ಶಾಲಾರಂಭ: ಪೋಷಕರು-ಮಕ್ಕಳ ಮುಖದಲ್ಲಿ ಮಂದಹಾಸ- ಸುರೇಶ್ ಕುಮಾರ್
‘ಕರೋನಾ ಓಡಿಸೋಣ… ನಮ್ಮ ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ…’ ಎಂಬ ಧ್ಯೇಯವಾಖ್ಯದೊಂದಿಗೆ ಹೆಚ್ಚುಕಮ್ಮಿ ಆರೇಳು ತಿಂಗಳ ನಂತರ ಶಾಲೆಗಳು ಆರಂಭವಾಗಿ ರಾಜ್ಯದೆಲ್ಲೆಡೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿ ಬಂದಿದ್ದು, ಮಕ್ಕಳು ಮತ್ತು ಪೋಷಕರಲ್ಲಿ ಸಂಭ್ರಮ ಮನೆ ಮಾಡಿತ್ತು ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ 10 ಮತ್ತು 12ನೇ ತರಗತಿಗಳು ಮತ್ತು 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಇಂದು ಆನೇಕಲ್ ತಾಲೂಕಿನ ಹೆನ್ನಾಗರ, ಹೆಬ್ಬಗೋಡಿ, ಚಂದಾಪುರ ಚತ್ರಖಾನೆ, ಅತ್ತಿಬೆಲೆ, ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ, ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಗಳಿಗೆ ತಾವು ಭೇಟಿ ನೀಡಿದ್ದು, ಮಕ್ಕಳು ಮತ್ತು ಪೋಷಕರು ಶಾಲೆ ಆರಂಭದಿಂದ ಅತ್ಯಂತ ಖುಷಿಯಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಅವರು ಶುಕ್ರವಾರ ಸಂಜೆ ಶಾಲಾರಂಭದ ಅನುಭವಗಳನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯಾದ್ಯಂತ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 241965 ವಿದ್ಯಾರ್ಥಿಗಳ ಪೈಕಿ ಇಂದು 78794 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 32.56 ಹಾಜರಿ) ಅಂತೆಯೇ 16850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ 927472 ವಿದ್ಯಾರ್ಥಿಗಳು 380264 ಹಾಜರಾಗಿದ್ದಾರೆ. (ಶೇ. 41 ಹಾಜರಾತಿ) ಮಧ್ಯಾಹ್ನದ ಮೇಲೆ 6ರಿಂದ 9ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ತರಗತಿಗಳು ಪ್ರಾರಂಭವಾಗಿವೆ. ಇದರ ಅಂಕಿ-ಅಂಶಗಳು ಅಪ್‍ಡೇಟ್ ಆಗುತ್ತಿದ್ದು, ವಿವರಗಳು ಇನ್ನೂ ದೊರೆಯಬೇಕಿದೆ ಎಂದು ಸಚಿವರು ವಿವರಿಸಿದರು.
ಎಲ್ಲರ ಸಹಕಾರದಿಂದ ಶಾಲೆಗಳು ಆರಂಭ: ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತಗಳು, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ರೀತಿಯ ಕಾಯಕಲ್ಪವನ್ನು ದೊರಕಿಸಿಕೊಟ್ಟಿದ್ದಾರೆ. ರಾಜ್ಯದ ಎಲ್ಲ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಸಚಿವರು ಹೇಳಿದರು.
ಮಕ್ಕಳು ಮಾಸ್ಕ್ ಹಾಕಿಕೊಂಡು, ಪೋಷಕರ ಅನುಮತಿ ಪತ್ರದೊಂದಿಗೆ ಶಾಲೆಗೆ ಹಾಜರಾದರು. ರಾಜ್ಯದ ಬಹುತೇಕ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ಊರವರು, ಶಾಲಾಭಿವೃದ್ಧಿ ಸಮಿತಿಗಳವರು ಮಾವು, ತೆಂಗಿನ ಗರಿ, ಬಾಳೆಕಂಬಗಳೊಂದಿಗೆ ತಳಿರು ತೋರಣ ಕಟ್ಟಿದ್ದು ವಿಶೇಷವಾಗಿತ್ತು. ರಂಗೋಲಿ ಬಿಡಿಸಲಾಗಿತ್ತು. ಇಂದು ರಾಜ್ಯದ ಹಬ್ಬದ ವಾತಾವರಣ ಮೂಡಿತ್ತು. ಹಳ್ಳಿಗಳಲ್ಲಿ ಮನೆಮನೆಗಳಲ್ಲಿ ಹೊಸ ವರ್ಷದ ಈ ದಿನ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಬೆಳ್ಳಂಬೆಳಗ್ಗೆಯೇ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಹೋಗಲು ತಯಾರಿ ನಡೆಸಿದ ಪೋಷಕರು ಮಕ್ಕಳಿಗೆ ಲಘು ಉಪಹಾರ ಮತ್ತು ಬಿಸಿ ನೀರಿನ ಬಾಟಲಿಯೊಂದಿಗೆ ಶಾಲೆಗೆ ಕಳಿಸಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು.
