ಪ್ರತಿದಿನ ಅತಿಹೆಚ್ಚಿನ ಸೋಂಕಿತರನ್ನು ವರದಿಮಾಡುತ್ತಿರುವ ದೇಶಗಳಲ್ಲಿ ದಿನವೊಂದರಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕನ್ನು ವರದಿ ಮಾಡಿರುವ ಭಾರತ ಇಡೀ ವಿಶ್ವದಲ್ಲೇಅಗ್ರ ಸ್ಥಾನವನ್ನುಪಡೆದಿದೆ. ಅಮೆರಿಕಾ ಮತ್ತು ಬ್ರೆಜಿಲ್ ದೇಶಗಳನ್ನೂ ಹಿಂದಕ್ಕೆ ಹಾಕಿದೆ.
ಆದರೆ ಭಾರತದಲ್ಲಿ ಅಥವಾ ಇಡೀ ಪ್ರಪಂಚದಲ್ಲಿ ಇದುವರೆಗೆ ವರದಿಯಾಗಿರುವಜನರಿಗಷ್ಟೇ ಸೋಂಕು ಬಂದು ಹೋಗಿದೆಯೇ? ಖಂಡಿತ ಇಲ್ಲ.ಈ ಸಂಖ್ಯೆ ಅದಕ್ಕಿಂತ ಬಹಳ ದೊಡ್ಡದಿದೆ ಎಂಬುದು ಎಲ್ಲರ ಸುಲಭ ಊಹೆ. ಯಾಕೆಂದರೆ ಶಂಕಿತರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿಲ್ಲ. ಪರೀಕ್ಷೆಗಳು ಮೊದಲೆಲ್ಲ ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆದದ್ದು ಒಂದು ಕಾರಣವಾದರೆ, ಕ್ವಾರಂಟೈನ್ ಇತ್ಯಾದಿ ಭಯಗಳು ಇನ್ನೊಂದು ಕಡೆ ಜನರನ್ನು ಕಾಡಿದ್ದು ನಿಜ.ಇದರ ನಡುವೆ ಸೋಂಕು ಬಂದಿರುವ ಎಲ್ಲರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಪರೀಕ್ಷೆ ಮಾಡಿಸಿಕೊಳ್ಳದಿರಲು ಮತ್ತೊಂದು ದೊಡ್ಡ ಕಾರಣವಾಗಿದೆ.
ಒಂದು ದೇಶದ ಪ್ರತಿ ಪ್ರಜೆಗೆ ಕೋವಿಡ್ ಪರೀಕ್ಷೆ ನಡೆಯದಿದ್ದರೆ ನಿಖರ ಸಂಖ್ಯೆ ತಿಳಿಯುವುದೂ ಇಲ್ಲ. ಆದರೆ ಅದು ಸಾಧ್ಯವಾಗದ ಮಾತು. ದಿನಕ್ಕೆ ಹತ್ತು ಲಕ್ಷ ಪರೀಕ್ಷೆಗಳನ್ನು ಮಾಡಿದರೂ ಅದು ಭಾರತದ ಜನಸಂಖ್ಯೆಗೆ ಕಡಿಮೆ ಎನ್ನುವ ಬಲವಾದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೋವಿಡ್ ಪರೀಕ್ಷೆಗಳ ಮತ್ತೊಂದು ವಿಲಕ್ಷಣ ವಿಚಾರವೆಂದರೆ ಅದುಈ ತಪಾಸಣೆಗಳ ಅತ್ಯಂತ ಸೂಕ್ಷ್ಮ ಸ್ವಭಾವ. ಅಂದರೆ, ಈ ಪರೀಕ್ಷೆಯಿಂದ ಕೋವಿಡ್ ಇದೆ ಎಂದು ಗೊತ್ತಾದವರಲ್ಲಿ ಮತ್ತೊಂದು ದಿನ ಇದೇ ಪರೀಕ್ಷೆಯನ್ನು ಮಾಡಿದಾಗ ಸೋಂಕು ಇಲ್ಲ ಎನ್ನುವ ಫಲಿತಾಂಶ ಬಂದಿದೆ. ಇಲ್ಲ ಎಂದವರಲ್ಲಿ ನಂತರ ಸೋಂಕು ಇದೆ ಎನ್ನುವ ವಿಚಾರಗಳು ಪತ್ತೆಯಾಗಿವೆ. ಇದರ ಜೊತೆ ಪರೀಕ್ಷೆಗೆ ಬಂದ ಮಾದರಿಯ ಪ್ರಮಾಣ ಸಾಕಷ್ಟಿಲ್ಲ, ಮಾದರಿಯನ್ನು ತೆಗೆದ ಕ್ರಮದಲ್ಲಿ ಲೋಪವಿದೆ ಎಂದು ಫಲಿತಾಂಶ ಸಿಕ್ಕ ಸಾವಿರಾರು ಪರೀಕ್ಷೆಗಳು ಯಾವುದೇ ಫಲಿತಾಂಶ ನೀಡದೆ ವ್ಯರ್ಥವಾಗಿವೆ.
ಹೀಗಿದ್ದೂ ನಾವು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ? ಕೋವಿಡ್ ಪರೀಕ್ಷೆಯ ವಿಧಾನಗಳದ್ದು ಯಾಕಿಷ್ಟು ನವಿರು ಸ್ವಭಾವ?ಕೋವಿಡ್ ಪರೀಕ್ಷೆಗಳು ಹೇಗೆ ನಡೆಯುತ್ತವೆ?
ಕೋವಿಡ್ ಪರೀಕ್ಷೆಯ ಹಿನ್ನೆಲೆಯೇನು?
