ಅಮೆರಿಕಾದ ಚುನಾವಣೆಯ ಕಣದಲ್ಲಿ ದೇಜಾ ವು (Déjà vu) ಎನ್ನುವ ಕ್ಷಣವೊಂದು ಸೃಷ್ಟಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಏಟು-ಎದಿರೇಟುಗಳು ನಡೆಯುತ್ತಿವೆ. ಕೊನೆಯ ಕ್ಷಣಗಳಲ್ಲಿ ಪಕ್ಷಗಳು ತಮ್ಮ ತಮ್ಮ ಬಲಹೀನತೆಗಳನ್ನು ತಿದ್ದಿಕೊಂಡು ಹೆಚ್ಚು ಹೆಚ್ಚು ಜನರ ಮನವೊಲಿಸುವ ಪ್ರಯತ್ನವನ್ನು
ಮಾಡುತ್ತಿದ್ದಾರೆ.ಹಾಗಿರುವಾಗಲೇ ಆಗಬಹುದೆಂದು ನಿರೀಕ್ಷಿಸಿದ್ದ ಘಟನೆಯೊಂದು ನಡೆದದ್ದು ಈ
ಚುನಾವಣೆಗೆ ಮತ್ತೊಂದು ಆಯಾಮವನ್ನು ಸೃಷ್ಟಿಸಿದೆ.
ಜಸ್ಟಿಸ್ ರೂತ್ ಬೇಡರ್ ಜಿನ್ಸ್ಬರ್ಗ್(87) ಎಂಬುವ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಕಳೆದ ಶುಕ್ರವಾರ ನಿಧನರಾದ ಕೂಡಲೇ ಚುನಾವಣೆಯ ಮುನ್ನಾ ದಿನಗಳ ಹಣಾಹಣಿಗೆ ಮತ್ತೊಂದು ಹೊಸ ಎಳೆ ಸಿಕ್ಕಿಹೋಗಿದೆ. ಅಮೆರಿಕಾದ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ಒಮ್ಮೆ ಚುನಾಯಿತರಾದರೆಂದರೆ ಅದು ಅವರ
ಜೀವಿತಾವಧಿಯ ಹುದ್ದೆಯಾಗುತ್ತದೆ.ಅಥವಾ ಅವರು ತಾವಾಗಿ ನಿವೃತ್ತಿ ಬೇಡುವವರೆಗೆ ಅವರು ಆ ಹುದ್ದೆಯಲ್ಲಿ ಇರಬಹುದಾಗಿದೆ. ಇದುವರೆಗೆ ನಾಲ್ವರು ರಿಪಬ್ಲಿಕನ್ ನಾಮಿತ ಜಸ್ಟಿಸ್ ಗಳು
ನೇಮಕವಾಗಿದ್ದರೆ ಮೂವರು ಡೆಮೊಕ್ರಟ್ ಗಳ ಬೆಂಬಲಿಗರು ನೇಮಕವಾಗಿದ್ದಾರೆ. ಈಗ ನಿಧನರಾದ ರೂತ್ಎಂಬ ಹೆಸರುವಾಸಿ ನ್ಯಾಯಾಧೀಶೆ ಟ್ರಂಪ್ ಆಡಳಿತ ನೀತಿಗಳನ್ನು ಬಹಿರಂಗವಾಗಿ ವಿರೋಧಿಸಿದವರು. ಈಕೆ
