16.5 C
Karnataka
Tuesday, November 26, 2024
    Home Blog Page 152

    ಕೊರೊನಾ ಎಂಬ ಹೊಸ ಮಹಾಮಾರಿ ಇವರ ಲೆಕ್ಕದಲ್ಲಿ ಮತ್ತೊಂದು ನೆಗಡಿ-ಕೆಮ್ಮು-ಜ್ವರ ಮಾತ್ರ!

    ‘ಕೋವಿಡ್ ಇಲ್ಲವೇ ಇಲ್ಲ, ಲಾಕ್ ಡೌನ್ ಎಲ್ಲ ದೊಡ್ಡ ಡ್ರಾಮ… ‘.ಎಂದು ನಂಬುವವರು ಈ ಪ್ರಪಂಚದಲ್ಲಿ ಇದ್ದಾರೆ. ಭೂಗೋಲದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಹರಡಿದ್ದಾರೆ. ಕೋವಿಡ್ -19 ರ ಸೋಂಕಿನಿಂದ ಪ್ರಪಂಚದಲ್ಲಿ ಇದುವರೆಗೆ 9 ಲಕ್ಷ 35 ಸಾವಿರ ಜನರು ಸತ್ತಿರುವುದನ್ನು ಓದಿದ ನಂತರ, 29.6 ಮಿಲಿಯನ್ ಸೋಂಕಿತರು ಇದ್ದಾರೆ ಎಂದು ತಿಳಿದ ನಂತರವೂ ಈ ಜನರ ಗುಂಪು  ‘ಕೋವಿಡ್ ಎನ್ನುವುದು ಇಲ್ಲವೇ ಇಲ್ಲ , ಇವೆಲ್ಲ ಮಾಧ್ಯಮಗಳ ಹುನ್ನಾರ ‘- ಎನ್ನುತ್ತಿದ್ದಾರೆ.

    ಅಮೆರಿಕಾದಿಂದ ಹಿಡಿದು ಆಸ್ಟ್ರೇಲಿಯಾವರೆಗೆ ಹರಡಿರುವ ಈ ಜನರು ತಮ್ಮ ಈ ನಿರ್ಣಯಕ್ಕೆ ಹೇಗೆ ತಲುಪುತ್ತಾರೆ. ಅವರ ಮಾನಸಿಕ ಪ್ರಪಂಚ ಏನನ್ನು ಒಪ್ಪಬಲ್ಲದು,ಏನನ್ನು ಒಪ್ಪಲು ಹಿಂತೆಗೆಯತ್ತಿದೆ? ಮತ್ತು ಯಾಕೆ?-ಎನ್ನುವುದು ಅತ್ಯಂತ ಸ್ವಾರಸ್ಯಕರ ವಿಚಾರ. ಬೆಟ್ಟದಷ್ಟು ಸಾಕ್ಷಿ ಆಧಾರಗಳಿದ್ದರೂ ಮನುಷ್ಯರಲ್ಲಿ ಹುಟ್ಟುವ ಈ ನಿರಾಕರಣೆ ಅಧ್ಯಯನ ಯೋಗ್ಯ ವಿಷಯವೂ ಹೌದು.

    ಸೆಪ್ಟೆಂಬರ್ ಐದನೇ ತಾರೀಕು  ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ದೊಡ್ಡ ಪ್ರತಿಭಟನೆಗಳಾದವು. ವಿಕ್ಟೋರಿಯಾ ಸ್ಟೇಟ್  ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕಿನಿಂದ ಗಂಭೀರವಾಗಿ ಬಳಲಿರುವ ಜಾಗ. ಆದರೆ ಸುಮಾರು ಮುನ್ನೂರು ಮಂದಿ ಇಲ್ಲಿ ಒತ್ತಟ್ಟಿಗೆ ಸೇರಿ ಕೊರೊನಾ ಲಾಕ್ ಡೌನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಅದು ಹಿಂಸಾತ್ಮಕ ರೂಪ ತಾಳಿತು. ಪೋಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾದವು. ಹಲವರನ್ನು ಪೊಲೀಸರು ಬಂಧಿಸಿದರು. ಅದೇ ದಿನ ಆ ದೇಶದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 748 ಜನರು ಸತ್ತಿದ್ದರು. ಮೆಲ್ಬೋರ್ನಿನ ಆರು ವಾರಗಳ ಲಾಕ್ ಡೌನ್ ಕೊನೆಯಾಗುತ್ತಿದ್ದ ಕಾಲವದು.

    ಆದರೆ ಇದುವರೆಗಿನ ಆಸ್ಟ್ರೇಲಿಯಾದ ಒಟ್ಟಾರೆ  ಕೊರೊನಾ ಸೋಂಕಿಗೆ ವಿಕ್ಟೋರಿಯಾ ರಾಜ್ಯದ ಕೊಡುಗೆ ಶೇಕಡಾ 75 ಇತ್ತು. ಇಡೀ ದೇಶದಲ್ಲಿ ಸತ್ತವರ ಸಂಖ್ಯೆಯಲ್ಲಿ ವಿಕ್ಟೋರಿಯಾ ರಾಜ್ಯದವರೇ ಶೇಕಡಾ 90 ಇದ್ದರು. ಹೀಗೆ ಪ್ರತಿಭಟನೆ ನಡೆಯುತ್ತಿರುವ ದಿನವೇ ಅಲ್ಲಿ 11  ಜನರು ಸತ್ತಿದ್ದರು. ಶೇಕಡಾ 70 ಗಿಂತಲೂ ಹೆಚ್ಚ ಜನರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿತ್ತು. ಹೀಗಿರುವಾಗ ಕೊರೊನಾದ ಎರಡನೇ ಅಲೆ ಹೆಚ್ಚಾಗುವ ಸಾಧ್ಯತೆಗಳನ್ನು  ಹತ್ತಿಕ್ಕಲು ಸರ್ಕಾರ  6 ವಾರಗಳ ಲಾಕ್ ಡೌನ್  ಕ್ರಮವನ್ನು ಅನುಸರಿಸಿದ್ದರಲ್ಲಿ ಯಾವ ಅಶ್ಚರ್ಯವೂ ಇರಲಿಲ್ಲ.ಆದರೆ ಈ ಮುನ್ನೂರು ಜನರು ಅದನ್ನು  ವಿರೋಧಿಸಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪೊಲೀಸರೊಂದಿಗೆ ಘರ್ಷಣೆಗಿಳಿದರು.

    ಅದೇ ದಿನ  ಸ್ಕಾಟ್ಲ್ಯಾಂಡಿನ ರಾಜಧಾನಿ ಎಡಿನ್ ಬರೋ ದಲ್ಲಿ ಕೂಡ ಪ್ರತಿಭಟನೆಗಳು ನಡೆದವು. ಕೊರೊನಾ ವೈರಸ್ ಇಲ್ಲವೆನ್ನುವವರು, ಲಸಿಕೆಗಳ ಹಿಂದೆ ಒಳಸಂಚಿದೆಯೆಂಬ ಸಿದ್ದಾಂತದವರು ಮಾಸ್ಕ್ ಧಾರಣೆ ವಿರೋಧಿಗಳು ಹೀಗೆ ಒತ್ತಟ್ಟಿಗೆ ಸಾವಿರಕ್ಕೂ ಅಧಿಕ ಜನರು ಸೇರಿ  ಘೋಷಣೆಗಳನ್ನು ಕೂಗಿದರು. ಮಾಸ್ಕ್ ಮತ್ತು ವ್ಯಾಕ್ಸಿನ್ ಎರಡನ್ನೂ ಕಡ್ಡಾಯಗೊಳಿಸುವುದನ್ನು ಇವರು ಬಲವಾಗಿ ಖಂಡಿಸಿದರು.

    ಆದರೆ ಅದೇ ವಾರ ಸ್ಕಾಟ್ಲ್ಯಾಂಡಿನಲ್ಲಿ ಒಟ್ಟು 994 ಹೊಸ ದೃಡಪಟ್ಟ ಸೋಂಕಿತರ ಪತ್ತೆಯಾಗಿತ್ತು, ಅದರ ಹಿಂದಿನ ವಾರಕ್ಕೆ ಹೋಲಿಸಿದರೆ 507  ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದರು. ಎರಡನೇ ಅಲೆ ಬಲವಾಗುತ್ತಿವೆ ಎಂಬಂತ ಕರಾಳ ವಾತಾವರಣದಲ್ಲೂ ಅವರ ಪ್ರತಿಭಟನೆ ಏಕೆ ನಡೆಯಿತು?

    ಸ್ಕಾಟ್ಲ್ಯಾಂಡಿನ ನ್ಯಾಷನಲ್ ಕ್ಲಿನಿಕಲ್  ಡೈರೆಕ್ಟರ್  ಪ್ರೊಫೆಸರ್ ಜೇಸನ್ ಲೀಕ್ ಇವರನ್ನು ಅತ್ಯಂತ  ’ಬೇಜವಬ್ದಾರೀ ನಡತೆಯ ಜನರೆಂದು’ ಬಣ್ಣಿಸಿದರು.ಜಗತ್ತಿನ 194 ದೇಶಗಳು ನೂರು ವರ್ಷಗಳಲ್ಲಿ ಥಟ್ಟನೆ ಒತ್ತಟ್ಟಿಗೆ ಬಂದು ಹೀಗೊಂದು ದಂತ ಕಥೆಯನ್ನು ಸೃಷ್ಟಿಸಿದ್ದೇವೆಯೇ? ಕಳೆದ ಆರು ತಿಂಗಳಲ್ಲಿ ನಡೆದಿರುವುದು ನಡೆದಿರಬಾರದಿತ್ತು ಎಂದು ಬಲವಾಗಿ ಆಶಿಸುವವರಲ್ಲಿ ನಾನೂ ಒಬ್ಬ ಆದರೆ ಇವರ ವರ್ತನೆ ಅತ್ಯಂತ  ಬೇಜವಾಬ್ದಾರಿಯಿಂದ ಕೂಡಿದೆ” -ಎಂದು ಬೇಸರಪಟ್ಟರು.

    ಇತ್ತ ಇಂಗ್ಲೆಂಡಿನ ಲೀಡ್ಸ್ ಎನ್ನುವ ನಗರದಲ್ಲಿ ಕೊರೊನಾ ವೈರಸ್ಸಿನ ಸೋಂಕಿತರ ಸಂಖ್ಯೆ ಮೆಲ್ಲಗೆ ಏರುತ್ತಿದ್ದು ಸೆಪ್ಟೆಂಬರ್ ನಾಲ್ಕನೇ ತಾರೀಖಿನಂದು ಈ ನಗರ ವಾಚ್ ಲಿಸ್ಟ್ ನ ಐದನೇ ಸ್ಥಾನಕ್ಕೆ ತಲುಪಿತ್ತು. ಐದನೇ ತಾರೀಖು ಆ ನಗರ ಮತ್ತೆ ಲಾಕ್ ಡೌನ್ ಗೆ ಪ್ರವೇಶಿಸುವುದು ಖಾತರಿಯಾಯಿತು. ಆರನೇ ತಾರೀಕು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಆಂಟಿ ಮಾಸ್ಕ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಯೋಜನೆ ಪ್ರಕಟವಾಯಿತು.ಆದರೆ ಅದೇ ದಿನ ಇಂಗ್ಲೆಂಡಿನಲ್ಲಿ 2988 ಹೊಸ ಸೋಂಕುಗಳು ಪತ್ತೆಯಾದವು.

    ಅತಿ ಬೇಗನೆ ಅಂದರೆ ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಾಗಲೇ ಅಮೆರಿಕಾದ ಹಲವಾರು ನಗರಗಳಲ್ಲಿ ಲಾಕ್ ಡೌನ್ ತಮ್ಮ ಆರ್ಥಿಕತೆಯನ್ನು ನಿಧಾನಗೊಳಿಸಬಲ್ಲದು ಎನ್ನುವ ಕಾರಣಕ್ಕೆ  ಪ್ರತಿಭಟನೆಗಳು ಶುರುವಾಗಿದ್ದವು.ಇದನ್ನು ಸ್ವತಃ ಅಮೆರಿಕಾದ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಮತ್ತು ಆಡಳಿತ ಪಕ್ಷ ಕೂಡ  ಪರೋಕ್ಷವಾಗಿ ಅನುಮೋದಿಸಿದರು. ಅವರದೇ ಪಕ್ಷದ ಹಲವು ನಾಯಕರು ಮತ್ತು ಸ್ಥಳೀಯ ಮೇಯರುಗಳು, ಗವರ್ನರುಗಳು ಈ ಬಗೆಯ ಪ್ರತಿಭಟನೆಗಳು  ಕೊರೋನಾ ವೈರಸ್ಸನ್ನು ನಿಯಂತ್ರಿಸುವಲ್ಲಿ ದೊಡ್ಡ ತೊಡಕಾಗಬಲ್ಲರೆಂದರು. ಏಪ್ರಿಲ್ 15 ರಂದು ಮಿಶಿಗನ್ ನಲ್ಲಿ ಶುರುವಾದ ಪ್ರತಿಭಟನೆ ಮೇ ಒಂದನೇ ತಾರೀಕಿನ ವೇಳೆಗೆ ಸುಮಾರು ಅರ್ಧದಷ್ಟು ಅಮೆರಿಕನ್ ರಾಜ್ಯಗಳಿಗೆ ಹರಡಿತ್ತು. ಮಿಶಿಗನ್ ಪ್ರತಿಭಟನೆಯಿಂದಲೇ ಇತರರಿಗೆ ಸ್ಪೂರ್ತಿ ಸಿಕ್ಕಿತ್ತು.

    ಅಮೆರಿಕಾದಲ್ಲಿ ಮೊದಲಿಗೆ ಶುರುವಾದ ಈ ಪ್ರತಿಭಟನೆಗಳು ಅಂತಾರಾಷ್ಟ್ರೀಯ ಸುದ್ದಿಗಳಾದವು. ಇವರ ರಾಲಿಯನ್ನು ವಿರೋಧಿಸಿದ ಕೆಲವು ವೈದ್ಯರು ಇವರ ವಾಹನಗಳಿಗೆದುರಾಗಿ ನಿಂತು “ ನೀವು ಮುಂದುವರೆಯುವಿರಾದರೆ ನಮ್ಮನ್ನು ಈಗಲೇ  ಸಾಯಿಸಿಬಿಡಿ ಏಕೆಂದರೆ ಈಗಲೇ ಆರೋಗ್ಯ ಇಲಾಖೆ ತತ್ತರಿಸಿಹೋಗಿದೆ, ನಾವುಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗಿ ಸಾವನ್ನಪ್ಪುತ್ತಿದ್ದೇವೆ. ಇನ್ನು ಲಾಕ್ ಡೌನ್ ನ್ನು ತೆರೆದುಬಿಟ್ಟಲ್ಲಿ ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ “ ಎಂಬ ಸಂದೇಶಗಳನ್ನು ಕಳಿಸಿದರು.

