18.4 C
Karnataka
Wednesday, November 27, 2024
    Home Blog Page 139

    ಯಾವುತ್ತು ಪ್ರಕಟವಾಗುತ್ತೆ ಅಮೆರಿಕ ರಿಸಲ್ಟ್

    ಬಿಡೆನ್ 264 ಟ್ರಂಪ್ 214

    ಚುನಾವಣೆ ನಡೆದು ಮೂರು ದಿನ ಆದರೂ ಅಮೆರಿಕದ ನೂತನ ಅಧ್ಯಕ್ಷರು ಯಾರಾಗಬಹುದು ಎಂಬುದು ಇನ್ನೂ ಗೊತ್ತಾಗಿಲ್ಲ.ಕೌಂಟಿಂಗ್ ಶುರುವಾದ ಆರೇಳು ಗಂಟೆಯಲ್ಲಿ ಫಲಿತಾಂಶ  ತಿಳಿಯುವ ಭಾರತೀಯರಿಗೆ ಇದು ವಿಚಿತ್ರವಾಗಿ ಕಾಣುತ್ತಿದೆ. ನಮ್ಮಲ್ಲಿ ಆಗಿದ್ರೆ ಇಷ್ಟು ಹೊತ್ತಿಗೆ ಮೂರು ನಾಲ್ಕು ಎಲೆಕ್ಷನ್ ರಿಸಲ್ಟ್ ಕೊಡ್ತಿದ್ವಿ. ಎಲ್ಲದರಲ್ಲೂ ಮುಂದಿರುವ ಅಮೆರಿಕ ಇಲ್ಲಿ ಏಕೆ  ಹೀಗೆ ? ಭಾರತಕ್ಕೆ ಹೋಲಿಸಿದರೆ ಕಡಿಮೆ ಮತದಾರರಿರುವ ಅಲ್ಲಿ ವಾರಗಟ್ಟಲೆ ವೋಟ್ ಕೌಂಟ್ ಮಾಡುತ್ತಿರುವುದನ್ನು ಕಂಡು ಭಾರತೀಯರು ಅಚ್ಚರಿ ಪಡುತ್ತಿದ್ದಾರೆ. ಅಸಲಿಗೆ  ತಡವಾಗುತ್ತಿರುವುದಕ್ಕೆ ಕಾರಣವಾದರು ಏನು?. ಇಲ್ಲಿದೆ ನಿಮ್ಮ ಸಂದೇಹಗಳಿಗೆ ಉತ್ತರ.

    ಅಮೆರಿಕಾದಲ್ಲಿ ನಮ್ಮಂತೆ ಮತದಾನಕ್ಕೆ ಯಂತ್ರಗಳನ್ನು ಬಳಸುವುದಿಲ್ಲವೆ? ನಮ್ಮ ಬಿಇಎಲ್ ನವರಿಗೆ ಹೇಳಿದರೆ ಅವರಿಗೂ ರೆಡಿ ಮಾಡಿ ಕೊಡ್ತಿದ್ದರಲ್ವಾ?

    ಅಲ್ಲಿನ ಕಾನೂನು ಮತ ಯಂತ್ರಕ್ಕೆ ಅವಕಾಶ ನೀಡುವುದಿಲ್ಲ. ಈಗಲೂ ಬ್ಯಾಲಟ್ ಪೇಪರ್ ಅನ್ನೇ ಅವರು ಬಳಸುವುದು. ನಮ್ಮಲ್ಲೂ ಯಂತ್ರಗಳು ಬರುವ ಮೊದಲು ಫಲಿತಾಂಶ ಹೀಗೆ ತಡವಾಗುತ್ತಿತ್ತು. ಉತ್ತರ ಪ್ರದೇಶದ ಅನೇಕ ಕ್ಷೇತ್ರಗಳ ಎಣಿಕೆ ಮೂರು ದಿನವಾದರು ಮುಗಿಯುತ್ತಿರಲಿಲ್ಲ. ರೆಡಿಯೋದಲ್ಲಿ ಮೂರು ದಿನವಾದರು ಲೀಡಿಂಗ್ ನದೇ ಸುದ್ದಿ ಇರುತ್ತಿತ್ತು.

    ಸರಿ ಬ್ಯಾಲೆಟ್ ಪೇಪರ್ ಬಳಸ್ತಾರೆ ಒಪ್ಪೋಣ. ಆದರೂ ಇಷ್ಟೊಂದು ಡಿಲೇನಾ?

    ಹೌದು . ಈ ಬಾರಿ ತಡವಾಗಿದೆ. ಅದಕ್ಕೆ ಕಾರಣ ಕೋವಿಡ್. ಇದರ ಕಾರಣದಿಂದ ಮತಗಟ್ಟಗೆ ಬಂದು ವೋಟ್ ಮಾಡುವುದರಿಂದ ಕೋರಿಕೆ ಸಲ್ಲಿಸಿದ ಎಲ್ಲರಿಗೂ ವಿನಾಯ್ತಿ ನೀಡಲಾಗಿತ್ತು. ಮತಗಟ್ಟೆಗೆ ಬರಲು ಆಗದವರು ತಾವು ಅಂಚೆ ಮೂಲಕ ಮತಪತ್ರಗಳನ್ನು ತರಿಸಿಕೊಂಡು ಮತದಾನ ಮಾಡಿ ಅದನ್ನು ಮರು ಅಂಚೆ ಮಾಡಿದ್ದಾರೆ. ಈ ಹಿಂದೆ ಕೆಲವರು ಮಾತ್ರ ಆ ಸೌಲಭ್ಯ ಬಳಸುತ್ತಿದ್ದರು.

    ಮತದಾನದ ದಿನಕ್ಕೆ ಮುಂಚಿತವಾಗಿಯೆ ಮತಹಾಕಬಹುದಿತ್ತೆ?

    ಹೌದು. ಅಂಚೆಯ ಮೂಲಕ ಕಳಿಸಲು ಆಗದವರು ಮುಂಚಿತವಾಗಿಯೇ ಅಂದರೆ ವೋಟಿಂಗ್ ದಿನಕ್ಕೆ ಮುಂಚಿತವಾಗಿ ನಿಗದಿತ ಕೇಂದ್ರಕ್ಕೆ ಬಂದು ಮತಹಾಕುವ ಅವಕಾಶ ಕಲ್ಪಿಸಿತ್ತು. ಹೀಗಾಗಿ ಚುನಾವಣೆ ದಿನಕ್ಕೆ ಮುನ್ನವೆ  ಶೇಕಡ 73. 4(ಕಳೆದ ಚುನಾವಣೆಗೆ ಹೋಲಿಸಿ)  ರಷ್ಟು ಮತದಾನ ಆಗಿತ್ತು. ಈ ರೀತಿ ಮೊದಲೆ ಹಾಕಿದ ಮತಗಳು, ಅಂಚೆಗೆ ಹಾಕಿದ ಮತಗಳು ಎಣಿಕೆ ಕೇಂದ್ರ ತಲುಪಲು ತಡವಾಗಿದೆ. ಬಿರುಸಿನ ಸ್ಪರ್ಧೆ ಇರುವುದರಿಂದ ಎಲ್ಲಾ ಮತಗಳನ್ನು ಎಣಿಸಲೇ ಬೇಕಾಗಿದೆ.

    ಆದರೆ ಕೆಲವು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು ಹೇಗೆ?

    ಕೆಲವು ರಾಜ್ಯಗಳು ಚುನಾವಣೆ ದಿನಕ್ಕೆ ಮುನ್ನವೆ ಸ್ವೀಕಾರವಾದ ಮತಗಳ ಎಣಿಕೆ ಆರಂಭಿಸಲು ಅನುಮತಿ ನೀಡಿದ್ದವು. ಕೆಲವು ರಾಜ್ಯಗಳು ಅಧಿಕೃತ ಮತದಾನದ ದಿನದ ವರೆಗೂ ಎಣಿಕೆ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಅಲ್ಲಿ ನವೆಂಬರ್ 3 ರ ನಂತರದಿಂದಲೇ ಎಣಿಕೆ ಶುರುವಾಗಿದೆ,

    ಉದಾಹರಣಗೆ ಫ್ಲಾರಿಡಾ ಅಲ್ಲಿನ ರಾಜ್ಯ ಸರಕಾರ ಮೊದಲೆ ಎಣಿಕೆಗೆ ಅನುಮತಿ ನೀಡಿತ್ತು, ಹೀಗಾಗಿ ಅಲ್ಲಿ  ಫಲಿತಾಂಶ ಬೇಗ ಪ್ರಕಟವಾಯಿತು. ಪೆನಿಸಲ್ವೇನಿಯ ಮೊದಲೆ ಎಣಿಸಲು ಒಪ್ಪಲಿಲ್ಲ.

    ಅಂಚೆ ಮೂಲಕ ಮತ ಎಣಿಕೆ ಏಕೆ ತಡ?

    ಈ ಬಾರಿ ಇವುಗಳ ಸಂಖ್ಯೆಯೇ ಹೆಚ್ಚಾಗಿದೆ. ಮತ ಎಣಿಕೆ ಮಾಡುವ ಮುನ್ನ ಸಹಿಗಳನ್ನು ಟ್ಯಾಲಿ ಮಾಡಿ ಖಚಿತ ಪಡಿಸಿಕೊಳ್ಳಬೇಕು. ಕೆಲವು ಕಡೆ ಪೋಸ್ಟಲ್ ಬ್ಯಾಲೆಟ್ ಪಡೆದವರು ಅದನ್ನು ಚಲಾಯಿಸದೆ ಮತದಾನಕ್ಕೆ ಬಂದು ಚಲಾಯಿಸಿರುತ್ತಾರೆ. ಅಂಥ ಕಡೆ ಅವರಿಂದ ಡಬಲ್ ಮತದಾನ ಆಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ.

    ಆನ್ ಲೈನ್ ಮತದಾನಕ್ಕೆ ಅವಕಾಶ ಇತ್ತೆ?

    ಆನಲೈನ್ ಮತದಾನಕ್ಕೆ ಅವಕಾಶ ಇರಲಿಲ್ಲ.

    ಇನ್ನು ಯಾವ ರಾಜ್ಯಗಳ ಫಲಿತಾಂಶ ಪ್ರಕಟವಾಗಬೇಕು?

    ಜಾರ್ಜೀಯ – 16 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಸದ್ಯ ಟ್ರಂಪ್ ಮುಂದಿದ್ದಾರೆ. ಆದರೆ ಅಂತರ ಕಡಿಮೆ ಆಗುತ್ತಿದೆ. ಕೇವಲ 2000  ಮತಗಳ ವ್ಯತ್ಯಾಸವಿದೆ.  ಇನ್ನು 15000 ವೋಟುಗಳು ಎಣಿಕೆಯಾಗಬೇಕು. ಉಳಿದಿರುವ ಮತಗಳು ಅಟ್ಲಾಂಟ ಮತ್ತು ಸವನ್ನಾ ಪ್ರಾಂತ್ಯದ ಅಂಚೆಮತಗಳು.ಇವು ಬಿಡನ್ ಪರ ವಾಲುವ ಸಂಭವವೇ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂದು ರಾತ್ರಿಯ ವೇಳೆಗೆ ಪ್ರಕಟ ಆಗಬಹುದು

    ಪೆನಿಸಲ್ವೇನಿಯ -20 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಸಧ್ಯ ಟ್ರಂಪ್ ಮುಂದೆ ಇದ್ದಾರೆ.  ಅರ್ಧ ಮಿಲಿಯನ್ ಇದ್ದ ಲೀಡ್  ಈಗ 23000ಕ್ಕೆ ಇಳಿದಿದೆ. ಬೆಳಿಗ್ಗೆ 550000 ಮತಗಳ ಎಣಿಕೆ ಇತ್ತು. ರಾತ್ರಿ ಮುಗಿಯಬಹುದು. ಈ ರಾಜ್ಯದಲ್ಲಿ ಪಾರಂಪರಿಕವಾಗಿ ಡೆಮಾಕ್ರಾಟಿಕ್ ಗಳೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.

    ಅರಿಝೋನ—11 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಬಿಡೆನ್ 47 000 ಮತಗಳಿಂದ ಮುಂದೆ ಇದ್ದಾರೆ. ಆದರೆ ಟ್ರಂಪ್ ಕೂಡ ಬಿರುಸಿನ ಸ್ಫರ್ಧೆ ನೀಡಿದ್ದಾರೆ. ಇನ್ನೂ 4 ಲಕ್ಷಕ್ಕೂ ಹೆಚ್ಚಿನ ಮತ ಎಣಿಕೆ ಆಗಬೇಕು. ಯಾರಿಗೆ ಹೋಗಬಹುದು ಎಂಬುದು ಅಸ್ಪಷ್ಟ . ಇಬ್ಬರಿಂದಲೂ ಸ್ಪರ್ಧೆ ಇದೆ.

    ನೆವೆಡಾ- 6 ಪ್ರತಿನಿಧಿ (ಎಲೆಕ್ಟರ್ಸ್ ) ವೋಟುಗಳು

    ಬಿಡನ್ ಮುಂದೆ ಇದ್ದಾರೆ.  ಇನ್ನೂ 1 90 000 ಮತ ಎಣಿಕೆ ಆಗಬೇಕಿದೆ. ಇವು ಲಾಸ್ ವೇಗಸ್ ಇರುವ ಕ್ಲಾರ್ಕ್ ಕಂಟ್ರಿ ಮತಗಳು.ಇನ್ನು 51 000 ಮತಗಳು ನಾಳೆ ಕೇಂದ್ರಕ್ಕೆ ಸೇರುತ್ತವೆ. ವೀಕೆಂಡ್ ವೇಳೆಗೆ  ಫಲಿತಾಂಶ ಪ್ರಕಟ ಆಗಬಹುದು. ಪೋಸ್ಟಲ್ ಬ್ಯಾಲಟ್ ಗಳು ಬಿಡನ್ ಪಾಲಾಗಬಹುದು. ಆದರೆ  ಮತದಾನ ದಿನ ಟ್ರಂಪ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರೆ ಪರಿಸ್ಥಿತಿ ಬದಲಾಗಬಹುದು.

    ಹಾಗಾದರೆ ಫೈನಲ್ ರಿಸಲ್ಟ್ ?

    ಈಗಿನ ಸ್ಥಿತಿ ನೋಡಿದರೆ ಈ ವಾರಾಂತ್ಯ ಆಗಬಹುದು

    ಬಿಹಾರ ಯಾರಿಗೆ ಸಿಗುವುದು ಗೆಲುವಿನ ಹಾರ

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಬಹುಶಃ ವರದಿಗಾರಿಕೆ ಕ್ಷೇತ್ರದಲ್ಲಿ ಬೆಂಗಳೂರು ತಂಡದ ಕಾರ್ಯ ರಾಷ್ಟ್ರಮಟ್ಟದ ದಾಖಲೆಯಾಗಿದ್ದಾರೆ ಅಚ್ಚರಿ ಇಲ್ಲ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ.

    ಎಸ್ .ಕೆ. ಶೇಷಚಂದ್ರಿಕ

    ದೇಶಾದ್ಯಂತ ಜನಮನದಲ್ಲಿ ಅಪಾರ ಕುತೂಹಲ ತುಂಬಿದ ಬಿಹಾರ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಗಳಿಗೆ ಇನ್ನೇನು ತೆರೆ ಬೀಳಲಿದೆ.  ಇಂದು ಶುಕ್ರವಾರ ಅಂತಿಮ ಹಂತದ ಮತದಾನ ಪೂರ್ಣಗೊಳ್ಳಲಿದ್ದು,  ನವೆಂಬರ್ 10 ಮಂಗಳವಾರ ಫಲಿತಾಂಶ ಹೊರಬೀಳಲಿದೆ.

    ಇನ್ನು ಉಳಿದ ಪ್ರಶ್ನೆಯೆಂದರೆ ಈಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರರು ಗೆಲ್ಲುವರೇ? ಅಥವಾ 12 ವರುಷದ ಅವರ ಆಡಳಿತ ಕೊನೆಗೊಳ್ಳುವುದೇ?.

    ಇದಕ್ಕಿಂತ ಹೆಚ್ಚಿನ ಕುತೂಹಲದ ಪ್ರಶ್ನೆ ಎಂದರೆ ಬಿಹಾರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಆರ್ ಜೆಡಿಯ ತೇಜಸ್ವಿ ಯಾದವನ ಭವಿಷ್ಯವೇನು?

    ಸಮೀಕ್ಷೆಗಳ ಅಭಿಪ್ರಾಯ

    ಬೆಂಗಳೂರಿನ ವರದಿಗಾರರ ತಂಡವಾಗಿ ಬಿಹಾರದಲ್ಲಿ ನಾವು ಇಂದಿನ ಚುನಾವಣೆಯೂ ಸೇರಿದಂತೆ  ನಾಲ್ಕು ಬಾರಿ ಜನಾಭಿಪ್ರಾಯ ಸಮೀಕ್ಷೆ ನಡೆಸಿದ್ದೇವೆ.  ಕಳೆದ  ಮೂರು ಸಂದರ್ಭಗಳಲ್ಲಿ 2005-2010 ಮತ್ತು 2015ರ ಚುನಾವಣೆಗಳಲ್ಲಿ ಬಿಹಾರದ ತುಂಬೆಲ್ಲ ಮುದ್ದಾಂ  ಓಡಾಡಿ ಜನಪ್ರತಿಕ್ರಿಯೆ ಸಂಪಾದಿಸಿದ್ದೆವು.   ಈ ಬಾರಿ ನಮಗೆ ಕೋವಿಡ್ ಅಡ್ಡ ಬಂತು.  ಎರಡು ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದೆವು.

    ಈ ಎಲ್ಲಾ ಆತಂಕಗಳು ನಮ್ಮ ಸಮೀಕ್ಷೆಗೆ ಅಡ್ಡಿ ಬರಲಿಲ್ಲ.  ಕಳೆದ  ಮೂರು ಚುನಾವಣೆಗಳ ಸಂದರ್ಭದಲ್ಲಿ ಬಿಹಾರದ ಹಲವೆಡೆಗಳಲ್ಲಿ, ಮೂವತ್ತೊಂದು ಜಿಲ್ಲಾ ಕೇಂದ್ರಗಳಲ್ಲಿ, ನಗರ- ಪಟ್ಟಣಗಳಲ್ಲಿ,  ಸ್ಥಳೀಯ ಜನ ಹಾಗೂ ಮಾಧ್ಯಮ ಮಿತ್ರರ ದೊಡ್ಡ ಬಳಗ ನಮಗೆ ನಿರಂತರ ಮಾಹಿತಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಮ್ಮ ನೆಟ್ ವರ್ಕ್ ಬಗೆಗೆ ನಮಗೆ ಖಚಿತ ನಂಬಿಕೆ ಇದೆ.

    ನಮ್ಮಂತೆಯೇ ರಾಷ್ಟ್ರಮಟ್ಟದ ಸಮೀಕ್ಷಕರು ಕೋವಿಡ್ ನಿಂದ  ಜನಾಭಿಪ್ರಾಯ ಸಂಗ್ರಹದಲ್ಲಿ ಸಾಂದರ್ಭಿಕ ತೊಡಕು ಆತಂಕಗಳನ್ನು ಎದುರಿಸಿದ್ದಾರೆ. 

    ಹಿನ್ನೆಲೆಯಲ್ಲಿ ಮೋದಿ ಪವಾಡ

    ಬಹುತೇಕ ಸಮೀಕ್ಷೆಗಳು ಜೆಡಿಯು ಪಕ್ಷದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಬಾರಿ ಬಹುಮತಗಳಿಸಲಾರರು ಎಂದೇ ಅಭಿಪ್ರಾಯ ಪಟ್ಟಿವೆ.ಇದೇ ಪ್ರಮಾಣದಲ್ಲಿ ತೇಜಸ್ವಿಯಾದವರ ಘಟಬಂಧನದ ಪ್ರಧಾನ ಪಕ್ಷ ಆರ್ ಜೆಡಿ ಯು ಬಹುಮತಕ್ಕೆ ಸಮೀಪವಾಗುವುದೆಂಬ ಅಭಿಪ್ರಾಯ ಸಮೀಕ್ಷೆಗಳಲ್ಲಿದೆ.  ತೇಜಸ್ವಿಯವರ ಚುನಾವಣಾ ಗಳಲ್ಲಿ ನಿತೀಶರ ಸಭೆಗಳಿಗಿಂತ ಇಮ್ಮಡಿ ಮತದಾರರು ಜಮಾಯಿಸುತ್ತಿರುವುದು ಇದಕ್ಕೆ ಕಾರಣವೆನ್ನುವುದು ಸ್ಪಷ್ಟವಾಗಿದೆ. ಈ ಮಧ್ಯೆ ಅಪ್ಪನ ಸಾವಿನ ಅನುಕಂಪ ಗಿಟ್ಟಿಸುತ್ತಿರುವ ಚಿರಾಗ್ ಪಾಸ್ವಾನ್ ತಮ್ಮ ಪಕ್ಷ ಬಿಜೆಪಿಯ ಬಿ ಟೀಮ್ ಅಲ್ಲ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಬಿಜೆಪಿ ಮೇಲೆ ಕೋಪವಿಲ್ಲ. ನಿತೀಶ ಅವರ ಮೇಲೆಯೆ ಅವರಿಗೆ ಅಸಮಾಧಾನ.

    ಎನ್ ಡಿಎ ನೇತೃತ್ವದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ವರ್ಚಸ್ಸು ಈ ಬಾರಿ ಬಿಹಾರ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದೆಂದು ಮತದಾರರು ಅಭಿಪ್ರಾಯಪಡುತ್ತಿದ್ದಾರೆ. ಮೋದಿಯ  ಹವಾ ಇಲ್ಲದಿದ್ದರೂ ವ್ಯಕ್ತಿತ್ವದ ಆಕರ್ಷಣೆ ಬಲವಾಗಿ ಅಚ್ಚೊತ್ತಿದೆ.  ವಿಶೇಷವೆಂದರೆ ಮೋದಿಯವರನ್ನು ಪ್ರತಿರೋಧಿಸುವ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಸಹಿತ ಪ್ರಧಾನಮಂತ್ರಿಯ ಪಾತ್ರದ ಬಗೆಗೆ ಹೆದರಿದಂತಿದೆ.

    ಸುಲಿಗೆಕೋರರ ಹಾವಳಿ

    ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಲಿಗೆಕೋರರಂತಿರುವ  ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ  ಜಯಗಳಿಸುವ ಭೀತಿಯಲ್ಲಿವೆ.  ಬಿಹಾರದ ಮತದಾರರಿಗೆ ನೀತಿಬಾಹಿರ ರಾಜಕಾರಣಿಗಳ ಸ್ಪರ್ಧೆ  ಭಾರಿ ಚಿಂತೆಯುಂಟುಮಾಡಿದೆ. ಕ್ರಿಮಿನಲ್ ಆಪಾದನೆಗಳನ್ನು ಹೊತ್ತ  ಶೇ.37ರಷ್ಟು ಅಭ್ಯರ್ಥಿ ಗಳು ಈ ಬಾರಿ ರಾಜಕೀಯ ಪಕ್ಷಿಗಳನ್ನು ಪ್ರತಿನಿಧಿಸುತ್ತಿದ್ದಾರೆ.

    ಕೊಲೆ ಹಿಂಸೆ ಅತಿಕ್ರಮಣ ಮಹಿಳೆಯರ ಮೇಲೆ ಅತ್ಯಾಚಾರಗಳಿಗಿಂತ ಈ ಕ್ರಿಮಿನಲ್ ಅಭ್ಯರ್ಥಿಗಳು ನಡೆಸುತ್ತಿರುವ ದುರಾಚಾರವೆಂದರೆ ಹಫ್ತಾ ಮಾದರಿಯಲ್ಲಿ ಸುಲಿಗೆ ಹಾಗೂ ವಸೂಲಿ.  ರಾಷ್ಟ್ರೀಯ ಕ್ರಿಮಿನಲ್ ದಾಖಲೆ (ಎನ್ ಸಿ ಆರ್ ಬಿ)  ಮಾಹಿತಿಯಂತೆ ಬಿಹಾರದಲ್ಲಿ ‘ಹಫ್ತಾ’  ವಸೂಲಿ ದಂಧೆ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. 

    ವಿಚಿತ್ರ ಹಾಗೂ ವಿಷಾದದ ಸಂಗತಿಯೆಂದರೆ ವಸೂಲಾತಿಯೆನ್ನುವ ಹಗಲು ದರೋಡೆ ಬಗೆಗೆ ಪ್ರಧಾನಿಯಾಗಲೀ, ಮುಖ್ಯಮಂತ್ರಿಯಾಗಲೀ, ಹತ್ತು ಲಕ್ಷ ಉದ್ಯೋಗ ಸೃಷ್ಟಿಸುವ ಆರ್ ಜೆಡಿ ನಾಯಕ ತೇಜಸ್ವಿ ಆಗಲಿ ಚಕಾರವೆತ್ತಿಲ್ಲ.

    ಮೋದಿ ಪ್ರಭಾವಳಿ

    ಮೊದಲೇ ಹೇಳಿದಂತೆ ಬಿಹಾರದಲ್ಲಿ ಎನ್ ಡಿ ಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಒಲವು, ಸಿಟ್ಟು ಎಲ್ಲವೂ ಮತದಾರರಲ್ಲಿ ಇದೆ. ಇದನ್ನು ಪೂರ್ವಗ್ರಹ ಎಂದರು ಆದೀತು. ಮತದಾದರರು ತಮ್ಮದೆ ಆದ ಅಭಿಪ್ರಾಯವನ್ನು ಮೋದಿ ಬಗ್ಗೆ ಈಗಾಗಲೇ ಹೊಂದಿದ್ದಾರೆ. ಇದು ಫಲಿತಾಂಶದ ಮೇಲೆ ಪ್ರಭಾವ ಬೀರುವುದು ನಿಶ್ಚಿತ. ಮೋದಿ ಕೂಡ ಈ ಕೋವಿಡ್ ನಡುವೆಯೂ ಮೂರು ಬಾರಿ ಬಿಹಾರವನ್ನು ಸುತ್ತಿ ಬಂದಿದ್ದಾರೆ. ಬಹಿರಂಗ ಪ್ರಚಾರ ಅಂತ್ಯವಾಗುವ ಕಳೆದ ಭಾನುವಾರ ಕೂಡ ನಾಲ್ಕು ಸಭೆಗಳಲ್ಲಿ ಮಾತಾನಾಡಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಿಮಾಚಲದವರಾದರು ಅವರು ಹುಟ್ಟಿದ್ದು ಬಿಹಾರದಲ್ಲಿ. ಅವರು ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ದೊಡ್ಡ ಚುನಾವಣೆ ಇದು. ಅಮಿತ್ ಷಾ ಸಾಲು ಸಾಲಾಗಿ ಪಕ್ಷಕ್ಕೆ ಗೆಲುವನ್ನು ತಂದಿದ್ದರು.ನಡ್ಡಾ ಅವರಿಗೆ ಬಿಹಾರವೇ ಮೊದಲು ಸವಾಲು. ಬಿಹಾರ ಅವರಿಗೆ ಗೆಲುವಿನ ಹಾರ ತರುವುದೆ ಕಾದು ನೋಡಬೇಕು.

    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.

    ಆಹಾ ಕಾಫೀ

    ಬೆಳಗ್ಗೆ ಇನ್ನೂ ಹಾಸಿಗೆಯಲ್ಲಿರುವಂತೆಯೇ ಅಡುಗೆ ಕೋಣೆಯಲ್ಲಿ ಉಕ್ಕುವ ಹಾಲಿಗೆ ಕಾಫಿ ಪುಡಿ ಹಾಕಿದಾಗ ಹೊರಸೂಸುತ್ತೆ ನೋಡಿ ಪರಿಮಳ .
    ಹಾಸಿಗೆಯಿಂದ ಹಂಗೇ ಎದ್ದುಬಂದು ಹಾಲಲ್ಲಿ ಕೂತ್ಕೋಬೇಕು ಹಂಗ್ ಮಾಡುತ್ತೆ ಈ ದ್ರವರೂಪದ ಉಲ್ಲಾಸ . ಭಾಗಶಃ ಮನೆ ಮಂದಿಯ ದಿನದ ಮೊದಲ ಚಟುವಟಿಕೆ ಈ ಕಾಫಿ .

    ಬಿಸಿ ಕಾಫಿಯ ಲೋಟವನ್ನ ತುಟಿಯ ಹತ್ತಿರ ತೆಗೆದು ಕೊಂಡು ಹೋಗುತ್ತಿದ್ದಂತೆ ಮೊದಲು ಮೂಗು ಆ ಪರಿಮಳವನ್ನು ಆಸ್ವಾದಿಸುತ್ತದೆ .
    ಈ ಉಸಿರಿಂದಲೇ ಬಿಸಿ ಕಾಫಿಯನ್ನ ಉರುಬಿ ಮೊದಲ ಗುಟುಕನ್ನು ನೊರೆ ಸಮೇತ ನಿಧಾನವಾಗಿ ಹೀರಿದಾಗ, ಅದು ನಾಲಿಗೆಯಾದಿಯಾಗಿ ಗಂಟಲಿನಿಂದ ದೇಹ ಹೊಕ್ಕು ಒಂದು ತರಹದ ಸಿಹಿ ಒಗುರು ಮಿಶ್ರಿತ ಆಹ್ಲಾದಕರವಾದ ಅನುಭವ ಉಂಟಾಗುತ್ತದೆ .ಗಂಟೆಗಟ್ಟಲೇ ನಿದ್ದೆ ಮಂಪರಿಂದ ಮಂಕಾಗಿದ್ದ ದೇಹದ ನರ ನಾಡಿಗಳು ನವೀಕರಣಗೊಂಡಂತಾಗುತ್ತವೆ .

    ಕಾಫೀ ಪ್ರಿಯರಲ್ಲಿ ಒಬ್ಬೊಬ್ಬರದು ಒಂದೊಂದು ವಿಧಾನವಿದೆ ಕೆಲವರು ನನಗೆ ಬಿಸಿ ಕುಡೀದಿದ್ರೆ ಕುಡದಂಗಾಗಲ್ಲ ಅಂತಾರೆ . ಕೆಲವರು ನಾನು ತಣ್ಣಗಾದ್ ಮೇಲೇನೆ ಕುಡಿಯೋದು ಅಂತಾರೆ . ಕೆಲವರು ಸೊರ್ರ್ ಅಂತ ಸೌಂಡ್ ಮಾಡ್ಕೊಂಡು ಕುಡೀತಾರೆ . ಕೆಲವರು ಸುಮಾರು ಹೊತ್ತು ಗ್ಲಾಸಲ್ಲಿ ಇಟ್ಕೊಂಡು ಸ್ವಲ್ಪ ಸ್ವಲ್ಪವೇ ಕುಡೀತಾರೆ .ಕಾಫಿ ಮಾಡ್ಕೊಂಡು ಕುಡಿಯೋದಕ್ಕಿಂತಾ ಯಾರಾದ್ರೂ ಮಾಡ್ಕೊಟ್ರೆ ಕುಡಿಯೋ ಮಜಾನೇ ಬೇರೆ .

    ಕಾಫಿ ಪಾನೀಯ ಅನ್ನೋ ಪದಕ್ಕೂ ಮೀರಿದ್ದು . ಅದನ್ನ ಮಾಡೋದು ನಿಜವಾಗ್ಲೂ ಕಲೆ .ಇಷ್ಟು ಹಾಲಿಗೆ ಇಷ್ಟೇ ನೀರು ಇಂತಿಷ್ಟೇ ಕಾಫಿಪುಡಿ , ಸಕ್ಕರೆ, ಹೀಗೇ ಅದರದೇ ಆದ ಅನುಪಾತ ಗೊತ್ತಿರಬೇಕು ಆಗಷ್ಟೇ ಅತ್ಯುತ್ತಮ ಕಾಫಿ ತಯಾರಿಸಲು ಸಾಧ್ಯ .‌ ಕೆಲವರು ಮಾಡೋ ಕಾಫಿ ಕುಡೀತಿದ್ರೆ ಸ್ವರ್ಗವೇ ಸ್ವಾದವಾಗಿದೆಯೇನೋ ಅನ್ನಿಸುತ್ತದೆ .

    ಸಣ್ಣವರಿದ್ದಾಗಿಂದಲೂ ನಮ್ಮೆಷ್ಟೋ ಮುಂಜಾನೆಗಳ ಅದೆಷ್ಟೂ ಸಂಜೆಗಳ ತಿಂಡಿ ಈ ಕಾಫಿ ಬಿಸ್ಕೆಟ್ , ಕಾಫಿ ಬನ್ನು . ಶನಿವಾರ ಬೆಳ್ಬೆಳಿಗ್ಗೆ ಬಿಳಿ ಅಂಗಿ ಖಾಕಿ ಚಡ್ಡಿ ಯೂನಿಫಾಮ್ ಧರಿಸಿ ಹಾಲ್ನಲ್ಲಿ ಕೆಳಗೆ ಚಪ್ಪಂಕಾಲ್ ಹಾಕ್ಕೊಂಡು ಅಮ್ಮಕೊಟ್ಟ ಗ್ಲೂಕೋಸ್ ಬಿಸ್ಕೆಟ್ಟನ್ನು ಬಿಸಿ ಕಾಫಿಯೊಂದಿಗೆ ಮೆಲ್ಲುತ್ತಿದ್ದರೇ ಅಬ್ಬಾ ಸುಖಾನುಭವ .

    ಅದರದೊಂದು ಪ್ರೋಸಸ್ ಇದೆ ಬಿಸ್ಕೆಟ್ನ ಕಾಫೀಲಿ ಜಾಸ್ತೀನು ನೆನಸಬಾರದು ಕಡಿಮೇನೂ ನೆನೆಸಬಾರದು , ಜಾಸ್ತಿ ನೆನೆಸಿದ್ರೆ ಪುಟುಕ್ ಅಂತ ಮುರಿದು ಕಾಫಿಗ್ಲಾಸಿನಲ್ಲಿ ಬಿದ್ದುಬಿಡುತ್ತದೆ .

    ಕಾಫಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ …..ಹೊಟೆಲ್ಗಳಿಗೆ , ಕಾಫಿ ಕಾರ್ನರ್ಗಳಿಗೆ, ಕಾಂಡಿಮೆಂಟ್ಸ್ಗಳಿಗೆ ಇದು ವ್ಯಾಪಾರ .ಕಾಫಿ ಬೆಳೆಗಾರರಿಗೆ ವ್ಯವಸಾಯ .ಕಾಫಿ ಮಾರಾಟಗಾರರಿಗೆ ವ್ಯವಹಾರ .ಯಾವಾಗ್ ಕಾಫಿ ಕುಡೀತೀವೋ ಅನ್ನೊವ್ರಿಗೆ ಜಪ ,ಕಾಫಿಗೋಗಿದಾರೆ ಅನ್ನೋವ್ರಿಗೆ ನೆಪ .
    ಕಾಫಿ ಕಾಸ್ ಕೊಡೀ ಅನ್ನೋವ್ರಿಗೆ ಲಂಚ .

    ಹುಡುಗಿ ಕೈಯಲ್ಲಿ ಕಾಫಿ ಕಳಿಸಿ ಅನ್ನೊವ್ರಿಗೆ ಸಂಬಂಧ .
    ಕಾಫಿ ಕುಡ್ಕೊಂಡ್ ಹೋಗೀ ಅನ್ನೋವ್ರಿಗೆ ಉಪಚಾರ .
    ಒಂದು ಗ್ಲಾಸ್ ಕಾಫಿ ಮಾಡ್ಕೊಟ್ಬಿಡು ಅನ್ನೋವ್ರಿಗೆ ಉಪಕಾರ .
    ಅವರ ಯೋಗ್ಯತೇಗೆ ಒಂದು ಗ್ಲಾಸ್ ಕಾಫೀನೂ ಕೊಡ್ಲಿಲ್ಲ ಅನ್ನೋವ್ರಿಗೆ ಅವಮಾನ .
    ಬರ್ತೀನಿ ಕಾಫಿ ಕೊಡುಸ್ತೀಯ ಅನ್ನೋವ್ರಿಗೆ ಬಹುಮಾನ.
    ಒಳ್ಳೇ ಕಡೆ ಕಾಫೀ ಕುಡಿಯೋಣ ಅನ್ನೋವ್ರ್ದು ಹುಡುಕಾಟ ……

    ಇಷ್ಟೆಲ್ಲಾ ಗುಡ್ ವಿಲ್ ಇರೋ ಅಂತ ಕಾಫಿ ನ ಯಾರಾದ್ರೂ ಕೆಡಸಿದ್ರೆ ಕಾಫಿಪ್ರಿಯರಿಗೆ ತುಂಬಾನೇ ಸಿಟ್ಟು ಬರುತ್ತೆ ಕಲಗಚ್ಚು ಮಾಡಿಟ್ಟಿದ್ದ . ಡಬ್ಬಾ ಥರ ಇತ್ತು . ಒಂದು ಬಂಡಿ ಸಕ್ಕರೆ ಹಾಕಿ ಪಾನಕ ಮಾಡಿಟ್ಟಿದ್ದ . ಕಾಫೀಗೆ ಹಾಲೇ ತೋರ್ಸಿಲ್ಲ ಹಿಂಗೆಲ್ಲಾ ಬಯ್ಕೋತಾರೆ .

    ಜಗತ್ತಲ್ಲಿ ಅಪ್ಪನಿಗೆ ಮಾಡಲು ತುಂಬಾನೇ ಚಟಗಳಿವೆ ಆದರೆ ಅಮ್ಮನಿಗೆ ಇರುವ ಏಕೈಕ ಚಟವೆಂದರೆ ಅದು ಒಂದು ಲೋಟ ಕಾಫಿ ಮಾತ್ರ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಸಂತೇಬೆನ್ನೂರು: ಜಿಲ್ಲಾ ಪಂಚಾಯ್ತಿ ಸದಸ್ಯ ವಾಗೀಶ್ ನಿಧನ

    ದಾವಣಗೆರೆ ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಉಪಾಧ್ಯಕ್ಷ ಪಿ. ವಾಗೀಶ್ (71) ಗುರುವಾರ ಅಪರಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ರಾಜಕೀಯ ಪ್ರವೇಶಿಸುವ ಮುನ್ನ ಸಂತೇಬೆನ್ನೂರಿನ ವಿಜಯ ಯುವಕ ಸಂಘದ ವಿಜಯ ಪ್ರೌಢಶಾಲೆಯಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಪ್ರಿಯ ಶಿಕ್ಷಕರೂ ಆಗಿ ಅಪಾರ ಶಿಷ್ಯವೃಂದವನ್ನು ಸಂಪಾದಿಸಿದ್ದ ಅವರು ನಿವೃತ್ತಿ ನಂತರ ವಿಜಯ ಯುವಕ ಸಂಘದ ಉಪಾಧ್ಯಕ್ಷರಾದರು. ಕ್ರೀಡಾ ಪ್ರೇಮಿಯೂ ಆಗಿದ್ದ ಅವರು ವಿನೂಸ್ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರು ಆಗಿದ್ದರು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    ಸಂತಾಪ : ವಾಗೀಶ್ ಅವರ ನಿಧನಕ್ಕೆ ವಿಜಯ ಯುವಕ ಸಂಘದ ಅಧ್ಯಕ್ಷ ಸತ್ಯನಾರಾಯಣ ನಾಡಿಗ್, ಕಾರ್ಯಧ್ಯಕ್ಷ ಕೆ.ಮೂರ್ತಿ, ಕಾರ್ಯದರ್ಶಿ ಕೆ. ಸಿದ್ದಲಿಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಸುಮತೀಂದ್ರ ನಾಡಿಗ್ ದು:ಖಿಸಿದ್ದಾರೆ. ನಾಡು ಒಬ್ಬ ಶಿಕ್ಷಣ ಪ್ರೇಮಿ, ಸಹೃದಯಿಯನ್ನು ಕಳೆದುಕೊಂಡಂತೆ ಆಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಂಸದರು,ಶಾಸಕರ ಶೋಕ :ದಾವಣಗೆರೆ ಸಂಸದ ಸಿದ್ದೇಶ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಜನಾನುರಾಗಿ ನಾಯಕನನ್ನು ಕಳೆದುಕೊಂಡಂತೆ ಆಗಿದೆ ಎಂದು ಶೋಕಿಸಿದ್ದಾರೆ.

    ನಾಳೆ ಅಂತ್ಯಕ್ರಿಯೆ : ಶುಕ್ರವಾರ ಸಂತೇಬೆನ್ನೂರಿನಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಬ್ಬ ಪುತ್ರ, ಇಬ್ಬರು ಪುತ್ರಿ ಮತ್ತು ಪತ್ನಿಯನ್ನು ಅವರು ಅಗಲಿದ್ದಾರೆ.

    ಕೋವಿಡ್ ನೆನಪಿಟ್ಟುಕೊಳ್ಳಲೇಬೇಕಾದ 20 ಅಂಶಗಳು

    ಕೋವಿಡ್ ಪ್ಯಾಂಡಮಿಕ್ ಎನ್ನುವ ಅಭ್ಯಾಗತ ನಮ್ಮ ಬದುಕಿನ ಒಳಹೊಕ್ಕು ಅದರ ಜೊತೆಗೆ ನಮ್ಮ ಬದುಕನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಮನುಕುಲವನ್ನು ಬೆದರಿಸಿದ್ದು, ನೋಯಿಸಿದ್ದು, ಸಾಯಿಸಿದ್ದು, ಮಣಿಸಿದ್ದು ಈಗಾಗಲೇ ಬಹುಕಾಲ ನಡೆದುಹೋಗಿದೆ.

    ಇಂತಹ ಅಪರೂಪದ ಅವಘಡವೊಂದರ ಅಧ್ಬುತ ಅನುಭೂತಿಯಲ್ಲಿ ಮೊದಲಿಗೆ ಬೆಕ್ಕಸ ಬೆರಗಾಗಿ ನಂತರ ಹೈರಾಣಾದ ಮನುಷ್ಯ ಕೋವಿಡ್ ವೈರಾಣುವಿನ ಪಾಷಾಣ ಹೃದಯಕ್ಕೆ ಹೆದರಿ ಹಿಮ್ಮೆಟ್ಟಲೇಬೇಕಾಯಿತು. ಅದರ ಹೊಡೆತಕ್ಕೆ ನಲುಗಿರುವ ಈ ಪ್ರಪಂಚಕ್ಕೆ ಚೇತರಿಕೊಳ್ಳಲು ಹಲವು ವರ್ಷಗಳೇ ಬೇಕಾದೀತು. ಈ ಪ್ಯಾಂಡೆಮಿಕ್ ಸೃಷ್ಟಿಸಿರುವ ಆರ್ಥಿಕ ಸಂಕಷ್ಟಗಳ ಕೋಟಲೆಗಳು ದಶಕಗಳ ಕಾಲ ನಮ್ಮೊಡನೆ ಉಳಿದಾವು. ಅಕಸ್ಮಿಕವಾಗಿ ಪ್ರಾಣ ಕಳೆದುಕೊಂಡ ಅಸಂಖ್ಯಾತ ಜೀವಗಳನ್ನು ನೆನೆವ ಸಂಸಾರಗಳು ಬದುಕಿನುದ್ದಕ್ಕೂ ಕೊರೋನಾ ಹೆಮ್ಮಾರಿಯನ್ನು ಶಪಿಸಿಯಾರು. ಆದರೆ ಎಷ್ಟು ಕಾಲ ಎಂದು ಜನರು ಹಪಹಪಿಸಲು ಸಾಧ್ಯ?

    ಬಹಳ ಕಾಲ ಅವಘಡವೊಂದು ನಮ್ಮ ಬದುಕುಗಳ ಜೊತೆ ಚೆಲ್ಲಾಟವಾಡುವಾಗ ಆ ಸುಸ್ತಿನಲ್ಲಿ ಸೋಲುವ ಸಂವೇದನೆಗಳು (fatigue  de-sensitivity) ಮನುಷ್ಯನನ್ನು ಈಗ ಕಾಡುತ್ತಿವೆ. ಬದುಕುಳಿಯಲು ಅವಘಡದ ಉಪಸ್ಥಿತಿಯನ್ನು ನಿರ್ಲ್ಯಕ್ಷಿಸಿ ಮುಂದುವರಿಯಲೇಬೇಕಾದ ಅನಿವಾರ್ಯತೆಯನ್ನು ಆತ ಈಗ ಎದುರಿಸುತ್ತಿದ್ದಾನೆ.ಹಾಗಾಗಿ ಹೊಟ್ಟೆಯ ಪಾಡಿಗಾಗಿ ಕೋವಿಡ್ ನ್ನು ಎದುರಿಸಿಕೊಂಡೇ ದುಡಿಯಲು ಅವನು ಮುಂದಾಗಿದ್ದಾನೆ. ಆರ್ಥಿಕ ಹೊಡೆತದ ಝಳವನ್ನು ಕಡಿಮೆಮಾಡಲು ಸರಕಾರಗಳು ನಾಗರಿಕರ ದುಡಿತವನ್ನು ನಾನಾರೀತಿ ಪೋಷಿಸುತ್ತಿವೆಯಾದರು ಆ ಆರ್ಥಿಕ ಹೊರೆಯನ್ನು ಬಹುಕಾಲ ಹೊರಲಾರವು.

    ಅದರ ಜೊತೆಗೆ ಜನರ ಉತ್ಪಾದಕ ದುಡಿಮೆಯನ್ನು ಕೂಡ ಪ್ರೋತ್ಸಾಹಿಸಲೇಬೇಕಾಗುತ್ತದೆ. ಕೋವಿಡ್ ನ ಜೊತೆ ಬದುಕುವ ಆಯ್ಕೆ ಮಾತ್ರವೇ ಈಗ ಅವನ ಮುಂದಿರುವುದು.ಅದೇ ಈಗ ಬದುಕಿನ ಸಹಜತೆಯ ಹೊಸ ಅವತಾರವಾಗಿದೆ.

    ವ್ಯಾಕ್ಸಿನ್ ಅಥವಾ ಲಸಿಕೆ ಮುಂದಿನ ವರ್ಷ ದೊರೆಯುವ ಭರವಸೆಯಿದೆ.ಆದರೆ ಇನ್ನೂ ಒಂದು ವರ್ಷವಾದರೂ ನಾವು ಕೋವಿಡ್ ನೊಡನೆ ಜಾಣತನದ ಹೊಂದಾಣಿಕೆ ಮಾಡಿಕೊಂಡೇ ಬದುಕಬೇಕಾಗಿದೆ. ಇದು ಅನಿವಾರ್ಯವೂ ಹೌದು. ಆ ನಂತರವೂ ಪ್ರತಿ ವರ್ಷ ಕೋವಿಡ್ ಲಸಿಕೆ ನೀಡುವ ಕೆಲಸ ನಡೆಯಬೇಕಾಗುತ್ತದೆ. ಪಾಶ್ಚಾತ್ಯ ಚಳಿ- ದೇಶಗಳಲ್ಲಿ ಪ್ರತಿವರ್ಷ ಚಳಿಗಾಲ ಶುರುವಾದ ಕೂಡಲೇ ’ ಫ್ಲೂ ಲಸಿಕೆ ’ ಕೊಡುವುದು ಸರ್ವೇ ಸಾಮಾನ್ಯವಾದ ವಿಚಾರ. ದಶಕಗಳಿಂದಲು ನಡೆದುಬಂದಿರುವ ಮುಂಜಾಗ್ರತೆಯ ಕ್ರಮ.ಹಾಗೆಯೇ ಕೋವಿಡ್ ಲಸಿಕೆಯನ್ನೂ ಪ್ರತಿವರ್ಷ ಪ್ರಪಂಚದ ಎಲ್ಲರಿಗೂ ನೀಡುವ ಕಾರ್ಯ ಶುರುವಾಗಬಹುದು.ಇದೊಂದು ಅಭೂತಪೂರ್ವ ಅಗಾಧತೆಯನ್ನು ಬೇಡುವ ಅಗತ್ಯ. ಈ ಬಗ್ಗೆ ಪ್ರಪಂಚದಲ್ಲಿ ಸ್ಪರ್ಧೆ ಅನೇಕ ವರ್ಷಗಳ ಕಾಲ ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ವೈರಾಣುವನ್ನು ಸ್ಥಗಿತಗೊಳಿಸಬಲ್ಲ/ಕೊಲ್ಲಬಲ್ಲ  ವ್ಯಾಕ್ಸಿನ್ ಒಂದು ತನ್ನ ಪ್ರಾಯೋಗಿಕ ಹಂತಗಳನ್ನೆಲ್ಲ ಮುಗಿಸಿ, ಅವುಗಳಿಂದ ಅಪಾಯ ಇಲ್ಲವೆಂದಾಗಿ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕೃತವಾದರೆ ಮನುಕುಲಕ್ಕೆ ಆಗ ಥಟ್ಟನೆ ಹೊಸದೊಂದು ಭರವಸೆ ಸಿಗುತ್ತದೆ.ಆ ಹಂತದಿಂದ ಮುಂದಿನ ವರ್ಷಗಳನ್ನು ಮತ್ತು ಮುಂದಿನ ಭವಿಷ್ಯವನ್ನು ಕಟ್ಟಲು ನಾವು ಮತ್ತೆ ಶಕ್ತರಾಗುತ್ತೇವೆ.

    ಸಧ್ಯಕ್ಕೆ ಲಾಕ್ ಡೌನ್ ನ ಪರಿಣಾಮಗಳು ತನ್ನ ಗರಿಷ್ಠ ಮಟ್ಟ ಮುಟ್ಟಿದ ನಂತರವೂ ನಿರ್ಬಂಧಗಳನ್ನು ಮುಂದುವರೆಸಲು ಪ್ರಯತ್ನಿಸಿದರೆ ಮನುಷ್ಯನ ಸಹನೆ ಮಿತಿ ಮೀರುವುದನ್ನು ಕಾಣುವುದು ಅನಿವಾರ್ಯವಾಗುತ್ತದೆ. ಆತ ನಿರ್ಬಂಧಗಳನ್ನು ಲಕ್ಷಿಸದೆ ಬದುಕುಳಿಯಲು ಅಪಾಯಕ್ಕೆ ತನ್ನನ್ನು ತಾನು ದೂಡಿಕೊಳ್ಳುತ್ತಾನೆ.ಅದಕ್ಕಾಗಿ ನಾನಾ ರೀತಿ ಪ್ರಯತ್ನಿಸುತ್ತಾನೆ.ಹಾಗೆ ಮಾಡದೆ ಮಾನವನಿಗೆ ಬೇರೆ ದಾರಿಯೂ ಇಲ್ಲವಾಗಿದೆ.

    ಮೊದಲ ಅಲೆ ಕಳೆದನಂತರ ಮತ್ತೆ ಬಲಿಷ್ಠವಾಗುತ್ತಿರುವ ಕೋವಿಡ್ ನ್ನು ಹತ್ತಿಕ್ಕಲು ಹಲವು ದೇಶಗಳು ನಾನಾ ಬಗೆಯ ಸಣ್ಣ ಪುಟ್ಟ ನಿರ್ಬಂಧಗಳನ್ನು ಹೇರಲು ಪ್ರಯತ್ನಿಸಿ ಸೋಲುತ್ತಿವೆ.ಇದೀಗ ವಿಧಿಯಿಲ್ಲದೆ, ತಮ್ಮ ಆರೋಗ್ಯ ವ್ಯವಸ್ಥೆ ಮತ್ತು ಜನರ ನೈತಿಕ  ಸ್ಥೈರ್ಯವನ್ನು ಕಾಪಾಡಲು ಜರ್ಮನಿ,ಬೆಲ್ಜಿಯಮ್, ಫ್ರಾನ್ಸ್, ವೇಲ್ಸ್ ಮತ್ತು ಇಂಗ್ಲೆಂಡ್ ದೇಶಗಳು ಎರಡನೇ ರಾಷ್ಟ್ರ ಮಟ್ಟದ ಲಾಕ್ ಡೌನ್ ನ್ನು ಜಾರಿಗೆ ತಂದಿವೆ.

    ಸ್ಪೇನ್, ಇಟಲಿ, ರಶಿಯಾ, ಪೋಲಂಡ್ ಮತ್ತಿತರ ಹಲವು ದೇಶಗಳು ಅದೇ ದಿಕ್ಕಿನತ್ತ ನೋಡುತ್ತಿವೆ. ಯುದ್ಧ, ಆಂತರಿಕ ಯುದ್ಧಗಳು ಮತ್ತು ಪ್ರಕೃತಿ ವಿಕೋಪಗಳಲ್ಲಿ ಸಿಲುಕಿರುವ ಆರ್ಮೇನಿಯ, ಅಜರ್ಬಜಾನ್, ಸಿರಿಯಾ, ಟರ್ಕಿ, ಥೈಲ್ಯಾಂಡ್,ಲೆಬನಾನ್ ನಂತಹ ದೇಶಗಳು ಕೋವಿಡ್ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವ ಸ್ಥಿತಿಯಲ್ಲಿಲ್ಲ.

    ಅಮೇರಿಕಾ ಎನ್ನುವ ಮತ್ತೊಂದು ಪ್ರಪಂಚ ತನ್ನದೇ ರಾಜಕೀಯ ಹುನ್ನಾರಗಳಲ್ಲಿ ಇಡೀ ದೇಶವನ್ನು ಕೊರೋನ ಅಲೆಯಡಿ ತಳ್ಳಿದ್ದು ವಿಷಾದನೀಯ.ಟ್ರಂಪ್ ಪಕ್ಷದ ಚುನಾವಣ ಸಭೆಗಳಿಂದಲೇ 30,000 ಹೊಸ ಪ್ರಕರಣಗಳು ಮತ್ತು 700 ಕೋವಿಡ್ ಸಾವುಗಳು ಸಂಭವಿಸಿವೆಯೆಂದು ಸಮೀಕ್ಷೆಯೊಂದು ವರದಿ ಮಾಡಿತ್ತು.

    ಇದೀಗ ಕೋವಿಡ್ ಪ್ಯಾಂಡೆಮಿಕ್ ನ ಸುತ್ತಲೇ ನಡೆದ ನವೆಂಬರ್ 3 ರ ಅಮೆರಿಕಾದ  ಚುನಾವಣೆಯಲ್ಲಿ ಟ್ರಂಪ್ ಸೋತಲ್ಲಿ ಪ್ರತಿಸ್ಪರ್ಧಿ ಜೋ ಬೈಡನ್ ಗಿಂತಲೂ ಹೆಚ್ಚಾಗಿ ವೈರಾಣುವೊಂದು ಆಳುವ ಪಕ್ಷವನ್ನು ಸೋಲಿಸಿತೆಂದೇ ಇತಿಹಾಸದಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ. ಟ್ರಂಪ್ ನ ರಿಪಬ್ಲಿಕನ್ ಪಕ್ಷವೇ ಗೆದ್ದರೂ ಕಾಲು ಕೋಟಿ ಅಮೆರಿಕನ್ನರನ್ನು ಸಾಯಿಸಿದ ,ಸ್ವಂತ ಟ್ರಂಪ್ ಮತ್ತು ಮೈಕ್ ಪೆನ್ಸ್ ರನ್ನು ಕಾಡಿಸಿದ ಕೋವಿಡ್ ತನ್ನ ಅಟ್ಟಹಾಸವನ್ನು ಮುಂದುವರೆಸುವುದರಲ್ಲಿ ಸಂಶಯವಿಲ್ಲ.

    ಮೆಕ್ಸಿಕೋ,ಬ್ರೆಜಿಲ್ ಮತ್ತು ಭಾರತದಂತಹ  ದೇಶಗಳ ಆರ್ಥಿಕತೆಗೆ ಮತ್ತೊಂದು ಲಾಕ್ ಡೌನ್ ಮರಳಿ ಏಳಲಾಗದ ಅಥವಾ ಬಹುಕಾಲ ಬೇಡುವ ಮಾರಣಾಂತಿಕ ಹೊಡೆತವಾಗಬಹುದು. ವಿಶ್ವದ 175 ದಶ ಲಕ್ಷ ಜನರನ್ನು ಕೋವಿಡ್ ಈಗಾಗಲೇ ತೀವ್ರ ಬಡತನಕ್ಕೆ  ತಳ್ಳಿರುವುದನ್ನು ವಿಶ್ವ ಸಂಸ್ಥೆ ಧೃಡಪಡಿಸಿರುವ ಈ ಸಂದರ್ಭದಲ್ಲಿ ನಮ್ಮ ಬದುಕು ಮೊದಲಿನಂತಾಗಲು ಬಹುಕಾಲ ಬೇಕಾದೀತು.

    ಇವೇ ಕಾರಣಗಳಿಗೆ ಭಾರತವಾಗಲೀ ಅಥವಾ ಬೇರೆ ದೇಶಗಳಾಗಲೀ ಕೈ ಕಟ್ಟಿಕುಳಿತು, ಕೋವಿಡ್ ನಿಯಮಗಳನ್ನು ಸಡಿಸಲಾಗುವುದಿಲ್ಲ. ಸೋಂಕು ನಿಯಂತ್ರಣ ಕ್ರಮವನ್ನು ಮತ್ತಷ್ಟು ಕಟ್ಟು ನಿಟ್ಟಾಗಿ ಮುಂದುವರೆಸಲೇಬೇಕಾಗುತ್ತದೆ. ಆ ನಿಯಮಗಳಡಿಯೇ ಕೆಲಸ ಮಾಡುತ್ತ ಕೋವಿಡ್ ದುರಂತಗಳು ನಿಯಂತ್ರಣ ತಪ್ಪಿ ಹರಡದಂತೆ ಇನ್ನಷ್ಟು ಉಗ್ರವಾಗಿ ತಡೆಯಬೇಕಾಗಿದೆ.

    ಅಲ್ಲಿಯವರೆಗೆ ನಾವು ಮರೆಯದೆ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಮತ್ತು ಪಾಲಿಸಬೇಕಾದ ನಿಯಮಗಳು ಎಂದಿನಂತೆ ಉಳಿಯುತ್ತವೆ.

