ಷೇರುಪೇಟೆಯು ವಿಸ್ಮಯಕಾರಿ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಇವೆ. ಇತ್ತೀಚೆಗಂತೂ ಇಂತಹ ನಿದರ್ಶನಗಳೇ ಹೆಚ್ಚಾಗಿವೆ. ಷೇರುಪೇಟೆಯ ಅಂತಾರಾಷ್ಟ್ರೀಯ ಹೆಗ್ಗುರುತಾದ ಸೆನ್ಸೆಕ್ಸ್ ಡಿಸೆಂಬರ್ 4 ರಂದು ಸರ್ವಕಾಲೀನ ದಾಖಲೆಮಟ್ಟಕ್ಕೆ ಅಂದರೆ 45,148.28 ಪಾಯಿಂಟುಗಳನ್ನು ತಲುಪಿ ವಿಜೃಂಭಿಸಿದೆ. ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ಸಹ ರೂ.179.48 ಲಕ್ಷ ಕೋಟಿ ತಲುಪಿ ಸರ್ವಕಾಲೀನ ದಾಖಲೆ ನಿರ್ಮಿಸಿದೆ. ಇದಕ್ಕೆ ಪೂರಕ ಅಂಶವೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ತ್ರೈಮಾಸಿಕ ಪಾಲಿಸಿ ಪ್ರಕಟಣೆಯಲ್ಲಿ ಬ್ಯಾಂಕ್ ಬಡ್ಡಿದರಗಳಾದ ರೆಪೋ ಮತ್ತು ರಿವರ್ಸ್ ರೆಪೋದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಮತ್ತು ದೇಶದ ಆರ್ಥಿಕತೆಯು (GDP) ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿರುವುದೆಂದು ತಿಳಿಸಿದುದಾಗಿದೆ.
ಈ ವರ್ಷದ ಮಾರ್ಚ್ ನಲ್ಲಿ ಭಾರಿ ಕುಸಿತದಿಂದ 25,638.90 ಪಾಯಿಂಟುಳಿಗೆ ಕುಸಿದು ವಾರ್ಷಿಕ ಕನಿಷ್ಠ ದಾಖಲೆ ಮಾಡಿದ್ದ ಸೆನ್ಸೆಕ್ಸ್ ಕೇವಲ ಎಂಟೂವರೆ ತಿಂಗಳಲ್ಲಿ ದಾಖಲೆಯಮಟ್ಟಕ್ಕೆ ಜಿಗಿತ ಕಂಡಿರುವುದು ಅಚ್ಚರಿ ಮೂಡಿಸಿದ ವಿಸ್ಮಯಕಾರಿ ಅಂಶವಾಗಿದೆ.
ಸೆನ್ಸೆಕ್ಸ್ ನೊಂದಿಗೆ ಮಿಡ್ ಕ್ಯಾಪ್ ಇಂಡೆಕ್ಸ್, ಸ್ಮಾಲ್ ಕ್ಯಾಪ್ ಇಂಡೆಕ್ಸ್, ಬಿ ಎಸ್ ಇ 100, 500, ಬಿ ಎಸ್ ಇ ಪ್ರೈವೇಟ್ ಬ್ಯಾಂಕ್ ಇಂಡೆಕ್ಸ್, ಬಿ ಎಸ್ ಇ ಪಿ ಎಸ್ ಯು, ಬಿ ಎಸ್ ಇ ಆಟೋ ಇಂಡೆಕ್ಸ್, ಬಿ ಎಸ್ ಇ ಹೆಲ್ತ್ ಕೇರ್, ಬಿ ಎಸ್ ಇ ಮೆಟಲ್ಸ್, ಸೇರಿ ಇನ್ನೂ ಅನೇಕ ವಿವಿಧ ವಲಯ ಸೂಚ್ಯಂಕಗಳೂ ಸಹ ವಾರ್ಷಿಕ ದಾಖಲೆಯ ಮಟ್ಟವನ್ನು ತಲುಪಿವೆ. ಈ ಎಲ್ಲಾ ಅಂಶಗಳು ಪೋತ್ಸಾಹದಾಯಕ, ಸಕಾರಾತ್ಮಕವಾಗಿವೆ. ಅಂದ ಮಾತ್ರಕ್ಕೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟಿಂಗ್ ಆಗಿರುವ ಸುಮಾರು 5 ಸಾವಿರ ಕಂಪನಿಗಳೆಲ್ಲಾ ಏರಿಕೆ ಕಂಡಿವೆ ಎಂಬ ಭ್ರಮೆ ಮಾತ್ರ ಬೇಡ. ಕಾರಣ ಅನೇಕ ಅದರಲ್ಲೂ ಚುರುಕಾದ ಚಟುವಟಿಕೆ ಭರಿತ ಅಗ್ರಮಾನ್ಯ ಕಂಪನಿಗಳೂ ಎರಡು – ಮೂರು ವರ್ಷಗಳ ಹಿಂದೆ ಕೊಂಡವರಿಗೆ, ಖರೀದಿಸಿದ ಬೆಲೆಯನ್ನೂ ತಂದುಕೊಡದ ಮಟ್ಟದಲ್ಲಿ ಜಡವಾಗಿವೆ. ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ತಲುಪಿದ್ದರೂ, ವರ್ಷಗಳ ನಂತರವೂ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಕಾತುರತೆಯಿಂದ ಕಾಯುವ ಪರಿಸ್ಥಿತಿಯಲ್ಲಿ ಅನೇಕರಿದ್ದಾರೆ. ಈ ಹಂತದಲ್ಲಿ ಹೂಡಿಕೆ ಮಾಡುವಾಗ, ವಿಶೇಷವಾಗಿ ಅಲ್ಪಕಾಲೀನ ಹೂಡಿಕೆಯ ಉದ್ದೇಶದಿಂದ ಪ್ರವೇಶಿಸಿದಲ್ಲಿ ಬಂಡವಾಳವನ್ನು ಸುರಕ್ಷಿತಗೊಳಿಸುವುದು ಸುಲಭವಲ್ಲ.
2017 ರಲ್ಲಿದ್ದ ಕೆಲವು ಪ್ರಮುಖ ಕಂಪನಿಗಳ ಷೇರಿನ ದರಗಳು ಇಂತಿವೆ, ಬ್ರಾಕೇಟ್ ನಲ್ಲಿ ಈಗಿನ ದರಗಳನ್ನು ಕಾಣಬಹುದು :
ಅಪೋಲೋ ಟೈರ್ಸ್ : ರೂ.250, (ರೂ.188),
ಜೆ ಕೆ ಟೈರ್ : ರೂ.150, (ರೂ.81)
ಹುಡ್ಕೋ : ರೂ.85, (ರೂ.35)
ವಾಟೆಕ್ ವಾಬಾಗ್ : ರೂ.600, ( ರೂ.202)
ಚೆನ್ನೈ ಪೆಟ್ರೋ : ರೂ.385, (ರೂ.90)
ಆರ್ ಇ ಸಿ : ರೂ.180, ( ರೂ.127)
ಪಿ ಎಫ್ ಸಿ : ರೂ.140, (ರೂ.115)
ಐ ಟಿ ಸಿ : ರೂ.285, (ರೂ.198)
ಹೆಚ್ ಸಿ ಜಿ : ರೂ.300, (ರೂ.147)
ಬಿ ಪಿ ಸಿ ಎಲ್.: ರೂ.500, (ರೂ.392)
ಕೋಲ್ ಇಂಡಿಯಾ : ರೂ. 300, (ರೂ.133)
ರೇನ್ ಇಂಡಸ್ಟ್ರೀಸ್ : ರೂ.300, (ರೂ.125)
ಎಲ್ & ಟಿ ಫೈನಾನ್ಸ್ ಹೋಲ್ಡಿಂಗ್ಸ್ : ರೂ.185,( ರೂ.88)
ಆದಿತ್ಯ ಬಿರ್ಲಾ ಕ್ಯಾಪಿಟಲ್ : ರೂ.200, ( ರೂ.90)
ಟಾಟಾ ಮೋಟಾರ್ಸ್ : ರೂ.500, (ರೂ.184)
ಬಿ ಹೆಚ್ ಇ ಎಲ್ : ರೂ.130, (ರೂ.34),
ಕೆನರಾ ಬ್ಯಾಂಕ್ : ರೂ.360, (ರೂ.111)
ಜನರಲ್ ಇನ್ಶೂರನ್ಸ್ ಕಾರ್ಪೋರೇಷನ್ : ರೂ.800, (139, 1:1 ಬೋನಸ್ ವಿತರಿಸಿದ ನಂತರ)
ನ್ಯೂ ಇಂಡಿಯಾ ಅಶೂರನ್ಸ್ ಗಳು ರೂ.800 ರ ಸಮೀಪ ( 119, 1:1 ಬೋನಸ್ ವಿತರಿಸಿದ ನಂತರ)
ಎಲ್ ಐ ಸಿ ಹೌಸಿಂಗ್ ಫೈನಾನ್ಸ್ : ರೂ.600 (348)
ಇನ್ನು ರೂ.26 ರಲ್ಲಿದ್ದ ಸಿಂಟೆಕ್ಸ್, 70 ರ ಸಮೀಪವಿದ್ದ ಸಿಂಟೆಕ್ಸ್ ಪ್ಲಾಸ್ಟಿಕ್ಸ್, 120 ರಲ್ಲಿದ್ದ ಬಾಂಬೆ ರೆಯಾನ್ ಫ್ಯಾಷನ್ಸ್, 530 ರಲ್ಲಿದ್ದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್, 800 ರರಲ್ಲಿದ್ದ ಅಪೆಕ್ಸ್ ಫ್ರೋಜನ್, ರೂ.200 ರಲ್ಲಿದ್ದ ಅಬ್ಬಾನ್ ಆಫ್ ಷೋರ್, ರೂ.500 ರಲ್ಲಿದ್ದ ರಿಲಯನ್ಸ್ ಕ್ಯಾಪಿಟಲ್, ರೂ.1,500 ದಲ್ಲಿದ್ದ ಕೇರ್ ರೇಟಿಂಗ್ಸ್, ರೂ.550 ರಲ್ಲಿದ್ದ ದಿವಾನ್ ಹೌಸಿಂಗ್ ಫೈನಾನ್ಸ್, ರೂ.300 ರಲ್ಲಿದ್ದ ಮದರ್ ಸನ್ ಸುಮಿ, ರೂ.1,000 ದಲ್ಲಿದ್ದ ಕ್ವೆಸ್ ಕಾರ್ಪ್, 2017 ರಲ್ಲಿ ರೂ.700 ರಿಂದ ರೂ.270 ರವರೆಗೂ ಏರಿಳಿತ ಪ್ರದರ್ಶಿಸಿದ ವಕ್ರಾಂಗಿ ಲಿಮಿಟೆಡ್ ಮುಂತಾದವುಗಳ ಬೆಲೆಗಳು ಇಂದಿನ ಬೆಲೆಗೂ ಅಂದಿನ ಬೆಲೆಗಳಿಗೂ ಭಾರಿ ಕುಸಿತದ ಅಂತರದಲ್ಲಿವೆ.
ಕಂಪನಿಗಳಾದ ಪಿನ್ ಕಾನ್ ಲೈಫ್ ಸ್ಟೈಲ್, ಗೀತಾಂಜಲಿ ಜೆಮ್ಸ್, ನಂತಹ ಅನೇಕ ಕಂಪನಿಗಳು ಸ್ಟಾಕ್ ಎಕ್ಸ್ ಚೇಂಜ್ ಲೀಸ್ಟಿಂಗ್ ನಿಂದ ಅಮಾನತುಗೊಂಡಿವೆ. ಹೀಗೆ ಅನೇಕಾನೇಕ ಕಂಪನಿಗಳು ಹೂಡಿಕೆದಾರರ ಬಂಡವಾಳವನ್ನು ಭಾರಿ ಪ್ರಮಾಣದಲ್ಲಿ ಕರಗಿಸಿದ್ದರೂ ಪೇಟೆಯ ಬಂಡವಾಳೀಕರಣ ಮೌಲ್ಯವು, ಸೂಚ್ಯಂಕಗಳು ಸರ್ವಕಾಲೀನ ಗರಿಷ್ಠ ದಲ್ಲಿರುವುದು ಸಹಜವಾದ ವಿಸ್ಮಯಕಾರಿ ಅಂಶವಲ್ಲದೆ, ಕೇವಲ ವಿಶ್ಲೇಷಕರಿಗೆ ಉತ್ತಮವಾಗಿರುವಂತಿದೆ. ಈ ರೀತಿ ಗರಿಷ್ಠದಲ್ಲಿರುವಾಗ ಮಿಡ್ ಕ್ಯಾಪ್ ಸ್ಮಾಲ್ ಕ್ಯಾಪ್ ವ್ಯಾಮೋಹದಿಂದ ಹೊರಬರುವುದು ಕ್ಷೇಮ. ಅವು ಒಂದು ರೀತಿಯ ಹೂವಿನಂತೆ ಅಲ್ಪಾಯುವಾಗಿದ್ದು, ಲಾರ್ಜ್ ಕ್ಯಾಪ್ ಕಂಪನಿಗಳು ಡ್ರೈ ಫ್ರೂಟ್ಸ್ ತರಹ ದೀರ್ಘಾಯುವಾಗಿರುವುದಲ್ಲದೆ, ಆಗಿಂದಾಗ್ಗೆ ಕುಸಿತಕ್ಕೊಳಗಾದರೂ ಪುಟಿದೇಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ತೊಲಗಿಸಿರಿ ಭಾವನಾತ್ಮಕ ಬಾಂಧವ್ಯ, ಗರಿಷ್ಠದಲ್ಲಿ ಲಾಭಗಳಿಕೆಯೊಂದೇ ನವ್ಯ, ಆಗಲೇ ಹೂಡಿಕೆಯೊಂದು ಕಾವ್ಯ, ಅದರ ಫಲಿತವೇ ಭವ್ಯ.
ಜಿಡಿಪಿ ಬೆಳವಣಿಗೆ
ಜಿಡಿಪಿ ಬೆಳವಣಿಗೆಯ ಬಗ್ಗೆ ಹೇಳಬೇಕೆಂದರೆ 2010 ಮಾರ್ಚ್ ನಲ್ಲಿ ದಾಖಲೆಯ 13.3% ರಲ್ಲಿದ್ದುದು ಜೂನ್ 2020 ರಲ್ಲಿ -23.9% ಕ್ಕೆ ಕುಸಿದಿದೆ. ಈ ಕುಸಿತದ ಹಂತದಿಂದ ಚೇತರಿಕೆ ಕಂಡಿರುವುದೇ ಸಕಾರಾತ್ಮಕ ಅಂಶವೆಂದು ಬಿಂಬಿಸಲಾಗುತ್ತಿದೆ. ಹನ್ನೊಂದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೂ ಷೇರುಪೇಟೆಗಳು ಮಾತ್ರ ಸರ್ವಕಾಲೀನ ಗರಿಷ್ಠ ಹಂತಕ್ಕೆ ತಲುಪಿರುವುದು ವಿಸ್ಮಯಕಾರಿಯಲ್ಲವೇ?
ಫೆಬ್ರವರಿ 20 ರಂದು ಸೆನ್ಸೆಕ್ಸ್ 41,170 ರಲ್ಲಿದ್ದು ಅಲ್ಲಿಂದ ಸುಮಾರು ಒಂದು ತಿಂಗಳ ಅವಧಿಯಲ್ಲಿ ಅಂದರೆ ಮಾರ್ಚ್ 26 ರಂದು ಸೆನ್ಸೆಕ್ಸ್ 29,815 ಪಾಯಿಂಟುಗಳಿಗೆ ಕುಸಿಯಲು ಮುಖ್ಯ ಕಾರಣವೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಒತ್ತಡವಾಗಿದೆ. ಕೊರೊನಾ ಆರಂಭಿಕ ಸಮದಲ್ಲಿ ಭಯದ ವಾತಾವರಣದಲ್ಲಿ ಸುಮಾರು ರೂ.71 ಸಾವಿರ ಕೋಟಿಯಷ್ಠು ಮಾರಾಟ ಮಾಡಿದ ವಿತ್ತೀಯ ಸಂಸ್ಥೆಗಳು, ಈಗ ಕೊರೊನಾ ಲಸಿಕೆ ಲಭ್ಯವಾಗುವ ನೆಪದಿಂದ ಅನಿಯಮಿತವಾದ ಪ್ರಮಾಣದಲ್ಲಿ ಹಣದ ಹೊಳೆಯನ್ನು ಪೇಟೆಯೊಳಗೆ ಹರಿಸುತ್ತಿರುವುದು ಇಂದಿನ ವಿಜೃಂಭಣೆ ಹಂತಕ್ಕೆ ಪೇಟೆಗಳನ್ನು ತಲುಪಿಸಿವೆ.
ಈ ಸಮಯದಲ್ಲಿ ಚಟುವಟಿಕೆ ಹೆಚ್ಚು ಸಮತೋಲನೆಯಲ್ಲಿರಬೇಕು. ಗರಿಷ್ಠದಲ್ಲಿರಲಿ ಗಳಿಕೆ ಸೀಮಿತ, ಇಳಿಕೆಯಲ್ಲಿರುವುದು ಅವಕಾಶಗಳು ಅಪರಿಮಿತ, ತಾಳ್ಮೆಯೇ ಜಯಕ್ಕೆ ಮೂಲ, ಅತಿ ಆಸೆಯಿಂದ ಆಗಬಾರದು ಅನಾಹುತ. ಅರಿವಿನಿಂದ ಚಟುವಟಿಕೆ ನಡೆಸಿರಿ, ಶುಭವಾಗಲಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.