳುವ ಪ್ರಕಾರ ಮಕ್ಕಳಿಗೆ ಊಟ ತಿಂಡಿ ಮಾಡುವಾಗ ಟೀವಿ ಹಾಕಿಯೋ ಅಥವಾ ಮೊಬೈಲ್ ನಲ್ಲಿ ಸಾಕಷ್ಟು ಹಾಡುಗಳನ್ನು ಹಾಕಿಯೋ ತಿನಿಸುವುದು ಪೋಷಕರು ಮಾಡುವ ದೊಡ್ಡ ತಪ್ಪು , ಹಿಂದೆ ಈ ರೀತಿ ಮಾಡದೆ ಚಂದಮಾಮ ತೋರಿಸಿ ಅಥವಾ ಮರಗಿಡ ಇತರ ಪ್ರಾಣಿಗಳನ್ನು ತೋರಿಸಿ ಅಥವಾ ಕಟ್ಟು ಕಥೆ ಹೇಳಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ.

    ಹೌದು ಪೋಷಕರೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು , ಬುದ್ದಿವಂತರಾಗಬೇಕು ಎಂದಿದ್ದಲ್ಲಿ  ಮಗುವಾಗಿರುವಾಗಿನಿಂದಲೇ ಎಚ್ಚೆತ್ತುಕೊಳ್ಳಕೊಳ್ಳೋಣ . ಅವರೊಡನೆ ಬೆರೆತು ಮಕ್ಕಳೊಡನೆ ಕುಳಿತು , ಟಿವಿ , ಮೊಬೈಲ್ , ಟ್ಯಾಬ್ಲೆಟ್ ಗಳನ್ನು ದೂರವಿಟ್ಟು ಮಗುವಿನಿನೊಡನೆ ಮಗುವಾಗಿ ಬೆರೆತುಬಿಡೋಣ. ಮಕ್ಕಳೊಡನೆ ಕಳೆಯುವ ಸಮಯ ನಮ್ಮ ಆರೋಗ್ಯವನ್ನು ಉಲ್ಲಸಿತವಾಗಿಡುವುದರಲ್ಲಿ ಅನುಮಾನವಿಲ್ಲ. ಇಂದೇ ಹೋಗಿ ನಿಮ್ಮ ಮಗುವಿಗೆ ಪುಸ್ತಕ ತಂದು ಕೊಡಿ , ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು.

    Photo by 🇸🇮 Janko Ferlič on Unsplash

    ಶುಲ್ಕ ಪಾವತಿ ಆದೇಶ: ಮಕ್ಕಳ ಹಿತಕ್ಕಾಗಿ ಎಲ್ಲರೂ ಪಾಲಿಸುವುದು ಒಳಿತು- ಸುರೇಶ್ ಕುಮಾರ್

    ಪೋಷಕರು ಮತ್ತು ಖಾಸಗಿ ಶಾಲಾ ಕಾಲೇಜುಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿ ಸಂಬಂಧದಲ್ಲಿ ಸರ್ಕಾರ ಎಲ್ಲರಿಗೂ ಅನುಕೂಲವಾಗುವಂತಹ ನಿಟ್ಟಿನಲ್ಲಿ ಚಿಂತಿಸಿ ಆದೇಶ ಹೊರಡಿಸಿದ್ದು ಅದನ್ನು ಈ ವರ್ಷದ ಮಟ್ಟಿಗೆ ಉಭಯತ್ರರೂ ಪಾಲಿಸುವುದರಿಂದ ನಮ್ಮ ವಿದ್ಯಾರ್ಥಿಗಳ ಹಿತರಕ್ಷಣೆ ಸಾಧ್ಯವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಆರ್ಥಿಕವಾಗಿ ಜರ್ಝರಿತವಾಗಿದ್ದ ಪೋಷಕರು ಶುಲ್ಕ ಪಾವತಿಸಿರಲಿಲ್ಲವಾದ್ದರಿಂದ ಖಾಸಗಿ ಶಾಲೆಗಳೂ ಸಹ ತೀವ್ರ ತೊಂದರೆಗೀಡಾಗಿದ್ದುದನ್ನು ಗಮನಿಸಿ ಸರ್ಕಾರ ಒಂದು ಸಮನ್ವಯ ಸೂತ್ರ ಪಾಲಿಸಿ ಕಳೆದ ವರ್ಷದ ಬೊಧನಾ ಶುಲ್ಕದ ಶೇ. 30ರಷ್ಟು ಪಾವತಿಸಲು ಮತ್ತು ಸ್ವೀಕರಿಸಲು ಸೂಚಿಸಿ ಆದೇಶ ಹೊರಡಿಸಿತ್ತು ಎಂದರು.