ಕೋವಿಡ್ ಸೋಂಕನ್ನು ವಿಶ್ವವ್ಯಾಪಿ ಹೊಸವ್ಯಾಧಿಯೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲೇ ಸೋಂಕಿತರನ್ನು ಪತ್ತೆ ಹಚ್ಚಲು ತ್ವರಿತವಾಗಿ ಪರೀಕ್ಷಾ ವಿಧಾನಗಳ ಅಗತ್ಯ ಕಂಡಿತು. ಈ ಪರೀಕ್ಷೆ ಸುಲಭವಾಗಿರಬೇಕಿತ್ತು, ಹೆಚ್ಚು ಹಣ ಹೂಡಿಕೆ ಬೇಡದಂತಿರಬೇಕಿತ್ತು ಮತ್ತು ಈ ಪರೀಕ್ಷೆಯಿಂದ ಅತ್ಯಂತ ತ್ವರಿತವಾಗಿ ಸೋಂಕನ್ನು ಕಂಡುಹಿಡಿಯಲು ಸಾಧ್ಯವಿರಬೇಕಿತ್ತು.
ಈ ಮಾಪನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮನುಕುಲ ಈ ಹಿಂದೆ ಇನ್ಫ್ಲುಯೆಂಜಾದಂತಹ ಪಿಡುಗನ್ನು ಪತ್ತೆಹಚ್ಚಿ ಅದನ್ನು ಹತ್ತಿಕ್ಕುವಲ್ಲಿ ಬಳಸುತ್ತಿದ್ದ ಮಾದರಿಯ ಟೆಸ್ಟ್ ಕಿಟ್ ಗಳನ್ನು ತಯಾರಿಸಬೇಕಾಯ್ತು. ಅದು ಬಡ ಮತ್ತು ಶ್ರೀಮಂತ ದೇಶಗಳೆರಡರಲ್ಲೂ ಅಗ್ಗದರದಲ್ಲಿ ಲಭ್ಯವಾಗಬೇಕಾಯ್ತು. ವೇಗವಾಗಿ ಸೋಂಕು ಹರಡುತ್ತಿದ್ದ ದೇಶಗಳು ನಾಗಾಲೋಟದಲ್ಲಿ ಈ ಟೆಸ್ಟ್ ಕಿಟ್ ಗಳ ಉತ್ಪಾದನೆ ಅಥವಾ ಖರೀದಿಗಿಳಿದವು. ಸೋಂಕು ನಿಧಾನವಾಗಿ ಹಬ್ಬಿದ ದೇಶಗಳಿಗೆ ಇವುಗಳನ್ನು ಉತ್ಪಾದಿಸಲು ಸ್ವಲ್ಪ ಸಮಯ ಸಿಕ್ಕಿತು.
ಕೊರೊನಾ ಪರೀಕ್ಷೆಯ ಕಿಟ್ ಗಳನ್ನು ಬಳಸಿದ ನಂತರ ಅವುಗಳ ಪರೀಕ್ಷೆ ನಡೆಸಲು ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿಕೊಂಡ ಪರೀಕ್ಷಾ ಕೇಂದ್ರಗಳು ಮತ್ತು ಲ್ಯಾಬೊರೇಟರಿಗಳನ್ನು ನಿಧಾನವಾಗಿ ಪ್ರತಿ ನಗರ, ಕೇಂದ್ರಗಳಿಗೆ ವಿಸ್ತರಿಸಬೇಕಾಯ್ತು. ಇಲ್ಲದಿದ್ದಲ್ಲಿ ಒಂದು ಕಡೆ ಪಡೆದ ಮೂಗು ಮತ್ತು ಗಂಟಲು ದ್ರವಗಳ ಶೇಖರಣೆ,ಸಾಗಣೆ ಮತ್ತು ಗುಣಮಟ್ಟದ ಪರೀಕ್ಷೆಗಳಲ್ಲಿ ಅವು ಮತ್ತೊಂದು ಕಡೆ ಹೋಗಿ ಬರುವಷ್ಟರಲ್ಲಿ ಗಂಭೀರ ಲೋಪವಾಗುವ ಸಾಧ್ಯತೆಗಳಿದ್ದವು. ಈ ಪರೀಕ್ಷೆಯ ಫಲಿತಾಂಶಗಳು ತ್ವರಿತವಾಗಿ ಹೊರಬಿದ್ದು ಜನರನ್ನು ತಲುಪದಿದ್ದಲ್ಲಿ ಅವರು ತಮಗೆ ಸೋಂಕಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯದೆ ಡೋಲಾಯನಮಾನದ ಸ್ಥಿತಿಯಲ್ಲಿರಬೇಕಾಗಿತ್ತು.ಹೀಗಾಗಿ ಕೋವಿಡ್ ಪರೀಕ್ಷೆಗಳ ಅನುಕೂಲವನ್ನು ಸೃಷ್ಟಿಸುವಲ್ಲಿ ಪ್ರತಿದೇಶಗಳು ತೆಗೆದುಕೊಂಡ ಕ್ರಮಗಳು ಅಷ್ಟಿಷ್ಟಲ್ಲ.
ಕೋವಿಡ್ ಪರೀಕ್ಷೆ ಹೇಗೆ ನಡೆಯುತ್ತದೆ?
ಪರೀಕ್ಷೆಗೆ ಮುನ್ನ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಬಳಸಿ ಶುದ್ದಗೊಳಿಸಕೊಳ್ಳಬೇಕು. ಇದರಿಂದ ನಿಮ್ಮ ಕೈಯಿಂದ ಬರಬಹುದಾದ ಕಲ್ಮಶಗಳು ಟೆಸ್ಟ್ ಕಿಟ್ ನ್ನು ಪ್ರವೇಶಿಸವುದನ್ನು ತಡೆಯಬಹುದು.ಕೈಗಳಿಗೆ ಶುದ್ಧವಾದ ಕೈಗವುಸಗಳನ್ನು ತೊಟ್ಟುಕೊಳ್ಳಬೇಕು.ಟಿಶ್ಶೂ ಅಥವಾ ಬಿಸಾಡಬಹುದಾದ ಬಟ್ಟೆಯನ್ನು ಬಳಸಿಮೂಗನ್ನು ಲಘುವಾಗಿ ಸೀದಿ ಹೆಚ್ಚಿನ ಸ್ಲೇಷ್ಮವಿದ್ದಲ್ಲಿ ಅದನ್ನು ನಿವಾರಿಸಕೊಳ್ಳಬೇಕು.
