19.4 C
Karnataka
Monday, November 25, 2024
    Home Blog Page 156

    ಪಬ್ಜಿ ಗೇಮ್ ನಿಷೇಧ: ಹೊರಹೋದ ಬಹುದೊಡ್ಡ ಪಿಡುಗು

    ಚೀನಾದ ಅತಿಕ್ರಮಣದ ಕುತಂತ್ರದಿಂದ ಭಾರತಕ್ಕೆ ಬಲುದೊಡ್ಡ ಲಾಭ ಆಗಿದೆ. ಅದುವೇ ಮುಂದಿನ ಪೀಳಿಗೆ ಅಂದರೆ ಮಕ್ಕಳನ್ನು ಹಂತ ಹಂತವಾಗಿ ಕೊಂದು ಹಾಕುವ, ಅವರ ಮಾನಸಿಕತೆಯನ್ನೇ ಹಾಳುಗೆಡವುವ ಪಬ್ಜಿ ಗೇಮ್ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧರಿಸಿರುವುದು. ಇದರೊಂದಿಗೆ ಬಹುದೊಡ್ಡ ಪಿಡುಗು ದೇಶದಿಂದ ಹೊರ ನಡೆದಂತಾಗಿದೆ.

    ಕೊರೊನಾ ಸರಣಿಯ ಸಾರ್ಸ್, ಮಾರ್ಸ್, ಕೋವಿಡ್ -19 ಹೀಗೆ ಎಲ್ಲವೂ ಚೀನಾದ ಕೊಡುಗೆ ಎಂದು ಪರಿಗಣಿತವಾಗಿದೆ. ಜಗತ್ತಿನ ಸ್ವಾಸ್ಥ್ಯ ಕಾಪಾಡುವ ಯಾವುದೇ ಒಂದು ಉತ್ತಮ ಪ್ರಾಡಕ್ಟ್ ಚೀನಾದಿಂದ ಬಂದಿದೆ ಎಂದು ಹೆಸರಿಸಲು ಸಾಧ್ಯವೇ ಇಲ್ಲ. ಇವುಗಳ ಪೈಕಿ ಈಗ ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಎಂಬ ಗೇಮಿಂಗ್ ಕೂಡ ಸೇರ್ಪಡೆಯಾಗುತ್ತದೆ. ಮಕ್ಕಳ ಮನಸ್ಸನ್ನು ಹಾಳು ಮಾಡಿ ಅವರನ್ನು ಮಾನಸಿಕ ಗುಲಾಮರನ್ನಾಗಿಸುವ ಈ ಮೊಬೈಲ್ ಗೇಮ್ ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಮಾಡಿದೆ ಎಂದರೆ, ಒಮ್ಮೆ ಡೌನ್ ಲೋಡ್ ಮಾಡಿದರೆ ಸಾಕು ಇದೊಂದು ಮಾದಕ ದ್ರವ್ಯದಂತೆ ಕೆಲಸ ಮಾಡುತ್ತದೆ. ಅದೊಂದು ವ್ಯಸನವಾಗಿ (ಅಡಿಕ್ಷನ್) ಕಾರ್ಯ ನಿರ್ವಹಿಸಿ ಮಕ್ಕಳ ಬಾಳನ್ನೇ ಹಾಳು ಮಾಡುತ್ತದೆ.

    ಅಡಿಕ್ಷನ್ ಪ್ರಮಾಣ

    ಇತ್ತೀಚೆಗಷ್ಟೇ ಪಂಜಾಬಿನ 17 ವರ್ಷದ ಹುಡುಗನೊಬ್ಬ ತನ್ನ ಹೆತ್ತವರ ಬ್ಯಾಂಕ್ ಅಕೌಂಟ್ ನಿಂದ 16 ಲಕ್ಷ ರೂ.ಗೆ ಕನ್ನ ಹಾಕಿದ್ದ. ಕೇಳಿದರೆ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಪಾಠಕ್ಕಾಗಿ ಈ ಹಣ ವ್ಯಯ ಮಾಡಿದ್ದೆ ಎಂದು ಸಮಜಾಯಿಸಿಕೊಟ್ಟಿದ್ದ. ಆದರೆ ನಿಜವಾಗಿ ಆತ ಈ ಪಬ್ಜಿ ಗೇಮ್ ನ ಹುಚ್ಚಾಟಕ್ಕೆ ಬಿದ್ದಿದ್ದ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳ (ವರ್ಚುವಲ್ ಸಾಮಗ್ರಿಗಳಾದ ಗನ್, ಮದ್ದು ಗುಂಡು ಇತ್ಯಾದಿ) ಖರೀದಿಗಾಗಿ ಈ ಹಣವನ್ನು ವ್ಯಯಿಸಿದ್ದ. ಅವರ ತಂದೆ ಈ ಹಣವನ್ನು ತಮ್ಮ ಆರೋಗ್ಯದ ಸಮಸ್ಯೆಯ ನಿವಾರಣೆಗಾಗಿ ಉಳಿತಾಯ ಮಾಡಿದ್ದರು. ಇದು ಹಣದ ಸಮಸ್ಯೆಯಾದರೆ ಇದನ್ನು ಆಡುತ್ತಾ ಪ್ರಾಣ ಕಳೆದುಕೊಂಡ ಮಕ್ಕಳ ಪ್ರಮಾಣವೂ ಕಡಿಮೆಯೇನಿಲ್ಲ. ಅಧಿಕೃತ ಲೆಕ್ಕಾಚಾರದ ಪ್ರಕಾರ ಇದು 10ನ್ನು ದಾಟಿದ್ದರೆ, ಉಳಿದಂತೆ ಅಜ್ಞಾತವಾಗಿ ಉಳಿದ ಪ್ರಕರಣಗಳಷ್ಟೋ ಗೊತ್ತಿಲ್ಲ. ಇದರ ವ್ಯಸನ ಎಷ್ಟರ ಮಟ್ಟಿಗೆ ಇದೆಯೆಂದರೆ, ಬೆಳಗಾವಿಯಲ್ಲಿ ಈ ಗೇಮ್ ಆಡುತ್ತಿದ್ದ ಬೈಯ್ದ ಅಪ್ಪನ ತಲೆಯನ್ನೇ ಕಡಿದು 21 ವರ್ಷದ ಮಗ ಕೊಲೆ ಮಾಡಿದ್ದು, ವಿಜಯಪುರದಲ್ಲಿ ಇನ್ನೊಬ್ಬ ಹುಡುಗ ಪಬ್ಜಿ ಗೇಮ್ ನಲ್ಲಿ ಸೋತ ಬಳಿಕ ಬಾಜಿಯಂತೆ ನೀರಿಗೆ ಹಾರಿದ ನಿದರ್ಶನಗಳೂ ಇದರಲ್ಲಿ ಸೇರಿದೆ.

    ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ಗೇಮ್ ವ್ಯಸನವನ್ನು ಹೊಂದಿರುವ ಹದಿಹರೆಯದವರ ಸಂಖ್ಯೆ  10ರಿಂದ 15 ಲಕ್ಷ ಎಂದು ಹೇಳಲಾಗುತ್ತಿದೆ.

    ಅಗಾಧ ಮೌಲ್ಯದ ಇಂಡಸ್ಟ್ರಿ

    ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಕ್ಷೇತ್ರ ಇನ್ನಷ್ಟೇ ಅಂಬೆಗಾಲು ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಮಾರ್ಟ್ ಫೋನ್ ಯಾವಾಗ ಕಾಲಿಟ್ಟಿತೋ ಆ ಕ್ಷಣದಿಂದ ಇದು ಶರವೇಗದಲ್ಲಿ ಮುನ್ನಡೆಯುತ್ತಿದೆ. ಸದ್ಯದ ಮಟ್ಟಿಗೆ 1.4 ಶತ ಕೋಟಿ ಡಾಲರ್ ಮೌಲ್ಯದ ಇದು 2022ರ ಹೊತ್ತಿಗೆ 5 ಶತ ಕೋಟಿ ಡಾಲರ್ ಮೌಲ್ಯದ ಉದ್ಯಮವಾಗಲಿದೆ. 24 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶೇ. 66 ನಗರ ವಾಸಿಗಳು ಇದರ ವ್ಯಸನ ಹಚ್ಚಿಕೊಂಡಿದ್ದಾರೆ ಎಂದು ಕೆಪಿಎಂಜಿ ವರದಿ ಹೇಳುತ್ತದೆ. ಇದರ ಜತೆಗೆ ಉದ್ಯೋಗಿಗಳು, ಮನೆಯಲ್ಲೇ ಇರುವ ಗೃಹಿಣಿಯರು ಕೂಡ ಸೇರಿದ್ದಾರಂತೆ. ಚೀನಾವು ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು ಕೂಡ ಫೋನ್ ಬಳಕೆಯ ಜತೆಗೆ ಆನ್ ಲೈನ್ ಗೇಮ್ ಪ್ರಮಾಣ ಹೆಚ್ಚಲು ಕಾರಣ ಎಂದು ಅದು ಅಭಿಪ್ರಾಯ ಪಟ್ಟಿದೆ.

    ಹಲವು ದೇಶಗಳಲ್ಲಿ ನಿಷೇಧ

    ಹೀಗೆ ಎಲ್ಲರಿಗೂ ಅನಾಹುತ ಹಂಚುವ ಚೀನಾ ಪಬ್ಜಿ ಗೇಮ್ ನ ಮೇಲೆ ಮೊದಲ ವರ್ಷವೇ ನಿರ್ಬಂಧ ಹೇರಿತ್ತು. ಅಲ್ಲಿ 13 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ ಪ್ರತ್ಯೇಕ ಆಪ್ ಕೂಡ ಚೀನಾ ಸಿದ್ಧ ಪಡಿಸಿತ್ತು.  ಡಿಜಿಟಲ್ ಲಾಕ್ ಮೂಲಕ ಇಂತಹ ನಿರ್ಬಂಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅದು ಯಶಸ್ವಿಯಾಗಿತ್ತು. ಮುಖ ಚಹರೆ ಗುರುತು, ಐಡಿ ಗುರುತು ಮೂಲಕ ಇಂತಹ ನಿರ್ಬಂಧ ಯಶಸ್ವಿಯಾಗಿತ್ತು.

    ಇದರ ಮೇಲೆ ನಿಷೇಧ ಹೇರಿದ ದೇಶಗಳ ಪೈಕಿ ಪಾಕಿಸ್ತಾನ, ಜೋರ್ಡನ್, ಇರಾಕ್ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಇದರ ಅನಾಹುತದ ಅರಿವು ಆದ ಕೂಡಲೇ ಈ ದೇಶಗಳು ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ರಾಜ್ಯಗಳು ಈ ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸಂವಿಧಾನ ನೀಡಿದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿ ಅದನ್ನು ವಜಾಗೊಳಿಸಿತ್ತು.

    ಕಾನೂನು ಹೋರಾಟ

    ಹಾಗೆಂದು ಭಾರತದಲ್ಲಿ ಈ ಮಾರಕ ಗೇಮ್ ನಿಷೇಧಕ್ಕೆ ಈ ಮೊದಲೇ ಹೋರಾಟ ಆಗಿಲ್ಲವೆಂದೇನಿಲ್ಲ. ಇದರ ನಿಷೇಧಕ್ಕೆ ಆದೇಶ ನೀಡುವಂತೆ ಕೋರಿ ಹಿರಿಯ ವಕೀಲ ಎಚ್ ಸಿ ಅರೋರಾ ಎನ್ನುವವರು ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೊಂದು ಮಾದಕ ದ್ರವ್ಯದಂತೆ ವ್ಯಸನಕ್ಕೆ ಒಳಪಡಿಸುವ ಗೇಮ್ ಎಂದವರು ಪ್ರತಿಪಾದಿಸಿದ್ದರು. ಆ ಬಳಿಕ 2019ರಲ್ಲಿ ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರ ಮತ್ತು ಭಾವನಗರದಲ್ಲಿ ಇದರ ಮೇಲೆ ನಿಷೇಧ ಹೇರಲ್ಪಟ್ಟಿತ್ತು.ಮುಂಬೈ ಹೈಕೋರ್ಟ್ ನಲ್ಲಿ ಕೂಡ ಇಂತಹುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

    ನಮಗೂ ಕರೋನ ಬಂದು ಹೋಗಿರಬಹುದೇ?

    ತನ್ನ ಇರುವಿನ ಸುಳಿವನ್ನೇ ನೀಡದೆ, ಮನುಷ್ಯರಲ್ಲಿ ಹರಡಬಹುದಾದ ಸೋಂಕು ಉಂಟಾದರೆ ಅದು ನಮಗೆ ಬಂದು ಹೋಗಿರಬಹುದೇ ಎಂಬ ಸಂಶಯವೂ ಜನರಲ್ಲಿರುತ್ತದೆ. ಕೊರೊನಾ ಸೋಂಕು ಕೂಡ ಇಂತಹ ಒಂದು ರಹಸ್ಯ ಸೋಂಕಾಗಿರುವುದು, ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿ ಕಾಣಿಸಿಕೊಳ್ಳುತ್ತಿರುವುದು ಪ್ರತಿದೇಶದಲ್ಲಿ ವರದಿಯಾಗಿರುವ ವಿಚಾರ.ಆದರೆ ಈ ಆರು ತಿಂಗಳಲ್ಲಿ ಬಂದು ಹೋಗಿರುವ ಕೆಮ್ಮು-ಜ್ವರಗಳೆಲ್ಲ ಕೋವಿಡ್ ಸೋಂಕೇ ಅಲ್ಲದಿದ್ದರೂ ತಮಗೆ ಸೋಂಕು ಬಂದುಹೋಗಿರಬಹುದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಜನರನ್ನು ಸುಪ್ತವಾಗಿ ಕಾಡುತ್ತಿದೆ. ರೋಗ ಲಕ್ಷಣಗಳ ಅಗತ್ಯವಿಲ್ಲದೆಯೂ ಕೋವಿಡ್ ಬರಬಹುದಾದ್ದರಿಂದ ಅಕ್ಷರಶಃ ನಮ್ಮಲ್ಲಿ ಯಾರಿಗೆ ಬೇಕಾದರೂ ಸೋಂಕು ಇರಬಹುದು ಅಥವ ಬಂದುಹೋಗಿರಬಹುದು.

    ಒಂದು ದಿನ ಅಥವಾ ಎರಡು ದಿನಗಳ ಕಾಲ ಬಂದು ಹೋದದ್ದು ಸಣ್ಣ ಜ್ವರ -ಕೆಮ್ಮು ಕೋವಿಡ್ ಆಗಿರಬಹುದೇ? ಕೋವಿಡ್ ಪರೀಕ್ಷೆಗೆ ತೆರಳಲೇ, ಬೇಡವೇ?- ಎಂದು ಯೋಚಿಸುತ್ತಿರುವಾಗಲೇ ಮತ್ತೆ ಪೂರ್ಣ ಆರೋಗ್ಯಕ್ಕೆ ಮರಳಿದ ಲಕ್ಷಾಂತರ ಜನರೂ ಇದ್ದಾರೆ. ಅವರಲ್ಲೂ ಈ ಪ್ರಶ್ನೆಗಳಿವೆ. ಆದರೆ ಹೇಳಲು ಅಪರಾಧಿ ಪ್ರಜ್ಞೆಅವರನ್ನು ಕಾಡುತ್ತಿರಬಹುದು. ತಾವೂ ಈ ಸೋಂಕನ್ನು ಹರಡುವಲ್ಲಿ ಅರಿವೇ ಇಲ್ಲದೆ  ಭಾಗಿಯಾಗಿರಬಹುದೆ ಎನ್ನುವ ಸಂಶಯ ಇವರನ್ನ ಭಾಧಿಸುತ್ತಿರಬಹುದು.

    ಆತ್ಮಸಾಕ್ಷಿಯುಳ್ಳ, ಕರ್ತವ್ಯ ಪ್ರಜ್ಞೆಯಿರುವ ಎಲ್ಲರಲ್ಲೂ ತಾವೊಂದು ಅಂಗಡಿಗೆ ಹೋಗಿ ಬಂದರೂ ಕೋವಿಡ್ ಬಂದಿರಬಹುದೇ ಅಥವಾ ಅದನ್ನು ಹರಡುವಲ್ಲಿ ತಾವೊಂದು ಅಪರಾಧ ಎಸಗಿರಬಹುದೇ ಎನ್ನುವ ವಿಚಿತ್ರ ಅನುಭೂತಿಗಳು ಕಾಡುತ್ತಿರುವ ಅತ್ಯಂತ ವಿರಳವಾದ,ವಿಶೇಷವಾದ ಕಾಲ ಘಟ್ಟವಿದು

    ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕು

    ಭಾರತದಲ್ಲಂತೂ ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕಿನ ವರದಿಗಳು ಅಪಾರಮಟ್ಟದಲ್ಲಿವೆ.ಆಗಾಗ ಕೆಮ್ಮೋ ಜ್ವರವೋ ಬರುವುದು ಪುಟ್ಟ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ.ಆದರೆ ಕಳೆದ ತಿಂಗಳುಗಳಲ್ಲಿ ಮಕ್ಕಳಿಗೆ ಬಂದು ಹೋಗಿರಬಹುದೇ? -ಎನ್ನುವ ಅನುಮಾನಗಳು ನಮ್ಮಲ್ಲಿ ತಲೆ ಎತ್ತುತ್ತಿವೆ.ಹಾಗಿರುವಾಗ ಇಂಥಹ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನೆಮ್ಮದಿಯಲ್ಲವೇ?

    ಮೊದಲಿಗೆ ನಮ್ಮಲ್ಲಿ ಕೊರೊನಾ ಲಕ್ಷಣಗಳಿದ್ದವೇ ಎಂದು ಆಲೋಚಿಸಬೇಕಾಗುತ್ತದೆ.

    ಕೊರೋನಾ ಸೋಂಕಿನ ಲಕ್ಷಣಗಳು

    ಈ ವೇಳೆಗೆ ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ.

    1.ಜ್ವರ ಬರುವುದು

    ದೇಹದ ತಾಪಮಾನವನ್ನು ನೋಡಿಕೊಳ್ಳಲು ಅಳೆಯುವ ಮಾಪಕಗಳನ್ನು ಬಳಸಲೇಬೇಕು ಎಂದೇನಿಲ್ಲ. ಆದರೆ ನಿಮ್ಮ ದೇಹದ ಉಷ್ಣತೆ ಏರಿದಂತಾದರೆ ಅದು ನಿಮಗೆ ತಿಳಿಯುತ್ತದೆ.ಎದೆ ಅಥವಾ ಬೆನ್ನನ್ನು ಮುಟ್ಟಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ.

    2. ಹೊಸದಾಗಿ ಶುರುವಾಗುವ ಅವಿರತ ಕೆಮ್ಮು

    ಅಂದರೆ ಗಂಟೆಯೊಂದರಲ್ಲಿ ಬಹಳಷ್ಟು ಕೆಮ್ಮುವುದು ಅಥವಾ ದಿನವೊಂದರಲ್ಲಿ ಮೂರು ಅಥವಾ ಅದಕ್ಕಿನ್ನ ಹೆಚ್ಚು ಬಾರಿ ಅವಿರತ ಕೆಮ್ಮು ಬರುವುದು. ಹಳೆಯ ಗೂರಲು, ಕಫದ ಕೆಮ್ಮು ಇತ್ಯಾದಿ ಇರುವವರು ಅದಕ್ಕಿನ್ನ ಹೆಚ್ಚಿನ ಕೆಮ್ಮು ಬಂದಿತೇ ಎಂದು ಗಮನಿಸಬೇಕಾಗುತ್ತದೆ.

    3. ನಿಮ್ಮ ವಾಸನಾ ಗ್ರಹಿಕೆ ಮತ್ತು ರುಚಿಯ ಗ್ರಹಿಕೆ ಕುಂದುವುದು ಅಥವಾ ಇಲ್ಲವಾಗುವುದು

    ಇದು ಒಂದೆರಡು ದಿನವಿರಬಹುದು ಅಥವಾ ಒಂದು ವಾರವೇ ಇರಬಹುದು.

    ಒಟ್ಟಿನಲ್ಲಿ ಮೇಲಿನ ಮೂರು ಲಕ್ಷಣಗಳಲ್ಲಿ ಎಲ್ಲ ಅಥವಾ ಯಾವುದಾದರೂ ಒಂದಾದರೂ ಇದ್ದರೆ ಅಥವಾ ಬಂದುಹೋಗಿದ್ದರೆ ಅದು ಕೊರೊನಾ ಸೋಂಕನ್ನು ಹೋಲುತ್ತದೆ.

    ಇತರೆ : ಇವಲ್ಲದೆ ಮೈ ಕೈ ನೋವು, ಗಂಟಲು ನೋವು, ತಲೆನೋವು, ವಾಂತಿ-ಬೇಧಿ, ಮೂಗು ಕಟ್ಟುವುದು ಅಥವಾ ಸೋರುವುದು ಮುಂತಾದ ಎಲ್ಲ ಲಕ್ಷಣಗಳನ್ನು ಜನರು ವರದಿಮಾಡಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆಗಳಾಗಿದ್ದರೆ ಇನ್ನು ಹಲವರಲ್ಲಿ ಅತ್ಯಂತ ತೀವ್ರ ನ್ಯೂಮೋನಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಕೆಲವರಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡದ ವೈರಸ್ ಗಳು ಅವರಿಂದ ಸದ್ದಿಲ್ಲದೆ ಇನ್ನೊಬ್ಬರಿಗೆ ನೆಗೆದಿವೆ.

    ಅವರವರ ಲಕ್ಷಣಗಳಿಗನುಸಾರವಾಗಿ ಜನರು ಗುಣಮುಖವಾಗುತ್ತಾರೆ. ಅಂದರೆ ಕಡಿಮೆ ಲಕ್ಷಣಗಳಿರುವವರು ಎರಡು ವಾರಗಳಲ್ಲಿ ಗುಣಮುಖರಾದರೆ ಹೆಚ್ಚಿನ ತೊಂದರೆ ಅನುಭವಿಸುವ ಜನರು ಆರುವಾರಗಳ ಕಾಲ ತೆಗೆದುಕೊಳ್ಳಬಹುದು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗುವ ಜನರು ಗುಣಮುಖರಾಗಲು ಮತ್ತೂ ಹೆಚ್ಚಿನಕಾಲ ಬೇಕಾಗಬಹುದು.

    ಮಕ್ಕಳಲ್ಲಿ ಮೇಲಿನ ಎಲ್ಲ ಲಕ್ಷಣಗಳು ಅತ್ಯಂತ  ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಬಹುತೇಕರು ಅತ್ಯಂತ ಬೇಗನೆ ಚೇತರಿಕೆಯನ್ನು ತೋರಿದ್ದಾರೆ.

    ಕೊರೊನಾ ಬಂದು ಹೋಗಿದೆಯೇ ಎಂದು ತಿಳಿಯುವುದು ಹೇಗೆ?

    ಬಹಳಷ್ಟು ಜನರ ಜೊತೆ ಒಡನಾಡಿದ ಜನರಿಗೆ ತಮಗೆ ಕೊರೊನಾ ಬಂದು ಹೋಗಿರಬಹುದೇ ಎನ್ನುವ ಅನುಮಾನವಿರಬಹುದು. ಅಥವಾ ಕೊರೊನಾ ಪರೀಕ್ಷೆಗೆ ಹೆದರಿ ಅದನ್ನು ಮಾಡಿಸಿಕೊಳ್ಳದೆ ಹೋಗಿರಬಹುದು. ಆದರೆ ಆ ಅನುಮಾನವನ್ನು ಬಗೆಹರಿಸಲು ಮತ್ತೊಂದು ಪರೀಕ್ಷೆಯಿದೆ. ಇದನ್ನು  ’ಆಂಟಿಬಾಡಿ ಟೆಸ್ಟ್ ’ ಎನ್ನುತ್ತೇವೆ.

     ’ಆಂಟಿಬಾಡಿ ಪರೀಕ್ಷೆ’ ಹೇಗೆ ನಡೆಯುತ್ತದೆ?

