ನಿಮ್ಮ ಮಗು ಎಲ್ಲಿ? ನಮ್ಮೂರ ಶಾಲೆಯಲ್ಲಿ…..ಮರಳಿ ಬಾ ಶಾಲೆಗೆ….ವಿದ್ಯೆ ಇಲ್ಲದವನ ಮುಖ ಹದ್ದು, ವಿದ್ಯೆ ಕಲಿತವನ ಮುಖ ಮುದ್ದು…
ಅನ್ನುವಂತಹ ಘೋಷಣೆಗಳೊಂದಿಗೆ 70ರ ದಶಕದಲ್ಲಿ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮದ ಅಂಗವಾಗಿ ನಾವೆಲ್ಲಾ ಇಡೀ ಶಾಲೆಯ ವಿದ್ಯಾರ್ಥಿಗಳು ನಮ್ಮೂರ ಬೀದಿಗಳಲ್ಲಿ,ಓಣಿಗಳಲ್ಲಿ ಕೂಗುತ್ತಾ ಸಾಲಾಗಿ ಹೋಗುತ್ತಿದ್ದೆವು. ನಮ್ಮ ಹಿಂದೆ ಬರುತ್ತಿದ್ದ ಗುರುಗಳು ನೋಂದಾಯಿತ ಮಗು ಇದ್ದು, ಶಾಲೆ ಬಿಟ್ಟಿದ್ದರೆ, ಐದು ಆರು ವರ್ಷದ ಮಗು ಇದ್ದರೆ, ಅಂಥವರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮಗುವನ್ನು ಶಾಲೆಗೆ ಕಳುಹಿಸುವ ಕುರಿತು ಪಾಲಕರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು. ಹಾಗೆ ಸೇರಿದ್ದ ಹಲವಾರು ಗೆಳೆಯರು ನನ್ನೊಟ್ಟಿಗೆ ಇದ್ದು, ಅವರು ನನಗಿಂತ ಮೂರ್ನಾಲ್ಕು ವರ್ಷ ಹಿರಿಯರೇ ಆಗಿರುತ್ತಿದ್ದರು, ಪ್ರಾಥಮಿಕ ಶಾಲೆಯಲ್ಲಿ.
ಆಪ್ಪ ನಮ್ಮೂರ ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಕೆಲಸ ಮಾಡುವಾಗ ನಾನಾಗಲೇ ಹೈಸ್ಕೂಲ್ ಮುಗಿಸಿದ್ದೆ. ಶಾಲೆಯ ಗಣತಿ ಉತ್ತೇಜನಕಾರಿಯಾಗಿಲ್ಲ. ಬರುವ ಶೈಕ್ಷಣಿಕ ವರ್ಷದಲ್ಲಿ ಗಣನೀಯವಾಗಿ ಮಕ್ಕಳು ನೋಂದಾಯಿತರಾಗದೇ ಹೋದಲ್ಲಿ, ಶಾಲೆಯನ್ನು ಮುಚ್ಚಬೇಕಾಗುತ್ತದೆ ಅನ್ನುವ ಪತ್ರ ಹಿಡಿದು ಅಪ್ಪ ಚಿಂತಾಕ್ರಾಂತರಾಗಿದ್ದರು. ಬೇಸಿಗೆಯ ರಜೆಯಲ್ಲಿ ಅಪ್ಪ ಗೊಲ್ಲರಹಟ್ಟಿಗೆ ಭೇಟಿ ನೀಡಿ, ಮಕ್ಕಳನ್ನು ಶಾಲೆಗೆ ಸೇರಿಸುವ ಕುರಿತು ಪಾಲಕರ ಮನ ಒಲಿಸಲು ಹೋಗುತ್ತಿದ್ದರು. ಕೆಲವೊಮ್ಮೆ ನಾನೂ ಅವರ ಜೋಡಿ ಹೋಗ್ತಿದ್ದೆ.
