21.3 C
Karnataka
Wednesday, November 27, 2024
    Home Blog Page 134

    ಕಾಲಹರಣ ಸಾಕು, ಬೇಗ ಶಾಲೆ ಆರಂಭಿಸಿ ಎಂಎಲ್ ಸಿ ಗಳ ಆಗ್ರಹ

    ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಬುಧವಾರ ಸಮಗ್ರ ಶಿಕ್ಷಣ-ಕರ್ನಾಟಕ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಎಲ್ಲರ ಅಭಿಪ್ರಾಯ ಆಲಿಸಿದ ನಂತರ ಮಾತಾನಾಡಿದರು.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ರಾಜ್ಯದಲ್ಲಿ ತಕ್ಷಣವೇ ಶಾಲಾರಂಭ ಮಾಡಬೇಕೆಂದು ವಿಧಾನಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಸದಸ್ಯರು ರಾಜ್ಯ ಸರ್ಕಾರವನ್ನು ಈ ಸಭೆಯಲ್ಲಿ ಒತ್ತಾಯಿಸಿದರು.

    ಹಲವು ಸಮಸ್ಯೆ

    ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಯ ನಿರಂತರತೆ ತಪ್ಪಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

    ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೊದಲ ಹಂತದಲ್ಲಿ ದ್ವಿತೀಯ  ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ತರಗತಿಗಳನ್ನು  ಆರಂಭಿಸಬೇಕು. ಶಾಲೆಗಳನ್ನು ಆರಂಭಿಸುವುದರಿಂದ ಪ್ರಸ್ತುತ ಶಿಕ್ಷಣ ಇಲಾಖೆಯ ಮುಂದಿರುವ ಖಾಸಗಿ  ಅನುದಾನರಹಿತ ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ದೊರೆತಂತಾಗುತ್ತದೆ ಎಂದು ವಿಧಾನಪರಿಷತ್ತಿನ ಸದಸ್ಯರು ಅಭಿಪ್ರಾಯಪಟ್ಟರು.

    ವಿಶೇಷವಾಗಿ ಬಹುಕಾಲ ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ಮಕ್ಕಳ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗುವುದರಿಂದ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ಉತ್ತಮ ಎಂದು  ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಎಂ ಎಲ್ ಸಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರು.

    ಬಹುಕಾಲ ಶಾಲೆಯಿಂದ ದೂರ ಉಳಿದರೆ ಮಕ್ಕಳಲ್ಲಿ ನಿರಾಸಕ್ತಿ ಮೂಡುತ್ತದೆ, ಈಗಾಗಲೇ ಖಿನ್ನತೆ ಆರಂಭಿಸಿದೆ, ಮುಂದೆ ಇದರಿಂದ ಅವರ ಕಲಿಕೆಯ ಮೇಲೆ ಪರಿಣಾಮವಾಗಿ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಈಗಾಗಲೇ  ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ, ಕೆಲವರು ಬಾಲ್ಯವಿವಾಹಕ್ಕೆ ತುತ್ತಾಗಿದ್ದಾರೆ. ಇದು ಇನ್ನೂ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಯೊಬ್ಬ ಸದಸ್ಯರು ಅಭಿಪ್ರಾಯಪಟ್ಟರು. ನಾವು ಗ್ರಾಮಾಂತರ ಪ್ರದೇಶದಲ್ಲಿ ಪ್ರತಿದಿನವೂ ಎಲ್ಲ ಚಟುವಟಿಕೆಗಳು ಆರಂಭವಾಗಿರುವುದನ್ನು ನೋಡಿದ್ದೇವೆ. ಮಕ್ಕಳೂ ಸಹ ಗುಂಪುಗುಂಪಾಗಿ ಆಟವಾಡುತ್ತಿದ್ದಾರೆ. ಯಾವ ಸಮಸ್ಯೆಗಳೂ ಉದ್ಭವಿಸಿಲ್ಲ. ಅನ್ ಲಾಕ್ ಘೋಷಣೆಯಾಗಿ ಎಲ್ಲ ರೀತಿಯ ಚಟುವಟಿಕೆಗಳು ಆರಂಭವಾಗಿದ್ದು, ಶಾಲೆಗಳು ಮಾತ್ರವೇ ಆರಂಭವಾಗಿಲ್ಲ. ಶಾಲೆಗಳನ್ನು ಅದರಲ್ಲೂ 10ನೇ  ಮತ್ತು ದ್ವಿತೀಯ ಪಿಯಸಿ ತರಗತಿಗಳನ್ನು ಆರಂಭಿಸಲು ಈ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.

    “ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇನ್ನೂ ಕಾಲಹರಣ ಮಾಡದೇ ಶಾಲೆಗಳನ್ನು ಆರಂಭಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ತಮ್ಮೊಂದಿಗೆ ಮತ್ತು ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರದೊಂದಿಗೆ  ನಾವೆಲ್ಲ ಇದ್ದೇವೆ.  ನೀವು ಶಾಲೆ ಆರಂಭಿಸಿ” ಎಂದು ಎಲ್ಲ ಸದಸ್ಯರು ಶಿಕ್ಷಣ ಸಚಿವರಿಗೆ ಅಭಯ ನೀಡಿದರು.

    10 ಮತ್ತು 12ನೇ ತರಗತಿಗಳನ್ನು ಶೀಘ್ರವೇ ಆರಂಭಿಸಬೇಕು.  ವಿದ್ಯಾಗಮದಂತಹ ಕಾರ್ಯಕ್ರಮ ನಿಲ್ಲಿಸಿದ್ದು ಸರ್ವಥಾ ಸರಿಯಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಿಜಕ್ಕೂ ತುಂಬಾ ತೊಂದರೆಯಾಗಿದೆ.  ಈ ವಿದ್ಯಾಗಮ ಕಾರ್ಯಕ್ರಮಕ್ಕೆ   ಮರು ಚಾಲನೆ ನೀಡಬೇಕೆಂದು ಒತ್ತಾಯಿಸಿದ ಸದಸ್ಯರು  ಶಾಲಾರಂಭದ ನಂತರ ಉಳಿಕೆಯ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಕಡಿತ ಮಾಡಬೇಕೆಂದು ಸಲಹೆ ನೀಡಿದರು.

    ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸದಸ್ಯರು ಒಕ್ಕೊರಲಿನ ಅಭಿಪ್ರಾಯವನ್ನು ನಾನು ಗಮನಿಸಿದ್ದು, ಈ ಕುರಿತಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.

    ಕೋವಿಡ್ ನಂತರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಲಿಕಾ ನಿರಂತರತೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಸುರೇಶ್ ಕುಮಾರ್, ಶಾಲೆ ಆರಂಭಗೊಂಡ ನಂತರ ಪಿಯು ತರಗತಿಗಳ ಪಠ್ಯವನ್ನು ಎನ್.ಸಿ.ಇ.ಆರ್.ಟಿ ನಿಗದಿಪಡಿಸಿದ ಪಠ್ಯಕ್ರಮಗಳಂತೆ ಕಡಿತ ಮಾಡಲಾಗಿದೆ ಎಂದರು.

    ಶಾಲೆ ಆರಂಭ ನಿಧಾನವಾಗುತ್ತಿರುವದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಿನ್ನೆ ಕನ್ನಡಪ್ರೆಸ್.ಕಾಮ್ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಈ‌ ಬಾರಿ‌ ಸರಳ‌‌‌ ಶಿಕ್ಷಕ‌ಸ್ನೇಹಿ‌ ವರ್ಗಾವಣೆ:

    ಈಗಾಗಲೇ ಪ್ರಾರಂಭವಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಎದುರಿಸಲಾಗುತ್ತಿರುವ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಸರಿಪಡಿಸುವುದಲ್ಲದೇ ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಾದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಬಾರಿ ವರ್ಗಾವಣೆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಿರುವುದರಿಂದ ಬಹುಪಾಲು ಶಿಕ್ಷಕರಿಗೆ ವರ್ಗಾವಣೆ ಅವಕಾಶಗಳಿವೆ ಎಂದು ಸಚಿವರು ಹೇಳಿದರು.

    ಸಿಆರ್ ಪಿ ಬಿಆರ್ ಪಿಗಳಿಗೂ ಅವಕಾಶ

    ಸಿ.ಆರ್.ಪಿ ಮತ್ತು ಬಿ.ಆರ್.ಪಿ ಶಿಕ್ಷಕರಿಗೆ ವರ್ಗಾವಣಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ವರ್ಗಾವಣಾ ವ್ಯಾಪ್ತಿಯಲ್ಲಿ ಬಂದ ಮುಖ್ಯೋಪಾಧ್ಯಾಯರಿಗೆ ಮತ್ತು ಪದವಿ ಪೂರ್ವ ಉಪನ್ಯಾಸಕರಿಗೂ  ಈ ಬಾರಿ ಆದ್ಯತೆಯ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ಹೇಳಿದರು.

    ಹೊಸದಾಗಿ ನೇಮಕಗೊಂಡ ವೃತ್ತಿನಿರತ‌ ಪಿಯು ಉಪನ್ಯಾಸಕರಿಗೆ ನಿರಾಕ್ಷೇಪಣಾ ಪತ್ರ

    ಹೊಸದಾಗಿ ನೇಮಕಗೊಂಡ ಸೇವಾ ನಿರತ ಪದವಿ ಪೂರ್ವ ಶಿಕ್ಷಣ ಉಪನ್ಯಾಸಕ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳು ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನ ನೀಡಬೇಕೆಂದು ಆಗ್ರಹ ವ್ಯಕ್ತವಾಗಿದ್ದು, ಕೂಡಲೇ ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿದರು. ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

    ಈ ಬಾರಿಯ ತಂತ್ರಜ್ಞಾನಾಧಾರಿತ ವರ್ಗಾವಣಾ ವ್ಯವಸ್ಥೆಗೆ ಮುಕ್ತಕಂಠದಿಂದ ಪ್ರಶಂಶಿಸಿದ ವಿಧಾನಪರಿಷತ್ ಸದಸ್ಯರು, ಶಿಕ್ಷಕರು ಕುಳಿತ ಸ್ಥಳದಿಂದಲೇ ತಮ್ಮ ಮೊಬೈಲ್ ನಿಂದಲೇ ಅರ್ಜಿ ಹಾಕಿಕೊಳ್ಳುವಂತಹ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಅದರಲ್ಲಿನ ಕೆಲ ಗೊಂದಲಗಳನ್ನು ಸರಿಪಡಿಸಿದರೆ ಇದು ತುಂಬಾ ಉಪಯುಕ್ತವಾಗಿದೆ ಎಂದರು. ಶಿಕ್ಷಣ ಇಲಾಖೆ ಕಳೆದ ಒಂದುವರೆ ವರ್ಷದಲ್ಲಿ ಕೈಗೊಂಡ ಉಪಕ್ರಮಗಳನ್ನು ಸದಸ್ಯರು ಶ್ಲಾಘಿಸಿದರು.

    ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಮಾಜಿ ಶಿಕ್ಷಣ ಸಚಿವ ಬಸವರಾಜ ಎಸ್. ಹೊರಟ್ಟಿ, ಡಾ. ವೈ.ಎಸ್.ನಾರಾಯಣಸ್ವಾಮಿ, ಶಶೀಲ್ ನಮೋಶಿ, ಸಂಕನೂರು, ಚಿದಾನಂದ ಎಸ್. ಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ , ಬೋಜೇಗೌಡ ಭಾಗವಹಿಸಿದ್ದರು.

    ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾಚೋಳನ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    ಅಂತೂ ವ್ಯಾಕ್ಸಿನ್ ಬಂತು

    ಕೋವಿಡ್ ವಿರುದ್ಧದ ವ್ಯಾಕ್ಸಿನ್ ಇಂದು ಬರುತ್ತಂತೆ, ನಾಳೆ ಬರುತ್ತಂತೆ ಎಂಬ ಸುದ್ಧಿಗಳನ್ನೇ ಕೇಳುತ್ತಿದ್ದ ನಮಗೆ ನೆಮ್ಮದಿಯ ಸುದ್ದಿಯೊಂದು ಇಂಗ್ಲೆಂಡ್ ನಿಂದ ಬಂದಿದೆ. ಫೈಜರ್ ಮತ್ತು ಬಯೋ ಎನ್ ಟೆಕ್ ಸಿದ್ಧಪಡಿಸಿದ್ದ ಲಸಿಕೆಗೆ ಯುಕೆ (ಯುನೈಟಡ್ ಕಿಂಗ್ ಡಮ್)ಸರಕಾರ ಹಸಿರು ನಿಶಾನೆ ತೋರಿದೆ.

    ಈ ಲಸಿಕೆ ಸುರಕ್ಷಿತ ಮತ್ತು ಸಾರ್ವಜನಿಕ ಬಳಕೆಗೆ ಯೋಗ್ಯ ಎಂದು ಅಲ್ಲಿನ ಹೆಲ್ತ್ ಕೇರ್ ರೆಗ್ಯುಲೇಟರಿ ಅಥಾರಿಟಿ (MHRA) ಮಾಡಿದ್ದ ಶಿಫಾರಸ್ಸನ್ನು ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಅಲ್ಲಿನ ಸರಕಾರ ಒಪ್ಪಿಕೊಂಡು ಅನುಮತಿ ನೀಡಿತು. ವಿಶ್ವದಲ್ಲಿ ಲಸಿಕೆಗೆ ಅನುಮತಿ ನೀಡುತ್ತಿರುವ ಮೊದಲ ಸರಕಾರ ಯುಕೆ.

    ಮುಂದಿನವಾರದಿಂದ ಇಂಗ್ಲೆಂಡಿನಾದ್ಯಂತ ಲಸಿಕೆ ಲಭ್ಯವಾಗುತ್ತದೆ. ಸರಕಾರದ ಆರೋಗ್ಯ ಇಲಾಖೆ ಮೊದಲ ಹಂತದಲ್ಲಿ ಯಾರು ಯಾರಿಗೆ ಲಸಿಕೆ ನೀಡಬಹುದೆಂಬ ಆದ್ಯತಾ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಲಸಿಕೆ ನೀಡುವ ಕೆಲಸ ಶುರುವಾಗುತ್ತದೆ.

    ಈ ಮಧ್ಯೆೆ ತನ್ನ ದೇಶದ ಎಲ್ಲಾ ನಾ್ಗರಿಕರಿಗೂ ಉಚಿತವಾಗಿ ಲಸಿಕೆ ನೀಡುವ ಯೋಜನೆ ಜಪಾನ್ ಸರಕಾರ ತನ್ನ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ.

    ಗ್ರಾಮೀಣ ಭಾಗದಲ್ಲಿ ಶಾಲೆಯೂ ಇಲ್ಲ , ಆನ್ ಲೈನೂ ಇಲ್ಲ-ಏಕರೂಪತೆ ಹೇಗೆ ಸಾಧ್ಯವಾದೀತು?

    ಕೋವಿಡ್-19 ಸೊಂಕಿನಿಂದಾಗಿ 2020-21 ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭ ಮುಂದೂಡಲಾಗುತ್ತಿದೆ.  ನಿರ್ದಿಷ್ಟ ಆರಂಭದ ದಿನಾಂಕ ಪ್ರಕಟಣೆಗೆ ಡಿಸೆಂಬರ್ ಅಂತ್ಯದವರೆಗೂ ಕಾಯಬೇಕಾಗಿದೆ. ಶಿಕ್ಷಣ ಇಲಾಖೆ ಕಲಿಕಾ ಪ್ರಕಿಯೆ ನಿರಂತರಗೊಳಿಸಲು ಪ್ರಯತ್ನ ನಡೆಸಿತ್ತು. ಆದರೆ ಎಲ್ಲವೂ ಪರಿಪೂರ್ಣತೆ ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಕೊಠಡಿ ತರಗತಿಗಳು ನಡೆದರೆ ಮಾತ್ರ ವಾರ್ಷಿಕ ಪರೀಕ್ಷೆ ಯಶಸ್ಸು ಸಾಧ್ಯ ಎಂಬುದು ಕನ್ನಡಪ್ರೆಸ್.ಕಾಮ್ ಮಾತನಾಡಿಸಿದ ಪೋಷಕರ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಒಮ್ಮತದ ಅಭಿಪ್ರಾಯ.

    ಬಹುತೇಕ ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಪಠ್ಯಕ್ರಮದಂತೆ ಬೋಧನೆ ನಡೆಸಿವೆ. ಮಕ್ಕಳಿಗಾಗಿ ಸ್ವಂತ ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್ ಟಾಪ್ ಲಭ್ಯವಿದ್ದರೆ ಇದು ಸಾಧ್ಯ. ದುಬಾರಿ ವಂತಿಗೆಯಲ್ಲಿ ಪ್ರವೇಶ ಕೊಡಿಸಿದ ಪೋಷಕರಿಗೆ ಈ ಸೌಲಭ್ಯವನ್ನು ಮಕ್ಕಳಿಗೆ ನೀಡಲು ಶಕ್ತರು.

    ಒಮ್ಮುಖ ಪಾಠದಿಂದ ಮಕ್ಕಳಿಗೆ ಶಿಕ್ಷಕರೊಂದಿಗೆ ಪರಸ್ಪರ ಸಂವಾದ ಸಾಧ್ಯವಾಗಿಲ್ಲ. ಉಪನ್ಯಾಸ ಪದ್ಧತಿ ಬೋಧನೆ ಪ್ರೌಢಶಾಲಾ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಪೂರಕವಲ್ಲ. ನಗರ ಪ್ರದೇಶದಲ್ಲಿ ಇದು ಯಶಸ್ವಿ ಆಗಿರಲು ಸಾಧ್ಯ. ಗ್ರಾಮೀಣ ಮಕ್ಕಳ ಪಾಡೇನು? ಶಿಕ್ಷಣದಲ್ಲಿ ಏಕರೂಪತೆ ಹೇಗೆ ಸಾಧ್ಯವಾದೀತು?

    ಪಠ್ಯದ ಗೊಂದಲ: ಈಗಾಗಲೇ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಪಠ್ಯವನ್ನು ಕಡಿತಗೊಳಿಸುವ ಭರವಸೆ ಇಲಾಖೆ ನೀಡಿದೆ. ದಿನದಿಂದ ದಿನಕ್ಕೆ ಶೈಕ್ಷಣಿಕ ದಿನಗಳು ಕಡಿಮೆಗೊಳ್ಳುತ್ತಿವೆ. ಈಗ ಆನ್ ಲೈನ್ ನಲ್ಲಿ ಮುಗಿಸಿದ ಪಠ್ಯದಲ್ಲಿ ಕಡಿತಗೊಳ್ಳುವ ಪಠ್ಯದ ಮಾಹಿತಿ ನಿಖರವಾಗಿಲ್ಲ. ಎಸ್ಸೆಸ್ಸೆಲ್ಸಿ ಹಾಗೂ 2ನೇ ಪಿಯುಸಿ ಪರೀಕ್ಷೆಗೆ ದಿನಾಂಕ ಪ್ರಕಟಿಸಿದಲ್ಲಿ ಎಷ್ಟು ಹಾಗೂ ಯಾವ ಅಧ್ಯಾಯಗಳನ್ನು ಬೋಧಿಸಬೇಕೆಂಬ ಗೊಂದಲ ಇದ್ದೇ ಇದೆ ಎನ್ನುತ್ತಾರೆ ಶಿಕ್ಷಕ ಮಲ್ಲೇಶ್.

    ಗ್ರಾಮೀಣ ಮಕ್ಕಳ ಅಳಲು: ಹಳ್ಳಿ ಮಕ್ಕಳಿಗೆ ಇತ್ತ ಆನ್ ಲೈನ್ ಸೌಲಭ್ಯವೂ ಇಲ್ಲ, ಅತ್ತ ಶಾಲೆಗೆ ಹೋಗುವಂತೆಯೂ ಇಲ್ಲ. ಕಳೆದ 10 ತಿಂಗಳಿಂದ ಒಂದಿಷ್ಟು ವಿದ್ಯಾಗಮ ಪ್ರಯತ್ನ ಬಿಟ್ಟರೆ ಮತ್ತೆ ಪಠ್ಯದ ಬೋಧನೆ ಇಲ್ವೆ ಇಲ್ಲ. ಬಡ ಮಕ್ಕಳಿಗೆ ಮೊಬೈಲ್ ಇಲ್ಲ. ಇದ್ದರೂ ನೆಟ್ ವರ್ಕ್ ಇಲ್ಲ. ಮನೆಗೆಲಸ, ಹೊಲದ ಕೆಲಸದಲ್ಲಿ ಪೋಷಕರಿಗೆ ಸಹಕರಿಸುವ ಜವಾಬ್ದಾರಿ. ಶಾಲೆ ಆರಂಭದ ಬಗ್ಗೆ ತಮ್ಮ ಶಿಕ್ಷಕರಿಗೆ ಫೋನಾಯಿಸಿ ವಿಚಾರಣೆ ಇದರಲ್ಲೆ ಕಾಲ ತಳ್ಳುತ್ತಿದ್ದಾರೆ. ಇವರಿಗೆ ಪರೀಕ್ಷೆ ನಡೆಸಿದರೆ ನಿರೀಕ್ಷಿತ ಫಲಿತಾಂಶ ಸಾಧ್ಯವಿಲ್ಲ. ತರಗತಿ ನಡೆಸಿಯೇ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ ಶಿಕ್ಷಕ ಹಾಲೇಶ್.

    ಕನ್ನಡ ಮಾಧ್ಯಮದ ಸ್ಥಿತಿ-ಗತಿ: ರಾಜ್ಯದ ಬಹುತೇಕ ಕನ್ನಡ ಮಾಧ್ಯಮದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ನೇರ ಬೋಧನೆಯಷ್ಟೆ ಪರೀಕ್ಷೆ ಸಿದ್ಧಗೊಳಿಸುವ ಅಸ್ತ್ರ. ಬುದ್ದಿಮತ್ತೆಯಲ್ಲಿ ಚುರುಕಾದ ಮಕ್ಕಳು ಇಂಗ್ಲೀಷ್ ಮಾಧ್ಯಮ ಆಯ್ಕೆಮಾಡಿಕೊಂಡಿದ್ದಾರೆ. ಪೋಷಕರು ಬಹುತೇಕ ಪೋಷಕರು ವಿದ್ಯಾವಂತರಾಗಿದ್ದು ಮನೆಯಲ್ಲಿ ಓದಿಗೆ ಸಹಕರಿಸುವರು. ಹಳ್ಳಿಗಾಡಿ ಬಡ, ಅನಕ್ಷರಸ್ಥ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ಮುಗ್ಧತೆ ಹೊಂದಿದ್ದಾರೆ. ಅವರಿಗೆ ಆನ್ ಲೈನ್ ಗೊತ್ತಿಲ್ಲ. ಸ್ಕೂಲ್ ಹೋದ್ರೆ ಅಷ್ಟೆ ಪರೀಕ್ಷೆ ಬರೆಯುವ ಸಾಮರ್ಥ್ಯ ಎನ್ನುತ್ತಾರೆ ಪೋಷಕರು.

    ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಆನ್ ಲೈನ್ ತರಗತಿಗಳು ಪರಿಣಾಮಕಾರಿ ಅಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಸಾರ್ವತ್ರಿಕವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಏಕರೂಪತೆ ಇರಬೇಕು. ತಡವಾದರೂ ಸ್ಪಷ್ಟ ಪಠ್ಯದ ಅಧ್ಯಾಯಗಳ ಆಯ್ಕೆಯೊಂದಿಗೆ ಶಾಲಾ ದಿನಗಳನ್ನು ಪರಿಷ್ಕರಿಸಿ ಪರೀಕ್ಷೆಗೆ ಸಿದ್ದಗೊಳಿಸುವುದು ಸೂಕ್ತ ಎಂಬುದು ಹಲವರ ಅಭಿಪ್ರಾಯ.

    ಚಂದನ ವಾಹಿನಿ ಪಾಠ ಅರ್ಥವಾಗುವುದು ಕಷ್ಟ

    ಚಂದನ ವಾಹಿನಿಯಲ್ಲಿ ನಡೆದ ಪಠ್ಯದ ಬೋಧನೆ ಸರಾಸರಿ ಹಾಗೂ ಸರಾಸರಿ ಬುದ್ಧಿಮತ್ತೆಗಿಂತ ಕೆಳಗಿನ ಮಕ್ಕಳು ಅರ್ಥೈಸಿಕೊಳ್ಳಲು ಕಷ್ಟವಾಗಿದೆ. ಅವರ ಸಂಶಯಗಳಿಗೆ ಶಿಕ್ಷಕರ ಸಂಪರ್ಕವಿಲ್ಲದೇ ಪರಿಹಾರ ಸಿಗುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯ

    ಗ್ರಾಮೀಣ ಖಾಸಗಿ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದೇನೆ. ತಂದೆ ಅಕಾಲಿಕ ಮರಣ ಹೊಂದಿದ್ದಾರೆ. ತಾಯಿ ಖಾಸಗಿ ಅನುದಾನಿತ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆ ಆರಂಭಗೊಳ್ಳದ ಕಾರಣ ಕೆಲಸವಿಲ್ಲ. ಮನೆಯಲ್ಲಿ ಟಿವಿಯೂ ಇಲ್ಲ. ಆನ್ ಲೈನ್ ಪಾಠವೂ ಇಲ್ಲ. ಪರೀಕ್ಷೆ ಸಿದ್ಧತೆಗಾಗಿ ತರಗತಿ ಆರಂಭಿಸಲು ಶಿಕ್ಷಕರಿಗೆ ಮೊರೆ ಇಡುತ್ತಿದ್ದೇನೆ ಎಂದು ಅಲವತ್ತುಕೊಳ್ಳುತ್ತಾರೆ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ರಕ್ಷಿತಾ.

    ಮೀನು ಹಿಡಿಯುತ್ತಿರುವ ವಿದ್ಯಾರ್ಥಿ

    ತಂದೆಯೊಂದಿಗೆ ಮೀನು ಹಿಡಿಯಲು ನಿತ್ಯ ಕೆರೆಗೆ ತೆರಳುತ್ತೇನೆ. ಚಿಕ್ಕ ದೋಣಿಯಲ್ಲಿ ಬಲೆ ಹಿಡಿದು ನೀರಿನಲ್ಲಿ ಬಹುದೂರ ಸಾಗಬೇಕು. ಅನಾರೋಗ್ಯ ಪೀಡಿತ ತಂದೆಯೊಂದಿಗೆ ನಿತ್ಯ 5 ರಿಂದ 10 ಕೆ.ಜಿ. ಮೀನು ಬೇಟೆ ಆಡುತ್ತೇವೆ. ಕಾಲೇಜು ಆರಂಭಗೊಳ್ಳುವವರೆಗೆ ತಂದೆಗೆ ಸಹಕರಿಸುವೆ ಎಂದು ಕಷ್ಟ ತೋಡಿಕೊಳ್ಳುತ್ತಾನೆ ವಿದ್ಯಾರ್ಥಿ ಗಿರೀಶ್.

    ಅವರನ್ನು ಬಿಟ್ಟು ಬಿಟ್ಟರೆ ಅದೇ ನಾವು ಅವರಿಗೆ ಮಾಡುವ ಉಪಕಾರ

    ಎನ್.ಶೈಲಜಾ ಹಾಸನ

    ಶಾಂತಿಗ್ರಾಮದ  ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಶೈಲಜಾ ಅವರ ಅನೇಕ ಕಾದಂಬರಿಗಳು ಪ್ರಮುಖ ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.

