ವಟ ವಟ ವಟಾ ಅಂತ ಒಳ್ಳೇ ಹೊಸ ನೀರ್ ಕಪ್ಪೆಗಳ ಥರ ವಟಗುಡ್ತಾಇರ್ತೀರ . ಕಿಟಕೀ ನಲ್ಲೇನ್ ಕೋತಿ ಕುಣೀತಿದೀಯಾ ? ಬರ್ತಾ ಬರ್ತಾ ರಾಯರ್ ಕುದುರೆ ಕತ್ತೆ ಆಯ್ತು . ಹೋಂ ವರ್ಕ್ ಮಾಡದೇ ಮನೇಲ್ ಏನ್ ದನ ಕಾಯ್ತಿರ್ತೀರಾ ? ಬೆಲ್ ಹೊಡೆದಿದ್ದೇ ಕುರಿಗಳ ಥರ ನುಗ್ತೀರಲ್ಲೋ . ರಜೆ ಬಂತೂ ಅಂದ್ರೆ ಸಾಕು ಬೀದಿ ನಾಯಿ ಸುತ್ತಾಡದಂಗ್ ಸುತ್ತಾಡ್ತಾ ಇರ್ತೀರಾ . ಎಷ್ಟು ಹೊಡೆದ್ರೂ ಅಷ್ಟೇ ಬಡೆದ್ರೂ ಅಷ್ಟೇ ಎಮ್ಮೆ ಚರ್ಮ ನಿಮ್ದು . ಒಳ್ಳೇ ಕರ್ಡೀಗಳ ಥರ ಅಗಿದೀರ ನಾಳೆ ಕಟಿಂಗ್ ಮಾಡಿಸ್ಕೊಂಡ್ ಬಂದ್ರೆ ಸರಿ..
ಹೀಗೆ ಸದಾ ಒಂದಿಲ್ಲೊಂದು ಪ್ರಾಣೀನ ಹೋಲಿಸ್ಕೊಂಡು ನಮ್ ಟೀಚರ್ಗಳು ನಮ್ಮನ್ನ ಪಳಗಿಸಿರಲಿಲ್ಲ ಅಂದಿದಿದ್ರೆ ನಾವು ಇಂದು ಮನುಷ್ಯರಾಗಿ ಇರ್ತಿರ್ಲಿಲ್ಲ .
ಇವತ್ತು ನಾವು ಏನಾಗಿದೀವೋ ಅದಕ್ಕೆ ಕಾರಣ ನಮ್ಮ ಶಿಕ್ಷಕರು . ಪ್ರಾಥಮಿಕ ಪ್ರೌಢಶಾಲೆಯಿಂದಿಡಿದು ಪದವಿಪೂರ್ವ ದವರೆಗೂ ತುಂಬಾನೇ ಮುತುವರ್ಜಿ ತೋರುತ್ತಿದ್ದರು …..ಓದು ಬರವಣಿಗೆ.. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು , ತಿದ್ದುತ್ತಿದ್ದರು , ತಿಳಿಸುತ್ತಿದ್ದರು , ಓದಿಸುತ್ತಿದ್ದರು , ಬೋಧಿಸುತ್ತಿದ್ದರು .
ಚೆನ್ನಾಗಿ ಓದಿ ತಂದೆ ತಾಯಿಗೆ ಒಳ್ಳೇ ಹೆಸರು ತಗೊಂಡುಬನ್ನಿ ಅಂತ ನಿಸ್ವಾರ್ಥವಾಗಿ ಕೇಳ್ಕೋತಿದ್ರು . ಓದಿನಲ್ಲೋ ಕ್ರೀಡೆಯಲ್ಲೋ ಫಸ್ಟ್ ಬಂದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು . ಹೌದಲ್ವಾ ….. ಅಪ್ಪ ಅಮ್ಮ ಹೊಟ್ಟೆಗೆ ಊಟ ತುಂಬ್ತಾರೆ ಆದರೆ ಶಿಕ್ಷಕರು ನಮ್ಮಲ್ಲಿ ಸಮಾನತೆ ಸೃಜನಶೀಲತೆ ಸಾಕ್ಷರತೆ ವಿನಯತೆ ವಿಧೇಯತೆ ಔದಾರ್ಯತೆ ಸೌಹಾರ್ದತೆ ಸ್ಪರ್ಧಾತ್ಮಕತೆ ಎಲ್ಲಕ್ಕಿಂತಾ ಹೆಚ್ಚಾಗಿ ಮಾನವೀಯತೇನ ತುಂಬಿ, ಯೋಗ್ಯರನ್ನಾಗಿ ತಯಾರು ಮಾಡಿ ಸಮಾಜದಲ್ಲಿ ಬದುಕಲು ಬಿಡುತ್ತಾರೆ .
ಸ್ಕೂಲಲ್ಲಿ ಟೀಚರ್ಗಳಾಗಿ , ಕಾಲೇಜುಗಳಲ್ಲಿ ಲೆಕ್ಚರರ್ಗಳಾಗಿ , ಕ್ರೀಡೆಯಲ್ಲಿ ಕೋಚ್ ಗಳಾಗಿ , ಸಂಗೀತದಲ್ಲಿ ಗುರುಗಳಾಗಿ , ಕೆಲಸದಲ್ಲಿ ಮಾರ್ಗದರ್ಶಕರಾಗಿ ಸದಾ ನಮ್ಮೊಂದಿಗೆ ಇರ್ತಾರೆ . ಮೂವತ್ತಾರು ಮೂವತ್ತೆಂಟು ವರ್ಷ ನಿಸ್ವಾರ್ಥ ಸೇವೆ ಮಾಡಿ ರಿಟೈರ್ಡ್ ಆಗಿರ್ತಾರೆ.
ಒಂದು ಊರಲ್ಲೋ ಯಾವುದೋ ಕಾರ್ಯಕ್ರಮದಲ್ಲೋ ಸಿಕ್ಕಾಗ ನಾವು ನಮಸ್ಕಾರ ಮಾಡಿ ಪ್ರೀತಿಯಿಂದ ಮಾತಾಡಿಸಿದಾಗ ಅವರು ಕೇಳೋದು ಎರಡೇ ಪ್ರೆಶ್ನೆ ಒಂದು ಏನ್ ಮಾಡ್ಕೊಂಡಿದೀಯಪ್ಪಾ ? ಇನ್ನೊಂದು ತಂದೆ ತಾಯೀನ ಚೆನ್ನಾಗಿ ನೋಡ್ಕೊಪ್ಪ ಅಂತ .
ನಾವು ಗಳಿಸುವ ಆಸ್ತಿ ಶಾಶ್ವತವಲ್ಲ ಆದರೆ ಅವರು ಕಲಿಸುವ ಜ್ಞಾನ ಶಾಶ್ವತ . ಗುರು ಇಲ್ಲದೇ ಬದುಕಿನ ಗುರಿ ಇಲ್ಲ . ಮೊನ್ನೆ ಜರುಗಿದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಮ್ಮೆಲ್ಲರ ಗುರುಗಳಿಗೆ.
ಕಿರಣ್ ಮಾಡಾಳು
ಈ ಅಂಕಣದೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ಭಾರತ-ಚೀನಾ ಗಡಿ ಪ್ರದೇಶ (ವಾಸ್ತವ ನಿಯಂತ್ರಣ ರೇಖೆ)ದಲ್ಲಿ ದಿನೇ ದಿನೇ ಪ್ರಕ್ಷುಬ್ಧ ಪರಿಸ್ಥಿತಿ ಹೆಚ್ಚುತ್ತಿದೆ. ಗುರುವಾರ ಸೆ. 10ರಂದು ಅತ್ಯಾಧುನಿಕ ರಫಲ್ ಯುದ್ಧ ವಿಮಾನ ಭಾರತೀಯ ಸೇನೆಯ ಬತ್ತಳಿಕೆಯನ್ನು ಸೇರಿದೆ. ಹೀಗಾಗಿ ರಫಲ್ ಯುದ್ಧ ವಿಮಾನ ಮತ್ತು ಚೀನಾದ ಇತ್ತೀಚಿನ ನಡವಳಿಕೆಯನ್ನು ಒಂದಿಷ್ಟು ಅವಲೋಕನ ಮಾಡಬೇಕಾಗುತ್ತದೆ.
ಈಗಾಗಲೇ ಟುಟು ರೆಜಿಮೆಂಟ್ ಯೋಧರನ್ನು ನಿಯೋಜಿಸಿರುವ ಭಾರತ ಈ ಮೂಲಕ ಚೀನಾದ ಷಡ್ಯಂತ್ರಕ್ಕೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಮಾತ್ರವಲ್ಲ ಕಾರ್ಗಿಲ್ ಯುದ್ಧದ ಸಮಯದಲ್ಲಿ ಆದ ತಪ್ಪು ಮರುಕಳಿಸದಂತೆ ಮಾಡಿಕೊಂಡಿದೆ. ಆಗ ಪಾಕಿಸ್ತಾನ ಪಡೆಗಳು ರಹಸ್ಯವಾಗಿ ಕಾರ್ಗಿಲ್ ಬೆಟ್ಟದ ತುದಿಯನ್ನು ತಲುಪಿಯಾಗಿತ್ತು. ಅದನ್ನು ಮರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ಮುಂದುವರಿದರೆ ಮೇಲೇರುತ್ತಿದ್ದಂತೆಯೇ ಮೇಲಿನಿಂದ ಸುಲಭವಾಗಿ ನಮ್ಮ ಯೋಧರನ್ನು ಟಾರ್ಗೆಟ್ ಮಾಡುತ್ತಿತ್ತು. ಹೀಗಾಗಿಯೇ ಕಾರ್ಗಿಲ್ ಯುದ್ಧ ವಿಜಯಕ್ಕೆ ಭಾರತ ಹರ ಸಾಹಸ ಮಾಡಲೇಬೇಕಾಯಿತು. ಹಲವು ಯೋಧರು ಬಲಿದಾನಗೈಯಬೇಕಾಯಿತು.
ಕಲಿತ ಪಾಠ
ಆದರೆ ಕಾರ್ಗಿಲ್ ಯುದ್ಧದಿಂದ ಭಾರತ ಪಾಠ ಕಲಿತಿದೆ. ಹೀಗಾಗಿಯೇ ಲಡಾಕ್ ವಲಯದಲ್ಲಿ ಚೀನಾ ಸೇನೆಯು ಮುಂದುವರಿಯುತ್ತಿದ್ದಂತೆಯೇ ನಮ್ಮ ಯೋಧರು ಆಯಕಟ್ಟಿನ ಮತ್ತು ಹಿಮಚ್ಛಾದಿತ ಪರ್ವತ ಶ್ರೇಣಿಯ ಎತ್ತರದ ಪ್ರದೇಶವಾದ (ಫಿಂಗರ್-2 ಮತ್ತು 3 ಹಾಗೂ 4, 8) ಪಾಂಗಾಂಗ್ ತ್ಸು ಮೇಲೆ ಹಿಡಿತ ಸಾಧಿಸಿದೆ. ತಡೆಯೊಡ್ಡಲು ಬಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಲೆ ಗುಂಡು ಹಾರಿಸಲು ಹಿಂಜರಿಯಲಿಲ್ಲ. ಅದಕ್ಕಾಗಿ ವಾಸ್ತವ ನಿಯಂತ್ರಣ ರೇಖೆಯನ್ನೂ ದಾಟಿ ಮುಂದೆ ಹೋಗಿತ್ತು ಎಂದು ಹೇಳಲಾಗುತ್ತಿದೆ. ಈ ಕುರಿತು ರಾಜತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉಭಯ ದೇಶಗಳು ತಮ್ಮದೇ ವಾದ ಮುಂದಿಡುತ್ತಿವೆ .
ಆದರೆ ಭಾರತೀಯ ಸೇನೆ ಆ ಪ್ರದೇಶವನ್ನು ವಶಪಡಿಸಿಕೊಂಡು ತಳವೂರಿದ್ದು ಮಾತ್ರ ನಿಜ. ಸುಮಾರು 8 ಕಿ.ಮೀ. ಉದ್ದದ ಈ ಭಾಗದಲ್ಲಿ ತನ್ನ ಪಾರಮ್ಯ ಸಾಧಿಸುವ ಮೂಲಕ ಚೀನಾಕ್ಕೆ ಭಾರತ ಸರಿಯಾದ ತಿರುಗೇಟು ನೀಡಿದೆ. ಇದರಿಂದಾಗಿ ಚೀನಿಯರು ಬೆಟ್ಟ ಹತ್ತುವ ಸಾಹಸ ಮಾಡುವ ಹಾಗಿಲ್ಲ. ಹಾಗೇನಾದರೂ ಆದರೆ ಮೇಲಿನಿಂದ ಸುಲಭವಾಗಿ ಭಾರತೀಯ ಯೋಧರು, ಕೆಂಪು ಸೇನೆಯನ್ನು ಟಾರ್ಗೆಟ್ ಮಾಡಲು ಸಾಧ್ಯವಾಗುತ್ತದೆ ಮಾತ್ರವಲ್ಲ ಅದರ ಚಲನವಲನವನ್ನು ಕೂಡ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇದಲ್ಲದೆ ಪರ್ವತ ಪ್ರದೇಶದ ಯುದ್ಧದಲ್ಲಿ ಬಹುಮುಖ್ಯ ಪಾತ್ರ ವಹಿಸಬಹುದಾದ ದೆಪ್ಸಂಗ್- ದೌತ್ ಬೆಗ್ ಆಲ್ಡೀ ಎಂಬ ಆಯಕಟ್ಟಿನ ಪ್ರದೇಶದಲ್ಲಿ ಚೀನಾ ಈಗಾಗಲೇ ಸೇನಾ ಪಡೆಯನ್ನು ನಿಯೋಜಿಸಲು ಆರಂಭಿಸಿದೆ. ಇದಕ್ಕೆಪ್ರತಿಯಾಗಿ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನುಕಟ್ಟೆಚ್ಚರದಿಂದ ಭಾರತ ನೋಡುತ್ತಿದ್ದು, ಇದಕ್ಕಾಗಿ ಈಗಾಗಲೇ ಅಲ್ಲಿಗೆ ಸಮೀಪದ ಪ್ರದೇಶಕ್ಕೇ ಯುದ್ಧ ಟ್ಯಾಂಕರ್ ಗಳನ್ನು ರವಾನಿಸಿದೆ.
ಸುಮಾರು 14-17 ಸಾವಿರ ಅಡಿ ಎತ್ತರದ ಈ ಪರ್ವತ ಪ್ರದೇಶದಲ್ಲಿ ಏಳು ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಈ ಮೂಲಕ ಚೀನಾ ನಡೆಸುವ ಪ್ರತಿಯೊಂದು ವಿದ್ಯಮಾನ ಭಾರತಕ್ಕೆ ಗೊತ್ತಾಗಲಿದೆ.
ಷಡ್ಯಂತ್ರಕ್ಕೆ ಪ್ರತಿತಂತ್ರ
ಚೀನಾದ ಷಡ್ಯಂತ್ರದ ಅರಿವು ಭಾರತಕ್ಕೆ ಇದ್ದೇ ಇದೆ. ಹೀಗಾಗಿಯೇ ಇಸ್ರೇಲ್ ನಿಂದ ಅತ್ಯಾಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿದೆ. ಕಳೆದ ಜೂನ್ 27ರಂದೇ ಈ ಕುರಿತ ಒಪ್ಪಂದವು ಅಂತಿಮ ರೂಪ ಪಡೆದಿದೆ. ಈ ಆಧುನಿಕ ರಕ್ಷಣಾ ವ್ಯವಸ್ಥೆಯು ಶತ್ರು ರಾಷ್ಟ್ರದ ಕಡೆಯಿಂದ ಬರುವ ಯಾವುದೇ ವಿಮಾನ, ಕ್ಷಿಪಣಿ, ದ್ರೋಣ್ ಸೇರಿದಂತೆ ಎಲ್ಲಾ ವಾಯು ಮಾರ್ಗದಲ್ಲಿ ಎದುರಾಗಬಹುದಾದ ದಾಳಿಯನ್ನು ಅರ್ಧ ದಾರಿಯಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇನ್ನೂ ಹೆಸರಿಡದ ಈ ರಕ್ಷಣಾ ವ್ಯವಸ್ಥೆಯನ್ನು ಲಡಾಕ್ ವಲಯದಲ್ಲಿ ಅಳವಡಿಸಲು ಭಾರತ- ಇಸ್ರೇಲ್ ಒಪ್ಪಂದಕ್ಕೆ ಬಂದಿವೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಇದೇನಾದರೂ ಸಾಕಾರವಾದರೆ, ಚೀನಾದ ಇಂತಹ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ಅಸ್ತ್ರ ಅರ್ಧ ದಾರಿಯಲ್ಲೇ ಅಂದರೆ ಭಾರತದ ಗಡಿ ಪ್ರವೇಶಿಸುವ ಮೊದಲೇ ಛಿದ್ರವಾಗುವುದರಲ್ಲಿ ಸಂಶಯವಿಲ್ಲ.
ಸದ್ಯದ ಮಟ್ಟಿಗೆ ಭಾರತದ ವಾಯು ಪಡೆ ಎಸ್ಪಿವೈಡಿಇಆರ್ ಎಂಬ ಭೂಮಿಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಉತ್ತರ ಮತ್ತು ಪಶ್ಚಿಮ ಗಡಿ ಭಾಗದಲ್ಲಿ ಇದನ್ನು ಈಗಾಗಲೇ ನಿಯೋಜಿಸಲಾಗಿದೆ. ಈಗಾಗಲೇ ಪೂರ್ವ ಕರಾವಳಿಯ ಸೂರ್ಯಾಲಂಕಾ ವಾಯು ನೆಲೆಯಿಂದ ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಬಾಲಕೋಟ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಕ್ಷಿಪಣಿ ವ್ಯವಸ್ಥೆ ಇದು ಎಂಬುದು ಇಲ್ಲಿ ಗಮನಾರ್ಹ.
ಈಗ ಬರಾಕ್-8 ಎಂಬ ವೈಮಾನಿಕ ರಕ್ಷಣಾ ವಸ್ಥೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದು, ಸದ್ಯವೇ ಅದು ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.ಎಲ್ಆರ್ ಎಸ್ಎಂ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ನೆಲ, ಆಕಾಶ ಮತ್ತು ಸಮುದ್ರ ವಲಯಗಳಲ್ಲೂ ದೇಶಕ್ಕೆ ರಕ್ಷಣೆ ನೀಡುತ್ತವೆ. ಇದಲ್ಲದೆ ಈಗಾಗಲೇ ಭಾರತವು ಅಮರಿಕದ ಪಿಎಸಿ-3, ಎನ್ ಎಎಸ್ ಎಎಂಎಸ್-2 ಮೊದಲಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಚೀನಾದ ಹೊಸ ದಾಳಿ ತಂತ್ರಕ್ಕೆ ಪ್ರತಿತಂತ್ರವಾಗಿ ಭಾರತ ಇನ್ನಷ್ಟು ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿದೆ ಎಂದು ಹೇಳಬಹುದು.