ಅಪ್ಪ ನನ್ನೂರ ಶಾಲೆಯಲ್ಲಿ ಕೆಲಸ ಮಾಡಲೇ ಇಲ್ಲ. ಶಾಲೆಯಲ್ಲಿ ನನಗೆ ಒಂದಕ್ಷರವನ್ನೂ ಕಲಿಸಲಿಲ್ಲ, ನನ್ನ ಯಾವೊಂದು ಪರೀಕ್ಷೆಯ ಪತ್ರಿಕೆಯನ್ನು ಮಾಪನ ಮಾಡಿ,ಒಂದು ಅಂಕವನ್ನೂ ಕೊಡಲಿಲ್ಲ! ಒಂದು ಮೈಲಿ ದೂರದಲ್ಲಿದ್ದ ಗೌರಿಪುರ, ಬುಡ್ಡೆನಹಳ್ಳಿ, ಗೊಲ್ಲರಹಟ್ಟಿಯಲ್ಲಿಯೇ ಕಳೆದರು. ಐದಾರು ಮೈಲಿಗಳ ದೂರದಲ್ಲಿದ್ದ ಶೆ ಲಿಯಪ್ಪನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾಗಿ ತಮ್ಮೊಡನೆ ಮತ್ತೊಬ್ಬ ಶಿಕ್ಷಕರೊಂದಿಗೆ ಅಂದಿನ 7ನೇ ತರಗತಿಯ ಜಿಲ್ಲಾ ಮಟ್ಟದ ಪರೀಕ್ಷೆಗಳಲ್ಲಿ ಅಪ್ಪ ಇರುವಷ್ಟೂ ವರ್ಷ ಆ ಶಾಲೆಯ ಫಲಿತಾಂಶ ಶೇಖಡಾ 100 ಅನ್ನುವ ವಿಷಯ ಈಗ ದಂತ ಕಥೆ ಆಗಬಹುದು. ಆಗ ಅಲ್ಲಿಗೆ ಅಡ್ಡಾಡಲು ಪೂಲೆಪ್ಪ ಶೆಟ್ಟಿಯ ಸೆಕೆಂಡ್ ಹ್ಯಾಂಡಲ್ ಸೈಕಲ್ ಕೊಂಡದ್ದು ನಮಗೆ BMW ಕಾರು ಕೊಂಡಷ್ಟು ಖುಷಿ ಆಗಿತ್ತು. ಗುಡ್ಡ ಗಾಡು ರಸ್ತೆಯಲ್ಲಿ ಅಪ್ಪ ಒಮ್ಮೆ ಸೈಕಲ್ ಸಮೇತ ಬಿದ್ದುದರ ಪರಿಣಾಮ ಗೊಲ್ಲರಹಟ್ಟಿಯ ಶಾಲೆಗೆ ಬಂದರು! ಸಂಡೂರಿನ ಶಿಕ್ಷಣಾಧಿಕಾರಿಗಳು ಯಾರೇ ಇರಲಿ,ಬರಲಿ ಅಪ್ಪನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿರುತ್ತಿದ್ದರು. ಆಗೆಲ್ಲ ಶಾಲೆಯ ಮೇಲ್ವಿಚಾರಕರು (ಇನ್ಸ್ ಪೆಕ್ಟರ್ಸ್) ಭೇಟಿ ನೀಡುತ್ತಾರೆ ಅಂದ್ರೆ, ಭಯಂಕರ ಮಹತ್ವದ ದಿನ ಆಗಿಬಿಡುತ್ತಿತ್ತು, ನಮ್ಮ ಹಳ್ಳಿ ಶಾಲೆಗಳಿಗೆ.
ಹಾಗೆ ನೋಡಿದರೆ ಅಪ್ಪ ಬರೀ ಗೊಲ್ಲರಹಟ್ಟಿಯವರಿಗೆ ಮಾತ್ರ ಮಕ್ಕಳನ್ನು ಶಾಲೆಗೆ ಕಳಿಸಿ ಅಂತ ಹೇಳುತ್ತಿರಲಿಲ್ಲ. ಸಿಕ್ಕ ಪ್ರತಿಯೊಬ್ಬರಿಗೂ, ಬಂದ ಕಾಗದ,ಪತ್ರ ಓದಲಾಗದೆ ನಮ್ಮ ಮನೆಗೆ ಬರುತ್ತಿದ್ದವರಿಗೆಲ್ಲ ನಿಂದಂತೂ ಆಯ್ತು, ಮಗನನ್ನು ಶಾಲೆಗೆ ಕಳಿಸಿ ಓದಿಸು ಅಂತ ಹೇಳ್ತಿದ್ದರು. ದೊಡ್ಡ ಮಾದರಿ ಶಾಲೆಯಾದ ನಮ್ಮೂರ ಶಾಲೆಯಲ್ಲೇ ನಾವು ಇರುತ್ತಿದ್ದುದು ಗರಿಷ್ಠ 40 ಹುಡುಗರು. ಇನ್ನು ಅಪ್ಪ ಕೆಲಸ ಮಾಡುತ್ತಿದ್ದ ಸುತ್ತ ಹಳ್ಳಿಗಳ ಶಾಲೆಯ ಗಣತಿಯನ್ನು ಅಂದಾಜು ಮಾಡಿಕೊಳ್ಳಿ.