    ಕೊರೊನಾ ಸೋಂಕು ಬಂದು ಹೋಗಿರಬಹುದೇ ಎನ್ನುವುದನ್ನು ತಿಳಿಯಲು ಪರೀಕ್ಷೆಯನ್ನು ಗಂಟಲು ಮತ್ತು ಮೂಗಿನ ದ್ರವದ ಮಾದರಿಯ ಪರೀಕ್ಷೆಯಿಂದ ಮಾಡಿದರೆ ಆಂಟಿಬಾಡಿ ಪರೀಕ್ಷೆಯನ್ನು ರಕ್ತದ ಪರೀಕ್ಷೆಯ ಮೂಲಕ ಮಾಡುತ್ತಾರೆ. ನಮ್ಮ ದೇಹವನ್ನು ಯಾವುದೇ ಪರಜೀವಗಳು ಪ್ರವೇಶಿಸಿದಾಗ ಅವುಗಳನ್ನು ಹತ್ತಿಕ್ಕಲು ನಿರ್ದಿಷ್ಟ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗುತ್ತವೆ

    ನಮ್ಮ ರಕ್ತದಲ್ಲಿ ಕೊರೊನಾ ವೈರಸ್ಸನ್ನು ವಿರೋಧಿಸುವ ಈ ಜೀವನಿರೋಧಕ ಪ್ರೋಟೀನುಗಳು ಕಂಡುಬಂದಲ್ಲಿ ನಮಗೆ ಕೊರೊನಾ ಸೋಂಕು ಬಂದುಹೋಗಿರಬಹುದು ಎಂದು ತಿಳಿಯುತ್ತದೆ. ಆ ಮೂಲಕ ನಮ್ಮ ಶಂಕೆಗಳಿಗೆ ಈ ಪರೀಕ್ಷೆ ಅಂತಿಮ ತೆರೆಯನ್ನು ಎಳೆಯುತ್ತದೆ.

    ಆಂಟಿಬಾಡಿ ಪರೀಕ್ಷೆಯ ಮಿತಿಗಳು

    ಈ ಜೀವ ನಿರೋದಕ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಕಾಣಿಸಲು ಕನಿಷ್ಠ1-3 ವಾರಗಳು ಬೇಕಾಗುತ್ತದೆ. ಹಾಗಾಗಿ ಅಕಸ್ಮಾತ್ ನಮಗೆ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕು ಆಗ ತಾನೇ ಶುರುವಾಗಿದ್ದರೆ ಈ ಪರೀಕ್ಷೆಯಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

    ಆಂಟಿಬಾಡಿ ಫಲಿತಾಂಶಕ್ಕೆ ಬಹಳ ಮಿತಿಗಳಿವೆ. ಅಂದರೆ, ನಿಮಗೆ ಸೋಂಕು ಬಂದು ಹೋಗಿತ್ತೇ ಎಂದು ಇದರಿಂದ ಹೇಳಬಹುದೇ ಹೊರತು ನೀವು ಇನ್ನು ಮುಂದೆ ಮತ್ತೊಮ್ಮೆ ಈ ಸೋಂಕಿಗೆ ತುತ್ತಾಗಬಲ್ಲಿರೇ ಅಥವಾ ಇಲ್ಲವೇ ಎನ್ನುವುದನ್ನು ಹೇಳಲು ಬರುವುದಿಲ್ಲ.ಜೊತೆಗೆ ನೀವು ಮತ್ತೊಬ್ಬರಿಗೆ ಇನ್ನೂ ಸೋಂಕನ್ನು ಹರಡುತ್ತಿರುಬಹುದೇ ಎನ್ನುವುದು ಕೂಡ ತಿಳಿಯುವುದಿಲ್ಲ.

    ಆದ್ದರಿಂದ ಈ ಪರೀಕ್ಷೆಯಲ್ಲಿ ನಿಮಗೆ ಸೋಂಕು ಬಂದು ಹೋಗಿದೆ ಎಂದಾದರೂ ಎಲ್ಲರಂತೆ ಸಾಮಾಜಿಕ ಅಂತರ ಮತ್ತು ಪದೇ ಪದೇ ಕೈ ತೊಳೆಯುವುದನ್ನು ಮುಂದುವರೆಸಬೇಕಾಗುತ್ತದೆ.

    ನನಗೆ ತಿಳಿದ ಒಬ್ಬರಲ್ಲಿ ಒಂದ ವಾರದ ಕಾಲ ವಾಸನಾ ಶಕ್ತಿ ಇಲ್ಲವಾಗಿತ್ತು. ಆದರೆ ಇನ್ನಾವುದೇ ಖಾಯಿಲೆಯ ಲಕ್ಷಣಗಳಿರಲಿಲ್ಲ. ಆಕೆ ತನಗೆ ದೊರೆತ ನಿರ್ದೇಶನದ ಪ್ರಕಾರ ಕೋವಿಡ್ ಟೆಸ್ಟ್ ನ್ನು ಮಾಡಿಸಿಕೊಂಡರು. ಆಕೆಗ ಕೋವಿಡ್ ಇಲ್ಲ ಎಂದು ವರದಿ ಬಂದಾಗ ಆಕೆ ಅದುವರೆಗೆ ತನ್ನನ್ನು ತಾನು ಪ್ರತ್ಯೇಕಿಸಿಕೊಂಡದ್ದು, ಇತರರಿಗೆ ತೊಂದರೆ ಕೊಟ್ಟದ್ದು ಎಲ್ಲ ನೆನೆದು “ ಅಯ್ಯೋ ಸುಮ್ಮ ಸುಮ್ಮನೆ ಹೆದರಿದೆನಲ್ಲ “ ಎಂದು ಅಂದುಕೊಂಡರು. ಆದರೆ ಒಂದು ತಿಂಗಳ ನಂತರ ಆಕೆ ಕೆಲಸಕ್ಕೆ ಮರಳುವ ಕಾಲ ಬಂದಿತು. ಆಗ ಆಂಟಿ ಬಾಡಿ ಟೆಸ್ಟ್ ಮಾಡಿಸಲೇಬೇಕಿತ್ತು. ವರದಿಯಲ್ಲಿ ಅಶ್ಚರ್ಯಕರವಾಗಿ ಆಕೆಗೆ ಕೋವಿಡ್ ಬಂದು ಹೋದ ವರದಿಯಿತ್ತು.

    ಹಾಗಂದರೆ ಏನರ್ಥ?

    ಕಳೆದವಾರದ ಲೇಖನದಲ್ಲಿ ಹೇಳಿದಂತೆ ಕೊರೊನಾ ಪರೀಕ್ಷೆಎಲ್ಲ ಬಾರಿ ನಿಖರವಾದ ಫಲಿತಾಂಶವನ್ನು ನೀಡುವ ಪರೀಕ್ಷೆಯೇನಲ್ಲ.ಪರೀಕ್ಷೆಯಲ್ಲಿ ನಡೆಯಬಹುದಾದ ತಪ್ಪುಗಳು, ದ್ರವ ಮಾದರಿಯ ಪ್ರಮಾಣ, ಪರೀಕ್ಷಾ ವಿಧಾನ, ಪ್ರಯೋಗಾಲಯದ ಗುಣಮಟ್ಟ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆ ಯಾವಾಗ ಮಾಡಲಾಯಿತು ಇತ್ಯಾದಿ ಹಲವು ವಿಚಾರಗಳನ್ನು ನಾವು ವಿಷ್ಲೇಶಿಸಬೇಕಾಗುತ್ತದೆ. ಜೊತೆಗೆ ಎಲ್ಲವೂ ಸರಿಯಿದ್ದರೂ ಪ್ರತಿಬಾರಿ ನಿಖರ ಫಲಿತಾಂಶವನ್ನು ನೀಡಲು ಕೊರೊನಾ ಪರೀಕ್ಷೆ ಸಫಲವಾಗದೇ ಹೋಗಬಹುದು.

    ಅದರಂತೆಯೇ ಆಂಟಿಬಾಡಿ ಪರೀಕ್ಷೆಗಳೂ ಕರಾರುವಕ್ಕಾದ ಫಲಿತಾಂಶವನ್ನು ನೀಡುವುದಿಲ್ಲ.ಆಂಟಿಬಾಡಿಗಳಿದ್ದವು ಆದ್ದರಿಂದ ನಿಮಗೆ ಕೊರೊನಾ ಬಂದಿರಬಹುದು ಎನ್ನುವ ಸುಳ್ಳು ಫಲಿತಾಂಶ ಬರುವ ಸಾಧ್ಯತೆಗಳುಅರ್ಧಕ್ಕಿಂತ ಹೆಚ್ಚಿವೆ!ನಿಖರವಾದ ಫಲಿತಾಂಶ ನೀಡುವ ಸಾಧ್ಯತೆಯಿರುವುದು ಕೇವಲ 49 % ಪರೀಕ್ಷೆಗಳಲ್ಲ್ ಮಾತ್ರಎಂದು Infectious Disease Society of Americaಹೇಳಿದೆ.

    ಇನ್ನೂ ನೇರವಾಗಿ ಹೇಳಬೇಕೆಂದರೆ ಕೇವಲ ಅರ್ಧದಷ್ಟು ಕೇಸುಗಳಲ್ಲಿ ಮಾತ್ರ ಕೊರೊನಾ ವಿರುದ್ಧ ಜೀವನಿರೋಧಕ ಕಣಗಳು ನಿಜಕ್ಕೂ ಇದ್ದುದನ್ನು ಧೃಡ ಪಡಿಸುವ ಶಕ್ತಿಯಷ್ಟೇ ಈ ಪರೀಕ್ಷೆಗಿರುವುದು. ಉಳಿದಂತೆ  ಜೀವನಿರೋಧಕ ಕಣಗಳು ಕೊರೊನಾ ವಿರುದ್ಧ ಹುಟ್ಟಿದ್ದೇ ಎಂಬುದನ್ನು ಧೃಡಪಡಿಸುವಲ್ಲಿ ಈ ಪರೀಕ್ಷೆ ಸೋಲುತ್ತದೆ. ಅದರ ಮೇಲೆ,ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಇತ್ತೀಚೆಗಿನ ವರದಿಯ ಪ್ರಕಾರ ಕೋವಿಡ್  ಬಂದು ಹೋಗಿದ್ದರು ಆಂಟಿಬಾಡಿಗಳಿಲ್ಲವೆಂದು ಹೇಳುವ false-negative rateಶೇಕಡ 20%  ರಷ್ಟಿದೆ ಎನ್ನುತ್ತದೆ. ಅಂದರೆ ಇಲ್ಲಿ ಕೂಡ ಈ ಪರೀಕ್ಷೆಯನ್ನು ಯಾವಾಗ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ.ಅಂದರೆ ಈ ಪರೀಕ್ಷೆ ನಡೆವಾಗ ನಿಮ್ಮಲ್ಲಿ ಕೊರೊನಾ ಬಂದು ಹೋಗಿದ್ದ ಗುಮಾನಿಯಿದ್ದರೇನೋ ಪರವಾಗಿಲ್ಲ ಆದರೆ ಕೊರೊನಾ ಲಕ್ಷಣಗಳೇ ಇಲ್ಲದವರನ್ನು ಯಾವಾಗ  ಈ ಪರೀಕ್ಷೆಗ ಒಳಪಡಿಸಬೇಕು? ಎನ್ನುವ ಪ್ರಶ್ನೆಗೆ ತಾರ್ಕಿಕ, ಪ್ರಯೋಗಾತ್ಮಕ   ಉತ್ತರವನ್ನಿನ್ನೂ ಹುಡುಕುತ್ತಿದ್ದಾರೆ.

    ಯಾವ ಪರೀಕ್ಷೆಯೇ ಆದರೂ ಸುಳ್ಳು ಸುಳ್ಳೇ ಸೋಂಕಿಲ್ಲವೆಂದು ಬರುವ ಫಲಿತಾಂಶಗಳು ಸುಳ್ಳು ಸುಳ್ಳೇ ಸೋಂಕಿದೆಯೆಂದು ಬರುವ ಫಲಿತಾಂಶಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಸೋಂಕು ಬಂದಿದ್ದರೂ ಫಲಿತಾಂಶ ಸೋಂಕಿಲ್ಲವೆಂದು ಬರುವ ಕಾರಣ ಜನರು ಕೊರೊನಾ ಸೋಂಕನ್ನು ಸಮಾಜದ ತುಂಬೆಲ್ಲ ಹರಡುತ್ತ ಹೋಗುತ್ತಾರೆ.

    ಹಾಗಾದರೆ ಆಂಟಿ ಬಾಡಿ ಟೆಸ್ಟನ್ನು ಯಾರು ಮತ್ತು ಏಕೆ ಮಾಡಿಸಿಕೊಳ್ಳಬೇಕು?

    ಕೊರೊನಾ ಎನ್ನುವ ಸೋಂಕು ವಿಶ್ವವ್ಯಾಪಿ ಹೊಸವ್ಯಾಧಿ. ಅಂದರೆ ಈ ಕ್ಷಣದಲ್ಲೂ ಈ ಹೊಸಪಿಡುಗಿನ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.ಆ ಕಾರಣ ಈ ವ್ಯಾಧಿಯ ಬಗ್ಗೆ ಮನುಷ್ಯನಿಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಜಾಸ್ತಿ.

    ಈಗಾಗಲೇ ಹಲವು ದೇಶಗಳು ಸಮುದಾಯಮಟ್ಟದಲ್ಲಿ ಆಂಟಿಬಾಡಿ ಪರೀಕ್ಷೆಗಳನ್ನು ಶುರುಮಾಡಿದ್ದಾರೆ. ಮತ್ತೆ ಕೆಲವು ದೇಶಗಳು ಅಗತ್ಯ ಕೆಲಸಗಾರರನ್ನು, ಅಥವಾ ಕೊರೊನಾ ಬಂದುಹೋದವರ ಸಂಪರ್ಕದಲ್ಲಿ ಇದ್ದವರನ್ನು ಅವರ ಮನೆಯವರನ್ನು ಈ ಪರೀಕ್ಷೆಗೆ ಒಳಪಡಿಸುತ್ತಿವೆ.

    ಸೋಂಕು ಬಂದು ಹೋಗಿದ್ದರೂ ಗೊತ್ತಿರದ ಜನರನ್ನು ಗಣಿಸುವುದು ಇದರ ಮುಖ್ಯ ಉದ್ದೇಶ.ಈ ಗಣತಿಯಿಂದ ಅರ್ಧದಷ್ಟು ಸಂಖ್ಯೆಯನ್ನು ಮಾತ್ರವೇ ತೆಗೆದುಕೊಂಡರೂ ಸೋಂಕಿನ ತೀವ್ರತೆಯನ್ನು ಕಂಡು ಹಿಡಿಯಬಹುದು. ಲಕ್ಷಣರಹಿತ ಸೋಂಕಿನ ಮಟ್ಟ ಎಷ್ಟಿರಬಹುದು ಎಂಬುದನ್ನು ಅಳೆಯಬಹುದು.

    ಜೊತೆಗೆ ಕೋವಿಡ್ ಸೋಂಕಿನ ದಟ್ಟ ಲಕ್ಷಣಗಳಿದ್ದೂ ಕೋವಿಡ್ ಪರೀಕ್ಷೆ ಯಲ್ಲಿ ಸೋಂಕು ಇಲ್ಲ ಎಂದು ಫಲಿತಾಂಶ ಬಂದಿರುವ ಜನರಿಗೆ ನಿಜವನ್ನು ತಿಳಿಯಲು ಇರುವ ಇನ್ನೊಂದು ಏಕೈಕ ಮಾರ್ಗವೆಂದರೆ ಈ ಆಂಟಿಬಾಡಿ ಪರೀಕ್ಷೆ.ಆದರೆ ಫಲಿತಾಂಶವನ್ನು ಅನುಮಾನದ ದೃಷ್ಟಿಯಿಂದಲೇ ನೋಡಬೇಕಾದ ಅನಿವಾರ್ಯತೆ ನಮಗಿದೆ.

    ಆದರೆ ಆಂಟಿಬಾಡಿ ಟೆಸ್ಟ್ ಗಳನ್ನು ಕೋವಿಡ್ ಪಾಸ್ ಪೋರ್ಟುಗಳಂತೆ ಬಳಸಿಕೊಳ್ಳುವ ಸಂಸ್ಥೆ ಮತ್ತು ದೇಶಗಳು ಈ ಪರೀಕ್ಷೆಯ ನಿಖರತೆಯನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲಸಕ್ಕೆ ಹಿಂತಿರುಗುವ ಮುನ್ನ ಆಂಟಿಬಾಡಿ ಟೆಸ್ಟ್ ಮಾಡಿಸಿಕೊಂಡು ಅದರಲ್ಲಿ ನಮಗೆ ಕೋವಿಡ್ ಬಂದು ಹೋಗಿದೆ ಎನ್ನುವ ಫಲಿತಾಂಶ ಬಂದಿದ್ದರೆ “ ಇನ್ನು ನಿಮಗೆ ಈ ಸೋಂಕು ಬರುವುದಿಲ್ಲ, ನಿಮ್ಮ ದೇಹದಲ್ಲಿ ಆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಬಂದುಬಿಟ್ಟಿದೆ “ ಎನ್ನುವ ಮಾತುಗಳನ್ನು ಆಡಲಾಗುತ್ತಿದೆ.

    ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಪಾಸಿಟಿವ್ ಇದ್ದಲ್ಲಿ “ ರೋಗಿಯಲ್ಲಿ ಈಗಾಗಲೇ ಕೋವಿಡ್ ವಿರೋಧಕ ಇಮ್ಯೂನಿಟಿ ಇರುವ ಕಾರಣ ಅವರನ್ನು ಇನ್ನು ಮನೆಗೆ ಕಳಿಸಬಹುದು” ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

    ಒಂದು ಆಫೀಸು, ಆಸ್ಪತ್ರೆ ಹೀಗೆ ಗುಂಪಿನಲ್ಲಿ ಕೆಲಸಮಾಡುವ ಸ್ಥಳಗಳಲ್ಲಿ  ಒಬ್ಬರಿಗೋ- ಇಬ್ಬರಿಗೋ ಕೋವಿಡ್ ಲಕ್ಷಣಗಳಿರಬಹುದು. ಅವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ಅವರಿಂದ ಇತರರಿಗೂ ಕೋವಿಡ್ ಬಂದು ಹೋಗಿದೆಯೇ ಮತ್ತು ಎಂತಹ ಸ್ಥಳಗಳಲ್ಲಿ ಇದು ಗುಂಪಿನ ಎಷ್ಟು ಜನರಿಗೆ ಹರಡಿತು ಎನ್ನುವುದನ್ನು ಕೂಡ ಈ ಪರೀಕ್ಷೆಯಿಂದ ತಿಳಿಯಬಹುದಾಗಿದೆ. ಸೋಂಕು ಬಂದು ಹೋದ ತಿಂಗಳುಗಳ ನಂತರವೂ ಆಂಟಿಬಾಡಿ ಪರೀಕ್ಷೆಯ ಮೂಲಕ ಬಂದಿತ್ತೇ? ಎಂದು ಕಂಡುಹಿಡಿಯುವ ಪ್ರಯತ್ನ ಮಾಡಬಹುದು.

    ಕೊರೊನಾ ಪರೀಕ್ಷೆಯಲ್ಲಿ ಸೋಂಕಿದೆ ಎಂದು ಗೊತ್ತಾಗಿ ಅವರು ಗುಣಮುಖರಾದ ನಂತರ ಅವರ ದೇಹದಲ್ಲಿ ಆಂಟಿಬಾಡಿಗಳಿವೆ ಎಂದು ಆಂಟಿಬಾಡಿ ಪರೀಕ್ಷೆಯ ಮೂಲಕ ತಿಳಿದಲ್ಲಿ ಅವರ ರಕ್ತದ ಪ್ಲಾಸ್ಮಾವನ್ನು ಇತರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಆ ಮೂಲಕ ಆಂಟಿಬಾಡಿಗಳನ್ನು ಅಂದರೆ ಕೊರೊನಾ ವಿರುದ್ಧ ಹೋರಾಡಬಲ್ಲ ಸೈನಿಕರನ್ನು ನೇರವಾಗಿ ಗುಣಮುಖರಾಗಲು ಶ್ರಮಪಡುತ್ತಿರುವವರ ದೇಹಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ ಈ ಪರೀಕ್ಷೆಯ ಫಲಿತಾಂಶಗಳು ಕರಾರುವಕ್ಕಲ್ಲದಿದ್ದರೂ ಬಹಳಷ್ಟು ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದಿದೆ.

    ಆದರೆ ಈ ಪರೀಕ್ಷೆಗಳ ಬಗ್ಗೆ ಬಹಳಷ್ಟು ಅಧ್ಯಯನಗಳು ಈಗಲೂ ಜಾರಿಯಲ್ಲಿವೆ. ಈ ಅಧ್ಯಯನಗಳ ಮೂಲಕ ಇಂತಿಷ್ಟು ಆಂಟಿಬಾಡಿಗಳ ಪ್ರಮಾಣ ಇದ್ದರೆ ವೈರಸ್ಸಿನಿಂದ ರಕ್ಷಣೆ ಪಡೆಯಬಹುದು ಎಂಬುದನ್ನೇನಾದರೂ ಪತ್ತೆ ಹಚ್ಚಿದರೆ ಕೊರೊನಾ ಪರೀಕ್ಷೆ ಮತ್ತು ಆಂಟಿಬಾಡಿ ಪರೀಕ್ಷೆಗಳು ಕೊರೊನಾ ವಿರುದ್ಧದ ಸಮರದಲ್ಲಿ ನಮ್ಮ ಬತ್ತಳಿಕೆಯಲ್ಲಿರುವ ಅತ್ಯಮೂಲ್ಯ ಅಸ್ತ್ರಗಳಾಗುತ್ತವೆ. ಅಲ್ಲಿಯವರೆಗೂ ಆಂಟಿಬಾಡಿ ಪರೀಕ್ಷೆಗಳನ್ನು ನಾವು ಅದರ ಮಿತಿಗಳ ಪರಿಮಿತಿಯಲ್ಲೇ ನೋಡಬೇಕಾಗಿದೆ.

    ಏಕೆಂದರೆ ಸಧ್ಯದ ಆಂಟಿಬಾಡಿ ಟೆಸ್ಟ್ ಗಳು ನೀವು ವೈರಸ್ಸಿನ ಸಂಪರ್ಕಕ್ಕೆ ಬಂದಿದ್ದಿರೇ ಎನ್ನುವುದನ್ನು ಮಾತ್ರ ತಿಳಿಸುತ್ತವೆ. ಆದರೆ ಎಷ್ಟುಕಾಲ ಈ ಆಂಟಿಬಾಡಿಗಳು ಕೊರೊನಾ ಜೊತೆ ಹೋರಾಡಬಲ್ಲವು? ಆಂಟಿಬಾಡಿ ಇದ್ದವರಿಗೆ ಮತ್ತೆ ಇನ್ನೊಂದು ಬಾರಿ ಕೊರೊನಾ ಸೋಂಕು ಬರಬಹುದೇ?  ಎಷ್ಟು ಪ್ರಮಾಣದಲ್ಲಿ ಈ ಆಂಟಿಬಾಡಿಗಳು ಕೊರೊನಾ ವಿದ್ಧ ಫಲಪ್ರದವಾಗಿ ಹೋರಾಡಬಲ್ಲವು?-ಇತ್ಯಾದಿ ಹಲವು ಪ್ರಶ್ನೆಗಳಿಗೆ ಈ ಪರೀಕ್ಷೆಯಿಂದ ಉತ್ತರ ದೊರಕುವುದಿಲ್ಲ.

    ಮುಖ್ಯವಾಗಿ ಇವಿಷ್ಟು ತಿಳಿದಿದ್ದರೆ ಸಾಕು.

