21.7 C
Karnataka
Tuesday, November 26, 2024
    Home Blog Page 146

    ಕೋವಿಡ್ ನುಂಗಿದ ಶೈಕ್ಷಣಿಕ ವರ್ಷ: ಶಾಲೆ ಆರಂಭಿಸದರೂ ಕಷ್ಟ , ಆರಂಭಿಸದಿದ್ದರೂ ನಷ್ಟ

    ಕೊರೊನಾ ಸೋಂಕು ನಮ್ಮ ದೇಶದಲ್ಲಿನ್ನೂ ತಾಂಡವವಾಡುತ್ತಿದೆ.ಈ ಸ್ಥಿತಿಯಲ್ಲಿ ಮನುಷ್ಯರು ಸೀಮಿತವಾಗಿ ಮಾಡಬಹುದಾದ್ದು ‘ಆಯ್ಕೆ ‘ ಮಾತ್ರ. ಸೀಮಿತ ಆಯ್ಕೆಯೂ ಇಲ್ಲದೆ ಹೊಟ್ಟೆ ಪಾಡಿಗಾಗಿ ಪರದಾಡುತ್ತಿರುವ ಮಿಲಿಯನ್ ಗಟ್ಟಲೆ ಜನರೂ ಇದ್ದಾರೆ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲವಾದರೂ ಆಯ್ಕೆ ಇರುವವರ ನಡುವೆಯಾವುದು ಸರಿ ಅಥವಾ ತಪ್ಪು, ಯಾವುದು ಸಮಂಜಸ ಅಥವಾ ಅತಿರೇಖ ಎನ್ನುವುದರ ಬಗ್ಗೆ ಗೊಂದಲವೂ ಇದೆ.ಈ ಗೊಂದಲಗಳು ಮನುಷ್ಯರ ನಡುವೆ, ಸಾಮಾಜಿಕ ವ್ಯವಸ್ಥೆಗಳ ನಡುವೆ, ದೇಶ-ವಿದೇಶಗಳಲ್ಲಿ ಕಂಡುಬಂದಿದೆ.

    ವಿಶ್ವವಿದ್ಯಾನಿಲಯಗಳಿಗೆ ಸೇರಿ ಜೀವನದ ಹೊಸ ಅಧ್ಯಾಯವನ್ನು ಶುರುಮಾಡಬೇಕಿದ್ದ ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳು ಈ ಕೊರೋನ ಗೊಂದಲದ ನಡುವೆ ಸಿಲುಕಿಕೊಂಡಿದ್ದಾರೆ.ಆಯಾ ದೇಶಗಳು ತಮಗೆ ಸೂಕ್ತ ಎನ್ನುವ ಆಯ್ಕೆಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಒಂದು ಅಕಾಡೆಮಿಕ್ ವರ್ಷವನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ.

    ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲದಿದ್ದರೂ ಭಾರತ ತನ್ನ ಆರ್ಥಿಕತೆಯನ್ನು ಸಂಭಾಳಿಸಲು ಬಹುತೇಕ ಎಲ್ಲ ವಹಿವಾಟುಗಳನ್ನು ಶುರುಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅದರಂತೆ ಅಕ್ಟೋಬರ್ ಒಂದರಿಂದ ಅನ್ ಲಾಕ್ 5.0 ಭಾರತದಲ್ಲಿ ಜಾರಿಗೆ ಬಂದಿದೆ.

    ಇದರ ಪ್ರಕಾರ ಮಲ್ಟಿಪ್ಲೆಕ್ಸ್ ಗಳು ಮತ್ತು ಸಿನಿಮಾ ಮಂದಿರಗಳು ಶೇಕಡಾ 50 ಕಾರ್ಯನಿರತವಾಗಬಹುದಿದೆ. ಕ್ರೀಡಾಪಟುಗಳಿಗಾಗಿ ಈಜು ಕೊಳಗಳನ್ನು ಕೂಡ ತೆರೆಯಲಾಗುತ್ತಿದೆ. ಮನರಂಜನಾ  ಉದ್ಯಾನವನಗಳನ್ನು ತೆರೆಯಲಾಗುತ್ತಿದೆ. ಇದಕ್ಕೆ ತಕ್ಕನಾದ SOP (Standard operating procedures) ಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15 ರಿಂದ ಶ್ರೇಣೀಕೃತವಾಗಿ ಶಾಲೆ-ಕಾಲೇಜುಗಳನ್ನು ತೆರೆಯಲು ಅನುಮತಿ ಸಿಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೆಯಲ್ಲಿ ಇಡುವುದಿಲ್ಲ ಎನ್ನಲಾಗಿದೆ. ಶಿಕ್ಷಣವನ್ನು ಆನ್ ಲೈನ್ ಮಾದರಿಯಲ್ಲೇ ಮುಂದುವರೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಭಾರತ ಅಡಕತ್ತರಿಯಲ್ಲಿ ಸಿಲುಕಿದೆ. ಇಂದಿಗೂ ಸುಮಾರು ೭೦-೮೦ ಸಾವಿರ ಹೊಸ ಪ್ರಕರಣಗಳು ನಮ್ಮ ದೇಶದಲ್ಲಿ ಪತ್ತೆಯಾಗುತ್ತಿವೆ. ಇನ್ನು  ವಿದ್ಯಾರ್ಥಿಗಳು ಹೊರಬಂದರೆ ಥಟ್ಟನೆ ಈ ಸಂಖ್ಯೆ ದುಪ್ಪಟ್ಟಾಗಬಲ್ಲದು.ಇತ್ತ ಆನ್ ಲೈನ್ ಶಿಕ್ಷಣ ಭಾರತದ ಬಹುತೇಕ ವಿದ್ಯಾರ್ಥಿಗಳಿಗೆ ನಿಲುಕಬಲ್ಲ ವಿಚಾರವೂ ಅಲ್ಲ ವಿಧಾನವೂ ಅಲ್ಲವಾಗಿದೆ. ’ಗೆಲ್ಲಲು ಸಾಧ್ಯವಿಲ್ಲ’ ಎನ್ನುವ ಸ್ಥಿತಿಯಿದು.

    ಕಾಲೇಜುಗಳನ್ನು ಕೋವಿಡ್ ನಡುವೆಯೂ ಏಕೆ ಶುರುಮಾಡಲಾಗುತ್ತಿದೆ?

    ಮಿಕ್ಕೆಲ್ಲ ಉದ್ಯಮಗಳಂತೆ ಶಿಕ್ಷಣ ಮತ್ತು ವಿದ್ಯಾರ್ಥಿಗಳು ಸಮಾಜದ ಅವಿಭಾಜ್ಯ ಭಾಗಗಳು. ವಿದ್ಯಾ ರ್ಥಿಗಳ ವಯಸ್ಸು ಮತ್ತು ಸಂಭಾವ್ಯತೆ ಅಥವಾ ಒಳಸತ್ವದ ಕಾರಣ ಇತರೆ ಕೆಲವು ವರ್ಗಗಳಿಗಿಂತ ಹೆಚ್ಚಾಗಿ ಅವರ ಭವಿಷ್ಯವನ್ನು ಕಾಪಾಡುವುದು ಅತ್ಯಂತ ಮಹತ್ವವಾದ ವಿಚಾರವಾಗುತ್ತದೆ.

    ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳ ವಿಶ್ವವಿದ್ಯಾನಿಲಯಗಳು ಸೆಪ್ಟೆಂಬರ್ ನಲ್ಲಿ ಶುರುವಾದರೆ ಭಾರತದಲ್ಲಿ ಅಕ್ಟೋಬರಿನಲ್ಲಿ ದಾಖಲಾತಿ ಪ್ರಕ್ರಿಯೆ ನಡೆದು ನಂತರ ನವೆಂಬರಿನಿಂದ ತರಗತಿಗಳು ಶುರುವಾಗುತ್ತವೆ. ಇದೇ ಕಾರಣ ಭಾರತಕ್ಕೆ  ಬೇರೆಡೆ ಏನಾಗುತ್ತಿದೆ ಎಂದು  ವಾಸ್ತವದಲ್ಲಿ ತಿಳಿಯಲು ಒಂದು ಸುವರ್ಣಾವಕಾಶ ದೊರೆತಿದೆ.

    ವಿಶ್ವ ವಿದ್ಯಾನಿಲಯಗಳು ಸಾಮಾನ್ಯವಾಗಿ ಕೆಲವು ದೊಡ್ಡ ಸ್ಥಳಗಳಲ್ಲಿರುತ್ತವೆ. ಅಲ್ಲಿಗೆ ವಿದ್ಯಾರ್ಥಿಗಳು ಇತರೆ ಹಲವು ನಗರ, ಗ್ರಾಮ , ಹಳ್ಳಿಗಳಿಂದ ಬಂದು ದಾಖಲಾಗುತ್ತಾರೆ. ಬೇರೆ ಊರು, ರಾಜ್ಯ ಮತ್ತು ದೇಶಗಳ ವಿದ್ಯಾರ್ಥಿಗಳಾಗಿಯೂ ಅವರು ದಾಖಲಾಗಿರಬಹುದು.ಅದರ ಜೊತೆಯಲ್ಲೇ ವಿದ್ಯಾರ್ಥಿಗಳು ಆಯಾ ದೇಶದ ಆರ್ಥಿಕ ವ್ಯವಹಾರಗಳಿಗೆ ಮೌಲ್ಯಯುತ ಕಾಣಿಕೆಯನ್ನು ಸಲ್ಲಿಸುವ ಗ್ರಾಹಕರೂ ಹೌದು. ಉದಾಹರಣೆಗೆ ಅವರ ಪ್ರಯಾಣ, ಬಾಡಿಗೆ ಹಿಡಿಯುವ ಮನೆಗಳು, ಊಟ ತಿಂಡಿ ಮಾಡುವ ಸ್ಥಳಗಳು, ಸಾಮಾನು-ಸಾಮಗ್ರಿಗಳನ್ನು ಕೊಳ್ಳುವ ಅಂಗಡಿಗಳು, ಶುಲ್ಕವನ್ನು ಪಡೆಯುವ ವಿಶ್ವ ವಿದ್ಯಾಲಯಗಳು, ಸಿನಿಮಾ, ಆಟೋಟ-ಸಂಗೀತ-ನಾಟಕ ಇತ್ಯಾದಿ ಹಲವು ಚಟುವಟಿಕೆಗಳು ಈ ಹೊಸ ವಿದ್ಯಾರ್ಥಿಗಳ ವಾರ್ಷಿಕ ವಲಸೆಯನ್ನೇ ನಂಬಿ ಬದಕುವ ಚಟುವಟಿಕೆಗಳಾಗಿವೆ.

    ಕೊರೊನಾ ಕಾರಣ ಉನ್ನತ ಶಾಲಾ-ಕಾಲೇಜಿನ ತರಗತಿಗಳು, ಪರೀಕ್ಷೆಗಳು, ಫಲಿತಾಂಶ ಎಲ್ಲವೂ ಈ ವರ್ಷ ಅಯೋಮಯವಾಗಿದ್ದರೂ, ಇಡೀ ಒಂದು ವರ್ಷವನ್ನು ವಿಧ್ಯಾಭ್ಯಾಸದ ವಿಚಾರದಲ್ಲಿ ಇಲ್ಲವಾಗಿಸಲು ಸಾಧ್ಯವಿಲ್ಲ. ಇದನ್ನು ಯಾವ ದೇಶವೂ ಒಪ್ಪುವುದಿಲ್ಲ. ಏಕೆಂದರೆ ಈ ವರ್ಷದ ವಿದ್ಯಾರ್ಥಿಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ 2021 ಕೂಡ ಮತ್ತೆ ಬಿಕ್ಕಟ್ಟಿನ ವರ್ಷವಾಗುತ್ತದೆ.ತರಗತಿಗಳ ಪ್ರಮಾಣ, ಬೋಧಿಸುವವರ ಮೇಲಿನ ಒತ್ತಡ, ಫಲಿತಾಂಶದ ನಂತರದ ಪೈಪೋಟಿ , ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯತ್ತು ಹೀಗೆ ಎಲ್ಲವೂ ಹಾಳಾಗಬಲ್ಲವು.

    ಹಾಗೆಂದು ಕೊರೊನಾ ಸೋಂಕು ಇನ್ನೂ ದಟ್ಟವಾಗಿದ್ದಾಗಲೇ ತರಗತಿಗಳನ್ನು ಎಂದಿನಂತೆ ನಡೆಸಲು ಸಾಧ್ಯವಿಲ್ಲ. ಹಲವು ಸಾವಿರ ವಿದ್ಯಾರ್ಥಿಗಳ ಪಾದಗಳನ್ನು ಕ್ಯಾಂಪಸ್ಸಿನ ಆವರಣವನ್ನು ತುಳಿಯಲು ಬಿಟ್ಟರೆ ಆದರ ಜೊತೆ ಜೊತೆಗೆ ಕೊರೊನಾ ಸೋಂಕು ಕೂಡ ನಲಿ ನಲಿಯುತ್ತ ಕಾಲಿಡುತ್ತದೆ.

     ನಾನಾ ಸ್ಥಳಗಳಿಂದ ಬರುವ ಎಳೆಯ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಸೋಂಕು ಇರಬಹುದು. ಅವರಲ್ಲಿ ಇರಬಹುದಾದ ಸೋಂಕು ಹಲವು ರೀತಿಯಲ್ಲಿ ಇಡೀ ಊರಿಗೆ ಹರಡಬಲ್ಲದು. ಕಾಲೇಜುಗಳಲ್ಲಿ ಬೋಧಿಸುವ , ಆಡಳಿತದ ವಿಭಾಗದ  ಜನರಲ್ಲಿ ಕೊರೊನಾ ಕಾಣಿಸಿಕೊಂಡರೆ ಮತ್ತೆ ಇಡೀ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ.

    ಇವೆಲ್ಲ ಗೊತ್ತಿದ್ದೂ ಕಾಲೇಜು ವರ್ಷವನ್ನು ಶುರುಮಾಡದೆ ವಿಧಿಯಿಲ್ಲ. ಏನೇ ಆದರೂ ವಿಶ್ವ ವಿದ್ಯಾಲಯಗಳನ್ನು  ನಡೆಸಲೇ ಬೇಕೆಂದಾಗ ಸರಕಾರಗಳಿಗೆ ದೊರೆತಿರುವ ಪರ್ಯಾಯ ಆಯ್ಕೆಯೆಂದರೆ ಆನ್ ಲೈನ್ ಪಾಠಗಳು. ಆದರೆ ಪ್ರತಿಯೊಂದು ಅಧ್ಯಯನದ ವಿಷಯಗಳನ್ನು ಕೇವಲ ಆನ್ ಲೈನ್ ತರಗತಿಗಳಾಗಿ ನಡೆಸಲು ಸಾಧ್ಯವಿಲ್ಲ.ಕೆಲವು ವಿಚಾರಗಳನ್ನು ’ಪ್ರಾಕ್ಟಿಕಲ್ ’ ರೂಪದಲ್ಲೇ ನಡೆಸಬೇಕಾಗುತ್ತದೆ. ಜೊತೆಗೆ ಬರೇ ಆನ್ ಲೈನ್ ತರಗತಿಗಳಾಗಿಬಿಟ್ಟರೆ ವಿದ್ಯಾರ್ಥಿ ವಲಸೆಯ ಮೂಲಕ ನಡೆವ ಎಲ್ಲ ಆರ್ಥಿಕ ಚಟುವಟಿಕೆಗಳೂ ನಿಂತುಹೋಗುತ್ತವೆ.

    ಯುಕೆ ವಿಶ್ವವಿದ್ಯಾನಿಲಯಗಳ ಉದಾಹರಣೆ

    ಇದರ ಅಗಾಧತೆಯನ್ನು ಅಳೆಯಲು ಕರ್ನಾಟಕಕ್ಕಿಂತ ಸ್ವಲ್ಪವೇ ದೊಡ್ದದಿರುವ ಯುನೈಟೆದ್ ಕಿಂಗ್ಡಮ್ ನ ವಿಶ್ವವಿದ್ಯಾನಿಲಯಗಳ ಉದಾಹರಣೆಯನ್ನು ನೋಡೋಣ.

    ಓಪನ್ ಯೂನಿವರ್ಸಿಟಿಗಳೂ ಸೇರಿದಂತೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಒಟ್ಟು 169 ವಿಶ್ವ ವಿದ್ಯಾನಿಲಯಗಳಿವೆ. ಅವುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಅಗಾಧವಾದ್ದು. ಈ ವಿಶ್ವವಿದ್ಯಾನಿಲಯಗಳಿಗೆ 2018–19  ರ ಸಾಲಿನಲ್ಲಿ ಒಟ್ಟು 2.38 ಮಿಲಿಯನ್ ವಿದ್ಯಾರ್ಥಿಗಳು ಓದಲು ಸೇರಿದ್ದರು. ಇವರು ದೇಶದ ಶೈಕ್ಷಣಿಕ ವ್ಯವಸ್ಥೆ ಮುಂದುವರೆಯಲು ಅಗತ್ಯವಾಗಿ ಬೇಕಾದ ಜೀವರಸದಂತವರು.ಶಿಕ್ಷಣದ ಅಗತ್ಯ ವಿದ್ಯಾರ್ಥಿಗಳ ಎಷ್ಟಿದೆಯೋ, ಶೈಕ್ಷಣಿಕ ವ್ಯವಸ್ಥೆಯ ಉಳಿವಿಗೆ ಈ ವಿದ್ಯಾರ್ಥಿಗಳ ಅಗತ್ಯವೂ ಅಷ್ಟೇ ಇದೆ ಅಥವಾ ಇನ್ನೂ ಹೆಚ್ಚಿದೆ ಎಂದರೂ ತೊಂದರೆಯಿಲ್ಲ.

    ಈ ಕಾರಣ ಯೂರೋಪ್ ಮತ್ತು ಇಂಗ್ಲೆಂಡ್ ದೇಶಗಳು ನಿಗದಿತ ಸಮಯಕ್ಕೆ ಸರಿಯಾಗಿ ವಿಶ್ವವಿದ್ಯಾನಿಲಯಗಳನ್ನು ಶುರುಮಾಡಿಯೇ ಬಿಟ್ಟರು. ಜೊತೆಗೆ ಇಲ್ಲಿ ಮೊದಲ ಕೊರೊನಾ ಅಲೆ ತಣ್ಣಗಾಗಿತ್ತು. ಲಾಕ್ ಡೌನ್ ತೆರವಾಗಿ ಬದುಕು ’ಸಹಜ’ ಎನ್ನುವತ್ತ ತೆರಳುತ್ತಿತ್ತು.ಜನರು ಕೆಲಸಗಳಿಗೆ ಮರಳುತ್ತಿದ್ದರು. ಪ್ರಾಥಮಿಕ ಶಾಲೆಗಳು ಎಂದಿನಂತೆ ಸೆಪ್ಟಂಬರಿನಲ್ಲಿ ಶುರುವಾಗಿದ್ದವು.ಆದ್ದರಿಂದ ವಿಶ್ವವಿದ್ಯಾನಿಲಯಗಳು ಹೊಸ ವಿದ್ಯಾರ್ಥಿಗಳಿಗೆ ಬಾಗಿಲು ತೆರೆಯಲು ಸಿದ್ದವಾದವು.ಯೂರೋಪಿನ ಬಹತೇಕ ವಿಶ್ವ ವಿದ್ಯಾನಿಲಯಗಳು ಮತ್ತು ಇಂಗ್ಲೆಂಡಿನ 17 ವಿಶ್ವ ವಿದ್ಯಾನಿಲಯಗಳು ಕೊರೊನಾ ಪರೀಕ್ಷೆಯ ನಂತರವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಾರೆ.

    ಆದರೆ ಸೆಪ್ಟಂಬರಿನ ನಡುವಿನಿಂದ ವಿಶ್ವವಿದ್ಯಾಲಯಗಳು ಶುರುವಾದ ಮೊದಲ ಒಂದೆರಡು ವಾರದಲ್ಲೇ ಯುನೈಟೆಡ್ ಕಿಂಗ್ಡಮ್ ನ ಸುಮಾರು ನಲವತ್ತು ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿರುವುದನ್ನು ವರದಿ ಮಾಡಿದವು.

    ಅಕ್ಟೋಬರ್ ಎರಡರಂದು ನ್ಯೂಕ್ಯಾಸಲ್ ನಗರದ ನಾರ್ತ್ ಅಂಬ್ರಿಯ ವಿಶ್ವ ವಿದ್ಯಾನಿಲಯವೊಂದರಲ್ಲೇ 770 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಇದೆ ಎನ್ನುವುದು ಪತ್ತೆಯಾಯಿತು.ಆಶ್ಚರ್ಯವೆಂದರೆ ಇವರಲ್ಲಿ 78 ಜನರನ್ನು ಬಿಟ್ಟರೆ ಇನ್ಯಾರಲ್ಲೂ ಯಾವುದೇ ರೋಗಲಕ್ಷಣಗಳಿರಲಿಲ್ಲ!

    ಶುರುವಾದ ಮೊದಲ ವಾರದಲ್ಲಿ ಮ್ಯಾಂಚೆಸ್ಟರ್ ನಗರದ ಯೂನಿವರ್ಸಿಟಿಯಲ್ಲಿ  127 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿತು. ಈ ಕಾರಣ ಅವರೊಡನೆ ಒಡನಾಡಿದ್ದ 1700 ವಿದ್ಯಾರ್ಥಿಗಳು ತಮ್ಮನ್ನು ತಾವು ಕ್ವಾರಂಟೈನ್ ನಲ್ಲಿ ಇಟ್ಟುಕೊಳ್ಳಬೇಕಾಯಿತು.ಇದಕ್ಕಿಂತಲೂ ಒಂದು ವಾರ ಮುಂಚೆಯೇ ಕಾಲೇಜು ಶುರುವಾದ ಸ್ಕಾಟ್ಲ್ಯಾಂಡಿನ ಗ್ಲಾಸ್ಗೋ ಯೂನಿವರ್ಸಿಟಿಯಲ್ಲಿ 172 ವಿದ್ಯಾರ್ಥಿಗಳಿಗೆ ಕೊರೊನಾ ಕಾಣಿಸಿಕೊಂಡಿತು.ಹಲವಾರು ನೂರು ಜನ ವಿದ್ಯಾರ್ಥಿಗಳು ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ತಾವಿದ್ದ ವಿದ್ಯಾರ್ಥಿ ಗೃಹದಲ್ಲೇ ಕ್ವಾರಂಟೈನ್ ಗೆ ಒಳಗಾದರು.

    ವಿದ್ಯಾರ್ಥಿಗಳು ಫ್ರೆಶರ್ಸ್ ಪಾರ್ಟಿ ಮಾಡಿಕೊಂಡ ಸಮಯದಲ್ಲಿ ಮತ್ತು ವಿದ್ಯಾರ್ಥಿ ಗೃಹಗಳಲ್ಲಿ ಈ ಸೋಂಕು ಯಾರಿಂದಲೋ ಹರಡಲು ಶುರುವಾಗಿರಬೇಕೆಂದು ಶಂಕಿಸಲಾಯ್ತು.ಜೊತೆ ಜೊತೆಗೇ ವಿಶ್ವ ವಿದ್ಯಾಲಯಗಳನ್ನು ತೆರೆವ ನಿರ್ಧಾರ ಮಾಡಿದ ಸರ್ಕಾರದ  ನಿಲುವು ಸರಿಯೇ? ನಾನಾ ಊರುಗಳಿಂದ ಬಂದ ವಿದ್ಯಾರ್ಥಿಗಳ ಹಣ, ಶ್ರಮದ ಜೊತೆಗೆ ಇದೀಗ ವಿದ್ಯಾರ್ಥಿಗಳ ಗೃಹ ಬಂಧನದ ಹೊಣೆ ಸರಕಾರದ್ದೇ ಎನ್ನುವ ವಿವಾದಗಳು ಹುಟ್ಟಿಕೊಂಡವು.

    ತಾವಿರುವ ಕಟ್ಟಡಗಳನ್ನು ಬಿಡಲು ಅನುಮತಿಯಿರದ ವಿದ್ಯಾರ್ಥಿಗಳಿಗೆ ಅವರ ಪೋಷಕರು, ಹಿತೈಷಿ ಗಳು ಆಹಾರವನ್ನು ತಂದು ನೀಡುತ್ತಿದ್ದಾರೆ.ಅವರಿಗೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಲು ಮೊದಲು ಅನುಮತಿ ನೀಡದಿದ್ದರೂ ಇದೀಗ “ ಹೋಗಬಹುದು.ಆದರೆ ನಿಮ್ಮಿಂದ ನಿಮ್ಮ ಮನೆಯ ಹಿರಿಯರಿಗೂ ಹರಡುವುದನ್ನು ತಡೆಗಟ್ಟಲು ಸಾಧ್ಯವಾದಷ್ಟೂ ಇದ್ದಲ್ಲೇ ಇದ್ದರೆ ಒಳ್ಳೆಯದು “ ಎಂಬ ಕಿವಿಮಾತನ್ನು ಹೇಳಲಾಗಿದೆ. ಆದರೆ ವಿದ್ಯಾರ್ಥಿಗಳು ಇಡೀ ಸೆಪ್ಟಂಬರ್ ತಿಂಗಳಿನ ವಿದ್ಯಾರ್ಥಿ ಗೃಹಗಳ ಬಾಡಿಗೆಯನ್ನು ಹಿಂತಿರುಗಿಸಿ ಎಂದು ಪಟ್ಟು ಹಿಡಿದಿದ್ದಾರೆ.ಕಾಲೇಜಿನ ತರಗತಿಗಳು ಆನ್ ಲೈನ್ ಮಾಡುವುದಾದರೆ ನಾವೇಕೆ ವಾರ್ಷಿಕ ಕಾಲೇಜು ವೇತನವನ್ನು ಪೂರ್ತಿಯಾಗಿ ಕಟ್ಟಬೇಕು? ಎಂದು ವಾದಿಸುತ್ತಿದ್ದಾರೆ. ವಿಶ್ವ ವಿದ್ಯಾನಿಲಯಗಳ ಶುಲ್ಕದಲ್ಲಿ ರಿಬೇಟ್ ನೀಡಿ ’-ಎನ್ನುವ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. ಈ ನಡುವೆ ಆಡಳಿತ ವರ್ಗದವರು, ಜನ ನಾಯಕರು ಅಡಕತ್ತರಿಗೆ ಸಿಲುಕಿದಂತಹ ಸ್ಥಿತಿಯನ್ನು ತಲುಪಿದ್ದಾರೆ.

    ಭಾರತದಲ್ಲಿ ಇನ್ನೂ ಮೊದಲ ಅಲೆ ಇರುವಾಗಲೇ ಶೈಕ್ಷಣಿಕ ವರ್ಷ ಶುರುವಾಗಲಿದೆ. ಆದರೆ ಭವಿಷ್ಯ?

    ಇನ್ನೊಂದು ತಿಂಗಳಲ್ಲಿ ಭಾರತದ ಮೊದಲ ಕೊರೊನಾ ಅಲೆ ಮುಗಿದಿರುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ನವೆಂಬರ್ ಒಂದರಿಂದ ಆರಂಭವಾಗಬೇಕಿರುವ ವಿಶ್ವ ವಿದ್ಯಾನಿಲಯಗಳು ಹಾಗಾದರೆ ಯಾವ ಮಾರ್ಗವನ್ನು ಅನುಸರಿಸಬೇಕು? ಮೇಲಿನ ಉದಾಹರಣೆಗಳಿಂದ ಕಲಿಯುವುದೇನಾದರೂ ಇದೆಯೇ?

    ಕಳೆದ ವರ್ಷ ಕರ್ನಾಟಕದ  659 ಸರ್ಕಾರೀ ಕಾಲೇಜುಗಳಲ್ಲಿ 4,0139  ವಿದ್ಯಾರ್ಥಿಗಳು ಪ್ರವೇಶ ಪಡೆದರೆ 2876   ಖಾಸಗೀ ಕಾಲೇಜುಗಳಲ್ಲಿ 10,68,243 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಇದಾದ ನಂತರವೂ ಹಲವು ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿಯನ್ನು ನೀಡಿದೆ.

    ಪ್ರತಿ ಲಕ್ಷ ಜನರಿಗೆ ಸುಮಾರು 51 ಕಾಲೇಜುಗಳನ್ನು ಹೊಂದಿರುವ ನಮ್ಮ ಕರ್ನಾಟಕ ಇಡೀ ದೇಶದಲ್ಲೇ ಅತಿಸಾಂದ್ರತೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ.ಆದರೆ ದಾಖಲಾತಿಯ ವಿಚಾರಕ್ಕೆ ಬಂದಾಗ ನಮ್ಮ ರಾಜ್ಯಕ್ಕೆ 5 ನೇ ಸ್ಥಾನ ದೊರೆಯುತ್ತದೆ.ಉದಾಹರಣೆಗೆ 2017-18 ರಲ್ಲಿ ಕಾಲೇಜುಗಳಿಗೆ ದಾಖಲಾದವರ ಒಟ್ಟು ಸಂಖ್ಯೆ 14.6 ಲಕ್ಷ ಮಾತ್ರ..

    ಈ ವರ್ಷ ಕೊರೊನಾದ ಕಾರಣ ಅಪಾರ ನಷ್ಟ ಅನುಭವಿಸಿರುವ ಸಾವಿರಾರು ಕುಟುಂಬಗಳು ಮಕ್ಕಳನ್ನು ವಿಶ್ವ ವಿದ್ಯಾನಿಲಯಗಳಿಗೆ ಸೇರಿಸಲಾರರು. ಖರ್ಚು ವೆಚ್ಚಗಳನ್ನು ಭರಿಸಲಾರರು. ಸರ್ಕಾರೀ ಮತ್ತು ಖಾಸಗಿ ಎರಡೂ ವಲಯಗಳು ಈ ವರ್ಷ ಅತಿ ಕಡಿಮೆ ದಾಖಲಾತಿಯನ್ನು ನೋಡುವ ಮುನ್ಸೂಚನೆಯಿದೆ. ಹಾಗಿರುವಾಗ ಆನ್ ಲೈನ್  ತರಗತಿಗಳ ವಿಚಾರ ಇನ್ನೂ ಹಲವರನ್ನು ಹಿಮ್ಮೆಟ್ಟಿಸಬಲ್ಲದು.

    ಈಗಾಗಲೇ ಭಾರತದಲ್ಲಿ ಆನ್ ಲೈನ್ ತರಗತಿಗಳಿಗೆ ಆದ್ಯತೆ ದೊರಕಿದೆ. ಆದರೆ ಖಾಸಗೀ ಶಾಲಾ ಕಾಲೇಜುಗಳು ಒಂದು ರೀತಿಯ ನೀತಿಯನ್ನನುಸರಿಸಿದರೆ ಸರ್ಕಾರೀ ಶಾಲಾ ಕಾಲೇಜುಗಳು ಇನ್ನೂ ಆನ್ ಲೈನ್ ತರಗತಿ ನಡೆಸಲು ಹೆಣಗುತ್ತಿದ್ದಾರೆ. ಚಂದನ ಚಾನಲ್ ನ ಮೂಲಕವೂ ತರಗತಿಗಳು ನಡೆಯುತ್ತಿವೆ. ಆದರೆ ನಮ್ಮ ಶೈಕ್ಷಣಿಕ ಚಿತ್ರ ಏಕರೂಪದಲ್ಲಿದೆಯೇ?

    ಆನ್ ಲೈನ್ ಎಂದ ಕೂಡಲೇ ಫೋನ್ ಗಳು, ಕಂಪ್ಯೂಟರ್ ಗಳ ಅಗತ್ಯ ಬೀಳುತ್ತದೆ. ಅಂತರ್ಜಾಲ ವ್ಯವಸ್ಥೆಯಿರಬೇಕಾಗುತ್ತದೆ. ಅಂತರ್ಜಾಲ ವ್ಯವಸ್ಥೆಯ ನೆಟ್ವರ್ಕ್ ಅಥವಾ ಸಂಪರ್ಕ ಜಾಲ ಬೇಕಾಗುತ್ತದೆ.ಅದಕ್ಕೆ ವೇಗವಿರಬೇಕಾಗುತ್ತದೆ. ಎಲ್ಲ ಇದ್ದರೂ ಫೋನು, ಕಂಪ್ಯೂಟರ್  ಚಾರ್ಜು ಮಾಡಲು ವಿದ್ಯುತ್ ಇರಬೇಕಾಗುತ್ತದೆ.ಇದ್ದರೂ ಅದಕ್ಕೆ ವೋಲ್ಟೇಜ್ ಬೇಕಾಗುತ್ತದೆ.

    ದೂರದ ಯಾವುದೋ ಹಳ್ಳಿಯ ಮಕ್ಕಳಿಗೆ ಈ ಎಲ್ಲ ಸವಲತ್ತುಗಳಿವೆಯೇ? ಇಲ್ಲದಿದ್ದರೆ ಇಡೀ ಶೈಕ್ಷಣಿಕ ವರ್ಷ ಬರೀ ಶ್ರೀಮಂತರ ಪಾಲಾಗುತ್ತದೆ. ಕೊರೊನಾ ಕಾಟವಿದ್ದರೂ ಛಲ ಹಿಡಿದು ಓದಬೇಕೆನ್ನುವ ಮಕ್ಕಳಿಗೆ ಬಡತನ ಮತ್ತು ಈ ಸರ್ಕಾರೀ ನೀತಿಗಳು ಮುಳುವಾಗುತ್ತಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಸಿಡಿದೆದ್ದು ನ್ಯಾಯಕೇಳಬಲ್ಲ ಮುಂದುವರೆದ ದೇಶಗಳ ವಿಚಾರವೇ ಬೇರೆ. ಆದರೆ ನೆಟ್ವರ್ಕ್ ಗಾಗಿ ಯಾವುದೋ ಗುಡ್ಡಹತ್ತಿ ಕೈನಲ್ಲಿ ಫೋನಿಡಿದು ಮಳೆ, ಗಾಳಿಗಳನ್ನು ಮೆಟ್ಟಿ ಕೂರಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠದ ಹೆಸರಲ್ಲಿ ಅನ್ಯಾಯವಾಗುವ ಸಾಧ್ಯತೆಗಳೇ ಹೆಚ್ಚಿವೆ.

    ಹೇಗೋ ಕಷ್ಟಪಟ್ಟು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸುತ್ತಿರುವ  ಬಡ ತಂದೆ ತಾಯಿಗಳು ಆನ್ ಲೈನ್ ತರಗತಿಗಾಗಿ ಮೊಬೈಲ್, ಡೇಟಾ, ಇಂಟರ್ನೆಟ್, ಲ್ಯಾಪ್ ಟಾಪ್ ಕೊಡಿಸಲು ಸಾಧ್ಯವೇ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯ ಚಿತ್ರಣವನ್ನು ಸರ್ಕಾರ ನಮ್ಮ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವೇ? ಇದು ಒಬ್ಬಿಬ್ಬ ವಿದ್ಯಾರ್ಥಿಯ ಪ್ರಶ್ನೆಯೇ?

    ತೀರಾ ಬಡತನದ ಕುಟುಂಬಗಳು ಮಕ್ಕಳಿಗೆ ಹೇಗೂ ಶಾಲೆ ಇಲ್ಲವೆಂದು ಸಣ್ಣ ಪುಟ್ಟ ಕೆಲಸಕ್ಕೆ ಹಚ್ಚಿದರೆ ಏನು ಗತಿ? ದುಡಿಮೆಯ ರುಚಿಕಂಡ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದು ಬಿಟ್ಟರೆ ಅದು ಮತ್ತೊಂದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.

    ಅದರಲ್ಲೂ ಈ ವರ್ಷ ಕೊರೊನಾ ಕಾರಣ ಎಲ್ಲರೂ ಆರ್ಥಿಕ ನಷ್ಟಗಳನ್ನು ಅನುಭವಿಸಿದ್ದಾರೆ. ಕಷ್ಟ ಪಟ್ಟು ಬೆಳೆ ಬೆಳೆದರೂ ರೈತರಿಗೆ ಬಂಡವಾಳವೂ ಹುಟ್ಟದೆ ಉಪವಾಸವಿರಬೇಕಾದ ಸಮಯದಲ್ಲಿ ಆಧುನಿಕ ಸಂಪರ್ಕ ಜಾಲಗಳ ಮೇಲೆ ಸಾವಿರಾರು ರೂಪಾಯಿ ಹಾಕಲು ಸಾಧ್ಯವೇ? ನಗರದಲ್ಲಿರುವವರ ಕುಟುಂಬಗಳು ಕೂಡ ಕೆಲಸವಿಲ್ಲದೆ, ಆದಾಯವಿಲ್ಲದೆ ತತ್ತರಿಸಿರುವ ಈ ಕಾಲದಲ್ಲಿ ಆನ್ ಲೈನ್ ತರಗತಿಗಳು ಮುಗಿಲ ಮಲ್ಲಿಗೆಯಲ್ಲವೇ?

    ನೇರ ಪಾಠ ಹೇಳುತ್ತೇವೆಂದು ಕರೆಸಿ ಆನ್ ಲೈನ್ ಪಾಠ ಹೇಳುವುದು ಅನ್ಯಾಯ ಎಂದು ವಿದ್ಯಾರ್ಥಿ ಒಕ್ಕೂಟಗಳೊಂದಿಗೆ ಸೇರಿ ಹೋರಾಟ ನಡೆಸುತ್ತಿರುವ ಇಂಗ್ಲೆಂಡಿನ ವಿದ್ಯಾರ್ಥಿಗಳಂತೆ ಈ ಆನ್ ಲೈನ್ ಪಾಠಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಪ್ರಶ್ನೆ ಎತ್ತಲು ಸಾಧ್ಯವಿದೆಯೇ? ಅಥವಾ ವಿದ್ಯಾರ್ಥಿಗಳು ಮೂಕವಾಗಿ ಬಲಿಪಶುಗಳಾಗುತ್ತಿದ್ದಾರೆಯೇ? ಎಂಬುದನ್ನು ಶೈಕ್ಷಣಿಕ ತಜ್ಞರು ತುರ್ತಾಗಿ ಚರ್ಚಿಸಬೇಕಿದೆ.

