18.7 C
Karnataka
Thursday, November 28, 2024
    Home Blog Page 132

    ರಾಣಿ ಚನ್ನಮ್ಮ ವಿವಿಯಲ್ಲಿ ವಿದೇಶಿ ಭಾಷೆ ಅಧ್ಯಯನ ವಿಭಾಗ ತೆರೆಯಲು ನಿರ್ಧಾರ

    ಬೆಳಗಾವಿಯ ಸಂಗೊಳ್ಳಿರಾಯಣ್ಣ ಪ್ರಥಮದರ್ಜೆ ಘಟಕ ಮಹಾ ವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಜಾಗತಿಕ ಸ್ಪರ್ಧೆಗಾಗಿ ಸಂವಹನ ಕೌಶಲ್ಯಗಳು (Communication skills for Global Competence) ವಿಷಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

    ಈ ಕಾರ್ಯಗಾರವನ್ನು ಉದ್ಘಾಟಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ ಅವರು ಇಂದಿನ ಯುವಕರಲ್ಲಿ ಸಂವಹನ ಕೌಶಲ್ಯಗಳ ಕೊರತೆಯಿಂದ ತಾವು ಪಡೆದ ಪದವಿಗೆ ತಕ್ಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟರು. ಜಗತ್ತಿನ ಯಾವುದೇ ಮೂಲೆಗೆ ಹೋದರು ಸಂವಹನ ಎನ್ನುವುದು ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದರು.

    ಬರುವ ದಿನಗಳಲ್ಲಿ ರಾಣಿ ಚನ್ನಮ್ಮ ವಿವಿಯಲ್ಲಿ ವಿದೇಶಿ ಭಾಷಾ ಅಧ್ಯಯನ ವಿಭಾಗಗಳನ್ನು ತೆರೆಯಲಾಗುವುದು ಎಂದು ಪ್ರಕಟಿಸಿದರು.

    ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಜಯಪ್ಪ ಅವರು ಮಾತನಾಡಿ ಇಂದು ಭಾರತ ದೇಶ ಇಂಗ್ಲಿಷ್ ಭಾಷೆಯನ್ನು ಬಳಸುವ ಎರಡನೇ ದೊಡ್ಡ ರಾಷ್ಟ್ರವಾಗಿದೆ ಎಂದರು . ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಭಾಷಾ ಕೌಶಲ್ಯ ಗಳನ್ನು ರೂಢಿಸಿ ಅವರ ಪ್ರತಿಭೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಕನಸು ನಮ್ಮದಾಗಿದೆ ಎಂದರು.

    ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಪ್ರೊ.ಎಂ.ಬಿ.ಹೆಗ್ಗನ್ನವರ ಹಾಗೂ ರಾಣಿ ಚನ್ನಮ್ಮ ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಪ್ರೊ ಏ.ಶ್ರೀನಿವಾಸಗೌಡ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷರಾದ ಪ್ರೊ.ಎಂ.ಬಿ.ಸಂಗಾಪೂರ ಅವರನ್ನು ಸತ್ಕರಿಸಲಾಯಿತು.

    ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪೂಜಾ ಹಲ್ಯಾಳ ಅವರು ಪ್ರಾಸ್ತಾವಿಕನುಡಿಗಳನ್ನುಆಡಿದರು

    ಡಾ.ಶಾಂತಿ ವರದರಾಜನ್ ಅವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದರು. ಕಾರ್ಯಾಗಾರಕ್ಕೆ1000ಕ್ಕೂ ಹೆಚ್ಚು ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ನೋಂದಣಿ ಪಡೆದು ಆನ್ ಲೈನ್ ಮೂಲಕ ಉಪಸ್ಥಿತರಿದ್ದರು

    ಒಮ್ಮೆ ಪ್ರೀತಿಸಿ ನೋಡಿ..!

    ಇವನು ನನ್ನನ್ನು ಅಥವಾ ನಾನು ಇವನನ್ನು ಪ್ರೀತಿಸದೇ ಹೋಗಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರುತ್ತಿದ್ದೆ..

    ಮನೆ ಬಿಟ್ಟು ಮೂರು ದಿನ ಆಯ್ತು..ನನ್ನ ಬ್ರೂನೋಗೆ ಊಟ ಸರಿಯಾಗಿ ಆಗ್ತಿದೆಯೋ ಇಲ್ವೋ.

    ನಾನು ಮನೆಯಿಂದ ಹೊರಗೆ ಬಂದು ಪೋರ್ಟಿಕೊದಲ್ಲಿ ಕುಳಿತಕೂಡಲೇ ಅದೆಲ್ಲಿರ್ತವೋ ಏನೋ.ಗುಬ್ಬಚ್ಚಿಗಳು ಹಿಂಡಿನಲ್ಲಿ ಬಂದು ಚುಂಯೋಪಂಯೋ ಅನ್ನುತ್ತವೆ..

    ನನ್ನ ಗೌರಿ.. ಅವಳನ್ನು ಮಾರಿ ಇಲ್ಲಿಗೆ ಹನ್ನೊಂದು ವರ್ಷ…ನನ್ನ ಚಿತ್ತದಲ್ಲಿನ್ನೂ ಅವಳು ಹಚ್ಚಹಸಿರು…

    *******

    ಯಾಕೆ ನಾವು ಯಾರನ್ನಾದರೂ, ಏನನ್ನಾದರೂ,ಯಾವುದನ್ನಾದರೂ ಹೀಗೆ ಅಕಾರಣ ಪ್ರೀತಿಸಲು ತೊಡಗುತ್ತೇವೆ. ಎಲ್ಲೋ ನೋಡಿದ ತುಂಬಾ ಸಾಮನ್ಯ ಹುಡುಗ. ಮಗ ಎತ್ತಿಕೊಂಡು ಬಂದು ಮಡಿಲಿಗೆ ಹಾಕಿದ ಪುಟ್ಟ ನಾಯಿಮರಿ.. ಗೆಳತಿ ಸುಮ್ಮನೆ ನೆನಪಿಗೆ ಕೊಟ್ಟ ಸೂಜಿ ಮಲ್ಲಿಗೆಬಳ್ಳಿ.
    ಬಹಳ ಹಿಂದೆ ಕೊಂಡ ಕನಕಾಂಬರ ಬಣ್ಣದ ಕುರ್ತಾ..
    ನಾನು ಬಂದೊಡನೆ ಹಾರಿಬರುವ ಆ ಪುಟ್ಟ ಗುಬ್ಬಿ
    ಹೀಗೇ..ನಾವು ಪ್ರೀತಿಸುವವರ,ಪ್ರೀತಿಸುವುದರ ಪಟ್ಟಿ ಬೆಳೆಯತ್ತಾ ಹೋಗುತ್ತದೆ.

    ಪ್ರೀತಿಗೆ ಸಾಮನ್ಯವಾಗಿ ಒಂದು ಗುಣವಿರುತ್ತದೆ.ಕೊಟ್ಟು ತೆಗೆದುಕೊಳ್ಳದ ಹೊರತು ಪ್ರೀತಿ ಹೆಚ್ಚು ಕಾಲ ಉಳಿಯದು.ಹಾಗಿದ್ದರೆ…ಮಲ್ಲಿಗೆ ಬಳ್ಳಿ,ಕುರ್ತಾ ಹೇಗಾದರೂ ಪ್ರೀತಿ ತೋರಿಸಿಯಾವು?

    ಅಲ್ಲೇ ಇರುವುದು ಮನುಷ್ಯ ಮರ್ಮ..ಇಡೀ ಜಗತ್ತು ಇಂದು ಸಂತೋಷವಾಗಿರುವುದು ಹೇಗೆ ಯೌವನಿಗರಾಗಿರುವುದು ಹೇಗೆ ಎನ್ನುವುದರ ಬೆನ್ನು ಬಿದ್ದಿದೆ.

    ಸೆರಟಾನಿನ್ ಮೆಲಟಾನಿನ್,ಡೊಪಮೈನ್ ಎಂಬಿತ್ಯಾದಿ ಖುಷಿಯ ಹಾರ್ಮೋನುಗಳು ನಮ್ಮೊಳಗೆ ಚಿಮ್ಮಿದಷ್ಟೂ ನಾವು ಚಿರ ಯೌವನಿಗರು..ಸಂತೋಷದ ಪ್ರಭಾವಳಿ ನಮ್ಮನ್ನು ಆವರಿಸುತ್ತದೆ ,ನಮ್ಮ ಜೊತೆಗಿರುವವರಿಗೂ ಖುಷಿಯ ಅಂಟುಜಾಡ್ಯ ಹಬ್ಬಿಸಬಲ್ಲೆವು ಆಗ ನಾವು.

    ಯಾಕೆ ನಾವು ಏನನ್ನಾದರೂ,ಯಾರನ್ನಾದರೂ ಹಾಗೇ ಗಾಢವಾದ ತೀವ್ರತೆಯಲ್ಲಿ ಪ್ರೀತಿಸುತ್ತೇವೆ ಎನ್ನುವುದಕ್ಕೆ ನಮ್ಮ ಸ್ವಾರ್ಥವೂ ಕಾರಣ.
    ಹೀಗೆ ಗಾಢವಾಗಿ ಪ್ರೀತಿಸುವಾಗ ನಮ್ಮೊಳಗೆ ಖುಷಿಯ ಹಾರ್ಮೋನುಗಳ ಸ್ರಾವ ಆಗುತ್ತದೆ‌.

    ನಮಗರಿವಿದ್ದರೂ ಇಲ್ಲದಿದ್ದರೂ ಪ್ರೀತಿಸುವ,ಪ್ರೀತಿಸಲ್ಪಡುವ ಸರ್ವರಿಗೂ ಇದು ಆಗುವಂತದ್ದೆ.

    ಇದಲ್ಲದೇ

    ನನ್ನ ಡಾಗಿಯನ್ನು ಹೊಗಳಿದಾಗ,
    ನನ್ನ ಸೂಜಿಮಲ್ಲಿಗೆ ಬಗ್ಗೆ ಮೆಚ್ಚುಗೆ ಸಿಕ್ಕರೆ,
    ನಾನು ತೊಟ್ಟ ಕನಕಾಂಬರ ಬಣ್ಣದ ಕುರ್ತಾದಿಂದ ನನ್ನ ಚಲುವು ಇಮ್ಮಡಿಸಿದರೆ,
    ಗೌರಿಹಸುವಿನ ಕುರಿತು ಯಾರಾದರೂ ಒಳ್ಳೆಯ ಮಾತಾಡಿದರೆ ಅದೆಲ್ಲವೂ ನಮ್ಮನ್ನೇ ಹೊಗಳಿದಂತೆ.
    ಪರೋಕ್ಷವಾಗಿ ನಮಗೆ ಸದಾ ಯಾರಾದರೂ, ಯಾವುದಕ್ಕಾದರೂ ಹೊಗಳುತ್ತಿರಬೇಕು..
    ಮನುಷ್ಯ ಸದಾ ಸ್ತುತಿಪ್ರಿಯ…
    ಹೊಗಳಿದಷ್ಟೂ ಅವನಿಗೆ ಅವೆಲ್ಲವನ್ನೂ ಇನ್ನಷ್ಟು ಪ್ರೀತಿಸುವ,ಹಚ್ಚಿಕ್ಕೊಳ್ಳುವ ಉಮೇದು ಹುಟ್ಟುತ್ತದೆ.

    *******

    ಜಗತ್ತನ್ನು ಮನ್ನಣೆಯ ದಾಹ ಆಳುತ್ತಿದೆ

    ಇನ್ನೂ ಅವನ,ಅವಳ ನಡುವಿನ ಪ್ರೀತಿ.. ಇದು ಮನುಷ್ಯ ಮಾತ್ರನಿಗೆ ಸಿಕ್ಕ ಅದ್ಭುತ..!
    ಸುತ್ತಲಿನಷ್ಟೂ ಪರಿಸರವನ್ನು ಸುಂದರವಾಗಿಸುವ ಈ ಪ್ರೀತಿ ಒಮ್ಮೆ ಎದೆ ಹೊಕ್ಕಿತೆಂದರೆ ಹಾದಿಬದಿಯ ತಂಗಡಿಯೂ ಪಾರಿಜಾತವೇ..
    ಕಡುಬಿಸಿಲೂ ಎಳಸು ಮುಂಜಾವೇ..ನಿದ್ದೆಯಿರದ ನಡುರಾತ್ರಿಗಳ ನೆನಪುಗಳಿಗೂ ಕೆನ್ನೆ ಹೊನ್ನು ಮೆತ್ತಿದ ಬೆಳಗು.

    ಪ್ರೀತಿಸುವುದೆಂದರೆ ಸುಮಾನಿಯಲ್ಲ.
    ಸುಮ್ಮನೆ ಅವನನ್ನೇ ಬದುಕುವುದು..
    ಅವನನ್ನೇ ಉಣ್ಣುವುದು,ಉಡುವುದು,ಉಸುರುವುದು..
    ಇದು ಹೀಗೆ ಆಗುವುದಕ್ಕೂ ಅದೃಷ್ಟ ಬೇಕು.
    ಒಮ್ಮೆ ಹೀಗೆ ಪ್ರೀತಿಸಿದ ಮೇಲೆ ಜಗದ ಯಾವ ಸೌಂದರ್ಯ ತಜ್ಞರ ಬಳಿಯೂ ಸಿಗಲಾರದ ಸೊಬಗು ,ಕಾಂತಿ ವ್ಯಕ್ತಿತ್ವಕ್ಕೆ ಬಂದಿರುತ್ತದೆ..
    ಇದು ಪ್ರೀತಿಯ ವೈಶಿಷ್ಟ್ಯ.

    ತನ್ನನ್ನು ತಾನು ಪ್ರೀತಿಸಿಕೊಳ್ಳುವುದು ಇಲ್ಲಿ ಬಹುಮುಖ್ಯ..
    ಒಂದು ಪ್ರೀತಿಯಲ್ಲಿ ಮುಳುಗಿದ ಮೇಲೆ ಇದೆಲ್ಲವೂ ಗುರುವಿಲ್ಲದೆ ಕಲಿಯುವ ವಿದ್ಯೆ.

    ತಾನು ಸುಖವಾಗಿರುವುದಕ್ಕೆ,ತನ್ನ ಪರಿಸರ ಪ್ರಕೃತಿ ಸುರಕ್ಷಿತವಾಗುಳಿಯುವುದಕ್ಕೆ,ತನ್ನ ಸಂತೋಷದಿಂದ ಜಗತ್ತು ಸಂಭ್ರಮಿಸುವುದಕ್ಕೆ ನಾವು ಪ್ರೀತಿಸಬೇಕು..
    ಯಾರಾನ್ನಾದರೂ,ಯಾವುದನ್ನಾದರೂ ಅಕಾರಣ ಪ್ರೀತಿಸಬೇಕು..

    ಒಮ್ಮೆ ಪ್ರೀತಿಸಿ ನೋಡಿ..!
    ಜಗತ್ತೇ ಪ್ರೀತಿಯಲ್ಲಿ ಅದ್ದಿಕೊಂಡಂತೆ ಕಂಡು ಬದುಕು ಅಚ್ಚರಿಯೆನಿಸುವುದು..!!

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    350 ಉಪನ್ಯಾಸಕರ ನೇಮಕ: ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಎಂ ಸೂಚನೆ

    ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ ನಂತರವೂ ನೆನೆಗುದಿಗೆ ಬಿದ್ದಿರುವ ಅನುದಾನಿತ ಪದವಿ ಕಾಲೇಜುಗಳ 350 ಉಪನ್ಯಾಸಕರ ನೇಮಕಾತಿ ಬಗ್ಗೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದರು.

    ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಅನುದಾನಿತ ಪ್ರಾಧ್ಯಾಪಕರ ಒಕ್ಕೂಟದ ಪ್ರತಿನಿಧಿಗಳು, ಉನ್ನತ ಶಿಕ್ಷಣ ಹಾಗೂ ಹಣಕಾಸು ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ ಡಿಸಿಎಂ, ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರಲ್ಲದೆ; ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಒಟ್ಟು 907 ಮಂದಿ ಉಪನ್ಯಾಸಕರನ್ನು ಅನುದಾನಿತ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದರಲ್ಲಿ 369 ಮಂದಿಗೆ ನೇಮಕಾತಿ ಅದೇಶ ನೀಡಿದ್ದು ಅವರೆಲ್ಲರೂ ತಮಗೆ ನಿಯೋಜನೆ ಆಗಿರುವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಜಿಸಿ ನಿಯಮಗಳ ಅನುಸಾರವಾಗಿಯೇ ಅವರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಡಿಸಿಎಂ ತಿಳಿಸಿದರು.

    ಇನ್ನು, 350 ಅಭ್ಯರ್ಥಿಗಳ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದು, ಇಷ್ಟೂ ಮಂದಿಯ ನೇಮಕಾತಿ ಕುರಿತಂತೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿಎಂ, ಈ ಬಗ್ಗೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರು ಕೂಡ, ಪ್ರಸ್ತಾವನೆ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

    ಕೊಳ್ಳೆಗಾಲದ ಶಾಸಕ ಮಹೇಶ್‌ ಅವರ ನೇತೃತ್ವಲ್ಲಿ ಡಾ.ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಅನುದಾನಿತ ಕಾಲೇಜುಗಳ ಉಪನ್ಯಾಸಕರು ತಮ್ಮೆಲ್ಲ ಸಮಸ್ಯೆಗಳನ್ನು ವಿವರಿಸಿದರು.

    2015ರ ಡಿಸೆಂಬರ್ 31ರವರೆಗಿನ ಬೋಧಕರ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಆ ಪ್ರಕಾರ ಈ ನೇಮಕ ಮಾಡಬೇಕಾಗಿದೆ.

    ಮಾಸ್ತಿ ಕಥಾಲೋಕಕ್ಕೆ ಹೊಸ ಬೆಳಕಿಂಡಿ

    ಕನ್ನಡದ ಸುಪ್ರಸಿದ್ಧ ಕತೆಗಾರ ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಂಸ್ಮರಣೆಗೆಂದು ವಸಂತ ಪ್ರಕಾಶನ ಹೊರ ತಂದಿರುವ ಕೆ. ಸತ್ಯನಾರಾಯಣ ಅವರು ರಚಿಸಿದ ಮಹಾ ಕಥನದ ಮಾಸ್ತಿ ಗ್ರಂಥದ ಲೋಕಾರ್ಪಣೆ ನಾಳೆ 12 ಡಿಸೆಂಬರ್ 2020 ರ ಶನಿವಾರ ಆಗಲಿದೆ. ಈ ಕೃತಿಯ ಪರಿಚಯವನ್ನು ನಮ್ಮ ಓದುಗರಿಗಾಗಿ ಯಜ್ಞದತ್ತ ಇಲ್ಲಿ ಮಾಡಿಕೊಟ್ಟಿದ್ದಾರೆ.

    ಕನ್ನಡದ ಪ್ರಮುಖ ಗದ್ಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಆಸ್ತಿ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಓದುತ್ತ, ಅವರ ಪ್ರಭಾವಕ್ಕೆ ಒಳಗಾಗುತ್ತ, ಆ ಪ್ರಭಾವವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತ, ತಮ್ಮದೇ ಒಂದು ಕಥನ ಶೈಲಿಯನ್ನು ರೂಢಿಸಿಕೊಂಡವರು. ಮಾಸ್ತಿಯವರ ಪ್ರಥಮ ಕಥಾ ಸಂಕಲನ ಪ್ರಕಟವಾಗಿ ನೂರು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಮಾಸ್ತಿಯವರ ಕತೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ `ಮಹಾ ಕಥನದ ಮಾಸ್ತಿ’ ಎಂಬ ಅಧ್ಯಯನಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಅಧ್ಯಯನದ ಶಿಸ್ತು ಒಬ್ಬ ಪಿಎಚ್‌.ಡಿ. ವಿದ್ಯಾರ್ಥಿಯ ರೀತಿಯದು.

    ಮಾಸ್ತಿಯವರು ಸುಮಾರು ಏಳು ದಶಕಗಳ ಅವಧಿಯಲ್ಲಿ ಒಂದು ನೂರು ಕತೆಗಳನ್ನು ಬರೆದಿದ್ದಾರೆ. ನವೋದಯದ ಆರಂಭದ ಕಾಲದಲ್ಲಿ ಕತೆಗಳನ್ನೇ ತಮ್ಮ ಸೃಜನಕ್ರಿಯೆಯ ಪ್ರಮುಖ ಮಾಧ್ಯಮವನ್ನಾಗಿ ಮಾಡಿಕೊಂಡವರಲ್ಲಿ ಮಾಸ್ತಿಯವರೇ ಅಗ್ರಗಣ್ಯರು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯದ ಅಲೆಗಳೆಲ್ಲ ಅವರ ಬರೆವಣಿಗೆಯ ಕಾಲದಲ್ಲಿ ಒತ್ತರಿಸಿ ಬಂದವು. ಈ ಎಲ್ಲ ಅಲೆಗಳ ಮೇಲೆ ತೇಲಿದ ಮಾಸ್ತಿಯವರು ಅವೆಲ್ಲವುಗಳಿಗಿಂತ ಹೇಗೆ ಭಿನ್ನವಾಗಿ ತಮ್ಮ ಕತೆಗಳನ್ನು ರಚಿಸಿದರು, ಆ ಕತೆಗಳ ಮೂಲ ಆಶಯವೇನು, ಕತೆಗಳು ಹೇಗೆ ಹುಟ್ಟಿಕೊಳ್ಳುತ್ತವೆ, ಸೃಜನ ಕೃತಿಯೊಂದು ಅಂತಿಮವಾಗಿ ಬೀರಬೇಕಾದ ಪರಿಣಾಮವೇನು, ಕನ್ನಡದ ಇತರ ಕತೆಗಾರರಿಂದ ಮಾಸ್ತಿ ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಇತ್ಯಾದಿ ಚರ್ಚೆಗಳನ್ನು ಸತ್ಯನಾರಾಯಣ ಅವರು ಇಲ್ಲಿ ಮಾಡಿದ್ದಾರೆ.

    ಪುಸ್ತಕದ ಮೊದಲ ಅಧ್ಯಾಯ `ಮಾಸ್ತಿಗನ್ನಡಿ’. ಮಾಸ್ತಿಯವರು ನೂರು ಕತೆಗಳನ್ನು ಬರೆದು, ಮೊದಲ ಕತೆ ಬರೆದು ನೂರು ವರ್ಷವೂ ಆಗುತ್ತ ಬಂದ ಸಂದರ್ಭದಲ್ಲಿ ತಾವು ಬದುಕಿದ್ದಾಗ ಅಡ್ಡಾಡಿದ್ದ ಗುಟ್ಟಳ್ಳಿ, ಗವಿಪುರ ಮೊದಲಾದ ಪ್ರದೇಶಗಳು, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದವುಗಳನ್ನು ನೋಡಿಕೊಡು ಹೋಗಲು ಮತ್ತೊಮ್ಮೆ ಭೂಮಿಗೆ ಬರುತ್ತಾರೆ. ತಾವು ಕತೆ ಬರೆದಾಗಿನ ದಿನಗಳಿಗೂ ಈಗಿನ ದಿನಗಳಿಗೂ ಆಗಿರುವ ಮಹತ್ತರವಾದ ಬದಲಾವಣೆಗಳನ್ನು, ಚಿಂತನ ಕ್ರಮಗಳನ್ನು ಅವರು ಗಮನಿಸುತ್ತಾರೆ. ತಮ್ಮ ಕತೆಯ ಪಾತ್ರಗಳು ಈಗ ಹೇಗಿವೆ ಎಂಬುದನ್ನು ನೋಡುತ್ತಾರೆ. ಈ ಅಧ್ಯಾಯದ ಕೊನೆಯ ಪ್ಯಾರಾ ಹೀಗಿದೆ- ಕಂಡ ಮೊದಲ ದೃಶ್ಯದಲ್ಲೇ ಹಿಂದಿನ ದಿನ ತಾನೇ ಕೇಳಿ ಪರಿಚಯವಾಗಿದ್ದ, ಮೈಯೆಲ್ಲಾ ಗಂಧೆಯಾಗಿ ನರಳುತ್ತಿದ್ದ ಸುಶೀಲ ಎಂಬ ಹುಡುಗಿಗೆ ಈಗ ಸುಖವಾಗಿ ಪ್ರಸವವಾಗಿ ಮಗ್ಗುಲಲ್ಲಿ ಮೊರದ ತುಂಬಾ ಮಲಗಿದ್ದ ಹಸಿ ಹಸಿ ಮಗುವಿನ ಕೆನ್ನೆಯನ್ನು ತಾಯಿಯು ಬಲಗೈಯ ತುದಿ ಬೆರಳಿನಿಂದ ಮುಟ್ಟಿದರೂ ಮುಟ್ಟದಂತೆ ಸವರುತ್ತಿದ್ದಳು.- ನಿಜ, ಮಾಸ್ತಿ ಕಂಡಿದ್ದ ಮತ್ತು ಕಾಣ ಬಯಸಿದ್ದ ಜೀವನ ಪ್ರೀತಿ ಈಗಲೂ ಹಾಗೆಯೇ ಇದೆ ಎಂಬುದನ್ನು ಸತ್ಯನಾರಾಯಣ ಅವರು ಸೃಜನಾತ್ಮಕ ರೀತಿಯಲ್ಲಿ ವಿವರಿಸುತ್ತಾರೆ. ಇದು ಅವರು ಬರೆದಿದ್ದ ಒಂದು ಕತೆಯಾಗಿದ್ದು, ಅವರ ಒಂದು ಸಂಕಲನದಲ್ಲಿ ಈಗಾಗಲೆ ಪ್ರಕಟವಾಗಿಯೂ ಇದೆ. ಮಾಸ್ತಿಯವರ ನೂರನೆ ಕತೆ `ಮಾಯಣ್ಣನ ಕನ್ನಡಿ’ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು.

    ಇದರಲ್ಲಿಯೇ ಕತೆ ಎಂದರೆ ಏನು ಎಂಬುದರ ಜಿಜ್ಞಾಸೆಗೂ ಮಾಸ್ತಿಯವರು ಸಾಕ್ಷಿಯಾಗುತ್ತಾರೆ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಹೋಗಿ ಕುಳಿತ ಮಾಸ್ತಿಯವರು ಭಾಷಣ ಕೇಳಿಸಿಕೊಳ್ಳುತ್ತಾರೆ. ಒಬ್ಬ ಭಾಷಣಕಾರ, ಯಾವ ಕತೆಯೂ ನಿಜವಲ್ಲ, ಯಾವ ಕತೆಯೂ ಪೂರ್ಣವಲ್ಲ. ಕತೆ ಬರೆಯುವವನು ಕತೆಯ ಅಗತ್ಯಕ್ಕಾಗಿ ಬರೆಯುವುದಿಲ್ಲ. ತನ್ನ ಅಗತ್ಯಕ್ಕೆ ತನಗೆ ಬೇಕಾದಷ್ಟು ಮಾತ್ರ ಬರೆಯುತ್ತಾನೆ. ಕತೆ ನಿಜವಲ್ಲ. ನಿಜದ ಒಂದು ಭಾಗ. ಕತೆ ಬರೆಯುವಾಗಲೂ, ಕತೆ ಬರೆದ ನಂತರವೂ ನಿಜ ಹಾಗೇ ಉಳಿದಿರುತ್ತದೆ. ಸಾರಾಂಶವೆಂದರೆ ಕತೆಗೂ ವೃತ್ತ ಪತ್ರಿಕೆಗೂ, ಕತೆಗೂ ಹೋಟೆಲ್‌ ಮೆನುಕಾರ್ಡಿಗೂ ಅಂತಹ ವ್ಯತ್ಯಾಸವೇನಿಲ್ಲ ಎಂದು ಹೇಳುತ್ತಾನೆ.- ಇದನ್ನು ಕೇಳಿಸಿಕೊಂಡ ಮಾಸ್ತಿಯವರು ತುಂಬ ಚಡಪಡಿಸುತ್ತಾರೆ. ಅವರಿಗೆ ಆ ಮಾತುಗಳು ಒಪ್ಪಿಗೆಯಾಗುವುದಿಲ್ಲ. ನಾನು ಬರೆದ ಒಂದೇ ಒಂದು ಕತೆ ಸುಳ್ಳಲ್ಲ. ಎಲ್ಲವೂ ಕಂಡದ್ದು ಕಂಡವರಿಂದ ಕೇಳಿಸಿಕೊಂಡದ್ದು ಎನ್ನುವ ಮಾಸ್ತಿ ಅಲ್ಲಿಂದ ಅಸಮಾಧಾನದಿಂದಲೇ ಹೊರಟುಬಿಡುತ್ತಾರೆ.

    ಈ ಎಳೆಯಲ್ಲಿಯೇ ಸತ್ಯನಾರಾಯಣ ಅವರು ಮಾಸ್ತಿಯವರ ಅನುಸಂಧಾನ ಮಾಡುತ್ತಾರೆ. ಮಾಸ್ತಿಯವರ ಪಾತ್ರಗಳು ಸಮಾಜದ ಬೇರೆ ಬೇರೆ ಸ್ತರಗಳಿಗೆ ಸೇರಿದವು. ಇತಿಹಾಸದ ಬೇರೆ ಬೇರೆ ಕಾಲದಿಂದ ಮೂಡಿಬಂದಿರುವಂಥವು. ಹಾಗೆಯೇ ಪುರಾಣ ಪ್ರಪಂಚದಿಂದ, ಬೇರೆ ಬೇರೆ ದೇಶಗಳಿಂದ ಮೂಡಿಬಂದ ಪಾತ್ರಗಳು ಕೂಡ ಇಲ್ಲಿವೆ. ಇದು ಮಾಸ್ತಿಯವರಿಗೆ ವಿಶಿಷ್ಟವಾದ ಹೆಗ್ಗಳಿಕೆ. ಇಷ್ಟೊಂದು ವೈವಿಧ್ಯಮಯವಾದ ಪಾತ್ರಗಳನ್ನು ಜೀವಂತವಾಗಿ ಸೃಷ್ಟಿಸಿದ ಇನ್ನೊಬ್ಬ ಕನ್ನಡ ಲೇಖಕನಿಲ್ಲ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ಹೇಳುತ್ತಾರೆ. ಮಾಸ್ತಿಯವರಿಗೆ ಬರೆವಣಿಗೆ ಎಂದರೆ ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು, ಅದರ ಸಂಗತಿಯನ್ನು ಬೇರೆ ಜೀವಕ್ಕೂ ತಿಳಿಸುವ ಆಸೆಯದು. ಸಾಹಿತ್ಯ ಹಲವು ರೀತಿ ಉದಯಿಸಬಲ್ಲದು. ಆದರೆ ಅದು ಹೀಗೆ ಉದಯಿಸಿದಾಗ ಸಾಹಿತ್ಯವೆಂಬ ಕರ್ಮದ ಅತ್ಯುತ್ತಮ ಲಕ್ಷ್ಯವನ್ನು ಸಾಧಿಸಹೊರಟಿರುತ್ತದೆ ಎಂಬ ತಿಳಿವಳಿಕೆ ಅವರದು.

    ಕೆ.ಸತ್ಯನಾರಾಯಣ ಅವರು ತಮ್ಮ ಮಾಸ್ತಿ ಅಧ್ಯಯನದಲ್ಲಿ ಅವರ ಕಥಾಲೋಕದ ವಿಶೇಷಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ ಹತ್ತನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.

    1.ಮಾಸ್ತಿ ತಮ್ಮ ಬರವಣಿಗೆಯ ಎಲ್ಲ ಘಟ್ಟದಲ್ಲೂ ಮನುಷ್ಯನಾದವನು ಇಲ್ಲಿ ಅರ್ಥಪೂರ್ಣ ಬದುಕೆಂಬುದನ್ನು ನಡೆಸಬೇಕಾದರೆ ನಿರಂತರವಾಗಿ ಎದುರಿಸಬೇಕಾದ `ಕಾಣುವ’ ಮತ್ತು ಕಂಡದ್ದನ್ನು `ಪ್ರಸ್ತುತಗೊಳಿಸುವ’ ಸಮಸ್ಯೆಯ ಬಗ್ಗೆಯೇ ಯೋಚಿಸುತ್ತಿದ್ದರು.

    2.ಅವರ ಕತೆಗಳ ಮನುಷ್ಯ ವರ್ತಮಾನ ಮತ್ತು ಭವಿಷ್ಯ ಎರಡರಲ್ಲೂ ಒಟ್ಟಿಗೆ ಬದುಕುತ್ತಿರುತ್ತಾನೆ.

    3.ಮಾಸ್ತಿ ಕತೆ ಹೇಳುವವರೂ ಅಲ್ಲ- ಹಿಂದಿನ ಪುರಾಣಿಕರುಗಳಂತೆ; ಕತೆ ಕಟ್ಟುವವರೂ ಅಲ್ಲ- ಅವರ ಮುಂದೆ ಬಂದ ನವ್ಯರಂತೆ. ಅವರು ಕತೆಯನ್ನು ದಾಟಿಸುವವರು, ಒಪ್ಪಿಸುವವರು…. ಅವರೇನು ನಮಗೆ ಚಿತ್ರವತ್ತಾದ ವಿವರಗಳನ್ನು ಕೊಡುವುದಿಲ್ಲ. ವಿಶೇಷ ಎನ್ನುವಂತಹ  ವರ್ಣನೆಯೂ ಇರುವುದಿಲ್ಲ. ಅವರ ಕತೆಗಳ  ವಿವರ ಬರುವುದು ಸಾರಸಂಗ್ರಹ ರೂಪದಲ್ಲಿ- ಸಾರಾಂಶದಲ್ಲಿ, ಒಮ್ಮೊಮ್ಮೆ ವಿಶ್ಲೆಷಣೆಯಲ್ಲಿ. ಕತೆಯನ್ನು ನಾವು ಇನ್ನೊಬ್ಬರಿಗೆ ಹೇಳುವಾಗ, ಇನ್ನೊಬ್ಬರು ಹೇಳಿದ್ದನ್ನು ಕೇಳಿಸಿಕೊಳ್ಳುವಾಗ ನಮ್ಮಗಳ ಮನಸ್ಸಿನಲ್ಲಿ ವಿವರಗಳು ದಾಖಲಾಗುವ ಸ್ವರೂಪವೇ ಇದು.

    4.ಕತೆ ದಾಟಿಸುವವನ ಮುಖ್ಯ ಕರ್ತವ್ಯವೆಂದರೆ ಇನ್ನೊಬ್ಬನ `ಅನುಭವ’ವನ್ನು ತನ್ನ ಅನುಭವದಷ್ಟೇ ತುರ್ತಿನಲ್ಲಿ, ನಿಜದಲ್ಲಿ ನೋಡಿ ಕತೆ ದಾಟಿಸಬೇಕಾಗುವುದು. ಹೀಗೆ ಇನ್ನೊಬ್ಬರ ಅನುಭವವನ್ನು ತನ್ನ ಅನುಭವದಷ್ಟೇ ಒಳಗುಮಾಡಿಕೊಳ್ಳುವ ಪ್ರಕ್ರಿಯೆ ಕತೆಗಾರನಿಗೆ, ಕಲಾವಿದನಿಗೆ ಮಾತ್ರ ಅನಿವಾರ್ಯವೆಂದು ಮಾಸ್ತಿ ಭಾವಿಸುವುದಿಲ್ಲ. ಅದು ಎಲ್ಲ ಮನುಷ್ಯರ ಕರ್ತವ್ಯ ಎಂದು ಕೂಡ ಅವರು ತಿಳಿದಂತಿದೆ.

    5.ಮಾಸ್ತಿಯವರಿಗೆ ಒಂದು ಕಾಲದ ಒಂದು ಚಾರಿತ್ರಿಕ ಸನ್ನಿವೇಶದ ಬದುಕಿಗಿಂತ ಮತ್ತೆ ಮತ್ತೆ ಎದುರಾಗುವ ಮನುಷ್ಯನ ಮೂಲಭೂತ ಆಶಯಗಳಿಗೆ ಸಂಬಂಧಪಟ್ಟಂತಹ ಮಾದರಿಗಳನ್ನು ಬೇರೆಬೇರೆ ಸನ್ನಿವೇಶದಲ್ಲಿ ಬೇರೆಬೇರೆ ಹಿನ್ನೆಲೆಯಲ್ಲಿ ಇಟ್ಟು ನೋಡುವುದೇ ಹೆಚ್ಚು ಅರ್ಥಪೂರ್ಣವಾಗಿ ಕಂಡಂತಿದೆ.

    6.ಮಾಸ್ತಿ ಮನುಷ್ಯರ ಕತೆಗಳನ್ನು ಚರಿತ್ರೆಯಂತೆಯೂ, ಚರಿತ್ರೆಯನ್ನು ಮನುಷ್ಯರ ಕತೆಗಳಂತೆಯೂ ಹೇಳುತ್ತಾ ಹೋಗುತ್ತಾರೆ. ಇತಿಹಾಸದಿಂದ ಇವೊತ್ತಿನ ಮನುಷ್ಯನ ತಿಳಿವಳಿಕೆಗೆ, ಸ್ವಭಾವಕ್ಕೆ ಏನು ಪಡೆಯಬೇಕೆಂಬುದನ್ನು ತಮ್ಮ ಬರವಣಿಗೆಯುದ್ದಕ್ಕೂ ಯೋಚಿಸಿದವರು ಮಾಸ್ತಿಯೊಬ್ಬರೇ ಎಂದು ಅನ್ನಿಸುತ್ತದೆ.

    7.ಮಾಸ್ತಿಯವರ ಬಹುತೇಕ ಪಾತ್ರಗಳು, ವಿಶೇಷವಾಗಿ ಸ್ತ್ರೀಪಾತ್ರಗಳು ಬದುಕಿನಲ್ಲಿ ಏನನ್ನೋ ಒಂದು ಉತ್ತಮವಾದದ್ದನ್ನು ಎತ್ತಿ ಹಿಡಿಯುವ ಪ್ರಸಂಗ ಬಂದಾಗ ಸದ್ದಿಲ್ಲದೆ ಸಾವನ್ನು ಒಪ್ಪಿಕೊಳ್ಳುವುದನ್ನು ಕಾಣುತ್ತೇವೆ.

    8.ಕತೆಗಾರಿಕೆಯ ಉದ್ದೇಶವೇನು, ಕತೆಗೂ ಕತೆಗಾರನಿಗೂ, ಕತೆಗೂ ಜೀವನಕ್ಕೂ ಇರುವ ಇರಬೇಕಾದ ಸಂಬಂಧ ಯಾವ ಸ್ವರೂಪದ್ದು ಎಂಬೆಲ್ಲ ಪ್ರಶ್ನೆಗಳ ಅರ್ಥಪೂರ್ಣ ಚರ್ಚೆಗೆ ಮಾಸ್ತಿ ಕತೆಗಳು ನೆರವಿಗೆ ಬರುವ ಹಾಗೆ ಮತ್ತ್ಯಾವ ಕತೆಗಾರರ ಬರವಣಿಗೆಯೂ ಬರುವುದಿಲ್ಲ.

    9.ಮಾಸ್ತಿಯವರು ಇಲ್ಲಿಯ ಜನಪದರು ತಮ್ಮ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದ ಸಂಘರ್ಷಗಳನ್ನು ಎದುರಿಸುವಲ್ಲಿ ತೋರಿದ ಜಾಣ್ಮೆಯನ್ನು ಧಾರಣಾಶಕ್ತಿಯನ್ನು ಮಾತ್ರವೇ ಮತ್ತೆ ಮತ್ತೆ ಎಂಬಂತೆ ತಮ್ಮ ಕತೆಗಳಲ್ಲಿ ಪ್ರತಿನಿಧೀಕರಿಸುತ್ತ ಹೋದರು. ಏಕೆದರೆ ಇಂತಹ ಜಾಣ್ಮೆ, ಧಾರಣಾಶಕ್ತಿ ಮಾತ್ರ ಇಲ್ಲಿಯ ನಾಗರಿಕತೆಗೆ ಬಹುಕಾಲ ಬದುಕುಳಿಯುವ ಗುಣಸ್ವಭಾವವನ್ನು ತಂದುಕೊಟ್ಟಿದೆಯೆಂದು ಅವರು ನಂಬಿದ್ದರು,

    10.ಅನುಭವದ ಧ್ವನಿಯನ್ನು ಮಾಸ್ತಿ ಗ್ರಹಿಸಿ ಕಥೆಯ ಭೂಮಿಕೆಗೆ ತಂದು ಬಿಡುತ್ತಾರೆ. ನಂತರ ಅನುಭವದ ತಾತ್ವಿಕ ಸ್ವರೂಪವನ್ನು ತಾಳಿಕೊಳ್ಳುವಂತಹ ಪ್ರಶ್ನೆಗಳಿಗೆ, ಜಿಜ್ಞಾಸೆಗೆ ಗಮನ ಕೊಡುತ್ತಾರೆ. ಈ ಪ್ರಶ್ನೆ ಜಿಜ್ಞಾಸೆ ತುಂಬಾ ಮೆಲುದನಿಯಲ್ಲಿ, ನೇರ ಸಂಭಾಷಣೆಯಲ್ಲಿ, ಸರಳ ನಿರೂಪಣೆಯಲ್ಲಿ ನಡೆಯುವುದರಿಂದ ಕಥೆಗಳು ಯಾವತ್ತೂ ಭಾರವೆನಿಸುವುದಿಲ್ಲ.

    ಕೆ.ಸತ್ಯನಾರಾಯಣ ಅವರು ಮಾಸ್ತಿಯವರನ್ನು ಮತ್ತೆ ಮತ್ತೆ ಓದಿದ್ದಾರೆ, ಮಾಸ್ತಿಯವರ ಬಗ್ಗೆ  ಬೇರೆಯವರು ಬರೆದುದನ್ನು ಓದಿದ್ದಾರೆ, ಮಾಸ್ತಿಯವರ ಸಾಹಿತ್ಯದ ಕುರಿತು ಹಿರಿಯರೊಂದಿಗೆ ಚರ್ಚಿಸಿದ್ದಾರೆ. ಅವೆಲ್ಲವುಗಳ ಸಾರ ಈ ಕೃತಿಯಲ್ಲಿ ಹರಳುಗಟ್ಟಿದೆ. ಮಾಸ್ತಿಯವರು ಮನುಷ್ಯನ ಘನತೆಯನ್ನು ಕಾಣುವುದಕ್ಕೆ ಮತ್ತು ಅದನ್ನು ತಮ್ಮ ಸಮಾಜಕ್ಕೆ ತೋರಿಸುವುದಕ್ಕೆ ತಮ್ಮ ಕತೆಗಳನ್ನು ಹೇಗೆ ಸಾಧನ ಮಾಡಿಕೊಂಡರು ಎಂಬುದನ್ನು ಅವರದೇ ಕತೆಗಳನ್ನು ಚರ್ಚಿಸುವ ಮೂಲಕ ಇಲ್ಲಿ ಹೇಳಲಾಗಿದೆ. ಮಾಸ್ತಿಯವರ ಕಥಾ ಬರೆವಣಿಗೆಯ ಶತಮಾನದ ಸಂದರ್ಭದಲ್ಲಿ ಈ ಕೃತಿ ಹೊರಬರುತ್ತಿರುವುದು ತುಂಬ ಸಾಂದರ್ಭಿಕವಾಗಿದೆ. ಇದು ಮಾಸ್ತಿಯವರನ್ನು ಸದಾ ಚರ್ಚೆಯಲ್ಲಿ ಇಡಲಿ, ಇನ್ನಷ್ಟು ಇಂಥ ಅಧ್ಯಯನಗಳಿಗೆ ಪ್ರೇರಣೆಯನ್ನು ನೀಡಲಿ.(ಮಾಸ್ತಿ ಚಿತ್ರ ಕೃಪೆ ವಿಕಿಪಿಡಿಯಾ)

    ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಹಾಕಥನದ ಮಾಸ್ತಿ ಕೃತಿಯ ಜೊತೆಗೆ ಎಸ್ ಆರ್ ವಿಜಯಶಂಕರ ಬರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು- ಬರಹ ಕೃತಿಯು ಕೂಡ ಲೋಕಾರ್ಪಣೆಗೊಳ್ಳಲಿದೆ.

    ಜ್ಯಾಮಿಟ್ರಿ ಬಾಕ್ಸ್ ಎಂಬ ಮಾಯಾ ಪೆಟ್ಟಿಗೆ

    ನಮ್ಮ ಬದುಕಿನ ಮೊದಲ ಪುಟ್ಟ ಬ್ಯಾಂಕ್ , ಲಾಕರ್ . ಹೆಣ್ಣು ಮಕ್ಕಳಿಗಂತೂ ಇದೇ ಪರ್ಸು .ದುಡ್ಡು , ಉಂಗುರ , ಹೇರ್ ಬ್ಯಾಂಡ್ , ಬಿಂದಿ , ಚಿಕ್ಕಿ , ಚಾಕಲೇಟ್ ಹೀಗೆ ಹತ್ತು ಹಲವಾರನ್ನು ಇರಿಸಿಕೊಳ್ಳೋ ಬಹುಪಯೋಗಿ ಪೆಟ್ಟಿಗೆ .ಹೌದು ಇದುವೇ ನಮ್ಮ ಬಾಲ್ಯದ “ಜ್ಯಾಮಿಟ್ರಿ ಬಾಕ್ಸ್ “.

    ಶಾಲೆಯಲ್ಲಿ ಭಾಗಶಃ ಎಲ್ಲರ ಹತ್ತಿರವೂ ಇರ್ತಿತ್ತು .
    ಮೊದಲ ಸಲ ತೆರೆದು ನೋಡಿದಾಗ ನಿಜಕ್ಕೂ ನಮ್ಮ ಪುಟ್ಟ ಕಂಗಳಲ್ಲಿ ಬೆಳಕು ಮೂಡುತ್ತಿತ್ತು . ಪ್ರತಿ ಸಲ ತೆಗೆದಾಗಲೂ ಮನಸ್ಸಿಗೆ ಅದೇನೊ ಆನಂದವಿರುತ್ತಿತ್ತು.

    ಸ್ಕೇಲು , ತ್ರಿಭುಜಾಕಾರದ ಸ್ಕೇಲು , ರಬ್ಬರ್ರು , ಡಿಗ್ರಿ ಎಂದು ಕರೆಯುತ್ತಿದ್ದ ಅರ್ಧಾಕೃತಿಯ ಕೋನಮಾಪಕ , ಕಾಂಪಾಸ್ ಅದನ್ನ ಕೈವಾರ ಅಂತಿದ್ವಿ ಅದರ ಜೊತೆ ಎರಡು ಮುಳ್ಳಿನದ್ದೊಂದು ವಿಭಜಕ ಇರುತ್ತಿತ್ತು ಅದನ್ನ ನಾವು ಒಂದು ದಿನಕ್ಕೂ ಉಪಯೋಗಿಸಲಿಲ್ಲ . ಹೀಗೆ ಅದರೊಳಗೆ ಕುತೂಹಲ ಮೂಡಿಸುವ ಪರಿಕರಗಳಿರುತ್ತಿತ್ತು .

    ಹೊಸದಾಗಿ ಕೊಂಡಾಗ ಅದೆಷ್ಟು ಸಂಭ್ರಮಿಸುತ್ತಿದ್ದೆವೋ ಅನುಭವಿಸಿದವರಿಗೇ ಗೊತ್ತು .

    ಒಂದು ಪೇಪರ್ರನ್ನು ಬಾಕ್ಸಿನ ಅಳತೆಗೆ ಕಟ್ ಮಾಡಿ ಬಾಕ್ಸಿನ ತಳದಲ್ಲಿ ಅದನ್ನು ಹಾಸಿ ಅದರ ಮೇಲೆ ಎಲ್ಲಾ ಜೋಡಿಸಿಕೊಳ್ಳುತ್ತಿದ್ದೆವು . ಮದುವೆ ಇನ್ವಿಟೇಶನ್ ನಲ್ಲಿ ಮುದ್ರಿತವಾಗಿ ಬರುತ್ತಿದ್ದ ಚಿನ್ನದ ಬಣ್ಣದ ಗಣೇಶ ವೆಂಕಟೇಶ್ವರ ದೇವರುಗಳ ಫೋಟೋಗಳನ್ನು ಜ್ಯಾಮಿಟ್ರಿ ತೆಗೆದಾಗ ಕಾಣುವ ಹಾಗೆ ಮುಚ್ಚಳಕ್ಕೆ ಅಂಟಿಸಿಕೊಳ್ಳುತ್ತಿದ್ದೆವು.

    ಹೆಣ್ಮಕ್ಳ ಜ್ಯಾಮಿಟ್ರಿಯಂತೂ ನೆಲ್ಲಿಕಾಯಿ , ಎಳಚಿಕಾಯಿ , ಸೆಂಟ್ ರಬ್ಬರ್ರು , ಕಾಡಿಗೆ , ಬಣ್ಣಬಣ್ಣದ ಬಿಂದಿಗಳು , ನವಿಲುಗರಿ , ತುಳಸಿ ಎಲೆ ಹೀಗೆ ತುಂಬೋಗಿರೋದು .

    ಮನೆಯಲ್ಲಿ ಹೊಸದಾಗಿ ಕೊಡಿಸಿದಾಗ ಅದರ ಮೇಲಿನ ಕವರ್ರನ್ನೂ ತೆಗೆಯದೇ ಜೋಪಾನ ಮಾಡುತ್ತಿದ್ದ ನಾವು ಕೊನೆ ಕೊನೆಗೆ ಅದನ್ನು ಹಲ್ಲಲ್ಲಿ ಕಚ್ಚಿ ತೆಗೆಯೋ ಪರಿಸ್ಥಿತಿಗೆ ತಂದುಬಿಡ್ತಿದ್ವಿ .

    ಗಣಿತದ ಮೇಷ್ಟ್ರು ಎಲ್ಲಾ ಜ್ಯಾಮಿಟ್ರಿ ಬಾಕ್ಸ್ ಓಪನ್ ಮಾಡಿ ಇಟ್ಕೋಳಿ ಅಂದ್ರೆ ಸಾಕು ಒಬ್ಬೊಬ್ಬರದು ಒಂದೊಂದು ಸೌಂಡ್ ಬರೋದು . ಇಂಕ್ ಪೆನ್ನು ಅದು ಲೀಕ್ ಆಗಿ ಆ ಕೆಳಗೆ ಹಾಸಿದ್ದ ಪೇಪರ್ರೆಲ್ಲಾ ಗಬ್ಬೆದ್ದು ಹೋಗಿರೊದು .ಲೆಕ್ಕದಲ್ಲಿ ತಪ್ಪು ಮಾಡಿದಾಗ ಮೇಷ್ಟ್ರು ನಿನಗೆ ಜ್ಯಾಮಿಟ್ರಿ ಬಾಕ್ಸ್ ಬೇರೆ ಕೇಡು ಅಂತ ಬಯ್ಯೋವ್ರು ಹೊಡೆಯೋವ್ರು .

    ಸ್ನೇಹಿತರ ಜೊತೆ ಸ್ಪರ್ಧೆಗೆ ಇಳಿದಾಗ , ಶಾಲೆಗೆ ವೇಳೆಯಾಯಿತು ಅಂತ ಓಡುವ ವೇಗದಲ್ಲಿ ಮುಗ್ಗರಿಸಿ ಬಿದ್ದಾಗ ಜ್ಯಾಮಿಟ್ರಿ ಬಾಕ್ಸ್ ಬಿದ್ದು ಅದರಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿರೋದು , ಸ್ನೇಹಿತರು ಬಂದು ಎಲ್ಲಾ ಆಯ್ಕೊಡೋವ್ರು . ಮಂಡಿ ಮಣ್ಣಾಗಿ ಚರ್ಮ ಕಿತ್ತು ರಕ್ತ ಬರುತ್ತಿದ್ದರೂ ನಮ್ಮ ಗಮನವೆಲ್ಲಾ ಬಿದ್ದ ಬಾಕ್ಸಿನ ಮತ್ತು ಅದರೊಳಗಿನ ವಸ್ತುಗಳ ಮೇಲಿರೋದು .

    ಈಗ ತರಾವರಿ ನಮೂನೆಗಳ ಅತ್ಯಾಕರ್ಷಕವಾದ ಬಣ್ಣಬಣ್ಣದ ಬಾಕ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ಮಕ್ಕಳಿಗೆ ಅದರ ಮೇಲೆ ಅಂತಾ ಆಸಕ್ತಿಯಿದ್ದಂತೆ ಕಾಣುವುದಿಲ್ಲ .

    “ಜ್ಯಾಮಿತಿ ಪೆಟ್ಟಿಗೆ” ಜೊತೆ ನಮ್ಮದೊಂದು ಆತ್ಮೀಯ ಅನುಬಂಧವಿತ್ತು , ಅದನ್ನ ತೆಗೆದಾಗ ಅದರೊಳಗಿನ ಸೆಂಟುರಬ್ಬರಿನ ಘಮಲು ಈಗಲೂ ಮೂಗಿಗೆ ಬಡಿದ ನೆನಪಿದೆ .

    ಇವತ್ತಿಗೆ ಅದು ಏನೂ ಅಲ್ಲದಿದ್ದರೂ ಅಂದು ನಮಗದು ಎಲ್ಲಾ ಆಗಿತ್ತು . ಗಣಿತಕ್ಕೆಂದೇ ತಯಾರಿಸಿದ ಪೆಟ್ಟಿಗೆಯಾಗಿದ್ದರೂ ಸಹ ನಮಗೆ ಎಲ್ಲಾ ವಿಷಯಗಳ ವಿಶೇಷ ಮಾಯಾಪೆಟ್ಟಿಗೆಯಾಗಿತ್ತು .

    ರಜನಿ ಅಧ್ಯಾತ್ಮ ರಾಜಕೀಯದಿಂದ ಯಾರಿಗೆ ಲಾಭ

    ದಕ್ಷಿಣ ಭಾರತದ ನಾಲ್ಕು (ಆಥವಾ ಐದು) ಭಾಷೆಗಳನ್ನು ದ್ರಾವಿಡ ಭಾಷೆಗಳೆಂದೇ ಕರೆಯಲಾಗುತ್ತಿತ್ತು. ಆದರೆ ಸಂಸ್ಕೃತದ ಮೇಲ್ಮೆಯ ಹಿನ್ನೆಲೆಯಲ್ಲಿ ಅವುಗಳಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಇದರ ಪರಿಣಾಮವಾಗಿ ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯ ಹುಟ್ಟಿಕೊಂಡಿತ್ತು. 1891ರಲ್ಲೇ ದ್ರಾವಿಡ ರಾಜಕೀಯ ನಾಯಕತ್ವ ವಹಿಸಿದ್ದ  ಜ್ಯೋತಿ ಥಾಸ್ ಎಂಬವರು ದ್ರಾವಿಡ ಮಹಾಜನ ಸಭಾವನ್ನು ಆಯೋಜಿಸಿದ್ದರು. ಬಳಿಕ ಪೆರಿಯಾರ್ ಅವರಿಂದ ದ್ರಾವಿಡ ಮುನ್ನೇತ್ರ ಕಝಗಂ (ದ್ರಾವಿಡ ಪ್ರಗತಿಪರ ಸಂಘ-ಡಿಎಂಕೆ) ಎಂಬ ಪಕ್ಷ ಸ್ಥಾಪನೆಯಾಗಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಧಿಕಾರಕ್ಕೂ ಬಂತು. ಬಳಿಕ ಕಾಲಾನಂತರದಲ್ಲಿ ಅದು ಒಡೆದು ಅಣ್ಣಾಡಿಎಂಕೆ (ಎಐಎಡಿಎಂಕೆ) ಎಂಬ ಪಕ್ಷ ಸ್ಥಾಪನೆಯಾಯಿತು. ಅದು ಕೂಡ ಅಧಿಕಾರಕ್ಕೆ ಬಂತು.

    ಏನಿದು ಅಧ್ಯಾತ್ಮ ರಾಜಕೀಯ ?

    ಬಹುತೇಕ ನಾಸ್ತಿಕವಾದವನ್ನೇ ಪ್ರತಿಪಾದಿಸುತ್ತಿದ್ದ ಡಿಎಂಕೆಯ ನೇತಾರ ಈಗಿಲ್ಲ. ಕರ್ನಾಟಕದಲ್ಲೇ ಹುಟ್ಟಿದ್ದರೂ ಅದೇ ಕಾರಣಕ್ಕಾಗಿಯೇ ಕಾವೇರಿ ನೀರು ಹಂಚಿಕೆಯನ್ನು ಪದೇ ಪದೇ ಕೆದಕುತ್ತಿದ್ದ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ಈಗ ಇತಿಹಾಸದ ಪುಟ ಸೇರಿದ್ದಾರೆ.

    ಇಂತಹ ನಿರ್ವಾತ ವಾತಾವರಣದಲ್ಲಿ ಮೂಲತಃ ಮರಾಠಿಗನಾಗಿದ್ದರೂ ಕರ್ನಾಟಕದಲ್ಲೇ ಬೆಳೆದು, ತಮಿಳುನಾಡಿನಲ್ಲಿ ಬಾಳಿ ಬೆಳಗಿದ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ದಾಳ ಉರುಳಿಸಿದ್ದಾರೆ. ತಾವು ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತದ ಜತೆಗೆ ಅಧ್ಯಾತ್ಮದ ರಾಜಕೀಯವನ್ನೂ ನೀಡುವುದಾಗಿ ಘೋಷಿಸಿದ್ದಾರೆ. ಹೊಸ ವರ್ಷದ ದಿನ ತಮ್ಮ ಪಕ್ಷದ ಹೆಸರನ್ನೂ ಪ್ರಕಟಿಸಲಿದ್ದಾರೆ.

    ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿದೆ. ಡಿಎಂಕೆ ನಾಯಕ ಕರುಣಾನಿಧಿ, ಅಣ್ಣಾಡಿಎಂಕೆ ನಾಯಕಿ ಜಯಲಲಿತಾ ಇಲ್ಲದೆ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ಇತಿಹಾಸವನ್ನು ಕೆದಕಿ ನೋಡಿದರೆ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಬದಲಾಗಿ ಬೆಳ್ಳಿ ತೆರೆಯ ನಾಯಕರ ವರ್ಚಸ್ಸೇ ಪ್ರಾಬಲ್ಯ ಇರುವುದು ಕಂಡು ಬರುತ್ತದೆ. ಆದರೆ ಈ ಬಾರಿ ಇಡೀ ರಾಜ್ಯ ರಾಜಕೀಯದ ಇತಿಹಾಸಕ್ಕೆ ಹೊಸ ಭಾಷ್ಯ ಬರೆಯಲು ರಜನೀಕಾಂತ್ ಹೊರಟಂತಿದೆ. ಅದುವೇ ಅಧ್ಯಾತ್ಮ ರಾಜಕೀಯದ ಮಾತು.

    ಬದಲಾದ ಕಾಲಮಾನ

    ಹೇಳಿ ಕೇಳಿ ರಜನೀಕಾಂತ್ ತಮ್ಮ ಅಧ್ಯಾತ್ಮ ಜೀವನದಿಂದ ಹೆಚ್ಚು ಪರಿಚಿತರು. ಸಿನಿಮಾದ ಜತೆಗೆ ಬಾಬಾ ಎನ್ನುವಂತಹ ಸಿನಿಮಾ ಮಾಡುವುದು, ಆಗಾಗ ಹಿಮಾಲಯದ ಗೌಪ್ಯ ಪ್ರದೇಶಕ್ಕೆ ಸಂಚಾರ ಮಾಡಿ ದಿನಗಟ್ಟಲೆ ಅಲ್ಲಿರುವುದು, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ದರ್ಶನ ಇತ್ಯಾದಿಗಳು ಕೆಲವೇ ಕೆಲವು ಉದಾಹರಣೆಗಳು ಮಾತ್ರ. ಆದರೆ ಅಧ್ಯಾತ್ಮದ ಜತೆ ಅವರ ನಂಟು ಇದ್ದೇ ಇದೆ.

    ಕಳೆದ 25 ವರ್ಷಗಳಿಂದಲೂ ರಾಜಕೀಯ ಪ್ರವೇಶ ಮಾಡುವ ಕುರಿತು ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಸೂಪರ್ ಸ್ಟಾರ್ ರಜನಿ, ಈಗ ಮನಬಿಚ್ಚಿ ಮಾತನಾಡಿದ್ದಾರೆ. ಒಳ್ಳೆಯದನ್ನೇ ಮಾಡಿ, ಒಳ್ಳೆಯದ್ದನ್ನೇ ಮಾತನಾಡಿ, ಇದರಿಂದ ಒಳ್ಳೆಯದಾಗುತ್ತದೆ ಎಂಬ ಅವರ ಮಾರ್ಮಿಕ ಮಾತುಗಳೇ ಮುಂದಿನ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

    ಬಿಜೆಪಿ ಸಖ್ಯ

    ಈಗ ಪ್ರಶ್ನೆ ಇರುವುದೇ ಇಲ್ಲಿ. ರಜನೀಕಾಂತ್ ಎಷ್ಟು ಸ್ಥಾನ ಗೆಲ್ಲಬಹುದು ? ಪೂರ್ಣ ಬಹುಮತವಂತಲೂ ಕಷ್ಟ ಸಾಧ್ಯ. ಹೀಗಾಗಿ ಅವರು ಯಾರ ಜತೆ ಸಖ್ಯ ಬೆಳೆಸಿಕೊಳ್ಳಬಹುದು ಎಂಬುದು. ಅಧ್ಯಾತ್ಮ ರಾಜಕಾರಣದ ಬಗ್ಗೆ ಮಾತನಾಡಿದ ಬಳಿಕ ಡಿಎಂಕೆ ಜತೆಗಂತೂ ಅವರು ಹೋಗುವ ಸಾಧ್ಯತೆಯೇ ಇಲ್ಲ. ಅಣ್ಣಾ ಡಿಎಂಕೆ ಅಷ್ಟು ನಿಷ್ಠುರ ನಾಸ್ತಿಕ ಪಕ್ಷವಲ್ಲ. ಹೀಗಾಗಿ ಅದರ ಜತೆಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಇದರ ನಡುವೆ ಭಾರತೀಯ ಜನತಾ ಪಕ್ಷ ಈಗಾಗಲೇ ಹೈದರಾಬಾದ್ ಕಾರ್ಪೋರೇಶನ್ ನಲ್ಲಿ ಸಾಕಷ್ಟು ಸಂಖ್ಯೆ ಗಳಿಸಿ ಮುನ್ನಲೆಗೆ ಬಂದಿದೆ. ಹೀಗಾಗಿ ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮಾನ್ಯತೆಯಿಲ್ಲ ಎಂಬ ಹೀಗಳಿಕೆಯನ್ನು ತೆಗೆದು ಹಾಕಿದೆ. ಈ ಹಿಂದೆ ಕೇರಳ ವಿಧಾನಸಭೆ ಚುನಾವಣೆಯಲ್ಲೂ ಗಣನೀಯ ಪ್ರಮಾಣದಲ್ಲಿ ಮತ ಗಳಿಸಲು ಅದಕ್ಕೆ ಸಾಧ್ಯವಾಗಿತ್ತು. 6-10 ಅಭ್ಯರ್ಥಿಗಳು ಒಂದು ಸಾವಿರ ಮತಗಳ ಅಂತರದಿಂದಷ್ಟೇ ಸೋತಿದ್ದರು.

    ಈಗ ತಮಿಳುನಾಡು ವಿಧಾನಸಭೆ ಚುನಾವಣೆ. ಈಗಾಗಲೇ ಅಮಿತ್ ಶಾ ಅವರು ರಜನೀಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಡಿಎಂಕೆ ಮತಗಳು ಒಡೆದು ಒಂದೆಡೆ ರಜನಿ ಪಕ್ಷಕ್ಕೆ, ಇನ್ನೊಂದೆಡೆ ಬಿಜೆಪಿಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇದರ ಪರೋಕ್ಷ ಲಾಭವನ್ನು ಅಣ್ಣಾ ಡಿಎಂಕೆ ಪಡೆದರೂ ಆಗ ಮತ್ತೆ ರಜನಿಯದ್ದೇ ಮೇಲುಗೈ ಆಗುತ್ತದೆ.

    ಈ ಅಂಕಣದೊಂದಿಗೆ ಪ್ರಕಟವಾದ ಕ್ಯಾರಿಕೇಚರ್ ಬರೆದವರು ಸಂತೋಷ ಸಸಿಹಿತ್ಲು.ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಸಾಕಷ್ಟು ಚಿತ್ರಗಳು ಪ್ರಕಟವಾಗಿವೆ. ಕಾರ್ಟೂನ್, ಇಲಸ್ಟ್ರೇಷನ್, ಭಾವಚಿತ್ರಗಳನ್ನು ರಚಿಸುವಲ್ಲಿ ಅವರು ಸಿದ್ಧ ಹಸ್ತರು. ಅವರ ಸಂಪರ್ಕ ಸಂಖ್ಯೆ 9986688101

    ಆತ್ಮನಿರ್ಭರ ಭಾರತದ ಹೊಸ ಸಂಸತ್ ಭವನ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು. ಹೊಸ ಸಂಪತ್ತು ಭವನದ ಬಗ್ಗೆ ಒಂದಿಷ್ಟು ಅರಿಯೋಣ.

    ಹೊಸ ಸಂಸತ್ ಭವನ ಎಷ್ಟು ದೊಡ್ಡದು.

    ಹೊಸ ಭವನ ಸುಮಾರು 64 500 ಚದುರ ಮೀಟರ್ ಪ್ರದೇಶದಲ್ಲಿ ತಲೆ ಎತ್ತಲಿದೆ. ಈಗಿನ ಸಂಸತ್ ಭವನದ ಎದುರೇ ಇದು ನಿರ್ಮಾಣವಾಗಲಿದೆ. ಹೊಸ ಕಟ್ಟಡದಲ್ಲಿ ಲೋಕಸಭೆಯಲ್ಲಿ 888 ಸದಸ್ಯರು,ರಾಜ್ಯ ಸಭೆಯಲ್ಲಿ 384 ಸದಸ್ಯರು ಕಳಿತುಕೊಳ್ಳುವಷ್ಟು ಸ್ಥಳಾವಕಾಶ ಕಲ್ಪಿಸಲಾಗುವುದು. ಈಗಿನ ಕಟ್ಟಡದಲ್ಲಿ 543 ಲೋಕ ಸಭಾ ಸದಸ್ಯರು ಮತ್ತು 245 ರಾಜ್ಯ ಸಭೆ ಸದಸ್ಯರಿಗೆ ಮಾತ್ರ ಅವಕಾಶ ಇದೆ. ಮುಂದೆ ಸದಸ್ಯರ ಸಂಖ್ಯೆ ಹೆಚ್ಚಾಗುವ ದೃಷ್ಟಿಯಿಂದ ಹೊಸ ಕಟ್ಟಡದಲ್ಲಿ ಹೆಚ್ಚು ಸದಸ್ಯರು ಕೂಡಲು ಅವಕಾಶ ಕಲ್ಪಿಸಲಾಗಿದೆ.

    ಹೊಸ ಕಟ್ಟದಲ್ಲಿ ಮತ್ತೇನು ಇರಲಿದೆ

    ಹಳೆಯ ಕಟ್ಟದಲ್ಲಿರುವ ಸೆಂಟ್ರಲ್ ಹಾಲ್ ಇಲ್ಲಿ ಇರುವುದಿಲ್ಲ. ನಮ್ಮ ಜನ ತಂತ್ರ ವ್ಯವಸ್ಥೆಯ ಹಿರಿಮೆಯನ್ನು ಸಾರುವ ಚಿತ್ರ ಪಟಗಳು, ಸದಸ್ಯರಿಗಾಗಿ ವಿಶೇಷ ಕೊಠಡಿಗಳು, ವಿಶಾಲವಾದ ಹಾಲ್, ನಾನಾ ಕಮಿಟಿ ರೂಮುಗಳು , ಭೋಜನಾಲಯ ಇರಲಿದೆ.

    ಆಧುನಿಕ ತಂತ್ರಜ್ಞಾನದ ಬಳಕೆ

    ಲೋಕಸಭೆ ಮತ್ತು ರಾಜ್ಯ ಸಭೆ ಎರಡಲ್ಲೂ ಆಧುನಿಕ ತಂತ್ರಜ್ಞಾನ ಆಧಾರಿತ ಧ್ವನಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು. ಕಮಿಟಿ ರೂಮಗಳು ಕೂಡ ವೈಫೈ ಸಂಪರ್ಕಕದೊಂದಿಗೆ ಸಜ್ಜಾಗಲಿವೆ.

    ಭದ್ರತಾ ವ್ಯವಸ್ಥೆ

    ಹಿಂದೆ ಲೋಕಸಭೆ ಕಟ್ಟದ ಮೇಲೆ ಭಯೋತ್ಪಾದಕರ ದಾಳಿ ಆಗಿದ್ದರ ಹಿನ್ನೆಲೆಯಲ್ಲಿ ಆತ್ಯಾಧುನಿಕ ರಕ್ಷಣಾ ವವ್ಯವಸ್ಥೆಯನ್ನು ಈ ಕಟ್ಟಡ ಹೊಂದಲಿದೆ. ಜೊತೆಗೆ ಭೂಕಂಪ ನಿರೋಧಕ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಿಸಲಾಗುವುದು.

    ಕಟ್ಟಡ ನಿರ್ಮಾಣ ಗುತ್ತಿಗೆ ಯಾರಿಗೆ ಸಿಕ್ಕಿದೆ

    ಕಳೆದ ಸೆಪ್ಟೆಂಬರ್ ನಲ್ಲಿ ಟಾಟಾ ಪ್ರಾಜೆಕ್ಟ್ಸ್ 861.90 ಕೋಟಿ ರೂಪಾಯಿಗಳಿಗೆ ಇದರ ಬಿಡ್ ಅನ್ನು ಪಡೆದುಕೊಂಡಿದೆ. ಅಂದಾಜು 2000 ಜನ ನೇರವಾಗಿ 9000 ಜನ ಪರೋಕ್ಷವಾಗಿ ಇದರ ನಿರ್ಮಾಣದಲ್ಲಿ ಭಾಗಿಯಾಗಲಿದ್ದಾರೆ.

    ಹಳೆ ಕಟ್ಟಡ ಏನಾಗುವುದು

    ಹಳೇ ಕಟ್ಟಡವನ್ನು ಹಾಗೆ ಉಳಿಸಿ ರಕ್ಷಿಸಲಾಗುವುದು. ಪಾರ್ಲಿಮೆಂಟಿನ ವಿವಿಧ ಕೆಲಸಗಳಿಗೆ ಬಳಸಲಾಗುವುದು.

    ಈಗಿನ ಕಟ್ಟಡ ಯಾವಾಗ ನಿರ್ಮಾಣವಾಗಿದ್ದು

    ಈಗಿನ ಸಂಸತ್ತು ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದು1921, ಫೆಬ್ರವರಿ 12. ನಿರ್ಮಿಸಲು ಆರು ವರ್ಷ ಹಿಡಿಯಿತು. ಆಗ 83 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಆಗಿನ ಗವರ್ನರ್ ಜನರಲ್ ಲಾರ್ಡ್ ಇರ್ವಿನ್ 1927 ರ ಜನವರಿ 18ರಂದು ಈ ಕಟ್ಟಡವನ್ನು ಉದ್ಘಾಟಿಸಿದ್ದರು. ನವದೆಹಲಿಯ ಯೋಜನೆ ಮತ್ತು ನಿರ್ಮಾಣದ ಹೊಣೆ ಹೊತ್ತಿದ್ದ ಎಡ್ವಿನ್ ಲೋಚೆನಸ್ ಮತ್ತು ಹರ್ಬರ್ಟ್ ಬೇಕರ್ ಅವರೇ ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು.

    ಹೊಸ ಕಟ್ಟಡ ಯಾವವಾಗ ಸಿದ್ಧವಾಗಬಹುದು.

    2022 ರ ಚಳಿಗಾಲದ ಅಧಿವೇಶನದ ವೇಳೆ ಕಟ್ಟಡ ಸಿದ್ಧವಾಗುವ ನಿರೀಕ್ಷೆ ಇದೆ.

    ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸಿದ ಮೋದಿ

    ಹೊಸ ಕಟ್ಟದ ಭೂಮಿ ಪೂಜೆಯ ಸಂದರ್ಭದಲ್ಲಿ ನಮ್ಮ ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸಿದ ಪ್ರಧಾನಿ ಮೋದಿ ಅನುಭವ ಮಂಟಪದ ಮೂಲಕ 12 ನೇ ಶತಮಾನದಲ್ಲೇ ಜನತಂತ್ರ ವ್ಯವಸ್ಥೆಯನ್ನು ಬಸವೇಶ್ವರರು ಜಾರಿಗೆ ತಂದಿದ್ದರು ಎಂದರು. ಜೊತಗೆ ಬಸವಣ್ಣನವರ ವಚನವನ್ನು ಕನ್ನಡದಲ್ಲಿಯೇ ಉದಾಹರಿಸಿದರು.

    ಹೊಸ ಕಟ್ಟಡ ಹೇಗಿರಲಿದೆ

    ಧರ್ಮೇಂದ್ರ ಪ್ರಧಾನ್ ಮಾಡಿರುವ ಈ ಟ್ವೀಟ್ ನೋಡಿ.

    ಬ್ರಿಟನ್ ನಂತರ ಕೆನಡಾದಲ್ಲೂ ಫೈಜರ್ ಲಸಿಕೆಗೆ ಅನುಮತಿ

    ಬ್ರಿಟನ್ ತನ್ನ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಿದ ಬೆನ್ನ ಹಿಂದೆಯೇ ಕೆನಡಾ ಕೂಡ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಫೈಜರ್ ಬಯೋ ಎನ್ ಟೆಕ್ ತಯಾರಿಸಿರುವ ಲಸಿಕೆಯನ್ನು ತನ್ನ ದೇಶದಲ್ಲಿ ಬಳಸಲು ಅನುಮತಿ ನೀಡಿದೆ.

    ಅಕ್ಟೋಬರ್ 9 ರಂದು ಫೈಜರ್ ಸಲ್ಲಿಸಿದ್ದ ಪ್ರಸ್ತಾವವನ್ನು ಸರಕಾರ ಅಂಗೀಕರಿಸಿದೆ ಎಂದು ಕೆನಡಾ ಸರಕಾರದ ಆರೋಗ್ಯ ಇಲಾಖೆ ಹೆಲ್ತ್ ಕೆನಡಾ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

    ಈ ತಿಂಗಳು 249000 ಡೋಸ್ ಗಳನ್ನು ಕೆನಡಾ ಪಡೆಯಲಿದ್ದು ಮಾರ್ಚ್ ವೇಳೆಗೆ 4 ಮಿಲಿಯನ್ ಡೋಸ್ ಗಳನ್ನು ಪಡೆಯಲಿದೆ.

    ಈ ಮಧ್ಯೆ ಭಾರತದಲ್ಲಿ ಸೆರಮ್ ಇನ್ಸಿ ಟ್ಯೂಟ್ ಮತ್ತು ಭಾರತ್ ಬಯೋಟೆಕ್ ನ ಲಸಿಕೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹಲವು ಟೀವಿಗಳು ಮಾಡಿದ್ದ ವರದಿಯನ್ನು ಫೇಕ್ ನ್ಯೂಸ್ ಎಂದು ಭಾರತದ ಆರೋಗ್ಯ ಸಚಿವಾಲಯ ತಳ್ಳಿಹಾಕಿದೆ.

    ಮುಕ್ತ ವಿವಿಯಿಂದ ಮಾತ್ರ ದೂರ ಶಿಕ್ಷಣ; ಬೆಂಗಳೂರು ಕೇಂದ್ರ ವಿವಿ ಹೆಸರು ಕೂಡ ಬದಲು

    ದೂರ ಶಿಕ್ಷಣ ಪದ್ಧತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತಗೊಳಿಸುವ, ಬೆಂಗಳೂರು ವಿವಿ ಹೆಸರನ್ನು ಬದಲಾಯಿಸುವ ಅಂಶವೂ ಸೇರಿದಂತೆ ಉನ್ನತ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆಗಳುಳ್ಳ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

    ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬುಧವಾರ ಸದನದಲ್ಲಿ ಈ ಅಂಶಗಳನ್ನೊಳಗೊಂಡ ʼಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರೆ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ-2020ʼಯನ್ನು ಮಂಡಿಸಿದರು.

    ಈ ಮಸೂದೆಯಲ್ಲಿರುವ ಅಂಶಗಳು ಹೀಗಿವೆ:

    *ಈ ಮೊದಲು ದೂರಶಿಕ್ಷಣವು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿಯೂ ಲಭ್ಯವಿತ್ತು. ಇನ್ನು ಮುಂದೆ ದೂರಶಿಕ್ಷಣಕ್ಕೆ ಮಾತ್ರವೇ ಮೀಸಲಾಗಿದ್ದ ಈ ಶಿಕ್ಷಣವನ್ನು ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಮಾತ್ರ ನೀಡಲಾಗುತ್ತದೆ. ಮುಕ್ತ ವಿವಿಯ ವ್ಯಾಪ್ತಿಯೂ ರಾಜ್ಯಾದ್ಯಂತ ಇದ್ದು, ಇನ್ನು ಮುಂದೆ ಇತರೆ ವಿವಿಗಳಲ್ಲಿ ದೂರಶಿಕ್ಷಣ ನೀಡುವುದನ್ನು ನಿಲ್ಲಿಸಲಾಗುವುದು.

    *ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಸರಕಾರಿ ವಿಜ್ಞಾನ ಕಾಲೇಜು ಸಂಸ್ಥೆಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಳಿಸಿ ʼಏಕಾತ್ಮಕ ಸ್ವರೂಪದ ನೃಪತುಂಗಾ ವಿವಿʼಯನ್ನು ಸ್ಥಾಪಿಸಲಾಗುತ್ತಿದ್ದು, ಇದರ ಕೇಂದ್ರಸ್ಥಾನವು ಬೆಂಗಳೂರು ನಗರದಲ್ಲೇ ಇರುತ್ತದೆ.

    *ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ಕೊರತೆ ಆಗದಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಆದಾಯ ತರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವುದು. ಇದರಿಂದ ಎಲ್ಲ ವಿವಿಗಳಿಗೂ ಆರ್ಥಿಕ ಬಲ ಸಿಗಲಿದೆ.

    *ಮಹಾರಾಣಿ ಕ್ಲಸ್ಟರ್‌, ಬೆಂಗಳೂರು ಮತ್ತು ಮಂಡ್ಯ ಏಕೀಕೃತ ವಿವಿಗಳಿಗೆ ಉಪ ಕುಲಪತಿಗಳನ್ನು ಸರಕಾರದಿಂದಲೇ ನೇಮಕ ಮಾಡುವುದು. ಎಲ್ಲ ವಿವಿಗಳಿಗೆ ಆಡಳಿತಾಧಿಕಾರಿ ಅಥವಾ ಕುಲಸಚಿವರನ್ನಾಗಿ ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲು ಅವಕಾಶ ಕಲ್ಪಿಸುವುದು.

    *ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ʼಬೆಂಗಳೂರು ನಗರ ವಿಶ್ವವಿದ್ಯಾಲಯʼ ಎಂದು ಮರು ನಾಮಕರಣ ಮಾಡುವುದು.

    *ವಿವಿಗಳಲ್ಲಿ ಕೆಲಸ ಮಾಡುವ ಲೆಕ್ಕಪತ್ರ ನಿಯಂತ್ರಕರ ಪದನಾಮವನ್ನು ʼಪ್ರಧಾನ ನಿರ್ದೇಶಕರು, ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆʼ ಎಂದು ಬದಲಿಸಲಾಗುವುದು.

    ಸುಗ್ರೀವಾಜ್ಞೆ ಹೊರಡಿಸಲಾಗಿತ್ತು:

    ಈ ಹಿಂದೆಯೇ ಸುಗ್ರೀವಾಜ್ಞೆ ಜಾರಿಗೆ ತರುವ ಮೂಲಕ ಮಸೂದೆಯಲ್ಲಿದ್ದ ಪ್ರಸ್ತಾಪಿಸಲಾಗಿರುವ ಬಹುತೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಮಹಾರಾಣಿ ಕ್ಲಸ್ಟರ್‌, ರಾಯಚೂರು, ಬೆಂಗಳೂರು-ಮಂಡ್ಯ ಏಕೀಕೃತ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಲಾಗಿತ್ತು. ಆದರೆ, ಈ ವಿವಿಗಳಿಗೆ ಕುಲ ಸಚಿವರು ಹಾಗೂ ಆಡಳಿತಾಧಿಕಾರಿಗಳನ್ನು ಸರಕಾರ ನೇಮಕ ಮಾಡಬೇಕಿದೆ. ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಇನ್ನು ಮುಂದೆ ಹೆಚ್ಚು ಶಕ್ತಿ ಬರಲಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯದಿಂದ ಗುರಿ ಸಾಧನೆ

    ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸದ ಕೊರತೆಯನ್ನು ನಾವುಗಳು ಕಾಣುತ್ತಿದ್ದೇವೆ. ಪೂರಕವಾಗಿ ಕೆಲವೊಂದು ಅಂಕಿ ಅಂಶಗಳು ಇಲ್ಲಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳ ಪ್ರಕಾರ 2018 ರಲ್ಲಿ 10159 ವಿದ್ಯಾರ್ಥಿಗಳು, 2017 ರಲ್ಲಿ 9905, ಮತ್ತು 2016 ರಲ್ಲಿ 9478 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನಪ್ಪಿದ್ದಾರೆ. 2012 ರ ಲ್ಯಾನ್ಸೆಟ್ ವರದಿ’ಯ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣವು 15 – 29 ವಯೋಮಾನದವರಲ್ಲಿ ಅತಿ ಹೆಚ್ಚು ದಾಖಲಾಗಿದೆ ( ಪುರುಷರಲ್ಲಿ 40% ಮತ್ತು ಮಹಿಳೆಯರಲ್ಲಿ 60% ). ಎನ್ ಸಿ ಆರ್ ಬಿ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ / ಳೆ.

    ಐಐಟಿಗಳಲ್ಲಿ 2014 ಮತ್ತು 2019 ರ ನಡುವೆ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ( ಎಂಹೆಚ್‍ಆರ್‍ಡಿ ). ಅಮೇರಿಕನ್ ಕಾಲೇಜು ಹೆಲ್ತ್ ಅಸೋಸಿಯೇಷನ್ ಪ್ರಕಾರ, ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಆತ್ಮಹತ್ಯೆ ಎರಡನೇ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುವ ಅಥವಾ ಪ್ರಕಟವಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ. ಲ್ಯಾನ್‍ಸೆಟ್ ಮೆಡಿಕಲ್ ಜರ್ನಲ್ 2012 ರ ಪ್ರಕಾರ, ದಕ್ಷಿಣ ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯನ್ನು ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಹತ್ತು ಪಟ್ಟು ಹೆಚ್ಚು. ಆತಂಕಕಾರಿ ವಿಷಯವೆಂದರೆ, ವಿದ್ಯಾವಂತ ಯುವಕ / ಯುವತಿಯರಲ್ಲಿ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

    ಈ ಕೆಟ್ಟ ಮತ್ತು ಸೋಲಿನ ಮನೋಭಾವಕ್ಕೆ ಪ್ರಮುಖ ಕಾರಣಗಳೆಂದರೆ :

    1. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯಗಳ ಕೊರತೆ.
    2. ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವುದೇ ಇಡೀ ಜೀವನದ ಉದ್ದೇಶ ಎಂಬ ತಪ್ಪು ನಂಬಿಕೆ ಮತ್ತು ಇದಕ್ಕೆ ಪೂರಕವಾಗಿ ಪೋಷಕರ ಮತ್ತು ಸಾಮಾಜಿಕ ಒತ್ತಡ.
    3. ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇಂದಿನ ಶಿಕ್ಷಣ ಪದ್ಧತಿ.  
    4. ಔದ್ಯೋಗಿಕ ಕೋರ್ಸುಗಳಿಗೆ ಮುಖ್ಯವಾಗಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆಯಲೇ ಬೇಕೆಂಬ ಅತಿಯಾದ ಹಂಬಲ ಮತ್ತು ಪೋಷಕರ ಒತ್ತಡ.
    5. ವ್ಯಕ್ತಿತ್ವದ ಅಸ್ವಸ್ಥತೆ.
    6. ಮಾನಸಿಕ ಖಿನ್ನತೆ.
    7. ಒಂಟಿತನ, ಸ್ನೇಹಿತರ ಜೊತೆಗೆ ಸಮಯ ಕಳೆಯುವ ಮನೋಭಾವವಿಲ್ಲದಿರುವುದು.
    8. ಸಂಸ್ಕೃತಿಯ ವಿಭಿನ್ನತೆ.
    9. ಯುವಕರ ಮತ್ತು ಪೋಷಕರ ನಡುವೆಯಿರುವ ಪೀಳಿಗೆಗಳ ನಡುವಿನ ಅಂತರ ( ಮಾನಸಿಕ ಅಸಮಾಧಾನಗಳು ). 
    10. ಹೆತ್ತವರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲವೆಂಬ ನಿರ್ಧಾರ.
    11. ಓದ್ಯೋಗಿಕ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ವಾತಾವರಣ.
    12. ಎಲ್ಲರಂತೆ ವಿದೇಶಕ್ಕೆ ಹೋಗ ಬೇಕೆಂಬ ಹಂಬಲ.                       

    ಹೀಗೆ ಹತ್ತು ಹಲವಾರು ಕಾರಣಗಳಿಂದ, ಗುರಿಗಳು ಈಡೇರದಿದ್ದಲ್ಲಿ ಮೊದಲನೆಯ ಹೆಜ್ಜೆಯಲ್ಲಿಯೇ ಸೋಲನ್ನು ಕಂಡಾಗ, ಜೀವನದಲ್ಲಿ ಜಿಗುಪ್ಸೆಯುಂಟಾಗಿ, ಜೀವನವೇ ಕತ್ತಲಾಗಿ ಪರಿಣಮಿಸಿ, ಆತ್ಮಹತ್ಯೆಗೆ ಆಲೋಚಿಸುವುದು ಸಾಮಾನ್ಯವಾದ ಸಂಗತಿ. ನನ್ನ ಪ್ರಕಾರ, ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಆಲೋಚನೆಗಳಿಗೆ ಮುಖ್ಯ ಕಾರಣ ಪೋಷಕರ ಒತ್ತಡ, ವ್ಯಕ್ತಿಯ ಸಾಮರ್ಥ್ಯಕ್ಕೆ ಮೀರಿದ ಗುರಿಗಳನ್ನು ಹೊಂದಿ, ಸಾಧಿಸಲು ಪ್ರಯತ್ನಿಸುವುದು ಮತ್ತು ಪೋಷಕರ ಮತ್ತು ಸ್ನೇಹಿತರ ಒತ್ತಡಕ್ಕೆ ಮಣಿದು, ಇಷ್ಟವಿಲ್ಲದ ವಿಷಯಗಳನ್ನು ಅಥವಾ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವುದು.

    ಉದಾಹರಣೆಗೆ ಹೇಳುವುದಾದರೆ, ವಾಣಿಜ್ಯ ಅಥವಾ ಕಲಾ ವಿಭಾಗದ ವಿಷಯಗಳಲ್ಲಿ ವ್ಯಾಸಂಗ ಮಾಡಲು ಆಸಕ್ತಿಯಿದ್ದರೂ, ಪೋಷಕರ ಬಲವಂತದಿಂದಾಗಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡುವುದು. ಈ ಪರಿಸ್ಥಿಯನ್ನು ನಮ್ಮ ದೇಶದಲ್ಲಿ ಮಾತ್ರವೇ ಕಾಣಬಹುದು. ವಿದ್ಯಾರ್ಥಿಯು ಯಾವ ವಿಷಯಗಳನ್ನು ಓದಬೇಕೆಂದು ಪೋಷಕರು ನಿರ್ಧರಿಸುವ ಪದ್ಧತಿ. ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡುವುದಿಲ್ಲ. ಇದರಿಂದ ವಿದ್ಯಾರ್ಥಿಯ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಸಾಧನೆ ಕುಂಠಿತಗೊಳ್ಳತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಿಷಯಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗುತ್ತದೆ. ಆದ್ದರಿಂದ ಖಿನ್ನತಗೆ ಒಳಗಾಗುವ ಸಂದರ್ಭಗಳು ಕಡಿಮೆ.

    ಆತ್ಮಹತ್ಯಾ ಆಲೋಚನೆಗಳಿಗೆ, ಶಿಕ್ಷಣದ ಬಗ್ಗೆ ನಮಗಿರುವ ತಪ್ಪು ಕಲ್ಪನೆಯು ಸಹ ಒಂದು ಕಾರಣ ಎಂದರೆ ತಪ್ಪಾಗಲಾರದು. ಔದ್ಯೋಗಿಕ ಕೋರ್ಸುಗಳಿಗೆ ಪ್ರವೇಶವನ್ನು ಪಡೆದು, ಹೆಚ್ಚು ವೇತನವನ್ನು ನೀಡುವ ಕೆಲಸವನ್ನು ಗಿಟ್ಟಿಸಿ, ಆಡಂಬರದ ಜೀವನ ನಡೆಸುವುದೇ ಜೀವನದ ಗುರಿ ಎಂಬ ಧೃಡವಾದ ನಂಬಿಕೆ. ಈ ಅಂಶವನ್ನು ಪೋಷಕರು ಚಿಕ್ಕಂದಿನಿಂದಲೇ ಮಕ್ಕಳ ತಲೆಗೆ ತುಂಬಿ, ಅನ್ಯ ದಿಕ್ಕಿನಲ್ಲಿ ವಿಭಿನ್ನವಾಗಿ ಆಲೋಚನೆ ಮಾಡಲು ಅವಕಾಶ ನೀಡದಿರುವುದೇ ಖಿನ್ನತೆಗೆ ಕಾರಣ ಎಂದರೆ ತಪ್ಪಾಗಲಾರದು.

    ಜೊತೆಗೆ ಸ್ನೇಹಿತರ ಸಹವಾಸ ಮತ್ತು ಅವರ ಪ್ರೇರಣೆಯಿಂದ, ಕೆಟ್ಟ ಚಟಗಳಿಗೆ ಬಲಿಯಾಗುವುದು. ಸಿನಿಮಾ ಮತ್ತು ಟಿ. ವಿ ಮಾಧ್ಯಮಗಳಲ್ಲಿ ಬಿತ್ತರವಾಗುವ ಸೀರಿಯಲ್‍ಗಳಲ್ಲಿ ತೋರಲ್ಪಡುವ ಪ್ರೀತಿ ಪ್ರೇಮಗಳ ಸನ್ನಿವೇಶಗಳು, ಅದು ಕೇವಲ ಫ್ಯಾಂಟಸಿ ಪ್ರಪಂಚ ಎಂದು ಆಲೋಚನೆ ಮಾಡುವಷ್ಟು ತಿಳುವಳಿಕೆ ಆ ವಯಸ್ಸಿನಲ್ಲಿರುವುದಿಲ್ಲ. ಅನುಕರಣೆ ಮಾಡಲು ಹೋಗಿ, ಸಮಸ್ಯೆಗೆ ಒಳಗಾಗುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ತಾಯಿ ಟಿ. ವಿ ನೋಡಲು ವಿರೋಧ ವ್ಯಕ್ತಪಡಿಸಿದಳು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಅವಲೋಕನೆಗೆ ಈ ಕೆಳಗಿನ ಅಂಶಗಳನ್ನು ತರಲು ಇಚ್ಚಿಸುತ್ತೇನೆ.

    ವಿದ್ಯಾರ್ಥಿಗಳು, ಯುವಕರು ದೇಶದ ಆಸ್ತಿ ಮತ್ತು ಅದರ ಬೆನ್ನೆಲುಬು. ವಿದ್ಯಾರ್ಥಿಗಳಲ್ಲಿ ಅಡಗಿರುವ ಚೈತನ್ಯವನ್ನು /  ಪ್ರತಿಭೆಯನ್ನು ಸಕಾರಾತ್ಮಕವಾಗಿ ಜಾಗೃತಗೊಳಿಸುವುದೇ ಶಿಕ್ಷಣದ ಮೂಲ ಉದ್ದೇಶ. ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳುವುದಾದರೆ, “Education is the manifestation of the perfection already in man”. ಶಿಸ್ತೀಯಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ, ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ ನಿರ್ಮಾಣ, ರಾಷ್ಟ್ರೀಯತಾ ಮನೋಭಾವ, ಸಾಮಾಜಿಕ ಮೌಲ್ಯಗಳು, ಜೀವನದ ಮೌಲ್ಯಗಳು, ಸರ್ವಧರ್ಮ ಸಮಭಾವ ಇವುಗಳನ್ನು ಮನಸ್ಸಿಗೆ ನಾಟುವಂತೆ ಬಿತ್ತುವುದು ಶಿಕ್ಷಣದ ಪ್ರಮುಖ ಉದ್ದೇಶ. ಜ್ಞಾನದ ಜೊತೆಯಲ್ಲಿ, ಕೌಶಲ್ಯಗಳನ್ನು ಮತ್ತು ಮೌಲ್ಯಗಳನ್ನು ಕಲಿಸ ಬೇಕು. ಆಗ ಅದು ನಿಜವಾದ ಪರಿಪೂರ್ಣ ಶಿಕ್ಷಣವಾಗುತ್ತದೆ. ಉತ್ತಮ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಸರ್ಕಾರ ಮತ್ತು ಶಿಕ್ಷಣ ತಜ್ಞರು ಯೋಜನೆಗಳನ್ನು ರೂಪಿಸಬೇಕಾಗಿದೆ.

    ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ

    ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು. ವಿದ್ಯಾರ್ಥಿಗಳಲ್ಲಿ ಮೊಟ್ಟ ಮೊದಲನೆಯದಾಗಿ, ಬೇರೆಯವರ ಒತ್ತಡಕ್ಕೆ ಮಣಿಯದೆ, ಆಸಕ್ತಿಯಿರುವ ವಿಷಯಗಳನ್ನು ನಿಮ್ಮ ವ್ಯಾಸಂಗಕ್ಕಾಗಿ ಆಯ್ಕೆ ಮಾಡಿಕೊಳ್ಳಿ. ಜೀವನದಲ್ಲಿ ನಿರ್ಧಿಷ್ಠವಾದ ಗುರಿಯಿರಲಿ. ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಥವಾ ಕಡಿಮೆ ಅಂಕಗಳನ್ನು ಗಳಿಸಿದರೆ, ಜೀವನವೇ ಮುಗಿಯಿತು, ಕೆರಿಯರ್ ಮುಗಿಯಿತು ಎಂಬ ಭಾವನೆ ಬೇಡ. Failure is the stepping stone for success ಎಂಬ ಮಾತನ್ನು ನೀವುಗಳು ಕೇಳಿದ್ದೀರಿ. ದ್ವಿತೀಯ ಪಿಯುಸಿಯಲ್ಲಿ ಮೂರನೇ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು, ಗುರಿಯನ್ನು ಸಾಧಿಸಲೇ ಬೇಕೆಂಬ ಚಲದಿಂದ ದೃಢ ನಿರ್ದಾರದೊಂದಿಗೆ ಚೆನ್ನಾಗಿ ವ್ಯಾಸಂಗವನ್ನು ಮಾಡಿ, ವಾಣಿಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿರುವ ವ್ಯಕ್ತಿಯ ಉದಾಹರಣೆ ನನಗೆ ತಿಳಿದಿದೆ. ಖ್ಯಾತ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಸಹ ಪ್ರತಿಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಆದರೆ, ಖ್ಯಾತ ವಿಜ್ಞಾನಿಯಾದ. ಭಾರತದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‍ರು ಎಫ್. ಎ ಪರೀಕ್ಷೆಯಲ್ಲಿ ನಪಾಸಾದರು. ಆದರೆ ವಿಶ್ವವೇ ಕಂಡರಿಯದ ಗಣಿತಶಾಸ್ತ್ರಜ್ಞ ಎಂಬ ಪ್ರಶಂಸೆಗೆ ಪಾತ್ರರಾದರು.

    ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ರೀತಿಯ ಸಾಮರ್ಥ್ಯ, ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಹೊರ ಜಗತ್ತಿಗೆ ತರಲು ಸಾಧನೆ ಮಾಡಬೇಕು. ಸಕಾರಾತ್ಮಕ ಚಿಂತನೆ, ಸಕರಾತ್ಮಕವಾದ ಮನೋಭಾವವನ್ನು ಬೆಳಸಿಕೊಳ್ಳಬೇಕು. ಒಬ್ಬ ಆಶಾವಾಧಿ ಪ್ರತಿಯೊಂದು ಸಮಸ್ಯೆಯಲ್ಲಿ ಅವಕಾಶವನ್ನು ಕಾಣುತ್ತಾನೆ. ಆದರೆ ನಿರಾಶಾವಾಧಿ ಪ್ರತಿಯೊಂದು ಅವಕಾಶದಲ್ಲಿ ಸಮಸ್ಯೆಯನ್ನು ಕಾಣುತ್ತಾನೆ. ನಿಮಗೆ ಇಷ್ಟವಿರುವ ವಿಷಯವನ್ನು ಆಯ್ಕೆ ಮಾಡಿ, ಅದರಲ್ಲಿ ಪಾಂಡಿತ್ಯವನ್ನು ಪಡೆಯಲು ಪ್ರಯತ್ನ ಮಾಡಿ. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿರಲಿ. ಗುರಿಯನ್ನು ಸಾಧಿಸಲು ದೃಢ ಮತ್ತು ಅವಿರತ ಯತ್ನಗಳ ಅವಶ್ಯಕತೆ ಇದೆ.

    ನಿಮ್ಮ ಹಾದಿಯಲ್ಲಿ ಅನೇಕ ತೊಡಕುಗಳು ಬರಬಹುದು. ಆತ್ಮವಿಶ್ವಾಸ ಮತ್ತು ಆತ್ಮ ಸ್ಥೈರ್ಯದಿಂದ ಮುನ್ನುಗ್ಗ ಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ, “Strength is life, weakness is death, wakeup stop not till the goal is reached”. ವಿವೇಕಾನಂದರ ಈ ವಾಕ್ಯದಲ್ಲಿ ನಂಬಿಕೆಯನ್ನು ಬೆಳಸಿಕೊಳ್ಳ ಬೇಕು. ಪರೀಕ್ಷೆಯಲ್ಲಿ ನಪಾಸಾಗುವುದು ತುಂಬ ಸಣ್ಣ ವಿಷಯ. ಮತ್ತೊಮ್ಮೆ ಪರೀಕ್ಷೆಗೆ ಹಾಜಾರಾಗಿ, ಪಾಸ್ ಮಾಡಬಹುದು. ಆದರೆ, ಜೀವ ಬಹಳ ಮುಖ್ಯ. ನಕಾರಾತ್ಮಕ ಚಿಂತನೆ ಮಾಡಬಾರದು. ಮರಳಿ, ಮರಳಿ ಪ್ರಯತ್ನಿಸಿ ಗುರಿಯನ್ನು ಸಾಧಿಸ ಬಹುದು.

    ಜೊತೆಗೆ ಒಳ್ಳೆಯ ಸ್ನೇಹಿತರ ಸಹವಾಸವನ್ನು ಮಾಡಿ, ದುಶ್ಚಟಗಳಿಗೆ ಬಲಿಯಾಗ ಬೇಡಿ. ಸಿನಿಮಾ ಅಥವಾ ಟೀವಿ ಸೀರಿಯಲ್‍ಗಳಲ್ಲಿ ತೋರಲ್ಪಡುವ ಸನ್ನಿವೇಶಗಳನ್ನು ನಿಜ ಜೀವನದಲ್ಲಿ ಅನುಕರಣೆ ಮಾಡಬೇಡಿ. ಅದು ಫ್ಯಾಂಟಸಿ ಪ್ರಪಂಚ. ನಿಜ ಜೀವನವೇ ಬೇರೆ, ರೀಲ್ ಜಗತ್ತೆ ಬೇರೆ. ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡುವ ಸಾಮರ್ಥ್ಯ ಮತ್ತು ಅಭ್ಯಾಸವನ್ನು ಬೆಳೆಸಿಕೊಳ್ಳಿ.

    ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿ ಉತ್ತಮ ಪ್ರಜೆಯೆಂಬ ಹೆಗ್ಗಳಿಕೆ ಭಾಜನರಾಗಲು ಪ್ರಯತ್ನಿಸಿ. ಗುರಿ ಸಾಧಿಸಲು ಬೇಕಾಗಿರುವುದು ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯ, ಆತ್ಮಹತ್ಯೆ ಪರಿಹಾರ ಅಲ್ಲವೇ ಅಲ್ಲ.

    Photo by Lukas from Pexels     

    error: Content is protected !!