    ಆದರೆ ಶೇ. 30 ಬೋಧನಾ ಶುಲ್ಕ ಪಾವತಿ ಆದೇಶವನ್ನು ಬಹುತೇಕ ಖಾಸಗಿ ಶಾಲಾ ಸಂಘಟನೆಗಳು ಸ್ವಾಗತಿಸಿದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿವೆ. ಹಿಂದೆಂದೂ ಕಾಣದಂತಹ ಈ ವರ್ಷದ ವಿಚಿತ್ರ ಸನ್ನಿವೇಶದಲ್ಲಿ ಎಲ್ಲ ಶೈಕ್ಷಣಿಕ ಪಾಲುದಾರರೊಂದಿಗೆ ಹತ್ತಾರು ಬಾರಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಈ ವರ್ಷದ ಮಟ್ಟಿಗೆ ಶೇ. 30 ಶುಲ್ಕ ಪಾವತಿ ಕುರಿತು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೊರೋನಾ ಹಿನ್ನೆಲೆಯಲ್ಲಿ ಶುಲ್ಕ ಪಾವತಿಸಲು ಪೋಷಕರು ಹಿಂಜರಿದಾಗ ಖಾಸಗಿ ಶಾಲೆಗಳು ತೊಂದರೆ ಅನುಭವಿಸಿದವು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಈ ಮೊದಲು ಒಂದು ಕಂತಿನ ಶುಲ್ಕ ಪಾವತಿಸಲು ಪೋಷಕರಿಗೆ ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಸÀಂಗ್ರಹವಾದ ಶುಲ್ಕವನ್ನು ಶಿಕ್ಷಕರ ಮತ್ತು ಸಿಬ್ಬಂದಿಯ ವೇತನಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸದರಿ ಸುತ್ತೋಲೆಯಲ್ಲಿ ಶಾಲೆಗಳಿಗೆ ಸೂಚಿಸಲಾಗಿತ್ತು. ಜೊತೆಗೆ ಈ ಬಾರಿ ಇದು ಸಂಕಷ್ಟದ ಸಮಯವಾದ್ದರಿಂದ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರುವಂತೆ ಮತ್ತೊಂದು ಸುತ್ತೋಲೆ ಸಹ ಹೊರಡಿಸಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಎಷ್ಟು ಶುಲ್ಕ ಪಾವತಿಸಬೇಕೆಂದು ಗೊತ್ತಾಗದೇ ಪೋಷಕರು ಶುಲ್ಕ ಪಾವತಿಗೆ ಮುಂದಾಗಲಿಲ್ಲ. ಹಲವಾರು ತಿಂಗಳು ಶುಲ್ಕ ಪಾವತಿಯಾಗದೇ ಶಾಲೆಗಳು ಆರ್ಥಿಕವಾಗಿ ತೊಂದರೆಗೊಳಗಾಗಿ ಶಿಕ್ಷಕರು ಸಿಬ್ಬಂದಿ ವೇತನಕ್ಕೆ ಪರದಾಡುವಂತಾಯಿತು. ಇದೆಲ್ಲವನ್ನೂ ಮನಗಂಡು ಎಲ್ಲರ ಹಿತದೃಷ್ಟಿಯಿಂದ ಸರ್ಕಾರ ಎಲ್ಲರೊಂದಿಗೆ ಚಿರ್ಚಿಸಿಯೇ ಒಂದು ಸಮನ್ವಯ ಸೂತ್ರದಂತೆ ಶೇ. 30 ಶುಲ್ಕ ಪಾವತಿಸಲು ಸೂಚಿಸಿತು ಎಂದು ಸಚಿವರು ಹೇಳಿದರು.

    ಸರ್ಕಾರ ಶೇ. 30ರಷ್ಟು ಶುಲ್ಕ ಪಾವತಿಸುವಂತೆ ಆದೇಶ ಹೊರಡಿಸಿದಾಗ ಪೋಷಕರು ತಮ್ಮ ಮಕ್ಕಳ ಶಾಲೆಗಳಿಗೆ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಶಾಲೆಗಳು ಸದರಿ ಶುಲ್ಕ ಪಾವತಿಗೆ ಪೋಷಕರಿಗೆ ಅನುವು ಮಾಡಿಕೊಟ್ಟಿವೆ. ಇದರಿಂದ ಆ ಶಾಲೆಗಳ ಸಿಬ್ಬಂದಿಯ ವೇತನಕ್ಕೆ ಅನುಕೂಲವಾಗಿರುವುದಂತೂ ನಿಜ. ಸರ್ಕಾರ ಈ ಆದೇಶ ಹೊರಡಿಸಿದ್ದರ ಪರಿಣಾಮ ಪ್ರಸ್ತುತ ಶಾಲೆಗಳಲ್ಲಿ ಶುಲ್ಕ ಸಂಗ್ರಹವಾಗುತ್ತಿದೆ. ಇಲ್ಲದೇ ಹೋಗಿದ್ದರೆ ಇದು ಇನ್ನೂ ಬಿಗಡಾಯಿಸುತಿತ್ತು. ಸರ್ಕಾರ ಶುಲ್ಕ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದರಿಂದಲೇ ಪೋಷಕರು ಶುಲ್ಕ ಪಾವತಿಸಲು ಮುಂದಾಗಿದ್ದಾರೆ ಎಂಬುದನ್ನು ನಮ್ಮ ಶಾಲೆಗಳು ಅರ್ಥೈಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

    ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬೇಕೆಂದು ಯಾರಾದರೂ ನನಗೆ ಸಲಹೆ ನೀಡಿದರೆ ನಾನಂತೂ ಮುಕ್ತವಾಗಿ ಸ್ವೀಕರಿಸುತೇನೆ. ಇದನ್ನು ನಾವು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕು. ಇಂತಹ ವಿಚಿತ್ರ ಸನ್ನಿವೇಶದಲ್ಲಿ ನಾವು ನೀವೆಲ್ಲರೂ ಪೋಷಕರನ್ನೂ ಒಳಗೊಂಡು ಕುಳಿತು ಚರ್ಚೆ ಮಾಡೋಣ. ಈ ವಿಚಿತ್ರ ಸನ್ನಿವೇಶದಲ್ಲಿ ಈ ವರ್ಷದ ಮಟ್ಟಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ಕಾಯಲು ನಾವೆಲ್ಲ ಮುಂದಾಗಬೇಕು ಎಂದು ಸಚಿವರು ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದಾರೆ.

    ಚಿನ್ನಮ್ಮನ ಪುನರಾಗಮನ ಕಳಗಂ ನಲ್ಲಿ ಕೋಲಾಹಲ

    ಚುನಾವಣೆ ಪೂರ್ವ ಸಮೀಕ್ಷೆ


    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ.ಚುನಾವಣಾ ಸಮೀಕ್ಷೆಯ ಎರಡನೆ ಕಂತು ಇಲ್ಲಿದೆ.


