21.7 C
Karnataka
Wednesday, November 27, 2024
    Home Blog Page 136

    ಕ್ರಿಸ್ಮಸ್ ವೇಳೆಗೆ ಲಸಿಕೆ ರೆಡಿ; ಮಡೋರ್ನ, ಫೈಜರ್ ಗೆಲ್ಲುವವರು ಯಾರು?

    ಎಲ್ಲವೂ ಅಂದು ಕೊಂಡಂತೆ ನಡೆದರೆ ಈ ತಿಂಗಳಾಂತ್ಯ ಅಥವಾ ಡಿಸೆಂಬರ್ ಮೊದಲ ವಾರ ಕೋವಿಡ್ ವಿರುದ್ಧದ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಕಾಣಿಸುತ್ತಿದೆ.

    ಕಳೆದವಾರ ಶೇಕಡ 90ರಷ್ಟು ಪ್ರಗತಿ ಕಂಡಿರುವುದಾಗಿ ಹೇಳಿದ್ದ ಫೈಜರ್ ಕಂಪೆನಿ ನಿನ್ನೆ ಮತ್ತಷ್ಟು ಆಶಾದಾಯಕ ಫಲಿತಾಂಶ ನೀಡಿದ್ದು ಶೇಕಡ 95ರಷ್ಟು ಪ್ರಗತಿ ಸಾಧಿಸಿರುವುದಾಗಿ ಹೇಳಿದೆ. ಎಲ್ಲಾ ವಯೋಮಾನದವರಲ್ಲೂ ಈ ಲಸಿಕೆ ಆಶಾದಾಯಕ ಫಲಿತಾಂಶ ನೀಡಿದೆ ಎನ್ನಲಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಸರಕಾರಗಳ ಅನುಮತಿ ಪಡೆದು ಕ್ರಿಸ್ಮಸ್ ಗೆ ಮುನ್ನವೇ ಜನರಿಗೆ ಲಭ್ಯವಾಗುವಂತೆ ಮಾಡುವ ಇಂಗಿತವನ್ನು ಕಂಪನಿ ವ್ಯಕ್ತಪಡಿಸಿದೆ.

    ಮತ್ತೊಂದು ಕಂಪೆನಿ ಕೇಂಬ್ರಿಡ್ಜ್ ನ ಮಡೋರ್ನ ಕೂಡ ಆಶಾದಾಯಕ ಫಲಿತಾಂಶ ನೀಡಿದ್ದು ಅದು ಶೇಕಡ 94.5 ರಷ್ಟು ಪ್ರಗತಿ ಸಾಧಿಸಿದೆ. ಇನ್ನುಳಿದಂತೆ ಸರಕಾರಗಳು ಪರಿಶೀಲಿಸಿ ಅನುಮತಿ ನೀಡಬೇಕು.

    ಆಸ್ಟ್ರಾ ಜೆನಿಕಾ ಮತ್ತು ಯೂನಿವರ್ಸಿಟಿ ಆಫ್ ಆಕ್ಸ್ ಫರ್ಡ್ ಸಿದ್ಧಪಡಿಸುತ್ತಿರುವ ಲಸಿಕೆ ಕೂಡ ವಯಸ್ಸಾದವರಲ್ಲೂ ಸಕ ಸಕರಾತ್ಮಕ ಫಲಿತಾಂಶ ವ್ಯಕ್ತಮಾಡಿದೆ. ಇದರ ಅಂತಿಮ ಪ್ರಯೋಗ ಈ ವಾರದಲ್ಲೇ ನಡೆಯಲಿದೆ.

    ಇಂದು ನಡೆದ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ನಾಯಕತ್ವ ಶೃಂಗದಲ್ಲಿ ಮಾತಾನಾಡಿದ ಸೆರಮ್ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅಡರ್ ಪೂನವಲ್ಲ , ಭಾರತದಲ್ಲಿ ಆಕ್ಸ್ ಫರ್ಡ್ ಲಸಿಕೆಯ ಬೆಲೆ 500 ರೂ. ಆಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಹೋಲಿಸಿದರೆ ಫೈಜರ್ ಮತ್ತು ಮಡೋರ್ನ ಕಂಪೆನಿಯ ಲಸಿಕೆಗಳ ಬೆಲೆ ಭಾರತಕ್ಕೆ ದುಬಾರಿ ಆಗಬಹುದು ಎಂದು ಅಂದಾಜಿಸಲಾಗಿದೆ.

    ಚೀನಾ ಅಭಿವೃದ್ಧಿ ಪಡಿಸಿರುವ ಕರೋನಾ ವಾಕ್ ಲಸಿಕೆ ಅಂತಿಮ ಹಂತದ ಪ್ರಯೋಗದಲ್ಲಿದೆ. ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ಶೇಕಡ 92ರಷ್ಟು ಫಲಿತಾಂಶ ನೀಡಿದೆ.

    ಭಾರತದಲ್ಲಿ ಭಾರತ್ ಬಯೋಟೆಕ್ ಸಿದ್ಧಪಡಿಸುತ್ತಿರುವ ಕೋವ್ಯಾಕ್ಸ್ ವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧವಾಗಿದೆ.

    ಸವಾಲುಗಳು

    1 ವ್ಯಾಕ್ಸಿನ್ ಸಿದ್ಧವಾದರು -80 ಡಿಗ್ರಿ ಸೆಲ್ಸಿಯಸ್ ನಲ್ಲಿ ಅದನ್ನು ಸಂಗ್ರಹಿಸಿ ಸಾಗಿಸುವ ಸವಾಲು.

    2 ಈಗಿನ ಫಲಿತಾಂಶ ನಾಲ್ಕು ಐದು ತಿಂಗಳು ರೋಗದ ವಿರುದ್ಧ ರಕ್ಷಣೆಯ ಫಲಿತಾಂಶ ನೀಡಿದೆ. ದೀರ್ಘಕಾಲವೂ ಇದು ರಕ್ಷಣೆ ನೀಡಬಲ್ಲದೆ ಎಂಬುದು ಖಚಿತವಾಗಬೇಕಿದೆ. ಅದಕ್ಕೆ ಇನ್ನು ಸಮಯ ಬೇಕು. ಹೀಗಾಗಿ ಮಾನಿಟರ್ ಮಾಡುತ್ತಲೆ ಇರಬೇಕು.

    3 ಸರಕಾರಗಳು ನಕಲಿ ವ್ಯಾಕ್ಸಿನ್ ತಯಾರಕರ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ.

    4 ಸೈಡ್ ಎಫೆಕ್ಟ್ ಗಳ ಬಗ್ಗೆ ಇನ್ನೂ ಪರಿಣಾಮಕಾರಿ ಅಧ್ಯಯನ ಆಗಬೇಕು.

    Photo by RF._.studio from Pexels

    ಒಂದು ಬಾಗಿಲು ಮುಚ್ಚಿದರೆ ಅವಕಾಶ ಅನ್ನೊ ಮತ್ತೊಂದು ಬಾಗಿಲು ತೆರೆದೇ ತೆರೆಯುತ್ತದೆ

    ಒಂದು ಪುರಾತನ ಊರು ಆ ಊರಿನಲ್ಲೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ . ಆ ದೇವರ ದರ್ಶನಕ್ಕಾಗಿ ದೂರದ ಊರುಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದರು. ದೇವರು, ದೇವಸ್ಥಾನದ ಗೋಪುರ , ಗೋಡೆ , ಗರ್ಭಗುಡಿ ಮತ್ತು ಸ್ಥಂಭಗಳು ಅತ್ಯಂತ ಆಕರ್ಷಕವಾದ ಹಾಗೂ ಸುಂದರವಾದ ಪ್ರಾಚೀನ ಶಿಲ್ಪಕಲೆಗಳಿಂದ ಕೂಡಿತ್ತು. ಅರ್ಚಕರು ಪ್ರತಿದಿನವೂ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದರು . ದೇವಸ್ಥಾನದ ಸಂಪೂರ್ಣ ಉಸ್ತುವಾರಿಯನ್ನು ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು .

    ಆ ದೇವಸ್ಥಾನದಲ್ಲಿ ಶ್ರೀನಿವಾಸ ಎಂಬುವವನು ಗಂಟೆ ಬಾರಿಸುವ ಕೆಲಸ ಮಾಡುತ್ತಿದ್ದ . ದೇವಸ್ಥಾನದ ಮಹಿಮೆ ಹಾಗೂ ಹಿರಿಮೆ ಸ್ಥಳೀಯರಿಂದ ಹೊರಗಿನವರಿಂದ ಹಾಗೂ ಗೈಡ್ ಗಳಿಂದ ಪ್ರತಿಯೊಂದು ಕಡೆಯೂ ಪಸರಿಸಿತ್ತು.

    ದಿನಕಳೆದಂತೆ ಸ್ಥಳೀಯ ಭಕ್ತರ ಜೊತೆಗೆ ವಿದೇಶೀ ಟೂರಿಸ್ಚ್ ಗಳೂ ಸಹ ಗುಂಪು ಗುಂಪಾಗಿ ದೇವಸ್ಥಾನಕ್ಕೆ ಬರಲಾರಂಭಿಸಿದರು .
    ಬೆಳವಣಿಗೆ ಕಂಡ ದೇವಸ್ಥಾನದ ಆಡಳಿತ ಮಂಡಳಿ ಒಮ್ಮೆ ಒಂದು ತುರ್ತು ಸಭೆ ಕರೆದು ಪೂಜೆ ಮಾಡುವ ಅರ್ಚಕರಿಂದ ಹಿಡಿದು ಗಂಟೆ ಬಾರಿಸುವ ಶ್ರೀನಿವಾಸನವರೆಗೂ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ತಪ್ಪದೇ ಇಂಗ್ಲಿಷು ಕಲಿಯುವಂತೆ ಫರ್ಮಾನು ಹೊರಡಿಸುತ್ತಾರೆ .

    ಅನಕ್ಷರಸ್ಥನಾದ ಶ್ರೀನಿವಾಸ ಕಂಗಾಲಾಗಿ ಇಂಗ್ಲಿಷನ್ನು ಕಲಿಯುವ ಗೋಜಿಗೇ ಹೋಗುವುದಿಲ್ಲ ‌.ಆಡಳಿತ ಮಂಡಳಿ ಶ್ರೀನಿವಾಸನಿಗೆ ನೀನು ಇಂಗ್ಲಿಷು ಕಲಿಯದಿದ್ದರೇ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಾರೆ .

    ಅವರು ತೆಗೆದುಹಾಕೋವರೆಗೂ ಯಾಕ್ ಇರ್ಬೇಕು ಅಂತಂದುಕೊಂಡ ಸ್ವಾಭಿಮಾನಿ ಶ್ರೀನಿವಾಸ ತಾನಾಗೇ ಗಂಟೆ ಬಾರಿಸುವ ಕೆಲಸ ಬಿಟ್ಟು ಬೇರೇ ದಾರಿಕಾಣದೇ ಬದುಕಲು ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಒಂದು ಟೀ ಅಂಗಡಿಯನ್ನು ತೆರೆಯುತ್ತಾನೆ .ವ್ಯಾಪಾರ ಚೆನ್ನಾಗಿ ನಡಿಯತೊಡಗುತ್ತದೆ.ತಿಂಗಳು ಕಳೆದಂತೆ ಸಂಜೆ ಹೊತ್ತು ಬಿಸಿ ಬೋಂಡ ಬಜ್ಜಿ ಹಾಕಲು ಶುರುಮಾಡುತ್ತಾನೆ . ರುಚಿ ಜನರ ನಾಲಿಗೆಯನ್ನು ವ್ಯಾಪಾರ ಶ್ರೀನಿವಾಸನ ಕೈಯನ್ನೂ ಹಿಡಿಯುತ್ತದೆ .
    ನೋಡು ನೋಡುತ್ತಿದ್ದಂತೆ ಶ್ರೀನಿವಾಸನ ಟೀ ಅಂಗಡಿ ಹೋಟೆಲ್ಲಾಗುತ್ತದೆ .ಹೋಟೆಲ್ ರೆಸ್ಟೋರೆಂಟಾಗುತ್ತದೆ . ದೊಡ್ಡ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡ ಶ್ರೀನಿವಾಸ ದೊಡ್ಡ ಶ್ರೀಮಂತನಾಗುತ್ತಾನೆ .

    ಅಷ್ಟು ದೊಡ್ಡ ಶ್ರೀಮಂತನಾದರೂ ಶ್ರೀನಿವಾಸ ಕನ್ನಡ ಬಿಟ್ಟು ಬೇರೆ ಭಾಷೆ ಕಲಿಯುವುದಿಲ್ಲ . ಒಮ್ಮೆ ಒಬ್ಬ ಆಂಗ್ಲ ಪತ್ರಿಕೆಯ ಪತ್ರಕರ್ತರೊಬ್ಬರು ಶ್ರೀನಿವಾಸನ ಸಂದರ್ಶನ ಮಾಡಲು ಬಂದು ನೀವು ಯಾಕೆ ಇಂಗ್ಲಿಷ್ ಕಲಿಯಲಿಲ್ಲ ? ಎಂದು ಶ್ರೀನಿವಾಸನನ್ನು ಪ್ರಶ್ನಿಸಿದಾಗ. ” ನಾ ಏನಾರ ಇಂಗ್ಲಿಷು ಕಲ್ತಿರ್ತಿದ್ರೆ ಇನ್ನೂ ದೇವಸ್ಥಾನದಲ್ಲಿ ಗಂಟೆ ಬಾರ್ಸ್ಕೊಂಡಿರ್ಬೇಕೀತ್ತು” ಎಂದು ಉತ್ತರಿಸುತ್ತಾನೆ .

    ಯಾರೋ ಮಹಾನುಭಾವ ಬರೆದಿದ್ದ ಈ ಸಣ್ಣ ಕತೆಯನ್ನು ಓದಿದ ತಕ್ಷಣ‌ ಮನಸ್ಸಿಗೆ ತುಂಬಾನೇ ಖುಷಿಯಾಯಿತು .

