ಎಲ್ಲ ಬಂಧನಗಳ ಕಿತ್ತೊಗಿವಿಕೆಯೇ ಮುಕ್ತಿ! ಸ್ವತಂತ್ರತೆಯ ಪರಮಾವಧಿಯೇ ಮುಕ್ತಿ!ಇದು ಹೀಗಿರಬೇಕು,ಅದು ಹೀಗಿರಬೇಕು ಅನ್ನುವ ವಿಧಿ,ವಿಧಾನಗಳ ಇಲ್ಲವಾಗುವಿಕೆಯೇ ಮುಕ್ತಿ! ಅದು ಯಾವುದೇ ತರಹದ ಜಂಜಡಗಳ ಸಂಕೋಲೆಗಳಿಲ್ಲದ ಆನಂದದ ಮಹಾಸಾಗರ! ಕೊಚ್ಛೆ,ಕೊಳಕು,ತೀರ್ಥ ಎಲ್ಲವೂ ಸೇರಿ ಹರಿದು ಸಾಗರ ಸೇರುವ ನೈಸರ್ಗಿಕ ನಿಯಮದಂತೆ,ಜೀವವು ಸಂಸಾರದ ಜಂಜಡಗಳಲ್ಲಿ ಬೆರೆತು,ಈಸಿ,ಜೈಸಿ, ಸೇರಬೇಕಾದ ಮಹಾದಾನಂದದ ಸಾಗರ!
ಕತ್ತಲು, ಬೆಳಕುಗಳಿಲ್ಲದ, ಸುಖ ದುಃಖಗಳ ಕಲ್ಪನೆಯಿಲ್ಲದ, ಮೇಲು,ಕೀಳು,ಒಳ್ಳೆಯದು,ಕೆಟ್ಟದ್ದು ಅನ್ನುವ ಭ್ರಮಾ,ಬ್ರಾಂತಿ ಇಲ್ಲದ ಪರಂಧಾಮ! ಎಲ್ಲ ಜೀವರಾಶಿಯ ತಾಣವೂ ಅದಾಗಿದ್ದು, ಉಗಮವೂ ಒಂದು ಕಾಲಕ್ಕೆ ಅಲ್ಲಿಂದಲೇ ಮೊದಲ್ಗೊಂಡು, ಅದು ಬೇಸರವಾಗಿ ಪ್ರಾಪಂಚಿಕ ಜೀವನವನ್ನು ಜೀವವು ತಾನೇ ಆಯ್ಕೆಮಾಡಿಕೊಂಡು, ಇಲ್ಲಿಯ ಸಂಕೋಲೆಗಳಲ್ಲಿ ಸಿಕ್ಕಿಹಾಕಿಕೊಂಡು,ಬಿಡುಗಡೆಯ ಮಾರ್ಗವನ್ನು ಕಂಡುಕೊಂಡು ಮತ್ತೆ ಆ ಮಹಾದಾನಂದದ ಕಡೆಗೆ ಪಯಣಿಸುವುದೇ ಜೀವನ!
ಅಪ್ಪ, ಒಂದು ನನ್ನ ಬಾಲ್ಯದ ಮಧ್ಯಾಹ್ನದ ದಿನ ಜೀವನ,ಮುಕ್ತಿಯ ಬಗ್ಗೆ ಹೀಗೆ ಹೇಳುತ್ತಿದ್ದನ್ನು ತದೇಕ ಚಿತ್ತದಿಂದ ಕೇಳುತ್ತಿದ್ದ ನನಗೆ ಸಾವಿರ ಸಾವಿರ ಹೆಡೆಗಳ ಸರ್ಪ ನನ್ನೆದುರು ಒಮ್ಮೆಲೇ ಪ್ರತ್ಯಕ್ಷವಾದ ಅನುಭವ! ಇದು ಬಾಲ,ಇದು ತಲೆ ಅಂತ ಹೇಳಿದರೂ ಅರ್ಥವಾಗದ ಸ್ಥಿತಿ!
ಸಂದರ್ಭ ನೆನಪಿಸಿಕೊಂಡು ಹೇಳುವುದಾದರೆ,ಅದು ಮಹಾಭಾರತದ ಅರಣ್ಯಕಾಂಡದ ಪ್ರಸಂಗ. ಸಿಕ್ಕ,ಸಿಕ್ಕ ಮುನಿಗಳನ್ನು,ಸಾಧು,ಸಂತರನ್ನು ಧರ್ಮರಾಯ ಕರೆದು,ಸತ್ಕರಿಸಿ, ಧರ್ಮ,ಜೀವನ, ಮುಕ್ತಿಗಳ ಬಗ್ಗೆ ಕೇಳುತ್ತಿರುತ್ತಾನೆ. ಭೀಮ ಮತ್ತೊಂದು ಕಡೆ ಸೇಡಿನ ಬೆಂಕಿಯಿಂದ ಬೇಯುತ್ತಿರುತ್ತಾನೆ.ತದ್ವಿರುದ್ಧ ತುಮುಲಗಳನ್ನು ವ್ಯಾಸನು ಒಂದೇ ವೇದಿಕೆಯಲ್ಲಿ ಓದುಗರಿಗೆ ಪರಿಚಯಿಸುವ ಪರಿಗೆ ಅಪ್ಪ ತನ್ನ ಮೆಚ್ಚುಗೆ ಸೂಸುತ್ತಿದ್ದರೆ,ನನಗೆ ಬೇರೆಯದೇ ಕಲ್ಪನೆ ನನ್ನ ಚಿಕ್ಕ ಮೆದುಳಲ್ಲಿ ಅಚ್ಚೊತ್ತಿತ್ತು.
ಎಲ್ಲ ಬಂಧನಗಳನ್ನ ಬಿಡಿಸಿಕೊಂಡು ಪಡೆಯುವ ಮುಕ್ತಿಗೆ ಧರ್ಮ,ಆಚರಣೆಗಳ ಕಟ್ಟಲೆ/ಸಂಕೋಲೆಗಳು ಏಕೆ ಎನ್ನುವ ಪ್ರೆಶ್ನೆ ಆಗಲೇ ಕಾಡಲು ಆರಂಭಿಸಿತ್ತು. ಮೃಗತ್ವದಿಂದ ಮಾನವತ್ವ ಅಂದ್ರೆ ಸಂಕೋಲೆಗಳ ಚಕ್ರವ್ಯೂಹವಾ? ಮೃಗತ್ವ ನೈಸರ್ಗಿಕವಾದದ್ದಾದರೆ,ಮಾನವತ್ವ ನಾವು ಅವಿರ್ಭವಿಸುವುದಾ? ಸ್ವಾಭಾವಿಕವಾದದ್ದನ್ನು ನಿಯಂತ್ರಿಸಿ,ನಿಗ್ರಹಿಸಿ ನಮ್ಮದಲ್ಲ ಅನ್ನುವಂತಾದನ್ನ ಪಡೆಯುವುದು ಎಷ್ಟು ಸರಿ? ಮಾನವತ್ವವೇ ಮನುಷ್ಯನ ಹುಟ್ಟು ಗುಣವಾದರೆ, ದೈವತ್ವಕ್ಕೆ ಪ್ರಯತ್ನಿಸುವುದು ಸರಿಯಾ ಅದೂ ಎಲ್ಲ ಸ್ವಾಭಾವಿಕತೆಗಳನ್ನು ಸಂಕೋಲೆಗಳಿಂದ ಬಂಧಿಸಿ?
ಪರಮಾತ್ಮನ ಅಂಶವಾದ ಜೀವಿಗಳು,ಮುಕ್ತಿ ಎನ್ನುವ ಪರಂಧಾಮದ ಮೂಲ ನಿವಾಸಿಗಳೇ ಆಗಿದ್ದು, ಪಂಚೇಂದ್ರಿಯಗಳೆಂಬ ಮೂಲ ವೈರಿಗಳೊಡನೆ ಹೋರಾಡುತ್ತಾ,ಅವುಗಳನ್ನು ನಿಗ್ರಹಿಸಿ ಮತ್ತೆ ಆ ಪರಂಧಾಮದ ಕಡೆ ತಲುಪುವ ರೀತಿ ನನಗೆ ವಿಚಿತ್ರ ಕುತೂಹಲ ಕೆರಳಿಸುತ್ತಿತ್ತು. ಆ ಪರಂಧಾಮದ ಮಾರ್ಗಗಳು ಸಾಕಷ್ಟಿದ್ದು, ಪ್ರಪಂಚಾದ್ಯಂತ ಜೀವಿಗಳು ತಮ್ಮದೇ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ತೊಡಗಿದ್ದರೆ,ಮತ್ತೆ ಕೆಲವರು ಹಾಗೆ ತಲೆಕೆಡಿಸಿಕೊಳ್ಳದೆ, ಒಬ್ಬರು ಕಂಡುಕೊಂಡ ಮಾರ್ಗದಲ್ಲಿ ತಮ್ಮ ನಂಬಿಕೆ ಇರಿಸಿ,ಅದರಂತೆ ಅನುಸರಿಸುವುದು,ಆ ಮಾರ್ಗದರ್ಶಕರನ್ನೇ ತಮ್ಮ ಸರ್ವಸ್ವ ಅಂತ ತಿಳಿದು,ಅವರು ಹೇಳಿದ ಹಾಗೆ ನಡೆಯುವುದು ಅನಾದಿಕಾಲದಿಂದಲೂ ನಡೆದು ಬಂದಿದೆ. ಎಲ್ಲ ಮಾರ್ಗದರ್ಶಕರೂ ಒಂದಿಲ್ಲೊಂದು ಆಚರಣೆ,ಕಟ್ಟಳೆ ಹಾಕಿರುವುದು ನನ್ನ ವಿಚಿತ್ರ ಕುತೂಹಲಕ್ಕೆ ಕಾರಣವಾದದ್ದು.
ಜೀವಶಾಸ್ತ್ರದ ನೈಸರ್ಗಿಕ ನಿಯಮದಂತೆ ಜೀವಿಗಳ ಪ್ರತಿಯೊಂದು ಜೀವಕೋಶ ತಮ್ಮದೇ ಆದ ಕೆಲಸಗಳಿಗಾಗಿ ವಿಕಸತೆ ಹೊಂದಿದೆ. ಬೇಕಾಗುವುದನ್ನು ಮಾತ್ರ ವಿಕಸನಗೊಳಿಸುವಲ್ಲಿ ನಿರತವಾದ ಈ ಕ್ರಿಯೆಯಲ್ಲಿ, ಬೇಡವಾದ್ದು ವಿಕಸನ ಹೇಗಾಯ್ತು,ಏಕಾಯ್ತು? ಮತ್ತು ಬೇಡವಾದ ಈ ವಿಕಸತೆಯನ್ನು ನಿಯಂತ್ರಿಸುವುದೇ ಮುಕ್ತಿಯ ಮಾರ್ಗ ಹೇಗಾಯ್ತು?! ಮುಂದೆ ಜೀವವಿಜ್ಞಾನವನ್ನು ಕಲಿಯುವಾಗ ಇಂತಹ ಯೋಚನೆಗಳು ನನ್ನಲ್ಲಿ ಸುಪ್ತವಾಗಿದ್ದ ಮುಕ್ತಿ,ಮುಕ್ತಿಯಹಾದಿಯ ವಿಷಯಗಳನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದ್ದವು.
ನಿನ್ನ ನೀನು ಮರೆತರೇನು ಸುಖವಿದೆ….. ಮತ್ತು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ…. ಅಂದ ಸಾಹಿತಿಗಳ ವಾಕ್ಯಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಸೃಷ್ಠಿಯ ಪ್ರತಿಯೊಂದು ಜೀವಿಯೂ ತನ್ನದೇ ಆದ ಸ್ವಂತಿಕೆ ಹೊಂದಿದೆ. ಸೃಷ್ಟಿಗೆ ನಕಲು ಮಾಡಲು ಆಗಿಲ್ಲ. ಹಾಗಿದ್ದಾಗ ನಾವೇಕೆ ಮತ್ತೊಬ್ಬರ ನಕಲಾಗಬೇಕು ಎಂಬಂತಹ ಪ್ರಾಜ್ಞರ ಮಾತುಗಳು ನನಗೆ ಹಿಡಿಸಿದ್ದವು. ಸ್ವಂತಿಕೆಯನ್ನು ತಮ್ಮ ಎಳೆ ದಿನಗಳಿಂದಲೇ ಕಳೆದುಕೊಂಡು, ನಕಲು ಮಾಡುವುದೇ ಗುರಿ ಅಂತ ತಿಳಿದ ಈಗಿನ ಜನಾಂಗ ಯೌವ್ವನಾವಸ್ಥೆಯಲ್ಲೇ ದಿಕ್ಕುತಪ್ಪಿ, ಮಾನಸಿಕ ರೋಗಿಗಳಾಗುತ್ತಿರುವುದು ನನಗೆ ಸ್ವಂತಿಕೆಯ ಪ್ರೆಜ್ಞೆಯನ್ನು ಮನವರಿಕೆ ಮಾಡಿಸಿತ್ತು.
ಅಷ್ಟೇ ಅಲ್ಲ ಯಾವುದೇ ಇಂತಹ ಕಟ್ಟು ಕಟ್ಟಳೆಗಳಿಲ್ಲದೆ, ವಿಕಸಿತ ಜೀವಿಗಳ ಕೆಲಸವನ್ನಷ್ಟೇ ಮಾಡಿಕೊಂಡ ಪ್ರಾಣಿಗಳು ಇರುವಷ್ಟು ಸುಖದಿಂದ ಮನುಷ್ಯ ಇಲ್ಲ ಅಂದಮೇಲೆ, ನಾವು ಮುಕ್ತಿಯ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲವಾಗಿಸಿಕೊಂಡು ಬಿಟ್ಟೆವಾ?! ಸ್ವನಿಯಂತ್ರಣ ನಿಸರ್ಗದ ವಿರುದ್ಧವಾಗಿಬಿಟ್ಟಿತಾ? ಇತ್ತ ನೈಸರ್ಗಿಕವಾಗಿ ಬದುಕದೆ, ಅತ್ತ ಮುಕ್ತಿಗಾಗಿ ನಿಯಂತ್ರಣಗಳನ್ನೂ ಪಾಲಿಸದೆ, ಸ್ವಂತಿಕೆ ಕಳೆದುಕೊಂಡವರಾಗಿ ಕಳೆದು ಹೋಗುತ್ತಿದ್ದೇವಾ? ಇಂದಿಗೂ ಪ್ರಾಣಿಗಳು,ಹಲವಾರು ನೈಸರ್ಗಿಕ ಮಡಿಲಲ್ಲೇ ಇರುವ ಬುಡಕಟ್ಟು ಜನಾಂಗದವರು ಇರುವಷ್ಟು ಸಂತೋಷವಾಗಿ ನಾವಿಲ್ಲದಿರುವುದು, ನಾವು ಸವೆಸುತ್ತಿರುವ ದಾರಿಯಲ್ಲಿ ಏನೋ ಎಡವಟ್ಟು ಇದೆ ಅಂತ ಅನ್ನಿಸುತ್ತಿಲ್ಲವಾ?
ಪ್ರಾಣಿಗಳಲ್ಲಿ,ಅನಾಗರಿಕರಲ್ಲಿ ಇರದಿದ್ದ ಆತ್ಮಹತ್ಯೆ ಮುಕ್ತಿಮಾರ್ಗದಲ್ಲಿ ನಡೆಯುವ ಅಥವಾ ನಡೆಯುತ್ತಿರುವ ನಮ್ಮಲ್ಲಿ ಏಕೆ ಬಂತು? ಆತ್ಮಹತ್ಯೆ ಒಂದು ಉದಾಹರಣೆ ಅಷ್ಟೇ. ತಾನೂ ಬದುಕದೇ, ಸುತ್ತ ಇರುವವರನ್ನೂ ಬದುಕಲು ಬಿಡದಷ್ಟು ಕ್ರೂರಿಯಾಗಿ ಮನುಷ್ಯ ವಿಜ್ಞಾನಿ,ಜ್ಞಾನಿ,ಪೂಜ್ಯ ಅಂತ ಏನೇನೋ ಹೆಸರುಗಳಿಂದ ಕರೆಯಿಸಿಕೊಂಡು ಮೈತುಂಬಾ ಬಟ್ಟೆ,ಚಿನ್ನ ಹಾಕಿಕೊಂಡು ಗಾಳಿಯಲ್ಲಿ ಹಾರಾಡುತ್ತಿದ್ದಾನೆ,ನೀರಲ್ಲಿ ತೇಲಾಡುತ್ತಿದ್ದಾನೆ, ಗ್ರಹಗಳ ಮೇಲೆಲ್ಲ ತನ್ನ ವಸಾಹತು ಸ್ಥಾಪಿಸಿ, ದೇವರನ್ನು ಕಾಣುವ ತವಕದಲ್ಲಿದ್ದಾನೆ!
ಮನುಷ್ಯ,ಮನುಷ್ಯನಿಗೆ ಇಂದು ಹೆದರುವಷ್ಟು ವಿಕಾಸದ ದಾರಿಯುದ್ದಕ್ಕೂ ಎಲ್ಲೂ ಹೆದರಿಲ್ಲ. ಕ್ರೂರ ಮೃಗಗಳೊಂದಿಗೆ ಬದುಕುವಾಗಲೂ. ಮುಂದುವರೆದ ನಾವು ಯೋಚಿಸದ,ಮಾಡದ ಕೆಲಸಗಳೇ ಇಲ್ಲ. ನಮ್ಮ ಹಸಿವಿನ ಅಗತ್ಯಗಳಿಗೆ ಒಂದು ಕಾಲದಲ್ಲಿ ಪ್ರಾಣಿಗಳನ್ನು ಬೇಟೆ ಆಡಿ ತಿನ್ನುತ್ತಿದ್ದ ನಾವು ಇಂದು ಮತ್ತೊಬ್ಬ ಮನುಷ್ಯನನ್ನು ಬೇಟೆ ಆಡಿ, ನಾವು ಬದುಕುವ ಮಟ್ಟಕ್ಕೆ ಬಂದಿದ್ದೇವೆ! ಪ್ರತಿಯೊಬ್ಬರೂ ಇಂದು ಯಾವುದೋ ಒಂದು ಧರ್ಮದ ಅನುಯಾಯಿಗಳು, ವಿಜ್ಞಾನ ಓದಿಕೊಂಡ ಪ್ರಖಾಂಡರು, ಪ್ರಪಂಚದ,ಸೃಷ್ಟಿಯ,ಜೀವನದ ಎಲ್ಲ ವಿದ್ಯೆಗಳನ್ನೂ ಬಲ್ಲವರು. ಕೆಲವರಂತೂ ಮುಕ್ತಿಗೆ ಇನ್ನೇನು ಹತ್ತಿರ ಇರುವವರು.
ಪ್ರತಿಯೊಬ್ಬರೂ ಮುಕ್ತಿಯನ್ನರಸಿ, ಅವರವರ ದಾರಿ, ಮಾರ್ಗದರ್ಶಕರ ದಾರಿಗಳಲ್ಲಿ ನಡೆಯುವವರೇ. ಯಾರೊಬ್ಬರೂ ಮತ್ತೊಬ್ಬರ ಕೆಡಕನ್ನು ಕನಸಲ್ಲಿಯೂ ಊಹಿಸಿಕೊಳ್ಳದವರು. ಏನೇ ಸ್ವಲ್ಪ ಕೆಟ್ಟದ್ದು ಉಸಿರಾಡುತ್ತಿದೆ ಅಂತ ಅನ್ನಿಸಿದರೂ ಕಠೋರ ಆಚರಣೆಗಳೊಂದಿಗೆ ನಿಗ್ರಹಿಸಿಕೊಂಡು ದೇವರ ಪ್ರೀತಿಗೆ ಪಾತ್ರರಾಗಿ, ತಮ್ಮ ಸ್ಥಾನಗಳನ್ನು ಮುಕ್ತಿಯ ಪರಂಧಾಮದಲ್ಲಿ ಕಾಯ್ದಿರಿಸಿಕೊಳ್ಳಲು ಮಗ್ನರಾಗಿರುವವರು.ಆದರೂ ಈ ಭೂಮಿ ದಿನದಿನವೂ ನರಕದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಗೊಳಿಸುತ್ತಿರುವುದು ಏಕೆ?
ಅನ್ನವಿಲ್ಲದ ಯಾವ ಭೋಜನವೂ ಊಟ ಅನ್ನಿಸಿಕೊಳ್ಳಲ್ಲ , ಅನ್ನವಿಲ್ಲದ ಯಾವ ಕಾರ್ಯವೂ ಕಾರ್ಯಕ್ರಮವೆನಿಸಿಕೊಳ್ಳುವುದಿಲ್ಲ .
” ತಿನ್ನೋ ಅನ್ನದ ಮೇಲೆ ಆಣೆ ಇಟ್ಟು ಹೇಳು ನೋಡೋಣ ” . “ಅನ್ನ ತಿನ್ನೋ ಮಾತು ಆಡಯ್ಯ ” , ” ಹೊಟ್ಟೆಗೆ ಅನ್ನ ತಿಂತಿಯೋ ಇಲ್ಲ ಮಣ್ ತಿಂತಿಯೋ ” . ಹೀಗೆ ಜಗಳಗಂಟರ ಬಾಯಲ್ಲೂ ಅನ್ನದ ವಿಷಯ ಪ್ರಸ್ತಾಪವಾಗುತ್ತದೆ .
ಒಂದೇ ಮಾತಲ್ಲಿ ಹೇಳಬೇಕೆಂದರೆ ” ತಟ್ಟೆಯೆನ್ನುವ ದೇವಸ್ಥಾನದಲ್ಲಿ ಕಾಣುವ ದೇವರೇ ಅನ್ನ ” .
ಅಮ್ಮ ಮಗುವನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಪುಟ್ಟ ಬಟ್ಟಲಿನಲ್ಲಿ ಅನ್ನ ತಿಳಿಸಾರನ್ನು ಚೆನ್ನಾಗಿ ಹಿಸುಕಿ ಮುದ್ದೆ ಮಾಡಿ ತಿನ್ನಿಸುವುದರೊಂದಿಗೆ ಶುರುವಾಗುತ್ತೆ ಅನ್ನದ ಜೊತೆ ನಮ್ಮ ಪ್ರಯಾಣ .
ಸಂಜೆಯಾದರೆ ಮನೆಯಿಂದ ಫೋನ್ ಬರುತ್ತೆ , ಎಷ್ಟೊತ್ತಿಗೋ ಬರ್ತಿಯಾ ಅನ್ನಕ್ಕಿಡ್ಬೇಕು ಅಂತ . ಹೇಳದೇ ಮನೆಗೆ ಹೋದರೆ , ಐದು ನಿಮಿಷ ಅನ್ನಕ್ಕಿಟ್ಬಿಡ್ತೀನಿ ಇರು ಅಂತಾರೆ . ತಟ್ಟೇಲಿ ಅನ್ನ ಬಿಟ್ರೆ ಇದ್ಯಾವಾಗಿಂದ ಕಲ್ತೆ ತಟ್ಟೇಲಿ ಅನ್ನ ಬಿಡೋದು ? ಅಂತಾರೆ .
ನೋಡಿ ಬೇರೆ ಎಲ್ಲವನ್ನೂ ಚಮಚ ಸೌಟು ಜಾಲರ ಅದೂ ಇದೂ ಅಂತೆಲ್ಲಾ ಕರೀತಾರೆ ಅದ್ರೆ ಅನ್ನ ಬಡಿಸೋದನ್ನ ಮಾತ್ರ ಅನ್ನದ ಕೈ ಅಂತಾರೆ . ಅಪರೂಪಕ್ಕೆ ಒಂದು ಹೊತ್ತು ಅಮ್ಮ ಮನೆಯಲ್ಲಿ ಇರದೇ ಹೋದ್ರೂ ಅನ್ನ ಮಾಡಿಟ್ಟು ಹೋಗಿರ್ತಾಳೆ .
ಅನ್ನ ಸಾರು ತಿಂದು ಅಸಿಡಿಟಿ ಆಗಿದೆ ಅಂತ ಯಾರ್ ಬಾಯಲ್ಲೂ ಕೇಳಿದ ಇತಿಹಾಸಾನೇ ಇಲ್ಲ .ಜ್ವರ ಬಂದಾಗ ಬಿಸಿ ಅನ್ನ ಮೆಣಸಿನ ಸಾರು , ರಸಂ ತಿನ್ನಿ , ಮಜ್ಜಿಗೆ ಅನ್ನ ತಿನ್ನಿ ಅಂದವರೇ ಹೆಚ್ಚು .ಪ್ರಪಂಚ ಸುತ್ಕೊಂಡು ವಾಪಸ್ ಮನೆಗೆ ಹೋಗಿ ತಟ್ಟೆ ಮುಂದೆ ಕೂತು ಅನ್ನ ನೋಡಿದ್ ತಕ್ಷಣ ಅದೇ ಪ್ರಪಂಚ ಅನ್ನಿಸಿಬಿಡುತ್ತೆ .
ಅನ್ನ ಮಾಡೋದು ಅನ್ನ ಉಂಡಷ್ಟೇ ಸುಲಭ ಅದ್ರೆ ಆ ಪುಟ್ಟ ವಿಧಾನವನ್ನ ಸರಿಯಾಗಿ ಪಾಲಿಸಬೇಕು ಅಷ್ಟೇ . ಎಷ್ಟು ಗ್ಲಾಸ್ ಅಕ್ಕೀಗೆ ಎಷ್ಟು ಗ್ಲಾಸ್ ನೀರು ಇಡಬೇಕು ? ಕುಕ್ಕರ್ ರಬ್ಬರ್ ಸರಿಯಾಗಿ ಹಾಕಿದೀವಾ ? ವೆಯ್ಟ್ ಇಟ್ವಾ ? ಎಷ್ಟು ವಿಸಿಲ್ ಕೂಗಿಸ್ಬೇಕು ? ಹೀಗೆ .
ಸ್ವಲ್ಪ ನೀರು ಜಾಸ್ತಿ ಅದ್ರೂ ಅನ್ನ ಮುದ್ದೆ ಅಗಿರುತ್ತೆ , ನೀರು ಕಮ್ಮಿ ಅದ್ರೂ ಅನ್ನ ಮುಳ್ಳು ಕಂಡಿಯಂತಾಗಿರುತ್ತದೆ . ಸ್ವಲ್ಪ ಯಾಮಾರಿದ್ರೆ ತಳ ಹಿಡಿದಿರುತ್ತೆ . ಪ್ರಪಂಚದಲ್ಲಿ ದೊಡ್ಡ ದೊಡ್ಡ ಅಡುಗೆ ಭಟ್ಟರಿಂದ ಅಡುಗೆ ಕೆಟ್ಟಿರೋ ಉದಾಹರಣೆಯಿದೆ ಆದರೆ ಅಮ್ಮನಿಂದ ಅನ್ನ ಕೆಟ್ಟಿರೋ ಉದಾಹರಣೆ ತುಂಬಾ ವಿರಳ .
ಇದಲ್ಲದೇ ನಾವು ಸಣ್ಣವರಿದ್ದಾಗ ಮನೆಗೆ ಬಂದ ನೆಂಟರಿಷ್ಟರ ಮಕ್ಕಳ ಜೊತೆ ಅಮ್ಮ ನಮ್ಮನ್ನೂ ಸುತ್ತ ಕೂರಿಸಿಕೊಂಡು ಒಂದು ತಪಲೆ ಅನ್ನ ಸಾರನ್ನು ಕಲಿಸಿ ಬೆಳದಿಂಗಳ ಬೆಳಕಿನಲ್ಲಿ ಒಬ್ಬೊಬ್ಬರಿಗೇ ಕೈ ತುತ್ತು ಹಾಕುತ್ತಿದ್ದಾಗ ನಾವು ಸ್ಪರ್ಧೆಗೆ ಬಿದ್ದವರಂತೆ ತಿನ್ನುತ್ತಿದ್ದೆವಲ್ಲ ಆ ಘಳಿಗೆ ನಿಜಕ್ಕೂ ಅಮೃತಘಳಿಗೆಯೇ .
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಕಳೆದ ತಿಂಗಳು ಸರ್ ಎಂ.ವಿ ಅವರ ಜನ್ಮ ದಿನದಂದು ಕನ್ನಡಪ್ರೆಸ್ .ಕಾಮ್ ನಲ್ಲಿ ಪ್ರಕಟವಾದ ಲೇಖನವೊಂದನ್ನು ಓದಿದ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ತಾವು ಸರ್ ಎಂವಿ ಕುರಿತು ಬಹಳ ಹಿಂದೆ ಬರೆದಿದ್ದ ಕಥೆಯನ್ನು ಈ ತಲೆಮಾರಿನ ಓದುಗರಿಗೂ ತಲುಪಲಿ ಎಂಬ ಆಶಯದೊಂದಿಗೆ ನಮಗೆ ಕಳುಹಿಸಿಕೊಟ್ಟರು. ವೈಎನ್ಕೆ ಅವರು ಕನ್ನಡಪ್ರಭ ಸಂಪಾದಕರಾಗಿದ್ದಾಗ ಈ ಕಥೆ ಅಲ್ಲಿ ಪ್ರಥಮವಾಗಿ ಪ್ರಕಟವಾಗಿತ್ತು.ನಂತರ ಎಸ್ ದಿವಾಕರ ಸಂಪಾದಕತ್ವದಲ್ಲಿ ಹೊರ ಬಂದ ಶತಮಾನದ ಕಥೆಗಳು ಪುಸ್ತಕದಲ್ಲೂ ಈ ಕಥೆ ಸೇರಿತು. ಇದನ್ನು ಆಧರಿಸಿ ೨೦೦೦ರಲ್ಲಿ ದೂರದರ್ಶನದಲ್ಲಿ ಕಿರುಚಿತ್ರವೂ ಪ್ರಸಾರವಾಗಿತ್ತು.
ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
.
(ಕೆಲವು ವರ್ಷಗಳ ಹಿಂದೆ ಊರಿಗೆ ಹೋಗಿದ್ದಾಗ ತಿಳಿದ ಕತೆ ಇದು)
ನಮ್ಮ ಸೀಮೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ಬಹಳ ಪ್ರಸಿದ್ಧರು ಎಂದರೆ ಏನೂ ಹೇಳಿದ ಹಾಗಾಗುವುದಿಲ್ಲ. ಬದಲಿಗೆ ಭಗೀರಥ – ಗಂಗೆ ಕತೆಯನ್ನು ನೀವು ಹೇಳಬೇಕಾದರೆ ಸರ್.ಎಂ.ವಿ. ಕತೆಯನ್ನು ಪೀಠಿಕೆಯಾಗಿ ಹೇಳಿ ಭಗೀರಥನ ತಪಸ್ಸು ಪರಿಶ್ರಮವನ್ನು ವಿವರಿಸಿದರೆ ಜನಕ್ಕೆ ಭಗೀರಥನ ಕತೆ ಸರಿಯಾಗಿ ಗೊತ್ತಾಗುತ್ತದೆ ಎಂದರೆ ಸರ್.ಎಂ.ವಿ. ಪ್ರಭಾವ ನಮ್ಮ ಸೀಮೆಯಲ್ಲೆಷ್ಟು ಎಂಬುದು ನಿಮ್ಮ ಊಹೆಗೆ ಬರಬಹುದು.
ಕನ್ನಂಬಾಡಿ ಕಟ್ಟೆ ಕಟ್ಟಿ ಅದರಲ್ಲಿ ಶೇಖರಿಸಿದ ನೀರಿನ ವಿತರಣೆಗೆ ಮಂಡ್ಯ ಜಿಲ್ಲೆಯ ಉದ್ದಕ್ಕೂ ನಾಲೆ ಕಟ್ಟಿಸುವ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಸರ್.ಎಂ.ವಿ. ಊರಿಗೆ ಬಂದದ್ದನ್ನು ಈಗಲೂ ಜನ ನೆನಸಿಕೊಳ್ಳುತ್ತಾರೆ. ಅವರು ನಮ್ಮ ಊರಿಗೆ ಬಂದಾಗ ಬೆಳಿಗ್ಗೆಯಾಗಿತ್ತೋ, ಮಧ್ಯಾಹ್ನವಾಗಿತ್ತೋ ಅನ್ನುವುದು ಕೂಡ ಊರವರ ನೆನಪಿನಲ್ಲಿದೆ. ಪ್ರತಿ ಗ್ರಾಮದ ಮಣ್ಣನ್ನು ಅವರು ಮುಟ್ಟಿ ನೋಡಿ, ಮುಷ್ಠಿಯಲ್ಲಿ ಹಿಡಿದು ಪರೀಕ್ಷೆ ಮಾಡಿ ಈ ಮಣ್ಣು ಈ ಬೆಳೆಗೆ, ಇಂತಹ ಹಣ್ಣಿಗೆ ಎಂದು ಗ್ರಾಮಸ್ಥರಿಗೆ ಹೇಳೋರಂತೆ.
ಗಾಂಧೀ, ಸುಭಾಷ್, ನೆಹರೂ, ವಿವೇಕಾನಂದ, ಶಿವಾಜಿ, ವಿಶ್ವೇಶ್ವರಯ್ಯ- ಇವರ ಪೋಟೋಗಳು ನಮ್ಮ ಸೀಮೆಯ ಎಲ್ಲ ಅನುಕೂಲಸ್ಥ ಕುಳಗಳ ಮನೆಯಲ್ಲೂ ಇವೆ.ಒಂದೊಂದು ಸಲ ಗಾಂಧೀ ಫೋಟೋ ಇರುವ ಒಂದು ಮನೆಯಲ್ಲಿ ವಿವೇಕಾನಂದರ ಫೋಟೋ ಇಲ್ಲದೆ ಇರಬಹುದು ಶಿವಾಜಿ ಫೋಟೋ ಇರುವ ಮನೆಯಲ್ಲಿ ನೆಹರೂ ಫೋಟೋ ಇಲ್ಲದೆ ಇರಬಹುದು. ಆದರೆ ಎಲ್ಲರ ಮನೆಯಲ್ಲೂ ಸರ್.ಎಂ.ವಿ .ಫೋಟೋ ಮಾತ್ರ ಗ್ಯಾರಂಟಿ. ಅಷ್ಟೇ ಏಕೆ, ಒಕ್ಕಲಿಗರ ಮನೆಗಳಲ್ಲಿ ಪಕ್ಷದ ದಿವಸ ಎಡೆ ಇಟ್ಟಾಗ ಸರ್.ಎಂ.ವಿ ಫೋಟೋದ ಮುಂದೆ ಕೂಡ ಎಡೆ ಇಡುತ್ತಾರೆ. ಶೆಟ್ಟರ ಮನೆಗಳಲ್ಲಿ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆಗೆಂದು ಇರುವ ಲೆಕ್ಕ ಪುಸ್ತಕಗಳ ಜೊತೆಗೆ ಸರ್.ಎಂ.ವಿ. ಫೋಟೋನು ಇಡುತ್ತಾರೆ. ಬ್ರಾಹ್ಮಣರ ಮನೆಗಳಲ್ಲಿ ದೇವರ ಫೋಟೋಗೆ ಇಡುವಂತೆ ಇವರ ಫೋಟೋಗೂ ಗಂಧ, ಕುಂಕುಮ ಇಟ್ಟಿರುವುದನ್ನು ನೀವು ನೋಡಬಹುದು.
