ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಕೈ ಗೊಂಡಿರುವ ಶಾಲಾ ಆವರಣದ ಸ್ವಚ್ಛತಾ ಕಾರ್ಯದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲಾ ಶಿಕ್ಷಕರ ಮಾದರಿ ಕೆಲಸ ಎಂದು ಕನ್ನಡಪ್ರೆಸ್.ಕಾಮ್ ಮಾಡಿದ್ದ ವರದಿಯನ್ನು ಗಮನಿಸಿರುವ ಸಚಿವರು ಈ ಕಾರ್ಯವನ್ನು ರಾಜ್ಯದ ಎಲ್ಲ ಸರಕಾರಿ ಶಿಕ್ಷಕರು ಅನುಸರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಬರುವ ಗಾಂಧೀ ಜಯಂತಿ ಶಾಲಾ ಸ್ವಚ್ಛತಾ ಅಭಿಯಾನಕ್ಕೆ ನಾಂದಿ ಹಾಡಲಿ ಎಂದು ಆಶಿಸಿದ್ದಾರೆ.
ಯಾವುದಾದರೊಂದು ವಿಚಾರದ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲವೆಂದ ಕೂಡಲೇ ಎಲ್ಲರೂ ತಲೆಗೊಂದೊಂದರಂತೆ ಮಾತಾಡಲು ಶುರುಮಾಡುತ್ತಾರೆ. ತಮ್ಮ ನಂಬಿಕೆ ಅಥವಾ ಅನಿಸಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಪರವಾನಗಿ ಸಿಕ್ಕಿತು ಎಂಬಂತೆ ವರ್ತಿಸತೊಡಗುತ್ತಾರೆ. ತಮ್ಮ ಆರೋಗ್ಯ ಮತ್ತು ಪ್ರಾಣದ ವಿಚಾರ ಎಂದ ಕೂಡಲೇ ಇವರನ್ನು ನಂಬುವ ಇತರರು ಸಿಕ್ಕ ಮಾಹಿತಿಯ ಮೂಲವನ್ನು ವಿಚಾರಿಸದೇ ಪಾಲನೆಗೆ ತಂದುಬಿಡುತ್ತಾರೆ. ಭಯ ಅಥವಾ ಗಾಬರಿಯಲ್ಲಿದ್ದಾಗ ಇದು ಜನಸಾಮಾನ್ಯರು ತೋರುವ ಸಹಜ ಪ್ರತಿಕ್ರಿಯೆ.
ವಿಶ್ವವ್ಯಾಪೀ ಹೊಸವ್ಯಾಧಿ ಶುರುವಾಗಿ ಸರ್ಕಾರಗಳು, ವೈದ್ಯರುಗಳು ತಮಗೆ ಈ ಬಗ್ಗೆ ನಿಖರ ಮಾಹಿತಿ ಇಲ್ಲವೆಂದ ಕೂಡಲೇ ಹಲವರು ತಮ್ಮ ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಕೆಲವು ಹೊಸ ಅಭ್ಯಾಸಗಳನ್ನು ಜಾರಿಗೆ ತಂದುಬಿಟ್ಟರು.
ಮನೋ ವೈಜ್ಞಾನಿಕ ಮೂಲಗಳಿಂದ ಅವಲೋಕಿಸಿದರೆ ’ ನಂಬುಗೆ ’ ಗಳು ಮನುಷ್ಯರಲ್ಲಿ ಹೊಸ ಭರವಸೆ ಮತ್ತು ಧೈರ್ಯಗಳನ್ನು ತುಂಬಬಲ್ಲವು. ಆ ಕಾರಣಕ್ಕೆ ಅವು ಒಳ್ಳೆಯವೇನೋ ನಿಜ. ಆದರೆ ಕೊರೋನಾದಂತಹ ಸಂದರ್ಭಗಳಲ್ಲಿ ಇವೇ ನಂಬಿಕೆಗಳು ಅವರಲ್ಲಿ ಹುಸಿ ಧೈರ್ಯವನ್ನು ತುಂಬಿ ಅವರು ವೈಜ್ಞಾನಿಕ ಮೂಲಗಳನ್ನು ತಿರಸ್ಕರಿಸುವ ಅಪಾಯವನ್ನು ಸೃಷ್ಟಿಸಬಲ್ಲವು. ಅವರು ತಮ್ಮ ನಂಬಿಕೆಗಳಿಗೆ ಜೋತುಬಿದ್ದು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಪದೇ ಪದೇ ಕೈ ತೊಳೆಯುವ ಅಭ್ಯಾಸಗಳನ್ನು ನಿಲ್ಲಿಸಬಹುದು. ಯಾವುದೇ ರೀತಿ ಪರಿಣಾಮಕಾರಿಯಲ್ಲದಿದ್ದರೂ ತಮಗೆ ತಾವೇ ಅನಗತ್ಯ ಚಿಕಿತ್ಸೆ ಮಾಡಿಕೊಂಡು ಅದರಿಂದಲೇ ಸಾಯಬಹದು.
ಇಂಥ ಹೊಸ ಅಭ್ಯಾಸಗಳು ಜನರಲ್ಲಿ ಧಾವಂತವನ್ನೂ ಸೃಷ್ಟಿಸುತ್ತವೆ. ಕೊರೊನಾ ತಡೆಗಟ್ಟಲು ಯಾವುದೋ ಒಂದು ವಸ್ತು ಉಪಯಕ್ತ ಎಂಬ ಹುಸಿ ನಂಬಿಕೆಯೊಂದಿಗೆ ಆ ವಸ್ತುವಿಗೆ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಬೇಡಿಕೆ ಕಾಣಿಸುತ್ತದೆ. ಪೈಪೋಟಿಯ ನಡುವೆ ಜಠಾಪಟಿಯೂ ನಡೆಯುತ್ತದೆ.
ಇಂತಹ ಹಲವು ಪೈಪೋಟಿಗಳನ್ನು ಬೇಕಂತಲೇ ಹುಟ್ಟು ಹಾಕಿ ಲಾಭ ಮಾಡಿಕೊಳ್ಳುವ ಖದೀಮರೂ ಇದ್ದಾರೆ. ಇವರು ವೈದ್ಯರ ಹೆಸರನ್ನು ಬಳಸಿ ಎಂಥದ್ದೊ ಅಧ್ಯಯನದ ಇಂಗ್ಲಿಷ್ ಪೇಪರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಅದು ಬರಿಯ ಗಮನಿಸಿದ (observational studies) ವಿಚಾರವೇ ಅಥವಾ ಧೃಡಪಟ್ಟು ಮನ್ನಣೆಗಳಿಸಿ ಸರ್ಕಾರದಿಂದ ಅಂಗೀಕೃತಗೊಂಡ ವಿಚಾರವೇ ಎನ್ನುವುದನ್ನು ಗಮನಿಸದೆ, ’ಇವು ಯಾಕೆ ಬರೀ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹರಿದಾಡುತ್ತಿವೆ ? ’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಧಿಡೀರ್ ಎಂದು ಜನರು ಇಂಥವನ್ನು ನಂಬಬಾರದು.
ಇಂತಹ ಕಪೋಲ ಕಲ್ಪಿತ ಮಿಥ್ಯೆಗಳನ್ನು ಜನಸಾಮಾನ್ಯರಲ್ಲಿ ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಪೋಸ್ಟರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಹರಿಯಬಿಟ್ಟಿದೆ. ಕಪೋಲ ಕಲ್ಪಿತ ಮಿಥ್ಯೆಗಳು ತರುವ ಹಾನಿಗಳಿಂದ ಜನರನ್ನು ರಕ್ಷಿಸುವುದೇ ಇದರ ಉದ್ದೇಶ.
ಇದುವರೆಗೆ ಕೊರೊನಾ ವಿರುದ್ಧ ಕೆಲಸ ಮಾಡಬಲ್ಲ ಯಾವುದೇ ಔಷದ ಮಾರುಕಟ್ಟೆಗೆ ಬಂದಿಲ್ಲ
ಭಾರತದಲ್ಲಿಯೂ ಸೇರಿದಂತೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಎಂಬ ಔಷದ ಕೊರೊನಾ ವಿರುದ್ಧ ಕೆಲಸಮಾಡುತ್ತದೆ ಎಂಬ ನಂಬಿಕೆ ಬಹಳಷ್ಟು ಜನರಲ್ಲಿ ಇತ್ತು. ಅಗತ್ಯವೇ ಇಲ್ಲದಾಗ್ಯೂ ಕೊರೊನಾವನ್ನು ತಡೆಗಟ್ಟಲು ಈ ಔಷಧವನ್ನು ಸೇವಿಸಿದ ಜನರಿದ್ದಾರೆ.
ಸಾಮಾನ್ಯವಾಗಿ ಮಲೇರಿಯ, ಲ್ಯೂಪಸ್ ಎರಿತೆಮಟೋಸಿಸ್, ರ್ಯೂಮಟ್ಯಾಯ್ಡ್ ಆರ್ಥ್ರೈಟಿಸ್ ಖಾಯಿಲೆಗಳಿಗೆ ಬಳಸುವ ಈ ಔಷದ ಕೊರೊನಾ ವಿರುದ್ಧ ಫಲಕಾರಿಯೇ ಎಂಬ ಅಧ್ಯಯನಗಳು ನಡೆದದ್ದು ನಿಜ. ಅದರೆ ಈ ಔಷದ ಕೊರೊನಾದಿಂದ ಆಗುವ ಸಾವನ್ನಾಗಲೀ ಅಥವಾ ಕಾಣಿಸಿಕೊಳ್ಳುವ ರೋಗಲಕ್ಷಣಗಳನ್ನಾಗಲೀ ತಡೆವಲ್ಲಿ ನಿಷ್ಪ್ರಯೋಜಕ ಎಂದು ತಿಳಿಯಿತು. ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಕೂಡ ಈ ಹೆಸರಿನಲ್ಲಿ ಜನರಿಗೆ ಭರವಸೆಯ ಮಾತನ್ನಾಡಲು ಪ್ರಯತ್ನಿಸಿದರಾದರೂ ಕೊರೋನಾ ಟಾಸ್ಕ್ ಮುಖ್ಯಸ್ಥ ಡಾ. ಆಂತೊನಿ ಫಾಷಿ ಅದನ್ನು ಅಲ್ಲೆಗೆಳೆದ ನಂತರ ಈ ವಿಚಾರಕ್ಕೆ ಕೊನೆಗೆ ತೆರೆ ಹಾಕಲಾಯಿತು. ಆರೋಗ್ಯ ಇಲಾಖೆಯಲ್ಲಿರುವ ಹಲವರು ಈ ಔಷದದ ಕೊರೊನ ಮೇಲಿನ ಅಧ್ಯಯನ ಪತ್ರಿಕೆಗಳನ್ನೇ ’ಸಾಕ್ಷಿ-ಆಧಾರ’ ಗಳೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದೂ ಉಂಟು.ಇನ್ನು ಜನ ಸಾಮಾನ್ಯರ ಪಾಡೇನು?
ಈ ಔಷದದ ಮೇಲೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ, ಕೊರೊನಾದ ಯಾವುದೇ ಹಂತದ ಮೇಲೆ ಇದು ಉಪಯಕ್ತವೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಹಾಗಿರುವಾಗ ಇದನ್ನು ವೈದ್ಯರ ಮೇಲುಸ್ತುವಾರಿಗೆ ಇಲ್ಲದೆ ಸೇವಿಸಿದಲ್ಲಿ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗುತ್ತವೆ. ಸಾವು ಕೂಡ ಉಂಟಾಗಬಲ್ಲದು. ಹಾಗೆಯೇ ವೈದ್ಯರ ಸಲಹೆಯಿಲ್ಲದೆ ಯಾವುದೇ ಇತರೆ ಮಾತ್ರೆ ಅಥವಾ ಔಷಧವನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಹಾನಿ ಮಾಡಬಲ್ಲದು.
ಇದುವರೆಗೆ ಕೊರೊನಾವನ್ನು ವಾಸಿ ಮಾಡಬಲ್ಲ ಅಥವಾ ತಡೆಯಬಲ್ಲ ಯಾವುದೇ ಔಷಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರವಾನಗಿ ಸಿಕ್ಕಿಲ್ಲ. ಈ ಕಾರಣ ಕೊರೊನಾ ವಾಸಿ ಮಾಡುತ್ತದೆಂದು ಹೇಳಿಕೊಳ್ಳುವ ಯಾವುದೇ ಔಷಧಗಳನ್ನು ಬಳಸುವುದರಿಂದ ಉಪಯೋಗವಾಗುವುದಿಲ್ಲ. ಬದಲಿಗೆ ಹಣದ ಖರ್ಚಿನ ಜೊತೆಗೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತಗಳೇ ಹೆಚ್ಚು.