    • ಮಾಡುವ ಕೆಲಸ ಯಾವುದೇ ಆದರೂ ಶ್ರದ್ಧೆಯಿಂದ ಮಾಡಿದರೆ ಖಂಡಿತ ಯಶಸ್ಸು ಲಭಿಸುತ್ತದೆ .
    • ಒಂದು ಬಾಗಿಲು ಮುಚ್ಚಿದರೆ ಅವಕಾಶ ಅನ್ನೊ ಮತ್ತೊಂದು ಬಾಗಿಲು ತೆರೆದೇ ತೆರೆಯುತ್ತದೆ .
    • ಬದಲಾವಣೆ ಜಗದ ನಿಯಮ ಅದಕ್ಕೆ ಧೃತಿಗೆಡಬಾರದು .
    • ಸದಾ ಹೊಸತನಕ್ಕೆ ಒಗ್ಗಿಕೊಳ್ಳಬೇಕು .
    • ಮನಸ್ಸಿಗೆ ಸರಿ ಎನ್ನಿಸುವ ನಿರ್ಧಾರವನ್ನು ಧೈರ್ಯದಿಂದ ತೆಗೆದುಕೊಳ್ಳಬೇಕು .
    • ಎಂತಹುದೇ ಸಂದರ್ಭದಲ್ಲೂ ಸ್ವಾಭಿಮಾನವನ್ನು ಬಿಡಬಾರದು .
    • ಪರಿಶ್ರಮಕ್ಕೆ ಪ್ರತಿಫಲ ಕಟ್ಟಿಟ್ಟ ಬುತ್ತಿ .

    ಈ ಪುಟ್ಟ ಕತೆಯಲ್ಲಿ ಇಷ್ಟೊಂದು ಅದ್ಭುತವಾದ ಸಂಗತಿಗಳು ಅಡಕವಾಗಿವೆ ಅನ್ನಿಸ್ತು .

    Photo by Matthew T Rader on Unsplash

    ಅವನಿಗೆ ಒಳ್ಳೆಯ ಬುದ್ಧಿ ಬರದೇ ಹೋಗಿದ್ದರೆ ತಮಿಳುನಾಡಿನ ಹೆಸರಾಂತ ಅಧಿಕಾರಿಗಳು ಇಂದು ದಿವಂಗತರಾಗಿರುತ್ತಿದ್ದರು

    ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್‌ ಬರೆದಿರುವ ದಂತಕತೆಯಾದ ದಂತಚೋರ ಕೃತಿ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಆ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ.

    ಗೋಪಾಲ್ ‌ಹೊಸೂರ್ ಮೇಲೆ ದಾಳಿಯಾದ ಕೇವಲ ಎರಡೇ ದಿನಗಳ ಬಳಿಕ ವೀರಪ್ಪನ್ ಮತ್ತೊಂದು ದಿಟ್ಟ ದಾಳಿಗೆ ಕ್ಯೆಹಾಕಿದ. ಪಾಲಾರ್ (ಸೊರಕೆಮಡು) ವಿನಲ್ಲಿ ಮಾಡಿದಂತೆಯೇಆತ ನೆಲ ಬಾಂಬ್‌ಗಳನ್ನಿಟ್ಟು ತಮಿಳುನಾಡಿದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವ ಪ್ರಯತ್ನವನ್ನು ಮಾಡಿದ.

    ಈ ಬಗ್ಗೆ ತಮಿಳುನಾಡಿನ ನಿವೃತ್ತಎಸ್.ಪಿ. ಎಂ.ಅಶೋಕ್‌ಕುಮಾರ್ ನನಗೆ ಹೀಗೆಹೇಳಿದರು:

    “1993ರ ಮೇ ತಿಂಗಳ 26ರ ಬೆಳಿಗ್ಗೆ ನಮ್ಮಎಸ್.ಟಿ.ಎಫ್‌ತಂಡವು ಡಿ.ಐ.ಜಿ ವಿಜಯಕುಮಾರ್‌ ನೇತೃತ್ವದಲ್ಲಿಕಲ್ಲಟ್ಟಿಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ಗಾಗಿ ಕೂಂಬಿಂಗ್‌ ಕಾರ್ಯಾಚರಣೆ ಮಾಡುತ್ತಿತ್ತು. ಆಗ ನಮ್ಮ ತಂಡದ ಕಾನ್ಸ್‌ಟೇಬಲ್ ಸೀಮೈಚಾಮಿ ಮರದ ಹಿಂದೆ ಅಡಗಿದ್ದ ಒಬ್ಬ ವ್ಯಕ್ತಿಯನ್ನು ನೋಡಿಕೂಡಲೇ ಅವನತ್ತ ಗುಂಡು ಹಾರಿಸಿದ. ಆಗ ಬಹಳ ಜನರುಓಡಿದ ಸಪ್ಪಳ ನಮಗೆ ಕೇಳಿಬಂದಿತು. ನಾವು ಆತ ಅಡಗಿದ್ದ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ತಿಂಡಿ ತಿನಿಸುಗಳ ಪಾಕೆಟ್‌ಗಳು, ಬೀಡಿಯ ತುಂಡುಗಳು ಮುಂತಾದವುಬಿದ್ದಿದ್ದವು. ಅಲ್ಲಿ ಬ್ಯಾಟರಿಯೊಂದನ್ನು ಇಟ್ಟಿದ್ದು ಅದಕ್ಕೆ ವ್ಯೆರ್ ಸಂಪರ್ಕವನ್ನು ಮಾಡಿತ್ತು. ಇದನ್ನು ನಾವು ಕಂಡಕೂಡಲೇ ನಮಗೆ ನೆಲದಲ್ಲಿ ಬಾಂಬುಗಳನ್ನು ಹುಗಿದಿದ್ದಾರೆ ಎಂದು ಖಾತ್ರಿಯಾಯಿತು. ಮುಂದೆ ಹೋಗುವ ಹಾದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನೆಲಬಾಂಬುಗಳನ್ನು ಭೂಮಿಯಲ್ಲಿ ಹುಗಿದು ಅವನ್ನುಒಂದಕ್ಕೊಂದನ್ನು ವೈರ್ ಮೂಲಕ ಜೋಡಿಸಿ ಬ್ಯಾಟರಿಗೆ ಸಂಪರ್ಕವನ್ನುಕೊಡಲಾಗಿತ್ತು. ಪಾಲಾರ್‌ಸ್ಫೋಟದಲ್ಲಿ ಹೇಗೆ ಮಾಡಿದ್ದರೋ ಇದೂ ಅದೇರೀತಿಯಲ್ಲಿಯೇ ಇತ್ತು. ಸೀಮೈಚಾಮಿ ಗಮನಿಸಿಗುಂಡು ಹಾರಿಸಿದ ಕಾರಣ ಬ್ಯಾಟರಿಗೆ ಕರೆಂಟ್ ಹರಿಸಲಾಗದೆ ವೀರಪ್ಪನ್‌ ತಂಡದವರು ಓಡಿಹೋಗಿದ್ದರು. ಹಲವಾರು ಗಂಟೆಗಳ ಕಾಲದ ಶೋಧನೆಯ ನಂತರ 45 ಬಾಂಬ್‌ಗಳನ್ನು ಪತ್ತೆ ಮಾಡಿ ಅವನ್ನು ನೆಲದಿಂದ ಹೊರಕ್ಕೆ ತೆಗೆದೆವು. ಆ ನಂತರ ಅವನ್ನು ಪಾಲಾರ್‌ ಕ್ಯಾಂಪಿಗೆ ತೆಗೆದುಕೊಂಡು ಹೋದೆವು.

    “ಪಾಲಾರ್ ‌ಸ್ಫೋಟದ ಪ್ರಕರಣದಲ್ಲಿ ನಾವು ಸೈಮನ್‌ನನ್ನುಬಂಧಿಸಿ ಅವನನ್ನು ಈ ಬಗ್ಗೆ ವಿಚಾರಿಸಿದಾಗ ಆತ ಪೊಲೀಸರನ್ನುಕೊಲ್ಲಲು ವಾಳಂಗುಳಿಪಟ್ಟಿ ಬಳಿ ಹಲವಾರು ಕಡೆಗಳಲ್ಲಿ ಇಂತಹ ಸ್ಫೋಟಕಗಳನ್ನು ಹುದುಗಿಸಿ ಇಟ್ಟಿದ್ದೆವು ಎಂದು ತಿಳಿಸಿದ. ಆತ ಇಂತಹ ನಾಲ್ಕು ಇತರ ಜಾಗಗಳನ್ನು ನಮಗೆ ತೋರಿಸಿದ್ದ. ಅವುಗಳಲ್ಲಿ ಒಂದು ನಮ್ಮತಂಡದ ಸದಸ್ಯರು ಕಾಡಿನಲ್ಲಿ ಕಾಲಕಾಲಕ್ಕೆ ವಿಶ್ರಾಂತಿಯನ್ನು ಪಡೆಯುತ್ತ್ತಿದ್ದ ಓಸಾಡಪ್ಪ ದೇವಸ್ಥಾನದ ಸುತ್ತಇದ್ದ ಪ್ರದೇಶವೆಂದು ತಿಳಿದು ನಮಗೆ ಗಾಬರಿಯಾಗಿತ್ತು.”

    ಈ ಘಟನೆಯ ಬಗ್ಗೆ ತಮಿಳುನಾಡಿನ ಬರಗೂರು ಪೊಲೀಸ್‌ಠಾಣೆಯ ಅಪರಾಧ ಸಂಖ್ಯೆ 12/93 ರಲ್ಲಿ ಕೊಲೆಗೆ ಪ್ರಯತ್ನದ ಪ್ರಕರಣವೊಂದುದಾಖಲಾಯಿತು.

    ಆ ದಿನ ಕರ್ನಾಟಕದ ಪಾಲಾರ್ ‌ಕ್ಯಾಂಪಿನಲ್ಲಿದ್ದ ಇನ್ಸ್‌ಪೆಕ್ಟರ್ ಬಿ .ಎ.ಪೂಣಚ್ಚ ಈ ಘಟನೆಯ ಬಗ್ಗೆ ಹೇಳಿದ್ದು ಹೀಗೆ:

    “ತಮಿಳುನಾಡಿನ ಕಾಡಿನ ಪ್ರದೇಶದಲ್ಲಿಎಸ್.ಟಿ.ಎಫ್‌ನ 70 ಜನ ಸಿಬ್ಬಂದಿ ಕೂಂಬಿಂಗ್‌ ಆಪರೇಷನ್ ಮಾಡುತ್ತಿದ್ದರು. ಅವರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ವೀರಪ್ಪನ್‌ಕಾಡಿನ ನೆಲದಲ್ಲಿ40-50 ಸ್ಫೋಟಕಗಳನ್ನು ಹುಗಿದಿದ್ದ. ತಮಿಳುನಾಡು ತಂಡದ ಜತೆಗೆ ಚಕಮಕಿಯಾದಾಗ ವೀರಪ್ಪನ್ ‌ತಂಡ ಅಲ್ಲಿಂದ ಪಲಾಯನ ಮಾಡಿತು. ನಂತರ ನಮಗೆ ತಿಳಿದುಬಂದಿದ್ದೇನೆಂದರೆ ವೀರಪ್ಪನ್ ‌ತಂಡದ ಒಬ್ಬ ಬಾಂಬ್‌ತಜ್ಞ ತಮಿಳು ನಾಡಿನ ಅಷ್ಟೊಂದು ಪೊಲೀಸರು ಸಾಯಬಾರದು ಎಂಬ ಸದುದ್ದೇಶದಿಂದ ಸ್ಫೋಟಕಗಳಿಗೆ ಕರೆಂಟ್ ಹರಿಯುವ ವೈರ್‌ನತುದಿಯನ್ನುಯಾರಿಗೂ ತಿಳಿಯದಂತೆ ಕತ್ತರಿಸಿದ್ದ. ಹೀಗಾಗಿ ಕರೆಂಟ್‌ಕೊಟ್ಟರೂ ಬಾಂಬುಗಳು ಸಿಡಿಯಲಿಲ್ಲ. ಒಂದು ವೇಳೆ ಆತ ಹೀಗೆ ಮಾಡಿರದಿದ್ದರೆ ತಮಿಳುನಾಡಿನ ೭೦ ಜನರು ಸಾಯಬೇಕಾಗಿತ್ತು.

    “ಆನಂತರ ತಮಿಳುನಾಡು ಎಸ್.ಟಿ.ಎಫ್‌ಯೋಧರು ಸ್ಫೋಟಕಗಳನ್ನು ನೆಲದಿಂದ ಹೊರಕ್ಕೆ ತೆಗೆದು ತಮ್ಮ ಹೆಗಲ ಮೇಲೆ ಹಾಕಿಕೊಂಡು ಪಾಲಾರ್‌ನಲ್ಲಿದ್ದ ನಮ್ಮ ಶಿಬಿರಕ್ಕೆ ಬಂದು ಅವನ್ನು ನಮಗೆ ತೋರಿಸಿ ನಾವು ಬದುಕಿದೆವುಎಂದು ಹೇಳಿದರು. ಈ ಘಟನೆಯಾದ ಹಲವಾರು ತಿಂಗಳುಗಳ ನಂತರ ನಾವು ವೀರಪ್ಪನ್‌ನ ಕೆಲವು ಸಹಚರರನ್ನು ಬಂಧಿಸಿ ಅವರನ್ನು ಈ ಘಟನೆಯ ಪ್ರಶ್ನಿಸಿದಾಗ, ಒಬ್ಬ ವ್ಯಕ್ತಿತಾನೇ ವೈರ್‌ಗಳನ್ನು ಕತ್ತರಿಸಿ ಪೊಲೀಸರನ್ನು ಉಳಿಸಿದ್ದಾಗಿ ನನ್ನ ಮುಂದೆಒಪ್ಪಿಕೊಂಡ. ಒಂದು ವೇಳೆ ಅವನಿಗೆ ಒಳ್ಳೆಯ ಬುದ್ಧಿ ಬರದೇ ಹೋಗಿದ್ದರೆ ತಮಿಳುನಾಡಿನ ಹೆಸರಾಂತ ಅಧಿಕಾರಿಗಳು ಇಂದು ದಿವಂಗತರಾಗಿರುತ್ತಿದ್ದರು.”