ತಮ್ಮ ಮಕ್ಕಳು ಅವರಷ್ಟೇ ಬುದ್ದಿವಂತರಾಗಲಿ ಅನ್ನೋ ಆಸೆಯಿಂದ ಎಷ್ಟೋ ತಂದೆ ತಾಯಿಗಳು ಇವರ ಹೆಸರನ್ನು ಮಕ್ಕಳಿಗಿಡುವುದುಂಟು. ಅಣ್ಣ-ತಮ್ಮ ಇಬ್ಬರಿಗೂ ಅವರ ಹೆಸರನ್ನೇ ದೊಡ್ಡ ವಿಶ್ವೇಶ್ವರಯ್ಯ, ಚಿಕ್ಕ ವಿಶ್ವೇಶ್ವರಯ್ಯ ಎಂದು ಕರೆಯುವುದೂ ಉಂಟು. ಇಷ್ಟೆಲ್ಲಾ ಇರುವಾಗ ಪ್ರತಿ ಗ್ರಾಮದಲ್ಲೂ ಯುವಕ ಸಂಘಗಳು ಅವರ ಹುಟ್ಟಿದ ಹಬ್ಬನ ಬಹು ವಿಜೃಂಭಣೆಯಿಂದ ಆಚರಿಸೋದರಲ್ಲಿ ಹೆಚ್ಚೇನಿದೆ? ಅವತ್ತು ಶಾಲೆಗಳಿಗೆ ರಜ, ಜಾನುವಾರುಗಳಿಗೆ ಬಿಡುವು, ಶಾಸಕರು, ಸರ್ಕಲ್ ಇನ್ಸ್‌ಪೆಕ್ಟರ್, ಹೆಡೆಮಾಸ್ಟರ್, ಡಾಕ್ಟರ್- ಹೀಗೆ ಎಲ್ಲ ಗಣ್ಯರೂ ಸಭೆಯಲ್ಲಿ ಮಾತನಾಡುತ್ತಾರೆ. ಅವರಲ್ಲಿ ಎಷ್ಟೋ ಜನ ಸರ್.ಎಂ.ವಿ ಯವರನ್ನು ನೋಡದೇ ಇದ್ದರೂ ತಾವೇ ಅವರನ್ನು ಕಣ್ಣಾರೆ ಕಂಡವರಂತೆ, ಮಾತನಾಡಿಸಿದವರಂತೆ ಭಾಷಣ ಮಾಡುತ್ತಾರೆ. ಅವರು ಹೇಳುವ ಮಾತುಗಳಲ್ಲಿ ಸುಳ್ಳು, ಉತ್ಪ್ರೇಕ್ಷೆ ಇದ್ದರೂ, ಇದೆಲ್ಲ ಕೃತಜ್ಞತೆಯಿಂದ, ಪ್ರೀತಿಯಿಂದ, ವಾಂಛೆಯಿಂದ ಹೇಳುವ ಮಾತಾದ್ದರಿಂದ ನಿಜಕ್ಕಿಂತಲೂ ಹೆಚ್ಚು ಇಷ್ಟವಾಗುತ್ತದೆ- ಹೇಳುವವರಿಗೂ, ಕೇಳುವವರಿಗೂ. **** ಈ ವರ್ಷದ ಹುಟ್ಟಿದ ಹಬ್ಬಕ್ಕೆ ನನ್ನನ್ನೂ ಭಾಷಣಕ್ಕೆ ಕರೆದಿದ್ದರು. ನಾನು ನನ್ನ ಹತ್ತಿರ ಇದ್ದ ಪುಸ್ತಕ, ಪತ್ರಿಕೆಗಳನ್ನೆಲ್ಲ ತಿರುವಿ ಹಾಕಿ ಸರ್.ಎಂ.ವಿ. , ಗಾಂಧಿ, ನೆಹರೂ, ಹನುಮಂತಯ್ಯ, ಮೋತಿಲಾಲ್ ಇಂತಹವರನ್ನೆಲ್ಲ ಭೇಟಿ ಮಾಡಿದಾಗ ಏನೇನು ಮಾತುಕತೆ ನಡೆಯಿತು ಅನ್ನೋದನ್ನೆಲ್ಲ ಪಟ್ಟಿ ಮಾಡಿಕೊಂಡು ಆಕರ್ಷಣೀಯವಾಗಿ ಹೇಳಬೇಕೆಂದು ಲೆಕ್ಕಹಾಕಿದ್ದೆ. ಮೊದಲು ಪ್ರಿನ್ಸಿಪಾಲ್ ಭಾಷಣ, ಆಮೇಲೆ ಮಾಜಿ ಎಂ.ಎಲ್.ಸಿ ದು, ಆಮೇಲೆ ನನ್ನದು, ಹೀಗಿತ್ತು ಭಾಷಣದ ಸರದಿ.
ಮಾಜಿ ಎಂ.ಎಲ್.ಸಿ. ಭಾಷಣ ಮುಗಿಸ್ತಾ ಇದೀನಿ, ಭಾಷಣ ಮುಗಿಸ್ತಾ ಇದೀನಿ ಅಂತ ಎರಡು ಸಲ ಹೇಳಿದ ಮೇಲು ಇನ್ನು ಭಾಷಣ ಮಾಡ್ತಾನೆ ಇದ್ದರು. ಆವಾಗಲೇ ಈ ಮುದುಕಿ ಮೀಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಬಂದದ್ದು. ‘ಹೋಗಮ್ಮಾ ಹೊರಗಡೆ ನೀನು ನಿನಗೇನು ಕೆಲಸ ಇಲ್ಲಿ’ ಎಂದು ಜನ ಕೂಗಾಡಿ, ಗದರಿಸಿ, ಮಾತಿನಲ್ಲಿ ಅವಳನ್ನು ಹೊರಗಟ್ಟಬೇಕೆಂದುಕೊಂಡಿದ್ದರೂ ಆ ಮುದುಕಿ ಒಳಕ್ಕೆ ಬಂದೇ ಬಿಟ್ಟಿತು. ಸೊಂಟ, ಬೆನ್ನು ಎರಡೂ ಒಂದೇ ಆಗಿಬಿಟ್ಟಿದೆ. ಗೂನು ಅಂತ ಪ್ರತ್ಯೇಕ ಹೇಳುವ ಹಾಗೇ ಇಲ್ಲ. ಕತ್ತನ್ನು ಮೇಲೆತ್ತಿದರೆ ತಾನೇ ಮುಖ ಹೇಗಿದೆ ಅಂತಾ ಹೇಳೋದು. ಸೊಂಟ, ಬೆನ್ನು ಎಲ್ಲಾ ಒಂದೇ ಆಗಿ, ದೇಹದ ಆಕೃತಿ ಮೂರು-ಮೂರುವರೆ ಅಡಿಗೆ ಬಂದುಬಿಟ್ಟಿದೆ. ಚಪ್ಪಟೆ ಬೆನ್ನು ಪ್ರಾಣಿಯ ಮೂತಿಯಂತೆ ಮುಂದೆ ಮಾಡಿದ ತಲೆ ಕಾಣುತ್ತಿದೆ. ಯಾರಿದು ಈ ಮುದುಕಿ-ಇಲ್ಲಿಗೇಕೆ ಬಂತು ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಆ ಮುದುಕಿ ಗೊಗ್ಗರು ದನಿಯಲ್ಲಿ ಮಾತಿಗೆ ಶುರು ಮಾಡಿತು. ‘ನಿನಗೇನು ಗೊತ್ತಿರೋದು-ಅವನ ಕತೆ-ನನಗೂ ಗೊತ್ತು. ನಾನೂ ಹೇಳ್ತೀನಿ. ನನಗೆ ಬಹಳ, ಬಹಳ ಉಪಕಾರ ಆಗಿದೆ ಅವನಿಂದ. ಹೀಗೇ ಒಂದು ಸಲ ಅವನು ನಮ್ಮ ಊರಿಗೆ ಬಂದು ಪಂಚಾಯಿತಿ ಆಫೀಸಿನಲ್ಲಿ…’ …ಮುದುಕಿ ಬಡಬಡಿಸೋಕ್ಕೆ ಶುರು ಮಾಡೇಬಿಟ್ಟಿತು. ಈಗ ಅದು ತನ್ನ ಎರಡು ಕೈಯನ್ನು ಕುರ್ಚಿಯ ಮೇಲೆ ಊರಿತ್ತು. ಬೋಳುತಲೆ, ಮುಖವೆಲ್ಲ ನೆಲನ ನೋಡ್ತಾ ಇದೆ. ಎಷ್ಟಿರಬಹುದು ವಯಸ್ಸು ಎಪ್ಪತ್ತೈದು, ಎಂಭತ್ತು, ಎಷ್ಟಾದರೂ ಇರಬಹುದು. ಬೋಳುತಲೆ ನೋಡಿದರೆ ಬ್ರಾಹ್ಮಣ ವಿಧವೆಯಿರಬಹುದು ಅನ್ನಿಸಿತು. ಆದರೆ ಕೆಂಪು ಸೀರೆಯಿಲ್ಲವಲ್ಲ. ಕಪ್ಪು ಬಣ್ಣದ ಸೀರೆ ಉಟ್ಟಿದೆ. ಇಲ್ಲ ಸರಿಯಾಗಿ ನೋಡಿದರೆ ಸೀರೆ ಮೈಮೇಲೆ ಹೇಗೆ ಹೇಗೋ ಕುಳಿತಿದೆ, ಅಷ್ಟೆ.
ಮಾಜಿ ಎಂ.ಎಲ್.ಸಿ ಕೂಡ ಕೂಗಿದರು. ‘ ಏ ಭಾಗಮ್ಮ, ನೀನು ಮನೆಗೆ ಹೋಗು ನಿನಗೇನು ಕೆಲಸ ಇಲ್ಲಿ?’ ಜನ ಕೂಡ ‘ಹೋಗು ಹೋಗು, ಹೊರಗಡೆ ಹೋಗು’ ಅಂತ ಗದರಿಸ್ತಾ ಇದ್ದರೂ ಆ ಮುದುಕಿ ನಿಂತಲ್ಲೇ ನಿಂತಿತ್ತು. ಸ್ವಲ್ಪ ಹೊತ್ತಾದ ಮೇಲೆ ಜನಾನೆ ಹೋಗಲಿ ಸುಮ್ಮನೆ ನಿಂತುಕೋ, ಮಾತಾಡಬೇಡ’ ಅಂತ ಹೇಳಿ ತಾವೇ ಸುಮ್ಮನಾದರು. ಮುದುಕಿ ಹಾಗೇ ನಿಂತುಕೊಂಡಿತ್ತು. ಆದರೆ ಯಾರಾದರೂ ಮಾತಾಡುವಾಗ ಮಧ್ಯದಲ್ಲಿ ಅದು ಕೂಡ ಇದ್ದಕ್ಕಿದ್ದಂತೆ ಮಾತಾಡೋಕೆ ಶುರು ಮಾಡಿಬಿಡುತ್ತಿತ್ತು. ತಿರುಗ ಜನ ಗದರಿಸಿ ಮುದುಕಿನ ಮತ್ತೆ ಸುಮ್ಮನಾಗಿಸುವರು. ಹೀಗೆ ಸಮಾರಂಭ ಮುಗಿಯಿತು. ಮುದುಕಿ ಮಾತ್ರ ಉದ್ದಕ್ಕೂ ಹಾಗೇ ನಿಂತಿತ್ತು.
ನನ್ನ ಭಾಷಣದಲ್ಲಿ ನನಗೆ ಆಸಕ್ತಿ ಉಳಿಯಲಿಲ್ಲ. ಮನಸ್ಸೆಲ್ಲಾ ಮುದುಕಿಯ ಬಗ್ಗೆ ಆದರೂ ನನ್ನ ಭಾಷಣ ಚೆನ್ನಾಗಿತ್ತೆಂದು, ಗಾಂಧಿಗೆ ನೆಹರೂಗೆ ಕೂಡ ಸರ್. ಎಂ. ವಿ. ಕೊಟ್ಟ ಉತ್ತರ, ಹಾಕಿದ ಪಾಯಿಂಟ್ ಬಹಳ ಚೆನ್ನಾಗಿತ್ತೆಂದು ಜನರೆಲ್ಲಾ ಹೇಳಿದರು. ನನಗೆ ಭಾಷಣ ಸರಿಯಾಗಿ ಮಾಡಲು ಬರುವುದಿಲ್ಲ, ಮಾತುಗಳನ್ನು ನುಂಗಿ ನುಂಗಿ ಮಾತಾಡ್ತೀನಿ ಅಂತ ರೇಗಿಸುವ ನನ್ನ ಹೆಂಡತಿ ಕೂಡ ಇವತ್ತು ತುಂಬಾ ಸ್ಪಷ್ಟವಾಗಿ ಮಾತಾಡಿದಿರಿ ಅಂತ ಹೊಗಳಿದಳು. ನನಗೇನೆ ಯಾವುದರಲ್ಲೂ ಅಷ್ಟೊಂದು ಮನಸ್ಸಿರಲಿಲ್ಲ, ಮುದುಕಿ ನೋಡಿದ ಮೇಲೆ.
ನಾನೇ ನನ್ನ ಹೆಂಡತಿಯ ಜತೆ ಹೋಗಿ ಪರಿಚಯ ಮಾಡಿಕೊಂಡು, ಮುದುಕಿನ ಮಾತಾಡಿಸಿದೆ. ತನ್ನ ಕತೇನ ಅದು ಬಹು ಚೆನ್ನಾಗಿ ಹೇಳಿಕೊಂಡಿತು. ಯಾವುದೋ ಕಾಲದ ಯಾವುದೋ ಪುರಾಣದ ಕತೆಯಂತೆ. ಮುದುಕಿ ಹೇಳಿದ ಕತೆ ಜೊತೆಗೆ ಇರಲಿ ಅಂತ ಇನ್ನು ನಾಲ್ಕು ಜನನ್ನ ವಿಚಾರಿಸಿದೆ. ಈಗ ಅದನ್ನೇ ಮುಂದೆ ಹೇಳಿರುವುದು. **** ವಿಶ್ವೇಶ್ವರಯ್ಯನವರನ್ನು ನೋಡಿದಾಗ ಭಾಗಮ್ಮ ಒಬ್ಬ ವಿಧವೆ. ನಾಲ್ಕಾರು ಮನೆಗಳಲ್ಲಿ ಸುತ್ತು ಕೆಲಸ, ಸೂರುಕೆಲಸ ಅಂತ ಮಾಡಿ ಜೊತೆಗೆ ಆ ಮನೆ ಮಕ್ಕಳ, ಮೊಮ್ಮಕ್ಕಳ ಬಾಣಂತನ, ಹೆರಿಗೆ, ಅಭ್ಯಂಜನ, ಸ್ನಾನ- ಹೀಗೆ ಎಲ್ಲದರ ಪಾರುಪತ್ಯನೂ ಅವಳೇ ನೋಡಿಕೊಳ್ಳುತ್ತಿದ್ದಳು. ಅಷ್ಟೇ ಆಗಿದ್ದರೆ ಭಾಗಮ್ಮನಂತೋರು ನೂರಾರು ಜನ ಅದೇ ಊರಲ್ಲಿ ಇದ್ದರು. ಅವರ ಹಾಗೆ ಭಾಗಮ್ಮನು ವಿಶ್ವೇಶ್ವರಯ್ಯನವರನ್ನು ನೋಡಬೇಕಾಗ್ತಿರಲಿಲ್ಲ.
ಆದರೆ ಭಾಗಮ್ಮನದು ಸಿಂಹಾಸನದ ಮೇಲೆ ಕುಳಿತು ಗುಂಡಿಗೆ ಬಿದ್ದವರ ಅದೃಷ್ಟ ಭಾಗಮ್ಮನ ಮದುವೆಯಾದಾಗ ಅವಳ ಗಂಡ ತಿಪ್ಪಯ್ಯ ಸ್ಥಿತಿವಂತನೆ. ಊರಲ್ಲೇ ಅಲ್ಲದೇ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಹೊಲ, ತೋಟ ಇಟ್ಟುಕೊಂಡಿದ್ದವನು. ಅದಷ್ಟನ್ನೇ ನೋಡಿಕೊಂಡಿದ್ದರೂ ಅವನು, ಭಾಗಮ್ಮ, ಅವನೆರಡು ಗಂಡು ಮಕ್ಕಳು ಬೆಳಿಗ್ಗೆಯಿಂದ ಸಂಜೆ ತನಕ ತುಪ್ಪ ನೆಕ್ಕಿಕೊಂಡೆ ಬದುಕಬಹುದಾಗಿತ್ತು. ಆದರೆ ತಿಪ್ಪಯ್ಯನಿಗೆ ಊರೋರ ದನವೆಲ್ಲ ಕಾಯೋ ಹುಚ್ಚು. ತನ್ನ ಆಸ್ತಿ ಜೊತೆಗೆ, ತನ್ನ ಆಸ್ತಿ ಇದ್ದ ಊರವರ ಹೊಲ, ತೋಟ, ಜಮೀನು, ಮನೆ ಎಲ್ಲದರ ತರಲೇನು ತಿಪ್ಪಯ್ಯನಿಗೆ ಬೇಕು. ಯಾರ ಜಮೀನು ಯಾರಿಗೆ ಅಡವಿಡಸಬೇಕು, ಯಾವ ಪತ್ರ ಮೈಸೂರಿನಲ್ಲಿ ರಿಜಿಸ್ಟರ್ ಆಗಬೇಕು, ಯಾವ ಪತ್ರ ಮದ್ದೂರಿನಲ್ಲಿ ರಿಜಿಸ್ಟರ್ ಆದರೆ ಸಾಕು, ಯಾರ ಮನೆಗೆ ಎತ್ತಿನ ಜೊತೆ ತರೋಕ್ಕೆ ಅವರ ಜೊತೆ ತಾನೂ ಎಡಿಯೂರ ಜಾತ್ರೆಗೆ ಹೋಗಬೇಕು, ಹೊಸದಾಗಿ ಕಟ್ಟಿಸಿದ ಮೈಸೂರು ಅರಮನೆಯ ಕಂಟ್ರಾಕ್ಟ ಗಿರಿಯಲ್ಲಿ ಯಾರ್ಯಾರು ಎಷ್ಟೆಷ್ಟು ದುಡ್ಡು ತಿಂದು ಹಾಕಿದರು ಎಲ್ಲಾನು ಅವನಿಗೆ ಬೇಕು. ಇವರ ಆಸ್ತಿ ಅವರ ಕೈಗೆ ಅವರ ಆಸ್ತಿ ಇವರ ಕೈಗೆ ಬದಲಾಯಿಸುವ ಹುರುಪಿನಲ್ಲಿ ಇವನ ಆಸ್ತಿಯೂ ಕೂಡ ಆ ಕೈ, ಈ ಕೈ ಬದಲಾಯಿಸುವುದು. ಅಡ ಇಟ್ಟು ಜಮೀನಿನ ಮೇಲೆ ಸಾಲ ತೆಗೆದು, ಅದನ್ನು ಬಡ್ಡಿಗೆ ಕೊಟ್ಟು, ಸಾಲ ತೆಗೆದುಕೊಂಡವರು ವಾಪಸ್‌ಕೊಡದೆ ಜಮೀನ್‌ನ ವಾಪಸ್ ಬಿಡಿಸಿಕೊಳ್ಳಕ್ಕಾಗದೆ ಅದಕ್ಕೆ ಭಾಗಮ್ಮನ ಜೊತೆ ಜಗಳ ಕಾದು, ಅವಳ ಒಡವೆ ಅಡ ಇಟ್ಟು-ಒಂದೇ ಎರಡೇ, ಅಷ್ಟಾದರೂ ಇನ್ನೂಬ್ಬರ ವ್ಯವಹಾರದ ಪರಭಾರೆ ಹುಚ್ಚು ಕಡಿಮೆಯಾಗುತ್ತಿರಲಿಲ್ಲ. ಅಗತ್ಯ ಇರಲಿ, ಇಲ್ಲದೇ ಇರಲಿ ಸುತ್ತಮುತ್ತಲ ಹಳ್ಳಿಯ ಯಾವುದೇ ಜಮೀನಿನ ಮನೆಯ ಕ್ರಯದ, ಅಡವಿನ ರಿಜಿಸ್ಟ್ರಿ ಎಂದರೆ ಇವನೂ ಕೂಡ ಅವರ ಜೊತೆ ಹೊರಟುಬಿಡೋನು. ಭಾಗಮ್ಮನ ತವರು ಕಡೆಯವರಿಗೆ ತಿಪ್ಪಯ್ಯನ ವ್ಯವಹಾರ, ಓಡಾಟ ಯಾವುದೂ ಇಷ್ಟವಾಗುತ್ತಿರಲಿಲ್ಲ. ಭಾಗಮ್ಮನ ಅಣ್ಣನ ಹೆಂಡತಿನೋ ತುಂಬಾ ಕೆಂಪು ಬಣ್ಣದೋಳು. ಜೊತೆಗೆ ಅವಳ ತವರು ಕಡೆಯೋರು ತುಂಬಾ ಸ್ಥಿತಿವಂತರು ಬೇರೆ. ಭಾಗಮ್ಮನ್ನ ಸೀಟ ಹಾಕುತಿರಲೂ ಇಲ್ಲ.ಅಷ್ಟೇ ಅಲ್ಲ, ಭಾಗಮ್ಮನ ಅಣ್ಣ ಶ್ರೀನಿವಾಸನ ಪ್ರೀತಿ, ಅಕ್ಕರೆ, ಅಪ್ಪಿ ತಪ್ಪಿ ಕೂಡ ತಂಗಿ ಕಡೆ ಹರಿಯದ ಹಾಗೆ, ಅವನನ್ನು ತನ್ನ ಒನಪು ವೈಯ್ಯಾರದ ನಿಯತ್ತಿನಲ್ಲಿಟ್ಟಿರೋಳು. ಹೀಗಾಗಿ ತಿಪ್ಪಯ್ಯ ಶ್ರೀನಿವಾಸಯ್ಯನ, ಭಾಗಮ್ಮನ ತವರು ಮನೆಯೋರನ್ನ ಕಿಚಾಯಿಸಿ ಉಡಾಫೆ ಮಾತನಾಡಿದಾಗ ಭಾಗಮ್ಮನೇ ಸುಮ್ಮನಾಗಬೇಕು. ತಿಪ್ಪಯ್ಯ ತನ್ನ ವ್ಯವಹಾರನ ಮುಂದುವರಿಸಿಕೊಂಡು ಹೋಗುಬೇಕು, ಭಾಗಮ್ಮನಿಗೆ ಅದು ಇಷ್ಟ ಇರಲಿ, ಇಲ್ಲದೇ ಇರಲಿ.
ಊರವರೆಲ್ಲರ ದನಾನ ಕಾಯುವ ತಿಪ್ಪಯ್ಯನ ತರಲೆಗಳು ಎಷ್ಟಿತ್ತೆಂದರೆ ಅವನಿಗಿದ್ದ ಊರಿನ ಪ್ರೈಮರಿ ಸ್ಕೂಲಿನ ಮೇಷ್ಟರ ಕೆಲಸನು ಸರಿಯಾಗಿ ಮಾಡ್ತಾ ಇರಲಿಲ್ಲ. ತನ್ನ ವ್ಯವಹಾರದ ಹುಚ್ಚು, ಓಡಾಟ ಇವುಗಳೆಲ್ಲದರ ಮುಂದೆ ನಾಲ್ಕು ಅಕ್ಷರನ ದಿನವೆಲ್ಲ ತಿದ್ದಿಸೋದು, ಪುಣ್ಯಕೋಟಿ ಕತೆ ಹೇಳೋದೇನು ಮಹಾ ಎನಿಸಿ ಯಾರು ಬೇಕಾದ್ರು ಅದನ್ನ ಮಾಡಬೋದಲ್ಲವೆ ಅಂತಾ ದುರ್ಗದ ಕಡೆಯಿಂದ ಒಬ್ಬ ಬ್ರಾಹ್ಮಣನ್ನ ತಂದು ಮೇಷ್ಟರಗಿರಿನ ತನ್ನ ಪರವಾಗಿ ಮಾಡೋಕೆ ಇಟ್ಟಿದ್ದ. ತಿಪ್ಪಯ್ಯ ಸಕಲ ಭೂಭಾರಗಳನ್ನು ಹೊತ್ತುಕೊಂಡು ಊರೂರು ತಿರುಗುತ್ತಾ ಇದ್ದರೆ ಅವನ ಪರವಾಗಿ ಆ ಬ್ರಾಹ್ಮಣನೇ ಮೇಷ್ಟರಗಿರಿ ನಡಸೋನು. ಊರಲ್ಲಿದ್ದಾಗ, ಮನಸ್ಸು ಅನ್ನೋದು ಬಂದಾಗ ಆರಕ್ಕೋ, ಮೂರಕ್ಕೋ ಒಂದು ಸಲ ತಿಪ್ಪಯ್ಯ ಸ್ಕೂಲು ಕಟ್ಟೆ ಹತ್ತೋನು. ಒಟ್ಟಿನಲ್ಲಿ ತಿಪ್ಪಯ್ಯ ಹೀಗೆ ತುಂಬಿದ ಹಾಗೆ ತುಂಬಿಕೊಂಡು ಓಡಾಡೋ ಹಾಗೆ ಕಾಣೋನು. ಭಾಗಮ್ಮನಿಗೂ ಹಾಗೇ ಅನಿಸ್ತಾ ಇದ್ದದರಿಂದ ಅವಳು ಪೀಡಿಸೋಕೆ, ಮಾಡಿಸೋಕೆ ಹೋಗ್ತಾ ಇರಲಿಲ್ಲ. ಒಂದು ಸಲ ಮೈಸೂರಿಗೆ ಯಾರದೋ ಕ್ರಯ ಪತ್ರದ ರಿಜಿಸ್ಟ್ರಿಗೆ ಹೋಗಿದ್ದ ತಿಪ್ಪಯ್ಯ ಅಲ್ಲಿಂದಲೇ ಫರಂಗಿ ಗಡ್ಡೆ ಜ್ವರ ತಗೊಂಡು ಬಂದು ಊರಿಗೆ ವಾಪಸ್ ಬಂದ ಮೂರೇ ದಿವಸಕ್ಕೆ ಸಾಯದೇ ಹೋಗಿದ್ದರೆ…
ಅಣ್ಣ ಶ್ರೀನಿವಾಸ ಮುಂದಿನ ಬೀದೀಲಿ ಇದ್ದರೂ ಅತ್ತಿಗೆ ವಯ್ಯಾರಕ್ಕೆ, ಒನಪಿಗೆ ಬಹಳ ನಿಯತ್ತಿರೂ ಮನುಷ್ಯ. ಅತ್ತಿಗೆ ಊರವರಿಗೆಲ್ಲ ನಾದಿನಿ ಅದೃಷ್ಟನ ಕತೆ ಮಾಡಿ, ಕತೆ ಮಾಡಿ ಊರವರಿಗೆಲ್ಲ ಒಪ್ಪಿಸ್ತಾ ಇದ್ದಾಳೆ. ಮಕ್ಕಳನ್ನೇನೋ ಭಾಗಮ್ಮ ಬೀದಿಗೆ ಬಿಟ್ಟಳು. ಅವು ಗಂಡು ಮಕ್ಕಳಾದ್ದರಿಂದ ದೇವಸ್ಥಾನದ ಚರವು, ಇಡಗಾಯಿ ತುಂಡು ಚೂರು, ಸಮಾರಾಧನೆ ಕೊನೆ ಪಂಕ್ತಿ ಊಟ ಅದೂ ಇದೂ ಮಾಡಿಕೊಂಡು ಬೆಳೀತಾ ಇದ್ದವು. ಭಾಗಮ್ಮ ಮೊದಲು ಒಂದು ಮನೆ ಕೆಲಸ , ಆಮೇಲೆ ಇನ್ನೊಂದು ಮನೆ ಕೆಲಸ ಅಂತ ಶುರು ಮಾಡಿಕೊಂಡು ಕೊನೆ ಕೊನೆಗೆ ತನ್ನ ತವರ ಸಂಬಂಧದ ಕಡೆ ಬಿಟ್ಟು ಬಾಕಿ ಮನೆ ಕಡೆ ಎಲ್ಲ ಕೆಲಸ ಮಾಡೋಕೆ ಶುರು ಮಾಡಿದಳು. ತಿಪ್ಪಯ್ಯ ಒಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಿದ್ದರೆ, ಭಾಗಮ್ಮ ಇನ್ನೊಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಳು.
ಒಂದಾರು ವರ್ಷನೋ, ಎಂಟು ವರ್ಷನೋ ಎಲ್ಲ ಹೀಗೇ ನಡೀತಿತ್ತು. ಭಾಗಮ್ಮನ ಬದುಕು ಇರೋದು ಹೀಗೆ ಅಂತ ಅವಳು, ಊರನೋರು ಎಲ್ಲ ಒಪ್ಪಿಕೊಂಡಾಗಿತ್ತು. ಒಂದು ದಿವಸ ಮಧ್ಯಾಹ್ನ ಕರಿಕೋಟು, ಬಿಳಿಪೇಟ, ಕಚ್ಚೆ ಪಂಚೆ ಹಾಕಿಕೊಂಡು ಅಮೀನ ಬಂದು ಭಾಗಮ್ಮನ ಬಾಡಿಗೆ ಮನೆ ಜಗುಲಿ ಮೇಲೆ ಕೂತುಕೊಂಡಾಗಿನಿಂದ ಕತೇನೇ ಬದಲಾಯಿಸಿತು.
ಅಮೀನ ತಿಪ್ಪಯ್ಯನಿಗೆ ಕೈ ಸಾಲ ಅಂತಾ ಎಪ್ಪತ್ತೈದು ರೂಪಾಯಿ ಕೊಟ್ಟಿದ್ದನಂತೆ. ತಿಪ್ಪಯ್ಯ ಸಾಯೋ ಹೊತ್ತಿಗೆ ಅವನಿಗೆ ಚಿತ್ರದುರ್ಗದ ಕಡೆಗೆ ವರ್ಗವಾಗಿ ಹೋಯಿತಂತೆ. ಅಲ್ಲಿಂದಲೇ ಹತ್ತಾರು ಕಾಗದ ಬರೆದರೂ ತಿಪ್ಪಯ್ಯನ ಕಡೆಯಿಂದ ಉತ್ತರ ಬರಲೇ ಇಲ್ಲ. ಪರಿಚಯಸ್ಥರ ಕೈಲಿ ಹೇಳಿ ಕಳಿಸಿದರೂ ಮಾರುತ್ರ ಸಿಗಲಿಲ್ಲ. ಕೊನೆಗೆ ತಿರುಗ ಅಮೀನನಿಗೆ ಶ್ರೀರಂಗಪಟ್ಟಣದ ಕೋರ್ಟಿಗೆ ವರ್ಗವಾದ್ದರಿಂದ ಊರಿಗೇ ಹುಡುಕೊಂಡು ಬಂದಿದ್ದ. ತಿಪ್ಪಯ್ಯ ಸತ್ತಿದ್ದು ಗೊತ್ತಾಗಿದ್ದರೂ ಅವನ ಮನೆ ಕಡೆಯಿಂದ ಏನಾದರೂ ವಸೂಲು ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮೊದಲು ಭಾಗಮ್ಮನ ಅಣ್ಣ ಶ್ರೀನಿವಾಸಯ್ಯನ ಮನೆಗೆ ಹೋಗಿ ಮುಖಕ್ಕೆ ಪೂಜೆ ಮಾಡಿಕೊಂಡು ಅಲ್ಲಿ ಚೆನ್ನಾಗಿ ಬೈಸಿಕೊಂಡದ್ದರಿಂದ ತಿಪ್ಪಯ್ಯನ ಸಂಸಾರದ ಕೈಯಿಂದಲೇ ಏನಾದರೂ ಸರಿ ಬಾಕಿ ವಸೂಲಿ ಮಾಡಲೇಬೇಕು ಅನ್ನೋ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿದ್ದ.
ಭಾಗಮ್ಮ ಮನೇಲಿ ಇರಲೇ ಇಲ್ಲ. ಇವನ ವೇಷಭೂಷಣ, ಮುಖ ಚಹರೆ, ಗತ್ತು ಎಲ್ಲ ನೋಡಿದೋರು ಸರಪರ ಅಂತ ಓಡಾಡಿ ಭಾಗಮ್ಮನ ಕರಕೊಂಡು ಬಂದರೂ ಅಮೀನ ಜಗಲಿ ಮೇಲೆ ಮರಿ ದೊರೆ ತರ ಕೂತಿದ್ದ. ಮನೆ ಹತ್ತಿರ ಬಂದವಳೇ ಭಾಗಮ್ಮ ಇವನ್ನು ನೋಡಿದರೂ ನೋಡದೇ ಇದ್ದ ಹಾಗೆ ಒಳಗಡೆ ಹೋಗಿ ಸೇರಿಕೋಂಡಳು. ಅಮೀನನೆ ಮಾತಿಗೆ ಶುರು ಮಾಡಿದ . ಇಷ್ಟೋತ್ತಿಗಾಗಲೇ ಸುತ್ತ ನಾಲ್ಕಾರು ಜನ ಸೇರಿದ್ದರು. ಸ್ಪಲ್ಪ ಅನೂಕೂಲಸ್ಥರಾಗಿದ್ದೋರು, ಕುಳ ಅಂತ ಅನ್ನಿಸಿಕೊಂಡೋರು ಅಮೀನನ್ನ ಬಹುವಚನದಲ್ಲಿ ಮಾತಾಡಿಸಿ ಗೌರವ ಸೂಚಿಸ್ತ ಜಗುಲಿ ಮೇಲೆ ಅಮೀನನ ಎದುರಿಗೆ ಕುಳಿಕೊಂಡುಬಿಟ್ಟರು.
ಅಮೀನ ಹೇಳಿದ್ದನ್ನೆಲ್ಲಾ ಭಾಗಮ್ಮ ಕಿವಿಯಾರ ಮನಸಾರ ಕೇಳಿಸಿಕೊಂಡಳು. ಅವನು ಸುಳ್ಳು ಹೇಳ್ತಿದ್ದಾನೆ ಅಂತ ಏನೂ ಅನಿಸಲಿಲ್ಲ ಅವಳಿಗೆ. ಅದೆಷ್ಟೋ ವ್ಯವಹಾರ ಮಾಡಿ ಕೈ ಮೈ ಎಲ್ಲ ಸುಟ್ಟುಕೊಂಡಿದ್ದ ಅವಳ ಗಂಡ ಇದನ್ನು ತಾನೆ ಯಾಕೆ ಮಾಡಿರೋಲ್ಲ ಅಂತ ಅನುಮಾನನೂ ಬಂತು. ಆದರೆ ಈಗ, ಯಾವತ್ತೋ ಸತ್ತು ಹೋದ ಮನುಷ್ಯನ ಸಾಲ ತೀರಿಸು, ಈಗಲೇ ಪೈಸಲ್ ಮಾಡು ಅಂತ ಇದೆ ಮೇಲೆ ಬಂದು ಕೂತುಕೊಂಡರೆ…… ಭಾಗಮ್ಮ ಏನೂ ಮಾತಾಡಲೇ ಇಲ್ಲ. ಕೊನೆ ಮನೆ ಶಾಸ್ತ್ರಿಗಳ ಮನೇನಲ್ಲಿ ಮೆಣಸಿನ ಪುಡಿ ಮುಗಿದಿತ್ತು. ಮೆಣಸಿನಕಾಯಿನ ಮನೆಯಿಂದಲೇ ಹುರಕೊಂಡು ಹೋಗಬೇಕು ಅಂತ ತಂದಿಟ್ಟುಕೊಂಡಿದ್ದಳು. ಅದರ ತೊಟ್ಟನ್ನ ಮುರೀತಾ ಮುರೀತಾ, ಎದುರುಗಡೆ ಇದ್ದ ಮೆಣಸಿನಕಾಯಿ ಗುಡ್ಡೇನೆ ನೋಡ್ತಾ ಕೂತಕೊಂಡಿದ್ದಳು.
ಹೊರಗಡೆ ಜಗುಲಿ ಮೇಲೆ ಕೂತಿದ್ದೋರಗೆಲ್ಲ ಅಮೀನನ ವೇಷಭೂಷಣ ಮಾತು ಎಲ್ಲ ನೋಡಿ, ಅವನ ಪರವಾಗೆ ಮಾತಾಡಬೇಕು ಅಂತ ಆಸೆ ಆದರೂ ಭಾಗಮ್ಮನ ಎದೆ ಸೀಳಿದರೂ ಎರಡು ಕಾಸು ಹುಟ್ಟೋಲ್ಲ ಅಂತ ಗೊತ್ತಿದ್ದರಿಂದ ಅಮೀನನ ಮುಖನೇ ನೋಡ್ತಾ ಕೂತಿದ್ದರು. ಎಷ್ಟೋತ್ತಾದರೂ ಯಾರೂ ಬಾಯಿ ಬಿಡದೇ ಇದ್ದದ್ದರಿಂದ ಅಮೀನನೆ ಜಗಲಿ ಇಳಿದು ಬಾಗಿಲ ಹತ್ತಿರ ಬಂದು ಒಳಗಡೆ ತಲೆ ತುರಿಸುವ ಹಾಗೆ ಮಾಡಿ ‘ ಈವತ್ತೇ ಅಂತ ಏನಿಲ್ಲ. ಮುಂದಿನ ಅಮವಾಸ್ಯೆ ಕಳೆದ ಮೇಲೆ ಬರ್ತೀನಿ. ದುಡ್ಡೇ ಆಗಬೇಕು ಅಂತಾನು ಇಲ್ಲ ನನಗೆ . ದುಡ್ಡಿಗೆ ಯಾವುದಾದರೂ ಪದಾರ್ಥ ಕೊಟ್ಟರೂ ಸಾಕು’. ಜಗಲಿ ಏರಿ ಕುಳಿತಿದ್ದ ಕುಲಸ್ಥರಿಗೂ ಈ ಮಾತು ಸರಿ ಎನ್ನಿಸಿ ಅವರು ಕೂಡ ಅಮೀನನ ಹಿಂದೆ ಹೊರಟು ದುರ್ಗದಿಂದ ಹೊರಟು ಮಂಡ್ಯದ ಮೇಲೆ ಶ್ರೀರಂಗಪಟ್ಟಣ ಸೇರೋ ರಾಯಲ್ ಮೋಟಾರ್ ಬಸ್ ನಿಲ್ಲುವ ಸಂತೆ ಮಾಳದ ತನಕವು ಅವನ ಜೊತೆಯೇ ಹೋದರು.
