25.1 C
Karnataka
Monday, April 21, 2025
    Home Blog Page 15

    ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ

    ಕಳೆದ ಸರ್ತಿ ಇನ್ನೂ ಬಡಿಯದ ಹುಲ್ಲುಬಣವೆಯಿಂದ ನಾಕಾರು ಬಾಯಿ ಹುಲ್ಲು ಮೆದ್ದು ನಂತರ ಅದೂ ಬೇಸರವಾಗಿ ಗೇಟನ್ನು ಮುರಿಯಲು ಹೋಗಿ ಅಪ್ಪ ‘ಯಾಕಪ್ಪ ಮುರಿತೀಯಾ…ಮಣ್ಣು ನೆಚ್ಚಿ ಬಾಳ್ವೆ ಮಾಡೋ ನಮಗೂ ಕಷ್ಟ ನಷ್ಟ ಇರ್ತವೆ ಕಣೋ,ದಾಟುಕೊಂಡು ಹೋಗಬಾರದಾ’ಎಂದಾಗ ತಿರುಗಿ ನೋಡಿ ಕಾಂಪೌಂಡನ್ನು ಸ್ವಲ್ಪ ತ್ರಾಸದಲ್ಲೇ ದಾಟಿ ಆಚೆ ಹೋದ ನಮ್ಮ ಬೆನವಣ್ಣ ಆನೆ ಮಹಾರಾಜ ನಿನ್ನೆ ರಾತ್ರಿ ‌ಮತ್ತೆ ಅಪ್ಪನ ಮನೆಯ ಸೂರಿನ ಬದಿಯಲ್ಲೇ ಹಾದು ಹೋಗಿದ್ದಾನೆ.

    ರಾತ್ರಿ ಹತ್ತರ ಹೊತ್ತಿಗೆ ಅಪ್ಪನ ಚಿಳ್ಳೆಪಿಳ್ಳೆಗಳಾದ ಸೋನಿ ಕೀನ್ಯಾ ರಾಜ ಇತರೆ ನಾಯಿಗಳು ಬೊಗಳಿದ್ದು ಕೇಳಿ ಎಂದಿನಂತೆ ಮೇಲಿನ ಹೊಲದ ತೋಟದಲ್ಲಿ ಆನೆ ದಾಟ್ತಿರಬೇಕು ಅಂದುಕೊಂಡು ಮಾಮೂಲಿನಂತೆ ಪಟ್ಟಾಂಗ ಹೊಡಿತಾ ಕೂತಿದ್ದಾರೆ.ಯಾಕೋ ನಾಯಿಗಳ ಬೊಗಳುವಿಕೆ ಕಡಿಮೆಯಾಗಿ ದೊಡ್ಡದೊಂದು ಉಸಿರು ಕೇಳಿದಾಗ ಅಮ್ಮ ಮಲಗಿದ್ದ ಮಂಚದ ಪಕ್ಕದಲ್ಲಿರುವ ಕಿಟಿಕಿ ತೆಗೆದರೆ ಎರಡು ಕೈಯಾಚೆ ದೊಡ್ಡ ಹೆಬ್ಬಂಡೆಯಂತಹ ಒಂಟಿಸಲಗ ನಿಂತಿದೆ.ಅಮ್ಮನ ಮೈ ತಣ್ಣಗಾದಂತಾಗಿ ಅಲ್ಲೇ ಇದ್ದ ನನ್ ‌ಮಗ ಮತ್ತು ಅಣ್ಣನನ್ನು ಕೂಗಿದ್ದಾರೆ.ಇಬ್ಬರೂ ಕಿಟಿಕಿಯಲ್ಲಿ ನೋಡುವಷ್ಟರಲ್ಲಿ ಆನೆ ಸೋಲಾರ ಪ್ಯಾನಲ್ ಪಕ್ಕ ಹೋಗಿ ನಿಂತಿದೆ.ಸಣ್ಣಗೊಮ್ಮೆ ಸೊಂಡಿಲಿನಿಂದ ಮುತ್ತಿಟ್ಟರೂ ಸೋಲಾರು ಸೋತು ಶರಣಾಗ್ತದೆ.
    ಅದೇನೋ ಗೊತ್ತಿಲ್ಲ. ಅಪ್ಪನ ಎಂದಿನ ಗದರುವಿಕೆಯ ಸದ್ದಿಗಾಗಿ ಆಲಿಸಿದಂತೆ ಮತ್ತೆ ಸುತ್ತ ನಿಂತು ನೋಡಿದೆ.ಅಪ್ಪಂಗೆ ಸ್ವಲ್ಪ ಮೈ ಹುಷಾರಿಲ್ಲದೆ ಆ ಮಳೆಯ ಅಬ್ಬರದಲ್ಲಿ‌ ಜೋರು ಧ್ವನಿಯಲ್ಲಿ ಗದರಲಾಗದೆ ‘ನೀನೆ ಸರಿ ತಪ್ಪು ನೋಡ್ಕೊಂಡು ಹೋಗಪ್ಪ’ ಅಂತ ಮನಸಲ್ಲೇ ಹೇಳಿದ್ರಂತೆ.

    ಈ ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ ಕೇಳಿರಬಹುದು ಕಾಣುತ್ತೆ.ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿ ಮತ್ತೆ ಅಲ್ಲಿಂದ ಎರಡು ಹೆಜ್ಜೆ ಮುಂದೆ ಬಂದು ನಮ್ಮ ಸೇದೋ ಬಾವಿಯ ಬಳಿ ನಿಂತು ಅಪ್ಪನ ಧ್ವನಿ ಗಾಗಿ ಎಂಬಂತೆ ಕಾಯ್ದಿದೆ.
    ಅಪ್ಪಂದು ಈ ಬಾರಿಯೂ ಎಂದಿನಂತೆ ಮೌನ ಸಂಭಾಷಣೆ.ಅಲ್ಲಿಂದ ಎರಡು ಹೆಜ್ಜೆ ಆಚೆ ಸ್ವಲ್ಪ ಇಕ್ಕಟ್ಟು.

    ಕಾರಣ ಅಣ್ಣ ತನ್ನ ಎಕ್ಸ್ ಯು ವಿ ಕಾರನ್ನು ಅದೇ ಬದಿಯಲ್ಲಿ ನಿಲ್ಲಿಸಿದ್ದ.ಅಲ್ಲೂ ನಮ್ಮ ಆನೆಯಣ್ಣನಿಗೆ ಕಾರನ್ನು ಸ್ವಲ್ಪ ಮಾತಾಡಿಸುವ ಅಂತ ಮನಸ್ಸಾಗಿದ್ದಿದ್ರೆ ಎನೋ ಎಂತೊ.
    ಅಲ್ಲಿಂದ ಕಾರಿಗೂ ತಾಗದಂತೆ ಸೋಲಾರಿಗೂ ನೋವಾಗದಂತೆ, ಬಾವಿ ಕಟ್ಟೆಗೂ ತೊಂದರೆಯಾಗದಂತೆ ಹೆಜ್ಜೆ ಹಾಕಿ ಮುಂದೆ ಬಂದಿದೆ.ಅಲ್ಲಿಂದ ಆನೆ ಮಹಾರಾಜ ಹನ್ನೆರಡು ಹೆಜ್ಜೆ ಹಾಕಿದರೆ ಹೊರ ಗೇಟು ಸಿಕ್ತದೆ.ಅಲ್ಲಿಂದ ಸುತ್ತಕೂ ಕಾಂಪೌಂಡು.

    ಸಂಜೆಯಾಗುತ್ತಲೂ ಒಂಟಿಮನೆಯಾದ್ದರಿಂದ ಗೇಟಿಗೆ ದೊಡ್ಡ ಬೀಗ ಹಾಕಿರ್ತಾರೆ.
    ಬೆನವಣ್ಣ ಅಪ್ಪನ ಮೌನ ಬೇಡಿಕೆಗೆ ಈಗ ಎಂತ ಮಾಡೋದು ಅಂತ ಸ್ವಲ್ಪ ಯೋಚಿಸಿ ಬೀಗ ಮಾತ್ರ ಮುರಿದು ಮೆಲ್ಲಗೆ ಗೇಟು ಅಲುಗಿಸಿದ್ದಾನೆ.ಮನೆಯ ಕಡೆಗೆ ಸ್ವಲ್ಪ ತಗ್ಗಿರುವ ಕಾರಣ ಗೇಟಿನ ಒಂದು ಬದಿ ತೆರೆದು ಕೊಂಡಿದೆ.ಸೀದಾ ಆಚೆ ಹೋಗಿ ಒಂದ್ನಿಮಿಷ ನಿಂತು ತಿರುಗಿ ನೋಡಿ ಎಡಕ್ಕೆ ಹೊರಳಿ ತೋಟದ ರಸ್ತೆಯಲ್ಲಿ ಆಚೆ ಎಲ್ಲೋ ಹೋಗಿದ್ದಾನೆ.

    ಅಮ್ಮ ಬೆಳಿಗ್ಗೆ ಇದನ್ನು ಹೇಳುವಾಗ ಆನೆಯ ಬುದ್ಧಿವಂತಿಕೆ ,ನೆನಪಿನ ಶಕ್ತಿ ಮತ್ತು ಅದರ ಮೆದುಳಿನಲ್ಲಿರುವ ಕಂಪಾಸ್ ವ್ಯವಸ್ಥೆಯ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ನನಗೆ ಮತ್ತೊಮ್ಮೆ ಮನೆ ಬಾಗಿಲಿಗೆ ಬಂದು ಹೋದ ಗಜರಾಜನ ಬಗ್ಗೆ ಪ್ರೀತಿಯುಕ್ಕಿತು.

    ಕಳೆದ ವಾರದಲ್ಲಿ ಮನೆಯಿಂದ ಕೆಳಗಿರುವ ಬಾಳೆ ತೋಟಕ್ಕೆ ನುಗ್ಗಿ ಹತ್ತಿಪ್ಪತ್ತು ಬಾಳೆಯ ಗೊನೆಗಳನ್ನು ಕಿತ್ತು ಬಾಳೆಯ ಕಂದುಗಳನ್ನೂ ಎಳೆದಾಡಿ ಅಡಾವುಡಿ ಮಾಡಿದ್ದಕ್ಕೆ ಅಪ್ಪ ಫೋನ್ ಮಾಡಿ ನನ್ ಹತ್ರ ಬೈಕೊಂಡಿದ್ರು.’ಮದುವೆಗೆಂತ ಎಂತ ಚೆನ್ನಾಗಿ ಬಾಳೆ ಗೊನೆ ತೂಗಾಡಿದ್ದವು.ಈ ನನ್ಮಗಂದು ಬಂದು ಎಲ್ಲನೂ ಹುಡಿ ಎಬ್ಸಿದೆ”ಅಂದಿದ್ರು.

    ‘ಅಯ್ಯೋ ಅಪ್ಪಾಜಿ..ಮದುವೆ ಇರೋದು ನವೆಂಬರ್ ಗೆ..ಈ ಬಾಳೆಗೊನೆ ಅಲ್ಲಿಯವರೆಗೂ ಎಲ್ಲಿ ಉಳಿತಿದ್ವು.ಸುಮ್ನಿರಿ ನೀವೊಂದು’ ಎಂದಿದ್ದೆ.

    ಅಪ್ಪ ಆನೆಗಳಿಗೆ ಬಯ್ಯುವಾಗಲೂ ಅದೆಂತದೋ ಅಕ್ಕರೆಯನ್ನು ತುಂಬ್ಕೊಂಡೇ ಬಯ್ತಾರೆ.
    ಅವೂ ಕೂಡಾ ‘ನೀ ಬೆಳೆದಿರೋದ್ರಲ್ಲಿ ಒಂದು ಐದು ಪರ್ಸೆಂಟು ನಾವು ಮೇಯಕ್ಕೇ ಇರೋದು’ ಅಂತ ವರ್ಷ ವರ್ಷವೂ ಚಂಡಿ ಹಿಡಿದು ತೋಟ ನುಗ್ತವೆ.
    ….
    ಹಾಗಂತ ಸಮಸ್ಯೆ ಇಷ್ಟು ಸಲೀಸಾಗಿ ಮಾರ್ಧವವಾಗಿ ಮುಗಿದು ಹೋಗ್ತದೆ ಅಂತಲ್ಲ.
    ಆಲೂರು ಸಕಲೇಶಪುರ ತಾಲ್ಲೂಕಿನಲ್ಲಿ ಆನೆಯಿಂದ ಆಗ್ತಿರುವ ಸಾವಿನ ಪ್ರಮಾಣ ವರ್ಷವರ್ಷವೂ ಜಾಸ್ತಿಯಾಗ್ತಿದೆ.ಬೆಳೆ ಹಾನಿಗೆ ಸರ್ಕಾರ ಕೊಡುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತಿದೆ.

    ಅಪ್ಪನ ಮನೆಯ ಬಳಿಯೂ ಅಸ್ಸಾಮಿನಿಂದ ಬರುವ ವಲಸೆ ಕಾರ್ಮಿಕರ ಮಕ್ಕಳು ಅಷ್ಟಗಲಕ್ಕೂ ಹೊತ್ತಿನ ಪರಿವೆಯಿಲ್ಲದೆ ಆಡುತ್ತಿರುತ್ತವೆ. ಮನೆಗೆ ಸಂಜೆ ಮೇಲೆ ಯಾರೇ ಬರಲಿಕ್ಕೂ ಭಯ ಬೀಳ್ತಾರೆ.ನಾವು ಕೂಡ ಬೆಳಕಿದ್ದ ಹಾಗೇ ಮನೆ ಸೇರಿಕೊಳ್ಳುವ ಅನಿವಾರ್ಯತೆ.

    ಆನೆಗಳ ಮನಸ್ಸು ಹೀಗೇ ಎಂದು ಹೇಳಲಾಗದು.ಅಲ್ಲೆಲ್ಲೋ ಬೆದೆಗೆ ಬಂದ ಹೆಣ್ಣಾನೆ ಇದ್ದರೆ ಸುತ್ತಿನ ನಲ್ವತ್ತು ಕಿಮೀ ವರೆಗಿನ ಇತರೆ ಗಂಡು ಆನೆಗಳಿಗೆ ಬೆದೆಯ ಆನೆ ಸ್ರವಿಸುವ ಫಿರಮೋನ್ ಮನಸ್ಸನ್ನು ತಲ್ಲಣಗೊಳಿಸುತ್ತದೆ.ಅದರ ಬುದ್ದಿ ಸ್ಥಿಮಿತದಲ್ಲಿರುವುದಿಲ್ಲ.ಇದು ಪ್ರಕೃತಿ ಸಹಜ ಕ್ರಿಯೆ.ಆಗ ಅವುಗಳನ್ನು ಕೆಣಕಿದಂತೆನಿಸುವ ಯಾವ ಘಟನೆಗಳಿಗೂ ಅವುಗಳ ಪ್ರತಿಕ್ರಿಯೆ ವಿಪರೀತದ್ದೆ.

    ಮನುಷ್ಯ ನಿರ್ಮಿತ ವಿಕೃತಿಗಳೂ ದಿನೇದಿನೇ ಹೆಚ್ಚುತ್ತಿವೆ.ನೆಟ್ಟಗೆ ನಿಂತಿದ್ದ ಬೆಟ್ಟ ಹತ್ತಾರು ವರ್ಷಗಳಲ್ಲಿ ಜೆಸಿಬಿ ಅಗೆದು ಅರ್ಧ ಖಾಲಿಯಾಗಿ ಸಪ್ಪೆ ಮುಖ ತೋರುತ್ತಿದೆ.ಎಲ್ಲೊ ಇದ್ದ ಕಾಲುಹಾದಿ ,ನೀರಿನ ಝರಿ,ತಗ್ಗು ತೋಡು,ದೊಡ್ಡದಾದ ಶತಮಾನ ಹಳೆಯ ಮರ ಎಲ್ಲವೂ ಅರ್ಥಮೂವರ್ಸ್ ಗಳ ದೊಡ್ಡ ಬಾಯಿಗೆ ಆಹಾರವಾಗಿ ವರ್ಷ ಬಿಟ್ಟು ನೋಡುವಾಗ ಇದು ನಮ್ಮೂರೇನಾ ಎನ್ನುವಂತೆ ರೂಪು ಕಳೆದುಕೊಳ್ಳುತ್ತಿದೆ.

    ನಿರಂತರವಾಗಿ ಬದಲಾಗುತ್ತಿರುವ ಲ್ಯಾಂಡ್ ಸ್ಕೆಪಿನಿಂದಾಗಿ ಆನೆಗಳು ಗೊಂದಲಕ್ಕೊಳಗಾಗುತ್ತಿವೆ.ಮೂರು ತಲೆಮಾರುಗಳಿಂದ ತಾವು ತಿರುಗಾಡಿದ ಹಾದಿಯನ್ನು ಕರಾರುವಾಕ್ಕಾಗಿ ನೆನಪಿಟ್ಟುಕೊಳ್ಳುವ ಆನೆಯಲ್ಲಿರುವ ಮೆದುಳಿನ ಸಂಕೀರ್ಣ ವ್ಯವಸ್ಥೆ ತಮ್ಮ ಹಾದಿ ಕಾಣೆಯಾದ ಕಾರಣ ಸಿಕ್ಕಸಿಕ್ಕಲ್ಲಿ ದಾರಿ ಕಂಡುಕೊಳ್ಳುತ್ತಿವೆ.ಇನ್ನೂ ಇತ್ತೀಚಿನ ತಲೆಮಾರುಗಳ ಆನೆಮರಿಗಳು ಹುಟ್ಟಿರುವುದೇ ಕಾಫಿ ತೋಟಗಳಲ್ಲಿ. ಅವುಗಳ ಮಾಮೂಲು ತಿರುಗಾಟವೂ ಊರಿನ ಒಳಗೇ.ಹಾಗಾಗಿ ಈ ತಲೆಮಾರಿನವು ನಾವು ಊರಿಗೇ ಸೇರಿದವುಗಳು ಎಂದೇ ಅಂದುಕೊಂಡಿರುತ್ತವೆ.

    ಆನೆಧಾಮ ಯೋಜನೆ ಪ್ರತಿ ಒಂದೂವರೆ ವರ್ಷಕೊಮ್ಮೆ ಧಿಡೀರನೆ ಮುನ್ನೆಲೆಗೆ ಬಂದು ನಿಧಾನವಾಗಿ ಹಿಂಜರಿಯುತ್ತಿದೆ.ಇಚ್ಛಾಶಕ್ತಿಯ ಕೊರತೆ ಅಂತ ನಾವು ಬಾಯಿ ಹರಿಯುವವರೆಗೂ ಒದರುತ್ತಿದ್ದೇವೆ.ಆನೆಯೆಂಬ ಮಹಾ ಜೀವದ ಒಂದು ದಿನ ಓಡಾಟದ ದೂರ ಅಂದಾಜು ಸುಮಾರು ಅರುನೂರು ಕಿಮೀ ಅಂತ ಹೇಳುವುದಿದೆ.ಅವಕ್ಕೆ ಧಾಮ ಎಂದಾದಲ್ಲಿ ಬೇಕಾದ ಅತ್ಯಂತ ವಿಶಾಲವಾದ ಜಾಗ ಯಾವುದು ಎನ್ನುವ ಗೊಂದಲದ ಜೊತೆಗೆ ಆನೆಧಾಮದ ಸಾಧಕಬಾಧಕಗಳ ಕುರಿತೂ ಸಾಕಷ್ಟು ಗೊಂದಲಗಳಿವೆ.

    ಕಾಫಿತೋಟದಲ್ಲಿ ಸಮೃದ್ಧವಾಗಿ ಸಿಗುತ್ತಿರುವ ಪ್ರೋಟೀನ್ ಭರಿತ ಆಹಾರ ಮತ್ತು ನೀರಿನ ಮೂಲಗಳಿಂದ ಆನೆಗಳ ವಂಶಾಭಿವೃದ್ಧಿಯೂ ಈಚಿನ ದಶಕಗಳಲ್ಲಿ ವೇಗವಾಗಿ ವೃದ್ಧಿಸಿದೆ.
    ನಾಲ್ಕು ವರ್ಷದಾಚೆ ನಮ್ಮಲ್ಲಿ ನಲ್ವತ್ತೆರಡು ಆನೆಗಳಿವೆ ಎಂದು ಅಂದಾಜಿಸಲಾಗಿತ್ತು.ಈಚಿನ ಗಣತಿ ನಡೆದಿದೆಯಾ.ನಡೆದರೂ ನಿಜವಾದ ಅಂಕಿಅಂಶ ಬಿಡುಗಡೆ ಮಾಡಿದರೆ ಜನ ಭೀತರಾಗುವ ಆತಂಕದಿಂದ ಮುಚ್ಚಿಟ್ಟಿದ್ದಾರಾ ಗೊತ್ತಿಲ್ಲ.

    ಇದೆಲ್ಲದರ ನಂತರವೂ ಒಂಟಿಮನೆಗಳು ಆನೆಯ ಕಾರಣದಿಂದಾಗಿ ಸುರಕ್ಷಿತವಾಗಿದ್ದಾವೆ ಅಂತ ಖಂಡಿತವಾಗಿ ಹೇಳಬಹುದು. ಎಷ್ಟೇ ಬೆಳೆ ಹಾಳು ಮಾಡಿದರೂ ಆನೆ ಎಂದೊಡನೆ ಭಕ್ತಿಯ ಜೊತೆಗೆ ಪ್ರೀತಿಯೂ ಇದ್ದೇ ಇದೆ.ಆನೆಯೊಂದು ಕಾರಣಾಂತರಗಳಿಂದ ದೈವಾಧೀನವಾದರೆ ಅದನ್ನು ವಿಧಿಪೂರ್ವಕವಾಗಿ ಸಂಸ್ಕಾರ ಮಾಡುವುದು ನಮ್ಮಲ್ಲಿ ಸಾಮಾನ್ಯ.
    ಅಪ್ಪ ಹೇಳುವ ಹಾಗೆಯೇ ಬಹುತೇಕರು ‘ಈ ನನ್ಮಗಂದು’ ಅಂತ ಗದರುತ್ತಾರೆ ಅಷ್ಟೇ. ಆನೆಯ ಕಾರಣಕ್ಕೆ ಸಾವುನೋವು ಸಂಭವಿಸಿದಾಗ ಮನಸ್ಸು ಎಂದಿನಂತೆ ಕುಸಿಯುತ್ತದೆ.

    ಹೊಂದಾಣಿಕೆ ಬಾಳುವೆ ಮಾಡಿ ಎನ್ನುವ ಪ್ರಭುಗಳ ಹೇಳಿಕೆ ನಗೆಪಾಟಲಿನ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿ ಆಗಾಗ ರಸ್ತೆ ತಡೆ ಚಳವಳಿ ನಡೆಯುತ್ತವೆ.ನಿಮ್ಮ ಪಾಡು ನಿಮ್ಮದು ನಮ್ಮ ಡೌಲು ನಮ್ಮದು ಅಂತಿದ್ದಾರೆ ರಾಜಕಾರಣಿಗಳು..

    ಆನೆಯಣ್ಣ ಬಂದರೂ ಹೋದರೂ ತೊಂದರೆ ಕೊಡದಂತೆ ಸಾವರಿಸಿಕೊಂಡು ಹೋಗು ಅಂತಷ್ಟೆ ಬೇಡಿಕೊಳ್ತಾ ಸದ್ಯಕ್ಕೆ ದ್ವೀಪದಂತಾಗಿರುವ ತವರಿನ ಫೋಟೋ ನೋಡ್ತಾ ಕೂತಿದ್ದೇನೆ.

    ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ

    ಸುಮಾ ವೀಣಾ

    ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ–  ಜನ್ನ ಕವಿಯ ಯಶೋಧರ ಚರಿತೆಯಿಂದ ಪ್ರಸ್ತುತ ಸಾಲನ್ನು ಆರಿಸಲಾಗಿದೆ.

    ಜನ್ನ ಕವಿ

    ಹೀನ ಹೃದಯಿಗಳು ಎಂದು ಸಾಬೀತಾದ ಮೇಲೆ ಅವರು ಸಭ್ಯರು ಎಂದು ಒಪ್ಪಿಕೊಳ್ಳುವುದು ಕಷ್ಟ. ನಿರಂತರ ಪಾಪಕೃತ್ಯಗಳಲ್ಲಿ ತೊಡಗುವವರನ್ನು  ಪುಣ್ಯಾತ್ಮರು ಎಂದು   ಒಪ್ಪುವುದು ಅಸಾಧ್ಯದ ಮಾತು.  ಅವರನ್ನು  ಒಳ್ಳೆಯವರು ಎಂದು ಬಿಂಬಿಸುವುದು ಕ್ರೂರ ಮೃಗಕ್ಕೆ  ಮುನಿಯ ವೇಷ ತೊಡಿಸಿದ ಹಾಗಾಗುತ್ತದೆ ಎಂದು ಬರೆದಿದ್ದಾರೆ. ದರ್ಪಣ ಪರಿಶುದ್ಧತೆಯ ಸಂಕೇತ  ಹಾಗೆ  ತುಪ್ಪ  ತೊಡಕಿನ ಸಂಕೇತವಾಗಿ ಇಲ್ಲಿ ಬಂದಿದೆ.

    ಅಭಯ ರುಚಿ ಮತ್ತು ಅಭಯಮತಿ ಇಬ್ಬರೂ ಮಾರಿದತ್ತನ ಮನವೊಲಿಸುವ ಸಂದರ್ಭದಲ್ಲಿ ಆಡಿದ ಮಾತುಗಳಿವು. ಮಾರಿದತ್ತನೆಂಬ ಮಂತ್ರಿ ಮಾರಿದೇವತೆಗೆ ಬಲಿಕೊಡಲು ಅಭಯರುಚಿ ಮತ್ತು ಅಭಯಮತಿ ಎಂಬ  ಇಬ್ಬರು  ಅಣ್ಣ ತಂಗಿಯರನ್ನು ಎಳೆ ತರುತ್ತಾನೆ.  ಮಾರಿದತ್ತ  ಆ ಮಕ್ಕಳನ್ನು ಅವರ ಪೂರ್ವಪರಗಳನ್ನು ಕೇಳುತ್ತಾನೆ.  ಆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅಧರ್ಮವನ್ನೇ ಪಾಲಿಸುತ್ತಿರುವವರಿಗೆ ನಮ್ಮ ನಿರ್ಮಲವಾದ ಚರಿತ್ರೆ ರುಚಿಸುವುದಿಲ್ಲ.  ಗುಣಗಳು ಅನ್ನುವ  ರತ್ನದ ಆಭರಣಗಳು ಕಟ್ಟ  ಅರಸರಿಗೆ ಸೊಗಸವು  ಅದು  ತುಪ್ಪ ಸವರಿದ ಕನ್ನಡಿಯಲ್ಲಿ ಪ್ರತಿಬಿಂಬವನ್ನು   ನೋಡುವ ವ್ಯರ್ಥ ಪ್ರಯತ್ನದಂತೆ ಎನ್ನುತ್ತಾನೆ.

     ಜೈವಿಕ ಗುರುತನ್ನು ಕಳೆದು ನಾವು ಇನ್ಯಾವುದೇ ವೇಷ ಹಾಕಿಕೊಂಡರೂ ಅದು ತಾತ್ಕಾಲಿಕವೇ.   ಹಾಗೆ   ಧರಿಸುವ ವೇಷ    ಅಶಾಶ್ವತ. ಹಾಗೆ ಮೂಲತಃ ಕೆಟ್ಟ ಗುಣವನ್ನು ಹೊಂದಿರುವವರು ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಒಳ್ಳೆಯವರು ಎಂದು ನಟಿಸುವುದು ಮೇಲ್ನೋಟಕ್ಕೆ ಬೇಗ ತಿಳಿಯುತ್ತದೆ. 

    ಷಡ್ರಸಾನ್ನವನ್ನು   ತಿಂದರೂ ಉರ ಹಂದಿ ಹೊಲಸು ಕಂಡಾಗ   ಜಿಗಿದು ತನ್ನ ಮೂಲತನವನ್ನು ಅದು ತೋರಿಸುತ್ತದೆ ಅದು ಅದರ ಗುಣ ಬದಲಾವಣೆ ಮಾಡಲು ಸಾದ್ಯವಿಲ್ಲ.  ಅಂತೆಯೇ   ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ  ಎಂಬುದನ್ನು . “ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ” ಎಂಬ ಮಾತು ಹೇಳುತ್ತದೆ.

    ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ; ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು

    BENGALURU JULY 17

    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, 91 ಪಾಲಿಟೆಕ್ನಿಕ್‌ಗಳು ಮತ್ತು 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಸರಕಾರಿ ನಿಗದಿತ ನಾನಾ ಶುಲ್ಕಗಳನ್ನು ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುವು ನೀಡಿ, ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು ಮತ್ತು ಈ ಮೂಲಕ ಆಯಾಯ ಸಂಸ್ಥೆಗಳು ಸುಗಮವಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲು ಅವಕಾಶ ನೀಡಬೇಕೆನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ, ಸರ್ಕಾರಿ ಶುಲ್ಕಗಳ ಸದ್ಬಳಕೆಗೆ ಕ್ರೋಡೀಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ’ ಎಂದಿದ್ದಾರೆ.

    ಇದಕ್ಕಾಗಿ ಮೇಲ್ಕಂಡ ಸಂಸ್ಥೆಗಳ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಇದರಲ್ಲಿ ಐಕ್ಯೂಎಸಿ ಸಂಚಾಲಕರು, ನಿಕಾಯವಾರು ಹಿರಿಯ ಉಪನ್ಯಾಸಕರು, ಅಧೀಕ್ಷಕರು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸದಸ್ಯರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

    ಈ ಸಮಿತಿಗಳು ಆಯಾ ಶೈಕ್ಷಣಿಕ ವರ್ಷದ ಜೂನ್‌ನಲ್ಲಿ ರಚನೆಗೊಂಡು, ಆಗಸ್ಟ್‌ ಹೊತ್ತಿಗೆ ಈ ಶುಲ್ಕ ಬಳಕೆಗೆ ಸಂಬಂಧಿಸಿ ವಾರ್ಷಿಕ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರ ಕಚೇರಿಗೆ ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಆಯುಕ್ತರ ಕಚೇರಿಯು ಸೆಪ್ಟೆಂಬರ್‍‌ ಹೊತ್ತಿಗೆ ಒಪ್ಪಿಗೆ ನೀಡಲಿವೆ. ಇದಕ್ಕಾಗಿ ಈ ಹಂತದಲ್ಲೂ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯ ಒಂದು ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.

    ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ, ಬೋಧನೆ, ಪ್ರಯೋಗಾಲಯ, ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ಪ್ರಮಾಣಪತ್ರ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ಎನ್‌ಎಸ್‌ಎಸ್‌, ಗ್ರಂಥಾಲಯ ಬಳಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಾಲೇಜು ಮ್ಯಾಗಜೈನ್, ಪರಿಚಯ ಪುಸ್ತಕ ಮತ್ತು ಗುರುತಿನ ಚೀಟಿ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಹೊಸ ಆದೇಶದ ಪ್ರಕಾರ, ಈ ಶುಲ್ಕಗಳ ಹೆಚ್ಚಿನ ಭಾಗವನ್ನು ಆಯಾ ಕಾಲೇಜುಗಳಿಗೇ ಕೊಡಲಾಗುವುದು. ಈ ನಿಧಿಯನ್ನು ಬಳಸಿಕೊಂಡು ಕಟ್ಟಡಗಳ ನಿರ್ವಹಣೆ, ದುರಸ್ತಿ, ಗ್ರಂಥಾಲಯಕ್ಕೆ ಪುಸ್ತಕ ಮತ್ತು ನಿಯತಕಾಲಿಕೆಗಳ ಖರೀದಿ, ಪ್ರಯೋಗಾಲಯಗಳ ಉಪಕರಣ, ಇಂಟರ್‍‌ನೆಟ್‌, ಕಚೇರಿ ವೆಚ್ಚ, ಎನ್‌ಎಸ್‌ಎಸ್‌ ಘಟಕ ಸ್ಥಾಪನೆ, ಕಂಪ್ಯೂಟರ್‍‌, ಸಿ.ಸಿ. ಕ್ಯಾಮರಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಹೊಸ ನಿಯಮದ ಪ್ರಕಾರ, ಆಯಾ ಕಾಲೇಜುಗಳು ಈ ರೀತಿಯಲ್ಲಿ ಸಂಗ್ರಹವಾಗಿರುವ ನಿಧಿ ಮತ್ತು ಅವುಗಳ ಖರ್ಚುವೆಚ್ಚದ ರೀತಿಗಳನ್ನು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಜೊತೆಗೆ, ಎಲ್ಲ ರೀತಿಯ ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕ ಮಾತ್ರವೇ ಮಾಡಬೇಕು. ಇದರಲ್ಲಿ ಭೌತಿಕ ಸ್ವರೂಪದ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಬ್ಯಾಂಕುಗಳ ಕ್ಲರಿಕಲ್ ಹುದ್ದೆಗೆ ಅರ್ಜಿ ಆಹ್ವಾನ

    ಬ್ಯಾಂಕ್  ನಲ್ಲಿ ಕ್ಲರ್ಕ್ ಹುದ್ದೆಯ ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  6,035 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    2019-20 ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 12,075 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2020-21 ರಲ್ಲಿ 2557 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021-22 ರಲ್ಲಿ 7,855 ಹುದ್ದೆಗಳಿಗೆ  ನೇಮಕಾತಿ  ಅಧಿಸೂಚನೆ ಹೊರಡಿಸಿತು. ಇದೀಗ 2022-23 ರಲ್ಲಿ 6,035 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖ ವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

    ರಾಜ್ಯದ  12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ಕೆನರಾ ಬ್ಯಾಂಕ್ 140,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 156, ಯೂಕೋ ಬ್ಯಾಂಕ್ 13, ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 2, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 36, ಬ್ಯಾಂಕ್ ಆಫ್ ಇಂಡಿಯಾ 6, ಪಂಜಾಬ್ ನ್ಯಾಷನಲ್ ಬ್ಯಾಂಕ್ 5, ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಹೀಗೆ ಒಟ್ಟಾರೆ ಕರ್ನಾಟಕದಲ್ಲಿ 358 ಹುದ್ದೆಗಳಿವೆ.(ಟೇಬಲ್ ಹಾಕಿ )

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯುಹೊಂದಿರಬೇಕಾಗುತ್ತದೆ.(ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ(InformationTechnology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು)

    ಗಮನಿಸಿ: ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

    ಒಂದು ವೇಳೆ ಆಯ್ಕೆಯಾದಲ್ಲಿ, ಅಂತಹ ಅಭ್ಯರ್ಥಿಗಳು 21 ನೇ ಜುಲೈ 2022 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆ ಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆಯ  ದಿನಾಂಕ: ಜುಲೈ  1 ರಿಂದ ಜುಲೈ 21 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಆ ಬ್ಯಾಂಕ್ ಗಳ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆ ಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ.

    ಕೈಬರಹದ ಘೋಷಣೆಯ ಪಠ್ಯ ಹೀಗಿದೆ-“ನಾನು,_______ (ಅಭ್ಯರ್ಥಿಯ ಹೆಸರು),ಈ ಮೂಲಕ ನಾನು ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ, ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

    ಮೇಲೆ ತಿಳಿಸಿದ ಕೈ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

    ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್‌ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆಸೆಪ್ಟೆಂಬರ್ 2022

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆಸೆಪ್ಟೆಂಬರ್ಅಕ್ಟೋಬರ್, 2022

    ವಯೋಮಿತಿ:

    01.07.2022 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.07.2022 ಕ್ಕೆ 28 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.07.1994 ಕ್ಕಿಂತ ಮುಂಚಿತವಾಗಿ ಮತ್ತು 01.07.2002 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು  ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್‌ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ಹೆಚ್ಚಿನಮಾಹಿತಿಗೆವೆಬ್: www.ibps.in ಭೇಟಿ ನೀಬಹುದು.

    ಅಣಬೆಯ ರುಚಿ ತಿಂದವರೇ ಬಲ್ಲರು

    ಆಷಾಡದ ಮಳೆಗೆ ಬಿಡುವು ಕೊಡುವ ಉಮೇದಿರುವುದಿಲ್ಲ.ಜೋ ಎನ್ನುವುದನ್ನು ಹೊರತುಪಡಿಸಿದರೆ ಜೀರುಂಡೆಗಳ ಜೀಗುಟ್ಟುವಿಕೆ ಮಾತ್ರ ಸದ್ಯ ನನ್ನ ಮನೆ ಸುತ್ತ ಕೇಳ್ತಿರೋ ಸದ್ದು.ಹೊರಗೆ ಕಾಲಿಟ್ಟರೆ ಜಾರಿಕೆ.ಮಳೆ ಶುರುವಾಗಿ ಇಪ್ಪತ್ತು ದಿನ ಅಯ್ತು. ಅಂಗಳದಲ್ಲಿ ಪಾಚಿ ಬೆಳೆದು ಹಸಿರುಗಟ್ಟಿಯಾಗಿದೆ.ಇಷ್ಟು ಸಣ್ಣ ಅವಧಿಯಲ್ಲಿ ಜೀವ ಜಿನುಗುವುದು ನಂಗೆ ಯಾವತ್ತಿಗೂ ಅಚ್ಚರಿಯೇ.

    ಅಂಗಳ ದಾಟಿ ಆಚೆಗೆ ಹೋದರೆ ಅಣುವಗಲದ ಎಲೆ ಹರವಿಕೊಂಡ ಧಿಮಾಕಿನ ಪುಟಾಣಿ ಸಸಿಗಳು ‘ಹೆಂಗೆ ನಾವು’ ಅಂತಿದ್ದಾವೆ !ಕರಗಿದ ಮರದ ಬೊಡ್ಡೆಯ ಮೇಲೆಲ್ಲ ಮೊಲ್ಲೆ ಹೂಚೆಲ್ಲಿದಂತೆ ಅಣಬೆ! ಅವು ತಿನ್ನುವ ಅಣಬೆಗಳಾ ಕಹಿ ಜಾತಿಯವಾ ನಂಗೊಂದೂ ಗೊತ್ತಾಗಲ್ಲ. ಕೆಲಸದವರು ಬಂದಾಗ ಮಾತ್ರ ‘ಯೇ ಎಷ್ಟ್ ಸರ್ತಿ ಹೇಳ್ಕೊಟ್ರು ನಿಮಗ ತಿಳಿಯಕಿಲ್ಲ ಹೋಗತ್ಲಗಿ’ ಅಂತ ಹುಸಿ ಸಿಟ್ಟು ತೋರಿಸ್ತಾರೆ.

    ಅಮ್ಮ ಚಿಕ್ಕಂದಿನಿಂದಲೂ ಹೇಳಿಕೊಟ್ಟ ಪ್ರಕಾರ ‘ಅಣಬೆ ಮುಟ್ಟುವುದು ಉಣ್ಣುವುದು ಎರಡೂ ಮಾಂಸ ತಿಂದ ಹಾಗೆ’. ಇಷ್ಟು ದೊಡ್ಡವಳಾಗಿ(?) ಅಷ್ಟಿಷ್ಟು ಓದಿಕೊಂಡು ಅಣಬೆಯೂ ಸಾಮಾನ್ಯ ಸಸ್ಯ ಜಾತಿಗೆ ಸೇರಿದ್ದು,ಪತ್ರ ಹರಿತ್ತು ಇರುವುದಿಲ್ಲ ಅಷ್ಟೇ ಅಂತ ಗೊತ್ತಾದ ಮೇಲೂ ಅಣಬೆಯನ್ನು ಮುಟ್ಟುವಾಗ ತುಸು ಹಿಂಜರಿಕೆ. ಮನೆಯ ಉಳಿದವರೆಲ್ಲರೂ ಅಮ್ಮ ಕಲಿಸಿದ್ದನ್ನು ಮೀರಿ ಅಣಬೆಯ ಜೊತೆಗೆ ಮೊಟ್ಟೆ ಗಿಟ್ಟೆ ತಿನ್ನುವುದನ್ನು ಸಲೀಸು ಮಾಡಿಕೊಂಡರಾದರೂ‌ ನಂಗೆ ಅದಿನ್ನೂ ಒಗ್ಗಿಲ್ಲ.

