25.5 C
Karnataka
Thursday, November 28, 2024
    Home Blog Page 125

    ಹೂಡಿಕೆಯಲ್ಲಿ ಬಂಡವಾಳ ಸುರಕ್ಷತೆಗೆ ಇರಲಿ ಆದ್ಯತೆ

    ಆರ್ಥಿಕ ಸಾಕ್ಷರತೆಯನ್ನು ಪಡೆಯಲು ಇಂದಿನ ವ್ಯವಸ್ಥೆಯನ್ನರಿತು ಅದಕ್ಕನುಗುಣವಾಗಿ ನಮ್ಮ ಚಿಂತನೆಗಳನ್ನು, ಕಾರ್ಯಗಳನ್ನು, ನಡೆಯನ್ನು ಬದಲಿಸಿಕೊಳ್ಳುವುದು ಹೆಚ್ಚು ಅಗತ್ಯ.

    ದಿನೇ ದಿನೇ ವಿವಿಧ ರೀತಿಯ ನಕಾರಾತ್ಮಕ ನಡೆಗಳು ಪ್ರದರ್ಶಿತವಾಗುತ್ತಿರುವ ಈಗಿನ ದಿನಗಳಲ್ಲಿ ಎಲ್ಲರೂ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಬಯಸುತ್ತಾರೆ. ಅದಕ್ಕೆ ತಕ್ಕಂತೆ ಕಾನೂನಾತ್ಮಕ ಪ್ರಕ್ರಿಯೆಗಳು ಸಹ ಕ್ಲಿಷ್ಟಕರವಾಗಿದ್ದು, ಜನಸಾಮಾನ್ಯರಿಗೆ ಸುಲಭವಂತೂ ಅಲ್ಲ. ಈ ಪರಿಸ್ಥಿತಿಯಲ್ಲಿ ನಿವೃತ್ತರು, ಹಿರಿಯ ನಾಗರಿಕರು, ಮಾಸಿಕ ಅದಾಯ ಅಪೇಕ್ಷಿತರುಗಳ ಅಗತ್ಯತೆಗೆ ಸ್ಪಂದಿಸುವ ಸೂಕ್ತ, ಹಣವನ್ನು ನಿಖರವಾಗಿ ಹಿಂದಿರುಗಿಸಬಲ್ಲ ಯೋಜನೆಗಳು ಅತಿ ವಿರಳವಾಗಿವೆ. ಸರ್ಕಾರಗಳಾಗಲಿ, ಅರ್‌ ಬಿ ಐ ಆಗಲಿ ಜಾರಿಗೊಳಿಸುತ್ತಿರುವ ಸುಧಾರಣಾ ಕ್ರಮಗಳು, ಬದಲಾವಣೆಗಳು ಜನಸಾಮಾನ್ಯರ ಹಿತದಿಂದ ಎಂಬ ಭಾವನೆಯಿದೆ. ಆದರೂ ಗೊಂದಲಮಯ ಸನ್ನಿವೇಶವಂತೂ ಕಡಿಮೆಯಾಗಿಲ್ಲ.

    ಬ್ಯಾಂಕ್‌ ಗಳಲ್ಲಿ ಠೇವಣಿ ಎಂದರೆ ಕೇವಲ ಶೇಕಡ 6ರಷ್ಠು ಬಡ್ಡಿ ಲಭಿಸುತ್ತದೆ. ಸರ್ಕಾರಿ ಕಂಪನಿಗಳಲ್ಲಿ ಬಾಂಡ್‌ ಹೂಡಿಕೆಗೆ ಸುಮಾರು ಶೇಕಡ7 ಸಮೀಪ ಬಡ್ಡಿ ದೊರೆಯುತ್ತದೆ. ಖಾಸಗಿ ಕಂಪನಿಗಳ ಸೆಕ್ಯೂರ್ಡ್‌ ಬಾಂಡ್‌ ಗಳಲ್ಲಿಯೂ ಗ್ಯಾರಂಟಿ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರಿನ ಬೆಲೆಗಳೆಲ್ಲಾ ಗಗನಕ್ಕೆ ಚಿಮ್ಮಿವೆ. ಕೆಲವು ಕಂಪನಿಗಳು ಗಜಗಾತ್ರದ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹಣೆ ಮಾಡುತ್ತಿವೆ.

    ಈ ಸಂಪನ್ಮೂಲ ಸಂಗ್ರಹಣೆಯಲ್ಲಿ ಸಾರ್ವಜನಿಕ ವಲಯದ ಕಂಪನಿಗಳೇನು ಹಿಂದಿಲ್ಲ. ಸಧ್ಯ ತೇಲಿಬಿಟ್ಟಿರುವ ಪವರ್‌ ಫೈನಾನ್ಸ್‌ ಕಂಪನಿಯ ಶೇಕಡ 7.15ರ ಬಾಂಡ್‌ ಗಳೂ ಹೆಚ್ಚಿನ ಬೇಡಿಕೆ ಕಂಡಿರುವುದು ಪೇಟೆಯಲ್ಲಿ ಹರಿದಾಡುತ್ತಿರುವ ಹೆಚ್ಚುವರಿ ಹಣದ ಪ್ರಮಾಣವನ್ನು ತೋರಿಸುತ್ತದೆ. ಸಂಪನ್ಮೂಲ ಸಂಗ್ರಹಣೆ ಮಾಡುತ್ತಿರುವ ಕಾರ್ಪೊರೇಟ್‌ ಗಳು ಕಡಿಮೆ ಬೆಲೆಯಲ್ಲಿ ವಿತರಿಸಲು ಪ್ರಯತ್ನಿಸುತ್ತವೆ. ಠೇವಣಿ / ಹೂಡಿಕೆ ಮಾಡುವವರು ಹೆಚ್ಚುವರಿ ಆದಾಯ ಗಳಿಸಿಕೊಡುವ ಕಂಪನಿಗಳತ್ತ ಸ್ಪರ್ಧಾತ್ಮಕವಾಗಿ ಒಲವು ಮೂಡಿಸಿಕೊಂಡಿದ್ದಾರೆ. ಹಾಗಾಗಿ ಕೆಲವು ಕಳಪೆ ಕಂಪನಿಗಳೂ ತೇಲಿಬಿಡುವ ಠೇವಣಿ ಯೋಜನೆಗಳು ಭಾರಿ ಪ್ರಮಾಣದ ಸಂಗ್ರಹಣೆ ಮಾಡಿಕೊಳ್ಳುತಿರುವುದನ್ನ ಕಾಣಬಹುದು.

    ಜಾಗತೀಕರಣಕ್ಕೂ ಮುಂಚಿನ ದಿನಗಳಲ್ಲಿ ಅನೇಕ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳು ಉತ್ಪಾದನ ವಲಯದ ಕಂಪನಿಗಳ ರೀತಿಯೇ ಗ್ರಾಹಕರಿಂದ ಠೇವಣಿ ಸ್ವೀಕರಿಸುತ್ತಿದ್ದವು. ಅವು ಉತ್ಪಾದನಾ ಕಂಪನಿಗಳಿಗಿಂತ ಸ್ವಲ್ಪ ಮಟ್ಟಿನ ಹೆಚ್ಚಿನ ಬಡ್ಡಿ ನೀಡುತ್ತಿದ್ದವು.ನಂತರ ಬದಲಾದ ಪರಿಸ್ಥಿತಿಯಲ್ಲಿ ಅನೇಕ ಕಂಪನಿಗಳು ಆಪತ್ತಿಗೆ ತುತ್ತಾಗಿ ಠೇವಣಿ ಹಣ ಹಿಂದಿರುಗಿಸುವಲ್ಲಿ ವಿಫಲಗೊಂಡವು. ನಂತರದ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಗಳು ಸಹ ಠೇವಣಿದಾರರ ಹಣ ಹಿಂದಿರುಗಿಸುವಲ್ಲಿ ವಿಫಲಗೊಂಡವು. ಈ ಮಧ್ಯೆ ಅನೇಕ ಪೊಂಜಿ ಯೋಜನೆಗಳೂ ತೇಲಿಬಂದು ಅಮಾಯಕ ಹೂಡಿಕೆದಾರರ ಹಣವನ್ನು ಕರಗಿಸಿವೆ.

    ಈ ಸಂದರ್ಭದಲ್ಲಿ ಕೆಲವು ಕಂಪನಿಗಳ ಉದಾಹರಣೆಗಳನ್ನು ಓದುಗರ ಗಮನಕ್ಕೆ ತರಬೇಕೆನಿಸುತ್ತದೆ.

    ಮಹಾರಾಷ್ಟ್ರ ಅಪೆಕ್ಸ್‌ ಕಾರ್ಪೊರೇಷನ್‌ ಲಿ:ಕರ್ನಾಟಕದ ಬ್ಯಾಂಕಿಂಗ್‌ ಉಗಮ ಜಿಲ್ಲೆಯಲ್ಲಿ ಸ್ಥಾಪಿತವಾಗಿ ಮೂರು ತಲೆಮಾರುಗಳ ಈ ಎನ್‌ ಬಿ ಎಫ್‌ ಸಿ ಕಂಪನಿಯು 2002 ರಲ್ಲಿ ತನ್ನ ಠೇವಣಿದಾರರ ಸುಮಾರು ರೂ.300 ಕೋಟಿಯಷ್ಟರ ಹಣವನ್ನು ಹಿಂದಿರುಗಿಸಲು ಆರ್ಥಿಕ ತೊಂದರೆಗೊಳಗಾಯಿತು ಆಗ ಕಂಪನಿಯು ಸ್ವಯಂಪ್ರೇರಿತವಾಗಿ ತನ್ನ ಠೇವಣಿದಾರರ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸುವದಾಗಿ ನ್ಯಾಯಾಲಯದ ಅನುಮತಿ ಪಡೆದು ಎಲ್ಲಾ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸಿ ನೈತಿಕತೆಯಿಂದ ಮೆರೆಯಿತು.

    ಆದರೆ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಗಳೆಂದು ಕೆಲವು ಕಂಪನಿಗಳು ವಿತರಣೆ ಮಾಡಿದ ಬಾಂಡ್ ಗಳು ಒಂದೆರಡು ವರ್ಷಗಳಲ್ಲೇ ಆಪತ್ತಿಗೆ ಸಿಲುಕಿ ಹೂಡಿಕೆದಾರರಿಗೆ ತೊಂದರೆ ಉಂಟುಮಾಡಿದ ಉದಾಹರಣೆಗಳಿವೆ.

    ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್: 1984 ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ಹೌಸಿಂಗ್‌ ಫೈನಾನ್ಸ್‌ ಕಂಪನಿಯಾದ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ 2015 ರಿಂದ 2018 ರವರೆಗೂ ಹಲವಾರು ಸರಣಿಯ ನಾನ್‌ ಕನ್ವರ್ಟಬಲ್‌ ಬಾಂಡ್‌ ಯೋಜನೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ.

    2019 ಆರಂಭದಲ್ಲಿ ಮಾಧ್ಯಮವೊಂದರಲ್ಲಿ ಈ ಕಂಪೆನಿಯ ಆರ್ಥಿಕ ಸ್ಥಿತಿಗತಿ ಬಗೆ ಪ್ರಕಟವಾದ ವರದಿಯಿಂದಾಗಿ ಷೇರುಪೇಟೆಯಲ್ಲಿ ಇದರ ಷೇರಿನ ಬೆಲೆಗಳು ತರಗೆಲೆಗಳಂತೆ ಉದುರಿಹೋಯಿತು. ಕಂಪನಿಯು ವಿತರಿಸಿದ ರೂ.1,000 ಮುಖಬೆಲೆಯ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ಆರಂಭಿಕ ದಿನಗಳಲ್ಲಿ ಮುಖಬೆಲೆಯ ಸಮೀಪದಲ್ಲಿ ವಹಿವಾಟಾಗುತ್ತಿದ್ದವು. ಆದರೆ ಈ ಸುದ್ಧಿಯು ಅವುಗಳ ಬೆಲೆಯನ್ನೂ ಸಹ ಭಾರಿ ಕುಸಿತಕ್ಕೊಳಪಡಿಸಿದವು. ವಿವಿಧ ಬಡ್ಡಿ ದರಗಳ ಈ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ರೂ.1,000 ದ ಮುಖಬೆಲೆ ಹೊಂದಿದ್ದು ಸಧ್ಯ ರೂ.285 ರ ಸಮೀಪದಿಂದ ರೂ.340 ರ ಅಂತರದಲ್ಲಿ ವಹಿವಾಟಾಗುತ್ತಿವೆ. ಸೆಕ್ಯೂರ್ಡ್‌ ಎಂಬ ಮೋಹಕ ಪದಕ್ಕೆ ಆಕರ್ಷಿತರಾದ ಬಹಳಷ್ಟು ಹೂಡಿಕೆದಾರರು ತಮ್ಮ ಹೂಡಿಕೆಯ ಹಚ್ಚಿನ ಭಾಗವನ್ನು ಕರಗಿಸಿಕೊಂಡಂತಾಗಿದೆ.

    ಹೂಡಿಕೆದಾರರೆಂದರೆ ಕೇವಲ ವ್ಯಕ್ತಿಗಳು ಮಾತ್ರವಲ್ಲ, ಬಹಳಷ್ಟು ಮ್ಯೂಚುಯಲ್‌ ಫಂಡ್‌ ಗಳು, ಹಣಕಾಸಿನ ಸಂಸ್ಥೆಗಳೂ, ಕಾರ್ಪೊರೇಟ್‌ ಗಳೂ ಸೇರಿರುತ್ತವೆ.‌ ಇದರಿಂದ ಸರಪಳಿ ರೀತಿ ವಿವಿಧ ಕಂಪನಿಗಳು ಆಪತ್ತಿಗೊಳಗಾಗಿವೆ. ಈ ಗೊಂದಲ ಇನ್ನು ಮುಂದುವರೆಯುತ್ತಿದ್ದು ಕಂಪನಿಯನ್ನು ಖರೀದಿಸಲು ಕೆಲವು ಪ್ರಖ್ಯಾತ ಕಂಪನಿಗಳು ಪ್ರಯತ್ನಿಸುತ್ತಿವೆ. ಒಂದು ಲಕ್ಷ ಕೋಟಿ ರೂಪಾಯಿಗಳಷ್ಠು ಬಾಧ್ಯತೆಯಿರುವ ಈ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ರೂ.37 ಸಾವಿರ ಕೋಟಿಗೆ ಖರೀದಿಗೆ ಮುಂದಾಗಿದ್ದಾರೆ ಎಂದರೆ ಉಳಿದ ರೂ.63 ಸಾವಿರ ಕೋಟಿ ಹಣವನ್ನು ತುಂಬಲು ಸಾಧ್ಯವಿಲ್ಲವೆಂದಾಯಿತು.
    ಇದು ಇಲ್ಲಿಗೇ ನಿಲ್ಲದೆ, ಈ ಹಾನಿಯು chain ತರಹ ಪಾಸ್ ಆಗಿ ಇತರೆ ಕಂಪನಿಗಳನ್ನು ಸಹ ತೊಂದರೆಗೊಳಗಾಗುವಂತಾಗಬಹುದು.

    ಇದರೊಂದಿಗೆ ಸ್ರೈ ಇನ್‌ ಫ್ರಾಸ್ಟ್ರಕ್ಚರ್‌ ಕಂಪನಿಯೂ ತನ್ನ ಬಾಂಡ್‌ ದಾರರಿಗೆ ಕೊಡಬೇಕಾದ ಬಡ್ಡಿಯಾಗಲಿ, ಮೂಲ ಹೂಡಿಕೆಹಣವನ್ನಾಗಲಿ ಹಿಂದಿರುಗಿಸಲು ಸಾಧ್ಯವಿಲ್ಲದಾಗಿದೆ. ಈ ಕಾರಣ ಈ ವಿಚಾರವು ಆರ್‌ ಬಿ ಐ ನ ಸ್ಪೆಷಲ್‌ ಆಡಿಟ್‌ ಗೆ ಒಳಗಾಗಿದೆ. ಆದ್ದರಿಂದ ಹೂಡಿಕೆ ಮಾಡುವಾಗ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಮಾಡಬೇಕು. ಸ್ವಯಂ ಘೋಷಿತ ಸುರಕ್ಷತೆ ಎಂಬುದು ಶಾಶ್ವತವಲ್ಲ.

    ಆದರೆ ಷೇರುಗಳಲ್ಲಿ ಹೂಡಿಕೆ ಮಾಡಿದಾಗ ಅಪಾಯದ ಅರಿವು ಇರುತ್ತದೆ. ಅಂದರೆ ಹೂಡಿಕೆ ಮಾಡಿದ ಕಂಪನಿಯು ಆಪತ್ತಿಗೆ ಒಳಗಾದಾಗ, ಹಾನಿಗೊಳಗಾದಾಗ ಹೂಡಿಕೆ ಮಾಡಿದ ಷೇರಿನ ಹಣದವರೆಗೂ ಮಾತ್ರ ಜವಾಬ್ಧಾರರಗಿರುತ್ತಾರೆ. ಅದರಂತೆ ಈ ಹಿಂದೆ ಮಜ್‌ ಡಾ ಇಂಡಸ್ಟ್ರೀಸ್‌ಷೇರಿನ ಬೆಲೆ ರೂ.1,400 ರಿಂದ ಜಾರಿ ಶೂನ್ಯವಾದಾಗಲೂ, ಯುನಿಟೆಕ್‌ ಕಂಪನಿ ಷೇರು ರೂ.20ಸಾವಿರದ ಗಡಿಯಿಂದ ಏಕ ಅಂಕಿಗೆ ಬಂದಾಗಲೂ, ಸ್ಟಾರ್‌ ಪ್ರಚಾರಕರ ಕಾರಣ ರೂ.600ಕ್ಕೂ ಹೆಚ್ಚಿದ್ದ ಗೀತಾಂಜಲಿ ಜೆಮ್ಸ್‌ ಷೇರಿನ ಬೆಲೆ ಶೂನ್ಯವಾದಾಗಲು ಯಾರೂ ಪ್ರಶ್ನಿಸಲಿಲ್ಲ, ಕಾರಣ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿಅಪಾಯಕ್ಕೆ ಯಾರೂ ಹೊಣೆಗಾರರಲ್ಲ ಎಂಬುದು ಜಗಜ್ಜಾಹಿರವಾದ ಅಂಶ. ಆದರೆ ನಿಶ್ಚಿತ ಕೂಪನ್‌ ದರದ ಬಾಂಡ್‌ ಗಳನ್ನುವಿತರಿಸಿದಾಗ ಕಂಪನಿ, ಪ್ರವರ್ತಕರು ಜವಾಬ್ಧಾರರಾಗಬೇಕು. ಲಕ್ಷಗಟ್ಟಲೆ ಮುಖಬೆಲೆಯಿರುವ ಬಾಂಡ್‌ ಗಳಲ್ಲಿ ಹೂಡಿಕೆ ಮಾಡಿದವರಿಗೆ ಯಾವುದೇ ರೀತಿಯ ಅಗೋಚರವಾದನಿಯಮಗಳಡಿ write off ಮಾಡುವುದು ನೈತಿಕತೆ ಅಲ್ಲ. ಇಂತಹ ಬೆಳವಣಿಗೆಯನ್ನು ಯೆಸ್‌ ಬ್ಯಾಂಕ್‌, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ ಗಳು ಪ್ರದರ್ಶಿಸಿವೆ.

    ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ ಉತ್ತಮ ಕಂಪೆನಿಗಳ ಷೇರಿನಲ್ಲಿ ಹೂಡಿಕೆಮಾಡುವುದು ಜಾಣತನ ಎನ್ನಬಹುದು. ಉದಾಹರಣೆಗೆ : ಟಾಟಾ ಸ್ಟೀಲ್‌ ಕಂಪನಿ 2010 ರಲ್ಲಿ ರೂ.600 ಕ್ಕೂ ಹೆಚ್ಚಿದ್ದು 2013 ರಲ್ಲಿ ರೂ.195 ರವರೆಗೂ ಕುಸಿದು, 2018 ರಲ್ಲಿ ರೂ.780 ರ ಸಮೀಪಕ್ಕೆ ಜಿಗಿಯಿತು. ಕಳೆದ ಮಾರ್ಚ್‌ ನಲ್ಲಿ ರೂ.251 ರವರೆಗೂ ಕುಸಿದಿದ್ದ ಈ ಷೇರು ಮತ್ತೆ ಈಗ ರೂ.700 ನ್ನು ದಾಟಿದೆ..ಇದೇ ರೀತಿ ಅಗ್ರಮಾನ್ಯ ಕಂಪನಿಗಳಾದ ರಿಲಯನ್ಸ್‌ ಇಂಡಸ್ಟ್ರೀಸ್‌, ಎಸ್‌ ಬಿ ಐ, ಐ ಟಿ ಸಿ, ಎಲ್‌ ಅಂಡ್‌ ಟಿ, ಎಂ ಅಂಡ್‌ ಎಂ ನಂತಹ ಅನೇಕ ಕಂಪನಿಗಳು ಪ್ರದರ್ಶಿಸಿವೆ.

    ಷೇರಿನ ದರಗಳು ಗರಿಷ್ಠದಲ್ಲಿದ್ದಾಗ ಹೊರಬಂದು ಬೆಲೆಗಳು ಕುಸಿತದಲ್ಲಿದ್ದಾಗ ಖರೀದಿಸುವ ಹವ್ಯಾಸವಾದ VALUE PICK- PROFIT BOOK ಹವ್ಯಾಸವನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಭಾರಿ ಸಂಖ್ಯಾ ಗಾತ್ರದ, ಗಜಗಾತ್ರದ ಚಟುವಟಿಕೆಗಿಂತ ಸೀಮಿತ ಸಂಖ್ಯೆಯ ಷೇರುಗಳಲ್ಲಿ ಸುರಕ್ಷಿತ ವಹಿವಾಟು ಸೂಕ್ತ. ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕಾದ ಕಂಪನಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಅಪಾಯ ಕಡಿಮೆ. ಒಂದು ವೇಳೆ ಕಂಪನಿಯು ತೊಂದರೆಯಲ್ಲಿದೆ ಎಂದೆನಿಸಿದಲ್ಲಿ ಲಾಸ್‌ ಬುಕ್‌ ಮಾಡಿಕೊಂಡು ಹೊರಬರಬಹುದು. ಹಾಗೆ ಮಾಡಿದಲ್ಲಿ ಹಾನಿಯ ಅಂಶವು ಸೀಮಿತವಾಗಿರುತ್ತದೆ.

    ಒಟ್ಟಾರೆ ಹೂಡಿಕೆಗೆ ಇದೇ ಯೋಜನೆ ಸುರಕ್ಷಿತ, ಸೂಕ್ತ ಎಂದು ನಿಖರವಾಗಿ ಗುರುತಿಸುವುದು ಅಸಾಧ್ಯ. ಅವುಗಳಲ್ಲಿ ಅಡಕವಾಗಿರುವ ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನಾಧರಿಸಿ, ಸಂದರ್ಭಕ್ಕನುಗುಣವಾಗಿ ನಿರ್ಧರಿಸಬೇಕು. ಅವಶ್ಯವಿದ್ದಲ್ಲಿ ಸೂಕ್ತ ನೈಪುಣ್ಯತೆಯುಳ್ಳವರ ಮಾರ್ಗದರ್ಶನ ಪಡೆಯಬಹುದು. ಬಂಡವಾಳ ಸುರಕ್ಷತೆಗೆ ಇರಲಿ ಆದ್ಯತೆ.

    ಅಪಕೀರ್ತಿವಂತರಾಗಿ ಬಾಳುವುದಕ್ಕಿಂತ ಲೋಕವೇ ಬೆರಗುಗಣ್ಣಿನಿಂದ ನೋಡುವ ಮಕ್ಕಳಾಗಬೇಕು


     ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


     ಪೆತ್ತಬ್ಬೆಗೆ ತಮ್ಮತ್ತಣಿಂ ಅಳಿವಾಯ್ತು-ಮುದ್ದಣನ ‘ರಾಮಾಶ್ವಮೇಧ’ದಲ್ಲಿ ಉಲ್ಲೇಖವಾಗಿರುವ ಮಾತು ಇದು. ಪ್ರಕೃತಿ ವರ್ಣನೆ ಮಾಡುವಾಗ ಕವಿ  ರಸಬಾಳೆಯ ದೊಡ್ಡಗೊನೆಗಳು ಕೆಳಮುಖವಾಗಿ  ಬಾಗಿರುವ ದೃಶ್ಯವನ್ನು  ವರ್ಣಿಸಿದ್ದಾನೆ. “ಬಾಳೆಗೊಂದೇ ಗೊನೆ ಬಾಳಿಗೊಂದೇ ಮಾತು”  ಇರುವ ಹಾಗೆ  ಗೊನೆ ಬಿಟ್ಟ ನಂತರ ಆ ಗಿಡದಿಂದ ಪ್ರಯೋಜನವಿಲ್ಲವೆಂದು  ಕಡಿದುಬಿಡುತ್ತಾರೆ. ಅದನ್ನೇ ಕವಿ “ತಮ್ಮನ್ನು ಹೆತ್ತ ತಾಯಿಗೆ  ತಮ್ಮಿಂದ ಸಾವು ಉಂಟಾಯಿತೆಂದು ನಾಚಿಕೆಯಿಂದ ತಲೆತಗ್ಗಿಸಬೇಕು” ಎನ್ನುತ್ತಾನೆ. ನಾವು ಯಾವ ಕಾಣಿಕೆ ಕೊಟ್ಟರೂ ತಾಯಿಯ ಋಣ ತೀರಿಸಲು ಸಾಧ್ಯವಾಗುವುದಿಲ್ಲ ಅವರೂ ಏನನ್ನೂ ಬಯಸುವುದಿಲ್ಲ. ಅಂಥವರಿಗೆ ಅಪಕೀರ್ತಿ ತಂದು ಬಿಟ್ಟರೆ ಸಹಜವಾಗಿ ಅವರಿಗೆ ನೋವಾಗುತ್ತದೆ.

    ಲೋಕದಲ್ಲಿ ಕೀರ್ತಿವಂತರಾಗಬೇಕೇ ವಿನಃ ಅಪರಾಧಿ ಕೃತ್ಯಗಳಲ್ಲಿ ಸಿಲುಕಿ  ಹೆತ್ತವರನ್ನು ಮುಜುಗರಕ್ಕೆ ಈಡುಮಾಡುವುದು ಸರಿಯಲ್ಲ ಎನಿಸುತ್ತದೆ. ಮಕ್ಕಳ ಸುಖಕ್ಕಿಂತ ದೊಡ್ಡದು ಇನ್ನೊಂದಿಲ್ಲ ಎಂದು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುವ ತಂದೆ ತಾಯಿಗಳಿಗೆ  ಮಕ್ಕಳು ಅವಿಧೇಯರಾಗಿ ಮಾದಕ -ದ್ರವ್ಯ  ಸೇವನೆ, ಸಮಾಜ ವಿರೋಧಿ ಚಟುವಟಿಕೆಗಳಲ್ಲೆಲ್ಲಾ ಭಾಗಿಯಾಗುವುದನ್ನು ಕಂಡಿದ್ದೇವೆ.  ಇಂಥ ವೈರುಧ್ಯವನ್ನು ಮುದ್ದಣ  ರಾಮಾಶ್ವಮೇಧ ಬರೆಯುವ ಕಾಲಕ್ಕೇ ಗ್ರಹಿಸಿ ಬರೆದಿರುವುದು  ಸಾರ್ವಕಾಲಿಕವಾಗಿದೆ.

    “ಬಾಳೆಗೊಂದೇ ಗೊನೆ ಚೇಳಿಗೊಂದೇ ಬಸುರು”   ಎಂಬಂತೆ ಚೇಳು  ಮರಿಗಳಿಗೆ ಜನ್ಮ ನೀಡುತ್ತಲೆ ಹಸಿವಾದ  ಮರಿಗಳಿಗೆ ತನ್ನ ದೇಹವನ್ನೆ ತಿನ್ನಲು ಬಿಡುತ್ತದೆಯಂತೆ ಹಾಗೆ ತಮ್ಮ ಜೀವದ ಉಸಿರನ್ನು ಬಸಿದು ಸಾಕುವ ನಮ್ಮ ಪೋಷಕರಿಗೆ , ಅವರ ನೆಮ್ಮದಿಗೆ “ಭಂಗ ತರಬಾರದು”  ಎಂಬ ನೀತಿ ಇಲ್ಲಿದೆ.

    “ಬಾಳೆಗೊಂದೇ ಗೊನೆ ಬಾಳಿಗೊಂದೇ ಮಾತು”   ಎಂಬ  ಮಾತಿನಂತೆ ನಡೆದುಕೊಂಡರೆ. ಹೆತ್ತವರಿಗೆ ನಮ್ಮಿಂದಲೇ  ಹಾನಿಯಾಯಿತು ಎಂಬ ಪಾಪಪ್ರಜ್ಞೆಯಿಂದ ದೂರವಿರಬಹುದು. ಮಕ್ಕಳಾಗಿ ಹೆತ್ತವರಿಗೆ ಮಾನಸಿಕವಾಗಿ ಹಿಂಸೆ, ದೈಹಿಕ ಹಿಂಸೆ ಕೊಡುವ   ಅನೇಕ  ಉದಾಹರಣೆಗಳನ್ನು ಕಂಡಿದ್ದೇವೆ.  ಮಕ್ಕಳಂತೆ ಹತ್ತವರನ್ನು ನೋಡಿಕೊಳ್ಳುವ  ಮಕ್ಕಳೂ ಇದ್ದಾರೆ. “ಇಂಥವರ ಮಕ್ಕಳು ಒಳ್ಳೆಯವರು, ಲೋಕೋತ್ತರ ಕೆಲಸ ಮಾಡಿದ್ದಾರೆ ಎನ್ನಿಸಿಕೊಳ್ಳಬೇಕು. ಲೋಕದಲ್ಲಿ ಅಪಕೀರ್ತಿವಂತರಾಗಿ ಬಾಳುವುದಕ್ಕಿಂತ  ಲೋಕವೇ ಬೆರಗುಗಣ್ಣಿನಿಂದ ನೋಡುವ ಮಕ್ಕಳಾಗಬೇಕು ಎಂಬುದು “ಪೆತ್ತಬ್ಬೆಗೆ ತಮ್ಮತ್ತಣಿಂ ಅಳಿವಾಯ್ತು” ಮಾತಿನ  ಅನನ್ಯ   ಅರ್ಥ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಗೋವಾ ಚಿತ್ರೋತ್ಸವ:ಉದ್ಘಾಟನಾ ಸಮಾರಂಭಕ್ಕೆ ನಟ ಸುದೀಪ್ ಮುಖ್ಯ ಅತಿಥಿ

    ಜನವರಿ 16ರಿಂದ ಗೋವಾದಲ್ಲಿ ಆರಂಭವಾಗಲಿರುವ 51ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ -IFFI- ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವ ಗೌರವಕ್ಕೆ ಕನ್ನಡದ ಸುಪ್ರಸಿದ್ಧ ನಟ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ. ಬಹುಶಃ ಈ ಗೌರವ ಪಡೆದ ಮೊದಲ ಕನ್ನಡ ನಟ ಸುದೀಪ್ .

    ಈ ಬಾರಿಯ ಚಿತ್ರೋತ್ಸವ ಭೌತಿಕ ಪ್ರದರ್ಶನದ ಜೊತೆ OTTಯಲ್ಲೂ ಪ್ರಸಾರವಾಗಲಿದೆ. ಮಾಸ್ಟರ್ ಕ್ಲಾಸಸ್ ಮತ್ತು ಮಾತು ಕಥೆಗಳು ಚಿತ್ರೋತ್ಸವದ OTTಯಲ್ಲಿ ಪ್ರಸಾರ ಕಾಣಲಿವೆ.

    ಈ ಬಾರಿ 119 ಚಿತ್ರಗಳು ಪ್ರಸಾರ ಕಾಣಲಿದ್ದು ಅದರಲ್ಲಿ 85 ಚಿತ್ರಗಳು ಚಿತ್ರೋತ್ಸವದ ಪ್ರೀಮಿಯರ್. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ನಾಳೆ ಪಣಜಿಯ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

    ಲಿಂಗದೇವರು ಅಭಿನಂದನೆ : ಚಿತ್ರೋತ್ಸವದ ಮುಖ್ಯ ಅತಿಥಿಯ ಗೌರವಕ್ಕೆ ಪಾತ್ರರಾದ ನಟ ಸುದೀಪ್ ಅವರನ್ನು ಕಳೆದ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಮತ್ತು ಹೆಸರಾಂತ ನಿರ್ದೇಶಕ ಬಿ ಎಸ್ ಲಿಂಗದೇವರು ಅಭಿನಂದಿಸಿದ್ದಾರೆ.

    ಪ್ರಥಮ ಪಿಯು ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ;ಶೀಘ್ರ ನಿರ್ಧಾರ ಎಂದ ಸುರೇಶ್ ಕುಮಾರ್

    ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಪೋಷಕರ ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪದವಿಪೂರ್ವ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಬೇಕೆಂದು ವಿವಿಧ ಜಿಲ್ಲೆಗಳ ಪ್ರಾಚಾರ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

    ದ್ವಿತೀಯ ಪಿಯು ತರಗತಿಗಳ ಆರಂಭದ ಪ್ರಗತಿ ಕುರಿತು ಬುಧವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಆಯ್ದ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯು ತರಗತಿಗಳನ್ನು ತಕ್ಷಣವೇ ಆರಂಭಿಸಬೇಕೆಂದು ಆಗ್ರಹಿಸಿದರು.

    ಪ್ರಾಚಾರ್ಯರ ಎಲ್ಲ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪ್ರಥಮ ಪಿಯು ತರಗತಿ ಆರಂಭಿಸುವ ಕುರಿತು ತಮ್ಮ ಇಲಾಖೆ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದರು.

    ಈಗಾಗಲೇ ಪದವಿ ತರಗತಿಗಳು ಪೂರ್ಣವಾಗಿ ಆರಂಭವಾಗಿವೆ. ಶಾಲಾರಂಭದ ನಂತರ ತಾವು ಈತನಕ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದಾಗ ಶಾಲಾರಂಭ ಕುರಿತು ಮಕ್ಕಳು ಮತ್ತು ಪೋಷಕರು ಉತ್ಸುಕರಾಗಿದ್ದು, ಶಾಲೆಗಳ ವಾತಾವರಣ ಮತ್ತು ಸುರಕ್ಷತೆ ಕುರಿತು ಭರವಸೆ ಮೂಡಿರುವುದರಿಂದ ಪ್ರಥಮ ಪಿಯು ಮತ್ತು 8 ಹಾಗೂ 9ನೇ ತರಗತಿಗಳನ್ನು ಆರಂಭಿಸಬೇಕೆಂಬ ಒತ್ತಾಯಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

    ಶಾಲಾ ತರಗತಿಗಳನ್ನು ಆರಂಭಿಸಲು ಮತ್ತು ಪರೀಕ್ಷೆಯ ಮೂಲಕವೇ ಉತ್ತೀರ್ಣರಾಗಬೇಕೆಂಬುದು ಎಲ್ಲ ಮಕ್ಕಳ ಬಯಕೆಯಾಗಿದೆ. ಪರೀಕ್ಷೆಗಳಿಲ್ಲದೇ ಪಾಸಾಗುವುದನ್ನು ಬಹುತೇಕ ವಿದ್ಯಾರ್ಥಿಗಳು ಬಯಸುವುದಿಲ್ಲ. ಪರೀಕ್ಷೆ ಮೂಲಕವೇ ತಮ್ಮ ಸಾಮರ್ಥ್ಯ ಪ್ರಕಟಿಸಬೇಕೆಂಬುದೇ ಪ್ರತಿಯೊಬ್ಬರ ಇಚ್ಛೆಯಾಗಿರುವುದರಿಂದ ಶಾಲೆಗೆ ಭೌತಿಕವಾಗಿ ಹಾಜರಾಗಲು ನಾಡಿನ ಮಕ್ಕಳು ಇಚ್ಛಿಸುತ್ತಿದ್ದಾರೆ. ಇದು ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾದ ಕಂಡುಕೊಂಡ ಸತ್ಯವಾಗಿದೆ ಎಂದು ಸುರೇಶ್ ಕುಮಾರ್ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.

    ಇದು ಸಂಕಷ್ಟ ಮತ್ತು ಸವಾಲಿನ ಸಮಯವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಇದಾಗಿದೆ. ಮಕ್ಕಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು, ಪ್ರಾಚಾರ್ಯರು ನಿಗದಿತ ಪಠ್ಯಾಂಶ ಪೂರ್ಣಗೊಳಿಸಲು ಹೆಚ್ಚಿನ ಸಮಯ ನೀಡುವುದರೊಂದಿಗೆ ಮಕ್ಕಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. ಕೋವಿಡ್‍ನಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸರ್ಕಾರ ಯಾರೊಬ್ಬರಿಗೂ ವೇತನವನ್ನು ಕಡಿಮೆ ಮಾಡಿಲ್ಲ, ಸವಲತ್ತುಗಳನ್ನು ವ್ಯತ್ಯಯ ಮಾಡಿಲ್ಲ, ಹಾಗಾಗಿ ನಾವೆಲ್ಲರೂ ಇಂತಹ ಸವಾಲಿನ ಸಮಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ ಎಂದು ಸಚಿವರು ಹೇಳಿದರು.

    ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಆರಂಭವಾಗಿವೆ. ಈ ಕುರಿತು ಪ್ರಾಚಾರ್ಯರು ಮಕ್ಕಳಿಗೆ ತಿಳಿ ಹೇಳಬೇಕೆಂದರಲ್ಲದೇ ಪ್ರತಿಯೊಬ್ಬ ಪ್ರಾಚಾರ್ಯರಿಂದ ತಮ್ಮ ಕಾಲೇಜಿನ ಪರಿಸ್ಥಿತಿ, ಮಕ್ಕಳ ಹಾಜರಾತಿ, ಕಾಲೇಜು ಆರಂಭದ ಕುರಿತು ಅಭಿಪ್ರಾಯಗಳನ್ನು ಆಲಿಸಿದರು.

    ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಬಹುತೇಕ ವಿದ್ಯಾರ್ಥಿಗಳು, ಪೋಷಕರು ಪ್ರಥಮ ಪಿಯು ತರಗತಿಗಳನ್ನು ಜ.1ರಿಂದಲೇ ಆರಂಭಿಸಬೇಕಿತ್ತು. ಈಗಾಲಾದರೂ ಪ್ರಥಮ ಪಿಯು ತರಗತಿಗಳನ್ನಕು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರತಿದಿನವೂ ನಮಗೆ ಹಾಗೂ ಉಪನ್ಯಾಸಕರಿಗೆ ಪ್ರಥಮ ಪಿಯು ಆರಂಭಿಸಬೇಕೆಂದು ಒತ್ತಾಯಿಸಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿರುವುದರಿಂದ ಕಾಲೇಜಿಗೂ ಬಂದು ಒತ್ತಾಯಿಸುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ಪುನರ್ಮನನ ತರಗತಿಗಳನ್ನು ನಡೆಸಬೇಕು ಎನ್ನುತ್ತಿದ್ದಾರೆ. ನಾಳೆಯಿಂದಲೇ ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಹಾಗೆಯೇ ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳಂತೆ ಕೂರಿಸಲು ಅನುವಾಗುವಂತೆ ಕೋವಿಡ್ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಿ, ಮಕ್ಕಳು ಮನೆಯಿಂದ ಊಟ-ಉಪಹಾರ ತರಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಎದುರಿಸುವ ಮಕ್ಕಳು ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ಒಟ್ಟಾರೆ ಪಠ್ಯಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿರುವುದರಿಂದ ಪಿಯು ತರಗತಿಗಳು ಮುಖ್ಯವಾಗಿದೆ. ಹಾಗೆಯೇ ಎಲ್ಲ ಪ್ರಾಚಾರ್ಯರು ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂಬ ಪೋಷಕರ ಮತ್ತು ಮಕ್ಕಳ ಒಟ್ಟಾರೆ ಅಭಿಪ್ರಾಯಗಳು ಮತ್ತು ಈ ಸಭೆಯಲ್ಲಿ ವ್ಯಕ್ತವಾದ ಅಂಶಗಳನ್ನು ತಾವು ರಾಜ್ಯ ಕೋವಿಡ್ ತಾಂತ್ರಿಕ ಸಮಿತಿ ಗಮನಕ್ಕೆ ತಂದು ಶೀಘ್ರದಲ್ಲೇ ಪ್ರಥಮ ಪಿಯು ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಉಪನ್ಯಾಸಕರ ಕೊರತೆ:ಪರೀಕ್ಷಾವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದೆಂದು ಹೇಳಿದ ಸುರೇಶ್ ಕುಮಾರ್, ಇಂತಹ ವಿಷಮ ಸಂದರ್ಭದಲ್ಲಿ ವಿದ್ಯಾರ್ಥಿ ಕಾಳಜಿಯುಳ್ಳ ಸೇವೆಯಿಂದ ನಿವೃತ್ತಿಯಾಗಿರುವ ಉಪನ್ಯಾಸಕರುಗಳು ಉಚಿತವಾಗಿ ಪಾಠ ಮಾಡಲು ಇಚ್ಛಿಸಿದಲ್ಲಿ ಅವರ ಸನಿಹದ ಕಾಲೇಜುಗಳಲ್ಲಿ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಇಷ್ಟರಲ್ಲಿಯೇ ಎಲ್ಲರಿಗೂ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.

    ಪರೀಕ್ಷಾವಧಿ ಹತ್ತಿರವಾಗುತ್ತಿರುವುದರಿಂದ ಪಠ್ಯಭಾಗವನ್ನು ಪೂರ್ಣಗೊಳಿಸಬೇಕಾದ ಅಗತ್ಯದ ಹಿನ್ನೆಲೆಯಲ್ಲಿ ಈ ಸಂಕಷ್ಟದ ವರ್ಷದ ಮಿತಿಯಲ್ಲಿ ಕಾರ್ಯಭಾರ ಕಡಿಮೆಯಿರುವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವ ಉಪನ್ಯಾಸಕರು ವಾರದ ಮೂರು ದಿನ ಇನ್ನೊಂದು ಕಾಲೇಜಿನಲ್ಲಿ ಬೋಧನೆ ಮಾಡಬೇಕೆಂಬ ಪದವಿ ಪೂರ್ವ ಶಿಕ್ಷಣ ಇಲಾಖೆಯ ಡೆಪ್ಯುಟೇಷನ್ ಸುತ್ತೋಲೆಯನ್ನು ಹಿಂಪಡೆಯಬೇಕೆಂಬ ಉಪನ್ಯಾಸಕರ ಅಗ್ರಹವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಆದರೆ ಉಪನ್ಯಾಸಕರೂ ಸಹ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚಿನ ಶ್ರಮ ವಹಿಸಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.

    ಸಂಚಿತ ನಿಧಿ ಬಳಸಿ:ಶಾಲಾ ಕಾಲೇಜುಗಳ ಸ್ಯಾನಿಟೈಸೇಷನ್ ಮತ್ತು ಶೌಚಾಲಯ ಸ್ವಚ್ಛತೆಯನ್ನು ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಆಯಾ ಮಟ್ಟದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ. ಅಗತ್ಯ ಬಿದ್ದರೆ ಶೌಚಾಲಯ ಸ್ವಚ್ಛತೆ ಹಾಗೂ ಗ್ರೂಪ್-ಡಿ ನೌಕರರ ನೇಮಕಕ್ಕೆ ಕಾಲೇಜು ಖಾತೆಯಲ್ಲಿರುವ ಸಂಚಿತ ನಿಧಿ ಹಣವನ್ನು ಬಳಸಿಕೊಳ್ಳಬಹುದಾಗಿದೆ ಎಂದೂ ಅವರು ಸೂಚಿಸಿದರು.

    ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಪ್ರಥಮ ಪಿಯು ತರಗತಿಗಳೂ ಪ್ರಮುಖವಾಗಿರುವುದರಿಂದ ಪ್ರಥಮ ಪಿಯು ತರಗತಿಗಳನ್ನು ತಡಮಾಡದೇ ಆರಂಭಿಸಬೇಕೆಂದು ಒತ್ತಾಯಿಸಿದರು.

    ಸಭೆಯಲ್ಲಿ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಚಾರ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ಇಲಾಖೆ ನಿರ್ದೇಶಕರಿ ಆರ್. ಸ್ನೇಹಲ್ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಯಾರು ಹಿತವರು ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಂ ಈ ಮೂವರೊಳಗೆ

    ಸಂದೇಶ ಕಳೆಸುವ ಹಾಗು ಉತ್ತರಿಸುವ ಪದ್ಧತಿ ಪ್ರಾಚೀನಕಾಲದಿಂದಲೂ ನಡೆದುಕೊಂಡು ಬಂದಿದೆ.  ಮನುಷ್ಯ ಸಂವೇದನಾ ಶೀಲ.  ತನ್ನ ಸಂವೇದನೆಯನ್ನು ಹಲವಾರು ವಿಧದಲ್ಲಿ ಹಂಚಿಕೊಳ್ಳುವುದು, ಆಯಾ ಕಾಲಕ್ಕೆ ತಕ್ಕಂತೆ ಪರಿಷ್ಕರಿಕೊಳ್ಳುತ್ತಾ ಹೋಗಿದ್ದಾನೆ.  ಮೊದಮೊದಲು   ಹಂಸ ಪಕ್ಷಿ, ಪಾರಿವಾಳ, ಗಿಡುಗ, ತಾಳೆಗರೆ, ತಾಮ್ರ ಹಾಳೆ, ಬಟ್ಟೆ ಲಕೋಟೆ ಯಲ್ಲಿ ಸಂದೇಶ ವಿನಿಮಯ ನೆಡೆಯುತ್ತಿತ್ತು.  ಕೈಗಾರಿಕಾ ಕ್ರಾಂತಿ ಶುರುವಾದ 19ನೇ ಹಾಗು 20ನೇ ಶತಮಾನದಿಂದ ಮಾನವ  ಕಾಗದದಲ್ಲಿ ಪತ್ರ ವ್ಯವಹಾರ  1990ನೆೇ ವರೆಗೆ ನಡೆಸುತ್ತಾ ಬಂದ. ಆ ನಂತರ  ಪತ್ರ ರಹಿತ ಸಂದೇಶ ರವಾನೆ ಹೆಚ್ಚು ಜನಪ್ರಿಯವಾಯಿತು.

    1990 ರ ದಶಕದಲ್ಲಿ ಆವಿಷ್ಕಾರ ಗೊಂಡ ಇ ಮೇಲ್ ಶೀಘ್ರದಲ್ಲಿ ಸಂದೇಶ ವಿನಿಮಯಕ್ಕೆ, ಹೊಸ ರೂಪ ತಂದು ಕೊಟ್ಟಿತ್ತು.   ನಂತರ  ಸಣ್ಣ ಸಂದೇಶ ಸೇವೆ -sms -ಮೊಬೈಲ್ ನಲ್ಲಿ ಪ್ರಾರಂಭ ವಾದಮೇಲೆ ಕಂಪ್ಯೂಟರ್ ಸಹಾಯವಿಲ್ಲದೆ, ಕೈಯಲ್ಲಿರುವ ಮೊಬೈಲ್ ನಲ್ಲೆ ಶೀಘ್ರವಾಗಿ ಸಂದೇಶ ವಿನಿಮಯ ಮತ್ತೊಂದು ಕ್ರಾಂತಿಯನ್ನು ಸೃಷ್ಟಿಸಿತು. ಜೊತೆಗೆ ಒಂದು ಸಂದೇಶಕ್ಕೆ ಇಂತಿಷ್ಟು ಹಣ ನಿಗದಿ ಮಾಡಿ ಅದರಿಂದ ಹೆಚ್ಚು ಆದಾಯವನ್ನು ಸೇವಾ ಪೂರೈಕೆದಾರರಿಗೆ ತಂದು ಕೊಟ್ಟಿತು.  
    ಹೊಸ ಹೊಸ ಆವಿಷ್ಕಾರ ಮಾನವನಿಗೆ ಬಹು ಉಪಯೋಗಿ ಯಾಗತೊಡಗಿದ್ದು ಅಂತರ್ಜಾಲ ಕ್ರಾಂತಿಯ ನಂತರ.  ಅಂತರ್ಜಾಲದ ಮಾಯಾಲೋಕದಲ್ಲಿ ಯಾವುದಿಲ್ಲ ಎನ್ನುವ ಹಂತಕ್ಕೆ ಬಂದಾಗ,  ಹೆಚ್ಚುವೆಚ್ಚವಿಲ್ಲದೆ  ಹೆಚ್ಚು ಹೆಚ್ಚು ಸಂದೇಶಗಳನ್ನೂ  ಕಳುಹಿಸಬಹುದಾದ, ಹೊಸ ವಿಧಾನದ ಭಾಗವಾಗಿ ಅತ್ಯಂತ ವೇಗವಾಗಿ ಎಲ್ಲರ ಮೊಬೈಲ್ ಸೇರಿದ್ದು  ‘ವಾಟ್ಸ್ ಆಪ್ ‘.

    ಮೊದಮೊದಲು ಕೇವಲ ಸಂದೇಶ ರವಾನೆಗೆ ಸೀಮಿತವಾಗಿದ್ದ ಸೇವೆ, ನಂತರದ ದಿನಗಳಲ್ಲಿ ಇಂಟರ್ ನೆಟ್ ಕರೆ, ಇಂಟರ್ ನೆಟ್ ವಿಡಿಯೋ ಕರೆ, ಇಂಟರ್ ನೆಟ್ ಮೂಲಕ ವ್ಯವಹಾರ ನಡೆಸುವಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾಗತೊಡಗಿತು.    ಅದರಂತೆ ಇಂಥಾ ಸಂದೇಶ ರವಾನೆಯಾಗ ಬೇಕಾದರೆ ವೈಯಕ್ತಿಕ ಮಾಹಿತಿ ಸೋರತೊಡಗಿತು ಎನ್ನುವ ಆತಂಕ ಸೃಷ್ಟಿಯಾಯಿತು.  ಕೊನೆಗೆ ಸರ್ಕಾರದ ಆದೇಶದಂತೆ  ಯಾವುದೇ ಸಂದೇಶ ಸೋರಿಕೆ ಯಾಗದಂತೆ ಎಂಡ್ ಟು ಎಂಡ್ encription ಮಾಡಿ ಬಳಕೆದಾರರ ಆತಂಕವನ್ನು ವಾಟ್ಸಪ್ ದೂರ ಮಾಡಿತ್ತು. 

    ಆದರೆ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆತಂಕ ಮೊದಲಿನಿಂದಲೂ ಇದ್ದರೂ ಈಗ ವಾಟ್ಸ್ ಆಪ್ ವ್ಯವಹಾರ ವಿಸ್ತರಿಸಲು, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್ ಬುಕ್ ಗೆ ವಿನಿಮಿಮಯ ಮಾಡಿಕೊಳ್ಳುಲು ಹವಣಿಸುತ್ತಿದ್ದು  ಅದನ್ನು ಒಪ್ಪಿದರೆ ಮಾತ್ರ ಮುಂದೆ ವಾಟ್ಸ್ ಆಪ್ ಉಪಯೋಗಿಸಬಹುದು ಇಲ್ಲವಾದರೆ ಸೇವೆ ಸ್ಥಗಿತ ಗೊಳ್ಳುತ್ತದೆ ಎಂಬ ವಿಷಯ ಗ್ರಾಹಕರನ್ನು ಚಿಂತೆಗೀಡುಮಾಡಿದೆ.   
    ಮುಂದೇನು ಎಂದು ಹುಡುಕುವಾಗ ಎಲ್ಲರ ಕಣ್ಣಿಗೆ ಬಿದ್ದಿದ್ದು  ಹೊಸ ಆಪ್  ‘ಸಿಗ್ನಲ್’  ಹಾಗು ಹಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಉಪಯೋಗಿಸುವ ಆಪ್ ‘ಟೆಲಿಗ್ರಾಂ’. 

    ಯಾರು ಹಿತವರು  ವಾಟ್ಸ್ ಆಪ್,  ಸಿಗ್ನಲ್, ಟೆಲಿಗ್ರಾಂ  ಈ ಮೂವರೊಳಗೆ.  ಬನ್ನಿ, ಈ ಮೂರೂ ಆಪ್ ಹೇಗೆ ಕಾರ್ಯ ನಿರ್ವಹಿಸುತ್ತವೆ ಹಾಗು ಎಷ್ಟರ ಮಟ್ಟಿಗೆ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸುತ್ತವೆ ಹಾಗೂ ಯಾವುದು ಹೆಚ್ಚು ಸುರಕ್ಷಿತ  ಎಂಬುದನ್ನುಅರಿತುಕೊಳ್ಳೋಣ. 

    ಮೇಲೆ ತಿಳಿಸಿದ ಮೂರೂ ಆಪ್ ಗಳು  ನೋಡಲು ಒಂದೇ ತರನಾಗಿದ್ದರೂ  ಅವುಗಳದೇ ಆದ ಅನುಕೂಲಗಳು ಹಾಗು ಅನಾನುಕೂಲಗಳು ಇವೆ.  ಅದಕ್ಕಿಂತ ಹೆಚ್ಚಾಗಿ  ಇಡೀ ಪ್ರಪಂಚದಲ್ಲಿ ಎಲ್ಲರೂ ಸಾಮಾನ್ಯವಾಗಿ  ಉಪಯೋಗಿಸುತ್ತಿರುವುದು   ವಾಟ್ಸ್ ಆ್ಯಪ್.  ಅದರಲ್ಲೂ  ಈಗಾಗಲೇ ತಮ್ಮದೇ ಆದ  ಗ್ರೂಪ್ ಗಳನ್ನು ಮಾಡಿಕೊಂಡು ಬಳಸುತ್ತಿರುವವರು  ಬೇರೆ ಅಪ್ಲಿಕೇಶನ್ ಗಳಿಗೆ ಅಷ್ಟು ಬೇಗ ಬದಲಾಯಿಸಿಕೊಳ್ಳುವುದು ಸುಲಭವಲ್ಲ. 

    ನಾವು ಒಪ್ಪಿದ  ನಿಯಮಗಳು ಹಾಗು ಷರತ್ತುಗಳ ಪ್ರಕಾರ ಸಧ್ಯ  ವಾಟ್ಸ್ ಪ್  ಕೆಳಗಿನ ನಮ್ಮ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ ಉಪಯೋಗಿಸುತ್ತಿದೆ. ಹೆಸರು, ವಯಸ್ಸು, ಇಮೇಲ್ ಐಡಿ, ಜೆಂಡರ್,  ಫೋನ್ ನ ಡಿವೈಸ್ ಐಡಿ, ಲೊಕೇಶನ್ ಐಡಿ,  ಪೇಮೆಂಟ್ ಯಾವ್ಯಾವ ರೀತಿ ಮಾಡಿದ್ದೀರಿ ಅನ್ನೋ ವಿಷಯ  ,  ಕೊಂಡು ವಸ್ತುಗಳ ವಿವರ ಹಾಗು ಇತಿಹಾಸ, ಜಾಹಿರಾತಿನ ವಿಷಯ  ನಮಗೆ ಅರಿವಿಲ್ಲದಂತೆ ದಿನ ನಿತ್ಯ ಕ್ರೋಢೀಕರಿಸುತ್ತದೆ. ಜೊತೆಗೆ ವಾಟ್ಸ್  ಆಪ್  ಫೇಸ್ ಬುಕ್ ನ  ಅಂಗ ಸಂಸ್ಥೆಯಾಗಿರುವುದರಿಂದ  ನಿಮ್ಮ ಎಲ್ಲಾ ಮಾಹಿತಿ ಫೇಸ್ ಬುಕ್ ಜೊತೆ ವಿನಿಮಯ ಮಾಡಿಕೊಳ್ಳುವುದಾಗಿ ಹೇಳುತ್ತಿದೆ. ಅದಕ್ಕೆ ಒಪ್ಪಿದರೆ ಸೇವೆ ಮುಂದರಿಯಲಿದೆ ಎನ್ನುತ್ತದೆ.  ಫೇಸ್ ಬುಕ್ ಸಾಮಾಜಿಕ ಜಾಲ ತಾಣವಾಗಿರುವುದರಿಂದ ತಮ್ಮ ವೈಯಕ್ತಿಕ ಗೋಪ್ಯತೆಗೆ ಅಪಾಯ ಎಂಬುದು ಕೆಲ ತಜ್ಞರ ಅಭಿಪ್ರಾಯ. 

    ಒಂದು ಉದಾಹರಣೆ ಕೊಡುವುದಾದರೆ:  ಇಂದು ನೀವು ವಾಟ್ಸ್ ಆಪ್ ನಲ್ಲಿ ಯಾವೊದೋ ಒಂದು ವಸ್ತುವನ್ನು ಕೊಂಡುಕೊಳ್ಳಲು ಸಂದೇಶ ಕಳುಹಿಸಿದರೆ ಆ ವಿಷಯ ಫೇಸ್ ಬುಕ್ ಜೊತೆ ಹಂಚಿಕೆಯಾಗಬಹುದು. ಆಗ ನಿಮ್ಮ ಫೇಸ್ ಬುಕ್ ಖಾತೆಗೆ ಅಲ್ಲಿ, ನೀವು ಹುಡುಕಿದ/ ಹುಡುಕುವ ವಸ್ತುಗಳ ಮಾರಾಟಗಾರರ ಹಲವಾರು advertisements ಲಿಂಕ್ ಗಳು  ಬರಲು ಪ್ರಾರಂಭಿಸುತ್ತವೆ.  ಒಂದು ಪಕ್ಷ ಆ ವಸ್ತು ಕೊಂಡರೆ, ಯಾವ ವಸ್ತು ಎಷ್ಟು ಹಣ ಕೊಟ್ಟು ಕೊಂಡಿರಿ, ಯಾವ ಬ್ಯಾಂಕ್ ಯಿಂದ ಆ ಹಣ ವರ್ಗಾವಣೆಯಾಯಿತು ಹಾಗು ತಿಂಗಳಿಗೆ ಎಷ್ಟು ಈ ರೀತಿ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಮತ್ತೆ ತಿಂಗಳಿಗೆ ಎಷ್ಟು ಹಣ ವ್ಯಯಿಸುತ್ತಾರೆ ಎಂಬುವುದನ್ನು  ಅತಿ ಸುಲಭವಾಗಿ ತಿಳಿದುಕೊಳ್ಳಬಹುದು. ಜೊತೆಗೆ ಈ ತಿಂಗಳಲ್ಲಿ ನೀವು ಯಾವ ಯಾವ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೀರಿ, ಎಷ್ಟು ಹೊತ್ತು ಇದ್ದೀರಿ ಎಂಬುದು ನಮಗೆ ಅರಿವಿಲ್ಲದಂತೆ ಈ ಆ್ಯಪ್ ಗಳು ಸಂಗ್ರಹಿಸುತ್ತವೆ. 

    ಬಿಸ್ನಸ್ ಅಕೌಂಟಿಗೆ ಸಂಬಂಧಿಸಿದಂತೆ ಮಾತ್ರ ಪಾಲಿಸಿ ಬದಲಾಗುತ್ತದೆ . ತಾನು ಯಾರ ವೈಯಕ್ತಿಕ ಮಾಹಿತಿಯ ಬಗ್ಗೆಯೂ ತಲೆ ಹಾಕುವುದಿಲ್ಲ ಎಂದು ವಾಟ್ಸ್ ಪ್ ಹೇಳುತ್ತಿದೆ. ಕೇವಲ ಬಿಸಿನೆಸ್ ಗೆ ಸಂಬಂಧಿಸಿದ ಅಕೌಂಟ್ ಗಳ ಬಗ್ಗೆ ಮಾತ್ರ ಹೊಸ ನಿಯಮ ಅಪ್ಲೆಯಾಗುತ್ತದೆ. ಅದು ಕೂಡ ಬಿಸ್ನೆಸ್ ಗೆ ಹೆಲ್ಪ್ ಮಾಡಲು ಎಂದು ವಾಟ್ಸಾಪ್ ಹೇಳುತ್ತಿದೆ. ಈಗ ವಾಟ್ಸಾಪ್ ಏನು ಹೇಳುತ್ತಿದೆ ನೋಡಿ.

    ಅದಕ್ಕೀಗ ಪ್ರತಿಸ್ಪರ್ಧಿಯಾಗಿ ಬಂದಿರುವ ಸಿಗ್ನಲ್ ತಾನು ಯಾವುದೇ ಮಾಹಿತಿ ಹಂಚುವುದಿಲ್ಲ ಹಾಗೂ ಸಂಗ್ರಹಿಸುವುದೂ ಇಲ್ಲ ಎಂದು ಹೇಳುತ್ತಿದೆ. ಯಾರಿಗೆ ಗೊತ್ತು ಮುಂದೆ ಅದು ಯಾವ ದಾರಿ ಹಿಡಿಯುವುದೋ. ವಾಟ್ಸಪ್ ಕೂಡ ಗೋಪ್ಯತೆ ವಿಚಾರದಲ್ಲಿ ಬಳಕೆದಾರರು ಆತಂಕ ಪಡಬೇಕಿಲ್ಲ ಎಂದಿದೆ.

    ವಾಟ್ಸಾಪ್ ಡಿವೈಸ್ ಐಡಿ, ಯೂಸರ್ ಐಡಿ, ಫೋನ್ ನಂಬರ್, ಇ ಮೇಲ್, ಕಂಟಾಕ್ಟ್ಸ್, ಅಡವರ್ಟೈಸಿಂಗ್ ಡಾಟಾ, ಪೇ ಮೆಂಟ್ ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸುತ್ತದೆ. ಸಿಗ್ನಲ್ ನಿಮ್ಮ ಪೋನ್ ನಂಬರನ್ನು ಮಾತ್ರ ಸಂಗ್ರಹಿಸುತ್ತದೆ. ಟೆಲಿಗ್ರಾಮ್ ಯೂಸರ್ ಐಡಿ ಮತ್ತು ಫೋನ್ ನಂಬರ್ ಮಾತ್ರ ಸಂಗ್ರಹಿಸುತ್ತದೆ. ಇವೆರಡಕ್ಕೆ ಹೋಲಿಸಿದರೆ ವಾಟ್ಸಾಪ್ ಸಂಗ್ರಹಿಸುವ ಡೇಟಾ ಹೆಚ್ಚು.

    ಟ್ವಿಟರ್ ನಲ್ಲಿ ಹರಿದಾಡುತ್ತಿರುವ ಈ ಮಾಹಿತಿ ನೋಡಿ

    ವಾಟ್ಸಪ್ ನ ಹೊಸ ಪಾಲಿಸಿ ಪ್ರಕಟಿಸಿದ ನಂತರ ಟೆಲಿಗ್ರಾಂನ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜನರು ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದನ್ನು ಬಯಸುವುದಿಲ್ಲ ಎಂದು ಟೆಲಿಗ್ರಾಂ ಸಂಸ್ಥಾಪಕ ಪಾವೆಸ್ ದುರವ್ ಹೇಳಿದ್ದಾರೆ. ಅವರ ಪ್ರಕಾರ ಟೆಲಿಗ್ರಾಂ ನಲ್ಲಿ ವೈಯಕ್ತಿಕ ಮಾಹಿತಿ ಸೇಫ್.

    ಹೀಗಾಗಿ ಗೋಪ್ಯತೆಯನ್ನು ಕಾಪಾಡುವ ಮೊಬೈಲ್ ಆಪ್ ಗಳನ್ನೂ, ಸಂದೇಶ ವಿನಿಮಯಕ್ಕಾಗಿ ಉಪಯೋಗಿಸಿದರೆ ಉತ್ತಮ.   ಯಾವ ಆಪ್ ನಮ್ಮ ವೈಯಕ್ತಿಕ ವಿವರ ಸಂಗ್ರಹಿಸುವುದಿಲ್ಲವೋ, ಯಾವ ಆಪ್ ನಮ್ಮ ವಿವರಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲವೋ, ಯಾವ ಆಪ್ ನಾವು ಕಳುಹಿಸುವ ಸಂದೇಶ, ಚಿತ್ರ, ವಿಡಿಯೋ,  ಕಾಲ್ ವಿವರ ಸಂಗ್ರಹಿಸಿ ಇಡುವುದಿಲ್ಲವೋ ಅಂಥಾ ಆಪ್ ಗಳನ್ನೂ ಉಪಯೋಗಿಸುವುದು  ಸುರಕ್ಷಿತ ದೃಷ್ಟಿಯಿಂದ ಉತ್ತಮ. ಭಾರತ ಸರಕಾರ ಈ ಬಗ್ಗೆ ಎದ್ದಿರುವ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಎಳೆಯಬೇಕಿದೆ.

    ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ನೀವೇ ನಿರ್ಧರಿಸಿ. 
    ಯಾರು ಹಿತವರು  ವಾಟ್ಸ್ ಆಪ್,  ಸಿಗ್ನಲ್,  ಟೆಲಿಗ್ರಾಂ  ಈ ಮೂವರೊಳಗೆ. !

    smile please ಅನ್ನುತ್ತಿದ್ದ ಕ್ಯಾಮರಾಮ್ಯಾನ್ ತನ್ನ smile ಅನ್ನೇ ಕಳೆದುಕೊಂಡಿದ್ದಾನೆ

    ಒಳಗೆ ಕಾಲಿಡುತ್ತಿದ್ದಂತೆ ಗೋಡೆ ಶೋಕೇಸು ಟೇಬಲ್ಲಿನ ಗಾಜುಪೀಸಿನ ಅಡಿಯಲ್ಲಿ ಹೀಗೆ ಎಲ್ಲಂದರಲ್ಲಿ ಕಣ್ಣಿಗೆ ರಾಚಿಸುವ ಬಣ್ಣ ಬಣ್ಣದ ತರಹೇವಾರಿ ಗಾತ್ರದ ಚಿತ್ರಪಟಗಳು .

    ವಿವಿಧ ಸ್ಥಳಗಳಲ್ಲಿ , ಸುಪ್ರಸಿದ್ಧ ನಟ ನಟಿಯರೊಂದಿಗೆ , ರಾಜಕೀಯ ಧುರೀಣರೊಂದಿಗೆ , ಕ್ರೀಡಾ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲಾ ರಂಗದ ಸಿಲೆಬ್ರೆಟಿಗಳೊಂದಿಗೆ ಒಬ್ಬಾತ ಆ ಪಟಗಳಲ್ಲಿ ಕಾಣಸಿಗುತ್ತಿದ್ದ . ಆ ವ್ಯಕ್ತಿಯೇ ಆ ಸ್ಟುಡಿಯೋದ ಮಾಲೀಕ ಮತ್ತು ಅದೇ ಕೌತುಕದ ಫೋಟೋ ಸ್ಟುಡಿಯೋ .

    ಹಿಂದೆಲ್ಲಾ ಪ್ರತೀ ಸ್ಟುಡಿಯೋದ ವಿನ್ಯಾಸ ಒಂದೇ ರೀತಿಯಾಗಿದ್ದರೂ ಅದರಲ್ಲಿರುವ ಎರಡು ಕೋಣೆಗಳಲ್ಲಿ ಒಂದು ಡಾರ್ಕ್ ರೂಂ ಎಂದು ಕುತೂಹಲಕಾರಿಯಾಗಿಯೂ ಮತ್ತೊಂದು ಫೋಟೋ ತೆಗೆಸಿಕೊಳ್ಳುವ ರೂಮು ಎಂದು ಆತ್ಯಾಕರ್ಷಕವಾಗಿಯೂ ಇರೋದು. ಒಂದು ನಿಲುವುಗನ್ನಡಿ ಅದರ ಮುಂದೆ ಬಾಚಣಿಗೆ ಜೊತೆಗೊಂದು ಪೌಡರಿನ ಡಬ್ಬ . ಗೋಡೆಗೆ ಇಳಿಬಿಟ್ಟ ಉದ್ದನೆಯ ಕಪ್ಪು ಬಿಳಿ ಮತ್ತು ಆಕಾಶ ನೀಲಿ ರಂಗಿನ ಪರದೆಗಳು .ಒಂದು ಮರದ ಸ್ಟೂಲು ಅದರ ಎದುರಿಗೇ ಸ್ಟ್ಯಾಂಡಿನಲ್ಲಿ ರಾಜನಂತೆ ಕಂಗೊಳಿಸುತ್ತಿದ್ದ ಕಡುಗಪ್ಪು ಕ್ಯಾಮರಾ .

    ನಾವುಗಳು ನಮ್ಮೂರಿನ ಸ್ಟುಡಿಯೋಗೆ ಕಾಲಿಡಲು ಪ್ರಮುಖ ಕಾರಣ ಅಂದ್ರೆ ಅದು ಪಾಸ್‌ಪೋರ್ಟ್ ಸೈಝಿನ ಭಾವಚಿತ್ರ .
    ಶಾಲೆಯ ಪ್ರವೇಶಕ್ಕೆ , ಹೈಸ್ಕೂಲು ಕಾಲೇಜಿನ ಗುರುತಿನ ಚೀಟಿಗೆ . ಲೈಬ್ರೆರಿ ಕಾರ್ಡಿಗೆ , ಬಸ್ ಪಾಸಿಗೆ . ಎಂಪ್ಲಾಯ್ಮೆಂಟ್ ಕಾರ್ಡಿಗೆ . ಹೀಗೆ ಪಾಸ್‌ಪೋರ್ಟ್ ಸೈಝಿನ ಫೋಟೋ ನಮಗೆ ಅತೀ ಜರೂರಿನದ್ದಾಗಿತ್ತು . ಫೋಟೋ ತೆಗೆದು ಮಾರನೆಯ ದಿನ ತೊಳೆದು ಒಣಗಾಕಿ ಅದನ್ನು ಸರಿಯಾದ ಅಳತೆಗೆ ಕತ್ತರಿಸಿ ಕವರಿನಲ್ಲಿ ಹಾಕಿ ಮೂರು ಫೋಟೋಗಳ ಜೊತೆ ಒಂದು ಸಣ್ಣ ಎಕ್ಸ್ ರೇ ಪ್ರತಿಯಂತೆ ಕಾಣುವ ಕಂದು ಬಣ್ಣದ ನೆಗೆಟಿವ್ ಕೊಡುತ್ತಿದ್ದರು .ನಾವು ಆ ನೆಗೆಟೀವನ್ನು ಜೋಪಾನ ಮಾಡಿ ಅದರಲ್ಲಿ ನಮಗೆ ಬೇಕೆಂದಾಗ ಪ್ರಿಂಟ್ ಹಾಕಿಸಿಕೊಳ್ಳುತ್ತಿದ್ದೆವು .

    ಹಿಂದೆಲ್ಲಾ ನೆಂಟರ ಮನೆಗೋ ಸ್ನೇಹಿತರ ಮನೆಗೋ ಒಟ್ನಲ್ಲಿ ಯಾರದೇ ಮನೆಗೆ ಹೋದ್ರು ಅವರ ಮನೆಯ ಗೋಡೆಯ ಮೇಲೆ ಆ ಮನೆಯ ಯಜಮಾನರ ಫೋಟೋ ಮಕ್ಕಳ ಬಾಲ್ಯದ ಫೋಟೋ . ಡ್ರೈವರ್ ಆಗಿದ್ರೆ ಕಾರಿನ ಜೊತೆ . ಕಾರ್ಮಿಕನೋ ಸೈನಿಕನೋ ಪೋಲೀಸೋ ಆಗಿದ್ರೆ ಸಮವಸ್ತ್ರದಲ್ಲಿ ಇರುವ ಫೋಟೋಗಳು , ಇದರ ಜೊತೆಗೆ ಒಂದಷ್ಟು ಫೋಟೋಗಳು ಆಲ್ಬಮ್ಗಳಲ್ಲಿ ಕಾಣಸಿಗುತ್ತಿತ್ತು .

    ಒಂದೊಂದು ಫೋಟೋ ಹಿಂದೆಯೂ ಅದರದ್ದೇ ಆದ ಕತೆಯಿರುತ್ತಿತ್ತು . ಆ ಫೋಟೋ ಎಲ್ಲಿ ತೆಗೆದೆದ್ದು ಅದನ್ನು ತೆಗೆದ ಫೋಟೋಗ್ರಾಫರ್ ಯಾರು ಎಲ್ಲವನ್ನೂ ಆ ಮನೆಯವರು ಹಂಚಿಕೊಳ್ಳುತ್ತಿದ್ದರು .

    ಪ್ರತೀ ಕುಟುಂಬಕ್ಕೊಬ್ಬ ಫೋಟೋಗ್ರಾಫರ್ ಆಪ್ತನಾಗಿರುತ್ತಿದ್ದ . ಮನೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ಮುಂಚೇನೇ ಅವರನ್ನು ಕರೆಸಿ ತಿಂಡಿ ಕಾಫಿ ಮಾಡಿಸಿ. ಒಂದಷ್ಟು ಮುಂಗಡ ಹಣ ನೀಡಿ ಚೆನ್ನಾಗಿ ತೆಗೀಬೇಕಪ್ಪ ಅಂತ ಕಾರ್ಯಕ್ರಮಕ್ಕೆ ಬುಕ್ ಮಾಡಿಕೊಂಡು ಕಳಿಸುತ್ತಿದ್ದರು .

    ಇಂದು ಮೊಬೈಲ್ ಕ್ರಾಂತಿಯಿಂದ ಫೋಟೋ ಸ್ಟುಡಿಯೋಗಳು ಮುಚ್ಚುವ ಹಂತ ತಲುಪಿದ್ದು ಲಕ್ಷಾಂತರ ಫೋಟೋಗ್ರಾಫರ್ಗಳ ಬದುಕು ಅತಂತ್ರವಾಗಿದೆ.ಕ್ಯಾಮರಾ ಕೈಯಲ್ಲಿ ಹಿಡಿದು ಸ್ಮೈಲ್ ಪ್ಲೀಸ್ ಅನ್ನುತ್ತಿದ್ದ ಕ್ಯಾಮರಾಮ್ಯಾನ್ ತನ್ನ ಸ್ಮೈಲನ್ನೇ ಕಳೆದುಕೊಂಡಿದ್ದಾನೆ .

    Photo by Alexander Dummer from Pexels

    ಒಪ್ಪಿಕೊಂಡು ಎಂಎಲ್ ಸಿ ಯಾದವರು ಮಂತ್ರಿಯಾದರು, ಸ್ವಪ್ರತಿಷ್ಠೆಗೆ ಅಂಟಿಕೊಂಡವರು ಹತಾಶರಾದರು

    ಅಶೋಕ ಹೆಗಡೆ

    ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಏನು ಏಕಾದರೂ ಆಗಬಹುದು. ಒಂದೇ ಒಂದು ಘಟನೆ ಎಷ್ಟೆಲ್ಲ ಪರಿಣಾಮಗಳನ್ನು ಉಂಟುಮಾಡಬಹುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಕೈಗೊಂಡಿರುವ ಸಂಪುಟ ವಿಸ್ತರಣೆ ಸಹ ಅಂತಹ ಹಲವು ಪರಿಣಾಮಗಳನ್ನು ಉಂಟುಮಾಡಿದೆ.

    ಹದಿನೇಳು ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಇಬ್ಬರ ಸೋಲಿನ ಬಗ್ಗೆ ಯಡಿಯೂರಪ್ಪನವರಿಗೆ ಸ್ಪಷ್ಟ ಮಾಹಿತಿ ಇತ್ತು. ಹೀಗಾಗಿ ಟಿಕೆಟ್ ನೀಡದೇ ವಿಧಾನ ಪರಿಷತ್ ಸದಸ್ಯರಾಗಿ ಮಾಡುವ ಭರವಸೆ ನೀಡಿದರು.ಒಬ್ಬರು ಅದನ್ನ ಒಪ್ಪಿಕೊಂಡು ಎಮ್ಮೆಲ್ಸಿಯಾಗಿ, ಈಗ ಮಂತ್ರಿಯೂ ಆದರು. ಇನ್ನೊಬ್ಬರು ಸ್ವಪ್ರತಿಷ್ಠೆಗೆ ಕಟ್ಟುಬಿದ್ದು,ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ರಾಜಕೀಯ ಸಂಧ್ಯಾಕಾಲದಲ್ಲಿ ಹತಾಶ ಸ್ಥಿತಿ ತಲುಪಿದ್ದಾರೆ. ಆ ಇಬ್ಬರು ಆರ್.ಶಂಕರ್ ಮತ್ತು ಎಚ್.ವಿಶ್ವನಾಥ್ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

    ಸಂಪುಟದಲ್ಲಿ ಸ್ಥಾನ ಸಿಗದ ಹತಾಶೆಯಿಂದ ವಿಶ್ವನಾಥ್ ಅವರು ಈಗ ಯಡಿಯೂರಪ್ಪ ಮಾತಿಗೆ ನಿಲ್ಲುವ ನಾಯಕ ಅಲ್ಲ ಎನ್ನುತ್ತಿದ್ದಾರೆ. ಹಿಂದೆ ಇದೇ ವಿಶ್ವನಾಥ್ ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ ಎಂದಿದ್ದರು. ಉಪ ಚುನಾವಣೆ ಸ್ಪರ್ಧೆ ಬೇಡವೆಂದರೂ ಹಠಕ್ಕೆ ಬಿದ್ದು ಸ್ಪರ್ಧಿಸಿದರು. ಸೋತರೂ ಯಡಿಯೂರಪ್ಪ ಕೈ ಬಿಡಲಿಲ್ಲ. ಹೇಗೋ ವರಿಷ್ಠರ ಮನವೊಲಿಸಿ ವಿಧಾನ ಪರಿಷತ್‌ಗೆ ನಾಮಕರಣ ಮಾಡಿದರು. ಅದೇ ಯಡಿಯೂರಪ್ಪ ಮಾಡಿದ ತಪ್ಪು. ಎಂಎಲ್ ಸಿ ಆದ ಕಾರಣದಿಂದಲೇ ತಾನೆ ವಿಶ್ವನಾಥ್ ಈಗ ಸಚಿವರಾಗಲು ಆಸೆ ಪಡುತ್ತಿರುವುದು?

    ವಿಶ್ವನಾಥ್‌ಗಿಂತಲೂ ಮುನಿರತ್ನ ಎಷ್ಟೋ ವಾಸಿ ಮತ್ತು ಪ್ರಬುದ್ಧರಂತೆ ಕಾಣಿಸುತ್ತಾರೆ. ವಿಶ್ವನಾಥ್ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತರು, ಮುನಿರತ್ನ ಭಾರಿ ಅಂತರದಿಂದ ಗೆದ್ದರು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮುಕ್ತ ಮನಸ್ಸು ಯಡಿಯೂರಪ್ಪನವರಿಗೂ ಇತ್ತು. ಅದಕ್ಕಾಗಿ ಕೊನೆ ಕ್ಷಣದವರೆಗೂ ಪ್ರಯತ್ನ ಮಾಡಿದರು. ಮುನಿರತ್ನ ವಿರುದ್ಧ ದಾಖಲಾಗಿರುವ ಕೇಸ್ ಇತ್ಯರ್ಥವಾಗವವರೆಗೆ ಕಾಯಲೇಬೇಕು ಎಂದು ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿದ್ದರಿಂದ ಮುಖ್ಯಮಂತ್ರಿ ಸುಮ್ಮನಾಗಬೇಕಾಯಿತು. ಇದೆಲ್ಲವೂ ಅರಿವಿರುವುದರಿಂದ ಮುನಿರತ್ನ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳದೇ ಪ್ರೌಢತೆ ಮೆರೆದಿದ್ದಾರೆ. ಎಲ್ಲ ಸತ್ಯಗಳು ಗೊತ್ತಿದ್ದೂ ವಿಶ್ವನಾಥ್ ವಾಚಾಳಿತನ ತೋರಿಸಿ ತಮ್ಮ ಹಿರಿತನ ಕಡಿಮೆ ಮಾಡಿಕೊಂಡಿದ್ದಾರೆ,

    ವಿಶ್ವನಾಥ್ ಮತ್ತು ಮುನಿರತ್ನ ಅವರ ರಾಜಕೀಯ ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಿದೆ ನಿಜ. ಮುನಿರತ್ನಗೆ ಖುದ್ದು ಮುಖ್ಯಮಂತ್ರಿ ಮಾತ್ರವಲ್ಲದೆ ಪ್ರಭಾವಿ ಶಾಸಕರ ನೈತಿಕ ಬೆಂಬಲವಿದೆ. ವಿಶ್ವನಾಥ್‌ಗೆ ಅತ್ತ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ, ಇತ್ತ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕುಟುಕುತ್ತಿದ್ದಾರೆ. ಮಂತ್ರಿಯಾಗಲಿಲ್ಲ ಎಂಬ ಅವಮಾನಕ್ಕಿಂತ ಅವರ ಟೀಕಾಸ್ತ್ರಗಳನ್ನು ಎದುರಿಸುವುದು ವಿಶ್ವನಾಥ್ ಅವರಿಗೆ ಭಾರಿ ನೋವಿನ ಸಂಗತಿ. ಆದರೆ, ಅವರಿಬ್ಬರನ್ನು ಎದುರು ಹಾಕಿಕೊಂಡಿದ್ದೂ ತಮ್ಮ ನಾಲಗೆಯನ್ನ ಬೇಕಾಬಿಟ್ಟಿ ಬಳಸಿಯೇ ಎನ್ನುವ ಸತ್ಯವನ್ನು ವಿಶ್ವನಾಥ್ ಮರೆಯಬಾರದು. ಈಗಲೂ ಮನಸ್ಸಿಗೆ ತೋಚಿದಂತೆ ಮಾತನಾಡಿದರೆ ಬಾಯಿ ಹರುಕ ನಾಯಕನೆಂಬ ಕುಖ್ಯಾತಿಯನ್ನು ರಾಜಕೀಯ ಜೀವನದ ಕೊನೆಗಾಲದಲ್ಲಿ ಶಾಶ್ವತವಾಗಿ ಅಂಟಿಸಿಕೊಳ್ಳಬೇಕಾಗುತ್ತದೆ ಅಷ್ಟೆ.

    ಸೇಡು ತೀರಿಸಿಕೊಂಡ ಜಾರಕಿಹೊಳಿ

    ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಕಾಳಗದಲ್ಲಿ ಸದ್ಯಕ್ಕೆ ಗೆದ್ದವರು ‘ಸಾಹುಕಾರ್’ ಜಾರಕಿಹೊಳಿ. ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸಲು ಹೋಗಿದ್ದರ ಫಲವನ್ನು ಡಿಕೆಶಿ ಈಗ ಅನುಭವಿಸಬೇಕಾಗಿದೆ. ಡಿಕೆಶಿಗೆ ಟಾಂಗ್ ನೀಡಲೆಂದೇ ಜಾರಕಿಹೊಳಿ ಪಟ್ಟು ಹಿಡಿದು, ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವಂತೆ ನೋಡಿಕೊಂಡರು. ರಾಜಕಾರಣದಲ್ಲಿ ಎಲ್ಲ ಸಮಯದಲ್ಲೂ ಮಾತಿನ ಬಲ, ತೋಳ್ಬಲ ನಡೆಯುವುದಿಲ್ಲ ಎನ್ನುವುದನ್ನು ರಮೇಶ್ ಜಾರಕಿಹೊಳಿ ತೋರಿಸಿಕೊಟ್ಟಿದ್ದಾರೆ.

    ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಯಂತೂ ಆಗಿದೆ. ಮೂರ‍್ನಾಲ್ಕು ತಿಂಗಳಲ್ಲಿ ಸಂಪುಟ ಪುನರ್‌ರಚನೆಯ ಹೊಸ ಜೇನುತುಪ್ಪವನ್ನು ವರಿಷ್ಠರು ಸವರಿ ಹೋಗಿದ್ದಾರೆ. ಈ ನಡುವೆ ಯಡಿಯೂರಪ್ಪನವರಿಗೆ ಸ್ಥಾನ ಭದ್ರತೆಯ ಖಾತರಿ ಸಿಕ್ಕಿದೆ. ಕನ್ನಡಿಗರು ಇನ್ನಾದರೂ ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಬಹುದೇ?

    ನಿನ್ನೆ ಅಕಾಲದ ಹುಚ್ಚು ಮಳೆ, ಇಂದು ಸಂಕ್ರಾಂತಿಯ ಕಿರಣದ ಎಳೆ

    ಷಷ್ಠಿ ಕಳೆದು ತಿಂಗಳಾಗಿದೆ. ನಮ್ಮ ಕಡೆಗೆ ಷಷ್ಠಿ ಅಂದ್ರೆ ಸಣ್ಣ ಹಬ್ಬ ಅಂತೇನು ತಿಳಿಬೇಡಿ. ಅಡುಗೆ ಮೂರೇ ಬಗೆಯಾದರೂ ಅಚ್ಚುಕಟ್ಟು ಜೋರು. ಮನೆಯ ಮೂಲೆ ಮುಡುಕು ಅಟ್ಟ ಸೂರು ಹಿತ್ಲು ಎಲ್ಲಕ್ಕೂ ಪೊರಕೆಯ ಮೂತಿ ಮುಟ್ಟಿಸದಿದ್ದರೆ ಮನಸ್ಸಿಗೆ ಏನೋ ಸಮಾಧಾನವಿಲ್ಲ.
    ಅಚ್ಚುಕಟ್ಟು ಆಯ್ತೋ.ಈ ಭೂಮಿಯ ಒಳಗಿನ ತಿನ್ನಲು ಅರ್ಹವಾದಂತ ಸಕಲ ಗೆಡ್ಡೆಗೆಣಸಿನ ಜೊತೆಗೆ ,ಬಳ್ಳಿಯಲ್ಲಿ ಬೆಳೆಯುವ ಎಲ್ಲ ತರಕಾರಿಗಳೂ , ಮೊಳಕೆ ಬರಿಸಿದ ಕಾಳು ಸೇರಿಸಿ ಕೂಟು ಮಾಡುವುದು ಷ಼ಷ್ಠಿಯ ಸಂಪ್ರದಾಯ. ಹಾಗೆಯೇ ಆಚೀಚೆ ಮನೆಯವರಿಗೆ ತರಕಾರಿ ಹಂಚುವುದು ವಾಡಿಕೆ. ಖಿಚಡಿ, ಷಷ್ಠಿ ಸಾಂಬಾರು ,ಪಾಯಸ ಅವತ್ತಿಗೆ ಸುಬ್ರಹ್ಮಣ್ಯ ನಿಗೆ ನೈವೇದ್ಯ ನಮ್ಮಲ್ಲಿ.ಷಷ್ಠಿ ಕಳೆದು ಸರಾಸರಿ ತಿಂಗಳಿಗೆ ಸಂಕ್ರಾಂತಿ ಬರ್ತದೆ.ಇದು ಹಿಂದೂಗಳಿಗೆ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ.

    ಷಷ್ಠಿ ತಲೆಯಮೇಲೆ ನಾಲ್ಕು ಮಳೆ ಹನಿ ಗ್ಯಾರೆಂಟಿಯಾದರೆ ಅದರ ನಂತರದ ಸಂಕ್ರಾಂತಿಯಲ್ಲಿ ಕರುಳು ಕಳಚಿಬೀಳುವಷ್ಟು ಚಳಿ. ಅದಾಗಿ ತಿಂಗಳಿಗೆ ಬರುವ ಶಿವರಾತ್ರಿಗೆ ಚಳಿ ಶಿವಶಿವ ಅಂತ ಕೈ ಮುಗಿದು ಹೊರಟುಹೋಗುತ್ತೆ ಎಂಬುವುದು ನಮ್ಮ ಗ್ರಾಮೀಣ ಭಾಗದ ಆಡುಮಾತು.ಜನಪದರ ಈ‌ ಮಾತು ತೀರ ಇತ್ತೀಚಿನವರೆಗೂ ಹಾಗೇ ನಡೆಯುತ್ತಿದ್ದು ಜಾಗತಿಕ ತಾಪಮಾನ ಏರಿಳಿತದ ಕಥೆ ಹೇಳ್ತಾ ಓಷನ್ನಿಗೆ ಡಿಪ್ರೆಷನ್ನು ಎನ್ನುವ ನೆವ ಹೇಳ್ತಾ ಭೂಮಿ ತನ್ನ ಋತುಮಾನದ ಕಾಲಾವಧಿಯನ್ನು ರೀಡಿಫೈನ್ನು ರೀಶಫಲ್ಲೂ ಮಾಡಿಕೊಳ್ತಿದೆ.
    ನೆಲ ನಂಬಿ ಬದುಕುವವರಿಗೆ ರಿಧಮಿಕ್ ಆಗಿ ದಿಗಿಲು ಹುಟ್ಟಿಸ್ತಿದೆ.

    ಕಳೆದ ವಾರದ ಪ್ರಳಯ ಸ್ವರೂಪಿ ಮಳೆಯಿಂದ ಕಾಫಿ ಭತ್ತ ಮೆಣಸು ಮಾವು ನೆಲಕ್ಕೆ ಸುರಿದಿವೆ.ಧಾನ್ಯದ ಬೆಳೆಗಳು ತೆನೆಯಲ್ಲೋ ಬಣವೆಯಲ್ಲೋ ಮೊಳಕೆಯೊಡೆದು ವ್ಯರ್ಥ ಆಗ್ತಿದೆ.
    ಜನವರಿ ತಿಂಗಳಲ್ಲಿ ಈ ಪಾಟಿ ಮಳೆ ಬಂದಿದ್ದನ್ನು ಆರೇಳು ದಶಕದಲ್ಲಿ ನೋಡಿದ್ದೇ ಇಲ್ಲ ಎನ್ನುತ್ತಲೇ ಈ ಬಾರಿ ಜನವರಿಯಲ್ಲಿ ಸುರಿದ ಮಳೆಗೆ ರೈತರು ಹೈರಾಣಾಗಿ ಹೋಗಿದ್ದಾರೆ.

    ಆಲೂರು ಸಕಲೇಶಪುರ ಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಕೊಯ್ಲಿನ ಕಾಲ ಇದು.ಈ ಹಾದಿಯಲ್ಲಿ ಹಾದುಹೋಗುವ ನಗರವಾಸಿಗಳ ಕಣ್ಣು ತಾಕುವಷ್ಟು ಕಾಫಿಗಿಡ ಹಣ್ಣಾಗಿ ಬಾಗಿದ್ದವು.ಇದ್ದಕ್ಕಿದ್ದಂತೆ ಜನವರಿಯ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಗಿಡದ ಹಣ್ಣೆಲ್ಲವೂ ಉದುರಿ‌ ಮಳೆ ನೀರಿನೊಂದಿಗೆ ಕೊಚ್ಚಿ ಜಲಮೂಲ ಸೇರಿದೆ.ಸಣ್ಣಕ್ಕಿ ನಾಡು ಅಂತಲೇ ಪ್ರಸಿದ್ಧವಾದ ಆಲೂರಿನಲ್ಲಿ ಕೊಯ್ಲು‌ ಮುಗಿದ ಗದ್ದೆಗಳಲ್ಲಿ ನೀರುನುಗ್ಗಿದೆ. ಒಟ್ಟಿದ್ದ ಬಣವೆಗೂ ,ತೆನೆ ಹರವಿದ ಹೊಲಕ್ಕೂ ಮಳೆ ಬಿದ್ದು ಇಡೀ ವರ್ಷದ ಬೆವರು ವ್ಯರ್ಥ ವಾಗಿದೆ.

    ಈ ಎಲ್ಲದರ ನಡುವೆಯೂ ಕಾಲ ನಿಲ್ಲುವುದಿಲ್ಲ. ಮರೆವು‌‌ ಮನುಷ್ಯನಿಗೆ ವರವೇ ಹೌದು.ಕಂಗಾಲಾಗಿದ್ದ ಬೆಳೆಗಾರರು ರೈತರೂ ಮೂರೇ ದಿನಕ್ಕೇ ಮೈಯನ್ನೂ ಮನಸ್ಸನ್ನೂ ಕೊಡವಿಕೊಂಡು ಮತ್ತೆ ಮಾಮೂಲಿಯಂತಾಗಿದ್ದಾನೆ.

    ಸುಗ್ಗಿಯ ಹಬ್ಬ

    ಸಂಕ್ರಾಂತಿ ಬಹುತೇಕ ಎಲ್ಲ ಊರಿನ ಆಚರಣೆಯಂತೆ ನಮ್ಮಲ್ಲೂ ಸುಗ್ಗಿಯ ಹಬ್ಬ. ಯಾವುದೇ ಹಬ್ಬದ ಆಚರಣೆಯ ಕುರಿತು ಹೇಳಬೇಕೆಂದರೂ ದಶಕಗಳ ಹಿಂದಕ್ಕೆ ಹೋಗಿ ನೆನಪುಗಳನ್ನು ಹಸಿರಾಗಿಸಿಕೊಂಡು ವರ್ತಮಾನಕ್ಕೆ ಬರಬೇಕೆನಿಸುತ್ತದೆ.

    ಭತ್ತದ ಗದ್ದೆಯ ಪ್ರತಿಕೆಲಸಕ್ಕೂ ಈಚೀಚಿನ ವರ್ಷಗಳಲ್ಲಿ ಎಗ್ಗಿಲ್ಲದೇ ಏರುತ್ತಲೇ ಹೋದ ದಿನಗೂಲಿಯ ಜೊತೆಗೆ ಏರಿಕೆಯನ್ನೇ ಕಾಣದ ಬೆಲೆಯಿಂದಾಗಿ ಬಹುತೇಕ ಭತ್ತದ ಗದ್ದೆಗಳು ನಮ್ಮಲ್ಲಿ ಕಾಫಿ ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ. ಉಣ್ಣುವ ಅನ್ನವನ್ನಾದರೂ ಗೊಬ್ಬರ ಸೋಕಿಸದೇ ಬೆಳೆದುಕೊಳ್ಳುವ ಆಸೆಯಿದ್ದವರು ಗದ್ದೆ ಮಾಡುತ್ತಿದ್ದಾರೆ.ಜೊತೆಗೆ ಸಣ್ಣ ರೈತರು ಮುಯ್ಯಾಳಿನೊಂದಿಗೆ ನಾಟಿ ,ಒಕ್ಕಲಾಟ ಮುಗಿಸಿ ಕೊಳ್ಳುವ ಶಕ್ತಿ ಇದ್ದವರು ಗದ್ದೆ ಕೃಷಿ ಮಾಡುತ್ತಿದ್ದಾರೆ ಅಷ್ಟೇ.

    ದಶಕಗಳ ಹಿಂದಕ್ಕೆ ಹೋದರೆ ಆಗ ನಾವೆಲ್ಲರೂ ಆರಂಭ ಮಾಡುತ್ತಿದ್ದೆವು.(ಆರಂಭವೆಂದರೆ ಭತ್ತ ಬೆಳೆಯುವುದು ಎಂಬರ್ಥ ನಮ್ಮಲ್ಲಿ) ಸಂಕ್ರಾಂತಿ ಗೆ ಸರಿಯಾಗಿ ಗದ್ದೆ ಮಾಗಿ ಬಂಗಾರ ವರ್ಣ ತಳೆಯುತ್ತಿದ್ದವು.ಸಂಕ್ರಾಂತಿಯ ದಿನ ಬೆಳಿಗ್ಗೆ ಶುಭ ಸಮಯ ನೋಡಿಕೊಂಡು ಮೂರು ಸೂಡು ಪೈರು ಕುಯ್ದು ಅದನ್ನು ಜಗುಲಿಯಲ್ಲೋ ದೇವರ ಮನೆಯಲ್ಲೋ ಅಲಂಕರಿಸಿದ ಮಣೆಯ ಮೇಲಿಟ್ಟು ಹಾಲುತುಪ್ಪ ಎರೆದು ಗಣಪತಿ ಇಟ್ಟು ಪೂಜಿಸುತ್ತಿದ್ದೆವು.ನಂತರ ಅದನ್ನು ಬಡಿದು ಹಿಡಿಯಷ್ಟು ಅಕ್ಕಿ ಮಾಡಿಕೊಂಡು ಆ ಅಕ್ಕಿಯನ್ನು ಮೊದಲಿಗೆ ಹಾಲಿನಲ್ಲಿ ‌ನೆನೆಹಾಕಿ ಅದರ ಜೊತೆಗೆ ‌ಮತ್ತಷ್ಟು ಅಕ್ಕಿ ಸೇರಿಸಿ ಹಾಲು ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕುದಿಸಿ ಇಳಿಸುವಾಗ ಎರಡು ಅರಿಷಿನದ ಎಲೆ ಹಾಕಿ ಮುಚ್ಚಳ ಮುಚ್ಚಿದರೆ ಘಮಘಮಿಸುವ ಹೊಸಕ್ಕಿ‌ ಪಾಯಸ ನೈವೇದ್ಯಕ್ಕೆ ತಯಾರಾಗ್ತಿತ್ತು.

    ಈಗ ವರ್ತಮಾನಕ್ಕೆ ಬರ್ತೇನೆ.

    ಕಾಲದ ಹಾದಿಯಲ್ಲಿ ಬರುವ ಬದಲಾವಣೆಗಳೆಲ್ಲವನ್ನೂ ಸಹಜವಾಗಿಯೇ ಸ್ವೀಕರಿಸುವುದನ್ನು ನಾವು ಕಲಿಯಬೇಕು.ಹೊರತು ಪಾದದಲ್ಲಿ ಬಿರುಕು ಬೊಕ್ಕೆ ಗ್ಯಾರೆಂಟಿ.

    ಈಗ ಬಹುತೇಕ ಮಧ್ಯಮ ವರ್ಗದ ಮಲೆನಾಡಿಗರು ಭತ್ತ ಬೆಳೆಯುತ್ತಿರುವುದು ಕಡಿಮೆಯಾಗಿದೆ.ನಮ್ಮ ಪರಿಸರದಲ್ಲಿ ಭತ್ತದ ಇಳುವರಿಯೂ ಬಹಳ ಕಡಿಮೆ.ಆರ್ಥಿಕವಾಗಿ ಹೊರೆಯಾಗುವ ಭತ್ತ ಬೆಳೆದು ನವೆದುಹೋಗುವುದು ಬೇಡ ಎನ್ನುವ ನಿರ್ಧಾರಕ್ಕೆ ಎಂಬತ್ತು ಪ್ರತಿಶತ ಗದ್ದೆ ಉಳ್ಳವರು ನಿರ್ಧರಿಸಿಯಾಗಿದೆ. ಇನ್ನೂ ಅಲ್ಲಿ ಇಲ್ಲಿ ಕಾಣುವ ನಾಕಾರು ಗದ್ದೆಗಳಲ್ಲಿ ಈಗೆಲ್ಲಾ ಕಾಣುವ ಹೈಬ್ರೀಡ್ ತಳಿಯಿಂದಾಗಿ ಸಂಕ್ರಾಂತಿಗೂ ಮೊದಲೇ ಭತ್ತ ಕಣ ಸೇರಿಯಾಗಿರುತ್ತದೆ.
    ಹೊಸಭತ್ತದಿಂದ ಮಾಡಿಸಿದ ಹೊಸ ಅಕ್ಕಿಯಿಂದ ಪಾಯಸ ಮಾಡುವುದು ಸಂಕ್ರಾಂತಿ ಯ ವಿಶೇಷ.

    ಈಗ ಕಾಫಿ ಬೆಳೆಗಾರರ ಕಣದಲ್ಲಿ ರೋಬಾಸ್ಟ ಕಾಫಿ ಒಣಗುತ್ತಿರುತ್ತದೆ.ಅಂಗಳದಲ್ಲಿರುವ ಕಾಫಿಯ ರಾಶಿಯ ಎದಿರು ಸಾರಿಸಿ ರಂಗೋಲಿ ಹಾಕಿ ನಡುವೆ ಸಗಣಿಯ ಬೆನವಣ್ಣನನ್ನು ಕೂರಿಸಿ ಗರಿಕೆ ಮತ್ತು ಹೂವುಗಳಿಂದ ಪೂಜೆ ಮಾಡಿ ಗಣಪನಿಗೂ ಬೆಳೆಯ ರಾಶಿಗೂ,ಸೂರ್ಯನಿಗೂ ಹೊಸಕ್ಕಿ ಪಾಯಸ ನೈವೇದ್ಯ ಮಾಡುವುದು ಸಂಕ್ರಾಂತಿ ಯ ಮುಖ್ಯ ಪೂಜಾ ವಿಧಿ.

    ಈ ಹಿಂದೆಲ್ಲಾ ನಮ್ಮಲ್ಲಿ ಸಂಕ್ರಾಂತಿಗೆ ಎಳ್ಳು ಬೆಲ್ಲ ಮಾಡುವುದು ಅಷ್ಟೇನೂ ಬಳಕೆಯಲ್ಲಿರಲಿಲ್ಲ.ನಗರ ಸ್ಪರ್ಶ ದಿಂದ ಈಗ ಎಳ್ಳುಬೆಲ್ಲ ಎಲ್ಲರ ಮನೆಯಲ್ಲೂ ತಯಾರಾಗ್ತದೆ.ಇದರ ಜೊತೆಗೆ ಸಂಕ್ರಾಂತಿಗೆ ವಿಶೇಷವಾಗಿ ಮಾಡುವುದು ಕುಟ್ಟುಂಡಿ.ಅಂದರೆ ಹುಚ್ಚೆಳ್ಳಿನ ಚಟ್ನಿ ಪುಡಿ. ಜೊತೆಗೆ ಅಕ್ಕಿತರಿಯಿಂದ ತಯಾರಿಸುವ ಕಡುಬು.

    ಸಂಕ್ರಾಂತಿ ಪುರುಷ

    ಹಿಂದಿನ ದಿನವೇ ಸಂಕ್ರಾಂತಿ ಪುರುಷನ ಆಗಮನದ ಮಾಹಿತಿ ತಿಳಿದು ಸಂಕ್ರಾಂತಿ ಪುರುಷ ಹುಟ್ಟುವ ಮೊದಲೇ ರಾಶಿ ಪೂಜೆ, ಸೂರ್ಯನ ಪೂಜೆ ಮುಗಿಸಿ ರಾಶಿಯೊಳಗೆ ಎರಡೆರಡು ಕಡುಬು ತೂರಿಸುವುದು ನಮ್ಮಲ್ಲಿ ಸಂಕ್ರಾಂತಿ ಆಚರಣೆ.ಇದಕ್ಕೆ ‘ಕಡುಬು ಸಿಕ್ಕಿಸುವುದು’ ಎನ್ನುತ್ತಾರೆ.
    ಒಳ್ಳೆಯ ಘಳಿಗೆಯಲ್ಲಿ ರಾಶಿಗೆ ಕಡುಬು ಸಿಕ್ಕಿಸುವುದು ಮುಗಿಯಬೇಕು.ಈ ಕಡುಬು ಸಿಕ್ಕಿಸುವುದು ಕೇವಲ ಬೆಳೆಯ ರಾಶಿಗಷ್ಟೇ ಅಲ್ಲ.
    ಗೋದಾಮು ,ಬಳಸುವ ಯಂತ್ರಗಳು, ಕಾಫಿ ತುಂಬಿಸಿದ ಚೀಲಗಳೊಳಗೂ ಇಡುತ್ತಾರೆ.ಇವೆಲ್ಲವೂ ಸಂಕ್ರಾಂತಿ ಪುರುಷ ಮೂಡುವ ಮೊದಲೇ ಮಾಡಿದರೆ ಸಂಕ್ರಾಂತಿ ಆಚರಣೆ ಮುಗಿದಂತೆ.

    ಈ ನಡುವೆ ಸಂಕ್ರಾಂತಿ ಪುರುಷ ನಡುರಾತ್ರಿಯೇನಾದರೂ ಹುಟ್ಟಿದರೆ ಅದರ ಹಿಂದಿನ ಸಂಜೆಯೇ ಕಡುಬು ಸಿಕ್ಕಿಸುವ ವಿಧಿ ಮುಗಿಸಿಕೊಳ್ತೀವಿ.ಹಳ್ಳಿಯಲ್ಲಿ ಎಳ್ಳುಬೀರುವ ಆಚರಣೆ ಇಲ್ಲವಾದರೂ ಹಬ್ಬದ ವಾರದಲ್ಲಿ ಮನೆಗೆ ಬರುವ‌ ಅತಿಥಿಗಳಿಗೆ ಎಳ್ಳುಬೆಲ್ಲದ ಆತಿಥ್ಯ ಗ್ಯಾರೆಂಟಿ.

    ಸಂಕ್ರಾಂತಿಗೆ ವಿಶೇಷವಾಗಿ ಮಡಿಮೈಲಿಗೆಯ ನೇಮಗಳು ಇಲ್ಲ.ಸುಗ್ಗಿಯನ್ನು ಸಂಭ್ರಮಿಸುವುದಷ್ಟೇ ಹಬ್ಬದ ಉದ್ದೇಶ. ಜೊತೆಗೆ ಮಾಗಿಕಾಲಕ್ಕೆ ಪರಿಸರದಲ್ಲಿ ಒಣಹವೆ ಹೆಚ್ಚಿ ದೇಹದ ತೇವಾಂಶ ಇಂಗುವುದರಿಂದ ಅದರ ಮರುಪೂರಣಕ್ಕಾಗಿ ಎಣ್ಣೆ ತುಪ್ಪ ಹೆಚ್ಚಾಗಿ ಬಳಸಿ ಮಾಡುವ ಆಹಾರದ ನೈವೇದ್ಯ ದೇವರಿಗೆ.ದೇವರ ನೆಪದಲ್ಲಿ ನಮಗೂ.ಒಟ್ಟಾರೆ ಒಂದು ಸಾದಾಸೀದ ಸಂಭ್ರಮದ ಹಬ್ಬವಾಗಿ ಸಂಕ್ರಾಂತಿ ನಮ್ಮೂರಿಗೆ ಬಂದು ಹೋಗುತ್ತದೆ.

    ಹುಲುಮಾನವನ ಮೇಲೆ ಮುನಿಯದಿರು

    ಆದರೂ..ಈ ಬಾರಿಯ ಸಂಕ್ರಾಂತಿಗೆ
    ‘ಹುಲುಮಾನವನ ಮೇಲೆ ಮುನಿಯದಿರು ತಾಯೇ’
    ಅಂತ ಪ್ರಕೃತಿಯನ್ನು ಕೇಳಿಕೊಳ್ಳುವುದರ ಜೊತೆಗೆ ಮಣ್ಣು ಮುನಿಯದಂತೆ ನಮ್ಮ ನಡಾವಳಿಗಳಲ್ಲಿ ಬದಲಾವಣೆ ಮಾಡಿಕೊಂಡು ಹಬ್ಬ ಆಚರಿಸುವುದು ನಿಜವಾದ ಸಂಕ್ರಾಂತಿ ಹಬ್ಬದ ಆಚರಣೆ.

    ಉತ್ತರಾಯಣದ ಹೊಸ ಬೆಳಕು
    ನೇಯ್ದ ಬಲೆಯಂತಹ ಬದುಕು
    ನಿನ್ನೆ ಅಕಾಲದ ಹುಚ್ಚು ಮಳೆ
    ಇಂದು ಸಂಕ್ರಾಂತಿಯ ಕಿರಣದ ಎಳೆ
    ಮತ್ತೆಮತ್ತೆ ನಿರೀಕ್ಷೆ
    ಇರಲಿ ಬೆಳಕೇ
    ನಮಗೆ ನಿನ್ನ ಶ್ರೀರಕ್ಷೆ.

    ಎಲ್ಲ ಓದುಗರಿಗೂ ಸಂಕ್ರಾಂತಿಯ ಶುಭಾಶಯಗಳು

    ಕಡಿಮೆ ಹಗಲು , ದೀರ್ಘ ರಾತ್ರಿಯ ಈ ದಿನ

    ಭೂಮಿ ತನ್ನ ಸುತ್ತ ತಾನೇ ತಿರುಗುತ್ತಾ, ಸೂರ್ಯನ ಸುತ್ತ ಸುತ್ತುತ್ತದೆ. ತನ್ನ ಸುತ್ತ ತಿರುಗುವುದರಿಂದ ರಾತ್ರಿ,ಹಗಲುಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಉಂಟಾಗುತ್ತವೆ – ಐದಾರನೇ ತರಗತಿಯಲ್ಲಿ ಇದ್ದಿರಬಹುದು. ಆಗ ತಾನೇ ನಮ್ಮ ಶಾಲೆಗೆ UNICEF -United Nations international Children’s Emergency Fund- ನಮ್ಮಶಾಲೆಗೆ ಮಂಜೂರಾಗಿದ್ದರಿಂದ,ಹಲವಾರು ಬೋಧನಾ ಸಾಮಗ್ರಿಗಳು ಶಾಲೆಗೆ ಬಂದಿದ್ದವು. ಜೊತೆಯಲ್ಲಿ ಮಧ್ಯಾಹ್ನದ ಆಹಾರವಾಗಿ ಹಳದಿಬಣ್ಣದ ಉಪ್ಪಿಟ್ಟನ್ನೂ ಕೊಡುತ್ತಿದ್ದರು.ಎಣ್ಣೆ ಡಬ್ಬದ ಮೇಲೆ,ಒಂದು ತರಹ ಪ್ಲಾಸ್ಟಿಕ್ ಎನ್ನಬಹುದಾದ ರವೆಯ ಚೀಲದ ಮೇಲೆ Made in USSR ಅಂತ ಬರೆದದ್ದನ್ನ ಓದೋದೂ ಒಂದು ಸಂಭ್ರಮ ಆಗ. ಹಾಗೆ ಬಂದ ಸಾಮಗ್ರಿಯಲ್ಲಿ ನಮ್ಮ ಉಂಡೆ ಆಕಾರದ ಭೂಚೆಂಡು(globe) ಒಂದು ಪ್ಲಾಸ್ಟಿಕ್ ಸ್ಟ್ಯಾಂಡ್ ಮೇಲೆ ಒರೆಯಾಗಿ ನಿಂತಿತ್ತು. ಅದನ್ನು ತಿರುಗಿಸಿ ನೋಡೋದೇ ಖುಷಿ ಆಗ. ಅದರ ಮೇಲಿದ್ದ ಓದಲು ಆಗದಂತಹ ಅಕ್ಷರಗಳು, ಅಡ್ಡಡ್ಡ,ಉದ್ದುದ್ದ ನಸುಗಪ್ಪು ಗೆರೆಗಳೂ,ಬಣ್ಣ ಬಣ್ಣದ ಆಕಾರದ ದೇಶಗಳು,ಸಮುದ್ರಗಳು ನನ್ನನ್ನು ಇನ್ನಿಲ್ಲದ ಕುತೂಹಲ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಎಷ್ಟೋ ಸಾರಿ ತುಂಬಾ ಹೊತ್ತು ಅದನ್ನ ನೋಡೋದು ನನ್ನ ನೆಚ್ಚಿನ ಅಭ್ಯಾಸವೂ ಆಗಿಬಿಟ್ಟಿತ್ತು.

    ಇಂತಹ ನನ್ನ ನೆಚ್ಚಿನ ಭೂ ಚೆಂಡನ್ನು ಕೈಯಲ್ಲಿ ಹಿಡಿದು ಒಂದು ದಿನ ಕನ್ನಡ ಮತ್ತು ಸಮಾಜ ವಿಜ್ಞಾನ ಕಲಿಸುತ್ತಿದ್ದ ಶೆಲಿಯಪ್ಪನಹಳ್ಳಿ ಷಣ್ಮುಖಪ್ಪ ಮೇಷ್ಟ್ರು ನನ್ನ ತರಗತಿಗೆ ಬಂದು ಬಿಟ್ಟರು. ನನ್ನ ಸಂಭ್ರಮ ಮತ್ತು ಕುತೂಹಲ ಎಲ್ಲೆ ಮೀರಿತ್ತು.

    ಟೇಬಲ್ಲಿನ ಒಂದು ತುದಿಗೆ ಈ ಭೂಗೋಳವನ್ನು ಇಟ್ಟು, ಮಧ್ಯೆ ಒಂದು ಮೇಣದ ಬತ್ತಿ ಹಚ್ಚಿಸಿ, ಬಾಗಿಲು ಕಿಟಕಿ ಮುಚ್ಚಿಸಿ ಕತ್ತಲು ಮಾಡಿ, ಈ ಮೇಣದ ಬತ್ತಿಯ ಬೆಳಕು ಸೂರ್ಯ ಅಂತ ಹೇಳುತ್ತಾ, ಭೂಚೆಂಡನ್ನು ಮೆಲ್ಲಗೆ ತಿರುಗಿಸಿ ಬೆಳಕು ಬೀಳುವ ಪ್ರದೇಶ ದಿನ ಅಂತಲೂ ಅದರ ಹಿಂದಿದ್ದ ಪ್ರದೇಶ ಕತ್ತಲು ಅಂತಲೂ ಹೇಳಿದರು. ಹಾಗೆಯೇ ತಿರುಗುತ್ತಿದ್ದ ಭೂಚೆಂಡನ್ನು ಮೇಣದ ಬತ್ತಿಯ ಸುತ್ತ ಮೊದಲೇ ಟೇಬಲ್ ಮೇಲೆ ಬರೆದಿದ್ದ ಮೊಟ್ಟೆ ಆಕಾರದ ಗೆರೆಯಗುಂಟ ತಳ್ಳುತ್ತಾ ಒಂದು ರೌಂಡ್ ಹಾಕಿಸಿ, ಇಲ್ಲಿಗೆ ಒಂದು ವರ್ಷ ಆಗುತ್ತದೆ ಅಂತ ಹೇಳಿದರು!

    ಸಾರ್ ಈ ಭೂಚೆಂಡು ನೆಟ್ಟಗಿರದೆ, ಒರೆಯಾಗಿ ಯಾಕೆ ಇದೆ ಅಂತ ಕೇಳಿದ್ದ ನನ್ನ ಬಹುದಿನದ ಕುತೂಹಲದ ಪ್ರಶ್ನೆಗೆ ಅದು ನಿನಗೆ ಈಗ ಹೇಳಿದರೆ ಅರ್ಥ ಆಗಲ್ಲ, ಈಗ ಹಗಲು,ರಾತ್ರಿ,ಋತುಗಳನ್ನು ಮಾತ್ರ ತಿಳಿದುಕೊ. ಮುಂದಿನ ತರಗತಿಗಳಲ್ಲಿ ಅದರ ಬಗ್ಗೆ ಹೇಳುತ್ತಾರೆ ಅಂದದ್ದು ನನಗೆ ನಿರಾಶೆ ಉಂಟು ಮಾಡಿತ್ತು. ಸುಮ್ಮನಾಗದ ನಾನು ಮನೆಯಲ್ಲಿ ಅಪ್ಪನ ತಲೆಯನ್ನೂ ತಿಂದಿದ್ದೆ. ಯಾಕೆ ಹಾಗಿದೆ ಗೊತ್ತಿಲ್ಲ ಆದರೆ ಅದು ಒರೆಯಾಗೇ ಇದೆ ಅಂತ ಖಗೋಳ ಶಾಸ್ತ್ರಜ್ಞರು ಕಂಡು ಕೊಂಡಿದ್ದಾರೆ. ಹಾಗೆ ಇರುವುದರಿಂದಲೇ ಚಳಿಗಾಲ,ಮಳೆಗಾಲ, ಬೇಸಿಗೆ ಕಾಲಗಳು ಭೂಮಿಯ ಮೇಲೆ ಆಗುತ್ತವೆ. ದೇವರೇ ಹಾಗೆ ಮನುಷ್ಯನಿಗೆ ಅನುಕೂಲ ಆಗಲಿ ಅಂತ ಇಟ್ಟು ಬಿಟ್ಟಿದ್ದಾನೆ ಅಂದಿದ್ದರು. ಆ ದೇವರು ಎಲ್ಲಿರಬಹುದು,ಅವನನ್ನೇ ಕೇಳಿಬಿಡುವುದು ಒಳ್ಳೆಯದೇನೋ, ಯಾವಾಗ ನನಗೆ ಕಾಣುತ್ತಾನೋ ಕೇಳಿಬಿಡುತ್ತೇನೆ ಅಂತ ಯೋಚಿಸುತ್ತಾ ಆಗ ಮಲಗುತ್ತಿದ್ದೆ.

    Photo by Alex Andrews from Pexels

    ಮುಂದೆಂದೂ ಮತ್ತೆ ನನ್ನ ತರಗತಿಗಳಲ್ಲಿ ನನ್ನ ನೆಚ್ಚಿನ ಬಣ್ಣ ಬಣ್ಣದ ಭೂಚೆಂಡು ನನಗೆ ಕಾಣಲಿಲ್ಲ. ನಂತರ ಕಲಿತ ಭೂಗೋಳ ತರಗತಿಗಳಲ್ಲಿ ನಕ್ಷೆ ಬಿಡಿಸಿ ಕೇಳುತ್ತಿದ್ದ ದೇಶಗಳ, ಊರುಗಳನ್ನು ಗುರುತಿಸಿ ತೋರಿಸುವುದರಲ್ಲೇ ನನ್ನ ಭೂಗೋಳ ಪಾಠಗಳು ಮುಗಿದು ಹೋಗಿದ್ದವು.

    ಸಿವಿಲ್ ಎಂಜಿನಿಯರಿಂಗ್ 3ನೇ ವರ್ಷದಲ್ಲಿ ಸರ್ವೆಯಿಂಗ್ (surveying) ಅಂತ ಇದ್ದ ವಿಷಯದಲ್ಲಿ Astronomical Survey ಅನ್ನುವ ಭಾಗ ಇತ್ತು. ಸೌರಮಂಡಲದ ನಕ್ಷತ್ರಗಳನ್ನು ಆಧಾರವಾಗಿಟ್ಟುಕೊಂಡು ಭೂಮಿಯ ಮೇಲೆ ಕೆಲವಾರು ಸ್ಥಳಗಳನ್ನು ಗುರುತಿಸಲು ಬೇಕಾಗುವ ಜ್ಞಾನವನ್ನು ಈ ವಿಷಯ ತಿಳಿಸುತ್ತದೆ. ಇದನ್ನು ಕಲಿಯುವಾಗ ಮತ್ತೆ ನನ್ನ ಬಾಲ್ಯದ ಕುತೂಹಲ ಮರುಕಳಿಸಿ ಭೂಗೋಳದ ಆಕಾರ, ಚಲಿಸುವ ಪಥ, ಎಷ್ಟು ಓರೆಯಾಗಿದೆ, ಇದರ ಪರಿಣಾಮ ಏನು ಅನ್ನುವಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು! ಸಿವಿಲ್ ಎಂಜಿನಿಯರ್ ಗಳಿಗೆ ಉತ್ತರ ದಿಕ್ಕು ತುಂಬಾ ಪವಿತ್ರವಾದದ್ದು. ಭೂಮಿಯ ಉತ್ತರ, ಖಗೋಳ ಅಥವಾ ಸೌರಮಂಡಲದ ಉತ್ತರ ಅಂತ ಎರಡು ಉತ್ತರಗಳಿವೆ ಅವುಗಳ ಅಂತರ 23.5 ಡಿಗ್ರಿಗಳು ಅನ್ನುವ ವಿಷಯಕ್ಕೆ ಬುನಾದಿಯೇ ನನ್ನ ಭೂಚೆಂಡಿನ ಓರೆ!!!

    ಭೂಮಿಯು ಸೂರ್ಯನ ಸುತ್ತುವ ಪಥವನ್ನು ,ತನ್ನ ಸುತ್ತ ತಿರುಗುವ ಪರಿಯನ್ನು ಪ್ರಪಂಚದ ಎಲ್ಲ ನಾಗರಿಕತೆಗಳ ಖಗೋಳ ಶಾಸ್ತ್ರಜ್ಞರು ಅಚ್ಚರಿಯ ವಿಷಯವಾಗಿಯೇ ಅಭ್ಯಸಿಸಿ, ತಮ್ಮದೇ ಆದ ಜ್ಞಾನದ ಸಿದ್ದಾಂತವನ್ನು ಮಂಡಿಸಿದ್ದಾರೆ. ಹಾಗಾಗಿಯೇ ಬೇರೆ ಬೇರೆ ಹೆಸರುಗಳಿದ್ದರೂ ವಾರಕ್ಕೆ 7 ದಿನಗಳು, ತಿಂಗಳಿಗೆ 4 ವಾರಗಳು, ವರ್ಷಕ್ಕೆ 12 ತಿಂಗಳುಗಳು ಮತ್ತು 365 ದಿನಗಳು ಎನ್ನುವುದು ಸಾರ್ವತ್ರಿಕವಾಗಿ ಪರಿಗಣಿಸಲಾಗಿದೆ. ಭಾರತೀಯರಾದ ನಮ್ಮ ಖಗೋಳ ಶಾಸ್ತ್ರಜ್ಞರು ಈ ಭೂಮಿಯ ಪಥವನ್ನು 12 ಭಾಗಗಳಾಗಿ ಮಾಡಿ ರಾಶಿಗಳು ಅಂತ ಹೆಸರಿಸಿದ್ದಾರೆ. ಮತ್ತೆ ರಾಶಿಗಳನ್ನು 27 ನಕ್ಷತ್ರಗಳಲ್ಲಿ ವಿಭಾಗಿಸಿದ್ದಾರೆ. ಈ ರಾಶಿಗಳೂ, ನಕ್ಷತ್ರಗಳೂ ಭೂಮಿ ಕ್ರಮಿಸುವ ಪಥದ ಕಾಲಮಾನ ,ಋತುಮಾನ ತಿಳಿಸುವ ಒಂದು ಕಾಲ್ಪನಿಕ ವ್ಯವಸ್ಥೆ. ಭೂಮಿಯ ಮೇಲಿನ ಎಲ್ಲ ಖಗೋಳ ಶಾಸ್ತ್ರಜ್ಞರಿಗಿಂತಲೂ ನಮ್ಮವರು ಹೆಚ್ಚು ನಿಖರತೆಯ ಮಾಪನವನ್ನು ರಾಶಿ,ನಕ್ಷತ್ರ,ಪಾದ ಅಂತ ವಿಂಗಡಿಸಿಕೊಂಡು ಕಂಡುಕೊಂಡಿರುವುದು ನಮಗೆಲ್ಲ ಹೆಮ್ಮೆಯ ಮತ್ತು ಅದ್ಭುತ ವಿಷಯ. ಆ ರೀತಿಯ ಮಾಪನದ ಕಲ್ಪನೆಯೇ ನನಗೆ ಇಂದಿಗೂ ಮೈನವಿರೇಳಿಸುವ ವಿಷಯ. ನಿರಂತರ ಖಗೋಳದ ವೀಕ್ಷಣೆ,ವಿಸ್ಮಯಗಳ ದಾಖಲೆಗಳ ಜೊತೆಗೆ ಇದು ಹೀಗೆಯೇ ಆಗಬೇಕು,ಆಗುತ್ತದೆ ಅನ್ನುವ ನಿಖರತೆಗೆ ಬರುವುದು ಇದೆಯಲ್ಲಾ ಅದು ಇಂದಿನ ಯಾವ ಸಂಶೋಧನೆಗಳಿಗೂ ಮೀರಿದ್ದು.

    ಸೂರ್ಯ ಆ ರಾಶಿಗೆ ಪ್ರವೇಶ ಆದ,ಈ ರಾಶಿಗೆ ಪ್ರವೇಶ ಆದ ಅನ್ನುವುದು ಕಾಲ್ಪನಿಕ. ನಿಜವಾಗಿ ಸೂರ್ಯ ಚಲಿಸುವುದಿಲ್ಲ. ಚಲಿಸುವುದು ಭೂಮಿ. ಭೂಮಿಯ ಚಲನೆಯಿಂದ ಭೂಮಿಯ ಮೇಲಿರುವ ನಮಗೆ ಸೂರ್ಯ ಚಲಿಸಿದಂತೆ ತೋರುತ್ತಾನೆ ಅಷ್ಟೇ. ಬಸ್ಸುಗಳಲ್ಲಿ ಹೋಗುವ ನಮಗೆ ರಸ್ತೆ ಬದಿಯ ಮರ ಗಿಡಗಳು ಓಡುತ್ತಿವೆ ಅನ್ನುವ ಭಾವ ಇದೆಯಲ್ಲಾ ಹಾಗೆ. ನಮ್ಮ ಕಾಲಮಾನದ ವ್ಯವಸ್ಥೆಗಾಗಿ,ನಾವು ಮಾಡಿಕೊಂಡ ಈ ವಿಧಾನದಲ್ಲಿ ಸೂರ್ಯನ ಚಲನೆಯ ವಿಷಯ ನಿಜವಲ್ಲದಿದ್ದರೂ ವ್ಯವಸ್ಥೆಯ ಪರಿಣಾಮ ನಿಜವಾಗಿದೆ ಅನ್ನುವುದು ಇಂದಿನ ಎಂತಹ ತಾರ್ಕಿಕ ಮನಸ್ಸುಗಳನ್ನೂ ಅಚ್ಚರಿಗೊಳಿಸುತ್ತದೆ! ಹಾಗಾಗಿಯೇ ನಮ್ಮವರು ಇದನ್ನು ಭೂಮಿಯ ಪರಿ ಭ್ರಮಣೆ ಅಂದರು.

    ಹೀಗೆ ಭೂಮಿ ಸುತ್ತುವ ಪಥದಲ್ಲಿ ಎರಡು ಕಾಲ್ಪನಿಕ ಸ್ಥಳಗಳು ತುಂಬಾ ಮುಖ್ಯವಾಗಿವೆ. ಯಾಕೆಂದರೆ ಭೂಮಿ ಆ ಸ್ಥಳಗಳಲ್ಲಿ ಬಂದಾಗ ಅಪರೂಪದ ಬದಲಾವಣೆಗಳು ಆಗುತ್ತವೆ. ಆ ಎರಡು ಸ್ಥಳಗಳನ್ನು ನಮ್ಮವರು ಕರ್ಕಾಟಕ ಸಂಕ್ರಮಣ ಮತ್ತು ಮಕರ ಸಂಕ್ರಮಣ ಅಂದಿದ್ದಾರೆ. ಕರ್ಕಾಟಕ ಸಂಕ್ರಮಣದ ದಿನ ವರ್ಷದ ಎಲ್ಲ ದಿನಗಳಿಗಿಂತ ಹೆಚ್ಚು ದೊಡ್ಡದಾದ ದಿನವಾಗಿರುತ್ತದೆ.(13 ಘಂಟೆಗೂ ಮೀರಿ). ಮಕರ ಸಂಕ್ರಮಣದ ದಿನ ಅತಿ ಕಡಿಮೆ ಅವಧಿಯ ದಿನ ಆಗಿರುತ್ತದೆ. ಪಾಶ್ಚಿಮಾತ್ಯರು ಕರ್ಕಾಟಕ ಸಂಕ್ರಮಣವನ್ನು Summer solstice(ದಕ್ಷಿಣಾಯನ) ಅಂತಲೂ ಮಕರ ಸಂಕ್ರಮಣ ವನ್ನು Winter solstice (ಉತ್ತರಾಯಣ) ಅಂತಲೂ ಕರೆದಿದ್ದಾರೆ.

    ಸೂರ್ಯನನ್ನು ಮಧ್ಯೆ ಇಟ್ಟು ಕಲ್ಪಿಸಿಕೊಂಡು ಹೇಳುವುದಾದರೆ, ಮಕರ ಸಂಕ್ರಮಣ ದ ದಿನದಿಂದ ಭೂಮಿ ಮೇಲಕ್ಕೆ ಅಂದರೆ ಉತ್ತರಕ್ಕೆ ಚಲಿಸುತ್ತದೆ. ಹಾಗಾಗಿ ನಮ್ಮವರು ಇದನ್ನು ಉತ್ತರಾಯಣ ಅಂದಿದ್ದಾರೆ. ಹಾಗೆಯೇ ಕರ್ಕಾಟಕ ಸಂಕ್ರಮಣದ ದಿನದಿಂದ ಭೂಮಿ ಕೆಳಕ್ಕೆ ಅಂದರೆ ದಕ್ಷಿಣಕ್ಕೆ ಚಲಿಸುತ್ತದೆ. ಅದಕ್ಕೆ ದಕ್ಷಿಣಾಯಣ ಅಂದಿದ್ದಾರೆ.

    ಜನವರಿ 14 ಮಕರ ಸಂಕ್ರಮಣ. ಸಂಕ್ರಮಣ ಅಂದರೆ ಪ್ರವೇಶ. ಕಲ್ಪನೆಯ ಪಥವನ್ನು 12 ವಿಭಾಗ ಮಾಡಿ ಒಂದೊಂದಕ್ಕೂ ಒಂದು ರಾಶಿ ಹೆಸರು ಇಟ್ಟರಲ್ಲ, ಹಾಗೆ ಇಟ್ಟ ಮಕರ ರಾಶಿಯ ಜಾಗಕ್ಕೆ ಇಂದಿನಿಂದ ಸೂರ್ಯ ಪ್ರವೇಶ ಆಗುತ್ತಾನೆ ಅಂತ ಭಾಸ ಮಾಡಿಕೊಂಡಿರುವುದು.

    ನಮ್ಮವರು ಉತ್ತರಾಯಣ, ಮಕರ ಸಂಕ್ರಾಂತಿ ಒಂದೇ ದಿನ ಅಂತ ಹೇಳಿದರು. ಈಗಿನ ಅರ್ಥದಲ್ಲಿ ಉತ್ತರಾಯಣ ಡಿಸೆಂಬರ್ 22,2020 ರಂದು ಶುರುವಾಗಿದೆ. (Winter solstice) ಉತ್ತರಾಯಣಕ್ಕೆ ನಮ್ಮವರು ಬಹಳ ಪ್ರಾಶಸ್ತ್ಯ ಕೊಟ್ಟು ಸ್ವರ್ಗದ ಬಾಗಿಲು ತೆರೆದಿರುತ್ತದೆ ಅಂತ ಹೇಳಿದರು. ಭೀಷ್ಮಾಚಾರ್ಯರು 58 ದಿನ ಶರಪಂಜರದಲ್ಲಿ ಮಲಗಿ ಉತ್ತರಾಯಣ ಬರುವುದಕ್ಕೆ ಕಾದು ದೇಹ ತ್ಯಾಗ ಮಾಡಿದರು ಅಂತ ಹೇಳಿ ಇದರ ಪ್ರಾಮುಖ್ಯತೆಯನ್ನು ನಮಗೆಲ್ಲ ಹೇಳಿದ್ದಾರೆ. ಅದೇನೇ ಇದ್ದರೂ ಡಿಸೆಂಬರ್ 21/22 ರಿಂದ ಜೂನ್ 21/22 ರ ವರೆಗೆ ಭೂಮಿಯ ವಾತಾವರಣ ಹಿತವಾಗಿರುತ್ತದೆ ಅನ್ನುವುದು ನಮಗೆಲ್ಲ ತಿಳಿದ ವಿಷಯವಾಗಿದೆ.

    ನಮ್ಮವರು ಉತ್ತರಾಯಣದ ಪುಣ್ಯದಿನ, ಮಕರ ಸಂಕ್ರಾಂತಿಯ ದಿನ ಒಂದೇ ಅಂತ ಯಾಕೆ ಹೇಳಿದರು ಅಂತ ನೋಡಿದರೆ ಅದರ ಕಾರಣವನ್ನು ಹೇಳುವುದೇ ಈ ನನ್ನ ಭೂಚೆಂಡಿನ ಓರೆ!!

    ಭೂಗೋಳದ ಓರೆ 22.2 ಡಿಗ್ರಿ ಇಂದ 24.5 ಡಿಗ್ರಿಗಳ ವರೆಗೆ 41 ಸಾವಿರ ವರ್ಷಗಳ ಅಂತರದಲ್ಲಿ ವಾಲುತ್ತದೆ. ನೂರು ಇನ್ನೂರು ವರ್ಷಗಳ ವರೆಗೆ ಈ ವಾಲುವಿಕೆಯ ಪರಿಣಾಮ ಅಷ್ಟಾಗಿ ಗೋಚರಿಸುವುದಿಲ್ಲ. ಈಗಿನ ಶತಮಾನದಲ್ಲಿ ಇದರ ವಾಲುವಿಕೆ 23.5 ಡಿಗ್ರಿ ಇದೆ. ಇದರ ವಾಲುವಿಕೆ 22.5 ರಿಂದ 23 ರ ಮಧ್ಯೆ ಇರುವಾಗ ನಮ್ಮವರು ಉತ್ತರಾಯಣ,ಮಕರ ಸಂಕ್ರಾಂತಿ ಒಂದೇ ದಿನ ಬಂದದ್ದನ್ನು ನೋಡಿಕೊಂಡು, ಎರಡನ್ನೂ ಒಂದೇ ದಿನಕ್ಕೆ ಹೇಳಿರಬಹುದಾದ ಅಂಶ ಗೊತ್ತಾಗುತ್ತದೆ. ಇದರ ಆಧಾರದ ಮೇಲೆ ಹೇಳುವುದಾದರೆ ಹೀಗೆ ಹೇಳಿ ಅಥವಾ ಆಚರಣೆ ಬಂದು ಸುಮಾರು ಸಾವಿರ ವರ್ಷಗಳು ಕಳೆದಿರಬಹುದು.

    ವರ್ಷಕ್ಕೆ 12 ಸಂಕ್ರಮಣಗಳು ಇದ್ದರೂ(ಪ್ರತಿ ರಾಶಿಯಲ್ಲಿ ಸೂರ್ಯನ ಪ್ರವೇಶವನ್ನು ಆಯಾಯ ರಾಶಿಯ ಸಂಕ್ರಮಣ ಎಂದೇ ಕರೆಯುವುದು) . ನಾಳೆ ಈ ಭೂಚೆಂಡಿನ ಓರೆ ಸೂರ್ಯನ ವಿರುದ್ಧ ದಿಕ್ಕಿಗೆ ಇರುವುದರಿಂದ ನೇರವಾಗಿ ಭೂಮಿಯ ಮೇಲಿರುವ ಮಕರ ಸಂಕ್ರಾಂತಿ ರೇಖೆಯ ಮೇಲೆ ಬೀಳುವ ಸೂರ್ಯನ ರಶ್ಮಿಗಳು ವರ್ಷದ ಅತೀ ಕಡಿಮೆ ಅವಧಿಯ ದಿನವನ್ನಾಗಿಸಿ, ದೀರ್ಘ ರಾತ್ರಿಯ ದಿನವಾಗಿಸುವುದು ಇದರ ಮೂಲ ವೈಶಿಷ್ಟವಾಗಿದೆ. ವರ್ಷಕ್ಕೊಮ್ಮೆ ಬರುವ ಇಂತಹ ಖಗೋಳ ಕೌತುಕವನ್ನು ಸಂಭ್ರಮಿಸುವುದು ಸಹಜವಾಗಿದೆ.

    ಉತ್ತರಾಯಣದ ಅತೀ ಕಡಿಮೆ ಅವಧಿಯ ದಿನ, ದಿನೇ ದಿನೇ ವೃದ್ಧಿಗೊಳ್ಳುತ್ತಾ, ದಕ್ಷಿಣಾಯಣ ದಿನದಂದು ಅತೀ ದೀರ್ಘ ದಿನವಾಗುತ್ತದೆ. ಹಾಗಾಗಿ ಈ ದಿನ ವೃದ್ಧಿಕಾಲವನ್ನು ನಮ್ಮವರು ವೃದ್ಧಿಯ ವಿಶೇಷತೆ ಅಂತ ಭಾವಿಸಿ, ಈ ಕಾಲಕ್ಕೆ ಮಹತ್ವ ಕೊಟ್ಟಿದ್ದಾರೆ.

    ಭಾರತದ ಭೂ ಭಾಗದಲ್ಲಿ ಇದರ ಪರಿಣಾಮ ಹೆಚ್ಚು,ಕಡಿಮೆ ಒಂದೇ ತೆರನಾಗಿ ಇರುವುದರಿಂದ ಈ ದಿನವನ್ನು ಬೇರೆ ಬೇರೆ ಹೆಸರುಗಳಿಂದ ಕರೆದುಕೊಂಡು ದೇಶದಾದ್ಯಂತ ಸಡಗರದಿಂದ ಆಚರಿಸುತ್ತಿರುವುದು ನಮ್ಮ ಖಗೋಳ ಶಾಸ್ತ್ರಜ್ಞರ ವಿದ್ವತ್ತಿಗೆ ತೋರುವ ಗೌರವವಾಗಿ ನನಗೆ ತೋರುತ್ತಿದೆ.

    ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯ.

    Photo by fotografierende from Pexels

    ಉತ್ತರಾಯಣ ಪರ್ವಕಾಲ

    ರತ್ನಾ ಶ್ರೀನಿವಾಸ್

    ಇಂದು ಸಂಕ್ರಾಂತಿ ಹಬ್ಬ. ಉತ್ತರಾಯಣ ಪರ್ವಕಾಲ. ಹಬ್ಬಗಳೆಂದರೆ
    ಹಲವು ಸಂಪ್ರದಾಯದ ಮೊತ್ತ. ಇಡೀ ಮನುಷ್ಯ ಸಮೂಹಕ್ಕೆ ಸಡಗರ, ಸಂತೋಷ, ಸಂಭ್ರಮವನ್ನು ಹಬ್ಬಗಳು ಕೊಡುತ್ತವೆ.

    ಇಂಥ ಸಡಗರದ ಹಬ್ಬಗಳಲ್ಲಿ ಕರ್ನಾಟಕ , ಆಂಧ್ರಪ್ರದೇಶ, ತಮಿಳು ನಾಡು ಗಳಲ್ಲಿ ಸಂಕ್ರಾಂತಿ/ಪೊಂಗಲ್ ಹೆಸರಲ್ಲಿ ಆಚರಿಸುವ ಸುಗ್ಗಿ ಹಬ್ಬವೂ ಒಂದು. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ.
    ಪ್ರತಿವರ್ಷ ಜನವರಿ 14 ಅಥವ 15 ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ನಂತರ ಆತ ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭ ವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು. 6 ತಿಂಗಳ ಕಾಲ ಉತ್ತರಾಯಣ ನಂತರದು ದಕ್ಷಿಣಾಯಣ.

    ಮೊದಲ ಹಬ್ಬ

    ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರದಿಂದ ಆಚರಿಸುತ್ತಾರೆ.ಕೊಯ್ಲು ಮುಗಿದು ಸುಗ್ಗಿಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮ ದಿಂದ ಆಚರಿಸು ತ್ತಾರೆ. ಮನೆ ಮುಂದೆ ಸುಂದರವಾದ ರಂಗೋಲಿ ಬಿಡಿಸಿ ತಳಿರು ತೋರಣ ಗಳನ್ನು ಕಟ್ಟುವರು. ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವರು.

    ಸಂಕ್ರಾಂತಿಯಲ್ಲಿ ಎಳ್ಳನ್ನು ತಯಾರಿಸಿ ತಮ್ಮ ಸ್ನೇಹಿತರು, ಬಂಧುಗಳಿಗೆ ಹಂಚುವರು. ಇದನ್ನು ಎಳ್ಳು ಬೀರುವುದು ಅಂತಲೇ ಕರೆಯುವರು.ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋ ಣ ಎಂದು ಹೇಳುತ್ತಾ ತಮ್ಮ ಆತ್ಮೀಯರಲ್ಲಿ ಎಳ್ಳನ್ನು ವಿನಿಮಯ ಮಾಡಿ ಕೊಳ್ಳು ತ್ತಾರೆ.
    ಕರ್ನಾಟಕದಲ್ಲಿ ಹೊಸದಾಗಿ ಮದುವೆ ಆದ ಮಹಿಳೆಯರು ಮದುವೆಯಾದ ಮೊದಲ ವರ್ಷ ದಿಂದ 5 ವರ್ಷ ಗಳು ಬಾಳೆಹಣ್ಣು ಗಳ ಸಂಖ್ಯೆಯನ್ನು ಐದರಿಂದ ಹೆಚ್ಚಿಸುತ್ತ ಎಳ್ಳು ಬೀರುತ್ತಾರೆ. ಎಳ್ಳಿನ ಜೊತೆ ಸಕ್ಕರೆ ಅಚ್ಚು, ಕಬ್ಬಿನ ತುಂಡು, ಹಣ್ಣನ್ನು ಬೀರುವರು.ಕೊಬ್ಬರಿ, ಹುರಿಗಡಲೆ, ಬೆಲ್ಲ, ಕಡಲೆಕಾಯಿ ಬೀಜ ಹುರಿದು ಎಳ್ಳನ್ನು ಸೇರಿಸಿ ತಯಾರಿಸಿರುತ್ತಾರೆ.

    ತಮಿಳು ನಾಡಿನಲ್ಲಿ ಪೊಂಗಲ್ ಹಬ್ಬ ಎಂದು ವಿಶೇಷ ವಾಗಿ ಆಚರಿಸುವರು.ಪೊಂಗಲ್ ಸಮೃದ್ದಿಯ ಸಂಕೇತ ವಾಗಿ ಹಾಲು ಬೆಲ್ಲ ಕುದಿಸಿ ಉಕ್ಕಿಸುತ್ತಾರೆ. ಗೋಪೂಜೆ ಮಾಡ್ತಾರೆ. ಕೆಲವೆಡೆ ಜಲ್ಲಿಕಟ್ಟು ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ.

    ಕೇರಳದಲ್ಲಿ ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವವಿದೆ. ಅಯ್ಯಪ್ಪ ಸನ್ನಿಧಾನದ ಶಬರಿಮಲೆಯಲ್ಲಿ ಕಂಡುಬರುವ ಸಂಕ್ರಮಣ ಜ್ಯೋತಿಯೇ ಪ್ರಮುಖವಾದುದು.ಮಹಾರಾಷ್ಟ್ರದಲ್ಲಿ ಎಳ್ಳು ಉಂಡೆ, ಕುಸುರಿ ಕಾಳನ್ನು ಹಂಚುವರು.

    ಎಳ್ಳನ್ನು ಕೊಡುವಾಗ ಎಳ್ಳು ಬೆಲ್ಲ ತೆಗೆದು ಕೊಂಡು ಒಳ್ಳೆ ಮಾತಾಡಿ ಅಂತ. ಹೇಳುವರು.ಮಕರ ಸಂಕ್ರಾಂತಿ ಅಭಿವೃದ್ಧಿಯ ಸಂಕೇತ ವಾಗಿದೆ. ಮನುಷ್ಯನ ಕೆಟ್ಟ ಗುಣ ಗಳೆಲ್ಲಾ ಅಳಿದು ಬಾಳುವ ಬದಲಾವಣೆಯ ಪರ್ವ ಕಾಲ ಇದಾಗಿದೆ.

    ಈ ಪರ್ವಕಾಲದಲ್ಲಿ ಕೋವಿಡ್ ಭೀತಿ ಎಲ್ಲಡೆಯೂ ಮಾಯವಾಗಿ ಸಂತಸ ಅರಳಲಿ ಎಂದು ಹಾರೈಕೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    ಇದರೊಂದಿಗಿರುವ ರಂಗೋಲಿ ಕಲೆ ಮಮತಾ, ಸಂಧ್ಯಾ ಮತ್ತು ಉಮ

    error: Content is protected !!