ಉದಾರ ನೀತಿಯ ದಿಟ್ಟ ಮಹಿಳೆ. ಇಡೀ ನ್ಯಾಯಾಂಗ ವೃತ್ತಿಯಲ್ಲಿ ಆಕೆಯದು ಶಿಸ್ತಿನ
ಹೆಸರಾಗಿತ್ತು. ಟ್ರಂಪ್ ಆಡಳಿತ ಕಾಲದಲ್ಲಿ ಆತನ ನಿರಂಕುಶ ಪ್ರಭುತ್ವಕ್ಕೆ ಅವಕಾಶ
ಮಾಡಿಕೊಡಬಾರದೆಂದು ತನ್ನ ಹುದ್ದೆಯನ್ನು ಬಿಟ್ಟುಕೊಡದೆ ಇದ್ದವರು.ಆದರೆ ಚುನಾವಣೆಗೆ ಕೆಲವೇ ದಿನಗಳ ಮೊದಲು ವಿಧಿವಶರಾಗಿ ಇಡೀ ಚುನಾವಣೆಯಲ್ಲಿ ಬಿರುಗಾಳಿಯನ್ನೆಬ್ಬಿಸಿದ್ದಾರೆ. ಅದು ಆಕೆಯ ಇಷ್ಟಕ್ಕೆ ವಿರುದ್ಧವಾದ ವಿಚಾರವಾದರೂ ಅಮೆರಿಕಾದ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಸಮಾಧಿಯಾಗುತ್ತಿರುವ ಪ್ರಥಮ ಮಹಿಳೆ ಎಂಬ ಘನತೆಗೆ ಈಕೆ ಪಾತ್ರಳಾಗಿ ಚರಿತ್ರೆಯ ಪುಟಗಳನ್ನುಸೇರುತ್ತಿದ್ದಾರೆ.
ಅಷ್ಟೇ ಏಕೆ? ಆಕೆಯ ಆರೋಗ್ಯ ಕ್ಷೀಣಿಸಿದ ಇತ್ತೀಚೆಗಿನ ದಿನಗಳಲ್ಲಿ ತನ್ನ ಕೊನೆಯ ಆಸೆಯೇನೆಂದು ಆಕೆ
ಬರೆದಿಟ್ಟೇ ಸತ್ತರು. ಆ ಪ್ರಕಾರ ನವೆಂಬರಿನ ಎಲೆಕ್ಷನ್ ಮುಗಿಯುವ ಮುನ್ನ ತನ್ನ ಸ್ಥಾನಕ್ಕೆ ಯಾರನ್ನೂ ಚುನಾಯಿಸಬೇಡಿ ಎಂಬುದು ಆಕೆಯ ಬೇಡಿಕೆ. ಇದನ್ನು ಮುಂದಿಟ್ಟುಕೊಂಡೇ ಬಿಡನ್ ಪಕ್ಷ ತಕ್ಷಣಕ್ಕೆ ನೇಮಕಾತಿ ಬೇಡ ಎಂದು ವಿರೋಧಿಸುತ್ತಿದೆ. ಆದರೆ ಟ್ರಂಪ್ ಪಕ್ಷ ಈ ಕೂಡಲೇ ಆ ಸ್ಥಾನಕ್ಕೆ 52, 48
ಮತ್ತು 38 ವರ್ಷಗಳ ಮೂವರು ಮಹಿಳೆಯರ ಹೆಸರನ್ನು ಮುಂದಿಟ್ಟಿದೆ. ಈ ವಾರಾಂತ್ಯದೊಳಗೆ ಇವರಲ್ಲಿ ಒಬ್ಬರನ್ನು ತೆರವಾದ ಹುದ್ದೆಗೆ ತುಂಬಲೇ ಬೇಕೆಂದು ಪಣತೊಟ್ಟಿದೆ.