    ಅಪ್ಪ ಮಾತ್ರ ಮಳೆಗಾಲ ಬಂತು ಅಂದರೆ ಅಮ್ಮನ ಈ ಕಂತೆ ಪುರಾಣಗಳನ್ನೆಲ್ಲ ಟ್ರಂಕಿನೊಳಗಿಟ್ಟು ಪ್ರತಿವರ್ಷವೂ ಅಣಬೆ ಹುಟ್ಟುವ ಅದೇ ಜಾಗವನ್ನು ಗುರುತಿಟ್ಟುಕೊಂಡು ಅವು ಅರಳುವ ಮುನ್ನ ಹೂವಿನಷ್ಟೇ ಜೋಪಾನವಾಗಿ ಬಿಡಿಸಿಕೊಂಡು ತರ್ತಾರೆ.ತಂದದನ್ನು ಅಮ್ಮ ಹಾಗೆಲ್ಲ ಒಳಗಿಡಲಿಕ್ಕೆ ಬಿಡೋರಲ್ಲ.ಹಿಂದುಗಡೆಯ ಕಾಯಿ ಸುರಿಯುವ ರೂಮಿನಲ್ಲಿ ಒಂದು ಬಟ್ಟೆ ಹಾಸಿ ಅದರಲ್ಲಿ ಸೋಸಿಕೊಳ್ಳಿ ಅಂತ ಆಜ್ಞೆ ಬರ್ತದೆ.ಅಣಬೆ ಸೋಸುವಾಗಿನ ಅಪ್ಪನ ಏಕಾಗ್ರತೆಯನ್ನು ನೋಡಬೇಕು.

    ಧ್ಯಾನಸ್ಥ!

    ನಡುನಡುವೆ ‘ಎಳೆ ಮಕ್ಳಂಗೆ ನೋಡು’ ಎಂಬೋ ಉವಾಚ.ಅಣಬೆಯ ಕಾಲು.. ಹೂವು ಎರಡೂ ಮುಕ್ಕಾಗದಂತೆ ಮೆತ್ತಗೆ ಕೈಗೆತ್ತಿಕೊಂಡು ಒಂದೊಂದನ್ನೇ ನೋಡಿ ಹುಳು ಹುಪ್ಪಡಿ ಇದೆಯಾ ಸೋಸಿ ಬೆಚ್ಚಗಿನ ನೀರಿನಲ್ಲಿ ತೊಳೆದು ಸೋರಿಡ್ತಾರೆ.

    ಅಮ್ಮ ಅಷ್ಟರಲ್ಲಿ ಒಗ್ಗರಣೆಗೆ ಈರುಳ್ಳಿ ಹಸೀ ಮೆಣಶಿನಕಾಯಿ ಹೆಚ್ಚಿ ಮೊಟ್ಟೆ ಮಾಡಿಕೊಳ್ಳುವ ಪಾತ್ರೆಯನ್ನೂ ಕೊಟ್ಟು ಹೊರಕೋಣೆಯಲ್ಲಿರುವ ಸ್ಟೌವು ಹಚ್ಚಿಕೊಡ್ತಾರೆ.ಅಪ್ಪ ಅಣಬೆಗೆ ಒಗ್ಗರಣೆ ಹಾಕುವ ಪರಿಮಳವನ್ನು ಬರೆಯಲು ನಂಗೆ ಪದಗಳು ಒದಗುವುದಿಲ್ಲ.
    ಅದು ಇಡೀ ಮನೆಯನ್ನು ತುಂಬಿ ಎಂದೂ ಅಣಬೆ ರುಚಿ ನೋಡದ ನನ್ನ ನಾಲಿಗೆಯೂ ಸೋರಿ ರುಚಿ ನೋಡುವ ಒಮ್ಮೆ ಅಂತನಿಸದೇ ಇರಲು ಸಾಧ್ಯವೇ ಇಲ್ಲ.
    ಒಂದು ಒಂದೂವರೆ ತಾಸಿನ ಕಾರ್ಯಾಚರಣೆಯ ನಂತರ ಅಣಬೆ ಪಲ್ಯ ತಯಾರಾಗಿ ಡೈನಿಂಗ್ ಹಾಲಿಗೆ ಅಮ್ಮನ ಸಿಡಿಮಿಡಿಯೊಂದಿಗೆ ಆಗಮಿಸ್ತದೆ.ಅಷ್ಟರಲ್ಲಿ ಅಮ್ಮ ಬಿಸಿರೊಟ್ಟಿಯೋ ಚಪಾತಿಯೊ ಹಾಕಿಟ್ಟಿರ್ತಾರೆ.

    ಹೊರಗೆ ಬಯ್ದಂತೆ ನಟಿಸುವ ಅಮ್ಮನಿಗೂ ಅಪ್ಪನಿಗೆ ಆಸೆ ಬಂದಿದ್ದನ್ನು ತಿನ್ನಲಿ ಅಂತ ಒಳಗೊಂದು ಮನಸಿರ್ತದೆ ಕಾಣುತ್ತೆ. ಒಂದು ದೊಡ್ಡ ಕೈಚೀಲದ ಭರ್ತಿ ತಂದಿದ್ದ ಅಣಬೆ ಒಗ್ಗರಣೆ ಯಲ್ಲಿ ಬೆಂದು ಸಣ್ಣ ಸರ್ವಿಂಗ್ ಬೌಲು ತುಂಬುವಷ್ಟು ಮಾತ್ರ ಪಲ್ಯ ಆದದ್ದು ನೋಡಿದಾಗ ಅಪ್ಪನಿಗೆ ಇನ್ನಷ್ಟು ಸಿಕ್ಕಿದ್ರೆ ಖುಷಿಯಲ್ಲಿ ತಿಂತಿದ್ರೋ ಏನೋ ಅಂತ ಅನಿಸಿ ‘ಇಷ್ಟೇ ಇಷ್ಟು ಆಯ್ತಲ್ಲಪ್ಪಜಿ’ ಅಂತೀನಿ. ವರ್ಷಕೊಂದ್ಸರ್ತಿ ಸಿಗುವ ತರಕಾರಿನ ಒಂದು ಗುಕ್ಕೇ ಆಗಲಿ,ತಿನ್ನಬೇಕು ಎನ್ನುವುದು ಅಪ್ಪನ ವಾದ.

    ಮೊಮ್ಮಕ್ಕಳು ಮನೆಯಲ್ಲಿದ್ರೆ ಅಪ್ಪನ ಈ ಅಣಬೆ ಗ್ರೆವಿ ತಯಾರಿಕೆಗೆ ಮತ್ತಷ್ಟು ಉತ್ಸಾಹ.ನಾನೂ ತವರುಮನೆಯಲ್ಲಿದ್ದಾಗ ಒಂಚೂರು ತಿಂದು ನೋಡು ಅಂತ ಪದೇಪದೇ ಒತ್ತಾಯಿಸಿದ್ರೂ ಅದರ ಪರಿಮಳಕ್ಕೆ ಜಿಹ್ವಾರಸ ಚುರುಕಾಗಿದ್ರೂ ಅಮ್ಮನ ಚಿಕ್ಕಂದಿನ ‘ಮಾಂಸ ತಿಂದಂತೆ’ ಮಾತು ನೆನಪಾಗಿ ‘ನಂಗ್ ಬ್ಯಾಡ ನೀವು ತಿನ್ನಪ್ಪಜಿ’ ಅಂತೀನಿ.

    ಮಳೆ ಹಿಡಿದು ಇಷ್ಟು ದಿನ ಆಗಿದೆ.ಅಣಬೆಗಳೂ ಎದ್ದೂ ಅರಳಿ ಮಾಸಿಯೂ ಆಗಿರಬಹುದು. ಅಥವಾ ಮತ್ತೆಲ್ಲೋ ಹುಟ್ಟುತ್ತಲೂ ಇರಬಹುದು.ಅಪ್ಪಾಜಿಗೆ ಈ ಸರ್ತಿ ಮಳೆಗಾಲದಲ್ಲಿ ಮೊದಲಿನಂತೆ ಬೇಕು ಬೇಕಾದಲ್ಲಿ ಸುತ್ತಾಡೋ ಹಾಗಿಲ್ಲ ಅಂತ ಮಕ್ಕಳಿಂದ ಎಚ್ಚರಿಕೆ ರವಾನೆಯಾಗಿದೆ.

    ಅಪ್ಪನ ಮನೆಯಂಗಳದ ಕೊನೆಯಲ್ಲೇ ಒಂದು ರಾಶಿ ಅಣಬೆ ಹುಟ್ಟಿ ಒಂದರ್ದ ತಾಸು ಮಳೆ ಬಿಡುವು ಕೊಡಲಿ,’ಸೀಸನ್ನಿಗೊಂದ್ಸಾರಿ ಬರೋ ತಿನ್ನೋ ಪದಾರ್ಥನ ಹಂಗ್ ತಿನ್ದೆ ಇರಬಾರದು ನಾಗಮ್ಮ’ ಅಂತ ಅಮ್ಮನಿಗೆ ಕನ್ವಿನ್ಸ್ ಮಾಡಿ ಅಪ್ಪ ಮಳೆ ನಿಂತ ಸಮಯ ನೋಡ್ಕೊಂಡು ಒಂದು ಕೈಚೀಲ ಭರ್ತಿ ಅಣಬೆ ಎತ್ಕೊಂಡು ಬರಲಿ ಅಂತ ಮನಸ್ಸು ಬಯಸ್ತಿದೆ.

    ಅತೃಪ್ತ ಮನಸ್ಸು  ಎಂದಿಗೂ ಅಪಾಯಕಾರಿ

    ಸುಮಾ ವೀಣಾ

    ಕೊಲ್ಲದುದೆ ಧರ್ಮ-  ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ಲಲಿತ ಘಟೆಯ ಕತೆಯಲ್ಲಿ  ಉಲ್ಲೇಖವಾಗಿರುವ ಮಾನವ ಧರ್ಮವನ್ನು ಸಾರುವ ವಾಕ್ಯವಿದು.  ಬೇಟೆಯಲ್ಲಿದ್ದ ಲಲಿತಘಟನಿಗೆ ಅಭಯಸೇನಾ ಭಟಾಚಾರ್ಯರು   ಕೊಲ್ಲದುದೆ ಧರ್ಮ ಎಂದು ಉಪದೇಶಿಸುತ್ತಾರೆ.

    ಹುಟ್ಟು ಮನುಷ್ಯನಿಗೂ ಪ್ರಾಣಿಗಳಿಗೂ ಸಸ್ಯಾವಳಿಗೂ ಒಂದೇ. ಬದುಕಲೇಬೇಕೆಂಬ ಆಸೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳಿಗೂ ಇರುತ್ತದೆ.   ಮನುಷ್ಯ ಬುದ್ದಿಯನ್ನು,  ದೈಹಿಕ ಶ್ರಮವನ್ನು ಉಪಯೋಗಿಸಿ ಕೆಲಸ ಮಾಡುತ್ತಾನೆ ಹಾಗೆ ಪ್ರಾಣಿಗಳು ಆಕ್ರಮಣಕಾರಿಗಳಾಗುವುದು ಹೊಟ್ಟೆಗಾಗಿ ಮತ್ತು ಇತರರಿಂದ ರಕ್ಷಿಸಿಕೊಳ್ಳಲು . ಆಸೆ, ಸುಖದ ಅನ್ವೇಷಣೆಯಲ್ಲಿ  ಮನುಷ್ಯ ಪ್ರತೀ ಕ್ಷಣವೂ ಕಾಲ ಕಳೆಯುತ್ತಿರುತ್ತಾನೆ.  ಮನುಷ್ಯ  ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ  ಕೊಲ್ಲುವ ಹಂತಕ್ಕೆ ಬಂದಿದ್ದಾನೆ. ಈ ಕಾರಣದಿಂದ ಮನುಷ್ಯ ಸಂಘಜೀವಿ  ಎನಿಸಿಕೊಂಡಿದ್ದರ ಉದ್ದೇಶ ದಿಕ್ಕು ತಪ್ಪುತ್ತಿದೆಯೇ ಅನ್ನುವ  ಭಾವ ಆವರಿಸುತ್ತದೆ.

    ಸ್ವಾರ್ಥವನ್ನು ಬಿಟ್ಟು ತನ್ನಂತೆ ಬದುಕುವ ಸಹಮಾನವರಿಗೆ  ಪರಸ್ಪರ ಸಂಚನೆಗಳಾಗದಂತೆ  ಬದುಕುವುದೆ  ಮನುಷ್ಯ ಧರ್ಮವಾಗಬೇಕು. ಪರರಿಗೋಸ್ಕರವೇ ಬದುಕಿದ ಅದೆಷ್ಟೋ  ಜನರು ಸಿದ್ಧಪುರುಷರು, ಸಾಧಕರು, ಹೋರಾಟಗಾರರು  ನಮ್ಮ ನಡುವಿದ್ದಾರೆ ಅಲ್ಲವೆ. ಇತ್ತೀಚೆಗೆ  ಇರಿದು ಕೊಲ್ಲುವ,ಗುಂಡಿಕ್ಕಿ ಕೊಲ್ಲುವ,ಹೊಡೆದು ಕೊಲ್ಲುವ   ಸುದ್ದಿಗಳು  ಹೆಚ್ಚು ಹೆಚ್ಚು ಕೇಳಿಸುತ್ತಿವೆ .  ಹೀಗೆ ಮುಂದುವರೆದರೆ ಮನುಷ್ಯಶರೀರ ಹೊತ್ತ ಮೃಗೀಯ ಸಮಾಜವಾಗಿಬಿಡುತ್ತದೆಯೋ ಏನೋ? ಸುರಕ್ಷತೆ ಅನ್ನುವುದು ಮರೀಚಿಕೆಯಾಗಿ ಬಿಡುತ್ತದೆಯೋ ಅನ್ನುವ ಪ್ರಶ್ನೆಗಳು ಕಾಡಲು ಪ್ರಾರಂಭವಾಗುತ್ತವೆ.

    ಮನುಷ್ಯ ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ  ಕೊಲ್ಲುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ಮಧುರತೆಯನ್ನು  ಹಾಳು ಮಾಡುತ್ತದೆ .ಅಲ್ಪದರಲ್ಲಿಯೇ ತೃಪ್ತಿ ಹೊಂದುವಂಥವರಾಗಬೇಕು  ಅತೃಪ್ತ ಮನಸ್ಸು  ಎಂದಿಗೂ ಅಪಾಯಕಾರಿ  ಪರರ ಜೀವ ತೆಗೆದು   ನೆಮ್ಮದಿಯ ಬದುಕು  ಬದುಕಲು ಸಾಧ್ಯವೇ ಖಂಡಿತಾ ಇಲ್ಲ ಕಾನೂನು ಕಟ್ಟಳೆಗಳಲ್ಲಿ ಬಂಧಿಯಾಗಿ ನಿತ್ಯ ಸಾವನ್ನು ಅನುಭವಿಸಬೇಕಾಗುತ್ತದೆ.  ಇಷ್ಟು ಚಂದದ ಬದುಕನ್ನು ನಾವು ಪಡೆದಿದ್ದೇವೆ ಎಂದಮೇಲೆ ಈ ಆಕ್ರಮಣಕಾರಿ ಮನಸ್ಥಿತಿ ಕೊಂದು ಬದುಕುವ ದುರಾಲೋಚನೆ ಏಕೆ ತಿಳಿಯುತ್ತಿಲ್ಲ.   ಒಂದೇ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ರಸ್ತೆಯನ್ನೆ ಹಂಚಿಕೊಂಡು   ಆದಷ್ಟು ಎಚ್ಚರದಿಂದ   ಕ್ಷೇಮವಾಗಿ ಮನೆ ತಲುಪುವಂತೆ  ಈ ಬದುಕಿನ ಪ್ರಯಾಣವನ್ನು ಸುಖಾಂತ್ಯ ಮಾಡಿಕೊಳ್ಳುವುದು  ಒಂದು ಧರ್ಮವೇ ಸರಿ!

    ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಷೇರುಪೇಟೆಯಲ್ಲಿ ಕಾರ್ಪೊರೇಟ್‌ ಫಲಗಳ ಪ್ರಭಾವ, ಲಾಭಾಂಶದೊಂದಿಗೆ ಮತ್ತು ಲಾಭಾಂಶದ ನಂತರ

    ಷೇರುಪೇಟೆಯಲ್ಲಿ ಈ ವಾರ ಅನೇಕ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ಕರೆದು ತಮ್ಮ ವಾರ್ಷಿಕ ವರದಿಗಳಿಗೆ ಷೇರುದಾರರ ಒಪ್ಪಿಗೆ ಪಡೆಯುವುದರೊಂದಿಗೆ ಅವು ಘೋಷಿಸಿದ ಕಾರ್ಪೊರೇಟ್‌ ಫಲಗಳಿಗೆ ಅನುಮೋದನೆ ಪಡೆದಿವೆ, ಪಡೆಯುವತ್ತ ಸಾಗಿವೆ. ಪೇಟೆಯಲ್ಲಿ ಕಾರ್ಪೊರೇಟ್‌ ಫಲಗಳು ಯಾವ ರೀತಿ ಪ್ರಭಾವಿಯಾಗಬಹುದು ಎಂಬುದನ್ನು ತಿಳಿಯೋಣ. ಕಾರ್ಪೊರೇಟ್‌ ಫಲಗಳು ಎಂದರೆ ಕಂಪನಿಗಳು ಘೋಷಿಸುವ ಲಾಭಾಂಶ, ಬೋನಸ್‌ ಷೇರು, ಹಕ್ಕಿನ ಷೇರು ಮುಂತಾದವುಗಳಾಗಿವೆ.

    • ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪನಿಯು ಜೂಲೈ 7 ನ್ನು‌ 1:2 ರ ಅನುಪಾತದ ಬೋನಸ್ ಷೇರಿಗೆ ನಿಗದಿತ ದಿನವೆಂದು ಪ್ರಕಟಿಸಿತ್ತು. ಈ ಷೇರಿನ ಬೆಲೆಯು ಬೋನಸ್‌ ಷೇರಿನ ಅನುಪಾತ್ತಕ್ಕನುಗುಣವಾಗಿ ರೂ.75 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಸುಮಾರು 470 ಕೋಟಿಗೂ ಹೆಚ್ಚಿನ ಬೋನಸ್‌ ಷೇರುಗಳನ್ನು 8ನೇ ಜುಲೈ ನಿಂದ ವಹಿವಾಟಿಗೆ ಅನುಮತಿಸಿದೆಯಾದರೂ ಹೆಚ್ಚಿನ ಬದಲಾವಣೆಗಳು ಪ್ರದರ್ಶಿತವಾಗಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕಂಪನಿ ಘೋಷಿಸಿದ, ಬೋನಸ್‌ ಷೇರು ವಿತರಣೆಗೂ ಮುಂಚಿನ ಬಂಡವಾಳಕ್ಕೆ ಪ್ರತಿ ಷೇರಿಗೆ ರೂ.3.60 ರ ಲಾಭಾಂಶಕ್ಕೆ ಆಗಷ್ಟ್‌ 12 ನಿಗದಿತ ದಿನವೆಂದು ಘೋಷಿಸಿದೆ. ಈಗ ಬೋನಸ್‌ ಷೇರುಗಳೂ ಸಹ ಸೇರಿರುವುದರಿಂದ ಲಾಭಾಂಶವನ್ನು ಬೋನಸ್‌ ಷೇರೂ ಸೇರಿ ಪ್ರತಿ ಷೇರಿಗೆ, ರೂ.2.40 ಎಂದು ಸರಿಹೊಂದಿಸಲಾಗಿದೆ. ಈ ಅಂಶವು ಷೇರಿನ ಬೆಲೆಯಲ್ಲಿ ಸ್ಥಿರತೆ ಕಾಪಾಡಿದೆ.
    • ಟೈಡ್‌ ವಾಟರ್‌ ಆಯಿಲ್‌ ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ ರೂ.15 ರಂತೆ ಲಾಭಾಂಶ ವಿತರಿಸಲು ಜುಲೈ 5 ನಿಗದಿತ ದಿನವಾಗಿತ್ತು. ಈ ರೂ.2 ರ ಮುಖಬೆಲೆಯ ಷೇರಿನ ಬೆಲೆಯು ಜೂನ್‌ 20 ರಂದು ರೂ.975 ರ ಸಮೀಪವಿದ್ದು ವಾರ್ಷಿಕ ಕನಿಷ್ಠಕ್ಕೆ ಇಳಿದಿತ್ತು. ಆದರೆ ಲಾಭಾಂಶದ ನಂತರದಲ್ಲಿ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸಿದಂತಾಗಿ ಶುಕ್ರವಾರ 8 ರಂದು ಷೇರಿನ ಬೆಲೆ ರೂ.1,038 ರ ಸಮೀಪಕ್ಕೆ ಜಿಗಿದು ರೂ.1,015 ರಲ್ಲಿ ಕೊನೆಗೊಂಡಿದೆ.
    • 1978 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ರೂ.10 ರ ಮುಖಬೆಲೆಯ ಸ್ಮಾಲ್‌ ಕ್ಯಾಪ್‌ ಕಂಪನಿ ಇಂಡಿಯನ್‌ ಕಾರ್ಡ್‌ ಕ್ಲಾಥಿಂಗ್‌ ಕಂಪನಿ ಲಿಮಿಟೆಡ್‌ ಈವಾರದಲ್ಲಿ 6 ರಂದು ರೂ.315 ರ ಗರಿಷ್ಠದಿಂದ ರೂ.291 ರವರೆಗೂ ಕುಸಿಯಿತು. ಈ ಕಂಪನಿಯು ಆಕರ್ಷಣೀಯ ಮಟ್ಟದ ಪ್ರಗತಿಯನ್ನು ಸಾಧಿಸುತ್ತಿದ್ದು ಕಳೆದ ಮೇ ತಿಂಗಳಲ್ಲಿ ಪ್ರತಿ ಷೇರಿಗೆ ರೂ.25 ರ ವಿಶೇಷ ಲಾಭಾಂಶ ವಿತರಿಸಿದ್ದು, ಈಗ ಮತ್ತೊಮ್ಮೆ ಪ್ರತಿ ಷೇರಿಗೆ ರೂ.25 ರಂತೆ ಲಾಭಾಂಶ ಘೋಷಿಸಿ, ಈ ತಿಂಗಳ 8 ನ್ನು ನಿಗದಿತ ದಿನವೆಂದು ಪ್ರಕಟಿಸಿತ್ತು, ಹಾಗಾಗಿ 8 ರಂದು ಷೇರಿನ ಬೆಲೆ ರೂ.268 ರ ಸಮೀಪದಿಂದ ರೂ.250 ರವರೆಗೂ ಕುಸಿದಿದೆ. ಅಂದರೆ ಕೇವಲ 4/5 ದಿನಗಳಲ್ಲಿ ರೂ.25 ರ ಲಾಭಾಂಶಕ್ಕೆ ಬದಲಾಗಿ ಸುಮಾರು ರೂ.60 ರಷ್ಟು ಕುಸಿತಕಂಡಿರುವ ಅಂಶ, ಕಂಪನಿಯ ಷೇರಿನ ಏರಿಳಿತಗಳನ್ನು ಗಮನಿಸಿ, ವ್ಯಾಲ್ಯೂಪಿಕ್‌ ಎನಿಸಿಕೊಳ್ಳಬಹದಲ್ಲವೇ?
    • ಬಾಂಬೆ ಸ್ಟಾಕ್‌ ಎಕ್ಸ್ ಚೇಂಜ್‌ ನ ಎಸ್‌ ಎಂ ಇ ವಿಭಾಗದಲ್ಲಿ ವಹಿವಾಟಾಗುತ್ತಿದ್ದ ಇ ಕೆ ಐ ಎನರ್ಜಿ ಸರ್ವಿಸಸ್‌ ಲಿಮಿಟೆಡ್‌ ಕಂಪನಿಯ ಷೇರಿನ ಬಂಡವಾಳ ರೂ.6.87 ಕೋಟಿ ಇತ್ತು. ಈ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷ ಅಂದರೆ 8ನೇ ಜುಲೈ 2021 ರಂದು ರೂ.198 ರ ಸಮೀಪವಿತ್ತು ಆ ಷೇರಿನ ಬೆಲೆ ಈಗ ರೂ.2,400 ರ ಸಮೀಪದಲ್ಲಿದೆ, ಅದೂ ಪ್ರತಿ ಒಂದು ಷೇರಿಗೆ 3 ಬೋನಸ್‌ ಷೇರು ವಿತರಿಸಿದ ನಂತರದಲ್ಲಿ. ದಿನಾಂಕ 5 ಬೋನಸ್‌ ಷೇರು ವಿತರಣೆಗೆ ನಿಗದಿತ ದಿನವಾಗಿದ್ದು, 4 ರಿಂದ ಬೋನಸ್‌ ಷೇರಿನ ನಂತರದ ವಹಿವಾಟು ಆರಂಭವಾದ ಕಾರಣ ಅಂದು ಷೇರನ್ನು ಎಸ್‌ ಎಂ ಇ ವಿಭಾಗದಿಂದ ಮುಖ್ಯ ವೇದಿಕೆಗೆ ಅಂದರೆ ʼ ಬಿʼ ಗುಂಪಿಗೆ ವರ್ಗಾಯಿಸಲಾಯಿತು. ಆರಂಭದ ದಿನ ಕನಿಷ್ಠ ರೂ.2,000 ದ ಸಮೀಪದಲ್ಲಿದ್ದು ನಂತರ ದಿನಾಂಕ 6 ರಂದು ರೂ.2,964 ರ ಸಮೀಪದವರೆಗೂ ಏರಿಕೆ ಕಂಡಿತು. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ 8 ರಂದು ರೂ.2,390 ರವರೆಗೂ ಕುಸಿದು ರೂ.2,402 ರಲ್ಲಿ ಕೊನೆಗೊಂಡಿದೆ. 1:3 ರ ಅನುಪಾತದ ಬೋನಸ್‌ ಷೇರುಗಳು ಇನ್ನು ಲೀಸ್ಟಿಂಗ್‌ ಆಗಬೇಕಿದೆ. ಅದು ಲೀಸ್ಟ್‌ ಆದ ನಂತರ ಪೇಟೆ ಎಷ್ಟರ ಮಟ್ಟಿಗೆ ಸ್ಥಿರತೆ ಕಾಣಬಹುದು ಎಂಬ ಅಂಶವನ್ನಾಧರಿಸಿ ಹೂಡಿಕೆ ಬಗ್ಗೆ ನಿರ್ಧರಿಸುವುದು ಉತ್ತಮ.
    • ಟೈಟಾನ್‌ ಕಂಪನಿ ಲಿಮಿಟೆಡ್‌ ಷೇರಿನ ಬೆಲೆ ಶುಕ್ರವಾರದಂದು ದಿನದ ಮದ್ಯಂತರದಲ್ಲಿ ರೂ.2,152 ರ ವರೆಗೂ ಏರಿಕೆ ಕಂಡು ರೂ.2,144 ರ ಸಮೀಪ ಕೊನೆಗೊಂಡಿದೆ. ಶುಕ್ರವಾರದ ಚಟುವಟಿಕೆಯು ಕಂಪನಿ ವಿತರಿಸಲಿರುವ ಪ್ರತಿ ಷೇರಿಗೆ ರೂ.7.50 ಯ ಲಾಭಾಂಶದ ನಂತರದ ವಹಿವಾಟಾಗಿದೆ. ಈ ಕಂಪನಿ ಷೇರಿನ ಬೆಲೆ ಜುಲೈ ಒಂದರಂದು ರೂ.1,827 ರ ಸಮೀಪದವರೆಗೂ ಇಳಿಕೆ ಕಂಡಿದ್ದು, ಲಾಭಾಂಶಸಹಿತ ವಹಿವಾಟಿನ ದಿನ 7 ರಂದು ಷೇರಿನ ಬೆಲೆ ರೂ.2,170 ರ ಸಮೀಪಕ್ಕೆ ಜಿಗಿದಿತ್ತು. ಅಂದರೆ ಒಂದೇ ವಾರದಲ್ಲಿ ರೂ.300 ಹೆಚ್ಚಿನ ಏರಿಕೆಯನ್ನು ಪ್ರದರ್ಶಿಸಿದ ಅಗ್ರಮಾನ್ಯ ಸೆನ್ಸೆಕ್ಸ್‌ ಕಂಪನಿಯಾಗಿದೆ.
    • ಡಾಕ್ಟರ್‌ ರೆಡ್ಡೀಸ್‌ ಲ್ಯಾಬೊರೇಟರೀಸ್‌ ಲಿಮಿಟೆಡ್‌ ಕಂಪನಿಯು ಪ್ರತಿ ಷೇರಿಗೆ ರೂ.30 ರಂತೆ ಲಾಭಾಂಶ ಘೋಷಣೆ ಮಾಡಿದ್ದು ಅದಕ್ಕೆ ಈ ತಿಂಗಳ 13 ನಿಗದಿತ ದಿನವಾಗಿದೆ. ನಿಗದಿತ ದಿನ ಸಮೀಪಿಸುತ್ತಿರುವಾಗಲೇ ಷೇರಿನ ಬೆಲೆಯಲ್ಲಿ ಏರಿಕೆ ಪ್ರದರ್ಶಿತವಾಗುತ್ತಿದೆ. ಜೂನ್‌ 20 ರಂದು ಷೇರಿನ ಬೆಲೆ ರೂ.4,107 ರ ಸಮೀಪವಿದ್ದು ಗುರುವಾರ 7 ರಂದು ಷೇರಿನ ಬೆಲೆ ರೂ.4,443 ರ ವರೆಗೂ ಏರಿಕೆ ಕಂಡು ರೂ.4,403 ರಲ್ಲಿ ವಾರಾಂತ್ಯ ಕಂಡಿದೆ. ಈ ಮಧ್ಯೆ ಅಮೇರಿಕಾದ ಎಫ್‌ ಡಿ ಎ ಯು ತನ್ನ ಇನ್ಸ್ಪೆಕ್ಷನ್‌ ನಲ್ಲಿ ಎರಡು ಅಬ್ಸರ್ವೇಶನ್‌ ಗಳನ್ನು ನೀಡಿದೆ ಎಂಬ ಅಂಶವು ಅಷ್ಟು ಪ್ರಭಾವಿಯಾಗಿಲ್ಲ.
    • ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಪ್ರತಿ ಷೇರಿಗೆ ರೂ.6.50 ಯಂತೆ ಲಾಭಾಂಶ ವಿತರಿಸಿದೆ. ಇದಕ್ಕೆ 16 ನೇ ಜೂನ್‌ ನಿಗದಿತ ದಿನವಾಗಿತ್ತು. ಆ ಸಮಯದಲ್ಲಿ ಷೇರಿನ ಬೆಲೆ ರೂ.195 ರ ಸಮೀಪವಿತ್ತು. ಲಾಭಾಂಶದ ನಂತರದಲ್ಲಿ 20 ರಂದು ಷೇರಿನ ಬೆಲೆ ರೂ.176 ರ ಸಮೀಪದವರೆಗೂ ಇಳಿಕೆ ಕಂಡಿತು. ನಂತರದಲ್ಲಿ ಮತ್ತೆ ಏರಿಕೆ ಕಂಡು 27 ರಂದು ರೂ.190 ರ ಗಡಿ ತಲುಪಿತು. ಮತ್ತೆ ಜುಲೈ ಒಂದರಂದು ರೂ.178 ರವರೆಗೂ ಇಳಿಕೆ ಕಂಡು ಶುಕ್ರವಾರ 8 ರಂದು ರೂ.212 ಕ್ಕೆ ಪುಟಿದೆದ್ದಿದೆ. 211 ರ ಸಮೀಪ ಕೊನೆಗೊಂಡಿದೆ.