ಕೆಂಗ ದೊಡ್ಡಪ್ಪ ಅಂದ್ರೆ, ನಮ್ಮೂರ ಗೊಲ್ಲರಹಟ್ಟಿಯ ಭರ್ಜರಿ ಕುಳ, ಆಗ. ನೂರಿನ್ನೂರು ಕುರಿಗಳು, ಮಾಗಾಣಿ ತುಂಬಾ ಗದ್ದೆಗಳು, ಒಣ ಭೂಮಿಯೂ ಸಾಕಷ್ಟಿತ್ತು. ಐದಾರು ಗಂಡು ಮಕ್ಕಳ ತಂದೆ. ಅಪ್ಪನೊಡನೆ ತುಂಬಾ ಒಡನಾಟ. ಹಣ ಎಣಿಸಲೂ ಬರ್ತೀರಲಿಲ್ಲ ಅಂದ್ರೆ ನೀವು ನಂಬಲೇಬೇಕು. ಮನೆಯಲ್ಲಿ ಒಟ್ಟಿದ್ದ ಕಾಳಿನ ಚೀಲಗಳ ಮಧ್ಯೆ ಹಣದ ಕಂತೆ ಇಡುತ್ತಿದ್ದ ಮನುಷ್ಯ. ಕೆಂಪಗೆ ಒಳ್ಳೆ ಇಂಗ್ಲಿಷರ ಬಣ್ಣ. ಎತ್ತರದ ಆಳು. ಯಾವಾಗಲೂ ಕರೀ ಕಂಬಳಿ ಹೆಗಲಿಗೆ, ಕೆಂಪಗಿನ ತಾಂಬೂಲದ ಬಣ್ಣ ಬಾಯಲ್ಲಿ. ನಕ್ಕರೆ ಅಪರೂಪದ ಚಲುವ ಅನ್ನಬಹುದಾದಂತಹ ರೂಪ.
ಕೆಂಗಜ್ಜಾ ಕೊನೆಯ ಮಕ್ಕಳನ್ನಾದರೂ ಶಾಲೆಗೆ ಕಳಿಸೋ ಅಂತ ಅಪ್ಪ ಒಮ್ಮೆ ನಮ್ಮ ಮನೆಯ ಕಟ್ಟೆಯ ಮೇಲೆ ಪ್ರಸ್ತಾಪಿಸಿದರು. ದೊಡ್ಡ ಮಗ ದೊಡ್ಡನಿಗೆ ಆಗಲೇ ಮದುವೆ ಆಗಿ ಮಕ್ಕಳಾಗಿದ್ದರು. ಹಾವು ಕಚ್ಚಿದಂತೆ ಬೆಚ್ಚಿ ಬಿದ್ದು ಬಿಡೋದಾ?
ಮೇಷ್ಟ್ರೇ ಈ ಓದಿದ ಹುಡುಗರು ಏನ್ಮಾಡ್ತಾರೆ ಗೊತ್ತಾ? ಬೆಳಿಗ್ಗೆ ಎದ್ದು, ಹಲ್ಲುಜ್ಜಲು ಪೇಷ್ಟು, ಬ್ರಷ್ಹು ಅಂತ ಹಿಡಿದು, ಹೆಂಗಸರಂತೆ ಮುಖಕ್ಕೆ ಪೌಡರ್ ಹಚ್ಚಿಕೊಂಡು,ಮನೆಯವರು ಒಗೆದಿಟ್ಟ ನೀಟಾದ ಬಟ್ಟೆ ಹಾಕಿಕೊಂಡು ಊರ ಸುತ್ತಲು ಹೊರಡುತ್ತಾರೆ. ಮನೆಯಲ್ಲಿ ಯಾರೂ ಇವರಿಗೆ ಕೆಲಸ ಹೇಳೋ ಆಗಿಲ್ಲ, ಅರಿತು ಇವರು ಮಾಡೋದೂ ಇಲ್ಲ, ಉಲ್ಟಾ ಮನೆಯವರು ಮಾಡುವ ಕೆಲಸ ಬಿಟ್ಟು ಇವರ ಸೇವೆ ಮಾಡಬೇಕು. ಇವರಿಂದ ದಿನಕ್ಕೆ ಕನಿಷ್ಠ 5 ರೂಪಾಯಿ ಖರ್ಚು. ಇನ್ನು ಓದಿಸೋಕ್ಕೆ, ಪುಸ್ತಕ, ಬಟ್ಟೆ ಎಲ್ಲ ನೀವೇ ಲೆಕ್ಕ ಹಾಕಿ. ಎಷ್ಟು ವರ್ಷ ಓದಿಸಬೇಕು, ಕನಿಷ್ಠ ಅಂದರೂ ಹತ್ತು ವರ್ಷ. ವರ್ಷಕ್ಕೆ ಸಾವಿರ ಅಂದ್ರೂ ಹತ್ತು ಸಾವಿರ ಖರ್ಚಾ? ಆಮೇಲೆ ಇವನು ತಂದು ನಮ್ಮನ್ನು ಸಾಕೋದು ಅಷ್ಟರಲ್ಲೇ ಇದೆ. ಮುದುಕರಾದ್ರು ಮದುವೆ ಆಗಲ್ಲ.