    ನೆನಪಿಟ್ಟುಕೊಳ್ಳಬೇಕಾದ ಅಂಶಗಳು

    1) ಕೊರೋನಾ ವೈರಸ್ಸುಗಳು ಹಲವು ಬಗೆಯವು. ಇತ್ತೀಚೆಗೆ ಕಂಡುಬಂದು ಈ ಹೊಸ ವ್ಯಾಧಿಯನ್ನು ಹರಡುತ್ತಿರುವ ವೈರಸ್ಸನ್ನು ಕೋವಿಡ್ -19 ಎಂದು ಗುರುತಿಸಿದ್ದೇವೆ

    ಇವು ಸಣ್ಣ ನೆಗಡಿ ಜ್ವರದಿಂದ ಹಿಡಿದು ಅತ್ಯಂತ ಉಲ್ಬಣ ಲಕ್ಷಣಗಳನ್ನು Middle east respiratory syndrome (MERS) ಅಥವಾ Severe Acute Respiratory Syndrome (SARS) ನ್ನು ಇದು ನಮ್ಮಲ್ಲಿ ಉಂಟುಮಾಡಬಲ್ಲವು.

    2) ಮುಖ್ಯ ಲಕ್ಷಣಗಳೆಂದರೆ ಜ್ವರ, ಒಣ ಕೆಮ್ಮು ಮತ್ತು ಸುಸ್ತು. ಇವುಗಳ ಜೊತೆ ಮೈ ಕೈ ನೋವು, ಮೂಗು ಕಟ್ಟುವುದು, ತಲೆನೋವು, ಕಣ್ಣಿನ ಸೋಂಕು, ಗಂಟಲು ಕೆರೆತ, ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು, ಉಸಿರಾಡಲು ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದಿವೆ.

    3) ಕೊರೋನಾ ಬಂದ ಶೇಕಡ 80ಜನ ಆಸ್ಪತ್ರೆಯ ನೆರವಿಲ್ಲದೆ ಶೀಘ್ರವಾಗಿ ಗುಣಮುಖರಾಗುತ್ತಾರೆ. ಪ್ರತಿ ಐವರಲ್ಲಿ ಒಬ್ಬರಿಗೆ ಉಸಿರಾಟದ ತೊಂದರೆ ಕಾಣಬಲ್ಲದು. ಕೊರೋನಾ ಯಾರಿಗೆ ಬೇಕಾದರೂ ಬರುತ್ತದೆ. ಆದರೆ ವೃದ್ಧರಿಗೆ ಮತ್ತು ಬೇರೆ ಖಾಯಿಲೆಯಿರುವವರು ಇದರಿಂದ ಹೆಚ್ಚು ನಲುಗುತ್ತಾರೆ. ಇಂಥವರಲ್ಲೇ ಸಾವು ಕೂಡ ಅಧಿಕ.

    4) ನಿಮ್ಮಲ್ಲಿ ಕೋವಿಡ್ ಸೋಂಕು ಕಾಣಿಸಿದ ಕೂಡಲೇ ಅಥವಾ ಪರೀಕ್ಷೆ ಪಾಸಿಟಿವ್ ಎಂದು ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ.  ಮನೇಯಲ್ಲೇ ಉಳಿದು, ಮನೆಯ ಇತರರಿಂದ ದೂರವಿದ್ದು, ಜ್ವರ ಇತ್ಯಾದಿಗಳಿಗೆ ಸರಳ ಚಿಕಿತ್ಸೆ ಮಾಡಿಕೊಂಡರೆ ಸಾಕು. ಸೋಂಕಿದ್ದಾಗ ಎಲ್ಲ ಕಡೆ ಮುಟ್ಟುವುದನ್ನು ನಿಲ್ಲಿಸಬೇಕು. ಕೈಗಳನ್ನು ಅರ್ಧ ನಿಮಿಷದ ಕಾಲ ಪದೇ ಪದೇ ಸ್ವಚ್ಚಗೊಳಿಸಿಕೊಳ್ಳುತ್ತಿರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಎದೆಯಲ್ಲಿ ಒತ್ತಡ, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಂಡರೆ ಆ ಕೂಡಲೇ ವೈದ್ಯರ ಸಹಾಯವನ್ನು ಕೋರುವುದು ಉತ್ತಮ.

    5) ಕೋವಿಡ್ ಹರಡುವುದು ಮನುಷ್ಯರಿಂದ ಮನುಷ್ಯರಿಗೆ. ಅವರು ಮಾತನಾಡುವಾಗ, ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ಸುಗಳು ಇತರರಿಗೆ ಹರಡುತ್ತದೆ. ಅಥವಾ ಸೋಂಕಿತರು ಮುಟ್ಟಿದ ಜಾಗಗಳನ್ನು ಮುಟ್ಟಿ ನಮ್ಮ ಬಾಯಿ, ಮೂಗು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದಲೂ ಬರುತ್ತದೆ. ಆದ್ದರಿಂದ ಮೇಲೆ ಹೇಳಿದ ಕ್ರಮಗಳನ್ನು ಎಲ್ಲರೂ ಪಾಲಿಸಿದರೆ ಕೋವಿಡ್ ಹರಡುವ ಸಾಧ್ಯತೆಗಳನ್ನು ಸಾಧ್ಯವಾದಷ್ಟೂ ತಡೆಯಬಹುದು.

    6) ಸೋಂಕಿನ ಲಕ್ಷಣಗಳಿಲ್ಲದೆಯೂ ಜನರಲ್ಲಿ ಕೋವಿಡ್ ಇರಬಹುದು. ಆದ್ದರಿಂದ ಅಂಥವರಿಂದಲೂ ಸೋಂಕು ಹರಡಬಲ್ಲದು. ಆದ್ದರಿಂದ ಮನೆಯ ಹೊರಗೆ ಮತ್ತು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮತ್ತು ನಿಯತ್ತಿನಿಂದ ಮುಖ ಗವಸನ್ನು ಧರಿಸಬೇಕು. ದಂಡಕ್ಕೆ ಹೆದರಿ ಆಥವಾ ಪೊಲೀಸರಿಗಾಗಿ ಮಾಸ್ಕ್ ಧರಿಸಿದರೆ ನಿಮಗೆ ಮತ್ತು ಇತರರಿಗೆ ಪ್ರಯೋಜನವಾಗಲಾರದು.

    7) ನೀವು ಅಕಸ್ಮಾತ್ ಸೋಂಕಿತರ ಸಂಪರ್ಕಕ್ಕೆ ಬಂದರೆ ಅಥವಾ ನೀವು ಒಡನಾಡಿದ ವ್ಯಕ್ತಿಗೆ ಸೋಂಕು ಬಂದಿದೆ ಎಂದು ತಿಳಿದರೆ ನಿಮಗೂ ಸೋಂಕು ತಗುಲಿರುವ ಸಾಧ್ಯತೆ ಅತ್ಯಧಿಕ. ನೀವು ಅಗತ್ಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಮನೆಯಲ್ಲಿರುವ ವ್ಯಕ್ತಿಯಿಂದಲೇ ಕೋವಿಡ್ ಬಂದಿದ್ದಲ್ಲಿ ಅವರ ಜೊತೆಗೆ ನೀವೂ ಮನೆಯಲ್ಲೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬಹುದು. ಆದರೆ ಮಲೇರಿಯ ಅಥವಾ ಡೆಂಗ್ಯೂ ಜ್ವರ ಇರುವ ಪ್ರದೇಶದಲ್ಲಿದ್ದರೆ ಸೋಂಕಿನ ಲಕ್ಷಣಗಳು ಕಾಣಿಸಿದ ಕೂಡಲೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

    8) ಮಕ್ಕಳಿಗೆ ಸೋಂಕು ಬಂದಲ್ಲಿ ಅವರ ವಯಸ್ಸಿನ ಆಧಾರದ ಮೇಲೆ ಅವರಿಗೆ ನಿಯಮಗಳನ್ನು ಪಾಲಿಸಲು ಕಲಿಸಬೇಕಾಗುತ್ತದೆ.

    9) ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದು (Self-Isolation) ಅಂದರೆ ಅದು ಸೋಂಕಿತ ವ್ಯಕ್ತಿಗೆ ಅನ್ವಯವಾಗುವ ಮಾತು- ಹೊರಗೆ ತೆರಳದೆ, ಕೆಲಸಕ್ಕೆ ಹೋಗದೆ ಮನೆಯಲ್ಲಿರುವುದು. ಮನೆಯಲ್ಲಿ ಕುಟುಂಬದ ಸದಸ್ಯರಿಂದ ಅಂತರ ಕಾಪಾಡಿಕೊಂಡು ಪ್ರತ್ಯೇಕ ಕೋಣೆಯಲ್ಲಿರುವುದು.ಆ ಕೋಣೆಯ ಕಿಟಕಿಗಳನ್ನು ಸಾಧ್ಯವಾದಷ್ಟು ತೆರೆದಿಡುವುದು.ಕೈಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಿಕೊಳ್ಳುವುದು. ಸೌಲಭ್ಯವಿದ್ದಲ್ಲಿ ಪ್ರತ್ಯೇಕ ಶೌಚ ಬಳಸುವುದು ಇತ್ಯಾದಿ.

    ಇದು ಸಾಧ್ಯವಾಗದಿದ್ದಲ್ಲಿ  1 ಮೀಟರ್ ಅಥವಾ ನಿಮ್ಮ ಎರಡೂ ಕೈಯಳತೆಯ ದೂರವನ್ನು ಸೋಂಕಿತ ವ್ಯಕ್ತಿಯ ಜೊತೆ ಕಾಯ್ದುಕೊಳ್ಳಿ.ಮಲಗುವಾಗ ಕೂಡ ಈ ನಿಯಮವನ್ನು ಪಾಲಿಸಬೇಕು.

    9) ಕ್ವಾರಂಟೈನ್ (Quarantine) ಎಂದರೆ ನಿಮಗೆ ಲಕ್ಷಣ ಇರಲಿ ಬಿಡಲಿ, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಅಥವಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದಿದ್ದಲ್ಲಿ ನಿಮ್ಮ ಚಟುವಟಿಕೆಗಳನ್ನು ಕಡಿಮೆಮಾಡಿಕೊಂಡು ಪ್ರತ್ಯೇಕವಾಗಿರುವುದು. ನಿಮಗೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೇ ಎಂಬುದನ್ನು ಈ ಸಮಯದಲ್ಲಿ ಗಮನಿಸುತ್ತಿರಬೇಕು.  ಇವೆರಡರ ಉದ್ದೇಶವೂ ಸೋಂಕು ಹರಡುವುದನ್ನು ತಡೆಯುವುದೇ ಆಗಿದೆ. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದಕ್ಕೂ ಮತ್ತು ಕ್ವಾರಂಟೈನಿಗೂ ಇದೇ ವ್ಯತ್ಯಾಸ.

    10) ಕೋವಿಡ್ ನಿಂದ ರಕ್ಷಿಸಿಕೊಳ್ಳುವುದು ಎಂದರೆ ಅದು ಬರದಂತೆ ಎಚ್ಚರಿಕೆ ತೆಗೆದುಕೊಳ್ಳುವುದೇ ಆಗಿದೆ. ಹೆಚ್ಚು ಜನರಿರುವ ಕಡೆ ಹೋಗಬಾರದು. ಸದಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡಬೇಕು.ಉತ್ತಮ ಆಹಾರ ಮತ್ತು ಬೇಕಾದಷ್ಟು ನೀರು ಕುಡಿಯಬೇಕು. ಮಿಕ್ಕಂತೆ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.

    11) ಅಕಸ್ಮಾತ್ ಕೋವಿಡ್ ಬಂದರೆ ಅದರ ಲಕ್ಷಣಗಳು ಕಾಣಿಸಿಕೊಳ್ಳಲು 5-6 ದಿನಗಳು ಬೇಕು.ಆದರೆ ಕೆಲವರು 1-14 ದಿನಗಳನ್ನು ತೆಗೆದುಕೊಂಡಿದ್ದೂ ಇದೆ.ಕೋವಿಡ್ ಎಲ್ಲ ವಯಸ್ಸಿನವರಿಗೆ ಬರಬಲ್ಲದು.ಆದರೆ ಹಿರಿಯರಲ್ಲಿ ಕೋವಿಡ್ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು.

    12) ಕೋವಿಡ್ ವೈರಸ್ಸು ಪ್ಲಾಸ್ಟಿಕ್ ಮತ್ತು ಸ್ಟೀಲ್ ಮೇಲೆ ಮೇಲೆ 72ಗಂಟೆ, ಹಿತ್ತಾಳೆಯ ಮೇಲೆ 4 ಗಂಟೆ ಮತ್ತು ರಟ್ಟಿನ ಮೇಲೆ 24 ಗಂಟೆ ಬದುಕುಳಿಯಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆದರೆ ಯಾವುದೇ ಸಾಮಾನ್ಯ ಸೋಂಕು ನಾಶಕಗಳನ್ನು ಬಳಸಿ ತೊಳೆದರೆ ಅವು ನಾಶವಾಗಿಬಿಡಬಲ್ಲವು. ಹೀಗಾಗಿ ವಸ್ತು ಮತ್ತು ಜಾಗಗಳನ್ನು ಸ್ವಚ್ಛಗೊಳಿಸಿಕೊಂಡನಂತರ ನಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

    13) ಮಲದಲ್ಲಿ ಕೊರೋನಾ ವೈರಸ್ಸು ಕಂಡುಬಂದಿದೆಯಾದರೂ ಅದರಿಂದ ಇನ್ನೊಬ್ಬರಿಗೆ ಹರಡಿದ ಉದಾಹರಣೆಗಳಿಲ್ಲ.ನೀರಲ್ಲಿ ಅಥವಾ ಚರಂಡಿಯ ನೀರಿನಲ್ಲಿ ವೈರಸ್ಸು ಬದುಕುಳಿದಿರುವುದು ಇದುವರೆಗೆ ವರದಿಯಾಗಿಲ್ಲ.

    14) ಈ ಕೊರೋನಾ ಕಾಲದಲ್ಲಿ ಯಾರಿಗೆ ಸಾಧಾರಣ ನೆಗಡಿ -ಕೆಮ್ಮಾಗಿದೆ, ಯಾರಿಗೆ ನಿಜಕ್ಕೂ ಕೋವಿಡ್ ಆಗಿದೆ ಎಂಬ ಬಗ್ಗೆ ಹೇಳಲು ಸಾಧ್ಯವಿಲ್ಲವಾಗಿದೆ. ಈ ಬಗ್ಗೆ ಜನರಲ್ಲಿ ಸಹಜವಾಗಿಯೇ ಗೊಂದಲವಿರಬಹುದು.

    ಮೈ ಕೈ ನೋವು, ಕೆಮ್ಮು, ಗಂಟಲು ಕೆರೆತ, ಸೀನು, ಜ್ವರ  ಬಂದಂತಾಗುವುದು ಇತ್ಯಾದಿ ಲಕ್ಷಣಗಳು ಬಂದ ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೇಕಾದಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡು ಕನಿಷ್ಠ ಎರಡು ವಾರಗಳ ಕಾಲ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಬೇಕು.

    15) ಮೆಡಿಕಲ್ ಮಾಸ್ಕ್ ಗಳನ್ನು ಸರಿಯಾಗಿ ಉಪಯೋಗಿಸಬೇಕು. ಅವುಗಳನ್ನು ಬಳಸುವ ಮೊದಲು ಕೈಯನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಬಣ್ಣದ ಭಾಗ ಹೊರಕ್ಕೆ ಬರುವಂತೆ ಧರಿಸಿ.ಸರ್ಜಿಕಲ್ ಮಾಸ್ಕ್ ಗಳ ಮೇಲ್ತುದಿ ಗಟ್ಟಿಯಾಗಿರುತ್ತದೆ. ಇದನ್ನು ನಿಮ್ಮ ಮೂಗಿನ ಆಕಾರಕ್ಕೆ ಜಾಗ ಬಿಡದಂತೆ ಅದುಮಿ ಅಳವಡಿಸಿಕೊಳ್ಳಿ.ಕೆಳಭಾಗವನ್ನು ಎಳೆದು ನಿಮ್ಮ ಗಲ್ಲವನ್ನು ಮುಚ್ಚುವಂತೆ ಧರಿಸಿ.ಒಂದೇ ಬಳಕೆಗೆ ಮೀಸಲಾದ ಮಾಸ್ಕ್ ಗಳನ್ನು ಒಮ್ಮೆ ಬಳಸಿದ ನಂತರ ಕಸದ ತೊಟ್ಟಿಯಲ್ಲಿ ಬಿಸಾಡಿ. ಕೈಗಳನ್ನು ಶುಚಿಗೊಳಿಸಿಕೊಳ್ಳಿ. ಒಗೆದು ಬಳಸುವಂತಹ ಮಾಸ್ಕ್ ಆದಲ್ಲಿ ಅವುಗಳನ್ನು ಮತ್ತೆ ಮತ್ತೆ ಬಳಸಬಹುದು.

    16) ಸೋಂಕಿನ ನಂತರ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೂ ತತ್ ಕ್ಷಣ ಎಲ್ಲರೂ ಏಕ ಪ್ರಕಾರದಲ್ಲಿ ಗುಣಮುಖರಾಗದಿರಬಹುದು. ಕೆಲವರಲ್ಲಿ ಹೆಚ್ಚು ಕಾಲ ರೋಗದ ನಾನಾ ಪ್ರಕಾರದ ಲಕ್ಷಣಗಳು, ಸೋಲು ಸುಸ್ತು ಉಳಿಯಬಹುದು. ಅಂಥವರ ಬಗ್ಗೆ ಸಹಾನುಭೂತಿಯಿರಲಿ. ಲಾಂಗ್ ಕೋವಿಡ್ ಎನ್ನುವ ಈ ಪ್ರಕಾರದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.

    17) ಕೋವಿಡ್ ಹೊಸ ವ್ಯಾಧಿಯಾದರೂ ಇದರಿಂದಾಗಿ ಮರಣ ಹೊಂದುವವರ ಸಂಖ್ಯೆ ಅತಿ ಕಡಿಮೆ. ಆದ್ದರಿಂದ ವಿಪರೀತವಾಗಿ ಹೆದರಬೇಡಿ. ಆದರೆ ಎಚ್ಚರಿಕೆಗಳನ್ನು ಮಾತ್ರ ಅಚ್ಚುಕಟ್ಟಾಗಿ ಮತ್ತು ನಿಯತ್ತಿನಿಂದ ಪಾಲಿಸಿ.

    18) ಈ ಮಹಾಮಾರಿಯನ್ನು ಎದುರಿಸಲು ನಾವು ಪಾಲಿಸಬೇಕಿರುವುದು ಸರಳ ಉಪಾಯಗಳೇ ಹೊರತು ಹೆಚ್ಚಿನವೇನಿಲ್ಲ. ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತವನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಜಾಗಕ್ಕೆ ಮಾತ್ರ ಹೋಗುವುದು ಇತ್ಯಾದಿ ಅಷ್ಟೇ. ಸಾಕ್ಷಿ ಆಧಾರಗಳಿಲ್ಲದ ಯಾವುದೇ ಔಷದ, ಆರೈಕೆ, ಸಾಮಗ್ರಿಗಳ ಮೇಲೆ ಅನಗತ್ಯವಾಗಿ ಹಣವನ್ನು ಖರ್ಚುಮಾಡಿ ಶ್ರಮ ಪಡುವ ಅಗತ್ಯವಿಲ್ಲ.

    19)  ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನಾವೆಲ್ಲ ಒಂದಿಷ್ಟು ಅಥವಾ ಬಹಳಷ್ಟು ನೊಂದಿದ್ದೇವೆ. ಈ ಬಗ್ಗೆ ಜನರೊಡನೆ ದೂರವಾಣಿಯಲ್ಲಿ ಅಥವಾ ದೂರನಿಂತು ಮಾತಾಡಿ ಮನಸ್ಸನ್ನು ಹಗುರಮಾಡಿಕೊಳ್ಳಿ. ದೈಹಿಕ ವ್ಯಾಯಾಮಗಳ ಜೊತೆಗೆ ಸುತ್ತಮುತ್ತಲಿನ ಜನರ ಮಾನಸಿಕ ಆರೋಗ್ಯದ ಮೇಲೂ ಕಣ್ಣಿಡಿ.

    20) ಈ ಹಿಂದೆಯೂ ಮನುಕುಲ ಇಂತಹ ಹೊಸವ್ಯಾಧಿಗಳನ್ನು ಎದುರಿಸಿದೆ. ಎದುರಿಸಿ ಗೆದ್ದಿದೆ. ಅದಕ್ಕೆಲ್ಲ ಸಮಯ ಹಿಡಿಯುತ್ತದಾದರೂ ಇದರಿಂದಲೂ ನಾವು ಹೊರಬಂದೇ ಬರುತ್ತೇವೆ.  ಈ ಬಗ್ಗೆ ಭರವಸೆಯಿರಲಿ. ಮುಂದೆ ಈ ಮಟ್ಟದ ಮಹಾನ್ ಅವಘಡ ನಡೆಯದಂತೆ ಕಾಪಾಡಬೇಕಾದಲ್ಲಿ ಪರಿಸರದೊಡನಿನ ನಮ್ಮ ಲಕ್ಷ್ಮಣರೇಖೆಯನ್ನು ದಾಟದಿರೋಣ. ಪ್ರಕೃತಿಯ ಸಮತೋಲನ ಹಾಳಾಗದಂತಿರಲು ಎಲ್ಲರೂ ಕೂಡಿ ಪ್ರಯತ್ನ ಪಡೋಣ

    ಮುಂದಿನ ವರ್ಷದ ಶುರುವಾತಿಗೆ ಲಸಿಕೆಗಳು ಲಭ್ಯವಾದಲ್ಲಿ ಎರಡನೆಯ ಅಲೆಯ ತೀವ್ರತೆಯನ್ನು ಭಾರತ ಸ್ವಲ್ಪ ಸುಲಭವಾಗಿ ಹತ್ತಿಕ್ಕಲು ಸಾಧ್ಯವಾಗುತ್ತದೆ ಎನ್ನುವ ಆಶಾದಾಯಕ ಯೋಚನೆಗಳಿವೆ. ಇದನ್ನು ಸಾಧಿಸಲು ಲಸಿಕೆ ಬಡವರಿಗೂ ಶ್ರೀಮಂತರಿಗೂ ಏಕಪ್ರಕಾರ ಲಭ್ಯವಾಗಬೇಕು ಎನ್ನುವುದನ್ನು ಮರೆಯದಿರೋಣ.

    ಕೋವಿಡ್ ನಿಂದ ಕಲಿಯಬಹುದಾದ ವಿಚಾರಗಳು

    ಕೋವಿಡ್ ಎನ್ನುವುದು ಮನುಕುಲಕ್ಕೆ ಸಿಕ್ಕ ಮಹಾನ್ ಎಚ್ಚರಿಕೆ.

    ಪ್ರಕೃತಿ ಮುನಿದರೆ ಬಡವ ಬಲ್ಲಿದನೆನ್ನದೆ ಮನುಕುಲವನ್ನು ಬಗ್ಗುಬಡಿಯಬಲ್ಲದು ಎಂಬುದನ್ನು ಈ ಪ್ಯಾಂಡೆಮಿಕ್ ಇನ್ನಿಲ್ಲದಂತೆ ತೋರಿಸಿದೆ. ಅದಕ್ಕೆ ಪ್ರಳಯವೇ ಆಗಬೇಕೆಂದೇನಿಲ್ಲ.ಕಣ್ಣಿಗೆ ಕಾಣದ ಅತಿಚಿಕ್ಕ ವೈರಾಣು ಕೂಡ ಸಾಕೇ ಸಾಕು ಎಂದು ಮನುಷ್ಯನನ್ನು ಬಡಿದು ತಿಳಿಸಿದ ಸಂದೇಶವಿದು.

    ನಮ್ಮ ಆರೋಗ್ಯ ವ್ಯವಸ್ಥೆಗಳು, ಸಾಮಾಜಿಕ ರೀತಿಗಳು, ಪ್ರಜಾ ಪ್ರಭುತ್ವದ ಆಡಳಿತ ನೀತಿಗಳು ಎಲ್ಲವೂ ಇದರಿಂದ ಸತ್ಯಶೋಧನೆಗೆ ಒಳಪಟ್ಟಿವೆ. ಈ ಸಂಧರ್ಭದಲ್ಲಿ ಮನುಷ್ಯರ ನಡುವಿನ ಸಂಬಂಧಗಳು, ಒಡೆಯ-ನೌಕರರ ನಡುವಿನ ನಂಬಿಕೆಗಳು, ಮನುಷ್ಯನ ಮಾನಸಿಕ ಸಮತೋಲನಗಳು ಇತ್ಯಾದಿ ವಿಚಾರಗಳೆಲ್ಲ ಬೇಗುದಿಗೆ ತಳ್ಳಲ್ಪಟ್ಟಿದ್ದು ಸುಳ್ಳಲ್ಲ. ಸ್ವಾರ್ಥ ಮತ್ತು ಸಾಮಾಜಿಕ ಒಳಿತುಗಳು, ಸರ್ಕಾರಗಳು ಮತ್ತು ಜನ ನಂಬಿಕೆಗಳು ಎಲ್ಲರ ಕಣ್ಣೆದುರು ಪೊರೆ ಕಳಚಿದ್ದು ಕೂಡ ಸುಳ್ಳಲ್ಲ.

    ಒಂದರ ಜೊತೆ ಮತ್ತೊಂದು ಅತ್ಯಂತ ಸಂಕೀರ್ಣವಾಗಿ ಹೊಸೆದುಕೊಂಡಿರುವ ನಮ್ಮ ಸಾಮಾಜಿಕ ವ್ಯವಸ್ಥೆಗಳು ಕೋವಿಡ್ ನ ಜಗ್ಗಾಟದಲ್ಲಿ ಒತ್ತಟ್ಟಿಗೆ ಮುಗ್ಗರಿಸಿದವು. ಝರ್ಜರಿತವಾದವು. ಕುಸಿದುಬಿದ್ದವು, ಹೊಸ ದಾರಿಗಳನ್ನು ಅನ್ವೇಷಿಸಿದವು. ಮತ್ತೆ ಮತ್ತೆ  ಸುಧಾರಿಸಿ ಚೇತರಿಸಿಕೊಂಡು ಸೇವೆಗೆ ಸಿದ್ಧವಾದವು. ಮನುಷ್ಯನ ಅತಿಕ್ರಮಣ ಆಪತ್ತನ್ನು ತಂದಂತೆ ಆತನ ಹಲವು ಆವಿಷ್ಕಾರಗಳು ಅವನ ಕೈ ಹಿಡಿದು ನಡೆಸಿದವು. ಆದರೆ ಎಷ್ಟೇ ಪ್ರಗತಿ ಸಾಧಿಸಿದರೂ ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವಲ್ಲಿ ಹುಲು ಮಾನವನ ಪ್ರಗತಿ ಧಾರುಣವಾಗಿ ಸೋಲು ಕಾಣುತ್ತವೆಂಬ ನಿತ್ಯ ಸತ್ಯವನ್ನು ಕೋವಿಡ್ ಪ್ಯಾಂಡೆಮಿಕ್ ನಿಚ್ಚಳವಾಗಿ ತೋರಿಸಿದೆ.

    ಆದ್ದರಿಂದ ಪ್ರಕೃತಿ ವಿಕೋಪಗಳನ್ನು ತಡೆಗಟ್ಟುವುದರಲ್ಲೇ ವಿಶ್ವದ ಒಳಿತಿದೆ. ಅಂತೆಯೇ ಕೋವಿಡ್ ವೈರಸ್ಸನ್ನು ನಮ್ಮ ಉದಾಸೀನತೆಯ ಮೈಮರೆವಿನಿಂದ ಆಹ್ವಾನಿಸಿಕೊಳ್ಳುವುದಕ್ಕಿಂತ ಎಚ್ಚರಿಕೆ ವಹಿಸಿ ದೂರವಿಡುವುದರಲ್ಲೇ ನಮ್ಮ ಜಾಣತನವಿದೆ. ಅಕಸ್ಮಾತ್  ನಮಗೆ ಕೋವಿಡ್ ಬಂದಲ್ಲಿ ಅದನ್ನು ಇತರರಿಗೆ ನೀಡದಂತೆ ಕಾಳಜಿವಹಿಸುವುದರಲ್ಲಿ ಮಾನವೀಯ ಔದರ್ಯವೂ ಅಡಗಿದೆ.ಇದನ್ನು ಮುಂಬರುವ ವರ್ಷಗಳಲ್ಲೂ ನಾವು ನೆನಪಿಟ್ಟುಕೊಂಡು ನಡೆಯಬೇಕಿದೆ.

    ಅಂತರ ರಾಷ್ಟ್ರೀಯ  ಮಟ್ಟದ ಸೌಹಾರ್ದತೆಗಳೂ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೋವಿಡ್ ಹಿಂದೆ ಬಿಟ್ಟುಹೋಗುವ ಎಲ್ಲ ನಷ್ಟಗಳನ್ನು ಸರಿಪಡಿಸಲು ಒಂದುಗೂಡಬೇಕಿದೆ. ಇಂಥದ್ದೇ  ಅವಘಡಗಳು ಮತ್ತೆ ನಡೆಯದಿರುವಂತೆ ನೋಡಿಕೊಳ್ಳಲು ಜಾತಿ, ಮತ, ಧರ್ಮ ಲಿಂಗ ಮತ್ತು ದ್ವೇಷ ಇಂಥವೆಲ್ಲ ಸಣ್ಣ ವಿಚಾರಗಳನ್ನು ಹಿಂದೆ ಬಿಟ್ಟು ಬದುಕಿನ ಬಟ್ಟೆಯ ಧೂಳನ್ನು ಜಾಡಿಸಿ ಕೊಡವಿ ಹೊಸ ಹುರುಪನ್ನು, ವೈಚಾರಿಕತೆಯನ್ನು, ಪ್ರಕೃತಿಯನ್ನು ಅತಿಕ್ರಮಿಸದಎಚ್ಚರಿಕೆಗಳನ್ನು ಮೈಗೂಡಿಸಿಕೊಂಡು ಮತ್ತೆ ಬದುಕನ್ನು ಕಟ್ಟಲು ತಯಾರಾಗಬೇಕಿದೆ. ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಜೀವಿ ವೈರಸ್ಸೊಂದು ಮನುಕುಲವನ್ನು ನಾಶಮಾಡಬಲ್ಲದು ಎಂಬ ಈ ಕಾಣ್ಕೆಯಲ್ಲಿ ನಾವೇ ಶ್ರೇಷ್ಠರೆಂಬ ನಮ್ಮ ಅಹಂಕಾರವನ್ನು ತ್ಯಜಿಸೋಣ.ಕೋವಿಡ್ ನಂತರದ ಬದುಕು ತರಲಿರುವ ಬದಲಾವಣೆಯ ಗಾಳಿಗೆ ಹುಲುಕಡ್ಡಿಯಂತೆ ಬಾಗಿ ಶರಣಾಗಿ ಬದುಕುಳಿಯೋಣ. ಕೋವಿಡ್ ಅವಘಡದಿಂದಲೂ ಕಲಿತು ಬಾಳೋಣ.

    ಈ ಅಂಕಣದೊಂದಿಗೆ ಪ್ರಕಟವಾದ ಚಿತ್ರ ಬರೆದವರು ಸಂತೋಷ ಸಸಿಹಿತ್ಲು.ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಸಾಕಷ್ಟು ಚಿತ್ರಗಳು ಪ್ರಕಟವಾಗಿವೆ. ಕಾರ್ಟೂನ್, ಇಲಸ್ಟ್ರೇಷನ್, ಭಾವಚಿತ್ರಗಳನ್ನು ರಚಿಸುವಲ್ಲಿ ಅವರು ಸಿದ್ಧ ಹಸ್ತರು. ಅವರ ಸಂಪರ್ಕ ಸಂಖ್ಯೆ 9986688101

    ಲೇಖಕಿಯ ಟಿಪ್ಪಣಿ

    ಕೋವಿಡ್ ಡೈರಿ ಅಂಕಣವನ್ನು ಪ್ರತಿವಾರ 6 ತಿಂಗಳಿಂದ ಸತತವಾಗಿ ಓದುತ್ತ, ಆಗಾಗ ಆದರೆ ನಿಯಮಿತವಾಗಿ ಪ್ರತಿಕ್ರಿಯಿಸುತ್ತ ನನ್ನನ್ನು ಉತ್ತೇಜಿಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಒಂದು ಪ್ಯಾಂಡೆಮಿಕ್ ನ ಬಿರುಗಾಳಿಯ ಹೊಡೆತದ ಕೇಂದ್ರ ಸಮಯದಲ್ಲಿ (Eye of the Storm) ವೈಯಕ್ತಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕೋನಗಳಿಂದ ಅದು ನನಗೆ ಕಂಡಂತೆ ದಾಖಲಿಸುತ್ತ ನಿಮ್ಮೊಂದಿಗೆ  ಸಹ ಪ್ರಯಾಣ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆ ಅವಕಾಶವನ್ನು ಕಲ್ಪಿಸಿದ ಕನ್ನಡಪ್ರೆಸ್ ನ ಪ್ರಧಾನ ಸಂಪಾದಕರಾದ ಶ್ರೀವತ್ಸ ನಾಡಿಗರಿಗೆ ನನ್ನ ವಂದನೆಗಳು.

    ಡಾ. ಪ್ರೇಮಲತ ಬಿ, ಲಂಡನ್

    ಸಂಪಾದಕರ ಟಿಪ್ಪಣಿ

    ಕೋವಿಡ್ ಬಗ್ಗೆ ಲಂಡನ್ ಕನ್ನಡತಿ ಡಾ. ಪ್ರೇಮಲತ ಬರೆಯುತ್ತಿದ್ದ ಈ ಅಂಕಣ ಈ ಬರಹದೊಂದಿಗೆ ಮುಕ್ತಾಯ ಕಾಣುತ್ತಿದೆ. ಬಹುಶ: ಕನ್ನಡ ಪತ್ರಿಕೋದ್ಯಮದಲ್ಲಿ ಕೋವಿಡ್ ಬಗ್ಗೆ ಇಷ್ಟು ಸಮಗ್ರವಾಗಿ ಅಧ್ಯಯನ ಶೀಲ ಲೇಖನ ಮಾಲೆ ಎಲ್ಲಿಯೂ ಪ್ರಕಟವಾದ ಉದಾಹರಣೆ ಇಲ್ಲ. ಕನ್ನಡಪ್ರೆಸ್.ಕಾಮ್ ನ ಮೇಲೆ ಅಭಿಮಾನವಿಟ್ಟು ಈ ಲೇಖನ ಮಾಲೆ ಬರೆದು ಕೊಟ್ಟ ಡಾ. ಪ್ರೇಮಲತ ಅವರಿಗೆ ಓದುಗರ ಪರವಾಗಿ ಧನ್ಯವಾದ.

    ಈ ಆರು ತಿಂಗಳಲ್ಲಿ ಒಂದು ವಾರವೂ ತಪ್ಪದೇ ಡಾ. ಪ್ರೇಮಲತ ಬರೆದಿದ್ದಾರೆ. ಅಂಕಣ ಎಂದ ಕೂಡಲೇ ಅಂಕಣಕಾರರಿಂದ ಅದನ್ನು ಪಡೆಯುವುದೆ ಸಂಪಾದಕರಿಗೆ ಸವಾಲು. ಅಂಕಣ ಬರೆಯಲು ಆರಂಭಿಸಿದಾಗ ಇರುವ ಉತ್ಸಾಹ ಕೆಲವವರಲ್ಲಿ ನಾಲ್ಕು ಕಂತು ಬರೆಯುವ ವೇಳೆಗೆ ಕಡಿಮೆಯಾಗಿರುತ್ತದೆ. ಸಂಪಾದಕರು ನೆನಪಿಸಿ ನೆನಪಿಸಿ ಅಂಕಣ ಪಡೆಯಬೇಕಾಗುತ್ತದೆ. ಇದು ನನ್ನ ಮೂವತ್ತು ವರುಷಗಳ ಪತ್ರಿಕೋದ್ಯಮದ ಅನುಭವ. ಆದರೆ ಅಂಕಣಕಾರರಾಗಿ ಪ್ರೇಮಲತ ಒಂದು ದಿನವೂ ತಡಮಾಡಲಿಲ್ಲ. ಎರಡೂ ದಿನ ಮೊದಲೆ ಅಂಕಣ ಬರಹ ನಮ್ಮ ಕೈ ಸೇರುತ್ತಿತ್ತು.

    ನಮ್ಮ ಓದುಗರು ಈ ಲೇಖನ ಮಾಲೆಯನ್ನು ಮೆಚ್ಚಿಕೊಂಡಿದ್ದಾರೆ. ಅನೇಕರು ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಅವರೆಲ್ಲಿರಿಗೂ ಧನ್ಯವಾದ. ಮತ್ತೊಂದು ಹೊಸ ವಿಷಯ ದೊಂದಿಗೆ ಡಾ. ಪ್ರೇಮಲತ ಅವರ ಅಂಕಣ ಸಧ್ಯದಲ್ಲೇ ನಿರಿಕ್ಷಿಸೋಣ.

    ಶ್ರೀವತ್ಸ ನಾಡಿಗ್, ಪ್ರಧಾನ ಸಂಪಾದಕ

    ಶಾಲೆ ಆರಂಭ : ಸಿಎಂ ಜೊತೆ ಚರ್ಚಿಸಿ ನಿರ್ಧಾರ

    ಬಹು ಚರ್ಚಿತ ವಿಷಯವಾಗಿರುವ ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತಂತೆ ಶಿಕ್ಷಣ ಇಲಾಖೆ ವಿವಿಧ ಸ್ತರಗಳಲ್ಲಿ ಸಮಾಲೋಚನೆ-ಸಂವಾದಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ಸ್ಥಿತಿಗತಿಗಳನ್ನು ಮನದಟ್ಟು ಮಾಡಿದ ನಂತರವೇ ಆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಬುಧವಾರ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾಶಿಇ ಆಯುಕ್ತರು, ನಿರ್ದೇಶಕರುಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಮಕ್ಕಳ ಹಿತ ಹಾಗೂ ಮಕ್ಕಳ ಆರೋಗ್ಯವೇ ಪ್ರಧಾನವಾಗಿರುವುದರಿಂದ ಶಾಲೆಗಳನ್ನು ತಕ್ಷಣದಲ್ಲೇ ಆರಂಭಿಸುವ ಉದ್ದೇಶವಿಲ್ಲವಾದರೂ, ಮಕ್ಕಳು ಶಾಲೆಯಿಂದ ಬಹುಕಾಲ ಹೊರಗುಳಿಯುವುದರಿಂದಾಗುವ ಸಮಸ್ಯೆಗಳ ಕುರಿತೂ ಚಿಂತಿಸಬೇಕಾದ ಅಗತ್ಯವಿದೆ ಎಂದರು.

    ಮಕ್ಕಳ ಹಿತ, ಮಕ್ಕಳ ಯೋಗಕ್ಷೇಮ, ಪೋಷಕರ ಆತಂಕ, ಶಿಕ್ಷಕರ ಹಿತಗಳೇ ನಮಗೆ ಅತ್ಯಂತ ಪ್ರಮುಖ ವಿಷಯಗಳಾದ್ದರಿಂದ ಯಾವ ಕಾರಣಕ್ಕೂ ಶಾಲೆಗಳನ್ನು ತಕ್ಷಣವೇ ತೆರೆಯುವ ಉದ್ದೇಶ ಸರ್ಕಾರಕ್ಕಿಲ್ಲ ಎಂದೂ ಸುರೇಶ್ ಕುಮಾರ್ ಒತ್ತಿ ಹೇಳಿದರು. ಹಾಗಾಗಿ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಸೂಕ್ತ ಕ್ರಮಗಳೊಂದಿಗೆ ಆರಂಭಿಸಬಹುದೆಂಬ ಕುರಿತು ಸಮಾಜದ ವಿವಿಧ ಸ್ತರಗಳೊಂದಿಗೆ ಸಮಾಲೋಚನೆಗಳನ್ನು ಕೈಗೊಳ್ಳಲಾಗಿದೆ ಎಂದರು.

    ಕೊರೋನಾ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿನ ಕಲಿಕಾ ಪ್ರಕ್ರಿಯೆಗಳು, ಅದರಿಂದಾದ ಉಪಯೋಗಗಳು ಮತ್ತು ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು, ಇದರ ಪರಿಣಾಮಗಳ ಬೆಳಕಿನಲ್ಲಿ ನಾವು ಹೇಗೆ ಕಲಿಕಾ ಪ್ರಕ್ರಿಯೆಗೆ ನಾಂದಿ ಹಾಡಬಹುದೆಂದು ವಿಷದವಾಗಿ ಚರ್ಚಿಸಲಾಯಿತು. ಆ ರಾಜ್ಯದ ಸ್ಥಿತಿಗತಿಗಳೊಂದಿಗೆ ನಮ್ಮ ರಾಜ್ಯದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು ಎಂದು ಅವರು ಹೇಳಿದರು.

    ಮುಂದಿನ ಎರಡು ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಎಸ್‍ಡಿಎಂಸಿ ಪ್ರತಿನಿಧಿಗಳು ಸೇರಿದಂತೆ ಹಲವು ಶೈಕ್ಷಣಿಕ ಪಾಲುದಾರರೊಂದಿಗೆ ಚರ್ಚೆ ನಡೆಸಿ ಸಮಗ್ರವಾದ ಕ್ರೋಢೀಕೃತ ವರದಿ ಸಿದ್ಧಪಡಿಸಲಿದ್ದಾರೆ. ಹಾಗೆಯೇ ಈಗಾಗಲೇ ಆಯುಕ್ತರು ರಾಜ್ಯದ ಡಿಡಿಪಿಐಗಳು, ಬಿಇಒಗಳೊಂದಿಗೆ ಚರ್ಚೆ ಮಾಡಿ ವಿವರಗಳನ್ನು ಪಡೆದಿದ್ದಾರೆ. ಈ ಎಲ್ಲ ವರದಿಗಳ ಹಿನ್ನೆಲೆಯಲ್ಲಿ ವರದಿ ಸಿದ್ಧಪಡಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ರಾಜ್ಯದ ಸ್ಥಿತಿಗತಿಗಳನ್ನು ಗಮನಕ್ಕೆ ತರಲಾಗುವುದು. ಆ ನಂತರವೇ ಶಾಲೆಗಳ ಆರಂಭ ಕುರಿತು ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ಶಿಕ್ಷಕರ ವರ್ಗಾವಣೆಗೆ ಚಾಲನೆ: ಈಗಾಗಲೇ ಶಿಕ್ಷಕರ ವರ್ಗಾವಣೆಗೆ ಎಲ್ಲ ಪೂರ್ವಭಾವಿ ಕ್ರಮಗಳು ಸಿದ್ಧಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ನೀತಿ ಸಂಹಿತೆ ಮುಕ್ತಾಯಗೊಂಡ ನಂತರವೇ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಹಾಗೆಯೇ ಪದವಿ ಪೂರ್ವ ಉಪನ್ಯಾಸಕರ ವರ್ಗಾವಣಾ ಕೌನ್ಸೆಲಿಂಗ್‍ನ್ನು ನೀತಿ ಸಂಹಿತೆ ಮುಗಿದ ತಕ್ಷಣವೇ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂತ ಮೊದಲು ಪ್ರಾಂಶುಪಾಲರ ಬಡ್ತಿ ಮತ್ತು ಅವರ ವರ್ಗಾವಣೆ ಮಾಡಲಾಗುವುದು. ಪ್ರಾಂಶುಪಾಲರ ವರ್ಗಾವಣೆಯಿಂದ ತೆರವಾಗುವ ಉಪನ್ಯಾಸಕ ಹುದ್ದೆಗಳನ್ನು ಒಳಗೊಂಡಂತೆ ಖಾಲಿಯಾಗುವ ಉಪನ್ಯಾಸಕರ ಹುದ್ದೆಗಳನ್ನು ಸೇರಿಸಿ ಉಪನ್ಯಾಸಕರ ವರ್ಗಾವಣಾ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.

    ಅಮೆರಿಕಾ ಚುನಾವಣೆ ಹೇಗೆ ನಡೆಯುತ್ತೆ ಗೊತ್ತಾ

    ಇವತ್ತು ಅಮೆರಿಕಾ ಮಹಾ ಚುನಾವಣೆಯ ಫಲಿತಾಂಶ ಗೊತ್ತಾಗುವ ನಿರೀಕ್ಷೆ ಇದೆ. ಯಾರಾಗಬಹುದು ಅಮೆರಿಕದ ಅಧ್ಯಕ್ಷ ಎಂಬ ಸಂಗತಿ  ತೀವ್ರ ಕುತೂಹಲ ಕೆರಳಿಸಿದೆ. ಹಲವು ರಾಜ್ಯಗಳು ಒಂದೊಂದು ರೀತಿಯ ಫಲಿತಾಂಶವನ್ನು ನೀಡುತ್ತಾ ಬರುತ್ತಿವೆ. ಕೆಲವು ಕಡೆ ಬಿಡೆನ್ ಮತ್ತೊದು ಕೆಲವು ಕಡೆ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ಇ ಮೇಲ್ ಮತಗಳು ಇರುವುದರಿಂದ ಕೆಲವು ಪ್ರಾಂತ್ಯಗಳಲ್ಲಿ ಎಣಿಕೆ ತಡವಾಗಿದೆ.   ಹಾಗೆ ನೋಡಿವ ದರೆ ಅಮೆರಿಕಾ ಚುನಾವಣೆ ಸ್ವಲ್ಪ ಕಾಂಪ್ಲಿಕೇಟಡ್.  ಅಲ್ಲಿನ ಸಂವಿಧಾನ ಕರ್ತೃಗಳು ಹಲವು ರೀತಿಯ ಬ್ಯಾಲನ್ಸ್ ಮತ್ತು ಚೆಕ್ ಗಳನ್ನು ಅಳವಡಿಸಿದ್ದಾರೆ. ಇಂದಿನ ಫಲಿತಾಂಶ ಸ್ಪಷ್ಟ ರೂಪ ಪಡೆಯುವ ಮುನ್ನ ಅಮೆರಿಕ ಚುನಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡೋಣ.

    ಅಲ್ಲಿನ ಚುನಾವಣೆ ನಮಗಿಂತ ಹೇಗೆ ಭಿನ್ನ?

    ನಮ್ಮಲ್ಲಿ  ಪ್ರಧಾನ ಮಂತ್ರಿ ಇದ್ದ ಹಾಗೆ ಅಲ್ಲಿ ಅಧ್ಯಕ್ಷ. ಅಮೆರಿಕನ್ ಪ್ರೆಸಿಂಡೆಂಟ್ ಎಂಬುದು ವಿಶ್ವದಲ್ಲೇ ಅತ್ಯಂತ ಪವರ್ ಫುಲ್ ಹುದ್ದೆಗಳಲ್ಲಿ ಒಂದು. ನಮ್ಮದು  ಸಂಸದೀಯ ಜನತಂತ್ರ ವ್ಯವಸ್ಥೆ. ಇಲ್ಲಿ ಸರಕಾರದ ಮುಖ್ಯಸ್ಥ ಜನರಿಂದ ನೇರವಾಗಿ ಆಯ್ಕೆಯಾಗುವುದಿಲ್ಲ.  ನಾವು ನಮ್ಮ ಪ್ರಧಾನಿಗೆ ನೇರವಾಗಿ ವೋಟ್ ಮಾಡಿ ಗೆಲ್ಲಿಸಿದ್ದಾವ ಇಲ್ಲ. ಅವರನ್ನು ಆಯ್ಕೆ ಮಾಡಿದ್ದು ವಾರಾಣಾಸಿ ಮತದಾರರು .ನಾವು ನಮ್ಮ ಕ್ಷೇತ್ರದ ಎಂಪಿ ಗಳಿಗೆ ವೋಟ್ ಮಾಡಿದೆವು.  ಅತಿ ಹೆಚ್ಚು ಎಂಪಿಗಳನ್ನು ಪಡೆದ ಬಿಜೆಪಿ ಅಧಿಕಾರಕ್ಕೆ ಬಂತು. ಆ ಪಕ್ಷದ ಸಂಸದರೆಲ್ಲಾ ಸೇರಿ ಆಯ್ಕೆ ಮಾಡಿದ ನರೇಂದ್ರ ಮೋದಿ  ಪ್ರಧಾನ ಮಂತ್ರಿ ಆದರು.

    ಆದರೆ ಅಮೆರಿಕಾದಲ್ಲಿ ಹಾಗಲ್ಲ. ಅಲ್ಲಿ ಅಧ್ಯಕ್ಷರಿಗೆ ಪರಮಾಧಿಕಾರ. ನೇರವಾಗಿ ನಾಗರಿಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ವೋಟ್ ಮಾಡುತ್ತಾರೆ.ಬಾಲೆಟ್ ಪೇಪರ್ ನಲ್ಲಿ ಅವರ ಹೆಸರೇ ಮುದ್ರಿತವಾಗಿರುತ್ತದೆ.

    ಅಂದರೆ ಜನರಿಂದ ಹೆಚ್ಚು ವೋಟು  ಪಡೆದವರೆ  ಅಮೆರಿಕನ್ ಪ್ರೆಸಿಡೆಂಟ್ ಆಗಿಬಿಡ್ತಾರ?

    ಈ ಪ್ರಶ್ನೆಗೆ ನನ್ನ ಉತ್ತರ ಇಲ್ಲ. ಉದಾಹರಣೆಗೆ  ಒಟ್ಟು ಮತದಾರರ ಸಂಖ್ಯೆ 1000 ಎಂದು ಇಟ್ಟು ಕೊಳ್ಳಿ. ಅದರಲ್ಲಿ ಒಬ್ಬ ಅಭ್ಯರ್ಥಿಗೆ  600 ವೋಟು ಬಂತು ಎಂದು ಭಾವಿಸಿ. ಅಂದರೆ ಎದುರಾಳಿಗಿಂತ 100 ಅಧಿಕ, ಪಡೆದವನೆ ಗೆದ್ದ ಎಂದು ಘೋಷಣೆ ಆಗಬೇಕಲ್ಲವೆ.  ಆದರೆ ಇಲ್ಲಿ ಹಾಗೆ ಆಗುವುದಿಲ್ಲ.  ವೋಟ್ ಪರಸಂಟೇಜ್  ಹೆಚ್ಚು ಬಂದ ಮಾತ್ರಕ್ಕೆ  ಆತ ಅಧ್ಯಕ್ಷ ಪಟ್ಟ ಗಿಟ್ವುವುದಿಲ್ಲ.   ನಮ್ಮಲ್ಲಿ ಸಿದ್ಧರಾಮಯ್ಯ ಹೇಳುತ್ತಿರುತ್ತಾರಲ್ಲ  ಬಿಜೆಪಿ ಗಿಂತ ವೋಟಿಂಗ್ ಪರ್ಸಂಟೇಜ್  ನಮಗೆ ಜಾಸ್ತಿ ಅಂತ. ಈ  ಪರ್ಸಂಟೇಜ್ ವೋಟುಗಳು   ಸೀಟುಗಳಾಗಿ ಬದಲಾಗದೆ ಹೋದಾಗ ಅಧಿಕಾರ ಗಿಟ್ಟುವುದಿಲ್ಲ. ಅಲ್ಲೂ ಹೆಚ್ಚು ಕಡಿಮೆ ಹೀಗೆಯೇ.

    ಅಂದರೆ ಹೆಚ್ಚಿನ ವೋಟು ಬಂದರು ಅಧಿಕಾರ ಸಿಗುವುದಿಲ್ಲವೆ?

    ಸಿಗುವುದಿಲ್ಲ ಎಂದಲ್ಲ.  ವಾಸ್ತವವಾಗಿ ಅಮೆರಿಕನ್ನರು  ಟ್ರಂಪ್‌ಗೋ ಬಿಡನ್ ಗೋ ಮತ  ಹಾಕಿದರೆ  ಅದು ನೇರವಾಗಿ ಅವರಿಗೆ ಹಾಕಿದಂತಲ್ಲ.  ವಾಸ್ತವವಾಗಿ ಆ ಮೂಲಕ ಅವರು ಆಯ್ಕೆ ಮಾಡುವುದು ಪ್ರೆಸಿಂಡೆಂಟ್ ಆಯ್ಕೆಯಲ್ಲಿ ವೋಟು ಮಾಡಲು ಹಕ್ಕು ಹೊಂದಿರುವ   ಎಲೆಕ್ಟ್ರೋಲ್ ಕಾಲೇಜನ್ನು .. ಎಲೆಕ್ಟ್ರೋಲ್ ಕಾಲೇಜ್ ಅಂದ ಕೂಡಲೆ ಕಾಲೇಜು ಎಂದು ಕೊಳ್ಳಬೇಡಿ ಅದನ್ನುಮತದಾರರ ಒಂದು ಗುಂಪು ಎಂದು ಭಾವಿಸಿಕೊಳ್ಳಿ, ಈ ಗುಂಪೇ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು.

    ಏನಿದು ಎಲೆಕ್ಟ್ರೋಲ್ ಕಾಲೇಜ್?

     ಅಮೆರಿಕದಲ್ಲಿ  50 ರಾಜ್ಯಗಳಿವೆ. ಪ್ರತಿಯೊಂದು ರಾಜ್ಯದಿಂದ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಈ ‌ಎಲೆಕ್ಟರ್ ಗಳ (ಜನರ ಪರವಾಗಿ ವೋಟು ಮಾಡುವ ಪ್ರತಿನಿಧಿ) ಸಂಖ್ಯೆ ನಿಗದಿಯಾಗಿರುತ್ತದೆ.  ಉದಾಹರಣೆಗೆ ಕ್ಯಾಲಿಫೋರ್ನಿಯ ರಾಜ್ಯ. ಇದು 55 ಎಲೆಕ್ಟರ್ ಗಳನ್ನು ಹೊಂದಿದೆ. ಅದೇ ರೀತಿ ನಾರ್ತ್ ಡಕೋಟ, ವಾಷಿಂಗ್ಟನ್ ಡಿಸಿ ಯಂಥ ರಾಜ್ಯಗಳು ಕೇವಲ 3  ಎಲೆಕ್ಟರ್ ಗಳನ್ನು ಹೊಂದಿದೆ. ಎಲ್ಲಾ 50 ರಾಜ್ಯಗಳು ಸೇರಿ ಇವರ ಸಂಖ್ಯೆ 538 ಅದರಲ್ಲಿ 270 ಮತ್ತು  ಅದಕ್ಕಿಂತ ಹೆಚ್ಚು ಎಲೆಕ್ಟರ್ ಗಳ (ಪ್ರತಿನಿಧಿ) ವೋಟ್‌ ಪಡೆದವರು ಅಧ್ಯಕ್ಷರಾಗುತ್ತಾರೆ. ಎಲೆಕ್ಟರ್ ಗಳು ಬೇರೆ ಜನಪ್ರತಿನಿಧಿಗಳಂತೆ ಅಲ್ಲ. ಅಧ್ಯಕ್ಷ/ ಉಪಾಧ್ಯಕ್ಷ ಚುನಾವಣೆಯಲ್ಲಿ ವೋಟು ಮಾಡಿದ ನಂತರ ಇವರ ಕೆಲಸ ಮುಗಿಯಿತು.

    ಎಲೆಕ್ಟರ್ ಗಳ ಆಯ್ಕೆ ಹೇಗೆ?

    ಚುನಾವಣೆ ಪೂರ್ವದಲ್ಲಿ ಆಯಾ ಪಕ್ಷಗಳು ತಮ್ಮ ಕಡೆಯ ಎಲೆಕ್ಟರ್ ಗಳನ್ನು ಆಂತರಿಕ ಮತದಾನದ ಮೂಲಕ ಆಯ್ಕೆ ಮಾಡಿರುತ್ತಾರೆ. ಸಾಮಾನ್ಯವಾಗಿ ಇವರು ಆಯಾ ಪಕ್ಷಗಳ ನಿಷ್ಠರು, ಸಮಾಜದ ಗಣ್ಯರು, ಕಾರ್ಯಕರ್ತರು ಆಗಿರುತ್ತಾರೆ. ( ನಮ್ಮಲ್ಲಿ ನಿಗಮ ಮಂಡಳಿ, ವಿಧಾನ ಪರಿಷತ್ ಗೆ ನೇಮಕ ಮಾಡುತ್ತಾರಲ್ಲ ಹಾಗೆ ) ಆದರೆ ಇವರು ಸರಕಾರದ ಯಾವುದೇ ಲಾಭದಾಯಕ ಹುದ್ದೆ ಹೊಂದಿರುವಂತಿಲ್ಲ. ಅಧ್ಯಕ್ಷ/ ಉಪಾಧ್ಯಕ್ಷ ಚುನಾವಣೆಯಲ್ಲಿ ವೋಟು ಹಾಕುವುದಷ್ಟೆ ಇವರ ಕೆಲಸ.  ಇವರು ಅಲ್ಲಿನ ಸೆನೆಟ್ / ಹೌಸ್ (ನಮ್ಮಲ್ಲಿ ಲೋಕಸಭೆ /ರಾಜ್ಯಸಭೆ ಇದ್ದಂತೆ) ಸದಸ್ಯರು ಆಗಿರುವಂತಿಲ್ಲ.

    ಆಯಾ ರಾಜ್ಯದಲ್ಲಿ ಶೇಕಡ 50ಕ್ಕಿಂತ ಹೆಚ್ಚಿನ ಮತವನ್ನು  ಪಡೆಯುವ ಅಧ್ಯಕ್ಷ/ ಉಪಾಧ್ಯಕ್ಷ  ಹುದ್ದೆಯ ಅಭ್ಯರ್ಥಿಯ ಪಕ್ಷ ಕ್ಕೆ ಆ ರಾಜ್ಯದ  ಎಲೆಕ್ಟರ್ ಹುದ್ದೆಗಳು ಸಿಗುತ್ತವೆ. ಉದಾಹರಣೆಗೆ  ಈ ಬಾರಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ  55 ಎಲೆಕ್ಟರ್ ಮತಗಳಿವೆ.  ಅಲ್ಲಿ ಈ ಬಾರಿ ಜಾನ್ ಬಿಡೆನ್ ಶೇಕಡ 65.3  ರಷ್ಟು ಮತ ಪಡೆದಿದ್ದಾರೆ. ಹೀಗಾಗಿ ಅಲ್ಲಿನ 55 ಎಲೆಕ್ಟರ್ ಮತಗಳು  ಬಿಡೆನ್ ಪಕ್ಷದ ಪಾಲಾಗುತ್ತದೆ. ಅದೇ ರೀತಿ ಫ್ಲೋರಿಡಾದಲ್ಲಿ ಟ್ರಂಪ್ ಶೇಕಡ 51.2 ರಷ್ಟು ಜನರ ಮತ ಪಡೆದಿದ್ದಾರೆ. ಹೀಗಾಗಿ ಅಲ್ಲಿರುವ ಎಲ್ಲಾ 29 ಎಲೆಕ್ಟರ್ ಸೀಟುಗಳು ಟ್ರಂಪ್ ಪಾಲಾಗುತ್ತವೆ. ಆದರೆ ಮೈನ್ ಮತ್ತು ನೆಬಸ್ಕಾ ರಾಜ್ಯಗಳು ಮಾತ್ರ ಅವರು ಪಡೆಯುವ ಮತಗಳ ಸಂಖ್ಯೆಯ ಆಧಾರದ ಮೇಲೆ ಎಲೆಕ್ಟರ್ ಗಳ ಸಂಖ್ಯೆಯನ್ನು ಹಂಚುತ್ತವೆ.

    ಜನರಿಂದ ಬಹುಮತ ಗಳಿಸದಿದ್ದರೂ ಅಧ್ಯಕ್ಷರಾಗಬಹುದೆ ?

    ಆಗಬಹುದು. ಒಟ್ಟಾರೆ ಮತಗಳು ಹೆಚ್ಚಿಗೆ ಬಂದು ಎಲೆಕ್ಟರ್ ಗಳ ಸಂಖ್ಯೆ ಕಡಿಮೆಯಾದಾಗ ಆತ ಗೆಲ್ಲುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಒಬ್ಬ ಅಭ್ಯರ್ಥಿಗೆ ಒಂದು ರಾಜ್ಯದಲ್ಲಿ ಶೇಕಡ 100 ಮತಗಳು ಬಂದಿರುತ್ತವೆ. ಆದರೆ ಅಲ್ಲಿನ ಜನಸಂಖ್ಯೆ ಅನುಗುಣವಾಗಿ ಅಲ್ಲಿನ ಎಲೆಕ್ಟರ್  ಸಂಖ್ಯೆ ಕಡಿಮೆ ಇರುತ್ತದೆ. ಇನ್ನೊಂದು ರಾಜ್ಯದಲ್ಲಿ ಎಲೆಕ್ಟರ್ ಗಳ ಸಂಖ್ಯೆ ಜಾಸ್ತಿ ಇರುತ್ತದೆ.  ಅಲ್ಲಿ ಮತ್ತೊಬ್ಬ ಅಭ್ಯರ್ಥಿ ಕೇವಲ 51 ರಷ್ಟು  ಮತ ಪಡೆದಿರುತ್ತಾನೆ. ಆದರೆ  ಇಲ್ಲಿನ  ಎಲೆಕ್ಟರ್ ಸಂಖ್ಯೆ 30 ಹೀಗಾಗಿ  ಆತನ ನಂಬರ್ ಹೆಚ್ಚಾಗುತ್ತದೆ. ನಮ್ಮಲ್ಲಿ ಉತ್ತರ ಪ್ರದೇಶದಲ್ಲಿ  ಹೆಚ್ಚು ಎಂಪಿಗಳನ್ನು ಪಡೆದವರು ಅಧಿಕಾರಕ್ಕೆ ಬರುವುದಿಲ್ಲವೆ ಹಾಗೆ. 2016ರಲ್ಲಿ ಟ್ರಂಪ್ ಗೆ  ಒಟ್ಟಾರೆ  ಹಿಲರಿ ಕ್ಲಿಂಟನ್ ಗಿಂತ 3 ಮಿಲಿಯನ್  ವೋಟುಗಳು ಕಡಿಮೆ ಬಂದಿದ್ದವು. ಆದರೆ  ಎಲೆಕ್ಟರ್ ಗಳ  ಸಂಖ್ಯೆ ಹೆಚ್ಚಿರುವ ರಾಜ್ಯದಲ್ಲಿ ಟ್ರಂಪ್ ಗೆದ್ದಿದ್ದರಿಂದ   ಒಟ್ಟು ಎಲೆಕ್ಟರ್ ಗಳ  ಸಂಖ್ಯೆ ಪಡದು ಆತ ಅಧ್ಯಕ್ಷನಾದ.

    ಏಕೆ ಈ  ಪದ್ಧತಿ?

    1787 ರಲ್ಲಿ ಅಮೆರಿಕದ ಸಂವಿಧಾನ ಸಿದ್ಧವಾದಾಗ  ಇಡೀ ದೇಶದ ಜನರ ವೋಟುಗಳನ್ನೆಲ್ಲಾ ಲೆಕ್ಕಹಾಕಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ದೇಶದ ವಿಸ್ತಾರದ ದೃಷ್ಟಿಯಿಂದ ಕಷ್ಟವಾಗಿತ್ತು. ಅದಲ್ಲದೆ ಸಣ್ಣ ರಾಜ್ಯಗಳು ತಮ್ಮ ಜನಸಂಖ್ಯೆ ಆಧಾರದ ಮೇಲೆ ಮತ ಹಾಕುವಾಗ ಈ ಪದ್ಧತಿ ಇದ್ದರೆ ತಮ್ಮ ರಾಜ್ಯದ ಮಾತು ಕೂಡ   ವಾಷಿಂಗ್ ಟನ್ ನಲ್ಲಿ ನಡೆಯುತ್ತದೆ ಎಂದು ಭಾವಿಸಿದವು. ಜನಸಂಖ್ಯೆ ಆಧರಿಸಿ ಎಲೆಕ್ಟರ್  ಸಂಖ್ಯೆ ನಿರ್ಧಾರವಾಗುವುದಿರಂದ ಆಯಾ ರಾಜ್ಯಗಳು ತಮ್ಮ ರಾಜ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ . ಇಲ್ಲದ್ದಿದ್ದರೆ ಹೆಚ್ಚಿನ ಮತದಾರರಿರುವ ರಾಜ್ಯಗಳ ಮಾತೇ ನಡೆದು ಬಿಡಬಹುದು ಎಂದು ಭಾವಿಸಿ ಈ ಪದ್ದತಿ ಒಪ್ಪಿದವು.

    ಎಲೆಕ್ಟರ್ ಗಳು  ಅತಿ ಹೆಚ್ಚಿನ ಮತ ಗೆದ್ದವರಿಗೆ ವೋಟು  ಹಾಕಬೇಕೇ?

    ಹಾಗೇನು ಇಲ್ಲ. ಒಂದು ಪ್ರಾತ್ಯದಲ್ಲಿ ಡೆಮಾಕ್ಟ್ರಾಟಿಕ್  ಪಕ್ಷದ ವತಿಯಿಂದ ನೇಮಕವಾದ ಎಲೆಕ್ಟರ್ ಗಳು ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ  ಮತಹಾಕಬಹುದು. ಆದರೆ ಅಂಥ ಸಂಭವ ಕಡಿಮೆ. ಈ ರೀತಿ ಮತ ಹಾಕಿದವರವನ್ನು ಜನ  ಫೇತ ಲೆಸ್ ಎಲೆಕ್ಟರ್ಸ್ ಎಂದು ಕರೆಯುತ್ತಾರೆ. 2016ರಲ್ಲಿ ಡೆಮಾಕ್ರಾಟಿಕ್ ಪಕ್ಷದ ಐವರು, ರಿಪಬ್ಲಿಕನ್ ಪಕ್ಷದ ಇಬ್ಬರು  ಎಲೆಕ್ಟರ್ ಗಳು ತಮ್ಮ ಪಕ್ಷದ ಅಣತಿಯನ್ನು ಮೀರಿ  ಬಾಲೆಟ್ ಪೇಪರ್ ನಲ್ಲೇ ಇಲ್ಲದ ವ್ಯಕ್ತಿಗಳಿಗೆ ಮತಹಾಕಿದ್ದರು.  ಎಲೆಕ್ಟರಲ್ ಗಳ ಜನರ ವಿಶ್ವಾಸಕ್ಕೆ ಭಂಗ ತರದಂತೆ ನೋಡಿಕೊಳ್ಳುವ ಹೊಣೆ ಆಯಾ ರಾಜ್ಯಗಳದ್ದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.

    ಯಾರಿಗೂ ಬಹುಮತ ಬರದಿದ್ದರೆ ಏನಾಗುತ್ತದೆ?

    ಇಂಥ ಸಮಯದಲ್ಲಿ ಈ ಎಲೆಕ್ಟರ್ ಗಳ  ಮತ ಲೆಕ್ಕಕ್ಕೆ ಬರುವುದಿಲ್ಲ. ಆಗ ಜನರಿಂದ ನೇರ ಆಯ್ಕೆ ಯಾಗಿರುವ ನಮ್ಮ ಲೋಕಸಭೆ ಮಾದರಿಯ  ಹೌಸ್ ಆಫ್ ರೆಪ್ರಸೆಂಟಿಟಿವ್ ನ ಸದಸ್ಯರು ಮತ ಹಾಕಿ ‌ಅಧ್ಯಕ್ಷ ರನ್ನು ಆಯ್ಕೆ ಮಾಡುತ್ತಾರೆ. ಉಪಾಧ್ಯಕ್ಷರನ್ನು ಹೊಸದಾಗಿ ಆಯ್ಕೆಯಾದ ಸೆನೆಟ್ ಮಾಡುತ್ತದೆ. ಅಮೆರಿಕ ಇತಿಹಾಸದಲ್ಲಿ ಒಮ್ಮೆ ಮಾತ್ರ 1824ರಲ್ಲಿ ಈ ರೀತಿ ಆಗಿತ್ತು.

    ಅಧಿಕೃತ ಫಲಿತಾಂಶ ಯಾವತ್ತು?

    ಡಿಸೆಂಬರ್ 14ರಂದು ಎಲೆಕ್ಟ್ರೋಲ್ ಕಾಲೇಜಿಗೆ ಆಯ್ಕೆಯಾಗಿರುವ  ಎಲೆಕ್ಟರ್ ಗಳು ಮತ ಹಾಕುತ್ತಾರೆ. ಜನವರಿ 6ರಂದು ಅಮೆರಿಕನ್ ಕಾಂಗ್ರೆಸ್ (ನಮ್ಮ ಸಂಸತ್ತಿನ ರೀತಿ) ಮಧ್ಯಾಹ್ನ 1 ಗಂಟೆಗೆ ಸೇರಿ ಎಲೆಕ್ಟ್ರಲ್ ಗಳ ಮತವನ್ನು ಲೆಕ್ಕ ಹಾಕಿ ವಿಜಯಿಯನ್ನು ಘೋಷಿಸುತ್ತದೆ.  2021 ರ ಜನವರಿ 20 ರಂದು ನೂತನ ಅಧ್ಯಕ್ಷರ ಪದಗ್ರಹಣ ಆಗುತ್ತದೆ.

    ಅಮೆರಿಕಾ ಚುನಾವಣೆ ಮತ್ತು ಫಲಿತಾಂಶ ಹೇಳುವುದೇನು?

    ಕಳೆದ  25 ವರ್ಷಗಳಲ್ಲಿ ಎಂದೂ ಕಾಣದಂತೆ  ಇಬ್ಭಾಗವಾಗಿರುವ ಅಮೆರಿಕಾದಲ್ಲಿ ನಿನ್ನೆ ಮತ ಚಲಾಯಿಸುವ ಪ್ರಕ್ರಿಯೆ ಕೊನೆಗೊಂಡಿದೆ. ಒಂದಿಡೀ ಶತಮಾನದಲ್ಲಿ ಅಮೆರಿಕಾ ಕಂಡರಿಯದಷ್ಟು ಪ್ರಜೆಗಳು ತಮ್ಮ ನಾಯಕನನ್ನು ಆರಿಸಲು ಮತಚಲಾಯಿಸಿ ದಾಖಲೆ ಸ್ಥಾಪಿಸಿದ್ದಾರೆ.

    ನಿನ್ನೆ ಅಂತಿಮ ದಿನದ ವೋಟಿಂಗ್ ನಡೆಯಿತಾದರೂ 100 ಮಿಲಿಯನ್ ಜನರು ಅಂತರ್ಜಾಲದ ಮೂಲಕ, ಪೋಸ್ಟ್ ಮೂಲಕ ಮುಂಚಿತವಾಗಿಯೇ ಮತ ಚಲಾಯಿಸಿಬಿಟ್ಟಿದ್ದರು.ಮಿಕ್ಕವರಷ್ಟೇ ನಿನ್ನೆ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ಬಂದಿದ್ದಾರೆ. ನಿನ್ನೆ ಬಹಳಷ್ಟು ರಾಜ್ಯಗಳಲ್ಲಿ ಇದ್ದ ಉತ್ತಮ ಹವಾಮಾನವೂ ಜನರ ಸಹಾಯಕ್ಕೆ ಬಂದಿತೆನ್ನಲಾಗಿದೆ.

    ಜನರ ನಂಬಿಕೆ ಮತ್ತು ಸಿದ್ದಾಂತಗಳು ಆಳವಾಗಿ ಬಿರುಕುಬಿಟ್ಟಿರುವ ಅಮೇರಿಕಾದಲ್ಲಿ ಸಾಮಾನ್ಯರು ತಮ್ಮ ತಮ್ಮ ಸಿದ್ಧಾಂತಗಳ ಪತನವಾಗುವುದನ್ನು ತಡೆಯಲು ಮತ ಚಲಾಯಿಸಿದ್ದಾರೆ. ಇತ್ತೀಚೆಗಿನ ರಾಜಕಾರಣದ ಹತಾಶೆಗಳು ಜನರಿಗೆ ತಮ್ಮ ಮತದ ಶಕ್ತಿಯ ಮೇಲೆ ದೇಶದ ಅತ್ಮದ ಉಳಿವು ನಿಂತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಲಕ್ಷಾಂತರ ಜನರ ಕೋವಿಡ್ ಸಾವು, ಜನಾಂಗೀಯ ದ್ವೇಷ, ವಲಸೆ ನೀತಿಗಳು, ಆರ್ಥಿಕ ಮತ್ತು ನೈತಿಕ ಭ್ರಷ್ಟತೆಗಳು ಅಮೆರಿಕಾ ಛಿದ್ರವಾಗಲು ಕಾರಣವಾಗಿವೆ. ಶತಮಾನವೊಂದರಲ್ಲಿ ಕಂಡರಿಯದಷ್ಟು ಪ್ರಮಾಣದಲ್ಲಿ ಈ ವರ್ಷ ಮತಚಲಾಯಿಸುವಂತೆ ಜನರನ್ನು ಪ್ರೇರೇಪಿಸಿವೆ.

    ತಮ್ಮ ನೆಲ ದೇವರುಗಳಿಂದ ಹರಸಲ್ಪಟ್ಟಿದೆ ಎನ್ನುವ ಅಮೆರಿಕಾದ ಭಾಗಗಳು ಕೂಡ ಇದೀಗ ಕೊರೋನಾ ಸಂಬಂಧಿತ ಸಾವುಗಳಿಂದ ಹೊಸ ಸ್ಮಶಾನಗಳನ್ನು ನಿರ್ಮಿಸಬೇಕಾಗಿದೆ. “ನಮ್ಮ ದೇಶವೀಗ ಶಾಪಗ್ರಸ್ಥ ಅಮೆರಿಕಾ ಆಗಿಬಿಟ್ಟಿದೆ “- ಎಂದು ಆಳುವವರಿಗೆ ಹಿಡಿ-ಹಿಡಿ ಶಾಪ ಹಾಕುವವರಿದ್ದಾರೆ. ಕೋವಿಡ್ ನಿರ್ಲಕ್ಷ್ಯ, ಜನಾಂಗೀಯ ತಾರತಮ್ಯ, ಪಾತಾಳ ಮುಟ್ಟಿರುವ ಆರ್ಥಿಕತೆ ಮತ್ತು ಹವಾಮಾನ ವೈಪರೀತ್ಯಗಳ ಪಾಲಿಸಿಗಳು, ಗರ್ಭಪಾತ, ವಲಸೆ ನೀತಿಗಳು ಹೀಗೆ ಹಲವು ಅಂಶಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಯ್ಕೆ ಆಗಿ ಬರದಿರುವಲ್ಲಿ ಕಾರಣಗಳಾಗಬಲ್ಲವು ಎಂಬ ವಿಚಾರ ಫಲಿತಾಂಶ ಬರುವ ಮುನ್ನಿನ ಸಮೀಕ್ಷೆಗಳಿಂದ ನಿಚ್ಚಳವಾಗಿವೆ. ಮುಂಚಿತವಾಗಿಯೇ ಮತಚಲಾಯಿಸಿದವರಲ್ಲಿ ಡೆಮೋಕ್ರಾಟ್ ಹಿಂಬಾಲಕರೇ ಅಧಿಕ ಎನ್ನಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಬಿಡೆನ್ ಅಧ್ಯಕ್ಷೀಯ ಓಟದಲ್ಲಿ ಮುಂದೆ ಇದ್ದಾರೆ. ಹೌಸ್ ನಲ್ಲಿ ರಿಪಬ್ಲಿಕ್ ನ್ನರು,ಸೆನೆಟ್ ನಲ್ಲಿ ಡೆಮಕ್ರಾಟಿಕರು ಮುಂದೆ ಇದ್ದಾರೆ.

    ಚುನಾವಣೆಯ ದೀರ್ಘಕಾಲದ ಚಡಪಡಿಕೆಗಳು, ಕಳೆದ ಕೆಲವು ದಿನಗಳ ಉದ್ವಿಗ್ನತೆಯ ಹಿಂದೆಯೇ ಇಡೀ ಅಮೇರಿಕಾ ಇದೀಗ ಆತಂಕದಲ್ಲಿದೆ. ಚುನಾವಣಾ ಫಲಿತಾಂಶಗಳು ಇಂದಿನಿಂದ ಹೊರಬೀಳುತ್ತ ಹೋಗುತ್ತವೆ. ಫಲಿತಾಂಶದ ನಂತರ ಹಿಂಸಾಚಾರ ನಡೆಯಬಹುದೆಂಬ ಭೀತಿಯಿಂದ ಅಂಗಡಿಗಳ ಕಿಟಕಿ, ಬಾಗಿಲುಗಳನ್ನು ಮಾಲೀಕರು ಭದ್ರಪಡಿಸಿಕೊಂಡಿದ್ದಾರೆ. ಗಾಜನ್ನು ಒಡೆದು ಲೂಟಿಮಾಡದಂತೆ ತಡೆಯಲು ಈಗಾಗಲೇ ಎಚ್ಚರಿಕೆ ತೆಗೆದುಕೊಂಡಿದ್ದಾರೆ.

    ಡೆಮೋಕ್ರಾಟ್ ಗಳು ಗೆದ್ದರೆ ಆ ಫಲಿತಾಂಶವನ್ನು ಸುಮಾರು 40 ಬಗೆಯ ಕಾನೂನಿನ ಅಡಚಣೆಗಳನ್ನು ತರುವ ಮೂಲಕ ವಿರೋಧಿಸುತ್ತೇನೆಂದು ಟ್ರಂಪ್  ಈಗಾಗಲೇ ಹೇಳಿಕೆ ನೀಡಿದ್ದಾರೆ. ಅವುಗಳಲ್ಲಿ ಪೋಸ್ಟ್ ನಲ್ಲಿ ಬಂದಿರುವ ಮತಗಳನ್ನು ’ಊರ್ಜಿತ ಕ್ರಮ’ ಅಲ್ಲವೆಂದು ವಿರೋಧಿಸುವ ನೀತಿಯೂ ಒಂದು. ಪೋಸ್ಟ್ ನಲ್ಲಿ ಮತ್ತು ಅಂತರ್ಜಾಲದ ಮತಗಳಲ್ಲಿ ಮೋಸ ನಡೆಯುತ್ತದೆ ಎಂದು ಚುನಾವಣೆಯ ಮುನ್ನಾ ದಿನಗಳಲ್ಲಿಯೂ ರಿಪಬ್ಲಿಕನ್ನರು ಕೋರ್ಟು ಕಟ್ಟೆಯನ್ನು ಹತ್ತಿ ಈ ವಿಧಾನದ ಮತಚಲಾವಣೆಗೆ ತಡೆತರಲು ಯತ್ನಿಸಿದ್ದರು. ಆದರೆ ಅವರ ಆಪಾದನೆಗಳಿಗೆ ಯಾವುದೇ ಸಾಕ್ಷಿ ಆಧಾರಗಳಿಲ್ಲದ ಕಾರಣ ನ್ಯಾಯಾಲಯ ತಡೆಯನ್ನು ಹಾಕಲು ಒಪ್ಪಲಿಲ್ಲ. ಅದರಲ್ಲೂ ಕೋವಿಡ್ ಸೋಂಕಿನ ಕಾರಣ ಈ ವಿಧಾನಗಳು ಎಲ್ಲರಿಗೂ ಒಳ್ಳೆಯದು ಮತ್ತು ನೂಕು ನುಗ್ಗಲನ್ನು ತಡೆಯಬಲ್ಲದು ಎಂದು ಹೇಳಿತು.

    ಹೀಗಾಗಿ ಚುನಾವಣೆಯ ನಂತರ ತನ್ನ ವಕೀಲರ ಮೂಲಕ ಮತ್ತೆ ಕೆಲವು ರಾಜ್ಯಗಳ ಫಲಿತಾಂಶವನ್ನು ತಮ್ಮ ಕಡೆ ತಿರುಗಿಸಿಕೊಳ್ಳುವ ಹಣಾಹಣಿ ನಡೆಸಿಯೇ ತೀರುವೆನೆಂದು ಟ್ರಂಪ್ ಹೇಳಿಕೆ ನೀಡಿರುವ ಕಾರಣ ಚುನಾವಣೆಯ ಒಟ್ಟು ಫಲಿತಾಂಶ ದೊರಕುವುದರಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ.ಹಿಂದೆಂದೂ ಆಗಿರದಷ್ಟು ಮತಗಳು ದಾಖಲಾಗಿರುವ ಕಾರಣ ಎಣಿಕೆಯಲ್ಲಿಯೂ ಅಲ್ಪ ವಿಳಂಬವಾಗಬಹುದು ಎನ್ನಲಾಗಿದೆ.

    2016 ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗಿಂತ ಟ್ರಂಪ್ ಸುಮಾರು ಮೂರು ಲಕ್ಷ ಮತಗಳಿಗೂ ಕಡಿಮೆ ಮತಗಳಿಸಿದ್ದರು. ಆದರೆ ಒಟ್ಟಾರೆ 270 ಕ್ಷೇತ್ರಗಳಿಂದ ಆಯ್ಕೆಯಾಗುವ ಮೂಲಕ ಅತಿ ಕಡಿಮೆ ವ್ಯತ್ಯಾಸದಲ್ಲಿ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದರು. ಈ ಬಾರಿ ಕೂಡ ಫ್ಲೋರಿಡ, ಪೆನಿನ್ಸಲ್ವೇನಿಯ ಮತ್ತು ಕ್ಯಾಲಿಫೋರ್ನಿಯ ಕ್ಷೇತ್ರಗಳಲ್ಲಿ ಗೆಲ್ಲುವುದು ಅಭ್ಯರ್ಥಿಗಳಿಗೆ ಅತ್ಯಂತ ಮುಖ್ಯವಾಗುತ್ತದೆ ಮತ್ತು ನಿರ್ಣಾಯಕ ಪಾತ್ರಗಳನ್ನೂ ವಹಿಸಲಿವೆ.

    ಉದಾಹರಣೆಗೆ ಫ್ಲೋರಿಡಾದಲ್ಲಿ ಬಿಡೆನ್ ಪಕ್ಷ ಗೆದ್ದಿತೆಂಬ ಫಲಿತಾಂಶ ಇಂದು ಬಂದರೆ ಬಿಡೆನ್ ಬಹುತೇಕ ಅಧ್ಯಕ್ಷ ಸ್ಥಾನಕ್ಕೆ ಗಟ್ಟಿಯಾದಂತೆ ಎಂದು ಹೇಳಲಾಗಿದೆ. ಇಲ್ಲದಿದ್ದಲ್ಲಿ ಇತರೆ ಕ್ಷೇತ್ರಗಳ ಫಲಿತಾಂಶಗಳು ಅತ್ಯಂತ ಮುಖ್ಯವಾಗುತ್ತವೆ. ಭಾರತೀಯ, ಆಫ್ರಿಕಾ, ಮೆಕ್ಸಿಕೋನ ಮೂಲದ ಬಹುತೇಕರು ಬಿಡೆನ್ ಪಕ್ಷದ ಪರವಾಗಿ ನಿಂತಿರುವ ಚುನಾವಣೆಯಿದು.ಇತ್ತೀಚಿನ ವರದಿಗಳಲ್ಲಿ ಫ್ಲೋರಿಡಾದಲ್ಲಿ ಹಣಾ ಹಣಿ ಹೋರಾಟ ನಡೆದಿದ್ದು ಟ್ರಂಪ್ ಅಲ್ಪ ಮುನ್ನಡೆಯಲ್ಲಿ ಇದ್ದಾರೆ.

    ಅಧ್ಯಕ್ಷ ಟ್ರಂಪ್ ನ ನಿಷ್ಠಾವಂತ ಹಿಂಬಾಲಕರು ಕೊರೋನಾ ಟಾಸ್ಕ್ ಫೋರ್ಸ್ ನ ಮುಖ್ಯಸ್ಥ ಆಂಥೊನಿ ಫಾಶಿಯನ್ನು ವಜಾಗೊಳಿಸಿರೆಂದು ಒತ್ತಾಯಿಸಿದ್ದಾರೆ. ಅದಕ್ಕೆ ಉತ್ತರವಾಗಿ ಅಧ್ಯಕ್ಷ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಅದನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಡಾ.ಆಂಥೊನಿ  ಫಾಶಿ ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದು ಕೊರೋನಾ ವೈರಸ್ಸನ್ನು ತಡೆಯಲು ಮಾಸ್ಕ್, ಸಾಮಾಜಿಕ ಅಂತರ ಮತ್ತು ಶುಚಿತ್ವ ಬೇಕೆಂದು ಒತ್ತಾಯಿಸಿದ ವ್ಯಕ್ತಿ. ಟ್ರಂಪ್ ಪಕ್ಷದ ಚುನಾವಣಾ ಪ್ರಚಾರ ಸಭೆಗಳಿಂದಲೇ 30,000 ಹೊಸ ಪ್ರಕರಣಗಳು ಮತ್ತು 700 ಕೋವಿಡ್ ಸಾವುಗಳು ಸಂಭವಿಸಿವೆಯೆಂದು ಸಮೀಕ್ಷೆಯೊಂದು ವರದಿ ಮಾಡಿದೆ.

    ಇದೀಗ ಕೋವಿಡ್ ಪ್ಯಾಂಡೆಮಿಕ್ ನ ಸುತ್ತಲೇ ನಡೆದ ನವೆಂಬರ್ 3 ರ ಅಮೆರಿಕಾದ  ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೋ ಬೈಡನ್ ಗೆದ್ದರೆ ಡೆಮೊಕ್ರಾಟ್ ಗಳಿಗಿಂತ ಹೆಚ್ಚಾಗಿ ವೈರಾಣುವೊಂದು ಆಳುವ ಪಕ್ಷವನ್ನು ಸೋಲಿಸಿತೆಂದೇ ಇತಿಹಾಸದಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.ಕೋವಿಡ್ ನಿಂದ ತಮ್ಮ ಜನರನ್ನು ಉಳಿಸಿಕೊಳ್ಳಲು ನಾನಾ ಕಷ್ಟ ನಷ್ಟಗಳನ್ನೆದುರಿಸಿದ ಎಲ್ಲ ದೇಶಗಳನ್ನು ಅವಹೇಳನ ಮಾಡಿ ವೈರಸ್ಸನ್ನು ಯಕಃಚಿತ್ ಎಂದು ನಿರ್ಲ್ಯಕ್ಷಿಸಿದ ಮತ್ತು ಉಪೇಕ್ಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದೇ ವೈರಸ್ಸಿನ ಕಾರಣ ಸೋಲನ್ನೊಪ್ಪಿಕೊಳ್ಳಬೇಕಾಗುವ ವಿಪರ್ಯಾಸವನ್ನೂ ಈ ಚುನಾವಣೆ ಬಿಂಬಿಸಬಲ್ಲದು. ಈ ಚುನಾವಣೆಯಲ್ಲಿ ನ್ಯಾಯವಾಗಿ ಯಾರೇ ಗೆದ್ದರೂ ಅದು ಅತ್ಯಂತ ದೊಡ್ಡ ದೇಶದ ಪ್ರಜಾಪ್ರಭುತ್ವದ ನಿಲುವಿನ ಗೆಲುವಾಗಿ ಪ್ರಪಂಚದ ಹಲವು ಆಗು ಹೋಗುಗಳನ್ನು ಬದಲಾಯಿಸಬಲ್ಲದು.

    ಸೋಮಣ್ಣನ ಬದುಕಿನ ನಾಟಕಕ್ಕೆ ತೆರೆ ; ಇಹಲೋಕ ತ್ಯಜಿಸಿದ ಎಚ್.ಜಿ.ಸೋಮಶೇಖರ ರಾವ್

    ಇಂದು ಮಧ್ಯಾಹ್ನ ನಿಧನರಾದ ವೆಂಕಮ್ಮ ಹಾಗೂ ಹರಿಹರ ಗುಂಡೂರಾಯರ ಪುತ್ರ ಎಚ್.ಜಿ.ಸೋಮಶೇಖರ ರಾವ್ (86)ಕನ್ನಡ ರಂಗಭೂಮಿ, ಸಾಹಿತ್ಯ ಹಾಗೂ ಸಿನಿಮಾರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

    ಲೆಕ್ಕ ಎಂದರೆ ಯಾವತ್ತೂ ಭಯ ಪಡುವ ವ್ಯಕ್ತಿ ಸೋಮಶೇಖರ ರಾವ್ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಲೆಕ್ಕದಲ್ಲಿ ಫೇಲು. ಆದರೆ ನಂತರ ಲೆಕ್ಕಗಳೇ ಬದುಕಾಗಿರುವ ಬ್ಯಾಂಕ್ ಸೇರಿದ್ದು ವಿಚಿತ್ರ. ಅದಕ್ಕೆ ಅವರು “ನನಗೆ ಲೆಕ್ಕ ಗೊತ್ತಿಲ್ಲ. ಆದರೆ ಲೆಕ್ಕಾಚಾರ ಗೊತ್ತು” ಎನ್ನುತ್ತಿದ್ದರು. ಅವರು ನೇರವಾಗಿ ಕೆನರಾ ಬ್ಯಾಂಕ್ ಆಫೀಸರ್ ಹುದ್ದೆಗೆ ಸೇರಿದ್ದರಿಂದ ನಿತ್ಯ ಲೆಕ್ಕ ಹಾಕುವ ಗೋಜು ಅವರಿಗೆ ಇರಲಿಲ್ಲ. ಲೆಕ್ಕ ಹಾಕುವವರನ್ನು ಮುನ್ನಡೆಸುವ ನಾಯಕತ್ವ ಅವರದಾಗಿತ್ತು.

    ಗಡಿಯಾರ ರಿಪೇರಿ

    ಸೋದರಮಾವನಿಂದ ಗಡಿಯಾರ ರಿಪೇರಿ ಮಾಡುವುದನ್ನು ಕಲಿತಿದ್ದರು. ಮೈಸೂರಿನಲ್ಲಿ ಗಡಿಯಾರ ರಿಪೇರಿ ಮಾಡುತ್ತಾ ಎಂ.ಎ. ಓದಿದರು. ಇವರು ವಾಸಿಸುತ್ತಿದ್ದ ಪಕ್ಕದ ಕೋಣೆಯಲ್ಲಿಯೇ ಪಿ.ಲಂಕೇಶ್ ಕೂಡಾ ವಾಸಿಸುತ್ತಿದ್ದರು. ಸಾಕಷ್ಟು ವರ್ಷಗಳ ಕಾಲ ಅವರು ಮೈಸೂರು ಅನಂತಸ್ವಾಮಿ ಅವರೊಂದಿಗೆ ಒಂದೇ ಕೋಣೆಯಲ್ಲಿದ್ದರು. ಅ.ರಾ.ಮಿತ್ರ, ಎಂ.ಎಚ್.ಕೃಷ್ಣಯ್ಯ, ಲಕ್ಷ್ಮೀನಾರಾಯಣ ಭಟ್ಟ ಎಲ್ಲರೂ ಇವರ ಜೊತೆಯಲ್ಲಿ ಓದಿದರು. ಅವರೆಲ್ಲರೂ ಕನ್ನಡ ಎಂ.ಎ. ಓದಿದರೆ ಸೋಮಶೇಖರರಾವ್ ಓದಿದ್ದು ಸಮಾಜಶಾಸ್ತ್ರ. ಆದರೆ ಎಲ್ಲರೂ ಕನ್ನಡದ ಕಟ್ಟಾಳುಗಳು.

    ಡಿ.ಎಲ್.ಎನ್., ತೀ.ನಂ.ಶ್ರೀ, ಪರಮೇಶ್ವರ ಭಟ್ಟರು ಮುಂತಾದವರಿಗೆ ಸಾಹಿತ್ಯದ ವಿದ್ಯಾರ್ಥಿಗಳಿಗಿಂತ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ತ.ಸು.ಶಾಮರಾಯರ ಮನೆಯಲ್ಲಿ ವಾರಾನ್ನ ಮಾಡುತ್ತಿದ್ದರು.
    ಇಂಟರ್ ಫೇಲಾದರೂ ಬಿ.ಎ ಹಾಗೂ ಎಂ.ಎ.ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದರು. ನಿರುದ್ಯೋಗದ ಬಾಧೆ ತಾಳಲಾಗದೆ ಮೈಸೂರ್ ಮೆಲೊಡಿ ಮೇಕರ್ಸ್ ಎಂಬ ಸಂಘ ಕಟ್ಟಿ ನಾಟಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

    “ಸೋಮಣ್ಣನ ಸ್ಟಾಕ್ ನಿಂದ” ಅವರ ಆತ್ಮಕಥೆ ಮತ್ತು ವೈಚಾರಿಕ ಲೇಖನಗಳ ಸಂಗ್ರಹ. ಅವರು ನಿಯಮಿತವಾಗಿ ಸಮಾಜದ ಆಗುಹೋಗುಗಳ ಕುರಿತು ಪತ್ರಿಕೆಗಳಿಗೆ ಓದುಗರ ಪತ್ರಗಳನ್ನೂ ಬರೆಯುತ್ತಿದ್ದರು.ನಟಿಸಿದ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಸೋದರ ದತ್ತಣ್ಣನಂತೆಯೇ ಪ್ರಬುದ್ಧ ಅಭಿನಯ ನೀಡುತ್ತಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕಾರರ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವ ತುಂಬಿದರು.

    ಹೃದಯ ಸಂಗಮ ಮೂಲಕ ಚಿತ್ರರಂಗ ಪ್ರವೇಶ

    ಇವರು ಕ್ಯಾಮರಾ ಎದುರಿಸಿದ ಮೊದಲ ಸಿನಿಮಾ ಹೃದಯ ಸಂಗಮ. ಟಿ.ಎಸ್.ರಂಗಾ ನಿರ್ದೇಶನದ ‘ಸಾವಿತ್ರಿ’ (1981) ಹೆಸರು ತಂದು ಕೊಟ್ಟ ಸಿನಿಮಾ. ಖ್ಯಾತ ನಟ ಅನಿಲ್ ಠಕ್ಕರ್ ಅವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಗಂಭೀರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯಪ್ರಧಾನ ಪಾತ್ರಗಳನ್ನು ನಿರ್ವಹಿಸಿದರು. ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾಯರು ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು.

    ಕೆನರಾ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಯಿತು. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂದು ನಮ್ಮನ್ನು ಅಗಲಿದ್ದಾರೆ. 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೂ ಭಾಜನರಾಗಿದ್ದರು.

    (ಚಿತ್ರ ಸೌಜನ್ಯ: ಪ್ರಗತಿ ಅಶ್ವತ್ಥ ನಾರಾಯಣ)

    ಮಣಿಪಾಲ್ ತೆಕ್ಕೆಗೆ ಕೊಲಂಬಿಯಾ ಏಷ್ಯಾ

    ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸಮೂಹವನ್ನು ರೂ. 2100 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಮಣಿಪಾಲ್ ಹಾಸ್ಪಿಟಲ್ಸ್ ಪ್ರಕಟಿಸಿದೆ. ಈ ಒಂದು ಪ್ರಕ್ರಿಯೆಯಿಂದಾಗಿ ಸಿಯಾಟೆಲ್ ಮೂಲದ ಕೊಲಂಬಿಯಾ ಏಷಿಯಾ ಫೆಸಿಫಿಕ್ ಸಂಸ್ಥೆ ಭಾರತದ ಆರೋಗ್ಯೋದ್ಯಮದಿಂದ ದೂರ ಸರಿದಂತಾಗಿದೆ. ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದ ನಂತರ ಎರಡೂ ಆಸ್ಪತ್ರೆಗಳ ರಿ ಬ್ರಾಂಡಿಂಗ್ ನಡೆಯಲಿದೆ.

    ಈ ವಿಷಯವನ್ನು ಪ್ರಕಟಿಸಿರುವ ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ ನ ಅಧ್ಯಕ್ಷ ರಂಜನ್ ಪೈ, ಕೊಲಂಬಿಯಾ ಏಷಿಯಾವನ್ನು ಮಣಿಪಾಲ ಗ್ರೂಪ್ ಗೆ ಸ್ವಾಗತಿಸುತ್ತಿರುವುದಾಗಿ ತಿಳಿಸಿದ್ದಾರೆ.

    2005ರಲ್ಲಿ ಹೆಬ್ಬಾಳದಲ್ಲಿ ಮೊದಲ ಬಾರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಕಾರ್ಯಾಚರಣೆ ಆರಂಭಿಸಿತು. ಪ್ರಸ್ತುತ ಬೆಂಗಳೂರು, ಮೈಸೂರು, ಕೊಲ್ಕತ್ತಾ, ಗುರುಗ್ರಾಮ್​, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ 11 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

    ಈ ಎರಡೂ ಸಮೂಹಗಳು ಒಟ್ಟು ಸೇರಿದಾಗ 15 ನಗರಗಳಲ್ಲಿ 27 ಆಸ್ಪತ್ರೆಗಳಾಗುತ್ತವೆ.7200 ಬೆಡ್ ಗಳು,4000ಕ್ಕೂ ಹೆಚ್ಚು ವೈದ್ಯರು ಮತ್ತು 10000ಕ್ಕೂ ಹೆಚ್ಚು ನೌಕರರು ಸೇರಿದಂತೆ ಆಗುತ್ತದೆ.

    error: Content is protected !!