ಎಂಜಿನಿಯರಿಂಗ್ ಮುಗಿಸಿ ಜೀವನದ ನೊಗಲಿಗೆ ಹೆಗಲು ಕೊಟ್ಟಿದ್ದೆ. ಅಪ್ಪ ಏನೋ ಡಿಗ್ರಿ ಕೊಡಿಸಿದ್ದರು. ಅದನ್ನು ಕಾಪಾಡಿಕೊಂಡು, ಅದಕ್ಕೆ ಧಕ್ಕೆ ಬರದ ರೀತಿಯಲ್ಲಿ ಜೀವಿಸಲು ಹೆಣಗಾಡುತ್ತಿದ್ದೆ. ಅಪ್ಪನಿಗೆ ಹೇಳಿಯೂ ಬಿಟ್ಟಿದ್ದೆ ಒಮ್ಮೆ, ನನ್ನ ಮದುವೆಗೆ ಒತ್ತಾಯಿಸುವಾಗ. ನನಗೇಕೆ ಇಂತಹ ದೊಡ್ಡ ಡಿಗ್ರಿ ಕೊಡಿಸಿದೆ. ಹೊತ್ತು ಹೊಟ್ಟೆ ಹೊರೆಯುವುದು ತುಂಬಾ ಕಷ್ಟ ಆಗ್ತಿದೆ. ಶಿಕ್ಷಕನೊ, ಕಾರಕೂನನೊ ಆಗಿದ್ದರೆ ನಿನಗೆ ಇಷ್ಟೊತ್ತಿಗೆ ತಾತನನ್ನು ಮಾಡಿರುತ್ತಿದ್ದೆ. ನೀನು ಕಷ್ಟ ಪಟ್ಟು ಕೊಡಿಸಿರುವ ಈ ಎಂಜಿನಿಯರ್ ಎನ್ನುವ ಡಿಗ್ರಿ ನನ್ನನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದೆ. ಹೊಟ್ಟೆ ಹೊರೆಯಲು ಸಾಕಷ್ಟು ಮಾರ್ಗಗಳು ಇವೆ. ನಾನೂ ದೈಹಿಕವಾಗಿ, ಬೆವರು ಸುರಿಸಿ ದುಡಿಯಲು ತಯಾರಿದ್ದೇನೆ. ಆದರೆ ಈ ಡಿಗ್ರಿ ಅಡ್ಡ ಬರುತ್ತಿದೆ. ಎಂಜಿನಿಯರ್ ಡಿಗ್ರಿ ಹಿಡಿದು, ಇಂತಹ ಕೆಲಸ ಮಾಡುವುದಾ ಅಂತ ಯಾರಾದ್ರೂ ಕೇಳಿದರೆ ಅನ್ನುವ ಭಯ ಕಾಡ್ತಿದೆ.ಈ ಭಯದಿಂದ ಕೆಲವಾರು ಕೆಲಸ ಮಾಡೋದು ಸಾಧ್ಯವಾಗುತ್ತಿಲ್ಲ. ಅಂತ ನನ್ನ ತುಮುಲವನ್ನು ಅಪ್ಪನಲ್ಲಿ ತೋಡಿಕೊಂಡಿದ್ದೆ. ಮೌನಿಯಾಗಿದ್ದರು ಅಪ್ಪ. ಅಲ್ಲಿಗಾಗಲೇ ಅವರು ಹೇಳುವುದನ್ನು ಸಾಕಷ್ಟು ಸಾರಿ, ಸಾಕಷ್ಟು ಬಗೆಯಲ್ಲಿ ಹೇಳಿ ಆಗಿತ್ತು, ಯಾವುದಾದರೂ ನೌಕರಿ ಹಿಡಿ ಅಂತ. ಈ ನೌಕರಿ ಅನ್ನೋದು ನನಗೂ ಅಪ್ಪನಿಗೂ ಸಾಕಷ್ಟು ಕಂದಕ ತಂದೊಡ್ಡಿತ್ತು. ಆದರೂ ನನ್ನ ದುಗುಡು, ದುಮ್ಮಾನಗಳನ್ನು ಅಪ್ಪನಲ್ಲಿ ಹಂಚಿಕೊಂಡಷ್ಟು ಯಾರಲ್ಲಿಯೂ ಹಂಚಿಕೊಳ್ಳಲು ಆಗುತ್ತಿರಲಿಲ್ಲ. ಅವರಿಗೂ ಬೇಸರ ಆಗಿ ನನ್ನ ಮನೋಸ್ಥೈರ್ಯ ಕುಂದುವ ಸಲಹೆ ಬರುತ್ತವೆ ಅಂತ ಗೊತ್ತಿದ್ದೂ.
ನಮ್ಮಿಬ್ಬರ ಮಧ್ಯೆ ಬಗೆ ಹರಿಯದ ವಿಷಯ ಇದು, ನನ್ನ ಹಠವನ್ನು ದುರ್ಯೋಧನನ ಹಠ ಅಂತ ಹೆಸರಿಸಿ, ವಿಷಯವನ್ನು ಬದಲಿಸಲು ಎಂಬಂತೆ ಇತ್ತೀಚೆಗೆ ಏನನ್ನಾದ್ರೂ ಓದಿದೆಯಾ ಅಂತ ಕೇಳಿದ್ದರು. ಈ ಓದು ಒಂದೇ ನನ್ನ ದುಗುಡಗಳಿಗೆ ಪರ್ಯಾಯ ಅಂತ ಅಪ್ಪನಿಗೂ ಅರ್ಥ ಆಗಿತ್ತು.
ಹೂ ಓದಿದೆ. ಈ ಜಂಜಾಟದ ಜೀವನ ಬೇಸರವಾಗಿ ಎಲ್ಲ ಬಿಟ್ಟು ಸನ್ಯಾಸಿ ಆಗುವ ಅಂತ …ವೇದ,ವೇದಾಂತ, ಷಟ್ ದರ್ಶನಗಳು, ಉಪನಿಷತ್ತುಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ಶಾಕ್ತ, ಗಾಣಪತ್ಯ, ಜೈನ,ಬೌದ್ಧ, ಅಜೀವಕ, ಕಾಪಾಲಿಕ, ಅಘೋರಿ ಇವರ ಮಧ್ಯೆ ನಾಸ್ತಿಕರು….ಅಸಂಖ್ಯಾತ ಪಂಗಡಗಳ ಸಿದ್ಧಾಂತಗಳು ನನ್ನನ್ನು ಹುಚ್ಚು ಹಿಡಿಸಿವೆ. ಅಲ್ಲಿಯೂ ಏನೊಂದೂ ತೀರ್ಮಾನಿಸಲು ಆಗದೆ ಕೊನೆಯಲ್ಲಿ ನನಗೆ ಅನುಮಾನ ಅಂದರೆ ಈ ತ್ರಿಮೂರ್ತಿ ಗಳು ಅಂತ ಕರೆಸಿಕೊಳ್ಳುವ ಬ್ರಹ್ಮ, ವಿಷ್ಣು, ಮಹೇಶ್ವರರು ಅವಿರ್ಭವಿಸಿರುವುದು ಹೇಗೆ ಅಂದೆ.
ದಡ್ಡ ಯಾರು ಹೇಳಿದ್ದು ನೀನು ಹೇಳಿದ ಎಲ್ಲವೂ ನಿನ್ನಂತಹ ಪಲಾಯನ ವಾದಿಗಳ ವಿಷಯಗಳು ಅಂತ?! ಅವುಗಳಲ್ಲಿ ಇರುವುದು ಮಹತ್ತರ ವಿಷಯಗಳು ಮತ್ತು ಅವುಗಳನ್ನು ಅರಿತು ಉಳಿಸಿಕೊಂಡು ಪುರುಷಾರ್ಥ ಸಾಧಿಸಲು ಬೇಕಾಗಿರುನೀನು ದು ಅಚಲ ಶ್ರದ್ಧೆ ಮತ್ತು ನಂಬಿಕೆ.
