20.2 C
Karnataka
Thursday, November 28, 2024
    Home Blog Page 124

    ಆಸೆಯೇ ದುಃಖಕ್ಕೆ ಮೂಲ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


     “ Litreture is not only the effect of social causes it is also the cause of social effects”  ಹ್ಯಾರಿಸ್ ಲಿವಿಸ್  ಅವರ  ಈ ಮಾತುಗಳು ಸಾಹಿತ್ಯ ಮತ್ತು ಸಮಾಜಗಳ ನಡುವೆ ಇರುವ ಆಂತರಂಗಿಕ ಸಂಬಂಧವನ್ನು  ವಿವರಿಸುತ್ತದೆ. ಅಂತೆಯೇ ಬಸವಣ್ಣನವರ  ವಚನಗಳಲ್ಲಿಯೂ ಅವರ ಸಾಮಾಜಿಕ ಚಿಂತನೆಗಳಲ್ಲಿಯೂ ಇಂತಹ ಆಂತರಂಗಿಕ ಸಮಾಜವನ್ನು ಬೆಸೆಯುವ ಅಂಶಗಳನ್ನು ನೋಡಬಹುದು.  ಇಲ್ಲಿ ವ್ಯಕ್ತಿಸುಧಾರಣೆ, ಸಮಾಜ ಸುಧಾರಣೆ ಎಂಬ  ಎರಡು ಭಾಗಗಳನ್ನು ನೋಡಬಹುದು ಸಮಾಜ ಸುಧಾರಣೆಯ ಪರಿಪ್ರೇಕ್ಷದಲ್ಲಿ ಬರುವ  ಆರ್ಥಿಕ ಚಿಂತನೆ  ಕುರಿತ ವಚನ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಂಡಿದೆ. ಸಂಪತ್ತಿನ  ಅಕ್ರೋಢಿಕರಣ ಅದರಲ್ಲಿ ಪ್ರಮುಖವಾದುದು.

     ‘ ಸಂಪತ್ತನ್ನು ಹೊಂದಬೇಕೆನ್ನುವ  ಹಂಬಲ ಹಾಗೂ  ಆ ಬಗೆಗಿನ ಚತುರತೆ ಏನಿದೆಯೊ ಅದು ದುರಾಸೆಯ ಜೀವನಾಡಿ.  ಇದನ್ನೆ  ಗೌತಮಬುದ್ಧನೂ ಆಸೆಯೇ ದುಃಖಕ್ಕೆ ಮೂಲ  ಎಂದಿರುವುದು. ಸಂಪತ್ತನ್ನು ಕೂಡಿ ಹಾಕುವುದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ.ಇದನ್ನುತೀವ್ರವಾಗಿ ವಿರೋಧಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು.  ಅನಗತ್ಯ ಸಂಪತ್ತನ್ನು ಕೂಡಿ ಹಾಕುವುದಕ್ಕೆ ವಿರೋಧವಿರುವ ವಚನವೊಂದು ಹೀಗಿದೆ-

           ಹೊನ್ನಿನಿಳಗೊಂದೊರೆಯ, ಸೀರೆಯೊಳಗೊಂದೆಳೆಯ

          ಇಂದಿಂಗೆ ನಾಳಿಂಗೆ ಬೇಕೆನೆಂದಾದರೆ

          ನಿಮ್ಮಾಣೆ! ಪುರಾತನರಾಣೆ,

          ನಿಮ್ಮ ಶರಣಿರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ.

     ಸಂಪತ್ತಿನ ಸಂಗ್ರಹವಾದಂತೆಲ್ಲಾ ಅದು ಆಯಾ ವ್ಯಕ್ತಿಗಳಲ್ಲಿ ಇಲ್ಲದ ಪ್ರತಿಷ್ಠೆ ಮತ್ತು ಅಹಂಕಾರಗಳು ಹುಟ್ಟಲು ಕಾರಣವಾಗುತ್ತದೆ. ಅದೂ ಅನಾಯಾಸವಾಗಿ, ಮೋಸದಿಂದ, ವಾಮಮಾರ್ಗದಿಂದ,   ಇನ್ನೊಬ್ಬರಿಗೆ ಆತ್ಮವಂಚನೆ, ಅರ್ಥವಂಚನೆ ಮಾಡಿ ಅವರ ದಿಕ್ಕು ತಪ್ಪಿಸಿ ಅವರಿಗೆ ಅವಮಾನ ಮಾಡಿ ಪಡೆದಾಗಲಂತೂ  ಹೆಚ್ಚು.  ಇದರಿಂದ  ಕುಟುಂಬದಲ್ಲಿ, ಸಮಾಜದಲ್ಲಿ ಅಸಮತೋಲನ ಹೆಚ್ಚಿ, ಅದು ಎಲ್ಲಾ ಬಗೆಯ ಮಾನಸಿಕ ಕ್ಷೋಭೆಗಳಿಗೆ ಕಾರಣವಾಗಬಲ್ಲದು. ಸಂಬಂಧಗಳ ತಿರಸ್ಕಾರಕ್ಕೆ ಕಾರಣವಾಗಬಹುದು.

    ಈ ಕ್ಷೋಭೆಗಳೆ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಠಿಸಬಲ್ಲವು. ಎಂಬ  ಆತಂಕ ಬಸವಣ್ಣನವರಿಗೆ ಶತಮಾನಗಳ ಹಿಂದೆಯೇ ಕಾಡಿತ್ತು .ಅದು ಅಕ್ಷರಶಃ ಈಗಲೂ ನಡೆಯುತ್ತದೆ. ಹಣದ ವ್ಯಾಮೋಹಕ್ಕೆ,  ನಿಧಿಯ ವ್ಯಾಮೋಹಕ್ಕೆ ಭಗವಂತನ ಸನ್ನಿಧಿಯನ್ನು ನಾವು ಮರೆಯುತ್ತ ಇದ್ದೇವೆ.  “ಪರರ ವಸ್ತು ಪಾಷಾಣ” ಎಂಬ ಮಾತನ್ನು ನಮ್ಮ ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ  ಆದರೆ ನಮ್ಮ ಸಮಾಜದಲ್ಲಿ  ಮರೆತೇ ಹೋಗಿದೆ ಲೋಭಿತನದ ಬದುಕನ್ನು ಬದುಕುವ ಕುಹಕಿಗಳೆ ನಮ್ಮ ನಡುವಿರುವುದು. ಹಣದ ವಿಷಯ ವಿಷವಿದ್ದಂತೆ ನಿಧಾನವಾಗಿಯಾದರು ಅದು ಆಪೋಷಣ ತೆಗೆದುಕೊಳ್ಳುತ್ತದೆ.  ಹಾಗಾಗಿ ನಮ್ಮದೇನಿದೆಯೊ ಅಷ್ಟನ್ನು ಬಿಟ್ಟು ಪರರ ಪಾಲನ್ನು ಅನುಭವಿಸಿದರೆ  ಪಾಷಾಣ ತಿಂದಂತೆಯೇ. 

    ಸಂಪತ್ತಿನ ಅಕ್ರೋಢಿಕರಣ ಕುರಿತ ಇಂಥ ಬಸವಣ್ಣನವರ ವಚನಗಳು ಸಮಾಜ ಸುಧಾರಣೆಯ  ಉದ್ದೇಶಗಳನ್ನು ಹೊಂದಿದೆ. ಈ ಸುಧಾರಣೆಗಳು ವ್ಯಕ್ತಿ ಸುಧಾರಣೆಯಿಂದಲೇ ಆಗಬೇಕೆನ್ನುವುದು  ಪ್ರಸ್ತುತ ವಚನದ ಮುಖ್ಯ ಆಶಯವಾಗಿದೆ

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಐಪಿಒಗಳು ಎಷ್ಟರಮಟ್ಟಿಗೆ ಲಾಭದಾಯಕ

    ಷೇರುಪೇಟೆಗೆ ಆರಂಭಿಕ ಷೇರು ವಿತರಣೆಗಳು ಕಳಸಪ್ರಾಯಗಳಿದ್ಧಂತೆ. ಷೇರುಪೇಟೆಯಲ್ಲಿ ವಹಿವಾಟಾಗಲು ಸಾಮಾನ್ಯವಾಗಿ ಐಪಿಒ ಗಳು ಅತ್ಯವಶ್ಯಕ. ಹಾಗಾಗಿ ಹೆಚ್ಚಿನ ಕಂಪನಿಗಳು ಆರಂಭದಲ್ಲಿ ಪ್ರವೇಶವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕೆಂದು ವೈವಿಧ್ಯಮಯ ರೀತಿಯ ಅಲಂಕಾರಿಕವಾದ ಪ್ರಚಾರ ನೀಡುತ್ತವೆ. ತಾರಾಮಣಿಗಳ ಮೂಲಕವೂ ಪ್ರಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತವೆ. ಇದಕ್ಕೆ ಪೂರಕವಾಗಿ ಐಪಿಒ ಗಳಿಗೆ ನಿಗದಿ ಪಡಿಸುವ ವಿತರಣೆ ಬೆಲೆಗಳು ಸಹ ಹೆಚ್ಚಾಗಿರುವುದರಿಂದ ಮಾರ್ಕೆಟಿಂಗ್‌ ತಂತ್ರವಾಗಿಯೂ ಪ್ರಚಾರ ನೀಡಬೇಕಾಗುತ್ತದೆ.

    ಪೇಟೆಯ ಸೂಚ್ಯಂಕಗಳು ಗರಿಷ್ಠಮಟ್ಟದಲ್ಲಿದ್ದಾಗ ಕಾರ್ಪೊರೇಟ್‌ ವಲಯದಲ್ಲಿ ಉತ್ಸಾಹ ತಾಂಡವವಾಡುತ್ತದೆ. ಈ ಉತ್ಸಾಹ ಆಂತರಿಕ ಸಾಧನೆಯಿಂದ ಆಗಿರದೆ ಅದು ಯಾವ ರೀತಿ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ವಿಜೃಂಭಿಸಿದ ಐಪಿಓ ಗಳು ದೀರ್ಘಕಾಲ ಅದೇ ಸಾಧನೆ ಮಾಡದೆ ಹೂಡಿಕೆದಾರರಿಗೆ ನಿರಾಶೆ ಮಾಡುತ್ತಿವೆ.

    ಸೆನ್ಸೆಕ್ಸ್‌ ಏರಿಕೆ- ಸಂಪನ್ಮೂಲ ಸಂಗ್ರಹಣೆ ಪೂರಕ

    ಈಗ ಸೆನ್ಸೆಕ್ಸ್‌ ಆದಿಯಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿವೆ. ಈ ಸಂದರ್ಭದಲ್ಲಿ ಅನೇಕ ಕಂಪನಿಗಳು ನಾನ್‌ ಕನ್ವರ್ಟಬಲ್‌ ಬಾಂಡ್‌ ಗಳ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ. ಅವುಗಳಲ್ಲಿ ಸಾರ್ವಜನಿಕ ವಲಯದ ಕಂಪನಿಗಳೂ ಕೂಡ ಸ್ಪರ್ಧಾತ್ಮಕ ರೀತಿಯಲ್ಲಿ ಸಾಗಿವೆ.

    ಪವರ್‌ ಫೈನಾನ್ಸ್‌ ಕಾರ್ಪೊರೇಷನ್ ಇತ್ತೀಚೆಗೆ ರೂ.1,000 ಮುಖಬೆಲೆಯ ಎನ್‌ ಸಿ ಡಿಗಳನ್ನು ಶೇ.7.15 ರ ಗರಿಷ್ಠ ಕೂಪನ್‌ ದರದಲ್ಲಿ ವಿತರಿಸಿದರೆ, ಎನ್‌ ಟಿ ಪಿ ಸಿ ಕಂಪನಿಯು ಶೇ.6.43 ರಂತೆ, ಎಸ್‌ ಜೆ ವಿ ಎನ್‌ ಎಲ್‌ ಕಂಪನಿ ರೂ.2,000 ಕೋಟಿ ಮೌಲ್ಯದ ಬಾಂಡ್‌ ಗಳನ್ನು ವಿತರಿಸಲು ಮುಂದಾಗಿವೆ. ಈ ಮಧ್ಯೆ ಹಿಂದಿನ ವರ್ಷ ಹೆಚ್ಚಿನ ಆಪತ್ತಿನಲ್ಲಿದ್ದು, ರೂ.8,000 ಕ್ಕೂ ಹೆಚ್ಚಿನ ಮೌಲ್ಯದ ಬಾಂಡ್‌ ಗಳನ್ನು ರೈಟಾಫ್ ಮಾಡಿದ, ಶೇಕಡ 75% ಷೇರುಗಳನ್ನು ಮೂರು ವರ್ಷಗಳವರೆಗೂ ಸ್ಥಗಿತಗೊಳಿಸಿದ ಯೆಸ್‌ ಬ್ಯಾಂಕ್‌ ತನ್ನ ಡಿಸೆಂಬರ್‌ ಫಲಿತಾಂಶ ಪ್ರಕಟಿಸಿದ ತಕ್ಷಣವೇ ರೂ.10,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆಯ ಗುರಿಹೊಂದಿದೆ. ಇದು ಹಿಂದಿನ ವರ್ಷದ ಜುಲೈ ನಲ್ಲಿ ರೂ.15,000 ಕೋಟೆ ಮೌಲ್ಯದ ಹಕ್ಕಿನ ಷೇರು ವಿತರಿಸಿತ್ತು. ಎಲ್‌ ‍& ಟಿ ಫೈನಾನ್ಸ್‌ ಹೋಲ್ಡಿಂಗ್ಸ್‌, ಊರ್ಜಾ ಗ್ಲೋಬಲ್‌ ಕಂಪನಿಗಳು ಸಹ ಹಕ್ಕಿನ ಷೇರಿನ ಮೂಲಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಯೋಜಿಸಿವೆ.

    ಕಂಪನಿಗಳು ವಿತರಿಸುವ ಪರ್ಪೆಚುಯಲ್‌ ಬಾಂಡ್‌ ಗಳಿಗೆ ಹೆಚ್ಚಿನ ಕೂಪನ್‌ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೆ ಈ ಬಾಂಡ್‌ ಗಳ ಮುಖಬೆಲೆ ರೂ.10 ಲಕ್ಷವಾಗಿರುತ್ತದೆ. ಸೆಕ್ಯೂರ್ಡ್‌ ಎಂಬ ನಾಮಾಂಕಿತದಲ್ಲಿ ವಿತರಿಸಲಾಗುವ ಬಾಂಡ್‌ ಗಳೇ ಆಪತ್ತಿಗೆ ತಳ್ಳುವಾಗ, ಅಪಾಯದ ಹೂಡಿಕೆ ಎಂದು ಮೊದಲೇ ತಿಳಿದಿರುವ ಈ ಪರ್ಪೆಚುಯಲ್‌ ಬಾಂಡ್ ಗಳಲ್ಲಿ ಸಾಮಾನ್ಯರೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವುದು ಅಗತ್ಯ. ಇದರ ಜೊತೆಗೆ ವಿತರಿಸಿದ ಬಾಂಡ್‌ ಗಳು ಸ್ಟಾಕ್‌ ಎಕ್ಸ್‌ ಚೇಂಜ್‌ ಫ್ಲೋರ್‌ ನಲ್ಲಿ ವಹಿವಾಟಿಗೆ ನೋಂದಾಯಿಸುವುದು ಕಡ್ಡಾಯ ಮಾಡಬೇಕು. ಈಗಿನಂತೆ ಕೇವಲ ಮ್ಯೂಚುಯಲ್‌ ಫಂಡ್‌ ಗಳು ವಿತ್ತೀಯ ಸಂಸ್ಥೆಗಳು ಮಾತ್ರ ಹೂಡಿಕೆಗೆ ಅವಕಾಶವಿದ್ದರೂ, ಮ್ಯೂಚುಯಲ್‌ ಫಂಡ್‌ ಗಳು ವಿತ್ತೀಯ ಸಂಸ್ಥೆಗಳಲ್ಲಿ ಪರೋಕ್ಷವಾಗಿ ಸಣ್ಣ ಹೂಡಿಕೆದಾರರ ಹೂಡಿಕೆಯೂ ಇರುತ್ತದೆ ಎಂಬುದು ಗಮನಾರ್ಹ ಅಂಶ.

    ಇವುಗಳಲ್ಲದೆ ಅನೇಕ ಕಂಪನಿಗಳು ಐ ಪಿ ಒ ಮೂಲಕ ಷೇರು ವಿತರಣೆಯ ಯೋಜನೆ/ ಯೋಚನೆಗಳನ್ನು ರೂಪಿಸಿಕೊಂಡಿವೆ. ಈ ತಿಂಗಳಲ್ಲಿ ಸಾರ್ವಜನಿಕ ವಲಯದ ಕಂಪೆನಿಯಾದ ಇಂಡಿಯನ್‌ ರೇಲ್ವೆ ಫೈನಾನ್ಸ್‌ ಕಾರ್ಪೊರೇಷನ್‌, ಇಂಡಿಗೋ ಪೇಂಟ್ಸ್‌, ಹೋಂ ಫಸ್ಟ್‌ ಫೈನಾನ್ಸ್‌ ಗಳು ಐ ಪಿ ಒ ಮೂಲಕ ಷೇರು ವಿತರಣೆ ಪ್ರಕ್ರಿಯೆ ಆರಂಭಿಸಿವೆ. ಸ್ಟೋವ್‌ ಕ್ರಾಫ್ಟ್‌ ಕಂಪನಿಯ ರೂ.385 ರಂತೆ ಷೇರು ವಿತರಣೆ 25 ರಿಂದ ಆರಂಭವಾಗಲಿದೆ. ಈ ಐ ಪಿ ಒ ಗಳು ಸರಣಿ ರೂಪದಲ್ಲಿ ಅಂದರೆ ಒಂದಾದ ನಂತರ ಒಂದರಂತೆ ಆರಂಭವಾಗುವ ರೀತಿ ಯೋಜಿಸಲಾಗಿದೆ ಎಂಬುದು ಗಮನಾರ್ಹ ಅಂಶ.

    ಗ್ರೇ ಮಾರ್ಕೆಟ್‌ ಎಂಬ ಭೂತಗನ್ನಡಿ

    ಷೇರುಗಳ ಐಪಿಒ ಗಳ ವಿತರಣೆಗೆ ಮುನ್ನ ಗ್ರೇ ಮಾರ್ಕೆಟ್‌ ಎಂಬ ಭೂತಗನ್ನಡಿಯ ಪ್ರಚಾರಕ್ಕೆ ಗಮನ ನೀಡುವುದು ಒಳಿತಲ್ಲ.ಗ್ರೇ ಮಾರ್ಕೆಟ್‌ ಎಂದು ಅನಾದಿಕಾಲದಿಂದ ಕರೆಯುವ ಊಹಾ ಪೋಹಗಳ ಆಧಾರಿತ ವರದಿಗಳು ಐಪಿಓ ಪ್ರೀಮಿಯಂ ದರದಲ್ಲಿ ವಿತರಣೆಯಾಗುವ ಸುದ್ದಿ ಹಬ್ಬಿಸುತ್ತವೆ. ಇದಕ್ಕೆ ಯಾವುದೇ ಆಧಾರ ಇರುವುದಿಲ್ಲ. ನಂತರ ವಿತರಣೆಯ ಕೊನೆಯ ದಿನ ಅಥವಾ ಲಿಸ್ಟಿಂಗ್‌ ಮುಂಚಿನ ದಿನಗಳಲ್ಲಿ ಗ್ರೇ ಮಾರ್ಕೆಟ್‌ ಪ್ರೀಮೀಯಂ ಕರಗಿಹೋಗಿರುತ್ತದೆ. ಈ ಗ್ರೇ ಮಾರ್ಕೆಟ್‌ ಎಂಬುದು ಅನಧಿಕೃತವಾಗಿದ್ದು, ಕಾನೂನು ಬಾಹಿರವಾದುದಾಗಿದೆ. ಸಣ್ಣ ಹೂಡಿಕೆದಾರರನ್ನು ಐಪಿಒ ಗಳಲ್ಲಿ ಹಣ ತೊಡಗಿಸಲು ಪ್ರೇರೇಪಿಸುವ ತಂತ್ರವೂ ಆಗಿರುತ್ತದೆ.

    ಆರಂಭ ಶೂರತ್ವ

    ಅನೇಕ ಕಂಪನಿಗಳು ವಿತರಣೆಯ ನಂತರ ಲಿಸ್ಟಿಂಗ್‌ ಪ್ರೈಸ್‌ ಉತ್ತಮವಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿದ್ದರೂ ಆರಂಭದ ಗರಿಷ್ಠಮಟ್ಟವನ್ನು ಉಳಿಸಿಕೊಳ್ಳಲಾಗದೆ ಜಾರಿವೆ. ಒಂದು ರೀತಿಯ ಆರಂಭಿಕ ಶೂರತ್ವವನ್ನು ಪ್ರದರ್ಶಿಸುತ್ತವೆ. ಆದ್ದರಿಂದ ಹೆಚ್ಚಿನವುಗಳಲ್ಲಿ ಆರಂಭಿಕ ಹಂತದಲ್ಲೇ ಮಾರಾಟಮಾಡುವುದಕ್ಕೆ ಪ್ರೇರೇಪಿಸುತ್ತವೆ. ಇದು ಐ ಪಿ ಒ ಗಳು ಕೇವಲ ವ್ಯವಹಾರಿಕ ಪ್ರಕ್ರಿಯೆ ಎಂದು ಸಾಬೀತುಪಡಿಸಿವೆ.

    ಇತ್ತೀಚಿನ ಕೆಲ ಐ ಪಿ ಒ ಗಳ ಉದಾಹರಣೆ ಹೀಗಿವೆ:

    ಎಸ್‌ ಬಿ ಐ ಕಾರ್ಡ್ಸ್‌: ಎಸ್‌ ಬಿ ಐ ಕಾರ್ಡ್ಸ್‌ ಮಾರ್ಚ್‌ 2020 ರಲ್ಲಿ ರೂ.755 ರಲ್ಲಿ ವಿತರಣೆಯಾದ ನಂತರ ರೂ. 500 ರೊಳಗೆ ಕುಸಿದು ನಂತರ ಪುಟಿದೆದ್ದಿದೆ. ಈ ಕುಸಿತಕ್ಕೆ ಪೇಟೆಗಳು ಲಾಕ್‌ ಡೌನ್‌, ಕೊರೋನ ಕಾರಣದ ಸೀಮಿತ ಚಟುವಟಿಕೆಗಳೂ ಕಾರಣವಿರಬಹುದಾದರೂ, ಹೂಡಿಕೆದಾರರಿಗೆ ಲಾಭದಾಯಕವೇ ಎಂಬುದು ಮುಖ್ಯ.

    ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌:ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಸೆಪ್ಟೆಂಬರ್‌ 2020 ರಲ್ಲಿ ರೂ.166 ರಲ್ಲಿ ವಿತರಿಸಿದ್ದು ರೂ.350 ರ ಸಮೀಪದಲ್ಲಿ ಲಿಸ್ಟಿಂಗ್‌ ಆದ ನಂತರ ನವೆಂಬರ್‌ ನಲ್ಲಿ ರೂ.286 ರವರೆಗೂ ಕುಸಿಯಿತು. ನಂತರ ಜನವರಿಯಲ್ಲಿ ರೂ.395 ಕ್ಕೆ ಜಿಗಿಯಿತು. ಸಧ್ಯ ರೂ.370 ರ ಸಮೀಪವಿದೆ.

    ಕೆಂಕಾನ್‌ ಸೆಷಾಲಿಟಿ ಕೆಮಿಕಲ್ಸ್‌:ಕೆಂಕಾನ್‌ ಸೆಷಾಲಿಟಿ ಕೆಮಿಕಲ್ಸ್‌ ಕಂಪನಿ ಸೆಪ್ಟೆಂಬರ್‌ 2020 ರಲ್ಲಿ ರೂ.340 ರಂತೆ ವಿತರಿಸಿದ್ದು, ರೂ.730 ರ ಸಮೀಪದಿಂದ ಆರಂಭವಾಗಿ ರೂ.743 ತಲುಪಿ ಅಕ್ಟೋಬರ್‌ ನಲ್ಲಿ ರೂ.398 ರವರೆಗೂ ಕುಸಿದು ನಂತರ ರೂ.440 ರ ಸಮೀಪಕ್ಕೆ ಹಿಂದಿರುಗಿಸಿದರೂ ಗರಿಷ್ಠದ ಬೆಲೆ ತಲುಪದಾಗಿದೆ.

    ಬರ್ಜರ್‌ ಕಿಂಗ್‌:ಬರ್ಜರ್‌ ಕಿಂಗ್‌ ಡಿಸೆಂಬರ್‌ ನಲ್ಲಿ ರೂ.60 ರಂತೆ ವಿತರಣೆಯಾದ ನಂತರ ರೂ.115 ರಂತೆ ಲೀಸ್ಟಿಂಗ್‌ ಆಗಿ ರೂ.219 ರವರೆಗೂ ಜಿಗಿದು ಮೂರೇ ದಿನಗಳಲ್ಲಿ ರೂ.108 ರವರೆಗೂ ಕುಸಿಯಿತು.

    ಆಂಟೋಣಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸೆಲ್:ಕಳೆದ ಮಾರ್ಚ್‌ ತಿಂಗಳಲ್ಲಿ ಪ್ರತಿ ರೂ. 5 ರ ಮುಖಬೆಲೆಯ ಷೇರಿಗೆ ರೂ.300 ರಂತೆ ಐಪಿಒ ಮೂಲಕ ಷೇರು ವಿತರಿಸಲು ಪ್ರಯತ್ನಿಸಿ ವಿಫಲವಾದ ಈ ಕಂಪನಿ ಡಿಸೆಂಬರ್‌ ತಿಂಗಳಲ್ಲಿ ಪ್ರತಿಷೇರಿಗೆ ರೂ.315 ರಂತೆ ಷೇರು ವಿತರಿಸಲು ಜಯಶಾಲಿಯಾಗಿದೆ. ಇದು ಕಂಪನಿಗಳ ಧನದಾಹಿಗುಣವನ್ನು ಬಿಂಬಿಸುತ್ತದೆ. ಆರಂಭದಲ್ಲಿ ರೂ.436 ರಲ್ಲಿದ್ದು ನಂತರ ರೂ.492 ವರೆಗೂ ಜಿಗಿತ ಕಂಡು ಕೇವಲ 10/12 ದಿನಗಳಲ್ಲಿ ರೂ.296 ರವರೆಗೂ ಕುಸಿದು ಸಧ್ಯ ರೂ.302 ರ ಸಮೀಪವಿದೆ.

    ಹೂಡಿಕೆದಾರರ ಬಂಡವಾಳ ಕರಗಿಸಿದ ಐಪಿಒ ಗಳು

    ವಾಟೆಕ್‌ ವಾಬಾಗ್‌ ಕಂಪನಿ 2011 ರಲ್ಲಿ ರೂ.1,310 ರಂತೆ ವಿತರಿಸಿದ ನಂತರ 2015 ರಲ್ಲಿ 1:1 ರ ಬೋನಸ್‌ ನೀಡಿತು. ಈಗ ರೂ.194 ರ ಸಮೀಪವಿದೆ.
    ಇರೋಸ್‌ ಮೀಡಿಯಾ ಕಂಪನಿ ರೂ.175 ರಂತೆ ವಿತರಿಸಿದ್ದು ಈಗ ರೂ.22 ರ ಸಮೀಪವಿದೆ.
    ರಾಂಕಿ ಇನ್ಫ್ರಾಸ್ಟ್ರಕ್ಚರ್‌ ರೂ.450 ರಂತೆ ವಿತರಿಸಿದ್ದು ಈಗ ರೂ.46 ರ ಸಮೀಪವಿದೆ.
    ಬ್ರೂಕ್ಸ್‌ ಲ್ಯಾಬೊರೇಟರೀಸ್‌ ಕಂಪನಿ 2011 ರಲ್ಲಿ ಪ್ರತಿ ಷೇರಿಗೆ ರೂ.100 ರಂತೆ ವಿತರಿಸಿತು, ಆದರೆ ಷೇರಿನ ಬೆಲೆ ವಿತರಣೆಬೆಲೆಯಿಂದ ದೂರವಿದ್ದು ಸಧ್ಯ ರೂ.61 ರ ಸಮೀಪವಿದೆ. ಈ ವರ್ಷದ ಕನಿಷ್ಠ ಬೆಲೆ ರೂ.14.05 ಆಗಿದೆ.
    ಪ್ರಕಾಶ್‌ ಸ್ಟೀಲ್‌ ಏಜ್‌ : ರೂ.110 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.0.95 ರಲ್ಲಿದೆ
    ತಿಜಾರಿಯಾ ಪೊಲಿಪೈಪ್ಸ್: 2011‌ ರಲ್ಲಿ ರೂ.60 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.8 ರ ಸಮೀಪವಿದೆ.

