17.9 C
Karnataka
Thursday, November 28, 2024
    Home Blog Page 131

    ಜವಾಬ್ದಾರಿ ಮತ್ತು ಉತ್ತರದಾಯಿತ್ವ

    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

    ಪರರ ಕಷ್ಟಮಂ ಸುಖಿ ಅರಿಯನ್ – ಕಷ್ಟ ಸುಖಗಳ  ಪರಾಮರ್ಶೆ ಮಾಡುವಂತಹ  ವಾಕ್ಯವಿದು. ದೇವರಾಜ ಕವಿಯ ‘ರಾಜಾವಳಿ ಕಥಾಸಾರ’ ದಲ್ಲಿ ಬರುತ್ತದೆ.  ಕೆಲವರಿಗೆ ತಾನೂ  ಚೆನ್ನಾಗಿದ್ದೇನೆ ಎಂದ ಮಾತ್ರಕ್ಕೆ ಎಲ್ಲರೂ ಚೆನ್ನಾಗಿ ಇರುತ್ತಾರೆ ಎಂಬ  ಹುಂಬ ನಂಬಿಕೆ ಇರುತ್ತದೆ.  ಸುಖವಿದ್ದಾಗ ಎಲ್ಲರು ಸುಖಿಗಳು ಎಂದು ತಿಳಿಯುವವನು ಕಷ್ಟ  ಎಂದಾಗ ಆಚೆ ತಿರುಗಿ ಕೂಡ  ನೋಡುವುದಿಲ್ಲ. ಇದೊಂದು ವೈರುಧ್ಯ ಹೌದು!.

    ಒಮ್ಮೆ ನದಿ ದಡದಲ್ಲಿ ವ್ಯಕ್ತಿಯೊಬ್ಬ ನಾಮ ಹಾಕಿಕೊಳ್ಳುತ್ತಿರುತ್ತಾನೆ.  ಆಚೆ ದಡದಲ್ಲಿರುವ ಇನ್ನೊಬ್ಬನ್ನನ್ನು ಬೇಗ ಬರುವಂತೆ  ಕೂಗುತ್ತಾನೆ. ಈ ಭಾಗದ ದಡದಲ್ಲಿದ್ದ ವ್ಯಕ್ತಿ ಗಾಬರಿಯಿಂದ ಏನಾಯ್ತು ಅಂಥ ನೀರನ್ನು ಹಾದು  ತರಾತುರಿಯಿಂದ ಹೋದರೆ ನಾಮ ಹಾಕಿ ಕೊಳ್ಳುತ್ತಿದ್ದ ವ್ಯಕ್ತಿ   “ನನ್ನ ಯಾವ ಭಾಗದ ನಾಮ ಚೆನ್ನಾಗಿದೆ ಹೇಳು” ಎಂದು ಕೇಳುತ್ತಾನೆ. ಗಾಬರಿಗೊಂಡು ಆತುರದಿಂದ  ದಡ ದಾಟಿ ಹೋದ ವ್ಯಕ್ತಿಗೆ ನಿರಾಶೆಯಾಗುತ್ತದೆ. ಅಷ್ಟೇನು ಮಹತ್ವವಲ್ಲದ   ಕಾರಣಕ್ಕೆ ತನ್ನ ಸಮಯ ಮತ್ತು ಶ್ರಮವನ್ನು   ವ್ಯರ್ಥ ಮಾಡಿಕೊಂಡಂತಾಗುತ್ತದೆ.  

    ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಬರುವ ‘ರೊಟ್ಟಿ ಪ್ರಕರಣ’ವನ್ನು ಇಲ್ಲಿ ಉದಾಹರಿಸಬಹುದು . ಹಸಿವಿನಿಂದ ಕಂಗಾಲಾಗಿದ್ದ ಪ್ರಜೆಗಳು ಅತ್ಯಂತ ವಿಲಾಸಿ ಜೀವನದಲ್ಲಿದ್ದ ರಾಣಿ  ಆ್ಯಂಟನಿಟೆ  ಬಳಿ “ತಿನ್ನಲು  ರೊಟ್ಟಿಯಿಲ್ಲ”  ಎಂದು  ಕೇಳಿದರೆ ಆಕೆ  “ರೊಟ್ಟಿಯಿಲ್ಲದಿದ್ದರೆ ಕೇಕ್ ತೆಗೆದುಕೊಂಡು ತಿನ್ನಿ” ಎಂದಿದ್ದಳಂತೆ.  ಸಿರಿಗರ ಬಡಿದವರು ಹಾಗೆನೇ ಅಲ್ವೇ!.

    ಹೊಟ್ಟೆ ತುಂಬಿದವನಿಗೆ ಹಸಿವಿನ ಸಂಕಟ ತಿಳಿಯದು. ಬೇಂದ್ರೆಯವರ “ಹಸಿದವನೆ ಹಸಿವೆಯ ಶೂಲಿ” ಎಂಬ  ಮಾತುಗಳು ಇಲ್ಲಿ ನೆನಪಿಗೆ ಬರುತ್ತವೆ.  ತಾವು ಅನುಭವಿಸಿದಾಗ   ಮಾತ್ರ  ಆ ಕಷ್ಟದ ತೀವ್ರತೆಯನ್ನು ಕೆಲವರು ಅರಿಯುತ್ತಾರೆ,  ಆದರೆ ಸ್ಪಂದಿಸಲು ಮರೆಯುತ್ತಾರೆ. 

    ಇನ್ನೊಂದು  ಪ್ರಸಂಗದಲ್ಲಿ  “ರೋಮ್ ನಗರವೇ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ  ನಿರೋ ಪಿಟೀಲು ಬಾರಿಸುತ್ತಿದ್ದ” ಎಂಬ ವಿಚಾರವೂ ಎಲ್ಲರಿಗೂ ತಿಳಿದಿರುವಂಥದ್ದೆ.  ‘ಬೆಕ್ಕಿಗೆ ಚೆಲ್ಲಾಟ   ಇಲಿಗೆ ಪ್ರಾಣ ಸಂಕಟ’ , ‘ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ರೆ’ ಎಂಬ ಗಾದೆಗಳನ್ನು ಸಂವಾದಿಯಾಗಿ ತೆಗೆದುಕೊಳ್ಳಬಹುದು ‘ಅಜ್ಜಿಗೆ ಅರಿವೆ ಚಿಂತೆಯಾದರೆ ಮಗಳಿಗೆ ಬೇರೆಯದೆ ಚಿಂತೆ’ ಎನ್ನುತ್ತಾರಲ್ಲ ಹಾಗೆ ! ಜವಾಬ್ದಾರಿ ಮತ್ತು ಉತ್ತರದಾಯಿತ್ವ  ಇಲ್ಲದೆ ಇರುವವರು ಹೀಗೆ  ವರ್ತಿಸುವುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    400 ವರ್ಷಗಳಿಗೊಮ್ಮೆ ಗುರು ಮತ್ತು ಶನಿ ಸನಿಹ ಸಮಾಗಮ; 21ರಂದು ಮಿಸ್ ಮಾಡದೆ ನೋಡಿ


    ಹರೋನಹಳ್ಳಿ ಸ್ವಾಮಿ

    ‘ಗಗನವನು ನೋಡು ಮೈ ನೀಲಿಗಟ್ಟುವವರೆಗೆ’ಎಂಬ ಕುವೆಂಪು ಅವರ ಈ ಮಾತು ಅವರು ಈ ಖಗೋಳ ಕಾಯಗಳ ಸಂಮ್ಮೋಹನಕ್ಕೆ ಒಳಗಾಗಿಯೇ ಬರೆದಿದ್ದಾರೆನ್ನಬಹುದು. ಪ್ರತಿದಿನವೂ ಒಂದಲ್ಲಾ ಒಂದು ವೈವಿಧ್ಯಮಯ ಚಟುವಟಿಕೆಗಳು ಈ ನಿಸರ್ಗ ನಮಗೆ ನೀಡಿರುವ ಮುಕ್ತ ಪ್ರಯೋಗಾಲಯವಾಗಿರುವ ಆಕಾಶದಲ್ಲಿ ಸಂಭವಿಸುತ್ತಿರುತ್ತವೆ.

    ಈಗಂತೂ ಚಂದದ ಸ್ವಚ್ಛ ಆಕಾಶ. ವೀಕ್ಷಿಸುವವರಿಗೆ ಸಂಭ್ರಮವೋ ಸಂಭ್ರಮ. ಮಿನುಗುವ ಬಿಳಿ, ನೀಲಿ, ಹಳದಿ, ಕೆಂಪು ಇತ್ಯಾದಿ ಬಣ್ಣಗಳ ನಕ್ಷತ್ರಗಳು, ಮಿನುಗದ ಆದರೆ ಹೊಳೆಯುವ ಬರಿಗಣ್ಣಿಗೆ ಕಾಣುತ್ತಿರುವ ಮಂಗಳ, ಗುರು ಮತ್ತು ಶನಿ ಗ್ರಹಗಳು.(ಈಗ ಕಾಣುತ್ತಿರುವ ಗ್ರಹಗಳಿವು) ಆಗಾಗ್ಗೆ ಮಿಂಚುತ್ತಾ ರಾಕೆಟ್‌ನಂತೆ ಭೂಮಿಗಪ್ಪಳಿಸುವ ಉಲ್ಕೆಗಳು ಮತ್ತು ಉಲ್ಕಾಪಾತ, ರಾಶಿ ನಕ್ಷತ್ರ ಪುಂಜಗಳು, ವಿವಿಧ ವಿನ್ಯಾಸಗಳ ನಕ್ಷತ್ರ ಪುಂಜಗಳು, ಒಂದೆಡೆ ಸ್ಥಿರವಾಗಿ ನಿಂತಂತಿರುವ ಧ್ರುವ ನಕ್ಷತ್ರ, ಸ್ವಲ್ಪ ಆಳವಾಗಿ ಗಮನಿಸಿದರೆ ಕಾಣುವ ನಮ್ಮ ಆಕಾಶಗಂಗೆ ಗೆಲಾಕ್ಸಿಯ ಸುರುಳಿಯೊಂದರ ಭಾಗಗಳು, ಆಗಾಗ ಕಾಣುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳು, ಜೊತೆಗೆ ಆಗೊಮ್ಮೆ ಈಗೊಮ್ಮೆ ಸಂಭವಿಸುವ ಗ್ರಹಕೂಟಗಳು, ನೆಂಟರಂತೆ ಬಂದು ಹೋಗುವ ಧೂಮಕೇತುಗಳು ಹೀಗೆ ಪ್ರತಿಕ್ಷಣವೂ ರೋಚಕತೆಗಳಿಂದ ತುಂಬಿ ಆಕಾಶ ವೀಕ್ಷಕರಿಗೆ ಮತ್ತು ಖಗೋಳ ವಿಜ್ಞಾನಿಗಳಿಗೆ ಸಂಭ್ರಮವನ್ನು ನೀಡುತ್ತಲೇ ಇರುತ್ತದೆ ಈ ಖಗೋಳ ಪ್ರಯೋಗಶಾಲೆ. ಇಲ್ಲಿ ಎಲ್ಲವೂ ಉಚಿತ ಹಾಗೂ ಖಚಿತ ಆದರೆ ಅವುಗಳನ್ನು ನೋಡುವ, ಅರ್ಥಮಾಡಿಕೊಳ್ಳುವ ಹವ್ಯಾಸ ನಮ್ಮದಾಗಬೇಕಾಗಿದೆ.


    ಈಗಿನ ವಿಶೇಷ ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ.
    ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ಸೂರ್ಯನ ಸುತ್ತ ವಿವಿಧ ಕಕ್ಷೆಗಳಲ್ಲಿ , ವಿವಿಧ ಅವಧಿಗಳಲ್ಲಿ ಗ್ರಹಗಳು ಸುತ್ತುತ್ತಿರುತ್ತವೆ. ಒಮ್ಮೊಮ್ಮೆ ಆಕಾಶದಲ್ಲಿ ಹಲವು ಗ್ರಹಗಳು ಒಟ್ಟಾಗಿ, ಜೊತೆಗಾರಂತೆ ಜೊತೆಯಾಗಿ ಕಾಣುವ ಅಪರೂಪದ ದೃಶ್ಯಗಳು ಘಟಿಸುತ್ತಿರುತ್ತವೆ. ಈಗ ಅಂತಹುದೇ ವಿಶೇಷ ಘಟನೆ ನಡೆಯುತ್ತಿದೆ.ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೋಡಲು ಸಾಧ್ಯವಾಗುವಂತಹ ಈ ಘಟನೆ ಬರೀಗಣ್ಣಿಗೆ ಗೋಚರಿಸುತ್ತಿದೆ.

