ಹಾಗೆ ನೋಡಿದರೆ ಹೂಗಳನ್ನು ಇಷ್ಟಪಡದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಹೂ ಮನಸ್ಸನ್ನು ಹಗುರಗೊಳಿಸಿ ಸಂತಸವನ್ನು ಮನದಂಗಳದಲ್ಲಿ ನೆಲೆಸುವಂತೆ ಮಾಡುತ್ತದೆ. ವಿವಿಧ ಸುಗಂಧ ಸುವಾಸನೆ ಸುಂದರ ಭಾವನೆ ಹೊರಹೊಮ್ಮಿಸುವ ಹೂಗಳು ಸರ್ವರನ್ನೂ ಮಂತ್ರಮುಗ್ಧಗೊಳಿಸುವ ಶಕ್ತಿ ಹೊಂದಿವೆ. ಸೌಂದರ್ಯ ಮತ್ತು ಸಮೃದ್ಧಿಯ ಪ್ರತೀಕವಾದ ಹೂ ದೇವರ ಅತ್ಯದ್ಭುತ ಸೃಷ್ಟಿಯಲ್ಲೊಂದು.
ಕೋಮಲತೆಯನ್ನು ಸಂಕೇತಿಸುವ ಕೋಮಲವಾದ ಹೂಗಳೆಂದರೆ ಕೋಮಲೆಯರಿಗೆ ತುಂಬಾ ಇಷ್ಟ. ಹೂವಿನಂಥ ಮನಸ್ಸುಳ್ಳ ಹೆಂಗಳೆಯರಿಗೆ ಹೂಗಳನ್ನು ಬೆಳೆಯಲು ಬಹಳಷ್ಟು ತಾಳ್ಮೆ ಮತ್ತು ದೃಢತೆ ಇದ್ದೇ ಇರುತ್ತದೆ. ಹೆಚ್ಚಿನ ಆರೈಕೆ ಮತ್ತು ಕಾಳಜಿ ಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು.
ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸುತ್ತಾರೆ. ಇಲ್ಲವೇ ಇವುಗಳ ಎಲೆಗಳನ್ನು ಬೇಯಿಸಿ ಹಾಗೆ ತಿನ್ನಬಹುದು. ಆದರೆ ತುರ್ತು ಆಹಾರವಾಗಿ ತಿನ್ನಲು ಯೋಗ್ಯವಾದ ಕಡುಗೆಂಪು ಬಣ್ಣದ ಡೈ ಯನ್ನು ಕೇಕ್ ಮತ್ತು ಜೆಲ್ಲಿಗಳ ಬಣ್ಣ ಬದಲಿಸಲು ಬಳಸಬಹುದು. ಕೆಲವು ಹೂಗಳನ್ನು ಚಿಕಿತ್ಸೆಯಲ್ಲೂ ಬಳಸುತ್ತಾರೆ. ಹೂಗಳಿಂದಲೇ ದೇವರ ಪೂಜೆಗೆ ಒಂದು ವಿಶೇಷ ಕಳೆ. ಹೂಗಳಿಲ್ಲದೇ ದೇವರ ಪೂಜೆ ಸಂಪೂರ್ಣವಾಗಲಾರದು.
ಶುಭ ಸಮಾರಂಭಗಳಲ್ಲಂತೂ ಇದರದು ಅಗ್ರ ಸ್ಥಾನ. ದೇವರ ಆರಾಧನೆಗೆ ಪ್ರಾರ್ಥನೆಗೆ ಹೂ ಬೇಕೇ ಬೇಕು. ನಿರ್ಮಲ ಮನಸ್ಸಿನಿಂದ ಹೂಗಳನ್ನು ದೇವರಿಗೆ ಸಮರ್ಪಿಸಿದರೆ ಮನದ ಆಸೆ ಆಕಾಂಕ್ಷೆಗಳು ಈಡೇರುವವು ಎಂಬ ಬಲವಾದ ನಂಬಿಕೆಯೂ ಇದೆ. ದೇವರ ಪಾದಗಳಿಗೆ ಹೂಗಳನ್ನು ಭಕ್ತಿ ಭಾವದಿಂದ ಸಮರ್ಪಿಸಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವಿಧ ಬಣ್ಣದ ಹೂಗಳಿಂದ ದೇವರ ಅಲಂಕಾರ ಅಷ್ಟೇ ಅಲ್ಲ ದೇವರ ಮನೆಯನ್ನೂ ಸಿಂಗರಿಸಲಾಗುವುದು. ದೇವಸ್ಥಾನವೂ ಇವುಗಳಿಂದಲೇ ಅಲಂಕೃತಗೊಂಡಿರುವುದನ್ನು ನಾವು ನೋಡಿ ಖುಷಿ ಪಡುತ್ತೆವೆ. ದೇವತೆಗಳಿಗೆ ಇಷ್ಟವಾಗುವ ಹೂಗಳನ್ನು ಸಮರ್ಪಿಸಿದರೆ ಅದೃಷ್ಟ ಹಾಗೂ ಸಮೃದ್ಧಿ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯೂ ಇದೆ.
ಮಹಾಭಾರತದಲ್ಲಿ ಉಲ್ಲೇಖವಾಗಿರುವ ಮಾಹಿತಿಯಂತೆ “ಯಾರು ಶುದ್ಧವಾದ ಮನಸ್ಸಿನಿಂದ, ಧಾರ್ಮಿಕವಾದ ವಿಧಿ ವಿಧಾನದ ಮೂಲಕ ದೇವರಿಗೆ ಹೂವನ್ನು ಸಮರ್ಪಿಸುತ್ತಾರೋ ಅಂತಹ ವ್ಯಕ್ತಿಗಳ ಬಗ್ಗೆ ದೇವರು ತೃಪ್ತನಾಗುತ್ತಾನೆ ಮತ್ತು ಆ ವ್ಯಕ್ತಿಗಳಿಗೆ ಸಮೃದ್ಧಿಯಿಂದ ಹರಿಸುತ್ತಾನೆ..” ವಿವಿಧ ದೇವತೆಗಳಿಗೆ ವಿಭಿನ್ನ ಹೂಗಳು ಹಾಗೂ ಅವುಗಳ ದಳಗಳು ಅತ್ಯಂತ ಪ್ರಿಯವಾದವುಗಳು ಆಗಿರುತ್ತವೆ. ಎಂಬ ವಿಷಯಗಳು ಪುರಾಣ ಇತಿಹಾಸದಲ್ಲಿ ಉಲ್ಲೇಖವಾಗಿರುವುದನ್ನು ಕಾಣುತ್ತೇವೆ. ದೇವರು ಕುಳಿತುಕೊಳ್ಳುವ ಪೀಠ ವಿಶೇಷ ಹೂಗಳಿಂದ ಕೂಡಿರುತ್ತವೆ. ದೇವತೆಗಳ ಕೈಯಲ್ಲೂ ವಿಭಿನ್ನ ಹೂಗಳನ್ನು ಹಿಡಿದಿರುವುದು ಹೂಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ದಾಸವಾಳ ಹೂವು, ಪಾರಿಜಾತ ಹೂವು ,ಕಮಲದ ಹೂವು, ಚೆಂಡು ಹೂವು, ತುಳಸಿ, ಮಲ್ಲಿಗೆ ಹೂವು ಪೂಜೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ.
ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಹಸಿರಿನೊಂದಿಗೆ ವಿವಿಧ ನಮೂನೆಯ ರಂಗು ರಂಗಿನ ಹೂಗಳು ಕಣ್ಮನ ಸೆಳೆಯುತ್ತವೆ. ಕೆಲವು ಮಹಿಳೆಯರು ಇಂಥ ಚಿತ್ತಾಕರ್ಷಕ ಹೂಗಳನ್ನು ಬೆಳೆಯುವ ಸಲುವಾಗಿ ಮಳೆಗಾಲಕ್ಕೆ ಕಾಯುತ್ತಿರುತ್ತಾರೆ. ಇಳೆಗೆ ತಂಪು ತಂದ ಮಳೆರಾಯ ಸಕಲ ಜೀವಿಗಳಿಗೂ ನವೋಲ್ಲಾಸ ನೀಡುತ್ತಾನೆ. ಇಡೀ ಪ್ರಕೃತಿಯೇ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರುವಾಗ ಹೂಗಳ ಪ್ರೇಮಿಗಳಾದ ಹೆಂಗಳೆಯರು ಪರಿಸರದ ಸೌಂದರ್ಯ ವರ್ಧನೆಯಲ್ಲಿ ತಮ್ಮದೂ ಒಂದಿಷ್ಟು ಪಾಲು ಇರಲೆಂದು ಸಜ್ಜಾಗಿರುತ್ತಾರೆ.
ಮಳೆಗೆ ಹಿಗ್ಗಿ ಹಿಗ್ಗಿ ಹೂವಾಗುವ ಪುಷ್ಪಗಳು ಅನೇಕ ಅವುಗಳಲ್ಲಿ ತಾವರೆಯೂ ಒಂದು. ಇದನ್ನು ಡೇರೆ ಹೂವೆಂದೂ ಕರೆಯುವರು. ಈ ಸಮಯದಲ್ಲಿ ತಾವರೆಯನ್ನು ತಮ್ಮ ಕೈ ತೋಟದಲ್ಲಿ, ಹೂದೋಟದಲ್ಲಿ ಬೆಳೆಸಲು ಹೆಂಗಳೆಯರು ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಒಡ್ಡುವಷ್ಟು ಕೌತುಕರಾಗಿರುತ್ತಾರೆ.
ತಾವರೆ ಗಡ್ಡೆ ಪ್ರಕೃತಿ ದತ್ತವಾಗಿ ದೊರೆಯತ್ತದೆ ಕೆಲವೊಮ್ಮೆ ಅವರಿವರನ್ನು ಕೇಳಿ ವಿವಿಧ ಬಣ್ಣದ ಹೂ ಬಿಡುವ ತಾವರೆ ಗೆಡ್ಡೆಗಳನ್ನು ಪಡೆದು ಭೂಮಿಯನ್ನು ಅಗೆದು ಅದರಲ್ಲಿ ಮರಳು ಮಣ್ಣು ಮತ್ತು ಗೊಬ್ಬರದ ಮಿಶ್ರಣ ಮಾಡಿ ಗಡ್ಡೆಯನ್ನು ಅದರೊಳಗಿಟ್ಟು ಬೆಳೆಸುವರು. ಇನ್ನು ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ಮರಳು ಗೊಬ್ಬರ ಬೆರೆಸಿ ಅದರಲ್ಲಿ ತಾವರೆ ಗಡ್ಡೆಯನ್ನಿಟ್ಟು ಬೆಳೆಸುವರು. ಸುರಿಯುವ ಮಳೆಗೆ ನೋಡು ನೋಡುತ್ತಿದ್ದಂತೆ ಒಂದೇ ವಾರದಲ್ಲಿ ಚಿಗುರೊಡೆದು ವಿಸ್ಮಯ ಮೂಡಿಸುವುದು. ನಂತರ ಮೊಳಕೆಯೊಡೆದು ಸಣ್ಣ ಸಣ್ಣ ಗಿಎಡವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಗಿಡಗಳಿಗೆ ಕಂಬಗಳನ್ನು ಆಧಾರವಾಗಿಡುವುದು ಸೂಕ್ತ. ತಿಂಗಳು ಕಳೆಯುವಷ್ಟರಲ್ಲಿ ಮೊಗ್ಗುಗಳು ಹಿಗ್ಗಿ ಹಿಗ್ಗಿ ಹೂವಾಗಿ ಮನಸೂರೆಗೊಳ್ಳುತ್ತವೆ.
ಮಳೆಗಾಲದ ನಂತರ ಇವುಗಳಿಗೆ ನೀರುಣಿಸುವುದು ಅತ್ಯಗತ್ಯ. ಮಳೆಗಾಲದ ನಂತರ ಗಿಡ ಒಣಗಿದಾಗ ಗಿಡದ ಬುಡದಲ್ಲಿ ಕಟಾವು ಮಾಡಿ ಪ್ಲಾಸ್ಟಿಕ್ ಚೀಲಗಳನ್ನಿಟ್ಟರೆ ಮತ್ತೆ ಮುಂದಿನ ಮಳೆಗಾಲಕ್ಕೆ ಮನಮೋಹಕ ತಾವರೆಗಳನ್ನು ಬೆಳೆದು ಮನಾನಂದ ಪಡೆಯಬಹುದು.
ಈಗ ನಗರ ಭಾಗಗಳಲ್ಲಿ ಟೆರೆಸ್ ಗಾರ್ಡನ್ ಅನಿವಾರ್ಯವಾಗಿರುವುದರಿಂದ ಮೇಲಿನ ವಿಧಾನದಲ್ಲಿ ಪಾಟ್ ನಲ್ಲೂ ತಾವರೆಗಿಡ ಬೆಳಸಬಹುದು. ಪಾಟ್ ಅಗಲವಾಗಿರಬೇಕಪ. ಅದರಲ್ಲಿ ಪೂರ್ಣ ಮಣ್ಣು ತುಂಬದೆ ಮಕ್ಕಾಲು ಮಣ್ಣು ತುಂಬಿ ಮೇಲೆ ನೀರ ಹಾಕಬೇಕು. ಕೆಸರಿನಂತೆ ಇರಬೇಕು.ಅದರಲ್ಲಿ ತಾವರೆ ಗೆಡ್ಡೆಗಳನ್ನುಇಟ್ಟು ಬೆಳೆಸಬಹುದು.
ಇಚ್ಚಾ ಶಕ್ತಿ, ಅಪಾರ ಬುದ್ಧಿವಂತಿಕೆ, ಅಗತ್ಯವಾದ ಜ್ಞಾನ ಇದ್ದಾಗಲೂ ಜನರು ಯಾಕೆ ಕೆಲವೊಂದು ಕೆಲಸದಲ್ಲಿ ವಿಫಲರಾಗುತ್ತಾರೆ? ಹಲವಷ್ಟು ಬಾರಿ ಕೆಲಸ ಗೊಂದಲಮಯವಾಗಿ ಇಲ್ಲವೇ ಅಪೂರ್ಣವಾಗಿಯೇ ಉಳಿಯುತ್ತದೆ. ಇದೇಕೆ ಹೀಗೆ ಎನ್ನಿಸಬಹುದು.?
ಪ್ರತಿ ಸೆಕೆಂಡುನಲ್ಲೂ ಪ್ರತಿಯೊಬ್ಬರ ಮನಸ್ಸಿನ ಪರದೆಯಲ್ಲಿ ಹಲವಾರು ವಿಚಾರಗಳು ಹರಿದಾಡುತ್ತಿರುತ್ತದೆ. ಅದು ಏಕಾಗ್ರತೆಗೆ ಭಂಗ ತರುತ್ತದೆ. ಅದರಿಂದ ಮಾಡಲು ಹೊರಟಿರುವ ಕೆಲಸದ ಫಲಿತಾಂಶ ಅಪೂರ್ಣವೇ ಆಗಿರುತ್ತದೆ. ಗುರಿಯೆಡೆಗೆ ಮನಸ್ಸು ಏಕಾಗ್ರಗೊಳ್ಳದೇ ಇದ್ದರೆ ಯಾವುದೇ ಪ್ರಯತ್ನವೂ ಸಫಲವಾಗುವುದಿಲ್ಲ. ಏಕಮನಸ್ಸಿನಿಂದ ಕೆಲಸದ ಕಡೆಗೆ ಗಮನ ಹರಿಸದೇ ಇದ್ದರೆ ಖಂಡಿತಾ ಯಶಸ್ಸು ಸಾಧ್ಯವಿಲ್ಲ. ಕೇಂದ್ರೀಕೃತ ಮನಸ್ಸು ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಹಾಗೂ ಅದರಿಂದ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.
ಮನಸ್ಸನ್ನು ಕೇಂದ್ರೀಕರಿಸುವುದರಿಂದ ವ್ಯಕ್ತಿಯ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ. ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಾಗುವುದಾದರೆ ಅದರಿಂದ ನಾವು ಸಮಂಜಸವಾಗಿ, ನಿಖರವಾಗಿ ನಮ್ಮನ್ನುನಾವು ವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ದೊಡ್ಡಮಟ್ಟದ ಯಶಸ್ಸು ಗಳಿಸುವುದಕ್ಕೂ ಸಾಧ್ಯ. ಅಂತಹ ಯಶಸ್ಸು ಸಾಧ್ಯವಾಗುವುದು ನಮ್ಮ ಮನಸ್ಸನ್ನು ನಾವು ನಿಯಂತ್ರಣದಲ್ಲಿರಿಸಿ ಕೊಳ್ಳುವುದರಿಂದ ಮಾತ್ರ ಸಾಧ್ಯ. ಚಾಂಪಿಯನ್ಸ್, ಜೀನಿಯಸ್ ಎಂದೆಲ್ಲಾ ಕರೆಸಿಕೊಂಡವರ ಯಶಸ್ಸಿನ ಗುಟ್ಟು ಇದೇ ಆಗಿದೆ.