ಅಮೀನನಲ್ಲವೇ? ಹೇಳಿದಂತೆಯೆ ಬಂದ. ಆವತ್ತೂ ಭಾಗಮ್ಮ ಮನೇಲಿ ಇರಲಿಲ್ಲ. ಅಮೀನ ಏನು ಹೇಳಬೇಕಾಗೇ ಇರಲಿಲ್ಲ. ಊರವರೆ ಅವನ ಮುಖ ನೋಡಿದ ತಕ್ಷಣ ಓಡಿ ಹೋಗಿ ಭಾಗಮ್ಮನ ಕರಕೊಂಡು ಬಂದರು. ಎರಡಮಾವಾಸ್ಯ ಮಧ್ಯೆ ಎಷ್ಷು ದುಡ್ಡು ಹುಟ್ಟುತ್ತೆ? ಆದೂ ಭಾಗಮ್ಮನಿಗೆ. ಅಮೀನ ಮನೇಲಿರೋ ಪದಾರ್ಥನೆ ತಗೊಂಡೋಗ್ತಿನಿ, ತಿಂಗಳಿಗೊಂದು ಸಲ ಐದಾರು ರೂಪಾಯ ಖರ್ಚು ಮಾಡಿಕೊಂಡು ನಾನು ಪಶ್ಚಿಮ ವಾಹಿನಿಯಿಂದ ಇವರ ಮುಖ ನೊಡೋಕೆ ಬರಬೇಕೆ’ ಅಂತಾ ಹೇಳಿ ನ್ಯಾಯ ಒಪ್ಪಿಸಿದ. ಒಂದು ಸಣ್ಣ ಕೊಳದಪ್ಪಲೆ, ಅಡಿಗೆ ಮನೆ ಚಿಕ್ಕ ಹಂಡೆ, ಒಂದು ದಪ್ಪ ಬೀಸೋ ಕಲ್ಲು ಇಷ್ಟನ್ನು ನಾಲ್ಕು ಜನದ ಎದುರಿಗೇನೆ ಹೊರೆಸಿಕೊಂಡು ಹೊರಟ. ಆಳು ತೂಕ ಇದೆ, ಬೀಸೋ ಕಲ್ಲದು ಇಲ್ಲೇ ಯಾರಿಗಾದರೂ ಮಾರಿ ಅಂತ ಊರಿನೋರು ಹೇಳಿದರು. ಅಮೀನ ಇಲ್ಲ ಇಲ್ಲ ಹೀಗೆ ತುದಿಗಾಲಲ್ಲಿ ನಿಂತು ಸೀಯೋಕೆ ಹೋದರೆ ಏನು ಬೆಲೆ ಹುಟ್ಟೋಲ್ಲ. ಬಸ್ ಕಂಡಕ್ಟರ್ಗೆ ನಾನು ಅಮೀನ ಅಂತ ಗೊತ್ತು’ ಅಂತ ಗಟ್ಟಿಯಾಗಿ ಹೇಳ್ತಾ, ಹೇಳ್ತಾ ನಡೆದದ್ದನ್ನೆಲ್ಲಾ ನೋಡ್ತಾ ನಿಂತಿದ್ದ ಮೇಲುಸಕ್ಕರೆ ಗೋವಿಂದ ಶೆಟ್ಟಿ ಕೈಲಿ ಎಲ್ಲವನ್ನು ಹೊರೆಸಿಕೊಂಡು ಸಂತೆ ಮಾಳದ ಕಡೆಗೆ ಹೋದ, ಬಸ್ಸು ಹಿಡಿಯೋಕೆ.
ಅಮೀನ ಹಾಗೆ ಬೀಸೋ ಕಲ್ಲು ಸಮೇತ ಎಲ್ಲವನ್ನು ಹೊರೆಸಿಕೊಂಡು ಹೋದ ಮೇಲೇನೆ ಭಾಗಮ್ಮನಿಗೆ ಅರಳು ಮರಳಾದ್ದು. ಹುಚ್ಚು ಹಿಡಿದದ್ದು ಅಂತ ಊರಿನೋರೆಲ್ಲ ಅಂದುಕೊಂಡರು. ಬೀಸೋಕಲ್ಲ ತಗೋಂಡೋಗೋಕೆ ಮುಂಚೇನೆ ಭಾಗಮ್ಮ ಮನೇಲಿದ್ದಾಗ ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳೋಳು, ಅತ್ತು ಕರೆದು ಮಾಡೋಳು, ತಿಪ್ಪಯ್ಯನ್ನ ಮನಸಾರೆ ಬಯ್ಯೋಳು, ಅಣ್ಣ- ಅತ್ತಿಗೇನ ಜಾಲಾಡೋಳು ಬೀಸೋಕಲ್ಲಿನ ಶಬ್ದದಲ್ಲಿ ಅದು ಯಾರಿಗೂ ಕೇಳಿಸ್ತಾ ಇರಲಿಲ್ಲ ಅಷ್ಟೇ. ಒಂದು ಮನೇದೆ ಕೆಲಸ ಭಾಗಿ ಮಾಡ್ತಾ ಇದ್ದದ್ದು. ಎಷ್ಟು ಮನೇದು ಅಂತ ಹಿಟ್ಟು, ತರಿ ಎಲ್ಲನು ಅದರಲ್ಲಿ ಬೀಸಿದೋಳು ಅವಳು? ಬೀಸೋಕಲ್ಲಿನ ಹಿಡಿ ಹಿಡಕೋಳ್ಳೋಕೆ ಅದೆಷ್ಟು ತ್ರಾಣ ಬೇಕು? ಅಷ್ಟು ದಪ್ಪನಾದ ಹಿಡಿ ಅದು.
ಈವಾಗ ಅಮೀನ ಬಂದು ಹೋದ ಮೇಲೆ ಬೀಸೋ ಕಲ್ಲೆ ಇಲ್ಲವಲ್ಲ. ಜಗುಲಿ ಮೇಲೆ ಕುತ್ಕೋಂಡು ಮಾತಾಡೋಕೆ ಶುರು ಮಾಡಿದಳು. ಯಾರಾದರೂ ಮನೆ ಎದುರಿಗೆ ಹೋಗ್ತಾ ಇದ್ದರೆ ಅವರ ಹಿಂದುಗಡೆ ಹೋಗಿ ಅವರು ಮನೆ ಸೇರೋ ತನಕ ಇವಳು ಲೊಟ ಲೊಟ ಅಂತ ವಟಗುಟ್ಟಕೊಂಡು ಹೋಗೋಳು. ಯಾರು ಇಲ್ಲದೆ, ಕೆಲಸಾನೂ ಇಲ್ಲದೆ ಕೈ ಖಾಲಿ ಇದ್ರೆ ಮನೇಲೆಲ್ಲಾ ಓಡಾಡ್ತಾ ಒಡಾಡ್ತಾ ತಾನೇ ಮಾತಾಡಿಕೊಳ್ಳೋಳು.
ಅಮೀನ ಭಾಗಮ್ಮನ ಬೀಸೋಕಲ್ಲು ಹೊತ್ತುಕೊಂಡು ಹೋದದ್ದು ಊರವರಿಗೂ ತೊಂದರೆಯಾಯ್ತು. ‘ಏ ಭಾಗೀ ಏನಾದರೂ ಮಾಡಿ ಒಂದು ಬೀಸೋಕಲ್ಲು ಹೊಂಚಕೊಳೆ’ ಎಂದು ಸುಖನಾತಿ ರಾಗದಲ್ಲಿ ಊರವರೆಲ್ಲಾ ಹೇಳ್ತಾ ಇದ್ದರೂ ಭಾಗಿಗೆ ಬೀಸೋಕಲ್ಲು ಹೇಗೆ ಸಿಗುತ್ತೆ? ಅವಳು ಅದಕ್ಕೆ ದುಡ್ಡು ಹೇಗೆ ಕೊಡ್ತಾಳೆ? ಅಂತ ಕೇಳಿಕೊಳ್ಳೋಕು ಹೋಗಲಿಲ್ಲ, ಹೇಳಕೊಡೋಕು ಹೋಗಲಿಲ್ಲ? ಭಾಗಮ್ಮನಿಗೂ ಬೀಸೋ ಕಲ್ಲು ಶಬ್ದ ಕೇಳಿ ಕೇಳಿ ಕಿವಿ ತುಂಬಾ ಅದೇ ರೂಢಿಯಾಗಿ ಬಿಟ್ಟಿದ್ದರಿಂದ ಅದನ್ನೇ ಕೇಳ್ತಾ ಕೇಳ್ತಾ ಇರಬೇಕು ಅಂತ ಆಸೆಯಾಗ್ತಾ ಇದ್ರು ಅದನ್ನ ಹೇಗೆ ಹೇಳಬೇಕು, ಅದು ಹೇಳಕೊಳೋ ಆಸೇನೆ ಅಂತಾನು ಗೋತ್ತಾಗ್ತಾ ಇರಲಿಲ್ಲ. ಊರನೋರ ಸುಖನಾತಿ ರಾಗ ಮಾತ್ರ ಮುಂದುವರಿದೇ ಇತ್ತು. ಬೀಸೋಕಲ್ಲ ತಗೋಳೆ, ಬೀಸೋಕಲ್ಲ ಹೊಂಚಹಾಕೆ.
ಭಾಗಮ್ಮನಿಗೆ ಕೂಡ ವಿಶ್ವೇಶ್ವರಯ್ಯನೋರ ಕತೆ, ಪ್ರತೀತಿಯೆಲ್ಲಾ ತಿಳಿದಿತ್ತು. ಅವರು ನಾಲೆ ಕೆಲಸಕ್ಕೆಂದು ಮೋಟರಿನಲ್ಲಿ ಬರೋದು, ಅಮಲ್ದಾರ್, ಶೇಖದಾರ್, ಅವರು ಇವರೆಲ್ಲ ಅವರ ಹಿಂದುಗಡೆ ಬರೋದು. ದಿವಾನರಾದ ಮೇಲು ವಿಶ್ವೇಶ್ವರಯ್ಯ ಖಾಯಿಲೆ ತಾಯಿನ ಬಂಗ್ಲೇಲಿ ಇಟ್ಟುಕೊಂಡು ಉಪಚಾರ ಮಾಡೋದು, ಅಂತ ದೊಡ್ಡ ಮನುಷ್ಯನ ಜೊತೆ ಬದುಕೋ ಅದೃಷ್ಟ ಇಲ್ಲದೆ ಅವರ ಹೆಂಡತಿ ಬೇರೆ ಯಾರ ಜೊತೆಯೋ ಓಡಿ ಹೋದ್ದು – ಎಲ್ಲ ಕತೇನು ಭಾಗಮ್ಮ ಕೇಳಿದ್ದಳು. ಊರಿನ ಜನವೆಲ್ಲ ಬೀಸೋಕಲ್ಲು ತಗೊಳೆ, ಬೀಸೋಕಲ್ಲು ತಗೊಳೆ ಅಂತ ಜ್ಞಾಪಕ ಮಾಡ್ತ ಮಾಡ್ತಾ ಅದನ್ನೇ ಯೋಚನೆ ಮಾಡಿ, ಯೋಚನೆ ಮಾಡಿ ಯಾವುದೋ ಒಂದು ಕ್ಷಣದಲ್ಲಿ ಅವಳಿಗೆ ದಿವಾನ್ ವಿಶ್ವೇಶ್ವರಯ್ಯನೋರ ಹತ್ತಿರ ಹೋಗಿ ತನ್ನ ಅಹವಾಲು ಹೇಳಿಕೊಂಡು, ಒಂದು ಬೀಸೋ ಕಲ್ಲು ತೆಗೆಸಕೊಬೇಕು ಅಂತ ಅನ್ನಿಸೋಕೆ ಶುರುವಾಗಿ ಬಿಟ್ಟಿತ್ತು. ಆಮೇಲಿಂದ ಅವಳು ಅರಳು ಮರಳು ಮಾತಿನಲ್ಲಿ, ಲೊಟಕಾಟದಲ್ಲಿ ಅವಳು ವಿಶ್ವೇಶ್ವರಯ್ಯನವರ ಎದುರಿಗೇನೆ ನಿಂತುಕೊಂಡು ಅಹವಾಲು ಹೇಳ್ತಾ ಇದ್ದದ್ದು ಅವರು ಕೇಳಿಸಿಕೊಳ್ತಾ ಇದ್ದದ್ದು ಎಲ್ಲ ಸೇರಿಕೊಂಡಿತು. ಊರಿನೋರಿಗೆ ಯಾರಿಗೂ ಗೊತ್ತಾಗಲಿಲ್ಲ, ಅಷ್ಟೆ ಭಾಗಿ ಕೂಡ ತಾನು ದಿವಾನರನ್ನು ಬೀಸೋಕಲ್ಲು ಕೇಳೋ ಸಂಗತಿ ಯಾರಿಗೂ ಗೊತ್ತಾಗಬಾರದು ಅಂತ ಅಂದುಕೊಂಡಿದ್ದಳು.
ತನ್ನಷ್ಟಕ್ಕೆ, ತನಗೆ ತಾನೇ ಭಾಗಿ ದಿವಾರನ್ನು ಕಾಣೋ ಆಸೇನ ನೂರು ಸಲ, ಸಾವಿರ ಸಲ ಹೇಳಿಕೊಂಡರೂ ಬೇರೆ ಯಾರಿಗೂ ಹೇಳೋಕೆ ಹೋಗಲಿಲ್ಲ. ಎಲ್ಲರ ಮನೆ ಕೆಲಸ ಎಲ್ಲ ಮುಗಿಸಿದ ಮೇಲೆ ಮಧ್ಯಾಹ್ನ ಅನ್ನದೆ, ಸಂಜೆ ಅನ್ನದೆ ಊರ ಹೊರಗಿನ ಸಂತೆ ಮಾಳದ ಹತ್ತಿರ ಬಂದು ತುದಿಗಾಲ ಮೇಲೆ ನಿಂತ್ಕೊಂಡು ಕಣ್ಣಿಗೆ ಕಾಣುವ ತನಕವು ರಸ್ತೇನ ನೋಡ್ತಾ ನಿಂತಿರೋಳು. ದಿವಾನರ ಪ್ರೋಗ್ರಾಂ ಇವಳಿಗೆ ಗೊತ್ತಾಗಿದೆ. ಅದಕ್ಕೆ ಊರ ಬಾಗಿಲಲ್ಲಿ ಕಾಯ್ತಾ ನಿಂತಿದ್ದಾಳೆ ಅಂತ ಅನ್ನಕೊಬೇಕು ಹಾಗೆ. ದಿನ ಕಾದಳು, ತಿಂಗಳು ಕಾದಳು, ವರ್ಷನು ಕಾದರಿಬೇಕು. ದಿವಾನರ ಮೋಟರು ಬರಲಿಲ್ಲ. ಭಾಗಿ ಕಾಯುವುದನ್ನು ಬಿಡಲಿಲ್ಲ.
ಕೊನೆಗೊಂದು ದಿನ ಬೇಸಿಗೆ ಇನ್ನೇನು ಇಳಿಯೋಕೆ ಶುರುವಾಗುತ್ತೆ ಅಂತ ಅನ್ನಕೊಳೋ ಒಂದು ದಿವಸದಲ್ಲಿ ದಿವಾನರು ಬಂದೇ ಬಿಟ್ಟರು. ಮೋಟಾರಿನಲ್ಲಿ ಧೂಳೆಬ್ಬಿಸುತ್ತಾ, ಮೋಟರ್ ನೋಡಿದವಳಿಗೆ ಅದು ದಿವಾನರದೆ ಮೋಟರ್ ಅಂತಾ ಹೇಗೆ ತಿಳೀತೋ ಸಂತೋಷದಿಂದ ಊರೊಳಗೆ ಓಡಿಹೋಗಿ ಮನೆ ಒಳಗಡೆ ಸೇರಿಕೊಂಡುಬಿಟ್ಟಳು. ಆವತ್ತು ರಾತ್ರಿ ನಿದ್ದೆ ಕಣ್ಣರಪ್ಪೆ ಹತ್ರ ಇರಲಿ, ಇವಳ ಮನೆ ಜಗುಲಿ ಹತ್ರನು ಬರಲಿಲ್ಲ. ನಿದ್ದೆಯಿಲ್ಲವಲ್ಲ, ಅಮೀನ ತಗೊಂಡೋಗಿದ್ದನಲ್ಲ; ಬೀಸೋಕಲ್ಲು, ಅದರ ಜಾಗ ಖಾಲಿ ಇತ್ತಲ್ಲ ಅದನ್ನೇ ನೋಡ್ತಾ ನೋಡ್ತಾ ನಿರುಕಿಸ್ತಾ ಮಲಗಿಕೊಂಡಿದ್ದಳು.
ದಿವಾನರು ಬಂದ ಮೇಲೆ ಊರಿನೋರಿಗೆ ಗೊತ್ತಿರಲ್ಲವೆ? ಎಲ್ಲರ ಮನೇಲು ಅವರದ್ದೇ ಸುದ್ದಿ. ಅವರ ಜೊತೆ ಯಾರ್ಯಾರು ಬಂದಿದಾರೆ, ಎಷ್ಟು ದಿನ ಇರ್ತಾರೆ, ನಾಲೆ ಕೆಲಸ ಎಲ್ಲಿ ತನಕ ಬಂತು, ನಾಲೆ ನೀರು ಯಾರ ಯಾರ ಜಮೀನಿಗೆ ಸಿಗುತ್ತೆ? ಎಲ್ಲರ ಬಾಯಲ್ಲು ಇದೇ ಮಾತು . ಈ ಸಲ ದಿವಾನರದು ಮೂರು ನಾಲ್ಕು ದಿನದ ಮೊಕ್ಕಾಂ ಅಂತ ಎಲ್ಲರೂ ಮಾತಾಡಿಕೊಳ್ಳೋರು. ಶುಕ್ರವಾರ ಸಂಜೆ ಸುತ್ತಮುತ್ತಲ ಊರನೋರೆಲ್ಲ ಸೇರಿ ದಿವಾನರಿಗೆ ಒಳ್ಳೆದಾಗಲಿ ಅಂತ ಈಶ್ವರನ ಗುಡೀಲಿ ಪಂಚಾಮೃತದ ಅಭಿಷೇಕ ಮಾಡಿಸ್ತಾರೆ. ಶನಿವಾರ ಬೆಳ್ಳಿಗೆ ದಿವಾನರು ಎದ್ದು ಮದ್ದೂರಿನ ತನಕ ಮೋಟರಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಹೋಗ್ತಾರೆ. ಎಲ್ಲನು ಭಾಗಮ್ಮನ ಕಿವಿ ಮೇಲೆ ಬೀಳೋದು.
ಒಂದು ದಿನ ಭಾಗಮ್ಮ ಬೆಳಿಗ್ಗೆ ಕೋಳಿ ಕೂಗೋ ಹೊತ್ತಿಗೆ ಎದ್ದು ದಿವಾನರು ಮೊಕ್ಕಾಂ ಮಾಡಿದ್ದ ಪಂಚಾಯತಿ ಆಫೀಸಿನ ಮುಂದುಗಡೆ ಕೂತೇ ಬಿಟ್ಟಳು . ದಿವಾನರ ಮೋಟರ್ ಅಲ್ಲೇ ನಿಂತಿತ್ತು. ದಿವಾನರ ಕಡೆಯಿಂದ ಒಂದಿಷ್ಟು ಜನ ಜಗುಲಿ ಮೇಲೆ ಮಲಗಿದ್ದ್ರು. ಗೂರ್ಖಾ ಒಬ್ಬ ಮಾತ್ರ ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಓಡಾಡ್ತಾ ಇದ್ದ. ಇವನ ಕಣ್ಣಿಗೆ ಬಿದ್ದರೆ ಏನಾದರೂ ಕೇಳಬೋದು, ಗದರಿಸಿ ಬೆದರಿಸಿ ಓಡಿಸಬಹುದು ಅಂತ ಭಾಗಮ್ಮ ಪಂಚಾಯತಿ ಆಫೀಸ್ ಎದುರಿಗೆ ಇದ್ದ ಒಂದು ಸುಮಾರಾದ ದೊಡ್ಡ ಮರದ ಹಿಂದೆ ಅವಿತುಕೊಂಡ ಹಾಗೆ ನಿಂತುಕೊಂಡಳು.
ಬೆಳಕು ಸ್ವಲ್ಪ ಸ್ವಲ್ಪ ಆಗ್ತ ಗೂರ್ಖಾ, ಜಗುಲಿ ಮೇಲೆ ಮಲಗಿದ್ದೋರು ಎಲ್ಲ ಎದ್ದು ಜಗುಲಿ ಮೇಲಿನ ಅಲ್ಲಿ ಇಲ್ಲಿ ಅಂತ ಒಂದಿಷ್ಟು ಒಡಾಡಿ ಎಲ್ಲರೂ ಒಟ್ಟಿಗೆ ಕೆರೆ ಕಡೆಗೆ ಹೊರಟರು. ಭಾಗಮ್ಮ ಈಗ ಧೈರ್ಯವಾಗಿ ಜಗುಲಿ ಹತ್ತಿರಕ್ಕೇ ಬಂದಳು. ಅವಳು ಬರೋ ಹೊತ್ತಿಗೆ ಒಬ್ಬ ಬೋಳು ತಲೆ ಮುದುಕಪ್ಪ, ಬನೀನ್ ಪಂಚೆನಲ್ಲಿ ಜಗುಲಿ ಮೇಲಿದ್ದ ಬಲಗಡೆ ಭಾಗದ ರೂಮಿನಿಂದ ಹೊರಬಂತು. ಕೈನಲ್ಲಿ ಹಿಡಿಕೊಂಡಿದ್ದ ಪುಸ್ತಕ, ಪೇಪರ್‌ನ ಜಗುಲಿ ಮೇಲೆ ಒಂದು ಮೂಲೇಲಿದ್ದ ಟೇಬಲ್ ಮೇಲೆ ಇಟ್ಟು, ಎರಡು ಕೈನೂ ಹಿಂದಕ್ಕೆ ಕಟ್ಟಿಕೊಂಡು ಶತಪಥ ಓಡಾಡೋಕೆ ಶುರು ಮಾಡಿತು. ಆಳುಕಾಳುಗಳು, ಕೈಕೆಳಗಿನ ಅಧಿಕಾರಿಗಳೆಲ್ಲ ಎದ್ದ ಮೇಲೆ ತಾನೇ ದಿವಾನರು ಏಳೋದು, ಇನ್ನೂ ಮಲಗಿರಬೇಕು ಅಂತ ತನಗೆ ತಾನೇ ಹೇಳಿಕೊಂಡು, ಶತಪಥ, ಹಾಕ್ತಿದ್ದ ಮುದುಕನನ್ನೇ ಭಾಗಮ್ಮ ನೋಡ್ತಾ ನಿಂತುಕೊಂಡಳು.
ಶತಪಥ ಹಾಕ್ತಿದ್ದ ಮುದುಕ ಒಂದು ಸಲ ಇವಳ ಕಡೆ ತಿರುಗದೋನೇ ‘ ಯಾರಮ್ಮಾ ನೀನು, ಈ ಬೆಳಿಗ್ಗೆ, ಬೆಳಿಗ್ಗೆ…’ ಇದ್ದಕ್ಕಿದ್ದಂತೆ ಮಾತಾಡಿದ್ದರಿಂದ ಮಾತು ಸ್ವಲ್ಪ ಬಿರುಸಾಗಿ ಇತ್ತು. ‘ ದಿವಾನರು ಇನ್ನೂ ಎದ್ದಿಲ್ಲವಾ? ಭಾಗಿ ತನಗೆ ಮಾತ್ರವೇ ಕೇಳಿಸುವಂತೆ ಕೇಳಿದಳು. ಮುದುಕಪ್ಪನಿಗೆ ಸರಿಯಾಗಿ ಕೇಳಿಸಲೇ ಇಲ್ಲ. ಮೊದಲು ಕೇಳಿದ್ದಕ್ಕಿಂತಲೂ ಜೋರಾಗಿ ‘ಯಾರಮ್ಮಾ ನೀನು’ ಅಂತ ಇನ್ನೊಂದು ಸಲ ಕೇಳಿದರು. ಭಾಗಮ್ಮ ಜಗುಲಿ ಮೇಲಿದ್ದ ರೂಮಿನ ಕಡೆ ತೋರಿಸಿ ಗಂಟಲು ದೊಡ್ಡದು ಮಾಡಿ ‘ದಿವಾನರು ಇನ್ನೂ ಎದ್ದಿಲ್ಲವೇನೋ…’ ಅಂತ ಕೇಳಿದಳು. ಮುದುಕಪ್ಪನಿಗೆ ಯಾರಿದು ಈ ಮುದುಕಿ, ಈ ಸರಹೊತ್ತಿನಲ್ಲಿ ಅನಿಸಿ ‘ಯಾರಮ್ಮಾ ನೀನು, ಏನುಬೇಕು? ಅಂತ ಕೇಳ್ತಾ ಜಗುಲಿಯಿಂದ ಕೆಳಗಿಳಿಯೋಗೆ ಶುರು ಮಾಡಿತು. ಭಾಗಮ್ಮ ಹೆದರಿ ಓಡಿಬಿಟ್ಟಳು.
ಒಂದಷ್ಟು ದೂರ ಓಡಿಹೋಗಿ ಬೀದಿ ಕೊನೆಯಲ್ಲಿ ಮರೆಯಾದ ಹಾಗೆ ನಿಂತುಕೊಂಡು ಮುದುಕಪ್ಪನ್ನೇ ನೋಡೋಕೆ ಶುರು ಮಾಡಿದಳು ಭಾಗಮ್ಮ. ಮುದುಕಪ್ಪ ಈಗ ಕೈಕಟ್ಟಿಕೊಂಡು ಓಡಾಡೋದನ್ನ ನಿಲ್ಲಿಸಿ ಜಗಲಿ ಮೆಟ್ಟಿಲು ಮೇಲೆ ಕೂತಕೊಂಡು ಪೇಪರ್, ಪುಸ್ತಕ ನೋಡೋಕೇ ಶುರು ಮಾಡಿತು. ದಿವಾನರು ಏಳಲಿ, ಎದ್ದ ತಕ್ಷಣ ಓಡಿಹೋಗಿ ಎಲ್ಲ ಹೇಳಿ, ಬೀಸೋಕಲ್ಲು ಕೇಳ್ತೀನಿ ಅಂತ ಭಾಗಮ್ಮ ತನಗೆ ತಾನೇ ಹೇಳಿಕೊಂಡು ಕಾಯ್ತಾ ನಿಂತುಕೊಂಡಳು.
ಭಾಗಮ್ಮ ಹೀಗೆ ರಸ್ತೆ ಕೋನೇಲಿ ನಿಂತಿದ್ದ ಹಾಗೇನೆ, ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಗುಂಪಾಗಿ ಮಾತಾಡಿಕೊಂಡು ಬರ್ತಿರುವುದು ಕಂಡಿತು. ಕಂಡವಳೇ ಭಾಗಮ್ಮ, ಎದ್ದೆನೋ ಬಿದ್ದನೋ ಅಂತಾ ಓಡಿ ಬಂದು ಪಂಚಾಯತಿ ಜಗುಲಿ ಮುಂದೆ ನಿಂತುಕೊಂಡು ಏದುಸಿರು ಬಿಡುತ್ತಾ, ‘ಏನುಸ್ವಾಮಿ, ದಿವಾನರು ಇನ್ನೂ ಏಳಲಿಲ್ಲವಾ? ಮಲಗಿಕೊಳ್ಳಲಿ ಬಿಡಿ, ನಮ್ಮ ಊರಲ್ಲಾದರೂ ದಿವನಾಗಿ… ಮನೇಲಂತು ಸುಖ ಇಲ್ಲ – ಸಂಸಾರ ಅಂತು ಕೇಳಿಕೊಂಡು ಬಂದಿಲ್ಲ’ ಅಂದು ತಲೆ ಚಚ್ಚಿಕೊಳ್ಳಲು ಪ್ರಾರಂಭಿಸಿದಳು. ಇವಳು ಹೀಗಂದ ತಕ್ಷಣವೇ, ಮುದುಕಪ್ಪ ಮೆಟ್ಟಲಿಳಿದು ಇವಳ ಕಡೆಗೆ ಬರುತ್ತಾ, ‘ಏನಮ್ಮಾ ನೀನು ಯಾರು, ಯಾರು ಬೇಕು? ಏನು ಬೇಕು? ಅಂತ ಕೇಳಿದ್ದೆ ಭಾಗಮ್ಮ ಹಿಂದಕ್ಕೆ ಹಿಂದಕ್ಕೆ ಓಡಿ ಹೋಗಲು ನೋಡಿದಳು. ಮುದುಕಿ ಇನ್ನೂ ಓಡಿ ಹೊರಟು ಹೋಗುತ್ತಲ್ಲಾ ಅಂತ ಮುದುಕಪ್ಪ ನಿಂತ ಜಾಗದಲ್ಲೇ ನಿಂತುಕೊಂಡ ತಕ್ಷಣವೆ, ಭಾಗಮ್ಮ ಬಡ ಬಡ ಅಂತಾ ಅಮೀನ ಬಂದದ್ದು, ಬೀಸೋಕಲ್ಲು ತಗೊಂಡೋದ್ದು, ತನಗೆ ಈಗ ಅದು ಬೇಕಾಗಿರೋದು ಎಲ್ಲನು ಕೇಳಿಕೊಂಡಳು. ಹೇಳಿಕೋಳ್ಳುತ್ತಿದ್ದ ಹಾಗೇನೆ ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಇನ್ನೇನು ಪಂಚಾಯತಿ ಜಗುಲಿ ಹತ್ತಿರಕ್ಕೆ ಬರ್ತಾ ಇದ್ದದ್ದು ಕಾಣಿಸಿತು. ಭಾಗಮ್ಮ ಓಡೇಬಿಟ್ಟಳು.
ದಿವಾನರಿಗೆ ಹೇಳದೇ ಹೋದರೇನೂ, ಅವರ ಕಡೆಯೋರಿಗೆ ಹೇಳಿದೀನಲ್ಲ. ಆ ಮನುಷ್ಯ ಇಟ್ಟುಕೊಂಡಿದ್ದ ಪೇಪರ್, ಪುಸ್ತಕ ಎಲ್ಲ ನೋಡಿದರೆ ಆತನು ಅಧಿಕಾರಸ್ಥನೇ ಇರಬೇಕು. ಏನಾದರೂ ಸಹಾಯ ಮಾಡಬೋದು. ಬೀಸೋಕಲ್ಲು ವ್ಯವಸ್ಥೆ ಮಾಡಬಹುದು-ಅಂತ ಆಸೆಯಿಂದಲೇ ಭಾಗಮ್ಮ ಘಂಟೆ, ಗಳಿಗೆಗಳನ್ನು ಕಾಯ್ತ ಇದ್ದಳು. ದಿವಾನರನ್ನು ನೋಡೋಕೆ ಯಾರ್ಯಾರು ಬಂದಿದ್ದರು, ಯಾರ ಯಾರ ಜಮೀನ ಹತ್ರ ದಿವಾನರು ಹೋಗಿದ್ರು , ಯಾರ ಜಮೀನಿನಲ್ಲಿ ಅವರು ಬಾಯಾರಿಕೆಗೆ ಶರಬತ್ತು ಕುಡಿದರು, ಯಾರ ಮನೇಲಿ ಅವರಿಗೆ ಊಟ ಇಟ್ಟುಕೊಂಡಿದ್ದರು, ಎಲ್ಲಾನೂ ಭಾಗಮ್ಮನ ಕಿವಿಗೆ ಬೀಳೋದು. ಅಪ್ಪಿ ತಪ್ಪಿಯಾದರೂ ದಿವಾನರು ಬೀಸೋಕಲ್ಲಿನ ಬಗ್ಗೆ, ಭಾಗಮ್ಮನ ಬಗ್ಗೆ ಯಾರ ಕೈಲೂ ಹೇಳಿರಲಿಲ್ಲ ಅಂತಾ ಕಾಣುತ್ತೆ ಅದು ಭಾಗಮ್ಮನ ಕಿವಿಗೂ ಬೀಳಲೇ ಇಲ್ಲ. ಏನ್ ಮಾಡೋದು? ನಾನು ದಿವಾನರನ್ನೇ ನೇರ ನೋಡಬೇಕಿತ್ತು. ಆ ಅಧಿಕಾರಸ್ಥ ಮನುಷ್ಯ ಅವತ್ತು ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡನಲ್ಲ, ಅವನೇ ಹೇಳಬೇಕಿತ್ತು ದಿವಾನರಿಗೆ. ದಿವಾನರ ಮನಸ್ಸಿಗೆ ಬಂದರೆ ಅದೇನು ದೊಡ್ಡ ವಿಷಯಾನಾ ? ಸ್ಥಳದಲೇ ನಿಂತಲ್ಲೇ ಬೀಸೋಕಲ್ಲು ಹುಕುಂ ಮಾಡಬಹುದಿತ್ತು. ಇನ್ನೊಂದು ಸಲ ಹೋಗಿ ಖುದ್ದಾಗಿ ಅವರನ್ನೇ ಕಂಡರೆ ಕೆಲಸ ಕೈ ಹತ್ತಬಹುದು. ಆದರೆ ದಿವಾನರನ್ನು ನೋಡೋಕೆ ಹೋದರೆ ಅವರ ಸುತ್ತ ಅದೆಷ್ಟೊಂದು ಜನ ಇರ್ತಾರೆ. ಅವರಿಗೆಲ್ಲ ಯಾಕೆ ನನ್ನ ಕತೆ ಗೋತ್ತಾಗಬೇಕು?
ಅಳೆದು ಸುರಿದು ಯೋಚನೆ ಮಾಡಿ ಭಾಗಮ್ಮ ಶುಕ್ರವಾರ ಬೆಳಿಗ್ಗೆ ಸರಿಹೊತ್ತಿಗೆ ಸರಿಯಾಗಿ ತಿರುಗಿ ಪಂಚಾಯತಿ ಆಫೀಸ್ ಹತ್ತಿರ ಬಂದು ನಿಂತಿದ್ದಳು. ಅವತ್ತಿನಂತೆ ಅದೇ ಗೂರ್ಖಾ, ದಿವಾನರ ಕಡೆ ಜನ ಎಲ್ಲ ಎದ್ದು ಬಯಲು ಕಡೆಗೆ ಹೊರಟ ಮೇಲೆ ಇವಳು ಜಗಲಿ ಹತ್ತಿರ ಬಂದು ಕೂತುಕೊಂಡೇಬಿಟ್ಟಳು. ಏನಾದರೂ ಸರಿಯೇ, ಇವತ್ತು ದಿವಾನರನ್ನು ನೋಡಲೇಬೇಕೆಂಬ ಮೊಂಡುತನದಿಂದ ಭಾಗಮ್ಮನಿಗೆ ಒಂದು ತರಹ ಧೈರ್ಯ ಬಂದುಬಿಟ್ಟಿತ್ತು. ಜಗಲಿಯ ಬಲಭಾಗಕ್ಕಿದ್ದ ರೂಮಿನ ಬಾಗಿಲ ಕಡೆಗೇ ಅವಳ ಕಣ್ಣೆಲ್ಲ ಮೈಯಾಗಿ ನೋಡುತ್ತಿತ್ತು.
ಒಂದು ಸ್ವಲ್ಪ ಹೊತ್ತಾದ ಮೇಲೆ ಸೂಟು, ಬೂಟು, ಪೇಟ ಹಾಕಿಕೊಂಡ ಭದ್ರಾವತಿ ದಾಸಪ್ಪನವರು ಹೊರಗೆ ಬಂದ ತಕ್ಷಣ ಭಾಗಮ್ಮ ಓಡಿಹೋಗಿ ಅವರ ಕಾಲಿಗೆ ಅಡ್ಡ ಬಿದ್ದು ‘ದೊಡ್ಡ ಮನಸ್ಸು ಮಾಡಬೇಕು. ಇಡೀ ಸೀಮೇಗೆ ನಾಲೆ ಮಾಡಿಸೋರಿಗೆ ಒಂದು ಬೀಸೋಕಲ್ಲು ಕೊಡಸೋದು ಬಹಳ ಕಷ್ಟವೇ ಮೊನ್ನೆನೆ ಬಂದು ನಿಮ್ಮ ಕಡೆಯೋರಿಗೆ ಹೇಳಿದೆ. ದಿವಾನರಿಗೆ ಅವರು ಏನೂ ಹೇಳಲಿಲ್ಲ ಅಂತಾ ಕಾಣುತ್ತೆ. ಮನಸ್ಸು ಮಾಡಬೇಕು. ಹಿಡಿದಿದ್ದ ಕಾಲನ್ನು ಬಿಟ್ಟು ಎದ್ದೋಳು ತಿರುಗ ಅವರ ಪಾದಗಳನ್ನು ಸ್ಪರ್ಶಿಸಿ ಕಣ್ಣಿಗೊತ್ತಿಕೊಂಡು ‘ಸೀಮೆಗೆಲ್ಲಾ ಅನ್ನ ಕೊಡ್ತಿ, ನೀರು ಕೊಡ್ತಿ, ದೇವರು ನಿನಗೂ ಒಳ್ಳೇದು ಮಾಡೇ ಮಾಡ್ತಾನೆ. ಒಳ್ಳೆ ಸಂಸಾರ ಕೊಡ್ತಾನೆ. ಹೋದೋಳು ಹೋಗಲಿ, ಬರೋಳು ಬಂದೇ ಬರ್ತಾಳೆ. ನನ್ನಂತೋಳದು ಸ್ವಲ್ಪ ನೋಡಪ್ಪ’ ಅಂತ ಹೇಳ್ತಾ ನಿಂತಿದ್ದ ಹಾಗೇನೆ ಸೂಟು ಬೂಟು ಪೇಟ ಹಾಕಿಕೊಂಡಿದ್ದ ಅಷ್ಟೇ ಎತ್ತರದ ಇನ್ನೊಂದು ಮನುಷ್ಯ ಬಂದು ಭಾಗಮ್ಮನ ಹತ್ತಿರ ನಿಂತುಕೊಂಡಿತು. ಭಾಗಮ್ಮನಿಗೆ ಏನು ತೋಚದೆ ಹೆದರಿಕೆಯಾಗಿ ಕಿಟಾರ್ ಅಂತ ಕಿರುಚಿಕೊಂಡು ಓಡಿ ಹೋಗಿಬಿಟ್ಟಳು.
ಭಾಗಮ್ಮ ಅವತ್ತು ಮೊದಲನೇ ದಿವಸ ಬನೀನ್, ಬೋಳುತಲೆ, ಪಂಚೆ, ಪುಸ್ತಕದ ಜೊತೆ ನೋಡಿದ್ದು ಸರ್. ಎಂ.ವಿ. ಯವರನ್ನೆ, ದಿವಾನರನ್ನೆ… ದಿವಾನರಿಗೆ ಅವತ್ತು ದಿನಕ್ಕಿಂತಲೂ ಬಲು ಬೇಗ ಎಚ್ಚರವಾಗಿತ್ತು. ಹೇಗಿದ್ದರೂ ಎಚ್ಚರ ಆಯ್ತಲ್ಲಾ ಅಂತ ಅಂದುಕೊಂಡು, ಇಷ್ಟೊತ್ತಿಗೇನೆ ಬೆಳಿಗ್ಗೆ ಯಾರೂ ನೋಡೋಕೆ ಮಾಡೋಕೆ ಬಂದಿರೋಲ್ಲವಲ್ಲ ಅಂತ ಉಟ್ಟ ಬಟ್ಟೇಲಿ ಜಗುಲಿಗೆ ಬಂದಿದ್ದರು. ಭಾಗಮ್ಮ ಅವಾಗಲೇ ಬಂದು ಎಲ್ಲವನ್ನು ಹೇಳಿಕೊಂಡಿದ್ದು. ಶುಕ್ರವಾರ ಬೆಳಿಗ್ಗೆ ಬಂದು ಅವಳು ಸೂಟು, ಬೂಟು ಪೇಟದ ಸಮೇತ ಮೊದಲು ನೋಡಿದ ಮನುಷ್ಯ ಭದ್ರಾವತಿ ದಾಸಪ್ಪ ಅಂತಾ, ದಿವಾನರ ಖಾಸಾ ಕಾರ್ಯದರ್ಶಿ. ದಿವಾನರು ತಮ್ಮ ಹತ್ತಿರ, ತಮ್ಮ ಆಫೀಸಿನಲ್ಲಿ ಕೆಲಸ ಮಾಡೋರೆಲ್ಲ ತಮ್ಮಷ್ಟೇ ಟಿಪ್ ಟಾಪ್ ಆಗಿರಬೇಕೆಂದು ಅವರುಗಳಿಗೂ ತಮ್ಮದೇ ರೀತಿಯ ಬಟ್ಟೆ ಭೂಷಣಗಳನ್ನು ಕೊಡಿಸ್ತಾ ಇದ್ದದ್ದರಿಂದ ಫೋಟೋ, ಪೇಪರ್ ಇಲ್ಲದೆ ಇದ್ದ ಕಾಲದಲ್ಲಿ ಎಷ್ಟೋ ಜನ ದಾಸಪ್ಪನೋರನ್ನೆ ದಿವಾನರು ಅಂತಾ ತಿಳಕೊಂಡು ಕಟ್ಟ ಸುಖ ಹೇಳಿಕೊಳ್ಳೋರು. ದಿವಾನರಿಗೆ ಇದೇನೂ ತಿಳಿದೇ ಇರಲಿಲ್ಲ. ಹಾಗೆ ದಾಸಪ್ಪನವರಿಗೆ ಹೇಳಿಕೊಂಡ ಕಷ್ಟ ಸುಖಾನೂ, ದಾಸಪ್ಪ ದಿವಾನರಿಗೆ ಹೇಳಿ ಸರ್ಕಾರದ ಕಡೆಯಿಂದ ಏನೇನು ಕೆಲಸ ಆಗಬೇಕಾಗಿತ್ತೋ ಆ ಕೆಲಸ ಆಗೇ ಆಗೋದು. ಭಾಗಮ್ಮನ ವಿಷಯದಲ್ಲಿ ಇದು ತಿರವು ಮುರುವಾಗಿತ್ತು. ದಿವಾನರಿಗೇ ಕಷ್ಟ ಸುಖ ಹೇಳಿಕೊಂಡಿದ್ದರೂ, ದಿವಾನರ ಕಡೆಯವರನ್ನು ದಿವಾನರು ಅಂತ ತಿಳಿದು ಅವರ ಕಾಲಿಗೆ ಬಿದ್ದಿದ್ದಳು. ಅಹವಾಲು ಮಾತ್ರ ದಿವಾನರಿಗೇ ಸರಿಯಾಗಿ ಹೇಳಿಕೊಂಡಿದ್ದಳು.
ಭಾಗಮ್ಮ ಆಕಡೆ ಓಡಿಹೋದ ತಕ್ಷಣ ದಿವಾನರು-ದಾಸಪ್ಪನೋರು ಒಬ್ಬರೊಬ್ಬರ ಮುಖ ನೋಡಿಕೊಂಡರು. ದಿವಾನರು ‘ನನ್ನ ಈ ಹೆಂಗಸು ಮೊನ್ನೇನೆ ನೋಡಿದಾರೆ’ ಅಂತ ಹೇಳಿ ಮೆಟ್ಟಿಲಿಳಿದು ವಾಕಿಂಗ್‌ಗೆ ಹೊರಟರು. ದಾಸಪ್ಪನು ಕೂಡ ಅವರ ಹಿಂದೆ ಹೊರಟರು.
ಬೀಸೋಕಲ್ಲು ತಗೊಂಡು ಹೋಗುವಾಗ ಅಮೀನ ಎರಡಮಾವಾಸ್ಯೆ ವಾಯದೆ ಕೊಟ್ಟಿದ್ದ ಹಾಗೆ ದಿವಾನರು ವಾಯಿದೆ ಕೊಡದೆ ಹೋಗಿದ್ದರೂ ಬಲು ಬೇಗನೆ ಹತ್ತು ರೂಪಾಯಿನ ಮನಿಯಾರ್ಡರ್ ಭಾಗಮ್ಮನ ವಿಳಾಸಕ್ಕೆ ಬಂತು. ಭಾಗಮ್ಮನೆ ಸ್ವಲ್ಪ ಸುಳ್ಳು ತಟವಟ, ಹೇಳೋಕೆ ಶುರು ಮಾಡಿದಳು. ದಿವಾನರು ಊರಿಗೆ ಈಚಿಗೆ ಬಂದದ್ದರಿಂದ ದಿವಾನರು ಖುದ್ದು ಕಳಿಸಿದಾರೆ ಅಂತ ಹೇಳಿದರೆ ತಾನೇ ಹೋಗಿ ದಿವಾವನರನ್ನು ಅಂಗಲಾಚಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಯೋಚನೆನೆ ಹಿಡಿದು, ಮೈಸೂರು ಮಹಾರಾಜರೆ ಗೂಢಚಾರರ, ಚಿತ್ರಗುಪ್ತರ ಮೂಲಕ ತನ್ನ ಕಷ್ಟ ತಿಳಕೊಂಡು ತನಗೆ ಖುದ್ದು ಕಳಿಸ್ತಾ ಇದಾರೆ ಅಂತ ಊರಲ್ಲೆಲ್ಲ ಪ್ರಚಾರ ಮಾಡಿದಳು.
ಕೆಸ್ತೂರಿನ ಸಂತೆಗೆ ಅದೇ ಮೇಲುಸಕ್ಕರೆ ಗೋವಿಂದಶೆಟ್ಟಿನ ಜತೆ ಮಾಡಿಕೊಂಡು ಹೋಗಿ ಬೀಸೋಕಲ್ಲು ತಗೊಂಬಂದ ಮೇಲೆ ಊರವರ ಪ್ರಕಾರ ಭಾಗಮ್ಮನಿಗೆ ಹುಚ್ಚು ಅರಳು-ಮರಳು ಎಲ್ಲ ಕಡಿಮೆಯಾಯ್ತು. ಆದರೆ ಅವಳು ಮಾತ್ರ ಮೊದಲಿನಂತೆಯೇ ಬೀಸೋಕಲ್ಲಿನ ಶಬ್ದದ ಜೊತೆಗೆ ತನ್ನ ಬೈಗುಳ, ಅಳು, ಅಲವತ್ತು ಕೊಳ್ಳುವುದನ್ನು ಸೇರಿಸೋಕೆ ಶುರು ಮಾಡಿದಳು. ಬೀಸೋಕಲ್ಲಿನ ಶಬ್ದಾನೇ ತುಂಬಾ ಜೋರು ಮಾಡಿದಾಗ ಮಾತ್ರ ಯಾರಿಗೂ ಕೇಳಲಾರದು ಅನ್ನುವಂತೆ ತಾನು ದಿವಾನರನ್ನು ನೋಡಿದ್ದು, ಅವರ ಕಾಲಿಗೆ ಬಿದ್ದ ಸಂಗತೀನು ಹೇಳುವಳು. ಅಷ್ಟೇ ಅಲ್ಲ, ವಿಶ್ವೇಶ್ವರಯ್ಯನವರು ಇಡೀ ಭೂಮಿಗೆ ದಿವಾನರಾಗಬೇಕು, ಆಗ್ತಾರೆ. ಅವರ ಖಾಯಿಲೆ ತಾಯಿಗೆ ಸತ್ತು ಸ್ವರ್ಗ ಸುಖ ಸಿಗುತ್ತೆ. ವಿಶ್ವೇಶ್ವರಯ್ಯನವರಿಗೆ ಹೊಸ ಸಂಸಾರ ಬರುತ್ತೆ. ಮನೆ ತುಂಬಾ ಗಂಡು ಮಕ್ಕಳಾಗುತ್ತೆ ಅನ್ನೋ ಮಾತನ್ನೂ ಸೇರಸೋಳು.
ದಿವಾನರು ಪಂಚಾಮೃತದ ಅಭಿಷೇಕ, ಕ್ಯಾಂಪು ಎಲ್ಲಾನು ಮುಗಿಸಿಕೊಂಡು ಶನಿವಾರ ಬೆಂಗಳೂರಿಗೆ ಬಂದು ಮನೆ ತಲುಪಿದಾಗ ಸಂಜೆ ಆಗ್ತಾ ಇತ್ತು. ಅವರ ಸಾಕುಮಗ ಅಪ್ಪನಂತೆಯೆ ಸೂಟು ಬೂಟು ಪೇಟ, ಟೈ ಧರಿಸಿ ವಾಕಿಂಗ್‌ಗೆ ಹೊರಟು ನಿಂತಿದ್ದರು. ಎಷ್ಟು ಹೊತ್ತಿನಲ್ಲಿ ವಾಕಿಂಗ್‌ಗೆ ಹೋಗಬೇಕು, ಎಷ್ಟು ಸಮಯ ಹೋಗಬೇಕು ಅನ್ನೋದನ್ನ ದಿವಾನರೆ ಕಟ್ಟುನಿಟ್ಟು ಮಾಡಿದ್ದರಿಂದ ದಿವಾನರ ಮುಖ ನೋಡಿದ ತಕ್ಷಣ ಅವರು ಕೋಟು, ಶರಟನ್ನು ಹಿಂದಕ್ಕೆ ಸರಸಿ ಗಡಿಯಾರ ನೋಡಿಕೊಂಡರು-ದಿವಾನರು ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ಹೊರಟಿದ್ದರಿಂದ ಅವರಿಗೆ ಖುಷಿಯೇ ಆಯ್ತು.
ದಿವಾನರೇ ಸಾಕು ಮಗನನ್ನು ಬೆರಳು ಸನ್ನೆ ಮಾಡಿ ಮನೆ ಒಳಗೆ ಕೂಗಿದರು. ಸೊಸೆ ಎಲ್ಲಿ ಎಂದು ವಿಚಾರಿಸಿದರು. ಅದೇನು ಮಾತು ಕತೆ ನಡೀತೋ, ಅದಾದ ಹತ್ತು ನಿಮಿಷಕ್ಕೇ ದಿವಾನರ ಸಾಕು ಮಗ – ಸೊಸೆ ಇಬ್ಬರೂ ವಾಕಿಂಗ್‌ಗೆ ಹೊರಟರು. ಸೊಸೆನ ಆತುರ ಆತುರವಾಗಿ ಹೊರಡಿಸಿರಬೇಕು ಅಂತಾ ಕಾಣುತ್ತೆ. ಹೆಜ್ಜೆ ಹಾಕ್ತಾ ಹಾಕ್ತಾನೆ ಮುಡಿಲಿರೋ ಹೂವನ್ನು ಸರಿ ಮಾಡಕೋತಾ ಇದ್ದರು.
ಅವತ್ತೇ ಅಲ್ಲ, ಅದಾದ ಮೇಲೆ ಪ್ರತಿದಿವಸನೂ ಅದೇ ಹೊತ್ತಿನಲ್ಲಿ ದಿವಾನರ ಸಾಕುಮಗ ಸೊಸೆ ವಾಕಿಂಗ್‌ಗೆ ಹೋಗೋದು. ವಾಕಿಂಗ್‌ನಿಂದ ಬಂದಮೇಲೆ ಸಾಕುಮಗ ಕಾರಲ್ಲಿ ಕ್ಲಬ್ಬಿಗೆ ಹೋಗುತ್ತಿದ್ದ. ಅಲ್ಲಿ ದಿವಾನರು ಸಾಕುಮಗನ ಆಗಮನವನ್ನು ಕಿರುಗಣ್ಣಿನಿಂದಲೇ ಗಮನಿಸಿ ಕೇರಂ ಬೋರ್ಡುನಲ್ಲಿ ಉಳಿದಿದ್ದ ಪಾನುಗಳನ್ನು ಹೊಡೆಯೋಕೆ ರೆಡಿಯಾಗೋರು.
ಈ ಕತೆ ಇಷ್ಟೆಲ್ಲಾ ತಿಳಿದ ಮೇಲೆ ನಾನು ನನ್ನ ಹೆಂಡತಿ ಯಾವಾಗ ಊರಿಗೆ ಹೋದರೂ ಒಂದು ಗಳಿಗೆ ಬಿಡುವು ಮಾಡಿಕೊಂಡು ಭಾಗಮ್ಮನ ಮನೆಗೆ ಹೋಗ್ತಾ ಇದ್ದಿವಿ. ನಾವು ಯಾರೂ ಅಂತ ಅವಳಿಗೆ ಗೊತ್ತಿಲ್ಲ. ದಿವಾನರನ್ನೇ ನೋಡಿದೋಳಿಗೆ ನಾವ್ಯಾರು ಅನ್ನೋದು ಯಾಕೆ ಗೊತ್ತಾಗಬೇಕು. ನನ್ನ ಕುತೂಹಲಕ್ಕೆ, ಆಸೆಗೆ ಸರ್ ಎಂ.ವಿ. ಪೋಟೋ ಅವಳ ಮನೇಲಿ ಇರಬಹುದೆ ಅಂತ ಆಸೆಯಿಂದ ಹುಡುಕಿದ್ದೇನೆ, ಇಲ್ಲ . ದಶಾವತಾರದ ಪೋಟೋ, ಲಕ್ಷ್ಮಿಯ ಪೋಟೋ, ವಸ್ತ್ರಾಪಹರಣದ ಪೋಟೋ ಎಲ್ಲ ಇದೆ. ಸರ್ ಎಂ.ವಿ ಪೋಟೋ ಮಾತ್ರ ಇಲ್ಲ. ಮೊದಲೊಂದೆರಡು ಸಲ ಹೋದಾಗ ಇದಕ್ಕೆ ಮನಸ್ಸು ಪಿಚ್ ಅನಿಸೋದು. ಆಮೇಲೆ ಅದೇ ರೂಢಿಯಾಗಿ ಹೋಯ್ತು. ಭಾಗಮ್ಮನ ಮನೆಗೆ ಹೋಗೋ ಬಳಕೆನು ಕಡಿಮೆಯಾಯ್ತು. ಆವಾಗ ಈವಾಗ ಗೂನ್‌ಬೆನ್ನಿನ ಜೊತೆ ಸರಸರ ಅಂತಾ ಓಡಾಡೋ ಭಾಗಮ್ಮನ್ನ ಊರ ಬೀದೀಲಿ ನೋಡೋದು, ಅಷ್ಟೇ.
ಎರಡು ಮೂರು ವರ್ಷದ ಹಿಂದೆ ಭಾಗಮ್ಮ ಸತ್ತು ಹೋದಳು. ಬೆಂಗಳೂರಿಗೆ ಬಂದಿದ್ದ ಯಾರೋ ಸಂಬಂಧಿಗಳು ಈ ಸುದ್ದಿ ಹೇಳಿದರು. ಆವಾಗ ಎರಡು ಮೂರು ದಿವಸವೆಲ್ಲ ಭಾಗಮ್ಮ, ಬೀಸೋಕಲ್ಲು ಸರ್ ಎಂ ವಿ ಯವರದೇ ನೆನಪು, ಯೋಚನೆ . ನಾನು ನನ್ನ ಹೆಂಡತಿ ಯಾವಾಗಲೂ ಅದೇ ವಿಷಯಾನ ಮಾತಾಡ್ತಾ ಇದ್ದೆವು. ‘ ನೋಡಿ, ಭಾಗಮ್ಮ , ಸರ್ ಎಂ ವಿ ಫೋಟೋನ ಅವಳ ಮನೇನಲ್ಲಿ ಇಟ್ಟುಕೊಳ್ಳದೇ ಹೋದ್ರೆ ಏನು, ಅವರ ಮನೆ ಇದೆಯಲ್ಲ ಮುದ್ದೇನಹಳ್ಳಿಯಲ್ಲಿ ಸ್ಮಾರಕದ್ದು ಅಂತಾ, ಅಲ್ಲಿ ಅವರು ಕೊಡಿಸಿದ ಬೀಸೋಕಲ್ಲು ಇರಲಿ, ಮುಂದಿನ ಸಲ ಊರಿಗೆ ಹೋದಾಗ ತಗೊಂಬಂದು ಮುದ್ದೇನಹಳ್ಳಿಗೆ ಕೊಡೋಣ.
ಹೆಂಡತಿ ಹೇಳಿದ್ದು ನನಗೂ ಸರಿ ಎನಿಸಿತು. ಮುಂದಿನ ಸಲ ಊರಿಗೆ ಹೋದಾಗ ಭಾಗಮ್ಮನ ಮನೆ ಹತ್ತಿರ ಹೋದೆವು. ಅವಳ ಮನೆಗೆ ಬೀಗ ಹಾಕಿತ್ತು. ಬಾಡಿಗೆಗೆ ಹೊಸದಾಗಿ ಯಾರೂ ಬಂದಿರಲಿಲ್ಲ. ಒಬ್ಬ ಮಗ ಸೊಲ್ಲಾಪುರ, ಇನ್ನೊಬ್ಬ ಮಗ ಗೋವಾ ಅಂತೆ. ಯಾರೋ ಕಾಗದ ಬರೆದದ್ದಕ್ಕೆ ಸತ್ತ ಐದನೇ ದಿನ ಒಬ್ಬ, ಏಳನೇ ದಿನ ಒಬ್ಬ ಬಂದು ಊರಲ್ಲಿ ತಿಥಿ ಸಮಾರಾಧನೆ ಮಾಡಿ ಹೊರಟುಹೋದರಂತೆ. ಇಬ್ಬರು ಮಕ್ಕಳು ಸಂತೆಮಾಳದಲ್ಲಿರೋ ಹೋಟೆಲಲ್ಲಿ ವಾಸ ಮಾಡಿಕೊಂಡು ದಿನ ಊರೊಳಕ್ಕೆ ಬಂದು ತಿಥಿ ಸಮಾರಾಧನೆ ಮಾಡೋರಂತೆ.
ಮನೆ ಮಾಲೀಕ ಶೇಷಗಿರಿನ ಹಿಡಿದು ಬೀಗ- ಬಾಗಿಲು ತೆಗೆಸಿದಾಗ ಬೀಸುಕಲ್ಲಿನ ಒರಳಲ್ಲಿ ಜಿರಳೆಗಳು, ಜಿರಳೆ ಮೊಟ್ಟೆಗಳು. ಬೀಸುಕಲ್ಲನ್ನು ಈಚೆಗೆ ತೆಗೆಸಿ ಅದರ ಮೇಲೆ ಕೂತಿದ್ದ ಜೇಡ, ಕಸ, ಜಿರಳೆ ಮೊಟ್ಟೆ ಎಲ್ಲವನ್ನೂ ಒರೆಸಿ ಬೆಂಗಳೂರಿಗೆ ತಂದು ಆಮೇಲೆ ಒಂದು ಭಾನುವಾರ ಬೆಳಿಗ್ಗೆ ಮುದ್ದೇನಹಳ್ಳಿಗೆ ಹೋಗಿ ನಮಗೆ ತಿಳಿದಿದ್ದ ಸರ್ ಎಮ್ ವಿ ಕತೆಗೆಂದು ಸ್ಮಾರಕವಾಗಿ ಬೀಸೋ ಕಲ್ಲನ್ನು ಅಲ್ಲೇ ಬಿಟ್ಟು ಬಂದೆವು. ಸ್ಮಾರಕದ ಮ್ಯಾನೇಜರ್ ಸರ್ ಎಮ್ ವಿ ಹಸ್ತಾಕ್ಷರವಿರುವ ಒಂದು ಫೋಟೋ ನಮಗೆ ಕೊಟ್ಟ.
ನೀವು ಆಕಡೆ ಹೋದಾಗ ಭಾಗಮ್ಮನ ಬೀಸೋ ಕಲ್ಲನ್ನ, ಅಲ್ಲ ದಿವಾನರು ಭಾಗಮ್ಮನಿಗೆ ಕೊಡಿಸಿದ ಬೀಸೋಕಲ್ಲನ್ನ ತಪ್ಪದೇ ನೋಡಬೇಕು.
ಈಗ ನಮ್ಮ ಮನೆ ಹಾಲಿನಲ್ಲಿರುವ ಸರ್ ಎಮ್ ವಿ ಫೋಟೋ, ಸ್ಮಾರಕಕ್ಕೆ ಬೀಸೋಕಲ್ಲು ಕೊಡೋಕ್ಕೆ ಹೋಗಿದ್ದಾಗ ಮ್ಯಾನೇಜರ್ ಕೊಟ್ಟದ್ದು. ನಾನು ಆ ಫೋಟೋನಾ ನೋಡುವಾಗಲೆಲ್ಲಮಕ್ಕಳು ಯಾರದು, ಯಾರದು ಅಂತ ಕೇಳ್ತಾರೆ. ಸರ್ ಎಂ ವಿ ಬಡವರಾಗಿ ಹುಟ್ಟಿದ್ದು, ಕಷ್ಟಪಟ್ಟು ಓದಿದ್ದು, ದಿವಾನರಾಗಿ ದೇಶದ ಬದುಕಿಗೆ ಹೊಸ ದಿಕ್ಕು ಕೊಟ್ಟಿದ್ದು ಎಲ್ಲಾನೂ ಅವರಿಗೆ ಅರ್ಥವಾಗುವ ಹಾಗೆ ಹೇಳೋಕೆ ಪ್ರಯತ್ನ ಮಾಡ್ತೀನಿ. ಭಾಗಮ್ಮನ ಕತೆ, ಬೀಸೋಕಲ್ಲು ಕತೆ, ಯಾಕೆ ಚಿಕ್ಕ ವಯಸ್ಸಿಗೆ ದೊಡ್ಡವರಾದ ಮೇಲೆ ಹೇಳಬಹುದಲ್ಲವೇ ಅಂತಾ.
ಎಲ್ಲಿ? ಆವಾಗ ಕತೆ ಹೇಳಿದಾಗ ಬೀಸೋ ಕಲ್ಲನ್ನ ಮಕ್ಕಳು ನೋಡಬೇಕು ಅಂದರೆ ಮುದ್ದೇನಹಳ್ಳಿ ಸ್ಮಾರಕಕ್ಕೆ ಕರಕೊಂಡು ಹೋಗಬೇಕೇನೋ?
ಇದೀಗ ಒಂಭತ್ತು ತಿಂಗಳು ತುಂಬಿದ ಈ ಕೊರೋನ ವೈರಸ್ಸಿನ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳು ತಿಳಿಯುತ್ತಲೇ ಇವೆ. ಜಗತ್ತಿನ ಮಿಲಿಯನ್ ಗಟ್ಟಲೆ ಜೀವಗಳನ್ನು ಆಹುತಿ ತೆಗೆದುಕೊಂಡು ಕೋಟ್ಯಂತರ ಜನರ ದೇಹಗಳನ್ನು ತನ್ನ ಸಂತಾನವರ್ಧನೆಗೆ ಬಳಸಿಕೊಂಡಿರುವ ಈ ವೈರಸ್ಸು ನಮ್ಮ ದೇಹದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಲ್ಲದೇ ಎನ್ನುವ ಬಗ್ಗೆ ಹೊಸ ಕಾಳಜಿಗಳು ಹುಟ್ಟಿಕೊಂಡು ಜಗತ್ತಿನಾದ್ಯಂತ ಹಲವು ಅಧ್ಯಯನಗಳನ್ನು ಆರಂಭಿಸಲಾಗಿದೆ.
ಈ ಬಗ್ಗೆ ಸೆಪ್ಟಂಬರ್ 3 ರಂದು ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ) ಏರ್ಪಡಿಸಿದ್ದ ಒಂದು ವೆಬಿನಾರ್ ನಲ್ಲಿ ಕೊರೋನಾ ರೋಗದ ಅಧ್ಯಯನದಲ್ಲಿ ತೊಡಗಿಕೊಂಡಿರುವ ಹಲವು ತಜ್ಞರು ಚರ್ಚೆಯನ್ನು ನಡೆಸಿದರು. ನಂತರ ಅವರು ತಮ್ಮ ಚರ್ಚೆ ಮತ್ತು ಅಧ್ಯಯನವನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಿಸಿದ್ದಾರೆ.
ಅವರು ಆರಿಸಿಕೊಂಡ ವಿಚಾರ ’ದೀರ್ಘ ಕೋವಿಡ್ ’ ( Long COVID ) ಎಂಬುದು. ಏನು ಹಾಗೆಂದರೆ?
ಕೊರೋನಾ ಸೋಂಕಿತರಲ್ಲಿ ಬಹುತೇಕರು ಬೇಗನೆ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಈ ಸೋಂಕಿನ ರೋಗ ಲಕ್ಷಣಗಳು ಹಲವು ವಾರ ಅಥವಾ ತಿಂಗಳುಗಳ ಕಾಲ ಹಾಗೇ ಉಳಿದು ಆಗಾಗ ಉಲ್ಬಣಗೊಂಡು ಕಾಡಬಲ್ಲವು. ಇದನ್ನು ಲಾಂಗ್ ಕೋವಿಡ್ ಎಂದು ಕರೆಯಲಾಗಿದೆ.
ಕೋವಿಡ್ ನೆಗೆಟಿವ್ ಆದ ನಂತರವೂ ರೋಗ ಲಕ್ಷಣಗಳು ಕೆಲವರನ್ನು ಬಹುಕಾಲ ಕಾಡುವುದರಿಂದ ಕ್ಷಿಪ್ರವಾಗಿ ಗುಣಮುಖರಾಗುವ ಇತರರಿಂದ ಇವರನ್ನು ಬೇರೆಯೆಂದು ಗುರುತಿಸಲು ’ದೀರ್ಘ ’ ಎನ್ನುವ ಪದವನ್ನು ಬಳಸಲಾಗುತ್ತಿದೆ.ಆದರೆ ಲಾಂಗ್ ಕೋವಿಡ್ ಎಂಬ ಪದ ವೈಜ್ಞಾನಿಕವಾಗಿ ಇನ್ನೂ ಪರಿಗಣಿಸಲ್ಪಟ್ಟಿಲ್ಲ. ಇದಿನ್ನೂ ವೈದ್ಯರು ಮತ್ತು ಜನಬಳಕೆಯಲ್ಲಿ ಮಾತ್ರ ಇರುವ ಪದ.
ಹಲವು ಲಕ್ಷಣಗಳು
ಕೊರೋನಾಕ್ಕೆ ಹಲವು ಲಕ್ಷಣಗಳಿವೆ. ಬೇರೆ ಬೇರೆ ಜನರನ್ನು ಇದು ಬೇರೆ ಬೇರೆ ರೀತಿ ಕಾಡಬಲ್ಲದು. ಗುಣಮುಖರಾಗುವ ಜನರಲ್ಲೂ ವೈವಿಧ್ಯತೆಗಳಿವೆ. ಕೆಲವರು ಅತಿ ಬೇಗ ಸುಧಾರಿಸಿಬಿಡುತ್ತಾರೆ. ಮತ್ತೆ ಕೆಲವರು ತಿಂಗಳಾನುಕಾಲ ಹೋರಾಡಿದ ನಂತರ ಗುಣಮುಖರಾಗುತ್ತಾರೆ. ಆದರೆ ಇಂಥವರಲ್ಲಿ ಕೆಲವರು ಗುಣಮುಖರಾದ ನಂತರವೂ ಹಲವು ತಿಂಗಳುಗಳ ಕಾಲ ನಾನಾ ತೊಂದರೆಗಳಿಂದ ಬಳಲುತ್ತಿದ್ದಾರೆ. ಇನ್ನು ಕೆಲವರು ಈ ದೀರ್ಘಕಾಲದ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಆದರೆ ಇಂಥವರ ಸಂಖ್ಯೆ ಕಡಿಮೆ ಎನ್ನುವುದೇ ಸಮಾಧಾನದ ಸಂಗತಿ.
’ದೀರ್ಘ ಕೋವಿಡ್ ’ ಚರ್ಚೆಯಲ್ಲಿ ಭಾಗವಹಿಸಿದ ಇಂಗ್ಲೆಂಡಿನ ಡಾ. ನಿಸ್ರೀನ್ ಆಲ್ವನ್ ಸೌಂಥಾಂಟನ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸಮಾಡುತ್ತಿದ್ದಾರೆ. ಈಕೆಗೆ ಸ್ವತಃ ದೀರ್ಘಕಾಲದ ಕೊರೋನಾ ವೈರಸ್ಸಿನ ಸೋಂಕು ತಗುಲಿತ್ತು.
ಕೋವಿಡ್ ಸೋಂಕು ಬಂದರೆ ಎರಡು ವಾರ ಮನೆಯಲ್ಲಿರಿ. ಅಷ್ಟರಲ್ಲಿ ಸಾಮಾನ್ಯವಾಗಿ ಗುಣವಾಗಿರುತ್ತೀರಿ ಎಂದೇ ಬಹುತೇಕ ಸಂದೇಶಗಳು ಹೇಳುವುದು. ಕ್ವಾರಂಟೈನ್ ಕಾಲವೂ ಇಷ್ಟು ಕಾಲ ಮಾತ್ರ.ಇದೇ ಕಾರಣಕ್ಕೆ ಕೋವಿಡ್ ಎಂದರೆ ಎರಡು ವಾರದ ಸೋಂಕು ಎನ್ನುವ ಭಾವನೆಗಳೂ ಜನರಲ್ಲಿವೆ.ಹೀಗೆ ಕೆಲವು ದಿನಗಳಲ್ಲಿ ಅಥವಾ 2-3 ವಾರದಲ್ಲಿ ಪರಿಪೂರ್ಣವಾಗಿ ವಾಸಿಯಾಗುವ ಕೊರೋನಾ ಸೋಂಕನ್ನು ಸಾಮಾನ್ಯ ಕೋವಿಡ್ ಎನ್ನಬಹುದು.ದೀರ್ಘ ಕೋವಿಡ್ ನಲ್ಲಿ ಕೊರೋನಾ ಸೋಂಕಿನ ಪರೀಕ್ಷೆ ಋಣಾತ್ಮಕವಾಗಿ ಬಂದಿದ್ದರೂ ಸೋಂಕಿನ ಲಕ್ಷಣಗಳು ಮುಂದುವರೆಯಬಲ್ಲವು.
ಆಗಸ್ಟ್ ನ ಮೊದಲಿಗೇ ಕೊರೊನಾದಿಂದ ಆಸ್ಪತ್ರೆಗೆ ಸೇರಿದ ಎಸ್. ಪಿ. ಬಾಲಸುಬ್ರಮಣ್ಯಂ ಸುಮಾರು 7 ವಾರಗಳ ಕಾಲ ಅದರೊಂದಿಗೆ ಹೋರಾಡಿದ್ದನ್ನೂ ನಾವು ಇಲ್ಲಿ ನೆನೆಯಬಹುದು. ಸೆಪ್ಟಂಬರಿನ ಮೊದಲಿಗೆ ಇವರ ಕೋವಿಡ್ ಪರೀಕ್ಷೆ ನೆಗಟಿವ್ ಎಂದು ತಿಳಿದಿತ್ತು. ಆದರೆ ಅವರಲ್ಲಿ ಆಯಾಸ ಮತ್ತು ಕೆಲವು ಲಕ್ಷಣಗಳು ಮುಂದುವರೆದವು. ಸೆಪ್ಟಂಬರ್ 25 ರಂದು ಹೃದಯ ಮತ್ತು ಉಸಿರಾಟಗಳೆರಡರದ್ದೂ ತೊಂದರೆಯಾಗಿ ಅವರು ಅಸುನೀಗಿದರು.ಕೋಟ್ಯಂತರ ಜನರು ಮಮ್ಮಲ ಮರುಗಿದರು.
ಅತ್ಯಧಿಕ ಆಯಾಸ ಲಾಂಗ್ ಕೋವಿಡ್ ನ ಅತ್ಯಂತ ಮುಖ್ಯ ಲಕ್ಷಣ ಎಂದು ಡಾ.ನಿಸ್ರೀನ್ ಹೇಳುತ್ತಾರೆ. ಇದರ ಜೊತೆ ಜೊತೆಗೆ ಕೋವಿಡ್ ಸೋಂಕಿನ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲ್ಲಕ್ಕಿನ್ನ ಮುಖ್ಯವಾಗಿ ಈ ರೋಗಲಕ್ಷಣಗಳು ಬಿಟ್ಟು ಬಿಟ್ಟು ಬಂದು- ಹೋಗಿ ಮಾಡುತ್ತವೆ ಎನ್ನುತ್ತಾರಿವರು.
ನಾವೆಲ್ಲ “ ಇದೀಗ ಎಸ್ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ “ ಎಂದು ಕೇಳಿದ ಕೆಲವೇ ದಿನಗಳಲ್ಲಿ “ಅವರ ಸ್ಥಿತಿ ಚಿಂತಾಜನಕವಾಗಿದೆ…” ಎಂದು ಆಸ್ಪತ್ರೆಗಳು ಹೇಳಿಕೆ ಕೊಟ್ಟದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅವರ ಪರೀಕ್ಷೆ ನೆಗೆಟಿವ್ ಬಂದಾಗಲೂ ಅವರ ಸಾವಿನ ಕಾರಣವನ್ನು ’ಕೋವಿಡ್ ಸಾವು ’ ಎಂದು ಕರೆದರು. ಕೋವಿಡ್ ಸೋಂಕು ಶ್ವಾಸಕೋಶಗಳ ಜೊತೆಗೆ ಮನಷ್ಯರ ಹೃದಯ,ಮೂತ್ರಪಿಂಡ, ಯಕೃತ್ತು, ನರ ವ್ಯವಸ್ಥೆಗಳ ಮೇಲೆಯೂ ದಾಳಿ ಮಾಡಬಲ್ಲದು ಎಂಬುದು ಈಗಾಗಲೇ ಧೃಡವಾಗಿರುವ ವಿಚಾರ.
ನಿಸ್ರೀನ್ ಪ್ರಕಾರ ರೋಗಿಗೂ, ರೋಗಿ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿರುವ ರೋಗಿಯ ಹಿತೈಷಿಗಳಿಗೂ ಪದೇ ಪದೇ ನಿರಾಸೆ ಮಾಡುವ ವಿಚಾರಗಳಿವು. 74 ವರ್ಷ ವಯಸ್ಸಾಗಿದ್ದ , ಸ್ಥೂಲಕಾಯದ ಎಸ್ಪಿಬಿ ಯವರಿಗೆ ಐವತ್ತು ವರ್ಷದೊಳಗಿನವರಿಗೆ ಹೋಲಿಸಿದರೆ ಶೇಕಡ 90 ರಷ್ಟು ಹೆಚ್ಚು ಅಪಾಯವಿತ್ತು.ಅವರು ಸಿಗರೇಟು ಸೇದುತ್ತಿದ್ದ ವಿಚಾರವೂ ಇಲ್ಲಿ ತನ್ನ ಪಾತ್ರವನ್ನು ತೋರಿತು ಎನ್ನಲಾಗಿದೆ.
74 ವರ್ಷದ, ಅಮೆರಿಕಾದ ವೈದ್ಯರ ಪ್ರಕಾರ ಸ್ಥೂಲಕಾಯದ, ಜಂಕ್ ಆಹಾರಗಳ ಪ್ರಿಯರಾದ ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಇಂತವೇ ಮೂರು ಅಪಾಯಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೂಡಲೇ ಅವರನ್ನು ಮಿಲಿಟರಿ ಆಸ್ಪತ್ರೆಯಲ್ಲಿಟ್ಟು ಪ್ರಾಯೋಗಿಕ ರಿಜೆನೆರಾನ್ಸ್ ಪಾಲಿಕ್ಲೋನಲ್ ಆಂಟಿಬಾಡಿ ಕಾಕ್ ಟೈಲ್ ನೀಡಿ ಚಿಕಿತ್ಸೆಯನ್ನು ಶುರುಮಾಡಲಾಯಿತು.
ಬಹುಕಾಲ ಕಾಡಬಹುದು
ದೀರ್ಘ ಕೋವಿಡ್ ಎರಡು ರೀತಿಯಲ್ಲಿ ಬಹುಕಾಲ ಕಾಡಬಹುದು ಎನ್ನಲಾಗಿದೆ. ಮೊದಲನೆಯದಾಗಿ ಈಗಾಗಲೇ ಹಲವು ಖಾಯಿಲೆಗಳಿಂದ ನರಳುತ್ತಿರುವ ಕೆಲವರು ಕೊರೋನಾದಿಂದ ಅಲ್ಪ ಸ್ವಲ್ಪ ಚೇತರಿಸಿಕೊಂಡಿದ್ದರೂ ಅದರಿಂದ ಜರ್ಜರಿತರಾಗುವ ಅವರು ತಮ್ಮ ಇತರೆ ಖಾಯಿಲೆಗಳು ಮತ್ತು ಸಮಸ್ಯೆಗಳು ಉಲ್ಬಣವಾಗುವ ಕಾರಣ ಬಹುಕಾಲ ಸುಧಾರಿಸಿಕೊಳ್ಳಬೇಕಾಗುತ್ತದೆ. ಮತ್ತು ಎರಡನೆಯದಾಗಿ ಮೊದಲಿಂದಲೂ ಕೊರೋನಾ ಲಕ್ಷಣಗಳು ಬಹಳ ಕಡಿಮೆಯಿದ್ದು ಅವೇ ಲಕ್ಷಣಗಳಿಂದ ಬಹುಕಾಲ ಬಳಲುವವರು.
ಸುಮಾರು ಆರು ತಿಂಗಳ ಕಾಲ ದೀರ್ಘ ಕೋವಿಡ್ ಲಕ್ಷಣಗಳಿಂದ ಬಳಲಿದ ಪಾಲ್ ಗಾರ್ನರ್ ಎಂಬಾತ ಮೊದಲ ಎರಡು ತಿಂಗಳಲ್ಲಿ ಕೋವಿಡ್ ರೋಗ ಲಕ್ಷಣಗಳು ಪದೇ ಪದೇ ಅವನನ್ನು ಬಳಲಿಸಿತೆಂದೂ ನಂತರದ ನಾಲ್ಕು ತಿಂಗಳು ಸತತ ಸುಸ್ತಿನೊಂದಿಗೆ ಸಣ್ಣದಾಗಿ ಇತರೆ ಲಕ್ಷಣಗಳು ಕೂಡ ಇದ್ದವೆಂದು ಹೇಳುತ್ತಾನೆ. ಅಂದರೆ ಇವನಲ್ಲಿ ವೈರಸ್ಸು ಇಲ್ಲದಿದ್ದರೂ ರೋಗ ಲಕ್ಷಣಗಳು ಸತತವಾಗಿ 6 ತಿಂಗಳುಗಳ ಕಾಲ ಮುಂದುವರೆದಿದ್ದವು. ಕೊರೋನಾ ನೆಗೆಟಿವ್ ಆಗಿದ್ದರೂ ಈ ರೀತಿ ದೀರ್ಘಕಾಲದ ಲಕ್ಷಣಗಳಿಂದ ಬಳಲುತ್ತಿರುವ ಸಾವಿರಾರು ಜನರಿದ್ದಾರೆ.
ಆದ್ದರಿಂದ ಸೋಂಕಿನಿಂದ ಮುಕ್ತರಾದವರನ್ನು “ಮತ್ತೆ ಸೋಂಕು ಬಂದಿರಬಹುದೇ ? “ ಎನ್ನುವ ಸಂದೇಹದಿಂದ ನೋಡುವ ಅಗತ್ಯವಿಲ್ಲ. ಆದರೆ ಅವರನ್ನು ಲಕ್ಷಣಗಳು ಕೆಲಕಾಲ ನಲುಗಿಸಬಲ್ಲವು ಎಂಬ ಅರಿವಿದ್ದರೆ ಒಳ್ಳೆಯದು. ಇಂಥವರ ಬಗ್ಗೆ ಸಹಾನುಭೂತಿಯಿರಲಿ. ಕೆಲಸಕೊಟ್ಟಿರುವ ಧಣಿಗಳು, ಉದ್ಯಮಿಗಳು, ಸಂಸ್ಥೆಗಳು ಇವರ ವಿಶೇಷ ಅಗತ್ಯಗಳನ್ನು ಅರಿತುಕೊಳ್ಳಲಿ.
ದೀರ್ಘ ಕಾಲೀನ ಕೋವಿಡ್ ನಿಂದ ಬಳಲುತ್ತಿರುವವರು ’ತಮ್ಮನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ’ ಎನ್ನುವ ನೋವುನ್ನೂ ತೋಡಿಕೊಂಡಿದ್ದಾರೆ. ಸೋಂಕು ಮುಕ್ತರಾದ ಕಾರಣ ಇವರಿಗೆ ಬೇಕಾದ ನೆರವು,ಬಿಡುವು, ರಜಾಗಳು ದೊರೆಯದೆ ಅವರು ಮಾನಸಿಕವಾಗಿಯೂ ಬಳಲಬಲ್ಲರು.ಆದ್ದರಿಂದ ಕೊರೋನಾ ಸೋಂಕಿನ ಈ ವಿಧದ ಬಗ್ಗೆಯೂ ಅರಿವು ಮೂಡಬೇಕು ಎನ್ನುವುದು ಈ ಬರಹದ ಮುಖ್ಯ ಉದ್ದೇಶವಾಗಿದೆ.
ಯಾರಲ್ಲಿ ಹೆಚ್ಚು?
ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಜೆನೆಟಿಕ್ಸ್ ಆಫ್ ಎಪಿಡೆಮಿಯಾಲಜಿಯ ಪ್ರೊಫೆಸರ್ ಮತ್ತು ಕೋವಿಡ್ ಲಕ್ಷಣಗಳ ಅಧ್ಯಯನದ ಮುಖ್ಯಸ್ಥರಾಗಿರುವ ಡಾ. ಟಿಂ ಸ್ಪೆಕ್ಟರ್ ಪ್ರಕಾರ ದೀರ್ಘ ಕೋವಿಡ್ ಬರುವವರು ಸೋಂಕು ತಗುಲಿದ ಮೊದಲ ವಾರದಲ್ಲೇ ನಿಲ್ಲದ ಕೆಮ್ಮು, ಒಡೆದ ಧ್ವನಿ, ತಲೆನೋವು, ಭೇದಿ,ಊಟ ತಿನ್ನಲಾಗದಿರುವುದು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳನ್ನು ತೋರಿಸುತ್ತಾರೆ. ಇಂತವರು ಮಿಕ್ಕವರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿ ದೀರ್ಘ ಕೋವಿಡ್ ಗೆ ಬಲಿಯಾಗುತ್ತಾರಂತೆ.
ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಇದು ದುಪ್ಪಟ್ಟು ಉಂಟಾಗುತ್ತದೆ ಎನ್ನಲಾಗಿದೆ.ಸಾಮಾನ್ಯವಾಗಿ ಕಡಿಮೆ ಕಾಲ ಅಥವಾ ಶಾರ್ಟ್ ಕೋವಿಡ್ ಬರುವವರಿಗಿಂತ ಇವರ ವಯಸ್ಸು ಕನಿಷ್ಠ ನಾಲ್ಕು ವರ್ಷ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.ದೀರ್ಘ ಕಾಲೀನ ಕೋವಿಡ್ ನ ಮುಖ್ಯ ಲಕ್ಷಣ ಎಂದರೆ ಅದು ಆಯಾಸ/ಸುಸ್ತು ಎನ್ನುವ ಈತ ಮೂರು ವಾರಕ್ಕಿಂತ ಹೆಚ್ಚು ಕಾಲ ಕೋವಿಡ್ ಇದ್ದ ಶೇಕಡ 80 ಜನರು ತಿಂಗಳಾನುಗಟ್ಟಲೆ ಪದೇ ಪದೇ ಸುಸ್ತನ್ನು ಅನುಭವಿಸಿದ್ದನ್ನು ವರದಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಡಾ. ವೇಲೆಂಟಿನಾ ಪಂಟ್ಮ್ಯಾನ್ ಎಂಬಾಕೆ ದೀರ್ಘ ಕೋವಿಡ್ ವೈರಸ್ಸಿನಿಂದ ಮುಕ್ತರಾದವರ ಬಹುತೇಕರ ಹೃದಯದಲ್ಲಿ ಉರಿಯೂತ ( Inflammation) ಕಾಣಿಸಿಕೊಂಡದ್ದನ್ನು ತನ್ನ ಅಧ್ಯಯನಗಳ ಮೂಲಕ ಜಗತ್ತಿಗೆ ತಿಳಿಸಿದ್ದಾಳೆ. ತನ್ನ ಈ ಅಧ್ಯಯನವನ್ನು ಜಮ (JAMA) ದಲ್ಲಿ ಹಂಚಿಕೊಂಡಿರುವ ಈಕೆ ಕೊರೋನಾ ಸೋಂಕಿತರಲ್ಲಿ ಉಸಿರಾಟ ಮತ್ತು ಶ್ವಾಸಕೋಶಗಳ ಬಗ್ಗೆಯೇ ಹೆಚ್ಚು ಒತ್ತುಕೊಡುತ್ತಿದ್ದ ಬಗ್ಗೆ ಹೇಳುತ್ತ ವೈರಸ್ಸುಗಳು ಹೃದಯದ ಮೇಲೆಯೂ ದಾಳಿ ಮಾಡಬಲ್ಲವು ಎಂದು ಹೇಳುತ್ತಾಳೆ. ಇದೇ ಕಾರಣಕ್ಕೆ ಈಗಾಗಲೇ ಹೃದಯದ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ವೈರಸ್ಸಿನಿಂದ ಸೋಂಕಿತರಾದರೆ ಅತ್ಯಂತ ಬೇಗನೆ ನಿತ್ರಾಣರಾಗುತ್ತಾರೆ ಎನ್ನಲಾಗಿದೆ.
ಬದಲಾಗುತ್ತಿರುವ ಚಿತ್ರ
ಅದು ಅಲ್ಪಕಾಲದ ಕೋವಿಡ್ ಆಗಲಿ ಅಥವಾ ದೀರ್ಘಕಾಲದ ಕೋವಿಡ್ ಆಗಿರಲಿ ಸಾವಿನ ಸಂಖ್ಯೆ ಕಡಿಮೆಯೇ. ಆದರೆ ಮೊದಲ ಮೂರು ವಾರದಲ್ಲಿ ತೀವ್ರ ನಿಗಾ ಘಟಕ ಬೇಕಾಗದ ಜನರು ಗುಣಮುಖರಾಗುವ ಸಾಧ್ಯತೆ ಹೆಚ್ಚು. ಒಮ್ಮೆ ವೆಂಟಿಲೇಟರುಗಳ ಅಗತ್ಯ ಬಿದ್ದನಂತರ ಅವರ ಗುಣಮುಖರಾಗಬೇಕಾದಲ್ಲಿ ಆ ಪ್ರಯಾಣ ದೀರ್ಘಕಾಲ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಎನ್ನಲಾಗಿದೆ.
ಆದರೆ ಗುಣಮುಖರಾಗುವದು ಇಲ್ಲವೇ ಸಾಯುವುದು ಇವೆರಡನ್ನು ಬಿಟ್ಟು ದೀರ್ಘಕಾಲ ಕಾಡುವ ಕೋವಿಡ್ ಬಗ್ಗೆ ಇತ್ತೀಚೆಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ದೀರ್ಘಕಾಲದ ಕೋವಿಡ್ ಬಂದವರಲ್ಲಿ ದೈಹಿಕವಾಗಿ ಆರೋಗ್ಯವಾಗಿದ್ದವರು, ಚಟುವಟಿಕೆಗಳಿಂದ ಕೂಡಿದ್ದ ಜನರು ಎಲ್ಲರೂ ಇದ್ದು ಅವರ ಬದುಕು ಕೋವಿಡ್ ಕಾರಣ ತಳಕಂಬಳಕ ಆದದ್ದು ವಿಷಾದದ ಸಂಗತಿಯಾಗಿದೆ.ಕೆಲವರಲ್ಲಿ ಆಯಾಸ, ಮೈ-ಕೈ ನೋವು,ಕೀಲು ನೋವಿನ ಜೊತೆ, ಮರೆವು,ಏಕಾಗ್ರತೆಯ ನಾಶ, ಖಿನ್ನತೆ ಮತ್ತು ಮಾನಸಿಕ ರೋಗದ ಲಕ್ಷಣಗಳು, ಕೂದಲುದುರುವಿಕೆ ಕೂಡ ಕಂಡು ಬಂದಿವೆ. ಒಂದು ವರ್ಷದ ನಂತರಇದರ ಪೂರ್ಣ ಚಿತ್ರ ಹೇಗಿರಬಹುದೆಂಬುದರ ಬಗ್ಗೆ ಸಧ್ಯಕ್ಕೆ ತಿಳಿದಿಲ್ಲ.
ಆಸ್ಪತ್ರೆಗೆ ದಾಖಲಾಗಬೇಕಾಗುವ ರೋಗಿಗಳಲ್ಲಿ ಕೋವಿಡ್ ಹೇಗೆ ವರ್ತಿಸುತ್ತದೆ ಎಂದು ಅಧ್ಯಯನ ಮಾಡಲು ಇಂಗ್ಲೆಂಡಿನ ಲೆಸ್ಟರ್ ಎನ್ನುವ ನಗರದ ಆಸ್ಪತ್ರೆಗಳಲ್ಲಿ ಇಡೀ ಪ್ರಪಂಚದಲ್ಲೇ ದೊಡ್ಡದು ಎನ್ನುವಂಥ ಅಧ್ಯಯನವೊಂದು ನಡೆಯುತ್ತಿದೆ.ಇದರಲ್ಲಿ ಶ್ವಾಸಕೋಶ, ಹೃದಯ, ಮಾನಸಿಕ ಆರೋಗ್ಯ, ಜೀವ ನಿರೋಧಕ ಶಕ್ತಿ, ಮೂತ್ರಕೋಶ ಹೀಗೆ ವೈದ್ಯಕೀಯ ಲೋಕದ ಹಲವಾರು ವಿಭಾಗಕ್ಕೆ ಸೇರಿದ ತಜ್ಞರು ಒತ್ತಟ್ಟಿಗೆ ಬಂದು ಕೆಲಸಮಾಡುತ್ತಿದ್ದಾರೆ.
ಇವರ ಮುಖ್ಯ ಉದ್ದೇಶ ದೀರ್ಘಕಾಲದ ಕೋವಿಡ್ ಯಾರಿಗ ಬರುತ್ತದೆ, ಏಕೆ ಬರುತ್ತದೆ, ಹೇಗೆ ವರ್ತಿಸುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು, ಅವರಲ್ಲಿ ಯಾರು ಬದುಕುಳಿಯುತ್ತಾರೆ ಮತ್ತು ಯಾರು ಯಾವ ಕಾರಣಕ್ಕೆ ಸಾಯುತ್ತಾರೆ ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡುವುದೇ ಆಗಿದೆ.
ಇದಕ್ಕೂ ಕಾರಣಗಳಿವೆ. ಈ ಹಿಂದೆ ಏಪ್ರಿಲ್ ನಲ್ಲೇ ಯೂರೋಪಿನ ಒಕ್ಕೂಟ, ಇನ್ನೋವೇಟ್ ಯು.ಕೆ. ಮತ್ತು ಪರ್ಸ್ಪೆಕ್ಟಮ್ ಎನ್ನುವವರ ಸಹಭಾಗತ್ವದಲ್ಲಿ 160 ರೋಗಿಗಳ ಮೇಲೆ ಅಧ್ಯಯನ ಶುರುವಾಗಿತ್ತು. ಇವರೆಲ್ಲರೂ ದೀರ್ಘ ಕೋವಿಡ್ ನಿಂದ ಬಳಲುತ್ತಿದ್ದರು. ಇವರಲ್ಲಿ ಶೇಕಡಾ 50 ರಷ್ಟು ಜನರಲ್ಲಿ ಹೃದಯ, ಮೂತ್ರಪಿಂಡ ಮತ್ತು ಯಕೃತ್ತ ನ್ನು ಕೊರೋನಾ ವೈರಸ್ಸು ತೊಂದರೆಗೀಡುಮಾಡಿತ್ತು.ಇದೇ ಕಾರಣಕ್ಕೆ ಈಗಿನ ಅಧ್ಯಯನದಲ್ಲಿ ಎಲ್ಲ ವಿಭಾಗದ ನಿಪುಣರೂ ಒತ್ತಟ್ಟಿಗೆ ಸೇರಿ ಕೆಲಸಮಾಡುತ್ತಿದ್ದಾರೆ.
ಕಾಲ ಕ್ರಮೇಣ ಜನಸಾಮಾನ್ಯರಿಗೆ ಕೋವಿಡ್ ನ ವರ್ತನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತ ಹೋಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.
ಇದಕ್ಕೆ ಮದ್ದಿದೆಯೇ?
ದೀರ್ಘಕಾಲದ ಕೋವಿಡ್ ನಿಂದ ನರಳಿ ಸುಧಾರಿಸಿಕೊಳ್ಳುವವರ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಸೇವನೆ, ಆರಾಮ ಮತ್ತು ಲಘು ವ್ಯಾಯಾಮಗಳೇ ಸಧ್ಯಕ್ಕಿರುವ ಚಿಕಿತ್ಸೆ. ಅದರಿಂದಲೇ ಅವರಲ್ಲಿ ಉಳಿಯುವ ದೀರ್ಘಕಾಲದ ಸಮಸ್ಯೆಗಳು ನಿಧಾನವಾಗಿ ಸುಧಾರಿಸುತ್ತವೆ ಎನ್ನಲಾಗಿದೆ. ಮ್ಯಾಟ್ ಎಂಬ ನಲವತ್ತರ ಪ್ರಾಯದ ವ್ಯಕ್ತಿಗೆ ಕೋವಿಡ್ ಬಂದು ಹೋದ ನಂತರ ಕೇವಲ ಹತ್ತು ನಿಮಿಷಗಳ ಕಾಲ ಟಿ.ವಿ. ಅಥವಾ ಯಾವುದೇ ಪರದೆಗಳನ್ನು ನೋಡಿದರೆ ತಲೆನೋವು ಬರುತ್ತದಂತೆ. ಐದು ನಿಮಿಷದ ನಡಿಗೆ ಅತ್ಯಂತ ತ್ರಾಸವಾಗಿ ಉಸಿರಾಡಲು ಆಗುವುದಿಲ್ಲ ಎಂದಿದ್ದಾನೆ. ಇವನಿಗೆ ಮಾರ್ಚ್ ತಿಂಗಳಲ್ಲಿ ಕೋವಿಡ್ ಬಂದುಹೋಗಿ ಆರು ತಿಂಗಳು ಕಳೆದಿದ್ದರೂ ದೀರ್ಘಕಾಲೀನ ಲಕ್ಷಣಗಳು ಇನ್ನೂ ಉಳಿದಿವೆಯಂತೆ.
ಕೊರೋನ ಬಿಟ್ಟು ಹೋದ ನಂತರದ ಮೂರು ವಾರಗಳ ನಂತರವೂ ರೋಗ ಲಕ್ಷಣಗಳಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳುವುದು ಒಳಿತು. ನಿಮ್ಮ ಸುಸ್ತು, ಸೋಲಿಗೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಇನ್ನೇನಾದರೂ ಕಾರಣಗಳಿವೆಯೇ ಎಂದು ತಿಳಿಯುವುದು ಒಳ್ಳೆಯದು. ದೇಹಕ್ಕೆ ಆಯಾಸ ತರುವ ಯಾವುದೇ ವ್ಯಾಯಾಮವನ್ನು ನಿಲ್ಲಿಸುವುದು ಒಳ್ಳೆಯದು. ಪೌಷ್ಟಿಕ ಆಹಾರ ಸೇವನೆ ಮತ್ತ ಲಘು ವ್ಯಾಯಾಮ ನಿಯಮಿತವಾಗಿ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.
ದೀರ್ಘ ಕಾಲದ ಕೋವಿಡ್ ಇರುವವರಿಗೆ ಯಾವುದು ಅವರಲ್ಲಿ ಸುಸ್ತು ಸೋಲನ್ನು ತರಬಲ್ಲದು ಎಂಬ ಅರಿವು ಮೂಡುತ್ತದೆ. ಅಂಥವನ್ನು ಮಾಡದಿದ್ದರೆ ಒಳ್ಳೆಯದು.ಸಧ್ಯಕ್ಕೆ ರೋಗಿಗಳು ಮಾಡಬಹುದಾದ್ದು ಇಷ್ಟು ಮಾತ್ರವೇ ಎನ್ನುವ ಡಾ.ನಸ್ರೀನ್ ವೈದ್ಯರುಗಳ ನಡುವೆ ಈ ದೀರ್ಘಕಾಲದ ಲಕ್ಷಣಗಳನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಒಂದು ನಿಚ್ಚಳ ರೂಪು ರೇಖೆ ಮತ್ತು ಮಾರ್ಗಸೂಚಿ ತಯಾರಾಗಬೇಕು ಎನ್ನುತ್ತಾರೆ.
ದೀರ್ಘಕಾಲದ ಕೋವಿಡ್ ರೋಗಿಗಳು ನಾನಾತರದ ಲಕ್ಷಣಗಳನ್ನು ಹೇಳಿದರೂ ಅವರನ್ನು ಒಂದು ವಿಭಾಗದಿಂದ ಇನ್ನೊಂದಕ್ಕೆ ಅಲಸದೆ ಅವರ ಎಲ್ಲ ಲಕ್ಷಣಗಳನ್ನು ತಿಳಿಸಿಕೊಡಬಲ್ಲ ಮಾರ್ಗಸೂಚಿ ಇದ್ದರೆ ಒಬ್ಬರೇ ವೈದ್ಯರು ಅವರನ್ನು ಸುಧಾರಿಸಬಹುದು ಎನ್ನುವ ಆಶಯಗಳನ್ನು ವ್ಯಕ್ತಪಡಿಸುತ್ತಾರೆ. ಆ ಮೂಲಕ ಭಯ ಮತ್ತು ಆತಂಕಗಳನ್ನು ಸುಧಾರಿಸಬಹುದು ಎನ್ನುತ್ತಾರೆ.
ಇನ್ನೂ ಆಸಕ್ತಿಯ ವಿಚಾರವೆಂದರೆ, ಮೇ ವೇಳೆಗೆ ಯು.ಕೆ.ಯಲ್ಲಿ ದೀರ್ಘ ಕೋವಿಡ್ ನಿಂದ ಬಳಲಿದ 640 ಜನರಿದ್ದ ಒಂದು ಸಮೀಕ್ಷೆ ನಡೆಯಿತು. ಇವರಲ್ಲಿ ಕೇವಲ ಶೇಕಡ 23.1 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂಬ ಫಲಿತಾಂಶ ದೊರಕಿತ್ತು.ಶೇಕಡ 27.5 ಜನರಿಗೆ ಪರೀಕ್ಷೆ ನೆಗೆಟಿವ್ ಎಂಬ ಫಲಿತಾಂಶ ಬಂದಿತ್ತು. ಮಿಕ್ಕ ಶೇಕಡ 50.1 ಜನರಿಗೆ ಕೋವಿಡ್ ಸೋಂಕು ಬಂದು ಹೋಗಿರಬೇಕು ಎಂದು ನಂಬಲಾಗಿತ್ತು. ಆದರೆ ಪರೀಕ್ಷೆಯೇ ಆಗಿರಲಿಲ್ಲ.
ಏಕೆಂದರೆ ಪರೀಕ್ಷೆಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಲ್ಲರಿಗೂ ವ್ಯಾಪಕವಾಗಿ ದೊರಕುತ್ತಿರಲಿಲ್ಲ. ಆದರೆ, ಇವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಮಾಡಿಕೊಂಡು ಗುಣ ಮುಖರಾದೆವು ಎಂದುಕೊಂಡಿದ್ದರು. ಮೇ ತಿಂಗಳ 18 ನೇ ತಾರೀಖಿನ ನಂತರವಷ್ಟೇ ಅವರಿದ್ದ ದೇಶದಲ್ಲಿ ಎಲ್ಲ ಸಾರ್ವಜನಿಕರಿಗೂ ಪರೀಕ್ಷೆಗಳು ಸುಲಭವಾಗಿ ಲಭ್ಯವಾದದ್ದು. ಆ ವೇಳೆಗೆ ಅವರು ಗುಣಮುಖರಾಗಿದ್ದರು.ಆದರೆ,ಕೋವಿಡ್ ನ ಕೆಲವು ಲಕ್ಷಣಗಳು ಇವರನ್ನು ಬಹಳ ಕಾಲ ಕಾಡಿದ್ದವು. ದೀರ್ಘಕಾಲದ ಕೋವಿಡ್ ನಿಂದ ಇನ್ನೂ ಬಳಲುತ್ತಿರುವ ಇವರೆಲ್ಲ ಅಂತರ್ಜಾಲದಲ್ಲಿ ತಮ್ಮದೇ ಗುಂಪನ್ನು ನಿರ್ಮಿಸಿಕೊಂಡಿದ್ದಾರೆ.
ಈ ವಿಚಾರವಿನ್ನೂ ಅಧ್ಯಯನದ ಹಂತದಲ್ಲಿರುವ ಕಾರಣ ಇವರ ಪರಿಸ್ಥಿತಿಗೊಂದು ಹೆಸರಿಲ್ಲ. ಇದೇ ರೀತಿ ಕನಿಷ್ಠ 6 ತಿಂಗಳ ಕಾಲ ಸೋಲು ಸುಸ್ತನ್ನು ಅನುಭವಿಸುವುದನ್ನು ಕ್ರಾನಿಕ್ ಫೆಟಿಗ್ ಸಿಂಡ್ರೋಮ್ (Chronic Fatigue Syndrome) ಎನ್ನುತ್ತಾರೆ. ಮುಂದೊಮ್ಮೆ CFS ನ್ನು ಧೀರ್ಘ ಕೊರೋನಾ ಬಂದು ಹೋದವರಿಗೆ ಜೋಡಿಸಬಹುದು.
ಮುಂದಿನ ತಿಂಗಳು, ವರ್ಷಗಳಲ್ಲಿ ನಮಗೆ ಈ ಸೋಂಕಿನ ಬಗ್ಗೆ ಮತ್ತೂ ಹೆಚ್ಚಿನ ಮಾಹಿತಿಗಳು ದೊರೆಯುತ್ತ ಹೋಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಅದೊಂದು ಕಾಲ ನಮೋ ವೆಂಕಟೇಶ… ಎಂಬ ಘಂಟಸಾಲ ಹಾಡಿನ ಸಾಲು ಕೇಳಿದೊಡಣೆಯೇ ಲೇ… ಪಿಚ್ಚರ್ ಸ್ಟಾಟ್ ಆತ್ಕಣಲೇ… ಅಂತ ಪಂಚೆ ಮೇಲೆ ಕಟ್ಟಿ ಎದ್ನೊ..ಬಿದ್ನೊ..ಎಂದು ಓಡುತ್ತಿದ್ದೆವು. ಸೆಕೆಂಡ್ ಶೋಗೆ ಎತ್ತಿನ ಗಾಡಿ ಗಲ್..ಗಲ್.. ಸದ್ದಿನೊಂದಿಗೆ ಚಿತ್ರಮಂದಿರದತ್ತ ಬಿರ್ರನೆ ಧಾವಿಸುತ್ತಿದ್ದೆವು. ದೊಡ್ಡವರು ಟಿಕೆಟ್ ತಗಂಡ ತಕ್ಷಣ ..ಧಡ ಧಡ ಓಡಿ ಜಾಗ ಹಿಡಿಯುತ್ತಿದ್ದ ಗ್ರಾಮೀಣ ಚಿತ್ರಮಂದಿರ ವೈಭವ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿದಿದೆ.
ದೊಡ್ಡ ಮಕ್ಕಳಿಗೆ ದುಡ್ಡು ಕೇಳ್ತಾರೆ ಅಂತ ಅಜ್ಜಿ ಎತ್ತಿಕೊಂಡ ನೆನಪು. ಚಿಲ್ಲರೆ ಹಿಡಿದು ಅಣ್ಣ.. ಬಿಡಣ.. ಅಂತ ಹಲ್ಲುಗಿರಿಯುವ ಮಕ್ಕಳು. ಗೇಟ್ ಕೀಪರ್ ಬಿಟ್ಟನೆಂದರೆ ಟಣ್ ಅಂತ ಒಳಗೆ ಹಾರಿ ಕುಳಿತುಕೊಳ್ಳುವ ಚಿಣ್ಣರು. ಆಗ ನೆಲ, ಬೆಂಚ್, ಕುರ್ಚಿ ಮೂರು ವರ್ಗಗಳು. ಮಣ್ಣು ಭರಿತ ನೆಲದಲ್ಲೇ ಟೂರಿಂಗ್ ಟಾಕೀಸ್ ಚಿತ್ರ ಪ್ರದರ್ಶನ. ಹೈಸ್ಕೂಲು ಓದುವಾಗ ಸ್ನೇಹಿತರ ಗುಂಪು ಸ್ಕ್ರೀನ್ ಕೆಳಗೆ ಕಾಲು ಚಾಚಿ ಅಂಗಾತ ಮಲಗಿ ನೋಡಿದ ಸಿನಿಮಾಗಳೆಷ್ಟೋ..
60-70ರ ದಶಕದಲ್ಲಿ ಚಿತ್ರಮಂದಿರಗಳೇ ಮನರಂಜನೆಯ ತಾಣ. ಕಪ್ಪು-ಬಿಳುಪು ಚಿತ್ರದಿಂದ ಬಣ್ಣದ ಚಿತ್ರಗಳಿಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಟೂರಿಂಗ್ ಟಾಕೀಸ್ ಗಳಿಗೆ ಉತ್ತುಂಗ ಕಾಲ. ಭಕ್ತಿ ಪ್ರಧಾನ, ಐತಿಹಾಸಿಕ, ಸಾಮಾಜಿಕ ಚಿತ್ರಗಳಿಗೆ ಎಲ್ಲಿಲ್ಲದ ರಶ್. ಎರಡು- ಮೂರು ವಾರಗಳು ಸಿನಿಮಾ ಓಡುತ್ತಿದ್ದವು. ಫೈಟಿಂಗ್ ಸೀನ್ ನಲ್ಲಿ ಸೀಟಿ, ಕೇಕೆ, ಭಾವುಕತೆಯಲ್ಲಿ ಕಣ್ಣೀರು ಹಾಕಿದವರೆಷ್ಟೊ.
ರಾಜ್ಯಾದ್ಯಂತ ಬಹುತೇಕ ಟೂರಿಂಗ್ ಟಾಕೀಸ್ ಗಳಲ್ಲಿ ಚಿತ್ರ ವೀಕ್ಷಣೆಯ ಸೊಗಡು ಜವಾರಿಯೇ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಶ್ ಸಿನಿಮಾಗಳ ಸುಗ್ಗಿ. ಅವರ ಸ್ಟೈಲ್ ಕಾಪಿ ಮಾಡಿದವರಿಲ್ಲ. ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಜನನಾಯಕ, ಹಂತದಂತಹ ಸಾಲು ಸಾಲು ಸಿನಿಮಾಗಳಿಗೆ ಹಳ್ಳಿಗಳಿಂದ ಬಂದ ಎತ್ತಿನಗಾಡಿಗಳನ್ನೆ ಎಣಿಕೆ ಮಾಡುವ ಅಚ್ಚರಿ. ಈ ಚಿತ್ರಣ 2000 ಇಸವಿವರೆಗೂ ಚಿತ್ರಮಂದಿರಗಳ ಹೈ ಕಲೆಕ್ಷನ್ ಇದ್ದೇ ಇತ್ತು.
ಸಿನಿಮಾ ಸಮಯ ಕಸಿದ ಟೀವಿ
ನನ್ನೂರಲ್ಲಿ ಕಪ್ಪು ಬಿಳುಪು ಟಿವಿ 1986ರಲ್ಲಿ ಕಾಲಿಟ್ಟಾಗ ಮರಡೋನಾ ಫುಟ್ ಬಾಲ್ ಫೈನಲ್ ಸಮಯ. ಒಂದೆರಡು ಮನೆಯಲ್ಲಿದ್ದ ಟಿವಿ ನೋಡಲು ಮಗಿಬೀಳುತ್ತಿದ್ದೆವು. ಅಂದಿನಿಂದ 2000ದ ವರೆಗೆ ದೂರದರ್ಶನದಲ್ಲಿ ವಾರಕ್ಕೊಂದು ಸಿನಿಮಾ ಪ್ರಸಾರ. ಚಿತ್ರಮಂದಿರಗಳ ಮೇಲೆ ಹೆಚ್ಚು ಪರಿಣಾಮ ಬೀರಿರಲಿಲ್ಲ. 2001ರ ಸುಮಾರಿಗೆ ಆರಂಭವಾದ ಖಾಸಗಿ ಚಾನಲ್ ಗಳು ಧಾರಾವಾಹಿಗಳಿಂದ ಚಿತ್ರಮಂದಿರಗಳಿಗೆ ಹೋಗುವ ಪ್ರೈಮ್ ಟೈಂ ಕಸಿದುಕೊಂಡವು. ಸಿನಿಮಾಗಳಿಗೆ ಮೀಸಲಾದ ಚಾನಲ್ ಗಳು ನಿತ್ಯ ಸಿನಮಾ ಎಡಬಿಡದೆ ಪ್ರಸಾರ ಮಾಡಿದವು. ಉಚಿತ ಚಾನಲ್ ಗಳಿಂದ ಚಿತ್ರಮಂದಿರಗಳಿಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿತು. 2005 ರ ಹೊತ್ತಿಗೆ ಅನೇಕ ಗ್ರಾಮೀಣ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಲ್ಪಟ್ಟವು. ತಮ್ಮ ಗತಕಾಲದ ವೈಭವದ ಸ್ಮರಣೆಯಲ್ಲಿ ಗೋಡೆ ಕುಸಿದು, ರೂಫಿಂಗ್ ಹಾರಿ, ಗೋಡೌನ್ ಗಳಾಗಿ ನಿಂತಿವೆ. ಚಿತ್ರ ಮಂದಿರದ ಮಾಲೀಕರ ಬದಲಿ ಉದ್ಯಮಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೆಲವರು ಆರ್ಥಿಕ ದುಸ್ಥಿತಿ ತಲುಪಿದ್ದಾರೆ.
ರಾಜ್ಯದಲ್ಲಿ 1500 ಚಿತ್ರಮಂದಿರಗಳಿದ್ದವು. ಕಲೆಕ್ಷನ್ ಇಲ್ಲದೇ 800 ಚಿತ್ರಮಂದಿರಗಳಿಗೆ ಕುಸಿದಿದೆ. ತಾಲ್ಲೂಕಿನಲ್ಲಿ 10 ರಿಂದು 15 ಚಿತ್ರಮಂದಿರಗಳಿಂದ 3 ರಿಂದ 4 ಚಿತ್ರಮಂದಿರಗಳು ಮಾತ್ರ ಆರಂಭಿಸಿವೆ. ಇದಕ್ಕೆ ಕಾರಣ ಟಿವಿ ಮಾಧ್ಯಮ. ಸದಭಿರುಚಿಯ ಚಿತ್ರಗಳ ಕೊರತೆ. ಚಿತ್ರ ವಿತರಣೆ ಸಮಸ್ಯೆ, ಆಧುನಿಕ ತಂತ್ರಜ್ಞಾನ ಅಳವಡಿಸಿ ಪುನರುಜ್ಜೀವನಗೊಳಿಸದೆ ಇರುವುದು, ಶುಚಿತ್ವದ ಕೊರತೆ, ಆಸನದ ಕೊರತೆ ಹೀಗೆ ಅನೇಕ ಕಾರಣಗಳ ಸಮಾಗಮದಿಂದ ಚಿತ್ರಮಂದಿರಗಳಿಗೆ ಜನರ ನಿರಾಸಕ್ತಿ ಮಡುಗಟ್ಟಿದೆ.
ಕರ್ನಾಟಕ ಏಕಪರದೆ ಹಾಗೂ ಮಲ್ಟಿಪ್ಲೆಕ್ಟ್ ಚಿತ್ರಮಂದಿರಗಳಿವೆ. ಏಕ ಪರದೆ ಚಿತ್ರಮಂದಿರಗಳಲ್ಲಿ ನಗರ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಎ.ಬಿ.ಸಿ.ಡಿ ಎಂದು ವಿಭಾಗಿಸಲಾಗಿದೆ. ಎಲ್ಲಾ ಹಂತದ ಚಿತ್ರಮಂದಿರಗಳಿಗೆ ಏಕರೂಪದ ಸಿನಿಮಾಟೊಗ್ರಫಿ ಕಾಯ್ದೆಯಗೆ ಒಳಪಡಿಸಲಾಗಿದೆ.
ಕೋವಿಡ್ ಕಾಲದ ಸ್ಥಿತಿ
ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಸುಮಾರು 8 ಸಾವಿರ ಚಿತ್ರಮಂದಿರ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತು ದೊರೆತಿಲ್ಲ. ಪಡಿತರ ಆಹಾರ ಕಿಟ್ ಗಳನ್ನು ನೀಡಿಲ್ಲ. ಮಾಲೀಕರು ವೇತನ ಕೊಡಲು ಆಶಕ್ತರಾದ ಕಾರಣ ಅವರ ಜೀವನಕ್ಕೆ ಮಾರ್ಗೋಪಾಯ ಹುಡುಕಲು ಹೆಣಗಾಡುತ್ತಿದ್ದಾರೆ.
ಸುಮಾರು 100 ವರ್ಷಗಳಿಂದ ಸಾರ್ವಜನಿಕ ಮನರಂಜನೆ ನೀಡುತ್ತಿವೆ. ಜಿಎಸ್ ಟಿ, ವಿದ್ಯುತ್ ಶುಲ್ಕ, ನೀರಿನ ಕಂದಾಯ, ಆಸ್ತಿ ತೆರಿಗೆ, ಬ್ಯಾಂಕ್ ಗಳ ಸಾಲದ ಕಂತು ಬಾಕಿ ಇರುತ್ತವೆ. ಫ್ಯಾನ್ ಫಾಲೋವರ್ಸ್ ಇರುವ ನಾಯಕ ನಟರ ಸಿನಿಮಾಗಳಿಗೆ ಗ್ರಾಮೀಣ ಭಾಗದ ಚಿತ್ರಮಂದಿರಗಳಿಗೆ ಕಲೆಕ್ಷನ್. ಸಾಲು, ಸಾಲು ಚಿತ್ರ ಬಿಡುಗಡೆ ನಿರೀಕ್ಷೆ ಇದ್ದ ಮಾಲೀಕರಿಗೆ ಕೋವಿಡ್ ಬರಸಿಡಿಲಿನಂತೆ ಅಪ್ಪಳಿಸಿದೆ.
ಒಟಿಟಿ, ಮೊಬೈಲ್, ಟಿವಿಗಳಿಂದ ಚಿತ್ರಮಂದಿರದ ಸಂಭ್ರಮದ ವೀಕ್ಷಣೆಯಿಂದ ಏಕತಾನತೆ ಮೂಡಿದೆ. ಜನರ ಗುಂಪಿನೊಂದಿಗೆ, ಕೇಕೆ, ಸಿಳ್ಳೆ, ಚಪ್ಪಾಳೆಗಳಿಂದ ಕೂಡಿದ ಸಿನಿಮಾ ವೀಕ್ಷಣೆ ಸಂಭ್ರಮ ಕಳೆದು ಹೋಗಬಾರದು. ಚಿತ್ರಮಂದಿರಗಳ ಸಂಭ್ರಮ ಕಾಪಾಡುವುದು ಸರ್ಕಾರದ, ನಿರ್ಮಾಪಕರ, ಚಿತ್ರ ರಸಿಕರ, ಉದ್ಯಮದ ಕಲಾವಿದರ, ನಿರ್ದೇಶಕರ, ಕಾರ್ಮಿಕರ ಕರ್ತವ್ಯವಾಗಿದೆ. ಸರ್ಕಾರದ ಕೃಪಾ ದೃಷ್ಟಿಯಿಂದ ಚಿತ್ರಮಂದಿರಗಳು ಜೀವಂತಿಕೆ ಪಡೆಯಲಿ. ಆ ಮೂಲಕ ಮಾಲೀಕರ, ಕಾರ್ಮಿಕರ ಜೀವನ ಸಂರಕ್ಷಣೆಗೆ ಮುಂದಾಗಲಿ
ಪುನರಾರಂಭಿಸಲು ನಿರಾಸಕ್ತಿ
ಇದೇ 15 ರಿಂದ ಚಿತ್ರಮಂದಿರಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ವಯ ಚಿತ್ರಮಂದಿರ ಪುನರರಾಂಭಕ್ಕೆ ಅವಕಾಶ ನೀಡಲಾಗಿದೆ. ಗ್ರಾಮೀಣ ಚಿತ್ರಮಂದಿರಗಳ ಮಾಲೀಕರಲ್ಲಿ ನಿರಾಸಕ್ತಿ ಇದೆ. ಪ್ರತಿ ಚಿತ್ರ ಪ್ರದರ್ಶನಕ್ಕೂ ಸ್ಯಾನಿಟೈಸರ್ ಮಾಡಬೇಕು. ಒಬ್ಬ ವೀಕ್ಷಕನಿಗೆ ರೂ.10 ಖರ್ಚು ತಗುಲಿದೆ.
ಈಗ ಟಿಕೆಟ್ ದರ ರೂ.80 ಇದೆ. ಅದರಲ್ಲಿ ಶೇ.12 ಜಿಎಸ್ ಟಿ ಕಡಿತಗೊಳ್ಳುತ್ತದೆ. ಹೆಸರಾಂತ ನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿಲ್ಲ. ಹಾಗಾಗಿ ಚಿತ್ರಮಂದಿರದ ಕಡೆ ಹೆಜ್ಜೆ ಹಾಕುವ ಪ್ರೇಕ್ಷಕರಿಲ್ಲ ಎನ್ನುತ್ತಾರೆ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಎಚ್.ಎಸ್.ಪ್ರಕಾಶ್.
ಪ್ರಮುಖ ಬೇಡಿಕೆಗಳು
1.ವಾರ್ಷಿಕ ಪರವಾನಗಿ ಶುಲ್ಕ ರೂ.22500ಕ್ಕೆ ಏರಿಸಲಾಗಿದೆ. ಈ ಮೊದಲು ರೂ.1500 ಇತ್ತು. ಇದನ್ನು ಕಡಿತಗೊಳಿಸಬೇಕು.
2.ಚಲನ ಚಿತ್ರಮಂದಿರವನ್ನು ಉದ್ಯಮ ಅಡಿಯಲ್ಲಿದೆ. ಹಾಗಾಗಿ ವಿದ್ಯುತ್ ದರ ಪ್ರತಿ ಯುನಿಟ್ ಗೆ ರೂ.3.50ಕ್ಕೆ ನಿಗದಿಗೊಳಿಸಬೇಕು. ಸದ್ಯ ರೂ. 8 ವಿಧಿಸಲಾಗುತ್ತಿದೆ.
3.ಕಟ್ಟಡದ ವಿಸ್ತೀರ್ಣಕ್ಕೆ ಮಾತ್ರ ತೆರಿಗೆ ವಿಧಿಸಬೇಕು. ಹೊರ ಆವರಣ ಸೇರಿಸಬಾರದು.
4.ಸಿನಿಮಾ ಪ್ರದರ್ಶನ ರದ್ದಾಗಿರುವಾಗ ನೀರಿನ ಕಂದಾಯಕ್ಕೆ ವಿನಾಯಿತಿ ನೀಡಬೇಕು.
5.ಹಿಂತಿರುಗಿಸದ ಮುಂಗಡ ಕಟ್ಟಲು ಮಾಲೀಕರಿಗೆ ನಷ್ಟ ಉಂಟುಮಾಡುತ್ತದೆ. ಕಲೆಕ್ಷನ್ ಆಧಾರದಲ್ಲಿ ಮುಂಗಡ ಪಡೆಯಬೇಕು.
ಇಂತಹ ಗೊಂದಲಗಳನ್ನು ನಿವಾರಿಸಲು ಮುಂದಾದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪುನರರಾಂಭಿಸಲು ಚಿಂತನೆ ನಡೆಸಲಾಗುವುದು ಎನ್ನುತ್ತಾರೆ ಪ್ರಕಾಶ್.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಾಧ್ಯಮದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿತ್ತು. ಸೋಜಿಗವೆಂದರೆ ಆ ಸಂದರ್ಭದಲ್ಲಿ, ಚಿನ್ನ ಮಾರಬೇಕೇ, ತಕ್ಷಣ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯನ್ನು ನಮ್ಮ …………..ಗೋಲ್ಢ್‌ಕಂಪನಿ ನೀಡುತ್ತದೆ ಎಂಬ ವೈವಿಧ್ಯಮಯ ರೀತಿಯ ಹೆಚ್ಚಿನ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾಯಿತು.
ವಿಪರ್ಯಾಸವೆಂದರೆ ಇಂತಹ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾದರೂ ಸಹ ಚಿನ್ನವನ್ನು ಅಡವಿಟ್ಟು ಸಾಲ ಪಡೆದವರು, ಸಾಲ ಮರುಪಾವತಿ ಮಾಡದ ಕಾರಣ ಆ ಚಿನ್ನವನ್ನು ಹರಾಜು ಹಾಕುವ ಬಗ್ಗೆ ಪುಟಗಟ್ಟಲೆ ಜಾಹಿರಾತುಗಳು ಬರುತ್ತಲೇ ಇವೆ. ಜನಸಾಮಾನ್ಯರ ಮನದಲ್ಲಿ ಆಸೆ ಮತ್ತು ಆಸಕ್ತಿಯನ್ನು ಕೆರಳಿಸಿ, ಚಿನ್ನ ಕೊಳ್ಳಬೇಕೆಂಬ ಆಸೆಯನ್ನು ಸಹ ಬಿತ್ತಲಾಯಿತು. ಅದಕ್ಕೆ ಪೂರಕವಾಗಿ 2021 ರಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ.82 ಸಾವಿರ ತಲುಪುತ್ತದೆಂಬ ವಿಶ್ಲೇಷಣೆಗಳು ಸಹ ಹೊರಬಂದವು. ಕಮಾಡಿಟೀಸ್ ಮಾರ್ಕೆಟ್ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಹಲವಾರು ಪವಿತ್ರವಾದ, ಹಬ್ಬ ಹರಿದಿನಗಳಲ್ಲಿ ಚಿನ್ನ-ಬೆಳ್ಳಿಗಳಂತಹ ಅಮೂಲ್ಯವಾದ ಲೋಹಗಳನ್ನು, ಕನಿಷ್ಟ ಪಕ್ಷ ಸಾಂಕೇತಿಕವಾಗಿಯಾದರೂ ಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಈಗಿನ ದರಗಳಲ್ಲಿ ಚಿನ್ನದ ಆಭರಣವಾಗಲಿ ಬೆಳ್ಳಿಯ ವಸ್ತುಗಳಾಗಲಿ ಕೊಳ್ಳುವುದಕ್ಕೆ ಸಾಮಾನ್ಯರಿಗೆ ಸಾಧ್ಯವಿಲ್ಲ ಎಂಬಂತಾಗಿದೆ.
ಬೆಳ್ಳಿಯ ಬೆಲೆ
2008 ರ ಡಿಸೆಂಬರ್ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ. ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಟಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದು ಅಲ್ಲವೇ?
ಹಳದಿ ಲೋಹದ ಬೇಡಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸರ್ಕಾರಗಳ ಮಟ್ಟದಲ್ಲಿ, ಹೆಚ್ಚಾಗಲು ಆರಂಭವಾಗಿದ್ದು 2009 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ಟನ್ ಚಿನ್ನವನ್ನು ಐ ಎಂ ಎಫ್ ನಿಂದ ರೂ.31,490 ರಂತೆ ಖರೀದಿಸಿದ್ದಾಗಿದೆ. ನವೆಂಬರ್ 2017 ರಿಂದ 2019 ರ ನವೆಂಬರ್ ಅವಧಿಯಲ್ಲಿ ಆರ್ ಬಿ ಐ ಸುಮಾರು 75 ಟನ್ ಚಿನ್ನವನ್ನು ಖರೀದಿಸಿದೆ. ಈ ರೀತಿಯ ಬೇಡಿಕೆಯು ಚಿನ್ನದ ಬೆಲೆ ಸತತ ಏರಿಕೆ ಕಾಣುವಂತೆ ಮಾಡಿದೆ.
ಹೂಡಿಕೆಯಾಗಿಯೋ, ಆಭರಣವಾಗಿಯೋ
ಚಿನ್ನ ಕೊಳ್ಳಬೇಕೆ, ಹಾಗಿದ್ದರೆ ಚಿನ್ನವನ್ನು ಆಭರಣಕ್ಕಾಗಿಯೋ ಅಥವಾ ಹೂಡಿಕೆಯಾಗಿ ಕೊಳ್ಳಬೇಕಾಗಿದೆಯೋ ಎಂಬುದನ್ನು ನಿರ್ಧರಿಸಿರಿ. ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವ ಉದ್ದೇಶವಾಗಿದ್ದರೆ ಕೇಂದ್ರ ಸರ್ಕಾರದ ಸವರಿನ್ ಗೋಲ್ಡ್ ಬಾಂಡ್ ಯೋಜನೆ ಸೂಕ್ತವೆನಿಸಬಹುದು. ಈ ಬಾಂಡ್ ಗಳು ಡಿಮ್ಯಾಟ್ ರೂಪದಲ್ಲಿರುವುದರಿಂದ, ಈ ಹಿಂದೆ ವಿತರಣೆಯಾಗಿರುವ ಬಾಂಡ್ ಗಳು ಷೇರುಪೇಟೆಯಲ್ಲಿ ಖರೀದಿಸಬಹುದು. ಸವರಿನ್ ಗೋಲ್ಡ್ ಬಾಂಡ್ 7 ವಿತರಣೆಗೆ ಸಿದ್ಧವಾಗಿದ್ದು, ವಿತರಣೆಯ ಬೆಲೆ ರೂ.5,051 ಎಂದು ನಿಗದಿಪಡಿಸಲಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ರೂ.50 ರಂತೆ ರಿಯಾಯಿತಿ ನೀಡಲಾಗುವುದು. 8 ವರ್ಷಗಳ ಅವಧಿಯ ಈ ಬಾಂಡ್ ಗಳು ಪ್ರತಿ ವರ್ಷ ಶೇ.2.50 ಯಂತೆ ಬಡ್ಡಿ ಗಳಿಸುವುದಲ್ಲದೆ, ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ವಹಿವಾಟಿಗೆ ಅನುಮತಿಯಿದೆ. ಅವಧಿಯ ನಂತರ ಅದರ ಹಿಂದಿನ ವಾರದ ಸರಾಸರಿ ಬೆಲೆಯಲ್ಲಿ ಬಾಂಡ್ ಹೋಲ್ಡರ್ ಗಳಿಗೆ ರೂಪಾಯಿಗಳಲ್ಲಿ ಹಿಂದಿರುಗಿಸಲಾಗುವುದು. ಸೋಜಿಗವೆಂದರೆ ಈ ಹಿಂದಿನ ವರ್ಷಗಳಲ್ಲಿ, ಹಿಂದಿನ ತಿಂಗಳಲ್ಲಿ ವಿತರಿಸಿದ ಬಾಂಡ್ ಗಳು ರೂ.4,800 ರಿಂದ ರೂ.5,000 ಗಳವರೆಗೂ ವಹಿವಾಟಾಗುತ್ತಿದ್ದು, ಅವುಗಳು ವಿತರಿಸಿದ ಬೆಲೆಗಳ ಮೇಲೆ ಬಡ್ಡಿ ನೀಡಲಾಗುತ್ತದೆ. ಒಟ್ಟಾರೆ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇದು ಉತ್ತಮ ಯೋಜನೆ. ಹೂಡಿಕೆಗೆ ಮುನ್ನ ವಿತರಣೆ ಬೆಲೆ ಮತ್ತು ವರ್ಷ ಅರಿತು ನಿರ್ಧರಿಸಿರಿ.
2017 ರಲ್ಲಿ ವಿತರಿಸಿದ ಮೇ 2025 ರ ಪಕ್ವತೆಯುಳ್ಳ ಬಾಂಡ್ ಗಳು ರೂ.2,951 ರಲ್ಲಿ ವಿತರಿಸಲಾಗಿದ್ದು, ಸಧ್ಯ ರೂ.4,800 ರ ಸಮೀಪ ವಹಿವಾಟಾಗುತ್ತಿದೆ. ಇಲ್ಲಿ ಚಿನ್ನದ ಬೆಲೆ 2025 ರ ಪೇಟೆಯನ್ನವಲಂಭಿಸಿದ್ದರೂ, ಅಲ್ಲಿಯವರೆಗೂ ದೊರೆಯುವ ಬಡ್ಡಿ ಮಾತ್ರ ವಿತರಣೆ ಬೆಲೆಯಾದ ರೂ.2,951 ರ ಮೂಲ ಬೆಲೆಮೇಲೆ. ಅದೇ ಸೆಪ್ಟೆಂಬರ್ 2028 ಬಾಂಡ್ ಗಳ ವಿತರಣೆ ಬೆಲೆ ರೂ.5,117 ಆಗಿದ್ದು, ಈ ಬಾಂಡ್ ಗಳು ಸಹ ರೂ.4,850 ರ ಸಮೀಪ ವಹಿವಾಟಾಗುತ್ತಿವೆ. ಹೀಗೆ ವಹಿವಾಟಾಗುತ್ತಿರುವ ದರ ಈಗಿನ ಚಿನ್ನದ ದರವನ್ನವಲಂಭಿಸಿದ್ದರೂ, ವಿತರಣೆ ಬೆಲೆ ಮತ್ತು ಪಕ್ವತೆಯ ಅವಧಿಗಳು ಬೇರೆ ಬೇರೆಯಾಗಿರುತ್ತವೆ. ಹೂಡಿಕೆಗೆ ಮುಂಚೆ ಚಿಂತಿಸಿ ನಿರ್ಧರಿಸಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಕೊರೋನ ಕರಿಛಾಯೆ ಪ್ರಪಂಚದಾದ್ಯಾಂತ ಗಾಢವಾಗಿ ಹಬ್ಬಿ ಸದ್ಯದ ಪರಿಸ್ಥಿತಿಯಲ್ಲಿ ’ಕ್ಲಾಸ್ ಎಂದರೆ ಆನ್ಲೈನ್ ಕ್ಲಾಸ್ ಎನ್ನಿರಯ್ಯ’ ಎಂಬ ಸಂದಿಗ್ದತೆ.
ಪಾಪ …. ಇಷ್ಟರವರೆಗೆ ತರಗತಿಯ ಗೋಡೆ -ಗೋಡೆಗಳಲ್ಲಿ ತಮ್ಮದೇ ಶಾಸನವ ಕೆತ್ತುತ್ತಾ, ಕಿವಿಯ ತಮಟೆ ಒಡೆದು ಹೋಗುವ ಹಾಗೆ ಚೀರುತ್ತಾ, ಗೆಳೆಯರೊಂದಿಗೆ ಮೋಜು -ಮಸ್ತಿ ಮಾಡುತ್ತಾ ಹಕ್ಕಿಗಳಂತಿದ್ದ ವಿದ್ಯಾರ್ಥಿಗಳಿಗೆ ಪಂಜರದಲ್ಲಿಟ್ಟ ಅನುಭವ.
ಅತ್ತ ಶಾಲೆ ಶುರುವಾಗಿಲ್ಲ ಎಂಬ ಬೇಸರ, ಇತ್ತ ಆನ್ಲೈನ್ ಕ್ಲಾಸಿಗೆ ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯತೆ. ಎಲ್ಲದರ ಮದ್ಯೆ ಬಳಲಿ -ಬೆಂಡಾಗಿರುವುದಂತು ನಿಜ. ಈ ಸಂದಿಗ್ದತೆಯಲ್ಲಿ ಹೊಸ ಮೋಜನ್ನು ಕಂಡುಕೊಳ್ಳುತ್ತಿದೆ ವಿದ್ಯಾರ್ಥಿ ವರ್ಗ.
ಮೊದ-ಮೊದಲು ಆನ್ಲೈನ್ ಕ್ಲಾಸ್ ಬಗ್ಗೆ ಗಂಧ -ಗಾಳಿ ಗೊತ್ತಿಲ್ಲದ ವಿದ್ಯಾರ್ಥಿಗಳ ಪಜೀತಿ ಕೇಳಿದರೆ ನಗು ಬರುವುದಂತು ಖಂಡಿತ. ಅದಕ್ಕೆ ನಾನೂ ಹೊರತಲ್ಲ. ಆನ್‌ಲೈನ್ ಕ್ಲಾಸ್ ಎಂದರೆ ಮನೇಲೇ ಕೂತು ಪಾಠ ಕೇಳ್ಬಹುದು, ತರಗತಿ ಮಜವಾಗಿರವಾಗಿರಬಹುದೆಂದು ಯೋಚಿಸಿ , ಸರಿಯಾದ ಸಮಯಕ್ಕೆ ಫೋನನ್ನು ಮುಖಾರವಿಂದದ ಎದುರು ಹಿಡಿದು ಕುಂತರೆ….ಕಾದಿದ್ದೇ ಬಂತು, ಕ್ಲಾಸ್ ಶುರುವಾಗಲೇ ಇಲ್ಲ. ದಡ್ಡ ಶಿಖಾಮಣಿಗಳಿಗೆ ತರಗತಿ ಮುಗಿದಿದ್ದೂ ಗೊತ್ತಾಗಲಿಲ್ಲ! ಜೂಮ್, ಗೂಗಲ್ ಮೀಟ್ ಎಂಬ ಆಪ್ ಉಂಟು ಅದನ್ನು ಡೌನ್ಲೋಡ್ ಮಾಡಬೇಕು ಅನ್ನೋದು ತಿಳಿಯದೇ ಹೋದದ್ದು ಆನ್ಲೈನ್ ದುರಂತ!
ಹಾಗೋ ಹೀಗೋ ಗೆಳೆಯರನ್ನು ಕಾಡಿ -ಬೇಡಿ ಆಪ್ ಇನ್ಸ್ಟಾಲ್ ಮಾಡಿಟ್ಟು ಮರುದಿನ ಮೀಟನ್ನು ಓಪನ್ ಮಾಡಿ ಕುಳಿತಿದ್ದರೆ, ಮತ್ತೆ ಕ್ಲಾಸ್ ಶುರುವಾಗಲಿಲ್ಲ. ಚಿಂತೆ ಮುಖದಲ್ಲಿ ಬೆವರಾಗಿ ಹರಿಯತೊಡಗಿತು. ತಕ್ಷಣವೆ ಗೆಳೆಯರಿಗೆ ಪೋನು ಹಚ್ಚಿದರೆ ಬ್ಯುಸಿ ಎಂದು ಬಂತು .ಆಗಲೇ ಏನೋ ಸುಟ್ಟ ವಾಸನೆ ಬಂದರೂ ಎದೆಗುಂದದೆ ಪುನಃ ಆಪ್ ಓಪನ್ ಮಾಡಿದೆ. ಕ್ಲಾಸ್ ಇನ್ನು ಶುರುವಾಗಲೇ ಇಲ್ಲ… ಒಂದು ತಾಸಿನ ನಂತರ ಗೆಳೆಯರ ಕರೆ ಬಂತು ಕ್ಲಾಸಿಗೆ ಯಾಕೆ ಜಾಯಿನ್ ಆಗಲಿಲ್ಲ ಎಂದು ಪ್ರಶ್ನಿಸಿದರು! ಕ್ಲಾಸ್ಗೊಂದು ಲಿಂಕ್ ಇರುತ್ತೆ, ಅದ್ರ ಮೂಲಕ ಜಾಯಿನ್ ಆಗಬೇಕು ಎಂಬ ದಿವ್ಯಜ್ಞಾನ ನಂತರ ಸಿಕ್ಕಿತು. ಅಂತೂ ಕ್ಲಾಸ್‌ಗೆ ಜಾಯಿನ್ ಆಗಿದ್ದು ಆಯಿತು, ಮೊದಲೆರಡು ದಿನ ಆದ ವಿಚಿತ್ರ ಅನುಭವಗಳ ನೆನೆದು ನಕ್ಕಿದ್ದೂ ಆಯಿತು!
ಮೀಟು ಕೈಗೆಟುಕಿದ ನಂತ್ರ ಇನ್ನೇನು…ಕ್ಲಾಸ್ ಬಗ್ಗೆ ಕಲಿತಿದ್ದೇ ಕಲಿತಿದ್ದು. ಬಹಳ ದಿನಗಳಿಂದ ಕಾಣದ ಸಹಪಾಠಿಗಳ ಮೊಗವ ವಿಡಿಯೋದಲ್ಲಿ ಕಂಡಾಗ ಅದೇನೋ ಖುಷಿ. ಕ್ಲಾಸ್ ನಲ್ಲಿ ಮಾಡುತ್ತಿದ್ದ ತರ್ಲೆ -ತಮಾಷೆ ರಪ್ ಅಂತ ಕಣ್ಣ ಮುಂದೆ ಬಂದು ಹೋಯಿತು. ಇನ್ನೂ ನೆಟ್ವರ್ಕ್ ಸಮಸ್ಯೆಯಿಂದ ಶಿಕ್ಷಕರು ಲೆಫ್ಟ್ ಆದಾಗ, ಅಲ್ಲಿವರೆಗೂ ಸಾಚಾಗಳಂತೆ ವರ್ತಿಸುತ್ತಿದ್ದ ನಮ್ಮೊಳಗೇ ಅವಿತು ಕುಳಿತಿರುವ ನಾನಾ ಪ್ರತಿಭೆಗಳು ಹೊರ ಬರುತ್ತವೆ. ಸಂಭಾಷಣೆ ತೀರಾ ಹಾಸ್ಯಮಯ. ತಕ್ಷಣ ಗುರುಗಳು ರೀಜಾಯಿನ್ ಆದಾಗ ಸಿಂಹ ಕಂಡಂತೆ ಗಪ್ಚುಪ್ ಆಗುತ್ತೆ ಕ್ಲಾಸ್!
ಇನ್ನೂ ತರಗತಿ ನಡೆಯುತ್ತಿರುವಾಗಲೆ ನಡೆಯುವ ಲೈವ್ ಕಾಮೆಂಟ್ರಿ ಕ್ರಿಕೆಟ್ ಮ್ಯಾಚ್ ನಂತೆ ಕುತೂಹಲಕಾರಿ. ವಾಟ್ಸಪ್ ಇದರ ಪ್ಲಾಟ್ಫಾರಂ . ಶಿಕ್ಷಕರ ಹಾವ -ಭಾವ, ವಿದ್ಯಾರ್ಥಿಗಳ ಪ್ರತ್ಯುತ್ತರದ ಬಗ್ಗೆ ವಾದ, ಎಲ್ಲರ ವೇಷಭೂಷಣ ಇದರ ಮುಖ್ಯ ಚರ್ಚಾ ವಿಷಯ. ಶಾಲೆಯ ಗಂಟೆ ಶಬ್ದವೊಂದು ಬಿಟ್ಟು ಮತ್ತೆಲ್ಲ ಇಲ್ಲಿ ಸಾಧ್ಯ. ಈಗೀಗ ಅನಿಸುವುದುಂಟು’ ಏನೋ ನವನವೀನ ಈ ಆನ್ಲೈನ್ ಕ್ಲಾಸ್ ’!
ಎಲ್ಲವೂ ಮೊಬೈಲ್ ಆಗಿರುವ ಈ ದಿನದಲ್ಲಿ ಅನೇಕರಿಗೆ ಅಂಚೆ ಮೂಲಕ ಬರುತ್ತಿದ್ದ ಪತ್ರಗಳ ನೆನಪೇ ಇದ್ದಂತೆ ಇಲ್ಲ. ಎಂತೆಂಥ ಪತ್ರಗಳಿವೆ ಗೊತ್ತಾ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಈ ಲೇಖನ ಓದಿ.
ಸುಮಾವೀಣಾ, ಹಾಸನ
ಒಬ್ಬರು ಮತ್ತೊಬ್ಬರಿಗೆ ಬರವಣಿಗೆಯ ಮೂಲಕ ಸಂವಹನ ನಡೆಸುವುದನ್ನು ಪತ್ರಲೇಖನ ಎಂದು ಕರೆಯಬಹುದು.ಸಂವಹನ, ಸಂಪರ್ಕ ಈ ಪದಗಳ ಉದ್ದೇಶ ಮನದಿಂಗಿತವನ್ನು ಅರುಹುವುದೇ ಆಗಿದೆ.“ಪತ್ರ” ಪದವನ್ನು ತೆಗೆದುಕೊಂಡರೆ ಪತ್ರೆಯ ಬದಲಾದ ರೂಪವೇ ಪತ್ರ ಎನ್ನಬಹುದು. ಅಂದರೆ ಪತ್ರೆಯ ಮೇಲೆ ಬರೆದ ಲೇಖನ “ಪತ್ರಲೇಖನ” ಎಂದಾಯಿತು.ಈಗ ಕಾಗದದ ಮೇಲೆ ಬರೆಯುವುದಾದರೂ ಹಳೆಯ ಪದ ಪತ್ರದ ಬಳಕೆಯಿದೆ.ಪಂಡಿತರೆಲ್ಲ ‘ಪತ್ರ’ ಬರೆದಿದ್ದೇನೆ “ಪತ್ರ ತಲುಪಿತು” ಎಂದು ಹೇಳುತ್ತಾರೆ.‘ಪತ್ರ’ ಸಂಸ್ಕೃತ ಪದ ‘ಕಾಗದ’ ಹಿಂದುಸ್ಥಾನಿ ಮೂಲದ ಕಾಗಜ಼್ನಿಂದ ಬಂದಿರುವ ಅನ್ಯದೇಶಿ ಪದ.ಅಷ್ಟೇನೂ ಓದು ಬರಹ ಬಾರದವರು ಪತ್ರಕ್ಕೆ ‘ಕಾಗದ’,’ಕಾದಗ’ ಎಂದೇ ಕರೆಯುವುದು, ಹಾಗಾಗಿ ಕನ್ನಡದ ‘ಓಲೆ’ ಸರಿಯಾದ ಪದ ಪ್ರಯೋಗ.
ದೇಶೀಯ ಶಬ್ದ
‘ಓಲೆ’ ಇದೊಂದು ದೇಶೀಯ ಶಬ್ದ. ‘ತಾಳೆಯಗರಿ’ ಎಂಬುದು ಇದರ ಅರ್ಥ. ಹಾಗಾಗಿ ‘ಓಲೆಗರಿ’ ಎಂಬ ಪದವೂ ಬಳಕೆಯಲ್ಲಿದೆ. ಹಿಂದೊಂದು ಕಾಲದಲ್ಲಿ ತಾಳೆಗರಿಗಳನ್ನು ಮಡಿಸಿ ಸುಂದರ ಆಕಾರ ಕೊಟ್ಟು ಕಿವಿಗೆ ಆಭರಣವಾಗಿ ಧರಿಸುತ್ತಿದ್ದರು.ಕಾಲಕ್ರಮೇಣ ಬೆಂಡನ್ನು ಅಲಂಕಾರದ ಆಭರಣವಾಗಿಸಿಕೊಂಡರು.ಆ ಕಾರಣಕ್ಕಾಗಿ ಅದನ್ನು ‘ಬೆಂಡೋಲೆ’ ಎಂದೂ ಕರೆದರು. ನಂತರ ಮುತ್ತು, ರತ್ನ, ವಜ್ರ, ಚಿನ್ನಗಳಿಂದ ತಯಾರಾದ ಕಿವಿಯ ಆಭರಣಗಳಿಗೆ ಓಲೆ ಪದವನ್ನು ಸೇರಿಸಿಕೊಂಡು ಮುತ್ತಿನೋಲೆ, ರತ್ನದೋಲೆ… ಹೀಗೆ ಕರೆದದ್ದಾಯಿತು.‘ತಾಳೆಗರಿ’ ಎಂಬ ಸೀಮಿತ ಅರ್ಥದಲ್ಲಿದ್ದ ‘ಓಲೆ’ ಕಿವಿಯ ಆಭರಣ ಎಂಬ ವಿಶಾಲಾರ್ಥ ಪಡೆದುಕೊಂಡಿದೆ. ಇದರ ಜೊತೆಗೆ ಕಾಗದ, ಪತ್ರ ಎಂಬ ಅರ್ಥದಲ್ಲೂ ಬಳಕೆಯಲ್ಲಿದೆ.‘ಓಲೆ’ ಎಂಬ ಪದ ರೂಪ ವ್ಯತ್ಯಾಸವಾಗದೇ ಇದ್ದರೂ ‘ಅರ್ಥವ್ಯತ್ಯಾಸ’ ಹಾಗು ‘ಅರ್ಥವಿಕಾಸ’ ಪಡೆದುಕೊಂಡಿದೆ.
ಪ್ರಸ್ತುತ ‘ಓಲೆ’ ಪದವನ್ನು ಪತ್ರಗಳಿಗೆ ಅನ್ವಯಿಸಿ ಹೇಳುತ್ತೇವೆ. ಹಿಂದೆ ತಾಳೆಗರಿಗಳನ್ನು ಇನ್ನೂ ತೇವಾಂಶ ಇರುವಾಗಲೇ ಬಿಸಿನೀರಿನಲ್ಲಿ ಕುದಿಸಿ ನೆರಳಿನಲ್ಲಿ ಒಣಗಿಸಿ ನುಣುಪಾದ ಗಾರೆಯ ಕಲ್ಲಿನಿಂದ ಉಜ್ಜಿ ಮೃದುಗೊಳಿಸುತ್ತಿದ್ದರು.ಆಗ ಎರಡು ಬದಿಗಳು ಸಮತಲವಾಗುತ್ತಿದ್ದವು. ಅಂತಹವುಗಳನ್ನು.ಪತ್ರಗಳನ್ನು ಬರೆಯಲೋ, ಗ್ರಂಥಗಳನ್ನು ಬರೆಯಲೋ ಬಳಸುತ್ತಿದ್ದರು. ಓಲೆಗರಿಗಳಿಂದ ರಚಿತವಾದ ಸಂದೇಶವನ್ನು ಸಂವಹಿಸುವವನಿಗೆ ‘ಓಲೆಕಾರ’ ಎಂದು ಕರೆಯುತ್ತಿದ್ದುದುಂಟು.ಧಾರವಾಡ ಕನ್ನಡದಲ್ಲಿ ‘ವಾಲಿಕಾರ’. ನಾವು ಆಧುನೀಕರು ಕಾಗದದಲ್ಲಿ ಬರೆದ ಸಂದೇಶ ತಲುಪಿಸುವ ಸಂದೇಶ ವಾಹಕರಿಗೆ ಪೋಸ್ಟ್ಮ್ಯಾನ್ ಎಂದು ಕರೆಯುತ್ತೇವೆ.
ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ
ರಾಸಾಯನಿಕ ಕ್ರಿಯೆಯಿಂದ ತಯಾರಾದ ಕಾಗದಕ್ಕಿಂತಲೂ ಪ್ರಕೃತಿ ಸಹಜವಾದ ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ ಬರುವಂತಹದ್ದು. ಬಹುಬೇಗ ಹುಳುಗಳ ಹೊಡೆತಕ್ಕೆ ಇವುಗಳು ಬಲಿಯಾಗುತ್ತಿರಲಿಲ್ಲ. ರಾಜ ಮಹಾರಾಜರ ಕಾಲದಲ್ಲಿ ಬರೆಯುತ್ತಿದ್ದ ಪತ್ರಗಳು ರೇಷ್ಮೆ ವಸ್ತುಗಳಿಂದ, ಮುತ್ತು ರತ್ನಗಳಿಂದ ಅಲಂಕೃತವಾಗಿ ಸುರುಳಿ ಸುತ್ತಿ ಸೈನಿಕರ ಮುಖೇನ ಅದನ್ನು ತಲುಪಿಸುತ್ತಿದ್ದರು.ಈಗ ನಾವು ನೋಡುವ ಪತ್ರಗಳು ಚಪ್ಪಟೆಯಾಗಿರುತ್ತವೆ. ರಾಜ ತನ್ನ ಪತ್ರದ ಕಡೆಯಲ್ಲಿ ರಾಜಮುದ್ರೆಯನ್ನು ಒತ್ತುತ್ತಿದ್ದ.ಇಂದಿಗೆ ಸರಕಾರಿ, ವಾಣಿಜ್ಯ ಪತ್ರಗಳಲ್ಲಿ ಅಧಿಕಾರಿಗಳ ಉಧ್ಯಮಿಗಳ ಸೀಲ್ ಮತ್ತು ಸಹಿ ಇರುತ್ತದೆ.ಅದರಲ್ಲಿ ಅವರ ಪದನಾಮ, ವಿಳಾಸ ಎಲ್ಲವೂ ಅಡಕವಾಗಿರುತ್ತದೆ.
ಅಂಚೆ ಮೂಲಕ
ಅಂಚೆ ಇಲಾಖೆಯ ಮೂಲಕ ಪತ್ರ ರವಾನೆಯಾಗುತ್ತದೆ.ಎಂದರೆ ದಿನಾಂಕ ಹಾಗೂ ಊರಿನ ಹೆಸರನ್ನುಳ್ಳ ಮುದ್ರೆ ಖಂಡಿತಾ ಇರುತ್ತದೆ.ಭಾರತದಲ್ಲಿ ಏಪ್ರಿಲ್ ೧, ೧೭೭೪ ರಲ್ಲಿ ಪ್ರಥಮ ಬಾರಿಗೆ ಅಂಚೆ ಇಲಾಖೆ ಕಾರ್ಯಾರಂಭ ಮಾಡಿತು. ಸದ್ಯ ೨೧-೨೨ ಕಿ.ಮೀ.ಗೊಂದು ಅಂಚೆ ಕಛೇರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಂಚೆ, ಟಪಾಲು ಇತ್ಯಾದಿ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಅಂಚೆ ಕಛೇರಿ ಎಂದು ಕರೆಯುತ್ತೇವೆ. ಇಲ್ಲಿ ‘ಅಂಚೆ’ ದೇಶೀಪದವಾದರೆ ಅನ್ಯದೇಶ್ಯ ಪದ ‘ಕಚೇರಿ’, ಇದು ಮರಾಠಿಯ ಕಚೇರಿಯಿಂದ ಹಾಗೂ ಹಿಂದಿಯ ಕಛಹರಿಯಿಂದ ಬಂದಿದೆ. ಹಾಗಾದರೆ ‘ಅಂಚೆ ಕಛೇರಿ’ ಅಂದರೆ ‘ಟಪಾಲು ವ್ಯವಹಾರ’ ನೋಡುವುದು ಎಂದಾಯಿತಲ್ಲ. ಈಗ ಪತ್ರ, ಓಲೆ, ಕಾಗದ ಯಾವುದೂ ಇಲ್ಲ, ಎಲ್ಲಾ ಪೇಪರ್‌ಲೆಸ್ ಆಗಿ ಮೊಬೈಲ್ ಸಂದೇಶ, ಇ-ಮೇಲ್, ವಾಟ್ಸಪ್, ಫೇಸ್‌ಬುಕ್ ಸಂದೇಶಗಳು ರಾರಾಜಿಸುತ್ತಿವೆ. ಆಯ ತಪ್ಪಿದರೆ ಸಂದೇಶಗಳಲ್ಲಿ ಬರೇ ಸಂದೇಹಗಳು ಏನಂತೀರಿ…?
ಪತ್ರಗಳಲ್ಲಿ ವೈಯುಕ್ತಿಕ, ಸರಕಾರಿ, ಅರೆಸರಕಾರಿ ವಾಣಿಜ್ಯ ಪತ್ರಗಳು, ಆಮಂತ್ರಣ ಪತ್ರಿಕೆಗಳು ಎಂದೆಲ್ಲಾ ಹೇಳಬಹುದು.ಹಿಂದೆ ‘ಮದುವೆ ಪತ್ರಿಕೆ ಆಯ್ತು’ ಎಂದು ಹೇಳುತ್ತಿದ್ದರು.ಈಗ ‘ಮದುವೆ ಕಾಗದ’ ‘ಪ್ರಿಂಟ್ ಕೊಡೋಕೆ ಬಂದಿದ್ವಿ’ ಅನ್ನುತ್ತಾರೆ.ಸರಿಯಾದ ಪದ ಪ್ರಯೋಗ, ಶುಭಾಶಯ ಪತ್ರಗಳು ಸಮಾರಂಭಗಳ ಆಹ್ವಾನ ಪತ್ರಿಕೆಗಳೂ ಪತ್ರಗಳೇ’’ ಕೆಲವೊಂದು ದಾಖಲೆಗಳನ್ನು ಅಂದರೆ ಜನನ, ಮರಣ, ಆದಾಯ, ವಾಸಸ್ಥಳ ಪತ್ರಗಳೂ ಇವೆ. ಅಂದರೆ ಇವು ಸರಕಾರದ ಅಧಿಕಾರಿಗಳಿಂದ ಅಧೀಕೃತವಾಗಿ ಪರಿಶೀಲಿಸಿದ ಪ್ರಮಾಣೀಕರಿಸಿದ ಪತ್ರಗಳು, ನಡತೆ ಪ್ರಮಾಣ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪದವಿ ಪ್ರಮಾಣ ಪತ್ರಗಳು ಇವೆಯಲ್ಲ!ಎಲ್ಲಾ ಅಸಲಿಯೋ ಇಲ್ಲ ನಕಲಿಯೋ ನನಗೆ ತಿಳಿದಿಲ್ಲ.
‘ಕಾಗದ ಪತ್ರ’ ಎನ್ನುವುದು ದ್ವಿರುಕ್ತಿ.ಚಿರಾಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಕ್ರಯಪತ್ರ, ಭೋಗ್ಯಪತ್ರ, ಬಾಡಿಗೆ ಕರಾರು ಪತ್ರ ಮುಂತಾದ ಪತ್ರಗಳ ಬಗೆಯನ್ನೂ ನೋಡಬಹುದು.ಈ ದಾಖಲೆಗಳನ್ನು ಪತ್ರ ರೂಪಕ್ಕಿಳಿಸಲು ಪತ್ರಬರಹಗಾರರೇ ಇರುತ್ತಾರೆ.ಸರಕಾರಕ್ಕೆ ಇಂತಿಷ್ಟು ಶುಲ್ಕ ಪಾವತಿಸಿದ ಸ್ಟಾಂಪ್ ಹಚ್ಚಿದ ಕಾಗದಗಳಲ್ಲಿ ಇವರು ವಿಷಯ ದಾಖಲಿಸುತ್ತಾರೆ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಪತ್ರಕ್ಕೆ ನಾಮಪತ್ರ ಎನ್ನುತ್ತೇವೆ. ಉದ್ದಿಮೆಗಳನ್ನು ನಡೆಸಲು ಅನುಮತಿ ನೀಡುವ ಪರವಾನಗಿಗಳು, ಪತ್ರಿಕಾ ಸಂಪಾದಕರಿಗೆ ಬರೆಯುವ ಪತ್ತ, ಬ್ಯಾಂಕ್ ನೋಟೀಸು, ಕರಪತ್ರಗಳೂ ಪತ್ರಗಳೇ..
ಓಲೆಗಳು ಬಂದುವೆಂದರೆ ಹಿಂದೆ ಬಂಧುಗಳು ಬಂದಷ್ಟೇ ಸಂತೋಷಿಸುತ್ತಿದ್ದರು.ಕಾಗದದಲ್ಲಿ ಉಕ್ತವಾದ ಸಾಲುಗಳನ್ನು ಮತ್ತೆ ಮತ್ತೆ ಓದಿ ಆನಂದಿಸುತ್ತಿದ್ದರು. ಹೊಸ ಉತ್ಸಾಹ ಪಡೆಯುತ್ತಿದ್ದರು. ಅನಕ್ಷರಸ್ಥರೇ ಹೆಚ್ಚಾಗಿದ್ದ ಕಾಲದಲ್ಲಿ ಊರಿಗೊಬ್ಬ ಅಕ್ಷರಸ್ಥ ಇದ್ದರೆ ಅವನಿಗೆ ಅದೇ ಕೆಲಸ ಪತ್ರ ಓದುವುದು, ಪತ್ರ ಬರೆಯುವುದು.ಆನಂತರ ಅಂಚೆಯಣ್ಣನಿಗೆ ಆ ಜವಾಬ್ದಾರಿ.ಕೆಲವೊಮ್ಮೆ ಪತ್ರಗಳೂ ಅದರ ಸಂದೇಶಗಳು ದುರುಪಯೋಗವಾದದ್ದೂ ಇದೆ.ಹೆಣ್ಣು ಮಕ್ಕಳಿಗಂತೂ ಹಬ್ಬದ ಸಮಯದಲ್ಲಿ ತಾಯಿ ಮನೆಯವರು ಹಬ್ಬಕ್ಕೆ ಕರೆದು ಕಾಗದ ಬರೆಯುತ್ತಾರೆ, ಬಾಗಿನಕ್ಕೆ ಹಣ ಕಳುಹಿಸುತ್ತಾರೆ ಎಂತಲೇ ಅಂಚೆಯಣ್ಣನನ್ನು ಕಾಯುತ್ತಿದ್ದುದು ಇದೆ.ಹಿಂದೆ ತವರಿನ ಸಂದೇಶಗಳನ್ನು ಹೆಣ್ಣು ಮಕ್ಕಳಿಗೆ ತಲುಪಿಸುವಲ್ಲಿ ಬಳೆಗಾರರದ್ದೂ ಪಾತ್ರವಿತ್ತು. ಎಂಬುದನ್ನು ಕೆ.ಎಸ್.ನ.ರವವರ “ಬಳೆಗಾರಚನ್ನಯ್ಯ” ಗೀತೆ ನೆನಪಿಸುತ್ತದೆ.
ಅಂಚೆಕಾರ್ಡು, ಇನ್‌ಲ್ಯಾಂಡ್ ಶೀಟ್ (ಇದರ ಅಪಭ್ರಂಶ ಇಂಗ್ಲೆಂಡ್ ಶೀಟ್ ಎಂದೂ ಕರೆಯುವುದಿದೆ), ಎನ್‌ವಲಪ್, ನಂತರ ಬೇರೆ ಹಾಳೆಗಳಲ್ಲಿ ಬರೆದು ಲಕೋಟೆಗಳಲ್ಲಿ ಹಾಕಿ ಅದು ತೂಗುವ ತೂಕಕ್ಕೆ ಸರಿಯಾದ ಮೌಲ್ಯದ ಅಂಚೆ ಚೀಟಿಗಳನ್ನು ಹಚ್ಚುವುದಿತ್ತು.ಕಾರ್ಡುಗಳೆಂದರೆ ಖುಲ್ಲಂ ಖುಲ್ಲ ಯಾರು ಬೇಕಾದರೂ ಓದಬಹುದು, ಇನ್‌ಲ್ಯಾಂಡ್ ಶೀಟ್ ಎಂದರೆ ಒಳ ಮೈಯಲ್ಲಿ ವಿಚಾರ ಅರುಹಿ ಹೊರ ಮೈಯ್ಯಲ್ಲಿ ವಿಳಾಸ ಬರೆಯುವುದು ಇತ್ತು.ಈಗ ಕಡಿಮೆಯಾಗಿದೆ. ಕಾಗದ ಬರೆದು ಅಂಚೆಪೆಟ್ಟಿಗೆಯೊಳಗೆ ಹಾಕಿದ ಮೇಲೆ ತಲುಪಿತೋ ಇಲ್ಲವೋ ಎಂಬ ಕಳವಳ ಇರುತ್ತಿತ್ತು.ಅದನ್ನು ತಪ್ಪಿಸಲು ರಿಪ್ಲೆಕಾರ್ಡು, ರಿಜಿಸ್ಟ್ರೆಡ್ ಪೋಸ್ಟ್, ಅದಕ್ಕೆ ಸ್ವೀಕೃತಿ ಪತ್ರ. ವೇಗದ ಅಂಚೆ ಚಾಲ್ತಿಯಲ್ಲಿದೆ.ಇವೆಲ್ಲ ವಿಳಾಸದಾರರಿಗೇ ಖುದ್ದಾಗಿ ತಲುಪಬೇಕು ಅನ್ನುವ ಕಾರಣಕ್ಕೆ.ಕೆಲ ಜಿಪುಣಾಗ್ರೇಸರರು ಹಣ ಖರ್ಚಾಗುತ್ತದೆಂದು ಡ್ಯೂ ಬೀಳುವಂತೆ ಮಾಡಿ ತಾವು ಅಂದುಕೊಂಡವರಿಗೆ ಕಾಗದ ತಲುಪುವಂತೆ ಮಾಡುತ್ತಿದ್ದರು.ಈಗ ಪತ್ರ ತಲುಪಿದ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಮೊಬೈಲ್ ಆ್ಯಪ್ ಇದೆ.ನಾವು ಕಳುಹಿಸಿದ ಅಂಚೆ ಎಲ್ಲಿದೆ ಯಾವಾಗ ತಲುಪುತ್ತದೆ, ಯಾವಾಗ ವಿಳಾಸದಾರರು ತೆಗೆದುಕೊಂಡಿದ್ದಾರೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಬಹುದು.
ಕೆಂಪು ಬಣ್ಣದ ಅಂಚೆ ಪಟ್ಟಿಗೆ
ಅಂಚೆ ಪೆಟ್ಟಿಗೆಗಳ ಬಗ್ಗೆ ಒಂದೆರಡು ಮಾತು.ಭಾರತದಲ್ಲಿ ಹೆಚ್ಚಿಗೆ ಕೆಂಪು ಬಣ್ಣದ ಅಂಚೆ ಪಟ್ಟಿಗೆಗಳನ್ನು ಕಾಣಬಹುದು.ಕೆಂಪು ನೆಲಮಟ್ಟದಲ್ಲಿ ಇರುತ್ತದೆ ಇಲ್ಲ ಗೋಡೆಗೆ ತೂಗಿಸಿರುತ್ತಾರೆ. ಸಿಲಿಂಡರಿನಾಕಾರದ, ಚೌಕಾಕಾರದ ವಿನ್ಯಾಸದಲ್ಲಿ ಅಂಚೆ ಪೆಟ್ಟಿಗೆಗಳು ಇರುತ್ತವೆ. ಹಸಿರು, ನೀಲಿ ಪೆಟ್ಟಿಗೆಗಳಿದ್ದರೂ ಅವುಗಳು ಅಪರೂಪ. ದೇಶ ಅಲ್ಲಿನ ಆಡಳಿತ ವ್ಯವಸ್ಥೆ ಇತ್ಯಾದಿಗಳ ಮೇಲೆ ಅಂಚೆ ಪೆಟ್ಟಿಗೆಯ ಬಣ್ಣ ನಿರ್ಧಾರವಾಗಿರುತ್ತದೆ. ವಿಳಾಸದಾರರಿಗೆ ತಲುಪಿಸಲು ಪಿನ್‌ಕೋಡ್ ನಂಬರ್ ಇರುತ್ತದೆ.ಒಂದೇ ಹೆಸರಿನ ಊರುಗಳಿಂದ ಆಗುವ ಗೊಂದಲಗಳನ್ನು ಪಿನ್‌ಕೋಡ್‌ಗಳು ತಪ್ಪಿಸುತ್ತವೆ. ಸರ್ಕಾರಿ ಅಂಚೆ ವ್ಯವಸ್ಥೆಯನ್ನು ಮೀರಿಸಲೆಂದೇ ಖಾಸಗಿ ಕೊರಿಯರ್ ವ್ಯವಸ್ಥೆ ಇದೆ. ಆದರೆ ಸರಕಾರವೇ ಗ್ರೇಟ್ ಬಿಡಿ!. ಸಾಗರದಾಚೆಗೂ ಭಾರತೀಯ ಅಂಚೆ ಕಚೇರಿ ಇದೆ.
ಅಂದ ಹಾಗೆ ಪತ್ರಲೇಖನ ಪರಿಣಾಮಕಾರಿಯಾಗಿ ಇದ್ದರೆ ಅದರ ಉದ್ದೇಶ ಸಫಲ.ಯಾವುದೇ ಅಂಶ ಅಪೂರ್ಣವಾಗಿಯಾಗಲಿ, ಅರ್ಥ ಸಂದಿಗ್ಧತೆಯಿಂದಲಿ ಕೂಡಿರಬಾರದು.ಬರೆದವರ ಗುರುತು, ಬರೆದ ಸ್ಥಳ, ದಿನಾಂಕ ಯಾರನ್ನು ಉದ್ದೇಶಿಸಿ ಯಾವ ಸಂದರ್ಭದಲ್ಲಿ ಬರೆಯಲಾಗಿದೆ ಎಂಬ ಅಂಶಗಳು ನಿರ್ದಿಷ್ಟವಾಗಿರಬೇಕು.ಸ್ವವಿಳಾಸ, ದಿನಾಂಕ, ಸಂಭೋದನೆ, ವಿಸಯ, ನಿರೂಪಣೆ, ಮುಕ್ತಾಯ ಹಸ್ತಾಕ್ಷರ ಇರಬೇಕು.ಇಲ್ಲಿ ‘ಸಾಮಾನ್ಯ ಪತ್ರಗಳು’ ಅಂದರೆ ವೈಯುಕ್ತಿಕ ಪತ್ರಗಳಿಗೆ ಭಾಷೆ ಹೀಗೆ ಇರಬೇಕು ಎಂಬುದಿಲ್ಲ. ಭಾವುಕರಾಗಿ, ಕೋಪಿಷ್ಠರಾಗಿ, ದುಃಖಿತರಾಗಿ, ಹಾಸ್ಯವಾಗಿ ಕೂಡ ಪತ್ರಗಳನ್ನು ಬರೆಯಬಹುದು.ಆದರೆ ಸರಕಾರಿ ಪತ್ರಗಳು, ವಾಣಿಜ್ಯ ಪತ್ರಗಳಲ್ಲಿ ಭಾವುಕತೆಗೆ ಅವಕಾಶವಿರುವುದಿಲ್ಲ. ಹೇಳುವುದನ್ನು ನಿಖರವಾಗಿ, ನೇರವಾಗಿ ಸರಳವಾಗಿ ಹೇಳಬೇಕು. ‘ಕೈ ಮುಗಿಯುತ್ತೇನೆ’, ‘ಕಾಲು ಹಿಡಿಯುತ್ತೇನೆ’, ‘ಕೆಲಸವಾಗದೆ ಇದ್ದರೆ ಕಾಲು ಮುರಿಯುತ್ತೇವೆ’ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.
ಕರೆಯೋಲೆಗಳು
ಇನ್ನು ಕರೆಯೋಲೆಗಳ ಕಡೆಗೆ ಹೊರಳೋಣ, ಪದವೇ ಎಷ್ಟು ಸೊಗಸಾಗಿದೆ.ನಮ್ಮನ್ನು ಕರೆಯುವ, ಆಹ್ವಾನಿಸುವ ಓಲೆಗಳು ಅಥವಾ ಪತ್ರಗಳು.ಆತ್ಮೀಯ ಕರೆಯೋಲೆ, ಪ್ರೀತಿಯ, ಒಲವಿನ, ಮಮತೆಯ ಇತ್ಯಾದಿ ಪದಗಳೊಂದಿಗೆ ಓಲೆ ಸೇರಿಕೊಂಡಿರುತ್ತದೆ. ಶುಭಾಶಯ ಪತ್ರಗಳು ಒಂದು ಬಗೆ ಶುಭ+ಆಶಯ ಎಷ್ಟು ಚೆನ್ನಾಗಿದೆ ಪದ..! ಮದುವೆಗಳಲ್ಲಿ ಮೊದಲ ಕಾಗದವನ್ನು ಕುಲದೇವರಿಗೆ, ದೇವಸ್ಥಾನಕ್ಕೆ, ಕುಲಗುರುಗಳ ಮಠಕ್ಕೆ ಕೊಡುವುದೆ ಎಲ್ಲಿಗೂ ಕೊಡಲಿಲ್ಲ ಎಂದರೂ ಧರ್ಮಸ್ಥಳ ಮಂಜುನಾಥನಿಗಂತೂ ಹೆಚ್ಚಿನವರು ಮದುವೆ ಕಾಗದ ತಲುಪಿಸುತ್ತಾರೆ.ಈಗ ವಾಟ್ಸಪ್‌ನಲ್ಲಿ ಕರೆಯೋಲೆ ಕಳುಹಿಸುತ್ತಾರೆ. ‘ವಾಟ್ಸಪ್ ಕರಯೋಲೆಗೆ’ ವಾಟ್ಸಪ್ ಹಾರೈಕೆ ಸರಿ ಅಲ್ವ !
ಖಾಸಗಿ ಶುಭ ಕರ‍್ಯಕ್ರಮಗಳಾದ ಮದುವೆ, ನಾಮಕರಣ, ಗೃಹಪ್ರವೇಶ, ಉದ್ದಿಮೆಗಳ ಪ್ರಾರಂಭ, ಶಾಲಾ ವಾರ್ಷಿಕೋತ್ಸವ, ಸರಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ ಮೊದಲಾದವು ಇವೆ. ಶಿವಗಣಾರಾಧನೆಯ, ವೈಕುಂಠ ಸಮಾರಾಧನೆಯ ಆಮಂತ್ರಣ ಪತ್ರಿಕೆ ಮರೆತಿದ್ದಾರೆ ಅಂದುಕೊಳ್ಳಬೇಡಿ ಅದನ್ನೂ ಅವಶ್ಯವಾಗಿ ಸೇರಿಕೊಳ್ಳಿ.ಇಂತಹ ಪತ್ರಗಳಲ್ಲಿ ಕಾರ್ಯಕ್ರಮ ಎಲ್ಲಿ, ಯಾವಾಗ, ಯಾವ ಸ್ಥಳ, ಎಷ್ಟು ಗಂಟೆಗೆ ಭೋಜನ ಇತ್ಯಾದಿಗಳಿಗೇ ಆದ್ಯತೆ, ಅದನ್ನೇ ಕೆಂಪು ಅಕ್ಷರಗಳಲ್ಲಿ ಮುದ್ರಿಸಿರುತ್ತಾರೆ. ನಾವು ಮುಖ್ಯವಾಗಿ ನೋಡೋದು ಅದನ್ನೇ ಅಲ್ವೆ !.
ಹಿಂದೆ ಇಂತಹ ಪತ್ರಿಕೆಗಳಲಿ ವಿಳಾಸ ಬರೆಯಲೆಂದೇ ಮೂರು ನಾಲ್ಕು ಗೆರೆ ಎಳೆದಿರುತ್ತಿದ್ದರು.ಈಗ ಗೆರೆಗಳ ಜಾಗದಲ್ಲಿ ನಿಮ್ಮ ಹೆಸರು ನಮ್ಮ ಮನದಲ್ಲಿದೆ, ನಿಮ್ಮ ಹೆಸರು ಹಸುರಾರಾಗಿದೆ ಇತ್ಯಾದಿ ಇತ್ಯಾದಿ ಬರೆದಿರುತ್ತಾರೆ. ವಿಳಾಸದಾರರ ಹೆಸರೇ ಇರಲ್ಲ. ಎಲ್ಲಿಗೆ ಬಂದು ತಲುಪಿದ್ದೇವೆ ನೋಡಿ!.ಕಡೆ ಪಕ್ಷ ಹೆಸರು ಬರೆಯುವ ವ್ಯವಧಾನ ತಾಳ್ಮೆ ನಮ್ಮಲ್ಲಿ ಮಾಯವಾಗಿದೆ.
ಮುಂದೆ ಪತ್ರದ ಒಕ್ಕಣೆಗೆ ಬರೋಣ ಮಕ್ಕಳನ್ನು ವ್ಯಾಸಂಗಕ್ಕೆ ಕಳುಹಿಸಿದರೆ ಆಗ ಅಪ್ಪ ಗದರಿ ‘ಹೆಚ್ಚು ಹಣ ಖರ್ಚು ಮಾಡಬೇಡ, ‘ಕಾಲಹರಣ ಮಾಡಬೇಡ ಎಂದು ಬರೆದರೆ, ಅಮ್ಮ ಮುದ್ದಿನಿಂದ “ಆರೋಗ್ಯ ಸರಿಯಾಗಿ ನೋಡಿಕೊ, ಕೋಡುಬಳೆ, ರವೆಉಂಡೆ, ನಿಪ್ಪಟ್ಟು ಕಳಿಸುತ್ತೇನೆ’’ ಎಂದು ಬರೆಯುವುದು.ಮಕ್ಕಳು “ಚೆನ್ನಾಗಿ ಓದದೆ ಇದ್ದರೂ “ಚೆನ್ನಾಗಿ ಓದಿ ಕೊಳ್ಳುತ್ತೇನೆ ವ್ಯಾಸಂಗ ಉತ್ತಮವಾಗಿದೆ ಪ್ರವಾಸ ಹೊರಡುತ್ತಿದ್ದೇವೆ ಹಣ ಕಳುಹಿಸಿ” ಎಂದು ಬರೆಯುತ್ತಿದ್ದರು.ಇನ್ನು ಕೆಲವರು ಎಷ್ಟೇ ಕಷ್ಟವಿದ್ದರೂ ನಾನು ‘ಕ್ಷೇಮವಾಗಿದ್ದೇನೆ’, ‘ಸುಖವಾಗಿದ್ದೇನೆ’ ಎಂದು ಬರೆಯುವುದಿತ್ತು.ಅತ್ತೆ ಮನೆ ಸೊಸೆಯಾದರೆ ಅದು ದೂರುಗಳ ಸರಪಳಿಯೇ ಸರಿ.ದೂರದಲ್ಲಿ ಸೈನ್ಯದಲ್ಲಿದದ ಸೈನಿಕರುಗಳಿಗೆ ಮನೋಸ್ಥೈರ್ಯ ತುಂಬಲು ಪತ್ರಗಳೇ ಸಂಜೀವಿನಿಯಾಗಿರುತ್ತಿದ್ದವು. ಈಗ ವೀಡಿಯೊ ಕಾಲ್ ಮಾಡಿ ಮಾತನಾಡುತ್ತಾರೆ ಬಿಡಿ.
ಕೆಲವರಿಗೆ ಕೆಟ್ಟ ಚಾಳಿ, ಅದೇನೆಂದರೆ ಬೇರೆಯವರ ಪತ್ರಗಳನ್ನು ಓದುವುದು, ಪತ್ರಗಳು ಹರಿದು ಚಿಂದಿಯಾಗಿ ಕಸದ ಬುಟ್ಟಿಯಲ್ಲಿ ಬಿದ್ದಿದ್ದರೂ ಅದನ್ನೆಲ್ಲಾ ಒಟ್ಟುಗೂಡಿಸಿ ಓದುವುದು. ಕೆಲವರು ಪತ್ರಗಳನ್ನು ಮುಚ್ಚಿಡುತ್ತಾರೆ.ಸನ್ನಿವೇಶಗಳು ಕುತ್ತಿಗೆಗೆ ಬಂದಾಗ ಹೇಳಿ ಒಳ್ಳೆಯವರಾಗೂ ನೀಚರಿಗೇನೂ ಕಡಿಮೆಯಲ್ಲ ಬಿಡಿ. ಇನ್ನು ಕೆಲವರು ಮೊದಲು ಅವರು ಓದಿದ ನಂತರ ಬೇರೆಯವರಿಗೆ ಕೊಡುವುದು ಕೆಲವೊಮ್ಮೆ ವಿಷಯ ಕುತೂಹಲಕ್ಕೆ ಪತ್ರ ಓದುವ ಮುನ್ನವೇ ಪತ್ರ ಛಿದ್ರವಾಗುವುದೂ ಇತ್ತೆನ್ನಿ. ಎಸ್.ಎಂ.ಎಸ್. ಯುಗ ಬರುವುದಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಖಾಸಗಿ ಶಾಲೆಗಳು ಅಂಚೆಯ ಮೂಲಕ ಕಳುಹಿಸುತ್ತಿತ್ತು. ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಅಂಚೆಯಣ್ಣನನ್ನು ಪುಸಲಾಯಿಸಿ “ನಾವೇ ಮನೆಗೆ ಕೊಡುತ್ತೇವೆ” ಎಂದು ಅದಕ್ಕೊಂದು ಗತಿ ಕಾಣಿಸಿಬಿಡುತ್ತಿದ್ದರು.
ಸುಳ್ಳು ಪತ್ರಗಳು
ಅತ್ಯಂತ ಸುಳ್ಳು ಪತ್ರಗಳು ಎಂದರೆ ಕೆಲವೊಮ್ಮೆ ಪ್ರೇಮಪತ್ರಗಳು.ನಿಜವಾದ ಪ್ರೀತಿಯಿಂದ ಪ್ರೇಮ ಪತ್ರಗಳನ್ನು ಬರೆದ ಓದುಗರಿದ್ದರೆ ಸಿಟ್ಟಾಗಬೇಡಿ ನಿಮ್ಮ ಪತ್ರಗಳ ವಿಚಾರಕ್ಕೆ ನಾನು ಬರಲಾರೆ ನಿಮ್ಮ ಪ್ರೀತಿ ಚಿರಾಯುವಾಗಿರಲಿ.ನಾನು ಹೇಳುತ್ತಿರುವುದು ಡಮ್ಮಿ ಪತ್ರಗಳ ಬಗ್ಗೆ. ಬೇರೆಯವರಿಗೆ ಅರ್ಥವಾಗಬಾರದೆಂದು ಉಲ್ಟ ಬರೆಯುವುದು, ಕ್ಯಾಡಲ್‌ನ ಪ್ರಯೋಗ ಏನೇನೋ? ಬರೆದವರಿಗೆ ಗೊತ್ತಿರುತ್ತೆ ಬಿಡಿ! ಆದರೆ ಪೋಷಕರಿಗೆ ಪತ್ರಗಳು ಸಿಕ್ಕಿದರಂತೂ ಊರು ಹಬ್ಬವಾಗುತ್ತಿತ್ತು.ಇನ್ನೊಂದು ಜಾತಿಯ ಸುಳ್ಳುಪತ್ರವೆಂದರೆ ರಜಾ ಅರ್ಜಿ. ಯಾವುದೇ ಶುಭಸಮಾರಂಭಕ್ಕೆ ಹೋಗಲು ಇಲ್ಲದ ರೋಗ ಬರಿಸಿಕೊಂಡು ಹೋಗುವುದು.
ಮತ್ತೆ ಅತ್ಯಂತ ಅಪಾಯಕಾರಿ ಪತ್ರಗಳೆಂದರೆ ಅನಾಮಧೇಯ ಪತ್ರಗಳು.ಒಂದು ರೀತಿಯ ಮನೆಹಾಳು ಪತ್ರಗಳು.ಆಗುವ ಮದುವೆಗಳಿಗೆ ವಿಘ್ನ ತರಲು ಇಲ್ಲ ಬೇರೆಯವರ ಬಗ್ಗೆ ಈರ್ಷೆಯಿಂದ, ಅವರ ಏಳಿಗೆ ಸಹಿಸದೆ ಬರೆಯುವುದು.ಆನಂತರ ತಮಾಷೆ ನೋಡುವುದು ವಿಕೃತಿಯ ಪರಮಾವಧಿ. ಇವುಗಳನ್ನು ಹೇಡಿಗಳು ಬರೆಯುತ್ತಾರೆ ಎನ್ನಬಹುದೋ?ಗೊತ್ತಿಲ್ಲ.
ನನಗೀಗ ಹೊಳೆಯುತ್ತಿರುವುದು ಹಿರಿಯರು ಹೇಳಿದಂತೆ ಪತ್ರಗಳನ್ನು ಬರೆಯುತ್ತಿದ್ದ ಸನ್ನಿವೇಶ. ಅವರು ಹೇಳಿದಂತೆಯೇ ನಾವುಗಳು ಬರೆಯಬೇಕಾಗಿತ್ತು.ವ್ಯಾಕರಣ ದೋಷವಾದರೂ, ಪುನರುಕ್ತಿಗಳಿದರೂ ಮಾತನಾಡದೆ ಬರೆದು ಮುಗಿಸಬೇಕಾಗಿತ್ತು.ಸಾಂಪ್ರದಾಯಿಕವಾಗಿ ಸ್ವಸ್ತಿಶ್ರೀ ಇಲ್ಲ ಕ್ಷೇಮ, ಶ್ರೀ, ದಿನಾಂಕ, ಊರಿನ ಹೆಸರು, ತೀರ್ಥರೂಪು, ಎಲ್ಲರೂ ಕ್ಷೇಮ, ನಿಮ್ಮ ಕ್ಷೇಮಕ್ಕೆ ಕಾಗದ ಬರೆಯಿರಿ ಇತ್ಯಾದಿ ಇತ್ಯಾದಿ ಬರೆದು ಇನ್ನೇನು ಹೆಚ್ಚಿನ ವಿಷಯವಿಲ್ಲ ಇದ್ದರೆ ಮುಂದಿನ ಕಾಗದದಲ್ಲಿ ಎಂದು ಬರೆದು ಸಹಿ ಮಾಡಲು ಕೊಡಬೇಕಾಗಿತ್ತು.ಬಹಳ ಕಷ್ಟದ ಕೆಲಸವಾಗಿತ್ತು ಬಿಡಿ.
ಮಕ್ಕಳು ನಮಗೂ ಪತ್ರ ಬರೆಯಲು ಬರುತ್ತದೆ ಎಂಬ ಅಹಂನಲ್ಲಿ ತೀರ್ಥರೂಪುರವರಲ್ಲಿ ಮಾಡುವ ಆಶೀರ್ವಾದಗಳು ಬೇಡುವ ನಮಸ್ಕಾರಗಳು ಇಲ್ಲ ಪೂಜ್ಯ ‘ಪಿತಾಜಿ’ ಎನ್ನುವುದರ ಬದಲು ‘ಪಿಶಾಚಿ’ ಎಂದು ಬರೆದು ಇಂತಿ ತಮ್ಮ ವಿಶ್ವಾಸಿ ಎಂದು ಬರೆದು ಕಳುಹಿಸಿದರೆ ತಂದೆ-ತಾಯಿಗಳ ಪಾಡು ಯೋಚಿಸಬೇಕಾದ್ದೆ.ಪತ್ರಲೇಖನವನ್ನು ಸಂಭ್ರಮಿಸಬೇಕೋ ಪತ್ರಲೇಖನ ಸರಿಪಡಿಸಬೇಕೋ ತಿಳಿಯುತ್ತಿರಲಿಲ್ಲ. ಎದುರು ಸಿಕ್ಕಾಗ ತಲೆಗೊಂದು ಮೊಟಕುವುದು ಅಷ್ಟೇ. ನಿಮಗೂ ಇಂತಹ ಕೆಲ ವಿಚಾರ ನಿನಪಾಗುತ್ತಿರಬಹುದು. ಅಲ್ವ! ಕೆಲ ಬುದ್ಧಿವಂತರು ಪತ್ರ ಬರೆದಿದ್ದೇವೆ ಎಂಬ ಹೆಚ್ಚುಗಾರಿಕೆಯಲ್ಲಿ ‘ಇಂದ’ ವಿಳಾಸವನ್ನು ‘ಗೆ’ ವಿಳಾಸವನ್ನು ಅದಲು ಬದಲು ಮಾಡುತ್ತಿದ್ದುದು ನೆನಪಿದೆ.
ಕೆಲವರಿಗೆ ಪತ್ರದಲ್ಲಿರುವ ತಪ್ಪುಗಳನ್ನು ಹೇಳಿಕೊಂಡು ನಗುವುದೇ ಖಯಾಲಿಯಾಗಿರುತ್ತಿತ್ತು, ಈಗ ಅವಕಾಶವೇ ಇಲ್ಲ!.ಕಾಗದಗಳನ್ನು ಬರೆಯುತ್ತಿದ್ದ ಆ ಕಾಲವೇ ಚೆನ್ನಾಗಿತ್ತು.ಪತ್ರಲೇಖನವೂ ಒಂದು ಕಲೆಯಲ್ಲವೆ, ಭಾವನಾತ್ಮಕತೆ, ಸೃಜಶೀಲತೆ ಪತ್ರಗಳಲ್ಲಿತ್ತು.ಎಷ್ಟೋ ದಿನಗಳವರೆಗೆ ಜೋಪಾನವಾಗಿ ಇಡುತ್ತಿದ್ದೆವು.ಈಗ ಫೋನ್ ಮೆಮೊರಿ ತುಂಬಿ ಹೋಗುತ್ತದೆ, ಸಿಸ್ಟಮ್ ಹ್ಯಾಂಗ್ ಆಗುತ್ತದೆ ಎಂದು ನಿರ್ಧಾಕ್ಷಿಣ್ಯವಾಗಿ ಡಿಲೀಟ್ ಮಾಡುತ್ತೇವೆ. ಅಂದಿನ ದಿನಮಾನಗಳಲ್ಲಿ ಕಾಗೆಗಳು ಮನೆಗಳ ಮೇಲೆ ಬಂದು ಕೂಗಿದರೆ ಕಡೇ ಪಕ್ಷ ಕಾಗದವಾದರೂ ಬರುವೆ ಎಂದು ಹೇಳೋರು. ಅಂದರೆ ಕಾಗದಕ್ಕೂ ಅಷ್ಟು ಬೆಲೆಯಿತ್ತು !ಕಾಗದ ಬರೆಯಲು ಅವರಿಗೆ ಬಾರದೆ ಇದ್ದರೂ ಮತ್ತೊಬ್ಬರಲ್ಲಿ ಬರೆಸುವವರು ಇದ್ದರು, ಈಗ ಬರೆಯಲು ಬಂದರೂ ಟೈಪ್ ಮಾಡುತ್ತೇವೆ. ಕೆಲವರು ಅದೂ ಮಾಡಲ್ಲ ಧ್ವನಿ ಸಂದೇಶ ರವಾನಿಸುತ್ತಾರೆ. ನಾವು ಹೇಳಿದಂತೆ ಟೈಪ್ ಮಾಡಲು ಆ್ಯಪ್ಗಳು ಬಂದಿವೆ.ಒಮ್ಮೊಮ್ಮೆ ಕೆಲವರಿಗೆ ಅನಿವಾರ್ಯವಾಗಿ ಪತ್ರಗಳನ್ನು ಬರೆಯಲೇಬೇಕೆಂದಾಗ ನಕಲು ಮಾಡುವ ಚಾಳಿ. ಹಾಗೆ ನಕಲು ಮಾಡುವಾಗ ಎಚ್ಚರದಿಂದ ಇರಬೇಕು. ಇಲ್ಲ ಅಭಾಸಗಳು ಖಂಡಿತ. ಹೆರಿಗೆ ರಜೆ ಹಾಕುವ ಮಹಿಳೆಯ ರಜಾ ಅರ್ಜಿಯನ್ನು ಪುರುಷನೊಬ್ಬ ನಕಲು ಮಾಡಿದರೆ ಹೇಗೆ ?. ಹೌದು ತಾನೆ !
ಇಲ್ಲಿಯವರಗೂ ಬಹುಪಾಲು ಅಂಚೆ ಪೆಟ್ಟಿಗೆಗೆ ಹಾಕುವ ಪತ್ರಗಳ ಸಮಾಚಾರವಾಯಿತು. ಅಂಚೆ ಪೆಟ್ಟಿಗೆಗೆ ಹಾಕದ ಹಾಕಲಾರದ ಅನೇಕ ಪತ್ರಗಳೂ ಇವೆ. ಇಂತಹ ಪತ್ರಗಳನ್ನು ಯಾರು ಬರೆಯುತ್ತಾರೆ ? ಎಂದರೆ ಬರೆಯೋದಿಲ್ಲವೇ ?ಮನೆ ಬಿಟ್ಟು ಹೋಗುವವರು ಬರೆಯುತ್ತಾರೆ.“ಏನೋ ತಪ್ಪಾಗಿದೆ” “ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ” ಎಂದು ಬರೆದು ಮೇಜಿನ ಮೇಲೋ ಬಾಗಿಲಿಗೋ ಸಿಕ್ಕಿಸಿ ಹೊರಟಿರುತ್ತಾರೆ.
ಜನಜಂಗುಳಿಯಿದ್ದ ಸಮಾರಂಭಗಳಲ್ಲಿ ತಮಾಷೆ ನೋಡಲೆಂದೇ ಹೇಗೋ ಬೆದರಿಕೆ ಪತ್ರಗಳನ್ನು ರವಾನಿಸುವುದು ಇದೆ. ಆತ್ಯಹತ್ಯೆ ಮಾಡಿಕೊಳ್ಳುವವರು “ನನ್ನ ಸಾವಿಗೆ ನಾನೇ ಕಾರಣ” ಎಂದೋ “ಇಂತಹವರೆ ಕಾರಣರು ಅವರಿಗೆ ಶಿಕ್ಷೆ ಕೊಡಿ” ಎಂದೋ ಬರೆದಿಡುವ ಪತ್ರಗಳು ಸಾಮಾನ್ಯ.
ಒಂದಷ್ಟೇ ವರ್ಷಗಳ ಹಿಂದೆ ಫೋನ್ ಇಲ್ಲದ ಕಾಲದಲ್ಲಿ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗಬೇಕಾದಲ್ಲಿ ಮನೆಗೆ ಬೇಗ ಬರುವವರಿಗೆ ಸಂದೇಶ ತಲುಪಿಸಲು ಪತ್ರಗಳನ್ನು ಬರೆದು ಗಂಡಸರಿಗಾದರೆ ಟಿ.ವಿ. ಬಳಿ ಹೆಂಗಸರಿಗಾದರೆ ಡ್ರೆಸ್ಸಿಂಗ್ ಟೇಬಲ್ ಬಳಿ ಇಟ್ಟು ಹೋಗುತ್ತಿದ್ದರು. ತುಂಬಾ ಮರೆಗುಳಿಗಳಾಗಿದ್ದವರೂ ತಮಗೆ ತಾವೇ ದಿಕ್ಸೂಚಿ ಎಂಬಂತೆ ಪತ್ರಗಳನ್ನು ಇಲ್ಲ ಟಿಪ್ಪಣಿಗಳನ್ನು ಬರೆದಿಡುತ್ತಿದ್ದರು. ಈಗೆಲ್ಲ ಗೂಗಲ್ ಕ್ಯಾಲೆಂಡರ್‌ನಲ್ಲಿ ರಿಮೈಂಡರ್‌ಗೆ ಹಾಕುವುದಲ್ವೆ !
ಈಗ ಮೊಬೈಲ್ ಮಯ
ತರಗತಿಗಳನ್ನು ಅಧ್ಯಾಪಕರು ಪಾಠ ಮಾಡುವಾಗ ಮುಂದೆ ಮಾಡಬೇಕಾದ ಕ್ಲಾಸ್ ಬಂಕ್ಕ್ ಯೋಜನೆಗೆ ಸಂದೇಶಗಳು ಬೆಂಚಿಂದ ಬೆಂಚಿಗೆ ರೂಪಾಂತರಗಳಲ್ಲಿ ರವಾನೆಯಾಗುತ್ತಿದ್ದವು. ಅತೀ ಬುದ್ಧಿವಂತರೂ ಅಧ್ಯಾಪಕರಿಗೆ ಕಾಟ ಕೊಡಲು ಅಸಂಬದ್ಧ ಪ್ರಶ್ನೆಗಳನ್ನು ಚೀಟಿ ಸಂದೇಶಗಳ ಮೂಲಕ ಬೇರೆಯವರಿಂದ ಕೇಳಿಸುವುದೆಲ್ಲ ಹಳೆಯದು. ಆದರೆ ಅಧ್ಯಾಪಕರು ವಿದ್ಯಾರ್ಥಿಗಳಿಗಿಂತ ಬುದ್ಧಿವಂತರಾಗಿ ಬೆಲ್ ಆಗುವ ಸಮಯಕ್ಕೆ ಪ್ರಶ್ನೆಗಳನ್ನು ಪಡೆದು ಈಗ ಸಮಯವಾಯಿತು ನಾಳಿನ ತರಗತಿಯಲ್ಲಿ ಹೇಳುತ್ತೇನೆ ಎಂದು ಮರುದಿನ ತಿಳಿದುಕೊಂದು ಬಂದು ಹೇಳುತ್ತಿದ್ದರು. ಈಗ ಅಂತಹ ಸಂದೇಶಗಳೆಲ್ಲ ಮೊಬೈಲ್‌ನಲ್ಲಿ ರವಾನೆಯಾಗುತ್ತಿರುತ್ತವೆ. ಸೈಲೆಂಟ್ ಮೋಡ್‌ನಲ್ಲಿ ಇರಿಸಿಕೊಂಡ ವಿದ್ಯಾರ್ಥಿಗಳ ಮೊಬೈಲ್‌ನ ವೈಬರೇಟರ್ ಸದ್ದಿಗೆ ಅಧ್ಯಾಪಕರು ಅಲರ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿಗಳು ಏನೂ ಗೊತ್ತಿಲ್ಲವೆಂಬಂತೆ ಬಂಡೆಕಲ್ಲಿನಂತೆ ಕುಳಿತುಕೊಂಡಿರುತ್ತಾರೆ.ಬೋರ್ಡಿಂಗ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳದ್ದೇ ಬೇರೆ ಕತೆ, ಎಲ್ಲಾ ಕಾಗದಗಳನ್ನು ಶಾಲೆಯವರು ಮೊದಲು ಓದುತ್ತಿದ್ದರು. ಹಾಗಿದ್ದಾಗ ಮೊದಲು ಶಾಲೆಯನ್ನು ಶಾಲೆಯವರನ್ನು ಹೊಗಳೆ ಬರೆದು ಉಳಿದದ್ದನ್ನು ಸೇರಿಸಬೇಕಾಗಿತ್ತು.
ಇನ್ನು ಹಲವು ಬಗೆಯ ಪತ್ರಗಳಿವೆ. ಬೇಡಿಕೆಗಳನ್ನು ಈಡೇರಿಸುವಂತೆ, ‘ನನ್ನ ಗಂಡನಿಗೆ ಬುದ್ಧಿ ಕಲಿಸು’ ಎಂದೋ, “ಇಂಥ ಹುಡುಗಿಯ ಇಲ್ಲ ಹುಡುಗನ ಜೊತೆ ಮದುವೆ ಮಾಡಿಸು ನಾನು ಇಂತಹದ್ದನ್ನು ಕೊಡುತ್ತೇನೆ” ಎಂದು ವ್ಯವಹಾರ ಕುದುರಿಸಿ ದೇವಸ್ಥಾನದ ಹುಂಡಿಗಳಿಗೆ ಹಾಕುವ ಪತ್ರಗಳು ಇವೆ. ಮತ ಪೆಟ್ಟಿಗೆಯಲ್ಲಿ ಹಾಕುವ ಟೀಕಾಪತ್ರಗಳು, ಗಲಾಟೆ ಮಾಡಬಾರದು, ನೋಟ್ಸ್ ಎಲ್ಲಾ ಬರೆದು ತೋರಿಸಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಂದ ಬರೆಸಿಕೊಳ್ಳುವ ತಪ್ಪೊಪ್ಪಿಗೆ ಪತ್ರ, ಕ್ಷಮಾಪಣಾ ಪತ್ರಗಳೂ ಇವೆ. ಕ್ಷಮೆ ಕೋರಿ ವಿದ್ಯಾರ್ಥಿ ಪತ್ರ ಬರೆಯಲ್ಲ ನಮಗೆ ಕ್ಷೇಮ ತೋರಿ ಎಂದು ಬರೆಯುತ್ತಾರೆ. ಇನ್ನೊಂದು ಪೋಲಿಸ್ ಠಾಣೆಯಲ್ಲಿ ಇನ್ನು ಮುಂದೆ ಯಾರ ತಂಟೆ-ತಕರಾರಿಗೆ ಹೋಗುವುದಿಲ್ಲವೆಂದು ಬರೆಸುವೆ ಮುಚ್ಚಳಿಕೆಯ ಪತ್ರ.ಈಗ ಇಂತಹ ಪತ್ರಗಳಿಗೆ ಬದಲಾಗಿ ಅವರ ತಪ್ಪೊಪ್ಪಿಗೆ, ಹೇಳಿಕೆಗಳನ್ನು ಆಡಿಯೋ-ವೀಡಿಯೋ ಮಾಡಿಕೊಳ್ಳುತ್ತಾರೆ ಬಿಡಿ.
ಬದಲಾದ ದಿನಮಾನಗಳಲ್ಲಿ ಅಂಚೆ ವ್ಯವಸ್ಥೆ ತನ್ನದೇ ಆದ ಛಾಪು ಮೂಡಿಸಿದೆ ಆದರೆ ಅದಕ್ಕೂ ವಿಘ್ನ ಲಾಕ್ಡೌನ್ ಕಾಲದಲ್ಲಿ ಆಗಿತ್ತು. ಇದೀಗ ಅನ್ಲಾಕ್ ಪ್ರಕ್ರಿಯೆಯಿಂದ ಚಟುವಟಿಕೆಗಳು ಗರಿಗೆದರಿವೆ.ಒಟ್ಟಾರೆಯಾಗಿ ಈ ಓಲೆ ಪತ್ರ, ಕಾಗದ ಏನಾದರೂ ಕರೆಯಿರಿ ನಮ್ಮ ಸಂವೇದನೆಯ ಸಂವಾಹಕ ತಡ ಮಾಡಬೇಡಿ ನಿಮ್ಮ ಸಂವೇದನೆಯನ್ನು ಪತ್ರದ ಮೂಲಕ ನಿಮ್ಮ ಇಷ್ಟ ಮಿತ್ರರಿಗೆ ಸಂವಹಿಸಿ. ಪತ್ರಗಳು ಇತಿಹಾಸ ಹೇಳುತ್ತವೆ. ಪತ್ರ ಮುಖೇನ ತಾವೂ ಇತಿಹಾಸ ಸೃಜಿಸಿ.
ಸುಮಾ ವೀಣಾ
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.‘’ನಲವಿನ ನಾಲಗೆ’”ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.
ಇದರೊಂದಿಗೆ ಪ್ರಕಟವಾಗಿರುವ ಚಿತ್ರ ಬರೆದವರು ಕಿರಣ ಆರ್ . ಅಂಚೆ ಕಾರ್ಡನಲ್ಲೇ ಈ ಚಿತ್ರವನ್ನು ಅವರು ರಚಿಸಿದ್ದಾರೆ
ಬಾಲ್ಯದಲ್ಲಿ ಎಲ್ಲಿಗೆ ಹೋಗ್ಬೇಕಂದ್ರೂ ಬರಿಗಾಲಿನಲ್ಲೇ ಹೋಗುತ್ತಿದ್ದೆವು. ಆಗ ಟಾರು ರಸ್ತೆಗಳೂ ಕಡಿಮೆಯೇ ಕಲ್ಲು ಮುಳ್ಳಿನ ಕಾಲುದಾರಿಗಳಲ್ಲೇ ನಮ್ಮ ಸಂಚಾರ ಆಟ ಪಾಟ ಎಲ್ಲವೂ ಆಗಿತ್ತು .
ವಾರದಲ್ಲಿ ಎರಡು ಬಾರಿಯಾದರೂ ಮುಳ್ಳು ಚುಚ್ಚಿಸಿಕೊಂಡು ಕುಂಟುತ್ತಿದ್ದೆವು . ಕಾಲಿಗೆ ಚುಚ್ಚಿದ್ದ ಆ ಮುಳ್ಳನ್ನು ಹುಡುಕುವ ಮೊದಲು ನಾವು ಹುಡುಕುತ್ತಿದ್ದುದ್ದೇ ‘ಪಿನ್ನನ್ನು’ .
ಮೊದಲಿಗೆ ನಾವೇ ಪಿನ್ನಿನ ಮೂಲಕ ಮುಳ್ಳನ್ನು ತೆಗೆಯಲು ಪ್ರಯತ್ನ ಪಟ್ಟು ಸಾಧ್ಯವಾಗದಿದ್ದಾಗ ಹಿರಿಯರ ಕೈಗೆ ನಮ್ಮ ಕಾಲನ್ನು ಒಪ್ಪಿಸುತ್ತಿದ್ದೆವು . ಅವರು ಒಂದಷ್ಟು ಬೈದು ಮುಳ್ಳನ್ನು ತೆಗೆದ ನಂತರ ನಮಗೆ ಜೋಪಾನವಾಗಿರು ಅನ್ನುವುದಕ್ಕಿಂತಾ ಹೆಚ್ಚಾಗಿ ಪಿನ್ನನ್ನು ಜೋಪಾನವಾಗಿಡುವಂತೆ ಹೇಳುತ್ತಿದ್ದರು . ಹೊನ್ನಿಗಿರುವಷ್ಟು ಬೆಲೆ ಪಿನ್ನಿಗಿತ್ತು.ಹಾಗಂತ ಬೆಲೆಯಲ್ಲಲ್ಲ ಆವಶ್ಯಕತೆಯಲ್ಲಿ .
ಪಿನ್ನಿನ ಬಗ್ಗೆ ಪಿನ್ ಟು ಪಿನ್ ಆಗಿ ಬರೆಯಲು ಕಾರಣ ಪಿನ್ನಿನ ಜೊತೆ ನಮಗಿರುವ ದಶಕಗಳಷ್ಟು ಹಳೆಯದಾದ ಸ್ನೇಹ ಸಂಬಂಧ.
ನಮ್ಮ ಹವಾಯಿ ಚಪ್ಪಲಿಯು ಕಿತ್ತುಬಂದಾಗ ಇದನ್ನು ಪಟ್ಟಿಗೂ ಚಪ್ಪಲಿಗೂ ನಡುವೆ ಸಿಕ್ಕಿಸಿ ನಡೆಯುವಂತೆ ಮಾಡುತ್ತಿತ್ತು .ಪ್ರತೀ ಬಾರಿ ಅಂಗಿಗೆ ಗುಂಡಿ ಇಲ್ಲವಾದಾಗ ಇದನ್ನು ಬಳಸಿದ್ದೇವೆ . ಚಡ್ಡೀ ಹುಕ್ಸ್ ಕಿತ್ತೋದಾಗ ಚಡ್ಡೀನ ಸೊಂಟದಲ್ಲಿ ನಿಲ್ಲುವಂತೆ ಮಾಡಿ ನಮ್ಮ ಮರ್ಯಾದೆ ಕಾಪಾಡಿದ್ದು ಇದೇ ಪಿನ್ನು .
ಪ್ಯಾಂಟಿನ ಜಿಪ್ಪಾಗಲಿ ಬ್ಯಾಗಿನ ಜಿಪ್ಪಾಗಲೀ ಹರಿದು ಕೆಲಸ ಮಾಡದಿದ್ದಾಗ ಕೆಲಸಕ್ಕೆ ಬರುತ್ತಿದ್ದುದ್ದು ಇದೇ ಪಿನ್ನು . ಮದ್ರಾಸ್ ಐ ಎಂಬ ಕಣ್ಣಿನ ಸೋಂಕಾದಾಗ ಆ ನಾಲ್ಕಾಣೆಯ ಟ್ಯೂಬನ್ನು ತೆರೆಯಲು ಆವಶ್ಯಕವಾಗ್ತಿದ್ದಿದ್ದು ಈ ಪಿನ್ನು .
ಮನೆಮಂದಿಯೆಲ್ಲಾ ಉಪಯೋಗಿಸುತ್ತಿದ್ದ ಬಾಚಣಿಗೆಯ ಹಲ್ಲುಗಳ ನಡುವಿನ ಕೊಳೆಯನ್ನು ತೆಗೆಯಲೂ ಇದೇ ಬೇಕಾಗಿತ್ತು .
ಗಾತ್ರದಲ್ಲಿ ಸಣ್ಣದೇ ಆದರೂ ಇದರ ಪಾತ್ರ ಮಾತ್ರ ದೊಡ್ಡದು .ಆಪದ್ಭಾಂಧವನಾಗಿ , ಅಮ್ಮನ ಅಸಿಸ್ಟೆಂಟ್ ಆಗಿ , ಟೈಲರ್ರಾಗಿ , ಡಾಕ್ಟರ್ ಆಗಿ , ಕ್ಲೀನರ್ ಆಗಿ , ರಕ್ಷಕನಾಗಿ …. ನಮ್ಮ ಬಾಲ್ಯವನ್ನು ಕಾಪಾಡಿ ದಾಟಿಸಿದ ಕೆಳಮಧ್ಯಮವರ್ಗದ ಬಹುಪಯೋಗಿ “ಆಯುಧ” ಈ ಪಿನ್ನು .
ಆವತ್ತಿನಿಂದ ಇವತ್ತಿಗೂ ಮಹಿಳೆಯರ ನಂಬಿಕೆಯನ್ನು ಬಲವಾಗಿ ಹಿಡಿದಿಟ್ಟಿಕೊಂಡಿದೆ ಅಂದ್ರೆ ಸುಳ್ಳಲ್ಲ .
ಜಗತ್ತಿನ ಸಣ್ಣ ದೊಡ್ಡ ಫ್ಯಾಷನ್ ಷೋಗಳಲ್ಲಿ ಲಲನೆಯರ ಮಾರ್ಜಾಲ ನಡಿಗೆಯ ಬೆನ್ನಿಗೆ ಈ ಪಿನ್ನಿದೆ .
ಇದರ ಇನ್ನೊಂದು ವಿಶೇಷವೇನೆಂದರೆ ಮನೆಯ ಎಲ್ಲೋ ಯಾವುದೋ ಒಂದು ಮೂಲೆಯಲ್ಲಿ ಇದ್ದಂತೆ ಭಾಸವಾಗುತ್ತಿದ್ದರೂ ಇದು ಇರುತ್ತಿದ್ದದ್ದೇ ಅಮ್ಮನ ಕತ್ತಲ್ಲಿ. ನಮ್ಮನ್ನ ಸೇಫ್ಟಿಯಾಗಿ ನೋಡಿಕೊಳ್ಳುವ ಅಮ್ಮ ಸೇಫ್ಟಿಯಾಗಿ ಅದನ್ನು ಇಟ್ಟಿರುತ್ತಿದ್ದಳು .
ಜಗತ್ತಿನಲ್ಲಿ ಈ ಸೇಫ್ಟಿ ಪಿನ್ನನ್ನು ಯಾರು ಕಂಡುಹಿಡಿದ್ನೋ ಏನೋ ಆ ಪುಣ್ಯಾತ್ಮನಿಗೆ ಅನಂತಾನಂತ ಧನ್ಯವಾದಗಳು.
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ದೆಹಲಿಯಿಂದ ಬೆಂಗಳೂರಿಗೆ ಧಾವಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ -6E 122- ಪ್ರಯಾಣಿಕರೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ವರದಿಯಾಗಿದೆ. ಈ ವಿಮಾನದ ಕ್ಯಾಪ್ಟನ್ ವಿಂಗ್ ಕಮಾಂಡರ್ ಸಂಜಯ್ ಮಿಶ್ರಾ ಅವರು ಈ ಘಟನೆಯ ವಿವರಗಳನ್ನು ಅವರ ಒಂದು ಕಾಲದ ಸಹೋದ್ಯೋಗಿ ಮಧುಸೂಧನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪೂರ್ಣ ಪಾಠವನ್ನು ಕನ್ನಡಪ್ರೆಸ್. ಕಾಮ್ ಇಲ್ಲಿ ನೀಡಿದೆ.
ದೆಹಲಿಯಿಂದ ನಮ್ಮ ವಿಮಾನ ಆಗಷ್ಟೆ ಹೊರಟಿತ್ತು. ವಾತಾವರಣವೂ ತಿಳಿಯಾಗಿತ್ತು. ಮುಸ್ಸಂಜೆಯ ಹೊತ್ತು. ಕ್ಯಾಬಿನ್ ಕ್ರ್ಯೂ ಒಬ್ಬರು ನನ್ನ ಬಳಿ ಧಾವಿಸಿ ಬಂದರು. ಅವರ ಧ್ವನಿಯಲ್ಲಿ ಸ್ವಲ್ಪ ಆತಂಕವಿತ್ತು.
“ಕ್ಯಾಪ್ಟನ್….. ಸೀಟ್ 1ಸಿಯಲ್ಲಿ ರುವ ಮಹಿಳೆಯೊಬ್ಬರ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿದೆ. ಡಿಸ್ ಕಂಫರ್ಟ್ ಆಗಿದ್ದಾರೆ. ಬೆಳಿಗ್ಗೆಯಿಂದ ಆಕೆ ಏನು ತಿಂದಂತೆ ಕಾಣುತ್ತಿಲ್ಲ” ಎಂದರು. ಆಕೆಗೆ ಏನಾದರು ತಿನ್ನಲು ಕೊಡಲು ಹೇಳಿದೆ. ಆದರೂ ಆಕೆಯ ಪರಿಸ್ಥಿತಿ ಸುಧಾರಿಸಿದಂತೆ ಕಾಣಲಿಲ್ಲ. ಆಕೆಯ ಸಂಕಟ ಹೆಚ್ಚಾಯಿತು. ಈ ಮಧ್ಯೆ ಹೊಟ್ಟೆ ನೋವು ಕೂಡ ಆರಂಭವಾಯಿತು.ಆಕೆ ಗರ್ಭಿಣಿ ಎಂದು ಗೊತ್ತಾಯಿತು. ಇನ್ನು ತಡಮಾಡುವುದು ಬೇಡವೆಂದು ಕೂಡಲೆ ವಿಮಾನದಲ್ಲಿ ಯಾರಾದರು ವೈದ್ಯರು ಇದ್ದಾರ ಎಂದು ಅನೌನ್ಸ್ ಮಾಡಲು ಹೇಳಿದೆ.
ನಮ್ಮ ಅದೃಷ್ಟ ಇಬ್ಬರು ವೈದ್ಯರು ವಿಮಾನದ ಪ್ರಯಾಣಿಕರಾಗಿದ್ದರು. ಒಬ್ಬರು ರಿಯಾದ್ ನಲ್ಲಿ ಪ್ರಾಸ್ಲಿಕ್ ಸರ್ಜನ್ ಆಗಿರುವ ಡಾ. ನಾಗರಾಜ್ ಮತ್ತು ಇನ್ನೊಬ್ಬರು ಕ್ಲೌಡ್ ನೈನ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶೈಲಜಾ.
ಈ ವೇಳೆಗೆ ನಮ್ಮ ವಿಮಾನ ಜೈಪುರದಲ್ಲಿತ್ತು. FL 390 ಆಲ್ಟಿಟ್ಯೂಡ್ ಲ್ಲಿ ಹಾರಾಡುತ್ತಿತ್ತು. ಆರಂಭದಲ್ಲಿ ಆ ಪ್ರಯಾಣಿಕರಿಗೆ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಎಂದು ವೈದ್ಯರು ಭಾವಿಸಿದರು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಆಕೆಯ ನೋವು ಹೆಚ್ಚುತ್ತಲೆ ಹೋಯಿತು. ಇಬ್ಬರೂ ವೈದ್ಯರು ಸತತ ನಿಗಾ ಇಟ್ಟಿದ್ದರು. ನಾನು ಲೇಡಿ ಡಾಕ್ಟರ್ ಬಳಿ ಮಾತಾಡಿದೆ. ಅವರು ಹೆದರುವ ಅಗತ್ಯ ಇಲ್ಲವೆಂತಲೂ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿಯೂ ಹೇಳಿದರು.
ವಿಮಾನ ಭೋಪಾಲ್ ನ ಉತ್ತರದಲ್ಲಿತ್ತು. ಈ ವೇಳೆಗೆ ಆಕೆಯಲ್ಲಿ ತೀವ್ರ ರಕ್ತ ಸ್ರಾವ ಕಾಣಿಸಿತು. ಕ್ಯಾಬಿನ್ ಕ್ರ್ಯೂ ಸನ್ನದ್ಧರಾದರು. ಕ್ಷಣಾರ್ಧದಲ್ಲಿ ವಿಮಾನದ ಕಿಚನ್- galley- ಅನ್ನು ಲೇಬರ್ ರೂಮ್ ಆಗಿ ಪರಿವರ್ತಿಸಿದರು. ವಿಮಾನ ಹಾರುತ್ತಲೇ ಇತ್ತು. ನಾನು ಮುಂದೇನು ಮಾಡಬೇಕು ಎಂಬುದನ್ನು ಡಾಕ್ಟರ್ ಸಲಹೆ ಮೇರೆಗೆ ನಿರ್ಧರಿಸೋಣ ಎಂದು ಕೊಂಡೆ.
ಇದಕ್ಕಿದ್ದಂತೆ ವಿಮಾನದೊಳಗೆ ಚಟುವಟಿಕೆ ಗರಿಗೆದರಿತು, ಕ್ಯಾಬಿನ್ ಸಿಬ್ಬಂದಿ ಗಡಿ ಬಿಡಿಯಲ್ಲಿ ಓಡಾಡ ತೊಡಗಿದರು. ಆತಂಕದ ವಾತಾವರಣ. ನಿಟ್ಟುಸಿರು, ನಿಶಬ್ಧ…ಇದೆಲ್ಲಾ ಕೆಲವೆ ಹೊತ್ತು .ಮರುಕ್ಷಣ ವಿಮಾನದಲ್ಲಿ ಚಪ್ಪಾಳೆ. ಗಂಡು ಮಗುವಿನ ಜನನವಾಗಿತ್ತು. ಆತಂಕದ ಕ್ಷಣಗಳು ಮಾಯಾವಾಗಿ ಎಲ್ಲೆಲ್ಲೂ ಸಂತಸ ಮೂಡಿತು. ಈ ಒಂದು ಸಂದರ್ಭದಲ್ಲಿ ರೋಮಾಂಚನ ಗೊಳ್ಳದ ಒಬ್ಬ ಪ್ರಯಾಣಿಕರು ಅಲ್ಲಿರಲಿಲ್ಲ ಎಂದು ನಾನು ಹೇಳಬಲ್ಲೆ. ಕ್ಲೌಡ್ ನೈನ್ ನಲ್ಲಿ ಕ್ಲೌಡ್ ನೈನ್ ವೈದ್ಯರ ನರೆವಿನೊಂದಿಗೆ ಹೊಸ ಜನ್ಮವೊಂದು ಅವತರಿಸಿತು.
ಆದರೆ ಆ ಮಗು ಪ್ರಿ ಮೆಚೂರ್. ಎಷ್ಟು ತಿಂಗಳ ಮಗು ಎಂಬುದು ಖಾತ್ರಿ ಆಗಲಿಲ್ಲ. ಆದರೆ ಮತ್ತೇನಾದರು ಹೆಚ್ಚು ಕಡಿಮೆ ಆಗಿ ಬಿಟ್ಟರೆ ಎಂಬ ಭಯ. ಡಾಕ್ಟರೇನೋ ಆತಂಕ ಪಡಬೇಕಾಗಿಲ್ಲ. ತಾಯಿ ಮಗು ಹುಷಾರಾಗಿದ್ದಾರೆ ಎಂಬ ಅಭಯ ನೀಡಿದರು. ಆದರೆ ನನಗೆ ಏನಾಗುವುದೋ ಎಂಬ ಆತಂಕ ದೂರವಾಗಲಿಲ್ಲ,
ನಾಗಪುರ, ಇಂದೋರ್ ದೂರವಾಗಿತ್ತು. ಹತ್ತಿರವೆಂದರೆ ಹೈದರಾಬಾದ್. ಅಲ್ಲಿಗೆ ನನ್ನ ವಿಮಾನವನ್ನು ತಿರುಗಿಸಬೇಕಿತ್ತು. ಆದರೆ ಕೋವಿಡ್ ಕಾಲದಲ್ಲಿ ಆ ಮಗುವನ್ನು ಅಲ್ಲಿ ಇಳಿಸಿ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ. ಆ ಪ್ರಯಾಣಿಕರ ಜೊತೆ ಮತ್ತಾರು ಇರಲಿಲ್ಲ. ನಾನು ವಿಮಾನದಲ್ಲಿ ಹೊಸ ಪ್ರಯಾಣಿಕರು ಸೇರಿಕೊಂಡ ವಿಷಯನ್ನು ಪ್ರಕಟಿಸಿದೆ. ಚೆನ್ನೈ, ನಾಗಪುರ , ಬೆಂಗಳೂರು ಏರ್ ಟ್ರಾಫಿಕ್ ನಿಂದ ಅಭಿನಂದನೆಗಳು ಕೇಳಿ ಬಂದವು. ನಾಗಪುರದ ಏರ್ ಟ್ರಾಫಿಕ್ ನೇರವಾಗಿ ಬೆಂಗಳೂರು ಸೇರುವುದಕ್ಕೆ ಅನುವು ಮಾಡಿಕೊಟ್ಟರು. ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಬೆಂಗಳೂರನ್ನು ಸೇರಿ ನಿಟ್ಟುಸಿರು ಬಿಟ್ಟೆ.
ಈ ವೇಳೆಗೆ ಬೆಂಗಳೂರಿಗೆ ಸುದ್ದಿ ಮುಟ್ಟಿತ್ತು. ತಾಯಿ ಮಗುವಿಗೆ ಅದ್ದೂರಿ ಸ್ವಾಗತ. ಆಸ್ತರ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು, ಕೆಎಐಲ್ ಸಿಬ್ಬಂದಿ ಸ್ವಾಗತ ಕೋರಿದರು. ಬ್ಯಾನರ್ ಗಳು.. ಚಾಕೋಲೇಟ್ಗಳು…
ಅರ್ಧಗಂಟೆಯ ಹಿಂದೆ ಹುಟ್ಚಿದ ಹೀರೋನನ್ನು ಕೈ ಗೆತ್ತಿಕೊಂಡೆ.. ಧನ್ಯತಾ ಭಾವ ಮೂಡಿತು. ಏರ್ ಪೋರ್ಸ್ ಡೇ ಹಿಂದಿನ ದಿನವೇ ನನಗೆ ಏರ್ ಪೋರ್ಸ್ ಡೇ ಯ ಶುಭಾಶಯ ಸಿಕ್ಕಂತಾಯಿತು.