ಶಾಲಾರಂಭದ ಒಂದು ಸ್ಲೈಡ್ ಶೋ ಇಲ್ಲಿದೆ.
10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಬೆಳಗ್ಗೆ ಆರಂಭವಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪಾಳಿಗಳಲ್ಲಿ 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳು ಶಾಲಾವರಣದಲ್ಲಿ ಪುಟ್ಟಪುಟ್ಟ ತಂಡಗಳಲ್ಲಿ ಮಾರ್ಗದರ್ಶಿ ಶಿಕ್ಷಕರ ಕಣ್ಗಾವಲಿನಲ್ಲಿ ಆರಂಭಗೊಂಡವು. ಹಲವಾರು ಕಡೆಗಳಲ್ಲಿ ಕೆಲವು ಮಕ್ಕಳು ತಮ್ಮದೇ ಆದ ಸ್ಯಾನಿಟೈಜ್ ಬಾಟಲಿಗಳನ್ನು ಜೊತೆಗಿಟ್ಟುಕೊಂಡಿದ್ದು ಕಂಡು ಬಂತು. ಮಾಸ್ಕ್ ಮರೆತು ಬಂದ ಮಕ್ಕಳಿಗೆ ಶಾಲೆಯ ಶಿಕ್ಷಕರು ಮಾಸ್ಕ್ ಗಳನ್ನು ನೀಡಿದರು. ಶಾಲೆಗೆ ಬರುವುದರಿಂದ ಹಿಡಿದು ಶಾಲೆಯಿಂದ ಹೋಗುವ ತನಕವೂ ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ನೋಡಿಕೊಂಡರು. ಮೊದಲ ದಿನವಾದ ಇಂದು ತರಗತಿಗಳಲ್ಲಿ ಕೋವಿಡ್ ಕುರಿತು ಮುಂಜಾಗ್ರತ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, 10 ಮತ್ತು 12ನೇ ತರಗತಿಗಳ ಶಿಕ್ಷಣದ ಮಹತ್ವ ಮತ್ತು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿತರಬೇಕೆಂಬುದರ ಉಪಯುಕ್ತತೆಯನ್ನು ಶಿಕ್ಷಕರು ಹೇಳುತ್ತಿದ್ದರು ಎಂದು ಸಚಿವರು ಹೇಳಿದರು.
ಪೋಷಕರ ಸಮಾಧಾನ: ಶಾಲೆಗಳಿಗೆ ತಮ್ಮ ಮಕ್ಕಳೊಂದಿಗೆ ಬಂದ ಪೋಷಕರು ಶಾಲೆಯಲ್ಲಿ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳು, ಸ್ವಚ್ಛತೆ ಕುರಿತು ಕೈಗೊಂಡ ಕ್ರಮಗಳನ್ನು ಗಮನಿಸಿ ತಮ್ಮ ಮಕ್ಕಳ ಸುರಕ್ಷೆ ಕುರಿತು ಸಮಾಧಾನದಿಂದ ಹೋಗುತ್ತಿದ್ದುದು ವಿಶೇಷವಾಗಿತ್ತು. ಹಲವಾರು ಕಡೆಗಳಲ್ಲಿ ದೃಶ್ಯಮಾಧ್ಯಮಗಳ ಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲಾರಂಭಕ್ಕೆ ಕೈಗೊಳ್ಳಲಾದ ಸಚಿತ್ರ ವರದಿಗಳನ್ನು ಬಿತ್ತರಿಸುತ್ತಿದ್ದುದರಿಂದ ಪೋಷಕರು ಸಮಾಧಾನವಾಗಿದ್ದರು. ಕೆಲವು ಕಡೆಗಳಲ್ಲಿ ಶಿಕ್ಷಕರು ಆರತಿ ಬೆಳಗಿದರು. ಸಿಹಿ ತಿನ್ನಿಸಿದರು. ಚಾಕೋಲೇಟ್ ಹಂಚಿದರು. ವಿದ್ಯಾರ್ಥಿಗಳು ಬಹಳ ದಿನಗಳ ನಂತರ ಸ್ನೇಹಿತರು-ಸಹಪಾಠಿಗಳನ್ನು ಕಂಡು ಪುಳಕಿತರಾಗಿ ಹಾಯ್ ಹಾಯ್ ಎನ್ನುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು ಎಂದು ಅವರು ವಿವರಿಸಿದರು.