    (ಸಪ್ನ ಬುಕ್ ಬೆಂಗಳೂರು ಇವರು ಪ್ರಕಟಿಸಿರುವ 340 ಪುಟಗಳ ಈ ಕೃತಿಯ ಬೆಲೆ ರೂ .250)

    ಹೆಚ್ಚು ಅಂಕ ಗಳಿಸುವುದೇ ಗುರಿಯಾದಾಗ ಶಿಕ್ಷಣದ ಉದ್ದೇಶ ಈಡೇರುವುದೆ?

    ಪಾಠ ಕಲಿಸ ಬೇಕಾದ ಶಿಕ್ಷಕರಿಂದಲೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಹಲವು ದೇಶಗಳಲ್ಲಿ ಶಿಕ್ಷಕರನ್ನೇ ಗುಂಡಿಟ್ಟು ಕೊಂದ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವೀಧರರು ಉಗ್ರರಾಗಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವುದು, ತಂದೆ-ತಾಯಿ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳು, ವಿನಾಕಾರಣ ವಿಶ್ವ ವಿದ್ಯಾಲಯಗಳ ಆವರಣದಲ್ಲಿ ಗುಂಪು ಘರ್ಷಣೆಗಳು, ಲಂಚಗುಳಿತನ, ಇದೆಲ್ಲವೂ ಇಂದಿನ ದಿನಪತ್ರಿಕೆಗಳಲ್ಲಿ ಆಗಾಗ್ಗೆ ನಾವುಗಳು ಓದುವ ಆತಂಕಕಾರಿ ವಿಷಯಗಳು.

    ಇವುಗಳ ಬಗ್ಗೆ ಆಳವಾಗಿ ಚಿಂತಿಸಿದಾಗ, ನಮ್ಮ ಸಮಾಜವು ದಾರಿತಪ್ಪಿ ವಿರುದ್ಧ ದಿಕ್ಕಿನಲ್ಲಿ ಸಾಗಿತ್ತಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಉತ್ತಮ, ಆರೋಗ್ಯಕರ ಮತ್ತು ಸಮರ್ಥ ಸಮಾಜವನ್ನು ಕಟ್ಟುವಲ್ಲಿ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆ ಎಂಬ ವಾಸ್ತವಾಂಶ ಇದರಿಂದ ತಿಳಿಯುತ್ತದೆ. ಸಮಾಜದಲ್ಲಿ ಈ ಪರಿಸ್ಥಿತಿ ಸುಧಾರಿಸಿ, ಮೌಲ್ಯಗಳಿಗೆ ಗೌರವವನ್ನು ನೀಡುವ, ಮಾನವೀಯತೆ ಮೆರೆಯುವ ಸಮಾಜವನ್ನು ಸೃಷ್ಟಿಸಲು ಮೌಲ್ಯಾಧಾರಿತ ಶಿಕ್ಷಣದಿಂದಲೇ ಸಾಧ್ಯ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ – “Education is the only panacea for all evils in the society”. ಆದುದರಿಂದ ಶಿಕ್ಷಣ ಎಂದರೇನು? ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಅದರ ಪಾತ್ರವೇನು? ಎಂಬ ಅಂಶಗಳನ್ನು ಮುಂದಿನ ಸಾಲುಗಳಲ್ಲಿ ತಿಳಿಯಲು ಪ್ರಯತ್ನಿಸೋಣ. 

    ಶಿಕ್ಷಣ ಎಂದರೇನು?

    ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಭೋದನೆ, ತರಬೇತಿ  ಮತ್ತು ಸಂಶೋಧನೆಗಳ ಮೂಲಕ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಕ್ರಿಯೆಯೇ ಶಿಕ್ಷಣ. ಶಿಕ್ಷಣವು ಮನುಷ್ಯನ ಯೋಚನಾ ಶಕ್ತಿಯ ಬೆಳವಣಿಗೆಗೆ ಮತ್ತು ನಡವಳಿಕೆಗಳ ಮೇಲೆ ರಚನಾತ್ಮಕ ಮತ್ತು ಧನಾತ್ಮಕವಾದಂತ ಪರಿಣಾಮವನ್ನು ಬೀರುತ್ತದೆ. ನೆಲ್ಸನ್ ಮಂಡೇಲಾರವರ ಪ್ರಕಾರ “ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ”. ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಬಹಳ ಮುಖ್ಯ. 

    ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯದ ಉಪನ್ಯಾಸಕ, ಕಾಲೇಜಿನ ಮುಖ್ಯ ದ್ವಾರದಲ್ಲಿ ಈ ಕೆಳಗಿನ ಸಂದೇಶವನ್ನು ಬರೆಸಿ, ಫಲಕವನ್ನು ನೇತು ಹಾಕಿದನಂತೆ, “Collapsing any nation does not require use of atomic bombs or the use of long range missiles. But it requires lowering the quality of education and allowing cheating in the exams by students”.

    ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳ ತರಗತಿಗಳಲ್ಲಿ

    1964ರಲ್ಲಿ ಪ್ರೊ. ಡಿ.ಎಸ್ ಕೊಠಾರಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಶಿಕ್ಷಣ ಆಯೋಗದ ವರದಿಯಲ್ಲಿ ಹೇಳಿರುವಂತೆ,Destiny of a nation is being shaped in the classrooms. ಅಂದರೆ, ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳ ತರಗತಿಗಳಲ್ಲಿ. ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮೀಜಿ, ಶ್ರೀ ವೀರೇಶಾನಂದ ಸರಸ್ವತಿ ಮಹಾರಾಜ್‍ರವರು ಹೇಳಿರುವ ಅರ್ಥಗರ್ಭಿತ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. Build one good school today and avoid hundred jails tomorrow. ಇಂದು ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿದರೆ ನಾಳೆ ಒಂದು ನೂರು ಜೈಲುಗಳ ನಿರ್ಮಾಣವನ್ನು ತಪ್ಪಿಸಬಹುದು.

    ಮೇಲಿನ ವಾಕ್ಯಗಳನ್ನು ಅವಲೋಕಿಸಿದರೆ, ಶಿಕ್ಷಣದ ಮಹತ್ವ ನಮಗೆ ಅರಿವಾಗುವುದರಲ್ಲಿ ಸಂಶಯವಿಲ್ಲ. 

    ಶಿಕ್ಷಣದ ಉದ್ದೇಶಗಳು : 

    • ಸುಶಿಕ್ಷಿತ ಸಮಾಜವನ್ನು ಕಟ್ಟುವುದು.
    • ವಿದ್ಯಾರ್ಥಿಗಳಲ್ಲಿ ಜ್ಞಾನಸಂಪತ್ತು ಮತ್ತು ಆಲೋಚನಾ ಶಕ್ತಿಗಳನ್ನು ವಿಧಿವತ್ತಾಗಿ ಬೆಳೆಸುವುದು.
    • ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸುವುದು.
    • ಜ್ಞಾನ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು.
    • ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರತ್ಯೇಕರಿಸಿ, ಸಿದ್ಧಿಸಿಕೊಳ್ಳಲು ಅನುವು ಮಾಡುವುದು. 
    • ಪ್ರಜೆಗಳನ್ನು ಸಶಕ್ತಿಗೊಳಿಸುವುದು.
    • ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅನುಕೂಲ ಮಾಡಿಕೊಡುವುದು. 
    • ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು.
    • ಜೀವನದ ಸಂಪೂರ್ಣತೆಯನ್ನು ಅರಿತು, ನೈತಿಕ ಹಾದಿಯಲ್ಲಿ ನಡೆದು ಜೀವನ ನಿಬಾಯಿಸಬಲ್ಲ ಸಮಗ್ರ ವ್ಯಕ್ತಿಯನ್ನು ತಯಾರು ಮಾಡುವುದು.

    ಪ್ರಸ್ತುತದಲ್ಲಿ, ಶಾಲಾ ಕಾಲೇಜುಗಳ ಕಾರ್ಯ ವೈಖರಿಯನ್ನು ಗಮನಿಸಿದರೆ, ಈ ಉದ್ದೇಶಗಳು ನಿಜವಾಗಿಯೂ ಈಡೇರುತ್ತಿವೆಯೇ ಎಂಬ ಸಂಶಯ ಮನಸ್ಸಿಗೆ ಬರುವುದು ಸಹಜ ಮತ್ತು ನೈಜವೂ ಕೂಡ. ವಿದ್ಯಾ ಸಂಸ್ಥೆಗಳು ವಾಣಿಜ್ಯ ಕೇಂದ್ರಗಳಾಗಿ, ಶಿಕ್ಷಣ ವಾಣಿಜ್ಯೀಕರಣವಾಗಿ, ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಗಳಿಸುವ ಗುರಿಯನ್ನು ಹೊಂದಿದ್ದು, ಶಿಕ್ಷಣದ ಮೂಲ ಉದ್ದೇಶಗಳನ್ನು ಗಾಳಿಗೆ ತೂರಲಾಗಿದೆ.

    ಹೆಚ್ಚು ಅಂಕ ಗಳಿಸುವುದೇ ಗುರಿ

    ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಲ್ಲಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವುದೇ ಗುರಿಯಾಗಿದೆಯೇ ಹೊರತು, ಜೀವನದ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು, ನೈತಿಕತೆಯ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳುವ ಆಸಕ್ತಿ ಮತ್ತು ವ್ಯವದಾನ ಕಂಡು ಬರುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ, ವಿದ್ಯಾವಂತರು ಎಂದು ಕರೆಸಿಕೊಳ್ಳುವವರೇ, ಹೇಗೆ ಪರಿಸರ, ಸಂಚಾರಿ ಮತ್ತು ಈಗಿನ ಕೋವಿಡ್‍ – 19 ರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ದೇಶದ ನಾಗರೀಕರಿಗೆ ತಿಳಿದಿರುವ ವಿಷಯವಾಗಿದೆ.

    ಶಿಕ್ಷಣವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. 

    1. Education for life 2. Education for Livelihood. ಅಂದರೆ, ಜೀವನಕ್ಕಾಗಿ ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ಶಿಕ್ಷಣ. ಜನರು, ಸಾಮಾನ್ಯವಾಗಿ ಶಿಕ್ಷಣವನ್ನು ಉದ್ಯೋಗಕ್ಕಾಗಿ ವ್ಯಕ್ತಿಯನ್ನು ಸಿದ್ಧ ಪಡಿಸುವ ದೃಷ್ಟಿಕೋನದಿಂದ ನೋಡುತ್ತಾರೆ. ನಮ್ಮ ಜೀವನವು ಹಣ ಸಂಪಾದಿಸುವ ಉದ್ದೇಶಕ್ಕಿಂತ ಹೆಚ್ಚು ವಿಶಾಲವಾಗಿದೆ. ಜೀವನದಲ್ಲಿ ಶಾಶ್ವತವಾದ ತೃಪ್ತಿ ಮತ್ತು ಸಂತೋಷಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ತಿಳಿಸಿ ಕೊಡುವುದು ಶಿಕ್ಷಣದ ಮುಖ್ಯ  ಆಯಾಮವಾಗಬೇಕು.  ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳು ಶಿಕ್ಷಣದ ಮೂರು ಅಂಗಗಳು. Knowledge, skills and values are three components of Education. 

    ಶೈಕ್ಷಣಿಕವಾಗಿ ವರ್ಧಿಸಲು ಜ್ಞಾನ, ಔದ್ಯೋಗಿಕವಾಗಿ ಅಭಿವೃದ್ಧಿಯಾಗಲು ಕೌಶಲ್ಯಗಳು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಸುಶಿಕ್ಷಿತ ಪ್ರಜೆಯಾಗಲು ಮೌಲ್ಯಗಳು ಅತ್ಯವಶ್ಯಕ. ಈ ಮೂರು ಅಂಗಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟುವಂತೆ ಮಾಡುವುದೇ ನೈಜ ಶಿಕ್ಷಣ. ಈ ಮೂರರಲ್ಲಿ ಯಾವುದೊಂದರಲ್ಲಿ ಕೊರತೆಯಾದರು, ಅದು ನೈಜ ಶಿಕ್ಷಣವಾಗಲು ಸಾಧ್ಯವಿಲ್ಲ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ನುಡಿದಿರುವಂತೆ, “Education is the creation of sound mind in a sound body and it encompasses in itself an all-round development of an individual”. 

    ಶಿಕ್ಷಣದ ಮೂರು ಅಂಗಗಳು

    ಜ್ಞಾನ : “ನಹೀ ಜ್ಞಾನೇನ ಸದೃಶ್ಯಂ ಪವಿತ್ರಮಿಹ ವಿದ್ಯತೇ”, ಜ್ಞಾನಕ್ಕೆ ಸಮಾನವಾದ ಪವಿತ್ರಕರ ವಸ್ತುವು ಬೇರೊಂದಿಲ್ಲ ಎಂಬ ಮಾತನ್ನು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಜ್ಞಾನ ಸಂಪಾದನೆ ಶಿಕ್ಷಣದ ಮೂಲ ಮತ್ತು ಪ್ರಮುಖ ಉದ್ದೇಶ. ಯಾವುದೇ ಕ್ಷೇತ್ರದಲ್ಲಿ ನಾವುಗಳು ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆ ಬಹಳ ಮುಖ್ಯ. ಶ್ರದ್ಧಾ ಭಕ್ತಿಗಳಿಂದ ಕಲಿಕಾ ಕಾರ್ಯದಲ್ಲಿ ಭಾಗವಹಿಸಿ, ಜ್ಞಾನ ಸಂಪತ್ತನ್ನು ಬೆಳೆಸಿಕೊಳ್ಳ ಬೇಕು, ಪಾಂಡಿತ್ಯವನ್ನು ಪಡೆಯಬೇಕು. ಸಂಸ್ಕೃತದಲ್ಲಿ ಒಂದು ಮಾತಿದೆ “ಸ್ವದೇಶಿ ಪೂಜ್ಯತೇ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೇ”. ರಾಜನನ್ನು ತನ್ನ ದೇಶದಲ್ಲಿ ಮಾತ್ರ ಪೂಜಿಸ ಬಹುದು, ಆದರೆ ವಿದ್ವಾಂಸನನ್ನು ಸರ್ವರೂ ಪೂಜಿಸುತ್ತಾರೆ ಮತ್ತು ಗೌರವಿಸುತ್ತಾರೆ

    ಪ್ರಸ್ತುತದಲ್ಲಿ ವಿದ್ಯಾರ್ಥಿಗಳು, ಪರೀಕ್ಷೆಗಳಲ್ಲಿ ಅಂಕಗಳಿಸಲು, ಪಾಠಗಳನ್ನು ಗಟ್ಟು ಹೊಡೆಯುವುದನ್ನು ನಾವು ನೋಡಿದ್ದೇವೆ. ಇದರಿಂದ ಪ್ರಯೋಜನವಾಗುವುದಿಲ್ಲ. ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಸೃಜನಾತ್ಮಕ ಕಲಿಕೆ ಮತ್ತು ಪರಿಕಲ್ಪನಾ ತಿಳಿವಳಿಕೆಗೆ ಹೆಚ್ಚು ಒತ್ತು ಕೊಡಬೇಕು. ಆಗ ವಿಷಯ ಸಂಗ್ರಹಣೆ, ದೀರ್ಘಕಾಲ ಉಳಿಯಲು ಸಾಧ್ಯ.

