ಮಾಧ್ಯಮಗಳಲ್ಲಿ ಬರುವ ಅನೇಕ ಸಕಾರಾತ್ಮಕ ಪ್ರಚಾರಿಕ ವಿಚಾರಗಳು, ಷೇರುಪೇಟೆಯ ರಭಸದ ಏರಿಳಿತಗಳ ಲಾಭ ಪಡೆಯಲು ಅನೇಕರಿಗೆ ಪ್ರೇರಣೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಸುಮಾರು 1,457 ಪಾಯಿಂಟುಗಳ ಇಳಿಕೆ ದಾಖಲಿಸಿದೆ ಎಂಬ ವಿಚಾರ ಮೇಲ್ನೋಟಕ್ಕೆ ಗೋಚರಿಸಿದರೂ, ಆಂತರಿಕವಾಗಿ ಅದು ಪ್ರದರ್ಶಿಸಿದ ಚಲನೆಯು ಯಾವ ರೀತಿಯ ಅವಕಾಶಗಳು ಸೃಷ್ಠಿಸುತ್ತವೆ ಎಂಬುದನ್ನು ತೋರಿಸಿಕೊಟ್ಟಿದೆ.
ಷೇರುಪೇಟೆಯಲ್ಲಿ ಚಟುವಟಿಕೆಗಾಗಿ ಜುಲೈ ಮೊದಲ ವಾರದಲ್ಲಿ 5,15,09,962 ರಷ್ಟರಲ್ಲಿದ್ದ ನೋಂದಾಯಿತ ಗ್ರಾಹಕರ ಸಂಖ್ಯೆ ಸೆಪ್ಟೆಂಬರ್ 25 ರಂದು ಈ ಸಂಖ್ಯೆ 5,48,67,062 ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು ಎರಡೂವರೆ ತಿಂಗಳ ಅವಧಿಯಲ್ಲಿ 33 ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಪೇಟೆಯನ್ನು ಪ್ರವೇಶಿಸಿದ್ದಾರೆ. ಅಂದರೆ ಷೇರುಪೇಟೆಯು ಹೆಚ್ಚಿನವರನ್ನು ತನ್ನತ್ತ ಆಕರ್ಷಿಸುತ್ತಿದೆ ಎಂದಾಯಿತು. ಹೊಸದಾಗಿ ಪೇಟೆ ಪ್ರವೇಶಿಸುವವರು ಕೇವಲ ಕಲ್ಪನಾ ಲೋಕದಲ್ಲಿರದೆ ವಾಸ್ತವತೆಯನ್ನಾಧರಿಸಿ ಚಟುವಟಿಕೆ ನಡೆಸುವುದು ಸೂಕ್ತ.
ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಲು ಅಳವಡಿಸಿಕೊಳ್ಳಬೇಕಾದ / ಅಗತ್ಯವಿರುವ ಕೆಲವು ಸೂತ್ರಗಳು ಹೀಗಿವೆ.
1. ಬಂಡವಾಳ :ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು ಎಂಬಂತೆ ಪೇಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಪ್ರಯತ್ನಮಾಡಿದಲ್ಲಿ ಮಾತ್ರ ಭವಿಷ್ಯದಲ್ಲಿ ಆ ಹೂಡಿಕೆ ಮೆರಗು ತರಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ, ಸಂದರ್ಭದಲ್ಲಿ ಹೆಚ್ಚು