    ಈ ಭೂಮಿ ಮೇಲೆ ಹುಟ್ಟಿದವರೆಲ್ಲರೂ ಸಂತೋಷವಾಗಿ, ಆನಂದವಾಗಿ ಬದುಕುತ್ತಿಲ್ಲ. ಎಷ್ಟೋ ನೋವು, ಅವಮಾನ, ಅಪಮಾನ ,ಸಂಕಟ ಎಲ್ಲವನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು ಮೇಲೆ ನಗುನಗುತ್ತಾ ಇರುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಅದು ದೇವರು ಅವರಿಗೆ ಕೊಟ್ಟ ವರ.ಹೃದಯದಲ್ಲಿ ಅದೆಂತಹ ಅಗ್ನಿಪರ್ವತ ಇರುತ್ತದೆಯೋ, ಅದೆಂತಹ ಜ್ವಾಲಾಮುಖಿ ಉಕ್ಕುತ್ತಿರುತ್ತದೆಯೋ, ಅವರಿಗಷ್ಟೇ ಗೊತ್ತು.ನೋಡುವವರಿಗೆ ಅವರ ನಗುಮುಖ ಮಾತ್ರ ಕಾಣಿಸುತ್ತದೆ. ನೋಡಿದವರು ಅವರ ನಗು ಮುಖ ನೋಡಿ ಅದೆಷ್ಟು ಸುಖವಾಗಿ ,ಸಂತೋಷವಾಗಿ ಇದ್ದಾರೆ ಎಂದು ಭಾವಿಸಿ ಬಿಡುತ್ತಾರೆ. ಅದಕ್ಕೆ ಮುಖ್ಯ ಕಾರಣ ತಮ್ಮೊಳಗಿನ ನೋವುಗಳನ್ನೇ ಆಗಲಿ ,ಸಂಕಟಗಳನ್ನೇ ಆಗಲಿ ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ತಾವು ಸಂತೋಷವಾಗಿಯೇ ಇದ್ದೀವಿ ಎಂದು ತೋರಿಸಿಕೊಳ್ಳುತ್ತಾರೆ. ಸಂಕಟಗಳನ್ನು ಹಂಚಿಕೊಳ್ಳಲು ಇಷ್ಟ ಪಡದ ಅದೆಷ್ಟೋ ಜನ ತಮ್ಮ ಸಂಭ್ರಮಗಳನ್ನು ಮಾತ್ರ ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ.ಈ ಸ್ವಭಾವ ಕೆಲವರು ಕುಹಕಕ್ಕೂ ಕಾರಣವಾಗಬಹುದು.

    ಸರೋಜಾ ಜೋರಾಗಿ ನಗುತ್ತಾ ಸಹೋದ್ಯೋಗಿ ವಿನುತ ಜೊತೆ ಮಾತನಾಡುತ್ತಾ ಇರುವುದನ್ನು ನೋಡಿ ಅಂಬಿಕಾ ಮೂಗು ಮುರಿದು “ಏನು ಹೆಂಗಸಪ್ಪ , ಮನೆಯಲ್ಲಿ ನೋಡಿದರೆ ಹಾಸುಹೊದೆಯುವಷ್ಟು ಕಷ್ಟ ಇದೆ,ಇಲ್ಲಿ ನೋಡಿದರೆ ಹೀಗೆ ನಗುತ್ತಾ ಮಾತಾಡುತ್ತಾ ಇರೋದು ನೋಡಿ,ಸುಖ, ಸಂತೋಷ ಅನ್ನೋದು ಇವಳು ಹತ್ತಿರವೇ ಕಾಲು ಮುರಿದುಕೊಂಡು ಕುಳಿತು ಕೊಂಡು ಬಿಟ್ಟಿದೆ ಅನ್ನೋ ಹಾಗೆ,ಅದು ಹೇಗೆ ಮನಸ್ಸು ಬರುತ್ತದೆಯೋ,ಹೀಗೆ ಇರೋಕೆ” ಅಂದಾಗ ತಟ್ಟನೆ “ಮತ್ತೆ ತನಗೆ ಕಷ್ಟ ಇದೆ,ನೋವು ಇದೆ ಅಂತ ಸದಾ ಅಳುತ್ತಾ ಇರಬೇಕಾ” ಅಂತ ಪ್ರತಿಕ್ರಿಯಿಸಿದ್ದೆ. ಸರೋಜ ಪೆಚ್ಚಾಗಿ ಅಲ್ಲಿಂದ ದುರ್ದಾನತೆಗೆದುಕೊಂಡಂತೆ ಎದ್ದು ಹೋದಾಗ ನನಗೇನು ಪಶ್ಚಾತ್ತಾಪ ಆಗಲಿಲ್ಲ. ನಗುತ್ತಲೇ ಎಲ್ಲವನ್ನೂ ಎದುರಿಸುವುದು ಸುಲಭದ ಮಾತಿಲ್ಲ.ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ಸಂಕಷ್ಟಗಳಿಗೆ ಗುರಿಯಾಗುವುದು ಸಹಜ.ಅದನ್ನೆ ದೊಡ್ಡದು ಮಾಡಿಕೊಂಡು ಅಳುಮುಂಜಿ ಆದರೆ ಸುತ್ತಲಿನವರಿಗೂ ಕಷ್ಟವೇ.

    ರಾಗಿಣಿ ದಂಪತಿಗಳು ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ವರ್ಷವಾದರೂ ಆ ದುಃಖದಿಂದ ಹೊರ ಬರದೆ ಶೋಕದಲ್ಲಿ ಮುಳುಗಿ ಹೋಗಿದ್ದರು.ಅವರ ಬಂಧು ಬಳಗದವರು ಸಮಾಧಾನ ಮಾಡುತ್ತಲೆ ಇದ್ದರು.ಇವರನ್ನು ಹೀಗೆಯೇ ಬಿಟ್ಟರೆ ಇವರೂ ಮಗನಹಾದಿ ಹಿಡಿದುಬಿಟ್ಟಾರೆಂದು ಹೆದರಿ ಎಲ್ಲರೂ ಸೇರಿ ಭಾರತ ಪ್ರವಾಸ ಏರ್ಪಡಿಸಿ ರಾಗಿಣಿ ದಂಪತಿಗಳನ್ನು ಕರೆದುಕೊಂಡು ಹೋಗಿ ಸುಮಾರು ಎರಡು ತಿಂಗಳ ಕಾಲ ಸುತ್ತಾಡಿಸಿ ಕೊಂಡು ಬಂದಮೇಲೆ,ಹೊಸ ಪ್ರವಾಸ ತಾಣ, ತೀರ್ಥಕ್ಷೇತ್ರ ನೋಡಿಕೊಂಡು ಬಂದಮೇಲೆ ಮಗನ ಅಗಲಿಕೆ ನೋವಿನಿಂದ ಸ್ವಲ್ಪ ಹೊರ ಬಂದು ಹೊರಗಿನವರ ಜೊತೆ ಬೆರೆಯ ತೊಡಗಿದ್ದರು. ಅವರೇನೊ ಮೇಲುನೋಟಕ್ಕೆ ಸಮಾಧಾನ ಹೊಂದಿರುವಂತೆ ಎಲ್ಲರೊಡನೆ ಬೆರೆತು ಸಹಜವಾಗಿರಲು ಪ್ರಯತ್ನ ನಡೆಸಿದ್ದರು.ಆದರೆ ಕೆಲ ಅಧಿಕಪ್ರಸಂಗಿಗಳು “ಮಗ ಸತ್ತು ವರ್ಷವಾಗಿಲ್ಲ, ಆಗಲೆ ಅವರ ಸುತ್ತಾಟ ಏನು, ಸಂತೋಷ ಏನು,ಏನು ಜನರಪ್ಪ”ಅಂತ ಕುಟಿಕಿದ್ದು ಕೇಳಿ ನಿಜಕ್ಕೂ ಬೇಸರವಾಗಿತ್ತು.ಪುತ್ರ ಶೋಕ ನಿರಂತರ ಅನ್ನೋದೂ ಸತ್ಯವೇ ಆಗಿದೆ.ಸಾಯುವ ತನಕ ಆ ನೋವು,ಸಂಕಟ ಶಾಶ್ವತವಾಗಿ ಉಳಿದಿರುತ್ತದೆ.ಹಾಗಂತ ಸದಾ ಅಳುತ್ತಾ ಕುಳಿತರೆ ಬದುಕಿನ ಬಂಡಿ ನಡೆಯಬೇಕಲ್ಲವೆ. ಗಂಡನಿಗೆ ಗೊತ್ತಾಗದಂತೆ ಹೆಂಡತಿ, ಹೆಂಡತಿಗೆ ಗೊತ್ತಾಗದಂತೆ ಗಂಡ ಸಂಕಟಪಡುತ್ತಿದ್ದರೂ ಅದು ಪರಸ್ಪರ ಗೊತ್ತಾಗದಂತೆ ದುಃಖ ಮರೆತವರಂತೆ ನಟಿಸುತ್ತಾ ಪರಸ್ಪರರಿಗಾಗಿ ಬದುಕಲು ಪ್ರಯತ್ನಿಸುತ್ತಿದ್ದರು.ಈ ಸತ್ಯ ಅವರನ್ನು ನೋಡಿ ಕುಹಕವಾಡುವವರಿಗೇನು ಗೊತ್ತು.

    ಮಮತಾಗೆ ಪತಿ ಕ್ಯಾನ್ಸರ್ ನಿಂದ ತೀರಿಕೊಂಡಾಗ ಪ್ರಪಂಚವೇ ಬೇಡವೆನಿಸಿತ್ತು.ತಿಂಗಾನುಗಟ್ಟಲೆ ಗಂಡನಿಗಾಗಿ ಕಂಬನಿ ಹರಿಸುತ್ತ ಊಟ ತಿಂಡಿ ತ್ಯಜಿಸಿ ಗೋಳಾಡಿದ್ದಳು. ನೆಂಟರಿಷ್ಟರು ಕೆಲವು ದಿನಗಳು ಜೊತೆಯಲ್ಲಿ ಇದ್ದು ಸಂತೈಸಿದ್ದರು.ನಂತರ ಅವರವರ ದಾರಿಹಿಡಿದು ಹೊರಟಾಗ ಮನೆಯಲ್ಲಿ ಅವಳು, ಅವಳ ಮಕ್ಕಳು,ತಾಯಿ ಮಾತ್ರವೆ ಉಳಿದಾಗ ಮುಂದಿನ ಬದುಕನ್ನು ನೋಡಿಕೊಳ್ಳಲೇ ಬೇಕಾಯಿತು.ಟಿವಿ ಚಾನಲೊಂದರಲ್ಲಿ ಕೆಲಸ ಸಿಕ್ಕಾಗ ಬದುಕಿಗೆ ದಾರಿ ಸಿಕ್ಕಿತು.ಹೊರ ಹೋಗುವಾಗ ಹೇಗೇಗೊ ಹೋಗಲು ಸಾಧ್ಯವೇ,ಅದೂ ಕೂಡ ಜನರ ಬಾಯಿಗೆ ಸಿಕ್ಕೆ ಬಿಟ್ಟಿತು. ಅವಳು ಅಲಂಕಾರದ ಬಗ್ಗೆ ಅನಿಷ್ಟ ಕರ ಮಾತುಗಳು, ಅವಹೇಳನಕಾರಿ ನಡವಳಿಕೆಗಳು.ಇದಾವುದಕ್ಕೂ ಸೊಪ್ಪು ಹಾಕದೆ ಮಮತಾ ಆಡುವವರ ಮಾತುಗಳು ಕಿವಿಮೇಲೆ ಬೀಳದಂತೆ ಇದ್ದು ಬಿಡುತ್ತಿದ್ದಳು.ಎದೆಯೊಳಗೆ ಬೇಯುವ ಸಂಕಷ್ಟ,ನೋವು ಇದ್ದರೂ ತೋರಿಸಿಕೊಳ್ಳದೆ ಗಟ್ಟಿಗಿತ್ತಿ ಮಮತಾ,ಈ ಗಟ್ಟೀತನ ಇತರರಿಗೆ ಮಾದರಿಯೂ ಹೌದು.

    ಮನುಷ್ಯ ಅಂದ ಮೇಲೆ ಕಷ್ಟ, ದುಃಖ,ಸಂಕಟ ಇವೆಲ್ಲವೂ ಇದ್ದದ್ದೇ.ಕಷ್ಟವಿದೆ, ದುಃಖವಿದೆ ಅಂತ ಸದಾ ತಾವೂ ದುಃಖಿಸುತ್ತಾ ತನ್ನ ಸುತ್ತಲಿನವರಿಗಳೂ ಸಂಕಟ ನೀಡುವುದು ಯಾವ ನ್ಯಾಯ.ಎಷ್ಟೇ ದುಃಖಿಸಿದರೂ ಹೋದ ವ್ಯಕ್ತಿ ಮತ್ತೆ ಬರಲಾರೆ.ಬರುವಂತಿದ್ದರೆ ನಾವೂ ಕೂಡ ಅವರ ಜೊತೆ ದುಃಖಿಸುತ್ತಾ ಕೂರಬಹುದಿತ್ತು.ಆದರೆ ಅದು ಅಸಾಧ್ಯದ ಮಾತು.ಸಂತೋಷವನ್ನು ಹಂಚಿಕೊಂಡಷ್ಟು ಹೆಚ್ಚಾಗುತ್ತದೆ. ಹಾಗಾಗಿ ಸಂತೋಷಹಂಚಿಕೊಳ್ಳ ಬಹುದು.ಆದರೆ ದುಃಖ ಹಂಚಿಕೊಳ್ಳಲು ಅಸಾಧ್ಯ.ಹಂಚಿಕೊಂಡರೆ ಕಡಿಮೆಯಾಗುವುದಿಲ್ಲ.ನಮ್ಮ ನೋವು ನಾವೇ ತಿನ್ನಬೇಕು.ಅದನ್ನು ಇತರರಿಗೆ ಹಂಚಲು ಸಾಧ್ಯವಿಲ್ಲ.ಹಾಗಾಗಿ ನಮ್ಮ ನೋವು, ಸಂಕಷ್ಟವನ್ನು ನುಂಗಿ ಕೊಂಡು ನೋಡುವವರಿಗೆ ನೋವು ಮರೆತಿದ್ದೆವೆ ಅಂತ ನಟಿಸಬೇಕಾಗುತ್ತದೆ.ಅದು ಅವರ ವಿಶಾಲ ಗುಣವೂ ಹೌದು.ಅದನ್ನು ಅರ್ಥ ಮಾಡಿಕೊಳ್ಳದೆ ಕಟುಕಿಯಾಡುವುದು ಕ್ರೂರತ್ವ.ನಮ್ಮಿಂದ ಬೇರೆಯವರ ನೋವು ಕಡಿಮೆ ಮಾಡಲು ಅಸಾಧ್ಯ.ಆದರೆ ಚುಚ್ಚಿ ಮಾತನಾಡದೆ, ವ್ಯಂಗ್ಯ ಕುಹಕವಾಗಿ ಮಾತನಾಡಿ ನಿಂದಿಸದೆ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಟ್ಟರೆ ಅದೇ ನಾವು ಅವರಿಗೆ ಮಾಡುವ ಉಪಕಾರ. (ಹೆಸರುಗಳು ಕಾಲ್ಪನಿಕ)

    Photo by Simon Migaj on Unsplash

    ಲರ್ನಿಂಗ್‌ ಫ್ರಮ್‌ ಎನಿವೇರ್‌ ; ಕಲಿಕಾ ನಿರ್ವಹಣಾ ವ್ಯವಸ್ಥೆಗೆ ಚಾಲನೆ

    ಸರಕಾರಿ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಬಲ್ಲ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆ ‘ಕರ್ನಾಟಕ ಎಲ್ಎಂಎಸ್’ (ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್-ಎಲ್‌ಎಂಎಸ್)‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

    ಬೆಂಗಳೂರಿನಲ್ಲಿ ಸೋಮವಾರ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಿದ ಮುಖ್ಯಮಂತ್ರಿ, “ವಿದ್ಯಾರ್ಥಿಗಳು ಇದ್ದ ಜಾಗದಿಂದಲೇ ಜ್ಞಾನಾರ್ಜನೆ ಮಾಡಬಹುದು. ʼಲರ್ನಿಂಗ್‌ ಫ್ರಮ್‌ ಎನಿವೇರ್‌ʼ ಎನ್ನುವ ಪರಿಕಲ್ಪನೆಯನ್ನು ಇದು ಸಾಕಾರಗೊಳಿಸುತ್ತದೆ. ಇದರಿಂದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ” ಎಂದರು.

    ಏನಿದ ಕಲಿಕಾ ನಿರ್ವಹಣಾ ವ್ಯವಸ್ಥೆ?

    • ಕೋವಿಡ್‌ ಹಿನ್ನೆಲೆಯಲ್ಲಿ ಡಿಜಿಟಲ್‌ ಕಲಿಕೆಗೆ ಎಲ್ಲಡೆ ಹೆಚ್ಚು ಒತ್ತು ಸಿಗುತ್ತಿದೆ. ಈ ಕಾರಣದಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಲ್‌ಎಂಎಸ್ ಆಧಾರಿತ ಡಿಜಿಟಲ್‌ ಕಲಿಕೆಯನ್ನು ʼಕರ್ನಾಟಕ ಎಲ್‌ಎಂಎಸ್ʼ ಎಂಬ ಹೆಸರಿನಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, 14 ಸರಕಾರಿ ಎಂಜಿನಿಯರಿಂಗ್ ಮತ್ತು 87 ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಈ ಕ್ರಮದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಹಾಗೂ 24,000 ಅಧ್ಯಾಪಕರ ಬೋಧನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಲಿವೆ. ನಮ್ಮ ಶಕ್ತಿ, ನಮ್ಮ ಭವಿಷ್ಯ ಎನ್ನುವುದು ಈ ಪರಿಕಲ್ಪನೆಯ ಟ್ಯಾಗ್‌ಲೈನ್‌ ಆಗಿದೆ.
    • ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಮುಖ್ಯವಾಗಿ; ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಅವರ ಕಲಿಕೆಯ ಮಟ್ಟವನ್ನು ಈ ಹೊಸ ಪದ್ಧತಿ ಗಣನೀಯವಾಗಿ ಸುಧಾರಿಸಲಿದೆ.
    • ಎಲ್‌ಎಂಎಸ್‌ ಆಧಾರಿತ ಡಿಜಿಟಲ್‌ ಕಲಿಕೆ ಪದ್ಧತಿಯು ವಿಷಯ ಸಂವಹನ, ವಿಷಯ ಲಭ್ಯತೆ ಮತ್ತು ಮೌಲ್ಯಮಾಪನದಲ್ಲಿ ಗುರುತರ, ಮಹತ್ವದ ಬದಲಾವಣೆಗಳನ್ನು ತರುತ್ತದೆ. ಈ ಮೂಲಕ ಅದು ಡಿಜಿಟಲ್‌ ಅಂತರವನ್ನು ಅಳಿಸಿ ಹಾಕುತ್ತದೆ. ತನ್ಮೂಲಕ ಬೋಧನೆ- ಕಲಿಕೆಗಳಲ್ಲಿ ಕ್ರಾಂತಿಕಾರಕ ಮುನ್ನಡೆಯನ್ನು ಸಾಧಿಸಬಲ್ಲ ಪರಿಣಾಮಕಾರಿ ವೇದಿಕೆಯಾಗಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದು, ಸಮಯವನ್ನು ಉಳಿಸಬಹುದು.
    • ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರು, ವಿವಿಧ ಭಾಷೆಗಳಲ್ಲಿ 14 ಸಂಯೋಜಿತ ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಪೂರಕವಾಗಿ ಸ್ವ-ಕಲಿಕೆ ಮತ್ತು ಬೋಧನೆಗೆ ಸೂಕ್ತವಾದ ಇ-ಕಂಟೆಂಟ್‌ ಅನ್ನು ಪಿಪಿಟಿ, ವಿಡಿಯೋ, ಅಸೈನ್‌ಮೆಂಟುಗಳು, ಇ-ಅಧ್ಯಯನ ಮಾಹಿತಿ, ಪ್ರಶ್ನೋತ್ತರ ವಿವರ, ಕ್ವಿಜ್‌ ರೂಪದಲ್ಲಿ ಅಭಿವೃದ್ಧಿಗೊಳಿಸಿದ್ದು, ಇದರ ಜತೆಗೆ ವಿವಿಗಳವಾರು ಕೇಂದ್ರೀಕೃಗೊಂಡು, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಸಾರಪಠ್ಯವೂ ಬೋಧಕರಿಗೆ ಲಭ್ಯವಾಗಲಿದೆ.
    • ಈ ಕಲಿಕಾ ನಿರ್ವಹಣೆ ಪದ್ದತಿಯಲ್ಲಿ ಶಿಕ್ಷಣದ ವಿವಿಧ ಅಂಶಗಳ ವೈಜ್ಞಾನಿಕ ಮಾಹನಕ್ಕೆ ಪೂರಕವಾಗಿ ವಿಶ್ಲೇಷಣೆ ಇರುತ್ತದೆ. ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಕಾಲೇಜುಗಳ ಹಿಂದಿನ ಮಾಹಿತಿ, ಕಂಟೆಂಟ್‌ ರೇಟಿಂಗ್‌, ವಿದ್ಯಾರ್ಥಿಗಳಿಂದ ಮತ್ತು ತರಗತಿಗಳಲ್ಲಿ ಅಧ್ಯಾಪಕರಿಂದ ಇ-ಕಂಟೆಂಟ್‌ ಬಳಕೆಯ ಟ್ರ್ಯಾಕಿಂಗ್‌, ಸಂಪೂರ್ಣ ವಿವರಗಳುಳ್ಳ ವರದಿ ತಯಾರಿಕೆ ಇತ್ಯಾದಿಗಳಿಗೆ ಅವಕಾಶ ಕಲಿಸಲಾಗಿದೆ.
    • ಎಲ್‌ಎಂಎಸ್‌ ಆಧಾರಿತ ಡಿಜಿಟಲ್‌ ಕಲಿಕೆಯಿಂದ ಉತ್ತಮ ಗುಣಮಟ್ಟದ ಬೋಧನೆ, ಕಲಿಕೆ, ನಿರಂತರ ಮೌಲ್ಯಮಾಪನ ಮತ್ತು ಮಾಹಿತಿ ಆಧಾರಿತ ತಿದ್ದುಪಡಿ ಕ್ರಮಗಳಿಂದ ಇಡೀ ಉನ್ನತ ಶಿಕ್ಷಣಕ್ಕೆ ಒಂದು ರೀತಿಯ ಪರಿಪೂರ್ಣತೆ ಬರಲಿದೆ.

    ಹೊಸ ರೀತಿಯ ಪ್ರಯತ್ನ

    ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆಯು ಕೋವಿಡ್‌ನಿಂದ ಕಲಿಕೆಯಿಂದ ವಂಚಿತವಾಗುತ್ತಿರುವ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇಡೀ ದೇಶದಲ್ಲಿಯೇ ಇದು ಹೊಸ ರೀತಿಯ ಪ್ರಯತ್ನ ಹಾಗೂ ಮೊದಲು ಎನ್ನಬಹುದು. ಈ ಉಪಕ್ರಮದಿಂದ ಸರಕಾರಿ ಕಾಲೇಜುಗಳ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಈ ಲರ್ನಿಂಗ್‌ ಸಿಸ್ಟಮ್‌ನಲ್ಲಿ ಪರಿಹಾರಗಳಿವೆ. ಎಲ್ಲೇ ಇದ್ದರೂ ವಿದ್ಯಾರ್ಥಿಗಳು ಕಲಿಯಬಹುದು. ಲೈವ್‌ ತರಗತಿಗಳಲ್ಲಿ ಭಾಗಿಯಾಗಬಹುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳೀದರು.

    ಜಾಗತಿಕ ಮಟ್ಟದಲ್ಲಿ ಬೋಧನೆ- ಕಲಿಕೆಯಲ್ಲಿ ಗುರುತರ ಬದಲಾವಣೆಗಳಾಗುತ್ತಿವೆ. ಇದನ್ನು ಕ್ಷಿಪ್ರವಾಗಿ ಗ್ರಹಿಸಿರುವ ಕರ್ನಾಟಕವೂ ಈ ನಿಟ್ಟಿನಲ್ಲಿ ನೂತನ ಪದ್ಧತಿಯನ್ನು ಜಾರಿಗೆ ತಂದಿದೆ. ತಂತ್ರಜ್ಞಾನದ ಮೂಲಕ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ ಎಂದರು ಡಿಸಿಎಂ

    ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳು

    ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು; “ರಾಜ್ಯದಲ್ಲಿ ಈಗ ಸರಕಾರಿ ಎಂಜಿನೀಯರಿಂಗ್‌, ಪದವಿ, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಒಟ್ಟು 8,000 ತರಗತಿ ಕೊಠಡಿಗಳಿವೆ. ಇವುಗಳ ಪೈಕಿ 2,500 ಕೊಠಡಿಗಳನ್ನು ಕೂಡಲೇ ಅತ್ಯಂತ ವೇಗದ ವೈಫೈ ವ್ಯವಸ್ಥೆ ಇರುವ ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳನ್ನಾಗಿ ರೂಪಿಸಲಾಗುತ್ತಿದೆ. ಉಳಿದ 5,500 ಕೊಠಿಡಿಗಳನ್ನು 4ರಿಂದ 5 ತಿಂಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಮುಗಳನ್ನಾಗಿ ಪರಿವರ್ತಿಸಲಾಗುವುದು. ಇಷ್ಟೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ಲಕ್ಷ ವಿದ್ಯಾರ್ಥಿಗಳ ಹಾಗೂ ಎಲ್ಲ ಬೋಧಕರು ಏಕಕಾಲದಲ್ಲಿಯೇ ಲಾಗಿನ್‌ ಆಗಬಹುದು ಎಂದು ಮಾಹಿತಿ ನೀಡಿದರು.

    ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಹೆಗ್ಗಳಿಕೆ ಸೇರಿ ಹೊಸ ಗರಿಯಂದರೆ, ನೂತನ ಕಲಿಕಾ ನಿರ್ವಹಣಾ ಪದ್ಧತಿ. ಆನ್‌ಲೈನ್‌, ಆಫ್‌ಲೈನ್‌ನಲ್ಲೂ ಈ ಮೂಲಕ ಕಲಿಯಬಹುದು. ಕೋವಿಡ್‌ ಕಾರಣದಿಂದ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಕಲಿಯಬಹುದು. ಯಾವುದೇ ಸಂದರ್ಭದಲ್ಲಿ, ಎಲ್ಲೇ ಇದ್ದರೂ ತಮ್ಮ ವ್ಯಾಸಂಗವನ್ನು ಮುಂದುವರಿಸಬಹುದು. ಡೆಸ್ಕ್‌ಸ್ಟಾಪ್‌, ಆಂಡ್ರಾಯ್ಡ್‌, ಐಒಎಸ್‌ಗೆ ಪೂರಕವಾಗಿ ಇದನ್ನು ಅಭಿವೃದ್ಧಿಪಡಿಲಾಗಿದೆ. ಇದೆಷ್ಟು ಪರಿಣಾಮಕಾರಿ ಎಂದರೆ, ದಿನಿತ್ಯದ ಕಂಟೆಂಟ್‌ ನೀಡಿಕೆಯ ಜತೆಗೆ, ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಮಾಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹದು ಎಂದರು ಉಪ ಮುಖ್ಯಮಂತ್ರಿ.

    ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌, ಕಲಿಕಾ ನಿರ್ವಹಣಾ ಪದ್ಧತಿಯ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದರು. ನೂತನ ಕಲಿಕಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ವಿವಿಧ ಕಾಲೇಜುಗಳ ಅಧ್ಯಾಪಕರು, ತಾಂತ್ರಿಕ ನಿಪುಣರನ್ನು ಇದೇ ವೇಳೆ ಸಿಎಂ ಗೌರವಿಸಿದರು.