    ಕೌಶಲ್ಯ: ಶಿಕ್ಷಣದ ಎರಡನೇ ಅಂಗವಾದ ಕೌಶಲ್ಯ, ಔದ್ಯೋಗಿಕವಾಗಿ ಅಭಿವೃದ್ದಿ ಹೊಂದಲು ಬಹಳ ಮುಖ್ಯ. ಯಾವುದೇ ಉದ್ಯಮದಲ್ಲಿ ಯಶಸ್ಸು ಕಾಣ ಬೇಕಾದರೆ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಹಲವು ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಪೈಕಿ ಕೇವಲ 25%, ಸಾಮಾನ್ಯ ಪದವೀಧರರ ಪೈಕಿ 15% ಪದವೀಧರರು ಮಾತ್ರ ಉದ್ಯೊಗಕ್ಕೆ ಅವಶ್ಯಕತೆಯಿರುವ ಕೌಶಲ್ಯಗಳನ್ನು ಪಡೆದಿದ್ದು, ಅರ್ಹತೆಯನ್ನು ಹೊಂದಿದ್ದಾರೆ. ಉಳಿದ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ.

    ಉದಾಹರಣೆಗೆ ಹೇಳುವುದಾದರೆ, ಒಬ್ಬ ಆಟೋಮೊಬೈಲ್ ಎಂಜಿನಿಯರ್ ಸ್ಕೂಟರ್ ನ ಸಣ್ಣ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ, ಒಬ್ಬ ವೈದ್ಯನಿಗೆ ಸರಳ ಮತ್ತು ಸಾಧಾರಣವಾದ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಅದೇ ರೀತಿ ಒಬ್ಬ ಬಿ.ಕಾಂ ಪದವೀಧರನಿಗೆ ಕ್ಯಾಶ್ ಬುಕ್ ಬರೆಯಲು ಬಾರದಿದ್ದರೆ, ವೃತ್ತಿಯಲ್ಲಿ ಇವರೆಲ್ಲರೂ ಅಪ್ರಯೋಜಕರು. ಆದ್ದರಿಂದ ಯಶಸ್ಸು ಕಾಣಲು ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಸಹ ಕಲಿಯ ಬೇಕು, ಬೆಳೆಸಿಕೊಳ್ಳ ಬೇಕು.

    ಮೌಲ್ಯಗಳು :ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವಂತೆ, ಸಮಾಜದಲ್ಲಿ ನಡೆಯುತ್ತಿರುವ, ವಂಚನೆ, ಹಿಂಸೆ, ದೌರ್ಜನ್ಯ ಮತ್ತು ಹೇಯ ಕೃತ್ಯಗಳನ್ನು ಗಮನಿಸಿದರೆ, ಸಮಾಜದಲ್ಲಿನ ಮೌಲ್ಯಗಳು ಕುಸಿಯುತ್ತಿವೆ ಎಂಬ ಅಂಶ ದೃಢವಾಗುತ್ತದೆ. ಆ ಕುಸಿತವನ್ನು ತಡೆಗಟ್ಟ ಬೇಕಾದರೆ, ಶಾಲಾ ಕಾಲೇಜುಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು. ವಿದ್ಯಾರ್ಥಿಗಳಲ್ಲಿ ಜೀವನದ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸಬೇಕು ಮತ್ತು ಮೌಲ್ಯಗಳು ಅವರುಗಳ ವ್ಯಕ್ತಿತ್ವದ ಭಾಗವಾಗಬೇಕು. ದುರದೃಷ್ಟಕರ ವಿಷಯವೆಂದರೆ, ಇಂದಿನ ಶಿಕ್ಷಣ ಪದ್ದತಿಯಲ್ಲಿ ಜೀವನೋಪಾಯದ ಶಿಕ್ಷಣಕ್ಕೆ ಹೊತ್ತು ನೀಡುತ್ತಿರುವುದು.

    ಮಹಾತ್ಮ ಗಾಂಧಿಯವರು ಹೇಳಿರುವಂತೆ, ಅಕ್ಷರ ಶಿಕ್ಷಣ ನಿಜವಾದ ಶಿಕ್ಷಣವಲ್ಲ. ಅಕ್ಷರ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಬೆರೆಸಿದರೆ, ಅದು ನಿಜವಾದ ಶಿಕ್ಷಣವಾಗುತ್ತದೆ. ಗಾಂಧೀಜಿಯವರ ಪ್ರಕಾರ ಚಾರಿತ್ರ್ಯವಿಲ್ಲದ ವಿದ್ಯೆ ಸಾಮಾಜಿಕ ಪಾಪಗಳಲ್ಲಿ ಒಂದು. ಸ್ವಾಮಿ ವಿವೇಕಾನಂದರು ನುಡಿದಿರುವಂತೆ, ಶಿಕ್ಷಣವು ಮಾನವನನ್ನು ತಯಾರಿಸುವ ಪ್ರಕ್ರಿಯೆಯಾಗ ಬೇಕು. – The need of the hour is Man Making Education – Swami Vivekananda.

    ನಾನು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ, ನಮ್ಮ ಪ್ರಾಂಶುಪಾಲರು ಮತ್ತು ಗಾಂಧೀವಾದಿ ದಿವಂಗತ ಡಾ. ಎಚ್. ನರಸಿಂಹಯ್ಯನವರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. Educated criminal is more dangerous than uneducated criminal ಆದ್ದರಿಂದ ಆರೋಗ್ಯಕರ ಮತ್ತು ಸಮರ್ಥ ಸಮಾಜವನ್ನು ಕಟ್ಟಲು, ಉತ್ತಮ ಪ್ರಜೆಗಳನ್ನು ಬೆಳೆಸಲು ಮೌಲ್ಯಾಧಾರಿತ ಶಿಕ್ಷಣ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. 

    ಕೊನೆಯದಾಗಿ ಹೇಳುವುದಾದರೆ, ಬೌದ್ಧಿಕ, ದೈಹಿಕ, ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ, ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತೆ ನೀಡುವ ಶಿಕ್ಷಣವೇ ನೈಜ ಶಿಕ್ಷಣ. ಈ ಅಂಶಗಳನ್ನು ಶಿಕ್ಷಣ ಕ್ಷೇತ್ರದ ಎಲ್ಲಾ ಭಾಗೀದಾರರು ಅರಿತು ಮುನ್ನಡೆಯ ಬೇಕಾಗಿದೆ.

    ನೈಜ ಶಿಕ್ಷಣದಿಂದ ಉತ್ತಮ ಪ್ರಜೆಗಳನ್ನು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. 

    Photo by Susan Yin on Unsplash

    ಕೊರೋನಾ ವೈರಸ್ ಪತ್ತೆಯಾಗಿ ಇಂದಿಗೆ ಬರೋಬ್ಬರಿ ಒಂದು ವರ್ಷ

    ಜಗತ್ತಿನಾದ್ಯಂತ ತಲ್ಲಣ ಎಬ್ಬಿಸಿದ ಕೊರೋನಾ ವೈರಸ್ ತಗುಲಿದ ಮೊದಲ ಕೇಸ್ ವರದಿಯಾಗಿ ಇವತ್ತಿಗೆ ಬರೋಬ್ಬರಿ ವರುಷ ತುಂಬಿದೆ.

    ವರ್ಷದ ಹಿಂದೆ ಇದೇ ದಿನ ಚೀನಾದ ಹುಬೆ ಪ್ರಾಂತ್ಯದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಮೊದ ಮೊದಲು ಅಲ್ಲಿನ ವೈದ್ಯಲೋಕಕ್ಕೂ ಇದೇನಿದು ಎಂದು ಗೊತ್ತಾಗಲಿಲ್ಲ, ನಂತರ ಇದೇ ರೀತಿಯ ರೋಗ ಲಕ್ಷಣಗಳಿರುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು, ಡಿಸೆಂಬರ್ ವೇಳೆಗೆ ಚೀನಾ ಈ ರೋಗ ಹಬ್ಬುತ್ತಿರುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಿತು.

    ಚೀನಾ ಸರ್ಕಾರ ಅಧಿಕೃತವಾಗಿ ಮೊದಲ ಕೋವಿಡ್ ಕೇಸನ್ನು ಖಚಿತ ಪಡಿಸಿದ್ದು ಡಿಸೆಂಬರ್ 8ರಂದೇ ಆಗಿದ್ದರೂ ಈ ವರ್ಷದ ಮಾರ್ಚ್ ನಲ್ಲಿ South China Morning Post ವರದಿಯೊಂದನ್ನು ಪ್ರಕಟಿಸಿ 2019 ರ ನವೆಂಬರ್ 17 ರಂದೆ ಮೊದಲ ಕೇಸು ಪತ್ತೆಯಾಗಿದ್ದು ಎಂದು ಹೇಳಿತ್ತು. ಇದರ ಪ್ರಕಾರ ಮೊದಲ ಕೇಸ್ ಪತ್ತೆಯಾಗಿ ಇವತ್ತಿಗೆ ವರ್ಷ ತುಂಬುತ್ತದೆ.

    ಡಿಸೆಂಬರ್ ನಲ್ಲಿ ಹುಬೈ ಆಸ್ಪತ್ರೆಗೆ ಬಂದಿದ್ದ ದಂಪತಿಗಳನ್ನು ಪರೀಕ್ಷಿಸಿದ್ದ ವೈದ್ಯರು ಇದೊಂದು ಫ್ಲೂ ಥರ ಕಾಣುತ್ತಿರುವ ಯಾವುದೋ ಹೊಸ ಕಾಯಿಲೆಯಾಗಿದೆ ಎಂದು ತಿಳಿಸಿದ್ದರು. ನಂತರ ಈ ರೋಗ ಇಡೀ ವಿಶ್ವಕ್ಕೆ ಹಬ್ಬಿದ್ದು ಈಗ ಇತಿಹಾಸ. ವಿಶ್ವದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವ ವೇಳೆಗೆ ಜನವರಿಯಾಗಿತ್ತು. ಬಿಬಿಸಿಯ ವಿದೇಶ ಸುದ್ದಿ ವಿಭಾಗದ ಹಿರಿಯ ವರದಿಗಾರ ರಿಚ್ ಪ್ರೆಸ್ಟನ್ ಜನವರಿಯಲ್ಲಿ ಈ ಬಗ್ಗೆ ಮಾಡಿದ ವರದಿಯನ್ನು ಮೊನ್ನೆ ಟ್ವೀಟ್ ಮಾಡಿದ್ದಾರೆ.

    ವರುಷ ತಲುಪುವ ವೇಳೆಗೆ ಲಸಿಕೆ ತಯಾರಿಕೆ ಹಂತದಲ್ಲೂ ಗಣನೀಯ ಪ್ರಗತಿ ಸಾಧಿಸಿರುವುದು ನೆಮ್ಮದಿ ತಂದಿರುವ ಸಂಗತಿ. ಈ ಮಧ್ಯೆ ಸಾಮಾಜಿಕ ಜಾಲ ತಾಣಗಳು ಕೊರೋನಾ ಗೆ ವರ್ಷ ತುಂಬಿದ ಬಗ್ಗೆ ಹಾಕಿದ ವಿಧ ವಿಧ ಪೋಸ್ಟ್ ಗಳಿಂದ ತುಂಬಿ ಹೋಗಿವೆ.

    ನ.20ರಿಂದ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

    ಈಗಾಗಲೇ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನವೆಂಬರ್ 20 ರಿಂದ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 20ರಂದು ಮಾನ್ಯ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಿದ್ದಾರೆಂದು ಅವರು ತಿಳಿಸಿದ್ದಾರೆ.

    ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

    ಕೋವಿಡ್‍ನಿಂದಾಗಿ ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗಳ ಆರ್ಥಿಕ ಮಿತವ್ಯಯ ಆದೇಶವಿದ್ದುದರಿಂದ ಹಾಗೂ ಶಾಲಾ ಕಾಲೇಜುಗಳ ಆರಂಭ ಕುರಿತು ಅನಿಶ್ಚಿತತೆ ಹಿನ್ನೆಲೆಯಲ್ಲಿ ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸಾಧ್ಯವಾಗಿರಲಿಲ್ಲ. ಈ ಮಿತವ್ಯಯ ಆದೇಶವಿದ್ದರೂ ಸಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿಗೆ ಅವಕಾಶ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

    ನ. 23ರಿಂದ ಪಿಯು ಉಪನ್ಯಾಸಕ ವರ್ಗಾವಣಾ ಪ್ರಕ್ರಿಯೆ:
    ಪಿಯು ಉಪನ್ಯಾಸಕರ ವರ್ಗಾವಣೆಗೆ ಪ್ರಕ್ರಿಯೆ ನವೆಂಬರ್ 23ರಿಂದ ಆರಂಭವಾಗಲಿದ್ದು, ಅಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

    ಈ ಬಾರಿ ಉಪನ್ಯಾಸಕರ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣಾ ನಿಯಂತ್ರಣ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ತಂದು, ಉಪನ್ಯಾಸಕ ಸ್ನೇಹಿಯಾದ ವರ್ಗಾವಣಾ ನೀತಿ ನೀತಿ ಜಾರಿಗೊಳಿಸಲಾಗುವುದೆಂದು ಸಚಿವರು ವಿವರಿಸಿದ್ದಾರೆ.

    ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಪದೋನ್ನತಿ ಮತ್ತು ಸ್ಥಳ ನಿಯುಕ್ತಿ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ನಾಳೆಯಿಂದ ಅಂದರೆ ನ. 18ರಿಂದ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಹುದ್ದೆ ಭರ್ತಿ:
    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಇತ್ತೀಚೆಗಷ್ಟೇ ಇಲಾಖೆ ಟಿಇಟಿ ಪರೀಕ್ಷೆಗಳನ್ನು ನಡೆಸಿದ್ದು, ವೃಂದ -ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹೆಚ್ಚು ಖಾಲಿ ಹುದ್ದೆಗಳು ಇರುವುದನ್ನು ಗಮನಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವನೆ ಮಂಡಿಸಲು ಇಲಾಖೆಯ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದರು.

    ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಪಿಯು ಇಲಾಖೆ ನಿರ್ದೇಶಕಿ ಸ್ನೇಹಲ್, ಸಾಶಿಇ ಆಯುಕ್ತ ಅನ್ಬುಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

    ಭಾಗ್ಯದ ಲಕ್ಷ್ಮಿ ಬಾರಮ್ಮ

    ಬಲಿಪಾಡ್ಯಮಿಯ ಸಂಜೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಕನ್ನಡಪ್ರೆಸ್.ಕಾಮ್ ಈ ಸುಮಧುರ ಪಾಡ್ಕಾಸ್ಟ್ ಅನ್ನು ಪ್ರಸ್ತುತ ಪಡಿಸುತ್ತದೆ.

    ಮೊನ್ನೆಯ ಪಾಡ್ಕಾಸ್ಟ್ ನಲ್ಲಿ ತಮ್ಮ ಸುಶ್ರಾವ್ಯ ಸಂಗೀತದೊಂದಿಗೆ ದೀಪಾವಳಿಯ ಸಡಗರವನ್ನು ಹೆಚ್ಚಿಸಿದ್ದ ಸಾರಂಗ ಸಂಗೀತ ಶಾಲೆಯ ಡಾ. ಸುಚೇತಾ ಅವರು ಇಂದು ತಮ್ಮ ವಿದ್ಯಾರ್ಥಿ ಬಳಗದೊಂದಿಗೆ ಈ ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಮಾಧವಿ ರವಿ,ತಮೋಘ್ನ,ಅವನಿ ಅರ್ಜುನ, ತನಿಷ ಸತೀಶ್, ಎಸ್ ಪ್ರದೀಪ, ತೇಜಸ್ವಿನಿ, ಪ್ರಿಯದರ್ಶಿನಿ, ಎನ್. ಸಾನಿಕ,ಸಾನಿಕ ತೇಜಸ್ವಿ, ಅನಿರುದ್ಧ ಹಾಗೂ ದ್ಯುತಿ ಆನಂದ್ ಅವರು ಈ ಪಾಡ್ಕಾಸ್ಟ್ ನಲ್ಲಿ ಡಾ. ಸುಚೇತಾ ಅವರೊಂದಿಗೆ ಸೊಗಸಾಗಿ ಹಾಡಿದ್ದಾರೆ.

    ಎಂದಿನಂತೆ ಭಾರತಿ ಎಸ್ ಎನ್ ಅವರ ವ್ಯಾಖ್ಯಾನ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸಿದೆ. ಆಲಿಸಿ. ಪ್ರತಿಕ್ರಿಯಿಸಿ.

    ದಾಖಲೆ ಮಟ್ಟದಲ್ಲಿ ಸೂಚ್ಯಂಕ; ಸುರಕ್ಷಿತ ಹೂಡಿಕೆ ಇಂದಿನ ಅಗತ್ಯ

    ಷೇರುಪೇಟೆಗಳ ಸೂಚ್ಯಂಕಗಳು ಸರ್ವಕಾಲೀನ ದಾಖಲೆ ಮಟ್ಟ ತಲುಪಿವೆ ಎಂಬುದು ಸ್ವಾಗತಾರ್ಹವಾದ ಅಂಶವಾಗಿದೆ. ಸೆನ್ಸೆಕ್ಸ್‌ ದೀಪಾವಳಿ ಮುಹೂರ್ತದ ವಹಿವಾಟಿನಲ್ಲಿ 43,830.93 ನ್ನು ಮಧ್ಯಂತರದಲ್ಲಿ ತಲುಪಿ ದಾಖಲೆ ನಿರ್ಮಿಸಿ 43,637.98 ರಲ್ಲಿ ಕೊನೆಗೊಂಡಿದೆ. ಮೇಲ್ನೋಟಕ್ಕೆ ಇದು ಸಕಾರಾತ್ಮಕ ಬೆಳವಣಿಗೆಯಾದರೂ, ಇದು ಎಷ್ಟರಮಟ್ಟಿಗೆ ಸಹಜತೆಯಿಂದ ಕೂಡಿದ ಪ್ರಕ್ರಿಯೆಂಬುದು ಮಾತ್ರ ಪ್ರಶ್ನೆಯಾಗಿದೆ.

    ಮಾರ್ಚ್‌ 24 ರಂದು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಅಂದರೆ 25,638.90 ರ ಕುಸಿದಿದ್ದ ಸೆನ್ಸೆಕ್ಸ್‌ ಅಂದು ಮಾರ್ಕೆಟ್‌ ಕ್ಯಾಪಿಟಲೈಸೇಷನ್ ರೂ.103.69 ಲಕ್ಷ ಕೋಟಿಯಲ್ಲಿತ್ತು. ಫೆಬ್ರವರಿ 19 ರಂದು ರೂ.158.71 ಲಕ್ಷ ಕೋಟಿಯಲ್ಲಿದ್ದ ಮಾರ್ಕೆಟ್‌ ಕ್ಯಾಪಿಟಲ್‌ ಮೊತ್ತ ಕೇವಲ ಒಂದು ತಿಂಗಳ ಸಮಯದಲ್ಲಿ ರೂ.55 ಲಕ್ಷ ಕೋಟಿಯಷ್ಟು ಕರಗಿದೆ ಎಂದರೆ ಪೇಟೆಯ ಚಲನೆ ಎಷ್ಟರ ಮಟ್ಟಿಗೆ ಹರಿತ ಎಂಬುದು ತಿಳಿಯುತ್ತದೆ. ಕೊರೋನಾ ಎಂಬ ಗುಮ್ಮವನ್ನು ಮುಂದಿಟ್ಟು ಭಾರಿ ಮಾರಾಟ ಮಾಡಿದವು. ಆದರೆ ಅದೇ ಕೊರೋನಾ ಗರಿಷ್ಠಕ್ಕೆ ಏರಿಕೆಯಾದಾಗ ಅದು ನಿರ್ಲಕ್ಷಕ್ಕೊಳಗಾಗಿ, ಏನೂ ಆಗಿಲ್ಲವೆಂಬಂತೆ, ಕಾರ್ಪೊರೇಟ್‌ ಗಳ ಸಾಧನೆಯ ಬೆಂಬಲವಿಲ್ಲದಿದ್ದರೂ, ಏರಿಕೆಯತ್ತ ಸಾಗುವಂತೆ ಮಾಡಲಾಗಿದೆ. ಆಗಷ್ಟ್‌ 7ರಂದು ರೂ.150 ಲಕ್ಷ ಗಡಿ ದಾಟಿದ ಪೇಟೆಯ ಬಂಡವಾಳಿಕರಣ ಮೌಲ್ಯವು ಸುಮಾರು ಒಂದು ತಿಂಗಳ ಅವಧಿಯವರೆಗೂ ರೂ.150 ರಿಂದ ರೂ.159 ರ ಅಂತರದಲ್ಲಿತ್ತು. ಆದರೆ ಸೆಪ್ಟೆಂಬರ್‌ 16 ರಂದು ರೂ.160.08 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯ ತಲುಪಿದ ನಂತರ ಅಕ್ಟೋಬರ್‌ 9 ರವರೆಗೂ ಸ್ಥಿರತೆ ಕಂಡು ಅಂದು ರೂ.160.68 ಲಕ್ಷ ಕೋಟಿಯ ಹೊಸ ದಾಖಲೆ ನಿರ್ಮಿಸಿತು.

    ದೀಪಾವಳಿಗೆ ಮುನ್ನ ಹಿಂದಿನ ವಾರದಲ್ಲಿ ನಿರಂತರ ಖರೀದಿ ನಡೆಸಿದ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.169.31 ಲಕ್ಷ ಕೋಟಿಗೆ ದೀಪಾವಳಿ ಮುಹೂರ್ತದ ಚಟುವಟಿಕೆಯಲ್ಲಿ ಜಿಗಿತ ಕಂಡಿದೆ. ಈ ಜಿಗಿತವು ಎಷ್ಟರಮಟ್ಟಿಗೆ ಸ್ಥಿರತೆ ಕಾಣುವುದು ಎಂಬುದನ್ನು ಕಾದು ನೋಡಬೇಕಾಗಿದೆ.

    ಆಕರ್ಷಕ ಲಾಭಾಂಶದ ಸುರಿಮಳೆ ನಿರರ್ಥಕ:

    ಫೆಬ್ರವರಿ 19 ರಂದು ವಿದೇಶಿ ವಿತ್ತೀಯ ಸಂಸ್ಥೆಗಳು ರೂ.190.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದವು. ಅಲ್ಲಿಂದ ಮಾರ್ಚ್‌ 26 ರವರೆಗೂ ನಿರಂತರ ಮಾರಾಟದ ಹಾದಿಯಲ್ಲಿದ್ದವು. ಈ ಒಂದು ತಿಂಗಳ ಅಂತರದಲ್ಲಿ ಕಂಪನಿಗಳಾದ ಬಿ ಪಿ ಸಿ ಎಲ್‌ ಪ್ರತಿ ಷೇರಿಗೆ ರೂ.16.50, ಅಲೆಂಬಿಕ್‌ ಫಾರ್ಮ ರೂ.10, ಸವಿತಾ ಟೆಕ್ನಾಲಜೀಸ್‌ ರೂ.20, ಎಕ್ಸೆಲ್‌ ಇಂಡಸ್ಟ್ರೀಸ್‌ ರೂ.10, ಸುಂದರಂ ಕ್ಲೇಟನ್‌ ರೂ.31, ಟಿವಿಎಸ್‌ ಶ್ರೀಚಕ್ರ ರೂ.21.10, ಟೊರೆಂಟ್‌ ಫಾರ್ಮ ರೂ.32, ಸನ್‌ ಟಿವಿ ರೂ.12.50, ಬಾಂಕೋ ಇಂಡಿಯಾ ರೂ.20, ಕೋಲ್‌ ಇಂಡಿಯಾ ರೂ.12, ಗಾಡ್ ಫ್ರೆ ಫಿಲಿಪ್ಸ್‌ ರೂ.24, ಟೆಕ್‌ ಮಹೀಂದ್ರ ರೂ.10, ಬಜಾಜ್‌ ಆಟೋ ರೂ.125, ಬಜಾಜ್‌ ಹೋಲ್ಡಿಂಗ್ಸ್‌ ರೂ.40, ಬಜಾಜ್‌ ಫೈನಾನ್ಸ್‌ ರೂ.10, ಎಚ್‌ ಎ ಎಲ್‌ ರೂ.33, ಎಲ್‌ & ಟಿ ರೂ.10, ಜೆ ಬಿ ಕೆಮಿಕಲ್ಸ್ ರೂ.10, ಮಹರಾಷ್ಟ್ರ ಸ್ಕೂಟರ್ಸ್‌ ರೂ.50, ಸನೋಫಿ ರೂ.349, ಸೊನಾಟಾ ಸಾಫ್ಟ್‌ ವೇರ್‌ ರೂ.14.50, ಫಿನೋಲೆಕ್ಸ್‌ ರೂ.10 ರಂತೆ ಲಾಭಾಂಶ ಪ್ರಕಟಿಸಿ, ಘೋಷಿಸಿ, ವಿತರಿಸಿವೆ. ಆದರೂ ಷೇರುಪೇಟೆ ಈ ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟದ ಭರಾಟೆಯಲ್ಲಿ ಸಿಲುಕಿ, ನಲುಗಿ ರೂ.55 ಲಕ್ಷ ಕೋಟಿಯಷ್ಟು ಬಂಡವಾಳಿಕರಣ ಮೌಲ್ಯವನ್ನು ಕಳೆದುಕೊಂಡಿತು.

    ವಾಸ್ತವ ಪರಿಸ್ಥಿತಿ:

    ಹಿಂದಿನ ವಾರ ರೀಟೇಲ್‌ ಗ್ರಾಹಕರ ಹೂಡಿಕೆ ಪ್ರಥಮ ಭಾರಿಗೆ ರೂ.10 ಲಕ್ಷ ಕೋಟಿ ದಾಟಿದೆ ಎಂಬ ಅಂಶವು ಮಾಧ್ಯಮಗಳಲ್ಲಿ ಹೆಡ್‌ ಲೈನ್‌ ಸುದ್ಧಿಯಾಯಿತು. ಇದೇನು ಮಹಾ ಸಾಧನೆಯೇ? ಸುಮಾರು ರೂ.169 ಲಕ್ಷ ಕೋಟಿ ಮಾರ್ಕೆಟ್‌ ಕ್ಯಾಪ್‌ ಇರುವ ಪೇಟೆಯಲ್ಲಿ ರೀಟೇಲ್‌ ಹೂಡಿಕೆದಾರರ ಭಾಗ ಕೇವಲ ರೂ.10 ಲಕ್ಷ ಕೋಟಿ ಎಂದರೆ ಪೇಟೆಯಲ್ಲಿ ನಡೆಯುತ್ತಿರುವ ಚಟುವಟಿಕೆಯಲ್ಲಿ ಕಂಪನಿಯ ಪ್ರವರ್ತಕರು, ವಿದೇಶಿ ಹೂಡಿಕೆದಾರರು, ಸ್ಥಳೀಯ ವಿತ್ತೀಯ ಹೂಡಿಕೆದಾರರು, ಮ್ಯುಚುಯಲ್ ಫಂಡ್‌ ಹೂಡಿಕೆಗಳದೇ ಕಾರುಬಾರು. ಅದರೂ ರೀಟೇಲ್‌ ಹೂಡಿಕೆದಾರರ ಆಸಕ್ತಿ ವಿತ್ತೀಯ ಪೇಟೆಗಳಲ್ಲಿ ಹೆಚ್ಚುತ್ತಿದೆ. ಜುಲೈ 10 ರಂದು 5.15 ಕೋಟಿ ನೋಂದಾಯಿತ ಹೂಡಿಕೆದಾರರಿದ್ದರೆ ಅದು ಈ ತಿಂಗಳ 13 ರಂದು 5.67 ಕೋಟಿಗೆ ಏರಿಕೆ ಕಂಡಿದೆ. ಈ ಮಧ್ಯೆ ಸೂಚ್ಯಂಕಗಳು, ಷೇರಿನ ದರಗಳ ಏರಿಕೆಗೂ ದೇಶದ ಆರ್ಥೀಕತೆಗೂ ಸಂಬಂಧವಿಲ್ಲವೆಂದು ಹಲವಾರು ವಿಶ್ಲೇಷಣೆಗಳು ಬಂದರೂ, ರಿಸರ್ವ್‌ ಬ್ಯಾಂಕ್‌ ಗೌರ್ನರ್‌ ರವರೂ ಇವೆರಡಕ್ಕೂ ಸಂಬಂಧವಿಲ್ಲವೆಂದು ಆಗಷ್ಟ್‌ ತಿಂಗಳಲ್ಲಿ ಹೇಳಿಕೆ ಕೊಟ್ಟಮೇಲೂ ಸೂಚ್ಯಂಕಗಳು ಏರಿಕೆ ಕಂಡಿವೆ. ಸೆನ್ಸೆಕ್ಸ್‌ ಸುಮಾರು 5,400 ಪಾಯಿಂಟುಗಳಷ್ಟು ಏರಿಕೆ ಕಂಡಿದೆ. ಈಗಿನ ಏರಿಕೆಯ ರೀತಿ ನೋಡಿದರೆ ಷೇರಿನ ಬೆಲೆಗಳು ರಸ್ತೆ ಬದಿ ಅಂಗಡಿಯಲ್ಲಿ ಕೊಳ್ಳುತ್ತಿದ್ದ ಪಾಪ್ ಕಾರ್ನ್‌ ಬೆಲೆಗೂ ಅದೇ ಪಾಪ್‌ ಕಾರ್ನ್‌ ನ್ನು ಮಲ್ಟಿಪ್ಲೆಕ್ಸ್‌ ಗಳಲ್ಲಿ ಖರೀದಿ ಬೆಲೆಗೂ ಇರುವ ಅಂತರದಷ್ಟು ಬದಲಾಗಿವೆ.

    ಈಗ ಪ್ರದರ್ಶಿತವಾಗುತ್ತಿರುವ ತೇಜಿಯು ಪೇಟೆಯೊಳಗೆ ನುಸುಳಿ ಬರುತ್ತಿರುವ ಹಣವೇ ಹೊರತು ಕಾರ್ಪೊರೇಟ್‌ ಗಳ ಆಂತರಿಕ ಸಾಧನೆಯಿಂದಲ್ಲ. ಹಾಗಾಗಿ ಬಂಡವಾಳ ಸುರಕ್ಷತೆಯತ್ತ ಹೆಚ್ಚಿನ ಗಮನ ನೀಡುವುದು ಅತ್ಯವಶ್ಯಕವಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಅಮ್ಮ ಹಚ್ಚಿದ ಹೂ ಕುಂಡ

    ನಮ್ ಕಡೆ ದೀಪಾವಳಿ ಅಂದರೆ ನನಗೆ ನೆನಪಾಗುವುದು ನನ್ನ ತವರು ಮನೆಯ ದೀಪಾವಳಿಯೇ. ಹಾಗಂತ ಕೊಟ್ಟ ಮನೆಗೂ ಹುಟ್ಟಿದ ಮನೆಗೂ ಘನಂದಾರಿ ದೂರ ಏನಲ್ಲ.ಒಂದೇ ತಾಲೂಕು ಕೂಡ. ಅಬ್ಬಾಬ್ಬಾ ಅಂದರೆ ಇಪ್ಪತ್ತು ಕಿಮಿ.ರಸ್ತೆ ಗುಂಡಿಯಿಂದಾಗಿ ಹದಿನೆಂಟು ನಿಮಿಷದ ಪ್ರಯಾಣ. ಆದರೂ ಅಮ್ಮನ ಮನೆ ದೀಪಾವಳಿಗೂ ಇಲ್ಲಿನ ದೀಪಾವಳಿಗೂ ಡಿಫರೆನ್ಸು ಬಾಳಾ ಇದೆ.

    ಅಲ್ಲಿ ಒಟ್ಟು ಮೂರುದಿನದ ದೀಪಾವಳಿ ಸಡಗರ.ನಮ್ ಕಡಿಗೆಲ್ಲಾ ದೀಪಾವಳಿನಾ ‘ದೀವಳಿಗೆ’ಹಬ್ಬ ಅಂತೀವಿ.ಈ ಹಬ್ಬದ ಒಂದು ಖುಷಿ ಹೇಳೇಬಿಡ್ತಿನಿ. ಮನೇಲಿ ಹಬ್ಬ ಅಂದರೆ ಉಜ್ಜು ತಿಕ್ಕು ತೊಳಿ ಬಳಿ ಗುಡಿಸು ಸಾರಿಸುಗಳಿಂದಾಗಿ ಮನ್ಸು ದೇಹ ಎರಡೂ ಹೈರಾಣಾದ್ರೂ ಚಿಂತಿಲ್ಲ. ಮನೆ ಮಾತ್ರ ಫಳಪಳ ಹೊಳೀಬೇಕು. ಅದೇ ಪದ್ದತಿ. ಅತ್ತೆಮಾವ ಅಂತ ಹಿರಿಯರು ಇಲ್ದೇ ಇದ್ದ ಮನೇಲೂ ಅವರು ನಡೆಸಿದ ತೊಳಿಬಳಿ ಯಜ್ಞವನ್ನು ಮಾಡದೇ ಹೋದರೆ ಏನೋ ಪಾಪ ಪ್ರಜ್ಞೆ.

    ದೀವಳಿಗೆಯ ಖುಷಿ ಏನಾಪ ಅಂದ್ರೆ ಈ ಹಬ್ಬಕ್ಕೆ ‘ತೊಳಿಬಳಿ’ ಸಮಾಚಾರ ಸ್ವಲ್ಪ ಕಡಿಮೆ. ಗೌರಿ ಹಬ್ಬದ ಹಂಗೆ ಪೂಜೆಗೆ ಹೊಂದಿಸುವ ದೊಡ್ಡ ಕೆಲಸ ಇಲ್ವೇ ಇಲ್ಲ. ಯುಗಾದಿ ಹಂಗೆ ಒಬ್ಬಟ್ಟು ಮಾಡೋ ಉಸಾಬರಿ ಇಲ್ಲ.
    ಶಿವರಾತ್ರಿಯ ಹಾಗೇ ತಂಬಿಟ್ಟು ,ಜಾಗರಣೆಯೂ ಇಲ್ಲ. ಷಷ್ಟಿ ಸಂಕ್ರಾಂತಿಯಲ್ಲೂ ಆಯಾ ಋತುಮಾನಕ್ಕನುಸಾರ ಕೆಲಸ,ಅಡುಗೆ ಜೋರಿರುತ್ತೆ. ದೀವಳಿಗೆಗೆ ದೋಸೆಯ ಜೊತೆಗೆ ಸೋರೆಹಣ್ಣಿನ ಪಲ್ಯ ಮತ್ತು ಹಾಲುಪಾಯಸ ಮಾಡಿದ್ರೆ ಮುಗೀತು.

    ಆದರೆ ಸಕಲೇಶಪುರ ಆಲೂರು ಸೀಮೆಯ ನಮ್ಮ ಹಳ್ಳಿಗಳಲ್ಲಿ ದೀವಳಿಗೆ ಹಬ್ಬದಲ್ಲಿ ಮನೆಯ ಗಂಡಸರಿಗೆ ಮಾತ್ರ ಜಬರದಸ್ತ ಕೆಲಸ. ನಮ್ಮಲ್ಲಿ ಹುಣ್ಣಿಮೆ ಮುಗಿದಾಗಿಂದ ಅಮಾವಾಸ್ಯೆ ಕಳೆದು ಮೂರು ದಿನದವರೆಗೂ ಒಂದೊಂದು ಊರಿಗೆ ಒಂದೊಂದು ದಿನ ದೀಪಾವಳಿ.ಬಹುಶಃ ಹತ್ತುದಿನಗಳವರೆಗೆ ಒಂದಿಲ್ಲೊಂದು ದಿನ ಒಂದಿಲ್ಲೊಂದು ಊರಲ್ಲಿ ಹಬ್ಬ ನಡೀತಾ ಇರುತ್ತೆ.

    ಮೇಲೆ ಊರು,ಕೆಳ್ಳೆ ಊರು,ಹಿರೇ ಊರು, ಕಿರೇ ಊರು ಅಂತ ಆಯಾ ಊರಿನ ವರ್ಗಕ್ಕನುಸಾರ ಹಬ್ಬ ಮೊದಲು ಬರ್ತದೆ ಅಥವಾ ಕೊನೆಗೇ ಆಗ್ತದೆ.ಆಯಾ ಊರಿಗೆ ಬೇರೆಬೇರೆ ದಿನದಲ್ಲಿ ದೀಪಾವಳಿ ಬಂದು ಬೆಳಗಿ ಹೋಗುವುದು ಪದ್ದತಿಯಾಗಿರುವುದರಿಂದ ನಮ್ಮಲ್ಲಿ “ದಿಕ್ಕಿಲ್ಲದ ದೀಪಾವಳಿ” ಅಂತ ಈ ಹಬ್ಬಕ್ಕೆ ಹೇಳುವುದು ರೂಢಿ. ಇನ್ನೂ ನಮ್ಮಲ್ಲಿ ಕೆಲವು ಮನೆತನಗಳಲ್ಲಿ ಹಿರಿಯರಿಗೆ ಎಡೆ ಇಡುವುದು ಕೂಡ ಸಾಮಾನ್ಯವಾಗಿ ದೀಪಾವಳಿ ಅಮಾವಾಸ್ಯೆಯಂದೇ.

    ನಾವು ಚಿಕ್ಕವರಿದ್ದಾಗ ಬಹುತೇಕ ಎಲ್ಲರ ಮನೆಯಲ್ಲೂ ಕನಿಷ್ಠ ಇಪ್ಪತ್ತು ದನಕರುಗಳು ಇಲ್ಲದ ಮನೆಯೇ ಇಲ್ಲ.ನಾನು ಮದುವೆಯಾಗಿ ಈ‌ ಮನೆಗೆ ಬಂದಾಗ ಗಂಡನ ಮನೆಯಲ್ಲಿ ನೂರಕ್ಕೂ ಮೀರಿ ದನಕರುಗಳು ಇದ್ದವು.
    ದನಕರು ಹೆಚ್ಚಿಗಿದ್ದಷ್ಟೂ ಕೊಟ್ಟಿಗೆ ದೊಡ್ಡದು!ಕೊಟ್ಟಿಗೆ ಗೆ ತಕ್ಕಂತೆ ತಿಪ್ಪೆಯ ಸೈಝು.!ನಾಕು ದಶಕಗಳ ಹಿಂದೆ ತಿಪ್ಪೆಯ ಸೈಝು ಆಕಾರ ನೋಡಿ ಹೆಣ್ಣು ಕೊಡ್ತಿದ್ರಂತೆ.!ತಿಪ್ಪೆಯ ಆಕಾರ ದೊಡ್ಡದಿದ್ದಷ್ಟೂ ಮನೆಯ ಗಂಡಸು ಘನವಾದ ಕೆಲಸಗಾರ ಅಂತ.ಅಂತವನ ಕೈ ಹಿಡಿದರೆ ಮಗಳೂ ಸುರಕ್ಷಿತವಾಗಿರ್ತಾಳೆ ಅಂತೊಂದು ನಂಬಿಕೆ ಇತ್ತಂತೆ. ವಿಷಯಾಂತರ ಆಯ್ತು.ಕ್ಷಮ್ಸಿ.

    ದೀವಳಿಗೆ ಹಬ್ಬಕ್ಕೂ ದನಕರುಗಳಿಗೂ ನಮ್ಮಲ್ಲಿ ಅವಿನಾಭಾವ ಸಂಬಂಧ. ಎಲ್ಲಾ ದನಕರುಗಳು ಅಂತಿಲ್ಲದಿದ್ರೂ ಕರೆಯೋ ಹಸು,ಪುಟಾಣಿ ಕರು ,ಜೊತೆಗೆ ಎತ್ತುಗಳಿದ್ರೆ ಅವಕ್ಕೂ ಹಬ್ಬದ ವಿಶೇಷವಾಗಿ ಜಳಕ.
    ಅವು ಅಪರೂಪಕ್ಕೆ ಸಿಕ್ಕುವ ಮೀಯುವ ಸುಖಕ್ಕೆ ಕಿವಿಯೆತ್ತಿ ಕಾಲೆತ್ತಿ ಮೈ ಉಜ್ಜಿಸಿಕೊಂಡಿದ್ದೇ ಉಜ್ಜಿಸಿಕೊಂಡಿದ್ದು.ಸ್ನಾನ ಆದಮೇಲೆ ಕೊಟ್ಟಿಗೆಗೆ ಕಟ್ಟಿ ದೋಸೆ ನೈವೇದ್ಯ. ಕಾಡಿನ ಹೂವುಗಳನ್ನು ಗೋಣಿದಾರದಲ್ಲಿ ಕಟ್ಟಿ ಕೊರಳಿಗೆ ಹಾಕುವ ಖುಷಿ. ಇದರ ಜೊತೆಗೆ ನಾವು ಚಿಕ್ಕವರಿರುವಾಗ
    ದೀಪಾವಳಿ ಹಬ್ಬ ಮಕ್ಕಳ ಹಬ್ಬವೂ ಆಗಿ ಆ ದಿನ ಕೊಟ್ಟಿಗೆಯನ್ನು ತೊಳೆದು ಗದ್ದೆ ಮಣ್ಣು ತಂದು ವಿಧವಿಧವಾದ ಗೊಂಬೆಗಳನ್ನು ಮಾಡಿ (ಮಡಿಕೆ,ಕುಡಿಕೆ, ಮನುಷ್ಯ, ಮಗು,ದನಕರು,ಬೆಕ್ಕು,ಸೂರ್ಯ,ಚಂದ್ರ) ಹಾಲುತಂಬಿಗೆ ಇಡೋ ಗೂಡಿನಲ್ಲಿಡ ಬೇಕಿತ್ತು. ಕೌಟೇಕಾಯಿಯಿಂದ ಹಣತೆ ಮಾಡಿ ಹಚ್ಚಿ ದನಕರುಗಳಿಗೆ ಪೂಜೆ ಮಾಡಿ ,ಮಾಡಿಟ್ಟ ಗೊಂಬೆಗಳಿಗೂ ಪೂಜೆ ಮಾಡಿ ಮನೆಯಲ್ಲಿ ಮಕ್ಕಳೂ ,ದನಕರುಗಳೂ ಸಮೃದ್ದಿಯಾಗಲಿ ಅಂತ ಪೂಜೆ. ಕ್ರಮೇಣ ಹೇಗೋ ಮಕ್ಕಳ ಹಬ್ಬ ನೇಪಥ್ಯಕ್ಕೆ ಸರಿದು‌ ಮರೆಯಾಯ್ತು.

    ಮೊದಲೇ ಹೇಳಿದ್ನಲ್ಲಾ..ತಿಪ್ಪೆಗೂ ದೀವಳಿಗೆಗೂ ಸಮ್ ಸಂಬಂಧ ಅಂತ.
    ತಿಪ್ಪೆ ಅಂತ ಹೆಸರಿಟ್ಟಿರುವುದೇ ಕೊಳಕು ಮಾಡ್ಲಿಕ್ಕೆ ಅನ್ನುವ ಹಾಗೆ ಸಿಕ್ಕಿದ್ದೆಲ್ಲವನ್ನೂ ಸುರಿಯುವ ತಿಪ್ಪೆಗೇ ದೀವಳಿಗೆಯಲ್ಲಿ ಅಲಂಕಾರ ನಮ್ಮಲ್ಲಿ. ತಿಪ್ಪೆ ಸುತ್ತ ಕೆತ್ತಿ ಚೊಕ್ಕ ಮಾಡಿ ಮದ್ಯದಲ್ಲಿ ದೊಡ್ಡ ಕೇದಿಗೆಯ ಗರಿ (ಇದನ್ನು ಚ್ಯಾದಿಗೆ ನೆಡುವುದು ಅಂತಾರೆ)ಮತ್ತು ಲಕ್ಕಿ ಸೊಪ್ಪುಗಳನ್ನು ತಿಪ್ಪೆ ಮದ್ಯೆ ವೇದಿಕೆ ಮಾಡಿ ನಿಲ್ಲಿಸುವುದು.
    ಆಮೇಲೆ ಕರಗಿದ ಆ ಸಗಣಿಯ ಮಧ್ಯಕ್ಕೆ ಹೋಗಿನಿಂತು ವಿಶೇಷವಾಗಿ ಚೆಂಡು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಿ ಹಾಲುತುಪ್ಪ ಎರೆಯುವುದು. ಮತ್ತು ಹಾಗೇ ಪೂಜಿಸಿಕೊಂಡ ತಿಪ್ಪೆಯೇ ಪ್ರತಿ ಊರಿನಲ್ಲೂ ಹಬ್ಬ ಮುಗಿದದ್ದಕ್ಕೆ ಸಂಕೇತ.

    ಇದಲ್ಲದೆ..

    ಸಗಣಿಯ ಸಣ್ಣಸಣ್ಣ ಉಂಡೆಗಳನ್ನು ಮಾಡಿ ಅದಕ್ಕೆ ಚೆಂಡು ಹೂವು ಸುತ್ತಕ್ಕೂ ಸಿಕ್ಕಿಸಿ ಅದನ್ನು ಸೋರೆ ಎಲೆಯ ಮೇಲಿಟ್ಟು ಅದಕ್ಕೆ ಉತ್ತರಾಣಿ ಕಡ್ಡಿ ಸಿಕ್ಕಿಸಿದರೆ ಅದು ‘ಚರಕ’. ಇದು ಗೊಬ್ಬರದ ಲಕ್ಷ್ಮಿಯ ಸಂಕೇತ. ಈ ಚರಕಗಳನ್ನು ಅಕ್ಕಿ ಜಲಿಸುವ ಜರಡಿಯಲಿಟ್ಟು ಪೂಜಿಸಿ ಹಾಲು ತುಪ್ಪ ಎರೆದು ತಿಪ್ಪೆಯ ಮಧ್ಯಕ್ಕೂ ಮನೆಯಲ್ಲಿರುವ ಅಷ್ಟೂ ಬಾಗಿಲಿಗೂ, ಗೇಟು , ತೋಟ,ಮೇಷಿನು ಮನೆಗೂ ಇಡುವುದು ಮತ್ತು ಐದುದಿನಗಳವರೆಗೂ ಅದನ್ನು ಹಾಗೇಯೇ ಬಿಟ್ಟು ನಂತರ ಪುನಃ ಅದನ್ನು ತಿಪ್ಪೆಗೆ ಇಟ್ಟುಬರುವುದು ಹಬ್ಬದ ಮತ್ತೊಂದು ಆಚರಣೆ. ಹಬ್ಬಕ್ಕೆ ನಮ್ಮಲ್ಲಿ ದೋಸೆ ಮತ್ತು ಸೋರೆಹಣ್ಣಿನ ಪಲ್ಯವೇ ಕಡ್ಡಾಯವಾಗಿ ಎಡೆ.
    ಜೊತೆಗೆ ಹಾಲುಪಾಯಸ. ಸೋರೆಹಣ್ಣೇ ಯಾಕೆಂದರೆ ತಿಪ್ಪೆಯ ಮೇಲೆ ಎರಚಲಾಗಿದ್ದ ಸೋರೆ ಬೀಜಗಳು ಈ ವೇಳೆಗೆ ಫಲ ಕೊಡಲು ಶುರುವಾಗಿರುತ್ತವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ ‘ಪಾಲಿಸಿ ಇದು.

    ಹಬ್ಬದ ದಿನ ದೋಸೆ ಹಿಟ್ಟನ್ನು ಒಂದು ತಟ್ಟೆಗೆ ತೆಗೆದುಕೊಂಡು ಅದನ್ನು ಮನೆಯ ಅಷ್ಟೂ ದನಕರುಗಳು ,ನಾಯಿ ,ಮನೆಯ ಗೋಡೆ ,ಬಾಗಿಲು,
    ಆಮೇಲೆ ನಮ್ಮೆಲ್ಲರ ಬೆನ್ನ ಮೇಲೂ ಹಾಕಿಕೊಂಡು ಸಂಭ್ರಮಿಸುತ್ತಿದ್ದದ್ದು ಈಗ ನೆನಪು ಅಷ್ಟೆ.ಹಾಗೆ ಮಾರ್ಕು ಮಾಡುವುದನ್ನು ‘ಹುಂಡರಿಕೆ’ ಹೊಡೆಯುವುದು ಅಂತಾರೆ. ಆಗೆಲ್ಲಾ ಯಾರಿಗೆ ಯಾರು ಮೊದಲು ಹುಂಡರಿಕೆ(ದೋಸೆ ಹಿಟ್ಟಿನಲ್ಲಿ ಬೆನ್ನಿಗೆ ಮಾರ್ಕು ಮಾಡುವುದು) ಹೊಡಿತಾರೆ ಅಂತ ಹಠ,ಆಟ. ಇದು ದೀಪಾವಳಿಯ ಇನ್ನೊಂದು ಆಚರಣೆ.

    ಇದಲ್ಲದೆ

    ‘ಬೆಳಗುಂಬಳ ಬೀಳು’ ಅಂತ ಒಂದು ಸಿಕ್ತದೆ. ಇದು ದೀಪಾವಳಿಗೆ ನಮಗೆ ಅಗತ್ಯವಾಗಿ ಬೇಕಾದ ಪರಿಕರ. ಅದನ್ನು ಕೊಯ್ದು ತಂದು ಅದರಿಂದ ಸಣ್ಣ ಮತ್ತು ದೊಡ್ಡ ಉಂಗುರಾಕೃತಿ ಮಾಡಿ ದನಕರುಗಳಿಗೆ, ಅಕ್ಕಿ, ಧನ ,ಧಾನ್ಯ ಕಣಜ,ತೋಟ,ದುಡ್ಡಿನ ಡಬ್ಬ,ಬಂಗಾರದ ಡಬ್ಬ ,ರೇಷ್ಮೆ ವಸ್ತು ಗಳು ಇದೆಲ್ಲಕ್ಕೂ ಇಡುವ ಪದ್ದತಿ.

    ಯಾವ ವಸ್ತು ಬೆಳೆದು ಸಮೃದ್ಧ ವಾಗಬೇಕೋ ಅದೆಲ್ಲಕ್ಕೂ ಬೆಳಗುಂಬಳದ ಉಂಗುರ ಇಡುವುದು ಹಬ್ಬದ ಕುರುಹು. ಬೆಳಗುಂಬಳಕ್ಕೆ ವಿಶೇಷವಾದ ಬೆಳೆಯುವ ಶಕ್ತಿ ಇದೆಯಾದ್ದರಿಂದ ಹಾಗೇ ಅದನ್ನು ಇಟ್ಟ ಸಾಮಾಗ್ರಿಗಳೆಲ್ಲವೂ ವೃದ್ದಿಸಲಿ ಎನ್ನುವ ನಂಬಿಕೆಯೊಂದಿಗೆ ಇದನ್ನು ಮಾಡ್ತೇವೆ. ನಾನು ಚಿಕ್ಕವಳಿದ್ದಾಗ ಅಪ್ಪನಿಂದ ಬೆರಳಿಗೆ ಉಂಗುರ ಮಾಡಿಸಿ ಹಾಕಿಕೊಂಡಿದ್ದಲ್ಲದೆ ತಲೆಗೂದಲಿಗೂ ಬೆಳಗುಂಬುಳದ ಉಂಗುರ ಹಾಕಿಸಿಕೊಳ್ತಿದ್ದೆ. (ಇನ್ನು ‌ಮೂರೇ ದಿನಕ್ಕೆ ನನ್ನ ತಲೆಗೂದಲು ಸೊಂಟದವರೆಗೂ ಬೆಳೆದಿರುತ್ತೆ ಅಂತ ಸಂಭ್ರಮಿಸಿಕೊಂಡು ಆಮೇಲೆ ಆ ಸಿನೆಮಾ ನಟಿಯರ ಥರ ನಾನೂ ಜಡೆಯನ್ನು ಕುಣಿಸಿ ನಡೆಯಬಹುದು ಅಂತೆಲ್ಲಾ ಕನಸು ಕಾಣ್ತಿದ್ದೆ.)

    ಹಬ್ಬ ಮುಗಿದು ತಿಪ್ಪೆಗೆ ಹಾಲುತುಪ್ಪ ಎರೆದು ಪೂಜೆ ಮಾಡಿ,ಬಸವಣ್ಣನ‌ ಕಟ್ಟೆ ಪೂಜೆ ಮಾಡಿ ಊಟ ಮುಗಿದ ಮೇಲೆ ಏನಿದ್ರೂ ಪಟಾಕಿಯ ಸಡಗರ.
    ಅಣ್ಣತಮ್ಮ ನಿಗೆ ಸದ್ದು ಮಾಡುವ ದೊಡ್ಡ ಪಟಾಕಿಗಳಾದರೆ ನಂಗೆ ಹೂಕುಂಡ,ಸುಸುರು ಬತ್ತಿ,ವಿಷ್ಣು ಚಕ್ರ, ಹಾವು ಬಹಳ ಇಷ್ಟ. ಅದೆಷ್ಟೇ ಇಷ್ಟವಾದರೂ ಸುಸುರು ಬತ್ತಿ ಹಚ್ಚಲಿಕ್ಕೂ ನಂಗೆ ಜೀವ ಭಯ. ನಾನು ಮತ್ತು ನಮ್ಮ ಮನೆ ನಾಯಿ ಪಟಾಕಿ ಸಮಯಕ್ಕೆ ಹೆದರಿ ಮನೆ ಮೂಲೆ ಸೇರಿರತಿದ್ವಿ. ಆಗೆಲ್ಲಾ ನಂಗೆ ಹೆದರಪುಕ್ಲಿ ಅಂತ ಅಡ್ಡಹೆಸರು ಕಾಯಮ್ಮು.

    ಇನ್ನು ಲಕ್ಷ್ಮಿ ಪೂಜೆ.

    ಎಲ್ಲಾ ಊರಿನಂತೆ ಅಮಾವಾಸ್ಯೆ ದಿವಸದಂದು ಮಾಡುವುದು.
    ಸಂಜೆಯ ಶುಭ ಘಳಿಗೆ ನೋಡಿ ಅಮ್ಮ ದೀಪ ಹಚ್ಚಿ ಶುಭಾರಂಭ ಮಾಡ್ತಿದ್ರು. ಮನೆಯಲ್ಲಿದ್ದ ದೊಡ್ಡ ಕಟ್ಟು ಹಾಕಿದ ಲಕ್ಷ್ಮಿ ಫೋಟೊ ವನ್ನು ಗೋಡೆಯಿಂದ ಕೆಳಗಿಳಿಸಿ ಒರೆಸಿ ಶುಭ್ರ ಮಾಡಿ ತಳಿರು ಬಾಳೆಕಂದುಗಳಿಂದ ಅಲಂಕೃತವಾದ ಕುರ್ಚಿಯಲ್ಲಿ ಕೂರಿಸಿ, ಅದಕ್ಕೆ ವಿಧ ವಿಧವಾದ ನಾಣ್ಯಗಳನ್ನು ಸುಂದರವಾಗಿ ಹಾರದಂತೆ ಅಂಟಿಸಿ ,ಐದರ ಹತ್ತರ ನೂರರ ನೋಟುಗಳನ್ನು ಹಾರ ಮಾಡಿ ಹಾಕಿ ಪೂಜಿಸಿ ಗರ್ಜಿಕಾಯಿ,ಚಿತ್ರಾನ್ನದ ನೈವೇದ್ಯ..

    ಲಕ್ಷ್ಮಿ ಗೆ ಸುಸುರು ಬತ್ತಿಯಿಂದಲೇ ಆರತಿ ಪೂಜೆ ಎಲ್ಲವೂ.ಏ
    ಪೂಜೆ ಊಟ ಮುಗಿದ ಮೇಲೆ ನಾವು ಮೂವರು ಮಕ್ಜಳೂ ಹಂಚಿಕೊಟ್ಟಿದ್ದ ಪಟಾಕಿ ಹಿಡಿದು ನೀರೊಲೆಯಿಂದ ಕೆಂಡ ಇರುವ ಕೊಳ್ಳಿ ತಂದು ಅಂಗಳಕಿಟ್ಟುಕೊಂಡು ಪಟಾಕಿ ಹಚ್ಚುವ ಸಡಗರ.

    ಅಣ್ಣ ತಮ್ಮ ಸದ್ದು ಮಾಡುವ ಪಟಾಕಿ ಸುಟ್ಟರೆ ನಾನು ನಡುಗುವ ಕೈಗಳಲಿ ವಿಷ್ಣು ಚಕ್ರಕ್ಕೆ ಊದುಬತ್ತಿಯನ್ನು ಉದ್ದಾನುದ್ದ ಕೋಲಿಗೆ ಸಿಕ್ಕಿಸಿ ಕಿಡಿ ತಾಗಿಸಿ ಎದ್ದೆನೊಬಿದ್ದೆನೊ ಎನುವಂತೆ ಜಗುಲಿ ಸೇರಿಕೊಳ್ತಿದ್ದೆ.

    ಅಪ್ಪ ನನ್ನ ಭಯ ನೋಡಲಾಗದೆ ನನ್ನ ಪಾಲಿನ ಪಟಾಕಿಗೆ ಅವರೇ ಕಿಡಿ ತಾಗಿಸಿ ನನ್ನ ನೋಡಲು ಕರೆಯುತ್ತಿದ್ದರು.ಸುಮಾರು ರಾತ್ರಿ ಹನ್ನೊಂದು ಗಂಟೆವರೆಗೂ ನಡೆಯುತ್ತಿದ್ದ ಈ ಪಟಾಕಿ ಸಂಭ್ರಮ ನಾವು ಹೈಸ್ಕೂಲ್ ಮುಗಿಸುವವರೆಗೂ ಸ್ವಾರಸ್ಯಕರ ವಾಗೇ ನಡೆಯಿತು. ಆಮೇಲೆ ನಾವೆಲ್ಲರೂ ವಿಪರೀತ ಬುದ್ದಿವಂತರಾದೆವೇನೋ. ಪಟಾಕಿ ಹಚ್ಚುವುದು ಮಾಲಿನ್ಯ ಅಂತ ಅನ್ನಿಸಿ ಸುಮ್ಮನಾದೆವು.

    ಅಮಾವಾಸ್ಯೆ ಮಾರನೆ ದಿನ ಬೆಟ್ಟ ಹತ್ತುವ ಖುಷಿ. ಮನೆಯ ಎದುರಿನ ಪಾರ್ವತಮ್ಮನ ಬೆಟ್ಟ ಹತ್ತಿ ಹಣ್ಣುಕಾಯಿ ಮಾಡಿಕೊಂಡು ಊರವರೆಲ್ಲಾ ಸೇರಿ ಸಂಭ್ರಮಿಸಿದರೆ ಮೂರುದಿನಕ್ಕೆ ದೀಪಾವಳಿ ಮುಗಿಯುತ್ತಿತ್ತಾದರೂ ನಾವು ಅದನ್ನು ಹಾಗೆ ಮುಗಿಸಗೊಡುತ್ತಿರಲಿಲ್ಲ.

    ಹಬ್ಬದ ಮಾರನೇದಿನ ಪಟಾಕಿ ಸಿಡಿಸಿದ ಮದ್ದುಗಳನ್ನು ಒಟ್ಟು ಜೋಡಿಸುವ ಸಂಭ್ರಮ. ಯಾರಿಗೆ ಹೆಚ್ಚು ಸಿಕ್ತು. ಯಾವುದರಲ್ಲಿ ಹೆಚ್ಚು ಮದ್ದಿದೆ ಅಂತ ಅಳೆಯುವ ಖುಷಿ. ಹಾಗೆ ಚುಚುರೇ ಮದ್ದು ಉಳಿದಿರುವ ಮೊದಲೇ ಸುಟ್ಟಿರುವ ಪಟಾಕಿಗಳನ್ನು ಸೂಂಯ್ ಅನ್ನಿಸುವ,ಟುಸ್ ಅನ್ನಿಸುವ,ಭಗ್ ಅನ್ನಿಸುವ ಸುಖ ಈಗಿನ ಯಾವ ಹಂಡ್ರೆಡ್ ಶಾಟ್ಸ್ ಪಟಾಕಿಗೂ ಬರಲು ಸಾಧ್ಯವೇ ಇಲ್ಲ. ಅದು ಮಾತ್ರ ನಿಜವಾದ ದೀಪಾವಳಿ ಅನಿಸ್ತದೆ ನಂಗೆ.

    ಹಬ್ಬಕ್ಕೆ ಹೊಸಬಟ್ಟೆ ,ಉಡುಗೊರೆ ಏನೂ ಇರದಿದ್ದರೂ ನೂರು ರೂಪಾಯಿ ಪಟಾಕಿಯನ್ನು ಮೂರುಜನಕ್ಕೂ ಹಂಚುತ್ತಿದ್ರು ಅಮ್ಮ.
    ಆಮೇಲೆ ಅಮ್ಮನಿಗೆ ದೊಡ್ಡದಾದ ಎರಡು ಹೂಕುಂಡ. ಸ್ಪೆಷಲ್ ಆಗಿ ಸೆಪರೇಟ್ ಆಗಿ ಕೊಟ್ಟು ಹಚ್ಚಿಸ್ತಿದ್ವಿ. ಅಮ್ಮ ಹಚ್ಚಿದ ಆ ಹೂಕುಂಡದ ನಂತರವೇ ದೀವಳಿಗೆಯ ಪಟಾಕಿ ಸಡಗರವನ್ನು ನಮಗೆ ಸಂಭ್ರಮಿಸಲಿಕ್ಕೆ ಬಿಡ್ತಿದ್ದಿದ್ದು.

    ಸಂಭ್ರಮಿಸುತ್ತಿದ್ದ ಆ ಹಳೆಯ ದಿನಗಳ ಹಳಹಳಿಕೆಯಾ ಇದು.? ಅಂತ ನೀವು ಕೇಳಿದ್ರೆ ಖಂಡಿತವಾಗಿ ಇಲ್ಲ ಅಂತೀನಿ.ನೆನಪುಗಳನ್ನು ಮತ್ತೆಮತ್ತೆ ಕಣ್ತೆರೆ ಮುಂದೆ ತಂದು ನೋಡುವುದು ಎಷ್ಟು ಸೊಗಸು ಅಂತೀರಾ ಗೊತ್ತೇ.?

    ನಾನು ಸೇರಿದ ಮನೆಯಲ್ಲಿ ದೀಪಾವಳಿ ಹಬ್ಬ ಅಂದರೆ ಬರೀ ಕೂಗಿನ ಹಬ್ಬ. ಅಂದರೆ ನಮಗೆ ಅಮಾವಾಸ್ಯೆಗೂ ಮೂರು ದಿನ ಮೊದಲೆ ಹಬ್ಬ.
    ನೀರು ತುಂಬುವ ಹಬ್ಬದ ದಿನವೇ ನಮ್ಮ ಹಬ್ಬ ಆಗಿಹೋಗ್ತದೆ.ಇದೂ ಒಂಥರಾ ಸೊಗಸೇ.

    ಆ ದಿನ ಮೊದಲ ಜಾವಕ್ಕೇ ಎದ್ದು ‘ಲಕ್ಯೋ ಲಕ್ಯೋ ಕೂಹೂ ‘ಅಂತ ಪ್ರತಿಯೊಂದು ‌ಮನೆಯ ಗಂಡಸರು ಎರಡೆರೆಡು ಬಾರಿ ಕೂಗಬೇಕು. ನಂತರ ಮದ್ದಿನ ಸೊಪ್ಪು ತಂದು ಗದ್ದೆ ತೋಟಕ್ಕೆ ಹಾಕಬೇಕು.
    ಈ ಮದ್ದಿನ ಸೊಪ್ಪನ್ನು ಜಮೀನಿಗೆ,ಮನೆಯ ಗೇಟಿಗೆ ಹಾಕುವ ಪದ್ದತಿ ಬಹುಶಃ ನಮ್ಮ ಹಾಸನ ಜಿಲ್ಲೆಯ ಎಲ್ಲ ಊರುಗಳಲ್ಲೂ ಇದೆ.
    ನಾ ಸೇರಿದ ಮನೆಯಲ್ಲಿ ತಿಪ್ಪೆ ಪೂಜೆ ,ಚರಕ ಇವೆಲ್ಲವೂ ಇದ್ದರೂ ಕ್ರಮೇಣ ಈ ಎಲ್ಲಾ ಆಚರಣೆಗಳೂ ಸಣ್ಣದಾಗುತ್ತಿವೆ.

    ಅದೇನೇ ಇದ್ದರೂ,

    ಈಗಲೂ ದೀಪಾವಳಿಗೆ ಚೆಂಡು ಹೂವು, ದೋಸೆಯ ಜೊತೆಗೆ ಸೋರೆ ಪಲ್ಯ,ಚರಕ ಮತ್ತು ತಿಪ್ಪೆಯ ಪೂಜೆ, ಉತ್ತರಾಣಿ ಕಡ್ಡಿ,ಬೆಳಗುಂಬಳದ ಬಳ್ಳಿ ,ಲಕ್ಯೋ ಲಕ್ಯೊ ಕೂಹೂ…ಇಂದಿಗೂ ನಮ್ಮಲ್ಲಿ ಮಹತ್ವ ಉಳಿಸಿಕೊಂಡಿವೆ.

    ಕಣ್ಣ ಹಣತೆಗೆ
    ಕತ್ತಲನು
    ಅದ್ದಿ ತಿದ್ದಿಕೊಂಡೆ.
    ಅವನು…

    ‘ಈಗ ದೀಪಾವಳಿ ‘ಎಂದ..

    ಬೆಳಕಿನ ಹಬ್ಬ ಸರ್ವರಿಗೂ ಶುಭ ತರಲಿ.

    ದೀಪಗಳ ಹಬ್ಬ ಬಂದಿದೆ

    ಎಲ್ಲೆಡೆಯೂ ದೀಪಾವಳಿಯ ಸಂಭ್ರಮ. ನರಕ ಚತುರ್ದಶಿಯ ಈ ಹೊತ್ತು ಮನೆ ಮನೆಗಳಲ್ಲೂ ದೀಪಗಳು ಝಗಮಗಿಸುತ್ತಿವೆ. ಈ ಹೊತ್ತಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಶಾಸ್ತ್ರೀಯ ಸಂಗೀತದ ಪಾಡ್ಕಾಸ್ಟ್ ಪ್ರಸ್ತುತ ಪಡಿಸುತ್ತಿದ್ದೇವೆ.

    ಈ ಪಾಡ್ಕಾಸ್ಟ್ ನ್ನು ನಡೆಸಿಕೊಟ್ಟವರು ಡಾ. ಸುಚೇತ. ವೃತ್ತಿಯಿಂದ ದಂತ ವೈದ್ಯೆಯಾದರು ಸಂಗೀತದಲ್ಲಿ ಆಸಕ್ತಿ. ಹೀಗಾಗಿ ಪತಿಯ ಜೊತೆ ಸೇರಿ ಸಾರಂಗ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಡಾ. ಸುಚೇತ ಅವರು ವಿದ್ವಾನ್ ಪಲ್ಲವಿ ಸಿ ವರದರಾವ್, ಸರೋಜ ಸಿದ್ಧಾಂತಿ ಮತ್ತು ವಿದುಷಿ ವೃಂದಾ ಆಚಾರ್ಯ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ.

    ಈ ಸಂಚಿಕೆ ನೀರು ತುಂಬುವ ಹಬ್ಬ ಬಂದಿದೆ ಎಂಬ ಗೀತೆಯೊಂದಿಗೆ ಆರಂಭವಾಗುತ್ತದೆ. ಈ ಗೀತೆಯನ್ನು ರಚಿಸಿದವರು ಕ್ಯಾಲಿಫೋರ್ನಿಯಾದಲ್ಲಿರುವ ರಾಮಪ್ರಸಾದ್. ಅದಕ್ಕೆ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಸುಚೇತ ಅವರದ್ದು.

    ಗಜಾನನುತಂ ಗಣೇಶ್ವರಂ ಎಂದು ವಿನಾಯಕನ್ನು ಧ್ಯಾನಿಸಿ ಮುಂದುವರಿಯುವ ಸಂಗೀತ ಸಂಜೆ ಮುಂದೆ ಪಿಳ್ಳಂಗೋವಿಯ ಚೆಲುವ ಕೃಷ್ಣನ, ಇನ್ನು ದಯಾಬಾರದೆ ದಾಸನ ಮೇಲೆ.., ಬಾರೋ ಕೃಷ್ಣಯ್ಯ ಎಂಬ ದಾಸರ ಪದಗಳೊಂದಿಗೆ ಮುಂದುವರಿದು ಸಂಗೀತ ಪ್ರಿಯ ನಮ್ಮ ಶ್ರೀರಂಗ ಎಂಬ ಹಾಡಿನೊಂದಿಗೆ ಮುಕ್ತಾಯವಾಗುತ್ತದೆ.

    ಜೊತಗೆ ಭಾರತಿ ಅವರ ವಿಶ್ಲೇಷಣೆ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ. ಇನ್ನು ಆಲಿಸುವ ಸಂಭ್ರಮ ನಿಮ್ಮದಾಗಲಿ.

    error: Content is protected !!