    ಮಿಶಿಗನ್ ರಾಲಿಯನ್ನು ತಾವೇ ಸಂಘಟಿಸಿದ್ದೇವೆಂದು ಆಳುವ ಪಕ್ಷ ನೇರವಾಗಿ ಒಪ್ಪಲಿಲ್ಲ. ಆದರೆ ಇದನ್ನು ಸಂಘಟಿಸಿದವರಲ್ಲಿ ಮ್ಯಾಟ್  ಮ್ಯಾಡಕ್ ಎಂಬ ರಿಪಬ್ಲಿಕನ್ ಪಕ್ಷದ ಸದಸ್ಯನ ಹೆಂಡತಿ ಮೆಶ್ವಾನ್ ಮ್ಯಾಡಕ್ ಕೂಡ  ಇದ್ದಳು.ಆಕೆ  ’ ವುಮೆನ್ ಫಾರ್ ಟ್ರಂಪ್ ’ ಸಂಘದ  ಸಲಹಾ ಸಮಿತಿಯ ಸದಸ್ಯೆಯಾಗಿದ್ದಳು. ಈ ಸಂಘದ ಉಪಾಧ್ಯಕ್ಷೆ ಮರಿಯಾನ್ ಶೆರಿಡನ್ ಕೂಡ ಇದರಲ್ಲಿದ್ದಳು.ಇವೇ ಪ್ರತಿಭಟನೆಗಳು ವಾಷಿಂಗ್ಟನ್ ನಲ್ಲಿ ಸಂಘಟಿಸಿದ್ದು ಅಲ್ಲಿನ ಕೌಂತಿ ರಿಪಬ್ಲಿಕನ್ ಪಾರ್ಟಿಯೇ. ಈ ರಾಲಿ ಉದ್ದೇಶಿಸಿ ಮಾತನಾಡಿದವರಲ್ಲಿ ಮೂವರು ರಿಪಬ್ಲಿಕನ್ ಪಾರ್ಟಿ ಲೆಜಿಸ್ಲೇಟರುಗಳು ಇದ್ದರು.

    ಪ್ರತಿಭಟಿಸುತ್ತಿದ್ದವರಲ್ಲಿ ಕೆಲವರಿಗೆ ಕೊರೊನಾ ಬರಲಿ,ಬಿಡಲಿ ಬದುಕು ಎಂದಿನಂತೆ ನಡೆಯಬೇಕು ಎಂಬ ವಿಚಿತ್ರ ನಂಬಿಕೆಗಳಿದ್ದವು. ಇನ್ನು ಕೆಲವರು ಲಾಕ್ ಡೌನ್ ತಮ್ಮ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ಭಾವನೆಯಿತ್ತು. ಮತ್ತೂ ಕೆಲವರಿಗೆ ಟ್ರಂಪ್ ಆಡಳಿತದಲ್ಲಿ ಆರ್ಥಿಕತೆ ಕೆಳಮುಖವಾಗುವುದು ಬೇಡವಾಗಿತ್ತು. ಅವರು ಆತನ ಆಡಳಿತವನ್ನು ಬೆಂಬಲಿಸಲು ಪ್ರತಿಭಟಿಸುತ್ತಿದ್ದರು.

    ಈ ಪ್ರತಿಭಟನೆಗಳು ಸಂಘಟಿಸಲ್ಪಟ್ಟಿದ್ದವು ಮತ್ತು ಜೊತೆ ಜೊತೆಯಲ್ಲೇ ಜನರ ನಂಬಿಕೆಗಳು ಮತ್ತು ಆರ್ಥಿಕ ಆತಂಕಗಳೂ ಜೊತೆಗೂಡಿದ್ದವು. ಅಥವಾ ಈ ಆತಂಕ ಮತ್ತು ನಂಬಿಕೆಗಳ ಪ್ರಯೋಜನ ಪಡೆಯಲಾಗಿತ್ತು. ನವೆಂಬರಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಅಮೆರಿಕಾದಲ್ಲಿ ಅತ್ಯಂತ ಬೇಗನೆ ಅನ್ ಲಾಕ್ ಅಭಿಯಾನ ಶುರುಮಾಡಲಾಯಿತು. ಸಾಮಾಜಿಕ ಅಂತರದ ಕಾರಣ ಸೋಂಕು ನಿಯಂತ್ರಣದಲ್ಲಿರುವ ಚಿತ್ರಣ ನೀಡಿ ವ್ಯಾಪಾರ ಮತ್ತು ವಹಿವಾಟುಗಳಿಗೆ ಮೇ ನಲ್ಲಿಯೇ ಚಾಲೂ ನೀಡಿದರೂ ಆರ್ಥಿಕತೆ ದಾಖಲೆ ಪ್ರಮಾಣದಲ್ಲಿ ಕುಸಿಯಿತು. ಇಂದಿಗೂ ಅತ್ಯಂತ ಮುಂದುವರೆದ ದೇಶವಾದ ಅಮೆರಿಕಾ ಕೊರೊನಾ ಸಾವು ಮತ್ತು ಸೋಂಕುಗಳೆರಡರಲ್ಲೂ ಪ್ರಥಮ ಸ್ಥಾನದಲ್ಲಿದೆ.

    ವಾಸ್ತವದಲ್ಲಿ ಮಿಶಿಗನ್ನಿನ ಜನಸಂಖ್ಯೆ ಅಮೆರಿಕಾದ ರಾಜ್ಯಗಳಲ್ಲಿ ಹತ್ತನೇ ಸ್ಥಾನದಲ್ಲಿದ್ದರೂ ಆಗಿನ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಅಲ್ಲಿ ವೇಗವಾಗಿ ಸೋಂಕು ಹರಡುತ್ತಿದ್ದ ದಿನಗಳವು. ಗನ್ನು, ಪಿಸ್ತೂಲುಗಳನ್ನಿಡಿದ ಪ್ರತಿಭಟನೆಕಾರರು ಅಲ್ಲಿನ ಗವರ್ನರ್ ನ ಕಚೇರಿಯ ಕಟ್ಟಡವನ್ನು ಅನಧಿಕೃತವಾಗಿ ಪ್ರವೇಶಿಸಿ ಹಿಂಸಾತ್ಮಕ ಬೆದರಿಕೆಗಳನ್ನು ಹಾಕಿದಾಗ್ಯೂ ಟ್ರಂಪ್ ಅವರೊಂದಿಗೆ ’ ಡೀಲ್ ’ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದು ಸ್ವಾರ್ಥದ ಪರಮಾವಧಿಯಾಗಿತ್ತು.

    ಕೊರೊನಾ, ಆರ್ಥಿಕತೆ ಮತ್ತು ಚುನಾವಣೆಯ ಮೂರು ಕಲ್ಲಿನ ಒಲೆಯಲ್ಲಿ ಟ್ರಂಪ್ ನ ಕೊರೊನಾ ಸಂಭಾಳಿಸುವಿಕೆ ದೇಶದ ಜನತೆಯಲ್ಲಿ ಆಳ ಅಸಮಾಧಾನಗಳ ಅಡುಗೆಯನ್ನು ಬೇಯಿಸಿತು. ಮೇ 25 ರಂದು ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ನಂತರ ಜನಾಂಗೀಯ ದ್ವೇಷದ ಬಗ್ಗೆ ಕೋಪದ ಉರಿಯ ನಾಲಗೆಗಳು  ಹುಟ್ಟಿಕೊಂಡ ಮೇಲಂತೂ ಅಮೆರಿಕಾದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೇಗುದಿಯಲ್ಲಿ ಅಮೆರಿಕಾ ಕುದಿಯುತ್ತಲೇ ಇದೆ. ಜನರ ಸಹನೆ ಮೀರುತ್ತಲೇ ಸಾಗಿದೆ. ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ನಿಂದಿಸುವುದು ಮುಂದುವರೆದಿವೆ.ಆದರೆ ಟ್ರಂಪ್ ಬೆಂಬಲಿಗರು ಇದೀಗ ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಕೈ ಬಿಟ್ಟು ಜನಾಂಗೀಯ ತಾರತಮ್ಯವನ್ನು ವಿರೋಧಿಸುವ ಪ್ರತಿಭಟನೆಕಾರರತ್ತ ತಮ್ಮ ಗಮನವನ್ನು ಹರಿಸಿದ್ದಾರೆ.

    ಈ ಮೂರೂ ಮುಂದುವರೆದ ದೇಶಗಳ ರಾಜಕೀಯ ಸಂಸ್ಕೃತಿಗಳು ಅತ್ಯಂತ ಭಿನ್ನವಾದವು.ಆದರೆ ಎಲ್ಲ ದೇಶಗಳ ಗುರಿ ಸಾವಿನ ಸಂಖ್ಯೆಯನ್ನು ಮಿತಗೊಳಿಸುವುದು, ಸೋಂಕನ್ನು ಹತ್ತಿಕ್ಕುವುದು ಮತ್ತು ಆರ್ಥಿಕತೆಯನ್ನು ರಕ್ಷಿಸುವುದೇ ಆಗಿದೆ.ಆದರೆ ಲಾಕ್ ಡೌನ್ ಮತ್ತು ಮಾಸ್ಕ್ ವಿರೋಧಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವವರ ಮಾನಸಿಕ ಸ್ಥಿತಿಯೇನು?

     ಲಾಕ್ ಡೌನ್ ವಿರೋಧಿಗಳ ನಿಲುವು

    ಮೊದಲಿಗೆ, ಲಾಕ್  ಡೌನನ್ನು ವಿರೋಧಿಸಿ ಪ್ರತಿಭಟನೆ ಮಾಡುವವರ ಸಂಖ್ಯೆ ಸಣ್ಣದು ಎಂಬುದನ್ನು ಗಮನಿಸಿ. ಹಲವು ನೂರರಿಂದ ಹಿಡಿದು ಹಲವು ಸಾವಿರಗಳಲ್ಲಿ ಮಾತ್ರ  ಇರುವ ಇವರು ಹಲವು ಮಾನಸಿಕ ಹಿನ್ನೆಲೆಗಳನ್ನು ಹೊಂದಿದವರು. ರಾಜಕೀಯ ನಿಲುವುಗಳನ್ನು ಸಮರ್ಥಿಸುವುದೊಂದೇ ಅಲ್ಲದೆ “ ಕೊರೊನಾ ಎನ್ನುವ ಈ ಸೋಂಕು ಅಂಥ ದೊಡ್ಡ ವಿಚಾರವೇನಲ್ಲ, ಇದೆಲ್ಲ ಮಾಧ್ಯಮಗಳ ಹುನ್ನಾರ ಮಾತ್ರ “ ಎಂದು ನಂಬುವವರ ದೊಡ್ಡ ಗುಂಪೇ ಇವರಲ್ಲಿದೆ. ಇವರ ಪ್ರಕಾರ ಕೊರಾನಾ ಇರುವಿಕೆ ಮತ್ತು ಅವುಗಳ ಸೋಂಕಿನ ಅಪಾಯ ಎರಡೂ ಅಷ್ಟೇನು ದೊಡ್ಡವಲ್ಲ!

    ಅತಿ ಕಡಿಮೆ ಕಾಲದಲ್ಲಿ ಎಲ್ಲ ಇತಿ-ಮಿತಿಗಳ ನಡುವೆಯೂ ಹೇಗೋ ಹರಡಿ ಅತ್ಯಂತ ವೇಗವಾಗಿ 190 ದೇಶಗಳಲ್ಲಿ ಕಾಣಿಸಿಕೊಂಡು ಹಲವು ಕೋಟ್ಯಂತರ ಜನರನ್ನು ಆಸ್ಪತ್ರೆಗೆ ಎಡತಾಕಿಸಿದ,ಸುಮಾರು ಒಂದು ಕೋಟಿ ಜನರನ್ನು ಕೊಂದ ಕೊರೊನಾ ಎಂಬ ಹೊಸ ಮಹಾಮಾರಿ ಇವರ ಲೆಕ್ಕದಲ್ಲಿ ಮತ್ತೊಂದು ನೆಗಡಿ-ಕೆಮ್ಮು-ಜ್ವರ ಮಾತ್ರ.

    ಕೊರೊನ ಅಂಕಿ ಅಂಶಗಳಿಗೆ ಪ್ರತಿರೋಧ ತೋರುತ್ತ ಲಾಕ್ ಡೌನ್ ಇಲ್ಲದ ಸಮಯದಲ್ಲಿ ಕೇವಲ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆಯನ್ನು ಇವರು ನೀಡುತ್ತಾರೆ. ಹೆಚ್ಚು ವಯಸ್ಸಾದ ಮತ್ತು ಇತರೆ ಖಾಯಿಲೆಗಳಿರುವವರನ್ನೇ ಕೊರೊನ ಹೆಚ್ಚಾಗಿ ಕೊಲ್ಲುವ ಕಾರಣ “ ಅವರು ಹೇಗೂ ಸಾಯುತ್ತಿದ್ದರು… ಬೇಗ ಹೋದರು “ ಎನ್ನುವುದು ಇವರ ಧೋರಣೆ.ಲಾಕ್ ಡೌನ್ ನ ಕಾರಣ ಸಂಭವಿಸುತ್ತಿರುವ ಸದ್ಯದ ಕಷ್ಟ-ನಷ್ಟಗಳು ಮತ್ತು ದೀರ್ಘ ಕಾಲದಲ್ಲಿ ಕಂಡು ಬರುವ ಆರ್ಥಿಕ ದುರಂತಗಳಿಂದ ಸಂಭವಿಸುವ ಅವಘಡಗಳು ಇವರ ಮುಖ್ಯ ಕಾಳಜಿ. ಕೊರೊನ ಸಭಂದಿತ ಎಲ್ಲ ವಿಚಾರಗಳನ್ನು ಉತ್ಪ್ರೇಕ್ಷೆಗೊಳಿಸುತ್ತಿರುವ ಮಾಧ್ಯಮಗಳ ಮೇಲೆ ಇವರ ಕೋಪ. ಈ ಕಾರಣ ಮಾಸ್ಕ್ ಧರಿಸುವುದಕ್ಕೂ ಇವರು ತಯಾರಿರುವುದಿಲ್ಲ.

    ಮಾಸ್ಕ್, ಲಾಕ್ ಡೌನ್ ವಿರೋಧಿಗಳ ಮಾನಸಿಕ ಧೋರಣೆಗಳು

    ಲಾಕ್ ಡೌನ್ ನ ವಿರೋಧಗಳು ಅಥವಾ ನಿರ್ಲ್ಯಕ್ಷಗಳು ಮೂಲಭೂತ ಅವಶ್ಯಕತೆಗಳ ಕಾರಣ ಹುಟ್ಟಿಕೊಂಡಲ್ಲಿ ಅದು ಕೇವಲ ನಂಬುಗೆ ಅಥವಾ ವಯಕ್ತಿಕ ನಿಲುವುಗಳ ಮಿತಿಯನ್ನು ಮೀರಿ ಬದುಕುಳಿಯುವ  ಅವಶ್ಯಕತೆಯನ್ನು ಮಾತ್ರ ಅವಲಂಭಿಸುತ್ತದೆ.

    ಉದಾಹರಣೆಗೆ, ಲಾಕ್ ಡೌನ್ ನ ವಿರುದ್ಧದ ಪ್ರತಿಭಟನೆಗಳು ಕೊರೊನ ಸೋಂಕಿನಲ್ಲಿಭಾನುವಾರದವರೆಗೆ ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್ ನಲ್ಲಿ ನಡೆದಾಗ ಅದಕ್ಕೆ ಜನರ ಹಸಿವಿನ ಝಳವೇ ಮುಖ್ಯ ಕಾರಣವಾಗಿತ್ತು.ಅಲ್ಲಿ ಜನರಿಗೆ  “ಆಯ್ಕೆ’ ಗೆ ಅವಕಾಶವಿರಲಿಲ್ಲ. ಹಸಿವು , ಬಡತನಗಳೇ ಅವರನ್ನು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡಿತ್ತು.