    ಬಾಂಡ್ ಗಳನ್ನು ರದ್ದು ಮಾಡದೆ ಸಣ್ಣ ಹೂಡಿಕೆದಾರರ ಹಿತ ಕಾಯಬೇಕು

    ವಿಶ್ವ ಆರ್ಥಿಕ ಸಾಕ್ಷರತಾ ಶೃಂಗಸಭೆಯ 2012 ರ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಶೇ.35 ರಷ್ಟು ಜನ ಆರ್ಥಿಕ ಸಾಕ್ಷರತೆ ಹೊಂದಿದ್ದಾರೆ. ನಾಲ್ಕು ವರ್ಷದ ನಂತರ ಅಂದರೆ 2016 ರಲ್ಲಿ ಆರ್ಥಿಕ ಸಾಕ್ಷರತಾ ಪ್ರಮಾಣವು ಶೇ.24 ಕ್ಕೆ ಕುಸಿದಿದೆ. ನಮ್ಮಲ್ಲಿ ಸಾಕ್ಷರತಾ ಮಟ್ಟ ಹೆಚ್ಚಿದ್ದರೂ, ಆರ್ಥಿಕ ಸಾಕ್ಷರತೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಇತ್ತೀಚಿನ ಅಂಶಗಳ ಪ್ರಕಾರ ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರಲ್ಲಿದೆ.

    ಈ ವಾತಾವರಣದಲ್ಲಿ ಜನ ಸಾಮಾನ್ಯರ ಹಿತದ ದೃಷ್ಟಿಯಿಂದ, ಉದ್ಯಮಗಳು ದಾರಿತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದೆಂಬ ಕಾರಣಕ್ಕಾಗಿ ವಿವಿಧ ಮೇಲ್ವಿಚಾರಣಾ ಆಧಿಕಾರ, ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ಡೈರೆಕ್ಟರ್‌ ಜನರಲ್‌ ಆಫ್‌ ಆಂಟಿ ಪ್ರಾಫಿಟೀರಿಂಗ್‌ ಸಂಸ್ಥೆಯು ಪಿ & ಜಿ ಸಮೂಹದ ಕಂಪನಿಗಳಿಗೆ ರೂ.241.50 ಕೋಟಿ ದಂಡ ವಿಧಿಸಿರವುದು ಇದಕ್ಕೊಂದು ಉದಾಹರಣೆ.

    ಸಾರ್ವಜನಿಕರಿಂದ ಸಂಪನ್ಮೂಲ ಸಂಗ್ರಹಣೆ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.‌ ಇತ್ತೀಚೆಗೆ ಎಚ್‌ ಡಿ ಎಫ್‌ ಸಿ, ಎನ್ ಹೆಚ್‌ ಎ ಐ, ಐ ಆರ್‌ ಎಫ್‌ ಸಿ, ಗಳಂತಹ ಬೃಹತ್‌ ಕಾರ್ಪೊರೇಟ್‌ ಗಳು ಕಳೆದ ವಾರಗಳಲ್ಲಿ ರೂ.30 ಸಾವಿರ ಕೋಟಿಗೂ ಹೆಚ್ಚಿನ ಸಂಪನ್ಮೂಲವನ್ನು ಬಾಂಡ್‌ಗಳನ್ನು ವಿತರಿಸುವ ಮೂಲಕ ಸಂಗ್ರಹಿಸಿವೆ.

    ಈ ಮಧ್ಯೆ ದೇಶದ ಆರ್ಥಿಕತೆ ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂಬ ಸುದ್ಧಿಯೂ ಸಕಾರಾತ್ಮಕವಾದುದಾಗಿದೆ. ಆದರೂ ವಿತ್ತೀಯ ವಲಯದ ಮೇಲೆ ನಂಬಿಕೆಯು ಕ್ಷೀಣಿತವಾಗುತ್ತಿರುವಂತೆ ಭಾಸವಾಗುತ್ತಿದೆ. ಕಾರ್ಪೊರೇಟ್‌ನೀತಿಪಾಲನಾ ಮಟ್ಟವು ಕುಸಿದಿರುವುದೆ ಇದಕ್ಕೆ ಕಾರಣ ಎನ್ನಬಹುದಾಗಿದೆ. ತಪ್ಪು ಮಾಡಿದವರನ್ನು ಗುರುತಿಸಲಾಗದೆ, ಅಮಾಯಕ ಹೂಡಿಕೆದಾರರನ್ನು ಆಪತ್ತಿಗೆ ತಳ್ಳಿದ ಕೆಲವು ನಿದರ್ಶನಗಳು ಹಲವಾರಿವೆ.

    ಆರ್ಥಿಕ ಗೊಂದಲದ ಆರಂಭ:

    ಈ ಆರ್ಥಿಕ ಅಸಮತೋಲನೆ, ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದ್ದೆಂದರೆ ಐ ಎಲ್‌ & ಎಫ್‌ ಎಸ್‌ ನ ರೂ 92 ಸಾವಿರ ಕೋಟಿ ಹಗರಣ. ಇದು ವಿತ್ತೀಯ ವಲಯದ ಮೇಲೆ ಹೂಡಿಕೆದಾರರ ವಿಶೇಷವಾಗಿ ಸಣ್ಣ ಹೂಡಿಕೆದಾರರ ಆಸಕ್ತಿಯನ್ನು ಕ್ಷೀಣ ಗೊಳಿಸಿತು. ಆದರೆ ಇದುವರೆಗೂ ಈ ಹಗರಣದ ಮೂಲ ವ್ಯಕ್ತಿಗಳನ್ನು ಗುರುತಿಸಲಾಗಲಿಲ್ಲ.

    2018 ರಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿದೆ. ಈ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮಾಡಿದವರು ವಿಶೇಷವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದವರ ಬಂಡವಾಳವಂತೂ ಕರಗಿಹೋಗಿದೆ. ಚೇತರಿಸಿಕೊಳ್ಳುವ ಹಂತದಲ್ಲಂತೂ ಇಲ್ಲ.

    ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್:

    ಹೌಸಿಂಗ್‌ ಫೈನಾನ್ಸ್‌ ಕಂಪನಿಯಾದ, 1984 ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ 2015 ರಿಂದ 2018 ರವರೆಗೂ ಹಲವಾರು ಸರಣಿಯ ನಾನ್‌ ಕನ್ವರ್ಟಬಲ್‌ ಬಾಂಡ್‌ ಯೋಜನೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ. 2019ರ ಆರಂಭದಲ್ಲಿ ಮಾಧ್ಯಮವೊಂದರಲ್ಲಿ ಕಂಪನಿಯಲ್ಲಿ ಆರ್ಥಿಕ ಸ್ಥಿತಿ ಕುರಿತು ಪ್ರಕಟವಾದ ವರದಿಯಿಂದಾಗಿ ಈ ಕಂಪೆನಿಯ ಷೇರಿನ ಬೆಲೆಗಳು ತರಗೆಲೆಗಳಂತೆ ಉದುರಿಹೋಯಿತು. ಕಂಪನಿಯು ವಿತರಿಸಿದ ರೂ.1,000 ಮುಖಬೆಲೆಯ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ಆರಂಭಿಕ ದಿನಗಳಲ್ಲಿ ಮುಖಬೆಲೆಯ ಸಮೀಪದಲ್ಲಿ ವಹಿವಾಟಾಗುತ್ತಿದ್ದವು. ಆದರೆ ಈ ಸುದ್ಧಿಯು ಅವುಗಳ ಬೆಲೆಯನ್ನೂ ಸಹ ಭಾರಿ ಕುಸಿತಕ್ಕೊಳಪಡಿಸಿತು. ವಿವಿಧ ಬಡ್ಡಿ ದರಗಳ ಈ ಸೆಕ್ಯೂರ್ಡ್‌ ನಾನ್‌ ಕನ್ವರ್ಟಬಲ್ ಬಾಂಡ್‌ ಗಳು ರೂ.1,000 ದ ಮುಖಬೆಲೆ ಹೊಂದಿದ್ದು ಸಧ್ಯ ರೂ.285 ರ ಸಮೀಪದಿಂದ ರೂ.340 ರ ಅಂತರದಲ್ಲಿ ವಹಿವಾಟಾಗುತ್ತಿವೆ.

    ಸೆಕ್ಯೂರ್ಡ್‌ ಎಂಬ ಮೋಹಕ ಪದಕ್ಕೆ ಆಕರ್ಷಿತರಾದ ಬಹಳಷ್ಟು ಹೂಡಿಕೆದಾರರು ತಮ್ಮ ಹೂಡಿಕೆಯ ಹಚ್ಚಿನ ಭಾಗವನ್ನು ಕರಗಿಸಿಕೊಂಡಂತಾಗಿದೆ. ಹೂಡಿಕೆದಾರರೆಂದರೆ ಕೇವಲ ವ್ಯಕ್ತಿಗಳು ಮಾತ್ರವಲ್ಲ, ಬಹಳಷ್ಟು ಮ್ಯೂಚುಯಲ್‌ ಫಂಡ್‌ ಗಳು, ಹಣಕಾಸಿನ ಸಂಸ್ಥೆಗಳೂ, ಕಾರ್ಪೊರೇಟ್‌ ಗಳೂ ಸೇರಿರುತ್ತವೆ.‌ ಇದರಿಂದ ಸರಪಳಿ ರೀತಿ ವಿವಿಧ ಕಂಪನಿಗಳು ಆಪತ್ತಿಗೊಳಗಾಗಿವೆ. ಈ ಗೊಂದಲ ಇನ್ನು ಮುಂದುವರೆಯುತ್ತಿದ್ದು ಕಂಪನಿಯನ್ನು ಖರೀದಿಸಲು ಕೆಲವು ಪ್ರಖ್ಯಾತ ಕಂಪನಿಗಳು ಪ್ರಯತ್ನಿಸುತ್ತಿವೆ.

    ಯೆಸ್‌ಬ್ಯಾಂಕ್‌‌ಪ್ರಕರಣ:

    ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಎನ್‌ ಪಿ ಎ, ಗಳು, ಪರಾರಿಯಾಗುತ್ತಿರುವ ಸಾಲಗಾರರು, ಬ್ಯಾಂಕ್‌ ಗಳಲ್ಲಿ ನಡೆದಿರುವ ಹಗರಣಗಳಿಂದ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಿನ ನಂಬಿಕೆಯು ಕ್ಷೀಣವಾಗುತ್ತಿದೆ. ಯೆಸ್ ಬ್ಯಾಂಕ್‌ಷೇರಿನ ಬೆಲೆ ಎರಡು ವರ್ಷಗಳ ಹಿಂದೆ ರೂ.395 ರ ಸಮೀಪವಿದ್ದು, 2018 ರಲ್ಲಿ ಬ್ಯಾಂಕ್‌ನ ಪ್ರವರ್ತಕರು ತಮ್ಮ ಪಾಲಿನ ಷೇರುಗಳನ್ನು ತನ್ನ ಮಕ್ಕಳಿಗೆ, ನಂತರ ಅವರ ಮಕ್ಕಳಿಗೆ ಪಾರಂಪರಿಕವಾಗಿ, ವಾರಸುದಾರರಿಗೆ ಬಳುವಳಿಯಾಗಿ ನೀಡಿ, ವಜ್ರಗಳಂತೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದಿದ್ದರು. ಆದರೆ ಮುಂದಿನ ಎರಡೇ ವರ್ಷಗಳ ಅವಧಿಯಲ್ಲಿ ಷೇರಿನ ಬೆಲೆ ರೂ.5.5 ಕ್ಕೆ ಕುಸಿಯಿತಲ್ಲದೆ, ಎರಡು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್‌2018 ಲ್ಲಿ ಶೇ.20ರಷ್ಟರ ಭಾಗಿತ್ವವನ್ನು ಹೊಂದಿದ್ದ ಪ್ರವರ್ತಕರು, ಸೆಪ್ಟೆಂಬರ್‌2020 ರಲ್ಲಿ ಪ್ರವರ್ತಕರೇ ಇಲ್ಲದ ಪರಿಸ್ಥಿತಿಗೆ ತಲುಪಿದೆ.

    ಈ ವರ್ಷದ ಮಾರ್ಚ್‌ನಲ್ಲಿ ಯೆಸ್‌ಬ್ಯಾಂಕ್‌ದುರ್ಬಲಗೊಂಡ ಸುದ್ಧಿಯಕಾರಣ ಆ ಬ್ಯಾಂಕ್‌ಗೆ ಎಸ್‌ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್‌ ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್‌ ಟೈರ್‌1 ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದು ಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್‌ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ. ಈ ಬಾಂಡ್‌ ಗಳನ್ನು ಸಂಪೂರ್ಣವಾಗಿ ರದ್ದು ಮಾಡುವ ಬದಲು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಂತುಗಳಲ್ಲಿ ಹಿಂದಿರುಗಿಸುವಂತಾಗಿದ್ದರೆ ಸುಧಾರಿತ ಕ್ರಮವಾಗುವುದರೊಂದಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಮೇಲಿನ ನಂಬಿಕೆ ಭದ್ರವಾಗುತ್ತಿತ್ತು.

    ಯೆಸ್‌ಬ್ಯಾಂಕ್‌ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್ ‌ಮಾರ್ಕೆಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್‌ನ ಶೇಕಡ 75 ರಷ್ಟು ಷೇರುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮದಿಂದ ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕೊಂಡ ಷೇರಿನ ಬೆಲೆ ಏರಿಳಿತಗಳ ಲಾಭದ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್‌ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.

    ಅಂದರೆ ಯಾವುದೇ ಒಂದು ಕಾರ್ಪೊರೇಟ್‌ ಗಳು ನೀಡಿದ ಹೇಳಿಕೆಗಳು ಅಂದಿಗೆ ಮಾತ್ರ, ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳು, ಉಂಟಾಗುವ ತಿರುವುಗಳೂ ಆ ಚಿಂತನೆಗಳ ದಿಶೆಯನ್ನೇ ಬದಲಾಯಿಸಿಬಿಡಬಹುದು. ಈ ಬದಲಾವಣೆಗಳು, ತಿರುವುಗಳು ಯಾವಾಗಲೂ ನಕಾರಾತ್ಮಕವಾಗಿರಬೇಕೆಂದಿಲ್ಲ, ಅವು ಸಕಾರಾತ್ಮಕವಾಗಿಯೂ ಆಗಬಹುದು.

    ಬದಲಾವಣೆಗಳು ಹೇಗೆ ಸಕಾರಾತ್ಮಕವಾಗುವುದು?

    ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್‌ ಮತ್ತು ಯು ಟಿ ಐ ಬ್ಯಾಂಕ್‌ ಗಳ ವಿಲೀನ ಯೋಜನೆ ವಿಫಲಗೊಂಡ ಘಟನೆಯಾಗಿದೆ. ಠೇವಣಿದಾರರ ಹಿತ ಕಾಪಾಡಲು 2004 ರಲ್ಲಿ ಆ ಬ್ಯಾಂಕ್‌ನ್ನು ಓರಿಯಂಟಲ್ ‌ಬ್ಯಾಂಕ್ ‌ಆಫ್‌ ಕಾಮರ್ಸ್‌ನಲ್ಲಿ ವಿಲೀನಗೊಳಿಸುವ ಪ್ರಕ್ರಿಯಗೂ ಮುನ್ನ 2001 ರಲ್ಲಿ ಈ ಬ್ಯಾಂಕ್‌ ನ್ನು ಅಂದಿನ ಯು ಟಿಐ ಬ್ಯಾಂಕ್‌ ನಲ್ಲಿ ವಿಲೀನಗೊಳಿಸುವ ಪ್ರಸ್ತಾಪವೂ ತೇಲಿಬಂದು, ಈ ಬ್ಯಾಂಕಿನ ಮೌಲೀಕರಣ ಮಾಡಲಾಗಿತ್ತು. ಅದರಂತೆ 9 ಯು ಟಿ ಐ ಬ್ಯಾಂಕ್‌ ನ ಷೇರುಗಳಿಗೆ 4 ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ಷೇರು ನೀಡುವ ಶಿಫಾರಸನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಇನ್ವೆಸ್ಟ್ ಮೆಂಟ್‌ ಬ್ಯಾಂಕರ್‌ ಗಳು ಮಾಡಿದ್ದವಾದರೂ ಮ್ಯಾನೇಜ್ ಮೆಂಟ್‌ ತಿರಸ್ಕರಿಸಿತು. ಅಂದಿನ ಯು ಟಿ ಐ ಬ್ಯಾಂಕ್‌ ಇಂದಿನ ಆಕ್ಸಿಸ್‌ ಬ್ಯಾಂಕ್‌ ಆಗಿದೆ. ಈ ವಿಲೀನ ಶಿಫಾರಸು ತಿರಸ್ಕೃತವಾದ ಕಾರಣ ಈ ಬದಲಾವಣೆ ಯು ಟಿ ಐ ಬ್ಯಾಂಕ್‌ ಗೆ ಸಕಾರಾತ್ಮಕವಾಗಿ ಪರಿಣಮಿಸಿತು. ಮುಂದೆ ಆ ಬ್ಯಾಂಕ್‌ ಹೆಸರನ್ನು ಆಕ್ಸಿಸ್‌ ಬ್ಯಾಂಕ್‌ ಎಂದು ಬದಲಾಯಿಸಿಕೊಂಡಿತು.

    ಮಹಾರಾಷ್ಟ್ರ ಅಪೆಕ್ಸ್‌ ಕಾರ್ಪೊರೇಷನ್‌ ಲಿ

    ಕರ್ನಾಟಕದ ಬ್ಯಾಂಕಿಂಗ್‌ ಉಗಮ ಜಿಲ್ಲೆಯಲ್ಲಿ ಸ್ಥಾಪಿತವಾಗಿ ಮೂರು ತಲೆಮಾರುಗಳ ಈ ಎನ್‌ ಬಿ ಎಫ್‌ ಸಿ ಕಂಪನಿಯು 2002 ರಲ್ಲಿ ತನ್ನ ಠೇವಣಿದಾರರ ಸುಮಾರು ರೂ.300 ಕೋಟಿಯ಼ಷ್ಟರ ಹಣವನ್ನು ಹಿಂದಿರುಗಿಸಲು ಆರ್ಥಿಕ ತೊಂದರೆಗೊಳಗಾಯಿತು. ಈ ಸಂದರ್ಭದಲ್ಲಿ ಕಂಪನಿಯು ಸ್ವಯಂಪ್ರೇರಿತವಾಗಿ ತನ್ನ ಠೇವಣಿದಾರರ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸುವದಾಗಿ ಹೇಳಿತು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ ಎಲ್ಲಾ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸಿ ನೈತಿಕತೆಯಿಂದ ಮೆರೆಯಿತು.

    ಲಕ್ಷ್ಮೀ ವಿಲಾಸ್‌ಬ್ಯಾಂಕ್:

    ಯೆಸ್‌ಬ್ಯಾಂಕ್‌ನ‌ ಹಗರಣವು ಇನ್ನೂ ಮಾಸದೆ ಇರುವಾಗಲೇ 94 ವರ್ಷಗಳ ಇತಿಹಾಸವುಳ್ಳ ಲಕ್ಷ್ಮೀ ವಿಲಾಸ್‌ಬ್ಯಾಂಕ್ ‌ದುರ್ಬಲ ಗೊಂಡಿರುವ ಕಾರಣ ಅದನ್ನು ಮೊರೆಟೋರಿಯಂ ನಲ್ಲಿರಿಸಿ ನಂತರ ಸಿಂಗಾಪುರ ಮೂಲದ 12 ವರ್ಷದ ಡಿ ಬಿ ಎಸ್ ‌ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಗಿದೆ. ಈ ಹಿಂದೆ ಇಂಡಿಯಾ ಬುಲ್‌ ಹೌಸಿಂಗ್‌ಫೈನಾನ್ಸ್‌ ತದ ನಂತರ ಕ್ಲಿಕ್ಸ್ ‌ಕ್ಯಾಪಿಟಲ್ ಗಳು ಈ ಬ್ಯಾಂಕ್‌ ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ. ಸುಮಾರು 563 ಶಾಖೆಗಳನ್ನು, 970 ಎ ಟಿ ಎಂ ಗಳನ್ನು ಹೊಂದಿರುವ ಈ ಬ್ಯಾಂಕ್‌ 2019 ರ ಸೆಪ್ಟೆಂಬರ್‌ತಿಂಗಳಿಂದಲೂ ಪ್ರಾಂಪ್ಟ್‌ ಕರೆಕ್ಟಿವ್‌ಆಕ್ಷನ್‌ನಲ್ಲಿ ಭಾರತೀಯ ರಿಸರ್ವ್‌ ಬ್ಯಾಕ್‌ ಸೇರಿಸಿದೆ. ವಿಲೀನ ಯೋಜನೆಯಲ್ಲಿ ಠೇವಣಿದಾರರಿಗೆ ಯಾವುದೇರೀತಿ ಹಾನಿಯಾಗಲಾರದಾದರೂ ಬ್ಯಾಂಕ್‌ವಿತರಿಸಿರುವ ಬಾಂಡ್‌ಗಳ ಮತ್ತು ಅಸಂಖ್ಯಾತ ಷೇರುದಾರರ ಹಿತವನ್ನು ಕಾಪಾಡಲಾಗದೆ ರದ್ದು ಮಾಡಲಾಗಿದೆ.

    ಸೋಜಿಗವೆಂದರೆ ಕೇವಲ ರೂ.318 ಕೋಟಿಯಷ್ಟಿರುವ ಬೇಸಲ್‌ 3 ಪ್ರಕಾರ ಸಂಗ್ರಹಿಸಿರುವ ಬಾಂಡ್‌ ಗಳನ್ನೂ ರದ್ದು ಮಾಡಿರುವ ಕ್ರಮ ಸರಿಯಲ್ಲವೆನಿಸುತ್ತದೆ. ಒಂದು ವೇಳೆ ವಿಲೀನಗೊಳ್ಳುತ್ತಿರುವ ಬ್ಯಾಂಕ್‌ ಈ ಹಣ ಪಾವತಿಸಲಾಗದೆ ಇದ್ದರೂ, ಸ್ವಾಧೀನಪಡಿಸಿಕೊಳ್ಳುತ್ತಿರುವ ಬ್ಯಾಂಕ್ ಆದರೂ ಈ ಅಲ್ಪ ಮೊತ್ತವನ್ನು ಠೇವಣಿದಾರರಿಗೆ ಹಿಂದಿರುಗಿಸಬಹುದಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್‌ ಒಕ್ಕಣೆ ಈ ಕೆಳ ಕಂಡಂತಿದೆ:

    1. As per the terms of the information Memorandumsof the respective Basel III Tier 2 bonds issued by the Bank.

    ” If the relevnat authorities decides to reconstitute the Bankor amalgamate the Bank with any other bank under the section 45 of the BR Act, such a bank shall be deemed as non-viable or approaching non-viability and both the pre-specified trigger and the trigger at the point of non-viability for write-down the Bonds shall be activated. Accordingly, the Bonds shall be written -off before amalgamation / reconstitution in accordance with applicable rules”

    ಈ ರೀತಿಯ ನಿಯಮಗಳಿದ್ದರೆ ಈ ಬಾಂಡ್‌ ಗಳನ್ನು ವರ್ಗಾಯಿಸಲಾಗದೆ ಇರಬಹುದಾದಂತಹ ನಿಯಮದಡಿ ಬಿಡುಗಡೆ ಮಾಡಬೇಕಾಗಿತ್ತು. ದೇಶದ ಶೇ.73 ರಷ್ಠು ಜನ ಆರ್ಥಿಕ ಅನಕ್ಷರಸ್ಥರಿರುವಾಗ ಈ ರೀತಿಯ ಅಗೋಚರ ನಿಯಮಗಳಡಿಯಲ್ಲಿ ಅಮಾಯಕರ ಹಣವನ್ನು ಅಪಾಯಕ್ಕೊಳಪಡಿಸುವುದು ಸರಿಯಲ್ಲ.

    ಈ ರೀತಿಯ ಬಾಂಡ್‌ ಗಳನ್ನುwrite off ಮಾಡಿ ಬ್ಯಾಂಕ್‌ ಗಳು ಕೈ ತೊಳೆದುಕೊಳ್ಳುವುದು ಸೂಕ್ತವಲ್ಲ. ಬ್ಯಾಂಕ್‌ ನ್ನು ಆ ಹಂತಕ್ಕೆ ತಲುಪಿಸಿದ, ತಪ್ಪು ಮಾಡಿದವರನ್ನು ಬಿಟ್ಟು ಜವಾಬ್ಧಾರಿಯಿಂದ ನುಣಿಚಿಕೊಳ್ಳುವುದು ಅಪಾಯಕಾರಿಯಾಗಿದೆ.

    ಷೇರುಪೇಟೆಯಲ್ಲಿ ಅಪಾಯದ ಅರಿವಿರುತ್ತದೆ

    ಈ ಹಿಂದೆ ಮಜ್‌ ಡಾ ಇಂಡಸ್ಟ್ರೀಸ್‌ ಷೇರಿನ ಬೆಲೆ ರೂ.1,400 ರಿಂದ ಜಾರಿ ಶೂನ್ಯವಾದಾಗಲೂ, ಯುನಿಟೆಕ್‌ ಕಂಪನಿ ಷೇರು ರೂ.20 ಸಾವಿರದ ಗಡಿಯಿಂದ ಏಕ ಅಂಕಿಗೆ ಬಂದಾಗಲೂ, ಸ್ಟಾರ್‌ ಪ್ರಚಾರಕರ ಕಾರಣ ರೂ.600 ಕ್ಕೂ ಹೆಚ್ಚಿದ್ದ ಗೀತಾಂಜಲಿ ಜೆಮ್ಸ್‌ ಷೇರಿನ ಬೆಲೆ ಶೂನ್ಯವಾದಾಗಲು ಯಾರೂ ಪ್ರಶ್ನಿಸುತ್ತಿಲ್ಲ, ಕಾರಣ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ಅಪಾಯಕ್ಕೆ ಯಾರೂ ಹೊಣೆಗಾರರಲ್ಲ ಎಂಬುದು ಜಗಜ್ಜಾಹಿರಾದ ಅಂಶ. ಆದರೆ ನಿಶ್ಚಿತ ಕೂಪನ್‌ ದರದ ಬಾಂಡ್‌ ಗಳನ್ನು ವಿತರಿಸಿದಾಗ ಕಂಪನಿ, ಪ್ರವರ್ತಕರು ಜವಾಬ್ಧಾರರಾಗಬೇಕು. ಲಕ್ಷಗಟ್ಟಲೆ ಮುಖಬೆಲೆಯಿರುವ ಬಾಂಡ್‌ ಗಳಲ್ಲಿ ಹೂಡಿಕೆ ಮಾಡಿದವರಿಗೆ ಯಾವುದೇ ರೀತಿಯ ಅಗೋಚರವಾದ ನಿಯಮಗಳಡಿ write off ಗೆ ಅವಕಾಶ ಕೊಡಬಾರದು. ಇದು ನೈತಿಕವೂ ಅಲ್ಲ.