ಕೆಲವು ಶಾಲೆಗಳ ಆವರಣದಲ್ಲ್ಲಿ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಶಿಕ್ಷಕರು, ಜಿಲ್ಲಾಧಿಕಾರಿಗಳು, ಸಿಒಇಗಳು ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು. ಕೆಲವು ಶಾಲೆಗಳಲ್ಲಿ ಸರಸ್ವತಿ-ಗಣೇಶ ಫೋಟೋಗಳಿಗೆ ಪೂಜೆಗಳು ನಡೆದು, ಸರಸ್ವತಿ ಮತ್ತು ಗಣೇಶನ ಸ್ತೋತ್ರವನ್ನು ಮಕ್ಕಳು ಹಾಡಿ ಸರಸ್ವತಿ ಮತ್ತು ಗಣೇಶನ ಆಶೀರ್ವಾದ ಪಡೆದು ತರಗತಿಗಳತ್ತ ನಡೆದರು. ಪ್ರತಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿ ಕೊಠಡಿಗಳಲ್ಲಿ 15 ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ದೊಡ್ಡ ಕೊಠಡಿಗಳಲ್ಲಿ 20 ಮಕ್ಕಳ ತಂಡ ಮಾಡಲಾಗಿತ್ತು. ಬಳ್ಳಾರಿಯ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರು, ತಾಯಂದಿರು ಶಾಲಾ ಮಕ್ಕಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡಿದ್ದು ಮಕ್ಕಳು ಮತ್ತು ಊರವರಲ್ಲಿ ಖುಷಿಯ ವಾತಾವರಣ ಮೂಡಿಸಿತ್ತು. ಕೆಲವಡೆಗಳಲ್ಲಿ ಮಕ್ಕಳನ್ನು ಓಲಗ ವಾದ್ಯ, ತಮಟೆಗಳಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು ಎಂದು ಸಚಿವರು ವಿವಿಧೆಡೆಯ ಶಾಲಾರಂಭದ ವಿವರ ನೀಡಿದರು.
ಕೊಪ್ಪಳದ ಹಲವಾರು ಶಾಲೆಯಲ್ಲಿ ಶಿಕ್ಷಕರು ಗುಲಾಬಿ ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡರು. ರಾಯಚೂರಿನ ಕೆಲವು ಶಾಲೆಗಳಲ್ಲಿ ಹೊಸ ವರ್ಷದ ಅಂಗವಾಗಿ ಮಕ್ಕಳಿಂದ ಕೇಕ್ ಕತ್ತರಿಸಿ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಇಡೀ ರಾಜ್ಯ ಶಾಲಾರಂಭದ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವುದು ಬಹುದೊಡ್ಡ ವಿಶೇಷವಾಗಿದೆ. ಕೊರೋನಾ ಕರಿನೆರಳಿನ ನಡುವೆಯೂ ನೀವು ಎಸ್ ಎಸ್ ಎಲ್ ಸಿ/ ಪಿಯುಸಿ ಪರೀಕ್ಷೆಗಳನ್ನು ನಡೆಸಿದ ಸಂದರ್ಭದಲ್ಲಿ ನಮ್ಮ ಮಕ್ಕಳು ಸರ್ಕಾರದ ಮೇಲೆ ಭರವಸೆಯಿಟ್ಟು ಶಾಲೆಯೊಳಗೆ ನಡೆದು ಬಂದರು. ನಮ್ಮ ಪೋಷಕರೂ ಸಹ ತೋರಿದ ವಿಶ್ವಾಸ, ಇಂದು ನಮ್ಮ ಮಕ್ಕಳ ಭವಿಷ್ಯಕ್ಕೆ ಕಾಯಕಲ್ಪವನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಲ್ಲವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು. ಸೋಮವಾರದಿಂದ ಹಾಜರಾತಿ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸುರೇಶ್ ಕುಮಾರ್ ಹೇಳಿದರು.