    ಟಿಡಿ ಪವರ್‌ ಸಿಸ್ಟಂ, ಬಜಾಜ್‌ ಕಾರ್ಪ್‌ ( ಈಗಿನ ಬಜಾಜ್‌ ಕನ್ಸೂಮರ್ಸ್)‌, ನಿತೇಶ್‌ ಎಸ್ಟೇಟ್ಸ್‌ ( ಎನ್‌ ಇ ಎಲ್‌ ಹೋಲ್ಡಿಂಗ್ಸ್), ‌ ಸ್ಟರ್ಲಿಂಗ್‌ ಅಂಡ್‌ ವಿಲ್ಸನ್‌ ಸೋಲಾರ್‌, ಚಲೆಟ್‌ ಹೋಟೆಲ್ಸ್‌, ವರೋಕ್‌ ಇಂಜಿನಿಯರಿಂಗ್‌, ಲೆಮನ್‌ ಟ್ರೀ ಹೊಟೆಲ್ಸ್‌, ಹೆಚ್‌ ಎ ಎಲ್‌, ನ್ಯೂ ಇಂಡಿಯಾ ಅಶುರನ್ಸ್‌ ಕಂ, ಜನರಲ್‌ ಇನ್ಶೂರನ್ಸ್‌ ಕಾರ್ಪೊರೇಷನ್‌, ಹುಡ್ಕೋ, ಬಿ ಎಸ್‌ ಇ, ಮ್ಯೂಸಿಕ್‌ ಬ್ರಾಡ್ ಕ್ಯಾಸ್ಟ್‌, ಮುಂತಾದ ಕಂಪನಿಗಳು ಈ ಪಟ್ಟಿಯಲ್ಲಿವೆ.

    ಆಂಕರ್‌ ಇನ್ವೆಸ್ಟರ್ಸ್:ಕಂಪನಿಗಳು ತಮ್ಮ ಐಪಿಒ ಗಿಂತ ಮುಂಚಿತವಾಗಿ, ಹೂಡಿಕೆದಾರರಲ್ಲಿ, ವಿಶೇಷವಾಗಿ ಸಣ್ಣ ಹೂಡಿಕೆದಾರರಲ್ಲಿ ಕಂಪನಿಯ, ವಿತರಿಸುತ್ತಿರುವ ದರದ ಬಗ್ಗೆ ನಂಬಿಕೆ ಮೂಡಿಸಲು 2009 ರಲ್ಲಿ ಆಂಕರ್‌ ಇನ್ವೆಸ್ಟರ್‌ ಯೋಜನೆ ಜಾರಿಗೊಳಿಸಲಾಯಿತು. ಇದರಂತೆ ಶೇ.30 ರಷ್ಠು ವಿತರಣೆಯನ್ನು ಹಿತಾಸಕ್ತರ ಹೊರತಾದವರಿಗೆ, ಕನಿಷ್ಠ ರೂ.5 ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ಹಿಂದಿನದಿನ ವಿತರಿಸಬಹುದಾಗಿದೆ. ಈ ರೀತಿ ವಿತರಿಸಿದ ಷೇರುಗಳು 30 ದಿನಗಳ ಲಾಕ್‌ ಇನ್‌ ಇದ್ದು, 30 ದಿನಗಳ ನಂತರ ಆಂಕರ್‌ ಇನ್ವೆಸ್ಟರ್‌ ಗಳು ಈ ಷೇರುಗಳನ್ನು ಮಾರಾಟಮಾಡಬಹುದಾಗಿದೆ.

    ವಿಸ್ಮಯಕಾರಿ ಅಂಶ:ಸೆನ್ಸೆಕ್ಸ್‌ 50 ಸಾವಿರದ ಗಡಿದಾಟಿ ದಾಖಲೆ ನಿರ್ಮಿಸಿದೆ. ಆದರೆ ಅದರ ಮಾತೃ ಸಂಸ್ಥೆ ಬಿ ಎಸ್‌ ಇ ಷೇರಿನ ಬೆಲೆ ಮಾತ್ರ ವಿತರಣೆ ಬೆಲೆಗಿಂತ ಕಡಿಮೆಯಿದೆ. 2017 ರಲ್ಲಿ ಪ್ರತಿ ಷೇರಿಗೆ ರೂ.806 ರಂತೆ ವಿತರಿಸಿದ ಈ ಷೇರಿನ ಬೆಲೆ ರೂ.601 ರ ಸಮೀಪವಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಐಪಿಒ ಎಂದರೆ ಕೇವಲ ಇರಿಟೆಟಿಂಗ್‌ ಪಬ್ಲಿಕ್‌ ಆಫರ್‌ ಆಗಿದೆಯೇ ಎಂಬ ಭಾವನೆ ಸಾಮಾನ್ಯ ಹೂಡಿಕೆದಾರರಲ್ಲಿ ಬರುವಂತಾಗಿದೆ. ವಿತರಣೆಯಲ್ಲಿ ಹೆಚ್ಚು ಸಂಗ್ರಹಣೆಯಾದಲ್ಲಿ ಅಲಾಟ್ಮೆಂಟ್‌ ದೊರೆಯದು, ಕಡಿಮೆಯಾದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸದು. ಆದ್ದರಿಂದ ಉತ್ತಮ ಮಾರ್ಗ ಎಂದರೆ ಲಿಸ್ಟಿಂಗ್‌ ಆದ ನಂತರ ಪೇಟೆಯ ಚಟುವಟಿಕೆ, ಕಂಪನಿಯ ಗುಣಮಟ್ಟ ಆಧರಿಸಿ ಖರೀದಿ ನಡೆಸುವುದಾಗಿದೆ.

    Photo by Alec Favale on Unsplash

    ಅಮೆರಿಕದ ಸಿಟಿಜೆನ್ ಷಿಪ್ ಆಕ್ಟ್ 2021;ಭಾರತೀಯರಿಗೆ ಆಗುವ ಲಾಭ ಏನು

    ಅಮೆರಿಕಾದಲ್ಲಿ ನೆಲಸಿರುವ ಭಾರತೀಯರಿಗೆ ಜೋ ಬೈಡನ್ ಉಡುಗೊರೆ. ಅಮೆರಿಕಾದ ಗ್ರೀನ್ ಕಾರ್ಡ್ ಹೊಂದುವುದು ಇನ್ನು ಮುಂದೆ ಮತ್ತಷ್ಟು ಸುಲಭ. ಬೈಡನ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಮಹತ್ವಾಕಾಂಕ್ಷೆಯ ಹೊಸ ವಲಸೆ ಸುಧಾರಣಾ ನೀತಿಗೆ ಸಹಿ ಹಾಕಿ ಅದನ್ನು ಕಾಂಗ್ರೆಸ್ ಗೆ ರವಾನಿಸಿದ್ದಾರೆ.  ಅದು ಜಾರಿಯಾದರೆ  ಕಳೆದ ಎಂಟು ವರ್ಷಗಳಿಂದ ಚಾತಕ ಪಕ್ಷಿಯಂತೆ  ‘ಗ್ರೀನ್ ಕಾರ್ಡ್’ ಹೊಂದಲು ಕಾಯುತ್ತಿರುವ  ಸುಮಾರು  ಐದು  ಲಕ್ಷ ಭಾರತೀಯರಿಗೆ  ಅಮೆರಿಕಾದ ಪೌರತ್ವ ಸಿಗಲಿದೆ. 
     
    ‘US  ಸಿಟಿಜೆನ್ ಷಿಪ್ ಆಕ್ಟ್ 2021’ನಿಂದ ಆಗುವ ಉಪಯೋಗಗಳೇನು   

    ಈ ಹೊಸ ಕಾಯಿದೆ   US  ಸಿಟಿಜೆನ್ ಷಿಪ್ ಆಕ್ಟ್ 2021 ಅಮೆರಿಕಾದ ಸಂಸತ್ ಆದ ಕಾಂಗ್ರೆಸ್ ನಲ್ಲಿ  ಅಂಗೀಕರಿಸಿದ ನಂತರ,  ವಲಸೆ ವ್ಯವಸ್ಥೆಯನ್ನು ಆಧುನಿಕರಿಸುವ ಜೊತೆಗೆ  ಹಳೆಯ ಹಲವಾರು ಉಪಯೋಗವಲ್ಲದ ನಿಯಮಗಳನ್ನು ನಿಲ್ಲಿಸಿ, H1B ವೀಸಾ ನಿಯಮಗಳನ್ನು ಸರಳೀಕರಣಗೊಳಿಸುತ್ತದೆ. ಇದರಿಂದ   ಈಗಾಗಲೇ ಅಮೆರಿಕಾದಲ್ಲಿ H1B ವೀಸಾ ಹೊಂದಿರುವವರಿಗೆ  ಗ್ರೀನ್ ಕಾರ್ಡ್ ಹೊಂದಲು ಇನ್ನು ಮುಂದೆ ವರ್ಷಾನುಗಟ್ಟಲೆ ಕಾಯುವುದು ತಪ್ಪುತ್ತದೆ. ಜೊತೆಗೆ  H1B ವೀಸಾ ಹೊಂದಿರುವವರ ಅವಲಂಬಿತರು  ( ಗಂಡ, ಹೆಂಡತಿ, ಮಕ್ಕಳು, ಪೋಷಕರಿಗೆ)  H-4 ವೀಸಾ ಶೀಘ್ರವಾಗಿ ಸಿಗುತ್ತದೆ.  

    1. ಈ ಮೊದಲು ಗ್ರೀನ್ ಕಾರ್ಡ್ ಹೊಂದಲು ಹಲವಾರು ವರ್ಷಗಳು ಕಾಯಬೇಕಿತ್ತು ಹಾಗು ನಿರ್ದಿಷ್ಟ ವೇತನ ಶ್ರೇಣಿಯವರಿಗೆ ಆದ್ಯತೆ ಮೇಲೆ ಬೇಗ ಗ್ರೀನ್ ಕಾರ್ಡ್ ದೊರೆಯುತ್ತಿತ್ತು.  ಇನ್ನು ಮುಂದೆ ಎಲ್ಲಾ ವೇತನ ಶ್ರೇಣಿಯವರಿಗೂ ಗ್ರೀನ್ ಕಾರ್ಡ್ ಬೇಗ ದೊರೆಯುವಂತೆ ಸರಳೀಕರಣ ಗೊಳಿಸಲಾಗಿದೆ. 
    2. ಅಮೆರಿಕಾದಲ್ಲಿ H1B ವೀಸಾ ಪಡೆದು ಉದ್ಯೋಗ ಮಾಡುತ್ತಿದ್ದವರ ಅವಲಂಬಿತರು ಅಮೆರಿಕಾದಲ್ಲಿ ಉದ್ಯೋಗ ಮಾಡಲು ಅಡೆ ತಡೆ ಇದ್ದ ಹಲವಾರು ಅಂಶಗಳನ್ನು ಕೈ ಬಿಡಲಾಗಿದೆ. ಇದರಿಂದ ಅಮೆರಿಕಾದಲ್ಲಿರುವ ಹೆಚ್ಚಿನ ಅವಲಂಬಿತ  ಭಾರತೀಯರು ಕೌಶಲ್ಯಾಧಾರಿತ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತದೆ. 
      3.  ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಹೋಗಿ ‘ಸ್ಟೆಮ್ ಡಿಗ್ರಿಗಳನ್ನು’   ಪಡೆದ ಭಾರತೀಯ ವಿದ್ಯಾರ್ಥಿಗಳಿಗೆ   ಇನ್ನು ಮುಂದೆ ಸುಲಭವಾಗಿ ಅಮೆರಿಕಾದ ಪೌರತ್ವ ಪಡೆಯಲು, ಅಮೆರಿಕಾದಲ್ಲಿ ಉದ್ಯೋಗ ಮಾಡಲು  ಅನುಕೂಲವಾಗಲಿದೆ. 
    3. ಅಮೆರಿಕಾದ ಯಾವ ರಾಜ್ಯದಲ್ಲಿ ಬೇಕಾದರೂ ಎಷ್ಟು ವರ್ಷಗಳು ಬೇಕಾದರೂ ನೆಲೆಸಲು ಸಹಾಯವಾಗುತ್ತದೆ. ಹಾಗು ಅಮೆರಿಕಾ ದಿಂದ ಹೊರ ಹೋಗಲು ಮತ್ತೆ ಬರಲು ಯಾವುದೇ ಅಡೆತಡೆ ಇರುವುದಿಲ್ಲ. 
    4. ಅಮೆರಿಕಾದ ಪೌರತ್ವ ಹೊಂದಲು   ಗ್ರೀನ್ ಕಾರ್ಡ್  ಸಹಾಯಮಾಡಲಿದೆ.  ಇದು ವರ್ಷ ಅಮೆರಿಕಾದಲ್ಲಿ ನೆಲಸಿದ ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಪೌರತ್ವ ಪಡೆಯಲು ಅರ್ಹರಾಗುತ್ತಾರೆ.   ಜೊತೆಗೆ ಅಮೆರಿಕಾದ ಫೆಡರಲ್ ಸೌಲಭ್ಯಗಳು ಸಿಗಲಿವೆ. ಜೊತೆಗೆ ಅಮೆರಿಕಾದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕನ್ನು ಪಡೆದುಕೊಳ್ಳುತ್ತಾರೆ.  
    5. ಗ್ರೀನ್ ಕಾರ್ಡ್ ಹೊಂದಿರುವವರು ತಮ್ಮದೇ ಆದ ಉದ್ಯೋಗ ಸೃಷ್ಟಿಸಿಕೊಳ್ಳಲು, ವ್ಯಾಪಾರ ವಹಿವಾಟು ಮಾಡಲು ಅನುಕೂಲವಾಗಲಿದೆ.  ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಲು ಸಹಾಯಕವಾಗಲಿದೆ.
    6. ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಯೂನಿವರ್ಸಿಟಿ ಯಲ್ಲಿ ಓದಲು ಸುಮಾರು 80% ಟ್ಯೂಷನ್ ಫಿ ಕಮ್ಮಿ ಆಗಲಿದೆ.  ಹಾಗು ಅಮೆರಿಕಾ ಫೆಡರಲ್  ಸ್ಟೂಡೆಂಟ್ ಲೋನ್ ತೆಗೆದುಕೊಳ್ಳಲು ಅರ್ಹರಾಗುತ್ತಾರೆ. 

