ಮಧ್ಯ ಕರ್ನಾಟಕದ ಬೃಹತ್ ಕೆರೆ ಸೂಳೆಕೆರೆ. ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಎಂಬ ಖ್ಯಾತಿ. ಪ್ರವಾಸಿಗರ ಮೆಚ್ಚಿನ ತಾಣ. ಮುಂಗಾರು ಮಳೆ ನೀರು ಹರಿದು ತುಂಬಿ ತುಳುಕುತ್ತಿದೆ. ಸ್ವಚ್ಛ ಪರಿಸರದಲ್ಲಿ ಸುರ್ಯೋದಯ ಹಾಗೂ ಸೂರ್ಯಾಸ್ತದ ನೀರವತೆಯಲ್ಲಿ ವಿಹಂಗಮ ನೋಟ ಸವಿಯುವುದೇ ಮುದ ನೀಡುತ್ತಿದೆ.
ಹರಿದ್ರಾವತಿ ಹಳ್ಳದಿಂದ ಸ್ವಾಭಾವಿಕ ಜಲ ಹಾಗೂ ಭದ್ರಾ ನಾಲೆ ಬಿಡುಗಂಡಿಯಿಂದ ಸತತ ಹರಿದ ನೀರಿನಿಂದ ಸತತ ಎರಡನೇ ವರ್ಷವೂ ಭರ್ತಿ ಆಗಿದೆ. ಗರಿಷ್ಠ ಮಟ್ಟ 28 ಅಡಿ ನೀರು ತುಂಬಿದೆ. ಬಸವನ ನಾಲಾ ಬಿಡುಗಂಡಿ ಮಂಟಪದ ಮೇಲೆ ನೀರು ನಿಂತಿದೆ. ಸಾಗರೋಪಾದಿ ನಿಂತ ನೀರು ಕೆರೆ ಪಕ್ಕ ಸಾಗುವ ಪ್ರಯಾಣಿಕರಿಗೆ ಮನೊಲ್ಲಾಸ ನೀಡುತ್ತಿದೆ.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಅನೇಕ ಪಟ್ಟಣ ಹಾಗೂ ಗ್ರಾಮಗಳಿಗೆ ಈ ಕೆರೆಯೇ ಕುಡಿಯುವ ನೀರಿನ ಮೂಲ. ಭರ್ತಿಗೊಂಡ ಹಿನ್ನೆಲೆಯಲ್ಲಿ ಬೇಸಿಗೆ ನೀರಿನ ಬವಣೆಯಿಂದ ಮುಕ್ತಿಗೊಳಿಸಿದೆ. ಸುಮಾರು 108 ಹಳ್ಳಿಗಳಿಗೆ ನೀರು ನೀಡುವ ಅನೇಕ ಪಂಪ್ ಹೌಸ್ ಗಳು ಕೆರೆ ಸುತ್ತ ಕಾರ್ಯನಿರತವಾಗಿವೆ.
ಕೆರೆ ಎರಡು ಬದಿಯಲ್ಲಿಯನ ಗುಡ್ಡಗಳಲ್ಲಿ ಮಳೆಯಿಂದಾಗಿ ಹಚ್ಚ ಹಸಿರು ಹೊದ್ದಿವೆ. ಕೆರೆ ಏರಿ ಎದುರಿನ ಭದ್ರಾ ನಾಲೆಯ ಅಕ್ವಾಡೆಕ್ಟ್ ಪ್ರವಾಸಿಗರು ನಡೆದಾಡುವ ತಾಣ. ಇಲ್ಲಿ ಸೆಲ್ಫಿ ತೆಗೆಯುವ ಯುವಕರ ಸಾಹಸ ನಿತ್ಯ ನಡೆಯುತ್ತಿದೆ. . ಕೆರೆ ಏರಿ ಕೆಳಭಾಗದಲ್ಲಿ ಹಸಿರು ಗದ್ದೆ, ಅಡಿಕೆ ತೋಟಗಳು ನಡೆದಾಡುವ ಪರಿಸರದ ಮೌನ ಕಣಿವೆ ನೆನಪಿಸುತ್ತವೆ. ಇತ್ತೀಚೆಗೆ ಅಕ್ವಾಡೆಕ್ಟ್ ಎರಡು ಬದಿಯಲ್ಲಿ ರಕ್ಷಣಾ ಕಂಬಿಗಳಿಂದ ಸುರಕ್ಷತೆಗೆ ಕ್ರಮಕೈಗೊಳ್ಳಲಾಗಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಕುಸಿದಿದೆ. ದೋಣಿ ವಿಹಾರ ಕೇಂದ್ರದಲ್ಲಿಯೂ ಹೆಚ್ಚಿನ ಚಟುವಟಿಕೆ ಕಂಡು ಬರುತ್ತಿಲ್ಲ. ಸೋಂಕಿನ ಭೀತಿಯಲ್ಲಿಯೇ ಸೂಳೆಕೆರೆ ಸೌಂದರ್ಯ ಪೂರ್ಣಮಟ್ಟದಲ್ಲಿ ಸವಿಯಲು ಅಡಚಣೆ ಇದ್ದೆ ಇರುತ್ತದೆ. ಐತಿಹಾಸಿಕ ಸಿದ್ದೇಶ್ವರ ದೇಗುಲ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ.
ಪೂರ್ಣ ಮಟ್ಟದ ನೀರು ತುಂಬಿದ ಕಾರಣ ಹಿನ್ನೀರಿನಲ್ಲಿ ಕೆಲ ಬೆಳೆಗಳು ಮುಳುಗಿವೆ. ಹೂಳು ತುಂಬಿದ ಕಾರಣ ಸಾಮರ್ಥ್ಯದಷ್ಟು ನೀರು ತುಂಬಲಾಗುತ್ತಿಲ್ಲ. ಖಡ್ಗ ಸಂಘ ಸರ್ವೇ ನಡೆಸಿ ಬೌಂಡರಿ ನಿರ್ಧರಿಸಲು ಹೋರಾಟ ನಡೆಸಿದೆ. ಹೂಳು ತೆಗೆಯಿಸಲು ಪ್ರಯತ್ನ ನಡೆಸಿದೆ. ಇದುವರೆಗೂ ಹೇಳಿಕೊಳ್ಳುವಂತ ಪ್ರಗತಿ ಆಗಿಲ್ಲದಿರುವುದು ಬೇಸರ ತಂದಿದೆ.
ರಾಜ್ಯದ ನೆಚ್ಚಿನ ಪ್ರವಾಸಿ ತಾಣವನ್ನಾಗಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿಲ್ಲ. ಕೇರಳ ರಾಜ್ಯದಲ್ಲಿನ ಪ್ರವಾಸಿ ತಾಣ ಅಭಿವೃದ್ಧಿ ನಡೆಸಬೇಕು. ಒಂದಿಷ್ಟು ಅಭಿವೃದ್ಧಿ ನಡೆದರೂ ಹೇಳುಕೊಳ್ಳುವ ಪ್ರಗತಿ ಅಲ್ಲ. ಸೂಳೆಕೆರೆ ಅಭಿವೃದ್ಧಿಗಾಗಿಯೇ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದಲ್ಲಿ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಚಿಂತನೆ ಅಗತ್ಯ ಎನ್ನುತ್ತಾರೆ ಪ್ರವಾಸಿಗರು.
ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವಿಂದು. 1904, ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಮೈಲಿ ದೂರದಲ್ಲಿರುವ ಮೊಘಲ್ಸರೈ ಎಂಬ ಸಣ್ಣ ಊರಿನಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕರಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಕೇವಲ ಒಂದೂವರೆ ವರ್ಷದವರಿದ್ದಾಗ ಅವರ ತಂದೆ ವಿಧಿವಶರಾದರು. ಅವರ ತಾಯಿ ತನ್ನ ಮೂವರು ಮಕ್ಕಳನ್ನು ತಂದೆಯ ಮನೆಗೆ ಕರೆದೊಯ್ದು ಅಲ್ಲಿಯೇ ನೆಲೆಸಿ ಮಕ್ಕಳನ್ನು ಸಾಕಿ ಸಲಹಿದರು.
ಪ್ರಾಥಮಿಕ ಶಿಕ್ಷಣ ಸಣ್ಣ ಊರಿನಲ್ಲಿ, ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಹಾಗಾಗಿ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅವರನ್ನು ವಾರಣಾಸಿಯಲ್ಲಿ ಚಿಕ್ಕಪ್ಪನೊಂದಿಗೆ ವಾಸಿಸಲು ಕಳುಹಿಸಲ್ಪಟ್ಟರು. ಬೇಸಿಗೆಯ ಸುಡು ಬಿಸಿಲಿನಲ್ಲಿ ಕಾಲಿಗೆ ಚಪ್ಪಲಿಯೂ ಇಲ್ಲದೆ ಶಾಲೆಗೆ ನಡೆದು ಹೋಗುತ್ತಿದ್ದರಂತೆ.
ಬೆಳೆದಂತೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸ್ವಾತಂತ್ರ್ಯ ಹಾಗೂ ದೇಶದ ಹೋರಾಟದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಹುಟ್ಟುತ್ತಾ ಹೋಯಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ್ದಕ್ಕಾಗಿ ಮಹಾತ್ಮ ಗಾಂಧಿಯವರು ಭಾರತೀಯ ರಾಜಕುಮಾರರನ್ನು ಖಂಡಿಸಿದ್ದು ಇವರ ಮೇಲೆ ಬಹಳ ಪ್ರಭಾವವನ್ನು ಬೀರಿತು. ಲಾಲ್ ಬಹದ್ದೂರ್ ಶಾಸ್ತ್ರಿ ಆ ಸಮಯದಲ್ಲಿ ಕೇವಲ ಹನ್ನೊಂದು ವರ್ಷದವರಾಗಿದ್ದರು, ಆದರೆ ಆಗಲೇ ಅವರು ಮಾನಸಿಕವಾಗಿ ದೇಶಕ್ಕಾಗಿ ಹೋರಾಡಲು ಸಿದ್ಧತೆ ನಡೆಸಿದ್ದರು.
ಗಾಂಧೀಜಿ ತಮ್ಮ ದೇಶವಾಸಿಗಳನ್ನು ಅಸಹಕಾರ ಚಳವಳಿಯಲ್ಲಿ ಸೇರಲು ಕರೆ ನೀಡಿದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಹದಿನಾರು ವರ್ಷ. ಮಹಾತ್ಮರ ಕರೆಗೆ ಓಗೊಟ್ಟ ಅವರು ತಮ್ಮ ಅಧ್ಯಯನವನ್ನು ತ್ಯಜಿಸಲು ಒಮ್ಮೆಲೇ ನಿರ್ಧರಿಸಿದರು. ಈ ನಿರ್ಧಾರವು ತಾಯಿಯ ಹೃದಯವನ್ನು ಛಿದ್ರಗೊಳಿಸಿತು. ಕುಟುಂಬವು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಒಮ್ಮೆ ಮನಸ್ಸು ಮಾಡಿದ ನಂತರ ಅವರು ಎಂದಿಗೂ ಬದಲಾಯಿವುದಿಲ್ಲ ಎಂಬುದು ಕುಟುಂಬದ ಎಲ್ಲರಿಗೂ ತಿಳಿದಿತ್ತು, ಅವರ ಮೃದುವಾದ ಮನಸ್ಸಿನ ಹಿಂದೆ ಬಂಡೆಯಂತಹ ಧೃಢತೆ ಇತ್ತು.
ಲಾಲ್ ಬಹದ್ದೂರ್ ಶಾಸ್ತ್ರಿ ವಾರಣಾಸಿಯ ಕಾಶಿ ವಿದ್ಯಾ ಪೀಠಕ್ಕೆ ಸೇರಿದರು. ಇದು ಬ್ರಿಟಿಷ್ ಆಡಳಿತವನ್ನು ಧಿಕ್ಕರಿಸಿ ಸ್ಥಾಪಿಸಲಾದ ಅನೇಕ ರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧಿಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎನ್ನುವುದು ಅವರಿಗೆ ವಿದ್ಯಾ ಪೀಠದಲ್ಲಿ ನೀಡಿದ ಬ್ಯಾಚುಲರ್ ಡಿಗ್ರಿ ಅವಾರ್ಡ್, ಆದರೆ ಜನರ ಮನಸ್ಸಿನಲ್ಲಿ ಅದು ಅವರ ಹೆಸರಿನ ಭಾಗವೇ ಆಗಿ ಸೇರಿದೆ.
1927 ರಲ್ಲಿ ಅವರು ವಿವಾಹವಾದರು. ಅವರ ಪತ್ನಿ ಲಲಿತಾದೇವಿ, ಮಿರ್ಜಾಪುರದವರು. ವಿವಾಹವು ಸಾಂಪ್ರದಾಯಿಕವಾಗಿತ್ತು .ಒಂದು ನೂಲುವ ಚಕ್ರ ಮತ್ತು ಕೆಲವು ಗಜಗಳಷ್ಟು ಹ್ಯಾಂಡ್‌ಸ್ಪನ್ ಬಟ್ಟೆಯನ್ನು ಮಾತ್ರ ಅವರು ವರದಕ್ಷಿಣೆಯಾಗಿ ಸ್ವೀಕರಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ಅನೇಕ ಬ್ರಿಟಿಷ್ ವಿರೋಧಿ ಪ್ರಚಾರಗಳನ್ನು ನಡೆಸಿದರು ಮತ್ತು ಸುಮಾರು ವರ್ಷಗಳನ್ನು ಜೈಲುಗಳಲ್ಲಿ ಕಳೆದರು. ಈ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ಎಲ್ಲರೂ ಅವರನ್ನು ಗುರುತಿಸಿವಂತಾಯಿತು.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಭಯ ನಾಯಕ ಎಂದು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಎಲ್ಲರೂ ಗುರುತಿಸಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದಾಗ, ಈ ಲಿಟ್ಲ್ ಮ್ಯಾನ್ ಆಫ್ ಡೈನಮೋ ಅವರನ್ನು ದೇಶದ ಆಡಳಿತದಲ್ಲಿ ರಚನಾತ್ಮಕ ಪಾತ್ರವಹಿಸಲು ಕರೆ ನೀಡಲಾಯಿತು. ಅವರು ತಮ್ಮ ತವರು ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು ಮತ್ತು ಗೃಹ ಸಚಿವರ ಸ್ಥಾನಕ್ಕೂ ಏರಿದರು. ಅವರ ಕಠಿಣ ಪರಿಶ್ರಮ ಮತ್ತು ದಕ್ಷತೆಯ ಕೆಲಸದಿಂದ 1951 ರಲ್ಲಿ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಸಂಪುಟದಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದರು. ರೈಲ್ವೆ ಸಚಿವ, ಸಾರಿಗೆ ಮತ್ತು ಸಂವಹನ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ, ಹೀಗೆ. ರೈಲ್ವೆ ಮಂತ್ರಿಗಳಾಗಿದ್ದಾಗ ಒಮ್ಮೆ ಒಂದು ರೈಲು ಅಪಘಾತ ನಡೆಯುತ್ತದೆ ಆಗ ಆ ಅಪಘಾತಕ್ಕೆ ತಾನೇ ಕಾರಣ ಎಂದು ಭಾವಿಸಿ ಅವರು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಈ ನಡೆಯನ್ನು ಇಡೀ ಸಂಸತ್ತು ಮತ್ತು ದೇಶವು ಬಹಳವಾಗಿ ಪ್ರಶಂಶಿಸಿತು. ಅಂದಿನ ಪ್ರಧಾನಿ ನೆಹರೂ ಅವರು ಈ ಘಟನೆ ಕುರಿತು ಸಂಸತ್ತಿನಲ್ಲಿ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಶ್ಲಾಘಿಸುತ್ತ ರಾಜೀನಾಮೆಯನ್ನು ಅಂಗೀಕರಿಸುತ್ತಿದ್ದೇನೆ, ಏಕೆಂದರೆ ಇದರಿಂದ ಮುಂದೆ ಇಂತಹ ಸಂದರ್ಭ ಬಂದಲ್ಲಿ ನಮಗೆ ಒಂದು ಮಾದರಿ ಯಾಗಿ ನಿಂತಿರುತ್ತದೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಯಾವುದೇ ರೀತಿಯಲ್ಲೂ ಈ ಅಪಘಾತಕ್ಕೆ ಜವಾಬ್ದಾರರಲ್ಲ ಎಂದು ತಿಳಿಸಿದರು. ರೈಲ್ವೆ ಅಪಘಾತದ ಬಗ್ಗೆ ಸುದೀರ್ಘ ಚರ್ಚೆ ನಡೆದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಹೇಳುತ್ತಾರೆ “ಬಹುಶಃ ನಾನು ಗಾತ್ರದಲ್ಲಿ ಚಿಕ್ಕವನಾಗಿರುವುದರಿಂದ ಮತ್ತು ನಾನು ಸೌಮ್ಯ ಸ್ವಭಾವದವನಾದ್ದರಿಂದ ನಾನು ತುಂಬಾ ದೃಢವಾಗಿರಲು ಸಾಧ್ಯವಿಲ್ಲ ಎಂದು ಜನರು ನಂಬುತ್ತಿದ್ದಾರೆ. ದೈಹಿಕವಾಗಿ ದೃಢವಾಗಿಲ್ಲದಿದ್ದರೂ, ನಾನು ಆಂತರಿಕವಾಗಿ ದುರ್ಬಲನಲ್ಲ” ಎಂದು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲವನ್ನು ದೇಶ ಸೇವೆಗೆ ಸಮರ್ಪಿಸಿದರು. ಈ ಅವಧಿಯಲ್ಲಿ ಅವರು ಬಹಳ ಸಾಮರ್ಥ್ಯದ ವ್ಯಕ್ತಿ ಎಂದು ಪ್ರಸಿದ್ಧರಾದರು. ನೆಹರೂ ನಂತರ ನಮ್ಮ ದೇಶದ ಪ್ರಧಾನ ಮಂತ್ರಿಯೂ ಆದರು . ದೇಶವನ್ನು ಪ್ರಗತಿಯತ್ತ ಕೊಂಡೊಯ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಮಹಾತ್ಮ ಗಾಂಧಿಯವರ ರಾಜಕೀಯ ಬೋಧನೆಗಳಿಂದ ಆಳವಾಗಿ ಪ್ರಭಾವಿತರಾದವರು. “ಕಠಿಣ ಪರಿಶ್ರಮವು ಪ್ರಾರ್ಥನೆಗೆ ಸಮಾನವಾಗಿದೆ” ಎಂದು ಅವರು ಹೇಳುತ್ತಿದ್ದರು.
ಇಂತಹ ಸೌಮ್ಯ, ಸರಳ, ದೃಢ ವ್ಯಕ್ತಿಯನ್ನು ನಾವು ತಾಷ್ಕೆಂಟ್ ಒಪ್ಪಂದದ ಮರುದಿನವೇ ಕಳೆದುಕೊಂಡೆವು. ಅವರ ಮರಣ ಇನ್ನೂ ಭಾರತೀಯರಿಗೆ ನಿಗೂಢ.
ಆಸೆ ಅನ್ನೋದು ಯಾವಾಗ ನನ್ನಲ್ಲಿ ಮೊದಲ ಬಾರಿ ಸೇರಿಕೊಂಡಿರಬಹುದು ಅಂತ ಮೆಲುಕು ಹಾಕ ತೊಡಗಿದೆ. ನಿರ್ದಿಷ್ಟ ಸಮಯ,ಘಟನೆ ಕಾಣಲಿಲ್ಲ. ಬಹುಶಃ ನನ್ನ ಬುದ್ದಿ ಜೊತೆಯಲ್ಲೇ ಇತ್ತೇನೋ ಅಂತ ಅನುಮಾನ. ನೆನಪಿನ ಆಚೆ ದಡದಿಂದಲೂ ನನ್ನಲ್ಲಿದ್ದಿರಬೇಕು,ಹುಟ್ಟಿದ ಕ್ಷಣದಿಂದ ಅಮ್ಮನನ್ನು ಬಿಟ್ಟಿರಲಾರದ ಆಸೆಯಿಂದಲೂ ಅಥವಾ ಅದಕ್ಕೂ ಮುಂಚೆ ಹುಟ್ಟುವ ಆಸೆಯೂ ನನ್ನಲ್ಲಿತ್ತೇನೋ? ಆಳಕ್ಕೆ ಇಣುಕಿದರೆ ಎಟುಕಲಾರದ ಭಾವನೆ,ಕಾಣದ ಅಗಾಢತೆ ಬಂದು, ಮೇಲಕ್ಕೆ ನೋಡುವ ಪ್ರಯತ್ನ ಮಾಡಿದೆ. ಮೇಲಕ್ಕೆ ನೋಡಿದಂತೆಲ್ಲ ಆದ ಇದರ ವಿರಾಟ ದರ್ಶನವನ್ನು ಎಲ್ಲಿಂದ ಶುರುಮಾಡಲಿ?!
ಅಮ್ಮನ ಮಡಿಲು,ಅಪ್ಪನ ತೊಡೆ,ಎದೆ ಅವಚಿಕೊಳ್ಳಬೇಕು ಅನ್ನುವ ಬಯಕೆ ನನ್ನ ಮೊದಲ ನೆನಪಲ್ಲಿ ಉಳಿದ ಆಸೆ ಆಗಿದೆ. ಅದರ ಮುಂಚಿನ ಆಸೆಗಳು ಎನಿದ್ದವೋ ನನಗೆ ಗೊತ್ತಿಲ್ಲ. ಅಲ್ಲಿಂದ ಬೆಳೆದಂತೆಲ್ಲಾ ಸಮಯಕ್ಕೆ, ಪರಿಸ್ಥಿತಿಗೆ,ಸುತ್ತ ಇರುತ್ತಿದ್ದ ಜನಗಳ,ವಸ್ತುಗಳ ಆಧಾರದ ಮೇಲೆ ಈ ಆಸೆ ಅನ್ನೋದು ರೂಪಾಂತರ ಹೊಂದಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಸ್ಪಷ್ಟತೆ ಇಲ್ಲದಿದ್ದರೂ,ತನ್ನ ಇರುವಿಕೆಯನ್ನು ನನ್ನಲ್ಲಿ ಸ್ಥಾಪಿಸಿಕೊಂಡೇ,ಪ್ರತಿ ಹಂತದಲ್ಲಿ ತನ್ನ ಇರುವಿಕೆಯನ್ನು ಬೇರೆ ಬೇರೆ ರೂಪಗಳಲ್ಲಿ ಪ್ರದರ್ಶಿಸುತ್ತಾ ನನ್ನ ಜೊತೆಯಲ್ಲಿ ಇದೆ. ಇದರ ನಿಜವಾದ ಗುಣ,ರೂಪ ಯಾವುದು ಹೇಗಿದೆ ಅಂತ ನನಗಿನ್ನೂ ತಿಳಿದಿಲ್ಲ. ಕ್ಷಣವೂ ಬಿಟ್ಟಿರದದ್ದು ಇದೊಂದೇ ಅಂತ ಹೇಳುವ ಮಟ್ಟಿಗೆ ನನ್ನ,ಇದರ ಸಂಬಂಧ ಇದ್ದರೂ, ಇದರ ನಿಜ ಸ್ವರೂಪ ನನಗೆ ಮನವರಿಕೆಯಾಗದೇ ಇರೋದು, ನನಗೇ ಆಶ್ಚರ್ಯ ತರಿಸಿದೆ. ಹಾಗಾಗಿ 55ರ ಈ ಹರೆಯದಲ್ಲಿ ಇದನ್ನ ನನ್ನಿಂದ ಪ್ರತ್ಯೇಕಿಸಿ ಅವಲೋಕಿಸುವ ಮನಸ್ಸಾಯ್ತು.
ಆಸೆ ಸರ್ವಾಂತರ್ಯಾಮಿಯಾ?
ನನ್ನನ್ನು ಪ್ರತ್ಯೇಕಿಸಿ, ಅವಲೋಕಿಸುವ ಮನಸ್ಸು ನಿನಗೆ ಬಂತಲ್ಲಾ, ಅದೂ ನನ್ನಿಂದನೇ ಅಂತ ಆಸೆ ಹೇಳಿ, ನಕ್ಕ ಅನುಭವ ಆಯ್ತು. ಒಮ್ಮೆ ಬೆಚ್ಚಿಬಿದ್ದೆ. ಆಸೆ ಸರ್ವಾಂತರ್ಯಾಮಿಯಾ? ಭಗವಂತನ ರೂಪವಾ? ಇಡೀ ಸೃಷ್ಟಿಯ ಪ್ರೇರಕ ಶಕ್ತಿಯಾ? ಇದಿಲ್ಲದ ಸೃಷ್ಟಿಯ ಯಾವ ವ್ಯಾಪಾರವೂ ಸಾಧ್ಯವಿಲ್ಲವಾ? ಗೊತ್ತಿಲ್ಲ. ದೊಡ್ಡ ದೊಡ್ಡ ತತ್ವಜ್ಞಾನಿಗಳು,ದಾರ್ಶನಿಕರು ಮಾತ್ರ ಇದಕ್ಕೆ ಹಲವಾರು ರೂಪ ಕೊಟ್ಟು ,ಒಂದು ರೀತಿಯ ಅಸ್ಪೃಶ್ಯತೆಯನ್ನು ಇದರ ಜೊತೆ ಪಾಲಿಸಿಕೊಂಡು ಬಂದಿದ್ದಾರೆ.
ಹೊರಹಾಕದಿದ್ದರೂ, ಹಾಕಲು ಆಗದಿದ್ದರೂ ಇದರ ನಿಗ್ರಹ ತುಂಬಾ ಅವಶ್ಯಕ ಅನ್ನುವ ಸಂದೇಶವನ್ನು ಬಹಳ ಕಡೆ ನೋಡಿದ ಮೇಲೆ, ನನ್ನಲ್ಲೇ ಇದ್ದ ಇದರ ಕಡೆ ನೋಡಿದೆ. ಇದು ಅಮಾಯಕವಾಗಿ ನನ್ನನ್ನೇ ನೋಡಿ ನಕ್ಕು ಬಿಡುವುದಾ?
ಆಸೆ ಆಸೆಯೇ
ಆಸೆ,ಮಹದಾಸೆ,ದುರಾಸೆ ಹೀಗೆ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆದರೂ ಆಸೆ ಆಸೆಯೇ. ಹೆಣ್ಣು,ಹೊನ್ನು,ಮಣ್ಣುಗಳಲ್ಲಿ ಪಾಮರರಾದ ನಾವುಗಳು ಇದರ ಹುಟ್ಟು ಕಂಡುಕೊಂಡರೂ, ಜ್ಞಾನಿಗಳು ಪರಮಾತ್ಮನನ್ನು ಕಾಣಬೇಕು ಎನ್ನುವುದರಲ್ಲಿ ಈ ಆಸೆಯನ್ನು ಕಂಡುಕೊಂಡಿದ್ದಾರೆ. ಯಾವುದೋ ಒಂದು ರೂಪದಲ್ಲಿ ಎಲ್ಲರನ್ನೂ ಆವರಿಸಿರುವ ಈ ಆಸೆ, ಅದೇಗೆ ಯಾರಿಗೇ ಆದರೂ ಬೇಡವಾಗಬೇಕು? ಯಾಕೆ ಎಲ್ಲರಿಗೂ ಇದನ್ನು ಕಂಡರೆ ಒಂದು ರೀತಿಯ ಮುಜುಗರ?
ಹೌದು ನನ್ನಲ್ಲಿ ಆಸೆ ಇದೆ ಅಂತ ಹೇಳೋಕ್ಕೆ ಎಷ್ಟು ಸಜ್ಜನರು ನಮ್ಮಲ್ಲಿ ತಯಾರಿದ್ದಾರೆ? ಆಸೆ ನಮಗೆ ಮೈಲಿಗೆ ಆದದ್ದು ಯಾವಾಗ ಮತ್ತು ಯಾಕೆ? ನನಗೆ ಅಂತಹ ಆಸೆಗಳು ಇಲ್ಲ ಅನ್ನುವ ಲೋಕಾರೂಢಿ ವಾಕ್ಯಕ್ಕೆ ನಿಜವಾಗಿಯೂ ಅರ್ಥ ಇದೆಯಾ? ಕ್ಷಣವೂ ಬಿಟ್ಟಿರದ ಈ ಆಸೆ ನನ್ನಲ್ಲಿ ಇಲ್ಲ ಅಂತ ಹೇಳಲು ನನಗೆ ಕಷ್ಟ ಆಗ್ತಿದೆ. ಯಾಕೋ ಗೊತ್ತಿಲ್ಲ,ನನಗೆ ತಿಳಿಯದೆಯೇ ನನಗೆ ಇದರ ಮೇಲೆ ಇತ್ತೀಚೆಗೆ ತುಂಬಾ ಪ್ರೀತಿ ಉಂಟಾಗಿದೆ. ಇದರ ಯಾವ ರೂಪದ ಮೇಲೆ ಪ್ರೀತಿ ಅಂತ ಹೇಳೋದು ಕಷ್ಟ, ಪ್ರೀತಿ ಅಂತೂ ಇದೆ.
ಮಹದಾಸೆ,ದುರಾಸೆ ಇದರ ಪರಮೋಚ್ಚ ತುದಿಗಳಾಗಿವೆ. ಇವು ಆಸೆಯಷ್ಟು ಸಾಮಾನ್ಯವಾಗಿ ಎಲ್ಲರನ್ನೂ ಆವರಿಸದೇ, ಕೆಲವರಿಗೆ ಸೀಮಿತ ಅಂತ ತಿಳಿದು, ಅವುಗಳನ್ನು ಆಸೆಯ ವ್ಯಾಪ್ತಿಯಿಂದ ಈ ಲೇಖನದಲ್ಲಿ ದೂರ ಇಡುತ್ತಿದ್ದೇನೆ.
ಕಾಮ,ಕ್ರೋಧ,ಮದ,ಲೋಭ,ಮೋಹ,ಮತ್ಸರ….ಅರಿಷಡ್ವರ್ಗಗಳು ಅಂತ ಕರೆಯಿಸಿಕೊಂಡಿರುವ ಈ ಆರು ಗುಣಗಳ ಅಮ್ಮ ಈ ಆಸೆಯೇ ಅಂತ ಅನ್ನಿಸಿದರೂ, ಆಸೆಯನ್ನ ಈ ಸಾಲಿನಲ್ಲಿ ಹೆಸರಿಸಿಲ್ಲ ಅನ್ನೋದು ನನಗೆ ಏನೋ ಖುಷಿ,ಸಮಾಧಾನ. ಯಾಕೋ ಗೊತ್ತಿಲ್ಲ. ಆಸೆ ಇಲ್ಲದೆ ಪ್ರಕೃತಿ ಇರಬಲ್ಲದೇ? ಆಸೆಯ ದುಂಬಿ ಬರದೇ ಹೂವು ಅರಳ ಬಲ್ಲದೇ? ದುಂಬಿಯನ್ನಾಕರ್ಷಿಸುವ ಹೂವಿನ ಪರಿಮಳವನ್ನು ಹೂವಿನ ಆಸೆ ಅಂತ ತುಚ್ಚಿಕರಿಸಲೇ? ಹು ಹೂ… ಸಾಧ್ಯವೂ ಇಲ್ಲ,ಸಿಂಧುವೂ ಅಲ್ಲ. ಆಸೆಯಿಲ್ಲದ ಪ್ರಕೃತಿ,ಪ್ರಪಂಚವನ್ನು ನನಗೆ ಊಹಿಸಿಕೊಳ್ಳಲೂ ಆಗುತ್ತಿಲ್ಲ.
ಆಸೆಯೇ ಸೃಷ್ಟಿಯನ್ನು ಜೀವಂತವಾಗಿ ಇಟ್ಟಿದೆ
ಆಸೆ ಪ್ರತಿ ಜೀವರಾಶಿಯಲ್ಲಿ ಇರಲೇ ಬೇಕಾದ ಅನಿವಾರ್ಯ ಅಂಶ ಅಂತ ಅನ್ನಿಸುತ್ತಿಲ್ಲವಾ? ನನಗಂತೂ ಈ ಆಸೆಯೇ ಸೃಷ್ಟಿಯನ್ನು ಜೀವಂತವಾಗಿ ಇಟ್ಟಿದೆ ಅನ್ಸುತ್ತೆ. ಅಷ್ಟೇ ಅಲ್ಲ, ಆಸೆ ಚಿರನೂತನ! ನಿನ್ನೆಯ ಆಸೆ,ನಾಳೆಯ ಆಸೆಯ ಮುಂದೆ ಬಾಲಿಶವಾಗಿ ಕಂಡಿದೆ ನನಗೆ. ಜಾರುವ ಕ್ಷಣಕ್ಕನುಸಾರವಾಗಿ ಮಾಯವಾಗಿ,ಹುಟ್ಟುವ ಮರುಕ್ಷಣಕ್ಕೆ ಹೊಸತನ್ನು ಹೊದ್ದು ಬರುವ ಈ ಆಸೆ ನನ್ನಲ್ಲಿ ಒಂದು ರೀತಿಯ ಅವರ್ಣನೀಯ ಪ್ರಜ್ಞೆಯನ್ನು ಹುಟ್ಟು ಹಾಕಿ,ನನಗರಿವಿಲ್ಲದೆಯೇ ನನ್ನಲ್ಲಿ ನನ್ನತನದ ಜೀವಂತಿಕೆಯನ್ನು ತುಂಬುತ್ತಿದೆ.
ಇಂತಹ ಆಸೆಯನ್ನು ನಿಗ್ರಹಿಸಬೇಕು ಅಂತ ಜ್ಞಾನಿಗಳಾದರೂ ಯಾಕೆ ಹೇಳಿದರು? ಇದನ್ನು ನಿಗ್ರಹಿಸಿದಷ್ಟೂ ಕೆರಳುವುದನ್ನು ನಾನು ಕಂಡುಕೊಂಡಿದ್ದೇನೆ. ಇದನ್ನು ಇದರ ಪಾಡಿಗೆ ಇರಲು ಬಿಟ್ಟಾಗ ಅಷ್ಟಾಗಿ ಕೆರಳಿಲ್ಲ. ಇದು ನನಗಾದ ಅನುಭವ. ಯಾವುದನ್ನೇ ಆಗಲಿ ನಿಗ್ರಹಿಸುವುದು ಎಷ್ಟು ಸರಿ? ನಿಗ್ರಹದಿಂದ ಆಗದೇ ಇರೋದನ್ನ ಪ್ರೀತಿಯಿಂದ ಮಾಡಬಹುದು ಅಂತಾರಲ್ಲ, ಅಂತಹ ಪ್ರೀತಿ ಈ ಆಸೆ ಕಡೆಗೂ ತೋರಬಹುದಲ್ಲ? ಇದರೆಡೆಗೆ ತೋರುವ ಪ್ರೀತಿ ಅಂದ್ರೆ ಜಾಸ್ತಿ ಆಯ್ತೇನೋ,ಯಾಕಂದ್ರೆ, ಇದು ಇದೆ ಅಂತ ಹೇಳೋದೇ ನಮಗೆ ಮುಜುಗರ!
ಆಸೆ ಕೆಟ್ಟದ್ದು, ಇದು ಬಿಸಿಲ ಕುದುರೆ, ಆಸೆಯ ಬದುಕು ಅಂದರೆ ತಳ ಒಡೆದ ದೋಣಿಯಲ್ಲಿನ ಪಯಣ….ಒಂದಾ ಎರಡಾ .ಆಸೆಯ ಬದುಕು ಅಂತಾರಲ್ಲಾ, ಅವರಿಗೆ ಒಂದು ಪ್ರಶ್ನೆ. ಬದುಕಿನಿಂದ ಆಸೆ ತೆಗೆದು ನೋಡಿ ಅಲ್ಲಿ ಬದುಕು ಇರುತ್ತಾ ಅಂತ? ಹೀಗೆ ಅನಿವಾರ್ಯ ಆದದ್ದನ್ನ ಯಾವುದೋ ಹುಸಿ ಪ್ರತಿಷ್ಠೆಗೆ ನನ್ನಲ್ಲಿಲ್ಲ ಅಂತ ಹೇಳೋದು ಮನುಷ್ಯನಿಗೆ ಮಾತ್ರ ಸಾಧ್ಯ ಏನೋ. ಪ್ರಕೃತಿಯ ಯಾವ ಜೀವಿಗೂ ಇರದ ಒಂದು ರೀತಿಯ ಹುಸಿ ಪ್ರತಿಷ್ಠೆ ಮನುಷ್ಯನಿಗೆ ತಾನು ತೊಟ್ಟ ಉಡುಗೆಯೊಂದಿಗೇ ಬಂದಂತಾಗಿದೆ,ಇದ್ದದ್ದನ್ನು ಮುಚ್ಚಿಟ್ಟು ಇಲ್ಲ ಅಂತ ಹೇಳೋದು! ಸರ್ವ ಸಂಗ ಪರಿತ್ಯಾಗಿ ಅಂತ ಕರೆಸಿಕೊಂಡವರು ನಿಜವಾಗಿಯೂ ಆಸೆಯಿಂದ ಮುಕ್ತರಾದವರಾ? ಹಾಗೆ ಆಗಬೇಕು, ಕರೆಯಿಸಿಕೊಳ್ಳಬೇಕು ಅನ್ನೋದು ಒಂದು ಆಸೆಯಲ್ಲವಾ? ಯಾಕೋ ಈ ರೀತಿಯ ಯೋಚನೆಗಳು ನನ್ನೊಳಗಿರುವ ಆಸೆಯೆಡೆಗೆ ಒಂದು ರೀತಿಯ ಮೆದುಧೋರಣೆ ಉಂಟುಮಾಡಿ,ಅದರತ್ತ ಕರುಣೆಯ ನೋಟ ಬೀರುವ ಹಾಗೆ ಮಾಡುತ್ತಿದೆ. ಅದು ಮಾತ್ರ ಎಂದಿನಂತೆ ಅಮಾಯಕತೆಯಿಂದ ನನ್ನತ್ತ ನೋಡುತ್ತಿದೆ,ಇನ್ನೂ ಎಷ್ಟೊತ್ತು ನನ್ನನ್ನು ನಿನ್ನಿಂದ ಪ್ರತ್ಯೇಕಿಸಿ ಇಡುತ್ತಿಯಾ ಅಂತ.
ನಾನು ಆಸೆಯನ್ನು ನಿಗ್ರಹ ಮಾಡಲಾರೆ. ನಿಗ್ರಹ ಮಾಡಿ, ನನ್ನಂತೆಯೇ ಅದರ ಜೀವಂತಿಕೆಯನ್ನು ನಶಿಸಲಾರೆ. ನನ್ನೊಡನೆ ಅದನ್ನು ಸ್ವಚ್ಛಂದವಾಗಿ ಇರಲು ಅನುವು ಮಾಡಿಕೊಟ್ಟು, ನನ್ನ ಶಾಂತಿಗೆ,ನೆಮ್ಮದಿಗೆ ಅಡ್ಡ ಬರಬೇಡ ಅಂತ ಪ್ರೀತಿಯಿಂದ ಹೇಳಬಲ್ಲೆ. ನನ್ನ ಆಸೆ ನನ್ನ ಮಾತು ಕೇಳುತ್ತದೆ ಅನ್ನುವ ಆತ್ಮ ವಿಶ್ವಾಸ ನನ್ನಲ್ಲಿದೆ. ಈ ವಿಶ್ವಾಸ ಇಲ್ಲದಾದ್ರೆ ಮಾತ್ರ ನಾನು ನಿಗ್ರಹದಂತ ಅಮಾನುಷ ಪ್ರಯತ್ನಕ್ಕೆ ಕೈ ಹಾಕಬೇಕಾಗುತ್ತದೆ. ಕಚ್ಚುವುದು ನಾಯಿಯ ಮೂಲಗುಣ ವಾದರೂ, ಎಲ್ಲರ ಮನೆಯ ನಾಯಿಗಳು ಕಚ್ಚುವುದಿಲ್ಲ ಅಲ್ವಾ? ನೋಡಿ ಇಂತಹ ಆತ್ಮವಿಶ್ವಾಸದ ಮಾತುಕೇಳಿ ಇಷ್ಟೊತ್ತು ಅಮಾಯಕನಂತೆ ಕೂತಿದ್ದ ನನ್ನ ಆಸೆ ಹೇಗೆ ಗರಿಕೆದರಿ, ಮೈಝಾಡಿಸಿಕೊಂಡು,ಪ್ರೀತಿಯ ನಗೆ ಬಿರುತ್ತಾ ನನ್ನೆಡೆಗೆ ಬರುತ್ತಿದೆ. ನಾನೂ ಅಷ್ಟೇ ಅಪ್ಯಾಯತೆಯಿಂದ ಇದನ್ನು ಅಪ್ಪಿಕೊಳ್ಳುತ್ತಿದ್ದೇನೆ,ಯಾರು ಏನೇ ಅಂದರೂ, ನನಗೂ ನನ್ನ ಆಸೆಗೂ ನಾಚಿಕೆಯೇ ಇಲ್ಲ ಅಂದರೂ ನಮಗೆ ಬೇಸರ ಇಲ್ಲ. ದ್ವೇಷ,ಅಸೂಯೆ ಅಂತಹುಗಳೇ ನನ್ನಲ್ಲಿರಬೇಕಾದ್ರೆ,ಪಾಪ ಈ ಆಸೆಯನ್ನು ಹೊರದಬ್ಬಿ ನಾನು ಸಾಧಿಸಬೇಕಿರುವುದಾದ್ರು ಏನನ್ನು?
ದಿನನಿತ್ಯ ಸಾಮಾನು ಒದಗಿಸುವ ಗ್ರಂದಿಗೆ ಅಂಗಡಿಯ ವೃತ್ತಿಯಲ್ಲಿ ಗಾಂಧೀಜಿಯವರ ಹಿರೀಕರು ಇದ್ದಿದ್ದರಿಂದ ಅವರ ಮನೆತನದ ಹೆಸರು ‘ ಗಾಂಧಿ’ ಆಯಿತಂತೆ! ಇಂಥ ವ್ಯಾಪಾರಿ ಮನೋಧರ್ಮದ ಗುಜರಾತಿ ಉಚ್ಛ ಮನೆತನದಲ್ಲಿ ಜನಿಸಿದ, ಬೆಳೆದ ಗಾಂಧೀಜಿ, ತುಂಡು ಪಂಚೆಯುಟ್ಟು ತನ್ನ ಸರ್ವಸ್ವವನ್ನೂ ಜನರಿಗೆ ಧಾರೆ ಎರೆದು ಕೊನೆಗೆ ತನ್ನನ್ನೂ ನಾಡಿಗೆ ಸಮರ್ಪಿಸಿಕೊಂಡ ಹಾದಿ ಮಾತ್ರ ಅನನ್ಯವಾದುದು.
ಗಾಂಧಿ ಯುಗ ಭಾರತದಲ್ಲಿ ಆರಂಭವಾಗುವ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಒಂದು ಗಾಂಧಿ ಯುಗ 1883ರ ಹೊತ್ತಿಗೆ ಆರಂಭವಾಗಿತ್ತು. ಅಲ್ಲಿನ ಬಿಳಿಯರು ವಲಸೆಗಾರರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳ , ಹೇರುತ್ತಿದ್ದ ಕಠಿಣ ಕಾನೂನುಗಳ ವಿರುದ್ಧ ಅವರು ಪ್ರತಿಭಟಿಸಿದರು. ಆ ಸಂದರ್ಭದಲ್ಲಿ ಅವರು ಅನುಭವಿಸಿದ ಅವಮಾನ, ಅವಹೇಳನ ಅಪಾರ. ಅವರನ್ನು ಚಲಿಸುವ ರೈಲಿನಿಂದ ಕೆಳಕ್ಕೆ ನೂಕಲಾಯಿತು. ರೈಲಿನಲ್ಲಿ ತಾವು ಕೊಂಡ ಟಿಕೀಟಿನ ಜಾಗದಲ್ಲಿ ಬಿಳಿಯರಲ್ಲದ ಕಾರಣ, ಬಿಳಿಯ ರೊಂದಿಗೆ ಕುಳಿತು ಪ್ರಯಾಣಿಸುವ ಯೋಗ್ಯತೆ ಇಲ್ಲವೆಂಬ ಕಾರಣದಿಂದ ಸಾಮಾನು ಸಮೇತ ಅವರನ್ನು ಹೊರ ನೂಕಿದಾಗ ಅವರು ಅವಮಾನವನ್ನು ನುಂಗಿ ಸುಮ್ಮನಾಗಲಿಲ್ಲ. ಅದನ್ನು ಪ್ರತಿಭಟಸಿ ಅದನ್ನೊಂದು ಜನಾಂದೋಲನವಾಗಿ ಪರಿವರ್ತಿಸಿದರು. ಅವರ ಈ ನಡೆ ಅಲ್ಲಿನ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಏಕೆಂದರೆ ಅವರ ಪ್ರತಿಭಟನೆ ನ್ಯಾಯಯುತವಾಗಿತ್ತು ಹಾಗೂ ಶಾಂತಿಯುತವಾಗಿತ್ತು. ಅವರು ಸೆರೆಮನೆ ವಾಸಕ್ಕೆ ಅಂಜುತ್ತಿರಲಿಲ್ಲ. ಇಂಥ ವಿರೋಧವನ್ನು ಅದುವರೆಗೂ ಜಗತ್ತು ಕಂಡಿರಲಿಲ್ಲ. ಇದರೊಂದಿಗೆ ಗಾಂಧೀಜಿ ಅಲ್ಲಿನ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಅನುಸರಿಸಿದ ಇನ್ನೊಂದು ತಂತ್ರ ‘ ಸತ್ಯಾಗ್ರಹ.’
ಗಾಂಧೀಜಿಯವರ ಈ ಅಸ್ತ್ರ ಜಗತ್ತಿಗೇ ಹೊಸದು. ಇದನ್ನು ಅವರು ಬಹಳ ಶಕ್ತಿಯುತವಾಗಿ ಅಲ್ಲಿನ ಸರ್ಕಾರದ ವಿರುದ್ಧ ಬಳಸಿದರು. ಆಗ ದಕ್ಷಿಣ ಆಫ್ರಿಕಾದಲ್ಲಿ ಇದ್ದ ಭಾರತೀಯರು ಹಾಗೂ ಭಾರತೀಯೇತರರೂ ಅವರ ಬೆಂಬಲಕ್ಕೆ ನಿಂತರು. ಆದರೂ ಅಲ್ಲಿಯ ಕೆಲವು ಪಠಾಣ ನಾಯಕರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಗಾಂಧೀಜಿಯವರಿಗೆ ಇದು ನೋವುಂಟು ಮಾಡುತ್ತಿರಲಿಲ್ಲ. ಅವರದು ‘ ವಿಶ್ವ ಭ್ರಾತೃತ್ವ ‘ ದೃಷ್ಟಿ ಕೋನ. ನೋಯಿಸಿದವರನ್ನೂ ಗೆಲ್ಲುವ ಅವರ ಸಾಮರ್ಥ್ಯ ಮಾತ್ರ ಯಾರಿಗೂ ನಿಲುಕದ್ದು.
1914ರ ಹೊತ್ತಿಗೆ ಅವರು ದಕ್ಷಿಣ ಆಫ್ರಿಕಾವನ್ನು ಬಿಟ್ಟು ಭಾರತಕ್ಕೆ ಹಿಂದಿರುಗುವಾಗ ಅಲ್ಲಿನ ಕಾರ್ಮಿಕರ ಬಹುತೇಕ ಸಮಸ್ಯೆಗಳನ್ನು ಅವರು ಪರಿಹರಿಸಿದ್ದರು.
ಮೋಹನದಾಸ್ ಕರಮಚಂದ ಗಾಂಧಿ- ಮಹಾತ್ಮ ಗಾಂಧಿಯಾದ ಕಥೆ ಯಾವ ‘ ಫೇರಿ ಟೇಲ್’ ಗೂ ಕಡಿಮೆಯಿಲ್ಲ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಇರಬಹುದಾದ ಎಲ್ಲ ದುರ್ಗುಣಗಳು, ದುರ್ನಡತೆ ಗಳು, ದೌರ್ಬಲ್ಯಗಳು ಅವರಲ್ಲಿ ಚಿಕ್ಕಂದಿನಿಂದ ಇದ್ದವು. ಬಹು ಪ್ರಖ್ಯಾತವಾಗಿರುವ ಶಾಲೆಯಲ್ಲಿ ಅವರು ಸುಳ್ಳು ಹೇಳಲು ನಿರಾಕರಿಸಿದ ಕತೆ ಒಂದು ನಿದರ್ಶನ ಮಾತ್ರ. ಆನಂತರ ಅವರಲ್ಲಿ ಸಾಕಷ್ಟು ಮೋಹ, ವ್ಯಾಮೋಹ ಸೇರಿಕೊಂಡಿತ್ತು ಎಂದು ಅವರೇ ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದಾಗ ಹೆಂಡತಿಯ ಸಾಮಿಪ್ಯಕ್ಕಾಗಿ ಹಾತೊರೆಯುತ್ತಿದ್ದು ಅವರು ಸಿಕ್ಕಾಗ ಅವರ ಮೇಲೆ ಮುಗಿ ಬೀಳುತ್ತಿದ್ದುದಕ್ಕಾಗಿ ಆನಂತರ ಪಶ್ಚಾತ್ತಾಪ ಪಟ್ಟಿದ್ದಾರೆ. ಇಂಗ್ಲೀಷರಂತೆ ಉಡುಪು ಧರಿಸಿ ಮೆರೆದಿದ್ದಾರೆ. ಧೂಮಪಾನ, ಮದ್ಯಪಾನ ಮಾಡಿದ್ದಾರೆ. ರೀತಿಯಾಗಿ ಯೌವನದ ಮೋಡಿಗೆ ಅವರು ಮರುಳಾಗಿದ್ದು ಸುಳ್ಳಲ್ಲ.
ಆದರೆ ಇವೆಲ್ಲ ಕಮ್ಮಾರನ ಕುಲುಮೆಯಲ್ಲಿ ಕಾದ ಕಬ್ಬಿಣದಂತೆ ಅವರ ಬದುಕನ್ನು ‘ ಗಾಂಧೀಜಿ’ ಯಾಗಿ ರೂಪಿಸುವಲ್ಲಿ ಮೆಟ್ಟಿಲುಗಳಾಗಿವೆ. ಒಂದು ಹಂತದ ನಂತರ ಈ ಎಲ್ಲ ಲೋಲುಪತೆಗಳು ಅವರನ್ನು ವಿರಕ್ತಿಯೆಡೆಗೆ ಸಾಗಿಸುತ್ತವೆ. ಆ ವಿರಕ್ತಿಯಾದರೂ ಎಂತಹದು! ಈ ಸಂತನ ಆಧ್ಯಾತ್ಮ ಸಾಗಿದ್ದು ಸಮಾಜದ ಕಡೆಗೆ. ಸಾಮಾನ್ಯರ ಕಡೆಗೆ. ಅದು ಮನೆ – ಮಾರು ಎಂಬ ಗಡಿ ದಾಟಿ ಸಮುದಾಯ ಸೇರಿ, ರಾಷ್ಟ್ರ , ವಿಶ್ವ ವ್ಯಾಪಿಯಾಯಿತು. ಇಂಥ ಸಂತನನ್ನು ವಿಶ್ವ ಆ ಮೊದಲು ಕಂಡಿರಲಿಲ್ಲ. ನಂತರ ಕಾಣಲೂ ಇಲ್ಲ.
ಇವರ ಸಾಮಾಜಿಕ ಆಧ್ಯಾತ್ಮವನ್ನು ಒಂದು ಹಂತದವರೆಗೆ ಬಸವಣ್ಣನವರಲ್ಲಿ, ಒಂದು ಹಂತದವರೆಗೆ ಅಂಬೇಡ್ಕರರಲ್ಲಿ ಹಾಗೂ ಒಂದು ಹಂತದವರೆಗೆ ಸ್ವಾಮಿ ವಿವೇಕಾನಂದರಲ್ಲಿ ಕಂಡಿದ್ದೇವೆ. ಅವರದು ಅಹಿಂಸೆಯ ಮಾರ್ಗ. ಇದನ್ನು ನಾವು ಬುದ್ಧನಲ್ಲಿ, ಏಸುವಿನಲ್ಲಿ ಕಂಡಿದ್ದೇವೆ. ಆದರೆ ಗಾಂಧೀಜಿಯವರು ಈ ಎಲ್ಲರನ್ನೂ ಏಕತೃವಾಗಿ ಎರಕ ಹೊಯ್ದ ಅಚ್ಚು!!ರಸ್ಕಿನ್ನರ ‘ Unto This Last’ ಪುಸ್ತಕ ಅವರು ಮೇಲೆ ಬಹಳ ಪ್ರಭಾವ ಬೀರಿತ್ತು. ರಾಜಾಜಿಯವರು ಅವರ ರಾಜಕೀಯ ಮಾರ್ಗದರ್ಶಕರು ಹಾಗೂ ಗುರುಗಳು. ಈ ಇಬ್ಬರು ಗುರುಗಳನ್ನೂ ಮೀರಿ ಅವರು ಬೆಳೆದು ವಿಶ್ವ ಗುರುವೇ ಆದದ್ದು ಸೋಜಿಗದ ಸತ್ಯ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅಲ್ಲಿನ ಕಾರ್ಮಿಕರ ಪರ ವಕೀಲರಾಗಿ ವಕಾಲತ್ತನ್ನು ಮಾಡುತ್ತಿದ್ದರು. ಆಗ ಅವರು ಕಂಡುಕೊಂಡಿದ್ದು ‘ ಸ್ವರಾಜ್ಯ’ ದ ಕಲ್ಪನೆ. ಅವರ ಕಲ್ಪನೆಯ ಸ್ವರಾಜ್ಯ ಭೌಗೋಳಿಕವಾಗಿ ಅಲ್ಲ. ಅದೊಂದು ಜೀವನ ವಿಧಾನ. ದುಡಿದು ಉಣ್ಣುವ, ತನ್ನ ಅಗತ್ಯಗಳನ್ನು ಸ್ವಯಂ ಪೂರೈಸಿಕೊಳ್ಳುವ ನೆಲಮೂಲದ ಬದುಕಿನ ಮಾರ್ಗ. ಇದನ್ನು ಅವರು ಪ್ರಾಯೋಗಿಕವಾಗಿ ದಕ್ಷಿಣ ಆಫ್ರಿಕಾದಲ್ಲೆ ಅನುಸರಿಸಿದರು. ಅಲ್ಲಿ ಇದ್ದ ಸುಮಾರು 30 ವರ್ಷಗಳ ಕಾಲ ಅವರು ಸ್ವಾವಲಂಬನೆಯ ಬದುಕನ್ನು ಬಾಳಿದ್ದಲ್ಲದೆ ಬೇರೆಯವರೂ ಅನುಸರಿಸುವಂತೆ ಮಾಡಿದರು. ಅವರ ಬದುಕು ಸಮುದಾಯದ ಬದುಕಾಗಿತ್ತು.
ಪಾಳುಬಿದ್ದ ಜಮೀನನ್ನು ಖರೀದಿಸಿ ಅದನ್ನು ತನ್ನ ಜೊತೆಗಾರ ಬಂಧು- ಮಿತ್ರರೊಂದಿಗೆ ಸ್ವಚ್ಛಗೊಳಿಸಿ, ವಾಸ ಯೋಗ್ಯವಾಗಿ ಮಾಡಿ , ಸುತ್ತಲೂ ಐದು ಕಿ.ಮೀ. ದೂರದ ಒಳಗೆ ಸಿಗುವ ಪರಿಕರಗಳಿಂದಲೇ ಅಲ್ಲಿ ಮನೆ, ಮತ್ತಿತರ ಅವಶ್ಯಕತೆಗಳನ್ನು ಪೂರೈಸಿಕೊಂಡರು. ಆಹಾರಕ್ಕೆ ಬೇಕಾದ ಹೈನು, ತರಕಾರಿಗಳನ್ನು ತಾವೇ ಬೆಳೆದರು. ಅದು ಸರಳ ಜೀವನ ವಿಧಾನ. ಇಂದಿನ ಕೂಡಿಡುವ ಜಾಗತೀಕರಣದ ಆರ್ಥಿಕತೆಯಲ್ಲ. ಅವರ ಬೇಡಿಕೆಗಳು ಅಲ್ಪವಾಗಿದ್ದು, ತಾವೇ ಪೂರೈಸಿಕೊಳ್ಳಬಲ್ಲವಾಗಿದ್ದವು. ಇದನ್ನು ಅವರು ಭಾರತದಲ್ಲೂ ಮುಂದುವರೆಸಿದರು. ಹಾಗಾಗಿಯೇ ಅವರು ಇಲ್ಲಿ ಆಶ್ರಮ ವಾಸಿಗಳಾಗಿದ್ದದ್ದು. ಅವು ಸಮುದಾಯ ಜೀವನಕ್ಕೆ ಪೂರಕವಾಗಿದ್ದವು. ಕೊನೆಯವರೆಗೂ ಅವರು ಅದನ್ನೇ ಅನುಸರಿಸಿದರು. ಮಾತ್ರವಲ್ಲದೇ ತಮ್ಮ ಪತ್ನಿ ಕಸ್ತೂರಬಾ ಅವರ ಕಾಲಾನಂತರ 1944ರಲ್ಲಿ ಜೈಲಿನಿಂದಲೇ ಆರಂಭಿಸಿದ ಕಸ್ತೂರ ಬಾ ಆಶ್ರಮಗಳು ಇಂದಿಗೂ ಭಾರತದಾದ್ಯಂತ ಇವೆ. ಭಾರತದಲ್ಲಿ 12 ಸ್ಥಳಗಳಲ್ಲಿ ಈ ಆಶ್ರಮಗಳಿವೆ. ಕರ್ನಾಟಕದಲ್ಲಿ ಅರಸೀಕೆರೆಯಲ್ಲಿ ಈ ಆಶ್ರಮ ಇದೆ. ಇಲ್ಲಿ ಅಳವಡಿಸಿರುವ ದಿನಚರಿ ಗಾಂಧೀಜಿಯವರ ದಿನಚರಿಯಂತೆ ಪ್ರಾರ್ಥನೆ, ಪರಿಶ್ರಮ, ಅಭ್ಯಾಸ, ಧ್ಯಾನ, ಪಠಾಣ ಮೊದಲಾದವುಗಳನ್ನು ಹೊಂದಿದೆ. ಈಗಲೂ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡಲಾಗಿದೆ. ಆಶ್ರಮಗಳು ದಾನದಿಂದ ಹಾಗೂ ಆಶ್ರಮ ವಾಸಿಗಳ ಪರಿಶ್ರಮದಿಂದ ನಡೆಯುತ್ತವೆ.
ಈ ಆಶ್ರಮಗಳಲ್ಲಿ ಯಾವ ಹುದ್ದೆಗಳೂ ಇಲ್ಲ. ಇದರ ಉಸ್ತುವಾರಿ ನೋಡಿಕೊಳ್ಳುವವರನ್ನು ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಇದು ಗಾಂಧೀಜಿಯವರೇ ಕೊಟ್ಟ ಹೆಸರು. ಆದರೆ ಇವುಗಳ ಬಗ್ಗೆ ನಮ್ಮ ದೇಶದಲ್ಲಿ ತಿಳಿದಿರುವವರು ಬಹಳ ಕಡಿಮೆ!
ಗಾಂಧೀಜಿಯವರು ಭಾರತದಲ್ಲಿ ಸುಮಾರು 1915ರ ಹೊತ್ತಿಗೆ ತಮ್ಮ ಹೆಜ್ಜೆಗಳನ್ನು ಮೂಡಿಸಿದವರು. ಇದು ‘ ಗಾಂಧೀ ಯುಗ’ ವೆಂದೇ ಇತಿಹಾಸದಲ್ಲಿ ದಾಖಲಾಗಿದೆ. ಆಗ ಗಾಂಧಿ ಒಬ್ಬರೇ ಇರಲಿಲ್ಲ. ಆದರೆ ಅವರ ವಿಚಾರ ಧಾರೆಗಳು ಭಾರತ ರಾಷ್ಟ್ರಕ್ಕೆ ಬೇಕಾಗಿದ್ದವು ಅಥವಾ ಬೇಕಾಗುವಂಥವಾಗಿದ್ದವು. ಅವು ಜನಪರವಾಗಿದ್ದರಿಂದಲೇ ರಾಷ್ಟ್ರಪರವೂ ಆಗಿದ್ದವು ಎಂಬುದರ ಅರಿವು ಸಾಮಾನ್ಯ ಜನರಿಗಿತ್ತು. ಆಳುವ ವರ್ಗಗಳದ್ದು ಸದಾ ಜಾಣ ಕುರುಡು ಹಾಗೂ ಜಾಣ ಕಿವುಡು. ಭಾರತದಲ್ಲಿ ಗಾಂಧೀಜಿಯವರ ಬಗ್ಗೆ ಆದದ್ದೂ ಅದೇ. ಅವರು ಅಧಿಕಾರದಿಂದ ದೂರ ಉಳಿದದ್ದನ್ನು ಆಳುವ ನಾಯಕರು ತಮ್ಮ ತಮ್ಮ ನೆಲೆಗಳಲ್ಲಿ ವಿಚಾರ ಮಾಡಿರಲಿಕ್ಕೆ ಸಾಕು. ಜೊತೆಗೆ ಗಾಂಧೀಜಿಯವರ ವಿಚಾರ ಧಾರೆಗಳು ಅಧಿಕಾರಶಾಹಿಗೆ ಹೊಂದುವಂಥವುಗಳಲ್ಲವೇ ಅಲ್ಲ. ಅವು ದುಡಿವ ವರ್ಗದ, ಕಾರ್ಮಿಕ ವರ್ಗದ, ಬಡವರ ಪರವಾದಂಥವು. ಅವರು ಸಮ ಸಮಾಜದಲ್ಲಿ ನಂಬಿಕೆ ಇಟ್ಟವರು. ಸರಳ ಜೀವನವನ್ನು ಪಾಲಿಸಿಕೊಂಡು ಬಂದವರು. ಆದರೆ ಅಧಿಕಾರವೆಂದರೆ ಆಳುವ ವರ್ಗ. ಅದಕ್ಕೆ ಕುರ್ಚಿಯ ಮೋಹ. ಹಾಗಾಗಿ ಅದು ತತ್ವರಹಿತ; ಸಿರಿವಂತರ, ಬಲಾಢ್ಯರ ಪರ. ಸ್ವಾತಂತ್ರ್ಯಾ ನಂತರ ಭಾರತದ ಕಟ್ಟೋಣ ನಡೆದಿದ್ದು ವಿಶೇಷವಾಗಿ ಈ ಸಿರಿವಂತರಿಗಾಗಿ. ಕೈಗಾರಿಕೀಕರಣ, ವಾಣಿಜ್ಯೀಕರಣ ಗಳೆಲ್ಲ ಬೆಳೆಸಿದ್ದು ಹಣವಂತ ವರ್ಗವನ್ನು ಹಾಗೂ ಅದರ ಅಧೀನದಲ್ಲಿ ದುಡಿವ ವರ್ಗವನ್ನು. ಇದು ಗಾಂಧೀಜಿಯ, ರಸ್ಕಿನ್ನರ, ಬಸವಣ್ಣನ, ಅಂಬೇಡ್ಕರರ ವಿಚಾರಧಾರೆಗಳಿಗೆ ವಿಪರೀತವಾದದ್ದು. ಹಾಗಾಗಿಯೇ ಇವರು ಕಾಲಾಂತರದಲ್ಲಿ ಮರೆಗೆ ಸರಿಸಲ್ಪಟ್ಟರು.
ಆದರೆ, ಇಂದು ಜಗತ್ತೇ ಅಶಾಂತಿ, ಅರಾಜಕತೆ, ಭಯೋತ್ಪಾದನೆ, ಬಡತನ, ಯುದ್ಧಭೀತಿಯಿಂದ ತಲ್ಲಣಿಸುತ್ತಿರುವಾಗ ಇವರೆಲ್ಲ ಮುನ್ನೆಲೆಗೆ ಬರುತ್ತಿದ್ದಾರೆ. ಅದರಲ್ಲೂ ಗಾಂಧೀಜಿ ಇಂದು ವಿಶ್ವಕ್ಕೇ ಬೇಕಾದವರಾಗಿದ್ದಾರೆ. ಗ್ರಾಹಕ ಕೇಂದ್ರಿತ ಅಮೇರಿಕಾದ ಟ್ರಂಪ್, ವಿಶ್ವವನ್ನೇ ವಸಾಹತಾಗಿ ಆಳಿದ ಇಂಗ್ಲೆಂಡ್ ಗಾಂಧೀ ಮಂತ್ರವನ್ನು, ಬಸವಣ್ಣನವರನ್ನು ಜಪಿಸುತ್ತಿವೆ. ಅಂದರೆ ಭಾರತ ಸುಮ್ಮನಿರಲಾದೀತೆ?
2000 ದಿಂದ ಈಚೆಗೆ ‘ ಗಾಂಧಿ ಮರುಯುಗ’ ವಿಶ್ವದಲ್ಲಿ ಆರಂಭವಾಯಿತು ಎಂದು ಹೇಳಬಹುದು. ಇಂದಿನ ಕೊರೋನಾಘಾತ ವಿಶ್ವದಲ್ಲಿ ಮತ್ತೆ ಗಾಂಧೀಜಿಯನ್ನು ಸ್ಥಾಪಿಸುವ ಅನಿವಾರ್ಯತೆಯನ್ನು ತಂದಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಆದ ಕಾರ್ಮಿಕರ ಗುಳೆ , ವಲಸೆಯಿಂದ ಆದ ಅನಾಹುತಗಳನ್ನು ಗಾಂಧೀಜಿ 1890ರ ಹೊತ್ತಿಗೇ ದಕ್ಷಿಣ ಆಫ್ರಿಕಾದಲ್ಲಿ ಮನಗಂಡು ಆಗಲೇ ಎಚ್ಚರಿಸಿದ್ದರು. ಗಾಂಧೀಜಿ, ಬಸವಣ್ಣನವರದು ಬಹುತೇಕ ಒಂದೇ ಮಾರ್ಗ. ಅದು ಕಾಯಕದಿಂದ ಕೈಲಾಸ ಕಾಣುವ ಮಾರ್ಗ. ದುಡಿವ ಕೈಗಳಿಗೆ ಬಲ ತುಂಬುವ ಮಾರ್ಗ. ಗಾಂಧೀಜಿಯವರನ್ನು ರಾಜಕೀಯವಾಗಿ ಮಾತ್ರ ನೋಡುವುದನ್ನು ನಿಲ್ಲಿಸಬೇಕು. ಇಂದಿನ ಎಲ್ಲಾ ಕ್ಷೇತ್ರಗಳಲ್ಲೂ ಅವರ ಅನ್ವಯ ಅಗತ್ಯವಾಗಿದೆ.
ಉದಾಹರಣೆಗೆ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಅನ್ವಯಿಸಿ ನೋಡಿದರೆ ಪ್ರಶಸ್ತಿಗಳಿಗಾಗಿ ನಡೆಯುವ ಲಾಬಿ, ಲಜ್ಜೆಗೆಟ್ಟು ಓಲೈಸುವ , ಗುಂಪುಗಾರಿಕೆ ಮಾಡುವ ಸಾಹಿತಿಗಳು, ಲೇಖಕರು ಗಾಂಧೀಜಿಯವರ ಆದರ್ಶಗಳನ್ನು ಒಳಗೊಳ್ಳಬೇಕಿದೆ. ಇದು ಎಲ್ಲ ಕಲೆಗಳಿಗೂ, ಮಾಧ್ಯಮಗಳಿಗೂ ಅನ್ವಯಿಸುತ್ತದೆ. ಹಾಗೆ ನೋಡಿದರೆ ಗಾಂಧೀ ತತ್ವಗಳ ಬಗೆಗಿನ ನಮ್ಮ ಅರಿವು ಏನೂ ಇಲ್ಲ ಎಂತಲೇ ಹೇಳಬಹುದು. ಅವರನ್ನು ಅರಿಯುವುದಿರಲಿ ಅವರ ಮಾರ್ಗದ ಒಂದು ಪ್ರತಿಶತವನ್ನಾದರೂ ಪಾಲಿಸುವಂತಾದರೆ ಇಂದು ದೇಶದಲ್ಲಿ ಎದುರಾಗಿರುವ ಅನೇಕಾನೇಕ ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ಸಮಸ್ಯೆಗಳು ತಕ್ಕ ಮಟ್ಟಿಗೆ ಪರಿಹಾರ ಕಂಡಾವು. ಆ ಒಂದು ಪ್ರತಿಶತವನ್ನು ಸಾಧಿಸಲು ಗಾಂಧೀಜಿಯವರ ಬಗ್ಗೆ, ಬಸವಣ್ಣನವರ, ವಿವೇಕಾನಂದರ, ಅಂಬೇಡ್ಕರರ ಬಗ್ಗೆ ಹೆಚ್ಚು ಹೆಚ್ಚು ಓದಬೇಕು. ಓದಿನ ನಂತರ ಅರಿತು ಒಳಗಿಳಿಸಿಕೊಳ್ಳಬೇಕು. ಆನಂತರ ಆ ಹಾದಿಯಲ್ಲಿ ಕ್ರಮಿಸಬೇಕು. ಜಾಗತೀಕರಣದ ಹೊಡೆತಕ್ಕೆ ನಡು ಮುರಿದುಕೊಂಡಿರುವ ಭಾರತಕ್ಕೆ ಇದೇನು ಅಷ್ಟು ಸುಲಭದ ಮಾರ್ಗವಲ್ಲ. ಆದರೂ ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸಬಹುದಲ್ಲವೆ?
ಓವರ್ ಹೆಡ್ ಕೇಬಲ್ ಪಾಲಿಸಿ ಸಿದ್ಧಪಡಿಸುವವರೆಗೆ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಓವರ್ ಹೆಡ್ (OFC) ಕೇಬಲ್ ಗಳನ್ನು ತೆರವುಗೊಳಿಸದಂತೆ ಉಪಮುಖ್ಯಮಂತ್ರಿ ಡಾ. ಸಿ ಎನ್. ಅಶ್ವತ್ಧನಾರಾಯಣ ಸೂಚಿಸಿದ್ದಾರೆ.ಈ ಬಗ್ಗೆ ಮುಖ್ಯಕಾರ್ಯದರ್ಶಿಗಳಿಗೆ ಅವರು ಬರೆದ ಪತ್ರ ಕನ್ನಡಪ್ರೆಸ್.ಕಾಮ್ ಗೆ ಲಭ್ಯವಾಗಿದೆ.
ಮಹಾನಗರಪಾಲಿಕೆ ಈ ಕುರಿತು ಈಚೆಗೆ ಹೊರಡಿಸಿರುವ ಸುತ್ತೋಲೆ ತಮ್ಮ ಗಮನಕ್ಕೆ ಬಂದಿದ್ದೂ ಅದರಂತೆ ಕೇಬಲ್ ತೆರವುಗೊಳಿಸಿದರೆ ಆಗುವ ತೊಂದರೆಗಳನ್ನು ಗಮನಿಸಿ ತಾವು ಈ ಸೂಚನೆ ನೀಡುತ್ತಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ಕಾರಣದಿಂದ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಅನೇಕ ಐಟಿ ಕಂಪೆನಿಗಳ ಕೆಲಸ ಆನ್ ಲೈನ್ (WORK FROM HOME) ನಲ್ಲೇ ನಡೆಯುತ್ತಿದೆ. ಹೀಗಾಗಿ ಕೇಬಲ್ ತೆರವು ಗೊಳಿಸಿದರೆ ಸಮಸ್ಯೆ ಆಗಬಹುದು ಎಂದು ಅವರು ಹೇಳಿದ್ದಾರೆ.
ವಿಶೇಷವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಓವರ್ ಹೆಡ್ ಕೇಬಲ್ (OFC) ಪಾಲಿಸಿ ಸಿದ್ಧ ಆಗುವವರೆಗೂ ಅವುಗಳನ್ನು ತೆರವು ಗೊಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲು ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
” ಪೆನ್ನು ” …. ಕನ್ನಡದಲ್ಲಿ ಮುದ್ದಾಗಿ ಲೇಖನಿಯೆಂದು ಕರೆಯಲ್ಪಡುವ ಪಠ್ಯಸಾಮಗ್ರಿ .ಬಾಲ್ಯದಲ್ಲಿ ನಾವುಗಳು ವಿದ್ಯಾಭ್ಯಾಸ ಶುರು ಮಾಡಿದ್ದು ಸ್ಲೇಟು ಬಳಪದಲ್ಲಾದ್ದರಿಂದ ನಮ್ಮ ಕೈಗೆ ಪೆನ್ನು ಸಿಕ್ಕಿದ್ದು ಸ್ವಲ್ಪ ತಡವಾಗಿಯೇ . ಅದಕ್ಕೇ ನಮಗೆ ಪೆನ್ನೆಂದರೆ ಅದೇನೋ ವಿಶೇಷ ಒಲವು .
ಆಗ ಇದ್ದಿದ್ದು ಎರಡೇ ಪೆನ್ನು. ಒಂದು ಇಂಕ್ ಪೆನ್ನು. ಇನ್ನೊಂದು ಬಾಲ್ ಪೆನ್ನು. ಅದನ್ನ ನಾವು ಟೂಬ್ ಪೆನ್ನು ಅಂತ ಕರೀತಿದ್ವಿ . ಸ್ವಲ್ಪ ದಿನಗಳ ಅಂತರದಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದು ಮತ್ತು ತೀರಾ ಕುತೂಹಲದ ಜೊತೆಗೆ ಆಶ್ಚರ್ಯ ತರಿಸಿದ ಪೆನ್ನಂದ್ರೆ ಡುಮ್ಮನೆಯ ಒಂದೇ ಪೆನ್ನಿನಲ್ಲಿ ನಾಲ್ಕು ಬಣ್ಣದ ನೀಲಿ ಕೆಂಪು ಕಪ್ಪು ಮತ್ತು ಹಸಿರು ರೀಫಿಲ್ ಗಳಿದ್ದ ಪೆನ್ನು. ಇದರ ಮೇಲ್ಬಾಗದಲ್ಲಿ ಅಷ್ಟೇ ಬಣ್ಣದ ಟಿಕ್ ಟಿಕ್ ಎನ್ನುವ ತಂತ್ರಜ್ಞಾನ ಒಂದನ್ನು ಒತ್ತಿದರೆ ಮತ್ತೊಂದು ಜಾಗ ಮಾಡಿಕೊಡುತ್ತಿತ್ತು . ಇದನ್ನು ಕೊಂಡು ಬರೆದಿದ್ದಕ್ಕಿಂತಾ ತೆರೆದು ರಿಪೇರಿ ಮಾಡಿದ್ದೇ ಹೆಚ್ಚು .
ಆಗಲೇ ಮೇಡ್ ಇನ್ ಚೀನಾದ ಹೀರೋ ಪೆನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು . ಮೆರೂನ್ ಕಲರಿನ ಬಾಡಿ ಚಿನ್ನದ ಬಣ್ಣದ ಕ್ಯಾಪು . ಅದಕ್ಕೆ ಇಂಕ್ ತುಂಬಿಸೋದೇ ಒಂದು ಕಲೆಯಾಗಿತ್ತು ಪಿಚಕಾರಿಯ ತರಹದ ಒಳವಿನ್ಯಾಸ ಅದರಲ್ಲಿರುತ್ತಿತ್ತು . ಹೀರೋ ಪೆನ್ನು ಪೈಲಟ್ ಪೆನ್ನು ಮುಂತಾದ ದುಬಾರಿ ಪೆನ್ನು ಹೊಂದಿರುವವರು ಮನೆಗಳಲ್ಲಿಯೇ ಬ್ರಿಲ್ ಇಂಕ್ ಬಾಟಲ್ಗಳನ್ನು ಇಟ್ಟಿರುತ್ತಿದ್ದರು . ಆಗೆಲ್ಲಾ ಬುಕ್ ಸ್ಟೋರ್ ಗಳಲ್ಲಿ ಪೆನ್ನಿಗೆ ಲೂಸ್ ಇಂಕ್ ಹಾಕೋವ್ರು . ನಿಬ್ಬು ರೀಫಿಲ್ ಹೀಗೇ ಪೆನ್ನಿನ ಬಿಡಿ ಭಾಗಗಳು ಸಿಗುತ್ತಿತ್ತು .
ನಾವುಗಳಂತೂ ಪೆನ್ನುಗಳನ್ನು ಹಲವು ಫನ್ನುಗಳಿಗೆ ಒಡ್ಡುತ್ತಿದ್ದೆವು . ಸರಿಯಾಗಿ ಬರೆಯದಿದ್ದರೆ ರೀಫಿಲ್ ತೆಗೆದು ಎರಡೂ ಕೈಗಳಿಂದ ಅದನ್ನು ಉಜ್ಜಿ ಬಿಸಿ ಮಾಡುವುದು . ದೀಪದ ಬೆಂಕಿಯಿಂದ ಶಾಖ ಕೊಟ್ಟು ಬರೆಯುವಂತೆ ಮಾಡುವುದು . ಇಂಕ್ ಪೆನ್ ಆದ್ರೆ ಅದರ ಮುಳ್ಳಿಗೆ ಬ್ಲೇಡಿಂದ ಕುಯ್ದು ಇಂಕ್ ಸರಾಗವಾಗಿ ಹರಿಯುವಂತೆ ಮಾಡುವುದು , ನಿಬ್ಬನ್ನೇ ನಾವು ಮುಳ್ಳು ಎಂದು ಕರೆಯುತ್ತಿದ್ದೆವು .
ಇನ್ನು ಕ್ಲಾಸಿನಲ್ಲಿ ಬಾಲ್ ಪೆನ್ನಿನ ಒಳಗಡೆ ಇರುವ ಸ್ಪ್ರಿಂಗನ್ನು ಅದೆಷ್ಟು ಬಾರಿ ಬೀಳಿಸಿಕೊಂಡು ಹುಡುಕಿದ್ದೇವೋ .ಹೀಗಿದ್ದಾಗ ಒಮ್ಮೆ ಅದೆಲ್ಲಿಂದ ಬಂತೋ ನೋಡಿ ರೆನಾಲ್ಡ್ಸ್ ಎಂಬ ವಿದೇಶಿ ದೈತ್ಯ ಪೆನ್ನುಕಂಪನಿ ಎಲ್ಲಾ ಪೆನ್ನುಗಳನ್ನು ನಿವಾಳಿಸಿ ಮೂಲೆಗೆ ನೂಕಿಬಿಡ್ತು .
ಪೆನ್ನು ಒಂದು ವಿಧವಾದ ಗೌರವವಾದರೆ . ನೀನ್ ಯಾವ್ ಸೀಮೆ ರೈಟ್ರು ಗುರೂ ಒಂದ್ ಪೆನ್ನೂ ಇಟ್ಟಿಲ್ಲ . ಸ್ಟೂಡೆಂಟ್ ಆಗಿ ಒಂದು ಪೆನ್ನೂ ನೆಟ್ಟಿಗೆ ಇಟ್ಟಿಲ್ಲ ಅಂದ್ರೆ ಅದೇನ್ ಓದಿ ದಬ್ಬಾಕ್ತಿಯೋ ?ಹೆಸರಿಗೆ ಡಾಕ್ಟ್ರಂತೆ ಒಂದು ಪೆನ್ನು ಇಟ್ಟಿಲ್ಲ ….ಹೀಗೆ ಅಗೌರವವೂ ಹೌದು .
ಪೆನ್ನನ್ನ ಎಲ್ಲಾರು ಜೇಬಲ್ಲಿ ಬ್ಯಾಗಲ್ಲಿ ಇಟ್ಕೊಂಡ್ರೆ ಈ ಕಂಡಕ್ಟರ್ ಗಳು ಮಾತ್ರಾನೇ ಕಿವಿಯಲ್ಲಿ ಇಟ್ಕೋತಾರೆ .ಹೋಲಿಕೆ ಅಂತ ಬಂದಾಗ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪೆನ್ನನ್ನ ದೇವರಿಗೆ ಹೋಲಿಸಿದರೆ, ಪತ್ರಕರ್ತರು ಖಡ್ಗಕ್ಕೆ ಹೋಲಿಸ್ತಾರೆ .
ಆಗೆಲ್ಲಾ ನ್ಯಾಯಾಧೀಶರು ತೀರ್ಪು ಬರೆಯಲು, ವೈದ್ಯರು ಔಷಧಿ ಬರೆಯಲು , ಇನ್ಸ್‌ಪೆಕ್ಟರ್ ದಂಡ ವಿಧಿಸಲು , ಕಂಡಕ್ಟರ್ ಚಿಲ್ಲರೆ ಬರೆಯಲು , ಉಳ್ಳವರು ಚೆಕ್ ಬರೆಯಲು , ಬರಹಗಾರರು ಕತೆ ಕಾದಂಬರಿ ಕವಿತೆ ಸಾಹಿತ್ಯ ಬರೆಯಲು ಉಪಯೋಗಿಸುತ್ತಿದ್ದರೆ . ಇನ್ನು ಕೆಲವು ಕಡೆ ಪತ್ರಗಳಿಗೆ , ಪ್ರೇಮಪತ್ರಗಳಿಗೆ , ಲಗ್ನಪತ್ರಿಕೆಗಳಿಗೆ , ರಿಜಿಸ್ಟರ್ ಮ್ಯಾರೇಜ್ ಗಳಿಗೆ ಪೆನ್ನಿನ ಜರೂರತ್ತಿತ್ತು. ಈಗೀಗ ಟೈಪಿಂಗು , ವಾಟ್ಸಪ್ಪು , ಮೆಸೇಂಜರ್, ಟ್ವಿಟರ್ ಗಳಿಂದಾಗಿ ಪೆನ್ನು ತನ್ನ ಮುಂಚಿನ ಚಾಪು ಕಳೆದುಕೊಳ್ಳುತ್ತಿದೆ .
ಯಾವುದೇನೇ ಅದರೂ ದೇಶ ವಿದೇಶಗಳ ನಡುವಿನ ಒಡಂಬಡಿಕೆಗಳಿಗೆ ಒಪ್ಪಂದಗಳಿಗೆ ಹಿರಿಯರ ಹಸ್ತಾಕ್ಷರಗಳು ಜರುಗುವುದು ಇದೇ ಪೆನ್ನಿನಿಂದಲೆ.
” ಸಹಿಗಿರುವಷ್ಟೇ ಬೆಲೆ ಪೆನ್ನಿಗಿದೆ ” ಎಂಬುಂದಂತು ಬರವಣಿಗೆಯಷ್ಟೇ ಸತ್ಯ.
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಹಸಿದ ಹೊಟ್ಟೆಗಳನ್ನು ತುಂಬಿಸುವ ಯೋಜನೆಯೊಂದು ಬೆಂಗಳೂರಿನಲ್ಲಿ ಸದ್ದಿಲ್ಲದೆ ಆರಂಭವಾಗುತ್ತಿದೆ. ಒಂದು ಹೊತ್ತಿನ ಕೂಳಿಗೂ ಒದ್ದಾಡುವ ಅನೇಕ ನಿರ್ಗತಿಕರ ಹೊಟ್ಟೆ ತುಂಬಿಸುವ ಕಾಯಕವೊಂದಕ್ಕೆ ನಾಳೆ ಚಾಲನೆ ಸಿಗಲಿದೆ.
ಈ ಯೋಜನೆಗೆ ಪ್ರೇರಣೆಯಾಗಿದ್ದು ಖ್ಯಾತ ಚಿಂತಕ ಗುರುರಾಜ ಕರಜಗಿ ಅವರ ಒಂದು ಉಪನ್ಯಾಸ. ಈ ಉಪನ್ಯಾಸದಲ್ಲಿ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಒನ್ ಫಾರ್ ದಿ ವಾಲ್ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಈ ಉಪನ್ಯಾಸ ವಾಟ್ಸಾಪ್ ಲ್ಲಿ ಹರಿದಾಡುತ್ತಾ ಬನಶಂಕರಿಯ ಗುರುರಾಜ ಭಟ್ ಅವರನ್ನು ಸೇರಿತು.
ಗುರುರಾಜರದು ಇನ್ನೊಬ್ಬರಿಗೆ ತುಡಿಯುವ ಜೀವ. ಈ ವಾಟ್ಸಪ್ ಅವರನ್ನು ಸೇರಿದಾಗ ಅವರು ಬನಶಂಕರಿ ಕೊರೋನಾ ವಾರಿಯರ್ಸ್ ಎಂಬ ತಂಡ ಕಟ್ಟಿಕೊಂಡು ನಿರ್ಗತಿಕರಿಗೆ ಫುಡ್ ಪ್ಯಾಕೆಟ್ ಗಳನ್ನು ವಿತರಿಸುವ ಯೋಜನೆ ಹಾಕಿಕೊಂಡು ಕಾರ್ಯೋನ್ಮುಖರಾಗಿದ್ದರು. ಕರಜಗಿ ಅವರ ಮಾತು ಇವರಿಗೆ ಎಂಥ ಪ್ರೇರಣೆ ನೀಡಿತು ಎಂದರೆ ಒನ್ ಫಾರ್ ದಿ ವಾಲ್ ಕಲ್ಪನೆಯನ್ನು ದೇಶೀಯವಾಗಿ ನಮ್ಮ ಬೆಂಗಳೂರಿನಲ್ಲೂ ಅಳವಡಿಸಬೇಕೆಂಬ ಚಿಂತನೆ ಮೂಡಿತು. ತಡ ಮಾಡದ ಅವರು ಇದನ್ನು ತಮ್ಮ ಸಹೋದರ ಸಂಬಂಧಿ ವಿದ್ಯಾರ್ಥಿ ಭವನದ ಮಾಲೀಕ ಅರುಣ ಅಡಿಗ ಅವರೊಂದಿಗೆ ಪ್ರಸ್ತಾಪಿಸಿದರು. ಅರುಣ ಅಡಿಗ ಅವರದು ಹೊಸ ಚಿಂತನೆಗಳಿಗೆ ಸದಾ ತೆರದುಕೊಳ್ಳುವ ಮನಸ್ಸು. ಅವರೂ ಕೂಡ ತಡ ಮಾಡದೆ ಸೂಪರ್ ಆಗಿದೆ ಐಡಿಯಾ.ಜಾರಿ ಮಾಡೋಣ ಎಂದೇ ಬಿಟ್ಟರು.
ಈ ಐಡಿಯಾ ಸರಳ. ನೀವು ಒಂದು ಹೋಟೆಲ್ಲಿಗೆ ಹೋಗುತ್ತೀರಿ. ಅಲ್ಲಿ ತಿಂಡಿ ತಿನಿಸಿಗೆ ಆರ್ಡರ್ ಮಾಡುತ್ತೀರಿ. ನಿಮ್ಮ ಆರ್ಡರ್ ಜೊತೆ ಹಸಿದವರಿಗೆಂದು ಮತ್ತೊಂದು ಆರ್ಡರ್ ಮಾಡುವುದು . ಈ ಆರ್ಡರ್ ಒಂದು ಟೋಕನ್ ರೂಪದಲ್ಲಿರುತ್ತದೆ. ಈ ಟೋಕನ್ ಅನ್ನು ನೀವು ಗಲ್ಲಾ ಪೆಟ್ಟಿಗೆ ಬಳಿ ಇರುವ ಸಂಚಿ (ಡಬ್ಬಿ)ಯಲ್ಲಿ ಹಾಕುವುದು. ನಿಮ್ಮಂಥ ದೊಡ್ಡ ಮನಸ್ಸಿನ ಹಲವರು ಮಾಡಿದ ಆರ್ಡರ್ ಗಳು ಟೋಕನ್ ರೂಪದಲ್ಲಿ ಈ ಸಂಚಿಯಲ್ಲಿ ಶೇಖರಣೆಯಾಗುತ್ತದೆ. ಹಸಿದವರು ಯಾವುದೇ ಸಂಕೋಚವಿಲ್ಲದೆ ಸಂಚಿಯಿಂದ ಒಂದು ಟೋಕನ್ ಪಡೆದು ಆಹಾರ ಸೇವಿಸಬಹುದು. ದಿನಗೂಲಿ ಕಾರ್ಮಿಕರು, ಬಡ ವಿದ್ಯಾರ್ಥಿಗಳು,ನಿರ್ಗತಿಕರು ಇದನ್ನು ಕೇಳಿ ಪಡೆಯಬಹುದು.
ಯೋಜನೆಯೇನೋ ಚೆನ್ನಾಗಿದೆ. ಆದರೆ ಒಂದೇ ಹೋಟೆಲಿನಲ್ಲಿ ಮಾತ್ರ ಈ ಜಾರಿಗೆ ಬಂದರೆ ಒಂದು ಭಾಗದ ಜನರಿಗೆ ಮಾತ್ರ ತಲುಪುತ್ತದೆ. ಮತ್ತು ಅದರ ಸಂಖ್ಯೆ ಸೀಮಿತವಾಗಿರುತ್ತದೆ. ಹಾಗೆಂದೇ ಅದನ್ನು ಬೆಂಗಳೂರು ಪೂರ್ತಿ ವಿಸ್ತರಿಸುವ ಪ್ಲಾನ್ ಶುರುವಾಯಿತು.
ಮೊದಲ ಪ್ಲಾನಿಂಗ್ ಮೀಟಿಂಗ್ ಸಭೆ ನಡೆದದ್ದು ವಿದ್ಯಾರ್ಥಿ ಭವನದಲ್ಲೇ. ಈ ವೇಳೆಗೆ ಬನಶಂಕರಿ ಕೊರೋನಾ ವಾರಿಯರ್ಸ್ ತಂಡದ ಹರ್ಷ ಮತ್ತು ರೋಟರಿ ಸೌತ್ ಪರೇಡ್ ನ ಆನಂದ ಎಂಬ ಇಬ್ಬರು ಉತ್ಸಾಹಿ ತರುಣರು ಅರುಣ ಮತ್ತು ಗುರುರಾಜರ ಜೊತೆ ಸೇರಿದರು. ಹಸಿದ ಹೊಟ್ಟೆಗಳನ್ನು ತುಂಬಿಸುವ ಕನಸು ನನಸಾಗುವ ಯೋಜನೆ ಸಿದ್ಧವಾಯಿತು.
ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸದಸ್ಯರೂ ಆಗಿರುವ ಅರುಣ ಅಡಿಗರು ತಮ್ಮ ತಂಡದ ಕನಸನ್ನು ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಹಂಚಿಕೊಂಡರು. ಒಳ್ಳೆಯ ಕೆಲಸ ಮಾಡುತ್ತೇವೆ ಎಂದಾಗ ಬೇಡ ಎನ್ನುವವರು ಯಾರು. ಅಧ್ಯಕ್ಷ ಪಿಸಿ ರಾವ್ ಪೂರ್ಣ ಬೆಂಬಲದೊಂದಿಗೆ ಕೈ ಜೋಡಿಸಿದರು.
ಯೋಜನೆಯಂತೂ ಚೆನ್ನಾಗಿದೆ. ಹಸಿದವರಿಗೆ ಅನ್ನ ನೀಡುವ ಈ ಯೋಜನೆಗೆ ಇನ್ಫಾಸ್ಟ್ರಕ್ಚರ್ ಖರ್ಚೇನು ಬೀಳುವುದಿಲ್ಲ. ಇರುವ ಸೌಲಭ್ಯದಲ್ಲೇ ಆರಂಭಿಸಬಹುದು ಎಂದು ಹೇಳುತ್ತಾರೆ ಅರುಣ ಅಡಿಗ. ಯೋಜನೆಯಲ್ಲಿ ಶೇಕಡ 20 ರಷ್ಟು ಅಪಾತ್ರ ದಾನ ಆದರೂ ಆಗಬಹುದು. ಕೆಲಸ ಮಾಡದ ಸೋಮಾರಿಗಳು ದುರುಪಯೋಗ ಪಡಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ಅರ್ಹರಿಗೆ ಮಾತ್ರ ಸೇರುವಂಥ ಪಕ್ಕಾ ಪ್ಲಾನ್ ಮಾಡಹುದು ಎಂದು ಅವರು ಕನ್ನಡಪ್ರೆಸ್ .ಕಾಮ್ ಗೆ ತಿಳಿಸಿದರು.
ಹಲವರಿಗೆ ಹಸಿದವರಿಗೆ ಊಟ ಕೊಡುವ ಮನಸ್ಸು ಇರುತ್ತದೆ. ಆದರೆ ದಾರಿ ಇರವುದಿಲ್ಲ. ಇದಕ್ಕಾಗಿ ಅವರು ಎಲ್ಲಿಗೋ ಹುಡುಕಿಕೊಂಡು ಹೋಗಬೇಕಿಲ್ಲ. ಸಮೀಪದ ಹೋಟೆಲ್ಲಿಗೆ ಹೋಗಿ ಹಸಿದವರಿಗೆ ಅನ್ನ ನೀಡುವ ಯೋಜನೆಯಲ್ಲಿ ಕೈ ಜೋಡಿಸಬಹುದು ಎಂದು ಅಡಿಗರು ಹೇಳುತ್ತಾರೆ.
ಈ ಬಗ್ಗೆ ಪೋಸ್ಟರ್ ಗಳನ್ನು ಸಿದ್ಧಪಡಿಸಲಾಗಿದೆ. ನಾಳೆ ಗಾಂಧಿಜಯಂತಿಯಂದು ಮಧ್ಯಾಹ್ನ 12 ಕ್ಕೆ ಕರ್ನಾಟಕ ಚಿತ್ರ ಕಲಾ ಪರಿಷತ್ ನಲ್ಲಿ ನಡೆಯುವ ಸಮಾರಂಭದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು.
ಬೆಂಗಳೂರಿನಲ್ಲಿ ಯೋಜನೆ ಯಶಸ್ಸು ಕಂಡ ನಂತರ ರಾಜ್ಯದ್ಯಂತ ವಿಸ್ತರಿಸುವ ಆಲೋಚನೆಯನ್ನು ಈ ತಂಡ ಹಾಕಿಕೊಂಡಿದೆ.
ಒಂದು ಒಳ್ಳೆಯ ಉಪನ್ಯಾಸ ಒಂದು ಉತ್ತಮ ಕೆಲಸಕ್ಕೆ ಹೇಗೆ ಪ್ರೇರಣೆ ನೀಡಬಲ್ಲದು ಎಂಬುದಕ್ಕೆ ಈ ಯೋಜನೆ ಉದಾಹರಣೆಯಾಗಿ ನಿಲ್ಲುತ್ತದೆ.
ನೀವು ಹೇಗೆ ಭಾಗವಹಿಸಬಹದು
1 ಹತ್ತಿರದ ಸಂಚಿಗೊಂದು ಯೋಜನೆ ಜಾರಿಯಲ್ಲಿರುವ ಹೋಟೆಲ್ಲಿಗೆ ಹೋಗಿ ನಿಮ್ಮ ಊಟ/ತಿಂಡಿಯ ಜೊತೆ ಸಂಚಿಗೊಂದು ಹೆಸರಿನಲ್ಲಿ ಮತ್ತೊಂದು ಊಟ/ ತಿಂಡಿ ಖರೀದಿಸುವುದು.
2 ಸಂಚಿಗೊಂದು ಹೆಸರಿನ ಟೋಕನ್ ಅನ್ನು ಪಡೆದು ಅದಕ್ಕಾಗಿ ಮೀಸಲಿರಿಸಿರುವ ಡಬ್ಬಿಯಲ್ಲಿ ಹಾಕುವುದು.
3 ಹಣ ಕೊಟ್ಟು ಊಟ ತಿಂಡಿ ಪಡೆಯಲಾಗದ ವ್ಯಕ್ತಿ ಸಂಕೋಚವಿಲ್ಲದೆ ಸಂಚಿಯಿಂದ ಒಂದು ಎಂದು ಕೇಳಿ ಊಟ ಪಡೆಯುವುದು.
ಅದು 90ರ ದಶಕದ ಒಂದು ಕಥೆ. ಮಹಾನಗರದ ಒಂದು ವಠಾರದ ದೃಶ್ಯ. ಬೆಳಗಿನ ಆರಕ್ಕೆಲ್ಲಾ ಕೌಸಲ್ಯ ಸುಪ್ರಜಾ ಆರಂಭವಾಗಿದೆ ಅಲ್ಲಿ. ನೀರು ಸುರಿದು ಬಾಗಿಲ ಜೊತೆಗೆ ಬೀದಿಯನ್ನು ತೊಳೆದು ರಂಗೋಲಿ ಬಿಡಿಸಿದ ಆ ಹೆಣ್ಣುಮಗಳು ರಸ್ತೆಯ ಬಲ ತಿರುವಿನತ್ತ ಮತ್ತೆಮತ್ತೆ ದೃಷ್ಟಿ ಹಾಯಿಸುತ್ತಾಳೆ. ರಂಗೋಲಿ ಮುಗಿಸಿ ಒಳಗೆ ಹೋಗಿ ಎರಡು ನಿಮಿಷದ ನಂತರ ಮತ್ತೆ ಹೊರಬಂದು ಮತ್ತದೇ ತಿರುವಿನತ್ತಾ ನೋಡುತ್ತಾ ..’ಎನ್ನಂಗ…ಎಪ್ಪಉಂ ಈಂಗೆ ತಾಮದಮಾಗಿ ವರಮಾಟಿಂಗ್ಲೇ..?’ ಅಂದವಳು ಬೇಸತ್ತು ಯಾವುದು ಅಸಹನೆಗೊಳಗಾದವಳಂತೆ ಸಿಡಿಮಿಡಿಯಾಡುತ್ತಾ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾ ಒಳಗೆ ಹೋಗುತ್ತಾಳೆ.
ಕೈಯಲ್ಲಿ ಪೇಪರ್ ಹಿಡಿದು ಶತಪಥ ತಿರುಗುತ್ತಾ ಮತ್ತೆಮತ್ತೆ ಗೇಟಿನ ಕಡೆಗೆ ನೋಡುತ್ತಿರುವ ಗಂಡನದ್ದೂ ಅದೇ ಪಾಡು. ಆತನೂ ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿದ್ದ.ಅತ್ತಕಡೆಯಿಂದ ಸೈಕಲ್ ಬೆಲ್ ಕೇಳಿದೊಡನೆ ದಡಬಡ ಹೊರಗೆ ಹೋಗಿ ಕೈಯಲ್ಲಿ ಪಾತ್ರೆ ಹಿಡಿದು ಗೇಟಿನ ಮುಂದೆ ನಿಂತು ಪಾತ್ರೆಗೆ ಹಾಲು ಅಳೆಸಿಕೊಂಡವ ‘ಇಷ್ಟು ತಡ ಯಾಕಾಯ್ತು ತಮ್ಮ’ ಅನ್ನುವ ಮಾಮೂಲು ಪ್ರಶ್ನೆ.
ಬೆಳಗ್ಗಿನ ಐದಕ್ಕೇ ಬಂದರೂ ಈ ತಮಿಳಿಗರ ಬೀದಿಯ ಕಾಯಂ ಪ್ರಶ್ನೆಗೆ ಹಾಲಿನ ಹುಡುಗ ಯಾವತ್ತೂ ಉತ್ತರಿಸುವುದಿಲ್ಲ.ಸುಮ್ಮನೆ ನಕ್ಕು ಹಾಲು ಅಳೆಸಿ ಹೋಗುತ್ತಿದ್ದ.ಹಾಲಿನ ಪಾತ್ರೆ ಹಿಡಿದ ಒಳಬಂದವನಿಗೆ ಮನೆಯೆಲ್ಲಾ ವ್ಯಾಪಿಸಿರುವ ಕಾಫಿಯ ದಟ್ಟ ಪರಿಮಳವು,ಅಡುಗೆ ಮನೆಯಲ್ಲಿ ಲಯಬದ್ದವಾಗಿ ಫಿಲ್ಟರ್ ಬಡಿಯುತ್ತಿರುವ ಸದ್ದೂ ಕೇಳುತ್ತದೆ. ಹಾಲು ಅಡುಗೆ ಮನೆ ತಲುಪಿದೊಡನೆ ಕಾಯಿಸಿ ಈಗಷ್ಟೇ ಹಾಕಿದ್ದ ತಾಜಾ ಡಿಕಾಕ್ಷನ್ ಪುಡಿ ಬೆಲ್ಲ ಸೇರಿಸಿ ಅಗತ್ಯಕ್ಕಿಂತ ಹೆಚ್ಚಿಗೆಯೇ ಬಿಸಿ ಮಾಡಿಕೊಂಡು ಎರಡು ನಿಮಿಷ ಆರಾಮಾವಾಗಿ ಕುಳಿತು ಕಾಫಿಯನ್ನು ಗುಟುಕಿಸಿದ ನಂತರವೇ ಆ ಮನೆಯ ಬೆಳಗ್ಗಿನ ಕಾಯಂ ಶತಪಥ ಕಡಿಮೆಯಾಗುತ್ತಿದ್ದದ್ದು. ****** ಒಂದು ಕಥೆಯ ಆರಂಭದ ಈ ಮೇಲಿನ ಭಾಗವನ್ನು ಆಗ ಓದಿದಾಗ ಆ ಕುಟುಂಬ ಕಾಫಿ ಪ್ರಿಯರದ್ದು ಇರಬಹುದು ಅಂದುಕೊಂಡೆ.ಆದರೆ ತಮಿಳುನಾಡಿಗೆ ತಮಿಳುನಾಡೇ ಕಾಫಿಯ ಪರಮ ಆಸ್ವಾದಕರು ಅಂತ ತಿಳಿದಾಗ ಅಚ್ಚರಿಯೆನಿಸಿತು. ತಾಯ್ನಾಡಿನಲ್ಲಿ ಮಾತ್ರವಲ್ಲದೆ ತಾವು ನೆಲೆನಿಂತ ಯಾವುದೇ ಪ್ರದೇಶದಲ್ಲಿ ಕೂಡ ತಮಿಳಿಗರು ತಮ್ಮ ಪರಂಪರಾಗತ ಫಿಲ್ಟರ್ ಕಾಫಿ ದಿನಚರಿಯನ್ನು ಬದಲಾಯಿಸಿಕೊಳ್ಳದೆ ಹಾಸಿಗೆ ಬಿಟ್ಟೆದ್ದ ಹತ್ತೇ ನಿಮಿಷದಲ್ಲಿ ತಾಜಾ ಫಿಲ್ಟರ್ ಕಾಫಿ ಅವರ ಹೊಟ್ಟೆ ಸೇರಲೇಬೇಕು ಎನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು.
ತಮಿಳುನಾಡು ಪ್ರಥಮ
ಕರ್ನಾಟಕ ,ತಮಿಳುನಾಡು ,ಕೇರಳ ನಮ್ಮ ದೇಶದ ಪ್ರಮುಖ ಕಾಫಿ ಬೆಳೆಯುವ ರಾಜ್ಯಗಳು. ಆದರೆ ಕಾಫಿ ಸೇವನೆಯಲ್ಲಿ ತಮಿಳುನಾಡು ಪ್ರಥಮದಲ್ಲಿ ನಿಲ್ಲುತ್ತದೆ. ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಸುಮಾರು ಒಂದು ಲಕ್ಷ ಟನ್ ಕಾಫಿ ಬಳಕೆಯಾಗುತ್ತದೆಯಾದರೆ ಇದರ ಅರ್ಧದಷ್ಟನ್ನು ತಮಿಳುನಾಡು ಒಂದೇ ಬಳಸುತ್ತದೆ. ಸುಮಾರು ಐವತ್ತು ಸಾವಿರ ಟನ್ ಕಾಫಿಯನ್ನು ತಮಿಳುನಾಡು ಸರಾಸರಿ ವಾರ್ಷಿಕವಾಗಿ ಬಳಸುತ್ತಾರೆ.
ಅವರ ಕಾಫಿಯ ಮೇಕಿಂಗ್ ನಲ್ಲೂ ಒಂದು ವಿಶೇಷತೆ ಇದ್ದುಅದು ಅವರ ಕಾಫಿಯ ಬಳಕೆಯನ್ನು ಗುರುತರವಾಗಿ ಹೆಚ್ಚಿಸಿದೆ. ತಮಿಳುನಾಡಿನಷ್ಟು ವಿಶೇಷವಾದ ಫಿಲ್ಟರ್ ಕಾಫಿ ದೇಶದ ಮತ್ತಾವುದೇ ಕಾಫಿ ಜಿಲ್ಲೆಗಳಲ್ಲಿ ಸಿಗುವುದಿಲ್ಲ ಎನ್ನುವ ಮಾತು ಕೂಡ ಉತ್ಪ್ರೇಕ್ಷೆಯದಲ್ಲ.
ಕಾಫಿ ಕಂಟೇನರ್
ಈ ಫಿಲ್ಟರ್ ಕಾಫಿಗೆ ಬೇಕಾಗುವ ಫಿಲ್ಟರ್ ಕೂಡ ಶತಮಾನದ ಹಿಂದೆಯೇ ತಮಿಳಿರೇ ತಯಾರಿಸಿದ್ದು.ತಮಿಳುನಾಡಿನ ಸೇಲಂ ಕಾಫಿ ಫಿಲ್ಟರ್ ತಯಾರಿಕೆಯಲ್ಲಿ ಈಗಲೂ ಅಗ್ರಸ್ಥಾನದಲ್ಲಿದೆ. ಮೊದಲೆಲ್ಲಾ ಹಿತ್ತಾಳೆ ತಾಮ್ರದ ಫಿಲ್ಟರ್ ಗಳು ದೊರಕುತ್ತಿದ್ದವು.ಈಗ ಅವುಗಳನ್ನು ಪ್ರೆಸೆಂಟೆಷನ್ ಪರ್ಪಸ್ಸಗಾಗಿ ಬಳಸಲಾಗ್ತಿದೆ.
ಫಿಲ್ಟರ್ ಕಾಫಿಗೆ ಬೇಕಾಗುವ ಕಾಫಿಪುಡಿಯನ್ನು ಸಹ ಅಲ್ಲಿ ವಿಶೇಷ ಗಮನ ವಹಿಸಿ ತಯಾರಿಸಲಾಗ್ತದೆ. ಬೆಳೆಗಾರರಿಂದ ಸಂಗ್ರಹಿಸಿದ ಕಾಫಿಯನ್ನು ಎ,ಬಿ ಮತ್ತು ಪಿ ಬ್ರಿ ಯಾಗಿ ಗ್ರೇಡಿಂಗ್ ಮಾಡಿ ಹದವಾಗಿ ಹುರಿದು ಪುಡಿ ಮಾಡಲಾಗ್ತದೆ. ಬಹುತೇಕ ತಮಿಳಿಗರು ಕಾಫಿ ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಾರೆ. ಹಾಗು ಚಿಕೋರಿ ರಹಿತ ಕಾಫಿಯನ್ನು ಇಷ್ಟಪಡುತ್ತಾರೆ.
ಇದೇ ಕಾರಣದಿಂದಾಗಿ ಒಂದು ಕಪ್ ಕಾಫಿ ಮಾಡಲು ಬೇಕಾಗುವ ಕಾಫಿಪುಡಿ ಪ್ರಮಾಣ ಅಲ್ಲಿ ಹೆಚ್ಚಿರುತ್ತದೆ. ತಮಿಳಿಗರ ಈ ಕಾಫಿ ಸಂಸ್ಕೃತಿ ಎಲ್ಲಾ ಕಾಫಿ ಬೆಳೆಯುವ ರಾಜ್ಯಗಳಲ್ಲೂ ಬಳಕೆಗೆ ಬಂದರೆ ಬಹುಶಃ ನಾವು ನಮ್ಮ ಕಾಫಿಗಾಗಿ ವಿದೇಶಿ ಮಾರುಕಟ್ಟೆಯನ್ನು ಆಶ್ರಯಿಸುವ ಪ್ರಸಂಗವೇ ಬರುವುದಿಲ್ಲ. ಜೊತೆಗೆ ತಮಿಳಿಗರಲ್ಲಿ ಒಂದು ವಿಶೇಷ ಸ್ವಭಾವ ಇದೆ. ಪ್ರಪಂಚದ ಯಾವುದೇ ಭಾಗಗಳಲ್ಲಿ ಅವರು ನೆಲೆ ಕಂಡುಕೊಂಡಿದ್ದರೂ ತಮ್ಮ ಕಾಫಿ ಕಲ್ಚರ್ ಅನ್ನು ಮಾತ್ರ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ನೀರಿನಷ್ಟೇ ಕಾಫಿಯೂ ದೇಹಕ್ಕೆ ಅನಿವಾರ್ಯ ಎನ್ನುವ ಹಾಗೆ ಅವರು ಒಗ್ಗಿಹೋಗಿದ್ದಾರೆ .
ಕಾಫಿ ಸಂಸ್ಕೃತಿಯನ್ನು ಅಷ್ಟಾಗಿ ರೂಢಿಸಿಕೊಳ್ಳದ ಕರ್ನಾಟಕ
ಆದರೆ ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕ ಮಾತ್ರ ಕಾಫಿ ಸಂಸ್ಕೃತಿಯನ್ನು ಅಷ್ಟಾಗಿ ರೂಢಿಸಿಕೊಂಡಿಲ್ಲ.ಕೊಡಗು ಚಿಕ್ಕಮಗಳೂರು ಹಾಸನದ ಕೆಲವು ಭಾಗಗಳಲ್ಲಿ ಬಿಟ್ಟರೆ ಕಾಫಿ ಇಲ್ಲಿ ಅಷ್ಟೇನು ಬಳಕೆಯಲ್ಲಿ ಇಲ್ಲ. ಇತ್ತೀಚಿನ ದಿನಗಳಲ್ಲಿ ‘ನಾನು ಕಾಫಿ ಕುಡಿಯುವುದಿಲ್ಲ’ ಎನ್ನುವುದು ಒಂದು ಸ್ಟೈಲ್ ಸ್ಟೇಟ್ಮೆಂಟ್ ಕೂಡ ಆಗಿರುವುದು ವಿಪರ್ಯಾಸ.
ಕಾಫಿ ತಾಳ್ಮೆಯನ್ನು ಬಯಸುವ ಬೆಳೆ. ಬೀಜದ ಆಯ್ಕೆಯಿಂದ ಆರಂಭವಾಗಿ ಕೊಯ್ಲು ಮತ್ತು ಕೊಯ್ಲೋತ್ತರ ಪ್ರಕ್ರಿಯೆಗಳವರೆಗೂ ದೀರ್ಘ ತಾಳ್ಮೆಯನ್ನು ಕಾಫಿ ಕೇಳುತ್ತದೆ. ಬೆಳೆಗಾರರು ಅದೆಲ್ಲವನ್ನು ಅಳವಡಿಸಿಕೊಂಡಿದ್ದಾರೆ ಕೂಡ. ಆದರೆ ಹೀಗೆ ವರ್ಷಾನುಕಾಲ ಶ್ರಮಪಟ್ಟು ಬೆಳೆದ ಕಾಫಿಗೆ ಮಾರುಕಟ್ಟೆ ಮಾಡುವ ತಂತ್ರ ಮಾತ್ರ ನಮ್ಮ ಬೆಳೆಗಾರರು ಮಾಡುತ್ತಿಲ್ಲ ಎನ್ನುವುದು ಇಲ್ಲಿಯ ಕಾಫಿ ಪರಿಣಿತರ ಖಚಿತ ಅಭಿಪ್ರಾಯ.
ಹಾಗಿದ್ದರೆ ಕಾಫಿಯ ಆಂತರಿಕ ಬಳಕೆ ಹೆಚ್ಚುವಂತೆ ಏನೆಲ್ಲ ಮಾಡಬಹುದು. ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ತಮಿಳಿಗರ ಫಿಲ್ಟರ್ ಕಾಫಿ ಕುರಿತಾದ ಪ್ಯಾಶನ್ ಇದಕ್ಕೆ ಒಂದು ಉದಾಹರಣೆ.ಬಹಳ ಮುಖ್ಯವಾಗಿ ಕಾಫಿ..ಅದರಲ್ಲೂ ಫಿಲ್ಟರ್ ಕಾಫಿ ಏಕೆ ಮತ್ತು ಹೇಗೆ ಎನ್ನುವುದನ್ನು ಕಾಫಿಯ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ನಮ್ಮವರು ಪ್ರಚಲಿತ ಪಡಿಸಬೇಕಿದೆ.
ಒಂದಿಷ್ಟು ಪ್ರಶ್ನೆಗಳು
ಇನ್ಸ್ಟಂಟ್ ಕಾಫಿ ಕಲ್ಚರ್ ನಮ್ಮ ಸಾಂಪ್ರದಾಯಿಕ ಫಿಲ್ಟರ್ ಕಾಫಿಗೆ ಸೆಡ್ಡು ಹೊಡೆಯುತ್ತಿವೆಯೇ.? ಕೆಫಿನ್ ಹಿಟ್ ಗಾಗಿಯೇ ಕಾಫಿ ಸೇವನೆ ಆಗುತ್ತಿರುವಾಗ ಈ ಉತ್ತೇಜಕ ಗುಣ ಯಾವುದರಲ್ಲಿ (ಫಿಲ್ಟರ್ ಅಥವಾ ಇನಸ್ಟಂಟ್) ಹೆಚ್ಚಿದೆ.? ಫಿಲ್ಟರ್ ಕಾಫಿ ತಯಾರಿಸುವ ಸರಿಯಾದ ವಿಧಾನ ಹೇಗೆ.?
ಇನ್ಸ್ಟೆಂಟ್ ಕಾಫಿಯ ಥರೇವಾರಿ ಮಾದರಿಗಳು ಇವತ್ತು ಮಾರುಕಟ್ಟೆಯನ್ನು ಆಳುತ್ತಿವೆ. ನೆಸ್ ಕೆಫೆ ,ಬ್ರೂ ,ಡಲ್ಗೋನಾ,ಕ್ಯಾಪಿಚಿನೊ ಎಕ್ಸ್ಪ್ರೆಸ್ಸೊ,ಪ್ರ್ಯಾಪಿಚಿನೊ ಸದ್ಯ ತಿಳಿದಿರುವ ಇನಸ್ಟಂಟ್ ಕಾಫಿಯ ಒಂದಷ್ಟು ಹೆಸರುಗಳು. ಕೇವಲ ಕುತೂಹಲಕ್ಕಾಗಿ, ಕಾಫಿ ಕೆಫೆ ಕಲ್ಚರ್ ಅನ್ನು ನೋಡುವುದಕ್ಕಾಗಿ ಇನಸ್ಟಂಟ್ ಕಾಫಿ ಕುಡಿದದ್ದು ಬಿಟ್ಟರೆ ತಾಜಾ ಹಾಲಿಗೆ ಕಾಫಿಯ ಡಿಕಾಕ್ಷನ್ ಬೆರೆಸಿ ಪುಡಿ ಬೆಲ್ಲ ಹಾಕಿ ಸ್ವಲ್ಪ ಹೆಚ್ಚಿಗೆ ಬಿಸಿ ಮಾಡಿಕೊಂಡು ಕುಡಿಯುವುದು ವೈಯುಕ್ತಿಕವಾಗಿ ನನಗೆ ಅಚ್ಚುಮೆಚ್ಚು.
ಒಳ್ಳೆಯ ಫಿಲ್ಟರ್ ಕಾಫಿ ತಯಾರಿಸುವ ಹಂತ
ಒಂದು ಒಳ್ಳೆಯ ಫಿಲ್ಟರ್ ಕಾಫಿ ತಯಾರಿಸುವ ಹಂತಗಳನ್ನು ಗಮನಿಸುವುದಾದರೆ., ಸರಿಯಾದ ತೇವಾಂಶಕ್ಕೆ ಒಣಗಿಸಿದ ಬೇಳೆಯನ್ನು ಹಲ್ ಮಾಡಿಸಿ ಕಾಫಿ ಪುಡಿ ಮಾಡುವ ವ್ಯಾಪಾರಿಗಳಲ್ಲಿ ನಮ್ಮ ಆಯ್ಕೆಗನುಗುಣವಾಗಿ ರೋಬಸ್ಟಾ ಮತ್ತು ಅರೇಬಿಕವನ್ನು ಬ್ಲೆಂಡ್ ಮಾಡಲು ಹೇಳಬೇಕು.ಗ್ರಾಹಕರ ಆಯ್ಕೆಗನುಸಾರ ಅವರು ಬೇಳೆಯನ್ನು ಹದವಾಗಿ ಹುರಿದು ಪುಡಿ ಮಾಡಿಕೊಡುತ್ತಾರೆ.ಇದು ಫಿಲ್ಟರ್ ಕಾಫಿಗೆ ಬೇಕಾಗುವ ಬೇಸಿಕ್ ಕಾಫಿ ಪೌಡರ್. ಇಲ್ಲಿ ರೋಬಸ್ಟಾ ಮತ್ತು ಅರೇಬಿಕಾ ಅನುಪಾತವನ್ನು ನಾವೇ ಹೇಳಬೇಕು. ಶೇಕಡ 100ಅರೇಬಿಕಾ ಅಥವಾ ಶೇಕಡ 100 ರೋಬಸ್ಟಾ ಇಷ್ಟಪಡುವವರೂ ಇದ್ದಾರೆ. ಚಿಕೋರಿ ಬೇಕಿದ್ದರೆ ಅದನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಲು ಸಾಧ್ಯವಿದೆಯೇ ಅದು ಒಗ್ಗುತ್ತದಾ ಗಮನಿಸಿಕೊಳ್ಳಬೇಕು. ಶೇಕಡಾ ಹತ್ತು/ಹದಿನೈದು ಚಿಕೋರಿ ಬೆರೆಸಲು ಹೇಳಬಹುದು.
ನಂತರ ನಮ್ಮ ಸ್ವಾದದ ಅನುಸಾರ ಪೌಡರನ್ನು ಫಿಲ್ಟರಿನಲ್ಲಿ ಹಾಕಿ ಕುದಿವ ನೀರನ್ನು ಮೇಲಿಂದ ಸುರಿದು ತಕ್ಷಣ ಮುಚ್ಚಳ ಮುಚ್ಚಿದರೆ ಒಂದೆರಡು ನಿಮಿಷದ ನಂತರ ಕೆಳಗಿನ ಪಾತ್ರೆಯಲ್ಲಿ ತಾಜಾ ಡಿಕಾಕ್ಷನ್ ಸಂಗ್ರಹವಾಗಿರುತ್ತದೆ. ಅವರವರ ಅಭಿರುಚಿಗೆ ಅನುಸಾರ ಡಿಕಾಕ್ಷನ್ ಹಾಲು ಸಕ್ಕರೆ ಅಥವಾ ಬೆಲ್ಲ ಬೆರೆಸಿ ಕುಡಿಯುತ್ತಾರೆ.ಶುಗರ್ ಲೆಸ್ ಕಾಫಿ ಇಷ್ಟಪಡುವವರೂ ಬಹಳಷ್ಟಿದ್ದಾರೆ.
ಫಿಲ್ಟರ್ ಕಾಫಿಗೆ ಕಾಫಿ ಬೇಳೆಯನ್ನು ಹುರಿದು ಪುಡಿ ಮಾಡುತ್ತಾರೆ.ಪುಡಿಗೆ ಬೇಳೆ ಕೊಡುವ ಮುನ್ನ ಬಿಳುಚಿಕೊಂಡ,ಕಪ್ಪಗಿನ,ಒಡೆದ(bleeched,Black’s, titbit) ಬೇಳೆಗಳನ್ನು ಆರಿಸಿ ಶುಚಿಗೊಳಿಸಿ ಕೊಡುವುದು ಬಹಳ ಹಿಂದಿನಿಂದಲೂ ಬಂದಿರುವ ಕ್ರಮ. ಇತ್ತೀಚಿನ ದಿನಗಳಲ್ಲಿ ಕಾಫಿ ಮತ್ತು ಚಿಕೋರಿಯನ್ನು ಸೆಪರೇಟಾಗಿ ಇಟ್ಟುಕೊಂಡು ಸ್ವಾದಕ್ಕನುಸಾರ ಬಳಕೆ ಮಾಡುವುದು ಅಭ್ಯಾಸವಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇಳೆಯನ್ನು ಹದವಾಗಿ ಹುರಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಬಳಸುವುದೂ ಇದೆ. ಗಮನಿಸಬೇಕಾದ ವಿಷಯವೆಂದರೆ ಚಿಕೋರಿ ರಹಿತ ಕಾಫಿ ಗಾಢವಾಗಲು ಒಂದಕ್ಕೆ ಮೂರೂವರೆ ಪಟ್ಟು ಹೆಚ್ಚು ಕಾಫಿ ಪುಡಿಯನ್ನು ಬಳಸಬೇಕಾಗುತ್ತದೆ. ಇದು ರುಚಿಯಲ್ಲೂ ವಿಶೇಷವಾಗಿರುತ್ತದೆ.ಆದರೆ ಚಿಕೋರಿ ಸಹಿತ ಕಾಫಿ ಬಹಳ ಬೇಗ ದಟ್ಟವಾಗುತ್ತದೆ. ಕಡುವಾಗಿರುತ್ತದೆ.
ಬಹಳ ಹಿಂದೆ ಸೂಪರ್ ಸೈಝ್ ಬೇಳೆಯಿಂದ ತಯಾರಿಸುವ ಕಾಫಿ ಉತ್ತಮ ಅನ್ನಲಾಗ್ತಿತ್ತು. ಇದು ಮಾತ್ರವಲ್ಲದೆ ಇಂಡಿಯನ್ ರೋಬಸ್ಟಾ ಪೀ ಬೆರ್ರಿಯನ್ನು ಕಪ್ಪು ಮುತ್ತು/ಬ್ಲ್ಯಾಕ್ ಪರ್ಲ್ ಅಂತ ಗಲ್ಫ್ ಮತ್ತು ಇಟಲಿಯಂತಹ ರಾಷ್ಟ್ರಗಳು ಕರೆಯುತ್ತಿದ್ದವು. ಕಾರಣ ಪೀ ಬೆರ್ರಿ ಉರುಟಾಗಿರುವುದರಿಂದ ಒಂದೇ ಹದದಲ್ಲಿ ಹುರಿಯಬಹುದು.ಹಾಗಾಗಿ ಆ ಊನ ಕಾಫಿಬೇಳೆಯನ್ನು ದಿ ಬೆಸ್ಟ್ ಅನ್ನಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಹುರಿಯುವುದನ್ನು ನಿಯಂತ್ರಿಸುವುದರಿಂದ ಆ ವಿಚಾರಗಳೆಲ್ಲವೂ ರೂಲ್ಡ್ ಔಟ್ ಎನಿಸಿಕೊಂಡವು.
ಇನಸ್ಟಂಟ್ ಕಾಫಿ
ಇನಸ್ಟಂಟ್ ಕಾಫಿಯ ವಿಚಾರಕ್ಕೆ ಬಂದರೆ ಮೊದಲಿನಿಂದಲೂ ಬೀನ್ ಆಯ್ಕೆಯ ಬಗ್ಗೆ ಅಸಮಾಧಾನ ಇದ್ದೇ ಇದೆ.ಕಾಫಿ ಕ್ಷೇತ್ರದ ಪರಿಣಿತರ ಪ್ರಕಾರ ಇಲ್ಲಿ ಬಳಸುವುದು ಬಹುತೇಕ ಟಿಟ್ ಬಿಟ್ಸ್.ಅಂದರೆ ಕಾಫಿಯ ಸೆಕೆಂಡ್ಸ್ ಎನ್ನಲಾಗುವ ಒಡೆದ ಬೀನ್ ಗಳು.
ಇಲ್ಲಿ ಕಾಫಿ ಬೇಳೆಯನ್ನು ಡೀಪ್ ಫ್ರೀಝ್ ಮತ್ತು ಡಿ ಹೈಡ್ರೇಟ್ ಮಾಡುವ ಮೂಲಕ ತೇವಾಂಶ ಮುಕ್ತಗೊಳಿಸಿ ಪುಡಿಮಾಡಿ ನಂತರ ಅದನ್ನು ಕ್ರಿಸ್ಟಲ್ ರೂಪಕ್ಕೆ ತರಲಾಗುತ್ತದೆ. ಅಗತ್ಯಕ್ಕೆ ಅನುಸಾರ ಕುದಿಯುವ ಹಾಲು ಸಕ್ಕರೆ ಕೆನೆ ಮತ್ತು ಇನ್ಸ್ಟೆಂಟ್ ಕಾಫಿ ಪೌಡರ್ ಅನ್ನು ಬೆರೆಸಿಕೊಳ್ಳುವುದರಿಂದ ಇನಸ್ಟಂಟ್ ಕಾಫಿ ಕುಡಿಯಲು ತಯಾರಾಗುತ್ತದೆ.ಇಲ್ಲಿಯ ಫೈನಲ್ ಪೌಡರ್ ತಯಾರಾಗಬೇಕಿದ್ದರೆ ಬೇಳೆಯನ್ನು ಎರಡೆರಡು ಬಾರಿ ವಿದ್ಯುತ್ ಮೂಲಕ ಹಾಯಿಸಿ ಕ್ರಿಸ್ಟಲ್ ರೂಪಕ್ಕೆ ತರಲಾಗುತ್ತದೆ.
‘ಯಾವುದೇ ವಸ್ತು ಅಥವಾ ಆಹಾರ ಪದಾರ್ಥ ಸಹಜವಾಗಿದ್ದಾಗ ಅದರಲ್ಲಿರುವ ಗುಣಕಾರಿ ಅಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಪ್ರೋಸೆಸ್ ಆಫ್ ಮೇಕಿಂಗ್ ಸಂಕೀರ್ಣವಾದಷ್ಟೂ ಅದರ ಗುಣ ವಿಶೇಷಗಳು ಕ್ಷೀಣಿಸುತ್ತವೆ.’
ಇನಸ್ಟಂಟ್ ಆದ ಯಾವುದೇ ಆಹಾರ ಪದಾರ್ಥದಲ್ಲಿ ಕೂಡ ಇದೇ ಆಗುತ್ತದೆ. ಪ್ರತಿಬಾರಿ ವಿದ್ಯುತ್ ಹಾಯ್ದಾಗಲೂ ಆ ಆಹಾರದ ಸಹಜ ಸ್ವಾಭಾವಿಕ ಗುಣ ಕುಂದಿ ಕೊನೆಯಲ್ಲಿ ಜಡದಂತಹ ವುಡ್ಡೀ ಪದಾರ್ಥ ತಯಾರಾಗಿ ಬಳಕೆಗೆ ಲಭ್ಯವಾಗುತ್ತದೆ.ಈಗಿನ ಕೃತಕ ಆಹಾರ ಸಂಸ್ಕೃತಿಯಲ್ಲಿ ಯಾವುದೇ ಜಡ ಪದಾರ್ಥಕ್ಕೂ ರುಚಿ ಬರುವ ಹಾಗೆ ಮಾಡುವ ಫುಡ್ ಟೆಕ್ನಾಲಜಿಗಳಿಗೆ ಕೊರತೆಯಿಲ್ಲ.
ಮತ್ತೆ ಫಿಲ್ಟರ್ ಕಾಫಿಗೇ ಬರೋಣಾ. ಕಾಫಿಯನ್ನು ಮುಖ್ಯವಾಗಿ ಬಳಸುವುದು ಬೇವರೇಜ್ ಆಗಿ .ಕಾಫಿಯಲ್ಲಿರುವ ಕೆಫಿನ್ ನರಮಂಡಲವನ್ನು ಉತ್ತೇಜಿಸಿ ಒಂದು ಬಗೆಯ ಆಹ್ಲಾದವನ್ನು ತಾಜಾನುಭೂತಿಯನ್ನು ಕೊಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಆದರೆ ಕಾಫಿಯ ಕೆಫಿನ್ ಹಿಟ್ ಯಾವುದರಲ್ಲಿ ಹೆಚ್ಚು. ಫಿಲ್ಟರ್ ಕಾಫಿ ಅಥವಾ ಇನಸ್ಟಂಟ್ ಕಾಫಿ?
ವೆರೈಟಿ ಆಫ್ ಇನಸ್ಟಂಟ್ ಕಾಫಿ ಮಾರುಕಟ್ಟೆಗೆ ಬರುತ್ತಿರುವುದರ ಹೊರತಾಗಿಯೂ ಕಾಫಿ ಪ್ರಿಯರ ಆಸಕ್ತಿಯನ್ನು ಫಿಲ್ಟರ್ ಕಾಫಿ ಹಾಗೆ ಉಳಿಸಿಕೊಂಡಿದೆ ಎನ್ನುವುದು ಗಮನಾರ್ಹ ವಿಚಾರ. ಇದಕ್ಕೆ ಮುಖ್ಯ ಕಾರಣ ಇದು ಸಾಮಾನ್ಯ ಮನುಷ್ಯನಿಗೂ ಕೈಗೆಟುಕಬಲ್ಲದು. ಅಫರ್ಡೆಬಲ್ ಟು ಕಾಮನ್ ಮ್ಯಾನ್.
ಇಷ್ಟು ಪ್ರಮುಖ ಕಾರಣ ಇದ್ದಾಗ್ಯೂ ನಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಫಿಲ್ಟರ್ ಕಾಫಿ ಹೆಚ್ಚು ಬೇಡಿಕೆ ಪಡೆಯುತ್ತಿಲ್ಲ ಯಾಕೆ?
ಮುಖ್ಯವಾಗಿ ನಮ್ಮಲ್ಲಿ ಟೀ ತಯಾರಿಸುವುದು ಸಮಯ ಮತ್ತು ತಯಾರಿಸುವ ದೃಷ್ಟಿಯಿಂದ ಸುಲಭ ಎನ್ನುವ ಕಲ್ಪನೆ ಇದೆ. ಆದರೆ ಫಿಲ್ಟರ್ ಕಾಫಿ ಅಭ್ಯಾಸವಾಗಿದ್ದೇ ಆದಲ್ಲಿ ಕಾಫಿ ತಯಾರಿಸುವುದು ಎಷ್ಟು ಸುಲಭ ಎನ್ನುವುದು ತಿಳಿಯುತ್ತದೆ.
ಒಂದೂವರೆ ಲೋಟ ನೀರು ಕುದಿಯಲು ಇಟ್ಟು ಫಿಲ್ಟರ್ ಜೋಡಿಸಿ ಕಾಫಿಪುಡಿ ಹಾಕಿ ಹಾಲು ಸಕ್ಕರೆ ತೆಗೆಯುವಷ್ಟರಲ್ಲಿ ನೀರು ಕುದಿಯುತ್ತದೆ. ಫಿಲ್ಟರ್ ಗೆ ಹಾಕಿದ ಪುಡಿಯ ಮೇಲೆ ಕುದಿವ ನೀರು ಸುರಿದು ಮೂರ್ನಾಲ್ಕು ನಿಮಿಷದಲ್ಲಿ ಡಿಕಾಕ್ಷನ್ ಇಳಿಯುತ್ತದೆ. ಚಹಾದ ಹಾಗೆ ಪುಡಿ ತನ್ನ ರಸವನ್ನು ಬಿಡುವವರೆಗೂ ಕುದಿಸುವ ಅಗತ್ಯ ಕಾಫಿಯಲ್ಲಿ ಇಲ್ಲವೇ ಇಲ್ಲ.
ಸಮಯ ಮತ್ತು ನಿರ್ವಹಣೆಯಲ್ಲಿ ಕಾಫಿ ಈಸ್ ಆಲ್ವೇಸ್ ಬೆಸ್ಟ್. ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಒಳ್ಳೆಯ ಕಾಫಿ ಪುಡಿಯನ್ನು ಒದಗಿಸುವುದಕ್ಕೆ ನಮ್ಮ ಸ್ಥಳೀಯ ಕಾಫಿ ಅಸೋಸಿಯೇಷನ್ಗಳು ಸದಾ ಸಿದ್ದವಾಗಿವೆ. ಸದ್ಯ ಚಿರಪರಿಚಿತವಿರುವ ಹಟ್ಟಿ ಕಾಫಿ, ಕೋಥಾಸ್ ಕಾಫಿ,ಲೆವಿಸ್ಟಾ ಕಾಫಿಗಳಂಥ ಬೆರೆಳೆಣಿಕೆಯ ಫಿಲ್ಟರ್ ಕಾಫಿ ಬ್ರ್ಯಾಂಡ್ ಗಳ ಜೊತೆಗೆ ಸಾಕಷ್ಟು ಕಾಫಿ ಸಂಘಸಂಸ್ಥೆಗಳು ಫಿಲ್ಟರ್ ಕಾಫಿ ಪೌಡರನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿವೆ. ಮಾರ್ಕೆಟಿಂಗ್ ದೃಷ್ಟಿಯಿಂದ ನೋಡುವಾಗ ಇನ್ನೂ ದೃಢವಾದ ಹೆಜ್ಜೆಯ ಅಗತ್ಯ ಇಲ್ಲಿ ಕಾಣುತ್ತಿದೆ.
ಫಿಲ್ಟರ್ ಕಾಫಿಯ ಪ್ರಯೋಜನ
ಇನ್ನು ಫಿಲ್ಟರ್ ಕಾಫಿಯ ಇತರೆ ಪ್ರಯೋಜನಗಳನ್ನು ಗಮನಿಸುವುದಾದರೆ ಕಾಫಿಯ ಸಹಜ ಸ್ವಾಭಾವಿಕ ಉತ್ತೇಜನ ಗುಣದ ಹೊರತಾಗಿ ಇದರ ಹೆಲ್ತ್ ಬೆನಿಫಿಟ್ಸ್ ಅಂಶಗಳು ಫಿಲ್ಟರ್ ಕಾಫಿಯನ್ನು ಸರ್ವ ಮಾನ್ಯವಾಗಿ ಉಳಿಸಿದೆ.
ಇದು ಮಾತ್ರವಲ್ಲದೇ ಫಿಲ್ಟರ್ ಕಾಫಿಯ ಕೊನೆಯ ಪ್ರಾಡಕ್ಟೂ ಕೂಡ ಉಪಯೋಗಕ್ಕೆ ಬರುತ್ತದೆ.ಇಲ್ಲಿ ಯಾವುದೂ ವ್ಯರ್ಥ ಪದಾರ್ಥವೇ ಇಲ್ಲ. ಇದರ ಚರಟಕ್ಕೆ ಮೊಸರು ಅಥವಾ ಕೆನೆ ಬೆರೆಸಿ ಉತ್ತಮವಾದ ಸ್ಕಿನ್ಪ್ಯಾಕ್ ಮಾಡಿಕೊಳ್ಳಬಹುದು. ಚರಟವನ್ನು ಕೇಶದ ಆರೈಕೆಗಾಗಿ ಬಳಸಬಹುದು.ಅಕಸ್ಮಾತ್ ಕಾಫಿ ಡಿಕಾಕ್ಷನ್ ಉಳಿದರೆ ಅದರ ಜೊತೆಗೆ ಯಾವುದಾದರೂ ಹಿಟ್ಟು ಬೆರೆಸಿ ಸ್ನಾನಕ್ಕೆ ಬಳಸಬಹುದು. ಒಡೆದ ಹಿಮ್ಮಡಿಗೆ ಕಾಫಿ ಅತ್ಯುತ್ತಮ ಮನೆಮದ್ದು. ಹಾಗೆಯೇ ತಯಾರಿಸಿದ ಡಿಕಾಕ್ಷನ್ ಅನ್ನು ಹೊರಗಿಟ್ಟರೂ ಎರಡು ದಿನಗಳವರೆಗೆ ಬಳಸಬಹುದು. ಏರ್ಟೈಟ್ ಕಂಟೇನರ್ ಗಳಲ್ಲಿ ಇಟ್ಟು ಫ್ರಿಜ್ಜಿನಲ್ಲಿಟ್ಟರೆ ವಾರದವರೆಗೂ ಬಳಸಬಹುದು. ತಾಜಾತನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗಾಢತೆಯೂ ಉತ್ತೇಜಕ ಗುಣವೂ ಹಾಗೆಯೇ ಉಳಿಯುತ್ತದೆ. ಚರಟ ಹೂದೋಟಕ್ಕೆ ಒಳ್ಳೆಯ ಗೊಬ್ಬರ ಆಗಬಲ್ಲದು.
ಫಿಲ್ಟರ್ ಕಾಫಿ ಕುರಿತು ಇನ್ನೂ ಒಂದು ಮಾತು ಹೇಳಬೇಕಿದೆ ಕೆಲವೊಮ್ಮೆ ಹೊರಗೆ ಹೋಗುವಾಗ ವಿಧಿಯಿಲ್ಲದೆ ಇನಸ್ಟಂಟ್ ಕಾಫಿಗೆ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಒಂದು ಕಂಟೇನರ್ ನಲ್ಲಿ ತಾಜಾ ಡಿಕಾಕ್ಷನ್ ಅನ್ನು ಹಾಕಿ ಒಯ್ದರೆ ಹೋಟೆಲುಗಳಲ್ಲಿ ಹಾಲು ಪಡೆದು ಅದಕ್ಕೆ ನಮ್ಮ ಗಾಢ ಡಿಕಾಕ್ಷನ್ ಬೆರೆಸಿದರೆ ಮನೆಯ ಫಿಲ್ಟರ್ ಕಾಫಿಯನ್ನು ಹೊರಗೆ ಹೋದಾಗಲೂ ಸವಿಯಬಹುದು.
ಕಾಪಿಯ ಹೆಲ್ತ್ ಬೆನಿಫಿಟ್ಸ್ ಬಗ್ಗೆ ಹೇಳುವುದಾದರೆ ಹಿತಮಿತವಾದ ಕಾಫಿ ಸೇವನೆಯಿಂದ ಅಲ್ಜಿಮರ್ ತೊಂದರೆಯನ್ನು ತಡೆಯಬಹುದು ಎನ್ನಲಾಗುತ್ತಿದೆ.ಹೃದಯಸಂಬಂಧಿ ತೊಂದರೆಗಳಿಗೂ ಕಾಫಿ ಒಳ್ಳೆಯದು. ಕಾಫಿಯಲ್ಲಿ ಉತ್ತಮ ಆ್ಯಂಟಿ ಆ್ಯಕ್ಸಿಡೆಂಟ್ಸ್ ಗಳು ಹೇರಳವಾಗಿದೆ.ಇದರಲ್ಲಿರುವ ಫ್ಲೆವಿನಾಯ್ಡ್ಸ್ ದೇಹವನ್ನು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ನಮ್ಮ ಕಾಫಿನಾಡಿನ ಮಹಿಳೆಯರು ಹೇಗಿಷ್ಟು ಸುರಸುಂದರಿಯರು ಎನ್ನುವ ಸಾಮಾನ್ಯ ಪ್ರಶ್ನೆಗೆ ‘ಕಾಫಿ’ಅಂತ ಸಹಜವಾಗಿ ಹೇಳಬಹುದು. ‘ಕಾಫಿ ಬಾತ್’ ಬಹಳ ಹಿಂದಿನಿಂದಲೂ ಕೆಲವು ಐರೋಪ್ಯ ದೇಶಗಳಲ್ಲಿ ಹಾಗು ಜಪಾನ್ ಮತ್ತು ಸಿಂಗಾಪುರ್ ಗಳಲ್ಲಿ ಅಭ್ಯಾಸದಲ್ಲಿದೆ. ಅಂದರೆ ಕಾಫಿ ಡಿಕಾಕ್ಷನ್ ಅನ್ನು ಬಾತ್ ಟಬ್ಬಿನೊಳಗೆ ಹಾಕಿ ಸ್ನಾನ ಮಾಡುವುದು.ಇದರಿಂದ ಚರ್ಮ ರಿಜುವೆನೇಟ್ ಆಗುತ್ತದೆ ಹಾಗು ಚರ್ಮಕ್ಕೆ ಬಿಗಿ ಮತ್ತು ಹೊಳಪು ಬರುತ್ತದೆ ಎನ್ನುವುದು ಸೌಂದರ್ಯ ಕ್ಷೇತ್ರದ ಪರಿಣಿತರ ಖಚಿತ ಅಭಿಪ್ರಾಯ.
ಕೋರೋನಾ ಸಮಸ್ಯೆಯಲ್ಲಿ ಸಹ ಫಿಲ್ಟರ್ ಕಾಫಿಯನ್ನು ತುಸು ತೆಳುವಾಗಿ ಮಾಡಿಕೊಂಡು ದಿನದಲ್ಲಿ ಐದಾರುಬಾರಿ ಸೇವಿಸುವುದರಿಂದ ಜೀವಕೋಶಗಳ ಉರಿಯೂತದ ಸಮಸ್ಯೆಗೆ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತಿದೆ. ಅನಾರೋಗ್ಯದ ಸಮಯದಲ್ಲಿ ಆವರಿಸುವ ಖಿನ್ನತೆಯಿಂದ ದೂರಾಗಲು ಕಾಫಿ ಈಸ್ ಅಲ್ವೇಸ್ ಬೆಸ್ಟ್.
ಕಾಫಿಯ ಚಿಗುರಿನಿಂದ ತಯಾರಿಸುತ್ತಿದ್ದ ಅಜ್ಜಿ ಕೊಡುತ್ತಿದ್ದ ಮದ್ದು ‘ಸೋಕಿನ ಔಷಧಿ’ ಕುಡಿದೊಡನೆ ದೇಹದ ಆಯಾಸ,ಆಲಸ್ಯಗಳು ದೂರಾಗುತ್ತಿದ್ದದ್ದನ್ನು ಈಗ ಯೋಚಿಸುವಾಗ ಕಾಫಿಯ ಒಂದು ಮುಖದ ಪರಿಚಯವನ್ನು ಮಾತ್ರ ಜಗತ್ತು ಮಾಡಿಕೊಂಡಿದೆ ಎನಿಸುತ್ತದೆ.ಈ ನಿಟ್ಟಿನಲ್ಲಿ ಕೂಡ ಅಗತ್ಯ ಅಧ್ಯಯನ ಆಗಬೇಕಿದೆ. ಕಾಫಿಯ ಉಪಯುಕ್ತ ಗುಣಗಳು ಇನ್ನೂ ಬಹಳಷ್ಟಿವೆ. ಆದರೆ ನ್ಯಾಚುರಲ್ ಆದ ಬಳಕೆಯಿಂದ ಮಾತ್ರವೇ ಕಾಫಿಯ ಉಪಯುಕ್ತ ಸ್ವಭಾವಗಳು ದೇಹಕ್ಕೆ ಲಭ್ಯವಾಗುತ್ತವೆ.
ಕಾಫಿ ಮೆಷಿನ್ ಗಳಲ್ಲಿ ಮಾಡಿದ ಕಾಫಿ ಬೆಸ್ಟ್ ಇರುತ್ತದೆ ಎನ್ನುವ ಭ್ರಮೆ ಸಾಮಾನ್ಯರಲ್ಲಿ ಇದೆ. ಆದರೆ ನೂರಿನ್ನೂರು ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುವ ಕಾಫಿ ಫಿಲ್ಟರ್ ನಿಂದ ಉತ್ಕೃಷ್ಟ ಕಾಫಿ ಮಾಡಲು ಸಾಧ್ಯ. ಅದೂ ಸಾಧ್ಯವಾಗದೇ ಹೋದಲ್ಲಿ ಮುಚ್ಚಳವಿರುವ ಡಬ್ಬಿಯಲ್ಲಿ ಪುಡಿ ಮತ್ತು ಕುದಿಯುವ ನೀರು ಸುರಿದರೂ ಒಳ್ಳೆಯ ಡಿಕಾಕ್ಷನ್ ತಯಾರಾಗ್ತದೆ.
ಫಿಲ್ಟರ್ ಕಾಫಿ ನ್ಯಾಚುರಲ್ ಕಾಫಿ
ಕಾಫಿಯ ಅತಿಬಳಕೆ ಇರುವ ಯುರೋಪಿಯನ್ ರಾಷ್ಟ್ರಗಳಲ್ಲಿ ಕೂಡ ಫಿಲ್ಟರ್ ಕಾಫಿಯನ್ನು ನ್ಯಾಚುರಲ್ ಕಾಫಿ ಅಂತ ಪರಿಗಣಿಸುತ್ತಾರೆ. ಆದರೆ ಕ್ಯಾಪಿಚಿನೋ ,ಪ್ರ್ಯಾಪಿಚಿನೋ ,ಲ್ಯಾಟ್ಟೆ ,ಬ್ರೂ, ನೆಸ್ಕೇಫೆ ಗಳಂತಹ ಇನ್ಸ್ಟಂಟ್ ಕಾಫಿಗಳು ತಮ್ಮ ಮಾರ್ಕೆಟಿಂಗ್ ಅನ್ನು ಅತ್ಯುತ್ತಮವಾಗಿ ಮಾಡಿಕೊಳ್ಳುತ್ತಿವೆ.ಜೊತೆಗೆ ಕಾಫಿ ಸೇವನೆಗೆ ಬೇಕಾದ ವಿಶೇಷ ಆ್ಯಂಬಿಯನ್ಸ್ ಅನ್ನು ಈ ಕಂಪನಿಗಳು ಗ್ರಾಹಕರಿಗೆ ಮಾಡಿಕೊಡುತ್ತಿವೆ.
ಇರಲಿ..
ಕೆಲವು ವಿಶೇಷ ಕ್ಷಣಗಳಿಗಾಗಿ ಅವುಗಳ ಅನಿವಾರ್ಯತೆಗಳಿರಬಹುದು. ಆದರೆ ಫಿಲ್ಟರ್ ಕಾಫಿಗೆ ಕೂಡ ಇಂತಹ ಆಧುನಿಕತೆಯ ಸ್ಪರ್ಶದ ಅಗತ್ಯವಿದೆ. ಸಾಂಪ್ರಾದಾಯಿಕ ಪರಿಸರದೊಂದಿಗೆ ಅಧುನಿಕತೆ ಮಿಳಿತವಾದ ವಿಶೇಷ ‘ಫಿಲ್ಟರ್ ಕಾಫಿ ರೆಸ್ಟುರಾ’ ಗಳಲ್ಲಿ ಕಾಫಿಯನ್ನು ಒದಗಿಸುವುದರಿಂದ ಅಧಿಕ ಗ್ರಾಹಕರನ್ನು ಸೆಳೆಯಲು ಸಾಧ್ಯವಿದೆ.ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಕಾಫಿ ಬಳಕೆ ಹೆಚ್ಚಾಗಬೇಕಾದರೆ ರುಚಿಗೂ ಮಿಗಿಲಾಗಿ ಕಾಫಿ ವಾತವರಣವನ್ನು ಕ್ರಿಯೇಟ್ ಮಾಡುವುದು ಮೊದಲ ಹೆಜ್ಜೆ.
ಬೇಸರದ ಸಂಗತಿಯೆಂದರೆ ಫಿಲ್ಟರ್ ಕಾಫಿಗಾಗಿ ಮಾರ್ಕೆಟಿನಲ್ಲಿ ದೊರೆಯುವ ಕಾಫಿಪುಡಿ ಗಳು ಅಗತ್ಯಕ್ಕೂ ಮೀರಿ ಚಿಕೋರಿ ಭರಿತವಾಗಿದ್ದು ಆ ಪುಡಿಯಿಂದ ಕಾಫಿಯ ಬಳಕೆ ಹೆಚ್ಚುತ್ತದೆ ಎಂದುಕೊಳ್ಳುವುದು ಭ್ರಮೆಯಷ್ಟೆ. ಕಾಲಕಾಲಕ್ಕೆ ಕಾಫಿಮಂಡಳಿ ಮತ್ತು ಕಾಫಿ ಅಸೋಸಿಯೇಷನ್ ಗಳು ಇದರ ಕುರಿತು ಅಗತ್ಯ ಕಾಯ್ದೆ ಕಾನೂನುಗಳನ್ನು ರೂಪಿಸುವ ಮೂಲಕ ಉತ್ತಮ ಕಾಫಿಯನ್ನು ಗ್ರಾಹಕರಿಗೆ ಒದಗಿಸುವ ಕೆಲಸವನ್ನು ಮಾಡಬೇಕಿದೆ.
ಸದ್ಯ ಫಿಲ್ಟರ್ ಕಾಫಿಗೆ ಬೇಕಾಗುವ ಕಾಫಿ ಪುಡಿಯನ್ನು ಬೇರೆಬೇರೆ ಬ್ಲೆಂಡ್ ಗಳಲ್ಲಿ ಪುಡಿ ಮಾಡಿಸಿ ಮಾರ್ಕೆಟಿಂಗ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಆಗಬೇಕಿದೆ.
ಫಿಲ್ಟರ್ ಕಾಫಿಯ ವಿಶೇಷತೆಗಳನ್ನು ಮತ್ತು ಫಿಲ್ಟರ್ ಕಾಫಿ ಮಾಡುವುದನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಚಾರ ಮಾಡಿದರೆ ಕಾಫಿಯ ಬೇಡಿಕೆ ಗಣನೀಯವಾಗಿ ಹೆಚ್ಚುತ್ತದೆ .
ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಸಮಯ ಮತ್ತು ಮಾಡುವ ವಿಧಾನಗಳ ಸಲುವಾಗಿ ಇನಸ್ಟಂಟ್ ಕಾಫಿ ಹೆಚ್ಚು ಬಳಕೆಯಲ್ಲಿದೆ. ಆದರೆ.. ಈಗ ಮಾರ್ಕೆಟಿನಲ್ಲಿ ಸಿಗುತ್ತಿರುವ ಕಾಫಿ ಡಿಕಾಕ್ಷನ್ ಸ್ಯಾಷೆಟ್ ಗಳು ಇದಕ್ಕಿಂತಲೂ ಕನ್ಸ್ಯೂಮರ್ ಫ್ರೆಂಡ್ಲಿ ಆಗಿವೆ. ಮಾರುಕಟ್ಟೆಗೆ ಕಾಫಿಯನ್ನು ತರುವಷ್ಟೇ ಸಮರ್ಥವಾಗಿ ಪ್ರಚಾರದ ಅಗತ್ಯವೂ ಇದೆ.
ಅದೆಷ್ಟೇ ಇನಸ್ಟಂಟ್ ಕಾಫಿ ಮಾರುಕಟ್ಟೆಗೆ ಬರಲಿ. ನಮ್ಮ ಫಿಲ್ಟರ್ ಕಾಫಿಗೆ ಸರಿಗಟ್ಟುವ ರುಚಿ ಗಾಢತೆ ತಾಜಾತನ ಅವುಗಳಿಂದ ಸಾಧ್ಯವಿಲ್ಲ.
ಒಂದೆರಡು ದಶಕಗಳ ಹಿಂದೆ ಹೋದರೆ ಬಹುತೇಕರ ಮನೆಯಲ್ಲಿ ಕಾಫಿ ಗ್ರೈಂಡರ್ ಇರುತ್ತಿತ್ತು.ಕಾಫಿ ಹುರಿಯುವ ಅರೆಯುವ ಪರಿಮಳ ಇಡೀ ಊರನ್ನೇ ಹರಡಿಕೊಳ್ಳುತ್ತಿತ್ತು. ಮನೆಯಲ್ಲೇ ತಯಾರಿಸಿದ ಆ ಕಾಫಿಪುಡಿ ಬಳಸಿ ಮಾಡುತ್ತಿದ್ದ ಕಾಫಿಯ ಸ್ವಾದ ಕ್ಕೆ ಸರಿಸಾಟಿ ಯಾವುದೂ ಇಲ್ಲವೆನ್ನುವ ಮಾತು ಆಗಾಗ ನಮ್ಮಲ್ಲಿ ಕೇಳಿಬರುತ್ತದೆ.ಅದಕ್ಕೆ ಕಾರಣವೂ ಸರಳವಾಗಿದೆ. ಅಲ್ಲಿನ ಪ್ರೋಸೆಸ್ ಆಫ್ ಕಾಫಿ ಮೇಕಿಂಗ್ ಬಹಳ ನ್ಯಾಚುರಲ್ ಆಗಿತ್ತು. ಇದರಿಂದಾಗಿ ಕಾಫಿಯ ಸ್ವಾಭಾವಿಕ ಗುಣಗಳು ಹಾಗೆಯೇ ಉಳಿಯುತ್ತಿದ್ದವು. ಮುಂದಿನ ದಿನಗಳಲ್ಲಿ ಫಿಲ್ಟರ್ ಕಾಫಿಯೂ ಹಾಗೇ ಎನಿಸಿಕೊಳ್ಳುತ್ತದೆ.
ಫಿಲ್ಟರ್ ಕಾಫಿ ಮಾಡುವುದನ್ನು ಕಲಿಯುವುದೂ ಕೂಡ ಖುಷಿಯ ವಿಚಾರ. ಇದು ತಿಳಿದದ್ದು ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಲ್ಲಿ ಕಾಫಿ ಮೇಕಿಂಗ್ ಅನ್ನು ನಾವು ತಿಳಿಸಿಕೊಟ್ಟಾಗ. ಹೇಗೆ ಉತ್ತರಭಾರತದ ರಸಮಲೈ ಅನ್ನು ನಾವು ತಯಾರಿಸಿದಾಗ ಸಂಭ್ರಮಿಸ್ತಿವೋ ಹಾಗೆ ಕಡುವಾದ,ರುಚಿಯಾದ ಕಾಫಿಯನ್ನು ತಾವೇ ತಯಾರಿಸಿಕೊಂಡಿದ್ದನ್ನು ಹೇಳುವಾಗ ಅವರು ಸಂಭ್ರಮಿಸುವುದೇ ಚಂದ.
ಕಾಫಿ ಸಂಸ್ಕೃತಿಯೂ ಹಾಗೆ. ಮುಗಿಯದ ಆಹ್ಲಾದದ ಅನುಭವ. ನಮ್ಮ ಬಾಲ್ಯದಲ್ಲಿ ಶಾಲೆಯಿಂದ ಬರುವಾಗ ಗೇಟಿನವರೆಗೂ ಹರಡಿರುತ್ತಿದ್ದ ಕಾಪಿಯ ಪರಿಮಳ,ಮುಂಜಾವಿಗೇ ತಟ್ಟಿ ಎಬ್ಬಿಸುತ್ತಿದ್ದ ಕಾಫಿಯ ಘಮಘಮ.ಇದೆಲ್ಲವೂ ಮಾತಿಗೆ ನಿಲುಕದ ವಿಷಯಗಳು. ಇಂತಹ ರಸಭರಿತ ಕಾಫಿಯ ಅಸ್ವಾದನೆಯನ್ನು ಮುಂದಿನ ಪೀಳಿಗೆಯೂ ಪಡೆಯಬೇಕಲ್ಲವೇ?
ಅದರ ಸಲುವಾಗಿಯಾದರೂ ಇಂತಹದೊಂದು ಅದ್ವಿತೀಯ ಪೇಯವನ್ನು ನಾವು ಜನಪ್ರಿಯ ಗೊಳಿಸಬೇಕಿದೆ. ಇದಕ್ಕೆ ಕಾಫಿಮಂಡಳಿಯೂ ಬೆಳೆಗಾರರ ಜೊತೆಗೆ ಕೈ ಜೋಡಿಸಬೇಕು. ಕೇವಲ ಸಹಾಯಧನಕ್ಕೊ,ಪ್ರಕೃತಿ ವಿಕೋಪ ಪರಿಹಾರಕ್ಕೊ ಮಾತ್ರ ಕಾಫಿ ಮಂಡಳಿ ಸೀಮಿತವಾಗದೆ ಕಾಫಿ ಸಂಸ್ಕೃತಿಯನ್ನು ಪ್ರಮೋಟ್ ಮಾಡುವ ಮೂಲಕ ಆಂತರಿಕ ಮಾರುಕಟ್ಟೆ ಹೆಚ್ಚಿಸುವ ಗುರುತರ ಜವಬ್ದಾರಿ ಕಾಫಿ ಮಂಡಳಿಯ ಮೇಲಿದೆ.
ಇನ್ನೂ ನಮ್ಮ ಪ್ರಮುಖ ಕಾಫಿ ಬೆಳೆಯುವ ತಾಲೂಕು ಸಕಲೇಶಪುರದಲ್ಲಿ ಸಂಪೂರ್ಣ ಮಹಿಳೆಯರೇ ನಡೆಸುವ “ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ” ಇದ್ದು ಇವರು ಕೂಡ ರಾಜ್ಯ ಮತ್ತು ದೇಶದ ಹಲವೆಡೆ ಕಾಫಿ ಸ್ಟಾಲ್ ಗಳನ್ನು ಹಾಕುವ ಮೂಲಕ ಕಾಫಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಾರ್ಯವೈಖರಿ ಕೂಡ ಇನ್ನೂ ವೇಗವನ್ನು ಪರಿಣಿತಿಯನ್ನೂ ಪಡೆಯಬೇಕಿದೆ. ಅಸಾಂಪ್ರದಾಯಿಕ ಕಾಫಿ ಪ್ರದೇಶಗಳಿಗೆ ತೆರಳಿ ಕಾಫಿಯನ್ನು ಪರಿಚಯಿಸುವ ಇವರ ಕಾರ್ಯಕ್ಕೆ ಕಾಫಿ ಮಂಡಳಿಯ ಪ್ರೋತ್ಸಾಹವೂ ದೊರಕಬೇಕಿದೆ.
ಇಂದು ಅಕ್ಟೋಬರ್ ಒಂದು. ಅಂತಾರಾಷ್ಟ್ರೀಯ ಕಾಫಿ ದಿನ. ಕಾಫಿ ಬೆಳೆಗಾರ ಸಮುದಾಯ ಈ ದಿನವನ್ನು ಬಹಳ ಸಂಭ್ರಮದಿಂದ ಅಚರಿಸುತ್ತಾರೆ. ಸಮುದಾಯದ ಸಂಪ್ರದಾಯಗಳು, ಆಚರಣೆಗಳು,ಕಾಫಿ ವೈಶಿಷ್ಟ್ಯ ಬಿಂಬಿಸುವ ಕಾರ್ಯಕ್ರಮಗಳ ಜೊತೆಗೆ ಕಾಫಿ ಕ್ಷೇತ್ರದ ಪ್ರಸ್ತುತ ಸಮಸ್ಯೆಗಳನ್ನು ವ್ಯವಸ್ಥೆಗೆ ಮುಟ್ಟಿಸುವ ಕಾರ್ಯ ಆ ದಿನದ ಮುಖ್ಯ ಉದ್ದೇಶವಾಗಿರುತ್ತದೆ. ಸ್ಥಳೀಯ ಕಾಫಿ ಸಂಘಟನೆಗಳ ಜೊತೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಜಂಟಿಯಾಗಿ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಯೋಜನೆ ಮಾಡುತ್ತಾರೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಅಂದು ನಮ್ಮ ಕಾಫಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಚಿತವಾಗಿ ಕಾಫಿ ವಿತರಿಸುವ ಮೂಲಕ ನಮ್ಮ ಫಿಲ್ಟರ್ ಕಾಫಿಯನ್ನು ಪ್ರಮೋಟ್ ಮಾಡುವ ಕಾರ್ಯವನ್ನು ಮಾಡಲಾಗ್ತಿದೆ. ಕಾಫಿನಾಡಿನ ಈ ಆತಿಥ್ಯಕ್ಕೆ ಸಾರ್ವಜನಿಕರ ಸ್ಪಂದನೆ ಕೂಡ ಅತ್ಯುತ್ತಮವಾಗಿದೆ.
ನಮ್ಮ ಕಾಫಿನಾಡಿನ ಜಿಲ್ಲೆಗಳ ಮೂಲಕ ಅತ್ಯುತ್ತಮ ಕಾಫಿಯನ್ನು ಗ್ರಾಹಕರಿಗೆ ಒದಗಿಸುವ ಕೆಲಸವಾದರೆ ಫಿಲ್ಟರ್ ಕಾಫಿಯ ಬಳಕೆಯೂ,ಫಿಲ್ಟರ್ ಕಾಫಿಯ ಕುರಿತು ಆಸಕ್ತಿಯೂ ಖಂಡಿತವಾಗಿ ಹೆಚ್ಚುವುದರಲ್ಲಿ ಸಂದೇಹವಿಲ್ಲ.