ಅಮೆರಿಕಾದ ಅಧ್ಯಕ್ಷ ಗದ್ದುಗೆ ಅದನ್ನು ಅಲಂಕರಿಸಿದ ವ್ಯಕ್ತಿತ್ವಗಳನ್ನು ಅವಿರತವಾಗಿ ಬದಲಾಯಿಸಿದೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಮತ್ತು ಕರ್ತವ್ಯಗಳಿಗೆ ಅಧ್ಯಕ್ಷರುಗಳನ್ನು ಅದು ಬದ್ಧರಾಗಿಸಿದ್ದೇ ಹೆಚ್ಚು. ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯ ಮುಂದೆ ಆತ ಕುಬ್ಜನೂ, ವಿಧೇಯನೂ ಆಗುವಂತೆ ಮಾಡಬಲ್ಲ ಶಕ್ತಿ ಆ ಪದವಿಗಿದೆ.
ಆದರೆ ಅತಿಕ್ರಮಣದ ಶೈಲಿಯಲ್ಲಿ ಆಡಳಿತ ನಡೆಸುತ್ತಿರುವ ಅತ್ಯಂತ ವಿವಾದಾಸ್ಪದ ವ್ಯಕ್ತಿತ್ವದ ಟ್ರಂಪ್ ನ ಕಥೆಯೇ ಬೇರೆ. ಹಲವು ಊಹಾಪೋಹಗಳ ನಡುವೆ ಪ್ರತಿ ಸ್ಪರ್ಧಿಗಿಂತ ಕಡಿಮೆ ಮತ ಗಳಿಸಿದರೂ ಎಲೆಕ್ಟೋರಲ್ ಮತಗಳ ಹೆಚ್ಚಳದ ಕಾರಣ ಆಯ್ಕೆಯಾಗಿ ಈ ಪದವಿಯನ್ನು ಅಲಂಕರಿಸಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಳ್ಳೆಯದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ ವ್ಯಕ್ತಿ. ವಿಭಿನ್ನ ಧಾಟಿಯ ಆಳ್ವಿಕೆ ನಡೆಸುತ್ತ ಸುತ್ತ ಮುತ್ತಲಿನ ಹಲವು ಸಲಹೆಗಾರರನ್ನು, ರಾಜ ತಾಂತ್ರಿಕರನ್ನು ಕೆಲಸದಿಂದ ವಜಾ ಮಾಡುತ್ತಲೇ ಇತರರ ಬಾಯಿ ಮುಚ್ಚಿಸಿದ ವ್ಯಕ್ತಿ. ಒಬ್ಬ ಮುಖಂಡನಾಗಿ ಆತನ ನಡವಳಿಕೆ, ಬಳಸಿದ ಭಾಷೆ, ಯೋಚನೆ ಮಾಡದೆ ನಡೆದುಕೊಳ್ಳುವ ವ್ಯಕ್ತಿತ್ವ, ಸೃಷ್ಟಿಸಿದ ವಿವಾದಗಳು ಅಮೆರಿಕಾವನ್ನು ಈ ನಾಲ್ಕು ವರ್ಷಗಳಲ್ಲಿ ಆಳವಾಗಿ ಒಡೆಯುವುದರ ಜೊತೆ ನಗೆಪಾಟಲಾಗಿಸಿದ್ದೇ ಹೆಚ್ಚು.
