27.8 C
Karnataka
Sunday, April 20, 2025
    Home Blog Page 14

    ವಿಶಾಲ್ ಕಾವಟೇಕರ್ ಮತ್ತು ಗೋಪಾಲ್ ಕಮ್ಮಾರ್ ಕಾಣುವ ಮಾತುಗಳು ಮತ್ತು ಒಡನಾಟ

    ಬಳಕೂರು ವಿ ಎಸ್ ನಾಯಕ

    ಕಲಾಪ್ರಕಾರಗಳಲ್ಲಿ ಚಿತ್ರಕಲೆ ಶಿಲ್ಪಕಲೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಲವಾರು ಜನರು ಒಂದೊಂದು ವಿಷಯವನ್ನು ಆರಿಸಿಕೊಂಡು ವಿಭಿನ್ನವಾದ ಕಲಾತ್ಮಕ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ತಾವು ಕಲಿತ ರಚಿಸಿದ ಅನುಭವಿಸಿದ ಹಲವಾರು ವಿಚಾರಗಳನ್ನು ತಾವು ಆರಿಸಿಕೊಂಡ ಕಲಾ ಮಾಧ್ಯಮದ ಮೂಲಕ ಬಿತ್ತರಿಸುತ್ತಾರೆ.

    ಇಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಶಿಲ್ಪ ಕಲಾವಿದರಾದ ವಿಶಾಲ್ ಕಾವ ಟೇಕರ್ ಮತ್ತು ಗೋಪಾಲ್ ಕಮ್ಮಾರ್ ರವರು ತಾವು ರಚಿಸಿರುವ ವಿಭಿನ್ನ ಶಿಲ್ಪಕಲಾಕೃತಿಗಳ ಗುಚ್ಛವನ್ನು ಏಕವ್ಯಕ್ತಿ ಕಲಾ ಪ್ರದರ್ಶನದ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸಲು ಹೊರಟಿದ್ದಾರೆ. ವಿಭಿನ್ನ ಕಲಾತ್ಮಕ ನೋಟಗಳನ್ನು ಒಳಗೊಂಡ ಶಿಲ್ಪಗಳು ವಿಭಿನ್ನ ಸಂದೇಶವನ್ನು ತರುವುದಲ್ಲದೆ ಎಲ್ಲರ ಮನಸ್ಸಿನಲ್ಲಿ ಸದಾಕಾಲ ನೆನಪಿಡುವಂತಹ ವಿಚಾರ ವಿನಿಮಯ ಮಾಡಲು ಹೊರಟಿರುವುದು ನಿಜವಾಗಿಯೂ ಶ್ಲಾಘನೀಯ.
    ಕಾಣುವ ಮಾತುಗಳು ಶಿಲ್ಪ ಕಲಾ ಪ್ರದರ್ಶನ

    ವಿಶಾಲ ಕಾವಟೇಕರ್

    ವಿಶಾಲ ಕಾವಟೇಕರ್ ಕನ್ನಡ ನಾಡು ಕಂಡ ಅದ್ಭುತ ಶಿಲ್ಪ ಕಲಾವಿದರಲ್ಲಿ ಒಬ್ಬರು. ಇವರು ಮೂಲತಃ ಶಿವಮೊಗ್ಗದವರು. ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಶಿಲ್ಪಕಲಾ ವಿಭಾಗದ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ತಂದೆ ಪ್ರಸಿದ್ಧ ಶಿಲ್ಪ ಕಲಾವಿದರಾದ ಶಿಲ್ಪಿ ನಾರಾಯಣರಾವ್. ಕೆ. ಇವರು ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿ. ವಿ. ಎ ಪದವಿಯನ್ನು ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ವಿ. ಎ. ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಅಗಸ್ಟ್ ತಿಂಗಳ 8ರಂದು ಆರಂಭವಾಗುವ ಏಕವ್ಯಕ್ತಿ ಕಲಾ ಪ್ರದರ್ಶನದಲ್ಲಿ ಕಾಣುವ ಮಾತುಗಳು ಎಂಬ ಶೀರ್ಷಿಕೆಯಡಿ ಶಿಲ್ಪ ಕಲಾ ಪ್ರದರ್ಶನವನ್ನು ಏರ್ಪಡಿಸುತ್ತಿರುವುದು ವಿಶೇಷ.

    ಶಿಲ್ಪ ಕಲಾ ಪ್ರದರ್ಶನದ ವಿಶೇಷತೆಯೆಂದರೆ ಮನುಷ್ಯನ ಮುಖಚರ್ಯೆ ಮಾತನಾಡದೆ ಶಬ್ದಗಳ ಹಂಗಿಲ್ಲದೆ ಹಲವಾರು ವಿಚಾರಗಳನ್ನು ಹೇಳಬಲ್ಲವು. ಅಭಿವ್ಯಕ್ತಿ ಎಂಬುದು ಒಂದು ನಿರ್ದಿಷ್ಟ ಕಾಲಕ್ಕೆ ಸೀಮಿತವಾದದ್ದಲ್ಲ ಅದು ಕಾಲಾತೀತವಾದ ವಿಷಯ. ಇಂತಹ ವಿಷಯವನ್ನು ತನ್ನ ಶಿಲ್ಪಕಲಾ ವಸ್ತುವನ್ನಾಗಿ ಮಾಡಿಕೊಂಡು ಹಲವಾರು ಶಿಲ್ಪಕಲಾಕೃತಿಗಳನ್ನು ಏಕವ್ಯಕ್ತಿ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿ ದೆ. ಇವರ ಈ ಕಲಾಪ್ರದರ್ಶನದಲ್ಲಿ ಒಟ್ಟು ಏಳು ಶಿಲ್ಪ ಗಳು ಮತ್ತು 10 ಚಿತ್ರಕಲೆ ಸಂಬಂಧಿಸಿದ ವಿಭಿನ್ನ ಕಲಾಕೃತಿಗಳು ಅನಾವರಣಗೊಳ್ಳಲಿದೆ. ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾಗ್ಯಾಲರಿ -1 ರಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.

    ಒಡನಾಟ ಶಿಲ್ಪಕಲಾ ಪ್ರದರ್ಶನ

    ಗೋಪಾಲ ಕಮ್ಮಾರ್

    ಗೋಪಾಲ್ ಕಮ್ಮಾರ್ ಕನ್ನಡ ನಾಡು ಕಂಡ ಅದ್ವಿತೀಯ ಶಿಲ್ಪ ಕಲಾವಿದ ಇವರ ಒಂದೊಂದು ಶಿಲ್ಪಗಳು ವಿಭಿನ್ನ ಸಂದೇಶದ ಜೊತೆಗೆ ವಿಶಿಷ್ಟ ಅನುಭವವನ್ನು ಸಾರಿ ಹೇಳುವಂತದ್ದು. ಎಂಥವರ ಮನಸ್ಸನ್ನು ಆಕರ್ಷಿಸುವ ಕಲಾತ್ಮಕವಾದ ವಿಭಿನ್ನ ಶಿಲ್ಪಗಳು ಕಲಾಸಕ್ತರನ್ನು ಬೇರೆ ಒಂದು ಲೋಕಕ್ಕೆ ಕೊಂಡೊಯ್ಯುತ್ತವೆ. ಇಂತಹ ಕಲಾವಿದರ ಶಿಲ್ಪ ಕಲಾ ಪ್ರದರ್ಶನ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ನಡೆಯುತ್ತಿರುವುದು ವಿಶೇಷ.

    ಗೋಪಾಲ ಕಮ್ಮಾರ್ ಅವರು ಬೆಳಗಾವಿಯ ಯರಗಟ್ಟಿ ಯವರು. ಈಗ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಶಿಲ್ಪಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಗಸ್ಟ್ 8 ರಿಂದ ಆರಂಭವಾಗುವ ಇವರ ಕಲಾ ಪ್ರದರ್ಶನ ಒಡನಾಟವು ನಿಜವಾಗಿಯೂ ಕೂಡ ವಿಭಿನ್ನ ಸಂದೇಶವನ್ನು ನೀಡುವುದರಲ್ಲಿ ಸಂದೇಹವಿಲ್ಲ. ಬದುಕಿನ ಜೊತೆಗೆ ಒಡನಾಟ ಎಂಬ ಸಂದೇಶವನ್ನು ಸಾರುವ ಇವರೇ ಶಿಲ್ಪಗಳ ಪ್ರದರ್ಶನ ವಿಸ್ಮಯಕಾರಿ ತಾಣಕ್ಕೆ ಕಲಾಸಕ್ತರನ್ನು ಕೊಂಡೊಯ್ಯುತ್ತದೆ. ಕಲಾವಿದನಾದವನು ತನ್ನ ಸುತ್ತಮುತ್ತಲಿನ ಆಗುಹೋಗುಗಳ ಜೊತೆಗಿನ ಒಡನಾಟದಿಂದ ಪ್ರೇರೇಪಣೆಗೊಂಡು ಹಲವಾರು ಶಿಲ್ಪಕಲಾಕೃತಿಗಳನ್ನು ಕಲಾಸಕ್ತರ ಮಡಿಲಿಗೆ ಅರ್ಪಿಸುತ್ತಾನೆ. ಇವರು ಕೂಡ ವಿಭಿನ್ನ ಶಿಲ್ಪಕಲಾಕೃತಿಗಳನ್ನು ಅಂದರೆ 16 ಶಿಲ್ಪಗಳು ಸೇರಿ ಒಂದು ಪ್ರತಿಷ್ಠಾಪನಾ ಕಲೆ ಮೂಲಕವಾಗಿ ಪ್ರದರ್ಶನ ಮಾಡುತ್ತಿದ್ದಾರೆ.

    ಒಟ್ಟಾರೆ ಇದರ ಸಂದೇಶವೆಂದರೆ ನಾವು ನಮ್ಮ ಜೀವನ ಸಾಗಿಸುವಾಗ ಎಡವಬಾರದು. ಹೊಟ್ಟೆಗಾಗಿ ನಾವು ಕೆಟ್ಟ ಕೆಲಸವನ್ನು ಮಾಡುವುದನ್ನು ಬಿಟ್ಟು ಸರಿಯಾದ ಮಾರ್ಗದಲ್ಲಿ ನಡೆದು ಚಿಂತನಾಶೀಲ ರಾದರೆ ನಮ್ಮ ಬದುಕು ಅರ್ಥಪೂರ್ಣ ಸಾರ್ಥಕವಾದ ಸಾಧನೆಯ ಉತ್ತುಂಗ ಎರಬಹು ದು ಎಂಬ ಸಂದೇಶ ಅಡಕವಾಗಿ ದೆ. ಇಂಥ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ತಾವೆಲ್ಲರೂ ಕಣ್ತುಂಬಿಕೊಳ್ಳಬೇಕಾದರೆ ಬೆಂಗಳೂರಿನಲ್ಲಿ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾಗ್ಯಾಲರಿ ಒಂದು ಮತ್ತು ಎರಡರಲ್ಲಿ ಬಂದು ವೀಕ್ಷಿಸಬಹುದು.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಸುಖ, ಶಾಂತಿ ಸಂಪತ್ತಿನ ಹಬ್ಬ – ವರಮಹಾಲಕ್ಷ್ಮಿ ವ್ರತ

    ಎಂ.ವಿ. ಶಂಕರಾನಂದ

    ಮುತ್ತೈದೆಯರು ತಮ್ಮ ಮನೆಯಲ್ಲಿ ಸುಖ, ಶಾಂತಿ, ಸಂಪತ್ತನ್ನು ಕರುಣಿಸು ಎಂದು ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸೋ ಹಬ್ಬವೇ ವರಮಹಾಲಕ್ಷ್ಮಿ ವ್ರತ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಹತ್ತಿರವಾದ ಎರಡನೇ ಶುಕ್ರವಾರದಂದು ಈ ವ್ರತವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು, ನವರಾತ್ರಿಯ ಶುಕ್ರವಾರದಂದು ಮಾಡುತ್ತಾರೆ.

    ಭವಿಷ್ಯೋತ್ತರ ಪುರಾಣದಲ್ಲಿ ಈ ವ್ರತದ ಪ್ರಸ್ತಾಪ ಬರುತ್ತದೆ. ಒಮ್ಮೆ ಕೈಲಾಸದಲ್ಲಿ ಪರಮೇಶ್ವರನು ವೈಭವದಿಂದ ಒಡ್ಡೋಲಗವನ್ನು ನಡೆಸುತ್ತಿದ್ದಾಗ ಪಾರ್ವತಿದೇವಿಯು ಭಕ್ತರ ಇಷ್ಟಾರ್ಥವನ್ನು ನೆರವೇರಿಸುವಂತಹ ಯಾವುದಾದರೂ ವ್ರತವನ್ನು ತಿಳಿಸುವಂತೆ ಕೇಳಿದಾಗ, ಪರಮೇಶ್ವರನು ಈ ವರಮಹಾಲಕ್ಷ್ಮಿ ವ್ರತವನ್ನೂ, ಅದಕ್ಕೆ ಸಂಬಂಧಿಸಿದ ಕಥೆಯನ್ನು ವಿವರಿಸಿ, ಇದನ್ನು ಆಚರಿಸುವಂತೆ ತಿಳಿಸಿದನಂತೆ. (ಆಚರಣೆಯ ವಿವರಗಳ ಬಗ್ಗೆ ಈ ವಿಡಿಯೋ ನೋಡಿ)

    ವ್ರತ ಕಥೆ

    ಈ ವ್ರತಕ್ಕೆ ಸಂಬಧಿಸಿದ ಕಥೆಯೇನೆಂದರೆ: ಹಿಂದೆ ವಿದರ್ಭ ದೇಶದಲ್ಲಿ ಕುಂಡಿನಿ ಎಂಬ ಪಟ್ಟಣವಿತ್ತು. ಅಲ್ಲಿ ಚಾರುಮತಿ ಎಂಬ ಒಬ್ಬ ಬ್ರಾಹ್ಮಣ ಸ್ತ್ರೀಯಿದ್ದಳು. ಆಕೆ ಪತಿವ್ರತೆ, ತುಂಬಾ ಬಡವಳು. ಅಷ್ಟು ದಾರಿದ್ರಾವಸ್ಥೆಯಲ್ಲಿದ್ದರೂ ಚಾರುಮತಿ ಪತಿಭಕ್ತಿಯುಕ್ತಳಾಗಿ, ತನ್ನ ದೊಡ್ಡ ಸಂಸಾರವನ್ನು ಗೌರವಯುತವಾಗಿ ಸಾಗಿಸುತ್ತಾ, ನಿರಂತರವೂ ಲಕ್ಷ್ಮಿದೇವಿಯ ಧ್ಯಾನ, ಪೂಜಾ ಪಾರಾಯಣಳಾಗಿದ್ದಳು. ಅವಳ ಭಕ್ತಿಗೆ ಮೆಚ್ಚಿ ಒಂದು ದಿನ ರಾತ್ರಿ ಕನಸಿನಲ್ಲಿ ಲಕ್ಷ್ಮಿಯು ಕಾಣಿಸಿಕೊಂಡು ಹೀಗೆ ಹೇಳಿದಳು; ಚಾರುಮತಿ ನಿನ್ನ ಭಕ್ತಿಗೆ ಮೆಚ್ಚಿದೆನು. ನಾನೇ ವರಮಹಾಲಕ್ಷ್ಮಿ. ನೀನು ಶ್ರಾವಣ ಶುಕ್ಲ ಹುಣ್ಣಿಮೆಯ ಸಮೀಪದ ಶುಕ್ರವಾರದಲ್ಲಿ ನನ್ನನ್ನು ಕಲ್ಪೋಕ್ತ ಪ್ರಕಾರವಾಗಿ ಪೂಜಿಸು. ನಿನ್ನ ದಾರಿದ್ರ್ಯವು ಪರಿಹಾರವಾಗುವುದು.’’ ಎಂದು ಹೇಳಿ ಮಾಯವಾದಳು.

    ಚಾರುಮತಿಯು ದೇವಿಯ ಆಜ್ಷೆಯಂತೆ ವರಮಹಾಲಕ್ಷ್ಮಿ ವ್ರತವನ್ನು ವಿಧ್ಯುಕ್ತವಾಗಿ ಮಾಡಿ ಸಕಲ ಸೌಭಾಗ್ಯಗಳನ್ನೂ ಪಡೆದಳು. ಆದ್ದರಿಂದ ಇಂಥ ಉತ್ತಮೋತ್ತಮವಾದ ವ್ರತವನ್ನು ಯಾರು ಮಾಡುವರೋ ಅವರು ಸಕಲ ಸಂಪತ್ತನ್ನು ಹೊಂದುತ್ತಾರೆ’’ ಎಂದು ಪರಮೇಶ್ವರನು ಪಾರ್ವತೀದೇವಿಗೆ ಹೇಳಿದನೆಂದು ಭವಿಷ್ಯೋತ್ತರಪುರಾಣ ತಿಳಿಸುತ್ತದೆ.

    ದಕ್ಷಿಣ ಭಾರತದಲ್ಲಿ ಆಚರಣೆ

    ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಈ ಹಬ್ಬವನ್ನು ತುಂಬಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪೂಜೆಯಲ್ಲಿ ರಂಗೋಲಿ, ಹಸಿರು ತಳಿರು ತೋರಣ, 5 ರೀತಿಯ ಹಣ್ಣುಗಳು, 16 ಜಾತಿಯ ಪತ್ರೆಗಳು, ಹಾಗೂ ಲಕ್ಷ್ಮಿಗೆ ಪ್ರಿಯವಾದಂತಹ ಕಮಲದ ಹೂ, ಸೇವಂತಿಗೆ, ಮಲ್ಲಿಗೆ ಹೂವನ್ನು ಅರ್ಪಿಸುತ್ತಾರೆ.

    ಈ ವ್ರತವನ್ನು ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವ ೫ ಗಂಟೆಗೆ ಮಾಡಿದರೆ ಶ್ರೇಷ್ಠವೆನ್ನುತ್ತಾರೆ. ನಂತರ ಬೆಳಗಿನ ಸಮಯ ೭-೩೦ಕ್ಕೆ ಅಥವಾ ಮಧ್ಯಾಹ್ನ ಅಭಿಜಿನ್ ಮುಹೂರ್ತವಾದ ೧೨ಕ್ಕೆ ಇಲ್ಲವೇ ಸಂಜೆ ಗೋಧೂಳಿ ಮುಹೂರ್ತವಾದ ೫-೬ಕ್ಕೆ ಮಾಡಬಹುದು ಎಂದು ಹೇಳುತ್ತಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಎದ್ದು ಮಂಗಳ ಸ್ನಾನ ಮಾಡಿ, ನಂತರ ವ್ರತ ಮಾಡುವವರು ಪೂಜೆ ಮಾಡುವವರು ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ, ಅಷ್ಟದಳ ಪದ್ಮದ ರಂಗೋಲಿ ಹಾಕುತ್ತಾರೆ. ಇದರ ಮೇಲೆ ಕಳಸ ಸ್ಥಾಪಿಸುತ್ತಾರೆ.

    ಉಪವಾಸವಿದ್ದು, ಮನದಲ್ಲೇ ಸಂಕಲ್ಪ ಮಾಡಿ, ಕಲಶದಲ್ಲಿ ಅಕ್ಕಿಯನ್ನು ಅಥವಾ ನೀರನ್ನು ತುಂಬಿಸಿ, ಅದರಲ್ಲಿ ಆಲದ ಚಿಗುರನ್ನು ಹಾಕಿ, ಜೊತೆಗೆ ಅರಿಸಿನದ ಕೊಂಬು, ಅಡಿಕೆ, ನಾಣ್ಯ ಇಟ್ಟು, ಅದರ ಮೇಲೆ ಅರಿಸಿನ, ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಚಿನ್ನ, ಬೆಳ್ಳಿಯಿಂದ ಮಾಡಿದ ಮುಖವಾಡ ತೊಡಿಸಿ ಅಥವಾ ತೆಂಗಿನ ಕಾಯಿಗೆ ಹಳದಿ ಹಿಟ್ಟಿನಿಂದ ಅಥವಾ ಅರಿಸಿನದಿಂದ ಮೂಗು, ಕಣ್ಣು, ಕಿವಿ ಮಾಡಿ, ಒಡವೆ ಸೀರೆ ಉಡಿಸಿ, ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಕಳಶದ ಬಾಯಿಗೆ ವೀಳ್ಯದ ಎಲೆ ಅಥವಾ ಮಾವಿನ ಎಲೆಯನ್ನು ಇಡುತ್ತಾರೆ. ಅಲ್ಲದೆ ಈ ಪೂಜೆಯಲ್ಲಿ ಕಳಸಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದ್ದು, ಅದನ್ನು ಲಕ್ಷ್ಮಿ ಕಳಶ ಎಂದೇ ಕರೆಯಲಾಗುತ್ತದೆ.

    ವಿವಿಧ ರೀತಿಯ ಬಾದಾಮಿ, ಖರ್ಜೂರ, ಒಣದ್ರಾಕ್ಷಿ, ಕಲ್ಲುಸಕ್ಕರೆ, ಹಣ್ಣು ಹಂಪಲುಗಳನ್ನು ದೇವರ ಮುಂದಿರಿಸುತ್ತಾರೆ. ಗೋಧಿ ಅಥವಾ ಅಕ್ಕಿ ಹಿಟ್ಟಿನಲ್ಲಿ ಮಾಡಿದ ಕಡುಬುಗಳನ್ನು ನಿವೇದಿಸುತ್ತಾರೆ. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ನೀರಿನಲ್ಲಿ ನೆನಸಿ, ಅರಿಸಿನ ಹಚ್ಚಿ, ದೇವಿಯ ಪಕ್ಕದಲ್ಲಿರಿಸುತ್ತಾರೆ. ದೇವಿಯ ಮೂರ್ತಿಗೆ ಅರಿಸಿನ ಕುಂಕುಮ ಹೂ, ಪತ್ರೆಗಳಿಂದ ಪೂಜಿಸುತ್ತಾರೆ. ನಂತರ ಆ ಹನ್ನೆರಡು ದಾರಗಳಿಗೆ,ರಮೆ, ಸರ್ವಮಂಗಳೆ, ಕಮಲವಾಸಿನಿ, ಮನ್ಮಥ ಜನನಿ, ವಿಷ್ಣು ವಲ್ಲಭೆ, ಕ್ಷೀರಾಬ್ಧಿ ಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಪೆ ಮತ್ತು ವರಲಕ್ಷ್ಮಿ’’ ಎಂಬ 12 ಹೆಸರುಗಳಿಂದ ಉಚ್ಛರಿಸಿ, ಕುಂಕುಮ ಹೂ, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವುದು ಈ ವ್ರತದ ವಿಶೇಷ.