    ಪರಿಹಾರಾರ್ಥ ಸಲಹೆ:
    ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ನ ಬಾಂಡ್‌ ಗಳು ಕೇವಲ ರೂ.318 ಕೋಟಿಯಷ್ಠಿರುವುದರಿಂದ ಉದ್ಯಮ / ವ್ಯವಹಾರಿಕ ಸಂಘಟನೆಯಾದ FKCCI/ ASSOCHAM/ CONFEDERATION OF INDIAN INDUSTRY ಗಳು, ಚಾರ್ಟರ್ಡ್‌ ಅಕೌಂಟಂಟ್ಸ್‌ ಆಫ್‌ ಇಂಡಿಯಾ ಮುಂತಾದ ಸಂಘ ಸಂಸ್ಥೆಗಳು ಸಿಂಗಾಪುರ ಮೂಲದ ಡಿ ಬಿ ಎಸ್‌ ಬ್ಯಾಂಕ್‌ ಮೇನೇಜ್‌ ಮೆಂಟ್‌ ಗಳಿಗೆ ಮನವರಿಕೆ ಮಾಡಿ ಈ ಬಾಂಡ್‌ ಗಳ ರದ್ದತಿಯನ್ನು ಬಿಟ್ಟು ಬಾಂಡ್‌ ಹಣ ಹಿಂದಿರುಗಿಸುವಂತೆ ಮಾಡಬೇಕು. ಇದರಿಂದ ಬ್ಯಾಂಕ್‌ ನ ಘನತೆ, ಪ್ರತಿಷ್ಠೆ ಹೆಚ್ಚುವುದು ಅಲ್ಲದೆ ನೈತಿಕತೆಗೆ ಆದ್ಯತೆ ನೀಡಿದಂತಾಗುತ್ತದೆ. ಬ್ಯಾಂಕ್‌ ಖರ್ಚು ಮಾಡುವ ಪ್ರಚಾರದ ವೆಚ್ಚಕ್ಕಿಂತಲೂ ಅಲ್ಪವಾಗಿರುವುದರಿಂದ ಇದು ಸಾಧ್ಯ. ಕನಿಷ್ಠ ಪಕ್ಷ ವ್ಯಕ್ತಿಗತ ಹೂಡಿಕೆ ಮಾಡಿದ ಸಣ್ಣ ಹೂಡಿಕೆದಾರರ ಹಣವನ್ನು ಹಿಂದಿರುಗಿಸುವಂತೆ ಮಾಡಲು ಪ್ರಯತ್ನಿಸಬಹುದು. ಈ ವಿಷಯದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ತೀರ್ಮಾನ ಬದಲಿಸಲಾರದು ಕಾರಣ ಇದು ಪೂರ್ವ ನಿದರ್ಶನವಾಗಬಹುದೆಂಬ ಯೋಚನೆಯಿದ್ದರೂ ಇರಬಹುದು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ

    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣ ಇಂದಿನಿಂದ ಪ್ರತಿ ಭಾನುವಾರ ಪ್ರಕಟವಾಗುತ್ತದೆ.ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

    ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ ಇದು ಮುದ್ದಣನ ‘ರಾಮಾಶ್ವಮೇಧ’ದಲ್ಲಿ  ಉಲ್ಲೇಖವಾಗಿರುವ ಮಾತು ಜೊತೆಗೆ ನಾವೂ ಕೂಡ ನಿತ್ಯ ಬಳಸುವ  ಮಾತು.  ಒಮ್ಮೆ ಮುನಿಗಳು ಸಂಚಾರ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಸಾತ್ವನ ಎಂಬ  ಬ್ರಾಹ್ಮಣ ಮುನಿಗಳನ್ನು  ಗಮನಿಸುವುದಿಲ್ಲ . ಆತ ಔಚಿತ್ಯ ಮೀರಿ ಮುಕ್ಕಳಿಸಿದ ನೀರು  ಋಷಿ  ಮುನಿಗಳನ್ನು ತಾಗುತ್ತದೆ.  ಮುನಿಗಳು ಅಪಚಾರವಾಯಿತು ಎಂದು “ಭೂಮಿಯಲ್ಲಿ ರಾಕ್ಷಸನಾಗಿ ಹುಟ್ಟು ಎಂದು ಶಾಪ ಕೊಡುತ್ತಾರೆ”. ಶಾಪಗ್ರಸ್ಥನಾದ ಸಾತ್ವನ ಮುನಿಗಳ ಶಕ್ತಿಯನ್ನು ಅವಲೋಕಿಸುತ್ತಾ  “ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ” ( ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದ ಹಾಗಾಯಿತು)   ಎಂದು ಮರುಗುತ್ತಾನೆ. ಇದೊಂದುಗಾದೆಮಾತು. 

    ನಿಜಸ್ಥಿತಿ ಗೊತ್ತಿದ್ದರೂ , ತಪ್ಪುಗಳು  ತೀವ್ರ ಅನಾಹುತಕ್ಕೆ ಕಾರಣವಾಗುತ್ತವೆ ಎಂಬ ಸತ್ಯ ಗೊತ್ತಿದ್ದರೂ  ನಿರ್ಲಕ್ಷ್ಯ ಮಾಡುವವರನ್ನು ಕುರಿತು ಈ ಮಾತನ್ನು ಹೇಳಲಾಗುತ್ತದೆ. ಅಪಾಯದ  ತಿರುವುಗಳು ಇವೆ ಎಂದು ತಿಳಿದೂ ವೇಗವಾಗಿ ವಾಹನ ಚಲಾಯಿಸಿ ಆಘಾತ ತಂದು ಕೊಳ್ಳುವ  ಜನರನ್ನು ಇಲ್ಲಿ ಉದಾಹರಿಸಬಹುದು. “A little neglect may breed great mischief”, “ಗೊತ್ತಿದ್ದು ಮಾಡುವ ತಪ್ಪುಗಳಿಗೆ  ಕ್ಷಮೆ ಇಲ್ಲ”, “ಸ್ವಯಂಕೃತ ಅಪರಾಧ” ಎಂಬ ಮಾತುಗಳಿವೆಯಲ್ಲ ಹಾಗೆ.ಈಗ ಮಾಸ್ಕ್ ಇಲ್ಲದೆ ಓಡಾಡುವವರನ್ನೂ ಕೂಡ ಈ ಸಾಲಿಗೆ ಸೇರಿಸಬಹುದು.

    ಅಪಾಯದ ಸುಳಿವಿಲ್ಲದೆ ಅವಿವೇಕಿಯೊಬ್ಬ ತಾನಿದ್ದ ಮರದ ಕೊಂಬೆಯನ್ನೆ ಕತ್ತರಿಸಿಕೊಂಡಂತೆ ಆಗಬಾರದು.  ನಮ್ಮ ನಡೆ ಯಾವಾಗಲೂ ವಿವೇಕದ ನಡೆಯಾಗಿರಬೇಕು, ಸಾಧಕ ಭಾಧಕಗಳನ್ನು ಯೋಚಿಸಿ ಮುಂದಣ ಹೆಜ್ಜೆಗಳನ್ನು ಇರಿಸಬೇಕು. ಅತೀ ಆತ್ಮವಿಶ್ವಾಸ  ಒಳ್ಳೆಯದಲ್ಲ ಎಂಬ   ಅಂತಃಸತ್ವ  ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ  ಮಾತಿನಲ್ಲಿ ಅಡಕವಾಗಿದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.

    ವರಿಷ್ಠರನ್ನು ಮಣಿಸಿದರೇ ಯಡಿಯೂರಪ್ಪ?

    ಸಚಿವರ ಪಟ್ಟಿಯೊಂದಿಗೆ ದಿಲ್ಲಿಗೆ ಹೋದ ಯಡಿಯೂರಪ್ಪ ಅವರನ್ನು ನಡ್ಡಾ ಬರಿಗೈಲಿ ಕಳುಹಿಸಿದರು. ಇನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಆಗಲೇ ಮನವರಿಕೆಯಾಗಿ ಹೋಯಿತು. ಆದದ್ದಾಗಲಿ ಎಂದು ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದರು. ರಾಜ್ಯ ನಾಯಕರ ಮೂಲಕ ಪದೇದೇ ನಾಯಕತ್ವ ಬದಲಾವಣೆಯ ಮಾತು ಆಡಿಸುತ್ತಿರುವವರಿಗೂ ಉತ್ತರ ನೀಡುವುದು ಅನಿವಾರ್ಯವಾಗಿತ್ತು.

    ಅಶೋಕ ಹೆಗಡೆ

    ತಾಳ್ಮೆಗೂ ಮಿತಿ ಇರುತ್ತದೆ. ಅದನ್ನು ಪರೀಕ್ಷಿಸಲು ಹೋದರೆ ವಿಧ್ವಂಸ ಕಟ್ಟಿಟ್ಟ ಬುತ್ತಿ. ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯಬೇಕು ಎಂಬ ಇರಾದೆ ಹೊಂದಿರುವ ಬಿಜೆಪಿ ವರಿಷ್ಠರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ವರಿಷ್ಠರು ಪ್ರತಿಷ್ಠೆಯ ಹುಂಬತನಕೆ ಜೋತು ಬಿದ್ದರೆ ಮತ್ತೊಂದು ರಾಜ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಬೇಕಾಗುತ್ತದೆ.

    ಸರಕಾರ ರಚನೆಯಿಂದ ಹಿಡಿದು ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಎಲ್ಲರೂ ಯಡಿಯೂರ‍್ಪನವರಿಗೆ ಕಿರಿಕಿರಿ ನೀಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಸಹ ಇದುವರೆಗೆ ಮೌನದಿಂದಲೇ ಸಹಿಸಿಕೊಂಡು ಬಂದಿದ್ದರು. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕವೂ ಸಂಪುಟ ವಿಸ್ತರಣೆ ಅನುಮತಿ ನೀಡದೇ ವರಿಷ್ಠರು ಸತಾಯಿಸಿದ್ದಾರೆ. ಸಚಿವರ ಪಟ್ಟಿಯೊಂದಿಗೆ ದಿಲ್ಲಿಗೆ ಹೋದ ಯಡಿಯೂರಪ್ಪ ಅವರನ್ನು ನಡ್ಡಾ ಬರಿಗೈಲಿ ಕಳುಹಿಸಿದರು. ಇನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಆಗಲೇ ಮನವರಿಕೆಯಾಗಿ ಹೋಯಿತು. ಆದದ್ದಾಗಲಿ ಎಂದು ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದರು. ರಾಜ್ಯ ನಾಯಕರ ಮೂಲಕ ಪದೇಪದೇ ನಾಯಕತ್ವ ಬದಲಾವಣೆಯ ಮಾತು ಆಡಿಸುತ್ತಿರುವವರಿಗೂ ಉತ್ತರ ನೀಡುವುದು ಅನಿವಾರ್ಯವಾಗಿತ್ತು. ಆಗ ಬತ್ತಳಿಕೆಯಿಂದ ಹೊರ ಬಂದದ್ದೇ ವೀರಶೈವ ಲಿಂಗಾಯತ ಮೀಸಲು ಅಸ್ತ್ರ.

    ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸುವ ನಿರ್ಧಾರಕ್ಕೆ ಯಡಿಯೂರಪ್ಪ ಬಂದರು. ಸಂಪುಟ ಸಭೆಯ ಮುನ್ನಾದಿನ ತಡರಾತ್ರಿ ಅದನ್ನು ಕಾರ್ಯಸೂಚಿಗೆ ಸೇರಿಸಿದ್ದಷ್ಟೇ ಅಲ್ಲ, ಮಾಧ್ಯಮಗಳಲ್ಲಿ ದೊಡ್ಡ ರೀತಿಯಲ್ಲಿ ಸುದ್ದಿಯಾಗುವಂತೆಯೂ ನೋಡಿಕೊಂಡರು. ಇದೊಂದು ಅಸ್ತ್ರಕ್ಕೆ ವರಿಷ್ಠರು ಪತರಗುಟ್ಟು ಹೋದರು. ದಿಲ್ಲಿಗೆ ಬಂದಾಗ ಭೇಟಿಗಾಗಿ ಯಡಿಯೂರಪ್ಪನವರನ್ನು ಯಾವ ಅಮಿತ್ ಶಾ ಸತಾಯಿಸುತ್ತಿದ್ದರೋ, ಅದೇ ಅಮಿತ್ ಶಾ ಬೆಳ್ಳಂಬೆಳಗ್ಗೆ ಕರೆ ಮಾಡಿ ಅವಸರ ಅವಸರವಾಗಿ ನಿರ್ಣಯವನ್ನು ಮಾಡಬೇಡಿ ಎಂದು ಬೇಡಿಕೊಂಡರು. ಯಡಿಯೂರಪ್ಪ ಪ್ರಯೋಗಿಸಿದ ಅಸ್ತ್ರ ಅಷ್ಟು ಪರಿಣಾಮಕಾರಿಯಾಗಿತ್ತು.

    ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕಿದ್ದರೆ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರಕಾರ ಆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು. ವೀರಶೈವ ಲಿಂಗಾಯತರನ್ನು 2ಎ ಪ್ರವರ್ಗಕ್ಕೆ ಸೇರಿಸುವ ಶಿಫಾರಸನ್ನು ಒಪ್ಪಿಕೊಳ್ಳದೇ ಕೇಂದ್ರಕ್ಕೆ ವಿಧಿ ಇರಲಿಲ್ಲ. ಒಪ್ಪಿಗೆ ನೀಡದಿದ್ದರೆ ರಾಜ್ಯದಲ್ಲಿನ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಲ್ಲಿ ಆ ಸಮುದಾಯದ ಪ್ರಬಲ ನಾಯಕರಿಲ್ಲ. ಅದೂ ಅಲ್ಲದೇ ಇಂತಹ ವಿಷಯದಲ್ಲಿ ಪ್ರತಿಪಕ್ಷಗಳೂ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲುತ್ತವೆ. ಈ ಸೂಕ್ಷ್ಮ ಅರಿತ ಶಾ ತಾವೇ ಅಖಾಡಕ್ಕೆ ಇಳಿದಿದ್ದಲ್ಲದೇ, ಸಂಪುಟ ವಿಸ್ತರಣೆ ಪಟ್ಟಿಗೆ ಶೀಘ್ರ ಅನುಮತಿ ನೀಡುವ ಭರವಸೆಯನ್ನೂ ನೀಡಿದ್ದಾರೆ.

    ಸೌಹಾರ್ದದ ದಾರಿ ಅಗತ್ಯ

    ಯಡಿಯೂರಪ್ಪನವರಿಗೆ ವಯಸ್ಸಾಗಿದೆ ನಿಜ. ಹಾಗಂತ ಅವರನ್ನು ಏಕಾಏಕಿ ಅಧಿಕಾರದಿಂದ ಇಳಿಸಿ ಮೂಲೆಗುಂಪು ಮಾಡುವ ಪ್ರಯತ್ನ ಸರಿಯಲ್ಲ. ಅಧಿಕಾರ ಹಿಡಿಯಲು ಯಡಿಯೂರಪ್ಪ ಬೇಕು, ಆದರೆ ಯಡಿಯೂರಪ್ಪ ಅಧಿಕಾರದಲ್ಲಿರುವುದು ಬೇಡ ಎಂದರೆ ಹೇಗೆ? ಹೇಗಿದ್ದರೂ ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ. ಹೀಗಾಗಿ “ಮುಂದಿನ ಚುನಾವಣೆಗೆ ನಿಮ್ಮದೇ ನೇತೃತ್ವ. ಆದರೆ ನಾವು ಸೂಚಿಸಿದವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂಬ ಸೂತ್ರವನ್ನು ವರಿಷ್ಠರು ಯಡಿಯೂರಪ್ಪನವರ ಮುಂದೆ ಇರಿಸಬಹುದು. ಅದೇರಿತಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಪುತ್ರ ವಿಜಯೇಂದ್ರನನ್ನು ದೂರ ಇಡಿ ಎಂದು ಸೌಮ್ಯವಾಗಿಯೇ ಸಲಹೆ ಕೊಡಬಹುದು. ಯಾರದೋ ಮಾತು ಕೇಳಿಕೊಂಡು ಮೃದು ಮಾರ್ಗ ಬಿಟ್ಟು ಒರಟು ದಾರಿಯಲ್ಲಿ ವರಿಷ್ಠರು ಹೊರಟರೆ, ಯಡಿಯೂರಪ್ಪ ಮತ್ತಷ್ಟು ವ್ಯಗ್ರರಾಗುತ್ತಾರೆ. ಯಡಿಯೂರಪ್ಪ ಸಿಟ್ಟಿನ ಪರಿಣಾಮವನ್ನು ಬಿಜೆಪಿ ಒಮ್ಮೆ ಹೀನಾಯ ಸೋಲಿನ ಮೂಲಕ ಕಂಡಿದೆ. ಮತ್ತೆ ಹಾಗೆಯೇ ಆಗಬೇಕೆಂದು ಬಯಸುವುದು ಮೂರ್ಖತನ.

    ಅಲ್ಲದೇ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶುಇ ಅವರಂತಹ ದಿಗ್ಗಜರನ್ನೇ ತೆರೆಮರೆಗೆ ಸರಿಸಿದ ಅಮಿತ್ ಶಾ- ಮೋದಿ ಹೆಸರಿಗೆ ಮತ್ತೊಂದು ಕಳಂಕ ಅಂಟುತ್ತದೆ.ನಿಜವಾಗಿ ವರಿಷ್ಠರು ಮಾಡಬೇಕಾದದ್ದು ರಾಜ್ಯದ ಕೆಲವು ಶಾಸಕರು, ಮುಖಂಡರಿಗೆ ಮೂಗುದಾರ ಹಾಕುವ ಕೆಲಸವನ್ನು. ಅಧಿಕಾರ ಸಿಕ್ಕಾಗ ನೆಮ್ಮದಿಯಿಂದ ಅನುಭವಿಸುವುದು ಇಲ್ಲಿನ ಕೆಲವರಿಗೆ ಗೊತ್ತಿಲ್ಲ. ಗೆದ್ದ ಶಾಸಕರೆಲ್ಲರಿಗೂ ಮಂತ್ರಿ ಪದವಿ ನೀಡುವುದು ಸಾಧ್ಯವೇ ಇಲ್ಲ. ಮೂರ‍್ನಾಲ್ಕು ಸಲ ಗೆದ್ದ ಮಾತ್ರಕ್ಕೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ನಿಯಮ ಎಲ್ಲಿಯೂ ಇಲ್ಲ. ಯಡಿಯೂರಪ್ಪನವರ ನಾಯಕತ್ವ ಇಷ್ಟವಿಲ್ಲದಿದ್ದರೆ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವ ಮುನ್ನವೇ ಯೀಚನೆ ಮಾಡಬೇಕಿತ್ತು.

    ಹಿಂದಿನ ಸಲವೂ ಇಂತಹ ಭಿನ್ನಮತವೇ ಪಕ್ಷದ ಪತನಕ್ಕೆ ಕಾರಣವಾಗಿತ್ತು, ಆಗ ಯಡಿಯೂರಪ್ಪನವರ ಪಾತ್ರವೂ ಸ್ವಲ್ಪ ಇತ್ತೆನ್ನಿ. ಈಗಲೂ ಹಾಗೆ ಆಗದಂತೆ ವರಿಷ್ಠರು ಎಚ್ಚರವಹಿಸಬೇಕು, ಗುಂಪುಗಾರಿಕೆಗೆ ಅವಕಾಶ ನೀಡದಂತೆ ನಿರ್ಬಂಧಿಸಬೇಕು. “ಯಡಿಯೂರಪ್ಪನವರ ನಾಯಕತ್ದದ ವಿರುದ್ಧ ಸೊಲ್ಲೆತ್ತಬೇಡಿ’ ಎಂಬ ಕಠಿಣ ಸಂದೇಶವನ್ನು ದಿಲ್ಲಿ ನಾಯಕರು ರವಾನಿಸಿದರೆ ಇಲ್ಲಿನವರ ಅ’ಸಂತೋಷ’ ತಾನಾಗಿಯೇ ತಹಬಂದಿಗೆ ಬರುತ್ತದೆ. ಹಾಗೆ ಮಾಡದೇ ವರಿಷ್ಠರು ಮತ್ತೊಂದು ತಪ್ಪು ಹೆಜ್ಕೆ ಇಡುತ್ತಿದ್ದಾರೆ.

    ರಾಜ್ಯದಲ್ಲಿ ಪಕ್ಷ ಮುಂದಿನ ಸಲವೂ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ. ಸಮಾಧಾನದಿಂದ ಅವರ ಮನವೊಲಿಸುವ ಪ್ರಯತ್ನ ಮಾಡಿದರೆ ಮಾತ್ರವೇ ಯಡಿಯೂರಪ್ಪ ಮೆತ್ತಗಾಗುತ್ತಾರೆ. ಯಾವುದೋ ಭ್ರಮಾಲೋಕದಲ್ಲಿರುವ ರಾಜ್ಯದ ಕೆಲವು ಶಾಸಕರು, ಮುಖಂಡರು ಮತ್ತು ಅದನ್ನೇ ನಂಬಿ ಹೆಜ್ಜೆ ಇಡುತ್ತಿರುವ ವರಿಷ್ಠರು ಈಗ ಕೊಂಚ ಎಡವಿದರೂ ಅದರ ಫಲವನ್ನು ತಾವೇ ಅನುಭವಿಸಬೇಕಾಗುತ್ತದೆ.

    ಸ್ವದೇಶಿ ಕ್ರಾಂತಿಯ ಕಿಡಿ ಹೊತ್ತಿದ ಆ ದಿನ

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಖರ ಚಿಂತಕ ವಿನಾಯಕ ದಾಮೋದರ ಸಾವರ್ಕರ್ ಬಗ್ಗೆ ಅಜ್ಞಾತವಾಗಿ ಉಳಿದಿರುವ ಸಂಗತಿಗಳೇ ಹೆಚ್ಚಾಗಿವೆ. ಸ್ವತಂತ್ರ ಭಾರತದ ಬಗ್ಗೆ ತಮ್ಮದೇ ಆದ ವಿಶಿಷ್ಟ ಪರಿಕಲ್ಪನೆಗಳನ್ನು ಇಟ್ಟುಕೊಂಡಿದ್ದ ಸಾವರ್ಕರ್, ತಮ್ಮ ನಿಷ್ಠುರ ನಿಲುವುಗಳಿಗೆ ಹೆಸರಾಗಿದ್ದವರು.

    ಇಂತಹ ಸಾವರ್ಕರ್ ಬಗ್ಗೆ ಬಿ.ಎಸ್.ಜಯಪ್ರಕಾಶ ನಾರಾಯಣ ಅನುವಾದಿಸಿ, ವಸಂತ ಪ್ರಕಾಶನ ಪ್ರಕಟಿಸುತ್ತಿರುವ ‘ಸಾವರ್ಕರ್: ಹಿಂದುತ್ವದ ಜನಕನ ನಿಜಕತೆ’ ಎನ್ನುವ ಮಹತ್ತ್ವದ ಕೃತಿಯು ನ.೨೮ರಂದು ಬಿಡುಗಡೆಯಾಗುತ್ತಿದೆ. ಸಾವರ್ಕರ್ ಹೆಸರು ನಾನಾ ಕಾರಣಗಳಿಗಾಗಿ ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಅವರನ್ನು ಕುರಿತ ಓದು, ಪ್ರೇರಣಾದಾಯಕವಾಗುವುದರಲ್ಲಿ ಸಂಶಯವಿಲ್ಲ. ಈ ಕೃತಿಯ ಅಧ್ಯಾಯವೊಂದರ ಆಯ್ದ ಭಾಗ ಇಲ್ಲಿದೆ.

    ನಾಸಿಕ್‌ನಲ್ಲಿ ಓದುತ್ತಿದ್ದ ಸಾವರ್ಕರ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ೧೯೦೨ರ ಫೆಬ್ರವರಿಯಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಹೋದರು. ಈ ಸಂದರ್ಭದಲ್ಲಿ ಅವರು, ತಮ್ಮ ನೇತೃತ್ವದ ಮಿತ್ರಮೇಳ ಸಂಘಟನೆಯು ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳೇನೆಂದು ಸಮಾಧಾನವಾಗಿ ಅಥವಾ ಸಂತೃಪ್ತಿಯ ಭಾವನೆಯಿಂದ ಹಿಂದಿರುಗಿ ನೋಡಿದರು. ನಿಜ ಹೇಳಬೇಕೆಂದರೆ, ಆಗ ಮಿತ್ರಮೇಳ ಸಂಘಟನೆಯು ಅದ್ಭುತವೆನ್ನುವಂಥ ಏನನ್ನೂ ಮಾಡಿರಲಿಲ್ಲ. ಆದರೆ, ಒಂದು ಕ್ರಾಂತಿಕಾರಿ ಸಂಘಟನೆಯು ಬೆಳೆಯಲು ಬೇಕಾದ ಮೂಲಭೂತ ಕೆಲಸಗಳನ್ನು ಅದು ಮಾಡಿತ್ತು. ಅಂದರೆ, ನಾಸಿಕ್ ಜಿಲ್ಲೆಯಲ್ಲಿ ಅದು ಆ ಕಾಲಕ್ಕೆ ಅಗತ್ಯವಾದ ಚೈತನ್ಯವನ್ನು ಬಡಿದೆಬ್ಬಿಸಿತ್ತಲ್ಲದೆ, ಬ್ರಿಟಿಷರ ವಿರುದ್ಧ ಸಂಚಲನವನ್ನು ಸೃಷ್ಟಿಸಿತ್ತು.

    ಆಗಿನ್ನೂ ನಮ್ಮ ದೇಶದಲ್ಲಿ ‘ಅಸ್ಪೃಶ್ಯತೆ’ಯ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ. ಆದರೂ ಬೇರೆಬೇರೆ ಜಾತಿಗಳ ಜನರು ಜೊತೆಯಲ್ಲಿ ಕೂತು ಊಟ ಮಾಡುತ್ತಿರಲಿಲ್ಲ. ಆದರೆ, ಮಿತ್ರಮೇಳದ ಸದಸ್ಯರಾಗಿದ್ದ ಬ್ರಾಹ್ಮಣರು, ಕ್ಷತ್ರಿಯರು (ಪ್ರಭುಗಳು), ವೈಶ್ಯರು (ವಣಿಗಳು) ಮತ್ತು ಮರಾಠರು ಈ ಸಂಪ್ರದಾಯವನ್ನು ಮುರಿದು, ಮುಂದಡಿ ಇಟ್ಟರು. ಅಂದರೆ, ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಒಂದೊಂದು ಜಾತಿಯವರಿಗೂ ಪ್ರತ್ಯೇಕ ಸಾಲುಗಳನ್ನು ಮಾಡಿ, ಊಟ-ತಿಂಡಿ ಬಡಿಸುವುದನ್ನು ಇವರು ಖಂಡತುಂಡವಾಗಿ ವಿರೋಧಿಸಿ, ‘ಸಮಾರಂಭ ಎಂದಮೇಲೆ ಎಲ್ಲರೂ ಒಟ್ಟಾಗಿ ಕೂತು ಅಥವಾ ಕಲೆತು ಊಟ ಮಾಡಬೇಕು. ಇಲ್ಲಿ ಜಾತಿ ತಾರತಮ್ಯ ಸಲ್ಲದು,’ ಎಂದು ಪಟ್ಟು ಹಿಡಿದರು. ಮಿತ್ರಮೇಳದ ಸದಸ್ಯರ ಈ ಉಪಕ್ರಮವು ಒಂದು ದೊಡ್ಡ, ಸಕಾರಾತ್ಮಕ ಸಂದೇಶವನ್ನು ರವಾನಿಸಿತು. ಕೆಲವು ಸಮಾರಂಭಗಳಲ್ಲಿ ಸಂಪ್ರದಾಯಶೀಲರು, ‘ನಾವು ಈ ಆಬಾ ದಾರೇಕರ್ ಜೊತೆ ಕೂತು ಊಟ ಮಾಡುವುದಿಲ್ಲ. ಏಕೆಂದರೆ, ಅವರು ಜಾತಿಯಿಂದ ದಲಿತ’ ಎಂದು ಗೊಣಗಾಡಿದರು. ಆದರೆ, ಸಾವರ್ಕರ್ ಅವರ ಸಂಘಟನೆಯು ಅಂತಹ ಆಕ್ಷೇಪಣೆಗಳಿಗೆ ಮಣೆ ಹಾಕಲಿಲ್ಲ.