ನಿಮಗೆ ಕೊಟ್ಟ ಕಿಟ್ ನ್ನು ಬಳಸಿನೀವೇ ಮಾದರಿ ದ್ರವವನ್ನು ತೆಗೆದುಕೊಡಬಹುದು. ಇದು ಸಾಧ್ಯವಿಲ್ಲದ ದೇಶಗಳಲ್ಲಿ ತ್ವರಿತವಾಗಿ ಮಾದರಿಗಳನ್ನು ಸಂಗ್ರಹಿಸಲು ಪರೀಕ್ಷೆಯ ಮಾದರಿಗಳನ್ನು ಸಂಗ್ರಹ ಮಾಡಿಕೊಳ್ಳುವವರೇ ನಿಮ್ಮ ಮೂಗು-ಗಂಟಲಿನ ದ್ರವವನ್ನು ತೆಗೆದುಕೊಳ್ಳಬಹುದು.
ಗಂಟಲಿನ ಒಳಭಾಗದ ಎರಡೂ ಕಡೆ ಇಣುಕುವ ಟಾನ್ಸಿಲ್ಸ್ ಗ್ರಂಥಿಯ ಅಂಗಾಂಶದ ಮೇಲೆ ಚೆನ್ನಾಗಿ ಅಂದರೆ ಹತ್ತು ಸೆಕೆಂಡುಗಳ ಕಾಲಮೆತ್ತಗಿನ ತುದಿಯಿರುವ ಪರೀಕ್ಷೆಯ ಕಡ್ಡಿಯನ್ನು ಬಳಸಿಎರಡರ ಮೇಲೂ ತೀಡಬೇಕು.ಕೆಲವರಿಗೆ ಟಾನ್ಸಿಲ್ಸ್ ತೆಗೆಯುವ ಶಸ್ತ್ರ ಚಿಕಿತ್ಸೆ ಆಗಿದ್ದಲ್ಲಿ ಅವರು ಟಾನ್ಸಿಲ್ಸ್ ಇದ್ದ ಜಾಗದಲ್ಲಿ ತೀಡಿದರೂ ಸಾಕು. ನಂತರ ಹಲ್ಲು, ನಾಲಿಗೆ ಯಾವುದಕ್ಕೂ ತಗುಲಿಸದಂತೆ ತೀಡುವ ಕಡ್ಡಿಯನ್ನು ಹೊರತೆಗೆಯಬೇಕು. ಇದೇ ತುದಿಯನ್ನು ಯಾವುದಾದರೂ ಒಂದು ಮೂಗಿನ ಹೊರಳೆಯಲ್ಲಿ ಒಂದಿಂಚು ಒಳಹೊಗಿಸಿ 10-15 ಸೆಕೆಂಡುಗಳ ಕಾಲ ಚೆನ್ನಾಗಿ ದುಂಡಗೆ ತಿರುಗಿಸಬೇಕು.
ಮೂಗು ನತ್ತು ಧರಿಸಿರುವವರು ಇನ್ನೊಂದು ಹೊರಳೆಯನ್ನು ಬಳಸಬಹದು. ತೀಡುವ ಕಡ್ಡಿ ಒಂದಿಂಚು ಒಳಹೋದ ನಂತರ ಮೂಗಿನಲ್ಲಿ ಸಾಧಾರಣವಾಗಿ ತಡೆಯೊಂದು ಸಿಕ್ಕುತ್ತದೆ. ಅದಕ್ಕಿಂತ ಹೆಚ್ಚು ಒಳಹೊಗಲು ಯತ್ನಿಸಿದರೆ ನೋವಾಗುತ್ತದೆ. ಈ ಹಂತಕ್ಕಿಂತ ಒಳಕ್ಕೆ ಕಡ್ಡಿಯನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.
ಜಾಗರೂಕವಾಗಿ ಕಡ್ಡಿಯನ್ನು ಹೊರತೆಗೆದು ಅದನ್ನು ನಿಮ್ಮ ಹೆಸರು, ವಿಳಾಸ ಅಥವಾ ಗುರುತಿನ ಸಂಖ್ಯೆಯನ್ನು ಅಂಟಿಸಿಕೊಟ್ಟಿರುವ ನಳಿಕೆಯಲ್ಲಿ ಸೀಲ್ ಮಾಡಿ ಪರೀಕ್ಷೆಗೆ ಕಳಿಸಬೇಕು.
ಕೋವಿಡ್ ಪರೀಕ್ಷೆಯ ಫಲಿತಾಂಶಗಳಲ್ಲಿ ಆಗಬಹುದಾದ ಲೋಪಗಳು
ನಾವೇ ಇದನ್ನು ಮಾಡುವಾಗ ಜತನದಿಂದ ಮತ್ತು ಕಾಳಜಿಯಿಂದ ಮಾಡಿ ಮಾದರಿಯನ್ನು ಕಳಿಸಿಕೊಡಬೇಕು.
ಬೇರೆಯವರು ಬೆಳಗ್ಗಿನಿಂದ ಸಂಜೆಯ ತನಕ ಜನರ ಗಂಟಲು-ಮೂಗಿನ ದ್ರವವನ್ನು ಸಂಗ್ರಹಿಸುತ್ತಿದ್ದಲ್ಲಿ ಅವರು ನಾನಾ ರೀತಿ ವರ್ತಿಸುವ ಜನರೊಂದಿಗೆ ಸಹನೆಯಿಂದಿರಬೇಕಾಗುತ್ತದೆ. ಇಂಥವರಿಗೆ ಅತ್ಯುತ್ತಮ ರಕ್ಷಣಾ ಉಡುಪುಗಳನ್ನು ನೀಡುವುದು ಕೂಡ ಅತ್ಯಗತ್ಯ. ಇಲ್ಲದಿದ್ದಲ್ಲಿ ಹತ್ತಿರಕ್ಕೆ ಬಂದು ಬಾಯಿ ತೆಗೆದು ಮುಖದ ನೇರಕ್ಕೆ ಉಸಿರು ಬಿಡುತ್ತ ನಿಲ್ಲುವ ಜನರಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಹಲವು ತಪ್ಪುಗಳನ್ನು ಮಾಡಬಹುದು.