ಕೊರೊನಾ ಸೋಂಕು ಬರುವುದು ವೈರಸ್ಸಿನಿಂದ. ಹೀಗಾಗಿ ಆಂಟಿ ಬ್ಯಾಕ್ಟೀರಿಯಗಳು ಇದರ ವಿರುದ್ಧವಾಗಿ ಕೆಲಸಮಾಡುವುದುದಿಲ್ಲ. ಆದ್ದರಿಂದ ಸುಮ್ಮ ಸುಮ್ಮನೆ ಆಂಟಿ ಬಯಾಟಿಕ್ಸ್ ತೆಗೆದುಕೊಂಡರೆ ದೇಹಕ್ಕೆ ಹಾನಿಯೇ ಹೊರತು ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ.
ಎಥನಾಲ್, ಮೆಥನಾಲ್ ಮತ್ತು ಬ್ಲೀಚ್ ಗಳು ವಿಷವಸ್ತುಗಳು. ಯಾವುದೇ ರೀತಿಯಲ್ಲೂ ಇವನ್ನು ದೇಹದೊಳಕ್ಕೆ ಸೇರಿಸಬಾರದು. ಇವು ಕೊರೊನಾ ವೈರಸ್ಸನ್ನು ಕೊಲ್ಲುವ ಬದಲು ನಮ್ಮನ್ನೇ ಕೊಲ್ಲಬಲ್ಲ ಅಪಾಯಕಾರಿ ರಾಸಾಯನಿಕಗಳು.
ಮಾಸ್ಕ್ ಅಥವಾ ಮುಖಗವಸುಗಳು
ಅದರಂತೆಯೇ ಮತ್ತೊಂದು ಅತ್ಯಂತ ಕ್ಷುಲ್ಲಕವಾದ ಮತ್ತೊಂದು ಮಿಥ್ಯವೂ ಹರಿದಾಡುತ್ತಿದೆ. ಅದೆಂದರೆ, ಮಾಸ್ಕ್ ಗಳನ್ನು ಧರಿಸುವುದರಿಂದ ಉಸಿರಾಡಲು ತೊಂದರೆಯಾಗುತ್ತದೆ ಎಂಬ ವಿಚಾರ. ಇದು ನಿಜವಲ್ಲ. “ ನಮ್ಮ ವೈದ್ಯರೇ ಹೇಳಿದ್ದಾರೆ, ಮಾಸ್ಕ್ ಉಸಿರಾಟಕ್ಕೆ ತೊಂದರೆಕೊಡುತ್ತದೆಂದು “ ವಾದಮಾಡಿದವರೂ ಇದ್ದಾರೆ.
ನೆನಪಿಡಿ ತಮ್ಮ ಜೀವಿತವಿಡೀ ಮಾಸ್ಕ್ ಧರಿಸಿ ಕೆಲಸಮಾಡುವ ಬೇಕಾದಷ್ಟು ಜನರಿದ್ದಾರೆ.ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. “ಜಾಸ್ತಿ ಕಾಲ ಮಾಸ್ಕ್ ಧರಿಸಿದರೆ ಅದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ, ಬೇಕಾದಷ್ಟು ಆಮ್ಲಜನಕ ಸಿಗುವುದಿಲ್ಲ “ ಇತ್ಯಾದಿ ನಂಬಿಕೆಗಳು ನಿಜವಲ್ಲ.
ಮಾಸ್ಕ್ ಹಾಕಿಕೊಳ್ಳುವುದರಿಂದ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. ಮುಖಗವಸು ಧರಿಸುವ ಅಭ್ಯಾಸವಿಲ್ಲದಿರುವ ಕಾರಣ ಹಾಗೆನಿಸಬಹುದು ಅಷ್ಟೆ. ಜೊತೆಗೆ ಮನೆಯಲ್ಲಿರುವಾಗ, ನಿದ್ರೆ ಮಾಡುವಾಗ, ವ್ಯಾಯಾಮ ಮಾಡುವಾಗ, ಒಬ್ಬರೇ ಇದ್ದಾಗ, ನಿಮ್ಮದೇ ಖಾಸಗಿ ವಾಹನದಲ್ಲಿ ಓಡಾಡುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ.
ಮಾಸ್ಕ್ ಬೆವರಿಗೋ ಮತ್ತೊಂದಕ್ಕೋ ಒದ್ದೆಯಾದ ನಂತರ ಅದನ್ನು ಬಿಸಾಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದುಕೊಳ್ಳಬಹುದು. ಒಮ್ಮೆ ಧರಿಸಿ ಬಿಸಾಡುವ ಮಾಸ್ಕ್ ಆದಲ್ಲಿ ಒಂದು ಬಳಕೆಯ ನಂತರ ಬಿಸಾಡಬೇಕು. ಒಗೆದು ಮತ್ತೆ ಧರಿಸುವ ಮಾಸ್ಕ್ ಆದಲ್ಲಿ ಆಗಾಗ ಒಗೆದು ಒಣಗಿಸಿ ಧರಿಸಬೇಕು.
ಪಾದರಕ್ಷೆಗಳಿಂದ ಕೊರೊನಾ ಎಂಬ ಮಿಥ್ಯೆ
ಕೆಲವರಿಗೆ ಪಾದರಕ್ಷೆಗಳಿಂದ ಕೊರೊನಾ ಹರಡುತ್ತದೆಂಬ ನಂಬಿಕೆಗಳಿವೆ, ಇಂತವು ಮನೆಗೆ ಬಂದ ಕೂಡಲೆ ಶೂ ಮತ್ತು ಚಪ್ಪಲಿಗಳನ್ನು ಆಂಟಿಸೆಪ್ಟಿಕ್ ಸ್ಪ್ರೇ ಮತ್ತು ದ್ರಾವಣಗಳಿಂದ ತೊಳೆಯುವ ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವುಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಇದು ಸಹಾಯಮಾಡಬಹುದೇ ಹೊರತು ಕೊರೊನ ವಿಚಾರದಲ್ಲಿ ಇದರಿಂದ ಪ್ರಯೋಜನವಾಗುವುದಿಲ್ಲ. ಬೆವರಿನಿಂದ ಕರೋನಾ ಹರಡುವುದಿಲ್ಲ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಭಾರತದಲ್ಲಿ ಬ್ರಿಟನ್ನಿನಂತೆ ಉಚಿತ ಆರೋಗ್ಯಭಾಗ್ಯ ಎಲ್ಲರಿಗೂ ಇಲ್ಲ. ಇರುವ ಕಡೆಯಲ್ಲಿ ಸರ್ಕಾರಿ ಆಸ್ಪತ್ರೆಗಳೆಂದರೂ ಜನರಿಗೆ ಪೂರ್ಣ ನಂಬಿಕೆಯಿಲ್ಲ. ಖಾಸಗಿ ಆಸ್ಪತ್ರೆಗಳು ಅತ್ಯಂತ ದುಬಾರಿ.
ಇತ್ತೀಚೆಗೆ ಒಂದು ಕುಟುಂಬದ ಚಿಕ್ಕ ವಯಸ್ಸಿನ ಮಗಳೊಬ್ಬಳಿಗೆ ಕೊರೊನಾ ಎಂದಕೂಡಲೇ ಆಕೆಯನ್ನು ಖಾಸಗೀ ಆಸ್ಪತ್ರೆಗೆ ಸೇರಿಸಿದರು. ಕೆಲವು ದಿನ ಆಸ್ಪತ್ರೆಯಲ್ಲಿದ್ದು ಮರಳಿದ ನಂತರ ಎರಡನೇ ಮಗಳನ್ನೂ ಆಸ್ಪತ್ರೆಗೆ ಸೇರಿಸಿದರು. ಕೊರೊನಾ ಪಾಸಿಟಿವ್ ಎಂಬುದನ್ನು ಬಿಟ್ಟರೆ ಇಬ್ಬರಲ್ಲೂ ಇನ್ನಾವುದೇ ರೋಗ ಲಕ್ಷಣಗಳಿರಲಿಲ್ಲ. ಲಕ್ಷಾಂತರ ರೂಪಾಯಿ ಕೈ ಬಿಟ್ಟಿತು. ದಿನವೊಂದಕ್ಕೆ ಮಲಗಲು ಮಂಚ-ಹಾಸಿಗೆಯನ್ನು ನೀಡಲು ಪಂಚ ತಾರಾ ಹೋಟೆಲಿಗಿಂತಲೂ ಹೆಚ್ಚು ಶುಲ್ಕ ವಿಧಿಸಿದ ಆಸ್ಪತ್ರೆ ವೈದ್ಯರು ಭೇಟಿಕೊಟ್ಟದ್ದಕ್ಕೆ, ದಾದಿ ಬಂದು ಬರೇ ಇಪ್ಪತ್ತು ರೂಪಾಯಿಗಳ ಮಾತ್ರೆ ಕೊಟ್ಟದ್ದಕ್ಕೆ ನೂರಾರು ಪಟ್ಟು ಫೀ ತೆಗೆದುಕೊಂಡಿತ್ತು.
ನಿಜಕ್ಕೂ ಪರೀಕ್ಷೆಯ ವರದಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲೆಯಾಗಬೇಕೆ?
ಹಲವರಲ್ಲಿ ಕೊರೊನಾ ಬಂದ ಕೂಡಲೇ ಸಾವಿನ ಭಯ ಆವರಿಸುತ್ತಿದೆ. ಆದರೆ ಇದು ನಿಜಕ್ಕೂ ಅನಗತ್ಯ.ಕೊರೊನಾ ಸೋಂಕು ತಗುಲಿದ ಬಹುತೇಕರು ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ.ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಅವರ ಮಾರ್ಗದರ್ಶನದಂತೆ ನಡೆಯುವುದು ಸೂಕ್ತ. ಹಿರಿಯರು, ಇತರೆ ಖಾಯಿಲೆಗಳಿಂದ ಈಗಾಗಲೇ ನರಳುತ್ತಿರುವರು ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಡ ಮಾಡದೆ ಬೇಗನೆ ವೈದ್ಯಕೀಯ ಸಲಹೆಯನ್ನು ಕೇಳಬಹುದು. ಮಲೇರಿಯ ಡೆಂಗ್ಯೂ ಜ್ವರವಿರುವ ಜಾಗಗಳಲ್ಲಿ ಬದುಕುತ್ತಿರುವವರು ವಿಶೇಷ ಎಚ್ಚರಿಕೆಯಿಂದ ತುರ್ತಾಗಿ ವೈದ್ಯಕೀಯದ ನೆರವು ತೆಗೆದುಕೊಳ್ಳುವುದು ಅಗತ್ಯ.
ಸರ್ಕಾರವೇ ತಮ್ಮ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದಲ್ಲಿ ಅದು ಬೇರೆಯೇ ವಿಚಾರ. ಆದರೆ ಖಾಸಗಿಯಾಗಿ ಪರೀಕ್ಷೆ ಮಾಡಿಸಿಕೊಂಡು ಸಾವಿನ ಭಯದಿಂದ ಅನಗತ್ಯ ಕಾಳಜಿ ತೆಗೆದುಕೊಳ್ಳುವಷ್ಟು ಕೋವಿಡ್ ಮಾರಕವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತದೆ. ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಯಾರೂ ಅನಗತ್ಯ ಆತಂಕಗಳಿಗೆ ಬ ಲಿಯಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಕೋವಿಡ್ ಸೋಂಕು ಬರುವ ಬಹತೇಕರು ತೊಂದರೆಯೇ ಇಲ್ಲದೆ ಪೂರ್ಣ ಗುಣ ಮುಖರಾಗುತ್ತಾರೆ.
ಆಲ್ಕೋಹಾಲ್ ಕುಡಿಯುವುದರಿಂದ ಗುಣಮುಖರಾಗುವುದಿಲ್ಲ
ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಡಿಸ್ ಇನ್ಫೆಕ್ಟಂಟ್ ಗಳನ್ನು ಚುಚ್ಚಿಕೊಳ್ಳುವುದರಿಂದ ಕೊರೊನಾವನ್ನು ನಿಯಂತ್ರಿಸಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಬಗ್ಗೆ ಬಹುತೇಕ ಎಚ್ಚರಿಕೆಗಳು ಕೇಳಿಬಂದವು. ಅದರಂತೆಯೇ ಮದ್ಯವನ್ನು ಸೇವಿಸುವುದರಿಂದ ಕೊರೊನಾವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಬದಲು ಅದು ದೇಹದ ರೋಗನಿರೋಧಕ ಶಕ್ತಿಯನ್ನು ಕುಂಟಿತಗೊಳಿಸಬಹುದು.