ಚೀನಾದ ತಂತ್ರ
ಚೀನಾವು ಈಗ ಏರ್ ಬೋರ್ನ್ ಮ್ಯುನಿಶನ್ಸ್ (ಯುದ್ಧ ಸಾಮಗ್ರಿ) ಡಿಸ್ಪೆನ್ಸರ್ ಎಂಬ ದ್ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಆಕಾಶದಿಂದ ಭೂಮಿಗೆ ಪ್ರಯೋಗಿಸಲ್ಪಡುವ ಕ್ಷಿಪಣಿಯಾಗಿದ್ದು, ಯುದ್ಧ ವಿಮಾನದ ಮೂಲಕ ರವಾನೆಯಾಗುತ್ತದೆ. ವೈರಿಯ ವಾಯು ನೆಲೆಗಳ ಮೇಲೆ ಏಕ ಕಾಲದಲ್ಲಿ ನೂರಾರು ಬಾಂಬುಗಳನ್ನು ಹಾಕುವ ಸಾಮರ್ಥ್ಯ ಹೊಂದಿದೆ. ಇದರಿಂದ ಶತ್ರು ದೇಶದ ವಾಯು ನೆಲೆಯಲ್ಲಿ ಇರುವ ಜೆಟ್ ವಿಮಾನಗಳು ಧ್ವಂಸಗೊಳ್ಳುವ ಮೂಲಕ ವಾಯು ದಾಳಿಯ ಸಾಮರ್ಥ್ಯವನ್ನು ಶೂನ್ಯಕ್ಕೆ ಇಳಿಸುವ ಸಾಧ್ಯತೆಯಿದೆ.
ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಈ ಕ್ಷಿಪಣಿಯು ಸುಮಾರು 500 ಕೆ.ಜಿ. ತೂಕದ ಬಾಂಬ್ ಗಳನ್ನು ಹೊತ್ತೊಯ್ಯಬಲ್ಲುದು. ಒಮ್ಮೆ ಕ್ಷಿಪಣಿಯಿಂದ ಬೇರ್ಪಟ್ಟರೆ ಆಗ ನಾನಾ ಗುರಿಗಳಿಗೆ ಬಾಂಬು ಸಿಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ರಾಡಾರ್ ಕಣ್ಣಿಗೂ ಕಾಣದ ರೀತಿಯಲ್ಲಿ ಇದು ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಜೂನ್ ನಿಂದಲೇ ಈ ನಿಟ್ಟಿನಲ್ಲಿ ಜೂನ್ ನಿಂದಲೇ ಪೈಲಟ್ ಗಳ ತರಬೇತಿ ಕಾರ್ಯಕ್ರಮ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ಶತ್ರುವಿನ ವಾಯುನೆಲೆ ಅಥವಾ ರಕ್ಷಣಾ ನೆಲೆಯನ್ನು ಪ್ರವೇಶಿಸುವ ಮೊದಲೇ ಅಂದರೆ ಸುಮಾರು 60 ಕಿ.ಮೀ. ದೂರದಿಂದಲೇ ಇದು ಬಾಂಬು ಹಾಕಬಲ್ಲುದು ಎಂಬುದು ಇಲ್ಲಿ ಗಮನಾರ್ಹ. ಹಾಗೆಂದು ಭಾರತ ಸುಮ್ಮನೆ ಕುಳಿತಿಲ್ಲ. ಈಗಾಗಲೇ ರಫಲ್ ಯುದ್ಧ ವಿಮಾನವು ಭಾರತದ ವಾಯು ಪಡೆಯ ಸಾಮರ್ಥ್ಯವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ.
(ಚಿತ್ರ: ರಫಲ್ ಯುದ್ಧ ವಿಮಾನದ ಅಧಿಕೃತ ಸ್ವೀಕಾರ ಸಮಾರಂಭ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಇದ್ದಾರೆ)
ಮನುಷ್ಯನೊಬ್ಬನಲ್ಲಿ ಕೊರೋನಾ ಸೋಂಕನ್ನು ಕಂಡು ಹಿಡಿಯುವುದರ ಜೊತೆಗೆ ಅವರ ಸಂಪರ್ಕಕ್ಕೆ ಬಂದ ಎಲ್ಲರ ಜಾಡನ್ನು ಪತ್ತೆ ಹಚ್ಚುವುದನ್ನು ಕಾಂಟ್ಯಾಕ್ಟ್ ಟ್ರೇಸಿಂಗ್ ಅಥವಾ ಸಂಪರ್ಕ ಜಾಲ ಪತ್ತೆ ಎನ್ನುತ್ತಾರೆ.ಈ ವಿಧಾನವನ್ನು ಕೋವಿಡ್ ಗೇ ಅಲ್ಲದೆ ಹಲವು ಹಲವಾರು ರೋಗಗಳ ಹರಡುವಿಕೆಯನ್ನು ತಡೆಯಲು ಈಗಾಗಲೇ ದಶಕಗಳ ಕಾಲದಿಂದಲೂ ಉಪಯೋಗಿಸಿದ್ದಿದೆ. ಉದಾಹರಣೆಗೆ ಸಿಡುಬು ಅಥವ ಸ್ಮಾಲ್ ಪಾಕ್ಸ್ ಖಾಯಿಲೆಯ ನಿಯಂತ್ರಣದಲ್ಲಿ ಮತ್ತು ಇತರೆ ಹಲವು ಖಾಯಿಲೆಗಳ ಅಧ್ಯಯನಗಳಲ್ಲಿ ಈ ವಿಧಾನವನ್ನು ಬಳಸಲಾಗಿತ್ತು. ಇದೀಗ ಕೊರೊನಾ ಕಾರಣ ಮತ್ತೆ ಈ ಪದ ಮತ್ತು ವಿಧಾನ ಮರುಬಳಕೆಗೆ ಬಂದಿದೆ.
ಈ ವರ್ಷದ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಶಬ್ದ ಭಾರತದಲ್ಲಿ ಅತ್ಯಂತ ಬಲವಾಗಿ ಕೇಳಿಬರುತ್ತಿತ್ತು.ಆಗಿನ್ನೂ ಲಾಕ್ ಡೌನ್ ತೆರವಾಗಿರಲಿಲ್ಲ. ಮೊಟ್ಟ ಮೊದಲಿಗೆ ಮಾರ್ಚ್ 24 ರಂದು 21 ದಿನಗಳ ಲಾಕ್ ಡೌನ್ ಜಾರಿಯಾಗುವ ವೇಳೆಗೆ ಭಾರತದಲ್ಲಿ ಸುಮಾರು 500 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಏಪ್ರಿಲ್ 6 ರ ವೇಳೆಗೆ ಪ್ರತಿ ಆರು ದಿನಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣವಾದರೆ, ಏಪ್ರಿಲ್ 18 ರ ವೇಳೆಗೆ ಪ್ರತಿ 8 ಗಂಟೆಗಳಿಗೊಮ್ಮೆ ಇವರ ಸಂಖ್ಯೆ ದ್ವಿಗುಣಿಸಿತ್ತು. ಕೊರೊನ ಸೋಂಕು ಬಹುತೇಕ ನಿಧಾನವಾಗಿದ್ದ ಅಥವಾ ನಿಯಂತ್ರಣದಲ್ಲಿದ್ದ ಕಾಲವದು. ಹಾಗಾಗಿ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಿ ಕೊರೊನಾವನ್ನು ಹತ್ತಿಕ್ಕುವುದು ಅತ್ಯಂತ ಮುಖ್ಯವಾಗಿತ್ತು.
ಅದರೆ ಎಲ್ಲರಿಗೂ ಇದ್ದ ಶಂಕೆಯೆಂದರೆ ಅದು ಸ್ವಲ್ಪಕಾಲದ ವಿಚಾರ ಮಾತ್ರವೆನ್ನುವುದು. ಏಕೆಂದರೆ, ಕೊರೊನಾವನ್ನು ನಿಯಂತ್ರಿಸುವುದೆಂದರೆ ಸುಲಭದ ಮಾತಲ್ಲ. ಒಬ್ಬ ಸೋಂಕಿತನಿಂದ ಹತ್ತು ಜನರಿಗೆ ಅವರಿಂದ ನೂರುಜನಕ್ಕೆ ಮಿಂಚಿನಂತೆ ಹರಡಬಲ್ಲ ಸೋಂಕನ್ನು ತಡೆಯಬೇಕೆಂದರೆ ಎಷ್ಟು ಸಾಧ್ಯವೋ ಅಷ್ಟೂ ಜನ ಸೋಂಕಿತರನ್ನು ಪತ್ತೆ ಹಚ್ಚಬೇಕಿತ್ತು. ಆದರೆ ಕಾಣದ ವೈರಸ್ಸಿನಂತೆ ಶೇಕಡಾ 40 ಜನರಲ್ಲಿ ರೋಗ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ ಎಂದಿರುವಾಗ ಸೋಂಕಿತರನ್ನು ಪತ್ತೆ ಹಚ್ಚುವುದು ಹೇಗೆ? ಅವರಿಗಿದ್ದ ಒಂದೇ ಒಂದು ದಾರಿಯೆಂದರೆ, ಒಬ್ಬ ಸೋಂಕಿತ ಪತ್ತೆಯಾದ ಕೂಡಲೇ ಅವನ ಸಂಪರ್ಕಕ್ಕೆ ಬಂದವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸುವುದು. ಅದರಿಂದ ಇತರೆ ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನ ಆರೋಗ್ಯವಂತರಿಂದ ಬೇರ್ಪಡಿಸಿ ಕ್ವಾರಂಟೈನ್ ನಲ್ಲಿಡುವುದು.
ಇದು ಮೇಲ್ನೋಟಕ್ಕೆ ಸರಳವೆನಿಸಿದರೂ ಸೋಂಕಿತರ ಸಂಪರ್ಕಕ್ಕೆ ಬರುವವರನ್ನು ಪತ್ತೆ ಹಚ್ಚುವುದು ಹೇಗೆ ? ಎನ್ನುವ ದೊಡ್ಡ ಸವಾಲು ಎದುರಾಗಿತ್ತು. ಆ ವೇಳೆಗೆ ಇದನ್ನು ಸಾಧಿಸಲು ಇತರೆ ಹಲವು ದೇಶಗಳು ಟೆಕ್ನಾಲಜಿಯ ಮೊರೆ ಹೋಗಿದ್ದರು. ಇತರೆ ಬೇರೆ ವಿಧಾನಗಳೂ ಜಾರಿಯಲ್ಲಿದ್ದವು. ಈ ದೇಶಗಳಂತೆ ಸಂಪರ್ಕ ಜಾಲದ ಪತ್ತೆಯನ್ನು ಆರಂಭಿಸಲು ಸರಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು.
ಕೊರೊನಾ ಸೋಂಕಿತರರ ಜೊತೆ ಬದುಕುವವರ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ನಲ್ಲಿಡಲು ಭರದ ತಯಾರಿ ನಡೆಯಿತು. ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಫೋನ್ ಗಳಲ್ಲಿ ಇಳಿಸಿಕೊಳ್ಳಬಹುದಾಗಿದ್ದ ಆರೋಗ್ಯ ಸೇತು ಆಪ್ ಅನ್ನು ಸರಕಾರ ಜಾರಿಗೆ ತಂದಿತು.ಫೋನ್ ಗಳ ಬ್ಲೂಟೂತ್ ಮತ್ತು ಲೊಕೋಷನ್ ಡೇಟ ಬಳಸುವ ಮೂಲಕ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಈ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡಿರುವ ಜನರು ಬಂದರೇ ಎಂದು ಈ ಆಪ್ ಮೂಲಕ ತಿಳಿಯಲು ಸಾಧ್ಯವಿತ್ತು. ಇದನ್ನು ಸಾಧಿಸಲು ಸೋಂಕಿತರ ಡೇಟಾವನ್ನು ಸರಕಾರ ಹೊಂದಿರಬೇಕಿತ್ತು. ಅದರ ಜೊತೆ ಈ ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡವರ ವಿವರಗಳೂ ಸರಕಾರಕ್ಕೆ ತಿಳಿಯುತ್ತಿತ್ತು.
ಸಂಪರ್ಕ ಜಾಲ ಪತ್ತೆಯಲ್ಲಿ ಯಾರನ್ನು ಸಂದರ್ಶಿಸಲಾಗುತ್ತದೆ?
ಕಾಂಟಾಕ್ಟ್ ಟ್ರೇಸಿಂಗ್ ನಲ್ಲಿ ಈಗಾಗಲೇ ಕೋವಿಡ್ ಪರೀಕ್ಷೆಯ ಮೂಲಕ ಸೋಂಕು ಧೃಡ ಪಟ್ಟ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳ ವಿವರಗಳನ್ನು ಪತ್ತೆ ಹಚ್ಚಿ ಸಂದರ್ಶನವನ್ನು ನಡೆಸಲಾಗುತ್ತದೆ.
ಪ್ರಾಥಮಿಕ (primary) ಸಂಪರ್ಕಗಳು– ಇವರು ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರು. ಸೋಂಕಿತರಿಂದ ಆರು ಅಡಿ ಅಂತರಕ್ಕಿಂತ ಕಡಿಮೆ ಹತ್ತಿರ, ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದವರು. ಉದಾಹರಣೆಗೆ- ಮನೆಯವರು, ಸ್ನೇಹಿತರು, ಗ್ರಾಹಕರು ಮತ್ತು ಆರೋಗ್ಯ ಸಿಬ್ಬಂದಿ ಇತರರು
ಮಾಧ್ಯಮಿಕ (Secondary) ಸಂಪರ್ಕಗಳು– 6 ಅಡಿಗಿಂತ ಜಾಸ್ತಿ ದೂರದಲ್ಲಿದ್ದರೂ ಸಾಕಷ್ಟು ಕಾಲ ಸೋಂಕಿತರೊಂದಿಗೆ ಒಂದೇ ಕೋಣೆಯಲ್ಲಿಯೋ ಅಥವಾ ಸೋಂಕಿತರು ಮುಟ್ಟಿದ ಅವೇ ಪರಿಕರಗಳ ಸಂಪರ್ಕಕ್ಕೆ ಬಂದವರು, ಅದೇ ಕಟ್ಟಡದಲ್ಲಿ ಬದುಕುವವರು ಇತ್ಯಾದಿ.
ಈ ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದು ಆರೋಗ್ಯಸೇತುವಿನ ಉದ್ದೇಶ. ಪರೀಕ್ಷೆಗಳಲ್ಲಿ ಸೋಂಕು ದೃಢ ಪಟ್ಟವರಿಗೆ ಚಿಕಿತ್ಸೆ ಕೊಡುವುದು ಮತ್ತು ರೋಗದ ಲಕ್ಷಣಗಳಿದ್ದೂ ಟೆಸ್ಟ್ ನಲ್ಲಿ ನೆಗೆಟಿವ್ ಬಂದವರನ್ನ ಕ್ವಾರಂಟೈನ್ ನಲ್ಲಿಡುವ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸುವುದು ಸಂಪರ್ಕ ಜಾಲ ಪತ್ತೆಯ ಮುಖ್ಯ ಉದ್ದೇಶಗಳು.
ಲಕ್ಷಣಗಳಿದ್ದು ಕೋವಿಡ್ ಪರೀಕ್ಷೆ ಲಭ್ಯವಿಲ್ಲದಿದ್ದರೆ ಅಂತಹ ಸಂಪರ್ಕಿತರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು. ಅಕಸ್ಮಾತ್ ಸಂಪರ್ಕಿತರಲ್ಲಿ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಲಭ್ಯವಿಲ್ಲದಿದ್ದಲ್ಲಿ ಅವರು ಕೂಡ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.
ಸೋಂಕಿತರ ಸಂಪರ್ಕಕ್ಕೆ ಬಂದವರ ಜಾಲ ಪತ್ತೆಯಾದ ನಂತರ ಕೊರೊನಾ ಸಂಬಂಧಿತ ಅಧಿಕಾರಿಗಳು ಅವರನ್ನು ಫೋನ್ ಮೂಲಕ ಸಂದರ್ಶಿಸಿ ಅವರು ಏನು ಮಾಡಬೇಕು ಎಂಬ ಮಾರ್ಗದರ್ಶನವನ್ನು ಮತ್ತು ಮಿಕ್ಕ ವಿವರಗಳನ್ನು ನೀಡುತ್ತ ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಯ್ತು.
ಆರೋಗ್ಯ ಸೇತು ಹೇಗೆ ಕೆಲಸ ಮಾಡುತ್ತಿದೆ
ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಎನ್ನುವ ಮೊಬೈಲ್ ಆಪ್ ನನ್ನು ಸರಕಾರ ಹೊರತಂದ ನಂತರ ಅದನ್ನು ಬಳಸಲು ಜನರನ್ನು ವಿನಂತಿಸಿಕೊಳ್ಳಲಾಯಿತು.
ಮೊದಲಿಗೆ ಆರೋಗ್ಯ ಸೇತುವನ್ನು ಸ್ವ ಇಚ್ಛೆಯಿಂದ ಜನರು ಬಳಸಿರೆಂದು ಸರಕಾರ ಹೇಳಿತು. ಆದರೆ ನಂತರ ಎಲ್ಲ ಸರ್ಕಾರೀ ಸಂಸ್ಥೆಗಳ, ಅರೆ ಸರ್ಕಾರೀ ಕೆಲಸದ ಸ್ಥಳಗಳ, ಖಾಸಗೀ ವಲಯಗಳ ಉದ್ಯೋಗಿಗಳಿಗೆ ಇದನ್ನು ಕಡ್ಡಾಯಗೊಳಿಸಲಾಯಿತು. ಉದಾಹರಣಗೆ, ಹೆಚ್ಚು ಸೋಂಕಿನ ಪ್ರಕರಣಗಳು ಇದ್ದ ದೆಹಲಿಯ ನೊಯ್ಡ ಉಪನಗರದಂತಹ ಕಡೆ ಪ್ರತಿಯೊಬ್ಬರೂ ಇದನ್ನು ಖಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶಿಸಲಾಯ್ತು, ಇಲ್ಲದಿದ್ದರೆ 6 ತಿಂಗಳ ಜೈಲು ಎಂದು ಕೂಡ ಹೇಳಿತು.
ಆರೋಗ್ಯ ಸೇತು ಜಾರಿಗೆ ಬಂದದ್ದು ಏಪ್ರಿಲ್ 2 ರಂದು. ಅಂದರೆ ಲಾಕ್ ಡೌನ್ ಶುರವಾದ ಮೊದಲ ಹತ್ತು ದಿನಗಳಲ್ಲಿ. ಮೊದಲ ಹದಿಮೂರು ದಿನಗಳಲ್ಲಿ ಐವತ್ತು ಮಿಲಿಯನ್ ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡರು. 40 ದಿನಗಳಲ್ಲಿ ನೂರು ಮಿಲಿಯನ್ ಜನರ ಬಳಕೆಗೆ ಬಂದ ಅತ್ಯಂತ ವೇಗವಾಗಿ ಬೆಳೆದ ಆಪ್ ಎಂತಲೂ ಇದು ದಾಖಲೆಯನ್ನು ಸೃಷ್ಟಿಸಿತು.