ಸ್ವಾಮೀಜಿಗಳ ಸ್ವಾಗತ, ಜನಪ್ರತಿನಿಧಿಗಳ ಭೇಟಿ:
ಧರ್ಮಸ್ಥಳದ ಧರ್ಮಾಧಿಕಾರಿಗಳು, ಸುತ್ತೂರು, ಸಿರಿಗೆರೆ, ಸಿದ್ದಗಂಗಾ, ಆದಿಚುಂಚನಗಿರಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಶಾಲೆ ಆರಂಭವನ್ನು ಸ್ವಾಗತಿಸಿದ್ದು, ಈ ಕಾರ್ಯ ಮೊದಲೇ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ಹೇಳಿದರು.
ರಾಜ್ಯದ ವಿವಿಧೆಡೆಗಳಲ್ಲಿ ಆಯಾ ಭಾಗದ ಹಲವಾರು ಶಾಸಕರು, ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗಳಿಗೆ ಬರಮಾಡಿಕೊಂಡಿದ್ದಾರೆ. ಹೂ ಕೊಟ್ಟು ಸ್ವಾಗತಿಸಿದ್ದಾರೆ. ವಿಶೇಷವಾಗಿ ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೂ ಆದ ನಮ್ಮ ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿರ್ಸಿಯ ಸರ್ಕಾರಿ ಮಾರಿಕಾಂಬ ಪ್ರೌಢಶಾಲೆ ಸೇರಿದಂತೆ ಹಲವಾರು ಶಾಲೆಗಳಿಗೆ ಭೇಟಿ ನೀಡಿದರು. ಪಶು ಸಂಗೋಪನಾ ಸಚಿವ ಪ್ರಭು ಬಿ. ಚೌಹಾಣ್ ಬೀದರ್ ಜಿಲ್ಲೆಯ ಶಾಲೆಯಲ್ಲಿ ತರಗತಿಗೆ ಹೋಗಿ ಮಕ್ಕಳಿಗೆ ಸಹಿ ಹಂಚಿ ಸಂಭ್ರಮಿಸಿದರು. ಬೆಂಗಳೂರಿನಲ್ಲಿ ಸಚಿವ ಕೆ.ಗೋಪಾಲಯ್ಯ ಕೆಲವು ತಮ್ಮ ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆ ಭೇಟಿ ಮಾಸ್ಕ್ ಮತ್ತು ಸ್ಯಾನಿಟೈಜ್ ವಿತರಿಸಿದ್ದು ವಿಶೇಷವಾಗಿತ್ತು. ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ, ವಿಧಾನಸಭಾ ಸದಸ್ಯರಾದ ಮಾಡಾಳು ವಿರೂಪಾಕ್ಷಪ್ಪ, ಎಂಎಲ್ ಸಿ ಡಾ. ವೈ.ಎ. ನಾರಾಯಣಸ್ವಾಮಿ, ಜ್ಯೋತಿ ಗಣೇಶ್, ಸಿ.ಎಸ್. ಪಟ್ಟರಾಜು, ಉಮಾನಾಥ ಕೋಟ್ಯಾನ್, ಡಾ.ರಾಜೇಶ್ ನಾಯಕ್ ಉಳಿಪ್ಪಾಡಿ ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಶಾಸಕರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ತಾಪಂ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಲವಾರು ಕಡೆಗಳಲ್ಲಿ ಸ್ವಾಮೀಜಿಯವರು, ಶಾಲೆಗಳಿಗೆ ಭೇಟಿ ನೀಡಿದ ಮಕ್ಕಳು ಮತ್ತು ಪೋಷಕರಲ್ಲಿ ಭರವಸೆ ಮೂಡಿಸಿದ್ದು ವರದಿಯಾಗಿದೆ. ಅವರೆಲ್ಲರಿಗೆ ನನ್ನ ಮನದಾಳದ ಕೃತಜ್ಞತೆಗಳು ಸಲ್ಲುತ್ತವೆ ಎಂದು ಸಚಿವರು ಹೇಳಿದರು.