    ಕಳೆದ ಭಾನುವಾರದಿಂದ ಎರಡನೇಸ್ಥಾನಕ್ಕೇರಿರುವ  ಭಾರತ ಮೊದಲಿಗೆ ಅಪಾರ ಸಹನೆಯನ್ನು ತೋರಿತು. ತನ್ನ ಮಿತಿಯಲ್ಲಿ ದಕ್ಷವಾದ ಲಾಕ್ ಡೌನ್ ನ್ನು ಯಶಸ್ವಿಯಾಗಿ ನಡೆಸಿ ಸಾವು ಮತ್ತು ಸೋಂಕು ಎರಡನ್ನೂ ನಿಯಂತ್ರಣಕ್ಕೆ ತೆಗೆದುಕೊಂಡು ಜಗತ್ತಿನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಯಿತು. ಅನಿವಾರ್ಯ ಸ್ಥಿತಿಯಲ್ಲಿ ಅನ್ ಲಾಕ್ ಕ್ರಿಯೆಯನ್ನು ಮಾಡ ತೊಡಗಿದ ನಂತರ ಸೋಂಕೆನ್ನುವುದು ಈಗ ಕಾಳ್ಗಿಚ್ಚಿನಂತೆ ಹರಡುತ್ತಿದೆ.ಆರ್ಥಿಕತೆ ಪಾತಾಳವನ್ನು ಮುಟ್ಟಿದೆ. ಇಂತಹ ಭಾರತದಲ್ಲಿ ಕೂಡ ಇಡೀ ಕೊರೊನಾ ವ್ಯವಹಾರದ ಬಗ್ಗೆ ಆಳ ಅಸಮಾಧಾನಗಳನ್ನು ಹೊಂದಿದ ಜನರಿದ್ದಾರೆ.ಇದೆಲ್ಲ ದೊಡ್ಡ ಬೂಟಾಟಿಕೆ ಎಂದು ಇವರು ದೂರುತ್ತಾರೆ

    ಆದರೆ ಮೇಲಿನಂತೆ ಅಪನಂಬಿಕೆಗಳಲ್ಲಿ  ಬದುಕುತ್ತಿರುವವರ ವಾದಗಳ ವಿಚಾರವೇ ಬೇರೆಯದ್ದಾಗಿದೆ. ಪ್ರತಿ ವಾದಕ್ಕೆ ಹಲವು ಮುಖಗಳಿರುವಂತೆ, ಇವರ ವಾದಗಳಲ್ಲಿಯೂ ಕೆಲವು ಸತ್ಯಾಂಶಗಳಿದ್ದರೆ ಆ ವಿಚಾರವನ್ನು ಒಪ್ಪಬೇಕಾಗುತ್ತದೆ. ಗೌರವಿಸಲೂ ಬೇಕಾಗುತ್ತದೆ.

    ಆದರೆ ಮುಖ್ಯವಾಗಿ ಇವರು ತಮ್ಮ ನಾಯಕರು ಏನನ್ನೂ ಮಾಡಿದರೂ ಖಂಡಿಸಲು ತಯಾರಿರುವವರು. ಇದೇ ಕೋವಿಡ್ ಪರಿಸ್ಥಿತಿಯಲ್ಲಿ ತಮ್ಮ ಸರ್ಕಾರಗಳು ಲಾಕ್ ಡೌನಿನ ತದ್ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡು ಪರಿಸ್ಥಿತಿ ಬಿಗಡಾಯಿಸಿದ್ದರೂ ಮೊದಲು ಪ್ರತಿಭಟನೆಗಿಳಿಯುತ್ತಿದ್ದ ಜನರಿವರು. ಸಾಮಾನ್ಯವಾಗಿ ಇವರಿಗಾಗಲೀ ಅಥವಾ ಇವರ ಹತ್ತಿರದವರಿಗಾಗಲೀ ಕೊರೊನಾ ಸೋಂಕು ಬಂದಿರುವುದಿಲ್ಲ ಅಥವಾ ಬಂದಿದ್ದರೂ ಸಾವುಗಳು ಸಂಭವಿಸಿಲ್ಲದಿರಬಹುದು. ಅಕಸ್ಮಾತ್ ಸತ್ತಿದ್ದರೂ ಅವರು ಇಂತಹವರ ಪ್ರೀತಿ ಪಾತ್ರರೇ ಎನ್ನುವುದು ಮತ್ತು ಇವರ ಭಾವನಾತ್ಮಕ ಸಂಬಂಧಗಳು ಇತರ ಮನುಷ್ಯರೊಡನೆ ಯಾವ ಮಟ್ಟದಲ್ಲಿ ಬೆಸೆದುಕೊಂಡಿದೆ ಎಂಬುದನ್ನು ಕೂಡ ಅಳೆಯಬೇಕಾಗುತ್ತದೆ.

    ಹಾಗಾಗಿ ತಮಗೆ ಆಗಿಲ್ಲದ ಆತಂಕ, ಭಯ, ಸಾವು, ನೋವುಗಳು ಇತರರಿಗೆ ಆಗಿಲ್ಲ ಎಂದು ಇವರು ಬಲವಾಗಿ ಮತ್ತು ನಿಜವಾಗಿಯೇ ನಂಬಿರಬಹುದು. ಅದರಲ್ಲೇ ಅವರ ಪಲಾಯನವಾದೀ ವ್ಯಕ್ತಿತ್ವದ ಪರಿಚಯವೂ ಇರಬಹುದು.

    ಇವರು ನೀಡುವ ಅಂಕಿ-ಅಂಶಗಳು ನಿಜವಿದ್ದರೂ ದುರಂತವೊಂದನ್ನು ಪೂರ್ಣ ಪ್ರಮಾಣದಲ್ಲಿ ಆಗಲು  ಬಿಡುವುದಕ್ಕಿಂತ ಅದನ್ನು ತಡೆಯುವುದಕ್ಕಾಗಿ ಕೆಲವೊಮ್ಮೆ ಹೆಚ್ಚು ಕಷ್ಟವಾದರೂ ಕೆಲಸಗಳನ್ನು ಮಾಡಬೇಕಾಗುತ್ತದೆ ಮತ್ತು ಅದಕ್ಕಾಗಿ ಹೆಚ್ಚು  ಖರ್ಚುಮಾಡಬೇಕಾಗಬಹುದೆನ್ನುವುದು, ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದುಇವರ ನಂಬಿಕೆಯ ಪರಿಧಿಯ ಹೊರಗಿರಬಹುದು.

    ಸಮಾಜದ ವಿವಿಧ ಸ್ಥರಗಳಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ರಕ್ಷಿಸಲು ಕೆಲವು ಸಣ್ಣ ತ್ಯಾಗಗಳನ್ನು ಮಾಡಬೇಕಾದ ಕಾಲ ಇದೆನ್ನುವುದನ್ನು ಇವರು ನಂಬಬೇಕಾಗುತ್ತದೆ. ಉದಾಹರಣೆಗೆ ಮಾಸ್ಕ್ ಧರಿಸುವ ವಿಚಾರದಲ್ಲಿ ಇವರಿಗೆ ವೈಯಕ್ತಿಕ ನಂಬಿಕೆಗಳಿಲ್ಲದಿದ್ದರೂ ಇತರರ ಒಳಿತಿಗಾಗಿ ಇವರು ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕಿದೆ.

    ಸಾಮಾನ್ಯವಾಗಿ ಆಗುವ ಸಾವು ನೋವುಗಳ ಜೊತೆ ಹೊಸದೊಂದು ಪಿಡುಗು ಸೇರಿದರೆ ಅದರಿಂದ ಆಗಬಹುದಾದ ಜನನಾಶ ಅತ್ಯಂತ ಭೀಕರ ಪರಿಸ್ಥಿತಿಗಳನ್ನು ಕೋಟ್ಯಂತರ ಸಂಸಾರಗಳಲ್ಲಿ ಸೃಷ್ಟಿಸಬಹುದು. ಇನ್ನು ಯಾವ ಎಚ್ಚರಿಕೆಗಳನ್ನೂ ತೆಗೆದುಕೊಳ್ಳದಿದ್ದರೆ ಬದುಕಿ ಬಾಳಬೇಕೆಂಬ ಇಚ್ಛೆಯಿರುವ ಬಹುಸಂಖ್ಯಾತರ ಜೀವಗಳು- ಜೀವನಗಳು ಭಯಾನಕವಾಗಿ ನಲುಗಬಲ್ಲವು ಎಂಬ ವಾಸ್ತವವನ್ನು ಇವರು ಗೌರವಿಸುವುದನ್ನು ಕಲಿಯಬೇಕಿದೆ.

    ಲಾಕ್ ಡೌನನ್ನು ಕೇವಲ ವೈಯಕ್ತಿಕ ತಾತ್ವಿಕ ಕಾರಣಗಳಿಗಾಗಿ ವಿರೋಧಿಸುವವರು ಇತರೆ ತರ್ಕಬದ್ದ ಕಾರಣಗಳಿಂದ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡು ಬಿಟ್ಟಿರುತ್ತಾರೆ.ಇದರಿಂದ ಸ್ವತಃ ನೋಯುತ್ತಾರೆ. ಜೊತೆಗೆ ಇನ್ನಷ್ಟು ಸೋಂಕನ್ನು ಹರಡಲು ಕಾರಣರಾಗುತ್ತಾರೆ.

    ನೂರಾರು ದೇಶಗಳು ಒಂದೇ ನಿಲವನ್ನು ತೆಗೆದುಕೊಂಡರೂ ತಮ್ಮದೇ ಸ್ವಾರ್ಥಕ್ಕಾಗಿ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಹಲವು ದೇಶಗಳು, ಗುಂಪುಗಳು ಮತ್ತು  ಜನರು ಬೇರೆಯ ನಿಲುವನ್ನು ಕೊರೊನಾ ವಿಚಾರದಲ್ಲಿ ತೋರಿದ್ದಾರೆ. ಇನ್ನು ಕೆಲವರು ನಿಜವಾಗಿಯೂ ಅಂದರೆ  “ಲೋಕೋ ಭಿನ್ನ ರುಚಿಃ “ ಎನ್ನುವಂತೆ ತಮ್ಮದೇ ಭಿನ್ನ ಅಭಿಪ್ರಾಯಗಳನ್ನು ಕೊರೊನಾದ ಇರುವಿಕೆ, ಲಾಕ್ ಡೌನ್ ಮತ್ತು ಮಾಸ್ಕ್ ವಿಚಾರಗಳ ಬಗ್ಗೆ ಹೊಂದಿದ್ದಾರೆ.

    ಶುಭ ದಿನ

    ಇಂದಿನ ನುಡಿ

    ಬದುಕು ಮತ್ತು ಬಾಳು ಬೇರೆ ಬೇರೆ. ಬದುಕು ವೃದ್ಧಿ; ಬಾಳು ಸಿದ್ಧಿ.- ದ.ರಾ. ಬೇಂದ್ರೆ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 17 ಸೆಪ್ಟಂಬರ್ 2020, ಗುರುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಆಮಾವಾಸ್ಯೆ ನಕ್ಷತ್ರ: ಪೂರ್ವಾ ಫಾಲ್ಗುಣಿ

    ಸೂರ್ಯೋದಯ : ಬೆಳಿಗ್ಗೆ 6.15

    ಸೂರ್ಯಾಸ್ತ: ಸಂಜೆ 6.27

    ಇಂದಿನ ವಿಶೇಷ

    ಮಹಾಲಯ ಅಮಾವಾಸ್ಯೆ

    ಶುಭ ದಿನ

    ಇಂದಿನ ನುಡಿ

    ಯಾರಾನ್ನಾದರೂ ನಂಬುವುದು ನಮ್ಮ ಸಹೃದಯತೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಅವರವರ ಯೋಗ್ಯತೆ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 16 ಸೆಪ್ಟಂಬರ್ 2020, ಬುಧವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಚತುರ್ದಶಿ ನಕ್ಷತ್ರ: ಮಖ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.20

    ಇಂದಿನ ವಿಶೇಷ

    ವಿಶ್ವ ಓಝೋನ್ ದಿನ

    ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಮತ್ತೊಂದು ಪ್ರಬಲ ಪುರಾವೆ ?

    ಇದೊಂದು ಬಹುದೊಡ್ಡ ಜಿಜ್ಞಾಸೆ. ಅನ್ಯಗ್ರಹದಲ್ಲಿ ಜೀವಿಗಳಿವೆಯಾ ಎಂಬುದು. ಈಗ ಶುಕ್ರ ಗ್ರಹದಲ್ಲಿ ಅಂತಹದ್ದೊಂದು ಪುರಾವೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ನೇಚರ್ ಆಸ್ಟ್ರಾನಮಿ ಎಂಬ ಜನಪ್ರಿಯ ನಿಯತಕಾಲಿಕದಲ್ಲಿ ಈ ಕುರಿತು ವಿವರ ಪ್ರಕಟವಾಗಿದೆ.

    ಏನಿದು ಪುರಾವೆ

    ಶುಕ್ರ ಗ್ರಹದಲ್ಲಿ ಇರುವ ಫೋಸ್ಪೀನ್ (phosphine-ಕೊಳೆತ ಮೀನಿನ ವಾಸನೆ ಅಥವಾ ಬೆಳ್ಳುಳ್ಳಿ ವಾಸನೆ ಹೊಂದಿರುವ ಅನಿಲ) ಇದಕ್ಕೆಲ್ಲಾ ಮೂಲ. ಇದು ಭೂಮಿಯಲ್ಲೂ ಇದೆಯಂತೆ. ಹೀಗಾಗಿ ಭೂಮಿಯನ್ನು ಹೊರತಾದ ಇತರ ಗ್ರಹಗಳಲ್ಲಿ ಈ ಅನಿಲ ಇದ್ದರೆ ಖಚಿತವಾಗಿಯೂ ಅಲ್ಲಿಯೂ ಜೀವಿಗಳು ಇದ್ದಾವೆ ಎಂದವರು ತರ್ಕಿಸಿದ್ದಾರೆ.

    ಆದರೆ ಯಾವ ರೀತಿಯ ಜೀವಿಗಳು ಇರಬಹುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿಲ್ಲ. ಆದಾಗ್ಯೂ, ಇಂತಹ ಅನಿಲ ಸೃಷ್ಟಿಯಾಗುವುದೇ ಬ್ಯಾಕ್ಟೀರಿಯಾಗಳಿಂದ, ಅವುಗಳು ಹೊರ ಸೂಸುವ ಆಮ್ಲಜನಕವು ಆ ವಾತಾವರಣದಲ್ಲಿ  ಭೂಮಿಯಲ್ಲಿ ಸೃಷ್ಟಿಯಾಗುವ ರೀತಿಯಲ್ಲೇ ಫೋಸ್ಪೀನ್ ಅನಿಲವನ್ನು ಸೃಷ್ಟಿಸುತ್ತದೆ. ಹೀಗಾಗಿ ಅಲ್ಲೂ ಜೀವಿಗಳು ಇರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹವಾಯಿಯ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ ಟೆಲಿಸ್ಕೋಪಿಕ್ ಅನ್ನು ಉಲ್ಲೇಖಿಸಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

    ನೇಚರ್ ಆಸ್ಟ್ರಾನಮಿಕಿಗೆ ಸಂದರ್ಶನ ನೀಡಿದ ಹಿರಿಯ ವಿಜ್ಞಾನಿ  (ವೇಲ್ಸ್ ವಿವಿ) ಜಾನ್ ಗ್ರೀವ್ಸ್ ಅವರು, ಇದೊಂದು ಆಚ್ಚರಿದಾಯಕ ಸಂಶೋಧಕ. ನಿಜವಾಗಿಯೂ ನಾನು ಇದರಿಂದ ಸ್ತಂಭೀಭೂತನಾದೆ.

    ದೀರ್ಘ ಕಾಲದ ಪ್ರಶ್ನೆ

    ವಿಜ್ಞಾನ ಇಷ್ಟು ಮುಂದುವರಿದಿದೆ ನಿಜ. ಆದರೆ, ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನೂ ಇದಮಿತ್ಥಂ ಅನ್ನುವ ಉತ್ತರ ಸಿಕ್ಕಿಲ್ಲ. ಕೇವಲ ಊಹಾಪೋಹಗಳು ಮಾತ್ರ ಹಬ್ಬಿವೆ. ಈ ಹಿನ್ನೆಲೆಯಲ್ಲಿ ಈ ಸಂಶೋಧನೆ ಮಹತ್ವ ಪಡೆದಿದೆ. ಜೀವಿಯೊಂದರ ಹುಟ್ಟು, ಬೆಳವಣಿಗೆಗೆ ಬೇಕಾದ ಅನಿಲವೊಂದು ಶುಕ್ರನಂತಹ (ವೀನಸ್) ಗ್ರಹದಲ್ಲಿ ಕಂಡು ಬಂದಿದೆ ಎಂಬುದು ಇಲ್ಲಿ ಗಮನಾರ್ಹ.