ಪ್ರಚಾರ ಪಡೆದಿರುವ ವಿಧಗಳಾದ ಮಾರ್ಜಿನ್ ಟ್ರೇಡಿಂಗ್, ಇಂದು ಕೊಂಡು ನಾಳೆ ಮಾರು, ಲೀವರೇಜ್ ಟ್ರೇಡಿಂಗ್ ನಂತಹ ಚಟುವಟಿಕೆಗಳಿಗೆ ಮಾರುಹೋಗದೆ ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆಗೂ ಆದ್ಯತೆ ಅಗತ್ಯ. ಈ ದಿಶೆಯಲ್ಲಿ, ಕೈಲಿ ಕಾಸಿಲ್ಲದಿದ್ದರೂ, ಹಣ ಗಳಿಸಬೇಕೆಂಬ ಹಂಬಲಕ್ಕೆ ಮನಸ್ಸು ಬಲಿಯಾಗುವುದನ್ನು, ಈ ಮೂಲಕ ಪೇಟೆಯ ವ್ಯವಸ್ಥೆಯನ್ನು ಹದಗೆಡಿಸುವುದನ್ನು ತಪ್ಪಿಸಲು ವಿತ್ತೀಯ ಪೇಟೆಗಳ ನಿಯಂತ್ರಕ ಇತ್ತೀಚೆಗೆ ಜಾರಿಗೊಳಿಸಿದ ಮಾರ್ಜಿನ್ ವ್ಯವಸ್ಥೆಯು ಉತ್ತಮವಾಗಿದೆ. ಇದು ಲಂಗುಲಗಾಮಿಲ್ಲದ ರೀತಿ ಚಟುವಟಿಕೆ ನಡೆಸುವ ಚಪಲ ನಿಯಂತ್ರಿಸಲು ಪೂರಕವಾಗಿದೆ. ಪೇಟೆಗಳು ಉತ್ತುಂಗದಲ್ಲಿದ್ದಾಗ, ಅದಕ್ಕೆ ಪೂರಕವಾದ ಕಾರ್ಪೊರೇಟ್ ಸಾಧನೆಯಿಲ್ಲದೆ ಇರುವ ಸಂದರ್ಭದಲ್ಲಿ ಈ ರೀತಿಯ ಲೀವರೇಜ್ ಟ್ರೇಡಿಂಗ್ ನಡೆಸುವುದಕ್ಕಿಂತ, ಕೈಲಿ ಸದಾ ಹಣ ಉಳಿಸಿಕೊಂಡು ಸೂಕ್ತ ಅವಕಾಶಕ್ಕೆ ಕಾಯುವುದು ಉತ್ತಮ ಎಂಬುದನ್ನು ಹಿಂದಿನವಾರದ ಏರಿಳಿತಗಳು ತೋರಿಸಿಕೊಟ್ಟಿವೆ.
ಉದಾಹರಣೆಗೆ: ಗ್ಲೆನ್ ಮಾರ್ಕ್ ಫಾರ್ಮ ಕಂಪನಿ ಷೇರು ರೂ.518 ರ ಸಮೀಪದಲ್ಲಿದ್ದು ನಂತರ ಬದಲಾದ ವಾತಾವರಣದಲ್ಲಿ ಜಾರಿ ರೂ.442 ರ ಸಮೀಪಕ್ಕೆ ಬಂದು ನಂತರ ದಿಶೆ ಬದಲಿಸಿ ರೂ.485 ರ ಸಮೀಪಕ್ಕೆ ಜಿಗಿತ ಕಂಡಿದೆ. ಕೇವಲ ನಾಲ್ಕೈದು ದಿನಗಳಲ್ಲಿ ರೂ.118 ರೂಪಾಯಿಗಳ ಏರಿಳಿತವು ಹಿತಕರವೋ, ಅಪಾಯಕಾರಿಯೋ ಎಂಬುದನ್ನು ನಡೆಸಿದ ಚಟುವಟಿಕೆಯನ್ನಾಧರಿಸಿದೆ. ಇದರಂತೆ ಇನ್ಫೋಸಿಸ್, ಹೆಚ್ಸಿ ಎಲ್ಟೆಕ್, ಟಾಟಾ ಕೆಮಿಕಲ್ಸ್, ಅಶೋಕ್ ಲೇಲ್ಯಾಂಡ್, ಬಯೋಕಾನ್, ಗ್ರಾಫೈಟ್ಇಂಡಿಯಾ, ಭಾರತಿ ಏರ್ ಟೆಲ್, ಮುಂತಾದ ಅನೇಕ ಕಂಪನಿಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿವೆ.
2.ಸಹನೆ :ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಗಳು ಉತ್ತಮವಾಗಿದ್ದಲ್ಲಿ, ಷೇರುಗಳ ಬೆಲೆಗಳಲ್ಲಿ ಆಗುವ ಏರಿಳಿತಗಳಿಗೆ ಗಮನಕೊಡದೆ, ಅವುಗಳು ಏರಿಕೆ ಕಾಣುವವರೆಗೂ ಹೂಡಿಕೆ ಮುಂದುವರೆಸಬೇಕು. ಕೊಂಡ ಷೇರು ಏರಿಕೆ ಕಾಣಲಿಲ್ಲ ಎಂಬ ಕೊರಗು ಇರಬಾರದು. ಕಾರಣ, ಸೇವಿಸಿದ ಆಹಾರವು ಪಚನವಾಗಿ ರಕ್ತಗತವಾಗಲೂ ಸಹ ಸಮಯ ಬೇಕಾಗುವುದು, ಅದರಂತೆ ಖರೀದಿಸಿದ ಷೇರು ಲಾಭ ಗಳಿಸಿಕೊಡಲು ಸಹ ಸಮಯಾವಕಾಶ ನೀಡಬೇಕು. ಹೂಡಿಕೆಯು ಸಕಾರಾತ್ಮಕ ಫಲಿತಾಂಶ ನೀಡುವವರೆಗೂ ಮುಂದುವರೆಸುವಂತಿರಬೇಕು. ಒಂದು ವೇಳೆ ಹೂಡಿಕೆಮಾಡಿದ ಕಂಪನಿಯಲ್ಲಿನ ಆಂತರಿಕ ಬೆಳವಣಿಗೆ ಅಥವಾ ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ನೇರವಾಗಿ ಪ್ರಭಾವ ಬೀರುವಂತಹ ಬಾಹ್ಯ ಬೆಳವಣಿಗೆ ಏನಾದರೂ ಇದ್ದಾಗ ಮಾತ್ರ ಅಂತಹ ಷೇರಿನಿಂದ ಹೊರಬರುವ ಚಿಂತನೆ ಮಾಡಬೇಕಷ್ಠೆ. ಇದು ಒಂದು ರೀತಿಯ ಸ್ಟಾಪ್ ಲಾಸ್ ಪ್ರಕ್ರಿಯೆಯಾಗಿದೆ.
3. ಅನುಭವ :ಅಧ್ಯಯನದಿಂದ ಅರಿವು, ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು, ಅರಿವು ತಿಳಿವು ಸುಳಿವುಗಳಿಂದ ಉಳಿವು ಎಂಬಂತೆ ಅನುಭವವೇ ಚಟುವಟಿಕೆಗೆ ಪೂರಕ ಅಂಶವಾಗಿದ್ದು, ಚಟುವಟಿಕೆಗೆ ಸ್ವಂತ ಅನುಭವವಿಲ್ಲದೆ ಇದ್ದರೂ, ಅನುಭವಸ್ಥರಿಂದ, ವೃತ್ತಿಪರರಿಂದ ಸೂಕ್ತ ಮಾರ್ಗದರ್ಶನ ಪಡೆದಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ. ಷೇರುಪೇಟೆಯ ಬಗ್ಗೆ ಅರಿಯಲು ಸಹಸ್ರಾರು ರೂಪಾಯಿಗಳನ್ನು ತೆತ್ತು ಕ್ಲಾಸ್ ಗಳಿಗೆ ಹೋಗುವ ಬದಲು, ಅದೇ ಹಣವನ್ನು ಬಂಡವಾಳವಾಗಿಸಿಕೊಂಡು, ಚಟುವಟಿಕೆಯನ್ನು ನಡೆಸಿ ಅನುಭವ ಪಡೆಯಬಹುದು. ಷೇರುಗಳು ಡಿಮ್ಯಾಟ್ ನಲ್ಲಿರುವುದರಿಂದ ಕಡಿಮೆ ಸಂಖ್ಯೆಯ ಷೇರುಗಳನ್ನು ಖರೀದಿಸಿ, ಚಟುವಟಿಕೆ ನಡೆಸಿ ಅನುಭವ ಪಡೆಯಬಹುದು.
4.ಸಂದರ್ಭೋಚಿತ ನಿರ್ಧಾರ:ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಾಗ, Invest and forget it, invest and sit tight, wealth creation ಎಂಬ ಸಂಪ್ರದಾಯಿಕ ಮಾಂತ್ರಿಕ ಪದಗಳಿಗೆ ಮರುಳಾಗದೆ invest and track it, invest and watch it, wealth protection ಎಂಬುದಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಯಶಸ್ಸು ಸಮೀಪವಿರುತ್ತದೆ. ಸಮಯೋಚಿತ ನಿರ್ಧಾರ ಹಲವು ಭಾರಿ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆಗಳೂ ಉಂಟು. ವಿಶೇಷವಾಗಿ ಪೇಟೆಗಳು ಉತ್ತುಂಗದಲ್ಲಿದ್ದಾಗ, ಹೂಡಿಕೆಯು ಆರಂಭದಲ್ಲಿ ದೀರ್ಘಕಾಲೀನ ಉದ್ದೇಶ ಹೊಂದಿದ್ದರೂ, ನಂತರದಲ್ಲಿ ಅವಕಾಶ ಲಭಿಸಿದಾಗ ನಿರ್ಗಮಿಸುವ ವ್ಯವಹಾರಿಕತೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ.