ಟ್ರಂಪ್ ನ ನಿರಂತರ ವಿರೋದಾಭಾಸಗಳ ಹೇಳಿಕೆಗಳು ಮತ್ತು ನಿರಂಕುಶ ಆಳ್ವಿಕೆ ಅಮೆರಿಕಾದ ಈ ಕಡು ಬಲ ಪಂಥೀಯ ಜನರ ಮೇಲೆ ಮಾತ್ರ ಮಾಯಾ ಜಾಲವನ್ನೇ ಬೀಸಿರುವುದು ಸುಳ್ಳಲ್ಲ. ಹಾಗಾಗಿ ಇತ್ತೀಚೆಗಿನ ಚುನಾವಣೆಯಲ್ಲಿ ಟ್ರಂಪ್ ಸೋತರೂ ಇಡೀ ಅಮೆರಿಕಾದ ಇತಿಹಾಸದಲ್ಲಿ ಕೇಳರಿಯದಷ್ಟು ಮತಗಳಿಸುವಲ್ಲಿ ಎರಡನೇ ಸ್ಥಾನವನ್ನು ಆತ ತಲುಪುವಂತೆ ಮಾಡಿತು. ಅದಕ್ಕಾಗಿ ರಿಪಬ್ಲಿಕನ್ ಪಕ್ಷ ಆತನ ನೇತೃತ್ವವವನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಸ್ಥಿತಿ ಇರುವಾಗಲೇ ಇದೇ ಬುಧವಾರ ಟ್ರಂಪ್ ನ ಹಿಂಬಾಲಕರು ನಡೆಸಿದ ದಾಂಧಲೆ ಇಡೀ ರಿಪಬ್ಲಿಕನ್ ಪಕ್ಷವನ್ನೇ ಇಬ್ಭಾಗವಾಗಿಸಿ ಒಡೆದಿದೆ. ಸ್ವತಃ ಉಪಾಧ್ಯಕ್ಷ ಮೈಕ್ ಪೆನ್ಸ್ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾನೆ. ಅಮೆರಿಕನ್ ರಿಪಬ್ಲಿಕ್ ಮತ್ತು ಟ್ರಂಪ್ ರಿಪಬ್ಲಿಕ್ ಎಂದು ರಿಪಬ್ಲಿಕನ್ ಪಾರ್ಟಿ ಒಡೆದುಹೋಗಿದೆ. ಅಧಿಕಾರ ಕಳೆದುಕೊಂಡು ಇನ್ನು ಹನ್ನೆರಡು ದಿನಗಳಲ್ಲಿ ಕೆಳಗಿಳಿಯಬೇಕಾಗಿರುವ ಟ್ರಂಪ್ ಪ್ರಪಂಚದ ಬಹುತೇಕ ನಾಯಕರಿಂದ ಟೀಕಿಸಲ್ಪಟ್ಟಿದ್ದಾನೆ.
ಕಳೆದ ವರ್ಷದ ನವೆಂಬರ್ ತಿಂಗಳ ಚುನಾವಣೆ ನಡೆಯುವುದಕ್ಕಿಂತ ಮುಂಚಿನಿಂದಲೂ “ಈ ಚುನಾವಣೆಯಲ್ಲಿ ತಾನು ಸೋತರೆ ಅದು ನ್ಯಾಯಯುತ ಚುನಾವಣೆಯಲ್ಲ, ಅದನ್ನು ತಾನು ಒಪ್ಪುವುದಿಲ್ಲ. ದೇಶ ಹಿಂಸೆಗೆ ತಿರುಗುತ್ತದೆ “ -ಎನ್ನುವ ಮುನ್ಸೂಚನೆಯ ನೀಡಿದ್ದ ಟ್ರಂಪ್ ಚುನಾವಣೆಯಲ್ಲಿ ಸೋತ ನಂತರ ತನ್ನ ಉಳಿದ ದಿನಗಳಲ್ಲಿ ತೀವ್ರ ಹತಾಶೆಯ ಹಂತ ತಲುಪಿದ್ದಾರೆ. ದಿನ ಕಳೆದಂತೆಲ್ಲ ಆತನ ವಂದಿ ಮಾಗಧರೆಲ್ಲ ಒಬ್ಬೊಬ್ಬರಾಗಿ ದೂರಾಗುತ್ತಿರುವ ಕಾರಣ ಕೊನೆಯ ಅಸ್ತ್ರವಾಗಿ ತನ್ನ ಕಟ್ಟಾ ಅನುಯಾಯಿಗಳನ್ನು ಉದ್ರೇಕಿಸಿ ಅವರನ್ನು ದೇಶದ ಶಾಂತಿಯನ್ನು ಕದಡಲು ಉಪಯೋಗಿಸಿಕೊಳ್ಳುವ ಹೀನಾಯ ಸ್ಥಿತಿಯನ್ನು ತಲುಪಿದ್ದಾರೆ. ಅತ್ಯಂತ ಕುಟಿಲತೆಯಿಂದ ತನ್ನ ಈ ಅನುಯಾಯಿಗಳ ಮೆದುಳನ್ನು ತಿರುಚಿ ಅವರನ್ನು ದೇಶ ಭಕ್ತರೆಂತಲೂ, ಕ್ರಾಂತಿಕಾರಿಗಳೆಂದೂ ಕರೆದು ಹೊಗಳುತ್ತ ರಾಜಧಾನಿಯ ಸಂವಿಧಾನ ಸ್ಥಾನದಲ್ಲೇ ಅರಾಜಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿ ಕಳಂಕಿತರಾಗಿದ್ದಾರೆ.