ಶಾಲೆಗೆ ಕಳಿಸದೆ ಐದು ವರ್ಷದ ಹುಡುಗನನ್ನು ಕುರಿ ಕಾಯಲು ಕಳಿಸಿದರೆ, ವರ್ಷಕ್ಕೆ ಹತ್ತುಸಾವಿರದಷ್ಟು ದುಡಿಯುತ್ತಾನೆ. ಹತ್ತು ಸಾವಿರ ಎದುರು ಖರ್ಚಿನ ಬದಲಿಗೆ ಲಕ್ಷ ದುಡಿಯುತ್ತಾನೆ. 20 ವರ್ಷಕ್ಕೆ ಇಬ್ಬರು ಮೊಮ್ಮಕ್ಕಳನ್ನು ಕೈಗೆ ಕೊಡ್ತಾನೆ. ಒಳ್ಳೆಯದು ಹೇಳ್ತಾರೆನೋ ಮೇಷ್ಟ್ರು ಅಂದ್ರೆ ಹುಡುಗರನ್ನು ಶಾಲೆಗೆ ಕಳಿಸು ಅಂತಿರಲ್ಲಾರಿ…. ಅಂದು ಅಪ್ಪನಿಗೆ ಜೀವನದ ಪಾಠ ಹೇಳಿದ್ದ ನಮ್ಮ ಕೆಂಗ ದೊಡ್ಡಜ್ಜ!
ನೀನೇಳೋದು ಎಲ್ಲ ಸರಿಯೋ ಕೆಂಗಜ್ಜಾ….ನೋಡು ನಿನ್ನ ಮನೆಯ ವ್ಯವಹಾರ,ಆಸ್ತಿ ಪಾಸ್ತಿಗಳ ಪತ್ರ ನೋಡೋಕ್ಕಾದ್ರು, ನಿಮ್ಮವನೇ ಅಂತ ಒಬ್ಬ ಇದ್ದರೆ ಒಳ್ಳೇದು. ನನ್ನಂತವರ ಹತ್ತಿರ ಎಷ್ಟು ದಿನ ಅಂತ ನಿನ್ನ ಎಲ್ಲ ವಿಷಯಗಳನ್ನು ಹೊರಗೆ ಹಾಕ್ತಿಯ? ಯಾರೋ ಬಂದು ನಿನ್ನ ಪತ್ರ ಸರಿ ಇಲ್ಲ, ನೀನು ತೆರಿಗೆ ಕಟ್ಟಿಲ್ಲ ಅಂದ್ರೆ, ಓದಿದ ನಿನ್ನ ಮಗ ಅಂತ ಒಬ್ಬ ಇದ್ರೆ ಎಷ್ಟು ಅನುಕೂಲ, ಯೋಚನೆ ಮಾಡು. ಸರ್ಕಾರ ನಿಮ್ಮಂತವರಿಗೆ ಅಂತ ತುಂಬಾ ಅನುಕೂಲ ಮಾಡಿದೆ ಅಂದಾಗ ಕಂಬಳಿ ಕೊಡವಿ ಮೇಲೆದ್ದಿದ್ದ.
ನಮ್ಮ ಮನೆಯನ್ನು, ನಾವು ಐದು ಜನ ಗಂಡು ಮಕ್ಕಳು ಇದ್ದರೂ, ಹೇ ಇದು ನನ್ನ ಗುರುಗಳ ಮನೆ, ನನಗೇ ಮೊದಲ ಹಕ್ಕು, ನೀವೆಲ್ಲ ಆಮೇಲೆ ಅಂತಾನೇ ನಮ್ಮೆಲ್ಲರಿಗೆ ಆತ್ಮೀಯನಾಗಿ, ಇಡೀ ದಿನ ಮನೆಯಲ್ಲೇ ಇದ್ದು, ಅಪ್ಪನ ನೆಚ್ಚಿನ ಶಿಷ್ಯನಾಗಿ, ನನಗೆ ಐದಾರು ವರ್ಷ ದೊಡ್ಡವನಾದ್ರು, ಶಾಲೆಯಲ್ಲಿ ವರ್ಷಕ್ಕೆ ಚಿಕ್ಕ ಕ್ಲಾಸ್ನಲ್ಲಿ ಓದಿ, ಮುಂದೆ BA, BEd ಮಾಡಿ ಹೈಸ್ಕೂಲ್ ಹೆಡ್ಮಾಸ್ಟರ್ ಆಗಿ ಈಗ retired ಆಗಿರುವ ನಮ್ಮೂರ ಚಿತ್ತಪ್ಪ ಮಾಸ್ಟ್ರೇ ನಮ್ಮ ಕೆಂಗ ದೊಡ್ಡಪ್ಪನ ಮಗ!