ಉದಾಹರಣೆಗೆ ಕ್ಲಾರಿಯಂಟ್ ಕೆಮಿಕಲ್ಸ್ ಎಂಬ ಸ್ಪೆಷಾಲಿಟಿ ಕೆಮಿಕಲ್ ಕಂಪನಿಯ ಷೇರಿನ ಬೆಲೆ ಮಾರ್ಚ್ ತಿಂಗಳ ಕುಸಿತದ ವೇಳೆ ರೂ.192 ರ ಸಮೀಪಕ್ಕೆ ಕುಸಿದಿತ್ತು. ನಂತರದ ಬೆಳವಣಿಗೆಯಲ್ಲಿ ಷೇರಿನ ಬೆಲೆ ಜುಲೈ ತಿಂಗಳಲ್ಲಿ ರೂ.608 ರವರೆಗೂ ಜಿಗಿತ ಕಂಡಿತು. ನಂತರದಲ್ಲಿ ಕುಸಿಯುತ್ತಾ ಬಂದ ಷೇರಿನ ಬೆಲೆ ಸಧ್ಯ ರೂ.330 ರ ಸಮೀಪದಲ್ಲಿದೆ. ಅಂದರೆ ಶೇ.300 ರಷ್ಟು ಏರಿಕೆ ಕಂಡ ನಂತರ ಶೇ.50 ರಷ್ಟು ಕುಸಿತ ಕಾಣಲು ಕೇವಲ ಕೆಲವೇ ತಿಂಗಳುಗಳು ಸಾಕಾಗುವುದು ಈಗಿನ ಅಲ್ಪ ಬಡ್ಡಿಯುಗದಲ್ಲಿ ವಿಸ್ಮಯಕಾರಿಯೆನಿಸುವುದು. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಕಂಪನಿಯು ಜುಲೈ ತಿಂಗಳಲ್ಲಿ ಪ್ರತಿ ಷೇರಿಗೆ ರೂ.140 ರಂತೆ special dividend ನ್ನು ವಿತರಿಸಿದೆ ಹಾಗಾಗಿ ಈ ರೀತಿಯ ಭರ್ಜರಿ ಏರಿಳಿತ ಪ್ರದರ್ಶಿತವಾಗಿದೆ. ಇಂತಹ ಬೆಳವಣಿಗೆಗಳನ್ನು ಅನೇಕ ಕಂಪನಿಗಳ ಷೇರುಗಳಲ್ಲಿ ಕಾಣಬಹುದಾಗಿದೆ. ಆದ್ದರಿಂದ Timing of the decision ಹೆಚ್ಚಿನ ಮಹತ್ವ ಹೊಂದಿದೆ.
5.ನಿರ್ಲಿಪ್ತತೆ :ಸಾಮಾನ್ಯವಾಗಿ, ಸಾಂಪ್ರದಾಯಿಕವಾಗಿ ನಡೆದುಬಂದಿರುವ ಪದ್ಧತಿ ಎಂದರೆ ಹೂಡಿಕೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ಹೊಂದುವುದು. ಈ ಭಾವನಾತ್ಮಕತೆಯು ಷೇರುಪೇಟೆಯಲ್ಲಿ ಹೆಚ್ಚಿರುತ್ತದೆ. ಈ ಭಾವನಾತ್ಮಕತೆಯ ಕಾರಣ ಅನೇಕ ಅವಕಾಶಗಳನ್ನು ಕೈ ಚೆಲ್ಲಬೇಕಾಗುತ್ತದೆ.