ನಮ್ಮ ಮೂಗು -ಗಂಟಲಿನ ಒಳಭಾಗಗಳು ಒಣಗಿದ್ದರೆ ಹೆಚ್ಚಿನ ದ್ರವ ಮಾದರಿ ದೊರೆಯದೆ ಪರೀಕ್ಷೆ ನಡೆಸಲು ಸಾದ್ಯವಾಗದಿರಬಹುದು. ಬೇಕಾದ ಜಾಗವನ್ನು ತಲುಪಿ ತೀಡದಿದ್ದರೆ ಅದರಿಂದಲೂ ಮಾದರಿ ದೊರೆಯದೆ ಹೋಗಬಹುದು.
ಹೆದರಿಕೊಂಡು ತೀಡುವ ಕಡ್ಡಿಯನ್ನು ಅಂಗಾಂಶಗಳ ಸಂಪರ್ಕಕ್ಕೆ ತರದಿದ್ದರೆ ಅಥವಾ ತರಲು ಅನುವು ಮಾಡಿಕೊಡದಿದ್ದರೆ ಆಗಲೂ ಫಲಿತಾಂಶಗಳು ನಿರ್ಣಾಯಕವಾಗದೇ ತಪ್ಪು ಫಲಿತಾಂಶ ಬರಬಹುದು.ಹೀಗೆ ಹಲವಾರು ಮನುಷ್ಯ ಸಹಜ ತಪ್ಪುಗಳ ಕಾರಣಗಳಿಂದ ಪರೀಕ್ಷೆಯ ಫಲಿತಾಂಶದಲ್ಲಿ ವ್ಯತ್ಯಾಸ ಕಂಡು ಬರಬಹುದು.
ಪರೀಕ್ಷೆ ನಡೆಯುವ ಪ್ರಯೋಗಾಲಯ ಅಥವಾ ಲ್ಯಾಬುಗಳು ಎರಡನೇ ಶ್ರೇಣಿ ಅಥವಾ ಮೂರನೇ ಶ್ರೇಣಿಯ ನಿಯಂತ್ರಣವಿರುವ ಕಟ್ಟಡ ಸೌಲಭ್ಯಗಳನ್ನು ಹೊಂದಿರಬೇಕು. ಹೊರಗಿನದ್ದಕ್ಕೆ ಹೋಲಿಸಿದರೆ ಪ್ರಯೋಗಾಲಯದ ಒಳಗಿನ ಗಾಳಿಯ ಒತ್ತಡ ಋಣಾತ್ಮಕವಾಗಿರುವಂತಹ ಅನುಕೂಲಗಳಿರಬೇಕು ಇಲ್ಲದಿದ್ದರೆ ಫಲಿತಾಂಶಗಳಲ್ಲಿ ಲೋಪಗಳು ಕಾಣಿಸಬಹುದು
ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಲ್ಲಿ ಮನುಷ್ಯರ ಉಗುಳಿನಿಂದ ಸೋಂಕಿನ ಪತ್ತೆ ಮಾಡಬಹುದು.ಉಗುಳಿನ ಮಾದರಿಯನ್ನು ಸಂಗ್ರಹಿಸುವುದು ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುವ ವಿಧಾನಕ್ಕಿಂತ ಸುಲಭವಾದರೂ ಪರೀಕ್ಷೆ ಮಾಡಲು ಗಂಟಲು-ಮೂಗಿನ ದ್ರವಗಳನ್ನೇ ಹೆಚ್ಚು ನಂಬಲರ್ಹ ಎನ್ನಲಾಗಿದೆ.
ಈ ಟೆಸ್ಟ್ ಕಿಟ್ ಗಳು ಆಯಾ ದೇಶದ ಗುಣಮಟ್ಟ ಮಾಪನಗಳಲ್ಲಿ ಉತ್ತೀರ್ಣರಾದ ನಂತರವೇ ಸಾರ್ವಜನಿಕರ ಬಳಕೆಗೆ ಮಾರುಕಟ್ಟೆಗೆ ಬರುತ್ತವೆ. ಪ್ರತಿದೇಶದಲ್ಲೂ ಇವುಗಳ ಔದ್ಯಮಿಕ ಮಟ್ಟದಲ್ಲಿ ಇವುಗಳ ಬಳಕಯಾಗುತ್ತಿದೆ. ಅಲ್ಲಲ್ಲಿ ನಕಲಿ ಟೆಸ್ಟ್ ಕಿಟ್ ಗಳ ದಂಧೆ ಶುರುವಾದದ್ದು ಮತ್ತು ಆ ಮೂಲಕ ರೋಗವನ್ನು ಪತ್ತೆ ಮಾಡುವಲ್ಲಿ ಸೋತದ್ದು ಕೂಡ ನಡೆಯಿತು. ಕೆಲವು ದುಷ್ಕರ್ಮಿಗಳ ಅನೈತಿಕ ವ್ಯವಹಾರಗಳಿಂದ ನಕಲಿ ಕಿಟ್ ಗಳು ಅಸಲಿ ಕಿಟ್ ಗಳೊಡನೆ ಬೆರೆತು ವಿವಾದಾತ್ಮಕ ಫಲತಾಂಶಗಳನ್ನು ದೊರಕಿಸಿರಬಹುದು.ಇಂತಿಷ್ಟು ಹಣ ಕೊಟ್ಟರೆ ಕೋವಿಡ್ ನೆಗೆಟಿವ್ -ಎನ್ನುವ ಪ್ರಮಾಣ ಪತ್ರ ನೀಡುತ್ತ ಸಿಕ್ಕಿಹಾಕಿಕೊಂಡ ಲ್ಯಾಬ್ ಅಥವಾ ಪರೀಕ್ಷಾಲಯಗಳ ಬಗ್ಗೆಯೂ ವರದಿಗಳು ಬಂದವು.
