ಸುಮಾ ವೀಣಾ
“ನಾವಾಡುವ ನುಡಿಯೇ ಕನ್ನಡ ನುಡಿ , ನಾವಿರುವಾ ತಾಣವೇ ಗಂಧದ ಗುಡಿ… ಸಾಲುಗಳನ್ನು ಕೇಳದವರ್ಯಾರು? ಇದು ಎಲ್ಲರಿಗು ತಿಳಿದಿರುವಂತೆ ಚಿ. ಉದಯಶಂಕರ್ ಸಾಹಿತ್ಯದ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದ . ಪಿ. ಬಿ. ಶ್ರೀನಿವಾಸ್ ರವರು ಹಾಡಿದ ಗೀತೆ. ಕನ್ನಡ ನಾಡನ್ನು ಗಂಧದ ಗುಡಿಯ ಶ್ರೀಮಂತಿಕೆಯಲ್ಲಿ ಸ್ಥಾಯಿ ಗೊಳಿಸಿದ ಗೀತೆ.
ನವೆಂಬರ್ ಒಂದು ಮತ್ತೆ ಬಂದಿದೆ ಮತ್ತೆ ಸಂಭ್ರಮ ಮನೆ ಮಾಡಿದೆ ಸಂಭ್ರ,ಮವನ್ನು ಇಮ್ಮಡಿಗೊಳಿಸುವುದು ಸಂಗೀತ ಸಾಹಿತ್ಯ ಅಲ್ಲವೇ!, ಕನ್ನಡ ನಾಡು, ನುಡಿ ಮತ್ತು ಸಿನಿಮಾ ಗೀತೆಗಳಿಗೆ ಅವಿನಾಭಾವ ಸಂಬಂಧ. ಇಂಥ ನಾಡಿನ ಕುರಿತ ಶ್ರೇಷ್ಟ ಗೀತೆಗಳನ್ನು ಅಮರಗೊಳಿಸಿದ ಕೀರ್ತಿ ಕನ್ನಡ ಚಿತ್ರರಂಗಕ್ಕೆ ಸಲ್ಲಬೇಕಾಗುತ್ತದೆ.
ಕಳೆದ ತಿಂಗಳ ಅವಧಿಯಲ್ಲಿಯೇ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಹಾಗು ಎಸ್. ಪಿ. ಬಿ ಯಂಥ ಗಾಯಕರನ್ನು ಕಳೆದುಕೊಂಡಿದ್ದೇವೆ. ಇದು ಕನ್ನಡಿಗರಿಗೆ ಬರಿಸಲಾಗದ ನಷ್ಟ. ಈ ಇಬ್ಬರು ಮಹನೀಯರೇ ಅಲ್ಲದೇ ಚಿತ್ರಗೀತೆಗಳ ಮೂಲಕವೇ ಕನ್ನಡತನವನ್ನು ಯಶಸ್ವಿಯಾಗಿ ಕನ್ನಡಿಗರಗರ ಮನೆ ಮನಗಳಲ್ಲಿ ಅನುರಣನಗೊಳಿಸಿದವರಲ್ಲಿ , ಸಾಹಿತಿಗಳು, ಗಾಯಕರು, ನಟರು ಇದ್ದಾರೆ.
ಜಿವಿ ಅಯ್ಯರ್, ಚಿ ಉದಯಶಂಕರ್,ಪುಟ್ಟಣ್ಣ ಕಣಗಾಲ್, ಕಣಗಾಲ್ ಪ್ರಭಾಕರಶಾಸ್ತ್ರಿ, ಜಿ.ಕೆ ವೆಂಕಟೇಶ್, ರಾಜನ್ ನಾಗೇಂದ್ರ, ಪೀಠಾರಾಂ ನಾಗೇಶ್ವರ ರಾವ್, ಪಿಬಿ ಶ್ರೀನಿವಾಸ್, ಕಲ್ಪನಾ,ಡಾ, ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಎಸ್ ಪಿ ಬಿ. ಪ್ರಮುಖರು . ಇವರು ನಮ್ಮ ನಡುವೆ ಇಲ್ಲದೆ ಇದ್ದರೂ ಶಾರೀರದ ಮೂಲಕ ನಮ್ಮೊಡನೆ ಇದ್ದಾರೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಇವರುಗಳ ನಿರ್ದೇಶನ,ಸಾಹಿತ್ಯ, ಸಂಗೀತ,ಗಾಯನ , ನಟನೆಯ ಮೂಲಕ ಅವರನ್ನು ನೆನಪಿಸಿಕೊಳ್ಳುವ ಚಿಕ್ಕ ಪ್ರಯತ್ನವಿದು.
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ
“ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ” ಕನ್ನಡಿಗರಲ್ಲಿ ಏಕತೆಯನ್ನು ಬಯಸಿದ ಈ ಹಾಡು ‘ಕಣ್ತೆರೆದು ನೋಡು’ ಚಿತ್ರದ್ದು. ಸಾಹಿತ್ಯ ಜಿವಿ ಅಯ್ಯರ್ ಅವರದ್ದು ಗಾಯಕರು ಜಿ.ಕೆ. ವೆಂಕಟೇಶ್ ಅವರು. ಹಾಡಿನ ಧಾಟಿಯಲ್ಲೇ ಕನ್ನಡಿಗರನ್ನು ಒಗ್ಗಟ್ಟಿನ ಹಾದಿಗೆ ಕರೆದ ಗೀತೆ.
‘ಕುಲವಧು’ ಚಲನಚಿತ್ರದ “ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ” ಗೀತೆ.ಗೋವಿಂದ ಪೈ ರವರ ರಚನೆ. ಕರ್ನಾಟಕ ಏಕೀಕರಣಕ್ಕೂ ಪೂರ್ವದಲ್ಲಿ ರಚಿಸಿದ ಗೀತೆ. ಕನ್ನಡಿಗರ ತಾಯಿ ಎಂಬ ಶೀರ್ಷಿಕೆಯ ಇದು ಮಕ್ಕಳ ಗೀತೆಯಾದರೂ ಹಿರಿಯರಿಗೆ ಹೇಳಿರುವುದೇ ಹೆಚ್ಚು. ಕನ್ನಡ ನಾಡನ್ನು ತಾಯಿಯೆಂದು ಹೇಳಿ ನಿನ್ನ ಮುಖವನ್ನು ತೋರಿಸು ಎಂದು ಕವಿ ಆಕೆಯನ್ನು ಆಹ್ವಾನಿಸುತ್ತಾರೆ. ದೀಪದ ಕೆಳಗೆ ಕತ್ತಲು ಎಂಬಂತೆ ಕನ್ನಡಿಗರು ಪರರ ನುಡಿಗೆ ಮಾರು ಹೋಗುತ್ತ ಇದ್ದಾರೆ. ಕಸ್ತೂರಿಯ ಪರಿಮಳ ತನ್ನಲೇ ಇದ್ದರೂ ಆ ಕಸ್ತೂರಿಮೃಗ ನಿರ್ಲಕ್ಷ್ಯ ತೋರಿಸುವಂತೆ ಕನ್ನಡಿಗರು ಇದ್ದಾರೆ . ಈ ಗೀತೆಯಲ್ಲಿರುವ ‘ಹರಸು ತಾಯೆ, ಸುತರ ಕಾಯೆ’ ಎಂಬ ಮಾತುಗಳಿಗೆ ಬೆಲೆ ಕಟ್ಟಲಾಗದು. ನಡೆ ಕನ್ನಡ, ನುಡಿ ಕನ್ನಡ ಎಂಬ ಮಾತುಗಳು ಇದೇ ಗೀತೆಯದ್ದು. ಚಲನಚಿತ್ರದಲ್ಲಿ ನಟಿ ಲೀಲಾವತಿಯವರು ಮಕ್ಕಳಿಗೆ ಶಿಕ್ಷಕಿಯಾಗಿ ಹೇಳುವಂತೆ ಚಿತ್ರೀಕರಿಸಲಾಗಿದೆ. ಇದಕ್ಕೆ ಧ್ವನಿಯಾಗಿರುವುದು ಎಸ್. ಜಾನಕಿಯವರ ಕೊರಳು. ಇಲ್ಲಿ ಕನ್ನಡಿಗರ ಮಹಾನ್ ಕವಿಗಳು, ಶಿಲ್ಪ ಕಲೆ, ಇತಿಹಾಸ, ಭೌಗೋಳಿಕ ವೈವಿಧ್ಯತೆಯನ್ನೂ ವರ್ಣಿಸಲಾಗಿದೆ.
‘ಪೋಸ್ಟ್ ಮಾಸ್ಟರ್ ಚಿತ್ರ’ದಲ್ಲಿ ಪಿ.ಬಿ ಶ್ರೀನಿವಾಸ ಹಾಡಿರುವ ಗೀತೆ “ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ” ಎಂಬ ಅನನ್ಯ ಸಾಲುಗಳನ್ನು ಹೊಂದಿದೆ . ಕನ್ನಡಿಗರಿಗೆ ನಿಜವಾದ ದಿಗ್ದರ್ಶಕಳು ಕನ್ನಡಾಂಬೆ ಎನ್ನುವುದನ್ನು ಒಪ್ಪಿತವಾಗಿಸಿದ ಹಾಡು. ಏನೇ ಭಿನ್ನಾಭಿಪ್ರಾಯಗಳು ಇದ್ದರೂ “ಹೊಂದಿ ಬಾಳದ ಸುತರ ಹೊಸಬೆಸುಗೆಯಲಿ ಬಿಗಿದು ಒಂದು ಗೂಡಿಸು ತಾಯೇ” ಎಂಬುದಾಗಿ ಒಗ್ಗಟ್ಟನ್ನು ಬಯಸಿದ ಕನ್ನಡಿಗರು ಮತ್ತೆ ಮತ್ತೆ ಅನುಸಂಧಾನಿಸಿಕೊಳ್ಳಬೇಕಾದ ಹಾಡು.
ವೈಜ್ಞಾನಿಕವಾಗಿ ರಚನೆಯಾಗಿರುವ ಕನ್ನಡ ವರ್ಣಮಾಲೆ
ಪ್ರಾಪಂಚಿಕ ಭಾಷಾ ಅಧ್ಯಯನದಲ್ಲಿ ಅತ್ಯಂತ ವೈಜ್ಞಾನಿಕವಾಗಿ ರಚನೆಯಾಗಿರುವುದು ಕನ್ನಡ ವರ್ಣಮಾಲೆ. ಅಂಧಕಾರದಿಂದ ಬಿಡುಗಡೆಗೊಳಿಸಿ ಜ್ಞಾನಶಾಖೆಗೆ (ಅ- ಜ್ಞ ದವರೆಗಿನ ಅಕ್ಷರಗಳು)ಒಗ್ಗಿಸುವ ಗುಣ ಕನ್ನಡಕ್ಕಿದೆ.”ಅಆ ಇಈ ಕನ್ನಡದ ಅಕ್ಷರ ಮಾಲೆ” ಈ ಹಾಡಂತೂ ಕನ್ನಡಿಗರ ಪಾಲಿಗೆ ಅಕ್ಷಯವಾದದ್ದೆ. ಆರ್. ಎನ್. ಜಯಗೋಪಾಲ್ ಅವರು ರಚಿಸಿದ ಹಾಡಿಗೆ ಶರೀರವಾದವರು ರಾಜ್ ಕುಮಾರ್ ಮತ್ತು ಕಲ್ಪನಾ, ನಿರ್ದೇಶಕ ಪುಟ್ಟಣ್ಣಕಣಗಾಲ್, ಸಂಗೀತ ನಿರ್ದೇಶಕ್, ಎಂ. ರಂಗರಾವ್.ಕರುಳಿನ ಕರೆ ಚಿತ್ರ ದ ಹಾಡು “ಆಟ ಊಟ ಊಟ ಕನ್ನಡ ಒಂದನೆ ಪಾಠ, ಇದ್ದವರೆಲ್ಲಾ ಇಲ್ಲದವರಿಗೆ ನೀಡಲೇ ಬೇಕು” ಎಂದಿರುವುದು ಮೌಲ್ಯ ಪರಿಚಾರಿಕೆಯನ್ನೂ ಮಾಡಿವೆ.
‘ವೀರ ಸಂಕಲ್ಪ’ ಚಿತ್ರದಲ್ಲಿ ಪೀಠಾರಾಮ್ ನಾಗೇಶ್ವರ ರಾವ್ ಹಾಡಿರುವ “ ಹಾಡು ಬಾ ಕೋಗಿಲೆ , ನಲಿದಾಡು ಬಾರೆ ನವಿಲೆ, ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲಿ” ಎಂದು ತಾಯಿ ಭುವನೇಶ್ವರಿಗೆ ಯಾವಾಗಲೂ ಜಯವಾಗಲಿ ತನ್ಮೂಲಕ ಕನ್ನಡಿಗರಿಗೂ ಒಳಿತೇ ಆಗುತ್ತದೆ ಎಂಬ ಸದಾಶಯವನ್ನು ಮೂಡಿಸುವ ಗೀತೆಯಾಗಿದೆ.
‘ವಿಜಯನಗರದ ವೀರಪುತ್ರ’ ಚಿತ್ರದಲ್ಲಿ ಪಿ.ಬಿ .ಶ್ರೀನಿವಾಸ್ ಹಾಡಿದ “ಅಪಾರಶಿಲ್ಪಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು” ಹಾಡಂತೂ ವಿಶ್ವಮಟ್ಟದಲ್ಲಿ ಕನ್ನಡ ನಾಡು ಅಪಾರ ಶಿಲ್ಪ ಕಲೆಯಿಂದಲೆ ಗುರುತಿಸಿಕೊಳ್ಳುವಂತೆ ಮಾಡಿದೆ. ಆ ಪರಂಪರೆಯನ್ನು ಉಳಿಸಿಕೊಳ್ಳಬೇಕಾದದ್ದು ನಾಡಿನ ಭಾಷಿಕನ ಕರ್ತವ್ಯ ಎಂದು ಎಷ್ಟು ಚೆನ್ನಾಗಿ ಹೇಳಿದ್ದಾರೆ ಅಲ್ವೆ!ಈ ಕನ್ನಡ ಮಣ್ಣಿನ ಅಂತಃಸತ್ವವೆ ಹಾಗೆ ಅದರ ಸೆಳೆತ ಇಲ್ಲಿ ಬಿಟ್ಟು ನಮ್ಮನ್ನು ಹೊರಹೋಗಗೊಡದು ಎಂಬುದನ್ನು “ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ” ಎಂಬ ಬಯಕೆ ಹಾಗು ನಿರ್ಧಾರವನ್ನು ಒಟ್ಟಿಗೆ ಹೇಳುವ ಹಾಡು ಈ ಹಾಡನ್ನು ಅಷ್ಟೇ ಒಪ್ಪಿತವಾಗುವಂತೆ ಹಾಡಿರುವ ಖ್ಯಾತಿ ಎಸ್. ಪಿ .ಬಿ ಯವರಿಗೆ ಸಲ್ಲುತ್ತದೆ.
“ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ” ಕನ್ನಡ ಸಿಹಿ,ಸವಿ ನುಡಿ ಎಂಬುದನ್ನು ಕನ್ನಡಿಗರಿಗೆ ಮತ್ತೆ ಮತ್ತೆ ನೆನಪಿಸಿದ ಆ ಆಹ್ಲಾದವನ್ನು ತರಿಸಿದ ಗೀತೆ . ಇದು ‘ಚಲಿಸುವ ಮೋಡಗಳು’ ಚಿತ್ರದ ಗೀತೆ ಇದಕ್ಕೆ ಸಂಗೀತ ಸಂಯೋಜನೆ ಮಾಡಿದವರು ರಾಜನ್ ನಾಗೇಂದ್ರ , ಗಾಯಕರು ರಾಜ್ ಕುಮಾರ್ ಮತ್ತು ಎಸ್ ಜಾನಕಿ . ಇದು ಕನ್ನಡ ಭಾಷೆಯ ಮಹತ್ವವನ್ನು ಹೇಳುವ ಗೀತೆಗಳಲ್ಲೊಂದು.