ನನಗಿಂತಲೂ ಹೆಚ್ಚಿನ ವಿಜ್ಞಾನ ನೀನು ಓದಿಕೊಂಡಿದ್ದಿಯ , ಅದರಲ್ಲಿ ದ್ರವ್ಯ, (Matter/Mass) ಆಕಾಶ (space), ಕಾಲ (time) ಬಗ್ಗೆ ತುಂಬಾ ಓದಿರಬೇಕಲ್ಲ ನೀನು? ಅಂದಿದ್ದರು. ಅಲ್ಲಿಯ ತನಕ ಇದ್ದ ನನ್ನ ದುಗುಡತೆ ಒಮ್ಮೆಲೇ ಮಾಯವಾಗಿ ಇನ್ನಿಲ್ಲದ ಕುತೂಹಲದಿಂದ ಹೌದು ಅಂದೆ. ನಮ್ಮ ದಾರ್ಶನಿಕರು ಈ ಮೂರನ್ನೇ ತ್ರಿಮೂರ್ತಿ ಗಳು ಅಂದಿದ್ದಾರೆ ಅಂತ ಅಂದುಬಿಟ್ಟರು. ಅಪ್ಪಾ, ನಿಮಗೆಲ್ಲಾ ನಿಮ್ಮ ವೇದಾಂತಗಳನ್ನು ಈ ವಿಜ್ಞಾನಕ್ಕೆ ಸಮೀಕರಿಸಿಕೊಂಡು ಹೇಳೋದು ನನಗೆ ಬಹಳಷ್ಟು ಬಾರಿ ನಗೆ ತರಿಸಿದೆ. ಯಾಕೆ ನಿಮಗೆಲ್ಲಾ ಇಂತಹ ಹುಚ್ಚು? ಅದು ವಿಜ್ಞಾನವೇ ಆಗಿದ್ದರೆ, ವಿಜ್ಞಾನದಷ್ಟು ಸರಳವಾಗಿ ಯಾಕೆ ಹೇಳಲಿಲ್ಲ? ವಿಜ್ಞಾನ ಅಥವಾ ವಿಜ್ಞಾನದ ಅವಿಷ್ಕರಣೆಗಳು ಪ್ರಚಲಿತವಾದಾಗ, ಇದೇ ನೋಡು ವೇದ ಹೇಳಿರೋದು, ಆ ಈ ಧರ್ಮ ಸಿದ್ಧಾಂತ ಹೇಳಿರೋದು ಅಂತ ಹೇಳ್ತೀರಿ, ನಗೆಪಾಟಲಿಗೆ ಗುರಿ ಆಗ್ತೀರಿ ಅಂದೆ.
ರೇಗಿಸಿದರೂ ಸಮಾಧಾನದಿಂದ ನಮ್ಮ ಸಿದ್ಧಾಂತಗಳು ಅವಿಷ್ಕಾರವಾದಾಗ ಮನುಷ್ಯನ ಬುದ್ಧಿಮತ್ತೆ ಈಗಿನಷ್ಟು ಬೆಳೆದಿರಲಿಲ್ಲ. ಸಾವಿರಕ್ಕೆ,ಲಕ್ಷಕ್ಕೆ ಒಬ್ಬರು ಜ್ಞಾನಿಗಳು ಇರ್ತಿದ್ದರು. ಶಾಲಾ ಶಿಕ್ಷಕನಾಗಿ 30 ವರ್ಷ ಕೆಲಸ ಮಾಡಿರುವ ಅನುಭವದಲ್ಲಿ ಹೇಳ್ತೇನೆ, ಹಳೆಯ ಪೀಳಿಗೆಗಳಿಗಿಂತ ಹೊಸ ಪೀಳಿಗೆಗಳು ತುಂಬಾ ಚುರುಕಾಗಿ, ಬುದ್ಧಿವಂತರಾಗಿರುವುದನ್ನು ನಾನು ಕಂಡು ಕೊಂಡಿದ್ದೇನೆ. ಸಾವಿರಾರು ವರ್ಷಗಳ ಹಿಂದೆ ವಿಧ್ಯೆಯ ಹಿಂದೆ ಹೋದವರು ತುಂಬಾ ಕಡಿಮೆ. ಆಗ ಅವರು ಕಂಡುಕೊಂಡದ್ದನ್ನು ಧರ್ಮ,ದೇವರು ಅಂತ ಹೇಳಿದರೆ ಮಾತ್ರ ಅದಕ್ಕೆ ಪವಿತ್ರತೆ ಇರ್ತಿತ್ತು. ಹಾಗಾಗಿ ದೇವರುಗಳಿಗೆ ಸಮೀಕರಿಸಿ ಅವರು ಕಂಡು ಕೊಂಡದ್ದನ್ನು ಹೇಳಿದ್ದಾರೆ.