    H1B ,L1 ವೀಸಾ  ಎಂದರೇನು?

    H1B: ಹದಿನಾರು ವರ್ಷದ ವಿದ್ಯಾಭ್ಯಾಸ  (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ  ಕಾರ್ಮಿಕನಿಗೆ/ತಂತ್ರಜ್ಞರಿಗೆ  (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ.  ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು. 

    L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ,  ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ  ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ  ಅಮೆರಿಕಾದಲ್ಲಿ ಇರುವ ಕಂಪನಿಗೆ  ಕೌಶಲ್ಯ ತುಂಬಿದ ನುರಿತ  ಕೆಲಸ ಮಾಡಲು ಕಳುಹಿಸುವುದು. 

    ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000  H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ.  ಇದರ ಜೊತೆ L1  ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ.   ಅದರಲ್ಲಿ ಭಾರತದ  IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್   ಪಾಲೇ ಹೆಚ್ಚು. ಅದರೊಟ್ಟಿಗೆ  ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ. 

    ಪಿಯು ಸೇವೆಗಳು ಸಕಾಲ ವ್ಯಾಪ್ತಿಗೆ: ಸುರೇಶ್ ಕುಮಾರ್ ಇಂಗಿತ

    ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಆಡಳಿತ ಚುರುಕುಗೊಳಿಸಲು ಉಪನ್ಯಾಸಕರ ಸೇವಾ ವಿಷಯಗಳನ್ನು ಸಕಾಲ ಯೋಜನೆ ವ್ಯಾಪ್ತಿಗೆ ತರಲು ಆಲೋಚಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಮಗ್ರ ಶಿಕ್ಷಣ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಿಯು ಇಲಾಖೆಯಲ್ಲಿ ಸೇವಾ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಸಂಘಟನೆಗಳು ಸಚಿವರ ಗಮನಕ್ಕೆ ತಂದೆ ಹಿನ್ನೆಲೆಯಲ್ಲಿ ಇಲಾಖೆಯ ಸೇವೆಗಳು  ಕ್ಷಿಪ್ರಗತಿಯಲ್ಲಿ ದೊರೆಯುವಂತಾಗಲು ಇಲಾಖೆಯ ಸೇವೆಗಳನ್ನು  ಸಕಾಲ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.

    ಪಿಯು ಉಪನ್ಯಾಸಕರ ವಿವಿಧ ಬೇಡಿಕೆಗಳ ಕುರಿತು ಮಾತನಾಡಿದ ಸಚಿವರು, ಪದವಿ ಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆಗೆ ಈಗಾಗಲೇ ಇರುವ ಕಾಯ್ದೆಯಡಿ ನಿಯಮ ರೂಪಿಸುವ ಕೆಲಸ ಪ್ರಗತಿಯಲ್ಲಿದ್ದು, ನಿಯಮಗಳನ್ನು ರೂಪಿಸಿದ ನಂತರ ವರ್ಗಾವಣೆ ಕೈಗೆತ್ತಿಕೊಳ್ಳಲಾಗುವುದು ಎಂದರು.

    ಸೇವಾ ವಿಷಯಗಳಲ್ಲಿನ ವಿಳಂಬ ನಿರ್ವಹಣೆಗೆ ಕಡತ ವಿಲೇವಾರಿಗೆ ಇ-ಕಚೇರಿ ಬಳಕೆ ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡಿ ವಿಳಂಬವಿಲ್ಲದೇ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕಡತಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಿಯು ನಿರ್ದೇಶಕರಿಗೆ ಸೂಚಿಸಿದರು.

    ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚೆ:

    2007 ರಿಂದೀಚೆಗೆ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಬಿ.ಇಡಿ., ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಹಾಲಿ ಸೇವೆಯಲ್ಲಿರುವ ಉಪನ್ಯಾಸಕರು ಬಿ.ಇಡಿ., ಪಡೆಯಬೇಕಿದ್ದು, ಅದರಲ್ಲಿ 2357 ಮಂದಿ ಅನುದಾನಿತ ಕಾಲೇಜುಗಳ ಉಪನ್ಯಾಸಕರು  ಬಿ.ಇಡಿ., ಪಡೆಯುವುದು ಬಾಕಿಯಿರುವ ಹಿನ್ನೆಲೆಯಲ್ಲಿ ಈ ಎಲ್ಲ ಉಪನ್ಯಾಸಕರು ಏಕ ಕಾಲದಲ್ಲಿ ಬಿ.ಇಡಿ., ಪಡೆಯಲು ಅನುವಾಗುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಒಂದು ಬಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚಿಸಿದ್ದೇನೆ  ಮತ್ತು ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಆಶ್ವತ್ಥ್ ನಾರಾಯಣ್ ಅವರೊಂದಿಗೆ ಈ ಸಂಬಂಧದಲ್ಲಿ ಚರ್ಚಿಸಲಾಗುವುದು ಎಂದರು. 

    ಕುಮಾರನಾಯ್ಕ ಸಮಿತಿ ಶಿಫಾರಸ್ಸಿನಂತೆ ಉನ್ನತ ಪದವಿ ಹೊಂದಿದ ಉಪನ್ಯಾಸಕರಿಗೆ ಬಡ್ತಿ ಸೇರಿದಂತೆ ವೇತನ ಬಡ್ತಿ ನೀಡಿಕೆ ಕುರಿತು ನಿರ್ಧಾರ ಕೈಗೊಳ್ಳಲು ಅಧಿಕಾರಿಗಳಿಗೆ ಕಡತ ಮಂಡಿಸುವಂತೆ ಸೂಚನೆ ನೀಡಿದ ಸಚಿವರು, ಪದವಿ ಕಾಲೇಜುಗಳಿಗೆ ಬಡ್ತಿ ನೀಡುವ ಕುರಿತಂತೆ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಲಾಗುವುದು. ಈ ಕುರಿತಂತೆ ಒಂದು ವಿವರವಾದ ಪ್ರಸ್ತಾವನೆ ಸಲ್ಲಿಸಬೇಕೆಂದು ಪಿಯು ನಿರ್ದೇಶಕರಿಗೆ ಸೂಚನೆ ನೀಡಬೇಕೆಂದು ಸಚಿವರು ಸೂಚನೆ ನೀಡಿದರು.

    ಬಿ.ಇಡಿ. ವಿನಾಯ್ತಿ:

    ವೃತ್ತಿಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಪಿಯು ಉಪನ್ಯಾಸಕರು ಈಗಾಗಲೇ ನಿವೃತ್ತಿಗೆ ಸಮೀಪದಲ್ಲಿರುವುದು ಮತ್ತು ಅವರ ಅತಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅವರುಗಳಿಗೆ ಬಿ.ಇಡಿ.ಪದವಿ ಪಡೆಯುವುದರಿಂದ  ವಿನಾಯ್ತಿ ನೀಡಲು ಮತ್ತು ಕಾಯಂ ಪೂರ್ವ ಸೇವಾ ಅವಧಿ ಘೋಷಣೆ ಮಾಡಲು ಇಲಾಖೆಯಲ್ಲಿ ಅನುಕೂಲಕರವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೇವಲ ಏಳು ವರ್ಷಕ್ಕಿಂತ ಕಡಿಮೆ ಸೇವೆ ಇರುವ ಜೆಒಸಿ ವಿಲೀನ ಉಪನ್ಯಾಸಕರಿಗೆ ಬಿ.ಇಡಿ., ವಿನಾಯ್ತಿ ನೀಡಲು ಪರಿಶೀಲಿಸಲಾಗುವುದು ಎಂದೂ ಸಚಿವರು ತಿಳಿಸಿದರು.

    ಪ್ರಾಚಾರ್ಯರ ನೇರ ನೇಮಕ, ಉಪನ್ಯಾಸಕರಿಂದ ಪ್ರಾಚಾರ್ಯರ ಸ್ಥಾನಕ್ಕೆ ಮತ್ತು ಪ್ರಾಚಾರ್ಯರಿಂದ ಉಪನಿರ್ದೇಶಕರ ಸ್ಥಾನಕ್ಕೆ ಬಡ್ತಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಬೇಡಿಕೆಗಳನ್ನು ಸಂಘಟನೆಯ ಪದಾಧಿಕಾರಿಗಳು ಗಮನಕ್ಕೆ ತಂದಿದ್ದು, ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸಬೇಕೆಂದು  ಸುರೇಶ್ ಕುಮಾರ್ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

    ಮೌಲ್ಯಮಾಪನ ಸಹಕಾರಕ್ಕೆ ಮನವಿ:

    ಕೋವಿಡ್ ಸಾಂಕ್ರಾಮಿಕ ರೋಗದ ಪ್ರಸರಣದ ಹಿನ್ನೆಲೆಯಲ್ಲಿ ಈಗಾಗಲೇ ಪದವಿ ಪೂರ್ವ ಕಾಲೇಜುಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಯತ್ತ ಮುಖ ಮಾಡಿದ್ದು ಅಧ್ಯಯನದಲ್ಲಿ ತೊಡಗಿದ್ದಾರೆ. ನಿಗದಿತ ಅವಧಿಯಲ್ಲಿ ಪರೀಕ್ಷೆ ಆರಂಭವಾಗಲಿದ್ದು, ಈ ವಿಷಮ ಕಾಲಘಟ್ಟದಲ್ಲಿ ಉಪನ್ಯಾಸಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವಿಷಯದಲ್ಲಿ ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಿದರು. ಇಂತಹ ಕಾಲಘಟ್ಟದಲ್ಲಿ ನಾವು ನಮ್ಮ ಮಕ್ಕಳಲ್ಲಿ ವಿಶ್ವಾಸ ಮೂಡಿಸಬೇಕಾಗಿರುವುದರಿಂದ ಮೌಲ್ಯಮಾಪನ ಬಹಿಷ್ಕಾರ ಸೇರಿದಂತೆ ಯಾವುದೇ ಪ್ರತಿಭಟನೆಗಳಿಗೆ ಮುಂದಾಗಬಾರದೆಂದೂ ಸಚಿವರು ಮನವಿ ಮಾಡಿದರು.

    ಸಭೆಯಲ್ಲಿ ಪಿಯು ನಿರ್ದೇಶಕಿ ಸ್ನೇಹಲ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಸಂಘಟನೆಯ ಎಸ್.ಆರ್. ವೆಂಕಟೇಶ್, ಶಿವರಾವ ಮಾಲೀಪಾಟೀಲ್, ಕೋಶಾಧ್ಯಕ್ಷರು ಮತ್ತಿತರರು ಭಾಗವಹಿಸಿದ್ದರು.

    ಮನೆಗೆ ಬರುವ ನೆಂಟರು ಇಷ್ಟರು ಈಗ ಅಪರೂಪ

    ಆವಾಗೆಲ್ಲಾ ಫೋನು ಮತ್ತೊಂದು ಇರಲಿಲ್ಲ . ‘ ಸಂಬಂಧಿಕರು ‘ ಇಂತಾ ದಿನ ನಿಮ್ಮ ಮನೇಗೆ ಬರ್ತೀವಿ ಅಂತ ಕಾಗದದ ಮುಖೇನ ತಿಳಿಸಿ ಬರುತ್ತಿದ್ದರು . ಕೆಲವರಂತೂ ಕಾಗದವನ್ನೂ ಹಾಕ್ತಿರಲಿಲ್ಲ ಹಾಗೇ ಬಂದುಬಿಡೋವ್ರು . ಅವರು ನಮ್ಮ ಮನೆಗಳಿಗೆ ಬಂದ್ರೆ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರೋದು. ಅವರೆಲ್ಲಾ ಹೊಸ ಬಟ್ಟೆಗಳನ್ನು ತೊಟ್ಟು ಅವರ ಮಕ್ಕಳಿಗೂ ಹೊಸ ಬಟ್ಟೆ ತೊಡಿಸಿ. ಒಣಗಿದ ಅರಳೆಲೆಯಲ್ಲಿ ಬಿಳಿದಾರದೊಂದಿಗೆ ಸುತ್ತಿದ್ದ ತಾಜಾ ಕನಕಾಮ್ರ ಹೂವು, ಗ್ಲೂಕೋಸ್ ಬಿಸ್ಕೆಟ್ಟು ಹಾಗೂ ಪಕೋಡ ಪೊಟ್ಟಣ ಹಿಡಿದು ಬಂದಿರೋವ್ರು .ಸ್ವಲ್ಪ ಸ್ಥಿತಿವಂತರೇನಾದರೂ ಬಂದ್ರೆ ಮೈಸೂರು ಪಾಕು , ಚೌಚೌ , ಹೂವು ಹಣ್ಣು ತಂದಿರೋವ್ರು .

    ನಾವು ಶಾಲೆ ಮುಗಿಸಿ ಮನೆಗೆ ಹೋದಾಗ ಅವರೆಲ್ಲರನ್ನೂ ನೋಡಿ ಖುಷಿಯಾಗ್ಬಿಡ್ತಿದ್ವಿ , ಅವರೂ ನಮ್ಮನ್ನ ತೊಡೆ ಮೇಲೆ ಕೂರಿಸಿಕೊಂಡು ಯಾವ ಸ್ಕೂಲು ? ಮುಂದೆ ದೊಡ್ಡವನಾದ ಮೇಲೆ ಏನ್ ಆಗ್ತೀಯಾ ? ನಿನಗೆ ಅಪ್ಪ ಇಷ್ಟಾನ ಅಮ್ಮ ಇಷ್ಟಾನ ? ಹಿಂಗೆಲ್ಲಾ ಪ್ರೀತಿಯಿಂದ ವಿಚಾರಿಸೋವ್ರು .ಅವರು ತಂದ ತಿಂಡಿಯನ್ನ ಅಮ್ಮ ಕೊಡೋವ್ರು ತಿಂದು ಸಂಭ್ರಮಿಸುತ್ತಿದ್ದೆವು .

    ವಾರ ಪೂರ್ತಿ ದಿನಕ್ಕೊಂದು ರೀತಿಯ ಅಡುಗೆ ತಯಾರಾಗೋದು , ಎಲ್ಲಾ ಒಟ್ಟಿಗೇ ಊಟಕ್ಕೆ ಕೂರುತ್ತಿದ್ದೆವು . ಅವರ ಮಕ್ಕಳು ತಂದ ಅಟಿಕೆಗಳ ಜೊತೆ ನಾವು ಆಟ ಆಡ್ತಿದ್ವಿ . ಅವರ ಜೊತೆ ಕೂಗಾಡ್ತಿದ್ವಿ ಕಿರುಚಾಡ್ತಿದ್ವಿ ಜಗಳ ಮಾಡ್ತಿದ್ವಿ . ಮನೆಯಲ್ಲಿ ನೆಂಟರಿದ್ದರೆ ನಮ್ಮನ್ನ ಹೊಡೆಯಲ್ಲ ಅನ್ನೋ ಧೈರ್ಯ ನಮ್ಮದು , ಮನೆಯವರು ನಮ್ಮ ಉಪಟಳವನ್ನ ತುಂಬಾನೇ ಸಹಿಸ್ಕೋಳೋವ್ರು .