ಸಾಮಾನ್ಯವಾಗಿ ಹೆಚ್ಚು ಅನುಭವವಿರುವ ಜನರನ್ನೇ ಈ ಹುದ್ದೆಗೆ ಆರಿಸುವುದು ವಾಡಿಕೆಯಾದರೂ ಕೇಲವ 38 ವರ್ಷದ
ವ್ಯಕ್ತಿಯನ್ನು ಹೆಸರಿಸುವ ಮೂಲಕ ತಮ್ಮ ತರಾತುರಿಯನ್ನು ರಿಪಬ್ಲಿಕನ್ನರು
ವಿವಾದಕ್ಕೊಡ್ಡಿದ್ದಾರೆ. ಸಧ್ಯಕ್ಕೆ ಅಮೆರಿಕಾದ ಸೆನೆಟ್ ನಲ್ಲಿ ರಿಪಬ್ಲಿಕನ್ ಸೆನೇಟರುಗಳದೇ ಬಹುಮತವಿದೆ.ಆದರೆ ಚುನಾವಣೆ ಬಹಳಷ್ಟು ಹತ್ತಿರದಲ್ಲಿರುವ ಕಾರಣ ಈ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. 2016 ರಲ್ಲಿ ಇಂತದ್ದೇ ಘಟನೆ ನಡೆದಿತ್ತು. ಬಾರಕ್ ಒಬಾಮರ ಆಡಳಿತ ಕೊನೆಗೊಳ್ಳುತ್ತಿರುವ ಸಮಯದಲ್ಲೇ ಮತ್ತೊಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವಿಧಿವಶವಾಗಿದ್ದರು. ಆಗ ಇವೆರಡೂ
ರಾಜಕೀಯ ಪಕ್ಷಗಳು ಅದಲು-ಬದಲಾದ ಸ್ಥಾನದಲ್ಲಿದ್ದವು.ಆಗ ಚುನಾವಣೆಗೆ ಇನ್ನೂ 8
ತಿಂಗಳುಗಳಿದ್ದವು. 2016 ರ ಮಾರ್ಚ್ 16 ರಂದು ಬಾರಕ್ ಒಬಾಮ ಮೆರ್ರಿಕ್ ಗಾರ್ಲ್ಯಂಡ್
ಎಂಬಾತನನ್ನು ಒಂದು ತಿಂಗಳ ಹಿಂದೆ ಮೃತಪಟ್ಟಿದ್ದ ಸ್ಕೇಲಿಯಾನ ಸ್ಥಾನಕ್ಕೆ
ಚುನಾಯಿಸಿದ್ದರು.ಆದರೆ ಚುನಾವಣೆ ಮುಗಿಯುವವರೆಗೆ ಮತ್ತೊಬ್ಬ ನ್ಯಾಯಾಧೀಶನನ್ನು ಚುನಾಯಿಸಬಾರದೆಂದು ಆಗ ರಿಪಬ್ಲಿಕನ್ ಗಳು ಆಗ್ರಹಿಸಿದ್ದರು.
ದೇ ಜಾ ವೂ!
ರಿಪಬ್ಲಿಕನ್ನರು ಆಗ ಆಡಿದ್ದ ಮಾತುಗಳನ್ನು ಡೆಮೊಕ್ರಾಟ್ ಗಳು ಇದೀಗ ಒಂದಕ್ಷರವನ್ನೂ ಬಿಡದೆಯಥಾವತ್ ನಕಲು ಮಾಡಿ, ಆಗ ಅವರು ನೀಡಿದ್ದ ಹೇಳಿಕೆಗಳ ವೀಡೀಯೋಗಳನ್ನು ಮತ್ತೆ ಲೈಮ್ ಲೈಟಿಗೆ ತಂದು ಅವರ ಬದಲಾದ ನೀತಿಗಳನ್ನು ಹೀಯಾಳಿಸಿದ್ದಾರೆ. ರಾಜಕೀಯದ ಮುಖಗಳನ್ನುಮಾಧ್ಯಮಗಳಿಗೆ ಬಿತ್ತರಿಸಲು ಅನುಮತಿ ನೀಡಿ, ಒಂದಿಬ್ಬರಾದರೂ ಸೆನೇಟರುಗಳು ತಮ್ಮ ಅಂದಿನ ನಿಲುವಿಗನುಗುಣವಾಗಿ ಮನಸ್ಸು ಬದಲಾಯಿಸುತ್ತಾರೇನೋ ಎಂದು ಕಾಯುತ್ತಿದ್ದಾರೆ.