ಏಕಾಗ್ರತೆ ನಮ್ಮೊಳಗೆ ಆಧ್ಯಾತ್ಮಿಕ ಅರಿವನ್ನು ತಂದುಕೊಡುತ್ತದೆ, ನಮ್ಮಂತರಂಗವನ್ನು ಅರಿಯುವುದಕ್ಕೆ ಸಾಧ್ಯವಾಗಿಸುತ್ತದೆ. ಪ್ರತಿಯೊಬ್ಬನೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ಹೊಂದಿರುತ್ತಾನೆ. ಮನಸ್ಸನ್ನು ಕೇಂದ್ರೀಕರಿಸಿಕೊಳ್ಳುವುದನ್ನು ಆಧ್ಯಾತ್ಮಿಕ ಗುರು ಮನವೊಲಿಸುವುದರ ಮೂಲಕ ಕಲಿಸಿಕೊಡುತ್ತಾನೆ. ಅದನ್ನವನು ಬಹಳ ಚತುರತೆಯಿಂದ ಬಳಸಿಕೊಂಡಿರುತ್ತಾನೆ.ವಿವಿಧ ಧರ್ಮಗ್ರಂಥಗಳು ಕೂಡಾ ಫೋಕಸ್ ಮಾಡುವುದರ ಬಗೆಗೆ ತಮ್ಮದೇ ನೆಲೆಯಲ್ಲಿ ಸಾರುತ್ತವೆ.
ಎಲ್ಲಾ ಧರ್ಮಗಳೂ ಕೂಡಾ ಕರ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವಂತೆ ಹೇಳುತ್ತದೆ.ವಾಸ್ತವ ಅಂದರೆ ಒಬ್ಬ ಸಾಮಾನ್ಯ ಮನುಷ್ಯನಿಗೆ ಹಲವಾರು ಗೊಂದಲಗಳು ಇದ್ದಾಗ ಒಂದೇ ಕಡೆಗೆ ಗಮನ ನೀಡುವುದು ಅಷ್ಟು ಸುಲಭದ ಮಾತಲ್ಲ. ಮನಸ್ಸಿನೊಂದಿಗೆ ಹಲವಾರು ವಿಷಯಗಳು ಸ್ಪರ್ಧೆ ಮಾಡುತ್ತಿರುತ್ತವೆ. ಹಾಗಾಗಿ ಒಂದೇ ವಿಷಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸುವ ವಿಧಾನ ಅಂದರೆ ಈ ಕ್ಷಣ ನಾನೇನು ಮಾಡಬೇಕು, ನಾನು ಮಾಡಬೇಕಾದ್ದದ್ದೇನು ಎಂಬುದನ್ನು ತಿಳಿದುಕೊಳ್ಳುವುದು. ಸದ್ಯದ ಪರಿಸ್ಥಿತಿಯಲ್ಲಿ ತಾನು ಮಾಡಬೇಕಾದ ಗುರಿಗಳೇನು ಎಂಬುದನ್ನು ತಿಳಿದುಕೊಳ್ಳುವುದು. ಮೊದಲ ಪ್ರಾಶಸ್ತ್ಯ ಯಾವುದಕ್ಕೆ ನೀಡಬೇಕು ಎಂಬುದನ್ನು ಅರಿತು ಕೆಲಸ ಮಾಡುವುದರಿಂದ ಒಂದೊಂದೇ ಗುರಿಗಳೊಂದಿಗೆ ಸರ್ವಶ್ರೇಷ್ಠ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.
ನಮ್ಮ ಗಮನ ಯಾವಾಗ ಹಲವಾರು ಕೆಲಸಗಳೊಂದಿಗೆ ಒಂದೇ ಸಮಯದಲ್ಲಿ ವಿಭಜನೆಯಾಗಿ ಹೋಗಿರುತ್ತದೆಯೋ ಅದು ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುತ್ತಿರುವುದರಿಂದ (ಮಲ್ಟಿಟಾಸ್ಕ್) ಉದಾಹರಣೆಗೆ ಇಮೇಲ್ ಮಾಡುವುದು, ಫೇಸ್‍ಬುಕ್ ನೋಡುವುದು, ಟ್ವಿಟರ್ ಹೀಗೆ ಒಟ್ಟಿಗೆ ಎಲ್ಲವನ್ನೂ ಮಾಡುವುದರಿಂದ ಚಿಂತನೆಯನ್ನೇ ಹಾಳು ಮಾಡಿಬಿಡುತ್ತದೆ. ಇದರಿಂದ ಮಾಡುವ ಕೆಲಸದಲ್ಲಿ ಗುಣಮಟ್ಟ ಕಡಿಮೆಯಾಗುತ್ತದೆ.ಹಳೆಯದರ ಬಗ್ಗೆ ಚಿಂತೆ ಮಾಡದೆ, ಭವಿಷ್ಯದ ಬಗ್ಗೆ ವಿಚಲಿತರಾಗದೆ ಪ್ರಸ್ತುತ ಕೈಗೆತ್ತಿಕೊಂಡುದುದರ ಬಗ್ಗೆ ಗಮನ ಕೇಂದ್ರೀಕರಿಸಿ. ಧ್ಯಾನ ಅಭ್ಯಾಸ ಮಾಡುವವರ ಪ್ರಮುಖ ಅಂಶ.
ಧ್ಯಾನ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಮನಸ್ಸು ಒತ್ತಡಮುಕ್ತವಾಗುತ್ತದೆ. ಮನಸ್ಸಿನ ಗೊಂದಲಗಳನ್ನು ತಳ್ಳಿ ಹಾಕುತ್ತದೆ.ಒಂದು ವಸ್ತುವಿನೆಡೆಗಿನ ನಮ್ಮ ಮನಸ್ಸಿನ ಜಾಗೃತಿಯು ನಮ್ಮ ಧ್ಯಾನಾವಸ್ಥೆಗೆ ಕೊಂಡೊಯುತ್ತದೆ.ಒಂದು ಗುರಿಯನ್ನು ಆಯ್ಕೆ ಮಾಡಿಕೊಂಡು ಅದರೆ ಮನಸ್ಸನ್ನು ಕೇಂದ್ರೀಕರಿಸಿ. ಅದು ಪೂರ್ಣಗೊಂಡ ನಂತರವೇ ಮತ್ತೊಂದನ್ನು ಆಯ್ಕೆ ಮಾಡಿಕೊಳ್ಳಿ.
ಒಂದು ಸಮಯಕ್ಕೆ ಒಂದೇ ವಿಷಯದ ಕಡೆಗೆ ಗಮನ ಕೇಂದ್ರೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಾಸ್ತವದ ಕಡೆಗೇ ಗಮನ ಇರಬೇಕು ಅನ್ನೋದನ್ನು ಮರೆಯಬಾರದು. ಪ್ರತಿದಿನ ಬೆಳಗ್ಗೆ ಎದ್ದಾಗ ಎಂತಹ ಅದ್ಭುತ ಮತ್ತೊಂದು ಗಳಿಗೆ ಬಂದಿದೆ. ಅದು ಜೀವನಕ್ಕೆ ಸಿಕ್ಕಿದ ಅದ್ಭುತ ಉಡುಗೊರೆ ಎಂದುಕೊಂಡು ಗುರಿಯೆಡೆಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಅದು ಒಳ್ಳೆಯ ದಿನವಾಗುವುದರಲ್ಲಿ ಸಂಶಯವಿಲ್ಲ.
ಗಮನ ಕೇದ್ರೀಕರಿಸುವುದು ಹೇಗೆ?
* ಒಂದಷ್ಟು ಹೊತ್ತು ಒಂದೇ ವಿಷಯ, ಗುರಿ, ಕೆಲಸದ ಕಡೆ ಗಮನ ನೀಡಲು ಪ್ರಯತ್ನಿಸಬೇಕು.
* ಗಮನ ಕೇಂದ್ರೀಕರಿಸುವುದು ಅಂದರೆ ಒಂದೊಳ್ಳೆ ಕಾರಣಕ್ಕಾಗಿ ಒಂದೊಳ್ಳೆಯ ಸಮಯ ಹಾಗೂ ಸ್ಥಳದಲ್ಲಿ ಕೆಲಸ ಮಾಡುವ ಕಲೆ.
ನಾವೆಲ್ಲ ಕಾತುರದಿಂದ ಎದುರು ನೋಡುತ್ತಿರುವ ಐ.ಪಿ.ಎಲ್ ಪಂದ್ಯ ನಾಳೆಯಿಂದ ಶುರುವಾಗುತ್ತಿದೆ. ಕೊರೋನ ಸಾಂಕ್ರಾಮಿಕ ರೋಗದಿಂದ ಭಯಭೀತಿಗೊಂಡ ಜನರ ಮನಸ್ಸನ್ನು ಮನರಂಜನೆಯತ್ತ ಒಯ್ಯುವಲ್ಲಿ ಐಪಿಎಲ್ ಖಂಡಿತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಬಿಸಿಸಿಐ ನ ಉತ್ಸಾಹ, ವಿಶ್ವಾಸದಿಂದ ಈ ಟೂರ್ನಿ ಸಾಧ್ಯವಾಗುತ್ತಿದೆ.
ಕ್ರಿಕೆಟ್ನಲ್ಲಿ ಐದು ದಿನಗಳ ಟೆಸ್ಟ್ ಪಂದ್ಯವಿದೆ, ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವಿದೆ ಮತ್ತು 2008 ರಲ್ಲಿ ಬಿಸಿಸಿಐ ಎಲ್ಲಾ ದೇಶಗಳನ್ನೊಳಗೊಂಡ ಲೀಗ್ ಆಧಾರಿತ ಪಂದ್ಯವನ್ನು ಜನರಿಗೆ ಪರಿಚಯಿಸಿತು. ಎರಡೂ ಟೀಂ ಗಳು ಟ್ವೆಂಟಿ 20 ಓವರ್ ಮಾಡಬೇಕು ಮತ್ತು ಆಟವೂ ಬೇಗ ಮುಗಿಯುತ್ತದೆ. ಇದು ಎಷ್ಟು ಜನಪ್ರಿಯವಾಯಿತೆಂದರೆ , 12 ವರ್ಷಗಳ ಕಡಿಮೆ ಅವಧಿಯಲ್ಲಿ ಇದು ವಿಶ್ವದ 10 ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿತು.
ಲೀಗ್ ಆಟಗಳ ಜನಪ್ರಿಯತೆಯನ್ನು ಕ್ರೀಡಾಂಗಣದಲ್ಲಿ ಸೇರುವ ಪ್ರೇಕ್ಷಕರ ಮತ್ತು ಟಿವಿ ವೀಕ್ಷಕರ ಸಂಖ್ಯೆಯನ್ನು ಪರಿಗಣಿಸಿ ತೀರ್ಮಾನ ಮಾಡಲಾಗುತ್ತದೆ . ಈ ಎರಡು ಅಂಶಗಳನ್ನು ಒಟ್ಟು ಗಮನಿಸಿದಾಗ, ಪ್ರಪಂಚದ ನಾನಾ ದೇಶಗಳಲ್ಲಿ ಆಡುವ ಲೀಗ್ ಪಂದ್ಯಗಳ ಕ್ರಮಾಂಕ ಕೆಳಗಿನಂತಿದೆ:
1. ಯು. ಎಸ್.ಎ – ಎನ್.ಎಫ್.ಎಲ್ (ರಗ್ಬಿ ಲೀಗ್) 2. ಜರ್ಮನ್ – ಬುಂಡೆಸ್ಲಿಂಗ (ಫುಟ್ಬಾಲ್), 3. ಯು.ಎಸ್ – ಕಾಲೇಜ್ ಫುಟ್ಬಾಲ್ ವಿಭಾಗ I , 4. ಇಂಗ್ಲಿಷ್ ಪ್ರೀಮಿಯಂ ಲೀಗ್ (ಫುಟ್ ಬಾಲ್), 5. ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ 6. ಐ ಪಿ ಎಲ್
ಭಾರತದಲ್ಲಿ ಕ್ರಿಕೆಟ್ನಷ್ಟು ಜನಪ್ರಿಯ ಆಟ ಬೇರೊಂದಿಲ್ಲ. ಕಾರಣ ಬ್ಯಾಟೇ ಬೇಕು ಅಂತ ಇಲ್ಲ ಒಂದು ಹಲಗೆ ಮತ್ತು ರಬ್ಬರ್ ಚೆಂಡಿದ್ದರೂ ಸಾಕು ಈ ಆಟ ಆಡಬಹುದು. ಹಾಗಾಗಿ ಗಲ್ಲಿ ಗಲ್ಲಿಗಳಲ್ಲೂ ಈ ಆಟ ಪ್ರಸಿದ್ಧವಾಗಿದೆ . ಬಡವರಿಂದ ಶ್ರೀಮಂತರವರೆಗೂ ಜನಪ್ರಿಯವಾಗಿದೆ. ಐ.ಪಿ.ಎಲ್ ವಿಶ್ವದ ಎಲ್ಲೆಡೆಯೂ ಹೆಚ್ಚು ವೀಕ್ಷಿಸುವ ಲೀಗ್ ಪಂದ್ಯಗಳಲ್ಲಿ ಒಂದಾಗಿದೆ. ಐ.ಪಿ.ಎಲ್ ಪ್ರಸ್ತುತ ಎಂಟು ಫ್ರ್ಯಾಂಚೈಸ್ ಹೊಂದಿದೆ. ಪ್ರತಿ ಪಂದ್ಯದಲ್ಲೂ ಸರಾಸರಿ 32000 ವೀಕ್ಷಕರ ಹಾಜರಾತಿ ಇರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಐಪಿಎಲ್ ಶುರುವಾಯಿತೆಂದರೆ ಫೀವರ್ ಬಂತು ಅಂತಾನೆ ಲೆಕ್ಕ.
ಐಪಿಎಲ್ ನ 13ನೇ ಆವೃತ್ತಿ 19.09.2020 ರಿಂದ 10.11.2020 ರವರೆಗೆ ಯುನೈಟೆಡ್ ಅರಬ್ ಎಮರೈಟ್ಸ್ ನ ದುಬೈ, ಅಬುದಾಭಿ ಮತ್ತು ಶಾರ್ಜಾ ನಗರಗಳಲ್ಲಿ ನಡೆಯುತ್ತದೆ . ಒಟ್ಟು 53 ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ 56 ಲೀಗ್ ಪಂದ್ಯಗಳು, 4 ಪ್ಲೇ-ಆಫ್ ಸೇರಿ ಒಟ್ಟು 60 ಪಂದ್ಯಗಳು ನಡೆಯಲಿವೆ. ಐಪಿಎಲ್ ನ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಪಂದ್ಯಾವಳಿಯನ್ನು ಭಾರತದಿಂದ ಹೊರಗೆ ನಡೆಸಲಾಗುತ್ತಿದೆ.
ಮೊದಲು ನಡೆದದ್ದು 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ. ಕಾರಣ ಭಾರತದಲ್ಲಿ ಆಗ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿತ್ತು . ಎರಡನೆಯದು 2014ರಲ್ಲೂ ಚುನಾವಣೆಯ ಕಾರಣಕ್ಕೆ ಮೊದಲ 20 ಪಂದ್ಯ ಗಳನ್ನು ಯುಎಇ ನಲ್ಲಿ ನಡೆಸಿದ್ದರು. ಈ ವರ್ಷ ಕೋವಿಡ್ -19 ಪ್ರಕರಣಗಳು ದೇಶದಲ್ಲಿ ದಿನದಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪುನ: ಯುಎಇ ನಲ್ಲಿ ನಡೆಯುತ್ತಿದೆ.
ಫ್ಯಾಂಟಸಿ ಕ್ರಿಕೆಟ್ ಲೀಗ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಪ್ರಾಯೋಜಕತ್ವದ ಹಕ್ಕನ್ನು ಪಡೆದಿದ್ದಾರೆ . ಇಂಡಿಯನ್ ಆನ್ಲೈನ್ ಎಜುಕೇಷನ್ ಟೆಕ್ನಾಲಜಿ ಕಂಪನಿ ಅನ್ಅಕ್ಯಾಡಮಿ ಐಪಿಎಲ್ ನ ಅಧಿಕೃತ ಪಾಲುದಾರರಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಲೈವ್ ಟಿವಿ ಪ್ರಸಾರ ಮತ್ತು ಡಿಸ್ನಿ ಹಾಟ್‌ಸ್ಟಾರ್ ಡಿಜಿಟಲ್ ಪ್ಲಾಟ್ ಫಾರ್ಮ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ.
ಟ್ವೆಂಟಿ 20 ಪಂದ್ಯವನ್ನು ನೀವು ಕ್ರೀಡಾಂಗಣಕ್ಕೆ ಹೋಗಿ ನೋಡುವ ಮಜವೇ ಬೇರೆ. ಇಡೀ ಕ್ರೀಡಾಂಗಣದಲ್ಲಿ ಆರ್ ಸಿ ಬಿ, ಆರ್ ಸಿ ಬಿ ಎಂದು ಗಂಟಲು ಹರಿಯುವಂತೆ ಕೂಗಿ ಆಟಗಾರರನ್ನು ವೀಕ್ಷಕರು ಪ್ರೋತ್ಸಾಹಿಸುತ್ತಿದ್ದರೆ ಅದು ನಿಮ್ಮ ಕಿವಿಗೆ ಅಲೆಅಲೆಯಾಗಿ ಬಂದು ಅಪ್ಪಳಿಸುತ್ತಿರುತ್ತದೆ. ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರೂ how is the josh ಎಂದರೆ high sir ಎನ್ನುವಂತಿರುತ್ತದೆ. ಒಟ್ಟಿನಲ್ಲಿ ಇಡೀ ವಾತಾವರಣದಲ್ಲಿ ಕರೆಂಟ್ ಹರಿಯುತ್ತಿರುತ್ತದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಎರಡೂ ಕಡೆ ಉತ್ಸವದ ವಾತಾವರಣವಿರುತ್ತದೆ.