ಬಹುತೇಕ ಕಡೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತ್ಯೇಕ ತಂಡಗಳಲ್ಲಿ ಭೇಟಿ ನೀಡಿ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಬರುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು ಎಂದು ಅವರು ಹೇಳಿದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಗಡಿಭಾಗದ ಹಳ್ಳಿಯಾದ ಗೋಲವಾಡದಲ್ಲಿ ಒಟ್ಟು 52 ಮಕ್ಕಳಲ್ಲಿ 45 ಮಕ್ಕಳು ಬಂದಿದ್ದರು. ಮಧುಗಿರಿಯ ಬಡವನಹಳ್ಳಿ ಶಾಲೆಯಲ್ಲಿ 180ಕ್ಕೆ 170 ಮಕ್ಕಳು ಹಾಜರಿದ್ದರು. ಧಾರವಾಡದ ಆರ್‍ಎನ್ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಹೈಸ್ಕೂಲ್‍ಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಿಇಒಗಳು ಮಕ್ಕಳನ್ನು ಹೂ ನೀಡಿ ಬರಮಾಡಿಕೊಂಡರು. ಹಲವಾರು ಕಡೆಗಳಲ್ಲಿ ದಾನಿಗಳು ಸೋಪು, ಸ್ಯಾನಿಟೈಜರ್, ಮಾಸ್ಕ್‍ಗಳನ್ನು ನೀಡಿ ಸಹಕಾರದ ಹಸ್ತ ಚಾಚಿದ್ದಾರೆ. ಮಾಗಡಿ ತಾಲೂಕಿನಲ್ಲಿ ದಾನಿಯೊಬ್ಬರು ಎರಡು ಸಾವಿರ ಮಾಸ್ಕ್‍ಗಳನ್ನು ಬಿಇಒರಿಗೆ ತಲುಪಿಸಿದ್ದಾರೆ ಎಂದು ಸಚಿವರು ವಿವರಿಸಿದರು.
ಮಕ್ಕಳಿಲ್ಲದ ಶಾಲೆಗಳನ್ನು ನಾವು ಕಲ್ಪಿಸಿಕೊಳ್ಳುವುದೇ ಕಷ್ಟ. ಇಂದು ಶಾಲಾ ಪರಿಸರಕ್ಕೆ ಜೀವ ಬಂದಂತಾಗಿತ್ತು. ಕಳೆದ 10 ತಿಂಗಳಿಂದ ಶಾಲಾ ಪರಿಸರ ಬಣಗುಟ್ಟುತ್ತಿದ್ದುದರಿಂದ ಬೇಜಾರಾಗಿದ್ದ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಶಿಕ್ಷಕರು ಆನಂದ ತಂದಿಲರಾಗಿದ್ದರು ಎಂದು ಸಚಿವರು ಹೇಳಿದರು.
ಉಡುಪಿಯ 2 ಶಾಲೆ ಸೋಮವಾರ ಆರಂಭ:
ಉಡುಪಿ ಜಿಲ್ಲೆಯಲ್ಲಿ ಒಬ್ಬ ಶಿಕ್ಷಕ ಮತ್ತು ಒಬ್ಬ ಸಹಾಯಕನಿಗೆ ಕೊರೋನಾ ಪಾಸಿಟೀವ್ ಫಲಿತಾಂಶದ ಹಿನ್ನೆಲೆಯಲ್ಲಿ ಎರಡು ಶಾಲೆಗಳು ಇಂದು ಆರಂಭವಾಗಿಲ್ಲ. ಹೆಬ್ರಿಯ ಕೆಪಿಎಸ್ ಶಾಲೆಯ ಅಟೆಂಟರ್ ಮತ್ತು ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ಕೊರೋನಾ ಪಾಸಿಟೀವ್ ಬಂದಿದ್ದು, ಈ ಶಾಲೆಗಳು ಆರಂಭವಾಗಲಿಲ್ಲ. ಸೋಮವಾರದಿಂದ ಈ ಶಾಲೆಗಳು ಆರಂಭವಾಗಲಿವೆ.
ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಅವರು ಶಾಲಾ ಆರಂಭದ ಕುರಿತು ಗಮನ ಹರಿಸುವರು ಎಂದು ಸಚಿವರು ವಿವರಿಸಿದರು.