    ಜೀವ ಕಾರಣ

    ಜೀವ ಕಾರಣಕ್ಕೆ ಅಂದರೆ ಜೀವಿಯೊಂದರ ಉಗಮ ಮತ್ತು ಬೆಳವಣಿಗೆಯಲ್ಲಿ ಫೋಸ್ಪೀನ್ ಅನಿಲ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಶುಕ್ರ ಗ್ರಹದಲ್ಲಿ ಅಂತಹ ಅನಿಲ ಇದೆಯೆಂದ ಕೂಡಲೇ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ. ಯಾಕೆಂದರೆ, ಸಾಕಷ್ಟು ಜನರು ಅನ್ಯಗ್ರಹ ಜೀವಿಗಳನ್ನು ನೋಡಿದ್ದೀವಿ ಎಂದು ಹೇಳುತ್ತಾರೆ. ಜತೆಗೆ ಅಂತಹ ಸಾಧ್ಯತೆಗಳನ್ನೂ ನಾವು ನೇರವಾಗಿ ಅವೈಜ್ಞಾನಿಕವಾಗಿ ಅಲ್ಲಗಳೆಯುವಂತಿಲ್ಲ ಎಂದು ಮೆಸಾಶುವೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಲೆಕ್ಯುಲರ್ ಆಸ್ಟ್ರೋಲಜಿಸ್ಟ್ ಕ್ಲಾರ್ ಸೌಸಾ ಸಿಲ್ವಾ ಕೂಡ ಹೇಳುತ್ತಾರೆ.

    ಈ ಸಂಶೋಧನೆಯು ಯಾಕೆ ಮಹತ್ವದ್ದೆಂದರೆ, ಫೋಸ್ಪೀನ್ ಅನಿಲವು ಅಲ್ಲಿದ್ದರೆ ಅದು ಖಚಿತವಾಗಿಯೂ ಯಾವುದಾದರೂ ಜೀವಿಯ ಅಸ್ತಿತ್ವವನ್ನು ತೋರಿಸುತ್ತದೆ. ಅದಿಲ್ಲದಿದ್ದರೆ ಬ್ಯಾಕ್ಟೀರಿಯಾ ಸೇರಿದಂತೆ ಯಾವುದೇ ಜೀವಿ ಅಲ್ಲಿ ಬದುಕಲು ಸಾಧ್ಯವಿಲ್ಲ. ಅವುಗಳು ಹೊರ ಸೂಸುವ ಈ ಅನಿಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಗ ಅಲ್ಲಿ ಇನ್ನೊಂದು ಜೀವಿಯ ಅಸ್ತಿತ್ವವನ್ನು ಪರಿಗಣಿಸಲು ಸಾಧ್ಯ ಎಂದವರು ವಿವರಿಸುತ್ತಾರೆ.

    ಎಂಜಿನಿಯರ್ ಗಳ ದಿನದಂದು ನೆನಪಾದರು ಸರ್ ಎಂ ವಿ

    ವೇದಗಳ ಕಾಲದಿಂದಲೂ ಭಾರತ ‘ಜ್ಞಾನ’ಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದೆ. ವೇದ, ಉಪನಿಷತ್, ಪುರಾಣ ಹೇಳುತ್ತಿದ್ದ ಕಾಲದಲ್ಲೇ  ನಭೋ ಮಂಡಲದ ಗ್ರಹಗಳ ಚಲನೆ ಬಗ್ಗೆ, ಕರಾರುವಕ್ಕಾಗಿ ಹೇಳಿದ ಪ್ರಥಮ ವಿಜ್ಞಾನಿ ಆರ್ಯಭಟ.   ವಿಜ್ಞಾನ ಬೆಳೆದಂತೆಲ್ಲಾ ಕಲಿಯುವ ವಿದ್ಯೆಯಲ್ಲೂ, ಮಾಡುವ ಕೆಲಸಗಳಲ್ಲೂ ಬದಲಾವಣೆ ಆಗುತ್ತಾ ಹೋಯಿತು. 

    ಹಿಂದಿನ ಕಾಲದ ವಾಸ್ತುಶಾಸ್ತ್ರ , ಶಿಲ್ಪಶಾಸ್ತ್ರ ಎಷ್ಟು ಉತ್ತುಂಗ ಮಟ್ಟದ್ದಾಗಿತ್ತು ಎನ್ನುವುದಕ್ಕೆ  ಹಲವಾರು ದೇವಾಲಗಳ ನಿರ್ಮಾಣ ಮತ್ತು ಅವುಗಳು ಇಂದಿಗೂ ಸುಸ್ಥಿತಿಯಲ್ಲಿ ಇರುವುದು  ಅಂದಿನ ಎಂಜಿನಿಯರಿಂಗ್  ಎಷ್ಟು ಅದ್ಭುತವಾಗಿತ್ತು  ಎಂಬುದಕ್ಕೆ ಸಾಕ್ಷಿಯಾಗಿವೆ. 

    ಎಂಜಿನಿಯರಿಂಗ್ ಅಂದರೆ ಏನು?

    ಹಲವು ಸಾಮಾಜಿಕ ಹಾಗು  ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು  ವಿಜ್ಞಾನ ಮತ್ತು ಗಣಿತದ ತತ್ವಗಳನ್ನು ಉಪಯೋಗಿಸಿ,   ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿ, ಸಾಮಾಜಿಕ ಮತ್ತು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ  ಹೊಸ ಹೊಸ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಇರುವ ತಾಂತ್ರಿಕತೆಯನ್ನ ಉತ್ತಮಗೊಳಿಸುತ್ತಾ ಹೋಗುವುದೇ  ಎಂಜಿನಿಯರಿಂಗ್.

     ಮೇಲೆ ತಿಳಿಸಿದ ಹಾಗೆ ಹೊಸ ಆವಿಷ್ಕಾರ, ಹೊಸ ಪ್ರಯೋಗ ಮಾಡಲು  ಮಾನವ ಮೊದಲು ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ.  ತನ್ನ ಕೌಶಲ್ಯಾಭಿವೃದ್ಧಿ ಮಾಡಲು ಒಂದು ವಿಷಯದ ಬಗ್ಗೆ  ವ್ಯವಸ್ಥಿತವಾದ ಅಧ್ಯಯನ  ನಡೆಸಿ, ಆ ವಿಷಯದಲ್ಲಿ ಪರಿಣಿತಿ ಹೊಂದಿದ ಮೇಲೆ  ಅದಕ್ಕೆ ಸಂಬಂಧ ಪಟ್ಟ ಕೆಲಸಗಳಲ್ಲಿ ಉತ್ಕೃಷ್ಟವಾದ ಜನೋಪಯೋಗವಾದ ಕೆಲಸಗಳನ್ನು ಮಾಡುವುದು  ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದೆ.  ಅಂಥ ಆಳ ಅಧ್ಯಯನ, ಬುದ್ಧಿಮತ್ತೆ ಹಾಗು ತೆಗೆದುಕೊಂಡ ಕೆಲಸಗಳಲ್ಲಿ ನೂರಕ್ಕೆ ನೂರರಷ್ಟು ವಿಜಯವನ್ನು ಇಪ್ಪತ್ತನೇ ಶತಮಾನದಲ್ಲಿ ಕಂಡ ಭಾರತದ ಅಪ್ರತಿಮ ಎಂಜಿನಿಯರ್ ನಮ್ಮ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರು. 

    ಮುದ್ದೇನ ಹಳ್ಳಿಯಲ್ಲಿ ಜನನ

    ಸರ್  ಎಂ ವಿ  15 ನೇ ಸೆಪ್ಟೆಂಬರ್ 1860 ಯಲ್ಲಿ ಬೆಂಗಳೂರಿನ ಸಮೀಪ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನ ಹಳ್ಳಿಯಲ್ಲಿ ಜನಿಸಿದರು.  ಸರ್ಕಾರಿ ಶಾಲೆಗಳಲ್ಲಿ ಓದಿ,  ಸಿವಿಲ್ ಎಂಜಿನಿಯರಿಂಗ್ ನಲ್ಲಿ ವಿಶೇಷ ಪರಿಣಿತಿ ಹೊಂದಿ, ಇಡೀ ಪ್ರಪಂಚವೇ ನಿಬ್ಬೆರಗಾಗುವಂಥ ವಿದ್ವತ್ತನ್ನ ತಮ್ಮ ಕೆಲಸಗಳ ಮೂಲಕ ಮಾಡಿ ತೋರಿಸಿದರು.

    ಮುದ್ದೇನಹಳ್ಳಿಯಲ್ಲಿ ಎಂ. ವಿ ಅವರಿದ್ದ ಹಂಚಿನ ಮನೆ
    ನಂತರ ಕಟ್ಟಿದ ಹೊಸ ಮನೆ ಈಗ ಸ್ಮಾರಕವಾಗಿದೆ.
    ಸರ್ ಎಂ ವಿ . ಸಮಾಧಿ

    ಭಾರತದ ಪ್ರಪ್ರಥಮ ಜಲಾಶಯಗಳ ನಿರ್ಮಾತೃ. ಜಲಾಶಯಗಳಲ್ಲಿ ನೀರು ಹೆಚ್ಚಾದಾಗ, ತನ್ನನ್ನು ತಾನೆ ತೆರೆದುಕೊಳ್ಳಬಹುದಾದ ಬಾಗಿಲುಗಳನ್ನು ಅಭಿವೃದ್ಧಿಪಡಿಸಿದ ಧೀಮಂತ. ಶಿಕ್ಷಣ, ಹಣಕಾಸು, ನೀರಾವರಿ, ಕೃಷಿ, ವಿದ್ಯುತ್, ಉದ್ಯೋಗ ಇನ್ನು ಹಲವಾರು ಕ್ಷೇತ್ರಗಳ ಅಭಿವೃದ್ಧಿ ಹರಿಕಾರ. 

    1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು  ಮೈಸೂರ್ ರಾಜ್ಯದ 19ನೇ ದಿವಾನರಾಗಿ  ಪ್ರಥಮ ಜಲವಿದ್ಯುತ್ ಶಿವನ ಸಮುದ್ರದಲ್ಲಿ ಅಭಿವೃದ್ಧಿ ಪಡಿಸಿ, ಮೈಸೂರು ಸ್ಯಾಂಡಲ್ ಸೋಪ್, ಬಿನ್ನಿ ಮಿಲ್, ಪುಸ್ತಕ ಕಾರ್ಖಾನೆ, ಭದ್ರಾವತಿಯಲ್ಲಿ ಕಬ್ಬಿಣದ ಕಾರ್ಖಾನೆ , ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇತ್ಯಾದಿಗಳು ಅವರ  ಜನೋಪಯೋಗಿ ಕೆಲಸಗಳಿಗೆ, ಅವರ ವಿದ್ವತ್ ಗೆ ಹಿಡಿದ ಕನ್ನಡಿ. 

    ಇದಕ್ಕೆಲ್ಲಾ ಮುಕುಟ ಮಣಿಯಂತೆ ಕೇವಲ ಗಾರೆ ಹಾಗು  ಕಲ್ಲುಗಳನ್ನು ಬಳೆಸಿ   ಕಾವೇರಿ ನದಿಗೆ ಅಡ್ಡಲಾಗಿ ಇಡೀ ಏಷ್ಯಾ ಖಂಡದಲ್ಲೇ ದೊಡ್ಡದಾದ ಜಲಾಶಯ ಕೃಷ್ಣರಾಜಸಾಗರ  ನಿರ್ಮಿಸಿದ್ದು ಇತಿಹಾಸ.   ನಿರ್ಮಿಸುವ ಸಮಯದಲ್ಲಿ,  ಕೆಲಸಗಾರರಿಗೆ 24/7 ಕೆಲಸ  ಮಾಡಲು ಮೊದಲ ಪ್ಲಾನ್ ಮಾಡಿದ್ದು, ಹಣದ ಅಡಚಣೆ ಬಂದಾಗ  ಮೈಸೂರು ರಾಜರ ಹತ್ತಿರ ವಿದ್ದ ಅಮೂಲ್ಯ ಚಿನ್ನಾಭರಣಗಳನ್ನ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಅಡವಿಟ್ಟು  ಕೃಷ್ಣರಾಜಸಾಗರ ಸಂಪೂರ್ಣ ವಾಗುವಂತೆ ನೋಡಿಕೊಂಡಿದ್ದು ಒಂದು ಕಡೆ ಯಾದರೆ.  ಮೈಸೂರು, ಮಂಡ್ಯ ಸುತ್ತಮುತ್ತ ಪ್ರತಿಯೊಂದು ಹಳ್ಳಿ ಹಳ್ಳಿಗೂ ಹೋಗಿ, ನಿಮ್ಮ ಭೂಮಿಯನ್ನು ಮಾರಬೇಡಿ, ಮುಂದೆ ಇದು ನೀರಾವರಿಯಾಗಿ  ಚಿನ್ನದಂಥಾ ಬೆಳೆ ಬೆಳೆಯುವ ಭೂಮಿಯಾಗುತ್ತದೆ ಯಾವುದೇ ಕಾರಣಕ್ಕೂ ಮಾರಬೇಡಿ ಎಂದು ಡಂಗೂರ ಸಾರಿ ಆದರ್ಶ ಮೆರೆದ ಮೇರು ವ್ಯಕ್ತಿ. 

    ಅವರು ಮಾಡಿದ ಸಾಧನೆ ಕೇವಲ ಒಂದು ಲೇಖನದಲ್ಲಿ ತಿಳುಸುವುದು ಅಸಾಧ್ಯ,  ಸರ್ ಎಂ ವಿ ಪಡೆದ  ಪ್ರಶಸ್ತಿಗಳಿಗೆ  ಲೆಕ್ಕವಿಲ್ಲ.  ಭಾರತ ಸರ್ಕಾರ 1955 ರಲ್ಲಿ ಜೀವಮಾನದ ಸಾಧನೆಗೆ  ಭಾರತ ರತ್ನ ಕೊಟ್ಟು ಗೌರವಿಸಿತು .  ಪ್ರಪಂಚದ ಹಲವಾರು ದೇಶಗಳಲ್ಲಿ ಬೇರೆ ಬೇರೆ ದಿನ ಇಂಜಿನಿಯರ್ ದಿನ ಆಚರಿಸಿದರೂ ಭಾರತದಲ್ಲಿ ಸರ್ ಎಂ ವಿ ಅವರ  ಹುಟ್ಟು ಹಬ್ಬದ ದಿನ  ಎಂಜಿನಿಯರಿಂಗ್ ಡೇ   ಆಚರಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿತು.  ಅಂದಿನಿಂದ ಅವರ ಹುಟ್ಟಿದ ದಿನ ಸೆಪ್ಟೆಂಬರ್ 15 ಭಾರತದ ಎಂಜಿನಿಯರ್ ದಿನವಾಗಿ ಇಂದಿಗೂ ಆಚರಿಸುತ್ತಾ ಬರುತ್ತಿದೆ. 