    ಆಂಟಿಬಾಡಿ ಪರೀಕ್ಷೆ ಪಾಸಿಟಿವ್ ಬಂದಲ್ಲಿ

    1.  ನಿಮ್ಮ ದೇಹದಲ್ಲಿ ಕೋವಿಡ್-19 ಎನ್ನುವ ವೈರಾಣುವಿನ ವಿರುದ್ಧ ಉತ್ಪತ್ತಿಯಾಗುವ ಪ್ರೋಟೀನುಗಳಿವೆ ಎಂದು ತಿಳಿಯುತ್ತದೆ. ಆದರೆ ಇದು ಕೊರೊನಾ ವೈರಸ್ ಎನ್ನುವ ಫ್ಯಾಮಿಲಿಯ ಇತರೆ ವೈರಸ್ಸುಗಳ ಸಂಪರ್ಕಕ್ಕೆ ಬಂದ ಕಾರಣದಿಂದಲೂ ಇರಬಹುದು. ಸಾಮಾನ್ಯ ಕೆಮ್ಮು-ನೆಗಡಿ ತರುವ ವಿಧದ ವೈರಸ್ಸುಗಳ ಕಾರಣವೂ ನಮ್ಮಲ್ಲಿ ಕೋವಿಡ್-೧೯ ರ ವಿರುದ್ಧ ಹೋರಾಡಬಲ್ಲ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗಬಲ್ಲವು.

    2. ನಮ್ಮ ದೇಹಕ್ಕೆ ಕೋವಿಡ್ -19 ರ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾದ್ದನ್ನು ಖಾತರಿಮಾಡಿಕೊಳ್ಳಬಹುದು. ಆದರೆ, ಎಷ್ಟು ಕಾಲ ಎಷ್ಟು ಮತ್ತು  ರಕ್ಷಣೆ ಸಿಗಬಲ್ಲದು ಎನ್ನುವುದು ಇನ್ನೂ ತಿಳಿದಿಲ್ಲದ ವಿಚಾರ.

    3. ಇನ್ನೂ ಖಾತರಿಬೇಕೆಂದರೆ, ಮತ್ತೊಂದು ವಿಶೇಷ ಆಂಟಿಬಾಡಿ ಪರೀಕ್ಷೆ ಲಭ್ಯವಿದೆ. ಆದರೆ ಎಲ್ಲ ರೀತಿಯ ರಕ್ಷಣಾ ಧಿರಿಸುಗಳನ್ನು ಮುಂದುವರಿಸಲೇ ಬೇಕು.

    ಆಂಟಿಬಾಡಿ ಪರೀಕ್ಷೆ ನೆಗೆಟಿವ್ ಬಂದರೆ

    1.ನಮಗೆ ಕೊರೊನಾ ಫ್ಯಾಮಿಲಿಯ ವೈರಾಣುವಿನ ಸಂಪರ್ಕ ಆಗಿಲ್ಲದಿರಬಹುದು

    2 . ನಿಮ್ಮಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಇನ್ನೂಇರಬಹುದು ಅಥವಾ ಆಗಷ್ಟೆ ಬಂದಿರಬಹುದು

    3.ಮುಂದೆಕೊರೊನಾಸೋಂಕುಬರುವಸಾಧ್ಯತೆಗಳುಇರಬಹುದು

    4. ಏಕೆಂದರೆ, ಕೆಲವರಲ್ಲಿ ತಕ್ಷಣ ಆಂಟಿ ಬಾಡಿಗಳು ಉತ್ಪತ್ತಿಯಾದರೆ ಇನ್ನು ಕೆಲವರಲ್ಲಿ ನಿಧಾನಕ್ಕೆ ಉತ್ಪತ್ತಿಯಾಗಬಹುದು

    ಮೇಲಿನ ಈ ಕಾರಣಗಳಿಗಾಗಿ, ಫಲಿತಾಂಶ ಏನೇ ಆದರೂ ಸ್ವತಃ ನಿಮ್ಮನ್ನು ಮತ್ತು ಇತರರನ್ನು ರಕ್ಷಣೆ ಮಾಡುವುದನ್ನು ಮುಂದುವರೆಸಬೇಕಾಗುತ್ತದೆ.

    Photo by cottonbro from Pexels

    ಮನಸ್ಥಿತಿಗಳ ಬಿರುಕಿನ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು

    ಮಮತಾ ಕುಲಕರ್ಣಿ

    ಭೂಮಿ ಅನ್ನೊ ಪುಟ್ಟ ಸಂಸಾರದಲ್ಲಿ ಎಲ್ಲಾ ಜೀವಿಗಳು ಒಂದಲ್ಲಾ ಒಂದು ಸಂಬಂಧದ ಸರಪಳಿಯಲ್ಲಿ ಸೇರಿಹೊಗಿರುತ್ತವೆ. ಅದರಲ್ಲಿ ಮನಸ್ಥಿತಿಗಳ ಆಧಾರದ ಮೇಲೆ ಒಳ್ಳೆ ಸಂಬಂಧ, ಕೆಟ್ಟ ಸಂಬಂಧ, ಕಾಟಾಚಾರದ ಸಂಬಂಧ ಹೀಗೆ ನಾನಾ ವಿಂಗಡನೆ ಆಗುತ್ತಾ ಹೋಗುತ್ತವೆ.

    ಎಂಜಿನಿಯರಿಂಗ್ ಎಂಬ ವಿಭಾಗದಲ್ಲಿ ಹೇಗೆ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ ಹೀಗೆ ನಾನಾ ರೀತಿಯ ವಿಭಾಗಗಳಿವೆಯೊ, ಹಾಗೆ ಮನುಷ್ಯ ತನ್ನದೆ ಆದ ಪುಟ್ಟ ಪ್ರಪಂಚದಲ್ಲಿ ತಂದೆ,ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ,ಗಂಡ, ಹೆಂಡತಿ,ಮಕ್ಕಳು, ಅಜ್ಜ,ಅಜ್ಜಿ ಹೀಗೆ ನಾನಾ ರೀತಿಯ ರೆಂಬೆ ಕೊಂಬೆಗಳನ್ನ ತನ್ನ ಜೀವನದ ವೃಕ್ಷಕ್ಕೆ ಅಂಟಿಸಿರುತ್ತಾನೆ. ಅವುಗಳ ಜೊತೆ ಸಮಯಕ್ಕೆ ತಕ್ಕಂತೆ ಬೆರೆತು ಹೋಗುತ್ತಾನೆ. ಸುಖ ದುಃಖಗಳಲ್ಲಿ  ಆ ರೆಂಬೆ ಕೊಂಬೆಗಳ ಸಾಂತ್ವನ ಹಾಗೂ ಸೌಹಾರ್ಧದ ಬಲದಿಂದ ತನ್ನ ಜೀವನದ ಕಟ್ಟಡವನ್ನು ಕಟ್ಟುತ್ತಾ ಹೋಗುತ್ತಾನೆ. ಹೀಗಿರುವಾಗ  ಸಂಬಂಧಗಳ ಬಾಂಧವ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸುವ ಶಕ್ತಿ ಹಾಗೂ ಯುಕ್ತಿಗಳನ್ನು ಕಳೆದುಕೊಳ್ಳುತ್ತಾನೆ. ಮನಸ್ಥಿತಿಗಳ ಬಿರುಕಿನ ಅಥವಾ ಬದಲಾವಣೆಯ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು. ಇದು ಕೇವಲ ದೊಡ್ಡವರಿಗೆ ಅಥವಾ ಸಣ್ಣವರಿಗೆ ಇಲ್ಲಿ ಅನ್ವಯವಾಗುವ ಹಾಗೆ ಇಲ್ಲ.

    ಭೂಮಿಯ ಮೇಲೆ ಜನಿಸಿದ ಕ್ಷಣದಿಂದ ಪ್ರತಿನಿತ್ಯ ಬದಲಾವಣೆಗಳ ರೂಪವನ್ನು ಹೊಂದುವ ಮಗುವಿನಿಂದ ಹಿರಿಯ ಜೀವಿಗಳವರೆಗೂ ಅನ್ವಯವಾಗುತ್ತದೆ. ಒಂದು ಪುಟ್ಟ ಮಗು ಕೂಡ ತನ್ನ ಇಚ್ಛೆಯಂತೆ ತಿನ್ನಲು ಕುಡಿಯಲು ಬಯಸುತ್ತದೆ. ಬೆಳೆಯುವ ಮಕ್ಕಳು ತಮಗೆ ಇಷ್ಟವಾದ ವಿಷಯವನ್ನು ಮನಸ್ಸಿನಿಂದ ವಿಷಯವನ್ನು ಮನಸ್ಸಿನಿಂದ ಮಾಡುತ್ತಾರೆ. ಆಟವೇ ಆಗಿರಲಿ ಬೇರೆ ಬೇರೆ ವಿಷಯಗಳೇ ಆಗಿರಲಿ.

    ಮದುವೆಯಾದ ಮೇಲೆ ಎಲ್ಲ ಸಂಬಂಧಗಳನ್ನ ತೊರೆದು ಕೇವಲ ತನ್ನ ಹೆಂಡತಿ ತನ್ನ ಗಂಡ ಅಂತ ಬದುಕಿದರೆ ಸಾಕೇ? ಸಂಸಾರದ ಜವಾಬ್ದಾರಿಯತ್ತ ತಮ್ಮ ಕನಸುಗಳನ್ನು, ಕ್ಷಮತೆಯನ್ನು ಗಂಟು ಕಟ್ಟಬೇಕೇ? ವಯಸ್ಸಾದ ಮೇಲೆ ಅವರ ವಿಚಾರಗಳಿಗೆ, ಆಸೆಗಳಿಗೆ ರೆಕ್ಕೆಪುಕ್ಕ ಬೇಡವೇ?

    ಹೀಗೆಲ್ಲ ಯೋಚನೆ ಮಾಡುತ್ತಾ ಹೋದಂತೆ ಭಾಸವಾಗುವುದು ಒಂದು ವಿಚಾರ. ಅದು ಸಂಬಂಧಗಳಲ್ಲಿ ಸ್ವಾತಂತ್ರ್ಯದ ತುಣುಕು. ಅಂದರೆ ಉದಾಹರಣೆಗೆ, ಮಕ್ಕಳೊಂದಿಗೆ ಹೊರಗಡೆ ಹೋದಾಗ ಅವರಿಗೆ ಸ್ವತಂತ್ರವಾಗಿ ತಮಗೆ ಬೇಕಾಗುವ ಹಣ್ಣುಗಳನ್ನು ಆಯ್ಕೆ ಮಾಡಲು ಬಿಡಿ. ಅವರ ಆಯ್ಕೆ ತಪ್ಪಿದ್ದಲ್ಲಿ ತಿದ್ದಿ ಹೇಳುವುದು ನಮ್ಮ ಕೈಯಲ್ಲಿ ಇರುತ್ತೆ. ಆದರೆ ಅವರ ವಯಸ್ಸಿಗೆ ತಕ್ಕಂತೆ ಒಳ್ಳೆಯದು-ಕೆಟ್ಟದ್ದು ಯೋಚನೆ ಮಾಡುವ ಶಕ್ತಿ ಅವರಲ್ಲಿ ಬೆಳೆಯಲು ಸಹಕರಿಸುವುದೇ ಸ್ವಾತಂತ್ರ್ಯದ ಮಾನ್ಯತೆ ಇಲ್ಲಿ. ಯೋಚನಾಶಕ್ತಿ ಜೊತೆ ಸರಿ-ತಪ್ಪುಗಳ ತಿಳಿವಳಿಕೆಯನ್ನು ಗ್ರಹಿಸುವಿಕೆಯೇ ಸ್ವಾತಂತ್ರ್ಯ.

    ಅದೇರೀತಿ ಮದುವೆಯಾದ ಮೇಲೆ ಗಂಡ ಹೆಂಡತಿ ಅವರವರ ಇಷ್ಟ ಕಷ್ಟಗಳಿಗೆ ಮಾನ್ಯತೆ ನೀಡಬೇಕು. ಸ್ವಲ್ಪ ಸಮಯ ತಮ್ಮ ಸಂಬಂಧದ ಜೊತೆ ಅವರ ಸ್ವಂತ ವಿಚಾರ ಹಾಗೂ ಕೆಲಸಗಳನ್ನು, ಹವ್ಯಾಸಗಳನ್ನು ಮಾಡಲು, ಜೊತೆಗಾರರನ್ನು ಭೇಟಿಯಾಗಲು ಸಮಯ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಭರದಲ್ಲಿ ಕಾಲ ಕಳೆದಂತೆ ಬೇಸರದ ಸ್ವರೂಪದಲ್ಲಿ ಕೂಪಮಂಡೂಕದ ತರಹ ಆಗಿ ಹೋಗುವುದು.

    ಹೀಗೆ ಯಾವುದೇ ಸಂಬಂಧಗಳಲ್ಲಿ ಆಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ವತಂತ್ರ ವಿಚಾರ ಜೀವನಶೈಲಿಗೆ ಜಾಗ ಬಿಡಲೇಬೇಕು. ಅದರಿಂದ ಕೌಶಲ್ಯದ ಅಭಿವೃದ್ಧಿ ಆಗುವುದಲ್ಲದೆ, ಮಾನಸಿಕವಾಗಿ, ಭಾವನಾತ್ಮಕವಾಗಿ ಮನುಷ್ಯ ಹೆಚ್ಚು ದೃಢವಾಗುತ್ತಾನೆ. ಆದರೆ ಸ್ವಾತಂತ್ರ್ಯದ ದುರುಪಯೋಗ ಮಾತ್ರ ಸಲ್ಲದು.

    Photo by JOSHUA COLEMAN on Unsplash

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ಶಿಲ್ಪಗಳು ಗೊತ್ತು ಶಿಲ್ಪಿ ಗೊತ್ತಾ

    ಬಳಕೂರು ವಿ. ಎಸ್ . ನಾಯಕ

    ಪ್ರತಿಯೊಬ್ಬರೂ ಕೂಡ ತಮ್ಮ ಜೀವಿತದ ಅವಧಿಯಲ್ಲಿ ಏನನ್ನಾದರೂ ಸಾಧನೆಯನ್ನುಮಾಡಿರುತ್ತಾರೆ .ಅದರಲ್ಲಿ ಕೆಲವೊಂದು ಮಾತ್ರ ನಮ್ಮ ನೆನಪಿನ ಪುಟದಲ್ಲಿರುತ್ತದೆ. ಕವಿ ವಾಣಿಯಂತೆ ನಾವು ಸತ್ತು ಬದುಕಬೇಕು ಎಂದು ಹೇಳುತ್ತಾರೆ ಅಂದರೆ ಸತ್ತ ಮೇಲೂ ನಮ್ಮ ಸಾಧನೆಯ ಕಾರ್ಯ ಎಲ್ಲರ ನೆನಪಿನಲ್ಲಿ  ಚಿರಸ್ಥಾಯಿ ಆಗಬೇಕು ಎಂದುಕೊಳ್ಳುತ್ತಾರೆ .

    ಒಂದು ಕುಟುಂಬದ ವ್ಯವಸ್ಥೆಯ ಅಡಿಯಲ್ಲಿ ಬದುಕುತ್ತಿರುವವರು ಒಬ್ಬರಿಗೊಬ್ಬರು ಅಷ್ಟೊಂದು ಪ್ರಿಯರಾಗಿರುತ್ತಾರೆ.  ಅವರ ಅಕಾಲಿಕ ಸಾವು ಅವರಿಗೆ ಮರೆಯಲು ಸಾಧ್ಯವಿಲ್ಲ. ಆದರೆ ಅವರು ನಮ್ಮೊಂದಿಗೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವವರಿಗೇನು ಕಡಿಮೆಯಿಲ್ಲ .

    ಹಾಗೆ ಇಲ್ಲಿಯ ಒಂದು ಕುಟುಂಬ ಶ್ರೀನಿವಾಸ ಗುಪ್ತಾ.   ಅವರ ಮಡದಿ ಮಾಧವಿ ಅಕಾಲಿಕ ಮರಣಕ್ಕೆ ಒಳಪಟ್ಟಾಗ ಇಷ್ಟು ವರ್ಷ ನೋಡಿದ ಕಣ್ಣುಗಳಿಂದ ಮರೆಯಲಾರದ ಸ್ಥಿತಿ .ಅವರ ಮಕ್ಕಳಿಗೂ ಕೂಡ ಆಗಾಗ ಅವರ ನೆನಪು ಕಾಡುತ್ತಿತ್ತು. ಹಾಗಾದರೆ ಏನಾದ್ರೂ ಮಾಡಿ ಅವರ ನೆನಪನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಅವರ ಶಿಲ್ಪವನ್ನೋ ಅಥವಾ ಚಿತ್ರವನ್ನೋ  ಬಿಡಿಸಬೇಕೆಂದುಕೊಂಡಿದ್ದರು.

    ಶ್ರೀಧರ ಮೂರ್ತಿ. ಅವರ ಕಲೆಯಲ್ಲಿ ಮೂಡಿ ಬಂದ ಮಾಧವಿ ಅವರ ಶಿಲ್ಪ

    ಆದ್ರೆ ಶಿಲ್ಪದಲ್ಲಿ  ಅಥವಾ ಚಿತ್ರದಲ್ಲಿ ಎಲ್ಲವನ್ನೂ ಚಿತ್ರಿಸಿ ಮೂಡಿಸಬಹುದು ಆದರೆ ಅವರು ನಮ್ಮ ಜೊತೆಯಾಗಿ ಇದ್ದ ಹಾಗೇ ಅನಿಸುವುದಿಲ್ಲ ಎಂಬ ಭಾವನೆ ಅವರಿಗಿತ್ತು.

    ಹೀಗಾಗಿ ಅವರು ಸೂಕ್ತ ಕಲಾವಿದರ ಹುಡುಕಾಟ ನಡೆಸಿದರು. ಆಗ ಅವರ ನೆನಪಿಗೆ ಬಂದದ್ದು ಶ್ರೀ ತೋಂಟದಾರ್ಯ ಸ್ವಾಮೀಜಿಯವರ ಮೂರ್ತಿ ಮಾಡಿದ ಶಿಲ್ಪಿ ಶ್ರೀಧರ ಮೂರ್ತಿ. ಶಿಲ್ಪಿ ಶ್ರೀಧರ್ ಅವರು ಇವರ ಬೇಡಿಕೆ ಆಸಕ್ತಿಯನ್ನು ಗಮನಿಸಿ ಏನನ್ನಾದರೂ ಹೊಸತನದ ಹುಡುಕಾಟದಲ್ಲಿ ಇದ್ದ ಅವರಿಗೆ ಸಿಲಿಕಾನ್ ರಬ್ಬರ್ ಬಳಸಿ ಒಂದು ಸುಂದರವಾದ ಅದೇ ರೀತಿ ಹೋಲುವ ಕಲಾಕೃತಿ ಮಾಡಲು ಆರಂಭಿಸಿದ್ದರು.  ಸುಮಾರು ಹದಿನೈದು ಕಲಾವಿದರ ಶ್ರಮ ಶ್ರೀಧರ ಮೂರ್ತಿಯವರ ನೇತೃತ್ವದಲ್ಲಿ ಸುಮಾರು 4 ತಿಂಗಳುಗಳ ಕಾಲ ಈ ಪ್ರತಿಮೆ ಮಾಡಲು ಬೇಕಾಯಿತು. ಮಾಧವಿಯವರ ಈ ಪ್ರತಿಮೆ ನೋಡಿದರೆ ಸಾಕ್ಷಾತ್ ಮಾಧವಿಯವರೀ ಬಂದು  ಆಸೀನರಾಗಿದ್ದಾರೆ . ಆ ನಗು ಮುಖ, ನೋಟ  ವೇಷಭೂಷಣ ಎಲ್ಲವೂ ಯಾರೂ ಕೂಡ ಶಿಲ್ಪವೆಂದು ತಿಳಿಯಲು ಸಾಧ್ಯವಿಲ್ಲ

    ಮನೆತನವೆಲ್ಲ ಕಲಾವಿದರೇ

    ಶ್ರೀಧರಮೂರ್ತಿಯವರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು .ಖ್ಯಾತ ಶಿಲ್ಪಿ ಶ್ರೀ ಕಾಶೀನಾಥರವರ ಮಗ .ಇವರ ಮನೆತನವೆಲ್ಲ ಕಲಾವಿದರೇ. ಇವರ ಚಿಕ್ಕಪ್ಪ ನಾರಾಯಣ್ ರಾವ್  ಕಾವಟೇಕರ್ ಕೂಡ ಪ್ರಸಿದ್ಧ ಶಿಲ್ಪಿಗಳು.

    ನಾವು ಪ್ರವಾಸಿ ತಾಣಗಳನ್ನು ಭೇಟಿ ಕೊಟ್ಟಾಗ ಅದರಲ್ಲಿಯೂ ಮುರುಡೇಶ್ವರ ನೂರ ಇಪ್ಪತ್ತಮೂರು ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಉತ್ತರ ಕನ್ನಡ ಜಿಲ್ಲೆಗೆ ಮುಕುಟ ಪ್ರಾಯವಿದ್ದಂತೆ. ತಪೋಭಂಗಿಯಲ್ಲಿ ಕುಳಿತಿರುವ ಶಿವನ ಮೂರ್ತಿಯು ಜಗತ್ಪ್ರಸಿದ್ಧವಾಗಿದೆ. ಈ ಮೂರ್ತಿಯ ಕೆಳಭಾಗದಲ್ಲಿ ಒಂದು ಗುಹೆಯಲ್ಲಿ ಭೂ ಕೈಲಾಸದ ಕಥಾವಳಿಯನ್ನು ಸಾರುವ ಶಿಲ್ಪಗಳು ನಿಜಕ್ಕೂ ವಿಭಿನ್ನ ಸಂದೇಶವನ್ನು ಕೊಡುತ್ತದೆ.  ಅದರ ಪಕ್ಕದಲ್ಲಿ ಶ್ರೀಕೃಷ್ಣನ ಗೀತೋಪದೇಶದ ಪ್ರತಿಮೆ ಸಿದ್ಧವಾಗಿದ್ದು ಅದಕ್ಕೆ ಬಂಗಾರದ ವರ್ಣ ಲೇಪನ ಮಾಡಲಾಗಿದೆ .ಇದರ ಜೊತೆಗೆ ವಿಭಿನ್ನ ದೃಶ್ಯಕಾವ್ಯವನ್ನು ನೆನಪು ಮಾಡುವ ಲಂಡನ್ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಡದಲ್ಲಿ albert embankment  ಪ್ರದೇಶದಲ್ಲಿ ನಿರ್ಮಿಸಿರುವ ಬಸವಣ್ಣನವರ ಪ್ರತಿಮೆ ಲೋಕ ಪ್ರಸಿದ್ಧಿಯಾಗಿದೆ. . ಬೆಂಗಳೂರಿನ ಕೆಂಪ್ ಪೋರ್ಟ್ ನಲ್ಲಿ ಇರುವ ಶಿವನ ವಿಗ್ರಹ, 2004ನಲ್ಲಿ ನಿರ್ಮಿಸಿದ ಜಬಲ್ಪುರದ ನೂರು ಅಡಿ ಎತ್ತರದ ಆಂಜನೇಯ ವಿಗ್ರಹ,  ಸೂರತ್ ನಲ್ಲಿ 85 ಅಡಿ ಎತ್ತರದ ಕೈಲಾಸವಾಸಿ ಶಿವನ  ವಿಗ್ರಹ,  ಬಸವಕಲ್ಯಾಣದ ಶಿವನು ಕುಳಿತ ಭಂಗಿಯಲ್ಲಿರುವ ಶಿಲ್ಪಾ . ಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಿಕ್ಕಿಂನಲ್ಲಿ ಹನ್ನೆರಡು ಜ್ಯೋತಿರ್ಲಿಂಗ ಮಧ್ಯೆ ಇರುವ  ಶಿವನ ವಿಗ್ರಹ , ಗದಗದ ತೋಂಟದಾರ್ಯ ಮಠದ ಆವರಣದಲ್ಲಿ 75 ಅಡಿ ಎತ್ತರದ ಲೋಟಸ್ ದೇವಾಲಯ ,ಬೆಂಗಳೂರಿನ ನೆಲಮಂಗಲದಲ್ಲಿ ಗೀತೋಪದೇಶದ ಕಾಂಕ್ರೀಟ್ ವಿಗ್ರಹ ,ಹೀಗೆ ಬಹಳಷ್ಟು ಕಲಾಲೋಕವನ್ನೇ ಸೃಷ್ಟಿಸಿದ್ದಾರೆ .