ಮೊದಲ ದಿನವಾದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಯೊಳಗೆ ಕಳಿಸಿ, ಶಾಲೆಯ ಸಿದ್ಧತೆಗಳನ್ನು ಗಮನಿಸಿ, ಶಿಕ್ಷಕರೊಂದಿಗೆ ಮಾತನಾಡುತ್ತಿದ್ದುದು ಕಂಡು ಬಂದಿತು ಎಂದು ಸುರೇಶ್ ಕುಮಾರ್ ಹೇಳಿದರು.
ವಿಶೇಷವಾಗಿ ಗ್ರಾಮೀಣ ಭಾಗದ ಪೋಷಕರು ಶಾಲೆ ಆರಂಭವಾದುದಕ್ಕೆ ಭಾರಿ ಖುಷಿಯಲ್ಲಿದ್ದರು.
ವಿಜಯಪುರ ತಾಲೂಕಿನ ಟಕ್ಕಳಕಿ ತಾಂಡಾದ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಶಾಲೆ ಆರಂಭವಾದುದಕ್ಕೆ ಬೆಟ್ಟದಷ್ಟು ಖುಷಿಯಾಗಿದೆ ಎಂದು ಶಿಕ್ಷಕರ ಬಳಿ ಹೇಳುತ್ತಿದ್ದರು.
ಟಕ್ಕಳಕಿ ತಾಂಡಾದ ಓರ್ವ ಪೋಷಕಿ ಮಲ್ಲಮ್ಮ ನಾಯ್ಕ, ‘ಶಾಲೆ ಆರಂಭವಾಗದಿರುವುದರಿಂದ ಮಕ್ಕಳು ಮನೆಮಠ ಬಿಟ್ಟು ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ತಿರುಗಾಡುತ್ತಿದ್ದರು. ಶಾಲೆ ಆರಂಭವಾಗಿರುವುದು ನಮಗೆ ಹೇಳಲಾರದಷ್ಟು ಖುಷಿಯಾಗಿದೆ. ಸಾರ್ ಇವರೆಲ್ಲ ಇನ್ನು ನಿಮ್ಮ ಮಕ್ಕಳು. ಚೆನ್ನಾಗಿ ನೋಡಿಕೊಳ್ಳಿ.. ಶಾಲೆ ಆರಂಭಿಸಿದುದಕ್ಕೆ ಶಿಕ್ಷಕರಿಗೆ ಕೈಮುಗಿದು ಕೃತಜ್ಞತೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರಿನ ವಿದ್ಯಾರ್ಥಿಯೊಬ್ಬನ ತಾಯಿ ಸುಮಿತ್ರಾ, ‘ಶಾಲೆ ಆರಂಭಿಸಿದ್ದು, ನಮಗೆ ಖುಷಿಯ ವಿಷಯವಾಗಿದೆ. ಹೆಚ್ಚುಕಮ್ಮಿ ಒಂದು ವರ್ಷದಿಂದ ಶಾಲೆಗಳಿಲ್ಲದೇ ಮಕ್ಕಳನ್ನು ನಾವು ಹಿಡಿಯುವುದೇ ಕಷ್ಟವಾಗಿತ್ತು. ಇನ್ನಾದರೂ ಶಾಲೆ ಆರಂಭವಾಯಿತಲ್ಲ, ಶಾಲೆಗಳು ಯಾವುದೇ ತೊಂದರೆಯಿಲ್ಲದೇ ನಡೆಯಲು ಭಗವಂತ ಹರಸಲಿ’ ಎಂದು ಶಿಕ್ಷಕರೊಂದಿಗೆ ಮಾತನಾಡುತ್ತಾ ಸಂಭ್ರಮ ವ್ಯಕ್ತಪಡಿಸಿದರು.
ಈ ಅಭಿಪ್ರಾಯಗಳು ರಾಜ್ಯದ ಬಹುತೇಕ ಪೋಷಕರ ಅಭಿಪ್ರಾಯವನ್ನು ಅಭಿವ್ಯಕ್ತಿಯಾಗಿತ್ತು. ನಾನು ಭೇಟಿ ಮಾಡಿದ ಬಹುತೇಕ ಕಡೆಗಳಲ್ಲಿ ಉಳಿದ ತರಗತಿಗಳನ್ನೂ ಆರಂಭಿಸಿ ಎಂದು ಪೋಷಕರು ಒತ್ತಾಯಿಸುತ್ತಿದ್ದರು. ಪರಿಸ್ಥಿತಿ ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು ಈ ಕುರಿತು ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರಿಗೆ ತಿಳಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು