ಕೊರೋನಾ ತಟ್ಟದ ದೇಶವಿಲ್ಲ, ನಷ್ಟವನ್ನು ಅನುಭವಿಸಿಲ್ಲದ ಸಮಾಜವಿಲ್ಲ– ಎನ್ನುವಂತೆ ಈ ಹೊಸವ್ಯಾಧಿ ತನ್ನ ಅಲೆಗಳನ್ನು ಇಡೀ ಭೂಗೋಲಕ್ಕೇ ಅಪ್ಪಳಿಸಿದೆ.
ಪ್ರಪಂಚವೆಂಬುವ ಈ ದೊಡ್ಡ ಹಡಗಿನ 195 ಕ್ಯಾಪ್ಟನ್ ಗಳು ಅವರವರದೇ ಕೋಣೆಯಲ್ಲಿ ಕುಳಿತು ತಮಗೆ ತಿಳಿದಂತೆ ಹುಟ್ಟುಹಾಕುತ್ತ ಸಾಗುತ್ತಿದ್ದಾರೆ.ಎಲ್ಲರ ಮೇಲೂ ತಮ್ಮ ದೇಶಗಳಲ್ಲಿ ಕೊರೋನಾ ಸಾವುಗಳನ್ನು ಮತ್ತು ಆರ್ಥಿಕ ನಷ್ಟಗಳನ್ನು ಕಡಿಮೆ ಮಾಡುವ ಗುರುತರ ಜವಾಬ್ದಾರಿಯಿದೆ. ಇವರೆಲ್ಲ ತಮ್ಮ ಶಕ್ತಿಯಿದ್ದಷ್ಟು ದೇಶಗಳನ್ನು ಮುನ್ನೆಡುಸುತ್ತ ನಾಯಕತ್ವಕ್ಕೆ ಎದುರಾದ ಸಮಸ್ಯೆಗೆ ಎದೆಕೊಟ್ಟು ನಿಂತಿದ್ದಾರೆ. ಕೈಲಾಗದವರು ಎಂದಿನಂತೆ ತಮ್ಮದೇ ಮಿತಿಯಲ್ಲಿ ನಿಟ್ಟುಸಿರಿಟ್ಟಿದ್ದಾರೆ.
ಲಕ್ಷಾಂತರ ಜನರು ಸತ್ತರು ಪರವಾಗಿಲ್ಲ ತಮ್ಮ ಮರು ಆಯ್ಕೆಯಾದರೆ ಸಾಕು ಎಂದು ಸಾವು ಮತ್ತು ನೋವಿನ ಸಾಧ್ಯತೆಗಳ ನಡುವೆ ಸಿಲುಕಿ ನಲುಗಿರುವ ಜನರನ್ನು ಒಡೆದು ಆಳುವ ರಾಜಕೀಯವನ್ನು ಕೆಲವರು ಮಾಡುತ್ತಿದ್ದಾರೆ. ಜನಸಾಮಾನ್ಯರ ಬವಣೆಯ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಏಕ ಪಕ್ಷೀಯ ನಿಲುವಿನ ರಾಜಕಾರಣಿಗಳು ಇದೇ ಕಾರಣಕ್ಕೆ ವಿಶ್ವದಾದ್ಯಂತ ಟೀಕೆಗೊಳಗಾಗಿದ್ದಾರೆ.
ಆಫ್ರಿಕಾದ 54 ದೇಶಗಳು, ಏಶಿಯಾದ 48 ದೇಶಗಳು,ಯೂರೋಪನ 44 ದೇಶಗಳು, ಲ್ಯಾಟಿನ್ ಅಮೆರಿಕಾದ 33 ದೇಶಗಳು, ಉತ್ತರ ಅಮೆರಿಕಾದ 2 ಮತ್ತು ಓಶಿಯಾನದ 14 ದೇಶಗಳು ಕೊರೋನಾ ಯಾನದಲ್ಲಿ ಅಲ್ಪ-ಸ್ವಲ್ಪ ಸಮಯ ವ್ಯತ್ಯಾಸದಲ್ಲಿ ತಮ್ಮ ಯಾತ್ರೆ ಶುರುಮಾಡಿದ ಕಾರಣ ಎಲ್ಲರೂ ಒಂದೇ ಬಗೆಯ ನೀರಿನಲ್ಲಿಲ್ಲ. ಕೆಲವರು ಮೊದಲ ಅಲೆಯ ಜೊತೆಗಿನ ಹೊಡೆದಾಟವಾದರೆ, ಮತ್ತೆ ಹಲವರು ಎರಡನೆಯ ಅಲೆಯನ್ನು ಎದುರಿಸುತ್ತಿದ್ದಾರೆ. ಹಾಗಂತ ಎಲ್ಲರೂ ಒಂದೇ ಬಗೆಯ ಹೋರಾಟ ನಡೆಸಿಲ್ಲ. ಇನ್ನೂ ಆಶ್ಚರ್ಯವೆಂದರೆ ಪ್ರಪಂಚದ ಅತ್ಯಂತ ಶ್ರೀಮಂತ ಮತ್ತು ಶಕ್ತ ರಾಷ್ಟ್ರವಾದ ಅಮೆರಿಕಾ ಜಗತ್ತೇ ಅಚ್ಚರಿಪಡುವಂತೆ ಕೊರೋನಾ ಹೋರಾಟದಲ್ಲಿ ಮುಗ್ಗರಿಸಿಬಿದ್ದಿದೆ. ‘ಕೋವಿಡ್ ರಾಜಕೀಯ ‘ ದೇಶದ ಜನತೆಯನ್ನು ಇಬ್ಭಾಗವಾಗಿಸಿದೆ. ಅಕ್ಟೋಬರ್ 24 ರಂದು ಅಂದರೆ ಅಮೆರಿಕಾದ ಚುನಾವಣೆಯ ಹತ್ತು ದಿನಗಳ ಹಿಂದೆ ಕೂಡ ದಿನವೊಂದರಲ್ಲಿ 80,000 ಕ್ಕೂ ಹೆಚ್ಚು ಹೊಸ ಸೋಂಕುಗಳು ಅಮೆರಿಕಾದಲ್ಲಿ ಪತ್ತೆಯಾಗುತ್ತಿವೆ.
ಈ ಕಾರಣ ಅಲ್ಲಿನ ಪರಿಣಿತರು ಕೊರೋನಾ ಮುಗಿಯುವ ವೇಳೆಗೆ ಅಮೆರಿಕಾದಲ್ಲಿ ಅಧಿಕೃತವಾಗಿ ಮೂರು ಲಕ್ಷಕ್ಕೂ ಹೆಚ್ಚು ಜನರು ಕೊರೋನಾ ಕಾರಣ ಸಾಯಬಹುದೆಂಬ ಅಂದಾಜಿಸಿದ್ದರೆ ಅನಧಿಕೃತವಾಗಿ ಆದರೆ ವಾಸ್ತವದಲ್ಲಿ ಈ ಸಂಖ್ಯೆ ಅರ್ಧ ಮಿಲಿಯನ್ ತಲುಪಲಿದೆ ಎನ್ನುವ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ದೇಶಗಳು ಪುಟ್ಟವಾದರೂ ಈ ಹೋರಾಟದಲ್ಲಿ ಅಮೋಘವಾದ ಕಟ್ಟು ನಿಟ್ಟಾದ ನಿರ್ಧಾರಗಳನ್ನು ತೆಗೆದುಕೊಂಡು ಅತ್ಯಂತ ಕಡಿಮೆ ನಷ್ಟದೊಂದಿಗೆ ಇದುವರೆಗಿನ ಕೊರೋನಾ ಪೀಡಿತ ಜೌಗಿನಿಂದ ಹೊರಬಂದಿದ್ದಾರೆ ಮತ್ತು ತಮ್ಮ ಪ್ರಜೆಗಳಲ್ಲಿ ಭರವಸೆಗಳನ್ನು ಮೂಡಿಸಿದ್ದಾರೆ.
ವೈರಾಣುವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ನ್ಯೂಝಿಲ್ಯಾಂಡ್ ನ ಲೇಬರ್ ಪಕ್ಷದ ಪ್ರಧಾನಿ ಶ್ರೀಮತಿ ಜಸಿಂಡ ಅರ್ಡೆನ್ ಳ ಸರ್ಕಾರ ಅಕ್ಟೋಬರ್ 17 ರಂದು ಅತ್ಯಧಿಕ ಮತಗಳೊಡನೆ ಮರು ಆಯ್ಕೆಯಾಗಿ ಬಂದಿತು. ಒಂದು ಎಲೆಕ್ಷನ್ ನಲ್ಲಿ ಗೆಲ್ಲಲು ಬಹಳ ಕಾರಣಗಳಿರಬಹುದಾದರೂ ಕೋವಿಡ್ ಪ್ಯಾಂಡೆಮಿಕ್ ಬಂದಾದ ನಂತರ ನಡೆಯುತ್ತಿರುವ/ ನಡೆಯಲಿರುವ ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿ ಕೋವಿಡ್ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಮತ್ತು ವಹಿಸಲಿದೆ. ಗೆದ್ದು ಬಂದ ಪ್ರತಿ ರಾಜಕೀಯ ಪಕ್ಷಗಳಿಗೆ ಕೋವಿಡ್ ದಾಳಿಯಿಂದುಂಟಾದ ಆರ್ಥಿಕ ಹಾನಿಯಿಂದ ತಮ್ಮ ತಮ್ಮ ದೇಶಗಳನ್ನು ಹೊರನಡೆಸುವುದು ಕೂಡ ಅತ್ಯಂತ ಕಠಿಣ ಅಗ್ನಿಪರೀಕ್ಷೆಯಾಗಲಿದೆ. ಇನ್ನು ಆಳುವ ಪಕ್ಷಗಳಂತೂ ಕೊರೋನಾ ಕೇಂದ್ರಿತ ವಿಚಾರಗಳ ಸುತ್ತಲೇ ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಕೇಂದ್ರೀಕರಿಸಬೇಕಿದೆ.
ಕಾರಣ ಇಷ್ಟೆ. ಕೊರೋನಾ ಬರೀ ಜನರಿಗೆ ಮಾತ್ರ ಸೋಂಕನ್ನು ಹರಡಲಿಲ್ಲ. ಬದಲು ಜಗ್ತತಿನ ರಾಜಕೀಯಕ್ಕೂ ಸೋಂಕನ್ನು ಹರಡಿದೆ.ಕೊರೋನಾ ಸೋಂಕನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡು ರಾಜಕೀಯ ಹೊಸ ನಗ್ನಾವತಾರವನ್ನು ಜನರಿಗೆ ತೋರಿಸಿದೆ. ಎಲ್ಲ ರಾಜಕೀಯ ಚರ್ಚೆ,ರಾಜಕೀಯ ವಿರೋಧ ಮತ್ತು ಸ್ಪರ್ಧೆಗಳಿಗೆ ಇದೀಗ ಕೊರೋನ ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಅಮೆರಿಕಾದ ಪ್ರಜಾ ಪ್ರಭುತ್ವದ ಮಹತ್ತರ ಚುನಾವಣೆಯ ಪ್ರತಿ ಚರ್ಚೆಗಳು ಕೊರೋನಾ ಸಂಬಂಧಿತ ವಿಚಾರಗಳ ಬಗ್ಗೆಯೇ ಕೇಂದ್ರೀಕೃತವಾಗಿದೆ.
ಹಲವು ದೇಶಗಳು , ಹಲವು ಕೋವಿಡ್ ತಂತ್ರಗಳು
ಪ್ರಪಂಚದ ದೇಶಗಳು ಕೊರೋನಾವನ್ನು ಎದುರಿಸಲು ವಿಶಾಲ ಅರ್ಥದಲ್ಲಿ ಒಟ್ಟು 19 ಬಗೆಯ ಭಿನ್ನ ದೋರಣೆಗಳನ್ನು ಅಥವಾ ತಂತ್ರಗಳನ್ನು ಅನುಸರಿಸಿದವು ಎನ್ನಲಾಗಿದೆ. ಈ ಬಗ್ಗೆ ಅಧ್ಯಯನಗಳನ್ನು ನಡೆಸಿ ಇಲ್ಲಿಯವರೆಗೆ ಯಾವ ದೇಶಗಳು ಉತ್ತಮ ನಿಭಾವಣೆ ತೋರಿದ್ದಾವೆ ಎನ್ನುವ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ಸಂಬಂಧಿತ ಘಟಕವೊಂದು ತನ್ನ ಮೊದಲ ವರದಿಯನ್ನು ಸಲ್ಲಿಸಿದೆ.
ಆ ವರದಿಯ ಪ್ರಕಾರ ಕೊರೋನಾ ನಿಭಾವಣೆಯಲ್ಲಿ ದಾರುಣವಾಗಿ ಮತ್ತು ನಿಸ್ಸಂಶಯವಾಗಿ ಸೋತ ದೇಶವೆಂದರೆ ಅದು ಅತ್ಯಂತ ಶಕ್ತಿಯುತ ದೇಶವಾದ ಅಮೆರಿಕಾ- ಎಂದು ಈ ವರದಿ ಹೇಳುತ್ತದೆ.
ಅಷ್ಟೇ ಅಲ್ಲ, ಮಿಕ್ಕ 14 ದೇಶಗಳಿಗೆ ಹೋಲಿಸಿದರೆ, ಯಾವುದೇ ಕಾರಣಗಳಿಂದ ಸತ್ತವರ ಸಂಖ್ಯೆ ಅಂದರೆ, ಪ್ರತಿ ಲಕ್ಷ ಜನಕ್ಕೆ ಎನ್ನುವ ಲೆಕ್ಕದಲ್ಲಿ ಕೊರೋನಾ ಪರೀಕ್ಷೆಯಿಲ್ಲದೆ ಇನ್ಯಾವುದೋ ಕಾರಣಕ್ಕೆ ಸತ್ತರು ಎಂಬಂತ ಸಾವುಗಳು ಕೂಡ ಅಮೆರಿಕಾದಲ್ಲಿಯೇ ಅತ್ಯಧಿಕವಾಗಿವೆ.
ಕೊರೋನಾ ವಿಚಾರದಲ್ಲಿ ಯಾವುದೇ ಲಾಕ್ ಡೌನ್ ಇಲ್ಲದೆ ಮತ್ತು ಅತಿಕಡಿಮೆ ನಿರ್ಬಂಧಗಳ ಮೂಲಕ ನಿಭಾಯಿಸಿದ ಸ್ವೀಡನ್ನಿನಂಥ ದೇಶಕ್ಕೆ ಹೋಲಿಸಿದರೂ ಅಮೇರಿಕಾದಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೇಕಡ 29 ಜಾಸ್ತಿಯಿರುವುದು ಬಹುತೇಕ ಅಮೆರಿಕನ್ನರಿಗೆ ನುಂಗಲಾರದ ತುತ್ತಾಗಿದೆ.
ಇಟಲಿಗಿಂತ ಮುಂದುವರೆದ ದೇಶವಾದರೂ ಮೇ 10 ರ ನಂತರ ಇಟಲಿಯಲ್ಲಿ ನಡೆದ ಮಾರಣಹೋಮದಷ್ಟು ಕಡಿಮೆ ಸಾವು ಸಂಭವಿಸಿದ್ದಿದ್ದರೆ ಇನ್ನೂ ಒಂದು ಲಕ್ಷ ಜನರ ಜೀವಗಳನ್ನು ಅಮೆರಿಕಾದಲ್ಲಿ ಉಳಿಸಬಹುದಿತ್ತು ಎನ್ನುವ ಈ ಅಧ್ಯಯನಕಾರರು ’ಅತ್ಯಂತ ಗಂಭೀರವಾದ ’ ತಪ್ಪುಗಳು ಅಮೆರಿಕಾದಲ್ಲಿ ನಡೆದವು ಎಂಬುದನ್ನು ಒಪ್ಪುತ್ತಾರೆ.
ಸರ್ವಾಧಿಕಾರ ಅಥವಾ ಮಿಲಿಟರಿ ಆಡಳಿತಗಳಿರುವ ದೇಶಗಳ ಮುಖಂಡರುಗಳ ಸಿಂಹಾಸನಗಳನ್ನೂ ಕೊರೋನಾ ಅಲೆಗಳು ಅಲುಗಿಸಿವೆ. ಅಲ್ಲಿ ರಸ್ತೆಗಿಳಿದು ಹೋರಾಟ ನಡೆಸುತ್ತಿರುವವರು ಪ್ರತಿಪಕ್ಷ ಅಥವಾ ವಿರೋಧಿಗಳು ಮಾತ್ರವಲ್ಲ ಬದಲು ತಮ್ಮ ಹೊಟ್ಟೆಪಾಡಿಗೆ ಹೊಡೆತ ಬಿದ್ದಿರುವ ಸಾಮಾನ್ಯ ಜನರು. ಹಾಗಾಗಿ ಇದೀಗ ಕೊರೋನಾ ಸಂಭಂದಿತ ವಿಚಾರಗಳು ಪ್ರಜೆಗಳು ಮತ್ತು ಪ್ರಭುಗಳನ್ನು ತನ್ನ ಸೆಳೆತದ ವರ್ತುಲದಲ್ಲಿ ಇಟ್ಟುಕೊಂಡಿದೆ.
ಈಗಾಗಲೇ ರಾಜಮನೆತನದ ಆಡಳಿತಾಧಿಕಾರಕ್ಕೆ ವಿರೋಧವಿದ್ದ ಥೈಲ್ಯಾಂಡಿನಲ್ಲಿ ಕೊರೋನಾ ಅತಿದೊಡ್ಡ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಅಲ್ಲಿನ ರಾಜಮನೆತನ ಮತ್ತು ಮಿಲಿಟರಿ ಶಕ್ತಿಗಳು ಕೊನೆಗೊಂಡು ಹೊಸ ಬಗೆಯ ಅಡಳಿತವನ್ನು ಆಗ್ರಹಿಸಿರುವ ಲಕ್ಷಾಂತರ ಜನರು ಬೀದಿಗಿಳಿದಿದ್ದಾರೆ. ಇದರ ಹಿಂದೆ ಕೋವಿಡ್ ಸೃಷ್ಟಿಸಿರುವ ಆರ್ಥಿಕತೆಯ ಅರಾಜಕತೆ ಈಗ ಮೂಲ ಇಂಧನವಾಗಿ ಕೆಲಸಮಾಡುತ್ತಿದೆ ಎನ್ನಲಾಗಿದೆ.
ಜಗತ್ತಿನ ಜನರನ್ನು ಕಾಡುವ ಇನ್ನಿತರ ನೂರಾರು ಬಗೆಯ ಸಮಸ್ಯೆಗಳನ್ನೆಲ್ಲ ಹಿಂದಕ್ಕೆ ಸರಿಸಿ ಕೋವಿಡ್ ಇದೀಗ ತಾನೇ ಅಗ್ರಜನಂತೆ ಮೆರೆಯುತ್ತಿದೆ. ಸಧ್ಯಕ್ಕೆಇಡೀ ಪ್ರಪಂಚವನ್ನೇ ತನ್ನ ಕಿರುಬೆರಳಿನ ಮೇಲೆ ಕೊರೋನಾ ವೈರಸ್ಸು ಬುಗರಿಯಂತೆ ತಿರುಗಿಸುತ್ತಿದೆ ಎಂದರೆ ಅಡ್ಡಿಯಿಲ್ಲ.
ಚಳಿಗಾಲ ಮತ್ತು ಕೋವಿಡ್ ವೈರಸ್ಸಿನ ವರ್ಧನೆ
ಈ ನಡುವೆ ಚಳಿಗಾಲದ ಶುರುವಿನಿಂದ ಮತ್ತಷ್ಟು ಕಸುವು ತುಂಬಿಕೊಳ್ಳಲು ಕೋವಿಡ್ ತಯಾರಾಗಿದೆ.ಅದನ್ನು ಬಗ್ಗು ಬಡಿಯಲು ದೇಶ ವಿದೇಶಗಳು ಮತ್ತೆ ಸಜ್ಜಾಗಬೇಕಾಗಿದೆ. ಏಕೆಂದರೆ ನಮ್ಮ ಉಸಿರಾಟಕ್ಕೆ ತೊಂದರೆ ಕೊಡಬಲ್ಲ ವೈರಾಣುಗಳು ಚಳಿಗಾಲದಲ್ಲಿ ಜಾಸ್ತಿ ವೃದ್ಧಿಯಾಗುವುದು ಸರ್ವೇ ಸಾಮಾನ್ಯ. ಚಳಿಯ ದೇಶಗಳಲ್ಲಿ ಕೋವಿಡ್ ಇಲ್ಲದ ಸಮಯದಲ್ಲೂ ಚಳಿಗಾಲ ಅತಿಹೆಚ್ಚಿನ ವೈರಾಣು ಸೋಂಕುಗಳನ್ನು ಮತ್ತು ಸಾವುಗಳನ್ನು ನೋಡುತ್ತವೆ.ಅದರ ಜೊತೆಗೆ ಈ ವರ್ಷ ಚಳಿಗಾಲದ ಶುರುವಾತಿನಲ್ಲಿಯೇ ಕೋವಿಡ್ ನ ಎರಡನೆಯ ಅಲೆ ಕಾಳ್ಗಿಚ್ಚಿನಂತೆ ಯೂರೋಪಿನ ದೇಶಗಳಲ್ಲಿ ಹರಡುತ್ತಿದೆ.
ಈ ಕಾರಣ ಅಕ್ಟೋಬರ್ 12 ರಂದೇ ಇಂಗ್ಲೆಂಡ್, ಇಡೀ ದೇಶ ಕೊರೋನಾದ ಎರಡನೆಯ ಅಲೆಯ ಮಾಧ್ಯಮಿಕ ಅಪಾಯದಲ್ಲಿದೆ ಎಂದು ಘೋಷಿಸಿತು. ಪಕ್ಕದ ಪುಟ್ಟ ದೇಶ ವೇಲ್ಸ್ ಎರಡನೇ ರಾಷ್ಟ್ರೀಯ ಲಾಕ್ ಡೌನ್ ಅನ್ನು ಘೋಷಿಸಲು ಅನುವಾಗಿದ್ದೇವೆ ಎಂಬ ಹೇಳಿಕೆ ನೀಡಿತು. ಅಕ್ಟೋಬರ್ 23 ರಿಂದ 17 ದಿನಗಳ ಎರಡನೇ ಲಾಕ್ ಡೌನ್ ನ್ನು ಕೂಡ ಶುರುಮಾಡಿತು. ಅಕ್ಟೋಬರ್ 14 ರಂದು ಉತ್ತರ ಐರ್ಲ್ಯಾಂಡ್ ಎರಡು ವಾರಗಳ ಎರಡನೇ ಅರೆ ಲಾಕ್ ಡೌನ್ ಅನ್ನು ಘೋಷಿಸಿತು.ಫ್ರಾನ್ಸ್, ಜರ್ಮನಿ ದೇಶಗಳು ಅಂದೇ ಕರ್ಫ್ಯೂ ಘೋಷಿಸಿದವು. ಅಕ್ಟೋಬರ್ 24 ರ ವೇಳೆಗೆ ಫ್ರಾನ್ಸಿನ ಅಸ್ಪತ್ರೆಯ ಅರ್ಧಕ್ಕಿಂತ ಹೆಚ್ಚು ತೀವ್ರನಿಘ ಘಟಕದ ಬೆಡ್ಡುಗಳು ರೋಗಿಗಳಿಂದ ತುಂಬಿಹೋದವು.
ಪೋಲ್ಯಾಂಡ್ ದೇಶ 19 ಅಕ್ಟೋಬರ್ ವೇಳೆಗೆ ಕೋವಿಡ್ ಆಸ್ಪತ್ರೆಯ ಮಂಚಗಳ ತೀವ್ರ ಅಭಾವವನ್ನು ಘೋಷಿಸಿತು.ಮೇಲಿನ ಈ ಯೂರೋಪಿಯನ್ ದೇಶಗಳ ಜೊತೆಗೆ ಇನ್ನಿತರ ಯೂರೋಪಿಯನ್ ದೇಶಗಳು ಚಳಿಗಾಲದಲ್ಲಿ ಆಸ್ಪತ್ರೆಗಳಿಗೆ ಕೊರೋನಾ ರೋಗಿಗಳ ನೂಕು ನುಗ್ಗಲಾಗದಿರಲಿ ಎಂಬ ಎಚ್ಚರಿಕೆಗಳನ್ನು ವಹಿಸಿವೆ.
ಭಾರತ ಇನ್ನೂ ಮೊದಲ ಅಲೆಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಹಂತದಲ್ಲಿರುವಾಗಲೇ ಮೇಲಿನ ಹಲವು ದೇಶಗಳು ಎರಡನೆಯ ಅಲೆಯ ಉಗಮ ಸ್ಥಾನಗಳನ್ನು ಹತ್ತಿಕ್ಕಲು ಮತ್ತು ನಿಯಂತ್ರಿಸಲು ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂದು ಮಾರಣ ಹೋಮ ನಡೆಯದಂತೆ ತಡೆಯುವುದೇ ಅವರ ಉದ್ದೇಶವಾಗಿದೆ.ಅದನ್ನು ನೋಡಿದಾಗ ಸ್ವಲ್ಪ ಹಿಂದಿರುವ ಭಾರತ ಕ್ರಮಿಸಬೇಕಾದ ಹಾದಿ ಕೂಡ ಬಹಳ ದೊಡ್ಡದಿದೆ ಎನ್ನುವುದು ವೇದ್ಯವಾಗುತ್ತದೆ.ಈ ಮಧ್ಯೆ ಲಸಿಕೆಯೊಂದು ಲಭ್ಯವಾದರೆ ಭಾರತದ ಪರಿಸ್ಥಿತಿ ಎರಡನೆಯ ಅಲೆಯ ಕಾಟವಿಲ್ಲದೆ ಸುಧಾರಿಸಬಹುದೇನೋ?
ಹಲವು ಬಗೆಯ ಕಿಚ್ಚುಗಳನ್ನು ಒಡಲಲ್ಲಿಟ್ಟುಕೊಂಡು, ಕೊರೋನಾದ ಹೊಸ ಆಘಾತವನ್ನು ಆಶ್ಚರ್ಯಕರ ರೀತಿಯ ಸಮಾಧಾನದಲ್ಲಿ ಎದುರಿಸುತ್ತಿರುವ ಭಾರತದಲ್ಲಿ ಸಾವಿನ ಸಂಖ್ಯೆ ಅಧಿಕೃತ ವರದಿಗಳ ಪ್ರಕಾರ ಮೊದಲಿಂದಲೂ ಕಡಿಮೆಯಿದ್ದದ್ದು ಜನರಲ್ಲಿ ಧೈರ್ಯವನ್ನು ಹೆಚ್ಚಿಸಿದೆ. ಸಾವು ಮತ್ತು ಸೋಂಕಿನ ಸಮಸ್ಯೆಗಳು ಕಡಿಮೆಯಾಗುತ್ತಿರುವುದು ಮನಸ್ಸಿಗೆ ಒಂದಷ್ಟು ಸಮಾಧಾನವನ್ನು ಸೃಷ್ಟಿಸಿದೆ.ಜೊತೆಗೆ ಅತ್ಯಧಿಕ ಕ್ಷೇತ್ರಗಳಿಂದ ಆಯ್ಕೆಯಾಗಿ ಬಂದಿರುವ ಸರ್ಕಾರ ಅಧಿಕಾರದಲ್ಲಿರುವ ಕಾರಣ ಇದ್ದದ್ದರಲ್ಲಿ ಕೊರೋನ ಸಂಬಂಧಿತ ರಾಜಕೀಯ ಗೊಂದಲಗಳು ಕಡಿಮೆ ಎನ್ನಬಹುದು. ಆದರೆ ಚುನಾವಣೆ ಇತ್ಯಾದಿ ರಾಜಕೀಯ ಸನ್ನಿವೇಶಗಳು ಮೇಲೆದ್ದಕೂಡಲೇ ಕೊರೋನಾ ಸಂಬಂಧಿತ ಸಮಸ್ಯೆಗಳನ್ನು ಗೌಣೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಅಪವಾದಕ್ಕೆ ಭಾರತದ ರಾಜಕಾರಣವೂ ಹೊರತಾಗಿಲ್ಲ. ಕೋವಿಡ್ ಶುರುವಾಗುವ ಮೊದಲೇ ಆರ್ಥಿಕ ಹಿನ್ನೆಡೆಯಲ್ಲಿದ್ದ ಭಾರತಕ್ಕೆ ಕೋವಿಡ್ ಸಮಸ್ಯೆಗಳು ಕರಾಳತೆಯನ್ನು ಬೆರೆಸಿರುವ ಕಾರಣ ಕೋವಿಡ್ ನ ಉಪಸ್ಥಿತಿಯನ್ನು ಕಡೆಗಣಿಸಿ ಜೀವನ ಸಾಗಿಸಬೇಕಾದ ಅನಿವಾರ್ಯ ಅಗತ್ಯಗಳಿವೆ.
ಈ ನಡುವೆ ಭಾರತದ ನವರಾತ್ರಿ, ದೀಪಾವಳಿ ಮತ್ತು ಪಾಶ್ಚಾತ್ಯರ ಹಾಲೋವೀನ್ ಮತ್ತು ಕ್ರಿಸ್ಮಸ್ . ಎಲ್ಲವೂ ವರ್ಚುಯಲ್ ಸಂಭ್ರಮಕ್ಕೆ ಮಿತಗೊಂಡಿವೆ. ಮನಸ್ಸಿನ ಸಮಾಧಾನಕ್ಕೆ ಈ ಹಬ್ಬಗಳು ಕೇವಲ ನೋಟಕ್ಕೆ ಸಿಕ್ಕುವಷ್ಟು ದಕ್ಕಿದರೂ ಸಾಕೆನ್ನುವಂತಾಗಿರುವುದು ಸುಳ್ಳಲ್ಲ.
ಕೋವಿಡ್ ಕಾರಣ ಭವಿಷ್ಯ ನಿಜಕ್ಕೂ ಬದಲಾಗಬಲ್ಲದೇ?
ಇಂಗ್ಲೆಂಡಿನ ವೇಮತ್ ಎನ್ನುವ ಸಮುದ್ರ ತಟದ ನಗರದಲ್ಲಿ ’ ಬ್ಲಾಕ್ ಡೆತ್ ಈ ಬಂದರಿನ ಮೂಲಕ 1348 ರಲ್ಲಿ ಇಂಗ್ಲೆಂಡಿಗೆ ಬಂದಿತು. ಇಂಗ್ಲೆಂಡಿನ 30-50% ಜನರನ್ನು ಅದು ಕೊಂದಿತು “ ಎಂಬ ಫಲಕವಿದೆ. ಆಗ ಬ್ಲಾಕ್ ಡೆತ್ ಕ್ರೈಮಿಯಾ ಅಥವಾ ಚೀನಾ ದೇಶಗಳಿಂದ ಬಂದಿತು ಎಂದು ನಂಬಲಾಗಿತ್ತು.
ಶತಮಾನಗಳ ನಂತರ ಯೂರೋಪಿಯನ್ ಅನ್ವೇಷಕರು ಕೊಂಡುಹೊಯ್ದು ನೀಡಿದ ಖಾಯಿಲೆಗಳು ಇತರೆ ಖಂಡಗಳ ಕೆಲವು ಮೂಲವಾಸಿಗಳನ್ನೇ ಇಲ್ಲವಾಗಿಸಿದ್ದೂ ಇದೆ. ಹೀಗೆ ನೂರಾರು ವರ್ಷಗಳಿಂದ ಮನುಕುಲವನ್ನು ಕಾಡುತ್ತಿರುವ ಇಂಥಹ ವಿಶ್ವವ್ಯಾಪಿ ಹೊಸವ್ಯಾಧಿಗಳು ಬಹುಬಾರಿ ಪ್ರಪಂಚದ ಇತಿಹಾಸವನ್ನು ಬದಲಿಸಿವೆ. ಆಗಲೂ ಈಗಿನ ಕಾಲದಂಥವೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಲ್ಲೋಲ ಕಲ್ಲೋಲಗಳು ಸೃಷ್ಟಿಯಾಗಿದ್ದವೆಂಬುದನ್ನು ಮರೆಯಲು ಸಾಧ್ಯವಿಲ್ಲ.
ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಇಂದಿಗೂ ಹಲವು ಮಹತ್ತರ ಮತ್ತು ಮೂಲಭೂತವಾದ ತಾರತಮ್ಯಗಳು ಉಳಿದುಕೊಂಡಿರುವುದನ್ನು ನೋಡಿದಾಗ ಇದು ಮನುಷ್ಯರ ಮೂಲಭೂತ ಗುಣ ಸ್ವಭಾವಗಳ ಮೇಲೆ ಬೆಳಕು ಚೆಲ್ಲುತ್ತವೆ. ಬದಲಾವಣೆಗಳು ನಡೆದಂತೆಲ್ಲ ಒಂದಷ್ಟು ಸ್ವಾರ್ಥ ಮತ್ತು ಹಿನ್ನಡೆತ ಕಾದಿರುತ್ತದೇನೋ ಎನ್ನಿಸುತ್ತದೆ. ಆದರೆ ಪ್ರತಿಬಾರಿ, ಮತ್ತೆ ಆ ತಪ್ಪುಗಳನ್ನೆಲ್ಲ ಸರಿಪಡಿಸುವತ್ತ ಮನುಷ್ಯತ್ವ ತುಡಿಯುವುದನ್ನು ನಾವು ಕಾಣಬಹುದು.
ಚುನಾವಣೆಗಳು, ಯುದ್ಧ, ಸ್ವಾರ್ಥ, ವಂಚನೆ, ಹಣ ಇಂಥ ವಿಚಾರಗಳಲ್ಲೇ ಮತ್ತೆ ಮತ್ತೆ ಮುಳುಗುವ ಈ ಸಾಮಾನ್ಯ ಪ್ರಪಂಚ ಕೋವಿಡ್ ನಂತಹ ಹೊಸ ಪಿಡುಗುಗಳು ಬಂದಾಗ ಅಥವಾ ಪ್ರಕೃತಿ ವಿಕೋಪಗಳು ಕಾಣಿಸಿಕೊಂಡಾಗ ಒಂದಷ್ಟು ಕಾಲ ಆ ಬಗ್ಗೆಯೇ ಗಮನಹರಿಸಬೇಕಾದ ಅನಿವಾರ್ಯತೆಗೆ ತಳ್ಳಲ್ಪಡುತ್ತವೆ.ಆದರೆ ಇವೆಲ್ಲ ಆತಂಕಗಳು ಸ್ವಲ್ಪ ತಹಬದಿಗೆ ಬಂದ ಕೂಡಲೇ ತನ್ನ ಎಂದಿನ ಸ್ವರೂಪಕ್ಕೆ ಮರಳಿಬಿಡಲು ತಹ ತಹಿಸುತ್ತದೆ.
ಭೂತಕಾಲದ ಈ ವಿಚಾರಗಳನ್ನು ಗಮನಿಸಿದಾಗ ಇಂದಿನ ಕೋವಿಡ್ ತಂದಿರುವ ಮಾನವೀಯ ಬದಲಾವಣೆಗಳು ನಿಧಾನವಾಗಿ ಮಾಸಲಾಗಿ ಮನುಷ್ಯನ ಮೂಲಭೂತ ವರ್ಣಗಳೇ ಮತ್ತೆ ಭವಿಷ್ಯತ್ತಿನಲ್ಲಿ ಮೆರೆಯುತ್ತವೇನೋ ಎಂಬ ಜಿಗ್ನಾಸೆಗಳು ಕಾಡದಿರುವುದಿಲ್ಲ. ಹಾಗೆಯೇ ಪ್ಲೇಗ್ ನ ಕಾಲಕ್ಕೆ ಹೋಲಿಸಿದರೆ ಇಂದಿನ ಪ್ರಪಂಚ ಗುರುತಿಸಲಾಗದಷ್ಟು ಬದಲಾಗಿರುವುದನ್ನು ನೋಡಿದಾಗ ಆಶಾವಾದದ ಒರತೆ ಬತ್ತುವುದೂ ಇಲ್ಲ.
ಕೊರೋನಾ ಹೊಸದು ಆದರೆ ಜಗತ್ತು ಹಳೆಯದು !?
ಏನೇ ಇದ್ದರೂ ಕೋವಿಡ್ ಮತ್ತೊಂದು ಮುಖ್ಯ ಪ್ರಶ್ನೆಯನ್ನು ಎತ್ತುತ್ತದೆ.
ಈಗಿನ ಪ್ರಪಂಚದಲ್ಲಿರುವಂಥ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಾಸಗಳು ಹೀಗೇ ಮುಂದುವರೆದರೆ ಯಾವುದೇ ಪ್ರಾಪಂಚಿಕ ಸಮಸ್ಯೆಗಳನ್ನು ದೇಶಗಳು ಒಂದೇ ರೀತಿಯಲ್ಲಿ ನಿಭಾಯಿಸಲಾರವು. ಇನ್ನು, ಸ್ವಾರ್ಥ, ಜಂಭ , ರಾಜಕೀಯ ಹುನ್ನಾರಗಳು- ಕೊರೋನಾ ಇದ್ದರೂ ಹೋದರೂ ಮುಂದುವರೆಯುವಂಥವು. ಇದೇ ಕಾರಣಕ್ಕೆ ಪ್ರಪಂಚವನ್ನು ಈ ಸಂದರ್ಭದಲ್ಲಿ ಕೊರೋನಾ ಒಗ್ಗೂಡಿಸುವುದಕ್ಕಿಂತ ಒಡೆದು ತೋರಿಸಿದ್ದೇ ಹೆಚ್ಚು ಎನ್ನಿಸುತ್ತದೆ.
ಜನರ ನಡುವಿನ ರಾಜಕೀಯ, ಆರ್ಥಿಕ ಮತ್ತು ಬೌದ್ಧಿಕ ವ್ಯತ್ಯಾಸಗಳು ಮತ್ತು ದೇಶಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ವ್ಯತ್ಯಾಸಗಳನ್ನು ಎತ್ತಿಹಿಡಿಯುವುದರಲ್ಲೇ ಕೋವಿಡ್ ಹೆಚ್ಚು ಯಶಸ್ವಿಯಾಗಿದೆ. ಕೊರೋನಾಗೆ ವ್ಯಾಕ್ಸಿನ್ ದೊರೆಯುವಂತಾದಾಗ ಕೂಡ ಇವೇ ಭಿನ್ನತೆಗಳು ಮುಂದುವರೆಯುವುದರಲ್ಲಿ ಅನುಮಾನವಿಲ್ಲ.
ಈ ವ್ಯತ್ಯಾಸಗಳು ನಿಯಂತ್ರಣವಿಲ್ಲದಂತೆ ಬೆಳೆಯುವುದು ಮನುಷ್ಯರ ಉಳಿವಿಗೆ ಸಂಚಕಾರವಾಗಬಲ್ಲದು.ಈ ಕಾರಣದಿಂದಾಗಿ ಪ್ರಪಂಚದ ಐದು ಸಾವಿರ ಅಧ್ಯಯನಕಾರರು, ವಿಚಾರವಂತರು ಇಂತಹ ತಾರತಮ್ಯಗಳನ್ನು ಕಡಿಮೆಮಾಡುವ ಗಮ್ಯದೆಡೆಗೆ ತಮ್ಮ ಕೆಲಸಗಳನ್ನು ಕೇಂದ್ರೀಕರಿಸುವ ವಿಚಾರಕ್ಕೆ ಒಗ್ಗೂಡಿ ಸಹಿ ಹಾಕಿದ್ದಾರೆ. ಇದರಲ್ಲಿ ಜನಾಂಗೀಯ ದ್ವೇಷ ಇತ್ಯಾದಿ ಮೂಲ ಭೂತ ವಿಚಾರಗಳೂ ಇವೆ.ವಿಶ್ವಸಂಸ್ಥೆಗೆ ಹಲವು ದೇಶಗಳು ಒಗ್ಗೂಡಿ ಬಿಲಿಯನ್ ಗಟ್ಟಲೆ ಹಣವನ್ನು ನೀಡಿ ಸಮಾನತೆಯ ಅಸಮತೋಲನ ಮತ್ತಷ್ಟು ಹೆಚ್ಚಾಗದಿರುವಂತಹ ಎಚ್ಚರಿಕೆಗಳನ್ನು ರೂಪಿಸುವ ಯೋಜನೆಗಳನ್ನು ಜಾರಿಗೆ ತರುವಂತೆ ಆಗ್ರಹಿಸಿವೆ.
ಜನಸಾಮಾನ್ಯರ ಪ್ರತಿಕ್ರಿಯೆಗಳು
ಉದ್ದೇಶಗಳು ಭಿನ್ನವಾದರೂ, ಸರ್ಕಾರಗಳು ಕೊರೋನಾ ಸಮಸ್ಯೆಯನ್ನು ಗಂಭೀರವಾಗಿ ಅಥವಾ ಅತ್ಯಂತ ಲಘುವಾಗಿ ತೆಗೆದುಕೊಂಡಂತೆಯೇ ಪ್ರತಿ ದೇಶದ ಜನರು ಅಥವಾ ಪ್ರತಿ ವ್ಯಕ್ತಿ ಕೊರೋನಾ ಸಮಸ್ಯೆಯನ್ನು ತಮ್ಮದೇ ಕೋನಗಳಿಂದ ನೋಡಿದ್ದಾರೆ.ನಾನಾ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ.ಹೇಗೆ ನಿಭಾಯಿಸಬೇಕು ಎನ್ನುವುದು ಅವರವರ ಆಯ್ಕೆಯಾಗುತ್ತಿದೆ. ಕೆಲವರು ಕೊರೊನಾ ಇಲ್ಲವೇ ಇಲ್ಲವೆನ್ನುವಂತ ವರ್ತನೆಯಲ್ಲಿ ನಡೆದುಕೊಳ್ಳುತ್ತಿದ್ದರೆ ಮತ್ತೆ ಕೆಲವರು ಅದರಿಂದ ದೂರವಿರಲು, ಅದನ್ನು ತಡೆಗಟ್ಟಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಿದ್ದಾರೆ.
ಇತ್ತೀಚೆಗೆ ನಾನು ಭೇಟಿ ಮಾಡಿದ ಮಧ್ಯ ವಯಸ್ಸಿನ ವ್ಯಕ್ತಿಯೋರ್ವರು ಅವರಿಗೆ ತಿಳಿದ ಚಿಕ್ಕ ವಯಸ್ಸಿನ ಕೆಲವರು ಕಳೆದ ಆರು ತಿಂಗಳಿಂದ ಮನೆ ಬಿಟ್ಟು ಹೊರಗೆ ಬಂದಿಲ್ಲದ ವಿಚಿತ್ರದ ಬಗ್ಗೆ ಹೇಳಿಕೊಂಡು ನಗಾಡಿದರು. ತಮ್ಮ ಕಾಂಪೌಂಡಿನಲ್ಲಿ, ಕೈ ದೋಟದಲ್ಲಿ ಕೂಡ ಕಾಲಿಡದೆ ತಮ್ಮನ್ನು ತಾವು ಕೈದಿಗಳನ್ನಾಗಿ ಮಾಡಿಕೊಂಡ ಈ ಜನರ ಮಾನಸಿಕ ಸ್ವಾಸ್ಥ್ಯ ಮತ್ತು ದೈಹಿಕ ಸ್ವಾಸ್ಥ್ಯಗಳು ನಿಜಕ್ಕೂ ಹಾಳಾಗಬಹುದಾದ ಸಾಧ್ಯತೆಗಳ ಬಗ್ಗೆ ಕಾಳಜಿಯ ಮಾತುಗಳನ್ನಾಡಿದರು.
ಅದೇ ದಿನ ಭೇಟಿ ಮಾಡಿದ ಕೆಲವರು ಹಿರಿಯರು ಎಗ್ಗೇ ಇಲ್ಲದಂತೆ ಮೈ ಮೇಲೆ ಬೀಳುವಷ್ಟು ಹತ್ತಿರಕ್ಕೇ ಬರುವ ಚಿಕ್ಕ ವಯಸ್ಸಿನವರ ಮೇಲೆ ತೀವ್ರ ಅಸಮಾಧಾನಗಳನ್ನು ವ್ಯಕ್ತಗೊಳಿಸಿದರು. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ಓಡಾಡುವ ಕಿರಿಯ ವಯಸ್ಸಿನವರು ಕೊರೊನಾ ಕ್ಯಾರಿಯರ್ಸ್ ಆಗಿರುವ ಸಾಧ್ಯತೆಗಳು ಅವರನ್ನು ಹೊರಗೆ ಬರಲು ಕೂಡ ಹೆದರುವಂತೆ ಮಾಡಿರುವುದನ್ನು ಹೇಳಿಕೊಂಡು ಆತಂಕವನ್ನ ವ್ಯಕ್ತಪಡಿಸಿದರು.
ಭಿನ ಭಿನ್ನ ದೇಶಗಳಂತೆಯೇ, ಬೇರೆ ಬೇರೆ ಜನರ ನಡುವೆ ಈ ಕೋವಿಡ್ ಪರಿಸ್ಥಿಯ ಬಗ್ಗೆ ಸಾಮ್ಯವಾದ ನಡವಳಿಕೆಗಳಿಲ್ಲ. ಜನರ ಓದು, ಪದವಿ, ಹಣ ಮತ್ತು ಸವಲತ್ತುಗಳು ಅವರ ನಡವಳಿಕೆಗಳನ್ನು ಬಿಂಬಿಸುತ್ತಲೂ ಇಲ್ಲ.
ಆದರೆ ಮಿಕ್ಕ ಬಹುತೇಕರು ಕಾಲದ ಗೊಂಬೆಗಳಾಗಿ ನಿಯಮಗಳನ್ನು ಪಾಲಿಸುತ್ತ, ಬದುಕಿನ ಸಮತೋಲನಗಳನ್ನು ಕಾಯ್ದುಕೊಳ್ಳಲು ದುಡಿಯುತ್ತಿದ್ದಾರೆ. ಲೋಕದ ಚಿತ್ರ-ವಿಚಿತ್ರಗಳನ್ನು ಕಣ್ಣು ತುಂಬಿಕೊಳ್ಳುತ್ತ ಮುಂಬರುವ ’ಮೊದಲಿನಂತಹ ’ ದಿನಗಳ ಹಾದಿಯನ್ನು ಕಾಯುತ್ತಿದ್ದಾರೆ.
Photo by Anna Shvets from Pexels