ಭಾರತದ ರಾಜಕಾರಣದಲ್ಲಿದ್ದ ನಿಜವಾದ ವಿದ್ವಾಂಸ ಮತ್ತು ಚತುರಮತಿಗಳಲ್ಲಿ ಪಿ.ವಿ.ನರಸಿಂಹರಾವ್ ಕೂಡ ಒಬ್ಬರು. ನೆಹರು-ಗಾಂಧಿ ಕುಟುಂಬವನ್ನು ಎದುರು ಹಾಕಿಕೊಂಡು, ಐದು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಅವರು ನಿಸ್ಸಂಶಯವಾಗಿಯೂ ಆಧುನಿಕ ಭಾರತದ ನಿರ್ಮಾತೃಗಳಲ್ಲೊಬ್ಬರು. ಇಂತಹ ಪಿವಿಎನ್ ಅವರನ್ನು ಕುರಿತ ಅನುವಾದಿತ ಕೃತಿ ‘ಪಿವಿಎನ್: ಪರ್ವಕಾಲದ ಪುರುಷೋತ್ತಮ’ ಇಂದು ಬಿಡುಗಡೆಯಾಗುತ್ತಿದೆ. ಸಂಜಯ ಬರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದು, ಸಮನ್ವಿತ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿದೆ. ಈ ಗಮನಾರ್ಹ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗ ನಮ್ಮ ಓದುಗರಿಗಾಗಿ ಇಲ್ಲಿದೆ
1991 ರ ಜೂನ್ 21 ರಂದು ಪಿ.ವಿ.ನರಸಿಂಹರಾವ್ ಅವರು ಈ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಮರುದಿನ -ಜೂನ್ 22ರಂದು- ಸಂಜೆಯೇ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಅಂದು ಅವರು ಮಾಡಿದ ಭಾಷಣವನ್ನು ಸಿದ್ಧಪಡಿಸಿದ್ದು ಸಂಪುಟ ಕಾರ್ಯದರ್ಶಿಗಳಾಗಿದ್ದ ನರೇಶ್ ಚಂದ್ರ.
“ಈ ಭಾಷಣಕ್ಕೊಂದು ರೂಪು ಕೊಡುವಲ್ಲಿ ಪ್ರಧಾನ ವಾರ್ತಾಧಿಕಾರಿ ರಾಮಮೋಹನ್ ರಾವ್ ಅವರು ನನಗೆ ತುಂಬಾ ಸಹಾಯ ಮಾಡಿದ್ದರು,’’ ಎಂದು ಅವರು ನೆನಪಿಸಿಕೊಂಡಿದ್ದರು. ಆದರೆ, ರಾವ್ ಅವರಿಗೆ ತಾವು ಮಾಡಿದ ಈ ಕೆಲಸ ಮರೆತು ಹೋಗಿದೆ. ಈ ಬಗ್ಗೆ ರಾವ್ ಅವರು “ಈ ಭಾಷಣವನ್ನು ಸಂಪೂರ್ಣವಾಗಿ ಸಿದ್ಧಪಡಿಸಿದ್ದೆಲ್ಲ ನರೇಶ್‌ಚಂದ್ರ ಅವರೇ. ಅದರಲ್ಲಿ ನಾನೇನು ನೆರವು ನೀಡಿದೆನೋ ನನಗಂತೂ ಗೊತ್ತಿಲ್ಲ,’’ ಎಂದಿದ್ದರು. ನರಸಿಂಹರಾವ್ ಅವರು ಪ್ರಧಾನಿಯಾಗಿ ಬಂದಾಗ ರಾಮಮೋಹನ್ ರಾವ್ ಅವರು ಭಾರತೀಯ ವಾರ್ತಾ ಸೇವೆಯ (ಇಂಡಿಯನ್ ಇನ್ಫರ್ಮೇಶನ್ ಸರ್ವೀಸ್) ಅಧಿಕಾರಿಯಾಗಿದ್ದರು.
1962 ರಲ್ಲಿ ಚೀನಾ ಎದುರು ಯುದ್ಧವಾದಾಗ ಈ ರಾವ್, ಕೇಂದ್ರ ಸರಕಾರದ ವರದಿಗಾರರಾಗಿದ್ದು ಯುದ್ಧದ ವರದಿಗಳನ್ನು ಬರೆಯುತ್ತಿದ್ದರು. ಬಳಿಕ, ಅಂದರೆ 1965ರಲ್ಲಿ ಪಾಕಿಸ್ತಾನದ ಎದುರು ಕಾದಾಟವಾದಾಗಲೂ ಇವರು ನೇರವಾಗಿ ಯುದ್ಧಭೂಮಿಯಿಂದಲೇ ವರದಿಗಳನ್ನು ಕಳಿಸುತ್ತಿದ್ದರು. ಒಂದು ದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕೆನ್ನುವ ಬಗ್ಗೆ ಇವರಿಗೆ ಅರಿವಿತ್ತು.
1962 ಮತ್ತು 1965ರಲ್ಲಿ ಸಾಂಪ್ರದಾಯಿಕ ಯುದ್ಧದಲ್ಲಿ ತೊಡಗಿದ್ದ ಭಾರತವು 1991ರಲ್ಲಿ ಇನ್ನೊಂದು ಬಗೆಯ ಸಮರಾಂಗಣದಲ್ಲಿತ್ತು. ಒಂದು ದಿನದ ಹಿಂದಷ್ಟೇ ಪ್ರಧಾನಿಯಾಗಿ ಈ ದೇಶದ ಚುಕ್ಕಾಣಿ ಹಿಡಿದಿದ್ದ ಪಿವಿಎನ್, ಅದೇ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು. ನಿಜಕ್ಕೂ ಅಂದು ಅವರು ನಿಷ್ಠುರವಾಗಿ ಮಾತನಾಡಲೇಬೇಕಾಗಿತ್ತು. ಎಂದಿನಂತೆ ತಮ್ಮ ಸ್ವಭಾವವಾದ ನೀರಸವೂ ನಿಸ್ತೇಜವೂ ಆದ ಶೈಲಿಯಲ್ಲಿ ಭಾಷಣ ಶುರು ಮಾಡಿದ ಅವರು “ದೇಶದ ಆರ್ಥಿಕ ಪರಿಸ್ಥಿತಿಯು ತೀವ್ರ ಸಂಕಷ್ಟದ ಸುಳಿಯಲ್ಲಿದೆ. ವಿದೇಶಿ ಸಾಲದ ಕಂತುಗಳ ಬಾಕಿ ಸಮಸ್ಯೆಯಂತೂ ಗಂಡಾಂತರಕಾರಿಯಾಗಿದೆ. ಹಣದುಬ್ಬರ ಕೂಡ ವಿಪರೀತವಾಗಿ ಏರುತ್ತಿದೆ. ಈಗಲೂ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾವೀಗ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕಾಗಿದೆ. ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಲು ಈಗ ನಮ್ಮ ಮುಂದೆ ಯಾವ ಸಾತ್ತ್ವಿಕ ಪರಿಹಾರವೂ ಉಳಿದುಕೊಂಡಿಲ್ಲ. ನಾವು ಅನಗತ್ಯವಾದ ಖರ್ಚಿಗೆ ಕಡಿವಾಣ ಹಾಕಲೇಬೇಕು. ಒಂದು ಶಕ್ತಿಶಾಲಿ ರಾಷ್ಟ್ರವನ್ನು ಕಟ್ಟಬೇಕೆಂದರೆ ಆರ್ಥಿಕ ಸ್ವಾತಂತ್ರ್ಯವೂ ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವೇ ಆಗಿರುತ್ತದೆ. ನಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಪ್ರತಿಯೊಬ್ಬರೂ ಅಗತ್ಯವಾದ ತ್ಯಾಗವನ್ನು ಮಾಡಲು ಸಿದ್ಧರಾಗಬೇಕಾಗಿದೆ,’’ ಎಂದು ಕರೆ ಕೊಟ್ಟರು.
ಇದಾದ ಮೇಲೆ ಪ್ರಧಾನಿಗಳು ಒಂದು ಆಸಕ್ತಿಕರವಾದ ಹೆಜ್ಜೆಯನ್ನಿಟ್ಟರು. ದೇಶವನ್ನು ಕೇವಲ ಆರ್ಥಿಕ ಬಿಕ್ಕಟ್ಟಿನಿಂದ ಮಾತ್ರ ಪಾರು ಮಾಡುವುದಕ್ಕೆ ಅವರು ತೃಪ್ತರಾಗಲಿಲ್ಲ. ಬದಲಿಗೆ, “ಕ್ಷಿಪ್ರ ಕೈಗಾರಿಕೀಕರಣದ ಹಾದಿಯಲ್ಲಿ ಇರುವ ತೊಡರುಗಳನ್ನು ನಿವಾರಿಸಲು ನಮ್ಮ ಸರಕಾರವು ಬದ್ಧವಾಗಿದೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸುವಂತಹ ದೇಶವನ್ನಾಗಿ ಬೆಳೆಸಲು ನಾವು ಶ್ರಮಿಸಲಿದ್ದೇವೆ. ನಾವು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಲಿದ್ದು, ಜಾಗತಿಕ ಆರ್ಥಿಕ ವ್ಯವಸ್ಥೆಯು ಸೃಷ್ಟಿಸಿರುವ ಅವಕಾಶಗಳನ್ನು ಕೂಡ ಬಾಚಿಕೊಳ್ಳಲಿದ್ದೇವೆ,’’ ಎಂದು ಘೋಷಿಸಿದರು.
ಜವಾಹರ್‌ಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಕಾಲದಲ್ಲಿ ನಮ್ಮ ವಾಣಿಜ್ಯ ಮತ್ತು ಕೈಗಾರಿಕಾ ನೀತಿಗಳು ಅಂತರ್ಮುಖಿಯಾಗಿದ್ದವು. ಆದರೆ, ನರಸಿಂಹರಾವ್ ಅವರು ತಮ್ಮ ಭಾಷಣದಲ್ಲಿ ಉಪಯೋಗಿಸಿದ ಎರಡೇ ಎರಡು ಸರಳವಾಕ್ಯಗಳ ಮೂಲಕ ನೆಹರು-ಇಂದಿರಾ ಕಾಲದ ನೀತಿಗಳಿಗೆ ತಿಲಾಂಜಲಿ ಬಿಟ್ಟರು. ಭಾರತವು ತುಂಬಾ ಜರೂರಾಗಿ ಹೊಸ ಕಾಲಮಾನದ ಜಾಗತಿಕ ಸ್ವರೂಪದ ಸಮಗ್ರ ಬೆಳವಣಿಗೆಗೆ ತಕ್ಕಂತೆ ತನ್ನ ನೀತಿಗಳನ್ನು ಬದಲಿಸಿಕೊಳ್ಳಬೇಕೆಂಬುದು ಅವರ ಮಾತಿನ ಸಾರವಾಗಿತ್ತು. ಒಟ್ಟಿನಲ್ಲಿ ಈ ಮೂಲಕ, ದೇಶಕ್ಕೆ ಎದುರಾಗಿರುವ ಆಪತ್ತನ್ನು ತಾವು ಸದವಕಾಶವಾಗಿ ಬಳಸಿಕೊಳ್ಳಲು ತಾವು ಮಾಡಿರುವ ಸಂಕಲ್ಪವನ್ನು ಅವರು ದೇಶದ ಜನರಿಗೆ ತಿಳಿಸಿದರು.
1991ರಲ್ಲಿನ್ನೂ ಜಾಗತಿಕ ಅರ್ಥವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರುತ್ತಿತ್ತು ಎನ್ನುವುದು ನಿಜ. ಇದನ್ನು ಮುಖ್ಯವಾಗಿ ಎರಡು ಅಂಶಗಳು ಪ್ರಭಾವಿಸಿ, ಅದಕ್ಕೊಂದು ಮರು ರೂಪ ಕೊಡುತ್ತಿದ್ದವು. ಅವೆಂದರೆ- ಒಂದು, ಸೋವಿಯತ್ ಒಕ್ಕೂಟ ಛಿದ್ರಛಿದ್ರವಾಗಿದ್ದು; ಎರಡು, ಜಗತ್ತಿನಲ್ಲೆಲ್ಲ ತನ್ನ ಅಧಿಕಾರದ ಛಾಪು ಮೂಡಿಸುವ ಗುರಿಯೊಂದಿಗೆ ಅಮೆರಿಕವು ಈ ಹೊಸ ಜಾಗತಿಕ ಅರ್ಥವ್ಯವಸ್ಥೆಗೆ ರೂಪು ಕೊಡುತ್ತಿದ್ದುದು. 1950ರ ದಶಕದಲ್ಲಿ ಯುದ್ಧದಿಂದ ಬಸವಳಿದಿದ್ದ ಯೂರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳು ಮತ್ತೆ ಆರ್ಥಿಕವಾಗಿ ಸದೃಢವಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಅಮೆರಿಕವು ಆಗ ‘ಗ್ಯಾಟ್’ ಒಪ್ಪಂದವನ್ನು ಜಾರಿಗೆ ತರಲು ಅಮೆರಿಕವು ಆಗ ಹೆಗಲು ಕೊಟ್ಟಿತ್ತು. ಇದರ ಹಿಂದೆ ತನ್ನ ಪಾಲಿಗೆ ಹೊಸಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿಕೊಳ್ಳುವ ಉದ್ದೇಶವೂ ಅಮೆರಿಕಕ್ಕಿತ್ತು. ಈ ಮೂಲಕ ಅದು ತನ್ನ ರಫ್ತು ವಹಿವಾಟನ್ನು ಹೆಚ್ಚಿಸಿಕೊಂಡಿದ್ದೇನೂ ಸುಳ್ಳಲ್ಲ. ಗ್ಯಾಟ್ ಒಪ್ಪಂದದಿಂದಾಗಿಯೇ ಜರ್ಮನಿ, ಜಪಾನ್ ಮತ್ತು ಪೂರ್ವ ಏಷ್ಯಾದ ಅನೇಕ ದೇಶಗಳು ದೊಡ್ಡ ಆರ್ಥಿಕಶಕ್ತಿಗಳಾಗಿ ಬೆಳೆದಿದ್ದು, ಈ ಒಪ್ಪಂದದ ಉದ್ದೇಶ ಈಡೇರಿದೆ ಎನ್ನುವುದು ಅಮೆರಿಕದ ನಂಬಿಕೆಯಾಗಿತ್ತು. ಇಷ್ಟರ ಮಧ್ಯೆ, ಹೀಗೆ ಹೊಸದಾಗಿ ಆರ್ಥಿಕವಾಗಿ ಪ್ರಬಲವಾದ ದೇಶಗಳು ದೊಡ್ಡ ಮಟ್ಟದಲ್ಲಿ ರಫ್ತು ವಹಿವಾಟನ್ನು ಶುರು ಮಾಡಿದ್ದು ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆಯಾಗಿ ಪರಿಣಮಿಸಿತ್ತು. ಹೀಗಾಗಿ ‘ಜಗತ್ತಿನ ದೊಡ್ಡಣ್ಣ’ನಾದ ಅಮೆರಿಕವು ‘ಗ್ಯಾಟ್’ ಒಪ್ಪಂದದ ಬದಲಿಗೆ ಬೇರೊಂದು ಬಗೆಯ ವಿಶ್ವ ವಾಣಿಜ್ಯ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಬೇಕೆಂದು ತಹತಹಿಸುತ್ತಿತ್ತು.
ಇಷ್ಟು ಹೊತ್ತಿಗಾಗಲೇ ಭಾರತದ ಆರ್ಥಿಕವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಸಂಪೂರ್ಣ ತದ್ವಿರುದ್ಧವಾದ ಇಬ್ಬಗೆಯ ಅಭಿಪ್ರಾಯಗಳು ಕೇಳಿಬರುತ್ತಿದ್ದವು. ಒಂದು ಗುಂಪಿನವರು, ದೇಶವು ತನ್ನ ಆಮದಿನ ಮೇಲೆ ಕಠಿಣವಾದ ನಿಯಂತ್ರಣ ಹೇರುವ ಮೂಲಕ ಸದ್ಯದ ಆರ್ಥಿಕ ಗಂಡಾಂತರದಿಂದ ಪಾರಾಗಬೇಕೆಂದು ಹೇಳುತ್ತಿದ್ದರು. ಇದನ್ನು ಒಪ್ಪದ ಎದುರಾಳಿ ಗುಂಪಿನವರು, ಭಾರತವನ್ನು ಮುಕ್ತ ಆರ್ಥಿಕ ವ್ಯವಸ್ಥೆಯ ಮತ್ತು ರಫ್ತುಕೇಂದ್ರಿತ ಬಂಡವಾಳ ಹೂಡಿಕೆಯ ತಾಣವನ್ನಾಗಿಸಿ ದೇಶದ ಆದಾಯವನ್ನು ಹೆಚ್ಚಿಸಲು ಈಗಿನ ಆರ್ಥಿಕ ಸಂಕಷ್ಟವು ಸರಿಯಾದ ಅವಕಾಶವನ್ನು ಸೃಷ್ಟಿಸಿದೆ ಎಂದು ಪ್ರತಿಪಾದಿಸುತ್ತಿದ್ದರು.