ಅದೇ ರೀತಿ ಸಲೈನ್ ದ್ರಾವಣವನ್ನು ಬಳಸಿ ಮೂಗನ್ನು ಸ್ವಚ್ಚಗೊಳಿಸುವುದು, ಅರಿಶಿನ ನೀರನ್ನು ಬಳಸುವುದು, ಉಪ್ಪು ನೀರನ್ನು ಬಳಸಿ ಗಂಟಲು ಮುಕ್ಕಳಿಸುವುದು ಇತ್ಯಾದಿಗಳು ಬೇರೆ ಹಲವು ಸಂದರ್ಭಗಳಲ್ಲಿ ಸಹಾಯಕವಾಗಬಲ್ಲದಾದರೂ ಇವುಗಳಿಂದ ಕೊರೊನಾವನ್ನು ತಡೆಯಲು ಅಥವಾ ಕೊರೊನಾದಿಂದ ಮುಕ್ತರಾಗುವುದು ಸಾಧ್ಯವಿಲ್ಲ.
ಥರ್ಮಲ್ ಸ್ಕಾನರ್ ಗಳು ಕೊರೊನಾವನ್ನು ಕಂಡುಹಿಡಿಯುವುದಿಲ್ಲ
ಇದೀಗ ಎಲ್ಲಿಗೆ ಹೋದರೂ ಉಷ್ಣ ಮಾಪಕವನ್ನು ನಮ್ಮ ಹಣೆಯ ಕಡೆಗೆ ಗುರಿ ಹಿಡಿದು ನಮ್ಮ ದೇಹದ ತಾಪಮಾನವನ್ನು ಅಳೆಯುವುದಕ್ಕೆ ಒಗ್ಗಿಕೊಳ್ಳುತ್ತಿದ್ದೇವೆ. ಪ್ರತಿದಿನ ಕೆಲಸಕ್ಕೆ ಹೋದಾಗ ಬಾಗಿಲ ಬಳಿಯೇ ದೇಹದ ತಾಪಮಾನವನ್ನು ಅಳೆದ ನಂತರ ಕೆಲಸಮಾಡಲು ಅನುಮತಿ ಸಿಗುತ್ತದೆ.
ಅದರಂತೆ ರೈಲು, ಏರೋಪ್ಲೇನು, ಕೆಲವು ಅಂಗಡಿಗಳು ಕೂಡ ಒಳಬರುವ ಎಲ್ಲರನ್ನೂ ಪರೀಕ್ಷಿಸುತ್ತಿದ್ದಾರೆ. ಆದರೆ ಈ ಥರ್ಮಲ್ ಸ್ಕಾನರ್ ಗಳು ಕರೋನಾ ಮಾಪಕಗಳಲ್ಲ. ಇದರಿಂದ ಕೊರೊನ ಬಂದಿದೆಯೇ ಇಲ್ಲವೇ ಎಂದು ತಿಳಿಯುವುದಿಲ್ಲ. ದೇಹದ ಉಷ್ಣಾಂಶ ಏರಿದೆಯೇ ಎನ್ನುವ ಒಂದು ಲಕ್ಷಣವನ್ನು ಬಿಟ್ಟರೆ ಮಿಕ್ಕಿದ್ದೇನೂ ಇದರಿಂದ ತಿಳಿಯುವುದಿಲ್ಲ. ಆದರೆ ಜ್ವರ ಎನ್ನುವುದು ಕೊರೊನಾದ ಒಂದು ಲಕ್ಷಣ ಮಾತ್ರ, ಅದಿಲ್ಲದೆಯೂ ಕೋವಿಡ್ ಸೋಂಕು ಬಂದಿರಬಹುದು. ಅಕಸ್ಮಾತ್ ಜ್ವರ ಇದ್ದರೂ ಅದು ಕೋವಿಡ್ ಅಲ್ಲದೆಯೂ ಇರಬಹುದು.ಆದ್ದರಿಂದ ಈ ಸ್ಕಾನರ್ ಗಳು ಎಚ್ಚರಿಕೆಯನ್ನು ನೀಡಬಲ್ಲವೇ ಹೊರತು ಇವು ಕೊರೊನಾವನ್ನು ಪತ್ತೆ ಹಚ್ಚುವ ಯಂತ್ರಗಳಲ್ಲ.
ಮೆಣಸಿನ ಕಷಾಯದಿಂದ ಕೊರೊನಾ ದೂರವಾಗುವುದಿಲ್ಲ
ನೆಗಡಿ ಕೆಮ್ಮಾದಾಗ ಮೆಣಸಿನ ಕಷಾಯವನ್ನು ಕುಡಿಯುವ ’ಮನೆಯ ಮದ್ದಿನ ’ ಪದ್ಧತಿ ನಮ್ಮಲ್ಲಿದೆ. ಆದರೆ ಕೊರೊನಾ ಸಂಬಂಧವಾಗಿ ಇದು ಕೆಲಸಮಾಡುವುದಿಲ್ಲ. ಕೆಲವರು ತಮ್ಮ ಸೂಪಿಗೆ ಕರಿ ಮೆಣಸಿನ ಪುಡಿಯನ್ನು ಚೆನ್ನಾಗಿ ಸುರವಿಕೊಂಡು ಕೊರೊನಾ ಉಚ್ಚಾಟನೆಯ ಪ್ರಯೋಗಗಳನ್ನೂ ನಡೆಸಿದ್ದಾರೆ. ಆದರೆ ಇದು ಕೊರೊನಾ ವಿಚಾರದಲ್ಲಿ ಉಪಯೋಗಕ್ಕೆ ಬರುವುದಿಲ್ಲ.
ಅದರಂತೆಯೇ ಬೆಳ್ಳುಳ್ಳಿ ತಿನ್ನುವುದು ಕೂಡ. ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಕೆಲಸ ಮಾಡುವ ಕೆಲವು ಆರೋಗ್ಯಕರ ಗುಣಗಳಿವೆ. ಆದರೆ, ಇದು ಕೊರೊನ ಅಥವಾ ಇನ್ನಾವುದೇ ವೈರಸ್ಸಿನ ವಿರುದ್ಧ ಸೆಣೆಸಲಾರದು.
ಅದರ ಬದಲಿಗೆ ಇತರರಿಂದ ಒಂದು ಮೀಟರಿನ ದೂರದ ಅಳತೆಯ ಅಂತರವನ್ನು ಕಾಪಾಡಿಕೊಂಡರೆ ಅದು ಕೊರೊನಾ ಬರದಂತೆ ತಡೆಯುವುದರಲ್ಲಿ ಹೆಚ್ಚಿನ ಉಪಯೋಗಕ್ಕೆ ಬರಬಲ್ಲದು.ನಿಯಮಿತ ವ್ಯಾಯಾಮ, ಸಮತೋಲಿತ ಪೌಷ್ಟಿಕ ಆಹಾರ, ಸಾಕಷ್ಟು ನೀರಿನ ಸೇವನೆ ಇತ್ಯಾದಿ ಸರಳ ನಿಯಮಗಳ ಪಾಲನೆ ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ.
ಸೊಳ್ಳೆ ಕಡಿತ ಮತ್ತು ನೊಣಗಳಿಂದ ಕೋವಿಡ್ ಹರಡಬಲ್ಲದೇ?
ಇಡೀ ಪ್ರಪಂಚದಲ್ಲಿ ಇದುವರೆಗೆ ಸೊಳ್ಳೆ ಕಡಿತ ಮತ್ತು ನೊಣಗಳಿಂದ ಕೊರೊನಾ ವೈರಸ್ಸು ಹರಡಬಲ್ಲದೇ ಎಂಬುದಕ್ಕೆ ಯಾವ ಪುರಾವೆಯೂ ದೊರೆತಿಲ್ಲ. ಕೊರೊನಾ ಹರಡುವುದು ಬಾಯಿ ಮತ್ತು ಮೂಗಿನ ದ್ರವಗಳಿಂದ, ಅಥವಾ ಅವುಗಳು ಯಾವುದಾದರೂ ವಸ್ತುಗಳ ಮೇಲೆ ಬಿದ್ದಿದ್ದಲ್ಲಿ ಅವನ್ನು ಮುಟ್ಟಿ ನಮ್ಮ ಶರೀರಕ್ಕೆ ವರ್ಗಾಯಿಸುವುದರಿಂದ. ಆದರೆ ಸೊಳ್ಳೆ ಮತ್ತು ನೊಣಗಳಿಂದ ಹಲವು ಇತರೆ ಖಾಯಿಲೆಗಳು ಹರಡಬಲ್ಲವು.ಸಾಧ್ಯವಾದಷ್ಟು ಇವುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ನಿಜ. ಆದರೆ ಸೊಳ್ಳೆ ಕಚ್ಚಿದ್ದರಿಂದ ಕೊರೊನಾ ಬಂದಿರಬಹುದೇ ಎಂಬ ಆತಂಕ ಅನಾವಶ್ಯಕ.
5G ನೆಟ್ ವರ್ಕ್ ನಿಂದ ಕೋವಿಡ್ ಹರಡಬಲ್ಲದೇ?
ಇದಂತೂ ಕಥೆಗಳನ್ನು ಹುಟ್ಟು ಹಾಕಿ ಬಿಟ್ಟು ಮಜಾ ತೆಗೆದುಕೊಳ್ಳುವ ಯಾರೋ ಕಿತಾಪತಿ ಜನರು ಹುಟ್ಟುಹಾಕಿದ ಕಪೋಲ ಕಲ್ಪಿತ ಮಿಥ್ಯೆಯಿದು.
ಇನ್ನೂ ನೇರವಾಗಿ ಹೇಳಬೇಕೆಂದರೆ ಕೋವಿಡ್ ಹರಡಿರುವ 210 ದೇಶಗಳಲ್ಲಿ ಎಷ್ಟೋ ದೇಶಗಳಲ್ಲಿ 5G ನೆಟ್ ವರ್ಕ ಇಲ್ಲ ಎನ್ನುವುದನ್ನು ಮರೆಯಬೇಡಿ.
ಸೂರ್ಯನ ಬಿಸಿಲು ಮತ್ತು ಹಿಮ ಎರಡೂ ವೈರಸ್ಸನ್ನು ಕೊಲ್ಲಲಾರವು.
ಮೊದ ಮೊದಲು ಕೊರೊನಾ ಹರಡಿದ್ದು ಚಳಿಯ ದೇಶಗಳಲ್ಲಿ. ನಮ್ಮ ದೇಶದಲ್ಲಿ ಇದು ಕಡಿಮೆಯಿದ್ದಾಗ ಉಷ್ಣಾಂಶ 25 ಡಿಗ್ರಿಗಿಂತ ಜಾಸ್ತಿಯಿರುವ ಕಡೆ ಕೊರೊನಾ ಬರುವುದಿಲ್ಲ ಎಂಬ ಸುಳ್ಳು ವದಂತಿಗಳು ಹರಡಿದವು. ಆದರೆ ಇದು ನಿಜವಲ್ಲ. ಯಾವುದೇ ತಾಪಮಾನದಲ್ಲೂ ಕೊರೊನಾ ಹರಡಬಲ್ಲದು. ಇದೀಗ ಈ ವಿಶ್ವವ್ಯಾಪೀ ಪಿಡುಗು ಪ್ರಪಂಚದ ಬಹುತೇಕ ದೇಶಗಳಿಗೆ ಹರಡಿರುವುದೇ ಇದಕ್ಕೆ ಸಾಕ್ಷಿ.ಆದ್ದರಿಂದ ಬಿಸಿಲಿನಲ್ಲಿ ನಮ್ಮನ್ನು ನಾವು ಬಾಡಿಸಿಕೊಳ್ಳುವ ಅಗತ್ಯವಿಲ್ಲ.
ಇನ್ನು ಮುಂಬರುವ ಚಳಿಗಾಲದಲ್ಲಿ ಉಸಿರಾಟದ ತೊಂದರೆ ಮಾಡುವ ಎಲ್ಲ ವೈರಸ್ಸುಗಳ ಉಪಟಳ ಹೆಚ್ಚಾಗುವ ಆತಂಕಗಳೂ ಇವೆ. ಆದರೆ ಹಿಮಸುರಿತ ಕೊರೊನಾವನ್ನು ಕೊಲ್ಲುವುದಿಲ್ಲ.
ಅದರಂತೆಯೇ ಉಸಿರನ್ನು 10 ಸೆಕೆಂಡುಗಳ ಕಾಲ ಹಿಡಿಯಬಲ್ಲಿರಾದರೆ ನಿಮಗೆ ಕೋವಿಡ್ ಇಲ್ಲ ಎನ್ನುವ ಕಲ್ಪನೆ ಕೂಡ ಶುದ್ಧ ಸುಳ್ಳು. ಕೋವಿಡ್ ಇರುವವರು ವ್ಯಾಯಾಮ ಮಾಡುವುದು ಕೂಡ ಒಳಿತಲ್ಲ.ಸ್ಟೀಮ್ ಯಂತ್ರದ ಮೂಲಕ ದಿನವೂ ನಮ್ಮ ಮೂಗು ಗಂಟಲನ್ನು ಶುದ್ಧಗೊಳಿಸಿಕೊಂಡರೆ ತೊಂದರೆಯಿಲ್ಲವಾದರೂ ಅದು ಕೊರೋನಾ ಬಾರದೆ ಇರಲು ಮದ್ದಲ್ಲ .ಇದೇ ರೀತಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳಿತಾದರೂ ಅದು ಕೋವಿಡ್ ವೈರಸ್ಸನ್ನು ಕೊಲ್ಲಲಾರದು.