    ಈ ದಾರಕ್ಕಾಗಿ ವಿಶೇಷ ನೈವೇದ್ಯವಾಗಿ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀ ಸೂಕ್ತವನ್ನು ಪಠಿಸುವುದೂ ಒಳ್ಳೆಯದು ಎನ್ನುತ್ತಾರೆ. ಪೂಜೆಯ ಬಳಿಕ ಮುತ್ತೈದೆಯರು, ದಾರಿದ್ರ್ಯ ಸಾಗರೇ ಮಗ್ನಾ ಭೀತಾಹಂ ಭವಭೀತಿತಃ, ದೋರಂ ಗೃಹ್ಣಾಮಿ ಕಮಲೇ ಮಮಾಭೀಷ್ಟ ಪ್ರದಾಭವ’’ ಎಂಬ ಶ್ಲೋಕವನ್ನು ಹೇಳುತ್ತಾ ಆ ದಾರಗಳಿಗೆ ಹೂಗಳನ್ನು ಕಟ್ಟಿ, “ದ್ವಾದಶ ಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿಃ, ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ’’ ಎಂಬ ಶ್ಲೋಕವನ್ನು ಹೇಳುತ್ತಾ ಅವನ್ನು ಹಿರಿಯರಿಂದ ಬಲಗೈಗೆ ಕಟ್ಟಿಸಿಕೊಂಡು ಆಶೀರ್ವಾದ ಪಡೆದು, ದಕ್ಷಿಣೆಯ ಜೊತೆಗೆ ಅರಿಸಿನ, ಕುಂಕುಮವನ್ನು ನೀಡುವುದು ವಾಡಿಕೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    KEA ತೀರ್ಮಾನಕ್ಕೆ ಸರ್ಕಾರ ಬದ್ಧ24 ಸಾವಿರ ವಿದ್ಯಾರ್ಥಿಗಳ ಮಾತು ಕೇಳಿದರೆ ಮೂರು ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ: ಅಶ್ವತ್ಥನಾರಾಯಣ

    BENGALURU AUG 2.

    2021-22ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿ ಈ ವರ್ಷವೂ ಪುನಃ ಸಿಇಟಿ ಬರೆದಿರುವ 24 ಸಾವಿರ ವಿದ್ಯಾರ್ಥಿಗಳಿಗೆ ಪಿಯುಸಿ ಅಂಕಗಳನ್ನು ಪರಿಗಣಿಸುವುದು ಸಾಧ್ಯವಿಲ್ಲ. ಈ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.

    ಈ 24,000 ವಿದ್ಯಾರ್ಥಿಗಳಿಗೆ ಈಗ ಪಿಯುಸಿ ಅಂಕಗಳನ್ನು ಪರಿಗಣಿಸಿ, ರಾಂಕಿಂಗ್ ಕೊಟ್ಟರೆ ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇವರಲ್ಲಿ ಒಂದುವರೆ ಲಕ್ಷ ವಿದ್ಯಾರ್ಥಿಗಳು ಹೋದ ವರ್ಷವೇ ಸಿಇಟಿ ಬರೆದಿರುವವರು ಹಾಗೂ ಈ ವರ್ಷದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.

    ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ‌ ಮಹೇಶ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಇದಲ್ಲದೆ, ಕಳೆದ ವರ್ಷದ ಐಸಿಎಸ್ಇ ಪಠ್ಯಕ್ರಮದ 64 ಮತ್ತು ಸಿಬಿಎಸ್ಇ ಪಠ್ಯಕ್ರಮದ 600 ವಿದ್ಯಾರ್ಥಿಗಳು ಕೂಡ ಈ ಬಾರಿ ಸಿಇಟಿ ಬರೆದಿದ್ದು ಅವರದ್ದನ್ನು ಕೂಡ ಕೇವಲ ಸಿಇಟಿ ಅಂಕದ ಮೇಲೆ ರಾಂಕಿಂಗ್ ಕೊಡಲಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ ಎಂದು ಅವರು ನುಡಿದರು.

    ಈ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸುದೀರ್ಘ ವಾಗಿ ಚರ್ಚಿಸಲಾಯಿತು. ಏನೇ ಮಾಡಿದರೆ ಇತರ ದೊಡ್ಡ ಸಂಖ್ಯೆಯ ‌ಹಾಗೂ ಎರಡೂ ಪರೀಕ್ಷೆಗಳನ್ನು ಬರೆದವರಿಗೆ‌ ಅನ್ಯಾಯ ಆಗುತ್ತದೆ. ಅವರ ರಾಂಕಿಂಗ್ ನಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹೀಗಾಗಿ ಕೆಇಎ ತೆಗೆದುಕೊಂಡು ನಿಲುವುದು ಸರಿ‌ ಇದೆ ಎನ್ನುವುದರ ತೀರ್ಮಾನಕ್ಕೆ ಬರಲಾಯಿತು ಎಂದರು.

    ಈ‌ ವಿಷಯ ವನ್ನು ಮುಖ್ಯ ಮಂತ್ರಿ ಬಸವರಾಜ‌ ಬೊಮ್ಮಾಯಿ ಅವರ‌ ಗಮನಕ್ಕೂ ತರಲಾಗಿದೆ ಎಂದು ಸಚಿವರು ವಿವರಿಸಿದರು.

    2021-22 ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಆಗಿರಲಿಲ್ಲ. ಹೀಗಾಗಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ನೀಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

    ನನ್ನ ಪ್ರಕಾರ ಈ‌ 24 ಸಾವಿರ ವಿದ್ಯಾರ್ಥಿಗಳಿಗೂ ವಿವಿಧ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ.
    ಇವರಿಗೆಲ್ಲ ಈಗಾಗಲೆ ಒಮ್ಮೆ ಅವಕಾಶ ನೀಡಲಾಗಿದೆ ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಿದರು.

    ಸರ್ವ ಹಬ್ಬಗಳ ಸಂಯೋಗ ಮಾಸ ಶ್ರಾವಣ

    ಎಂ.ವಿ. ಶಂಕರಾನಂದ

    ಕಾರ ಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹಬ್ಬಗಳ ಕರಕೊಂಡು ಹೋಯ್ತು-ಎಂಬ ಹಿರಿಯರ ನುಡಿ ಎಷ್ಟು ಸತ್ಯ. ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆ ಮೋಡಗಳ ಮೂಲಕ ಬರುವ ಮಾಸವೇ ಇಂದು ಶುರು ಆಗಿರುವ ಶ್ರಾವಣ.ಇದನ್ನು ವರಕವಿ ದ.ರಾ.ಬೇಂದ್ರೆಯವರು ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ’’ ಎಂದು ಶ್ರಾವಣದ ವೈಭವವನ್ನು ಕುರಿತು ಹಾಡಿ ಹೊಗಳಿದ್ದಾರೆ.

    ಶ್ರಾವಣ ಬಂತೆಂದರೆ ಎಲ್ಲಿಲ್ಲದ ಸಂಭ್ರಮ ಸಡಗರ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನದ ಐದನೇ ತಿಂಗಳಲ್ಲಿ ಬರುವ ಈ ಶ್ರಾವಣ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ, ಪುಣ್ಯಾರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ. ಭೋಜನ ಪ್ರಿಯರಿಗಂತೂ ನಿತ್ಯವೂ ಹಬ್ಬದ ಔತಣವೇ.

    `ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು, ಒಳ್ಳೆಯದಾಗುತ್ತದೆ’ ಎಂಬ ರೂಢಿಯುಂಟು. ಅದರಲ್ಲೂ ಈ ಮಾಸ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅಚ್ಚುಮೆಚ್ಚು. ಆಷಾಢ ಮಾಸದಲ್ಲಿ ಮಂದಗತಿಯಲ್ಲಿದ್ದ ವ್ಯಾಪಾರ, ವ್ಯವಹಾರಗಳು ಶ್ರಾವಣ ಮಾಸದಲ್ಲಿ ಚಿಗುರುವುದರಿಂದ ಈ ಮಾಸವೆಂದರೆ ಹಣ್ಣು, ಹೂ, ತರಕಾರಿ ವ್ಯಾಪಾರಿಗಳಿಗೆ ಮತ್ತು ಪುರೋಹಿತರಿಗೆ ಒಂದು ರೀತಿಯಲ್ಲಿ ಸಂತೋಷವೋ ಸಂತೋಷ.
    ಶ್ರಾವಣವು ಆಷಾಢ ಮೋಡದ ಮಬ್ಬಿನ ವಾತಾವರಣವನ್ನು ಹೋಗಲಾಡಿಸಿ, ಹಬ್ಬ ಹರಿದಿನಗಳ ಬೆಳಕಿನ ಹೊನಲನ್ನು ಹರಿಸುತ್ತದೆ. ಈ ಮಾಸ ಪೂರ್ತಿ ಮನೆಯ ಮುಂಬಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಮುತ್ತೈದೆಯರು ಮಂಗಳರೂಪಿಣಿಯರಾಗಿ ಕಂಗೊಳಿಸುತ್ತಾ ಹಬ್ಬವನ್ನು ಶ್ರದ್ಧೆ, ಭಕ್ತಿ, ಉತ್ಸಾಹದಿಂದ ಆಚರಿಸುತ್ತಾರೆ.

    ಈ ಮಾಸದಲ್ಲಿ ಬರುವಷ್ಟು ಹಬ್ಬಗಳು ಮತ್ತು ವ್ರತಗಳು ಬೇರೆ ಯಾವ ಮಾಸದಲ್ಲಿಯೂ ಬರುವುದಿಲ್ಲ. ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸವಿದು. ಆಷಾಢದಲ್ಲಿ ಸಂಪ್ರದಾಯದ ಪ್ರಕಾರ ದೂರವಾಗಿರುವ ದಂಪತಿಗಳು ಶ್ರಾವಣದಲ್ಲಿ ಒಂದಾಗುತ್ತಾರೆ. ಅತ್ತೆ-ಸೊಸೆ, ಮಾವ-ಅಳಿಯ ಸೇರುವ ಮಾಸವಿದು. ಆದ್ದರಿಂದಲೇ ಈ ಮಾಸವನ್ನು ಹಬ್ಬಗಳ ಮಾಸ ಎನ್ನುತ್ತಾರೆ.

    ಗುಡುಗು, ಮಿಂಚು, ಮೇಘಾವಳಿಗಳಿಂದ ಕೂಡಿದ ವರ್ಷಧಾರೆಯೊಂದಿಗೆ ಆರಂಭವಾಗಿ ಜೀವರಾಶಿಗಳ ಜೀವನ ಚೈತನ್ಯವಾಗಿರುವ ಈ ಶ್ರಾವಣವನ್ನು ನಾವು ಮಂಗಳ ಗೌರಿಯ ಪೂಜೆಯೊಂದಿಗೆ ಸ್ವಾಗತಿಸಿದರೆ, ಭಾರತದ ವಿವಿಧ ಪ್ರದೇಶಗಳ ಜನರು ಇದನ್ನು ಆಯಾ ಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ. ಹಿಮಾಚಲ ಪ್ರದೇಶದವರು ಕಾಳಿಕಾಮಾತೆಯನ್ನು ಪೂಜಿಸುವ ಮೂಲಕ ದಖರೈವ (ಹರಿಯಾಲಿ ತ್ಯೋಹಾರ್) ಎಂಬ ಹೆಸರಿನಿಂದ ಆಚರಿಸಿದರೆ, ಪಂಜಾಬಿಗಳು ತಿಯಾನ್ ಬಾಗಿ ಎಂದೂ, ಉತ್ತರಪ್ರದೇಶದಲ್ಲಿ ಸಾವನ್, ಜಮ್ಮು ಕಾಶ್ಮೀರದಲ್ಲಿ ರುಥಾ ನೃತ್ಯವನ್ನು ಮಾಡುವುದರ ಮೂಲಕ ಶ್ರಾವಣವನ್ನು ಸ್ವಾಗತಿಸಿ, ಆಚರಿಸುತ್ತಾರೆ. (ಶ್ರಾವಣ ಮಾಸದ ವಿಶೇಷತೆಗಳ ಬಗ್ಗೆ ಈ ವಿಡಿಯೋ ನೋಡಿ)

    ಶ್ರಾವಣ ಮಾಸದಲ್ಲಿ ಬರುವ ಹಬ್ಬ, ವ್ರತಗಳೆಂದರೆ; ಮಂಗಳ ಗೌರಿ ವ್ರತ, ನಾಗ ಚತುರ್ಥಿ, ನಾಗ ಪಂಚಮಿ/ಬಸವ ಪಂಚಮಿ, ಶುಕ್ರಗೌರಿ ವ್ರತ, ವೈಷ್ಣವ ಶ್ರಾವಣ ಶನಿವಾರ ವ್ರತ, ಅಂಗಾರಕ ಜಯಂತಿ, ಶ್ರೀ ವರಮಹಾಲಕ್ಷ್ಮಿ ವ್ರತ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಗಾಯತ್ರಿ ಆರಾಧನೆ, ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ, ನೂಲು ಹುಣ್ಣಿಮೆ, ಋಗ್/ಯಜುರ್ ಉಪಾಕರ್ಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಶಿರಿಯಾಳ ಷಷ್ಠಿ… ಹೀಗೆ ಸಾಕಷ್ಟು ಹಬ್ಬಗಳು ಆಚರಿಸಲ್ಪಡುವುವು.

    ಶ್ರಾವಣ ಮಾಸದಲ್ಲಿ ಹೆಂಗಸರಿಗಂತೂ ಬಿಡುವಿಲ್ಲದಂತೆ ಕೆಲಸವಿರುತ್ತದೆ. ಆಷಾಢದ ಮಳೆಗೆ ಹೆದರಿ ಬೀರುವನ್ನು ಸೇರಿದ್ದ ಸೀರೆಗಳು, ಒಡವೆಗಳು ಶ್ರಾವಣ ಶುರುವಾದ ಕೂಡಲೇ ಒಂದೊಂದಾಗಿ ಹೊರಬಂದು ಹಬ್ಬ-ಹರಿದಿನ, ಶುಭಕಾರ್ಯ ಸಮಾರಂಭಗಳಲ್ಲಿ ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಸಕಲರಿಗೂ ಸುಖ ತರುವ ಶ್ರಾವಣದಲ್ಲಿ ಹಬ್ಬಗಳ ಸುಗ್ಗಿ ಎಂದು ಹಿಗ್ಗಿದರೂ ಜೇಬಿಗೆ ಸದಾ ಖರ್ಚು. ಹಾಗಾಗಿ ಹಬ್ಬಗಳ ಸುಗ್ಗಿಯ ಹೊತ್ತು ಖರ್ಚುಗಳ ಮಗ್ಗಿಯನ್ನು ಮರೆಯುವುದೇ ಒಳ್ಳೆಯದು.

    ಮೂರು ತಿಂಗಳು ಮಳೆಗಾಲದಲ್ಲಿ ಬೋರ್ಗರೆದು ಮೊರೆವ ಸಮುದ್ರ ಶ್ರಾವಣ ಹುಣ್ಣಿಮೆಯಂದು ಶಾಂತವಾಗುತ್ತದೆ. ಕರಾವಳಿಯಲ್ಲಿ ಜಾತಿಬೇಧವಿಲ್ಲದೆ ಜನ ಕಡಲಿಗೆ ಹಾಲೆರೆದು ಸಮುದ್ರ ದೇವತೆಯನ್ನು ಪೂಜೆ ಮಾಡುತ್ತಾರೆ. ಮಹಾರಾಷ್ಟ್ರೀಯರು ಆ ದಿನವನ್ನು ನಾರಳ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಪಾರಸೀಕರು ಈ ಹುಣ್ಣಿಮೆಯ ದಿನವನ್ನು ತಮ್ಮ ಹೊಸ ವರ್ಷವಾಗಿ ಪತೇತಿ ಎಂಬ ಹೆಸರಿನಿಂದ ಆಚರಿಸುತ್ತಾರೆ.

    ದೇಶಾದ್ಯಂತ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಹಬ್ಬದಲ್ಲಿ ದೇವರ ಪ್ರಾರ್ಥನೆ ಮುಖ್ಯವಾದರೂ, ಪತಿ, ಒಡಹುಟ್ಟಿದವರು, ಗೋವು, ನಾಗ, ಗರುಡ, ಋಷಿಗಳು, ಗ್ರಹಗಳು, ಶಕ್ತಿದೇವತೆ, ಮಹಾಲಕ್ಷ್ಮಿ ನವವಿವಾಹಿತರಿಗೆ, ನವ ವಟುಗಳಿಗೆ -ಹೀಗೆ ಎಲ್ಲರಿಗೂ ಒಳ್ಳೇಯದಾಗಲಿ ಎಂದು ವಿವಿಧ ರೀತಿಯಲ್ಲಿ ಆಚರಿಸುವ ಹಬ್ಬಗಳುಂಟು. ಆದ್ದರಿಂದಲೇ ಹೇಳುವುದು ಶ್ರಾವಣಮಾಸ ಎಲ್ಲರಿಗೂ ಪ್ರಿಯವಾದ ಮಾಸ!

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಶ್ರಾವಣ ಮಾಸದ ಮಂಗಳಗೌರಿ ವ್ರತ

    ಎಂ.ವಿ.ಶಂಕರಾನಂದ

    ಶ್ರಾವಣ ಮಾಸದಲ್ಲಿ ದೇವಿ ಪಾರ್ವತಿಯ ಕೃಪೆ ನಮಗೆ ದೊರೆಯಲಿ ಎಂದು ಮುತ್ತೈದೆಯರು ಮಂಗಳಗೌರಿ ಪೂಜೆಯನ್ನು ಮಾಡುವ ವ್ರತವೇ ಮಂಗಳಗೌರಿ ವ್ರತ. ಈ ವ್ರತವನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಈ ವ್ರತವನ್ನು ಶ್ರಾವಣ ಮಾಸದ ಮೊದಲನೇ ಮಂಗಳವಾರದಿಂದ ಕೊನೆಯ ಮಂಗಳವಾರದವರೆಗೆ ಆಚರಿಸಲಾಗುತ್ತದೆ.

    ಈ ಸಮಯದಲ್ಲಿ ಗೌರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುತ್ತೈದೆಯರು ಸಾಂಪ್ರದಾಯಕವಾಗಿ ಅಲಂಕರಿಸಿಕೊಂಡು ಕೈಗೆ ಬಳೆ, ತಲೆಗೆ ಹೂ ಮುಡಿದಿರುತ್ತಾರೆ. ಇದರರ್ಥ ನಮಗೆ ಹೀಗೆ ಕೊನೆಯವರೆಗೂ ಮುತ್ತೈದೆ ಭಾಗ್ಯ ಕರುಣಿಸು ಎಂಬುದಾಗಿದೆ. ಈ ಸಮಯದಲ್ಲಿ ಮನೆಗೆ, ಮನೆಯವರಿಗೆ ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸು, ಗಂಡನೊಂದಿಗೆ ಸಂತೋಷವಾಗಿ ಬಾಳುವಂತೆ ಮಾಡು ಎಂದು ಬೇಡಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಬರೀ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ.

    ಈ ವ್ರತವನ್ನು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮತ್ತು ಮದುವೆಯಾಗಿ ಇನ್ನೂ ಐದು ವರ್ಷ ತುಂಬಿರದ ಹೆಣ್ಣು ಮಕ್ಕಳು ಸೇರಿ ಮಾಡಲಾಗುವುದು. ವ್ರತವನ್ನು ಮಂಗಳವಾರ ಮಾಡಲಾಗದಿದ್ದರೆ ಶುಕ್ರವಾರ ಮಾಡಲಾಗುವುದು. ವ್ರತದ ಕೊನೆಯಲ್ಲಿ ತಾಯಿಗೆ ಮತ್ತು ಇತರ ಮುತ್ತೈದೆಯರಿಗೆ ಉಡುಗೊರೆ ಕೊಡಲಾಗುವುದು.

    ದೇವಿ ಭಾಗವತದಲ್ಲಿ ಮಂಗಳಗೌರಿ ವ್ರತಕ್ಕೆ ಸಂಬಂಧಿಸಿದಂತೆ ಒಂದು ಕಥೆ ಇದೆ; ಮಹಿಷ್ಮತಿ ನಗರದ ರಾಜ ಜಯಪಾಲನಿಗೆ ಶಿವನ ವರದಿಂದ ಹದಿನಾರು ವರ್ಷ ಮಾತ್ರ ಆಯಸ್ಸನ್ನುಳ್ಳ ಮಗನೊಬ್ಬನು ಹುಟ್ಟುತ್ತಾನೆ. ಅವನ ಹೆಸರು ಶಿವಧರ್ಮ. ಅವನು ಬೆಳೆದು ದೊಡ್ಡವನಾದಾಗ ತನ್ನ ಅಲ್ಪಾಯುಷ್ಯದ ಬಗ್ಗೆ ತಿಳಿದು, ತನ್ನ ಸೋದರಮಾವನ ಜೊತೆಗೂಡಿ, ಕಾಶಿಯಾತ್ರೆ ಮಾಡಿಬರಲು ಹೊರಡುತ್ತಾನೆ. ದಾರಿಯಲ್ಲಿ ಅವರು ಪ್ರತಿಷ್ಠಾಪುರವೆಂಬ ಊರಿನ ಉದ್ಯಾನದಲ್ಲಿ ವಿಶ್ರಾಂತಿಗೆಂದು ತಂಗಿರುವಾಗ, ಅಲ್ಲಿಗೆ ಕೆಲವರು ಕನ್ಯೆಯರು ಬಂದರು. ಅವರಲ್ಲಿ ಮಂಗಳಗೌರಿಯ ಭಕ್ತಳೂ, ಆ ಊರಿನ ರಾಜನ ಮಗಳೂ ಆದ ಸುಶೀಲೆಯೂ ಇದ್ದಳು. ಆಗ ಅಶರೀರವಾಣಿಯೊಂದು ಅವಳ ತಂದೆಗೆ ಆ ಉದ್ಯಾನದಲ್ಲಿರುವ ಶಿವಧರ್ಮನ ಜೊತೆ ನಿನ್ನ ಮಗಳ ವಿವಾಹ ಮಾಡು ಎಂದು ಹೇಳಿತು. ಆ ರಾಜನು ಅವರಿಬ್ಬರ ಮದುವೆ ಮಾಡಿಸಿದನು.
    ಆ ದಿನ ರಾತ್ರಿ ಸುಶೀಲೆ ಮಂಗಳ ಗೌರಿಯ ಪೂಜೆಯನ್ನು ಮಾಡುತ್ತಿದ್ದಾಗ, ಮಂಗಳಗೌರಿಯು ಪ್ರತ್ಯಕ್ಷಳಾಗಿ,“ ನಿನ್ನ ಗಂಡನಿಗೆ ಈ ದಿನಕ್ಕೆ ಆಯುಷ್ಯ ಮುಗಿಯುತ್ತದೆ. ಕರಿ ನಾಗರಹಾವೊಂದು ಬಂದು ಅವನನ್ನು ಕಚ್ಚಿ ಸಾಯಿಸುತ್ತದೆ. ನೀನು ಹಾಗೆ ಆಗದಂತೆ ನೋಡಿಕೋ. ಸರ್ಪ ಬಂದಾಗ ಹಾಲು ತುಂಬಿದ ಕಲಶವನ್ನು ಅದರೆದುರಿಗೆ ಹಿಡಿ. ಅದು ಹಾಲು ಕುಡಿಯಲು ಅದರೊಳಗೆ ಇಣುಕಿದಾಗ ಅದನ್ನು ಬಟ್ಟೆಯಿಂದ ಮುಚ್ಚಿ, ಬಂಧಿಸಿಬಿಡು. ನಾಳೆ ಬೆಳಿಗ್ಗೆ ಆ ಕಲಶವನ್ನು ನಿಮ್ಮ ತಾಯಿಗೆ ಬಾಗಿನವಾಗಿ ಕೊಡು. ಆಗ ನಿನ್ನ ಗಂಡನ ಆಯುಷ್ಯ ಹೆಚ್ಚುತ್ತದೆ.” ಎಂದು ಹೇಳಿದಳು.

    ಆ ದಿನ ರಾತ್ರಿ ದೇವಿ ಹೇಳಿದಂತೆಯೇ ಎಲ್ಲವೂ ನಡೆಯಿತು.
    ಶಿವಧರ್ಮನು ಮಾರನೇ ದಿನ ಬೆಳಿಗ್ಗೆ ಎಚ್ಚೆತ್ತು, ಕಾಶಿಯಾತ್ರೆಯನ್ನು ನೆನಸಿಕೊಂಡು, ತನ್ನ ಉಂಗುರವನ್ನು ಬಿಚ್ಚಿಟ್ಟು, ಹೊರಟು ಹೋದನು. ರಾಜಕುಮಾರಿ ಆ ಕಲಶವನ್ನು ತನ್ನ ತಾಯಿಗೆ ಬಾಗಿನವಾಗಿ ಕೊಟ್ಟಳು. ಆಕೆ ಅದನ್ನು ತೆರೆದು ನೋಡಿದರೆ ಒಳಗೆ ಹಾವಿನ ಬದಲು ಒಂದು ರತ್ನಹಾರವಿತ್ತು. ಅದನ್ನು ಆಕೆ ಸುಶೀಲೆಗೇ ಕೊಟ್ಟಳು.

    ಐದು ವರ್ಷದವರೆಗೂ ಸುಶೀಲೆ ಮಂಗಳಗೌರಿ ವ್ರತವನ್ನು ಆಚರಿಸಿದಳು. ಐದು ವರ್ಷದ ನಂತರ ಶಿವಧರ್ಮನು ಕಾಶಿಯಾತ್ರೆ ಮುಗಿಸಿಕೊಂಡು ಮತ್ತೆ ಹಿಂತಿರುಗಿ ತನ್ನ ಹೆಂಡತಿಯ ಊರಿಗೆ ಬಂದನು. ಅವರಿಬ್ಬರೂ ಕೂಡಿ ಮಹಿಷ್ಮತಿ ನಗರಕ್ಕೆ ಹೋಗಿ ಮಂಗಳಗೌರಿ ವ್ರತವನ್ನು ಆಚರಿಸುತ್ತಾ ಸುಖವಾಗಿದ್ದರು. ಅಂದಿನಿಂದ ನವವಿವಾಹಿತ ಹೆಣ್ಣು ಐದು ವರ್ಷ ಮಂಗಳಗೌರಿ ವ್ರತವನ್ನು ಆಚರಿಸುವ ಸಂಪ್ರದಾಯ ಲೋಕರೂಢಿಗೆ ಬಂದಿತು. ಭಕ್ತಿಭಾವಗಳಿಂದ ವ್ರತವನ್ನಾಚರಿಸುವವರಿಗೆ ಮಂಗಳಗೌರಿಯ ಅನುಗ್ರಹ ಕಟ್ಟಿಟ್ಟ ಬುತ್ತಿಯೆಂದು ಪ್ರತೀತಿಯಾಯಿತು.

    ಈ ವ್ರತದ ದಿನ ಮಂಗಳಸ್ನಾನ ಮಾಡಿ, ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸುತ್ತಾರೆ. ಒಂದು ಮಣೆ ಇಟ್ಟು ಅದರ ಮೇಲೆ ರವಿಕೆ ಬಟ್ಟೆಯನ್ನು ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮರನ್ನು (ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಗೋಪುರದ ಆಕಾರ ಕೊಟ್ಟು) ಇಡುತ್ತಾರೆ. ಮೂರು ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಿಸಿ ಹಿಂದೆ ಇಡುತ್ತಾರೆ. ಅಥವಾ ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡುತ್ತಾರೆ. ಇದಕ್ಕೆ ಕಣ್ಣು ಕಪ್ಪಿನಿಂದ ಕಣ್ಣು, ಮೂಗು ಬರೆದು ಅಲಂಕರಿಸುತ್ತಾರೆ. ಇದೇ ಮಂಗಳಗೌರಿ ಮೂರ್ತಿ.

    ಕೆಲವು ಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ. ಕೆಲವರು ದೇವಿಯ ಎಡ ಬದಿಯಲ್ಲಿ 16 ಎಲೆ, ಅಡಿಕೆಗಳನ್ನು ಇಡುತ್ತಾರೆ. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಬಾಗಿನದ ಜೊತೆ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಇರುತ್ತದೆ. ಮೊದಲು ಗಣಪತಿ ಪೂಜೆ ಮಾಡಿ, ನಂತರ ಮಂಗಳಗೌರಿ ಪೂಜೆ ಮಾಡುತ್ತಾರೆ. ಗೌರಿಗೆ 16 ಹಿಡಿ, 16ಎಳೆಗಳ ಹತ್ತಿಯ ಹಾರ ಹಾಕುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ಆರತಿ ಮಾಡುತ್ತಾರೆ. ಈ ದೀಪದಲ್ಲಿ ವೀಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ)ನ್ನು ಶೇಖರಿಸುತ್ತಾರೆ. ಇದನ್ನು ಮಂಗಳ ಗೌರಿಗೆ ಹಚ್ಚಿ, ಕಣ್ಣಿಗೆ ಹಚ್ಚಿಕೊಳ್ಳುತ್ತಾರೆ.
    ಪೂಜೆಯ ನಂತರ ಕಥೆಯನ್ನು ಓದುವರು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೇ ಇಟ್ಟುಕೊಂಡು, ಅದೇ ಕೊಬ್ಬರಿಯನ್ನು ಉಳಿದೆಲ್ಲಾ ವಾರ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಅದನ್ನು ಬಾಗಿನದಲ್ಲಿ ಇಟ್ಟು ಕೊಡುತ್ತಾರೆ.

    ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಬಾಗಿನದ ಜೊತೆ ಇಟ್ಟುಕೊಳ್ಳುವರು. ಮರದ ಒಳಗೆ ನಾಲ್ಕು ತರಹದ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, ೧೬ ಎಳೆ ಹತ್ತಿಯ ಹಾರವನ್ನು ಇಡುವರು. ಇದನ್ನು ಹೆಣ್ಣುಮಕ್ಕಳು ತಮ್ಮ ತಾಯಿಗೆ ಬಾಗಿನ ಕೊಡುತ್ತಾರೆ. ಹೀಗೆ ಐದು ವರ್ಷ ವ್ರತ ಮಾಡಿ, ಮುಕ್ತಾಯ ಮಾಡುವರು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಮ್ಮ ತಾಯಿಗೆ ಕೊಡುತ್ತಾರೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಕಷ್ಟಗಳನ್ನು ಸಹಿಸಲು ಜೀವನೋತ್ಸಾಹವೂ ಬೇಕು

    ಸುಮಾ ವೀಣಾ

    ಜನ್ನ ಕವಿ

    ನಿಯತಿಯನಾರ್ ಮೀರಿದಪರ್-(ನಿಯತಿಯನ್ನು ಯಾರು ಮೀರುತ್ತಾರೆ)   ಜನ್ನ ಕವಿಯ ‘ಯಶೋಧರ ಚರಿತೆ’ಯಿಂದ ಪ್ರಸ್ತುತ ಸಾಲನ್ನು ಆರಿಸಲಾಗಿದೆ. ಚಂಡ ಕರ್ಮನು  ಎಳೆದುಕೊಂಡು ಹೋಗುವಾಗ ಅಭಯರುಚಿತು  ತನ್ನ ತಂಗಿಯಾದ  ಅಭಯಮತಿಯನ್ನು  ಕುರಿತು ನೀತಿಶಾಸ್ತ್ರವನ್ನು ಬಲ್ಲವಳೆ  ವಿಧಿ ನಿಯಮವನ್ನು  ಮೀರಲು ಯಾರಿಗೆ ಸಾಧ್ಯವಾಗುತ್ತದೆ . ಸಂದಿಗ್ಧತೆಯ ಸಮಯದಲ್ಲಿ ಬರುವ ಕಷ್ಟಗಳನ್ನು  ಸಹಿಸಿಕೊಂಡು    ಕ್ಲೇಶಗಳನ್ನು  ನೀಗಿಕೊಳ್ಳಲೇ ಬೇಕು  ಅದಕ್ಕಾಗಿ ಮಾನಸಿಕ ಧೃಡತೆ ಮುಖ್ಯವಾಗಿ ಬೇಕಾಗುತ್ತದೆ ಎಂಬ ಮಾತನ್ನು ಹೇಳುತ್ತಾನೆ.

    ಆಧುನಿಕ ಜಗತ್ತಿನಲ್ಲಿ  ವಿಧಿ ಹಣೆಬರೆಹ  ಇತ್ಯಾದಿ ಮಾತುಗಳು  ವಿಚಾರವಂತರಿಗೆ ಗುಂಪಿಗೆ ಸೇರದವು ಅನ್ನಿಸುತ್ತವೆ ಇನ್ನು ಕೆಲವರಿಗೆ  ಸರಿ ಅನ್ನಿಸುತ್ತದೆ ಹೇಗೂ ಇರಲಿ ಪೂರ್ವ ನಿರ್ಧಾರಿತ ಹೌದೋ ಅಲ್ಲವೋ ಅದನ್ನು ಮೀರಿ  ಬರುವ ಕಷ್ಟಗಳನ್ನು ಸಹಿಸಿಕೊಳ್ಳುವ  ಕಸುವನ್ನು ಮೈ ಮನಸ್ಸುಗಳಲ್ಲಿ ರೂಢಿಸಿಕೊಳ್ಳಬೇಕು  ಇಲ್ಲವಾದರೆ ಕಷ್ಟ. 

    ದುಃಖವಿದ್ದರೆ ಸುಖ ಹೇಗೆ ಬರುತ್ತದೆಯೋ ಹಾಗೆ   ಕತ್ತಲು –ಬೆಳಕು, ಕಷ್ಟ –ಸುಖಗಳು ಮತ್ತೆ ಮತ್ತೆ ಆವರ್ತನವಾಗುತ್ತವೆ.  ಬರೆ ಸಿಹಿಯನ್ನೇ ಸೇವಿಸುತ್ತಿದ್ದರೆ ಆರೋಗ್ಯ ಹೇಗೆ ಕೆಡುತ್ತದೆಯೋ ಅಂತೆಯೇ ಬರೆ ಸುಖ ಜೀವನದ ಮಧುರತೆಯನ್ನು ಕೊಡುವುದಿಲ್ಲವೇನೋ ಜೀವನದ ನಿಜವಾದ ಸಿಹಿಯನ್ನು ಅನುಭವಿಸಲು ಕಷ್ಟಗಳು ಬರುತ್ತಿರಬೇಕು ಆಂತೆಯೇ ಅವುಗಳು ಬಿಡುಗಡೆಯೂ ಆಗುತ್ತಿರಬೇಕು .

    ಕಷ್ಟಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತವೆಯೇ ಅನ್ನುವ ಮಾತುಗಳಿವೆ . ಎಂಥ ಕಷ್ಟಗಳು ಬಂದರೂ  ಸಹಿಸುವ ಶಕ್ತಿ ಬೇಕು ನಾನು ಕಷ್ಟಗಳನ್ನು ಮೀರಿ ನಿಲ್ಲುವೆ ಅನ್ನುವ ಮನಸ್ಥಿತಿ ಇದ್ದರೆ  ಸಾಕು .  ಬದುಕಲು ನಮ್ಮ ಪೂರ್ವಿಕರಿಗೆ ಇದ್ದ ಕಷ್ಟಗಳು ಇಂದಿಲ್ಲ.  ಇಂದಿಗೆ ಕಷ್ಟ  ಅನ್ನುವ ಮಾತುಗಳೆಲ್ಲವೂ  ನಾವೆ ಮಾಡಿಕೊಂಡಿರುವ  ತಪ್ಪುಗಳು.  ಬದುಕು  ಆದಷ್ಟೂ ಸರಳವಾಗಿದ್ದರೆ ಸುಂದರವೇ ಆಗಿರುತ್ತದೆ ಆದರೆ ವಿಪರೀತ ಅನ್ನುವಷ್ಟರ ಮಟ್ಟಿಗೆ  ನಮ್ಮ ಬದುಕನ್ನು ನಾವೆ  ಜಟಿಲ ಮಾಡಿಕೊಂಡಿದ್ದೇವೆ.  ನಾವೆ ಮಾಡಿಕೊಂಡ ತಪ್ಪುಗಳು ಮತ್ತೆ ಕಷ್ಟಗಲಾಗಿ ಕಾಡತೊಡಗಿದಾಗ ಅದಕ್ಕೆ ಬೆನ್ನು ಹಾಕುವ ಮನಸ್ಥಿತಿಯೂ ನಮ್ಮದೆ ಆಗಿದೆ.  ಇದೊಂದು ಅಪಸವ್ಯವೇ ಅಲ್ಲವೆ . ನಿಯತಿಯನ್ನು ಯಾರು ಮೀರುತ್ತಾರೆ ಅಂದರೆ ವಿಧಿಯನಿಯಮವನ್ನು ಯಾರು ಮೀರುತ್ತಾರೆ ಎಂದು ನಮ್ಮ ನಿರ್ಲಕ್ಷದ ಹೊಣೆಯನ್ನು ವಿಧಿಯ ಮೇಲೆ ಹಾಕುವುದು ಸರಿಯಲ್ಲ.  ಕಷ್ಟಗಳನ್ನು ಸಹಿಸಲು ಜೀವನೋತ್ಸಾಹವೂ ಬೇಕು ಏನಂತೀರ?

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market:ಷೇರುಪೇಟೆ ಚಟುವಟಿಕೆ ಹೂಡಿಕೆಯೋ, ಉಳಿತಾಯವೋ, ವ್ಯವಹಾರವೋ?

    ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಷೇರುಪೇಟೆಯಲ್ಲಿನ ಏರಿಳಿತಗಳು ಗ್ರಾಹಕರಿಗೆ ಯಾವ ರೀತಿಯ ಚಟುವಟಿಕೆ ಸರಿ ಎಂಬುದನ್ನು ನಿರ್ಧರಿಸುವುದು ಗೊಂದಲಮಯವಾಗಿರಲೇಬೇಕು.ಕಾರಣ ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳೂ ಸೇರಿ ಹೆಚ್ಚಿನ ಏರಿಳಿತಗಳನ್ನು, ಸೂಕ್ತ ಕಾರಣಗಳಿಲ್ಲದೆಯೂ ಪ್ರದರ್ಶಿಸುತ್ತಿರುವುದಾಗಿದೆ. ಕೆಲವು ಬೆಳವಣಿಗೆಗಳನ್ನು ತಿಳಿಯೋಣ ಆಗ ಪರಿಸ್ಥಿತಿಯನ್ನರಿಯಲು ಸಾಧ್ಯವಾಗುತ್ತದೆ.

    ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಹೆಗ್ಗುರುತಾದ ಸಂವೇದಿ ಸೂಚ್ಯಂಕ (Sensex) ಅಕ್ಟೋಬರ್‌ ತಿಂಗಳಿನಲ್ಲಿ 62,245 ಪಾಯಿಂಟುಗಳಿಗೆ ತಲುಪಿ ಸರ್ವಕಾಲೀನ ಗರಿಷ್ಠದ ದಾಖಲೆ ಸ್ಥಾಪಿಸಿತು.
    ಅಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.271.42 ಲಕ್ಷ ಕೋಟಿಯಲ್ಲಿತ್ತು. ನಂತರದಲ್ಲಿ ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು.
    ಅಲ್ಲಿಂದ ಸೆನ್ಸೆಕ್ಸ್‌ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು. ಜೊತೆಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.258 ಲಕ್ಷ ಕೋಟೆ ಮೀರಿತು.
    ಜೂನ್‌ ತಿಂಗಳ 17 ರಂದು ಮಧ್ಯಂತರದಲ್ಲಿ ಸೆನ್ಸೆಕ್ಸ್‌ 50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು. ಅಂದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್‌ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿದಿದೆ. ಅಂದರೆ ಮೇ ತಿಂಗಳ ಆರಂಭದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್‌ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು ಹೂಡಿಕೆಯೆನಿಸದು. ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ. ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.

    ಜಿ ಎಂ ಎಂ ಫೌಡ್ಲರ್ ಲಿಮಿಟೆಡ್:

    ಈ ಕಂಪನಿಯು ಈ ತಿಂಗಳ 10 ರಂದು ಪ್ರತಿ ಷೇರಿಗೆ ಎರಡರಂತೆ 2:1 ರ ಅನುಪಾತದಲ್ಲಿ ಬೋನಸ್‌ ಷೇರನ್ನು ವಿತರಿಸಿತು. ಆಗ ಷೇರಿನ ಬೆಲೆಯು ರೂ.4,200 ರ ಸಮೀಪದಲ್ಲಿದ್ದು, ಬೋನಸ್‌ ಷೇರು ವಿತರಣೆಯ ನಂತರೆ ಷೇರಿನ ಬೆಲೆ ಕುಸಿಯುತ್ತಾ 28 ರಂದು ರೂ.1,336 ರ ವರೆಗೂ ಇಳಿಯಿತು. 29 ನೇ ಶುಕ್ರವಾರದಂದು ಷೇರಿನ ಬೆಲೆ ರೂ.1,428 ರ ಸಮೀಪದಿಂದ ರೂ.1,611 ರವರೆಗೂ ಏರಿಕೆ ಕಂಡು ಅಂತ್ಯದಲ್ಲಿ ರೂ.1,599 ರ ಸಮೀಪ ಕೊನೆಗೊಂಡಿದೆ. ಈ ಷೇರಿನ ವಹಿವಾಟು ಈ ತಿಂಗಳ 15 ರಿಂದಲೂ ಸುಮಾರು ಶೇ.50 ಕ್ಕೂ ಹೆಚ್ಚಿನ ವಿಲೇವಾರಿ ಆಧರಿತ ಚುಕ್ತಾ ಚಟುವಟಿಕೆಯಾಗಿದ್ದು, ಶುಕ್ರವಾರದಂದು ಷೇರಿನ ಬೆಲೆ ಶೇ.20 ರಷ್ಟು ಏರಿಕೆ ಕಂಡ ಕಾರಣ ಮಾರಾಟದ ಪ್ರಮಾಣದೊಂದಿಗೆ ವಿಲೇವಾರಿ ಆಧರಿತ ಚುಕ್ತಾ ವಹಿವಾಟು ಕ್ಷೀಣಿತವಾಗಿದ್ದು, ದೈನಂದಿನ ಚುಕ್ತಾ ಚಟುವಟಿಕೆ ಹೆಚ್ಚಾಗಿದೆ. ಅಂದರೆ ಒಂದೇ ದಿನ ಭಾರಿ ಪ್ರಮಾಣದ ಏರಿಳಿತದ ಕಾರಣ ಡೇ ಟ್ರೇಡಿಂಗ್‌ ಹೆಚ್ಚಾಗಿದೆ. ಇದನ್ನು ಅಂದು ನಡದ ವಹಿವಾಟಿನ ಗಾತ್ರವೂ ಪುಷ್ಠೀಕರಿಸುತ್ತದೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 28 ರಂದು ವಹಿವಾಟಾದ ಷೇರುಗಳ ಸಂಖ್ಯೆಗಿಂತ 29 ರಂದು ನಡೆದ ಚಟುವಟಿಕೆಗಳಲ್ಲಿ8 ಪಟ್ಟು ಹೆಚ್ಷಾಗಿದೆ. ಆದರೆ NSE ಯಲ್ಲಿ 28ರಂದು 88 ಸಾವಿರ ಷೇರುಗಳು ವಹಿವಾಟಾದರೆ, 29 ರಂದು 15 ಲಕ್ಷ 94 ಸಾವಿರ ಷೇರುಗಳು ವಹಿವಾಟಾಗಿವೆ. ಅಂದರೆ ಆ ದಿನ ಡೇ ಟ್ರೇಡಿಂಗ್‌ ನೊಂದಿಗೆ ಪ್ರಾಫಿಟ್‌ ಬುಕಿಂಗ್‌ ಆಗಿರಲೂ ಸಾಧ್ಯವಿದೆ.

    ತಾನ್ಲಾ ಪ್ಲಾಟ್‌ ಫಾರ್ಮ್ಸ್‌ ಲಿಮಿಟೆಡ್‌ :

    ಐ ಟಿ ವಲಯದ ಈ ಕಂಪನಿ ಜೂನ್‌ ತ್ರೈಮಾಸಿಕದ ಸಾಧನೆಯು ಅಷ್ಠು ಪರಿಣಾಮಕಾರಿಯಾಗಿರದೆ ಇದ್ದ ಕಾರಣ ಷೇರಿನ ಬೆಲೆ ಒಂದೇ ವಾರದಲ್ಲಿ ಅಂದರೆ ಜುಲೈ 22 ರಂದು ಒಂದು ಸಾವರ ರೂಪಾಯಿಗಳ ಸಮೀಪವಿದ್ದು, ನಂತರದ ಒಂದು ವಾರದಲ್ಲಿ ಅಂದರೆ ಗುರುವಾರ 28 ರಂದು ರೂ.585 ರ ಕನಿಷ್ಠ ಬೆಲೆಗೆ ಕುಸಿದು ಅಂದು ಕೆಳ ಆವರಣಮಿತಿಯಲ್ಲಿ ಲಾಕ್‌ ಆಗಿತ್ತು. ಆದರೆ ನಂತರದ 29 ರಂದು ಷೇರಿನ ಬೆಲೆ ಪುಟಿದೆದ್ದು ರೂ.699 ರವರೆಗೂ ಏರಿಕೆ ಕಂಡು ರೂ.694 ರ ಸಮೀಪ ಕೊನೆಗೊಂಡಿದೆ. ಈ ಬದಲಾವಣೆಗೆ ಪೂರಕವಾದ ಅಂಶ ಎಂದರೆ ಕಂಪನಿಯ ಆಡಳಿತ ಮಂಡಳಿಯು 4 ರಂದು ಸಭೆ ಸೇರಲಿದೆ. ಅಂದು ಕಂಪನಿಯು ತನ್ನ ಲಾಭಾಂಶ ನೀತಿಯನ್ನು ಪರಿಶೀಲಿಸಲಿದೆ ಮತ್ತು ಮಧ್ಯಂತರ ಲಾಭಾಂಶ ಪ್ರಕಟಿಸುವ ಬಗ್ಗೆಯೂ ನಿರ್ಧರಿಸಲಿದೆ. ಆಗಸ್ಟ್‌ 18 ರಿಂದ ಪ್ರತಿ ಷೇರಿಗೆ ರೂ.2 ರಂತೆ ವಿತರಿಸಲಿರುವ ಲಾಭಾಂಶ ರಹಿತ ವಹಿವಾಟು ಆರಂಭವಾಗಲಿದೆ.

    ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ಸ್‌ ಸರ್ವಿಸಸ್‌ ಲಿಮಿಟೆಡ್ :

    ಈ ಕಂಪನಿಯ ಷೇರಿನ ಬೆಲೆ ಡಿಸೆಂಬರ್‌ ತಿಂಗಳಲ್ಲಿ ರೂ.1,000 ಕ್ಕೂ ಹೆಚ್ಚಿದ್ದು ನಂತರದಲ್ಲಿ ಪ್ರತಿ ತಿಂಗಳೂ ನಿರಂತರವಾಗಿ ಕುಸಿಯಿತು. ಜೂನ್‌ ತಿಂಗಳಲ್ಲಿ ರೂ.656 ರ ಸಮೀಪಕ್ಕೆ ಜಾರಿ ನಂತರ ಸ್ವಲ್ಪಮಟ್ಟಿನ ಮೌಲ್ಯಾಧಾರಿತ ಖರೀದಿಯ ಕಾರಣ ಗುರುವಾರದಂದು ಕಂಪನಿಯ ತ್ರೈಮಾಸಿಕ ಫಲಿತಾಂಶದ ಕಾರಣ ಸುಮಾರು ರೂ.54 ರಷ್ಟು ಏರಿಕೆಯನ್ನು ಕಂಡುಕೊಂಡಿತು. ಶುಕ್ರವಾರವೂ ಚುರುಕಾದ ಚಟುವಟಿಕೆಯಿಂದ ಮುನ್ನುಗ್ಗಿ ರೂ.968 ರವರೆಗೂ ಏರಿಕೆ ಕಂಡು ರೂ.937 ರ ಸಮೀಪ ಕೊನೆಗೊಂಡಿದೆ. ಈ ರೀತಿಯ ಅನಿರೀಕ್ಷಿತ ಮಟ್ಟದ ಏರಿಕೆಗೆ ಕೇವಲ ಕಂಪನಿಗಳ ಸಾಧನೆಯೊಂದೇ ಮುಖ್ಯವಲ್ಲ ಉತ್ತಮ ಕಂಪನಿಯಾಗಿದ್ದಲ್ಲಿ, ಅದು ಹಿಂದೆ ಕಂಡಿರುವ ಕುಸಿತದ ಪ್ರಮಾಣಕ್ಕನುಗುಣವಾಗಿ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಈ ರೀತಿಯ ಚೇತರಿಕೆಯ ಗರಿಷ್ಠ ಬೆಲೆಗಳು ಸ್ಥಿರತೆ ಕಾಣುವುದು ಸಹ ಬಹು ಅಪರೂಪ.

    ಸಿ ಎಲ್ ಎಸ್ ಎ ಸಂಸ್ಥೆಯು ಎಸ್ ಬಿ ಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವಿಸಸ್ ಕಂಪನಿಯ ಷೇರಿಗೆ ʼ ಸೆಲ್ʼ ರೇಟಿಂಗ್ ಕೊಟ್ಟಿದೆ. ಸೋಜಿಗವೆಂದರೆ ಈ ಸುದ್ಧಿ ಹೊರಬಂದ ದಿನ ಷೇರಿನ ಬೆಲೆಯು ಸುಮಾರು 48 ರೂಪಾಯಿಗಳಷ್ಠು ಏರಿಕೆ ಕಂಡು ದಿನದ ಅಂತ್ಯದಲ್ಲಿ ರೂ.42 ರಷ್ಟರ ಏರಿಕೆಯಿಂದ ಕೊನೆಗೊಂಡಿದೆ. ಈ ಷೇರಿನ ಬೆಲೆ ರೂ.754 ರ ಸಮೀಪದಿಂದ ರೂ.937 ರವರೆಗೂ ಏರಿಕೆಯನ್ನು ಕೇವಲ ಒಂದು ತಿಂಗಳಲ್ಲಿ ಕಂಡಿದೆ. ಇಂತಹ ಏರಿಕೆಯ ಹಿನ್ನೆಲೆಯಲ್ಲಿ ಮಾರಾಟದ ರೇಟಿಂಗ್ ನೀಡಿರುವುದು ʼ ಪ್ರಾಫಿಟ್ ಬುಕ್ಕಿಂಗ್ʼ ಗೆ ಸೂಕ್ತವಾದ ಸಮಯವೆನ್ನಬಹುದು. ಆದರೆ ಕಂಪನಿಯು ಅಂದೇ ಪ್ರಕಟಿಸಿದ ತನ್ನ ತ್ರೈಮಾಸಿಕ ಫಲಿತಾಂಶವು ಪ್ರೋತ್ಸಾಹದಾಯಕವಾಗಿದ್ದಂತೆ ಕಂಡಿದ್ದು, ಈ ಸೆಲ್ ರೇಟಿಂಗ್ ಎಷ್ಟು ಪರಿಣಾಮಕಾರಿ ಎಂಬುದು ಸೋಜಿಗದ ಸಂಗತಿಯಾಗಿದೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ನೋವಾರ್ಟಿಸ್‌ ಇಂಡಿಯಾ ಲಿಮಿಟೆಡ್:

    ಫಾರ್ಮಾ ವಲಯದ ಈ ಕಂಪನಿ ಷೇರು 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಆಗಿ ವಹಿವಾಟಾಗುತ್ತಿರುವ ಕಂಪನಿ. ಮಾರ್ಚ್‌ ತಿಂಗಳ ತ್ರೈಮಾಸಿಕದಲ್ಲಿ ಮತ್ತು ಹಿಂದಿನ ವರ್ಷ ಹಾನಿಗೊಳಗಾಗಿದ್ದ ಕಂಪನಿ, ಆದರೂ ಪ್ರತಿ ಷೇರಿಗೆ ರೂ.10 ರ ಲಾಭಾಂಶವನ್ನು ಘೋಷಿಸಿ ವಿತರಿಸಿದ ಕಂಪನಿ. ಮೇ ತಿಂಗಳ ಅಂತ್ಯದಲ್ಲಿ ರೂ.566 ರ ವಾರ್ಷಿಕ ಕನಿಷ್ಠ ಬೆಲೆಗೆ ಕುಸಿದಿತ್ತು. ಜುಲೈನಲ್ಲಿ ಲಾಭಾಂಶ ವಿತರಣೆಯ ನಂತರದಲ್ಲಿ ಕಂಪನಿ ಘೋಷಿಸಿದ ಸಕಾರಾತ್ಮಕ ತ್ರೈಮಾಸಿಕ ಫಲಿತಾಂಶ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಬುಧವಾರದಂದು ರೂ.653 ರ ಸಮೀಪದಲ್ಲಿದ್ದಂತಹ ಷೇರಿನ ಬೆಲೆ ಗುರುವಾರದಂದು ಆರಂಭದಿಂದಲೇ ಏರಿಕೆ ಕಂಡು ರೂ.694 ರಿಂದ ರೂ.760 ರ ಗಡಿ ದಾಟಿತು. ವಾರಾಂತ್ಯದಲ್ಲಿ ರೂ.722 ರ ಸಮೀಪ ಕೊನೆಗೊಂಡಿದೆ.

    ಈ ರೀತಿಯ ಅಸಹಜ ಏರಿಳಿತಗಳನ್ನು ಅನೇಕ ಪ್ರಮುಖ ಕಂಪನಿಗಳಲ್ಲಿ ಅಂದರೆ ಎಸ್ಕಾರ್ಟ್ಸ್‌, ಟಾಟಾ ಸ್ಟೀಲ್‌, ಗ್ರಾಸಿಂ, ಜಿಎಂಎಂ ಫೌಡ್ಲರ್, ಡಿಕ್ಸನ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಟಿಸಿಎಸ್‌, ವೇದಾಂತ, ಹಿಂಡಲ್ಕೊ, ರಿಲಯನ್ಸ್‌ ಇಂಡಸ್ಟ್ರೀಸ್‌, ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌, ಬಾಟಾ ಇಂಡಿಯಾ, ದೀಪಕ್‌ ನೈಟ್ರೈಟ್‌, ಎಸ್‌ ಬಿ ಐ, ಕೆನರಾ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಹೆಚ್‌ ಡಿ ಎಫ್‌ ಸಿ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಐ ಸಿ ಐ ಸಿ ಐ ಬ್ಯಾಂಕ್‌, ಕಾಲ್ಗೇಟ್‌, ಅಲ್ಟ್ರಾಟೆಕ್‌, ಏಶಿಯನ್‌ ಪೇಂಟ್ಸ್‌, ಬರ್ಜರ್‌ ಪೇಂಟ್ಸ್‌, ಲೌರಸ್‌ ಲ್ಯಾಬ್‌, ಚೆನ್ನೈ ಪೆಟ್ರೋ, ಟಾಟಾ ಮೋಟಾರ್ಸ್‌, ಐಟಿಸಿ, ಹಿಂದೂಸ್ಥಾನ್‌ಝಿಂಕ್‌, ಹೆಚ್‌ಎ ಎಲ್‌, ಟಾಟ ಕಮ್ಯುನಿಕೇಷನ್ಸ್‌ ನಂತಹ ಕಂಪನಿಗಳಲ್ಲಿಯೂ ಕಳೆದ ಒಂದು ವಾರದಲ್ಲಿ ಕಂಡುಬಂದಿದೆ. ಹಾಗಾಗಿ ಉತ್ತಮ ಅಗ್ರಮಾನ್ಯ ಕಂಪನಿಗಳು ಒದಗಿಸುವ ಅವಕಾಶಗಳು ಆಕರ್ಷಣೀಯವಾಗಿರುವಾಗ ಕಳಪೆ ಕಂಪನಿಗಳತ್ತ ಗಮನಹರಿಸುವ ಅವಶ್ಯಕತೆ ಇರದು.

    ಈ ರೀತಿಯ ಭಾರಿ ಏರಿಳಿತಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಪೇಟೆಯಲ್ಲಿ ಅತಿ ಹೆಚ್ಚು ಕಂಪನಿಗಳನ್ನು ಲೀಸ್ಟಿಂಗ್‌ ಮಾಡಿಕೊಂಡಿರುವ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಕಂಪನಿಗಳ ಸಂಖ್ಯೆ ಸ್ಥಿರವಾಗಿದ್ದು, ಚಟುವಟಿಕೆದಾರರ ಸಂಖ್ಯೆ ಅತಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ. ಯಾವುದೇ ಒಂದು ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆ ಕುಸಿತ ಕಂಡಿದೆ ಎಂದರೆ ಅದಕ್ಕೆ ಅನಿರೀಕ್ಷಿತ ಮಟ್ಟದ ಬೇಡಿಕೆ ಬರುತ್ತಿದೆ. ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಚಟುವಟಿಕೆ ಮೂಲಕವಷ್ಠೇ ಸುರಕ್ಷತೆಯನ್ನು ಕಾಣಬಹುದಾಗಿದೆಯಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Karnataka CET:ಸಿಇಟಿ ಫಲಿತಾಂಶ ಪ್ರಕಟ:ಆಗಸ್ಟ್ 5ರಿಂದ ದಾಖಲೆಗಳ ಆನ್ ಲೈನ್ ಪರಿಶೀಲನೆ, ಸೆಪ್ಟೆಂಬರ್ ಮೊದಲ ವಾರ ಕೌನ್ಸೆಲಿಂಗ್ ಆರಂಭ

    BENGALURU JULY 30

    2022-23ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಸಲಾಗಿದ್ದು, ಎಲ್ಲ ವಿಭಾಗಗಳ ಟಾಪರ್ ಗಳು ಈ ಬಾರಿ ಬಾಲಕರೇ ಆಗಿರುವುದು ವಿಶೇಷವಾಗಿದೆ.ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಮಾಹಿತಿಯನ್ನು ನೀಡಿದರು.