ಉದಾಹರಣೆಗೆ ಅಶೋಕ್ ಲೇಲ್ಯಾಂಡ್ ಷೇರಿನ ಬೆಲೆ ಈ ತಿಂಗಳ ಎರಡನೇ ವಾರದಲ್ಲಿ ರೂ.83 ರ ಸಮೀಪದಲ್ಲಿತ್ತು. ಅದು ವಾರ್ಷಿಕ ಗರಿಷ್ಠದ ಸಮೀಪವೂ ಹೌದು. ಆ ಸಂದರ್ಭದಲ್ಲಿ ಷೇರನ್ನು ಮಾರಾಟ ಮಾಡಿದ್ದವರಿಗೆ, ಈ ತಿಂಗಳ 24 ರಂದು ಸುಮಾರು 68 ರೂಪಾಯಿಗಳ ಸಮೀಪ ಮರು ಖರೀದಿಸುವ ಅವಕಾಶವನ್ನು ಒದಗಿಸಿತ್ತು. ಶುಕ್ರವಾರ 25 ರಂದು ಮತ್ತೆ ರೂ.76 ರ ಗಡಿ ದಾಟಿದೆ. ಆರಂಭದಲ್ಲಿ ಹೂಡಿಕೆ ನಂತರದಲ್ಲಿ ಸರಕು ಎಂಬಂತಹ detachment ಇದ್ದವರಿಗೆ ಪ್ರಮುಖ ಕಂಪನಿಗಳಾದ ಭಾರತಿ ಏರ್ ಟೆಲ್, ಟಾಟಾ ಕೆಮಿಕಲ್ಸ್ ನಂತಹ ಕಂಪನಿಗಳು ಲಾಭ ಗಳಿಕೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ
6.ಶಿಸ್ತು :ಹೂಡಿಕೆಯು ಉತ್ತಮ ಕಂಪನಿಯಲ್ಲಿದ್ದು, ಮೌಲ್ಯಾಧಾರಿತ ಖರೀದಿಯಾಗಿದ್ದಲ್ಲಿ ಪೇಟೆಯ ಏರಿಳಿತಗಳತ್ತ ಗಮನಹರಿಸದೆ ಕೇವಲ ಅವಕಾಶಕ್ಕಾಗಿ ಎದುರು ನೋಡಬೇಕು. ಇಂದಿನ ಪೇಟೆಗಳಲ್ಲಿ ನಾನಾ ರೀತಿಯ ವಹಿವಾಟುದಾರರು, ವಿತ್ತೀಯ ಸಂಸ್ಥೆಗಳು, ಸಾಹುಕಾರಿ ವ್ಯಕ್ತಿಗಳು ಭಾಗವಿಹಿಸುವುದರಿಂದ, ಹಾಗೂ Derivative ಪೇಟೆಯ ಚಟುವಟಿಕೆಯು, ಪ್ರತಿ ತಿಂಗಳ ಕೊನೆಯ ಗುರುವಾರ ಚುಕ್ತಾ ಆಗಬೇಕಾಗಿರುವುದರಿಂದ, ಹತ್ತಾರು ರಭಸದ ಏರಿಳಿತಗಳನ್ನು ಕಾಣಬಹುದಾಗಿದೆ. ಭಾರಿ ಕುಸಿತ ಕಂಡಂಥ ಕಂಪನಿಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಅದು ಷೇರಿನ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುವಂತೆ ಮಾಡುತ್ತದೆ. ಷೇರಿನ ಬೆಲೆಗಳು ಗರಿಷ್ಠದಲ್ಲಿದ್ದಾಗ ಅಲ್ಪ ಪ್ರಮಾಣದ ಲಾಭಕ್ಕೆ ತೃಪ್ತಿಪಟ್ಟು ನಗದೀಕರಿಸುವ ಶಿಸ್ತನ್ನು ರೂಢಿಸಿಕೊಳ್ಳುವುದು ಸೂಕ್ತ. ಕೈಲಿ ಹಣವಿದೆ ಎಂದು ಆತುರದಲ್ಲಿ ಮನಬಂದಂತೆ ಹೂಡಿಕೆ ನಿರ್ಧರಿಸದೆ, ಅವಕಾಶಕ್ಕಾಗಿ ಎದುರುನೋಡುವುದು ಒಳಿತು.
7.ನೆಮ್ಮದಿ: Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.
ಪ್ರತಿ ದಿನವೂ, ಪ್ರತಿಗಳಿಗೆಯೂ ಪೇಟೆಯಲ್ಲಿ ಲಾಭಗಳಿಸುವ ಬಗ್ಗೆ ಹೊಸ ಹೊಸ ಮಾಧರಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.