ಒಟ್ಟು ನಾಲ್ವರು ಪ್ರಜೆಗಳ ಸಾವಿನ ರಕ್ತ ಕೈ ಗೆ ಅಂಟಿರುವಾಗಲೂ ಸ್ವಾರ್ಥ ದ ಹೇಳಿಕೆ ನೀಡುತ್ತಿರುವ ಕಾರಣ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಈತನನ್ನು 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಇದೀಗ ಶರತ್ತುಗಳನ್ನು ಹಾಕಿ ಟ್ರಂಪ್ ಹಲವು ಟ್ವೀಟ್ ಗಳನ್ನು ರದ್ದು ಮಾಡಿದ ಮೇಲಷ್ಟೆ ಮತ್ತೆ ತನ್ನ ಖಾತೆಯನ್ನು ಬಳಸಲು ಅನುಮತಿ ನೀಡಿದೆ. ಫೇಸ್ ಬುಕ್ ಅನಿರ್ದಿಷ್ಠ ಕಾಲ ಈತನ ಖಾತೆಯನ್ನು ಮುಚ್ಚಿದೆ.
ನ್ಯಾಯಯುತವಾಗಿ ನಡೆದ ಚುನಾವಣೆಯ ವಿರುದ್ಧ ಯಾವ ಸಾಕ್ಷಿಗಳು ಇಲ್ಲದಾಗ್ಯೂ ತನ್ನ ಸೋಲನ್ನು ಒಪ್ಪಲಾಗದ ಟ್ರಂಪ್ ನ ಮಾನಸಿಕ ಸ್ವಾಸ್ಥ್ಯ ದ ಬಗ್ಗೆಯೂ ಹಲವರಲ್ಲಿ ಗುಮಾನಿ ಎದ್ದು ಆ ಕಾರಣ ತತ್ ಕ್ಷಣವೇ ಆತನನ್ನು ಅಧಿಕಾರದಿಂದ ತೆಗೆಯಬೇಕೆಂಬ ವಿಚಾರಕ್ಕೆ ಅಮೆಂಡ್ ಮೆಂಟ್ 25 ರ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
25 ನೇ ಅಮೆಂಡ್ ಮೆಂಟನ್ನು ಯಾವಾಗ ಬಳಸಲಾಗುತ್ತದೆ?