ಆದರೆ ಮೇ ವೇಳೆಗೆ ಇದರಿಂದ ಗೊಂದಲಗಳು ಹುಟ್ಟಿಕೊಂಡವು. ಆರೋಗ್ಯ ಸೇತು ಇದ್ದವರ ವೈಯಕ್ತಿಕ ಮಾಹಿತಿಗಳಿಗೆ ರಕ್ಷಣೆ ಇಲ್ಲವಾಗುತ್ತದೆ ಎಂಬ ದಟ್ಟ ಕಾಳಜಿ ಕೇಳಿಬರತೊಡಗಿತು. ಅಧಿಕಾರಿಗಳು ಸೋಂಕಿತರ ಸಂಪರ್ಕಕ್ಕೆ ಬಂದ ಜನರ ಹೆಸರು ಕೂಡ ಆ ಹಂತಗಳಲ್ಲಿ ತಮಗೆ ತಿಳಿದಿರುವುದಿಲ್ಲ ಎಂದು ಎಷ್ಟೇ ಹೇಳಿದರೂ ಜನರಲ್ಲಿ ಆತಂಕ ಕಾಡಿತು.ಕೋವಿಡ್ ಹೆಸರಲ್ಲಿ ವ್ಯಾಪಕ ವಂಚನೆಗಳು ಫೋನ್ ಮೂಲಕ, ಅಂತರ್ಜಾಲದ ಮೂಲಕ ಶುರುವಾಗಿದ್ದ ಕಾಲವದು.
ತಮ್ಮ ಪ್ರತ್ಯೇಕತೆಗೆ ಇದರಿಂದ ಧಕ್ಕೆ ಬರುವುದರ ಜೊತೆಗೆ ಸಂಪರ್ಕ ಜಾಲವನ್ನು ಪತ್ತೆ ಹಚ್ಚಲು ಈ ಆಪ್ ಹೆಚ್ಚೇನೂ ಪ್ರಯೋಜನಕ್ಕೆ ಬರುತ್ತಿಲ್ಲವೆಂಬ ವಿವಾದಗಳೊಂದಿಗೆ ಬಹಳಷ್ಟು ಜನ ಇದನ್ನು ವಿರೋಧಿಸಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದರು.
ಜೊತೆಗೆ ಆರೋಗ್ಯ ಸೇತುವಿನ ಕಾರ್ಯಕ್ಷಮತೆಯಲ್ಲಿಯೂ ದೋಷಗಳಿದ್ದವು. ಉದಾಹರಣೆಗೆ ಸೋಂಕಿತ ವ್ಯಕ್ತಿ ಒಂದು ಕೋಣೆಯಲ್ಲಿದ್ದು ಮಿಕ್ಕವರು ಮತ್ತೊಂದು ಕೋಣೆಯಲ್ಲಿದ್ದರೂ ಬ್ಲೂಟೂತ್ ಗೆ ಗೋಡೆಗಳ ತಡೆ ಬರದ ಕಾರಣ ಅವರಿಬ್ಬರೂ ಸಂಪರ್ಕಕ್ಕೆ ಬಂದಿದ್ದರು ಎಂದು ತೋರಿಸುವುದರಿಂದ ಇಡೀ ಆಪ್ನ ನಿಖರತೆಯೇ ಬೇಗುದಿಗೆ ಬಿದ್ದಿತು.
ಯಾರಾದರೂ ಫೋನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದಲ್ಲಿ ಅವರು ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ ಅದು ಕೂಡ ತಿಳಿಯುತ್ತಿರಲಿಲ್ಲ. ಇಂತಹ ಹಲವು ಮಿತಿಗಳಿಂದ ಸಂಪರ್ಕ ಜಾಲದ ಪತ್ತೆಯನ್ನು ಟೆಕ್ನಾಲಜಿಯ ಬಳಕೆಯ ಮೂಲಕ ಮಾಡುವ ದೊಡ್ಡ ಅಭಿಯಾನ ಒಂದು ಮಟ್ಟದಲ್ಲಿ ಮುಗ್ಗರಿಸಿತು.
ಜೊತೆಗೆ ಎಲ್ಲರಲ್ಲೂ ಫೋನ್ ಅಥವಾ ಸ್ಮಾರ್ಟ್ ಫೋನ್ ಇರಲಿಲ್ಲ. ಇದ್ದರೂ ಅದಕ್ಕೆ ಬ್ಲೂಟೂತ್, ಅಂತರ್ಜಾಲ ಇತ್ಯಾದಿ ಇರಬೇಕಿತ್ತು. ಎಷ್ಟು ಜನರ ಫೋನಿನಲ್ಲಿ ಇದೆಲ್ಲ ಇತ್ತೋ ಅವರೆಲ್ಲರೂ ಈ ಆಪ್ ನ್ನು ಬಳಸಲು ಸಿದ್ಧರಿರಲಿಲ್ಲ.
ಭಾರತದಲ್ಲೇ ಅಲ್ಲದೆ ಇಂತಹ ಸರಕಾರೀ ಆಪ್ ಗಳಿಂದ ಜನರ ಪ್ರೈವಸಿ ಗೆ ಕುಂದು ಬರುವ ದೊಡ್ಡ ಆತಂಕ ಪ್ರಪಂಚದ ಬಹುತೇಕ ದೇಶಗಳಲ್ಲಿ ಕೇಳಿಬಂತು. ಕೆನಡಾ ಮತ್ತು ಅಮೆರಿಕಾದ ಸಲಹೆಗಾರರು ಪ್ರತ್ಯೇಕ ಸಮ್ಮತಿ ಸೂಚಕ ಪೇಪರಿನ ಮೇಲೆ ಸಹಿ ಮಾಡಿಸಿಕೊಂಡು ನಂತರ ಆಪ್ ಗಳನ್ನು ಬಳಸಬಹುದು ಎಂದರು. ಈ ಎಲ್ಲ ಕೋಟಲೆಗಳನ್ನು ನೋಡಿದ ಸಿಂಗಾಪೋರ್ ತನ್ನ 5.7 ಮಿಲಿಯನ್ ಪ್ರಜೆಗಳು ಪ್ರತ್ಯೇಕ ಸಂಪರ್ಕ ಜಾಲದ ಪತ್ತೆಯನ್ನು ಮಾಡಬಲ್ಲ ಉಪಕರಣವನ್ನು ಧರಿಸಿರಿ ಎಂದಿತು. ಇಂಗ್ಲೆಂಡಿನಲ್ಲಿಯೂ ಜನರು ತಮ್ಮ ಪ್ರೈವಸಿಯನ್ನು ಪ್ರಶ್ನಿಸಿಸಿದರು. NHS test-and-trace system ನ ಮುಖ್ಯಸ್ಥ ಟೋನಿ ಪ್ರೆಸ್ಟೆಜ್ ಸೆಪ್ಟೆಂಬರಿನವರೆಗೆ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಸೂಚಿಸಿದರು.
ಆದರೆ ಇದೀಗ ಎರಡನೇ ಅಲೆಯ ಭಯದಲ್ಲಿರುವ ಯು.ಕೆ. ಮತ್ತೊಮ್ಮೆ ಸಂಪರ್ಕ ಜಾಲ ಪತ್ತೆಯ ಮೇಲೆ ಹೆಚ್ಚಿನ ಒತ್ತನ್ನು ನೀಡಿದೆ.ಕೆಲವು ಯೂರೋಪಿಯನ್ ದೇಶಗಳು ಇದಕ್ಕಾಗಿ ಹೆಚ್ಚು ಉತ್ತಮವಾಗಿ ಕೆಲಸಮಾಡಬಲ್ಲ ಹೊಸ ಹೊಸ ಆಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ, ಏನೇ ಆದರೂ ಇಂತಹ ಆಪ್ ಗಳನ್ನು ಬಲವಂತವಾಗಿ ಹೇರಲಾಗದ ಕಾರಣ ಅರೆ ಬರೆ ಡೇಟಾ ಪಡೆದು ಕೊರೊನಾ ಹೊಸಸೋಂಕುಗಳ ಸಂಪರ್ಕ ಜಾಲವನ್ನು ಫಲಪ್ರದವೆನ್ನಬಹುದಾದ ಪ್ರಮಾಣದಲ್ಲಿ ಪತ್ತೆ ಹಚ್ಚುವುದು ಸಾಧ್ಯವಾಗದ ಮಾತಾಯಿತು.ಇನ್ನು ಬಡವ -ಶ್ರೀಮಂತರ ನಡುವೆ ಹೆಚ್ಚು ಅಂತರವಿರುವ ಭಾರತ ಮತ್ತಿತರ ದೇಶಗಳಲ್ಲಿ ಎಲ್ಲರಿಗೂ ಈ ಆಧುನಿಕ ಉಪಕರಣಗಳನ್ನು ಒದಗಿಸುವ ಮಾತು ಸುಲಭವಲ್ಲ.
ನಮ್ಮ ದೇಶದಲ್ಲಿ ಆರ್ಥಿಕ ಭಯ, ಕ್ವಾರಂಟೈನ್ ಭಯ, ಪರೀಕ್ಷೆಗಳ ಭಯ ಹೀಗೆ ನಾನಾ ಆತಂಕಗಳಿಂದ ಜನರು ತಮ್ಮ ಲಕ್ಷಣಗಳನ್ನು ವರದಿಮಾಡದೆ ಹೋಗಿದ್ದಾರೆ.ಇಲ್ಲದಿದ್ದರೆ ಈ ಮಟ್ಟದಲ್ಲಿ ಸೋಂಕು ಹರಡಲು ಸಾಧ್ಯವೇ ಇರುತ್ತಿರಲಿಲ್ಲ. ಇನ್ನು ಅವರ ಸಂಪರ್ಕಕ್ಕೆ ಬಂದವರ ಪತ್ತೆಯನ್ನು ಹೇಗೆ ಮಾಡಲು ಸಾಧ್ಯ?
ಜನರನ್ನು ಪ್ರಶ್ನಿಸಿ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕ್ವಾರಂಟೈನ್ ಮಾಡುವುದು ಸುಲಭವಲ್ಲ. ಕಾಂಟಾಕ್ಟ್ ಟ್ರೇಸಿಂಗ್ ನ ವಿಚಾರ ಈ ರೀತಿ ಮುಗ್ಗರಿಸುತ್ತಿರುವಾಗಲೇ ನಿಧಾನಕ್ಕೆ ಆರ್ಥಿಕ ಸಂಕಷ್ಟಗಳೊಂದಿಗೆ ಲಾಕ್ ಡೌನ್ ತೆರವುಗೊಳಿಸಲೇ ಬೇಕಾದ ಅಗತ್ಯ ಭಾರತದಲ್ಲಿ ಬೃಹತ್ತಾಗಿ ಬೆಳೆಯಿತು.
ಹಲವು ಝೋನ್ ಗಳ ವಿಭಜನೆ, ಕಂಟೈನ್ ಮೆಂಟ್ ಪ್ರದೇಶಗಳು, ಅಲ್ಲಿಲ್ಲಿ ಅಲ್ಪ ಸ್ವಲ್ಪ ತೆರವಿನ ಬದಲಾವಣೆ ಇತ್ಯಾದಿ ಹಲವು ಪ್ರಯೋಗಗಳ ನಂತರ ಜೂನ್ 8 ರಂದು ಅನ್ ಲಾಕ್ 1 ಆರಂಭವಾಯ್ತು, ಜುಲೈ 1 -31 ರ ನಲ್ಲಿ ಅನ್ ಲಾಕ್ 2 ಆರಂಭವಾಯ್ತು. ಆಗಸ್ಟ್ ನಲ್ಲಿ ಅನ್ ಲಾಕ್ 3 ನಡೆಯಿತು.
ಇನ್ನು ಮಿಕ್ಕ ವಿಚಾರ ಇಂದಿನದು. ಕಳೆದ ಭಾನುವಾರ 90,802 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ದಿನವೊಂದಕ್ಕೆ ಸಾವಿರಾರು ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಇದೀಗ 47 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂತಹ ದಿನಗಳಲ್ಲಿ ಸಂಪರ್ಕ ಜಾಲದ ಹುಡುಕಾಟ ಮೊದಲಿನ ಬಿಗಿಯನ್ನು ಕಳೆದುಕೊಂಡಿದೆ. ಈ ವಿಧಾನಕ್ಕಿದ್ದ ಪ್ರಾಧಾನ್ಯತೆ ಹಿಂಬದಿಗೆ ಸರಿಯುತ್ತಿದೆ. ಬಹುತೇಕ ರಾಜ್ಯಗಳು ಕಾಂಟಾಕ್ಟ್ ಟ್ರೇಸಿಂಗ್ ವಿಧಾನಕ್ಕೆ ಒತ್ತು ನೀಡುವುದನ್ನು ನಿಲ್ಲಿಸುತ್ತಿವೆ ಅಥವಾ ನಿಲ್ಲಿಸಿವೆ.
ಸಂಪರ್ಕದ ಜಾಲದ ಪತ್ತೆ- ನಾಪತ್ತೆಯಾಗಿದೆಯೇ?
ಹಾಗಾದರೆ ಸಂಪರ್ಕ ಜಾಲದ ಪತ್ತೆ ಪೂರ್ಣ ನಾಪತ್ತೆಯಾಗಿದೆಯೇ? -ಖಂಡಿತ ಇಲ್ಲ.
ಕರ್ನಾಟಕದಲ್ಲಿ ಇದೇ ತಿಂಗಳ ನಾಲ್ಕನೇ ತಾರೀಖಿನ ವೇಳೆಗೆ ಇದುವರೆಗೆ ಕರ್ನಾಟಕದಲ್ಲಿ ನಡೆಸಿದ ಕಾಂಟ್ಯಾಕ್ಟ್ ಟ್ರೇಸಿಂಗ್ ನ ಸಂಖ್ಯೆಗಳು:
ಪ್ರಾಥಮಿಕ ಸಂಪರ್ಕಗಳು- 53,5102, ದ್ವಿತೀಯ ಅಥವಾ ಮಾಧ್ಯಮಿಕ ಸಂಪರ್ಕಗಳು- 48,1228 ಎಂದು ವರದಿಯಾಗಿದೆ. ಜೊತೆಗೆ ಇನ್ನು ಮನೆಯಲ್ಲೇ ಸ್ವಯಂ ಕ್ವಾರಂಟೈನ್ ನಲ್ಲಿ ಇನ್ನೂ 47,3307 ರಷ್ಟು ಜನರಿದ್ದಾರೆ ಎಂದು ತಿಳಿದುಬಂದಿದೆ. ಹಲವರ ಸಂಪರ್ಕ ಜಾಲ ಪತ್ತೆ ಈಗಲೂ ಜಾರಿಯಲ್ಲಿದೆ.
ಕೇರಳದಲ್ಲಿ ಕಟ್ಟು ನಿಟ್ಟಿನ ಸಂಪರ್ಕ ಜಾಲ ಪತ್ತೆಯ ಕಾರಣ ಕೊರೊನ ನಿಯಂತ್ರಣದಲ್ಲಿ ಮೊದಲ ಹಂತದಲ್ಲಿ ಭಾರೀ ಯಶಸ್ಸು ದೊರೆಯಿತು ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕೋವಿಡ್ ನ ಸೋಂಕಿನ ನಿಯಂತ್ರಣಕ್ಕೆ ’ಸಂಪರ್ಕ ಜಾಲ ಪತ್ತೆಯೇ ಬೆನ್ನೆಲುಬು’ ಎಂದು ಹೇಳಿಕೆ ನೀಡಲಾಗಿದೆ. ಈಗಲೂ ಈ ವಿಧಾನವನ್ನು ಜಾರಿಯಿಡಲಾಗಿದೆ.
ಇದು ನಿಜವಾದರೂ ಸೋಂಕು ಹಬ್ಬುವಿಕೆ ಮತ್ತು ಸಂಪರ್ಕ ಜಾಲ ಪತ್ತೆ ಒಂದಕ್ಕೊಂದು ಪೂರಕವಾಗಿರಬೇಕು. ಆದರೆ, ಒಂದೆಡೆ ಆರ್ಥಿಕ ವಹಿವಾಟುಗಳನ್ನು ಸಾಮಾನ್ಯ ಸ್ಥಿತಿಗೆ ತರಲೇ ಬೇಕಾದ ಅಗತ್ಯವಿರುವ ಕಾರಣ ಸೋಂಕು ಹರಡಲು ಬಿಟ್ಟು ಇನ್ನೊಂದು ಕಡೆ ಸಂಪರ್ಕ ಜಾಲ ಪತ್ತೆ ದಕ್ಷತೆಯಿಂದ ಕೆಲಸಮಾಡಲಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಿಬಿಡುತ್ತದೆ. ಸಧ್ಯಕ್ಕೆ ಭಾರತವಿರುವುದು ಇದೇ ಪರಿಸ್ಥಿತಿಯಲ್ಲಿ.ಆದರೆ ಅದು ಅನಿವಾರ್ಯವೆನ್ನಿಸಿರುವ ಪರಿಸ್ಥಿತಿ.ಹ್
ಸಂಪರ್ಕ ಜಾಲ ಪತ್ತೆಯ ಅವಶ್ಯಕತೆ ಇನ್ನೂ ಇದೆಯೇ?
“ಬಹುತೇಕ ಜನರು ಪರಸ್ಪರ ಭೇಟಿಯಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್ ನಿಷ್ಪ್ರಯೋಜಕ ಅದರ ಬದಲು ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡುವುದೇ ಲೇಸು “- ಎನ್ನುವ ವಾದಗಳಿವೆ.
ಆದರೆ, ಈ ವಾದಕ್ಕೂ ಬಹಳ ಮಿತಿಗಳಿವೆ. ಉದಾಹರಣೆಗೆ, ನಮ್ಮ ದೇಶದ 1.3 ಬಿಲಿಯನ್ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವ ಕೆಲಸ ಸಾಮಾನ್ಯದ್ದಲ್ಲ, ಅದರ ಜೊತೆ ಒಮ್ಮೆ ಪರೀಕ್ಷೆ ನಡೆದು ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದವರಿಗೆ ಸ್ವಲ್ಪ ಸಮಯದ ನಂತರ ಮತ್ತೆ ಸೋಂಕು ತಗುಲಬಹುದು. ಸೋಂಕು ಇದೆ ಎಂದು ತಿಳಿದು ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಮತ್ತೊಮ್ಮೆ ಸೋಂಕು ಬರುವುದಿಲ್ಲ ಎನ್ನುವುದಕ್ಕೆ ಖಾತರಿಯೇನು ಇಲ್ಲ. ಹಾಗಾಗಿ ಎಷ್ಟು ಜನರಿಗೆ ಪದೇ ಪದೇ ಪರೀಕ್ಷೆ ಮಾಡಬೇಕಾಗುತ್ತದೆಯೋ ತಿಳಿದಿಲ್ಲ. ಇವೆಲ್ಲದರ ಜೊತೆ ಕೊರೊನಾ ಎರಡನೇ ಅಲೆ, ಮೂರನೇ ಅಲೆ ಇತ್ಯಾದಿಗಳೂ ಇವೆ. ಹೀಗಾಗಿ ಕೋವಿಡ್ ಪರೀಕ್ಷೆಯೊಂದೇ ಖಂಡಿತ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ ಎನ್ನುವುದು ತಿಳಿದವರ ಅಭಿಪ್ರಾಯ.