    ಈಗ ಬೆಂಗಳೂರಿನಲ್ಲಿ ಬೊಂಬೆಮನೆ ಕಲಾ ಗ್ಯಾಲರಿ ಸ್ಥಾಪಿಸಿ ವಿಭಿನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ ಇವರ ಪ್ರಕಾರ ಯಾವುದೇ  ಕಲಾಕೃತಿ ರಚಿಸುವಾಗ ಮೂಲ ವಿಷಯ ಸರಿಯಾಗಿ ಗ್ರಹಿಸಬೇಕು ಆಗಿದೆ ಮಾತ್ರ ಉತ್ತಮ ಕಲಾಕೃತಿ ಮೂಡಿ ಬರುತ್ತದೆ.  ಸುಮಾರು 30 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಶ್ರೀಧರ ಅವರಿಗೆ ಹೃದಯಾಂತರಾಳದ ನಮನಗಳು. 

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಚೀನಾದ ಗಡಿ ತಂಟೆಗೆ ಅಸಲಿ ಕಾರಣ

    ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯಾವುದೇ ಬಿಕ್ಕಟ್ಟುಗಳಿಗೆ ನಾನಾ ಆಯಾಮಗಳಿರುತ್ತವೆ. ಇವುಗಳ ಪೈಕಿ ಭಾರತ-ಚೀನಾ ನಡುವಿನ ಈಗಿನ ಸಂಘರ್ಷ ಕೂಡ ಸೇರುತ್ತದೆ. ಹಾಗಾದರೆ, ಜಗತ್ತೇ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ (ಮುಖ್ಯವಾಗಿ ಕೋವಿಡ್ -19ನಿಂದ ಆದ ಸಮಸ್ಯೆ) ಯಾಕೆ ಭಾರತದ ಗಡಿಯನ್ನು ಅತಿಕ್ರಮಿಸಲು ಮುಂದಾಯಿತು ?  ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ ಮತ್ತು ಸರಳವಾಗಿ ಹೇಳುವಂತೆಯೂ ಇಲ್ಲ. ಇದಕ್ಕೆ ಸುದೀರ್ಘ ವಿವರಣೆ ಬೇಕಾಗುತ್ತದೆ.

    ಚೀನಾದಲ್ಲಿ ಆಹಾರ ಅಭಾವ

    ಇತ್ತೀಚೆಗಷ್ಟೇ ಅಂದರೆ ಮೇ ತಿಂಗಳಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ “ಅಪರೇಶನ್ ಕ್ಲೀನ್ ಪ್ಲೇಟ್” ಎಂಬ ಯೋಜನೆಯನ್ನು ಘೋಷಿಸಿದ್ದರು. ಆಹಾರವು ವ್ಯರ್ಥ ಮಾಡಬಾರದು ಎಂಬುದು ಇದರ ಹಿಂದಿನ ಉದ್ದೇಶ.

    ಹಿಂದೆ 1949ರಲ್ಲೂ ಚೀನಾ, ಅತಿಯಾದ ಆಹಾರ ಅಭಾವವನ್ನು ಎದುರಿಸಿತ್ತು. ಆಗ ಲಕ್ಷಾಂತರ ಜನರು ಹಸಿವಿನಿಂದಲೇ ಸಾವನ್ನಪ್ಪಿದ್ದರು. ಬಳಿಕ 1962ರಲ್ಲಿ ಮಾವೋ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಆಹಾರ ಸಿಗದೆ ಆಗಲೂ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು, ಮಾವೋ ಭಾರತದ ಗಡಿ ಭಾಗವನ್ನು ಅತಿಕ್ರಮಿಸಿ, ಅತಿಯಾದ ರಾಷ್ಟ್ರೀಯತೆ ಭಾವನೆಯನ್ನು ಚೀನೀಯರಲ್ಲಿ ಕೆರಳಿಸುವ ಅಥವಾ ಪ್ರಚೋದಿಸುವ ಮೂಲಕ ತಮ್ಮ ಪಟ್ಟವನ್ನು ಗಟ್ಟಿ ಮಾಡಿಕೊಂಡರು. ಆದರೆ ಅದಕ್ಕೆ ಬಲಿಪಶುವಾಗಿದ್ದು ಭಾರತ ಎಂಬುದು ಈಗ ಇತಿಹಾಸ.

    ಈಗ ಮತ್ತೆ ಚರಿತ್ರೆ ಮರುಕಳಿಸಿದೆ. ಅಧ್ಯಕ್ಷ ಮಾವೋ ಬದಲು ಜಿನ್ ಪಿಂಗ್ ಅಧಿಕಾರದಲ್ಲಿದ್ದಾರೆ. ಆಂತರಿಕ ಭಿನ್ನಮತ, ವಿದೇಶಗಳ ರಾಜತಾಂತ್ರಿಕ ವೈಫಲ್ಯ ಮತ್ತು ಕಾಡುತ್ತಿರುವ ಬಡತನದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಭಾರತದ ಗಡಿ ವಿವಾದವನ್ನು ಕೆಣಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ತೂಕದ ಮೇಲೆ ಆಹಾರ

    ಇದಕ್ಕೆ ಪುರಾವೆ ಇಲ್ಲದಿಲ್ಲ. ಚೀನಾದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಈಗ ತೂಕ ನೋಡಿ ಆಹಾರ ಒದಗಿಸುತ್ತಿದ್ದಾರಂತೆ. ಒಳಗೆ ನುಗ್ಗಿತ್ತಿದ್ದಂತೆ ಗ್ರಾಹಕರ ತೂಕವನ್ನು ನೋಡಲಾಗುತ್ತದೆ. ಬಳಿಕವಷ್ಟೇ ಅವರಿಗೆ ಸೂಕ್ತವಾದ ಆಹಾರದ ಮೆನು (ಪ್ರತ್ಯೇಕ-ಪ್ರತ್ಯೇಕವಾಗಿ) ಒದಗಿಸಲಾಗುತ್ತದೆ. 88 ಪೌಂಡ್ ಗಳಿಗಿಂತ ಕಡಿಮೆ ತೂಕ ಇರುವವರಿಗೆ ಬೀಫ್ ಮತ್ತು ಮೀನು, 175 ಪೌಂಡ್ ಗಳಿಗಿಂತ ಹೆಚ್ಚುವರಿಗೆ ಪೋರ್ಕ್ ಡಿಶ್ ಮಾತ್ರ ಒದಗಿಸಲಾಗುತ್ತದೆ. ಪ್ರತಿಯೊಂದು ವಿವರವೂ ಆಪ್ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗುತ್ತಲೇ ಇರುತ್ತದೆ.

    ಎನ್ -1, ಎನ್ -2 ಇತ್ಯಾದಿ ಡಿಶ್ ಗಳನ್ನು ಸೂಚಿಸಲಾಗುತ್ತದೆ. ಬೇಕಾದರೆ ತಿನ್ನಬಹುದು. ಇಲ್ಲವಾದರೆ ಬಿಡಬಹುದು. ಆದರೆ ರೆಸ್ಟೋರೆಂಟ್ ಮಾತ್ರ ಸರಕಾರದ ನಿಯಮವನ್ನು ಮೀರುವಂತಿಲ್ಲ. ಎಷ್ಟೆಂದರೂ ಅದು ಚೀನಾ ಅಲ್ಲವೇ ?

    ಚೀನಾದ ಸಮಸ್ಯೆ

    ಚೀನಾಕ್ಕೆ ಆಹಾರ ವಸ್ತು ಪೂರೈಸುವ ಪ್ರಮುಖ ದೇಶಗಳೆಂರೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ. ಆದರೆ ಇವುಗಳ (ಕೃಷಿ ಉತ್ಪನ್ನಗಳು ಸೇರಿದಂತೆ) ಮೇಲೆ ಈಗ ಚೀನಾ, ಶೇ. 80ಕ್ಕೂ ಹೆಚ್ಚು ಆಮದು ಶುಲ್ಕವನ್ನು ವಿಧಿಸಿದೆ. ಇದರಿಂದ ಸಹಜವಾಗಿಯೇ ಆಮದು ಕಡಿಮೆಯಾಗಿ, ಆಹಾರ ಧಾನ್ಯ ಅಥವಾ ವಸ್ತುಗಳ ಕೊರತೆ ಎದುರಾಗಿದೆ.

    ಆಸ್ಟ್ರೇಲಿಯಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಚೀನಾದ ಒಟ್ಟು ಕೃಷಿ ಮತ್ತು ಆಹಾರ ಸಾಮಗ್ರಿಗಳ ಆಮದಿನಲ್ಲಿ ಆಸ್ಟ್ರೇಲಿಯಾದ ಪಾಲು ಶೇ. 60-70. ಇದರ ಜತೆಗೆ ಕೆನಡಾ, ಆರ್ಜೆಂಟೀನಾ, ಫ್ರಾನ್ಸ್ ಮತ್ತು ಉಕ್ರೈನ್ ಮೇಲೆಯೂ ಅದು ಅವಲಂಬಿತವಾಗಿದೆ. ಈಗ ಅವುಗಳು ಹಿಂಜರಿಯುತ್ತಿರುವುದರಿಂದ ತನ್ನ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಭಾರತದ ಗಡಿ ಭಾಗದಲ್ಲಿ ಗದ್ದಲ ಎಬ್ಬಿಸಿ ಆ ಮೂಲಕ ಜನರಲ್ಲಿ ರಾಷ್ಟ್ರಪ್ರೇಮ ಭಾವನೆಯನ್ನು ಉತ್ತೇಜಿಸಿ, ನೈಜ ಸಮಸ್ಯೆಯನ್ನು ಮರೆ ಮಾಚುವ ಕೆಲಸಕ್ಕೆ ಮುಂದಾಗಿದೆ. ಕೋವಿಡ್ -19 ಜತೆಗೆ ಇದು ಸೇರಿಕೊಂಡರೆ ತನ್ನ ಪಟ್ಟ ಅಬಾಧಿತವಾಗುತ್ತದೆ ಎಂಬುದು ಜಿನ್ ಪಿಂಗ್ ಅಭಿಪ್ರಾಯ ಎಂದೇ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

    ಆಹಾರ ಬೆಲೆಯೇರಿಕೆ

    ಚೀನಾದ ಕೃಷಿ ಸಚಿವರ ಮಾತನ್ನೇ ನಂಬಬಹುದಾದರೆ ಆಫ್ರಿಕನ್ ಸ್ವೇನ್ ಫ್ಲೂನಿಂದಾಗಿ ಕನಿಷ್ಠವೆಂದರೂ 100 ದಶಲಕ್ಷ ಹಂದಿಗಳನ್ನು ಕೊಲ್ಲಲಾಗಿದೆ. ಇದರಿಂದಾಗಿ ಜುಲೈನಿಂದ ಆಹಾರ ಸಾಮಗ್ರಿ ಬೆಲೆಯಲ್ಲಿ ಶೇ. 13ರಷ್ಟು ಮತ್ತು  ಹಂದಿ ಮಾಂಸದ ಬೆಲೆ ಶೇ. 85ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಚೀನಾದ ಯಾಂಗ್ಟ್ಝ್ ನದಿಯಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದೆಗೆಡುವಂತೆ ಮಾಡಿದ್ದು, ಲಕ್ಷಾಂತರ ಜನರ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಏನೂ ಬೆಳೆಯಿಲ್ಲದಂತೆ ಆಗಿದೆ.

    ಚೀನಾದ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ವರ್ಷದ ಜನವರಿ-ಜುಲೈ ಅವಧಿಗೆ ಹೋಲಿಸಿದರೆ ಈ ಬಾರಿ ದವಸ ಧಾನ್ಯಗಳ ಆಮದು ಶೇ. 22.7ರಷ್ಟು ಎರಿಕೆಯಾಗಿದೆ. ಗೋಧಿ ಆಮದು ಶೇ. 197ರಷ್ಟು ಹೆಚ್ಚಳವಾಗಿದೆ. ಜೋಳದ ಆಮದು ಶೇ. 23ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಚೀನಾದ ಆಡಳಿತವನ್ನು ಕಂಗೆಡಿಸಿದ್ದು, ಜನರ ಗಮನವನ್ನು ಇದರಿಂದ ಬೇರೆಡೆಗೆ ಸೆಳೆಯಲು ಭಾರತದ ಮೇಲೆ ಶಸ್ತ್ರ ಝಳಪಿಸಲು ಮುಂದಾಗಿದೆ ತಜ್ಞರು ವಿಶ್ಲೇಷಿಸುತ್ತಾರೆ.

    ಕೊರೊನಾ ಹೇರ್ಕಟ್

    ಅಂತೂ ಇಂತೂ ಕಲಿಯುಗದ ಒಂದು ಪ್ರಮುಖ ವಿದ್ಯಮಾನವಾದ ಕೊರೊನಾ ಶಕೆಯ ಆರಂಭ ಕಾಲ ಮುಗಿದು ಇದು ಮಧ್ಯಕಾಲವೋ ಅಂತಿಮವೊ ಎಂಬ ಚಿಂತೆಯಲ್ಲಿರುವಾಗಲೇ ಸಲೂನೂ,ಸ್ಪಾ,ಪಾರ್ಲರ್ರುಗಳನ್ನು ತೆರೆಯಬಹುದು ಎನ್ನುವ ಸರ್ಕಾರದಿಂದ ಸುತ್ತೋಲೆ ಬಂದಾಗ ನನಗಂತೂ ಈ ಕೆಳಗಿನ ಸಂಗತಿಗಳು ಇನ್ನು ಮಿಸ್ ಆಗುತ್ತವಲ್ಲ ಅಂಥ ಅನ್ನಿಸಿದ್ದು ಸುಳ್ಳಲ್ಲ.

    ತಮ್ಮ ಪತಿದೇವರಿಗೋ, ಮಗನಿಗೋ, ಸೋದರರಿಗೊ ಹೇರ್ಕಟ್ ಮಾಡುತ್ತಿರುವ ಹೆಂಗೆಳೆಯರ ಅಪರೂಪದ ವಾಟ್ಸ್ ಆಪ್ ಸ್ಟೇಟಸ್ ಗಳನ್ನು ನೋಡುವ ಸೌಭಾಗ್ಯ ಇಲ್ಲದೇ ಹೋದದ್ದು ಮೊದಲ ನಷ್ಟ.

    ‘ಕೊರೊನಾ ಲುಕ್ಸ್’ಎನ್ನುವ ಕ್ಯಾಪ್ಷನ್ ಇಟ್ಟು  ಡಿಪಿಗೆ ಅಪ್ಟೇಡಿಟಿಸಲಾಗುತ್ತಿದ್ದ ಅಡ್ಡಾದಿಡ್ಡಿ ಗಡ್ಡದಾರಿ ಸ್ಪುರದ್ರೂಪಿಗಳನ್ನ  ಮತ್ತೆ ಮತ್ತೆ ಝೂಮಿಸಿ ಇವ ಹಿಂಗ ಚಂದವೋ, ಹಂಗೋ ಅನ್ನುವ ಮಹತ್ವದ ಪ್ರಶ್ನೆಗಳಿಗೆ ನಾವು ಗೆಳತಿಯರು ಚರ್ಚಿಸಿ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ನಿಂತದ್ದು ಎರಡನೇ ನಷ್ಟ.

    ನಮ್ ನಮ್ಮ ತಲೆಗೂದಲು ಉದುರುವುದೇ ಭಾರಿ ಚಿಂತೆಯಾಗಿದ್ದ ಕಾಲವೊಂದಿತ್ತು. ಆ ದುರಿತ ಕಾಲ ಕೊರೊನಾ ಭಾಗ್ಯದಲ್ಲಿ ಕಳೆದು ಹೋಗಿ ಮೂರನೇ ವಾರಕ್ಕೇ ಆರಿಂಚು ಬೆಳೆದ ತಮ್ಮ ಗಡ್ಡ ಮೀಸೆ ,ತಲೆಕೂದಲ ಸಾಮರ್ಥ್ಯ ಕಂಡು ನಿಬ್ಬೆರಗಾಗಿ ಇನ್ನೂ ಕೂದಲು ಉದುರುವ ಸಮಸ್ಯೆಗೆ ಕಾಸು ಖರ್ಚು ಮಾಡಬೇಕಿಲ್ಲ ಎಂದು ನಿಟ್ಟುಸಿರು ಬಿಡುವಾಗಲೇ ಈ ವೃತ್ತಿಯಲ್ಲಿ ಕೈ ತುಂಬಾ ಸಂಪಾದಿಸುತ್ತಿದ್ದವರು ಕಣ್ಕಣ್ಣು ಬಿಡುವಂತಾಗಿದ್ದು‌ ಮೂರನೇ ನಷ್ಟ.ಆದರೆ ಕೊರೊನಾ ಕಾಲದ ಭತ್ಯೆಯಾಗಿ ಈ ವೃತ್ತಿಯಲ್ಲಿನ ಶ್ರಮಿಕರಿಗೂ ತಲಾ ಇಂತಿಷ್ಟು ಎಂಬೊಂದು ಮೊತ್ತ ಸಮಾಜದ ಉಳಿದೆಲ್ಲ ಶ್ರಮಿಕರಂತೆ ಸಿಕ್ಕಿದ್ದು ಸಂತಸದ ಸುದ್ದಿ.

    ಕೊನೆಯದಾಗಿ ಒಂದು ಸಂತಸದ ಸಂಗತಿ.ಹೇಳೇ ಬಿಡ್ತೀನಿ.ಚಿಕ್ಕಂದಿನಲ್ಲಿ ಸದಾ ಅಪ್ಪನ ಮೊಡ್ಡು  ಕತ್ತರಿ ಜೊತೆಗೇ ಆಟವಾಡುತ್ತಾ ಸಿಕ್ಕಿದ ವೇಸ್ಟು ಪದಾರ್ಥಗಳನ್ನೆಲ್ಲಾ ಆ ಮೊಡ್ಡು ಕತ್ತರಿಯಿಂದ ತುಂಡುತುಂಡು ಮಾಡಲು ಯತ್ನಿಸಿ ,ಅಮ್ಮನಿಂದ ಸಾಕಷ್ಟು ಬೈಗುಳಗಳನ್ನೂ ಅದಕ್ಕಾಗಿ ಗಿಟ್ಟಿಸಿಕೊಂಡವಳು ನಾನು.ಯಾವುದನ್ನಾದರೂ ಒಂದು ಶೇಪಲ್ಲಿ ಕತ್ತರಿಸಬೇಕೆನ್ನುವ ನನ್ನ ಅದಮ್ಯ ಆಸೆಗೆ ಯಾರಾದಾದರೂ ಫಲಭರಿತ ಮಂಡೆ ಸಿಕ್ತದಾ ಅಂತ ಹುಡುಕಾಡ್ತಾ ಒಬ್ಬೊಳ್ಳೆ ಹೇರ್ ಸ್ಟೈಲಿಸ್ಟ್ ಆಗಬೇಕು ಎನ್ನುವ ನನ್ನ ಬಯಕೆ ಅಂತೂ ಇಂತೂ ಕೊರೊನಾ ಕಾಲದಲ್ಲಿ ಈಡೇರಿದೆ.

    ಈ ಕೊರೊನಾ ದುರಿತ ಕಾಲದಲ್ಲಿ ಸಲೂನಿನ ಸಹಯೋಗವಿಲ್ಲದೆ ವಿಪರೀತ ಬೆಳೆದ ತನ್ನ ತಲೆಗೂದಲ ಜೊತೆಗೆ ತಲೆಯನ್ನೂ ನೆಚ್ಚಿನ ತಂಗಿಯ ಕೈಗಿಟ್ಟು ನನ್ನಣ್ಣ ನಿರಾಂತಕದಲಿ ಅರೆಗಣ್ಣಾದದ್ದೆ  ತಡ.ನನಗೆ ಮರೆತೇ ಬಿಟ್ಟಿದ್ದ ಹಳೆಯ ಕನಸೊಂದು ಮತ್ತೆ ಸಾಕಾರವಾಗುತ್ತಿರುವ ಸಡಗರವಾಗಿ ಹೋಯಿತು.ಯಾವುದೋ ಸೌಭಾಗ್ಯ ಸಿಕ್ಕಂತಾಗಿ ಅಣ್ಣನ ತಲೆಗೂದಲನ್ನು ಒಮ್ಮೆ ಕೈಯಲ್ಲಿ ಹಾಗೆ ಹೀಗೆ ನೋಡಿ  ಅದರ ಲೆಂತೂ,ಡೆನ್ಸಿಟಿ,ಮೃದುತ್ವವನ್ನು ಪರೀಕ್ಷೆ ಮಾಡಿದೆ.ಹೀಗೆ ಸಲೂನಿನವರು ಮಾಡ್ತಾರೋ ಇಲ್ವೋ ಅದಂತೂ ಗೊತ್ತಿಲ್ಲ. ಆದರೆ ನಾನು ಮಾತ್ರಮಹಾ ಕಸುಬುದಾರಿಣಿಯಂತೆ ಸಿಕ್ಕಿದ ವಿಪುಲ ಕೇಶದ ಮಂಡೆಯನ್ನು ಆಚೀಚೆ ತಿರುಗಿಸಿ  ಸೂಕ್ಷ್ಮವಾಗಿ ಒಮ್ಮೆ ಗಮನಿಸಿ ಕೊಂಡೆ.ಆಮೇಲೆ ಅಣ್ಣನನ್ನು ಕೆಳಗೆ ಕೂರಿಸಿ ನಾನು ಅಂಗಳದ ಒಂದು ಕಟ್ಟೆಯ ಮೇಲೆ ಕುಳಿತು ಅವನ ತಲೆಗೂದಲಿಗೆ ಒಂದಿಷ್ಟು ನೀರು ಪ್ರೋಕ್ಷಿಸಿಕೊಂಡೆ.ಆಮೇಲೆ ಅಣ್ಣನಕೈಗೆ ಕೊಟ್ಟಿದ್ದ ಕನ್ನಡಿಯಲ್ಲಿ ಗಮನಿಸುತ್ತಾ ಒಂದು ಅಗಲ ಹಲ್ಲಿನ ಬಾಚಣಿಗೆಯಿಂದ ಸೈಡಿನ ಕೂದಲನ್ನು ಕತ್ತರಿಸಿದೆ.ಆಹಾ…ಮೊತ್ತ ಮೊದಲ  ಪ್ರಯತ್ನವೇ ಪರ್ಫೆಕ್ಟ್ ಎನಿಸಿ ನಾನಿನ್ನು ಜಗದ ಅತಿ ದೊಡ್ಡ ಕೇಶ ವಿನ್ಯಾಸಕಿ ಆಗೇ ಬಿಟ್ಟೆ ಎನ್ನುವ ಹೆಮ್ಮೆ ಯಲ್ಲಿ ಹಿಂಬದಿಯ ಕೂದಲನ್ನೂ ಹಾಗೇ ಬಾಚಣಿಗೆಯಿಂದ ಮೇಲೆತ್ತಿ ಕತ್ತರಿಸಿದೆ.ಹಾಗೇ ಈ ಬದಿಯದ್ದೂ.