ಹುದ್ದೆಯಲ್ಲಿರುವ ಅಮೆರಿಕಾದ ಅಧ್ಯಕ್ಷನಿಗೆ ಅಕಸ್ಮಾತ್ ಸಾವಾದಲ್ಲಿ, ಖಾಯಿಲೆಯಾದಲ್ಲಿ, ಧೀರ್ಘ ಕಾಲ ಆಸ್ಪತ್ರೆಗೆ ಹೋಗಬೇಕಾದಲ್ಲಿ, ಮರೆವಿನ ಖಾಯಿಲೆ ಇತ್ಯಾದಿ ಆದಲ್ಲಿ ಆತನ ಸಮ್ಮತಿಯನ್ನು ಕೇಳದೆ ಅಧ್ಯಕ್ಷನನ್ನು ಕೆಳಗಿಳಿಸಿ, ಉಪಾಧ್ಯಕ್ಷನನ್ನು ಅಧ್ಯಕ್ಷ ಪದವಿಗೆ ಏರಿಸಲಾಗುತ್ತದೆ. ಸ್ವತಃ ಅಧ್ಯಕ್ಷನೇ ತನಗೆ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ಬರೆದು ತಿಳಿಸಿದಾಗ ಅಥವಾ ಅಂಗವಿಹೀನತೆ ಉಂಟಾದಲ್ಲಿ ಈ ಬದಲಾವಣೆ ಸಾಧ್ಯ. ಅಕಸ್ಮಾತ್ ಉಪಾಧ್ಯಕ್ಷ ನನ್ನು ಬದಲಾಯಿಸಬೇಕಾದ ತುರ್ತಿನಲ್ಲಿ ಕೂಡ ಇದನ್ನು ಬಳಸಬಹುದಿದೆ.
ಆದರೆ, ಗದ್ದುಗೆ ಬಿಡಲಾಗದ ಮಾನಸಿಕ ಖಾಯಿಲೆ ಅಥವಾ ವ್ಯಕ್ತಿತ್ವ ವ್ಯಾಧಿ ಯ ವಿಕಲತೆಯ ಅಡಿಯಲ್ಲಿ ಡೊನಾಲ್ಡ್ ಟ್ರಂಪ್ ನನ್ನು ಕೆಳಗಿಳಿಸಬಹುದೇ ಅದರಲ್ಲೂ ಅಧಿಕಾರ ಹಸ್ತಾಂತರಕ್ಕೆ ಇನ್ನು ಕೇವಲ 12 ದಿನವಿರುವಾಗ ಎನ್ನುವ ವಿಚಾರ ಬರಿಯ ಚರ್ಚೆಗೆ ಸೀಮಿತವಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಬುಧವಾರ ನಡೆದದ್ದೇನು?
ಮಧ್ಯಾಹ್ನದ ವೇಳೆಗೆ ಶ್ವೇತ ಭವನದ ಹತ್ತಿರವೇ ಇರುವ ಎಲ್ಲಿಪ್ಸ್ ಮೈದಾನದಲ್ಲಿ ’ ಅಮೆರಿಕಾವನ್ನು ರಕ್ಷಿಸಿ” ಎನ್ನುವ ಟ್ರಂಪ್ ನ ಭಾಷಣ ಕೇಳಲು ಸಾವಿರಾರು ಅನುಯಾಯಿಗಳನ್ನು ಒಗ್ಗೂಡಿಸಲಾಯಿತು. ಇವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್-“ ಪೆನ್ಸಿಲ್ವೇನಿಯಾ ರಸ್ತೆಯ ಮೂಲಕ ನಡೆದು ಕ್ಯಾಪಿಟಲ್ ಭವನದಲ್ಲಿ ಬಿಡೆನ್ ಮುಂದಿನ ಅಧ್ಯಕ್ಷರೆಂದು ಪ್ರಮಾಣ ಪತ್ರ ಬರೆದು ನಮ್ಮ ಗೆಲುವನ್ನು ಕಸಿದುಕೊಳ್ಳುತ್ತಿರುವ ಬಲಹೀನರಿಗೆ ಬುದ್ಧಿ ಕಲಿಸೋಣ “- ಎಂಬ ಭಾಷಣ ಮಾಡಿದ್ದಾರೆ.