ಖಾಲಿ ಕ್ರೀಡಾಂಗಣ
ಈ ಬಾರಿಯ ವಿಶೇಷತೆ ಎಂದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿ. ಈ ಸಲ ಖಾಲಿ ಆಟದ ಮೈದಾನದಲ್ಲಿ ಅಭಿಮಾನಿಗಳ ಬೆಂಬಲವಿಲ್ಲದೆ ಹೇಗೆ ಆಟಗಾರರು ಸ್ಫೂರ್ತಿ ಪಡೆಯುತ್ತಾರೆ ಎನ್ನುವುದೇ ದೊಡ್ಡ ಕುತೂಹಲ. ಬಿಸಿಸಿಐ ಸಹ ಐಪಿಎಲ್ ಅನ್ನು ಕೊರೋನದಿಂದ ಕಾಪಾಡಲು ಸಾಕಷ್ಟು ಕಠಿಣ ಕ್ರಮಗಳನ್ನು ಹಾಗೂ ನಿಯಮಗಳನ್ನು ರೂಪಿಸಿದೆ.
ಈ ಬಾರಿ ಆಡುತ್ತಿರುವ ಎಂಟು ತಂಡಗಳ ನಾಯಕರು ಹೀಗಿದ್ದಾರೆ:
1. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ
2.ಚೆನ್ನೈ ಸೂಪರ್ ಕಿಂಗ್ ನಾಯಕ ಎಂ ಎಸ್ ಧೋನಿ
3.ಕೋಲ್ಕತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್
4.ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ
5. ಕಿಂಗ್ಸ್ 11ಪಂಜಾಬ್ ನಾಯಕ ಕೆ ಎಲ್ ರಾಹುಲ್
6.ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್
7.ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್
8.ಸನ್ ರೈಸರ್ಸ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್.
ಸಮೀಕ್ಷೆಯ ಪ್ರಕಾರ ಅಗ್ರ ಸ್ಥಾನದಲ್ಲಿರುವ ನಾಲ್ಕು ತಂಡಗಳು :
1.ಮುಂಬೈ ಇಂಡಿಯನ್ಸ್ (ಎಂಐ), 2.ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ), 3.ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು 4.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ).
1983ರ ಆ ಪಂದ್ಯ
ಕ್ರಿಕೆಟ್ ಎಂದ ತಕ್ಷಣ ನನಗೆ ಜ್ಞಾಪಕಕ್ಕೆ ಬರುವುದು 1983ರ ಭಾರತ- ವೆಸ್ಟ್ ಇಂಡೀಸ್ ODI Finals. ಅಬ್ಬಾ ! ನಮ್ಮ ತಂದೆಯವರು ಆದಿನ ನನ್ನ ಗೆಳೆಯರೊಡನೆ ಆಟವನ್ನು ಎಂಜಾಯ್ ಮಾಡಿದ ರೀತಿ ನವಯುವಕರನ್ನೂ ನಾಚಿಸುವಂತಿತ್ತು.
ಒಟ್ಟಿನಲ್ಲಿ ಈ ಸಲದ ಐಪಿಎಲ್ ಪಂದ್ಯವು ಕುತೂಹಲಕಾರಿ, ಮನೋರಂಜನಾ ಮತ್ತು ಸ್ಪರ್ಧಾತ್ಮಕವಾಗಿ ಇರುತ್ತದೆ . ವರ್ತಮಾನಕ್ಕೆ ಯಾವತ್ತೂ ಇತಿಹಾಸ ವ್ಯರ್ಥ ಎಂದು ಸಾಬೀತಾಗುತ್ತದೆ.
ಎಲ್ಲಾ ಟೀಮಿನವರು ಸಮನಾಗಿ ಇರುವ ಕಾರಣ ಯಾರು ಫೈನಲ್ಸ್ ಗೆ ಬಂದರೂ ಆ ದಿನ ಉತ್ತಮವಾಗಿ ಆಡಿದರೆ ಹಾಗೂ ಅವರ ಅದೃಷ್ಟ ಚೆನ್ನಾಗಿದ್ದರೆ ಅವರಿಗೆ ಕಪ್ ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ .
ಆದರೆ ಆರ್ ಸಿ ಬಿ ಹಾರ್ಡ್ ಕೋರ್ ಫ್ಯಾನ್ಸ್ ಎಲ್ಲರಿಗೂ ಈ ಸಲ ಆರ್ ಸಿ ಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ದೃಢವಾಗಿದೆ. ನಾವೆಲ್ಲಾ ಟಿವಿಯ ಮುಂದೆ ಕುಳಿತೇ ಆಟಗಾರರನ್ನು ಪ್ರೋತ್ಸಾಹಿಸೋಣ ಅಲ್ಲವೇ?
ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ ಉಂಟಾಗುತ್ತಿದ್ದ ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿತ್ತು.
ಹೊಸ ಸಹಸ್ರಮಾನ 2000 ಇಸವಿಗೆ ಕಾಲಿಡುತ್ತಿದ್ದಂತೆ ಭೀಕರ ಪ್ರಳಯದಿಂದ ಯುಗ ಅಂತ್ಯವಾಗುತ್ತದೆ ಎಂದು ಯಾವಾಗಲೋ ಕೆಲವು ಜ್ಯೋತಿಷಿಗಳು ‘ಬರೆದಿಟ್ಟಿದ್ದನ್ನು’ ನಂಬಿಕೊಂಡು ತೊಂಬತ್ತರ ದಶಕದಲ್ಲಿ ಜನರನ್ನು ಹುಯಿಲೆಬ್ಬಿಸಲಾಗಿತ್ತು. ಇನ್ನೇನು ಪ್ರಳಯವನ್ನು ಜನರು ಸಂಪೂರ್ಣ ಮರೆತ್ತಿದ್ದರೆನ್ನುವಾಗ ಮತ್ತೊಮ್ಮೆ, “ಡಿಸೆಂಬರ್ 11, 2012 ರಂದು ಪ್ರಳಯ ಸಂಭವಿಸುವುದು ಗ್ಯಾರಂಟಿ, ಈ ಸಲ ಅದು ಸುಳ್ಳಾಗಲು ಸಾಧ್ಯವೇ ಇಲ್ಲ” ಎಂದು ಜ್ಯೋತಿಷಿಗಳು ಮಾಧ್ಯಮಗಳ ಮೂಲಕ ಬೊಂಬ್ಡ ಬಡಿದುಕೊಂಡರೂ ‘ಒಮ್ಮೆ ಮೂರ್ಖರಾಗಿದ್ದು ಸಾಕು’ ಎಂದುಕೊಂಡು ಅದರ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳಲಿಲ್ಲ (ಜೀವ ಉಳಿಸಿಕೊಳ್ಳಲು ಮತ್ತು ಪ್ರಳಯದ ನಂತರ ಬದುಕಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಕೆಲವು ಜನರ ಸ್ವಾರಸ್ಯಕಾರಿ ದೃಶ್ಯಾವಳಿಗಳು ಆಗಿನ ದಿನಗಳಲ್ಲಿ ಟೀವಿ, ಪತ್ರಿಕೆಗಳಲ್ಲಿ ಬಿತ್ತರವಾಗುತ್ತಿತ್ತು). ಇದಕ್ಕೆ ಸಂಬಂಧಿಸಿದ ‘2012’ ಎಂಬ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಮೂಡಿಬಂದ ಭೀಕರ ಪ್ರಳಯ ಸದೃಶ್ಯಗಳನ್ನು ನೋಡಿ ಮನರಂಜನೆ ಪಟ್ಟರೆ ಹೊರತು ಇನ್ನು ಸ್ವಲ್ಪ ದಿನದಲ್ಲಿ ಹೀಗೆ ಆಗುತ್ತದೆ ಎಂದು ಯಾರೂ ಭಯಪಡುವಷ್ಟು ಮೂರ್ಖರಾಗಲಿಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಳಯದ ಬಗ್ಗೆ ಇರುವ ವ್ಯಾಖ್ಯಾನ, ಭವಿಷ್ಯವಾಣಿಗಳು, ನಂಬಿಕೆ, ಅಪನಂಬಿಕೆಗಳು ಏನೇ ಇರಲಿ, ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಮಾನವ ನಿರ್ಮಿತ ಕಾರಣದಿಂದ ಭೂವಾತಾವರಣದಲ್ಲಿ ಉಂಟಾಗುತ್ತಿದ್ದ ಅನಪೇಕ್ಷಿತ ಬದಲಾವಣೆಯೊಂದನ್ನು ಸುಮಾರು ಐದು ದಶಕಗಳ ಹಿಂದೆ ವಿಜ್ಞಾನಿಯೊಬ್ಬರು ಒಂದು ವೇಳೆ ಗಮನಿಸದೇ ಹೋಗಿರದಿದ್ದರೆ ಪ್ರಾಯಶ: ಪ್ರಳಯ ಸದೃಶ್ಯ ಘಟನೆ ಇಷ್ಟರೊಳಗೆ ನಡೆದೇ ಹೋಗುವ ಸಂಭವ ಇರುತ್ತಿದ್ದರಬಹುದು…!
ಪ್ರಕೃತಿಯಲ್ಲಿ ಉಂಟಾಗುತ್ತಿರುವ ಒಂದು ಅನಪೇಕ್ಷಿತ ಬದಲಾವಣೆಯ ಹಿಂದಿರುವ ಕಾರಣವನ್ನು ಅರಿತುಕೊಂಡು ಅದನ್ನು ತಡೆಗಟ್ಟಲು 1961 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ ಒಂದು ಒಡಂಬಡಿಕೆಯು ಮುಂದೆ ಸಂಭವಿಸಬಹುದಾದ ಪ್ರಳಯ ಸನ್ನಿಹಿತ ಘಟನೆಯನ್ನು ತಡೆಯಲು ಸಾಧ್ಯವಾಯಿತು. ಹಾಗಿದ್ದರೆ, ಆ ವಿಜ್ಞಾನಿಯು ಭೂ ವಾತಾವರಣದಲ್ಲಿ ಗಮನಿಸಿದ ಅಂಶ ಯಾವುದು? ಭೂಮಿಯಲ್ಲಿರುವ ಜೀವಿಗಳಿಗೆಲ್ಲ ನಾಶವಾಗುವ ಪ್ರಳಯಸದೃಶ್ಯ ಸನ್ನಿವೇಷ ಹೇಗೆ ತಪ್ಪಿಸಲಾಯಿತು? ಪುಸ್ತತ ಸ್ಥಿತಿ ಹೇಗಿದೆ? ಬನ್ನಿ ನೋಡೋಣ.
ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು ಸೇಬುಹಣ್ಣನ್ನು ಉದಾಹರಣೆಯಾಗಿ ತಗೆದುಕೊಳ್ಳೋಣ. ಸೇಬುಹಣ್ಣಿನ ಮೇಲಿರುವ ತೆಳುವಾದ ಸಿಪ್ಪೆಯನ್ನು ಕೆರೆಸಿ ತೆಗೆದು ತೆರೆದ ಸ್ಥಿತಿಯಲ್ಲಿ ಇಟ್ಟರೆ ಸ್ವಲ್ಪ ಹೊತ್ತಿನ ನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಸ್ವಲ್ಪ ಸಮಯ ಹಾಗೆಯೇ ಬಿಟ್ಟರೆ ಹಣ್ಣು ಸಂಪೂರ್ಣ ಹಾಳಾಗುತ್ತದೆ. ಅಂದರೆ, ಇಡೀ ಸೇಬು ಹಣ್ಣಿನ ನೈಜತೆಯನ್ನು ಕಾಪಾಡಲು ಅದರ ತೆಳುವಾದ ಸಿಪ್ಪೆಯು ರಕ್ಷಾಕವಚದಂತೆ ಇರುತ್ತದೆ. ಅದೇ ರೀತಿ ಭೂಮಿಯಲ್ಲಿರುವ ಎಲ್ಲಾ ಜೀವಸಂಕುಲಗಳನ್ನು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಅತಿನೇರಳೆ ಕಿರಣಗಳಿಂದ ಕಾಪಾಡಲು ಭೂಮಿಯ ವಾತಾವರಣದಲ್ಲಿ ತೆಳುವಾದ ರಕ್ಷಾಕವಚವೊಂದಿದೆ.
ಆರಕ್ಷಾಕವಚಯಾವುದು?
ಸೌರ ಶಕ್ತಿಯು ಭೂಮಿಯಲ್ಲಿರುವ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮೂಲ. ಆದರೆ ಎಲ್ಲಾ ಜೀವಿಗಳ ಶಕ್ತಿಯ ಮೂಲವಾದ ಬೆಳಕಿನ ಕಿರಣಗಳ ಜೊತೆಗೆ ಸೂರ್ಯನಿಂದ ಅಪಾಯಕಾರಿಯಾದ ನೇರಳಾತೀತ ವಿಕಿರಣಗಳೂ (Ultraviolet radiation) ಹೊರಹೊಮ್ಮುತ್ತವೆ. ಅಗಾಧ ಪ್ರಮಾಣದಲ್ಲಿ ಸೂರ್ಯನಿಂದ ಉತ್ಸರ್ಜಿತವಾಗುವ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪಿದರೆ ಇಲ್ಲಿರುವ ಎಲ್ಲಾ ಜೀವಿಗಳು ನಾಶವಾಗುತ್ತವೆ. ಏಕೆಂದರೆ ಅತಿನೇರಳೆ ಕಿರಣವು ಜೈವಿಕ ಅಣುಗಳನ್ನು, ಮುಖ್ಯವಾಗಿ ತಳಿಮಾಹಿತಿಯನ್ನು ಹೊಂದಿರುವ ಡಿ.ಎನ್.ಎ.ಯನ್ನು ಛಿದ್ರಗೊಳಿಸುತ್ತದೆ. ಜೀವಕೋಶದ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವ ಡಿಎನ್‍ಎ ಛಿದ್ರವಾದರೆ ಜೀವಕಣಗಳು ಸಾಯುತ್ತವೆ. ಸೂರ್ಯನಿಂದ ಹೊಂಬರುವ ಈ ಅಪಾಯಕಾರಿ ಅತಿನೇರಳಾತೀತ ವಿಕಿರಣಗಳನ್ನು ಆಕಾಶದಲ್ಲೇ ತಡೆಹಿಡಿದು ಭೂಮಂಡಲವನ್ನು ತಲುಪದಂತೆ ನಿರ್ಬಂಧಿಸಲು ಒಂದು ತೆಳುವಾದ ಕವಚ ಇದೆ. ಭೂಮಿಯ ಮೇಲ್ಮೈಯಿಂದ ಸುಮಾರು 12ರಿಂದ 30 ಮೈಲು ದೂರದಲ್ಲಿರುವ ಆ ರಕ್ಷಾ ಕವಚವೇ ಓಝೋನ್.
ಆಮ್ಲಜನಕ ಜೀವಿಗಳ ಉಸಿರಿಗೆ ಎಷ್ಟು ಅಮೂಲ್ಯ ಎಂಬುವುದು ನಮಗೆಲ್ಲ ತಿಳಿದೇ ಇದೆ. ಅದೇ ಆಮ್ಲಜನಕವು ಆಕಾಶದಲ್ಲಿ ಇನ್ನೊಂದು ರೂಪಕ್ಕೆ ಪರಿವರ್ತನೆಗೊಂಡು ಭೂಮಿಯಲ್ಲಿರುವ ಜೀವಸಂಕುಲವನ್ನು ಉಳಿಸುವಲ್ಲಿಯೂ ಅತ್ಯಮೂಲ್ಯ ಪಾತ್ರ ವಹಿಸುತ್ತದೆ.