    ಹೀಗೆ ಕಂಪನಿಗಳಾದ ಅಸ್ಟ್ರಜೆನಿಕಾ ಫಾರ್ಮಸ್ಯುಟಿಕಲ್ಸ್‌, ಟಾಟಾ ಸ್ಟೀಲ್‌, ಎಸ್ಕಾರ್ಟ್ಸ್‌, ರೆಡಿಂಗ್ಟನ್‌, ಹಿಂದೂಸ್ಥಾನ್‌ ಏರೋನಾಟಿಕ್ಸ್‌,l ಮಹೀಂದ್ರ ಅಂಡ್‌ ಮಹೀಂದ್ರ, ಎಲ್‌ ಅಂಡ್‌ ಟಿ ಟೆಕ್ನಾಲಜೀಸ್‌ ಮುಂತಾದ ಅಗ್ರಮಾನ್ಯ ಕಂಪನಿಗಳು ಲಾಭಾಂಶದ ಮುನ್ನ ಮತ್ತು ಲಾಭಾಂಶದ ನಂತರದಲ್ಲಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅವಕಾಶಗಳನ್ನು ಸೃಷ್ಠಿಸಿಕೊಟ್ಟಿವೆ/ ಕೊಡುತ್ತಿವೆ. ಸಮಯಾಧರಿಸಿ, ಅವಕಾಶಗಳನ್ನು ಬಳಸಿಕೊಳ್ಳುವ ವ್ಯಾಲ್ಯು ಪಿಕ್‌ ಚಟುವಟಿಕೆ ಇಂದಿನ ಅಗತ್ಯವಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಶ್ರೀಲಂಕಾ: ಪ್ರಧಾನಿಯೂ ರಾಜಿನಾಮೆ

    Colombo July 9

    ಶ್ರೀಲಂಕಾ ಅಕ್ಷರಶಃ ಕುದಿಯುತ್ತಿದೆ. ದೇಶ ಅರಾಜಕತೆಯತ್ತ ಸಾಗುತ್ತಿದೆ. ಅಧ್ಯಕ್ಷ ಗೋಟಾಬಯ ಪರಾರಿಯಾದ ಬೆನ್ನ ಹಿಂದೆಯೇ ಪ್ರಧಾನಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ ಕೂಡ ನೀಡಿದ್ದಾರೆ.ಉದ್ರಿಕ್ತರ ಗುಂಪೊಂದು ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದೆ. ಸರ್ವಪಕ್ಷ ಸರಕಾರದ ರಚನೆಗೆ ಅನುವು ಮಾಡಿಕೊಡಲು ತಾವು ರಾಜೀನಾಮೆ ನೀಡುತ್ತಿರುವುದಾಗಿ ವಿಕ್ರಮ ಸಿಂಘೆ ಹೇಳಿದ್ದಾರೆ.

    ಈ ಮಧ್ಯ್ಯೆ ಅಧ್ಯಕ್ಷ ಗೋಟಾಬಯ ಇದೇ 13ರಂದು ರಾಜೀನಾಮೆ ನೀಡುವುದಾಗಿ ಸ್ಪೀಕರ್ ತಿಳಿಸಿದ್ದಾರೆ.

    ಪದವಿ, ಸ್ನಾತಕೋತ್ತರ ಕೋರ್ಸ್: ಇಡೀ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ

    ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭ

    BENGALURU JUNE 9

    2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲಾ ವಿ.ವಿ.ಗಳು ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಶನಿವಾರ ಈ ಬಗ್ಗೆ ಮಾತನಾಡಿರುವ ಅವರು, ಈ ಏಕರೂಪದ ಕಾರ್ಯಕ್ರಮ ಪಟ್ಟಿಯಂತೆ, ರಾಜ್ಯದ ಉದ್ದಗಲಕ್ಕೂ ಪದವಿ ತರಗತಿಗಳಿಗೆ ಜುಲೈ 11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಇದೇ ರೀತಿಯಲ್ಲಿ, ಸ್ನಾತಕೋತ್ತರ ಕೋರ್ಸುಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 2ರಿಂದ 14ರ ನಡುವೆ ತರಗತಿಗಳಿಗೆ ಚಾಲನೆ ಸಿಗಲಿದೆ ಎಂದಿದ್ದಾರೆ.

    ಇದುವರೆಗೂ ರಾಜ್ಯದಲ್ಲಿ ಒಂದೊಂದು ವಿ.ವಿ.ಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿ ಕೊಳ್ಳುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲ ಆಗುತ್ತಿತ್ತು. ಇದನ್ನು ಗಮನಿಸಿ ಈ ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.

    ಈ ವೇಳಾಪಟ್ಟಿಯಲ್ಲಿ ಪ್ರತೀ ಸೆಮಿಸ್ಟರುಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ಪ್ರತಿ ಸೆಮಿಸ್ಟರುಗಳಿಗೆ ಬೋಧನಾ ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಈ ಪಟ್ಟಿಯಲ್ಲಿ ಪದವಿಯ 6, ಸ್ನಾತಕೋತ್ತರ ಮಟ್ಟದ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರುಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀಕ್ಷಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು. (ಸಂಪೂರ್ಣ ವಿವರ ಈ ಕೆಳಗಿದೆ. ಪಿಡಿಎಫ್ ಫೈಲ್ ಗಮನಿಸಿ. ಸ್ಕ್ರಾಲ್ ಮಾಡಿ ಓದಿ)

    ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ಸ್ ಜತೆ ವರ್ಚುಯಲ್ ಸಭೆ ನಡೆಸಿ, ಸಮಾಲೋಚನೆ ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

    ಅಮರನಾಥ ಕನ್ನಡಿಗರ ರಕ್ಷಣೆಗೆ ಕ್ರಮ

    BENGALURU JULY 9

    ಪ್ರಾಥಮಿಕ ಮಾಹಿತಿಯ ಪ್ರಕಾರ ನೂರಕ್ಕೂ ಹೆಚ್ಚು ಜನ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಅಮರನಾಥದಲ್ಲಿಇದುವರೆವಿಗೆ ಮೇಘ ಸ್ಪೋಟದಿಂದ 15 ಜನ ಸಾವನ್ನಪ್ಪಿದ್ದು, ರಾಜ್ಯದಿಂದ ಅಮರನಾಥ ಯಾತ್ರ ಕೈಗೊಂಡಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಬೇರೆ ಯಾವ ಅಹಿತರಕರ ಸುದ್ದಿಯೂ ಬಂದಿಲ್ಲ. ಅಲ್ಲಿಯ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ ಎಂದರು.

    ರಕ್ಷಣಾ ಕಾರ್ಯಕ್ಕಾಗಿ ಸಹಾಯವಾಣಿಯನ್ನೂ ಸಹ ತೆರೆಯಲಾಗಿದೆ. ಈಗಾಗಲೇ 15-20 ಜನ ಕರೆ ಮಾಡಿ ತಾವು ಸಿಲುಕಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗುವುದು ಎಂದರು.

    ಕೇಂದ್ರ ಸರ್ಕಾರ, ಗಡಿ ರಕ್ಷಣಾ ಪಡೆ, ಇಂಡಿಯನ್ ಟಿಬೆಟ್ ಫೋರ್ಸ್ ಎಲ್ಲರೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರೆ. ಮುಖ್ಯ ಕಾರ್ಯದರ್ಶಿಗಳು ನೇರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ತೊಂದರೆಗೆ ಸಿಲುಕಿರುವವರು ಸಹಾಯವಾಣಿಗೆ ಕರೆ ಮಾಡಿದರೆ. ಕೂಡಲೇ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು.

    ಸಹಾಯವಾಣಿಯ ವಿವರ:

    ಎನ್.ಡಿ.ಆರ್.ಎಫ್: 011-23438252, 011-23438253

    ಕಶ್ಮೀರ್ ಡಿವಿಷನಲ್ ಹೆಲ್ಪ್ ಲ್ಲೈನ್: 0914- 2496240

    ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149

    ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676

    ಸಹಾಯವಾಣಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ.

    error: Content is protected !!