     ಸರ್ ಎಂ ವಿ ಅವರು  ಕೇವಲ ತಾಂತ್ರಿಕತೆಯಲ್ಲಿ ಮಾತ್ರ ಕೌಶ್ಯಲ್ಯ ಗಳಿಸಿರಲಿಲ್ಲ, ಜೊತೆಯಲ್ಲಿ ತಮ್ಮಲ್ಲೇ ಒಂದು ಕಟ್ಟು ನಿಟ್ಟಿನ ಶಿಸ್ತುಬದ್ಧ ಜೀವನ ಅಳವಡಿಸಿಕೊಂಡಿದ್ದರು. ಸಮಯದ ಉಪಯೋಗ,  ಸರಳತೆ, ಪ್ರಾಮಾಣಿಕತೆ,  ಮಾಡಿದ ಕೆಲಸಕ್ಕೆ ,ಅಗತ್ಯಕ್ಕೆ ತಕ್ಕಷ್ಟೇ ಸಂಬಳ ಪಡೆದಿದ್ದು, ಜೀವನದ  ಮೌಲ್ಯ, ಪ್ರೀತಿ ಹಾಗು ಒಬ್ಬ ಎಂಜಿನಿಯರ್  ಸಾಮಾನ್ಯ ಮನುಷ್ಯರ ಜೀವನದಲ್ಲಿ ಏನೆಲ್ಲಾ ವ್ಯತ್ಯಾಸ ತರಬಹುದು ಎಂದು ತೋರಿಸಿಕೊಟ್ಟ ದಾರ್ಶನಿಕ. ಶತಾಯುಷಿಗಳಾಗಿ ಬದುಕಿ 12 ಏಪ್ರಿಲ್ 1962 ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು.  ಅವರ  ಜೀವನ, ಆದರ್ಶ ನಡುವಳಿಕೆ, ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೂ ಮಾದರಿ. 

    ಕಾಲ ಬದಲಾಗಿದೆ, ಎಂಜಿನಿಯರಿಂಗ್ ಶಾಖೆ ಹೆಮ್ಮರವಾಗಿ ಬೆಳೆದಿವೆ.  ತಾಂತ್ರಿಕತೆ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರ ಹೊಂದಿ ಮಾನವನ ಜೀವನ ಸೌಖ್ಯಗಳು  ಬೆರೆಳುಗಳ ತುದಿಯಲ್ಲಿ ಬಂದು ನಿಂತಿವೆ. 

    ಎಂಜಿನಿಯರ್ ದಿನವನ್ನು ಕೇವಲ ಶುಭಾಶಯಗಳನ್ನು ಕೋರಲು ಮಾತ್ರ ಉಪಯೋಗಿಸದೆ,  ಸರ್ ಎಂ ವಿ ಅವರ ಕೌಶಲ್ಯದ, ಸರಳತೆಯ ಹಾಗು ಅವರು ಮಾಡಿದ ಸಾಧನೆಗಳ ಒಂದು ಅಂಶವನ್ನಾದರೂ   ಪ್ರತಿಯೊಬ್ಬ ಎಂಜಿನಿಯರ್  ಅಳವಡಿಸಿಕೊಳ್ಳುವಂತಾದರೆ, ಎಂಜಿನಿಯರ್ ಡೇ ಮಾಡಿದ್ದಕ್ಕೂ ಒಂದು ಅರ್ಥ ಬರುತ್ತದೆ. ಜೊತೆಗೆ ಅದು ನಮ್ಮ ದೇಶದ ಅಭಿವೃದ್ಧಿಗೂ  ಪೂರಕ. 

    ಸರ್ ಎಂವಿ ವೃತ್ತಿ ಜೀವನದ ಘಟ್ಟಗಳು

    1885 – ಬಾಂಬೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ನೇಮಕ, ನಾಸಿಕ್ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಣೆ.

    1894 – ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ.

    1896 – ಸೂರತ್ ನಲ್ಲಿ ಎಸ್ಎಕ್ಯುಟಿವ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.

    1897 :ಪುಣೆಯಲ್ಲಿ ಕಾರ್ಯನಿರ್ವಾಹಕ ಆಗಿ ಕಾರ್ಯ ನಿರ್ವಹಣೆ.

    1898 – ಚೀನಾ ಹಾಗು ಜಪಾನ್ ಭೇಟಿ

    1899 – ಪುಣೆಯಲ್ಲಿ ವ್ಯವಸಾಯ ಕಾರ್ಯನಿರ್ವಾಹಕ ಎಂಜಿನಿಯರ್

    1901 – ಬಾಂಬೆಯಲ್ಲಿಒಳಚರಂಡಿ ಕಾಮಗಾರಿ ಎಂಜಿನಿಯರ್ ಹಾಗೂ ಒಳಚರಂಡಿ ಮಂಡಳಿಯ ಸದಸ್ಯ – ಭಾರತೀಯ ವ್ಯವಸಾಯ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ.

    1903 – ಫೈಫ್ ಕೆರೆಗೆ ತಾವೇ ಪೇಟೆಂಟ್ ಪಡೆದುಕೊಂಡ ಅತ್ಯಾಧುನಿಕ ವಿಧಾನ ಬಳಸಿ ಸ್ವಯಂಚಾಲಿತ ಆಣೆಕಟ್ಟು ದ್ವಾರಗಳನ್ನು ಅಭಿವೃದ್ಧಿ ಪಡಿಸಿ ಅಳವಡಿಸುವ ಮೂಲಕ ಭಾರತ ನೀರಾವರಿ ಕ್ಷೇತ್ರದಲ್ಲಿ ಹೊಸ ಭಾಷ್ಯ. – ವ್ಯವಸಾಯ ದಲ್ಲಿ ‘ಬ್ಲಾಕ್ ಸಿಸ್ಟಮ್’ ಎಂಬ ಹೊಸ ವಿಧಾನ ಪರಿಚಯಿಸಿದ್ದು.

    1904 – ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು.

    1907 – ಸುಪೆರಿಂಡೆಂಟ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಣೆ.

    1908 – ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿಕೊಟ್ಟಿದ್ದು.

    1909 – ಮೂಸಿ ನದಿ ಪ್ರವಾಹದಿಂದ ತತ್ತರಿಸಿದ ಹೈದೆರಾಬಾದ್ ನಗರಕ್ಕೆ ವಿಶೇಷ ನಿರ್ದೇಶಕ ಎಂಜಿನಿಯರ್ ಆಗಿ ನೇಮಕ ನಂತರ ಬ್ರಿಟೀಷ್ ಸರಕಾರದ ಸೇವೆಯಿಂದ ನಿವೃತ್ತಿ.

    1909 – ಮೈಸೂರು ಸರ್ಕಾರದ ಮುಖ್ಯ ಎಂಜಿನಿಯರ್ ಹಾಗು ಕಾರ್ಯದರ್ಶಿಯಾಗಿ ನೇಮಕ.

    1913 – ಮೈಸೂರು ದಿವಾನರಾಗಿ ನೇಮಕ , ಸಾರ್ವಜನಿಕ ಕಾಮಗಾರಿ ಹಾಗು ರೈಲ್ವೆ ಇಲಾಖೆ ಮೇಲ್ವಿಚಾರಣೆ.

    1927-1955: ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .

    (ಚಿತ್ರಗಳು ವಿಎಲ್ ಪ್ರಕಾಶ್)

    ಶುಭ ದಿನ

    ಇಂದಿನ ನುಡಿ

    ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು,ಹರುಷಕೆ ಇದುವೇ ದಾರಿ ಮಂಕುತಿಮ್ಮ!- ಡಿ.ವಿ.ಜಿ

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 15 ಸೆಪ್ಚೆಂಬರ್ 2020,ಮಂಗಳವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ತ್ರಯೋದಶಿ ನಕ್ಷತ್ರ: ಆಶ್ಲೇಷ

    ಸೂರ್ಯೋದಯ : ಬೆಳಿಗ್ಗೆ 6.08

    ಸೂರ್ಯಾಸ್ತ: ಸಂಜೆ 6.21

    ಇಂದಿನ ವಿಶೇಷ

    ಎಂಜಿನಿಯರ್ ಗಳ ದಿನ

    ನೀವೇ ಗಳಿಸಿದ ಹಣ ಬಳಸುವುದರಲ್ಲಿ ಜಿಪುಣರಾಗದೆ ನಿಪುಣರಾಗಬೇಕು


    ಕಷ್ಟಪಟ್ಟು ದುಡಿದು ಗಳಿಸಿ ಉಳಿತಾಯ ಮಾಡಿದ ಹಣವನ್ನು ಉಪಯೋಗಿಸಲು ಜೀವನದಲ್ಲಿ ಜಿಪುಣತನ ಮಾಡದೆ ನಿಪುಣರಾಗಬೇಕು. ಉಳಿಸುವ ಸಲುವಾಗಿ ಉಳಿಸಬೇಡಿ . ಗಳಿಸಿ ಉಳಿಸಿದ ಸಂಪತ್ತನ್ನು ಅಗತ್ಯಬಿದ್ದಲ್ಲಿ ಬಳಸುವುದು ಸೂಕ್ತ.

    ನನ್ನ ಸ್ನೇಹಿತರೊಬ್ಬರು ಹತ್ತು ವರ್ಷಗಳ ಹಿಂದೆ ನಿವೃತ್ತರಾದರು. ಈಚೆಗೆ ಅವರು ತುಂಬಾ ಖಿನ್ನರಾಗಿರುತ್ತಿದ್ದರು. ಯಾಕೋ ಇತ್ತೀಚೆಗೆ ಡಲ್ ಆಗಿ ಇರುತ್ತೀರಲ್ಲ ಅಂತ ಒಂದು ಬೆಳಗಿನ ವಾಕಿಂಗ್ ಸಮಯದಲ್ಲಿ ಕೇಳಿದೆ. ಅವರ ಖಿನ್ನತೆಗೆ ಕಾರಣ ಬಡ್ಡಿದರ ಎನ್ನುವುದು ಗೊತ್ತಾಯಿತು.

    ಇತ್ತೀಚಿನ ದಿನದಲ್ಲಿ ಆ ದರ ಇಳಿಮುಖವಾಗಿದ್ದರಿಂದ ಅವರ ಆದಾಯ ದಿನದಿನಕ್ಕೆ ಕ್ಷೀಣಿಸುತ್ತಿದೆ. ಹಾಗಾಗಿ ದಿನನಿತ್ಯದ ಖರ್ಚು ವೆಚ್ಚಕ್ಕೆ ತೊಂದರೆಯಾಗುತ್ತಿದೆ ಎನ್ನುವುದು ಅವರ ಆತಂಕಕ್ಕೆ ಕಾರಣವಾಗಿತ್ತು. . ಇದು ನಿಜಕ್ಕೂ ಯೋಚಿಸುವ ಸಂಗತಿ. ಅವರು ತಮ್ಮ ಹಣಕಾಸು ಸಲಹೆಗಾರರನನ್ನು ಕೇಳಿದಾಗ ಡಿಪಾಸಿಟ್ ಮೊತ್ತವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ. ಆದರೆ ಡಿಪಾಸಿಟ್ ಮೊತ್ತ ಹೆಚ್ಚಿಸಲು ಹಣವಿರಬೇಕಲ್ಲ. ನಿವೃತ್ತಿಯಾದ ಸಮಯದಲ್ಲಿ ಬರುವ ದೊಡ್ಡ ಮೊತ್ತ ಮತ್ತೆ ಮತ್ತೆ ಬರುವುದಿಲ್ಲ ನೋಡಿ , ಹಾಗಾಗಿ ನಾನು ಅವರಿಗೆ ಠೇವಣಿಯ ಮೊತ್ತದಲ್ಲಿ ಸ್ವಲ್ಪ ಹಣವನ್ನು ತೆಗೆದು ಉಪಯೋಗಿಸಲು ಸೂಚಿಸಿದೆ.

    ಆ ಸೂಚನೆಯಿಂದ ಅವರು ಗಾಬರಿಯಾದರಲ್ಲದೆ ಅದನ್ನು ಸಾರಾಸಗಟಾಗಿ ನಿರಾಕರಿಸಿದರು ಮತ್ತು ಯಾವುದೇ ಕಾರಣಕ್ಕೂ ನಾನು ಆ ಮೂಲ ಠೇವಣಿ ಹಣವನ್ನು ಮುಟ್ಟುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. 

    ಈಗ ಒಂದು ಪ್ರಶ್ನೆ ಉದ್ಭವಿಸುತ್ತದೆ ಏನೆಂದರೆ ನೀವೇ ಗಳಿಸಿ ಉಳಿಸಿದ ಹಣ ನಿಮ್ಮ ಕಷ್ಟಕ್ಕಾಗದಿದ್ದ ಮೇಲೆ ಅಂತಹ ಉಳಿತಾಯದಿಂದ ಪ್ರಯೋಜನವಾದರೂ ಏನು ಎಂದು, ಹೌದೋ ಅಲ್ಲವೊ ಹೇಳಿ.ಅನೇಕರಿಗೆ ಉಳಿತಾಯದ ಹಣವನ್ನು ಯಾವಾಗ ಬಳಸಬೇಕು ಎಂಬುದೇ ಒಂದು ಸವಾಲಾಗಿರುತ್ತದೆ. ಅದನ್ನು ತುರ್ತುಪರಿಸ್ಥಿತಿಯಲ್ಲಿ ಮಾತ್ರ ಬಳಸಬೇಕು ಎಂಬುದು ಕೆಲವರ ವಾದ.

    ಈಗ ಬಂದಿರುವ ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ವಿಧದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೇವೆ. ಇದು ತುರ್ತು ಪರಿಸ್ಥಿತಿ ಅಲ್ಲದಿದ್ದರೆ ಮತ್ತಿನ್ನೇನು? ಈ ಕಷ್ಟ ಸಂದರ್ಭದಲ್ಲೂ ನಾವು ನಮ್ಮ ಉಳಿತಾಯದ ಹಣವನ್ನು ಉಪಯೋಗಿಸುವುದಿಲ್ಲ ಎಂದರೆ ಅದಕ್ಕೆ ಅರ್ಥವಿದೆಯೇ? 

    ನನ್ನ ಗೆಳೆಯರೊಬ್ಬರ ಸಹೋದರ ಇಪ್ಪತ್ತೈದು ವರ್ಷಗಳ ಕಾಲ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡಿ ಆರು ತಿಂಗಳ ಹಿಂದೆ ನಿವೃತ್ತರಾದರು. ಆಡಳಿತ ಮಂಡಳಿಯು ಮಾರ್ಚ್ ತಿಂಗಳ ನಂತರ ನಿಮ್ಮ ನಿವೃತ್ತಿಯ ಹಣ, ಪಿಎಫ್ , ಗ್ರಾಚ್ಯುಟಿ ಎಲ್ಲವನ್ನೂ ಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟರಂತೆ. ಮಾರ್ಚ್ ಅಂತ್ಯದಲ್ಲಿ ಕೋವಿಡ್ ನಿಂದ ಲಾಕ್ ಡೌನ್ ಘೋಷಣೆಯಾಗಿ ಶಾಲೆಗಳನ್ನು ಮುಚ್ಚಲಾಯಿತು. ಆಗ ಆ ವಿದ್ಯಾಸಂಸ್ಥೆಯ ಮುಖ್ಯಸ್ಥರು ನಿಮ್ಮ ಎಲ್ಲಾ ಹಣವನ್ನು ಪರಿಸ್ಥಿತಿ ಸುಧಾರಿಸಿದ ಮೇಲೆ ಕೊಡುವುದಾಗಿ ಹೇಳಿದರಂತೆ. ಇದುವರೆಗೂ ಸಂಬಳವೂ ಇಲ್ಲ ಮತ್ತು ನಿವೃತ್ತಿಯಾದ ನಂತರ ಬರುವ ಬೆನಿಫಿಟ್ಸ್ ಸಹ ಇಲ್ಲ . ಇದು ತುರ್ತು ಪರಿಸ್ಥಿತಿಯಲ್ಲವೇ? ಇಂತಹ ಸಂದರ್ಭಗಳಲ್ಲೂ ನೀವು ಉಳಿತಾಯದ ಹಣವನ್ನು ಉಪಯೋಗಿಸಲು ಹಿಂಜರಿಯುವುದು ಏಕೆ ?

    ಕೆಲವು ಉಳಿತಾಯದಾರರ ಮನೋಭಾವ ಹೇಗೆ ಎಂದರೆ ಉಳಿತಾಯದ ಹಣವನ್ನು ಯಾವ ಕಾರಣಕ್ಕೂ ಬಳಸಬಾರದು , ಅದು ಪಾಪದ ಕೆಲಸವೆಂದೇ ಅವರ ಭಾವನೆ. ಅದನ್ನು ರಕ್ಷಿಸುವುದೇ ಸ್ವಯಂ ಶಿಸ್ತಿನ ಪರಮಾವಧಿ ಎಂಬುದು ಅವರ ಅನಿಸಿಕೆ. ಇಂತಹ ಮನೋಭಾವ ನಿಜಕ್ಕೂ ಸಲ್ಲದು. ಅವರಿಗೆ ತಮ್ಮ ಉಳಿತಾಯ ಮುಂದಿನ ಪೀಳಿಗೆಗೆ ಅಥವಾ ಸಮಾಜಕ್ಕೆ ಉಪಯೋಗಕ್ಕೆ ಬರುತ್ತದೆ ಎಂಬ ಭಾವನೆ ಇದ್ದಿರಲೂ ಬಹುದು. ಆದರೆ ಉಳಿಸಿರುವ ಹಣವನ್ನು ಬಳಸದಿರಲು ಮುಖ್ಯ ಕಾರಣ ಭಯ. ಉಳಿತಾಯದ ಹಣ ಖರ್ಚಾಗ್ತಾ ಆಗ್ತಾ ಎಲ್ಲಿ ಒಂದು ದಿನ ಏನೂ ಉಳಿಯುವುದಿಲ್ಲವೋ ಎಂಬ ಭೀತಿ. 

    ಈ ವಿಷಯವಾಗಿ ಒಮ್ಮೆ ನನ್ನ ಗೆಳೆಯನ ಜೊತೆ ಚರ್ಚಿಸುತ್ತಿದ್ದೆ . ಉದಾಹರಣೆಗೆ, ಒಬ್ಬರ ಬಳಿ ಉಳಿತಾಯ ಮತ್ತು ಹೂಡಿಕೆ ಸೇರಿ ಒಂದು ಕೋಟಿ ರೂಪಾಯಿಗಳಿವೆ ಅಂತ ಭಾವಿಸೋಣ. ಅವರ ವಾರ್ಷಿಕ ಖರ್ಚು ಆರು ಲಕ್ಷ ರೂಪಾಯಿಗಳು. ಬಡ್ಡಿ ಮತ್ತು ಇತರೆ ಆದಾಯದಿಂದ ಸುಮಾರು ನಾಲ್ಕು ಲಕ್ಷ ಬರುತ್ತದೆ, ಖರ್ಚಿಗೆ ಕಮ್ಮಿ ಬರುವುದು ಎರಡು ಲಕ್ಷ ರೂಪಾಯಿಗಳು ಮಾತ್ರ. ಇದನ್ನು ಮೂಲಧನದಿಂದ ತೆಗೆದು ಬಳಸಿದರೂ ಇನ್ನೂ ಇಪ್ಪತ್ತು ವರ್ಷ ಸುಖವಾಗಿ ಜೀವನ ಮಾಡಬಹುದು. ಅದು ಅವರಿಗೆ ಬೇಡ .

    ಜೀವನಕ್ಕೆ ಬೇಕಾದ ಮೂಲ ವಸ್ತುಗಳನ್ನೂ ಖರೀದಿಸದೆ ತಮಗೆ ತಾವೇ ವಂಚಿಸಿಕೊಂಡು ಉಳಿತಾಯ ಮಾಡುವುದರಲ್ಲಿ ಯಾವ ಪುರುಷಾರ್ಥ ಸಾಧಿಸುತ್ತಾರೆ ತಿಳಿಯದು. ನಿಜ ಹೇಳಬೇಕೆಂದರೆ ಮುಂದಿನ ಪೀಳಿಗೆ ಮತ್ತು ಸಮಾಜ ಇವರಿಂದ ಇವೆಲ್ಲವನ್ನೂ ನಿರೀಕ್ಷಿಸುತ್ತಲೇ ಇಲ್ಲ. ಒಂದು ಮಾತ್ರ ನಿಜ ನಾವು ಯಾವ ಬಾಧ್ಯತೆಯನ್ನು ಆದಷ್ಟೂ ಬಿಟ್ಟು ಹೋಗದಿರುವುದೇ ಒಳ್ಳೆಯದು. ಗಳಿಸಿದ ಹಾಗೂ ಉಳಿಸಿದ ಹಣ ನಮಗೆ ಬೇಕಾಗಿರುವಾಗ ಉಪಯೋಗಿಸದೆ ಬರೀ ಕೂಡಿಟ್ಟರೆ ಯಾರಿಗೆ ಲಾಭ ಹೇಳಿ.

    ಗಳಿಸಿದ ಸ್ಥಿರ ಮತ್ತು ಚರಾಸ್ಥಿ ಹಾಗೂ ಉಳಿಸಿದ ಹಣವನ್ನು ಈ ರೀತಿಯೂ ಉಪಯೋಗಿಸಬಹುದು:

    1. ಮನೆಯ ಆದಾಯ ಕಡಿಮೆಯಾದಾಗ ಆಸ್ತಿಯನ್ನು ಅಡವಿಟ್ಟು ಬ್ಯಾಂಕ್ ನಲ್ಲಿ ಸಾಲತೆಗೆದು ಕೊಂಡರೆ ಬಡ್ಡಿದರವೂ ಕಮ್ಮಿ ಇರುತ್ತದೆ ಹಾಗೂ ಸ್ಥಿತಿ ಸುಧಾರಿಸಿದ ನಂತರ ಸಾಲ ಮರುಪಾವತಿ ಮಾಡಬಹುದು. ರಿವರ್ಸ್ ಮಾಟ್ಗೇಜನ್ನೂ ಬಳಸಬಹುದು.

    2. ಆಸ್ತಿಯಲ್ಲಿ ಸಣ್ಣ ಭಾಗವನ್ನು ಮಾರಿ ಕಷ್ಟ ಸಮಯದಲ್ಲಿ ಬಳಸಬಹುದು ಸಮಯ ಉತ್ತಮವಾದಾಗ ಪುನಃ ಕೊಂಡುಕೊಳ್ಳಬಹುದು. ಕೃಷಿ ಉದ್ಯಮದಲ್ಲಿ ಇದು ಸಾಮಾನ್ಯ. ಹಸುಗಳು, ಮೇಕೆಗಳು , ಕುರಿ ಕೋಳಿಗಳನ್ನು ತುರ್ತುಪರಿಸ್ಥಿತಿಯಲ್ಲಿ ಮಾರಿ ಜೀವನವನ್ನು ನಡೆಸುತ್ತಾರೆ ನಂತರ ಪರಿಸ್ಥಿತಿ ಸರಿಯಾದ ಮೇಲೆ ಕೊಂಡುಕೊಳ್ಳುತ್ತಾರೆ.

    3. ಸ್ಥಿರ ಠೇವಣಿ, ಮ್ಯೂಚುಯಲ್ ಫಂಡ್ ನಲ್ಲಿ ಹೂಡಿದ ಮೊತ್ತದಲ್ಲಿ ಸ್ವಲ್ಪ ಹಣ ವಾಪಸ್ಸು ಪಡೆದು ಉಪಯೋಗಿಸಬಹುದು.

    4. ಆಪತ್ಕಾಲಕ್ಕಾಗಿ ಯಾವಾಗಲೂ ಸ್ವಲ್ಪ ಹಣವನ್ನು ಮೀಸಲಿಡುವ ಅಭ್ಯಾಸ ಮಾಡಿಕೊಂಡರೆ ಕಷ್ಟ ಬಂದಾಗ ಉಪಯೋಗಿಸಬಹುದು.

     ಕೆಲವರು ಕುಟುಂಬದವರಿಂದ ತಮ್ಮ ಉಳಿತಾಯದ ವಿಷಯವನ್ನು ರಹಸ್ಯವಾಗಿಟ್ಟಿರುತ್ತಾರೆ. ಹೆಂಡತಿ ಮಕ್ಕಳಿಗೂ ತಿಳಿದಿರುವುದಿಲ್ಲ . ಅಕಾಲಿಕ ದುರ್ಘಟನೆ ಸಂಭವಿಸಿದರೆ ಅಂತಹ ನಿಧಿ ಸರ್ಕಾರಕ್ಕೆ ನಿಗದಿತ ಸಮಯದ ನಂತರ ಸೇರ್ಪಡೆಯಾಗುತ್ತದೆ ಮತ್ತು ನಿಜವಾದ ವಾರಸುದಾರರಿಗೆ ಠೇವಣಿಯನ್ನು ಹಿಂಪಡೆಯಲು ಬಹಳ ತೊಂದರೆಯಾಗುತ್ತದೆ.

    ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಲ್ಲಿ ಸುಮಾರು 32 ಸಾವಿರ ಕೋಟಿ ಕ್ಲೇಮು ಮಾಡದ ಠೇವಣಿ ಹಣ ಇದೆ ಎಂದು ಭಾರತ ಸರಕಾರ ಲೋಕಸಭೆಯಲ್ಲಿ 2019 ರಲ್ಲಿ ಘೋಷಿಸಿದೆ. 

    ಗಳಿಕೆ ಹಾಗೂ ಉಳಿತಾಯವನ್ನು ಎಷ್ಟು ನಿಪುಣತೆಯಿಂದ ಯೋಚಿಸಿ ಮಾಡುತ್ತೇವೆಯೋ ಅಷ್ಟೇ ನಿಪುಣತೆ ಅದನ್ನು ಸದುಪಯೋಗಿಸಲೂ ಬೇಕು. ನಾವೇ ಗಳಿಸಿದ ಹಣವನ್ನು ನಮ್ಮ ಕಷ್ಟ ನಷ್ಟ ಗಳಿಗೆ ಉಪಯೋಗಿಸುವುದರಲ್ಲಿ ಜಿಪುಣತನ ಬೇಡ.

    Photo by Damir Spanic on Unsplash

    ಶುಭ ದಿನ

    ಇಂದಿನ ನುಡಿ

    ಸಾಧ್ಯವಿಲ್ಲ ಎನ್ನುವುದು ಯಾವುದು ಇಲ್ಲ. ಮನಸ್ಸು ಅಂಜುತ್ತದೆಯಷ್ಟೆ. ಧೈರ್ಯ ಮಾಡಿ ಮುಂದೆ ಸಾಗಿ. ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿ ಕೊಡಬಹುದು. ಸೋತರೆ ನಾವೇ ಪಾಠ ಕಲಿಯಬಹುದು

    ಸಂಗ್ರಹ :ರಾಜೀವಲೋಚನ

    ಇಂದಿನ ಪಂಚಾಂಗ

    ದಿನಾಂಕ 14 ಸೆಪ್ಚೆಂಬರ್ 2020,ಸೋಮವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ದ್ವಾದಶಿ ನಕ್ಷತ್ರ: ಪುಷ್ಯ

    ಸೂರ್ಯೋದಯ : ಬೆಳಿಗ್ಗೆ 6.09,

    ಸೂರ್ಯಾಸ್ತ: ಸಂಜೆ 6.21

    ಇಂದಿನ ವಿಶೇಷ

    ವಿಶ್ವ ಪ್ರಥಮ ಚಿಕಿತ್ಸಾ ದಿನ

    Photo by Wes Hicks on Unsplash

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟ ಹೆಚ್ಚಿಸಲು ಮತ್ತೇನು ಮಾಡಬೇಕು

    ನೂತನ ರಾಷ್ಟ್ರೀಯ ನೀತಿ 2020 ರ ಪ್ರಮುಖಾಂಶಗಳು ಹಾಗೂ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆಈ ಹಿಂದೆ ಅವಲೋಕಿಸಲಾಗಿತ್ತು. ಈ ಲೇಖನದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೆಲವು ಸಲಹೆಗಳಿವೆ.    

    1) ನೂತನ ರಾಷ್ಟ್ರೀಯ ನೀತಿಯಲ್ಲಿ 2035 ರ ವೇಳೆಗೆ ಸರಾಸರಿ ದಾಖಲಾತಿ ಅನುಪಾತವನ್ನು ( GER ) ಶೇ 26.3 ರಿಂದ ಶೇ 50 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ನಿಜವಾಗಿಯೂ ಇದು ಉತ್ತಮವಾದಂತ ಗುರಿ. ಇದರಿಂದ ಹೆಚ್ಚಿನ ಯುವಕರಿಗೆ ಉನ್ನತ ಶಿಕ್ಷಣ ದೊರೆಯುವ ಅವಕಾಶಗಳು ಸಿಗುವಂತಾಗುತ್ತದೆ. ಆದರೆ ಇದನ್ನು ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಜೊತೆಗೆ ಇನ್ನು ಕನಿಷ್ಠ ಎಂಟನೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ  ಹೆಚ್ಚಿನ ಬಂಡವಾಳದ ಆವಶ್ಯಕತೆಯಿದೆ.  

    2) 2035 ರ ವೇಳಗೆ ಪ್ರತಿಯೊಂದು ಮಹಾವಿದ್ಯಾಲಯವು ಬಹು ಶಿಸ್ತೀಯ ( multi disciplinary ) ಮತ್ತು ದೊಡ್ಡ ಮಟ್ಟದ ಕಾಲೇಜಾಗಿ ಬೆಳೆದು, ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ. ಜೊತೆಗೆ ಮುಂದಿನ 10 – 15 ವರ್ಷಗಳಲ್ಲಿ ವಿಶ್ವ ವಿದ್ಯಾಲಯಗಳಿಂದ ಸಂಯೋಜನೆಯನ್ನು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಿ, ಪ್ರತಿಯೊಂದು ಕಾಲೇಜಿಗೆ, ಕೆಲವು ನಿಬಂಧನೆಗಳಿಗೆ ಒಳಪಟ್ಟು ಪದವಿಗಳನ್ನು ನೀಡುವ ಅಧಿಕಾರವನ್ನು ನೀಡಲು ಉದ್ದೇಶಿಸಲಾಗಿದೆ. ಗ್ರಾಮೀಣ  ಮತ್ತು ಬಹುದೂರದ ( ರಿಮೋಟ್ ) ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳಿಗೆ ನಿಬಂಧನೆಗಳನ್ನು ಪೂರೈಸಲು ನಿಜವಾಗಿಯೂ ಕಷ್ಟಕರ. ಆದ್ದರಿಂದ ಸ್ವಾಯತ್ತತೆಯನ್ನು ನೀಡುವ ಜೊತೆಗೆ, ವಿಶ್ವ ವಿದ್ಯಾಲಯಗಳಿಂದ ಸಂಯೋಜನೆಯನ್ನು ನೀಡುವ ಪದ್ಧತಿಯನ್ನು ಮುಂದುವರಿಸ ಬೇಕಾಗಿದೆ. ಇದರಿಂದ ಆ ಪ್ರದೇಶದಲ್ಲಿರುವ ಕಾಲೇಜುಗಳಿಗೆ ಮತ್ತು ಯುವಕರಿಗೆ ಅನುಕೂಲವಾಗಲಿದೆ.                 

    3) ನೂತನ ಶಿಕ್ಷಣ ನೀತಿಯಲ್ಲಿ ನಿರ್ದಿಷ್ಟವಾದ ಕಲಿಕೆಯ ಫಲಿತಾಂಶಗಳು ( well defined learning outcomes ), ಜ್ಞಾನಾರ್ಜನೆ ಮತ್ತು ಕೌಶಲ್ಯಗಳ ಅಭಿವೃದ್ಧಿ ಇವುಗಳಿಗೆ ಒತ್ತು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಪಠ್ಯ ಕ್ರಮದಲ್ಲಿ ಜ್ಞಾನಾರ್ಜನೆ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ 60 : 40 ಅನುಪಾತದಲ್ಲಿ ಪಠ್ಯಕ್ರಮವನ್ನು ತಯಾರಿಸಿದರೆ ಉತ್ತಮ.    

    4) ನೂತನ ಶಿಕ್ಷಣ ನೀತಿಯಲ್ಲಿ, ನಾಲ್ಕು ವರ್ಷಗಳ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದು ನಿಜವಾಗಿಯೂ ಉತ್ತಮವಾದ ಕ್ರಮ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿ. ನಾಲ್ಕನೇ ವರ್ಷದಲ್ಲಿ, ಸಂಶೋಧನಾ ಆಧಾರಿತ ಚಟುವಟಿಕೆಗೆ ಅಥವಾ ವಿಶೇಷಿತಾ ವಿಷಯಕ್ಕೆ ( specialisation ) ಸಂಬಂಧಿಸಿದ ಪ್ರಾಜೆಕ್ಟ್ ಗೆ ಆದ್ಯತೆಯನ್ನು ನೀಡಬೇಕು. ನಾಲ್ಕು ವರ್ಷಗಳ ಅಧ್ಯಯನದ ನಂತರ ಆನರ್ಸ್ ಪದವಿಯನ್ನು ನೀಡಬೇಕು. ನಾಲ್ಕನೇ ವರ್ಷದಲ್ಲಿ ಯಾವುದಾದರೂ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಪ್ರತಿಷ್ಠಿತ ಕಂಪನಿಗಳಲ್ಲಿ ಆಪ್ತ ಸೇವೆಯನ್ನು ( internship ) ಕಡ್ಡಾಯಗೊಳಿಸಬೇಕು.

    5) ಪದವಿ ಶಿಕ್ಷಣದ ನಾಲ್ಕು ವರ್ಷದ ಅವಧಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು ನೀಡಲಾಗಿದೆ ( multiple exit options ). ಅಂದರೆ ಎರಡು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ, ಡಿಪ್ಲೊಮಾ ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರ ನೀಡಲಾಗುವುದು. ಇದು ಉತ್ತಮ ನಡೆಯಾದರೂ, ಒಂದು ಅಥವಾ ಎರಡು ವರ್ಷಗಳಲ್ಲಿ ನಿರ್ಗಮಿಸುವ ವಿದ್ಯಾರ್ಥಿಗಳಿಗೆ ಮಾರ್ಕೆಟ್‍ನಲ್ಲಿರುವ ಉದ್ಯೋಗವಕಾಶಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನ ತಯಾರಿಸ ಬೇಕು. ಇಲ್ಲದಿದ್ದರೆ ಈ ಯೋಜನೆ ಪ್ರಯೋಜನಕಾರಿಯಾಗುವುದಿಲ್ಲ. 

    6) ಕಾಲೇಜಿನ ಹಂತದಲ್ಲಿ ಅಧ್ಯಯನಕ್ಕಾಗಿ ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕೆಫೆಟೀರಿಯಾ ವಿಧಾನವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಕಲೆ, ವಿಜ್ಞಾನ, ವಾಣಿಜ್ಯ, ಸಮಾಜ ವಿಜ್ಞಾನದ ವಿಷಯಗಳು ಮತ್ತು ಮಾನವೀಯ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಇವುಗಳ ನಡುವೆ ಈಗಿರುವ ಅಡ್ಡಗೋಡೆಗಳು ಇರದೆ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು ಆರಿಸಿಕೊಳ್ಳ ಬಹುದು. ಇದು ಉತ್ತಮ ನಿರ್ಧಾರವೆಂದೇ ಹೇಳಬಹುದು. ಬಹಳ ವರ್ಷಗಳ ಹಿಂದೆಯೆ ಜಾರಿಗೆ ಬರಬೇಕಿತ್ತು. ಆದರೆ, ವಿಷಯಗಳನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ, ಮನಬಂದಂತೆ ಒಂದಕ್ಕೊಂದು ಪೂರಕವಾಗಿರದ ವಿಷಯಗಳನ್ನು ಆರಿಸಿಕೊಳ್ಳುವ ಬದಲು, ವಿಶೇಷ ಅಧ್ಯಯನಕ್ಕೆ ಆರಿಸಿಕೊಂಡಿರುವ ( specialisation ) ವಿಷಯಕ್ಕೆ ಪೂರಕವಾಗಿರುವ, ಸಂಬಂಧಿತ ಜ್ಞಾನಕ್ಕೆ ಉಪಯೋಗ ಪಡುವ ವಿಷಯಗಳನ್ನು ಆರಿಸಿಕೊಳ್ಳಲು ಉತ್ತೇಜನ ನೀಡಬೇಕು. ಉದಾಹರಣೆಗೆ, ರಸಾಯನಶಾಸ್ತ್ರದ ಬಿ.ಎಸ್ಸಿ ವಿದ್ಯಾರ್ಥಿ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ವಿಷಯಗಳನ್ನು ಆರಿಸಿಕೊಂಡರೆ ಉಪಯೋಗವಾಗುತ್ತದೆ. ಬದಲು, ಇತಿಹಾಸ ಅಥವಾ ಅರ್ಥಶಾಸ್ತ್ರವನ್ನು ಆರಿಸಿಕೊಂಡರೆ, ರಸಾಯನಶಾಸ್ತ್ರದಲ್ಲಿನ ಜ್ಞಾನ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಒಂದು ನಿರ್ಧಿಷ್ಟ ಶಿಸ್ತಿನಲ್ಲಿ ಜ್ಞಾನ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.  Jack of All Master of None ಎಂಬಂತೆ ಆಗುತ್ತದೆ.  

    7) ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಸೃಜನಶೀಲತೆ ( Creativity ), ಹೊಸತನ್ನು ಕಂಡುಹಿಡಿಯುವಿಕೆ ( innovation ), ಪರಿಕಲ್ಪನಾ ತಿಳುವಳಿಕೆ ( conceptional understanding ) ಇವುಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅರ್ಥ ಮಾಡಿಕೊಳ್ಳದೆ, ಗಟ್ಟು ಹೊಡೆದು, ಪರೀಕ್ಷೆಯಲ್ಲಿ ಬರೆದು ಅಂಕಗಳನ್ನು ಗಳಿಸುವ ವಿಧಾನಕ್ಕೆ ತಿಲಾಂಜಲಿ ನೀಡಲು ಉದ್ದೇಶಿಸಲಾಗಿದೆ. ಹೊಸ ಅಂಶಗಳನ್ನು ಒಳಗೊಂಡ ಬೋಧನಾ ಪದ್ಧತಿಯಲ್ಲಿ ಯಶಸ್ಸನ್ನು ಕಾಣಬೇಕಾದರೆ, ವಿದ್ಯಾರ್ಥಿ ಕೇಂದ್ರ ಬಿಂದುವಿರುವ ( student centric ) ಬೋಧನಾ ಕ್ರಮವನ್ನು ಅಳವಡಿಸಬೇಕು. ಇದಕ್ಕೆ ಅನುಗುಣವಾಗಿ ಶಿಕ್ಷಕರಿಗೆ ತರಬೇತಿ ನೀಡಬೇಕಾಗುತ್ತದೆ. ಜೊತೆಗೆ ಪರೀಕ್ಷಾ ವಿಧಾನದಲ್ಲಿಯೂ ಸಹ ಪರಿವರ್ತನೆ ಮಾಡಬೇಕಾಗುತ್ತದೆ. ನಿರಂತರ ರಚನಾತ್ಮಕ ಮೌಲ್ಯಮಾಪನ ( Formative Assessment ) ಕ್ಕೆ ಹೆಚ್ಚು ಆದ್ಯತೆ ನೀಡ ಬೇಕಾಗುತ್ತದೆ. ಕನಿಷ್ಟ ಶೇ 30 – 40 ರಷ್ಟು ಪ್ರಮಾಣದ ಆಂತರಿಕ ಅಂಕಗಳನ್ನು ನೀಡಬೇಕು. ಪ್ರಶ್ನೆ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು ಕೇಳುವ ರೀತಿಯಲ್ಲಿಯು ಸಹ ಸುಧಾರಣೆಯ ಅವಶ್ಯಕತೆಯಿದೆ. ಉದಾಹರಣೆಗೆ, ಆರ್ಕಿಮಿಡೀಸ್ ತತ್ವವನ್ನು ಬರೆಯಿರಿ ಎಂದು ನೇರವಾಗಿ ಪ್ರಶ್ನೆ ಕೇಳುವ ಬದಲು, ಆರ್ಕಿಮಿಡೀಸ್ ತತ್ವವನ್ನು ಆಧರಿಸಿ ( ಪ್ರಾಬ್ಲಂ ) ಸಮಸ್ಯೆಯನ್ನು ಬಿಡಿಸಲು ಕೇಳಿದರೆ, ತತ್ವದ ಪರಿಕಲ್ಪನೆ ಚೆನ್ನಾಗಿ ಅರ್ಥವಾಗುವ ಸಾಧ್ಯತೆಯಿರುತ್ತದೆ. 

    8) ನೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡುವುದಾಗಿ ತಿಳಿಸಲಾಗಿದೆ. ಆದ್ದರಿಂದ, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನೆಯ ಮೂಲಕ ಸ್ನಾತಕೋತ್ತರ ಪದವಿಯನ್ನು ಗಳಿಸುವ ಪದ್ಧತಿಯನ್ನು ( Master Degree by Research ) ಪ್ರಾರಂಭಿಸುವುದು ಉತ್ತಮ. ಸಂಶೋಧನೆಗೆ ಆಸಕ್ತಿ ಬೆಳೆಸುವ ಜೊತೆಗೆ ಅಡಿಪಾಯವು ಆಗುತ್ತದೆ. ಪ್ರಾರಂಭದಲ್ಲಿ, ಉದ್ದೇಶಿಸಲಾಗಿರುವ ರಿಸರ್ಚ್ ಇಂಟೆನ್ಸೀವ್ ವಿಶ್ವವಿದ್ಯಾಲಯಗಳಲ್ಲಿ ಜಾರಿಗೆ ತರಬಹುದು.                            

    9) ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ಅನುಪಾತವು ಪದವಿ ತರಗತಿಗಳಲ್ಲಿ 1 : 60 ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ 1 : 40 ದಾಟದಂತೆ ಕಟ್ಟು ನಿಟ್ಟಿನ ನೀತಿಯನ್ನು ಅನುಸರಿಸ ಬೇಕಾಗಿದೆ.   

    10) ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ಅಧ್ಯಯನದ ಕಾಲದಲ್ಲಿ, ವಿಶೇಷ ವಿಷಯಕ್ಕೆ ಸಂಬಂಧಿಸಿದಂತೆ ( specialisation ) ಸಂಶೋಧನಾ ಆಧಾರಿತ ಯೋಜನೆ ಅಥವಾ ಸಂಬಂಧಪಟ್ಟ ವಿಷಯಗಳಲ್ಲಿ ಕೋರ್ಸುಗಳಿಗೆ ಹಾಜರಾಗಿ ಗಳಿಸಿದ ಕ್ರೆಡಿಟ್‍ಗಳನ್ನು ಗಣನೆಗೆ ತೆಗದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ.   

    11) ಸಾಮಾನ್ಯ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣಗಳಲ್ಲಿ, ವೃತ್ತಿಪರ ತರಬೇತಿ / ಇಂಟರ್ನ್‍ಶಿಫ್ / ಉದ್ಯೋಗ ತರಬೇತಿ / ಕ್ಷೇತ್ರ ಅಧ್ಯಯನ ಮುಂತಾದವುಗಳನ್ನು ಕಡ್ಡಾಯಗೊಳಿಸಬೇಕು.    

    12) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಾಪಕರ ವಿನಿಮಯ ( Faculty Exchange ) ಮತ್ತು ವಿದ್ಯಾರ್ಥಿಗಳ ವಿನಿಮಯ ( Student Exchange ) ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು. ಸಬ್ಬಟಿಕಲ್ ರಜೆಯನ್ನು ನೀಡುವ ಪದ್ಧತಿಯನ್ನು ಜಾರಿಗೊಳಿಸಿ. ಅನುಷ್ಠಾನಕ್ಕೆ ತರಬೇಕು.  

    13) ಶಿಕ್ಷಕರ ಸಮಗ್ರ ಮತ್ತು ನಿರಂತರ ವೃತ್ತಿಪರ ಅಭಿವೃದ್ಧಿಗೆ ( comprehensive and continuous professional Development ) ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸ ಬೇಕು. ಇದರಿಂದ ಶಿಕ್ಷಕರ ಜ್ಞಾನ ಮತ್ತು ಕೌಶಲ್ಯಗಳು ಅಭಿವೃದ್ಧಿಯಾಗಿ, ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುತ್ತದೆ.    

    14) ವಿಶ್ವವಿದ್ಯಾಲಯಗಳಲ್ಲಿ Academic staff college ಗಳನ್ನು ಶಕ್ತಿಗೊಳಿಸಬೇಕಾಗಿದೆ.                       

    15) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿರುವ ಉನ್ನತ ಸಂಶೋಧನ ಕೇಂದ್ರವನ್ನು ಸ್ಥಾಪಿಸಬೇಕು. ವಿಶ್ವವಿದ್ಯಾಲಯದಲ್ಲಿರುವ ಎಲ್ಲಾ ಸಂಶೋಧಕರಿಗೆ ಸೌಲಭ್ಯಗಳನ್ನು ಉಪಯೋಗಿಸುವ ಅವಕಾಶವಿರಬೇಕು.                         

    16) ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳನ್ನು ಮತ್ತು ಪ್ರಯೋಜನಗಳನ್ನು ನೀಡುವ ಪದ್ಧತಿಯನ್ನು, ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸ ಬೇಕು. ಇದರಿಂದ ಶಿಕ್ಷಕರಲ್ಲಿ ಮತ್ತು ಸಂಶೋಧಕರಲ್ಲಿ ಹೆಚ್ಚು ಕಲಿಯುವ ಆಸಕ್ತಿ ಬೆಳೆದು, ಶಿಕ್ಷಣದ ಗುಣಮಟ್ಟ ಹೆಚ್ಚಲು ಕಾರಣವಾಗುತ್ತದೆ.  

    17) ಸ್ವತಂತ್ರ ಬಿ.ಇಡಿ ಕಾಲೇಜುಗಳನ್ನು ಮುಂದಿನ 3 – 4 ವರ್ಷಗಳಲ್ಲಿ ರದ್ದುಗೊಳಿಸ ಬೇಕು. ನಾಲ್ಕು ವರ್ಷದ ಬಿ.ಇಡಿ ಕೋರ್ಸ್‍ನ್ನು ಬಹುಶಿಸ್ತೀಯ ಕಾಲೇಜುಗಳಲ್ಲಿ ಕೂಡಲೇ ಪ್ರಾರಂಭಿಸಲು ಅನುಮತಿಯನ್ನು ನೀಡಬೇಕು. 

    18) ಉನ್ನತ ವಿದ್ಯಾಸಂಸ್ಥೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಲು, ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ಮಾನ್ಯತೆಯನ್ನು ನೀಡುವ ಪದ್ಧತಿಯನ್ನು ಬಿಗಿಗೊಳಿಸಿ, ಸಾರ್ವಜನಿಕ ಪ್ರಕಟಣೆಗಳೊಂದಿಗೆ ಪಾರದರ್ಶಕತೆಯನ್ನು ಕಾಪಾಡಬೇಕಾಗಿದೆ. 

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗ ಬೇಕಾಗಿದೆ. ಅದಕ್ಕೆ ನಾವೆಲ್ಲರು ಕೈಜೋಡಿಸ ಬೇಕಾಗಿದೆ. ಈ ನೀತಿಯ ಅನುಷ್ಠಾನದಿಂದ  ಪ್ರಪಂಚದ ಮಟ್ಟದಲ್ಲಿ ನಮ್ಮ ದೇಶದ ವಿದ್ಯಾಕ್ಷೇತ್ರದ ಘನತೆ ಹೆಚ್ಚಾಗಲೆಂದು ಆಶಿಸೋಣ.   

    (ಚಿತ್ರ: ಹೊಸ ಶಿಕ್ಷಣ ನೀತಿಯ ಕರಡು ಪ್ರತಿ ಸಲ್ಲಿಸುವ ಫೈಲ್ ಫೋಟೋ)  

    ಪೇಟೆಯಲ್ಲಿ RIL ವೇಗದ ಓಟ ಮುಂದುವರಿಯುವುದೇ

    .
    ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆ ಕಳೆದ ಆರು ತಿಂಗಳಲ್ಲಿ ಪ್ರದರ್ಶಿಸಿದ ಭಾರಿ ಏರಿಕೆಯು ಷೇರುಪೇಟೆಯ ಚಮತ್ಕಾರಿ ಬೆಳವಣಿಗೆ ಬಗ್ಗೆ ತಿಳಿಸುತ್ತದೆ.  ಲಾಕ್‌ ಡೌನ್‌ ಕಾರಣ ಎಲ್ಲಾ ವಲಯದ ಕಂಪನಿಗಳು ಹೆಚ್ಚಿನ ಆರ್ಥಿಕ ಒತ್ತಡವನ್ನೆದುರಿಸುತ್ತಿದ್ದರೂ ಈ ಕಂಪನಿಯ ಷೇರಿನ ಬೆಲೆ ಮಾರ್ಚ್‌ ನ ರೂ.880 ರ ಕನಿಷ್ಠ ಬೆಲೆಯಿಂದ ರೂ.2,340 ರ ವಾರ್ಷಿಕ ಗರಿಷ್ಠಕ್ಕೆ ಏರಿಕೆ ಕಂಡಿದೆ. 

    ಹಲವು ದಶಕಗಳಿಂದ ಈ ಕಂಪನಿಯು ಸಂಪಾದಿಸಿರುವ ಗೌರವ, ಘನತೆ, ಪ್ರತಿಷ್ಠೆಗಳ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಪಡೆದಿರುವ ಅಂಶ ಈಗ ಕಂಪನಿಯನ್ನು ಬೆಳೆಸಲು ಸಹಯೋಗ ನೀಡಿವೆ.  ಈಗ ಕಂಪನಿಯ ಟೆಲಿಕಾಂ ವಲಯವು ಹೆಚ್ಚು ಆದ್ಯತೆಯನ್ನು ಪಡೆದಿದ್ದು, ಅದಕ್ಕೆ ಪೂರಕವಾದ ಬಂಡವಾಳವೂ ಹಲವಾರು ಜಾಗತಿಕ ಹೂಡಿಕೆದಾರರಿಂದ ಹರಿದುಬಂದಿದೆ, ಬರುತ್ತಲಿದೆ.    ಫೇಸ್‌ ಬುಕ್‌, ಸಿಲ್ವರ್‌ ಲೇಕ್‌, ವಿಸ್ತಾ, ಜನರಲ್‌ ಅಟ್ಲಾಂಟಿಕ್‌,  ಇಂಟೆಲ್‌, ಟಿಪಿಜಿ, ಕೆಕೆಆರ್‌ ನಂತಹ ಬೃಹತ್‌ ಸಂಸ್ಥೆಗಳು ಸರದಿಯಲ್ಲಿ ಬಂದು ಹೂಡಿಕೆ ಮಾಡಿರುವುದು ಕಂಪನಿಯ ಗಳಿಸಿರುವ ಜಾಗತಿಕ ಮಟ್ಟದಲ್ಲಿರುವ ಮಾನ್ಯತೆಯನ್ನು ತೋರುತ್ತದೆ. 

    ಈ ಕಂಪನಿಯು ಜಿಯೋ ಪ್ಲಾಟ್‌ ಫಾರಂ ನ ಭಾಗಿತ್ವವನ್ನುಈ ಸಂಸ್ಥೆಗಳಿಗೆ ನೀಡಿ ಸಂಗ್ರಹಿಸಿರುವ ಸಂಪನ್ಮೂಲವನ್ನು ತನ್ನ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಮೂಲಕ ಸಾಲ ಮುಕ್ತವನ್ನಾಗಿಸ ಬಯಸಿದೆ.ಈ ದಿಕ್ಕಿನಲ್ಲಿ ಭಾಗಿತ್ವ ವಿತರಣೆಯ ಮೂಲಕ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿ ಸಂಗ್ರಹಿಸಿದ ದಾಖಲೆಯನ್ನು ನಿರ್ಮಿಸಿದ ಕಂಪನಿ ಇದಾಗಿದೆ.   ಇದಲ್ಲದೆ ಕಂಪನಿಯು ಪ್ರತಿ ಷೇರಿಗೆ ರೂ.1,257 ರಂತೆ ಹಕ್ಕಿನ ಷೇರು ವಿತರಿಸಿದೆ. ಈ ಹಕ್ಕಿನ ಷೇರಿಗೆ ಕೇವಲ ಶೇಕಡ 25 ರಷ್ಟು ಹಣವನ್ನು ಸಂಗ್ರಹಿಸಿದ್ದು ಉಳಿದ ಹಣವನ್ನು 2021 ರ ಮೇ ಮತ್ತು ನವೆಂಬರ್‌ ತಿಂಗಳಲ್ಲಿ ಪಾವತಿಸಬೇಕು.  ಅಂದರೆ ಸಧ್ಯ ರೂ.53,125 ಕೋಟಿ ಮೌಲ್ಯದ ವಿತರಣೆಯಲ್ಲಿ ಶೇ.25 ರಷ್ಟು ಸಂಗ್ರಹಣೆಯಾಗಿದೆ.  ಈಗ ಮತ್ತೊಮ್ಮೆ ಬಿಗ್‌ ಬಜಾರ್‌ ಸಮೂಹದ ಕಂಪನಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮತ್ತೊಮ್ಮೆ ರಿಲಯನ್ಸ್‌ ರೀಟೇಲ್‌ ನ ಭಾಗಿತ್ವವನ್ನು ಹೂಡಿಕೆದಾರರಿಗೆ ಹಂಚುತ್ತಿದೆ.  ಈ ಕಾರಣ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆ ಗುರುವಾರದಂದು ರೂ.2,344 ರವರೆಗೂ ತಲುಪಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.   

    ಈ ಎಲ್ಲಾ ಬೆಳವಣಿಗೆಗಳ ಕಾರಣ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಮೌಲ್ಯವು ರೂ.15.68 ಲಕ್ಷ ಕೋಟಿಯನ್ನು ತಲುಪಿದೆ. ಅಂದರೆ ಬಾಂಬೆ ಷೇರು ವಿನಿಮಯ ಕೇಂದ್ರದ ಮಾರ್ಕೆಟ್‌ ಕ್ಯಾಪಿಟಲೈಸೇಷನ್ ಮೌಲ್ಯವು ರೂ.156.88 ಲಕ್ಷ ಕೋಟಿಯಲ್ಲಿದೆ.  ಅಂದರೆ ರಿಲಯನ್ಸ್‌ ಇಂಡಸ್ಟ್ರೀಸ್‌  ಮಾರ್ಕೆಟ್‌ ಕ್ಯಾಪ್‌,    ಬಿ ಎಸ್‌ ಇ ಯ ಮಾರ್ಕೆಟ್‌ ಕ್ಯಾಪ್‌ ನ ಶೇ.10 ರಷ್ಟಿದೆ.   ಮಾರ್ಚ್‌ 2020 ರಲ್ಲಿ ರೂ.6 ಲಕ್ಷಕೋಟಿಯಷ್ಟರಲ್ಲಿದ್ದ ಮಾರ್ಕೆಟ್‌ ಕ್ಯಾಪಿಟಲ್‌ ಹೊಂದಿದ್ದ ಕಂಪನಿ ಕೇವಲ ಆರು ತಿಂಗಳಲ್ಲಿ ರೂ.15.68 ಲಕ್ಷ ಕೋಟಿಗೆ ಹೆಚ್ಚಿಸಿಕೊಂಡಿದೆ. ಇದು ಅದ್ಬುತವಾದ ಸಾಧನೆಯಾಗಿದೆ.

    ಈ ಸಮಯದಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾದ ರೀತಿಯಲ್ಲಿ ಕಂಪನಿಯ ಆಂತರಿಕ ಸಾಧನೆಯಿಲ್ಲ.  ಇದಕ್ಕೆ ಮುಖ್ಕ ಕಾರಣ ಎಲ್ಲೆಡೆ ಹರಡಿಕೊಂಡಿರುವ ಮಹಾಮಾರಿ ಕೋವಿಡ್‌ 19 ಆಗಿದೆ.   ಇಂತಹ ಕರೋನಾ ಪಿಡುಗಿನ ಸಮಯದಲ್ಲಿಯೂ ಕಂಪನಿಯ ಷೇರಿನ ಬೆಲೆ ಈ ರೀತಿಯ ಏರಿಕೆಯು, ಹೂಡಿಕೆದಾರರಿಗೆ ಕಂಪನಿಯ ಮೇಲೆ ಇರುವ ನಂಬಿಕೆಯನ್ನು ಬಿಂಬಿಸುತ್ತದೆ.    ಈ ರೀತಿ ಸಂಗ್ರಹಿಸಿರುವ ಹಣವನ್ನು ಕಂಪನಿಯು ತನ್ನ ಸಾಲದ ಹೊರೆಯನ್ನು ಇಳಿಸಿಕೊಳ್ಳುವುದಕ್ಕೆ ಬಳಸಿಕ್ಕೊಳ್ಳುವುದು ಸರಿ.  ಆದರೆ ಇದು ಬಡ್ಡಿಹೊರೆಯನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ.  ಸಾಲದ ಹೊರೆ ಬದಲು, ಷೇರುದಾರರನ್ನ ನಿಭಾಯಿಸುವ ಜವಾಬ್ಧಾರಿ ಹೆಚ್ಚಿಸಿಕೊಂಡಿದೆ. 

    ಷೇರುದಾರರಿಗೆ  ಕಂಪನಿ ನೀಡುವ ಡಿವಿಡೆಂಡ್‌ ಕೇವಲ ರೂ.6.50ಯು ಈಗಿನ ಷೇರಿನ ಮೌಲ್ಯಕ್ಕೆ ಸರಿದೂಗದು.  ಅಂದರೆ ಈಗಿನ ರೂ.2,300 ರೂಪಾಯಿಗಳಿಗೆ ವರ್ಷಕ್ಕೆ ರೂ.6.50 ಡಿವಿಡೆಂಡ್‌ ಆಕರ್ಷಕವಲ್ಲ.  ಹಾಗಾದರೆ ಕಂಪನಿಯ ಷೇರಿನ ಬೆಲೆ ಹೆಚ್ಚಿದಾಗ ಷೇರನ್ನು ಮಾರಾಟಮಾಡಿದಲ್ಲಿ ಮಾತ್ರ ಲಾಭದಾಯಕವಾಗುತ್ತದೆ, ಇಲ್ಲವಾದಲ್ಲಿ ಹೂಡಿಕೆ ಯೋಗ್ಯವೆನಿಸಿಕೊಳ್ಳದು.  ಇದು ಷೇರುದಾರರಲ್ಲಿ ನಮ್ರತೆ ಬದಲು ವ್ಯವಹಾರಿಕತೆ ಹೆಚ್ಚಿಸುತ್ತದೆ.    ಈ ಕ್ರಮವು ಕಂಪನಿಯ ಆಡಳಿತದ ಮೇಲೆ, ಉತ್ತಮ ಸಾಧನೆ, ಫಲಿತಾಂಶ, ಲಾಭಾಂಶ ವಿತರಣೆಗೆ ಹೆಚ್ಚಿನ ಒತ್ತಡವನ್ನು ಹಾಕಲಿದೆ.    ಕಂಪನಿಯು ಈ ಪ್ರಮಾಣದ ಸಾಧನೆಗೆ ಪೂರಕವಾದ ಬ್ಲೂಪ್ರಿಂಟ್‌ ಸಿದ್ಧಗೊಳಿಸಿಕೊಂಡಿರುತ್ತದೆ.   ಅದನ್ನು ಜಾರಿಗೊಳಿಸಲು ಯಶಸ್ಸು ಕಾಣಲೂಬಹುದು.  
    ಎಲ್ಲವೂ ನಿರೀಕ್ಷಿತ ಮಟ್ಟದಲ್ಲಿ ನಡೆದರೆ ಅಂಗೈಯಲ್ಲಿ ಅರಮನೆಯಂತಾಗುತ್ತದೆ.

    ಆದರೆ ಈಗಿನ ಸ್ಪರ್ಧಾತ್ಮಕ ಸಮಯದಲ್ಲಿ, ಅನಿರೀಕ್ಷಿತವಾಗಿ ಪ್ರೊಜೆಕ್ಟೆಡ್‌ ಸಾಧನೆ ತೋರಲು ವಿಫಲವಾದಲ್ಲಿ ಷೇರಿನ ಬೆಲೆ ದಿಶೆ ಬದಲಿಸಿದಲ್ಲಿ ಗುರುತ್ವಾಕರ್ಷಣೆ ಥಿಯರಿ ಅಳವಡಿಸಿದಲ್ಲಿ ಏನಾಗಬಹುದು ಎಂಬ ಕಲ್ಪನೆಯನ್ನೂ ಸಹ ಹೂಡಿಕೆದಾರರು ಗಮನದಲ್ಲಿಸಿಕೊಂಡಿರಬೇಕು.  ಇಲ್ಲಿ ನೆನಪಿಲ್ಲಿಡಬೇಕಾದ ಅಂಶವೆಂದರೆ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆಯಲ್ಲಿ  ಪ್ರತಿ ಒಂದು ರೂಪಾಯಿಯ ಏರಿಕೆಯಾದರೆ ಆ ಕಂಪನಿಯ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.670 ಕೋಟಿಯಷ್ಟು ಹೆಚ್ಚುತ್ತದೆ. ಅದೇ ಪ್ರಮಾಣದಲ್ಲಿ ಕಡಿಮೆಯಾದರೆ  ಬಂಡವಾಳವೂ ಕರಗುವುದು. ಒಂದು ವೇಳೆ ಕಂಪನಿಯು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ತೋರದಿದ್ದರೆ  ಈಗ FAVORITE  ಆಗಿರುವುದು  FAVOUR HIT ಎಂದು ಈ ಗಣ್ಯ ಹೂಡಿಕೆ ಕಂಪನಿಗಳು ನಿರಂತರ ಮಾರಾಟ ಮಾಡಿದಲ್ಲಿ ಷೇರಿನ ಬೆಲೆ ಎಲ್ಲಿಗೆ ಕುಸಿಯಬಹುದೆಂಬುದು ಕಲ್ಪನೆಗೂ ಎಟುಕದು. 

    ಈ ಹಿಂದೆ ಡಿ ಎಸ್‌ ಕ್ಯು ಸಾಫ್ಟ್‌ ವೇರ್‌, ಪೆಂಟಾಮೀಡಿಯಾ ಗ್ರಾಫಿಕ್ಸ್‌, ಹಿಮಾಚಲ್‌ ಫ್ಯೂಚರಿಸ್ಟಿಕ್‌ ಗಳ ಬೆಲೆ ರೂ.3,000 ದಿಂದ ಕುಸಿದ ವೇಗ ಹಿಮ ಕರಗುವುದಕ್ಕಿಂತಲೂ ವೇಗವಾಗಿತ್ತು.  ಅಲ್ಲದೆ ಒಮ್ಮೆ ಷೇರಿನ ಬೆಲೆ ಈ ರೀತಿ ಕುಸಿದಲ್ಲಿ ಉಂಟಾಗಬಹುದಾದ ಪರಿಸ್ಥಿತಿಯು ಎಲ್ಲಿಗೆ ತಲುಪಬಹುದೆಂಬುದನ್ನು ಎಡಿಎಜಿ ಸಮೂಹವು ತೋರಿಸಿದೆ. ಬಂಡವಾಳ ಸುರಕ್ಷತೆಗೆ ಆದ್ಯತೆ ಇರಲಿ. 

    ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!