21.7 C
Karnataka
Wednesday, November 27, 2024
    Home Blog Page 137

    ದೀಪಾವಳಿ ಬಂದಾಯಿತು ..

    ಏನೇ ಬಂದರೂ, ಏನೇ ಆದರೂ ಏನೇ ನಿಂತರೂ ದೀಪಾವಳಿ ಎಂದಿನಂತೆ ಬಂದು ನಿಂತಿದೆ.. ಮನದ ಮೂಲೆಯಲ್ಲಿ ಹಣತೆ ಹಚ್ಚಿದಂತೆ ಒಂಚೂರು ಹೊಸತನ, ಒಂದಿಷ್ಟು ಹರ್ಷ .. ಬೇಸರದ ನಡುವೆ, ಏಕತಾನತೆಯ ನಡುವೆ ಬೆಳಕಿನ ಕಿಡಿಗಳು , ಕುಡಿಗಳ ನೆಪದಲ್ಲಿ ಸಣ್ಣ ಕಿರುನಗೆ .

    ದೀಪಾವಳಿ ಬರುವುದೇನೋ ಹೊಸತಲ್ಲ . ಬುದ್ಧಿ ತಿಳಿಯುವ ಮುನ್ನಿನಿಂದಲೂ ಬರುತ್ತಲೇ ಇದೆ.ತೀರಾ ಚಿಕ್ಕವಳಿದ್ದಾಗ ಅಮ್ಮನ ಸೆರಗ ಮರೆಯಲ್ಲಿ ನಿಂತು ಹೊರಗಿನ ಪಟಾಕಿಗಳ ಸದ್ದಿಗೆ ಬೆದರಿ ಕಿವಿಮುಚ್ಚಿ, ಸುರುಸುರುಕಡ್ಡಿಯ ಬೆಡಗಿಗೆ ಕಣ್ಣರಳಿಸಿ ದೂರದಿಂದಲೇ ಕಣ್ತುಂಬಿಸಿಕೊಂಡು ಅಮ್ಮನೋ ಅಣ್ಣನೋ ಒತ್ತಾಯದಿಂದ ಒಂದು ಮತಾಪು ಹಚ್ಚಿಸಿದರೆ ಹೆದರುತ್ತಲೇ ಹಚ್ಚುವ ದಿನಗಳಿಂದ ಮುಂದಿನ ದೀಪಾವಳಿಯ ಹೊತ್ತಿಗೆ ಗನ್ ಹಿಡಿದು ಕೇಪ್ ಪಟಾಕಿ ಹೊಡೆಯುವಲ್ಲಿಗೆ ಬಡ್ತಿ . ಢಮ್ ಎನ್ನಿಸುವಲ್ಲಿ ಖುಷಿ . ಭಯಂಕರ ಹೊಗೆ ಬರುವ ಹಾವಿನ ಪಟಾಕಿ ಹಚ್ಚಿದ ಕೂಡಲೇ ಕಪ್ಪು ಹಾವಿನಂತೆ ಹೊಗೆಕಾರುತ್ತಾ ಸುರುಳಿಸುರುಳಿ ಸುತ್ತುತ್ತಿದ್ದರೆ ಬಿಟ್ಟಕಣ್ಣು ಬಿಟ್ಟುಕೊಂಡು ನೋಡುವ ಹೊತ್ತಿಗೆ ಅಲ್ಯಾರೋ ದೊಡ್ಡ ಲಕ್ಷ್ಮಿ ಪಟಾಕಿ ಆಟಂ ಬಾಂಬ್ ಹಚ್ಚಿದ ಸದ್ದಿಗೆ ಕುಮುಟಿ ಬಿದ್ದು ಸಂಜೆಯ ಹೊತ್ತಿಗೆ ಮನೆಮನೆಯ ಮುಂದೆ ನಕ್ಷತ್ರ ಕಡ್ಡಿಯ ಬೆಡಗಿಗೆ ಮನಸೋತು.. ಮತ್ಯಾರೋ ಟ್ವೈನ್ ದಾರ ಕಟ್ಟುತ್ತಿದ್ದಾರೆ ಅಂದರೆ ರೈಲು ಪಟಾಕಿಯೇ ಅದು ಎಂದು ಎಲ್ಲ ಮಕ್ಕಳೂ ಓಡಿಹೋಗಿ ಆ ಮನೆಯ ಮುಂದೆ ನಿಂತು ಎಲ್ಲ ಸಂಭ್ರಮ ಮುಗಿದ ಮೇಲೆ ಕನಸಲ್ಲೂ ಪಟಾಕಿ ಹಚ್ಚಿ ಮುಂದಿನ ವರ್ಷಕ್ಕದೋ ಮತ್ತೊಂದು ಬಡ್ತಿ .

    ದೀಪಾವಳಿ ಎಂದರೆ ಬರೀ ಪಟಾಕಿಯಲ್ಲ .. ಅಭ್ಯಂಜನವೆಂಬ ಪರಮ ಹಿಂಸೆಯ ಶಿಕ್ಷೆ ಅನುಭವಿಸಿ ಸೆಗಣಿಯಿಂದ ಪುಟ್ಟ ಪುಟ್ಟ ಬೆನಕನನ್ನು ಮಾಡಿ ಅವುಗಳ ತಲೆಗೊಂದೊಂದು ಚೆಂಡು ಹೂವಿಟ್ಟು ಬಾಗಿಲಿನ ಎರಡೂ ಬದಿ ಸ್ಥಾಪಿಸಿ ನರಕಾಸುರನ ಕಥೆ ಕೇಳಿ ವರ್ಷಕ್ಕೊಮ್ಮೆ ಬರುವ ಬಲೀಂದ್ರನಿಗೆ ಶ್ರದ್ಧಾಭಕ್ತಿಯಿಂದ ಕೈ ಮುಗಿದು ಪಟಾಕಿ ಹೊಡೆದು ಹೋಳಿಗೆಯೂಟ ಉಂಡರೆ ಹಬ್ಬ ಮುಗಿಯಿತು.

    ಹದಿಹರೆಯ ಮೈತುಂಬಿದ ಹೊತ್ತಿನ ದೀಪಾವಳಿಯ ಸಡಗರವೇ ಬೇರೆ .. ಈಗ ಅಭ್ಯಂಜನಕ್ಕೆ ತಕರಾರಿಲ್ಲ. ಎದ್ದೊಡನೆ ಅಂಗಳದಲ್ಲಿ ಚೆಂದದ ರಂಗವಲ್ಲಿ ಅರಳಿಸಿ ಅದನ್ನೊಂದಿಷ್ಟು ಹೂ , ಬಣ್ಣಗಳಿಂದ ಸಿಂಗರಿಸಿ , ನೆತ್ತಿಗೆ ಮೆತ್ತಿದ ಎಣ್ಣೆಯನ್ನು ಪಸೆಯೂ ಉಳಿಯದಂತೆ ತಿಕ್ಕಿ ತೊಳೆದು ಹೊಸ ಬಟ್ಟೆಯುಟ್ಟು ಚಳಿಚಳಿಯ ಹದಾ ಬಿಸಿಲಲ್ಲಿ ಕೂದಲೊಣಗಿಸಿ ಸಡಿಲವಾಗಿ ನೀರುಜಡೆ ಹೆಣೆದು ಉದ್ದಜಡೆಗೆ ಹೂ ಮುಡಿದು ಲಂಗದ ನೆರಿಗೆ ಚಿಮ್ಮಿಸಿ ಗೆಜ್ಜೆಕಾಲಲ್ಲಿ ಅತ್ತಿತ್ತ ಓಡಾಡಿ ಕೈಬಳೆಗಳ ಸದ್ದಿಗೆ ತಂತಾನೇ ಮರುಳಾಗಿ ಕನ್ನಡಿಯ ಮುಂದೆ ಅರ್ಧ ಗಂಟೆ ತಿದ್ದಿದ ಕಾಡಿಗೆಯನ್ನೇ ತಿದ್ದುತ್ತಾ ಝುಮುಕಿ ತುಸು ಅಲುಗುವಂತೆ ಬೇಕೆಂದೇ ಕತ್ತು ಕೊಂಕಿಸುತ್ತಾ ಹಣತೆ ಹಚ್ಚುವಾಗ ಬೆಳಗುವುದು ಹಣತೆಯಷ್ಟೇ ಎಂದುಕೊಂಡರೆ ಆ ವಯಸ್ಸಿಗೇ ಮೋಸ.. ಮುಖ ಬೆಳಗಿ , ಹಚ್ಚಿದ ಹಣತೆಯ ಬೆಳಕು ಕಣ್ಣಲ್ಲೂ ಮಿನುಗಿದವಳ ನೋಡುವುದೇ ಸೊಗಸು.. ಬಿಂಕದಿಂದ ಹೊರಗಡೆ ಅಂಗಳದಲ್ಲಿ ನಿಂತು ಕೈಯ್ಯಲ್ಲಿ ನಾಜೂಕಾಗಿ ನಕ್ಷತ್ರ ಕಡ್ಡಿ ಹಿಡಿದು ಬೆಳಕು ಸುರಿಸುತ್ತಿದ್ದರೆ ಜಗತ್ತೇ ಜಗಮಗ .

    ಮತ್ತೆ ಮದುವೆಯ ನಂತರದ ಹೊಸ ದೀಪಾವಳಿ . ಮನದನ್ನ ಪಕ್ಕದಲ್ಲೇ ನಿಂತ ಸಂಭ್ರಮ ಇವಳು ನೋಡಲೆಂದು ಭಾರೀ ಸದ್ದಿನ ಆಟಂಬಾಂಬ್ ಸಿಡಿಸಿ ಬೀಗುವ ಅವನು , ಹೆದರಿದ್ದಕ್ಕಿಂತ ಹೆಚ್ಚಿನ ಹೆದರಿಕೆ ನಟಿಸಿ ಆತುಕೊಳ್ಳುವ ಇವಳು .ಕೈಲಿ ಹಿಡಿದ ನಕ್ಷತ್ರ ಕಡ್ಡಿಯನ್ನು ಮೀರಿಸುವ ಇವಳ ಮೊಗದ ಹೊಳಪನ್ನು ಕಣ್ತುಂಬಿಕೊಳ್ಳುವ ಅವನು .. ಅವನು ನೋಡುತ್ತಿರುವನೆಂದು ಗೊತ್ತಿದ್ದೇ ಬಿಂಕದಿಂದ ಹಣತೆ ಹಿಡಿದ ಇವಳು .. ಹಬ್ಬ ಬದುಕಿಗೇಕೆ ಬೇಕು ಎನ್ನುವವರು ಒಮ್ಮೆಯಾದರೂ ಅನುಭವಿಸಬೇಕಿದ್ದನ್ನು ..

    ಬದುಕು ಇಷ್ಟೇ ಅಲ್ಲವಲ್ಲ .. ಮುಂದಿನ ಬಡ್ತಿ ಮಡಿಲಲ್ಲಿ ಮಲಗಿದೆ .. ಪಟಾಕಿ ಸಿಡಿದರೆ ಕೂಸಿನ ಕಿವಿ ಮುಚ್ಚಿ ಬೆದರುತ್ತಾಳೆ ಇವಳು.. ಬಾಗಿಲು, ಕಿಟಕಿ ಭದ್ರ ಪಡಿಸಿ ಆತಂಕದಿಂದ ಕೂಸು, ಬಾಣಂತಿಯ ಪಕ್ಕ ಕೂರುತ್ತಾನೆ ಅವನು.

    ಮರುವರ್ಷಕ್ಕಾಗಲೇ ಕೂಸಿನ ಮುಂದೆ ನಕ್ಷತ್ರ ಕಡ್ಡಿ ಹಿಡಿದ ಅವನು .. ದೂರದಿಂದಲೇ ಕೂಸಿಗೆ ಅದನ್ನು ತೋರಿಸಿ ನಗುವ ಇವಳ ಕಣ್ಣಲ್ಲಿ ನಕ್ಷತ್ರಕಡ್ಡಿ .ಮುಂಬಡ್ತಿ ಬಾರದಿದ್ದೀತೇ.. ಮಕ್ಕಳ ಪಟಾಕಿ ಸಡಗರ .ಅಭ್ಯಂಜನಕ್ಕೆ ಎಳೆದೊಯ್ಯುವ ಇವಳು .. ಅಂಗಡಿಗೆ ಕರೆದೊಯ್ದು ಪಟಾಕಿ ಕೊಡಿಸುವ ಇವನು ….. ಇಷ್ಟು ದೀಪಾವಳಿಗಳ ಸಡಗರಗಳಲ್ಲಿ ಬದುಕಿನ ಚಕ್ರ ಒಂದು ಸುತ್ತು ತಿರುಗಿದ್ದು ಯಾವಾಗ .. ಯಾರಿಗೆ ಗೊತ್ತು ಯಾರಿಗೆ ಬೇಕು.

    ದೀಪಾವಳಿ ಮತ್ತೆ ಬಂದಿದೆ. ಬಡ್ತಿಯ ಸಡಗರ ಅನುಭವಿಸದೇ ಇರಬೇಡಿ . ಜವಾಬ್ದಾರಿ ಮರೆಯಬೇಡಿ. ನರಕಾಸುರ , ಬಲೀಂದ್ರ ಕಥೆಗಳೆಲ್ಲವನ್ನೂ ಕೇಳೋಣ. ನೆನೆಯೋಣ . ಮನೆಯೊಳಗೆ ಮನದೊಳಗೆ ಚೆಂದದ ಒಂದು ಪುಟ್ಟ ಹಣತೆಯನ್ನು ಹಚ್ಚೋಣ . ಬದುಕಲ್ಲಿ ಬೆಳಕು ತುಂಬಿಕೊಳ್ಳೋಣ.

    ಎಲ್ಲರಿಗೂ ದೀಪಾವಳಿಯ ಶುಭಾಶಯ.

    Photo by Sonika Agarwal on Unsplash

    ದೀಪಾವಳಿ ಶುಭಾಶಯ

    ನಮ್ಮೆಲ್ಲಾ ಓದುಗರು, ಲೇಖಕ ಬಳಗ ಮತ್ತು ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿ ಶುಭಾಶಯ. ಕೋವಿಡ್ ಕತ್ತಲು ದೂರವಾಗಿ ಎಲ್ಲೆಡೆ ಸಂಸತಸದ ಬೆಳಕು ಮೂಡಲಿ.

    ಸಂಪಾದಕ

    ಬದುಕಲು ಎಷ್ಟು ದುಡ್ಡು ಬೇಕು?

    ಜಯಶ್ರೀ ಅಬ್ಬೀಗೇರಿ

    ಬೀದಿಯ ಬದಿಯಲ್ಲಿ ಚೆಂದದಿ ನಗೆ ಚೆಲ್ಲುವ ಹೂವಿನ ಅಂದವನ್ನು ನೋಡಲು ಸಮಯ ನಮಗಿಲ್ಲ. ಬೆಕ್ಕು ನಾಯಿ ಮರಿಗಳ ಚೆಲ್ಲಾಟ. ಹಸು ಕರುಗಳ ಚಿನ್ನಾಟ ಇವೆಲ್ಲ ಒತ್ತಟ್ಟಗಿರಲಿ ನಮ್ಮ ಕರುಳ ಕುಡಿಯ ಮೋಹಕ ಆಟವನ್ನು ಸವಿಯಲೂ ನಮಗೆ ಪುರುಸೊತ್ತಿಲ್ಲ. ದಿನೇ ದಿನೇ ಬದುಕಿನ ಮಗ್ಗುಲನ್ನು ಯಾಂತ್ರಿಕತೆಯತ್ತ ಹೊರಳಿಸುತ್ತಿದ್ದೇವೆ. ಧಾವಂತಿಕೆಯಲ್ಲಿ ನರಳುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ನಮ್ಮನ್ನು ನಾವೇ ಕಟ್ಟಿ ಹಾಕಿಕೊಳ್ಳುತ್ತಿದ್ದೇವೆ.

    ಪ್ರತಿಯೊಬ್ಬರೂ ಒಂದು ಹವ್ಯಾಸವನ್ನು ಹೊಂದಿರಬೇಕು ಅದು ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ರೂಪಾಯಿಯನ್ನು ಹೇಗೆ ಉಳಿಸಬೇಕು ಎಂದು ತಿಳಿದುಕೊಳ್ಳಲು ಇರುವ ಆಸಕ್ತಿ ಪ್ರತಿಕ್ಷಣದಲ್ಲೂ ಜೀವಂತಿಕೆ ತುಂಬಬೇಕು ಎನ್ನುವುದರಲ್ಲಿಲ್ಲ. ಹಣ ಬಂದಷ್ಟು ಸಂತಸ ಹೆಚ್ಚುತ್ತದೆ ಎಂಬ ಭ್ರಮೆಯಲ್ಲಿ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಆಸೆಗೆ ಕಡಿವಾಣ ಬೀಳುವುದೇ ಇಲ್ಲ. ಜನರಿಗಿಂತ ಸಂಬಂಧಗಳಿಗಿಂತ ಚೆಂದದ ಖುಷಿಗಳಿಗಿಂತ ಹಣವೇ ಮುಖ್ಯ. ಹಣವಿದ್ದರೆ ಯಾರಿಗೂ ಕಾಯಬೇಕಾಗಿಲ್ಲ.ಯಾರನ್ನೂ ಅವಲಂಬಿಸಬೇಕಾಗಿಲ್ಲ. ಇದಕ್ಕಿಂತ ಮೇಲಾಗಿ ಯಾರನ್ನೂ ಓಲೈಸಬೇಕಾಗಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಹುದೆಂಬ ಹುಚ್ಚು ಕುದುರೆಯ ಬೆನ್ನೇರಿ ಸವಾರಿ ನಡೆದುಬಿಡುತ್ತದೆ.

    ಈ ಹುಚ್ಚಾಟದಲ್ಲಿ ಅಮೂಲ್ಯ ಬದುಕು ಸವೆದು ಹೋಗುತ್ತಿದೆ ಎಂಬುದು ಅರಿವಿಗೆ ಬರುತ್ತಲೇ ಇಲ್ಲ. ಹೃದಯದಲ್ಲಿ ಹುದುಗಿರುವ ಸಂತಸದ ಚಿಲುಮೆಯನ್ನು ಉಕ್ಕಿಸಲು ಬಿಡುವೇ ಇಲ್ಲ. ಸಾಗರದತ್ತ ಓಡಲೂ ಬಿಡುವಿಲ್ಲ. ಯಾವ ತಕ್ಕಡಿಯಲ್ಲಿ ಅಳೆಯಲಾಗದಷ್ಟು ಇರುವ ಅಂತರಂಗದ ನಿಧಿಯನ್ನು ಅಲಕ್ಷಿಸಿ ದುರಾಸೆಯ ಹಿಂದೆ ಕಾಲೆಳೆದುಕೊಂಡು ಹೋಗುತ್ತಿರುವುದು ಮೂರ್ಖತನವಲ್ಲದೇ ಮತ್ತೇನು?

    ಈ ಮೂರ್ಖತನ ಬದುಕನ್ನು ನೀರಿಲ್ಲದ ಬಾವಿಯಾಗಿಸಿದೆ. ಜೀವವೇ ಇಲ್ಲದಂತೆ ಮಾಡುತ್ತಿದೆ. ಹಣ ಬದುಕಿನ ಬಹು ಭಾಗವನ್ನು ಆವರಿಸಿಕೊಂಡಿದೆ ಎಂಬುದೇನೋ ನಿಜ. ಯಾರಿಗಾಗಿ ಯಾಕಾಗಿ ಗಾಣದೆತ್ತಿನಂತೆ ದುಡಿದು ಸಂಪತ್ತು ಕೂಡಿಡಬೇಕು ಎಂದು ಒಮ್ಮೆಯಾದರೂ ನಮ್ಮನ್ನು ನಾವು ಕೇಳಿಕೊಂಡಿದ್ದೇವೆಯೇ? ಕೇಳಿಕೊಳ್ಳಬೇಕೆಂದರೂ ಪುರುಸೊತ್ತು ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಗಳಿಕೆಯಲ್ಲಿ ನಮ್ಮನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ.

    ಮಹಾನಗರ ಎಂದು ಕರೆಸಿಕೊಳ್ಳುವ ಊರುಗಳಲ್ಲಿ ಸೂರ್ಯ ಪಿಳಿ ಪಿಳಿ ಕಣ್ಣು ಬಿಡುವ ಮೊದಲೇ ಮನೆಯಿಂದ ಕಾಲ್ಕಿಳಬೇಕು.ಮಧ್ಯಾಹ್ನ ಎಲ್ಲೋ ಡಬ್ಬಾ ಅಂಗಡಿಯಲ್ಲಿ ಊಟ.ಇಡೀ ಮನೆಯೆಲ್ಲ ಮಲಗಿದ ಮೇಲೆ ಬಂದು, ಕಳ್ಳರಂತೆ ಒಂದಿಷ್ಟು ತಟ್ಟೆಗೆ ಸುರುವಿಕೊಂಡು ನುಂಗುವ ಶಾಸ್ತ್ರ.ಒತ್ತಡಕ್ಕೆ ಒಲಿದ ರೋಗಗಳಿಗೆ ಗುಳಿಗೆಗೆಗಳನ್ನು ನುಂಗಿ ನೀರು ಕುಡಿದು ದಿಂಬಿಗೆ ತಲೆ ಇಡುವುದರೊಳಗೆ ಬಾರಾ ಹೊಡೆದಿರುತ್ತದೆ.

    ಮರುದಿನ ಬೆಳಿಗ್ಗೆ ಬೇಗ ಏಳದಿದ್ದರೆ ಬಸ್ ಮಿಸ್ ಆಗುತ್ತದೆ ಎನ್ನುವ ಚಿಂತೆಯಲ್ಲೇ ಕಣ್ಣು ರೆಪ್ಪೆ ಅಂಟಿಸುವ ಪ್ರಯತ್ನ ನಡೆಯುತ್ತದೆ. ಅಪ್ಪ ಅಮ್ಮ ಒಂದೂರಲ್ಲಿ ನನ್ನ ಮಗ ದೊಡ್ಡೂರಲ್ಲಿದ್ದಾನೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡ್ತಿದಾನೆ ಅಂತ ಹೇಳಿಕೊಳ್ಳುವುದು ಒಂದು ಪ್ರತಿಷ್ಟೆ. ಅಂಥ ಒಣ ಪ್ರತಿಷ್ಟೆಯಲ್ಲಿ ಜೀವಗಳೆರಡು ಕೊರಗಿ ಸಾಯುತ್ತವೆ. ಕಾಲ ಉರಳಿದಂತೆ ಕನಸಿನ ಮನೆ, ಮನೆ ಮುಂದೊಂದು ಕಾರು ನಿಲ್ಲುತ್ತದೆ. ಹೊಟೆಲ್ಲಿನಲ್ಲಿ ಬರಿ ಇಡ್ಲಿ ತಿಂದು ಉಳಿಸಿದ ಹಣ ಫಲ ಕೊಟ್ಟಿತು. ಮಾಡಿದ ಸಾಲ ಸಂಬಳದಲ್ಲಿ ಕಟ್ ಆಗಿ ಬರುತ್ತದೆ. ಉಳಿದ ಸಾಲಕ್ಕೆ ಕಚೇರಿ ಕೆಲಸ ಮುಗಿದ ಮೇಲೆ ಬೇರೊಂದು ಕಡೆ ಪಾರ್ಟ್ ಟೈಂ ಕೆಲಸ. ಹೆಂಡತಿಯ ಸಂಬಳ ಮನೆ ಖರ್ಚಿಗೆ ಸಾಟಿ. ಮನಸ್ಸಿನಲ್ಲಿಯೇ ಇದೆಲ್ಲ ಲೆಕ್ಕ ಹಾಕಿದಾಗ ಯುದ್ಧ ಗೆದ್ದಂತಹ ಮನಸ್ಥಿತಿ.

    ಎತ್ತು ಮೂತ್ರ ಮಾಡಿದಂತೆ ಎಲ್ಲೆಲ್ಲಿ ಏನೇನೋ ಹಣ ತೆಗೆದು ಇಟ್ಟು ಮಾಡಿ ಕೊನೆಗೆ ತಲೆ ಮೊಸರ ಗಡಿಗೆಯಂತೆ ಆಗುತ್ತದೆ. ಹೆದರಬೇಡ ಎಲ್ಲದಕ್ಕೂ ದೇವರಿದ್ದಾನೆಂದು ತಮಗೆ ತಾವೇ ಹೇಳಿಕೊಂಡು ದೇವರ ಮುಖವನ್ನೊಮ್ಮೆ ದಿಟ್ಟಿಸಿ ಧೈರ್ಯ ತುಂಬಿಕೊಳ್ಳುವುದು ನಡದೇ ಇರುತ್ತದೆ. ಸದಾ ಓಡುವ ಮನಸ್ಸಿಗೆ ಲಗಾಮಿಲ್ಲ ಅದಕ್ಕೆ ಗಳಿಕೆಯ ಕಣ್ಣು ಕಾಪು ಕಟ್ಟಿ ಬಿಟ್ಟು ಓಡಿಸಿದ್ದೇ ಓಡಿಸಿದ್ದು. ಕೊನೆಗೊಂದು ದಿನ ಗಳಿಸಿದ್ದೆಲ್ಲವನ್ನೂ ಇಲ್ಲೇ ಬಿಟ್ಟು ಹೊರಡುವ ದಿನಗಳ ಎಣಿಕೆ ಶುರುವಾಗುತ್ತವೆ. ಇಷ್ಟು ವರ್ಷ ಯಾರಿಗಾಗಿ ಇಷ್ಟೆಲ್ಲ ಗಳಿಸಿದೆ? ದೇವನಿತ್ತ ಅದ್ವಿತೀಯ ಬದುಕನ್ನು ಗುಡ್ಡಕ್ಕೆ ಕಲ್ಲು ಹೊರುವುದರಲ್ಲಿಯೇ ವ್ಯರ್ಥ ಮಾಡಿ ಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಪಡುವುದನ್ನು ನೋಡುತ್ತೇವೆ.

    ಆದರೆ ಆಗ ಏನೆಂದುಕೊಂಡರೂ ಏನುಪಯೋಗ ಬದುಕೆಲ್ಲ ಮುಗಿದು ಹೋಗಿರುತ್ತದೆ. ಗಳಿಕೆಯ ದುರಾಸೆ ಇಂಥದ್ದೊಂದು ಬೇಗುದಿಯನ್ನು ಅಸಹನೀಯ ನೋವನ್ನು ಕೊಡುಗೆಯಾಗಿ ನೀಡುತ್ತದೆಂದು ನಾವು ಊಹಿಸಿರಲೂ ಸಾಧ್ಯವಿಲ್ಲ ನಮ್ಮ ನಡುವೆ ಇರುವ ಬುದ್ಧಿವಂತರು ಜ್ಞಾನಿಗಳು ಮೇಧಾವಿಗಳೆಂದು ಕರೆಸಿಕೊಳ್ಳುವವರೂ ಇದೇ ದಾರಿಯಲ್ಲಿ ನಮಗಿಂತ ವೇಗವಾಗಿ ಹೆಜ್ಜೆ ಹಾಕುತ್ತಿರುವುದನ್ನು ಕಂಡು ಬೆರಗಾಗುವ ಸ್ಥಿತಿ ನಮ್ಮದು. ಇದರಲ್ಲಿ ದುರಾಸೆಯ ಹಸ್ತಕ್ಷೇಪ ಸುಸ್ಪಷ್ಟ.
    ನನ್ನ ಹತ್ತಿರ ಇಷ್ಟು ಇದೆ ಎಂದು ತೋರಿಸುವ ಉಮ್ಮೇದಿನಲ್ಲಿ ಎಷ್ಟೊಂದು ಅಮೂಲ್ಯವಾದುದನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಮರೆಯುತ್ತಿದ್ದೇವೆ. ಗಳಿಸಿರುವುದನ್ನು ಎಷ್ಟರ ಮಟ್ಟಿಗೆ ನಮ್ಮ ಖುಷಿಗಾಗಿ ಮತ್ತು ಬದುಕಿನ ಸಾರ್ಥಕತೆಗಾಗಿ ಬಳಸುತ್ತಿದ್ದೇವೆ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುವುದು ಬಲು ಕಷ್ಟ. ಬೇಕಿಲ್ಲದ್ದಕ್ಕೆ ಬೇಡದ್ದಕ್ಕೆ ಕೂಡಿಡುವ ಹಾಳು ಚಾಳಿ. ಹೆಚ್ಚೆಚ್ಚು ಕೂಡಿಸಿದರೆ ಹೆಚ್ಚು ಗೌರವ ಪ್ರೀತಿಯ ಓಲೈಕೆ ಸಿಗುತ್ತದೆಂಬುದನ್ನು ಮುಖ್ಯವಾಗಿಸಿಕೊಳ್ಳುತ್ತಿದ್ದೇವೆ.

    ಚಿಕ್ಕ ಪುಟ್ಟ ಸಂಗತಿಗಳು ಎಷ್ಟು ಖುಷಿ ಕೊಡುತ್ತವೆ ಎಂಬುದು ಅನುಭವಿಸಿದವರಿಗೇ ಗೊತ್ತು. ಅಂಧಕಾರದಿ ಕುರುಡನಾಗಿ ಆಸೆಗಳ ದಾಸನಾಗಿ ದುಡಿಮೆಯಿಂದ ಬಳಲಿ ಬೆಂಡಾದಾಗ ಬುದ್ಧಿಹೀನತೆಯ ಬಗ್ಗೆ ಅರಿವು ಮೂಡುತ್ತದೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ಉತ್ಸಾಹವಿಲ್ಲದೇ ಬರಿ ಗಳಿಕೆಯ ಬೆನ್ನು ಹತ್ತಿದರೆ ಬದುಕು ಬೇಸರವೆನಿಸಿ ಬಿಡುತ್ತದೆ. ಗಳಿಕೆಯ ಹುಚ್ಚು ಯಾವ ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ. ಬದಲಾಗಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸಂಪತ್ತಿನ ಆಸೆ ಜಾಲಿಮರದ ಸ್ನೇಹವಿದ್ದಂತೆ ನೆರಳು ನೀಡುತ್ತದೆಂದು ಬಲು ಮೋಹದಿಂದ ಹತ್ತಿರ ಹೋದರೆ ಅದರ ಮುಳ್ಳು ಚುಚ್ಚಿ ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ.ಮಾನಸಿಕ ಆಘಾತದಿಂದ ಬಳಲಬೇಕಾಗುತ್ತದೆ. ಹೀಗಾಗಿ ತಿಳಿದವರು ಜಾಲಿಮರದ ನೆರಳಿನಲ್ಲಿ ವಿಶ್ರಮಿಸಲು ಬಯಸುವುದಿಲ್ಲ.

    ದುಡಿ ಮತ್ತು ದುಡಿ ಎಂಬುದು ಪ್ರಸ್ತುತ ಸಮಾಜದ ಸಾಂಕ್ರಾಮಿಕ ಕಾಯಿಲೆ ಆದಂತಾಗಿದೆ. ಹರುಷದ ಹೊನಲು ಅಳೆಯಲು ಬಾಹ್ಯ ಸಂಪತ್ತಿನ ಅಳತೆಗೋಲು ಬಳಸುವುದು ಕನಿಷ್ಠ ಮಾರ್ಗವೇ ಸರಿ. ಬದುಕಿನಿಂದ ಕಲಿಯಲು ವಿಕಸನ ಹೊಂದಲು ಪ್ರೇರೇಪಣೆ ನೀಡುವ ಅತ್ಯುಚ್ಛ ಆಸೆಗಳನ್ನು ಇರಿಸಿಕೊಳ್ಳುವ ಹಂಬಲ ಶೂನ್ಯವಾಗುತ್ತಿದೆ. ದುರಾಸೆಯಿಂದ ದುರ್ಯೋಧನನೋ ಶಕುನಿಯೋ ಆಗುತ್ತಿದ್ದೇವೆ. ಮೋಹ ಮದ ಮತ್ಸರಾದಿಗಳನ್ನು ನಿಯಂತ್ರಿಸಬಲ್ಲವ ಪರಮ ಸುಖಿಯಾಗಬಲ್ಲ. ಆದರೆ ಆ ಸುಖದ ಶಿಖರವನ್ನು ಏರುವುದು ಅಷ್ಟು ಸುಲಭವಲ್ಲ.

    ಗಳಿಸುವುದಕ್ಕಿಂತ ಉಳಿಸುವುದು ಮುಖ್ಯ. ಬದುಕನ್ನು ಕಳೆದುಕೊಂಡು ಹುಡುಕುವುದಕ್ಕಿಂತ ಸಿಕ್ಕಿರುವ ಸಂಭ್ರಮದ ಪ್ರತಿ ಕ್ಷಣಗಳನ್ನು ಕಳೆದುಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ. ನಮ್ಮ ನಿಜವಾದ ಸಂಪತ್ತು ಹೃದಯ ಸಂಪತ್ತು. ತಲೆಯ ಸಂಪತ್ತಿನಿಂದ ಹಿಂದೆ ಬಿದ್ದು ಅಜ್ಞಾನಿಗಳಾಗಿ ತಪ್ಪು ಮಾಡುತ್ತಿದ್ದೇವೆ ‘ತಪ್ಪು ಮಾಡುವುದಕ್ಕಿಂತ ನಿಧಾನಿಸುವುದು ಒಳ್ಳೆಯದು.’ಒಮ್ಮೆ ಗಳಿಕೆಯ ಚಕ್ರಕ್ಕೆ ಸಿಕ್ಕಿಕೊಂಡರೆ ಸಾಕು ಹೊರ ಬರುವುದು ಸುಲಭದ್ದಲ್ಲ.ಗಳಿಕೆಯಂಬ ವಿಷ ಚಕ್ರ ತಿರುಗುತ್ತಿರುತ್ತದೆ. ದಿನ ತಿಂಗಳು ವರುಷಗಳು ಉರುಳುರುಳಿ ಸಮಯದ ಚಕ್ರವೂ ತಿರುಗುತ್ತಲೇ ಇರುತ್ತದೆ.

    ಕಟ್ಟಿಸಿದ ಮನೆಯಲ್ಲಿ ಒಂದು ಗಳಿಗೆ ಸುಖಾಸೀನರಾಗಲು ಸಾಧ್ಯವಿಲ್ಲ. ಕೊಂಡ ಕಾರಿನಲ್ಲಿ ಆನಂದದಿಂದ ತಿರುಗಲು ಸಮಯವಿಲ್ಲವೆಂದರೆ ಅದನ್ನೆಲ್ಲ ಗಳಿಸಿ ಉಪಯೋಗವೇನು ಅಲ್ಲವೇ? ಗಳಿಕೆಗಿಂತ ನಮ್ಮನ್ನು ಪ್ರೀತಿಸುವ ಜೀವಗಳಿಗೆ ಸಮಯವನ್ನು ನೀಡುವುದು ಅತಿ ಮುಖ್ಯ. ಇಲ್ಲವಾದಲ್ಲಿ ನಮ್ಮಲ್ಲಿ ಸಿಗದ ಪ್ರೀತಿಯನ್ನು ಇನ್ನೆಲ್ಲೋ ಅರಸಿ ಹೋಗುತ್ತಾರೆ. ನಮ್ಮ ಕೈಗೆಟುಕದಷ್ಟು ದೂರ ನಿಲ್ಲುತ್ತಾರೆ. ಬದುಕೆಂಬುದು ಕೇವಲ ಅವಕಾಶವಲ್ಲ ಅದೊಂದು ಆಯ್ಕೆಯ ವಿಷಯ. ‘ಬದುಕು – ನನಗಾಗಿ ನಮ್ಮವರಿಗಾಗಿ ಇತರರಿಗಾಗಿ’ ಎನ್ನುವಂತೆ ಬದುಕುವುದರಲ್ಲಿನ ಶ್ರೇಷ್ಠತೆ ಯಾವುದರಲ್ಲೂ ಇಲ್ಲ. ಕಾಲ ಬದಲಾಗಿದೆ ಬದುಕಿಗೆ ತುಂಬ ದುಡ್ಡು ಬೇಕು ಎನ್ನುವ ನೆಪ ಹೇಳಿ ನಿಟ್ಟುಸಿರು ಏದುಸಿರು ಬಿಡುತ್ತ ಭಾವ ಸೇತುವೆಯ ಹಾಳುಗೆಡುವಿದರೆ ಸರಳ ಸುಂದರ ಬದುಕು ಕೈಗೆಟುಕದ ಗಗನ ಕುಸುಮದಂತೆ ಆಗುತ್ತದೆ‼ ನೆನಪಿರಲಿ: ಸರಳ ಸುಂದರ ಬದುಕು ಒಂದು ಅತ್ಯುತ್ತಮ ಕಲೆ.

    Photo by Ravi Roshan on Unsplash

    ನ್ಯೂ ನಾರ್ಮಲ್ ತಂದ ಹೊಸ ಅವಕಾಶ- ಬೆಂಗಳೂರು ಆಚೆಗೂ ಐಟಿ ವಿಸ್ತರಣೆ

    ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದ್ದು, ಅದಕ್ಕೆ ಪೂರಕವಾದ ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ.

    ಬೆಂಗಳೂರಿನಲ್ಲಿ ಗುರುವಾರ ಬೆಂಗಳೂರು ಟೆಕ್‌ ಸಮ್ಮಿಟ್‌ಗೆ ಪೂರ್ವಭಾವಿಯಾಗಿ ಐಟಿ ಕ್ಷೇತ್ರ ಅಭಿವೃದ್ಧಿಗೆ ಬೆಂಗಳೂರನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಟಿಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ 2020-2025ರ ನೂತನ ಐಟಿ ನೀತಿಯನ್ನು ಬಿಡುಗಡೆ ಮಾಡಿದರು.

    ರಾಜ್ಯ ವಿವಿಧ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಅಂಶಗಳನ್ನು ಐಟಿ ನೀತಿ ಒಳಗೊಂಡಿದ್ದು, ಇದರಿಂದ ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಡಿಸಿಎಂ ಹೇಳಿದರು.

    ಈಗಾಗಲೇ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಪ್ರಯತ್ನಗಳು ನಡೆದಿವೆ. ಮುಖ್ಯವಾಗಿ ಇನ್ಪೋಸಿಸ್‌ ಕಂಪನಿ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ನಗರಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ದೊಡ್ಡ ಪ್ರಯತ್ನ ಮಾಡಿತು. ಇದೇ ರೀತಿಯ ಪ್ರಯತ್ನ ಗಳು ಮುಂದಿನ ದಿನಗಳಲ್ಲಿ ರಚನಾತ್ಮಕ ವೇಗ ಪಡೆಯಲಿವೆ ಎಂದರು.

    ಮೂಲಸೌಕರ್ಯಕ್ಕೆ ಒತ್ತು:

    ಸದ್ಯಕ್ಕೆ 5ಜಿ ಹೊಸ್ತಿಲಲ್ಲಿ ಇದ್ದೇವೆ. ಆದರೆ 4ಜಿ ಯನ್ನೇ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಇನ್ನೂ ಆಗಬೇಕಿದೆ. ಕನೆಕ್ಟಿವಿಟಿ ಎನ್ನುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಟೆಲಿಕಾಂ ಸೇವೆಗಳ ಪರಧಿಯನ್ನು ವಿಸ್ತರಿಸಬೇಕು. ಈಗಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿರುವುದರಿಂದ ನೆಟ್‌ವರ್ಕಿಂಗ್‌ ಅತ್ಯಗತ್ಯವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಈಗ ಬಿಯಾಂಡ್‌ ಬೆಂಗಳೂರು ಉಪಕ್ರಮದಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ,ಗುಲ್ಬರ್ಗಾ, ಬೆಳಗಾವಿ ಮತ್ತು ಶಿವಮೊಗ್ಗ ನಗರಗಳತ್ತ ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಹಾಗೂ ಐಟಿ ಕಂಪನಿಗಳನ್ನು ಕಳಿಸಿ ಇಡೀ ರಾಜ್ಯದಲ್ಲಿ ಎಲ್ಲೆಡೆ ಇಂಥ ಸಂಸ್ಥೆಗಳ ಅಸ್ತಿತ್ವ ಇರುವಂತೆ ನೋಡಿಕೊಳ್ಳಲು ಸರಕಾರ ಬಲವಾಗಿ ಯತ್ನಿಸುತ್ತಿದೆ ಎಂದರು ಉಪ ಮುಖ್ಯಮಂತ್ರಿ.

    ವರ್ಕ್‌ ಫ್ರಂ ಎನಿವೇರ್‌:

    ಕೋವಿಡ್‌ ಬಂದ ಮೇಲೆ ನಮ್ಮೆಲ್ಲರ ಸಾಂಪ್ರದಾಯಿಕ ಪರಿಕಲ್ಪನೆಗಳೆಲ್ಲ ಬದಲಾಗಿಬಿಟ್ಟಿವೆ. ಸೋಂಕು ಬರುವುದಕ್ಕೂ ಮೊದಲು ವರ್ಕ್‌ ಫ್ರಂ ಹೋಮ್‌ ಎನ್ನುವುದು ವಿರಳವಾಗಿ ಬಳಸುವ ಪದವಾಗಿತ್ತು. ಕೋವಿಡ್‌ ನಂತರ ಇದು ಸರ್ವೇಸಾಮಾನ್ಯ ಎನಿಸಿತು. ಈಗ ಇನ್ನೂ ಮುಂದೆ ಹೋಗಿ ವರ್ಕ್‌ ಫ್ರಂ ಎನಿವೇರ್‌ ಆಗಿದೆ. ಇದಕ್ಕೆ ಅತ್ಯುತ್ತಮ ನೆಟ್‌ವರ್ಕಿಂಗ್‌, ಕನೆಕ್ಟಿವಿಟಿ ಮಾಡಿದರೆ ಹೆಚ್ಚಿನ ಫಲಶ್ರುತಿಯನ್ನು ಕಾಣಬಹುದು ಎಂದು ಡಿಸಿಎಂ ಹೇಳಿದರು.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರಗೆ, ಅಂದರೆ; ರಾಜ್ಯದ ಉದ್ದಗಲಕ್ಕೂ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ. ಒಂದೆಡೆ ಶೈಕ್ಷಣಿಕ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಾ ಮತ್ತೊಂದೆಡೆ ಐಟಿ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋದರೆ ಅತ್ಯುತ್ತಮ ಸಾಧನೆ ಮಾಡಬಹುದು. ಈಗಾಗಲೇ ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೂ ಮತ್ತಷ್ಟು ಮುಂದೆ ಸಾಗಲಿದೆ. ಈ ನಿಟ್ಟಿನಲ್ಲಿ ಜಾರಿಗೆ ಬರುತ್ತಿರುವ ನೂತನ ಐಟಿ ನೀತಿಯು ಈ ಕ್ಷೇತ್ರದ ವಿಕೇಂದ್ರೀಕರಣಕ್ಕೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.

    ಕೋವಿಡ್‌ ಪಿಡುಗನ್ನು ಟೆಕ್ನಾಲಜಿಯಿಂದಲೇ ಪರಿಣಾಮಕಾರಿಯಾಗಿ ಎದುರಿಸಿದ್ದೇವೆ. ಹೀಗಾಗಿ ಮುಂದುವರಿದ ದಿನಗಳಲ್ಲಿ ಇಂಥ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲೇ ಬೀಡುಬಿಡುವುದು ಸರಿಯಲ್ಲ. ವೈಜ್ಞಾನಿಕವಾಗಿ ಎಲ್ಲ ಕ್ಷೇತ್ರಗಳನ್ನು ಎರಡನೇ ಹಂತದ ನಗರಗಳಿಗೆ ವಿಕೇಂದ್ರೀಕರಿಸಬೇಕು ಎಂಬುದು ನೂತನ ಐಟಿ ನೀತಿಯ ಆಶಯ ಎಂದು ಅವರು ಹೇಳಿದರು.

    ಹೊರಗೆ ಉತ್ತಮ ಅವಕಾಶಗಳಿವೆ:
    ಈ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, “ಬೆಂಗಳೂರಿನ ಹೊರಗೂ ಐಟಿ ಕ್ಷೇತ್ರಕ್ಕೆ ಅತ್ಯುತ್ತಮ ಅವಕಾಶಗಳಿವೆ. ಶ್ರೇಷ್ಠ ಮಾನವ ಸಂಪನ್ಮೂಲವೂ ಸಿಗುತ್ತಿದೆ. ಮೇಲಾಗಿ ಯಾವುದಾದರೂ ಸಮಸ್ಯೆ ಎದುರಾದರೂ ಸಕಾಲಕ್ಕೆ ಮಧ್ಯಪ್ರವೇಶಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಸರಕಾರ ಸದಾ ಸಿದ್ಧವಿದೆ” ಎಂದರು.

    “ಈಗಾಗಲೇ ರಾಜ್ಯದ ಎಲ್ಲ ಭಾಗಗಳಲ್ಲೂ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಗೆ ಸರಕಾರ ಹೆಚ್ಚು ಒತ್ತು ನೀಡಿದೆ. ಈಗ ಹೊಸದಾಗಿ ಬಿಡುಗಡೆ ಆಗುತ್ತಿರುವ ಐಟಿ ನೀತಿಯಲ್ಲೂ ಅದಕ್ಕೆ ಪೂರಕವಾದ ಅಂಶಗಳನ್ನು ಅಡಕಗೊಳಿಸಲಾಗಿದೆ” ಎಂದು ರೆಡ್ಡಿ ಮಾಹಿತಿ ನೀಡಿದರು.

    ಐಟಿ ನೀತಿಯಲ್ಲಿ ಏನಿದೆ?

    *ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ರಾಜ್ಯವೂ ಈಗ ಹೊಂದಿರುವ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದು ಹಾಗೂ ಇನ್ನೂ ಮುಂದೆ ಸಾಗುವುದು. ಅದಕ್ಕೆ ಬೇಕಾದ ಎಲ್ಲ ಉಪಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವುದು.
    *ರಾಜ್ಯದ ಉದ್ದಗಲಕ್ಕೂ ಹೂಡಿಕೆಯನ್ನು ಉತ್ತೇಜಿಸಿ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು. ಅದಕ್ಕೆ ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸುವುದು.
    *ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ ಐಟಿ, ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಹಾಗೂ ಅಭಿವೃದ್ಧಿ (ಇಎಸ್‌ಡಿಎಂ) ಕಂಪನಿಗಳನ್ನು ಸ್ಥಾಪನೆ ಮಾಡುವುದು.
    *ಈ ಮೂಲಕ ರಾಜ್ಯವ್ಯಾಪಿ ಉದ್ಯೋಗಾವಕಾಶ ಸೃಷ್ಟಿ ಮಾಡುವುದು. ಈ ನೀತಿಯಿಂದ ಮೂಲಸೌಕರ್ಯ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ, ಪರಿಸರ ರಕ್ಷಣೆ, ಕೌಶಲ್ಯಾಭಿವೃದ್ಧಿ, ವ್ಯಾಪಾರ-ವಾಣಿಜ್ಯಾಭಿವೃದ್ಧಿ ಸಾಧ್ಯವಾಗುತ್ತದೆ.
    *ಬೆಂಗಳೂರಿನ ಹೊರಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವ ಕಂಪನಿಗಳಿಗೆ ಸರಕಾರ ಎಲ್ಲ ರೀತಿಯ ಆರ್ಥಿಕ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ, ಅನೇಕ ರಿಯಾಯಿತಿಗಳನ್ನು ನೀಡಲಿದೆ.

    ಐಟಿ ನೀತಿಯ ಗುರಿಗಳು:

    *ಟ್ರಿಲಿಯನ್ ಡಾಲರ್ʼಗೂ ಮೀರಿ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುವ ಭಾರತದ ಗುರಿಗಾಗಿ ಶೇ.30ರಷ್ಟು ಕೊಡುಗೆ ನೀಡಲು ರಾಜ್ಯದ ಐಟಿ ಉದ್ಯಮವನ್ನು ಸಜ್ಜುಗೊಳಿಸುವುದು.
    *2020-2025ರ ಅವಧಿಯಲ್ಲಿ ರಾಜ್ಯದಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶ ಕಲ್ಪಿಸುವುದು.
    *ಐಟಿ ಕ್ಷೇತ್ರವನ್ನು ಆದ್ಯತೆಯ ಮೇರೆಗೆ ವಿಸ್ತರಿಸುವುದು ಹಾಗೂ ಆ ಮೂಲಕ ಎಲ್ಲ ಭಾಗಗಳ ಸಮಾನಾಂತರ ಅಭಿವೃದ್ಧಿಯನ್ನು ಸಾಧಿಸುವುದು.
    *ಐಟಿ ಉದ್ಯಮಕ್ಕೆ ಪೂರಕವಾಗಿ ಬೆಂಗಳೂರು ಹೊರಗೆ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವುದು.
    *ಅಗತ್ಯ ದತ್ತಾಂಶ ಸಂರಕ್ಷಣೆಗೆ ಬೇಕಾದ ಸೈಬರ್ ಭದ್ರತಾ ನೀತಿಯನ್ನು ರೂಪಿಸುವುದು.

    (ಚಿತ್ರದಲ್ಲಿ: ರಾಜ್ಯದ ಹೊಸ ಐಟಿ‌ ನೀತಿ 2020-25 ಅನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ಬತ್ಥನಾರಾಯಣ ಬಿಡುಗಡೆ ಮಾಡಿದರು. ಐಟಿ‌ ನಿರ್ದೇಶಕಿ ಮೀನಾ ನಾಗರಾಜ, ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ‌ ಇದ್ದರು.)

    ಶಿಕ್ಷಕರ ವರ್ಗಾವಣೆಗೆ ಕೊನೆಗೂ ಮುಹೂರ್ತ

    ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ‌. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ , ಈ ಬಾರಿ ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾದ ಶಿಕ್ಷಕರಿಗೆ ಮೊದಲ ಆದ್ಯತೆ ಇರಲಿದೆ ಎಂದಿದ್ದಾರೆ.

    ವರ್ಗಾವಣಾ‌ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಇದೇ ತಿಂಗಳ‌ 17ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ. ಶಿಕ್ಷಕ‌ಮಿತ್ರ ಮೊಬೈಲ್‌ ಆಪ್‌ ಮೂಲಕ ವರ್ಗಾವಣಾ‌ ಪ್ರಕ್ರಿಯೆ ನಿರ್ವಹಣೆಯಾಗಲಿದೆ‌ ಎಂದು ಸಚಿವರು ಹೇಳಿದ್ದಾರೆ.

    ಕಳೆದ‌ ವಿಧಾನ‌ಮಂಡಲದ ಅಧಿವೇಶನದ ಸಂದರ್ಭದಲ್ಲಿ ಶಿಕ್ಷಕ,ಶಿಕ್ಷಣ ಸ್ನೇಹಿಯಾದ ವರ್ಗಾವಣಾ ಕಾಯಿದೆಗೆ ಉಭಯ ಸದನಗಳ ಅನುಮೋದನೆಯನ್ನು ಪಡೆದಿದ್ದೆವು. ಇಂದು ಈ ಕಾಯಿದೆಯನ್ನು  ಆಧರಿಸಿದ ವರ್ಗಾವಣೆಗೆ ಚಾಲನೆ ನೀಡಿದ್ದೇವೆ. ಇದು ದೀಪಾವಳಿಗೆ ಸರ್ಕಾರ ನಮ್ಮ ಶಿಕ್ಷಕ‌ ಸಮುದಾಯಕ್ಕೆ ನೀಡುತ್ತಿರುವ ಕೊಡುಗೆ. ಶಿಕ್ಷಕರಿಗೆ ಇದು ಉಪಯೋಗವಾಗಲಿ, ನಮ್ಮ ವಿದ್ಯಾರ್ಥಿಗಳ ಒಳಿತನ್ನು ಕಾಯಲು ಇದು‌ ಪ್ರೇರಕವಾಗಲಿ ಎಂದು ಸಚಿವರು ಹೇಳಿದ್ದಾರೆ.

    ಈಗಾಗಲೇ ಅಧಿಸೂಚನೆ ಪ್ರಕಟವಾಗಿದ್ದು ಇದೇ ತಿಂಗಳ‌ 17ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಂತಿಮ ಕೌನ್ಸೆಲಿಂಗ್ ಅರ್ಹತಾ ಪಟ್ಟಿ ಡಿಸೆಂಬರ್ 14ರಂದು ಪ್ರಕಟವಾಗಲಿದೆ. ಈ ಬಗ್ಗೆ ಸರ್ಕಾರ ಹೊರಡಿಸಿರುವ ಅಧಿಕೃತ ಜ್ಞಾಪನದ ಪೂರ್ಣ ಪಾಠ ಇಲ್ಲಿದೆ.

    Photo by Kimberly Farmer on Unsplash

    ಪೂರ್ಣವಾಗಿ ಜೀವಿಸದಿದ್ದರೂ ಜೀವಿಸಿದಷ್ಟೂ ಕಾಲ ಅರ್ಥಪೂರ್ಣವಾಗಿ ಜೀವಿಸಿದ್ದ

    ಕೆಲ ವರ್ಷಗಳ ಹಿಂದೆ ಅಗಲಿದ ಗುಲಾಮ , ಕಂಠೀರವ ಸಿನಿಮಾಗಳ ನಿರ್ದೇಶಕ ತುಷಾರ್ ರಂಗನಾಥ್ ಅವರನ್ನು ಅವರ ಬಹು ಕಾಲದ ಗೆಳೆಯ ಮಾಸ್ತಿ ಇಲ್ಲಿ ನೆನಪಿಸಿಕೊಂಡಿದ್ದಾರೆ.

    ಕ್ಷಮೆಯಿರಲಿ, ಲೇಖನದುದ್ದಕ್ಕೂ ರಂಗನಾಥನನ್ನು ಏಕವಚನದಲ್ಲಿಯೇ ಉಲ್ಲೇಖಿಸಿದ್ದೇಅವನೆ ಕಾರಣ ರಂಗ ನನಗೆ ಹೋಗೋ ಬಾರೋ ಅನ್ನೋವಷ್ಟು ಸಲುಗೆಯ ಗೆಳೆಯ , ಗೌರವ ನಾವಿಬ್ಬರೂ ಬೇರೆಯವರಿಗೆ ಕೊಡುತ್ತಿದ್ದೆವೇ ಹೊರತು ಪರಸ್ಪರ ಹಂಚಿಕೊಳ್ಳುತ್ತಿರಲಿಲ್ಲ .

    ರಂಗನ ಅಪ್ಪ ಪೊಲೀಸು, ಮನೆಯಲ್ಲಿ ತಾಯಿ, ಜೊತೆಗೆ ಅಕ್ಕ ತಮ್ಮ . ಜಾತಿ ಪ್ರೀತಿಗಳಲ್ಲಿ ವರ್ಗಗಳನ್ನಿಟ್ಟುಕೊಳ್ಳದಂಥ ಮಧ್ಯಮ ವರ್ಗದ ಕುಟುಂಬ. ಅಪ್ಪ ಪೊಲೀಸು ಅಂದ ಮೇಲೆ ಶಿಸ್ತಿಗೇನು ಕೊರತೆ ಇರಲಿಲ್ಲ ಹಾಗಂತ ಅವರ ತಂದೆ ಯಾವತ್ತೂ ಯಾವುದನ್ನೂ ಹೇರುತ್ತಿರಲಿಲ್ಲ .
    ಶಿಸ್ತು ತಾನಾಗೇ ರಂಗನಲ್ಲಿ ರೂಢಿಸಿಕೊಂಡಿತ್ತು , ಆಗಿನ ವಿದ್ಯಾಭ್ಯಾಸದ ಪ್ರಮುಖ ಘಟ್ಟ ಅಂತನಿಸಿಕೊಂಡಿದ್ದ ಎಸ್ಎಸ್ಎಲ್ ಸಿ ಯನ್ನು ರಂಗ ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದ್ದ. ಮನೆಯಲ್ಲಿದ್ದ ದೊಡ್ಡ ಜವಾಬ್ದಾರಿ ಎಂದರೆ ಅಕ್ಕನ ಮದುವೆ ಅದೂ ಕೂಡ ಆಗಿತ್ತು .

    ಸಣ್ಣ ವಯಸ್ಸಿನಿಂದಲೇ ಸಿನಿಮಾಗಳು ಸಿನಿಮಾದ ಹಾಡುಗಳು ರಂಗನ ಮನಸ್ಸಿನಲ್ಲಿ ಸಿನಿಮಾಸಕ್ತಿಯನ್ನು ಮೂಡಿಸಿತ್ತು ಅನ್ಸುತ್ತೆ . ಆಗಿನಿಂದ ಅವನಲ್ಲಿದ್ದ ಸಿನಿಮಾ ಅಣು ಕಣವಾಗಿ , ಕಣ ಬೀಜವಾಗಿ , ಬೀಜ ಮೊಳಕೆಯೊಡೆದು ನಿಂತಿತ್ತು. ಮೊದಲಿನಿಂದಲೂ ಹನಿಗವನಗಳನ್ನು, ಸಣ್ಣ ಪುಟ್ಟ ಹಾಡುಗಳನ್ನು, ಸಣ್ಣ ಕಥೆಗಳನ್ನು ಓದುವುದೂ ಬರೆಯುವುದು ಮಾಡುತ್ತಿದ್ದ .

    ರಂಗ ಜೀವಕ್ಕಿಂತಲೂ ಮಿಗಿಲಾಗಿ ಇಷ್ಟಪಡ್ತಿದಿದ್ದು ಕನ್ನಡವನ್ನು . ಒಂದಷ್ಟು ದಿವಸ ಕೆಲವು ಸಂಘಟನೆಗಳ ಹಿಂಬಾಲಕರನ್ನು ನಾಯಕರನ್ನು ಭೇಟಿ ಮಾಡಿ ಮಾತನಾಡಿಸಿ ಅವರೊಂದಿಗೆ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ . ಅನಂತರ ಕನ್ನಡ ಸೇವೆ ಮಾಡುವ ರೀತಿ ಇದಲ್ಲ ಎಂದು ನಿರ್ಧರಿಸಿ , ಮನಸ್ಸನ್ನು ಮನಸ್ಸಲ್ಲಿದ್ದ ಕನ್ನಡ ಪ್ರೀತಿಯನ್ನು ಗಟ್ಟಿಮಾಡಿಕೊಂಡು ವಾಪಸ್ ಬಂದುಬಿಟ್ಟಿದ್ದ.

    ಟೀಚರು ಕಲಿಸಿದ ಕನ್ನಡ , ಬದುಕು ಕಲಿಸಿದ ಅನುಭವದೊಂದಿಗೆ ಚಿತ್ರರಂಗದ ಪ್ರವೇಶಕ್ಕೆ ಅಣಿಯಾಗುತ್ತಾನೆ. ಅಷ್ಟೊತ್ತಿಗಾಗಲೇ ಒಂದೆರೆಡು ಒಳ್ಳೆಯ ನೌಕರಿಗಳನ್ನು ಬಿಟ್ಟಿದ್ದ ರಂಗನಿಗೆ ಈ ಅವಧಿಯಲ್ಲಿ ಮನೆಯವರಿಂದ ಸಂಬಂಧಿಕರಿಂದ ವಿರೋಧ ಉಂಟಾಗಿ ಮನೆಯವರು ಇವನಲ್ಲಿನ ಸಿನಿಮಾ ಸಸಿಯನ್ನು ಕಿತ್ತೆಸೆದಾಗ ರಂಗನ ಅಕ್ಕ ಆ ಸಸಿಯನ್ನು ಪುನಃ ನೆಡುತ್ತಾರೆ , ನೀರೆರೆಯುತ್ತಾರೆ . ಆರ್ಥಿಕವಾಗಿ ಸಹಾಯ ಮಾಡಿ ಇವನ ಬೆನ್ನಿಗೆ ನಿಲ್ಲುತ್ತಾರೆ .

    ರಂಗ ಮೊದಲ ಹೆಜ್ಜೆ ಕಿರುತೆರೆಯಲ್ಲಿಡುತ್ತಾನೆ . ಬರವಣಿಗೆ ಚೆನ್ನಾಗಿದ್ದಿದ್ದರಿಂದ ಸೀರಿಯಲ್ ಗಳಲ್ಲಿ ಬರೆಯಲು ಅವಕಾಶ ಸಿಗುತ್ತದೆ ಮತ್ತು ಬಹಳ ಬೇಗ ಕಿರುತೆರೆಯನ್ನು ಅರ್ಥೈಸಿಕೊಂಡು ಗುರುತಿಸಿಕೊಳ್ಳುತ್ತಾನೆ . ಅಲ್ಲಿ ಬಿ ಸುರೇಶರ ಬಳಗದಲ್ಲಿ ಕೆಲಸ ಮಾಡುತ್ತಿದ್ದ ಯೋಗರಾಜ ಭಟ್ಟರ ಪರಿಚಯವಾಗುತ್ತದೆ ಅವರಿಂದ ಸೂರಿಯ ಸಂಗಡ ಲಭಿಸುತ್ತದೆ . ಸಮಾನ ಮನಸ್ಕ ಹಾಗೂ ಸಮಾನ ವಯಸ್ಕನಾದ ಸೂರಿಯೊಂದಿಗೆ ಒಡನಾಟ ಶುರುವಾಗುತ್ತದೆ . ಇವನಿಗಿದ್ದ ವೇಗಕ್ಕೆ ಮತ್ತು ಇವನಿಗಿದ್ದ ಹಸಿವಿಗೆ ಕಿರುತೆರೆ ಸಾಕಾಗುವುದಿಲ್ಲ . ಸಿನಿಮಾ ಬಾಗಿಲನ್ನು ಬಡಿಯಲು ಗಾಂಧೀನಗರ ಪ್ರವೇಶಿಸುತ್ತಾನೆ , ಕಾಕತಾಳೀಯವೆಂದರೆ ಅವನಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅವಕಾಶ ಮೊದಲಬಾರಿಗೆ ಗಾಂಧೀನಗರ ಅನ್ನೋ ಸಿನಿಮಾದಲ್ಲೇ ಸಿಗುತ್ತದೆ ಲಕ್ಕೀ ಶಂಕರ್ ಅದರ ನಿರ್ದೇಶಕರು .

    ಈ ಸಿನಿಮಾದ ನಂತರ ಸೀರಿಯಲ್ನಿಂದ ಹೊರಬಂದ ಭಟ್ಟರು ಮತ್ತು ಸೂರಿ ಜೋಡಿ ಮಣಿ ಸಿನಿಮಾ ಶುರು ಮಾಡುತ್ತಾರೆ ಅದರಲ್ಲಿಯೂ ರಂಗ ಕೆಲಸ ಮಾಡುತ್ತಾನೆ . ಸಿನಿಮಾ ರಿಲೀಸ್ ಆಗಿ ಹೆಸರು ಮಾಡಿದರೂ ಬಾಕ್ಸಾಫೀಸಿನಲ್ಲಿ ಹಣ ಗಳಿಸಲು ವಿಫಲವಾಗುತ್ತದೆ .

    ಭಟ್ಟರು ಎರಡನೇ ಸಿನಿಮಾಗೆ ಇದೇ ರಂಗನ ಹೆಸರನ್ನು ಬಳಸಿ ರಂಗ ಎಸ್ಎಸ್ಎಲ್ಸಿ ಎಂದು ನಾಮಕರಣ ಮಾಡುತ್ತಾರೆ , ರಂಗ ಇದರಲ್ಲಿ ಕೆಲಸ ಮಾಡುವುದಿಲ್ಲ . ಗಾಂಧೀನಗರ ಸಿನಿಮಾ ಮಾಡುವಾಗ ಲಕ್ಕೀ ಶಂಕರ್ ರಂಗನಿಗೆ ಲಯೇಂದ್ರರನ್ನು ಪರಿಚಯಿಸುತ್ತಾರೆ . ಲಯೇಂದ್ರ ರಂಗನನ್ನು ತನ್ನ ತಮ್ಮ ಸಾಧುಕೋಕಿಲ ಬಳಿ ಕರೆದೊಯ್ಯುತ್ತಾರೆ , ಒಬ್ಬ ರೈಟರ್ ನ ತಲಾಷಿಯಲ್ಲಿದ್ದ ಸಾಧುಕೋಕಿಲರಿಗೆ ರಂಗನ ಕೆಲಸ ಗಟ್ಟಿಮೊಸರಿನಂತೆ ಕಾಣಿಸುತ್ತದೆ . ಅವರ ರಾಕ್ಷಸ ಸಿನಿಮಾಗೆ ಸಹ ನಿರ್ದೇಶಕನಾಗಿ ಸೇರ್ಪಡೆಯಾಗುತ್ತಾನೆ , ಸಹ ನಿರ್ದೇಶನದ ಜೊತೆ ರಂಗ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ಸಿನಿಮಾ ಕಮರ್ಷಿಯಲ್ಲಾಗಿ ಗೆಲ್ಲುತ್ತದೆ , ಕೂಡಲೇ ದರ್ಶನ್ ಅವರು ಸಾಧುಗೆ ಸುಂಟರಗಾಳಿ ಸಿನಿಮಾ ಮಾಡಲು ಕರೆಯುತ್ತಾರೆ .

    ರಂಗ ಸುಂಟರಗಾಳಿ ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುತ್ತಾನೆ. ರಂಗ ಗೀತರಚನೆಕಾರನಾಗಿ ಕಥೆಗಾರನಾಗಿ ಪಯಣ ಮುಂದುವರೆಸುತ್ತಾನೆ , ಬದಲಾವಣೆಯ ಗಾಳಿ ಹೇಗೆ ಬೀಸುತ್ತೆ ಅಂದ್ರೆ ನೋಡುನೋಡುತ್ತಲೇ ಭಟ್ಟರು ಮುಂಗಾರು ಮಳೆ ಸುರಿಸಿ ಯಶಸ್ಸಿನ ಫಸಲು ತೆಗೆಯುತ್ತಾರೆ . ಸೂರಿ ದುನಿಯಾ ಮಾಡಿ ಇತಿಹಾಸ ನಿರ್ಮಿಸುತ್ತಾರೆ , ರಾತ್ರೋರಾತ್ರಿ ಸಹತಾರೆಗಳಂತಿದ್ದ ವಿಜಿ ಮತ್ತು ಗಣೇಶ್ ಧ್ರುವತಾರೆಗಳಾಗುತ್ತಾರೆ .

    ರಾಕ್ಷಸ ,ಸುಂಟರಗಾಳಿ ,ದುನಿಯಾ ಸಿನಿಮಾಗಳ ಯಶಸ್ಸಿನ ನಂತರ ರಂಗ ಸಾಹಿತ್ಯ ಸಂಭಾಷಣೆಯಲ್ಲಿ ತುಂಬಾ ಹೆಸರು ಮಾಡುತ್ತಾ ಹೋಗುತ್ತಾನೆ , ತನ್ನನ್ನು ತಾನು ಬಿಡುವಿಲ್ಲದ ಬರವಣಿಗೆಗೆ ತೊಡಗಿಸಿಕೊಳ್ಳುತ್ತಾನೆ . ಯಾವ ಮಟ್ಟಿಗೆ ಬೆಳೆಯುತ್ತಾನೆಂದರೆ ಯಾರನ್ನು ತನ್ನ ಆದರ್ಶ ಎಂದು ಕನವರಿಸುತ್ತಿದ್ದನೋ ಯಾರನ್ನು ನೋಡಿದರೆ ಸಾಕು ಅಂದುಕೊಳ್ಳುತ್ತಿದ್ದನೋ ಅವರ ಜೊತೆ ಔತಣಕ್ಕೆ , ಕೂಟಕ್ಕೆ , ಗೋಷ್ಠಿಗಳಿಗೆ ಸೇರುವಷ್ಟರ ಮಟ್ಟಿಗೆ ಬೆಳೆಯುತ್ತಾನೆ .

    ಬೆಳೆದಂತೆ ರಂಗನ ಮನಸ್ಸಿನಲ್ಲಿ ಒಂದು ವಿಚಾರ ತಲೆದೋರುತ್ತದೆ . ಎಷ್ಟು ದಿನ ಬೇರೆಯವರ ಕಥೆಗಳಿಗೆ ಮಾತು ಬರೆಯುವುದು ? ಬೇರೆಯವರ ಸಿನಿಮಾಗಳಿಗೆ ಹಾಡು ಬರೆಯುವುದು ? ಗೆಳೆಯರೆಲ್ಲಾ ನಿರ್ದೇಶಕರಾದರು ತಾನೂ ಅಗಬೇಕು ಎಂಬ ಉಮೇದಿಯಿಂದ ನಿರ್ದೇಶಕನಾಗಲು ಹೊರಡುತ್ತಾನೆ . ಕನಸಿನಲ್ಲಿಯೂ ಗುಲಾಮನಂತೆ ಬದುಕದ ರಂಗ ತನ್ನ ಮೊದಲ ಸಿನಿಮಾಕ್ಕೆ ಗುಲಾಮ ಎಂದು ಹೆಸರಿಡಲು ತೀರ್ಮಾನಿಸುತ್ತಾನೆ . ಕಥೆ ಸಿದ್ದಪಡಿಸಿಕೊಂಡು ನಿರ್ಮಾಪಕ ರಾಮು ಮತ್ತು ನಾಯಕ ಪ್ರಜ್ವಲ್ ದೇವರಾಜ್ ಗೆ ಹೇಳುತ್ತಾನೆ . ಸಿಂಗಲ್ ಸಿಟಿಂಗಲ್ಲಿ ಕಥೆ ಓಕೆಯಾಗುತ್ತದೆ . ಗುರುಕಿರಣ್ ಸಂಗೀತದಲ್ಲಿ ಹಾಡುಗಳೂ ಸಿದ್ದವಾಗುತ್ತದೆ , ರಭಸದಿಂದ ಚಿತ್ರೀಕರಣ ಮುಗಿದು ಸಿನಿಮಾ ತೆರೆ ಕಾಣುತ್ತದೆ . ರೌಡೀಸಂ ಬೆರೆತ ಪ್ರೇಮಕಥೆಯಾಗಿದ್ದರಿಂದ ಸಿನಿಮಾ ಭರ್ಜರಿ ಓಪನಿಂಗೇನೋ ಪಡೆಯುತ್ತದೆ ಆದರೆ ಚಿತ್ರಕಥೆಯ ಪರಿಪಾಟಲಿನಿಂದಾಗಿ ಸಿನಿಮಾ ಯಶಸ್ಸು ಪಡೆಯುವುದಿಲ್ಲ .

    ಕಾಲಿನ ಉಗುರು ಕಿತ್ತು ರಕ್ತ ಬಂದಿದ್ದರೂ ಎಲ್ಲಿ ಎಡವಿದೆನೋ ನೆನಪಿಗೆ ಬರುತ್ತಿಲ್ಲ ಎಂಬಂತಹ ಸ್ಥಿತಿ ರಂಗನದ್ದಾಗಿತ್ತು . ಗುಲಾಮ ಸೋಲಿನಿಂದ ಮೇಲೇಳಲು ರಂಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ .ಸಿನಿಮಾ ಎಂಬ ಮಾಯಾಮಹಲ್ಲಿನ ಪಡಸಾಲೆಯಲ್ಲಿ ಒಬ್ಬಂಟಿಯಾಗಿ ನಿಂತಿದ್ದ , ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಸಿನಿಮಾ ಎಂಬ ಕನಸ್ಸನ್ನು ಬೆನ್ನಟ್ಟಿ ಹಿಡಿದು, ಅದರ ಆಳ ಅಗಲಗಳನ್ನರಿತು ಕಲಿತು ಸಹಾಯಕ , ಸಾಹಿತಿ , ಸಂಭಾಷಣೆಕಾರ , ಸಹನಿರ್ದೇಶಕ, ನಿರ್ದೇಶಕನಾಗಿದ್ದ ರಂಗ ಅಂದು ಅಕ್ಷರಶಃ ಅಧೀರನಾಗಿದ್ದ .

    ಸ್ನೇಹಿತರಲ್ಲಿ ಕೆಲವರನ್ನು ಇವನೇ ದೂರವಿರಿಸಿದ ಕೆಲವರು ತಾವಾಗೇ ದೂರ ಉಳಿದರು . ಇಷ್ಟೊತ್ತಿಗಾಗಲೇ ಮನೆಯವರೊಂದಿಗೆ ಭಾಗಶಃ ಸಂಪರ್ಕ ಕಡಿದುಕೊಂಡಿದ್ದ . ಎಷ್ಟೇ ಅಗಲಿ ಮನೆಯವರಲ್ಲವೇ ಅವರು ಇವನನ್ನು ಎಂದಿ್ಗೂಗೂ ದೂರ ಮಾಡಲಿಲ್ಲ , ರಂಗನ ಪಾಲಿಗೆ ದಿಕ್ಕೇ ದಾರಿತಪ್ಪಿಸಿದಾಗಲೂ ದಿಕ್ಕಾಗಿ ಕಂಡವರು ಅವನ ಅಕ್ಕ . ಆಕೆ ಇನ್ನಿಲ್ಲದಂತೆ ಅರ್ಥಿಕವಾಗಿ ನೆರವಾದಳು . ಸುಧಾರಿಸಿಕೊಂಡ ರಂಗ ನಂತರ ಕಂಠೀರವ ಸಿನಿಮಾ ನಿರ್ದೇಶಿಸುತ್ತಾನೆ , ಅದು ತಕ್ಕ ಮಟ್ಟಿಗೆ ಯಶಸ್ಸು ಪಡೆದರೂ ರಿಮೇಕೆಂದು ನಂತರದ ಅವಕಾಶಗಳು ಕಡಿಮೆಯಾಗುತ್ತವೆ.

    ಪರಿಚಯಸ್ಥರ ಮದ್ಯೆ ಅಪರಿಚನಂತಾಗುತ್ತಾನೆ , ರಂಗನ ಮನಸ್ಸಿನಲ್ಲಿ ಆರೋಗ್ಯಕರ ಸ್ಪರ್ಧೇಯಿದ್ದರೂ ದೇಹದಲ್ಲಿ ಅರೋಗ್ಯವಿರಲಿಲ್ಲ .
    ಒಮ್ಮೆ ಹೃದಯಾಘಾತಕ್ಕೆ ಒಳಗಾಗಿ ಘಾಸಿಕೊಂಡಿದ್ದ ಹೃದಯ ಎರಡನೇ ಬಾರಿ ಸಾವಿನೊಂದಿಗೆ ಶಾಮೀಲಾಗಿಬಿಡುತ್ತದೆ .

    ಗೆಲುವಿಗೇ ಮಣೆ ಹಾಕುವ ಚಿತ್ರೋದ್ಯಮ ಹಾಗೂ ಜಗತ್ತು ಪ್ರಯತ್ನಕ್ಕೆ ಬೆನ್ನು ತಟ್ಟಿದ್ದರೆ ಬಹುಶಃ ರಂಗ ಬದುಕಿರುತ್ತಿದ್ದನೇನೋ , ಹಾಗಾಗಲಿಲ್ಲ , ರಂಗ ಕಾಲವಾಗುತ್ತಾನೆ .ಸಣ್ಣ ಮನಸ್ಸಿನ ಜನರೆದುರು ಅವನು ದೊಡ್ಡವನಾಗಿ ಕಾಣಲೇ ಇಲ್ಲ . ಕಾಣುವ ಯಾವುದೇ ಬರಹಕ್ಕಿಂತಲೂ ಮಿಗಿಲಾದದ್ದು ಕಾಣದ ಹಣೆಬರಹ .

    ಆಟಕ್ಕೆ ಹೆದರದ ಸೋಲಿಗೆ ಹೆದರದ ರಂಗ ಕ್ರೀಡಾಂಗಣದ ಪ್ರೇಕ್ಷಕರಿಗೆ ಹೆದರಿದ್ದ , ಅನಾರೋಗ್ಯದ ನೊವಿಗಿಂತ ಹೆಚ್ಚು ಬಾಧಿಸಿದ್ದು ಅವನಂದುಕೊಂಡದ್ದಾಗಲಿಲ್ಲವೆಂಬ ನೋವು .
    ರಂಗ ಬೆಂಕಿಯಂತಿರದೇ ಬೆಣ್ಣೆಯಂತಿದ್ದರೆ , ಭಾವುಕನಾಗದೇ ನಿರ್ಭಾವುಕನಾಗಿದಿದ್ದರೆ , ನಿಸ್ವಾರ್ಥವನ್ನು ಬದಿಗೊತ್ತಿ ಸ್ವಾರ್ಥದಿಂದಿದ್ದರೇ , ಸಾಧಕನಾಗದೇ ಸಮಯಸಾಧಕನಾಗಿದ್ದರೇ , ನಂಬಿಕೆಯನ್ನು ಸಹ ಅನುಮಾನದಿಂದ ನೋಡಿದ್ದರೆ ಈ ಜಗತ್ತಿನಲ್ಲಿ ಬದುಕಿರುತ್ತಿದ್ದ ಅನ್ನಿಸ್ತು .

    ಒಂದು ಕಡೆ ಸಾವಿಗೆ ಕಾರಣ ಇದಾದರೆ ಮತ್ತೊಂದು ಕಡೆ ಅರೋಗ್ಯವನ್ನು ಕಡೆಗಣಿಸಿದ್ದು ವೈದ್ಯರ ಔಷಧಿ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೂ, ಪತ್ಯೆಗಳನ್ನು ಪಾಲಿಸದಿದ್ದಿದ್ದು ಸಾವಿಗೆ ಕಾರಣವಾಯಿತು.ರಂಗ ಪೂರ್ಣವಾಗಿ ಜೀವಿಸದಿದ್ದರೂ ಜೀವಿಸಿದಷ್ಟೂ ಕಾಲ ಅರ್ಥಪೂರ್ಣವಾಗಿ ಜೀವಿಸಿದ್ದ

    ಈ ಅಂಕಣದೊಂದಿಗೆ ಪ್ರಕಟವಾಗಿರುವ ತುಷಾರ್ ರಂಗನಾಥ್ ಅವರ ಭಾವಚಿತ್ರವನ್ನು ರಚಿಸಿರುವ ಕಲಾವಿದೆ ಕಿರಣ ಆರ್ . ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಗೆದ್ದಿದ್ದು ಯಡಿಯೂರಪ್ಪ ಮತ್ತು ವಿಜಯೇಂದ್ರ!

    ಅಶೋಕ ಹೆಗಡೆ

    ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ವಾಸ್ತವಿಕವಾಗಿ ಇಲ್ಲಿ ಗೆದ್ದಿರುವುದು ಬಿಜೆಪಿಯಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ!

    ’ಆಪರೇಷನ್ ಕಮಲ’ದ ಫಲವಾಗಿ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜಾಣ ಮರೆವು ತೋರಿದ್ದರು. ಸೌಜನ್ಯಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಿಲ್ಲ. ಕರ್ನಾಟಕದ ಜತೆಗೇ ನಡೆದ ಉಪ ಚುನಾವಣೆ, ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಮಾತ್ರವಲ್ಲದೇ ಪ್ರತಿಪಕ್ಷಗಳ ನಾಯಕರನ್ನೂ ಮೋದಿ-ಶಾ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಅದೇಕೋ ಹಠಕ್ಕೆ ಬಿದ್ದವರಂತೆ ಕಠೋರ ಮೌನ ತಾಳಿಬಿಟ್ಟಿದ್ದರು. ಆದರೆ, ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇಬ್ಬರೂ ತರಾತುರಿಯಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ, ಅದೂ ಮೋದಿಯವರಂತೂ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ! ಅಷ್ಟರಮಟ್ಟಿಗೆ ಅದು ಯಡಿಯೂರಪ್ಪನವರ ಗೆಲುವು.

    ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಂತಹವರು ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿಯಾಗಿರುವುದಿಲ್ಲ ಎನ್ನುವ ಮಾತನಾಡಿದ್ದರು. ಬೇರೆಯವರ ಕುಮ್ಮಕ್ಕಿನಿಂದ ಅವರು ಹಾಗೆ ಮಾತನಾಡಿದ್ದರು ಎನ್ನುವುದು ಸ್ಪಷ್ಟ. ಈಗ ಹಾಗೆ ಮಾತನಾಡಿದವರು, ಮಾತನಾಡಿಸಿದವರು ಇಬ್ಬರೂ ಮೌನವಾಗಿರಬೇಕು. ಯಡಿಯೂರಪ್ಪನವರನ್ನು ಕಡೆಗಣಿಸಿದರೆ ಅಪಾಯ ಮೈಮೇಲೆ ಎಳೆದುಕೊಂಡತೆಯೇ ಎನ್ನುವುದು ಈಗ ವರಿಷ್ಠರಿಗೂ ಚೆನ್ನಾಗಿಯೇ ಅರ್ಥವಾಗಿದೆ. ಇಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆ, ಅನುದಾನ ಸೇರಿ ಹಲವು ವಿಚಾರಗಳಲ್ಲಿ ಯಡಿಯೂರಪ್ಪನವರ ಕುರಿತು ತಾತ್ಸಾರ ಮಾಡುತ್ತಿದ್ದ ವರಿಷ್ಠರು, ಮೋದಿಯವರು ಈಗ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಸೇರಿದಂತೆ ಕೆಲದಿನಗಳ ಹಿಂದೆ ಸಾವಿರಾರು ಕೋಟಿ ರೂ. ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದೆ. ಇದು ನಿಜಕ್ಕೂ ಯಡಿಯೂರಪ್ಪನವರ ಗೆಲುವು.

    ಇನ್ನು ವಿಜಯೇಂದ್ರ ಅವರ ವಿಚಾರಕ್ಕೆ ಬರೋಣ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಏನು ಎನ್ನುವುದು ವರಿಷ್ಠರಿಗೆ ಈಗ ಚೆನ್ನಾಗಿ ಅರ್ಥವಾಗಿದೆ. ಅಂದು ಹಳೆ ಮೈಸೂರು ಭಾಗದಿಂದ ವಿಜಯೇಂದ್ರ ಸ್ಪರ್ಧೆಗೆ ಅನುಮತಿ ನೀಡಿದ್ದರೆ ಆಪರೇಷನ್ ಕಮಲ ನಡೆಸುವ ಅನಿವಾರ್ಯತೆಯೇ ಬಿಜೆಪಿಗೆ ಬರುತ್ತಿರಲಿಲ್ಲ ಎನ್ನುವ ಸತ್ಯ ವರಿಷ್ಠರಿಗೆ ಈಗ ಅರ್ಥವಾಗಿದೆ. ಬಿಜೆಪಿಯ ನೆಲೆಯೇ ಇಲ್ಲದ ಮಂಡ್ಯದ ಕೆ.ಆರ್.ಪೇಟೆ, ಕಾಂಗ್ರೆಸ್-ಜೆಡಿಎಸ್‌ನ ಪ್ರಬಲ ನೆಲೆಯಾಗಿದ್ದ ತುಮಕೂರಿನ ಶಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದು ಸಾಧಾರಣ ಸಂಗತಿಯಲ್ಲ. ಕ್ಷೇತ್ರದಲ್ಲೇ ಬೀಡುಬಿಟ್ಟು, ತಳಮಟ್ಟದ ವಾಸ್ತವಗಳನ್ನು ಅರ್ಥ ಮಾಡಿಕೊಂಡು, ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಗೆಲುವಿನ ರಣತಂತ್ರ ರೂಪಿಸುವುದು ಸಾಧಾರಣ ಸಂಗತಿಯಲ್ಲ. ವಿಜಯೇಂದ್ರ ವಿರುದ್ಧ ಹಿಂದಿನಿಂದ ಆರೋಪ ಮಾಡುತ್ತಿದ್ದ ನಾಯಕರೆಲ್ಲ ಈಗ ತೆಪ್ಪಗಿರಲೇಬೇಕು. ಇದು ವಿಜಯೇಂದ್ರ ಅವರ ನಿಜವಾದ ಗೆಲುವು.

    ರಾಜರಾಜೇಶ್ವರಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದರು. ಆದರೆ ಕ್ಷೇತ್ರದಲ್ಲಿ ಮುನಿರತ್ನ ಅವರ ವೈಯಕ್ತಿಕ ಪ್ರಭಾವ ಮತ್ತು ಬಿಜೆಪಿಯ ಸಂಘಟನಾ ಶಕ್ತಿಯ ಎದುರು ಡಿಕೆ ಬ್ರದರ್ಸ್ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಶಿರಾದಲ್ಲಿ ದುರ್ಬಲ ಅಭ್ಯರ್ಥಿಗಳ ವಿರುದ್ಧ ಹಳೆಹುಲಿ ಟಿ.ಬಿ.ಜಯಚಂದ್ರ ಗೆದ್ದೇ ಗೆಲ್ಲುತ್ತಾರೆ ಎಂಬ ಕಾಂಗ್ರೆಸ್‌ನ ಅತಿಯಾದ ವಿಶ್ವಾಸ, ಮುನಿರತ್ನ ವಿರುದ್ಧ ಸೇಡು ತೀರಿಸಿಕೊಳ್ಳುಬವ ಅಬ್ಬರದಲ್ಲಿ ಡಿಕೆ ಸಹೋದರರು ಶಿರಾವನ್ನು ಕಡೆಗಣಿಸಿದ್ದು ಮುಳುವಾಯಿತು. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಮೊದಲೇ ಸೋಲೊಪ್ಪಿಕೊಂಡಿತ್ತು ಅಥವಾ ಕಾಂಗ್ರೆಸ್‌ನವರು ಹೇಳುವಂತೆ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿತ್ತು.

    ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರ ಜವಾಬ್ದಾರಿಯೂ ಈಗ ದೊಡ್ಡದಿದೆ. ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ಬಹುಶಃ ಅಲ್ಲಿಯೂ ಬಿಜೆಪಿ ಗೆಲ್ಲಬಹುದು. ಆದರೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಯಡಿಯೂರಪ್ಪ, ವಿಜಯೇಂದ್ರ ಮರೆಯಬಾರದು. ‘ವಿಜಯೇಂದ್ರ ಅವರು ಛಾಯಾ ಮುಖ್ಯಮಂತ್ರಿ’ ಎಂಬ ಆರೋಪ ಮತ್ತೆ ಕೇಳದಂತೆ ಇಬ್ಬರೂ ಎಚ್ಚರವಹಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವತ್ತ ವಿಜಯೇಂದ್ರ, ಕನಸಿನ ಆಡಳಿತ ನೀಡುವತ್ತ ಯಡಿಯೂರಪ್ಪ ಗಮನಹರಿಸಬೇಕು, ಆಗಲೇ ಅವರಿಗೂ, ಬಿಜೆಪಿಗೂ ಇಬ್ಬರಿಗೂ ಕ್ಷೇಮ.

    ಬುದ್ಧ ಬಸವ ಗಾಂಧಿ ಇಲ್ಲಿಯೇ ಇದ್ದಾರೆ

    ಬಳಕೂರು ವಿ ಎಸ್ ನಾಯಕ

    ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ,ಮಂದಸ್ಮಿತ ನಗುವನ್ನು ಬೀರುವ ಗೌತಮ ಬುದ್ಧ, ರಾಧಾಕೃಷ್ಣ ,ಕುದುರೆಯನೇರಿದ ಶಿವಾಜಿ, ಜಗತ್ತಿಗೆ ಶಾಂತಿಯನ್ನು ಸಾರಿದ ಬಸವಣ್ಣ, ಗುರುಸಾರ್ವಭೌಮ ಶ್ರೀ ರಾಘವೇಂದ್ರ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀಬಾಲಗಂಗಾ ರನಾಥ ಸ್ವಾಮೀಜಿ, ಅಂಬೇಡ್ಕರ್ ಶಿಲ್ಪ ಹೀಗೆ ಒಂದೇ ಎರಡೇ ಒಂದು ಕ್ಷಣ ಅಲ್ಲಿ ತೆರಳಿದರೆ ಸಾಕು ಭಾವ ಪರವಶರಾಗಿ ನಿಲ್ಲುವುದಂತು ಸತ್ಯ.

    ಇಲ್ಲಿಯ ವಿಭಿನ್ನ ಶಿಲ್ಪಗಳು ನಿಜವಾಗಿಯೂ ಪ್ರತಿ ಸಾಧುಸಂತರು ಮಹಾನ್ ವ್ಯಕ್ತಿಗಳ ಇರುವಿಕೆಯನ್ನು ಸೂಚಿಸುವಂತಿದೆ. ಇಂತಹ ವಿಬಿನ್ನ ಶಿಲ್ಪಕಲಾಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಹೆಸರು ಮಾಡಿದವರು ಕಲಾವಿದರಾದ ಕೃಷ್ಣ ನಾಯಕ್ . ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಯವರು. ಇವರಿಗೆ ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಅಪಾರ ಆಸಕ್ತಿ. ಮನೆಯ ಮುಂದಿನ ಶರಾವತಿ ನದಿ,ಅಲ್ಲಿಯ ಬೆಟ್ಟಗುಡ್ಡಗಳೆಲ್ಲ ಇವರಿಗೆ ಪರಿಚಿತ. ಇವೆಲ್ಲವನ್ನೂ ಕಲಾ ವಸ್ತುವನ್ನಾಗಿಸಿ ಕೊಂಡ ಇವರು ತಮ್ಮ ಯೋಚನೆಯಲ್ಲಿ ವಿಭಿನ್ನ ಶಿಲ್ಪಕಲಾಕೃತಿಗಳನ್ನು ತಯಾರಿಸಿ ಇಂದು ನಾಡಿನ ಪ್ರಸಿದ್ಧ ಕಲಾವಿದರ ಸಾಲಿನಲ್ಲಿದ್ದಾರೆ.

    ಕಲಾ ಪಯಣ ಆರಂಭವಾಗಿದ್ದು ಹೀಗೆ

    ಕಲಾವಿದ ಕೃಷ್ಣ ನಾಯಕ್ ಅವರು ತಂದೆಯಿಂದ ಪ್ರೇರಿತರಾಗಿ ಮೊದಲು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ಕಾರ್ಯ ಆರಂಭಿಸಿದರು ಕೂಡ ಅವರನ್ನು ಆಕರ್ಷಿಸಿದ್ದು ಶಿಲ್ಪಕಲೆ.ಅವರಿಗೆ ತಾವು ವಿದ್ಯಾರ್ಥಿ ದೆಸೆಯಲ್ಲಿ ನೋಡಿದ ಕುದುರೆ ಲಕ್ಷ್ಮಿ ಗಣೇಶ ಇತ್ಯಾದಿ ಶಿಲ್ಪಗಳು ಆಕರ್ಷಣೆಗೆ ಒಳಗಾಗಿ ಅದೇ ಮಾದರಿಯ ಶಿಲ್ಪಗಳನ್ನು ರಚಿಸಲು ಆರಂಭಿಸಿದರು.

    ಕೃಷ್ಣ ನಾಯಕ್ ರವರು ಬೆಂಗಳೂರಿನ ನಾಗರಭಾವಿಯಲ್ಲಿ ಕ್ರಿಶ್ ಪಾರ್ಟ್ ವರ್ಲ್ಡ್ ಎಂಬ ಕಲಾ ಗ್ಯಾಲರಿಯನ್ನು ಆರಂಭಿಸಿ ಇಲ್ಲಿ ತಾವು ರಚಿಸಿದ ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲಿ ಪ್ರವೇಶಿಸಿದವರಿಗೆ ಯಾವುದೋ ಒಂದು ಕಲಾಲೋಕಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ.

    ರಾಜ್ಯದ ಮೂಲೆ ಮೂಲೆಯಲ್ಲಿ ಶಿಲ್ಪಕಲಾಕೃತಿಗಳು

    ಶ್ರೀ ಕೃಷ್ಣ ನಾಯಕ್ ರವರು ರಾಜ್ಯದ ವಿಭಿನ್ನ ಭಾಗಗಳಲ್ಲಿ ತಮ್ಮ ಕೈಚಳಕದಲ್ಲಿ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗ ದಲ್ಲಿರುವ ಬುದ್ಧ ಬಸವಣ್ಣ ಅಂಬೇಡ್ಕರ್ ಶಿಲ್ಪಗಳು, ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಬುದ್ಧನ ಶಿಲ್ಪ , ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಗಣೇಶನ ಶಿಲ್ಪ, ತುಮಕೂರಿನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಲ್ಪ ಮತ್ತು ಬಾಲಗಂಗಾಧರ ಸ್ವಾಮೀಜಿಯವರ 9 ಅಡಿ ಎತ್ತರದ ಶಿಲ್ಪ ಇವ ಕಲಾ ಪ್ರೌಢಿಮೆಗೆ ಸಾಕ್ಷಿ .

    ಸುಮಾರು 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಅವರು ಬಹಳಷ್ಟು ಶಿಲ್ಪಗಳನ್ನು ರಚಿಸಿದ್ದಾರೆ. ಯಾವುದೇ ಶಿಲ್ಪಗಳನ್ನು ರಚಿಸುವುದು ಸುಲಭದ ಮಾತಲ್ಲ ಮೊದಲು ಮಣ್ಣಿನಲ್ಲಿ ಕಲಾಕೃತಿಯನ್ನು ಮಾಡಿ ಸಿಲಿಕಾನ್ ಅಲ್ಲಿ ಮಾದರಿ ಮಾಡಿದನಂತರ ಫೈಬರ್ ನಲ್ಲಿ ತಯಾರಿಸಿ ಕಂಚಿನಲ್ಲಿ ಸರಿಯಾಗಿ ಮಾಡಬೇಕಾದರೆ ಸುಮಾರು ಆರರಿಂದ ಎಂಟು ತಿಂಗಳುಗಳ ಪರಿಶ್ರಮದ ಅಗತ್ಯವಿದೆ ಎಂದು ಕೃಷ್ಣ ನಾಯಕ್ ಹೇಳುತ್ತಾರೆ.

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಮತದಾನದ ಮಹತ್ವ: ಬಿಹಾರ ಚುನಾವಣೆ ಕಲಿಸಿದ ಪಾಠ

    ಎಸ್.ಕೆ. ಶೇಷಚಂದ್ರಿಕ

    ಬಿಹಾರಿ ಮತದಾರನನ್ನು ದಡ್ಡ, ಪೆದ್ದ, ಕೋಲೇ ಬಸವ, ಹಿಂಸೆಯನ್ನು ಪ್ರೋತ್ಸಾಹಿಸುವಾತ  ಹೀಗೆ ನಾನಾ ರೀತಿ ಬಣ್ಣಿಸುತ್ತಿದ್ದ ದೇಶದ ಒಟ್ಟಾರೆ ಮತದಾರರಿಗೆ ಬಿಹಾರಿಗ ಸಂದೇಶ ರವಾನಿಸಿದ್ದಾನೆ.

    ಸ್ವತಂತ್ರ ಭಾರತದ  ಐದು ದಶಕಗಳ ಇತಿಹಾಸದಲ್ಲಿ ಬಿಹಾರ ಚುನಾವಣೆ ಹಲವಾರು ದೃಷ್ಟಿಯಿಂದ ಮಹತ್ವದ್ದಾಗಿದೆ.  ಇನ್ನು ಮುಂದೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಉಳಿದ ಮತದಾರರು ಬಿಹಾರ ಮತದಾರನನ್ನು ಮಾದರಿ ಎಂದು ಪರಿಗಣಿಸಿದಲ್ಲಿ ವಿಶೇಷವೇನಿಲ್ಲ.

    ಯುವ ಮತದಾರರ ನಿರ್ಣಯ
    ಮುಖ್ಯವಾಗಿ ಬಿಹಾರ ಚುನಾವಣೆಯಿಂದ ಕಲಿಯಬಹುದಾದ ನೀತಿ ಪಾಠವೇನು?

    ಧ್ರುವೀಕರಣ ಎನ್ನಬಹುದಾದ ರೀತಿಯಲ್ಲಿ ಬಿಹಾರ  ಮತದಾರನ ನಿರ್ಣಯ ಹೊರಬಿದ್ದಿದೆ.  ಯುವಜನರಲ್ಲಿ ಬಹುತೇಕ ಮತದಾರರು ಬದಲಾವಣೆಗೆ ಓಗೊಟ್ಟಿದ್ದಾರೆ.  ಹೊಸ ನೋಟ, ಹೊಸ ದೃಷ್ಟಿ, ಬದಲಾವಣೆ  ಇದು ಬಿಹಾರಿ ಯುವ ಮತದಾರರ ಸಂದೇಶವಾಗಿದೆ.

    ಬೆಂಗಳೂರಿನ ವರದಿಗಾರರ ತಂಡ ಸಮೀಕ್ಷಿಸಿದಂತೆ ಮತದಾರರಲ್ಲಿ  ಮೂರು ವರ್ಗ ಸ್ಪಷ್ಟವಾಗಿದೆ.

    ಯುವ ಮತದಾರರು ಕ್ರಾಂತಿ ಅಥವಾ ದಂಗೆ ಎನ್ನುವ ಪ್ರಮಾಣದಲ್ಲಿ ರಾಷ್ಟ್ರೀಯ ಜನತಾದಳದ ಯುವ ನಾಯಕ ತೇಜಸ್ವಿ ಯಾದವನನ್ನು ಬೆಂಬಲಿಸಿದ್ದಾರೆ.  75 ಕ್ಷೇತ್ರಗಳಲ್ಲಿ ಆತ ಸಾಧಿಸಿರುವ  ವಿಜಯ ಇದರಿಂದ ಸ್ಪಷ್ಟವಾಗುತ್ತದೆ.

    ಎರಡನೆಯ ವರ್ಗ ತಟಸ್ಥರು. ಮುಖ್ಯಮಂತ್ರಿ ನಿತೀಶ್ ಕುಮಾರರ ಬೆಂಬಲಿಗರು.  ನಿತೀಶರ ವೈಯಕ್ತಿಕ ಸಚ್ಛಾರಿತ್ರವನ್ನು ನಂಬಿ,  ಪಕ್ಷಕ್ಕೆ ಅಲ್ಲದಿದ್ದರೂ,  ವ್ಯಕ್ತಿಗೆ ವೋಟು ಹಾಕಿದವರು. ದೇಶದ ಇಂದಿನ ಹಲವಾರು ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಬಿಹಾರದ ಸಮಾಜವಾದಿ ಮುಖ್ಯಮಂತ್ರಿ ನಿತೀಶ್ ಕುಮಾರ ಸಾವಿರಪಾಲು ಯೋಗ್ಯರು.

    ಮೋದಿಯನ್ನು ಮೆಚ್ಚಿದ ಬಿಹಾರಿಗರು

    ಮೂರನೆಯದು: ಬಿಹಾರದ ಇಂದಿನ ಚುನಾವಣೆಯ
    ಹಿಂದಿನ ಪ್ರೇರಕಶಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಂಬಿದವರು.  ಇವರನ್ನು ತಟಸ್ಥರು ಎಂದು ವರ್ಗೀಕರಣ ಮಾಡಿದರೂ ತಪ್ಪಲ್ಲ.

    ಚರಿತ್ರಹೀನ ರಾಜಕಾರಣಿಗಳು ಇದೀಗ ದೇಶದ ಚರಿತ್ರೆಯನ್ನು ತುಂಬಿಸಿದ್ದಾರೆ.ಅಧಿಕಾರಕ್ಕೆ ಬಂದ ಕೂಡಲೇ ಹಣ ಗಳಿಸುವ ದಂಧೆ ಹೆಚ್ಚುತ್ತಿದೆ.  ಅಭಿವೃದ್ಧಿ ಸಂಘಟನೆಯನ್ನು ನಡೆಸಬೇಕಾದ ಕೆಲ ಮುಖ್ಯಮಂತ್ರಿಗಳು ಹಣ-ಜಾತಿ ಸಂಘಟನೆಗೆ ಆದ್ಯತೆ ಕೊಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ನಂಬಿಕೆ ಅರ್ಹ ರಾಗಿ ಕಾಣಿಸಿದ್ದರೆ ಅಚ್ಚರಿ ಇಲ್ಲ.

    ಇಂದಿನ ಬಿಹಾರದ ಚುನಾವಣೆ  ಒಂದು ರೀತಿಯಲ್ಲಿ ಜನಸಾಮಾನ್ಯರು, ವಿಶೇಷವಾಗಿ ಮಹಿಳಾ ಮತದಾರರು ನರೇಂದ್ರ ಮೋದಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕೊಟ್ಟ ಆದರ –  ಗೌರವ ಎಂದರೆ ಉತ್ಪ್ರೇಕ್ಷೆಯಲ್ಲ.

    ಮೋದಿಯವರ ಜನಪ್ರಿಯತೆಯನ್ನು ಎಲ್ಲರೂ ಅನುಮೋದಿಸಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಹೆಚ್ಚು ಜನ ಮೋದಿಯ ನಾಯಕತ್ವದಲ್ಲಿ ದೇಶದ ಭವಿಷ್ಯ, ಪ್ರಗತಿ ಮತ್ತು ಏಳಿಗೆಯನ್ನು ನಂಬಿದ್ದಾರೆ ಎನ್ನುವುದು ಬಿಹಾರಿ ಮತದಾರ ಕಲಿಸಿದ ಪಾಠ.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು

    ನಾಳೆ ಬಗ್ಗೆ ಚಿಂತೆ ಏತಕೇ ಇಂದು ಎಂದೂ ನಮ್ಮದೇ…

    ನಾಳೆ ನನ್ನ ಬದುಕಿನಲ್ಲಿ ಏನಾಗಬಹುದು ಎಂಬ ಚಿಂತೆಯಿಂದಲೇ ನಾನು ಒತ್ತಡಕ್ಕೊಳಗಾಗಿದ್ದೇನೆ. ಏನೇ ಮಾಡಿದರೂ ಯಾಕೋ ನನ್ನ ಬದುಕು ಬದಲಾಗುತ್ತಿಲ್ಲವಲ್ಲ. ನನ್ನ ಗಳಿಕೆ ಮುಂದಿನ ದಿನಗಳಿಗೆ ಸಾಲುತ್ತಿಲ್ಲ. ನಾಳೆ ಕಾಯಿಲೆ ಬಂದರೆ ಏನು ಮಾಡೋದು… ಹೀಗೆ ಇಂತಹದ್ದೇ ಅನೇಕ ಚಿಂತೆಗಳು ಈ ಕ್ಷಣವನ್ನು ಆನಂದದಿಂದ ಬದುಕಲು ಬಿಡುತ್ತಿಲ್ಲ. ಅದಕ್ಕೇನು ಮಾಡಬಹುದು… ?

    ಪ್ರತಿಯೊಬ್ಬ ವ್ಯಕ್ತಿಯನ್ನು ಕಾಡುವ ಭಯ ಅಂದರೆ ಕೊರತೆಗಳು. ನಾಳೆಯ ಬದುಕಿಗೆ ನಾನೇನು ಮಾಡಲಿ? ನಾಳೆಗೆ ಬೇಕಾದ್ದು ನನ್ನಲ್ಲಿಲ್ಲವಲ್ಲ ಎನ್ನುವ ಭಯ ಪ್ರತಿಯೊಬ್ಬ ಮನುಷ್ಯನನ್ನು ಪ್ರತಿದಿನ ಕಾಡುತ್ತಲೇ ಇರುತ್ತದೆ. ದಿನ ಬೆಳಗಾದರೆ ನಾಳೆಯ ಬಗ್ಗೆಯೇ ಯೋಚನೆ ಮಾಡುವವರು ಹೆಚ್ಚು. ಅದೆಷ್ಟೋ ನಾಳೆಗಳಿಗಾಗಿ ಕಷ್ಟಪಡುವುದರಲ್ಲಿಯೇ ಪ್ರತಿದಿನ ಕಾಲ ಕಳೆಯುತ್ತಾರೆ.
    ಪ್ರತಿಯೊಬ್ಬರೂ ನಿರಂತರ ಹೋರಾಟ ನಡೆಸುವುದು ಇಲ್ಲದ್ದನ್ನು ಹೊಂದಬೇಕು ಎಂಬ ಬಯಕೆಗೆ.

    ಸಾಂಸಾರಿಕ ಜೀವನದಲ್ಲಿ ತೊಡಗಿಸಿಕೊಂಡವನಿಗೆ ಹೆಂಡತಿ ಮಕ್ಕಳೊಡಗೂಡಿ ಖುಷಿಯಾಗಿರಲು ಐಷಾರಾಮಿ ಮನೆ ಬೇಕು, ಓಡಾಡಲು ಕಾರು ಬೇಕು, ಮಕ್ಕಳ ಭವಿಷ್ಯಕ್ಕೆಂದು ಒಂದಷ್ಟು ಹಣ ಕೂಡಿಡಬೇಕು…. ಇನ್ನೂ ಹಲವು ಆಸೆಗಳು. ಇವೆಲ್ಲದರ ಕನಸು ಕಾಣುತ್ತಿರುವಾತ ಹೇಗೋ ಅವೆಲ್ಲವನ್ನೂ ಪಡೆದುಕೊಳ್ಳುತ್ತಾನೆ ಕೂಡಾ. ಆದರೆ ಅವೆಲ್ಲದರಿಂದ ಅವನಿಗೆ ಸಂತೃಪ್ತಿ ಸಿಕ್ಕೀತಾ?
    ಇದ್ದುದರಲ್ಲಿ ಸಂತೃಪ್ತಿ ಪಡೆವ ಮನಸ್ಸು ಅವರದಲ್ಲ. ಒಂದು ಪಡೆದುಕೊಂಡ ಮೇಲೆ ಮತ್ತಿನ್ನೇನೋ ಬೇಕು ಎನ್ನುವ ಬಯಕೆ ಮನದಲ್ಲಿ ಮೂಡಿರುತ್ತದೆ.

    ಬಯಕೆಯ ಸರಮಾಲೆಯಲ್ಲಿ ಒಂದೊಂದೇ ಆಸೆ ಪೋಣಿಸಲ್ಪಟ್ಟಾಗ ಸಂತೃಪ್ತಿ ಎಂಬುದು ಕನಸಿನ ಮಾತಾಗುತ್ತದೆ.ಕೆಲವರಿಗೆ ಈ ಜಗತ್ತಿಗೆ ಎಷ್ಟು ನೀಡಿದರೂ ತೃಪ್ತಿಯಿಲ್ಲ, ಜಗತ್ತಿನಿಂದ ಎಷ್ಟು ಪಡೆದುಕೊಂಡರೂ ಸಾಕಾಗುವುದಿಲ್ಲ. “ಕಡಿಮೆಯೇ’ ಎನ್ನುವ ಮನಸ್ಥಿತಿ ಅವರದ್ದು. ಮತ್ತೆ ಅದನ್ನು ಪಡೆಯುವುದಕ್ಕಾಗಿ ಏನೇನೋ ಕಸರತ್ತು ನಡೆಸುತ್ತಿರುತ್ತಾರೆ. ಭೌತಿಕ ಜಗತ್ತಿನಲ್ಲಿ ಬಾಹ್ಯ ಬಯಕೆಗಳಿಂದ ಸಂತೃಪ್ತಿ ಹೊಂದಲು ಸಾಧ್ಯವಿಲ್ಲ.

    ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ಸಿಗಲಾರದಕ್ಕೆ ಆಸೆ ಪಡುವುದರಲ್ಲಿ ಅರ್ಥ ಇಲ್ಲ. ಅದರಿಂದ ದುಃಖವೇ ಹೊರತು ಸಂತೋಷ ಅಥವಾ ಸಂತೃಪ್ತಿ ಸಿಗುವುದಕ್ಕೆ ಸಾಧ್ಯವಿಲ್ಲ. `ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು’ ಎಂದು ಡಿವಿಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು ಇದೇ ಉದ್ದೇಶಕ್ಕೆ.
    ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಹುಟ್ಟು, ಜೀವನ, ಜೀವನದ ಉದ್ದೇಶ, ಹಾಗೂ ಗುರಿ ಹಾಗೂ ಸಾಧನೆಯೆಡೆಗಿನ ಪ್ರಯತ್ನ ಇವೇ ಮೊದಲಾದುವುಗಳ ಬಗ್ಗೆ ಪ್ರಶ್ನಿಸಿಕೊಂಡರೆ ಜೀವನದಲ್ಲಿ ತೃಪ್ತಿ ಹೊಂದುವುದು ಕಷ್ಟವಲ್ಲ. ಇಲ್ಲವಾದರೆ ಅನಿರೀಕ್ಷಿತ ವಾಗಿ ದುಃಖ ಅನುಭವಿಸಬೇಕಾಗಬಹುದು.

    ಬದುಕಿನ ಯಾನದಲ್ಲಿ ಸಾಧಿಸಿದ ಯಶಸ್ಸು, ನಾಳೆಗೆ ಕೂಡಿಟ್ಟ ಶ್ರೀಮಂತಿಕೆ ಮುಖ್ಯವಾಗುವುದಿಲ್ಲ. ಯಾಕೆಂದರೆ ಸಾಕು ಎನ್ನುವ ಭಾವ ತೃಪ್ತಿ. ಅದು ಬಯಕೆಗಳಿಂದ ಹೊರತಾಗಿರುತ್ತದೆ. ಹಾಗಾಗಿ ನನಗೆ ತೃಪ್ತಿ ಇದೆ ಎನ್ನುವ ಭಾವ ವ್ಯಕ್ತವಾದರೆ ಅದೇ ಸಾರ್ಥಕತೆ.

    Photo by Jill Heyer on Unsplash

    error: Content is protected !!