ಇದೆನ್ನೆಲ್ಲ ಹತ್ತಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಗಳು ದುಡಿಯುತ್ತಿರುವಾಗಲೇ ಈಗಾಗಲೇ ಜಾರಿಯಲ್ಲಿರುವ ಕೋವಿಡ್ ಪರೀಕ್ಷೆಯ ಗುಣಮಟ್ಟ ಮತ್ತು ಕಾರ್ಯ ಕ್ಷಮತೆಯ ಮಾಪನಗಳೂ ನಡೆಯುತ್ತಿವೆ. ಅದಕ್ಕಾಗಿ ಹಲವಾರು ಅಧ್ಯಯನಗಳನ್ನು ಪ್ರಪಂಚದ ಹಲವೆಡೆ ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಪರೀಕ್ಷೆಯ ಉದ್ದೇಶಗಳೇನು?
ಈ ಪರೀಕ್ಷೆಯ ಉದ್ದೇಶ ನಮ್ಮ ಗಂಟಲು-ಮೂಗು ದ್ರವ ಮತ್ತು ಎಂಜಲಿನ ಮಿಶ್ರಣವನ್ನು ಸಂಗ್ರಹಿಸುವುದು. ಈ ಸಂಗ್ರಹದಲ್ಲಿ ಕೋವಿಡ್ -19 ಎನ್ನುವ ವೈರಸ್ಸು ಇದೆಯೇ ಎಂದು ಪತ್ತೆ ಹಚ್ಚುವುದು.ಸೋಂಕಿತರನ್ನು ಗುರುತಿಸಿದ ನಂತರ ಅವರ ಸಂಪರ್ಕಕ್ಕೆ ಬಂದವರನ್ನು ಕಂಡುಹಿಡಿಯುವುದು. ಸೋಂಕಿತರನ್ನು ಆರೋಗ್ಯವಂತರಿಂದ ಬೇರ್ಪಡಿಸಿ ಸೋಂಕು ಹರಡದಂತೆ ರಕ್ಷಿಸುವುದು. ಸೋಂಕು ಇರುವವರಿಗೆ ಲಭ್ಯವಿರುವ ಚಿಕಿತ್ಸೆ ನೀಡುವುದು. ಇಲ್ಲವೆಂದಾದವರಿಗೆ ಧೈರ್ಯ ನೀಡುವುದು. ದೇಶವೊಂದನ್ನು ಮುಚ್ಚುವುದು ಅಥವಾ ಪ್ರಯಾಣಕ್ಕಾಗಿ ತೆರೆಯುವುದು ಇತ್ಯಾದಿ ಮಹತ್ವದ ನಿರ್ಧಾರಗಳನ್ನೆಲ್ಲ ಈ ಕೋವಿಡ್ ಪರೀಕ್ಷೆಯ ಆಧಾರದ ಮೇಲೇ ನಡೆಯುತ್ತಿರುವ ಕಾಲವಿದು.
ಆದರೆ ಈ ಪರೀಕ್ಷೆ ನಿಜಕ್ಕೂ ಕರಾರುವಕ್ಕಾದ ನಿರ್ಣಯವನ್ನು ಕೊಡುತ್ತದೆಯೇ? ಇಲ್ಲವೆಂದಾದರೆ ಪ್ರಪಂಚವೇ ಇದನ್ನು ನಂಬಿ ನಡೆಯುತ್ತಿರುವುದು ಎಂತಹ ವಿಪರ್ಯಾಸವಲ್ಲವೇ?
ಸರಿಯಾದ ಕ್ರಮದಲ್ಲಿ ಮಾದರಿಯನ್ನು ಸಂಗ್ರಹಿಸಿ ಕಳಿಸಿದರೂ ಪರೀಕ್ಷೆಯಫಲಿತಾಂಶಗಳಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದು ಕೂಡ ವರದಿಯಾಗಿದೆ. ಇದು ಹೇಗೆ?
ಮುಖ್ಯ ವ್ಯತ್ಯಾಸ ಬರುವುದು ಸಂಗ್ರಹವಾದ ಮಾದರಿ ದ್ರವದಲ್ಲಿ. ಒಂದು ಅಧ್ಯಯನದ ಪ್ರಕಾರ ವೈರಸ್ಸಿನ RNA ದ ಪ್ರಮಾಣ ಮೂಗಿನಿಂದ ತೆಗೆದ ದ್ರವದಲ್ಲಿ ಹೆಚ್ಚು ಕಾಣಸಿಕ್ಕಿತು ಆದರೆ ಗಂಟಲಿನಿಂದ ಪಡೆದ ದ್ರವದಲ್ಲಿ ಈ ಮಟ್ಟ ಅಷ್ಟಾಗಿ ಇರಲಿಲ್ಲ. ಆದರೆ ಈ ಅಧ್ಯಯನದಲ್ಲಿ ಕೇವಲ 12 ಜನರು ಭಾಗವಹಿಸಿದ್ದರು. ವಿಸ್ತೃತ ಮಟ್ಟದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಮೂಗು ಮತ್ತು ಗಂಟಲಿನ ದ್ರವದ ಮಾದರಿಗಳಲ್ಲಿ ಈ ವ್ಯತ್ಯಾಸ ಕಂಡುಬರಲಿಲ್ಲ.
ಆದರೆ ಧೃಡವಾದ ಫಲಿತಾಂಶಗಳು ದೊರಕ್ಕಿದ್ದು ಮೂಗು ಮತ್ತು ಗಂಟಲಿನ ದ್ರವಗಳೆರಡೂ ಇರುವ ಮಾದರಿಗಳಿಂದ. ಇದೇ ಮಾದರಿಯ ಪರೀಕ್ಷೆಗಳನ್ನು ಬಹುತೇಕ ದೇಶಗಳು ಅಳವಡಿಸಕೊಂಡವು.