ಜನರು ಸೆನೇಟರ್ ಗಳ ಮೇಲೆ ಒತ್ತಡ ಹೇರಿ ಅವರ ಮನಸ್ಸನ್ನು ಬದಲಾಯಿಸಬೇಕೆಂದು ಕರೆ ನೀಡಿದ್ದಾರೆ.ಒಟ್ಟು 9 ಜನ ನ್ಯಾಯಾಧೀಶರಿರುವ ಈ ಸುಪ್ರೀಂ ಕೋರ್ಟ್ ನ ನ್ಯಾಯಪೀಠದ ಸೈದ್ಧಾಂತಿಕ ನಿಲುವು ಅತ್ಯಂತ ಮುಖ್ಯವಾದದ್ದು. ಈ ನ್ಯಾಯ ಪೀಠ ತೆಗೆದುಕೊಳ್ಳುವ ನಿರ್ಧಾರಗಳು ಇಡೀ ಪ್ರಪಂಚದ ಮೇಲೆ
ಪ್ರಭಾವ ಬೀರಬಲ್ಲವು. ಏಕೆಂದರೆ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಮೆರಿಕಾದ ಹಲವು ಅತಿ ಮುಖ್ಯ ವಿಚಾರಗಳಾದ ವಲಸೆ ನೀತಿಗಳು, ಗರ್ಭಪಾತ, ಮರಣ ದಂಡನೆ, ಕಾರ್ಬನ್ ಎಮಿಶನ್, ಗೇ ವಿವಾಹಗಳ
ಮೇಲೆ ಪ್ರಭಾವ ಬೀರಬಲ್ಲವು. ಭಾರತದ ವಲಸಿಗರ, ಅವಕಾಶಗಳನ್ನು ಕೂಡ ನಿರ್ಧರಿಸಬಲ್ಲವು.
ಅಕಸ್ಮಿಕವಾಗಿ ರಿಪಬ್ಲಿಕನ್ನರು ಈ ಚುನಾವಣೆಯಲ್ಲಿ ಸೋತರೆ, ಡೆಮೊಕ್ರಾಟ್ ಗಳು ಜನವರಿಯವರೆಗೂ
ತಮ್ಮ ಅಧಿಕಾರ ಸ್ವೀಕರಿಸಿರುವುದಿಲ್ಲ. ಈ ಕಾರಣ ಟ್ರಂಪ್ ನ ನ್ಯಾಯಧೀಶರ ಆಯ್ಕೆಯನ್ನು ಅವರು
ಜನವರಿಯಲ್ಲಿ ಮತ್ತೆ ಪ್ರಶ್ನಿಸಬಹುದಾಗಿದೆ. ಜನವರಿ ಇಪ್ಪತ್ತನೆಯ ತಾರೀಖಿನವರೆಗೆ ಇದು
ನಿರ್ಧರಿತವಾಗದಿದ್ದರೆ ಆಗ ಅಂದಿನ ಹೊಸ ಅಧ್ಯಕ್ಷ ಮತೊಬ್ಬ ಹೊಸ ನ್ಯಾಯಾಧೀಶರನ್ನು
ಆರಿಸಬಹುದಾಗಿದೆ.
ಸಧ್ಯಕ್ಕೆ ಈ ಶುಕ್ರವಾರ ಅಥವಾ ಶನಿವಾರದ ವೇಳೆಗೆ ಏನಾಗುತ್ತದೆ ಎಂದು ನೋಡಲು ಇಡೀ ಪ್ರಪಂಚವೇ ಕಾದು ಕುಳಿತಿರುವಾಗ ಅಮೇರಿಕಾದಲ್ಲಿ ಕೊರೋನಾ ದಿಂದ ಸತ್ತವರ ಸಂಖ್ಯೆ ಎರಡು ಲಕ್ಷ್ಯವನ್ನು ದಾಟಿ
ನಿರುಮ್ಮಳವಾಗಿ ಮುನ್ನಡೆದಿದೆ.