ನಮ್ಮೂರ ಗೊಲ್ಲರಹಟ್ಟಿಯ ಸಂಪ್ರದಾಯವೇ ಕುತೂಹಲಕರವಾದದ್ದು. ಅದೇ ಒಂದು ರೋಮಾಂಚನ ಬರವಣಿಗೆ ಆದೀತು. ಊರವರ ಯಾರ ಮನೆಯಲ್ಲೂ ನೀರನ್ನು ಕುಡಿಯದ ಈ ಜನ ತಮ್ಮದೇ ದೇವರು,ವಿಶಿಷ್ಟ ಆಚರಣೆಗಳೊಂದಿಗೆ ಊರ ಹೊರಗೆ ತಮ್ಮದೇ ಜನಾಂಗದವರೊಂದಿಗೆ ವಾಸಿಸುತ್ತಾರೆ, ಶ್ರೀಕೃಷ್ಣನ ನೇರ ವಂಶಸ್ಥರು ನಾವು ಅಂತ ಹೇಳುತ್ತಾ. ಇಡೀ ದಿನಗಳನ್ನು,ರಾತ್ರಿಗಳನ್ನು ನಮ್ಮ ಮನೆಯಲ್ಲೇ ಕಳೆಯುತ್ತಿದ್ದ ನಮ್ಮಪ್ಪನ ಈ ಶಿಷ್ಯ ಒಂದೇ ಒಂದು ದಿನ ಊಟ ಮಾಡಲಿಲ್ಲ! ಹೇ ಇವತ್ತು ಹಬ್ಬ ಕಣೋ, ಹೋಳಿಗೆ ಮಾಡಿನಿ,ಒಂದೇ ಒಂದು ತಿನ್ನೋ ಅಂತ ಅಮ್ಮ ಗೋಗರೆದರೂ ಒಂದು ದಿನಕ್ಕೂ ಏನನ್ನೂ ತಿನ್ನಲಿಲ್ಲ ಇವನು! ಅವನ ಮನೆ ಓದಿನ ಪರಿಸರಕ್ಕೆ ಅವನಿಗೆ ಒಗ್ಗುತ್ತಿರಲಿಲ್ಲವೇನೋ, ಅಲ್ಲಿಗೆ ಊಟಕ್ಕೆ ಮಾತ್ರ ಹೋಗಿ ಉಳಿದಂತೆ ನಮ್ಮೊಡನೆಯೇ ಒಬ್ಬನಾಗಿ, ಜಗಳ ಆಡುತ್ತಾ, ನಗುತ್ತಾ ನಮ್ಮವನೇ ಆಗಿದ್ದ.
ಬೇಸಾಯ,ಕುರಿ ಸಾಗಾಣಿಕೆ, ಪಶು ಪಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು, ಆಧುನಿಕ ಸಮಾಜ,ಜೀವನ ಶೈಲಿಯಿಂದ ದೂರ ಇರುತ್ತಿದ್ದ ಇವರ ಜೀವನ ವಿಧಾನ ನನಗೆ ಯಾವಾಗಲೂ ವಿಚಿತ್ರ ಅನ್ನಿಸುತ್ತಿತ್ತು. ಅಪ್ಪ ಮಾತ್ರ ಇವರ ಮುಗ್ಧತೆ,ಪ್ರಾಮಾಣಿಕತೆ, ಕಷ್ಟಪಟ್ಟು ದುಡಿಯುವ ಪರಿಯನ್ನು ನಮಗೆಲ್ಲ ಉದಾಹರಣೆ ರೂಪಕಗಳಲ್ಲಿ ಆಗಾಗ ಹೇಳುತ್ತಿದ್ದರು. ಇವರು ಸುತ್ತಲಿನ ಸುಧಾರಿತ ಸಮಾಜದೊಂದಿಗೆ ಪಡೆಯುತ್ತಿದ್ದುದು ಉಪ್ಪು ಮತ್ತು ಅಪರೂಪಕ್ಕೆ ಅಡುಗೆ ಎಣ್ಣೆಯನ್ನು ಮಾತ್ರ. ಮತ್ತೆಲ್ಲಾ ತಾವು ಬೆಳೆದ ಬೆಳೆಯಲ್ಲೇ. ಅಪ್ಪನಿಗೆ ಇವರ ಈ ಮಾದರಿಯ ಸ್ವಾವಲಂಬನೆಯ ಜೀವನ ಶೈಲಿ ಹೆಚ್ಚು ಇಷ್ಟವಾಗುತ್ತಿತ್ತು. ಅಪ್ಪ ಇವರಲ್ಲಿಯೇ ಒಬ್ಬರಾಗಿಬಿಟ್ಟಿದ್ದರು,ಇವರ ಕಷ್ಟ ಸುಖಗಳಲ್ಲಿ ಒಂದಾಗಿ! ನಾವೆಲ್ಲಾ ಪೆಟ್ರೋಲ್,ಡೀಸೆಲ್ ಹೆಚ್ಚಾಯ್ತು, ಎಲ್ಲ ಬೆಲೆ ಏರಿಕೆ ಆಯ್ತು ಅಂತ ಬೊಬ್ಬೆ ಹೊಡೀತಿವಿ, ಇವರು ನೋಡು, ಅದ್ಯಾವುದೂ ತಮಗೆ ಸಂಬಂಧವೇ ಇಲ್ಲದ ಹಾಗೆ ಬದುಕುತ್ತಿದ್ದಾರೆ ಅನ್ನುತ್ತಿದ್ದರು.
ಆಗ ಅಪರೂಪಕ್ಕೆ ಪದವೀಧರರಿದ್ದ ನಮ್ಮೂರಲ್ಲಿ, ನಾನು ಪದವೀಧರನಾಗುವ ಹೊತ್ತಿಗೆ ಸುಮಾರಾಗಿ ವಿದ್ಯಾವಂತರಿದ್ದರು. ನಮ್ಮ ಮನೆಯನ್ನೂ ಸೇರಿಸಿ ಎಲ್ಲರ ಮನೆಯ ಓದಿದವರು ಅನ್ನಿಸಿಕೊಂಡವರ ಬಗ್ಗೆ ಇರುತ್ತಿದ್ದ ತಕರಾರು ಅಂದ್ರೆ, ಏನಂದ್ರೆ ಏನೂ ಮನೆ ಕೆಲಸ ಮಾಡಲ್ಲ ಅಂತ! ಅದು ಸತ್ಯವೂ ಹೌದು. ಶಾಲೆಯಲ್ಲಿ ಯಾವ ಗುರುಗಳೂ ಮನೆ ಕೆಲಸ, ಹೊಲದ ಕೆಲಸ ಮಾಡಬೇಡಿ ಅಂತ ಹೇಳುತ್ತಿರಲಿಲ್ಲ. ಆದ್ರೂ ನಮಗೆ ಯಾಕೆ ಒಂದು ರೀತಿಯ ಬಿಗುಮಾನ, ನಾವು ಬೇರೆ ಅನ್ನುವ ಭಾವನೆ ಬರುತ್ತಿತ್ತು?
ಕೆಲವು ಮನೆಗಳಲ್ಲಿಯಂತೂ ಏ ಓದಿಕೊಂಡ ಹುಡುಗ,ಪಾಪ ಕೆಲಸಕ್ಕೆ ಹೇಗೆ ಹಚ್ಚೋದು ಅಂತಾನೇ ಅಂತಿದ್ದರು! ಅನಿವಾರ್ಯ ಅಂತಾದಾಗ ಎಲ್ಲ ಕೆಲಸಗಳನ್ನು ಮಾಡಿರುವ ನನ್ನ ಸ್ನೇಹಿತರೂ ಇದ್ದಾರೆ, ಆದರೆ ಅಂತಹವರು ಬಹಳ ವಿರಳ. ಅವರೆಡೆಗೆ ನನ್ನ ಗೌರವ ಯಾವಾಗಲೂ ಇದೆ. ನನ್ನನ್ನೂ ಸೇರಿಸಿ ಬಹುತೇಕರು ಹಲವಾರು ಹೊಲ,ಮನೆಯ ಗ್ರಾಮೀಣ ಕೆಲಸ ಕಾರ್ಯಗಳನ್ನು ಮಾಡಲು ಎಂತಹುದೋ ಮುಜುಗರ. ಆಗಲೇ ಮನೆಯ ಹಿರಿಯರು ಇವನನ್ನು ಓದಿಸಿ ತಪ್ಪು ಮಾಡಿದೆವು ಅನ್ನುತ್ತಿದ್ದರು.
ನಮ್ಮ ಊರು,ನಮ್ಮ ಮನೆ,ನಮ್ಮ ಸಂಸ್ಕೃತಿ, ನಾವು ಬೆಳೆದ ರೀತಿ, ನಮ್ಮ ಹಿರಿಯರು ಎಲ್ಲರ ಎಲ್ಲವುದರ ಬಗ್ಗೆ ಅಸಡ್ಡೆ. ನಮ್ಮ ಭಾಷೆಯನ್ನೂ ಬೇರೆ ತೆರನಾಗಿ ಮಾತಾಡಿ, ನಾವೆಲ್ಲೋ ಬೇರೆಯೇ ತೆರನಾಗಿದ್ದೇವೆ ಅಂತ ತೋರಿಸಿಕೊಳ್ಳೋ ಹುಸಿ ದರ್ಪ. ಊರು ಬಿಟ್ಟು 2,3 ವರ್ಷ ಇದ್ದರಂತೂ ನಾವು ಬೇರೆ ಗ್ರಹಗಳಿಂದ ಬಂದಿದ್ದೇವೆ ಅನ್ನೋ ತರಹದ ಆಟಗಳು. ಏನನ್ನೋ ಮರೆತಂತೆ, ಯಾವುದನ್ನೊ ತನ್ನದಲ್ಲ ಎನ್ನುವಂತೆ ವರ್ತಿಸಿ, ತೋರ್ಪಡಿಸುವ ಧಿಮಾಕು. ಆಪ್ಯಾಯಮಾನವಾಗಿ,ಅಭಿಮಾನದಿಂದ ಹತ್ತಿರ ಬಂದವರನ್ನು ಬೇಕಾಗಿ ಕೀಳಾಗಿ ನೋಡುವ ದುರಹಂಕಾರ. ಅದೇನು ಕೀಳಿರಿಮೆ ಮುಚ್ಚಿಕೊಳ್ಳುವಿಕೆಯೋ ಅಥವಾ ಮೇಲಿರಿಮೆಯ ತೋರ್ಪಡಿಸುವಿಕೆಯೋ ಗೊತ್ತಾಗದ್ದು. ವಿದ್ಯಾವಂತರಾಗಿ ನಾವು ನಮ್ಮ ಸುತ್ತ ಎಂತಹ ಸಂದೇಶ ಹರಡುತ್ತಿದ್ದೇವೆ ಅನ್ನುವುದರ ಬಗ್ಗೆ ಎಳ್ಳಷ್ಟೂ ಯೋಚಿಸದ ಅಸಡ್ಡತೆ. ಪೇಟೆ ಮಂದಿ ಆಗ ಹೇಗಿದ್ದರೋ, ನಾವಂತೂ ಹಳ್ಳಿ ಮಂದಿ ಹೀಗಿರುತ್ತಿದ್ದೆವು.
ಅರ್ಧಂಬರ್ಧ ಇಂಗ್ಲಿಷ್, ಅದನ್ನೂ ಪೂರ್ತಿ ಕಲಿತಿರಲಿಲ್ಲ. ಅದರಲ್ಲೇ ಹುಟ್ಟಿದ್ದೇವೆ ಏನೋ ಅಂತ ತೋರಿಸುವ ಒನಪುಗಳು. ಇಂತಹುವೇ ಆಗ ನಾವು ಅನುಸರಿಸಬೇಕಾದ್ದು ಅನ್ನುವ ರೀತಿ ಅವುಗಳನ್ನು ಅನುಕರಣೆ ಮಾಡುತ್ತಿದ್ದೆವು. ನಮ್ಮ ಧಿಮಾಕೇ ಇಷ್ಟಿರಬೇಕಾದಾಗ, ಇನ್ನು ವಿದೇಶದಿಂದ ಬಂದವರು ಹೇಗಿದ್ದರು, ಹೇಗಿದ್ದಿರಬಹುದು ಅನ್ನೋ ಅನುಮಾನ ಬರ್ತಿತ್ತು. ಆಗಿನ್ನೂ ಅಂತಹವರನ್ನು ಕಂಡಿರಲಿಲ್ಲ. 10-12 ವರ್ಷದ ಶಿಕ್ಷಣ ಅಥವಾ ವಿದ್ಯಾಭ್ಯಾಸ ಈ ಮಟ್ಟದ ಪರಿಣಾಮವನ್ನು ನಮ್ಮಲ್ಲಿ ತರುತ್ತಿದ್ದಾದರೂ ಹೇಗೆ ಅಂತ ಯೋಚಿಸಿದರೆ, ಸೋಜಿಗವಾಗುತ್ತದೆ.
ನಮ್ಮ ವಿಚಿತ್ರ ವರ್ತನೆಗಳನ್ನು ಗಮನಿಸಿದ ಯಾರಾದ್ರು ಹಿರಿಯರು ನಮ್ಮ ಬಗ್ಗೆ ಕೇಳಿದರೆ,ಅವರಿಗೆ ಉತ್ತರ ಕೊಡುವ ಸೌಜನ್ಯವೂ ನಮ್ಮಲ್ಲಿ ಇರುತ್ತಿರಲಿಲ್ಲ. ನಮ್ಮವರೇ ಆದವರು ಅವನಾ SSLC ಪಾಸ್ ಆಗ್ಯಾನೆ, PUC ಪಾಸಾಗ್ಯಾನೆ,BA ಮುಗಿಸ್ಯಾನೆ, ಮೊನ್ನೆ ಸರ್ಕಾರ ಕಾಲ್ಫಾರ್ ಮಾಡಿತ್ತಲ್ಲ,ಅಥವಾ ಮುಂದಿನ ತಿಂಗಳು ಕಾಲ್ಫಾರ್ ಮಾಡ್ತಾರಲ್ಲ ಅದಕ್ಕೆ ಅರ್ಜಿ ಹಾಕ್ಯಾನೆ ಅಂತನೊ ನಮ್ಮ ಪರಿಚಯ ಮಾಡಬೇಕು. ಆಗಿನ ನಮ್ಮ ಬಿಗುಮಾನ ಇಲ್ಲಿ ಹೇಳಲು ಆಗಲ್ಲ ಬಿಡಿ.
ಲಾರ್ಡ್ ವಿಲಿಯಂ ಬೆಂಟಿಕ್ 1835 ರಲ್ಲಿ ಭಾರತದಲ್ಲಿ ಜಾರಿಗೆ ತಂದಿದ್ದ ಇಂಗ್ಲಿಷ್ ಎಜುಕೇಶನ್ ಆಕ್ಟ್ ಬಗ್ಗೆ ಇಂಗ್ಲೆಂಡಿನ ಪಾರ್ಲಿಮೆಂಟ್ ನಲ್ಲಿ ಮಾತಾಡುತ್ತಾ ಇತಿಹಾಸಕಾರ ಮತ್ತು ರಾ ಜಕಾರಣಿ ಆಗಿದ್ದ ಲಾರ್ಡ್ ಮೆಕಾಲೆ ಹೇಳಿದ್ದ ಮಾತುಗಳು ಹೀಗಿವೆ. ಭಾರತದಲ್ಲಿ ನಮ್ಮ ಈ ಆಕ್ಟ್ ನಿಂದಾಗಿ ಭಾರತೀಯರಲ್ಲಿ ಅವರ ಬಗ್ಗೆ ಅವರಿಗೇ ಕೀಳಿರಿಮೆ ಮೂಡಬೇಕು. ಸಂಸ್ಕೃತ ಮತ್ತು ಪರ್ಶಿಯಾ ಒಳಗೊಂಡಂತೆ ಯಾವುದೇ ಭಾರತೀಯ ಭಾಷೆಗಿಂತ ಇಂಗ್ಲಿಷ್ ಉತ್ಕೃಷ್ಟ ಭಾಷೆಯೆಂದು ತಿಳಿಯಬೇಕು. ರಕ್ತ,ಮಾಂಸ ಮಾತ್ರ ಭಾರತಿಯವಾಗಿ, ಬುದ್ಧಿ,ವೇಷ, ಭೂಷಣ,ಮನಃಸತ್ವ ಇಂಗ್ಲಿಷ್ ಆಗಬೇಕು…..ತಮ್ಮದು ಎನ್ನುವ ಎಲ್ಲವೂ ಅವರಿಗೆ ನಿಕೃಷ್ಟವಾಗಬೇಕು, ಆಗ ಮಾತ್ರ ನಾವು ಅವರನ್ನು ಆಳಲು ಸಾಧ್ಯ.
ಮೆಕಾಲೆ ಕನಸು ನನಸಾಗಿ ಬಿಟ್ಟಿತ್ತಾ?, ಬ್ರಿಟಿಷರು ಹೋಗಿ,ನಮಗೆ ಸ್ವಾತಂತ್ರ್ಯ ಬಂದರೂ ಅವರು ಬಿಟ್ಟು ಹೋದ ಈ ಶಿಕ್ಷಣದ ವ್ಯವಸ್ಥೆಯ ಷಡ್ಯಂತ್ರದಿಂದ ನಮ್ಮ ತನವನ್ನು ನಾವು ಕಳೆದುಕೊಂಡು ಬಿಟ್ಟೆವಾ??!!! ನಮಗೆ ನಮ್ಮ ಆಯುರ್ವೇದದಲ್ಲಿ ನಂಬಿಕೆ ಇಲ್ಲ. ನಮ್ಮ ಸಂಸ್ಕಾರ,ಸಂಸ್ಕೃತಿ ಮೂಢನಂಬಿಕೆ. ರನ್ನ ಪಂಪರಿಗಿಂತ ಹೆಚ್ಚು ಕೀಟ್ಸ್, ಶೇಕ್ಸ್ ಪಿಯ್ಯರ್, ಜಾರ್ಜ್ ಬರ್ನಾಡ್ ಷಾ ಹತ್ತಿರವಾಗಿದ್ದಾರೆ. ಆರಂಕುಶಯಿಟ್ಟೋಡೇಮ್, ನೆನೆವುದೆನ್ನ ಮನಂ, ಬನವಾಸಿ ದೇಶವಂ ಅನ್ನುವ ವಾಕ್ಯ ನೆನಪಿನಿಂದಲೇ ಹೋಗಿ, ಜೂಲಿಯಸ್ ಸೀಜರ್ ನಾಟಕದ ಡೈಲಾಗ್ ಗಳು ನಮಗೆ ಹತ್ತಿರವಾದವು!ನಮ್ಮ ಹಂಪಿ,ಅಜಂತಾ ಎಲ್ಲೋರಾ, ಹರಪ್ಪಾ ನಾಗರಿಕತೆಯ ಜಾಗಗಳನ್ನೂ ಅವರೇ ತೋರಿಸಿ, ಅವರು ಹೇಳಿದ ವಾಕ್ಯಗಳನ್ನು ದೇವವಾಕ್ಯಗಳೆಂದು ಇಂದಿಗೂ ತಿಳಿದಿದ್ದೇವೆ.
ನಮ್ಮಲ್ಲಿಯ ಪ್ರಖಾಂಡ ಸಂಸ್ಕೃತ ಪಂಡಿತರಿಗಿಂತ, ಮ್ಯಾಕ್ಸ್ ಮುಲ್ಲರ್ ಬರೆದ ವೇದಗಳ ಬಗೆಗಿನ ವ್ಯಾಖ್ಯಾನ ದೈವ ವಾಣಿ ಆಗಿಬಿಡ್ತು! ಇವರು ಹಾಕಿದ ವ್ಯವಸ್ಥಿತ ಶಿಕ್ಷಣದ ದಾಸ್ಯ ಮನಸ್ಥಿತಿಯಲ್ಲಿ ಓದಿದವರು ನಮಗೆ ಬುದ್ಧಿಜೀವಿಗಳಾದಾಗ ಯಾವುದರ ಗಂಧ,ಗಾಳಿಯೂ ತಿಳಿಯದಿದ್ದರೂ ನಂದು ಡಿಗ್ರಿ ಆಗಿದೆ ಅನ್ನುವ ನನ್ನಂತಹವರ ವರ್ತನೆ ಆಶ್ಚರ್ಯ ತರಿಸಬೇಕಿಲ್ಲ ಅನ್ನಿಸುತ್ತೆ.