    ಅಣ್ಣ ಹಾಗೇ ಕನ್ನಡಿಯಲ್ಲಿ ಗಮನಿಸುತ್ತಿದ್ದವ ‘ಏನೇ ನೀನು’ ಅಂದಿದ್ದಕ್ಕೆ ನಾನೇನೂ ಕಮ್ಮಿಯಿಲ್ಲದವಳಂತೆ”ಹೆಂಗೆ ನಾವು” ಎಂದೆ.ಮೊದಲಿಗೆ ಮಂಡೆಯ ಸುತ್ತಲಿನ ಕೂದಲನ್ನು ಕತ್ತರಿಸಬೇಕೆಂದು ಯಾವ ಹೇರ್ ಹೋಸ್ಟೆಸ್ ಯೂನಿವರ್ಸಿಟಿಯಲ್ಲೂ ಕಲಿತಿಲ್ಲವಾದರೂ ನಾನು ಮಾತ್ರ ಸುತ್ತಲೂ ಕಲಾಯಿ ಹೊಡೆಯುವವಳಂತೆ ಕತ್ತರಿಸಿ ಆಮೇಲೆ ಮೇಲೆ ಮೇಲೆ ಹೋಗಲಾರಂಬಿಸಿದೆ.ಅದೇನೋ ಗೊತ್ತಿಲ್ಲ.ಬಹಳ ಚೆನ್ನಾಗಿ ಹೇರ್ಕಟ್ ಮಾಡ್ತಿದ್ದೀನಿ ಎನ್ನುವ ಆತ್ಮವಿಶ್ವಾಸವೋ ,ಹುಸಿಜಂಭವೋ ಆಗಲೇ ನನ್ನ ಬೆರಳುಗಳಿಗೆ ಬಂದಾಗಿತ್ತು.ಅಂತೂ ಕತ್ತರಿಸುತ್ತಾ ಹೋದೆ.

    ಅಣ್ಣ ಮಾತ್ರ ಹೇಗೂ ವರ್ಕ್ ಫ್ರಮ್ ಹೋಮ್ ಇದ್ದುದ್ದರ ಜೊತೆಗೆ ಕೊರೊನಾ ಕಾರಣ ದಿಂದಾಗಿ ಯಾವ ಅತಿಥಿ ಅಭ್ಯಾಗತರ ಭೇಟಿಯ ,ಮುಖಾಮುಖಿಯಸಾಧ್ಯತೆಗಳೂ ಮುಚ್ಚಿದ್ದರಿಂದ ತಂಗಿಯ ಕೈಗೆ ತನ್ನ ಕೇಶಭರಿತ ಬುರುಡೆ ಕೊಟ್ಟು ಕುಳಿತು ಬಿಟ್ಟಿದ್ದ.ನಾನು ಆಗಾಗ  ಸ್ಪೆಷಲ್ ಸ್ಕಿಲ್ಲಿನ ಸಲೂನಿನವನ ಥರ ಸೈಡ್ ಎಷ್ಟು ಗಿಡ್ಡ ಇರಬೇಕು ಅಣ್ಣಾ?ಹಿಂದೆ ಇನ್ನೂ ಸ್ವಲ್ಪ ಶಾರ್ಟ್ ‌ಮಾಡಲಾ…ಈಗ ನೋಡ್ಕೋ..ಅಂತೆಲ್ಲಾ ಮಾತಾಡ್ತಾ ಕಚಕಚಕಚ ಕತ್ತರಿ ಆಡಿಸಿ,ಟ್ರಿಮ್ ಮಾಡಿ  ಅಣ್ಣನಿಗೆ ಕಣ್ಣು ಬಿಡಲು ಹೇಳಿದೆ.

    ಸೇಮ್ ಟು ಸೇಮ್ಮ್  ಖಾಲಿ ಬಿಳಿಮಡಿಕೆ ಥರ ಕಾಣ್ತಿತ್ತು ನನ್ನ ಕೈ ಚಳಕಕ್ಕೆ ಸಿಕ್ಕಿದ ಅಣ್ಣನ ಮಂಡೆ. ಕನ್ನಡಿ ಕೊಟ್ಟಾಗ ಒಂಥರ ಮುಖ ಮಾಡಿಕೊಂಡ ಅಣ್ಣ  ದೇವರು ಕೊಟ್ಟ ತಂಗಿ ಮಾಡಿದ ಹೇರ್ಕಟ್ಟನ್ನು  ಅಲ್ಲಗಳಲೆಯೂ ಆಗದೇ ಒಪ್ಪಲೂ ಆಗದೇ ‘ಬೆಳೆಯುತ್ತೆ ಬಿಡು.ಇನ್ನೆರಡು ದಿನದಲ್ಲಿ’ ಅಂತ ಸಮಾಧಾನ ಮಾಡಿಕೊಂಡ.
    ಆದರೆ ..ನನಗೇ ಸ್ಪುರದ್ರೂಪಿ ಅಣ್ಣನ ಚಲುವು ನನ್ನ  ಕೈಚಳಕಕ್ಕೆ ಬಲಿಯಾದ ವಿಚಿತ್ರ ಹೇರ್ಸ್ಟೈಲನ್ನಿಂದಾಗಿಒಂದು ವಾರವಾದರೂ ನೋಡಲಾಗದೇ ‘ಅಣ್ಣಾ…ಟೋಪಿ ಹಾಕಳೋ..ಚೆನ್ನಾಗಿ ಕಾಣ್ತಿಯಾ’ ಅಂತ ಟೋಪಿ ಹಾಕಲು ನೋಡಿದೆ.ಆದರೆ ಅಣ್ಣಾ ಮಾತ್ರ ಸ್ಥಿತಪ್ರಜ್ಞನಂತೆ “ಇಟ್ಸ್ ಓಕೆ ಬಿಡಮ್ಮಾ.ಈಗಾಗಲೇ ನೀ ಹಾಕಿರೋ ಟೋಪಿ ಚೆನ್ನಾಗೇ ಇದೆ.ಇದಕ್ಕೆ ಕೊರೊನಾ ಹೇರ್ಕಟ್ ಅಂತ ಹೊಸ ಹೆಸರಿಡಬಹುದು”ಅಂತ ಜೋರು ನಕ್ಕಿದ್ದು ಮಾತ್ರ ಯಾರ ತಲೆಗೂದಲನ್ನಾರೂ ಒಂದು ಶೇಪಿಗೆ ಕತ್ತರಿಸಬಲ್ಲೆ ಎನ್ನುವ ಕನಸನ್ನು ಈಡೇರಿಸಿದೆ.

    ಕೊರೊನಾ ಭಾಗ್ಯ ಕಾಲದಲ್ಲಿ ಯಾರು ಯಾರೋ ಏನೇನೋ ಸಂಪಾದಿಸಿಕೊಂಡು ತಮ್ಮ ‌ಕಿಸೆಯನ್ನೂ, ಖಾತೆಯನ್ನೂ ತುಂಬಿಸಿಕೊಂಡ ಸಂಗತಿ ಆಗಾಗ ಕಿವಿ ಮೇಲೆ ಬೀಳುತ್ತಲೆ ಇರುವಾಗ ಅಣ್ಣನಿಗೆ ಹೇರ್ಕಟ್ ಮಾಡಿದ ಸಡಗರವನ್ನು ನನಗೆ ಕೊರೊನಾ ಕೊಟ್ಟಿದೆ.ಜೊತೆಗೆ ಅಣ್ಣನಿಗೆ ತನ್ನ ದೇವರು ಕೊಟ್ಟ ತಂಗಿಯ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿ ನನ್ನ ಜವಬ್ದಾರಿಯನ್ನೂ ಹೆಚ್ಚಿಸಿದೆ.ಅದಕ್ಕಾಗಿ…

    ಥ್ಯಾಂಕ್ಯೂ ಕೊರೋನಾ.

    ಟಾಂಕೀಸ್ ಅಣ್ಣಾ…!!

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಚ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ‘ಕಪ್ಪು ಸೈನಿಕರ’ ಅಮೋಘ ಪರಿಸರ ಸೇವೆ

    .

    ಹಸಿ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ. ಮನೆಯಲ್ಲೇ ‘ಕಪ್ಪು ಸೈನಿಕರಿಗೆ’ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಸಾಕು..! ನಿಮ್ಮ ಕೆಲಸ ಸಲೀಸು

    ಹೆಸರಿಗೆ ತಕ್ಕಂತೆ ಆ ಸೈನಿಕರು ನೋಡಲು ಕಪ್ಪು ಬಣ್ಣ. ಆದರೆ ಅವರು ಇತರ ಸೈನಿಕರುಗಳಂತೆ ಗನ್ ಹಿಡಿದು ದೇಶ ಅಥವಾ ದೇಶದ ಗಡಿಯನ್ನು ರಕ್ಷಿಸುವ ಕೆಲಸ ನಿರ್ವಹಿಸುವುದಿಲ್ಲ. ಆದರೆ ದೇಶ, ಗಡಿ, ನಾಡು ಯಾವುದರ ಸೀಮೆಗೂ ಒಳಪಡದೇ ನಿಸರ್ಗದಲ್ಲಿ ಒಂದು ಅಪೂರ್ವವಾದ ಸೇವೆಯನ್ನು ನೀಡುತ್ತಾರೆ. ಆ ಸೇವೆಯು ಪರಿಸರಕ್ಕೆ ಪೂರಕವಾಗಿರುವುದರಿಂದ ಪರಿಸರಸ್ನೇಹಿ ಸೇವೆ ಅಂತ ಹೇಳಬಹುದು.

    ತಮ್ಮದೇ ಅದ ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಈ ಕಪ್ಪು ಸೈನಿಕರು ಸ್ವಚ್ಛಂದವಾಗಿ ಗಾಳಿಯಲ್ಲಿ ಹಾರಾಡಬಲ್ಲರು. ಹಾರಾಡಲು ರೆಕ್ಕೆ ಇರಬೇಕಲ್ಲವೇ? ತಮ್ಮಲ್ಲಿರುವ ಒಂದು ಜೊತೆ ರೆಕ್ಕೆಯ ಸಹಾಯದಿಂದ ಈ ಕಪ್ಪು ಸೈನಿಕರು
    ಗಾಳಿಯಲ್ಲಿ ‘ ಝು೦ಯ್’ ಎಂದು ಹಾರಾಡುವರು. ಇದು ಯಾವ ಸೈನಿಕರಪ್ಪ ರೆಕ್ಕೆ ಬಿಚ್ಚಿ ಗಾಳಿಯಲ್ಲಿ ಹಾರಾಡುವವರು ಎಂದು ಗೊಂದಲಕ್ಕೊಳಗಾಗದಿರಿ. ಇಲ್ಲಿ ನಾವು ಮಾತಾನಾಡುತ್ತಿರುವ ಆ ಸೈನಿಕರು ಮತ್ತ್ಯಾರೂ ಅಲ್ಲ, ಒಂದು ಕೀಟ.

    ‘ಓ , ಕೀಟವಾ…?’ ಎಂದು
    ಮೂಗು ಮುರಿದು ಅಸಡ್ಡೆ ಮಾಡುವ ಕೀಟ ಇದಲ್ಲ. ಅದರ ಸೇವೆ ಮತ್ತು ಅದರಿಂದ ನಮಗಾಗುವ ಪ್ರಯೋಜನಗಳನ್ನು ನೋಡಿ ಒಂದು
    ದೊಡ್ಡ ಸಲಾಮ್ ಹೊಡೆಯಬೇಕಾದ ಕೀಟ ಇದು. ಅದಕ್ಕೆ ಇಂಗ್ಲಿಷ್ ಭಾಷೆಯ ಚೆಂದದ ಹೆಸರು ‘ಬ್ಲಾಕ್ ಸೋಲ್ಜಿಯರ್ ಫ್ಲೈ’;
    ಕನ್ನಡದಲ್ಲಿ ‘ಕಪ್ಪು ಸೈನಿಕ ಕೀಟ’ ಅಥವಾ ‘ಕಪ್ಪು ಸೈನಿಕ ನೊಣ’ ಅಂತ ಹೆಸರಿಸಬಹುದು.

    ನೊಣ ತರವೇ ಕಾಣುವ ಕೀಟ

    ನೋಡಲು ನೊಣ ತರವೇ ಕಾಣುವ ಈ ಕೀಟ
    ಸುಮಾರು ೧.೬ ಸೆಂ. ಮೀ. ಉದ್ದವಿದ್ದು ಗಾತ್ರದಲ್ಲಿ ನೊಣಗಿಂತ ಸ್ವಲ್ಪ ದೊಡ್ಡದಾಗಿದೆ. ೧೭೫೮ ರಲ್ಲಿ ಅಧುನಿಕ ವರ್ಗೀಕರಣಶಾಸ್ತ್ರದ
    (Taxonomy) ಪಿತಾಮಹ ಕಾರ್ಲ್ ಲಿನ್ನೆಯಸ್ ಅವರು ಇದಕ್ಕೆ ನೀಡಿರುವ ವೈಜ್ಞಾನಿಕ ಹೆಸರು ಹರ್ಮೆಶಿಯ ಇಲ್ಯೂಸೆನ್ಸ್ (Hermetia
    illucens).

    ಇತರ ಕೆಲವು ಕೀಟಗಳಂತೆ ಇದು ಯಾವುದೇ ಬೆಳೆಗಳನ್ನು ತಿಂದು ಹಾಳು ಮಾಡುವುದಿಲ್ಲ ಅಥವಾ ನೊಣ, ಸೊಳ್ಳೆಗಳಂತೆ ಯಾವುದೇ
    ಸಾಂಕ್ರಾಮಿಕ ಕಾಯಿಲೆಯನ್ನೂ ಹಬ್ಬುವುದಿಲ್ಲ. ಬ್ಲಾಕ್ ಸೋಲ್ಜಿಯರ್ ಫ್ಲೈ ನಿಸರ್ಗಕ್ಕೆ ಮತ್ತು ಮಾನವನಿಗೆ ಉಪಕಾರ ಮಾಡುವ
    ಒಂದು ಪರೋಪಕಾರಿ ಜೀವಿ.

    ಕಪ್ಪು ಸೈನಿಕ ಕೀಟವು ನಿಸರ್ಗಕ್ಕೆ , ಸಮಾಜಕ್ಕೆ ಹೇಗೆ ಉಪಕಾರ ಮಾಡುತ್ತದೆ ?

    ಜಗತ್ತಿನಾದ್ಯಂತ ಅದರಲ್ಲಿಯೂ ಭಾರತದ ನಗರಗಳಲ್ಲಿ ಇರುವ ಅನೇಕ ಜ್ವಲಂತ ಸಮಸ್ಯೆಗಳಲ್ಲಿ ಒಂದು ತ್ಯಾಜ್ಯ ನಿರ್ವಹಣೆ. ಅರ್ಬನ್ ಇಂಡಿಯಾ
    ವಿಶ್ವದ 3 ನೇ ಅತಿದೊಡ್ಡ ಕಸ ಉತ್ಪಾದಕ ರಾಷ್ಟ್ರವಾಗಿದೆ ಮತ್ತು 2050 ರ ಹೊತ್ತಿಗೆ 436 ಮಿಲಿಯನ್ ಟನ್ಗಳಷ್ಟು ತ್ಯಾಜ್ಯವು
    ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳಿದೆ. ತ್ಯಾಜ್ಯ ನಿರ್ವಹಣೆ ಒಂದು ಸಮಸ್ಯೆ ಅನ್ನುವುದರ ಬದಲು ಒಂದು ಸವಾಲು
    ಎಂದು ಪರಿಗಣಿಸಬಹುದು. ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ಕಪ್ಪು ಸೈನಿಕ ಕೀಟವು ನಮಗೆ ಸಹಕರಿಸುತ್ತದೆ.

    ಮೊದಲು ಸಮಸ್ಯೆಯ ಮೂಲವನ್ನು ನೋಡೋಣ. ಕಸ ನಿರ್ವಹಣೆಯಲ್ಲಿ ಮುಖ್ಯ ಸಮಸ್ಯೆ ಇರುವುದು ಹಸಿ ಕಸ ಮತ್ತು ಒಣ
    ಕಸಗಳನ್ನು ಒಟ್ಟಿಗೆ ಹಾಕುವುದು.

    ಹಸಿ ಕಸ ಸಾವಯವ ಅಂಶಗಳಿಂದ ಕೂಡಿರುವುದರಿಂದ ಅದು ಜೈವಿಕ ವಿಘಟನೆಗೆ ಒಳಪಟ್ಟು ಅದರಲ್ಲಿರುವ ಪೋಷಕಾಂಶಗಳು ಮರಳಿ ಮಣ್ಣಿಗೆ ಸೇರುತ್ತವೆ. ಹಣ್ಣು-ತರಕಾರಿ ಸಿಪ್ಪೆಗಳು, ತಿಂದುಳಿದ ಆಹಾರ ಪದಾರ್ಥಗಳು, ಒಡೆದ ಮೊಟ್ಟೆಯ ಚಿಪ್ಪು, ಮೀನು, ಚಿಕನ್, ಮಟನ್ ನಾನ್ ವೆಜ್ ವೇಸ್ಟ್, ಇತ್ತ್ಯಾದಿ ಅಡುಗೆ ಮನೆಯ ಹಸಿ ಕಸಗಳನ್ನು, ಹಾಗೂ ಖಾಲಿಯಾದ
    ಟೂಥ್ ಪೇಸ್ಟ್ ಟ್ಯೂಬ್, ಔಷಧಿ, ಶಾಂಪೂ ಬಾಟಲ್ ಗಳು ಮೊಂಡಾದ ರೇಜರ್, ಒಡೆದು ಹೋದ ಗ್ಲಾಸು, ಪವರ್ ಖಾಲಿಯಾದ
    ಬ್ಯಾಟರಿ ಸೆಲ್, ಹಳೆಯ ಸ್ವಿಚ್, ವಯರ್ ಮುಂತಾದ ಇಲೆಕ್ಟ್ರಾನಿಕ್, ಇಲೆಕ್ಟ್ರಿಕ್ ವೇಸ್ಟ್ (ಇ-ತ್ಯಾಜ್ಯಗಳು), ಚಾಕೊಲೇಟ್ ರಾಪರ್,
    ಪ್ಲಾಸ್ಟಿಕ್ ಕೈಚೀಲ, ಹಾಲಿನ ಪ್ಯಾಕೆಟ್, ಹತ್ತು ಹಲವಾರು ದೈನಂದಿನ ಜೀವನದಲ್ಲಿ ಉತ್ಪತ್ತಿಯಾಗುವ ಗಟ್ಟಿ ಕಸಗಳನ್ನು ಒಂದೇ ಕಸದ
    ಬುಟ್ಟಿಯಲ್ಲಿ ಹಾಕುವುದೇ ಘನ ತ್ಯಾಜ್ಯ ನಿರ್ವಹಣೆಯ ವಿಫಲತೆಗೆ ಮೂಲ ಕಾರಣ.

    ಅವುಗಳನ್ನೆಲ್ಲಾ ಒಂದೇ ಕಸದ ಬುಟ್ಟಿಯಲ್ಲಿ
    ಹಾಕುವ ಬದಲು ಕನಿಷ್ಠ ಪಕ್ಷ ಮನೆಯಲ್ಲಿ ಎರಡು ಕಸದ ಬುಟ್ಟಿಗಳನ್ನು, ಒಂದು ಹಸಿ ಕಸಕ್ಕೆ ಇನ್ನೊಂದು ಒಣ ಕಸಕ್ಕೆ ಬಳಸಿದರೆ, ತ್ಯಾಜ್ಯ
    ನಿರ್ವಹಣೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ. ನಾವು ಬಳಸಿ ಎಸೆಯುವ ಪ್ರತಿಯೊಂದು ವಸ್ತುವೂ ಕೂಡ ಮರುಚಕ್ರೀರಣಗೊಳಿಸಬಹುದು. ಹೀಗೆ ಮಾಡಲು ಅದಕ್ಕೆ ನಾವು ಪೂರಕವಾಗಿ ಸ್ಪಂದಿಸಬೇಕು.

    ಏನು ಮಾಡಬೇಕು ?

    ಹಸಿ ಕಸವನ್ನು ರಿ ಸೈಕಲ್ ಮಾಡಲು ಏನು ಮಾಡಬೇಕು ? ನಾವೇನು ಅಂತಹ ದೊಡ್ಡ ಸಾಧನೆ ಮಾಡಬೇಕಾಗಿಲ್ಲ. ಎಲ್ಲವನ್ನು ‘ಕಪ್ಪು ಸೈನಿಕರು’ ಮಾಡುತ್ತಾರೆ. ನಾವು ಮಾಡಬೇಕಾಗಿರುವುದು ಇಷ್ಟೇ. ಹಸಿ ಕಸವನ್ನು ರಸವನ್ನಾಗಿ ಪರಿವರ್ತಿಸುವ ಕಪ್ಪು
    ಸೈನಿಕರುಗಳಿಗೆ ಮನೆಯಲ್ಲೇ ಅಂದರೆ ಮನೆಯ ವರಾಂಡ ಅಥವಾ ಹಿತ್ತಲಲ್ಲೇ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಡುವುದು.

    ಈ ನಿಟ್ಟಿನಲ್ಲಿ ಒಂದು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ . ಇದರ ಸಂಚಾಲಕರಾದ ಶ್ರೀ ಸ್ವಾಮೀ ಏಕಗಮ್ಯಾನಂದಜೀ ಮಹಾರಾಜ್ ಅವರು ಹೇಳುವಂತೆ “ಅಡುಗೆ ಮನೆಯ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ”. ಬೇಕಿರುವುದು ಮೂರೇ
    ಮೂರು ಮಣ್ಣಿನ ಮಡಿಕೆ ಮತ್ತು ಆ ಮಡಿಕೆಗಳನ್ನು ಒಂದರ ಮೇಲೊಂದು ಇಡಲು ಒಂದು ಅಡಿಯಷ್ಟು ಸ್ಥಳವಕಾಶ, ಜೊತೆಗೆ ಒಂದಿಷ್ಟು ತೆಂಗಿನ ಸಿಪ್ಪೆಯ ನಾರು.

    ಮರಿಹುಳುಗಳು ಅಂದರೆ ಬ್ಲಾಕ್ ಸೋಲ್ಜಿಯರ್ ಬಾಲ್ಯಾವಸ್ಥೆಯಲ್ಲಿ ಹಸಿಕಸವನ್ನು ಆಹಾರವಾಗಿ ತಿಂದು ಸಸ್ಯಗಳ ಬೆಳವಣಿಗೆಗೆ ಮತ್ತು ಅತ್ಯುತ್ತಮ ಇಳುವರಿಗೆ ಪೋಷಕಾಂಶಭರಿತ ಗೊಬ್ಬರವನ್ನು ನೀಡುತ್ತವೆ. ಮಡಿಕೆಯನ್ನು ಬಳಸುವುದರಿಂದ ಇದನ್ನು ‘ಮಡಿಕೆ ಗೊಬ್ಬರ’ ಎಂದು ಪ್ರಚಲಿತವಾಗಿದೆ. ಕಪ್ಪು ಸೈನಿಕ ಕೀಟದ ಮರಿಹುಳುಗಳು (ಮ್ಯಾಗ್ಗೊಟ್) ಅಡುಗೆ ಮನೆಯ ತ್ಯಾಜ್ಯವನ್ನು ತಿಂದು ಗೊಬ್ಬರ
    ಮಾಡುವುದರಿಂದ ಇದನ್ನು ‘ಮ್ಯಾಗ್ಗೊಟ್ ಗೊಬ್ಬರ’ ಅಥವಾ ‘ಗ್ರಬ್ ಕಾಂಪೋಸ್ಟಿಂಗ್’ ಅಂತಲೂ ಕರೆಯುತ್ತಾರೆ.

    ಈ ಗೊಬ್ಬರ ಹೇಗೆ ಮಾಡುವುದು? ಮಡಿಕೆ ಹೇಗಿರಬೇಕು? ಮಣ್ಣಿನ ಮಡಿಕೆಯೇ ಏಕೆ ಬೇಕು? ನಾನ್ ವೆಜ್ ವೇಸ್ಟ್ ಹಾಕಬಹುದೇ? ವಾಸನೆ ಬರುತ್ತದೆಯೇ? ತೆಂಗಿನ ಸಿಪ್ಪೆಯ ನಾರಿನ ಮಹತ್ವ ಏನು? ‘ಕಪ್ಪು ಸೈನಿಕರನ್ನು’ ಹುಡುಕಿಕೊಂಡು ಎಲ್ಲಿಗೆ ಹೋಗಬೇಕು? ಗೊಬ್ಬರದಲ್ಲಿ ಯಾವೆಲ್ಲ ಲವಣಾಂಶಗಳು ಇವೆ? ಇಂಥಹ ಹತ್ತು ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆಯೇ?
    ಹಾಗಿದ್ದರೆ, ಮಡಿಕೆ ಗೊಬ್ಬರ ತಯಾರಿಕೆಯ ಬಗ್ಗೆ ಆಸಕ್ತಿ, ಕುತೂಹಲ ನಿಮ್ಮಲ್ಲಿ ಮೂಡಿದೆ ಅಂತ ಅರ್ಥ.