ಆವರು ಹೇಳಿರುವ ಸರಳತೆ, ಮುಂದುವರೆದ ನಿನ್ನ ಪೀಳಿಗೆಯವರಿಗೆ ನಗೆಪಾಟಲಾಗಿ ಕಾಣುವುದೂ ಆಶ್ಚರ್ಯವಲ್ಲ, ಅದರಲ್ಲಿ ನಿಮ್ಮ ತಪ್ಪು ಇಲ್ಲ. ಆಗಿದ್ದ ಅಲ್ಪ ಬುದ್ಧಿಗಳಿಗೆ ಅವರ ಸಮಕ್ಕೆ ಹೇಳಿದ್ದಾರೆ ಅಷ್ಟೇ ಅಂದು ಬಿಟ್ಟಿದ್ದರು ಅಪ್ಪ. ಉದಾಸಿನತೆ ಇಣುಕಿದರೂ ಆಸಕ್ತಿ ಎಲ್ಲೋ ಒಂದು ಕಡೆ ಹೆಡೆ ಬಿಚ್ಚುತ್ತಿತ್ತು ನನ್ನಲ್ಲಿ. ಸರಿ ಈ ದ್ರವ್ಯ,ಆಕಾಶ,ಕಾಲ ತ್ರಿಮೂರ್ತಿಗಳಾದದ್ದು ಹೇಗೆ ಹೇಳಿ ಅಂದೆ.
ಸೃಷ್ಟಿಯ ಸಕಲ ಜಡ ಜೀವಗಳ ಅಂಡ, ಪಿಂಡ ಬ್ರಹ್ಮಾಂಡ ವು ಒಂದು ದ್ರವ್ಯದಿಂದ ತಯಾರಾಗಿ, ಆ ದ್ರವ್ಯವೇ ಸೃಷ್ಟಿಯನ್ನೂ ವ್ಯಾಪಿಸಿರುವುದನ್ನು ಅರಿತು ಅದನ್ನು ಬ್ರಹ್ಮ ಅಂದರು. ಅದನ್ನು ವಿಜ್ಞಾನ Matter/ mass ಅಂತ ಈಗ ಹೆಸರಿಸಿದೆ. ಸಕಲ ಚರಾಚರ ಜೀವಗಳ ಉಗಮಿಗೆ ಈ ದ್ರವ್ಯವೇ ಕಾರಣ ಎಂದರಿತು ಅದಕ್ಕೆ ಸೃಷ್ಟಿ ಕರ್ತ ಬ್ರಹ್ಮ ಅಂತ ಹೆಸರಿಸಿದರು. ಅತೀ ಪುರಾತನ ಈ ದ್ರವ್ಯ ಅಂತ ಹೇಳಲು ಬ್ರಹ್ಮನನ್ನು ಬಿಳಿ ಗಡ್ಡ ಮೀಸೆ ಕೂದಲುಗಳನ್ನೊಳಗೊಂಡವನನ್ನಾಗಿ ಚಿತ್ರಿಸಿದರು. ಈ ದ್ರವ್ಯ ಅಥವಾ ಬ್ರಹ್ಮ ಇರುವುದು ಎಲ್ಲಿ? ಆಕಾಶದಲ್ಲಿ. ಈ ಆಕಾಶವನ್ನು ವಿಷ್ಣು ಅಂದು ಅವನಲ್ಲಿ ದ್ರವ್ಯ ಇದೆ ಅಥವಾ ಅವನಿಂದ ಬ್ರಹ್ಮ ಹುಟ್ಟಿದ ಅಂತ ಹೇಳಲು ವಿಷ್ಣುವಿನ ನಾಭಿಯಿಂದ ಬ್ರಹ್ಮ ಜನಿಸಿದ ಅಂತ ಕಲ್ಪಿಸಿಕೊಟ್ಟರು. ಆಕಾಶಕ್ಕೆ ವಯಸ್ಸಿಲ್ಲ,ಸದಾ ಯವ್ವನವೇ. ಹಾಗಾಗಿ ಯವ್ವನ ಅವಸ್ಥೆಯ ವಿಷ್ಣುವಿನಿಂದ ಬ್ರಹ್ಮ ಹುಟ್ಟಿದ ಅನ್ನುವ ಪರಿಪಾಠ ಬಂತು. ಈ ಆಕಾಶವೇ ವಿಜ್ಞಾನದ Space. ಇನ್ನು ಕಾಲ ಅಥವಾ time. ಇದನ್ನು ಮಹೇಶ್ವರ/ ಶಿವ ಅಂದರು. ಇದು