ಕೋವಿಡ್ ಟೆಸ್ಟ್ ಕಿಟ್ ಗಳು ರೋಗವನ್ನು ಪತ್ತೆ ಹಚ್ಚುವಲ್ಲಿ ಅಥವಾ ಇಲ್ಲವೆಂದು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಈ ಕಿಟ್ ಗಳ ಗುಣಮಟ್ಟ ಅತ್ಯಂತ ಮುಖ್ಯವಾಗುತ್ತದೆ. ಹೀಗಾಗಿ ಅವು ಪ್ರತಿದೇಶದ ಅತ್ಯುನ್ನತ ಔಷದ ಮಂಡಳಿಗಳಿಂದ ಮಾನ್ಯತೆ ಪಡೆದು ನಂತರ ಮಾರುಕಟ್ಟೆಗೆ ಬರುತ್ತವೆ.Test sensitivity ಅಂದರೆ ವೈರಾಣು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಅದನ್ನು ಈ ಕಿಟ್ ಗಳು ಕಂಡುಹಿಡಿಯಬೇಕು. Test specificity ಅಂದರೆ ಕೋವಿಡ್ -19 ನ್ನು ಬಿಟ್ಟರೆ ಇನ್ಯಾವುದೇ ವೈರಾಣುಗಳಿದ್ದರೆ ಫಲಿತಾಂಶ ಪಾಸಿಟಿವ್ ಎಂದು ಬರಬಾರದು. ಇವೆರಡು ಗುಣಗಳಲ್ಲಿ ಯಾವುದರಲ್ಲಿ ಲೋಪವಾದರೂ ಫಲಿತಾಂಶಗಳು ಮನುಷ್ಯರಿಗೆ ಮಾರಕವಾಗುತ್ತವೆ.
ಕೋವಿಡ್ ಪರೀಕ್ಷೆಯಿಂದ ಲಾಭಗಳೇನು?
ಯಾವುದೇ ಪರೀಕ್ಷೆಯ ಉದ್ದೇಶ ರೋಗವನ್ನು ಪತ್ತೆಹಚ್ಚುವುದು.ಆ ಮೂಲಕ ಸೋಂಕಿತರನ್ನು ಆರೋಗ್ಯವಂತರಿಂದ ದೂರವಿಡುವುದು, ಈಗಾಗಲೇ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ನಲ್ಲಿರಲು ಆದೇಶಿಸಿ, ಪರೀಕ್ಷೆಗೆ ಒಳಪಡಿಸುವುದು, ಸೋಂಕಿತ ವ್ಯಕ್ತಿಗೆ ಅಗತ್ಯವಾದಲ್ಲಿ ಸಂಬಂಧಿತ ಚಿಕಿತ್ಸೆಯನ್ನು ನೀಡುವುದು.ಆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವುದು ಇತ್ಯಾದಿ ಉತ್ತಮ ಉದ್ದೇಶಗಳಿವೆ.ಹಾಗಾಗಿ ಕೋವಿಡ್ ಪರೀಕ್ಷೆ ಅತ್ಯಗತ್ಯವಾಗಿ ಬೇಕು. ಅದರಲ್ಲೂ ವಯಸ್ಸಾದವರು, ಇತರೆ ಖಾಯಿಲೆಗಳಿರುವವರು ಮತ್ತು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಲ್ಲಿ ಸೋಂಕನ್ನು ಮುಂಚಿತವಾಗಿಯೇ ಕಂಡುಹಿಡಿಯುವ ಮೂಲಕ ಅವರ ಜೀವಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.
ಇವೆಲ್ಲದರ ಜೊತೆ ಒಂದು ಪ್ಯಾಂಡೆಮಿಕ್ ನ ಶುರುವಾತು, ಹರಡುವಿಕೆ, ವೇಗ, ನಿಯಂತ್ರಣ, ಎರಡನೇ ಅಥವಾ ಮೂರನೆ ಅಲೆಗಳು ಇತ್ಯಾದಿಗಳ ಅಧ್ಯಯನಕ್ಕೂ ಕೋವಿಡ್ ಪರೀಕ್ಷೆ ಅಗತ್ಯವಾಗಿ ಬೇಕಾಗುತ್ತದೆ.
ಒಂದು ದೇಶ ಇನ್ನೊಂದು ದೇಶದ ಪ್ರಜೆಗಳಿಗೆ ತಮ್ಮ ಬಾಗಿಲುಗಳನ್ನು ತೆರೆಯಬಹುದೇ, ಆರ್ಥಿಕ ಚಟುವಟಿಕಗಳನ್ನು ಆರಂಭಿಸಬಹುದೇ ಇತ್ಯಾದಿ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೂಡ ಕೋವಿಡ್ ಪರೀಕ್ಷೆಗಳು ಅತ್ಯಗತ್ಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಆದರೆ ಪರೀಕ್ಷೆ ಕರಾರುವಕ್ಕಾದ ಮಾಹಿತಿ ನೀಡುವಲ್ಲಿ ವಿಫಲವಾದರೆ ಆ ಮೂಲಕ ಸರಣಿ ತಪ್ಪುಗಳಿಗೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ.
ಕೋವಿಡ್ ಪರೀಕ್ಷೆಯ ಮಿತಿಗಳು
ಕೋವಿಡ್ ಪರೀಕ್ಷೆಯೆನ್ನುವುದು ಪ್ರತಿಶತ ಕರಾರುವಕ್ಕಾದ ಪರೀಕ್ಷೆಯೇನಲ್ಲ. ಇದರಲ್ಲಿ ಮಾದರಿಯನ್ನು ಸಂಗ್ರಹಿಸುವಾಗ, ಶೇಖರಿಸವಾಗ, ಪರೀಕ್ಷಿಸುವಾಗ ಮತ್ತು ವರದಿನೀಡುವಾಗ ಹಲವಾರು ದೋಷಗಳಾಗಬಹುದು.
ಅದರಲ್ಲೂ ತ್ವರಿತವಾಗಿ ಫಲಿತಾಂಶ ನೀಡಬಹುದಾದ (Rapid ಟೆಸ್ಟ್) ಅಂದರೆ ಕೇಲವ ಅರ್ಧಗಂಟೆಯಲ್ಲಿ ಫಲಿತಾಂಶ ನೀಡಲು ಸಾಧ್ಯವಿರುವ ವಿಧಾನಗಳಿಂದ ಪರೀಕ್ಷೆಗಳ ಗುಣ ಮಟ್ಟದಲ್ಲೂ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಬೇರೊಂದು ದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆಯನ್ನು ಏರ್ ಪೋರ್ಟಿನಲ್ಲೇ ಮಾಡಿದರೆನ್ನಿ. ಆಗ ಅವರ ದೇಹದಲ್ಲಿ ವೈರಾಣುಗಳು ಮೂಗು-ಗಂಟಲು ದ್ರವದಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಇಲ್ಲದಿರಬಹುದು. ಹಾಗಾಗಿ ನೆಗೆಟಿವ್ ಬರುವ ಟೆಸ್ಟ್ ಮೂರು ದಿನಗಳ ನಂತರ ಪಾಸಿಟಿವ್ ಆಗಬಹುದು. ಆದರೆ ಆ ಜನರು ತಾವು ಕೋವಿಡ್ ಸೋಂಕಿತರಲ್ಲ ಎಂದು ಆ ವೇಳೆಗೆ ಊರೆಲ್ಲ ಓಡಾಡಿರಬಹುದು.ಈ ಕಾರಣ ಪರದೇಶದ ಪ್ರಯಾಣ ಮಾಡಿಬಂದ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿಟ್ಟ ನಂತ72 ಗಂಟೆಗಳಲ್ಲಿ ಮತ್ತೆ ಪರೀಕ್ಷಿಸಬೇಕು ಎನ್ನುವ ಎಚ್ಚರಿಕೆಗಳನ್ನು ಅಧ್ಯಯನಕಾರರು ನೀಡಿದ್ದಾರೆ.Point of testing ಅಥವಾ ಯಾವ ಹಂತದಲ್ಲಿ ಪರೀಕ್ಷೆ ನಡೆಯಿತು ಎನ್ನುವುದುಇದೇ ಕಾರಣಕ್ಕೆ ಅತ್ಯಂತ ಮುಖ್ಯವಾಗುತ್ತದೆ.
ಗಂಟಲು-ಮೂಗಿನ ದ್ರವದ ಕೋವಿಡ್ ಪರೀಕ್ಷೆಯಿಂದವೈರಸ್ಸಿನ ಆರ್. ಎನ್.ಎ ಅಥವಾ ಪ್ರೋಟೀನಿನ ಕುರುಹು ಆ ವ್ಯಕ್ತಿಯಲ್ಲಿದೆಯೇ ಎಂದು ಹೇಳಲು ಸಾಧ್ಯವಾಗುತ್ತದೆ. ಆದರೆ ವೈರಲ್ ಲೋಡ್, ಟಾಕ್ಸಿಸಿಟಿ ಇತ್ಯಾದಗಳ ಮಾಹಿತಿಗಳಿಗಾಗಿ ಹೆಚ್ಚಿನ ಪರೀಕ್ಷೆಗಳು ಬೇಕಾಗುತ್ತವೆ.ವೈರಸ್ಸು ನಮ್ಮ ದೇಹಕ್ಕೆ ಪ್ರವೇಶ ಕೊಟ್ಟು ಹೋಗಿರಬಹುದೇ ಎನ್ನುವ ಆಂಟಿಬಾಡಿ ಪರೀಕ್ಷೆ ಕೂಡ ಲೋಪಗಳಿಂದ ಕೂಡಿದೆ.ಆ ಬಗ್ಗೆ ಮುಂದೆ ಬರೆಯುತ್ತೇನೆ.
ಕೋವಿಡ್ ಟೆಸ್ಟ್ ಗಳು ಮತ್ತು ವಿವಾದಗಳು
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನಲ್ಲಿ ಡಾ.ನಾಗೇಂದ್ರ ಎನ್ನುವ ಸರ್ಕಾರಿ ವೈದ್ಯರ ಮೇಲೆ ದಿನಕ್ಕೆ ಇಂತಿಷ್ಟು ಟೆಸ್ಟ್ ಗಳನ್ನು ನಡೆಸಬೇಕೆಂಬ ಒತ್ತಡ ಇದ್ದಿತು, ಆದರೆ ಸೌಲಭ್ಯ ಇರಲಿಲ್ಲ ಎಂಬ ಆಪಾದನೆಗಳು ಕೇಳಿಬಂದವು. ಅದರ ಸತ್ಯಾ ಸತ್ಯತೆಗಳನ್ನು ಪ್ರಶ್ನಿಸದೆಯೂ ಹೇಳಬಹುದಾದರೆ, ಪ್ರತಿ ದೇಶದ ಮೇಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ನಡೆಸಬೇಕಾದ ಒತ್ತಡವಿದೆ. ವಿರೋಧ ಪಕ್ಷಗಳು, ವಿಶ್ವ ಆರೋಗ್ಯ ಸಂಸ್ಥೆಗಳು, ಪಾಲಿಸಿ ಮೇಕರ್ ಗಳು ಸಂಖ್ಯೆಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈ ಗೊಳ್ಳಲು ಕೋವಿಡ್ ಮಂಡಳಿಯ ಕೆಲಸಗಾರರ ಮೇಲೆ ಒತ್ತಡ ಹೇರುತ್ತಿರುವುದು ಸುಳ್ಳಲ್ಲ.