    ಅಂದಮಾತ್ರಕ್ಕೆ, ಮಿತ್ರಮೇಳದ ಸದಸ್ಯರಿಗೆ ಭ್ರಮೆಗಳಿದ್ದವು ಎಂದಲ್ಲ. ಸ್ವತಃ ಸಾವರ್ಕರ್ ಅವರೇ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ತಮ್ಮದೇನಿದ್ದರೂ ಒಂದು ಸಣ್ಣ ಗುಂಪು ಎನ್ನುವುದು ಮಿತ್ರಮೇಳದಲ್ಲಿ ಸಕ್ರಿಯರಾಗಿದ್ದವರಿಗೆಲ್ಲ ಗೊತ್ತಿತ್ತು. ಅಲ್ಲದೆ, ತುಂಬಾ ಪ್ರಬಲವಾಗಿರುವ ಬ್ರಿಟಿಷ್ ಸಾಮ್ರಾಜ್ಯವನ್ನು ನಾವು ಒಂದು ದೊಣ್ಣೆಯನ್ನು ಹಿಡಿದುಕೊಂಡು ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದರ ಅರಿವು ಅವರೆಲ್ಲರಿಗೂ ಇತ್ತು. ಆದರೆ, ‘ನಾವು ಮಾಡುತ್ತಿರುವ ಕೆಲಸಗಳು ಧಗಧಗನೆ ಬೆಂಕಿಯನ್ನು ಹತ್ತಿಸಲು ಬೇಕಾದ ಬೆಂಕಿಕಡ್ಡಿಗಳಂತಿವೆ. ಇದನ್ನು ನಾವು ಸರಿಯಾದ ಜಾಗದಲ್ಲಿ ಇಟ್ಟರೆ, ಬ್ರಿಟಿಷ್ ಸಾಮ್ರಾಜ್ಯ ಸುಟ್ಟು ಭಸ್ಮವಾಗಲಿದೆ,’ ಎಂದು ಸಾವರ್ಕರ್ ಅವರು ತಮ್ಮ ಜೊತೆಗಾರರಿಗೆ ಹೇಳುತ್ತಿದ್ದರು. ಸ್ವಾತಂತ್ರ್ಯ ಸಿಕ್ಕಬೇಕೆಂದರೆ ನಾವು ಒಗ್ಗಟ್ಟಿನಿಂದ ಹೋರಾಡಬೇಕು; ಇಲ್ಲದೆ ಹೋದರೆ ಅದು ಎಂದಿಗೂ ನಮಗೆ ದಕ್ಕುವುದಿಲ್ಲ ಎನ್ನುವ ಒಂದಿಷ್ಟನ್ನು ಜಾಗೃತಿಯನ್ನು ಹುಟ್ಟಿಸಿದ್ದೇನೂ ಯಃಕಶ್ಚಿತ್ತೆನ್ನುವಂಥ ಕೆಲಸವಲ್ಲ.ಇದನ್ನು ಒತ್ತಿ ಹೇಳುತ್ತಿದ್ದ ಸಾವರ್ಕರ್, ‘ನಮ್ಮ ದೇಶದ ಜನಸಂಖ್ಯೆ ಈಗ ಮುವ್ವತ್ತು ಕೋಟಿ ಇದೆ. ಈ ಪೈಕಿ ಕೇವಲ ಎರಡು ಲಕ್ಷ ಭಾರತೀಯರು ಸಿಡಿದೆದ್ದರೆ ಸಾಕು, ಬ್ರಿಟಿಷ್ ಸಾಮ್ರಾಜ್ಯದ ಆಟ ಅಲ್ಲಿಗೆ ಕೊನೆಗೊಳ್ಳುತ್ತದೆ,’ ಎನ್ನುತ್ತಿದ್ದರು.

    ಪುಣೆಗೆ ಬಂದ ಸಾವರ್ಕರ್, ಅಲ್ಲಿ ತಮ್ಮ ರಹಸ್ಯ ಸಂಘಟನೆಯ ಹೆಜ್ಜೆಗುರುತುಗಳನ್ನು ವಿಸ್ತರಿಸುವ ಕೆಲಸಕ್ಕೆ ಮುಂದಾದರು. ಇದಕ್ಕಾಗಿ ಅವರು ಕಾಲೇಜಿನಲ್ಲೂ ತಾವು ಉಳಿದುಕೊಂಡಿದ್ದ ವಿದ್ಯಾರ್ಥಿನಿಲಯದಲ್ಲೂ ಇದ್ದ ಸಹಪಾಠಿಗಳನ್ನು ಸೆಳೆಯತೊಡಗಿದರು. ಅಲ್ಲದೆ, ಅವರು ಡೆಕ್ಕನ್ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು, ಅಲ್ಲಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯವಾದಿ ಕೆಲಸಗಳಿಗೆ ಜತೆಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಅವರಿಗೆ ಒಳ್ಳೆಯ ಸ್ಪಂದನ ಸಿಕ್ಕಿ, ಹೆಚ್ಚುಹೆಚ್ಚು ವಿದ್ಯಾರ್ಥಿಗಳು ‘ಮಿತ್ರಮೇಳ’ವನ್ನು ಸೇರತೊಡಗಿದರು.

    ಬಾಲಗಂಗಾಧರ ತಿಲಕರು, ಮಹಾದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆ ಮತ್ತು ಕೆಲವು ಪ್ರಮುಖ ಪತ್ರಿಕೆಗಳ ಸಂಪಾದಕರೆಲ್ಲ ಸೇರಿಕೊಂಡು ಪುಣೆಯನ್ನು ಇಂತಹ ಕೆಲಸಗಳಿಗೆ ಚೆನ್ನಾಗಿ ಹದಗೊಳಿಸಿದ್ದುದು ಇದಕ್ಕೆ ಕಾರಣವಾಗಿತ್ತು. ಅಂದರೆ, ಪುಣೆಯ ವಾತಾವರಣವು ರಾಜಕೀಯ ಸಂವೇದನೆಯಿಂದ ಸಮೃದ್ಧವಾಗಿತ್ತು. ಹೀಗಾಗಿ, ಸಾವರ್ಕರ್ ಅವರು ಪುಣೆಗೆ ಬಂದ ಕೇವಲ ಎರಡೇ ವರ್ಷಗಳಲ್ಲಿ, ಅಂದರೆ ೧೯೦೪ರಲ್ಲಿ ನಾಸಿಕ್‌ನಲ್ಲಿ ಮಿತ್ರಮೇಳದ ಚೊಚ್ಚಲ ಅಧಿವೇಶನ ನಡೆಯುವ ಹೊತ್ತಿಗೆ ಸದಸ್ಯರ ಸಂಖ್ಯೆ ೨೦೦ಕ್ಕೇರಿತು. ಹೀಗೆ ಸಂಘಟನೆಯನ್ನು ಸೇರಿದವರಲ್ಲಿ ಬಾಂಬೆ, ಪುಣೆಯ ಸುತ್ತಮುತ್ತ ಹಬ್ಬಿದ್ದ ಪಶ್ಚಿಮ ಘಟ್ಟ ಸೀಮೆ, ಮಹಾರಾಷ್ಟ್ರದ ದಕ್ಷಿಣ ಭಾಗಕ್ಕಿದ್ದ ಸೊಲ್ಲಾಪುರ, ಉತ್ತರದ ಖಾನ್‌ದೇಶದ ತರುಣರೆಲ್ಲ ಇದ್ದರು. ಇಷ್ಟು ಹೊತ್ತಿಗೆ ಸಾವರ್ಕರ್ ಅವರು ತಮ್ಮ ವಾಕ್ಚಾತುರ್ಯವನ್ನು ಹರಿತಗೊಳಿಸಿಕೊಂಡಿದ್ದರ ಜೊತೆಗೆ, ಇತರರನ್ನು ಮನವೊಲಿಸುವ ಸಾಮರ್ಥ್ಯವನ್ನೂ ಬೆಳೆಸಿಕೊಂಡಿದ್ದರು. ಹೀಗಾಗಿ, ಅವರ ಯಶಸ್ಸಿನ ಪ್ರಮಾಣ ಇಲ್ಲಿ ಜಾಸ್ತಿಯಾಯಿತು.

    ಈ ಸಮಯದಲ್ಲಿ ಮಿತ್ರಮೇಳವನ್ನು ಸೇರಿದ ಪೈಕಿ ಮೂವರು ಮುಂದೆ ತಮ್ಮದೇ ಆದ ಬಗೆಯಲ್ಲಿ ರಾಷ್ಟ್ರ ಮಟ್ಟದ ನೇತಾರರಾಗಿ ಪ್ರಸಿದ್ಧರಾದರು. ಮುಂದೊಂದು ದಿನ ಕಾಂಗ್ರೆಸ್ಸಿನ ಚುನಾಯಿತ ಅಧ್ಯಕ್ಷರಾದ ಜೆ.ಬಿ.ಕೃಪಲಾನಿ, ಭವಿಷ್ಯದಲ್ಲಿ ಕಾಂಗ್ರೆಸ್ಸನ್ನು ಸೇರಿಕೊಂಡು ೧೯೩೭ರಲ್ಲಿ ಬಾಂಬೆ ಪ್ರಾಂತ್ಯದ ಅಧ್ಯಕ್ಷರಾದ ಬಿ.ಜಿ.ಖೇರ್ ಮತ್ತು ತಮ್ಮ ಕ್ರಾಂತಿಕಾರಕ ಚಟುವಟಿಕೆಗಳಿಂದಾಗಿ ‘ಸೇನಾಪತಿ’ ಎಂದೇ ಹೆಸರಾಗಿ, ತೀವ್ರಗಾಮಿಗಳ ನಾಯಕ ತಿಲಕ್ ಹಾಗೂ ಶಾಂತಿವಾದಿ ಮಹಾತ್ಮ ಗಾಂಧಿಯವರ ಪ್ರಮುಖ ಅನುಯಾಯಿಗಳಾದ ಪಿ.ಎಂ.ಬಾಪಟ್ ಇವರೇ ಆ ಮೂರು ಮಂದಿ!

    ೧೯೦೪ರಲ್ಲಿ ನಾಸಿಕ್‌ನಲ್ಲಿ ನಡೆದ ಮಿತ್ರಮೇಳದ ಪ್ರಥಮ ಸಮಾವೇಶದಲ್ಲಿ ಸಾವರ್ಕರ್ ತಮ್ಮ ಸಂಘಟನೆಯ ಹೆಸರನ್ನು ‘ಅಭಿನವ ಭಾರತ’ ಎಂದು ಬದಲಿಸಿದರು. ‘ಮಿತ್ರಮೇಳ’ ಎನ್ನುವ ಸ್ವಲ್ಪ ಸಪ್ಪೆಯಾದ ಹೆಸರಿಗೆ ಹೋಲಿಸಿದರೆ, ಈ ಹೊಸ ಹೆಸರು ತುಂಬಾ ಮಹತ್ತ್ವಾಕಾಂಕ್ಷಿಯಾಗಿ ಕೇಳಿಸುತ್ತಿತ್ತು. ಸಾವರ್ಕರ್ ಅವರ ಸಂಘಟನೆಯು ಹೀಗೆ ಹೊಸ ಹೆಸರನ್ನು ಪಡೆದುಕೊಂಡ ಮೇಲೆ, ಇದು ಎಲ್ಲರನ್ನೂ ಒಳಗೊಳ್ಳುವಂತಹ ಸಂಸ್ಥೆ ಎನ್ನುವ ಸದಭಿಪ್ರಾಯವನ್ನು ರೂಢಿಸುವ ಉದ್ದೇಶದಿಂದ ದೇಶದ ನಾನಾ ಭಾಗಗಳಲ್ಲಿ ಇದರ ಸಮಾವೇಶವನ್ನು ಏರ್ಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದರಂತೆ ಒಂದು ವರ್ಷ ನಾಸಿಕ್ ಸಮೀಪದ ಕೋತೂರಿನಲ್ಲಿ, ಇದರ ಮುಂದಿನ ವರ್ಷ ಮುಂಬೈಗೆ ತಾಗಿಕೊಂಡಿರುವ ಸಿಯೋನ್‌ನಲ್ಲಿ, ಮತ್ತೊಂದು ವರ್ಷ ಹೈದರಾಬಾದಿನ ನಿಜಾಮರ ಆಳ್ವಿಕೆಯ ಅಡಿಯಲ್ಲಿದ್ದ ಔರಂಗಾಬಾದಿಗೆ ಸಮೀಪದಲ್ಲಿ ಹೀಗೆ ಸಮಾವೇಶಗಳು ಜರುಗಿದವು.

    ‘ಅಭಿನವ ಭಾರತ’ದ ಕೆಲವು ಸಭೆಗಳು ತೀರಾ ಸಾಧಾರಣವಾದ ಮನೆಗಳಲ್ಲೂ ನಡೆಯುತ್ತಿದ್ದವು. ಉದಾಹರಣೆಗೆ ಹೇಳುವುದಾದರೆ, ಮುಂಬೈನ ಗ್ರ್ಯಾಂಟ್ ರಸ್ತೆಯಲ್ಲಿದ್ದ ಶಾಸ್ತ್ರಿ ಹಾಲ್‌ಗೆ ಸಮೀಪದಲ್ಲಿದ್ದ ಕೆಲವು ಮನೆಗಳಲ್ಲಿ, ಹಾಗೆಯೇ ಚಿಕಳವಾಡಿ ಪ್ರದೇಶದಲ್ಲಿದ್ದ ಇನ್ನೊಂದಿಷ್ಟು ಮನೆಗಳಲ್ಲಿ ಇಂತಹ ಸಭೆಗಳು ಏರ್ಪಾಡಾಗುತ್ತಿದ್ದವು. ಒಂದು ಕಾಕತಾಳೀಯ ಕುತೂಹಲದ ವಿಚಾರವೆಂದರೆ, ೧೯೮೦ರ ದಶಕದಲ್ಲಿ ಲಂಡನ್ನಿನಲ್ಲಿ ಸಾವರ್ಕರ್ ಅವರ ನೆನಪಿನಲ್ಲಿ ಒಂದು ಪಾರಿತೋಷಕವನ್ನು ಅನಾವರಣಗೊಳಿಸಲು ಇದೇ ಚಿಕಳವಾಡಿಯಲ್ಲಿ ಹುಟ್ಟಿ, ಬೆಳೆದ ಹುಡುಗನೊಬ್ಬನನ್ನು ಆಹ್ವಾನಿಸಲಾಗಿತ್ತು. ಆ ಹುಡುಗ ಯಾರೆಂದರೆ, ಕ್ರಿಕೆಟ್ ಲೋಕದ ದಂತಕತೆಯಾಗಿರುವ ಸುನೀಲ್ ಮನೋಹರ್ ಗವಾಸ್ಕರ್! ಈ ಗವಾಸ್ಕರ್ ಓರ್ವ ರಾಜಕೀಯ ಕ್ರಾಂತಿಕಾರಿಯಲ್ಲದೆ ಇರಬಹುದು. ಆದರೆ, ಕ್ರಿಕೆಟ್ ಲೋಕದಲ್ಲಿ ಆಗ ವಿಜೃಂಭಿಸುತ್ತಿದ್ದ ಭಯಾನಕ ವೇಗದ ಬೌಲರುಗಳ ಎಸೆತಗಳನ್ನು ತಲೆಗೆ ಹೆಲ್ಮೆಟ್ ಹಾಕಿಕೊಳ್ಳದೆಯೇ ಧೈರ್ಯದಿಂದ ಎದುರಿಸುತ್ತಿದ್ದ ಈ ಪ್ರತಿಭಾನ್ವಿತ ಕ್ರಿಕೆಟಿಗ ಕೂಡ ತಮ್ಮದೇ ಆದ ಒಂದು ಶೈಲಿಯಲ್ಲಿ ಕ್ರಾಂತಿಯನ್ನು ಉಂಟುಮಾಡಿದರು; ಈ ಮೂಲಕ ಅವರು ಭಾರತೀಯ ಕ್ರಿಕೆಟಿಗೆ ನೆಲೆ-ಬೆಲೆಗಳನ್ನು ತಂದುಕೊಟ್ಟರು.

    ತಮ್ಮ ಕಾಲದ ಇನ್ನಿತರ ನಾಯಕರುಗಳಂತೆಯೇ ತಮ್ಮ ಕಾಲೇಜು ದಿನಗಳಲ್ಲಿ ಪುಣೆಯ ಪ್ರಭಾವಿ ಮತ್ತು ಹೆಸರಾಂತ ದಿನಪತ್ರಿಕೆಗಳಿಗೆ ಹಾಗೂ ನಿಯತಕಾಲಿಕಗಳಿಗೆ ಅಪಾರವಾಗಿ ಬರೆದರು. ಹಾಗೆಯೇ, ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಅಧ್ಯಯನ ಪೂರೈಸಿದ ನಂತರ, ಅವರು ಲಂಡನ್ನಿನ ಕಾನೂನು ಪದವಿ ಶಿಕ್ಷಣದ ಪ್ರವೇಶ ಪರೀಕ್ಷೆಗೆಂದು ಸಿದ್ಧತೆ ಮಾಡಿಕೊಳ್ಳಲು ಒಂದು ವರ್ಷ ಮುಂಬೈನಲ್ಲಿದ್ದಾಗ ‘ವಿಹಾರಿ’ ಎನ್ನುವ ವಾರಪತ್ರಿಕೆಗೆ ತಪ್ಪದೆ ಬರೆದರು. ಇಷ್ಟರ ಮಧ್ಯೆ ಅವರು ಪುಣೆಯಲ್ಲಿ ತಮ್ಮ ನೆಚ್ಚಿನ ಪತ್ರಕರ್ತ, ‘ಕಾಲ್’ ಪತ್ರಿಕೆಯ ಸಂಪಾದಕರಾಗಿದ್ದ ಎಸ್.ಎಂ.ಪರಾಂಜಪೆ ಅವರನ್ನು ಕೊನೆಗೂ ನೇರವಾಗಿ ಭೇಟಿಯಾದರು. ಅಲ್ಲಿ ತಮ್ಮ ಹಾಸ್ಯಪ್ರವೃತ್ತಿ ಮತ್ತು ಪ್ರತಿಭೆಯಿಂದ ಅವರ ಮನಗೆದ್ದ ಸಾವರ್ಕರ್, ಪರಾಂಜಪೆಯವರ ಮಗ ಕೃಷ್ಣನ ಆತ್ಮೀಯ ಸ್ನೇಹಿತರಾದರು. ಆ ದಿನಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಾವರ್ಕರ್ ಅವರ ಕವನಗಳು ಸಾಕಷ್ಟು ಗಮನ ಸೆಳೆದಿದ್ದವು. ಅವುಗಳ ಪೈಕಿ ಸ್ವಾತಂತ್ರ್ಯದ ಅಧಿದೇವತೆಯನ್ನು ಸ್ತುತಿಸಿ ಬರೆದಿದ್ದ ‘ಜಯೋಸ್ತುತೇ’ ಎನ್ನುವ ಒಂದು ಕವನವೂ ಸೇರಿತ್ತು. ನಂತರದ ವರ್ಷಗಳಲ್ಲಿ, ಖ್ಯಾತ ಸಂಗೀತ ಸಂಯೋಜಕ ಹೃದಯನಾಥ್ ಮಂಗೇಶಕರ್ ಅವರು -ಲೋಕವಿಖ್ಯಾತ ಗಾಯಕಿ ಲತಾ ಮಂಗೇಶಕರ್ ಅವರ ಖಾಸಾ ಅಣ್ಣ- ಈ ಕವನಕ್ಕೆ ರಾಗವನ್ನು ಹಾಕಿದರು. ಈ ಗೀತೆಯನ್ನು ಮಹಾರಾಷ್ಟ್ರದಲ್ಲಿ ನಡೆಯುವ ದೊಡ್ಡದೊಡ್ಡ ಸಮಾರಂಭಗಳಲ್ಲಿ ಈಗಲೂ ಹಾಡುತ್ತಾರೆ. ಆ ದಿನಗಳಲ್ಲಿ ಒಮ್ಮೆ ಒಂದು ಕಾವ್ಯರಚನಾ ಸ್ಪರ್ಧೆ ಏರ್ಪಟ್ಟಿತ್ತು. ಹಿಂದೂ ವಿಧವೆಯರ ದಾರುಣ ಸ್ಥಿತಿಗತಿಗಳನ್ನು ಟೀಕಿಸಿ ಸಾವರ್ಕರ್ ಅವರು ಈ ಸ್ಪರ್ಧೆಗೆ ಒಂದು ಕವನವನ್ನು ಕಳಿಸಿದ್ದರು. ಅದು ಅಂತಿಮವಾಗಿ ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ಹಾಗೆಯೇ, ಇನ್ನೊಂದು ಪ್ರಬಂಧ ಸ್ಪರ್ಧೆಗೆ ಇವರು ‘ಐತಿಹಾಸಿಕ ವ್ಯಕ್ತಿಗಳನ್ನು ಸಮಾಜವೇಕೆ ಗೌರವಿಸಬೇಕು?’ ಎನ್ನುವ ವಿಚಾರ ಕುರಿತು ಕಳಿಸಿದ್ದ ಪ್ರಬಂಧ ಕೂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿತ್ತು.

    ಆದರೆ, ಸಾವರ್ಕರ್ ಮತ್ತು ಅವರ ಜೊತೆಗಾರರು ತಮ್ಮದೇ ಸರಿ ಎನ್ನುವಂತೆ ಪ್ರದರ್ಶಿಸುತ್ತಿದ್ದ ದೇಶಭಕ್ತಿಯ ವರಸೆಯನ್ನು ಒಪ್ಪದವರೂ ಇದ್ದರು. ೨೦ನೇ ಶತಮಾನದ ಮೊದಲ ದಶಕದ ಪೂರ್ವಾರ್ಧದಲ್ಲಿ ರಾಜಗಢದಲ್ಲಿ ನಡೆದ ಶಿವಾಜಿ ಉತ್ಸವವು ಇಂಥದೊಂದು ಘಟನೆಗೂ ಸಾಕ್ಷಿಯಾಯಿತು. ಏಕೆಂದರೆ, ಅಲ್ಲಿ ಸಾವರ್ಕರ್ ಅವರ ಸ್ನೇಹಿತರು ಶಿವಾಜಿಯ ಸೇನೆಯಲ್ಲಿದ್ದ ವೀರಸೇನಾನಿಗಳಾದ ತಾನಾಜಿ ಮತ್ತು ಬಾಜಿ ಪ್ರಭು ದೇಶಪಾಂಡೆ ಅವರನ್ನು ಕುರಿತು ಲಾವಣಿ ಹಾಡಿದ್ದನ್ನು ಆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈನ ನ್ಯಾಯವಾದಿ ಮತ್ತು ತಿಲಕರ ಅನುಯಾಯಿಯಾಗಿದ್ದ ಡಿ.ಎ.ಖರೆ ಅವರು ಬಿಲ್‌ಕುಲ್ ಒಪ್ಪಲಿಲ್ಲ. ಈ ಲಾವಣಿಯ ವಿರುದ್ಧ ತಿಲಕರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಈ ಹಾಡು ತೀರಾ ಅಸಾಂವಿಧಾನಿಕವಾಗಿದೆ. ಆದ್ದರಿಂದ ನೀವು ಕೂಡಲೇ ಈ ಸಮಾರಂಭವನ್ನು ನಿಲ್ಲಿಸಬೇಕು,’ ಎಂದು ಆಗ್ರಹಿಸಿದರು. ಆದರೆ, ತಿಲಕರು ಇದಕ್ಕೆ ಮಣೆ ಹಾಕಲಿಲ್ಲ. ಬದಲಿಗೆ, ಅವರು ಸಭಿಕರನ್ನು ಉದ್ದೇಶಿಸಿ, ‘ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಖರೆಯವರಿಗೆ ಸ್ವಲ್ಪಹೀಗಾಗಿ ಅವರು ಸಭೆಯಿಂದ ತುಸು ಬೇಗನೆ ನಿರ್ಗಮಿಸಲು ಬಯಸಿದ್ದಾರೆ. ಹೀಗಾಗಿ, ಸಮಾರಂಭದ ಉಳಿದ ಭಾಗದ ಅಧ್ಯಕ್ಷತೆಯನ್ನು ಎಸ್.ಎಂ.ಪರಾಂಜಪೆಯವರು ವಹಿಸಿಕೊಳ್ಳಲಿದ್ದಾರೆ,’ ಎಂದು ಹೇಳಿದರು.

    ಮತ್ತೊಬ್ಬ ಖ್ಯಾತ ಇತಿಹಾಸಜ್ಞ ವಿ.ಕೆ.ರಾಜವಾಡೆ ಅವರು ಕೂಡ ಯಾವುದೇ ವಿಷಯವನ್ನು ಪಟ್ಟು ಬಿಡದೆ ಚರ್ಚಿಸುವ ಸಾವರ್ಕರ್ ಅವರ ಗುಣವನ್ನು ಮೆಚ್ಚಿಕೊಂಡಿದ್ದರಾದರೂ ಎಲ್ಲವನ್ನೂ ಭಾರತೀಯ ಸಂದರ್ಭಕ್ಕೆ ತಳುಕು ಹಾಕುವ ಅವರ ಇನ್ನೊಂದು ಪ್ರವೃತ್ತಿಯನ್ನು ಒಪ್ಪುತ್ತಿರಲಿಲ್ಲ. ೧೯೦೦ರ ದಶಕದ ಮೊದಲ ಭಾಗದಲ್ಲಿ ನಡೆದ ಒಂದು ಚರ್ಚಾಸ್ಪರ್ಧೆಯಲ್ಲಿ ಹೀಗೆಯೇ ಆಯಿತು. ಅದರಲ್ಲಿ ಪಾಲ್ಗೊಂಡಿದ್ದ ಸಾವರ್ಕರ್ ಅವರು ಇಟಲಿಯ ಚರಿತ್ರೆಯ ಬೆಳವಣಿಗೆಯ ಬಗ್ಗೆ ವಿಚಾರವನ್ನು ಮಂಡಿಸಿದ ರೀತಿನೀತಿಗಳನ್ನು ರಾಜವಾಡೆಯವರು ಬಹುವಾಗಿ ಮೆಚ್ಚಿಕೊಂಡರು. ಆದರೆ, ಅದನ್ನೆಲ್ಲ ಸಾವರ್ಕರ್ ಅವರು ಸ್ಥಳೀಯ ರಾಜಕೀಯ ಸಂದರ್ಭಗಳೊಂದಿಗೆ ಬೆಸೆಯಲು ಪ್ರಯತ್ನಿಸಿದ್ದನ್ನು ಒಪ್ಪಲಿಲ್ಲ.

    ಅಂದಮಾತ್ರಕ್ಕೆ, ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಂಡು ತಿರುಗುತ್ತಿದ್ದ ಎಲ್ಲರನ್ನೂ ಸಾವರ್ಕರ್ ಒಪ್ಪಿಕೊಳ್ಳುತ್ತಿರಲಿಲ್ಲ. ‘ಅಗಮ್ಯ ಗುರು ಪರಮಹಂಸ’ ಎನ್ನುವ ಹೆಸರನ್ನಿಟ್ಟುಕೊಂಡಿದ್ದ ಸ್ವಯಂಘೋಷಿತ ದೇವಮಾನವನ ಪ್ರಕರಣದಲ್ಲಿ ಹೀಗೆಯೇ ಆಯಿತು. ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಪುಣೆಯಲ್ಲಿ ಕೆಲವು ತರುಣರ ಮೂಲಕ ವಸೂಲಿ ದಂಧೆ ನಡೆಸುತ್ತಿದ್ದ ಈತನನ್ನು, ಇವನ ಕೆಲ ಸ್ನೇಹಿತರು ಸಾವರ್ಕರ್‌ಗೆ ಪರಿಚಯ ಮಾಡಿಕೊಟ್ಟರು. ಈತನ ಬಗ್ಗೆ ಅವನ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಸಾವರ್ಕರ್, ಅವನೊಂದಿಗಿನ ಸಭೆಯನ್ನು ದಿಢೀರನೆ ಮುಗಿಸಿ, ‘ಇಂತಹ ಮುಟ್ಟಾಳರ ಸಹವಾಸ ಮಾಡಿಕೊಂಡು ಸಮಯವನ್ನೆಲ್ಲ ಹಾಳು ಮಾಡಬೇಡಿ,’ ಎಂದು ಅವನ ಹಿಂದೆಮುಂದೆ ಓಡಾಡುತ್ತಿದ್ದವರಿಗೆ ನೇರವಾಗಿ ಹೇಳಿದರು. ಇದಾದ ಕೆಲವು ವರ್ಷಗಳ ನಂತರ ಈ ‘ಗುರು’ವನ್ನು ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಲಂಡನ್ನಿನಲ್ಲಿ ಬಂಧಿಸಲಾಯಿತು.