    ಎಂಜಿನಿಯರಿಂಗ್, ಕೃಷಿ, ನ್ಯಾಚುರೋಪಥಿ ಮತ್ತು ಯೋಗ, ಪಶುಸಂಗೋಪನೆ, ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು. ಅಚ್ಚರಿಯ ಅಂಶವೆಂದರೆ, ಈ ಬಾರಿ ನ್ಯಾಚುರೋಪತಿ ವಿಭಾಗ ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳಲ್ಲೂ ಬಾಲಕರೇ ಅಗ್ರ 9 ರಾಂಕ್ ಗಳನ್ನೂ ಬಾಚಿಕೊಂಡು, ಪಾರಮ್ಯ ಮೆರೆದಿದ್ದಾರೆ.

    ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಒಂಬತ್ತು ರಾಂಕ್ ಪಡೆದಿರುವುದು ಬಾಲಕರೇ ಆಗಿದ್ದು, ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳೇ ಆಗಿದ್ದಾರೆ. ಸಿಬಿಎಸ್ಸಿಯಲ್ಲಿ ವ್ಯಾಸಂಗ ಮಾಡಿದವರೇ ಅದರಲ್ಲೂ ಹೆಚ್ಚು ಇದ್ದಾರೆ ಎಂದು ಅವರು ವಿವರಿಸಿದರು.

    ಈ ಬಾರಿಯ ಸಿಇಟಿ ಯಲ್ಲಿ ವಿದ್ಯಾರ್ಥಿಗಳಿಗೆ 7 ಕೃಪಾಂಕಗಳನ್ನು (ಗಣಿತ ವಿಷಯಕ್ಕೆ ಐದು, ರಸಾಯನವಿಜ್ಞಾನ ಮತ್ತು ಭೌತವಿಜ್ಞಾನ ವಿಷಯಕ್ಕೆ ತಲಾ ಒಂದು ಅಂಕ) ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಒಟ್ಟು 2,16,559 ಮಂದಿ ಸಿಇಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,10,829 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಡು 486 ಕೇಂದ್ರಗಳಲ್ಲಿ ಸಿಇಟಿ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

    ಆಗಸ್ಟ್ 5ರಿಂದ ದಾಖಲೆಗಳ ಪರಿಶೀಲನೆ ಆನ್ ಲೈನ್ ನಲ್ಲಿ ನಡೆಯಲಿದೆ. ರಕ್ಷಣೆ, ಎನ್.ಸಿ.ಸಿ, ಕ್ರೀಡೆ, ವಿಕಲಚೇತನ ಇತ್ಯಾದಿ ಕೋಟಾಗಳ ಅಡಿಯಲ್ಲಿ ಬರುವ ಶೇ.10ರಷ್ಟು ವಿದ್ಯಾರ್ಥಿಗಳ ದಾಖಲೆಗಳನ್ನು ಮಾತ್ರ ಭೌತಿಕವಾಗಿ ಪರಿಶೀಲಿಸಲಾಗುತ್ತದೆ ಎಂದು ಅವರು ವಿವರಿಸಿದರು.

    ನೀಟ್ ಪರೀಕ್ಷೆಯ ಫಲಿತಾಂಶ ಬಂದ ಬಳಿಕ, ಅಲ್ಲಿಯ ಅಂಕಗಳನ್ನು ಪರಿಗಣಿಸಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://karresults.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಇದ್ದರು.

    ಕೌನ್ಸೆಲಿಂಗ್ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳನ್ನು ಮನಗಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲ ಹಂತದ ಪ್ರಕ್ರಿಯೆಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

    ಆದಾಯ, ಜಾತಿ, ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ, ಭಾಷಾ ಅಲ್ಪಸಂಖ್ಯಾತರ ಪ್ರಮಾಣ ಪತ್ರ, ಇತ್ಯಾದಿ ಪ್ರಮಾಣ ಪತ್ರಗಳನ್ನು ಆನ್ ಲೈನ್ ನಲ್ಲೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಆನ್ ಲೈನ್ ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್ಸಿ, ಐಸಿಎಸ್ಇ ಹೊರತುಪಡಿಸಿ ರಾಜ್ಯ ಪಠ್ಯಕ್ರಮದಲ್ಲಿ ಪಿಯುಸಿ ಮಾಡಿದವರ ಅಂಕ ಪಟ್ಟಿಗಳನ್ನು ಕೂಡ ಕೆಇಎ ಅನ್ ಲೈನ್ನಲ್ಲಿ ಪಡೆದು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮಾಡಲಿದೆ ಎಂದು ಅವರು ವಿವರಿಸಿದರು.

    ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಸುಲಭ-ಸರಳವಾಗಿ ಅರ್ಜಿಗಳನ್ನು ಸಲ್ಲಿಸುವ ಹಾಗೆ ಮಾಡುವುದು ನಮ್ಮ ಉದ್ದೇಶ. ಈ ಸಲುವಾಗಿ ಸಾಫ್ಟ್ ವೇರ್ ಉನ್ನತೀಕರಣ ಕೂಡ ಮಾಡಲಾಗುತ್ತಿದೆ. ಕೊನೆ ಹಂತದ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

    ಪ್ರಾಧಿಕಾರದ ಸಹಾಯವಾಣಿಯ ಸಾಫ್ಟ್ ವೇರ್ ಕೂಡ ಉನ್ನತೀಕರಿಸುತ್ತಿದ್ದು, ಒಮ್ಮೆಗೇ ಸಾವಿರ ಜನರು ಕರೆ ಮಾಡಿದರೂ ಅದನ್ನು ನಿರ್ವಹಿಸುವ ಸಾಮರ್ಥ್ಯವೃದ್ಧಿಸಲಾಗಿದೆ. ಇದರಿಂದ ಅನುಮಾನಗಳಿಗೆ ಬೇಗ ಪರಿಹಾರ ಸಿಗಲಿದೆ ಎಂದು ಸಚಿವರು ವಿವರಿಸಿದರು.


    ಕಳೆದ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳ ರಾಂಕಿಂಗ್ ಅನ್ನು ಕೇವಲ ಸಿಇಟಿ ಪರೀಕ್ಷೆಯ ಅಂಕಗಳನ್ನು ಆಧಾರಿಸಿಯೇ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ವಿವರಿಸಿದ್ದಾರೆ.

    ಸಾಮಾನ್ಯವಾಗಿ ಕೆಇಎನಲ್ಲಿ ಸಿಇಟಿ ಮತ್ತು ದ್ವಿತೀಯ ಪಿಯುಸಿ- ಎರಡೂ ಪರೀಕ್ಷೆಗಳ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡೇ ರಾಂಕಿಂಗ್ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಅದೇ ರೀತಿ ಮಾಡಲಾಗಿದೆ. ಆದರೆ, ಕಳೆದ ಬಾರಿ ಕೋವಿಡ್ ಇದ್ದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೇವಲ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧಾರಿಸಿಯೇ ರಾಂಕಿಂಗ್ ನೀಡಲಾಗಿತ್ತು. ಆ ವರ್ಷದ ವಿದ್ಯಾರ್ಥಿಗಳಿಗೆ ಅದೇ ನಿಯಮ ಈಗಲೂ ಅನ್ವಯವಾಗುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.

    ಕಳೆದ ವರ್ಷದವರೇ ಸುಮಾರು 24 ಸಾವಿರ ಮಂದಿ ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅವರೆಲ್ಲರೂ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಸಿಇಟಿ ರಾಂಕಿಂಗ್ ಪ್ರಕಟಿಸಿ ಎನ್ನುವ ಒತ್ತಾಯ ಮಾಡುತ್ತಿದ್ದು, ಇದನ್ನು ಒಪ್ಪಲು ಸಾಧ್ಯ ಇಲ್ಲ ಎನ್ನುವ ಉತ್ತರವನ್ನು ರಮ್ಯಾ ಅವರು ಕೊಟ್ಟಿದ್ದಾರೆ.

    ಒಂದು ವೇಳೆ ಇವರ ಮನವಿಯನ್ನು ಪರಿಗಣಿಸಿದರೆ ಕಳೆದ ಬಾರಿ ಕೇವಲ ಸಿಇಟಿ ಪರೀಕ್ಷೆ ಮೇಲೆ ರಾಂಕಿಂಗ್ ಪಡೆದು ಈಗ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    1. ಅಫೂರ್ವ ಟಂಡನ್
    2. ಸಿದ್ಧಾರ್ಥ್ ಸಿಂಗ್
    3. ಆತ್ಮಕೂರಿ ವೆಂಕಟ ಮಾಧವ ಶ್ರೀರಾಮ್.
    4. ಆರ್ ಕೆ ಶ್ರೀಧರ್
    5. ವಿಶಾಲ್ ಬೈಸಾನಿ
    6. ಕೆ ವಿ ಸಾಗರ್
    7. ವಿ.ಮಹೇಶಕುಮಾರ್
    8. ಜಿ ವಿ ಸಿದ್ಧಾರ್ಥ್
    9. ವಿ. ಸಾತ್ತ್ವಿಕ್
      (ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳು)

    Karnataka CET:30ರಂದು ಸಿಇಟಿ ಫಲಿತಾಂಶ

    BENGALURU JULY 25

    ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ-CET) ಫಲಿತಾಂಶವನ್ನು ಇದೇ 30ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಸೋಮವಾರ ಈ ವಿಚಾರ ತಿಳಿಸಿರುವ ಅವರು, ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿತ್ತು’ ಎಂದರು.

    ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್ ಸಿ ಮತ್ತು ಐಸಿಎಸ್ಇ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. ಈಗ ಅವರ ಫಲಿತಾಂಶ ಬಂದಿದ್ದು, ಸಿಇಟಿ ಬರೆದಿದ್ದ ಈ ವಿದ್ಯಾರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ತಮ್ಮ ಅಂಕಗಳನ್ನು ನಾಳೆ (ಜು.26) ಸಂಜೆಯೊಳಗೆ ಅಪ್ಲೋಡ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

    7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಕೆಐಟಿ -KIT-ದರ್ಜೆಗೆ; ಕಾರ್ಯಪಡೆ ರಚನೆ

    BENGALURU JULY 23

    ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 7 ಕಾಲೇಜುಗಳನ್ನು ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರೊ.ಶಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್ ನಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬೆಂಗಳೂರಿನ ಎಸ್.ಕೆ.ಎಸ್.ಜೆ.ಐ.ಟಿ. ಕಾಲೇಜನ್ನು ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಸಡಗೋಪನ್ ಅವರು ಬೆಂಗಳೂರಿನ ಐಐಐಟಿಯ ಸ್ಥಾಪಕ ನಿರ್ದೇಶಕರು.

    ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ ಆಗಿ ಬೆಳೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.

    ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು
    ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

    ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರ್ಯಪಡೆಯು ಈ ಕಾಲೇಜುಗಳ ಉನ್ನತೀಕರಣಕ್ಕೆ ಎರಡು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.

    ಅಲ್ಲದೆ, ಈ ಕಾಲೇಜುಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಚಟುವಟಿಕೆಗಳನ್ನು ಸೂಚಿಸಲಿದೆ ಎಂದು ಸಚಿವರು ನುಡಿದಿದ್ದಾರೆ.

    ಪರಿಣತರಾದ ಪ್ರೊ.ಎಲ್ ಎಸ್ ಗಣೇಶ್, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್ ರಾವ್, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್ ಮತ್ತು ಪ್ರೊ. ವೈ ನರಹರಿ ಅವರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

    error: Content is protected !!