    ಆನ್ ಲೈನ್ ತರಗತಿಗಳ ಗುಣಮಟ್ಟ

    ಜೊತೆಗೆ ನಡೆಯುತ್ತಿವೆ ಎನ್ನಲಾಗುತ್ತಿರುವ ಆನ್ ಲೈನ್ ತರಗತಿಗಳ ಗುಣಮಟ್ಟವನ್ನು ಅಳೆಯುವ ಪದ್ಧತಿಗಳನ್ನು ಅಳವಡಿಸಬೇಕಿದೆ.ಏಕೆಂದರೆ ಆನ್ ಲೈನ್ ಪಾಠ ಮಾಡಿ ಅಭ್ಯಾಸವಿರದ ಹಳೆಯ ತಲೆಮಾರಿನ ಬೋಧಕರು ತರಗತಿಯಲ್ಲಿನ ಹೆಸರು ಪಟ್ಟಿಯನ್ನು ಕೂಗುವಂತೆ ಕೂಗಿ ಹಾಜರಾತಿ ಹಾಕಲೇ ಅರ್ಧಗಂಟೆ ಕಳೆಯುತ್ತಿದ್ದಾರೆಂಬ ದೂರುಗಳಿವೆ. ಆನ್ ಲೈನ್ ನಲ್ಲಿ ತರಗತಿ ಮಾಡಿ ಅಭ್ಯಾಸವಿಲ್ಲದವರು ತಾವೇ ಪರದಾಡುವುದಿದೆ. ಝೂಮ್ ಮುಂತಾದ ಉಚಿತ ವೇದಿಕೆಗಳು ಪ್ರತಿ 45 ನಿಮಿಷಕ್ಕೊಮ್ಮೆ ಕತ್ತರಿಸಿದಾಗಲೂ ಮತ್ತೆ ಎಲ್ಲವೂ ಗೊಂದಲಮಯವಾಗುತ್ತಿದೆ. 15 ನಿಮಿಷ ಪಾಠ ಹೇಳಿ ತರಗತಿ ಮುಗಿಯಿತೆಂದು ಕಣ್ಮರೆಯಾಗುವ ಬೋಧಕರಿದ್ದಾರೆ. 15 ನಿಮಿಷದ ಪಾಠಗಳನ್ನು ರೆಕಾರ್ಡ್ ಮಾಡಿ  ಯೂ ಟ್ಯೂಬಿನಲ್ಲಿ ನೋಡಿಕೊಳ್ಳಿ ಎಂದು ಕೈ ತೊಳೆದುಕೊಳ್ಳುವ ದಾರಿಯಲ್ಲೂ ಇದು ಸಾಗಿದೆ.ಒಟ್ಟಾರೆ ಪಠ್ಯವನ್ನೇ ಕಡಿಮೆ ಮಾಡುವ, ಉದಾರವಾಗಿ ಅಂಕಕೊಟ್ಟು ಪಾಸ್ ಮಾಡುವ ತಂತ್ರಗಳೂ ಜಾರಿಯಲ್ಲಿವೆ.

    ಜ್ಞಾನದ ಮೇಲೆ ಮಾತ್ರ ಒತ್ತು ಕೊಡುವ ಪದವಿಗಳಾದರೆ ಪರವಾಗಿಲ್ಲ. ಆದರೆ ಜೊತೆಗೆ, ಕೈ ಕಸಬನ್ನು ಕಲಿಸುವ ಕೋರ್ಸ್ ಗಳಾದರೆ ಕೆಲಸವನ್ನು ಕಲಿಯದೆ ಈ ಪದವೀಧರರು ಈ ವರ್ಷ ಮತ್ತು ಮುಂದಿನ ವರ್ಷಗಳಲ್ಲಿ ನಷ್ಟವನ್ನು ಅನುಭವಿಸಲಿದ್ದಾರೆ.

    ಏನೇ ಆದರೂ ಸಮಾಜದ ಯಾವುದೇ ಇನ್ನಿತರ ವರ್ಗಗಳಂತೆ ಅವಿಭಾಜ್ಯ ಅಂಗಗಳಾಗಿರುವ ವಿದ್ಯಾರ್ಥಿಗಳು ಮಿಲಿಯನ್ ಗಟ್ಟಲೆ ಲೆಕ್ಕದಲ್ಲಿ ರಸ್ತೆಗಿಳಿಯುವುದು ಸಧ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಡವಾಗಿದೆ.

    ಪ್ರತಿ ವಿದ್ಯಾರ್ಥಿಗೆ ಕೋವಿಡ್ ಟೆಸ್ಟ್ ಮಾಡುವುದು, ವಿದ್ಯಾರ್ಥಿಗಳನ್ನು ಸಣ್ಣ, ಸಣ್ಣ ಗುಂಪುಗಳಾಗಿ ವಿಂಗಡಿಸಿ ಪ್ರಾಕ್ಟಿಕಲ್  ಕಸುಬನ್ನು ಹೇಳಿಕೊಡುವುದು, ಶಿಕ್ಷಕರಿಗೆ ಆನ್ ಲೈನ್ ತರಗತಿಗಳ ಬಗ್ಗೆ ತರಬೇತಿ ನೀಡುವುದು, ಮಧ್ಯೆ ಕಡಿದು ಹೋಗದಂತಹ  ಅಂತರ್ಜಾಲ ವೇದಿಕೆಗಳನ್ನು ಆಯಾ ಶಿಕ್ಷಣ ಸಂಸ್ಥೆಗಳು ಖರೀದಿಸುವುದು, ಆಧುನಿಕ ಸವಲತ್ತುಗಳಿಲ್ಲದ ಮಕ್ಕಳು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಶಾಲಾ-ಕಾಲೇಜಗಳಲ್ಲೇ ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುವಂತಹ ವ್ಯವಸ್ಥೆಗಳನ್ನು ಒದಗಿಸುವುದು,ರೆಕಾರ್ಡ್ ಆದ ಲೈವ್ ಪಾಠಗಳನ್ನು ಅಕಸ್ಮಾತ್ ಆ ದಿನದ ತರಗತಿಗೆ ಹಾಜರಾಗಲು ಸಾದ್ಯವಾಗದ ಮಕ್ಕಳಿಗೆ ದೊರಕುವಂತೆ ಮಾಡುವ ಬದಲಾವಣೆಗಳ ಬಗ್ಗೆ ಮತ್ತು ಅಳವಡಿಸಬಹುದಾದ ಇತರೆ ಹೊಸ ವಿಚಾರಗಳಿಗೆ ಸರ್ಕಾರ ಮತ್ತು ದುಬಾರಿ ಶುಲ್ಕವನ್ನು ಪಡೆವ ಕಾಲೇಜುಗಳು ಗಮನಹರಿಸಲೇ ಬೇಕಿದೆ.

    ಪ್ರತಿ ಸುಧಾರಣೆಯೂ ಹಲವು ಸಹಸ್ರ ವಿದ್ಯಾರ್ಥಿಗಳ ಮುಖ್ಯ ಘಟ್ಟವಾದ ಈ ಶೈಕ್ಷಣಿಕ ವರ್ಷಗಳ ಕರಾಳತೆಯನ್ನು ಒಂದಷ್ಟು ಕಡಿಮೆ ಮಾಡಬಲ್ಲವು.ಕೊರೊನಾ ಕಾರಣ ಲೇವಡಿಯಾಗಿ ಬಿಟ್ಟಿರುವ, ಬಿಕ್ಕಟ್ಟಿನಲ್ಲಿ ಬೇಯುತ್ತಿರುವ ಉನ್ನತ ಅಭ್ಯಾಸದ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ವರ್ಷಗಳ ಗೌರವವನ್ನು ಅಲ್ಪಮಟ್ಟಿಗಾದರೂ ಎತ್ತಿಹಿಡಿಯಬೇಕಿದೆ.

    ಕಾರಣವಿಷ್ಟೆ. ಮೊದಲ ಅಲೆ ನೆಲಕಚ್ಚಿದರೂ ಎರಡನೆಯ ಅಲೆಯ ಭಯವೂ ಮತ್ತೆ  ಭಾರತವನ್ನು ಮತ್ತಷ್ಟು ಕಾಲ ಕಾಡಬಲ್ಲದು. ಎರಡನೆಯ ಅಲೆಯ ಭಯದಲ್ಲಿ ಮತ್ತೆ ಸುಮಾರು ಅರ್ಧಭಾಗದಷ್ಟು ಲಾಕ್ ಡೌನ್ ಆಗಿರುವ ವೇಲ್ಸ್ ನಂತಹ ಪುಟ್ಟ ದೇಶವನ್ನು ನೋಡಿದರೆ ಇದಿನ್ನೂ ಶುರುವಾಗುತ್ತಿರುವ ಕೋಟಲೆಗಳ ಅಧ್ಯಾಯ ಎನ್ನುವುದನ್ನು ನಾವು ಅರಿಯಬಹುದಾಗಿದೆ.

    Photo by Rubén Rodriguez on Unsplash

    ಬದುಕನ್ನು ಮತ್ತಷ್ಟು ಸಂಭ್ರಮಿಸುವ ಬಗೆಯಿದು

    ನಾವು ಬದುಕನ್ನು ಖುಷಿಯಾಗಿ ಕಳೆಯುವುದನ್ನು ಕಲಿತಿದ್ದೇವೆಯೇ? ಜೀವನದಲ್ಲಿ . ಅನಿರ್ದಿಷ್ಟತೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈ ಕ್ಷಣವನ್ನು ಖುಷಿಯಿಂದ ಕಳೆಯಲು ಮನಸ್ಸು ಹಿಂದೇಟು ಹಾಕುತ್ತಿದೆಯಾ?

    ಬದುಕಿದ್ದಷ್ಟೂ ದಿನ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಕಳೆಯುವುದಷ್ಟೇ ಜೀವನದ ಉದ್ದೇಶ ಆಗಿರಬೇಕು. ಇತರರನ್ನು ದ್ವೇಷಿಸಿ, ತೊಂದರೆ ಕೊಟ್ಟು ಬದುಕಿದ್ದಷ್ಟೂ ದಿನ ಮತ್ತೊಬ್ಬರ ಬಗ್ಗೆಯೇ ಅಸೂಯೆ, ಅಸಹನೆ, ದ್ವೇಷ ಮನೋಭಾವ ಬೆಳೆಸಿಕೊಳ್ಳುವುದರಿಂದ ಗಳಿಸುವಂತಹದ್ದೂ ಏನೂ ಇಲ್ಲ. ಕಳೆದುಕೊಳ್ಳುವುದೇ ಹೆಚ್ಚು.

    ಜೀವನದ ಕೊನೆಯ ಗಳಿಗೆಯ ಬಗ್ಗೆ ನಿಖರತೆ ಇಲ್ಲದೇ ಇರುವುದರಿಂದ ಈ ಕ್ಷಣವನ್ನು ಎಷ್ಟು ಸಾಧ್ಯವೋ ಅಷ್ಟು ಆನಂದಿಂದ ಎಲ್ಲರೊಂದಿಗೂ ಪ್ರೀತಿಭಾವದಿಂದ ಕಳೆದರೆ ಅದುವೇ ಜೀವನದ ಸಾರ್ಥಕ ಭಾವ. ಅದೇ ಬದುಕಿನ ಶ್ರೀಮಂತಿಕೆ.

    ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಕಾಣದ ಶಕ್ತಿಗೆ ಒಂದು ನಮನ ಸಲ್ಲಿಸಿ. ಬದುಕನ್ನು ಖುಷಿಯಿಂದ ಕಳೆಯಲು ನನ್ನ ಬದುಕಿನಲ್ಲಿ ಒಳ್ಳೆಯದನ್ನೇ ಯೋಚನೆ ಮಾಡಲು, ಈ ಕ್ಷಣವನ್ನು ಖುಷಿಯಿಂದ ಕಳೆಯಲು, ಎಲ್ಲರನ್ನೂ ಪ್ರೀತಿಸಲು ಮತ್ತೊಂದು ಅಮೂಲ್ಯ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ನೋಡಿ. ಇದೆಲ್ಲವುಗಳಿಂತ ಹೆಚ್ಚಾಗಿ ನಮ್ಮ ಬಳಿ ಏನಿದೆ ಏನಿಲ್ಲ ಎನ್ನುವುದಷ್ಟೇ ಮುಖ್ಯವಲ್ಲ. ಬದುಕನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದು ಮುಖ್ಯ.

    ಬದುಕನ್ನು ಆನಂದಿಸಲು
    ಪ್ರತಿ ಕ್ಷಣವನ್ನು ಸವಿಯಿರಿ. ಯಾವ ಕ್ಷಣ ನಮ್ಮ ಜೀವನದ ಕೊನೆ ಗಳಿಗೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವ ಪ್ರಯತ್ನ ಮಾಡಬೇಕು.

    ಮಗುವನ್ನು ಗಮನಿಸಿ ನೋಡಿ ಸಣ್ಣ ಸಣ್ಣ ವಿಷಗಳಲ್ಲಿಯೂ ಆನಂದವನ್ನು ಹುಡುಕುತ್ತಿರುತ್ತದೆ. ಹರಿದಾಡುವ ಇರುವೆಯನ್ನು ನೋಡಿ ಖುಷಿ ಕಂಡುಕೊಳ್ಳುತ್ತಿರುತ್ತದೆ. ಅದೇ ರೀತಿ ನಾವೂ ಕೂಡಾ ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು.

    ಮಗುವಾಗಿದ್ದಾಗ ಕಳೆದ ಪ್ರತಿಕ್ಷಣವೂ ಆನಂದದಾಯಕವಾಗಿರುತ್ತದೆ.
    ಅದಷ್ಟೇ ಅಲ್ಲ ಮಳೆಯ ಸಿಂಚನಕ್ಕೆ ಮೈಯೊಡ್ಡಿ ಸಂಭ್ರಮಿಸಿದ್ದು, ಮೋಜಿನ ಆಟಗಳನ್ನು ಆಡಿದ್ದು, ಯಾವುದರ ಬಗ್ಗೆಯೂ ಚಿಂತೆ ಇಲ್ಲದೇ ನಿರಾಂತಕವಾಗಿದ್ದಿದು. ಹೀಗೆ ಸಣ್ಣಸಣ್ಣ ಖುಷಿಯೂ ಅವಶ್ಯಕವೇ.

    ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಿ. ನಿತ್ಯ ಎಕ್ಸರಸೈಸ್ ಮಾಡುವುದರಿಂದ ನಮ್ಮಲ್ಲಿ ಖುಷಿಯಾಗಿರಲು ಪ್ರೇರಣೆ ನೀಡುವಂತಹ ರಾಸಾಯನಿಕಗಳು ಬಿಟುಗಡೆಯಾಗುವಂತೆ ಮಾಡುತ್ತದೆ. ಎಂಡೋರ್ಫಿನ್‍ಗಳ ಬಿಡುಗಡೆಯಿಂದ ದೇಹದಲ್ಲಿ ನೋವು ಒತ್ತಡ ಕಡಿಮೆ ಆಗುತ್ತದೆ.

    ನಗು ಮುಖದಿಂದಿರಿ. ನಗು ಎಲ್ಲದಕ್ಕೂ ಔಷಧ ಎಂದಿದ್ದಾರೆ ಹ್ಯಾರಿ ವಾರ್ಡ್ ಬೀಚರ್. ವ್ಯಾಯಾಮ ಮಾಡುವುದರಿಂದ ದೇಹ ಉಲ್ಲಾಸಿತಗೊಳ್ಳುತ್ತದೆ. ಖುಷಿಯಾಗಿರಿಸುವಂತಹ ವಿಷಯಗಳತ್ತ ಗಮನಹರಿಸಿ. ಹೊಸ ತರದ ಆಹಾರ ಸೇವನೆ, ಹಾಸ್ಯಮಯ ಸಿನಿಮಾಗಳನ್ನು ನೋಡುವುದು, ಮಕ್ಕಳೊಂದಿಗೆ ಸಮಯ ಕಳೆಯುವುದು, ಮೋಜಿನ ಆಟಗಳನ್ನು ಕೈಗೊಳ್ಳುವುದು ಇವೇ ಮೊದಲಾದ ಮನಸ್ಸಿಗೆ ಖುಷಿ ನೀಡುವಂತಹ ವಿಚಾರಗಳತ್ತ ಗಮನ ಹರಿಸಿ. ಹೊಸತನ್ನು ಟ್ರೈ ಮಾಡುವುದರಿಂದ ಅದು ಆಹಾರವೇ ಆಗಿರಬಹುದು ಅದರಿಂದ ಸಿಗುವ ಖುಷಿ ಬೇರೆಯೇ ಆಗಿರುತ್ತದೆ.

    ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಖುಷಿಯ ವಿಚಾರಗಳನ್ನು ದೈನಂದಿನ ಚಟುವಟಿಕೆಗಳನ್ನು ಅದರಲ್ಲಿ ನಮೂದಿಸುತ್ತಾ ಹೋಗಿ. ಮುಂದೊಂದು ಅದನ್ನು ತೆರೆದಾಗ ಆಗುವ ಖುಷಿ ಅಷ್ಟಿಷ್ಟಲ್ಲ.

    ಹೊಸ ವಿಷಯಗಳನ್ನು ಕಲಿಯಲು ಆರಂಭಿಸಿ. ಹೊಸ ವಿಷಯಗಳನ್ನು ಕಲಿತುಕೊಳ್ಳುವುದರಿಂದ ವಿಷಯಜ್ಞಾನ ಹೆಚ್ಚುವುದರ ಜತೆಗೆ ಖುಷಿಯೂ ಆಗುವುದು. ಮನಸ್ಸು, ಆಲೋಚನಾ ಕ್ರಮವನ್ನು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ಮಾಡುವುದು. ದೇಹ ಮತ್ತಷ್ಟುಚಟುವಟಿಕೆಯಿಂದ ಕೂಡಿರುವುದರಿಂದ ಸಹಜವಾಗಿ ಸಂತೋಷವೂ ಹೆಚ್ಚುವುದು.

    • ಥ್ಯಾಂಕ್ಸ್ ಹೇಳುವುದು, ಉಡುಗೊರೆಗಳನ್ನು ನೀಡುವುದು, ಕುಟುಂಬದವರೊಂದಿಗೆ, ಬಂಧು ಬಾಂಧವರೊಡನೆ ಸಮಯ ಕಳೆಯುವುದು ಕೂಡಾ ಖುಷಿ ನೀಡುತ್ತದೆ. ಅದಕ್ಕಾಗಿ ಸಮಯ ಮೀಸಲಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೈಚಾಚಿ ಬಂದವರಿಗೆ ಸಹಾಯ ಮಾಡುವುದು, ಕೆಲಸದ ಜಾಗದಲ್ಲಿ ಹೊಸಬರಿಗೆ ಸಹಾಯಮಾಡುವುದು, ಇವೇ ಮೊದಲಾದ ಸಣ್ಣ ಸಣ್ಣ ವಿಷಯಗಳೂ ಕೂಡಾ ಖುಷಿ ನೀಡುತ್ತದೆ.
    • ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಆದರೆ ವರ್ತಮಾನದಲ್ಲಿ ಜೀವಿಸಿ. ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾ,ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ಪ್ರಸ್ತುತ ಜೀವನದ ಸುಖದ ಕ್ಷಣಗಳನ್ನು ಮರೆತರೆ ಅದಕ್ಕರ್ಥವಿಲ್ಲ.ಖುಷಿಯಿಂದಿರುವ ವ್ಯಕ್ತಿಗಳು ಹೆಚ್ಚಾಗಿ ಈ ಕ್ಷಣವನ್ನು ಅನುಭವಿಸುತ್ತಿರುತ್ತಾರೆ ಎಂಬುದು ಸಂಶೋಧನೆಗಳಿಂದಲೂ ತಿಳಿದುಬಂದಿದೆ.
    • ಬದುಕಿನ ಸಣ್ಣ ಸಣ್ಣ ಯಶಸ್ಸನ್ನೂ ಆನಂದಿಸಿ. ಇದರಿಂದ ಜೀವನಕ್ಕೆ ಮತ್ತಷ್ಟು ಸೂರ್ತಿ ಮತ್ತು ಪ್ರೇರಣೆ ಸಿಗುತ್ತದೆ. ಸಣ್ಣದೇ ಆಗಿರಬಹುದು ಅದರೆ ಅದನ್ನು ಅನುಭವಿಸುವುದರಿಂದ ಸಿಗುವ ಖುಷಿಯ ಮೊತ್ತ ದೊಡ್ಡದೇ ಆಗಿರುತ್ತದೆ.
    • ತನ್ನ ಬಳಿ ಏನಿದೆಯೋ ಅದರ ಬಗ್ಗೆ ಹೆಮ್ಮೆ ಇರಲಿ. ಏನಿಲ್ಲವೋ ಅದರ ಬಗ್ಗ ಚಿಂತೆ ಬೇಡ. ಪಾಲಿಗೆ ಬಂದದ್ದು ಪಂಚಾಮೃತ ಅನ್ನುತ್ತಾರಲ್ಲ. ಅಂತಹ ಮನಸ್ಥಿತಿ ಇರಲಿ.
    • ಕುಟುಂಬ, ಗೆಳೆಯರ ಬಳಗವನ್ನು ಗೌರವಿಸಿ. ಅವರ ಬಗ್ಗೆ ಹೆಮ್ಮೆ ಇರಲಿ. ಪ್ರೀತಿಪಾತ್ರರನ್ನು ಗೌರವಿಸುವುದರಿಂದ ಆದರದಿಂದ ಕಾಣುವುದರಿಂದ ಪರಸ್ಪರ ಬಾಂಧವ್ಯ ಚೆನ್ನಾಗಿರುತ್ತದೆ. ಕಷ್ಟಕಾಲದಲ್ಲಿಯೂ ನೆರವಾಗುತ್ತಾರೆ.
    • ಜೀವನ ಅನ್ನೋದು ಕ್ಷಣಿಕ. ಬದುಕಿನ ಬಗ್ಗೆ ನಿಖರತೆ ಇಲ್ಲ, ಇಲ್ಲಿ ಯಾವುದೂ ಕೂಡಾ ಶಾಶ್ವತ ಅಲ್ಲ. ಹಾಗಿರುವಾಗ ಜೀವನವನ್ನು ಪ್ರತಿಕ್ಷಣ ಖುಷಿಯಿಂದ ಅನುಭವಿಸಲಿಕ್ಕಾಗಿಯೇ ಇದ್ದೇನೆ ಎನ್ನುವ ಭಾವ ಇರಲಿ.

    Photo by Belle Co from Pexels

    ಇಂದಿನ ನುಡಿ

    ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು…

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 7 ಅಕ್ಟೋಬರ್ 2020,ಬುಧವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ಪಂಚಮಿನಕ್ಷತ್ರ:ರೋಹಿಣಿ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.06

    NEP: ಈಗಿನ ವ್ಯವಸ್ಥೆಯಲ್ಲಿಯೇ ಜಾರಿಗೆ ತರುವುದು ಹೇಗೆ?

    2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಹಲವಾರು ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರದ ಆದೇಶಗಳಿಗೆ ನಿರೀಕ್ಷಿಸಿ ಕಾದು ಕುಳಿತುಕೊಳ್ಳುವ ಬದಲು, ಪ್ರಸ್ತುತ ವ್ಯವಸ್ಥೆಯಲ್ಲಿಯೇ ಹಲವಾರು ಹಂತಗಳಲ್ಲಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಅವಲೋಕಿಸಲಾಗಿದೆ.

    ನನ್ನ ಗುರುಗಳ ಸ್ಥಾನದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನ್ಯಾಕ್ ವಿಶ್ರಾಂತ ನಿರ್ದೇಶಕರಾದಂತ ಡಾ. ಎಚ್. ಎ. ರಂಗನಾಥ್‍ ಅವರು ಸೆಪ್ಟಂಬರ್ 19 ರಂದು ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ ವೆಬಿನಾರ್‍ನಲ್ಲಿ ನೀಡಿದ ಉದ್ಘಾಟನಾ ಭಾಷಣಕ್ಕೆ ಹಾಜರಾಗಿ, ಈ ಲೇಖನದ ಕೆಲವು ಅಂಶಗಳ ಬಗ್ಗೆ ಅವರ ಜೊತೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡಿದ್ದೇನೆ. ಪ್ರಸ್ತುತ ವ್ಯವಸ್ಥೆಯಲ್ಲೇ ನೂತನ ಶಿಕ್ಷಣ ನೀತಿಯನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ವಿವರಿಸಲಾಗಿದೆ.

    ಸಂಯೋಜಿತ ಕಾಲೇಜುಗಳ ಮಟ್ಟದಲ್ಲಿ 

    ರಾಷ್ಟೀಯ ಶಿಕ್ಷಣ ನೀತಿಯ ಪ್ರಕಾರ ಬೋಧನಾ ಕ್ರಮದಲ್ಲಿ ವಿದ್ಯಾರ್ಥಿ ಕೇಂದ್ರ ಬಿಂದು ಇರುವ ( Student centric ) ಪದ್ಧತಿಯನ್ನು ಅಳವಡಿಸಿ ಸೃಜನಾತ್ಮಕ, ವಿಮರ್ಶಾತ್ಮಕ ಚಿಂತನೆ ಹಾಗೂ ಪರಿಕಲ್ಪನಾ ತಿಳಿವಳಿಕೆಗೆ ಒತ್ತು ನೀಡಲಾಗಿದೆ. ಈ ಶಿಪಾರಸ್ಸುಗಳನ್ನು ಪ್ರಸ್ತುತ ವ್ಯವಸ್ಥೆಯಲ್ಲಿಯೇ ಯಾವುದೇ ಹಣಕಾಸಿನ ಅವಶ್ಯಕತೆಯಿಲ್ಲದೇ, ಅಧ್ಯಾಪಕರ ಸೃಜನಶೀಲತೆಯ ಬೆಂಬಲದಿಂದ ಜಾರಿಗೊಳಿಸಬಹುದು.

    ಬೋಧನೆ, ಕಲಿಕೆ ಮತ್ತು ಆಂತರಿಕ ಮೌಲ್ಯಮಾಪನದಲ್ಲಿ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ. ಸರ್ಕಾರಗಳ ಸೂಚನೆಗೆ ಕಾಯ ಬೇಕಿಲ್ಲ.

    ಜೀವನ ಕೌಶಲ್ಯಗಳು / ಸಾಮಾಜಿಕ ಕೌಶಲ್ಯಗಳು / ಔದ್ಯೋಗಿಕ ಕೌಶಲ್ಯಗಳು / ವಿಷಯಗಳಿಗೆ ಸಂಬಂಧಿಸಿದ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅವಶ್ಯಕತೆಯಿರುವ ವಿಷಯಗಳನ್ನು ಕುರಿತಂತೆ ಸರ್ಟಿಫಿಕೇಟ್ ಕೋರ್ಸುಗಳ ಮೂಲಕ ಶಿಕ್ಷಣ ನೀಡಬಹುದು. ಹಲವಾರು ವಿದ್ಯಾಸಂಸ್ಥೆಗಳಲ್ಲಿ ಈ ಪದ್ಧತಿಯು ಈಗಾಗಲೇ ಚಾಲ್ತಿಯಲ್ಲಿದೆ.

    ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡಬೇಕೆಂದು ಶಿಪಾರಸ್ಸು ಮಾಡಲಾಗಿದೆ. ಆಡಳಿತ ಮಂಡಳಿಗಳ ಸಹಕಾರದಿಂದ , ವಿದ್ಯಾಸಂಸ್ಥೆಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಧ‍್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬಹುದು.

     ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿಪರ ಅಬಿವೃದ್ಧಿಗೆ ( Comprehensive and Continuous Professional Development ) ಒತ್ತು ನೀಡಲಾಗಿದೆ. ಪುನಃಶ್ಚೇತನ ಕೋರ್ಸುಗಳಿಗೆ ಹಾಜರಾಗುವುದು, ಸಮ್ಮೇಳನಗಳಲ್ಲಿ ಭಾಗವಹಿಸುವುದು, ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಉತ್ತೇಜನ ನೀಡುವುದು ಇತ್ಯಾದಿ, ಇವುಗಳ ಮೂಲಕ ಶಿಕ್ಷಕರ ಗುಣಮಟ್ಟದಲ್ಲಿ ಅಪಾರವಾದ ಅಭಿವೃದ್ಧಿಯನ್ನು ಕಾಣಬಹುದು.

    ಇನ್ನುಇನ್ಕುಬೇಷನ್ ಕೇಂದ್ರಗಳು, ಉದ್ಯಮ ಅಕಾಡಮಿಯ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ, ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತೆಯನ್ನು( Entrepreneurship ) ಅಭಿವೃದ್ಧಿ ಪಡಿಸಬಹುದು.

    ಸ್ವಾಯತ್ತ ಮಹಾವಿದ್ಯಾಲಯಗಳ ಮಟ್ಟದಲ್ಲಿ

    ಪ್ರತಿಯೊಂದು ವಿಶ್ವವಿದ್ಯಾಲಯವು 2035 ರ ವೇಳೆಗೆ ಬಹು ಶಿಸ್ತೀಯ ಕಾಲೇಜಾಗಿ ಬೆಳೆಯಲು ಸೂಚಿಸಲಾಗಿದೆ. ಪ್ರಸ್ತುತ ಒಂದೇ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವ ಮಹಾವಿದ್ಯಾಲಯಗಳು, ಬಹುಶಿಸ್ತೀಯ ಮಹಾ ವಿದ್ಯಾಲಯಗಳಾಗಿ ಬೆಳೆಯಲು ಉತ್ತೇಜನ ನೀಡಿದರೆ ಮುಂದಿನ ವರ್ಷಗಳಲ್ಲಿಯೇ ಗುರಿಯನ್ನು ಸಾಧಿಸಬಹುದು.

    ಪಠ್ಯಕ್ರಮವನ್ನು ವಿದ್ಯಾರ್ಥಿ ಕೇಂದ್ರಬಿಂದು ಪದ್ಧತಿಗೆ ಅನುಗುಣವಾಗಿ ಪುನರ್‍ರಚಿಸಿ, ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಹೆಚ್ಚಿಸಬಹುದು. ಇದು ತಕ್ಷಣದಿಂದಲೇ ಸಾಧ್ಯ.

    ಕಂಠಪಾಠ ಕಲಿಕೆಗೆ ( rote learning ) ತಿಲಾಂಜಲಿ ನೀಡಿ, ಸೃಜನಶೀಲತೆ, ಹೊಸತನ್ನು ಕಂಡುಹಿಡಿಯುವಿಕೆ ಮತ್ತು ಪರಿಕಲ್ಪನಾ ತಿಳಿವಳಿಕೆಗಳನ್ನು ಉತ್ತೇಜಿಸುವಂತೆ, ಪಠ್ಯಕ್ರಮ ಮತ್ತು ಬೋಧನಾ – ಕಲಿಕೆ ಕಾರ್ಯ ವಿಧಾನವನ್ನು ಮಾರ್ಪಾಟು ಮಾಡಬಹುದು.

    ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ, ಸಂಪೂರ್ಣ ಸ್ವಾತಂತ್ರ್ಯ ನೀಡಿ ಅಂತರ ಶಿಸ್ತೀಯ ( interdisciplinary ) ಪದ್ಧತಿಯನ್ನು ಜಾರಿಗೊಳಿಸ ಬಹುದು. ಕಲೆ, ವಿಜ್ಞಾನ. ವಾಣಿಜ್ಯ, ಸಮಾಜ ವಿಜ್ಞಾನದ ವಿಷಯಗಳು, ಮಾನವೀಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು ಇವುಗಳ ನಡುವೆ ಈಗಿರುವ ಅಡ್ಡಗೋಡೆಗಳನ್ನು ತೆಗೆದುಹಾಕಿ, ಅಂತರಶಿಸ್ತೀಯ ಶಿಕ್ಷಣಕ್ಕೆ ಉತ್ತೇಜನ ನೀಡಬಹುದಾಗಿದೆ.ಮುಕ್ತ ಕಲೆ ಶಿಕ್ಷಣಕ್ಕೆ (Liberal Arts Education) ಉತ್ತೇಜನ ನೀಡಬಹುದು.

    ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿಷಯಗಳ ಕಾಂಬಿನೇಷನ್ ಆರಿಸಿಕೊಳ್ಳುವಾಗ ಔದ್ಯೋಗಿಕ ವಿಷಯಗಳನ್ನು ಸೇರಿಸುವುದರ ಮೂಲಕ, ಔದ್ಯೋಗಿಕ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದಲ್ಲಿ ವಿಲೀನಗೊಳಿಸಬಹುದು.

    ಸಾಮಾಜಿಕ ಎಂಗೇಜ್‍ಮೆಂಟ್( Community Engagement ), ಪರಿಸರ ವಿಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣಗಳನ್ನು ಕ್ರೆಡಿಟ್ ಆಧಾರಿತ ಕೋರ್ಸುಗಳಾಗಿ ಮತ್ತು ಯೋಜನೆಗಳಾಗಿ ಪರಿಚಯಿಸಬಹುದು.ಇಂಟರ್ನ್‍ಶಿಪ್ ಅನ್ನು ಪಠ್ಯಕ್ರಮದ ಒಂದು ಭಾಗವಾಗಿ ಮಾಡಬಹುದು.

    ವಿದ್ಯಾಸಂಸ್ಥೆಗಳಲ್ಲಿ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು.

    ಸಂಶೋಧನೆ ಮೂಲಕ ಸ್ನಾತಕೋತ್ತರ ಪದವಿಗಳನ್ನು ನೀಡುವ ಪದ್ಧತಿಯನ್ನು ಪರಿಚಯಿಸಬಹುದು.

    ಇವುಗಳ ಜೊತೆಗೆ, ಸಂಯೋಜಿತ ಕಾಲೇಜುಗಳ ಮಟ್ಟದಲ್ಲಿ ಉಲ್ಲೇಖಿಸಿರುವ ಹಲವಾರು ಯೋಜನೆಗಳನ್ನು, ಉದಾಹರಣೆಗೆ ತಂತ್ರಜ್ಞಾನ ಅಳವಡಿಕೆ, ಸರ್ಟಿಫಿಕೇಟ್ ಕೋರ್ಸುಗಳನ್ನು ಪ್ರಾರಂಭಿಸುವುದು, ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿ ಪರ ಅಭಿವೃದ್ದಿ, ಇನ್ಕುಬೇಷನ್ ಕೇಂದ್ರಗಳ ಸ್ಥಾಪನೆ, ತಕ್ಷಣದಿಂದಲೇ ಕಾರ್ಯಗತಕ್ಕೆ ತರಬಹುದು.

    ವಿಶ್ವವಿದ್ಯಾಲಯಗಳ ಮಟ್ಟದಲ್ಲಿ

    ವಿವಿಧ ಬಗೆಯ ನಿರ್ಗಮನ ಆಯ್ಕೆ ಅವಕಾಶಗಳೊಳಗೊಂಡಂತೆ (multiple exit options) ನಾಲ್ಕು ವರ್ಷಗಳ ಅವಧಿಯ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಅಗತ್ಯವಾದ ಕ್ರಮಗಳನ್ನು ಪ್ರಾರಂಭಿಸಬಹುದು.

    ಮೊದಲ ಹಂತದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಉನ್ನತಿ ವಿದ್ಯಾ ಸಂಸ್ಥೆಗಳಲ್ಲಿ  ( Institutions of eminence ) ಪ್ರಾರಂಭಿಸಿ, ನಂತರ ಉಳಿದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಪ್ರಾರಂಭಿಸಬಹುದು.

    ಅಕಾಡೆಮಿಕ್ ಬ್ಯಾಂಕ್ ಕ್ರೆಡಿಟ್ ವ್ಯವಸ್ಥೆಯನ್ನು ಪ್ರಾರಂಭಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.

    ಐದು ವರ್ಷದ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಬಹುದು.

    ನಾಲ್ಕು ವರ್ಷದ ಬಿ. ಎಡ್ ಕೋರ್ಸುಗಳನ್ನು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಬಹುಶಿಸ್ತೀಯ ಕಾಲೇಜುಗಳಲ್ಲಿ ಪ್ರಾರಂಭಿಸಬಹುದು. ಈಗಿರುವ ಬಿ. ಎಡ್ ಕಾಲೇಜುಗಳನ್ನು ಬಹುಶಿಸ್ತೀಯ ಕಾಲೇಜುಗಳಾಗಿ ಪರಿವರ್ತನೆಯಾಗಲು ಉತ್ತೇಜನ ನೀಡಬಹುದು, ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು.

    ಆನ್‍ಲೈನ್ ಮತ್ತು ಮುಕ್ತ ದೂರದ ಕಲಿಕೆ ( open distance learning ) ಪದ್ಧತಿಯಲ್ಲಿ ಕೋರ್ಸುಗಳನ್ನು ಪ್ರಾರಂಭಿಸಬಹುದು.

    ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿಷಯಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಪೆಟೇರಿಯಾ ಪದ್ಧತಿಯನ್ನು ಅಳವಡಿಸಬಹುದು. ಇದರಿಂದ ಅಂತರಶಿಸ್ತೀಯ ( interdisciplinary ) ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

    ಮುಕ್ತ ಕಲೆ ಶಿಕ್ಷಣಕ್ಕೆ (Liberal Arts Education ) ಹೆಚ್ಚು ಒತ್ತು ಮತ್ತು ಉತ್ತೇಜನ ನೀಡಬಹುದು.

    ಇಂಟರ್ನ್ ಶಿಪ್‍ನ್ನು ಪಠ್ಯಕ್ರಮದ ಒಂದು ಭಾಗವಾಗಿ ಮಾಡಬಹುದು. ಮೊದಲ ಹಂತದಲ್ಲಿ ಔದ್ಯೋಗಿಕ ಕೋರ್ಸುಗಳಲ್ಲಿ ಕಡ್ಡಾಯಗೊಳಿಸಬಹುದು.

    ಕಂಠಪಾಠ ಕಲಿಕೆಗೆ ತಿಲಾಂಜಲಿ ನೀಡಿ, ಸೃಜನಶೀಲತೆ ಹಾಗೂ ಪರಿಕಲ್ಪನಾ ತಿಳುವಳಿಕೆಗೆಒತ್ತು ನೀಡಿ, ಪಠ್ಯಕ್ರಮ, ಕಲಿಕಾ ಪದ್ದತಿ ಮತ್ತು ಮೌಲ್ಯಮಾಪನದ ಕ್ರಮಗಳನ್ನು ಪುನರ್‍ರಚಿಸಿ,ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಸಹ ಸೂಕ್ತವಾಗಿ ಬದಲಾಯಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು.

    ತರಗತಿಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತವನ್ನು ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿರುವಂತೆ ನಿರ್ಬಂಧಿಸಬಹುದು. ಉದಾಹರಣೆಗೆ, ಪದವಿ ತರಗತಿಗಳಲ್ಲಿ 60 : 1 ಸ್ನಾತಕೋತ್ತರ ತರಗತಿಗಳಲ್ಲಿ 40 : 1 ಅನುಪಾತವನ್ನು ಅಳವಡಿಸಬಹುದು. ಇದರಿಂದ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ನಡುವೆ ಅರ್ಥಪೂರ್ಣ ಸಂವಹನಕ್ಕೆ ಅವಕಾಶ ಸಿಗುತ್ತದೆ.

    ಹೆಚ್ಚಿನ ಸಂಖೈಯಲ್ಲಿ ಅರ್ಹತೆಯಿರುವ ಕಾಲೇಜುಗಳಿಗೆ ಸ್ವಾಯತ್ತತೆ ನೀಡಬಹುದು.

    ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಮತ್ತು ಉತ್ತೇಜನ ನೀಡಬಹುದು. ಹಲವಾರು ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು.

    ಪ್ರತಿಷ್ಠಿತ ವಿದೇಶಿ ವಿಶ‍್ವವಿದ್ಯಾಲಯಗಳ ಜೊತೆ ಅವಳಿ ಕೋರ್ಸುಗಳನ್ನು ( twinning programmes ) ಪ್ರಾರಂಭಿಸಬಹುದು.

    ರಾಜ್ಯ ಸರ್ಕಾರದ ಮಟ್ಟದಲ್ಲಿ

    ಪ್ರಸ್ತುತದಲ್ಲಿ ಏಕಶಿಸ್ತೀಯ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾಸಂಸ್ಥೆಗಳು ಬಹು ಶಿಸ್ತೀಯ ಶಿಕ್ಷಣ ಸಂಸ್ಥೆಗಳಾಗಿ ಬದಲಾಗಲು ಅವಶ್ಯಕತೆಗೆ ಅನುಗುಣವಾಗಿ ಬೆಂಬಲ, ಸಹಕಾರ, ಅನುಮತಿ ಮತ್ತು ಉತ್ತೇಜನ ನೀಡಬಹುದು.

    ತರಗತಿಗಳಲ್ಲಿ, ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಂಖ್ಯಾ ಅನುಪಾತವನ್ನು ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿರುವಂತೆ ಆದೇಶ ನೀಡಬಹುದು.

    ವಿಶ್ವವಿದ್ಯಾಲಯಗಳಲ್ಲಿ ಮತ್ತು ವಿದ್ಯಾ ಸಂಸ್ಥೆಗಳಲ್ಲಿ ನಾಲ್ಕು ವರ್ಷದ ಪದವಿ ಕೋರ್ಸು ಹಾಗೂ ನಾಲ್ಕು ವರ್ಷದ  ಬಿ.ಎಡ್ ಕೋರ್ಸುಗಳನ್ನು ಪ್ರಾರಂಭಿಸಲು ಅತ್ಯಾವಶ್ಯಕವಾದ ಕ್ರಮಗಳನ್ನು ಕೂಡಲೆ ತೆಗದುಕೊಳ್ಳಬಹುದು.

    ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಾಮಕಾರಿ ಆಡಳಿತ ವ್ಯವಸ್ಥೆ ಹಾಗೂ ನಾಯಕತ್ವವನ್ನು ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು.

    ವಿಶ್ವ ವಿದ್ಯಾಲಯಗಳಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ನೀಡುವುದು, ವಿನೂತನ ಪಠ್ಯಕ್ರಮ ಮತ್ತು ಕೋರ್ಸುಗಳನ್ನು ಪರಿಚಯಿಸಲು ಉತ್ತೇಜನ ಹಾಗೂ ಅನುಮತಿಯನ್ನು ನೀಡುವುದು.

    ಪ್ರಸ್ತುತದಲ್ಲಿರುವ ಏಕ ಶಿಸ್ತೀಯ ಕಾಲೇಜುಗಳನ್ನು ವಿಲೀನಗೊಳಿಸಿ, ಬಹುಶಿಸ್ತೀಯ ಕಾಲೇಜುಗಳಾಗಿ ಪರಿವರ್ತನೆ ಮಾಡಬಹುದು. ಉದಾಹರಣೆಗೆ ಬೆಂಗಳೂರಿನ ಮಹಾರಾಣಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳನ್ನು ವಿಲೀನಗೊಳಿಸಿ, ಬಹುಶಿಸ್ತೀಯ ಕಾಲೇಜಾಗಿ ಪರಿವರ್ತಿಸಬಹುದು.

    ಸೂಕ್ತವಾದಂತ ಮಾನದಂಡವನ್ನು ನಿರ್ಧರಿಸಿ, ಅದರ ಆಧಾರದ ಮೇಲೆ ರಾಜ್ಯದ ವಿಶ್ವವಿದ್ಯಾಲಯಗಳನ್ನು ಜಾಗತಿಕ ಮಟ್ಟದಲ್ಲಿ ಸಂಶೋಧನೆಗೆ ಒತ್ತು ನೀಡುವ ಹಾಗೂ ಉತ್ತಮ ಮಟ್ಟದ ಬೋಧನೆಯನ್ನು ಮಾಡುವ ವಿಶ್ವವಿದ್ಯಾಲಯಗಳು( Research Intensive Universities ) ಹಾಗೂ ಎರಡನೆಯದಾಗಿ, ಬೋಧನೆಗೆ ಒತ್ತು ಕೊಟ್ಟು ಗಮನಾರ್ಹ ಸಂಶೋಧನೆಯನ್ನು ನಡೆಸುವ ವಿಶ್ವ ವಿದ್ಯಾಲಯಗಳು( Teaching Intensive Universities ) ಎಂಬುವುದಾಗಿ ವಿಂಗಡಿಸಬಹುದು.

    ಕೇಂದ್ರ ಸರ್ಕಾರದ ಮಟ್ಟದಲ್ಲಿ

    ಉಳಿದಂತೆ, ಇನ್ನೂ ಕೆಲವು ಶಿಪಾರಸ್ಸುಗಳ ಅನುಷ್ಠಾನ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಜಾರಿಗೊಳಿಸ ಬೇಕಾಗಿದೆ.

    ನಿಯಂತ್ರಣ ಸಂಸ್ಥೆಗಳ ಸ್ಥಾಪನೆ ( Setting up of Regulatory bodies ).

    ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆ.

    ಅಧ್ಯಾಪಕರಿಗೆ ಕಾರ್ಯ ಕ್ಷಮತೆ ಆಧಾರಿತ ಪ್ರೋತ್ಸಾಹಗಳು, ಬಡ್ತಿಗಳು ಹಾಗೂ ಪ್ರಯೋಜನಗಳನ್ನು ನೀಡುವ ಬಗ್ಗೆ ನಿಯಮಗಳ ರಚನೆ.

    ಪಿಎಚ್‍.ಡಿ ಪದವಿಯ ಬಗ್ಗೆ ನಿಯಮಗಳನ್ನು ರೂಪಿಸುವುದು.

    ದೇಶದಲ್ಲಿ ಉನ್ನತ ಶಿಕ್ಷಣವನ್ನು ಅಂತರ ರಾಷ್ಟ್ರೀಕರಣಗೊಳಿಸುವುದು.

    ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್‍ಗಳನ್ನು ಸ್ಥಾಪಿಸಲು ಅನುಮತಿ ನೀಡುವುದು.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಶಿಪಾರಸ್ಸುಗಳನ್ನು ಆರ್ಥಿಕ ಮತ್ತು ಆರ್ಥಿಕೇತರ ಎಂಬುವುದಾಗಿ ವಿಂಗಡಿಸಿ, ಆರ್ಥಿಕೇತರ ಶಿಪಾರಸ್ಸುಗಳನ್ನು ಕೂಡಲೇ ಅನುಷ್ಠಾನಕ್ಕೆ ತರಲು ಪ್ರಯತ್ನಗಳನ್ನು ನಡೆಸಬಹುದು. ಈ ಲೇಖನದಲ್ಲಿ ಆರ್ಥಿಕ ಹೊಣೆಯಿಲ್ಲದೇ, ಆರ್ಥಿಕೇತರ ಶಿಪಾರಸ್ಸುಗಳನ್ನು ಹೆಚ್ಚಾಗಿ ಪಟ್ಟಿ ಮಾಡಲಾಗಿದೆ.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರಪಂಚದ ಬೇರೆ ದೇಶಗಳಿಗೆ ಮಾದರಿಯಾಗಿ, ನಮ್ಮ ದೇಶದ ಶಿಕ್ಷಣದ ಘನತೆ ಹೆಚ್ಚಾಗಲೆಂದು ಆಶಿಸೋಣ.

    ಆರ್.ಆರ್.ನಗರ, ಶಿರಾಗಳಲ್ಲಿ ಸಂಪ್ರದಾಯ ಬದಲಾಗುವುದೇ?


    ಅಶೋಕ ಹೆಗಡೆ
    ಸಾಮಾನ್ಯವಾಗಿ ನಿಧನ ಹೊರತುಪಡಿಸಿ ಬೇರೆ ಕಾರಣಗಳಿಂದ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಡೆದರೆ ಆಡಳತ ಪಕ್ಷವೇ ಜಯ ಗಳಿಸುವುದು ವಾಡಿಕೆ. ಏಕೆಂದರೆ ಪ್ರಭುತ್ವದ
    ಜತೆಗಿದ್ದರೆ ಒಂದಷ್ಟಾದರೂ ಅಭಿವೃದ್ಧಿ ಕೆಲಸಗಳು ಆಗಬಹದು ಎನ್ನುವುದು ಜನರ ಲೆಕ್ಕಾಚಾರ. ಹೀಗಾಗಿ ಆ ಕ್ಷೇತ್ರದಲ್ಲಿ ಸಂಘಟನೆ ಇಲ್ಲದಿದ್ದರೂ ಆಡಳಿತ ಪಕ್ಷವೇ ಗೆಲವು ಸಾಧಿಸಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗೆಯೇ ಹಾಲಿ ಶಾಸಕರ ಸಾವಿನಿಂದ ತೆರವಾಗುವ
    ಕ್ಷೇತ್ರಗಳಲ್ಲಿ ಅವರ ಕುಟುಂಬ ಸದಸ್ಯರೇ ಅನುಕಂಪದ ಅಲೆಯಲ್ಲಿ ಗೆಲ್ಲುವುದು ಬಹುತೇಕ
    ನಿಶ್ಚಿತ.

    ಈ ಎರಡೂ ಕಾರಣಗಳಿಂದ ನಡೆಯುವ ಉಪ ಚುನಾವಣೆಯಲ್ಲಿ ಭಾರಿ ಅಂತರದಿoದ ಗೆದ್ದ
    ವ್ಯಕ್ತಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಿದರ್ಶನಗಳೂ ಇವೆ.
    ಆದರೆ, ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಈ
    ಮಾತು ಅಪವಾದವಾದರೂ ಅಚ್ಚರಿ ಇಲ್ಲ.
    ಮೊದಲಿಗೆ ರಾಜರಾಜೇಶ್ವರಿ ಕ್ಷೇತ್ರವನ್ನೇ ನೋಡೋಣ. ಕಾಂಗ್ರೆಸ್‌ನಿಂದ ಮುನಿರತ್ನ ಅವರು
    ಬಿಜೆಪಿಗೆ ಪಕ್ಷಾಂತರ ಮಾಡಿರುವುದರಿಂದ ಉಪ ಚುನಾವಣೆ ನಡೆಯುತ್ತಿದೆ. ಸಂಭವನೀಯ
    ಅಭ್ಯರ್ಥಿಗಳ ಪಟ್ಟಿಯಲ್ಲಿ ಮುನಿರತ್ನ ಮತ್ತು ಕಳೆದ ಬಾರಿ ಅವರ ಎದುರು ಸೋತಿದ್ದ ತುಳಸಿ
    ಮುನಿರಾಜು ಗೌಡ ಅವರ ಹೆಸರನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದರೂ ಇಲ್ಲಿ
    ಮುನಿರತ್ನ ಅವರೇ ಅಭ್ಯರ್ಥಿಯಾಗುವುದು ಖಚಿತ. “ಸಂಭವನೀಯ ಅಭ್ಯರ್ಥಿ ಪಟ್ಟಿಯಲ್ಲಿ
    ನಿಮ್ಮ ಹೆಸರನ್ನೂ ಕಳಿಸಿದ್ದೆವು, ಹೈಕಮಾಂಡ್ ಮುನಿರತ್ನ ಅವರಿಗೆ ಟಿಕೆಟ್ ನೀಡಿತು,”
    ಎಂದು ಮುನಿರಾಜು ಅವರನ್ನು ಸಮಾಧಾನಪಡಿಸುವುದು ಬಿಜೆಪಿ ತಂತ್ರಗಾರಿಕೆ.


    ಆದರೆ, ತುಳಸಿ ಮುನಿರಾಜು ಸುಮ್ಮನಿರುವುದಾಗಲೀ ಅಥವಾ ಮುನಿರತ್ನ ಗೆಲುವಿಗಾಗಿ ಕೆಲಸ ಮಾಡುವುದಾಗಲೀ ಸಾಧ್ಯವೇ ಇಲ್ಲ. ಮುನಿರತ್ನ ವಿರುದ್ಧ ಕೋರ್ಟ್ನಲ್ಲಿ ಸಲ್ಲಿಸಿದ್ದ
    ಅರ್ಜಿ ವಾಪಸ್ ಪಡೆದುಕೊಳ್ಳುವಂತೆ ಮಾಡಲು ಪಕ್ಷದ ನಾಯಕರನ್ನೇ ಸಾಕಷ್ಟು ಸತಾಯಿಸಿದವರು
    ತುಳಸಿ. ಈಗ ಮುನಿರತ್ನ ವಿಜಯಕ್ಕಾಗಿ ಕೆಲಸ ಮಾಡು ಎಂದರೆ ಸಾಧ್ಯವೆ?

    ಕಾಂಗ್ರೆಸ್ ಐಎಎಸ್ ಅಧಿಕಾರಿಯಾಗಿದ್ದ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರನ್ನು
    ಕಣಕ್ಕೆ ಇಳಿಸಬಹುದು. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಕ್ಷೇತ್ರದಲ್ಲಿ ಒಂದಷ್ಟು
    ಹಿಡಿತ ಇಟ್ಟುಕೊಂಡಿದ್ದಾರಾದರೂ ಅದು ಗೆಲವಿಗೆ ಸಾಕಾಗದು. ಮುನಿರತ್ನ ಎದುರು ಕುಸುಮಾ
    ದುರ್ಬಲ ಅಭ್ಯರ್ಥಿ ಎನ್ನುವುದು ನಿರ್ವಿವಾದ. ಯಾವುದೋ `ಬಾಹ್ಯ ಶಕ್ತಿ’ಯನ್ನು
    ನಂಬಿಕೊಂಡೇ ಕಾಂಗ್ರೆಸ್ ಕುಸುಮಾ ಅವರಿಗೆ ಟಿಕೆಟ್ ನೀಡಲಿದೆ ಎನ್ನುವುದೂ ನಿಜ. ಆ
    `ಬಾಹ್ಯ ಶಕ್ತಿ’ ತುಳಸಿ ಮುನಿರಾಜು ಗೌಡ ಅವರೇ ಆಗಿರಬಾರದು ಏಕೆ? ಈ ಸೂಕ್ಷ್ಮ
    ಅರಿತಿರುವ ಬಿಜೆಪಿ ಜೆಡಿಎಸ್ ಜತೆ `ಒಳ ಒಪ್ಪಂದ’ ಮಾಡಿಕೊಂಡಿರುವುದೂ ನಿಜವೇ. ಈ
    `ಬಾಹ್ಯ ಶಕ್ತಿ’ ಮತ್ತು ‘ಒಳ ಒಪ್ಪಂದ’ದ ತಂತ್ರಗಾರಿಕೆಯಲ್ಲಿ ಯಾರು ಗೆಲ್ಲುತ್ತಾರೆ
    ಎನ್ನುವುದುಯ ಕುತೂಹಲ ಮೂಡಿಸಿದೆ.
    ಶಿರಾದಲ್ಲಿ ಪಕ್ಷಾಂತರ ಪರ್ವ: ಜೆಡಿಎಸ್ ಶಾಸಕ ಬಿ,.ಸತ್ಯನಾರಾಯಣ ನಿಧನದಿಂದ
    ತೆರವಾಗಿರುವ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
    ಜೆಡಿಎಸ್ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೇ ಟಿಕೆಟ್ ನೀಡುವ
    ಇರಾದೆಯಲ್ಲಿದೆ. ಅನುಕಂಪದ ಲಾಭ ಪಡೆಯಲು ಪ್ರಯತ್ನಿಸುವುದು ಜೆಡಿಎಸ್‌ನ ತತ್ವವೇ
    ಆಗಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಗಳಳ್ಲಿನ ಪಕ್ಷಾಂತರ `ಪರ್ವ’ತವು ಅನುಕಂಪದ
    ಅಲೆಯನ್ನು ಮೆಟ್ಟಿನಿಲ್ಲುವ ಸಾಧ್ಯತೆಗಳು ಗೋಚರಚಾಗಿವೆ.

    ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್ ಗೌಡ ಅವರು ಜೆಡಿಎಸ್‌ನಿಂದ
    ಬಿಜೆಪಿಗೆ ಸೇರಿದ್ದಾರೆ. ಇದೇ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಲ್ಕೆರೆ ರವಿಕುಮಾರ್ ಸಹ ಕಾಂಗ್ರೆಸ್ ಸೇರಿ ಮೂಡಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ಘೋಷಿಸಿಯಾಗಿದೆ. ಅಲ್ಲಿಗೆ ರಾಜೇಶ್ ಗೌಡ, ಅಮ್ಮಾಜಮ್ಮ, ಟಿಬಿಜೆ ನಡುವೆ ಸ್ಪರ್ಧೆ ನಡೆಯುವುದು ಭಾಗಶಃ ನಿರ್ಧಾರವಾದಂತಾಗಿದೆ. ಅದರ
    ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಪಂಚಾಯಿತಿ ಮಟ್ಟದಲ್ಲಂತೂ ಮೂರೂ ಪಕ್ಷಗಳ ನಡುವೆ ಪಕ್ಷಾಂತರಗಳು ಬಿರುಸುಗೊಂಡಿವೆ.
    ಶಿರಾ ಬಿಜೆಪಿಯ ಅಖಾಡವೇ ಅಲ್ಲ. ಅದು ಕಾಂಗ್ರೆಸ್, ಜೆಡಿಎಸ್‌ನ ಮೈದಾನ. ಆದರೂ ಅಲ್ಲಿ
    ಗೆಲ್ಲುವ ಛಾತಿಯನ್ನು ಇಟ್ಟುಕೊಂಡು ಬಿಜೆಪಿ ಕಣಕ್ಕೆ ಇಳಿದಿದೆ. ಕೊನೆ ಕ್ಷಣದಲ್ಲಿ ಈ
    ಕ್ಷೇತ್ರದಲ್ಲಿಯೂ “ಒಳ ಒಪ್ಪಂದ’ಗಳ ಭರಾಟೆ ಜೋರಾಗಬಹುದು. ಆರ್ಥಿಕವಾಗಿ ಮತ್ತು
    ರಾಜಕೀಯವಾಗಿ ಯಾರು ಬಲಾಢ್ಯರೋ ಅವರು ಗೆಲ್ಲುತ್ತಾರೆ.

    ಪರಿಷತ್ ಪೈಪೋಟಿ: ಇದರ ಜತೆಗೆ. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೂ ಚುನಾವಣೆ
    ಘೋಷಣೆಯಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ
    ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
    ವಿಧಾನ ಪರಿಷತ್ ಚುನಾವಣೆ ವಿಧಾನಸಭೆ ಚುನಾವಣೆಯಂತಲ್ಲ. ಇಲ್ಲಿ ವರ್ಷಕ್ಕೂ ಮೊದಲೇ
    ಅಭ್ಯರ್ಥಿಗಳು ಯಾರು ಎನ್ನುವುದು ನಿಗದಿಯಾಗಿರುತ್ತದೆ. ಅವರು ಮತದಾರರ ಜತೆ
    ಸಂಪರ್ಕದಲ್ಲಿರುತ್ತಾರೆ. ಚುನಾವಣೆಗೂ ಬಹಳ ಮೊದಲೇ ಆಮಿಷಗಳ ಭರಾಟೆ ಶುರುವಾಗಿರುತ್ತದೆ.
    ನಿಜವಾದ ಸ್ಪರ್ಧೆ ಇರುವುದು ಹೀಗೆ ಆಮಿಷ ಒಡ್ಡುವುದರಲ್ಲಿಯೇ ವಿನಾ ಮತದಾನದಲ್ಲಿ
    ಅಲ್ಲವೇ ಅಲ್ಲ. ಮೂರು ಅವಧಿಗೆ ಜೆಡಿಎಸ್‌ನಿಂದ ಪರಿಷತ್ ಸದಸ್ಯರಾಗಿದ್ದ ಬೆಂಗಳೂರು
    ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಈಗ ಬಿಜೆಪಿಯಿಂದ ಸ್ಪರ್ಧಿಸಿರುವುದು ಬಿಜೆಪಿಗೆ
    ಅನುಕೂಲವಾಗಲಿದೆ. ಗೆದ್ದರೆ ಈ ಹಿಂದೆ ಇದ್ದ ಉಪ ಸಭಾಪತಿ ಸ್ಥಾನ ಪುಟ್ಟಣ್ಣ ಅವರಿಗೆ
    ಗ್ಯಾರಂಟಿ.

    ಶುಭ ದಿನ

    ಇಂದಿನ ನುಡಿ

    ಕೊಳೆಯೇ ಕಾಣದ ಲೋಕವಿಲ್ಲ. ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ಶುಚಿ ಮಾಡಿಕೊಳ್ಳುವುದೇ ಚೊಕ್ಕತನದ ಲಕ್ಷಣ.

    ಶಿವರಾಮ ಕಾರಂತ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 5 ಅಕ್ಟೋಬರ್ 2020,ಸೋಮವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ತದಿಗೆನಕ್ಷತ್ರ:ಭರಣಿ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.07

    ಇಂದಿನ ವಿಶೇಷ

    ವಿಶ್ವ ಮೂಲ ನಿವಾಸಿಗಳ ದಿನ

    ಐಪಿಒ ಅಂದು – ಇಂದು

    ಐಪಿಒ ಗಳಲ್ಲಿ ಹೂಡಿಕೆ ಮಾಡಿ, ಆ ಷೇರುಗಳು ಅಲಾಟ್‌ ಆದಲ್ಲಿ ಲಾಭ ಗಳಿಕೆ ಖಂಡಿತಾ ಇರುತ್ತದೆ ಎಂಬ ಭಾವನೆ ಜಾಗತೀಕರಣಕ್ಕೂ ಮೊದಲಿನಿಂದಲೂ ಬಂದಿದೆ. ಈಗಲೂ ಅನೇಕ ಹೂಡಿಕೆದಾರರು, ವಿಶೇಷವಾಗಿ ಸಣ್ಣ ಹೂಡಿಕೆದಾರರು ಷೇರುಗಳು ಅಲಾಟ್‌ ಆದ ಮೇಲೆ ಎಂತಹ ಲಾಭ ಬಂದರೂ ಸರಿ ಮಾರಾಟ ಮಾಡಬೇಕೆಂಬ ಚಿಂತನೆಯನ್ನೇ ಬೆಳೆಸಿಕೊಳ್ಳದೆ, ಹಿಂದೆ ಆ ಕಂಪನಿಯಲ್ಲಿ ಹೀಗೆ ಬೆಳೆದಿದೆ, ಇನ್ಫೋಸಿಸ್‌, ವಿಪ್ರೋ, ಹೆಚ್‌ ಡಿ ಎಫ್‌ ಸಿ ಯಲ್ಲಿ ಹೂಡಿಕೆ ಮಾಡಿದವರಿಗೆ ಕೋಟಿಗಟ್ಟಲೆ ಲಾಭ ಆಗಿದೆ, ಈಗ ಅಲಾಟ್ ಆಗಿರುವ ಕಂಪನಿಯೂ ಸಹ ಮುಂದೆ ಬೆಳೆಯಲು ಅವಕಾಶವಿದೆ, ಮುಂತಾದ ಚಿಂತನೆಗಳಿಂದ, ಭಾವನಾತ್ಮಕತೆಯ ಕಾರಣ ಅತಿ ಹೆಚ್ಚು ಲಾಭ ತಂದುಕೊಟ್ಟಾಗಲೂ ಅದರ ಉಪಯೋಗ ಪಡೆದುಕೊಳ್ಳುವ ಗೋಜಿಗೆ ಹೋಗಲಾರರು.

    ಈ ಚಿಂತನೆಯು ದೀರ್ಘಕಾಲೀನ ಹೂಡಿಕೆಗೆ ಪುಷ್ಠಿ ಕೊಡುತ್ತದಾದರೂ, ವಾಸ್ತವಿಕತೆಯನ್ನರಿತು ನಿರ್ಧರಿಸಿದಲ್ಲಿ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪಮಟ್ಟಿನ ಸುರಕ್ಷಿತತೆಯನ್ನು ಕಾಣಬಹುದು. ಈ ಪ್ರವೃತ್ತಿಯು ಅಕ್ಷರಶ: ಸರಿ, ಇತರೆ ಸಂಗತಿಗಳು ಬದಲಾಗದಿದ್ದರೆ. ಆದರೆ ಈಗ ಎಲ್ಲವೂ ವೇಗವಾದ ಬದಲಾವಣೆಗಳನ್ನು ಕಾಣುತ್ತಿವೆ. ಮೊಟ್ಟಮೊದಲು ಎಲ್ಲವೂ ತಾಂತ್ರಿಕತೆಗೊಳಪಟ್ಟಿವೆ.

    ಈ ಹಿಂದೆ ಕೆಲವು ಪದ್ಧತಿಗಳ ವಿವರ ಇಂತಿದೆ:

    1. ಐಪಿಒ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮೊದಲು ಆಗಿನ ಕಂಟ್ರೋಲರ್‌ ಆಫ್‌ ಕ್ಯಾಪಿಟಲ್‌ ಇಶ್ಯೂಸ್‌ ರವರ ಪೂರ್ವಾನುಮತಿ ಪಡೆಯಬೇಕಿತ್ತು. ಈಗ ಅಂತಹ ಪೂರ್ವಾನುಮತಿಯನ್ನು ಪೇಟೆಯ ನಿಯಂತ್ರಕ ʼಸೆಬಿʼ ಯಿಂದ ಪಡೆಯಬೇಕಿದೆ.
    2. ಕಂಟ್ರೋಲರ್‌ ಆಫ್‌ ಕ್ಯಾಪಿಟಲ್‌ ಇಶ್ಯೂಸ್‌ ಸಂಸ್ಥೆ ಎಂತಹ ಸಬಲ, ಬಲಿಷ್ಠ ಕಂಪನಿಯಾದರೂ ಅದು ಕೇವಲ ಅತ್ಯಲ್ಪ ಪ್ರೀಮಿಯಂ ಗೊತ್ತುಮಾಡುತ್ತಿತ್ತು. ಆಗಿನ ಸಮಯದಲ್ಲಿ ಪ್ರಮುಖ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೋಲಿವ್‌, ಬ್ರಿಟಾನ್ನಿಯಾ, ಹಾರ್ಲಿಕ್ಸ್‌, ಕ್ಯಾಡ್ಬರೀಸ್‌, ಈಸ್ಟ್‌ ಇಂಡಿಯಾ ಹೋಟೆಲ್ಸ್‌, ಟೀ ಎಸ್ಟೇಟ್ಸ್ ನಂತಹ ಸಾಧನೆಯಾಧಾರಿತ ಕಂಪನಿಗಳ ವಿತರಣಾ ಬೆಲೆ ಪೇಟೆಯ ಬೆಲೆಗಿಂತ ಅತ್ಯಲ್ಪವಾಗಿತ್ತು. ಕೇವಲ ರೂ.10 ರಿಂದ 30, 40 ರೂಪಾಯಿಗಳ ಪ್ರೀಮಿಯಂ ನಿಗದಿಪಡಿಸಲಾಗುತ್ತಿತ್ತು.
    3. ಅಲಾಟ್ಮೆಂಟ್‌ ನ್ನು ಸ್ಟಾಕ್‌ ಎಕ್ಸ್‌ ಚೇಂಜ್‌ ಗಳ ಸಹಯೋಗದೊಂದಿಗೆ ನಿರ್ಧರಿಸುವುದಲ್ಲದೆ, ಅಲಾಟ್ಮೆಂಟ್‌‌ ಪಟ್ಟಿ ಅಂತಿಮಗೊಳಿಸಲು ವಾರಗಟ್ಟಲೆ ಸಮಯ ಹಿಡಿಯುತ್ತಿತ್ತು. ಕಾರಣ ವಿತರಣೆಯು ಈಗಿನಂತೆ ಕೇವಲ ಮೂರು ದಿನಗಳಿಗೆ ಸೀಮಿತವಾಗಿರದೆ ಬಹುದಿನಗಳವರೆಗೂ ತೆರೆದಿರುತ್ತಿತ್ತು. ಐಪಿಒ ಫಾರಂಗಳನ್ನು ಷೇರು ಬ್ರೋಕರ್‌ ರವರಿಂದ ಪಡೆದು, ಭರ್ತಿಮಾಡಿ, ಚೆಕ್‌ ನೊಂದಿಗೆ ನಿಗದಿತ ಬ್ಯಾಂಕ್‌ ಗೆ ತಲುಪಿಸಬೇಕಿತ್ತು. ನಂತರ ದೇಶದ ಎಲ್ಲಾ ಬ್ಯಾಂಕ್‌ ಗಳು ಸಂಗ್ರಹಿಸಿದ ಈ ಫಾರಂಗಳು, ಬ್ಯಾಂಕರ್ಸ್‌ ಟು ದಿ ಇಶ್ಯು ನ ಕೇಂದ್ರ ಕಚೇರಿಯಲ್ಲಿ ವಿಂಗಡಣೆ ಮಾಡಿ ಅಲಾಟ್ಮೆಂಟ್‌ ಕಮಿಟಿ ಫೈನಲ್‌ ಮಾಡುತ್ತಿತ್ತು. ಈ ಎಲ್ಲಾ ಕಾರ್ಯಗಳು ಭೌತಿಕವಾಗಿ ನಡೆಯುತ್ತಿದ್ದ ಕಾರಣ ಹೆಚ್ಚಿನ ಸಮಯ ಬೇಕಾಗಿರುತ್ತಿತ್ತು. ಕನಿಷ್ಠ ಎರಡು ತಿಂಗಳಾದರೂ ಐಪಿಒ ಷೇರು ಲಿಸ್ಟಿಂಗ್‌ ಗೆ ಸಮಯ ಬೇಕಾಗುತ್ತಿತ್ತು. ಅಲಾಟ್ಮೆಂಟ್‌‌ ಆಗದಿದ್ದರೆ ರೀಫಂಡ್ ಆರ್ಡರ್‌ ಬರುವುದೂ ಸಹ ಹಲವಾರು ಬಾರಿ ವಿಳಂಬವಾಗುತ್ತಿತ್ತ್ತು
    4. ಷೇರುಪೇಟೆ ಲೀಸ್ಟಿಂಗ್‌ ಆದ ನಂತರ ಬ್ರೋಕರ್‌ ಮೂಲಕ ಖರೀದಿಸಿದ ಮೇಲೆ ಖರೀದಿಸಿದ ಷೇರು ಸರ್ಟಿಫಿಕೇಟ್‌ ಮತ್ತು ಅದರ ವರ್ಗಾವಣೆ‌ ಫಾರಂ ಖರೀದಿದಾರರ ಕೈ ಸೇರಲು ಕೆಲವೊಮ್ಮೆ ತಿಂಗಳುಗಳ ಸಮಯವೇ ಹಿಡಿಯುತ್ತಿತ್ತು. ನಂತರ ಅದನ್ನು ಸಂಬಂಧಿತ ‌ ಏಜೆಂಟರಿಗೆ ವರ್ಗಾವಣೆಗೆ, ಸೂಕ್ತವಾದ ಷೇರು ಟ್ರಾನ್ಸ್‌ ಫರ್‌ ಸ್ಟಾಂಪ್‌ ಲಗತ್ತಿಸಿ ಕಳುಹಿಸಿದಾಗ, ಷೇರು ಟ್ರಾನ್ಸ್‌ ಫರ್‌ ಏಜೆಂಟರು ಎಲ್ಲವನ್ನೂ ಚೆಕ್‌ ಲಿಸ್ಟ್‌ ನೊಂದಿಗೆ ಹೊಂದಿಸಿ ಎಲ್ಲವೂ ಸರಿ ಇದ್ದರೆ ವರ್ಗಾವಣೆಯನ್ನು, ಆಯಾ ಕಂಪನಿಯ ಬೋರ್ಡ್‌ ಅನುಮತಿಯೊಂದಿಗೆ, ಮಾಡಿ ಖರೀದಿದಾರರಿಗೆ ಕಳುಹಿಸಲಾಗುತ್ತಿತ್ತು. ಬಹಳಷ್ಟು ಸಂದರ್ಭಗಳಲ್ಲಿ ವರ್ಗಾವಣೆಗೆ ಕಳುಹಿಸಿದ ಷೇರುಗಳು ಆಂಗೀಕಾರವಾಗದೆ, ಬ್ಯಾಡ್‌ ಡೆಲಿವರಿಯಾಗಿ ಹಿಂದಿರುಗಿಸಲಾಗುತ್ತಿತ್ತು.

    ಬ್ಯಾಡ್‌ ಡೆಲಿವರಿಗಳಿಗೆ ಪ್ರಮುಖ ಕಾರಣಗಳು

    • ಕಂಪನಿಯ ದಾಖಲೆಯಲ್ಲಿರುವ ಮತ್ತು ಟ್ರಾನ್ಸ್‌ ಫರ್‌ ಫಾರಂನಲ್ಲಿರುವ ಷೇರುದಾರರ ಸಹಿ ಹೊಂದಾಣಿಕೆಯಾಗದಿರುವುದು.
    • ನಿಖರವಾದ ಷೇರು ಟ್ರಾನ್ಸ್‌ ಫರ್‌ ಸ್ಟಾಂಪ್‌ ಲಗತ್ತಿಸದೆ ಇರುವುದು.
    • ಅಪೂರ್ಣವಾಗಿ ಭರ್ತಿಯಾದ ಫಾರಂ
    • ಷೇರು ಟ್ರಾನ್ಸ್‌ ಫರ್‌ ಫಾರಂ ಔಟ್‌ ಡೇಟೆಡ್‌ ಆಗಿರುವುದು
    • ಒಂದು ವೇಳೆ ಷೇರುಗಳು ಪಾರ್ಟ್ಲಿ ಪೇಡ್‌ ಆಗಿದ್ದಲ್ಲಿ ಅಥವಾ ಕಾಲ್‌ ಮನಿ ಪೂರ್ಣವಾಗಿ ಪಾವತಿಯಾಗಿರುವುದಕ್ಕೆ ಕಾಲ್‌ ರಸೀದಿ ಲಗತ್ತಿಸದೆ ಇರುವುದು.

    ಮುಂತಾದ ಅನೇಕ ಕಾರಣಗಳಿಂದ ಷೇರುಗಳು ವರ್ಗಾವಣೆಯಾಗದೆ ಹಿಂದಿರುಗುತ್ತಿದ್ದವು.

    ಈ ಎಲ್ಲಾ ಕಾರ್ಯಪ್ರಕ್ರಿಯೆಗಳು ಮುಗಿಯಲು ಹಲವು ತಿಂಗಳುಗಳೆ ಹಿಡಿಯುತ್ತಿದ್ದವು. ಹಾಗಾಗಿ ದೀರ್ಘಕಾಲೀನ ಹೂಡಿಕೆಗೆ ಮಹತ್ವವಿತ್ತು. ಪ್ರತಿಯೊಂದು ಶ್ರಮಕ್ಕೂ ಗೌರವಯುತ ಬೆಲೆಯಿತ್ತು.

    ಪ್ರಸ್ತುತ ಪದ್ಧತಿ:

    ಆದರೆ ಈಗ ಎಲ್ಲವೂ ಮಿಂಚಿನ ವೇಗದಲ್ಲಿ ಸಾಗುತ್ತಿವೆ. ಎಲ್ಲವೂ ತಾಂತ್ರಿಕತೆ ಅಳವಡಿಕೆಯ ಕಾರಣ ಅರ್ಜಿಯ ಹಣವನ್ನೂ ಸಹ ಪಡೆಯದೆ, ಕೇವಲ ಅಷ್ಠು ಹಣವನ್ನು ಅರ್ಜಿದಾರರ ಬ್ಯಾಂಕ್‌ ಖಾತೆಯಲ್ಲಿಯೇ ಬ್ಲಾಕ್‌ ಮಾಡುವ ಮೂಲಕ ಸರಳಗೊಳಿಸಲಾಗಿದೆ. ಅಲ್ಲದೆ ಷೇರುಗಳ ಅಲಾಟ್ಮೆಂಟ್‌, ಲಿಸ್ಟಿಂಗ್‌ ಪ್ರಕ್ರಿಯೆಗಳು ತ್ವರಿತವಾಗಿ ಸಾಗುವುವು. ಲಿಸ್ಟಿಂಗ್‌ ಆದ ನಂತರ ಷೇರು ಖರೀದಿಸಿದಲ್ಲಿ, ಖರೀದಿಸಿದ ಷೇರಿಗೆ ಪೂರ್ಣವಾಗಿ ಹಣ ಪಾವತಿಯಾಗಿದ್ದಲ್ಲಿ ನೇರವಾಗಿ ಡಿಮ್ಯಾಟ್‌ ಖಾತೆಗೆ ಬರುವುವು ಮತ್ತು ಷೇರು ಮಾರಾಟ ಮಾಡಿದವರ ಹಣವು ಕೇವಲ ಎರಡೇ ದಿನಗಳಲ್ಲಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುವುದು. ಇದೆಲ್ಲಾ ಪ್ರಕ್ರಿಯೆಗಳು ಮಿಂಚಿನಂತೆ ನಡೆದು ಕೇವಲ ಎರಡೇ ದಿನಗಳಲ್ಲಿ ಪೂರ್ಣವಾಗುವುದರಿಂದ ಷೇರುಪೇಟೆಯಲ್ಲಿ ವಹಿವಾಟು ಅತಿ ಸುಲಭ. ಆದರೆ ಇಂತಹ ವಾತಾವರಣದಲ್ಲಿ ಪೇಟೆಯ ಚಟುವಟಿಕೆಗಳ ಹಿಂದಿನ ಉದ್ದೇಶವನ್ನರಿತು, ಮನಸ್ಸಿನ ಚಿಂತನೆಗಳನ್ನು ಚುರುಕುಗೊಳಿಸಿ, ಸಂದರ್ಭಕ್ಕನುಗುಣವಾಗಿ ನಿರ್ಧರಿಸುವುದು ಅನಿವಾರ್ಯ.

    ಇನ್ನು ಐಪಿಒ ಗಳು ಇತ್ತೀಚೆಗೆ ಅತಿ ಹೆಚ್ಚಿನ ಬೆಲೆಗಳಲ್ಲಿ ಪೇಟೆ ಪ್ರವೇಶಿಸುತ್ತಿವೆ. ಕೆಲವು ಕಂಪನಿಗಳನ್ನು ಹೊರತುಪಡಿಸಿ, ಆರಂಭದಲ್ಲಿ ಅತಿ ಹೆಚ್ಚಿನ ಬೆಲೆಯಲ್ಲಿ ವಹಿವಾಟಾಗಿ ನಂತರ ಮಂದಗತಿಯಲ್ಲಿರುತ್ತವೆ. ಉತ್ತಮ ಕಂಪನಿಗಳು ಕಡಿಮೆ ಬೆಲೆಯಲ್ಲಿ ಐಪಿಒ ಮೂಲಕ ಪ್ರವೇಶಿಸುವ ಸಂದರ್ಭಗಳು ಅತಿ ವಿರಳವಾಗಿವೆ.

    ಮಾರುತಿ ಸುಜುಕಿ, ಕೆನರಾ ಬ್ಯಾಂಕ್‌ ಗಳು ವಿತರಿಸಿದ ರೀತಿ ಮುಂದುವರೆಯದೆ, ಜೆಟ್‌ ಏರ್‌ ವೇಸ್‌, ನ್ಯೂ ಇಂಡಿಯಾ ಅಶುರನ್ಸ್‌, ಜನರಲ್‌ ಇನ್ ಶೂರನ್ಸ್‌, ಹೆಚ್‌ ಎ ಎಲ್‌ ಕಂಪನಿಗಳು ವಿತರಿಸಿದ ಬೆಲೆಗಳ ರೀತಿಯು ಸಾಮಾನ್ಯ ಹೂಡಿಕೆದಾರರ ಹಿತದಿಂದಂತೂ ಅಲ್ಲ. ಕೆಲವೇ ಕಂಪನಿಗಳನ್ನು ಹೊರತುಪಡಿಸಿದರೆ, ವಿತರಣೆ ಬೆಲೆ ಮತ್ತು ಇಂದಿನ ಷೇರಿನ ದರಗಳಿಗೂ ಭಾರಿ ಇಳಿಕೆಯಲ್ಲಿರುವುದು ಮುಂಬರುವ ಐಪಿಒ ಗಳಲ್ಲಿ ಭಾಗವಹಿಸುವ ಮುನ್ನ ತಿಳಿದುಕೊಂಡಲ್ಲಿ ಉಪಯುಕ್ತವಾಗಬಹುದು.

    ವಿಸ್ಮಯಕಾರಿ:

    ಅಕ್ಟೋಬರ್‌ 1ರಂದು ಲಿಸ್ಟಿಂಗ್‌ ಆದ ಕೆಂಕಾನ್‌ ಸ್ಪೆಷಾಲಿಟಿ ಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿಯ ಐಪಿಒ ವಿತರಣೆ ಬೆಲೆ ರೂ.340, ಆದರೆ ಲಿಸ್ಟಿಂಗ್‌ ಬೆಲೆ ರೂ.741 ರಲ್ಲಿ ಆರಂಭವಾಗಿ ನಂತರ ಇಳಿಕೆಯಿಂದ ರೂ.584 ರ ಸಮೀಪದ ಕೆಳಗಿನ ಸರ್ಕ್ಯುಟ್‌ ತಲುಪಿತು. ಸೋಜಿಗವೆಂದರೆ ರೂ.340 ರಿಂದ ಏರಿಕೆ ಕಾಣಲು ಇಲ್ಲದ ಸರ್ಕ್ಯುಟ್‌ ಇಳಿಕೆಗೆ ಮಾತ್ರ ಅಳವಡಿಸಲಾಗಿರುವುದು ವಿಸ್ಮಯಕಾರಿ ಅಂಶವಾಗಿದೆ.

    ಒಟ್ಟಿನಲ್ಲಿ ಐಪಿಒ ಗಳಿಗೆ ಅಪ್ಲೈ ಮಾಡುವ ಮುನ್ನ ವಿವಿಧ ಅಯಾಮಗಳನ್ನು ಪರಿಶೀಲಿಸಿ ಸ್ವತಂತ್ರವಾದ ನಿರ್ಧಾರ ತೆಗೆದುಕೊಂಡಲ್ಲಿ ಮಾತ್ರ ಲಾಭದಾಯಕ ಹೂಡಿಕೆಯಾಗಬಹುದು. ಅಲಾಟ್‌ ಆದ ಷೇರುಗಳ ಮೇಲೆ ಕೇವಲ ಭಾವನಾತ್ಮಕತೆಯ ಭಾಂದವ್ಯ ಹೊಂದದೆ ಪರಿಸ್ಥಿತಿಯಾಧರಿಸಿ ನಿರ್ಧರಿಸಬೇಕು. ನಡೆಸಿದ ಎಲ್ಲಾ ಚಟುವಟಿಕೆಗೂ ಸರಿಯಾದ ಅಕೌಂಟ್‌ ಇಟ್ಟು ನಿರ್ವಹಿಸಿದರೆ ನೆಮ್ಮದಿಯೂ ನಿಮ್ಮದಾಗುವುದು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಶುಭ ದಿನ

    ಇಂದಿನ ನುಡಿ

    ನೀವು  ಸಂತೋಷವಾಗಿ ಇದ್ದೀರಿ ಅಂದರೆ, ನಿಮ್ಮ ವಿಷಯದಲ್ಲಿ ಎಲ್ಲವೂ ಪರಿಪೂರ್ಣವಾಗಿ ಇದೆ ಎಂದರ್ಥವಲ್ಲ. ಎಲ್ಲ ಕುಂದು ಕೊರತೆಗಳನ್ನೂ ಮೀರಿ ಬದುಕನ್ನು ಗ್ರಹಿಸಲು ನಿರ್ಧರಿಸಿದ್ದೀರಿ ಎಂದು ಅರ್ಥ.

    -ಗೆರಾರ್ಡ್‌ ವೇ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 4 ಅಕ್ಟೋಬರ್ 2020,ಭಾನುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ತದಿಗೆನಕ್ಷತ್ರ:ಅಶ್ವಿನಿ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.08

    ಇಂದಿನ ವಿಶೇಷ

    ವಿಶ್ವ ಪ್ರಾಣಿ ಅಭ್ಯುದಯ ದಿನ

    ಸೈಬರ್ ಲೋಕದಲ್ಲಿ ಟ್ರಾಫಿಕ್ ಜಾಮ್

    ಕಳೆದ ಒಂದು ವಾರದಿಂದ ಬೆಂಗಳೂರಿನ ಬ್ರಾಡ್ ಬ್ಯಾಂಡ್ ಬಳಕೆದಾರರು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟು ದಿನ ಅಡೆ ತಡೆಯಿಲ್ಲದೆ ಹರಿದು ಬರುತ್ತಿದ್ದ ಬ್ರಾಡ್ ಬ್ಯಾಂಡ್ ವೇಗ ಹೊಯ್ದಾಡುತ್ತಿದೆ. ವೇಗವಾಗಿ ಸಾಗಿಬರುತ್ತಿದ್ದ ಕಾರಿನ ಮುಂದೆ ಧುತ್ತನೆ ಹಂಪ್ ಎದುರಾಗಿ ಚಾಲಕ  ಸಡನ್ ಆಗಿ ಬ್ರೇಕ್ ಹಾಕಿದ ಅನುಭವ ಬಳಕೆದಾರರಿಗೆ ಆಗುತ್ತಿದೆ.

    ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ಹೊಸ ಚಿತ್ರ ನಿಶ್ಶಬ್ದಂ ನೋಡುತ್ತಿದ್ದವರು ಟ್ರಾಫಿಕ್ ಜಾಮ್ ಇಲ್ಲದ ಸಿಯಾಟಲ್ ಪಟ್ಟಣದಲ್ಲಿ ನಟ ಮಾಧವನ್ ಓಡಿಸುತ್ತಿದ್ದ  ಕಾರು ಬ್ರಾಡ್ ಬ್ಯಾಂಡ್ ನ ಆಮೆ ವೇಗದಿಂದ ನಿಂತಲ್ಲೇ ಗಿರಕಿ ಹೊಡೆದದ್ದನ್ನು ಕಂಡಿದ್ದಾರೆ.ಆನ್ ಲೈನ್ ತರಗತಿಯಲ್ಲಿ ಲೆಕ್ಚರರು ಅಟೆಂಡನ್ಸ್ ಕೂಗುವಾಗ ಇದ್ದ ಬ್ರಾಡ್ ಬ್ಯಾಂಡ್ ವಿದ್ಯಾರ್ಥಿ ಎಸ್ ಮಾಮ್ ಎನ್ನುವ ವೇಳೆಗೆ ಮಾಯವಾಗಿರುತ್ತದೆ.

    ಹೆಚ್ಚಿದ ಅವಲಂಬನೆ

    ಕೋವಿಡ್ ಕಾರಣದಿಂದಾಗಿ ಬ್ರಾಡ್ ಬ್ಯಾಂಡ್ ಮೇಲಿನ ಅವಲಂಬನೆ ಇನ್ನಿಲ್ಲದಂತೆ ಹೆಚ್ಚಿದೆ. ಆನ್ ಲೈನ್ ತರಗತಿಗಳು, ಆನ್ ಲೈನ್ ಕೆಲಸ, ಆನ್ ಲೈನ್ ಶಾಪಿಂಗ್, ಆನ್ ಲೈನ್ ಬ್ಯಾಕಿಂಗ್, ಜೂಮ್ ಮೀಟಿಂಗ್ ಗಳು, ವೆಬಿನಾರ್ ಗಳು ….ಬೆಂಗಳೂರಿನ ರಸ್ತೆಯಲ್ಲಿ ಕಡಿಮೆಯಾದ ಟ್ರಾಫಿಕ್ ಆನ್ ಲೈನ್ ನಲ್ಲಿ ಜಾಮ್ ಆಗುವಷ್ಟು ಜಾಸ್ತಿ ಆಗಿದೆ.

    ಇಂಟರ್ ನೆಟ್ ಬಳಕೆ ಕೋವಿಡ್ ಕಾರಣದಿಂದಾಗಿ ನಗರ ಪ್ರದೇಶಗಳಲ್ಲಿ ಶೇಕಡ 40 ರಿಂದ 50 ರಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಬೇಡಿಕೆ ಶೇಕಡ 100 ರಷ್ಟು ಹೆಚ್ಚಾಗಿರುವ ಮಾಹಿತಿಯನ್ನು ಮೇ ತಿಂಗಳಲ್ಲಿ  ಭಾರತದ ಇ ಗವರೆನ್ಸ್ ಸಂಸ್ಥೆ -CSC  –  ನೀಡಿತ್ತು. ಶಾಲೆ ಕಾಲೇಜು ಗಳು ಆರಂಭವಾಗುವುದು ತಡವಾಗಿ ಆನ್ ಲೈನ್ ತರಗತಿಗಳು ಶುರುವಾದ ಮೇಲಂತೂ ಈ ಬೇಡಿಕೆ ಮತ್ತಷ್ಟು ಜಿಗಿಯಿತು.

    ಸೈಬರ್ ಲೋಕ  ಅಸ್ತವ್ಯಸ್ತ

    ಏತನ್ಮಧ್ಯೆ ಬೆಂಗಳೂರು ನಗರದಲ್ಲಿ ಹಲವಾರು ಏಜೆನ್ಸಿಗಳು(BESCOM, BWSSB,BBMP)  ತಮ್ಮ ತಮ್ಮ ಕೆಲಸಗಳಿಗೆ ರಸ್ತೆಯನ್ನು ಅಗೆಯುತ್ತಿದ್ದಂತೆ ಹಲವಾರು ಕಡೆ ಅಂತರ್ಗತ ಕೇಬಲ್ ಗಳು ತುಂಡರಿಸಿ ಸೈಬರ್ ಲೋಕ  ಅಸ್ತವ್ಯಸ್ತವಾಯಿತು. ಇದನ್ನು ಅರಿಯದ  ಗ್ರಾಹಕರು ತಮ್ಮ ಸರ್ವೀಸ್ ಪ್ರಾವೈಡರ್ ನ್ನು ಬದಲಿಸಲು ಹೊರಟರು.  ಸರ್ವೀಸ್ ಪ್ರಾವೈಡರ್ ಬದಲಾದರು ಸಮಸ್ಯೆ ಬಗೆಹರಿಯದಿದ್ದಾಗ ಸಮಸ್ಯೆ ಬೇರೆ ಎಲ್ಲೋ ಇದೆ ಎಂಬುದು ಅರಿವಾಯಿತು.

    ಅಂತರ್ಗತ ಕೇಬಲ್ ದುರಸ್ತಿ ಕಾಣುವುದು ತಡವಾದಾಗ ಕೆಲವು ಸರ್ವೀಸ್ ಪ್ರಾವೈಡರ್ ಗಳು ಓವರ್ ಹೆಡ್ ಕೇಬಲ್ ವ್ಯವಸ್ಥೆಗೆ ತಾತ್ಕಾಲಿಕವಾಗಿ ಶಿಫ್ಟ್ ಆಗಬೇಕಾಯ್ತು. ಆದರೂ ಸಮಸ್ಯೆ ಬಗೆ ಹರಿದಿಲ್ಲ. ಓವರ್ ಹೆಡ್ ಕೇಬಲ್ ಗಳ ಬಗ್ಗೆ ಬಿಬಿಎಂಪಿ ಆಕ್ಷೇಪಣೆ ಎತ್ತಿತು.

    ಬ್ರಾಡ್ ಬ್ಯಾಂಡ್ ಇಲ್ಲದೆ ಬದುಕಿಲ್ಲ

    ನಮ್ಮ ಕಡೆ ಹದಿನೈದು ದಿನವಾದರು ಬ್ರಾಡ್ ಬ್ಯಾಂಡ್ ದುರಸ್ತಿ ಆಗದೆ  ಅಮೆರಿಕಾದಲ್ಲಿರುವ ನಮ್ಮ ಮಕ್ಕಳ ಜೊತೆಗೂ ಮಾತಾಡದಂತೆ ಆಗಿದೆ. ಫೇಸ್ ಬುಕ್ ಸ್ನೇಹಿತೆಯರನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ವಿದ್ಯಾಮಾನ್ಯನಗರದ ಮೀರಾ ನಾಗರಾಜ್ ಹೇಳುತ್ತಾರೆ.

    ಆನ್ ಲೈನ್ ತರಗತಿ ನಡೆಸುತ್ತಿರುವ  ರಾಜಾಜಿನಗರದ ಶ್ರೀನಿವಾಸ್ ಬ್ರಾಡ್ ಬ್ಯಾಂಡ್ ಸಂಪರ್ಕಕಕ್ಕೆ ಬೇಸತ್ತು ಮೊಬೈಲ್ ಡೇಟವನ್ನೇ ನಂಬಿಕೊಂಡರೆ ಅದೂ ಕೂಡ ಅಗತ್ಯ ಸಂದರ್ಭದಲ್ಲಿ ಕೈ ಕೊಡುತ್ತಿದೆ.

    ವಿದ್ಯುತ್ ನಷ್ಟೆ ಬ್ರಾಡ್ ಬ್ಯಾಂಡ್ ಕೂಡ ಇಂದು ಅನಿವಾರ್ಯ. ಅದರ ದುರಸ್ತಿ ಕೂಡ ಅಷ್ಟೇ ತ್ವರಿತಗತಿಯಲ್ಲಿ ಆಗಬೇಕು ಎಂದು ಅವರು ಹೇಳುತ್ತಾರೆ.

    ನಾನಾ ಏಜೆನ್ಸಿಗಳು ವಿವಿಧ ಕೆಲಸಗಳಿಗೆ ರಸ್ತೆ ಅಗೆಯುವ ಕೆಲಸಕ್ಕೆ ಒಂದು ಸಮಯ ಮಿತಿ ನಿಗದಿಯಾಗಬೇಕು.ಸಮನ್ವಯ ಸಾಧ್ಯವಾಗಬೇಕು. ಆಗ ಮಾತ್ರ ಸರಿಯಾದ ಸೇವೆ ಕೊಡಲು ಸಾಧ್ಯ ಎಂದು ಸರ್ವೀಸ್ ಪ್ರಾವೈಡರ್ ಗಳು ಹೇಳುತ್ತಾರೆ.

    ಡಿಸಿಎಂ ಪತ್ರ

    ಸರಕಾರದ ಟೆಕ್ ಸ್ಯಾವಿ ಉಪಮುಖ್ಯಮಂತ್ರಿ ಅಶ್ವತ್ಧನಾರಾಯಣ ಇದೀಗ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಮುಂದಾಗಿದ್ದು ಓವರ್ ಹೆಡ್ ಕೇಬಲ್ ಕತ್ತರಿಸದಂತೆ ಸೂಚಿಸಿದ್ದಾರೆ.

    ಕೋವಿಡ್ ಸಂಕಷ್ಟದ ಕಾರಣದಿಂದ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಅನೇಕ ಐಟಿ ಕಂಪೆನಿಗಳ ಕೆಲಸ ಆನ್ ಲೈನ್ (WORK FROM HOME) ನಲ್ಲೇ ನಡೆಯುತ್ತಿದೆ. ಹೀಗಾಗಿ ಕೇಬಲ್ ತೆರವು ಗೊಳಿಸಿದರೆ ಸಮಸ್ಯೆ ಆಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ವಿಶೇಷವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಓವರ್ ಹೆಡ್ ಕೇಬಲ್ (OFC) ಪಾಲಿಸಿ ಸಿದ್ಧ ಆಗುವವರೆಗೂ ಅವುಗಳನ್ನು ತೆರವು ಗೊಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲು ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

    ಬಳಕೆದಾರರ ಆಗ್ರಹ

    ಸರಕಾರ ಓವರ್ ಹೆಡ್ ಕೇಬಲ್ (OFC) ಪಾಲಿಸಿಯನ್ನು   ತ್ವರಿತವಾಗಿ ಜಾರಿಗೆ ತಂದು ಅನಿರ್ಬಂಧಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಐಟಿ ಸಿಟಿಯಲ್ಲೇ ಇಂಟರ್ ನೆಟ್ ಸೇವೆ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಬೇಕು ಎಂಬುದು ಬಳಕೆದಾರರ ಆಗ್ರಹವಾಗಿದೆ.

    Photo by Brett Sayles from Pexels

    ಸದ್ದು ಮಾಡುತ್ತಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆ ಹಿಂದೆ ಚೀನಾ ತಂತ್ರ

    ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರಾಂತ್ಯದಲ್ಲಿ ಚುನಾವಣೆಯನ್ನು ನಡೆಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಇದರ ಹಿಂದೆ ಹತ್ತು ಹಲವು ತಂತ್ರ-ಕುತಂತ್ರಗಳು ಇವೆ.

    ಏನಿದು ಜಿಬಿ ಸಮಸ್ಯೆ ?

    ಭಾರತ ವಿಭಜನೆಯಾದ ಬಳಿಕ ಜಮ್ಮು-ಕಾಶ್ಮೀರದ ಕೆಲವು ಭಾಗವನ್ನು ಪಾಕಿಸ್ತಾನ ಗುಡ್ಡಗಾಡು ಬಂಡುಕೋರರ ದಾಳಿಯ ಹೆಸರಿನಲ್ಲಿ ವಶ ಪಡಿಸಿಕೊಂಡಿತು. ಆಗ ನೆಹರು, ಈ ವಿಷಯವನ್ನು ವಿಶ್ವಸಂಸ್ಥೆಯ ಮುಂದಿಟ್ಟರು. ಅದು ಜನಮತ ಗಣನೆಗೆ ನಿರ್ದೇಶನ ಅಥವಾ ಆದೇಶ ನೀಡಿತು. ಅದನ್ನೇ ಮುಂದಿಟ್ಟುಕೊಂಡು ಪಾಕಿಸ್ತಾನ ಈ ಭಾಗದಲ್ಲಿ ಜನಮತ ಗಣನೆ ನಡೆಯಲಿ ಎಂದು ಪಟ್ಟು ಹಿಡಿಯಿತು. ಅದಕ್ಕಾಗಿಯೇ ಅದಕ್ಕಾಗಿಯೇ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭಾಗಶಃ ಸ್ವಯಂಮಾಧಿಕಾರವನ್ನಷ್ಟೇ ಘೋಷಿಸಿತು. ವಾಸ್ತವವಾಗಿ ಪಾಕ್ ಮಾತೇ ಅಲ್ಲಿ ನಡೆಯುತ್ತಿದ್ದರೂ ಜಗತ್ತಿನ ದೃಷ್ಟಿಯಲ್ಲಿ ಕಾನೂನಾತ್ಮಕವಾಗಿ ಅದು ಅರ್ಧ ಸ್ವತಂತ್ರ ಭಾಗವಾಗಿ ಪರಿಗಣಿಸಲ್ಪಡುತ್ತಿತ್ತು. ಈಗ ಜಿಬಿಯಲ್ಲಿ ವಿಧಾನಸಭೆ ಚುನಾವಣೆ ನಡೆಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತ ಪಡಿಸಿಯೂ ಆಗಿದೆ. ಇದು ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಇಂದಿನವರೆಗೆ ಸ್ಪಷ್ಟವಿಲ್ಲ. .

    ಚೀನಾ ಕುಮ್ಮಕ್ಕು

    ಜಿಬಿಯಲ್ಲಿ ಚುನಾವಣೆ ನಡೆಸುವುದು ಕಾನೂನಾತ್ಮಕವಾಗಿ ಅಷ್ಟು ಸುಲಭವಲ್ಲ. ಪಾಕ್ ಸಂವಿಧಾನದ ಅನುಮತಿ ಅದಕ್ಕೆ ಬೇಕಾಗುತ್ತದೆ. ಹೀಗಾಗಿ ಇಮ್ರಾನ್ ಖಾನ್, ಅದನ್ನು ಪಾಕಿಸ್ತಾನದ ಐದನೇ ಪ್ರಾಂತ್ಯ (ರಾಜ್ಯ)ವಾಗಿ ಪರಿಗಣಿಸಲು ಮುಂದಾಗಿದ್ದಾರೆ. ಈ ಮೂಲಕ ಚುನಾವಣೆ ನಡೆಸಲು ಹಾದಿ ಸುಗಮ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅವರು ಅಂದುಕೊಂಡಂತೆ ನಡೆದರೆ ನವೆಂಬರ್ ಮಧ್ಯಭಾಗದಲ್ಲಿ (ನ. 15) ಅಲ್ಲಿನ ಶಾಸನ ಸಭೆ (ವಿಧಾನಸಭೆ)ಗೆ ಚುನಾವಣೆ ನಡೆಯಲಿದೆ.

    ಇದರ ಹಿಂದೆ ಚೀನಾದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೆಡೆ ಲಡಾಕ್ ಗಡಿ ಭಾಗದಲ್ಲಿ ಭಾರತದ ಮೇಲೆ ಸೇನಾ ಒತ್ತಡ ಹೇರುತ್ತಿದ್ದರೂ ಅದಕ್ಕೆ ಭಾರತ ಪ್ರತಿತಂತ್ರವನ್ನು ಯಶಸ್ವಿಯಾಗಿ ಹೂಡಿದ್ದರಿಂದ ಚೀನಾ ಸ್ವಲ್ಪ ಮಟ್ಟಿಗೆ ಹಿಂದೆಗೆದಿದೆ. ಆಗ ಇನ್ನೊಂದು ಗಡಿಯಾದ ಕಾಶ್ಮೀರದಲ್ಲಿ ಪಾಕಿಸ್ತಾನದ ಮೂಲಕ ಒತ್ತಡ ಹೇರುವ ತಂತ್ರವನ್ನು ಅದು ಅನುಸರಿಸುತ್ತಿದೆ.

    ಮೂರು ಭಾಗ

    ಆಗಸ್ಟ್ 5ರಂದು ಭಾರತ ಸರಕಾರ ಜಮ್ಮು-ಕಾಶ್ಮೀರವನ್ನು ಮೂರು ಭಾಗಗಳಾಗಿ ವಿಭಜಿಸಿತು. ಮುಖ್ಯವಾಗಿ ಇದರಿಂದ ಕಾಶ್ಮೀರದ ಹೋರಾಟವನ್ನು ಯಶಸ್ವಿಯಾಗಿ ಹತ್ತಿಕ್ಕಲು ಮತ್ತು ಅಲ್ಲಿನ ಜನರ ಮನವೊಲಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಆದರೆ ಇದು ಪಾಕಿಗೆ ಪಥ್ಯವಾಗಲಿಲ್ಲ. ಆಗ ಕಾಶ್ಮೀರ ಸಮಸ್ಯೆ ಎಂಬ ವಿಷಯವೇ ಇರುವುದಿಲ್ಲ ಎಂದು ಪರಿಗಣಿಸಿದ ಪಾಕಿಸ್ತಾನ ಹೊಸ ವಿಷಯವನ್ನು ಹಳೆ ವಿಷಯದ ಜತೆ ಬೆರೆಸಿ ಮುಗ್ಧ ಜನರ ಮನದಲ್ಲಿ ವಿಷವುಣಿಸಲು ಬಳಸಿಕೊಂಡಿತು.

    ಪಾಕ್ ಗೆ ಅಪಥ್ಯ

    ಇಂತಹ ಒಂದು ವಿಷ ಬೀಜವನ್ನು ದಶಕದ ಹಿಂದೆಯೇ ಪಾಕಿಸ್ತಾನ ಹುಟ್ಟು ಹಾಕಿತ್ತು. ಅದುವೆರವಿಗೂ ಆಕ್ರಮಿತ ಕಾಶ್ಮೀರವು ತಮ್ಮ ಪೂರ್ಣ ನಿಯಂತ್ರಣದಲ್ಲಿ ಇಲ್ಲ, ಬದಲಾಗಿ ಅದು ಭಾಗಶಃ ಸ್ವತಂತ್ರ ಹಾಗೂ ಪಾಕಿಸ್ತಾನದೊಂದಿಗೆ ವಿಲೀನಗೊಂಡಿಲ್ಲ ಎಂದೇ ಪಾಕಿಸ್ತಾನ ಹೇಳುತ್ತಿತ್ತು. ಕೇವಲ ಜನಮತ ಗಣನೆ ಮಾತ್ರ ಈ ಭಾಗದಲ್ಲಿ ನಡೆಯುತ್ತಿತ್ತು. ಆದರೆ ಈಗ ಶಾಸನ ಸಭೆಯ ಚುನಾವಣೆಗೆ ಮುಂದಾಗಿದೆ. ಇದರಲ್ಲಿ ಚೀನಾದ ಚಿತಾವಣೆ ಮತ್ತು ಅದರಿಂದಾಗುವ ಲಾಭದ ಲೆಕ್ಕಾಚಾರವೂ ಸಾಕಷ್ಟಿದೆ.

    ಚೀನಾ ವಾದ

    ಪಾಕ್ ಆಕ್ರಮಿತ ಕಾಶ್ಮೀರ ನಡುವೆ ಚೀನಾ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ ಹಾದು ಹೋಗುತ್ತದೆ. ಆದರೆ ಎರಡು ದೇಶಗಳ ನಡುವಿನ ವಿವಾದದ ಕೇಂದ್ರ ಬಿಂದುವಾಗಿರುವ ಈ ಪ್ರದೇಶದಲ್ಲಿ ಇಂತಹ ಕಾರಿಡಾರ್ ಹಾದು ಹೋಗಬೇಕಾದರೆ ಅದಕ್ಕೆ ಸ್ವತಂತ್ರ ಮಾನ್ಯತೆ ಬೇಕು ಎಂಬುದು ಚೀನಾದ ವಾದ. 2016ರಲ್ಲೇ ಚೀನಾ ಅಧ್ಯಕ್ಷ ಜಿನ್ ಪಿಂಗ್ ಇದನ್ನು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದ್ದರು. ಆಗಲೇ ಜಿಬಿ ವಲಯಕ್ಕೆ ಸಾಂವಿಧಾನಿಕ ಸ್ಥಾನಮಾನ ಹೆಚ್ಚಿಸುವ ಪ್ರಸ್ತಾಪ ಮುಂದಿಡಲ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ. ಭಾರತ-ಪಾಕಿಸ್ತಾನ ನಡುವಿನ ವಿವಾದಿತ ಪ್ರದೇಶದಲ್ಲಿ ಹಾದು ಹೋಗುವ ಈ ಕೋಟ್ಯಂತರ ವೆಚ್ಚದ ಯೋಜನೆಗೆ ಸೂಕ್ತ ಭದ್ರತೆಯಿಲ್ಲದೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಆಗಲೇ ಸ್ಪಷ್ಟಪಡಿಸಿತ್ತು. ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿರುವ ಈ ಕಾರಿಡಾರ್ ನಿಂದ ಚೀನಾಕ್ಕೆ ಸಾಕಷ್ಟು ಲಾಭವಿದೆ.

    ಈ ಕಾರಿಡಾರ್ ನಿರ್ಮಾಣದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ ಚೀನಾದಕ್ಕೆ ಸುಲಭ ಸಂಪರ್ಕ ಸಾಧ್ಯವಿದೆ. ಮುಖ್ಯವಾಗಿ ಗ್ವದಾರ್ ನಂತಹ ಆಯಕಟ್ಟಿನ ಪ್ರದೇಶದಲ್ಲಿ ಸುಸಜ್ಜಿತ ಬಂದರು ನಿರ್ಮಾಣದ ಮೂಲಕ ಅದು ಮಲ್ಲಕ್ಕಾ ಸ್ಟ್ರೇಟ್ ಮೂಲಕದ ಅವಲಂಬನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಹಿಂದೂ ಮಹಾಸಾಗರದ ಮೂಲಕ ಸಮುದ್ರ ಪ್ರಯಾಣದ ಹಂಗು ಚೀನಾಕ್ಕೆ ತಪ್ಪುತ್ತದೆ.

    ತನ್ನ ಲಾಭವನ್ನೂ ನೋಡಿಕೊಂಡ ಚೀನಾ

    ಪಾಕಿಸ್ತಾನಕ್ಕೆ ನೆರವು ನೀಡುವ ಉದ್ದೇಶದ ನೆಪದಲ್ಲಿ ತನ್ನ ಲಾಭವನ್ನೂ ನೋಡಿಕೊಂಡು ಇಂತಹ ಕಾರಿಡಾರ್ ನಿರ್ಮಾಣಕ್ಕೆ ಚೀನಾ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಪಾಕ್, ಜಿಬಿಗೆ ಸಾಂವಿಧಾನಿಕ ಸ್ಥಾನ ನೀಡುವಂತೆ ಒತ್ತಡ ಹೇರಿದೆ. ಸದ್ಯದ ಮಟ್ಟಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪ್ರತಿರೋಧವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಒಂದು ವೇಳೆ ತೋರಿಸಿದರೆ ಮತ್ತೆ ಸೇನಾಡಳಿತ, ನ್ಯಾಯಾಲಯದ ವಿಚಾರಣೆ ಹೀಗೆ ಮುಷರ್ರಫ್, ನವಾಜ್ ಶರೀಫ್, ಈ ಹಿಂದೆ ಜುಲ್ಫಿಕರ್ ಅಲಿ ಭುಟ್ಟೋ, ಬೆನಜೀರ್ ಭುಟ್ಟೋ ಸೇರಿದಂತೆ ನಾನಾ ರಾಜಕೀಯ ನಾಯಕರು ಅನುಭವಿಸಿದ ಯಾತನೆಯನ್ನೇ ಎದುರಿಸಬೇಕಾಗುತ್ತದೆ ಎಂಬುದು ಹಗಲಿನಷ್ಟೇ ನಿಚ್ಚಳ.

    ಪಾಕ್ ನಲ್ಲಿ ಚೀನಾ ಹೂಡಿಕೆ

    • ಗ್ವಾದರ್ ಪೂರ್ವ ಕೊಲ್ಲಿ ಎಕ್ಸ್ ಪ್ರೆಸ್ ವೇ – 141 ದಶ ಲಕ್ಷ ಡಾಲರ್
    • ನವ ಗ್ವಾದರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 230 ದಶ ಲಕ್ಷ ಡಾಲರ್
    • ಬ್ರೇಕ್ ವಾಟರ್ ಯೋಜನೆ 123 ದಶ ಲಕ್ಷ ಡಾಲರ್
    • ಪ್ರಮುಖ ಕಾಲುವೆಗಳ ಪುನರ್ ನಿರ್ಮಾಣ 27 ದಶ ಲಕ್ಷ ಡಾಲರ್
    • ಪಾಕ್ –ಚೀನಾ ಫ್ರೆಂಡ್ ಶಿಪ್ ಹಾಸ್ಪಿಟಲ್ಸ್ 100 ದಶ ಲಕ್ಷ ಡಾಲರ್
    • ಕ್ರಾಸ್ ಬಾರ್ಡರ್ ಆಪ್ಟಿಕಲ್ ಫೈಬರ್ ಕೇಬಲ್ 44 ದಶ ಲಕ್ಷ ಡಾಲರ್
    • ಥಕೋಟ್-ಹಾವೇಲಿನ್ ಕಾರಕೋರಂ ಹೆದ್ದಾರಿ ಎರಡನೇ ಹಂತ 1,386 ದಶ ಲಕ್ಷ ಡಾಲರ್
    • ಮುಲ್ತಾನ್-ಮುಖ್ಖುರ್ ವಲಯದಲ್ಲಿ ಪೇಶಾವರ-ಕರಾಚಿ ಮೋಟಾರ್ ವೇ 2,980 ದಶ ಲಕ್ಷ ಡಾಲರ್
    • ಖುಝ್ದಾರ್-ಬಸಿಮಾ ಹೆದ್ದಾರಿ 80 ದಶ ಲಕ್ಷ ಡಾಲರ್
    • ಕರಾಚಿ-ಪೇಶಾವರ ರೈಲ್ವೆ ಮಾರ್ಗ ಪುನರ್ ನಿರ್ಮಾಣಕ್ಕೆ 8,172 ದಶ ಲಕ್ಷ ಡಾಲರ್.

    ಇಷ್ಟೆಲ್ಲಾ ಕೊಟ್ಟ ಚೀನಾಕ್ಕೆ ಪಾಕಿಸ್ತಾನ ಕೃತಜ್ಞತೆ ತೋರಿಸದಿರಲು ಸಾಧ್ಯವೇ .

    error: Content is protected !!