ಎರಡು ಆಮ್ಲಜನಕದ ಪರಮಾಣುಗಳು ಜೋಡಣೆಗೊಂಡು ಆಗಿರುವ ಆಮ್ಲಜನಕದ (ಆಕ್ಸಿಜನ್) ಅಣು ಸೂತ್ರ O2. ಅದುವೇ ಮೂರು ಆಮ್ಲಜನಕದ ಪರಮಾಣುಗಳನ್ನು ಹೊಂದಿರುವ ಅಣು ಓಝೋನ್; ಇದರ ಅಣು ಸೂತ್ರ O3. ಕುತೂಹಲದ ಸಂಗತಿಯೆಂದರೆ ಅಪಾಯಕಾರಿಯಾದ ನೇರಳಾತೀತ ವಿಕಿರಣಗಳನ್ನು ತಡೆಹಿಡಿಯುವ ಓಝೋನ್ ಪದರ ನಿರ್ಮಾಣವಾಗಲು ಕಾರಣವೂ ಸಹ ಅವೇ ನೇರಳಾತೀತ ವಿಕಿರಣ. ಸಸ್ಯಗಳ ದ್ಯುತಿಸಂಶ್ಲೇಷನೆ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಮ್ಲಜನಕವು ಗಾಳಿಯ ಮೂಲಕ ಭೂಮಿಯ ಮಧ್ಯ ಅಕ್ಷಾಂಶದಿಂದ ಸುಮಾರು 10 ಕಿ. ಮೀ ಅಂತರದಲ್ಲಿರುವ ಸ್ತರಗೋಳವನ್ನು (Stratosphere) ತಲಪುತ್ತದೆ. ಅಲ್ಲಿ ಆಮ್ಲಜನಕದ ಅಣುಗಳು ಅತಿ ಶಕ್ತಿಯ ನೇರಳಾತೀತ ವಿಕಿರಣದ ಪ್ರಭಾವಕ್ಕೆ ಒಳಗಾಗಿ ವಿಭಜನೆಗೊಂಡು ಅದರಲ್ಲಿ ಒಂದು ಆಮ್ಲಜನಕ ಪರಮಾಣು (O) ಇನ್ನೊಂದು ಆಮ್ಲಜನಕ ಅಣುವಿನೊಂದಿಗೆ (O2)ಸಂಯೋಗ ಹೊಂದಿ ಮೂರು ಆಮ್ಲಜನಕ ಪರಮಾಣುಯುಕ್ತ (O3) ಓಝೋನ್ ಅಣುಗಳಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಪಾಯಕಾರಿಯಾದ ಅತಿನೇರಳೆ ಕಿರಣದ ಅಗಾಧವಾದ ಶಕ್ತಿಯು ಶಾಖವಾಗಿ ಪರಿವರ್ತಿನೆಯಾಗುತ್ತದೆ.
ನೇರಳಾತೀತ ಕಿರಣ + ಓಝೋನ್ —-> ಆಮ್ಲಜನಕ ಪರಮಾಣು
+ ಆಮ್ಲಜನಕ ಅಣು —-> ಓಝೋನ್ + ಶಾಖ
ಹೀಗೆ ಉರ್ತ್ಪನ್ನವಾದ ಓಝೋನ್ ಅಣುಗಳಿಗೆ ನೇರಳಾತೀತ ವಿಕಿರಣವು ಸ್ಪರ್ಶವಾದಾಗ ಓಝೋನ್ ಅಣುಗಳು ಪುನ: ಪರಮಾಣು ಆಮ್ಲಜನಕ ಮತ್ತು ಆಮ್ಲಜನಕದ ಅಣುಗಳಾಗುತ್ತವೆ. ನಿರಂತರವಾಗಿ ನಡೆಯುವ ಈ ಪ್ರಕ್ರಿಯೆಯನ್ನು ‘ಆಮ್ಲಜನಕ – ಓಝೋನ್ ಚಕ್ರ’ (Oxygen-Ozone cycle) ಎನ್ನಲಾಗುವುದು. ಹೀಗೆ ಉತ್ಪನ್ನವಾಗುವ ಅನೇಕಾನೇಕ ಓಝೋನ್ ಅಣುಗಳ ಅನಿಲದ ಪದರು ಭೂಮೇಲ್ಮೈನಿಂದ ಸುಮಾರು 12 ರಿಂದ 50 ಮೈಲುಗಳ ಎತ್ತರದಲ್ಲಿ ಸ್ತರಗೋಳದ ಹೊರವಲಯದ ಮೂರನೇ ಎರಡು ಭಾಗದಷ್ಟು ಭೂಮಿಯನ್ನು ಸುತ್ತುವರಿದಿದೆ. ಓಝೋನ್ ಪದರು ಸೂರ್ಯನಿಂದ ಉತ್ಸರ್ಜಿತವಾಗುವ ಮಧ್ಯಮ-ತರಂಗಾಂತರದ (200 – 315 ನ್ಯಾನೊಮೀಟರ್) ಶೇಕಡಾ 97-99 ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಒಂದು ವೇಳೆ ಓಝೋನ್ ಪದರು ಇಲ್ಲದೇ ಹೋಗಿದಲ್ಲಿ ಸೂರ್ಯನ ಅಪಾಯಕಾರಿ ನೇರಳಾತೀತ ವಿಕಿರಣವು ಭೂಮಿಯನ್ನು ಪ್ರವೇಶಿಸಿ ಎಲ್ಲಾ ಜೀವಿಗಳು ಅಪಾಯಕ್ಕೆ ಸಿಲುಕುತ್ತಿತ್ತು.
‘ವಿಶ್ವಸಂಸ್ಥೆ – ಪರಿಸರ ಕಾರ್ಯಕ್ರಮ’ (The United Nations – Environmental program) ಸಂಸ್ಥೆಯು ನಡೆಸಿದ ಸಂಶೋಧನೆಯ ಪ್ರಕಾರ ಓಝೋನ್ ಪದರಿನಲ್ಲಿ ಶೇಕಡ 10 ರಷ್ಟು ಇಳಿಕೆ ಉಂಟಾದರೂ ವರ್ಷಕ್ಕೆ ಮೂರು ಲಕ್ಷ ಜನರು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ ಮತ್ತು 1.6 ಮಿಲಿಯನ್ ಜನರು ಕಣ್ಣಿನ ಪೊರೆಯ (Cataract) ಸಮಸ್ಯೆಗೆ ಒಳಗಾಗುತ್ತಾರೆ. ಮಾತ್ರವಲ್ಲ ಸಸ್ಯಗಳು, ಬೆಳೆಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ. ಇನ್ನು ಓಝೋನ್ ಕವಚ ಸಂಪೂರ್ಣವಾಗಿ ನಾಶವಾದರೆ ನೇರಳಾತೀತ ವಿಕಿರಣಗಳಿಂದ ಯಾವ ಮಟ್ಟದಲ್ಲಿ ಅನಾಹುತಗಳಾಗಬಹುದು. ಇಡೀ ಜೀವಸಂಕುಲವು ನಾಶವಾಗಬಹುದಲ್ಲವೇ…?
ಕುತೂಹಲದ ವಿಷಯ ಏನೆಂದರೆ, ನೇರಳಾತೀತ ವಿಕಿರಣವು ಪುರಾತನ ಭೂಮಿಯಲ್ಲಿ ಜೀವಸೃಷ್ಟಿಯಲ್ಲಿಯೂ ಸಹ ಬಹುಮುಖ್ಯ ಪಾತ್ರ ವಹಿಸಿದೆ ಎಂದು ವೈಜ್ಞಾನಿಕವಾಗಿ ನಂಬಲಾಗಿದೆ. ಶಕ್ತಿಯ ಮೂಲವಾಗಿ ನೇರಳಾತೀತ ವಿಕಿರಣವು ಸಂಕೀರ್ಣಮಯ ಅಣುಗಳ ಜೋಡಣೆಗೆ ಅನುವು ಮಾಡಿಕೊಟ್ಟು ಸಾವಯವ ಪದಾರ್ಥಗಳ ಸಂಶ್ಲೇಷಣೆಗೆ ನಾಂದಿಯಾಗಿ ಜೀವಸೃಷ್ಟಿ ಆಯಿತು. ಯಾವಾಗ, ಅಂದರೆ ಸುಮಾರು 540 ಮಿಲಿಯನ್ ವರ್ಷಗಳ ಹಿಂದೆ ದ್ಯುತಿಸಂಶ್ಲೇಷಣೆ ಸಾಮರ್ಥ್ಯವಿರುವ ಜೀವಿಗಳ ಉಗಮವಾಯಿತೋ ಆವಾಗಿನಿಂದ ಯಥೇಚ್ಛವಾಗಿ ಆಮ್ಲಜನಕ ಅಣುಗಳು ಬಿಡುಗಡೆಯಾಗಲು ಪ್ರಾರಂಭವಾಯಿತು. ವಾತಾವರಣದಲ್ಲಿ ಶೇಕಡ 21 ರಷ್ಟನ್ನು ಮಾತ್ರ ಹಿಡಿದಿಟ್ಟುಕೊಂಡು ಉಳಿದ ಆಮ್ಲಜನಕದ ಅಣುಗಳು ವಾಯುಗೋಳದ ಮೇಲ್ಭಾಗದಲ್ಲಿ (ಸ್ತರಗೋಳ) ಶೇಖರಣೆಗೊಂಡು ಓಝೋನ್ ಪದರು ನಿರ್ಮಾಣವಾಗಲು ಕಾರಣವಾಯಿತು. ಸುಮಾರು 500 ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಓಝೋನ್ ಪದರು ಸೂರ್ಯನ ಅಪಾಯಕಾರಿ ನೇರಳಾತೀತ ವಿಕಿರಣವನ್ನು ತಡೆಹಿಡಿಯುವ ರಕ್ಷಾಕವಚ ಆಗುವೂದರ ಜೊತೆಗೆ ಭೂಮಿಯಲ್ಲಿ ವೈವಿಧ್ಯಮಯ ಜೀವಿಗಳ ವಿಕಸನ ಆಗಲು ಅವಕಾಶ ಉಂಟಾಯಿತು.
ವಿಜ್ಞಾನಿಗಳಕೊಡುಗೆಗಳು:
ಕೋಟ್ಯಾನುಕೋಟಿ ವರ್ಷಗಳಿಂದ ಓಝೋನ್ ಪದರು ಭೂಮಂಡಲದಲ್ಲಿ ಇದೆ. ಆದರೆ ಆ ಇರುವಿಕೆಯನ್ನು 1913 ರಲ್ಲಿ ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಚಾರ್ಲ್ಸ್ ಫ್ಯಾಬ್ರಿ (Charles Fabry) ಮತ್ತು ಹೆನ್ರಿ ಬ್ಯೂಸನ್ (Henri Buisson) ಇಬ್ಬರು ಫ್ರೆಂಚ್ ಭೌತವಿಜ್ಞಾನಿಗಳಿಗೆ ಸಲ್ಲುತ್ತದೆ. ಮುಂದೆ 1928 ರಲ್ಲಿ ಜಿ. ಎಂ. ಬಿ. ಡಾಬ್ಸನ್ (G. M. B. Dobson) ಬ್ರಿಟೀಷ್ ಖಗೋಳ ವಿಜ್ಞಾನಿಯು ಓಝೋನ್ ಪದರದ ಮೇಲೆ ಹೆಚ್ಚಿನ ಅಧ್ಯಯನ ನಡೆಸಿ ಭೂಮಿಯಲ್ಲಿದ್ದುಕೊಂಡೇ ಸುಮಾರು 15 ರಿಂದ 35 ಕಿ.ಮೀ. ಎತ್ತರದಲ್ಲಿರುವ ಓಝೋನ್ ಪದರದ ಸಾಂಧ್ರತೆ (ದಪ್ಪವನ್ನು) ಅಳತೆ ಮಾಡುವ ಸಾಧನವನ್ನು ಅನ್ವೇಷಿಸಿದರು. ಅವರ ನೆನಪಿಗಾಗಿ ಈ ಸಾಧನವನ್ನು ‘ಡಾಬ್ಸನ್ ಓಝೋನ್ ಸ್ಪೆಕ್ಟ್ರೋಫೋಟೋಮೀಟರ್ (ಡಾಬ್ಸನ್‌ಮೀಟರ್)’ ಎಂದು ಹೆಸರಿಸಲಾಯಿತು. ಓಝೋನ್ ಕವಚದ ಸಾಂಧ್ರತೆಯ ಮೇಲೆ ಒಂದು ನಿಗಾ ಇಡಲು ‘ಓಝೋನ್ ಮಾನಿಟರಿಂಗ್ ಸ್ಟೇಶನ್’ ಎಂಬ ಕೆಂದ್ರಗಳನ್ನು ವಿಶ್ವದಾದ್ಯಂತ ಅನೇಕ ಕಡೆಗಳಲ್ಲಿ ಸ್ಥಾಪಿಸಿ 1928 ರಿಂದ 1958 ರವರೆಗೆ ಅವರೇ ಸ್ವತ: ಒಂದು ಜಾಗತಿಕ ಜಾಲಬಂಧವನ್ನು (Worldwide Network) ಸ್ಥಾಪಿಸಿ ಓಝೋನ್ ಪದರಿನಲ್ಲಿ ಉಂಟಾಗುವ ಬದಲಾವಣೆಗಳನ್ನು ದಾಖಲಿಸಿದರು. ಭಾರತದಲ್ಲಿ, ಶ್ರೀನಗರ, ನವದೆಹಲಿ, ವಾರಣಾಸಿ, ಕೋಲ್ಕತಾ, ಅಹಮದಾಬಾದ್ ಮತ್ತು ಕೊಡೈಕನಾಲ್ ಗಳಲ್ಲಿ ಡಾಬ್ಸನ್‌ಮೀಟರ್ ಅನುಸ್ಥಾಪಿಸಿ ಒಟ್ಟು ಆರು ನಿಲ್ದಾಣಗಳ ಜಾಲವನ್ನು ಸ್ಥಾಪಿಸಲಾಗಿದೆ. ಆವಾಗ ಸ್ಥಾಪಿಸಿರುವ ಡಾಬ್ಸನ್‌ಮೀಟರ್ ಇವತ್ತಿಗೂ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಓಝೋನ್ ಪದರದಲ್ಲಿ ಉಂಟಾಗುತ್ತಿರುವ ಏರುಪೇರಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತಿದೆ.
ಅಪಾಯದಮುನ್ಸೂಚನೆಗೆಪರಿಹಾರ:
ಪ್ರದೇಶ ಮತ್ತು ಕಾಲಮಾನಕ್ಕೆ ತಕ್ಕಂತೆ ಓಝೋನ್ ಕವಚದ ಸಾಂಧ್ರತೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆಗುವುದು ಸಹಜ. ಆದರೆ ಅಸಹಜ ರೀತಿಯಲ್ಲಿ ಓಝೋನ್ ಪದರವು ವೇಗವಾಗಿ ಕ್ಷೀಣವಾಗುತ್ತಾ ಬರುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದರು. ಆಗಲೇ ಓಝೋನ್ ಪದರದ ಮಹತ್ವವನ್ನು ಅರಿತುಕೊಂಡಿದ್ದ ವಿಜ್ಞಾನಿಗಳು ಇದು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಓಝೋನ್ ರಕ್ಷಾಕವಚವು ಸಂಪೂರ್ಣ ನಾಶವಾಗಿ ಭೂಮಿಯಲ್ಲಿರುವ ಜೀವಸಂಕುಲಕ್ಕೆಲ್ಲಾ ಮಹಾ ಅಪಾಯ ಕಾದಿದೆ ಎಂದು ಮನಗಂಡರು. ಅಪಾಯವನ್ನು ತಡೆಗಟ್ಟಲು ಮೊದಲು ಸಮಸ್ಯೆಯ ಮೂಲ ಯಾವುದು ಎಂದು ಪತ್ತೆಹಚ್ಚಬೇಕು. ವಿಜ್ಞಾನಿಗಳು ಓಝೋನ್ ಕ್ಷೀಣತೆ ಆಗುತ್ತಿರುವ ಕಾರಣವನ್ನು ಪತ್ತೆಹಚ್ಚಲು ಬೆಂಬತ್ತಿ ಹೋದಾಗ ತಿಳಿದುಬಂದ ಅಂಶವೇ, ಹ್ಯಾಲೋಜನ್‍ಯುಕ್ತ ರಾಸಾಯನಿಕಗಳು, ಅದರಲ್ಲಿ ಪ್ರಮುಖವಾಗಿ ಕ್ಲೋರೊಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋಫ್ಲೋರೊಕಾರ್ಬನ್‍ಗಳು. 1974ರಲ್ಲಿ ಫ್ರಾಂಕ್ ಶೆರ್ವುಡ್ ರೋಲ್ಯಾಂಡ್ (Frank Sherwood Rowland) ಮತ್ತು ಮಾರಿಯೋ ಜೆ. ಮೋಲಿನ (Mario J. Molina) ಗುರು-ಶಿಷ್ಯರು ಜಂಟಿಯಾಗಿ ಸಂಶೋಧನೆ ಮಾಡಿ ಓಝೋನ್ ಕುಸಿತಕ್ಕೆ ಕಾರಣವೇನು ಎಂದು ಪತ್ತೆಹಚ್ಚಿದರು. ಅವರ ಈ ಮಹತ್ವದ ಕೊಡುಗೆಗಾಗಿ 1995ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು.