    ಆದರೆ, ೧೯೧೮ರಲ್ಲಿ ಎಸ್.ರೌಲತ್ ನೇತೃತ್ವದ ‘ದೇಶದ್ರೋಹ ಆರೋಪಗಳ ಸಮಿತಿ’ಯು ನೀಡಿದ ಸುಳ್ಳು ವರದಿಯಲ್ಲಿ ‘ಸಾವರ್ಕರ್ ಅವರು ಈ ಪರಮಹಂಸ ಎಂಬ ವ್ಯಕ್ತಿಯಿಂದಾಗಿಯೇ ಕ್ರಾಂತಿಕಾರಿ ಚಟುವಟಿಕೆಗಳಿಗೆ ಮುಂದಾದರು,’ ಎಂದು ಆಧಾರರಹಿತವಾಗಿ ಹೇಳಿತಲ್ಲದೆ, ‘ಸಾವರ್ಕರ್ ಅವರ ಅಣ್ಣ ಗಣೇಶ್ ಸಾವರ್ಕರ್ (ಬಾಬಾರಾವ್) ಅವರೇ ಅಭಿನವ ಭಾರತ ಸಂಘಟನೆಯ ಸ್ಥಾಪಕ,’ ಎಂಬ ಇನ್ನೊಂದು ಹಸೀಸುಳ್ಳನ್ನೂ ಪ್ರತಿಪಾದಿಸಿತು.
    ವಾಸ್ತವವಾಗಿ ಸಾವರ್ಕರ್ ಅವರು ೧೯೦೫ರ ಹೊತ್ತಿಗೆಲ್ಲ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ್ದರು. ಇದಕ್ಕೆ ಕಾರಣವಾದ ಬೆಳವಣಿಗೆ ಯಾವುದೆಂದರೆ, ಬಂಗಾಳದ ವಿಭಜನೆ. ಆ ವರ್ಷದ ಅಕ್ಟೋಬರಿನಲ್ಲಿ ವೈಸ್‌ರಾಯ್ ಜಾರ್ಜ್ ನಥ್ಯಾನಿಯಲ್ ಕರ್ಜನ್, ಬಂಗಾಳವನ್ನು ವಿಭಜಿಸುವ ನಿರ್ಣಯವನ್ನು ಮಂಡಿಸಿದ. ಹೀಗೆ ಮಾಡುವಾಗ ಅವನು ಬಹಿರಂಗವಾಗಿಯೇ ‘ಭಾರತದ ಮೇಲೆ ಬ್ರಿಟಿಷರ ಯಜಮಾನಿಕೆಯನ್ನು ಇನ್ನಷ್ಟು ತೀವ್ರಗೊಳಿಸುವುದೇ ಇದರ ಹಿಂದಿನ ಉದ್ದೇಶ’ವಾಗಿದ್ದು, ‘ಈ ದೇಶವು (ಭಾರತವು) ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದನ್ನು ಮತ್ತಷ್ಟು ಮುಂದೂಡುವುದು’ ತನ್ನ ಗುರಿಯಾಗಿದೆ ಎಂದು ಸಾರಿದ.

    ಬ್ರಿಟಿಷರು ಹೀಗೆ ಬಂಗಾಳವನ್ನು ವಿಭಜಿಸಲು ಮುಂದಾದ ಕ್ರಮವು ಆ ಪ್ರಾಂತ್ಯದೆಲ್ಲೆಡೆ ತೀಕ್ಷ್ಣ ಪ್ರತಿಭಟನೆಯನ್ನು ಸೃಷ್ಟಿಸಿತು. ಆಗ ವೈಸ್‌ರಾಯ್ ಕರ್ಜನ್, ‘ಸುಗಮ ಆಡಳಿತವು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಬಂಗಾಳವನ್ನು ವಿಭಜಿಸಲಾಗುತ್ತಿದೆ. ಏಕೆಂದರೆ, ಈಗ ಈ ಪ್ರಾಂತ್ಯದಲ್ಲಿ ಕೇವಲ ಬಂಗಾಳ ಮಾತ್ರವೇ ಇಲ್ಲ. ಇದರ ಜೊತೆಗೆ ಅಕ್ಕಪಕ್ಕದ ಬಿಹಾರ, ಒರಿಸ್ಸಾ ಮತು ಛೋಟಾ ನಾಗ್ಪುರ ಕೂಡ ಸೇರಿದ್ದು, ಇದೊಂದೇ ಪ್ರಾಂತ್ಯದಲ್ಲಿ ಭಾರತದ ಕಾಲುಭಾಗಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೆ,’ ಎಂದು ಹೇಳಿದ. ಆದರೆ, ಭಾರತೀಯರು ಬಂಗಾಳದ ವಿಭಜನೆಯ ಹಿಂದೆ ಬ್ರಿಟಿಷರ ಒಡೆದಾಳುವ ನೀತಿಯನ್ನು ಕಂಡರು. ಏಕೆಂದರೆ, ಬ್ರಿಟಿಷರ ಯೋಜನೆಯ ಪ್ರಕಾರ ಪೂರ್ವ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದರು. ಇದರ ಜೊತೆಗೆ, ಈ ಭಾಗಕ್ಕೆ ಅಸ್ಸಾಮನ್ನು ಅವರು ಲಗತ್ತಿಸಬೇಕೆಂದುಕೊಂಡಿದ್ದರು. ಇನ್ನೊಂದೆಡೆಯಲ್ಲಿ, ಬಿಹಾರ, ಒರಿಸ್ಸಾ ಮತ್ತು ಛೋಟಾ ನಾಗ್ಪುರಗಳನ್ನೂ ಒಳಗೊಂಡಿರುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುತ್ತಿದ್ದರು. ಹೀಗಾದಾಗ, ಪಶ್ಚಿಮ ಬಂಗಾಳದಲ್ಲಿ ಹಿಂದಿ ಮತ್ತು ಒರಿಯಾ ಭಾಷಿಕರ ಸಂಖ್ಯೆ ಹೆಚ್ಚಾಗಿ, ಆ ಎರಡೂ ಗುಂಪುಗಳ ಮುಂದೆ ಬಂಗಾಳಿ ಭಾಷಿಕರು ಅಲ್ಪಸಂಖ್ಯಾತರಾಗುತ್ತಿದ್ದರು.

    ಕರ್ಜನ್‌ನ ಈ ನಡೆಯು ಕಾಂಗ್ರೆಸ್ ಪಕ್ಷಕ್ಕೆ, ಅದರಲ್ಲೂ ಬಾಲಗಂಗಾಧರ ತಿಲಕರ ನೇತೃತ್ವದ ತೀವ್ರಗಾಮಿಗಳಿಗೆ ಎರಡು ಅಸ್ತ್ರಗಳನ್ನು ಕೊಟ್ಟಿತು. ಅವೆಂದರೆ- ಮೊದಲನೆಯದು, ಸ್ವದೇಶಿ ಚಳವಳಿ; ಎರಡನೆಯದು, ಬ್ರಿಟಿಷ್ ವಸ್ತುಗಳಿಗೆ ಬಹಿಷ್ಕಾರ. ಇವೆರಡೂ ಕ್ರಮಗಳು ಮಂದಗಾಮಿಗಳು ಹೇಳುತ್ತಿದ್ದ ಸಾಂವಿಧಾನಿಕ ರೀತಿಯ ಪ್ರತಿಭಟನೆಯ ಲಕ್ಷ್ಮಣರೇಖೆಯನ್ನೂ ಉಲ್ಲಂಘಿಸುತ್ತಿರಲಿಲ್ಲ. ಜೊತೆಗೆ, ಮಂದಗಾಮಿ ಅನುಸರಿಸುತ್ತಿದ್ದ ಮನವಿ, ಪ್ರಾತಿನಿಧ್ಯವನ್ನು ಅನುಗ್ರಹಿಸುವಂತೆ ಕೇಳುವುದು ಮತ್ತು ಎಲ್ಲಕ್ಕೂ ಬ್ರಿಟಿಷರ ಮುಂದೆ ದೈನ್ಯವಾಗಿ ಮೊರೆ ಇಡುವುದು ಇಂತಹ ಕ್ರಮಗಳಷ್ಟು ಇದು ತೀರಾ ನಿಷ್ಪ್ರಯೋಜಕವೂ ಆಗಿರಲಿಲ್ಲ. ತಿಲಕರಂತೂ ಸ್ವದೇಶಿ ಚಳವಳಿಯ ಪರ ತೀಕ್ಷ್ಣವಾಗಿ ಮಾತನಾಡುತ್ತಿದ್ದರು. ೧೯೦೫ರ ಆಗಸ್ಟ್ ೭ರಂದು ಕೊಲ್ಕತ್ತಾದ ಪುರಸಭೆಯಲ್ಲಿ (ಟೌನ್‌ಹಾಲ್) ನಡೆದ ಸಭೆಯಲ್ಲಿ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಿದಾಗ ಅವರು ತಮ್ಮ ವಿಚಾರಧಾರೆಯನ್ನು ಪ್ರಖರವಾಗಿ ಮಂಡಿಸಿದರು. ಅಲ್ಲದೆ, ಈ ಚಳವಳಿಯನ್ನು ಭಾರತೀಯರು ದೇಶದ ಮೂಲೆಮೂಲೆಗಳಲ್ಲೂ ಹಬ್ಬಿಸಬೇಕೆಂದು ಕರೆ ನೀಡಿದರು. ಇದಕ್ಕಿಂತ ಹೆಚ್ಚಾಗಿ ತಿಲಕರು, ‘ಬಂಗಾಳಿಗಳ ದನಿಯನ್ನು ಉಳಿದವರಿಗಿಂತ ಹೆಚ್ಚಾಗಿ ಮಹಾರಾಷ್ಟ್ರದ ಜನರು ಬೆಂಬಲಿಸಬೇಕು. ಇದರ ಅಂಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಬೇಕು’ ಎಂದು ಅವರು ಇನ್ನೊಂದು ಕರೆ ಕೊಟ್ಟರು.

    ಆಗ ಮಹಾರಾಷ್ಟ್ರವೆಂದರೆ ತುಂಬಾ ದೊಡ್ಡದಾಗಿತ್ತು ಎನ್ನುವುದು ನಮಗೆಲ್ಲ ಗೊತ್ತಿರಬೇಕು. ಆಗ ಈ ಪ್ರಾಂತ್ಯವು ಮರಾಠಿ ಮಾತನಾಡುವ ಬಹುದೊಡ್ಡ ಪ್ರದೇಶಗಳನ್ನೊಳಗೊಂಡಿತ್ತು (ಈಗಿರುವ ಮಹಾರಾಷ್ಟ್ರ ರಾಜ್ಯವು ಅಸ್ತಿತ್ವಕ್ಕೆ ಬಂದಿದ್ದು ೧೯೬೦ರಲ್ಲಿ). ತಿಲಕರಂತೂ ‘ಸ್ವದೇಶಿ ಕಲ್ಪನೆಯು ನಮ್ಮಲ್ಲಿ ಬಂದಿದ್ದೇ ಮಹಾರಾಷ್ಟ್ರದಿಂದ’ ಎಂದು ಪ್ರತಿಪಾದಿಸುತ್ತಿದ್ದರು. ಸ್ವತಃ ತಿಲಕರ ತಲೆಮಾರಿನವರಿಗೆ ಈ ಸಂಬಂಧವಾಗಿ ಪೂನಾ ಸಾರ್ವಜನಿಕ ಸಭಾದ ನಾಯಕರಾದ ಖಾದಿಧಾರಿ ಜಿ.ವಿ.ಜೋಷಿಯವರು ಅಥವಾ ಸಾರ್ವಜನಿಕ ಕಾಕಾ ಅವರ ಮಧುರ ನೆನಪುಗಳಿದ್ದವು. ಏಕೆಂದರೆ, ಅತ್ಯಂತ ಮಹತ್ತ್ವದ ಸ್ವದೇಶಿ ಪರಿಕಲ್ಪನೆಯನ್ನು ಪ್ರಚುರಪಡಿಸಿದವರೇ ಅವರು! ಈ ಸಂಬಂಧವಾಗಿ ತಮ್ಮ ಸಂಪಾದಕತ್ವದ ‘ಕೇಸರಿ’ ಪತ್ರಿಕೆಯಲ್ಲಿ ೧೯೦೫ರ ಆಗಸ್ಟ್ ೨ರಂದು ಒಂದು ಸಂಪಾದಕೀಯವನ್ನೇ ಬರೆದ ತಿಲಕರು, ‘ನಮ್ಮ ಬಂಗಾಳದ ಜನರು ಸ್ವದೇಶಿ ಪರಿಕಲ್ಪನೆಯ ಮಹತ್ತ್ವವನ್ನು ಗುರುತಿಸಿದ್ದಾರೆ. ಹೀಗಿರುವಾಗ ಉಳಿದ ಪ್ರಾಂತ್ಯಗಳ ಜನರು ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಈ ಮೂಲಕ ಅವರು ಬ್ರಿಟಿಷರ ವಿರುದ್ಧದ ಪ್ರತಿಭಟನೆಯನ್ನು ಬಾಂಬೆ ಮತ್ತು ಪುಣೆಗಳಿಗೂ ಕೊಂಡೊಯ್ದರು. ಆಗ, ಮಂದಗಾಮಿಗಳ ನಾಯಕರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದ ಗೋಪಾಲಕೃಷ್ಣ ಗೋಖಲೆಯವರು ‘ಈ ಪ್ರತಿಭಟನೆಯು ಬಂಗಾಳಕ್ಕೆ ಮಾತ್ರ ಸೀಮಿತವಾಗಿರಬೇಕು,’ ಎಂದು ಹೇಳುತ್ತಿದ್ದರೆ. ಆದರೆ ತಿಲಕರು ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಇನ್ನೊಂದೆಡೆಯಲ್ಲಿ, ಲಾಲಾ ಲಜಪತರಾಯ್ ಅವರು ಪಂಜಾಬಿನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯು ಹಬ್ಬುವಂತೆ ಮಾಡಿದರು. ಈ ಪ್ರತಿಭಟನೆಗಳಿಗೆ ಸುರೇಂದ್ರನಾಥ ಬ್ಯಾನರ್ಜಿಯವರಂತಹ ಮಂದಗಾಮಿ ನಾಯಕರು ಕೂಡ ಸ್ವಲ್ಪಮಟ್ಟಿಗೆ ತಮ್ಮ ಬೆಂಬಲವನ್ನು ನೀಡಿದರು.

    ಆದರೆ, ತಿಲಕರ ಜೀವನಚರಿತ್ರಕಾರರಾದ ಎ.ಕೆ.ಭಾಗವತ್ ಮತ್ತು ಜಿ.ಪಿ.ಪ್ರಧಾನ್ ಅವರ ಪ್ರಕಾರ, ‘ತಿಲಕರು ಎಂದಿಗೂ ಮಂದಗಾಮಿಗಳ ನೀತಿಗೆ ವಿರುದ್ಧವಾಗಿ ಕ್ರಾಂತಿಕಾರಿಗಳ ಮಾರ್ಗವನ್ನು ಒಪ್ಪಿದವರಲ್ಲ. ಅವರ ಪ್ರಕಾರ, ಮಂದಗಾಮಿಗಳು ಅನುಸರಿಸುತ್ತಿದ್ದ ಸಾಂವಿಧಾನಿಕ ಪ್ರಯತ್ನಗಳು ಯಾವ ಫಲವನ್ನೂ ಕೊಡದೆ ಉಂಟಾದ ಹತಾಶೆಯೇ ಕ್ರಾಂತಿಕಾರಿ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು.

    ಇದೇನೇ ಇರಲಿ, ಸಾವರ್ಕರ್ ಅವರ ದೃಷ್ಟಿಯಲ್ಲಿ ತಿಲಕರೆಂದರೆ ಕ್ರಾಂತಿಕಾರಿ ಹೋರಾಟದ ಪರವಾಗಿರುವ ನಾಯಕರಾಗಿದ್ದು, ಕಾಂಗ್ರೆಸ್ಸಿನಂತಹ ಒಂದು ಸಾಮೂಹಿಕ ಹೋರಾಟವನ್ನು ಮುನ್ನಡೆಸಲು ಅವರು ಭೂಗತರಾಗದೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿದ್ದರು. ವಾಸ್ತವವಾಗಿ, ತಿಲಕರು ಬಹಳ ಹಿಂದಿನಿಂದಲೂ ಬ್ರಿಟಿಷರ ವಿರುದ್ಧ ‘ನಾಗರಿಕ ದಂಗೆ’ಯನ್ನು ಹುಟ್ಟುಹಾಕುವ ಆಲೋಚನೆಯನ್ನು ಹೊಂದಿದ್ದರು. ಇದು ಕ್ರಾಂತಿಕಾರಿಗಳು ಬಯಸುತ್ತಿದ್ದಷ್ಟು ಉಗ್ರವಾದ ಕ್ರಮವೂ ಆಗಿರಲಿಲ್ಲ; ಹಾಗೆಯೇ, ಮಂದಗಾಮಿಗಳು ನಡೆಸುತ್ತಿದ್ದಂತಹ ಹೋರಾಟದಷ್ಟು ನೀರಸವೂ ಆಗಿರಲಿಲ್ಲ. ಇಂಥ ಸಮಯದಲ್ಲಿ ತಿಲಕರಿಗೆ ‘ತೀವ್ರಗಾಮಿ’ ಪರಿಕಲ್ಪನೆಗಳಾದ ಸ್ವದೇಶಿ ಜಾಗೃತಿ ಮತ್ತು ಬ್ರಿಟಿಷ್ ವಸ್ತುಗಳಿಗೆ ಬಹಿಷ್ಕಾರ ಇವೆರಡೂ ‘ಕ್ರಾಂತಿಕಾರಿಗಳನ್ನು ಹುರಿದುಂಬಿಸಲು ಸೂಕ್ತವಾದ ಮಾರ್ಗಗಳಂತೆ ಕಂಡವು. ಅವರ ಈ ಲೆಕ್ಕಾಚಾರ ಸರಿಯಾಗಿತ್ತು. ಏಕೆಂದರೆ, ಬಂಗಾಳಿಗಳನ್ನು ದೇಶವಾಸಿಗಳೆಲ್ಲರೂ ಬೆಂಬಲಿಸಬೇಕು ಎಂಬ ಅವರ ಕರೆಗೆ ಎಲ್ಲರಿಗಿಂತ ಮೊದಲು ಪುಣೆಯ ಕ್ರಾಂತಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು!

    ಆಗ ಸಾವರ್ಕರ್ ಅವರು ತಮ್ಮ ಕೆಲವು ಗೆಳೆಯರೊಂದಿಗೆ ತಿಲಕರನ್ನು ಭೇಟಿ ಮಾಡಿ, ವಿದೇಶಿ ವಸ್ತ್ರಗಳು ಮತ್ತು ಇತರ ವಸ್ತುಗಳನ್ನೆಲ್ಲ ಸುಟ್ಟು ಹಾಕುವ ಒಂದು ಕಾರ್ಯಕ್ರಮವನ್ನು ಪುಣೆಯಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ಪ್ರತಿಭಟನೆಯ ಹೊಣೆಯನ್ನು ತಾವೇ ಹೊತ್ತುಕೊಂಡ ತಿಲಕರು, ಈ ಯುವಕರು ಒಂದು ರಾಶಿ ವಿದೇಶಿ ವಸ್ತ್ರಗಳು ಮತ್ತು ವಸ್ತುಗಳನ್ನು ಗುಡ್ಡೆ ಹಾಕಿ ಅದಕ್ಕೆ ಬೆಂಕಿ ಹಚ್ಚಿದರೆ ಅದು ಗಹನವಾದ ಪರಿಣಾಮವನ್ನು ಉಂಟುಮಾಡಲಿದೆ ಎನ್ನುವ ನಿರ್ಧಾರಕ್ಕೆ ಬಂದರು. ಇದರಂತೆ, ಸಾವರ್ಕರ್ ಮತ್ತು ಇತರರು ವಿದೇಶಿ ವಸ್ತ್ರಗಳು ಮತ್ತಿತರ ವಸ್ತುಗಳನ್ನು ಕಲೆಹಾಕುವ ಕೆಲಸಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಅವರಿಗೆ ಮರಾಠಿ ಪತ್ರಿಕೆ ‘ಭಾಲಾ’ದ ಸಂಪಾದಕ ಬಿ.ಬಿ.ಭೋಪಟ್ಕರ್ ಅವರು ನೆರವು ನೀಡಿದರು. ಅಂದರೆ, ಇವರು ತಮ್ಮ ಕುಟುಂಬವು ನಡೆಸುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನೆಲ್ಲ ಇದಕ್ಕೆ ಕಳಿಸಿಕೊಟ್ಟರು. ಇದರಂತೆ, ಈ ವಿದ್ಯಾರ್ಥಿಗಳೆಲ್ಲ ತಮ್ಮ ಮುಂದಿನ ಹೆಜ್ಜೆ ಹೇಗಿರಬೇಕೆಂದು ನಿರ್ಧರಿಸಲು ೧೯೦೫ರ ಅಕ್ಟೋಬರ್ ೧ರಂದು ಸಭೆ ಸೇರಿದರು. ಆದರೆ, ಆ ಸಭೆಗೆ ಬಾಂಬೆ ಪ್ರಾಂತ್ಯದ ಒಬ್ಬ ಗುಪ್ತಚರ ಅಧಿಕಾರಿಯೂ ಬಂದಿದ್ದ! ಅವನು ಆ ಸಭೆಯ ವಿದ್ಯಮಾನಗಳನ್ನು ದಾಖಲಿಸಿರುವ ಪ್ರಕಾರ, ‘ಆ ಸಭೆಯಲ್ಲಿ ಸಾವರ್ಕರ್ ಎನ್ನುವ ಹೆಸರಿನ ವ್ಯಕ್ತಿಯು ಬ್ರಿಟಿಷರ ಸ್ಪರ್ಶವಿರುವ ಪ್ರತಿಯೊಂದನ್ನೂ ಬಹಿಷ್ಕರಿಸುವಂತೆ ತುಂಬಾ ಏರಿದ ದನಿಯಲ್ಲಿ ತನ್ನ ದೇಶವಾಸಿಗಳಿಗೆ ಕರೆ ಕೊಟ್ಟ. ಅಲ್ಲದೆ, ವಿದೇಶಿ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದೆಂದು ಕೂಡ ಅವನು ಪ್ರತಿಪಾದಿಸಿದ. ಜೊತೆಗೆ, ಬ್ರಿಟನ್ನಿನಲ್ಲಿ ಮತ್ತು ಇತರೆ ದೇಶಗಳಿಂದ ತಯಾರಾಗಿ ಬರುವ ಉಡುಪುಗಳನ್ನು ವಿದ್ಯಾರ್ಥಿಗಳು ದಸರಾ ಹಬ್ಬದ ದಿನದಂದು ಲಡಖೀ ಪೂಲ್‌ನಲ್ಲಿ ಜಮಾಯಿಸಿ ಸುಟ್ಟು ಹಾಕಬೇಕು ಎಂದು ಭಾಷಣ ಮಾಡಿದ.’

    ಇದರಂತೆ ೧೯೦೫ರ ಅಕ್ಟೋಬರ್ ೮ರಂದು ಪುಣೆಯಲ್ಲಿ ನಡೆದ ಪ್ರತಿಭಟನೆಯು ‘ಪಶ್ಚಿಮ ಭಾರತದಲ್ಲಿ ಬ್ರಿಟಿಷರ ವಿರುದ್ಧ ಆರಂಭವಾದ ಚಳವಳಿಯ ಗಮನಾರ್ಹ ಘಟನೆಯಾಯಿತು. ಇದರ ಅಂಗವಾಗಿ ಸಾವರ್ಕರ್ ನೇತೃತ್ವದಲ್ಲಿ ಹೊರಟ ವಿದ್ಯಾರ್ಥಿಗಳು ತಾವು ಕಲೆಹಾಕಿದ್ದ ವಿದೇಶಿ ವಸ್ತುಗಳನ್ನೆಲ್ಲ ಪುಣೆಯ ‘ನ್ಯೂ ಪ್ರಿಪರೇಟರಿ ಸ್ಕೂಲ್’ ಹತ್ತಿರ ಒಂದು ಗಾಡಿಯಲ್ಲಿ ಪೇರಿಸಿದರು. ನಂತರ ನಗರದ ತುಂಬಾ ಪ್ರತಿಭಟನಾ ಪ್ರದರ್ಶನ ನಡೆಸಿ, ಆದಷ್ಟು ಹೆಚ್ಚಿನ ಜನರನ್ನು ಆಕರ್ಷಿಸಲು ಒಂದು ಸಂಗೀತ ಮೇಳವನ್ನು ನುಡಿಸಿದರು. ಈ ಪ್ರದರ್ಶನದಲ್ಲಿ ‘ಕಾಲ್’ ಮತ್ತು ‘ಭಾಲಾ’ ಪತ್ರಿಕೆಗಳ ಸಂಪಾದಕರೂ ಪಾಲ್ಗೊಂಡಿದ್ದರು. ಬಳಿಕ ತಿಲಕರು ದಾರಿಯ ಮಧ್ಯೆ ಈ ಪ್ರತಿಭಟನೆಗೆ ಸೇರಿಕೊಂಡರು. ಅಂತಿಮವಾಗಿ ಈ ಪ್ರದರ್ಶನವು ಫರ್ಗ್ಯೂಸನ್ ಕಾಲೇಜಿನ ಹತ್ತಿರ ಇದ್ದ ಒಂದು ಪಾಳು ಹವೇಲಿಗೆ ಬಂದು ನಿಂತಾಗ ಸುಮಾರು ಐದು ಸಾವಿರ ಜನರು ಜಮಾವಣೆಗೊಂಡಿದ್ದರು. ಬಳಿಕ, ಕಲೆಹಾಕಿದ್ದ ವಿದೇಶಿ ಛತ್ರಿಗಳು, ವೆಲ್ವೆಟ್ ಟೋಪಿಗಳು, ಸೀಸದ ಕಡ್ಡಿ, ಉಡುಪುಗಳಲ್ಲಿ ಬಳಸುವ ಗುಂಡಿಗಳು ಎಲ್ಲವನ್ನೂ ಅಲ್ಲಿ ಪೇರಿಸಿ, ಬೆಂಕಿ ಹಚ್ಚಲಾಯಿತು. ಆ ಕ್ಷಣದಲ್ಲಿ ‘ಅಲ್ಲಿ ನೆರೆದಿದ್ದವರ ಕಣ್ಣುಗಳಲೆಲ್ಲ ದೇಶಭಕ್ತಿಯು ಪ್ರಜ್ವಲಿಸುತ್ತಿತ್ತು.’