ಭಾರತದಲ್ಲಿ ಮೊದಲ ಅಲೆಯ ಉಬ್ಬರ ನಿರಂತರವಾಗಿ ಏರುತ್ತಲೇ ಇದೆ. ಆದರೆ ಆರು ತಿಂಗಳು ಕಾದಿರುವ ಜನರ ಸಹನೆ ಕರಗಿಹೋಗುತ್ತಿದೆ. ಯಾವುದೋ ಹುಂಬು ಧೈರ್ಯದ ಮೇಲೆ ಸಹಜ ಬದುಕಿನತ್ತ ಒರಳಲು ಬದುಕು ಮಿಡುಕುತ್ತಿದೆ.
ಭಾರತದಲ್ಲಿಯೂ ಕರೋನ ಕಡಿಮೆಯಾಗುವ ಕಾಲ ಶುರುವಾಗಿ ದಿನವೊಂದರಲ್ಲಿ ಅತ್ಯಂತ ಕಡಿಮೆ ಹೊಸ ಸೋಂಕಿತರು ಪತ್ತೆಯಾಗುವ ಕಾಲ ಬಂದಾಗ ಸೋಂಕಿನ ಪ್ರಮಾಣವನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಕಡಿಮೆ ಪ್ರಮಾಣದಲ್ಲಿಯೇ ಇಡಲು ನಮಗೆ ಸಂಪರ್ಕ ಜಾಲ ಪತ್ತೆಯ ಅಗತ್ಯ ಇದ್ದೇ ಇದೆ. ಆಗ ಸಂಪರ್ಕ ಜಾಲ ಪತ್ತೆ ಮತ್ತೆ ಮುಂಚೂಣಿಗೆ ಬರಲಿದೆ. ಹಿನ್ನೆಲೆಯಲ್ಲಿ ಈಗಲೂ ನೆರವು ನೀಡುತ್ತಿದೆ.
ಮುಗಿದು ಹೋದ ಕಾಲ ಚೆನ್ನಾಗಿ ಇರುತ್ತದೆ. ಏಕೆಂದರೆ ಮತ್ತೆ ತಿರುಗಿ ಬಾರದೆಂದು. ಬರುವಂತಹ ಭವಿಷ್ಯ ಕಾಲ ಅಂದವಾಗಿ ಇರುತ್ತದೆ. ಏಕೆಂದರೆ ನಮಗೆ ಬೇಕಾಗಿರುವ ರೀತಿಯಲ್ಲಿ ಉಹಿಸಿಕೊಳ್ಳುತ್ತೇವೆ. ಪ್ರಸ್ತುತ ಕಾಲ ಮಾತ್ರ ಕಷ್ಟವಾಗಿರುತ್ತದೆ ಏಕೆಂದರೆ ಅನುಭವಿಸುತ್ತಾ ಇರುತ್ತೇವೆ.
ಸಂಗ್ರಹ :ರಾಜೀವಲೋಚನ
ಇಂದಿನ ಪಂಚಾಂಗ
ದಿನಾಂಕ 10 ಸೆಪ್ಚೆಂಬರ್ 2020,ಗುರುವಾರ
ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಅಷ್ಟಮಿ ನಕ್ಷತ್ರ: ರೋಹಿಣಿ
ದುಡಿದ ಹಣ ಎಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಮೂರನೇ ಲೇಖನದಲ್ಲಿ ಹಣದಲ್ಲೂ ಒಳ್ಳೆಯ ಹಣ ಕೆಟ್ಟ ಹಣ ಎಂಬುದು ಇದೆಯಾ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
ಧರ್ಮ,ಅರ್ಥ,ಕಾಮ,ಮೋಕ್ಷ…..ಪುರುಷಾರ್ಥ ಅಂತ ಹೇಳುವ ಈ ನಾಲ್ಕೂ ಶಬ್ದಗಳು , ಮೋಕ್ಷಕ್ಕೆ ದಾರಿಯಲ್ಲಿರುವ ಈ ಅರ್ಥ..ವೂ ತುಂಬಾ ದಿನಗಳವರೆಗೆ ನನಗೆ ಕುತೂಹಲದ ಸಂಗತಿಗಳಲ್ಲಿ ಒಂದಾಗಿತ್ತು.
ನಮ್ಮೆಲ್ಲಾ ಹಿರಿಯರು ಧರ್ಮ ಮತ್ತು ಮೋಕ್ಷಗಳ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು ಬಿಟ್ಟರೆ,ಉಳಿದೆರಡು ಪುರುಷಾರ್ಥ ಶಬ್ದಗಳಾದ ಅರ್ಥ,ಕಾಮದ ಬಗ್ಗೆ ಬಹು ದಿನಗಳ ತನಕ ನನ್ನಲ್ಲಿ ಅವರ್ಣಿಯ ಕೌತುಕ ಹುಟ್ಟಿಸಿದ್ದವು. ತಾಳಲಾರದೆ ಅಪ್ಪನನ್ನು ಕೇಳಿಯೇ ಬಿಟ್ಟಿದ್ದೆ ಒಮ್ಮೆ. ಅರ್ಥ,ಕಾಮವನ್ನು ಮನವರಿಕೆ ಮಾಡುವುದೂ, ಮಾಡಿಕೊಳ್ಳುವುದೂ ತುಂಬಾ ಕ್ಲಿಷ್ಟ. ದೊಡ್ಡವನಾಗು ಎಂದಾದ್ರು ಒಮ್ಮೆ ಮಾತಾಡುವ ಅಂದಿದ್ದರು. ಹಲವಾರು ವಿಷಯಗಳಲ್ಲಿ ಅಪ್ಪನ ಹತ್ತಿರ ದೊಡ್ಡವನಾಗಲೇ ಇಲ್ಲ ನಾನು! ಅವುಗಳಲ್ಲಿ ಇವೆರಡೂ.
ಧರ್ಮಿಷ್ಠನಾಗಿ,ಮಾಡಬೇಕಾದ ಕರ್ಮದ ಮೂಲಕ ಅರ್ಥವನ್ನು ಸಂಪಾದಿಸಿ, ಸಂನ್ಯಾಸಿಯಾಗದೆ ಸಂಸಾರಿಯಾಗಿ ಮೋಕ್ಷ ಹೊಂದಬೇಕು. ಆಗ ಮಾತ್ರ ಈ ಭವದ ಬಂಧನದಿಂದ ಮುಕ್ತಿ ಅಂತ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ್ದರು.ಕೆದಕುವ ಅದಮ್ಯತೆ ಒಳಗಿನಿಂದ ಒತ್ತುತ್ತಿದ್ದರೂ ಸುಮ್ಮನಾಗಿದ್ದೆ.
ಹಣ ವಿಷ, ಅದು ಮಧುರ ಸಂಬಂಧಗಳನ್ನು ಹಾಳು ಮಾಡುತ್ತದೆ,ಅದರ ವಿಷಯವಾಗಿ ಒಂದು ಸುಪ್ತ ಜಾಗ್ರತೆ ಬಹು ಮುಖ್ಯ ಅಂತ ಹೇಳುವವರು ಒಂದು ಕಡೆ….ಮತ್ತೊಂದು ಕಡೆ ನಮ್ಮ ಆಧ್ಯಾತ್ಮಿಕರ ಮೋಕ್ಷದ ದಾರಿಗೆ ಬೇಕೇ ಬೇಕಾಗಿದ್ದ ಈ ಅರ್ಥ ಸಹಜವಾಗಿಯೇ ನನ್ನಲ್ಲಿ ಒಂದು ತೆರನಾದ,ಸ್ಪಷ್ಟತೆ ಇಲ್ಲದ ಸಾಮಗ್ರಿಗಳೊಡನೆ ಮನೆ ಮಾಡಿಕೊಂಡಿತ್ತು. ನನಗೆ ನಾನೇ ಸಮಾಧಾನ ಹೇಳಿಕೊಳ್ಳುವಂತೆ ಸಂಸಾರಿಯಾಗಿ,ದುಡಿಯುವ ಮೊದಲು ಧರ್ಮಿಷ್ಠನಾಗಬೇಕೇನೋ ಅಂದು ಕೊಂಡು ಸುಮ್ಮನಿದ್ದೆ.
ಯಾಕೆಂದರೆ ಆಗ ದುಡಿಯುವ ವಯಸ್ಸು,ಮದುವೆ ಆಗುವ ವಯಸ್ಸು ಎರಡೂ ನನ್ನಲ್ಲಿ ಇರಲಿಲ್ಲ. ಆದರೂ ಬೇರೆಯವರ ಹಣ,ನನ್ನ ಹಣದ ವ್ಯತ್ಯಾಸ, ಪಾಪದ ಹಣ, ಒಳ್ಳೆ ಹಣದ ವ್ಯತ್ಯಾಸ ತನ್ನದೇ ಆದ ಅರ್ಥದೊಂದಿಗೆ ನನ್ನಲ್ಲಿ ತುಂಬಾ ಎಳೆ ವಯಸ್ಸಿನಲ್ಲೇ ಮನೆ ಮಾಡಿಕೊಂಡಿತ್ತು. ಆಗಾಗ ಕೇಳುತ್ತಿದ್ದ…ಇವನು ಅವನ ಹಣ ತಿಂದು ನೀರು ಕುಡಿದ….ಅನ್ನುವಂತಾ ಮಾತುಗಳು ಹಣವನ್ನೂ ತಿನ್ನುತ್ತಾರಾ ಎನ್ನುವಂತಹ ಬಾಲಿಶ ಅನುಮಾನಕ್ಕೆ ಕಾರಣವಾದದ್ದು ಇದೆ. ಸಾಮಾನ್ಯ ಜನರ ಓಡಾಟ,ವ್ಯವಹಾರ ಕೆಲವು ಮೈಲಿಗಳ ಅಂತರಕ್ಕಷ್ಟೇ ಮೀಸಲಿದ್ದ ಸಮಯದಲ್ಲಿ, ನಮ್ಮ ನೆಲದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ವ್ಯಾಪಾರಕ್ಕೆಂದು ನಮ್ಮಲ್ಲಿಯ ವ್ಯಾಪಾರಿ ವರ್ಗ ಖಂಡಾಂತರ ಪ್ರಯಾಣ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭೈರಪ್ಪನವರ ಸಾರ್ಥ ಕಾದಂಬರಿಯಂತೂ ಇದರ ನಿಚ್ಚಳ ರೂಪ ಒದಗಿಸುತ್ತದೆ. ಇಂಥವರಿಗೆ ರಾಜಾಶ್ರಯಗಳೂ ದೊರೆತ ಸಂದರ್ಭಗಳಿವೆ.
ಇತಿಹಾಸದಲ್ಲಿ ಆಳಿದ ರಾಜರನ್ನು ಬಿಟ್ಟರೆ, ಈ ವ್ಯಾಪಾರಸ್ಥರ ಬಳಿ ಸಂಪತ್ತು ಹೇರಳವಾಗಿರುವುದೂ ದಾಖಲಾಗಿದೆ. ಹಾಗಾಗಿ ದಾನಿಗಳ ಪಟ್ಟಿಯಲ್ಲಿ ಅಂದಿನಿಂದಲೂ ಇಂದಿನವರೆಗೆ ಇವರ ಉಲ್ಲೇಖಗಳೇ ಹೆಚ್ಚು. ವಿದ್ಯಾ ಸಂಸ್ಥೆಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಇವರು ನೀಡಿರುವ ಕೊಡುಗೆಗಳೇ ಅದ್ಭುತ. ವ್ಯಾಪಾರ,ವ್ಯವಹಾರ ಅಂದರೇನೇ ಬಂಗಾರದಲ್ಲಿಯ ತಾಮ್ರದಂತೆ ಅಲ್ಪ ಸ್ವಲ್ಪ ಅಧರ್ಮ ಇರಲೇ ಬೇಕು,ಅಂದು ಮತ್ತು ಇಂದು. ಅಥವಾ ಅದೇ ಅವರ ವೃತ್ತಿ ಧರ್ಮ ಅಂತ ಕರೆಯಿಸಿಕೊಂಡು ಮಾನ್ಯವಾಗಿತ್ತೋ ಗೊತ್ತಿಲ್ಲ.
ಏಕೆಲವು ಕಡೆ ವೇಶ್ಯೆಯರೂ ತಾವು ಗಳಿಸಿದ್ದ ಸಂಪತ್ತನ್ನು ಸಾಮಾಜಿಕ ಉದ್ದೇಶಿತ ಯೋಜನೆಗಳಿಗೆ ಕೊಟ್ಟ ಉದಾಹರಣೆ ಗಳೂ ಸಾಕಷ್ಟು ಇವೆ.ಏನೇನೂ ಕಾರಣ ಇಲ್ಲದೆ,ಕೇವಲ ಸಂಪತ್ತನ್ನು ಸೂರೆಗೊಳ್ಳಲು ನಮ್ಮಲ್ಲಿ ಯುದ್ಧಗಳು ನಡೆದಿವೆ.ಹೀಗಾಗಿ ರಾಜರು ಸೂರೆಗೊಂಡ ಸಂಪತ್ತಿಗೂ ಲೆಕ್ಕ ಇಲ್ಲ.
ಹೀಗಿದ್ದೂ, ನಮ್ಮ ಹಿರಿಯರು ಇಂತಹ ಮೂಲದಿಂದ ಬಂದ ಹಣ ಅಥವಾ ಸಂಪತ್ತನ್ನು ಅನೇಕ ಸಮಾಜಮುಖಿ ಕಾರ್ಯಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಿದ್ದರು ಅಂದರೆ ಹಣ ಹಣವೇ, ಅದರಲ್ಲಿ ಕೆಟ್ಟದ್ದು,ಒಳ್ಳೆಯದ್ದು ಅಂತ ಇರುವುದಿಲ್ಲವೇನೋ ಎನ್ನುವ ಅನುಮಾನವೂ ಬಂದಿದ್ದಿದೆ. ಹಲವಾರು ವೃತ್ತಿಧರ್ಮಗಳನ್ನು ಅದರದೇ ಆದ ಕಟ್ಟಳೆಗಳೊಂದಿಗೆ ಅಂಗೀಕರಿಸಿ,ಆಗಿನ ಸಮಾಜ ಒಪ್ಪಿತ್ತೇನೋ,ಅಥವಾ ಒಪ್ಪಬೇಕಾದ ಅನಿವಾರ್ಯತೆಯೂ ಉಂಟಾಗಿತ್ತೇನೋ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಕಟುಕರೂ ಇದ್ದಾರೆ, ಸನ್ಯಾಸಿಗಳೂ ಇದ್ದಾರೆ. ಕೆರೆಯ ನೀರನ್ನು ಕೆರೆಗೇ ಚೆಲ್ಲುವುದರಿಂದ ನೀರಿನ ಮಲಿನತೆ ಗೌಣವಾಗುವ ಹಾಗೆ ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗ ಆಗುವ ಹಣದ ಮಾಲಿನತೆಯೂ ಗೌಣವಾಗಿರಬೇಕು.
ಹಾಗಾಗಿಯೇ ಇಂದಿಗೂ ನಮ್ಮ ದೇವಸ್ಥಾನದ ಹುಂಡಿಯಲ್ಲಿ ದೊರೆಯುವ ಹಣ ನಮಗೆ ಪರಮ ಪವಿತ್ರವಾಗಿ ಗೋಚರಿಸುವುದು. ಹುಟ್ಟಿನಲ್ಲಿ ಪವಿತ್ರತೆ ಪಡೆದು, ಹರಿಯುವಾಗ ಮಲಿನವಾಗಿ ಮತ್ತೆ ಸೇರಿದ ಸಮುದ್ರದಲ್ಲಿ ಲೀನವಾಗಿ ಪವಿತ್ರತೆ ಹೊಂದುವ ನಮ್ಮ ನದಿಗಳಂತೆ, ಈ ಹಣವೂ ಏನೋ. ಹಾಗಾಗಿ ಇದಕ್ಕೆ ಚಲಿಸುವ,ಚಂಚಲತ್ವ ಉಳ್ಳ ಗುಣವನ್ನು ಉಪಾಧಿಸಿರಬೇಕು ನಮ್ಮವರು. ಸಮಾಜದ ಒಳಿತಿಗಾಗಿ ರೂಪಗೊಂಡು, ಸಮಾಜದಲ್ಲಿ ಹರಿದಾಡುವಾಗ ಮಲಿನವಾಗಿ, ಕೊನೆಗೆ ಸಮಾಜಮುಖಿ ಕಾರ್ಯಗಳಲ್ಲಿ ವಿನಿಯೋಗವಾದಾಗ ಹಣ ಅದರ ಪಾವಿತ್ರತೆಯನ್ನು ಕಂಡುಕೊಂಡಿರಬೇಕು. ನದಿಯ ಎಲ್ಲಾ ನೀರು ಹರಿದು ಸಮುದ್ರ ಸೇರಲ್ಲ. ಅಲ್ಲಲ್ಲಿ ನಿಂತು ಕೊಳಚೆ ಗುಂಡಿಗಳಾಗಿ ಮಾರ್ಪಾಡುತ್ತವೆ. ಹಾಗೆ ಕೆಲ ಹಣ ಕೆಲವು ಕಡೆ ನಿಂತು ಕೊಚ್ಛೆ ಆಗುತ್ತದೆ. ಅದರ ಕೆಟ್ಟ ವಾಸನೆ ಸಮಾಜಕ್ಕೆ ಬಡಿದು,ಇಡೀ ಹಣವನ್ನೇ ಕೆಟ್ಟದ್ದು ಎಂದು ಬಿಂಬಿಸಿಬಿಟ್ಟಿತಾ?…ಗೊತ್ತಿಲ್ಲ. ಅಥವಾ ಹಣ ತಾನಿರುವ ಸ್ಥಾನಕ್ಕನುಗುಣವಾಗಿ ತನ್ನ ಗುಣವನ್ನು ಬದಲಾಯಿಸಿ ಕೊಳ್ಳುತ್ತಾ? ಮೋಸಗಾರನ ಹಣ ಕೆಟ್ಟದ್ದು, ಸನ್ಯಾಸಿಯ ಹಣ ಒಳ್ಳೆಯದಾ?! ಆದರೂ ನೀರಿನಂತೆ ಹರಿದುಬಂದು ಒಂದೆಡೆ ಸೇರುವ ಇದರ ಗುಣ ನನಗೆ ಅದ್ಭುತವಾಗಿ ಕಾಣುತ್ತದೆ.
ಒಂದು ಮಾಹಿತಿಯ ಪ್ರಕಾರ ಪ್ರಪಂಚಾದ್ಯಂತ ಧಾರ್ಮಿಕ (ಎಲ್ಲಾ ಧರ್ಮಗಳು ಸೇರಿ) ಕೆಲಸಗಳಿಗೆ ಹೆಚ್ಚು ಹಣ ವಿನಿಯೋಗವಾಗುವುದಂತೆ!ಅಲ್ಲಿಂದ ಮತ್ತೆ ಸಮಾಜಕ್ಕೆ ಹಲವು ಮುಖಗಳಲ್ಲಿ ಬಂದು ತನ್ನ ವೃತ್ತಿ ಅರಂಭಿಸುತ್ತದೆ, ಸಮುದ್ರದ ನೀರು ಆವಿಯಾಗಿ,ಮಳೆಯಾಗಿ,ಮತ್ತೆ ನದಿಯಾಗಿ ಹರಿದಂತೆ.
ಈ ಹಣದ ಸ್ವರೂಪವನ್ನು ಇದರ ವಿರಾಟ ರೂಪದಲ್ಲಿ ನೋಡಿದ ಮೇಲೆ ನಮ್ಮ ನಿಮ್ಮ ಕೈಯಲ್ಲಿರುವುದು ಒಳ್ಳೆಯ ಹಣವಾ ಅಥವಾ ಕೆಟ್ಟ ಹಣವಾ?! ಅನ್ನುವ ಜಿಜ್ಞಾಸೆ ಹುಟ್ಟುವುದು ಸಾಮಾನ್ಯವಲ್ಲವೇ? ಅಥವಾ ಹಣ ಹಣವೇ , ಒಳ್ಳೆಯದು,ಕೆಟ್ಟದ್ದು ಅನ್ನುವುದು ನಮ್ಮ ಮಾನಸಿಕ ಭ್ರಮೆಯಾ? ಇಲ್ಲವಾದರೆ ನಮ್ಮ ನಮ್ಮ ವಿವೇಚನೆಯ ಪರಿಧಿಯಲ್ಲಿ ಹಣದ ಸ್ವರೂಪವನ್ನು ಹಿಡಿದಿಟ್ಟು ಬಿಟ್ಟಿದ್ದೇವಾ? ಇಂತಹ ಸರಣಿ ಸರಣಿ ಪ್ರೆಶ್ನೆಗಳು ನನ್ನನ್ನು ಒಂದು ಕಾಲದಲ್ಲಿ ಕಾಡಿದ್ದಿದೆ. ಉತ್ತರ ಸಿಕ್ಕಿತ್ತಾ??…ನಾನಾ ರೂಪದಲ್ಲಿ ನನ್ನ ಬಳಿ ಬರುತ್ತಿದ್ದ ಹಣವನ್ನು ಇದು ಹೀಗೆ ಅಂತ ಹೇಗೆ ಹೇಳಲಿ??
ಒಳ್ಳೆಯ ನೀರನ್ನು ಕುಡಿದವರು ಆರೋಗ್ಯವಂತರಾಗಿಯೂ, ಕೊಚ್ಛೆ ನೀರು ಕುಡಿದವರು ಅನಾರೋಗ್ಯ ಪೀಡಿತರಾಗುವುದು ನೈಸರ್ಗಿಕವಾಗಿ ಕಂಡುಕೊಂಡ ಸತ್ಯದಂತೆ, ಹಣ ಬೀರುವ ಪರಿಣಾಮದಿಂದ ಕೆಟ್ಟದ್ದೇ,ಒಳ್ಳೆಯದೇ ಅಂತ ಹೇಳಬಹುದು. ಯಾವ ಹಣ ಬಂದಾಗ ನನಗೆ ಆತ್ಮಸಂತೋಷ ಆಗಿ ಧನ್ಯತೆಯ ಭಾವನೆ ಆಗುತ್ತಿತ್ತೋ ಆಗ ಅದು ಒಳ್ಳೆಯ ಹಣ ಅಂತಾನೂ, ಯಾವ ಹಣ ಬಂದಾಗ ಮನಸ್ಸಿಗೆ ಕಿರಿಕಿರಿಯಾಗಿ,ನಿದ್ರೆ ಇಲ್ಲದೆ ಒರಳಾಡುತ್ತಿದ್ದೇನೋ ಆಗ ಕೆಟ್ಟ ಹಣ ಅಂತಲೂ ನನ್ನಷ್ಟಕ್ಕೆ ಅರ್ಥೈಸಿಕೊಂಡಿದ್ದೇನೆ. ಒಳ್ಳೆ ಹಣ ಸ್ವಚ್ಛ ತಿಳಿನೀರಂತೆ ನಳ ನಳಿಸುತ್ತಿದ್ದರೆ, ಕೆಟ್ಟ ಹಣ ತಡೆದುಕೊಳ್ಳಲಾರದ ದುರ್ವಾಸನೆಯಿಂದ, ನರಳುವವರ ಆಕ್ರಂದನದಿಂದ, ವಾಸಿಯಾಗದ ರೋಗಗಳ ರಕ್ತ,ಕೀವುಗಳಿಂದ ತುಂಬಿರುತ್ತಿತ್ತು. ಸ್ವಚ್ಛ ಮಾಡಲೆಂದು ಹಲವಾರು ತೀರ್ಥಕ್ಷೇತ್ರ ಅಲೆದು, ಅಲ್ಲಿಯ ಪವಿತ್ರ ತೀರ್ಥಗಳಿಂದ ತೊಳೆದು ನೋಡಿದೆ. ಆಗಲಿಲ್ಲ. ಇನ್ನು ಅದರ ಹಿಂಸೆ ಭರಿಸಲಾಗದೆ ಮತ್ತೆ ನರಳುವವರಿಗೆ,ಹಸಿದವರಿಗೆ ಕೊಡುತ್ತಿದ್ದೆ ನೋಡಿ, ಆಗ ಮತ್ತೆ ಅದು ಗರಿಗರಿಯಾಗಿ ನಳಿಸಿದಂತೆ ಅನ್ನಿಸುತ್ತಿತ್ತು!
ಹಾಗಾಗಿ ನ್ಯಾಯವಾಗಿ ಸಂಪಾದಿಸಿದವರ ಹಣ ಒಳ್ಳೆಯದಾ,ಕೆಟ್ಟ ರೀತಿಯಲ್ಲಿ ಶೇಖರಿಸಿದ ಹಣ ಕೆಟ್ಟದ್ದಾ ಅಂತ ನಾನಿನ್ನು ನಿರ್ಧರಿಸುವ ಸ್ಥಿತಿ ತಲುಪಿಲ್ಲ. ಯಾಕೆಂದರೆ ನನ್ನಲ್ಲಿಯ ಹಣ ಎಂತಹದ್ದು ಅಂತಾನೇ ತಿಳಿಯದ ಅಜ್ಞಾನದಲ್ಲಿ ನಾನಿದ್ದೇನೆ. ವ್ಯಾಪಾರದ ಸಂತೆಯಲ್ಲಿ ನನ್ನ ಸರಕನ್ನು ಮಾರುವ ಭರದಲ್ಲಿದ್ದೇನೆ. ಬಂದ ಹಣದಿಂದ ಆಹಾರ ಪದಾರ್ಥ ಕೊಂಡು ಹೋಗಿ ಸಂಸಾರ ಸಮೇತನಾಗಿ ಊಟ ಮಾಡುತ್ತೇನೆ. ಊಟ ಮಾಡಿ ನೆಮ್ಮದಿಯಿಂದ ನಿದ್ದೆ ಮಾಡಿ,ಮಾಡಿದ ಊಟ ಮೈಗೆ ಹತ್ತಿ ಚೇತನ ಸಿಕ್ಕಿತ್ತಾ ಒಳ್ಳೆಯದೆಂದೂ, ಬಾರದ ರೋಗ ಬಂದು,ಗಳಿಸಿದ್ದೆಲ್ಲ ಖರ್ಚು ಮಾಡಿ ದಿವಾಳಿಯಾಗಿ ಭಿಕಾರಿಯಾದ್ರೆ ಕೆಟ್ಟದ್ದೆಂದೂ ಸಮಬುದ್ಧಿಯ,ಸಹೃದಯಿ,ವಿದ್ಯಾವಂತರು,ವಿವೇಕಿಗಳು ಅರ್ಥೈಸುತ್ತಾರೆ.
ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಎರಡನೇ ಲೇಖನದಲ್ಲಿ ಶೇಖರಿಸಿದ ಹಣ ತರುವ ಅಪಾಯಗಳನ್ನು ತಿಳಿಸಿದ್ದಾರೆ.
ತಾಮ್ರದ ನಾಣ್ಯ ತಾಯಿ ಮಕ್ಕಳನ್ನು ಅಗಲಿಸುತ್ತೆ. ಸಂಬಂಧಗಳಲ್ಲಿ ಹಣದ ವ್ಯವಹಾರ ಬೇಡ ಅಂತ ಮನೆಗಳಲ್ಲಿ ಹಿರಿಯರಾಡುವುದು ಇತ್ತೀಚಿನ ತನಕ ಸಾಮಾನ್ಯವಾಗಿತ್ತು. . ಹಣದ ವಿಷಯ ಕುಟುಂಬದ ಕೆಲವರಿಗೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು. ಕುಟುಂಬದ ಒಡೆಯನನ್ನು ಬಿಟ್ಟರೆ ಒಬ್ಬಿಬ್ಬರು ಮಾತ್ರ ಅದರ ವಿಚಾರಕ್ಕೆ ಅರ್ಹರು ಎಂಬಂತಿತ್ತು ನಮ್ಮ ಅವಿಭಕ್ತ ಕುಟುಂಬಗಳ ಹಣಕಾಸು ವಿಚಾರ. ಬೇರೆ ಎಲ್ಲರ ಭಾವನೆಯಲ್ಲಿ ಹಣ ಪಾಷಾಣ(ವಿಷ) ಸಮ ಅಂತ ಬಿಂಬಿತವಾಗಿರುತ್ತಿತ್ತು.ಈಗಿನ ರೀತಿ ಎಲ್ಲಿಯಂದರಲ್ಲಿ ನಾಣ್ಯಗಳು,ನೋಟುಗಳು ಆಗ ಕಾಣ ಸಿಗುತ್ತಿರಲಿಲ್ಲ.
ಇದು ಮನೆಗಳ ವಿಚಾರ ಆದರೆ, ಇನ್ನು ಊರ ವಿಚಾರದಲ್ಲೂ ಅಷ್ಟೇ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರ ಹತ್ತಿರ ಮಾತ್ರ ಹಣ ಇರ್ತಿತ್ತು. ಶೆಟ್ಟರ ಅಂಗಡಿಗಳಲ್ಲೂ ನಾಣ್ಯದ ವಿನಿಮಯಕ್ಕಿಂತ ಹೆಚ್ಚಾಗಿ ಹೊಲಗಳಲ್ಲಿ ಬೆಳೆಯುತ್ತಿದ್ದ ಕಾಳು, ದವಸ ಧಾನ್ಯ,ಹುಣಸೇ ಹಣ್ಣು, ಕೆಲವು ಕಾಡಿನ ಉತ್ಪನ್ನಗಳು ವಿನಿಮಯಕ್ಕೆ ಉಪಯೋಗಿಸಲ್ಪಡುತ್ತಿದ್ದವು. ಉಪ್ಪು ಬೇಕೆಂದರೆ ಪಾವು ರಾಗಿ ಅಥವಾ ಜೋಳ ಅಂಗಡಿಗೆ ಹಾಕಿ ತರುತ್ತಿದ್ದರು. ಕೊನೆಗೆ ಬೀಡಿ, ಕಡ್ಡಿಪುಡಿ(ತಂಬಾಕು) ಬೇಕೆಂದರೂ ಮನೆಗಳಲ್ಲಿ ಚೀಲ,ಚೀಲ ಇರುತ್ತಿದ್ದ ಕಾಳನ್ನು ಅಂಗಡಿಗೆ ಹಾಕಿ ವ್ಯವಹಾರ ಮಾಡುತ್ತಿದ್ದರು. ಅಷ್ಟೇ ಅಲ್ಲ, ಏನಕ್ಕಾದರೂ ಹಣ ಬೇಕಾದಾಗಲೂ ಕಾಳು ಹಾಕಿ ಹಣ ತೆಗೆದುಕೊಳ್ಳುವ ಪದ್ದತಿ ಸಾಮಾನ್ಯವಾಗಿರುತ್ತಿತ್ತು.
1,2,3,5,10,20 ಪೈಸೆ ನಾಣ್ಯಗಳಿಗೆ ಭಾರೀ ಬೆಲೆ. ಅದಕ್ಕಿಂತಲೂ ಮುಂಚೆ ಡಂಬಡಿ,ದುಗ್ಗಾಣಿ ಅಂತ ಕರೆಯಿಸಿಕೊಳ್ಳುವ ಬಿಲ್ಲೆಗಳು ಇದ್ದವು ಅಂತ ತಾತ ಹೇಳುತ್ತಿದ್ದರು. 25,50 ಪೈಸೆ ಮತ್ತು 1ರೂಪಾಯಿ ನಾಣ್ಯ ಇತ್ತು.(ಈಗಲೂ ಇವೆ,ಬೆಲೆ ಕಳೆದುಕೊಂಡು) 6 ಪೈಸೆಗೆ ಆಣೆ ಅಂತಲೂ 25 ಪೈಸೆಗೆ ನಾಲ್ಕಾಣೆ,50 ಪೈಸೆಗೆ ಎಂಟಾಣೆ ಅಂತ ಕರೆಯುತ್ತಿದ್ದೆವು. ಮೊದಲೇ ಹೇಳಿದಹಾಗೆ ಇವು ಎಲ್ಲರ ಹತ್ತಿರ ಇರ್ತಿರಲಿಲ್ಲ.
ಇನ್ನು ನೋಟಿನ ವಿಷಯ ಎಂದರೆ 1,2,5,10,20,50,100 ರ ನೋಟುಗಳು. ಅಪ್ಪನ ತಿಂಗಳ 130 ರೂಪಾಯಿ ಸಂಬಳ ಬಂದಾಗ, ಅಜ್ಜಿಗೆ ಕೆಲವು ನೋಟುಗಳನ್ನು ತೋರಿಸುತ್ತಿದ್ದರಂತೆ. ಅಲ್ಲಿಯವರೆಗೆ ಅಜ್ಜಿ ಆ ನೋಟುಗಳನ್ನು ನೋಡೇ ಇರುತ್ತಿರಲಿಲ್ಲ ಅಂತೆ. ಸಮಾಜದಲ್ಲಿ ಅಷ್ಟೊಂದು ವಿರಳ ನೋಟು,ನಾಣ್ಯಗಳು. ಊರಲ್ಲಿ ಸಾಹುಕಾರ, ಶೆಟ್ಟರು ಎನ್ನಿಸಿಕೊಂಡವರ ಹತ್ತಿರ ಬಿಟ್ಟರೆ, ಬೇರೆಯವರ ಹತ್ತಿರ ನೋಟುಗಳು ನೋಡಲೂ ಸಿಗುವುದು ಕಡಿಮೆ. ಹತ್ತು ರೂಪಾಯಿ ಜೇಬಲ್ಲಿ ಇಟ್ಟು ಹೊರಟವ ಊರ ಸಾಹುಕಾರನೆ ಆಗಿರಬೇಕಿತ್ತು!.
ಇದು 70ರ ದಶಕದ ತನಕ ಇದ್ದ ಭಾರತದ ಗ್ರಾಮೀಣ ಭಾಗದ ಹಣಕಾಸಿನ ಚಿತ್ರಣ. ಸಾವಿರ ರೂಪಾಯಿ ನೋಟುಗಳೂ ಇದ್ದವಂತೆ. ಪ್ರಥಮ ಬಾರಿಗೆ,ತುರ್ತುಪರಿಸ್ಥಿತಿ ಆದ ನಂತರ 1977 ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಂತ ಬಂದ ಮುರಾರ್ಜಿ ದೇಸಾಯಿ ಸರ್ಕಾರ ಅಮಾನತ್ತು ಮಾಡಿತ್ತು. ನಮ್ಮೂರಲ್ಲಿ ಇರಲಿಲ್ಲ, ನಾನೂ ನೋಡಿಲ್ಲ. ಒಟ್ಟಾರೆ ಹಣದ ವಿನಿಮಯ ಕೆಲವೇ ಕೆಲವು ಜನರಿಗೆ ಸೀಮಿತವಾಗಿತ್ತು.
ಇನ್ನೂ 30 ವರ್ಷ ಹಿಂದಕ್ಕೆ,ಸ್ವತಂತ್ರ ಬಂದ ವೇಳೆಯ ಭಾರತದ ಹಣಕಾಸು ಪರಿಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ. ನನಗೆ ನೆನಪಿರುವ ಹಾಗೆ, ಸುಮಾರು ಐದಾರು ಅಂಗಡಿಗಳ ನಮ್ಮೂರಲ್ಲಿ ಅಂಗಡಿಗೊಂದರಂತೆ ದಿನಕ್ಕೆ ಸರಾಸರಿ ಹತ್ತು ರೂಪಾಯಿಗಳ ವಹಿವಾಟು ಇರುತ್ತಿತ್ತು. ಅಂದರೆ ಇಡೀ ನಮ್ಮೂರ ದಿನವೊಂದರ ವಹಿವಾಟು ಐವತ್ತರಿಂದ ಅರವತ್ತು ರೂಪಾಯಿಗಳು!
ಗಮನಿಸಬೇಕಾದ ಅಂಶವೆಂದರೆ, ಪ್ರತೀ ಮನೆಗಳಲ್ಲಿ ಅಲ್ಪ ಸ್ವಲ್ಪ ಬೆಳ್ಳಿ,ಬಂಗಾರ,ತಾಮ್ರ ಇರುತ್ತಿತ್ತು, ವ್ಯವಸಾಯೋತ್ಪನ್ನ ಸರಕುಗಳೊಂದಿಗೆ. ಹಾಗಾಗಿ ಹಣಕಾಸು ವ್ಯವಹಾರ ತನ್ನ ಗಂಭೀರತೆಯನ್ನು ಉಳಿಸಿಕೊಂಡು ಆಯ್ದ ಕೆಲವರು ಮಾತ್ರ ಇದರ ಗೊಡವೆಗೆ ಹೋಗುತ್ತಿದ್ದರು. ಆದ್ದರಿಂದ ಹಣ ಎನ್ನುವುದು ಸಾರ್ವತ್ರಿಕವಾಗಿ ಮನ್ನಣೆಗೆ ಪಾತ್ರವಾದ ಅಂಶ ಆಗಿರಲಿಲ್ಲ ಆಗ.
ಪ್ರತಿ ಹಳ್ಳಿಗಳಲ್ಲೂ ಆಗಿನ ಜೀವನ ಕ್ರಮಕ್ಕೆ ಅವಶ್ಯ ಅನ್ನಿಸಿಕೊಂಡಿದ್ದ ವೃತ್ತಿ ಧರ್ಮದವರಿದ್ದರು. ಯಾರದರೊಬ್ಬರ ಕೊರತೆ ಇದ್ದರೆ ಊರವರೆಲ್ಲ ಸೇರಿ ಬೇರೆ ಊರಿನಿಂದ ಕರೆತಂದು ತಮ್ಮ ಊರಲ್ಲಿರಲು ಅನುಕೂಲ ಮಾಡಿಕೊಡುತ್ತಿದ್ದರು. ಇವರೆಲ್ಲರ ವಿನಿಮಯ ರೂಪಕವಾಗಿರುತ್ತಿದ್ದುದು ಬೆಳೆದ ದವಸ ಧಾನ್ಯಗಳೇ. ಹಾಗಾಗಿ ಸಮಾಜಕ್ಕೂ ಈ ಹಣದ ಆವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಪಟ್ಟಣಗಳ ವ್ಯವಹಾರಕ್ಕೆ ಹಣ ಬೇಕಿತ್ತು. ಅದಕ್ಕೆ ವ್ಯಾಪಾರಸ್ಥರು ಇದ್ದರು. ಹೀಗೆ ಅನ್ಯೋನ್ಯೆತೆಯ ಸಮಾಜಕ್ಕೆ ಹಣದ ಅವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಯಾವಾಗ ನಮ್ಮ ಸಾಮಾಜಿಕ ವ್ಯವಸ್ಥೆ ಹಲವಾರು ಕಾರಣಗಳಿಗೆ ಒಡೆದು ಹೊಯ್ತೋ ಆಗ ಈ ಹಣ ಮುಂದಲೆಗೆ ಬಂದು ಬಿಡುತ್ತದೆ. ಜೀವನ ಪೂರ್ತಿ ನೋಟುಗಳನ್ನು ನೋಡದೇ, ಹಣಕಾಸಿನ ವಿನಿಮಯ ಇಲ್ಲದೇ ಬಂದಂತಹ ಜನರಿಗೆ, ಈ ಹಣ ಕೈಯಲ್ಲಿ ಒಂದು ದಿನ ಇಲ್ಲವೆಂದರೂ ಜೀವನ ನಡೆಯದ ಪರಿಸ್ಥಿತಿಗೆ ಸಮಾಜ ತಲುಪಿದಾಗ, ಆಗಿನ ಎಲ್ಲ ರೀತಿಯ ಪರಿಹಾರಕ್ಕೆ ಹಣವೇ ಮುಖ್ಯವಾಗಿ, ಅಲ್ಲಿಯ ತನಕ ಇದ್ದ ವಿಶ್ವಾಸ,ನಂಬಿಕೆ ಅಂತಹ ಮಾನವೀಯ ಗುಣಗಳನ್ನು ತಿಂದು ಹಾಕುವ ರಾಕ್ಷಸ ಹಣ ಎಲ್ಲರ ಅನಿವಾರ್ಯ ಆಗುತ್ತದೆ. ಈಗ ಎಲ್ಲರೂ ಇದರ ಬೆನ್ನು ಹತ್ತುವುದು ಜೀವನದ ಗುರಿಯಾಗಿ ಬಿಡುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆ ಬೆಳೆಸಿಕೊಂಡಿದ್ದಂತಹ,ಸಮಾಜಕ್ಕೆ ಅನಿವಾರ್ಯ ಆಗಿದ್ದಂತಹ ವೈದ್ಯ ಪದ್ದತಿ, ಗುರು ಪದ್ಧತಿಗಳಿಗೆ ಈ ಹಣದ ಸೋಂಕು ಹತ್ತದಿರಲು ರೂಢಿಸಿಕೊಂಡಿದ್ದ ಪದ್ದತಿ ನನಗೆ ಆಶ್ಚರ್ಯ ತರಿಸಿತ್ತು. ಇಂತಹ ಅನಿವಾರ್ಯ ವೃತ್ತಿಯವರು ತಮ್ಮ ಕೊಡುಗೆಗೆ ಇಂತಿಷ್ಟೇ ಹಣ ಕೊಡಬೇಕು ಎನ್ನುವ ನಿಯಮವನ್ನು ನಿಷೇಧಿಸಿದ್ದರು. ಉಪಕಾರ ಪಡೆದವರು ಸಂತೋಷದಿಂದ ಕೊಡಮಾಡುವ ದಕ್ಷಿಣೆ ಪದ್ದತಿ ಇತ್ತೇ ಹೊರತು,ಕಡ್ಡಾಯದ ಶುಲ್ಕ ಇರಲಿಲ್ಲ. ಅದೂ ಹಣದ ರೂಪದಲ್ಲಿಯೇ ಇರಬೇಕು ಎನ್ನುವ ನಿಯಮವೂ ಇರಲಿಲ್ಲ. ಏನೂ ಕೊಡದಿದ್ದರೂ ಕೃತಜ್ಞತಾಪೂರ್ವಕ ಗೌರವ ಸಾಕು ಅಂತ ಹೇಳಿದ್ದ ಆ ಸಮಾಜದ ನಿಯಮ ನನ್ನನ್ನು ಮೂಕನಾಗಿಸಿತ್ತು. ಬರೀ ಎಲೆ,ಅಡಿಕೆಗೆ ನಮ್ಮೂರಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸಿದ್ದು ಇನ್ನೂ ನನ್ನ ನೆನಪಲ್ಲಿ ಇದೆ!
ಇದರ ಹಿನ್ನಲೆಯಲ್ಲಿ ಸುಮ್ಮನೆ ಒಂದು ಸಾರಿ ನಾವು ದುಡಿದ ಹಣದ ಹೆಚ್ಚಿನ ಭಾಗ ಎಲ್ಲಿ ಹೋಗುತ್ತದೆ ಈಗ ಅಂತ ಯೋಚಿಸಿದಾಗ ನನಗೆ ಕಂಡದ್ದು ಈಗಿನ ಆಸ್ಪತ್ರೆಗಳಿಗೆ ಮತ್ತು ವಿದ್ಯಾಲಯಗಳಿಗೆ! ನಮ್ಮ ಹಿರಿಯರು ರೂಪಿಸಿದ್ದ ನಮ್ಮ ಸಂಸ್ಕಾರಯುತ ನಿಯಗಳಲ್ಲಿ ಈ ಎರಡೂ ಸಮಾಜಕ್ಕೆ ಉಚಿತವಾಗಿ ದೊರೆಯುತ್ತಿದ್ದವು. ಅವರ ದೂರದೃಷ್ಟಿಗೆ ನಮನ ಹೇಳಲೇ ಬೇಕಲ್ಲವೇ?
ಸಮಾಜದಲ್ಲಿ ನಂಬಿಕೆ,ವಿಶ್ವಾಸ,ಪ್ರೀತಿ ಕಡಿಮೆ ಆದಾಗ ಅವು ಮಾಡುತ್ತಿದ್ದ ಕೆಲಸವನ್ನು ಈ ಹಣ ಮಾಡಲು ಶುರು ಮಾಡಿತು ನೋಡಿ,ಆಗ ಎಲ್ಲರಿಗೂ ಇದು ಬೇಕಾಯ್ತು. ಹಾಗಾಗಿಯೇ ಮಾನವೀಯ ಮೌಲ್ಯ ಕಳೆದುಕೊಂಡ ಸಮಾಜಕ್ಕೆ ಹಣ ಅನಿವಾರ್ಯವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ಸಮಾಜದ ಎಲ್ಲ ಹಂತಗಳಲ್ಲಿಯೂ ಅನಿವಾರ್ಯವಾಯ್ತು. ಎಂತಹ ವಿಪರ್ಯಾಸ ಅಲ್ಲವಾ?
ಇದರ ಹಿನ್ನಲೆಯಲ್ಲೇ ಬೆಳೆದ ನಮ್ಮನ್ನೂ ಸೇರಿದ ಪೀಳಿಗೆ ಹಣಕ್ಕಾಗಿ ಎಲ್ಲ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲು ಸಿದ್ದವಾಗಿಬಿಟ್ಟಿದೆ. ಕಾರಣ ಹಣ ಈ ಎಲ್ಲ ಮೌಲ್ಯಗಳನ್ನೂ ಸರಿಗಟ್ಟುತ್ತದೆ ಅಥವಾ ಮೀರಿಸಿದೆ ಅಂತ ಭಾವಿಸಿರುವುದು.
ಈಗ ಹೇಳಿ ಸಮಸ್ಯೆ ಹಣದ್ದಾ ಅಥವಾ ಬದಲಾದ ಮೌಲ್ಯರಹಿತ ಸಮಾಜದ್ದಾ?
ಸಂಸ್ಕೃತಿಯನ್ನು ಮರೆತು,ಲಂಗು ಲಗಾಮು ಇಲ್ಲದೆ ಗುರಿತಪ್ಪಿದ ಕುದುರೆಯಂತೆ ಹಣದ ಹಿಂದೆ ಓಡುತ್ತಿರುವ ಪೀಳಿಗೆಯದ್ದಾ?? ಅದಕ್ಕೇ ಹೇಳೋದು, ನಾವೆಷ್ಟೇ ಪದವಿಗಳನ್ನು ಪಡೆದು,ವಿದೇಶ ಸುತ್ತಿ ನಾಗರಿಕತೆಯ ಮುಸುಕು ಹಾಕಿಕೊಂಡರೂ ಹಿರಿಯರ ಪಂಕ್ತಿಗಳನ್ನು ಧಿಕ್ಕರಿಸಿ ಹೋದಷ್ಟೂ ಕತ್ತಲೆಯ ಕೂಪದ ಮಂಡೂಕಗಳಾಗುತ್ತೇವೆ ಅಂತ.
ಭಾರತ ರಕ್ಷಣಾ ಸಂಶೋಧನೆಗಳಲ್ಲಿ ಮುಂಚೂಣಿಯ ರಾಷ್ಟ್ರಗಳ ಸಾಲಿಗೆ ಸೇರಿದೆ. ಇದೀಗ ಸೋಮವಾರ ನಡೆಸಿದ ಕ್ಷಿಪಣಿ ಪರೀಕ್ಷೆ ವಿಶ್ವದ ಭೂಪಟದಲ್ಲಿ ಈ ತಂತ್ರಜ್ಞಾನ ಹೊಂದಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿ.ಆರ್.ಡಿ.ಒ) ಸೋಮವಾರ ಯಶಸ್ವಿಯಾಗಿ ಹೈಪರ್ ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ವೆಹಿಕಲ್(ಎಚ್.ಎಸ್.ಟಿ.ಡಿ.ವಿ) ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಅಮೆರಿಕಾ, ಚೀನಾ ಮತ್ತು ರಷ್ಯಾ ನಂತರ ಅಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಲ್ಕನೇ ರಾಷ್ಟ್ರವಾಗಿದೆ.
ಸೋಮವಾರ ಈ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ವೀಲರ್ ದ್ವೀಪದಲ್ಲಿರುವ ಅಬ್ದುಲ್ ಕಲಾಂ ಉಡ್ಡಯನ ಕೇಂದ್ರದಿಂದ ನಡೆಸಲಾಗಿದೆ. ಒಂದು ವರ್ಷದ ಹಿಂದೆಯೇ ಈ ಪ್ರಯೋಗ ನಡೆಸಲಾಗಿದ್ದರೂ ಆಗ ಎಲ್ಲ ಮಾನದಂಡಗಳನ್ನೂ ತಲುಪಲಾಗಿರಲಿಲ್ಲ.
ಸೋಮವಾರ ನಡೆಸಲಾದ ಕ್ಷಿಪಣಿ ಪರೀಕ್ಷೆಯು ಶಬ್ದದ ವೇಗಕ್ಕಿಂತ ಆರು ಪಟ್ಟು ವೇಗವಾಗಿ ಚಲಿಸಬಲ್ಲ ತಂತ್ರಜ್ಞಾನ ಹೊಂದಿದ್ದು ಮುಂದಿನ ಐದು ವರ್ಷಗಳಲ್ಲಿ ಮೊದಲ ಹೈಪರ್ ಸಾನಿಕ್ ಕ್ಷಿಪಣಿ ನಿರ್ಮಿಸಲಿದೆ. ಈ ತಂತ್ರಜ್ಞಾನವನ್ನು ದೂರ ಪ್ರದೇಶಕ್ಕೆ ಹಾರಿಸುವ ಕ್ಷಿಪಣಿಗಳಿಗೆ ಹಾಗೂ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಹಾರಿಸಲು ಬಳಸಬಹುದು. ಈ ಕ್ಷಿಪಣಿಗೆ ದೇಸೀಯವಾಗಿ ಅಭಿವೃದ್ಧಿಪಡಿಸಲಾದ ಸ್ಕ್ರಾಮ್ ಜೆಟ್ ಪ್ರೊಪಲ್ಷನ್ ಸಿಸ್ಟಂ ಬಳಸಲಾಗಿದೆ.
ಈ ವ್ಯವಸ್ಥೆಯ ವಿಶೇಷವೆಂದರೆ ಅವು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸುತ್ತವೆ ಮತ್ತು ಉಪಗ್ರಹವನ್ನು ಕಕ್ಷೆಯ ಮೇಲೆ ಕೂರಿಸಲು ಅಗತ್ಯವಾದ ಪ್ರೊಪೆಲ್ಲೆಂಟ್ ಅನ್ನು ಕಡಿಮೆ ಮಾಡುತ್ತವೆ. ಡಿ.ಆರ್.ಡಿ.ಒ ಪರೀಕ್ಷಿಸಿದ ಕ್ಷಿಪಣಿ ತಂತ್ರಜ್ಞಾನವು ಮುಂದಿನ ತಲೆಮಾರಿನ ಹೈಪರ್ ಸಾನಿಕ್ ವಾಹನಗಳನ್ನು ಸಿದ್ಧಪಡಿಸಲು ನೆರವಾಗಲಿದೆ. ಹೈಪರ್ ಸಾನಿಕ್ ಕ್ಷಿಪಣಿಗಳು ಗಂಟೆಗೆ 3,800 ಮೈಲಿ ಅಥವಾ 6,115 ಕಿ.ಮೀ.ಗಿಂತ ವೇಗವಾಗಿ ಪ್ರಯಾಣಿಸುತ್ತವೆ, ಇದು ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳಿಗಿಂತ ಅತ್ಯಂತ ವೇಗ ಹೊಂದಿವೆ. ಇವು ಸಾಂಪ್ರದಾಯಿಕ ಅಥವಾ ಪರಮಾಣು ಬಾಂಬ್ ಗಳನ್ನು ಕೆಲ ನಿಮಿಷಗಳಲ್ಲಿ ಗುರಿ ತಲುಪಿಸಬಲ್ಲವು. ಇವು ಪ್ರಯಾಣಿಸುವಾಗ ಊಹಿಸಬಲ್ಲ ಪರಿಧಿಯನ್ನು ಅನುಸರಿಸುವುದಿಲ್ಲ. ಅವು ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ವೇಗ ಮತ್ತು ಕ್ರೂಸ್ ಕ್ಷಿಪಣಿಗಳಂತೆ ದಾರಿ ಬದಲಿಸಬಲ್ಲವು. ಇದರ ವೇಗದಿಂದ ಸಾಂಪ್ರದಾಯಿಕ ಕ್ಷಿಪಣಿ ತಂತ್ರಜ್ಞಾನಕ್ಕೆ ಕಂಡುಕೊಳ್ಳಲು ಕಷ್ಟವಾಗಿಸುತ್ತದೆ. ಈಗಾಗಲೇ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದು ಅವು ರಾಮ್ಜೆಟ್ ಎಂಜಿನ್ ಹೊಂದಿವೆ.
ಭಾರತಕ್ಕೆ ಗಡಿ ತಂಟೆ ಮಾಡುತ್ತಿರುವ ಚೀನಾ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳು, ಸಬ್ ಮೆರಿನ್ ಗಳು ಇತ್ಯಾದಿಗಳಿಂದ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಆದರೆ ಚೀನಾಗೆ ಹೈಪರ್ ಸಾನಿಕ್ ಹಡಗು ನಿರೋಧಕ ಕ್ಷಿಪಣಿಗಳಿಲ್ಲ. ಭಾರತದ ಹಡಗು ನಿರೋಧಕ ಕ್ಷಿಪಣಿಗಳು ಚೀನಾಗೆ ಹೊಸ ಆತಂಕ ಹುಟ್ಟಿಸಿದೆ. ಇದು ಚೀನಾದ ಶಕ್ತಿಯುತಗೊಳ್ಳುತ್ತಿರುವ ನೌಕಾಬಲಕ್ಕೆ ಸೆಡ್ಡು ಹೊಡೆಯುತ್ತಿದೆ.
ನಮ್ಮ ಬಾಲಿವುಡ್ ಸಂಗೀತದ ಜೀವನಾಡಿ, ಕಲಾವಿದರ ಧ್ವನಿಯಾಗಿ ಪಾತ್ರಗಳು ಹಾಡುವ ಚೇತನವಾಗಿ ಸುಮಾರು ಏಳೂವರೆ ದಶಕಗಳಿಂದ ಹಲವಾರು ತಲೆಮಾರು ಕಲಾವಿದರ ಪಾತ್ರಗಳಲ್ಲಿ ಹಾಡುತ್ತಾ ಇಂದಿಗೂ ಹಾಡುತ್ತಲೇ ಇದ್ದಾರೆ ಆಶಾ ಭೋಂಸ್ಲೆ. ಈ ಇಂಪಾದ ದನಿ ಬಹುಶಃ ಮತ್ತೊಬ್ಬರಿಗಿಲ್ಲ. ಹತ್ತಿರದ ಪ್ರತಿದ್ವಂದಿ ಇವರ ಅಕ್ಕ ಲತಾಮಂಗೇಶ್ಕರ್.
ತಂದೆ ದೀನಾನಾಥ ರವರಿಂದ ಶಾಸ್ತ್ರೀಯ ಗಾಯನವನ್ನು ಅಭ್ಯಸಿಸಿದ್ದರು. ಮುಂದೆ ಜೀವನದುದ್ದಕ್ಕೂ ಈ ಸಂಗೀತವೇ ಕೈ ಹಿಡಿಯಿತು. ಹತ್ತನೇ ವಯಸ್ಸಿನಲ್ಲಿ ಮರಾಠಿ ಚಿತ್ರವೊಂದರ ಹಿಂಬದಿಯ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು, ನಂತರ ಹಿಂದಿ ಸಿನಿಮಾಗಳಲ್ಲೂ ಅವಕಾಶಗಳು ಬಂತು.
ಯೌವನಕ್ಕೆ ಕಾಲಿಡುತ್ತಿದ್ದ ಆಶಾರವರು ಮನೆಯವರೆಲ್ಲರ ವಿರುದ್ಧವಾಗಿ ಲತಾ ಅವರ ಸೆಕ್ರೆಟ್ರಿಯಾಗಿದ್ದ ಗಣಪತ್ ಭೋಂಸ್ಲೆಯವರನ್ನು ವಿವಾಹವಾದರು. ಆದರೆ ವಿವಾಹ ಊರ್ಜಿತವಾಗಲಿಲ್ಲ. ಇಬ್ಬರು ಮಕ್ಕಳು ಮತ್ತು ಗರ್ಭಿಣಿ ಯಾಗಿದ್ದ ಆಶಾರವರನ್ನು ಮನೆಯಿಂದ ಹೊರಹಾಕಲಾಯಿತು. ವಿಧಿಯಿಲ್ಲದೆ ತವರಿಗೆ ವಾಪಸ್ಸಾದರು. ತನ್ನ ತಪ್ಪಿನ ಅರಿವಾಯಿತು. ಜೀವನವನ್ನು ಮೂರು ಮಕ್ಕಳೊಂದಿಗೆ ಹೇಗೆ ಸಾಗಿಸಬೇಕೆಂದು ಅಳುತ್ತಿದ್ದರು.
ಆಶಾ ತನ್ನ ಜೀವನದ ಜಂಜಾಟದಲ್ಲಿ ನರಳುತ್ತಿದ್ದಾಗ ಲತಾ ಅವರು ಹಲವು ಸಿನಿಮಾಗಳಲ್ಲಿ ಹಾಡಿ ವಿಖ್ಯಾತರಾದರು. ಆರ್ಥಿಕವಾಗಿ ಕಂಗಾಲಾಗಿದ್ದ ಆಶಾ ಜೀವನ ನಿರ್ವಹಣೆಗಾಗಿ ಹಾಡಲು ಶುರು ಮಾಡಿದರು. ಆದರೆ ಮೊದಮೊದಲು ಆಶಾತಾಯಿಯವರಿಗೆ ಸೈಡ್ ರೋಲ್ ಪಾತ್ರಕ್ಕೆ ಕ್ಯಾಬರೆ ಹಾಡುಗಳು ಅಥವಾ ‘ಸಿ’ ಗ್ರೇಡ್ ಸಿನಿಮಾಗಳಲ್ಲಿ ಹಾಡುವಂತಾಯಿತು. 1956ರಲ್ಲಿ ಒ ಪಿ ನಯ್ಯರ್ ಅವರ ಆಶ್ರಯದಲ್ಲಿ ಮತ್ತು
ಉತ್ತೇಜನದಿಂದ ಹಾಡಲು ಶುರು ಮಾಡಿದ ಮೇಲೆ ಅದೃಷ್ಟದ ಬಾಗಿಲು ತೆರೆಯಿತು. ಹಲವಾರು ಹಾಡುಗಳು ಬಹಳ ಹಿಟ್ ಆದವು. ಪ್ರಸಿದ್ಧರಾದ ಎಲ್ಲಾ ಸಂಗೀತ ನಿರ್ದೇಶಕರು ಆಹ್ವಾನ ನೀಡಿ ಹಾಡಿಸಿದರು . ನಮ್ಮ ದೇಶದ ಮೂಲೆ ಮೂಲೆಯಲ್ಲಿ ಆಶಾ ಅವರ ಹಾಡುಗಳು ವಿಜೃಂಭಿಸಿದವು . ಡ್ಯುಯೆಟ್ ಹಾಡುಗಳನ್ನು ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಮೊಹಮ್ಮದ್ ರಫಿ , ಮುಖೇಶ್ ಹೀಗೆ ಪ್ರಸಿದ್ಧರಾದ ಎಲ್ಲರ ಜತೆ ಹಾಡಿದ್ದಾರೆ. 1980ರಲ್ಲಿ ಸಂಗೀತ ನಿರ್ದೇಶಕರಾದ ಆರ್ ಡಿ ಬರ್ಮನ್ ಜೊತೆ ಮತ್ತೆ ವಿವಾಹವಾದರು. ಸಂತೋಷದ ಜೀವನ ಕೇವಲ ಹದಿನಾಲ್ಕು ವರ್ಷಗಳು ಮಾತ್ರ. ಪತಿ ಹೃದ್ರೋಗದಿಂದ ದೈವಾಧೀನರಾದರು.
ಆಶಾ ಭೋಸ್ಲೆ ಅವರ ಕಂಠದಲ್ಲಿ ಅದೆಷ್ಟು ಇಂಪು ತಂಪು ಇದೆಯೆಂದರೆ ಎಂಥವರಿಗೂ ಗಾನಸುಧೆಯನ್ನು ಕೇಳುತ್ತಿದ್ದರೆ ಮನದಲ್ಲಿ ಸಂತೋಷದ ಅಲೆಗಳು ಏಳುತ್ತವೆ. ಅದೇನು ಸ್ಫೂರ್ತಿ, ಸಕಾರಾತ್ಮಕವಾಗಿ ಹಾಡುವ ಅವರನ್ನು ನೋಡುತ್ತಿದ್ದರೆ ಮತ್ತಷ್ಟು ಆನಂದ. ದುಃಖ ಕಷ್ಟಗಳಿಲ್ಲದ ಕನಸಿನ ಲೋಕದಲ್ಲಿ ತೇಲುತ್ತೇವೆ ಎನಿಸುತ್ತದೆ. ಅವರು ಹಾಡುವ ಪ್ರಣಯಗೀತೆಗಳಂತೂ ಯುವ ಜನತೆಗೆ ಬಹಳ ಇಷ್ಟ….ತಮ್ಮ ಜೀವನದ ಝಲಕ್ ಕಾಣುತ್ತಾರೆ.
ಆಶಾರವರ ಸ್ಟೈಲ್ ನಲ್ಲಿ ಬಹಳ ವೈವಿಧ್ಯತೆಯಿರುತ್ತದೆ. ಅವರು ಹಾಡುವ ಹಾಡಿನ ರೇಂಜ್ ಬಹುಶಃ ಬೇರೆ ಯಾರಿಗೂ ತಲುಪಲು ಸಾಧ್ಯವಿಲ್ಲ.ಅಷ್ಟು ಸಲೀಸಾದ ದನಿಯ ಏರಿಳಿತಗಳು. ಲಿರಿಕ್ಸ್ ನಲ್ಲಿ ಸ್ಪಷ್ಟತೆ ಹಾಗೂ ಹಾಡುವಾಗ ಅವರು ಅನುಭವಿಸುವ ಸಂತಸ, ಪ್ರೇಕ್ಷಕರೂ ಗುನಗುನಾಯಿಸುವಂತೆ ಮಾಡುತ್ತದೆ. ಯಾವುದೋ ಮಾಯಾಲೋಕದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ಮಾಡುತ್ತದೆ! 1981ರ ಉಮರೋಜಾನ್ ಚಿತ್ರದ ರೇಖಾಳ ದುಃಖತಪ್ತ ಅಭಿನಯ ಹಾಗೂ ಅದಕ್ಕೆ ತಕ್ಕ ಆಶಾರ ವಿರಹ ಗಾನ ಎಂತಹ ಸಂಜೋಗ್. ನಿಮ್ಮ ಕಣ್ಣಲ್ಲೂ ಎರಡು ಹನಿ ನೀರು ಬರುತ್ತೆ . ಎದೆ ಕಿವುಚಿದಂತಾಗುತ್ತದೆ . ಜ಼ರಾಸೆ ಝೂಮ್ ಲೆ … DDLJಯ ಈ ಗಾನ ಕೇಳಿದಾಗ ಹಾಡಿನ ಜತೆ ನೀವೂ ಡ್ಯಾನ್ಸ್ ಮಾಡುತ್ತೀರ! . ಆಶಾ ಅವರು ನಮ್ಮ ಕನ್ನಡದಲ್ಲೂ ಹಾಡು ಹಾಡಿದ್ದಾರೆ.
ಎಲ್ಲಾ ಸಂಗೀತ ಕಾರ್ಗಯಕ್ರಮಗಳಲ್ಲೂ ಅವರು ಬಿಳಿಯ ರೇಷ್ಮೆ ಕಾಂಟ್ರಾಸ್ಟ್ ಬಾರ್ಡರ್ ಇರುವ ಸೀರೆ ಉಟ್ಟಿರುತ್ತಾರೆ. ಕಿವಿಯಲ್ಲಿ ದೊಡ್ಡದಾದ ವಜ್ರದ ಓಲೆ , ಚಿನ್ನದ ನೆಕ್ಲೇಸ್ ಮತ್ತು ಕೈಗೆ ಮುತ್ತಿನ ಪಟ್ಟಿ ಅದಕ್ಕೆ ತೂಗಾಡುವ ವಜ್ರಗಳು. ಶ್ವೇತಾಂಬರಿಯಾದ ಆಶಾ ನೋಡಲು ನಿಜಕ್ಕೂ ಗಾನ ದೇವತೆಯೇ ಭೂಮಿಗೆ ಇಳಿದು ಬಂದಂತಿರುತ್ತದೆ.
2018ರಲ್ಲಿ ಬೆಂಗಳೂರಿಗೆ ಬಂದು ಇಷ್ಟು ಇಳಿ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ನಮ್ಮೆಲ್ಲರನ್ನೂ ರಂಜಿಸಿದ್ದಾರೆ. ಸಾವಿರಾರು ಜನ ಮೂರು ಸಾವಿರ ರೂಪಾಯಿಯ ಟಿಕೆಟ್ ತೆಗೆದುಕೊಂಡು ಕಿಕ್ಕಿರಿದು ನೆರೆದಿದ್ದರು.ಇಷ್ಟೆಲ್ಲಾ ನಮ್ಮನ್ನು ರಂಜಿಸುವ ಆಶಾ ತಾಯಿಗೆ ಹೃದಯದಲ್ಲಿ ದುಃಖ ಹೆಪ್ಪುಗಟ್ಟಿದೆ. ಮಗಳು ವರ್ಷಾ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಳು, ಮಗ ಹೇಮಂತ್ ಕ್ಯಾನ್ಸರ್ ನಿಂದ ಮರಣಿಸಿದ್ದಾನೆ, ಆದರೆ ತನ್ನ ದುಃಖವನ್ನು ಎಲ್ಲೂ ತೋರಿಸಿಲ್ಲ.
ಈ ತಿಂಗಳ 8ಕ್ಕೆ 87 ವರ್ಷ ತುಂಬುತ್ತದೆ. ಈ ವಯಸ್ಸಿನಲ್ಲಿ ವೃದ್ಧಾಪ್ಯದ ತೊಂದರೆಗಳಿರುತ್ತವೆ. ಆದರೆ ಇವರು ಇವನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ.ಆಶಾ ಸಂಗೀತ ಒಂದರಲ್ಲೇ ಪರಿಣಿತಿ ಪಡೆದಿಲ್ಲ ಇವರು ರುಚಿ ರುಚಿಯಾದ ಅಡುಗೆಯನ್ನೂ ಮಾಡುತ್ತಾರೆ. ಇವರು ದುಬೈ ಮತ್ತು ಕುವೇಟ್ ನಲ್ಲಿ ತಮ್ಮ ರೆಸ್ಟೋರೆಂಟ್ ಗಳನ್ನು ತೆಗೆದು ಬಿಸ್ನೆಸ್ ವುಮನ್ ಸಹ ಆಗಿದ್ದಾರೆ.
ಜನ್ಮದಿನವಾದ ಇಂದು (8ನೇ ಸೆಪ್ಟೆಂಬರ್ ) ಆಶಾ ತಾಯಿಯವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.
ಅಪ್ಪ ಯಾವಾಗಲೂ ಹೇಳ್ತಿದ್ದ ಮಾತುಗಳು ಇವು. ಎಳೆಯ ದಿನಗಳಲ್ಲಿ ಏನೆಂದ್ರೆ ಏನೂ ಅರ್ಥ ಆಗದಿದ್ದ ಈ ವಾಕ್ಯಗಳು ಸರಿಯಾಗಿ ಅರ್ಥವಾದಾಗ ನಾನು ಸಿವಿಲ್ ಎಂಜಿನಿಯರಿಂಗ್ ಪದವೀಧರನಾಗಿ, ಹಸಿದ ಹೊಟ್ಟೆಯಲ್ಲಿ ಎಷ್ಟೋ ದಿನ ಮಲಗಿ, ಆ ವಾಕ್ಯಗಳಿಗೆ ಅನ್ನಕ್ಕೆ ಬದಲಾಗಿ ಹಣ ಎನ್ನುವುದನ್ನು ನಾನೇ ಸೇರಿಸಿಕೊಂಡು ದಿನವೂ ನೋಡುವ ಕನ್ನಡಿ ಪಕ್ಕ ಬರೆದುಕೊಂಡಿದ್ದೆ ಮತ್ತು ಈ ವಾಕ್ಯಗಳ ಮೇಲೆ ಕಣ್ಣು ಹಾಯಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ.
ಮಕ್ಕಳ ಕೈಯಲ್ಲಿ ಹಣ ಕೊಡಬಾರದು,ಕೊಟ್ಟರೆ ಕೆಡುವುದಕ್ಕೆ ದೊಡ್ಡವರೇ ದಾರಿ ಹೇಳಿದ ಹಾಗೆ ಆಗುತ್ತೆ ಅಂತ ನಂಬಿದ್ದ ಅಪ್ಪ, ನನ್ನ ಕೈಗೆ ಐದು,ಹತ್ತು ಪೈಸೆಯನ್ನೂ ಕೊಡುತ್ತಿರಲಿಲ್ಲ. ಆಗ ಬೇಕೂ ಆಗಿರಲಿಲ್ಲ,ಅದು ಬೇರೆ ವಿಷಯ. ಬೇರೆ ನನ್ನ ಗೆಳೆಯರಂತೆ ನಮ್ಮೂರ ಜಾತ್ರೆಯಲ್ಲಿಯೂ ಏನನ್ನು ಕೊಂಡದ್ದು ಇಲ್ಲ. ದೀಪಾವಳಿಯ ದಿನದಂದು ಪಟಾಕಿ ಹೊಡೆಯಲೂ ಅಪ್ಪನ ಅಪ್ಪಣೆ ಇಲ್ಲ. ಇದಕ್ಕೆಲ್ಲ ನನಗೆ ಆಗ ಹಣ ಕೊಡುತ್ತಿದ್ದದ್ದು ಎಂದರೆ ನನ್ನ ಕೊನೆಯ ಚಿಕ್ಕಪ್ಪ. ಅಪ್ಪನ ಸ್ಟ್ರಿಕ್ಟ್ ರಾಜ್ಯಭಾರವನ್ನು ನನಗಿಂತ ಮೊದಲು ಅನುಭವಿಸಿದರು ಅವರು,ಹಾಗಾಗಿ ನನ್ನ ಇಷ್ಟ,ಕಷ್ಟ ಅವರಿಗೆ ಬಲು ಬೇಗ ಅರ್ಥವಾಗುತ್ತಿದ್ದವು. ಹಾಗಾಗಿ ನಾನು ಕಂಡ ಮೊದಲ ಐದು,ಹತ್ತು ಪೈಸೆಗಳು ನನ್ನ ಚಿಕ್ಕಪ್ಪನವೇ. ಅವು ಆಗ್ಗೆ ನಮ್ಮೆಲ್ಲಾ ಇಷ್ಟಾರ್ಥಗಳನ್ನು ತೀರಿಸುತ್ತಿದ್ದವು.
ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಲ್ಲಾಡಿಹಳ್ಳಿಯ ಆಶ್ರಮದಲ್ಲಿ ಮುದ್ದೆ ಊಟದೊಂದಿಗೆ ಮುಗಿಸಿದ್ದೆ. ಆ ಐದು ವರ್ಷಗಳೂ ನನ್ನ ಖರ್ಚಿಗೆಂದು ಅಪ್ಪ ,ಆಶ್ರಮಕ್ಕೆ ಕೊಡುತ್ತಿದ್ದ ಹತ್ತು ರೂಪಾಯಿಯ ಮೇಲೆ ಐದು ರೂಪಾಯಿ ಕಳುಹಿಸುತ್ತಿದ್ದರು ಎಂ. ಓ. ಮೂಲಕ. ಅದರಲ್ಲೇ ಸೋಪು,ಪೇಸ್ಟ್, ಪೆನ್, ಇಂಕು, ಪೆನ್ಸಿಲ್, ರಬ್ಬರ್, ಗ್ರಾಫ್ ಪೇಪರ್…ಇತ್ಯಾದಿ. ಎಂಜಿನಿಯರಿಂಗ್ ಓದುವಾಗ ಇದು ಐವತ್ತು ರೂಪಾಯಿಗಳಿಗೆ ಬಡ್ತಿ ಹೊಂದಿತ್ತು, ಅಷ್ಟೇ ವ್ಯತ್ಯಾಸ. ಪ್ರತಿ ತಿಂಗಳೂ ಲೆಕ್ಕ ತೋರಿಸಬೇಕು!
ಪಿಯು 2 ಓದುವಾಗ ಎಕ್ಸಾಮ್ ಟೈಂ, ರಾತ್ರಿ ತುಂಬಾ ಹೊತ್ತಿನವರೆಗೆ ಓದಬೇಕು, ಅದಕ್ಕೆ ಟೀ ಕುಡಿಯಬೇಕು, ಐದು ರೂಪಾಯಿ ಹೆಚ್ಚಿಗೆ ಮೂರು ತಿಂಗಳು ಕಳಿಸಿ ಅಂತ ಜನವರಿಯಲ್ಲಿ ಪತ್ರ ಬರೆದಿದ್ದಕ್ಕೆ ಸಾಧನೆಗೆ ಅನುಕೂಲಗಳ ಅಗತ್ಯ ಇಲ್ಲ. ಸಾಧಕ ಅವನ್ನು ಬೇಡುವುದೂ ಇಲ್ಲ. ಅರ್ಜುನ ಪಾಶು ಪತಾಸ್ತ್ರ ತರಲು ಕಾಡಿಗೆ ಹೋದಾಗ ಧರ್ಮರಾಯನನ್ನು ಅದು ಬೇಕು,ಇದು ಬೇಕು ಅಂತ ಕೇಳಲಿಲ್ಲ. ಎಲೆ ತಿಂದು,ನೀರು ಕುಡಿದು ಕೊನೆಯಲ್ಲಿ ಬರೀ ಗಾಳಿ ಸೇವನೆ ಮಾಡಿ ಪಾಶುಪತಾಸ್ತ್ರ ಪಡೆದ ಅಂತ ಉತ್ತರ ಬಂದಾಗ,ಮತ್ತೆಂದೂ ಅಪ್ಪನನ್ನು ಹಣ ಕೇಳಬಾರದು ಅಂತ ನಿರ್ಧಾರ ಮಾಡಿಬಿಟ್ಟೆ,ಹಾಗೆಯೇ ನಡೆದುಕೊಂಡೆ ಸಹಾ,ಕೊನೆಯತನಕ! ಹಾಗಾಗಿ ನನಗೆ ಹಣದ ಆವಶ್ಯಕತೆ ಯಾವಾಗಲೂ ಇದೆ ಅಥವಾ ಬೇಕು ಅಂತ ಅನ್ನಿಸಲಿಲ್ಲ ಏನೋ ಆಗ.
ಡಾಕ್ಟರ್ ಆಗಬೇಕು ಅಂತ ಬಹುದಿನದ ಕನಸು ನನಗೆ. ಬರೀ ಒಂದು ಮಾರ್ಕ್ ಲ್ಲಿ ನನಗೆ ಸರ್ಕಾರಿ ಸೀಟು ತಪ್ಪಿದ್ದ ದಿನ ಪೂರ್ತಿ ಬಳ್ಳಾರಿ ಮೆಡಿಕಲ್ ಕಾಲೇಜ್ ಎದುರಿಗೆ ಕುಳಿತುಕೊಂಡು ಅತ್ತಿದ್ದೆ. ಒಂದು ವೇಳೆ ಡಾಕ್ಟರ್ ಆಗಿದ್ದರೆ,ಇನ್ನೂ ಓದುತ್ತಲೇ ಇರ್ತಿದ್ದೆ ಏನೋ…ಆಗ ಆಶ್ರಮದಲ್ಲಿ ಆಯುರ್ವೇದ ಕಾಲೇಜು ಇದ್ದಿದ್ದರೂ ಅಲ್ಲಿಯೇ ಓದಿ ಬಿಡುತ್ತಿದ್ದೆ,ಶಿಸ್ತಿನ ಜೀವನ ರೂಪಿಸಿಕೊಂಡು. ಅದಾಗಲಿಲ್ಲ ಅಂತ ಸುರತ್ಕಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಸೀಟ್ ಸಿಕ್ಕಿದೆ, ಒಳ್ಳೆಯದು ಹೋಗಿ ಬಿಡು ಅಂದ್ರು. ಆಗ ಎಂಜಿನಿಯರಿಂಗ್ ಲ್ಲಿ ಎಷ್ಟು ಭಾಗಗಳು ಇದ್ದವು ಅಂತಾನೂ ಗೊತ್ತಿಲ್ಲ! ಬೇಕಿಲ್ಲದ ಹೆಂಡತಿಯೊಡಗಿನ ಸಂಸಾರ ಆಯ್ತು ನನ್ನ ಎಂಜಿನಿಯರಿಂಗ್. ಮುಂದೆ ಓದಲು ಮನಸ್ಸಿರಲಿಲ್ಲ, ಸರ್ಕಾರಿ ಸ್ಟೈಪೆಂಡ್ ನೊಂದಿಗೆ ಎಂ ಟೆಕ್ ಸೀಟ್ ಸಿಕ್ಕರೂ. ಅದೇನೋ ನನಗೆ ಹೃದಯಪೂರ್ತಿ ಇಷ್ಟ ಇಲ್ಲದ್ದನ್ನು ಮಾಡಲು ಇಂದಿಗೂ ಆಗಲ್ಲ. ನನ್ನ ಜೀವನದಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಏನನ್ನೂ ಮಾಡಿಲ್ಲ,ಎಷ್ಟೇ ಕಷ್ಟ ಬಂದರೂ. ನನ್ನ ಈ ಗುಣ ನನಗಷ್ಟೇ ಅಲ್ಲ, ನನ್ನ ಸುತ್ತ ಇರುವವರಿಗೂ ತೊಂದರೆ ಮಾಡುತ್ತದೆ ಅಂತಾದ ಮೇಲೆ, ಸ್ವಂತವಾಗಿ ಜೀವನ ರೂಪಿಸಿಕೊಳ್ಳಲು ಪ್ರಾರಂಭಿಸಿದೆ ನೋಡಿ,ಅಲ್ಲಿಂದ ಶುರು ಆಯ್ತು ಜೀವನದ ಮತ್ತೊಂದು ಮುಖದ ದರ್ಶನ! ಮತ್ತು ಹಣ,ಅನ್ನದ ಬೆಲೆ ಏನು ಅನ್ನುವ ವಿಷಯ.
ಬಳ್ಳಾರಿಯಲ್ಲಿ ಈಗ ನನ್ನ ವೃತ್ತಿ ಆರಂಭಿಸುವವರು 3-4 ವರ್ಷಗಳಲ್ಲಿ ಎಸಿ ಕಾರ್ ಗಳಲ್ಲಿ ಅಡ್ಡಾಡುತ್ತಾರೆ. 90 ರ ದಶಕ ಹಾಗಿರಲಿಲ್ಲ. ನಾನು ಎಸಿ ಕಾರಿನಲ್ಲಿ ಅಡ್ಡಾಡಲು ಬರೋಬ್ಬರಿ 10 ವರ್ಷ ಹಿಡಿದವು. ಅದರ ಮಧ್ಯೆ ಮದುವೆ,ಮನೆ. ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲದರ ಮಧ್ಯೆ ಇವತ್ತಿಗೂ ಸಮಾಧಾನದ ವಿಷಯ ಎಂದರೆ ನಾನಂದು ಕೊಂಡ ಜೀವನವನ್ನು,ಅಂದು ಕೊಂಡಿದ್ದಕ್ಕಿಂತಲೂ ಹೆಚ್ಚಿನ ಸ್ತರದಲ್ಲಿ ಯಾರನ್ನೂ ನೋಯಿಸದೆ,ಹಿಂಸಿಸದೆ ಸ್ವಂತವಾಗಿಯೇ ರೂಪಿಸಿಕೊಂಡೆ ಅನ್ನುವುದು. ಇದೇ ಈ ಸಮಾಧಾನವೇ ನನ್ನಲ್ಲಿ ಇವತ್ತಿಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿರುವುದು. ದಾರಿ ಮುಖ್ಯವಲ್ಲ,ಗುರಿ ಮುಖ್ಯ ಅನ್ನುವ ಒಂದು ಸಿದ್ದಾಂತ ಇದೆ. ಇದಕ್ಕೆ ನನ್ನದೇ ಆದ ತಕರಾರು ಇದೆ. ಗುರಿ ಮುಟ್ಟಿದ ಮೇಲೂ ಜೀವನ ಆನಂದವಾಗಿರಬೇಕು ಅಂತಾದರೆ,ನಡೆದು ಬಂದ ದಾರಿಯ ಪಾತ್ರ ತುಂಬಾ ಇರುತ್ತದೆ. ಈ ದಾರಿಯ ನೆರಳು ಗುರಿಯ ಮೇಲೆ ಪ್ರಭಾವ ಬೀರುತ್ತವೆ. ಅದಕ್ಕೆ ಸಾಕಷ್ಟು ನಿದರ್ಶನ ದಿನ ಬೆಳಗಾದರೆ ಎಲ್ಲರೂ ನೋಡುತ್ತೇವೆ.
ಕಾರು,ಬಂಗಲೆಗಳು ಇಲ್ಲದ ದಿನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದ ಸಂಸಾರಗಳು, ಅವೆಲ್ಲವುಗಳನ್ನು ಹೊಂದಿಯೂ ಅಪಘಾತಕ್ಕೀಡಾಗಿರುವುದು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ ಕೂಡಾ. ನೆಪಕ್ಕೆ ನಾವು ಯಾರನ್ನೋ ಹೊಣೆ ಮಾಡಿದರೂ,ಆಳದಲ್ಲಿ ನಡೆದು ಬಂದ ದಾರಿಯ ಕರಿ ನೆರಳು ಅಂತಹ ಸಂದರ್ಭದಲ್ಲಿ ಕಾಣುತ್ತೇವೆ. ಎಷ್ಟೋ ಸಾರಿ ಹಣ ಎಲ್ಲವನ್ನೂ ಸರಿದಾರಿಗೆ ತರುತ್ತದೆ ಅನ್ನುವ ಅಂಶ ಇತ್ತೀಚೆಗೆ ಸಮಾಜದಲ್ಲಿ ಗಾಢವಾದ ಪ್ರಭಾವ ಬೀರುತ್ತದೆ. ಅದು ತಪ್ಪು. ಹಣ ಎಷ್ಟಿರಬೇಕೋ ಅಷ್ಟಿದ್ದರೆ ಚೆನ್ನ. ಎಲ್ಲದ್ದಾಕ್ಕೂ ಹಣ ಬೇಕು,ಆದರೆ ಹಣದಿಂದಲೇ ಎಲ್ಲವೂ ಅಲ್ಲ. ಅದು ಇರದಿದ್ದಾಗ ಏನೂ ಇಲ್ಲ,ಎಲ್ಲವೂ ಶೂನ್ಯ ಅನ್ನುವ ಭ್ರಮೆ ಬರುವುದು ನಿಜ. ಅದಕ್ಕಾಗಿಯೇ ಎಲ್ಲವನ್ನು ಕಳೆದುಕೊಂಡು ಗಳಿಸುವುದು ಮೂರ್ಖತನ. ಹಣ ಒಂದೇ ಸುಖಕ್ಕೆ ಕಾರಣ ಅಂತಾಗಿದ್ದರೆ, ಇಂದು ಯಾವ ಶ್ರೀಮಂತರೂ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರಲಿಲ್ಲ ಮತ್ತು ಸಾವಿರ ಸಾವಿರ ಬಡ ಜನರು ನಗುತ್ತಾ ಜೀವನ ನಡೆಸುತ್ತಿರಲಿಲ್ಲ. ಅದೂ ಒಂದು ಜೀವನಕ್ಕೆ ಬೇಕಾದ ವಸ್ತು, ಅದೇ ಜೀವನವಲ್ಲ.
ಇಂದು ಇಡೀ ಪ್ರಪಂಚ ಇದರ ಹಿಂದೆ ಯಾವ ರೀತಿ ಓಡುತ್ತಿದೆ ಅಂದರೆ, ಯಾರೂ ಇದನ್ನು ನಿಯಂತ್ರಿಸಲು ಆಗುತ್ತಿಲ್ಲ. ಎಲ್ಲರೂ ಮರೆತಿರುವುದು ಅದರ ಹೊರತಾಗಿಯೂ ಜೀವನ ಇದೆ ಎನ್ನುವಂಥ ಅಂಶವನ್ನು. ಸಮಾಜವೂ ಹಣ ಇದ್ದವರಿಗೆ ಮಾತ್ರ ಗೌರವ ತೋರುವುದು,ಈ ನಡಿಗೆಗೆ ಇನ್ನಷ್ಟು ಹುರುಪು ತಂದಿದೆ. ಬಹುಶಃ ಮನುಷ್ಯನ ಆಸೆ ಎನ್ನುವ ಗುಣ ಈ ಹಣದಿಂದ ಉತ್ತೇಜನ ಗೊಂಡು, ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸಿ,ಬೇರೆಲ್ಲ ವಿಷಯಗಳನ್ನು ಗೌಣ ಮಾಡಿದೆಯೇನೋ ಅಂತ ನನ್ನ ಅನ್ನಿಸಿಕೆ.
ನಿಮಗೆ ಮತ್ತೊಂದು ಅಪ್ಪಟ ಸತ್ಯ ಹೇಳ್ತೇನೆ. ಈ ಹಣವನ್ನು ಗಳಿಸಿದವರು ಯಾರೂ ಅದನ್ನು ಖರ್ಚು ಮಾಡಿ ಸುಖವಾಗಿಲ್ಲ. ಅದರ ಸುಖ ಪಡುವವರು ಬೇರೆ ಯಾರೋ. ಗಳಿಸುವುದಕ್ಕಾಗಿ ಎಲ್ಲವನ್ನು ತೊರೆದವರು ಅದನ್ನು ಅನುಭವಿಸಲು ಸಮಯ ಇಲ್ಲದೆ ಸತ್ತಿರುವುದು ಕಟು ಸತ್ಯ. ಅದನ್ನು ನೋಡಿಯೂ ಎಲ್ಲರೂ ಅದರ ಗಳಿಕೆಯ ಹಿಂದೆ ಬಿದ್ದಿರುವುದು ಅದರ ಮಾಯೆ ಏನೋ ಅಂತ ತುಂಬಾ ಸಾರಿ ನನಗೆ ಅನ್ನಿಸಿದೆ. ಅದನ್ನು ಗಳಿಸಿದ ಮೇಲೆ,ಗಳಿಸಿದವರ ಹತ್ತಿರ ಕುಳಿತುಕೊಂಡು ಮಾತನಾಡಿ. ಗಳಿಸುವ ಭರದಲ್ಲಿ ಏನೆಲ್ಲಾ ಅವರು ಕಳೆದು ಕೊಂಡರು ಅಂತ ಅರ್ಥ ಆಗುತ್ತೆ.
ಇಷ್ಟೆಲ್ಲಾ ಹೇಳಿದ ನಂತರ, ನಾನು ಸರಿಯಾದ ಮಾರ್ಗದಲ್ಲೇ ಹಣ ಗಳಿಸುತ್ತಿದ್ದೇನೆ,ಅದನ್ನು ನಿಲ್ಲಿಸಿಬಿಡಬೇಕಾ ಅನ್ನುವ ಅನುಮಾನ ಬರುವುದು ಸಹಜ. ಹಾಗೆ ಹಣಕ್ಕಾಗಿಯೇ ಕರ್ಮಗಳನ್ನು ಮಾಡದೆ,ಹಣ ತಾನಾಗಿ ಬರುತ್ತಿರುವುದನ್ನು ಹಲವರಲ್ಲಿ ನಾವು ನೋಡುತ್ತೇವೆ. ಕೃಷ್ಣ ಭಗವದ್ಗೀತೆಯಲ್ಲೂ ಮಾಡಬೇಕಾದ ಕರ್ಮವನ್ನು ಪ್ರತಿಯೊಬ್ಬರೂ ಮಾಡಲೇಬೇಕು ಅಂತಾನೇ ಹೇಳಿರೋದು. ಹಣಕ್ಕಾಗಿ ಕರ್ಮ ಮಾಡೋದು, ಮಾಡಿದ ಕರ್ಮಕ್ಕೆ ಹಣ ಬರೋದು ಎರಡು ಬೇರೆ ಬೇರೆ ವಿಷಯ. ಉದಾಹರಣೆಗೆ ಒಬ್ಬ ಒಳ್ಳೆಯ ಡಾಕ್ಟರ್ ತನ್ನ 90ನೆಯ ಇಳಿ ವಯಸ್ಸಿನಲ್ಲಿ, ರಾತ್ರಿ 11 ರವರೆಗೆ ರೋಗಿಗಳನ್ನು ನೋಡುವುದನ್ನು ಗಮನಿಸಿರುತ್ತೇವೆ. ಅಲ್ಲಿ ಹಣಕ್ಕಾಗಿ ಆ ವೃದ್ಧ ಕರ್ಮ ಮಾಡುತ್ತಿಲ್ಲ. ಕರ್ಮಕ್ಕೆ ಪ್ರತಿಫಲವಾಗಿ ಹಣ ಬರುತ್ತಿರುತ್ತದೆ. ಆದರೆ ಆ ವೃದ್ಧ ವೈದ್ಯ ಬರುವ ಹಣಕ್ಕಿಂತಲೂ ಹೆಚ್ಚಿನ ಆನಂದವನ್ನು ತನ್ನ ಕರ್ಮದಿಂದ ಕಾಣುತ್ತಾನೆ. ತನ್ನೆಲ್ಲಾ ಬಾಹ್ಯ ಪ್ರಾಪಂಚಿಕ ಸುಖಗಳಿಂದ ವಂಚಿತನಾದರೂ ರೋಗಿಗಳ ಮುಗುಳ್ನಗೆಯಲ್ಲಿ ಅವರು ಸುಖ ಕಾಣುತ್ತಾರೆ. ಅಂತಹ ಸುಖವನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ.
ಹಾಗೆ ಎಲ್ಲರನ್ನೂ ಅರಸಿ ಹಣ ಬರುವುದಿಲ್ಲ. ಹಣಕ್ಕಿಂತಲೂ ಮುಖ್ಯವಾದದ್ದು ಏನೋ ಇದೆ ಅಂತಾದಾಗ ಪ್ರತಿಯೊಬ್ಬರೂ ಅಂತಹ ಕರ್ಮ ಮಾಡಬೇಕಾಗುತ್ತದೆ. ಇಲ್ಲವಾದರೆ ಸಮಾಜಕ್ಕೆ ಅಂತಹವರಿಂದ ಅನ್ಯಾಯ ಆಗುತ್ತದೆ. ಈ ಹಣದಲ್ಲಿ ಅದರ ಗಳಿಸುವ ಮಾರ್ಗಗಳನ್ನು ಅನುಸರಿಸಿ ಒಳ್ಳೆ ಹಣ,ಕೆಟ್ಟ ಹಣ ಎರಡು ವಿಧ ಇದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತಾಗ ಇದರಿಂದ ಉಂಟಾಗುವ ಎಲ್ಲ ರೀತಿಯ ಸಮಸ್ಯೆ,ತೊಂದರೆಗಳು ಇಲ್ಲವಾಗುತ್ತವೆ.ಹಣ ಎಲ್ಲರಿಗೂ ಬೇಕು, ಹಣವೇ ಎಲ್ಲವೂ ಅಲ್ಲ.
ಅಪ್ಪ ನನ್ನ ಕೈಗೆ ಎಳೆ ವಯಸ್ಸಲ್ಲಿ ಐದು,ಹತ್ತು ಪೈಸೆ ಕೊಡಲಿಲ್ಲ ಅಂತ ಬೇಸರ ಆಗ ಇತ್ತು. ಆದರೆ ಹಾಗೆ ಕೊಡದೇ ಇದ್ದುದರಿಂದ ಇಂದು ನನ್ನಲ್ಲಿ ಇರುವುದೇ ಹೆಚ್ಚಾಗಿ ಕಾಣುತ್ತಿದೆಯೇನೋ ಅನ್ನುವ ಅನುಮಾನ ತುಂಬಾ ಸಾರಿ ಬಂದಿದೆ. ನಿನಗೆ ಖರ್ಚು ಮಾಡಲು ಬರುವುದಿಲ್ಲ ಅಂತ ನನ್ನ ಹೆಂಡತಿ,ಮಕ್ಕಳು ಹೇಳುತ್ತಿದ್ದರೆ, ಅಪ್ಪ ನಿನ್ನ ಖರ್ಚು ನನಗೆ ನೋಡಲು ಆಗಲ್ಲ,ತುಂಬಾ ದುಂದು ವೆಚ್ಚ ಮಾಡುತ್ತಿದ್ದಿಯ,ಹಾಗಾಗಿಯೇ ನಿನ್ನ ಮನೆಯಲ್ಲಿ ಇರಲು ನನಗೆ ಆಗುತ್ತಿಲ್ಲ ಎನ್ನುತ್ತಿದ್ದರು.
ಈ ಹಣ, ಇದರ ಮಾಯೆ ನನಗೆ ಇನ್ನೂ ಅರ್ಥ ಆಗುತ್ತಿಲ್ಲ. ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ. ನೀವೇನಂತಿರಾ??