ಆದರೆ ಕೋವಿಡ್ ಪರೀಕ್ಷೆಯ ಫಲಿತಾಂಶದ ಗುಣಮಟ್ಟದ ಮೇಲೆ ದೊಡ್ಡ ಕಪ್ಪು ಛಾಯೆಯಿದೆ.ಇದು ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಗಳಿವೆ. ಏಕೆಂದರೆ ಸರಿಯಾದ ಫಲಿತಾಂಶ ನೀಡದ ಪಾಸಿಟಿವ್ ಪರೀಕ್ಷೆಗಳಿಂದ ಸುಮ್ಮ ಸುಮ್ಮನೆ ಜನಸಾಮಾನ್ಯರು ಕ್ವಾರಂಟೈನ್ ಗೆ ಒಳಗಾದರೆ, ಸುಳ್ಳು ಸುಳ್ಳೆ ನೆಗೆಟಿವ್ ಟೆಸ್ಟ್ ಗಳಿಂದ ಮತ್ತಷ್ಟು ಸೋಂಕು ಮತ್ತು ಸಾವುಗಳು ಸಂಭವಿಸಿ ಇಡೀ ದೇಶಗಳೇ ನಲುಗಬಲ್ಲವು.
ಉದಾಹರಣೆಗೆ, ಚೈನಾ ದೇಶದಲ್ಲಿ ಕೋವಿಡ್ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದ 213 ಜನ ನಾನಾ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದರು. ಇವರಲ್ಲಿ 37 ಜನ ಮಾರಣಾಂತಿಕ ಚಿಂತಾಜನಕ ಸ್ಥಿತಿಯನ್ನು ತಲುಪಿದ್ದರು. ಇದರಿಂದ ಎಚ್ಚೆತ್ತ ಒಂದು ಅಧ್ಯಯನಕಾರರ ತಂಡ 927 ಶಂಕಿತ ಆದರೆ ಈಗಾಗಲೇ ನೆಗೆಟಿವ್ ಎಂಬ ಫಲಿತಾಂಶ ಬಂದಿದ್ದ ಜನರ ಮೇಲೆ ಅಧ್ಯಯನ ನಡೆಸಿ ಅವರ ಗಂಟಲು ಮತ್ತು ಮೂಗಿನ ದ್ರವಗಳನ್ನು ಬೇರೆ ಬೇರೆ ರೀತಿ ಪರೀಕ್ಷಿಸಿದಾಗ ಅವರಲ್ಲಿ ಶೇಕಡಾ3-29 ರಷ್ಟು ಜನರಲ್ಲಿ ಕೋವಿಡ್ ಇದ್ದದ್ದು ಧೃಡವಾಯ್ತು.ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕು ಎನ್ನುವ ಕರೆಗೆ ಬಲ ದೊರಕಿತು.
ಇಡೀ ಕೋವಿಡ್ ಅಧ್ಯಾಯ ಒಂದು ರೀತಿಯಲ್ಲಿ ಕಾಲದ ಜೊತೆಗಿನ ಸ್ಪರ್ಧೆಯ ರೀತಿಯಲ್ಲಿ ಸಾಗುತ್ತಿರುವುದು ಕೂಡ ಮತ್ತೊಂದು ದೊಡ್ಡ ಕಾರಣ.
ಇವೆಲ್ಲದರ ಜೊತೆ ಪ್ಯಾಂಡೆಮಿಕ್ ಶುರುವಾಗಿ 8 ತಿಂಗಳುಗಳೇ ಕಳೆದಿದ್ದರೂ,ಯಾವುದೇ ಲಕ್ಷಣಗಳಿಲ್ಲದ ರೀತಿಯ ಕೋವಿಡ್ ಸೋಂಕಿತರನ್ನು ಹೇಗೆ ಪತ್ತೆ ಹಚ್ಚುವುದು?- ಎನ್ನುವುದು ಮಾತ್ರ ಇನ್ನೂ ಒಂದು ಯಕ್ಷಪ್ರಶ್ನೆಯಾಗೇ ಉಳಿದಿದೆ. ಉತ್ತರ ಸಿಗದಿದ್ದಲ್ಲಿ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುವುದಿಲ್ಲ.ಸೋಂಕು ಹರಡುವುದನ್ನೂ ತಡೆಯಲಾಗುವುದಿಲ್ಲ.
ಮನುಷ್ಯರ ಮೂಲಕ ಜರುಗಬಲ್ಲ, ತಡೆಯಬಲ್ಲ ಎಲ್ಲ ತಪ್ಪುಗಳನ್ನು ಹತೋಟಿಯಲ್ಲಿಟ್ಟು, ಉತ್ತಮ ಪ್ರಯೋಗಾಲಯದ ವ್ಯವಸ್ಥೆಗಳನ್ನು ಕಲ್ಪಿಸಿ, ಉತ್ತಮ ಟೆಸ್ಟ್ ಕಿಟ್ ಗಳನ್ನು ಬಳಸುವುದರ ಜೊತೆ ಟೆಸ್ಟ್ ಫಲಿತಾಂಶ ಏನೇ ಆಗಿದ್ದರೂ ಪಾಲಿಸಬೇಕಾದ ನಿಯಮಗಳು ಒಂದೇ ಆಗಿವೆ. ಅಂದರೆ ಟೆಸ್ಟ್ ಪಾಸಿಟಿವ್ ಆಗಿರಲಿ ,ನೆಗೆಟಿವ್ ಆಗಿರಲಿ, ನಮ್ಮಲ್ಲಿ ಲಕ್ಷಣಗಳಿರಲಿ, ಇಲ್ಲದಿರಲಿ ಒಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾದುಕೊಳ್ಳುವುದು, ಮಾಸ್ಕ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಇತ್ಯಾದಿಗಳನ್ನು ಇದೇ ಕಾರಣಕ್ಕೆ ಮುಂದುವರೆಸಬೇಕಾದ ಜರೂರು ಅಗತ್ಯ ಮಾತ್ರ ಹಾಗೇ ಉಳಿದಿದೆ.ಇದೊಂದೇ ಸಧ್ಯಕ್ಕಿರುವ ಸರಳ ಉಪಾಯ.