    ಅದೇ ದೈತ್ಯಗ್ರಹಗಳಾದ ಗುರು ಮತ್ತು ಶನಿಗ್ರಹಗಳು ಜೊತೆಯಲ್ಲಿಯೇ ಅಕ್ಕಪಕ್ಕದಲ್ಲಿಯೇ ಇರುವಂತೆ ಕಾಣುತ್ತಿರುವ ದೃಶ್ಯ. ಇದನ್ನು ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ ಎಂದು ಕರೆಯಲಾಗುತ್ತಿದ್ದು ಇದು 21 ನೇ ಶತಮಾನದ ದೊಡ್ಡ ವಿಶೇಷ ಘಟನೆಯೇ ಆಗಿದೆ. ಈ ಎರಡೂ ದೈತ್ಯ ಗ್ರಹಗಳು ಅತೀ ಸಮೀಪಕ್ಕೆ ಬಂದಿದ್ದು ಭೂಮಿಯಿಂದ ನೋಡುವ ವೀಕ್ಷಕರಿಗೆ ಕಾಣುತ್ತಿರುವುದು 400 ವರ್ಷಗಳಿಗೊಮ್ಮೆ ಸಂಭವಿಸುವ ಘಟನೆಯಾಗಿದೆ. ಒಂದೆ ಜಾಗದಲ್ಲಿ ಈ ಎರಡೂ ಗ್ರಹಗಳನ್ನು ನೋಡುವ ಕೌತುಕಮಯ ಸನ್ನಿವೇಶ ಈಗ ಆಗಸದಲ್ಲಿ ಸಂಭವಿಸಿದ್ದು, ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ನೋಡಿ ಮೈದುಂಬಿಕೊಳ್ಳಬಹುದು.

    ಜೊತೆಗೆ ಇದೇ ಡಿಸೆಂಬರ್ 21ನೇ ತಾರೀಖು ಈ ಎರಡೂ ಗ್ರಹಗಳು, ಅತ್ಯಂತ ಸನಿಹ ಗೋಚರಿಸಿ, ಅದ್ಭುತ ಸಮಾಗಮದಂತೆ ಕಾಣುತ್ತದೆ.

    ಈ ಗುರು ಮತ್ತು ಶನಿಗ್ರಹಗಳ ಸಮಾಗಮಕ್ಕೆ ಕಾರಣವೇನು?

    ಸೂರ್ಯನ ಸುತ್ತ ನಮ್ಮ ಸೌರವ್ಯೂಹದ 8 ಗ್ರಹಗಳೂ ವಿವಿಧ ಪಥಗಳಲ್ಲಿ, ಬೇರೆ ಬೇರೆ ಅವಧಿಗಳಲ್ಲಿ ತಿರುಗುತ್ತವೆ. ಸೌರವ್ಯೂಹದ ದೈತ್ಯ ಗ್ರಹಗಳಾದ ಗುರುಗ್ರಹವು ಸೂರ್ಯನ ಸುತ್ತಾ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿಯು 11 ವರ್ಷ 314 ದಿನಗಳಾದರೆ, ಎರಡನೇ ದೈತ್ಯಗ್ರಹ ಶನಿಯು ತನ್ನ ವಾರ್ಷಿಕ ಚಲನೆ ಪೂರೈಸಲು ತೆಗೆದುಕೊಳ್ಳುವ ಅವಧಿ 29 ವರ್ಷ 168 ದಿನಗಳಾಗಿದೆ. ಜೊತೆಗೆ ಸೂರ್ಯನಿಂದ ಗುರುಗ್ರಹಕ್ಕಿರುವ ದೂರ ಸು.74 ಕೋಟಿ, 10ಲಕ್ಷ ಕಿ.ಮೀ ಗಳಾಗಿದ್ದು, ಶನಿಗ್ರಹವು ಸುಮಾಉ 134 ಕೋಟಿ ಕಿ.ಮೀ. ದೂರದಲ್ಲಿದೆ.ಈ ಗುರು ಮತ್ತು ಶನಿಗ್ರಹಗಳ ದೂರಗಳೂ ಮತ್ತು ವಾರ್ಷಿಕ ಚಲನೆಯು ಬೇರೆ ಬೇರೆಯಾಗಿದ್ದು, ಈಗಿನ ಸನಿಹ ಸಮಾಗಮಕ್ಕೆ ಕಾರಣ ಭೂಮಿ, ಗುರು ಮತ್ತು ಶನಿಗ್ರಹಗಳು ಒಂದೆ ನೇರದಲ್ಲಿ ಕಂಡು ಬರುತ್ತಿರುವುದೇ ಆಗಿದೆ.

    ಈಗ ಕಂಡು ಬರುತ್ತಿರುವ ಗ್ರಹಗಳ ಸಮಾಗಮಕ್ಕೆ ಭೂಮಿ, ಗುರು ಮತ್ತು ಶನಿಗ್ರಹಗಳ ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಕಾರಣವಾಗುತ್ತವೆ.ಎರಡು ಗ್ರಹಗಳು ಸನಿಹ ಸಮಾಗಮ ನಡೆಯುವುದು 20 ವರ್ಷಗಳಿಗೊಮ್ಮೆಯಾದರೂ ಕೂಡ, ಪ್ರಸ್ತುತ ಗುರು ಮತ್ತು ಶನಿಗ್ರಹಗಳು ಅತ್ಯಂತ ಸನಿಹಕ್ಕೆ ಬಂದು ಸಮಾಗಮಿಸಲು 400 ವರ್ಷಗಳೇ ಬೇಕಾಗುತ್ತವೆ.1226 ರಲ್ಲಿ ಮತ್ತು 1623 ರಲ್ಲಿ ಈ ಗುರು ಮತ್ತು ಶನಿಗ್ರಹಗಳ ಸಮಾಗಮ ಸಂಭವಿಸಿತ್ತು.

    ಈ ಗ್ರಹಗಳ ಸಮಾಗಮ ನೋಡುವುದು ಎಲ್ಲಿ? ಹೇಗೆ?

    ಡಿಸೆಂಬರ್ ತಿಂಗಳು ಮುಗಿಯುವವರೆಗೂ ಈ ಗುರು ಮತ್ತು ಶನಿಗ್ರಹಗಳ ಸಮಾಗಮವು ಬರೀಗಣ್ಣಿಗೆ ಗೋಚರಿಸುವುದು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ಮಧ್ಯೆ ಬರುವ ನೈಋತ್ಯ ದಿಕ್ಕಿನೆಡೆಗೆ ತಿರುಗಿ, ಕ್ಷಿತಿಜದಿಂದ ಸುಮಾರು 400 ಡಿಗ್ರಿಗಳಲ್ಲಿ ತಲೆ ಮೇಲೆತ್ತಿ ನೋಡಿದರೆ ಹೊಳೆಯುವ ದೊಡ್ಡ ಗುರುಗ್ರಹ ಅದರ ಮೇಲೆಯೇ ಒಂದಡಿ ದೂರದಲ್ಲಿ ಶನಿಗ್ರಹ ಎರಡೂ ಕಂಡು ಬರುತ್ತವೆ. ಜೊತೆಗೆ ನೆತ್ತಿಯ ಮೇಲೆ ಕೆಂಪು ಬಣ್ಣದಿಂದ ಹೊಳೆಯುವ ಮಂಗಳ ಗ್ರಹವೂ ಕಾಣುವುದನ್ನು ನೋಡಬಹುದು.

    ಸಂಜೆಯಾಗುತ್ತಿದ್ದಂತೆ ನೈಋತ್ಯ ದಿಕ್ಕಿನಲ್ಲಿ, ನಕ್ಷತ್ರಗಳು ಕಾಣುವ ಮುನ್ನವೇ ಈ ಗುರು ಮತ್ತು ಶನಿಗ್ರಹಗಳು ಗೋಚರಿಸುತ್ತವೆ.
    ಇದೇ ಡಿಸೆಂಬರ್ 21 ರಂದು ಈ ಎರಡೂ ಗ್ರಹಗಳ ಅಂತರ ಅತ್ಯಂತ ಸನಿಹದಲ್ಲಿ ಗೋಚರಿಸುತ್ತವೆ, ಟೆಲಿಸ್ಕೋಪ್‌ನಲ್ಲಿ ಒಮ್ಮೆಲೇ ಎರಡೂ ಗ್ರಹಗಳನ್ನು ನೋಡಬಹುದಾಗಿದೆ.

    ಅವೈಜ್ಞಾನಿಕ ಮಾಹಿತಿಗಳ ಬಗ್ಗೆ ಎಚ್ಚರವಿರಲಿ

    ಆಗಸದಲ್ಲಿ ಗ್ರಹಣಗಳಾದಾಗ, ಇಂತಹ ಗ್ರಹಗಳ ಕೂಟಗಳು ಸಂಭವಿಸಿದಾಗ,ಕೆಲ ಮಾಧ್ಯಮಗಳಲ್ಲಿ ಖಗೋಳದ ತಜ್ಞರಲ್ಲದವರು ಚರ್ಚೆಗಿಳಿದು, ಅವೈಜ್ಞಾನಿಕ ಮಾಹಿತಿ ನೀಡುತ್ತ, ಜನರಲ್ಲಿ ಭೀತಿ ಹುಟ್ಟಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಇಂತಹ ಸುಳ್ಳು ಮಾಹಿತಿಗಳಿಂದ ಸಾರ್ವಜನಿಕರು ಎಚ್ಚರಗೊಂಡು, ಖಗೋಳ ಸತ್ಯಗಳನ್ನು ವೈಜ್ಞಾನಿಕವಾಗಿ ಅರಿತು, ನೋಡಿ ಆನಂದಿಸಬೇಕಾಗಿದೆ.
    ಆಕಾಶ ವೀಕ್ಷಣೆಯ ನಮ್ಮ ಹವ್ಯಾಸಗಳಲ್ಲೊಂದಾಗಿ, ಈ ವಿಶ್ವದರ್ಶನ ಮಾಡುತ್ತಾ ವಿಶ್ವಮಾನವರಾಗುವೆಡೆಗೆ ಸಾಗೋಣ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    ಕೋವಿಡ್ ಸಲಹಾ ಸಮಿತಿ ವರದಿ ಆಧರಿಸಿ ಶಾಲಾರಂಭ

    ಎಸ್ ಎಸ್ ಎಲ್ ಸಿ , ದ್ವಿತೀಯ ಪಿಯುಸಿ ಮತ್ತು ಪರಿಷ್ಕೃತ ವಿದ್ಯಾಗಮ ಆರಂಭಿಸುವ ಬಗ್ಗೆ ಸಲಹಾ ಸಮಿತಿ ಸಲಹೆ

    ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಗುರುವಾರ ನೀಡಿರುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಸ್ತುತ ವರ್ಷದಲ್ಲಿ ಶಾಲಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಗುರುವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತಂತೆ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಹೇಳಿದರು.

    ಪರಿಸ್ಥಿತಿಯನ್ನು ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ಯಾವ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಪ್ರಾರಂಭಿಸಬಹುದು, ಪ್ರಾರಂಭಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ-ಎಸ್ ಒ ಪಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅದರ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಲಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

    ಮೊದಲಿಗೆ ಮುಂದಿನ ವ್ಯಾಸಂಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಮತ್ತು ಪರಿಷ್ಕೃತ ವಿದ್ಯಾಗಮ ಆರಂಭಿಸುವ ಸಂಬಂಧದಲ್ಲಿ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ. ನಂತರ ಉಳಿದ ತರಗತಿಗಳ ಆರಂಭಕ್ಕೆ ಕ್ರಮವಹಿಸಲೂ ಸಹ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

    ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಮತ್ತು ಇತರೆ ಸೌಲಭ್ಯಗಳ ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸುವುದು. ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ತಮ್ಮ ಪೋಷಕರಿಂದ ಅನುಮತಿ ಪತ್ರವನ್ನು ತರುವುದು ಕಡ್ಡಾಯವಾಗಿದೆ. ಆರೋಗ್ಯದ ತೊಂದರೆ ಇಲ್ಲವೇ ಶೀತ, ನೆಗಡಿ, ಕೆಮ್ಮು ಹಾಗೆಯೇ ಕೋವಿಡ್ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅವರು ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಸೇರಿದಂತೆ ಮೇಲ್ಕಂಡ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ತಾವು ತಮ್ಮ ಮಕ್ಕಳು ಶಾಲೆಗೆ ಹಾಜರಾಗುವಾಗ ನೀಡುವ ಅನುಮತಿ ಪತ್ರದಲ್ಲಿ ತಿಳಿಸುವುದು ಕಡ್ಡಾಯವಾಗಬೇಕು. ಅಗತ್ಯ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಪರಿಣಾಮಕಾರಿಯಾಗಿ ಅನುಸರಿಸುತ್ತಿರುವುದರಿಂದ ಪದವಿ ಹಾಗೂ ಉನ್ನತ ಶಿಕ್ಷಣದ ತರಗತಿಗಳು ಸುಸೂತ್ರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಪಾಳಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರವೇ ಬರುವುದರಿಂದ ಸುರಕ್ಷಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.

    ಜುಲೈನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲೂ ಕೋವಿಡ್ ಪ್ರಸರಣವಾಗರಿಲಿಲ್ಲ ಎಂಬುದನ್ನು ಸಮಿತಿ ಈ ಸಂದರ್ಭದಲ್ಲಿ ಅವಲೋಕಿಸಿತು ಎಂದು ಅವರು ಹೇಳಿದ್ದಾರೆ.
    ಶಾಲಾರಂಭಕ್ಕೂ ಮುನ್ನ ಡಿಸೆಂಬರ್ ಮಾಸದಲ್ಲಿ ಶಾಲಾಡಳಿತಗಳು/ ಶಾಲಾ ಮೇಲುಸ್ತುವಾರಿ ಸಮಿತಿಗಳು ಪೋೀಷಕರು, ಮಕ್ಕಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಪಾಲುದಾರರನ್ನು ಸಭೆ ನಡೆಸಿ ಶಾಲೆಗಳ ಪುನರಾರಂಭ ಕುರಿತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವರು ವಿವರಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಗೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಅಭಿಪ್ರಾಯಪಟ್ಟಿದ್ದು, ಈ ಎಲ್ಲ ಸಂಗತಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಕಾರ ಪಡೆದು ಶಾಲಾರಂಭಕ್ಕೆ ಮುಂದಿನ ನಿರ್ಧಾರಗಳನ್ನು ತೆಗೆದಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

    ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್, ಸದಸ್ಯರಾದ ಡಾ. ವಿ. ರವಿ, ಡಾ. ಎಂ. ಶರೀಫ್, ಡಾ. ಶಶಿಭೂಷಣ್ ಬಿ.ಎಲ್., ಡಾ. ಲೋಕೇಶ್ ಅಲ್ಹಾರಿ ಸೇರಿದಂತೆ ಕೋವಿಡ್ ಸಲಹಾ ಸಮಿತಿ ಸದಸ್ಯರಾದ ಹಲವಾರು ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಟೀವಿ ಠೀವಿ

    ಮಹಡಿಯ ಮೇಲೆ ಎತ್ತರದ ಕಬ್ಬಿಣದ ಪೈಪು. ಅದರ ತುದಿಯಲ್ಲಿ ಸಣ್ಣದು ಪಕ್ಕದಲ್ಲೇ ಸ್ವಲ್ಪ ದೊಡ್ಡದು ಅದರ ಪಕ್ಕದಲ್ಲಿ ಇನ್ನೂ ಸ್ವಲ್ಪ ದೊಡ್ಡದು…. ಹೀಗೆ ಸಾಲಾಗಿ ಜೋಡಿಸಿದಂತೆ ಕಾಣುವ ಹತ್ತನ್ನೆರಡು ಸಣ್ಣ ಅಲ್ಯೂಮಿನಿಯಂ ಪೈಪುಗಳಿಂದ ತಯಾರಾದ ಆ್ಯಂಟೆನಾ . ಅದನ್ನ ಐದಾರು ಮಂದಿ ಲೋಹದ ತಂತಿಯಿಂದ ಒಂದು ದಿಕ್ಕಿಗೆ ಗುರಿಯಾಗಿಸಿ ಕಟ್ಟುತ್ತಿದ್ದಾರೆ .ಕೆಳಗೆ ನಿಂತಿರುವವರು ಒಮ್ಮೆ ಮನೆಯ ಕಡೆ ಮತ್ತೊಮ್ಮೆ ಮಹಡಿಯ ಕಡೆ ನೋಡುತ್ತಾ …. ಬಂತಾ …..ಇಲ್ಲ….ಈಗ ನೋಡು …ಇಲ್ಲ …. ಸ್ವಲ್ಪ ಸ್ವಲ್ಪ ಬರ್ತಿದೆ….ಹಾಂ ಬಂತು ಬಂತು . ಸಾಕು ಕಟ್ಬಿಡಿ . ಹೀಗೆ ಪರಸ್ಪರ ಏರು ಧ್ವನಿಯಲ್ಲಿ ಕೂಗಾಡುತ್ತಿದ್ದಾರೆಂದರೆ ಅವರ ಮನೆಗೆ ಹೊಚ್ಚ ಹೊಸ ಟೀವಿ ಬಂದಿದೆ ಎಂದರ್ಥ .

    ಆಗೆಲ್ಲಾ ಇಂತಾವ್ರ ಮನೆಗೆ ಟೀವಿ ತಂದ್ರಂತೆ ಅನ್ನೋದು ದೊಡ್ಡ ವಿಷಯ . ಆ ಮನೆಯ ಮಕ್ಕಳನ್ನು ಬಡಾವಣೆಯ ಪ್ರತಿಯೊಬ್ಬರೂ ಏನೋ ಹೊಸಾ ಟೀವಿ ತಂದ್ರಂತೆ ಅಂತ ವಿಚಾರಿಸೋವ್ರು . ಮನೆಯ ಯಜಮಾನರಂತೂ…. ಟೀವಿಗೆ ಎಷ್ಟು ಬಿತ್ತು ? ಸ್ಟೆಬಲೈಸರ್ಗೆಷ್ಟು ? ಯಾವ ಕಂಪನಿ ? ಎಲ್ಲಿಂದ ತಂದಿದ್ದು ? ಹೆಂಗ್ ತಂದಿದ್ದು ? …ಹೀಗೆ ಕಂಡಕಂಡಲ್ಲಿ ಪ್ರಶ್ನೆಗಳ ಸುರಿಮಳೆಗೆಯ್ಯೋವ್ರು .
    ಆಗ ಡಯೋನೊರಾ , ಬುಷ್ , ಬಿ ಪಿ ಎಲ್ , ಒನೀಡಾ ಈ ಪ್ರಮುಖ ಕಂಪನಿಗಳದ್ದೇ ಪಾರುಪತ್ಯ .

    ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳೂ ಹಾಗೇ ಇರುತ್ತಿದ್ದವು ವಾರದಲ್ಲಿ ಏನೇನು ಬರುತ್ತೆ ಅನ್ನೋ ‘ ಮುನ್ನೋಟ ‘ . ಹಿಂದಿನ ವಾರದಲ್ಲಿ ಏನೇನು ನಡೆದಿದೆ ಅನ್ನೋದಕ್ಕೆ ‘ ಸುತ್ತಮುತ್ತ ‘ . ಬುಧವಾರ ಸಂಜೆಯ ಚಿತ್ರಮಂಜರಿ ಅದರ ಕೊನೆಯಲ್ಲಿ ಶನಿವಾರ ಸಂಜೆ ಪ್ರಸಾರವಾಗುವ ಕನ್ನಡ ಚಲನಚಿತ್ರ ಯಾವುದು ಅಂತ ತಿಳಿಸೋವ್ರು.
    ಭಾನುವಾರ ಸಂಜೆ ಒಂದು ಹಿಂದಿ ಚಿತ್ರ . ವಾರದ ಮಧ್ಯೆ ಜೈಯಂಟ್ ರೋಬೊರ್ಟ್ , ವಿಕ್ರಮ್ ಔರ್ ಬೇತಾಳ್ , ಮಿಕ್ಕಿ ಅಂಡ್ ಡೊನಾಲ್ಡ್‌ ಎಂಬ ಮಕ್ಕಳ ಪ್ರೊಗ್ರಾಮುಗಳು .ಬುನಿಯಾದ್ , ನುಕ್ಕಡ್ , ಯಹೀ ತೋ ಹೈ ಝಿಂದಗಿ ಎಂಬ ಹಿಂದಿ ಸೀರಿಯಲ್ಗಳು .

    ನಮ್ಮ ಕನ್ನಡದ…. ಕಂಡಕ್ಟರ್ ಕರಿಯಪ್ಪ , ಸಿಹಿ ಕಹಿ , ಗುಡ್ಡದ ಭೂತ , ಸ್ಪೋಟ , ಕ್ರೇಝಿ ಕರ್ನಲ್ ಧಾರಾವಾಹಿಗಳು .ಕಾರ್ಯಕ್ರಮಗಳು ಎಷ್ಟು ಚೆನ್ನಾಗಿತ್ತು ಅಂದ್ರೆ ಅವು ಪ್ರಸಾರವಾಗಿ ದಶಕಗಳೇ ಕಳೆದಿದ್ದರೂ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ .

    ಟೀವಿ ಇರೊವ್ರ ಮನೆಯಲ್ಲಿ ಆ ಬೀದಿಯ ಬಹುತೇಕ ಮಂದಿ ಕಿಕ್ಕಿರುದು ತುಂಬಿರೋವ್ರು . ಸಿನಿಮಾ ಮಧ್ಯೆ ಹತ್ತು ನಿಮಿಷ ವಾರ್ತೆಗಳು ಬರೋದು, ಮಕ್ಕಳಂತೂ ಎದ್ದು ಹೋದ್ರೆ ಪುನಃ ಎಲ್ಲಿ ಜಾಗ ಸಿಗಲ್ವೋ ಅಂತ ಕುಂತೇ ಇದ್ದು ಸಿನಿಮಾ ಮುಗಿದ ಮೇಲೆ ಎದ್ದು ಹೋಗೊವ್ರು .
    ವಾರದಿಂದ ಕಾದುಕೊಂಡಿದ್ದು ತುಂಬಾನೇ ಇಷ್ಟ ಪಟ್ಟು ನೋಡ್ತಿದ್ದ ಸನ್ನಿವೇಶದಲ್ಲೇ ಈ ಕರೆಂಟ್ ಹೋಗಿಬಿಡೋದು, ಅದ್ಯಾವಾಗ್ ಬರುತ್ತೊ ಹೇಳಕ್ಕಾಗ್ತಿರಲಿಲ್ಲ . ಎಷ್ಟು ಬೇಜಾರಾಗೋದು ಅಂದ್ರೆ… ಹೆಂಗಸ್ರು ಮಕ್ಕಳು ಹಿರಿಯರು ಕಿರಿಯರಯಾದಿಯಾಗಿ ಪ್ರತಿಯೊಬ್ರೂ ಅಂದಿನ ಕೆ ಇ ಬಿ ಯವರಿಗೆ ಶಾಪ ಹಾಕೋವ್ರು . ಕರೆಂಟ್ ಬಂದಾಗ ಆಗೋ ಖುಷಿಯಿತ್ತಲ್ಲ ನಿಜವಾಗ್ಲೂ ಕರೆಂಟ್ ಕಂಡುಹಿಡಿದವರಿಗೂ ಆ ಖುಷಿ ಆಗಿರಲಿಕ್ಕಿಲ್ಲ ಹಂಗ್ ಚೀರ್ತಿದ್ವಿ .

    ಇದೆಲ್ಲದರ ಮಧ್ಯೆ ಕೆಲವರು ರಾತ್ರೋರಾತ್ರಿ ತಮ್ಮ ಮನೆಯ ಟೀವಿಗೆ ಮೂರು ಕಲರಿನ ಗಾಜು ಮುಖವಾಡವೊಂದನ್ನು ತಂದು ತಗುಲಿಸಿಬಿಡುತ್ತಿದ್ದರು. ಮೊದಲಿಗೆ ನಾವು ಅದನ್ನೇ ಕಲರ್ ಟೀವಿ ಎಂದು ಯಾಮಾರಿದ್ದೆವು. ನಂತರ ಬಂತು ನೋಡಿ ಬಜಾರಿಗೆ ಕಲರ್ ಟೀವಿ ಜಗತ್ತಿನಾದ್ಯಂತ ಸಂಚಲವನ್ನೇ ಸೃಷ್ಟಿ ಮಾಡಿಬಿಟ್ಟಿತು.

    ಮನೆಗಳಲ್ಲಿ ಹಿರಿಯರು ಟೀವಿಯನ್ನು ಟೀಬಿ ಎಂದು ಖಾಯಿಲೆಯ ಹೆಸರಿನಿಂದ ಕರೆಯವ್ರು ಅವರು ಅದ್ಯಾವ ಬಾಯಲ್ಲಿ ಹಾಗೆ ಕರೆದರೋ, ಟೀವಿ ನಿಜಕ್ಕೂ ಖಾಯಿಲೆಯಂತೆಯೇ ಆವರಿಸಿಕೊಂಡುಬಿಟ್ಟಿತ್ತು .ನಂತರದ ವರುಷಗಳಲ್ಲಿ ಅದ್ಯಾಕೋ ಜನರಿಗೆ ದೂರದರ್ಶನದ ಮೇಲಿದ್ದ ಪ್ರೀತಿ ಆಸಕ್ತಿ ಕ್ರಮೇಣ ದೂರವಾಗುತ್ತಾ ಹೋಯಿತು.

    ಹಿಂದೆಲ್ಲಾ ಒಂದೇ ಟೀವಿ ಒಂದೇ ಚಾನಲ್ಲು ಹಲವು ಮನೆ ಮನಗಳನ್ನು ಒಂದು ಮಾಡಿತ್ತು ಇಂದು ಮನೆಗೆ ಎರಡು ಮೂರು ಟೀವಿಗಳಿದ್ದು ಸಾವಿರಾರು ಚಾನಲ್ಗಳಿದ್ದರೂ ಯಾರನ್ನೂ ಒಂದು ಮಾಡಿಲ್ಲ. ಬದಲಾಗಿ ಪ್ರತ್ಯೇಕಿಸಿದೆ.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾನವ ಮತ್ತು ವನ್ಯ ಜೀವಿ ಸಂಘರ್ಷ ನಿವಾರಣೆ ಇಂದಿನ ದೊಡ್ಡ ಸವಾಲು

    ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತಿದ್ದು ಇದನ್ನು ನಿವಾರಿಸಲು ಎಲ್ಲರೂ ಜೊತೆ ಗೂಡಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವನ್ನು ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಮೀಸಲು ಅಭಯಾರಣ್ಯದಲ್ಲಿ (ಬಿಆರ್‌ಟಿ ಟೈಗರ್ ರಿಸರ್ವ್ )ನಡೆದ ಮಾಧ್ಯಮ ಕಾರ್ಯಗಾರ ಪ್ರತಿಪಾದಿಸಿತು.ಕನ್ನಡಪ್ರೆಸ್.ಕಾಮ್ ಕೂಡ ಈ ಕಾರ್ಯಗಾರದಲ್ಲಿ ಭಾಗವಹಿಸಿತ್ತು.

    ಈ ಅರಣ್ಯ ಪ್ರದೇಶದಲ್ಲಿನ ಜೀವ ವೈವಿಧ್ಯ ಮತ್ತು ಇಲ್ಲಿನ ಪರಿಸರ ಸಂರಕ್ಷಣೆಯ ವ್ಯವಸ್ಥೆಯಲ್ಲಿ ಅಸಮತೋಲನವನ್ನು ಉಂಟುಮಾಡುವ ಹಲವು ಸಂಗತಿಗಳ ಬಗ್ಗೆ ಈ ಕಾರ್ಯಗಾರದಲ್ಲಿ ಚಿಂತನ ಮಂಥನ ನಡೆಯಿತು.

    ಮುಖ್ಯ ಭಾಷಣ ಮಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರಾ, ಅನಗತ್ಯ ಲ್ಯಾಂಟೆನಾ (ಕಳೆ) ಸಸ್ಯಗಳ ಬೆಳವಣಿಗೆಯನ್ನು ಹಾಳುಮಾಡುತ್ತಿದೆ. ಇದು ಸಸ್ಯಹಾರಿ ಪ್ರಾಣಿಗಳ ಆಹಾರ ಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

    ಇದರ ಜೊತೆಗೆ ಮಾನವ-ಪ್ರಾಣಿಗಳ ಸಂಘರ್ಷವು ನಾವು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸವಾಲಾಗಿದೆ . ಬದಲಾಗುತ್ತಿರುವ ಬೆಳೆ ಪದ್ಧತಿಯು ಪ್ರಾಣಿಗಳನ್ನು ಅದರಲ್ಲೂ ವಿಶೇಷವಾಗಿ ಆನೆಗಳನ್ನು ಸೊಪ್ಪು ಮತ್ತು ಇತರ ಬೆಳೆಗಳನ್ನು ತಿನ್ನಲು ಆಹ್ವಾನಿಸುತ್ತದೆ ಎಂದರು. ಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಗಳಿಗೆ ವಿಮೆ ಪಡೆಯಲು ಸಂತ್ರಸ್ತರಿಗೆ ಸಹಾಯ ಮಾಡಲು ಅರಣ್ಯ ಇಲಾಖೆ ಇ-ಪರಿಹಾರ ಎಂಬ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ ಎಂದರು.

    ವನ್ಯಜೀವಿ ಸಂರಕ್ಷಣೆಯ ಜೊತಗೆ ಸಸ್ಯ ವೈವಿಧ್ಯವನ್ನು ಉಳಿಸಿ ಬೆಳೆಸಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಕಾರ್ಯಗಾರದಲ್ಲಿ ಪರಿಚಯ ಮಾಡಿಕೊಡಲಾಯಿತು. ಬಿಆರ್‌ಟಿ ಹುಲಿ ಮೀಸಲು ಅರಣ್ಯ ಪ್ರದೇಶವು ಶುಷ್ಕ, ತೇವಾಂಶ, ಅರೆ ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಕಾಡಿನ ಸಂಯೋಜನೆಯಾಗಿದೆ. ಅಂದಾಜು 86 ಹುಲಿಗಳು , 600 ಆನೆಗಳಿಗೆ ನೆಲೆಯಾಗಿದೆ. ಸಸ್ಯ ಮತ್ತು ಪ್ರಾಣಿ ಮಾತ್ರವಲ್ಲ, ಬಿಆರ್‌ಟಿ ಹುಲಿ ಮೀಸಲು 10,000 ಜನಸಂಖ್ಯೆಯನ್ನು ಹೊಂದಿದ್ದು ಇದರಲ್ಲಿ ಹೆಚ್ಚಾಗಿ ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನಾಂಗದವರು ಸೇರಿದ್ದಾರೆ.

    ಕಾಡು ಪ್ರಾಣಿಗಳ ಕಳ್ಳ ಬೇಟೆ, ಅತಿಯಾಗಿ ಬೆಳೆಯುವ ಕಳೆ, ಮಾನವ ಪ್ರಾಣಿ ಸಂಘರ್ಷ, ಕಾಡ್ಗಿಚ್ಚು ಇವು ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನಕ್ಕೆ ಕಾರಣವಾಗುವ ಕೆಲವು ಸಂಗತಿಗಳಾಗಿವೆ ಎಂದು ಬಿಆರ್ ಟಿ ಯ ನಿರ್ದೇಶಕ ಸಂತೋಷ್ ಕುಮಾರ್ ಹೇಳಿದರು.

    ಕಳೆ ತೆಗೆಯುವ ಕಾಯಕ

    ಇಲ್ಲಿರುವ ಸೋಲಿಗ ಸಮುದಾಯವನ್ನು ಕಾಡು ರಕ್ಷಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಕ್ರಿಯವಾಗಿ ಬಳಸಿಕೊಳ್ಳುತ್ತಿದೆ. ಕಾಡಿನ ಕಳೆ ತೆಗೆಯಲು ಈ ಸಮುದಾಯವನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಇನ್ನು ಕೆಲವು ಸೋಲಿಗರು ಅಡವಿ ಹೆಸರಿನಲ್ಲಿ ಸಾವಯವ ಜೇನು ಸಂಗ್ರಹಿಸುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ. ಈ ಜೇನುತುಪ್ಪಕ್ಕೆ ಚಾಮರಾಜನಗರ,ಮೈಸೂರು ಅಲ್ಲದೆ ಬೆಂಗಳೂರಿನಲ್ಲೂ ಒಳ್ಳೆಯ ಬೇಡಿಕೆ ಇದೆ. ಇದರಿಂದ ಆ ಸಮುದಾಯಕ್ಕೆ ಒಳ್ಳೆಯ ಆದಾಯವು ಬರುತ್ತಿದೆ.

    ಜೇನು ಕೃಷಿ

    ಸುದೀರ್ಘ ಕಾಲದಿಂದ ಇರುವ ಕಳೆಯನ್ನು ನಿರ್ಮೂಲನೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಇದು ಹುಲಿ ಮೀಸಲು ಪ್ರದೇಶದಾದ್ಯಂತ ಎಗ್ಲಿಲ್ಲದೆ ಬೆಳೆಯುತ್ತಿದೆ. ಇದರಿಂದ ಸಸ್ಯ ಮತ್ತು ಪ್ರಾಣಿಗಳಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿದೆ. ಮತ್ತೊಂದೆಡೆ ಹಲವು ದುಷ್ಕರ್ಮಿಗಳು ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

    ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಅರಣ್ಯ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ವನ್ಯಜೀವಿ ಶಿಕ್ಷಣದ ಬಗ್ಗೆ ಜನರಲ್ಲಿ ಸರಿಯಾದ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ದೀರ್ಘವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಮತ್ತು ಹೆಸರಾಂತ ಪರಿಸರವಾದಿ ನಾಗೇಶ್ ಹೆಗ್ಡೆ ಅವರು ಪರಿಸರ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು.

    ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನರಿರುವ ಗ್ರಾಮಗಳು, ರಾಗಿಕಲ್ಲುಮಡು ಕ್ಯಾಂಪ್, ಸುವರ್ಣವತಿ ಚಾನೆಲ್ ಪ್ರದೇಶ ಮುಂತಾದ ಪ್ರಮುಖ ತಾಣಗಳಿಗೆ ಮಾಧ್ಯಮ ಸಿಬ್ಬಂದಿ ಭೇಟಿ ನೀಡಿದರು.

    ಕಾರ್ಯಾಗಾರದಲ್ಲಿ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದ ವರದಿಗಾರರು ಭಾಗವಹಿಸಿ ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಸಂವಾದ ನಡೆಸಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಮತ್ತು ಸಾಮಾಜಿಕ ವೈವಿಧ್ಯತೆಯ ಬಗ್ಗೆ ತಿಳಿದುಕೊಂಡರು.

    ಚಿತ್ರ ಸೌಜನ್ಯ :ಶ್ರೀಜಾ ವಿ ಎನ್

    ಪರಿಷ್ಕೃತ ರೂಪದಲ್ಲಿ ಮತ್ತೆ ವಿದ್ಯಾಗಮ

    ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು  ಸುರಕ್ಷತಾ ಕ್ರಮಗಳೊಂದಿಗೆ ಹೊಸ  ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು  ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಕಳೆದ ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮವನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮ ಆರಂಭಿಸಿದ್ದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುವುದು, ಗ್ರಾಮೀಣ ಪ್ರದೇಶದಲ್ಲಿ ಪೋಷಕರೊಂದಿಗೆ ಶಾಲಾ ಸಮಯದಲ್ಲಿ ಕೆಲಸಗಳಿಗೆ  ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂತಹ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅನುವಾಗಿತ್ತು ಎಂದು ಅವರು ತಿಳಿಸಿದ್ದಾರೆ.

    ಹೊಸ ರೂಪ

    ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮವನ್ನು ಉಚ್ಚನ್ಯಾಯಾಲಯದ ಅಪೇಕ್ಷೆಯನುಸಾರ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದ್ದು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ.

    ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮವು ನಡೆಯಲು ಅನುವು ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನಾ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿವೆ. ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತು ಪಾಠ ಕಲಿಯಬಹುದಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳು ಬರುವಂತಿಲ್ಲ. ಸ್ಯಾನಿಟೈಸರ್, ಸೋಪ್ ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಿಕೊಳ್ಳುವುದು.

    ಮಕ್ಕಳನ್ನು ಲಭ್ಯ ಶಿಕ್ಷಕರ ಸಂಖ್ಯೆ, ಲಭ್ಯ ಕೊಠಡಿಗಳ ಅನುಸಾರವಾಗಿ 15-20 ವಿದ್ಯಾರ್ಥಿಗಳ ತಂಡ ರಚಿಸುವುದು. ಆಯಾ ಸ್ತರದ  ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸೇಷನ್ ಜವಾಬ್ದಾರಿ ತೆಗೆದುಕೊಳ್ಳಲಿದ್ದು, ಮಕ್ಕಳು ಕುಡಿಯಲು ನೀರನ್ನು ತಮ್ಮೊಂದಿಗೆ ಮನೆಯಿಂದಲೇ ತರಲು ಸಲಹೆ ನೀಡಬಹುದು. ಅಗತ್ಯ ಬಿದ್ದಾಗ ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರ ಪಡೆಯಲು ಅವಕಾಶವಿದೆ. ಇದೇ ರೀತಿಯ ಹತ್ತು ಹಲವು ಕಟ್ಟುನಿಟ್ಟಿನ  ಕ್ರಮಗಳೊಂದಿಗೆ ವಿದ್ಯಾಗಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ  ಎಂದು ಸಚಿವರು ತಿಳಿಸಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಿದ್ಯಾಗಮದ ಅನುಷ್ಠಾನಾಧಿಕಾರಿಗಳಾಗಿದ್ದಾರೆ. ವಿದ್ಯಾಗಮ ತರಗತಿಗಳು ಪಾಳಿಗಳಲ್ಲಿ ಅಂದರೆ ಬೆಳಗ್ಗೆ 45 ನಿಮಿಷದ  3 ತರಗತಿಗಳು ಮತ್ತು ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿಗಳನ್ನು ನಡೆಸಲಾಗುತ್ತದೆ.  ಒಂದು ದಿನಕ್ಕೆ 7ರಿಂದ 8 ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಬರಲು ಸೂಚಿಸಲಾಗುತ್ತಿದೆ.

    ಇದು ಶಾಲಾರಂಭವಲ್ಲ:

    ವಿದ್ಯಾಗಮವು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ. ಇದು ಶಾಲಾರಂಭವಲ್ಲ ಎಂಬುದನ್ನು ಪೋಷಕರು ಮನಗಾಣಬೇಕು ಎಂದು ಸಚಿವರು ಹೇಳಿದ್ದಾರೆ.

    ವಿದ್ಯಾಗಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಆನ್-ಲೈನ್ ಶಿಕ್ಷಣ ವಂಚಿತರಿಗೆ ಅನುಕೂಲವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯು ಯಾವುದೇ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ವಾತಾವರಣದಲ್ಲಿಯೂ ಶಿಕ್ಷಣವನ್ನು ನೀಡುವುದು  ಸರ್ಕಾರದ ಜವಾಬ್ದಾರಿಯಾದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ದಾಖಲಾಗಬೇಕಿದೆ ಹಾಗೆಯೇ   ಅವರ ಕಲಿಕೆ ನಿರಂತರವಾಗಿರಬೇಕಿರುವಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

    ಗ್ರಾಮೀಣ ಖಾಸಗಿ ಶಾಲೆಗಳ ಆಸಕ್ತಿ:

    ವಿದ್ಯಾಗಮ ತರಗತಿಗಳನ್ನು ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳು ವಿಶೇಷವಾಗಿ ಬಜೆಟ್ ಶಾಲೆಗಳು ತಮ್ಮ ಪರಿಸರದಲ್ಲಿ ಆರಂಭಿಸಿ ತಮ್ಮ ಶಾಲೆಯ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬಹುದಾಗಿದೆ. ಅದು ವಿದ್ಯಾಗಮವೇ ಆಗಿರಬಹುದು ಇಲ್ಲವೇ ಅವಕಾಶವಿದ್ದಲ್ಲಿ ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ವಯ ಆನ್-ಲೈನ್ ಮೂಲಕವೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕವೇರ್ಪಡಿಸಬಹುದಾಗಿದೆ.  ಯಾವುದೇ ಶಾಲೆಗಳು ಲಭ್ಯವಿರುವ ಸಂಪನ್ಮೂಲಗಳಲ್ಲಿ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿದ್ದು, ಮಕ್ಕಳ ಹಿತವನ್ನು ಕಾಪಾಡಬೇಕಿದೆ ಎಂದು ಎಂದು ಸಚಿವರು ಹೇಳಿದ್ದಾರೆ.

    ಮಕ್ಕಳ ಕಲಿಕಾ ನಿರಂತರತೆಗೆ ವಿದ್ಯಾಗಮವು ಅನುಕೂಲವಾಗಿದ್ದು, ಶಿಕ್ಷಕರು ಮತ್ತು ಪೋಷಕರಲ್ಲಿ ಒಳ್ಳೆಯ ಭಾವನೆ ಮೂಡಿಸಿದೆ. ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಕಾರ್ಯಕ್ರಮದ ರೂಪುರೇಷೆಗಳನ್ನು ಪರಿಷ್ಕರಿಸಿ ಪುನರಾರಂಭಿಸಲು ಇಲಾಖೆ ಎಲ್ಲ ರೀತಿಯಲ್ಲೂ ಸಿದ್ಧತೆ  ಮಾಡಿಕೊಂಡಿದ್ದು, ಶೀಘ್ರವೇ ಪುನರಾರಂಭಿಸಲಾಗುವುದು. ಒಟ್ಟಾರೆ ಪ್ರತಿಯೊಬ್ಬರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ಕಲಿಕಾ ನಿರಂತರತೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ  ಎಂದು ಅವರು ತಿಳಿಸಿದ್ದಾರೆ.

    ಕಲಾ ಚತುರೆ ಗಾಯಿತ್ರಿ ನಾಯಕ

    ಬಳಕೂರು ವಿ.ಎಸ್ ನಾಯಕ

    ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲವನ್ನು ರಕ್ಷಿಸಿ ಎಂದು ಸಂದೇಶ ಸಾರುವ ಶಿಲ್ಪ, ನೀರನ್ನು ಕಲುಷಿತ ಮಾಡದೆ ಉಳಿಸಿ ಎಂಬ ಸಂದೇಶವನ್ನು ಬಿಂಬಿಸುವ ಶಿಲ್ಪ, ಕುಟುಂಬ ವ್ಯವಸ್ಥೆಯ ಮಹತ್ವವನ್ನು ಅರಿವು ಮೂಡಿಸುವ ಶಿಲ್ಪ, ಮನೆ, ಮಕ್ಕಳು, ತಾಯಿ, ಹುಡುಗಿ ಹೀಗೆ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ಶಿಲ್ಪ, ಜಗತ್ತಿಗೆ ಶಾಂತಿಯ ಮಂತ್ರ ಸಾರಿದ ಬುದ್ಧನ ಶಿಲ್ಪ….. ಹೀಗೆ ಒಂದೇ ಎರಡೆ ಕಲಾವಿದನ ಕೈಚಳಕದಲ್ಲಿ ಜೀವ ತುಂಬಿ ಕಲಾಸಕ್ತರ ಮಡಿಲಿಗೆ ಅರ್ಪಿಸಿ ಜನ ಮೆಚ್ಚುಗೆ ಪಡೆದವರು ಉಡುಪಿಯ ಕಟಪಾಡಿಯ ಕಲಾವಿದೆ ಶ್ರೀಮತಿ ಗಾಯಿತ್ರಿ ಜಗದೀಶ್‌ನಾಯಕ.

    ಇವರು ಬಿ.ಕಾಂ ಪದವಿಧರೆ. ಗೃಹಿಣಿ . ಆದರೆ ಚಿಕ್ಕವಯಸ್ಸಿನಲ್ಲಿಯೇ ಕಲಾಸಕ್ತಿ ಬೆಳೆಸಿಕೊಂಡವರು. ಮೊದಲು ಇವರು ಕಲಾವಿದ ರಮೇಶ್‌ರಾವ್‌ರವರ ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್‌ನಲ್ಲಿ ಸುಮಾರು ೫ ವರ್ಷಗಳ ವಿಭಿನ್ನ ಕಲಾ ಕೃತಿಗಳನ್ನು ರಚಿಸುವ ತರಬೇತಿಯನ್ನು ಪಡೆದರು. ನಂತರ ಕಲಾವಿದ ಶೈಲೇಶ್ ಕೊಟ್ಯಾನ್‌ರವರ ಮಾರ್ಗದರ್ಶನದಲ್ಲಿ ಕಲೆಯನ್ನು ಅಧ್ಯಯನ ಮಾಡಿ ಇಂದು ಒಬ್ಬ ಅದ್ಭುತ ಕಲಾ ಪ್ರತಿಭೆಯಾಗಿ ಹೊರ ಹೊಮ್ಮಿದ್ದಾರೆ.

    ಇವರಿಗೆ ಕಲಾಸಕ್ತಿ ಮೂಡಲು ಕಾರಣ ಮುಖ್ಯವಾಗಿ ನಿಸರ್ಗ .ಇದು ಒಂದು ಇದ್ದ ಹಾಗೆ ಇನ್ನೊಂದು ದಿನ ಕಾಣುವುದಿಲ್ಲ. ಆದ್ದರಿಂದ ಕಲಾವಿದರಾದ ಇವರು ನಿಸರ್ಗದಲ್ಲಿ ಇರುವ ಬದಲಾವಣೆಯನ್ನು ಗಮನಿಸಿ ತಮ್ಮದೇ ರೀತಿಯಲ್ಲಿ ಕಲಾಕೃತಿಗಳನ್ನು ಶಿಲ್ಪಗಳನ್ನು ಮಾಡಬೇಕೆಂಬ ಆಸಕ್ತಿ ಮೂಡಿಸಿಕೊಂಡರು ನಂತರದ ದಿನಗಳಲ್ಲಿ ಇವರ ಕಲಾ ಶಕ್ತಿ ನೀಡಿದವರು ಪ್ರಸಿದ್ಧ ಕಲಾವಿದರಾದ ವೆಂಕಿಪಲಿಮಾರ್‌.ಇವರು ಹಲವಾರು ಆವೆ ಮಣ್ಣಿನ ಕಲಾಕೃತಿಗಳನ್ನು ಮಾಡಿ ಜನಮಾನಸದಲ್ಲಿ ಇರುವ ಕೆಲಸವನ್ನು ಮಾಡಿದ್ದಾರೆ.

    ಮರಗಳನ್ನು ರಕ್ಷಿಸಿ, ನಿಸರ್ಗವನ್ನು ರಕ್ಷಿಸಿ, ಪಕ್ಷಿಗಳನ್ನು ರಕ್ಷಿಸಿ ಇದರ ಜೊತೆಗೆ ಮುಖದಲ್ಲಿ ಭಾವನಾತ್ಮಕ ಸಂದೇಶ ನೀಡುವ ವಿಭಿನ್ನ ಶಿಲ್ಪಗಳು ಕಲಾಸಕ್ತರನ್ನ ಆಕರ್ಷಿಸಿಸಿದೆ. ಆವೆ ಮಣ್ಣಿನ ಕಲಾಕೃತಿಗಳನ್ನು ಮಾಡಲು ಕರಾವಳಿಯಲ್ಲಿ ಸಿಗುವ ಆವೆ ಮಣ್ಣನ್ನು ತಂದು ಅದರಲ್ಲಿರುವ ಕಲ್ಲು ಮತ್ತು ಮಣ್ಣನ್ನು ಬೇರ್ಪಡಿಸಿ ಅದನ್ನು ನೀರು ಹಾಕಿ ಹದಮಾಡಿಕೊಂಡು ನಂತರ ಈ ಮಣ್ಣಿನಿಂದ ಹಲವಾರು ವಿಭಿನ್ನ ಶಿಲ್ಪಗಳನ್ನು
    ರಚಿಸಬಹುದು.

    ಕಲಾವಿದ ವೆಂಕಿಪಲಿಮಾರ್‌ರವರ ಕಲಾ ಗ್ಯಾಲರಿ ಚಿತ್ರಾಲಯದಲ್ಲಿ ಇದ್ದು, ಅವರಲ್ಲಿ ಗಾಯಿತ್ರಿ ನಾಯಕರು ತರಬೇತಿ ಪಡೆದು ವಿಭಿನ್ನ ಶಿಲ್ಪಗಳನ್ನು ರಚಿಸಿದ್ದಾರೆ. ಕಲಾಕೃತಿಗಳಲ್ಲಿ ನೈಜತೆ ತುಂಬಲು ಮುಖ್ಯವಾಗಿ ಬೇಕಾಗಿದ್ದು, ಗ್ರಹಿಕೆ ಆಲೋಚನೆ ಅಭಿವ್ಯಕ್ತಿತ್ವ .ಇವರು ಪ್ರಕೃತಿಯಲ್ಲಿ ಏನನ್ನಾದರು ನೋಡಿದಾಗ ಯಾವುದರಲ್ಲಿ ಆಕರ್ಷಿತರಾಗುತ್ತಾರೋ ಅದನ್ನೇ ಕಲಾವಸ್ತುವನ್ನಾಗಿ ಬಿಂಬಿಸಿದ್ದಾರೆ. ಇವರ ಕಲಾಕೃತಿಗಳು ಪ್ರಕೃತಿಯ ಅಳಿವು ಹೇಗೆ ಆಗುತ್ತದೆ. ಅದನ್ನು ಹೇಗೆ ಉಳಿಸಬಹುದು ಎಂಬುದನ್ನು ತಮ್ಮ ಶಿಲ್ಪಗಳಲ್ಲಿ ಬಿಂಬಿಸಿದ್ದಾರೆ.

    ಶ್ರೀಮತಿ ಗಾಯಿತ್ರಿ ನಾಯಕರವರು ಹೇಳುವ ಪ್ರಕಾರ ನಮ್ಮಿಂದ ಪ್ರಕೃತಿನಾಶ ಬೇರೆ ಬೇರೆ ರೀತಿಯಲ್ಲಿ ಆಗುತ್ತದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ ತಾವು ಪ್ರಕೃತಿಯ ಅಳಿವನ್ನು ತಮ್ಮ ಕಲಾಕೃತಿಗಳ ಮೂಲಕವಾಗಿ ಅದರಲ್ಲೂ ಶಿಲ್ಪಗಳಲ್ಲಿ ಬಿಂಬಿಸಿದರೆ. ಜನ ಮಾನಸವನ್ನು ತಲುಪಬಹುದು ಜನರಲ್ಲಿ ಒಂದು ರೀತಿಯ ಅರಿವು ಮೂಡಿಸಬಹುದು. ಹೀಗೆ ಶಿಲ್ಪಗಳು ಜನರನ್ನು ಸೆಳೆಯುವುದಲ್ಲದೇ ಪರೋಕ್ಷವಾಗಿ ಪ್ರಕೃತಿಯ ಉಳಿವನ್ನು ಬಿಂಬಿಸುತ್ತದೆ. ಅದಕ್ಕಾಗಿ ಈ ಮಾಧ್ಯಮದಲ್ಲಿಯೇ ಹಲವಾರು ಕಲಾಕೃತಿಗಳನ್ನು ಮಾಡಿದ್ದೇನೆ ಎನ್ನುತ್ತಾರೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಸರದಿ ಬಂದೇ ಬರುತ್ತದೆ

    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

    ‘ಸರದಿ’  ಪ್ರತಿಯೊಬ್ಬರಿಗೂ   ಬಂದೇ ಬರುತ್ತದೆ.  ಆ ಸರದಿಯಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲ. ಪಂಪನ ‘ವಿಕ್ರಮಾರ್ಜುನವಿಜಯ’ದ  ದಶಮಾಶ್ವಾಸದಲ್ಲಿ ಭೀಷ್ಮ ಪಟ್ಟಾಭಿಷೇಕ ಸಂದರ್ಭದಲ್ಲಿ ಕರ್ಣ ಮತ್ತು ಭೀಷ್ಮರ ನಡುವೆ ನಡೆದ ಸಂಘರ್ಷದ ಸಂವಾದ ಅರ್ಥಗರ್ಭಿತವಾಗಿದೆ.

    ಕರ್ಣ ದುರ್ಯೋಧನನ್ನು ಕುರಿತು “ಪಗೆವರನಿಟ್ಟೆಲ್ವಂ ಮುರಿವೊಡೆನಗೆ ಪಟ್ಟಂಗಟ್ಟಾ” ಅಂದರೆ  “ಹಣ್ಣು ಹಣ್ಣು  ಮುದುಕರಾಗಿರುವ  ಭೀಷ್ಮರಿಗೆ ಯುದ್ಧ ಪಟ್ಟವನ್ನು ಕಟ್ಟುವ ಬದಲು ನನಗೆ ಪಟ್ಟ ಕಟ್ಟು. ಹಗೆಯವರಾದ  ಪಾಂಡವರಿಗೆ  ಸೋಲಿನ ರುಚಿ ತೋರಿಸುವುದಾದರೆ ಇದು ಅಗತ್ಯ” ಎನ್ನುತ್ತಾನೆ.

    ಆ ಸಂದರ್ಭದಲ್ಲಿ ವಯೋವೃದ್ಧರೂ, ಜ್ಞಾನವೃದ್ಧರೂ, ವಿವೇಕವೃದ್ಧರೂ ಆದ ಭೀಷ್ಮರು  ಕರ್ಣನ ಮಾತಿಗೆ ಮುನಿಸಿಕೊಳ್ಳದೆ  “ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್!” ಎಂದು ಮಾರ್ಮಿಕವಾಗಿ ವ್ಯಂಗ್ಯವಾಡುತ್ತಾರೆ.

    ಕಾವ್ಯಮೀಮಾಂಸೆಯ ಅರ್ಥಧ್ವನಿಗೆ ಇದೊಂದು ಒಳ್ಳೆಯ  ಉದಾಹರಣೆ. ಅಂದರೆ   ಯುದ್ಧಭೂಮಿಯಲ್ಲಿ ಹೋರಾಡುವ ‘ಸರದಿ’ ನಿನಗೂ ಬರುತ್ತದೆ ಅದಕ್ಕೆ ವ್ಯವಧಾನ ಬೇಕು , ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ ಎನ್ನುತ್ತಾರೆ .

    ಇಲ್ಲಿ ಯುದ್ಧವೆಂದರೆ ಬದುಕು ಎಂತಲೂ ತೆಗೆದುಕೊಳ್ಳಬಹುದು.  ಹಾಗಾಗಿ ಇಲ್ಲಿ ‘ಸರದಿ’ ಎಂಬ ಪದ ಇಡೀ ಜೀವನಕ್ಕೇ ಅನ್ವಯಿಸುವಂಥದ್ದು.  ಬಾಲ್ಯ , ಕಿಶೋರಾವಸ್ಥೆ, ಯೌವ್ವನ, ಮುಪ್ಪುಗಳು ಬಂದೇ ಬರುತ್ತವೆಇದರ ಜೊತೆಗೆ ಹಗಲು- ಇರುಳು, ಸುಖ-ದುಃಖ. ಸೋಲು-ಗೆಲುವುಗಳು  ಆವರ್ತವಾಗಿ ಅಂದರೆ ಪಾಲಿಯಲ್ಲಿ ಬರುತ್ತವೆ ಅದಕ್ಕೆ ನಾವು ಸಿದ್ಧರಿರಬೇಕು ಎಂಬ ಧ್ವನಿಯೂ ಇಲ್ಲಿದೆ.

    ದೇವಾಲಯದ ಘಂಟಾನಾದ ಮತ್ತೆ ಮತ್ತೆ ಹೇಗೆ ರಿಂಗಣಿಸುತ್ತಿರುತ್ತದೆಯೋ ಅಂತಯೇ ಇಲ್ಲಿ ‘ಸರದಿ’ ಎಂಬ ಪದದ  ಅರ್ಥ  ಮತ್ತೆ ಮತ್ತೆ  ನಮಗೆ ಹೊಳೆಯುತ್ತದೆ. ಭೀಷ್ಮರ ಮಾತಿನನ್ವಯ  ಮೊದಲನೆಯದಾಗಿ ಯುದ್ಧದಲ್ಲಿ ಹೋರಾಡುವ ಸರದಿ, ಎರಡನೆಯದಾಗಿ ಯೌವ್ವನದಿಂದ  ಮುಪ್ಪಿಗೆ ಸರಿಯುವ  ಸರದಿ, ಮೂರನೆಯದಾಗಿ ಸಾವಿನ  ಸರದಿ  ಬಂದೇ ಬರುತ್ತದೆ ಎಂದು ತಿಳಿಯಬೇಕು.

    ”ಜಾತಸ್ಯ ಮರಣಂ ಧ್ರುವಂ” ಎಂಬಂತೆ ಹುಟ್ಟಿದವರು ಸಾಯಲೇಬೇಕೆಂಬ ನಿಯಮವಿದೆ. ಈ ಸತ್ಯವನ್ನು  ತಿಳಿದ ಮೇಲೆ,   ಶಾಶ್ವತವಲ್ಲದ   ಈ ತಾರುಣ್ಯದಲ್ಲಿ  ಅನ್ಯ ವಿಷಯಕ್ಕೆ ಮಾರು ಹೋಗಬಾರದು,ಹೋರಾಟದ  ಸಂಕಲ್ಪವನ್ನು ಕಡೆಗಾಣಿಸಬಾರದು.ಬದುಕಿರುವಾಗ ಒಳ್ಳೆಯ  ಕೆಲಸಗಳನ್ನು ಮಾಡುವುದನ್ನು ಮರೆತು ಮೆರೆಯಬಾರದು ಎನ್ನುವ ತಿಳಿವಳಿಕೆ ಕೂಡ  ಇಲ್ಲಿದೆ. ಬದುಕಿನ  ಎಲ್ಲಾ  ಮಜಲುಗಳನ್ನು  ಅನುಭವಿಸಲು  ಅವಕಾಶವಿದ್ದೇ ಇದೆ ಎಂಬುದನ್ನು   “ಸರದಿ” ಎಂಬ ಒಂದೇ ಪದ ಹೇಳುತ್ತದೆ.

    ಜೀವನ ಪಾಠವೇ ಹಾಗೆ!   ಆಕಾಶವನ್ನು ನೋಡಲು  ಮುಗಿ ಬೀಳಬೇಕಿಲ್ಲ  ಎಲ್ಲಿ ನಿಂತರೂ  ನೀಲಾಕಾಶ ಗೋಚರಿಸುತ್ತದೆ ಹಾಗೆ ಮನುಷ್ಯನಿಗೂ ಅವಕಾಶಗಳ  ಸರದಿ ಇರುತ್ತದೆ ಅದನ್ನು ಸದ್ವಿನಿಯೋಗ  ಮಾಡಿಕೊಳ್ಳಬೇಕಷ್ಟೆ.   ದುಡುಕಿನಿಂದ ಸಂರಚಿತ ಜೀವನ ನಿಯಮಗಳನ್ನು ಮುರಿಯುವುದು ಉದ್ಧಟತನ. ಮುಪ್ಪು ಎಂಬುದು ದೇಹಕ್ಕೆ ವಿನಃ  ಬುದ್ಧಿಗಲ್ಲ, ಬುದ್ಧಿಗಮ್ಯ ಜ್ಞಾನ ವಯಸ್ಸನ್ನು ಮೀರಿದ್ದು ಎಂಬ ತತ್ವವಿದೆ.  

    ಪಂಪನ ಭೀಷ್ಮರು ಹೇಳಿರುವ ‘ಸೂಳ್’ ಅಥವಾ ‘ಸರದಿ’  ಎಂಬ ಮಾತು ಕೇವಲ ಉಪದೇಶಾತ್ಮಕವಾಗಿಲ್ಲ .  ಜೀವಮಾನವನ್ನು ಕುರಿತದ್ದಾಗಿದೆ. ‘ಸರದಿ’ ಎಂಬ ಪದದ ಅರ್ಥ ಅಂತರಾರ್ಥ ಎಲ್ಲಾ ಕಾಲಕ್ಕೂ ಅನ್ವಯವಾಗುವಂಥದ್ದು .  ಮನುಷ್ಯ ಚಿರಂಜೀವಿಯಂತೂ  ಅಲ್ಲ ! ‘ಮೃತ್ಯು’ ಎಂಬ ಛಾಯೆ ನಮ್ಮ ನಡುವೆ ಸುತ್ತುತ್ತಲೇ ಇರುತ್ತದೆ. ಲೌಕಿಕ ಸುಖಭೋಗಗಳಿಗೆ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು ಸತ್ತ ಮೇಲೆಯೂ  ಬದುಕುವಂಥ ಜೀವನ ಮಾರ್ಗ ನಮ್ಮದಾಗಿರಬೇಕು.  ತಾನಾಗಿ ಒದಗಿ ಬರುವ  ಕಾರ್ಯಗಳನ್ನು ನಿಷ್ಟೆಯಿಂದ  ಮಾಡಬೇಕಷ್ಟೆ.  ಆಗ ನಮಗೆ ಯಥಾವತ್ ಪ್ರತಿಫಲ  ಎಂಬ ‘ಸರದಿ’ ಅರಸಿ ಬರುತ್ತದೆ.  

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಬಂಡವಾಳವನ್ನು ಸುರಕ್ಷಿತಗೊಳಿಸಿಕೊಳ್ಳುವ ಆರ್ಥಿಕ ಸಾಕ್ಷರತೆ ಇಂದಿನ ಅಗತ್ಯ

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಸರ್ವಕಾಲೀನ ದಾಖಲೆ ಮಟ್ಟಕ್ಕೆ ಜಿಗಿತ ಕಂಡು ವಿಜೃಂಭಿಸುತ್ತಿದೆ. ಆನೆ ನಡೆದಿದ್ದೇ ದಾರಿ – ಸೆನ್ಸೆಕ್ಸ್‌ ತಲುಪಿದ್ದೇ ಗುರಿ ಎಂಬಂತಾಗಿದೆ. ಈ ವಾತಾವರಣದಲ್ಲಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ವಲಯದ ಷೇರುಗಳು ಮಾತ್ರವಲ್ಲದೆ ಕಳಪೆ ವಲಯದ ಷೇರುಗಳಿಗೂ ಜೀವ ಬರುತ್ತಿದ್ದು ಹಲವರಿಗೆ ಅಪೂರ್ವ ಅವಕಾಶ ಮಾಡಿಕೊಡುತ್ತಿದೆ.

    ಈ ಅವಕಾಶ ಷೇರು ಖರೀದಿಸುವುದಕ್ಕಿಂತ ವರ್ಷಗಟ್ಟಲೆ ಕಾಯುತ್ತಿದ್ದವರಿಗೆ ಮಾರಾಟಮಾಡಿ ಹೊರಬರುವ ಅವಕಾಶ. ಕಂಪನಿಗಳು ತಮ್ಮ ಆಂತರಿಕ ಸಾಧನೆಯಿಂದ ಏರಿಕೆ ಕಾಣುತ್ತಿದ್ದರೆ ಅದು ಹೂಡಿಕೆಗೆ ಯೋಗ್ಯ ಆದರೆ ಮೊದಲೇ ರೋಗಗ್ರಸ್ತವಾಗಿರುವ ಕಂಪನಿಗಳು, ದಿವಾಳಿತನದ ಪ್ರಕ್ರಿಯೆಯಲ್ಲಿರುವ ಕಂಪನಿಗಳು ಸಹ ಏರಿಕೆ ಕಾಣುತ್ತಿವೆ. ಈ ವಾತಾವರಣದಲ್ಲಿ ದಿಢೀರ್‌ ಏರಿಕೆ ಕಾಣುತ್ತಿರುವುದು ಅಮಾಯಕ ಹೂಡಿಕೆದಾರರು, ಹೊಸದಾಗಿ ಪೇಟೆ ಪ್ರವೇಶಿಸಿದ ರಿಟೇಲ್‌ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನವಿರಬಹುದು. ಈ ರೀತಿಯ ಬೆಳವಣಿಗೆಗಳಿಂದ ದೂರವಿದ್ದರೆ ಬಂಡವಾಳ ಸುರಕ್ಷಿತವಾಗಿರಬಹುದು.

    ಉದಾಹರಣೆಗೆ ಪಿ ಸಿ ಜುವೆಲ್ಲರ್ಸ್. ‌ ಒಂದು ವರ್ಷದ ಹಿಂದೆ ಅಂದರೆ ಡಿಸೆಂಬರ್‌ 16, 2019 ರಲ್ಲಿ ಈ ಕಂಪೆನಿಯ ಷೇರು ದರ ರೂ.28.55 ರ ಗರಿಷ್ಠ ದರದಲ್ಲಿತ್ತು. ಮಾರ್ಚ್‌ ನಲ್ಲಿ ರೂ.7.80 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ಮತ್ತೆ ರೂ.27 ರ ಗಡಿಯಈ ಶುಕ್ರವಾರ ದಾಟಿದೆ. ವಹಿವಾಟಿನ ಗಾತ್ರವೂ ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಮಾರಿ ಲಾಭ ಮಾಡಿಕೊಳ್ಳುವುದೇ ಜಾಣತನ.

    ದಿವಾಳಿತನದ ಪ್ರಕ್ರಿಯೆಗಳನ್ನೆದುರಿಸುತ್ತಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್ ಈ ವರ್ಷದ ಏಪ್ರಿಲ್‌ ನಲ್ಲಿ ರೂ.8 ರ ಸಮೀಪಕ್ಕೆ ಕುಸಿದಿತ್ತು. ಈಗ ವಾರ್ಷಿಕ ಗರಿಷ್ಠ ರೂ.41 ರ ಸಮೀಪಕ್ಕೆ ಜಿಗಿದಿದೆ. ಹಾನಿಯಲ್ಲಿರುವ ಕಂಪನಿಯ ಷೇರು ಒಂದೇ ತಿಂಗಳಲ್ಲಿ, ಸೂಚ್ಯಂಕಗಳು ಏರಿಕೆಯಲ್ಲಿವೆ ಎಂಬ ಕಾರಣಕ್ಕಾಗಿ ರೂ.16 ಸಮೀಪದಿಂದ ರೂ.41 ರವರೆಗೂ ಜಿಗಿತ ಕಂಡಿರುವುದನ್ನು ಏನೆಂದು ಅರ್ಥೈಸುವುದು.

    ಯೆಸ್‌ ಬ್ಯಾಂಕ್‌ ಈ ವರ್ಷದ ಆರಂಭದಲ್ಲಿ ಆರ್ಥಿಕ ಒತ್ತಡದಲ್ಲಿದ್ದಾಗ ಆರ್‌ ಬಿ ಐ ಮಧ್ಯೆ ಪ್ರವೇಶಿಸಿ ಬ್ಯಾಂಕ್‌ ನ ಶೇಕಡ 75ರಷ್ಠು ಷೇರುಗಳನ್ನು 3 ವರ್ಷಗಳ ಅವಧಿಯವರೆಗೂ ಚಲಾವಣೆಯಿಂದ ತಡೆಹಿಡಿದುದಲ್ಲದೆ, ಬ್ಯಾಂಕ್‌ ಸಂಗ್ರಹಿಸಿದ್ದ ರೂ.8,400 ಕೋಟಿ ಮೌಲ್ಯದ ಟೈರ್‌ 1 ಬಾಂಡ್‌ ಗಳನ್ನು ರದ್ದುಗೊಳಿಸಿ ಮೌಲ್ಯವನ್ನು ಶೂನ್ಯ ಮಾಡಿದ್ದು ಅನೇಕ ಹೂಡಿಕೆದಾರರನ್ನು ಆಪತ್ತಿಗೆ ತಳ್ಳಿದೆ. ಈ ಸಮಯದಲ್ಲಿ ಅನೇಕ ಅಗ್ರಮಾನ್ಯ ಬ್ಯಾಂಕ್‌ ಗಳು ಇದರ ಬೆಂಬಲಕ್ಕೆ ನಿಂತು ಬಂಡವಾಳವನ್ನು ಒದಗಿಸಿದವು. ಮತ್ತೊಮ್ಮೆ ಯೆಸ್‌ ಬ್ಯಾಂಕ್‌ ಹಕ್ಕಿನ ರೂಪದಲ್ಲಿ ಪ್ರತಿ ಷೇರಿಗೆ ರೂ.12 ರಂತೆ ಷೇರುಗಳನ್ನು ವಿತರಿಸಿ ಸಂಪನ್ಮೂಲ ಸಂಗ್ರಹಿಸಿತು. ಕಳೆದ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಠು ಉತ್ತಮವಾದ ಸಾಧನೆ ತೋರುವುದೆಂದು ಬ್ಯಾಂಕ್‌ ಮುಖ್ಯಸ್ಥರು ತಿಳಿಸಿದ್ದಾರೆ. ಈ ಮಧ್ಯೆ ಉತ್ತಮ ಬಂಡವಾಳೀಕರಣವಾಗಿದೆ ಎಂದು ರೇಟಿಂಗ್‌ ಹೆಚ್ಚಿಸಿದ ಕಾರಣ ಷೇರಿನ ಬೆಲೆ ಏರಿಕೆ ಕಂಡಿದೆ. ಇದು ಎಷ್ಟರಮಟ್ಟಿಗೆ ನೈತಿಕ ಎಂಬುದನ್ನು ಓದುಗರೇ ನಿರ್ಧರಿಸಬಹುದು.

    ಪೇಟೆಯ ವೇಗ

    ಅಲ್ಪಾವಧಿಯಲ್ಲೇ ದೀರ್ಘಾವಧಿಯ ಲಾಭ
    ಈಗಿನ ಬ್ಯಾಂಕ್‌ ಬಡ್ಡಿದರ ಶೇ.6 ರೊಳಗಿರುವ ಅಲ್ಪಬಡ್ಡಿ ಯುಗದಲ್ಲಿ ಹೆಚ್ಚು ಹೆಚ್ಚು ಲಾಭ ಗಳಿಸಿಕೊಳ್ಳುವ ಕಾತುರತೆ ಬೆಳೆಯುತ್ತಿದೆ. ಅದಕ್ಕೆ ಭಾರತೀಯ ಷೇರುಪೇಟೆಗಳು ಉತ್ತಮ ವೇದಿಕೆಯನ್ನು ಒದಗಿಸಿವೆ. ಪ್ರಮುಖ ಕಂಪನಿಗಳನೇಕವು ವೈವಿಧ್ಯಮಯ ಕಾರಣಗಳಿಂದ ಅಲ್ಪ ಸಮಯದಲ್ಲೇ ಅತ್ಯಧಿಕ ಪ್ರಮಾಣದ ಲಾಭದ ಅವಕಾಶವನ್ನು ತಂದುಕೊಟ್ಟಿವೆ. ಕೆಲವು ಉದಾಹರಣೆಗಳು ಇಂತಿವೆ.

    ಬಜಾಜ್‌ ಫೈನಾನ್ಸ್‌ ಲಿಮಿಟೆಡ್:ಈ ಕಂಪನಿಯು ಸೆಪ್ಟೆಂಬರ್‌ ತಿಂಗಳ ಅಂತ್ಯದ ಸಾಧನೆಯು ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕಾಗಿ ರೂ.3,100 ರೂಪಾಯಿಗಳವರೆಗೂ ಅಕ್ಟೋಬರ್‌ ಮೂರನೇ ವಾರದಲ್ಲಿ ಕುಸಿದಿದ್ದಂತಹ ಷೇರಿನ ಬೆಲೆ ನವೆಂಬರ್‌ ಅಂತ್ಯದ ವಾರದಲ್ಲಿ ರೂ.4,900 ನ್ನು ದಾಟಿದೆ. ಅಂದರೆ ಕೇವಲ ಒಂದೇ ತಿಂಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ.

    ಟಾಟಾ ಕೆಮಿಕಲ್ಸ್‌ ಲಿಮಿಟೆಡ್‌ :ಸರಕು ರಸಾಯನಿಕಗಳನ್ನುತ್ಪಾದಿಸುವ ಈ ಕಂಪನಿ ಕಳೆದ ಒಂದು ತಿಂಗಳಿನಲ್ಲಿ ರೂ.318 ರ ಸಮೀಪದಿಂದ ರೂ.516 ರವರೆಗೂ ಏರಿಕೆ ಕಂಡು ಶೇ.60 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಈ ಕಂಪನಿ ಜೂನ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.11 ರಂತೆ ಲಾಭಾಂಶ ವಿತರಿಸಿದ ನಂತರವೂ ಷೇರಿನ ಬೆಲೆ ರೂ.300 ರೊಳಗೆ ವಹಿವಾಟಾಗುತ್ತಿತ್ತು.

    ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ :ಮಧ್ಯಮ ಶ್ರೇಣಿಯ ಈ ಕಂಪನಿ ಕಳೆದ ಒಂದು ತಿಂಗಳಲ್ಲಿ ರೂ.179 ರ ಸಮೀಪದಿಂದ ರೂ.285 ರವರೆಗೂ ಏರಿಕೆ ಪ್ರದರ್ಶಿಸಿದೆ. ಈ ಷೇರಿನ ವಹಿವಾಟಿನ ಗಾತ್ರ ನವೆಂಬರ್‌ ಮೂರನೇವಾರದಲ್ಲಿ ಅತ್ಯಧಿಕವಾಗಿದ್ದರಿಂದ, ಷೇರು ವಿನಿಮಯ ಕೇಂದ್ರವು ಕಂಪನಿಯಿಂದ ವಿವರಣೆ ಕೇಳಿದಾಗ ಕಂಪನಿ ಈ ಏರಿಕೆಗೆ ಕಂಪನಿಯ ಆಂತರಿಕವಾದ ಬೆಳವಣಿಗೆಗಳೇನೂ ಇಲ್ಲ ಎಂದು ತಿಳಿಸಿದೆ. ಒಂದೇ ತಿಂಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ.

    ಇವುಗಳೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ ಗಳಾದ ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಗಳಲ್ಲದೆ ಶಿಪ್ಪಿಂಗ್‌ ಕಾರ್ಪೋರೇಷನ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಗೇಲ್‌ ಇಂಡಿಯಾ, ಒ ಎನ್‌ ಜಿ ಸಿ, ಆಯಿಲ್‌ ಇಂಡಿಯಾ, ಕೋಲ್‌ ಇಂಡಿಯಾ ಗಳು ಉತ್ತಮ ಚಟುವಟಿಕೆ ಭರಿತವಾದ ಏರಿಕೆಯನ್ನು ಪ್ರದರ್ಶಿಸಿದವು.

    ಕೆಲವು ಕಂಪನಿಗಳು ಒಂದೆರಡು ದಿನಗಳಲ್ಲೇ ಅಧಿಕವಾದ ಏರಿಳಿತಗಳನ್ನು ಪ್ರದರ್ಶಿಸಿದ ಉದಾಹರಣೆಗಳಿವೆ. ಈ ವಾರದ ಗುರುವಾರದಂದು ಯು ಪಿ ಎಲ್‌ ಲಿಮಿಟೆಡ್‌ ಷೇರಿನ ಬೆಲೆ ರೂ.492 ರ ಸಮೀಪದಿಂದ ರೂ.417 ರವರೆಗೂ ಕುಸಿದಿದೆ. ಸುಮಾರು ಶೇ.15 ರಷ್ಟರ ಕುಸಿತ ಒಂದೇ ದಿನ. ಇಂತಹ ಕುಸಿತಕ್ಕೆ ಕಾರಣಗಳನೇಕವಿರಬಹುದು, ಆದರೆ ಹಾನಿ ಮಾತ್ರ ಹೂಡಿಕೆದಾರರಿಗಲ್ಲವೇ?

    ಕಲ್ಪತರು ಪವರ್‌ ಟ್ರಾನ್ಸ್ ಮಿಷನ್‌ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ ರೂ.360 ರ ಸಮೀಪದಲ್ಲಿತ್ತು. ಕಂಪನಿ ತನ್ನ ಕಾರ್ಪೊರೇಟ್‌ ಆಫೀಸ್‌ ಗಾಗಿ ಪ್ರದೇಶ ಖರೀದಿಗೆ ರೂ.207 ಕೋಟಿ ಮತ್ತು ಕಟ್ಟಡ ನಿರ್ಮಾಣಕ್ಕೆ ರೂ.170 ಕೋಟಿ ತೊಡಗಿಸುವ ನಿರ್ಧಾರ ಮಾಡಿದೆ ಈ ಬೆಳವಣಿಗೆಯಿಂದ ಗುರುವಾರ ಷೇರಿನ ಬೆಲೆ ರೂ.298 ರವರೆಗೂ ಕುಸಿಯಿತು. ಆದರೆ ಶುಕ್ರವಾರದಂದು ಷೇರಿನ ಬೆಲೆ ರೂ.332 ರವರೆಗೂ ಪುಟಿದೆದ್ದಿತು.
    ಒಂದೇ ವಾರದಲ್ಲಿ ರೂ.1,793 ರಿಂದ ರೂ.1,400 ಕ್ಕೆ ಕುಸಿದ ಬೆಳವಣಿಗೆಯನ್ನು ಐ ಆರ್‌ ಸಿ ಟಿ ಸಿ ಷೇರಿನಲ್ಲಿ ಕಂಡುಬಂದಿದೆ. ಷೇರಿನ ಬೆಲೆ ಅಧಿಕ ಏರಿಕೆ ಕಂಡ ಕಾರಣ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿ ಶೇ.20ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ನಡೆಸಿದ ಕಾರಣ ಈ ರೀತಿ ಕುಸಿತ ಪ್ರದರ್ಶಿಸಿತವಾಗಿದೆ. ಈ ರೀತಿಯ ಭರ್ಜರಿ ಏರಿಕೆಯು ಕಂಪನಿಗಳಾದ ಐ ಟಿ ಸಿ, ಆಕ್ಸಿಸ್‌ ಬ್ಯಾಂಕ್‌, ಲಾರ್ಸನ್‌ ಅಂಡ್‌ ಟೋಬ್ರೋ ಗಳಲ್ಲಿ ಪ್ರದರ್ಶಿತವಾದಲ್ಲಿ ಕೇಂದ್ರ ಸರ್ಕಾರವು ತನ್ನಲ್ಲಿರುವ special undertaking of UTI ನ ಷೇರುಗಳನ್ನು ಮಾರಾಟಮಾಡಲು ಪ್ರಯತ್ನಿಸುವ ಸಾಧ್ಯತೆಯೂ ಇದೆ.

    ಹೀಗೆ ವಿಭಿನ್ನ ಕಾರಣಗಳಿಂದ ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಷೇರುಪೇಟೆಯಲ್ಲಿ ಬಂಡವಾಳವನ್ನು ಸುರಕ್ಷಿತಗೊಳಿಸಿ ಬೆಳೆಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳುವ ಆರ್ಥಿಕ ಸಾಕ್ಷರತೆ ಇಂದಿನ ಅಗತ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಪ್ರವಚನಗಳಿಂದ ಆತ್ಮವಿಶ್ವಾಸ ತುಂಬಿದ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯ

    ಡಾ.ಬನ್ನಂಜೆ ಗೋವಿಂದಾಚಾರ್ಯ ಸರಳ ಕನ್ನಡದಲ್ಲಿ ಸುಲಲಿತವಾಗಿ ಪ್ರವಚನ ನೀಡುವ ಶೈಲಿ ನನ್ನನ್ನು ಆಕರ್ಷಿಸಿತ್ತು. ಹಿಂದೊಮ್ಮೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಪ್ರವಚನ ಏಕಾಗ್ರತೆಯಿಂದ ಆಲಸಿದ್ದ ನೆನೆಪು. ಆನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನಗಳ ಆಲಿಕೆ ನಡೆದಿತ್ತು.

    ವಿಷ್ಣು ಸಹಸ್ರನಾಮದ ಪ್ರಯೋಜನದ ಬಗ್ಗೆ ಪ್ರವಚನವೊಂದರಲ್ಲಿ ಹೀಗೆ ಹೇಳಿದ್ದರು. – ‘ವೃದ್ಧ ಪೋಷಕರು ಭೇಟಿಯಾಗಿ ಅಮೆರಿಕಾದಲ್ಲಿ ನೆಲೆಸಿರುವ ಮಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅವಳು ಕ್ಯಾನ್ಸರ್ ಕಾಯಿಲೆಯಿಂದ ಬಳಲುವುದನ್ನು ತೋಡಿಕೊಂಡಿದ್ದರು. ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ಪಠಿಸಿ ಎಂದು ಮಾರ್ಗದರ್ಶನ ನೀಡಿದ್ದೆ. ಕೆಲ ದಿನಗಳ ಪೋಷಕರು ಭೇಟಿಯಾಗಿ ಮಗಳ ಕ್ಯಾನ್ಸರ್ ವಾಸಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು’… -ಹೀಗೆ ಅವರು ಹೇಳಿದಾಗ ಪ್ರವಚನ ಕೇಳುತ್ತಿದ್ದ ಅನೇಕರಲ್ಲಿ ಆತ್ಮವಿಶ್ವಾಸ ಮೂಡುತ್ತಿದ್ದುದು ಸುಳ್ಳಲ್ಲ. ಆತ್ಮ ವಿಶ್ವಾಸ ಎಂಥ ಅದ್ಭುತಗಳನ್ನು ಮಾಡಬಲ್ಲದು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿತ್ತು.

    ವಿದ್ಯಾವಾಚಸ್ಪತಿ

    ವಿದ್ಯಾವಾಚಸ್ಪತಿ ಎಂದೇ ಗೌರವಪೂರ್ವಕವಾಗಿ ಕರೆಯಲಾಗುತ್ತಿದ್ದ ಅವರು ‘ಇರವು ಸಂಪತ್ತಲ್ಲ, ಇರವಿನ ಅರಿವು ಸಂಪತ್ತು’ ಎಂಬ ಗಮನಾರ್ಹ ಕಲ್ಪನೆಯೊಂದಿಗೆ ಬದುಕನ್ನು ಸಾರ್ಥಕಪಡಿಸಿಕೊಂಡವರು.

    ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ ಹಾಗೂ ಪುರಾಣಗಳಿಗೆ ನಿಪುಣತೆಯ ಭಾಷ್ಯ ಬರೆದ ಸಂಸ್ಕೃತ ವಿದ್ವಾಂಸ. ನಿರರ್ಗಳ ವಾಗ್ಮಿಗಳಾಗಿ ವೇದಾ ಸೂಕ್ತ, ಉಪನಿಷತ್ತು, ಶತ ರುದ್ರೀಯ, ಬ್ರಹ್ಮ ಸೂತ್ರ, ಗೀತಾ ಬಾಷ್ಯಗಳಿಗೆ ಸಮರ್ಪಕ ವ್ಯಾಖ್ಯಾನಗಳನ್ನು ಪ್ರವಚನಗಳ ಮೂಲಕ ನೀಡಿದ ಹೆಮ್ಮೆ ಅವರಿಗಿದೆ. ಸುಮಾರು 10000 ಗಂಟೆಗಳಿಗಿಂತ ಅಧಿಕ ಪ್ರವಚನದ ಮೂಲಕ ಬಹುತೇಕ ಎಲ್ಲಾ ತತ್ವಶಾಸ್ತ್ರದ ಚಿಂತನೆಗಳನ್ನು ವಿವರಿಸಿದ ಕೀರ್ತಿ ಇದೆ.

    ಪಾಣಿನಿಯ ಕೆಲ ಅಪೂರ್ಣ ವ್ಯಾಕರಣಗಳಿಗೆ ನವೀನ ಸೂತ್ರಗಳನ್ನು ಬರೆದಿದ್ದಾರೆ. ಭಾಗವತ ಚಿಂತನದ ಮಹಾನ್ ಪ್ರತಿಪಾದಕರಾಗಿದ್ದರು. ವೇದವ್ಯಾಸ ಸಂಯೋಜಿತ ಪಠ್ಯ ಸುಲಭವಾಗಿ ಅರ್ಥೈಸಲು ತಾತ್ವಿಕವಾಗಿ ಏಕರೂಪತೆ ನೀಡಿದ್ದ ಪಂಡಿತರು. ಹುಟ್ಟಿನಿಂದಲೇ ಮಧ್ವಾಚಾರ್ಯರ ಅನುಯಾಯಿ.ಆದಾಗ್ಯೂ ಮಾಯಾವಾದ ಹಾಗೂ ತತ್ವಶಾಸ್ತ್ರ ಅಧ್ಯಯನ ನಡೆಸಿದ್ದರು. ಪ್ರಸಿದ್ಧ ದಾರ್ಶನಿಕರಾಗಿ ಸಂಸ್ಕೃತ ಹಾಗೂ ಕನ್ನಡದಲ್ಲಿ 4000 ಪುಟಗಳ ವ್ಯಾಖ್ಯಾನ ರಚಿಸಿದ್ದಾರೆ. ಇತರೆ ಭಾಷೆಗಳಲ್ಲಿಯೂ ಸೇರಿ 150 ಪುಸ್ತಕಗಳನ್ನು ರಚಿಸಿದ್ದಾರೆ.ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ.ನಟ ವಿಷ್ಣುವರ್ಧನ್ ಅವರ ಅಧ್ಯಾತ್ಮ ಗುರುಗಳು ಆಗಿದ್ದರು.

    ಉಡುಪಿಯ ಬನ್ನಂಜೆಯಲ್ಲಿ 1936ರಲ್ಲಿ ಜನನ. ಬಾಲ್ಯದಲ್ಲಿ ವೇದಗಳ ಪಠ್ಯ ಹಾಗೂ ಗ್ರಂಥಗಳನ್ನು ಅವರ ತಂದೆ ತಾರಾಕೇಸರಿ ಎಸ್. ನಾರಾಯನಾಚಾರ್ಯ ಪದಮಣ್ಣೂರು, ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ತೀರ್ಥರ ಆಶ್ರಯದಲ್ಲಿ ಕಲಿತರು. ಕಾಣಿಯೂರು ಮಠದ ಶ್ರೀವಿದ್ಯಾಸಮುದ್ರ ತೀರ್ಥ ಸ್ವಾಮೀಜಿ ಅವರ ಆಚಾರ್ಯ ವ್ಯಕ್ತಿತ್ವ ವಿಕಸಿಸಲು ಕಾರಣಕರ್ತರು. ಪೇಜಾವರ ಮಠದ ಶ್ರೀವಿಶ್ವೇಶ್ವತೀರ್ಥರೊಂದಿಗೆ ಹಲವು ವಿಷಯ ಗಳ ಬಗ್ಗೆ ಚರ್ಚಿಸುತ್ತಿದ್ದರು.

    ಪತ್ರಕರ್ತರೂ ಆಗಿದ್ದರು

    ಹಲವು ಪ್ರಚಲಿತ ವಿಷಯಗಳ ಬಗ್ಗೆ ನಾಡಿನ ವಿವಿಧ ನಿಯತಕಾಲಿಕೆಗಳಿಗೆ 800 ಲೇಖನಗಳನ್ನು ಬರೆದಿದ್ದಾರೆ. ಆರಂಭದಲ್ಲಿ ಉದಯವಾಣಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. 1979ರಲ್ಲಿ ಅಮೆರಿಕಾದ ಪ್ರಿನ್ಸ್ ಟನ್ ನಲ್ಲಿ ನಡೆದ ವಿಶ್ವ ಧಾರ್ಮಿಕ ಹಾಗೂ ಶಾಂತಿ ಸಮ್ಮೇಳನದಲ್ಲಿ ಭಾರತದ ವಿಶೇಷ ರಾಯಭಾರಿಯಾಗಿದ್ದರು. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

    ಅಮೇರಿಕಾದ ನ್ಯೂಯಾರ್ಕ್ ರೊಚೆಸ್ಟರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬನ್ನಂಜೆ ಅವರ ಶಿಷ್ಯರಾದ ಪಿ.ಆರ್.ಮುಕುಂದ್ 2005-06ರಲ್ಲಿ ಅವರ ಸಹೋದ್ಯೋಗಿಗಳಾದ ಡಾ.ರೋಜರ್ ಈಸ್ಟನ್  ಹಾಗೂ ಹವಾಯ್ ಬೊಯಿಂಗ್ ಕಾರ್ಪೋರೇಷನ್ ಕೀತ್ ನಾಕ್ಸ್ ಜೊತೆಗೂಡಿ ಮಧ್ವಚಾರ್ಯರ ಮೂಲ ಹಸ್ತಪ್ರತಿ ಸರ್ವಮೂಲ ಗ್ರಂಥವನ್ನು ಇಮೇಜಿಂಗ್ ಮೂಲಕ ಎಚ್ಚರಿಕೆಯಿಂದ ಸಂಸ್ಕರಿಸಿದ್ದರು. ಬನ್ನಂಜೆ ಈ ಯೋಜನೆಗೆ ಸಲಹೆ ನೀಡಿದ್ದರು. ಹಸ್ತಪ್ರತಿ ಅಧ್ಯಯನಕ್ಕೆ ಈ ಚಿತ್ರಗಳು ಸಹಕರಿಸಿದ್ದವು.

    ಸಂಸ್ಕೃತ ವಿದ್ವಾಂಸರಾಗಿ ಖ್ಯಾತನಾಮರಾಗಿದ್ದ ಬನ್ನಂಜೆಗೆ 84 ವರ್ಷಗಳ ಸಾರ್ಥಕ ಜೀವನ ನಡೆಸಿ ಇಂದು (ಡಿಸೆಂಬರ್,13, 2020) ನಿಧನರಾದರು. ಅನೇಕ ಗಣ್ಯರು, ಶಿಷ್ಯರು ಕಂಬನಿ ಮಿಡಿದಿದ್ದಾರೆ.

    ಕೃತಿರಚನೆ

    ಬಾಣಭಟ್ಟನ ಕಾದಂಬರಿ,ಕಾಳೀದಾಸನ ಶಾಕುಂತಲಾ,ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.

    ಟಿಪ್ಪಣಿಗಳು

    1. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನ೦ದಮಾಲಾ’,
    2. ತ್ರಿವಿಕ್ರಮ ಪ೦ಡಿತರ ’ವಾಯುಸ್ತುತಿ’,
    3. ’ವಿಷ್ಣುಸ್ತುತಿ’
    4. ಆರು ಉಪನಿಷತ್ತುಗಳಿಗೆ ಟೀಕೆ.
    5. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿ.
    6. ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ

    ಕನ್ನಡಕ್ಕೆ ಅನುವಾದ

    ಪುರುಷಸೂಕ್ತ,ಶ್ರೀ ಮದ್ಭಗವದ್ಗೀತೆ,ಶ್ರೀ ಸೂಕ್ತ ,ಶಿವಸೂಕ್ತ,ನರಸಿಂಹ ಸ್ತುತಿ,ತಂತ್ರಸಾರ ಸಂಗ್ರಹ .

    ಮಧ್ವಾಚಾರ್ಯರ ’ಮಾಧ್ವ ರಾಮಾಯಣ’,

    ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳು

    error: Content is protected !!