23.8 C
Karnataka
Thursday, November 28, 2024
    Home Blog Page 126

    ಜ.15ರಿಂದ ಉನ್ನತ ಶಿಕ್ಷಣ ಎಲ್ಲ ‌ ತರಗತಿಗಳು ಶುರು; ಹೊಸ ಎಸ್‌ಒಪಿ ಜಾರಿ

    ಇದೇ ಜನವರಿ 15ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಎಸ್‌ಒಪಿ ಜಾರಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಈ ಬಗ್ಗೆ ಪ್ರಕಟಣೆ ನೀಡಿರುವ ಅವರು; ಯಾವುದೇ ಕಾರಣಕ್ಕೂ ಈ ಮಾರ್ಗಸೂಚಿ ಮೀರುವಂತಿಲ್ಲ. ಶಿಕ್ಷಣ ಸಂಸ್ಥೆಗಳ ಜತೆಗೆ, ವಿದ್ಯಾರ್ಥಿಗಳು ಕೂಡ ಪಾಲಿಸಬೇಕು. ಇನ್ನು, ವಿದ್ಯಾರ್ಥಿಗಳು ನೇರ ತರಗತಿಗಳಿಗೂ ಹಾಜರಾಗಬಹುದು, ಆನ್‌ಲೈನ್‌ ತರಗತಿಗೂ ಹಾಜರಾಗಬಹದು. ಆ ಆಯ್ಕೆ ವಿದ್ಯಾರ್ಥಿಗಳಿಗೇ ಇರುತ್ತದೆ. ಎರಡರಲ್ಲಿ ಒಂದಕ್ಕೆ ಹಾಜರಾತಿ ಕಡ್ಡಾಯ ಎಂದು ಅವರು ಹೇಳಿದರು.

    ಹೊಸ ಎಸ್‌ಒಪಿ ಹೀಗಿದೆ:

    • ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಈ ಪತ್ರ ತರದಿದ್ದರೆ ನೇರ ತರಗತಿಗಳಿಗೆ ಪ್ರವೇಶ ಇರುವುದಿಲ್ಲ.
    • ಮಾರ್ಗಸೂಚಿಯಂತೆ ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿಯಮಗಳನ್ನು ಮೀರುವಂತಿಲ್ಲ. ದೈಹಿಕ ಅಂತರ ಕಡ್ಡಾಯ. ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧ ಮಾಡಿಕೊಳ್ಳಬೇಕು.
    • ಬೋಧನಾ, ಪ್ರಾಕ್ಟಿಕಲ್‌, ಪ್ರಾಜೆಕ್ಟ್‌ ತರಗತಿಗಳನ್ನು ಅಗತ್ಯಬಿದ್ದರೆ ಪಾಳಿ ಆಧಾರದಲ್ಲಿ ಮಾಡಬಹುದು.
    • ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಬಹುದು. ಇಂಥ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಇರುವ ಅನುಮಾನ, ಗೊಂದಲಗಳನ್ನು ನಿವಾರಿಸಲು ಪ್ರತಿದಿನ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸಬಹುದು. ಇಂಥ ಸಂಪರ್ಕ ತರಗತಿಗಳನ್ನು ನಡೆಸುವಾಗಲೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಪ್ರತಿ ಹಂತದಲ್ಲೂ ದೈಹಿಕ ಅಂತರ ಬಹಳ ಮುಖ್ಯವಾಗಿರುತ್ತದೆ.
    • ಎಲ್ಲ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಇಂದು ತಿಂಗಳ ಕಾಲ ಪ್ರತಿ ತರಗತಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಯನ್ನು ವಾಟ್ಸಾಪ್‌, ಇ ಮೇಲ್‌ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು. ಇದು ಕಡ್ಡಾಯ. ಜತೆಗೆ, ವಿಡಿಯೋ ಪಾಠಗಳು, ಪವರ್‌ ಪಾಯಂಟ್‌ ಪ್ರೆಸೆಂಟೇಶನ್‌, ಇ-ಪುಸ್ತಕ, ಇ-ನೋಟ್ಸ್‌, ಆಡಿಯೋ ಪುಸ್ತಕ, ಅಭ್ಯಾಸ ಪ್ರಶ್ನೆಗಳನ್ನು ಇತ್ಯಾದಿ ಅಧ್ಯಯನ ಸಾಮಗ್ರಿಯನ್ನು ಕಡ್ಡಾಯವಾಗಿ ಕಾಲೇಜ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.
    • ಇನ್ನು ಆನ್‌ಲೈನ್‌ ಅಥವಾ ಆಫ್‌ಲೈನ್‌ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಆನ್‌ ಕ್ಯಾಂಪಸ್‌ ಮತ್ತು ಆಫ್‌ ಕ್ಯಾಂಪಸ್‌ ಹಾಸ್ಟೆಲುಗಳಲ್ಲಿ ಉಳಿದುಕೊಳ್ಳಬಹುದು.

    ಸಾಮಾನ್ಯ ಮಾರ್ಗಸೂಚಿ:

    • ತರಗತಿಗಳ ಆರಂಭಕ್ಕೆ ಮುನ್ನ ಕಾಲೇಜಿನ ಕಟ್ಟಡ, ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ, ಪೀಠೋಪಕರಣ ಹಾಗೂ ಆಧ್ಯಯನ ಪುಸ್ತಕಗಳನ್ನು ಸ್ಯಾನಿಟೈಸ್‌ ಮಾಡಬೇಕು. ಜತೆಗೆ, ದ್ವಾರದಲ್ಲಿಯೇ ಎಲ್ಲರ ಥರ್ಮಲ್‌ ಸ್ಕೀನಿಂಗ್‌ ಹಾಗೂ ಸ್ಯಾನಿಟೈಸ್‌ ವ್ಯವಸ್ಥೆ ಕಡ್ಡಾಯ.
    • ಗಮನಾರ್ಹ ಅಂಶವೆಂದರೆ; ಎಲ್ಲ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕೋವಿಡ್-‌೧೯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಆದರೆ, ಕೋವಿಡ್‌ ಲಕ್ಷಣಗಳು ಇರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹತ್ತಿರದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಎಲ್ಲ ಕಾಲೇಜುಗಳು ಮ್ಯಾಪಿಂಗ್‌ ಮಾಡಿಕೊಳ್ಳಬೇಕು.
    • ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ.50 ಮೀರುವಂತಿಲ್ಲ. ಒಂದು ಹಾಜರಾತಿ ಹೆಚ್ಚಿದರೆ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ನೇರ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಕಡ್ಡಾಯವಾಗಿ ಮನೆಯಿಂದಲೇ ಊಟ, ಕುಡಿಯುವ ನೀರು ತಂದುಕೊಳ್ಳಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಕೂಡ ಕಡ್ಡಾಯ. ಬೋಧಕರಿಗೂ, ಇತರೆ ಎಲ್ಲ ಸಿಬ್ಬಂದಿಗೂ ಇದು ಅನ್ವಯವಾಗುತ್ತದೆ.
    • ಲೈಬ್ರರಿ, ಕ್ಯಾಂಟೀನ್‌ ಆರಂಭಕ್ಕೆ ಅಡ್ಡಿ ಇಲ್ಲ. ಆದರೆ ಮಾರ್ಗಸೂಚಿ ಮೀರುವಂತಿಲ್ಲ. ಜತೆಗೆ, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ಚಟುವಟಿಕೆಗಳನ್ನು ಕೋವಿಡ್‌ ಮಾರ್ಗಸೂಚಿಯಂತೆ ಆರಂಭಿಸಬಹುದು.

    ನೂತನ ಮಾರ್ಗಸೂಚಿಯ ವಿವರವಾದ ಕರಡನ್ನು ಎಲ್ಲ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಕಳಿಸಲಾಗಿದ್ದು, ಆಯಾ ಸಂಸ್ಥೆಗಳ ಆಡಳತ ಮಂಡಳಿ, ಪ್ರಾಂಶುಪಾಲರು ಕೂಲಂಕಷವಾಗಿ ಗಮನಿಸಿ ಜಾರಿ ಮಾಡಬೇಕು ಎಂದು ಉಪ ಮುಖ್ಯಮಂತ್ರಿಗಳು ಕೋರಿದ್ದಾರೆ.

    ಕೆಲಸದ ಒತ್ತಡ -ನಿರ್ವಹಣೆ ಏಕೆ? ಹೇಗೆ?

    ಈಗಿನ ಯಾಂತ್ರಿಕ ಜೀವನದಲ್ಲಿ ಸಂಜೆಯಾಗುತ್ತಿದ್ದಂತೆ ಆಫ಼ೀಸ್‌ನಿಂದ ಮನೆಗೆ ಬರುವ ವೇಳೆಗೆ ಕೇಳುವ ಒಂದೇ ಮಾತು ತುಂಬಾ ಕೆಲಸದ ಒತ್ತಡ ಕಣ್ರಿ. ಇದ್ದಕ್ಕಿದಂತೆ ತಲೆ ಸುತ್ತು ವೈದರ ಬಳಿ ಹೋದ್ರೆ ಕೆಲಸದ ಒತ್ತಡಕ್ಕೆ ಹೀಗಾಗಿದೆ. ಜಾಸ್ತಿ ಸ್ಟ್ರೆಸ್ ಮಾಡ್ಕೋಬೇಡಿ ಅಂತ. 30-35ವರ್ಷ ದಾಟದವರೂ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದು ಇದಕ್ಕೆ ಕೆಳಿ ಬರುವ ಒಂದೇ ಕಾರಣ ಕೆಲಸದ ಒತ್ತಡ .

    ಕೆಲಸದ ಜಾಗದಲ್ಲಿ ಅನಗತ್ಯ ಒತ್ತಡ ತೆಗೆದುಕೊಳ್ಳುವುದರಿಂದ ಅದು ಆರೋಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯಲ್ಲದೇ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಒತ್ತಡಕ್ಕೆ ಕೆಲವೊಮ್ಮೆ ಒಂದೇ ಕಾರಣ ಇರದೇ ಹಲವಾರು ಇತರ ಯೋಚನೆಗಳು ಇರಬಹುದು. ಇಂತಹ ಸಮಯದಲ್ಲಿ ಇದನ್ನು ನಿರ್ವಹಣೆ ಹೇಗೆ ಮಾಡಬೇಕು ಎಂದು ನಾವೇ ನಿರ್ಧರಿಸಬೇಕು. ಆಫ಼ೀಸ್‌ನಲ್ಲಿ ಅಧಿಕ ಕೆಲಸದ ಒತ್ತಡ ಇದ್ದರೆ ಅದರಿಂದ ಹೊರಬರಲು ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಿ ಖಂಡಿತ ಹೊರಬರಬಹುದು. ಅದು ಹೇಗೆ? ಕೆಳಗೆ ಓದಿ

    ಸಣ್ಣ ವಿರಾಮಗಳು: ಕೆಲಸದ ಮಧ್ಯೆ ಪ್ರತಿ ಒಂದು ಅಥವಾ ಎರಡು ಗಂಟೆಗೊಮ್ಮೆ ಸಣ್ಣವಿರಾಮ ತೆಗೆದುಕೊಳ್ಳಿ. ಬಹಳಷ್ಟು ಜನ ಊಟಕ್ಕೆ ಬಿಟ್ಟರೆ ಕೆಲಸ ಮಾಡುವ ಡೆಸ್ಕ್ ಬಿಟ್ಟು ಏಳುವುದಿಲ್ಲ. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮ ಮೆದುಳು ಸತತವಾಗಿ ಒಂದೇ ಕೆಲಸದಲ್ಲಿ ಬಹಳ ಹೊತ್ತು ಕ್ರಿಯಾಶೀಲವಾಗಿದ್ದರೆ ಅದು ಅಪಾಯಕಾರಿ. ಪ್ರತಿ ಎರಡು ಗಂಟೆಗೊಮ್ಮೆ ಎರಡು ಮೂರು ನಿಮಿಷದ ವಿರಾಮ ತೆಗೆದುಕೊಳ್ಳಿ. ಕುಳಿತಲ್ಲಿಂದ ಎದ್ದು ಆಫ಼ೀಸಿನ ಕಿಟಕಿಯ ತನಕವೋ ಅಥವಾ ವಾಟರ್ ಕೂಲರ್ ತನಕ ಹೋಗಿ ನೀರು ಕುಡಿದು ಬನ್ನಿ, ಕೈಕಾಲುಗಳನ್ನು ಮೈಮುರಿಯುವ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಿ , ಹೀಗೆ ಮಾಡಿ ನಿಮ್ಮ ಡೆಸ್ಕಗೆ ಬಂದಾಗ ನಿಮಗೆ ರಿಲ್ಯಾಕ್ಸ್ ಆಗುತ್ತದೆ. ನಿಮ್ಮ ಕಚೇರಿಯ ಆವರಣದಲ್ಲಿ ಹೂದೊಟ ಅಥವಾ ಹಸಿರು ಲಾನ್ ಇದ್ದರೆ ಅದರ ಕಡೆ ದೃಷ್ಟಿ ಹಾಯಿಸಿ.

    ಊಟದ ವಿರಾಮ: ಕೆಲವರು ಊಟ ಮಾಡಲು ಬೇರೆಯದೇ ಕ್ಯಾಂಟಿನ್ ಇದ್ದರೂ ಅಲ್ಲಿ ಹೋದರೆ ಸಮಯ ವ್ಯರ್ಥವಾಗುತ್ತದೆ ಎಂದು ತಾವು ಕುಳಿತು ಕೊಳ್ಳುವ ಸ್ಥಳದಲ್ಲೇ ಊಟ ಮಾಡುತ್ತಾ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಬಹಳ ತಪ್ಪು. ನಿಮ್ಮ ಎಂಟು ಗಂಟೆಯ ಕೆಲಸದ ಅವಧಿಯಲ್ಲಿ ಊಟದ ವಿರಾಮ ಬಹಳ ದೊಡ್ಡ ವಿರಾಮವಾಗಿದ್ದು ಅದನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಕ್ಯಾಂಟಿನ್‌ಗೆ ಹೋದರೆ ಅಲ್ಲಿ ಸಹೋದ್ಯೋಗಿಗಳ ಜೊತೆ ಕುಳಿತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ವಲ್ಪ ಹರಟುತ್ತಾ ಊಟ ಮಾಡುವುದರಿಂದ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ. ಕೆಲಸ ಮಾಡುವ ಕಡೆಯೆ ಕುಳಿತು ಊಟ ಮಾಡುವುದರಿಂದ ಕೆಲಸದ ಒತ್ತಡದಲ್ಲೆ ಊಟ ಮಾಡುವುದು ಒಳ್ಳೆಯದಲ್ಲ. ಊಟದ ವಿರಾಮದಲ್ಲಿ ಸಹೋದ್ಯೋಗಿಗಳ ಜೊತೆ ಅದು ಇದು ಮಾತನಾಡುವುದರಿಂದ ಕೆಲಸದಿಂದ ಸ್ವಲ್ಪ ಮೆದುಳಿಗೆ ಬಿಡುವು ಸಿಗುತ್ತದಲ್ಲದೇ ಮತ್ತೆ ನಿಮ್ಮ ಡೆಸ್ಕಗೆ ಹಿಂದಿರುಗಿದಾಗ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡಲು ಸಾಧ್ಯ.

    ಹವ್ಯಾಸವೂ ಇರಲಿ: ಕೆಲಸದ ಮಧ್ಯೆ ಎರಡು ಮೂರು ಗಂಟೆಗೊಮ್ಮೆ ಸಹುದ್ಯೋಗಿಗಳೊಂದಿಗೆ ಕ್ಯಾಂಟಿನ್ ಅಥವಾ ಒಳಾಂಗಣ ಕ್ರೀಡೆಗಳಾದ ಟೆಬಲ್ ಟೆನ್ನಿಸ್ ಅಥವಾ ಕೇರಂ ವ್ಯವಸ್ಥೆ ಇದ್ದರೆ ಅಲ್ಲಿ ಹೋಗಿ 10-15 ನಿಮಿಷ ಕಾಲ ಕಳೆಯಿರಿ. ಕಾಫ಼ಿ ಟಿ ಹೀರುವ ಮೂಲಕ ಸಮಯ ಕಳೆಯುವುದರಿಂದ ಹಾಗೂ ದಿನವಿಡಿ ಮಾಡುವ ಒಂದೇ ಕೆಲಸದಿಂದ ಸ್ವಲ್ಪ ನಿಮಿಷ ಬೇರೆ ಕೆಲಸ ಮಾಡುವುದರಿಂದ ಮಾಡುವ ಕೆಲಸವನ್ನು ಇನ್ನು ಅತ್ಯುತ್ತಮವಾಗಿ ಮಾಡಲು ಸಾಧ್ಯ. ಕುಳಿತಲ್ಲಿಂದ ಎದ್ದು ಹೋಗಲು ಆಗದಿದ್ದರೆ ಕುಳಿತಲ್ಲೇ ಸ್ವಲ್ಪ ಸಂಗೀತ ಕೇಳುವುದೋ ಅಥವಾ ನೀವು ಚಿತ್ರಗಾರರಾಗಿದ್ದರೆ ಚಿತ್ರ ಸ್ಕೆಚ್ ಮಾಡುವುದರಿಂದ ಅನಗತ್ಯ ಕೆಲಸದ ಒತ್ತಡದಿಂದ ಪಾರಾಗಬಹುದು

    ಉತ್ತಮ ಆಹಾರದ ಆಯ್ಕೆ: ಕೆಲವರಿಗೆ ಕೆಲಸದ ಮಧ್ಯೆ ಚಿಪ್ಸ್ ಹಾಗೂ ಜಂಕ್ ಫ಼ುಡ್ಸ್ ತಿನ್ನುವ ಅಭ್ಯಾಸವಿರುತ್ತದೆ. ಇದರಿಂದ ಹೆಚ್ಚಿನ ಉಪ್ಪಿನ ಹಾಗೂ ಸಕ್ಕರೆ ಅಂಶ ದೇಹವನ್ನು ಸೇರಿ ಬೊಜ್ಜಿಗೆ ಕಾರಣವಾಗಬಹುದಲ್ಲದೇ ಅನೇಕ ಖಾಯಿಲೆಗಳಿಗೂ ಕಾರಣವಾಗಬಹುದು. ಒತ್ತಡ ಇದ್ದಾಗ ಕೆಲವರು ಎನೋ ಒಂದು ತಿಂದರೆ ಅಯಿತು ಎಂದು ತಿನ್ನುತ್ತಾರೆ. ಹೀಗೆ ಮಾಡದೆ ಡ್ರೈ ಫ಼್ರೂಟ್ಸ್, ಸೇಂಗಾ ಬೀಜ ಅಥವಾ ಕ್ಯಾರೆಟ್ ಮತ್ತು ಸೌತೆಕಾಯಿ ತುಂಡುಗಳನ್ನು ಮನೆಯಿಂದ ಬರುವಾಗ ತಂದು ತಿನ್ನಿ. ನಮ್ಮ ಆಹಾರ ಶೈಲಿಯೂ ಕೂಡ ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಉತ್ತಮ ಆಹಾರ ಶೈಲಿ ನಿಮ್ಮದಾಗಿರಲಿ.

    ಕೆಲಸ ಮಾಡುವ ವಾತಾವರಣವೂ ಸರಿಯಾಗಿರಲಿ : ನೀವು ಕ್ಯೂಬಿಕಲ್ ಅಥವಾ ಕ್ಯಾಬಿನ್ ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಅದು ನಿಮ್ಮ ಮನೆ ಇದ್ದಂತೆ. ಯಾಕೆಂದರೆ ನೀವು ಎನಿಲ್ಲವೆಂದರೂ ಆ ಜಾಗದಲ್ಲಿ ಸುಮಾರು ಏಳು ಗಂಟೆಗಿಂತ ಹೆಚ್ಚು ಸಮಯ ಕುಳಿತು ಕೆಲಸ ಮಾಡುತ್ತಿರುತ್ತಿರಿ. ಹಾಗಾಗಿ ಆ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಅಲ್ಲದೇ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಕಡತಗಳನ್ನು ನೀಟ್ ಆಗಿ ಜೋಡಿಸಿಕೊಳ್ಳಿ. ಇದರಿಂದ ಏನಾದರೂ ಹುಡುಕುವಾಗ ಅನಗತ್ಯ ಗೊಂದಲ ತಪ್ಪುತ್ತದೆಯಲ್ಲದೇ ಇಂತಹ ಗೊಂದಲಗಳು ಒತ್ತಡವನ್ನು ಇನ್ನೂ ಜಾಸ್ತಿ ಮಾಡುತ್ತದೆ. ನಿಮ್ಮ ಕುಟುಂಬದ ಫ಼ೋಟೋವೂ ಇರಲಿ ಹಾಗೂ ಸಾಧ್ಯವಾದರೆ ಒಂದು ಸಣ್ಣ ದೇವರ ಫ಼ೋಟೋವೂ ಇರಲಿ. ದಿನ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆ ಕೈಮುಗಿದು ಕೆಲಸ ಪ್ರಾರಂಭಿಸಿ.

    ಸಮಯದ ನಿರ್ವಹಣೆ: ಕೆಲಸದ ಜಾಗದಲ್ಲಿ ಇದಕ್ಕೆ ಬಹಳ ಮಹತ್ವ ಇದೆ. ನಿಮಗೆ ಕೆಲಸ ಜಾಸ್ತಿ ಇದ್ದು ಅದನ್ನು ನಿರ್ವಹಿಸಲು ಸಮಯ ಕಡಿಮೆ ಇದ್ದಾಗ ನಾವು ಅನಗತ್ಯ ಕೆಲಸದ ಒತ್ತಡಕ್ಕೆ ಸಿಲುಕುತ್ತೇವೆ. ಇದಕ್ಕೆ ಕಾರಣ ನಾವು ಸಮಯದ ಸದುಪಯೋಗವನ್ನು ಸರಿಯಾಗಿ ನಿರ್ವಹಿಸದೇ ಇರುವುದು. ಹತ್ತಾರು ಕೆಲಸಗಳಿದ್ದರೆ ಅತಿ ಪ್ರಮುಖವಾದ ಕೆಲಸ ಯಾವುದು ಎಂದು ಮೊದಲೇ ನಿರ್ಧರಿಸಿ ಅದನ್ನು ಮುಗಿಸಲು ಪ್ರಯತ್ನಿಸಿ ನಂತರ ಉಳಿದ ಕೆಲಸವನ್ನು ಕೈಗೆತ್ತಿಕೊಳ್ಳಿ. ಸಾಧ್ಯವಾದಾಗ ನಿಗದಿತ ಸಮಯಕ್ಕಿಂತ ಅರ್ಧ ಘಂಟೆ ಮುಂಚೆ ಬಂದು ಆ ಸಮಯದಲ್ಲಿ ಆ ದಿನದಲ್ಲಿ ಮಾಡಿ ಮುಗಿಸಬೇಕಾಗಿರುವ ಕೆಲಸದ ಬಗ್ಗೆ ಯೋಚಿಸಿ. ಯಾವ ಕಾರಣಕ್ಕೂ ಆಫ಼ೀಸಿನ ಕೆಲಸವನ್ನು ಮನೆಗೆ ಒಯ್ಯಬೇಡಿ. ಇದರಿಂದ ಮನೆಯ ವಾತಾವರಣವೂ ಹಾಳಾಗಬಹುದು.

    ದೀರ್ಘ ಉಸಿರನ್ನು ಎಳೆದುಕೊಳ್ಳಿ: ಕೆಲವೊಮ್ಮೆ ಒತ್ತಡ ಇದ್ದಾಗ ನಾವೆಷ್ಟು ಆಳವಾಗಿ ಕೆಲಸದಲ್ಲಿ ಮುಳುಗಿರುತ್ತೇವೆಂದರೆ ಕೆಲಸ ಮುಗಿಸಬೇಕೆಂಬ ಒತ್ತಡದಲ್ಲಿ ನಮ್ಮ ಹೃದಯದ ಬಡಿತ ಜಾಸ್ತಿಯಾಗಿದ್ದು ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಆಸ್ಪದ ಕೊಡದೆ ಹೊಟ್ಟೆಯ ಮೇಲೆ ಕೈಯನ್ನು ಇಟ್ಟು ಧೀರ್ಘ ಉಸಿರನ್ನು ಎಳೆದುಕೊಳ್ಳಿ. ಹೀಗೆ ಮಾಡಿದಾಗ ಮನಸ್ಸಿಗೆ ಸಮಾಧಾನವಾಗುತ್ತದೆಯಲ್ಲದೇ ಹೃದಯದ ಬಡಿತವೂ ಕಡಿಮೆಯಾಗುತ್ತದೆ ಅನಗತ್ಯ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಈ ರೀತಿ ಒಂದೈದು ಬಾರಿ ಮಾಡಿ ಆಗ ಮನಸಿನ ಉದ್ವೇಗವೂ ಕಡಿಮೆಯಾಗಿ ತಕ್ಷಣವೆ ಉಲ್ಲಾಸಿತರಾದಂತೆ ಅನ್ನಿಸುತ್ತದೆ.

    ಮನೆಯವರೊಂದಿಗೆ ಸಮಯ ಕಳೆಯಿರಿ: ನೀವು ಹೊರಗೆ ಮನೆಯವರೊಂದಿಗೆ ಕಳೆಯುವ ಸಮಯ ನೀವು ಆಫ಼ೀಸ್‌ನಲ್ಲಿ ಮಾಡುವ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತದೆ. ವಾರದಲ್ಲಿ ಒಂದೆರಡು ಬಾರಿಯಾದರೂ ಇಲ್ಲದಿದ್ದರೆ ವಾರದ ಕೊನೆಯಲ್ಲಿ ಮನೆಯವರೊಂದಿಗೆ ಹೊರಗಡೆ ಸಿನಿಮಾಕ್ಕೋ ಅಥವಾ ರಾತ್ರಿ ಡಿನ್ನರ್‌ಗೋ ಹೋಗಿ. ವಾರಾಂತ್ಯದಲ್ಲಿ ನಿಮ್ಮ ಬಂಧು ಮಿತ್ರರೊಡನೆ ಅಥವಾ ಯಾವುದಾದರೂ ಸಾಮಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಿ ಇವೆಲ್ಲವೂ ಮನಸ್ಸಿಗೆ ಆನಂದವನ್ನು ನೀಡುತ್ತದೆಯಲ್ಲದೇ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ.

    ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಹಕ್ಕೆ ಸ್ವಲ್ಪ ವ್ಯಾಯಾಮ ಅತಿ ಮುಖ್ಯ. ನಮ್ಮ ಮನಸ್ಸಿಗೆ ಕೆಲಸದ ಒತ್ತಡವಿದ್ದಾಗ ನಮ್ಮ ದೇಹ ಜಗಳದ ಮನಸ್ಥಿತಿಯಲ್ಲಿರುತ್ತದೆ. ನಮ್ಮ ದೇಹ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಗುರುತಿಸುವುದಿಲ್ಲ ಎನ್ನುತ್ತಾರೆ ವೈದ್ಯರುಗಳು. ಹಾಗಾಗಿ ದಿನದ ಸ್ವಲ್ಪ ವೇಳೆಯನ್ನು ಜಿಮ್‌ನಲ್ಲಿ ಕಳೆಯುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಮನಸ್ಸಿಗೆ ಉಲ್ಲಾಸ ತರುವ ಹಾರ್ಮೋನ್‌ಗಳು ಹೆಚ್ಚಿಗೆ ಬಿಡುಗಡೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದಲ್ಲದೇ ಅಂದು ಕೊಂಡ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಲು ಇವು ಸಹಾಯ ಮಾಡುತ್ತದೆ.

    ಉತ್ತಮ ಜೀವನ ಶೈಲಿ ನಿಮ್ಮದಾಗಿರಲಿ: ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೆಚ್ಚಿಗೆ ಧೂಮಪಾನ ಹಾಗೂ ಕುಡಿತದಲ್ಲಿ ತೊಡಗುತ್ತಾರೆ. ಇದು ತುಂಬಾ ತಪ್ಪು. ಆದರೆ ಇವುಗಳಿಂದ ಇನ್ನೂ ಅಪಾಯವೇ ಜಾಸ್ತಿ ಹೊರತು ಮಾನಸಿಕ ಒತ್ತಡ ಕಡಿಮೆ ಮಾಡುವುದಿಲ್ಲ. ಅದರ ಬದಲಾಗಿ ಅನಾರೋಗ್ಯಕ್ಕೆ ದಾರಿಮಾಡುತ್ತದೆ. ಇದಕ್ಕೆ ಬದಲಾಗಿ ನಿಮ್ಮ ಮನಸ್ಥಿತಿಯನ್ನು ನಿಮ್ಮ ದೈಹಿಕ ಸಾಮರ್ಥ್ಯವನ್ನು ಸುಸ್ಥಿಯಲ್ಲಿಡುವಂಥಹ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ ಇದರಿಂದ ಮಾನಸಿಕ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ. ಜೋತೆಗೆ ದಿನದಲ್ಲಿ ಕನಿಷ್ಟ ೬ ಘಂಟೆಗಳ ನಿದ್ದೆಯನ್ನು ಮರೆಯಬೇಡಿ. ಇದರಿಂದ ನಿಮ್ಮ ಅರ್ಧ ಮಾನಸಿಕ ಒತ್ತಡ ಕಡಿಮೆಯಾಗುತ್ತದಲ್ಲದೇ ಆಫ಼ೀಸ್‌ನಲ್ಲಿ ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ತರುತ್ತದೆ. ಸರಿಯಾದ ಸಮಯದ ಸದ್ಭಳಕೆ ಮಾಡದೆ, ಆಫ಼ೀಸ್‌ನಲ್ಲಿ ಅನಗತ್ಯ ಕೆಲಸದ ಒತ್ತಡ ತೆಗೆದುಕೊಂಡು ನಮ್ಮ ಜೀವನಕ್ಕೆನಾದಾರೂ ಅಪಾಯವಾದರೇ ನಮ್ಮನ್ನೆ ನಂಬಿಕೊಂಡ ಮನೆಯವರ ಗತಿಯೇನು ಎಂಬುದನ್ನು ಮನದಲ್ಲಿಟ್ಟುಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಜ್ಜೆಯಿಡುವುದು ಜಾಣ್ಮೆಯ ನಡೆಯಾಗಿದೆ.

    ಪ್ರಕಾಶ್ ಕೆ ನಾಡಿಗ್ ಮೂಲತಃ ಶಿವಮೊಗ್ಗದವರು. ಸೂಕ್ಷ್ಮಣು ಜೀವಶಾಸ್ರ್ತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಔಷಧ ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರರಾಗಿದ್ದು ಕರ್ನಾಟಕದ ಎಲ್ಲ ದಿನಪತ್ರಿಕೆಗಳಲ್ಲಿ ಇದುವರೆಗೂ ಸುಮಾರು 1100 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು. ಒಂದು ಹಾಸ್ಯ ಸಾಹಿತ್ಯ.3 ಮಕ್ಕಳ ಸಾಹಿತ್ಯ .2ಪ್ರವಾಸ. ಸಾಹಿತ್ಯ ಹಾಗೂ ಒಂದು ಅಧ್ಯಾತ್ಮದ ಕೃತಿಗಳನ್ನು ಬರೆದಿದ್ದಾರೆ

    Photo by Christina @ wocintechchat.com on Unsplash

    ಈ ವರ್ಷ ಎಸ್ಎಸ್ ಎಲ್ ಸಿ ಪರೀಕ್ಷೆಗೆ ಎಷ್ಟು ಸಿಲಬಸ್- ಎರಡು ದಿನದಲ್ಲಿ ಪ್ರಕಟ

    ಈ ಬಾರಿಯ ಹತ್ತನೇ ತರಗತಿಯ ಪರೀಕ್ಷೆಯ ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಗುರುತಿಸಲಾದ ಪಠ್ಯವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ಚಾಮರಾಜನಗರ ಜಿಲ್ಲೆಯ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ತರಗತಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಹಾಗೂ ಅವರ ಕಲಿಕೆಗೆ ಖಚಿತತೆಯನ್ನು ಒದಗಿಸುವ ಸಲುವಾಗಿ, ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಗುರುತಿಸಲಾಗುವ ಅಂಶಗಳನ್ನು ಒದಗಿಸಲಾಗುವುದು ಎಂದರು.

    ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪಠ್ಯಾಂಶಗಳನ್ನು  ಈಗಾಗಲೇ ಗುರುತಿಸಲಾಗಿದ್ದು, ಶೀಘ್ರವೇ ಪ್ರಕಟಿಸಿ ಈ ವಿಷಯಗಳನ್ನೊಳಗೊಂಡ ಸವಿವರವಾದ ಕೈಪಿಡಿಯನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು. ಯಾವುದೇ ಆತಂಕಕ್ಕೆ ಅವಕಾಶವಿಲ್ಲ  ಎಂದು ಸುರೇಶ್ ಕುಮಾರ್  ಹೇಳಿದರು.

    ಪ್ರತಿ ವರ್ಷ ಲಭ್ಯವಾಗುತ್ತಿದ್ದ ಶಾಲಾ ಕೆಲಸದ ದಿನಗಳಿಗೆ ಅನುಗುಣವಾಗಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಪಠ್ಯಪುಸ್ತಕಗಳಲ್ಲಿರುವ ಪೂರ್ಣ ವಿಷಯಗಳನ್ನು ಈ ಸಾಲಿನಲ್ಲಿ ಬೋಧಿಸುವುದು ಕಷ್ಟಸಾಧ್ಯವಾದ್ದರಿಂದ 2020-21 ಶೈಕ್ಷಣಿಕ ಸಾಲಿಗೆ ಲಭ್ಯವಾಗಬಹುದಾದ ದಿನಗಳಿಗೆ ಅನುಸಾರವಾಗಿ ಕೆಲವು ಪಠ್ಯಾಂಶಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಇಲಾಖೆ ನಿರ್ಧರಿಸಿದೆ. ಸೂಚಿಸಿರುವ ವಿಷಯಾಂಶಗಳ ಅನುಸಾರ ಯಾವ ಘಟಕಗಳ ಬೋಧನಾ-ಕಲಿಕೆಗೆ,  ಯಾವ ಸ್ವರೂಪದ ಕಲಿಕಾ ಪ್ರಕ್ರಿಯೆ ಹೊಂದಿಕೊಳ್ಳುತ್ತದೆ ಎಂದು ತೀರ್ಮಾನಿಸಿ ಅದರಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

    ಮಕ್ಕಳು ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯ ಇರುವುದರಿಂದ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಶಾಲಾರಂಭದ ನಂತರ ಈತನಕ 150-170 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಶಾಲಾರಂಭ, ಪರೀಕ್ಷೆ, ಸುರಕ್ಷತೆ, ಪಠ್ಯ ನಿಗದಿ ಸೇರಿದಂತೆ ಮಕ್ಕಳ ಹಿತದೃಷ್ಟಿಯಿಂದ  ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ಅನಿಸಿಕೆಯನ್ನು ಪಡೆಯುತ್ತಿದ್ದೇನೆ. ಈ ವಾರದಲ್ಲಿ  ನಾನು ಬಾಗಲಕೋಟೆ ಜಿಲ್ಲೆಯ ಹುನಗುಂದ, ಸಾವಳಗಿ ಸೇರಿದಂತೆ ಮುಂಬೈ ಕರ್ನಾಟಕದ ವಿವಿಧ ಶಾಲೆಗಳಿಗೆ   ಭೇಟಿ ನೀಡುತ್ತಿದ್ದೇನೆ ಎಂದರು.

    ಉಳಿದ ತರಗತಿಗಳ ಆರಂಭ- ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಕ್ರಮ

    ಜ. 15ರಿಂದ ಉಳಿದ ತರಗತಿಗಳನ್ನೂ ಆರಂಭಿಸಬೇಕೆಂದು  ಪೋಷಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತಂತೆ ಆರೋಗ್ಯ ಇಲಾಖೆ ಮತ್ತು ಕೋವಿಡ್ ರಾಜ್ಯ ತಾಂತ್ರಿಕ ಸಮಿತಿಯ ಸಲಹೆಗಳನ್ನು ಪಡೆದು, ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು.

    ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದಾಗ ಶಾಲಾರಂಭ ಕುರಿತು ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರಿಗೆ ಶಾಲೆಗಳಲ್ಲಿನ ಸುರಕ್ಷಾ ಕ್ರಮಗಳ ಕುರಿತು ಭರವಸೆ ಮೂಡಿದ್ದು, ಸ್ವತಃ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಅರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು

    ಲಾಲ್ ಬಹದ್ದೂರ್ ಶಾಸ್ತ್ರಿ:ಒಂದು ನೆನಪು

    ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟ್ ನಲ್ಲಿ ನಿಧನರಾದ ದಿನದ ನೆನಪು ನನ್ನ ಮನಸಿನಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ .ಅಂದು ಜನವರಿ 11,1966. ನಾನು ನವದೆಹಲಿಯ ಆಕಾಶವಾಣಿ ಭವನದಲ್ಲಿದ್ದ ಪ್ರೆಸ್ ಇನ್ ಫರ್ಮೇಷನ್ ಬ್ಯುರೋ – ಪಿಐಬಿ ಕಚೇರಿಯಲ್ಲಿ- ಅಸಿಸ್ಟೆಂಟ್ ಜರ್ನಲಿಸ್ಟ್. ಇದು ಭಾರತ ಸರ್ಕಾರದ ವಾರ್ತಾ ಸೇವೆಯ ಮುಖ್ಯ ಕೇಂದ್ರ. ಹಾಗೂ ಕೇಂದ್ರ ಸರಕಾರದ ಮುಖವಾಣಿ.

    ಪಿಐಬಿ ಒಂದು ಅಂಗವಾದ ಪ್ರೆಸ್ ಫೆಸಿಲಿಟೀಸ್ ನಲ್ಲಿ ನಾನು ಸೇವಾ ನಿಯೋಜಿತನಾಗಿದ್ದೆ. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಪತ್ರಿಕೆಗಳು ಮತ್ತು ಪಿಟಿಐ, ಯುಎನ್ ಐ ಮತ್ತಿತರ ನ್ಯೂಸ್ ಏಜೆನ್ಸಿಗಳಿಗೆ ವಾರ್ತೆ- ಮಾಹಿತಿ ಒದಗಿಸುವುದು ಪಿಐಬಿಯ ಮುಖ್ಯ ಕೆಲಸ . ಆಗ ಟೆಲಿವಿಷನ್ ಇನ್ನೂ ಭಾರತಕ್ಕೆ ಕಾಲಿಟ್ಟಿರಲಿಲ್ಲ. ಫಿಲ್ಮ್ ಡಿವಿಜನ್ ವಾರಾಂತ್ಯಕ್ಕೆ ಬಿಡುಗಡೆ ಮಾಡುತ್ತಿದ್ದ ಇಂಡಿಯನ್ ನ್ಯೂಸ್ ರೀಲ್ ಗಳು ಸಿನೆಮಾ ಮಂದಿರಗಳ ಮೂಲಕ ‘ಲೈವ್’ ದೃಶ್ಯ ತೋರಿಸುತ್ತಿತ್ತು. ಆಕಾಶವಾಣಿಯೊಂದೇ ದೇಶದ ಪ್ರಮುಖ ಸುದ್ದಿ ಬಿಂದು.

    ಈ ಹಿನ್ನೆಲೆಯಲ್ಲಿ ಜನವರಿ 11ರಂದು ರಾತ್ರಿ ಹತ್ತು ಗಂಟೆವರೆಗೆ ಕೆಲಸ ಮುಗಿಸಿ ಕಾರಿನಲ್ಲಿ ನನ್ನ ರೂಮಿಗೆ ಡ್ರಾಪ್ ತೆಗೆದುಕೊಳ್ಳಲು ಸಿದ್ಧನಾಗುತ್ತಿದ್ದೆ. ವಾಹನ ಬರುವುದು ತಡವಾಗಿತ್ತು. ಸುಂದರ್ ರಾಜನ್ ಅವರು ನಮ್ಮ ಹಿರಿಯ ಸಹೋದ್ಯೋಗಿ. ಇನ್ನೇನು ಬೀಗ ಹಾಕಿ ಹೊರಡಲು ಸನ್ನದ್ಧರಾದಾಗ ವಾರ್ತಾಧಿಕಾರಿಯ ಮೇಜಿನ ಮೇಲಿದ್ದ ಹಾಟ್ ಲೈನ್ ಸದ್ದು ಮಾಡಿತು. ಜೊತೆಗೆ ಸೈರನ್ ಕೂಗಿನೊಂದಿಗೆ ವಿದೇಶಾಂಗ ವ್ಯವಹಾರದ ಪಬ್ಲಿಸಿಟಿ ವಿಭಾಗದ ಅಧಿಕಾರಿಗಳ ತಂಡ ನಾನಿದ್ದಲ್ಲಿಗೆ ಧಾವಿಸಿ ಬಂದಿತು. ಏನು ಅನಾಹುತದ ಮುನ್ಸೂಚನೆ ಸ್ಪಷ್ಟವಾಯಿತು. ರಷ್ಯಾದಲ್ಲಿ ಅಧಿಕೃತ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿತು.

    ಸುದ್ದಿ ಆಘಾತ ನಿಜ. ಅಂತೆಯೇ ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು ಅಂಥ ದಿನಗಳಲ್ಲಿ ಟೆಲೆಕ್ಸ್ ಯಂತ್ರವೊಂದರ ಬಿಟ್ಟರೆ ಮತ್ತಾವುದೇ ತಾಂತ್ರಿಕ ಯಾಂತ್ರಿಕ ಸಾಧನ ಇರಲಿಲ್ಲ. ಇಡೀ ದೇಶಕ್ಕೆ ಅಧಿಕೃತ ಮಾಹಿತಿ ನೀಡುವ ಜವಾಬ್ದಾರಿ ನಮಗೆ ಅರಿವಿಲ್ಲದಂತೆಯೇ ನಮಗೆ ಬಂದಿತ್ತು. ದಿಲ್ಲಿಯ ವರದಿಗಾರರೆಲ್ಲ ಪಿಐಬಿಗೆ ಮುತ್ತಿಗೆ ಹಾಕಿದರು. ಕ್ಷಣ ಕ್ಷಣದ ಮಾಹಿತಿಯನ್ನು ಲೌಡ್ ಸ್ಪೀಕರ್ ಮೂಲಕ ತಿಳಿಸುವ ವ್ಯವಸ್ಥೆಯಾಯಿತು.

    ಇನ್ಫರ್ಮೇಷನ್ ಆಫೀಸರ್ ಡೆಸ್ಕ್ ನಲ್ಲಿ ಕೂತವನು ಕುರ್ಚಿ ಬಿಟ್ಟು ಎದ್ದುದ್ದು ಬೆಳಿಗ್ಗೆ ಎಂಟು ಗಂಟೆಗೆ.ಪುನಃ ಕುಳಿತು ಮಾಹಿತಿ ವಿತರಣೆಗೆ ಧಾವಿಸಿದ್ದು ಕೆಲವೇ ನಿಮಿಷಗಳ ನಂತರ. ದಿ. ಲಾಲಬಹುದ್ದೂರ್ ಶಾಸ್ತ್ರಿ ಅವರ ಪಾರ್ಥಿವ ಶರೀರ ನವದೆಹಲಿಗೆ ಬಂದು ಸಾರ್ವಜನಿಕ ಗೌರವ ಅರ್ಪಣೆ, ಅಂತಿಮ ಯಾತ್ರೆ ಇದೆಲ್ಲವೂ ಮುಗಿಯುವವರೆಗೆ ಸತತವಾಗಿ 40 ಗಂಟೆ ಕೆಲಸ ಮಾಡಿದ್ದೆವು. ಅದಾವ ದೈತ್ಯ ಶಕ್ತಿ ಪಿಐಬಿಯಲ್ಲಿದ್ದ ನಮಗೆ ಬಂದಿತ್ತೋ ತಿಳಿಯದು.

    ಈ ಸಂದರ್ಭದಲ್ಲಿ ನಮ್ಮೊಂದಿಗೆ ಇದ್ದು ಸೇವೆ ಸಲ್ಲಿಸಿದ ಮಹನೀಯ ಅಧಿಕಾರಿಯೆಂದರೆ ಟಿ. ಕಾಶಿನಾಥ.ಭಾರತ ಸರ್ಕಾರ ಅಧಿಕೃತ ಫೋಟೋ ಡಿವಿಜನ್ ನ ಮುಖ್ಯಸ್ಥ ಕಾಶಿನಾಥರು ಕನ್ನಡಿಗರು. ರಾಷ್ಟ್ರಮಟ್ಟದ ಖ್ಯಾತ ಫೋಟೊಗ್ರಾಫರ್ . ಅಂದಿನ ದಿನಗಳಲ್ಲಿ ರಾಷ್ಟ್ರೀಯ ನ್ಯೂಸ್ ಏಜೆನ್ಸಿಗಳಿಗೆ, ದೇಶ ವಿದೇಶದ ಪತ್ರಿಕೆಗಳಿಗೆ ಫೋಟೋ ಫೋಟೊ ರವಾನಿಸಿದ ಮಹನೀಯರು ಇವರು. ಜೊತೆಜೊತೆಗೆ ಮಾಹಿತಿ ಒದಗಿಸುವ ಕೆಲಸ ನನ್ನದಾಗಿತ್ತು. ಇದು ನಾನು ಪುಣ್ಯ ಜೀವಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    ಟಿ.ವಿ.ಮೋಹನ್‌ ದಾಸ್‌ ಪೈ ಅವರಿಗೆ ರಾಣಿ ಚನ್ನಮ್ಮ ವಿವಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ

    ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್‌ ಪೈ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯ್‌ ವಾಲ ಅವರು ಪ್ರದಾನ ಮಾಡಿದರು.

    ರಾಜಭವನದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ವಜೂಭಾಯ್‌ ವಾಲ ಅವರು, ಪೈ ಅವರಿಗೆ ಈ ಪದವಿಯನ್ನು ಪ್ರದಾನ ಮಾಡಿದರಲ್ಲದೆ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಪೈ ಅವರ ಸೇವೆ ಅನುಕರಣೀಯವಾಗಿದೆ ಎಂದರು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೋಹನ್‌ದಾಸ್‌ ಪೈ ಅವರು, ಇನ್ಫೋಸಿಸ್‌ನಂಥ ಪ್ರತಿಷ್ಠಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಆ ಕಂಪನಿಗೆ ಆರ್ಥಿಕ ಸದೃಢತೆಯನ್ನು ತಂದುಕೊಟ್ಟವರು. ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಸಲ್ಲುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.

    ಸಂಶೋಧನೆಗೆ ಹೆಚ್ಚು ಒತ್ತು ಬೇಕೆಂದ ಪೈ:

    ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಮೋಹನ್‌ದಾಸ್‌ ಪೈ; ಶೈಕ್ಷಣಿಕವಾಗಿ ರಾಜ್ಯವು ಉನ್ನತ ಮಟ್ಟದಲ್ಲೇ ಇದ್ದರೂ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಲೇಬೇಕು.‌ ಕೊನೆಪಕ್ಷ 100 ಕೋಟಿ ರೂ.ಗಳಷ್ಟು ಮೊತ್ತವನ್ನಾದರೂ ಸಂಶೋಧನಾ ಕ್ಷೇತ್ರಕ್ಕೇ ಮೀಸಲಿಡಬೇಕು. ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಆರ್ಥಿಕ ಸಹಕಾರವನ್ನು ಒದಗಿಸಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ಬರುತ್ತದೆ ಹಾಗೂ ದೇಶದ ಅಭಿವೃದ್ಧಿಗೆ ವೇಗ ಬರುತ್ತದೆ ಎಂದರು.

    ಶಾಲೆ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಉದಾರವಾಗಿ ಒದಗಿಸಬೇಕು. ಮೂಲಸೌಕರ್ಯಗಳನ್ನು ಪರಿಣಾಮಕಾರಿ ಒದಗಿಸಬೇಕು ಎಂದು ಪೈ ಮನವಿ ಮಾಡಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರ ಗೌಡ, ಕುಲಸಚಿವ ಪ್ರೊ.ಬಸವರಾಜ್‌ ಪದ್ಮಶಾಲಿ, ವಿಶೇಷ ಕರ್ತವ್ಯಾಧಿಕಾರಿ ಡಾ. ಎಂ. ಜಯಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ವಿರಾಟ್, ಅನುಷ್ಕಾ ದಂಪತಿಗಳಿಗೆ ಹೆಣ್ಣು ಮಗು

    ಕ್ರಿಕೆಟಿಗ ವಿರಾಟ್ ಕೋಹ್ಲಿ ಮತ್ತು ಅನುಶ್ಕಾ ಶರ್ಮಾ ದಂಪತಿಗಳಿಗೆ ಹೆಣ್ಣು ಮಗುವಾಗಿದೆ. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ತಮ್ಮ ಕುಟುಂಬಕ್ಕೆ ಹೊಸ ಸದಸ್ಯೆಯ ಸೇರ್ಪಡೆಯಾಗಿದೆ ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.

    ಅಭಿಮಾನಿಗಳೆಲ್ಲರ ಹಾರೈಕೆ, ಪ್ರೀತಿ, ವಿಶ್ವಾಸಗಳಿಗೆ ಧನ್ಯವಾದ ಅರ್ಪಿಸಿರುವ ವಿರಾಟ್ , ಅನುಷ್ಕಾ ಮತ್ತು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.

    ನಮ್ಮ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ವಿರಾಟ್, ಈ ಸಂದರ್ಭದಲ್ಲಿ ತಮ್ಮ ಸಂತಸದ ಖಾಸಗಿ ಕ್ಷಣಗಳಿಗೆ ಗೌರವ ಕೊಟ್ಟು ಅಭಿಮಾನಿಗಳು ಸಹಕರಿಸುತ್ತಾರೆಂಬ ಆಶಯ ವ್ಯಕ್ತಪಡಿಸಿದ್ದಾರೆ.

    ಎಲ್ಲಾ ಡಿಗ್ರಿ ತರಗತಿಗಳು ಜನವರಿ 15 ರಿಂದ ಪುನರಾರಂಭ; ಹಾಸ್ಟೆಲ್ ಗಳೂ ಶುರು

    ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಉಳಿದಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಂತೆ, ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.

    ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್‌ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಇದರ ಜತೆಗೆ, ತರಗತಿಗಳು ಆರಂಭವಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್‌ ವ್ಯವಸ್ಥೆಯೂ ಪುನಾರಂಭವಾಗುತ್ತಿದೆ ಎಂದ ಅವರು, ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್‌ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೂ ಇರುತ್ತವೆ ಎಂದರು.

    ಬಸ್‌ ಪಾಸ್‌ ಬಗ್ಗೆಯೂ ಕ್ರಮ:

    ಈಗಾಗಲೇ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್‌ ಪಾಸ್‌ಗಳನ್ನು ತ್ವರಿತವಾಗಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಒಪ್ಪಿದ್ದು, ಆಯಾ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾರಿಗೆ ವಿಭಾಗೀಯ ಕಚೇರಿಗಳ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಬಸ್‌ಪಾಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಎನ್ ಸಿ ಸಿ ಮತ್ತು ‌ಎನ್ ಎಸ್ ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿ ಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ‌ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

    ಪ್ರತ್ಯೇಕ ಎಸ್‌ಒಪಿ:

    ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳನ್ನು ಕೋರಲಾಗಿದೆ. ಕಾಲೇಜುಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್‌, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕೂಟ ಆಯೋಜನೆಗೂ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

    ಪರೀಕ್ಷೆ ವೇಳಾಪಟ್ಟಿ ಶೀಘ್ರ:

    ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು ಉಪ ಮುಖ್ಯಮಂತ್ರಿ.

    ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ಕುರಿತ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ವಸಂತ ಕುಮಾರ್ ಮುಂತಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು

    ತಾವೂ ಬದುಕಿ ಇತರರನ್ನು ಬದುಕಗೊಡಬೇಕು


     ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ


    ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್–  ‘ಕವಿರಾಜಮಾರ್ಗ’ದಲ್ಲಿ ಉಲ್ಲೇಖವಾಗಿರುವ ಮಾತಿದು. “ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್” ಕುದಿಯುವ ಹಾಲಿಗೆ  ಅಳೆಯ ಅಂದರೆ ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ ಎಂದು .  ಇರುವ ಸುಂದರ,ವಾತಾವರಣ, ಸಂಸಾರ ಹಾಳು ಮಾಡುವ ಜನರನ್ನು ಕುರಿತು ಈ ಮಾತನ್ನು ಹೇಳಲಾಗಿದೆ.

    ನಮ್ಮ ಸಮಾಜದಲ್ಲಿ ಇಂಥ ಕುಹಕಿಗಳು ಅದೆಷ್ಟೋ ಜನರು ಸಿಗುತ್ತಾರೆ.  “ಹಾಲಿನಂಥ ಸಂಸಾರಕ್ಕೆ ಹುಳಿ ಹಿಂಡಿದರು” ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.   ಜೀವನ  ಎಂಬ ಬಂಡಿ ಅಂದರೆ  ಈ ಬದುಕು ನಂಬಿಕೆ ಮತ್ತು ವಿಶ್ವಾಸ ಎಂಬ ಹಳಿಗಳ ಮೇಲೆ ನಡೆಯುವುದು. ಇಂಥ ಬಂಡಿಗಳ ಪ್ರಯಾಣಿಕರ ಮನಸ್ಸುಗಳನ್ನು ಯಾರೋ ಹೇಳುವ ಎರಡು ಚಾಡಿ ಮಾತುಗಳು, ವ್ಯಂಗ್ಯದ ಮಾತುಗಳು ಒಡೆದು ಛಿದ್ರ ಮಾಡುತ್ತವೆ ಎಂದರೆ ಏನರ್ಥ ಅಲ್ವೆ! ಇದು  ವಿಕೃತ ಸಂತೋಷಕ್ಕೊಂದು ಉದಾಹರಣೆ. ಜೊತೆಗೆ ನಮ್ಮ ಸಮಾಜದ ಅಘೋಷಿತ ಮನಸ್ಥಿತಿಯೂ  ಹೌದು. 

    “ಉಪಕಾರ ಮಾಡುವ ಬದಲು ಅಪಕಾರ ಮಾಡುವ” , “ಹಣ್ಣು ಕೊಟ್ಟರೆ ಕಣ್ಣು ಕೀಳುವ ಮನಸ್ಥಿತಿ” ಇರುವವರನ್ನು ಕುರಿತು ಈ ಮಾತನ್ನು ಹೇಳಬಹುದು. ತಮಗೆ ಇಲ್ಲದ ಸಂತೋಷ . ನೆಮ್ಮದಿ, ಬದುಕು, ಸವಲತ್ತುಗಳು ಇತರರಿಗೆ  ಇವೆ ಎಂದು ತಿಳಿದಾಗ ಅದನ್ನು ಕೆಡಿಸಿ ಹೊಲಸೆಬ್ಬಿಸುವ ಜನರು ಅನೇಕರಿರುತ್ತಾರೆ.

    ಇತರರಿಗೆ “ನಮ್ಮಿಂದ  ಸಹಾಯ  ಆಗದೆ ಇದ್ದರೂ ಸಾಯೋಹಾಗೆ ಮಾಡಬಾರದು!” ಎನ್ನುವಂತೆ  ತಮ್ಮ ಜೀವನದಲ್ಲಿ ಸುಧಾರಣೆಗಳನ್ನು ತಂದುಕೊಳ್ಳುವತ್ತ ಗಮನಬಹರಿಸಬೇಕೇ  ವಿನಃ ಇತರರ ಸ್ವಚ್ಛಂದ ಬಾಳನ್ನು ನಷ್ಟಮಾಡುವುದರಲ್ಲಿ ಅರ್ಥವಿಲ್ಲ. ಚಿತ್ತ ಸಮಾಧಾನದಿಂದ  ಇರಬೇಕು . “ತಾವೂ ಬದುಕಿ ಇತರರನ್ನು ಬದುಕಗೊಡಬೇಕು” ಎಂಬ ಯೂನಿವರ್ಸಲ್ ಸತ್ಯಕ್ಕೆ  ಪೂರಕವಾಗಿ ಇರಬೇಕು.

    “ಮರುಗುವ ಪಾಲ್ಗೆ   ಅಳೆಯ ಪನಿಯಂ ಬೆರೆಸಿದವೊಲ್” ಎಂಬ ಮಾತು   ಬದುಕಿನಲ್ಲಿ ಆಗಬಹುದಾದ ದುರಂತದ ಎಚ್ಚರಿಕೆಯನ್ನು ಕೊಡುತ್ತದೆ.   ಅನವಶ್ಯಕವಾದುದ್ದನ್ನು ಎಳೆದು ತರುವುದಕ್ಕಿಂತ  ಅವಶ್ಯವಾದುದ್ದನ್ನು  ಉಳಿಸಿಕೊಂಡು ಹೋಗುವುದು  ಮುಖ್ಯ  ಅಲ್ಲವೆ! ಚಂದದ ಹೂವನ್ನು ಹಾಗೆ ನೋಡಿ ಸಂತೋಷಿಸು  ಸೌಧರ್ಮಿಕೆ ಅತ್ಯಂತ ಮುಖ್ಯ ಅನ್ನಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಮ್ಯೂಚುಯಲ್‌ಫಂಡ್‌: ಉಳಿತಾಯದ ಸುಲಭ ಸೂತ್ರ -ನಿಯಂತ್ರಣವಿದ್ದರೆ ಮಾತ್ರ

    ಈಗಿನ ಸಂಕೀರ್ಣಮಯ ಜಗತ್ತಿನಲ್ಲಿ ಎಲ್ಲವೂ ತೇಲಾಡುವ ಪರಿಸ್ಥಿತಿ ಇರುವಾಗ ಪರಂಪರಾಯುತವಾಗಿ ಮುಂದುವರೆಯುತ್ತಿರುವ ಕೆಲವು ಭಾವನಾತ್ಮಕ ಚಟುವಟಿಕೆಗಳಿಂದ ದೂರವಾಗುವುದೇ ಸವಾಲಾದಂತಿದೆ. 

    ಬ್ಯಾಂಕ್‌ ಬಡ್ಡಿದರ, ಪೆಟ್ರೋಲ್‌, ಬಸ್‌ ಪ್ರಯಾಣದ ದರ, ಷೇರುಪೇಟೆಗಳ ಚಲನೆ ಎಲ್ಲವೂ ತೇಲಾಡುವ ಪರಿಸ್ಥಿತಿಯಲ್ಲಿರುವಾಗ ನಮ್ಮ ನಿರ್ಧಾರಗಳನ್ನು ಸಹ ಹೆಚ್ಚು ತೇಲಾಡುವಂತೆ ಮಾಡುತ್ತಿದೆ. ಈ ಸಮಯದಲ್ಲಿ ದೀರ್ಘಕಾಲೀನ ಯೋಜನೆ ಎಂದು ಹೂಡಿಕೆ ಮಾಡಿದರೂ, ಅನಿರೀಕ್ಷಿತವಾಗಿ ತೇಲಿಬಂದ ಅವಕಾಶಗಳನ್ನು ಬಳಸಿಕೊಳ್ಳುವುದು ಹೂಡಿಕೆಯ ಯಶಸ್ಸಿನ ಗುಟ್ಟು.ಕರಗುತ್ತಿರುವ ಬ್ಯಾಂಕ್‌ ಬಡ್ಡಿದರ ಉಂಟುಮಾಡಿದೆ ಉಳಿತಾಯ ಯೋಜನೆಗಳ ಬರ.   ಮ್ಯೂಚುಯಲ್‌ ಫಂಡ್‌ ಒದಗಿಸಿವೆ ವೈವಿಧ್ಯಮಯ ಯೋಜನೆಗಳು. ಆದರೆ ನಮ್ಮ ಅನುಕೂಲಕ್ಕೆ ತಕ್ಕಂತಹ ಯೋಜನೆ ಆಯ್ಕೆ ನಿರ್ವಹಣೆ ನಮ್ಮದಾಗಿದೆ. ಆಯ್ಕೆ,  ನಿರ್ವಹಣೆ ಸರಿಯಾಗಿದ್ದರೆ ಉತ್ತಮ ಫಲಾನುಭವಿಗಳಾಗಬಹುದು.

    ಒಂದುಕಾಲದಲ್ಲಿಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲ್ಪ ಸಮಯದಲ್ಲೇ ತಲುಪಬಹುದಿತ್ತು.  ಹೊರ ಊರುಗಳಿಗೆ ಹೋಗಲು ದೀರ್ಘ ಸಮಯಬೇಕಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ತದ್ವಿರುದ್ಧ. ಇಂದು ಮೂರೂವರೆ ಗಂಟೆಯೊಳಗೆ ದಾವಣಗೆರೆ ತಲುಪಬಹುದು. ಆದರೆ ಪೀಕ್ ಅವರ್ ನಲ್ಲಿ ಜಯನಗರದಿಂದ ದೇವನಹಳ್ಳಿ ಏರ್ ಪೋರ್ಟ್ ತಲುಪುವುದೇ ಒಮ್ಮೊಮ್ಮೆ ದೀರ್ಘಾವಧಿ ಆಗಿಬಿಡುತ್ತದೆ.

    ಆಗಿನ ದಿನಗಳಲ್ಲಿ ಸುದ್ಧಿ ಸಮಾಚಾರಗಳು ಈಗಿನಷ್ಟು ತ್ವರಿತವಾಗಿ ಜನರನ್ನು ತಲುಪುತ್ತಿರಲಿಲ್ಲ.  ಆಗ ಬೆಳವಣಿಗೆಗಳು, ಘಟನೆಗಳು ಮುಂತಾದವುಗಳನ್ನು ತಲುಪಿಸಲು ಮುದ್ರಣಮಾಧ್ಯಮವನ್ನೇ ಅವಲಂಬಿಸಬೇಕಿತ್ತು.  ಈಗಿನಂತೆ ದೂರವಾಣಿ, ಸನಿಹವಾಣಿ, ಮಿಂಚಂಚೆ, ಸಾಮಾಜಿಕಜಾಲ ತಾಣಗಳು ಇರಲಿಲ್ಲ.   ಹಾಗಾಗಿ ಎಲ್ಲವೂ ಮಂದಗತಿಯಲ್ಲಿರುತ್ತಿದ್ದ ಕಾರಣ ದೀರ್ಘಾವಧಿ ಎಂಬುದಕ್ಕೆ ಪ್ರಾಶಸ್ತ್ಯವಿತ್ತು.

    ಈಗ ವೇಗವಾದ ಬದಲಾವಣೆಗಳ ಕಾರಣ ಜೀವನ ಶೈಲಿಗಳೂ ಸಹ ಹೆಚ್ಚಿನ ಬದಲಾವಣೆಗಳನ್ನು ಕಂಡು ವಾಣಿಜ್ಯೀಕರಣದತ್ತ ತಿರುಗಿವೆ.  ವಿಶೇಷವಾಗಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಾಗ ಈ ವ್ಯವಹಾರಿಕ ಚಿಂತನೆಗಳು ಹೆಚ್ಚು ತಾಂಡವವಾಡುತ್ತಿವೆ.  ಇದರ ಪ್ರಭಾವವೇ ನಗರದಲ್ಲೇ ಓಡಾಡಲು ಹೆಚ್ಚು ಸಮಯ ಬೇಕಾಗುತ್ತದೆ ಆದರೆ ಹೊರ ಊರಿಗೆ ಹೋಗಲು ಮೊದಲಿಗಿಂತ ಕಡಿಮ ಸಮಯ ಸಾಕಾಗುತ್ತದೆ.

    ಮ್ಯೂಚುಯಲ್‌ ಫಂಡ್‌ ಗಳೆಂದರೇನು?

    ಲವಾರು ಹೂಡಿಕೆದಾರರು ಒಂದೇ ಗುರಿಯೊಂದಿಗೆ  ಹಣವನ್ನು ಸೇರಿಸಿ,  ಕಾರ್ಪೊರೇಟ್‌ ಶೈಲಿಯಲ್ಲಿ,  ಹೂಡಿಕೆ ಅನುಪಾತಕ್ಕೆ ತಕ್ಕಂತೆ ರೂ.10 ರ ಮುಖಬೆಲೆಯಲ್ಲಿ ಘಟಕಗಳನ್ನು (UNITS) ಪಡೆಯುವರು.  ಈ ರೀತಿ ಸಂಗ್ರಹಿಸಿದ ಹಣವನ್ನು ಷೇರುಗಳಲ್ಲಿ, ಬಾಂಡ್‌ ಗಳಲ್ಲಿ,  ಮತ್ತಿತರ ಸೆಕ್ಯುರಿಟೀಸ್‌ ಗಳಲ್ಲಿ ತೊಡಗಿಸಿ ಅದನ್ನು ನಿರ್ವಹಿಸಲು ನಿಧಿ ನಿರ್ವಾಹಕರನ್ನು ನೇಮಿಸಲಾಗುವುದು.  ಈ ಹೂಡಿಕೆಯಿಂದ ಬಂದ ಲಾಭವನ್ನು  ಘಟಕಗಳನ್ನು ಹೊಂದಿರುವ ಹೂಡಿಕೆದಾರರಿಗೆ ವೆಚ್ಚಗಳ ನಂತರದ ಹಣವನ್ನು ಲಾಭಾಂಶವನ್ನಾಗಿ ವಿತರಿಸಲಾಗುವುದು. ‌ ತಮ್ಮ ಹೂಡಿಕೆಯನ್ನು ನಿರ್ವಹಿಸಲು ಸಮಯವಿಲ್ಲದಿದ್ದರೆ, ಅರಿವಿಲ್ಲದಿದ್ದರೆ,ಅಂತಹವರ ಪರವಾಗಿ ಹೂಡಿಕೆ ನಿರ್ವಹಿಸಲು ಹೊರಗುತ್ತಿಗೆಯ ರೀತಿ ನಿಯಂತ್ರಿತ,  ವೃತ್ತಿಪರ ಅನಭವಸ್ಥರ ಸಂಸ್ಥೆಗೆ ನೀಡಬಹುದು. ಆ ನಿಯಂತ್ರಿತ ಸಂಸ್ಥೆಯೇ ಮ್ಯೂಚುಯಲ್‌ ಫಂಡ್‌ ಹೌಸ್.  ಆದರೆ ಆ ನಿಯಂತ್ರಿತ ಸಂಸ್ಥೆ ನಿರ್ವಹಿಸುವ ನಿಮ್ಮ ಹೂಡಿಕೆಗೆ ಗ್ಯಾರಂಟಿ ಇರುವುದಿಲ್ಲ.   ಆದರೆ ಪೇಟೆಯ ಏರಿಳಿತಗಳ ಲಾಭ ಪಡೆಯಲು ಹೆಚ್ಚಿನ ಯೋಜನೆಗಳು ಸಮಯಾಧಾರಿತವಾಗಿರದೆ, ಬೇಕಾದಾಗ ನಗದೀಕರಣಗೊಳಿಸಿ ಕೊಳ್ಳಬಹುದಾಗಿದೆ.

    ಮ್ಯೂಚುಯಲ್‌ ಫಂಡ್‌ ಚಟುವಟಿಕೆಯ ಚಕ್ರ:

    ಈ ರೀತಿ ಗಳಿಸಿದ ಲಾಭವನ್ನು ಬೇಕಾದರೆ ಪುನರ್‌  ಹೂಡಿಕೆ ಮಾಡಲೂ ಅವಕಾಶವಿರುತ್ತದೆ.  ಒಂದು ಘಟಕದ ಆಂತರಿಕ ಸಾಧನೆಯನ್ನುಮಾಪನ ಮಾಡಲು  ನೆಟ್‌ ಅಸ್ಸೆಟ್‌ ವ್ಯಾಲ್ಯು (NAV) ಎನ್ನುವರು.  ರೂ.10ರ ಯುನಿಟ್‌ ಗೆ  ಆಂತರಿಕ ಸಾಧನೆಯಾಧರಿಸಿ ಮೌಲ್ಯ ಕಟ್ಟುವರು.  ಆ ಯೋಜನೆಯಡಿ ಹೂಡಿಕೆ ಮಾಡಿದ ಸ್ವತ್ತುಗಳ ಮಾರ್ಕೆಟ್‌ ಬೆಲೆಯನ್ನು ಘಟಕಗಳಿಂದ ಭಾಗಿಸಿದಾಗ ಬರುವ ಒಂದು ಘಟಕದ ಬೆಲೆಯೇ ಎನ್‌ ಎ ವಿ ಯಾಗಿರುತ್ತದೆ.  ಒಂದು ಘಟಕದ ಎನ್‌ ಎ ವಿ ಯು ರೂ.10ಕ್ಕಿಂತ ಹೆಚ್ಚಾದರೆ ಅದು ಲಾಭದಲ್ಲಿರುವ ಹೂಡಿಕೆ ಎಂದು, ಒಂದು ವೇಳೆ  ಹೂಡಿಕೆಯು ಹಾನಿಗೊಳಗಾದರೆ ಅದರ ಎನ್‌ ಎ ವಿ ಯೂ ಸಹ ಮುಖಬೆಲೆಯೊಳಗೆ ಕುಸಿಯುತ್ತದೆ. 

    ಮ್ಯುಚುಯಲ್ ಫಂಡ್‌ ಗಳನ್ನು  ನಿರಂತರವಾಗಿ  ಖರೀದಿಸಲು ಅವಕಾಶವಿದ್ದರೆ ಅದು ಓಪನ್‌ ಎಂಡೆಡ್‌ ಫಂಡ್‌ ಎಂದು ಮತ್ತು ನಿಗದಿತ ಅವಧಿಯವರೆಗೂ ಮಾತ್ರ ಮಾರಾಟ ಮಾಡುವುದಾದರೆ ಅದು ಕ್ಲೋಸ್ಡ್‌ ಎಂಡ್‌ ಫಂಡ್‌ ಎನ್ನುವರು.  ಫಂಡ್ ನ ಘಟಕಗಳನ್ನು ಆಯಾ ಫಂಡ್‌ ಗಳು ಹಿಂದಿರುಗಿಸುವಾಗ (redemption)  ಅಂದಿನ ಎನ್‌ ಎ ವಿ ಆಧರಿಸಿ ಹಣ ನೀಡುತ್ತವೆ.  ಕೆಲವು ಯೋಜನೆಗಳು ಸ್ಟಾಕ್‌ ಎಕ್ಷ್ ಚೇಂಜ್‌ ಗಳಲ್ಲಿಯೂ ವಹಿವಾಟಿಗೆ ನೋಂದಾಯಿಸಿ ಕೊಂಡಿರುತ್ತವೆ. ಅವುಗಳನ್ನು ಎಕ್ಸ್‌ ಚೇಂಜ್‌ ಟ್ರೇಡೆಡ್‌ ಫಂಡ್‌ ಎನ್ನುವರು.

    ಮ್ಯೂಚುಯಲ್‌ ಫಂಡ್‌ ಗಳಲ್ಲಿ ಹೂಡಿಕೆ ಹೇಗೆ ಲಾಭದಾಯಕ:

    *ಈ ಫಂಡ್‌ ಗಳು ನಿರ್ವಹಿಸುವ ನಿಧಿಯ ಗಾತ್ರ ಅತಿ ಹೆಚ್ಚಾಗಿರುವುದರಿಂದ,  ವಹಿವಾಟಿನ ವೆಚ್ಚವು ಕಡಿಮೆಯಾಗಿರುತ್ತದೆ.  ಅಲ್ಲದೆ ಆ ನಿಧಿಯನ್ನು ವೈವಿಧ್ಯಮಯ ಯೋಜನಗಳಲ್ಲಿ ತೊಡಗಿಸಲು ಅನುಕೂಲವಾಗುವುದರಿಂದ  ಅಪಾಯದ ಪ್ರಮಾಣ ಕಡಿಮೆಯಾಗಿರುತ್ತದೆ. 

    * ಈ ಫಂಡ್‌ ಗಳನ್ನು ನಿರ್ವಹಿಸುವವರು ವೃತ್ತಿಪರ ನೈಪುಣ್ಯತೆಯುಳ್ಳವರಾದ್ದರಿಂದ ಉತ್ತಮ ಸಾಧನೆ ತೋರಬಹುದು.

    * ಆವಶ್ಯಕತೆ ಇದ್ದಾಗ, ಬೇಕೆನಿಸಿದಾಗ ಮ್ಯುಚುಯಲ್‌ ಫಂಡ್‌ ಘಟಕಗಳನ್ನು, ತೆರಿಗೆ ರಿಯಾಯಿತಿ ಯೋಜನೆಗಳು, ಕ್ಲೋಸ್ಡ್‌ ಎಂಡ್‌ ಯೋಜನೆಗಳನ್ನು ಹೊರತುಪಡಿಸಿ, ಎನ್‌ ಎ ವಿ ಆಧಾರಿತ ಬೆಲೆಯಲ್ಲಿ ಹಿಂದಿರುಗಿ ಹಣ ಪಡೆಯಬಹುದು.

    * ನಿಯಂತ್ರಿತ ವ್ಯವಸ್ಥೆಯಾದ್ದರಿಂದ ಸುರಕ್ಷಿತ.  ಆದರೆ ಹೂಡಿಕೆಗೆ ಗ್ಯಾರಂಟಿ ಎಂಬುದಿಲ್ಲ.

    ಮ್ಯೂಚುಯಲ್‌ಫಂಡ್‌ಗಳ ವಿಧಗಳು:

    ಫಂಡ್‌ ಗಳಲ್ಲಿ ಅವುಗಳು ವಿನಿಯೋಗಿಸುವ ಶೈಲಿಯಾಧರಿಸಿ  ವೃದ್ಧಿ (ಗ್ರೋಥ್) ಯೋಜನೆ,  ಆದಾಯ ತರುವ ಯೋಜನೆ, ಸಮತೋಲನಾ ಯೋಜನೆ,  ವಿತ್ತೀಯ ಪೇಟೆಗಳ ಯೋಜನೆ, ತೆರಿಗೆ ರಿಯಾಯಿತಿ ಯೋಜನೆ, ಸೂಚ್ಯಂಕಗಳಾಧರಿತ (Index)  ಯೋಜನೆ,  ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುವ ನಿಧಿ (ETF),   ಅಲ್ಲದೆ  ಮಿಡ್‌ ಕ್ಯಾಪ್‌, ಲಾರ್ಜ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌,  ವಿವಿಧ ವಲಯಾಧರಿತ ಅಂದರೆ ಫಾರ್ಮ , ಐಟಿ, ಬ್ಯಾಂಕಿಂಗ್‌,  ಸಾರ್ವಜನಿಕ ವಲಯ ಕಂಪನಿಗಳ ನಿಧಿ,   ಇನ್ಪ್ರಾ, ರಿಯಾಲ್ಟಿ,  ಎಫ್‌ ಎಂ ಸಿ ಜಿ,  ಅವಕಾಶಗಳ ನಿಧಿ    ಮುಂತಾದ  ವಲಯಾಧಾರಿತ  ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುವ  ವಿಧಗಳಾಗಿ ವಿಂಗಡಿಸಲಾಗಿದೆ.   ಆದ್ದರಿಂದ ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಮುನ್ನ ಯಾವ ವಲಯದ ನಿಧಿಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದು  ನಿರ್ಧರಿಸಬೇಕು.

    ಎಸ್‌ ಐ ಪಿ ಹೂಡಿಕೆ:

    ಎಸ್‌ ಐ ಪಿ ಎಂದರೆ ಸಿಸ್ಟಮೆಟಿಕ್‌ ಇನ್ವೆಸ್ಟ್ಮೆಂಟ್‌ ಪ್ಲಾನ್‌.   ನಿಯತಕಾಲಿಕವಾಗಿ  ಹೂಡಿಕೆ ಮಾಡಲು ಅವಕಾಶ ಒದಗಿಸುವ ವಿಧವಾಗಿದೆ.   ಸಾಮಾನ್ಯವಾಗಿ ಈ ಯೋಜನೆಯಲ್ಲಿ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡುವುದರಿಂದ  ಪೇಟೆಗಳ ಏರಿಳಿತಗಳನ್ನಾಧರಿಸಿದ ಎನ್‌ ಎ ವಿ ಗಳನ್ನು ಸರಾಸರಿಯಾಗಿಸುವ ಕಾರಣ ಇದು ಸಮತೋಲನಾತ್ಮಕ ವಿಧವೆನಿಸುತ್ತದೆ.  ಈ ವಿಧದಲ್ಲಿ ಮಾಡಿದ ಹೂಡಿಕೆಯನ್ನು ಭಾಗಶ: ಅಥವಾ ಪೂರ್ಣವಾಗಿ ಹಿಂಪಡೆಯಲು ಸಾಧ್ಯವಿದೆ.   ಮಾಸಿಕ ಕಂತುಗಳನ್ನು ಎಲೆಕ್ಟ್ರಾನಿಕ್‌  ಅಥವಾ ಪೋಸ್ಟ್‌ ಡೇಟೆಡ್ ಚೆಕ್ಕುಗಳ ಮೂಲಕವೂ  ಪಾವತಿ ಮಾಡಬಹುದು.  ಆದರೆ ಒಂದು ಮುಖ್ಯವಾದ ಅಂಶವನ್ನು ಗಮನದಲ್ಲಿರಿಸಬೇಕಾದುದೇನೆಂದರೆ ಇಲ್ಲಿನ ಹೂಡಿಕೆಯಾದಿಯಾಗಿ ಯಾವ ಮ್ಯೂಚುಯಲ್‌ ಫಂಡ್ ಯೋಜನೆಗಳಲ್ಲೂ‌,  ಕ್ಯಾಪಿಟಲ್‌ ಪ್ರೊಟೆಕ್ಷನ್‌ ಫಂಡ್‌ ಸೇರಿ,  ಗ್ಯಾರಂಟಿ ಎಂಬುದಿಲ್ಲ.  ಎಲ್ಲವೂ ಪೇಟೆಯ ಏರಿಳಿತಗಳಿಗನುಗುಣವಾಗಿರುತ್ತದೆ.  ಹೆಚ್ಚಿನ ಯೋಜೆನಗಳು ಈಕ್ವಿಟಿ ಷೇರುಗಳ ಮೇಲೆ ಹೂಡಿಕೆ ಮಾಡುವುದರಿಂದ ಷೇರುಪೇಟೆಯ ಏರಿಳಿತಗಳಿಗನುಗುಣವಾಗಿ ಎನ್‌ ಎ ವಿ ಪ್ರದರ್ಶಿತವಾಗುತ್ತದೆ.  ಇದುವರೆಗೂ ಡೆಟ್‌ (DEBT) ಫಂಡ್‌ ಗಳು ಸುರಕ್ಷಿತವೆಂಬ ಭಾವನೆ ಇತ್ತು.  ಆದರೆ ಅವೂ ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತಡವನ್ನೆದುರಿಸುತ್ತಿರುತ್ತವೆ.-

    ಎಸ್‌ ಐಪಿಕಾರ್ಯವಿಧಾನ

    ಮ್ಯೂಚುಯಲ್ಫಂಡ್ನಿಯಂತ್ರಕರುಮತ್ತುAMFI

    ವಿತ್ತೀಯ ಪೇಟೆಗಳ ನಿಯಂತ್ರಕ ಸಂಸ್ಥೆಯಾದʼ ಸೆಬಿʼ ಮ್ಯೂಚುಯಲ್‌ಫಂಡ್‌ಗಳನ್ನೂ ಸಹ ನಿಯಂತ್ರಿಸುತ್ತದೆ.  ಸೆಬಿ (ಮ್ಯೂಚುಯಲ್‌ಫಂಡ್)‌ ರೆಗ್ಯುಲೇಷನ್ಸ್‌ 1996 ಮೂಲಕ ಸೆಬಿಗೆ ನಿಯಂತ್ರಣ ಆಧಿಕಾರ ನೀಡಲಾಗಿದೆ ಮ್ಯೂಚುಯಲ್‌ ಫಂಡ್‌ಗಳು ಸೆಬಿಯೊಂದಿಗೆ ನೋಂದಾಯಿಸಿಕೊಂಡಮೇಲೆಯೇ ತಮ್ಮ ಚಟುವಟಿಕೆಗಳನ್ನುಆರಂಭಿಸಬೇಕು.   ಇದಲ್ಲದೆ ಮ್ಯೂಚುಯಲ್‌ ಫಂಡ್‌ಗಳು ತಮ್ಮದೇ ಆದ ಸಂಘಟನೆಯನ್ನು ಹೊಂದಿದೆ ಅದು ಅಸೋಸಿಯೇಷನ್ ‌ಆಫ್‌ ಮ್ಯೂಚುಯಲ್ ‌ಫಂಡ್ಸ್ ‌ಇನ್‌ ಇಂಡಿಯಾ(AMFI).   ಮ್ಯೂಚುಯಲ್‌ ಫಂಡ್‌ ಇಂಡಸ್ಟ್ರಿಯನ್ನು ಆರೋಗ್ಯಕರವಾದ, ನೈತಿಕತೆಯಾಧಾರಿತ ವೃತ್ತಿಪರತೆಯೊಂದಿಗೆ ಅಭಿವೃಧ್ಧಿಪಡಿಸುವ ಹೊಣೆ ಹೊತ್ತ ಸ್ವನಿಯಂತ್ರಣ ಸಂಸ್ಥೆಇದಾಗಿದೆ.  ಸರ್ಕಾರ,ನಿಯಂತ್ರಕರ ಮತ್ತು ಮ್ಯೂಚುಯಲ್ ‌ಫಂಡ್‌ ಇಂಡಸ್ಟ್ರಿಯ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ.  ಮ್ಯೂಚುಯಲ್ ‌ಫಂಡ್ ‌ಸಲಹೆಗಾರರಾಗಲು AMFI ಯಿಂದ ಸರ್ಟಿಫಿಕೇಷನ್‌ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕಾದುದು ಕಡ್ಡಾಯ. 

    ಮ್ಯೂಚುಯಲ್ಫಂಡ್ಗಳಲ್ಲಿಯಾರುಹೂಡಿಕೆಮಾಡಬಹುದು:

    ಮ್ಯೂಚುಯಲ್ ‌ಫಂಡ್‌ಗಳಲ್ಲಿ18 ವರ್ಷದ ಮೇಲಿನವರು ಯಾರು ಬೇಕಾದರೂ ತೊಡಗಿಸಬಹುದು.  ಗೃಹಿಣಿಯರೂ ಸಹ ಹೂಡಿಕೆ ಮಾಡಬಹುದು.  ಅನಿವಾಸಿ ಭಾರತೀಯರೂ ಸಹಹೂಡಿಕೆ ಮಾಡಬಹುದಾಗಿದೆ.  ಕನಿಷ್ಠರೂ.1000 ದಿಂದ ಹೂಡಿಕೆ ಆರಂಭಿಸಬಹುದು.  SIP  ಯಲ್ಲಿಹೂಡಿಕೆಯನ್ನುಪ್ರತಿ ತಿಂಗಳು ರೂ.100 ರಿಂದಲೂ ಆರಂಭಿಸಲು ಅವಕಾಶವಿದೆ.  ಆದರೆ ನಿಗದಿತ ಪ್ರಮಾಣದಲ್ಲಿ ಲಾಭ ಸಿಕ್ಕೇಸಿಗುತ್ತದೆ ಎಂಬಭ್ರಮೆಬೇಡ.  ಷೇರುಪೇಟೆ, ಬಾಂಡ್‌ ಪೇಟೆಗಳ ಏರಿಳಿತಕ್ಕನುಗುಣವಾಗಿ ಎನ್‌ಎವಿ ಬದಲಾಗುತ್ತಿರುತ್ತದೆ.  ಪೇಟೆಗಳು ಇಳಿಕೆಯಲ್ಲಿದ್ದಾಗ ಒಂದೇ ಬಾರಿ ಹೂಡಿಕೆ ಮಾಡಲು ಸದವಕಾಶ.  ಅದೇ ಪೇಟೆಗಳು ಏರಿಕೆಯಲ್ಲಿದ್ದಾಗ ಲಾಭದ ನಗದೀಕರಣ ಮಾಡುವುದು ಸೂಕ್ತ.

    ಹೂಡಿಕೆಗಳ ಯಶಸ್ಸಿನ ಸುಲಭ ಸೂತ್ರ:

    ಇಂದಿನ ಚಟುವಟಿಕೆಯ ಶೈಲಿಯು ಎಲ್ಲವನ್ನೂ ವ್ಯಾಪಾರದ ದೃಷ್ಠಿಯಿಂದ ಕಾಣುವುದಾಗಿದೆ.   ಬ್ಯಾಲನ್ಸ್‌ಶೀಟ್‌ನತ್ತಲೇ ಎಲ್ಲರ ಗಮನ, ಅದರಲ್ಲೂ ಲಾಭ ನಷ್ಟದ ವಿಚಾರವೇ ಹೆಚ್ಚುಆದ್ಯತೆ.  ಅದಕ್ಕನುಗುಣವಾಗಿ ನಿಶ್ಚಯಿಸಿದ ಗುರಿ ತಲುಪಲು ಸತತಪ್ರಯತ್ನಗಳು ನಿರಂತರವಾಗಿದ್ದುಈದಿಶೆಯಲ್ಲಿ ಸಾಗಲು ಆಯ್ಕೆ ಮಾಡಿಕೊಳ್ಳುವ ಮಾರ್ಗ ಮಾತ್ರ ನಗಣ್ಯವಾಗಿದೆ.

    ಗುರಿ ಸಾಧನೆಗೆ ಅನುಸರಿಸುವ ಮಾರ್ಗಕ್ಕೆ ನಿಂಬಂಧನೆಗಳಿಲ್ಲದ ಕಾರಣ ಸ್ಪರ್ಧಾತ್ಮಕ ಸಂದರ್ಭದಲ್ಲಿ ಎಡುವುವ ಸಾಧ್ಯತೆಗಳೇ ಹೆಚ್ಚು.  ‌  ಹಾಗಾಗಿ ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ.  ನಮ್ಮ ಹೂಡಿಕೆಯ ಸುರಕ್ಷತೆಯ ಮೇಲೆ ಸದಾ ನಿಗಾ ವಹಿಸಿರುವುದು ಅನಿವಾರ್ಯವಾಗಿದೆ.   ಉಲ್ಲಾಸಭರಿತ ಯಶಸ್ಸಿಗೆ ಸರಳ ಸೂತ್ರ:ಶ್ವಾನ ನಿದ್ದೆ, ಬಕ ದ್ಯಾನ, ಗಜ ಸ್ನಾನ ಅಂದರೆ ನಮ್ಮ ಎಲ್ಲಾ ಚಟುವಟಿಕೆಗಳ, ಅದರಲ್ಲೂ ವಿತ್ತೀಯ ಚಟುವಟಿಕೆಗಳ ಮೇಲೆ, ನಾಯಿ ಹೇಗೆ ಮಲಗ್ಗಿದ್ದರೂ ಸದಾ ಎಚ್ಚರಿಕೆಯಲ್ಲಿರುವುದೋ ಹಾಗಿದ್ದರೆ ಒಳಿತು,  ನಮ್ಮ ಹೂಡಿಕೆಗಳು ಅನಿರೀಕ್ಷಿತವಾಗಿ ಒದಗಿಸುವ ಅಧಿಕ ಲಾಭದ ಸಂದರ್ಭಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ  ಬಕಪಕ್ಷಿಯ ರೀತಿ ಹಠವಿದ್ದಲ್ಲಿ ಮಾತ್ರ ಚಟುವಟಿಕೆಯು ಗಜ ಸ್ನಾನದ ತೃಪ್ತಿಯನ್ನು ಪಡೆಯಲು ಸಾಧ್ಯ.

    ಸಾಮಾನ್ಯವಾಗಿ ಗೃಹಿಣಿಯರು ಸಮತೋಲನಾ ಮನಸ್ಕರಾಗಿರುವುದರಿಂದ,  ಎಸ್‌ ಐ ಪಿ ವಿಧದಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿಕೆಮಾಡಿ, ಫಂಡ್‌ ಯೋಜನೆಯೊಳಗಿನ ಆಗು ಹೋಗುಗಳನ್ನು ತುಲನಾತ್ಮಕವಾಗಿ ತೂಗಿ ನಿರ್ಧರಿಸುವುದರಿಂದ,  ಇದು ಉತ್ತಮ ಉಳಿತಾಯ ಮಾರ್ಗವೆನ್ನಬಹುದು.

    ನೆನಪಿಡಿ: ಮ್ಯೂಚುಯಲ್‌ ಫಂಡ್‌ ಗಳಲ್ಲೂ ಸಹ ಗ್ಯಾರಂಟೀ ಎಂಬುದಿಲ್ಲ.  ಪೇಟೆಯ ಏರಿಳಿತಗಳಿಗನುಗುಣವಾಗಿ ಯೋಜನೆಗಳ ಎನ್ ಎ ವಿ ಬದಲಾಗುತ್ತಿರುತ್ತದೆ.   ಅದರಂತೆ ನಗದೀಕರಿಸಬಹುದಾದ ಯೂನಿಟ್‌ ಗಳ ಮೊತ್ತವೂ ಸಹ ಏರಿಳಿತ ಕಾಣುತ್ತದೆ.

    Photo by Micheile Henderson on Unsplash

    good news : ಮುಂದಿನ ಶನಿವಾರದಿಂದಲೇ ಲಸಿಕೆ ಹಾಕುವ ಕಾರ್ಯ ಆರಂಭ

    ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಅಂದರೆ ಸಂಕ್ರಾಂತಿ ಹಬ್ಬ ಮುಗಿದ ಎರಡೇ ದಿನಕ್ಕೆ ಭಾರತದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಜನವರಿ 16ರಿಂದ ಭಾರತಾದ್ಯಂತ ಲಸಿಕೆ ಹಾಕುವ ಕೆಲಸ ಶುರು. ಇದು ವಿಶ್ವದ ಅತಿದೊಡ್ಡ ಲಸಿಕೆ ಹಾಕುವ ಕಾರ್ಯಕ್ರಮವಾಗಲಿದೆ.

    ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಮೊದಲ ಹಂತದಲ್ಲಿ ಪೌರ ಕಾರ್ಮಿಕರು ಸೇರಿದಂತೆ ಆರೋಗ್ಯ, ಪೊಲೀಸ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಕೊರೋನಾ ಸೇನಾನಿಗಳು ವ್ಯಾಕ್ಸಿನ್ ಪಡೆಯಲಿದ್ದಾರೆ. ಇವರ ಸಂಖ್ಯೆ ಅಂದಾಜು 3ಕೋಟಿ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಕೆಲವು ರೋಗದಿಂದ ಬಳತ್ತಿರುವವರಿಗೆ ಆದ್ಯತೆ ನೀಡಲಾಗುವುದು. ಇವರ ಸಂಖ್ಯೆ ಅಂದಾಜು 27 ಕೋಟಿ.

    ಕಳೆದವಾರ ಕೋವಿಶಿಲ್ಡ್ ಮತ್ತು ಕೋ ವಾಕ್ಸಿನ್ ಬಳಕೆಗೆ ಭಾರತ ಅನುಮತಿ ನೀಡಿತ್ತು

    error: Content is protected !!