    ವೆಬ್ – ಕಾರ್ಯಾಗಾರ

    ಈ ಪ್ರಶ್ನೆಗಳಿಗೆ ಉತ್ತರವಾಗಿ ಮಂಗಳೂರು ವಿದ್ಯಾನಿಲಯ, ‘ವಿಜಯ ಬ್ಯಾಂಕ್ ಪೀಠ – ಪರಿಸರ ವಿಜ್ಞಾನ ಮತ್ತು ಪರಿಸರ’ ಇದರ ಅಡಿಯಲ್ಲಿ ರಾಮಕೃಷ್ಣ
    ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಹಭಾಗಿತ್ವದೊಂದಿಗೆ ‘ಪರಿಸರ ಸ್ನೇಹಿ ಮಡಿಕೆ ಗೊಬ್ಬರ ತಯಾರಿಕೆ ಹಾಗೂ ವಾಣಿಜ್ಯ ಬೆಳೆಗಳ
    ಕಸಿ ಕಟ್ಟುವಿಕೆ ಮತ್ತು ಕೃಷಿ’ ಕುರಿತು ವೆಬ್ – ಕಾರ್ಯಾಗಾರ ಒಂದನ್ನು ಇತ್ತೀಚೆಗೆ ಮಂಗಳಗಂಗೋತ್ರಿ ಪ್ರೊ. ಯು. ಆರ್. ರಾವ್
    ಸಭಾಂಗಣದಲ್ಲಿ ಆಯೋಜಿಸಲಾಯಿತು.

    “ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದು ಯಾವುದೂ ಇಲ್ಲ; ಕಸದಿಂದ ರಸ ಎಂಬ ನಾಣ್ಣುಡಿಯಂತೆ
    ಕಸವನ್ನು ಅಮೂಲ್ಯ ಉತ್ಪನ್ನಗಳಾಗಿ ಪರಿವರ್ತಿಸಬಹುದು. ಈ ಹಿನ್ನೆಲೆಯಲ್ಲಿ ಮಡಿಕೆ ಗೊಬ್ಬರವು ವಿಕೇಂದ್ರೀಕೃತ ಸಾವಯವ ತ್ಯಾಜ್ಯ
    ನಿರ್ವಹಣೆಗೆ ಒಂದು ಸುಲಭ ವಿಧಾನವಾಗಿದೆ” ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಆಡಿದ ಮಾತು ಉಲ್ಲೇಖನೀಯ.

    ಶ್ರೀ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಅವರ ಸಮರ್ಥ ನಾಯಕತ್ವದಲ್ಲಿ ಕಳೆದ 6-7 ವರ್ಷಗಳಿಂದ ರಾಮಕೃಷ್ಣ ಮಿಷನ್
    ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಮಡಿಕೆ ಗೊಬ್ಬರದ ಬಗ್ಗೆಯೂ ಜನರಲ್ಲಿ
    ಆಸಕ್ತಿಯನ್ನು ಮೂಡಿಸಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದೆ. ಈ ಅಭಿಯಾನದ ಜೊತೆ ಕ್ರಿಯಾಶೀಲ ಯುವಕ ಎಂಜಿನಿಯರಿಂಗ್ ಪದವೀಧರ ಸಚಿನ್ ಶೆಟ್ಟಿ ಅವರು ಕೈಜೋಡಿಸಿದ್ಡಾರೆ.

    ಅವರ ಮಡಿಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಲು ಮತ್ತು ಮೇಲಿನ ಎಲ್ಲಾ ಪ್ರಶ್ನೆಗಳಿಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಉತ್ತರಗಳನ್ನು
    ಪಡೆಯಲು, ಅಂತೆಯೇ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಗಾಟಿಸಿರುವ ಸ್ವಾಮೀಜಿಗಳ ಅನುಭವದ ಹಿತನುಡಿಗಳು, ಹಾಗೂ ಈ
    ಕಾರ್ಯಾಗಾರವನ್ನು ಆಯೋಜಿಸಲು ಬೆನ್ನಲುಬಾಗಿ ನಿಂತು ಪ್ರೋತ್ಸಾಹಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಸ್ಫೂರ್ತಿದಾಯಕ ಮಾತುಗಳನ್ನು ಇಲ್ಲಿ ಆಲಿಸಿ.

    ಪರಿಸರದ ಆಪ್ತ ಸ್ನೇಹಿತ

    ಕಪ್ಪು ಸೈನಿಕರು ಅಡುಗೆ ಮನೆಯ ತ್ಯಾಜ್ಯ ಮಾತ್ರವಲ್ಲ, ಕೃಷಿ ತ್ಯಾಜ್ಯಗಳನ್ನೂ ಗೊಬ್ಬರವನ್ನಾಗಿ ಪರಿವರ್ತಿಸಲು
    ಬಳಸಿಕೊಳ್ಳಬಹುದು. ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳನ್ನು ರೈತನ ಮಿತ್ರ ಎಂದು ಕರೆದರೆ, ಹಸಿ ಕಸವನ್ನು ರಸಭರಿತ
    ಗೊಬ್ಬರವನ್ನಾಗಿ ರೂಪಾಂತರಗೊಳಿಸಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಒದಗಿಸುವ ಕಪ್ಪು ಸೈನಿಕ ಕೀಟವನ್ನು ‘ಪರಿಸರದ ಆಪ್ತ ಸ್ನೇಹಿತ’
    ಎಂದು ಕರೆಯಬಹುದು.

    ಚಳಿ, ಮಳೆ, ಗಾಳಿ, ಬಿರುಗಾಳಿ ಯಾವುದಕ್ಕೂ ಎದೆಗುಂದದೇ ತಮ್ಮ ಜೀವ, ಜೀವನವನ್ನೇ ಮುಡಿಪಾಗಿಟ್ಟು ದೇಶದ ಭದ್ರತೆಯನ್ನು
    ಕಾಪಾಡುವ ನಮ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸುವ ಹಾಗೆ ತ್ಯಾಜ್ಯಗಳನ್ನು ಪರಿವರ್ತಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ, ಪರಿಸರ
    ಸಂರಕ್ಷಣೆಯಲ್ಲಿ ತೊಡಗಿರುವ ನಿಸರ್ಗದ ಕೊಡುಗೆ ‘ಕಪ್ಪು ಸೈನಿಕರಿಗೆ’ ಒಂದು ದೊಡ್ಡ ಸಲಾಂ ಹೊಡೆಯಲೇಬೇಕಲ್ಲವೇ?

    ಚರಿತ್ರೆಯನ್ನರಿತು ವಹಿವಾಟು ನಡೆಸಿದರಷ್ಟೆ ಫಲ

    ಷೇರುಪೇಟೆಯಲ್ಲಿ ವಿವಿಧ ಇಂಡೆಕ್ಸ್‌ ಗಳು ಏಕಮುಖವಾಗಿ ಏರಿಕೆ ಕಾಣುತ್ತಿರುವುದು ಅನೇಕ ಹೊಸ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.  ವಿಶೇಷವಾಗಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ವಲಯದ ಕಂಪನಿಗಳು ಚಿಗರೊಡೆಯುತ್ತಿರುವುದು ಹೆಚ್ಚಿನವರ ಗಮನವನ್ನಾಕರ್ಷಿಸುತ್ತಿದೆ. ಸೆನ್ಸೆಕ್ಸ್ ನ ರಭಸದ ಏರಿಕೆಯ ಹಿಂದೆ  30 ಕಂಪನಿಗಳಲ್ಲಿ ವಿತ್ತೀಯ ವಲಯದ 9, ನವರತ್ನ ಕಂಪನಿಗಳ ಕೊಡುಗೆ ಅಪಾರ. ಖರೀದಿಸುವ ಕಂಪನಿಗಳ ಚರಿತ್ರೆಯನರಿತು ನಡೆಸುವ ವಹಿವಾಟು ಉತ್ತಮ ಫಲ ನೀಡಬಲ್ಲದು.

    ಕೆಲವು ಕಂಪನಿಗಳ  ವಿವರ ಇಂತಿದೆ:

    ವಾಟೆಕ್‌ ವಾಬಾಗ್‌ ಕಂಪನಿಯ ಷೇರಿನ ಬೆಲೆ ಏಪ್ರಿಲ್‌ ತಿಂಗಳಲ್ಲಿ ರೂ.73 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದು ಆಗಸ್ಟ್‌ ತಿಂಗಳಲ್ಲಿ ರೂ.235 ಕ್ಕೆ ಏರಿಕೆ ಕಂಡಿರುವುದು, ಅದರಲ್ಲೂ ಒಂದೇ ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.235 ಕ್ಕೆ ಜಿಗಿತ ಕಂಡಿರುವುದು ಆಂತರಿಕ ಕಾರಣಗಳಿಗಿಂತ ಹೆಚ್ಚಾಗಿ ಬಾಹ್ಯ ಕಾರಣಗಳು ಕಾರಣ .ಈ ಕಂಪನಿಯ ಷೇರಿನ ಬೆಲೆ 2017 ರಲ್ಲಿ ರೂ.600 ರ ಸಮೀಪವಿದ್ದು ಆಗ ಖರೀದಿಸಿದವರಿಗೆ ಬಂಡವಾಳ ಉಳಿಸಿಕೊಂಡು ಹೊರಬರಬೇಕಾದ ಅವಕಾಶಗಳ ವಂಚಿತರಾಗಿದ್ದಾರೆ ಎಂಬುದು ಅರಿಯಬೇಕು. 

    ಸ್ಟರ್ಲೈಟ್‌ ಟೆಕ್ನಾಲಜೀಸ್ ಕಂಪನಿಯ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.170 ರ ಗಡಿಯನ್ನು ದಾಟಿದೆ, ಈ ಏರಿಕೆಗೆ ಕಂಪನಿಯ ಸಾಧನೆ ಕಾರಣವಾಗಿರದೆ ಕೇವಲ ಹೊರಗಿನ ಪ್ರಚಾರಿಕತೆಯಿಂದ ಏರಿಕೆ ಕಂಡಿದೆ.  ಇದೇ ಷೇರಿನ ಬೆಲೆ ಸೆಪ್ಟೆಂಬರ್‌ 2018 ರಲ್ಲಿ ರೂ.300 ಕ್ಕೂ ಹೆಚ್ಚಿದ್ದು ಈ ವರ್ಷದ ಮಾರ್ಚ್ ನಲ್ಲಿ ರೂ.60 ರ ಸಮೀಪಕ್ಕೆ ಕುಸಿತ ಕಂಡಿದ್ದ ಷೇರು ಇಷ್ಟು ಬೇಗ ನಿಶ್ಷೇಷ್ಟಿತ ವಾತಾವರಣದಲ್ಲಿ ಚಿಗರೊಡೆದಿರುವುದರಿಂದ ಚಟವಟಿಕೆಗೆ ಮುಂಚೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. 

     ನೋಸಿಲ್‌ ಕಂಪನಿ ಷೇರು ಕಳೆದ ಎರಡು ವರ್ಷಗಳ ಹಿಂದೆ ಖರೀದಿಸಿದವರು ಸಧ್ಯ ತಮ್ಮ ಖರೀಸಿದಿಸಿದ ಬೆಲೆ ಹತ್ತಿರ ಬರುತ್ತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ.  ಆದರೆ ಮಾರ್ಚ್‌ ನಲ್ಲಿ ರೂ.45 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಈಗ ರೂ.135 ರ ಸಮೀಪದಲ್ಲಿದೆ. 2018 ರ ಅಕ್ಟೋಬರ್‌ ನಲ್ಲಿ ಈ ಷೇರಿನ ಬೆಲೆ ರೂ.160 ರಲ್ಲಿತ್ತು.  ಜೂನ್‌ 2020 ರ ತ್ರೈಮಾಸಿಕ ಸಾಧನೆಯಂತೂ ಈ ಏರಿಕೆಗೆ ಪೂರಕ ಅಂಶವಂತೂ ಅಲ್ಲ.

    ಎಚ್‌ ಎ ಎಲ್‌ ಕಂಪನಿಯ ಷೇರಿನ ಬೆಲೆ ಇತ್ತೀಚೆಗೆ ಹೆಚ್ಚು ಚುರುಕಾದ ಚಟುವಟಿಕೆಭರಿತವಾಗಿದೆ. ಒಂದು ತಿಂಗಳಲ್ಲಿ ರೂ.860 ರ ಸಮೀಪದಿಂದ ರೂ.1,400 ನ್ನು ದಾಟಿ ಈಗ ರೂ.1,010 ರ ಸಮೀಪ ಕೊನೆಗೊಂಡಿದೆ.   2018 ರಲ್ಲಿ ಈ ಕಂಪನಿಯು ರೂ.1,215ರಂತೆ ಆರಂಭಿಕ ವಿತರಣೆ ಮಾಡಿತ್ತು ಎಂಬ ವಿಚಾರ ಓದುಗರು ಗಮನಿಸಬೇಕಾಗಿದೆ.   ಈ ಕಂಪನಿಯ ಷೇರಿನ ವಿಸ್ಮಯಕಾರಿ ಅಂಶವೆಂದರೆ ಎರಡು ವರ್ಷಗಳ ಹಿಂದೆ ಐಪಿಒ ಮೂಲಕ ಖರೀದಿಸಿದವರಿಗೆ ಹೂಡಿಕೆಯ ಹಣ ಪಡೆದುಕೊಳ್ಳಲು ಎರಡು ವರ್ಷ ಕಾಯಬೇಕಾಯಿತು.  ಆದರೆ ಮಾರ್ಚ್‌ – ಏಪ್ರಿಲ್‌ ನಲ್ಲಿ ಖರೀದಿಸಿದವರು ಕೆಲವೇ ತಿಂಗಳಲ್ಲಿ ಎರಡು – ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.  ಎರಡು ವರ್ಷಗಳ ಹಿಂದೆ ರೂ.1,215 ರಂತೆ ವಿತರಣೆಮಾಡಿದ ಕಂಪನಿ ಈಗ ರೂ.1,000 ದ ಸಮೀಪ ಮರುವಿತರಣೆ ಮಾಡಲು ಹರಸಾಹಸ ಮಾಡುವ ಪರಿಸ್ಥಿತಿ ಬಂದಿದೆ.

    ಮಾರ್ಚ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.755 ರಂತೆ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ಸ್‌ ಸರ್ವಿಸಸ್ ಕಂಪನಿಯ ಷೇರುಗಳು ಲೀಸ್ಟಿಂಗ್‌ ಆದ ಮೇಲೆ ರೂ.500 ರ ಸಮೀಪಕ್ಕೆ ಕುಸಿದಿತ್ತು. ಒಂದು ತಿಂಗಳ ಹಿಂದೆ ರೂ.725 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಶುಕ್ರವಾರದಂದು ರೂ.845 ರ ಸರ್ವಕಾಲೀನ ಗರಿಷ್ಠಕ್ಕೆ ಏರಿಕೆ ಕಂಡಿದೆ.  
    ಇದೇ ರೀತಿ ಕಂಪನಿಗಳಾದ ಕ್ವೆಸ್‌ ಕಾರ್ಪ್‌,  ಹೆಲ್ತ್‌ ಕೇರ್‌ ಗ್ಲೋಬಲ್‌, ರೇನ್‌ ಇಂಡಸ್ಟ್ರೀಸ್‌,  ಅಪೆಕ್ಸ್‌ ಫ್ರೋಜನ್‌, ಟಾಟಾ ಮೋಟಾರ್ಸ್, ಕೋಲ್‌ ಇಂಡಿಯಾ,    ಎಲ್‌ ಅಂಡ್‌ ಟಿ ಫೈನಾನ್ಸ್‌ ಹೋಲ್ಡಿಂಗ್ಸ್‌,  ಆದಿತ್ಯ ಬಿರ್ಲಾ ಕ್ಯಾಪಿಟಲ್‌,  ನ್ಯೂ ಇಂಡಿಯಾ ಅಶ್ಶುರನ್ಸ್‌, ಜನರಲ್‌  ಇನ್ಶೂರನ್ಸ್‌ ಕಾರ್ಪೊರೇಷನ್‌*, ನಂತಹ ಅನೇಕ ಕಂಪನಿಗಳನ್ನು ಒಂದೆರಡು ವರ್ಷಗಳಲ್ಲಿ ಕೊಂಡವರು ತಮ್ಮ ಅಸಲು ಹಣ ಹಿಂಪಡೆಯಲು ಕಾಯುತ್ತಿದ್ದಾರೆ.  ಆದರೆ ಕೆಲವೇ ತಿಂಗಳಲ್ಲಿ ಹೂಡಿಕೆ ಮಾಡಿದವರಿಗೆ ಅತ್ಯಧಿಕ ಲಾಭ ತಂದುಕೊಟ್ಟಿದೆ. 

     ಇನ್ನು ಕಂಪನಿಗಳಾದ ರಿಲಯನ್ಸ್‌ ಇನ್ ಫ್ರಾ, ರಿಲಯನ್ಸ್‌ ಕ್ಯಾಪಿಟಲ್‌, ಸಿಂಟೆಕ್ಸ್‌ ಇಂಡಸ್ಟ್ರೀಸ್‌, ಸಿಂಟೆಕ್ಸ್‌ ಪ್ಲಾಸ್ಟಿಕ್ಸ್‌, ಎಂ ಎಂಟಿಸಿ, ಗೋವಾ ಕಾರ್ಬನ್‌,  ಯೆಸ್‌ ಬ್ಯಾಂಕ್‌ ನಂತಹ ಕಂಪನಿಗಳ ಷೇರು ಖರೀದಿಸಿದವರು ಒತ್ತಾಯಪೂರ್ವಕವಾಗಿ, ಹೂಡಿಕೆ ಹಣ ಕರಗಿಸಿಕೊಳ್ಳಲು ಇಷ್ಟಪಡದೆ, ಹೂಡಿಕೆಯನ್ನು ಮುಂದುವರೆಸಿಕೊಂಡುಹೋಗುತ್ತಿದ್ದಾರೆ.

    ಬ್ಯಾಂಕಿಂಗ್‌ ವಲಯ ಚುರುಕು

    ಸಧ್ಯ ಬ್ಯಾಂಕಿಂಗ್‌ ವಲಯ ಚುರುಕಾಗಿದೆ.   ಬ್ಯಾಂಕಿಂಗ್‌ ವಲಯದ ಕೆನರಾ ಬ್ಯಾಂಕ್‌ 2014 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲು ನಿರ್ಧರಿಸಿತ್ತು.  ಆದರೆ ಇದುವರೆಗೂ ಅದು ಜಾರಿಗೊಳಿಸಲಿಲ್ಲ.  ಆದರೆ ಪೇಟೆ ಮಾತ್ರ ಷೇರಿನ ಬೆಲೆಯನ್ನು ಮುಖಬೆಲೆ ಸೀಳಿಕೆಯ ನಂತರದ ಮಟ್ಟಕ್ಕೆ ಷೇರಿನಬೆಲೆಯನ್ನು ಇಳಿಸಿದೆ.  ಅಂದರೆ ಆಗ ಸುಮಾರು ರೂ.450-500 ರ ಸಮೀಪವಿದ್ದ ಷೇರು ಈಗ ಸುಮಾರು ರೂ.113 ರ ಸಮೀಪವಿದೆ.

    ಸಾರ್ವಜನಿಕ ವಲಯದ ಷೇರುಗಳು ಇನ್ನೂ ಚುರುಕಾದ ಚಟುವಟಿಕೆಗೆ ಒಳಪಟ್ಟಿಲ್ಲವಾದರೂ, ಇದೇ ರೀತಿ ಪೇಟೆಯೊಳಗಿನ ಹರಿವು ಮುಂದಾದರೆ ಆಂತರಿಕಸಾಧನೆಯಾಧಾರಿತ ಕಂಪನಿಗಳು ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಹೆಚ್ಚು. 

    ಇದಕ್ಕೆ ಉದಾಹರಣೆ ಶುಕ್ರವಾರ ಎನ್ ಎಂಡಿಸಿ ಷೇರು ಪ್ರದರ್ಶಿಸಿದ ಏರಿಕೆಯಾಗಿದೆ.  ಐಒಸಿ, ಹೆಚ್‌ ಪಿ ಸಿ ಎಲ್‌, ಬಿ ಪಿ ಸಿ ಎಲ್‌, ಆರ್‌ ಇ ಸಿ, ಪಿ ಎಫ್‌ ಸಿ, ಗೇಲ್‌, ಬಾಲ್ಮರ್‌ ಲೌರಿ, ಪಿಟಿಸಿ ಇಂಡಿಯಾ, ಬಿ ಇ ಎಲ್‌,  ಹುಡ್ಕೋ* ಗಳಂತಹ  ಕಂಪನಿಗಳು ಹೂಡಿಕೆದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ವಿತರಿಸುವುವಾಗಿದ್ದರೂ, ಅದಕ್ಕೆ ಪೂರಕವಾದ ಬೆಂಬಲ ಇದುವರೆಗೂ ಲಭ್ಯವಾಗಿಲ್ಲ. ಇಂತಹ ಕಂಪನಿಗಳು ದೀರ್ಘಕಾಲೀನ ಹೂಡಿಕೆಗೆ ಆಯ್ಕೆ ಮಾಡಿಕೊಂಡರೂ, ಅನಿರೀಕ್ಷಿತ ಲಾಭ ತಂದುಕೊಟ್ಟಲ್ಲಿ ನಗದೀಕರಿಸಿಕೊಳ್ಳುವುದು ಬಂಡವಾಳ ಸುರಕ್ಷತೆಗೆ ಉತ್ತಮ ಮಾರ್ಗ.

    ಕೇವಲ ಹೃದಯದ ರಾಗಕ್ಕೆ ಮನಸೋಲದೆ, ಮಿದುಳಿನ ಚಿಂತನೆಗೂ ಆದ್ಯತೆ ಈಗಿನ ಅವಶ್ಯಕತೆ.

    ನೆನಪಿಡಿ:  ಷೇರುಪೇಟೆ ಹೂಡಿಕೆ ಈಗಿನ ದಿನಗಳಲ್ಲಿ, ಪ್ರವೇಶ ದೀರ್ಘಕಾಲೀನದ ಉದ್ದೇಶವಾದರೂ, ನಂತರ ವ್ಯವಹಾರಿಕ ದೃಷ್ಠಿಯಿಂದ  ನಿರ್ಧರಿಸಬೇಕು.

    ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಸಾಧನಾ ಜೀವಿಯ ದೀರ್ಘಾಯುಷ್ಯದ ಗುಟ್ಟು

    ಕಳೆದ ವಾರವಷ್ಟೆ 108ಕ್ಕೆ ಅಡಿ ಇಟ್ಟ ಭಾಷಾ ತಜ್ಞ ಪ್ರೊ. ಜಿ ವೆಂಕಟಸುಬ್ಬಯ್ಯ ಅವರೊಂದಿಗಿನ ಒಡನಾಟವನ್ನು ಅವರ ವಿದ್ಯಾರ್ಥಿ, ಲೇಖಕಿ ವೈ.ಕೆ. ಸಂಧ್ಯಾಶರ್ಮಾ ಇಲ್ಲಿ ದಾಖಲಿಸಿದ್ದಾರೆ


    ವೈ.ಕೆ. ಸಂಧ್ಯಾಶರ್ಮಾ

    ಜಿ.ವಿ. ನನ್ನ ವಿದ್ಯಾಗುರುಗಳು ಎಂದು ಹೇಳಿಕೊಳ್ಳಲು ನನಗಂತೂ ತುಂಬಾ  ಹೆಮ್ಮೆ. ಅವರು ನನ್ನ ಅಕ್ಕ-ಅಣ್ಣಂದಿರಿಗೂ ಅರ್ಧ ಶತಮಾನದ ಹಿಂದೆಯೇ ಗುರುಗಳಾಗಿದ್ದರಾದ್ದರಿಂದ ನನಗೆ ಅವರ ಹೆಸರು ಪ್ರಾಥಮಿಕ ತರಗತಿಯಲ್ಲಿದ್ದಾಗಲೇ ಪರಿಚಯ.

    ಬಸವನಗುಡಿಯ ವಿಜಯಾ ಕಾಲೇಜಿನ ಹಿಂದೆಯೇ ನಮ್ಮ ಮನೆ ಹಾಗೂ ಜೀವಿಯವರ ಮನೆಯೂ ಇದ್ದುದರಿಂದ ನಾನಾಗಲೇ ಅವರನ್ನು ನೋಡಿದ್ದೆ ಕೂಡ. ಅದೃಷ್ಟವಷಾತ್ ನಾನು ಪಿ.ಯೂ.ಸಿ.ಗೆ ವಿಜಯಾ ಕಾಲೇಜಿಗೇ ಸೇರಿದಾಗ ನನ್ನ ಕನ್ನಡ ಅಧ್ಯಾಪಕರು ಜೀವಿಯೇ ಆಗಿದ್ದರು. ಪ್ರತಿದಿನ ಅವರು ಶಿಸ್ತಾಗಿ, ಸೂಟು ಧರಿಸಿ ಟಿಪ್ ಟಾಪಾಗಿ ಬೂದುಬಣ್ಣದ ಹೆರಾಲ್ಡ್ ಕಾರಿನಲ್ಲಿ ಬರುತ್ತಿದ್ದರು. ನಡಿಗೆಯಲ್ಲಿ ಗತ್ತು, ಮುಖದಲ್ಲಿ ಮುಗುಳ್ನಗೆ ಅವರ ಕುರುಹುಗಳು.

    ವಯಸ್ಸು ಐವತ್ತೈದು- ಐವತ್ತಾರಿಬಹುದು… ಆದರೂ ಮಹಡಿಯ ಮೇಲಿದ್ದ ಅವರ ಕೋಣೆಗೆ ಹೋಗುವಾಗ ಅವರು ಮೆಟ್ಟಿಲುಗಳನ್ನು ಸರಸರನೆ ಹತ್ತುತ್ತಿದ್ದ ಲವಲವಿಕೆಯ ಬಗೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಪಿ.ಯೂಸಿ.ಯ ಏ-ಬಿ ಸೆಕ್ಷನ್ನುಗಳಿಗೆ ಅವರು ಕಂಬೈನ್ಡ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಸುಮಾರು ನೂರರ ಹತ್ತಿರ ವಿದ್ಯಾರ್ಥಿಗಳ ಸಂಖ್ಯೆ. ಹುಡುಗರೆಲ್ಲ ಬಲಗಡೆ , ಹುಡುಗಿಯರು ಎಡಗಡೆ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರು ಸ್ವಲ್ಪ ಸ್ಟ್ರಿಕ್ಟು…ಮೂಗಿನ ತುದಿಯಲ್ಲೇ ಕೋಪ…ಅನವಶ್ಯಕವಾಗಿ ಹುಡುಗ-ಹುಡುಗಿಯರು ಕಾರಿಡಾರಿನಲ್ಲಿ ಅಡ್ಡಡ್ಡ ಮಾತನಾಡುತ್ತ ನಿಂತುಕೊಳ್ಳುವುದು ಅವರಿಗೆ ಹಿಡಿಸುತ್ತಿರಲಿಲ್ಲ. ಅದು ಹಳೇ ಕಾಲ ಅಂತಿಟ್ಟುಕೊಳ್ಳಿ…

    ಕ್ಲಾಸಿನಲ್ಲಿ ಬಂದ ತತ್ ಕ್ಷಣ ಹಾಜರಿ ತೆಗೆದುಕೊಳ್ಳುವಾಗ “ಯಾರೋ ಎಸ್ ಮೇಡಮ್ ” ಎಂದಾಗ ಅವನೋ, ಅವಳೋ ಅವರಿಂದ   ಚೆನ್ನಾಗಿ ಬೈಸಿಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆದ್ದರಿಂದ ಅವರ ತರಗತಿಯಲ್ಲಿ ಎಲ್ಲರೂ ಗಪ್ ಚುಪ್!!….ಹೆದರಿಕೆಯಿಂದಲ್ಲ, ಅವರು ಪಾಠ ಮಾಡುತ್ತಿದ್ದ ವೈಖರಿ, ಸ್ವಾರಸ್ಯ ಹಾಗಿರುತ್ತಿತ್ತು.  ರಾಘವಾಂಕನ “ಹರಿಶ್ಚಂದ್ರ ಕಾವ್ಯ”ದ ಪದ್ಯಗಳ ಅರ್ಥವನ್ನು ಅವರು ವಿವರಿಸುತ್ತಿದ್ದ ಬಗೆಯೇ ತುಂಬಾ ವಿಶಿಷ್ಟವಾಗಿರುತ್ತಿತ್ತು. ನಾನಂತೂ ಕನ್ನಡದ ಒಂದು ಕ್ಲಾಸನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ವ್ಯಾಕರಣದ ತರಗತಿಯೆಂದರೆ ಇನ್ನೂ ಇಷ್ಟ. ಅವರ ಸ್ಫುಟವಾದ ಕನ್ನಡ ತರಗತಿಯಲ್ಲೇ ನನ್ನ ಮನಸ್ಸಿನಲ್ಲಿದ್ದ ಕನ್ನಡಪ್ರೀತಿ ಇಮ್ಮಡಿಗೊಂಡಿದ್ದು.

    ಪಿಯೂಸಿ ನಂತರ,ನಾನು ಬೆಳಗ್ಗೆ ಕನ್ನಡ ಆನರ್ಸ್ ತರಗತಿಗೆ,ಮಧ್ಯಾಹ್ನ ಬಿ.ಎಸ್ಸಿ.ತರಗತಿಗೆ  ಹಾಜರಾಗುತ್ತಿದ್ದೆ. ವರ್ಷದ ಕಡೆಯಲ್ಲಿ ಒಂದು ಕಡೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಎಂದರು ಆಡಳಿತ ಮಂಡಳಿಯವರು. ಆಗ ನನಗೆ ಮಾರ್ಗದರ್ಶನ ಮಾಡಿದವರೇ ನನ್ನ ಗುರುಗಳಾದ ಜೀವಿಯವರು.”ನೀನು ಕನ್ನಡದಲ್ಲಿ ಅಷ್ಟು ಉತ್ತಮ ಅಂಕಗಳನ್ನು ಗಳಿಸಿದ್ದೀ….ನೀನು ಕನ್ನಡ ಭಾಷೆಯನ್ನೇ ವಿಶೇಷವಾಗಿ ಅಭ್ಯಾಸ ಮಾಡಬೇಕು”-ಎಂದು ನನ್ನ ಬದುಕಿಗೊಂದು ತಿರುವು ನೀಡಿದರು.

    ಸತತ ಮೂರು ವರ್ಷಗಳ ಕಾಲ ಜೀವಿಯವರ ಪಾಠ ಕೇಳುವ ಸೌಭಾಗ್ಯ ನನ್ನದಾಯಿತು. ಕಬ್ಬಿಣದ ಕಡಲೆ ಕೇಶೀರಾಜನ “ಶಬ್ದಮಣಿದರ್ಪಣ” ವ್ಯಾಕರಣವನ್ನು ಸುಲಿದ ಬಾಳೇಹಣ್ಣಿನಂದದಿ , ಮನಂಬುಗುವಂತೆ ಮನಸ್ಸಿನಲ್ಲಿ ಅಚ್ಚು ಒತ್ತಿಸಿದರು. ಬಿಎಂಶ್ರೀ ಅವರು ಭಾವಾನುವಾದ ಮಾಡಿದ “ಇಂಗ್ಲೀಷ್ ಗೀತೆಗಳು” ಪದ್ಯಗಳನ್ನು ಅನುಭವಹೃದ್ಯವನ್ನಾಗಿಸಿದ ಅವರ ಬೋಧನಾರೀತಿ ನನ್ನ ಸ್ಮೃತಿಪಟಲದಲ್ಲಿ ಎಂದೂ ಚಿರಸ್ಥಾಯಿ. ನನ್ನ ಬರವಣಿಗೆಗೂ ಅವರು ಅಷ್ಟೇ ಒತ್ತಾಸೆ ನೀಡುತ್ತಿದ್ದರು. ಸಂಸ್ಕೃತ-ಆಂಗ್ಲ ಭಾಷೆಗಳಲ್ಲೂ ಅಷ್ಟೇ ಪರಿಣತರಾಗಿದ್ದ ಮೇಷ್ಟ್ರು , ನಮಗೆ ಆಂಗ್ಲ ಹಾಗೂ ಸಂಸ್ಕೃತ ಭಾಷೆಗಳ ಕವಿ-ಕಾವ್ಯಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ನಾವು ವಿದ್ಯಾರ್ಥಿಗಳೇ  ಲೇಖನಗಳನ್ನು ಬರೆದು, ಸಂಪಾದಿಸಿ “ಉತ್ಸಾಹ” ಎಂಬ ಪತ್ರಿಕೆಯನ್ನು ಹಲವು ವರ್ಷಗಳು ಪ್ರಕಟಮಾಡಲು ನೆರವು ನೀಡಿ ಪ್ರೋತ್ಸಾಹಿಸಿದ, ಅನನ್ಯ ಅವಕಾಶ ಒದಗಿಸಿದ್ದಕ್ಕೆ ಜೀವಿಯವರಿಗೆ  ನಾವೆಲ್ಲ ಕೃತಜ್ಞರು. 

     ಎಲ್ಲಿ ಹೋದರೂ ನಾನು ಜೀವಿ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ನನಗಿದೆ. ಮುಂದೆ ಕನ್ನಡ ಎಂ.ಎ. ಅಭ್ಯಾಸ ಮಾಡುವಾಗಲೂ ನನಗೆ ಜೀವಿಯವರ ಸಂಪರ್ಕ ಇದ್ದೇ ಇತ್ತು. ನನಗೆ ಭಾಷೆ,ವ್ಯಾಕರಣ ವಿಷಯದಲ್ಲಿ ಏನೇ ಅನುಮಾನ ಬಂದರೂ ಇವತ್ತಿಗೂ ಅವರೊಡನೆ ಚರ್ಚಿಸಿ, ಸಂತೃಪ್ತ ವಿವರಣೆಗಳನ್ನು ಪಡೆದು ಅನುಮಾನಗಳನ್ನು  ಪರಿಹರಿಸಿಕೊಳ್ಳುತ್ತೇನೆ. ಅವರು ಮನದಟ್ಟಾಗುವಂತೆ ನೀಡುತ್ತಿದ್ದ ವಿವರಣೆ-ವ್ಯಾಖ್ಯಾನ ನನಗೆ ಬಹು ಸಮಾಧಾನ ತರುತ್ತಿತ್ತು. ದೂರವಾಣಿಯಲ್ಲೂ ಎಷ್ಟೋ ಬಾರಿ ಸಂಪರ್ಕಿಸಿದ್ದೇನೆ, ನನಗೆ ಮುಜುಗರ, ಹಿಂಜರಿಕೆಗಳಿಲ್ಲ. ಅವರು ನನಗಷ್ಟು ಹತ್ತಿರ ಎಂಬ ಧೈರ್ಯ. ಇನ್ನೂ ಒಂದು ವಿಶೇಷ ಅಂದರೆ “ಗೊರೂರು ಸಾಹಿತ್ಯ ಪ್ರಶಸ್ತಿ ”  ಗುರು-ಶಿಷ್ಯರಾದ ನಮ್ಮಿಬ್ಬರಿಗೂ ಒಂದೇ ವೇದಿಕೆಯಲ್ಲಿ ಪ್ರದಾನವಾಯಿತು. ‘ಉರಿದು ಹೋದ ಕನಸುಗಳು’ ನನ್ನ ಕವನ ಸಂಕಲನವನ್ನು ಗುರುಗಳೇ ಬಿಡುಗಡೆ ಮಾಡಿ ನನಗೆ ಆಶೀರ್ವದಿಸಿದರು.

    ನಾವು ಕನ್ನಡ ಆನರ್ಸ್ ವಿದ್ಯಾರ್ಥಿಗಳೆಲ್ಲ ಒಂದಲ್ಲ ಒಂದು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿ ಅವರ ಒಡನಾಟದಲ್ಲಿ ಸಂತೋಷಪಡುತ್ತಿದ್ದೆವು. ನನಗೆ ಇನ್ನೂ ಒಂದು ಖುಷಿಯ ಸಂಗತಿಯೆಂದರೆ ಜಯನಗರದ ನಂದಾ ಥಿಯೇಟರ್  ಬಳಿಯ ಒಂದೇ ಪಾರ್ಕಿನಲ್ಲಿ ನಾನು ಮತ್ತು ನನ್ನ ಪತಿ  ಅವರ ಜೊತೆ ದಿನಾ ವಾಕ್ ಮಾಡುವ ಸಂದರ್ಭ ಒದಗಿದ್ದು. ಚುಮು ಚುಮು ನಸುಕು. ಡಿಸೆಂಬರ್ ತಿಂಗಳ ಕೊರೆಯುವ ಚಳಿ… ದಿನಾ ಜೀವಿಯವರಿಗಿಂತ ಮುಂಚೆ ನಾನಲ್ಲಿರಬೇಕೆಂದು ನನಗೆ ಆಸೆ. ಸುಮಾರು  ಆರುಗಂಟೆಯ  ಹಿಮಗತ್ತಲಲ್ಲಿ ಪಾರ್ಕು ಪ್ರವೇಶಿಸಿ ಒಂದು ರೌಂಡ್  ಹಾಕಿ ಬರುವಷ್ಟರಲ್ಲಿ, ಜೀವಿಯವರಾಗಲೇ ತಮ್ಮ ಮಾಮೂಲು ಮೂರು ರೌಂಡ್ ಮುಗಿಸಿ ,ಕೈ-ಕಾಲು ಅಲ್ಲಾಡಿಸುತ್ತ ವ್ಯಾಯಾಮ ಮಾಡುತ್ತ ಕಲ್ಲುಬೆಂಚಿನ ಮೇಲೆ ಕುಳಿತಿರುತ್ತಿದ್ದರು. ಅವರ ಚಟುವಟಿಕೆಯ ಚುರುಕು ನಡಿಗೆ ಕಂಡು ನನಗೆ ತುಂಬಾ ನಾಚಿಕೆಯಾಗುತ್ತಿತ್ತು.”ಅವರ ವೇಗದ ನಡಿಗೆಯನ್ನು ನೀನು ಸರಿಗಟ್ಟಲಾರೆ” -ಎಂದು ನಮ್ಮವರು ರೇಗಿಸುತ್ತಿದ್ದರು.

    ಶತಮಾನವನ್ನು ದಾಟಿದ್ದರೂ ‘ಜೀವಿ’ ಯುವಜನತೆಗಿಂತ  ತುಂಬಾ ಚಟುವಟಿಕೆಯ ಜೀವನವನ್ನು ನಡೆಸುತ್ತಿದ್ದಾರೆಂಬ ಸಂಗತಿ ಇತರರಿಗೆ ನಿಜಕ್ಕೂ ಮಾದರಿ. ಅದೂ ಬೆಳಗಿನ ಝಾವ ಈ ವಯಸ್ಸಿನಲ್ಲಿ ಅವರೇ ಕಾಫಿ ಡಿಕಾಕ್ಷನ್ ಗೆ ಹಾಕಿ , ಕಾಫಿ ಮಾಡಿಕೊಂಡು ಕುಡಿದು ಬರುತ್ತಾರೆಂದರೆ ಅವರೆಂಥ “ಬೆಳಗಿನ ಹಕ್ಕಿ” ಎಂದು ನಾವೇ ಊಹಿಸಿಕೊಳ್ಳಬಹುದು. ಇದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದೂ ಹೇಳಬಹುದು. ವಾಕಿಂಗ್ ಅವರ ಜೀವನಾಡಿ.

    ಸುಮಾರು ಮೂವತ್ತು ವರ್ಷದ ಹುಡುಗನಾಗಿದ್ದಾಗಿನಿಂದ ತಮ್ಮ ಈ ವಾಕಿಂಗ್ ಅಭ್ಯಾಸ, ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿದ್ದು,  ಎಂದೂ ತಾವು ವಾಕಿಂಗ್ ನಿಲ್ಲಿಸಿಲ್ಲ ಎಂದು ಅವರು ನುಡಿಯುವಾಗ ಅವರ ಮೊಗದಲ್ಲಿ ಆರೋಗ್ಯದ ಕಳೆ ಮಿಂಚುತ್ತದೆ. ಅವರು ವಾಕಿಂಗ್ ಮುಗಿಸಿ ಕುಳಿತನಂತರ ಅವರ ಸುತ್ತ ಅವರಿಗಿಂತ ಕೊಂಚ ಸಣ್ಣ ವಯಸ್ಸಿನ  ಸ್ನೇಹಿತರ ಒಂದು ದಂಡೇ ಸೇರುತ್ತದೆ. ಅವರೆಲ್ಲ ಸಾಹಿತ್ಯ ಜಗತ್ತಿನಲ್ಲಿ ಪ್ರಖ್ಯಾತರೇ. ನಗುಮೊಗದಿಂದ ಅವರೊಡನೆ ಜೀವಿ ಹರಟುತ್ತಾರೆ,ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸುತ್ತಾರೆ.ಇಬ್ಬರೂ ಏನೇನು ಬರೆದಿರಿ, ಹೊಸ ಪುಸ್ತಕ ಬಂತೇ?.. ಇತ್ಯಾದಿ  ನಮ್ಮಿಬ್ಬರನ್ನೂ ವಿಚಾರಿಸಿಕೊಳ್ಳುತ್ತಾರೆ. ಸರಿಯಾಗಿ ಏಳು ಗಂಟೆಗೆ ಮೇಲೆದ್ದು ಎಲ್ಲರಿಗೂ  ಕೈ ಬೀಸಿ ಮನೆಯ ಕಡೆ ನಡೆಯುತ್ತಾರೆ. ಇದು ಅವರ ದಿನನಿತ್ಯದ ಅಭ್ಯಾಸ. ಇದೆಲ್ಲ ಕೊಂಚ ಗತ ಇತಿಹಾಸ…. ಐದಾರು ವರ್ಷಗಳ ಹಿಂದೆ ನಮ್ಮ ಪಾರ್ಕಿಗೆ ಗ್ರಹಣ ಬಡಿಯಿತು. ಪಾರ್ಕಿನ ಅರ್ಧ ಭಾಗ ಕಬಳಿಸಿ ಮೆಟ್ರೋ ಆರಂಭವಾಯಿತು. ಜೀವಿಯವರ ನಡಿಗೆ ಸ್ಥಳ ಬದಲಾಗಿ ನಮ್ಮ ಭೇಟಿ ಅಪರೂಪವಾಗಿದೆಯಾದರೂ ನಾವು ಅವರನ್ನು ನಿತ್ಯ ನೆನೆಯುತ್ತೇವೆ.

    ಅವರು ಈ ವಯಸ್ಸಿನಲ್ಲೂ ದಿನನಿತ್ಯ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಂಡು-ಕೇಳಿ ತುಂಬಾ ಖುಷಿಪಡುತ್ತೇವೆ. ಇಂದವರು  107 ದಾಟಿ 108 ರಲ್ಲಿ ಇತರರಿಗೆ ಅನುಕರಣೀಯರಾಗಿ ಆದರ್ಶದ -ಕ್ರೀಯಾಶೀಲ ಜೀವನವನ್ನು ಕ್ರಮಿಸುತ್ತ ನಾಡಿನ ಭಾಗ್ಯದಂತೆ ಕನ್ನಡನಾಡಿನ ಹೆಮ್ಮೆಯ ಪುತ್ರರಾಗಿ, ಮಾರ್ಗದರ್ಶಕರಾಗಿರುವುದು ಭುವನದ ಹಾಗೂ ನಮ್ಮೆಲ್ಲರ ಭಾಗ್ಯ. ಬರೀ ದೀರ್ಘಾಯಸ್ಸಿದ್ದರೆ ಸಾಲದು. ಇಂಥ ಸಕ್ರಿಯ-ಜೀವಂತಿಕೆಯ ಅನುಕ್ಷಣದ ಸಾರ್ಥಕ ಬದುಕು ನಮ್ಮ ಗುರುಗಳದು ಎಂದು ನೆನೆದಾಗ ಮೈ ರೋಮಾಂಚನಗೊಳ್ಳುತ್ತದೆ. ನಿಜಕ್ಕೂ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂಥ ಸಾಧಕ ಜೀವನ ಅವರದು….ಹುಟ್ಟಿದ ಹಬ್ಬದ  ಸಂತೋಷದ ಸಂದರ್ಭದಲ್ಲಿ ಮನಸಾ ವಂದಿಸುವೆ.  “ಶ್ರೀ ಗುರುಭ್ಯೋ ನಮಃ ”                                                          

    ವೈ.ಕೆ.ಸಂಧ್ಯಾ ಶರ್ಮ -ಹಿರಿಯ ಸಾಹಿತಿ,ಪತ್ರಕರ್ತೆ, ಕಲಾ ವಿಮರ್ಶಕಿ ಮತ್ತು ರಂಗಕರ್ಮಿ. ಕರ್ನಾಟಕ ವಾರ್ತಾಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೃತ್ಯ-ನಾಟಕ ವಿಮರ್ಶಕಿ ಆಗಿಯೂ ಪರಿಚಿತ. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಇವರು, ಕಳೆದ 50 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತ ಜನಪ್ರಿಯ ಲೇಖಕಿಯಾಗಿದ್ದಾರೆ. ಇವರು,  ಸುಮಾರು 250 ಸಣ್ಣಕತೆಗಳು, 35 ಕಾದಂಬರಿಗಳು, ನೂರಕ್ಕೂ ಹೆಚ್ಚು ಕವನಗಳು, ಹಾಸ್ಯಬರಹಗಳು,  ನಾಟಕ,  ಜೀವನಚರಿತ್ರೆಯನ್ನು ರಚಿಸಿದ್ದಾರೆ.    ಸಧ್ಯ ಸಂಧ್ಯಾ ಪತ್ರಿಕೆ ಎಂಬ ಅಂತರ್ಜಾಲದ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಇವರು ಯಶಸ್ವಿಯಾಗಿ ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

         

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ – ಜಾರಿ ಸಮಯದ ಸವಾಲು


    ಹಿಂದಿನ ಲೇಖನದಲ್ಲಿ (ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಇರುವುದಾದರು ಏನು?) ನೂತನ ಶಿಕ್ಷಣ ನೀತಿ – 2020 ರ ಪ್ರಮುಖಾಂಶಗಳ ಬಗ್ಗೆ
    ಅವಲೋಕಿಸಲಾಗಿತ್ತು. ಈ ಲೇಖನದಲ್ಲಿ ಅದರ ಜಾರಿ ಸಮಯದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ.

    ಹೊಸ ಶಿಕ್ಷಣ ನೀತಿಯನ್ನು ಯಾವ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುವುದು ಎಂಬ ಪ್ರಶ್ನೆ ಹಲವಾರು ಜನರಲ್ಲಿ ಮೂಡಿರುವುದು ಸಹಜ. ಜೊತೆಗೆ ಇಂತಹ ದೊಡ್ಡ ಮಟ್ಟದಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ, ಅದರಲ್ಲೂ ಹೆಚ್ಚು ಜನಸಂಖೈ ಮತ್ತು ದೊಡ್ಡ ಶಿಕ್ಷಣ ಜಾಲವಿರುವ ನಮ್ಮ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಬಯಸುವ
    ನೀತಿಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಸಾಧ್ಯ ಮತ್ತು ಅನುಷ್ಠಾನಕ್ಕೆ ತರುವ ಸಮಯದಲ್ಲಿ
    ಹಲವಾರು ಸಮಸ್ಯೆಗಳು ಉದ್ಬವಿಸಬಹುದು, ಅವುಗಳನ್ನು ಹೇಗೆ ನಿವಾರಣೆ ಮಾಡಬೇಕು ಎಂಬ
    ಆಲೋಚನೆಗಳು ಬರುವುದು ಸರ್ವೇ ಸಾಮಾನ್ಯ.

    ಈ ಲೇಖನದಲ್ಲಿ ಸವಾಲುಗಳ ಬಗ್ಗೆ ಅವಲೋಕಿಸಲು ಪ್ರಯತ್ನಿಸೋಣ. ಮೊಟ್ಟ ಮೊದಲಿಗೆ, ಒಂದು ಅಂಶವನ್ನು ಹೇಳ ಬಯಸುತ್ತೇನೆ. ಯಾವುದೇ ಒಂದು ನೀತಿಯು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳ ಬೇಕಾದರೆ, ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯ.
    ಅದೃಷ್ಟವಶಾತ್, ಈ ನೀತಿಯನ್ನು ಕಾರ್ಯರೂಪಕ್ಕೆ ತರಲು, ಇಂದಿನ ಕೇಂದ್ರ ಸರ್ಕಾರ ಮತ್ತು ನಮ್ಮರಾಜ್ಯ ಸರ್ಕಾರಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಎದ್ದು ಕಾಣುತ್ತಿದೆ.

    ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಾತನಾಡುತ್ತ ‘This policy has the stamp of my political will’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ನಮ್ಮರಾಜ್ಯದ ಉಪಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ. ಅಶ್ವತ್ಥ
    ನಾರಾಯಣರವರು, ವಿಶ್ವ ವಿದ್ಯಾಲಯದ ಸಮಾರಂಭದಲ್ಲಿ ಮಾತನಾಡುತ್ತಾ, ನೀತಿಯನ್ನು
    ಜಾರಿಗೊಳಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ
    ಎಂಬ ಮಾತನ್ನು ಹೇಳಿದ್ದಾರೆ. ಇದರಿಂದ ರಾಜಕೀಯ ಇಚ್ಛಾಶಕ್ತಿಯಿರುವುದು ದೃಢಪಡುತ್ತದೆ.

    ಈ ವರ್ಷದಿಂದ, ಅಥವಾ ಕೋವಿಡ್ 19 ರಿಂದ ತೊಂದರೆಯಾಗಿರುವ ಕಾರಣ, ಮುಂದಿನ ಶೈಕ್ಷಣಿಕ
    ವರ್ಷದಿಂದ ಹಂತ ಹಂತವಾಗಿ ಹೊಸ ಶಿಕ್ಷಣ ನೀತಿಯು ಜಾರಿಗೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    ಸವಾಲುಗಳು

    1 . ನಮ್ಮ ದೇಶದಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕಾದ
    ವಯೋಮಾನವನ್ನು ಹೊಂದಿರುವ ಯುವ ಜನಸಂಖ್ಯೆ ಸುಮಾರು 35 ಕೋಟಿ. ಅಂದರೆ
    ನೂತನ ಶಿಕ್ಷಣ ನೀತಿಯ ಅನುಷ್ಠಾನವು ಅತಿದೊಡ್ಡ ಮಟ್ಟದಲ್ಲಿ ಪ್ರಪಂಚದ ಬೇರೆ ಯಾವ
    ದೇಶದಲ್ಲೂ ಕಂಡು ಅರಿಯದ ಪ್ರಮಾಣದಲ್ಲಿ ಜಾರಿಗೊಳಿಸ ಬೇಕಾಗಿದೆ. ಇದು ನಿಜವಾಗಿಯೂ
    ದೊಡ್ಡ ಸವಾಲು.

    2. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳನ್ನು ಗಮನಿಸಿದಾಗ, ಶಾಲೆಯಿಂದ ಹೊರಗೆ ಉಳಿದಿರುವ ಸುಮಾರು ಎರಡು ಕೋಟಿ ಮಕ್ಕಳನ್ನು ಮುಂದಿನ 15 ವರ್ಷಗಳಲ್ಲಿ ಮತ್ತೆ
    ಶಾಲೆಗೆ ಬರುವಂತೆ ಮಾಡ ಬೇಕಾಗಿರುವ ಉದ್ದೇಶವನ್ನು ಹೊಂದಿದೆ. ಇದನ್ನು ಜಾರಿಗೊಳಿಸಲು ಸಾವಿರಾರು ಶಾಲೆಗಳನ್ನು ತೆರೆಯ ಬೇಕಾಗುತ್ತದೆ. ಅಥವಾ, ಹೀಗಿರುವ ಶಾಲೆಗಳನ್ನು ವಿಸ್ತರಿಸಿ,ಲಕ್ಷಾಂತರ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಜೊತೆಗೆ, ಮೂಲಭೂತ
    ಸೌಕರ್ಯಗಳನ್ನು ಹೆಚ್ಚಿಸ ಬೇಕಾಗುತ್ತದೆ. ಇಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ತಗಲುವ
    ವೆಚ್ಚವನ್ನು ಅದರಲ್ಲೂ, ಕೋವಿಡ್ 19 ರಿಂದ ಹಣಕಾಸಿನ ವ್ಯವಸ್ಥೆಗೆ ಬಹಳ ದೊಡ್ಡ
    ಪೆಟ್ಟು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು
    ನೋಡ ಬೇಕಾಗಿದೆ.

    3. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early Childhood Care and
    Education ) ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ತಯಾರು
    ಮಾಡಬೇಕಾಗಿದೆ. ಇದು ದೊಡ್ಡ ಸವಾಲು.

    4. ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಎಲ್ಲಾ ಮಕ್ಕಳು ವೃತ್ತಿ ಪರ ಶಿಕ್ಷಣದ ಅಡಿಯಲ್ಲಿ
    ಯಾವುದಾದರೂ ಒಂದು ಔದ್ಯೋಗಿಕ ಶಿಕ್ಷಣ ತರಬೇತಿಯನ್ನು ಕಡ್ಡಾಯವಾಗಿ
    ಪಡೆಯಬೇಕಾಗಿರುತ್ತದೆ. ಸ್ಥಳೀಯವಾಗಿ ದೊರಕುವ ಪ್ರತಿಭೆಯನ್ನು ಉಪಯೋಗಿಸಿಕೊಂಡರು
    ಸಹ, ಬಹಳ ದೊಡ್ಡ ಮಟ್ಟದಲ್ಲಿ ವೃತ್ತಿ ಪರ ಶಿಕ್ಷಣದ ಶಿಕ್ಷಕರನ್ನು ತಯಾರು ಮಾಡ
    ಬೇಕಾಗಿರುತ್ತದೆ.

    5. ಬೋಧನಾ ಕ್ರಮದಲ್ಲಿ ಸೃಜನಶೀಲತೆ ( Creativity ), ಹೊಸತನ್ನು ಕಂಡು ಹಿಡಿಯುವಿಕೆ (innovation ), ಪರಿಕಲ್ಪನಾ ತಿಳಿವಳಿಕೆ ( Conceptual understanding ), ಇವುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹೊಸ ರೀತಿಯಲ್ಲಿ ಬೋಧನೆ ಮಾಡುವಂತಹ
    ಶಿಕ್ಷಕರನ್ನು, ತರಬೇತಿ ನೀಡಿ ತಯಾರು ಮಾಡುವುದು ದೊಡ್ಡ ಪ್ರಮಾಣದ ಯೋಜನೆ ಎಂದರೆ ತಪ್ಪಾಗಲಾರದು.

    6. ಶಿಕ್ಷಣ ನೀತಿಯಲ್ಲಿ ಕನಿಷ್ಠ 5 ನೇ ತರಗತಿಯವರಿಗೆ, ಮಾತೃ ಭಾಷೆ ಅಥವಾ ಸ್ಥಳೀಯ
    ಭಾಷೆಯು ಬೋಧನಾ ಮಾಧ್ಯಮವಾಗಿರ ಬೇಕೆಂದು ಉದ್ದೇಶಿಸಲಾಗಿದೆ. ಆದರೆ ಈ ಅಂಶದ
    ಬಗ್ಗೆ ಈಗಾಗಲೆ ಕೆಲವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿವೆ. ನಮ್ಮ ದೇಶದಲ್ಲಿ ಇದು ಬಹಳ ಸೂಕ್ಷ್ಮ ರೀತಿಯ ಸಮಸ್ಯೆಯಾದ್ದರಿಂದ, ಬಹಳ ದಕ್ಷತೆಯಿಂದ, ಸವಾಲನ್ನು ಎದುರಿಸ ಬೇಕಾಗಿದೆ.

    7. ರಾಷ್ಟ್ರೀಯ ಮಟ್ಟದ ಪಠ್ಯಕ್ರಮದ ಚೌಕಟ್ಟನ್ನು ತಯಾರಿಸುವಾಗ ವರ್ಗಾವಣೆಗೆ ಒಳಪಡುವ
    ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳ ಆಸಕ್ತಿ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗಿದೆ.

    8. ನೀತಿಯಲ್ಲಿ ಪಾಲಿ, ಪ್ರಾಕೃತ್ ಮತ್ತು ಪರ್ಶಿಯನ್ ಭಾಷೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ಪ್ರಾರಂಭದಲ್ಲಿ ಈ
    ಕಾರ್ಯವನ್ನು ಮೈಸೂರಿನಲ್ಲಿರುವ Central Institute of Indian Languages
    ಇದಕ್ಕೆ ವಹಿಸಬಹುದು.

    9. ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು
    ( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ಮುಟ್ಟ ಬೇಕಾದರೆ, ಕನಿಷ್ಠ ಇನ್ನೂ 800 ವಿಶ್ವ ವಿದ್ಯಾಲಯವನ್ನು ಸ್ಥಾಪಿಸ ಬೇಕಾಗಿರುತ್ತದೆ. ಜೊತಗೆ, ಈಗಿರುವ ವಿಶ್ವ ವಿದ್ಯಾಲಯಗಳಲ್ಲಿ ಮೂಲ ಭೂತ ಸೌಕರ್ಯಗಳನ್ನು ಹೆಚ್ಚಿಸಿ ಸಾವಿರಾರು ಪ್ರಾಧ್ಯಾಪಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಪ್ರಸ್ತುತ ವಿಶ್ವ ವಿದ್ಯಾಲಯಗಳಲ್ಲಿ ಶೇ.30 ರಷ್ಟು ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಇದು ನಿಜವಾಗಿಯೂ ಬೃಹತ್ ಸವಾಲೇ ಸರಿ.

    10. 2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ
    ಪದ್ಧತಿ ಇರುವುದಿಲ್ಲ ( No affiliation system ). ಈ ವೇಳೆಗೆ ಪ್ರತಿಯೊಂದು ಮಹಾ
    ವಿದ್ಯಾಲಯವು ಬಹು ಶಿಸ್ತೀಯ ( multi disciplinary ) ಮತ್ತು ದೊಡ್ಡ ಮಟ್ಟದ
    ಕಾಲೇಜಾಗಿ ಬೆಳೆದು ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು
    ಉದ್ಧೇಶಿಸಲಾಗಿದೆ. ಜೊತೆಗೆ ಪ್ರತಿಯೊಂದು ಕಾಲೇಜು ಪದವಿಗಳನ್ನು ಪ್ರದಾನ ಮಾಡುವ
    ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿ ಬೆಳೆಯ ಬೇಕಾಗುತ್ತದೆ. ತಾತ್ವಿಕವಾಗಿ ಒಳ್ಳೆಯ ವ್ಯವಸ್ಥೆ.
    ಆದರೆ ಈ ವ್ಯವಸ್ಥೆ ಕಾಸ್ಮೋಪಾಲಿಟನ್ ನಗರಗಳಲ್ಲಿ, ಸ್ವಲ್ಲ ಮಟ್ಟಿಗೆ ಜಿಲ್ಲಾ
    ಕೇಂದ್ರಗಳಲ್ಲಿ ಸಾಧ್ಯವಾಗಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದು ಸಾಧ್ಯವೆ? ಎಂಬ
    ಪ್ರಶ್ನೆ ಕಾಡುತ್ತದೆ. ಗ್ರಾಮೀಣ ಪ್ರದೇಶದ ಚಿಕ್ಕ ಕಾಲೇಜುಗಳು ಪದವಿಯನ್ನು ನೀಡಿದರೆ, ಈ
    ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ಸಿಗುವ ನಂಬಿಕೆಯಾದರು ಏನು. ಈಗ ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜುಗಳು, ವಿಶ್ವ ವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಾಗಿದ್ದು ವಿದ್ಯಾರ್ಥಿಗಳು
    ವಿಶ್ವ ವಿದ್ಯಾಲಯಗಳಿಂದ ಪದವಿಗಳನ್ನು ಪಡೆಯುತ್ತಿದ್ದಾರೆ. ನಂತರ ಅವರ ಸ್ವಂತ
    ಪ್ರತಿಭೆಯಿಂದ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಯೋಜನಾ ಪದ್ಧತಿಯನ್ನು
    ಮುಂದುವರಿಸುವುದು ಒಳ್ಳೆಯದು ಎಂಬುವುದು ನನ್ನ ಅಭಿಪ್ರಾಯ.

    11. ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಒಂದು ವೇಳೆ 2035 ರ ವೇಳೆಗೆ ಯಾವುದೇ
    ಶಿಕ್ಷಣ ಸಂಸ್ಥೆಯು ಬಹುಶಿಸ್ತೀಯ ದೊಡ್ಡ ಮಟ್ಟದ ಕಾಲೇಜಾಗಿ ಬೆಳೆಯಲು ಸಾಧ್ಯವಾಗದ
    ಪಕ್ಷದಲ್ಲಿ, ಅಂತಹ ಕಾಲೇಜನ್ನು ವಿಶ್ವ ವಿದ್ಯಾಲಯಕ್ಕೆ ಸೇರಿಸಲಾಗುವುದು. ಅಥವಾ ವಿಶ್ವವಿದ್ಯಾಲಯದ ಘಟಕದ ಕಾಲೇಜಾಗಿ ( constituent college ) ಪರಿವರ್ತನೆ
    ಮಾಡಲಾಗುವುದು. ಈ ವ್ಯವಸ್ಥೆ ಆಡಳಿತಾತ್ಮಕ ದೃಷ್ಟಿಯಿಂದ ಕಷ್ಟ ಸಾಧ್ಯವಾಗಬಹುದು.

    12. ಪದವಿ ಶಿಕ್ಷಣದ ಅವದಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು
    ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ, ಡಿಪ್ಲೊಮ
    ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್
    ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಉತ್ತಮವಾದ ಕ್ರಮ. ಏಕೆಂದರೆ,
    ಪ್ರಸ್ತುತ ವ್ಯವಸ್ಥೆಯಲ್ಲಿ, ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿದರೆ, ಯಾವ ಸರ್ಟಿಫಿಕೇಟ್
    ಸಿಗುವುದಿಲ್ಲ. ಆದರೆ ಮೇಲೆ ತಿಳಿಸಿರುವ ರೀತಿಯಲ್ಲಿ ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿ ಡಿಪ್ಲೊಮ ಅಥವಾ ಸರ್ಟಿಫಿಕೇಟ್ ಪ್ರಮಾಣ ಪತ್ರವನ್ನು ಪಡೆದವರಿಗೆ
    ಉದ್ಯೋಗಾವಕಾಶಗಳನ್ನು ಸೃಷ್ಠಿಸ ಬೇಕಾಗುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ
    ಅವರನ್ನು ಗುರುತಿಸುವಂತೆ ಪಠ್ಯ ಕ್ರಮವನ್ನು ತಯಾರು ಮಾಡ ಬೇಕಾಗಿದೆ. ಬಹಳ
    ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿರುತ್ತದೆ.

    13. ಪ್ರೌಢ ಮತ್ತು ಕಾಲೇಜು ಹಂತಗಳಲ್ಲಿ ಅಧ್ಯಯನಕ್ಕೆ ವಿಷಯಗಳನ್ನು ಆರಿಸಿಕೊಳ್ಳುವ
    ಸಂದರ್ಭದಲ್ಲಿ ಕೆಫೆಟೀರಿಯಾ ವಿಧಾನವನ್ನು ( cafeteria approach ) ಅಳವಡಿಸಲು
    ಉದ್ದೇಶಿಸಲಾಗಿದೆ. ಇದರ ಅರ್ಥ, ನಾವು ಹೋಟೆಲ್‍ಗೆ ಹೋದಾಗ ನಮಗೆ ಬೇಕಾದ ತಿಂಡಿ
    ಪದಾರ್ಥಗಳನ್ನು ಆರಿಸಿಕೊಳ್ಳುವಂತೆ. ಕಲೆ, ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನದ
    ವಿಷಯಗಳು, ಮಾನವೀಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು, ಇವುಗಳ ನಡುವೆ
    ಈಗಿರುವ ಅಡ್ಡ ಗೋಡೆಗಳನ್ನು ಸರಿಸಿ, ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು
    ಅಧ್ಯಯನಕ್ಕೆ ಆರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿಜವಾಗಿಯೂ ಉತ್ತಮ ಪದ್ಧತಿ.
    ಇನ್ನೂ ಮುಂಚೆಯೇ ಈ ಪದ್ಧತಿ ಜಾರಿಗೆ ಬರ ಬೇಕಾಗಿತ್ತು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ
    ಭೌತಶಾಸ್ತ್ರ, ಸಂಗೀತ ಮತ್ತು ಇತಿಹಾಸದ ವಿಷಯಗಳನ್ನು ಆರಿಸಿಕೊಳ್ಳ ಬಹುದು. ಆದರೆ
    ಆಡಳಿತ ಮಂಡಳಿಗಳ ದೃಷ್ಠಿಯಿಂದ ಇದು ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು. ಅನೇಕ
    ವಿಷಯಗಳಿಗೆ ಸಂಬಂಧ ಪಟ್ಟಂತೆ, ಮೂಲ ಸೌಕರ್ಯ ಮತ್ತು ಶಿಕ್ಷಕರನ್ನು ಒದಗಿಸುವುದು
    ಕಷ್ಟಕರವಾದಂತ ನಿರ್ಧಾರವಾಗಬಹುದು.

    14. ಬಹು ಶಿಸ್ತೀಯ ವಿಧಾನವನ್ನು ( multi disciplinary ) ಅಳವಡಿಸುವಾಗ
    ಮಾನಸಿಕವಾಗಿ ಶಿಕ್ಷಕರಲ್ಲೂ ಸಹ ಸಾಂಸ್ಕೃತಿಕ ಬದಲಾವಣೆ ( cultural shift ) ಬರ
    ಬೇಕಾಗಿರುತ್ತದೆ. ಈ ಪ್ರಕ್ರಿಯೆ 10 – 15 ವರ್ಷಗಳಲ್ಲಿ ಪೂರ್ಣಗೊಳ್ಳ ಬೇಕಾಗಿರುತ್ತದೆ.
    ಪ್ರಾಧ್ಯಾಪಕರಲ್ಲಿ ಇದರ ಬಗ್ಗೆ ನಿರುತ್ಸಾಹ ಉಂಟಾಗುವ ಸಾಧ್ಯತೆಗಳಿವೆ.

    15. ಹಿಂದಿನ ಲೇಖನಕ್ಕೆ ಪ್ರತಿಕ್ರಿಯಿಸಿ, ಕೆಲವರು ಹಾಲಿ ಸೇವೆಯಲ್ಲಿರುವ ಶಿಕ್ಷಕರ ಸ್ಥಿತಿ
    ಅಥವಾ ಸ್ಥಾನಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಲಿ ಸೇವೆಯಲ್ಲಿರುವ ಶಿಕ್ಷಕರ
    ಸೇವೆಯನ್ನು ಅವಶ್ಯಕತೆಗೆ ಅನುಗುಣವಾಗಿ ತರಬೇತಿ ನೀಡಿ, ಅವರುಗಳ ಸೇವೆಯನ್ನು ಹೆಚ್ಚಿನ
    ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಪ್ರಸ್ತುತ ಅಂಗನವಾಡಿ ಕಾರ್ಯ ಕರ್ತೆಯರಲ್ಲಿ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ ಪಡೆದಿರುವವರಿಗೆ ಆರು ತಿಂಗಳ ತರಬೇತಿ,
    ಕಡಿಮೆ ವಿದ್ಯಾರ್ಹತೆ ಪಡೆದಿರುವ ಕಾರ್ಯ ಕರ್ತೆಯರಿಗೆ ಒಂದು ವರ್ಷದ ತರಬೇತಿಯನ್ನು
    ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದಡಿಯಲ್ಲಿ ನೀಡಲಾಗುವುದು. ಪ್ರೌಢ ಶಿಕ್ಷಣ
    ಹಂತದಲ್ಲಿ 9 ರಿಂದ 12 ನೇ ತರಗತಿಯವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಅನುಷ್ಠಾನ
    ಮಾಡಲಾಗುತ್ತದೆ. ಹಾಲಿ ಶಿಕ್ಷಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ.

    16. ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ
    ಕಾರ್ಯಕ್ರಮವನ್ನು ಬಹು ಶಿಸ್ತಿನ ವಿದ್ಯಾ ಸಂಸ್ಥೆಗಳಿಗೆ ವರ್ಗಾಯಿಸಲು ಯೋಜಿಸಿರುವುದು
    ನಿಜವಾಗಲೂ ಉತ್ತಮ ಹೆಜ್ಜೆ. ಹಾಲಿ ಬಿ. ಎಡ್ ಕಾಲೇಜುಗಳು ಸಹ ಬಹು ಶಿಸ್ತೀಯ
    ಕಾಲೇಜುಗಳಾಗಿ ಬೆಳೆದು ಪರಿವರ್ತನೆಯಾಗ ಬೇಕೆಂಬ ನಿರ್ಧಾರ ಬಹಳ ಒಳ್ಳೆಯದು. ಇದರಿಂದ
    ಶಿಕ್ಷಕರ ಶಿಕ್ಷಣ ಗುಣಮಟ್ಟ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಎರಡು ವರ್ಷದ ಬಿ. ಎಡ್
    ಕೂಡ ಬಹು ಶಿಸ್ತೀಯ ವಿದ್ಯಾ ಸಂಸ್ಥೆಗಳಿಗೆ ಮಾತ್ರ ನೀಡ ಬೇಕು.

    ನೂತನ ಶಿಕ್ಷಣ ನೀತಿಯಲ್ಲಿ ಹಲವಾರು ಉತ್ತಮ ಸಲಹೆಗಳನ್ನು ನಾವುಗಳು ಕಾಣಬಹುದು. ಉದಾಹರಣೆಗೆ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದಿರುವುದು, ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಸ್ವಾಯತ್ತತೆ, ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಕೈಗೆಟಕುವಂತೆ ಪ್ರಯತ್ನ, ವೃತ್ತಿ ಪರ ಶಿಕ್ಷಣವನ್ನು ಮುಖ್ಯ ವಾಹಿನಿ ಶಿಕ್ಷಣದ ಜೊತೆಯಲ್ಲಿ ಸಂಯೋಜಿಸಿರುವುದು, ಪಠ್ಯ ಕ್ರಮದಲ್ಲಿ ನಮ್ಮ ದೇಶದ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಒತ್ತು ನೀಡಿರುವುದು, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಗಳಿಗೆ ಒತ್ತು ನೀಡಿರುವುದು.

    ಈ ನೂತನ ಶಿಕ್ಷಣದ ನೀತಿಯು ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಯಶಸ್ವಿಯಾಗಿ ಜಾರಿಗೆ ಬಂದು, ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲೆಂದು ನಾವೆಲ್ಲರೂ ಆಶಿಸೋಣ.

    Photo by Ian Panelo from Pexels

    error: Content is protected !!