ಅಂತೆಯೇ ಸೋಪಿನಿಂದ ಕೈ ತೊಳೆದ ನಂತರ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ನಂತರ ಹ್ಯಾಂಡ್ ಡ್ರೈ ಯರ್ ನಿಂದ ಕೈಗಳನ್ನು ಹೆಚ್ಚು ಕಾಲ ಒಣಗಿಸಿಕೊಳ್ಳುವ ಅಗತ್ಯ ಇಲ್ಲ. 20 ಸೆಕೆಂಡಿಗೂ ಹೆಚ್ಚು ಕಾಲ ಸೋಪಿನಲ್ಲಿ ಕೈ ತೊಳೆದು ನಂತರ ಅಗತ್ಯಕ್ಕೆ ತಕ್ಕಂತೆ ಕೈ ಒಣಗಿಸಿಕೊಂಡರೆ ಸಾಕು.
ಇದು ವೃದ್ಧರಿಗೆ ಮಾತ್ರ ಬರುವ ಖಾಯಿಲೆಯೇ?
ಕೊರೊನಾ ಸೋಂಕು ಯಾರಿಗೆ ಬೇಕಾದರೂ ಬರಬಹುದು. ಪ್ರಾಣಿಗಳಿಗೂ ಸೋಂಕು ಹರಡಬಹುದು. ಆದರೆ ಸಾವಿನ ಸಂಖ್ಯೆ ಇತರೆ ವಯಸ್ಸಾದವರಲ್ಲಿ, ಇತರೆ ಕಾಯಿಲೆ ಇರುವವರಲ್ಲಿ ಮತ್ತು ಧಡೂತಿ ದೇಹದವರಲ್ಲಿ ಹೆಚ್ಚು ಕಂಡುಬಂದಿದೆ.
ಹೊರಗಡೆಯಿಂದ ತರುವ ಕಾಯಿ-ಪಲ್ಲೆಗಳನ್ನು ಸೋಪು ಹಾಕಿ ತೊಳೆಯಬೇಕೆ?
ಕೊರೊನಾ ವೈರಸ್ಸು ಗಾಳಿಯಲ್ಲಿ ಮೂರುಗಂಟೆಯವರೆಗೆ, ಲೋಹದ ಮೇಲೆ 5 ಗಂಟೆಯವರೆಗೆ ಕಾರ್ಡ್ ಬೋರ್ಡ್ ಗಳ ಮೇಲೆ 24 ಗಂಟೆ, ಪ್ಲಾಸ್ಟಿಕ್ ನ ಮೇಲೆ 72 ಗಂಟೆ ಬದುಕುಳಿಯಬಹುದೆಂಬ ಹೇಳಿಕೆಗಳು ಹೊರಬಂದವು.ಬ್ಯಾಂಕು ನೋಟುಗಳು, ಪಿನ್ ಪ್ಯಾಡ್ ಗಳನ್ನು ಉಪಯೋಗಿಸುವ ಬಗ್ಗೆ ಎಚ್ಚರಿಕೆಗಳೂ ಕೇಳಿಬಂದವು.ಅದರ ಜೊತೆಯಲ್ಲೇ ಆಹಾರದ ಬಗ್ಗೆಯೂ ಆತಂಕ ಶುರುವಾಯಿತು.
ನಮ್ಮ ಚರ್ಮ ಅತ್ಯಂತ ಸಣ್ಣ ರಂಧ್ರಗಳನ್ನು ಒಳಗೊಂಡಿದೆ. ಆದರೆ ತರಕಾರಿಗಳ ಮೇಲ್ಮೈ ಅದಕ್ಕಿಂತ ಹೆಚ್ಚು ಸಣ್ಣ ತೂತಗಳಿಂದ ಕೂಡಿದೆ. ಸೋಪಿನಂತ ವಸ್ತು ಚರ್ಮಕ್ಕಿಂತ ಆಳವಾಗಿ ತರಕಾರಿಗಳನ್ನು ಹೊಗಬಲ್ಲದು.ತರಕಾರಿಗಳ ಮೂಲಕ ಇಂತಹ ಸೋಪನ್ನು ಹೆಚ್ಚು ತಿಂದರೆ ನಮ್ಮ ಆರೋಗ್ಯಕ್ಕೆ ಹಾನಿಯಾಗಬಲ್ಲದು. ಉದಾ. ವಾಂತಿ, ಭೇದಿ, ಹೊಟ್ಟೆ ನೋವು ಇತ್ಯಾದಿ.
ಮತ್ತೆ ಕೆಲವರು ಕಾಯಿ ಪಲ್ಲೆಗಳನ್ನು ವಿನೆಗರ್, ಉಪ್ಪು, ಬೇಕಿಂಗ್ ಸೋಡ, ಪೊಟಾಸ್ಸಿಯಂ ಪರಮಾಂಗನೇಟ್ ಇತ್ಯಾದಿಗಳಿಂದ ಸ್ವಚ್ಚಗೊಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಇವ್ಯಾವ ವಸ್ತುಗಳನ್ನೂ ತರಕಾರಿಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸಿ ಎಂಬ ಸಲಹೆಗಳಿಲ್ಲ.
ಪ್ಯಾಕೆಟ್ ಗಳಲ್ಲಿ ಬರುವ ಪದಾರ್ಥಗಳನ್ನು ಈಗಾಗಲೇ ಅಂಗಡಿಯವರು ತೊಳೆದಿರುತ್ತಾರೆ. ಮೇಲಿನ ಪ್ಲಾಸ್ಟಿಕ್ ನ್ನು ಕಿತ್ತಸೆದು ಒಳಗಿನದನ್ನು ನೀರಿನಿಂದ ತೊಳೆದರೆ ಸಾಕು. ಇನ್ನು ರಾಶಿಯಿಂದ ಆಯ್ದ ತರಕಾರಿಗಳನ್ನು ಕೊರೊನಾ ಇರಲಿ, ಬಿಡಲಿ, ನೀರಿನಿಂದ ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಆದರೆ ಸೋಪು ಹಾಕಿ ಉಜ್ಜುವ ಅಗತ್ಯವಿಲ್ಲ.ಬೇಯಿಸಿದ ಆಹಾರದಲ್ಲಿ ಬ್ಯಾಕ್ಟೀರಿಯಾ ಮತ್ತು ಸಾರ್ಸ್ ನಂತಹ ವೈರಸ್ಸುಗಳು ಬದುಕುಳಿಯುವುದಿಲ್ಲ. 60 ಡಿಗ್ರಿ ತಾಪಮಾನದಲ್ಲಿ 30 ನಿಮಿಷ ಬೆಂದ ಅಡುಗೆಯಲ್ಲಿ ಕೊರೊನಾ ಇರುವುದಿಲ್ಲ.ಹೆಚ್ಚಿನ ತಾಪಮಾನದಲ್ಲಿ ಕಡಿಮೆ ಕಾಲ ಬೆಂದ ಆಹಾರ ಪದಾರ್ಥಗಳಲ್ಲಿಯೂ ಅವು ಇರುವುದಿಲ್ಲ.
ಅದೃಷ್ಟವೆಂದರೆ The US Food and Drug Administration ಪ್ರಕಾರ ಇದುವರೆಗೆ ಆಹಾರ ಮತ್ತು ಆಹಾರದ ಪ್ಯಾಕೇಜಿಂಗ್ ಮೂಲಕ ಕೊರೋನಾ ಹರಡಿದ ವರದಿಯಾಗಿಲ್ಲ. ಆದರೆ ಉಪಯೋಗಿಸುವ ಮುನ್ನ ತರಕಾರಿ-ಕಾಯಿ -ಪಲ್ಲೆಗಳನ್ನು ಅಗತ್ಯವಾಗಿ ನೀರಿನಿಂದ ಸ್ವಚ್ಛಗೊಳಿಸಿರಿ. ತರಕಾರಿಗಳ ಬಳಕೆಯ ನಂತರ ನಿಮ್ಮ ಕೈ ಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ ಎಸ್ ಎಲ್ ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ ಪ್ರತಿ ಪಿರಿಯೆಡ್‌ನಲ್ಲೂ ನಮ್ಮ ತಲೆಯೊಳಗ ತುಂಬುತ್ತಿದ್ದರು. ಅಂತಾ ಸಮಯದೊಳಗ ಅದೂ ನನ್ನದು ಅರ್ಧ ಎಸ್ ಎಸ್ ಎಲ್ ಸಿ ಮುಗಿದು ಅಕ್ಟೋಬರ್ ಸೂಟಿ ಬಿಟ್ಟಾಗ ಅಪ್ಪನಿಗೆ ಸರ್ಕಾರದಿಂದ ವರ್ಗಾವಣೆ ಭಾಗ್ಯ ದೊರೆತಿತ್ತು. ಅವ್ವ ಮನೆಯಲ್ಲಿ ಇದ್ದ ಬಿದ್ದ ಸಾಮಾನುಗಳನ್ನು ಮೂಟೆ ಕಟ್ಟ ತೊಡಗಿದಳು ಆ ಕೆಲಸಕ್ಕೆ ನನ್ನನ್ನು ಮತ್ತು ಅಣ್ಣನನ್ನು ನೆರವಿಗೆ ಕರೆದಿದ್ದಳು. ಹೊಸ ವಾತಾವರಣದಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿದ್ದ ನಾನು ತೋರ್ಪಡಿಸದೆ ಅವ್ವನ ಮಾತಿಗೆ ಹೂಂಗುಟ್ಟಿ ಅವಳ ಕೆಲಸಕ್ಕೆ ಕೈ ಜೋಡಿಸಿದ್ದೆ.
ಗೆಳತಿಯರೆಲ್ಲ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿ ಒಲ್ಲದ ಮನಸ್ಸಿನಿಂದ ಬೀಳ್ಕೊಡುತ್ತ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿ ಬಿಕ್ಕುವಂತೆ ಮಾಡಿದ್ದರು. ನನಗೆ ಹಳೆ ಗೆಳತಿಯರಿಂದ ಬೀಳ್ಕೊಂಢು ಹೊಸ ಗೆಳತಿಯರನ್ನು ಮಾಡಿಕೊಳ್ಳುವದು ರೂಢಿಯಾಗಿಬಿಟ್ಟಿತ್ತು. ಆದರೆ ಈ ಸಾರಿ ಕಪ್ಪು ಬಿಳುಪಿನ ಕಣ್ಣುಗಳು ಜಗದ ಏಳು ಬೀಳುಗಳ ಬಗ್ಗೆ ಹೆದರಿದ್ದವು. ಊರು, ಜನ, ಸ್ಕೂಲು ಒಟ್ಟಿನಲ್ಲಿ ಎಲ್ಲವೂ ಹೊಸದು. ಹೊಸತು ಎಂಬ ಚಕ್ರದೊಳಗೆ ನನ್ನ ಮನಸ್ಸು ತಿರುಗುತ್ತಿತ್ತು. ಏನು ಬೇಕು ಬೇಡ ಎನ್ನುವದನ್ನು ಅರಿಯದಷ್ಟು ಬುದ್ಧಿ ಮಂಕಾಗಿತ್ತು. ಹೀಗೇಕೆ ಎದೆ ಭುಗಿಲೆದ್ದಿದೆ ಎಂದು ತಿಳಿಯದಾಗಿತ್ತು. ಇದು ನಾನು ಅಲ್ಲವೇ ಅಲ್ಲ ಅನ್ನುವಷ್ಟರ ಮಟ್ಟಿಗೆ ನನ್ನ ಹೆಜ್ಜೆಗಳು ಸೋತು ಹೋಗಿದ್ದವು. ಅಲ್ಲ ಬದುಕಿನ ಹಾದಿಗೆ ಮಗ್ಗಲುಗಳು ಇರದೆ ಹೋದರೆ ಹೇಗೆ? ಎಂದು ಅಂತರಂಗದ ದನಿಯೊಂದು ನನ್ನ ತೊಳಲಾಟಕ್ಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿತ್ತು.