ಓಝೋನ್ ಪದರನ್ನು ಹಾನಿಗೊಳಿಸುವ ಅನಿಲಗಳಾದ ನೈಟ್ರಿಕ್ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಹೈಡ್ರಾಕ್ಸಿಲ್, ಕ್ಲೋರಿನ್ ಮತ್ತು ಬ್ರೋಮಿನ್ ಅಣುಗಳು ಕೆಲವು ನೈಸರ್ಗಿಮೂಲಗಳಿಂದ ಬಿಡುಗಡೆಯಾದರೂ ಅವುಗಳೆಲ್ಲಾ ಒಂದು ಸಮತೋಲನ ಪ್ರಮಾಣದಲ್ಲಿರುವುದರಿಂದ ಓಝೋನ್ ಕವಚವು ಅಪಾಯಕಾರಿ ರೀತಿಯಲ್ಲಿ ಹಾನಿಯಾಗುವುದಿಲ್ಲ. ಏಕೆಂದರೆ, ‘ಓಝೋನ್ ಚಕ್ರ’ ನಿರಂತರವಾಗಿ ನಡೆಯುತ್ತಿದ್ದು ಹೊಸ ಓಝೋನ್ ಅಣುಗಳು ಉತ್ಪತ್ತಿಯಾಗುತ್ತಿರುತ್ತವೆ. ಆದರೆ ಅನೈಸರ್ಗಿಕ ಕಾರಣದಿಂದ ಹಾನಿಕಾರಕ ಅಂಶಗಳ ಪ್ರಮಾಣ ಜಾಸ್ತಿಯಾದರೆ ಓಝೋನ್ ಪದರು ವೇಗವಾಗಿ ಕ್ಷೀಣಿಸುತ್ತದೆ. ಇಲ್ಲಿ ಅನೈಸರ್ಗಿಕ ಕಾರಣ ಎಂದರೆ ಮಾನವ ಸಂಶ್ಲೇಷಿತ ಕ್ಲೋರೊ ಫ್ಲೋರೊಕಾರ್ಬನ್‍ಗಳು (CFCs) ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು(BFCs). ತಂಪಾಗಿಡುವ ವಿಶೇಷ ಗುಣ ಹೊಂದಿರುವ ಈ ರಾಸಾಯನಿಕಗಳನ್ನು ತಂಗಳುಪೆಟ್ಟಿಗೆ (ರೆಫ್ರಿಜರೇಟರ್), ಹವಾ ನಿಯಂತ್ರಿತ ಪೆಟ್ಟಿಗೆಯ ಕಂಪ್ರೆಸರ್‍ನಲ್ಲಿ, ಕಾರ್ಖಾನೆಗಳಲ್ಲಿ ಶುದ್ಧೀಕರಿಸುವ ದ್ರವವಾಗಿ, ಬೆಂಕಿ ನಂದಿಸುವ ಪ್ಲಾಸ್ಟಿಕ್ ನೊರೆಯಾಗಿ, ಸುಗಂಧದೃವ್ಯ, ಕ್ರಿಮಿನಾಶಕ ಮತ್ತು ಬಣ್ಣಗಳನ್ನು ಸಿಂಪಡಿಸಲು ಬಳಸುವ ಕ್ಯಾನ್‍ಗಳಲ್ಲಿ ವಾಯುದ್ರವವಾಗಿಯೂ ಬಳಸಲಾಗುತ್ತದೆ. ಹೀಗೆ ಬಳಸುವಾಗ ಆವಿ ರೂಪದಲ್ಲಿ ವಾತಾವಾರಣಕ್ಕೆ ಬಿಡುಗಡೆಯಾಗಡೆಯಾಗಿ ಗಾಳಿಯ ಮೂಲಕ ಸ್ತರಗೋಳವನ್ನು ತಲುಪುತ್ತವೆ. ಸ್ತರಗೋಳದಲ್ಲಿ ಸೂರ್ಯನ ಅತಿನೇರಳೆ ಕಿರಣದ ಪ್ರಭಾವಕ್ಕೆ ಒಳಗಾಗಿ ಅದರಲ್ಲಿರುವ ಕ್ಲೋರಿನ್ ಮತ್ತು ಬ್ರೋಮಿನ್ ಅಂಶಗಳು (ಸ್ವತಂತ್ರ ರಾಡಿಕಲ್‍ಗಳು) ಬಿಡುಗಡೆಯಾಗುತ್ತವೆ.
ಕ್ಲೋರೊ ಫ್ಲೋರೊಕಾರ್ಬನ್‍ಗಳು ಮತ್ತು ಬ್ರೋಮೋ ಫ್ಲೋರೊಕಾರ್ಬನ್‍ಗಳು ಏಕೆ ಅತ್ಯಂತ ಅಪಾಯಕಾರಿ ಮಾಲಿನ್ಯಕಾರಕಗಳು ಎಂದರೆ ಅವುಗಳಿಂದ ಬಿಡುಗಡೆಯಾಗುವ ಪ್ರತಿ ಕ್ಲೋರಿನ್ ಅಥವಾ ಬ್ರೋಮಿನ್ ರಾಡಿಕಲ್ ಸುಮಾರು ಒಂದು ಲಕ್ಷ ಓಝೋನ್ ಅಣುಗಳನ್ನು ವಿಭಜಿಸಿಬಲ್ಲವು. ಅಂದರೆ, O3 (ಓಝೋನ್) ಅಣುಗಳನ್ನು ಆಮ್ಲಜನಕವಾಗಿ (O2) ಪರಿವರ್ತಿಸುತ್ತದೆ. ಯಾವುದೇ ಅಣು ಇರಬಹುದು ಒಂದು ನಿರ್ಧಿಷ್ಟ ಸಂಖ್ಯೆಯಲ್ಲಿ ಪರಮಾಣುಗಳು ಜೋಡಣೆಯಾಗಿದ್ದರೆ ಮಾತ್ರ ಅದು ತನ್ನಲ್ಲಿರುವ ಗುಣಗಳನ್ನು ಪ್ರದರ್ಶಿಸುತ್ತದೆ. ಮೂರು ಆಮ್ಲಜನಕ ಪರಮಾಣುಗಳನ್ನು ಹೊಂದಿರುವ ಓಝೋನ್ ಮಾತ್ರ ಅತಿನೇರಳೆ ವಿಕಿರಣವನ್ನು ಹೀರಿಕೊಳ್ಳುವ ಗುಣ ಇದೆ. ಈ ಗುಣ ಪ್ರಾಣವಾಯುವಾಗಿರುವ ಆಮ್ಲಜನಕ ಹೊಂದಿಲ್ಲ.
ಭೂಮಿಯ ಉತ್ತರ ಧ್ರುವದಲ್ಲಿ ಕಳೆದ ಎಂಟು ವರ್ಷಗಳಿಂದ ಸರಾಸರಿ ಶೇಕಡಾ 1 ಓಝೋನ್ ಸಾಂಧ್ರತೆಯಲ್ಲಿ ಕಡಿಮೆಯಾಗುತ್ತಿದೆ. 1985 ರಲ್ಲಿ ಅಂಟಾರ್ಟಿಕದಲ್ಲಿ ಓಝೋನ್ ‘ರಂಧ್ರ’ (ಅಂದರೆ ಓಝೋನ್ ಪದರದ ಸಾಂಧ್ರತೆ ಬೇರೆ ಎಲ್ಲಾ ಕಡೆಗಳಿಗಿಂತ ಅತಿ ಹೆಚ್ಚು ಕ್ಷೀಣವಾಗಿರುವುದು) ಇರುವುದನ್ನು ವರದಿ ಮಾಡಲಾಯಿತು. ಓಝೋನ್ ‘ರಂಧ್ರ’ ಎಷ್ಟು ಬೃಹತ್ತಾಗಿತ್ತೆಂದರೆ ಸರಿಸುಮಾರು ಅಮೇರಿಕಾ ದೇಶದ ವಿಸ್ತಾರದಷ್ಟು. 1993ರಲ್ಲಿ ಉಪಗ್ರಹ ಚಿತ್ರವನ್ನು ಅವಲೋಕಿಸಿದಾಗ ರಂಧ್ರದಲ್ಲಿ ಇನ್ನಷ್ಟು ದೊಡ್ಡದಾಗಿರುವುದನ್ನು ದಾಖಲಿಸಲಾಯಿತು. ಅಮೇರಿಕಾದ ಉತ್ತರಾರ್ಧ, ಕೆನಡಾ, ರಷ್ಯಾ ಮತ್ತು, ಯುರೋಪ್ ದೇಶಗಳ ಪ್ರದೇಶಗಳಲ್ಲಿಯೂ ಕೂಡ ಓಝೋನ್ ಪದರಿನಲ್ಲಿ ಕುಸಿತವಾಗಿರುವುದನ್ನು ವರದಿ ಮಾಡಲಾಯಿತು.
ಓಝೋನ್ ಪದರಿನ ಕುಸಿತಕ್ಕೆ ಇತರ ಕಾರಣಾಂಶಗಳು ಇದ್ದರೂ ಸಹ ಸಿಎಫ್‍ಸಿಗಳನ್ನು ಅತಿಯಾಗಿ ಬಳಸುವುದರಿಂದ ಇದರ ಪಾತ್ರ ಪ್ರಮುಖವಾದದ್ದು. ಆದುದರಿಂದ ಓಝೋನ್ ರಕ್ಷಾಕವಚವನ್ನು ಹಾಳುಗೆಡಿಸುವ ಪ್ರಮುಖ ‘ಖಳನಾಯಕ’ ಸಿಎಫ್‍ಸಿಗಳ ಉತ್ಪತ್ತಿ ಹಾಗೂ ಬಳಕೆಯನ್ನು 2000 ಇಸವಿಯೊಳಗೆ ವಿಶ್ವದಾದ್ಯಂತ ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ಒಂದು ಅಂತರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಬರಲಾಯಿತು (1985 ರಲ್ಲಿ, ಅನೇಕ ರಾಷ್ಟ್ರಗಳು ಓಝೋನ್ ಪದರದ ರಕ್ಷಣೆಗಾಗಿ ವಿಯೆನ್ನಾ ಸಮಾವೇಶದ ಮಾಂಟ್ರಿಯಲ್ ಪ್ರೋಟೋಕಾಲ್ ಅಡಿಯಲ್ಲಿ ಅಂಗೀಕರಿಸಲಾಯಿತು). ಸಿಎಫ್‌ಸಿಗಳು ಒಂದು ಹಸಿರುಮನೆ ಅನಿಲ; ಅದು ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಿದ್ದು ಪರಿಸರದ ಮೇಲೆ ಇತರ ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆ.
ಒಂದುಸಮಾಧಾನದವಿಚಾರ:
2003 ರಲ್ಲಿ ಅಮೇರಿಕನ್ ಜಿಯೋಫಿಸಿಕಲ್ ಯುನಿಯನ್ ಸಂಸ್ಥೆಯು ಉಪಗ್ರಹ ಹಾಗೂ ಜಿ.ಪಿ.ಎಸ್. ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯ ವಾತಾವರಣದಲ್ಲಿರುವ ಓಝೋನ್ ಪದರದ ಸಾಂಧ್ರತೆಯನ್ನು ಪರೀಕ್ಷಿಸಿ ನೋಡಿದಾಗ ಒಂದು ಸಮಾಧಾನಕರವಾದ ವಿಷಯ ಗಮನಕ್ಕೆ ಬಂತು. ಏನೆಂದರೆ, ಓಝೋನ್ ಪದರ ಕ್ಷೀಣತೆಯಾಗುತ್ತಿರುವ ಪರಿಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ಓಝೋನ್ ಪದರದ ಸವಕಳಿಗೆ ಕಾರಣವಾಗಿರುವ ರಾಸಾಯನಿಕಗಳ ನಿಯಂತ್ರಣಕ್ಕೆ ಅಂತರಾಷ್ಟ್ರೀಯ ಮಟ್ಟದ ಒಪ್ಪಂದ ನಿಜವಾಗಿಯೂ ಫಲಪ್ರಧವಾಗಿದೆ ಎಂದು ವಿಜ್ಞಾನಿಗಳು ಸಂತಸಪಟ್ಟರು.
ಇನ್ನೂಕಾಯಬೇಕು:
ಆದರೆ ಓಝೋನ್ ಪದರು ಮೊದಲಿನ ಅಂದರೆ ನೈಜ ಸ್ಥಿತಿಗೆ ಮರಳಲು ಇನ್ನೂ 30-40 ವರ್ಷಗಳು ಬೇಕಾಗಬಹುದು. ಏಕೆಂದರೆ, ಅಣುಗಳನ್ನು ವಿಭಜಿಸುವ ರಾಸಾಯನಿಕಗಳನ್ನು ಇನ್ನೂ ಕೆಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಮಾತ್ರವಲ್ಲ, ಈ ಮೊದಲೇ ಬಿಡುಗಡೆಯಾಗಿರುವ ಕ್ಲೋರೊಫ್ಲೋರೊಕಾರ್ಬನ್‍ಗಳ ಆಯುಷ್ಯ ಸುಮಾರು 55 ವರ್ಷಗಳು ಆಗಿರುವುದರಿಂದ ಅವುಗಳು ವಾತಾವರಣದಲ್ಲಿ ಇರುವ ತನಕ ಓಝೋನ್ ಅಣುಗಳನ್ನು ವಿಭಜಿಸುವ ಕೆಲಸ ಮಾಡುತ್ತಿರುತ್ತವೆ.
ಓಝೋನ್ ಕವಚದ ರಕ್ಷಣೆನಮ್ಮಹೊಣೆ:
ಏನೇ ಇರಲಿ, ನೇರಳಾತೀತ ವಿಕಿರಣ ಆರಂಭದಲ್ಲಿ ಭೂಮಿಯಲ್ಲಿ ಜೀವಸೃಷ್ಠಿಗೆ ಪೂರಕವಾಗಿ ತದನಂತರ ಅಪಾಯಕಾರಿಯಾದರೂ ಆಮ್ಲಜನಕ ಅಣುಗಳನ್ನು ಓಝೋನ್ ಅಣುಗಳಾಗಿ ರೂಪಾಂತರಿಸಿ ತಡೆಹಿಡಿದುಕೊಳ್ಳುವುದು ನಿಸರ್ಗದ ಒಂದು ಅಪೂರ್ವ ಕೊಡುಗೆ. ಅಪಾಯಕಾರಿ ಅತಿನೇರಳೆ ಕಿರಣದಿಂದ ಜೀವಸಂಕುಲಗಳನ್ನು ರಕ್ಷಿಸುವ ಓಝೋನ್ ಪದರದ ಅಸ್ಥಿತ್ವ, ಸಾಂದ್ರತೆಯನ್ನು ಅಳೆಯುವ ಸಾಧನದ ಆವಿಷ್ಕಾರ ಹಾಗೂ ಅದರ ಸವಕಳಿಗೆ ಕಾರಣವಾಗುವ ಹಿನ್ನೆಲೆಯನ್ನು ಪತ್ತೆಹಚ್ಚಿ ಆಗಬಹುದಾದ ಅನಾಹುತದಿಂದ ಕಾಪಾಡಿರುವ ವಿಜ್ಞಾನಿಗಳೆಲ್ಲರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಇನ್ನು ಓಝೋನ್ ಪದರವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇದೆ.
ಓಝೋನ್ ಪದರದ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:
ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ. ವಿಯೆನ್ನಾ ಸಮಾವೇಶದ ನಂತರ 35 ವರ್ಷಗಳ ಜಾಗತಿಕ ಓಝೋನ್ ಪದರ ರಕ್ಷಣೆಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಆಂಟೋನಿಯೊ ಗುಟೆರೆಸ್ ಅವರು ನೀಡಿದ ಸಂದೇಶ ಹೀಗಿದೆ, “ಓಝೋನ್ ಪದರವನ್ನು ಸಂರಕ್ಷಿಸಲು ನಾವು ಹೇಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂಬ ಸ್ಫೂರ್ತಿಯೊಂದಿಗೆ ಭೂಗ್ರಹವನ್ನು ಉಪಶಮನಗೊಳಿಸಲು ಹಾಗೂ ಎಲ್ಲ ಮಾನವೀಯತೆಗೆ ಸಮಾನವಾದ ಪ್ರಕಾಶಮಯ ಭವಿಷ್ಯವನ್ನು ರೂಪಿಸಿಕೊಳ್ಳಲು ನಾವೆಲ್ಲರೂ ಕೈಜೋಡಿಸೋಣ”.
ಏನ್ರೀ ವತ್ಸಲ ಏನ್ ಮಾಡಿದ್ರಿ ತಿಂಡಿ ? ನೀವು ತಿಂದ್ರಾ ? ಅಂತ ಪಕ್ಕದ್ಮನೆ ಕಮಲಮ್ಮನವರು ಕೇಳಿದ್ದೇ ತಡ ಮಗೂನ ಕಂಕುಳಲ್ಲಿ ಎತ್ತಿಕೊಂಡಿರುವ ವತ್ಸಲ ಅವರು ….. ಬೆಳಿಗ್ಗೆಯಿಂದ ಬಿಡುವೇ ಇಲ್ಲಾ ಆಂಟಿ . ಇವನನ್ನ ಎತ್ಕೊಂಡು ಸುಧಾರಿಸೋದೇ ದೊಡ್ಡ ಕೆಲಸ ಆಗೋಗಿದೆ ಒಂದು ತುತ್ತೂ ತಿನ್ನಲ್ಲ ಅಂತ ಹಠ ಮಾಡ್ತಾನೆ .ಇವನಿಗೆ ತಿನ್ಸಿ ಸ್ನಾನ ಮಾಡಿಸಿ ಮಲಗ್ಸೋ ಅಷ್ಟರಲ್ಲಿ ನಂದು ಊಟದ್ ಟೈಮೇ ಆಗಿರುತ್ತೆ ಇನ್ ಎಲ್ಲಿ ತಿಂಡಿ ತಿನ್ನೋದು . ಹೀಗೆ ತಮ್ಮ ತೊಳಲಾಟವನ್ನು ಹಂಚಿಕೊಳ್ಳೋ ಈಗಿನ ಮಹಿಳೆಯರ ಮಧ್ಯೆ ನನಗೆ ಆಗಿನ ಮನೆಗಳ ವಾತಾವರಣ ನೆನಪಿಗೆ ಬರುತ್ತೆ.