ಮಾತ್ರ ಹೊಸತನ್ನು (ಕ್ಷಣವನ್ನು )ಸೃಷ್ಟಿಸಿ, ಹಳತನ್ನ ನಾಶ ಮಾಡಬಲ್ಲದು. ಇದಕ್ಕೆ ಸೃಷ್ಟಿಯ ಸಂಕೇತ ಅಂದರು. ವಿನಾಶವನ್ನು ಹೇಳಲೂ ಇದೇ ಶಿವನನ್ನು ಕಾಲ ಭೈರವ/ ಪ್ರಳಯ ರುದ್ರ ಅಂದರು. ಆಕಾಶಕ್ಕೆ ಈ ಕಾಲನ ಮಿತಿ ಇಲ್ಲದೇ ಇರುವುದರಿಂದ ಅದು ಯಾವಾಗಲೂ ಒಂದೇ ಸ್ಥಿತಿ ಕಾಪಾಡಿಕೊಂಡಿರುವುದನ್ನು ಸೂಚಿಸಲು ವಿಷ್ಣುವನ್ನು ನವ ಯವ್ವನದಲ್ಲಿ ನಮಗೆ ಕಾಣಿಸಿಕೊಟ್ಟರು. ಈ ಮೂಲ ದರ್ಶನವು ಮಾನವ ವಿಕಸಿದಂತೆಲ್ಲಾ ಮೂರು ಬೇರೆ ಬೇರೆ ತತ್ವಗಳಾಗಿ ಸಿದ್ಧಾಂತಗಳ ರೂಪ ಪಡೆದಿದೆ. ಸಿದ್ದಾಂತ ಪ್ರತಿಪಾದಿಸುವವರ ಅಹಂ ನಿಂದಾಗಿ ಹೆಚ್ಚುಗಾರಿಕೆ ತೋರ್ಪಡಿಸಲು ವಿಷ್ಣು ಶ್ರೇಷ್ಠ, ಶಿವ ಶ್ರೇಷ್ಠ ಅನ್ನುವ ಭಾವಗಳು ಬಂದಿವೆ. ಇಲ್ಲಿ ಯಾರೂ ಎಲ್ಲಿಯೂ ಶ್ರೇಷ್ಠರಲ್ಲ. ತತ್ವಗಳ ಗುರುತಾಗಿ ಮೂಡಿದ ಗುರುತುಗಳು ಅಷ್ಟೇ. ಅಂತ ನಿರ್ವಿಕಾರವಾಗಿ ಹೇಳಿದ್ದರು. ನಾನು ಕ್ಷಣ ಕಾಲ ಸ್ಥoಬೀತ ನಾಗಿದ್ದೆ.
ಇನ್ನ ವಿಶ್ವದ ಉಗಮದ ಜೊತೆ ಮಾನವ, ಭೂಮಿಯ ಉಗಮವನ್ನು ತಿಳಿಸಲು ಅದರ ವೈಶಾಲತೆಯನ್ನು ಸಂಕುಚಿಸಿ,Whole to Part ಅನ್ನುವ ನಿಯಮವನ್ನು ಪಾಲಿಸಿಕೊಂಡು ಮಾನವನಿಗೆ, ಈ ಭೂಮಿಗೆ ಮಾತ್ರ ಸೀಮಿತಿಗೊಳಿಸಿ ಹಲವು ಸಿದ್ದಾಂತಗಳನ್ನು ಹಲವಾರು ದಾರ್ಶನಿಕರು ಮಂಡಿಸಿದರು. ಇವರು ಮೂಲ ಮೂರರೊಂದಿಗೆ, ಮತ್ತೂ ಐದು ತತ್ವ ಹೇಳಿ ಪಂಚ ಮಹಾ ಭೂತಗಳು ಅಂತ ಹೆಸರಿಸಿದರು. ಅವೇ ಭೂಮಿ/ಮಣ್ಣು, ಗಾಳಿ, ನೀರು, ಬೆಂಕಿ ಮತ್ತು ಆಕಾಶ. ಭೂಮಿ , ಆಕಾಶ ಮೂಲ ರೂಪದ ದ್ರವ್ಯ,ಆಕಾಶದ ಸಂಕುಚಿತ ಅರ್ಥ ಹೇಳಿದರೆ, ಗಾಳಿ,ನೀರು,ಬೆಂಕಿ ಪ್ರತಿ ಜೀವಿಗಳಿಗೆ ಆಧಾರವಾದದ್ದನ್ನು ತಿಳಿಸಿಕೊಟ್ಟರು. ಪ್ರತಿ ಜೀವಿಗಳಿಗೆ ಬದುಕಿ,ವಿಕಸಿಸಲು ಈ ಮೂರು ಅಗತ್ಯ ಮತ್ತು ಅವು ಎಲ್ಲ ಜೀವಿಗಳಲ್ಲಿ ಇವೆ ಅಂತ ತೋರಿಸಿದರು. ಗಾಳಿ/ ವಾಯು ಐದು ರೂಪಗಳಲ್ಲಿ ಜೀವಿಗಳಲ್ಲಿ ಇದೆ.(ಪ್ರಾಣ, ಅಪಾನ, ವ್ಯಾನ ,ಉದಾನ, ಸಮಾನ ಅಂತ ನಮ್ಮ ದೇಹದಲ್ಲಿರುವ ಗಾಳಿಯನ್ನು ಅದು ಇರುವ ಮತ್ತು ಮಾಡುವ ಕೆಲಸದಿಂದಾಗಿ ವಿಭಜಿಸಿದ್ದಾರೆ) ಬೆಂಕಿಯು ಜಠರಾಗ್ನಿ ಅಂತ ಕರೆಸಿಕೊಂಡು ನಾವು ತಿಂದ ಅನ್ನವನ್ನು ಜೀರ್ಣಿಸಲು ಸಹಕಾರಿಯಾಗಿದೆ. (ಈ ತತ್ವವನ್ನು ಜೀವಂತ ಇಡುವ ಮಾರ್ಗವಾಗಿಯೇ ಹೋಮ ಹವನದಲ್ಲಿ ಅಗ್ನಿಗೆ ಹವಿಸ್ಸು ಕೊಡುವ ರೂಢಿ ಬಂತು) ಇನ್ನು ಇಡೀ ಶರೀರದ ಶೇಕಡಾ 60 ಭಾಗ ನೀರಿನಿಂದ ಆವರಿಸಿದೆ ಅಂತ ಈಗಿನ ವಿಜ್ಞಾನವೂ ಹೇಳಿದೆ. ಜೀವರಾಶಿಗಳಲ್ಲಿ ಬಹುಮುಖ್ಯವಾದ ಈ ತತ್ವಗಳು ಹೊರಗಿನ ಪ್ರಕೃತಿಯಲ್ಲಿಯೂ ಇರುವುದನ್ನು ಕಂಡು ಬ್ರಹ್ಮ,ಪರಬ್ರಹ್ಮ ಅಂದರು. ಈ ಜ್ಞಾನವು ಶಾಖೆಗಳಲ್ಲಿ ಉಳಿದು ಮುಂದುವರೆಯಲಿ ಅಂತ ಯೋಚಿಸಿ ನಿರ್ದಿಷ್ಟ ಗುಂಪುಗಳಿಗೆ ಒಂದೊಂದು ಸಿದ್ದಾಂತವನ್ನು ಹಂಚಿದರು. ಆ ಮಹೋದ್ದೇಶ ಮಾನವನ ಅಲ್ಪತನಕ್ಕೆ ತುತ್ತಾಗಿ ತನ್ನ ನಿಜರೂಪ ಕಳೆದುಕೊಂಡು ಮತ್ತೆಂತಹದೋ ವಿರೂಪ ತಾಳಿರುವುದು ಮೂಲ ದಾರ್ಶನಿಕರ ತಪ್ಪಾ? ಯೋಚನೆ ಮಾಡು. ಒಬ್ಬ ಡಾಕ್ಟರ್ ಮಾಡುವ ಎಡವಟ್ಟಿಗೆ ಇಡೀ ವೈದ್ಯಕೀಯ ಶಾಸ್ತ್ರ ಕೆಲಸಕ್ಕೆ ಬಾರದ್ದು ಎನ್ನುವುದು ಎಷ್ಟು ಸಮಂಜಸ ಅಂತ ನನ್ನನ್ನು ಪ್ರೆಶ್ನೆ ಕೇಳಿ ಸುಮ್ಮನಾಗಿ ದೀರ್ಘ ಉಸಿರು ಬಿಟ್ಟಿದ್ದರು. ಸ್ವಲ್ಪ ಹೊತ್ತು ಸುಮ್ಮನಿದ್ದು ಇದೆಲ್ಲಾ ವಿಜ್ಞಾನ ಅಲ್ಲದೆ ಮತ್ತೇನು ಅಂದರು.
ಸೃಷ್ಟಿಯ ಪ್ರತಿಯೊಂದೂ ಚಲನೆ ಹೊಂದಿ, ಕಾಲನ ತುಳಿತಕ್ಕೆ ನಾಶ ಹೊಂದುತ್ತದೆ, ಒಂದು ಆಕಾಶವನ್ನು ಬಿಟ್ಟು. Space is independent of Time. ಈ ಆಕಾಶವನ್ನು ವಿಷ್ಣು ಅಂದಾಗ ಇದರ ಅನಂತತೆಯನ್ನು,ಶಾಶ್ವತತೆಯನ್ನು ಸಮೀಕರಿಸಲು ಯವ್ವನ ರೂಪದ ಮನುಷ್ಯನ ರೂಪಕ ಇಟ್ಟು ಅನಂತ ಶಯನದಲ್ಲಿ ಸುಖಿಸುವ ರೀತಿ ಹೇಳಿದ್ದಾರೆ. ದ್ರವ್ಯ ಆಕಾಶದಲ್ಲಿ ಇದೆ ಅಂತ ಹೇಳಲು ವಿಷ್ಣುವಿನಿಂದ ಬ್ರಹ್ಮ ಹುಟ್ಟಿದ ಅಂತ ಹೇಳಿದರು. ಎಲ್ಲವನ್ನು ಸೃಷ್ಟಿಸಿ, ನಾಶಪಡಿಸುವ ಕಾಲದ ರೂಪಕವನ್ನು ಶಿವನಿಗೆ ರೂಪಿಸಿ, ಈ ತ್ರಿಮೂರ್ತಿಗಳು ಅತ್ಯಂತ ಶ್ರೇಷ್ಠ ಅಂದರು,ಪೂಜ್ಯ ಭಾವನೆ ಬರಲಿ ಅಂತ. ಇದನ್ನು ಈಗ …ಹರೆಯದ ವಿಷ್ಣು ವೃದ್ಧ ಬ್ರಹ್ಮನಿಗೆ ತಂದೆಯಂತೆ….ಅಂತ ಅಜ್ಞಾನಿಗಳು ನಕ್ಕರೆ, ತಪ್ಪು ಯಾರದ್ದು? ಅರ್ಥೈಸುವಿಕೆ ಸರಿ ಇಲ್ಲದ್ದರಿಂದ ಇಂತಹ ಮಹಾ ಜ್ಞಾನವನ್ನು ಹೇಳುವ ಎಲ್ಲ ಮಾರ್ಗಗಳೂ ಇಂದು ನಗೆಪಾಟಲಾಗಿವೆ. ಇದು ಯಾರನ್ನೂ ಸುಲಿಗೆ ಮಾಡಲು, ಮೋಸ ಮಾಡಲು ,ಯಾಮಾರಿಸಲು ಮಾಡಿದ ಸೋಮಾರಿಗಳ ಕೆಲಸವಲ್ಲ. ದುರದೃಷ್ಟ ಎಂದರೆ ಆಧುನಿಕ ಜ್ಞಾನಿಗಳು ಮೂಲ ಅರ್ಥ ಅರಿಯದೆ ಶಬ್ದಾರ್ಥ,ರೂಪಕ ಅರ್ಥಗಳಲ್ಲಿ ತೊಡಗಿ ಗೊಂದಲ ಮಾಡಿರುವುದು ಅಂದಿದ್ದರು ಸ್ವಲ್ಪ ಅಸಹನೆಯಿಂದ.
ಶಂಕರರ ಅದ್ವೈತದ ಬ್ರಹ್ಮ, ದ್ವೈತರ ಹರಿ ಸರ್ವೋತ್ತಮ, ವಾಯು ಜೀವೋತ್ತಮ, ವಿಶಿಷ್ಟಾದ್ವೈತರ ಮಹಾವಿಷ್ಣು, ಕಪಾಲಿಕರ ಕಾಲ ಭೈರವ, ಅಘೋರಿಗಳ ಶಿವ ಇವುಗಳೆಲ್ಲವೂ ಒಟ್ಟಿಗೇ ವೇದಿಕೆ ಮೇಲೆ ಬಂದು ಹೋದ ಅನುಭವ ಆಯ್ತು. ಈ ಮೂಲ ತತ್ವಗಳನ್ನು ಆಧಾರವಾಗಿಸಿ, ನಾಗರಿಕತೆ ಬೆಳೆದಂತೆಲ್ಲಾ ಮಾನವನ ನಾನಾ ಬಗೆಯ ಅವಿಷ್ಕರಣೆಗಳು ನಮ್ಮಲ್ಲಿ ಸಿದ್ದಾಂತಗಳಾಗಿ ನಾನಾ ದೇವ ದೇವಿಯರಾಗಿ ಮೈತಳೆದು ಮುಂದಿನ ಪೀಳಿಗೆಗಳಿಗೆ ರವಾನೆಯಾಗಿರುವ ಪರಿ ನನ್ನನ್ನು ಮೂಕನನ್ನಾಗಿಸಿತ್ತು. ಸಿದ್ದಾಂತಗಳ ಪವಿತ್ರತೆ ಕಾಪಾಡುವ ವಿಧಾನವಾಗಿ ಮಾನವರಲ್ಲಿ ಭಯ,ಭಕ್ತಿ ಗಳನ್ನು ಮೂಡಿಸಿಕೊಂಡು ಅವುಗಳನ್ನು ಕಾಪಾಡಿಕೊಂಡು ಬಂದ ವ್ಯವಸ್ಥೆ ನನ್ನಲ್ಲಿ ಬಹುಕಾಲ ಹಿಡಿದಿಟ್ಟಿತ್ತು. ಆಚಾರ, ಆಚರಣೆ, ಮಾನವನ ಸಂಸ್ಕಾರ, ಸಮಾಜದ ಸಂಸ್ಕೃತಿಗಳ ಅವಿಭಾಜ್ಯ ಅಂಗವಾಗಿ ಮೂಲ ಅರ್ಥಗಳ ಮಾಸುವಿಕೆಯಲ್ಲಿ ಪರ್ಯಸನ ಗೊಳ್ಳುತ್ತಿರುವುದು ಆತಂಕದ ವಿಷಯವೇನೋ ಅನ್ನಿಸಿತು. ಮಾನವ ಕುಲಕ್ಕೆ ಅನುಕೂಲವಾಗುವ ಇಂತಹ ವಿಷಯಗಳನ್ನು, ಆಗ್ಗೆ ಮಹಾ ಆವಿಷ್ಕಾರಗಳು ಆಗಿದ್ದ ಅಂಶಗಳನ್ನು ತಮಗೆ ತೋಚಿದ್ದ ಮಾರ್ಗಗಳಲ್ಲಿ ಪ್ರಚುರ ಪಡಿಸಿದ್ದನ್ನು ನನ್ನಂತಹ ಜೀವನ ಮಾಡಲೂ ಪರಿತಪಿಸುವಂತಹವರು ಟೀಕಿಸುವುದು ಎಷ್ಟು ಸರಿ? ಕಾಯ್ದುಕೊಂಡು ಬರುವ ಮಾರ್ಗಗಳು, ನೇಮಿಸಿದ್ದಂತಹ ವ್ಯಕ್ತಿಗಳಿಂದ ಕೆಲವೊಂದು ಕಡೆ ತಪ್ಪುಗಳಾಗಿರುವುದು ನಿಜವಾದರೂ ಮೂಲ ಅರ್ಥಗಳು ಕಳೆದುಹೋಗಿರುವುದಂತೂ ಸ್ಪಷ್ಟವಾಗಿದೆ. ಕೊಬ್ಬರಿಗೆ ಸಲ್ಲಬೇಕಿದ್ದ ಗಮನ ಕರಟಕ್ಕೆ ಸಲ್ಲಿಬಿಟ್ಟಿತಾ?…
Photo by Greg Rakozy on Unsplash