ಕ್ಯಾಪಿಟಲ್ ಎನ್ನುವ ಈ ಕಟ್ಟಡದಲ್ಲಿ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೆಟಿವ್ ಚುನಾಯಿತರು ಕೆಲಸ ಮಾಡುತ್ತಾರೆ. ಇಲ್ಲಿಗೆ ಸುಮಾರು ಒಂದು ಗಂಟೆಯ ನಂತರ ಮಾರಕಾಸ್ತ್ರ ಸಹಿತ ಬಂದ ಈ ಉದ್ರೇಕಿತ ಗುಂಪು ಪೋಲೀಸರ ಜೊತೆ ಹಣಾ ಹಣಿ ಮಾಡಿ ಕ್ಯಾಪಿಟಲ್ ಬಿಲ್ಡಿಂಗ್ ನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಕಾನೂನಿನ ಎಲ್ಲ ನಿಯಮಗಳನ್ನು ಮುರಿದು ಇಡೀ ಕಟ್ಟಡದ ಕಿಟಕಿ-ಬಾಗಿಲುಗಳನ್ನು ಪುಡಿ-ಪುಡಿ ಮಾಡಿ ವಿಧ್ವಂಸಕ ಕೃತ್ಯಕ್ಕಿಳಿದಿದ್ದಾರೆ. ಸಂವಿಧಾನ ಮತ್ತು ಪ್ರಜಾ ಪ್ರಭುತ್ವಕ್ಕೆ ಮಸಿ ಬಳಿದಿದ್ದಾರೆ.
ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು, ಸೆಕ್ಯೂರಿಟಿ ಆಫೀಸರುಗಳು ಅಲ್ಲಿನ ಪದಾಧಿಕಾರಿಗಳನ್ನೆಲ್ಲ ಸುರಕ್ಷಿತವಾಗಿಡಲು ಸತತವಾಗಿ ಎರಡು ಗಂಟೆ ಹೆಣಗಾಡಿದ್ದಾರೆ. ಬಾಗಿಲುಗಳಿಗೆ ತಡೆ ಗೋಡೆಗಳನ್ನು ನಿರ್ಮಿಸಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹದಿನಾಲ್ಕು ಜನ ಪೊಲೀಸರಿಗೆ ಗಾಯಗಳಾಗಿ ಇಬ್ಬರು ತೀವ್ರ ಹಾನಿಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೂರು ಗಂಟೆಯ ವೇಳೆಗೆ ಪೊಲೀಸರ ಮೇಲೆ ಕೆಮಿಕಲ್ಸ್,ಪೆಪ್ಪರ್ ಸ್ಪ್ರೇ , ಕುರ್ಚಿ ಇತ್ಯಾದಿಗಳನ್ನು ಎಸೆದು ಒಳನುಗ್ಗುತ್ತಿದ್ದವರಲ್ಲಿದ್ದ ಮಹಿಳೆಗೆ ಪೋಲೀಸರ ಗುಂಡ ತಾಕಿ ಆಕೆ ಅಸುನೀಗಿದ್ದಾಳೆ.
ಇದೆಲ್ಲದರ ವರದಿ ಇಡೀ ಅಮೆರಿಕಾವನ್ನು ಶಾಕ್ ಗೆ ತಳ್ಳಿ ಜೋ ಬಿಡೆನ್ ಅಧ್ಯಕ್ಷ ಟ್ರಂಪ್ ಇಂತಹ ನಾಚಿಕೆ ಗೇಡಿನ ಆಕ್ರಮಣಕ್ಕೆ ಪ್ರಚೋದನೆ ನೀಡಿದ್ದನ್ನು ಖಂಡಿಸಿ ಇದಕ್ಕೆ ಕೊನೆಹಾಡಲು ಟ್ರಂಪ್ ಗೆ ಕರೆ ನೀಡಿದ್ದಾರೆ. ಬಹಳಷ್ಟು ಕಟು ಖಂಡನೆಗಳು ಮತ್ತು ಒತ್ತಡ ಬಂದ ನಂತರವಷ್ಟೆ ತಮ್ಮ ತಮ್ಮ ಮನೆಗಳಿಗೆ ಮರಳುವಂತೆ ತನ್ನ ಬೆಂಬಲಿಗರಿಗೆ ಟ್ರಂಪ್ ಆದೇಶ ನೀಡಿದ್ದು.
ಟ್ರಂಪ್ ಈ ಗಲಭೆ ಕೋರರನ್ನು ಪೇಟ್ರಿಯಾಟ್ಸ್ ಎಂದು ಟ್ವೀಟ್ ಮಾಡಿ ಹೊಗಳಿ ಅತ್ಯಂತ ನಿರ್ಲಜ್ಜಿತ ಅಧ್ಯಕ್ಷನೆನಿಸಿಕೊಂಡರು. ಟ್ವಿಟ್ಟರ್ ಆತನ ಖಾತೆಯನ್ನು ಅಮಾನತು ಮಾಡಿದೆ. ನೂರಾರು ಜನರಿಗೆ ಸಣ್ಣ ಪುಟ್ಟ ಅಪಘಾತಗಳಾದರೆ, ಮಾನಸಿಕವಾಗಿ ಆತಂಕ, ಶಾಕ್ ನಿಂದ ಅಮೆರಿಕಾವಿರಲಿ, ಇಡೀ ಪ್ರಪಂಚವೇ ಅಮೆರಿಕಾವನ್ನು ನೋಡಿ ಧಿಗ್ಭ್ರಮೆಗೊಂಡಿದೆ.
ಸಾಯಂಕಾಲ ಸುಮಾರು 5.40 ರ ಹೊತ್ತಿಗೆ ಕ್ಯಾಪಿಟಲ್ ಬಿಲ್ಡಿಂಗ್ ನ್ನು ವಶಕ್ಕೆ ತಗೊಂಡ ನ್ಯಾಷನಲ್ ಗಾರ್ಡ್ ಟ್ರೂಪ್, ಸಿಬಿಐ, ಪೊಲೀಸರು, ಸೆಕ್ಯೂರಿಟಿಯವರ ಸಹಾಯಕ್ಕೆ ಬಂದಿದ್ದಾರೆ. ನಿಧಾನಕ್ಕೆ ಅಲ್ಲಿನ ಕಾಂಗ್ರೆಸಿಗರನ್ನು ಹೊರ ಕಳಿಸಿದ್ದಾರೆ. 6 ಗಂಟೆಯಿಂದ ಕರ್ಫ್ಯೂ ಹೇರಿದ್ದಾರೆ. ಸುಮಾರು 68 ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಗುರುವಾರ ಕರ್ಫ್ಯೂ ಮುರಿದ ಎಂಭತ್ತು ಜನರನ್ನು ಬಂಧಿಸಿದ್ದಾರೆ. ಇವತ್ತು ಬೆಳಿಗ್ಗೆಯ ವೇಳೆಗೆ ಬಂದ ಒಬ್ಬ ಪೊಲೀಸನ ಸಾವಿನ ಸುದ್ದಿ ಜನರನ್ನು ಮತ್ತಷ್ಟು ವಿಶಾದಕ್ಕೆ ತಳ್ಳಿದೆ.
ಅಮೆರಿಕಾದ ಈ ಚಾರಿತ್ರಿಕ ಕಟ್ಟಡದ ಮೇಲೆ ಅಮೆರಿಕಾದ ಪ್ರಜೆಗಳೇ ದಾಳಿ ನಡೆಸಿರುವುದು ಇದೇ ಮೊದಲು.
1814 ರ ದಾಳಿಯಲ್ಲಿ ಅಥವಾ ಸಣ್ಣ ಯುದ್ಧದಲ್ಲಿ ಬ್ರಿಟಿಷರು ಈ ಕಟ್ಟಡವನ್ನು ಸುಡಲು ಯತ್ನಿಸಿದ್ದರು. 1915 ರಲ್ಲಿ ಜರ್ಮನ್ ಪ್ರಾಧ್ಯಾಪರಕನೊಬ್ಬ ನಾಲ್ಕು ಡೈನಮೈಟ್ ಕಡ್ಡಿಗಳನ್ನು ಸ್ಪೋಟಿಸಿದ್ದ. ಅಮೆರಿಕಾ ಬ್ರಿಟನ್ ಮೂಲಕ ಜರ್ಮನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದೆ ಎನ್ನುವುದು ಈತನ ಆಕ್ಷೇಪಣೆಯಾಗಿತ್ತು.
1954 ಪೋರ್ಟೋರಿಕನ್ ನ್ಯಾಷನಲ್ ಪಾರ್ಟಿ ಗೆ ಸೇರಿದ ನಾಲ್ವರು ಗುಂಡಿನ ದಾಳಿ ನಡೆಸಿದ್ದರು. ಅವರು ತಮ್ಮ ದೇಶದ ಸ್ವಾತಂತ್ರ್ಯವನ್ನು ಆಗ್ರಹಿಸಿದ್ದರು.
1998 ರಲ್ಲಿ ಮಾನಸಿಕ ಸ್ವಾಸ್ಥ್ಯ ಸರಿಯಿಲ್ಲದ ವ್ಯಕ್ತಿಯೊಬ್ಬ ಕ್ಯಾಪಿಟಲ್ ಬಿಲ್ಡಿಂಗ್ ನ ಇಬ್ಬರು ಪೊಲೀಸರ ಮೇಲೆ ಗುಂಡನ್ನು ಹಾರಿಸಿದ್ದ.
ಅಮೆರಿಕಾವನ್ನು ರಕ್ಷಿಸಿ ಎನ್ನುವ ಬಾವುಟ ಹಿಡಿದ ಜನರೇ ಅಲ್ಲಿನ ಕಾನೂನು ಮತ್ತು ಕಟ್ಟಲೆಗಳನ್ನು ಮುರಿದು, ಸುಳ್ಳು ಸುದ್ದಿಯ ಊಹಾ ಪೋಹಗಳನ್ನು ನಂಬಿ್ “ ಜಗತ್ತೇ ನಿರ್ನಾಮವಾಗುತ್ತಿದೆ ಆದ್ದರಿಂದ ನಾವೇ ಈ ಜಗತ್ತಿನ ಕೊನೆಯ ಆಶಾಕಿರಣಗಳು, ಡೊನಾಲ್ಡ್ ಟ್ರಂಪ್ ನಮ್ಮ ನಾಯಕ “ ಎಂದು ಎಗ್ಗಿಲ್ಲದೆ ವರ್ತಿಸಿರುವುದು ಜನತಂತರ ಪ್ರೇಮಿಗಳಿಗೆ ಆಘಾತ ತಂದಿದೆ. ಟ್ರಂಪ್ ತಾನು ಕಾನೂನು ಬದ್ಧವಾಗಿ ಅಧಿಕಾರ ಹಸ್ತಾಂತರಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರೂ ಅದರ ಬೆನ್ನ ಹಿಂದೆಯೇ ’ ಅನ್ಯಾಯದ ವಿರುದ್ಧ ಹೋರಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳಿರುವುದು ಅಮೆರಿಕಾದಲ್ಲಿ ಇಂತಹ ಆಘಾತಕಾರೀ ವಿಚಾರಗಳು ಮುಂದುವರೆಯಬಹುದಾದ ಸಾಧ್ಯತೆಗಳನ್ನು ಹೆಚ್ಚಿಸಿದೆ.
ಈ ಮಧ್ಯೆ ಗಲಭೆಕೋರರ ಗುಂಪಿನಲ್ಲಿ ಭಾರತದ ಬಾವುಟ ಹಿಡಿದ ವ್ಯಕ್ತಿಯೊಬ್ಬರು ಕಾಣಿಸಿದ್ದು, ಭಾರತದ ಬಾವುಟವನ್ನು ಇಲ್ಲಿಗೆ ತಂದಿರುವ ಔಚಿತ್ಯವನ್ನು ಪ್ರಶ್ನಿಸಿ ಜಗತ್ತಿನ ಎಲ್ಲ ಭಾರತೀಯರು ತೀವ್ರ ಅಸಮಾಧಾನ,ಕೋಪ ವ್ಯಕ್ತಪಡಿಸಿದ್ದಾರೆ.