    ಎಸ್.ಕೆ. ಶೇಷಚಂದ್ರಿಕ

    ತಮಿಳುನಾಡಿನ ಮತದಾರ ಮತ್ತು ಚುನಾವಣೆಗಳಲ್ಲಿ ಆತನ ಪಾಲ್ಗೊಳ್ಳುವಿಕೆ ಕುರಿತು ವರದಿ ಮಾಡುವ ಮುನ್ನ ತಮಿಳು ಜನರ ಅಮಿತೋತ್ಸಾಹ ಸಂಕಲ್ಪಗಳ ಬಗೆಗೆ ಹೇಳಲೇಬೇಕು.

    ಕನಸಿನ ಶೋ ಪ್ರಪಂಚದಿಂದ ಭೂಮಿಗೆ ನೇರವಾಗಿ ಇಳಿದುಬಂದವರು ತಮಿಳು ಜನ. ಸಿನಿಮಾದಲ್ಲಿ ನಟ ನಟಿ ಆಡಿತೋರಿಸುವುದನ್ನೆಲ್ಲಾ ಬಹುತೇಕ ಜನಸಾಮಾನ್ಯರು,ನಿಜಜೀವನದಲ್ಲಿ ಮಾಡಿ ತೋರಿಸುತ್ತಾರೆ ಎಂದು ಖಚಿತವಾಗಿ ನಂಬಿದವರು. ಕಳೆದ ನಾಲ್ಕು ದಶಕಗಳ ಸಿನಿರಂಗದ ನಟ ನಟಿಯರು ಮತ್ತು ರಾಜಕೀಯ ಪಕ್ಷಗಳ ಅವಿನಾಭಾವ ನೆಂಟಸ್ಥಿಕೆ ಇದಕ್ಕೊಂದು ನಿದರ್ಶನ.

    ಎರಡನೆಯ ಬಹುಮುಖ್ಯ ಅಂಶವೆಂದರೆ ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆ, ತತ್ವ ಸಿದ್ಧಾಂತ ಮತ್ತು ಭರವಸೆಗಳಿಗಿಂತ ಇಲ್ಲಿನ ಮತದಾರರ ಗಮನ ಮುಂದಿನ ಮುಖ್ಯಮಂತ್ರಿ ಆಯ್ಕೆ. ಅಮೇರಿಕಾ ಜನತಂತ್ರವನ್ನು ಮೀರಿಸುವ ಚಾಲಾಕಿ ತಮಿಳು ಮತದಾರ.ಬಣಹಚ್ಚಿ ಮೇಕಪ್ ನಲ್ಲಿದ್ದ ನಟ ನಟಿಯರನ್ನು ನೇರವಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸುವ ಹೆಗ್ಗಳಿಕೆ ಇಲ್ಲಿನ ಮತದಾರ ಸಂಸ್ಕೃತಿ.

    ರಾಜಮಾತೆಯಾದ ಶಶಿಕಲಾ

    ಮತದಾರನ ಈ ಮನೋಭೂಮಿಕೆಯ ಹಿನ್ನಲೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಗಳು ಈಗಾಗಲೇ ತಾರಕಕ್ಕೇರಿದಂತಾಗಿದೆ ತಮಿಳುನಾಡಿನ ಚಿತ್ರ. ಪ್ರಧಾನ ಕಳಗಂ ಪಕ್ಷ ಗಳಾದ ಪ್ರತಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳ ಕಾರ್ಯಕರ್ತರು ಭಾಜಾ ಭಜಂತ್ರಿಯೊಂದಿಗೆ ಚುನಾವಣಾ ತಾಲೀಮು ನಡೆಸಿದ್ದಾರೆ. ಚೆನ್ನೈ, ಮಧುರೈ, ಸೇಲಂ, ತಿರುವಳ್ಳೂರು, ತೂತುಕುಡಿ, ದಿಂಡಿಗಲ್ ಇವೇ ಮೊದಲಾದ ಪ್ರಮುಖ ರಾಜಕಾರಣ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳು ಹುಟ್ಟಿಕೊಂಡಿವೆ.

    ತಮಿಳು ರಾಜಕಾರಣಿಗಳು ಬಹು ಚಾಣಾಕ್ಷ ಮಂದಿ. ಚುನಾವಣಾ ಆಯೋಗದ ನೀತಿ ಸಂಹಿತೆಗಳು ಜಾರಿಗೆ ಬರುವ ಮೊದಲೇ ತಮಿಳುನಾಡಿನ ನಗರ ಪಟ್ಟಣಗಳಲ್ಲಿ ಬೃಹತ್ ಬೋರ್ಡ್ ಗಳು, ಭಿತ್ತಿಪತ್ರಗಳು ಕಣ್ಣು ಕುಕ್ಕಲು ಆರಂಭಿಸಿವೆ.

    ಉದಾಹರಣೆಗೆ ಎಂ ಕೆ ಸ್ಟಾಲಿನ್ನರ ಡಿಎಂಕೆ ಪಕ್ಷ ಚಾಲೂಕಿನಿಂದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಶೋ ರೂಮ್ ಗಳ ಮನ ಒಲಿಸಿ ಅವರ ಬೋರ್ಡಿನ ಮೇಲೆ ತಾತ್ಕಾಲಿಕವಾಗಿ ಡಿಎಂಕೆ ಪ್ರಚಾರ ನಡೆಸಿದೆ.

    ಏತನ್ಮಧ್ಯೆ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು, ಇದೀಗ ಬಿಡುಗಡೆಯಾಗಿರುವ ದಿ. ಜಯಲಲಿತಾರ ಬಲಗೈನಂತಿದ್ದ ಶಶಿಕಲಾ ಚೆನ್ನೈ ಸೇರಿದ್ದಾರೆ. ರಾತ್ರೋರಾತ್ರಿ ರಾಜಮಾತೆಯ ಪಟ್ಟಕ್ಕೆ ಏರಿರುವ ಚಿನ್ನಮ್ಮನ ಚೆನ್ನೈ ಪ್ರಯಾಣ ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ.

    ದಿನಕರನಿಗೆ ಭಾಗ್ಯದ ಬಾಗಿಲು

    ಸಣ್ಣಪುಟ್ಟ ಕಾರಣಗಳಿಗೆಲ್ಲ ಕೈಕೈ ಮಿಲಾಯಿಸಿ ಉದ್ರಿಕ್ತರಾಗುವ ಕಳಗಂ ಪಕ್ಷಗಳೆರಡರ ಕಾರ್ಯಕರ್ತರಿಗೂ ಶಶಿಕಲಾರ ಪುನರಾಗಮನ ಬಹು ಮಹತ್ವದ್ದಾಗಿದೆ. ಮುಖ್ಯಮಂತ್ರಿ ಇರಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ತಮ್ಮ ಕುರ್ಚಿಗೆ ಸಂಚಕಾರ ಬಂತಂತೆ ಚಡಪಡಿಸುತ್ತಿದ್ದಾರೆ. ಗಾಳಿ ಬೀಸಿದತ್ತ ಹೊರಳುವ ಎಐಎಡಿಎಂಕೆ ಶಾಸಕರಿಗೆ ಶಶಿಕಲಾ ಆಗಮನ ನೂರೆಂಟು ಆಶೋತ್ತರಗಳ ಕನಸನ್ನು ತಂದಿದೆ. ಒಳಜಗಳ ತಾರಕಕ್ಕೇರಿದೆ.

    ಶಶಿಕಲಾಗೆ ಮಾನಸ ಪುತ್ರನೊಬ್ಬನಿದ್ದಾನೆ. ಮನೆ ಸಂಬಂಧದಲ್ಲಿ ಸೋದರಳಿಯ. ಈತನ ಹೆಸರು ಟಿ ಟಿ ಎ ದಿನಕರನ್. ಶಶಿಕಲಾ ಅವರ ಬಿಡುಗಡೆ ದಿನಕರನಿಗೆ ಭಾಗ್ಯದ ಬಾಗಿಲು ತೆರೆದಂತಾಗಿದೆ.ಈ ವಿವಾದದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಎಐಎಡಿಎಂಕೆ ಪಕ್ಷದ ಬಾವುಟದ ಬಳಕೆ ಕುರಿತು ಜಟಾಪಟಿ ನಡೆದಿದೆ. ಈಗಾಗಲೇ ಪರಪ್ಪನ ಅಗ್ರಹಾರದಿಂದ ರೆಸಾರ್ಟ್ ಗೆ ಶಶಿಕಲಾ ಕಾರಿನಲ್ಲಿ ಹೋದಾಗ ದಿನಕರ್ ಪಕ್ಷದ ಬಾವುಟ ಹಾರಿಸಿದ್ದ.

    ಬಾವುಟದೊಂದಿಗೆ ಮೆರವಣಿಗೆ ನಡೆಸಲೇ ಬೇಕೆಂಬ ಹಟ
    ಸಾಧಿಸುತ್ತಿರುವ ದಿನಕರನ್ “ಸೇನಾ ದಂಡ ನಾಯಕನೇ ಎದುರು ನಿಂತರೂ ” ಮೆರವಣಿಗೆ ನಿಲ್ಲುವುದಿಲ್ಲ ಎಂದು ಸಿನಿಮೀಯ ರೀತಿಯಲ್ಲಿ ಸವಾಲೆಸೆದಿದ್ದ. ಆತ ಹಾಕಿದ್ದ ಮತ್ತೊಂದು ಬೆದರಿಕೆಯೆಂದರೆ “ದೇಹದಲ್ಲಿ ಬಾಂಬ್ ಇಟ್ಟು ಕೊಂಡಿರುವ ಆತ್ಮಾರ್ಪಣೆಯ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ”. ಆತ ಅಂದು ಕೊಂಡಂತೆ ಚಿನ್ನಮ್ಮನ ತಮಿಳುನಾಡು ಪ್ರವೇಶ ಭರ್ಜರಿಯಾಗಿದೆ. ಬೆಂಗಳೂರಿನಿಂದ ಚೆನ್ನೈ ತಲುಪುಲು ಶಶಿಕಲಾ ತೆಗದುಕೊಂಡ ಸಮಯ 23 ಗಂಟೆ. ಹಾದಿ ಮಧ್ಯೆ ಬರುವ ಪ್ರತಿ ಊರಲ್ಲೂ ಭರ್ಜರಿ ಸ್ವಾಗತ.64 ಕಡೆ ಅದ್ದೂರಿ ಸಮಾರಂಭ. ಎಲ್ಲೆಡೆಯೂ ಚಿನ್ನಮ್ಮನದು ಜಯಲಲಿತಾ ಸ್ಟೈಲೇ.

    ಪೆರಂಬೂರಿನಲ್ಲಿ ಹಿಂದೆ ರಾಜೀವ್ ಗಾಂಧಿಯವರ ಹತ್ಯೆ ಯನ್ನು ಕಂಡಿದ್ದ ತಮಿಳುನಾಡು ಆಡಳಿತಕ್ಕೆ ಟಿ ಟಿ ಎ ದಿನಕರನ್ ಭಾರೀ ತಲೆನೋವಾಗಿದ್ದಾನೆ.

    ಇಬ್ಬರ ಜಗಳ ಮೂರನೆಯವನಿಗೆ ಲಾಭ

    ಚುನಾವಣೆಯ ವೇಳಾಪಟ್ಟಿಯ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವ ಪರಿಸ್ಥಿತಿಯಲ್ಲಿ ಎಐಎಡಿಎಂಕೆ ಮತ್ತು ಬಂಡಾಯ ಪಕ್ಷವಾದ ‘ಅಮ್ಮ ಮುನ್ನೇತ್ರ ಕಳಗಮ್’ ನಡುವೆ ತೀವ್ರ ರೀತಿಯ ವಾಗ್ವುದ್ಧ ನಡೆದಿರುವುದು ತಮಿಳುನಾಡು ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಪಕ್ಷದ ಜನನಿ, ಅಧಿನಾಯಕಿ,ಅನಭಿಷಕ್ತೆ ದಿ. ಜಯಲಲಿತಾಳ ಹೆಸರಿನಲ್ಲಿ ಚುನಾವಣೆಯಲ್ಲಿ ಆಯ್ಕೆಗೊಂಡು ಅಧಿಕಾರದಲ್ಲಿರುವ ಅಖಿಲ ಭಾರತ ಅಣ್ಣಾ ಡಿಎಂಕೆ (ಎಐಎಡಿಎಂಕೆ) ಪಕ್ಷದ ಅಸ್ತಿತ್ವಕ್ಕೆ ಪೆಟ್ಟು ಬಿದ್ದಂತಾಗಿದೆ. ಜೈಲಿನಿಂದ ಹೊರಬಂದ ಶಶಿಕಲಾ ಗಾಯಗೊಂಡ ಹುಲಿಯಂತಾಗಿದ್ದಾರೆ. ಪಕ್ಷದ ಭವಿಷ್ಯಕ್ಕಿಂತ ತನ್ನ ಇರುವಿಕೆಗೆ ಸವಾಲಾದ ಮರ್ಯಾದೆಯ ಪ್ರಶ್ನೆ ಇದರಲ್ಲಿ ಅಡಗಿದೆ.

    ಇದೇ ಸ್ಥಿತಿ ಮುಂದುವರಿದರೆ ಎಂಜಿಆರ್, ಜಯಲಲಿತಾ ಕಟ್ಟಿ ಬೆಳೆಸಿದ ಪಕ್ಷ ಉಳಿಯುವುದು ಕಷ್ಟವೆನಿಸುತ್ತದೆ.