ಆಗೆಲ್ಲಾ ಮನೆಗಳಲ್ಲಿ ಹೆಂಗಸರು ಎಲ್ಲಾ ಕೆಲಸವನ್ನೂ ಮುಗಿಸಿ , ಬಿಡುವು ಮಾಡಿಕೊಂಡು ವೈರಿನ ಬುಟ್ಟಿ ಹೆಣೆಯೋವ್ರು . ಮಕ್ಕಳಿಗೆ ದೊಡ್ಡೋವ್ರಿಗೆ ಉಲ್ಲನ್ ಸ್ವೆಟರ್ ಹೆಣೆಯೋವ್ರು. ಪ್ರತೀ ಮೂರು ಮನೆಗೊಂದು ಹೊಲಿಗೆ ಯಂತ್ರ ಇರ್ತಿತ್ತು , ಅದರಲ್ಲಿ ಎಲ್ಲಾ ತರಹದ ಬಟ್ಟೆಗಳನ್ನು ಹೊಲಿಯುತ್ತಿದ್ದರು .
ರೋಡಲ್ಲಿ ನಡ್ಕೊಂಡ್ ಹೋಗ್ತಿದ್ರೆ ಒಂದಲ್ಲಾ ಒಂದು ಮನೆಯಿಂದ ಟೈಲರಿಂಗ್ ಮಿಷೀನ್ ತುಳಿಯುತ್ತಿರುವ ಸೌಂಡು ಕಿವೀಗ್ ಬೀಳೋದು . ಅಕ್ಕನೋ ಅಮ್ಮನೋ ಮನೆಯಲ್ಲಿ ಯಾರಾದರೊಬ್ಬರು ಟೈಲರಿಂಗ್ ಕಲ್ತಿರೋವ್ರು . ಟೈಲರಿಂಗ್ ಅನ್ನೋದು ಮಧ್ಯಮ ವರ್ಗದವರು ಕಲಿಯಲೇಬೇಕು ಅನ್ನುವಷ್ಟು ಅಪ್ತವಾಗಿ ಕಡ್ಡಾಯವಾಗಿ ಇರ್ತಿತ್ತು .
ಹೆಣ್ಣು ನೋಡಕ್ಕೆ ಗಂಡು ಕಡೆಯವರು ಬಂದ್ರೆ ಅವರತ್ರ ಹುಡುಗಿಗೆ ಟೈಲರಿಂಗ್ ಬರುತ್ತೆ ಅಂತ ಹೆಮ್ಮೆಯಿಂದ ಹೇಳೋವ್ರು . ಅದನ್ನ ಕೇಳುತ್ತಲೇ ಹುಡುಗನ ಅಮ್ಮನಿಗೆ ತನ್ನ ಕುಪ್ಸ ಇನ್ಮೇಲೆ ಸೊಸೇನೆ ಹೊಲೀತಾಳೆ ಅನ್ನೂ ಹಾಗೆ ಮುಖ ಅರಳೋಗಿರೋದು .
ಸಾಮಾನ್ಯವಾಗಿ ಹೊಲಿಗೆ ಯಂತ್ರ ಮನೆಯ ಹಾಲ್ ನಲ್ಲಿ ಇರೋದು .ಆಕರ್ಷಕವಾದ ವುಡ್ ಟೇಬಲ್ಲಿನ ಮೇಲ್ಭಾಗದಲ್ಲಿ ಉಕ್ಕಿನಿಂದ ಮಾಡಿದ ಕಪ್ಪುಬಣ್ಣದ ಹೆಡ್ಡು ಅದಕ್ಕೊಂದು ಪುಟ್ಟ ಚಕ್ರ ಟೇಬಲ್ಲಿನ ಕೆಳಬಾಗದಲ್ಲಿ ಕಾಲಿನಂತೆ ಸ್ಟ್ಯಾಂಡು ಅದಕ್ಕಂಟಿಕೊಂಡಂತೆ ದೊಡ್ಡ ಚಕ್ರ . ಮೇಲಿನ ಚಿಕ್ಕ ಚಕ್ರ ಕೆಳಗಿನ ದೊಡ್ಡ ಚಕ್ರ ಇವೆರಡನ್ನೂ ಸೇರಿಸಿರುವ ಚರ್ಮದದಾರ. ಪಾದಗಳಿಂದ ತುಳಿಯಲು ವಿಶಾಲವಾದ ಸಿಂಗಲ್ ಪೆಡಲ್ಲು . ಟೇಬಲ್ಲಿನ ಅಡಿಯಲ್ಲಿ ದಾರದ ಡಬ್ಬ ಅದರ ಒಳಗಡೆ ಬಣ್ಣ ಬಣ್ಣದ ದಾರಗಳು . ದಾರಕ್ಕೆ ಚುಚ್ಚಿದ ಸೂಜಿಗಳು, ಅಳತೆಯ ಟೇಪು , ದೊಡ್ಡ ಕತ್ತರಿ ಹೀಗೆ ಬಿಡಿಬಾಗಗಳಿರುತ್ತಿದ್ದವು .
ಮೊದಲು ಸೂಜಿಗೆ ದಾರ ಹಾಕುವುದನ್ನು ಕಲಿಯುವುದೇ ಒಂದು ಕುತೂಹಲ . ಬಾಬಿನ್ ಸೂಜಿ ಅಂತೆಲ್ಲಾ ಪುಟ್ಟ ಮಿಷಿನರಿಗಳ ಒಳಗೆ ಆ ದಾರ ಹಾದು ಹೋಗಿರೋದು . ಅಮ್ಮ ಹೊರಗೋದಾಗ ಎಷ್ಟೋ ಸಲ ಟೈಲರಿಂಗ್ ಕಲಿಯಲು ಪ್ರಯತ್ನಿಸಿದ್ದುಂಟು , ಅದು ಅವರಿಗೆ ಗೊತ್ತಾಗಿ ಸೂಜಿ ಮುರಿದಾಕ್ತೀಯಾ ಅಂತೇಳಿ ಹೊಡಿಯೋವ್ರು . ಸುಮ್ನೆ ಕುತ್ಕೊಂಡು ತುಳಿದ್ರೆ ಖಾಲಿ ಮಷಿನ್ ತುಳೀಬಾರದು ಅಂತ ಬಯ್ಯೋವ್ರು . ನಾವಂತು ಹೊಲಿಗೇ ಯಂತ್ರವನ್ನ ಬಹುಪಯೋಗಿ ಮಾಡ್ಕೊಂಡ್ಬಿಟ್ಟಿದ್ವಿ…..ನಮಗೆ ಟೀವಿ ನೋಡಕ್ಕೆ ಅದೇ ಚೇರು .ಊಟ ಮಾಡಕ್ಕೆ ಅದೇ ಡೈನಿಂಗ್ ಟೇಬಲ್ . ಬರೆಯಕ್ಕೆ ಓದಕ್ಕೆ ಅದೇ ರೀಡಿಂಗ್ ಟೇಬಲ್ . ಬಾಲ್ಯ ಅದರ ಜೊತೇಗೆ ಕಳೆದಿದೀವಿ .
ಟೈಲರಿಂಗ್ ಮಾಡೋ ಮನೆಗಳಲ್ಲಿ ಬಣ್ಣ ಬಣ್ಣದ ಕಟ್ ಪೀಸುಗಳು ಹರಡಿರುತ್ತಿತ್ತು . ಲಂಗ ಬ್ಲೌಸು ಎಮಿಂಗು ಕಟಿಂಗು ಕಾಜಾ ಫಾಲ್ಸು ಎಂಬ ಪದಗಳು ಹರಿದಾಡುತ್ತಿತ್ತು . ಅಮ್ಮನನ್ನು ಪೀಡಿಸಿ ಆಕೆಯಿಂದ ಶಾಲೆಗೆ ಚಿಕ್ಕ ದಿಂಬಿನಾಕಾರದ ಡಸ್ಟರ್ ಹೊಲಿಸಿಕೊಂಡು ಹೋಗುತ್ತಿದ್ದೆವು .
ಆಗಿನ ಸಿನಿಮಾಗಳಲ್ಲಿಯೂ ಸಹ ಹೀರೋ ತಾಯಿ ಟೈಲರಿಂಗ್ ಮಾಡಿಯೇ ಅವನನ್ನು ದೊಡ್ಡವನನ್ನಾಗಿ ಮಾಡುತ್ತಿದ್ದಳು . ಬರೀ ಬಟ್ಟೆಗಳನ್ನಷ್ಟೇ ಅಲ್ಲ ಆಗಿನ ಅದೆಷ್ಟೋ ಹರಿದ ಬದುಕುಗಳನ್ನು ಹೊಲಿಯುತ್ತಿದ್ದಿದ್ದು ಇದೇ ಹೊಲಿಗೆ ಯಂತ್ರ.
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಕೆಲ ದಶಕಗಳ ಹಿಂದೆ ಪ್ರವಾಸ ಎಂದರೆ ಅದೊಂದು ರೋಮಾಂಚನದ ಅನುಭವವಾಗಿರುತ್ತಿತ್ತು. ಅದಕ್ಕಾಗಿ ತಮ್ಮ ತಮ್ಮ ಅಗತ್ಯಗಳ ತಯಾರಿಯಲ್ಲಿ ಮನೆಮಂದಿಯೆಲ್ಲ ಒಂದು ತಿಂಗಳಾದರೂ ಕಳೆಯುತ್ತಿದ್ದರು! ಅದು ತಿಂಡಿಗಳ ತಯಾರಿ, ಬಟ್ಟೆಗಳನ್ನು ಆಯಾ ಸ್ಥಳಗಳಿಗೆ ತಕ್ಕಂತೆ ಜೋಡಿಸಿಕೊಳ್ಳುವುದು, ಮಾರ್ಗದಲ್ಲಿ ಅಂತ್ಯಾಕ್ಷರಿ ಆಡಲು ಹಾಡುಗಳನ್ನು ಪಟ್ಟಿ ಮಾಡಿಕೊಳ್ಳುವುದು, ದಾರಿ ಖರ್ಚಿಗೆ ದುಡ್ಡನ್ನು ಹೊಂದಿಸಿಕೊಳ್ಳುವುದು ..ಮೊದಲಾಗಿ ಹತ್ತು ಹಲವು ಸಣ್ಣ ದೊಡ್ಡ ಬೇಡಿಕೆಗಳು ಪ್ರವಾಸಕ್ಕೆ ಹೊರಡುವವರೆಗೂ ಇರುತ್ತಿದ್ದವು. ಇನ್ನು ಮನೆಯಲ್ಲಿ ಒಂದು ರೋಲ್ ಹಾಕುವ ಕ್ಯಾಮರಾ ಇದ್ದರಂತೂ ನೆನಪುಗಳನ್ನು ದಾಖಲಿಸಿಕೊಳ್ಳಲು ರೋಲ್ ಕೊಳ್ಳುವುದು ಹಾಗೂ ಅಗತ್ಯವಾಗಿ ಬ್ಯಾಟರಿ ಸೆಲ್‌ಗಳನ್ನು ಕೊಳ್ಳುವ ಸಂಭ್ರಮವೇ ಸಂಭ್ರಮ.
ಆಗ ಪ್ರವಾಸ ಹೊರಡುತ್ತಿದ್ದುದೇ ಬಹುತೇಕವಾಗಿ ಬೇಸಿಗೆ ರಜ ಅಥವಾ ದಸರಾ ರಜಗಳ ಸಂದರ್ಭದಲ್ಲಿ. ಆದರೆ ಈಗ ಹಾಗಲ್ಲ. ವಾರದ ಕೊನೆಯಲ್ಲಿ, ಸಾಲು ಹಬ್ಬಗಳ ದೀರ್ಘ ರಜೆಯಲ್ಲಿ, ಶಹರಿಗರಾದರೆ ಲಾಂಗ್ ವೀಕ್ ಎಂಡ್‌ನಲ್ಲಿ , ಬೇಸರವಾದಾಗಲೆಲ್ಲ , ಪ್ರವಾಸದ ಹುಳ ಕಡಿದಾಗಲೆಲ್ಲ ಅಥವಾ ಶೋಕಿಗಾದರೂ ಸರಿಯೇ ರಜೆಗೆ ಅನುಗುಣವಾಗಿ ಸಮೀಪದ ಅಥವಾ ದೂರದ ಸ್ಥಳಗಳಿಗೆ ಹೋಗಿಬಿಡುವುದು ಸಾಮಾನ್ಯ. ಈ ಬಾರಿ ಕೋವಿಡ್ ಇಂಥ ಪ್ರವಾಸಗಳಿಗೆ ತಡೆ ಹಾಕಿತ್ತು. ಆದರೆ ಇಷ್ಟು ದಿನ ಮನೆಯಲ್ಲೇ ಕೂತವರು ನಿಧಾನವಾಗಿ ಮತ್ತೆ ಸುತ್ತಾಡಲು ಆರಂಭಿಸುತ್ತಿದ್ದಾರೆ.
ಇದಕ್ಕೆ ಹೆಚ್ಚಿನ ಪೂರ್ವ ತಯಾರಿಯೂ ಬೇಕಿಲ್ಲ. ಇಂಟರ್‌ನೆಟ್ಟಿನಲ್ಲ ಸ್ಥಳಗಳನ್ನು ಜಾಲಾಡಿ ಅಲ್ಲಿನ ಹೊಟೆಲ್ಲುಗಳಲ್ಲೋ, ಹೋಂ ಸ್ಟೇಗಳಲ್ಲೋ ಸ್ಥಳ ಕಾದಿರಿಸಿದರೆ ಮುಗಿಯಿತು. ಸ್ವಂತ ಕಾರಿಗಾದರೆ ಇಂಧನ ಹಾಕಿಸುವ ಕೆಲಸವಾದರೂ ಇದ್ದೀತು. ಝೂಂ ಕಾರಾದರೆ, ಬಾಡಿಗೆ ಕಾರಾದರೆ ದುಡ್ಡು ತುಂಬುವುದು ಅಷ್ಟೇ. ಸಮೀಪದ ಸ್ಥಳಗಳಾದರೆ ಡಿಕ್ಕಿಯಲ್ಲಿ ಕೆಲವಾರು ಬಟ್ಟೆ ಬರೆಗಳು, ಮೊಬೈಲ್ ಫೋನ್ ಹಾಗೂ ಚಾರ್ಜರ್‌ಗಳು, ಇವುಗಳ ಹೊರತಾಗಿ ಪರ್ಸ ತುಂಬ ದುಡ್ಡು ಅಥವಾ ಕೆಡಿಟ್/ಡೆಬಿಟ್ ಕಾರ್ಡಗಳು ಉಳಿದ ಎಲ್ಲ ಸೇವೆಗಳನ್ನು ಪೂರೈಸಲು ಸನ್ನದ್ಧವಾಗಿರುತ್ತವೆ.
ಇಂಥ ಪ್ರವಾಸಗಳ ದಾಹಕ್ಕೆ ಕರ್ನಾಟಕದಲ್ಲಿ ಗುರಿಯಾದದ್ದು ಕೊಡಗು ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು. ಅದರಲ್ಲೂ ಕೊಡಗು, ಪ್ರವಾಸಿಗರ ದಾಳಿಗೆ ಹೋಂ ಸ್ಟೇ ಎಂಬ ಹೊಸ ತಂತ್ರವನ್ನು ಹೆಣೆದು ಅವರನ್ನು ಆಕರ್ಷಿಸಿದ್ದಷ್ಟೆ ಅಲ್ಲ. ಆ ಮೂಲಕ ಅಲ್ಲಿನ ಜನ ಸಾಕಷ್ಟು ಆದಾಯವನ್ನೂ ಮಾಡಿಕೊಂಡರು. ಹೀಗೆ ಸ್ಥಿತಿವಂತರಾದವರನ್ನು ಕಂಡು ಸಣ್ಣ ಪುಟ್ಟ ಮನೆಗಳವರೂ ಕೂಡ ಪ್ರವಾಸಿಗರಿಗೆ ಒಂದೆರಡು ದಿನದ ಮಟ್ಟಿಗೆ ತಮ್ಮ ಮನೆಯಲ್ಲಿ ಇದ್ದ ಎರಡನೇ ಕೋಣೆಯನ್ನು ಬಿಟ್ಟುಕೊಟ್ಟು ಕೈಲಾದಷ್ಟು ಗಳಿಸಿಲು ಪ್ರಯತ್ನಿಸಿದರು. ಪ್ರವಾಸದ ಆಕರ್ಷಣೆಯಿಂದ ಕೊಡಗು ಜಿಲ್ಲೆಯಲ್ಲಿ ಬಹಳ ಬದಲಾವಣೆಗಳಾದವು.
ಹೋಟೆಲ್ಲುಗಳು, ಹೋಂ ಸ್ಟೇಗಳು ಹೆಚ್ಚಿದಂತೆ ಸಾರಿಗೆ, ಸಾಗಾಟವೂ ಹೆಚ್ಚಿತು. ಮಹಾ ಪ್ರಳಯ ಸನ್ನಿವೇಶದ ನಂತರ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಒಮ್ಮೆಲೇ ಕುಸಿದು ಹೋಗಿತ್ತು. ಈಗ ಆ ಸ್ಥಾನವನ್ನು ತುಂಬಿಕೊಡಲು ಸಿದ್ಧವಾಗಿದ್ದು ಚಿಕ್ಕಮಗಳೂರು ಜಿಲ್ಲೆ.
ಸುತ್ತುವರೆದ ಪರ್ವತಗಳ ಕೋಟೆ, ನಿತ್ಯ ಹರಿದ್ವರ್ಣದ ಕಾಡಿನ ನಡುವೆ ತಣ್ಣಗೆ ಹಾಯಾಗಿರುವ ಈ ‘ಸಾಂಬಾರಗಳ ನಾಡು’ ಈಗ ಪ್ರವಾಸಿಗರ ದಾಂಗುಡಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಕಳೆದ ದಸರೆಯ ಸಾಲು ರಜದ ಸಂದರ್ಭದಲ್ಲಿ ಬಾಬಾ ಬುಡನ್‌ಗಿರಿಯ ಬೆಟ್ಟದ ಮೇಲೆ ನಾಲ್ಕು ತಾಸುಗಳ ಟ್ರಾಫಿಕ್ ಜಾಮ್ ಆಗಿದ್ದು ಇದಕ್ಕೆ ಒಂದು ನಿದರ್ಶನ ! ಸಂಸಾರ ಸಮೇತ ಅಲ್ಲಿಗೆ ತೆರಳಿದ್ದ ಬೆಂಗಳೂರಿಗರೊಬ್ಬರು ‘ಬೆಂಗಳೂರಿನ ಟ್ರಾಫಿಕ್ಕನ್ನು ನಾವು ಅಲ್ಲಿಯೂ ಮಿಸ್ ಮಾಡಿಕೊಳ್ಳಲಿಲ್ಲ ‘ ಎಂದು ವ್ಯಂಗ್ಯವಾಡಿದರು.
ಚಿಕ್ಕಮಗಳೂರು, ‘ಎಸ್ಟೇಟ್ ಮಾಲೀಕರ ’ ಊರು ಎಂದೇ ಪ್ರಸಿದ್ಧ. ಸಮೃದ್ಧ ನೀರು, ಮಳೆಯ ಸೌಕರ್ಯದ ಕಾರಣ ಅಡಿಕೆ, ಕಾಳು ಮೆಣಸು, ಇತರ ಸಾಂಬಾರ ಪದಾರ್ಥಗಳು, ಕಾಫಿಯನ್ನು ಬೆಳೆದು ಸ್ಥಿತಿವಂತರಾಗಿರುವ ಇಲ್ಲಿಯ ಜನ ಪ್ರವಾಸೋದ್ಯಮದತ್ತ ಇದುವರೆಗೂ ಅಷ್ಟಾಗಿ ಒಲವು ತರಿಸಿರಲಿಲ್ಲ. ಅಲ್ಲೊಂದು ಇಲ್ಲೊಂದು ಹೋಂ ಸ್ಟೇಗಳು ಬಿಟ್ಟರೆ ದೊಡ್ಡ ಹೊಟೆಲ್ಲುಗಳಾಗಲೀ, ಲಾಡ್ಜುಗಳಾಗಲೀ ಇಲ್ಲಿ ಇಲ್ಲ. ಜಿಲ್ಲಾ ಕೇಂದ್ರವಾದರೂ ಚಿಕ್ಕಮಗಳೂರು ಚಿಕ್ಕ ಪಟ್ಟಣದಂತೆ ಇದೆ. ಆದರೆ ಈ ಜಿಲ್ಲೆಯ ಸುತ್ತಮುತ್ತಲೂ ಪ್ರವಾಸಿಗರನ್ನು ಸೆಳೆಯಬಲ್ಲ ಅನೇಕ ಸ್ಥಳಗಳಿವೆ. ಚಾರಣಿಗರಿಗೆ ಹೇಳಿ ಮಾಡಿಸದಂತಿರುವ ಅನೇಕ ಬೆಟ್ಟಗಳು ಇಲ್ಲಿವೆ. ಇದು ಪ್ರವಾಸೋದ್ಯಮ ಇಲಾಖೆಯನ್ನು ಚುರುಕಾಗಿಸಿದೆ. ಚಿಕ್ಕಮಗಳೂರಿನ ಪ್ರವಾಸಕ್ಕೆ ಕೈಬೀಸಿ ಕರೆಯುವ ಅನೇಕ ಜಾಹಿರಾತುಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ.
ಚಿಕ್ಕಮಗಳೂರಿನ ವಿಶೇಷತೆಯನ್ನು ಸಾರುವ , ೧೨ ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂವು ಬಾಬಾ ಬುಡನ್‌ಗಿರಿ ಹಾಗೂ ಮುಳ್ಳಯ್ಯನಗಿರಿ ಬೆಟ್ಟಗಳಲ್ಲಿ ಅರಳುವ ಕಾಲ ಈ ವರ್ಷ ಅಕ್ಟೋಬರಿನಿಂದ ಆರಂಭವಾಗುತ್ತದೆ ಎಂದು ಅಂತರ್ಜಾಲದಲ್ಲಿ ನೋಡಿದ ಪ್ರವಾಸಿಗರೆಲ್ಲ ಅಲ್ಲಿಗೆ ಸಾಲುಗಟ್ಟಿ ಹೊರಟಿದ್ದಾರೆ. ಉಳಿದಂತೆ ವಾರದ ಕೊನೆಗೆ ಅಲ್ಲಿ ಸುಮಾರು ೨೦೦-೩೦೦ ಪ್ರವಾಸಿಗರು ಬರುತ್ತಾರೆ. ಚಿಕ್ಕಮಗಳೂರಿನ ಧೋ ಎಂದು ಸುರಿವ ಮಳೆಗಾಲದಲ್ಲೂ ಪ್ರವಾಸಿಗರು ಇದ್ದೇ ಇರುತ್ತಾರೆ ಎನ್ನುವುದು ಅಚ್ಚರಿ ಹುಟ್ಟಿಸುವ ಸಂಗತಿ.
ಪ್ರವಾಸೋದ್ಯಮ ಒಳ್ಳೆಯ ಆದಾಯದ ಮೂಲ ಎಂದು ಮಲೇಷಿಯಾದಂಥ ಪುಟ್ಟ ದೇಶ ಹಾಗೂ ಕೇರಳದಂಥ ಸಣ್ಣ ರಾಜ್ಯ ಜಗತ್ತಿಗೇ ತೋರಿಸಿಕೊಟ್ಟ ಮೇಲೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸ್ಥಳೀಯ ಉತ್ಸವ, ಜಾತ್ರೆ, ಊಟ-ತಿಂಡಿ ಮೊದಲಾದ ಎಲ್ಲವನ್ನೂ ಪ್ರವಾಸೋದ್ಯಮದ
ಹೆಸರಿನಲ್ಲಿ ಬಳಸಿಕೊಂಡು ಹಣ ಮಾಡಲಾಗುತ್ತಿದೆ. ಇದು ಒಂದು ಭಾಗದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಬಹು ಒಳ್ಳೆಯ ಮಾಧ್ಯಮವೂ ಆಗಿರುವುದರ ಜೊತೆಗೆ ಅನೇಕ ಸಂದಿಗ್ಧಗಳನ್ನೂ ತರುತ್ತಿದೆ. ಇದರಲ್ಲಿ ಮುಖ್ಯವಾದದ್ದು ಸುಗಮ ಸಾಗಾಟಕ್ಕಾಗಿ ರಸ್ತೆಯ ನಿರ್ಮಾಣ. ಕಾಡಿನಲ್ಲಿ ರಸ್ತೆ ಮಾಡುವುದು ಎಂದರೆ ಕಾಡೆಂಬ ಅರ್ನಘ್ಯ ರತ್ನವನ್ನು ದೋಚುವುದು. ಇದಕ್ಕೆ ಸರ್ಕಾರಗಳೇ ಮುಂದೆ ನಿಲ್ಲುವುದು ದೊಡ್ಡ ದುರಂತ. ಇಂತಹ ದುರಂತ ಈಗ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ.
ಚಿಕ್ಕಮಗಳೂರಿನಿಂದ ಬಾಬಾ ಬುಡನ್‌ಗಿರಿಗೆ ಸರ್ಕಾರಿ ಬಸ್‌ಗಳು ಇನ್ನೂ ಇಲ್ಲ. ಏಕೆಂದರೆ ಆ ಕಡಿದಾದ , ಕಿರುಹಾದಿಯ, ತೀವೃಏರು ಬೆಟ್ಟಕ್ಕೆ ಮಿನಿ ಬಸ್‌ಗಳು ಮಾತ್ರ ಹೋಗಬಹುದು. ಇದನ್ನು ಬಂಡವಾಳವಾಗಿಸಿಕೊಂಡು ಖಾಸಗಿ ಮಿನಿ ಬಸ್‌ಗಳು ಅಲ್ಲಿಗೆ ಓಡಾಡುತ್ತವೆ. ಅದೂ ನಿಯಮಿತ ಸಮಯದಲ್ಲಿ ಮಾತ್ರ. ರಸ್ತೆಗಳು ತಕ್ಕ ಮಟ್ಟಿಗೆ ವಿಶಾಲವಾಗಿರುವುದರಿಂದ ತಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಅಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.
ಆದರೆ ಮುಳ್ಳಯ್ಯನಗಿರಿಯ ರಸ್ತೆಗಳು ಬಹಳ ಕಿರಿದಾಗಿವೆ. ಇದು ಕಾಫಿ ಪ್ಲಾಂಟೇಶನ್ ನಡುವೆ ದಟ್ಟ ಅರಣ್ಯದಲ್ಲೇ ಸಾಗುವ ಹಾದಿ. ಆದ್ದರಿಂದ ಅಲ್ಲಿಗೆ ಯಾವುದೇ ಬಸ್ ವ್ಯವಸ್ಥೆ ಸಾಧ್ಯವಿಲ್ಲ. ಸಮುದ್ರ ಮಟ್ಟದಿಂದ ಸುಮಾರು ೬೩೫೦ ಅಡಿ ಎತ್ತರವಿರುವ ಈ ಮುಳ್ಳಯ್ಯನಗಿರಿ ಈ ಕಾರಣದಿಂದಲೇ ಪ್ರವಾಸಿಗರಿಗೆ ಇದುವರೆಗೂ ಅಪರಿಚಿತವಾಗಿಯೇ ಉಳಿದಿದೆ. ಆದರೆ ಈ ಬಾರಿಯ ಕುರಂಜಿ ಹೂವಿನ ಆಕರ್ಷಣೆ ಹಾಗೂ ಕೊಡಗಿನಲ್ಲಿ ಪ್ರವಾಸೋದ್ಯಮ ಸ್ಥಗಿತವಾಗಿರುವುದು ಪ್ರವಾಸಿಗರು ಮುಳ್ಳಯ್ಯನಗಿರಿಯನ್ನು ಹುಡುಕುವಂತೆ ಮಾಡಿದೆ.
ಚಿಕ್ಕಮಗಳೂರಿನಿಂದ ೨೨ ಕಿ.ಮೀ ದೂರದಲ್ಲಿರುವ ಇಲ್ಲಿಗೆ ಆಟೋಗಳು, ಟ್ಯಾಕ್ಸಿಗಳು ಹಾಗೂ ಸ್ವಂತ ವಾಹನಗಳು ಮಾತ್ರ ಓಡಾಡುತ್ತವೆ. ಈ ಯಾವುದೇ ವಾಹನಗಳಾದರೂ ಬೆಟ್ಟದ ಮಧ್ಯದಲ್ಲಿರುವ ಸೀತಾಳಯ್ಯನಗಿರಿಯ ಬುಡದವರೆಗೆ ಮಾತ್ರ ಹೋಗುತ್ತವೆ. ಅಲ್ಲಿಂದ ೨.೫ ಕಿ.ಮೀ. ದೂರ ನಡೆದು ಹೋಗಬೇಕು ಅಥವಾ ಅಲ್ಲಿ ಕಾಯುತ್ತಿರುವ ಖಾಸಗಿ ಬಾಡಿಗೆ ಜೀಪುಗಳಲ್ಲಿ ಹೋಗಬೇಕು. ತೀರ ಕಿರಿದಾದ ರಸ್ತೆಗಳು, ತೀವೃ ತಿರುವುಗಳು, ಆಳ ಪ್ರಪಾತಗಳು ಎದುರಾಗುವ ಈ ಏರು ರಸ್ತೆಯಲ್ಲಿ ಸ್ವಂತ ವಾಹನಗಳ ಚಾಲನೆ ನಿಜಕ್ಕೂ ಒಂದು ಸವಾಲೇ ಸರಿ. ಜೀಪುಗಳೂ ಕೂಡ ಪ್ರಪಾತ ದರ್ಶನ ಮಾಡಿಸುತ್ತಲೇ ಸಾಗುತ್ತವೆ. ಈ ಎಲ್ಲ ಕಾರಣಗಳಿಂದ ಜನನಿಬಿಡತೆ ಇಲ್ಲಿ ಇಲ್ಲ.
ಈಗ ಸರ್ಕಾರ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಅಗಲ ರಸ್ತೆಗಳ ನಿರ್ಮಾಣ ಮಾಡುತ್ತಿದೆ. ಕೆಂಪು ಜೇಡಿ ಮಣ್ಣಿನ ಆ ರಸ್ತೆಗಳು ಅಲ್ಲಿನ ಭsಮಿಯ ಮೃದುತ್ವವನ್ನು ತೋರಿಸುತ್ತವೆ. ಬೆಟ್ಟದ ಒಂದು ಬದಿಯ ಬದುಗಳನ್ನು ಕ್ರೇನುಗಳಿಂದ ಸವರಿರುವುದರಿಂದ ಕಲ್ಲಿನ ಅನೇಕ ಪದರುಗಳು ಗೋಚರಿಸುತ್ತವೆ. ಈ ಪದರಗಳು ಬೆಟ್ಟದ ದೀರ್ಘ ಆಯುಷ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಬಾಡಿಗೆ ಜೀಪುಗಳು ಬೆಟ್ಟದ ಬುಡದವರೆಗೆ ಮಾತ್ರ
ಕೊಂಡೊಯುತ್ತವೆ. ಅಲ್ಲಿಂದ ಸುಮಾರು ೩೦೦-೪೦೦ ಕಿರಿದಾದ ಮೆಟ್ಟಿಲುಗಳನ್ನು ಏರಿ ಮುಳ್ಳಯ್ಯನ ದರ್ಶನ ಪಡೆಯಬೇಕು. ಈ ಮೆಟ್ಟಿಲುಗಳ ಬದಿಯಲ್ಲಿ ಹಿಡಿಕೆಗಳು ಇಲ್ಲವಾದ್ದರಿಂದ ಕಡಿದಾದ ಬೆಟ್ಟವನ್ನು ಏರುವುದು ಬಹಳ ಕಷ್ಟ. ಬೆಟ್ಟದ ಬುಡದ ಮೆಟ್ಟಿಲುಗಳ ಸಮೀಪ ಎಳೆನೀರು, ಬಿಸ್ಕತ್ತುಗಳು, ಹಣ್ಣುಗಳು, ತಂಪು ಪಾನೀಯಗಳು, ನೀರು, ಐಸ್ಕ್ರೀಂ ಇವಿಷ್ಟು ಮಾತ್ರ ಸಧ್ಯಕ್ಕೆ ಲಭ್ಯ ಇವೆ. ಇವುಗಳನ್ನು ಮೇಲೆ ಸಾಗಿಸಲು ಸಣ್ಣ ಕ್ಯಾರಿಯರ್ ವಾಹನಗಳು ಓಡಾಡುತ್ತವೆ. ಇದು ಇಂದಿನ ಮುಳ್ಳಯ್ಯನಗಿರಿ. ಆದರೆ ಬಹುಬೇಗ ಇದರ ಸ್ವರೂಪ ಬದಲಾಗುವ ಎಲ್ಲ ಲಕ್ಷಣಗಳೂ ಈಗ ಅಲ್ಲಿ ಕಾಣಿಸುತ್ತಿವೆ. ರಸ್ತೆ ಅಗಲೀಕರಣವಾದ ನಂತರ ವಾಹನ ಸಾಗಾಟ ತೀವೃವಾಗಿ ಹೆಚ್ಚಬಹುದು. ಜೊತೆಗೆ ಚಾರಣಿಗರ ಸಂಖ್ಯೆಯೂ ಏರಬಹುದು. ಇದರೊಂದಿಗೆ ತಿಂಡಿ ತಿನಿಸುಗಳ ಮಾರಾಟಗಾರರು, ಹೊಟೆಲ್ಲುಗಳು, ಕೊನೆಗೆ ಲಾಡ್ಜಗಳು ಎಲ್ಲವೂ ಒಂದರ ಹಿಂದೆ ಒಂದು ಬಂದೇ ಬರುತ್ತವೆ. ಈ ಎಲ್ಲ ಬೆಳವಣಿಗೆಗಳಿಗೆ ಬಹಳ ಕಾಲ ಹಿಡಿಯುವುದಿಲ್ಲ. ರಸ್ತೆ ಅಗಲೀಕರಣವಾದ ಕೂಡಲೇ ನೋಡುನೋಡುತ್ತಲೇ ಇವೆಲ್ಲ ಆಗಿ ಬಿಡುತ್ತವೆ. ಆಗ ಮುಳ್ಳಯ್ಯನಗಿರಿಯಲ್ಲಿರುವ ಈಗಿನ ಪ್ರಶಾಂತತೆ, ಸ್ವಚ್ಛತೆ, ಶುದ್ಧ ಗಾಳಿ ಎಲ್ಲವೂ ಮಾಯವಾಗಿ ವ್ಯಾಪಾರೀಕರಣ ತಾಂಡವವಾಡುತ್ತದೆ. ಇದು ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಯ ಮಾದರಿ!
ಮುಳ್ಳಯ್ಯನಗಿರಿಗೆ ಸರ್ಕಾರ ರಸ್ತೆಗಳನ್ನು ನಿರ್ಮಿಸಿದರೂ ಉಳಿದ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇನ್ನು ತಿಂಡಿ ತಿನಿಸುಗಳ ಅಂಗಡಿಗಳು, ಹೊಟೆಲ್ಲುಗಳು ಆಗದಂತೆ ನೋಡಿಕೊಂಡರೆ ಒಳಿತು. ಅಲ್ಲಿಂದ ಚಿಕ್ಕಮಗಳೂರೇನು ದೂರವಿಲ್ಲ. ಅಲ್ಲಿ ಈಗಾಗಲೇ ಇರುವ ಹೊಟೆಲ್ಲುಗಳು, ಹೋಂಸ್ಟೇಗಳು ಇದರ ಸದುಪಯೋಗ ಪಡೆಯಬಹುದು. ಕಡಿದಾದ ಬೆಟ್ಟಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕಡಿದು ನಾಡಾಗಿಸಿದ ದುರಂತವನ್ನು ಈಗಾಗಲೇ ನಾವು ಹರಿದ್ವಾರ, ಕೇದಾರನಾಥ, ಹೃಷಿಕೇಶ, ಕೊಡಗು, ಕೇರಳಗಳಲ್ಲಿ ಕಂಡಿದ್ದೇವೆ. ಇವುಗಳಿಂದ ಪಾಠ ಕಲಿತಾದರೂ ಸರ್ಕಾರಗಳು ಪ್ರವಾಸೋದ್ಯಮ ಅಭಿವೃದ್ಧಿಯ ವ್ಯಾಖ್ಯೆಯನ್ನು ಬದಲಿಸಿಕೊಳ್ಳಬೇಕಾಗಿದೆ.
ರಸ್ತೆ ಅಗಲೀಕರಣ, ಕಾಡು ಕಡಿಯುವುದು, ಬೆಟ್ಟಗಳನ್ನು ಸವರುವುದರಿಂದ ಅಭಿವೃದ್ಧಿಯ ಬದಲಾಗಿ ಅವಘಡಗಳೇ ಆಗಿದ್ದನ್ನು ಕಣ್ಣಾರೆ ಕಂಡೂ ಅದೇ ತಪ್ಪನ್ನು ಮಾಡಬಾರದು. ಕರ್ನಾಟಕದ ಊಟಿಯಾಗಿರುವ ತಂಪು ತಂಪು ಚಿಕ್ಕಮಗಳೂರು ಸಮೃದ್ಧ ಕಾಡು, ನೀರು, ಮಳೆ-ಬೆಳೆಗಳಿಂದ ಸಂಪನ್ನವಾಗಿರಲಿ ಎಂದು ಹಾರೈಸುವ ಸನ್ಮತಿಯನ್ನು ಮುಳ್ಳಯ್ಯ ಹಾಗೂ ಬುಡನ್‌ಗಿರಿಯ ಬಾಬಾ ಎಲ್ಲರಿಗೂ ನೀಡಲಿ.
ಬಲಾಢ್ಯವಾಗುತ್ತಿರುವ ಭಾರತವನ್ನು ಅಷ್ಟು ಸುಲಭವಾಗಿ ಬಗ್ಗು ಬಡಿಯಲು ಅಸಾಧ್ಯ ಎಂಬುದು ಚೀನಾಕ್ಕೆ ಗೊತ್ತಿದೆ. ಅದಕ್ಕಾಗಿಯೇ ಅದು ಲಡಾಕ್ ಗಡಿ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ. ಈ ಮೂಲಕ ಈಗಾಗಲೇ ಕೋವಿಡ್ -19 ಸಮಸ್ಯೆಯಿಂದಾಗಿ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಭಾರತಕ್ಕೆ ಮತ್ತಷ್ಟು ಏಟು ನೀಡುವ ಯತ್ನ ಮಾಡಿದೆ. ತನ್ನ ಮನೆಯಲ್ಲೇ ಊಟಕ್ಕೆ ಮಿತಿ ಹಾಕಿರುವ ಚೀನಾ, ಆದರೂ ನನ್ನ ಒಂದು ಕಣ್ಣು ಹೋದರೂ ಸರಿ, ಅವರ ಕಣ್ಣನ್ನೂ ತೆಗೆಯಬೇಕು ಎಂಬ ಕುತಂತ್ರಕ್ಕೆ ಮುಂದಾಗಿದೆ.
ಗಡಿಯಲ್ಲಿ ಸೇನೆಪೂರ್ವ ಲಡಾಕ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಅತಿಕ್ರಮಣದ ದುಸ್ಸಾಹಸ ಮಾಡಿದೆ. ಅದನ್ನು ಬಹುತೇಕ ಭಾರತೀಯ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿ, ಎತ್ತರದ ಪ್ರದೇಶದ ಮೇಲೆ ಪಾರಮ್ಯ ಸಾಧಿಸಿದ್ದಾರೆ. ಆದರೆ, ಬೀಜಿಂಗ್ ನ ಈ ತಂತ್ರದ ಹಿಂದಿದೆ ಭಾರತದ ಆರ್ಥಿಕತೆಯ ಮೇಲೆ ಹೊಡೆತ ನೀಡುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಭಾಗದಲ್ಲಿ ಸುಮಾರು 250ರಿಂದ 300 ಕಿ.ಮೀ. ಗಡಿ ಭಾಗವನ್ನು ಭಾರತ-ಚೀನಾ ಹಂಚಿಕೊಂಡಿದೆ. ಸದ್ಯದ ಮಟ್ಟಿಗೆ 25ರಿಂದ 30 ಸಾವಿರ ಯೋಧರನ್ನು (ಟುಟು, ಘಾತಕ್ ಪಡೆ ಹೊರತು ಪಡಿಸಿ) ನಿಯೋಜಿಸಲಾಗಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಹಾನಿ ಮಾಡುವ ಏಕಮಾತ್ರ ಉದ್ದೇಶವೇ ಚೀನಾದ ಈ ಗಡಿ ಕಬಳಿಸುವ ಷಡ್ಯಂತ್ರದ ಹಿಂದಿರುವ ಉದ್ದೇಶವಾಗಿದೆ.
1962ಕ್ಕೆ ಹೋಲಿಸಿದರೆ ಈಗ ಭಾರತ ಚೀನಾಕ್ಕಿಂತ ಸೇನಾ ಬಲದಲ್ಲಿ ಕಡಿಮೆಯೇನಿಲ್ಲ. ಹೀಗಾಗಿ ಅದನ್ನು ಮಣಿಸಲು ಕೇವಲ ಸೇನಾ ಸಾಮರ್ಥ್ಯವಲ್ಲ ಬದಲಾಗಿ ಆರ್ಥಿಕ ಒತ್ತಡವನ್ನೂ ಹೇರಬೇಕು ಎಂಬುದು ಚೀನಾದ ಈಗಿನ ಪ್ರತಿಯೊಂದು ನಡೆಯೂ ತೋರಿಸಿಕೊಡುತ್ತಿದೆ. ಈ ಮೂಲಕ ಸಶಸ್ತ್ರ ಹೋರಾಟದ ಬದಲಾಗಿ ಅಡ್ಡ ದಾರಿಯಲ್ಲಿ ಭಾರತವನ್ನು ಮಣಿಸಲು ಅದು ಮುಂದಾಗಿದೆ.
ಆದರೆ, ಭಾರತವೇನೂ ಕಡಿಮೆಯಿಲ್ಲ. ಈಗಾಗಲೇ ಚೀನಾ ಉತ್ಪನ್ನಗಳಾದ ಹಲವಾರು ಆಪ್ ಗಳನ್ನು ನಿಷೇಧಿಸುವ ಮೂಲಕ ತಕ್ಕ ತಿರುಗೇಟು ನೀಡಿದೆ ಬಿಡಿ.ಅಗಾಧ ವೆಚ್ಚಈಗಾಗಲೇ ಕೋವಿಡ್-19 ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಯನ್ನು ಭಾರತ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ ಎಂಬುದು ಹಗಲಿನಷ್ಟೇ ನಿಚ್ಚಳ. ಈಗ ಮುಂಗಾರು ಕಳೆದು ಚಳಿಗಾಲ ಆರಂಭವಾಗಲಿದೆ. ಉತ್ತರ ಭಾರತದಲ್ಲಿ ಅಕ್ಟೋಬರ್ ಮಧ್ಯ ಭಾಗದಿಂದ ಚಳಿಗಾಲ ಆರಂಭವಾಗುತ್ತಿದ್ದು, ಹಿಮಪಾತವಾಗುತ್ತದೆ.
ಈ ಸಂದರ್ಭದಲ್ಲಿ ಒಂದು ಅಂಶವನ್ನು ನಾವು ನೆನಪಿಸಿಕೊಳ್ಳಲೇಬೇಕು. 1962ರ ಚೀನಾ ಜತೆಗಿನ ಯುದ್ಧದ ಸಮಯದಲ್ಲಿ ನಮ್ಮ ಬಹುತೇಕ ಸೈನಿಕರು ಚೀನಾದ ಆಕ್ರಮಣದಿಂದಲೇ ಸಾವನ್ನಪ್ಪಿಲ್ಲ. ಬದಲಾಗಿ ಹವಾಮಾನದಲ್ಲಾದ ಬದಲಾವಣೆಯಿಂದ ಕೊರೆಯುವ ಚಳಿಯಲ್ಲಿ (ಮೂಲಭೂತ ಸೌಕರ್ಯ ಕೊರತೆಯಿಂದ) ಕೈ-ಕಾಲು ಬೆರಳು ಸೇರಿದಂತೆ ದೇಹದ ಅಂಗಾಂಗಳು ಕೊಳೆತು ಹೋಗಿ ಸತ್ತು ಹೋಗಿದ್ದರು ಎಂದು ಹೇಳಲಾಗುತ್ತದೆ (ಇಂಡಿಯಾಸ್ ಚೈನಾ ವಾರ್ – ನೆವಿಲ್ ಮ್ಯಾಕ್ಸ್ ವೆಲ್ ).
ಈಗ ಹಳೆ ಭಾರತವಲ್ಲ
1962ರ ಭಾರತದ ಪರಿಸ್ಥಿತಿಯನ್ನೇ ಅವಲೋಕಿಸಿ ಮತ್ತೊಮ್ಮೆ ಚೀನಾ ದುಸ್ಸಾಹಸಕ್ಕೆ ಮುಂದಾಗಿದೆ. ಆದರೆ ಈಗ ಸನ್ನಿವೇಶ ಬದಲಾಗಿದೆ. ಭಾರತವು ಬಲಾಢ್ಯವಾಗಿದೆ. ಅಂತಾರಾಷ್ಟ್ರೀಯ ಸಮುದಾಯದ ಸಕಲ ಬೆಂಬಲವನ್ನೂ ಪಡೆದಿದೆ.
ಸುಮಾರು 250ರಿಂದ 300 ಕಿ.ಮೀ. ಉದ್ದವಿರುವ ಗಡಿ ಭಾಗದಲ್ಲಿ ಭಾರತ ಈಗಾಗಲೇ 25ರಿಂದ 30 ಸಾವಿರ ಯೋಧರನ್ನು ನಿಯೋಜಿಸಿದೆ.ಇನ್ನು ಮುಂದೆ ಆರು ತಿಂಗಳು ಅಂದರೆ ಚಳಿಗಾಲದಲ್ಲಿ ಅಲ್ಲಿ ಸೇನೆ ನಿಯೋಜನೆಯನ್ನು (ಐದು ಅಂಶಗಳ ಒಪ್ಪಂದವಾಗಿದ್ದರೂ) ಹಿಂತೆಗೆಯುವ ಪರಿಸ್ಥಿತಿಯಲ್ಲಿ ಭಾರತ ಇಲ್ಲ.ಹೀಗಾಗಿ ಭಾರತ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ.
1993ರಲ್ಲಿ ಚೀನಾವು ಭಾರತದ ಜತೆಗೆ ಒಪ್ಪಂದ ಮಾಡಿಕೊಂಡಿದ್ದರೂ ಬಳಿಕ ಪದೇ ಪದೇ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಈ ಗಡಿ ಭಾಗದಲ್ಲಿ ಬಂಕರ್ ಗಳ ನಿರ್ಮಾಣ, ಹೆದ್ದಾರಿ ರಚನೆ ಸೇರಿದಂತೆ. ಒಪ್ಪಂದವನ್ನು ಉಲ್ಲಂಘನೆ ಮಾಡಿಕೊಂಡೇ ಬಂದಿತ್ತು ಎಂಬುದು ಇಲ್ಲಿ ಗಮನಾರ್ಹ. ಚೀನಾವು ತನ್ನ ರಾಜಕೀಯ ಲಾಭಕ್ಕಾಗಿ ಇಂತಹ ಕೆಲಸವನ್ನು ಮುಂದುವರಿಸುತ್ತಲೇ ಬಂದಿದೆ. ಎಲ್ ಎಸಿ ಸಮೀಪ ಸೇನಾ ಜಮಾವಣೆ ಮಾಡುವುದನ್ನು ಮುಂದುವರಿಸುವ ಮೂಲಕ ಉಭಯ ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬಂದಿದೆ ಎಂದು ನಿವೃತ್ತ ಮಿಲಿಟರಿ ಜನರಲ್ ಹಾಗೂ ಚೀನಾ ವ್ಯವಹಾರಗಳ ಕುರಿತ ತಜ್ಞ ಎ. ಪಿ. ಸಿಂಗ್ ಹೇಳುತ್ತಾರೆ.
ದುಬಾರಿ ಗಡಿ ಕಾವಲು
ಹಾಗೆ ನೋಡಿದರೆ ಭಾರತದ ದುಬಾರಿ ಗಡಿ ಕಾವಲು ಎಂದರೆ ಪಾಕ್ ಗಡಿಗೆ ಹೊಂದಿರುವ ಸಿಯಾಚಿನ್ ಹಿಮಾಚ್ಛಾದಿತ ಪರ್ವತ ಪ್ರದೇಶ. 17,700 ಅಡಿ ಎತ್ತರದ ಈ ಪರ್ವತ ಪ್ರದೇಶವನ್ನು ಕಾಯಲು ಸುಮಾರು 5,000 ಯೋಧರನ್ನು ಪಾಳಿಯಲ್ಲಿ ನಿಯೋಜಿಸಲಾಗಿದೆ. 76 ಕಿ.ಮೀ. ಉದ್ದದ ಈ ಗಡಿಯನ್ನು ಕಾಯಲು ಪ್ರತಿ ದಿನಕ್ಕೆ ಭಾರತ ಸುಮಾರು 4-6 ಕೋಟಿ ರೂ. ಅಂದರೆ ವರ್ಷಕ್ಕೆ ಸುಮಾರು 2,190 ಕೋಟಿ ರೂ. ಖರ್ಚು ಮಾಡುತ್ತಿದೆ.
ಕೇಂದ್ರ ಸರಕಾರ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, 1984ರ ಬಳಿಕ ಸಿಯಾಚಿನ್ ನಲ್ಲಿ ಹವಾಮಾನ ವೈಪರೀತ್ಯದಿಂದ 869 ಯೋಧರು ಹುತಾತ್ಮರಾಗಿದ್ದಾರೆ. ಯೋಧರಿಗೆ ರಕ್ಷಣೆ ಒದಗಿಸುವುದಕ್ಕಾಗಿಯೇ ( ಚಳಿಯಿಂದ ರಕ್ಷಿಸಿಕೊಳ್ಳಲುವ ಬಟ್ಟೆ ಸೇರಿದಂತೆ ಇತರ ಪರಿಕರಗಳು) 7,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೆಲ್ಲ ಅಂಕಿ ಅಂಶಗಳನ್ನು ನೋಡಿದರೆ ಖಚಿತವಾಗಿಯೂ ಚೀನಾವು ಭಾರತದ ಮೇಲೆ ಭೌತಿಕ ಬದಲಾಗಿ ಆರ್ಥಿಕ ಯುದ್ಧವನ್ನೇ ಸಾರಿದೆ ಎಂಬುದರಲ್ಲಿ ಸಂದೇಹವಿಲ್ಲ.
ಪರ್ವತ ಪಡೆಗೆ ಹಣ
ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 90,270 ಯೋಧರ ಸಾಮರ್ಥ್ಯದ 17ನೇ ಪರ್ವತ ಯುದ್ಧ ಯೋಧರ ಬೆಟಾಲಿಯನ್ (ಎಂಎಸ್ಸಿ)ಗೆ ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಹಣಕಾಸು ಮುಗ್ಗಟ್ಟಿನಿಂದಾಗಿ ಈ ಬೆಟಾಲಿಯನ್ ಗೆ ಹೆಚ್ಚಿನ ಚೇತನ ಸಿಕ್ಕಿರಲಿಲ್ಲ. ಸುಮಾರು 60,000 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲು 2013ರಲ್ಲಿ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು.