20.2 C
Karnataka
Thursday, November 28, 2024
    Home Blog Page 123

    ಮೌಢ್ಯಕ್ಕೆ ಬಲಿ-ನ್ಯಾಯವೇ ?


    ಹರೋನಹಳ್ಳಿ ಸ್ವಾಮಿ

    “ಧರೆಯ ಬದುಕೇನದರ ಗುರಿಯೇನು ಸ್ಥಲವೇನು?
    ಬರಿಬಳಸು ಬಡಿದಾಟ ಬರಿ ಪರಿಭ್ರಮಣೆ
    ತಿರುತಿರುಗಿ ಹೊಟ್ಟೆ ಹೊರಕೊಳ್ಳುವ ಮೃಗಖಗಕಿಂತ
    ನರನು ಸಾದ್ದಿಪುದೇನು ? ಮಂಕುತಿಮ್ಮ

    ಈ ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದೇ ನಮ್ಮ ಭಾಗ್ಯವಲ್ಲವೇ ? ಈ ವಿಶ್ವದ ಹುಟ್ಟು, ಬದುಕು, ಸಾವುಗಳೂ ನಿಯಮಬದ್ಧವಾದ ವೈಜ್ಞಾನಿಕ ಪ್ರಕೃತಿ ನಿಯಮಗಳ ಅಣತಿಗೊಳಪಟ್ಟು ನಡೆಯುತ್ತಿವೆ. ಸುಮಾರು 12 ರಿಂದ 15 ಬಿಲಿಯನ್ ವರ್ಷಗಳ ಹಿಂದೆ ಹುಟ್ಟಿರುವ ವಿಶ್ವ, ಸೂರ್ಯನಿಂದಲೇ ಸು.460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರುವ ನಮ್ಮ ಭೂಮಿ, ನಂತರದ ವಿಕಾಸದ ಹಾದಿಗಳೆಲ್ಲಕ್ಕೂ ಕಾರಣಗಳಿವೆ.

    ಈ ಗಾಳಿ, ಶಾಖ, ನೀರು, ಮರ, ಗಿಡ, ಬಳ್ಳಿಗಳು ಹಕ್ಕಿ ಪಕ್ಕಿ ಕ್ರಿಮಿ, ಕೀಟ ಇತ್ಯಾದಿ ಜೀವಿ ನಿರ್ಜೀವಿಗಳೆಲ್ಲದರ ಬದುಕು ನಿಸರ್ಗದ ನಿಯಮಕ್ಕೊಳಪಟ್ಟಿವೆ. ಗಾಳಿ ಬೀಸಲು, ಹಗಲು, ಇರುಳು, ನೆರಳು, ಬಿಸಿಲು, ಮಳೆ ಮಂಜು, ಜೊತೆಗೆ ಬೆಂಕಿ, ಬಿರುಗಾಳಿ, ಮಿಂಚು ಗುಡುಗು, ಭೂಕಂಪ, ಜ್ವಾಲಾಮುಖಿ, ಚಂಡಮಾರುತ ಹೀಗೆ ನಾವು ನೋಡುವ ಅನುಭವಿಸುತ್ತಿರುವ ಎಲ್ಲಾ ಆಗುಹೋಗುಗಳೂ ಸಂಭವಿಸಲೂ ವೈಜ್ಞಾನಿಕ ಕಾರ್ಯಕಾರಣ ಸಂಬಂಧಗಳೂ ನಿಯಮಬದ್ಧವಾಗಿಯೇ ನಡೆಯುತ್ತಿವೆ. ಆದರೆ ಯಾವ ನಿಯಮಕ್ಕೂ, ಇತಿ ಮಿತಿಗಳಿಗೂ ಒಳಪಡದೆ ಸ್ವೇಚ್ಛೆಯಾಗಿ, ತನಗೆ ತಿಳಿದಂತೆ, ಗೊತ್ತು ಗುರಿಗಳಿಲ್ಲದೆ ಬದುಕು ನಡೆಸುವವನೇ ಈ ಬುದ್ಧಿಜೀವಿ ಎಂದು ಕರೆಸಿಕೊಳ್ಳುವ ಆಧುನಿಕ ಮಾನವ.

    ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ, ನಮ್ಮ ವಿದ್ಯೆ, ನಮ್ಮ ಚಿಂತನೆಗಳು, ನಮ್ಮ ನಡೆ ನುಡಿಗಳು ಎತ್ತ ಸಾಗುತ್ತಿವೆ ಎಂದು ಅವಲೋಕಿಸಿದಾಗ ಆಗುವ ನೋವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುವೆನು.

    ಕೆಲದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ “ಕ್ಷುದ್ರಶಕ್ತಿ” ನಂಬಿ ಪುತ್ರಿಯರನ್ನು ಕೊಂದ ಪೋಷಕರ ಕರಾಳ ದುಷ್ಕೃತ್ಯವು ಪ್ರತಿಕ್ಷಣವೂ ಮನ ಕಲಕುತ್ತಿದೆ. ಹೆತ್ತ ತಾಯಿಯೇ ತನ್ನ ಕರುಳಬಳ್ಳಿಗಳನ್ನು ಮೂಢನಂಬಿಕೆಯಿಂದ ಕೈಯಾರೆ ಮಾಡಿರುವ ಅಮಾನುಷ ಹತ್ಯೆಯಿಂದ ಮಡಿದ ಆ ಹೆಣ್ಣುಮಕ್ಕಳ ನೆನೆದು ಹೃದಯ ಹಿಂಸಿಸುತ್ತಿದೆ.

    ಎಂ.ಎಸ್ಸಿ, ಪಿ.ಎಚ್ಡಿ ಓದಿ ಸಹಾಯಕ ಪ್ರಾಧ್ಯಾಪಕರಾದ ತಂದೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿರುವ ತಾಯಿ, ಇಂತಹ ಉನ್ನತ ಪದವಿ ಪಡೆದು, ಉದ್ಯೋಗದಲ್ಲಿರುವ ಪೋಷಕರು, ತಮ್ಮ ಒಡಲ ಕುಡಿಗಳಾದ ವಿದ್ಯಾವಂತ ಹೆಣ್ಣುಮಕ್ಕಳ ಹತ್ಯೆ ಮಾಡಿದ ಕಾರಣ ಕೂಡ ವಿಲಕ್ಷಣವಾಗಿದೆ, ಅವೈಜ್ಞಾನಿಕವಾಗಿದೆ ಮತ್ತು ಬಾಲಿಶವಾಗಿದೆ.

    ಅದೇನೆಂದರೆ “ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಕ್ಷುದ್ರಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿಬರುತ್ತಾರೆ” ಎಂಬ ಜ್ಯೋತಿಷಿಯೊಬ್ಬನ ಮಾತನ್ನು ನಂಬಿ ಮಾಡಿರುವ ಕೊಲೆಗಳಿವು.
    ನನಗೆ ಚಿಂತನೆಗೆ ಹಚ್ಚಿರುವುದು, ಖಂಡಿತಾ ಜ್ಯೋತಿಷಿಯ ಮಾತಲ್ಲ, ಕಾರಣ ಇಂತಹ ಮೂಢನಂಬಿಕೆಗಳನ್ನೇ ಬಿತ್ತಿ, ಬೆಳೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಡೋಂಗಿ ಬಾಬಾಗಳು, ಜ್ಯೋತಿಷಿಗಳ ಹೇಳಿಕೆಗಳನ್ನು ದಿನವೂ ಕಂಡು ಕೇಳುತ್ತೇವೆ. ಆದರೆ ಇಂತಹ ಸುಳ್ಳರ ಮಾತನ್ನು ನಂಬಿ ತಮ್ಮ ಮಕ್ಕಳನ್ನು ಕೊಂದ ಪೋಷಕರು ಅವಿದ್ಯಾವಂತರಲ್ಲ, ನಿರುದ್ಯೋಗಿಗಳಲ್ಲ, ಸಾಮಾಜಿಕವಾಗಿ ತುಳಿತ, ಅವಮಾನಕ್ಕೊಳಪಟ್ಟವರಲ್ಲ, ಬದಲಾಗಿ ಉನ್ನತ ವಿದ್ಯೆ ಮತ್ತು ಸ್ಥಾನಮಾನ ಪಡೆದವರಾಗಿರುವುದು ಪ್ರತಿಭಾವಂತ ವಯಸ್ಕ ಹೆಣ್ಣುಮಕ್ಕಳಿಬ್ಬರೂ ತಾಯಿ ತಂದೆಯರಿಂದಲೇ ಡಂಬೆಲ್‌ಗಳಿಂದ ಹೊಡೆಸಿಕೊಂಡು, ತ್ರಿಶೂಲದಿಂದ ಚುಚ್ಚಿಸಿಕೊಂಡು, ನೋವಿನಿಂದ ಒದ್ದಾಡಿ, ಒದ್ದಾಡಿ ಪ್ರಾಣ ಬಿಡುವಾಗ ಅನುಭವಿಸಿರುವ ನೋವು ಸಂಕಟಗಳನ್ನು ನೆನೆದರೆ ತುಂಬಾ ಕಸಿವಿಸಿಯಾಗುತ್ತದೆ.

    ಮಂಕುತಿಮ್ಮನ ಮೂಲಕ ಡಿ.ವಿ.ಜಿ.ಯವರು… ‘ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು?” ಎಂಬ ಸಾಲುಗಳು ಚಿಂತನಾರ್ಹವಾಗಿವೆ. ಕ್ರೂರ ಮೃಗಗಳೂ ಕೂಡ, ತಮ್ಮ ಸಂತಾನಗಳನ್ನು ವೈರಿಗಳಿಂದ ರಕ್ಷಿಸಲು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಆದರೆ ಈ ಘಟನೆ 21ನೇ ಶತಮಾನದಲ್ಲಿನ ಅತ್ಯಂತ ಅಮಾನವೀಯ, ಅಕ್ಷಮ್ಯ ಅಪರಾಧವಾಗಿದೆ.

    ನಾವು ಕಲಿತ ವಿದ್ಯೆಗೂ (ಅದರಲ್ಲೂ ವಿಜ್ಞಾನ ಪದವಿ ಪಡೆದ ಪೋಷಕರು) ನಮ್ಮ ಚಿಂತನೆ, ನಂಬಿಕೆ, ಆಚರಣೆಗಳಿಗೂ ಸಂಬಂಧಗಳೇ ಇಲ್ಲದಂತಾಗಿದೆ.ಕಲಿತವರೇ ಇಂತಹ ಮೂಢನಂಬಿಕೆಗಳನ್ನು ನಂಬಿ, ಮಕ್ಕಳನ್ನೇ ಬಲಿ ಪಡೆದರೆ ಇನ್ನು ಅವಿದ್ಯಾವಂತ ಅಮಾಯಕ ಮುಗ್ಧರು ಇಂತಹವರ ಮಾತಿಗೆ ಬಲಿಯಾಗುವುದರಲ್ಲಿ ಆಶ್ಚರ್ಯವಿಲ್ಲವೆನಿಸುತ್ತಿದೆ.

    “ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ” ಎಂಬ ನಂಬಿಕೆ ಹುಟ್ಟಿಸಿದ ಆ ಮಹಾಪುರುಷ, ಇನ್ನೆಷ್ಟು ಬಲಿ ಪಡೆದಿರಬಹುದೆಂದು ನೆನೆದರ ಗಾಬರಿಯಾಗುತ್ತದೆ. ವಿದ್ಯಾವಂತರೇ ಇಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿರುವುದನ್ನು ನೋಡಿದರೆ, ನಮ್ಮ ವಿದ್ಯೆ ವೈಚಾರಿಕ ಚಿಂತನೆಯನ್ನು ಬೆಳೆಸುತ್ತಿಲ್ಲವೆಂದೇ ಹೇಳಬೇಕು.

    ಅಲ್ಲದೇ ವಿದ್ಯೆಗೂ ವೈಜ್ಞಾನಿಕ ಮನೋಭಾವಕ್ಕೂ ಸಂಬಂಧವಿಲ್ಲದಂತಾಗಿದೆ.ಚಂದ್ರಲೋಕಕ್ಕೆ ಮಾನವ ಸುರಕ್ಷಿತವಾಗಿ ಹೋಗಿಬಂದು, ಈಗ ಮಂಗಳಯಾನಕ್ಕೆ ಸಿದ್ಧತೆ ನಡೆಸುತ್ತಿದ್ದರೂ ಗ್ರಹಗಳ ಚಲನೆ, ಹಸ್ತರೇಖೆ, ಅಲ್ಲದೆ ಮನುಷ್ಯನ ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಕೂಡ ಭವಿಷ್ಯವನ್ನು ನಿರ್ಧರಿಸಬಲ್ಲವೆಂಬ ಜ್ಯೋತಿಷಿಗಳನ್ನು ನಂಬುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದರಲ್ಲಿ ಅಕ್ಷರಸ್ಥ ವಿದ್ಯಾವಂತರ ಸಂಖ್ಯೆಯೂ ಹೆಚ್ಚಾಗಿರುವುದು ಚಿಂತೆಗೀಡುಮಾಡುತ್ತಿವೆ. ಆಹಾರದ ಮತ್ತು ಉಡುವ ತೊಡುವ ಪೋಷಾಕುಗಳಿಂದಿಡಿದು, ಮನೆಯ ಮೂಲೆ ಮೂಲೆಯ ವಾಸ್ತುಗಳ ಕುರಿತು, ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಕೋಟ್ಯಂತರ ಜನರು ಬಡತನ ರೇಖೆಯ ಕೆಳಗಿದ್ದು, ಹಸಿವಿನಿಂದ ನರಳುತ್ತಿರುವಾಗ ಹೋಮ, ಹವನ, ಯಜ್ಞ, ಯಾಗಾದಿಗಳಲ್ಲಿ ಅಮೂಲ್ಯ ಸಂಪತ್ತನ್ನು ಸುಟ್ಟು ಬೂದಿ ಮಾಡುವ ಮಂದಿಯೂ ಅನೇಕರಿರುತ್ತಾರೆ.
    ಮೌಢ್ಯಕ್ಕೆ ಪ್ರಚೋದಿಸುವ ಮತ್ತು ಮೌಢ್ಯವನ್ನು ಆಚರಿಸುವ ಜನರ ವಿರುದ್ಧ ಕಠಿಣ ಶಿಕ್ಷೆಯ ಕಾನೂನುಗಳು ರೂಪಗೊಂಡು ಅನುಷ್ಠಾನಕ್ಕೆ ತರಬೇಕಾದುದು ಇಂದಿನ ಅವಶ್ಯವಾಗಿದೆ.ಮೌಢ್ಯ ನಿಷೇಧ ಕಾನೂನು ಅನೇಕ ರಾಜ್ಯಗಳಲ್ಲಿ ಜಾರಿ ಇದ್ದರೂ ರಾಷ್ಟ್ರಮಟ್ಟದಲ್ಲಿ ಇಂತಹ ಕಾನೂನುಗಳು ರಚಿತಗೊಂಡು ಜಾರಿಯಾಗಬೇಕಾಗಿದೆ.

    ವೈಚಾರಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಸಾರಿದ ಬುದ್ಧ, ಬಸವ, ಅಂಬೇಡ್ಕರರ ನಾಡಿದು.ದೃಶ್ಯ ಮಾಧ್ಯಮಗಳೂ ಅವೈಜ್ಞಾನಿಕ ಧಾರಾವಾಹಿಗಳು, ಜ್ಯೋತಿಷಿಗಳ ಪ್ರವಚನಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಜನರ ಚಿಂತನೆಗಳನ್ನು ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿರುವುದೂ ದಿನನಿತ್ಯದ ಸಂಗತಿಯಾಗಿದೆ.

    “ತಮಗೆ ಮುಂಬಹ ಸುಖ ದುಃಖಗಳ ನರಿಯದವರು
    ಮತ್ತೊಬ್ಬರ ಸುಖದುಃಖಂಗಳ ಮೊದಲೇ ಅರಿಯರು” ಎಂಬ ಶರಣ ಚನ್ನಬಸವಣ್ಣನವರ ಮಾತು ಈ ಜ್ಯೋತಿಷಿಗಳೂ ಮತ್ತು ಅವರನ್ನು ನಂಬುವ ಜನರಿಬ್ಬರೂ ಅರಿಯಬೇಕಲ್ಲವೇ ? ಗ್ರಹಣಗಳಿಂದಾಗಿ ಹೆದರುವ ಮತ್ತು ಹೆದರಿಸುವ ಜನರಿಂದ ಅನೇಕ ಅಂಧಾಚರಣೆಗಳನ್ನು ನೋಡಿದ್ದೇವೆ. ವೈಕುಂಠ ಏಕಾದಶಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆಂದು ನಂಬಿ ಆತ್ಮಹತ್ಯೆ ಮಾಡಿಕೊಂಡವರುಂಟು, ಸ್ವರ್ಗಪ್ರಾಪ್ತಿ ಎಂದು ಸಾಮೂಹಿಕ ಆತ್ಮಹತ್ಯೆಗಳಾಗಿರುವುದನ್ನು ಕಂಡಿದ್ದೇವೆ. ಧನಪ್ರಾಪ್ತಿಗಾಗಿ ಮಕ್ಕಳ ಬಲಿ ನೀಡುವುದನ್ನು ಕಾಣುತ್ತಿದ್ದೇವೆ. ಮಾಡಿದ ಪಾಪಕೃತ್ಯಗಳಿಗಾಗ ಪ್ರಾಯಶ್ಚಿತ್ತವೆಂಬಂತೆ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಕೋಟಿ ಕೋಟಿ ಹಣ, ವಜ್ರ ವೈಢೂರ್ಯಗಳನ್ನು ಹುಂಡಿಗಳಿಗೆ ಹಾಕುವ ಜನರನ್ನು ಕಂಡಿದ್ದೇವೆ. ಜೊತೆಗೆ ಅಂತಹವರ ಅಧಃಪತನವನ್ನು ಕಂಡಿದ್ದೇವೆ.

    ಆದರೆ ವಿಜ್ಞಾನ ತಂತ್ರಜ್ಞಾನಗಳು ಬೆಳೆದಂತೆ ನಾಗರಿಕತೆ ಮುಂದುವರಿದಂತೆ ಆಂಧ್ರಪ್ರದೇಶಗಳು, ಮೌಢ್ಯಾಚರಣೆಗಳು ಹೆಚ್ಚತ್ತಿವೆ. ಇದು ಒಂದು ದೇಶಕ್ಕೆ, ಜನಾಂಗಕ್ಕೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ನಾನಾ ಕಡೆಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ.
    ಜ್ಞಾನ ವಿಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಅರಿತು ಬದುಕಬೇಕಾಗಿದೆ. ವೈಚಾರಿಕತೆಯಿಂದ ಮನುಷ್ಯನ ಎಷ್ಟೋ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿದೆ ಎಂಬುದನ್ನು ತಿಳಿಯಬೇಕಾಗಿದೆ.

    ವೈಜ್ಞಾನಿಕ ಮನೋಭಾವದ ಮೂಲ ಲಕ್ಷಣಗಳಾದ-ಸತ್ವಶೀಲ ವೈಚಾರಿಕತೆ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವ-ಇವುಗಳನ್ನು ಶಿಕ್ಷಣದ ಕಲಿಸುವ ಮತ್ತು ಕಲಿಯುವಿಕೆಯ ಭಾಗವಾಗಿಸಿಕೊಂಡು, ವೈಚಾರಿಕ ಜನಾಂಗವನ್ನು ಸೃಷ್ಟಿಸಬೇಕಿದೆ.
    ಭಾರತ ಸರ್ಕಾರವು ೧೯೫೮ ಮಾರ್ಚ್ ೪ ರಂದು ವಿಜ್ಞಾನ ಧೋರಣೆಗೆ ಸಂಬಂಧಿಸಿದಂತೆ ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದರಲ್ಲಿ ವಿಶೇಷ ಅಂಶವೊಂದಿದೆ. ಅದು ಹೀಗಿದೆ. “ಸಮಾಜದ ಪ್ರತಿಯೊಬ್ಬನಿಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕೆಲಸ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಧಾನದಿಂದ ಮಾತ್ರ ಸಾಧ್ಯ” ಆದರೆ ಇದರ ಮಹತ್ವವನ್ನು ಅರಿತು ನಮ್ಮನ್ನಾಳುವ ಮಂದಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.

    ನೆಹರೂರವರ ಮಾತೊಂದು ಅರ್ಥಪೂರ್ಣವೆನಿಸುತ್ತಿದೆ. ಅದು ಹೀಗಿದೆ “ವಿಜ್ಞಾನವೆಂದರೆ ಪರೀಕ್ಷಾ ನಳಿಕೆಗಳ ಸಹಾಯಕದಿಂದ ಒಂದು ವಸ್ತುವಿನಲ್ಲಿ ಇನ್ನೊಂದನ್ನು ಸೇರಿಸಿ ಸಣ್ಣ ದೊಡ್ಡ ವಸ್ತುಗಳನ್ನು ತಯಾರಿಸುವುದಲ್ಲ, ನಮ್ಮ ಇಡೀ ಜೀವನ ಕ್ರಮವು ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾಗಿರುವಂತೆ ಮನಸ್ಸನ್ನು ತರಬೇತಿಗೊಳಿಸಿವುದೇ ಆಗಿದೆ.” ಈ ಮನಸ್ಸನ್ನು ವೈಜ್ಞಾನಿಕವಾಗಿ ಅಣಿಗೊಳಿಸುವ ಕೆಲಸ ಮನೆ, ಶಾಲೆ, ಸಮಾಜ ಮತ್ತು ಮಾಧ್ಯಮ ಇವೆಲ್ಲವುಗಳೂ ಜವಾಬ್ದಾರಿಯಿಂದ ತಮ್ಮ ಕೆಲಸ ನಿರ್ವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯಾವುದೇ ದೇಶದ ಅಥವಾ ವ್ಯಕ್ತಿಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ವೈಜ್ಞಾನಿಕ ಅನ್ವೇಷಣೆಯ ದಾರಿ ಹಿಡಿದು, ಆ ಮೂಲಕ ಸಾಮಾಜಿಕ ಬದಲಾವಣೆಯನ್ನು ವೈಚಾರಿಕತೆಯ ಮಾರ್ಗದಿಂದ ತರಲು ಪ್ರಯತ್ನಿಸಿದಾಗ ಕ್ರಾಂತಿಕಾರಕ ಬದಲಾವಣೆ ಸಾಧ್ಯವಲ್ಲವೇ ?

    ಜೊತೆಗೆ ನಮ್ಮ ಭಾರತದ ಸಂವಿಧಾನ ನೀಡಿರುವ ಮೂಲಭೂತ ಕರ್ತವ್ಯಗಳಲ್ಲಿ 51 (h) ಹೀಗಿದೆ. ಪ್ರತಿಯೊಬ್ಬ ನಾಗರಿಕನಿಗೂ ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು ಕರ್ತವ್ಯವಾಗಿರತಕ್ಕದ್ದು. ಎಂದಿದೆ. ಅಂದರೆ ಅವೈಜ್ಞಾನಿಕ ಆಚರಣೆಗಳು ಮತ್ತು ಅವುಗಳ ಪ್ರಚೋದನೆ, ಪ್ರೇರಣೆ ಕೂಡ ನಮ್ಮ ಸಂವಿಧಾನಕ್ಕೆ ವಿರೋಧವಾಗಿದ್ದು, ಮೌಢ್ಯಗಳ ವಿರುದ್ಧದ ಕಾಯಿದೆಗಳು ಬೇಗ ರೂಪುಗೊಂಡು, ತಪ್ಪಿತಸ್ಥರಿಗೆ ಶಿಕ್ಷಿಸುವ ವ್ಯವಸ್ಥೆ ಆಗಬೇಕಾಗಿದೆ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    ಚಂಚಲಪೇಟೆಯಲ್ಲಿ ಅಚಲ ಹೂಡಿಕೆಗುಚ್ಚ ನಿರ್ಮಾಣ ಹೇಗೆ?

    ಷೇರುಪೇಟೆಯಲ್ಲಾಗುತ್ತಿರುವ ಬದಲಾವಣೆಗಳು, ಬೆಳವಣಿಗೆಗಳು ಎಲ್ಲವೂ ತಾತ್ಕಾಲಿಕ ಅದರಲ್ಲೂ ವಿಶೇಷವಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈಗಿನ ಸಂದರ್ಭದಲ್ಲಿ ಹೆಚ್ಚು ಕಾಲ್ಪನಿಕ ಎಂದೆನಿಸುತ್ತದೆ. ಹಿಂದಿನ ಗುರುವಾರ ಅಂದರೆ 21 ನೇ ಜನವರಿಯಂದು ಸೆನ್ಸೆಕ್ಸ್‌ 50,184 ಪಾಯಿಂಟುಗಳನ್ನು ತಲುಪಿ ವಿಜೃಂಭಿಸಿದ ನಂತರ ಸುಮಾರು 3,900 ಪಾಯಿಂಟುಗಳಷ್ಠು ಕುಸಿತ ಕಂಡಿದೆ. ಡಿಸೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಹೆಚ್ಚಿನ ಕಂಪನಿಗಳು ಅತ್ಯಂತ ಆಕರ್ಷಕ ಸಾಧನೆಗಳನ್ನು ಪ್ರಕಟಿಸಿವೆ. ಅದರಲ್ಲೂ ಪ್ರಮುಖ ಕಂಪನಿಗಳಾದ ಮಾರುತಿ ಸುಝುಕಿ, ಹಿಂದೂಸ್ಥಾನ್‌ ಲೀವರ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ನಂತಹ ಕಂಪನಿಗಳು ಉತ್ತಮ ಸಾಧನೆಯ ನಂತರವೂ ಕುಸಿತಕ್ಕೊಳಗಾಗಿವೆ. ಮಾರುತಿ ಸುಝುಕಿಯಂತೂ ಒಂದೇ ವಾರದಲ್ಲಿ ರೂ.1,000 ದಷ್ಠು ಕರಗಿಸಿಕೊಂಡಿದೆ. ಶುಕ್ರವಾರ ಒಂದೇ ದಿನ ರೂ.380 ರಷ್ಟು ಹಾನಿಗೊಳಗಾಗಿದೆ.

    ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರೂ ಏಕೆ ಹೀಗೆ? ಎಂಬುದು ಅನೇಕರ ಚಿಂತನೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕಂಪನಿಗಳು ಕಳೆದ 8-10 ತಿಂಗಳುಗಳಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿವೆ. ಅಲ್ಲದೆ ಈ ಕಂಪನಿಗಳು ಇದೇ ರೀತಿ ಸಾಧನೆ ಪ್ರದರ್ಶಿಸಬಹುದೆಂಬ ಮುಂಚಿತ ಕಲ್ಪನೆಯೂ ಆಗಿದೆ. ಈ ರೀತಿ ಏರಿಕೆ ಕಂಡಾಗ ಲಾಭದ ನಗದೀಕರಣ ಮಾಡಿಕೊಂಡಲ್ಲಿ ಹೂಡಿಕೆ ಮಾಡಿದ ಬಂಡವಾಳ ಫಲಪ್ರಧವಾಗುತ್ತದೆ. ಗರಿಷ್ಠಮಟ್ಟದಲ್ಲಿರುವ ಪೇಟೆಯು ಎಷ್ಠರಮಟ್ಟಿಗೆ ಹರಿತ – ತ್ವರಿತ ಎಂದರೆ, 20 ನೇ ಜನವರಿಯಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.197.70 ಲಕ್ಷ ಕೋಟಿಯಾಗಿದ್ದು 29 ರಂದು ಅದು ರೂ.186.12 ಲಕ್ಷ ಕೋಟಿಗೆ ಇಳಿದಿದೆ.

    ಹಿಂದೂಸ್ಥಾನ್‌ ಯೂನಿ ಲೀವರ್‌ :ಹೂಡಿಕೆದಾರರ ಬಂಡವಾಳವು ಯಾವ ರೀತಿ ವಿಸ್ತಾರವಾಗಿ ಹರಡಬೇಕು. ಅದು ಹೇಗಿರಬೇಕೆಂಬುದನ್ನು ಸೆನ್ಸೆಕ್ಸ್‌ ಕಂಪನಿ ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿಯ ಯಶಸ್ಸಿನಿಂದ ಅರಿಯಬಹುದು.

    ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿಯಲ್ಲಿ ಬ್ರೂಕ್‌ ಬಾಂಡ್‌ ಕಂಪನಿಯು 1996 ರಲ್ಲಿ ವಿಲೀನಗೊಂಡಿತು. ಅದಕ್ಕೂ ಮುಂಚೆ 1994 ರಲ್ಲಿ ಲಿಪ್ಟನ್‌ ಇಂಡಿಯಾ ಕಂಪನಿಯು ಬ್ರೂಕ್‌ ಬಾಂಡ್‌ ಕಂಪನಿಯಲ್ಲಿ ವಿಲೀನಗೊಂಡಿತು. 1993 ರಲ್ಲಿ ಟಾಟಾ ಆಯಿಲ್‌ ಮಿಲ್ಸ್‌, ಸಹ ಈ ಕಂಪನಿಯಲ್ಲಿ ವಿಲೀನಗೊಂಡಿತು. 1998 ರಲ್ಲಿ ಪಾಂಡ್ಸ್‌ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿದೆ. ನಂತರ ಅಲ್ಲಿಯವರೆಗೂ ಸೋಪು, ಡಿಟರ್ಜೆಂಟ್‌ ವಲಯದಲ್ಲಿ ಕೇಂದ್ರೀಕರಿಸಿಕೊಂಡಿದ್ದ ಕಂಪನಿಯು ಇತರೆ ವಲಯಗಳತ್ತಲೂ ವಿಸ್ತರಿಸಿಕೊಂಡಿತು. ಈತ್ತೀಚಿನ ಬೆಳವಣಿಗೆಯಲ್ಲಿ ಕಂಪನಿಯು ಹಾರ್ಲಿಕ್ಸ್ ನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದೆ. ಸದ್ಯ ಈ ಕಂಪನಿಯ ಬತ್ತಳಿಕೆಯಲ್ಲಿರುವ ಬ್ರಾಂಡ್‌ ಗಳು ಇಂತಿವೆ. ಈ ಎಲ್ಲಾ ಬ್ರಾಂಡ್‌ ಉತ್ಪನ್ನಗಳು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರತಿದಿನವೂ ಜಾಹಿರಾತುಗಳ ಮೂಲಕ ಪ್ರಚಾರಪಡೆಯುತ್ತವೆ. ಒಂದು ದಿನದ ಸುಮಾರು ಶೇಕಡ 75 ರಿಂದ 80ರಷ್ಟು ಜಾಹಿರಾತುಗಳು ಈ ಕಂಪನಿಯ ಉತ್ಪನ್ನಗಳದ್ದೇ ಆಗಿರುತ್ತದೆ. ಒಂದೊಂದು ಬ್ರಾಂಡ್‌ ಹೆಸರಿನಲ್ಲಿ ಅನೇಕ ಉಪ ಬ್ರಾಂಡ್‌ ಗಳು ಮಾರಾಟವಾಗುತ್ತಿವೆ.

    ಈ ಕಂಪನಿಯು ಭಾರತದ ಗೃಹಬಳಕೆ, ದಿನಬಳಕೆ ಸಾಮಾಗ್ರಿಗಳ ವಲಯದಲ್ಲಿ ಏಕಚಕ್ರಾಧಿಪತ್ಯವನ್ನುಹೊಂದಿದೆ ಎನ್ನಬಹುದು. ಕೆಇವುಗಳಲ್ಲಿ ಆಹಾರ, ಆರೋಗ್ಯ, ವೈಯಕ್ತಿಕ ರಕ್ಷಣಾ ಸಾಮಾಗ್ರಿ, ಗೃಹಬಳಕೆಪದಾರ್ಥಗಳಿರುವುದರಿಂದ ಯಾವುದನ್ನು ಬಳಸಿದರೂ ಕಂಪನಿಗೆ ಲಾಭಕರ. ದೇಶದ ಖಜಾನೆಗೂ ಕೊಡುಗೆಯಾಗುವುದಲ್ಲದೆ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳೂ ಲಭ್ಯ.ಕೆಲವು ಉತ್ಪನ್ನಗಳ ಪಟ್ಟಿ ಇಂತಿವೆ.

    ಬ್ರೂ, ಬ್ರೂ ಗ್ರೀನ್‌ ಲೇಬಲ್‌ ನೈಸ್‌,ರೆಡ್‌ ಲೇಬಲ್‌, ತಾಜಾ, ತಾಜ್‌ ಮಹಲ್‌, 3 ರೋಸಸ್‌,ಲಕ್ಸ್‌, ಹಮಾಮ್‌, ರೆಕ್ಸೋನ, ಡೋವ್‌, ಪಿಯರ್ಸ್‌, ಲೈಫ್‌ ಬಾಯ್‌, ಲಿರಿಲ್‌, ಟ್ರೆಸಮ್‌,ಕ್ಲಿನಿಕ್‌ ಶಾಂಪೂ, ಲೀವರ್‌ ಆಯುಶ್‌, ಇಂದುಲೇಖ ಆಯುರ್ವೇದಿಕ್‌ ಹೇರ್‌ ಆಯಿಲ್‌,ಲಾಕ್ಮೆ ಐಕೋನಿಕ್‌ ಕಾಜಲ್‌, ಪಾಂಡ್ಸ್‌, ಗ್ಲೋ ಅಂಡ್‌ ಲೌಲಿ, ವ್ಯಾಸಲಿನ್‌,ಅನ್ನಪೂರ್ಣ ಸಾಲ್ಟ್‌, ಅನ್ನಪೂರ್ಣ ಅಟ್ಟಾ,ಕಿಸಾನ್‌ ಕೆಚಪ್‌, ಜ್ಯೂಸ್‌, ಜಾಮ್ಸ್,ಪೆಪ್ಸೋಡೆಂಟ್‌, ಕ್ಲೋಸ್‌ ಅಪ್‌,ಸರ್ಫ್‌ ಎಕ್ಸೆಲ್‌, ರಿನ್‌, ಕಂಫರ್ಟ್‌ ಫ್ಯಾಬ್ರಿಕ್ ಸಾಫ್ಟ್ನರ್‌, ಡೊಮೆಕ್ಸ್‌ ಟಾಯಿಲೆಟ್ ಕ್ಲೀನರ್‌,ವಿಮ್‌,ಹಾರ್ಲಿಕ್ಸ್‌ ವುಮನ್‌ ಪ್ಲಸ್‌,ಹಾರ್ಲಿಕ್ಸ್‌ ಜೂನಿಯರ್ ಹೀಗೆ ಪಟ್ಟಿ ಬೆಳೆಯುತ್ತದೆ.

    ಒಂದೇ ಕಂಪನಿಯು ಇಷ್ಟೆಲ್ಲಾ ಬ್ರಾಂಡ್‌ ಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆ? ಇದರಿಂದಾಗುವ ಪ್ರಯೋಜನವೇನು?

    ಅತ್ಯಧಿಕ ಉತ್ಪನ್ನಗಳ ಮಾರ್ಕೆಟಿಂಗ್‌ ನಲ್ಲಿ ತೊಡಗಿಸಿಕೊಂಡಿರುವುದರಿಂದ ಕಂಪನಿಯ ಗ್ರಾಹಕರ ಸಂಖ್ಯೆ ಅಗಾಧವಾಗಿ ಬೆಳೆದಿದೆ. ಸೋಪ್‌ ಗಳಾಗಲಿ, ಡಿಟರ್ಜೆಂಟ್‌ ಗಳಾಗಲಿ, ಅಥವಾ ಹಾರ್ಲಿಕ್ಸ್‌ ಉತ್ಪನ್ನಗಳಿಗೆ ವಿವಿಧ ಹೆಸರಿನಲ್ಲಿ ಆ ಸಮುದಾಯವನ್ನು ತನ್ನತ್ತ ಸೆಳೆಯುತ್ತದೆ. ಉದಾಹರಣೆಗೆ ಹಾರ್ಲಿಕ್ಸ್‌ ಜೂನಿಯರ್‌, ಎಂದರೆ ಆ ವಯಸ್ಸಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಹೀಗೆ ವಿವಿಧ ವಯೋಮಾನದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು. ಮತ್ತೊಂದು ಪ್ರಮುಖ ಅಂಶ ಎಂದರೆ ಸ್ನಾನದ ಸೋಪ್‌ ನ ಅನೇಕ ಪ್ರಮುಖ ಬ್ರಾಂಡ್‌ ಗಳನ್ನು ತೇಲಿಬೆಟ್ಟಿರುವುದರಿಂದ ಗ್ರಾಹಕರು ಒಂದಲ್ಲ ಒಂದು ಬ್ರಾಂಡ್‌ ಗೆ ಅಂಟಿಕೊಳ್ಳಲು ಸಾಧ್ಯ. ಇಷ್ಟೆಲ್ಲಾ ಬ್ರಾಂಡ್‌ ನ ಉತ್ಪನ್ನಗಳಿರುವುದರಿಂದ ಕಂಪನಿಯ ಸಾಧನೆಯು ಬಲಿಷ್ಠವಾಗಿರುವುದು.

    ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ವಿವಿದೋದ್ದೇಶಗಳಿಂದ ಸಾರ್ವಜನಿಕವಾಗಿ ಸಂಪನ್ಮೂಲ ಸಂಗ್ರಹಣೆಗೆ ಪ್ರಯತ್ನಿಸುತ್ತಿವೆ. ಆದರೆ ಈ ಕಂಪನಿಯು ಸಂಪನ್ಮೂಲ ಸಂಗ್ರಹಣೆಯತ್ತ ಕೈ ಹಾಕುವ ಪ್ರಯತ್ನವನ್ನು ಮಾಡಿಲ್ಲ. ಎಫ್‌ ಎಂ ಸಿ ಜಿ ವಲಯದ ಇತರೆ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೊಲಿವ್‌, ಐ ಟಿ ಸಿ ಯಂತಹ ಕಂಪನಿಗಳಿಗೆ ಸಂಪನ್ಮೂಲ ಸಂಗ್ರಹಣೆಯ ಆವಶ್ಯಕತೆ ಇಲ್ಲ. ಬದಲಾಗಿ ಕಂಪನಿಗಳೇ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ನೀಡುತ್ತಾ ಬಂದಿವೆ. ಒಂದು ಸಮಯದಲ್ಲಿ ಸಿಗರೇಟ್‌ ಒಂದೇ ಐಟಿಸಿ ಕಂಪನಿಯ ಉತ್ಪಾದನೆಯಾಗಿತ್ತು. ಕಾಲ್ಗೇಟ್‌ ಎಂದರೆ ಕೇವಲ ದಂತವಲಯಕ್ಕೆ ಸೀಮಿತವಾಗಿದ್ದ ಕಂಪನಿಯಾಗಿತ್ತು. ಆದರೆ ಈಗ ಈ ಕಂಪನಿಗಳೂ ತಮ್ಮ ಚಟುವಟಿಕೆಯನ್ನು ಗೃಹಬಳಕೆ, ದೈನಂದಿನ ಬಳಕೆ ವಲಯಕ್ಕೆ ಪ್ರವೇಶಿಸಿ ಉತ್ತಮ ಜನಸ್ಪಂಧನ ಪಡೆಯುತ್ತಿವೆ.

    ಇದೇ ರೀತಿ ಒಂದು ಬಲಿಷ್ಠ ಹೂಡಿಕೆ ಗುಚ್ಚ ( Portfolio) ಹೊಂದಲು ಕೇವಲ ಕೆಲವೇ ಕಂಪನಿಗಳಿಗೆ ಸೀಮಿತಗೊಳಿಸದೆ ಹೂಡಿಕೆ ಗುಚ್ಚದಲ್ಲಿ ಅನೇಕ, ವೈವಿಧ್ಯಮಯ ಕಂಪನಿಗಳನ್ನು, ಒಂದೇ ವಲಯದ ವಿವಿಧ ಕಂಪನಿಗಳನ್ನು ಸೇರಿಸಿದಲ್ಲಿ ಆ ಹೂಡಿಕೆ ಗುಚ್ಚವು ಸುಭದ್ರವಾಗಿರುವುದಲ್ಲದೆ, ಪೇಟೆಯಲ್ಲಾಗುವ ಉಬ್ಬರ ವಿಳಿತಗಳ ರೀತಿಯ ಏರಿಳಿತಗಳಿಗೂ ಜಗ್ಗದ ಹೂಡಿಕೆಗುಚ್ಚವಾಗುವುದು. ಬ್ರಾಡ್‌ ಬೇಸ್‌ ಇದ್ದಲ್ಲಿ ಅದು ಒಂದು ರೀತಿಯ ಷಾಕ್‌ ಅಬ್ಸಾರ್ಬರ್‌ ರೀತಿ ಕಾರ್ಯನಿರ್ವಹಿಸಿ, ಅಪಾಯದ ಮಟ್ಟವನ್ನು ಮೊಟಕುಗೊಳಿಸುತ್ತದೆ. ಒಂದು ದಿನಸಿ ಅಂಗಡಿಯಂತೆ ಬಹಳಷ್ಠು ಕಂಪನಿಗಳನ್ನು ತಮ್ಮ ಹೂಡಿಕೆ ಗುಚ್ಚದಲ್ಲಿ ಸೇರಿಸಿದ್ದರೆ ಅಪಾಯವು ಕ್ಷೀಣಿತ ಮಟ್ಟದಲ್ಲಿರುತ್ತದೆ. ಎಂತಹ ಏರಿಳಿತಗಳುಂಟಾದರೂ ಒಂದಲ್ಲ ಒಂದು ಕಂಪನಿಯು ಉತ್ತಮ ಅವಕಾಶಗಳನ್ನು ಒದಗಿಸುತ್ತಿರುತ್ತವೆ. ಅಲ್ಲದೆ ಕಾರ್ಪೊರೇಟ್‌ ಫಲಗಳನ್ನು ಸಹ ನೀಡುತ್ತಿರುತ್ತವೆ. ಷೇರುಪೇಟೆಯ ಹೂಡಿಕೆಗೆ ಹಿಂದೂಸ್ಥಾನ್‌ ಲೀವರ್‌ ಶೈಲಿಯು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಅಲ್ಲವೇ ?

    ಅತಿಥಿ ಎಂದಿಗೂ ಆದರಣೀಯ..!


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ‘ಬರಹ’ ನಿಘಂಟಿನ ಪ್ರಕಾರ ‘ಅತಿಥಿ’ಎಂದರೆ ಆಮಂತ್ರಣವನ್ನು ಪಡೆದು ಇಲ್ಲವೆ ಪಡೆಯದೆ ಬಂದ ವ್ಯಕ್ತಿ ಅರ್ಥಾತ್ ಮನೆಯ ಸದಸ್ಯರಲ್ಲದವರೆಂದು. ಅತಿಥಿಯೋ ಇಲ್ಲ ಇನ್ನು ಯಾರೇ ಆದರು ಮನೆಯ ಬಾಗಿಲಿಗೆ ಬಂದ ನಂತರ ಅವರಿಗೆ ಪ್ರೀತಿಯ ಸ್ವಾಗತವನ್ನು ಕೋರಬೇಕು. ಮೇಲುಪಚಾರ,ಮಾತಿನುಪಚಾರ ಎರಡನ್ನೂ ಮಾಡದೆ ಹೃದಯಾಂತರಾಳದಿಂದ ಅವರನ್ನು ಸತ್ಕರಿಸಬೇಕು. ಅದನ್ನೇ ಬಸವಣ್ಣನವರು ಪ್ರಸ್ತುತ ವಚನದ ಮೂಲಕ ಸಾಮಾಜಿಕರಿಗೆ ಮನಮುಟ್ಟುವಂತೆ ಹೇಳಿದ್ದಾರೆ.

    ಏನೀ ಬಂದಿರಿ ಹದುಳಿದ್ದಿರೇ ಎಂದಡೆ
    ನಿಮೈಸಿರಿ ಹಾರಿ ಹೋಹುದೇ?
    ಕುಳ್ಳಿರೆಂದರೆ ನೆಲ ಕುಳಿ ಹೋಹುದೇ?
    ಒಡನೆ ನುಡಿದರೆ ಸಿರ ಹೊಟ್ಟೆ ಒಡೆಯವುದೇ?
    ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ
    ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ

    ಯಾವಾಗ ಬಂದಿರಿ ಮನೆಯಲ್ಲೆಲ್ಲಾ ಕ್ಷೇಮವಾಗಿದ್ದೀರ? ಎಂದು ಕೇಳಿ ಬಿಟ್ಟರೆ ನಿಮ್ಮ ಐಸಿರಿ ಏನೂ ಹಾರಿಹೋಗುವುದಿಲ್ಲ. ಮಾತನ್ನೇನು ದುಡ್ಡು ತೆತ್ತು ತರಬೇಕೇ? ಮಾತು ಮನುಷ್ಯನ ಬದುಕಿನ ಎಟುಕಿನಲ್ಲೇ ಇರುತ್ತದೆ. ಶತ್ರುಗಳು ಮನೆಯ ಬಾಗಿಲಿಗೆ ಬಂದರೂ ಅವರನ್ನು ತಿರಸ್ಕರಿಸಬಾರದೆಂಬುದಿದೆ. ನೂರು ಭಿನ್ನಾಭಿಪ್ರಾಯದ ತಡಿಕೆಯಿದ್ದರೂ ಮನೆಗೆ ಬಂದವರನ್ನು ಸದ್ಭಾವದಿಂದ ಸ್ವಾಗತಿಸಬೇಕು, ಸತ್ಕರಿಸಬೇಕು. ತಕ್ಷಣಕ್ಕೆ ನುಡಿದರೆ ಅದರಿಂದ ನೀವು ಕಳೆದುಕೊಳ್ಳುವುದೇನೂ ಇಲ್ಲ!

    ಯೋಚನೆ ಮಾಡಿ ಲೆಕ್ಕಾಚಾರ ಮಾಡಿ ಕೊಂಕು ಮಾತುಗಳನ್ನು ಪೋಣಿಸಿಕೊಂಡು ಒಂದಷ್ಟು ತಯಾರಿ ಮಾಡಿಕೊಂಡು ಮಾತನಾಡುವುದಕ್ಕಿಂತ ಒಡನೆ ನುಡಿದರೆ ನಿಮ್ಮ ಶಿರ ಹೊಟ್ಟೆ ಒಡೆಯುವುದೇ? ಅಂದರೆ ನಿಮಗೆ ದೈಹಿಕವಾಗಿ ಯಾವುದಾದರೂ ತೊಂದರೆಯಾಗುತ್ತದೆಯೇ ಎನ್ನುತ್ತಾರೆ. ಬಂದವರನ್ನು ಕುಳಿತುಕೊಳ್ಳಿ ಎಂದರೆ ಅವರು ಆಸೀನರಾದ ಜಾಗವೇನಾದರೂ ಕುಳಿ ಹೊಗುವುದೇ? ಎನ್ನುತ್ತಾರೆ.

    ಬಂದವರು ಬಡವರೋ ಶ್ರೀಮಂತರೋ ತಿಳಿದು ಸೋಫ ಮೇಲೆ, ಇಲ್ಲ ಖಾಲಿ ಕುರ್ಚಿ ಮೇಲೆ ಕೂರಿಸುವುದು, ಶ್ರೀಮಂತರಾದರೆ ಒಳ್ಳೆಯ ಗುಣಮಟ್ಟದ ಬಿಸ್ಕೆಟ್, ಬೆಳ್ಳಿ ಬಟ್ಟಲ ಕುಂಕುಮ, ಬಡವರಾದರೆ ಸಾದಾರಣ ಬಿಸ್ಕೇಟ್ ಸ್ಟೀಲ್ ಬಟ್ಟಲ ಕುಂಕುಮ ಕೊಡುವವರೂ ಇದ್ದಾರೆ. ತನ್ನಕಡೆಯವರು ಬಂದರೆ ಹೊಗೆಯಾಡುವ ಖಾದ್ಯಗಳ ಸಮರ್ಪಣೆ, ತನ್ನವರಲ್ಲ ಎಂಬ ಭಾವನೆಯಿದ್ದರೆ ತಣ್ಣಗೆ ಕೊರೆಯುವ ತಿಂಡಿಯನ್ನು ನೀಡಿ ಅಪಚಾರ ಮಾಡುವವರೂ ಇದ್ದಾರೆ. ಅತಿಥಿಗಳ ನಡುವಣ ಭೇದನ್ನು ಮಾಡುವವರಿಗೆ ಇಂತಹ ಜನರಿಗೆ ಎಂಟುನೂರು ವರ್ಷಗಳ ಹಿಂದೆಯೇ ನಯವಾಗಿ ಬಸವಣ್ಣನವರು ಕಿವಿ ಹಿಂಡಿದ್ದಾರೆ.
    ದಾನ ಮಾಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಎಂದಮೇಲೆ ಕೊಡಬೇಕು .

    ಆ ಭಗವಂತ ಕೊಟ್ಟಿದ್ದಾನೆ ಎಂದ ಮೇಲೆ ಅದು ಸತ್ಪಾತ್ರಕ್ಕೆ ಸಲ್ಲಬೇಕಲ್ಲವೇ? ಇಳೆ, ಬೆಳೆ, ಸುಳಿದು ಸೂಸುವ ವಾಯು ಎಲ್ಲ ಭಗವಂತನದ್ದೇ ಆದ ಮೇಲೆ ಸುರಿಯುವ ಮಳೆ ಸುರಿಯದಿದ್ದರೆ, ಬೆಳೆಯುವ ಬೆಳೆ ಬೆಳೆಯದೇ ಇದ್ದರೇ ನಮಗೆಲ್ಲಿರುತ್ತಿತ್ತು ಈ ಸಮೃದ್ಧಿ ಎಂದು ಜೇಡರ ದಾಸಿಮಯ್ಯ ಹೇಳಿಲ್ಲವೇ ಹಾಗೆ.

    ಇಲ್ಲದೇ ಇರುವುದನ್ನು ಹೊಂದಿಸಿ ಕೊಡು ಎಂದು ಭಗವಂತ ಹೇಳಿಲ್ಲ ಇರುವುದನ್ನು ಕೊಡು ಎಂದಿರುವುದು ಇದೇ ಅಕ್ಕನ ಪ್ರಕಾರ ಕೈಗೆ ಶೃಂಗಾರವಾಗಿರುವುದು. ನಾನು, ನನ್ನ ಮನೆ, ನನ್ನ ಕುಟುಂಬ, ನನ್ನ ಹೆಂಡತಿ, ನನ್ನ ಮಕ್ಕಳು ಎಂದು “ನಾನು” ಎನ್ನುವುದನ್ನೇ ವಿಜೃಂಭಿಸಿಕೊಳ್ಳುವುದರ ಬದಲು Think out of the box ಎಂಬಂತೆ ಪೂರ್ವಗ್ರಹ ಪೀಡಿತ ಆಲೋಚನೆಗಳಿಂದ ಹೊರಬಂದು ತಾನೂ ಬದುಕಿ ಇತರರನ್ನು ಬದುಕಗೊಡಿ ಇಲ್ಲವಾದರೆ ಶಿಕ್ಷೆ ಖಂಡಿತಾ ಎಂದು ಎಚ್ಚರಿಸುತ್ತಾರೆ. ಹಾಗಾದಾಗ “ವಸುದೈವ ಕುಟುಂಬಕಂ” ಎಂಬ ತತ್ವ ಸಾಕಾರಗೊಳ್ಳುತ್ತದೆ ಎಂಬ ಬಯಕೆಯನ್ನು ವ್ಯಕ್ತಪಡಿಸಿ, ಯಾರಾದರು ಮನೆಗೆ ಬಂದರೆ ಮಂದಸ್ಮಿತ,ಮಧುರವಾಣಿ,ಮನದಾಳದ ಹಾರೈಕೆ ಇದ್ದರೆ ಅದಷ್ಟೇ ಸಾಕು ಎನ್ನುತ್ತಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಕ್ಕೆ ಕೌನ್ಸೆಲಿಂಗ್; ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

    ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೌನ್ಸೆಲಿಂಗ್ ಮೂಲಕ ನಡೆಯಲಿದ್ದು, ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.15ರಷ್ಟು ಮೀರದಂತೆ ವರ್ಗಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಬೋಧನಾ ಸಿಬ್ಬಂದಿ ವರ್ಗಕ್ಕೆ ಹೊಸ ನಿಯಮಾವಳಿ ರೂಪಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಒಂದೇ ಕಡೆ 4 ವರ್ಷ ಕೆಲಸ ಮಾಡಿರುವ ಬೋಧಕರು ವರ್ಗಾವಣೆಗೆ ಅರ್ಹರಾಗಿದ್ದು, ಈ ಅಂಶವನ್ನು ಆಧಾರವಾಗಿಟ್ಟುಕೊಂಡು ವರ್ಗಾವಣೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ಇದು ಅನ್ವಯವಾಗುತ್ತದೆ ಎಂದು ಎಂದು ಅವರು ತಿಳಿಸಿದ್ದಾರೆ.

    ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರ್ಗಾವಣೆಗೆ ಚಾಲನೆ ಸಿಗಲಿದೆ. ಆದಷ್ಟು ಬೇಗ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸಲಾಗುವುದು. ಎಲ್ಲರಿಗೂ ಇಷ್ಟವಾಗುವ ಹಾಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ವಿವರಿಸಿದರು.

    ಐದು ವಲಯ:ರಾಜ್ಯವನ್ನು ಎ, ಬಿ, ಸಿ, ಡಿ ಮತ್ತು ಇ ವಲಯ ಎಂದು ಐದು ವಿಭಾಗ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯನ್ನು ‘ಎ’ ವಲಯವೆಂದು; ಬಿಡಿಎ ಮತ್ತು ಬೆಂಗಳೂರು ಹೊರತುಪಡಿಸಿದ ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯನ್ನು ‘ಬಿ’ ವಲಯವೆಂದು; ಜಿಲ್ಲಾ ಕೇಂದ್ರ ಹಾಗೂ ನಗರಸಭೆಗಳ ವ್ಯಾಪ್ತಿಯನ್ನು ‘ಸಿ’ ವಲಯ; ತಾಲ್ಲೂಕು ಕೇಂದ್ರ ಹಾಗೂ ಪಟ್ಟಣ ಪಂಚಾಯತಿಗಳನ್ನು ‘ಡಿ’ ವಲಯ ಹಾಗೂ ಮೇಲಿನ ಎಲ್ಲ ವಲಯಗಳ ವ್ಯಾಪ್ತಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಕಾಲೇಜುಗಳನ್ನು ‘ಇ’ ವಲಯಗಳೆಂದು ವಿಂಗಡಿಸಲಾಗಿದೆ. ಯಾರು ಯಾವ ವಲಯದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸುತ್ತಾರೊ ಅವರು ಬೇರೊಂದು ವಲಯಕ್ಕೆ ವರ್ಗವಾಗಲು ಅರ್ಹತೆ ಪಡೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

    ಶೇ.15ರಷ್ಟು ವರ್ಗಾವಣೆ ವಿವರ :ರಾಜ್ಯದ ಐದೂ ಶೈಕ್ಷಣಿಕ ವಿಭಾಗಗಳ ವ್ಯಾಪ್ತಿಯ ಪದವಿ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.9ರಷ್ಟು ಬೋಧಕರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯವಾಗಿ ವರ್ಗ ಮಾಡಲಾಗುವುದು. ಪತಿ-ಪತ್ನಿಯರ ಪ್ರಕರಣಗಳಲ್ಲಿ ಶೇ.3ರಷ್ಟು ಸಿಬ್ಬಂದಿಯನ್ನು ಮಾತ್ರ ವರ್ಗ ಮಾಡಲಾಗುವುದು. ವಿಧವೆಯರು, ಡಿವೋರ್ಸ್‌ ಪಡೆದ ಬೋಧಕಿಯರು, ವಿಕಲಚೇತನರ ಹೊಣೆಗಾರಿಕೆ ಇರುವವರು, ಸೇನೆ ಅಥವಾ ಅರೆ ಸೇನಾಪಡೆಯಲ್ಲಿ ಕೆಲಸ ಮಾಡುತ್ತಿರುವವರ ಪ್ರಕರಣಗಳಲ್ಲಿ ಶೇ.1ರಷ್ಟು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಶೇ.1ರಷ್ಟು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಇರುವವರ ಪೈಕಿ ಶೇ.1ರಷ್ಟು ಬೋಧಕರನ್ನು ವರ್ಗಾವಣೆಗೆ ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

    ವರ್ಗಾವಣೆಯಲ್ಲಿ ಪಾರದರ್ಶಕತೆ:ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. 4 ವರ್ಷಗಳಿಗೂ ಹೆಚ್ಚು ಕಾಲದಿಂದ ಒಂದೇ ಕಡೆ ಠಿಕಾಣೆ ಹೂಡಿರುವ ಬೋಧನಾ ಸಿಬ್ಬಂದಿಯನ್ನು ಮುಲಾಜಿಲ್ಲದೆ ವರ್ಗ ಮಾಡಲಾಗುವುದು. ಇದಕ್ಕೆ ಸಂಬಂಧಿತ ಎಲ್ಲ ನಿಯಮಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

    ಈ ಹಿಂದೆ ವರ್ಗಾವಣೆ ಎಂದರೆ ದೊಡ್ಡ ಪ್ರಹಸನದಂತೆ ನಡೆಯುತ್ತಿತ್ತು. ಆದರೆ, ಇಡೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಣೆಗೊಳಪಡಿಸಿ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಸಲಾಗುತ್ತಿದೆ. ವೈಜ್ಞಾನಿಕವಾಗಿ ಎಲ್ಲವೂ ನಡೆಯಲಿದೆ. ಉಪನ್ಯಾಸಕರು ಇನ್ನು ಮುಂದೆ ಸಚಿವರು, ಅಧಿಕಾರಿಗಳ ಕಚೇರಿಗಳ ಸುತ್ತ ಅಲೆಯುವ ಅವ್ಯವಸ್ಥೆ ಇರುವುದಿಲ್ಲ. ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಉನ್ನತ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

    ರಾಜ್ಯ ಉನ್ನತ ಶಿಕ್ಷಣ ಪರಿಷತ್ ನೀಡಿದ ವರದಿಯನ್ನು ಪರಿಶೀಲಿಸಿ ಅದರ ಅನುಸಾರ 2020-21 ಮತ್ತು 2021-22 ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದೆ.

    ಈ ಶೈಕ್ಷಣಿಕ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ವಿವಿಗಳು, ಕಾಲೇಜು ಶಿಕ್ಷಣ/ತಾಂತ್ರಿಕ ಶಿಕ್ಷಣ ಕಾಲೇಜುಗಳು ಕೂಡಲೇ ಕಡ್ಡಾಯವಾಗಿ ಜಾರಿಗೊಳಿಸುವಂತೆ ಸರ್ಕಾರದ ಆದೇಶ ಸಂಖ್ಯೆ ಇಡಿ/ 2/ವಿವಿಧ/ರಾಮು/2021, ಬೆಂಗಳೂರು ದಿನಾಂಕ 29-01-2021ರಲ್ಲಿ ತಿಳಿಸಲಾಗಿದೆ.

    ಈ ಆದೇಶದ ಪ್ರತಿ ಮತ್ತು ಶೈಕ್ಷಣಿಕ ವೇಳಾಪಟ್ಟಿಯ ಅನುಬಂಧಗಳನ್ನು ಇಲ್ಲಿ ನೀಡಲಾಗಿದೆ.

    ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮೊದಲ ಹೆಜ್ಜೆ

    ಪ್ರತಿವರ್ಷ ಜನವರಿ ಮೂವತ್ತರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ಮಹನೀಯರನ್ನು ಗೌರವಿಸುವ ದಿನ. ಈ ಹುತಾತ್ಮರ ದಿನವನ್ನು ಸರ್ವೋದಯ ದಿನ ಎಂದು ಸಹ ಕರೆಯಲ್ಪಡುತ್ತದೆ. ಮಹಾತ್ಮ ಗಾಂಧೀಜಿಯವರು 1948 ರ ಜನವರಿ ಮೂವತ್ತರಂದು ನಾಥುರಾಮ್ ಗೋಡ್ಸೆಯವರ ಗುಂಡಿಗೆ ಬಲಿಯಾಗಿ ಇಹ ಲೋಕವನ್ನು ತ್ಯಜಿಸಿ ಸ್ವರ್ಗಸ್ಥರಾದ ದಿನ. ಈ ದಿನದಂದು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಕ್ಷಣಾಸಚಿವರು ಹಾಗೂ ಮೂರು ಸೇನಾ ಮುಖ್ಯಸ್ಥರುಗಳು, ಅಲಂಕೃತಗೊಂಡ ಸಮಾಧಿ ಸ್ಥಳವಾದ ರಾಜಘಾಟ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಎರಡು ನಿಮಿಷಗಳ ಮೌನವನ್ನು ದೇಶಾದ್ಯಂತ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುತ್ತದೆ. ಸರ್ವ ಧರ್ಮಗಳ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಮತ್ತು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಗೌರವವನ್ನು ಸಲ್ಲಿಸಲಾಗುತ್ತದೆ.

    ಸರ್ವೋದಯ ಸಂಸ್ಕೃತದ ಪದ. ಸರ್ವೋದಯ ಎಂದರೆ “Universal uplift” ( ಸಾರ್ವತ್ರಿಕ ಉನ್ನತಿ) ಅಥವಾ “Progress for all” ( ಎಲ್ಲರ ಪ್ರಗತಿ ). ಈ ಪದವನ್ನು ಮೋಹನ್ ದಾಸ್ ಗಾಂಧೀಜಿಯವರು 1908 ರಲ್ಲಿ ಜಾನ್ ರಸ್ಕಿನ್‍ ರ ರಾಜಕೀಯ ಆರ್ಥಿಕತೆಯನ್ನು ಕುರಿತ “unto this last” ಅನುವಾದದ ಶೀರ್ಷಿಕೆಯಾಗಿ ಬಳಸಿದರು ಹಾಗೂ ಅದರ ಪರಿಕಲ್ಪನೆಯನ್ನು ಜೀವನದಲ್ಲಿ ಮುಂದುವರಿಸಿದರು.

    ಮಹಾತ್ಮ ಗಾಂಧೀಜಿಯವರು ಬೆಂಗಳೂರಿಗೆ ಮೊಟ್ಟ ಮೊದಲ ಹೆಜ್ಜೆಯನ್ನಿಟ್ಟ, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದ ಸಂದರ್ಭ, ನಾಗರಿಕರಲ್ಲಿ ಅವರನ್ನು ಬರಮಾಡಿಕೊಳ್ಳಲು ಇದ್ದಂತಹ ಉತ್ಸಾಹ, ಆನಂದ ಹಾಗೂ ಕಾತುರ ಇವುಗಳ ಬಗ್ಗೆ ಮೆಲಕು ಹಾಕಿಕೊಳ್ಳುತ್ತಾ, ಓದುಗರಲ್ಲಿ ಹಂಚಿಕೊಳ್ಳುವ ಅಭಿಲಾಷೆಯ ಫಲವೇ ಈ ಲೇಖನ.

    ಮಹಾತ್ಮ ಗಾಂಧೀಜಿ ಮತ್ತು ಅವರ ವಿಚಾರಧಾರೆಗಳೆಂದರೆ, ಇಂದಿನ ಯುವಕರಲ್ಲಿ ಅಸಡ್ಡೆ ಮನೋಭಾವ ಎಂಬ ಅಭಿಪ್ರಾಯ ಹಿರಿಯರಲ್ಲಿ ಮೂಡುವುದು ಸಾಮಾನ್ಯ ಸಂಗತಿ. ಆದರೆ ನನ್ನ  ನಲವತ್ತೈದು ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ಕಂಡ ವಾಸ್ತವಾಂಶವೇ ವಿಭಿನ್ನ. ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾಲೇಜಿನ ವಿದ್ಯಾರ್ಥಿಗಳವರೆಗೆ ಗಾಂಧೀಜಿಯವರನ್ನು ಕುರಿತು ಉಪನ್ಯಾಸಗಳನ್ನು ಮಾಡಿದ್ದೇನೆ. ಅನೇಕ ವಿದ್ವಾಂಸರು, ಗಾಂಧೀಜಿಯವರ ಅನುಯಾಯಿಗಳು ನೀಡಿದ ಭಾಷಣಗಳನ್ನು ಕೇಳಿದ್ದೇನೆ. ನಾನು ಕಂಡಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ವ್ಯಕ್ತಿತ್ವ, ತಪ್ಪುಗಳನ್ನು ಮಾಡಿ ಬುದ್ಧಿಕಲಿತ ಸಂದರ್ಭಗಳು ಹಾಗೂ ಅವರ ತತ್ವಗಳನ್ನು ಮನಕಲಕುವಂತೆ ಹೇಳಿದ ಪಕ್ಷದಲ್ಲಿ, ಅತೀವ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬಹುದು ಮತ್ತು ಯುವಕರ ನಡವಳಿಕೆಗಳಲ್ಲಿ ಅದ್ಬುತವಾದಂತಹ ಬದಲಾವಣೆಗಳನ್ನು ತರಬಹುದೆಂಬ ಸತ್ಯಾಂಶ.

    ಅಮೆರಿಕಾದ ಕಪ್ಪು ಜನಾಂಗದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಹೇಳಿರುವಂತೆ, “ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ”. ಈ ನುಡಿ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ವಿಚಾರಗಳು ಭೂಮಿಯ ಮೇಲೆ ಮನುಕುಲ ಇರುವ ವರೆಗೂ ಪ್ರಸ್ತುತ ಮತ್ತು ಅನಿವಾರ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾಟುವಂತೆ ಮಾಡಿ ಉತ್ತಮವಾದಂತಹ ಪರಿಣಾಮವನ್ನುಂಟು ಮಾಡಬಹುದು. ಯಾವ ರೀತಿಯಲ್ಲಿ ಯಶಸ್ವಿ ಕಾಣಬಹುದು, ಎಂಬುದು ಹಿರಿಯರಿಗೆ ಬಿಟ್ಟ ವಿಷಯ.

    ಗಾಂಧೀಜಿ ಬೆಂಗಳೂರಿಗೆ ಬಂದ ಆ ದಿನ

    ಈ ದಿಸೆಯಲ್ಲಿ, ಯುವಕರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ನಾಗರಿಕರಲ್ಲಿ ಕುತೂಹಲವನ್ನು ಕೆರಳಿಸುವ ಒಂದು ವಿಷಯವನ್ನು ಈ ಮೂಲಕ ತಿಳಿಸಲು ಬಯಸುತ್ತೇನೆ. ಮೇ 8, 1915 ರಂದು ಗಾಂಧೀಜಿಯವರು ಮೊಟ್ಟ ಮೊದಲಿಗೆ ಬೆಂಗಳೂರಿಗೆ ಬಂದದ್ದು, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದದ್ದು. ನಮ್ಮ ಹೆಮ್ಮೆಯ ಕರ್ನಾಟಕಕ್ಕೆ, ಗಾಂಧೀಜಿಯವರು ಪ್ರವೇಶ ಮಾಡಿ ಒಂದು ನೂರ ಐದು ವರ್ಷಗಳಾಗಿವೆ. ತದ ನಂತರ, ಗಾಂಧೀಜಿಯವರು 1915 ರಿಂದ 1937 ರ ನಡುವೆ ಕರ್ನಾಟಕಕ್ಕೆ ಹದಿನಾರು ಬಾರಿ ಬಂದಿದ್ದು ನೂರ ಎಂಬತ್ತಾರು ದಿನಗಳನ್ನು ಕಳೆದಿದ್ದಾರೆ. ಬೆಂಗಳೂರಿಗೆ ಹನ್ನೆರಡು ಬಾರಿ ಬಂದಿದ್ದು ಎಂಬತ್ತೊಂದು ದಿನಗಳ ಕಾಲ ವಾಸಿಸಿದ್ದಾರೆ.

    ಗೋಪಾಲ ಕೃಷ್ಣ ಗೋಖಲೆಯವರು ಗಾಂಧೀಜಿಯವರ ರಾಜಕೀಯ ಶಿಕ್ಷಕರು / ಗುರುಗಳು. ಈ ಮಾತನ್ನು ಸ್ವತಃ ಗಾಂಧೀಜಿಯವರೇ ಹೇಳಿದ್ದಾರೆ. ಇನ್ನೂ ಮುಂದುವರೆದು ಹೇಳುವುದಾದರೆ “ನನ್ನ ಬಾಳಿಗೆ ಉತ್ತೇಜನ ಕೊಟ್ಟವರು ಅವರೇ, ಇಂದಿಗೂ ಅವರ ಪ್ರೋತ್ಸಾಹ, ಉತ್ತೇಜನಗಳೇ ನನಗೆ ದಾರಿದೀಪ” ಎಂದು ಗಾಂಧೀಜಿಯವರು ನುಡಿದಿದ್ದಾರೆ. ಗೋಖಲೆಯವರ ಸಲಹೆಯ ಮೇರೆಗೆ ಭಾರತವನ್ನು ತಿಳಿಯಲು, ಗಾಂಧೀಜಿಯವರು ಭಾರತ ದೇಶದ ಪ್ರವಾಸವನ್ನು ಮಾಡಿದರು ಮತ್ತು ಪ್ರವಾಸದ ಬಗ್ಗೆ ಬಹಳಷ್ಟು ಕಾಳಜಿ, ಆಸಕ್ತಿಯನ್ನು ತೋರಿಸಿ ಅಧ್ಯಯನ ಮಾಡಿದರು.

    ದಕ್ಷಿಣ ಆಫ್ರಿಕದಲ್ಲಿ ದಿಗ್ವಿಜಯವನ್ನು ಸಾಧಿಸಿ, 1914 ರಲ್ಲಿ ತಾಯ್ನಾಡಿಗೆ ಮರಳಿದ ಕರ್ಮವೀರ ಗಾಂಧೀಜಿಯವರನ್ನು ಸ್ವಾಗತಿಸಲು ಇಡೀ ಬೆಂಗಳೂರು ನಗರ ಬಹಳ ಉತ್ಸಾಹದಿಂದ ಶೃಂಗಾರಗೊಂಡಿತ್ತು. ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರಿ ಬಾ ರವರು ಮದರಾಸಿನಿಂದ ರೈಲಿನಲ್ಲಿ ಪ್ರಯಾಣಿಸಿ ಬೆಂಗಳೂರನ್ನು ತಲುಪಿದರು. ಕರ್ನಾಟಕದ ಹಿರಿಯ ಸಾಹಿತಿ ಡಿ. ವಿ ಗುಂಡಪ್ಪನವರು, ಅಂದಿನ ಮದರಾಸಿನ ಜಿ. ಎ ನಟೇಶನ್ ರವರ ಸಹಾಯವನ್ನು ಪಡೆದು, ಗಾಂಧೀಜಿಯವರು ಬೆಂಗಳೂರಿಗೆ ಪ್ರವಾಸ ಕೈಗೊಳ‍್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣ ಆಫ್ರಿಕಾದ ಸತ್ಯಾಗ್ರಹಕ್ಕೆ ನಿಧಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕಾರಣದಿಂದಲೋ ಏನೋ, ಕನ್ನಡಿಗರಿಂದ ಬೆಂಗಳೂರಿಗೆ ಬರಬೇಕೆಂಬ ಆಹ್ವಾನವು ಗಾಂಧೀಜಿಯವರನ್ನು ತಲುಪಿದಾಗ ಸಂತೋಷದಿಂದ ಆಹ್ವಾನವನ್ನು ಮನ್ನಿಸಿದರು. ನಮ್ಮ ಕರ್ನಾಟಕ ಜನತೆಯ ಅದೃಷ್ಟ. ಮೇ 08, 1915 ರಂದು, ಗಾಂಧೀಜಿಯವರು ಪತ್ನಿ ಸಮೇತರಾಗಿ ಬೆಂಗಳೂರಿಗೆ ರೈಲಿನಲ್ಲಿ ಬಂದಿಳಿದರು. ಗಾಂಧೀಜಿಯವರು ಬಹಳ ಸರಳ ವ್ಯಕ್ತಿ. ಅದಕ್ಕೆ ನಿದರ್ಶನವೆಂಬಂತೆ, ಕೈಯಲ್ಲಿ ಒಂದು ಬಟ್ಟೆಗಳ ಗಂಟು ಮತ್ತು ನೀರಿನ ಬಾಟಲ್ ಹಿಡಿದು, ಅರ್ಧ ತೋಳಿನ ಷರ್ಟ್, ಪಂಚೆ ಮತ್ತು ಗುಜರಾತಿನ ಟರ್ಬನ್ ಧರಿಸಿದ್ದರು. ಅವರ ಪತ್ನಿಯು ಸಹ, ಬಹಳ ಸರಳವಾಗಿ ಕೆಂಪು ಹಂಚಿರುವ ಬಿಳಿ ಬಣ್ಣದ ಸೀರೆಯನ್ನು ಉಟ್ಟಿದ್ದರು.

    ಗಾಂಧೀಜಿಯವರನ್ನು ಕಾಣಲು ರೈಲ್ವೆ ನಿಲ್ದಾಣದ ಬಳಿ ಸಾವಿರಾರು ಜನ ಸೇರಿದ್ದರು. ಗಾಂಧೀಜಿಯವರನ್ನು ಕಂಡು ಜನ ಪುಳಕಿತರಾದರು. ಕೆಲವರು ಗಾಂಧೀಜಿಯವರನ್ನು ಕಂಡಾಗ ಜೀವನ ಸಾರ್ಥಕವಾಯಿತೆಂದರು. ಬೀದಿ, ಬೀದಿಗಳಲ್ಲಿ ಮಾವಿನ ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಾಂಧೀಜಿ ಮತ್ತು ಕಸ್ತೂರಿ ಬಾ ರವರನ್ನು ಅತಿಥಿ ಗೃಹಕ್ಕೆ ಕರೆದೊಯ್ಯಲು, ಅಲಂಕರಿಸಿದ ಕುದುರೆಗಳ ಗಾಡಿ ಸಿದ್ಧವಾಗಿತ್ತು. ಗಾಂಧೀಜಿಯವರು ಅತಿಥಿ ಗೃಹವು ಕೇವಲ ಅರ್ಧ ಮೈಲಿಯಷ್ಟು ದೂರದಲ್ಲಿದೆ ಎಂದು ತಿಳಿದು ಕುದುರೆ ಗಾಡಿಯಲ್ಲಿ ಪ್ರಯಾಣಿಸಲು ನಿರಾಕರಿಸಿ, ಬಿಡಾರದತ್ತ ಕಾಲು ನಡಿಗೆಯಲ್ಲಿಯೆ ಹೊರಟರು. ಇದು ಅವರ ಸರಳಿಕೆಯ ಪ್ರತೀಕ. 

     ಬಿಡಾರವು ಈಗಿನ ಆನಂದ್ ರಾವ್ ವೃತ್ತ ಇದೆಯಲ್ಲ ಅದರ ಹತ್ತಿರವೇ ಇದ್ದ, ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್ ಕೃಷ್ಣ ಸ್ವಾಮಿ ಅಯ್ಯಂಗಾರ್ ರವರು ಹೊಸದಾಗಿ ನಿರ್ಮಿಸಿದ ನೂತನ ಗೃಹ. ಈಗಿರುವ ಶ್ರೀ ವೈಷ್ಣವ ಸಭಾ ಕಟ್ಟಡದ ಎದುರು.

    ಉಭಯ ಕುಶಲೋಪರಿಯಾದ ನಂತರ, ಸ್ನಾನ ಮತ್ತು ತಿಂಡಿಯ ವ್ಯವಸ್ಥೆಯನ್ನು ಮಾಡಲಾಯಿತು. ಗಾಂಧೀಜಿಯವರ ಆಹಾರ ಬಹಳ ಸರಳ.  ಕಡಲೆಕಾಯಿ ಮತ್ತು ಪರಂಗಿಹಣ‍್ಣು ಅವರ ಇಷ್ಟವಾದ ಆಹಾರ.  ಅತಿಥೆಯರು ಗಾಂಧೀಜಿಯವರಿಗೆ ಸೇಬಿನಹಣ‍್ಣು ಮತ್ತು ಕಡಲೆಕಾಯಿ ನೀಡಿದರಂತೆ. ಹೆಚ್ಚು ಬೆಲೆಯುಳ‍್ಳ ಸೇಬಿನಹಣ‍್ಣಿನ ಅವಶ್ಯಕತೆಯಿಲ್ಲವೆಂದು ತಿಳಿಸಿ, ಪರಂಗಿಹಣ‍್ಣನ್ನು ತರುವಂತೆ ಆದೇಶ ನೀಡಿದರಂತೆ.

    ಕಾಕತಾಳೀಯವೇನೊ ಎಂಬಂತೆ, ಗಾಂಧೀವಾದಿಗಳು, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಮ್ಮ ಪ್ರಾಂಶುಪಾಲರಾಗಿದ್ದ, ಡಾ ಎಚ್ .ನರಸಿಂಹಯ್ಯನವರಿಗೂ ಸಹ, ಕಡಲೆಕಾಯಿ ಎಂದರೆ ಬಹಳ ಇಷ್ಟ. ಕೆಲವು ಸಂದರ್ಭಗಳಲ್ಲಿ ಹಾಸ್ಟಲ್ ನಲ್ಲಿದ್ದ ಅವರ ಕೊಠಡಿಗೆ ಅಥವಾ ಕಚೇರಿಗೆ ಹೋದಾಗ ವಿದ್ಯಾರ್ಥಿಗಳಿಗೆ ಕಡಲೆಕಾಯಿ ತರಿಸಿ ಕೊಟ್ಟಿದ್ದುಂಟು.

    ಆ ದಿನದ ಮೊದಲನೇ ಸಾರ್ವಜನಿಕ ಕಾರ್ಯಕ್ರಮವನ್ನು ಅಂದಿನ ಸರ್ಕಾರಿ  ಫ್ರೌಡ ಶಾಲೆ, ಇಂದಿನ ಸರಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಗಣ್ಯಾತಿಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಗಾಂಧೀಜಿಯವರಿಗೆ ನೀಡಿದ ಭಿನ್ನವತ್ತಳೆಯನ್ನು ಆಂಗ್ಲಭಾಷೆಯಲ್ಲಿ ಶ್ರೀ ಕೃಷ‍್ಣ ಅಯ್ಯ‍ರ್‍ರವರು ಓದಿದರೆ, ಡಿ. ವಿ. ಗುಂಡಪ್ಪನವರು ಕನ್ನಡದಲ್ಲಿ ಓದಿದರು. ಗೋಪಾಲ ಕೃಷ‍್ಣ ಗೋಖಲೆಯವರ ಭಾವಚಿತ್ರವನ್ನು ಗಾಂಧೀಜಿಯವರು ಅನಾವರಣ ಮಾಡಿದರು. ಗಾಂಧೀಜಿಯವರು ಗೋಖಲೆಯವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿ, ಪ್ರಗತಿಪಥದಲ್ಲಿ ಒಂದೊಂದು ಹೆಜ್ಜೆಯಾಗಿ ಹೋಗ ಬೇಕೆಂದು ಕಿವಿಮಾತನ್ನು ಹೇಳಿದರು. ಗಾಂಧೀಜಿಯವರು ಅನಾವರಣವನ್ನು ಮಾಡಿದ ಗೋಖಲೆಯವರ ಭಾವಚಿತ್ರವನ್ನು ಗೋಖಲೆ ಸಾರ್ವಜನಿಕ ಸಂಸ‍್ಥೆಯಲ್ಲಿ ಈಗಲೂ ನೋಡಲು ಲಭ್ಯವಿದೆ.

    ಸಮಾರಂಭದ ನಂತರ, ಗಾಂಧೀಜಿಯವರನ್ನು ಕುದುರೆಗಾಡಿಯಲ್ಲಿ ತಂಗಿದ್ದ ಬಿಡಾರಕ್ಕೆ ವಾಪಸ್ಸು ಕರೆತರುವಾಗ, ಗಾಡಿಯಲ್ಲಿ ಪುಟ್ಟಣ‍್ಣಶೆಟ್ಟರು ಮತ್ತು ಕೃಷ‍್ಣ ಅಯ್ಯರ್  ಅವರುಗಳು ಇದ್ದರು.  ಅವರಿಬ್ಬರೂ ಗಾಂಧೀಜಿಯವರಿಗೆ ಸೆಂಟ್ರಲ್ ಕಾಲೇಜನ್ನು ತೋರಿಸಿದರಂತೆ. ಆಗ, ಸೆಂಟ್ರಲ್ ಕಾಲೇಜಿನ ಕಟ್ಟಡವನ್ನು ನೋಡಲು ಆಸಕ್ತಿ ತೋರದ ಗಾಂಧೀಜಿಯವರು, ಬಡವರು, ದೀನ ದಲಿತರು ವಾಸಿಸುವ ಸ‍್ಥಳಗಳನ್ನು ತೋರಿಸಿ ಎಂದರಂತೆ. ಅವರ ಬಯಕೆಯ ಪ್ರಕಾರ, ಅರಳೇಪೇಟೆ ಮಾರ್ಗವಾಗಿ, ಬಿಡಾರಕ್ಕೆ ವಾಪಸ್ಸು ಕರೆತಂದರಂತೆ. ಈ ಒಂದು ಪ್ರಸಂಗ, ಗಾಂಧೀಜಿಯವರಿಗೆ ಬಡವರ ಮೇಲಿದ್ದ ಪ್ರೀತಿ, ಕಾಳಜಿಗೆ ಸಾಕ್ಷಿ.

    ನಂತರ, ನಗರದ ಪ್ರಮುಖರೊಡನೆ, ದೇಶದ ಬಡತನ, ಇಂಗ್ಲೀಷ್ ಭಾಷೆಯ ಪರಿಣಾಮ, ಆಧುನಿಕ ನಾಗರೀಕತೆ ಮತ್ತು ಅದರ ಪಾಪದ ಮೂಲಗಳು,  ಭಾರತೀಯ ಸಂಸ್ಕೃತಿ ಮತ್ತು ಆದರ್ಶಗಳು, ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯಗಳು ನಡೆದವು.

    ಅಂದು ಸಂಜೆ,  ಲಾಲ್ ಭಾಗಿನ ಗಾಜಿನ ಮನೆಯಲ್ಲಿ ಒಂದು ದೊಡ್ಡ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಕನ್ನಡ, ಉರ್ದು ಮತ್ತು ತೆಲುಗು ಭಾಷೆಗಳಲ್ಲಿ ಪದ್ಯಗಳನ್ನು ಓದಿ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ರಾಜಕೀಯಕ್ಕು, ರಾಜಕೀಯ ಸಂಸ‍್ಥೆಗಳಿಗೂ ಧಾರ್ಮಿಕ ಸ್ವರೂಪವನ್ನು ಕೊಡಬೇಕೆಂಬ ಅಂಶಗಳನ್ನು ತಿಳಿಸಿದರು. ಸಾರ್ವಜನಿಕ ಸೇವಕರಿಗೆ ಹೆಚ್ಚು ಆಡಂಬರವಿಲ್ಲದೆ ಕಾರ್ಯ ನಿರ್ವಹಿಸಲು ಕರೆಯನ್ನು ಕೊಟ್ಟರು. ಸಂಜೆ, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರು, ಮೈಸೂರಿನಿಂದ ಕಾರಿನಲ್ಲಿ ಬಂದು ಗಾಂಧೀಜಿಯವರನ್ನು ಭೇಟಿ ಮಾಡಿದರು. ಸಂಘಟಕರು, ಮೊದಲನೆ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಲು ಗಾಂಧೀಜಿಯವರಿಗೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ನಯವಾಗಿ ನಿರಾಕರಿಸಿ, ಮೂರನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದರು. ರಾತ್ರಿ, ಗಾಂಧೀಜಿಯವರು ವಾಪಸ್ಸಾದರು.

    ಸರ್ವೋದಯ ದಿನ ಆಚರಣೆಯ   ಸಂದರ್ಭದಲ್ಲಿ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿರುವ, ವಿಶ್ವ ನಾಯಕ, ಅಹಿಂಸಾತ್ಮಕ ಚಳವಳಿಗೆ ಬುನಾದಿ ಹಾಕಿದ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ, ಮಹಾತ್ಮ ಗಾಂಧೀಜಿಯವರ ವಿಚಾರಗಳು ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತ ಎಂಬ ಅಂಶವನ್ನು ಯುವಕರಿಗೆ ತಿಳಿಸಲು ಪ್ರಯತ್ನಿಸೋಣ. ಗಾಂಧೀಜಿಯವರ ನಾಲ್ಕು ಮೂಲಭೂತ ತತ್ವಗಳಾದಂತ ಸತ್ಯ, ಅಹಿಂಸೆ, ಸರ್ವೋದಯ ಮತ್ತು ಸತ್ಯಾಗ್ರಹ ಇವುಗಳನ್ನು ಪಾಲಿಸೋಣ. ಅನುಷ‍್ಠಾನಕ್ಕೆ ಶ್ರಮಿಸೋಣ. ಸಮಾಜದಲ್ಲಿ ಸಮಾನತೆಯ ಭಾವನೆಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ‍್ಳೋಣ.

    ಇರುವ ಹೆಸರನು ಬಿಟ್ಟು…

    ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ.ಅವಳ ಪತಿರಾಯರು ತುಸು ಹೊತ್ತು ಕುಶಲೋಪರಿ ಮಾತನಾಡಿದ ಮೇಲೆ ಮಹಡಿಯ ಅವರ ಕೋಣೆಗೆ ಹೋಗುತ್ತಾ ಮೆಟ್ಟಿಲಲ್ಲಿ ನಿಂತು ಮಂಜೇಗೌಡ ..ಮಂಜೇಗೌಡ ಅಂತ ದೊಡ್ಡ ಧ್ವನಿಯಲ್ಲಿ ಕರೆದರು.ವಿಷ್ಣುಭಕ್ತರ ಮನೆಯಲ್ಲಿ ಮಂಜೇಗೌಡ ಹೇಗೆ ಬಂದ ಅಂತ ನಾನು ತುಸು ಕನ್ಫ್ಯೂಸ್ ನಲ್ಲಿ ಇರುವಾಗಲೇ ಹಿಂದಿನ ಬಾಗಿಲಿಂದ ಇದ್ದಿಲಿಗಿಂತಲೂ ಕಪ್ಪಗಿನ ಎತ್ತರದ ನಾಯಿಯೊಂದು ಪೂರ್ಣ ಹಸನ್ಮುಖಿಯಾಗಿ ಬಾಲ,ಸೊಂಟ ಮುಖದವರೆಗೂ ವಿಧವಿಧವಾಗಿ ನುಲಿಯುತ್ತಾ ಗೆಳತಿಯ ಪತಿಯ ಹತ್ತಿರ ಹೋಗಿ ನಿಂತಾಗ ಈ ಮಂಜೇಗೌಡ ಯಾರೂಂತ ನನಗೆ ಗೊತ್ತಾದದ್ದು.

    ಇದೆಂಥ ಹೆಸರೇ ತಾಯಿ ಅಂತ ನನ್ನ ಗೆಳತಿಯನ್ನು ಕೇಳಿದ್ದಕ್ಕೆ ವ್ಯವಹಾರದಲ್ಲಿ ವಂಚಿಸಿದ ಗೆಳೆಯನೊಬ್ಬನ ಹೆಸರನ್ನು ನಾಯಿಗೆ ಇಟ್ಟುಕೊಂಡು ತೃಪ್ತರಾಗಿದ್ದಾರಂತೆ ಅವಳ ಪತಿರಾಯರು.

    ಈ ಸಾಕುಪ್ರಾಣಿಗಳಿಗೂ ಮನುಷ್ಯರ ಹೆಸರೇ ಇಡುತ್ತರಾದರೂ ಈಗೀಗ ಅವಕ್ಕೂ ವಿಪರೀತ ಹೊಸ ಮಾದರಿ ಹೆಸರುಗಳು.
    ಹಸುಗಳಿಗೆ ಗೌರಿ,ಪಾರು,ಮಂಗಳಿ,ಕೆಂಪಿ ಅಂತಲೂ ನಾಯಿಗಳಿಗೆ ಸೋನಿ,ಬ್ರೂನೋ,ರಂಗಣ್ಣ,ಕರಿಯ ಅನ್ನೋ ಸೆಮಿ ಸ್ಟೈಲಿಷ್ ಹೆಸರುಗಳು ಹಳೆಯ ಫ್ಯಾಷನ್ನಾದರೂ ನಮ್ಮ ಹಳ್ಳಿಯಲ್ಲಿ ಇನ್ನೂ ಹಳೆಯ ಹೆಸರುಗಳೇ ಮುಂದುವರೆದಿದ್ದು ನಾಯಿ ಹಸುಗಳೂ ಇದಕ್ಕೆ ಯಾವ ವಿರೋಧ ವ್ಯಕ್ತಪಡಿಸದೆ ಸಹಕರಿಸುತ್ತಿರುವುದರಿಂದ ನಮ್ಮಲ್ಲಿ ಪರಿಸ್ಥಿತಿ ಸಹಜವಾಗಿಯೇ ಇದೆ.

    ಇತ್ತೀಚೆಗೆ ನನ್ನ ಹಳ್ಳಿಯಲೊಂದು ಘಟನೆ ನಡೆಯಿತು.
    ನಮ್ಮೂರಿನ ಅರವತ್ತೆಂಟು ವರ್ಷದ ಅಜ್ಜ ಒಬ್ರು ಬಂದು ಸಣ್ಣನಿರ್ವಾಣಯ್ಯ ಅನ್ನೋ ಅವರ ಹೆಸರು ತೀರ ಹಳೇ ಥರವಾಗಿದೆಯಂತಲೂ,ಹೊಸದೊಂದು ಹೆಸರನ್ನು ತಾನು ಇಟ್ಕೋಬೇಕಂತಲೂ ಹೇಳಿ ,ನಾನಾದರೆ ಹೊರಗೆ ಹೋಗಿ ನಾಲ್ಕು ಜನರ ಜೊತೆಗೆ ಓಡಾಡಿದವಳಾದ್ದರಿಂದ ಈ ಹೆಸರು ಬದಲಿಸಿಕ್ಕೊಳ್ಳುವ ವಿಧಿ ವಿಧಾನಗಳು ತಿಳಿದಿರುತ್ತವದ್ದಾರಿಂದ ತನಗೆ ನೇರ್ಪು ಕೊಡಬೇಕಂತಲೂ ಕೇಳಿದರು.

    ಸದಾ ಪಟಾಪಟಿ ಡ್ರಾಸು(ಒಳಚಡ್ಡಿ),ಮೇಲೊಂದು ಶತಮಾನದ ಹಿಂದಿನ ಸಾವಿರ ಕಲೆಗಳುಳ್ಳ ಬಿಳಿ ಎಂದು ಹೆಸರಿಸಲಾಗುವ ಶರ್ಟು ತೊಡುವ ಅವರಿಗೆ ಹುಟ್ಟಿರುವ ಈ ಕೊನೆಯ ಇಚ್ಛೆ ಕೇಳಿ ಪ್ರಜ್ಞೆ ತಪ್ಪಿದಂತಾದರೂ ಮನಸು ಬೆಳೆದಂತೆಲ್ಲಾ ಹಸಿವೂ ಬೆಳೆಯುವುದು ಎನ್ನುವ ಡಿವಿಜಿಯವರ ಮಾತು ನೆನಪಾಗಿ ಇದೆಲ್ಲವೂ ನಾಗರಿಕತೆಯ ಕುರುಹು ಅಂದುಕೊಂಡು ‌ನಮ್ಮ ಹಳ್ಳಿ ಬೆಳೆಯುತ್ತಿರುವ ಕುರಿತು ಮೆಚ್ಚುಗೆಯೆನಿಸಿತು.ಅವರ ಜೀವನ್ಮುಖಿ ಮನಸ್ಸನ್ನು ಸಂತೋಷವಾಗಿಡಲು ಮಾಡಬೇಕಾದ ಸಹಾಯವೆಲ್ಲವನ್ನು ಮಾಡಿದ ನಂತರ ಅವರ ಎರಡು ಜೊತೆ ಚಪ್ಪಲಿ ಸವೆದು ಮೂರನೆಯದು ಕೊಳ್ಳುವ ಹೊತ್ತಿಗೆ ಸಣ್ಣನಿರ್ವಾಣಯ್ಯ ಎಂಬುವ ನಾನು ನಿರಂಜನನೆಂದು ಹೆಸರು ಬದಲಿಸಿಕೊಂಡಿರುವುದಕ್ಕೆ ಪತ್ರಿಕಾ ಪ್ರಕಟಣೆ, ಅಫಿಡವಿಟ್ಟು,ಅಧಿಕೃತ ದಾಖಲೆಗಳು ಅವರ ಕೈ ಸೇರಿದವು.

    ಆದರೆ ಅವರು ಮುಂದಲ ಕದ ಮುಚ್ಚಿ ಚಪ್ಪಲಿ ಮೆಟ್ಟಿದೊಡನೆ ಎತ್ಲಗ್ ಹೊಂಟೆ ಸಣ್ನಿರ್ವಾಣಣ್ಣೋ ಅನ್ನೋ ಮಾತು ಮಾತ್ರ ಕೊನೆವರೆಗೂ ಹಾಗೇ ಉಳಿದಿದ್ದು ವಿಪರ್ಯಾಸ.ಕೊನೆಗೆ ಅವರ ಕಾರ್ಯದ ಕಾರ್ಡಿನಲ್ಲೂ ಅವರ ಬಯಕೆಯ ‘ನಿರಂಜನ’ ಹೆಸರನ್ನು ಬ್ರಾಕೆಟ್ಟಿನಲ್ಲಾದರೂ ಇರಿಸುವಷ್ಟರಲ್ಲಿ ಸಾಕುಬೇಕಾಗಿದ್ದು ವಿಧಿಯ ಆಟವೇ ಸರಿ.

    ಒಂಚೂರು ಪುರಾಣ ಕಾಲಕ್ಕೆ ಹೋಗಿಬರೋದಾದ್ರೆ
    ಅಂಥ ಸೂರ್ಯ ಪುತ್ರನಿಗೆ..,ಹುಟ್ಟಿದಾಗಲೇ ಕುಂಡಲಗಳನ್ನು, ಕವಚವನ್ನೂ ಹೊಂದಿಯೇ ಹುಟ್ಟಿದ್ದ ಎನ್ನಲಾಗುವ ಕರ್ಣನಿಗೆ ..ಕರ್ಣ ಎನ್ನುವ ಹೆಸರನ್ನು ಅವನ ಅಮ್ಮ ಕುಂತಿ ಇಟ್ಟಿದ್ದಾ ಅಥವಾ ಸಾಕಿದ ಅಪ್ಪ ರಾಧೇಯ ಇಟ್ಟಿದ್ದ ಅನ್ನುವುದೂ ಯಾವಾಗಲೂ ನನ್ನ ತಕರಾರು.ರಾಧೇಯನೇ ಇಟ್ಟಿದ್ದರೂ ಕಿವಿಯೋಲೆಯೊಂದಿಗೇ ಹುಟ್ಟಿದ ಮಗನಿಗೆ ಕರ್ಣ ಅನ್ನುವುದೇ ಸೂಕ್ತ ಅಂತ ಬಾಸ್ಕೆಟ್ಟಿನೊಳಗಿಟ್ಟು ಹೊಳೆಗೆ ಬಿಡುವಾಗಲೇ ಕುಂತಿಗೂ ಅನಿಸಿರಬಹುದು.ಅದೂ ಅಲ್ಲದೇ ಆಗೆಲ್ಲಾ ಪುರಾಣಗಳಲ್ಲಿ ಅಷ್ಟು ಅದ್ಭುತವಾದ ಹೆಸರನ್ನು ಹುಡುಕಿದವರು ಯಾರು.?ರಂಭಾ,ಶಚಿ,ಮೇನಾ,ಶಕುಂತಲಾ, ದೇವಯಾನಿ, ನಚಿಕೇತ,ಪುರು,ಅಹಲ್ಯಾ..!!

    ಓಹ್ ..ಒಂದೇ ಎರಡೇ..

    ಯಾವ ಹೆಸರೂ ಕೇಳಿದ್ರೂ ಇದನ್ನು ನನ್ನ ಮೊಮ್ಮಗುವಿಗೆ ಇಡೋಣಾ,ಇದನ್ನು ಅದರ ಮಗುವಿಗೆ ಇಡೋಣಾ ಅನಿಸುವಷ್ಟು ಚಂದ.ಅದೂ ಅಲ್ಲದೇ ಈ ಪುರಾಣದ ಪಾತ್ರಗಳಿಗೆಲ್ಲಾ
    ಒಂದೇ ವ್ಯಕ್ತಿಗೆ ನಾಕಾರು ಹೆಸರುಗಳನ್ನು ಇಡುವ ಪದ್ದತಿಯಂತೆ.ಕರೆಯುವಾಗ ಕನ್ಫ್ಯೂಸ್ ಆಗ್ತಿರಲಿಲ್ಲವೇ ಅನ್ನುವ ಒಂದಷ್ಟು ಜಾಗತಿಕ ಮಟ್ಟದ ಪ್ರಶ್ನೆಗಳೂ ನನ್ನಲ್ಲಿ ಈ ಹೆಸರಿನ ವಿಷಯದಲ್ಲಿ ಆಗಾಗ ಕಾಡುವುದಿದೆ.

    ಇರಲಿ.ಅದೆಲ್ಲಾ ಮುಗಿದು ಹೋದ ಮಾತು..ಕಂಡವರಾರು..

    ಇನ್ನೊಂದು ವಿಚಾರವಿದೆ.

    ಕೆಲವರು ಚಂದ ಅಂದರೆ ಚಂದ.! ಥೇಟು ಇಂದ್ರ ಲೋಕದ ರಂಭೆಯರಂತೆ.ಅವರ ಹೆಸರುಗಳೂ ಅಷ್ಟೇ ಚಂದ.ಆಗೆಲ್ಲಾ ಇವರ ಚಂದ ನೋಡಿ ಇವರಿಗೆ ಈ ಹೆಸರಿಟ್ರೋ ಅಥವಾ ಚಂದದ ಹೆಸರಿನಿಂದಾಗಿಯೇ ಇವರು ಇಷ್ಟು ರೂಪವತಿಯಾದರಾ ಅನ್ನುವ ಸಮಸ್ಯೆ ಕೇವಲ ನನ್ನನ್ನು ಮಾತ್ರ ಕಾಡಿದ್ದಿರಬಹುದು.

    ಹೋಗಲಿ ಬಿಡಿ..ಇಲ್ಲಿ ಇದಕ್ಕಿಂತಲೂ ಚಂದದ ಇನ್ನೊಂದು ನಾಮಪುರಾಣವಿದೆ.ಮಗಳು ಗರ್ಭಿಣಿಯಾದ ಕೂಡಲೇ ಅಣ್ಣಪ್ಪ ಸ್ವಾಮಿಯ ದಯೆಯಿಂದ ಕೂಸು ಗಂಡಾದರೇ ‘ಅ’ ಯಿಂದಲೇ ಆರಂಭಿಸಿ ಹೆಸರು ಇಡುತ್ತೇನೆ ಅಂತ ನನ್ನ ಅಮ್ಮ ಹರಸಿಕೊಂಡಿದ್ದರು.
    ಮಗಳಾದ ಕಾರಣಕ್ಕೆ ಹದಿನಾರಕ್ಕೇ‌ ಮದುವೆ ಮಾಡಿ ಹೊರೆ ಇಳಿಸಿಕೊಂಡಿದ್ದ ಅಮ್ಮ ಹೊಟ್ಟೆಯ ಕೂಸು ಗಂಡಾಗಬೇಕೆಂದು ಬಯಸಿದ್ದು ಸಹಜವೇ ಬಿಡಿ.ಇಷ್ಟೆಲ್ಲಾ ಪೂರ್ವತಯಾರಿಯೊಂದಿಗೆ ಸಂಡೆ ಹುಟ್ಟಿದ ಮಗು ಗಂಡೇ ಆಗಿ ಅಮ್ಮನ ಆಸೆ ಕೈಗೂಡಿ ಅವನಿಗೆ ‘ಅ’ಯಿಂದ ಆರಂಭವಾಗುವ ಹೆಸರಿಟ್ಟು ವರ್ಷ ತುಂಬುವುದರೊಳಗಾಗಿ ಪುಟ್ಟ ಬೊಗಸೆಯಲ್ಲಿ ಕಾಸು ಅಭಿಷೇಕವನ್ನು ಅಣ್ಣಪ್ಪನಿಗೆ ಮಾಡಿಸಿ ಹರಕೆ ತೀರಿಸಿ ಸಂಭ್ರಮಿಸಿದ್ದು ಸಹಜ ಸಂಗತಿಯೇ.

    ಮಗನಿಗೆ ಮೂರು ವರ್ಷವಾಗುವಷ್ಟರಲ್ಲಿ ನಾಲ್ಕು ಮಾತು ಕಲಿತು ಜಗದೆಲ್ಲ ಪ್ರಶ್ನೆಗಳಿಗೂ ಇಂದೇ ,ಈ ಕ್ಷಣವೇ ಉತ್ತರ ಕಂಡುಕೊಳ್ಳುವವನಂತೆ ಅರಳುಹುರಿಯುತ್ತಿದ್ದವ ಅಜ್ಜನನ್ನು ಕುಂತಲ್ಲಿ,ನಿಂತಲ್ಲಿ ‘ಕತೆ ಹೇಳ್ತಾತ ,ಕತೆ ಹೇಳ್ತಾತ’
    ಅಂತ ಪೀಡಿಸಿ ಪೀಡಿಸಿ ಉಸಿರುಗಟ್ಟಿಸುತ್ತಿದ್ದ.

    ಹಗಲೆಲ್ಲಾ ತೋಟದಲ್ಲಿ ತಿರುಗಿ ಹೈರಾಣಾಗಿರುತ್ತಿದ್ದ ಅಪ್ಪ ಮಾತ್ರ ಮೊದಲ ಮೊಮ್ಮಗನೆಂಬ ಕಾರಣಕ್ಕೆ ತುಸುವೂ ಬೇಸರಿಸಿಕೊಳ್ಳದೇ ರಾತ್ರಿ ಹೊಟ್ಟೆ ಮೇಲೆ ಹತ್ತಿ ಎದೆಪದಕವಾಗುತ್ತಿದ್ದ ಪುಟ್ಟ ಬಾಹುಬಲಿಯಂತ ಮೊಮ್ಮಗನಿಗೆ ಭೀಮ,ಅರ್ಜುನ, ಕೃಷ್ಣ,ಪುಣ್ಯ ಕೋಟಿಯ ಕತೆಗಳನ್ನು ಹೇಳಿದ್ದೇ ಹೇಳಿದ್ದು.ಅಪ್ಪನ ಕಥೆ ಹೇಳುವ ಚಂದಕ್ಕೆ ಮರುಳಾಗಿ ನಾನೂ ಹೂಃಗುಟ್ಟರೆ ಅವನಿಗೆ ಸಿಟ್ಟೋಸಿಟ್ಟು..

    ಹೀಗೆ ನನ್ನ ಮಗ ಕೇಳಿಸಿಕೊಂಡ ಒಂದು ವಿಶೇಷ ಕಥೆ ಭೀಮ ಮತ್ತು ಬಕಾಸುರರದ್ದು.

    ಬಂಡಿ ಅನ್ನವುಂಡು ಕೊಲ್ಲಲು ಬಂದ ಬಕಾಸುರನನ್ನು ಭೀಮ ಕೊಂದ ಈ ಕತೆ ನನ್ನ ಮಗನ ಮೇಲೆ ಯಾವ ರೀತಿ ಪರಿಣಾಮ ಬೀರಿತೆಂದರೆ ಈ ಕತೆ ಶುರುವಾದೊಡನೆ ಹೊಟ್ಟೆಯ ಮೇಲೆ ಮಲಗಿದ್ದವನು ಚಕ್ಕನೆ ಎದ್ದು‌ಕೂತು ಕತೆ ಹೇಳುವ ತಾತನ ಮುಖವನ್ನೇ ನೋಡುತ್ತಿದ್ದ.ಕಥೆಯೊಂದಿಗೆ ಬದಲಾಗುತ್ತಿದ್ದ ಅವನ ದೇಹಭಾವ ,ಮುಖಬಾವ ಕಥೆ ಉಂಟು ಮಾಡಿದ ಪರಿಣಾಮ ಅಂತ ನಿಸ್ಸಂದೇಹವಾಗಿ ಹೇಳಬಹುದಿತ್ತು.

    ಪ್ರತೀಸಂಜೆಯೂ ಭೀಮನ ಕತೆಯೊಂದಿಗೆ ಆರಂಭವಾಗುವ ಕಥಾಕಾಲಕ್ಷೇಪ ಮೂರು ಗಂಟೆ ಮುಂದುವರೆದು ಅದೇ ಕಥೆಯೊಂದಿಗೆ ಮುಗಿಯಬೇಕಿತ್ತೆಂದರೆ ಆಗುವ ಕಿರಿಕಿರಿಯನ್ನು ಓದುಗರು ಊಹಿಸಿಕೊಳ್ಳಬಹುದು.ಅದಷ್ಟೇ ಆಗಿದ್ದರೆ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿಲ್ಲ.


    ಸುಮಾರು ಹತ್ತು ದಿನ ಈ ಕಥೆ ಕೇಳಿದ ಮೇಲೆ ನನ್ನ ಮಗ ಇದ್ದಕ್ಕಿದ್ದಂತೆ ಒಂದು ದಿನ “ನಾನು ಭೀಮ, ನನ್ನ ಭೀಮ ಅನ್ನಿ”
    ಅಂತ ಅನ್ನಲು ಶುರು ಮಾಡಿದ.ಕಥೆಯ ಎಫೆಕ್ಟ್ ಅಂದುಕೊಂಡ ನಾವು ಅವನು ಕೆನ್ನೆಯುಬ್ಬಿಸಿ ದೇಹ ಸೆಟೆದು “‌ನಾನು ಭೀಮ “ಎನ್ನುವುದನ್ನು ಮತ್ತೆಮತ್ತೆ ಕೇಳಿ ಸಂಭ್ರಮಿಸಿದ್ದೂ ಆಯ್ತು.

    ಆದರೆ ಪರಿಸ್ಥಿತಿ ಗಂಭೀರವಾದದ್ದೇ ಆಮೇಲೆ.

    ‘ಚಿನ್ನಾರಿ ,ಹಾಲು ಕುಡಿ ಬನ್ನಿ’ ಅಂದರೆ ” ಚಿನ್ನಾರಿ ಅಲ್ಲ ನಾನು..ಭೀಮ..”ಅಂತ ಹೂಃಕರಿಸುತ್ತಿದ್ದ.ಹಾಲು ಕುಡಿ ಬಾ ಭೀಮ ಅಂತ ಕರೆದ ಮೇಲೇ ಅವನ ಹಾಲೂ,ಊಟ,ಸ್ನಾನ ಎಲ್ಲವೂ ಆಗಿ ಒಂಥರಾ ಪೇಚಿಗೆ‌ ಸಿಕ್ಕಿಕೊಂಡ ಹಾಗಾಯ್ತು ಪರಿಸ್ಥಿತಿ.

    ಮಾತಿಗೂ‌ ಮೊದಲು ನನ್ನ ಭೀಮ ಅನ್ನಿ ಅನ್ನುತ್ತಿದ್ದ ಈ ‌ಮೂರು ವರ್ಷದ ಪುಟ್ಟ ಘಟೋತ್ಕಜ ಒಂದು ದಿನ ಬೆಳಿಗ್ಗೆ ಅಪ್ಪ ಕೇಳುತ್ತಿದ್ದ ರೇಡಿಯೋ ಹತ್ರ ನಿಂತು ”ಅವರಿಗೆ ಹೇಳಿ‌ ,ನಾನು ಭೀಮ ಆಗಿದ್ದೀನಿ ಅಂತ ” ಅಂತಂದು ರಚ್ಚೆ ಹಿಡಿದು ಅಳತೊಡಗಿದವನನ್ನು ಸಮಾಧಾನ ಮಾಡಬೇಕಾದರೆ ಸಾಕುಬೇಕಾಯ್ತು.ಇದ್ಯಾಕೋ ಅತಿರೇಕವಾಯ್ತು ಅಂತ ಹೆದರಿ ಒಂದು ದಿನ ಕರೆದು ಕೂರಿಸಿ ಕೊಂಡು ಮುದ್ದುಗರೆಯುತ್ತಾ ‘ಇಲ್ಲ ಕಂದ.ಮಾಮಿ ನಿಂಗೆ ಅಮೃತ್ ಅಂತಲೇ ಹೆಸರಿಟ್ಟಿರುವುದು.ಹಂಗೆಲ್ಲಾ ಭೀಮ ಅಂತ ಕರೆದ್ರೆ ನಿನ್ನ ಅಮ್ಮನನ್ನೂ ಬದಲು ಮಾಡಿಬಿಡುತ್ತೆ ಮಾಮಿ..!ಆಗುತ್ತಾ.?’ ಅಂತ ಸಾಮ ಪ್ರಯೋಗ ಮಾಡಿದ್ದೆ.
    ಅಮ್ಮ ಬದಲಾದರೆ ಅಂತ ತುಸು ಹೆದರಿ ದೊಡ್ಡ ಕಣ್ಣ ತುಂಬಾ ದಿಗಿಲು ತುಂಬಿಕೊಂಡು ಆ ರಾತ್ರಿ ಕಳೆಯುವವರೆಗೂ ಸುಮ್ಮನಾಗಿದ್ದ.

    ನಾನೂ ಹೇಗೋ ಭೀಮನಾಗುವ ಆಸೆ ತಪ್ಪಿತಲ್ಲ ಅಂತ ಸಮಾಧಾನ‌ಪಟ್ಟಿದ್ದು ರಾತ್ರಿ ಕಳೆಯುವವರೆಗಷ್ಟೆ..
    ಬೆಳಿಗ್ಗೆ ಅಮ್ಮ ಪೂಜೆ ಮಾಡುವಾಗ ಅಜ್ಜಿಯ ಪಕ್ಕ ಅಂಟಿಕೊಂಡು ಕುಳಿತು ‘ಅಜ್ಜಿ..ಅಜ್ಜೀ..ನನ್ನ ಭೀಮನ್ನ ಮಾಡು ಅಂತ ಮಾಮಿಗೆ ಹೇಳು..ಪ್ಲೀಸ್’ ಅಂತ ಪಿಸುಗುಟ್ಟ.

    ಮೊಮ್ಮಗುವಿನ ಮನಸ್ಸಿನ ಹೊಯ್ದಾಟಕ್ಕೆ ಅಮ್ಮನಿಗೆ ಪೂಜೆ ಮುಂದುವರಿಸಲೂ ಆಗದೇ ಅಲ್ಲೇ ಕಣ್ಣಿರಿಟ್ಟು ಅಪ್ಪನ್ನ ಬಯ್ಯಲಿಕ್ಕೆ ಶುರು ಮಾಡಿದ್ಳು .ಕೆಲಸಕ್ಕೆ ಬಾರದ ಕತೆ ಹೇಳಿ ಮಗಿನ ಮನಸಲ್ಲಿ ಆಸೆ ಹುಟ್ಟಿಸಿದ್ದಕ್ಕೆ ಅವಳಿಗೆ ಅಪ್ಪನ ಮೇಲೆ ವಿಪರೀತ ಕೋಪ.
    ಮಗನ ಸಂಕಟಕ್ಕೆ ನಾನೂ ಇದೇನಾಗೋಯ್ತು ಅಂತ ಅಂದು ಅತ್ತುಕರೆದದ್ದೂ ಆಯ್ತು.

    “ನನ್ನ ಭೀಮ ಅನ್ನಿ” ಅನ್ನುವ ನನ್ನ ಪುಟಾಣಿ ಮಗನ ಆಸೆ ಯಾವ ಗರಿಷ್ಠ ಮಟ್ಟ ತಲುಪಿತೆಂದರೆ ಒಬ್ಬೊಬ್ಬನೇ ದೇವರ ಮನೆಯಲ್ಲಿ ಕುಳಿತು ‘ನನ್ನ ಭೀಮನ್ನ ಮಾಡು‌ ಮಾಮಿ’ ಅಂತ ಕೇಳುವಷ್ಟು.

    ಮೂರು ತಿಂಗಳಿನಷ್ಟು ಸುದೀರ್ಘವಾಗಿ ನಡೆದ ಈ ‌ಭೀಮನಾಮ ಪ್ರಸಂಗ ನಿಧಾನವಾಗಿ ಅಪ್ಪನ “ಒಂದೂರಲ್ಲಿ ಒಬ್ಬ ರಾಜ ಇದ್ನಂತೆ.
    ಅವನ ಹತ್ರ ಮೂರು ಕುದುರೆಗಳಿದ್ವಂತೆ.ಅವನಿಗೆ ‌ಮೂರು‌ ಮಕ್ಕಳಿದ್ರಂತೆ.” ಎನ್ನುವ ಹೊಸ ಕತೆಯ ಶ್ರವಣದೊಂದಿಗೆ ಕ್ಷೀಣಗೊಂಡಿದ್ದು ಭೀಮನಾಮ ಪ್ರಸಂಗದ ಸುಖಾಂತ್ಯ ಅಂತಲೇ‌ ಭಾವಿಸಬೇಕು.

    **********
    ಇನ್ನು ನಾನು ಸ್ಕೂಲಿಗೆ,ಕಾಲೇಜಿಗೆ ಹೋಗುವಾಗ ಯಾವುದಾದರೂ ದಾಖಲೆಗೆ ನನ್ನ ತಾಯಿಯ ಹೆಸರು ಕೇಳಿದಾಗೆಲ್ಲಾ ಭೂಮಿಗಿಳಿದು ಹೋಗುತ್ತಿದ್ದೆ.ಬಾಲಮಣಿ ಎನ್ನುವ ಸುಂದರ ಹೆಸರಿನ ಅಮ್ಮ ತನ್ನ ಐದನೆ ಇಯತ್ತೆ ನಪಾಸಿನ ಕಾರಣದಿಂದ ಅದನ್ನು “ಬಾಲಾ ಮಣಿ “
    ಅಂತ ಅಂಕುಡೊಂಕಾಗಿ ಬರೆಯುತ್ತಿದ್ದು ಅದೇ ದಾಖಲೆಯಲ್ಲೂ ಸೇರಿಹೋಗಿತ್ತು.ಹೆಸರಿನಲ್ಲೇ ಬಾಲ ಇರುವ ಇದು ನನ್ನ ಆ ವಯಸ್ಸಿಗೆ ಭಾರಿ‌ ಮುಜುಗರದ ವಿಷಯ.

    ತಾಯಿಯ ಹೆಸರು ಅಂತ ದಾಖಲೆಯವರೇನಾದರೂ ಕೇಳುವಾಗ ಮೆಲ್ಲಗೆ ನಾನು ಬಾಲಾಮಣಿ ಅನ್ನುತ್ತಿದ್ದೆ.ಮತ್ತೊಮ್ಮೆ ಹೇಳಿ ಎನ್ನುವಾಗ ತುಸು ಜೋರಾಗಿ‌,ಅದೂ ಕೇಳದೇ ಮತ್ತೆ ಸ್ಪೆಲಿಂಗ್ ಕೇಳುವಾಗ ಸ್ಪಷ್ಟವಾಗಿ ಹೇಳಿ ಬೆವರೊರೆಸಿಕೊಂಡಿದ್ದೂ ಇದೆ.

    ಗೆಳತಿಯರೆಲ್ಲಾ ‘ಅದೆಂತ ಹೆಸರೇ‌ ಮಾರಾಯ್ತಿ.?
    ಬಾಲಾ. ಲಾ… ಮಣಿ ..?’ ಅಂದಾಗ ಅಮ್ಮನನ್ನು ಸರಿಯಾಗಿ ತರಾಟೆಗೆ ತಗೋಬೇಕು ಅಂತ ಅನಿಸಿದರೂ ಆಗ ಅದಕ್ಕೆ ಕಾಲ ಸಹಕರಿಸಿರಲಿಲ್ಲ ಎನುವುದು ಈಗ ಹೊಳೆವ ವಿಷಯ.ವೇದವತಿ ಎನ್ನುವ ನನ್ನ ಅಧಿಕೃತ ಹೆಸರೂ ಅದರ ಮೊದಲ ವೇದದ ಹೊರತಾಗಿ ಕೊನೆಯ
    ‘ವತಿ’ಯಿಂದ ಓತಿಕ್ಯಾತನ ಹೆಸರಿನಂತೆ ಅನ್ನಿಸಿ ಭಾರಿ ಬೇಸರವಾಗಿದ್ದೂ ಇದೆ.

    ದೇವರ ದಯದಿಂದ ನನ್ನ ಅಪ್ಪ ಅಮ್ಮನಿಗೆ ಮೊದಲಿಗೆ ಮಗ ಹುಟ್ಟಿ ಅವನಿಗೆ‌ ನಂದೀಶ ಎನ್ನುವ ಹೆಸರಿಟ್ಟ ಮೇಲೆ ಎರಡನೆಯವಳಾದ ನನಗೆ ಸಹಜವಾಗಿ ನಂದಿನಿ ಹೆಸರು ದಕ್ಕಿ ಜೀವನಪರ್ಯಂತದ ಖುಷಿಗೆ ಕಾರಣವಾಗಿದೆ.

    ಒಂದು ತಿಳಿವಳಿಕೆಯ ಪ್ರಕಾರ ಕೆಲವೊಂದು ಎವರ್ಗ್ರೀನ್ ಹೆಸರುಗಳಿರುತ್ತವೆ.ಅವು ಕಾಲದೇಶಗಳಿಗೂ ‌ಮೀರಿ ತಮ್ಮ ಸೌಂದರ್ಯ ಉಳಿಸಿಕೊಳ್ಳಲು ಸಮರ್ಥವಾಗಿರುತ್ತವೆ.ನಂದಿನಿ ಅಂತ ಒಂದು ಪರಮ ಅದ್ಭುತ ಹೆಸರು.

    ಅದರಲ್ಲೂ ಒಂದು ತೊಡಕಿದೆ ನೋಡಿ..

    ಇತ್ತಿಚೆಗೆ ನಾಕು ಮಾತಾಡಿ ಪರಿಚಯವಾದವರೆಲ್ಲಾ ನಂದು….ನಂದು..ನನ್ನದು ಅಂದು ಕರೆದು ಗೊಂದಲ ಮಾಡ್ತಾರೆ.ಹೆಣ್ಣುಮಕ್ಕಳು ,ಗೆಳತಿಯರೆಲ್ಲಾ “ನಂದು‌ ನಂದು” ಅಂದರೆ ಏನ್ ಪರವಾಗಿಲ್ಲ ಬಿಡಿ.ಆದರೆ ಲಿಂಗಭೇದವಿಲ್ಲದೇ ನಂದು.. ನಂದೂ..ಅಂತ ಅಂದು.,ನಿಧಾನವಾಗಿ ನಂದು ಮೀನ್ಸ್ ನನ್ನದು.. ಎನಿಸಿಕೊಳುವುದೂ ಹೆಂಗಿರಬೇಡಾ ಯೋಚಿಸಿ ನೋಡಿ.

    ಇದೇ ಹೆಸರು‌ ಪ್ರಾಯದಲಿದ್ದಾಗ ರೋಡ್ ರೋಮಿಯೋಗಳಿಗೆ ನಂದಿನಿ ಡೈರಿ ಅಂತಲೂ ಆಗಿ ಮೊದಲೇ ನಾಚಿಕೆ ಮುದ್ದೆಯಾದ ನಾನು ಇದ್ದ ಒಂದೇ ಒಂದು ದುಪ್ಪಟ್ಟವನ್ನು ಮೈತುಂಬ ಹೊದ್ದು ಹೋದರೂ‌ ನಂದಿನಿ ಜಾಹೀರಾತು ಎಲ್ಲೆಲ್ಲೂ ಕಂಡು ಮತ್ತೂ ಕುಗ್ಗಿ ಹೋದದ್ದು,ಬಗ್ಗಿ ನಡೆದದ್ದು ಆಗಿನ ಕಾಲಕ್ಕೆ ಏನು ಕಮ್ಮಿ ವಿಷಯವಲ್ಲ.

    ನಂದಿನಿ ಅನ್ನುವ ನನ್ನದೇ ಫೇವರಿಟ್ ಆದ ನನ್ನ ಹೆಸರು ಯಜಮಾನರ ಬಾಯಲ್ಲಿ ಎಲ್ಲೂ‌ ಕೇಳದ,ಯಾರೂ ಇಟ್ಟುಕೊಂಡಿರದ
    “ನನ್ನಿ” ಯಾಗಿದ್ದು ಮಾತ್ರ ‌ನನ್ನ ಅದೃಷ್ಟವೇ.!

    ನನ್ನ ಮಗ ಎರಡು ವರ್ಷದವನಿದ್ದಾಗ ನಿಮ್ಮ ಅಮ್ಮನ ಹೆಸರೇನು ಅಂತ ಪ್ರೀತಿಗೆ ಕೇಳುವಾಗ ಅವನ ತೊದಲು‌ನುಡಿಗೆ ಹುಟ್ಟಿದ ಹೆಸರೇ ಈ‌ ನನ್ನಿ ..!ಇವರೇನಾದರೂ ನಂದಿನಿ ಅಂತ ನನ್ನ ಪೂರ್ತಿ ಹೆಸರು ಕರೆದರೆ ಥೇಟು ಕಾಮಧೇನು ಮೈಮೇಲೆ ಬಂದವಳಂತೆ ಬುಸುಗುಡುವುದು ಇದ್ದದ್ದೆ.
    ಸಂಬಂಧಗಳೇ ಹಾಗಲ್ಲವೇ.ಯಾರು ಯಾವ ಹೆಸರಿಂದ ಕರೆಯುತ್ತಾರೋ ಹಾಗೇ ಕರೆಯಬೇಕು ಕೊನೆಯವರೆಗೂ.ನಂದಿನಿ,ನಂದು,ನನ್ನಿ,ನ್ನೀ…ಹೀಗೆ..

    ಅವರವರ ಅಕ್ಕರೆಗೆ ದಕ್ಕಿದ ಹೆಸರಿನ ಅರ್ದಗಿರ್ಧ ಭಾಗ ಅವರವರ ಪಾಲಿಗೆ.ಹೆಸರು ತುಂಡಾದಷ್ಟೂ ಬಾಂಧವ್ಯ ಹೆಚ್ಚಿದೆ ಅಂತ ಅರಿಕೆಯಾಗುವುದೂ ಒಂಥರ ಸುಖವೇ.

    ಇನ್ನೊಂದು ಸೊಗದ ಸಂಗತಿಯೆಂದರೆ, ಮಧ್ಯಯುಗದ(!) ಅರ್ಧ ಪ್ರತಿಶತ ಸಿನೆಮಾಗಳ ನಾಯಕಿ ನಂದಿನಿಯಾದರೆ,ನಾಯಕ ವಿಶ್ವ.ಅದೇ ಪದ್ದತಿ ಈಗಲೂ ಮುಂದುವರೆದಿರುವುದು,ಮುಂದಿನ ನೂರು ವರುಷವೂ ಕನ್ನಡ ಸಿನೆಮಾದ ನಾಯಕಿ ನಂದಿನಿಯೇ ಆಗಿರುವುದು ಸದ್ಯದ ಅವಲೋಕನದಲ್ಲಿ ‌ಖಚಿತವೇ.

    ಇದೂ ಕೂಡ ನನ್ನ ಹೆಸರು ಕೊಟ್ಟ ಸಂತೋಷಕ್ಕೆ ಮತ್ತೊಂದು ರೀಸನ್ನು.

    **********

    ಹುಟ್ಟಿದ ನಕ್ಷತ್ರಕ್ಕೆ ಅನುಸಾರ ನನ್ನ ಮಗಳಿಗೆ ಇಟ್ಟ ಹೆಸರು ಬೇರೆಯೇ ಇದ್ದರೂ ಅವಳದ್ದೂ ನಾಮಕರಣ ಪುರಾಣ ನಡೆಯುತ್ತಲೇ ಇದೆ.

    ಎರಡು ರಾತ್ರಿ ಸಹಿಸಲಾರದ ನೋವಿನೊಂದಿಗೆ ಕೊನೆಗೂ ಹುಟ್ಟಿದ ಈ ನನ್ನ ಮಗಳು ಹುಟ್ಟುವಾಗಲೇ ಹೊಕ್ಕಳುಬಳ್ಳಿ ಸುತ್ತಿಕೊಂಡು ,ಗರ್ಭದಲ್ಲಿ ನೀರು ಬತ್ತಿ ,ತಲೆಕೆಳಗೆ ಮಾಡಿ ಅಂಗಾಲು ಮಿಡಿದರೂ ,ಬುರುಡೆಗೆ ಹೊಡೆದರೂ

    ಕಂಯ್ ಕುಂಯ್ ಅಂತ ಅಳದೇ ಸಣ್ಣಗೆ ಮುಗುಳ್ನಕ್ಕು ಸುಮ್ಮನಾದ್ದುದ್ದಕ್ಕೆ ದಿಗಿಲಾಗಿ ಮಗು ಆರೋಗ್ಯವಾಗಿರಲಿ ನಿನ್ನ ಹೆಸರಿಟ್ಟು ಕರೆಯುತ್ತೇನೆ ಅಂತ ಪಾರ್ವತಿ ದೇವಿಗೆ ಹರಸಿಕೊಂಡಿದ್ದೆ.ಈಗಲೂ ಅವಳಿಗೆ ಕಟ್ಟಿದ ಹೆಸರಷ್ಟೇ ಇದ್ದು “ಪಾರ್ವತಿ ” ಅಂತ ಬದಲಾಯಿಸಬೇಕೆಂಬ ಆಸೆ ಕೈಗೂಡದೇ ಮುಂದಕ್ಕೆ ಹೋಗುತ್ತಲೇ ಇದೆ.

    ನಂದಿನಿ ಹೇಗೆ ನಂದು…ನನ್ನದು ಆಗಿಬಿಡುತ್ತದೋ ಹಾಗೇ ಕೆಲವು ಹೆಸರುಗಳನ್ನು ಕತ್ತರಿಸಿದರೆ ,ಅದಕ್ಕೆ ಅಣ್ಣ ಅಕ್ಕ ಸೇರಿಸಿದರೆ ಆಭಾಸ ಆಗಿಹೋಗುವ ಸಾಧ್ಯತೆಗಳೂ ಇವೆ.

    ವಸುಂಧರಾ ,ಇಂದಿರಾ ಇವರೆಲ್ಲಾ ರಾ ರಾ ಅಂತ ಆಪ್ತಮಿತ್ರದ ಆತ್ಮದ ಪ್ರತಿರೂಪವೆನಿಸಿದರೆ..ಮಲ್ಲಿಕಾ ,ರೇಣುಕಾ ಗಳಿಗೆ ಅಕ್ಕನನ್ನು ಸೇರಿಸಿದರೆ ಮಲ್ಲಿಕಕ್ಕ,ರೇಣುಕಕ್ಕಗಳು ಆಗಿ ವಿಪರೀತವಾಗಿ ಅವರನ್ನು ಚಿಕ್ಕವರೂ ಹೆಸರು ಹಿಡಿದೇ ಕರೆಯಬೇಕು ಅಥವಾ ಬರೀ ಅಕ್ಕ ಎನ್ನಬೇಕು.ಕೆಲವರಿಗೆ ಹೆಸರೆಷ್ಟೇ ಚಂದವಿದ್ದರೂ ಅವರ ಗುಣ ಸ್ವಭಾವ,ನಡಾವಳಿಗೆ ಅನುಗುಣವಾಗಿ ಅವರಿಗೆ ಅಡ್ಡ ಹೆಸರೂ,ಉದ್ದ ಹೆಸರೂ ಸಮುದಾಯದಿಂದ ನಾಮಕರಣವಾಗಿ ಅದೇ ಹೆಸರೂ ಶಾಶ್ವತವಾಗಿ ಉಳಿಯೋ ಸಾಧ್ಯತೆಗಳೂ ನಮ್ಮಲ್ಲಿ ಬಹಳಷ್ಟಿವೆ.

    ಪಿಟೀಲು, ಮೊಳೆ,ಗಾಂಧಿ, ಕಾಗೆ,ಬೊಬ್ಬೆ ,ಐಲು,ಬಿಜೆಪಿ,ಇವು ನಮ್ಮ ಹಳ್ಳಿಯಲ್ಲಿ ಸಮುದಾಯದ ಸಹಕಾರದೊಂದಿಗೆ ಕರೆಯಲ್ಪಡುತ್ತಿರುವ ಕೆಲವು ನಾಮಾವಳಿಗಳು.ನಮ್ಮ ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಿ ಶೂಸ್ ಕೊಳ್ಳಬೇಕು ಅಂತ ಚಪ್ಪಲಿ ಅಂಗಡಿಗೆ ಹೋದ.ಅವನ ವೇಷಭೂಷಣಗಳನ್ನು ನೋಡಿದ ಅಂಗಡಿಯವ ಅವನಿಗೆ ಐನೂರು ರೂಪಾಯಿಗಳ ಶೂ ತೋರಿಸಿದ.

    “ಇದಲ್ಲ..ಬೇರೆ ಥರದ್ದು” ಅಂದ ಇವ.

    ಯಾವ ಥರದ್ದು ಬೇಕು ಅಂದಾಗ ಸ್ವಲ್ಪ ಕಾಸ್ಟಲೀ ದು ತೋರ್ಸಿ ಅಂದ.
    ಅವರು ಎಂಟನೂರು ರೂಪಾಯಿ ದು ತೋರಿಸಿದ್ರು.

    ಇವನು ಇನ್ನೂ ಸ್ವಲ್ಪ ಕಾಸ್ಟಲೀ ಅಂದ..

    ಅವರು ಒಂದೂವರೆ ಸಾವಿರದ್ದು ತೋರಿಸಿದ್ರು.

    ಇವನು ಇನ್ನೂ ಕಾಸ್ಟ…

    ಎಷ್ಟ್ರುದ್ದು ಬೇಕಣ್ಣ ನಿಂಗೆ ಅಂದಾ ಅಂಗಡಿಯವ.
    ಇವನು ಸ್ವಲ್ಪ ಕಾಸ್ಟಲೀದು ಬೇಕಾಗಿತ್ತು ಅಂತ ತಲೆ ತುರಿಸ್ಕೊಂಡ.
    ಅದೇ ಎಷ್ಟು.

    ಮುನ್ನೂರು ರೂಪಾಯೊಳಗೆ ಅಂದ..ಆಂಗಡಿಯವ ಮುಗುಳ್ನಕ್ಕು ‘ತಗೋಳಣ್ಣಾ ,ನಿನ್ನ ಕಾಸ್ಟಲೀ ಶೂಸು ‘ ಅಂತ್ಹೇಳಿ ಇನ್ನೂರೈತ್ತರ ಶೂಸ್ ತೋರಿಸಿದ ಮೇಲೆ ಇವನ ಮುಖ ಬೆಳಗಿನ ಕಮಲದಂತೆ ಅರಳಿತು.
    ಅಂದಿನಿಂದ ಇವನಿಗೆ ಕಾಸ್ಟಲೀ ಅಂತಲೇ ಹೆಸರು. ಅವನೂ ಯಾವ ಬಿಗುಮಾವನ್ನೂ ತೋರಿಸದೆ ಕಾಸ್ಟಲೀ ಅಂದರೇ ಓ ಅಂತಾನೆ.

    ಹೆಸರಿನಿಂದಲೇ ಧರ್ಮದ ಗುರುತು ಹಿಡಿಯುವುದು ಜಗದ ಜನರ ಗುಣವಾದರೂ ಬೇರೆ ಧರ್ಮದ ಹೆಸರಿನ ಆಕರ್ಷಣೆ ಮಾತ್ರ ಯುವ ಮನಸ್ಸಿಗೆ ಸದಾ ಇರುವಂಥದ್ದೇ. ಶೀಬಾ,ರೀಮಾ,ರಿಯಾ,ನಿಧಾ ದಂತಹ ಚಂದದ ಹೆಸರುಗಳು ಮೌಸಮಿ,ಚಾರುಲತ,ಸುನೈನ,ಸುವಿಂಧ್ಯ ದವರನ್ನು ಆಕರ್ಷಿಸಿದರೆ ವಾನಿ,ಸೌರಭ,ದೇವಯಾನಿ,ಮಂಗಳಗೌರಿಯರು
    ಮ್ಯೂರಲ್,ಜೆನಿ,ಕ್ಲಿಯೋನಾ,ಲೀಡಾ,ಲೀಸಾಗಳ ಫೇವರಿಟ್ಟು.
    ಎಲ್ಲಾ ಕಾಲಕ್ಕೂ ವಸಿಷ್ಠ, ಕೌಶಿಕ್,ಹಿಮ,ಮೇನಾ,ಸ್ನಿಗ್ಧಗಳು ಅತ್ಯದ್ಭುತ ಹೆಸರುಗಳೇ. ಎಲ್ಲವೂ ಹಾಗೇ ತಾನೇ ..? ಇರುವುದೆಲ್ಲವಾ ಬಿಟ್ಟು ಇರುದುದಕೆ ತುಡಿಯುವುದು.!

    ನನ್ನ ಮದುವೆಯಾದ ಹೊಸತರಲ್ಲಿ ಮಧ್ಯಾಹ್ನ ತೋಟದಿಂದ ಬಂದ ಮಾವ ಅತ್ತೆಯ ಹತ್ತಿರ ‘ಕುಬೇರಪ್ಪ ಸಿಕ್ಕಿದ್ದ.ಸಂಜೆ ಮನೆಗೆ ಬರ್ತಿನಿ ಅಂದಿದ್ದಾನೆ’ ಅಂತಿದ್ರು.

    ಮನೆಯ ಮಾಮೂಲಿ ಜನರನ್ನೇ ನೋಡಿ ನೋಡಿ ಬೇಸರವಾಗಿದ್ದ ನನಗೆ ಈ ಹೊಸ ಕುಬೇರಪ್ಪ ಹೇಗಿರಬಹುದು ಅಂತೆಲ್ಲಾ ಯೋಚಿಸಿ
    ಹೆಸರೇ ಇಷ್ಟು ಚಂದ ಇರುವಾಗ ವ್ಯಕ್ತಿ ಹೇಗಿರಬೇಡ ಅಂತೆಲ್ಲ ಕಲ್ಪಿಸಿ ಸಂಭ್ರಮಿಸಿದ್ದೆ.

    ಹೊತ್ತು ಮುಳುಗಿದ ಮೇಲೆ ಇಳಿದ ಈ ಕುಬೇರಪ್ಪ ಹೆಸರಲ್ಲಿ ಮಾತ್ರ ಕು ಬೇರನನ್ನು ಇಟ್ಟುಕೊಂಡು ಉಳಿದಂತೆ ದಶರಂದ್ರವಿರುವ ಅಂಗಿಯ ಮಹಾನುಭಾವರಾಗಿದ್ದರಲ್ಲದೆ ಗಂಟಲುಮಟ ಸುರೆಯನ್ನೂ ಏರಿಸಿಕೊಂಡೇ ಬಂದಿದ್ದರು. ಆದರೂ ಇಂಥ ಹೆಸರಿನ ಇವರು ಪುಡಿಗಾಸು ಇರದ ಕುಚೇಲನಾಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ನನ್ನ ಸಣ್ಣ ವಯಸ್ಸಿಗೆ ಸಹಜವಾದ ಕುತೂಹಲವಾಗಿ ಕೊನೇವರೆಗೂ ಹಾಗೇ ಉಳಿಯಿತು.

    ನಾಮ ಪುರಾಣಗಳು ಇನ್ನೂ ಅನೇಕನೇಕವಿದ್ದು ಕೆಲವರಿಗೆ ತಮ್ಮ ಮಕ್ಕಳಿಗೆ ತಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಹೆಸರಿಡುವ ಬಯಕೆ.

    ಇದೊಂಥರ ಅಫಿಡವಿಟ್ಟು.ರಿಜಿಸ್ಟ್ರೇಷನ್ ಮಾಡಿಸಿದ ಹಾಗೆ ಅನಿಸುತ್ತದೆ ನನಗೆ.

    ಇನ್ನೂ ಕೆಲವರು ಫ್ಯಾಷನ್ ಹೆಸರಿನಲ್ಲಿ ಅರ್ಥವಿರದ ಅಕ್ಷರಗಳನ್ನು ಒಟ್ಟು ಮಾಡಿ ಹೆಸರಿಟ್ಟು ಸಂಭ್ರಮಿಸುತ್ತಾರೆ.
    ಇನ್ನು ನ್ಯೂಮರಾಲಜಿಯ ಪ್ರಕಾರ ಕೂಡಿಸಿ ,ಕಳೆದು ಗೂಗಲ್ಲಣ್ಣನಲ್ಲಿ ಅರ್ದ ಶತಮಾನ ಹುಡುಕಿ ಹೆಸರಿಡುವ ಸಮರವೀರರೂ ಇದ್ದಾರೆ.
    ಅಜ್ಜನ,ಮುತ್ತಜ್ಜನ ಹೆಸರನ್ನೂ ಮಕ್ಕಳಿಗಿಡುವ ಖುಷಿ ಒಂದೆಡೆಯಾದರೆ ಹೆಸರೇ ಇರದೇ ಬೀದಿಗೆ ಬಿದ್ದ ಮಗುವಿಗೆ ಯಾರೋ ಕರೆದ ಎಂಥದ್ದೋ ಅಡ್ಡ ಹೆಸರೇ ಹೆಸರಾಗಿರುವ ಕಥೆಗಳೂ ನಮ್ಮಲ್ಲಿ ಇವೆ.
    ಹೆಸರಿನಿಂದಲೇ ಕೀಳರಿಮೆ ಬೆಳೆಸಿಕೊಂಡು ಹಿಂದೆ ಉಳಿದ ಉದಾಹರಣೆಗಳೂ ಕಡಿಮೆ ಇಲ್ಲ.

    ನನ್ನ ಮಗನಿಗೆ ಇಂಥದ್ದೇ ಹೆಸರಿಡಬೇಕೆಂದು ನಿರ್ಧರಿಸಿಕೊಂಡ ತಾಯಿಗೆ ಗಂಡನ ಮನೆಯವರಿಂದ ಆ ಹೆಸರಿಡಲು ಸಹಕಾರ ಸಿಗದೇ ಆ ಮದುವೆಯನ್ನೇ ಧಿಕ್ಕರಿಸಿ ಇನ್ನೊಂದು ಮದುವೆಯಾಗಿ ಮಗನನ್ನು ಪಡೆದು ಅದಕ್ಕೆ ಆ ಹೆಸರಿಟ್ಟ ತಾಯಿಯ ಕಥೆಯೂ ನಮ್ಮ ನಡುವೆ ಶ್ರೇಷ್ಠ ಕಥೆ ಎನಿಸಿಕೊಂಡಿದ್ದಿದೆ.

    ದೇಹವನ್ನು ಹೀಗಳೆಯಬೇಡ ಮನುಜ ದೇಹವನ್ನು ಹೀಗೆ ಅಳೆಯಬೇಡ ಎನ್ನುವ ಕವಿವಾಣಿಯ ಹಾಗೆ ಹೆಸರಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ.
    ಅಜ್ಜ ಹೇಳಿದ್ರು,ಅವ್ವ ಹೇಳಿದ್ಳು ,ಹರಕೆ ಹೊತ್ತಕೊಂಡಿದ್ದೆ ಅಂತ ಕರಿಮಾರಿಯಮ್ಮ ಅಂತಲೋ,ದುಗ್ಗಣ್ಣ ಅಂತಲೋ ಹೆಸರಿಡುವುದು ಹಳೆಯ ಮಾತಾಯಿತು ಅಂದುಕೊಂಡರೂ ಈಗಲೂ ನಮ್ಮ ನಡುವೆ ಅಂತವರಿರುವುದನ್ನು ಅಲ್ಲಲ್ಲಿ ಕಾಣುತ್ತೇವೆ.

    ದೇಹ ಎಷ್ಟು ಮುಖ್ಯವೋ ಆ ದೇಹಕ್ಕಿಡುವ ಹೆಸರೂ ಅಷ್ಟೇ ಸುಂದರವೂ,ಧ್ವನಿಪೂರ್ಣವೂ ಆಗಿದ್ದರೆ ಮಕ್ಕಳು ಮುಂದೆ ನೀವಿಟ್ಟ ಈ ಹೆಸರಿನಿಂದಾಗಿ ನಂಗೆ ಹೀಗಾಯ್ತು ಹಾಗಾಯ್ತು ಅಂತ ದೂರುವುದು ‌ತಪ್ಪುತ್ತದೆ.ಆದರೂ ಸುಂದರವಾದ ಹೆಸರು ಪ್ರತೀ ಮಗುವಿನ ಹಕ್ಕು.

    ಈ ಬರಹವನ್ನು ಇನ್ನೇನು ಬರೆದು ಮುಗಿಸಬೇಕು ಎನ್ನುವಾಗ ಕರೆಯೊಂದು ಬಂದು ನಂದಿನಿ ವಿಶ್ವನಾಥ ಹೆದ್ದುರ್ಗ ಎನ್ನುವ ನನ್ನ ಹೆಸರನ್ನು ಹೊಸದಾಗಿ ತುಂಡರಿಸಿ ಹೆದ್ದುರ್ಗೇಶ್ವರಿಯವರಾ ಅಂದರು..?
    ನಾನು ಹೌದು ಅನ್ನಬೇಕೆ ಅಲ್ಲ ಅನ್ನಬೇಕೆ ತಿಳಿಯದೇ
    ತಡವರಿಸಿದೆ..!!

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಮೇ 24ರಿಂದ 2ನೇ ಪಿಯು ಪರೀಕ್ಷೆ

    ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ಸಾಲಿನ ದ್ವಿತೀಯ ಪಿಯು ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

    ಶುಕ್ರವಾರ ಸಂಜೆ ಪ್ರಕಟಿಸಲಾದ ಈ ತಾತ್ಕಲಿಕ ವೇಳಾಪಟ್ಟಿ ಪ್ರಕಾರ ಪರೀಕ್ಷೆಗಳು ಮೇ 24 ಕ್ಕೆ ಆರಂಭವಾಗಿ ಜೂನ್ 10 ಕ್ಕೆ ಮುಗಿಯಲಿದೆ.

    ವೇಳಾ ಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ.

    ಜೂನ್ 14 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ

    ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು 2021ನೇ ಜೂನ್ 14ರಿಂದ ಜೂನ್ 25ರವರಗೆ ನಡೆಯಲಿವೆ. ಜೂ. 14- ಪ್ರಥಮ ಭಾಷೆ, ಜೂ. 16- ಗಣಿತ, ಜೂ. 18-ದ್ವಿತೀಯ ಭಾಷೆ, ಜೂ. 21- ವಿಜ್ಞಾನ, ಜೂ. 23- ತೃತೀಯ ಭಾಷೆ, ಜೂ. 25- ಸಮಾಜ ವಿಜ್ಞಾನ ಪತ್ರಿಕೆಗಳ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ದ್ವಿತೀಯ ಪಿಯು ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಅಂತಿಮಗೊಳಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವರು ವಿವರಿಸಿದರು.

    ಫೆ. 1ರಿಂದ 9 ಮತ್ತು ಫಸ್ಟ್ ಪಿಯು ತರಗತಿ ಆರಂಭ

    ಪ್ರಸ್ತುತ ಶೈಕ್ಷಣಿಕ ವರ್ಷದ 9 ಮತ್ತು 11ನೇ ತರಗತಿಗಳನ್ನು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 10 ಮತ್ತು 12ನೇ ತರಗತಿಗಳೂ ಸಹ ಮೊದಲಿನಂತೆ ಪ್ರತಿದಿನ ಪೂರ್ಣ ಆವಧಿಯಲ್ಲಿ ನಡೆಯಲಿವೆ ಎಂದರು.

    ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸ್ತುತ 9ರಿಂದ 12ವರೆಗಿನ ತರಗತಿಗಳು ಪೂರ್ಣ ಅವಧಿಯಲ್ಲಿ ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ. ಹಾಗೆಯೇ 6ರಿಂದ 8ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳು ಈಗ ನಡೆಯುತ್ತಿರುವಂತೆ ಮುಂದುವರೆಯಲಿವೆ ಎಂದು ಸಚಿವರು ಹೇಳಿದರು.

    ಈಗಾಗಲೇ ಆರಂಭವಾಗಿರುವ 12ನೇ ತರಗತಿಯ ಸರಾಸರಿ ಶೇ. 75, 10ನೇ ತರಗತಿಯ ಶೇ.70, 6ರಿಂದ 9ನೇ ತರಗತಿಯ ವಿದ್ಯಾಗಮ ತರಗತಿಯ ಹಾಜರಾತಿ ಶೇ. 45ರಷ್ಟು ಹಾಜರಾತಿ ಇರುವ ಅಂಶವನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ 9 ಮತ್ತು 11ನೇ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ಸಚಿವರು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದು ತಿಳಿಸಿದರು.

    ಇತ್ತೀಚಿಗೆ ಶಿಕ್ಷಕ-ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ತರಗತಿಗಳು ನಿರಂತರವಾಗಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಕರ ಸಂಘಟನೆಗಳು, ಪದವಿ ಪೂರ್ವ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ಮಕ್ಕಳ ಹಿತದೃಷ್ಟಿಯಿಂದ ಎಲ್ಲ ತರಗತಿಗಳನ್ನೂ ಆರಂಭಿಸಬೇಕೆಂದು ಪದೇ ಪದೇ ಒತ್ತಾಯಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ ವಿವಾಹಗಳಂತಹ ಸಾಮಾಜಿಕ ಪಿಡುಗುಗಳ ಕುರಿತೂ ನಾವು ಎಚ್ಚರ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬುದು ಸಾರ್ವಜನಿಕ ವಲಯದ ಒತ್ತಾಯವಾಗಿದೆ ಎಂದು ಸಚಿವರು ತಿಳಿಸಿದರು.

    ಸಿಎಂ ಜೊತೆ ಚರ್ಚಿಸಿ ಶುಲ್ಕ ನಿಗದಿ:
    ಶಾಲಾ ಶುಲ್ಕ ನಿಗದಿ ಕುರಿತಂತೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. .

    ಸಭೆಯಲ್ಲಿ ಸಾರಿಗೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

    error: Content is protected !!