ಹೊಸತನದ ಜಂಜಾಟದಲ್ಲಿ ಬಿದ್ದು ತಲೆ ಬಿಸಿ ಮಾಡಿಕೊಳ್ಳುತ್ತಲೇ ಇತ್ತು.ಹೊಸ ಶಾಲೆ ಗೆಳತಿಯರ ಬಗ್ಗೆ ಚಿಂತಿಸದೆ ಹಾಯಾಗಿರಬೇಕೆಂದರೂ ಒಂದು ನಿಮಿಷವೂ ತೆಪ್ಪಗಿರದೆ, ಸುಮ್ಮನೆ ಏನಾದರೂ ವಟಗುಡತ್ತಲೇ ಇರುತ್ತಿತ್ತು. ಹಿಂದಿನ ಶಾಲೆಯ ಗೆಳತಿಯರನ್ನು ಅರೆಗಳಿಗೆ ನೆನೆದರೆ ಆಹಾ! ಎಷ್ಟು ಖುಷಿಯಾಗುತ್ತಿತ್ತು ಏನೋ ರೋಮಾಂಚನ, ತಲೆ ಹಗುರವಾಗಿ ಗಾಳಿಯಲ್ಲಿ ತೇಲಾಡಿದಂತಹ ಅನುಭವವಾಗುತ್ತಿತ್ತು. ಬದಲಾವಣೆಯನ್ನು ಎದುರಿಸುವ ಛಾತಿ ಬೆಳಸಿಕೊಳ್ಳದಿದ್ದರೆ ಸಾವು ನಿಶ್ಚಿತ ಎಂಬ ಸಂಗತಿ ಅರೆ ಪ್ರಜ್ಞಾವಸ್ಥಯಲ್ಲಿದ್ದ ನನ್ನನ್ನು ಬಡೆದಿಬ್ಬಿಸಿತ್ತು.
ಅಂತೂ ಇಂತೂ ಅಕ್ಟೋಬರ್ ಸೂಟಿ ಕಳೆದು ಹೊಸ ಶಾಲೆಗೆ ಹೋಗುವ ದಿನ ಬಂದೇ ಬಿಟ್ಟಿತು. ಅಂದೆಕೋ ಬೆಳಕು ಸೂಸುವ ಕಂಗಳು ಮಂಜಾದವು. ಮನದ ಕಣ ಕಣದಲ್ಲೂ ನೀರವ ಮೌನ. ಪ್ರಜ್ಞಾವಸ್ಥೆಯಲ್ಲಿದ್ದ ಬುದ್ಧಿ ನಿನ್ನ ನೀರವ ಮೌನ ಮಡಚಿ ಎತ್ತಿಟ್ಟು ಬಾ. ನಿನಗಲ್ಲಿ ಸಿಹಿ ಮಾತುಗಳ ಸವಿ ಹಂಚುವ ಗೆಳೆತನ ಸಿಕ್ಕೀತು. ನಿನ್ನ ಭಯಕ್ಕೆ ಮುಕ್ತಿ ದೊರಕೀತು ಎಂದು ಹೇಳಿತ್ತು. ಜೀವನದಲ್ಲಿ ಬೇರೆ ಊರು ಬೇರೆ ಬೇರೆ ಜನ, ಜನರ ಸ್ನೇಹ ಅನ್ನೋದು ಸಾಮಾನ್ಯ. ಅದರಿಂದ ಹೊರಗುಳಿಯಲು ಪ್ರಯತ್ನಿಸುವದು ಮೂರ್ಖತನ. ಹೊಸ ವಾತಾವರಣದಲ್ಲಿ ನನ್ನ ಮೇಲೆ ಯಾರಾದರೂ ಎಗರಿದರೆ, ಹಳೆಯ ಆಪ್ತ ವಲಯದಿಂದ ಹೊರ ಬರದೆ ನಾನೇ ಎಡವಿ ಬಿದ್ದರೆ? ಎನ್ನುವ ಭಯದಲ್ಲಿ ಬೇಯದೇ ಸ್ನೇಹದ ಕಡಲಲ್ಲಿ ಎದೆಗಾರಿಕೆಯಿಂದ ಈಜಬೇಕು. ಗೆಳೆತನದ ಮಾತಿನಲ್ಲಿ ಎಲ್ಲವನ್ನೂ ಹೂಂ ಎಂದು ಒಪ್ಪಿ ನಗಬೇಕು. ಹುಡುಗಾಟದಲ್ಲಿ ತುಂಟತನ ತೋರಬೇಕು. ಎಂದು ಒಳಮನಸ್ಸು ನನಗೆ ಬುದ್ಧಿ ಹೇಳುತ್ತಲೇ ಇತ್ತು.
ಈ ದೋಸ್ತಿ ಅನ್ನೋದು ಭಿನ್ನ ಭಿನ್ನ ರೀತಿಯಲ್ಲಿ ಸಿಕ್ಕುತ್ತೆ. ಕೆಲವರಿಗೆ ಈ ಗೆಳೆತನದಲ್ಲಿ ಬೇರಿಗಿಳಿಯುವಾಸೆ. ಇನ್ನೂ ಹಲವರಿಗೆ ಬೆವರಿಳಿಸುವಾಸೆ.ಬೇರಿಗಳಿದು ಹೃದಯದಲ್ಲಿ ಭಾವಾನುರಾಗದ ಹೂವುಗಳ ಪಲ್ಲವಿಸುವಂತೆ ಮಾಡುವಂಥ ಗೆಳೆಯರ ಜೊತೆ ಮನ ತೆರೆದು ನೆಗೆಯುವಾಸೆ.ಗೆಳೆತನದ ಹೆಸರಿನಲ್ಲಿ ತಮ್ಮ ಉಪಯೋಗಕ್ಕೆ ಉಪಯೋಗಿಸಿಕೊಂಡು ಅಯ್ಯೋ! ಇನ್ನು ಉಪಯೋಗಕ್ಕೆ ಬರಲ್ಲ ಎಂದು ಬಳಸಿ ಬೀಸಾಕುವಂಥ ಗೆಳೆಯರ ಕಾಟಕ್ಕೆ ನೋವಾದರೂ ಒಳಗೊಳಗೆ ಬಿಕ್ಕಿ ಎಲ್ಲವ ನುಂಗಿ ಕೂಡದಿರು. ಬದುಕು ಕಲಿಸಿದ ಬರಹವನು ಅವರಿಗೂ ಒಂದಿಷ್ಟು ಕಲಿಸು. ಓಲಂಪಿಕ್ಸ್‌ನ ಓಟದಲ್ಲಿ ಚಿನ್ನ ಗೆದ್ದ ಹಾಗೆ ಸಂಭ್ರಮಿಸುವುದೇ ನಿಜವಾದ ಗೆಳೆತನ. ಸ್ನೇಹವೇ ಉಸಿರು. ಗೆಳೆತನವೇ ಜೀವನ. ಗೆಳೆತನಕ್ಕೆ ಯವುದೇ ಸಂಬಂಧ ಬೇಕಿಲ್ಲ. ಅದಕ್ಕೆ ವಯಸ್ಸಿನ ಗಡಿಯಿಲ್ಲ.ಅದು ಜಾತಿ, ಲಿಂಗಭೇದ ನೋಡಲ್ಲ. ಅದು ಎಲ್ಲ ಎಲ್ಲೆಯನ್ನು ಮೀರಿದ್ದು. ಒಂದೇ ಒಂದು ಕಣ್ಣ ಹನಿ ಬಿದ್ದರೂ ಅದು ಸಹಿಸದು. ಸೊತರೂ, ಸೋತು ಗೆದ್ದರೂ ಜೀವನ ಪರ್ಯಂತ ಆಸರೆಯಾಗಿರುವದು ಸ್ನೇಹ ಮಾತ್ರ.
ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ಗಿರಗಿಟ್ಲೆ ಆಡುತ್ತಿರುವಾಗ ಅಕ್ಟೋಬರ್ ಸೂಟಿ ಕಳೆಯಲೆಂದು ಅಜ್ಜಿ ಮನೆ ಸೇರಿದ್ದ ಪಕ್ಕದ ಮನೆ ಹುಡುಗಿ ಸೂರ್ಯ ಬರೋ ಮುನ್ನವೇ ಊರಿಗೆ ಬಂದು ಶಾಲೆಗೆ ಬರೋ ತಯಾರಿ ಮಾಡಿಕೊಂಡು ಹೆಗಲಿಗೆ ಶಾಲೆಯ ಚೀಲ ಹಾಕಿ ನಮ್ಮ ಮನೆಗೆ ಬಂದು ತಾನೇ ತನ್ನ ಪರಿಚಯ ಮಾಡಿಕೊಂಡಳು. ಅವಳು ಎಸ್ ಎಸ್ ಎಲ್ ಸಿ ಯಲ್ಲಿಯೇ ಓದುತ್ತಿದ್ದಳು.ಸ್ನೇಹದ ಹಸ್ತವ ಚಾಚಿ ನನ್ನ ಮನೆವರೆಗೂ ಬಂದಿದ್ದಳು.
ಇದುವರೆಗೂ ಹೊಸ ಗೆಳೆತನದ ನಟ್ಟಿರುಳಿನ ಭಯದಲ್ಲಿದ್ದ ನನ್ನನ್ನು ಆಚೆ ತಂದಿದ್ದಳು. ಅವಳ ಸ್ನೇಹಕೆ ನನ್ನ ಮೌನದ ಆಣೆಕಟ್ಟು ಒಡೆಯಿತು. ಸ್ನೇಹದ ಸವಿ ಸುಧೆಯ ಹರಿಸಿತು. ಕಾಲೇಜಿನ ದಿನಗಳಲ್ಲಿ ಮತ್ತೆ ಈಗ ವೃತ್ತಿ ಜೀವನದಲ್ಲಿ ಅನೇಕ ಗೆಳತಿಯರ ಮತ್ತು ಜನರ ಸ್ನೇಹದಲ್ಲಿ ಮಿಂದಿದ್ದೇನೆ. ಆ ಶುದ್ಧ ಗೆಳೆತನದಲ್ಲಿ ಚಂದಿರನ ಮೆಟ್ಟಿ, ಮಂಗಳನ ಮುಟ್ಟಿ, ಅವರ ಭಾವದೆದಯ ತಟ್ಟಿ ಅವರೊಳಗಂದಾಗಿದ್ದೇನೆ. ಎಂಬ ಹೆಮ್ಮೆಯು ನನ್ನದಾಗಿದೆ.
ನಾವು ಪ್ರತಿನಿತ್ಯ ಉಪಯೋಗಿಸುವ ತೆಂಗಿನ ಚಿಪ್ಪನ್ನು ಸಾಮಾನ್ಯವಾಗಿ ಒಲೆಗೆ ಉರುವಲಾಗಿ ಬಳಸುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಕಲಾವಿದ ನಿರುಪಯುಕ್ತ ವಸ್ತುಗಳಾದ ಕರಟ ಮತ್ತು ಮರದ ಬೇರಿನಲ್ಲಿ ತಮ್ಮ ಕೈಚಳಕದ ಮೂಲಕ ಕಲಾಕೃತಿಗಳನ್ನು ರಚಿಸಿ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಶಿವಮೂರ್ತಿ ಭಟ್ಟರು. ಪ್ರಗತಿ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ. ಇವರಿಗೆ ಕಲಾಸಕ್ತಿ ಮೂಡಿದ್ದು ಇವರ ತಂದೆಯವರಿಂದ. ಅವರೂ ಕೂಡ ಕಲಾವಿದರು. ಅವರು ಮಾಡಿದ ಮರದ ಕಲಾಕೃತಿಗಳಿಗೆ ಮನಸೋತ ಇವರು ತಾವೂ ಕೂಡ ಇಂತಹ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಎಲ್ಲರೂ ಒಂದು ಕ್ಷಣ ಹುಬ್ಬೇರಿಸುವಂತೆ ಮಾಡಿದ್ದಾರೆ.
ಯಾವುದೇ ಒಂದು ಮರವನ್ನು ಕಿತ್ತಾಗ ಅಥವಾ ಅದು ಗಾಳಿ ಮಳೆಗೆ ಬಿದ್ದಾಗ ಅದರ ಬೇರು ಸಾಮಾನ್ಯವಾಗಿ ಯಾವುದಕ್ಕೂ ಬಳಕೆ ಯಾಗುವುದಿಲ್ಲ. ಆದರೆ ಅದರಲ್ಲಿಯೇ ಕಲೆ ಅರಳಿಸಬಹುದು ಎಂದು ಅರಿತ ಶಿವಮೂರ್ತಿ ಭಟ್ಟರು ಮರಗಳ ಬೇರು ಮತ್ತು ಕರಟದಲ್ಲಿ ಬಹಳ ತಾಳ್ಮೆಯಿಂದ ಪರಿಸರದ ವಿಭಿನ್ನ ವಿಷಯಗಳನ್ನು ತೆಗೆದುಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಕೂಡ ಈ ಕಲಾಕೃತಿಗಳ ಮೂಲ ಗುರುತಿಸುವುದು ಕಷ್ಟ. ಅಷ್ಟು ಸೊಗಸಾದ ರಚನೆ.
ಇವರಲ್ಲಿ ಹಕ್ಕಿಗಳ ಗೂಡು, ಮಾನವ, ಪಕ್ಷಿಗಳ, ಪ್ರಾಣಿಗಳ, ಹಾವು, ಆದಿಮಾನವ, ನಮ್ಮ ಹಳ್ಳಿಯ ಸಂಸ್ಕೃತಿ, ವೇಷಭೂಷಣಗಳು, ಕುದುರೆ, ಕಪ್ಪೆ, ದೇವರುಗಳನ್ನು ಹೋಲುವ ಮರದ ಬೇರಿನ ಕಲಾಕೃತಿಗಳ ಸಂಗ್ರಹವಿದೆ. ಇವರು ಬರೀ ಕೆತ್ತನೆ ಒಂದೇ ಅಲ್ಲದೆ ಅನ್ಯ ಮಾಧ್ಯಮದ ಮೂಲಕ ಕಲಾಕೃತಿಗಳನ್ನು ರಚಿಸಿದ್ದಾರೆ. ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ತೆಂಗಿನ ಚಿಪ್ಪು ಮತ್ತು ಮರದ ಬೇರುಗಳ ಕಲಾಕೃತಿಗಳು ಇವರ ಬಳಿಯಿದೆ. ಹವ್ಯಾಸ ಬೆಳೆಸಿಕೊಂಡ ಶಿವಮೂರ್ತಿ ಭಟ್ಟರವರು ಕಸದಿಂದ ರಸ ಎಂಬ ಕಲ್ಪನೆಯ ಮೂಲಕ ನಿರುಪಯೋಗಿ ವಸ್ತುಗಳಲ್ಲಿ ಕೂಡ ವಿಭಿನ್ನ ಆಕರ್ಷಕ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆಯಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಲ್ಲಿಯ ಆಸಕ್ತರಿಗೆ ಈ ಕಲೆಯನ್ನು ತರಬೇತಿ ಮೂಲಕ ಹೇಳಿಕೊಡುವ ಆಸಕ್ತಿ ಅವರಲ್ಲಿದೆ. ಆಸಕ್ತಿ, ಗುರಿ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಯಾವುದೂ ಕೂಡ ಆಗಲ್ಲ ಎಂದು ಕುಳಿತರೆ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಶಿವಮೂರ್ತಿ ಭಟ್ಟರವರ ಅಭಿಪ್ರಾಯ. ಇಂತಹ ಅದ್ಭುತ ಕಲಾ ಪ್ರಕಾರವನ್ನು ರಚಿಸುವ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಇವರ ಈ ಅದ್ಭುತ ಕಲಾ ಸೇವೆಗೆ ನಮ್ಮೆಲ್ಲರ ಹೃದಯಪೂರ್ವಕ ನಮನಗಳು. ಇನ್ನಷ್ಟು ವಿಭಿನ್ನ ಕಲಾ ಸೇವೆ ಇವರದ್ದಾಗಲಿ ಎಂಬ ಹಾರೈಕೆ ನಮ್ಮದು.
ವಿ. ಎಸ್ . ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.
ಇಂದಿನ ಕ್ಯಾಂಪಸ್ ಪ್ರೆಸ್ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ಪ್ರಮೀಳಾ ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಗುಡ್ಡ, ಕಾಡು -ಮೇಡುಗಳ ನಡುವೆ, ನಿಸರ್ಗದ ಮಡಿಲಲ್ಲಿರುವ ಜಾಗವೇ ಹಳ್ಳಿ. ಆಧುನೀಕತೆಯ ಗಾಳಿ ಸೋಂಕದೇ ಇರುವುದು ಹಳ್ಳಿಗರ ನೆಮ್ಮದಿಯನ್ನು ಉಳಿಸಿದೆಯಾದರೂ ಇದೇ ಮುಂದೆ ತಮ್ಮ ಅಭಿವೃದ್ಧಿಗೆ ಕುತ್ತಾಗಬಹುದು ಎಂಬ ಆತಂಕ ಇವರಲ್ಲಿದೆ. ಅದರಲ್ಲೂ ಕೋವಿಡ್‌ನಿಂದಾಗಿ ಶಿಕ್ಷಣವೂ ಆನ್‌ಲೈನ್ ಆಗಿರುವುದು ಇವರ ಚಿಂತೆ ಹೆಚ್ಚಿಸಿದೆ.
ಹಳ್ಳಿಗಳೇ ನಮ್ಮ ದೇಶದ ಆತ್ಮ ಎಂಬ ಮಾತಿದೆ. ಎಲ್ಲಾ ಸರ್ಕಾರಗಳೂ ಹಳ್ಳಿಗಳ, ಕೃಷಿಕರ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ಹೇಳಿದ್ದೂ ಆಯಿತು. ಆದರೆ ‘ಗ್ಲೋಬಲ್ ವಿಲೇಜ್ʼ ಪರಿಕಲ್ಪನೆ ಹಳತಾದರೂ ಹಳ್ಳಿಗರ ಪರಿಸ್ಥಿತಿ ಬದಲಾಗಿಲ್ಲ. ತಾವು ಹಸಿದರೂ ಊರಿಗೆಲ್ಲಾ ಊಟ ಬಡಿಸುವ ಮುಗ್ಧ ಮನಸ್ಸಿನ ಹಳ್ಳಿಗರಿಗೆ ಆಧುನಿಕ ಸೌಲಭ್ಯಗಳು ದೊರೆಯುತ್ತಿಲ್ಲ. ತಾವಂತೂ ಓದಲಾಗಲಿಲ್ಲ, ತಮ್ಮ ಮಕ್ಕಳಾದರೂ ಓದಲಿ ಎಂದು ಅವರನ್ನು ಪೇಟೆಯ ಖಾಸಗಿ ಶಾಲೆಗೆ ಸೇರಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಬದಲಾಗಿ ಆಧುನಿಕ ಮನಃಸ್ಥಿತಿ, ಹಳ್ಳಿಯ ಪರಿಸ್ಥಿತಿ ಒಟ್ಟಾಗಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ!
ಆಗಲೇ ಬಂತು ನೋಡಿ ಕೊವಿಡ್-19! ಶಿಕ್ಷಣವನ್ನೂ ಸೇರಿ ಎಲ್ಲವನ್ನೂ ಆನ್‌ಲೈನ್ ಮಾಡಿದ ಕೊವಿಡ್ ಹಳ್ಳಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೊದಲೇ ಸಾಲ-ಸೋಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದ ಜನರಿಗೆ ಈಗ ಮಕ್ಕಳಿಗೆ ಮೊಬೈಲ್ ಪೋನ್, ಲ್ಯಾಪ್‌ಟಾಪ್ ಕೊಡಿಸುವ ಚಿಂತೆ. ವಸ್ತುಸ್ಥಿತಿಯೆಂದರೆ ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿರುವುದಿಲ್ಲ. ಇನ್ನು ಮೊಬೈಲ್ ಟವರ್ ಇಲ್ಲವೇ ಇಲ್ಲ. ಇದ್ದರೂ ನೆಟ್‌ವರ್ಕ್ ಸರಿಯಾಗಿಲ್ಲ. ಇವರಿಗೆಲ್ಲಿಯ ಆನ್‌ಲೈನ್ ಶಿಕ್ಷಣ?!
ಸಾಲ ಮಾಡಿ ಮಕ್ಕಳ ಶುಲ್ಕ ಕಟ್ಟಿ, ಅವರ ಸಮವಸ್ತ್ರ, ಪುಸ್ತಕ, ಬ್ಯಾಗ್, ಕೊಡಿಸುವ, ಎಲ್ಲರಂತೆ ನನ್ನ ಮಗು ಶಿಕ್ಷಣ ಪಡೆಯಲಿ ಎಂದು ಬಯಸುವ ಹೆತ್ತವರ ಪ್ರಶ್ನೆಗಳಿಗೆ ಏನನ್ನುತ್ತದೆ ನಮ್ಮ ಆಡಳಿತ? ಇರುವ ಅರ್ಧ ಎಕರೆ ತೋಟ, ಹೊಲಗಳನ್ನು ನಂಬಿ ಬದುಕುವ ಹಳ್ಳಿ ಜನಕ್ಕೆ ಮಳೆ ಬಂದರೆ ಬಿತ್ತಿದ ಬೆಳೆ ಕೈ ಸೇರುತ್ತದೆ. ಇಲ್ಲವಾದರೆ ಕೈ ತಪ್ಪಿ ಹೋಗುತ್ತದೆ. ಹಾಗಾಗಿ ಸ್ವಂತ ಹೊಲ, ಗದ್ದೆಗಳಿಗೆ ಖರ್ಚು ಮಾಡಲು ಸಾಧ್ಯವಾಗದ ಹಳ್ಳಿ ಮಂದಿಗೆ ಇನ್ನೂ ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಹೇಗೆ ಕೊಡಿಸಲು ಸಾಧ್ಯ?
ಹಲವು ಹಳ್ಳಿಗಳಿಗೆ ಇನ್ನೂ ಸೀಮೆಎಣ್ಣೆ ದೀಪ ಅಥವಾ ಮೊಂಬತ್ತಿಗಳೇ ಆಧಾರ. ಇದಕ್ಕೆ ಪರಿಹಾರವಾಗಿ ಸರ್ಕಾರ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಅಳವಡಿಸಲು ಸೂಚಿಸಿದೆ ಎಂಬುದೇನೋ ಸತ್ಯ. ಆದರೆ ವಿದ್ಯುತ್ ಸಂಪರ್ಕ ಇರುವ ಹಳ್ಳಿಗಳಲ್ಲೇ ಮರದ ಕೊಂಬೆ ತಗುಲಿಯೋ ಅಥವಾ ಮಳೆಯಿಂದಾಗಿ ಕಂಬ ಮುರಿದು ವಾರ-ತಿಂಗಳುಗಟ್ಟಲೆ ವಿದ್ಯುತ್ ಇಲ್ಲದಂತಾಗುವುದು ಹೊಸ ಸಂಗತಿಯಲ್ಲ. ಇಷ್ಟಾಗಿಯೂ, ಸಾಲ ಮಾಡಿಯಾದರೂ ಮೊಬೈಲ್, ಲ್ಯಾಪ್‌ಟಾಪ್ ಕೊಡಿಸೋಣಾ ಎಂದಿಟ್ಟುಕೊಳ್ಳೋಣ. ಮಾಡಿದ ಸಾಲ ತೀರಿಸಲು ಅವರು ಮತ್ತೊಂದು ಸಾಲ ಮಾಡಬೇಕಾಗಿದೆ ಎಂಬುದು ದುರಂತ ಸತ್ಯ.
ಹಳ್ಳಿಯ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಆಲಿಸಲು ಸಾಧ್ಯವಾಗುತ್ತಿಲ್ಲ ಅಥವಾ ತುಂಬಾ ಕಷ್ಟವಾಗುತ್ತದೆ. ಅಷ್ಟಿಷ್ಟು ಚಾರ್ಜ್ ಮಾಡಿದ ಮೊಬೈಲ್ ಒಂದು ಕ್ಲಾಸ್ ಆಗುವಷ್ಟರಲ್ಲಿ ಆಫ್ ಆಗಿರುತ್ತದೆ. ಈ ಸಮಸ್ಯೆಯಿಂದ ಮಗು ಆ ದಿನದ ಪಾಠ ಕೇಳಲು ಸಾಧ್ಯವಾಗದ್ದಿದ್ದಾಗ ಕಲಿಕೆಯಲಿ ಹಿಂದುಳಿಯುವ ಸಾಧ್ಯತೆ ಇದೆ. ಹಾಗಾಗಿ ಆನ್ಲೈನ್ ಕ್ಲಾಸ್ಸಲ್ಲಿ ತರಗತಿ ನಡೆಸಿದರೂ ಆಫ್ ಲೈನ್ ಕ್ಲಾಸ್ ನಡೆಸಬೇಕು. ನೆಟ್ವರ್ಕಿಗಾಗಿ ಗುಡ್ಡ, ಕಾಡು ಅಲೆಯುವಾಗ ಪಾಠ ಮುಗಿದುಹೋಗಿರುತ್ತದೆ.
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 130 ಕೋಟಿ ಜನಗಳಿಗೆ ಹೇಗೆ ಪರಿಚಿತರೋ ಹಾಗೆ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರೂ ಸಹ ನಮ್ಮ ದೇಶದ ಜನತೆಗೆ ಚಿರಪರಿಚಿತರು. ಇವರ ಹುಟ್ಟಿದ ಹಬ್ಬಕ್ಕೆ ಪ್ರಧಾನಮಂತ್ರಿಯವರು ಸ್ವತ: ಫೋನ್ ಮಾಡಿ ಅಭಿನಂದನೆ ಸಲ್ಲಿಸಬೇಕೆಂದರೆ ಆ ವ್ಯಕ್ತಿ ಇನ್ನೆಷ್ಟು ಗೌರವಾನ್ವಿತೆ ಎಂದು ನೀವೇ ಊಹಿಸಿ. ಮೋದಿಜೀಯವರು ಲತಾಜೀ ಅವರೇ ಕೈಯಿಂದ ತಯಾರಿಸಿದ ಗುಜರಾತಿ ಊಟವನ್ನು ಮಾಡಿದ್ದಾರೆ.
ಹಿನ್ನೆಲೆ ಗಾಯಕಿಯರಲ್ಲಿ ಮೊದಲನೇ ಸ್ಥಾನ ಇವರಿಗೆ ಸಲ್ಲುತ್ತದೆ. ಎಂಟು ದಶಕಗಳಿಂದ ತಲೆಮಾರುಗಳಿಗೆ ಹಾಡು ಗಳು ಅತ್ಯಂತ ಸುಮಧುರ. ಕೇಳುಗರಿಗೆ ಮತ್ತು ನೋಡುವವರಿಗೆ ಬಾಲಿವುಡ್ ನಟಿಯರೇ ಹಾಡುತ್ತಿರಬಹುದೆಂಬ ಭ್ರಮೆ ಹುಟ್ಟಿಸುವಂತಹ ಧ್ವನಿ ಅವರದು. ಅಷ್ಟೊಂದು ವೈವಿಧ್ಯತೆಯಲ್ಲಿ ಹಾಡುವ ಲತಾಜೀಗೆ ಮತ್ತೊಬ್ಬರು ಸಾಟಿ ಇಲ್ಲ.
ಸವಿನಯದ ಪ್ರತಿರೂಪ
ಸೌಜನ್ಯ, ಸರಳತೆ ಮತ್ತು ಸವಿನಯದ ಪ್ರತಿರೂಪವೇ ಲತಾ ಮಂಗೇಶ್ಕರ್. ಸದಾ ಬಿಳಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಈ ಸ್ವರ ಸಂಗೀತದ ಗಾನಕೋಗಿಲೆ, ಬಹಳ ಸಂಕೋಚದ ಸ್ವಭಾವದವರು.
ಹಾಗೆಂದು ಜೀವನವೇನು ಸುಖದಲ್ಲಿ ಶುರುವಾಗಲಿಲ್ಲ.ತಂದೆ ದೀನಾನಾಥ್ ಅವರ ಅಕಾಲಿಕ ಮರಣ ದಿಂದಾಗಿ 12 ವರ್ಷದ ಲತಾಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಸಾಕುವ ಜವಾಬ್ದಾರಿ ಹೆಗಲೀರಿ ಹೇಗಾದರೂ ಕಷ್ಟಪಟ್ಟು ಸಂಪಾದಿಸಲೇ ಬೇಕಾದ ಪರಿಸ್ಥಿತಿ ಎದುರಾಯಿತು.
ತಂದೆಯಿಂದ ಶಾಸ್ತ್ರೀಯ ಸಂಗೀತದ ಪಾಠ ಮನೆಯವರೆಲ್ಲರಿಗೂ ಆಗಿತ್ತು. ಜೀವನದ ದಾರಿಗೆ ಮತ್ತೇನು ಗೊತ್ತಿಲ್ಲದ ಲತಾ ಮರಾಠಿ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಹಾಡುತ್ತಿದ್ದರು.ಈ ರೀತಿ ಸಣ್ಣ ಝರಿಯಾಗಿ ಶುರುವಾದದ್ದು ಇಂದು 25000ಕ್ಕೂ ಹೆಚ್ಚಿನ ಹಾಡುಗಳನ್ನು 36 ಭಾಷೆಗಳಲ್ಲಿ ಹಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಎಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಇದೆ.
ಇವರು ಹಾಡಿದ ಚಾಂದಿನಿ ಚಿತ್ರದ ಮೇರೆ ಹಾಥೋ ಮೆ ನೌ ನೌ ಚೂಡಿಯಾ ಹೆ ಹಾಗೂ ಹಮ್ ಆಪ್ ಕೆ ಹೈ ಕೌನ್ ನ ದೀದೀ ತೇರಾ ದೇವರ್ ದೀವಾನಾ ಹಾಡುಗಳು ಎಷ್ಟು ಫೇಮಸ್ ಎಂದರೆ ಆ ಕಾಲದಲ್ಲಿ ಮದುವೆ ಮನೆಗಳಲ್ಲಿ ಈ ಹಾಡುಗಳು ಇರಲೇ ಬೇಕಿತ್ತು.
ಒಮ್ಮೆ ಹಾಡುವಾಗ ಲತಾಗೆ ನಟ ದಿಲೀಪ್ ಕುಮಾರ್ ಹೇಳಿದರಂತೆ ನಿಮ್ಮ ಹಿಂದಿ ಉಚ್ಛಾರಣೆಯಲ್ಲಿ ಮರಾಠಿ ಭಾಷೆಯ ಛಾಯೆ ಎದ್ದು ಕಾಣುತ್ತದೆ ಎಂದು. ಅಷ್ಟಕ್ಕೆ ಲತಾರವರು ಉರ್ದು ಮತ್ತು ಹಿಂದಿಯನ್ನು ಕಲಿತು ಎಲ್ಲರಿಗೂ ನಾನೂ ಸರಿಯಾದ ಹಿಂದಿಯಲ್ಲಿ ಹಾಡಬಲ್ಲೆ ಎಂದು ತೋರಿಸಿದರಂತೆ. ಹಿಂದುಸ್ಥಾನಿ ಸಂಗೀತವನ್ನು ಹಲವಾರು ಗುರುಗಳಿಂದ ಕಲಿತಿದ್ದಾರೆ.
ನಮ್ಮ ದೇಶದ ಎಲ್ಲಾ ಭಾಗದಲ್ಲಿ ಲತಾ ಅವರ ಅಭಿಮಾನಿಗಳಿದ್ದಾರೆ. .ಇಂದಿಗೂ ವಯಸ್ಸಾದವರೇ ಆಗಲಿ ಯುವಕರೇ ಆಗಲಿ ಲತಾ ಹಾಡನ್ನು ಕೇಳಿ ಸಂತೋಷಪಡುತ್ತಾರೆ. ನಮ್ಮ ದೇಶ ಒಂದೇ ಅಲ್ಲ ಪರದೇಶಗಳಲ್ಲಿರುವ ಭಾರತೀಯರನ್ನೂ ಭಾವನಾತ್ಮಕವಾಗಿ ಒಂದುಗೂಡಿಸುವುದರಲ್ಲಿ ಲತಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಲಾಂಗ್ ಡ್ರೈವ್ ಹೋಗಬೇಕಾದರೆ ಮೊದಲು ಲತಾ ಹಾಡಿರುವ ಹಾಡುಗಳ ಪೆನ್ ಡ್ರೈವ್ ಅನ್ನು ತಮ್ಮ ಕಾರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಆಗ ಎಲ್ಲರಿಗೂ ತಾಯಿನಾಡು ಭಾರತದೊಡನೆ ಸಂಪರ್ಕದಲ್ಲಿರುವೆವೇನೋ ಎಂಬಂತೆ ಭಾಸವಾಗುತ್ತಿತ್ತಂತೆ. ಈಗ ಬಿಡಿ ಯಾವ ಹಾಡು ಬೇಕಾದರೂ ಆನ್ಲೈನ್ ನಲ್ಲಿ ಸಿಗುತ್ತದೆ. ನನಗೆ ಈಗ ಓ ಕೌನ್ ಥೀ ಚಿತ್ರದ ಲಗ್ ಜಾ ಗಲೆ ಹಾಡು ನೆನಪಿಗೆ ಬರುತ್ತಿದೆ.
1962 ರಲ್ಲಿ ಭಾರತದೊಡನೆ ಚೀನಾ ಯುದ್ಧ ಮಾಡಿದ ಸಂದರ್ಭ. 1963ರ ಗಣರಾಜ್ಯೋತ್ಸವದಂದು ಲತಾಜಿ ನಮ್ಮ ಯೋಧರ ಬಲಿದಾನದ ಸ್ಮರಣಾರ್ಥ ‘ಎ ಮೇರೆ ವತನ ಕೆ ಲೋಗೋ ಜ಼ರ ಆಂಖೋ ಮೆ ಭರಲೋ ಪಾನಿ‘ ಎಂಬ ಹಾಡನ್ನು ಹಾಡಿದರು. ಆಗ ಅಲ್ಲಿ ಸೇರಿದ್ದ ಎಲ್ಲರ ಹಾಗೂ ಪ್ರಧಾನಮಂತ್ರಿಗಳಾಗಿದ್ದ ನೆಹರೂ ಅವರ ಕಣ್ಣಲ್ಲಿ ಸಹ ನೀರು ಬಂತಂತೆ. ಈಗಲೂ ಆ ಹಾಡನ್ನು ಕೇಳಿದರೆ ಮೈ ಝುಮ್ ಎನ್ನುತ್ತದೆ. ಒಮ್ಮೆ ಕೇಳೋಣ ಬನ್ನಿ ಆ ಹಾಡಿನ ಎರಡು ಸಾಲುಗಳನ್ನು.
ಆಲ್ಬರ್ಟ್ ಹಾಲ್ ಲಂಡನ್ನಲ್ಲಿ ಪ್ರಪ್ರಥಮ ಕನ್ಸರ್ಟ್ ಕೊಟ್ಟ ಶ್ರೇಯಸ್ಸು ಲತಾ ಮಂಗೇಶ್ವರ್ ಅವರ ಮುಡಿಗೇರಿದೆ. ಅಲ್ಲಿ ನೆಲೆಸಿದ್ದ 6000 ಪಾಕಿಸ್ತಾನಿಗಳು ಕನ್ಸರ್ಟ್ ಗೆ ಬಂದಿದ್ದರಂತೆ ! 1974ರಲ್ಲಿ ನಡೆದ ಈ ಉತ್ಸವಕ್ಕೆ ಕೆನಡಾ,ಅಮೇರಿಕಾ ಹಾಗೂ ಪ್ಯಾರಿಸ್ ನಿಂದ ಜನಗಳು ಬಂದಿದ್ದರಂತೆ. ಪ್ರಖ್ಯಾತಿ ಎಂದರೆ ಹೀಗೆ ಇರಬೇಕಲ್ಲವೇ?
ಸಂಗೀತದಲ್ಲಿ ಮಾಡಿರುವ ಅದ್ವಿತೀಯ ಸೇವೆಗಾಗಿ ಭಾರತ ತನ್ನ ಪ್ರಜೆಗಳಿಗೆ ಕೊಡುವ ಸರ್ವಶ್ರೇಷ್ಠ ಭಾರತರತ್ನ ಪ್ರಶಸ್ತಿಯನ್ನು ಲತಾಜಿ ಅವರಿಗೆ 2001ರಲ್ಲಿ ನಮ್ಮ ಘನ ಸರ್ಕಾರ ಕೊಟ್ಟು ಗೌರವಿಸಿದೆ. ಇದಕ್ಕೆ ಮೊದಲು ಎಂಎಸ್ ಸುಬ್ಬಲಕ್ಷ್ಮಿ ಯವರಿಗೆ 1998ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.
ಇವರ ಜೀವನ ಚರಿತ್ರೆಯನ್ನು ಹಲವಾರು ಲೇಖಕರು ಬರೆದಿದ್ದಾರೆ. ಮನೆಗೆ ಬರುವ ಅತಿಥಿಗಳನ್ನು ಬಹಳ ಆದರದಿಂದ ಸ್ವಾಗತಿಸುತ್ತಾರೆ. ಇವರನ್ನು ನೈಟಿಂಗೇಲ್ ಆಫ್ ಬಾಲಿವುಡ್ ಅಂತ ಸಹ ಕರೆಯುತ್ತಾರೆ. ಲತಾಜೀಯವರಿಗೆ ಸ್ವಲ್ಪವೂ ಹಮ್ಮು-ಬಿಮ್ಮುಗಳಿಲ್ಲ. ಯಾವಾಗಲೂ ಕಲಿಯುತ್ತಲೇ ಇರಬೇಕೆಂದು ಹೇಳುವ ಲತಾಜೀಯವರ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷ . ಸಂಗೀತ ನಿರ್ದೇಶಕರುಗಳು ಹೇಳುವ ಹಾಗೆ ಭಾವನಾತ್ಮಕವಾಗಿ ಹಾಡುತ್ತಿದ್ದರು ಹಾಗೂ ಉಪಾಧ್ಯಾಯರು ಹೇಳಿದಂತೆ ಕಲಿಯುವ ವಿದ್ಯಾರ್ಥಿನಿಯೂ ಆಗುತ್ತಿದ್ದರಂತೆ. ಅವರ ಹಾಡುಗಳಲ್ಲಿ ನಾನು ಯಾವಾಗಲೂ ಗುನುಗುವ ಹಾಡು ಆಜ್ ಫಿರ್ ಜೀನೇ ಕಿ ತಮನ್ನಾ ಹೈ
ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ವತ: ಹಾಡುಗಳ ನಿರ್ದೇಶನವನ್ನೂ ಮಾಡಿದ್ದಾರೆ.
ಆಕೆಯ ಖ್ಯಾತಿ ಮುಗಿಲೆತ್ತರವಾದಾಗ ಎಲ್ಲರೂ ಸಂಗೀತ ಕೋಗಿಲೆಯ ಸಂಪರ್ಕವನ್ನು ಬಯಸುತ್ತಿದ್ದರು.1999ರಲ್ಲಿ ಪರ್ಫ್ಯೂಮ್ ಒಂದಕ್ಕೆ ಲತಾ ಪರ್ಫ್ಯೂಮ್ ಎಂದು ನಾಮಕರಣ ಮಾಡಿದರು. ರಾಜ್ಯಸಭೆಯ ಮೆಂಬರ್ ಆಗಿ ನೇಮಕಗೊಂಡಿದ್ದರು. ಅನಾರೋಗ್ಯದ ಕಾರಣ 2005 ರಲ್ಲಿ ನಿವೃತ್ತಿ ಪಡೆದರು.
ಪುಣೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನಡೆಸುತ್ತಿದ್ದಾರೆ.
ಇವರು ಸೋದರ ಹೃದಯನಾಥ್ ರೊಡನೆ ಕ್ರಿಕೆಟ್ ಆಡುತ್ತಿದ್ದರಂತೆ. ಬಹುಶ: ಇವರ ಕ್ರಿಕೆಟ್ ಮೇಲಿನ ಅಭಿಮಾನಕ್ಕೆ ಪರೋಕ್ಷವಾಗಿ ಇದು ಕಾರಣವಿರಬಹುದು. ಸಚಿನ್ ತೆಂಡೂಲ್ಕರ್ ಅವರ ಮೇಲೆ ಇವರಿಗೆ ಮಗನಂತೆ ವಿಶ್ವಾಸ.
ಈ ದಿನ ಅಂದರೆ ಸೆಪ್ಟೆಂಬರ್ 28 ಅವರ ಹುಟ್ಟುಹಬ್ಬ, 91 ವರ್ಷಗಳು ತುಂಬುತ್ತದೆ. ದೇವರು ಅವರಿಗೆ ಸುಖ, ಶಾಂತಿ, ಆರೋಗ್ಯ, ಎಲ್ಲವನ್ನೂ ಕೊಟ್ಟು ನೆಮ್ಮದಿಯಾಗಿಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.
ಇಲ್ಲಿರುವ ಹಾಡುಗಳನ್ನು ನಮ್ಮಓದುಗರಿಗಾಗಿ ಹಾಡಿದ್ದು ಪ್ರಿಯಾಂಕ ಪದಕಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿರುವ ಪ್ರಿಯಾಂಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.
ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಇಲ್ಲೊಂದು ಶಾಲೆ ಅದಕ್ಕೆ ಅಪವಾದ. ಶಿಕ್ಷಕರ ಆಸಕ್ತಿಯ ಫಲವಾಗಿ ಗಮನ ಸೆಳೆಯುತ್ತಿದೆ.
ದಾವಣಗೆರೆ ಜಿಲ್ಲೆ ಸಂತೇಬೆನ್ನೂರಿನ ಈ ಶಾಲೆಯ ಈಗಿನ ಹೆಸರು ಕರ್ನಾಟಕ ಪಬ್ಲಿಕ್ ಸ್ಕೂಲ್ .ಇದು 1948 ರಲ್ಲಿ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಆರಂಭಗೊಂಡ ಶಾಲೆ. ಒಂದು ಕಾಲದಲ್ಲಿ ಸುತ್ತಲ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಶಿಕ್ಷಣ ಕೇಂದ್ರವಾಗಿತ್ತು.
72 ವರುಷ ದಾಟಿ ಸಾಗುತ್ತಿರುವ ಶಾಲೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ತಳಹದಿಯೊಂದಿಗೆ ಜ್ಞಾನ ದ ಹಸಿವನ್ನು ತಣಿಸುತ್ತಾ ಸಾಗಿದೆ. ಕಾಲ ಬದಲಾದಂತೆ ಮಕ್ಕಳು ಶಿಕ್ಷಕರು ಬದಲಾದಂತೆ ಶಾಲೆಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಲದ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಉತ್ತಮ ಫಲಿತಾಂಶ ದ ಜೊತೆಗೆ ತಂತ್ರಜ್ಞಾನ, ಹೊಸ ಕಟ್ಟಡ, ನವೀನ ಶಿಕ್ಷಣ ಮೈಗೂಡಿಸಿಕೊಂಡು ಜಿಲ್ಲೆಯ ಉತ್ತಮ ಶಾಲೆ ಎನ್ನಿಸಿದೆ.
ಒಂದೇ ಸೂರಿನಡಿ ಶಿಕ್ಷಣ
ಈ ಎರಡು ಮೂರು ವರ್ಷಗಳಿಂದ ‘ ಒಂದೇ ಸೂರಿನಡಿ ಶಿಕ್ಷಣ’ ಎಂಬ ಸರ್ಕಾರದ ಹೊಸ ಯೋಜನೆಯ ಅನ್ವಯ ಪ್ರಾಯೋಗಿಕವಾಗಿ ಆರಂಭಗೊಂಡ’ ಕರ್ನಾಟಕ ಪಬ್ಲಿಕ್ ಸ್ಕೂಲ್’ ಪಟ್ಟಿಯಲ್ಲಿ ಸಂತೆಬೆನ್ನೂರು ಸರ್ಕಾರಿ ಪ್ರೌಢಶಾಲೆ ಯೂ ಸೇರಿ ನಾವಿನ್ಯತೆಗೆ ಒಗ್ಗಿಕೊಂಡು ಶೈಕ್ಷಣಿಕ ಪ್ರಗತಿ ಮಾಡುತ್ತಿದೆ.
ಕಾಲನ ಹೊಡೆತಕ್ಕೆ ಸಿಕ್ಕಿ ಎಲ್ಲಾ ಕ್ಷೇತ್ರ ಗಳು ಕೋವಿಡ್,ಕರೋನದ ಅಡಿಯಲ್ಲಿ ನಜ್ಜುಗುಜ್ಜಾಗಿದ್ದು ಜಗಜ್ಜಾಹಿರಾಗಿದ್ದು ಎಲ್ಲರು ಬಲ್ಲರು. ಅದಕ್ಕೆ ಶಾಲೆಗಳೂ ಹೊರತಲ್ಲ. ಕಳೆದ ಮಾರ್ಚ್ ನಿಂದ ಮಕ್ಕಳು ಶಾಲೆಯ ಮುಖ ನೋಡಿಲ್ಲ.ಶಿಕ್ಷಕ ವೃಂದ ಬಂದರೂ ಒಳ ಹೋಗದೇ ಹೊರಗಿಂದ ಹೊರಗೇ ಕಾರ್ಯ ಚಟುವಟಿಕೆ ಮಾಡುತ್ತಾ ಬಂದರು.
ಇದೀಗ ಸ್ವಲ್ಪ ಹೌದೋ ಅಲ್ಲವೋ ಅನ್ನುವಂಥಾ ತಣ್ಣನೆಯ ವಾತಾವರಣ ಮತ್ತು ಮಕ್ಕಳು ಶಾಲೆಗೆ ಮರಳುವ ಆಶಾಕಿರಣ ಕಾಣಿಸುತ್ತಿದೆ. ಆ ನಿಟ್ಟಿನಲ್ಲಿ ಈ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಒಮ್ಮತದಿಂದ ಮುಂಬರುವ ಮಕ್ಕಳ ಆರೋಗ್ಯ ದ ದೃಷ್ಟಿಯಿಂದ ಇಡೀ ಶಾಲೆಯನ್ನು ಅಮೂಲಾಗ್ರ ವಾಗಿ ಶುಚಿಗೊಳಿಸುತ್ತಿದ್ದಾರೆ.
ತಾರಸಿ,ಗೋಡೆ,ಕೊಠಡಿಗಳು, ಅಂಗಳ,ಹಿತ್ತಲು, ಕಸಕಡ್ಡಿ ಎಲ್ಲಾ ಒಪ್ಪ ಒರಣ ಮಾಡುತ್ತಿದ್ದಾರೆ. ಲಿಂಗ ತಾರತಮ್ಯ ಇಲ್ಲದೇ ಅನ್ನ ಕೊಡುವ ಮಕ್ಕಳಾಗಮನಕ್ಕೆ, ಕರೋನ ಮುಂಜಾಗ್ರತಾ ಕ್ರಮಕ್ಕೆ ಇಡೀ ಶಾಲೆ ಸುಂದರಗೊಳಿಸುತ್ತಿದ್ದಾರೆ.
ಸ್ವತಃ ಸಲಿಕೆ,ಗುದ್ದಲಿ,ಹಾರೆ ಪುಟ್ಟಿ ಹಿಡಿದು ಒಂದು ಕಡೆಯಿಂದ ಕಸ ತೆಗೆದು ಅಡ್ಡಾದಿಡ್ಡಿ ಬೆಳದ ಕೊಂಬೆರಂಬೆಗಳಿಗೆ ಆಕಾರಕೊಟ್ಟು, ಅಲಂಕಾರಿಕ ಸಸಿ ನೆಟ್ಟು, ಇರುವ ಗಿಡಗಳಿಗೆ ನೀರು ನಿಲ್ಲುವ ವ್ಯವಸ್ಥೆ ಮಾಡಿ ,ಗೊಬ್ಬರ ಹಾಕಿ ಮತ್ತೆ ಹೊಸ ಸಸಿ ನೆಟ್ಟು ಮುಂದಿನ ದಿನಗಳಲ್ಲಿ ಶಾಲೆ ಹಸಿರಿನಿಂದ ನಳನಳಿಸುವ ಆಲೋಚನೆ ಇಲ್ಲಿನ ಸಮಸ್ತ ಗುರು ವೃಂದದವರದು.
ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಮಾಡಿಸುವ ಆಲೋಚನೆಯೂ ಹೊಂದಿದ್ದು, ಸಧ್ಯ ಇಡೀ ಶಾಲೆಯನ್ನು ಕಸಮುಕ್ತ, ರೋಗಮುಕ್ತ, ಪ್ಲಾಸ್ಟಿಕ್ ಮುಕ್ತ ಮಾಡುವತ್ತ ಇಲ್ಲಿನ ಶಿಕ್ಷಕರು ದಾಪುಗಾಲು ಇಡುತ್ತಿದ್ದಾರೆ.
ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ತಾನು ಬದಲಾಗಿ,ತನ್ನ ಪರಿಸರ ಬದಲಾಯಿಸಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬಲ್ಲ.
ಸರ್ಕಾರಿ ಶಾಲೆ ಎಂಬ ಉದಾಸೀನ ತೊರೆದು, ಗುಣಾತ್ಮಕ ಶಿಕ್ಷಣ ಇಂದಿನ ದಿನಮಾನಗಳಲ್ಲಿ ಇಂತಹ ಶಾಲೆಗಳೆ ನೀಡುತ್ತಿವೆ ಎಂಬ ಭಾವನೆ ಮೂಡಿಸಿಕೊಂಡು ಸಮಾಜ,ಪೋಷಕರು,ಅಧಿಕಾರಿ ವರ್ಗ ಮುನ್ನಡೆದಾಗ ಸರಕಾರಿ ಶಾಲೆ ಉಳಿದಾವು…ಉಚಿತ ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳನ್ನು ಪ್ರತಿ ಪ್ರಜೆ ಪಡೆದು ಗೌರವಯುತವಾಗಿ ಬಾಳಿಯಾನು!
ದೊಡ್ಡ ಶಾಲೆ ನಮ್ಮದು. ಮಕ್ಕಳ ಸಂಖ್ಯೇ ದಾವಣಗೆರೆ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನ. ಸರ್ಕಾರಿ ಶಾಲೆ ಎಂಬ ಅಸಡ್ಡೆ ಮಾಡದೇ ಒಗ್ಗಟ್ಟಿನಿಂದ ನಮ್ಮ ಮನೆ ಕೆಲಸ ಎಂಬಂತೆ ಶಾಲೆಯ ಶುದ್ಧತೆ ಮಾಡುತ್ತಿದ್ದೇವೆ. ಜೆ.ಒ ವಿಜಯ್ ಕುಮಾರ್
ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಇದೇ ಶಾಲೆಯಲ್ಲಿ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.