    ನೆಂಟರ ಜೊತೆ ನಮ್ಮನ್ನ ನಾಟಕ ಸಿನಿಮಾ ಸರ್ಕಸ್ಸು ಹೋಟೆಲ್ಲು ಪಾರ್ಕು ಅಂತ ಕರ್ಕೊಂಡು ಸುತ್ತಾಡ್ಸೋವ್ರು . ಮನೆಗೆ ಬಂದು ತಡರಾತ್ರಿವರೆಗೂ ಅವರ ಕಷ್ಟ ಸುಖಗಳನ್ನು ಮಾತಾಡ್ತಾ ಕೂತಿರೋವ್ರು , ನಾವು ಚಾಪೆ ಜಮಖಾನ ಹಾಸಿಗೆಯ ಮೇಲೆ ಎದ್ದು ಬಿದ್ದು ಫೈಟಿಂಗ್ ಮಾಡ್ತಾ ಬೈಸಿಕೊಂಡು ಮಲಗ್ತಿದ್ವಿ .

    ಬೆಳಿಗ್ಗೆ ಎಲ್ಲರಿಗೂ ಒಟ್ಟಿಗೇ ಕಾಫಿ ಎಲ್ಲರೂ ಬೆಳಗಿನ ಕಾಫಿಯನ್ನು ಹೀರುತ್ತಾ ಆನಂದ ಅನುಭವಿಸುತ್ತಿದ್ದೆವು .ನಮ್ಮ ಮನೆಯವರ ಪ್ರೀತಿ ಆತಿಥ್ಯಕ್ಕೆ ಕಟ್ಟುಬಿದ್ದು ಎರಡು ದಿನಕ್ಕೆ ಅಂತ ಬಂದವರು ಒಂದು ವಾರ ಇರೋವ್ರು . ಹೆಂಗಸ್ರು ನಮ್ಮ ತಾಯಿಯ ಸೀರೆ ಉಟ್ಟರೆ , ಅವರ ಯಜಮಾನರು ನಮ್ಮ ತಂದೆಯವರ ಪಂಚೆ ಲುಂಗಿಯನ್ನು ತೊಡೋವ್ರು . ತಂಗಿದ್ದಷ್ಟು ಕಾಲ ತುಂಬಾನೇ ಅನ್ಯೋನ್ಯತೆಯಿಂದ ಇರೊವ್ರು . ಯಾರ ಮನಸ್ಸಿನಲ್ಲೂ ಕಲ್ಮಷ ಇರಲಿಲ್ಲ . ನಮ್ಮನೆಯವರ ಹತ್ತಿರ ಹಣವಿರಲೀ ಇಲ್ಲದೇ ಇರಲಿ ಸಾಲ ಮಾಡಿಯಾದರೂ ನೆಂಟರನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಕಳಿಸುತ್ತಿದ್ದರು . ಅವರೂ ಹೋಗುವಾಗ ಅರಿಷಿಣ ಕುಂಕುಮ ಪಡೆದು ಭಾವುಕರಾಗೋವ್ರು . ಅವರ ಮನೆಗೆ ಬರಲೇಬೇಕೆಂದು ಆಹ್ವಾನಿಸೋವ್ರು . ನಮ್ಮನೆಯವರು ಬೇಡ ಅಂದ್ರೂ ಒತ್ತಾಯ ಮಾಡಿ ನಮ್ಮ ಕೈಗೆ ಕಾಸು ಕೊಡೋವ್ರು .

    ಅದ್ಯಾಕೋ ಗೊತ್ತಿಲ್ಲ ಬೆಳೀತಾ ಬೆಳೀತಾ ಜಗತ್ತು ಹತ್ತಿರವಾದಂತೆಲ್ಲಾ ನೆಂಟರು ಸಂಬಂಧಿಕರು ದೂರ ಆಗ್ತಾ ಹೋದರು .ಸಂಬಂಧಗಳೆಲ್ಲಾ ಫೋನಲ್ಲಿ ಕನೆಕ್ಟ್ ಆಗ್ತಾ ಫೋನಲ್ಲೇ ಡಿಸ್ಕನೆಕ್ಟ್ ಆಗ್ತಾ ಹೋದವು . ಋಣಾನೇ ಆಗ್ಲಿ ಹಣಾನೇ ಆಗ್ಲಿ ಮೌಲ್ಯ ಕಳೆದುಕೊಂಡಿತು .
    ನಮ್ಮ ಹಿರಿಯರು ಸಂಬಂಧಿಕರನ್ನು ‘ನೆಂಟರಿಷ್ಟರು’ ಅಂತ ಕರೀತಿದ್ರು , ಅವರುಗಳಿಗೆ ಸ್ಥಾನವಿರಲಿ ಇಲ್ಲದೇ ಇರಲಿ ಹೃದಯದಲ್ಲಿ ಸ್ಥಾನ ಕೊಟ್ಟಿರುತ್ತಿದ್ದರು .

    ಆದರೆ ಈಗಿನ ಮಂದಿ …..

    ‘ ನಮಗೆ ಯಾರೂ ಬೇಕಾಗಿಲ್ಲ . ನಾವು ಯಾರ್ನೂ ಮನೆ ಬಾಗಿಲಿಗೂ ಸೇರ್ಸಲ್ಲ ಅನ್ನೋ ಕಠೋರ ನಿಲುವಿಗೆ ಬಂದುನಿಂತಿದ್ದಾರೆ ‘ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕರ್ನಾಟಕ ಸತತ ಎರಡನೇ ಬಾರಿಗೆ ‘ಅಗ್ರಮಾನ್ಯ ನಾವೀನ್ಯತಾ ರಾಜ್ಯ’

    ಕರ್ನಾಟಕ ರಾಜ್ಯವು ಸತತ ಎರಡನೇ ಬಾರಿಗೆ ದೇಶದ ಅಗ್ರಮಾನ್ಯ ನಾವೀನ್ಯತಾ-Innovation- ರಾಜ್ಯ ಎಂಬ ಗರಿಮೆಗೆ ಪಾತ್ರವಾಗಿದೆ. ನೀತಿ ಆಯೋಗವು ಪ್ರಕಟಿಸುವ ‘ಭಾರತ ನಾವೀನ್ಯತಾ ಸೂಚ್ಯಂಕ ಪಟ್ಟಿ’ಯಲ್ಲಿ ರಾಜ್ಯವು ಹೋದ ವರ್ಷ ಕೂಡ ಮೊದಲ ಸ್ಥಾನ ಪಡೆದಿತ್ತು.

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಹೊಸ ಮಾನದಂಡಗಳನ್ನು ಅಳವಡಿಸಲಾಗಿತ್ತು. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಜ್ಯಗಳು ಮಾಡುವ ವೆಚ್ಚ ಹಾಗೂ ಹೊಸ ವ್ಯಾಪಾರೋದ್ಯಮಗಳ ನೋಂದಣಿ ಇವುಗಳಲ್ಲಿ ಪ್ರಮುಖವಾದವು. ರಾಜ್ಯವು ಎಲ್ಲಾ ವಿಭಾಗಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬುಧವಾರ ಹೇಳಿದರು.

    ಈ ಸೂಚ್ಯಂಕವು ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆಯನ್ನು ನಿರ್ದೇಶಿಸುವ ವಿವಿಧ ಅಂಶಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇದು ಸೂಕ್ತ ಕಾರ್ಯನೀತಿಗಳನ್ನು ರೂಪಿಸಲು ಸಹಾಯಕವಾಗಿ ಉದ್ದಿಮೆಗಳಿಗೆ ಹೂಡಿಕೆಯನ್ನು ಆಕರ್ಷಿಸಲು ನೆರವಾಗುತ್ತದೆ ಎಂದರು.

    ಈ ಪಟ್ಟಿಯನ್ನು ಅಕ್ಟೋಬರ್ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಗಿತ್ತು. ದೇಶದ ನಾವೀನ್ಯತಾ ಸೂಚ್ಯಂಕವನ್ನು ಜಾಗತಿಕ ನಾವೀನ್ಯತಾ ಸೂಚ್ಯಂಕಕ್ಕೆ ಅನುಗಣವಾಗಿ ಸರಿದೂಗಿಸುವುದು ಇದರ ಉದ್ದೇಶ. ನಾವೀನ್ಯತೆಯು ತಯಾರಿಕಾ ವಲಯದ ಗುಣಮಟ್ಟದ ಉತ್ಪಾದನೆ, ಸ್ಪರ್ಧಾತ್ಮಕತೆ ಹಾಗೂ ರಫ್ತು ಪ್ರವೃತ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಆತ್ಮನಿರ್ಭರ ಸ್ಫೂರ್ತಿಯನ್ನು ಎತ್ತಿಹಿಡಿಯುತ್ತದೆ ಎಂದರು.

    ಈಗ ಪ್ರಕಟಿಸಲಾಗಿರುವ ಪಟ್ಟಿಯು 36 ಮಾನದಂಡಗಳನ್ನು (ಸೂಚಕಗಳನ್ನು) ಆಧರಿಸಿದೆ. ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ನಾವೀನ್ಯತೆಗೆ ಚಾಲಕ ಬಲ ನೀಡುವ ವಿವಿಧ ಅಂಶಗಳ ವಿಶ್ಲೇಷಣೆಯನ್ನೂ ಇದು ಲಭ್ಯವಾಗಿಸುತ್ತದೆ. ಜಾಗತಿಕವಾಗಿ ನಾವೀನ್ಯತಾ ಸೂಚ್ಯಂಕವನ್ನು ನಿರ್ಧರಿಸಲು 80 ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಅನುಗುಣವಾಗಿ ನೀತಿ ಆಯೋಗ ಕೂಡ ಈ ಪಟ್ಟಿ ನಿರ್ಧರಿಸಲು ವರ್ಷದಿಂದ ವರ್ಷಕ್ಕೆ ಮಾನದಂಡಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಿದೆ ಎಂದು ಹೇಳಿದರು.

    ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಕ್ರಮವಾಗಿ ಈ ಸೂಚ್ಯಂಕ ಪಟ್ಟಿಯಲ್ಲಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿರುವ 17 ಪ್ರಮುಖ ರಾಜ್ಯಗಳ ಪೈಕಿ ಹರಿಯಾಣ 6ನೇ ಸ್ಥಾನದಲ್ಲಿದ್ದರೆ, ಬಿಹಾರ ಕಡೆಯ ಸ್ಥಾನದಲ್ಲಿದೆ.

    ಮಾನವ ಸಂಪನ್ಮೂಲ, ಹೂಡಿಕೆ, ವಿಷಯ ತಜ್ಞರು, ಉದ್ಯಮ ಸ್ನೇಹಿ ವಾತಾವರಣ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನ ಪ್ರಸಾರ ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ವಿವಿಧ ವಲಯಗಳು ಮಾನದಂಡಗಳಾಗಿ ಪರಿಗಣಿತವಾಗುತ್ತವೆ.

    ಶೀಘ್ರವೇ ಮಧ್ಯಂತರ ವರದಿ :ರಾಜ್ಯದ ವಿವಿಧ ವಲಯಗಳಲ್ಲಿ ನಾವೀನ್ಯತೆಗೆ ಇರುವ ಅವಕಾಶಗಳ ಕುರಿತು ಈಗಾಗಲೇ ಅಧ್ಯಯನ ನಡೆಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಈಗಾಗಲೇ ಸಮಾಚೋಚನೆ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಶೀಘ್ರವೇ ಮಧ್ಯಂತರ ವರದಿ ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ತಿಳಿಸಿದರು

    ಛಿದ್ರಮನಸ್ಕತೆ ಹಾಗೆಂದರೇನು

    ಛಿದ್ರಮನಸ್ಕತೆಯು (Schizophrenia – ಸ್ಕಿಜೋಫ್ರೇನಿಯಾ) ಮಾನಸಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಜನರು ವಾಸ್ತವವನ್ನು ಅಸಹಜವಾಗಿ ವ್ಯಾಖ್ಯಾನಿಸುತ್ತಾರೆ. ಇದು ದೈನಂದಿನ ಕಾರ್ಯಚಟುವಟಿಕೆಯನ್ನು ಕುಂಠಿತಗೊಳಿಸುವ ಅತ್ಯಂತ ಅಸ್ತವ್ಯಸ್ತವಾದ ಚಿಂತನೆ ಮತ್ತು ನಡವಳಿಕೆಗಳಿಗೆ ಕಾರಣವಾಗಬಹುದು. ವ್ಯಕ್ತಿಯನ್ನು ಬಳಲುವಿಕೆಯಿಂದ ನಿಷ್ಕ್ರಿಯಗೊಳಿಸಬಹುದು. ಇದು ಸ್ಪಷ್ಟವಾಗಿ ಯೋಚಿಸುವ, ಅನುಭವಿಸುವ ಮತ್ತು ವರ್ತಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ.

    ಛಿದ್ರಮನಸ್ಕತೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಆದರೆ ತಳಿಶಾಸ್ತ್ರ, ಪರಿಸರ, ಬದಲಾದ ಮೆದುಳಿನ ರಸಾಯನಿಕ ಕ್ರಿಯೆ ಮತ್ತು ರಚನೆಯ ಸಂಯೋಜನೆಯು ಇದರಲ್ಲಿ ಪಾತ್ರವನ್ನು ವಹಿಸುತ್ತವೆ.
    ಅದು ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಕಡಿಮೆ ಮಾಡಿಸುತ್ತದೆ. ಏಕಾಗ್ರತೆ ಮತ್ತು ನೆನಪಿನ ಶಕ್ತಿಯಲ್ಲಿ ತೊಂದರೆ ಕೂಡ ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆಯು ಸಾಮಾನ್ಯವಾಗಿ ಆಜೀವವಾಗಿದ್ದು ಸಾಮಾನ್ಯವಾಗಿ ಔಷಧಿಗಳು, ಮಾನಸಿಕ ಚಿಕಿತ್ಸೆ ಮತ್ತು ವಿಶೇಷ ಆರೈಕೆ ಸೇವೆಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ.

    ತೀವ್ರವಾದ ಮಾನಸಿಕ ಅಸ್ವಸ್ಥತೆ
    ಛಿದ್ರಮನಸ್ಕತೆಯು ದೀರ್ಘಕಾಲದ ಮತ್ತು ತೀವ್ರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು, ವಿಶ್ವಾದ್ಯಂತ 20 ಮಿಲಿಯನ್ ಜನರನ್ನು ಬಾಧಿಸುತ್ತಿದೆ .ಛಿದ್ರಮನಸ್ಕತೆಯನ್ನು ಗುಣಪಡಿಸಬಹುದಾಗಿದೆ. ಆದರೆ ಇದಕ್ಕೆ ಔಷಧಿಗಳೊಂದಿಗೆ ಚಿಕಿತ್ಸೆ ಮತ್ತು ಮಾನಸಿಕ ಬೆಂಬಲವು ಅತ್ಯವಶ್ಯ. ಛಿದ್ರಮನಸ್ಕತೆಯಿಂದ ಬಳಲುತ್ತಿರುವ ಜನರಿಗೆ ಸಹಾಯ, ವಸತಿ ಮತ್ತು ಉದ್ಯೋಗದ ಸೌಲಭ್ಯಗಳು ಪರಿಣಾಮಕಾರಿ ನಿರ್ವಹಣಾ ತಂತ್ರಗಳಾಗಿವೆ.

    ಛಿದ್ರಮನಸ್ಕತೆಯ ಆರಂಭಿಕ ಎಚ್ಚರಿಕೆ ಚಿಹ್ನೆಗಳು:
    ಕೆಲವು ಜನರಲ್ಲಿ, ಛಿದ್ರಮನಸ್ಕತೆ ಇದ್ದಕ್ಕಿದ್ದಂತೆ ಯಾವದೇ ಪೂರ್ವ ಸೂಚನೆ ನೀಡದೆ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನವರಿಗೆ, ಇದು ನಿಧಾನವಾಗಿ ಬರುತ್ತದೆ. ಆರಂಭಿಕ ಹಂತದಲ್ಲಿ, ವ್ಯಕ್ತಿಯು ವಿಲಕ್ಷಣ, ವರ್ತನೆ ತೋರಬಹುದು. ವ್ಯಕ್ತಿ ತನ್ನನ್ನೇ ಪ್ರತ್ಯೇಕಿಸಿಕೊಂಡು ಒಂಟಿಯಾಗತೊಡಗಲು ಆರಂಭಿಸಬಹುದು. ನಿಮ್ಮ ನೋಟವನ್ನು ನಿರ್ಲಕ್ಷಿಸಲು ಪ್ರಾರಂಭಿಸಬಹುದು, ವಿಚಿತ್ರವಾದ ವಿಷಯಗಳನ್ನು ಹೇಳಬಹುದು ಮತ್ತು ಜೀವನದ ಬಗ್ಗೆ ಸಾಮಾನ್ಯ ಉದಾಸೀನತೆಯನ್ನು ತೋರಿಸಬಹುದು.

    ಛಿದ್ರಮನಸ್ಕತೆಯ ಆರಂಭಿಕ 8 ಚಿಹ್ನೆಗಳು ಕೆಳಗಿನಂತಿವೆ.

    1. ಖಿನ್ನತೆ
    2. ಹಗೆತನ ಅಥವಾ ಅನುಮಾನ, ಟೀಕೆಗಳಿಗೆ ತೀವ್ರ ಪ್ರತಿಕ್ರಿಯೆ.
    3. ವೈಯಕ್ತಿಕ ನೈರ್ಮಲ್ಯದ ಕ್ಷೀಣತೆ.
    4. ಅಭಿವ್ಯಕ್ತಿರಹಿತ ನೋಟ.
    5. ಅಳಲು ಅಥವಾ ಸಂತೋಷವನ್ನು ವ್ಯಕ್ತಪಡಿಸಲು ಅಸಮರ್ಥತೆ (ಅನುಚಿತ ನಗೆ ಅಥವಾ ಅಳಲು )
    6. ಅತಿಯಾದ ನಿದ್ರೆ ಅಥವಾ ನಿದ್ರಾಹೀನತೆ.
    7. ಮರೆವು ಅಥವಾ ಏಕಾಗ್ರತೆಯ ಕೊರತೆ.
    8. ಅಸಂಬಂದ್ಧ ಹೇಳಿಕೆಗಳು; ಪದಗಳ ವಿಚಿತ್ರ ಬಳಕೆ ಅಥವಾ ಮಾತನಾಡುವ ವಿಧಾನ


    ಪ್ರತಿಯೊಬ್ಬ ವ್ಯಕ್ತಿಯು ಎಲ್ಲಾ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ, ಮತ್ತು ಇದರ ಲಕ್ಷಣಗಳು ಸಹ ಕಾಲಾನಂತರದಲ್ಲಿ ಬದಲಾಗಬಹುದು.

    ಚಿಕಿತ್ಸೆಯ ಮೂಲಗಳು:
    ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ತಂತ್ರವು ಔಷಧಿ,ಜೀವನಶೈಲಿಯ ಬದಲಾವಣೆ ಮತ್ತು ಸಾಮಾಜಿಕ ಬೆಂಬಲದ ಸಂಯೋಜನೆಯನ್ನು ಒಳಗೊಂಡಿರುತ್ತದೆ.

    ಛಿದ್ರಮನಸ್ಕತೆಗೆ ದೀರ್ಘಕಾಲೀನ ಚಿಕಿತ್ಸೆಯ ಅಗತ್ಯವಿದೆ. ಇದರಿಂದ ಬಳಲುತ್ತಿರುವ ಹೆಚ್ಚಿನ ಜನರು ಹೊಸ ಲಕ್ಷಣಗಳನ್ನು ತಡೆಗಟ್ಟಲು ಮತ್ತು ರೋಗಲಕ್ಷಣವಿಲ್ಲದೆ ಇದ್ದರೂ ಚಿಕಿತ್ಸೆಯನ್ನು ಮುಂದುವರಿಸಬೇಕಾಗುತ್ತದೆ. ಚಿಕಿತ್ಸೆಯು ಕಾಲಾನಂತರದಲ್ಲಿ ಬದಲಾಗಬಹುದು, ಆದ್ದರಿಂದ ನಿಮ್ಮ ವೈದ್ಯರು ಡೋಸೇಜ್ ಅನ್ನು ಕಡಿಮೆ ಮಾಡಲು ಅಥವಾ ನಿಮ್ಮ ರೋಗಲಕ್ಷಣಗಳು ಸುಧಾರಿಸಿದಂತೆ ಔಷಧಿಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

    ಸ್ವ-ಸಹಾಯ:
    ಔಷಧಿ ಮತ್ತು ಚಿಕಿತ್ಸೆಯು ಪೂರ್ಣ ಪರಿಣಾಮ ಬೀರಲು ಸಮಯ ತೆಗೆದುಕೊಳ್ಳಬಹುದು ಆದರೆ ವ್ಯಕ್ತಿಗೆ ರೋಗಲಕ್ಷಣಗಳನ್ನು ನಿರ್ವಹಿಸಲು, ತನ್ನ ಭಾವನೆಯನ್ನು ಸುಧಾರಿಸಲು ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಇನ್ನೂ ಮಾರ್ಗಗಳಿವೆ. ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯರು ವ್ಯಕ್ತಿಗೆ ಔಷಧಿಗಳನ್ನು ಕಡಿಮೆ ಮಾಡಲು ರೋಗಿಯ ಸಹಕಾರ ತುಂಬಾ ಅಗತ್ಯ.


    ಸ್ವ-ಸಹಾಯದ 7 ಮುಖ್ಯ ಅಂಶಗಳು ಕೆಳಗಿನಂತಿವೆ.

    1. ಸಾಮಾಜಿಕ ಬೆಂಬಲವನ್ನು ಹುಡುಕುವುದು- ಸರಿಯಾದ ಚಿಕಿತ್ಸೆಯನ್ನು ಪಡೆಯಲು ಮತ್ತು ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿಡಲು ಸ್ನೇಹಿತರು ಮತ್ತು ಕುಟುಂಬವು ಪ್ರಮುಖವಾದುದು ಮಾತ್ರವಲ್ಲ, ನಿಯಮಿತವಾಗಿ ಇತರರೊಂದಿಗೆ ಮುಖಾಮುಖಿಯಾಗಿ ಸಂಪರ್ಕ ಸಾಧಿಸುವುದು ರೋಗಿಯ ನರಮಂಡಲವನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
    2. ಕೆಲಸ ಅಥವಾ ಶಿಕ್ಷಣವನ್ನು ಮುಂದುವರೆಸುವ ಮೂಲಕ ಇತರರೊಂದಿಗೆ ಬೆರೆಯಿರಿ-ಅಥವಾ ಅದು ಸಾಧ್ಯವಾಗದಿದ್ದರೆ, ಸ್ವಯಂಸೇವಕರಾಗಿ.
    3. ಒತ್ತಡವನ್ನು ನಿರ್ವಹಿಸಿ. ಕಾರ್ಟಿಸೋಲ್ ಎಂಬ ಹಾರ್ಮೋನ್ ದೇಹದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಮಟ್ಟದ ಒತ್ತಡವು ಸ್ಕಿಜೋಫ್ರೇನಿಕ್ ಕಂತುಗಳನ್ನು ಪ್ರಚೋದಿಸುತ್ತದೆ ಎಂದು ನಂಬಲಾಗಿದೆ. ಸಾಮಾಜಿಕವಾಗಿ ಸಂಪರ್ಕದಲ್ಲಿರುವುದರ ಜೊತೆಗೆ, ಧ್ಯಾನ, ಯೋಗ, ಅಥವಾ ಆಳವಾದ ಉಸಿರಾಟದಂತಹ ವಿಶ್ರಾಂತಿ ತಂತ್ರಗಳನ್ನು ಒಳಗೊಂಡಂತೆ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ನೀವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬಹುದು.
    4. ನಿಯಮಿತ ವ್ಯಾಯಾಮ ಪಡೆಯಿರಿ. ಎಲ್ಲಾ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನಗಳ ಜೊತೆಗೆ, ಸ್ಕಿಜೋಫ್ರೇನಿಯಾದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ವ್ಯಾಯಾಮವು ಸಹಾಯ ಮಾಡುತ್ತದೆ, ನಿಮ್ಮ ಗಮನ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಶಾಂತವಾಗಲು ಸಹಾಯ ಮಾಡುತ್ತದೆ. ನಿಮ್ಮ ಕೈ ಮತ್ತು ಕಾಲುಗಳಾದ ವಾಕಿಂಗ್, ಓಟ, ಈಜು ಅಥವಾ ನೃತ್ಯದಂತಹ ಲಯಬದ್ಧ ವ್ಯಾಯಾಮವನ್ನು ಪ್ರಯತ್ನಿಸಿ.
    5. ಸಾಕಷ್ಟು ನಿದ್ರೆ ಪಡೆಯಿರಿ. ನೀವು ಔಷಧಿಗಳನ್ನು ಹೊಂದಿರುವಾಗ, ಪ್ರಮಾಣಿತ 8 ಗಂಟೆಗಳಿಗಿಂತ ಹೆಚ್ಚಿನ ನಿದ್ರೆ ನಿಮಗೆ ಬೇಕಾಗುತ್ತದೆ. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಅನೇಕರಿಗೆ ನಿದ್ರೆಯಲ್ಲಿ ತೊಂದರೆ ಇದೆ, ಆದರೆ ನಿಯಮಿತವಾಗಿ ವ್ಯಾಯಾಮ ಪಡೆಯುವುದು ಮತ್ತು ಕೆಫೀನ್ ತಪ್ಪಿಸುವುದು ಸಹಾಯ ಮಾಡುತ್ತದೆ.
    6. ಆಲ್ಕೋಹಾಲ್, ಡ್ರಗ್ಸ್ ಮತ್ತು ನಿಕೋಟಿನ್ ಅನ್ನು ತಪ್ಪಿಸಿ. ಮಾದಕದ್ರವ್ಯವು ಸ್ಕಿಜೋಫ್ರೇನಿಯಾ ಚಿಕಿತ್ಸೆಯನ್ನು ಸಂಕೀರ್ಣಗೊಳಿಸುತ್ತದೆ ಮತ್ತು ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಸಿಗರೇಟು ಸೇದುವುದು ಸಹ ಕೆಲವು ಸ್ಕಿಜೋಫ್ರೇನಿಯಾ ಔಷಧಿಗಳ ಪರಿಣಾಮಕಾರಿತ್ವಕ್ಕೆ ಅಡ್ಡಿಯಾಗಬಹುದು.
    7. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಬದಲಾವಣೆಗಳಿಂದ ಉಲ್ಬಣಗೊಳ್ಳುವ ಲಕ್ಷಣಗಳನ್ನು ತಪ್ಪಿಸಲು ನಿಯಮಿತ, ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಕೊಬ್ಬಿನ ಮೀನು, ಮೀನಿನ ಎಣ್ಣೆ, ವಾಲ್ನಟ್ ಮತ್ತು ಅಗಸೆಬೀಜಗಳಿಂದ ಒಮೆಗಾ -3 ಕೊಬ್ಬಿನಾಮ್ಲಗಳು ಗಮನವನ್ನು ಸುಧಾರಿಸಲು, ಆಯಾಸವನ್ನು ನಿವಾರಿಸಲು ಮತ್ತು ಮನಸ್ಥಿತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

    ಛಿದ್ರಮನಸ್ಕತೆಯನ್ನು ಪತ್ತೆಹಚ್ಚುವ ಮಾನದಂಡ:

    ಕನಿಷ್ಠ 30 ದಿನಗಳವರೆಗೆ ಈ ಕೆಳಗಿನವುಗಳಲ್ಲಿ ಎರಡು ಅಥವಾ ಹೆಚ್ಚಿನ ರೋಗಲಕ್ಷಣಗಳ ಉಪಸ್ಥಿತಿ ಇದ್ದರೆ ವೈದ್ಯರ ಸಲಯೆ ಹಾಗೂ ಸಂಬಂಧಿಸಿದೆ ಪರೀಕ್ಷೆಗಳು ಅತ್ಯಗತ್ಯ:

    1. ಭ್ರಮೆ
    2. ಅಸ್ತವ್ಯಸ್ತವಾಗಿರುವ ಮಾತು
    3. ಅಸ್ತವ್ಯಸ್ತಗೊಂಡ ಅಥವಾ ಮಾನಸಿಕ ವಿಕಲ್ಫವರ್ತನೆ
    4. ನಕಾರಾತ್ಮಕ ಲಕ್ಷಣಗಳು (ಭಾವನಾತ್ಮಕ ಚಪ್ಪಟೆತನ, ನಿರಾಸಕ್ತಿ, ಮಾತಿನ ಕೊರತೆ)

    ಛಿದ್ರಮನಸ್ಕತೆಯು ವಾಸಿಯಾಗುವ ಕಾಯಿಲೆ. ಅದರ ವಿರುದ್ಧ ಹೋರಾಟಗಾರರಿಗೆ ಮಾನಸಿಕ ದೃಢತೆ ಇರಲಿ ಹಾಗೂ ನಮ್ಮೆಲರಿಂದ ಅಗತ್ಯ ಸಾಮಾಜಿಕ ಬೆಂಬಲ ಸಿಗಲಿ.

    Photo by Tim Mossholder on Unsplash

    2021-22ರ ಶೈಕ್ಷಣಿಕ ಕ್ಯಾಲೆಂಡರ್‌ ಪ್ರಕಟ


    2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು; ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅಕ್ಟೋಬರ್‌ 4ರಿಂದ ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್‌ ಕಾರಣದಿಂದ 2021-22ನೇ ಸಾಲಿನ ಶೈಕ್ಷಣಿಕ ಚಟವಟಿಕೆಗಳಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ಆ ಎಲ್ಲ ಅಂಶಗಳನ್ನು ಪರಿಗಣಿಸಿ ಶೈಕ್ಷಣಿಕ ಕ್ಯಾಲೆಂಡರ್‌ ನ ಕರಡು ರೂಪಿಸಲಾಗಿದೆ ಎಂದರು.

    2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್‌ ಹೀಗಿದೆ:

    ಪದವಿ ತರಗತಿಗಳು:

    ಪದವಿ ವಿಭಾಗದ 5ನೇ ಸೆಮಿಸ್ಟರ್‌ ತರಗತಿಗಳು ಫೆಬ್ರವರಿ 28ರಂದು ಮುಗಿಯಲಿದ್ದು, ಪರೀಕ್ಷೆಗಳು 2021 ಮಾರ್ಚ್‌ 31ರಂದು ಮುಗಿಯಲಿವೆ. 1 ಮತ್ತು 3ನೇ ಸೆಮಿಸ್ಟರ್‌ ತರಗತಿಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿದ್ದು, ಪರೀಕ್ಷೆಗಳು 2021 ಏಪ್ರಿಲ್‌ 30ರಂದು ಆರಂಭವಾಗಲಿವೆ. 6ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ರಂದು ಶುರುವಾಗಿ, 2021ರ ಜುಲೈ 31ಕ್ಕೆ ಮುಗಿಯುತ್ತವೆ. 6ನೇ ಸೆಮಿಸ್ಟರ್‌ ಪರೀಕ್ಷೆಗಳು 2021 ಅಗಸ್ಟ್‌ 31ಕ್ಕೆ ಮುಗಿಯುತ್ತವೆ. ಈ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶವು 2021 ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ. 2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು 2021 ಮೇ 2ಕ್ಕೆ ಶುರುವಾಗಿ 2021 ಅಗಸ್ಟ್‌ 31ಕ್ಕೆ ಮುಕ್ತಾಯವಾಗುತ್ತವೆ. ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಸೆಪ್ಟೆಂಬರ್‌ 30ಕ್ಕೆ ಮುಗಿಯುತ್ತವೆ.

    ಪದವಿ ವಿಭಾಗದ 1, 3, 5ನೇ ಸೆಮಿಸ್ಟರ್‌ ತರಗತಿಗಳು 2021 ಅಕ್ಟೋಬರ್‌ 4ಕ್ಕೆ ಆರಂಭವಾಗುತ್ತವೆ. 2022 ಜನವರಿ 31ಕ್ಕೆ ಮುಕ್ತಾಯವಾಗುತ್ತವೆ. ಪರೀಕ್ಷೆಗಳು 2022ರ ಫೆಬ್ರವರಿ 28ಕ್ಕೆ ಮುಗಿಯಲಿದೆ. 2, 4, 6ನೇ ಸೆಮಿಸ್ಟರ್‌ ತರಗತಿಗಳು 2022ರ ಮಾರ್ಚ್‌ 1ರಂದು ಶುರುವಾಗಿ, 2022ರ ಜೂನ್‌ 30ಕ್ಕೆ ತರಗತಿಗಳು ಮುಗಿಯುತ್ತವೆ. ಪರೀಕ್ಷೆಗಳು 2022ರ ಜುಲೈ 31ಕ್ಕೆ ಮುಗಿಯಲಿದ್ದು, ಫಲಿತಾಂಶವು 2022 ಅಗಸ್ಟ್‌ 14ರಂದು ಪ್ರಕಟವಾಗುತ್ತದೆ.

    ಎಂಜಿನಿಯರಿಂಗ್‌ ತರಗತಿಗಳು:

    ಎಂಜಿನಿಯರಿಂಗ್‌ ವಿಭಾಗದ 7ನೇ ಸೆಮಿಸ್ಟರ್‌ ತರಗತಿಗಳು 2021 ಫೆಬ್ರವರಿ 28ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು 2021 ಮಾರ್ಚ್‌ 31ರಂದು ಮುಗಿಯಲಿವೆ. 1, 3 ಮತ್ತು 5ನೇ ಸೆಮಿಸ್ಟರ್‌ ತರಗತಿಗಳು 2021 ಮಾರ್ಚ್‌ 31ಕ್ಕೆ ಮುಗಿಯಲಿವೆ. ಪರೀಕ್ಷೆಗಳು 2021 ಏಪ್ರಿಲ್‌ 31ಕ್ಕೆ ಅಂತ್ಯವಾಗುತ್ತವೆ. 8ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ರಂದು ಶುರುವಾಗಿ, 2021 ಜುಲೈ 31ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು 2021 ಅಗಸ್ಟ್‌ 31ಕ್ಕೆ ಮುಗಿದು ಫಲಿತಾಂಶವು 2021ರ ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ. 2,4 ಮತ್ತು 6ನೇ ಸೆಮಿಸ್ಟರ್‌ ತರಗತಿಗಳು 2021ರ ಮೇ 2ರಂದು ಆರಂಭವಾಗಿ, 2021ರ ಅಗಸ್ಟ್‌ 31ಕ್ಕೆ ಮುಗಿಯಲಿವೆ. ಪರೀಕ್ಷೆಗಳು 2021ರ ಸೆಪ್ಟೆಂಬರ್‌ 31ಕ್ಕೆ ಮುಗಿಯುತ್ತವೆ.

    ಎಂಜಿನಿಯರಿಂಗ್‌ ವಿಭಾಗದ 1,3,5,7ನೇ ಸೆಮಿಸ್ಟರ್‌ ತರಗತಿಗಳು 2021ರ ಅಕ್ಟೋಬರ್‌ 4ರಂದು ಆರಂಭವಾಗಲಿವೆ. ಈ ತರಗತಿಗಳು 2022 ಜನವರಿ 31ಕ್ಕೆ ಅಂತ್ಯವಾಗಲಿದ್ದು, 2022 ಫೆಬ್ತವರಿ 28ಕ್ಕೆ ಪರೀಕ್ಷೆಗಳು ಮುಗಿಯಲಿವೆ. ಇನ್ನು 2,4,6,8ನೇ ಸೆಮಿಸ್ಟರ್‌ನ ತರಗತಿಗಳು 2022 ಮಾರ್ಚ್‌ 1ರಂದು ಆರಂಭವಾಗಲಿದ್ದು, 2022 ಜೂನ್‌ 30ಕ್ಕೆ ತರಗತಿಗಳು ಕೊನೆಗೊಳ್ಳಲಿವೆ. ಈ ಸೆಮಿಸ್ಟರ್‌ಗಳ ಪರೀಕ್ಷೆಗಳು 2022 ಜುಲೈ 31ಕ್ಕೆ ಅಂತ್ಯವಾಗಲಿದ್ದು, 2022 ಅಗಸ್ಟ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

    ಸ್ನಾತಕೋತ್ತರ ತರಗತಿಗಳು:

    3ನೇ ಸೆಮಿಸ್ಟರ್‌ ತರಗತಿಗಳು 2021 ಫೆಬ್ರವರಿ 28ಕ್ಕೆ ಮುಗಿಯಲಿದ್ದು, ಇದರ ಪರೀಕ್ಷೆಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿವೆ. 1ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ಕ್ಕೆ ಮುಗಿದು, ಪರೀಕ್ಷೆಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿವೆ. 4ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ರಿಂದ ಆರಂಭವಾಗಿ 2021 ಜುಲೈ 31ಕ್ಕೆ ಮುಗಿಯಲಿವೆ. ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಅಗಸ್ಟ್‌ 31ಕ್ಕೆ ಆರಂಭವಾಗಿ ಪರೀಕ್ಷೆ ಫಲಿತಾಂಶವು 2021ರ ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ. 2ನೇ ಸೆಮಿಸ್ಟರ್‌ನ ತರಗತಿಗಳು 2021 ಮೇ 2ರಿಂದ ಆರಂಭವಾಗಿ 2021 ಅಗಸ್ಟ್‌ 31ಕ್ಕೆ ಮುಗಿಯುತ್ತವೆ ಹಾಗೂ ಈ ಪರೀಕ್ಷೆಗಳಫಲಿತಾಂಶವು 2021ರ ಸೆಪ್ಟೆಂಬರ್‌ 30ರಂದು ಪ್ರಕಟವಾಗಲಿದೆ.

    1-3ನೇ ಸೆಮಿಸ್ಟರ್‌ಗಳ ತರಗತಿಗಳು (ಕಾಲೇಜುಗಳು) 2021 ಅಕ್ಟೋಬರ್‌ 4ರಂದು ಆರಂಭವಾಗುತ್ತವೆ. ಈ ಮೂರು ಸೆಮಿಸ್ಟರ್‌ಗಳ ತರಗತಿಗಳು 2022 ಜನವರಿ 31ಕ್ಕೆ ಅಂತ್ಯವಾಗಲಿವೆ. 2022 ಫೆಬ್ರವರಿ 28ಕ್ಕೆಲ್ಲ ಈ ಸೆಮಿಸ್ಟರ್‌ಗಳ ಪರೀಕ್ಷೆಗಳು ಮುಗಿಲಿವೆ. 2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು 2022 ಮಾರ್ಚ್‌ 1ರಿಂದ ಆರಂಭವಾಗಿ 2022 ಜೂನ್‌ 22ಕ್ಕೆ ಅಂತ್ಯವಾಗಲಿವೆ. 2ರಿಂದ 4ನೇ ಸೆಮಿಸ್ಟರ್‌ ಪರೀಕ್ಷೆಗಳು 2022 ಜುಲೈ 31ರಿಂದ ಶುರುವಾಗಲಿವೆ. ಈ ಪರೀಕ್ಷೆಗಳ ಫಲಿತಾಂಶ 2022 ಅಗಸ್ಟ್‌ 14ರಂದು ಪ್ರಕಟವಾಗಲಿದೆ.

    ಪ್ರತಿ ಕಾಲೇಜಿಗೂ NAAC ಮಾನ್ಯತೆ – NIRF ಶ್ರೇಯಾಂಕ; ಕ್ರಿಯಾ ಯೋಜನೆ ರೂಪಿಸಲು ಸೂಚನೆ

    ಉನ್ನತ ಶಿಕ್ಷಣ ವಿಭಾಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವತ್ತ ವೇಗದ ಹೆಜ್ಜೆಗಳನ್ನು ಇಡುತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ರಾಜ್ಯದ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳ ನಾಕ್‌ ಮಾನ್ಯತೆ, ಎನ್‌ಐಆರ್‌ಎಫ್‌ ರಾಂಕ್‌ (rank) ಪಡೆಯುವ ಸಂಬಂಧ 15 ದಿನಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಸೂಚಿಸಿದ್ದಾರೆ.

    ಬೆಂಗಳೂರಿನಲ್ಲಿ ಮಂಗಳವಾರ ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿದರಲ್ಲದೆ, ಸುಮಾರು 3 ಗಂಟೆಗೂ ಹೆಚ್ಚು ಸಮಯ ಸಮಾಲೋಚನೆ ನಡೆಸಿದರು. “ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಮ್ಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲೊಂದು ಬಹುದೊಡ್ಡ ಬದಲಾವಣೆ. ಇದಕ್ಕೆ ಅನುಗುಣವಾಗಿ ನಾವೆಲ್ಲ ಹೆಜ್ಜೆ ಇಡಬೇಕು. ಸ್ಪರ್ಧಾತ್ಮಕವಾಗಿರುವ ಈ ಸಂದರ್ಭದಲ್ಲಿ ಪ್ರತಿ ವಿವಿಯು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ (National Institutional Ranking Framework-NIRF) rank ಹೊಂದಿರಬೇಕು ಹಾಗೂ ಪ್ರತಿ ಕಾಲೇಜ್‌ಗೂ ನಾಕ್‌ ಮಾನ್ಯತೆ (NAAC Accreditation) ಇರಲೇಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಮೊದಲಿನಂತೆ ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸಾಲುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಓಡಬೇಕು. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಏನೇನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅದರಂತೆ ನಮ್ಮ ವಿವಿಗಳನ್ನು ವರ್ತಮಾನದ ಅಗತ್ಯಗಳಿಗೆ ಅನುಗುಣವಾಗಿ ಮರು ರೂಪಿಸಬೇಕು. ಅದಕ್ಕೆ ಶಿಕ್ಷಣ ನೀತಿಯನ್ನು ಜೋಡಿಸಬೇಕು ಹಾಗೂ ಜಾಗತಿಕವಾಗಿ ಎಲ್ಲರೂ ಒಪ್ಪಿರುವ ಇಂಥ rank-ಮಾನ್ಯತೆ ಅತ್ಯಗತ್ಯ ಎಂದು ಕುಲಪತಿಗಳಿಗೆ ಉಪ ಮುಖ್ಯಮಂತ್ರಿ ಸಲಹೆ ನೀಡಿದರು.

    ಮುಂದಿನ 3 ವರ್ಷಗಳಲ್ಲಿ ಯಾವ್ಯಾವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು, ಎನ್‌ಐಆರ್‌ಎಫ್‌ ರಾಂಕ್(rank), ನಾಕ್‌ ಮಾನ್ಯತೆ ಪಡೆಯಲು ಏನೆಲ್ಲ ಸಿದ್ಧತೆ ನಡೆಸಲಾಗುವುದು ಎಂಬ ವಿವರಗಳನ್ನು ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಿ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು.

    ನಿರ್ಲಕ್ಷ್ಯ ಸಲ್ಲ ಎಂದ ಡಿಸಿಎಂ:

    ಎನ್‌ಐಆರ್‌ಎಫ್‌ ರಾಂಕಿಂಗ್‌- ನಾಕ್‌ ಮಾನ್ಯತೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಬೇಕಾದರೆ, ಹೆಚ್ಚು ಅನುದಾನ ಪಡೆಯಬೇಕಾದರೆ ಕೂಡ ಇವು ಅತ್ಯಗತ್ಯ. ಉನ್ನತ ಶಿಕ್ಷಣವನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸಬೇಕಾದರೆ ಇವೆಲ್ಲ ಅಂಶಗಳು ಅಗತ್ಯ ಎಂದು ಡಿಸಿಎಂ ಹೇಳಿದರು.

    ಸದ್ಯಕ್ಕೆ ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯು ಎನ್‌ಐಆರ್‌ಎಫ್‌ ranking‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೈಸೂರು ವಿವಿ-27, ಬೆಂಗಳೂರು ವಿವಿ-68, ಶಿವಮೊಗ್ಗದ ಕುವೆಂಪು ವಿವಿ-73 ಹಾಗೂ ಬೆಳಗಾವಿಯ ವಿಟಿಯು-80ನೇ ಸ್ಥಾನದಲ್ಲಿವೆ. ಮುಂದಿನ ಬಾರಿ ranking‌ ಪಟ್ಟಿ ಸಿದ್ಧವಾಗುವ ಹೊತ್ತಿಗೆ ಮೈಸೂರು ವಿವಿ 20ರೊಳಗಿನ ಸ್ಥಾನಕ್ಕೆ, ಬೆಂಗಳೂರು ವಿವಿ 50ರೊಳಗಿನ ಸ್ಥಾನಕ್ಕೆ ಬರಬೇಕು. ವಿಟಿಯು ಕೂಡ ಇನ್ನೂ ಉತ್ತಮ ಸ್ಥಾನಕ್ಕೆ ಬರಬೇಕು ಎಂದು ಡಿಸಿಎಂ ಅವರು ಕುಲಪತಿಗಳಿಗೆ ತಾಕೀತು ಮಾಡಿದರಲ್ಲದೆ, ಇದೇ ಪಟ್ಟಿಯಲ್ಲಿ ತುಮಕೂರು ಮತ್ತು ಮಂಗಳೂರು ವಿವಿಗಳು 150ರೊಳಗಿನ ಸ್ಥಾನದಲ್ಲಿವೆ. ಉಳಿದ ಯಾವ ವಿವಿಗಳಿಗೂ ಈ ರಾಂಕ್ (rank) ಸಿಕ್ಕಿಲ್ಲ. ಕೊನೆಯ ಪಕ್ಷ ಅದರ ಚೌಕಟ್ಟಿನೊಳಕ್ಕೆ ಬಂದಿಲ್ಲ ಎಂದರು.

    ಬೋಧನೆ, ಕಲಿಕೆ, ಸಂಪನ್ಮೂಲ ಸಂಗ್ರಹ, ಸಂಶೋಧನೆ ಮತ್ತು ವೃತ್ತಿಪರತೆ, ಫಲಿತಾಂಶ, ಜನರನ್ನು ತಲುಪುವ ರೀತಿ ಹಾಗೂ ಅದೇ ಜನರನ್ನು ಒಳಗೊಳ್ಳುವ ರೀತಿಯೂ ಸೇರಿದಂತೆ ಪ್ರಮುಖ ಐದು ಅಂಶಗಳನ್ನು ಆಧಾರವಾಗಿ ಇಟ್ಟಿಕೊಂಡು ಎನ್‌ಐಆರ್‌ಎಫ್‌ ranking‌ ನೀಡಲಾಗುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    3 ವಿವಿಗಳಿಗೆ ಅರ್ಹತೆಯೇ ಇಲ್ಲ:

    ನಮ್ಮ ರಾಜ್ಯದ ಸರಕಾರಿ ಸ್ವಾಮ್ಯದ 19 ವಿವಿಗಳ ಪೈಕಿ ಎನ್‌ಐಆರ್‌ಎಫ್‌ ranking ಪಟ್ಟಿಯಲ್ಲಿ ಎ-ಅದಕ್ಕಿಂತ ಮೇಲ್ಪಟ್ಟು ಸ್ಥಾನದಲ್ಲಿ 6 ವಿವಿ, ಬಿ-ಎ ಹಂತದಲ್ಲಿ 4 ವಿವಿಗಳಿದ್ದರೆ, ಮಾನ್ಯತೆ ಪಡೆದ 9 ವಿವಿಗಳಿವೆ. ಉಳಿದಂತೆ ಇನ್ನೆರಡು ವಿವಿಗಳು ಅರ್ಜಿ ಹಾಕಿಕೊಂಡಿದ್ದು, ಇನ್ನು 4 ವಿವಿಗಳು ಅರ್ಜಿಯನ್ನೇ ಹಾಕಿಲ್ಲ. 3 ವಿವಿಗಳು ಎನ್‌ಐಆರ್‌ಎಫ್‌ ranking ಅರ್ಹತೆಯನ್ನೇ ಹೊಂದಿಲ್ಲ ಎಂದು ಮಾಹಿತಿಯನ್ನು ಬಿಚ್ಚಿಟ್ಟರು ಡಿಸಿಎಂ.

    ನಾಕ್‌ ಮಾನ್ಯತೆ; 50 ಕಾಲೇಜ್‌ಗಳು ಮಾತ್ರ

    ರಾಜ್ಯದಲ್ಲಿ ಒಟ್ಟು 430 ಕಾಲೇಜ್‌ಗಳಿದ್ದು, ಕೇವಲ 50 ಕಾಲೇಜುಗಳಿಗೆ ಮಾತ್ರ ನಾಕ್‌ ಮಾನ್ಯತೆ ಸಿಕ್ಕಿದೆ. ಕೊನೆ ಪಕ್ಷ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜ್‌ಗಳನ್ನು ನಾಕ್‌ ವ್ಯಾಪ್ತಿಗೆ ತರಬೇಕೆನ್ನುವ ಗುರಿ ಹಾಕಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪ್ರತಿ ವಿವಿ ವ್ಯಾಪ್ತಿಯಲ್ಲೂ ಇಬ್ಬರು ನಾಕ್‌ ಸಂಯೋಜಕರನ್ನು ನೇಮಕ ಮಾಡಲಾಗಿದ್ದು, ಅವರಿಂದ ಕಾಲೇಜ್‌ಗಳಿಗೆ ಕಾರ್ಯಾಗಾರ ಮಾಡಿಸಲಾಗುತ್ತಿದೆ ಎಂದ ಅವರು; ಎ-ಅದಕ್ಕೂ ಮೇಲ್ಪಟ್ಟು 9 ಕಾಲೇಜ್‌, ಬಿ-ಎ ಮಟ್ಟದಲ್ಲಿ 170 ಕಾಲೇಜ್‌ಗಳಿವೆ. ಇನ್ನು ನಾಕ್‌ ಮಾನ್ಯತೆಯನ್ನೇ ಪಡೆಯದ 246 ಕಾಲೇಜ್‌ಗಳಿದ್ದು, ಇದಕ್ಕೆ ಅರ್ಹತೆಯೇ ಇಲ್ಲದ 26 ಕಾಲೇಜ್‌ಗಳಿವೆ. ಸದ್ಯಕ್ಕೆ 9 ಕಾಲೇಜ್‌ಗಳ ನಾಕ್‌ ಮಾನ್ಯತೆಗೆ ಅರ್ಜಿ ಹಾಕಿಕೊಂಡಿದ್ದರೆ, ಉಳಿದ 167 ಕಾಲೇಜ್‌ಗಳಿಗೆ ಅರ್ಹತೆಯೇ ಇಲ್ಲದ ಸ್ಥಿತಿ ಇದೆ. ಇದೆಲ್ಲವನ್ನು ಸುಧಾರಿಸಿ ಮುಂದಿನ ಮೂರು ವರ್ಷಗಳಲ್ಲಿ 230 ಕಾಲೇಜ್‌ಗಳನ್ನು ನಾಕ್‌ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಮುಂತಾದವರು ಪಾಲ್ಗೊಂಡಿದ್ದರು.

    ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಮಾತ್ರ ದೂರ ಶಿಕ್ಷಣ

    ಶೈಕ್ಷಣಿಕವಾಗಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕವು ಇದೀಗ ದೂರ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗಳನ್ನು ತಂದಿದ್ದು, ಇನ್ನು ಮುಂದೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ವಿಶ್ವವಿದ್ಯಾಲಯದ ಭೌತಿಕ ತರಗತಿಗಳ ಆರಂಭಕ್ಕೆ ವರ್ಚಯಲ್‌ ವೇದಿಕೆ ಮೂಲಕ ಬೆಂಗಳೂರಿನಿಂದಲೇ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಮುಂದಿನ ದಿನಗಳಲ್ಲಿ ಆನ್‌ಲೈನ್‌ ಹಾಗೂ ದೂರಶಿಕ್ಷಣ ವ್ಯವಸ್ಥೆಗೆ ಹೆಚ್ಚೆಚ್ಚು ಬೇಡಿಕೆ ಬರಲಿದೆ. ಬದಲಾವಣೆ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಶಿಕ್ಷಣ ನೀಡುವುದು ಸರಕಾರದ ಕರ್ತವ್ಯವೂ ಹೌದು. ಈ ಹಿನ್ನೆಲೆಯಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ತಾಂತ್ರಿಕವಾಗಿ ವಿವಿಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

    ಈಗಾಗಲೇ ದೂರಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯ ಮಾತ್ರ ನೀಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಶಿಕ್ಷಣ ಕಾಟಾಚಾರಕ್ಕಲ್ಲ, ಗಂಭೀರವಾಗಿ ಕಲಿಯಬೇಕು. ಯಾವ ಉದ್ದೇಶಕ್ಕಾಗಿ ಈ ವಿವಿ ಸ್ಥಾಪನೆಯಾಗಿತ್ತೋ ಅದೇ ದಿಕ್ಕಿನಲ್ಲಿ ಮುನ್ನಡೆಸಲಾಗುವುದು. ಅದಕ್ಕಾಗಿ ಸರಕಾರ ಎಲ್ಲ ಸಹಕಾರ ನೀಡಲಿದೆ ಎಂದರು ಉಪ ಮುಖ್ಯಮಂತ್ರಿ.

    ಹಾಜರಾತಿ ಕಡ್ಡಾಯ

    ಕೋವಿಡ್‌ ಬಂದ ಮೇಲೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಿದ್ದರೂ ಕಲಿಯುವ ವ್ಯವಸ್ಥೆ (ಲರ್ನ್‌ ಫ್ರಂ ಎನಿವೇರ್) ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸುಗಳ ಮೂಲಕವಾದರೂ ಕಲಿಯಬಹುದು ಅಥವಾ ಆಪ್‌ಲೈನ್‌ ತರಗತಿಗಳ ಮೂಲಕವಾದರೂ ಕಲಿಯಬಹುದು. ಯಾವುದೇ ಆದರೂ ವಿದ್ಯಾರ್ಥಿಯ ಹಾಜರಾತಿ ಮಾತ್ರ ಕಡ್ಡಾಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬೇಕು

    17,244 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡಲು ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಪ್ರಮಾಣ, ಶ್ಲಾಘನೀಯ ಕೂಡ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ದೂರಶಿಕ್ಷಣಕ್ಕೆ ಯಾವುದೇ ರೀತಿಯ ಗಡಿಗಳು ಇರುವುದಿಲ್ಲ. ಈ ವಿವಿ ರಾಷ್ಟ್ರಮಟ್ಟದಲ್ಲೂ ಬೆಳೆಯಲು ಅವಕಾಶವಿದೆ, ವ್ಯಾಪ್ತಿಯೂ ವಿಸ್ತರಿಸಲಿದೆ. 2022ಕ್ಕೆ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 50,000 ಹಾಗೂ 2023ನೇ ಸಾಲಿಗೆ 1 ಲಕ್ಷ ದಾಟಬೇಕು. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ವಿವಿ ಎಲ್ಲ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವ್ಯಾಪಕವಾದ ಪ್ರಚಾರವನ್ನು ಕೈಗೊಳ್ಳಿ. ಸಾಧ್ಯವಾದರೆ ಪ್ರತಿಷ್ಠಿತ ಅಥವಾ ಜನಪ್ರಿಯ ಸಿಲೆಬ್ರಿಟಿಯೊಬ್ಬರಿಂದ ದೃಶ್ಯ ರೂಪದ ಜಾಹೀರಾತನ್ನು ಸಿದ್ಧಪಡಿಸಿ ಪ್ರಚಾರ ಮಾಡಿ. ವಿಶೇಷ ಅಭಿಯಾನವನ್ನು ಮಾಡಿ. ಆ ಮೂಲಕ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೂ ಒಳ್ಳೆಯ ಶೈಕ್ಷಣಿಕ ಬ್ರ್ಯಾಂಡ್‌ ಆಗಿ ಹೊರಹೊಮ್ಮಲಿ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಡಾ.ಅಶ್ವತ್ಥನಾರಾಯಣ ಸಲಹೆ ಮಾಡಿದರು.

    ಅಷ್ಟೇ ಅಲ್ಲದೆ, ಇತರೆ ವಿವಿಗಳು, ಜಿಟಿಟಿಸಿ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಿ ಎಂದೂ ಡಿಸಿಎಂ ಹೇಳಿದರು.

    ವಿವಿ ಕುಲಪತಿ ಡಾ.ವಿದ್ಯಾಶಂಕರ್‌, ಕುಲಸಚಿವ ಡಾ.ಲಿಂಗರಾಜ ಗಾಂಧಿ, ಮೌಲ್ಯಮಾಪನ ಕುಲಸಚಿವ ಅಶೋಕ ಕಾಂಬ್ಳೆ ಸೇರಿದಂತೆ ವಿವಿಯ ಉನ್ನತ ಅಧಿಕಾರಿಗಳು ಮೈಸೂರಿನಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    error: Content is protected !!