ಕನ್ನಡ ನಾಡಿನ ರಮಣಿಯರು ಸಾಧಾರಣವಲ್ಲ “ವೀರ ರಮಣಿಯರು” ಎಂಬುದನ್ನು ‘ನಾಗರಹಾವು’ ಚಲನಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಹಾಡಿರುವ ಗಂಡು ಹಾಡೇ ಎನ್ನಬಹುದು. ಚಿತ್ರದುರ್ಗದ ಕಲ್ಲಿನ ಕೋಟೆಯ ಇತಿಹಾಸವನ್ನು ಗಂಡು ಭೂಮಿಯ ವೀರ ನಾರಿಯರು ಎಂದು ಹಾಡಿರುವುದು ಇಂದಿಗೂ ನಮ್ಮ ಪಕ್ಕದಲ್ಲೇ ಹಾಡುತ್ತಿದ್ದಾರೇನೋ ಎಂದನ್ನಿಸುತ್ತದೆ. “ಕರ್ನಾಟಕದ ಇತಿಹಾಸದಲಿ ಬಂಗಾರ ಯುಗದ ಕತೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ” ಎಂದು ‘ಕೃಷ್ಣ ರುಕ್ಮಿಣಿ’ ಚಿತ್ರದಲ್ಲಿ ಎಸ್ ಪಿ.ಬಿಯವರು ಹಾಡಿದ್ದು, ವಿಷ್ಣುವರ್ಧನ್ ಅವರು ನಟಿಸಿದ್ದು ಕರ್ನಾಟಕ ಇತಿಹಾಸಕ್ಕೊಂದು ಚಿಕ್ಕ ಕೈ ಪಿಡಿ ಇದ್ದಂತೆ ಇದೆ.
ಕರುನಾಡ ತಾಯಿ ಸದಾ ಚಿನ್ಮಯಿ
‘ನಾನು ನನ್ನ ಹೆಂಡ್ತಿ’ ಚಿತ್ರದಲ್ಲಿ ಹಂಸಲೇಖ ಸಾಹಿತ್ಯದ ,ಶಂಕರ್ ಗಣೇಶರ, ಸಂಗೀತ ನಿರ್ದೇಶನ ಮಾಡಲ್ಪಟ್ಟ, ಎಸ್. ಪಿ. ಬಾಲಸುಬ್ರಮಣ್ಯಂ ಹಾಡಿದ “ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯ ಭೂಮಿ ನಮ ದೇವಾಲಯ” ಎಂದು ಕನ್ನಡ ತಾಯಿಯನ್ನು ಚಿನ್ಮಯಿಯಾಗಿ ಈ ನಾಡನ್ನೇ ದೇಗುಲವಾಗಿಸಿ, ಕನ್ನಡ ನಾಡಿನ ಪಾವಿತ್ರ್ಯತೆಯನ್ನು ಕನ್ನಡಿಗರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದೆ.
‘ಆಕಸ್ಮಿಕ’ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಕೇಳಿದರೆ ಡಾ. ರಾಜ್ ಅವರ ಧ್ವನಿಯಲ್ಲಿಯೇ ಕೇಳಬೇಕು ಅನ್ನಿಸುತ್ತದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣನ್ನೆ ಮೆಟ್ಟಬೇಕು ಅನ್ನಿಸುತ್ತದೆ. “ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ”, “ರೋಮಾಂಚನವಿದು ಈ ಕನ್ನಡ … ಕಸ್ತೂರಿ..” ಎಂದು ಎಸ್ ಪಿಬಿ ಯವರು ಹಾಡಿದಂತೆ ನಾವೂ ಹಾಡಬೇಕೆನಿಸುತ್ತದೆ. ಕನ್ನಡ ಮಣ್ಣಿನ ನಿಜ ಸೆಳೆತ ಇದು ಅಲ್ವೆ!
‘ಕರುಳಿನ ಕರೆ’ ಚಿತ್ರದ ಹಾಡಿನಂತೆ ‘ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ” ನೀತಿ , ಕಲಿತ ಅಕ್ಷರದ ಮಹಾಮನೆಗೆ ಬೆನ್ನು ಹಾಕಬೇಡ ಎಂಬ ಸತ್ಯವನ್ನೂ, “ಒಂದೇ ತಾಯಿಯ ಮಕ್ಕಳೂ ನಾವು ಒಂದುಗೂಡಬೇಕು” ಎಂಬ ನಿರ್ಧಾರ,” ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು” ಎಂದು ಮಣ್ಣಿನ ರಕ್ಷಣೆಯನ್ನು ಮಾಡಬೇಕು ಎನ್ನುವ ಸದಾಶಯಗಳು ನಮ್ಮದಾಗಿರಲಿ ಎಂದು ಬಯಸುತ್ತ ಚಲನ ಚಿತ್ರ ಗೀತೆಗಳ ಮೂಲಕವೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಬಯಸುತ್ತೇನೆ. “ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು” , “ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲಿ”, “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”.
ಸುಮಾ ವೀಣಾ
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.‘’ನಲವಿನ ನಾಲಗೆ’”ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.