ನರಸಿಂಹರಾವ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲನೇ ದಿನವೇ “ನಮ್ಮ ಸರಕಾರವು ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಅರ್ಥ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳಲು ಬಯಸುತ್ತದೆಯೇ ವಿನಾ ಬಾಗಿಲು ಮುಚ್ಚಿಕೊಂಡು ಕೂರಲು ಇಷ್ಟಪಡುವುದಿಲ್ಲ,’’ ಎಂದು ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದರು.
ಪಿವಿಎನ್ ಅವರು ಪ್ರಧಾನಿಯಾದ ಶುರುವಿನಲ್ಲಿ ಆರ್ಥಿಕ ಸಂಕಷ್ಟವನ್ನು ಪರಿಹರಿಸಿ, ದೇಶಕ್ಕೆ ‘ಸುಸ್ತಿದಾರ’ ಎನ್ನುವ ಕಳಂಕ ಮೆತ್ತಿಕೊಳ್ಳುವುದನ್ನು ತಡೆಯಬೇಕಾಗಿತ್ತು. ಇದಕ್ಕೆ ತಕ್ಕಂತೆ ಅವರು ಅತ್ತ ಗಮನ ಹರಿಸಿದರು. ನಂತರ ಅವರು ಜಾಗತಿಕ ಅರ್ಥವ್ಯವಸ್ಥೆಗೆ ಪೂರಕವಾಗಿ, ಅದರಲ್ಲೂ ಪೂರ್ವ ಏಷ್ಯಾದ ರಾಷ್ಟ್ರಗಳ ಆರ್ಥಿಕಶಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಅದಕ್ಕೆ ತಕ್ಕಂತೆ ಭಾರತದ ಅರ್ಥವ್ಯವಸ್ಥೆಯ ಉದಾರೀಕರಣ ಮತ್ತು ಪುನರ್ವ್ಯವಸ್ಥೆಯನ್ನು ಸಾಧಿಸುವತ್ತ ಗಮನ ಹರಿಸಿದರು.
ಪಿವಿಎನ್ ತಮ್ಮ ಚೊಚ್ಚಲ ಭಾಷಣದಲ್ಲಿ ಮಾಡಿದ ಅತ್ಯಂತ ಮುಖ್ಯವಾದ ಎರಡನೆಯ ಘೋಷಣೆಯೆಂದರೆ, ‘ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಮರ್ಧಾತ್ಮಕ ರಾಷ್ಟ್ರವನ್ನಾಗಿ ಮಾಡಲಾಗುವುದು’, ಎಂದಿದ್ದು. ಒಂದು ದೇಶವು ಹೀಗೆ ಬೆಳೆಯಬೇಕಾದರೆ ಗಾತ್ರದ ದೃಷ್ಟಿಯಿಂದಲೂ ದಕ್ಷತೆಯ ದೃಷ್ಟಿಯಿಂದಲೂ ಅಗಾಧವೆನಿಸುವಂತಹ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳು ಇರಬೇಕೆನ್ನುವುದು ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತು. ಇಂದಿರಾ ಗಾಂಧಿಯವರ ಕಾಲದಲ್ಲಿ ಬೇರುಬಿಟ್ಟ ‘ಲೈಸೆನ್ಸ್ ರಾಜ್’ನ ಅತ್ಯಂತ ಕರಾಳ ಗುಣವೆಂದರೆ, ಸರಕಾರವೇ ಪ್ರತಿಯೊಂದು ಉದ್ಯಮದ ಬೆಳವಣಿಗೆ, ವಿಸ್ತರಣೆ, ಉತ್ಪಾದನೆ, ವಹಿವಾಟು ಎಲ್ಲವನ್ನೂ ನಿಯಂತ್ರಿಸುತ್ತಿತ್ತು. ಅಂದರೆ, ಹೊಸದೆಹಲಿಯಲ್ಲಿರುವ ‘ಉದ್ಯೋಗ ಭವನ’ದಲ್ಲಿ ಆರಾಮಾಗಿ ಕೂತಿರುತ್ತಿದ್ದ ಜಂಟಿ ಕಾರ್ಯದರ್ಶಿಗಳು ಈ ಕೆಲಸವನ್ನು ಮಾಡುತ್ತಿದ್ದರು. ಅವರಿಗೆ ಮಾರುಕಟ್ಟೆಯ ಬಗ್ಗೆಯಾಗಲಿ, ತಂತ್ರಜ್ಞಾನದ ಬಗ್ಗೆಯಾಗಲಿ ಕಿಂಚಿತ್ತೂ ಜ್ಞಾನವಿರುತ್ತಿರಲಿಲ್ಲ.
ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ದೇಶ ಎನ್ನಿಸಿಕೊಳ್ಳಬೇಕಾಗಿದ್ದರೆ ಎಲ್ಲಕ್ಕಿಂತ ಮೊದಲು ನಮ್ಮಲ್ಲಿ ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗೂ ತಮ್ಮ ಉತ್ಪನ್ನಗಳನ್ನು ಪೂರೈಸುವಂತಹ ಬೃಹತ್ ಉದ್ದಿಮೆಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿ ಆಗಬೇಕಾಗಿತ್ತು. ‘ಲೈಸೆನ್ಸ್ ರಾಜ್’ ಕಾಲದಲ್ಲಿ ಉದ್ದಿಮೆಗಳ ಗಾತ್ರ ಇತ್ಯಾದಿಗಳನ್ನು ನಿಯಂತ್ರಿಸುವುದರ ಹಿಂದೆ ಏಕಸ್ವಾಮ್ಯವನ್ನು ತಡೆಯುವ ಮತ್ತು ಒಂದೇ ಕಡೆಯಲ್ಲಿ ಆರ್ಥಿಕಶಕ್ತಿಯು ಸಂಚಯಗೊಳ್ಳದಂತೆ ನೋಡಿಕೊಳ್ಳುವ ಉದ್ದೇಶಗಳಿದ್ದವು. ಆಗಿನ ಕಾಲದ ಕೈಗಾರಿಕಾ ನೀತಿಯಲ್ಲಿ ಇದನ್ನು ಹೇಳಲಾಗಿತ್ತು.
ಸರಕಾರದ ನೀತಿಯಲ್ಲಿ ಇದನ್ನೆಲ್ಲ ಹೇಳಿದ ಮಾತ್ರಕ್ಕೆ ಎಲ್ಲ ಉದ್ದಿಮೆಗಳೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದವು ಎಂದೇನಲ್ಲ. ಬದಲಿಗೆ, ಇಂದಿರಾ ಗಾಂಧಿ ಕಾಲದ ಈ ನೀತಿಯು ಅಂತಿಮವಾಗಿ ಎಗ್ಗುಸಿಗ್ಗಿಲ್ಲದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತಷ್ಟೆ. ಕಂಪನಿಗಳು ಸರಕಾರವು ವಿಧಿಸಿದ್ದ ಮಿತಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುತ್ತ, ಅದನ್ನೆಲ್ಲ ಕಾಳಸಂತೆಯಲ್ಲಿ ಮಾರುತ್ತಿದ್ದವು. ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಅವು ತೆರಿಗೆ ಇಲಾಖೆಯ ಅಧಿಕಾರಿಗಳಿಗೂ ಇನ್ಸ್‌ಪೆಕ್ಟರ್‌ಗಳಿಗೂ ಕೈತುಂಬಾ ಲಂಚ ತಿನ್ನಿಸುತ್ತಿದ್ದವು. ಇದೆಲ್ಲ ಪಿವಿಎನ್ ಅವರಿಗೂ ಗೊತ್ತಿತ್ತು. ಹೀಗಾಗಿ ಅವರು, ಉದ್ದಿಮೆಗಳಿಗೆ ಮುಕ್ತ ವಾತಾವರಣವನ್ನು ಕಲ್ಪಿಸಲು ತೀರ್ಮಾನಿಸಿದರು. ಇದರಂತೆ ಅವರು ತಮ್ಮ ಮೊದಲ ಭಾಷಣದಲ್ಲೇ “ಕೈಗಾರಿಕೆಗಳ ಉತ್ಪಾದನೆಯ ಮೇಲೆ ವಿಧಿಸಿರುವ ಮಿತಿಗಳೆಲ್ಲವೂ ಇನ್ನು ಇತಿಹಾಸ ಸೇರಲಿವೆ. ಉದ್ದಿಮೆಗಳು ಯಾವ ಪ್ರಮಾಣದಲ್ಲಿ ಬೇಕಾದರೂ ಉತ್ಪಾದಿಸಬಹುದಲ್ಲದೆ, ತಮ್ಮ ಕಂಪನಿಗಳನ್ನು ಎಷ್ಟು ಬೇಕಾದರೂ ವಿಸ್ತರಿಸಬಹುದು,’’ ಎಂದು ಅನುಮಾನಕ್ಕೆ ಎಡೆಯಿಲ್ಲದಂತೆ ಸ್ಪಷ್ಟವಾಗಿ ಹೇಳಿದರು.
ಪಿವಿಎನ್ ಅವರು ತಮ್ಮ ಭಾಷಣದಲ್ಲಿ ಉಚ್ಚರಿಸಿದ ಇಂತಹ ಕೆಲವು ವಾಕ್ಯಗಳು ಬೀರಬಹುದಾದ ಪ್ರಚಂಡ ಪರಿಣಾಮ ಎಷ್ಟಿರಬಹುದು ಎನ್ನುವುದು ಕೆಲವರಿಗಷ್ಟೆ ಅಳತೆಗೆ ಸಿಕ್ಕಿತ್ತು. ಇದು, ಅವರು ಮುಂದಿನ ಒಂದು ತಿಂಗಳಲ್ಲಿ ಕೈಗೆತ್ತಿಕೊಂಡ ಕೈಗಾರಿಕಾ ನೀತಿಯಲ್ಲಿನ ಸಮಗ್ರ ಬದಲಾವಣೆಗೆ ನಾಂದಿ ಹಾಡಿತು.
ಆದರೆ ಏನೇ ಆಗಲಿ, ಮೊದಲು ಆಗಬೇಕಾದ ಕೆಲಸ ಆಗಲೇಬೇಕು. ಭಾರತವನ್ನು ‘ಸುಸ್ತಿದಾರ ದೇಶ’ ಎನ್ನುವ ಕಳಂಕದ ಹಣೆಪಟ್ಟಿ ಬೀಳುವ ಅಪಾಯದಿಂದ ಪಾರು ಮಾಡಬೇಕಾಗಿದ್ದುದು ನರಸಿಂಹರಾವ್ ಅವರ ಸರಕಾರದ ಮೊಟ್ಟಮೊದಲ ಆದ್ಯತೆಯಾಗಿತ್ತು. ಅಂದಮಾತ್ರಕ್ಕೆ, ಇದೊಂದೇ ಅದರ ಮುಂದಿದ್ದ ಸವಾಲಾಗಿರಲಿಲ್ಲ. ಇದರ ಜೊತೆಗೆ, ಹಳಿ ತಪ್ಪಿರುವ ಆರ್ಥಿಕ ವ್ಯವಸ್ಥೆಯನ್ನು ಎದುರಿಸುವ ಶಕ್ತಿ-ವಿಶ್ವಾಸಗಳೇ ಭಾರತಕ್ಕಿಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ಅವರ ಸರಕಾರವು ಬದಲಿಸಬೇಕಾಗಿತ್ತು. ಆದರೆ, ಇದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.
ನರಸಿಂಹರಾವ್ ಅವರು ಒಮ್ಮೆ ನನ್ನೊಂದಿಗೆ ಮಾತನಾಡುತ್ತ “ನಾನು ಬಡಬೊರೇಗೌಡನ ಅಭಿಪ್ರಾಯ, ಪ್ರತಿಕ್ರಿಯೆಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ನಮ್ಮಲ್ಲಿ ಜನರು ಸದಾ ಸಾಲಗಾರನ ಪರವಾಗಿಯೇ ಇರುತ್ತಾರೆ. ಅವನ ಬಗ್ಗೆ ಮರುಗಿ, ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ನಮ್ಮ ಸಿನಿಮಾಗಳಲ್ಲೂ ಅಷ್ಟೆ, ಮನೆಯ ಮರ್ಯಾದೆ ಉಳಿಸಲು ತನ್ನಲ್ಲಿರುವ ಚಿನ್ನ-ಬೆಳ್ಳಿಯನ್ನೆಲ್ಲ ಅಡವಿಡುವವನೇ ಜನರ ಅನುಕಂಪವನ್ನು ಗಿಟ್ಟಿಸುತ್ತಾನೆ. ಸಾಲದಾತ ಮಾತ್ರ ನಮ್ಮಲ್ಲಿ ಯಾವಾಗಲೂ ಖಳನಾಯಕನೇ ಆಗಿಬಿಡುತ್ತಾನೆ,’’ ಎಂದಿದ್ದರು.
ದೇಶವನ್ನು ಗಂಡಾತರದಿಂದ ಪಾರು ಮಾಡುವ ಉದ್ದೇಶದಿಂದ 20 ಟನ್ ಚಿನ್ನವನ್ನು ಅಡವಿಡಲು ಚಂದ್ರಶೇಖರ್ ಅವರ ಸರಕಾರವೇ ನಿರ್ಧರಿಸಿತ್ತು. ಇದರಂತೆ 1991ರ ಮೇ ತಿಂಗಳಲ್ಲಿ ಅಷ್ಟೂ ಚಿನ್ನವನ್ನು ಹೊರದೇಶಕ್ಕೆ ಸಾಗಿಸಲಾಗಿತ್ತು. ಆದರೆ, ಅಷ್ಟು ಮಾತ್ರದ ಚಿನ್ನವನ್ನು ಒತ್ತೆ ಇಡುವುದರಿಂದ ನಮ್ಮ ಮುಂದಿದ್ದ ಬೆಟ್ಟದಂಥ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಹೀಗಾಗಿ ಪಿವಿಎನ್ ಅವರು 1991ರ ಜುಲೈನಲ್ಲಿ ಇನ್ನೂ 46.91 ಟನ್ ಚಿನ್ನವನ್ನು ಅಡವಿಡಲು ತೀರ್ಮಾನಿಸಿದರು. ಇದರ ಮೌಲ್ಯ 405ದಶಲಕ್ಷ ಡಾಲರ್ ಆಗಿತ್ತು. ಇದರಂತೆ ಎರಡನೇ ಸುತ್ತಿನಲ್ಲಿ 46 ಟನ್‌ಗಿಂತಲೂ ಹೆಚ್ಚು ಚಿನ್ನವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ತಿಜೋರಿಗಳಿಂದ ದೂರದ ಇಂಗ್ಲೆಂಡ್‌ನ ಲಂಡನ್ ಬ್ಯಾಂಕ್‌ಗೆ ಸಾಗಿಸಲಾಯಿತು.
ಈ ಚಿನ್ನ ಸಾಗಾಟದ ಸಮಯದಲ್ಲಿ ನಡೆದ ಕೆಲವು ನಾಟಕೀಯ ಘಟನೆಗಳನ್ನು ಸಿ.ರಂಗರಾಜನ್ ಅವರು ತಮ್ಮ ಬರಹದಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಒಪ್ಪಂದದಂತೆ ಇದು ‘ಒಂದು ತಿಜೋರಿಯಿಂದ ಇನ್ನೊಂದು ತಿಜೋರಿಗೆ’ ನಡೆಯುತ್ತಿದ್ದ ಚಿನ್ನದ ಸಾಗಾಟವಾಗಿತ್ತು. ಇದರಂತೆ ಬಾಂಬೆಯ ಮಿಂಟ್ ರೋಡ್‌ನಲ್ಲಿ ಭದ್ರವಾಗಿದ್ದ ಬಹುತೇಕ 47 ಟನ್ ಚಿನ್ನವನ್ನು ಸಹರಾ ವಿಮಾನ ನಿಲ್ದಾಣದಲ್ಲಿ ಅದಕ್ಕೆಂದೇ ಗೊತ್ತಿದ್ದ ಪ್ರತ್ಯೇಕ ಜಾಗಕ್ಕೆ ಸಾಗಿಸಲಾಯಿತು. ಚಿನ್ನವನ್ನು ಹೊತ್ತಿದ್ದ ವ್ಯಾನ್‌ಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಅದನ್ನೆಲ್ಲ ನೋಡಿದರೆ ಯಾವುದೋ ಹಾಲಿವುಡ್ ಸಿನಿಮಾವನ್ನು ನೋಡಿದಂತಾಗುತ್ತಿತ್ತು. ಮೊದಲೇ ಸ್ವಲ್ಪ ಭಯಭೀತರಾಗಿದ್ದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಆಗ ಕೆಲವು ಆತಂಕದ ಕ್ಷಣಗಳೂ ಎದುರಾದವು. ಏಕೆಂದರೆ, ಚಿನ್ನವನ್ನು ಹೊತ್ತಿದ್ದ ವ್ಯಾನ್‌ನ ಚಕ್ರವೇನಾದರೂ ಸಿಡಿಯೇತೇನೋ ಎನ್ನುವಂತೆ ಆ ವಾಹನವು ಗಕ್ಕನೆ ನಿಂತಿತು! “ಆದರೆ, ಯಾವುದೇ ಗಲಿಬಿಲಿಯ ವಾತಾವರಣ ಸೃಷ್ಟಿಯಾಗುವುದಕ್ಕೂ ಮೊದಲೇ ಆ ವ್ಯಾನ್ ಮತ್ತೆ ಚಲಿಸತೊಡಗಿತು,’’ ಎಂದು ಸಿ.ರಂಗರಾಜನ್ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ವ್ಯಾನನ್ನು ನೋಡಿದ ತಕ್ಷಣವೇ ಹಿರಿಯ ಪತ್ರಕರ್ತ ಶಂಕರ್ ಅಯ್ಯರ್ ಅವರಿಗೆ, ದೇಶದ ಚಿನ್ನವನ್ನು ಅಡವಿಡಲೆಂದು ಸಾಗಿಸುತ್ತಿರುವ ವಾಸನೆ ಬಡಿಯಿತು. ಈ ಮೂಲಕ ಅವರಿಗೆ ತಮ್ಮ ವೃತ್ತಿಜೀವನದ ಬಹುದೊಡ್ಡ ಸುದ್ದಿಯೊಂದು ಸಿಕ್ಕಿತು.
ಹೀಗೆ ಟನ್‌ಗಟ್ಟಲೆ ಚಿನ್ನವನ್ನು ಅಡವಿಟ್ಟಿದ್ದರಿಂದ ದೇಶಕ್ಕೆ ಡಾಲರುಗಳೇನೋ ಸಿಕ್ಕಿದವು. ಆದರೆ, ದೇಶದ ಬ್ಯಾಂಕುಗಳಲ್ಲಿ ತಾವಿಟ್ಟಿದ್ದ ಠೇವಣಿಯನ್ನು ಹಿಂತೆಗೆದುಕೊಳ್ಳುವುದನ್ನು ಅನಿವಾಸಿ ಭಾರತೀಯರು ಮಾತ್ರ ನಿಲ್ಲಿಸಲೇ ಇಲ್ಲ. ಆರ್ಥಿಕ ಸಂಕಷ್ಟದಿಂದ ದೇಶವನ್ನು ಬಚಾವು ಮಾಡಬೇಕಾಗಿದ್ದ ಸ್ಥಿತಿಯಲ್ಲಿದ್ದ ಸರಕಾರಕ್ಕೆ ಆಮದು ವಹಿವಾಟಿನ ಮೇಲೆ ಮತ್ತಷ್ಟು ಬಿಗಿಯಾದ ನಿರ್ಬಂಧಗಳನ್ನು ಹೇರದೆ ಬೇರೆ ದಾರಿಯೇ ಇರಲಿಲ್ಲ. ಆದರೆ, ಹೀಗೆ ಆಮದಿನ ಮೇಲೆ ಅಂಕುಶ ಹಾಕಿದ್ದು ಆರ್ಥಿಕ ವ್ಯವಸ್ಥೆಯನ್ನು ಘಾಸಿಗೊಳಿಸಿತು. ಏಕೆಂದರೆ, ಇದರ ಪರಿಣಾಮವಾಗಿ ಒಂದೆಡೆ ಆರ್ಥಿಕ ಬೆಳವಣಿಗೆಯ ವೇಗವು ತೀರಾ ಕುಸಿಯಿತು. ಇನ್ನೊಂದೆಡೆಯಲ್ಲಿ, ಹಣದುಬ್ಬರದ ಒತ್ತಡ ಮತ್ತಷ್ಟು ಏರತೊಡಗಿತು. ಒಟ್ಟಿನಲ್ಲಿ, ಅರ್ಥಶಾಸ್ತ್ರಜ್ಞರ ನುಡಿಗಟ್ಟಿನಲ್ಲಿ ಹೇಳುವುದಾದರೆ ದೇಶದ ಆರ್ಥಿಕ ವ್ಯವಸ್ಥೆಯು ಸ್ತಬ್ಧಗೊಳ್ಳುವ ಹಂತಕ್ಕೆ ಬಂದಿತ್ತು.
ಆ ಹಂತದಲ್ಲಿ ಆಮದಿನ ಮೇಲೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿತ್ತು. ಆದರೆ, ಇದನ್ನು ಆಮದಿನ ಮೇಲೆ ನೇರವಾಗಿ ನಿಷೇಧ ವಿಧಿಸುವ ಮೂಲಕ ಸಾಧಿಸಬೇಕೇ, ಅಥವಾ ರೂಪಾಯಿಯನ್ನು ಅಪಮೌಲ್ಯೀಕರಣಗೊಳಿಸುವ ಮೂಲಕ ಇದನ್ನು ಸಾಧಿಸಬೇಕೆ ಎನ್ನುವ ಎರಡು ಬಗೆಯ ಅಭಿಪ್ರಾಯಗಳು ಸರಕಾರದಲ್ಲಿ ಕಾಣಿಸಿಕೊಂಡವು. ಕೊನೆಗೆ, ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಆಮದನ್ನು ನಿಷೇಧಿಸುವುದಕ್ಕಿಂತ ವಿನಿಮಯ ದರವನ್ನು ಬಳಸಿಕೊಳ್ಳುವ ತಂತ್ರವನ್ನು ಅಳವಡಿಸಿಕೊಳ್ಳಲು ತಮ್ಮ ಒಲವು ತೋರಿದರು. 1990-91ನೇ ಹಣಕಾಸು ವರ್ಷದ ಕೊನೆಯ ಹೊತ್ತಿಗಾಗಲೇ ರೂಪಾಯಿಯ ಮೌಲ್ಯವು ಶೇಕಡ 11ರಷ್ಟು ಕುಸಿದಿತ್ತು. ಆದರೆ, ಒಂದು ಸಲ ಅದನ್ನು ಸರಿಯಾಗಿ ಮರುಹೊಂದಾಣಿಕೆ ಮಾಡುವ ಮೂಲಕ ರೂಪಾಯಿಯ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಈ ಮೂಲಕ ರೂಪಾಯಿಯ ಮೇಲೆ ವಿಶ್ವಾಸ ಮೂಡುವಂತೆ ಮಾಡುವುದು ಅಗತ್ಯವೆಂದು ಸರಕಾರ ಭಾವಿಸಿತು.
ಇದರಂತೆ 1991ರ ಜುಲೈ 1ರಂದು ರೂಪಾಯಿಯನ್ನು ಶೇಕಡ 9ರಷ್ಟು, ಮತ್ತು ಜುಲೈ 3ರಂದು ಶೇಕಡ 11ರಷ್ಟು ಅಪಮೌಲ್ಯಗೊಳಿಸಲಾಯಿತು. ಇದರ ಪರಿಣಾಮವಾಗಿ ಹೊಂದಾಣಿಕೆ ದರದಲ್ಲಿ ರೂಪಾಯಿಯು ಶೇಕಡ 17.38ರಷ್ಟು ಅಪಮೌಲ್ಯೀಕರಣಗೊಂಡಿತು. ಇದರ ಬೆನ್ನಲ್ಲೇ ಒಂದು ಡಾಲರ್‌ಗೆ 17.9 ರೂಪಾಯಿಯಷ್ಟಿದ್ದ ನಮ್ಮ ಕರೆನ್ಸಿಯ ಬೆಲೆಯು 24.5 ರೂಪಾಯಿಗಳಿಗೆ ಕುಸಿಯಿತು. ಇದು ಹೀಗೆಯೇ ಮುಂದುವರಿದು 1992ರ ಕೊನೆಯ ಹೊತ್ತಿಗೆ ಒಂದು ಡಾಲರ್ ಎಂದರೆ 31 ರೂಪಾಯಿ ಎಂದಾಯಿತು. ಇದು ಪಿವಿಎನ್ ಅವರ ಆಡಳಿತಾವಧಿಯುದ್ದಕ್ಕೂ ಈ ಮಟ್ಟದಲ್ಲೇ ಇತ್ತು.
ಮನಮೋಹನ್ ಸಿಂಗ್ ಮತ್ತು ರಂಗರಾಜನ್ ಅವರು ಈ ಕಸರತ್ತನ್ನು ‘ಕುಪ್ಪಳಿಸುವಿಕೆ, ಜಿಗಿಯುವಿಕೆ ಮತ್ತು ನೆಗೆಯುವಿಕೆ’ (ಹಾಪ್, ಸ್ಕಿಪ್ ಅಂಡ್ ಜಂಪ್) ಎಂದು ಬಣ್ಣಿಸಿದರು. ಇದು ಅವರಿಬ್ಬರೂ ಗುಟ್ಟಾಗಿ ಆಡಿದ ಆಟವಾಗಿತ್ತು! ಈ ಉಪಕ್ರಮಕ್ಕೆ ಮನಮೋಹನ್ ಸಿಂಗ್ ಅವರಿಗೆ ಅಗತ್ಯವಾಗಿದ್ದ ಅಧಿಕಾರವನ್ನು ನರಸಿಂಹರಾವ್ ಕೊಟ್ಟಿದ್ದರು ಎನ್ನುವುದು ನಿಜ. ಆದರೆ ಈ ‘ಅಪಮೌಲ್ಯೀಕರಣ’ (ಡಿವ್ಯಾಲ್ಯುಯೇಷನ್) ಎನ್ನುವ ಪದ ಅವರಿಗೆ ಹಿಡಿಸಲಿಲ್ಲ! ಏಕೆಂದರೆ, ಭಾರತದ ರಾಜಕೀಯಕ್ಕೆ ಈ ಪದ ಒಗ್ಗುತ್ತಿರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಇಂದಿರಾ ಗಾಂಧಿಯವರು 1966ರಲ್ಲಿ ಹೀಗೆಯೇ ರೂಪಾಯಿಯ ಬೆಲೆಯನ್ನು ಕಡಿಮೆ ಮಾಡಿ, ಆ ಪ್ರಕ್ರಿಯೆಯನ್ನು ‘ಅಪಮೌಲ್ಯೀಕರಣ’ ಎಂದು ಕರೆದಾಗ ಎಂತಹ ಟೀಕೆಗಳನ್ನು ಎದುರಿಸಬೇಕಾಯಿತು ಎನ್ನುವುದು ಪಿವಿಎನ್ ಅವರಿಗೆ ಗೊತ್ತಿತ್ತು. ಐಎಂಎಫ್ ಸಲಹೆಯ ಮೇರೆಗೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದ ಇಂದಿರಾ ಗಾಂಧಿ, ಆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಮತ್ತು ಹಣಕಾಸು ಸಚಿವಾಲಯದ ಹಲವು ಅಧಿಕಾರಿಗಳನ್ನು ಅನೇಕ ರಾಜ್ಯಗಳ ರಾಜಧಾನಿಗಳಿಗೆ ಮೊದಲೇ ಕಳುಹಿಸಿ, ಈ ‘ರೂಪಾಯಿಯ ಅಪಮೌಲ್ಯೀಕರಣ’ ಪ್ರಕ್ರಿಯೆಯ ಬಗ್ಗೆ ಅಲ್ಲಲ್ಲಿಯ ಮುಖ್ಯಮಂತ್ರಿಗಳಿಗೆ ಮೊದಲೇ ಎಲ್ಲವನ್ನೂ ವಿವರಿಸುವಂತೆ ಮಾಡಿದ್ದರು. ಇಂದಿರಾ ಅವರು ಅನುಸರಿಸಿದ್ದ ಈ ಹೆಜ್ಜೆಯು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ರೂಪಾಯಿಯ ಮೌಲ್ಯವನ್ನು ದಿಢೀರನೆ ಬದಲಿಸುವ ಸವಾಲನ್ನು ಪಿವಿಎನ್ ಅವರು ರಾಜಕೀಯವಾಗಿ ನಿರ್ವಹಿಸಬೇಕಿತ್ತು. ಏಕೆಂದರೆ, ರೂಪಾಯಿಯ ಅಪಮೌಲ್ಯೀಕರಣವು ಕೇವಲ ಆರ್ಥಿಕ ತೀರ್ಮಾನವಷ್ಟೆ ಆಗಿರಲಿಲ್ಲ.
ಆದರೆ, ಮೊದಲ ಸುತ್ತಿನ ರೂಪಾಯಿಯ ಅಪಮೌಲ್ಯೀಕರಣವು ಪಿವಿಎನ್ ಅವರ ಸರಕಾರದ ಮೇಲೆ ಟೀಕೆಗಳ ಸುರಿಮಳೆಯನ್ನೇ ತಂದಿತು. ಆಗ ನರಸಿಂಹರಾವ್ ಅವರು, ‘ಎರಡನೇ ಸುತ್ತಿನ ಅಪಮೌಲ್ಯೀಕರಣವನ್ನು ಕೈಗೆತ್ತಿಕೊಳ್ಳಬೇಡಿ,’ ಎಂದು ಮನಮೋಹನ್ ಸಿಂಗ್ ಅವರಿಗೆ ಬುದ್ಧಿವಾದ ಹೇಳಿದರು. ಸ್ವತಃ ಸಿಂಗ್ ಅವರಿಗೂ 1966ರಲ್ಲಿ ನಡೆದ ಘಟನಾವಳಿಗಳೆಲ್ಲವೂ ಚೆನ್ನಾಗಿಯೇ ಗೊತ್ತಿತ್ತು. ಅಂದಂತೆ, 1966ರ ಆ ಬೆಳವಣಿಗೆಗಳನ್ನು ನಿಭಾಯಿಸಿದ್ದ ಕೆ.ಎನ್.ರಾಜ್, ಐ.ಜಿ.ಪಟೇಲ್, ಡಿ.ಆರ್. ಗಾಡ್ಗೀಳ್, ಜಗದೀಶ್ ಭಗವತಿ, ಪಿ.ಎನ್.ಧರ್ ಮತ್ತು ಮನು ಶ್ರಾಫ್ ಅವರೆಲ್ಲ ಒಂದೋ ಮನಮೋಹನ್ ಸಿಂಗ್ ಅವರ ಗುರುಗಳಾಗಿದ್ದರು, ಅಥವಾ ಸ್ನೇಹಿತರಾಗಿದ್ದರು. ನರಸಿಂಹರಾವ್ ಅವರ ಮಾತನ್ನು ಕೇಳಿಸಿಕೊಂಡ ಮನಮೋಹನ್ ಸಿಂಗ್, “ಈಗಾಗಲೇ ಯೋಜಿಸಿರುವಂತೆ ಎರಡನೇ ಸುತ್ತಿನ ರೂಪಾಯಿಯ ಅಪಮೌಲ್ಯೀಕರಣವನ್ನು ಶುರು ಮಾಡಲೇಬೇಕು. ಇಲ್ಲದೆ ಹೋದರೆ ಇನ್ನೆಂದೂ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗದು,’’ ಎಂದು ತೀರ್ಮಾನಿಸಿದರು.
ಇತ್ತೀಚೆಗೆ ಈ ಬಗ್ಗೆ ಮಾತನಾಡಿದ ಮನಮೋಹನ್ ಸಿಂಗ್ “ಜನರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾರುಕಟ್ಟೆಯ ನಾಡಿಮಿಡಿತವನ್ನು ತಿಳಿದುಕೊಳ್ಳುವುದಷ್ಟೇ ಮೊದಲನೇ ಸುತ್ತಿನ ರೂಪಾಯಿ ಅಪಮೌಲ್ಯೀಕರಣದ ಉದ್ದೇಶವಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದು ನಿಜವಾದರೂ ಅದು ನಾವು ನಿಭಾಯಿಸುವ ಮಟ್ಟದಲ್ಲಿತ್ತು. ಇದನ್ನು ಗಮನಿಸಿದ ನಾನು, ಜುಲೈ 3ರ ಹೊತ್ತಿಗೆ ಈ ಅಪಮೌಲ್ಯೀಕರಣ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಸಬೇಕು ಎಂದು ಹೇಳಿದೆ. ಆಗ ಸಿ.ರಂಗರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಆಗಿದ್ದರು. ಎರಡನೇ ಸುತ್ತಿನ ವಿನಿಮಯ ದರ ಹೊಂದಾಣಿಕೆಯ ಬಗ್ಗೆ ನರಸಿಂಹರಾವ್ ಅವರಿಗೆ ಅನುಮಾನಗಳಿದ್ದವು. ಹೀಗಾಗಿ ಅವರು, ಈ ಪ್ರಕ್ರಿಯೆಯನ್ನೇ ನಿಲ್ಲಿಸುವಂತೆ ಹೇಳಿದರು. ಪ್ರಧಾನಿಗಳ ಈ ಸಂದೇಶವನ್ನು ತಿಳಿಸಲೆಂದು ನಾನು ರಂಗರಾಜನ್ ಅವರಿಗೆ ಫೋನ್ ಮಾಡಿದೆ. ಆದರೆ ಅವರು, ನೀವು ಕೊಟ್ಟಿದ್ದ ಕೆಲಸವನ್ನೆಲ್ಲ ಅಚ್ಚುಕಟ್ಟಾಗಿ ಮುಗಿಸಿದ್ದೇನೆ ಎಂದು ಉದ್ಗರಿಸಿದರು,’’ ಎಂದು ಅಂದಿನ ಸಂಗತಿಗಳನ್ನು ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೀಗೆ ಎರಡು ಹಂತಗಳಲ್ಲಿ ರೂಪಾಯಿ ಅಪಮೌಲ್ಯೀಕರಣವನ್ನು ಮಾಡಿ ಮುಗಿಸಿದ ನಂತರ, ಸರಕಾರದ ವಕ್ತಾರರು “ಇನ್ನು ಮುಂದೆ ಯಾವುದೇ ಅಪಮೌಲ್ಯೀಕರಣ ಇರುವುದಿಲ್ಲ,’’ ಎಂದು ಮನದಟ್ಟು ಮಾಡಿಕೊಡುವ ಮೂಲಕ, ದೇಶದ ಮಾರುಕಟ್ಟೆ ಶಕ್ತಿಗಳಲ್ಲಿ ವಿಶ್ವಾಸವನ್ನು ತುಂಬಿದರು. ಈ ಮೂಲಕ ರೂಪಾಯಿ ಯಾವ ಮಟ್ಟದಲ್ಲಿ ಇರಬೇಕಿತ್ತೋ ಆ ಮಟ್ಟಕ್ಕೆ ಬಂದು ನಿಂತಿತು. ಇದರ ಪರಿಣಾಮವಾಗಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಣಿಸಿಕೊಂಡಿತು.
ರೂಪಾಯಿ ಅಪಮೌಲ್ಯೀಕರಣದ ಬೆನ್ನಲ್ಲೇ ಸರಕಾರವು ವಾಣಿಜ್ಯ ವಹಿವಾಟುಗಳ ಮೇಲಿದ್ದ ಅನಗತ್ಯವೂ ಅಪ್ರಸ್ತುತವೂ ಆದ ನಿಯಂತ್ರಣಗಳನ್ನೆಲ್ಲ ಕಿತ್ತೆಸೆದು, ಇಡೀ ವಲಯವನ್ನು ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತು. ಅಂದರೆ, ಲಾಗಾಯ್ತಿನಿಂದಲೂ ರಫ್ತು ವಹಿವಾಟಿನ ಬಗ್ಗೆ ರೂಢಿಸಿಕೊಂಡು ಬಂದಿದ್ದ ನಕಾರಾತ್ಮಕ ನೀತಿಗಳನ್ನು ಬದಿಗೆ ತಳ್ಳಿ, ರಫ್ತು ವಹಿವಾಟು ನಮ್ಮ ಆರ್ಥಿಕ ಬೆಳವಣಿಗೆಯ ಇನ್ನೊಂದು ಬಹುಮುಖ್ಯವಾದ ಮೂಲ ಮತ್ತು ವಿದೇಶಿ ವಿನಿಮಯ ನಿಧಿಯ ಸಮೃದ್ಧಿಗೆ ಅದು ನೀಡುವ ಕೊಡುಗೆ ಮಹತ್ತರವಾದುದು ಎನ್ನುವ ನಿಲುವನ್ನು ತಾಳಲಾಯಿತು. ಅದುವರೆಗೂ ಭಾರತವು ತಲಾವಾರು ಆದಾಯದ ದೃಷ್ಟಿಯಿಂದ ಹೇಳುವುದಾದರೆ ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿತ್ತು. ಅಲ್ಲದೆ, ತೈಲೋತ್ಪನ್ನಗಳ ಆಮದಿನ ಮೇಲೆ ವಿಪರೀತ ಅವಲಂಬನೆಯನ್ನು ಬೆಳೆಸಿಕೊಂಡಿತ್ತು. ಅಲ್ಲಿಯವರೆಗೂ ಸರಕಾರವು ಕೇವಲ ಅತ್ಯಗತ್ಯ ಆಮದಿಗಷ್ಟೇ ಹಣಕಾಸನ್ನು ವಿನಿಯೋಗಿಸುತ್ತಿರಲಿಲ್ಲ, ಅರ ಜೊತೆಗೆ ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದ ರಫ್ತು-ಉತ್ತೇಜಕ ಆಮದು ವಹಿವಾಟಿಗೂ ಹಣವನ್ನು ಸುರಿಯುತ್ತಿತ್ತು.
ರೂಪಾಯಿಯ ಅಪಮೌಲ್ಯೀಕರಣ ಮುಗಿದ ಕೂಡಲೇ ನರಸಿಂಹರಾವ್ ಅವರು ವಾಣಿಜ್ಯ ನೀತಿಯ ಕಡೆಗೆ ಗಮನ ಕೊಟ್ಟು, ರಫ್ತು ವಹಿವಾಟುದಾರರಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು (ಕ್ಯಾಶ್ ಕಾಂಪೆನ್ಸೇಟರಿ ಸಿಸ್ಟಂ) ನಿಲ್ಲಿಸುವಂತೆ ಆದೇಶಿಸಿದರು. ಜಾಗತಿಕ ಮಟ್ಟದಲ್ಲಿರುವ ಸ್ಪರ್ಧೆಯನ್ನು ಎದುರಿಸಲು ಭಾರತೀಯ ವಾಣಿಜ್ಯ ರಂಗವು ವಿಫಲವಾಗುತ್ತಿರುವುದನ್ನು ಸರಿದೂಗಿಸಲು ಸರಕಾರವು ಅಲ್ಲಿಯವರೆಗೂ ರಫ್ತುದಾರರಿಗೆ ಕೊಡುತ್ತಿದ್ದ ಸಬ್ಸಿಡಿ ಇದಾಗಿತ್ತು. ರೂಪಾಯಿಯ ಅಪಮೌಲ್ಯೀಕರಣವೇ ಈಗ ರಫ್ತುದಾರರಿಗೆ ಒಂದು ದೊಡ್ಡ ಉತ್ತೇಜಕ ಭತ್ಯೆಯಾಗಿತ್ತು. ಎರಡನೇ ಹಂತದ ರೂಪಾಯಿ ಅಪಮೌಲ್ಯೀಕರಣಕ್ಕೆ ಹಸಿರು ನಿಶಾನೆ ತೋರಿದ ದಿನವೇ ರಿಸರ್ವ್ ಬ್ಯಾಂಕ್, ಈ ಸಬ್ಸಿಡಿಯನ್ನೂ ರದ್ದುಪಡಿಸಿತು. ಈ ನಿಟ್ಟಿನಲ್ಲಿ ಅದು ರಫ್ತುದಾರರ ಹಿತರಕ್ಷಣೆ ಮಾಡುವುದೇ ತನ್ನ ಧರ್ಮವೆಂದು ಅದುವರೆಗೂ ಭಾವಿಸಿದ್ದ ಕೇಂದ್ರ ವಾಣಿಜ್ಯ ಸಚಿವಾಲಯದ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಮಾರನೆ ದಿನ, ಅಂದರೆ ಜುಲೈ 3ರಂದು ಪ್ರಧಾನಿ ಪಿವಿಎನ್ ಅವರ ಸೂಚನೆಯಂತೆ ಮನಮೋಹನ್ ಸಿಂಗ್ ಅವರು ವಾಣಿಜ್ಯ ಸಚಿವ ಚಿದಂಬರಂ ಮತ್ತು ಆ ಸಚಿವಾಲಯದ ಕಾರ್ಯದರ್ಶಿ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಅವರಿಬ್ಬನ್ನೂ ಸಂಪರ್ಕಿಸಿ, ರಫ್ತುದಾರರಿಗೆ ಕೊಡುತ್ತಿರುವ ಸಬ್ಸಿಡಿಯನ್ನು ನಿಲ್ಲಿಸುವುದಕ್ಕೆ ಅಗತ್ಯವಾದ ಕಾಗದಪತ್ರ ಇತ್ಯಾದಿಗಳನ್ನು ಸಿದ್ಧಪಡಿಸಿ ಅದಕ್ಕೆ ಪ್ರಧಾನಿಗಳ ಅನುಮೋದನೆ ಪಡೆದುಕೊಳ್ಳಬೇಕೆಂದು ಹುಕುಂ ಹೊರಡಿಸಿದರು. ಆ ಸಂದರ್ಭದಲ್ಲಿ ಅವರು, ಸರಕಾರವು ಈಗಾಗಲೇ ರೂಪಾಯಿಯನ್ನು ಅಪಮೌಲ್ಯೀಕರಣಗೊಳಿಸಿರುವುದರಿಂದ ಈ ಸಬ್ಸಿಡಿ ಅಗತ್ಯವಿಲ್ಲ ಎಂದು ವಿವರಿಸಿದರು. ಇದನ್ನು ಕೇಳಿಸಿಕೊಂಡ ಕೂಡಲೇ ಚಿದಂಬರಂ ಅವರೊಳಗಿದ್ದ ರಾಜಕಾರಣಿ ಎಚ್ಚರಗೊಂಡ! ಹೀಗಾಗಿ ಅವರು ಈ ಚಿಂತನೆಗೇ ಮುಳುಗುನೀರು ಬಿಡಲು ನೋಡಿದರು. ಆದರೆ, ಮನಮೋಹನ್ ಸಿಂಗ್ ಇದಕ್ಕೆ ಅವಕಾಶ ಕೊಡದೆ, “ಮಿಸ್ಟರ್ ಚಿದಂಬರಂ, ಈ ಸಂಬಂಧದ ಆದೇಶ ಇವತ್ತೇ ಹೊರಬೀಳಬೇಕೆಂದು ಪ್ರಧಾನಿಗಳು ಹೇಳಿದ್ದಾರೆ,’’ ಎಂದು ಹೇಳಬೇಕಾಯಿತು.
ಹೀಗೆ, ಜುಲೈ 3ರ ಸಂಜೆಯ ಹೊತ್ತಿಗೆ ರಫ್ತುದಾರರಿಗೆ ಅದುವರೆಗೂ ಕೊಡುತ್ತಿದ್ದ ಸಬ್ಸಿಡಿಯು ಇತಿಹಾಸವನ್ನು ಸೇರಿತು. ಇದಾದ ಕೆಲದಿನಗಳ ನಂತರ ‘ಎಕನಾಮಿಕ್ ಟೈಮ್ಸ್’ಗೆ ತಾವು ನೀಡಿದ ಸಂದರ್ಶನದಲ್ಲಿ ಚಿದಂಬರಂ ಅವರು “ಹೆರಿಗೆಯ ನೋವನ್ನನುಭವಿಸದೆ ಹೆರಿಗೆ ಆಗುವುದಾದರೂ ಹೇಗೆ?’’ ಎನ್ನುವ ಮೂಲಕ ತಮ್ಮ ಅಂದಿನ ಕ್ರಮವನ್ನು ಸಮರ್ಥಿಸಿಕೊಂಡರು.
ಸರಕಾರವು ತರುತ್ತಿದ್ದ ವಾಣಿಜ್ಯ ನೀತಿಗಳಲ್ಲಿನ ಸುಧಾರಣೆಯು ಮುಖ್ಯವಾಗಿ ಎರಡು ಉದ್ದೇಶಗಳನ್ನು ಒಳಗೊಂಡಿತ್ತು. ಒಂದು, ಆ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಸ ಬಗೆಯ ಜಾಗತಿಕ ಅರ್ಥ ವ್ಯವಸ್ಥೆಯೆಡೆಗೆ (ವರ್ಲ್ಡ ಟ್ರೇಡ್ ಆರ್ಗನೈಝೇಷನ್- ಡಬ್ಲ್ಯುಟಿಒ) ಭಾರತವು ಮುಂದಡಿ ಇಡಬೇಕು. ಎರಡು, ಆಮದು ವಹಿವಾಟನ್ನು ರಫ್ತು ವಹಿವಾಟಿನ ಜೊತೆ ಬೆಸೆಯಬೇಕು. ಇದಕ್ಕೆ ಪೂರಕವಾಗಿ, ಅದುವರೆಗೂ ಜಾರಿಯಲ್ಲಿದ್ದ ಸರಕಾರಿ ಆಮದು ಲೈಸೆನ್ಸ್ ಪದ್ಧತಿಯನ್ನು ಕೈಬಿಟ್ಟು, ಮುಕ್ತವಾದ ರಫ್ತು ವಹಿವಾಟಿಗೆ ಉತ್ತೇಜನ ನೀಡುವ ನೀತಿಯನ್ನು ಜಾರಿಗೆ ತರಲಾಯಿತು.
ರೂಪಾಯಿಯ ಅಪಮೌಲ್ಯೀಕರಣವನ್ನು ಮುಕ್ತ ವಾಣಿಜ್ಯ ನೀತಿಯೊಂದಿಗೆ ಬೆಸೆದಿದ್ದು ನಿಜಕ್ಕೂ ಅರ್ಥಪೂರ್ಣವಾಗಿತ್ತು. ತಮ್ಮ ನೇತೃತ್ವದ ಅಲ್ಪಮತದ ಸರಕಾರವು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎನ್ನುವ ಸಂದೇಶವನ್ನು ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ಹಣಕಾಸು ಸಂಸ್ಥೆಗಳಿಗೆ ರವಾನಿಸುವ ಉದ್ದೇಶದಿಂದ ನರಸಿಂಹರಾವ್ ಈ ಹೆಜ್ಜೆಗಳನ್ನಿಡುತ್ತಿದ್ದರು. ಏಕಕಾಲಕ್ಕೆ ಭಾರತದ ಒಳಗೆ ಕುಸಿದುಹೋಗಿದ್ದ ವಿಶ್ವಾಸವನ್ನು ಮತ್ತೆ ಮೂಡಿಸುವ ಹಾಗೂ ನೇರ ನಗದಿನ ಲಭ್ಯತೆಯನ್ನು ಸಮೃದ್ಧಗೊಳಿಸಿಕೊಳ್ಳುವ ಎರಡು ಗುರಿಗಳು ಈ ಉಪಕ್ರಮಗಳ ಹಿಂದಿದ್ದವು.
ರೂಪಾಯಿ ಅಪಮೌಲ್ಯೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ ಒಂದು ವಾರದ ನಂತರ, ಅಂದರೆ 1991ರ ಜುಲೈ 9ರಂದು ಚೊಚ್ಚಲ ಸಂಸತ್ ಅಧಿವೇಶನ ಆರಂಭವಾಯಿತು. ಅಂದು ನರಸಿಂಹರಾವ್ ಅವರು ಎರಡನೇ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಇದು ಟೆಲಿವಿಷನ್‌ನಲ್ಲಿ ನೇರಪ್ರಸಾರವಾಯಿತು. ತಮ್ಮ ಭಾಷಣದಲ್ಲಿ ಪಿವಿಎನ್ ಅವರು, ತಾವು ಅಧಿಕಾರ ವಹಿಸಿಕೊಂಡ ಕೂಡಲೇ ತೆಗೆದುಕೊಂಡ ಆರ್ಥಿಕ ಸುಧಾರಣೆಗಳನ್ನು ದೇಶವಾಸಿಗಳಿಗೆ ತುಂಬಾ ಸರಳವಾದ ಭಾಷೆಯಲ್ಲಿ ವಿವರಿಸಿದರು. “ನೀವು ರಫ್ತು ವಹಿವಾಟನ್ನು ನಡೆಸದೆ ಆಮದು ವಹಿವಾಟನ್ನು ನಡೆಸುವುದು ಸಾಧ್ಯವಿಲ್ಲ. ನಾನು ದೇಶದಲ್ಲಿ ವಾಣಿಜ್ಯ ವಹಿವಾಟು ಸಮೃದ್ಧವಾಗಿ ನಡೆಯಬೇಕೆಂದು ಹೇಳುವವನೇ ವಿನಾ ಸುಮ್ಮಸುಮ್ಮನೆ ಸಬ್ಸಿಡಿ ಕೊಡುವವನಲ್ಲ. ಸಬ್ಸಿಡಿ ಎನ್ನುವುದು ಊರುಗೋಲಿದ್ದಂತೆಲ ಆದರೆ ನಾವೇ ಸ್ವತಃ ಮಾಡುವ ವಾಣಿಜ್ಯ ವಹಿವಾಟು ನಮಗೆ ಹೆಮ್ಮೆಯ ಸಂಗತಿಯಾಗುತ್ತದೆ. ಭಾರತವು ಈಗಲ್ಲ, ಕಳೆದ ಸಾವಿರಾರು ವರ್ಷಗಳಿಂದಲೂ ವ್ಯಾಪಾರ-ವಹಿವಾಟನ್ನು ನಡೆಸುತ್ತಲೇ ಬಂದಿದೆ. ಈಗ ದೇಶದ ಮುಂದಿರುವ ಆರ್ಥಿಕ ಸಂಕಷ್ಟವನ್ನು ಪರಿಹರಿಸಿ ವಿರಮಿಸುವುದು ಮಾತ್ರ ನನ್ನ ಉದ್ದೇಶವಲ್ಲ. ಭಾರತವನ್ನು ಜಗತ್ತಿನ ಇತರ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿ ಪ್ರತಿಷ್ಠಾಪಿಸುವುದು ನನ್ನ ನಿಜವಾದ ಗುರಿ. ಜಗತ್ತಿನಲ್ಲಿ ಏನೇನಾಗುತ್ತಿದೆ ಎನ್ನುವುದನ್ನು ಭಾರತವು ಕಣ್ಣು ಬಿಟ್ಟು ನೋಡಿ, ಅದರಿಂದ ಸಾಕಷ್ಟು ಪಾಠಗಳನ್ನು ಕಲಿಯಬೇಕಾಗಿದೆ ಎಂದು ನಾವು ನಂಬಿದ್ದೇವೆ. ಅನೇಕ ರಾಷ್ಟ್ರಗಳು ದೂರಗಾಮಿ ಫಲಿತಾಂಶಗಳನ್ನು ನೀಡುವಂತಹ ಬದಲಾವಣೆಗಳನ್ನು ಜಾರಿಗೆ ತರುತ್ತಿವೆ. ಇಂದು ಸೋವಿಯತ್ ಒಕ್ಕೂಟ ಮತ್ತು ಚೀನಾದಂತಹ ಬೃಹತ್ ರಾಷ್ಟ್ರಗಳಲ್ಲಿ ಚಾರಿತ್ರಿಕವಾದ ಆರ್ಥಿಕ ಬದಲಾವಣೆಗಳು ಸಂಭವಿಸುತ್ತಿವೆ. ಜಗತ್ತಿನ ಎಲ್ಲೆಡೆಯೂ ಸಂಗತಿಗಳನ್ನು ನೋಡುವ ದೃಷ್ಟಿಕೋನದಲ್ಲೂ ಮನೋಭಾವದಲ್ಲೂ ಪರಿವರ್ತನೆ ಕಂಡುಬರುತ್ತಿದೆ. ಬದಲಾಗುತ್ತಿರುವ ಈ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ಭಾರತವೂ ಹೊಸತನವನ್ನು ಮೈಗೂಡಿಸಿಕೊಳ್ಳಲೇಬೇಕಾಗಿದೆ,’’ ಎನ್ನುವ ಸಾಲುಗಳು ಪಿವಿಎನ್ ಅವರ ಭಾಷಣದಲ್ಲಿ ಅಡಕವಾಗಿದ್ದವು.
ಪಿವಿಎನ್ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಕೇವಲ ಹದಿನೈದು ದಿನಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಎಲ್ಲರಲ್ಲೂ ವಿಶ್ವಾಸವನ್ನು ಮೂಡಿಸುವಂತಹ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡರು. ಅಷ್ಟೇ ಅಲ್ಲ, ತಮ್ಮ ಸರಕಾರದ ಮೊದಲ ಸಂಸತ್ ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ಅವರು ಇಂತಹ ದಿಟ್ಟತನದ ಹೆಜ್ಜೆಗಳನ್ನಿಟ್ಟರು. ನಂತರ ಅವರು ವಿತ್ತೀಯ ನಿರ್ವಹಣೆಯತ್ತ ತಮ್ಮ ಗಮನ ಹರಿಸಿದರು. ಏಕೆಂದರೆ, ಐಎಂಎಫ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ರೇಟಿಂಗ್ ಏಜೆನ್ಸಿಗಳು ಭಾರತದ ವಿತ್ತೀಯ ನಿರ್ವಹಣೆಯಲ್ಲಿ ಸಾಕಷ್ಟು ಇಳಿಕೆ ಕಂಡುಬರಬೇಕೆಂದು ಕುತೂಹಲದಿಂದ ನೋಡುತ್ತಿದ್ದವು. ಈ ಪೈಕಿ ವಿನಿಮಯ ದರದ ನಿರ್ವಹಣೆಯ ಹೊಣೆಗಾರಿಕೆಯು ಭಾರತೀಯ ರಿಸರ್ವ್ ಬ್ಯಾಂಕಿನದಾಗಿದ್ದರೆ, ವಿತ್ತೀಯ ನಿರ್ವಹಣೆಯ ಜವಾಬ್ದಾರಿಯು ಹಣಕಾಸು ಸಚಿವರದಾಗಿತ್ತು.
1991ರ ಜುಲೈ 24ರಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್ ಅವರು ಅದರಲ್ಲಿ ಮಾಡಿದ ಬಹುದೊಡ್ಡ ಘೋಷಣೆಯೆಂದೆ, ಸರಕಾರವು ಬಜೆಟ್ ಕೊರತೆಯನ್ನು ಇಳಿಸಲಿದೆ ಎನ್ನುವುದಾಗಿತ್ತು. ಇದು ಮೂಲತಃ, ಚಂದ್ರಶೇಖರ್ ಅವರ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಯಶವಂತ ಸಿನ್ಹಾ ಅವರು 1990ರ ಡಿಸೆಂಬರಿನಲ್ಲಿ ನೀಡಿದ್ದ ವಾಗ್ದಾನವಾಗಿತ್ತು. ಅದನ್ನು ಸಾಧಿಸಿ ತೋರಿಸುವ ಕೆಲಸ ಈಗ ಮನಮೋಹನ್ ಸಿಂಗ್ ಅವರ ಪಾಲಿಗೆ ಬಂದಿತ್ತು. ಇದರಂತೆ, 1990-91ರಲ್ಲಿ ದೇಶದ ಜಿಡಿಪಿಯ ಶೇಕಡ 8.4ರಷ್ಟು ಅಗಾಧವಾಗಿದ್ದ ಬಜೆಟ್ ಕೊರತೆ ಪ್ರಮಾಣವನ್ನು 1991-92ರಲ್ಲಿ ಶೇಕಡ 5.9ಕ್ಕೆ ಇಳಿಸಲಾಯಿತು. ಅಂದಂತೆ, ಏಳನೇ ಯೋಜನೆಯಲ್ಲಿ ಅಂದಾಜು ಮಾಡಿದ್ದ ಬಜೆಟ್ ಕೊರತೆ ಪ್ರಮಾಣವು ಶೇಕಡ ೮.೨ರಷ್ಟಿತ್ತು. ಹೀಗಾಗಿ, 1991-92ರಲ್ಲಿ ಮಾಡಿ ತೋರಿಸಿದ ಸಾಧನೆಯು ಯಾವ ಮಾನದಂಡದಿಂದ ಅಳೆದರೂ ಗಮನಾರ್ಹವಾಗಿತ್ತು.
ವಿತ್ತೀಯ ಕೊರತೆಯನ್ನು ಒಟ್ಟು ಜಿಡಿಪಿ ಪ್ರಮಾಣದಲ್ಲಿ ಶೇಕಡ 2ರಷ್ಟು ಇಳಿಸಿದ್ದರಿಂದ ಸರಕಾರಿ ವೆಚ್ಚವು ಗಣನೀಯವಾಗಿ ತಗ್ಗಿತು. ದೀರ್ಘಾವಧಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸರಕಾರದ ಹಣಕಾಸು ಕೊರತೆಯನ್ನು ಕೂಡ ನೀಗಿಕೊಳ್ಳಬಹುದಿತ್ತು ಎನ್ನುವುದು ಕೂಡ ನಿಜವೇ. ಆದರೆ, ಐಎಂಎಫ್ ಈ ಮೃದು ಧೋರಣೆಯನ್ನು ಒಪ್ಪುತ್ತಿರಲಿಲ್ಲ. ಭಾರತಕ್ಕೆ ತನ್ನ ಹಣಕಾಸು ನೆರವು ಸಿಗಬೇಕೆಂದರೆ ಸರಕಾರವು ತನ್ನ ಅನಗತ್ಯ ವೆಚ್ಚಗಳನ್ನು ಒಂದೇ ಏಟಿನಲ್ಲಿ ಇಳಿಸಬೇಕೆನ್ನುವುದು ಅದರ ಷರತ್ತಾಗಿತ್ತು. ಮನಮೋಹನ್ ಸಿಂಗ್ ಕೂಡ ತಮ್ಮ ಬಜೆಟ್ ಭಾಷಣದಲ್ಲಿ ಏನನ್ನೂ ಮುಚ್ಚಿಡಲು ಹೋಗದೆ, “ನಮ್ಮ ಹಣಕಾಸು ವ್ಯವಸ್ಥೆಯು ಬಿಕ್ಕಟ್ಟಿನಲ್ಲಿದ್ದು, ಎಲ್ಲರಲ್ಲೂ ತೀವ್ರ ಕಳವಳ ಹುಟ್ಟಿಸಿದೆ. ಈಗ ನಾವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ ಪರಿಸ್ಥಿತಿಯು ನಮ್ಮ ಕೈಮೀರಿ ಹೋಗಲಿದೆ. ನಂತರ ಅದನ್ನು ಸರಿಪಡಿಸುವುದು ಸಾಧ್ಯವಿಲ್ಲ,’’ ಎಂದು ಇದ್ದ ಪರಿಸ್ಥಿತಿಯನ್ನು ವಿವರಿಸಿದರು. ಇದಕ್ಕೆ ಅನುಗುಣವಾಗಿ ಅವರು ಎರಡು ಬಗೆಯ ಕ್ರಮಗಳನ್ನು ಘೋಷಿಸಿದರು. ಒಂದು- ಆಹಾರಧಾನ್ಯಗಳು, ರಸಗೊಬ್ಬರ ಮತ್ತು ರಫ್ತು ವಹಿವಾಟಿನ ಮೇಲೆ ಕೊಡುತ್ತಿದ್ದ ಸಬ್ಸಿಡಿಗಳಲ್ಲಿ ಭಾರೀ ಕಡಿತ; ಎರಡು- ದೇಶದ ರಕ್ಷಣಾ ವೆಚ್ಚದಲ್ಲಿ ಇಳಿಕೆ. ಇವೆರಡೂ ಕ್ರಮಗಳು ಹಣಕಾಸು ಕೊರತೆಯನ್ನು ಕಡಿಮೆ ಮಾಡುವ ಗುರಿಯನ್ನೇ ಹೊಂದಿದ್ದವು.
ಒಟ್ಟಿನಲ್ಲಿ ಮನಮೋಹನ್ ಸಿಂಗ್ ಅವರ ಚೊಚ್ಚಲ ಬಜೆಟ್ ಭಾಷಣವು ಸರಕಾರದ ನೀತಿಗಳ ದೃಷ್ಟಿಯಿಂದ ಒಂದು ಮೈಲುಗಲ್ಲಾಯಿತು. ಅವರು ತಮ್ಮ ಸ್ವಭಾವಸಹಜವಾದ ಮೆಲುದನಿಯಲ್ಲಿ ವಿದೇಶಿ ಸಾಲದ ಕಂತುಗಳನ್ನು ಕಟ್ಟಲಾಗದ ಮತ್ತು ಹಣಕಾಸು ಬಿಕ್ಕಟ್ಟಿನ ಮೂಲವನ್ನು ಸಮಗ್ರವಾಗಿ ವಿವರಿಸಿದರಲ್ಲದೆ, ಇವುಗಳನ್ನು ಬಗೆಹರಿಸಲು ಪಿವಿಎನ್ ನೇತೃತ್ವದ ಸರಕಾರವು ಕೈಗೊಂಡಿರುವ ಕ್ರಮಗಳನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು. ಜೊತೆಗೆ, ಮುಂದಿನ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸುಧಾರಣೆಗಳೇನೇನು ಎನ್ನುವುದನ್ನೂ ಅವರು ಸ್ಪಷ್ಟವಾಗಿ ತಮ್ಮ ಭಾಷಣದಲ್ಲಿ ಹೇಳಿದರು. ಇಡೀ ಲೋಕಸಭೆಯು ಅವರ ಮಾತುಗಳನ್ನು ಮೌನವಾಗಿ ಕೇಳಿಸಿಕೊಂಡಿತು. ಅಂದು ಲೋಕಸಭೆಯ ಪ್ರೆಸ್ ಗ್ಯಾಲರಿ ಮತ್ತು ಅತಿಥಿಗಳ ಗ್ಯಾಲರಿ ಕೂಡ ಭರ್ತಿಯಾಗಿದ್ದವು. ಅವರ ಆ ಮುವ್ವತ್ತೊಂದು ಪುಟಗಳ, ಹದಿನೆಂಟು ಸಾವಿರ ಪದಗಳ ಬಜೆಟ್ ಭಾಷಣವನ್ನು ದೇಶದ ಕೋಟ್ಯಂತರ ಜನ ಟೆಲಿವಿಷನ್ ಪರದೆಯ ಮೇಲೆ ವೀಕ್ಷಿಸಿದರು. ಕೊನೆಯಲ್ಲಿ ಅವರು “ದೇಶವು ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿರುವುದು ವಾಸ್ತವ. ಇದನ್ನು ಪರಿಹರಿಸಲು ಈ ಸರಕಾರವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ,’’ ಎನ್ನುವ ಮೂಲಕ ತಮ್ಮ ಭಾಷಣವನ್ನು ಮುಗಿಸಿದರು.
ಈ ಬಜೆಟ್ ಭಾಷಣದ ಕಟ್ಟಕಡೆಯ ಪ್ಯಾರಾ ಮಾತ್ರ ಇಷ್ಟು ವರ್ಷಗಳ ನಂತರವೂ ಆರ್ಥಿಕ ನೀತಿನಿರೂಪಕರ ಮನಸ್ಸಿನಲ್ಲಿ ಅನುರಣಿಸುತ್ತಿದ್ದು, ಆ ಸಾಲುಗಳನ್ನು ಇಲ್ಲಿ ನೋಡಬಹುದು-
“ಮಾನ್ಯ ಸಭಾಧ್ಯಕ್ಷರೇ, ನಾವೀಗ ಒಂದು ದೀರ್ಘಹಾದಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ. ಈ ಹಾದಿಯಲ್ಲಿ ಸಾಕಷ್ಟು ಕಷ್ಟನಷ್ಟಗಳು ನಮಗಿವೆ ಎನ್ನುವುದನ್ನೇನೂ ನಾನು ಮುಚ್ಚಿಡಲಾರೆ. ಆದರೆ, ಒಂದಂತೂ ಸತ್ಯ. ಖ್ಯಾತ ಲೇಖಕ ವಿಕ್ಟರ್ ಹ್ಯೂಗೋ ಹೇಳಿರುವಂತೆ, ‘ಯಾವುದೇ ಒಂದು ಘಟನೆಯು ಸಂಭವಿಸುವ ಸಮಯ ಬಂದಿತೆಂದರೆ ಅದನ್ನು ಈ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ತಡೆಯುವುದು ಸಾಧ್ಯವಿಲ್ಲ.’ ನನ್ನ ಪ್ರಕಾರ, ಭಾರತವು ವಿಶ್ವದ ದೈತ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ತಲೆಯೆತ್ತುವ ಸಮಯ ಈಗ ಬಂದಿದೆ. ಇದನ್ನು ನಾನು ಘನತೆವೆತ್ತ ಈ ಸದನಕ್ಕೆ ತಿಳಿಸಲು ಬಯಸುತ್ತೇನೆ. ಇಡೀ ವಿಶ್ವವು ಈ ಸಂಗತಿಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಿ. ಭಾರತವು ಈಗ ಎಚ್ಚೆತ್ತುಕೊಂಡಿದೆ. ನಾವು ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಲ್ಲುತ್ತೇವೆ; ತಲೆಯೆತ್ತಿ ನಿಲ್ಲುತ್ತೇವೆ.’’
ಪಿವಿಎನ್ ಸರಕಾರ ಕೈಗೊಂಡ ವಿನಿಮಯ ದರ ಹೊಂದಾಣಿಕೆ ಮತ್ತು ವಿತ್ತೀಯ ಕೊರತೆಯ ಇಳಿಕೆಯ ಎರಡು ಕ್ರಮಗಳು ಭಾರತದ ಬಗ್ಗೆ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಮತ್ತು ಹಣಕಾಸು ಸಂಸ್ಥೆಗಳು ಪುನಃ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಲು ಸಾಕಾದವು. ಆದರೂ ನರಸಿಂಹರಾವ್ ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು. 1991ರ ಜುಲೈ 15ರಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ನಡೆದ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ನಮ್ಮ ಸರಕಾರವು ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಆದರೆ, ಈ ಕ್ರಮಗಳು ರಾತ್ರಿ ಕಳೆದು ಬೆಳಕು ಹರಿಯುವುದರೊಳಗಾಗಿ ಬಂದಿದ್ದಲ್ಲ. ಸೋವಿಯತ್ ಒಕ್ಕೂಟದಲ್ಲಿ ಈಗ ಏನು ನಡೆಯುತ್ತಿದೆ ಎನ್ನುವುದನ್ನು ಜನರು ನನಗಿಂತ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಾವು ಈ ಬದಲಾವಣೆಗಳಿಂದ ಆಚೆ ಇರಲು ಸಾಧ್ಯವಿಲ್ಲ. ಇಡೀ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲೇಬೇಕು,’’ ಎಂದು ಪ್ರತಿಪಾದಿಸಿದರು.
ಈ ಉದ್ದೇಶ ಮತ್ತು ಆಶಯಗಳೊಂದಿಗೆ ನರಸಿಂಹರಾವ್ ಅವರು ತಾವೇ ಹೊತ್ತುಕೊಂಡಿದ್ದ ಕೈಗಾರಿಕಾ ಖಾತೆಯ ಅಧಿಕಾರಿಗಳಿಗೆ ಕುಖ್ಯಾತವಾದ ಲೈಸೆನ್ಸ್-ಪರ್ಮಿಟ್ ವ್ಯವಸ್ಥೆಗೆ ಇತಿಶ್ರೀ ಹಾಡುವಂತಹ ಹೊಸ ಕೈಗಾರಿಕಾ ನೀತಿಯನ್ನು ಸಿದ್ಧಪಡಿಸುವಂತೆ ಅಪ್ಪಣೆ ನೀಡಿದರು.
ಸ್ವತಂತ್ರ ಭಾರತದಲ್ಲಿ ಕ್ರಮವಾಗಿ 1948ರಲ್ಲಿ ಮೊದಲ ಬಾರಿಗೆ, ನಂತರ 1956ರಲ್ಲಿ ಎರಡನೇ ಬಾರಿಗೆ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಯಿತು. ಎರಡೂ ಬಾರಿಯೂ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಈ ಪ್ರಕ್ರಿಯೆಯಲ್ಲಿ ಖುದ್ದಾಗಿ ಭಾಗಿಯಾಗಿದ್ದರು ಎನ್ನುವುದು ನಮಗೆಲ್ಲ ಗೊತ್ತಿದೆ. ಇದಾದಮೇಲೆ, ಇಂದಿರಾ ಗಾಂಧಿಯವರು 1973ರಲ್ಲಿ ಮೂರನೇ ಬಾರಿಗೆ ದೇಶದ ಕೈಗಾರಿಕಾ ನೀತಿಯನ್ನು ಪರಿಷ್ಕರಿಸಿದರು. ಆದರೆ, ಇದು ಕೈಗಾರಿಕೋದ್ಯಮಗಳ ಮೇಲೆ ಸರಕಾರದ ಉಕ್ಕಿನ ಹಿಡಿತವನ್ನು ವಿಪರೀತವೆನಿಸುಷ್ಟು ಹೆಚ್ಚಿಸಿತು. 1980ರ ದಶಕದ ಮಧ್ಯಭಾಗದ ಹೊತ್ತಿಗೆ ಇಂದಿರಾಪ್ರಣೀತ ಕೈಗಾರಿಕಾ ನೀತಿಯು ಉಸಿರುಗಟ್ಟಿಸತೊಡಗಿತು. ಹೀಗಾಗಿ, ಉದ್ದಿಮೆಗಳ ಮೇಲೆ ಸರಕಾರದ ಕಪಿಮುಷ್ಟಿ ಇರುವ ಈ ನೀತಿಗೆ ಕೊನೆ ಹಾಡಬೇಕೆಂಬ ಪ್ರಬಲ ಅಭಿಪ್ರಾಯಗಳು ಕೇಳಿಬರತೊಡಗಿದವು. ವಾಸ್ತವವಾಗಿ, ಇಂದಿರಾ ಜಾರಿಗೆ ತಂದ ಆ ಕೈಗಾರಿಕಾ ನೀತಿಯಲ್ಲಿ ‘ಸಮಾಜವಾದಿ ಮಾದರಿಯ ಸಮಾಜವನ್ನು ರೂಪಿಸುವುದು ಇಲ್ಲಿರುವ ಉದ್ದೇಶ. ಇದರ ಜೊತೆಗೆ, ಕೈಗಾರಿಕಾ ಪ್ರಪಂಚದಲ್ಲಿ ಯಾವುದೇ ಒಬ್ಬ ಉದ್ಯಮಿಯ ಏಕಸ್ವಾಮ್ಯಕ್ಕೆ ಅವಕಾಶ ಕೊಡದೆ ಇರುವುದು ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ನೋಡಿಕೊಳ್ಳುವ ಆಶಯಗಳೂ ಇಲ್ಲಿವೆ,’ ಎಂದು ಹೇಳಲಾಗಿತ್ತು. ಆದರೆ, ಇದು ಅಂತಿಮವಾಗಿ ಅದಕ್ಷತೆಗೂ ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಟ್ಟಿತು. ಇಂತಹ ಕೆಟ್ಟ ಕೈಗಾರಿಕಾ ನೀತಿಗಳಿಂದಾಗಿ ಏನಾಯಿತೆಂದರೆ, ಭಾರತೀಯ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಎದ್ದು ನಿಲ್ಲಲು ಅಸಮರ್ಥವಾದವು; ಇನ್ನೊಂದೆಡೆಯಲ್ಲಿ, ದೇಶೀಯವಾಗಿ ವಾಣಿಜ್ಯೋದ್ಯಮವನ್ನು ಬೆಳೆಸುತ್ತೇವೆ ಎನ್ನುವ ಹೆಸರಿನಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ನಿಷೇಧಿಸಲಾಯಿತು. ಇಷ್ಟೇ ಅಲ್ಲದೆ, ಯಾವುದೇ ಒಬ್ಬ ಸಾಹಸಶೀಲ ಉದ್ಯಮಿಯು ಯಾವುದಾದರೂ ಉದ್ದಿಮೆಯನ್ನು ಆರಂಭಿಸಲು ಅಖಾಡಕ್ಕೆ ಧುಮುಕುವ ಮೊದಲು ಕೇಂದ್ರ ಸರಕಾರದ ಕೈಗಾರಿಕಾ ಸಚಿವಾಲಯದ ಜಂಟಿ ಕಾರ್ಯದರ್ಶಿಯ ಬಳಿಗೆ ಅನುಮತಿ ಕೋರಿ ಅಂಡಲೆಯಬೇಕಾಯಿತು. ಆದರೆ, ಈ ಅಧಿಕಾರಿಗಳಿಗೆ ಕೈಗಾರಿಕೋದ್ಯಮದಲ್ಲಿರುವ ಸವಾಲುಗಳ ಬಗ್ಗೆಯಾಗಲಿ, ಅಲ್ಲಿರುವ ಸದವಕಾಶಗಳ ಬಗ್ಗೆಯಾಗಲಿ ಕಿಂಚಿತ್ತೂ ತಿಳಿವಳಿಕೆ ಇರುತ್ತಿರಲಿಲ್ಲ. ದುರಂತವೆಂದರೆ ಇಂತಹ ದಡ್ಡ ಅಧಿಕಾರಿಗಳೇ ಉದ್ಯಮಿಗಳಿಗೆ ಎಲ್ಲಿ ಬಂಡವಾಳ ಹೂಡಬೇಕು, ಅದರ ಸ್ವರೂಪ ಹೇಗಿರಬೇಕು, ಎಷ್ಟನ್ನು ಬಂಡವಾಳವಾಗಿ ಹೂಡಬೇಕು ಮುಂತಾದ ಸಂಗತಿಗಳನ್ನು ಹೇಳುತ್ತಿದ್ದರು!
1980ರ ದಶಕದಲ್ಲಿ ದೇಶದ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿ ಮತ್ತು ವಿ.ಪಿ.ಸಿಂಗ್ ಇಬ್ಬರೂ ಈ ಲೈಸೆನ್ಸ್-ಪರ್ಮಿಟ್ ರಾಜ್ ವ್ಯವಸ್ಥೆಯನ್ನು ಕೊನೆಗಾಣಿಸಬೇಕಾದ ಅಗತ್ಯವಿದೆ ಎಂಬುದನ್ನು ಬಲ್ಲವರಾಗಿದ್ದರು. ಆದರೆ, ಅವರಿಬ್ಬರಿಗೂ ಇಂತಹ ಸಾಹಸವನ್ನು ಮಾಡಲು ಅಗತ್ಯವಾಗಿದ್ದ ರಾಜಕೀಯ ಧೈರ್ಯವಿರಲಿಲ್ಲ. ಆದರೆ, ಪಿ.ವಿ.ನರಸಿಂಹರಾವ್ ಮಾತ್ರ ‘ಮುಂದೆ ಏನಾದರೂ ಆಗಲಿ, ನೋಡಿಕೊಳ್ಳೋಣ,’ ಎಂದುಕೊಂಡು ಮುನ್ನುಗ್ಗಿದರು. ಅಂತಿಮವಾಗಿ ಇವರ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಎ.ಎನ್.ವರ್ಮ, ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳ ಒಂದು ತಂಡ ಮತ್ತು ಕೈಗಾರಿಕಾ ಸಚಿವಾಲಯದ ಆಯ್ದ ಅಧಿಕಾರಿಗಳೆಲ್ಲರೂ ಸೇರಿ 1991ರ ಜುಲೈ 24ರಂದು ನೂತನ ಕೈಗಾರಿಕಾ ನೀತಿಯನ್ನು ಸರಕಾರದ ಚೊಚ್ಚಲ ಬಜೆಟ್ ನೀತಿಯೊಂದಿಗೆ ಘೋಷಿಸಿಯೇ ಬಿಟ್ಟರು! ಈ ಪ್ರಕ್ರಿಯೆಯಲ್ಲಿ ಕೈಗಾರಿಕಾ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿದ್ದ ರಾಕೇಶ್ ಮೋಹನ್ ಅವರು ನಿರ್ಣಾಯಕ ಪಾತ್ರ ವಹಿಸಿದರು. ಇಷ್ಟೇ ಅಲ್ಲದೆ, ವರ್ಮ ಮತ್ತು ರಾಕೇಶ್ ಮೋಹನ್ ಇಬ್ಬರೂ ವಿ.ಪಿ.ಸಿಂಗ್ ಸರಕಾರವಿದ್ದಾಗ ಕೂಡ ಕೈಗಾರಿಕಾ ಸಚಿವಾಲಯದಲ್ಲಿ ಸಹೋದ್ಯೋಗಿಗಳಾಗಿದ್ದರು. ಇವರಿಬ್ಬರೂ ಆಗಲೇ ನೂತನ ಕೈಗಾರಿಕಾ ನೀತಿಯ ಕರಡನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು.
ಇದಕ್ಕೂ ಒಂದಿಷ್ಟು ದಿನಗಳ ಮೊದಲೇ, ಅಂದರೆ 1991ರ ಜುಲೈ 12ರಂದೇ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯು ‘ಲೈಸೆನ್ಸ್ ರಾಜ್‌ಗೆ ಇತಿಶ್ರೀ’ ಎನ್ನುವ ಶೀರ್ಷಿಕೆಯಲ್ಲಿ ಒಂದು ದೊಡ್ಡ ವರದಿಯನ್ನು ಪ್ರಕಟಿಸಿತ್ತು. ಇದನ್ನು ಬರೆದಿದ್ದವರು ಆ ಪತ್ರಿಕೆಯ ರಾಜಕೀಯ ಸಂಪಾದಕಿಯೂ ಪಿವಿಎನ್ ಅವರಿಗೆ ತೀರಾ ನಿಕಟವೂ ಆಗಿದ್ದ ಕಲ್ಯಾಣಿ ಶಂಕರ್. ಅವರಿಬ್ಬರ ಈ ಸಂಬಂಧವನ್ನು ಬಲ್ಲವರು, ‘ಬಹುಶಃ ರಾಜಕೀಯ ನಾಡಿಮಿಡಿತವನ್ನು ತಿಳಿದುಕೊಳ್ಳಲು ಈ ವರದಿಯನ್ನು ಬರೆಯಲಾಗಿದೆ,’ ಎಂದುಕೊಂಡರು. ಇನ್ನೊಂದೆಡೆಯಲ್ಲಿ, ಪಿವಿಎನ್ ವಿರೋಧಿಗಳು ಸಹಜವಾಗಿಯೇ ‘ಈ ಸರಕಾರವು ನೆಹರು ಅವರ ನೀತಿಗಳಿಂದ ದೂರ ಸರಿಯುತ್ತಿದೆ,’ ಎಂದು ಹರಿಹಾಯ್ದರು. ಕೂಡಲೇ ಎಚ್ಚೆತ್ತುಕೊಂಡ ಪಿವಿಎನ್ ತಮ್ಮ ಸಹೋದ್ಯೋಗಿಗಳಿಗೆ “ನೋಡ್ರಪ್ಪ, ನಾವು ತರುತ್ತಿರುವ ಹೊಸ ಕೈಗಾರಿಕಾ ನೀತಿಯನ್ನು ಸಮರ್ಥಿಸಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ನೀವು ನೆಹರು ಅವರ ಮಾತುಗಳನ್ನೇ ಧಾರಾಳವಾಗಿ ಉಲ್ಲೇಖಿಸಿ,’’ ಎಂದು ಸೂಚನೆ ಕೊಟ್ಟರು. ಇದರಂತೆ, ನೂತನ ಕೈಗಾರಿಕಾ ನೀತಿಯ ಶುರುವಿನಲ್ಲೇ ನೆಹರು ಮತ್ತು ಇಂದಿರಾ ಅವರನ್ನು ಸಂಪ್ರದಾಯದ ಪ್ರಕಾರ ನೆನಪಿಸಿಕೊಂಡು, ಭಾರತದ ಕೈಗಾರಿಕೀಕರಣಕ್ಕೆ ಅವರಿಬ್ಬರೂ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಲಾಯಿತು. ಇದಾದ ಬಳಿಕ, 1991ರ ಜುಲೈ 24ರಂದು ಅನಾವರಣಗೊಳಿಸಲಾದ ಕೈಗಾರಿಕಾ ನೀತಿಯು ಅದುವರೆಗೂ ಅಧಿಕಾರಿಗಳು ಸಮಾಜವಾದದ ಹೆಸರಿನಲ್ಲಿ ಬೆಳೆಸಿಕೊಂಡಿದ್ದ ಅಧಿಕಾರಶಾಹಿಯ ಕೆಟ್ಟ ಸಂಸ್ಕೃತಿಯನ್ನು ಒಂದೇ ಏಟಿಗೆ ಧ್ವಂಸಗೊಳಿಸಿತು! ಇಲ್ಲೂ ಪಿವಿಎನ್ ಅವರು ತಮ್ಮ ‘ವಿಶಿಷ್ಟ ಶೈಲಿ’ಯನ್ನು ಅನುಸರಿಸಿದರು. ಅದೇನೆಂದರೆ, ಕೈಗಾರಿಕಾ ಖಾತೆಯ ಹೊಣೆಯನ್ನು ಹೊತ್ತಿದ್ದ ತಾವು ಹೊಸ ಕೈಗಾರಿಕಾ ನೀತಿಯನ್ನು ಘೋಷಿಸದೆ, ತಮ್ಮ ಖಾತೆಯ ಸಹಾಯಕ ಮಂತ್ರಿಯಾಗಿದ್ದ ಪಿ.ಜೆ.ಕುರಿಯನ್ ಅವರಿಗೆ ಈ ಜವಾಬ್ದಾರಿಯನ್ನು ಕೊಟ್ಟಿದ್ದರು. ಇದರಂತೆ, ಮನಮೋಹನ್ ಸಿಂಗ್ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣವನ್ನು ಆರಂಭಿಸುವ ಕೆಲಗಂಟೆಗಳ ಮೊದಲು ಕುರಿಯನ್ ಅವರು ದೇಶದ ನೂತನ ಕೈಗಾರಿಕಾ ನೀತಿಯನ್ನು ಘೋಷಿಸಿದರು.
ಈ ಐತಿಹಾಸಿಕ ಘೋಷಣೆ ಹೊರಬೀಳುವ ಮುನ್ನ ನಡೆದ ನಾಟಕೀಯ ಘಟನೆಗಳನ್ನು ಆಗ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿದ್ದ ಜಯರಾಂ ರಮೇಶ್ ಅವರು ಮನೋಜ್ಞವಾಗಿ ನಿರೂಪಿಸಿದ್ದಾರೆ. ಪಿವಿಎನ್ ಅವರು ಅಷ್ಟು ಹೊತ್ತಿಗಾಗಲೇ ಕೈಗಾರಿಕಾ ನೀತಿಯಲ್ಲಿ ಚಾರಿತ್ರಿಕ ಬದಲಾವಣೆಗಳನ್ನು ಘೋಷಿಸಿದ್ದರು. ಇದರ ಬೆನ್ನಿಗೇ, ಅಂದರೆ ಜುಲೈ 4ರ ಹೊತ್ತಿಗೆ ವಾಣಿಜ್ಯ ನೀತಿಯಲ್ಲೂ ಐತಿಹಾಸಿಕ ಬದಲಾವಣೆಗಳನ್ನು ತರಬೇಕೆನ್ನುವುದು ಅವರ ಇರಾದೆಯಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ‘ಸರಕಾರವು ಕೈಗಾರಿಕಾ ನೀತಿಯಲ್ಲಿ ಭಾರೀ ಬದಲಾವಣೆಗಳನ್ನು ಜಾರಿಗೆ ತರಲು ಸಂಕಲ್ಪ ಮಾಡಿದೆ,’ ಎನ್ನುವಂತಹ ವರದಿಗಳು ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇಷ್ಟರ ಮಧ್ಯೆ 1991ರ ಜುಲೈ 19ರಂದು ನಡೆದ ಸಂಪುಟ ಸಭೆಯಲ್ಲಿ ಪಿವಿಎನ್ ಅವರ ವಿರೋಧಿಗಳು ಅರ್ಜುನ್ ಸಿಂಗ್ ನೇತೃತ್ವದಲ್ಲಿ ಈ ಉಪಕ್ರಮಗಳಿಗೆ ಕ್ಯಾತೆ ತೆಗೆದರು. ಇದರಿಂದ ಜಾಗೃತರಾದ ನರಸಿಂಹರಾವ್ ಅವರು ಕೂಡಲೇ ಈ ಸಂಬಂಧ ತೀರ್ಮಾನಿಸಲು ಸಂಪುಟ ಉಪಸಮಿತಿಯನ್ನು ರಚಿಸಿದರು. ಇದರಲ್ಲಿ ಅವರು ತಮಗೆ ನಿಷ್ಠರಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಮಾಧವ ಸಿನ್ಹ ಸೋಳಂಕಿ, ಸಂಪರ್ಕ ಸಚಿವ ರಾಜೇಶ್ ಪೈಲಟ್ ಮತ್ತು ಪೆಟ್ರೋಲಿಯಂ ಸಚಿವರಾಗಿದ್ದ ಕರ್ನಾಟಕದ ಬಿ.ಶಂಕರಾನಂದ ಅವರನ್ನು ಸೇರಿಸಿದರು. ಇವರುಗಳ ಜೊತೆಗೆ ಸೋನಿಯಾ ಗಾಂಧಿಗೆ ವಿಧೇಯರಾಗಿದ್ದ ಮಖನ್‌ಲಾಲ್ ಫೋತೇದಾರ್, ಸುಧಾರಣೆಗಳ ಪರವಾಗಿದ್ದ ಸಚಿವದ್ವಯರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ, ಹಾಗೂ ಪ್ರಧಾನಿಗಳ ಟೀಕಾಕಾರರಾಗಿದ್ದ ಅರ್ಜುನ್ ಸಿಂಗ್ ಮತ್ತು ಬಲರಾಂ ಜಾಖಡ್ ಅವರನ್ನೂ ಈ ಸಂಪುಟ ಉಪಸಮಿತಿಯ ಸದಸ್ಯರನ್ನಾಗಿ ಮಾಡಲಾಯಿತು. ಈ ಪೈಕಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಫೋತೇದಾರ್ ಅವರಿಗೆ ದೇಶದ ನೂತನ ಕೈಗಾರಿಕಾ ನೀತಿಯನ್ನು ರೂಪಿಸುವಲ್ಲಿ ಯಾವ ಪಾತ್ರವೂ ಇರಲಿಲ್ಲ. ಆದರೆ, ಇದಕ್ಕೆ ಸೋನಿಯಾ ನಿಷ್ಠರ ಬೆಂಬಲವೂ ಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪಿವಿಎನ್ ಅವರು ಇವರನ್ನು ಸಂಪುಟ ಉಪಸಮಿತಿಗೆ ಸೇರಿಸುವ ತಂತ್ರವನ್ನು ಹೂಡಿದ್ದರು.
ಜಯರಾಂ ರಮೇಶ್ ಅವರು ನೂತನ ಕೈಗಾರಿಕಾ ನೀತಿಗೆ ಬಹುದೀರ್ಘವಾದ ಒಂದು ಪೂರ್ವಪೀಠಿಕೆಯನ್ನು ಬರೆದು, ಅದರಲ್ಲಿ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರನ್ನು ಧಾರಾಳವಾಗಿ ಸ್ಮರಿಸಿದರು. ಇದರಲ್ಲಿ ನೆಹರು ಅವರು 1948 ಮತ್ತು 1956ರಲ್ಲಿ ನೆಹರು ಅವರು ಜಾರಿಗೆ ತಂದ ಕೈಗಾರಿಕಾ ನೀತಿಗಳನ್ನು, ಇಂದಿರಾ ಗಾಂಧಿಯವರು 1973, 1977 ಮತ್ತು 1980ರಲ್ಲಿ ದೇಶದ ಉದ್ಯಮ ನೀತಿಗೆ ತಂದ ಬದಲಾವಣೆಗಳನ್ನು, ಮತ್ತು ರಾಜೀವ್ ಅವರು 1985ರಲ್ಲೂ 1986ರಲ್ಲೂ ತಂದ ಪರಿವರ್ತನೆಗಳನ್ನು ಕೃತಜ್ಞತೆಯಿಂದ ಉಲ್ಲೇಖಿಸಲಾಗಿತ್ತು. ಈ ಮೂಲಕ ಜಯರಾಂ ರಮೇಶ್ ಅವರು ಪಿವಿಎನ್ ಸರಕಾರವು ರೂಪಿಸಿದ ನೂತನ ಕೈಗಾರಿಕಾ ನೀತಿಗೆ ಸಂಪುಟ ಉಪಸಮಿತಿಯ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಒಪ್ಪಿಗೆಯನ್ನು ಗಿಟ್ಟಿಸಿಕೊಳ್ಳಲು ಅಗತ್ಯವಾಗಿದ್ದ ನೆರವು ನೀಡಿದರು.
ಅದು 1991ನೇ ಇಸವಿಯ ಅಕ್ಟೋಬರ್ ತಿಂಗಳು. ಆಗ ಐಎಂಎಫ್ ನಿರ್ದೇಶಕ ಮೈಕೇಲ್ ಕ್ಯಾಮ್‌ಡೆಸಸ್ ಅವರು ಪ್ರಧಾನಿ ಪಿವಿಎನ್ ಅವರನ್ನು ಭೇಟಿಯಾದರು. ಆಗ ನರಸಿಂಹರಾವ್ ಅವರು ಹೇಳಿದ್ದಿಷ್ಟೆ- “ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಏನು ಅಗತ್ಯವಿದೆಯೋ ಅದೆಲ್ಲವನ್ನೂ ನಾನು ಮಾಡುತ್ತೇನೆ. ಆದರೆ, ನನ್ನಿಂದಾಗಿ ತನ್ನ ಕೆಲಸ ಹೋಯಿತೆಂದು ಒಬ್ಬೇಒಬ್ಬ ಅಲವತ್ತುಕೊಂಡರೂ ಅಂದೇ ನಾನು ಈ ಉಪಕ್ರಮಗಳನ್ನು ನಿಲ್ಲಿಸುತ್ತೇನೆ.’
ನರಸಿಂಹರಾವ್ ಅವರ ಈ ಹೆಜ್ಜೆಯನ್ನು ಸುದ್ದಿಮಾಧ್ಯಮಗಳಲ್ಲೂ ರಾಜಕೀಯ ಚರ್ಚೆಗಳಲ್ಲೂ ‘ಮನುಷ್ಯತ್ವದೊಂದಿಗೆ ಸಾಂಸ್ಥಿಕ ಪುನಾರಚನೆ ಮತ್ತು ಸುಧಾರಣೆಗಳ ಜಾರಿ’ ಎಂದು ಬಣ್ಣಿಸಲಾಯಿತು. ದೇಶದ ಆರ್ಥಿಕ ಸುಧಾರಣೆಗಳನ್ನು ಕುರಿತು ‘ದಿ ಇಂಡಿಯಾ ಅನ್‌ಬೌಂಡ್: ಫ್ರಮ್ ಇಂಡಿಪೆಂಡೆನ್ಸ್ ಟು ಗ್ಲೋಬಲ್ ಇನ್ಫರ್ಮೇಶನ್ ಏಜ್’ ಎನ್ನುವ ಅದ್ಭುತವಾದ ಕೃತಿಯನ್ನು ಬರೆದಿರುವ ಆರ್ಥಿಕ ಇತಿಹಾಸಜ್ಞ ಗುರುಚರಣ್ ದಾಸ್ ಅವರು ಪಿವಿಎನ್ ಅವರನ್ನು ‘ಇಷ್ಟವಿಲ್ಲದಿದ್ದರೂ ಸುಧಾರಣೆಗಳನ್ನು ತಂದ ಹರಿಕಾರ’ ಎಂದು ಕರೆದಿದ್ದಾರೆ. ಜೊತೆಗೆ, “ಪಿವಿಎನ್ ಅವರಿಗೆ ತಾವು ಜಾರಿಗೆ ತಂದ ಈ ಉಪಕ್ರಮಗಳ ಬಗ್ಗೆ ಅಷ್ಟೇನೂ ವಿಶ್ವಾಸವಿರಲಿಲ್ಲ. ಹೀಗಾಗಿಯೇ ಅವರು ಈ ಕ್ರಮಗಳನ್ನು ಬಡವರ ಪರವಾಗಿರುವ ಹೆಜ್ಜೆಗಳೆಂದೇನೂ ಕರೆದುಕೊಳ್ಳಲು ಹೋಗಲಿಲ್ಲ. ಆದರೆ ಒಬ್ಬ ಸುಧಾರಣಾವಾದಿಗೆ ತಾನು ಜಾರಿಗೊಳಿಸಿದ ಸುಧಾರಣೆಗಳು ಮಾತ್ರವೇ ಬಡವರ ಪಾಲಿಗಿರುವ ಭರವಸೆಗಳು,’’ ಎಂದು ವ್ಯಾಖ್ಯಾನಿಸಿದ್ದಾರೆ.
ಬಹಳ ದೀರ್ಘಕಾಲೀನ ದೃಷ್ಟಿಯಲ್ಲಿ ಇದು ಹೀಗೆಯೇ ಇರಬಹುದು. ಆದರೆ, ಪಿವಿಎನ್ ಅವರ ತಕ್ಷಣದ ದೃಷ್ಟಿಯು ದೂರಗಾಮಿ ಭವಿಷ್ಯದ ಮೇಲೇನೂ ಇರಲಿಲ್ಲ. ಬದಲಿಗೆ, ತಾವು ತಂದ ಸುಧಾರಣೆಗಳಿಂದಾಗಿ ಕೆಲಸಗಾರರು ಬೀದಿಗೆ ಬೀಳುತ್ತಿದ್ದಾರೆಂದು ದನಿಯೆತ್ತಿಕೊಂಡು ಕಾರ್ಮಿಕ ಸಂಘಟನೆಗಳು ಬೀದಿಗಿಳಿಯದಂತೆ ನೋಡಿಕೊಳ್ಳುವ ಕಡೆಗೆ ಅವರ ತಕ್ಷಣದ ಗಮನವಿತ್ತು. ಹೀಗಾಗಿಯೇ ಅವರು ಕೈಗಾರಿಕಾ ಖಾತೆಯ ಜೊತೆಗೆ ಗ್ರಾಹಕ ವ್ಯವಹಾರಗಳು ಮತ್ತು ನಾಗರಿಕ ಆಹಾರ ಪೂರೈಕೆ ಖಾತೆಗಳನ್ನೂ ತಾವೇ ಇಟ್ಟುಕೊಂಡರು. ಈ ಖಾತೆಯನ್ನು ಅವರು 1993ರಲ್ಲಷ್ಟೇ ತಮ್ಮ ಸಂಪುಟದಲ್ಲಿದ್ದ ಎಡಪಂಥೀಯ ಒಲವಿನ ಸಹೋದ್ಯೋಗಿ ಮತ್ತು ಪಕ್ಷದೊಳಗಿದ್ದೇ ತಮ್ಮನ್ನು ವಿರೋಧಿಸುತ್ತಿದ್ದ ಎ.ಕೆ.ಆಂಟನಿ ಅವರಿಗೆ ವಹಿಸಿದರು.
1999ರ ಕೊನೆಯಲ್ಲಿ ಹೆಸರಾಂತ ಆರ್ಥಿಕ ತಜ್ಞ ಎಸ್.ಎಲ್.ರಾವ್ ಅವರು ‘ಭಾರತ ಸರಕಾರದ ನಿರ್ವಹಣೆ’ ಎನ್ನುವ ವಿಚಾರವನ್ನು ಕುರಿತು ಒಂದು ಸಂಕಿರಣವನ್ನು ಏರ್ಪಡಿಸಿ, ಅಲ್ಲಿ ‘ಭಾರತದ ಆರ್ಥಿಕ ಸುಧಾರಣೆಗಳ ಸಂದರ್ಭದಲ್ಲಿ ರಾಜಕೀಯ ನಿರ್ವಹಣೆ’ ಎನ್ನುವ ವಿಚಾರ ಕುರಿತು ಒಂದು ಪ್ರಬಂಧವನ್ನು ಮಂಡಿಸುವಂತೆ ನನಗೆ ಹೇಳಿದರು. ಅಂದಂತೆ, ರಾವ್ ಅವರು ಆಗ ಕೇಂದ್ರೀಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇದರ ಜೊತೆಗೆ ಅವರು, ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಮುಖ್ಯಸ್ಥರೂ ಆಗಿದ್ದರು. ಅಷ್ಟು ಹೊತ್ತಿಗಾಗಲೇ ದೇಶದ ಆರ್ಥಿಕ ಸುಧಾರಣೆಗಳ ಬಗ್ಗೆ ಹತ್ತಾರು ಸಮಾವೇಶಗಳೂ ವಿಚಾರ ಸಂಕಿರಣಗಳೂ ನಡೆದಿದ್ದವು. ಆರ್ಥಿಕ ತಜ್ಞರೆಲ್ಲ ಯಶಸ್ಸು ಕಂಡಿದ್ದ ಅಂಗಳಿಗೆಲ್ಲ ತಾವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದರೆ, ಸೋಲು ಕಂಡ ಅಂಶಗಳಿಗೆಲ್ಲ ಬೇರೆಯವರನ್ನು ದೂಷಿಸುತ್ತಿದ್ದರು. ಭಾರತದ ಆರ್ಥಿಕ ಪುನರುತ್ಥಾನದಲ್ಲಿ ಗೆದ್ದವರು ಯಾರು, ಬಿದ್ದವರು ಯಾರು ಎನ್ನುವುದನ್ನು ಗುರುತಿಸುವ ಒಂದು ಹೊಸ ಜಾನಪದವನ್ನು ಹುಟ್ಟುಹಾಕಲಾಗಿತ್ತು. 1991ರಲ್ಲಿ ಚಾಲನೆ ಪಡೆದ ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಹೊಸ ಪ್ರಮೇಯಗಳನ್ನು ಕೂಡ ಹುಟ್ಟುಹಾಕಲಾಗುತ್ತಿತ್ತು.
ಪಿವಿಎನ್ ಅವರು ಹತ್ತಾರು ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ವಿಶೇಷ ಪತ್ರಿಕೆಗಳನ್ನು ಓದುತ್ತ, ಏನೇನು ನಡೆಯುತ್ತಿದೆ ಎನ್ನುವುದನ್ನು ನಿಕಟವಾಗಿ ಅರಿತಿದ್ದರು. ಇದನ್ನೆಲ್ಲ ನೋಡಿ ಅವರಿಗೆ ತಮಾಷೆ ಎನಿಸುತ್ತಿತ್ತು. ಸರಕಾರದ ನಾನಾ ಹಂತಗಳಲ್ಲಿ ಪ್ರತಿಭಾವಂತರೂ ಬದ್ಧತೆಯಿಂದ ಕೆಲಸ ಮಾಡುವವರೂ ಆದ ಅರ್ಥಶಾಸ್ತ್ರಜ್ಞರು ಮತ್ತು ನಾಗರಿಕ ಸೇವಾ ಅಧಿಕಾರಿಗಳು ಇದ್ದರು, ನಿಜ. ಆದರೆ, ಇವರಿಗೆ ರಾಜಕೀಯ ಬೆಂಬಲ ಇಲ್ಲದೆ ಹೋಗಿದ್ದರೆ ಇವರ‍್ಯಾರೂ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ಯವಿರಲಿಲ್ಲ.
ಈ ಬಗ್ಗೆ ಮಾತನಾಡಿದ ನರಸಿಂಹರಾವ್ “ನಾನು ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಕೇಳುತ್ತಿದ್ದ ಕಾಲವೂ ಇತ್ತು. ಹಾಗೆಯೇ, ಮನಮೋಹನ್ ಮತ್ತು ಇತರರನ್ನು ನಾನು ಉತ್ತೇಜಿಸುತ್ತಿದ್ದ ಕಾಲವೂ ಇತ್ತು. ಅಂತಹ ಸಂದರ್ಭಗಳಲ್ಲಿ ನಾನು ‘ರಾಜಕೀಯವಾಗಿ ಏನೇ ಸಮಸ್ಯೆ ಬಂದರೂ ನಾನಿದ್ದೇನೆ. ನೀವು ನಿಮ್ಮ ಕೆಲಸವನ್ನು ಮಾಡಿ ಅಷ್ಟೆ,’ ಎಂದು ಹೇಳುತ್ತಿದ್ದೆ,’’ ಎಂದರು.
ಪಿವಿಎನ್ ಅವರು ಮನಮೋಹನ್ ಸಿಂಗ್ ಅವರನ್ನು ಸದಾ ಸ್ನೇಹಭಾವದಿಂದ ನೋಡುತ್ತಿದ್ದರು. ಏಕೆಂದರೆ, ಅಷ್ಟು ಹೊತ್ತಿಗಾಗಲೇ ಪಿವಿಎನ್‌ಗೆ ಎಪ್ಪತ್ತೈದು ವರ್ಷಗಳಾಗಿದ್ದರೆ, ಮನಮೋಹನ್ ಅವರಿಗೆ ಇನ್ನೂ ಐವತ್ತೊಂಬತ್ತು ವರುಷಗಳಾಗಿದ್ದವಷ್ಟೆ. ನರಸಿಂಹರಾವ್ ಅವರು ಜೀವನದುದ್ದಕ್ಕೂ ರಾಜಕೀಯದ ಅಲ್ಲೋಲಕಲ್ಲೋಲದಲ್ಲಿ ಮುಳುಗೆದ್ದವರಾಗಿದ್ದರೆ, ಮನಮೋಹನ್ ಅವರು ಆಯಕಟ್ಟಿನ ಸರಕಾರಿ ಹುದ್ದೆಗಳನ್ನು ಒಂದೊಂದಾಗಿ ಏರಿಕೊಂಡು ಬಂದ ಸುಖದ ವರ್ತುಲದಲ್ಲಿದ್ದರು. ಇಬ್ಬರೂ 1980ರ ದಶಕದವರೆಗೂ ಸೈದ್ಧಾಂತಿಕವಾಗಿ ಎಡಪಂಥೀಯ ಒಲವನ್ನು ಹೊಂದಿದ್ದು, ನಂತರ ಇಬ್ಬರೂ ಕಾಲಕ್ಕೆ ತಕ್ಕಂತೆ ಬದಲಾಗಿದ್ದರು. ಇಡೀ ಪ್ರಪಂಚ ಬದಲಾದಂತೆ ಈ ಇಬ್ಬರು ನಾಯಕರು ಕೂಡ ತಮ್ಮ ಚಿಂತನಾಕ್ರಮವನ್ನು ಪರಿಷ್ಕರಿಸಿಕೊಂಡರು. ಅಲ್ಲದೆ, ಇಬ್ಬರೂ ಪರಸ್ಪರ ಗೌರವದ ಭಾವನೆಯನ್ನು ಇಟ್ಟುಕೊಂಡಿದ್ದರು.
ಇಂತಹ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಂದ ನೊಂದು, ಮೂರು ಬಾರಿ ತಮ್ಮ ಸಚಿವ ಹುದ್ದಗೆ ರಾಜೀನಾಮೆ ಕೊಟ್ಟಿದ್ದರು. ಅವರು ಮೂರನೇ ಸಲ ಹೀಗೆ ಮಾಡಿದಾಗ ಅವರನ್ನು ಮನವೊಲಿಸಲು ಪಿವಿಎನ್ ಅವರು ತಮ್ಮ ಮಾಧ್ಯಮ ಕಾರ್ಯದರ್ಶಿ ಪ್ರಸಾದ್ ಅವರನ್ನು ಕಳಿಸಿದ್ದರು. ಆ ಸಂದರ್ಭದಲ್ಲಿ ಅವರು “ನೋಡಿ, ಮನಮೋಹನ್ ಅವರಿಗೆ ರಾಜಕಾರಣಿಗಳೆಂದರೆ ಆಗುವುದಿಲ್ಲ. ಹೀಗಾಗಿಯೇ ನಾನು ನಿಮ್ಮನ್ನು ಈ ಕೆಲಸದ ಮೇಲೆ ಕಳಿಸುತ್ತಿದ್ದೇನೆ,’’ ಎಂದು ಪ್ರಸಾದ್ ಅವರಿಗೆ ಹೇಳಿದ್ದರಂತೆ.
ರಾಜೀವ್ ಗಾಂಧಿಯವರಿಗೆ ಕೂಡ ತಾವು ಪ್ರಧಾನಿಯಾಗಿದ್ದಾಗ ದೊಡ್ಡ ಮಟ್ಟದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕೆಂಬ ಬಯಕೆ ಇತ್ತು. ಆದರೆ ಮೂರು ಕಾರಣಗಳಿಂದಾಗಿ ಅವರಿಗೆ ಇದು ಸಾಧ್ಯವಾಗಲಿಲ್ಲ ಎನ್ನುವುದು ಪಿವಿಎನ್ ಅವರ ಅನಿಸಿಕೆಯಾಗಿತ್ತು. ಅವರು ರಾಜೀವ್ ಅವರ ವೈಫಲ್ಯಕ್ಕೆ ಕಂಡುಕೊಂಡಿದ್ದ ಆ ಮೂರು ಕಾರಣಗಳು ಹೀಗಿವೆ. ಒಂದು, ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸುಧಾರಣೆಗಳು ಸರಿಯಾದ ನಿಟ್ಟಿನಲ್ಲಿ ಇಡಲಿರುವ ಹೆಜ್ಜೆ ಎನ್ನುವ ಬಗ್ಗೆ ನಂಬಿಕೆ ಇರಲಿಲ್ಲ. ಆ ಸಂದರ್ಭದಲ್ಲಿ ರಾಜೀವ್ ಅವರು ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅಂದಹಾಗೆ, ಪಿವಿಎನ್ ಅವರು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಾಗಲೂ ಪಕ್ಷದ ನಾಯಕರಾದ ಅರ್ಜುನ್ ಸಿಂಗ್, ಆಂಟನಿ, ಎನ್.ಡಿ.ತಿವಾರಿ ಮುಂತಾದವರು ಅದನ್ನು ತೀವ್ರವಾಗಿ ವಿರೋಧಿಸಿದರು. ಎರಡು, ರಾಜೀವ್ ಅವರು ತರಲು ಮುಂದಾಗಿದ್ದ ಆರ್ಥಿಕ ಉಪಕ್ರಮಗಳನ್ನು ಯಾರೂ ಸುಧಾರಣೆಗಳೆಂಬಂತೆ ನೋಡಲಿಲ್ಲ. ಬದಲಿಗೆ ಅವುಗಳನ್ನು ‘ಶ್ರೀಮಂತರು ಮತ್ತು ಉದ್ಯಮಿಗಳ ಪರ ಇರುವ ಕ್ರಮಗಳು’ ಎಂಬಂತೆ ನೋಡಲಾಯಿತು. ಡೂನ್ ಸ್ಕೂಲಿನ ಅವರ ಗೆಳೆಯರು, ಉದ್ಯಮ ವಲಯದಲ್ಲಿ ಅವರಿಗಿದ್ದ ಸ್ನೇಹಿತರು ಮತ್ತು ಭಾರೀ ಢಾಣಾಡಂಗುರದೊಂದಿಗೆ ಅವರು ಹಾಯಾಗಿ ಕಾಲ ಕಳೆಯಲೆಂದು ವಿದೇಶಕ್ಕೆ ಹೋಗುತ್ತಿದ್ದ ಅಂಶಗಳು ಇದಕ್ಕೆ ಇನ್ನಷ್ಟು ತುಪ್ಪ ಸುರಿದವು.
1984ರ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆರಿಸಿ ಬಂದಿದ್ದ ಕಾಂಗ್ರೆಸ್ ಪಕ್ಷವು 1989ರ ಚುನಾವಣೆಯಲ್ಲಿ ಮಣ್ಣು ಮುಕ್ಕಿದ ಘಟನೆಯೇ ಇದನ್ನು ಹೇಳುತ್ತದೆ. ಅಂದರೆ, ಈ ಐದು ವರ್ಷಗಳಲ್ಲಿ ಕಾಂಗ್ರೆಸ್ ತನಗಿದ್ದ ಬೆಂಬಲದ ನೆಲೆಗಳನ್ನು ಕಳೆದುಕೊಂಡಿತು. ಮೂರು, ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಶೈಲಿಯಲ್ಲಿ ಅತಿಯಾದ ಕೇಂದ್ರೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು. ಏಕೆಂದರೆ, ದೂರಗಾಮಿ ಪರಿಣಾಮವುಳ್ಳ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕಾದರೆ ಎಲ್ಲಕ್ಕಿಂತ ಮೊದಲು ರಾಜಕೀಯ ವಿಕೇಂದ್ರೀಕರಣ ವ್ಯವಸ್ಥೆಯು ಅಸ್ತಿತ್ವದಲ್ಲಿರಬೇಕು. ಆದರೆ, ಕಾಂಗ್ರೆಸ್ ಈ ನಿಟ್ಟಿನಲ್ಲಿ ತದ್ವಿರುದ್ಧವಾದ ಹೆಜ್ಜೆಗಳನ್ನಿಡುತ್ತಿತ್ತು. ಇದರ ಪರಿಣಾಮವಾಗಿ ಏನಾಯಿತೆಂದರೆ, ಅಭಿವೃದ್ಧಿ ಹೊಂದಿದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗಿಂತ ಹೆಚ್ಚು ಪ್ರಬಲವಾದವು.
ಸ್ವತಃ ಪಿವಿಎನ್ ಅವರೇ ಹೇಳುತ್ತಿದ್ದಂತೆ, ಆರ್ಥಿಕ ಸುಧಾರಣೆಯ ಉಪಕ್ರಮಗಳೇನೂ ಹೊಚ್ಚ ಹೊಸ ಚಿಂತನೆಗಳಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ರಚಿಸಿದ್ದ ಎಲ್.ಕೆ.ಝಾ, ಅಬಿದ್ ಹುಸೇನ್, ಎಂ.ನರಸಿಂಹಂ ಮತ್ತು ಪಿ.ಸಿ.ಅಲೆಕ್ಸಾಂಡರ್ ನೇತೃತ್ವದ ಸಮಿತಿಗಳೆಲ್ಲ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಸಲ್ಲಿಸಿದ ವರದಿಗಳಲ್ಲಿ, ಆರ್ಥಿಕ ಸುಧಾರಣೆಯ ಅಗತ್ಯವನ್ನೇ ಹೇಳಿದ್ದವು. ಹೀಗಾಗಿ ಈ ಚಿಂತನೆಗಳು ನರಸಿಂಹರಾವ್ ಅವರಿಗೆ ಪರಿಚಿತವಾಗಿದ್ದವು. ಈ ಕುರಿತು ಅವರು “ಈ ಚಿಂತನೆಗಳೆಲ್ಲವೂ ಅಂದಿನ ರಾಜಕೀಯ ನಾಯಕರಿಗೂ ಗೊತ್ತಿದ್ದವು. ಆರ್ಥಿಕ ಸುಧಾರಣೆಗಳನ್ನು ಘೋಷಿಸುವುದೇನೂ ಸವಾಲಿನ ಕೆಲಸವಲ್ಲ. ಅವುಗಳನ್ನು ಜಾರಿಗೆ ತರುವುದೂ ಕಷ್ಟವಲ್ಲ. ಆದರೆ, ಅದಕ್ಕೆ ಬೇಕಾದ ರಾಜಕೀಯ ವಾತಾವರಣವನ್ನು ಸೃಷ್ಟಿಸುವುದೇ ನಿಜವಾದ ಕಗ್ಗಂಟು. ಏಕೆಂದರೆ, ನೀವು ಯಾವ ಸುಧಾರಣೆಯನ್ನೇ ತಂದರೂ ಅದು ನಿಜವಾದ ಅರ್ಥದಲ್ಲಿ ಜಾರಿಗೆ ಬರಲು ರಾಜಕೀಯ ನಾಯಕತ್ವದ ಬೆಂಬಲ ಬೇಕೇಬೇಕು,’’ ಎನ್ನುತ್ತ ತಮ್ಮ ಮಾತು ಮುಗಿಸಿದರು.