    ಈ ಬಗ್ಗೆ ವರದಿ ಮಾಡಿದ ಬಾಂಬೆ ಪೊಲೀಸ್ ಏಜೆಂಟನೊಬ್ಬ ‘ಪೊಲೀಸ್ ಮಹಾನಿರ್ದೇಶಕರಿಗೆ ಇಲ್ಲಿ ನಡೆಯುವ ಭಾಷಣಗಳ ಬಗ್ಗೆಯೆಲ್ಲ ಗೊತ್ತಿದ್ದರಿಂದ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಅವರು ಅಲ್ಲಿ ಇರುವವರೆಗೂ ಪ್ರತಿಭಟನಾಕಾರರು ಕೂಡ ಏನೂ ಮಾಡಲಿಲ್ಲ. ಆದರೆ, ಪೊಲೀಸ್ ಮಹಾನಿರ್ದೇಶಕರು ಸ್ಥಳದಿಂದ ನಿರ್ಗಮಿಸಿದ ಮೇಲೆ ಅಲ್ಲಿದ್ದ ನಾಯಕರು, ಇದುವರೆಗೂ ಕವಿದಿದ್ದ ಮೋಡ ಈಗ ಸರಿದಿದೆ; ಇನ್ನು ನಾವು ನಮ್ಮ ಕೆಲಸವನ್ನು ಮಾಡಬಹುದು ಎಂದರು’ ಎಂದು ವರದಿ ಮಾಡಿದ. ಈ ಪ್ರತಿಭಟನಾ ಪ್ರದರ್ಶನದಲ್ಲಂತೂ ತಿಲಕರು, ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸುವುದು ಏಕೆ ಅಗತ್ಯವೆನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದರು. ಪೊಲೀಸ್ ಏಜೆಂಟನ ವರದಿಯ ಪ್ರಕಾರ ‘ ಈ ವಸ್ತುಗಳನ್ನೆಲ್ಲ ಸುಡುವುದಕ್ಕಿಂತ ಬಡವರಿಗೆ ಕೊಡಬೇಕೆಂದು ನಾವು ಯೋಚಿಸಿದ್ದೆವು; ಆದರೆ ದೇಶಭಕ್ತಿ ಮತ್ತು ಧರ್ಮಗಳ ದೃಷ್ಟಿಯಿಂದ ನೋಡಿದರೆ ಇದು ಕೂಡ ಸರಿಯಲ್ಲ ಎನಿಸಿತು. ಏಕೆಂದರೆ, ಒಬ್ಬರಿಗೆ ಕೆಟ್ಟದೆನಿಸಿದ್ದು ಎಲ್ಲರಿಗೂ ಕೆಟ್ಟದ್ದೇ,’ ಎಂದು ತಿಲಕರು ಹೇಳಿದರು. ತಮ್ಮ ಮಾತು ಮುಂದುವರಿಸಿದ ಅವರು, ‘ಇಂದಿನ ಈ ಪ್ರತಿಭಟನೆಯು ಲ್ಯಾಂಕಾಶೈರ್ ಮತ್ತು ಮ್ಯಾಂಚೆಸ್ಟರ್‌ಗಳಲ್ಲಿ ಆತಂಕವನ್ನು ಹುಟ್ಟಿಸಿದೆ,’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಅಲ್ಲದೆ, ‘ಇನ್ನುಮುಂದೆ ನೀವೆಲ್ಲರೂ ಸ್ವದೇಶಿ ವಸ್ತುಗಳನ್ನೇ ಖರೀದಿಸುವುದಾಗಿ ಸಂಕಲ್ಪ ಮಾಡಬೇಕು,’ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸ್ಥಳದಲ್ಲಿ ಖುದ್ದಾಗಿ ಉಪಸ್ಥಿತರಿದ್ದ ಪರಾಂಜಪೆಯವರು ಈ ಪ್ರತಿಭಟನೆಗೆ ತಮ್ಮದೇ ಆದ ರೀತಿಯಲ್ಲಿ ನಾಟಕೀಯ ಸ್ಪರ್ಶವನ್ನು ನೀಡಿದರು. ತಮ್ಮ ಭಾಷಣದ ಮಧ್ಯೆಯೇ, ಅಲ್ಲಿ ಧಗಧಗನೆ ಉರಿದು ಬೂದಿಯಾಗುತ್ತಿದ್ದ ವಿದೇಶಿ ವಸ್ತುಗಳ ರಾಶಿಯಿಂದ ಒಂದು ಜಾಕೆಟ್ಟನ್ನು ಎತ್ತಿಕೊಂಡ ಅವರು, ಅದನ್ನು ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ತೋರಿಸುತ್ತ, ಆ ಜಾಕೆಟ್ಟಿನ ಜೇಬುಗಳನ್ನು ತಡಕಾಡಲು ಶುರು ಮಾಡಿದರು. ಅದು ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದುಕೊಂಡು ಹೋಗುತ್ತಿದ್ದ ಸಂಪತ್ತೇನಾದರೂ ಅಲ್ಲಿದೆಯೇ ಎಂದು ಹುಡುಕಾಡಿದ ಸಂಕೇತವಾಗಿತ್ತು. ಹೀಗೆ ಮಾಡಿ, ಕೊನೆಗೆ ಆ ಜಾಕೆಟ್ಟನ್ನು ಹತ್ತಿ ಉರಿಯುತ್ತಿದ್ದ ಬೆಂಕಿಯೊಳಕ್ಕೆ ರೊಂಯ್ಯನೆ ಎಸೆದು, ‘ಇದಕ್ಕೆ ಅದೇ ತಕ್ಕ ಜಾಗ!’ ಎಂದರು. ಸಾಮಾನ್ಯ ಜನರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಹುರಿದುಂಬಿಸುವ ವಿಚಾರದಲ್ಲಿ ಎತ್ತಿದ ಕೈಯಾಗಿದ್ದ ತಿಲಕರು, ನೆರೆದಿದ್ದವರನ್ನೆಲ್ಲ ಉದ್ದೇಶಿಸಿ, ‘ಮಹಾಜನಗಳೇ, ನೀವು ಈ ಅಗ್ನಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಆ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳಿ. ನಂತರ, ಇನ್ನುಮುಂದೆ ಯಾವ ಕಾರಣಕ್ಕೂ ಬ್ರಿಟಿಷ್ ಉಡುಪುಗಳನ್ನು ಖರೀದಿಸುವುದಿಲ್ಲಿ ಎಂದು ಪ್ರತಿಜ್ಞೆ ಮಾಡಿ’ ಎಂದು ಕರೆ ನೀಡಿದರು. ಹೀಗೆ ನಡೆದ ಪ್ರತಿಭಟನೆಯು ಅಂತಿಮವಾಗಿ ‘ಶಿವಾಜಿ ಮಹಾರಾಜ್ ಕೀ ಜೈ!’ ಎನ್ನುವ ಘೋಷಣೆಯ ಅನುರಣನದೊಂದಿಗೆ ಸಂಪನ್ನಗೊಂಡಿತು.

    *******
    ಸಾವರ್ಕರ್ ಅವರು ೧೯೦೬ರ ಜೂನ್ ೯ರಂದು ಮುಂಬೈನಿಂದ ‘ಎಸ್.ಎಸ್.ಪರ್ಷಿಯಾ’ ಹಡಗನ್ನೇರಿ ಲಂಡನ್ನಿಗೆ ಹೊರಟಾಗ ಅವರಿಗೆ ಇಪ್ಪತ್ಮೂರರ ಏರುಪ್ರಾಯ. ಆ ಕ್ಷಣಗಳಲ್ಲಿ ಅವರು ತಮ್ಮನ್ನು ಬೀಳ್ಕೊಡಲು ಬಂದಿದ್ದ ತಮ್ಮ ಪತ್ನಿ ಯಮುನಾ, ತಮ್ಮ ಒಂದೂವರೆ ವರ್ಷದ ಮಗು ಪ್ರಭಾಕರ ಮತ್ತು ಕೆಲವು ಆತ್ಮೀಯ ಸ್ನೇಹಿತರಿಗೆ ಕೈ ಬೀಸಿದರು. ಆದರೆ, ಆಗ ಅವರ ಮನಸ್ಸಿನಲ್ಲಿ ‘ಇನ್ನು ಮೂರು ವರ್ಷಗಳ ನಂತರ ನಾನು ನನ್ನ ಈ ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ಸು ಬರುವೆನೇ? ಬಂದು ನನ್ನ ಪ್ರೀತಿಪಾತ್ರರನ್ನೆಲ್ಲ ಮತ್ತೊಮ್ಮೆ ನೋಡುವೆನೇ?’ ಎನ್ನುವ ಭಾವನೆ ಮಡುಗಟ್ಟಿತ್ತು.

    ಮುಂಬೈ ಬಂದರಿನಲ್ಲಿ ಮೌನವಾಗಿ ಲಂಗರು ಹಾಕಿದ್ದ ಆ ಹಡಗು ಸಾವರ್ಕರ್ ಅವರ ಮನಸ್ಸಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ಗ್ರಹಿಸಿತೆನಿಸುತ್ತದೆ! ಅದರಲ್ಲೂ ಸಾವರ್ಕರ್ ಅವರ ಅಂತರಾಳದಲ್ಲಿ ತಮ್ಮ ಬಾಳಸಂಗಾತಿ ಮತ್ತು ಪುಟಾಣಿ ಮಗುವಿನ ಬಗ್ಗೆ ಇದ್ದ ಭಾವನೆಗಳು ತುಂಬಾ ತೀವ್ರವಾಗಿದ್ದವು. ಅವರು ತಮ್ಮ ಈ ಭಾವನೆಗಳನ್ನು ಬಾಯ್ಬಿಟ್ಟು ವ್ಯಕ್ತಪಡಿಸಲಿಲ್ಲ. ಆದರೆ, ಅವರು ಇಂಗ್ಲೆಂಡನ್ನು ತಲುಪಿದ ಮೇಲೆ ಅವರಿಗೆ ಇದನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ.
    ಸಾವರ್ಕರ್ ಅವರು ಮದುವೆಯಾದ ಮೇಲೆ ತಮ್ಮ ಹೆಚ್ಚಿನ ಸಮಯವನ್ನೆಲ್ಲ ಕುಟುಂಬದಿಂದ ದೂರದಲ್ಲಿದ್ದುಕೊಂಡೇ ಕಳೆದಿದ್ದರು. ಸಪ್ತಪದಿಯನ್ನು ತುಳಿದ ಕೆಲವೇ ದಿನಗಳಲ್ಲಿ ಪದವಿ ಅಧ್ಯಯನಕ್ಕಾಗಿ ಪುಣೆಗೆ ಹೋದ ಅವರು, ನಂತರ ಸ್ವದೇಶಿ ಮತ್ತು ರಾಷ್ಟ್ರೀಯ ಚಳವಳಿಯಲ್ಲಿ ಮುಳುಗಿದರು.

    ತಮ್ಮ ಹೆಂಡತಿ ಮತ್ತು ಮಗುವನ್ನು ನೋಡಲೆಂದು ಅವರು ಆಗಿಂದಾಗ್ಗೆ ಪುಣೆಯಿಂದ ನಾಸಿಕ್‌ಗೆ ಹೋಗುತ್ತಿದ್ದರೆನ್ನುವುದು ನಿಜ. ಅಂದಂತೆ, ಸಾವರ್ಕರ್ ಅವರ ಮಗ ಪ್ರಭಾಕರ ಹುಟ್ಟಿದ್ದು ೧೯೦೫ರಲ್ಲಿ. ದುರಂತವೆಂದರೆ, ಅದೇ ವರ್ಷ ವೈಸ್‌ರಾಯ್ ಕರ್ಜನ್, ಬಂಗಾಳದ ವಿಭಜನೆಗೆ ಮುಂದಾದ. ಇದು ದೇಶದಾದ್ಯಂತ ಪ್ರತಿಭಟನೆಯ ಹೆದ್ದೆರೆಯನ್ನೇ ಸೃಷ್ಟಿಸಿತು. ಆಗ ಸಾವರ್ಕರ್ ಕೂಡ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

    ಇಷ್ಟರ ಮಧ್ಯೆಯೂ ಅವರು ತಮ್ಮ ಮಗುವಿನೊಂದಿಗೆ ಒಂದಿಷ್ಟು ಕಾಲವನ್ನು ಕಳೆಯುತ್ತಿದ್ದರು. ಆದರೆ ತಂದೆಯಾದವನು ಒಂದು ಮಗುವಿಗೆ ಎಷ್ಟು ಸಮಯವನ್ನು ಕೊಡಬೇಕೋ ಅಷ್ಟನ್ನು ಕೊಡಲು ಅವರಿಗೆ ಆಗುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋದಮೇಲಂತೂ ಸಾವರ್ಕರ್ ಅವರಿಗೆ ತಮ್ಮ ಮಗನೆಡೆಗಿನ ಸೆಳೆತ ಮತ್ತಷ್ಟು ಜೋರಾಯಿತು. ಇದನ್ನು ಅವರು ತಮಗೆ ತುಂಬಾ ಇಷ್ಟದ ಮಾಧ್ಯಮವಾಗಿದ್ದ ಕಾವ್ಯ ಪ್ರಕಾರದಲ್ಲಿ ವ್ಯಕ್ತಪಡಿಸಿದರು. ಇಷ್ಟೇ ಅಲ್ಲ, ತಮ್ಮ ಮುದ್ದಿನ ಮಗನನ್ನು ಕುರಿತು ಅದೆಷ್ಟೋ ಪದ್ಯಗಳನ್ನು ಬರೆದರು.

    ಅಂತಹ ಕೆಲವು ಪದ್ಯಗಳಲ್ಲಿ ಅವರು ‘ಅಂಬೆಗಾಲಿಡುವ ನನ್ನ ಮಗನನ್ನು ನೋಡುತ್ತ, ಹಾಗೆಯೇ ಮುಳುಗಿ ಬಿಡಬೇಕು!’ಎನ್ನುವ ತೀವ್ರವಾದ ಹಂಬಲವನ್ನು ಪದಗಳಲ್ಲಿ ಅಭಿವ್ಯಕ್ತಿಗೊಳಿಸಿದರು. ಅದರಲ್ಲೂ ‘ಪ್ರಭ್ಯಾ ಪ್ರಿಯಕರ’ ಎನ್ನುವ ಒಂದು ಕವನದಲ್ಲಂತೂ ‘ನಾನೀಗ ಸಾಗರದಾಚೆಗೆ ಹೋಗುವ ಹೊತ್ತು ಬಂದಿದೆ/ ಪ್ರೀತಿಪಾತ್ರರನ್ನೆಲ್ಲ ಬಿಟ್ಟು’ ಎಂದು ಬೇಸರ ಹೊರಹಾಕಿದ್ದಾರೆ. ಹೀಗಾಗಿ, ಇಂಗ್ಲೆಂಡಿಗೆ ಹೋದಮೇಲೂ ಸಾವರ್ಕರ್ ತಮ್ಮ ಕಂದನನ್ನು ಕುರಿತು, ‘ನನ್ನ ಮುದ್ದುಮಗುವೇ/ ನೀನಿಲ್ಲದೆ ಇರಬಹುದು ನನ್ನ ಕಣ್ಣೆದುರಿನಲ್ಲಿ/ ಆದರೂ ಹಿಗ್ಗುವುದು ನನ್ನ ಹೃದಯ ಸದಾ ಸಂತೋಷದಲ್ಲಿ/’ ಎಂದು ಬಣ್ಣಿಸಿದರು.

    ಆದರೆ, ತಮ್ಮ ಪುಟ್ಟಕಂದನನ್ನು ಮತ್ತೊಮ್ಮೆ ಜೀವಂತವಾಗಿ ನೋಡುತ್ತೇನೋ, ಇಲ್ಲವೋ ಎನ್ನುವ ಸಾವರ್ಕರ್ ಅವರ ಭಯವು ೧೯೦೯ರಲ್ಲಿ ನಿಜವಾಗಿ ಪರಿಣಮಿಸಿತು. ಏಕೆಂದರೆ, ಆ ವರ್ಷ ಪುಟ್ಟ ಪ್ರಭಾಕರನಿಗೆ ದಡಾರ ಬಂದು, ಮಗುವು ಪ್ರಾಣ ಬಿಟ್ಟಿತು. ಇಂಗ್ಲೆಂಡಿನಲ್ಲಿದ್ದ ಸಾವರ್ಕರ್‌ಗೆ ಈ ವಿಚಾರ ತಿಳಿದು ಸಿಡಿಲು ಬಡಿದಂತಾಯಿತು. ಆಗ ತಮಗೆ ಉಕ್ಕಿಬಂದ ದುಃಖವನ್ನು ಅವರು ‘ನನ್ನ ಮುದ್ದುಮಗುವೇ/ ನೀನಿಲ್ಲದೆ ಇರಬಹುದು ನಮ್ಮೊಂದಿಗೀಗ/ ಆದರೇನು, ಸುಳಿದಾಡುತ್ತಲೇ ಇರುವೆ ಸದಾ ನೀನೆನ್ನ ಕಣ್ಣ ಮುಂದೆ’ ಎಂದು ಅಕ್ಷರಗಳಲ್ಲಿ ಹಿಡಿದಿಟ್ಟರು.

    ಕ್ರಾಂತಿಕಾರಿಗಳ ಪತ್ನಿಯರ ಸ್ಥಿತಿಗತಿಗಳು ಮತ್ತು ಭವಿಷ್ಯದ ಬಗ್ಗೆಯೂ ಸಾವರ್ಕರ್ ಅವರಿಗೆ ಸ್ಪಷ್ಟವಾದ ಆಲೋಚನೆಗಳಿದ್ದವು. ತಾವು ಬಹಳ ಪ್ರೀತಿಸುತ್ತಿದ್ದ -ಆದರೆ ಅವರೊಂದಿಗೆ ಸಾಮಾನ್ಯರಂತೆ ಇರಲಾರದ- ತಮ್ಮ ಬಾಳಸಂಗಾತಿ ಯಮುನಾ ಅವರಿಗೆ ಅವರು ಇದನ್ನೆಲ್ಲ ಹೇಳಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕ್ರಾಂತಿಕಾರಿಯೊಬ್ಬ ತನ್ನ ಕರ್ತವ್ಯವನ್ನು ನೆರವೇರಿಸುವಾಗೇನಾದರೂ ಹುತಾತ್ಮನಾದರೆ ಅವನ ಪತ್ನಿಯು ತನಗೂ ತನ್ನ ಮಕ್ಕಳಿಗೂ ಸರಿಹೊಂದುವ ಇನ್ನೊಬ್ಬರನ್ನು ಮದುವೆಯಾಗಿ, ತನ್ನ ಮುಂದಿನ ಬಾಳನ್ನು ಸುಖ-ಸಂತೋಷಗಳಿಂದ ಕಳೆಯಬೇಕು ಎನ್ನುವುದು ಅವರ ನಿಲುವಾಗಿತ್ತು. ಅವರ ಸಹಚರರಾಗಿದ್ದ ಸೇನಾಪತಿ ಬಾಪಟ್ ಅವರು ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟರು. ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ನಂತರ ಭೂಗತರಾಗಿದ್ದ ಅವರನ್ನು ಸೆರೆ ಹಿಡಿಯಲು ಬ್ರಿಟಿಷರು ಶತಪ್ರಯತ್ನ ಮಾಡುತ್ತಿದ್ದರು. ಆಗ ತಮ್ಮ ಪತ್ನಿಗೆ ಒಂದು ಮತ್ತು ಅವಿವಾಹಿತನಾಗಿದ್ದ ತಮ್ಮ ಗೆಳೆಯನೊಬ್ಬನಿಗೆ ಒಂದು ಪತ್ರವನ್ನು ಬರೆದ ಅವರು, ‘ನಾನು ಈಗಾಗಲೇ ಸತ್ತು ಹೋಗಿದ್ದೇನೆಂದು ನೀವಿಬ್ಬರೂ ತಿಳಿದುಕೊಂಡು, ಮದುವೆಯಾಗಿ’ ಎಂದು ತಿಳಿಸಿದ್ದರು. ಸಾವರ್ಕರ್ ಮತ್ತು ಬಾಪಟ್ ಅವರ ಈ ನಿಲುವುಗಳು ಆ ಕಾಲದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದರೆ ನಿಜಕ್ಕೂ ನಿಜವಾದ ಅರ್ಥದಲ್ಲಿ ಅತ್ಯಂತ ಪ್ರಗತಿಪರವಾಗಿದ್ದವು.

    ಸಾವರ್ಕರ್ ಅವರು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ಹಡಗಿನಲ್ಲಿ ಅವರಿದ್ದ ಕ್ಯಾಬಿನ್ ತೀರಾ ಹಿಂಬದಿಯ ತುದಿಯಲ್ಲಿತ್ತು. ಈ ಕ್ಯಾಬಿನ್ನನ್ನು ಅವರು ಹೊಕ್ಕಾಗ ಅಲ್ಲಿ ಅವರಿಗೆ ಇಪ್ಪತ್ತರ ಆಚೀಚೆ ಇದ್ದ ಸುಂದರವಾದ ತರುಣನೊಬ್ಬ ಕಂಡ. ಆ ಕ್ಷಣಗಳಲ್ಲಿ ತನ್ನ ಸಾಮಾನು ಸರಂಜಾಮುಗಳನ್ನೆಲ್ಲ ಬಿಚ್ಚಿಡುತ್ತಿದ್ದ ಆತ ಯಾರೆಂದರೆ, ಪಂಜಾಬಿನ ಅಮೃತಸರದವನಾದ ಹರನಾಮ್ ಸಿಂಗ್. ಸಾವರ್ಕರ್ ಅವರು ಈತನೊಂದಿಗೆ ಆ ಸಣ್ಣ ಕ್ಯಾಬಿನನ್ನು ಹಂಚಿಕೊಳ್ಳಬೇಕಾಗಿತ್ತು. ಆತ ಕೂಡ ಇವರಂತೆಯೇ ಕಾನೂನು ಪದವಿಯ ವ್ಯಾಸಂಗಕ್ಕೆಂದೇ ಇಂಗ್ಲೆಂಡಿಗೆ ಹೊರಟಿದ್ದ. ಹೀಗಾಗಿ ಇಬ್ಬರೂ ಬಹುಬೇಗ ಒಳ್ಳೆಯ ಗೆಳೆಯರಾದರು. ಇದಲ್ಲದೆ, ಸಾವರ್ಕರ್ ಅವರಿಗೆ ಇನ್ನೂ ಇಬ್ಬರೊಂದಿಗೆ ಸ್ನೇಹವೇರ್ಪಟ್ಟಿತು. ಅದರಲ್ಲಿ ಒಬ್ಬರು ಮುವ್ವತ್ತು ವರ್ಷದ ಪಂಜಾಬಿ ವ್ಯಕ್ತಿ. ಸಾವರ್ಕರ್ ಅವರು ತಮ್ಮ ಜ್ಞಾಪಕ ಚಿತ್ರಶಾಲೆಯ ಸಂಪುಟದಲ್ಲಿ ಈ ವ್ಯಕ್ತಿಯನ್ನು ‘ಶ್ರೀಮಾನ್ ಶಿಷ್ಟಾಚಾರಿ’ ಎಂದಷ್ಟೇ ದಾಖಲಿಸಿದ್ದಾರೆ. ಇನ್ನೊಬ್ಬರೆಂದರೆ, ‘ಕೇಶವಾನಂದ’ರು. ಆದರೆ, ಇದು ಕೂಡ ನಿಜವಾದ ಹೆಸರಲ್ಲ. ತಮ್ಮ ಮೊದಲ ಗೆಳೆಯನನ್ನು ‘ಶಿಷ್ಟಾಚಾರಿ’ ಎನ್ನುವ ಹೆಸರಿನಿಂದ ಕರೆದಿರಲು ಎರಡು ಕಾರಣಗಳಿದ್ದವು. ಮೊದಲನೆಯದು, ಈ ವ್ಯಕ್ತಿಯು ತುಂಬಾ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದು, ಇಂಗ್ಲೀಷಿನವರ ರೀತಿ ರಿವಾಜುಗಳನ್ನು ಅನುಸರಿಸುತ್ತಿದ್ದ ಪಂಜಾಬಿಯಾಗಿದ್ದರು. ಇನ್ನೊಂದು ಕಾರಣವೆಂದರೆ, ಸ್ವಾತಂತ್ರ್ಯವನ್ನು ಗಳಿಸುವುದಕ್ಕೂ ಮೊದಲು ಕೈಗೊಂಡ ಹಡಗಿನ ಪ್ರಯಾಣವನ್ನು ಕುರಿತು ತಾವು ಬರೆದಿಡುತ್ತಿರುವ ನೆನಪಿನ ವೃತ್ತಾಂತವು ಯಾರಿಗೂ ಗೊತ್ತಾಗಬಾರದೆನ್ನುವುದು ಸಾವರ್ಕರ್ ಅವರ ಇಂಗಿತವಾಗಿದ್ದಿರಬಹುದು. ಮಿಕ್ಕಂತೆ ‘ಕೇಶವಾನಂದ’ ಅವರು ಭಾರತದ ಆಚೆ ‘ಅಭಿನವ ಭಾರತ’ದ ಮೊಟ್ಟಮೊದಲ ಸದಸ್ಯರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ, ‘ಶಿಷ್ಟಾಚಾರಿ’ಯವರು ಸಾವರ್ಕರ್ ಅವರಿಗೆ ಅಗತ್ಯವಾಗಿದ್ದ ಶಸ್ತ್ರಾಸ್ತ್ರಗಳನ್ನೂ ಪುಸ್ತಕಗಳನ್ನೂ ಒಂದು ಬಟ್ಟೆಯ ಗಂಟಿನಲ್ಲಿಟ್ಟು ಪೂರೈಸಿದ್ದರು. ಅಲ್ಲದೆ, ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಇದ್ದ ಕರಪತ್ರವನ್ನು ಪಂಜಾಬಿ ಭಾಷೆಗೆ ಅನುವಾದಿಸಿದ ಈ ‘ಶಿಷ್ಟಾಚಾರಿ’ಯು, ಅದನ್ನು ಆ ಪ್ರಾಂತ್ಯದಲ್ಲೆಲ್ಲ ಹಂಚಿದ್ದರು. ಮಿಗಿಲಾಗಿ, ಈ ವ್ಯಕ್ತಿಯು ಸಾವರ್ಕರ್ ಮತ್ತು ಇತರ ಭಾರತೀಯರಿಗೆ ಮೊಟ್ಟಮೊದಲ ಹಡಗಿನ ಪಯಣದಲ್ಲಿ ಅನುಸರಿಸಿಬೇಕಾದ ಬ್ರಿಟಿಷ್ ರೀತಿರಿವಾಜುಗಳನ್ನು ಹೇಳಿಕೊಟ್ಟವರಾಗಿದ್ದರು. ಅಂದರೆ, ಟೈಯನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದರಿಂದ ಹಿಡಿದು ಊಟ-ತಿಂಡಿ ಮಾಡುವಾಗ ಚುಚ್ಚು ಚಮಚೆಗಳನ್ನು ಹೇಗೆ ಹಿಡಿದುಕೊಳ್ಳಬೇಕು ಎನ್ನುವವರೆಗೆ ಸಕಲ ಸಂಗತಿಗಳನ್ನೂ ಅವರು ಕಲಿಸಿ ಕೊಟ್ಟಿದ್ದರು. ಸಾವರ್ಕರ್ ಎಂದಿಗೂ ಶುದ್ಧ ಸಸ್ಯಾಹಾರದ ಪರವಾಗಿರಲಿಲ್ಲ. ಆದರೆ, ಭಾರತದಲ್ಲಿ ಅವರಿದ್ದ ಪರಿಸರದಲ್ಲಿ ಕೋಳಿಮೊಟ್ಟೆ, ಮೀನು ಮತ್ತು ಮಾಂಸವನ್ನು ತಿನ್ನುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಇವೆಲ್ಲವನ್ನೂ ಅವರು ಮೊಟ್ಟಮೊದಲ ಬಾರಿಗೆ ತಮ್ಮ ಚೊಚ್ಚಲ ಹಡಗಿನ ಪ್ರಯಾಣದಲ್ಲಿ ಸವಿದರು. ಆ ಸಮಯದಲ್ಲಿ ಸಾವರ್ಕರ್ ಅವರಿಗೆ ಚುಚ್ಚು ಚಮಚೆ ಮತ್ತು ನೈಫ್ ಅನ್ನು ಹಿಡಿದುಕೊಂಡು, ಮಾಂಸದಲ್ಲಿರುವ ಮೂಳೆಯ ಚೂರುಗಳನ್ನು ಬೇರ್ಪಡಿಸುವುದು ಹೇಗೆಂದು ಸರಿಯಾಗಿ ಗೊತ್ತಿಲ್ಲದೆ ಒದ್ದಾಡುತ್ತಿದ್ದರು. ಆಗ ಕೂಡ ‘ಶಿಷ್ಟಾಚಾರಿ’ಯವರೇ ಅವರ ನೆರವಿಗೆ ಬಂದು, ‘ಬಲಗೈಯಲ್ಲಿ ನೈಫ್ ಅನ್ನೂ ಎಡಗೈಯಲ್ಲಿ ಚುಚ್ಚುಚಮಚೆಯನ್ನೂ ಹಿಡಿದುಕೊಂಡು, ಚುಚ್ಚು ಚಮಚೆಗೆ ಮಾಂಸವನ್ನು ಸಿಕ್ಕಿಸಿಕೊಂಡು ಅದನ್ನು ಬಾಯಿಗೆ ಇಟ್ಟುಕೊಳ್ಳಬೇಕು,’ ಎಂದು ಹೇಳಿಕೊಟ್ಟರು. ಇದಾದಮೇಲೆ ಸಾವರ್ಕರ್ ಅವರು ಭಾರತೀಯ ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಊಟ ಮಾಡುವುದನ್ನು ಬಿಡುತ್ತ ಬಂದರು.