    ನಿಮ್ಮ ಮನೆ ಅಂಗಳದಲ್ಲಿ ಸ್ಟಾಲಿನ್

    ಚುನಾವಣಾ ವೇಳಾಪಟ್ಟಿ ಪ್ರಕಟಣೆಯನ್ನು ಕಾಯದೆ ಮತದಾರರನ್ನು ಒಲಿಸಲು ಬೃಹತ್ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳುವುದರಲ್ಲಿ ಕಳಗಂ ದ್ರಾವಿಡ ಪಕ್ಷಗಳು ಎತ್ತಿದ ಕೈ.ಉದಾಹರಣೆಗೆ ಪ್ರತಿಪಕ್ಷ ಡಿಎಂಕೆ ಮತ್ತು ಪಕ್ಷದ ನಾಯಕ ಎಂ ಕೆ ಸ್ಟಾಲಿನ್.ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಆಂತರಿಕ ಕಚ್ಚಾಟ ವೈಮನಸ್ಸುಗಳಿಗಿಂತ ಮುಂಚೆಯೇ, ಈ ವರ್ಷದ ಜನವರಿ ಒಂದರಿಂದ ತಮ್ಮ ಚುನಾವಣಾ ಕಾರ್ಯ ಆರಂಭಿಸಿದ ನಾಯಕ ಸ್ಟಾಲಿನ್.ಈಗಂತೂ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂರವರ ಅಸಹಾಯಕ ಪರಿಸ್ಥಿತಿ ಡಿಎಂಕೆ ಪಕ್ಷಕ್ಕೆ ಅನಿರೀಕ್ಷಿತ ಬೋನಸ್ ಸಿಕ್ಕಂತಾಗಿದೆ.2016ರ ಚುನಾವಣೆಯಲ್ಲಿ ಕೇವಲ 97 ಸ್ಥಾನಗಳಿಸಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾದ ಸ್ಟಾಲಿನ್ ಈ ಬಾರಿ ಶತಾಯ ಗತಾಯ ಪಕ್ಷದ ಯಶಸ್ಸಿಗೆ ಕಂಕಣ ತೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರಿಗೆ ‘ತಳಪತಿ’ ಎಂದೇ ಪರಿಚಿತರಾದ ಅರುವತ್ತೇಳು ವರುಷದ ಎಂ ಕೆ ಸ್ಟಾಲಿನ್ ದಿ. ಕರುಣಾನಿಧಿಯವರ ಪುತ್ರ. ನಾವು ಕಂಡಂತೆ ಸಮಕಾಲೀನ ರಾಜಕೀಯ ನಾಯಕರುಗಳ ಪೈಕಿ ತಮಿಳುನಾಡಿನಲ್ಲಿ ಸ್ಟಾಲಿನ್ ಅಮೋಘ ವಾಗ್ಮಿ, ಗೋಧಿ ಬಣ್ಣ,ಸಾಧಾರಣ ಮೈಕಟ್ಟು , ಅಗಲ ಹಣೆ, ನೀಟಾಗಿ ಬಾಚಿದ ತಲೆಕೂದಲು, ಯುದ್ಧಕ್ಕೆ ಮುನ್ನುಗ್ಗುವ ಭಂಗಿ ಇವು ಈತನ ಆಕರ್ಷಣೆ.ತಮಿಳು ಸಾಹಿತ್ಯ ಮತ್ತು ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿರುವ ಸ್ಟಾಲಿನ್ ಅವರ ಭಾಷಣ ಕೇಳಲು ಬಲು ಚೆಂದ, ಆಕರ್ಷಕ. ತಮಿಳು ಭಾಷಾ ಜಗತ್ತಿನ ದಾರ್ಶನಿಕರು, ವಿಚಾರವಾದಿಗಳು, ಕವಿಗಳು ವಾಗ್ಗೇಯಕಾರರು, ಜನಪದ ಸಾಹಿತ್ಯ ಪ್ರಾಕಾರಗಳು ಸ್ಟಾಲಿನ್ ನಾಲಿಗೆಯ ಮೇಲೆ ಕುಣಿದಾಡುತ್ತವೆ. ಎಷ್ಟೇ ಹೊತ್ತು ಮಾತನಾಡಿದರೂ ಇನ್ನೂ ಕೇಳಬೇಕೆನಿಸುವ ಭಾಷಣ ಶೈಲಿ ಈತನದು.ಯಾವುದಾದರೊಂದು ಆಕರ್ಷಕ ತಲೆಬರಹದ ಘೋಷಣೆಯೊಂದಿಗೆ ಚುನಾವಣಾ ಭಾಷಣ ಮಾಲಿಕೆ ಆರಂಭಿಸುವುದು ಸ್ಟಾಲಿನ್ನರ ಪದ್ದತಿ. ಕಳೆದ ಬಾರಿ ಇವರಿಟ್ಟ ಘೋಷಣೆ ನಮ್ಮಕ್ಕುಂ ನಾಮೆ ( ತಮಿಳರಾದ ನಾವು ಎಲ್ಲಕ್ಕೂ ಮುಂದೆ). ಟೆಂಪೋ ಟ್ರಾವೆಲರ್ ಅಥವ ಮಿನಿ ಬಸ್ಸಿನಲ್ಲಿ ಸಂಚರಿಸುತ್ತಾ ಮೋಹಕವಾಗಿ ಮತದಾರನಿಗೆ ಮಾತಿನಿಂದ ಮುತ್ತಿಕ್ಕುವುದು ಸ್ಟಾಲಿನ್ನು ರ ಭಾಷಣ ಶೈಲಿ.ಈ ಬಾರಿ ಸ್ಟಾಲಿನ್ ರ ಶೋ ಹೆಸರು ” ಉಂಗಳ್ ತೌಗತ್ತಿಯೊಳ್ ಸ್ಟಾಲಿನ್ ” ಕನ್ನಡದಲ್ಲಿ ಭಾಷಾಂತರಿಸಿ ಹೇಳಬಹುದಾದರೆ “ನಿಮ್ಮ ಮನೆಯಂಗಳದಲ್ಲಿ ಸ್ಟಾಲಿನ್ “.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    error: Content is protected !!