    ಹೀಗೆ ಮುಂಬೈನಿಂದ ಇಂಗ್ಲೆಂಡಿನತ್ತ ಹೊರಟ ಹಡಗು ಮಾರ್ಗಮಧ್ಯದಲ್ಲಿ ಫ್ರಾನ್ಸ್‌ನ ಮಾರ್ಸೆಲೆಸ್ ಬಂದರಿನಲ್ಲಿ ಲಂಗರು ಹಾಕಿತು. ಆಗ ಸಾವರ್ಕರ್ ಅವರು ಹಡಗಿನಿಂದ ಇಳಿದು, ತಮ್ಮ ಅಚ್ಚುಮೆಚ್ಚಿನ ಕ್ರಾಂತಿಕಾರಿಗಳಲ್ಲಿ ಒಬ್ಬರಾದ, ಇಟಲಿಯ ‘ಸಿಡಿಲ ಮರಿ’ ಮ್ಯಾಜಿನಿಯು ಆಸ್ಟ್ರಿಯನ್ನರು ತಮ್ಮನ್ನು ಸೆರೆ ಹಿಡಿಯುವುದರಿಂದ ತಪ್ಪಿಸಿಕೊಳ್ಳಲು ಅಡಗಿಕೊಂಡಿದ್ದ ತಾಣವನ್ನು ನೋಡಲೆಂದು ಹೋದರು. ಅಂದಂತೆ, ಮ್ಯಾಜಿನಿಯು ಇದೇ ಊರಿನಲ್ಲಿ ‘ಯಂಗ್ ಇಟಲಿ’ ಎನ್ನುವ ತನ್ನದೇ ಆದ ಸಂಘಟನೆಯನ್ನು ಕಟ್ಟಿ, ಬೆಳೆಸಿದ್ದ. ಇಂಥ ಒಬ್ಬ ಅಪ್ರತಿಮ ಹೋರಾಟಗಾರ ನೆಲೆಸಿದ್ದ ಊರನ್ನು ನೋಡಲೆಂದು ಹೊರಟ ಸಾವರ್ಕರ್ ಅವರು ಹೆಚ್ಚಿನ ಮಾಹಿತಿ ಸಿಗಬಹುದೆಂದು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯೊಬ್ಬನನ್ನು ಗೊತ್ತುಮಾಡಿಕೊಂಡರು. ಆದರೆ ಆತನಿಗೆ ಮ್ಯಾಜಿನಿಯ ಬಗ್ಗೆ ಕೇಳಿದಾಗ, ‘ಸ್ವಾಮಿ, ನಾನು ಮ್ಯಾಜಿನಿ ಎನ್ನುವ ಹೆಸರನ್ನೇ ಕೇಳಿಲ್ಲ,’ ಎಂದ. ನಂತರ ಸಾವರ್ಕರ್ ಅವರಯು ಸ್ಥಳೀಯ ಪತ್ರಿಕೆಯ ಸಂಪಾದಕನೊಬ್ಬನನ್ನು ಈ ಬಗ್ಗೆ ವಿಚಾರಿಸಿದರು. ಅವನು, ‘ಸರ್, ಮ್ಯಾಜಿನಿ ಎಲ್ಲಿದ್ದ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಮೊದಲಿಗೆ ನಾನು ಅವನು ಇಟಲಿಯಲ್ಲಿ ಯಾವ ಊರಿಗೆ ಸೇರಿದವನು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದ. ಒಟ್ಟಿನಲ್ಲಿ, ಮ್ಯಾಜಿನಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಮಾರ್ಸೆಲೆಸ್ ಪಟ್ಟಣವನ್ನು ವೀಕ್ಷಿಸಿದ ಸಾವರ್ಕರ್, ವಾಪಸ್ ಹಡಗಿಗೆ ಬಂದರು. ಆದರೆ, ಇಟಲಿಯ ಸಮುದ್ರ ತಟದಲ್ಲಿರುವ ಈ ಪಟ್ಟಣವು ಇನ್ನು ನಾಲ್ಕು ವರ್ಷಗಳಲ್ಲಿ ತಮ್ಮ ಬದುಕಿನಲ್ಲಿ ನಡೆಯಲಿರುವ ಒಂದು ಅಸಾಧಾರಣ ಘಟನೆಯ ಜೊತೆ ತಳುಕು ಹಾಕಿಕೊಳ್ಳಲಿದೆ ಎನ್ನುವ ಒಂದು ಸಣ್ಣ ಊಹೆಯೂ ಆ ಕ್ಷಣದಲ್ಲಿ ಅವರಿಗಿರಲಿಲ್ಲ.

    ಭಾವನೆಗಳಿಗೆ ಯಾವುದೇ ರಾಜಕೀಯ,ಆಡಳಿತಾತ್ಮಕ ಕಾರಣ ಕೊಟ್ಟು ಸಂತೈಸುವುದು ಕಷ್ಟ

    ಊರು ..ಬೊಮ್ಮಘಟ್ಟ,ತಾಲೂಕು… ಸಂಡೂರು,ಜಿಲ್ಲಾ…ಬಳ್ಳಾರಿ,ರಾಜ್ಯ…..ಮೈಸೂರು,ದೇಶ…ಭಾರತ.

    ಯಾರೇ ಮನೆಗೆ ಬರಲಿ, ಅಪ್ಪ ನನ್ನನ್ನು ಎತ್ತಿಕೊಂಡು ಹೊರಗಡೆ ಹೋದಾಗ ಯಾರಾದ್ರು ಸಿಕ್ಕರೂ,ಮಂಜೂ ನಮ್ಮೂರು ಯಾವ್ದು ಅಂತ ಶುರು ಮಾಡಿದ್ರೆ, ನಾನು ನಿಲ್ಲಿಸ್ತಿದ್ದಿದ್ದೆ …ಭಾರತ ಅಂತ,ಕೇಳಲಿ ಬಿಡಲಿ!! ಹೇಳುವಾಗ ಅಪ್ಪನಿಗೆ ಒಂಥರಾ ಖುಷಿ ಆದ್ರೆ, ಕೇಳಿಸಿಕೊಳ್ಳುವವರಿಗೆ ಆಶ್ಚರ್ಯಭರಿತ ಖುಷಿ,ಕಾರಣ ತೊದಲು ನುಡಿಗಳಲ್ಲಿಯೇ ಹೇಳುತ್ತಿದ್ದೆ ನಾನು. ತುಂಬಾ ದಿನಗಳವರೆಗೆ ಹೇಳಿದ್ದರಿಂದಲೋ ಅಥವಾ ತುಂಬಾ ಎಳೆ ತನದಲ್ಲೇ ಹೇಳಿಕೊಟ್ಟಿದ್ದರಿಂದಲೋ ಊರು, ತಾಲೂಕು, ಜಿಲ್ಲಾ,ರಾಜ್ಯ, ದೇಶಗಳ ಮೇಲೆ ಹೇಳಲಾರದ ಮಮಕಾರ.

    ಮೂರ್ನಾಲ್ಕನೆ ತರಗತಿಗೆ ಬಂದಾಗ ಮೊದಲಾಗಿ ನಾನು ಆಗ ತಾನೇ ಕರ್ನಾಟಕ ಅಂತ ಮರುನಾಮಕರಣ ಮಾಡಿಸಿಕೊಂಡಿದ್ದ ಮೈಸೂರು ರಾಜ್ಯದ ಭೂಪಟವನ್ನು ಶಾಲೆಯಲ್ಲಿ ನೋಡಿದ್ದು. ರಂಗು ರಂಗಿನ, ಏನೋ ಮುದಕೊಡುವ ಬಣ್ಣಗಳ ವಾಸನೆಯೊಂದಿಗೆ ಕೆಳಗೆ,ಮೇಲೆ ಕೋಲುಗಳನ್ನು ಅಂಟಿಸಿಕೊಂಡು,ಸುರುಳಿಯಾಗಿ ಸುತ್ತಲ್ಪಡುತ್ತಿದ್ದ ರಾಜ್ಯ,ದೇಶದ ನಕ್ಷೆಗಳು ನಮ್ಮೂರ ಶಾಲೆಗೆ ಬಂದಿದ್ದವು. ಅವುಗಳ ತಲೆಬರಹ, ಅಡಿಯಲ್ಲಿ ಕಪ್ಪು ಬಿಳುಪಿನ ಅಳತೆ ಮಾಪಕದ ಸಂಕೇತ ನನಗೆ ಬಹು ಆಕರ್ಷವಾಗಿ ಕಾಣುತ್ತಿತ್ತು. ಅವುಗಳ ಜೊತೆ ಧೂಮಪಾನ, ಮಧ್ಯಪಾನ ಮಾಡಬಾರದು,ಜೂಜು ಆಡಬಾರದು ಅನ್ನುವ ಸಂದೇಶ ಹೇಳುವ ಒಂದು ಪಟವೂ ಇತ್ತು. ಅವುಗಳ ಬಣ್ಣದ ವಾಸನೆ ನನಗೆ ಇಂದಿಗೂ ಮೂಗಲ್ಲಿ ಕುಳಿತ ಹಾಗಿದೆ. ಶಾಲಾ ನಿರೀಕ್ಷಕರು ಬರುವ ದಿನಗಳಲ್ಲಿ ಒಂದು ಕೊಠಡಿಯಲ್ಲಿ ಆಫೀಸ್ ರೂಮಿನಲ್ಲಿ ಇದ್ದ ಎಲ್ಲ ಪಟಗಳನ್ನು ಹಾಕಿರುತ್ತಿದ್ದರು, ಅದರಲ್ಲಿ ಕನ್ನಡ ವರ್ಣಮಾಲೆಯ ಪಟ ನನಗೆ ಅತೀ ಸುಂದರವಾಗಿ ಕಾಣುತ್ತಿತ್ತು. ಯಾಕೆ ಅಂತ ಗೊತ್ತಿಲ್ಲ. ಈಗಲೂ ಹಲವಾರು ಅಕ್ಷರ ನೋಡಿದ್ರೆ ನನಗೆ ಅಪ್ಪನ ನೆನಪಾಗುತ್ತೆ. ಬಳಪ,ಸ್ಲೇಟು ಸವೆಯುವ ಹಾಗೆ ತಿದ್ದಿಸಿ, ಕಲಿಸಿದ್ದರಿಂದಲೋ ಏನೋ.

    ಹಾಗೆ ಒಂದು ಮಧ್ಯಾಹ್ನ ದ್ಯಾಮಣ್ಣ ಮೇಷ್ಟ್ರು ಕರ್ನಾಟಕ ರಾಜ್ಯ ನಕ್ಷೆ ಗೋಡೆಗೆ ನೇತು ಹಾಕಿ ಕೋಲು ಹಿಡಿದು ….ನಡೂವೆ ಕುಂತ ಮೊಲ ಇದ್ದಂಗ ಐತಲ್ಲ,ಕೆಂಪು ಬಣ್ಣದಾಗ ಐತಿ, ಕಾಣ್ತಾತೇನು, ಇದೇ ನೋಡ್ರಿ ನಮ್ಮ ಬಳ್ಳಾರಿ ಜಿಲ್ಲೆ ಅಂದಿದ್ರು! ಉತ್ತರಕ್ಕೆ ಈ ನೀಲಿ ಗೆರೆ ಐತಲ್ಲ, ಇದು ತುಂಗಭದ್ರಾ ನದಿ ಅಂದಿದ್ದು ನನಗೆ ಭಯಂಕರ ಕುತೂಹಲಕರ ವಿಷಯ ಆಗಿತ್ತು. ಮನೆಗೆ ಬಂದು ಅಪ್ಪನನ್ನು ಇನ್ನಿಲ್ಲದಂತೆ ಗೋಳಾಡಿಸಿದ್ದೆ, ಬಳ್ಳಾರಿ ಜಿಲ್ಲೆ ಕುಂತ ಮೊಲ ಇದ್ದಂಗೆ ಯಾಕೈತಿ ಹೇಳು ಅಂತ!!

    ಅಪ್ಪ ನನಗೆ ನಕ್ಷೆ ಅಂದ್ರೆ ಏನು, ಆ ಕಪ್ಪು ಬಿಳುಪಿನ ಅಳತೆಯ ಮಾಪಕ ಏನು ಅಂತ ತಿಳಿಸಿ ಹೇಳುವಲ್ಲಿ ಸಾಕು ಸಾಕಾಗಿತ್ತೇನೋ, ನನಗೆ ಅರಿವಾಗದ ವಿಚಿತ್ರ ಕುತೂಹಲ. ಗೊತ್ತಿಲ್ಲದೆಯೇ ಬರೀ ಬಳ್ಳಾರಿ ಜಿಲ್ಲೆ ಅಲ್ಲ, ಕರ್ನಾಟಕ, ಭಾರತದ ನಕ್ಷೆಗಳೂ ಸುಂದರವಾಗಿ ಕಾಣುತ್ತಿದ್ದವು! ನನ್ನ ಜಿಲ್ಲೆಯ ಆಕಾರ ಬೇರೆ ಜಿಲ್ಲೆಗಳಿಗಿಂತಲೂ,ರಾಜ್ಯದ ಆಕಾರ ಬೇರೆ ರಾಜ್ಯಗಳ ಅಕಾರಕ್ಕಿಂತಲೂ,ದೇಶದ ಆಕಾರ ಬೇರೆ ದೇಶಗಳ ಅಕಾರಕ್ಕಿಂತಲೂ ಮನೋಹರವಾಗಿ ಕಾಣುತ್ತಿತ್ತು, ಈಗಲೂ ಸಹ! ಮುಂದೆ ನಮ್ಮ ಜಿಲ್ಲೆಯ ಗಡಿಗಳನ್ನು ಹೇಳಿ ಅಂದ್ರೆ, ಉತ್ತರಕ್ಕೆ ತುಂಗಭದ್ರಾ ನದಿ/ರಾಯಚೂರು ಜಿಲ್ಲೆ, ದಕ್ಷಿಣಕ್ಕೆ ಚಿತ್ರದುರ್ಗ ಜಿಲ್ಲೆ, ಪೂರ್ವಕ್ಕೆ ಆಂಧ್ರ ಪ್ರದೇಶ,ಪಶ್ಚಿಮಕ್ಕೆ ಧಾರವಾಡ ಜಿಲ್ಲೆ ಅಂತ ಕೈಕಟ್ಟಿಕೊಂಡು ಪಟ ಪಟ ಅಂತ ಹೇಳ್ತಿದ್ದೆವು. ತಾಲೂಕು ಎಷ್ಟು,ಯಾವುವು ಅಂದ್ರೆ, 7, ಸಿರುಗುಪ್ಪ, ಬಳ್ಳಾರಿ, ಸಂಡೂರು,ಕೂಡ್ಲಿಗಿ,ಹೊಸಪೇಟೆ, ಹಡಗಲಿ,ಕುರುಗೋಡು ಅಂತಿದ್ವಿ.

    ನಂತರ ಕೂಡ್ಲಿಗಿ ತಾಲೂಕು ವಿಭಜನೆ ಹೊಂದಿ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕುಗಳಾದವು. ಹೊಸಪೇಟೆ ತಾಲೂಕಿನಿಂದ ಕಂಪ್ಲಿ ತಾಲೂಕಿನ ಉದಯ ಆಗಿತ್ತು. ಮುಂದೆ ಹರಪನಹಳ್ಳಿ ದಾವಣಗೆರೆ ಜಿಲ್ಲೆಯ ಭಾಗವಾಗಿ ಬಳ್ಳಾರಿಯಿಂದ ಬೇರ್ಪಟ್ಟಿತ್ತು,ಮತ್ತೆ ಬದಲಾದ ಸನ್ನಿವೇಶದಲ್ಲಿ ಮರಳಿ ಬಳ್ಳಾರಿಗೆ ಬಂದಿತ್ತು. ಬಂದು ಬಹಳ ದಿನಗಳಾಗಲಿಲ್ಲ,ಈಗ ವಿಜಯನಗರ (ಹೊಸಪೇಟೆ) ಜಿಲ್ಲೆಗೆ ಸೇರಿದೆ. ಪಾಪ ಹರಪನಹಳ್ಳಿಯ ಮಕ್ಕಳು ಜಿಲ್ಲೆಯ ವಿಷಯದಲ್ಲಿ ನಮ್ಮಂತೆ ಹೆಮ್ಮೆಯಿಂದ ಯಾವುದರ ಹೆಸರು ಹೇಳಬೇಕೋ?

    ರಾಜರ ಕಾಲದಿಂದಲೂ ನೈಸರ್ಗಿಕವಾದ, ಭೌಗೋಳಿಕವಾದ ನದಿ,ಬೆಟ್ಟ ಆಯಾಯ ರಾಜ್ಯದ ಗಡಿರೇಖೆ ಅಂತ ಗುರುತಿಸಿಕೊಳ್ಳುತ್ತಿತ್ತು ಅಷ್ಟೇ ಅಲ್ಲ ಈಗಲೂ ಹಲವಾರು ಗ್ರಾಮಗಳ ಸರಹದ್ದೂ ಆಗಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ,ಸ್ವಾತಂತ್ರ್ಯಾನಂತರ ಭಾಷಾವಾರು ವಿಭಜನೆಗಳಾದವು.ಆಡಳಿತಕ್ಕಾಗಿ, ರಾಜಕೀಯಕ್ಕಾಗಿ ಮತ್ತೇನೂ ಕಾರಣಗಳಿಗೆ ವಿಭಜನೆ ಮಾಡ್ತಾರಲ್ಲಾ ಇವರಿಗೆ ಪ್ರಜೆಗಳ ನೋವು ಅರ್ಥ ಆಗುತ್ತಾ? ಬಳ್ಳಾರಿ ಆಂಧ್ರಕ್ಕೆ ಸೇರಬೇಕಾ ಅಥವಾ ಕರ್ನಾಟಕದಲ್ಲೇ ಇರಬೇಕಾ ಅಂತ ಇಲ್ಲಿ ಮತದಾನ ಆಗಿರುವ ವಿಷಯ ಬಹಳ ಜನರಿಗೆ ಗೊತ್ತಿಲ್ಲ ಅನ್ಸುತ್ತೆ. ಇಲ್ಲದಿದ್ದಲ್ಲಿ ಕೆಲವಷ್ಟೇ ಪ್ರಭಾವಿತರ ಅನ್ನಿಸಿಕೆಯಂತೆ ಬಳ್ಳಾರಿ ಆಂಧ್ರದ ಭಾಗವಾಗಿ ಬಿಡ್ತಿತ್ತು.

    ಈಗ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆಯನ್ನು ಕೇಂದ್ರವಾಗಿಸಿ ವಿಜಯನಗರ ಜಿಲ್ಲೆ ಅಂತ ಹೊಸ ಜಿಲ್ಲೆಯನ್ನು ಹುಟ್ಟು ಹಾಕಿದೆ. ಕುಳಿತ ಮೊಲದ ಆಕಾರದಲ್ಲಿದ್ದ ನನ್ನ ಜಿಲ್ಲೆಯನ್ನು ಸರಿಯಾಗಿ ಬೆನ್ನಮೇಲಿಂದ ಸೀಳಿದ ಹಾಗೆ ಆಗಿದೆ. ಮೂಲ ಬಳ್ಳಾರಿ ಜಿಲ್ಲೆಯಲ್ಲೀಗ 5 ತಾಲ್ಲೂಕುಗಳು. ಸಿರುಗುಪ್ಪ, ಬಳ್ಳಾರಿ,ಸಂಡೂರು,ಕೂಡ್ಲಿಗಿ,ಕುರುಗೋಡು. ಹೊಸದಾದ ವಿಜಯನಗರಕ್ಕೆ 6 ತಾಲ್ಲೂಕುಗಳು. ಹೊಸಪೇಟೆ, ಹಗರಿಬೊಮ್ಮನಹಳ್ಳಿ,ಹಡಗಲಿ,ಹರಪನಹಳ್ಳಿ,ಕಂಪ್ಲಿ,ಕೊಟ್ಟೂರು. ಹೆಚ್ಚು ಕಡಿಮೆ ಉತ್ತರ ಬಳ್ಳಾರಿ ಜಿಲ್ಲೆ , ದಕ್ಷಿಣ ಬಳ್ಳಾರಿ ಜಿಲ್ಲೆ ಎನ್ನುವಂತೆ ವಿಭಜಿಸಿದ್ದಾರೆ. ಏನೋ ಒಂಥರಾ ನೋವಾಗುತ್ತೆ ಕಣ್ರೀ… ಹಾಗೆ ನೋಡಿದರೆ ಬರೀ ನಕ್ಷೆಯಲ್ಲಿ ಗೆರೆ ಎಳೆದು,ಬೇರೆ ಬಣ್ಣದಿಂದ ಗುರುತಿಸಿದ್ದಾರೆ ಬಿಟ್ಟರೆ ಇಲ್ಲೇನೂ ಬಂದು ಬೇಲಿ ಹಾಕಿ ವಿಭಜಿಸಿಲ್ಲ. ಆದ್ರೂ ಹೇಳಿಕೊಳ್ಳಲು ಆಗದಂತಹ ಸಂಕಟ. ಇಷ್ಟು ದಿನ ಹೆಮ್ಮೆಯಿಂದ ಹಂಪಿ ನನ್ನ ಜಿಲ್ಲೆಯಲ್ಲಿದೆ,ಒಮ್ಮೆ ಬನ್ನಿ, ತಿರುಗಾಡುವ ಅಂತ ಎದೆಯುಬ್ಬಿ ಹೇಳುತ್ತಿದ್ದೆ. ನಾಳೆಯಿಂದ ಹಂಪಿ ಈಗ ನನ್ನ ಜಿಲ್ಲೆಯಲ್ಲಿ ಇಲ್ಲ, ತುಂಗಭದ್ರಾ ನದಿ, ಆಣೆಕಟ್ಟು ನನ್ನ ಜಿಲ್ಲೆಯಲ್ಲಿ ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಕಾರಣಗಳನ್ನು ಚರ್ಚಿಸಿ, ಸಮರ್ಥನೆ,ಅಸಮರ್ಥನೆ ನನಗೆ ಅಸಂಭದ್ದ ಎನಿಸುತ್ತಿದೆ. ಯಾರೋ ಕೆಲವು ಹಿತಾಸಕ್ತಿಗಳ, ವೈಯಕ್ತಿಕ ಲಾಭಕ್ಕೆ ಇಂತಹ ವಿಭಜನೆಗಳು ಅನಿವಾರ್ಯ ಎಂಬುದನ್ನು ಗಮನಿಸಿದ್ದೇವೆ. ಎರಡು ಹುಲಿಗಳು ಒಂದೇ ಕಾಡಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದೂ ಇಂತಹ ವಿಭಜನೆಗೆ ಕಾರಣವಾಗಿದೆ. ಯಾರನ್ನೋ ತುಳಿಯಲೊ,ಮತ್ಯಾರನ್ನೋ ಬೆಳೆಸಲೊ ಈ ಬೆಳವಣಿಗೆಗಳು ಸಹಾಯಕವಾಗಿವೆಯೇ ಹೊರತು, ಜನಹಿತ, ಸುಗಮ ಆಡಳಿತ ಎನ್ನುವ ಕಾರಣಗಳು ತುಂಬಾ ಬಾಲಿಶವಾಗಿ ತೋರುತ್ತವೆ.

    ಇಂತಹ ಬೆಳವಣಿಗೆಗಳು ಆಗಿ, ನಮ್ಮ ಮಧ್ಯೆಯೇ ವರ್ಣಿಸಲಾಗದ ಗೋಡೆಗಳು,ಬೇಲಿಗಳು ಹುಟ್ಟಿಕೊಂಡು ಮೂಕವಾಗಿ ರೋಧಿಸುವ ಮನಸ್ಸುಗಳಿಗೆ , ನಮಗೆ ಗೊತ್ತಿಲ್ಲದೇ ಒಂದು ರೀತಿಯ ಅವಿನಾಭಾವ ಸಂಬಂಧ ನಮ್ಮಲ್ಲಿ ಬೆಳೆದು ಬಿಟ್ಟಿರುತ್ತೆ. ಈ ನಕ್ಷೆಗಳ ಕಡೆಗೆ ನೋಡಿದಾಗೊಮ್ಮೆ ಮನಸ್ಸು ಅಳುತ್ತೆ ಕಣ್ರೀ. ನಮ್ಮ ದೇಹದ ಯಾವುದೋ ಅಂಗವೇ ಬೇರ್ಪಟ್ಟ ಸಂಕಟ ಮನದಲ್ಲಿ. ಇಂತಹ ಭಾವನೆಗಳಿಗೆ ಯಾವುದೇ ರಾಜಕೀಯ,ಆಡಳಿತಾತ್ಮಕ ಕಾರಣ ಕೊಟ್ಟು ಸಂತೈಸುವುದು ಕಷ್ಟ. ಹೊಸ ಜಿಲ್ಲೆ ಘೋಷಿಸಿದಾಗಿನಿಂದ ನಾನೇ ಎಷ್ಟು ಸಮಾಧಾನ ಪಡಲು ಪ್ರಯತ್ನಿಸಿದ್ದೀನಿ ಗೊತ್ತಾ?…ಅಯ್ಯೋ ಆಗಿರುವುದೇನು, ಮೊದಲೇ ಇದ್ದ ಗೆರೆಗಳಿಗೆ ಸ್ವಲ್ಪ ದಪ್ಪನಾದ, ಎದ್ದು ಕಾಣುವಂತಹ ಬಣ್ಣ ಬಳಿದಿದ್ದಾರೆ,ಮತ್ತೇನೂ ಆಗಿಲ್ಲ. ಯಾವಾಗಲೂ ಇರುವಂತೆಯೇ ಎಲ್ಲಾ ಇದೆ ಅಂತ ಅಂದು ಕೊಂಡರೂ ಎಂತಹುದೋ ಅವ್ಯಕ್ತ ರೋದನ ಮನಸ್ಸಲ್ಲಿ. ಅದು ನಮ್ಮನ್ನಾಳುವವರಿಗೆ ಅರ್ಥ ಆಗಲ್ಲ ಬಿಡಿ. ನಕ್ಷೆಯಲ್ಲಿ ಇದ್ದ ಗೆರೆಗಳಿಗೇ ಎದ್ದು ಕಾಣುವಂತೆ ಕಪ್ಪು ಬಣ್ಣ ಬಳಿದಾಗಲೆಲ್ಲ ನನ್ನಂತಹ ಹಲವಾರು ತೆಳುಗೆರೆಯ ಮನಸ್ಸುಗಳಿಗೆ ಆಗುವ ನೋವನ್ನು ಯಾರು ಗಮನಿಸಿಯಾರು?!

    error: Content is protected !!